ನಾನೃಷಿಃ ಕುರುತೇ ಕಾವ್ಯಂ ಎಂಬ ಸುಭಾಷಿತವಿದೆಯಷ್ಟೆ. ಋಷಿಯಲ್ಲದವನು ಮಹಾಕಲಾಕೃತಿಯನ್ನು ಸೃಷ್ಟಿಸಲಾರನೆಂಬುದು ಈ ಸುಭಾಷಿತದಿಂದ ಸ್ಪಷ್ಟವಾಗುತ್ತದೆ. ಭರತಖಂಡದ ಮೊಟ್ಟಮೊದಲ ಕವಿಯೇ ಮಹಾಋಷಿಯಾಗಿದ್ದನೆಂಬುದು ಸರ್ವವೇದ್ಯ. ಹೋಮರ್, ವರ್ಜಿಲ್, ಡಾಂಟೆ, ಮಿಲ್ಟನ್ ಮುಂತಾದ ಮಹಾಕವಿಗಳೆಲ್ಲರೂ ಋಷಿಸ ದೃಶರೇ. ಸಾಮಾನ್ಯ ದೃಷ್ಟಿಗೆ ನಿಲುಕದ ಭೂತ ವರ್ತಮಾನ ಭವಿಷ್ಯತ್ತುಗಳನ್ನು ಅವರ ದಾರ್ಶನಿಕ ಪ್ರತಿಭೆ ಏಕಕಾಲದಲ್ಲಿ ಗ್ರಹಿಸಬಲ್ಲದು. ಅನಂತತೆ ಸಾಂತತೆಗಳೆರಡನ್ನೂ ಒಟ್ಟಿಗೆ ದರ್ಶಿಸಬಲ್ಲ ಸಾಮರ್ಥ್ಯದಿಂದಾಗಿ ಅವನು ಇಡೀ ಜನಾಂಗದ ಅಂತಸ್ಸತ್ವವನ್ನೂ, ಸಮಕಾಲೀನ ಜೀವನವನ್ನೂ ಏಕಪ್ರಕಾರವಾಗಿ ರೂಪಿಸಬಲ್ಲವನಾಗುತ್ತಾನೆ. ಆದುದರಿಂದ ಋಷಿಕವಿಗಳ ಮತ್ತು ಮಹಾಕಾವ್ಯಗಳ ಕಾಲ ಮುಗಿದು ಹೋಯಿತೆಂದೂ, ಇಂದಿನ ಸದ್ದು ಗದ್ದಲಗಳ ಬಸಿರಿನಲ್ಲಿ ವಾಸಿಸುವ ಕವಿ ಮಹಾಕೃತಿಗಳನ್ನು ಸೃಷ್ಟಿಸಲಾರನೆಂದೂ ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಚಿತ್ತೈಕಾಗ್ರತೆಯನ್ನು ಭಂಗಗೊಳಿಸುವಂಥ, ಕರ್ಣಕುಹರವನ್ನು ಬಧಿರಗೊಳಿಸುವಂಥ ಪ್ರಕ್ಷುಬ್ದ ವಾತಾವರಣದ ನಡುವೆಯೂ ತಪಸ್ಸು ಸಾಧ್ಯವೆಂಬುದನ್ನೂ ಶ್ರೀ ರಾಮಾಯಣ ದರ್ಶನದಂಥ ಮಹಾಛಂದಸ್ಸಿನ ಮಹಾಕಾವ್ಯವನ್ನು ಸೃಷ್ಟಿಸಬಹುದೆಂಬು ದನ್ನೂ ಕುವೆಂಪು ತೋರಿಸಿಕೊಟ್ಟು, ವಿಮರ್ಶಕರ ಅಭಿಪ್ರಾಯವನ್ನು ಸುಳ್ಳಾಗಿಸಿದ್ದಾರೆ. ಅವರು ತಮ್ಮ ಮಹಾಕಾವ್ಯದಲ್ಲಿ ಇಡೀ ಜೀವರಾಶಿಯ ಏಕತೆಯ ಅರಿವನ್ನೂ, ಅಧ್ಯಾತ್ಮಿಕಾನುಭವಗಳ ಮತ್ತು ವೈಜ್ಞಾನಿಕ ಭಾವನೆಗಳ ಸಮನ್ವಯವನ್ನು, ಆಲೋಚನಾಭಾವಗಳ ಪರಿಪಕ್ವತೆಯನ್ನೂ, ವಿಶ್ವದ ರಹಸ್ಯಗಳ ಪ್ರಜ್ಞೆಯನ್ನೂ ಮೂಡಿಸಿದ್ದಾರೆ, ಅಂತೆಯೇ ಸಾಧಿಸಿದ್ದಾರೆ.

ಮಹಾಕಾವ್ಯ ರಚನೆಯನ್ನು ಪ್ರಾರಂಭಿಸುವ ಮುನ್ನವೆ ಕುವೆಂಪು ಉತ್ತಮ ಭಾವಗೀತ ಕಾರರಾಗಿ, ಅದ್ವಿತೀಯ ಸುನೀತಕಾರರಾಗಿ, ಶ್ರೇಷ್ಠ ಕಾದಂಬರಿಕಾರರಾಗಿ ಹಾಗೂ ಪ್ರಖ್ಯಾತ ನಾಟಕಕಾರರಾಗಿ ಹೆಸರು ಪಡೆದಿದ್ದರು. ಆಲೋಚನಾ ಸ್ವಾತಂತ್ರ್ಯವನ್ನು ಕುಂಠಿತಗೊಳಿಸುವ, ಆಧ್ಯಾತ್ಮಿಕ ಪ್ರಗತಿಯನ್ನು ಪ್ರತಿಬಂಧಿಸುವ ಓಬೀರಾಯನ ಕಾಲದ  ಸಂಪ್ರದಾಯಗಳ ವಿರುದ್ಧವಾಗಿ ಸಿಡಿದೆದ್ದ ಹುಟ್ಟು ಬಂಡಾಯಗಾರರು, ಅವರು. ಈ ಕ್ರಾಂತಿ ಮನೋಧರ್ಮ, ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ದೃಷ್ಟಿ ಮತ್ತು ಆಧ್ಯಾತ್ಮಿಕ ಸಿದ್ದಿಗಳು ಅವರ ಸಾಹಿತ್ಯದಲ್ಲಿ ಮಾತ್ರವಲ್ಲ, ಜೀವನದಲ್ಲಿ ಸಹ ಪ್ರತಿಬಿಂಬಿಸುತ್ತವೆ. ಅವರ ಪಕ್ವಾನುಭವ, ಅಕ್ಷಯ ಪ್ರತಿಭೆ ಮತ್ತು ಪೂರ್ಣ ಕಲಾಭಿಜ್ಞತೆಗಳು ಅವರ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬಳಕೆಗೊಂಡಿರುವ ಶೈಲಿ, ಶಬ್ದಕೋಶ, ಮತ್ತು ಛಂದಸ್ಸುಗಳಲ್ಲಿ ಪ್ರತಿಫಲನಗೊಂಡಿದೆ. ಭಾವಗೀತೆ, ಕಥನಕವನ, ನಾಟಕ ಮತ್ತು ಸಾನೆಟ್ಟುಗಳ ಮೂಲಕ ಅವರು ಯಶಸ್ವಿಯಾಗಿ ನಡೆಸಿರುವ ಛಂದೋ ಪ್ರಯೋಗಗಳು ಅದ್ವಿತೀಯವಾದವು. ಈ ಕ್ಷೇತ್ರದಲ್ಲಿ ಅವರನ್ನು ಮೀರಿಸುವ ಕವಿಗಳು ವಿರಳ. ಈ ಪ್ರಯೋಗಗಳು ಮಹಾಛಂದಸ್ಸಿನಲ್ಲಿ ಅಭೂತ ಪೂರ್ವ ಸಿದ್ದಿಯನ್ನು ಪಡೆದಿವೆಯೆಂದೇ ಹೇಳಬೇಕು. ಮಿಲ್ಟನ್ನಿನ ಸರಳ ರಗಳೆಯ ಪರಿಪೂರ್ಣಾವಸ್ಥೆಯೇ ಮಹಾಛಂದಸ್ಸು. ವಾಸ್ತವವಾಗಿ ಮಹಾಛಂದಸ್ಸಿನ ಮುನ್ಸೂಚನೆಗಳನ್ನೂ, ಅಷ್ಟೇ ಏಕೆ, ಮಹಾಕಾವ್ಯದ ರಚನೆಯ ಮೂಲಭೂತ ರೇಖೆಗಳನ್ನು ಅವರ ಸಾನೆಟ್ಟುಗಳಲ್ಲಿಯೂ, ಅಲ್ಪ ಪ್ರಮಾಣದ ಮಹಾಕಾವ್ಯವೆನಿಸಿಕೊಂಡಿರುವ ಚಿತ್ರಾಂಗದಾದಲ್ಲಿಯೂ ಗುರುತಿಸಬಹುದು. ವಸ್ತು, ಸಾಮಾಜಿಕ ಪರಿಸರ, ಉದ್ದೇಶ ಮತ್ತು ಇತರ ಕಾವ್ಯಾವಶ್ಯಕತೆಗಳಿಗೆ ತಕ್ಕಂತೆ ಅವರ ಶಬ್ದಕೌಶಲ ಒಂದು ಸಾಹಿತ್ಯ ಪ್ರಕಾರದಿಂದ ಮತ್ತೊಂದು ಸಾಹಿತ್ಯ ಪ್ರಕಾರಕ್ಕೆ ವ್ಯತ್ಯಾಸ ಹೊಂದುತ್ತದೆ. ಅವರು ಸಂಸ್ಕೃತಪದಗಳನ್ನು ಅತಿಯಾಗಿ ಬಳಸುತ್ತಾರೆಂಬ ಟೀಕೆಯನ್ನು ಮಹಾಕಾವ್ಯಕ್ಕೆ ಸಂಬಂಧಿಸಿದಂತೆ ಸಮರ್ಥಿಸಿಕೊಳ್ಳಲಾಗದು. ಅವರು ನವೋನವ ಛಂದೋ ಪ್ರಕಾರಗಳನ್ನು ಸೃಷ್ಟಿಸುವಂತೆ, ತಮ್ಮ ಉದ್ದೇಶಸಾಧನೆಗಾಗಿ, ಹೊಸಪದ ಮತ್ತು ಪದಗುಚ್ಛ ಗಳನ್ನು ಯಥೇಚ್ಛವಾಗಿ ಟಂಕಿಸುತ್ತಾರೆ. ಮಹಾಕಾವ್ಯದಲ್ಲಿ ಗಾಂಭೀರ್ಯ ಘನತೆ ಪ್ರಾಚೀನತೆ ಔನ್ನತ್ಯ ಮತ್ತು ಗಹನತೆಗಳನ್ನು ಸಾಧಿಸುವ ಸಲುವಾಗಿ ಅವರು ಹಳಗನ್ನಡದ ಪ್ರಯೋಗ ಗಳನ್ನು ಲೀಲಾಜಾಲವಾಗಿ ಹಾಗೂ ಸಮುಚಿತವಾಗಿ ಬಳಸಿಕೊಳ್ಳುತ್ತಾರೆ. ‘ಈ ಇಪ್ಪತ್ತನೆಯ ಶತಮಾನದಲ್ಲಿ ಪ್ರಪ್ರಥಮವಾಗಿ ಗೀರ್ವಾಣರ ಗೌರವಕ್ಕೂ ಪಾತ್ರವಾಗುವಂಥ ರೀತಿಯಲ್ಲಿ ಕನ್ನದ ಘನತೆ ಮುಗಿಲು ಮುಟ್ಟಿದೆ’ ಎನ್ನುವ ವಿಮರ್ಶಕರೊಬ್ಬರ ನಿರ್ಣಯ ಆಂಗೀಕಾರ ಯೋಗ್ಯವಾಗಿದೆ.

ಪೂರ್ವಕಾಲದ ಹಾಗೂ ಆಧುನಿಕ ಯುಗದ ಮಹಾಕವಿಗಳಂತೆ ಕುವೆಂಪು ಅವರು ರಾಮಾಯಣದ ಕತೆಯ ಎಲುಬುಗೂಡನ್ನು ಎತ್ತಿಕೊಂಡು ಅದರಲ್ಲಿ ಹೊಸ ಜೀವವನ್ನೂ ಹೊಸ ಚೈತನ್ಯವನ್ನೂ, ಹೊಸ ಮೌಲ್ಯವನ್ನೂ ತುಂಬುತ್ತಾರೆ. ಈ ವಸ್ತುವನ್ನಾರಿಸಿಕೊಳ್ಳುವಾಗ

ತಿಣುಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ

ಎಂಬ ಕುಮಾರವ್ಯಾಸನ ಮಾತು ಅವರ ನೆನಪಿಗೆ ಬಾರದಿರಲಿಲ್ಲ. ಪೂರ್ವಕಾವ್ಯಗಳ ಲೋಪದೋಷಗಳು ಅವರಿಗೆ ಮನವರಿಕೆಯಾಗಿದ್ದುದರಿಂದ, ನೂತನ ವೈಚಾರಿಕ ಭಾವನೆಗಳನ್ನೂ, ಕ್ರಾಂತಿಕಾರಕವಾದ ಆಧ್ಯಾತ್ಮಿಕ ಸತ್ಯಗಳನ್ನೂ, ಧರ್ಮ ಪ್ರೇಮ ಅಹಿಂಸೆಯೇ ಮೊದಲಾದ ವಿಶ್ವಮೌಲ್ಯಗಳನ್ನೂ ಅಂತೆಯೇ ಕಾಲಾನಂತರದಲ್ಲಿ ಅಸತ್ತು ಸತ್ತಾಗಿ ಪರಿವರ್ತನೆಯಾಗುತ್ತದೆಂಬ ವಿಶ್ವಮಾನವ ಸಂದೇಶವನ್ನೂ ಕಾವ್ಯದಲ್ಲಿ ಬೆಸೆದು, ಅದೊಂದು ಸ್ವತಂತ್ರ ನೂತನ ಕೃತಿಯಾಗುವಂತೆ ರಚಿಸಬಹುದೆಂಬ ಆತ್ಮಪ್ರತ್ಯಯದಿಂದ ಅವರು ಸಾಹಸೋದ್ಯಮಿಯಾಗುತ್ತಾರೆ. ಹೆಸರೇ ಸೂಚಿಸುವಂತೆ, ಶ್ರೀರಾಮಾಯಣ ದರ್ಶನಂ ನೂತನ ದರ್ಶನದಿಂದ, ಪೂರ್ಣಸತ್ಯದಿಂದ ಹಾಗೂ ವೈಜ್ಞಾನಿಕಯುಗದ ಸಂವೇದನೆಗಳಿಂದ ವಿರಾಜಮಾನವಾಗಿದೆ. ಇದು ಮೂಲದ ಭಾಷಾಂತರವೂ ಅಲ್ಲ, ಅನುಕೃತಿಯೂ ಅಲ್ಲ, ಇದು ನಿಜಕ್ಕೂ ಅದರ ನೂತನಾವತಾರವೆಂದೇ

[1] ಹೇಳಬೇಕು.

ಪಿಂತೆ
ವಾಲ್ಮೀಕಿಯುಲಿದ ಕಥೆಯಾದೊಡಂ, ಕನ್ನಡದಿ
ಬೇರೆ ಕಥೆಯೆಂಬಂತೆ, ಬೆರೆ ಮೈಯಾಂತಂತೆ,
ಮರುವುಟ್ಟುವಡೆದಂತೆ ಮೂಡಿದೀ ಕಾವ್ಯಮಂ
– ಶ್ರೀ ರಾ.ದ.ಶ್ರೀವೆಂಕಣ್ಣಯ್ಯನವರಿಗೆ

ಎಂಬ ಮಾತು ಕೇವಲ ಆಲಂಕಾರಿಕವಾಗಿರದೆ ವಾಸ್ತವತೆಗೆ ಹಿಡಿದ ಕನ್ನಡಿಯೆಂದೇ ಹೇಳಬಹುದು, ಕಥೆ ಸುರುಳಿ ಬಿಚ್ಚಿ ವಿಕಾಸವಾಗುತ್ತಿದ್ದಂತೆ ಮನುಕುಲದ ಅಭೀಪ್ಸೆಯೂ,[2] ಈಶ್ವರೇಚ್ಛೆಯೂ ತಾವಾಗಿಯೇ ಮೈದಾಳುತ್ತವೆ. ಈ ಕಾವ್ಯ ಕವಿ ಕಟ್ಟಿದ್ದಲ್ಲ, ಅವರ ಪ್ರತಿಭಾಕೋಶದಿಂದ ಮಿಂಚಿದ್ದು, ಅಥವಾ ಮೂಡಿದ್ದೆಂದೇ ಹೇಳಬಹುದು. ಅದು ‘ಶ್ರೀ ಕುವೆಂಪುವನ್ನೆ ಸೃಜಿಸು’ತ್ತದೆ.

ಶ್ರೀ ರಾಮಾಯಣದರ್ಶನಂ ಮೂಲಕೃತಿಯಿಂದ ಅನೇಕ ವಿಧಗಳಲ್ಲಿ ಬೇರೆಯಾಗುತ್ತದೆ. ವಸ್ತು ಸಂವಿಧಾನದಲ್ಲಿ, ಸನ್ನಿವೇಶಗಳ ಸೃಷ್ಟಿಯಲ್ಲಿ, ಪಾತ್ರ ರಚನೆಯಲ್ಲಿ, ವರ್ಣನೆಗಳಲ್ಲಿ, ಮತ್ತು ಘಟನೆಗಳ ಹಾಗೂ ಮಾನವ ವಿಚಾರಗಳ ಸಾಂಕೇತಿಕತೆಯಲ್ಲಿ ಕಾವ್ಯಸತ್ತೆ, ಲೋಕ ಸತ್ತೆ ಮತ್ತು ಆಧ್ಯಾತ್ಮಿಕಸತ್ತೆಗಳು ಈ ಕಾವ್ಯದಲ್ಲಿ ಸಮರಸವಾಗಿ ಮಿಲನಗೊಂಡು, ಪೂರ್ಣತೆಯಲ್ಲಿ ಸಿದ್ದಿ ಪಡೆಯುತ್ತವೆ.

ಮೇಲಣ ಹೇಳಿಕೆಗಳ ಸಮರ್ಥನೆಗಾಗಿ ಪಾತ್ರರಚನೆ ಹಾಗೂ ಸನ್ನಿವೇಶ ಸೃಷ್ಟಿಯಲ್ಲಿ ಪರಸ್ಪರ ವ್ಯತ್ಯಾಸವಿರುವ ಎರಡು ಸಂಗತಿಗಳನ್ನಿಲ್ಲಿ ಅತ್ಯಂತ ಸಂಕ್ಷೆಪವಾಗಿ ಗುರುತಿಸಿದರೆ ಸಾಕಾಗಿದೆ. ಮಂಥರೆಯ ಪ್ರಸಂಗ ಪ್ರೇಮಾಶಯಕ್ಕೆ ಅದ್ವಿತೀಯ ನಿದರ್ಶನವಾಗಿದೆ. ಕಾನನದಲ್ಲಿ ಸಿಕ್ಕಿದ ಅನಾಥ ಶಿಶುವನ್ನು ಕೇಕೆಯ ಮಹಾರಾಜ ಅರಮನೆಗೆ ತಂದು ಸಾಕಿ, ಸಲಹಿ, ಅವಳಿಗೆ ಮನುಷ್ಯತ್ವವನ್ನು ದಯಪಾಲಿಸುತ್ತಾನೆ. ಅವಳು ಗೂನಿಯಾಗಿ, ವಿಕಾರವಾಗಿ ಬೆಳೆಯುತ್ತಾಳೆ. ಅವಳ ವಿಕಾರ ಶರೀರ ಪ್ರೇಮದ ಸರಸಿಯಾಗುತ್ತದೆ. ಅವಳಿಗೆ ಮಕ್ಕಳಲ್ಲಿ ಅಕ್ಕರೆ. ಅರಮನೆಯ ಮಕ್ಕಳೊಡನೆ ಆಡುತ್ತ ಹಾಡುತ್ತ ದೊಡ್ಡವಳಾಗುತ್ತಾಳೆ. ದೊರೆಗೆ ಅವಳಲ್ಲಿ ಅಪಾರ ವಿಶ್ವಾಸ. ತನ್ನ ಮಗಳ ಲಾಲನೆ ಪಾಲನೆಯನ್ನು ಅವಳಿಗೆ ವಹಿಸುತ್ತಾನೆ. ತ್ರಿಲೋಕ ಸುಂದರಿಯಾದ ಕೈಕೆಯಲ್ಲಿ ಅವಳು ತನ್ನ ಜೀವನದ ಗುರಿಯನ್ನೂ, ಅಲೌಕಿಕಾನಂದ ವನ್ನೂ ಕಾಣುತ್ತಾಳೆ; ಅವಳ ಸಹವಾಸದಲ್ಲಿ ಮಂಥರೆಯ ಬಾಳು ಸಹನೀಯವಾಗುತ್ತದೆ, ಅರ್ಥಪೂರ್ಣವಾಗುತ್ತದೆ. ಕೈಕೆ ದಶರಥನನ್ನು ಮದುವೆಯಾಗಲಾಗಿ, ಮಂಥರೆ ಸಹ ಕಿರಿಯ ರಾಣಿಯೊಡನೆ ಅಯೋಧ್ಯೆಗೆ ತೆರಳುತ್ತಾಳೆ. ಅಲ್ಲಂತು ಅವಳೇ ರಾಣಿಯ ಗತಿಮತಿ ಮಾತ್ರವಲ್ಲ, ಸರ್ವಸ್ವವಾಗುತ್ತಾಳೆ. ಅರಮನೆಯ ಬೆರೆ ಜನ ಅವಳನ್ನು ನಿಕೃಷ್ಟವಾಗಿ ಕಂಡರೂ, ಅವಳು ಕೈಕೆಯ ಸೇವೆಯಲ್ಲಿ ತನ್ನನ್ನು ತಾನೆ ಮರೆಯುತ್ತಾಳೆ. ಭರತ ಜನಿಸಿದ ನಂತರ ಅವಳೇ ಅವನಿಗೆ ದಾದಿಯಾಗುತ್ತಾಳೆ, ಸಂಗಾತಿಯಾಗುತ್ತಾಳೆ. ತಾಯಿಯಾಗುತ್ತಾಳೆ.  ಅವನು ಅವಳಿಗೆ ಸರ್ವಸ್ವವಾಗುತ್ತಾನೆ. ಅವನಿಗೆ, ಅಂತೆಯೇ ಕೈಕೆಗೆ ಅವಳು ಪ್ರೇಮದ ಪುತ್ಥಳಿಯಂತೆ ಕಾಣುತ್ತಾಳೆ. ಭರತನ ಮೇಲಣ ಪ್ರೇಮದಿಂದ ಅವಳು ರಾಮನನ್ನು ಅರಣ್ಯಕ್ಕೆ ಕಳಿಸುವಂತೆಯೂ, ಭರತನಿಗೆ ಪಟ್ಟ ಕಟ್ಟಿಸುವಂತೆಯೂ ಕೈಕೆಯನ್ನು ಕಾಡಿ ಬೇಡಿ ಮರುಳು ಮಾಡುತ್ತಾಳೆ. ರಾಮ ಅರಣ್ಯವಾಸಿಯಾದನೆಂಬ ಕಾರಣದಿಂದ ಭರತ ವ್ಯಾಕುಲ ಗೊಂಡದ್ದರಿಂದ ಅವಳು ರೋದಿಸುತ್ತಾಳೆ, ಗೋಳಾಡುತ್ತಾಳೆ, ಭರತನಿಗೆ ಪ್ರಿಯ ವಾದದ್ದನ್ನೆಸಗಿ, ಅವನಿಗೆ ತೃಪ್ತಿಯುಂಟುಮಾಡುವ ಸಲುವಾಗಿ ರಾಮನನ್ನು ಹಿಂದಕ್ಕೆ ಕರೆತರಲು ಕಾಡಿಗೆ ಬಿದ್ದಂ ಬೀಳ ಓಡುತ್ತಾಳೆ. ದಾವಾಗ್ನಿ ಅವಳನ್ನು ಸುತ್ತುಗಟ್ಟಿ, ಭೌತಿಕ ದೇಹದಿಂದ ಅವಳ ಆತ್ಮವನ್ನೂ ಬೇರ್ಪಡಿಸುತ್ತದೆ. ಅವಳು ಚೈತನ್ಯ ಲಕ್ಷ್ಮಿಯಾಗಿಯೆ ಭರತನ ಕ್ಷೇಮಕಾತರೆಯಾಗಿ ಅಂತರಿಕ್ಷದಲ್ಲಿ ವಿಹರಿಸುತ್ತಾಳೆ. ಪ್ರೇಮ ಬಾಳನ್ನು ಹೇಗೆ ಪೋಷಿಸುತ್ತದೆ, ಆತ್ಮವನ್ನು ಹೇಗೆ ಶುದ್ದಿಗೊಳಿಸುತ್ತದೆ, ಮನಸ್ಸನ್ನೆಂತು ಉದಾತ್ತ ಗೊಳಿಸುತ್ತದೆ, ಪರಮಾತ್ಮನಲ್ಲಿ ಮಿಲನವಾಗಲು ಅದೆಂತು ನೆರವಾಗುತ್ತದೆಂಬುದಕ್ಕೆ ಮಂಥರೆಯ ಜೀವನ ರಮ್ಯೋಜ್ವಲ ನಿದರ್ಶನವಾಗಿದೆ.

ಕುವೆಂಪು ಅವರು ಲೋಕಕ್ಕೆ ನೀಡಿರುವ ಅತ್ಯುತ್ತಮ ಸಂದೇಶಗಳಲ್ಲಿ ಒಂದೆಂದರೆ ಯಾವ ವ್ಯಕ್ತಿಯೂ ಪೂರ್ಣವಾಗಿ ಕೆಟ್ಟವನಲ್ಲ, ಯಾವನೂ ಒಳ್ಳೆಯವನಲ್ಲ, ಪ್ರತಿಯೊಬ್ಬನ ಅಂತರಂಗದ ಗುಹೆಯಲ್ಲಿ ಒಳ್ಳೆಯತನ ಅವಿತಿದ್ದು, ಅಭಿವ್ಯಕ್ತಿಯ ಅವಕಾಶಕ್ಕಾಗಿ ಕಾಯುತ್ತಿದೆಯೆಂಬುದು; ಪರಿಶುದ್ಧವಾದ ಪ್ರೇಮ ಮಾತ್ರ ದುಸ್ಸ್ವಭಾವವನ್ನು ಸತ್‌ಸ್ವಭಾವ ವನ್ನಾಗಿ ಪರಿವರ್ತಿಸಿ, ಮಾನವ ದೇವತ್ತಕ್ಕೇರಲು ಅನುವು ಮಾಡಿಕೊಡುತ್ತದೆಂಬುದು. ಈ ಸಂದೇಶ ಈ ಕಾವ್ಯದಲ್ಲಿ ಸಾಕಾರ ಪಡೆದಿದೆಯೆಂಬುದಕ್ಕೆ ರಾವಣನ ಜೀವನವೇ ಶ್ರೇಷ್ಠ ನಿದರ್ಶನವಾಗಿದೆ. ರಾವಣ ರಾಕ್ಷಸನಾದರೂ ತಪಸ್ಸಿನ ಮೂಲಕ ಅಮೋಘಶಕ್ತಿಯನ್ನು ಸಂಪಾದಿಸಿದ್ದನೆಂಬ ಸಂಗತಿ ವಾಲ್ಮೀಕಿ ರಾಮಾಯಣದಲ್ಲಿಯೂ ಉಕ್ತಗೊಂಡಿದೆ. ಆದರೆ ರಾವಣ ಆ ಶಕ್ತಿಯನ್ನು ಭೌತಿಕ ಸುಖದ, ಲೈಂಗಿಕ ಭೋಗದ ತೃಪ್ತಿಗಾಗಿ ಬಳಸಿಕೊಳ್ಳುತ್ತಾನೆ. ಲೈಂಗಿಕ ವಿಕಾರದಿಂದಾಗಿ ತನ್ನ ಬಾಳು ದಾರಿತಪ್ಪಿತೆಂದೂ,[3] ತಾನು ಪರಿಸರಕ್ಕೆ ಬಲಿಯಾಗ ಬೇಕಾಯಿತೆಂದೂ ಅವನು ಮಾರೀಚನೊಡನೆ ಮಾತಾಡುವಾಗ ಒಪ್ಪಿಕೊಳ್ಳುತ್ತಾನೆ. ಅವನೊಡ್ಡಿದ ವ್ಯಾಮೋಹಗಳಿಗೆ[4] ಸೆರೆಯಾಗದ ಹೆಣ್ಣನ್ನವನು ಕಂಡವನೆ ಅಲ್ಲ. ಈ ಸಾಮಾನ್ಯ ನಿಯಮಕ್ಕೆ ಸೀತೆಯೊಬ್ಬಳೇ ಅಪವಾದ. ಅವನೊಡ್ಡಿದ ಆಕರ್ಷಣೆಗಳಿಗಾಗಲಿ, ತರ್ಜನೆ ಗರ್ಜನೆಗಳಿಗಾಗಲಿ ಅವಳು ಜಗ್ಗುವುದಿಲ್ಲ. ಶೀಲಭಂಗಳಾಗಿ ಬಾಳುವುದಕ್ಕಿಂತ ಸಾಯುವುದೇ ಲೇಸೆಂದು ಅವಳು ತೀರ್ಮಾನಿಸುತ್ತಾಳೆ. ಅವಳ ಮಾತೃಪ್ರೇಮ ಮತ್ತು ಪ್ರಾರ್ಥನೆಗಳ ಮುಂದೆ ಅವನ ಸಾರ್ವಭೌಮಾಹಂಕಾರ ಕಾಲಕ್ರಮೇಣ ಕುಸಿದು, ವಿನಯಶ್ರೀಯಾಗಿ ಪರಿಣಮಿ ಸುತ್ತದೆ.[5] ಕೊನೆಗೆ ಅವನು ಸೀತೆಯನ್ನು ದೇವತೆ, ಮಾತೆ ಎಂದು ಕರೆಯುತ್ತಾನೆ.

ಯುದ್ಧಪೂರ್ವದಲ್ಲಿ ರಾವಣ ಕರೆದ ದೈತ್ಯಸಭೆ ಅವನ ಜೀವನದಲ್ಲೊಂದು ತಿರುವು ಬಿಂದುವಾಗುತ್ತದೆ. ಅನಂತರ ಪ್ರಾರಂಭವಾದ ಅವನ ಅಂತರಂಗದ ತುಮುಲ ಅನೇಕ ಘಟನಾವಳಿಗಳಿಂದಾಗಿ ತೀವ್ರಗೊಂಡು, ಕೊನೆಗೆ ದೈತ್ಯ ಸ್ವಭಾವದ ಉದಾತ್ತೀಕರಣದಲ್ಲಿ ಪರ್ಯವಸಾನವಾಗುತ್ತದೆ. ರಾಮನಿಗೆ ಸೀತೆಯನ್ನೊಪ್ಪಿಸದಿದ್ದಲ್ಲಿ ತಾನು ಸಹಕರಿಸುವುದಿಲ್ಲವೆಂಬ ವಿಭೀಷಣನ ನಿರ್ಣಯ, ತನ್ನ ಹೃದಯಕ್ಕೆ ತೀರ ಹತ್ತಿರದವಳಾದ ಅನಲೆಯ ಅಗಲಿಕೆಯ ಕಲ್ಪನೆ, ಹಾಗೂ ಯುದ್ಧ ಭೂಮಿಯಲ್ಲಿ ಮಡಿದ ಮಕ್ಕಳ ವ್ಯಾಕುಲ ಅವನ ರಾಗ ಭಾವಗಳನ್ನು ಪರಿಶುದ್ಧಗೊಳಿಸಿ, ಆತ್ಮಸಾಕ್ಷಾತ್ಕಾರದ ಕಡೆಗೆ ಅವನನ್ನು ತಿರುಗಿಸುತ್ತವೆ. ಮರಣೋನ್ಮುಖಳಾಗಿದ್ದ ಧಾನ್ಯಮಾಲಿನಿಯ ನಿಂದೆಯನ್ನು ಕೇಳಿದಾಗ ಅವನು ಪಶ್ಚಾತ್ತಾಪದಿಂದ ಭೂಮಿಗಿಳಿದು ಹೋಗುತ್ತಾನೆ.[6] ದಿವಂಗತ ಸುತ ಇಂದ್ರಜಿತುವಿನ ದರಹಸಿತ ವದನದ ಕೈಕೂಸನ್ನು ಎದೆಗಪ್ಪಿಕೊಂಡಾಗ ಭೀತಿ ಕರುಣೆಗಳಿಂದ ವ್ಯಾಪ್ತವಾದ ಅವನ ಹೃದಯ ಡವಡವನೆ ಹೊಡೆದುಕೊಳ್ಳುತ್ತದೆ. ಪತಿಯ ಆತ್ಮೋದ್ಧಾರ ಕಾತರೆಯಾಗಿ ಸದಾ ಪ್ರಾರ್ಥನಾ ನಿರತಳೂ ಶಿವಪೂಜಾನುರಕ್ತಳೂ ಆದ ಸತಿ ತಪಸ್ವಿನಿ ಮಂಡೋದರಿಯನ್ನು ನೋಡಿದಾಗ ಅವನ ಹೃದಯ ಜರ್ಝರಿತವಾಗುತ್ತದೆ. ಅವನು ಅವಳಲ್ಲಿ ತನ್ನ ಉದ್ಧಾರಕ ಶಕ್ತಿಯನ್ನೂ, ನೈತಿಕಗುರುವನ್ನೂ, ಋತಚಿನ್ಮೂ ಜಗನ್ಮಾತೆಯನ್ನೂ ಕಾಣುತ್ತಾನೆ. ಕೊನೆಗೆ ಅವನು ಅವಳ ಮೊರೆಗೆ ಶರಣಾಗುತ್ತಾನೆ. ಅವನ ಕೀಳು ಸ್ವಭಾವ ದೇವತ್ವದ ಶಿಖರಕ್ಕೇರುತ್ತದೆ. ಅವನು ಸೀತೆಯಲ್ಲಿ ತನ್ನ ಮಾತೃದೇವತೆಯನ್ನು ಕಾಣುತ್ತಾನೆ. ಅವನ ಅಭೀಪ್ಸೆ ಕನಸಿನ ಮೂಲಕ ಅಭಿವ್ಯಕ್ತವಾಗುತ್ತದೆ. ಅವನ ಆತ್ಮ್‌ನ್ನತ್ಯವನ್ನು ಕಂಡ ಮಂಡೋದರಿ ಅವನ ಹೃದಯ ಪರಿವರ್ತನೆಯ ಸಂಗತಿ ಶತ್ರುವಿಗರಿವಾಗಲೆಂದು ಗಂಡನನ್ನು ಬೇಡಿಕೊಳ್ಳುತ್ತಾಳೆ. ಹೇಡಿಯಂತೆ ಶತ್ರುವಿಗೆ ಶರಣಾಗತನಾಗುವುದು ಅವನಿಗಿಷ್ಟವಿಲ್ಲ. ಯುದ್ಧದಲ್ಲಿ ರಾಮನನ್ನು ಸೋಲಿಸಿ, ತಂದು ಸೀತೆಗೆ ಕಾಣಿಕೆಯಾಗಿ ನೀಡುವುದೆಂದು ಯೋಚಿಸುತ್ತಾನೆ. ಅದರಿಂದಾಗಿ ತಾನೇ ಸೇನಾಧಿಪತಿ ಪಟ್ಟದ ಹೊಣೆಯನ್ನು ಹೊತ್ತು ಯುದ್ಧರಂಗವನ್ನು ಹೊಕ್ಕು, ಮನಸಾರೆ ರಾಮನೊಡನೆ ಹೋರಾಡಿ, ಅವನನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಾನೆ. ಅದೇ ಸಮಯದಲ್ಲಿ ರಾಮಹಸ್ತಚ್ಯುತ ದಿವ್ಯಬಾಣ ಅವನ ಎದೆಯಲ್ಲಿ ನಾಟಿಕೊಳ್ಳುತ್ತದೆ. ರಾಮಾಸ್ತ್ರ ವನ್ನೆ ರಾಮನೆಂದು ಬಗೆದ ರಾವಣ ಅದನ್ನು ಮುಷ್ಟಿಯಲ್ಲಿ ಹಿಡಿದುಕೊಂಡು ಅರಮನೆಗೆ ಧಾವಿಸಿ, ತಾನು ರಾಮನನ್ನು ಸೆರೆಹಿಡಿದುಕೊಂಡು ತಂದಿರುವುದಾಗಿ ಅಟ್ಟಹಾಸಗೈದು, ಅವನನ್ನು ಮಂಡೋದರಿಯ ವಶಕ್ಕೊಪ್ಪಿಸಲು ಕಾತರಿಸುತ್ತಾನೆ. ಮಂಡೋದರಿ ರಾಮಾಸ್ತ್ರ ವನ್ನು ಹೊರಗೆಳೆದ ಕೂಡಲೇ ರಾವಣ ಕೊನೆಯುಸಿರೆಳೆಯುತ್ತಾನೆ. ರಾವಣನ ಮೇಲೆ ಬಾಣ ಪ್ರಯೋಗ ಮಾಡಿದ ಸಮಯದಲ್ಲಿ ಮೂರ್ಛೆಗೊಂಡಿದ್ದ ರಾಮ ರಾವಣನ ದೇಹಮುಕ್ತ ಆತ್ಮತನ್ನ ದೇಹವನ್ನು ಪ್ರವೇಶಿಸುತ್ತಿದ್ದಂತೆ ಎಚ್ಚತ್ತುಕೊಳ್ಳುತ್ತಾನೆ. ಸಚ್ಚಿದಾನಂದ ಸಿದ್ದಿಯನ್ನು ಪಡೆದನಂತರ ರಾವಣನ ಯಾತ್ರೆ ಕೊನೆಗೊಳ್ಳುತ್ತದೆ.

ಶಬರಿ ವಾಲಿಯರ ಪ್ರಸಂಗಗಳೂ ಇದೇ ರೀತಿ ಮೂಲದಿಂದ ತೀರ ಭಿನ್ನವಾಗಿವೆ. ದೊರೆ ಮಕ್ಕಳ ವೇಷ ಭೂಷಣಗಳಲ್ಲಿ ರಾಮಲಕ್ಷ್ಮಣರು ಪ್ರತ್ಯಕ್ಷರಾಗುತ್ತಾರೆಂದು ನಿರೀಕ್ಷಿಸಿ ಕೊಂಡಿದ್ದ ಶಬರಿಯ ಮುಂದೆ ಅವರು ಮಲಿನವಸನಧಾರಿಗಳಾಗಿ ಅಲೆಮಾರಿಗಳಂತೆ ಕಾಣಿಸಿಕೊಂಡಾಗ ಅವಳಿಗೆ ಸೋಜಿಗವಾಗುತ್ತದೆ. ರಾಮನ ರುಜಿನವನ್ನು ಕಂಡು ಭಯ ವಿಹ್ವಲೆಯಾದ ಅವಳು ಅವನ ಆರೋಗ್ಯಕ್ಕಾಗಿ ತನ್ನ ಪ್ರಾಣವನ್ನು ಪಣವೊಡ್ಡಲು ಸಂಕಲ್ಪ ಚಿತ್ತಳಾಗುತ್ತಾಳೆ. ತನ್ನ ಸಂಕಲ್ಪವನ್ನು ಕಾರ್ಯಗತಗೊಳಿಸುವಲ್ಲಿ ಶಬರಿ ತೀರಿಕೊಳ್ಳುತ್ತಾಳೆ, ಶ್ರೀರಾಮ ಹೊಸಜೀವನವನ್ನು ಪ್ರವೇಶಿಸುತ್ತಾನೆ.

ಮರದ ಹಿಂದೆ ಕದ್ದು ನಿಂತು ವಾಲಿಯ ಬೆನ್ನಿಗೆ ಬಾಣ ಪ್ರಯೋಗ ಮಾಡಿದಾಗ ರಾಮ ತಾತ್ತ್ವಿಕ ವಿವರಣೆ ನೀಡುತ್ತಾನೆ.

ನಿರ್ಲಕ್ಷಿಸುತೆ ದೈವಮಂ, ಪ್ರತಿಭಟಿಸಿ
ದೈವೀ ಪರಂಗಳಂ ಶಕ್ತಿಯಂ, ನೆಮ್ಮುತ್ತೆ
ತನ್ನಹಂಕಾರಮಂ ಸ್ವಬಲಮಂ ಸ್ವಾರ್ಥಮಂ
ಚಲದಿಂ ವಿರೋಧಿಸಲ್ ವೈರ ಭಾವವನಾಂತ
ಆಸುರೀ ಸಾಧನೆಯ ದೈವೀವಿಮುಖಮಪ್ಪ
ಲೌಕಿಕ ಪರಾಕ್ರಮದ ಶಿಕ್ಷಾರಕ್ಷೆಗಿನ್ನಿಹುದೆ,
ಪೇಳ್, ಕೃಪಾಬಾಣಕ್ಕೆ ಬೆನ್ನಲ್ಲದನ್ಯಲಕ್ಷ್ಯಂ
ತುದಿಗೆ?             -ಶ್ರೀ.ರಾ.ದ. ಸಂಪುಟ ೨, ಸಂಚಿಕೆ ೬

ಈ ವಿವರಣೆ ಅಸಾಧುವಲ್ಲ ನಿಜ. ಆದರೆ ಲೌಕಿಕವಾಗಿ ಯೋಚಿಸಿದಾಗಲೂ ರಾಮನಿಗೆ ತನ್ನ ತಪ್ಪು ತಿಳಿಯುತ್ತದೆ.

ಮನ್ನಿಸೆನ್ನಂ, ಮಹಾ
ವೀರ! ತಪ್ಪಿದೆನಯ್ಯಿ, ಬ್ರಹ್ಮವರದಾ ಬಲೆಗೆ
ಸಿಲ್ಕಿ, ನಿನಗಾ ವರವೆ ಶಾಪಮಾದುದೊ! ಕೀರ್ತಿ
ಮಸುಳಿಸುವವೋಲೆನ್ನನಡಗಿಸಿತೊ! ಮರೆವೊಕ್ಕೆನಾ
ಮರಕೆ! ಮಾಡಿದ ತಪ್ಪನೊಪ್ಪಿ ಕೊಳ್ವುದೆ ಲೌಕಿಕದ
ಬೀರಕ್ಕೆ ಸಲ್ಲಕ್ಷಣಂ          -ಅದೇ, ಸಂಪುಟ ೨, ಸಂಚಿಕೆ ೬

ಎಂದು ನುಡಿದಾಗ ರಾಮನ ಘನತೆ ಮುಗಿಲಿಗೇರುತ್ತದೆ. ಸೀತಾ ವಿಯೋಗದ ದುಃಖದಿಂದಾಗಿ ತನ್ನ ಬುದ್ದಿಗೆ ಮಂಕು ಕವಿದಿತ್ತೆಂದು ಅವನು ಒಪ್ಪಿಕೊಳ್ಳುತ್ತಾನೆ. ವಾಲಿ ರಾಮನ ಔದಾರ್ಯ ದಿಂದ ಸುಪ್ರೀತನಾಗುತ್ತಾನೆ. ಇಲ್ಲಿಯೂ ಪ್ರೇಮಕ್ಕೆ ವಿಜಯವೆಂಬುದನ್ನು ಮರೆಯುವಂತಿಲ್ಲ.

ಕೊನೆಯಲ್ಲಿ ಸೀತೆಯ ಅಗ್ನಿಪ್ರವೇಶ ಪ್ರಸಂಗವೂ ರಾಮನ ಹಿರಿಮೆಗೆ ಸಾಕ್ಷಿಯಾಗಿದೆ. ಲೋಕದ ದೃಷ್ಟಿಯಿಂದ ಪತ್ನಿಯ ಅಗ್ನಿ ಪರೀಕ್ಷೆ ದೋಷಯುಕ್ತವಾಗಿ ಕಾಣದಿದ್ದರೂ, ಸೀತೆಯಂಥ ಸಾಧ್ವಿಯನ್ನು ಅಂಥ ಪರೀಕ್ಷೆಗೊಳಗುಮಾಡುವುದು ತರವೆ ಎಂದು ಯಾರಿ ಗಾದರೂ ಅನಿಸದಿರದು. ಮಡದಿಯ ಜತೆಗೆ ರಾಮ ತನ್ನನ್ನು ಸಹ ಪರೀಕ್ಷಿಸಿಕೊಂಡ ಸಂದರ್ಭ ವಂತು ಬೇರೆಲ್ಲಿಯೂ ಕಾಣದಂಥದು. ಇಲ್ಲಿಯೂ ಪ್ರೇಮಕ್ಕೆ ಮಾತ್ರ ಪಟ್ಟ. ಭರತ ಊರ್ಮಿಳೆ ಕೈಕೆ ಲಕ್ಷ್ಮಣ ಮಾತ್ರವಲ್ಲ, ವಹ್ನಿರಂಹರಂಥ ಸಾಧಾರಣ ಸೈನಿಕರು ಸಹ ಒಟ್ಟಿಗೆ ಪ್ರೇಮಸೂತ್ರದಲ್ಲಿ ಬಂಧನಗೊಂಡಿದ್ದಾರೆ. ಜಗತ್ತಿನ ಸಕಲ ಅರಿಷ್ಟಗಳಿಗೆ ಪ್ರೇಮವೊಂದೇ ಸಿದ್ಧೌಷದ, ಅದು ಮಾತ್ರ ಮಾನವನನ್ನು ಅತಿಮಾನವತ್ವಕ್ಕೆ ಕೊಂಡೊಯ್ಯಬಲ್ಲುದೆಂಬುದೇ ಈ ಮಹಾಕಾವ್ಯದ ಸಂದೇಶವಾಗಿದೆ. ಪೂರ್ಣದೃಷ್ಟಿಯ ಆಧಾರದ ಮೇಲೆ ವಿವಾದಾಸ್ಪದವಾದ ಸಂಗತಿಗಳ ಸಮನ್ವಯೀಕರಣವೇ ಈ ಕಾವ್ಯದ ಸಿದ್ದಿಯೆಂದು ಹೇಳಬಹುದಾಗಿದೆ. ಆರ್ಯ ದ್ರಾವಿಡ ಸಂಸ್ಕೃತಿಗಳ ಸಂಘರ್ಷವಂತು ಇಲ್ಲಿ ಕಾಣೆಯಾಗಿದೆಯೆಂಬುದು ಗಮನೀಯವಾದ ಅಂಶವಾಗಿದೆ. ವಿಷಯಲೋಲುಪತೆ ದೈತ್ಯ ಸಂಸ್ಕೃತಿಯ ಲಕ್ಷಣವಾಗಿ ಕಂಡುಬಂದರೂ ಅದು ಸುಸಂಸ್ಕೃತವಾದದ್ದೆಂಬುದನ್ನು ಮರೆಯುವಂತಿಲ್ಲ.

ಶ್ರೀರಾಮಾಯಣದರ್ಶನಂ ಮಹಾಕಾವ್ಯ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯಲ್ಲ; ಐತಿಹಾಸಿಕ ಕಾವ್ಯವೂ ಅಲ್ಲ.[7] ರಾವಣನನ್ನಾಗಲಿ ಕೆಲವು ರಾಕ್ಷಸರನ್ನಾಗಲಿ ಕೊಲ್ಲಲೆಂದೇ ರಾಮ ಜನಿಸಿದನೆಂದು ತಿಳಿಯುವುದು ಮೂರ್ಖತನವಾಗುತ್ತದೆ. ಅಂಥ ಕೊಲೆ ಅವತಾರದ ದೃಷ್ಟಿಯಿಂದ ಜಘನ್ಯಕ್ರಿಯೆಯಾಗುತ್ತದೆ. ಕೊಲೆ ಖಂಡಿತವಾಗಿ ಅವತಾರದ ಉದ್ದೇಶವಲ್ಲ. ಭೂಮಿಯಲ್ಲಿ ದೇವರ ರಾಜ್ಯವನ್ನು ಸಂಸ್ಥಾಪನೆ ಮಾಡುವ, ಅಂತೆಯೇ ಮಾನವನ ಊರ್ಧ್ವಮುಖ ಯಾತ್ರೆಯನ್ನು ಪ್ರೋಸಲುವಾಗಿ ಅದು ಭೂಗಾಮಿಯಾಗುತ್ತದೆ. ಲೌಕಿಕ ಸ್ತರದಿಂದ ಸಚ್ಚಿದಾನಂದದ ಸ್ತರದವರೆಗೆ ಆತ್ಮ ಕೈಗೊಳ್ಳುವ ಯಾತ್ರೆಯ ಸಾಂಕೆತಿಕ ನಿರೂಪಣೆಯೇ ಶ್ರೀರಾಮಾಯಣದರ್ಶನಂ ಮೇರುಕೃತಿ. ನಿತ್ಯರಾಮ ಮಾತ್ರ ಮೂಲಭೂತ ಸತ್ಯವೆಂಬುದನ್ನೂ, ದಶರಥ ಪುತ್ರ ರಾಮ ಕೆವಲ ಒಂದು ವ್ಯಕ್ತಿ ಎಂಬುದನ್ನೂ ಒಪ್ಪಿಕೊಳ್ಳ ಬೇಕಾಗುತ್ತದೆ. ರಾಮ ಸ್ವರ್ಗೀಯ ಪ್ರೇಮವನ್ನು ಪ್ರತಿನಿಧಿಸಿದರೆ, ಸೀತೆ ಭೂತತ್ತ್ವದ ಸಂಕೇತವಾಗಿದ್ದಾಳೆ. ಆಂಜನೇಯ ಪ್ರಾಣಶಕ್ತಿಯ ಕುರುಹಾಗಿದ್ದಾನೆ. ಈ ಪ್ರಾಣಶಕ್ತಿ ಅಲೌಕಿಕ ಶಕ್ತಿಯೊಡನೆ ಮೃಚ್ಛಕ್ತಿಯನ್ನು ಸೇರಿಸುವ ಸೇತುವೆಯಾಗುತ್ತದೆ. ಅವಿದ್ಯೆಯ ಸಂಕೇತ ರಾವಣ. ಅಲೌಕಿಕ ಶಕ್ತಿಯೊಡನೆ ಮೃಚ್ಛಕ್ತಿಯನ್ನು ಸೇರಿಸುವಲ್ಲಿ ಪ್ರತಿಬಂಧಕವಾಗಿ ಪರಿಣಮಿಸುವ ಅವಿದ್ಯೆ ಸಹ ತನ್ನ ಕಾಳಿಕೆಯನ್ನು ಕಳೆದುಕೊಂಡು, ಪರಾವಿದ್ಯೆಯಲ್ಲಿ ಐಕ್ಯವಾಗುತ್ತದೆ.[8] ಈ ಕೃತಿಯಲ್ಲಿ ಕಾಣುವ ಸಕಲ ವ್ಯತ್ಯಾಸಗಳಿಗೆ ಅದರ ನಾಡಿನಾಡಿಗಳಲ್ಲಿ ಪ್ರವಹಿಸುತ್ತಿರುವ ಪ್ರೇಮವೇ ಮೂಲಕಾರಣ. ಅದು ತಿರೋಹಿತವಾದಾಗ ಇಡೀ ಜಗತ್ತು ವಿಲಯದ ಅಂಚನ್ನು ಸೇರುತ್ತದೆ. ಈ ಕೃತಿ ಚಾರಿತ್ರಕ ಸಂಗತಿಗಳ ಸರಮಾಲೆಯಾಗಿರದೆ, ಪರಿಪೂರ್ಣತಾ ಸಿದ್ದಿಗಾಗಿ, ವಿಶ್ವಸತ್ಯದ ಅಭಿವ್ಯಕ್ತಿಗಾಗಿ ರೂಪಗೊಂಡ ಸಂಕೇತಗಳ ಕಲಾತ್ಮಕ ನಿರೂಪಣೆಯಾಗಿದೆ. ಈ ಕೃತಿಯನ್ನು ಅಧ್ಯಯನ ಮಾಡುವಾಗ ಅರವಿಂದ ದರ್ಶನದ ಪ್ರಭಾವ ಇದರ ಮೇಲೆ ಮುದ್ರೆಯೊತ್ತಿದೆಯೆಂದು ಯಾರಿಗಾದರೂ ಅನಿಸದಿರದು. ಅರವಿಂದರ ‘ದಿವ್ಯ ಜೀವನ’ವಾಗಲಿ ಅವರ ಇತರ ಕೃತಿಗಳಾಗಲಿ ಕುವೆಂಪು ಅವರ ಗಮನಕ್ಕೆ ಬಂದಾಗ ಅವರು ಮಹಾಕಾವ್ಯ ರಚನೆಯಲ್ಲಿ ಬಹುದೂರ ಸಾಗಿದ್ದರೆಂಬ ಸಂಗತಿಯನ್ನು ಮರೆಯುವಂತಿಲ್ಲ. ಶ್ರೀರಾಮಾಯಣ ದರ್ಶನಂ ಪ್ರಕಟವಾದ ಕೆಲವು ವರ್ಷಗಳ ನಂತರ ಅರವಿಂದರ ಮಹಾಕೃತಿ ‘ಸಾವಿತ್ರಿ’ ಹೊರ ಬಿತ್ತೆಂಬುದೂ ಗಮನಿಸಬೇಕಾದ ವಿಚಾರ. ‘ಕಥನ ಕಲೆಯ ಸೌಂದರ್ಯದಲ್ಲಿ, ನಾದ ಗಾಂಭೀರ್ಯ ದಲ್ಲಿ, ಲಯ ಮನೋಹರತೆಯಲ್ಲಿ ಶ್ರೀ ರಾಮಾಯಣದರ್ಶನಂ ಸಿದ್ದಿಯ ಶಿಖರವನ್ನು ಮುಟ್ಟಿದೆ. ಭಾಷಾ ಪ್ರಯೋಗ ಕೌಶಲದಲ್ಲಂತು ಯಾವ ಕವಿಯೂ ಅವರನ್ನು ಮೀರಿಸಿಲ್ಲ. ‘ಕುವೆಂಪು ಅವರ ಮೂಲಕ ಪ್ರಾಂತೀಯ ಸಾಹಿತ್ಯ ಸ್ಥಳೀಯ ಸಂಕುಚಿತತೆಯಿಂದ ಪಾರಾಗಿ, ವಿಶ್ವತ್ವದ ಸೀಮೆಯನ್ನು ಮುಟ್ಟಿದೆ’ ಎಂಬ ಪ್ರಾಧ್ಯಾಪಕ ಹೊಸಕೋಟೆಯವರ ಪ್ರಶಂಸೋಕ್ತಿ ಮನೋವಿಕಾರದ ವಿಮರ್ಶಕರಿಗೆ ಸವಾಲಾಗಿದೆ.

* * *

 


[1]    ಯುಗಯುಗದಿ ಸಂಭವಿಪೆನೆಂಬ ಭಗವದ್ದಿವ್ಯಮಾ
ವಚನಮೇಂ ನರರೂಪ ಮಾತ್ರಕ್ಕೆ ಮುಡಿಪೆ, ಪೇಳ್?
ನರಸಿಂಹ ಮತ್ಸ್ಯ ಕೂರ್ಮಾದಿ ಚರಮಾಲೀಲೆಗೇಂ
ಪೊರತೆ ಈ ಕೃತಿರೂಪಮಾ ಭಗವದಾವಿರ್ಭಾವ
ಬಹುರೂಪ ಸೂತ್ರತೆಗೆ? ರಾಮಂಗೆ ಮೊದಲಲ್ತೆ
ರಾಮಾಯಣಂ? ಮುನ್ನಲ್ತೆ, ಪಿರಿದಲ್ತೆ, ಮೆಯ್ಯಲ್ತೆ,
ಮನೆಯಲ್ತೆ ರಾಮಾಯಣಂ? ರಾಮನಾಮದ ಮಹಿಮೆ
ರಾಮಂಗೆ ಮಿಗಿಲೆಂಬ ವೋಲ್ ರಾಮಾವತಾರಕಿಂ
ಗುರುತರಂ ತಾನೈಸೆ ರಾಮಾಯಣಾವತಾರಂ!  -ಶ್ರೀ.ರಾ.ದ ಸಂಪುಟ ೪, ಸಂಚಿಕೆ ೧೩

[2]                                   ಬಹುಜನರ ಪೆರ್ಬಯಕೆ
ಕಲ್ಪವೃಕ್ಷದ ಕೊಂಬೆಯನೆ ಕಚ್ಚಿ ಸೆಳೆದಿಳೆಗೆ
ಫಲದಮೃತಮಂ ಮಳೆಗರೆಯದಿಹುದೆ? ಜನಮನಮೆ
ಯುಗಶಕ್ತಿಯಲ್ತೆ? ತಾನಾಶಕ್ತಿಮೂರ್ತಿಗೊಳೆ
ನಾಮದನ್ನವತಾರಮೆಂದು ಪೂಜಿಪೆವಲ್ತೆ ಪೇಳ್,
ವ್ಯಷ್ಟಿರೂಪದಿನಿಳಿದ ಸೃಷ್ಟಿಯ ಸಮಷ್ಟಿಯಂ?   -ಅದೇ, ಸಂಪುಟ ೧, ಸಂಚಿಕೆ ೧

[3]    ಮಾವಯ್ಯ, ಕೇಳೊರೆವೆನೆನ್ನಾತ್ಮ ಚರಿತಮಂ,
ಮನ್ಮನೋದುರಿತಮಂ, ಪುಟ್ಟುವಾಗಳೆಯೆ ನಾಂ
ನೆತ್ತರೊಳೆ ಪೆಣ್ಣೊಡಲಿನಾಸೆಯಾ ಬೇಟಮಂ
ಪೊತ್ತು ಪುಟ್ಟಿದೆನೈಸೆ!                     -ಶ್ರೀ. ರಾ.ದ.ಸಂಪುಟ ೨, ಸಂಚಿಕೆ ೧

[4]    ರಾಕ್ಷಸೇಶ್ವರನ ಮೈಸಿರಿಗೆ,
ವಿತ್ತೇಶ ಜೇತನೈಸಿರಿಗೆ, ದಿಕ್ಪಾಲರಂ
ಗೆಲ್ದ ಪೆಂಪಿಗೆ, ನಿಖಿಲ ಭೂಮಿನಾಥರನೊತ್ತಿ
ಬಾಯ್ಕೇಳಿಸಿದ ಯಶೋ ವೈಭವಕೆ, ರಾವಣನ
ರಸಿಕತೆಗೆ, ಸತ್ತ್ವಕ್ಕೆ, ವೀರ್ಯಕ್ಕೆ, ತೇಜಕ್ಕೆ,
ಜೌವನಕೆ ಕಂಡೆನಿಲ್ಲಾನೊರ್ವಳಂ, ನನಗೆ
ಮೆಚ್ಚಿವಶವಾಗದಿರ್ದಾ ಪವಿತ್ರಾಂಗಿಯಂ -ಅದೇ, ಸಂಪುಟ ೨, ಸಂಚಿಕೆ ೧

[5]    ನಿನಗಿಂ ಮಿಗಿಲ್ ಸೀತೆ
ನನಗೆ ದೇವತೆ, ಮಾತೆ! ಶ್ರದ್ಧೆಗೆಟ್ಟಿರ್ದೆನಗೆ
ಶ್ರದ್ಧೆಯಂ ಮರುಕೊಳಿಸುತಾತ್ಮದುದ್ಧಾರಮಂ
ತಂದ ದೇವತೆ, ಪುಣ್ಯಮಾತೆ             -ಅದೇ, ಸಂಪುಟ ೪, ಸಂಚಿಕೆ ೭

[6]    ತನ್ನ ಕಾಮಾತಿಶಯದಿಂದೆ
ಶವದ ಸಹವಾಸದೊಳ್ ಭೋಗಿಯಾಗಿರ್ದವಂ
ಬೋಧೆ ತಿಳಿದೇಳುತೆ ಜುಗುಪ್ಸೆಯಿಂದತಿ ನಾಣ್ಚಿ
ಯೂತನಾ ಪಂಕದೊಳಸಹ್ಯದೊಳುರುಳ್ವ ವೊಲ್
ಪಿಂತೆಂದುಮಾವ ಕಾರಣಕನುಭವಿಸದೊಂದು
ಮರ್ಮ ಘಾತದ ವೇಧೆಯಿಂ ನರಳ್ದನಾಳದಿಂ
ಮಂಡೋದರೀ ಪ್ರಿಯಂ                  -ಅದೇ, ಸಂಪುಟ ೪, ಸಂಚಿಕೆ ೫

[7]    ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು, ಅಲೌಕಿಕ ನಿತ್ಯಸತ್ಯಂಗಳಂ
ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ            -ಶ್ರೀ.ರಾ.ದ. ಶ್ರೀವೆಂಕಣ್ಣಯ್ಯನವರಿಗೆ

[8]    ಶ್ರೀ ರಾಮನಾ ಲೋಕದಿಂದವತರಿಸಿ ಬಂದು
ಈ ಲೋಕಸಂಭವೆಯನೆಮ್ಮ ಭೂಜಾತೆಯಂ
ಸೀತೆಯಂ ವರಿಸುತಾಕೆಯ ನೆವದಿ ಮೃಚ್ಛಕ್ತಿಯಂ
ಮರ್ದಿಸುತೆ, ಸಂವರ್ಧಿಸಿರ್ಪವೋಲ್ ಚಿಚ್ಛಕ್ತಿಯಂ;
ರಾವಣಾವಿದ್ಯೆಯೀ ನಮ್ಮ ಮರ್ತ್ಯಪ್ರಜ್ಞೆತಾಂ
ತನ್ನ ತಮದಿಂ ಮುಕ್ತಮಪ್ಪುದು ದಿಟಂ, ನಿಮ್ಮ
ದೀಪ್ಯದೈವೀ ಪ್ರಜ್ಞೆಯಮೃತ ಗೋಪುರ ಕೇರ್ವವೋಲ್ -ಶ್ರೀ.ರಾ.ದ. ಶ್ರೀವೆಂಕಟಣ್ಣಯ್ಯನವರಿಗೆ