‘ನೆನಪಿನ ದೋಣಿಯಲ್ಲಿ’ ಕುವೆಂಪು ಜೀವನದ ಸುಮಾರು ಮೊದಲ ಮೂರು ದಶಕಗಳ ಆತ್ಮಕತೆ. ಅವರೇ ಹೇಳುವಂತೆ ‘ನೆನಪು ಬಾಳಿನ ಬುತ್ತಿ; ಅನುಭವಗಳ ಅಕ್ಷಯ ನಿಧಿ’ ಎಂಬುದು ನಿಜ. ಆದರೆ ಜೀವನದ ಅನುಭವ ಸಮಸ್ತವೂ ಹಚ್ಚಹಸುರಾಗಿ ಕೊನೆಯ ತನಕ ನೆನಪಿನಲ್ಲುಳಿಯಲಾರವು. ದಿನಚರಿ ಮತ್ತು ಪತ್ರಗಳು ಹಳೆಯ ನೆನಪುಗಳಿಗೆ ಹಕ್ಕೆಗಳಾಗುತ್ತವೆ, ಹಾಗೂ ಆಸ್ಫೋಟಕ ಮಾಧ್ಯಮಗಳಾಗುತ್ತವೆ. ಅಷ್ಟೇ ಅಲ್ಲ, ಸಾಹಿತಿಯ ಸಾಹಿತ್ಯ ಕೃತಿಗಳೂ ನೆನಹುಸಿರಿಯ ಅಕ್ಷೂಣ ಚಿಲುಮೆಗಳಾಗಿರುತ್ತವೆ. ಆತ್ಮ ಕಥನಕಾರ ಅವುಗಳ ಮೇಲೆ ಕಣ್ಣಾಡಿಸುತ್ತಿದ್ದಂತೆ ಸುಪ್ತ ಪ್ರಜ್ಞೆಯಲ್ಲಿ ಹುದುಗಿರುವ ಹಳೆಯ ಅನುಭವಗಳು ಕಿಡಿ ತಗುಲಿದ ಮದ್ದಿನಂತೆ ಸಿಡಿಯುತ್ತವೆ. ಹೀಗಿರುವಾಗ ಈ ಆತ್ಮಕಥೆಯ ಒಂದೊಂದು ನೆನಪಿಗೂ ವಾಸ್ತವತೆಯ ಆಧಾರವಿದೆಯೆಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ.

ಕಾಲ ಮತ್ತು ಜೀವನ ವಿಭಿನ್ನವಲ್ಲ. ಜೀವನವಾಹಿನಿಯಲ್ಲಿ ನೆನಪಿನ ದೋಣಿ ತೇಲುತ್ತಿದೆ. ಚುಕ್ಕಾಣಿಯಿಲ್ಲದಾಗ ಅದು ಎತ್ತೆತ್ತಲೋ ಗೊತ್ತುಗುರಿಯಿಲ್ಲದೆ ಸಾಗುತ್ತದೆ. ಅಂಬಿಗ ಹುಟ್ಟು ಹಾಕಿದಾಗ ಅದಕ್ಕೆ ಸಾರ್ಥಕತೆಯೊದಗುತ್ತದೆ, ಸಾಫಲ್ಯತೆ ಸಮನಿಸುತ್ತದೆ, ನೆನಪಿನ ಗುರಿ ಈಡೇರುತ್ತದೆ. ‘ನೆನಪಿನ ದೋಣಿಯಲ್ಲಿ’ ನೆನಹುಗಳ ಗಣಿಯೂ ಅಹುದು, ಹೃದಯಾಹ್ಲಾದ ಕಾರಿಯಾದ ಚಿತ್ರ ಶಾಲೆಯೂ ಅಹುದು, ವರ್ಣನೆಗಳ ನಂದನವೂ ಅಹುದು, ಅಮೂಲ್ಯ ದಿನಚರಿ ಪತ್ರಗಳ ಸಂಗ್ರಹ ಶಾಲೆಯೂ ಅಹುದು, ಕವಿ ಚೇತನವಿಕಾಸದ ತಪೋಮಂದಿರವೂ ಅಹುದು. ಅದರಲ್ಲಿ ಕಾವ್ಯದ ರಮಣೀಯತೆಯಿದೆ, ಕಥೆಯ ಸೌಕುಮಾರ್ಯವಿದೆ, ಕಾದಂಬರಿಯ ವಿಲಾಸವಿದೆ, ನಾಟಕದ ಸಂಕೀರ್ಣತೆಯಿದೆ. ಕೆಲವೊಮ್ಮೆ ಹಿಂದಿನ ಘಟನೆಗಳನ್ನು ಸ್ಮರಿಸಿ ಕೊಳ್ಳುವಾಗ ಸಿನಿವಿೂಯ ತಂತ್ರ ನೆನಪಿಗೆ ಬರುತ್ತದೆ. ಕುವೆಂಪು ಅವರ ಅನೇಕ ಆಂಗ್ಲ ಮತ್ತು ಕನ್ನಡ ಭಾಷೆಗಳ ಅಪ್ರಕಟಿತ ಕವನಗಳ ಸೌಂದರ್ಯವನ್ನಾಸ್ವಾದಿಸುವ ಸುವರ್ಣಾವಕಾಶವೂ ಓದುಗರಿಗೊದಗುತ್ತದೆ.

ಕುವೆಂಪು ಅವರ ವಿದ್ಯಾಭ್ಯಾಸ ಪ್ರಾರಂಭವಾಗುವುದು ಮಲೆನಾಡಿನ ಮಡಿಲಿನಲ್ಲಿ, ಕುಪ್ಪಳಿಯ ಕೂಲಿ ಮಠದಲ್ಲಿ. ಆ ಮಠದ ಐಗಳ ಸವಿವರ ಸುಂದರ ವರ್ಣನೆ ‘ಮಲೆನಾಡಿನ ಚಿತ್ರಗಳು’ ಕೃತಿಯಲ್ಲಿ ದೊರಕುತ್ತದೆ. ಮೋಸಸ್ ಮೇಸ್ಟರು ‘ಮಾರ್ಕನ ಸುವಾರ್ತೆ’ಯನ್ನು ಅವರಿಗೆ ದಾನ ಮಾಡಿದಾಗ ‘ನನ್ನ ಬದುಕಿಗೆ ಒಂದು ಹೊಸ ಬಾಗಿಲು ತೆರೆದಂತಾಯ್ತು ಒಂದು ವಿಸ್ಮಯಕಾರಕ ನೂತನ ಪ್ರಪಂಚಕ್ಕೆ ಪ್ರವೇಶಿಸಿದಂತಾಯ್ತು. ನನ್ನ ಪ್ರಜ್ಞೆ….. ಭಗವಂತನು ಭೂಮಿಗಿಳಿದು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಇತ್ಯಾದಿಗಳನ್ನು ಕೇಳಿ ನನ್ನ ಚೇತನ ಭಕ್ತಿದೀಪ್ತವಾಯಿತು’ ಎಂದು ಕೃತಿಕಾರರು ಹೇಳಿಕೊಳ್ಳುತ್ತಾರೆ. ಗೆಳೆಯರೊಡನೆ ಕವಿಶೈಲಕ್ಕೇರಿ, ಕ್ರೈಸ್ತರು ಕೂರುವ ಭಂಗಿಯಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸುತ್ತಾರೆ.

ಮುಂದೆ ತೀರ್ಥಹಳ್ಳಿಯ ಮಾಧ್ಯಮಿಕ ಶಾಲೆಯ ಮೆಟ್ಟಿಲು ಹತ್ತಿದಾಗ ನಡೆದ ಕೆಲವು ಘಟನೆಗಳು ಕುವೆಂಪು ಅವರ ಎಳೆಯ ಮನಸ್ಸಿನ ಮೇಲೆ ಬೀರಿದ ಕ್ರೂರ ಪರಿಣಾಮಕ್ಕಾಗಿ ಉಲ್ಲೇಖನೀಯವಾಗಿವೆ. ಕೆರೆ ಕಟ್ಟೆಯೊಡೆದು, ನೀರು ಧಾರಾಕಾರವಾಗಿ ಸುತ್ತಲೂ ನುಗ್ಗುತ್ತಿದ್ದಾಗ, ಹಾವುಗಳು ಬಂಗಲೆಗಳ ಕಡೆಗೆ ಧಾವಿಸುತ್ತವೆ. ಆಗ ಬಾಲಕ ಪುಟ್ಟಪ್ಪ ಗೆಳೆಯರೊಡಗೂಡಿ ಕಲ್ಲೆಸೆದು ಓಡಿಸುತ್ತಾರೆ. ‘ಶೂದ್ರರ ಮಕ್ಕಳೆ ಹಾಗೆ’ ಎಂದು ಬ್ರಾಹ್ಮಣ ಮೇಷ್ಟರುಗಳು ಅವರನ್ನು ಆಡಿಕೊಳ್ಳುತ್ತಾರೆ. ಆ ಮಕ್ಕಳ ಸಾಹಸ ಕಾರ್ಯಕ್ಕಾಗಿ ಅವರನ್ನು ಪ್ರಶಂಸಿಸದೆ, ಮರುದಿನ ತರಗತಿಯಲ್ಲಿ ಮೇಷ್ಟರೊಬ್ಬರು ಅವರಿಗೆ ಛಡಿ ಯೇಟಿನ ಶಿಕ್ಷೆ ವಿಧಿಸುತ್ತಾರೆ.

ಜಾತಿ ಸೂಚಕವಾದ ಲಾಂಛನವನ್ನು ಹಣೆಯಲ್ಲಿ ಧರಿಸಿಕೊಂಡು ತರಗತಿಗೆ ಬರತಕ್ಕದ್ದೆಂದು ಕೆಲವು ಮೇಷ್ಟರು ವಿದ್ಯಾರ್ಥಿಗಳಿಗೆ ತಾಕೀತು ಮಾಡಿದ್ದರು. ಮೇಷ್ಟರ ಪೀಡೆಯನ್ನು ತಡೆಯಲಾರದೆ ಪುಟ್ಟಪ್ಪ ನಾಮ ಇಟ್ಟುಕೊಂಡು ಬರುತ್ತಿದ್ದ ವಿದ್ಯಾರ್ಥಿಯ ಹಣೆಗೆ ಬಲವಾಗಿ ತಮ್ಮ ಹಣೆಒತ್ತಿ ತರಗತಿಗೆ ಹೋಗುತ್ತಿದ್ದುದುಂಟು. ಆ ಸಂಗತಿ ಮೇಷ್ಟರಿಗೆ ತಿಳಿದಾಗ ಅವರ ಹೆಸರನ್ನು ಕೇಡಿ ರಿಜಿಸ್ಟರಿಗೆ ದಾಖಲು ಮಾಡುತ್ತಾರೆ; ಅಷ್ಟೇ ಅಲ್ಲ, ಅವರನ್ನು ಬೆಂಚಿನ ಮೇಲೆ ನಿಲ್ಲಿಸುತ್ತಾರೆ. ಮತ್ತೊಮ್ಮೆ ಹುಡುಗನೊಬ್ಬನ ನಾಮವನ್ನು ತಮ್ಮ ಹಣೆಯಲ್ಲಿ ಮುದ್ರಿಸಿಕೊಳ್ಳಲು ಬಳಿಗೈದಿಂದಾಗ ಅವನು ‘ಶೂದ್ರ’ ‘ಮುಟ್ಟಾಳ’ ಎಂದು ಪುಟ್ಟಪ್ಪನವರನ್ನು ಬೈಯುತ್ತಾನೆ. ಆಗ ಸಹಜವಾಗಿಯೇ ಕುಪಿತರಾದ ಪುಟ್ಟಪ್ಪನವರು ‘ನಿನ್ನ ಜನಿವಾರ ಕಿತ್ತುಹಾಕಿ, ಮುಖದ ಮೇಲೆ ಉಗುಳಿ ಜಾತಿ ಕೆಡಿಸುತ್ತೇನೆ’ ಎನ್ನುತ್ತಾರೆ. ಹಾಗೆ ಅಂದದ್ದಕ್ಕೂ ತರಗತಿಯಲ್ಲಿ ಅವರಿಗೆ ಬೆತ್ತದ ಸೇವೆಯಾಗುತ್ತದೆ.

ಮತ್ತೊಮ್ಮೆ ಮೇಷ್ಟರು ತರಗತಿಯಲ್ಲಿ ‘ಸಂಸ್ಕೃತ ತೆಗೆದುಕೊಳ್ಳುವವರೆಲ್ಲ ಎದ್ದು ನಿಲ್ಲಿ’ ಎಂದರು, ಇತರರ ಜತೆಯಲ್ಲಿ ಪುಟ್ಟಪ್ಪನವರೂ ಎದ್ದು ನಿಲ್ಲುತ್ತಾರೆ. ಸಂಸ್ಕೃತ ತೆಗೆದುಕೊಳ್ಳುವವರೆಲ್ಲ ಬೇರೆ ಕೋಣೆಗೆ ಹೋಗತಕ್ಕದ್ದೆಂದು ಮೇಷ್ಟರು ಆಜ್ಞೆ ನೀಡುತ್ತಾರೆ. ‘ಸಂಸ್ಕೃತ ಕಷ್ಟ ಕಣೋ. ಅದು ಬ್ರಾಹ್ಮಣರಿಗೆ ಮಾತ್ರ’ ಎಂದು ಜತೆಯವರು ಪುಟ್ಟಪ್ಪನವರನ್ನು ಹೆದರಿಸುತ್ತಾರೆ. ಶೂದ್ರರಿಗೆ ಯಾಕೋ ಸಂಸ್ಕೃತ ಎಂದು ಚುಚ್ಚುತ್ತಾರೆ. ರಿಜಿಸ್ಟರಿಗೆ ಹೆಸರು ಬರೆದುಕೊಳ್ಳುತ್ತಿದ್ದ ಮೂರು ನಾಮದ ಮೇಷ್ಟರು ‘ಶೂದ್ರ ಮಕ್ಕಳಿಗೆ ಬಾಯಿ ತಿರುಗುವುದೇ ಇಲ್ಲ! ಇವು ಸಂಸ್ಕೃತ ಕಲಿಯುತ್ತವಂತೆ! ನಿಲ್ಲೊ ಬೆಂಚಿನ ಮೇಲೆ!’ ಎಂದು ಅವರ ಉತ್ಸಾಹಕ್ಕೆ ತಣ್ಣೀರೆರಚುತ್ತಾರೆ.

ಯುದ್ಧ ನಿಧಿಗೆ ಹಣ ಕೂಡಿಸುವ ಸಲುವಾಗಿ ಆಡಿಸಿದ ‘ದಿ ಮರ್ಚೆಂಟ್ ಆಫ್ ವೆನಿಸ್’ ನಾಟಕದಲ್ಲಿ ಷೈಲಾಕ್‌ನ ಪಾತ್ರವಹಿಸುವ ಭಾರ ಪುಟ್ಟಪ್ಪನವರ ಹೆಗಲಿಗೆ ಬರುತ್ತದೆ. ನಾಟಕದಲ್ಲೆಲ್ಲ ದೀರ್ಘ ಸಂವಾದ ಷೈಲಾಕನದು. ಅದನ್ನು ಗಟ್ಟಿ ಮಾಡುವಾಗ ಅವರ ಕಣ್ಣಲ್ಲಿ ನೀರು ಹರಿಯುತ್ತದೆ. ‘ಅರ್ಥವಾಗದ ಅದನ್ನು ಬಾಯಿಪಾಠ ಮಾಡಲಾರದೆ ಅತ್ತೂ ಅತ್ತೂ, ಯಾಂತ್ರಿಕವಾಗಿ ಮಕ್ಕೀಕಾಮಕ್ಕಿಯಾಗಿ ಒಪ್ಪಿಸಿದುದೆ ನನ್ನ ಈಗಿನ ಇಂಗ್ಲಿಷ್ ವಿರೋಧಕ್ಕೆ ಗುಪ್ತಕಾರಣವಾಗಿರಬಹುದೇನೊ’(೫೩) ಎನ್ನುವ ಅವರ ಮಾತು ಭಾರತೀಯರಿಗೆಲ್ಲ ಅನ್ವಯಿಸುತ್ತದೆ.

ರಜೆಯಲ್ಲಿ ಊರಿಗೆ ಹೋದಾಗ ಗೋಪಾಲರೊಡನೆ ಕಾಡಿನಲ್ಲಿ ಸುತ್ತಾಡುತ್ತ, ದೊಡ್ಡವರೊಡನೆ ಬೇಟೆಗಾಗಿ ಹೋಗುತ್ತ, ಹೆಗಲೆಣೆಯ ಹುಡುಗರೊಡನೆ ಆಟವಾಡುತ್ತ ಸಂಪಾದಿಸುತ್ತಿದ್ದ ಅನುಭವ ವಿಶೇಷಗಳು ಅವರ ಬದುಕಿನ ಒಂದು ಭಾಗವಾಗಿವೆ. ಬ್ರಾಹ್ಮಣರ ಮನೆಗೆ ಹಿರಿಯರೊಡನೆ ಹೋದಾಗ ಅವರನುಭವಿಸುತ್ತಿದ್ದ ಅವಮಾನದ ಪ್ರಸಂಗಗಳಂತು ಗಾಯದ ಮಚ್ಚೆಗಳಂತೆ ಅವರ ನೆನಪಿನ ಬುತ್ತಿಯಲ್ಲಿ ಹುದುಗಿವೆ. ಶುಭ ಪ್ರಾಪ್ತಿಯ ಹೆಸರಿನಲ್ಲಿ ಪುರೋಹಿತರು ನಡೆಸುತ್ತಿದ್ದ ಶೋಷಣೆಯಂತು ಅವರೆಂದೂ ಮರೆಯುವಂತಿಲ್ಲ. ಶಂಕರಾಚಾರ್ಯರು ಹಸ್ತಾಮಲಕರಿಗೆ ಬೋಧಿಸಿದ್ದೆನ್ನಲಾದ ಉಪದೇಶವನ್ನು ಓದಿ ಕೆಲವು ದಿನ ಮಾಂಸಾಹಾರವನ್ನು ತ್ಯಜಿಸಿದ್ದೂ ಉಂಟು.

ಪ್ರೌಢಶಾಲೆಯ ಶಿಕ್ಷಣಕ್ಕೆಂದು ಅವರು ಮೈಸೂರಿಗೆ ಬಂದದ್ದು ೧೯೧೯ರಲ್ಲಿ. ಹಾರ್ಡ್‌ವಿಕ್ ಕಾಲೇಜು ಸೇರಿಕೊಂಡ ಅವರಿಗೆ ಒಕ್ಕಲಿಗರ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ದೊರೆಯುವುದಿಲ್ಲ. ಅವರು ಕ್ರಿಶ್ಚಿಯನ್ ಆಗಿದ್ದಿರಬೇಕೆಂಬ ನಿಲಯದ ಪಾರುಷತ್ಯಗಾರರ ಊಹೆಯೇ ಅದಕ್ಕೆ ಕಾರಣ. ಅಲ್ಲಿ ಪ್ರವೇಶ ದೊರೆಯದಿದ್ದುದೆ ಒಳಿತಾಯಿತೆಂದು ಕುವೆಂಪು ಸ್ಮರಿಸಿಕೊಳ್ಳುತ್ತಾರೆ. ಸಂಗಮಹಿಮೆಯಿಂದ ಅಧ್ಯಯನಕ್ಕೆ ತೊಂದರೆಯಾಗುತ್ತಿತ್ತೆಂದೂ, ಸಂಕುಚಿತ ಭಾವನೆ ಬೆಳೆಯಲವಕಾಶವಾಗುತ್ತಿತ್ತೆಂದೂ ಅವರು ಊಹಿಸುತ್ತಾರೆ. ಆ ಊಹೆ ನಿಜವಿರಲಿ, ಇಲ್ಲದಿರಲಿ, ಹೋಟಲಿನ ವಾಸ ಅವರ ಅನುಭವ ಕೋಶಕ್ಕೆ ಹೊಸ ಹೊಸ ಆಯಾಮಗಳನ್ನು ಜೋಡಿಸಿದ್ದಂತು ನಿಜ. ಭಗವಂತ ಸದಾ ಸುಖರೂಪಿಯಾಗಿಯೇ ಕಾಣಿಸಿಕೊಳ್ಳಬೆಕಾಗಿಲ್ಲ, ಕ್ಲೇಶರೂಪಿಯಾಗಿಯೂ ಗೋಚರಿಸುತ್ತಾನೆಂಬ ಸತ್ಯ ಅವರಿಗಲ್ಲಿ ಮನವರಿಕೆಯಾಗುತ್ತದೆ. ಆ ಶಾಲೆಯಲ್ಲಿದ್ದಾಗಲೇ ಅವರು ಆಂಗ್ಲ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ್ದು. ‘ರಾಬಿನ್‌ಸನ್‌ಕ್ರೂಸೋ’ ಓದುವ ಬಯಕೆ ಅವರನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ಎಳೆದೊಯ್ಯುತ್ತದೆ. ಆನಂತರ ಅದೇ ಅವರ ದಿನನಿತ್ಯದ ಯಾತ್ರಾ ಕ್ಷೇತ್ರವಾಗುತ್ತದೆ. ಅವರ ಬಾಳಿನ ತಿರುವಿಗೆ ಕಾರಣವಾದ ಸ್ವಾಮಿ ವಿವೇಕಾನಂದ ಶ್ರೀ ರಾಮಕೃಷ್ಣ ಪರಹಂಸರ ಸಾಹಿತ್ಯ ಮೊಟ್ಟಮೊದಲು ಅವರ ಕಣ್ಣಿಗೆ ಬಿದ್ದದ್ದು ಅಲ್ಲಿಯೇ. ಸುಬ್ಬಕೃಷ್ಣಯ್ಯ, ಸುಂದರ, ಸಪ್ತರ್ಷಿಅಯ್ಯರ್ ಮೊದಲಾದ ಅಧ್ಯಾಪಕರ ಮಾರ್ಗದರ್ಶನ ದಿಂದ ಅವರ ಸುಪ್ತ ಪ್ರಜ್ಞೆಯಲ್ಲಿ ಪವಡಿಸಿದ್ದ ಕಾವ್ಯಶಕ್ತಿ ಜಾಗೃತಗೊಳ್ಳುತ್ತದೆ. ತಾವು ಕಂಡುಂಡ ಆಲೋಚನೆಗಳನ್ನು ಗರ್ಭೀಕರಿಸಿ  ರಚಿಸಿದ ಕವನಗಳನ್ನು ಗೆಳೆಯರೊಡನೆ ಹಂಚಿಕೊಳ್ಳುತ್ತಾರೆ. ಸಂಜೆಯ ತಿರುಗಾಟ ವಿಚಾರ ವಿನಿಯಮಕ್ಕೆ ಅವಕಾಶವೊದಗಿಸುತ್ತದೆ. ನಡುನಡುವೆ ಸಿನಿಮಾ ಇಸ್ಪೀಟುಗಳೂ ಅವರಿಗೆ ಮನರಂಜನೆಯೊದಗಿಸುತ್ತವೆ. ನಶ್ಯದ ಅಭ್ಯಾಸವಂತು ಇದ್ದದ್ದೇ. ಬೈಬಲ್ ಪ್ರಶ್ನೆ ಪತ್ರಿಕೆಯ ಸಂಬಂಧವಾಗಿ ಉತ್ತರ ಬರೆಯುತ್ತ ಕ್ರೈಸ್ತ ಮತವನ್ನು ಖಂಡಿಸಿ, ಪ್ರಿನ್ಸಿಪಾಲರ ಕಣ್ಣಿಗೆ ಬೀಳುತ್ತಾರೆ. ಸ್ವಾತಂತ್ರ್ಯ ಸಮರದ ಕಹಳೆಗೆ ಅವರು ಓಗೊಟ್ಟದ್ದುಂಟು.

ಕಾಲೇಜು ವ್ಯಾಸಂಗದ ಅವಧಿಯಲ್ಲಿ ಕುವೆಂಪು ಅವರಿಗೆ ಎಂ.ಎಚ್. ಕೃಷ್ಣ ಅಯ್ಯಂಗಾರ್ ಅವರ ಪರಿಚಯ ಉಂಟಾಗಿ, ಅವರ ಕಾವ್ಯ ಪ್ರತಿಭೆಗೆ ಪ್ರೋಟಾನಿಕ್ಕು ದೊರೆತಂತಾ ಗುತ್ತದೆ. ಕೃಷ್ಣ ಅಯ್ಯಂಗಾರ್ ಅವರ ಸಲಹೆಯ ಮೇರೆಗೆ ಅವರು ಕಸಿನ್ಸ್‌ರನ್ನು ನೋಡುವಂಥಾದದ್ದು. ೧೯೨೬ರಲ್ಲಿ ಬನುಮಯ್ಯ ಕಾಲೇಜಿನಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮೋತ್ಸವದಿಂದಾಗಿ ಅವರಿಗೆ ಸ್ವಾಮಿ ಸಿದ್ಧೇಶ್ವರಾನಂದ ಮತ್ತು ನಾ. ಕಸ್ತೂರಿಯವರ ಪರಿಚಯವಾಗುತ್ತದೆ. ಆ ಪರಿಚಯ ಬರಬರುತ್ತ ಸ್ನೇಹವಾಗಿ, ಆಶೀರ್ವಾದವಾಗಿ, ರಕ್ಷೆಯಾಗಿ ಪರಿಣಮಿಸುತ್ತದೆ. ಅದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ತಗುಲಿದ ಕಾಯಿಲೆಯು ಅವರ ಆಶ್ರಮ ಪ್ರವೇಶಕ್ಕೆ ಕಾರಣವಾಗುತ್ತದೆ. ಅಲ್ಲಿ ಸ್ವಾಮಿಸಿದ್ದೇಶ್ವರಾನಂದರು ಅವರಿಗೆ ತಂದೆ ತಾಯಿಯರಾಗಿ, ಬಂಧು ಬಳಗವಾಗಿ ಏಕೆ ಅವರ ಪಾಲಿನ ದೇವರಾಗಿ ಸರ್ವಕ್ಷೇಮಕ್ಕೆ ಜವಾಬ್ದಾರರಾಗುತ್ತಾರೆ.

ಬಿ.ಎ.ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ತತ್ವಶಾಸ್ತ್ರದ ಎಂ.ಎ. ತರಗತಿಗೆ ಸೇರಬೇಕೆಂಬುದೇ ಅವರ ಬಯಕೆಯಾಗಿತ್ತು. ಆದರೆ ಕೃಷ್ಣಶಾಸ್ತ್ರಿಗಳ ಪ್ರೇರಣೆ ಅವರನ್ನು ಕನ್ನಡದ ಕಡೆಗೆ ಆಕರ್ಷಿಸುತ್ತದೆ. ಆ ಅವಧಿಯಲ್ಲಿ ಸಂಭವಿಸಿದ ಕಾಯಿಲೆಗಳನ್ನು ಹಾಗೂ ಸಾಂಸಾರಿಕ ಕ್ಲೇಶಗಳನ್ನು ಸಹಿಸಿಕೊಂಡೂ ವ್ಯಾಸಂಗ ಮುಂದುವರಿಸುತ್ತಾರೆ; ಸಾಹಿತ್ಯ ಕೃಷಿ ಹೊರವಾಗಿ ಸಾಗುತ್ತದೆ. ಗೃಹ ಕೃತ್ಯದ ಹೊರೆಯನ್ನೆಲ್ಲ ಹೊತ್ತಿದ್ದ ಪ್ರೀತಿಯ ತಮ್ಮ ತಿಮ್ಮಯ್ಯ ತೀರಿಕೊಂಡದ್ದಂತು ಅವರ ಬಾಳಿನಲ್ಲೊಂದು ದೊಡ್ಡ ಆಘಾತವಾಗುತ್ತದೆ. ಕಾವ್ಯ ತಪಸ್ಸಿನಿಂದೊದಗಿದ ಕೀರ್ತಿಯಿಂದಾಗಿ ಮಾಸ್ತಿ, ಶ್ರೀ ವೆಂಕಣ್ಣಯ್ಯ ಮೊದಲಾದ ನವೋದಯ ಸಾಹಿತ್ಯದ ಕಾರಣ ಪುರುಷರಿಗೆ ಅವರು ಮೆಚ್ಚುಗೆಯ ಕವಿಯಾಗುತ್ತಾರೆ. ಅವರ ಪ್ರತಿಭಾತೇಜಸ್ಸಿಗೆ ಮಾರುಹೋದ ಡಿ.ಎಲ್.ಎನ್‌ರಂಥ ಸಮಕಾಲೀನ ವಿದ್ವಾಂಸರು ಅವರನ್ನು ಕುರಿತು ‘I say! You are my Guru’ ಎಂದು ಹೇಳುವಂತಾಗುತ್ತದೆ.

ಆಗಿನ ಕಾಲದಲ್ಲಿ ಕುವೆಂಪು ಅವರು ಇಚ್ಛಿಸಿದ್ದರೆ ರೆವಿನ್ಯೂ ಇಲಾಖೆಯಲ್ಲಿ ದೊಡ್ಡ ಹುದ್ದೆಯನ್ನು ಪಡೆಯಬಹುದಿತ್ತು. ಆದರೆ ಅವರಿಗೆ ಬೇಕಾಗಿದ್ದುದು ಕವಿಚೇತನವನ್ನು ಮಸುಳಿಸದ, ಆಧ್ಯಾತ್ಮ ಸಾಧನೆಗೆ ತೊಡಕಾಗದ, ಪ್ರಶಾಂತ ಜೀವನಕ್ಕೆ ನೆರವಾಗುವ ಹುದ್ದೆ. ಅದು ಸಹ ಅಪ್ರಯಾಸವಾಗಿ ಅಯಾಚಿತವಾಗಿ ಸಿದ್ದೇಶ್ವರಾನಂದರ ಕೃಪೆಯಿಂದ, ವಾಡಿಯಾರವರ ನೆರವಿನಿಂದ ಅವರಿಗೆ ದಕ್ಕುತ್ತದೆ. ಬಿ.ಎಂ. ಶ್ರೀಯವರು ಕುಲಸಚಿವರಾಗಿದ್ದುದರಿಂದ ನಿರೀಕ್ಷೆಗೆ ಮೀರಿದ ಸಂಬಳವೂ ಅವರಿಗೆ ಲಭಿಸುತ್ತದೆ.

ಈ ಕೃತಿಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ ಕವಿಯ ಅಂತ ಶ್ಚೇತನದ ವಿಕಾಸ ಹಾಗೂ ಅಧ್ಯಾತ್ಮ ಸಾಧನೆಯ ಪ್ರಗತಿಯೇ ಹೊರತು ಬರಿಯ ಬಾಹ್ಯ ಘಟನೆಗಳಲ್ಲ. ಅದ್ಯತನದ ಈ ತುದಿಯಲ್ಲಿ ನಿಂತು ಹಿಂದಕ್ಕೆ ಕಣ್ಣು ಹೊರಳಿಸಿದಾಗ ಕುವೆಂಪು ಸಾಹಿತ್ಯ ಲೋಕದ ಕಾರಣ ಪುರುಷರೆಂಬ, ವಿಧಿಯೇ ಅವರ ಜೀವನ ನಾಟಕಕ್ಕೆ ರಂಗಮಂಚವನ್ನು ಸಿದ್ಧಪಡಿಸುತ್ತಿತ್ತೆಂಬ, ಮನುಷ್ಯ ರೂಪದ ಮಾತಾಪಿತರಿಗಿಂತ ಮಿಗಿಲಾಗಿ ನಿಸರ್ಗ ಮಾತೆಯೇ ಅವರ ಕ್ಷೇಮ ಕಲ್ಯಾಣಗಳ ಹೊಣೆ ಹೊತ್ತಿದ್ದಳೆಂಬ, ಸಾರಸ್ವತ ಶಕ್ತಿಯೇ ನಾನಾ ರೂಪ ಪ್ರಣಾಳಿಕೆಗಳ ಮೂಲಕ ಅವರ ಕವಿಚೇತನವನ್ನು ರೂಪಿಸುತ್ತಿತ್ತೆಂಬ ಸಂಗತಿ ಈ ಕೃತಿಯ ಪುಟಪುಟಗಳಲ್ಲಿ ಅನುರಣನಗೊಳ್ಳುತ್ತಿದೆ. ಅವರ ಕಾವ್ಯ ಹಾಗೂ ಅಧ್ಯಾತ್ಮಗಳ ಪ್ರಪ್ರಥಮ ಗುರು ನಿಸರ್ಗ. ಅವರ ಕವಿಚೇತನದ ರಸನೆ ಮೊದಲು ಚಪ್ಪರಿಸಿದ್ದು ಲಾಂಗ್‌ಫೆಲೋ ಕವಿಯ ‘ದಿ ಸಾಮ್ ಆಫ್ ಲೈಫ್’ ಕವನವೆಂಬುದನ್ನರಿತಾಗ ವಿಸ್ಮಯವಾಗುತ್ತದೆ. ತಮ್ಮ ಮನೆಯಲ್ಲಿ ರಾಮಾಯಣ ಭಾರತಗಳ ವಾಚನವನ್ನು ಕೇಳಿ ಆನಂದಿಸಿದ್ದರೂ, ಅವರು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ್ದು ಆಂಗ್ಲ ಭಾಷೆಯ ಮೂಲಕವೆಂಬುದನ್ನು ಮರೆಯುವಂತಿಲ್ಲ. ಪ್ರಿಚರ್ಡ್ ಎಂಬಾತ ಸಂಪಾದಿಸಿದ್ದ ಸ್ಟಡೀಸ್ ಇನ್ ಲಿಟರೇಚರ್ ಎಂಬ ಸಂಕಲನ ಗ್ರಂಥ ಅವರಿಗೆ ಪಠ್ಯವಾಗಿತ್ತಷ್ಟೆ. ಅದರಲ್ಲಿ ಪ್ರಸಿದ್ಧ ಲೇಖಕರ ಒಂದೊಂದು ಬರಹವೂ ‘ಹೊಸ ಹೊಸ ಲೋಕಗಳನ್ನೆ ತೆರೆದು ತೋರಿಸಿ, “ಬಾ, ಪ್ರವೇಶಿಸು” ಎಂದು ‘ಕೈಬೀಸಿ’ ಕರೆಯು ವಂತಾಗುತ್ತದೆ. ‘Foot Prints on the sand’ ಎಂಬ ಶೀರ್ಷಿಕೆಯುಳ್ಳ ಪ್ರಬಂಧ ಭಾಗವನ್ನೋದಿದಾಗ ‘ರಾಬಿನ್ಸನ್ ಕ್ರೂಸೋ’ ಮೂಲ ಕೃತಿಯನ್ನೇ ಓದುವ ಹಂಬಲ ಅವರ ಮನದಲ್ಲುದಿಸುತ್ತದೆ. ಆ ಹಂಬಲವೇ ಅವರನ್ನು ಸಾರ್ವಜನಿಕ ಗ್ರಂಥಾಲಯಕ್ಕೆಳೆದು ತರುತ್ತದೆ. ಅಲ್ಲಿ ಟೆನಿಸನ್, ಶೇಕ್ಸ್‌ಪಿಯರ್, ಮಿಲ್ಟನ್ ಮೊದಲಾದ ಕವಿವರೇಣ್ಯರು ಗ್ರಂಥ ರೂಪದಲ್ಲಿ ಅವರನ್ನು ತಕ್ಕೈಸಿಕೊಳ್ಳಲು ಸಿದ್ಧರಾಗಿದ್ದಾರೆ. ಅಧ್ಯಾಪಕ ಸುಂದರ ಅವರು ತರಗತಿಯಲ್ಲಿ ‘ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಅನ್ನು ಅಭಿನಯ ಪೂರ್ವಕವಾಗಿ ಓದಿದಾಗ, ಗೀತಾಂಜಲಿಯನ್ನು ಭಾವ ಪೂರ್ಣವಾಗಿ ವಾಚಿಸಿದಾಗ ಅವರ ಅಂತರಂಗದ ಕವಾಟ ತಟಕ್ಕನೆ ತೆರೆದಂತಾಗುತ್ತದೆ. ಅವರು ಮೊಟ್ಟಮೊದಲು ಆಂಗ್ಲ ಭಾಷೆಯಲ್ಲಿ ಕವನ ರಚಿಸಲುಪಕ್ರಮಿಸಿದ್ದು ಚರಿತ್ರೆಯ ವಿದ್ಯಾರ್ಥಿಯಾಗಿದ್ದ ಗೆಳೆಯನೊಬ್ಬನಿಗೆ ಚರಿತ್ರೆಯನ್ನು ಕಲಿಸುವ ಸಲುವಾಗಿ, ಪಾಠಗಳನ್ನು ಪದ್ಯರೂಪದಲ್ಲಿ ಹೊಸೆಯುವ ನೆಪದಿಂದ. ಆ ವಿದ್ಯಾರ್ಥಿ ಅವನ್ನು ಉರುಹಚ್ಚಿ, ಅವುಗಳ ನೆರವಿನಿಂದ ಪರೀಕ್ಷೆಯಲ್ಲಿ ಉತ್ತರ ಬರೆಯುತ್ತಾನೆ. ಸುಬ್ಬಕೃಷ್ಣಯ್ಯನವರಿಂದಾಗಿ ಕುವೆಂಪು ಅವರಿಗೆ ಇಂಗ್ಲಿಷ್ ಛಂದಸ್ಸಿನ ಪರಿಚಯವಾಗುತ್ತದೆ. ಪ್ರಿನ್ಸಿಪಾಲರ ಬೀಳ್ಕೊಡಿಗೆ ಸಮಾರಂಭದಲ್ಲಿ ಪದ್ಯ ಬರೆದು ಓದುತ್ತಾರೆ. ೧೯೨೨ರಲ್ಲಿ ಪ್ರೌಢ ಶಾಲೆಯಲ್ಲಿದ್ದಾಗಲೇ ‘ಬಿಗಿನರ್ಸ್‌ ಮ್ಯೂಸ್’ ಎಂಬ ಹದಿನಾರು ಪುಟದ ಆಂಗ್ಲ ಕವಿತೆಗಳ ಪುಸ್ತಿಕೆಯನ್ನು ಪ್ರಕಟಿಸುತ್ತಾರೆ. ಅವುಗಳಲ್ಲಿ ಕೆಲವು ಆಂಗ್ಲ ಕವಿಗಳ ರಚನೆಗಳಿಂದ ಪ್ರೇರಿತವಾದುವು, ಅಥವಾ ಅವುಗಳ ಅನುಕರಣೆಗಳು. ಆಂಗ್ಲ ಭಾಷೆಯಲ್ಲಿ ಅವರು ಮಾಡಿದ ಕಸರತ್ತಿನ ಪ್ರಯೋಜನ ಮುಂದೆ ಕನ್ನಡದ ಕೃಷಿಗೆ ಅನುಕೂಲವಾಯಿತೆಂಬುದು ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ.

ಅವರನ್ನು ಕವಿ ಎಂದು ಇಡೀ ಕರ್ನಾಟಕದಲ್ಲಿಯೇ ಮೊಟ್ಟ ಮೊದಲು ಗುರುತಿಸಿ ಸನ್ಮಾನಿಸಿದ ಕೀರ್ತಿ ಚನ್ನಪಟ್ಟಣಕ್ಕೆ ಸಲ್ಲುತ್ತದೆ. ಬಿಗಿನರ್ಸ್‌ ಮ್ಯೂಸ್ ಪ್ರಕಟವಾದ ತರುಣದಲ್ಲಿಯೇ, ಅಂದರೆ ೧೯೨೨ರಲ್ಲಿಯೇ ಸಮ್ಮೇಳನದ ಕಾರ್ಯಕರ್ತರು ಅಲ್ಲಿ ನಡೆದ ಅಖಿಲ ಮೈಸೂರು ಒಕ್ಕಲಿಗ ಯುವಜನ ಸಮ್ಮೇಳನಕ್ಕೆ ಅವರನ್ನು ಕರೆಸಿಕೊಂಡು ಪದಕವೊಂದನ್ನು ನೀಡಿ, ಅವರನ್ನು ಗೌರವಿಸುತ್ತಾರೆ. ಆಗಿನ್ನೂ ಅವರಿಗೆ ೧೮ ವರ್ಷ ಮಾತ್ರ.

ಸಾನೆಟ್, ಪ್ರಗಾಥ, ಲಾವಣಿ ಮೊದಲಾದ ಕನ್ನಡದಲ್ಲಿ ಹಿಂದೆ ಕಂಡು ಕೇಳದ ಪ್ರಕಾರ ಗಳಲ್ಲಿ, ಹಲವು ಬಗೆಯ ಛಂದಸ್ಸುಗಳ ಮೂಲಕ ಅವರ ಕವಿತಾ ಶಕ್ತಿ ಹೊರಹೊಮ್ಮುತ್ತದೆ. ಇಂಗ್ಲಿಷಿನ ಛಂದಸ್ಸಿನಲ್ಲಿ ಅವರು ಮಾಡಿದ ಪ್ರಯೋಗಗಳಿಗೆ ಲೆಕ್ಕವಿಲ್ಲ. ಕನ್ನಡದಲ್ಲಿ ಬರೆಯಲು ತೊಡಗಿದಾಗ ಇಂಗ್ಲಿಷಿನ ಛಂದೋವೈವಿಧ್ಯ ಸ್ಫೂರ್ತಿಯ ಸೆಲೆಯಾಗುತ್ತದೆ. ಅಂದ ಮೇಲೆ ಅವರಿಗೆ ಅಂಗ್ಲ ಕವಿಗಳು ಆದರ್ಶವೇ ಹೊರತು ಕನ್ನಡದ ಆಚಾರ್ಯರಲ್ಲ. ನವೋದಯದ ಕವಿಗಳು ಹೊಸಛಂದಸ್ಸುಗಳಲ್ಲಿ ಪ್ರಯೋಗ ನಡೆಸುತ್ತಿರುವಾಗಲೇ, ಅದರ ಅರಿವಿಲ್ಲದೆಯೇ, ಸಮಾನಾಂತರವಾಗಿ ಕುವೆಂಪು ಅವರು ನೂತನ ಪ್ರಯೋಗಗಳಲ್ಲಿ ತೊಡಗಿದ್ದರೆಂಬ ಅಂಶ ಗಮನೀಯವಾದದ್ದು. ಆ ಕಾಲಕ್ಕೆ ಅವರಿಗೆ ಯಾವ ಕನ್ನಡ ಸಾಹಿತಿಯ ಪರಿಚಯವೂ ಇದ್ದಂತಿಲ್ಲ. ಆಂಗ್ಲ ಭಾಷೆಯಲ್ಲಿ ಅವರು ರಚಿಸಿದ ಸಹಸ್ರ ಸಹಸ್ರ ಕವಿತೆಗಳು ಅಚ್ಚಿನ ಮನೆಯನ್ನೇ ಕಾಣದೆ ಹಸ್ತಪ್ರತಿಯಲ್ಲುಳಿಯುತ್ತವೆ. ಅವುಗಳಲ್ಲಿ ಕೆಲವನ್ನು ಮಾತ್ರ ನಿದರ್ಶನಾರ್ಥವಾಗಿ ಬಳಸಿಕೊಂಡು ತಮ್ಮ ಕಾವ್ಯಪ್ರತಿಭೆ ಅರಳಿದ ವಿಧಾನವನ್ನೂ, ತಾವು ನಡೆಸಿದ ಛಂದಸ್ಸಿನ ಪ್ರಯೋಗಗಳನ್ನೂ ಪದರಪದರವಾಗಿ ವಿವರಿಸುತ್ತಾರೆ. ಸಂತೆಪೇಟೆಯ ಗಲೀಜು  ಹೋಟಲಿನಲ್ಲಿರಲಿ, ಸಹ್ಯಾದ್ರಿಯ ಮಡಿಲಿನಲ್ಲಿರಲಿ, ರೈಲಿನಲ್ಲಿ ಪಯಣಿಸುತ್ತಿರಲಿ, ಸಂಜೆ ವಾಯುಸೇವನೆಗೆ ಸಂಚರಿಸುತ್ತಿರಲಿ, ಅವಸ್ಥಾತ್ರಯಗಳಲ್ಲೆಲ್ಲಾ ಅವರಿಗಿದ್ದುದು ಕಾವ್ಯಚಿಂತನೆಯೊಂದೆ, ಸ್ವಾರಸ್ವತೋಪಾನೆಯೊಂದೆ. ಕಾವ್ಯವೇ ಅವರ ಬದುಕಾಗಿ, ಬದುಕೇ ಅವರ ಕಾವ್ಯವಾಗಿತ್ತೆನ್ನುವುದಕ್ಕೆ ಇಲ್ಲಿಯ ಪ್ರತಿಯೊಂದು ಪುಟವೂ ಸಾಕ್ಷಿಯೊದಗಿಸುತ್ತದೆ.

ಕುವೆಂಪು ಅವರ ಆಂಗ್ಲಕವಿತೆಗಳನ್ನು ಕಂಡ ಎಂ.ಎಚ್. ಕೃಷ್ಣಯ್ಯಂಗಾರ್ ಅವರನ್ನು ಕುರಿತು ನುಡಿದ ಮಾತುಗಳು ಪ್ರವಾದಿಯ ವಾಣಿಯಂತಿವೆ: ಪುಟ್ಟಪ್ಪ, ನನಗೇನೊ ನಂಬಿಕೆ ಇದೆ. ನಮ್ಮ ನಾಡಿಗೆ ಮಹತ್ತಾದ ಭವಿಷ್ಯತ್ತೊಂದು ಕಾಯುತ್ತಿದೆ. ರವೀಂದ್ರನಾಥ ಠಾಕೂರರಿಗಿಂತಲೂ ದೊಡ್ಡ ಕವಿಗಳು ತಮ್ಮ ಉಜ್ವಲ ಪ್ರತಿಭೆಯಿಂದ ಲೋಕವನ್ನೇ ಬೆರಗುಗೊಳಿಸುತ್ತಾರೆ. ಐರಿಷ್ ಕವಿ ಕಸಿನ್ಸ್ ಮೈಸೂರಿಗೆ ಬಂದಿದ್ದಾಗ ಅವರನ್ನು ಕಾಣುವಂತೆ ಕುವೆಂಪು ಅವರನ್ನು ಪ್ರೇರೇಪಿಸಿದವರೂ ಅವರೆ. ೧೯೨೪ನೆಯ ವರ್ಷದ ಜುಲೈ ೨ನೆಯ ತಾರೀಖು ಅವರ ಕಾವ್ಯ ಜೀವನದಲ್ಲಿ ಮಹತ್ತರವಾದದ್ದೆಂದೇ ಹೇಳಬಹುದು. ಅವರ ಆಂಗ್ಲ ವ್ಯಾಮೋಹದ ಮಹಿಷಾಸುರನನ್ನು ಮರ್ದಿಸಿ, ಕನ್ನಡಾವಹೇಳನದ ಪೀಡೆಯಿಂದ ಪಾರುಮಾಡಿ, ಕನ್ನಡಕ್ಕೆ ವರವಾಗಿ, ಕವಿಗೆ ಧ್ರುವತಾರೆಯಾಗಿ ಪರಿಣಮಿಸಿದವರು ಕಸಿನ್ಸ್. ಪ್ರಾಯಶಃ ಹಿಂದಿನ ಜನ್ಮದಲ್ಲಿ ಅವರು ಕನ್ನಡದ ವರಕವಿಯಾಗಿ ಜನಿಸಿದ್ದರೋ ಏನೋ! ೧.೧.೧೯೨೪ರಂದು ಪ್ರಾರಂಭವಾದ ಅವರ ದಿನಚರಿಯ ಬಹುಭಾಗ ಆಂಗ್ಲಭಾಷೆಯಲ್ಲಿ ರಚನೆಗೊಂಡಿತ್ತೆಂಬು ದನ್ನು ನೆನೆದರೆ ಅವರ ಆಂಗ್ಲ ಮಾದಕತೆಯ ತೀವ್ರತೆ ವ್ಯಕ್ತವಾಗುತ್ತದೆ. ಕಸಿನ್ಸ್ ವ್ಯಂಗ್ಯ ಧ್ವನಿಯಲ್ಲಿ ಎಚ್ಚರಿಸಿದ ನಂತರವೂ ಕನ್ನಡದ ಕೆಚ್ಚು ನೆಚ್ಚುಗಳ ಬಗೆಗಿನ ಅವರ ಸಂದೇಹ ಮರೆಯಾಗುವುದಿಲ್ಲ. ‘ಪೂವು’ ಎಂಬ ಕವಿತೆಯನ್ನು ಮೊಟ್ಟಮೊದಲಿಗೆ ರಚಿಸಿದಾಗ, ರೂಪಾಂಶದ ಕೊರತೆಯಿಂದಾಗಿ ಅದು ಬಡಕಲಾಯಿತೆಂದು ಅವರು ನಿರ್ಣಯಿಸುತ್ತಾರೆ. ಮರಳಿ ಮರಳಿ ಪ್ರಯತ್ನಿಸಿದ ನಂತರ, ಕನ್ನಡದ ಕೆಚ್ಚು ಕಸುವುಗಳು ಅವರಿಗರಿವಾಗುತ್ತವೆ. ಲಂಡನ್ನಿನಲ್ಲಿದ್ದ ಎಸ್.ಜಿ. ಶಾಸ್ತ್ರಿಗಳು ‘ಚೈತ್ರ ವೈಶಾಖ’ ಎಂಬ ಅವರ ಕವನದ ಬಗ್ಗೆ ವಿಶೇಷ ಮೆಚ್ಚುಗೆ ಸೂಚಿಸುತ್ತಾರೆ.

೧೯೨೪ರ ಆಗಸ್ಟ್ ೬ನೆಯ ತಾರೀಕು ‘ಬೆಳದಿಂಗಳ ರಾತ್ರಿ’ ಎಂಬ ಕವನ ಬ್ಲಾಂಕ್ ವರ್ಸ್‌ನಲ್ಲಿ ಅವತರಿಸುತ್ತದೆ. ಅದರಲ್ಲಿ ಆದಿ ಅಂತ್ಯ ಪ್ರಾಸಗಳಿಲ್ಲ. ಮುಂದೆ ವಿಜೃಂಭಿಸಲಿದ್ದ ಮಹಾ ಛಂದಸ್ಸಿಗೆ ಬೀಜಾಂಕುರಾರ್ಪಣೆಯಾದದ್ದು ಅಲ್ಲಿಯೇ. ಮಾರನೆಯ ದಿನವೇ ಸೊಬಗು ಎಂಬ ಸಾನೆಟ್ಟನ್ನು ರಚಿಸಿದಾಗ ‘ಇದರ ನೆರವಿನಿಂದ ಕವಿತಾ ಪ್ರಪಂಚವನ್ನೇ ಸೂರೆ ಗೊಳ್ಳುತ್ತೇನೆ’ ಎಂದು ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಆದರೆ ಅವರ ಯೋಗ್ಯತೆಯ ಬಗ್ಗೆ ಅವರಿಗೇ ಅನುಮಾನವೆಂಬುದು ನಿಜ. ಅದರ ಲೋಪ ದೋಷಗಳನ್ನು ಅವರೇ ಎತ್ತಿತೋರಿಸುತ್ತಾರೆ. ಆದರೂ ಅವರ ಆತ್ಮವಿಶ್ವಾಸ ದಿನೇ ದಿನೇ ಅಧಿಕಗೊಳ್ಳುತ್ತಿತ್ತೆ ನ್ನುವುದಕ್ಕೆ ‘ಕರ್ನಾಟಕಮಾತೆಗೆ’ ಕವಿ ಇತ್ತ ಭರವಸೆ ನಿದರ್ಶನವಾಗಿದೆ. ‘ಬ್ರಿಟಿಷ್ ಸಾರ್ವಜನಿಕರ ಮನಸ್ಸಿನಲ್ಲಿ ಮೈಸೂರಿಗಿರುವ ಸ್ಥಾನವೇನು?’ ಎಂದು ಅದೆ ತಾನೆ ವಿದೇಶದಿಂದ ಹಿಂದಿರುಗಿದ್ದ ಪ್ರೊ. ಡಿಸೋಜ ಅವರನ್ನು ಕುವೆಂಪು ಅವರು ಕೇಳಿದ ಪ್ರಶ್ನೆ. ಅದಕ್ಕೆ ಅವರು ನೀಡಿದ ‘ಸೊನ್ನೆ’ ಎಂಬ ಉತ್ತರ, ಅದೇ ಶೀರ್ಷಿಕೆಯಡಿಯಲ್ಲಿ ಕುವೆಂಪು ಅವರು ಡೈಲಿಮೆಯಿಲ್‌ಗೆ ಬರೆದ ಲೇಖನ ಅವರ ಭಾವುಕತೆಗೆ, ಸಾಹಸ ಮನೋಭಾವಕ್ಕೆ, ಧೈರ್ಯಕ್ಕೆ ಸಾಕ್ಷಿಯಾಗಿವೆ.

ಕಸಿನ್ಸ್ ಭೇಟಿಯ ನಂತರವೂ ಕನ್ನಡ ರಚನೆಗಳ ಜತೆಗೆ ಇಂಗ್ಲಿಷ್ ಕವಿತೆಗಳೂ ಅವರ ಲೇಖನಿಯಿಂದ ಉದ್ಭವಿಸುತ್ತಿದ್ದು, ೧೯೨೬ರಲ್ಲಿ ಅವು ಪೂರ್ಣವಾಗಿ ಸ್ಥಗಿತಗೊಂಡುವೆಂದೇ ಹೇಳಬೇಕು. ೧೯೨೫ರಲ್ಲಿ ರವೀಂದ್ರರ ಕೆಲವು ಗೀತೆಗಳನ್ನು ಕನ್ನಡಕ್ಕೆ ಪರಿವರ್ತಿಸಿದ್ದುಂಟು. ಆದರೆ ಅವು ಪ್ರಕಟನ ಯೋಗ್ಯವಲ್ಲವೆಂದು ಅವರೇ ನಿರ್ಧರಿಸುತ್ತಾರೆ. ಸುಮಾರು ಅದೇ ಸಮಯದಲ್ಲಿ ಕೋಗಿಲೆಯನ್ನು ಕುರಿತು ಕವಿತೆಯೊಂದನ್ನು ವಚನ ಛಂದಸ್ಸಿನಲ್ಲಿ ರಚಿಸುತ್ತಾರೆ. ೧೯೨೬ರಲ್ಲಿ ಬರೆದ ‘ವಸಂತ ಕುಸುಮ’ ಎಂಬ ಕವಿತೆಯಲ್ಲಿ ಮೂರು ಮಾತ್ರೆಯ ಗಣದ ಸಕ್ರಮ ವಿನ್ಯಾಸವಿದ್ದರೂ ಪಂಕ್ತಿಗಳ ಹ್ರಸ್ವ ದೀರ್ಘತೆಗಳ ಅಸಮ ವಿನ್ಯಾಸವನ್ನು ಗಮನಿಸ ಬಹುದು. ಮೊದಮೊದಲು ಕಾದಂಬರಿಯ ಬಗ್ಗೆ ಅವರಿಗಿದ್ದ ತಿರಸ್ಕಾರ ಟಾಲ್‌ಸ್ಟಾಯ್, ಗಾಲ್ಸ್‌ವರ್ದಿ, ಹಾರ‌್ಡಿ ಮೊದಲಾದವರ ಕಾದಂಬರಿಗಳನ್ನೋದಿದ ನಂತರ ಗೌರವವಾಗಿ ಆರಾಧನೆಯಾಗಿ ಪರಿವರ್ತನೆಗೊಳ್ಳುತ್ತದೆ. ಕಾಯಿಲೆ ಬಿದ್ದಿದ್ದಾಗ ಉಕ್ಕೇರುತ್ತಿದ್ದ ಅದಮ್ಯ ಸ್ಫೂರ್ತಿ ವೈದ್ಯರು ಬೇಡವೆಂದರೂ ಶ್ರೇಷ್ಠ ಕವಿತೆಗಳಾಗಿ ಅರಳಿ, ಸಮಾಚಾರ ಪತ್ರಿಕೆಗಳ ಅಂಚನ್ನಲಂಕರಿಸುತ್ತವೆ. ‘ಕಿಂದರಿ ಜೋಗಿ’ ರಚನೆಯಾದದ್ದೂ ಇದೇ ವರ್ಷ.

೧೯೨೭-೧೯೨೮ನೆಯ ವರ್ಷಗಳು ಕುವೆಂಪು ಅವರ ಸೃಜನಾತ್ಮಕ ಜೀವನದ ಪರ್ವಕಾಲ ಗಳೆಂದೇ ಹೇಳಬೇಕು. ಬ್ಲಾಂಕ್‌ವರ‌್ಸನ್ನು ನಾಟ್ಯಛಂದಸ್ಸನ್ನಾಗಿ ಪರಿವರ್ತಿಸಿ ಜಲಗಾರ, ಯಮನಸೋಲು ಮತ್ತು ಮಹಾರಾತ್ರಿಗಳನ್ನು ರಚಿಸುತ್ತಾರೆ. ಅಂಥ ಛಂದಸ್ಸನ್ನು ನಾಟಕಗಳಿಗೆ ಬಳಸಿದವರಲ್ಲಿ ಅವರೇ ಮೊದಲಿಗರು. ಅವು ಅವತರಿಸಿದ ತರುಣದಲ್ಲಿ ಮಧ್ಯಾಹ್ನ ಮಲಗಿದ್ದಾಗ ಅವರಿಗೊಂದು ಕನಸು ಬೀಳುತ್ತದೆ: ‘ನಾನೊಂದು ಬೃಹದ್ ಗಾತ್ರದ ಅಪ್ರಾಸ ಛಂದಸ್ಸಿನ ಮಹಾಕಾವ್ಯ ರಚಿಸಿದ್ದೇನೆ. ಅದು ಅಚ್ಚಾಗಿ ಬಂದಿದೆ! ಕೈಯಲ್ಲಿ ಹಿಡಿದಿದ್ದೇನೆ. ತೂಕವಾಗಿದೆ!’ ಎಂಬ ದೃಶ್ಯವನ್ನನುಭವಿಸುತ್ತಿದ್ದಂತೆ ಯಾರೋ ಗೆಳೆಯರು ಬಂದು ಅವರ ಆನಂದಕ್ಕೆ ಮಾರಕವಾಗುತ್ತಾರೆ.

ಕತೆ ಕವಿತೆಗಳನ್ನು ರಚಿಸುತ್ತಿದ್ದರೂ ಅವರು ಅದನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಗೋಜಿಗೆ ಹೋಗುತ್ತಿರಲಿಲ್ಲ ಅಮಲನ ಕತೆ ಮಾತ್ರ ಹಿಂದೆಯೇ ಪ್ರಕಟಗೊಂಡಿತ್ತು. ತಾವು ಬರೆದ ಕವಿತೆಗಳನ್ನು ಗೆಳೆಯರ ಮುಂದೆ ವಾಚಿಸುವ ತನಕ ಅವರಿಗೆ ತೃಪ್ತಿ ಇರುತ್ತಿರಲಿಲ್ಲ. ಅವರ ಕವಿತಾವಾಚನವೆಂದರೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಶ್ರೋತೃಗಳು ನೆರೆಯುತ್ತಾರೆ.  ಅವರ ಕವಿತೆಗಳ ವಾಚನವನ್ನು ಕೇಳಿದ ಮಾಸ್ತಿಯವರು ‘ಕೊಳಲು’ ಪ್ರಕಟಣೆಗೆ ಕಾರಣರಾಗುತ್ತಾರೆ. ಅಸೂಯಾಪರರ ಹೊಟ್ಟೆ ಬೆಂಕಿಯ ಚಿತೆಯಾಗುವ ರೀತಿಯಲ್ಲಿ ಬಿ.ಎಂ.ಶ್ರೀ ಅದಕ್ಕೆ ಮುನ್ನುಡಿ ಬರೆಯುತ್ತಾರೆ. ಅಲ್ಪ ಮನಸ್ಸಿನ ತಿಳಿಗೇಡಿ ವಿಮರ್ಶಕರು ಬೆಂಕಿಯನ್ನು ಕಾರುತ್ತಾ, ಅವರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಾರೆ. ಇಂದಿಗೂ ಅವರು ಪೂರ್ವಗ್ರಹ ಪೀಡೆಯಿಂದ ಮುಕ್ತಗೊಂಡಿಲ್ಲ. ಕುವೆಂಪು ಅವರಂತು ಆನೆ ನಡೆದುದೆ ಮಾರ್ಗವೆಂಬಂತೆ, ಬುಲ್‌ಡೋಜರಿನಂತೆ ಮುನ್ನುಗ್ಗುತ್ತಾರೆ. ವಿಸೀ, ಕೃಷ್ಣಶಾಸ್ತ್ರಿ, ವೆಂಕಣ್ಣಯ್ಯ ಮೊದಲಾದ ನಿರಸೂಯರು ಮುಕ್ತಕಂಠದಿಂದ ಅವರ ರಚನೆಗಳಿಗೆ ಉಚಿತ ಗೌರವ ಸಲ್ಲಿಸುತ್ತಾರೆ. ಹುಬ್ಬಳ್ಳಿಯ ಕವಿ ಸಮ್ಮೇಳನದ ಅಧ್ಯಕ್ಷ ಪಟ್ಟ ಕಾವ್ಯಕ್ಷೇತ್ರದಲ್ಲಿಯ ಅವರ ಹಿರಿಯ ಸ್ಥಾನವನ್ನು ಭದ್ರಗೊಳಿಸುತ್ತದೆ. ೧೯೩೭ರಲ್ಲಿ ಮದುವೆಯಾಗುವ ಹೊತ್ತಿಗೆ ಅವರ ಸಾಹಿತ್ಯ ಸೃಷ್ಟಿಯ ಬಹುಭಾಗ ಹೊರಬಂದಿತ್ತೆಂದೇ ಹೇಳಬಹುದು. ‘ಶ್ರೀ ರಾಮಾಯಣ ದರ್ಶನಂ’ ಸೃಷ್ಟಿ ಸಹ ೧೯೩೬ರಲ್ಲಿಯೆ ಪ್ರಾರಂಭವಾಗಿತ್ತು. ಅಷ್ಟು ಹೊತ್ತಿಗೆ ‘ಕಾನೂರು ಹೆಗ್ಗಡತಿ’ ಮುಗಿದಿತ್ತು.

ನಿಸರ್ಗೋಪಾಸನೆಯೇ ಕುವೆಂಪು ಅವರ ಆಧ್ಯಾತ್ಮಿಕ ವಿಕಾಸಕ್ಕೆ ನಾಂದಿಯಾಗುತ್ತದೆ. ನಿಸರ್ಗದ ಗರ್ಭದಲ್ಲಿ ಜನಿಸಿ, ಅದರ ಮಡಿಲಲ್ಲಿ ಬೆಳೆದ ಅವರು ನವಿಲು ನೋಡಿ ನಡೆ ಕಲಿಯುತ್ತಾರೆ. ಕೋಗಿಲೆ ಕಾಜಾಣಗಳಿಂದ ಮಾತು ಕಲಿಯುತ್ತಾರೆ. ಕಾನನದ ರಮಣೀಯತೆ ಯಿಂದ, ಸೂರ್ಯಚಂದ್ರರ ಅಸ್ತೋದಯಗಳಿಂದ, ತಾರಕಿತ ಆಕಾಶದಿಂದ ಸ್ಫೂರ್ತಿ ಪಡೆಯುತ್ತಾರೆ; ನಿಸರ್ಗದ ಪ್ರತಿಯೊಂದು ವ್ಯಾಪಾರವೂ ಅವರಿಗೆ ಪಾಠ ಕಲಿಸುತ್ತದೆ. ತುಂಗೆಯ ಜುಳುಜುಳು ನಿನಾದವೇ ಅವರಿಗೆ ವೇದಘೋಷವಾಗುತ್ತದೆ; ನಿಬಿಡಾರಣ್ಯದ ಮಹಾಮೌನವೇ ಋಷಿಮಂತ್ರವಾಗುತ್ತದೆ. ಶೈಶವದಲ್ಲಿ ಆಳಿನ ಹೆಗಲ ಮೇಲೆ ಕುಳಿತು ಊರಿಂದೂರಿಗೆ ಕಾನನದ ಮಧ್ಯೆ ಹೋಗುವಾಗ, ಬಾಲ್ಯದಲ್ಲಿ ಭೀಕರಾರಣ್ಯದ ನಡುವೆ ಹಿರಿಯರ ಮತ್ತು ಗೆಳೆಯರ ಸಂಗದಲ್ಲಿ ಸುತ್ತಾಡುವಾಗ ಅವರಿಗೆ ನಿಸರ್ಗಪ್ರೇಮಭಿಕ್ಷೆ ದೊರೆಯುತ್ತದೆ. ಆಗಲೇ ಸಹ್ಯಾದ್ರಿಯ ಅರಣ್ಯದೇವಿ ಅವರ ಕವಿಚೇತನದಲ್ಲಿ ದೈವದತ್ತವಾಗಿದ್ದು ಪ್ರಸುಪ್ತಸ್ಥಿತಿ ಯಲ್ಲಿದ್ದ ಸೌಂದರ್ಯಪ್ರಜ್ಞೆಯನ್ನು ಎಚ್ಚರಿಸುತ್ತಾಳೆ.

ಅವರು ಶವವನ್ನು ದಾಟಿ ಬಾಲ್ಯದಲ್ಲಿ ಕಾಲಿಡುತ್ತಿದ್ದಂತೆ ಅಜ್ಜಯ್ಯನ ಪೂಜೆ ಸಂಬಂಧವಾದ ಸಾಂಪ್ರದಾಯಿಕ ಆಚರಣೆಗಳೂ, ರಾಮಾಯಣ ಭಾರತಾದಿ ಪುರಾಣಗಳ ಪ್ರವಚನವೂ ಅವರ ಮನಸ್ಸಿನ ಮೆಲೆ ಅಚ್ಚಳಿಯದ ಪ್ರಭಾವ ಬೀರುತ್ತವೆ. ಮೋಸಸ್ ಮೇಷ್ಟರಿಂದ ಹೇಳಿಸಿಕೊಂಡು, ಬಾಯಿಗೆ ಗಟ್ಟಿಮಾಡಿದ ಮಾರ್ಕನ ಸುವಾರ್ತೆಯಿಂದ ಅವರ ‘ಬದುಕಿಗೆ ಒಂದು ಹೊಸ ಬಾಗಿಲು ತೆರೆದಂತಾಗುತ್ತದೆ. ಶಂಕರಾಚಾರ್ಯರು ಹಸ್ತಾಮಲಕರಿಗೆ ಮಾಡಿದ ಬೋಧನೆಯನ್ನೋದಿ ಕಂಗಾಲಾಗಿದ್ದಾಗ ‘ಪಾಪಕ್ಕೆ ಪಶ್ಚಾತ್ತಾಪವೆ ಪ್ರಾಯಶ್ಚಿತ್ತ ವೆಂಬ’ ಯೇಸುಸ್ವಾಮಿಯ ಬೋಧೆ ನೆನಪಿಗೆ ಬಂದು ಸಮಾಧಾನ ತಾಳುತ್ತಾರೆ ಅದರಿಂದಾಗಿ ಅವರು ಕೆಲವು ದಿನ ಮಾಂಸಾಹಾರವನ್ನು ಸಹ ವಿಸರ್ಜಿಸುತ್ತಾರೆ. ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗಲೇ ನಡೆದ ಬಾಳೆಹಣ್ಣಿನ ಸಿಪ್ಪೆಯ ಪ್ರಸಂಗ ಅವರ ಜಿಜ್ಞಾಸೆಗೆ ನಿದರ್ಶನವಾಗಿದೆ. ಲಾಂಗ್‌ಫೆಲೋ ಕವಿಯ ‘ದಿ ಸಾಮ್ ಆಫ್ ಲೈಫ್’ ಅವರ ಆತ್ಮಕ್ಕೆ ಚೈತನ್ಯ ಪೂರ್ಣವಾದ ಮಂತ್ರದೀಕ್ಷೆ ನೀಡುತ್ತದೆ.

ಮೈಸೂರಿನ ಚಾಮುಂಡಿಯೆ ಅವರನ್ನು ಕೈಬೀಸಿ ಕರೆದು ಸ್ತನ್ಯಪಾನ ಮಾಡಿಸದಿದ್ದರೆ ಅವರ ಬಾಳು ಎತ್ತ ಕಡೆಗೆ ತಿರುಗುತ್ತಿತ್ತೋ ಹೇಳುವಂತಿಲ್ಲ. ಅವರ ಜೀವನದಲ್ಲಿ ಸಂಘಟಿಸಿದ ಪ್ರತಿಯೊಂದು ಘಟನೆಯೂ ಅವ್ಯಕ್ತಶಕ್ತಿಯಿಂದ ಪೂರ್ವನಿಯೋಜಿತವೆಂಬಂತೆ ತೋರುತ್ತದೆ. ಕ್ರಿಶ್ಚಿಯನ್ ಪಾಠಶಾಲೆ, ಅಲ್ಲಿಯ ಅಧ್ಯಾಪಕವೃಂದ, ಅವರಿಗೆ ಪಠ್ಯವಸ್ತುವಾಗಿದ್ದ ‘ಸ್ಟಡೀಸ್ ಇನ್ ಲಿಟರೆಚರ್’ ಎಲ್ಲವೂ ಅವರ ಅಧ್ಯಾತ್ಮಿಕ ವಿಕಾಸಕ್ಕೆ ನಿಮಿತ್ತವಾಗಿದ್ದಂತೆ ಭಾಸವಾಗುತ್ತದೆ. ಅವರ ಪಠ್ಯಪುಸ್ತಕದ ‘ಮರಳಿನ ಹೆಜ್ಜೆಗಳು’ ಎಂಬ ಭಾಗ ಅವರನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ಕರೆದೊಯ್ಯುತ್ತದೆ. ಅಲ್ಲಿಯೇ ಅವರಿಗಾದದ್ದು ಶ್ರೀ ರಾಮಕೃಷ್ಣ, ಸ್ವಾಮಿ ವಿವೇಕಾನಂದರ ‘ದರ್ಶನ ಸಂದರ್ಶನ’ ಸಂತೆಪೇಟೆಯ ಗಲಿಬಿಲಿಯ ಬಸಿರಲ್ಲಿದ್ದ ಕಚಡ ಆನಂದ ಮಂದಿರದಲ್ಲಿ ಅವರ ಅಧ್ಯಾತ್ಮ ಸಾಧನೆ ನಿರಾತಂಕವಾಗಿ ಸಾಗುತ್ತದೆ. ಭಗವಂತ ಸುಖ ರೂಪದಲ್ಲಿ ಮಾತ್ರವಲ್ಲ, ಕ್ಲೇಶ ರೂಪಿಯಾಗಿಯೂ ಕಾಣಿಸಿಕೊಳ್ಳುತ್ತಾನೆಂಬ ಮಹಾಸತ್ಯದ ಅರಿವಾದದ್ದೂ ಅಲ್ಲಿಯೇ. ಅದೇ ಸಮಯದಲ್ಲಿಯೇ ಅವರು ಬೈಬಲ್ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯುತ್ತ, ಕ್ರೈಸ್ತ ಮತ ಪ್ರಚಾರವನ್ನು ಖಂಡಿಸಿ, ವೇದಾಂತದರ್ಶನದ ಮಹಿಮೆಯನ್ನು ಪ್ರದರ್ಶಿಸುವ ಅವಕಾಶ ಲಭಿಸುತ್ತದೆ. ಸ್ವಾತಂತ್ರ್ಯ ಸಂಗ್ರಾಮವೂ ಋತನಿಯಮಕ್ಕನುಗುಣವಾದ ವಿಶ್ವ ಚಿತ್‌ಶಕ್ತಿಯ ವ್ಯಾಪಾರವಾಗಿ ಅವರಿಗೆ ತೋರುತ್ತದೆ. ಆಗಿನ ಕಾಲದ ಕುವೆಂಪು ಅವರ ಚೇತನ, ಆ ಚೇತನದ ಪ್ರತಿಯೊಂದು ವ್ಯಾಪಾರವೂ ಅನ್ಯಾಸಕ್ತವಾಗಿರದೆ ಸದಾ ಸಾಹಿತ್ಯಕ ಮತ್ತು ಆಧ್ಯಾತ್ಮಿಕ ಪಥಗಳಲ್ಲಿ ಮುಂದುವರಿಯುತ್ತಿತ್ತೆಂಬ ಸಂಗತಿ ಆತ್ಮಕಥನದುದ್ದಕ್ಕೂ ಪ್ರತಿಧ್ವನಿಗೈಯುತ್ತದೆ. ಪ್ರಾತಃಸಮಯ, ಹಿಮಮಣಿ, ಮೇಘಪಂಕ್ತಿ, ಪಕ್ಷಿಕೂಜನ, ತಾರಾಖಚಿತ ಗಗನ, ಹೂತಳಿರುಗಳು ಒಂದೊಂದೂ ಕಾವ್ಯಸ್ಫೂರ್ತಿಯ ಮಾಧ್ಯಮಗಳಾಗಿದ್ದುವಲ್ಲದೆ, ಅವರ ಚಿತ್ತಕೋಶದಲ್ಲಿ ಅತೀಂದ್ರಿಯ ವ್ಯಾಪಾರದ ವಾತಾವರಣವನ್ನು ನಿರ್ಮಿಸುತ್ತವೆ. ಕಾವ್ಯಸರಸ್ವತಿ ಮತ್ತು ಅಧ್ಯಾತ್ಮಲಕ್ಷ್ಮಿಯರಿಬ್ಬರೂ ಏಕಕಾಲದಲ್ಲಿ ಮುತ್ತಿಟ್ಟು ಮುಂಡಾಡಿ ಅವರ ಕೈಹಿಡಿದು ನಡೆಸುತ್ತಾರೆ. ಅವರ ಆಗಿನ ಕವಿಪ್ರಜ್ಞೆ ಮತ್ತು ಆಧ್ಯಾತ್ಮಿಕ ಅಭೀಪ್ಸೆಗಳು ಪ್ರಾರಂಭದ ಆಂಗ್ಲ ಕವಿತೆಗಳಲ್ಲಿಯೇ ಅಭಿವ್ಯಕ್ತಗೊಳ್ಳುತ್ತವೆ. ಜಾಗ್ರದವಸ್ಥೆಯಲ್ಲಿ ಮಾತ್ರವಲ್ಲ, ಸ್ವಪ್ನಾವಸ್ಥೆಯಲ್ಲಿಯೂ ಅವರ ಆ ಅಭೀಪ್ಸೆ ತೀವ್ರತಮವಾಗಿ ನಾನಾ ರೂಪಗಳಲ್ಲಿ ಪ್ರಕಟ ಗೊಳ್ಳುತ್ತದೆ. ಮಾನವ ಲೋಕದ ಕ್ಲೇಶಕಷ್ಟಗಳಿಗೆಲ್ಲ ಆಧ್ಯಾತ್ಮಿಕ ವಿಹೀನವಾದ ದೌರ್ಬಲ್ಯವೇ ಮೂಲಕಾರಣವೆಂಬುದು ಆಗಲೇ ಅವರಿಗೆ ಮನವರಿಕೆಯಾಗುತ್ತದೆ. ಪಾಶ್ಚಾತ್ಯ ಪೌರ್ವಾತ್ಯ ತತ್ವಶಾಸ್ತ್ರಗಳನ್ನು ಅಧ್ಯಯನ ಮಾಡಿದಂತೆಲ್ಲ, ಧ್ಯಾನ, ಮೌನ, ಪ್ರಾರ್ಥನೆ, ತಪಸ್ಸುಗಳು ಅವರ ಬಾಳಿನ ಅವಿಭಾಜ್ಯ ಭಾಗವಾಗುತ್ತವೆ.

೬.೧.೧೯೨೪ರಂದು ನಡೆದ ಘಟನೆಯೊಂದು ಅವರ ಅಲೌಕಿಕಾನುಭವಕ್ಕೆ ಸಾಕ್ಷಿಯಾಗಿದೆ. ಅಂದು ಅಮಾವಾಸ್ಯೆ. ಬೆಳಿಗ್ಗೆ ಎಣ್ಣೆಸ್ನಾನ ಮಾಡಿ, ಕೊಠಡಿಗೆ ಬಂದು ಎರಡು ತುಪ್ಪದ ದೋಸೆ ತರಿಸುತ್ತಾರೆ. ಮುಂದೆ ನಡೆದದ್ದನ್ನು ಕವಿಲೇಖನಿಯೆ ವರ್ಣಿಸಲಿ: ‘ನಾನು ತಿನ್ನಲು ಶುರುಮಾಡಲು ಕುಚೇಷ್ಟೆಯ ಬಾಲಕೃಷ್ಣನು ಬಂದು ನನ್ನ ಎದುರು, ಕೊಳಲು ಹಿಡಿದು ಬಲಗೈ ಊರಿ, ಒರಗಿದಂತೆ ಕುಳಿತನು. ಮುಗುಳು ನಗುತ್ತಿದ್ದನು. ಸಲುಗೆಯ ಮಾತುಗಳಿಂದ ಅವನನ್ನು ಕೇಳಿಕೊಂಡೆ ‘ದೋಸೆ ತಿನ್ನುವುದನ್ನು ಮೊದಲು ನೀನೇ ಪ್ರಾರಂಭಿಸು’ ಎಂದು. ಅವನು ಒಪ್ಪಲಿಲ್ಲ. ನಾನೆ ದೋಸೆಯ ಒಂದು ಚೂರನ್ನು ಕಿತ್ತು ಅವನ ಬಾಯಿಯ ಬಳಿಗೆ ಒಯ್ದೆ ತಿನ್ನಲೆಂದು. ಆದರೆ ಅವನು ಹಿಂದು ಹಿಂದಕ್ಕೆ ಸರಿದುಬಿಟ್ಟ. ನನಗೆ ಮುನಿಸು ಬಂದು, ಕೊಠಡಿಯಿಂದಾಚೆಗೆ ನಡಿ ಎಂದು ಆಜ್ಞೆ ಮಾಡಿದೆ. ಅವನು ಮಾತ್ರ ನಗುತ್ತಲೆ ಅಲ್ಲೆ ಇದ್ದನು, ಅವನಿಗೆ ಕೊಡಲೆಂದು ಹಿಡಿದಿದ್ದ ಚೂರನ್ನು ಬಾಯಿಗೆ ಹಾಕಿಕೊಂಡೆ. ಆಗ ಅವನೂ ಬಾಯಿಗೆ ಹಾಕಿಕೊಂಡ, ಅದೇ ಚೂರನ್ನು ನಾನು ಅವನಿಗೆ ತಿನ್ನಿಸಬೇಕೆಂದಿದ್ದು ನಾನು ಬಾಯಿಗೆ ಹಾಕಿಕೊಂಡಿದ್ದ ಚೂರನ್ನೇ!’ (೧೩೨) ಈ ಪ್ರಸಂಗ ಇನ್ನೂ ಮುಂದುವರಿಯುತ್ತದೆ. ಅದನ್ನು ಓದಿದಂತೆಲ್ಲ ವಿಸ್ಮಯವಾಗುತ್ತದೆ; ತಲ್ಲೀನತೆಯುಂಟಾಗುತ್ತದೆ. ಮುಂದೊಂದು ದಿನದ ದಿನಚರಿಯಲ್ಲಿ ಹೀಗೆ ಬರೆಯುತ್ತಾರೆ:’ ‘ನಾನು ತುಂಬಾ ಧ್ಯಾನಶೀಲನೂ ಅಂತರ್ಮುಖಿಯೂ ಆಗಿಬಿಟ್ಟಿದ್ದೇನೆ. ಭಗವಂತನ ನಿರಂತರ ಸಾನ್ನಿಧ್ಯಾನುಭವ ನನಗೆ ಸರ್ವದಾ ಹರ್ಷಪ್ರದವಾಗಿದೆ’ಯೆಂದು. (೩೮೪) ‘ಕವಿಯು ನಾನಲ್ಲ; ನನ್ನಳೊರ್ವಂ ಜ್ಯೋತಿಮಯ ಕವಿಯಿಹನು’ ಎನ್ನುವ ಪದ್ಯಪಂಕ್ತಿಯಲ್ಲಿ ‘ಸೋಹಂ’ ‘ಅಹಂಬ್ರಹ್ಮಾಸ್ಮಿ’ ಮೊದಲಾದ ಉಪನಿಷನ್ಮಂತ್ರಗಳ ಪ್ರತಿಧ್ವನಿಯಿದೆ. ‘ಒಬ್ಬ ದೇವತಾ ಪುರುಷ ಕಾಣಿಸಿಕೊಡು ನನ್ನ ಆತ್ಮಸಾಕ್ಷಿಯನ್ನು ಸದಾ ಎಚ್ಚರವಾಗಿಟ್ಟಿರಬೇಕೆಂದು ಎಚ್ಚರಿಕೆ ನೀಡಿದನು’ (೫೫೭) ಎಂಬೊಂದು ದಿನದ ದಿನಚರಿಯ ಬರಹವನ್ನೋದುವಾಗ ಅವರೊಬ್ಬರು ಅನುಭಾವಿಯೆಂದೇ ತೋರುತ್ತಾರೆ.

ಹೀಗಿರುವಾಗ ೨೫.೧.೧೯೨೫ರಂದು ಸ್ನೇಹಿತರೊಬ್ಬರು ‘ಶ್ರೀ ರಾಮಕೃಷ್ಣರ ಜೀವನ ಚರಿತ್ರೆ’ಯನ್ನು ಅವರಿಗೆ ಸ್ನೇಹದ ಕಾಣಿಕೆಯಾಗಿ ನೀಡುತ್ತಾರೆ. ಇಡೀ ರಾತ್ರಿಯೆಲ್ಲ ಅವರದನ್ನು ಓದುತ್ತಾರೆ. ಆ ಓದಿನಿಂದ ಅವರ ಚೇತನದ ಮೇಲಾದ ಪರಿಣಾಮಭೂಮತ್ವ ಅವರ್ಣನೀಯ. ಅಲ್ಲಿಂದ ಸುಮಾರು ಒಂದು ವರ್ಷದ ನಂತರ ೧೫.೧.೧೯೨೬ರಂದು ಅವರ ಬಹುಜನ್ಮಗಳ ಬಯಕೆ ಮೂರ್ತಿವೆತ್ತಂತೆ, ಅವರ ಪುಣ್ಯವೇ ಸಾಕ್ಷಾತ್ಕಾರಗೊಂಡಂತೆ ಸ್ವಾಮಿ ವಿವೇಕಾನಂದರ ಜನ್ಮೋತ್ಸವ ಸಮಯದಲ್ಲಿ ಸ್ವಾಮಿ ಸಿದ್ದೇಶ್ವರಾನಂದರು ಕಾಣಿಸಿಕೊಳ್ಳುತ್ತಾರೆ. ‘ನಿರಾಕಾರವಾಗಿದ್ದ ಶ್ರೀ ಗುರುಕೃಪೆ ತನ್ನ ಅನಿರ್ದಿಷ್ಟತೆಯನ್ನು ಉಳಿದು ಸಾಕಾರವೂ ನಿರ್ದುಷ್ಟವೂ ಆಗಿ ನನ್ನನ್ನು ತನ್ನಡಿಗೆ ಎಳೆದುಕೊಳ್ಳಲು ಅವತರಿಸಿದ ಪುಣ್ಯದಿನ’ವದು. ಸ್ವಾಮೀಜಿಯವರ ಅಪೇಕ್ಷೆಯಂತೆ ಅವರು ಆಗಾಗ್ಗೆ ಶ್ರೀ ರಾಮಕೃಷ್ಣಾ ಶ್ರಮಕ್ಕೆ ಹೋಗಿ ಬರುತ್ತಾರೆ. ಅಲ್ಲಿಂದ ಮುಂದೆ ಅವರು ಆಶ್ರಮದ ಬಾಳಿನಲ್ಲಿ ಒಂದಾಗುತ್ತಾರೆ. ಅದೇ ಅವರಿಗೆ ರಕ್ಷೆಯಾಗುತ್ತದೆ. ಜ್ವರದ ನಿಮಿತ್ತದಲ್ಲಿ ಕ್ಲೇಶರೂಪಿಯಾಗಿ ಕಾಣಿಸಿಕೊಂಡ ಭಗವಂತನ ಕೃಪಾಹಸ್ತ ಅವರನ್ನು ಆಶ್ರಮಕ್ಕೆ ಕೊಂಡೊಯ್ಯುತ್ತದೆ. ಅನಂತರ ಶ್ರೀ ರಾಮಕೃಷ್ಣರೇ ಅವರಿಗೆ ಸರ್ವಸ್ವವಾಗುತ್ತಾರೆ; ಸಿದ್ದೇಶ್ವರಾನಂದರು ಆ ಶಕ್ತಿಯ  ಪ್ರತಿನಿಧಿಯಾಗುತ್ತಾರೆ. ಆಧ್ಯಾತ್ಮಿಕ ಸಾಧನೆಗೆ ಹಾಗೂ ವಿಕಾಸಕ್ಕೆ ಆಶ್ರಮ, ಕನ್ನಡಗಳೆರಡೂ ನಿಮಿತ್ತವಾಗುತ್ತವೆ, ಪ್ರೇರಕವಾಗುತ್ತವೆ. ಕನ್ನಡಕ್ಕೆ ಅಧ್ಯಾತ್ಮ ತೇಜಸ್ಸು ದೊರೆಕೊಳ್ಳುತ್ತದೆ; ನೂತನಾನುಭವಗಳ ಸಾಕ್ಷಾತ್ಕಾರವಾಗುತ್ತದೆ.

ಅವರ ಅಧ್ಯಾತ್ಮ ಸಾಧನೆಯ ಅಥವಾ ವಿಕಾಸದ ಪಥದಲ್ಲಿ ಅವರಿಗೆ ಬಂದ ಸಿಡಿಬು ರೋಗವೊಂದು ಮೈಲಿಗಲ್ಲೆಂದು ಭಾವಿಸಬಹುದಾಗಿದೆ. ಆಗವರು ಸ್ವಾಮಿಜೀ ಹಾಗೂ ಇತರ ಗೆಳೆಯರೊಡನೆ ಜೋಗ ನೋಡಲು ಹೋಗಿದ್ದರು. ಆ ನಿರ್ಬೀಳವನ್ನು ನೋಡುತ್ತಿದ್ದಂತೆ ಅವರು ಪ್ರಜ್ಞಾಹೀನರಾಗುತ್ತಾರೆ. ಕೂಡಲೇ ಅವರನ್ನು ಭದ್ರಾವತಿಯ ಆಸ್ಪತ್ರೆಗೆ ಸೇರಿಸುತ್ತಾರೆ. ಅನಂತರ ಶಿವಮೊಗ್ಗೆಗೆ ಕರೆತಂದು ಗುಡಿಸಲ್ಲೊಂದರಲ್ಲಿ ಪ್ರತ್ಯೇಕವಾಗಿಡುತ್ತಾರೆ. ಅವರ ಮಾತುಕತೆ ಮತ್ತು ಚರ್ಯೆಗಳಿಂದಾಗಿ ಅವರಿಗೆ ಹುಚ್ಚುಹಿಡಿದಿದೆಯೆಂದು ಕೆಲವರು ಊಹಿಸಿಕೊಂಡದ್ದೂ ಉಂಟು. ಆ ಅಪ್ರಜ್ಞಾಸ್ಥಿತಿಯಲ್ಲಿಯೂ ಅವರು ಗುರುಮಹಾರಾಜ್-ಮಹಾಮಾತೆ-ಸ್ವಾಮಿಜಿಯವರ ಚಿತ್ರಕೋಶಕ್ಕೆ ಸದಾ ಪೂಜೆಸಲ್ಲಿಸುತ್ತಾರೆ. ಆ ಚಿತ್ರಕೋಶ ವನ್ನವರು ತಲೆದಿಂಬಿನಡಿಯಲ್ಲಿಯೇ, ಕಂಕುಳಿನಲ್ಲಿಯೇ ಇರಿಸಿಕೊಂಡಿರುತ್ತಾರೆ. ಮೈಸೂರಿನಿಂದ ಸಿದ್ದೇಶ್ವರಾನಂದರು ದಕ್ಷಿಣೇಶ್ವರದ ಕಾಳಿಕಾ ಪ್ರಸಾದವನ್ನು ಕಳಿಸಲಾಗಿ, ಅದನ್ನು ಹಣೆಗಿಟ್ಟುಕೊಂಡು ‘ಜೈಗುರು ಮಹಾರಾಜ್! ಜೈ ಮಹಾಕಾಳಿ!’ ಎಂದು ಉಗ್ಗಡಿಸುತ್ತಾರೆ. ಅವರ ಅಂದಿನ ಆ ವರ್ತನೆಯನ್ನು ಕೆಲವರು ಭೂತ ಚೇಷ್ಟೆ ಎಂದೇ ಬಗೆಯುತ್ತಾರೆ. ಯಾರಾದರೂ ಬಂದು ‘ಪುಟ್ಟಪ್ಪ’ ಎಂದು ಮಾತಾಡಿಸಿದರೆ ‘ಪುಟ್ಟಪ್ಪ ಸತ್ತು ಹೋದ; ನಾನು ವಿವೇಕಾನಂದ’ ಎಂದು ಅಬ್ಬರಿಸುತ್ತಾರೆ. ಉಳಿದದ್ದೇನೇ ಇರಲಿ, ಆ ಸಂದರ್ಭದಲ್ಲಿ ಅವರಿಗೆ ಅದ್ಭುತಾನುಭವವಾದಂತಾಗಿ, ಅವರ ಮನಸ್ಸು ಆನಂದ ಶಾಂತಿಗಳಿಂದ ಉದ್ದೀಪಿತವಾಗುತ್ತದೆ. ಎಂಥ ವಿಪತ್ತಿನಲ್ಲಿಯೂ ಧೃತಿಗೆಡದಂತೆ ಧೈರ್ಯಶಕ್ತಿಯಾಗಿ ಆಧ್ಯಾತ್ಮಿಕಶ್ರದ್ಧೆ ಅವರನ್ನು ಪೊರೆಯುತ್ತದೆ.

ಯಾವ ಗುರುದೇವನ ನಾಮಸ್ಮರಣೆಯಿಂದಾಗಿ ಅವರ ಚೈತನ್ಯಕ್ಕೆ ವೈನತೇಯ ಶಕ್ತಿಯೂ ಅಲೌಕಿಕಾನುಭವವೂ ಒದಗಿದ್ದುವೋ ಅವನ ಭೌತಿಕ ಲೋಕದ ಲೀಲಾಕ್ಷೇತ್ರವನ್ನು ನೋಡುವ ಅವಕಾಶ ೧೯೨೯ರ ದಸರೆಯ ಸಮಯದಲ್ಲಿ ಅವರಿಗೆ ಪ್ರಾಪ್ತವಾಗುತ್ತದೆ. ಬೇಲೂರು ದಕ್ಷಿಣೇಶ್ವರಗಳನ್ನು ದರ್ಶಿಸಿದಾಗ ಭಾವಕೋಶಸ್ಥವಾದ ಅನುಭವ ಮೂರ್ತಸ್ವರೂಪವನ್ನು ತಾಳುವಂತಾಗಿ ಪುಳಕಿತಗಾತ್ರರಾಗುತ್ತಾರೆ. ೮.೧೦.೧೯೨೯ ರಂದು ಶ್ರೀ ರಾಮಕೃಷ್ಣರ ಅಂತರಂಗದ ಶಿಷ್ಯರಲ್ಲೊಬ್ಬರಾದ ಸ್ವಾಮಿ ಶಿವಾನಂದರವರಿಂದ ದೀಕ್ಷಾಲಾಭವಾಗುತ್ತದೆ. ಮುಂದಿನ ಅವರ ಆಧ್ಯಾತ್ಮ ಸಿದ್ದಿಗೆ ಆ ಪ್ರಸಂಗವೊಂದು ಏಣಿಯಾಗುತ್ತದೆ; ಶ್ರೀ ರಾಮಾಯಣ ದರ್ಶನಂ ಅದಕ್ಕೊಂದು ಸಾಕ್ಷಿಯಾಗುತ್ತದೆ. ‘ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸ್ಸಿನ ಮೇರು ಕೃತಿ’ ಎನ್ನುವ ಮಾತು ಕೇವಲ ಅಲಂಕಾರಿಕವಲ್ಲ; ಅದು ಸತ್ಯಕ್ಕಿಂತ ಸತ್ಯವಾದುದು. ಈ ಮಾತು ಆ ಮಹಾಕಾವ್ಯದಂತೆಯೇ ಅವರ ಅನೇಕ ಕವಿತೆಗಳಿಗೂ ಅನ್ವಯಿಸುತ್ತದೆ.

ಕುವೆಂಪು ಅವರ ಅಧ್ಯಾತ್ಮಿಕ ವಿಚಾರಗಳನ್ನು ತಿಳಿಯದವರು ಮೌಢ್ಯವೆಂದು ಗ್ರಹಿಸಬಹುದಾದ ಸಾಧ್ಯತೆಯುಂಟು. ವೈಜ್ಞಾನಿಕ ದೃಷ್ಟಿ ಮತ್ತು ವೈಚಾರಿಕ ಮನೋಭಾವಗಳು ಅವರ ಬಾಳಿನ ಹಾಗೂ ಸಕಲ ಸಾಧನೆಗಳ ನೆಲೆಗಟ್ಟೆಂಬುದನ್ನೂ ಅಧ್ಯಾತ್ಮ ಸಾಧಕನೂ ವಿಜ್ಞಾನಿಯಂತೆ ಸತ್ಯ ಸಂಶೋಧಕನೆಂಬುದನ್ನೂ ಯಾರೂ ಮರೆಯಲಾಗದು. ಹಲವು ಜಾನಪದ ಸಂಪ್ರದಾಯಗಳ ವಿವರಣೆಯಲ್ಲಿ ಅಂದಿನ ಮಲೆನಾಡಿನ ಜೀವನ ವಿಧಾನದ  ನಿರೂಪಣೆಯಿದೆಯೇ ಹೊರತಾಗಿ, ಅವರ ನಂಬಿಕೆಯ ನಿಲವಲ್ಲ, ಯಾವ ಮಠಸ್ಥಲ ದೇವಾಲಯಗಳಿಗೂ ಅವರು ಹೋದವರಲ್ಲ. ಅವರಿಗೆ ಜಾತಿ ಮತಗಳ ಬಂಧನವಿಲ್ಲ. ಮೌಢ್ಯಗಳ ಉಗಮಕ್ಕೆ ಕಾರಣವಾದ ಪುರೋಹಿತ ಷಾಹಿಯ ಬಗ್ಗೆ ಅವರಿಗೆ ಕಟು ತಿರಸ್ಕಾರ, ಮಠ ಗುರು, ಪೂಜೆ, ಹೋಮ, ಯಜ್ಞ, ಸತ್ಯನಾರಾಯಣ ವ್ರತ ಇತ್ಯಾದಿ ಭದ್ರ ಕೋಟೆಗಳಲ್ಲಿ ಪುರೋಹಿತರು ತಮ್ಮ ರಕ್ಷಾಸ್ಥಾನಗಳನ್ನು ಭದ್ರಪಡಿಸಿಕೊಂಡು, ಶೂದ್ರರನ್ನು ಶೋಷಿಸುತ್ತಿದ್ದಾ ರೆಂದು ಅವರು ಮೇಲಿಂದ ಮೇಲೆ ಆರ್ಭಟಿಸುತ್ತಾರೆ. ದೇವರು, ಧರ್ಮ, ಪಾಪ, ಪುಣ್ಯ, ಸ್ವರ್ಗ, ನರಕ, ಇತ್ಯಾದಿಗಳನ್ನು ಯಾವ ಮತವೇ ಸೃಷ್ಟಿಸಿರಲಿ, ಅವು ‘ಆಧ್ಯಾತ್ಮಿಕ ವೇಷದ ಮತನಾಮಕ ಗರುಡ ಪುರಾಣದಂತಹ ಸರಕುಗಳು!’ ಎಂದೇ ಅವರು ಡಂಗುರಿಸುತ್ತಾರೆ. ಆದರೂ ಚಿಕ್ಕಂದಿನಲ್ಲಿ ಅವರ ದೊಡ್ಡ ಚಿಕ್ಕಪ್ಪಯ್ಯ ಸಿಡಿಲಿನ ರಕ್ಷಣೆಗಾಗಿ, ಕಾಯಿಲೆಯ ತಡೆಗಾಗಿ, ಅಂತೆಯೇ ಇತರ ಕೇಡುಗಳ ತಪ್ಪಿಕೆಗಾಗಿ ಹಾರುವರ ಕೈಯಿಂದ ಮಾಡಿಸುತ್ತಿದ್ದ ಶಾಂತಿ ಪೂಜಾಹವನ ಹೋಮಾದಿಗಳನ್ನು ಸಂಕಟದಿಂದ ಸಹಿಸಿಕೊಳ್ಳುತ್ತಾರೆ. ಆ ಬಗೆಗಿನ ಕೇಡುಗಳನ್ನು ಯುವಕರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಅವಶ್ಯ ಬಿದ್ದಾಗಲೆಲ್ಲ ಭಾಷಣ ಲೇಖನಗಳಿಗೆ ತೊಡಗುತ್ತಾರೆ. ಶೂದ್ರರು ಬ್ರಾಹ್ಮಣ ಮೌಢ್ಯದ ಬೋನಿನಿಂದ ಕ್ರೈಸ್ತ ಮೌಢ್ಯದ ಬೋನಿಗೆ ನೆಗೆಯಬಾರದೆಂದು ಅವರನ್ನು ‘ಹಳೆಯ ಮತ ಮೌಢ್ಯ ಸಂಕುಲಗಳಿಂದ ಪಾರುಮಾಡಿ, ಅವರಿಗೆ ವೈಚಾರಿಕತೆಯನ್ನೂ ವೈಜ್ಞಾನಿಕತೆಯನ್ನೂ ನೀಡಿ, ನಿಜವಾದ ಉಪನಿಷತ್ ಪ್ರಣೀತವಾದ ವೇದಾಂತದ ಆಧ್ಯಾತ್ಮ ಶ್ರೀಯೆಡೆಗೆ ಅವರನ್ನು ಕರೆದೊಯ್ಯಬೇಕು’ (೯೬೯) ಎಂಬ ಉದ್ದೇಶದಿಂದ ತ್ರೀ ರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಬೋಧೆಯನ್ನವರಿಗೆ ಪರಿಚಯ ಮಾಡಿಕೊಡುತ್ತಾರೆ. ಜಕ್ಕಿಣಿ, ಪಂಜ್ರೊಳ್ಳಿ, ಭೂತ, ದೆವ್ವ, ಮೊದಲಾದುವುಗಳಿಗೆ ಬಲಿಕೊಟ್ಟು ಪೂಜೆಮಾಡುವುದನ್ನು ತಪ್ಪಿಸಲು ಅವರು ಯತ್ನಿಸುತ್ತಾರೆ. ಕುವೆಂಪು ಅವರಂಥ ವಿಚಾರವಂತರು, ಆಧಾತ್ಮ ಸಾಧನೆಯಲ್ಲಿ ಸಿದ್ದಿ ಪಡೆದವರು ಈ ದಿಶೆಯಲ್ಲಿ ಎಷ್ಟೇ ಪ್ರಯತ್ನ ನಡೆಸಿದ್ದರೂ, ಸಮಾಜವನ್ನು ಮೌಢ್ಯದಿಂದ ಹಾಗೂ ಪೌರೋಹಿತ್ಯದಿಂದ ಪಾರುಮಾಡಲು ಸಾಧ್ಯವಾಗಿಲ್ಲ. ಅದಕ್ಕೆ ಮುಖ್ಯಕಾರಣ ರಾಜಕೀಯ ಮುಖಂಡರು. ಭಾರತದ ಅಧ್ಯಕ್ಷರು ಮತ್ತು ಪ್ರಧಾನಿಗಳೇ ದಿನನಿತ್ಯ ಮೌಢ್ಯಾರಾಧನೆಯಲ್ಲಿ ತೊಡಗಿರುವಾಗ, ತಿರುಪತಿ ತಿಮ್ಮಪ್ಪನೇ ಸುಲಿಗೆಕೋರನಾಗಿರುವಾಗ, ಕಪ್ಪುಹಣವುಳ್ಳ ವಂಚಕರಿಗೆ ಸಾಮೀಲಾಗಿರುವಾಗ ಈ ದೇಶದಲ್ಲಿ ಹಾನಿಕಾರಕ ಮೌಢ್ಯವರ್ಜನ ಸಾಧ್ಯವೇ ಎಂಬ ಸಂಶಯ ಮೂಡುತ್ತದೆ. ಮೌಢ್ಯ ರಾಜಕಾರಣಿಗಳ ಬಂಡವಾಳ ವಾಗಿದೆಯೆನ್ನುವುದನ್ನು ಈ ಸಂದರ್ಭದಲ್ಲಿ ಮರೆಯುವಂತಿಲ್ಲ.

ಕುವೆಂಪು ಅವರ ಲೌಕಿಕ ನಿರ್ಲಿಪ್ತತೆಗೆ ಅಥವಾ ದಿವ್ಯನಿರ್ಲಕ್ಷ್ಯಕ್ಕೆ ಅವರು ಹುಟ್ಟಿದ ಪರಿಸರವೂ ಒಂದು ಕಾರಣವೆನ್ನಬಹುದಾಗಿದೆ. ಅಂದಿನ ಮಲೆನಾಡು ನಿರ್ಜನ ಪ್ರದೇಶ. ಅಲ್ಲಿ ಹಳ್ಳಿಯೆಂದರೆ ಒಂದೇ ಒಂದು ಮನೆ. ಒಂದೇ ಮನೆಯಾದರೂ ಆಳು ಕಾಳುಗಳಿಂದ ಕೂಡಿದ ದೊಡ್ಡಸಂಸಾರ. ಆಗಾಗ್ಗೆ ಬಂದು ಹೋಗುವ, ಹಬ್ಬಹರಿದಿನಗಳಲ್ಲಿ ಸೇರುವ ನೆಂಟರಿಷ್ಟರನ್ನು ಬಿಟ್ಟರೆ ಇತರ ಜನರ ಸಂಪರ್ಕ ಕಡಿಮೆ. ತರುಗುಲ್ಮ ಲತೆಗಳು, ಪ್ರಾಣಿ ಪಕ್ಷಿಗಳು, ಚಂದ್ರ ಸೂರ್ಯತಾರೆಗಳು ಇವೇ ಅವರ ಸಂಗಾತಿಗಳು. ಅಂಥ ಪರಿಸರದಲ್ಲಿ ಬೆಳೆಯುವ ಜನ ಸಹಜವಾಗಿಯೇ ನಾಗರಿಕತೆಯ ವೇಷ ತೊಟ್ಟ ಅನಿಷ್ಟಗಳ ಸೋಂಕಿನಿಂದ ದೂರವಾಗಿರುತ್ತಾರೆ. ನಿರ್ಲಕ್ಷ್ಯ, ಸಂಕೋಚ, ಲಜ್ಜೆಗಳು ಅವರ ಸ್ವಾಭಾವಿಕ ಲಕ್ಷಣಗಳಾಗಿ ಮೈದೋರುತ್ತವೆ.

ಕುಪ್ಪಳಿಯ ಮನೆಯೆಂದರೆ ಮೂವತ್ತು ನಲವತ್ತು ಜನರುಳ್ಳ ಅವಿಭಕ್ತ ಕುಟುಂಬ. ಮೂರು ತಲೆಮಾರಿನ ದಾಯಾದಿಗಳು ಒಟ್ಟಿಗೆ ಬದುಕು ನಡಸುವ ಹಿರಿಯ ಸಂಸಾರ. ಸುವಿಭಕ್ತ ಕುಟುಂಬದಲ್ಲೆಂತೊ ಅವಿಭಕ್ತ ಕುಟುಂಬದಲ್ಲಿಯೂ ಅನುಕೂಲ ಪ್ರತಿಕೂಲಗಳು ಸಮ ಪ್ರಮಾಣದಲ್ಲಿರುತ್ತವೆ. ಅವಿಭಕ್ತ ಕುಟುಂಬದಲ್ಲಿ ತಂದೆ ತಾಯಿಯರ ಮತ್ತು ಮಕ್ಕಳ ನಡುವಣ ಭಾವಬಾಂಧವ್ಯ ಸಣ್ಣ ಕುಟುಂಬದಲ್ಲಿದ್ದಂತೆ ತೀವ್ರವಾಗಿರುವುದಿಲ್ಲ. ಮಕ್ಕಳು ಹಾಸುಗೆಯಿಂದೇಳುವ ಮುನ್ನವೆ ತಂದೆತಾಯಿಯರು ತಂತಮ್ಮ ಕೆಲಸಗಳಿಗೆ ಹೊರಟು ಹೋಗುತ್ತಾರೆ. ಎಚ್ಚರವಾದಾಗಲೆಲ್ಲ ಸಮವಯಸ್ಸಿನ ಮಕ್ಕಳು ಆಟಪಾಟಗಳಲ್ಲಿ ತಿಂಡಿ ಊಟಗಳಲ್ಲಿ ಒಟ್ಟಾಗಿರುತ್ತಾರೆ. ಕಣ್ಣಿಗೆ ನಿದ್ದೆ ಹತ್ತುವಾಗಲೇ ಅವರು ತಂದೆತಾಯಿಯರ ಸೆಜ್ಜೆಮನೆಯನ್ನು ಸೇರುವುದು. ಸರದಿಯ ಮೇಲೆ ಕೋಣೆ ಕೆಲಸದಲ್ಲಿರುವ ಹೆಂಗಸರು ಅವರ ಆಹಾರಪಾನೀಯಗಳ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಯಾವಾಗಲೋ ಒಮ್ಮೆ ತಾಯಂದಿರು ತಂತಮ್ಮ ಮಕ್ಕಳಿಗೆ ಕದ್ದು ತಿಂಡಿ ಕೊಡಬಹುದು. ಬಟ್ಟೆಬರೆ ಹೊಲಿಸುವ ಕೆಲಸವೂ ಕುಟುಂಬದ ಯಜಮಾನನ ಹೊಣೆಯಾದ್ದರಿಂದ ಮಕ್ಕಳು ತಂದೆಯರ ಹೃದಯಕ್ಕೆ ಹತ್ತಿರ ಬರುವ ಅವಕಾಶವೂ ಇರುವುದಿಲ್ಲ. ಇದರಿಂದಾಗಿ ತಂದೆತಾಯಿಯರ ವಾತ್ಸಲ್ಯದ ಬಣ್ಣ ಕಡಿಮೆಯಾಗುವುದಿಲ್ಲ, ನಿಜ. ಆದರೆ ಅಂಥ ಪರಿಸ್ಥಿತಿ ಮಕ್ಕಳ ಮನಸ್ಸಿನ ಮೇಲೆ ವಿಚಿತ್ರ ಪರಿಣಾಮವುಂಟುಮಾಡುತ್ತದೆಂಬುದರಲ್ಲಿ ಅನುಮಾನವಿಲ್ಲ. ‘ಒಟ್ಟು ಕುಟುಂಬದಲ್ಲಿ ಮಕ್ಕಳಿಗೆ ತಮ್ಮ ತಂದೆತಾಯಿಯರೇ ಬೇರೆ ಎಂಬ ಪ್ರತ್ಯೇಕತಾ ಬುದ್ದಿ ಪ್ರಖರಗೊಳ್ಳಲು ಸಾಧ್ಯವಿರುತ್ತಿರಲಿಲ್ಲ’. (೨೧) ಎಂಬ ಕುವೆಂಪು ಅವರ ಮಾತೇ ಪೂರ್ವೋಕ್ತ ಅಭಿಪ್ರಾಯಕ್ಕೆ ಸಾಕ್ಷಿಯಾಗಿದೆ.

ತಂದೆ ವೆಂಕಟಪ್ಪಗೌಡರು ವಿಷಮಶೀತ ಜ್ವರದಿಂದ ನರಳಿ, ಧರ್ಮಸ್ಥಳ ತಿರುಪತಿಗೆ ಹರಕೆ ಹೊತ್ತುಕೊಂಡರೂ ತೀರ್ಥಹಳ್ಳಿಯಲ್ಲಿ ತೀರಿಕೊಳ್ಳುತ್ತಾರೆ. ಆಗ ಇತರ ಮಕ್ಕಳಂತೆ ಬಾಲಕ ಪುಟ್ಟಪ್ಪ ಸಹ ಅಳುತ್ತಿದ್ದುದುಂಟು. ಆದರೆ ತಂದೆಯ ಮರಣ ದುಃಖ ಬಹುಬೇಗನೆ ಅವರ ಮನಸ್ಸಿನಿಂದ ಆರಿಹೋಗುತ್ತದೆ. ಹಾಗಾಗಲು ಅಂತೆಯೇ ತಂದೆಯ ವ್ಯಕ್ತಿತ್ವವನ್ನು ಪೂರ್ತಿಯಾಗಿ ಅರಿಯದಿರಲು, ಅವರೇ ಹೇಳುವಂತೆ ‘ಅವಿಭಕ್ತ ಕುಟುಂಬದ ಬದುಕಿನ ರೀತಿ’ (೨೧)ಯೇ ಕಾರಣ.

ವೆಂಕಟಪ್ಪಗೌಡರು ತೀರಿಕೊಂಡನಂತರ ಒಬ್ಬ ಗಂಡು ಮಗ ಮತ್ತು ಇಬ್ಬರು ಹೆಣ್ಣುಮಕ್ಕಳ ಕ್ಷೇಮಪಾಲನೆಯ ಹೊಣೆ ಅವಿಭಕ್ತ ಕುಟುಂಬದ್ದಾದರೂ, ಸೀತಮ್ಮನವರ ಮಾತೃವಾತ್ಸಲ್ಯಯುಕ್ತ ಕಾತರತೆ ಮಾತ್ರ ಅಧಿಕವಾಗುತ್ತದೆ. ಅಮ್ಚ್ ಅಲಿಚ್ ಆಟದಲ್ಲಿ ತಮ್ಮ ಮಗನ ತೋಳು ಮುರಿದಾಗ ಆ ತಾಯಿಯ ದುಃಖದೈನ್ಯಗಳು ಅವರ್ಣನೀಯ, ಶೋಕತಪ್ತ ಹೃದಯರಾದ ಅವರು ತುಳಸಿಕಟ್ಟೆಗೆದುರಾಗಿ ಕೈಮುಗಿದು ನಿಂತು, ಸಂಕಟದಾರುಣ ಧ್ವನಿಯಿಂದ ‘ಅಯ್ಯೋ, ಸ್ವಾಮಿ ನಿನಗೆ ಕಣ್ಣಿಲ್ಲವೆ? ಗಂಡನನ್ನಂತೂ ನುಂಗಿಕೊಂಡೆ! ಇದ್ದ ಒಬ್ಬ ಮಗನಿಗೂ ಹೀಗೆ ಮಾಡಿದೆಯಲ್ಲೊ’ ಎಂದು ಬಾಗಿ, ಎರಡು ಮೂರು ಸಾರಿ ಹಣೆಯನ್ನು ಕಲ್ಲುಪೀಠಕ್ಕೆ ಕುಟ್ಟಿಬಿಡುತ್ತಾರೆ.

ಅವಿಭಕ್ತ ಕುಟುಂಬದ ಪದ್ಧತಿಯ ಜತೆಗೆ, ವ್ಯಾಸಂಗ ನಿಮಿತ್ತವಾಗಿ ಕುಟುಂಬದಿಂದ ದೂರ ಸರಿಯಬೇಕಾದ ಸಂದರ್ಭವೂ ಕುವೆಂಪು ಅವರ ಮಾನಸಿಕ ವಿಚ್ಛಿತ್ತಿಗೆ ಕಾರಣವಾಗುತ್ತದೆ. ನೂತನ ವಾತಾವರಣ, ಹೊಸ ಸಹವಾಸ ಹಾಗೂ ಆಕರ್ಷಣೆಗಳು ಹಳೆಯ ಭಾವಾನುಭವಗಳನ್ನು ಮನಸ್ಸಿನ ಸುಪ್ತಸ್ತರಕ್ಕೆ ನೂಕುತ್ತವೆ. ಗ್ರಂಥಯಾತ್ರೆ ಪ್ರಾರಂಭವಾದ ಮೇಲಂತು ಹಳೆಯ ಅನುಭವಗಳನ್ನು ಮೆಲುಕು ಹಾಕುವುದಕ್ಕಾದರೂ ಪುರಸತ್ತು ಸಿಗುತ್ತದೆಯೇ? ಕಾಲದೇಶಗಳ ದೂರ ಹೆಚ್ಚಿದಷ್ಟೂ ಸ್ನೇಹ ಸಂಬಂಧಗಳು ಮಸಕು ಮಸಕಾಗುತ್ತವೆಂಬುದು ಮನುಷ್ಯ ಕೋಟಿಗೆ ಅನುಭವವೇದ್ಯವಾಗಿರುವ ಸತ್ಯ. ರಜೆಗೆ ಊರಿಗೆ ಹೋದಾಗಲೂ ಕುವೆಂಪು ಅವರು ವಿಶೇಷವಾಗಿ ಗೆಳೆಯರೊಡನೆ ಆಟ ಅಲೆತಗಳಲ್ಲಿ ಕಾಲಕಳೆಯುತ್ತಿದ್ದರೇ ವಿನಃ ತಾಯಿಯ ಬಳಿ ಕುಳಿತು ಮಾತುಕತೆಯಾಡುವುದಿಲ್ಲ. ಅವಿಭಕ್ತ ಕುಟುಂಬದಲ್ಲಿ ಅದಕ್ಕವಕಾಶವೂ ಇಲ್ಲ. ತಾಯಿ ಕಾಯಿಲೆಯಿಂದ ನರಳುತ್ತಿರುವಾಗಲೂ ಮಗ ಅವರನ್ನು ವಿಚಾರಿಸಿಕೊಂಡದ್ದಿಲ್ಲ. ‘ಏನು ಪುಟ್ಟೂ, ನನಗೆ ಕಾಯಿಲೆಯಾಗಿ ಬಿದ್ದಿದ್ದರೂ ನೀನು ಬಂದು ಮಾತಾಡಿಸುವುದೇ ಇಲ್ಲವಲ್ಲ?’ ಎಂದು ತಾಯಿಯೊಮ್ಮೆ ಕೇಳಿದಾಗ ‘ಅವ್ವಾ, ನನಗೇನು ನಿನ್ನ ಮೇಲೆ ಪ್ರೀತಿ ಇಲ್ಲ ಅಂತಾ ತಿಳಿದುಕೊಂಡಿದ್ದೀಯಾ? ನೀನು ಅಂದರೆ ಬರಿಯ ಈ ನಿನ್ನ ದೇಹವೇನು? ನೀನು ಸತ್ತರೂ ನಿನ್ನ ಆತ್ಮ ಅಮರವಾಗಿರುತ್ತದೆ’ ಎಂದು (೧೮೯) ಮಗ ಉಪನ್ಯಾಸ ಮಾಡುತ್ತಾರೆ. ಆಗ ಎಲ್ಲ ತಾಯಿಯರಂತೆ ಆ ತಾಯಿ ಕೊಟ್ಟ ಉತ್ತರವಾದರೂ ಏನು? ‘ಆಗಲಪ್ಪ! ಎಲ್ಲಾದರೂ ಇರು, ನೀನು ಸುಖವಾಗಿದ್ದರೆ ನನಗದೇ ಸಂತೋಷ!’.

ರಜಾ ದಿನಗಳಲ್ಲಿ ಊರಿಗೆ ಹೋದಾಗಲೂ ಒಮ್ಮೊಮ್ಮೆ ಹಿರಿಕೊಡಿಗೆಯಲ್ಲಿರುತ್ತಿದ್ದ ತಾಯಿ ತಂಗಿಯರನ್ನವರು ಸಂಧಿಸುವಂತಿರಲಿಲ್ಲ. ಅವರಲ್ಲಿಗೆ ತಾಯಿಯನ್ನು ನೋಡಲಿ ಕ್ಕಾದರೂ ಹೋಗುತ್ತಿರಲಿಲ್ಲ. ದೊಡ್ಡ ಚಿಕ್ಕಪ್ಪಯ್ಯ ತಮ್ಮ ತಾಯಿಯ ಬಗ್ಗೆ ಬೇಸರ ವ್ಯಕ್ತಪಡಿಸಿ ಕಾಗದ ಬರೆದಾಗಲೂ ಅವರು ತಲೆಕೆಡಿಸಿಕೊಂಡವರಲ್ಲ. ಅವರ ಆ ನಿರ್ಲಕ್ಷ್ಯಕ್ಕೆ ಕಾರಣ ಅವರ ಸಮಸ್ತ ಚೇತನವನ್ನು ಆಕ್ರಮಿಸಿಕೊಡಿದ್ದ ಅಲೌಕಿಕತೆ. ತಾಯಿಯ ಕಾಯಿಲೆಯ ಸುದ್ದಿ ಪತ್ರ ಮುಖೇನ ತಿಳಿದಾಗಲೂ, ಅವರ ಕ್ಷೇಮವನ್ನು ಜಗಜ್ಜನನಿಯ ಕೈಗೆ ಅರ್ಪಿಸುತ್ತಾರೆ. ‘ನನ್ನ ತಾಯಿ ಸತ್ತರೂ ಅವರು ಬೇರೆಯ ಲೋಕದಲ್ಲಿ ಬದುಕಿಯೆ ಇರುತ್ತಾರೆ’ ಎಂದು (೩೬೦) ಅವರು ಭಾವಿಸುತ್ತಾರೆ.

೧೯೨೪ನೆಯ ಇಸವಿಯ ಕೊನೆಯ ಭಾಗವಿರಬೇಕು. ಸಂತೆಪೇಟೆಯ ಆನಂದ ಮಂದಿರದ ಉಪ್ಪರಿಗೆಯ ಮೇಲೆ ಕುವೆಂಪು ಅವರು ಗೆಳೆಯರೊಡನೆ ಇಸ್ಪೀಟು ಆಡುತ್ತಿದ್ದಾರೆ. ಕೈಗೆ ಬಂದ ಟೆಲಿಗ್ರಾಂ ಒಡೆದು ನೋಡಿ, ಒಂದು ಕ್ಷಣ ಅವರ ಚೇತನ ತತ್ತರಿಸಿದರೂ, ತತ್‌ಕ್ಷಣವೇ ಅದ್ವೈತ ಬುದ್ದಿಯ ಅನೆಸ್ತೀಶಿಯಾ ಕೆಲಸ ಮಾಡಲಾಗಿ, ಅವರದನ್ನು ಜೇಬಿನಲ್ಲಿರಿಸಿಕೊಂಡು ಏನೂ ನಡೆದಿಲ್ಲವೆಂಬಂತೆ ಆಟ ಮುಂದುವರಿಸುತ್ತಾರೆ, ಆಟದ ನಂತರ ತಂತಿಯ ದುರಂತ ವಾರ್ತೆಯನ್ನು ಕೇಳಿದ ಗೆಳೆಯರು ತಬ್ಬಿಬ್ಬಾಗಿ ಕೂಡಲೇ ರೈಲಿಗೆ ಹೋಗುವಂತೆ, ಅವರನ್ನು ಒತ್ತಾಯಪಡಿಸುತ್ತಾರೆ. ‘ಆಗುವುದೆಲ್ಲ ಆಗಿ ಹೋಗಿರುತ್ತದೆ; ನಾನು ಹೋಗಿ ಏನು ಪ್ರಯೋಜನ’? ಎಂದವರು ಉತ್ತರಿಸುತ್ತಾರೆ. ದೇಹ ಭಸ್ಮೀಭೂತವಾದರೂ ಅವರ ಆತ್ಮ ತಂದೆಯ ಆತ್ಮದೊಡನೆ ಸೇರಿಕೊಂಡಿರುತ್ತದೆ ಎಂದು ನಂಬುತ್ತಾರೆ. ಅದೇ ಸಮಯದಲ್ಲಿ ಅವರು ಬರೆದ ‘ಅನಾಥ ಬಾಲ’ (೪೦೯) ಎಂಬ ಕವನದಲ್ಲಿ ಅವರ ದಾರುಣ ಸಂಕಟ ಕೋಡಿವರಿದಿದೆ. ಪ್ರತಿವರ್ಷವೂ ಅವರ ಮನೆಯಲ್ಲಿ ಒಬ್ಬರೋ ಇಬ್ಬರೋ ಸಾಯುತ್ತಿದ್ದುದೂ ಅವರ ನಿರ್ಲಿಪ್ತತೆಗೆ ಕಾರಣವಾಗಿದ್ದಿರಬೇಕು, ಅಂತೂ ಗೆಳೆಯರ ಒತ್ತಾಯದಿಂದ ಅವರು ಹನ್ನೊಂದನೆಯ ದಿನದ ಉತ್ತರ ಕ್ರಿಯೆಯ ಹೊತ್ತಿಗೆ ಊರಿಗೆ ಹೋಗುತ್ತಾರೆ. ಅಣ್ಣನನ್ನು ನೋಡಿ ಶೋಕತಪ್ತ ಸಂಕಟದಿಂದ ಉದ್ಗಾರ ತೆಗೆದ ತಂಗಿಯರನ್ನು ಸಮಾಧಾನ ಪಡಿಸುವ ತಂಟೆಗೂ ಹೋಗುವುದಿಲ್ಲ. ಅಂದಿನ ಅವರ ನಿರ್ಲಕ್ಷತೆಗಾಗಿ ಅವರೇ ಆನಂತರದ ದಿನಗಳಲ್ಲಿ ತಮ್ಮನ್ನು ನಿಂದಿಸಿಕೊಂಡದ್ದುಂಟು. ಮಾತೆಯ ಮರಣದ ಬಗ್ಗೆ ಅವರಿಗೆ ಸಂಕಟವಿರಲಿಲ್ಲವೆಂದಲ್ಲ. ಆಗಾಗ್ಗೆ ಅದು ಚಿತ್ತಕೋಶದಲ್ಲಿ ಮರುಕಳಿಸಿ, ಅವರ ಹೃದಯವನ್ನು ಹಿಂಡುತ್ತದೆ; ನೆನೆವರಿಕೆಯಿಂದ ಕಣ್ಣೀರು ಸುರಿಸುತ್ತಾರೆ. ಏಳು ವರ್ಷಗಳ ನಂತರ ಅಂಥದೊಂದು ಸಂದರ್ಭದಲ್ಲಿ ಅವರ ನೊಂದ ಹೃದಯದಾಳದಿಂದ ‘ಜನನಿಗೆ’ ಎಂಬ ಕವಿತೆ ಉದ್ಭವವಾಗುತ್ತದೆ. ಅಂದು ಸುರಿಸದ ಕಣ್ಣೀರು ಹಿರಿಯ ಹೊಳೆಯಾಗಿ ಈ ಕವಿತೆಯಲ್ಲಿ ಹರಿದಿದೆ; ಕುವೆಂಪು ಅವರ ಮಾತೃವಾತ್ಸಲ್ಯ ಎಣೆಯಿಲ್ಲದ್ದೆಂದೂ, ಅನನ್ಯ ಸಾಧಾರಣವಾದದ್ದೆಂದೂ, ಈ ‘ನೆನಪಿನ ದೋಣಿಯಲ್ಲಿ’ ಆ ವಾತ್ಸಲ್ಯಕ್ಕೆತ್ತಿದ ಆರತಿಯೆಂದೂ ಅದನ್ನೋದಿದವರಿಗೆ ಮನದಟ್ಟಾಗದಿರದು. ಈ ಧವಳ ಮಾತೃವಾತ್ಸಲ್ಯ ಅವರ ಮಹಾಕಾವ್ಯ, ಮಹಾಕಾದಂಬರಿಗಳಲ್ಲಿಯೂ ಮೂರ್ತಿವತ್ತಾಗಿ ಮೈದೋರುತ್ತದೆ.

ಮಾತೃ ವಾತ್ಸಲ್ಯದಂತೆಯೇ ಕುವೆಂಪು ಅವರ ದೇಶ ಭಕ್ತಿಯೂ ಅಸದೃಶವಾದುದೆಂಬ ಸಂಗತಿ ಈ ಕೃತಿಯಿಂದ ಸ್ಪಷ್ಟವಾಗುತ್ತದೆ. ಅವರು ಪ್ರೌಢಶಾಲೆಯ ವಿದ್ಯಾರ್ಥಿಯಾಗಿರು ವಾಗಲೇ, ಅಂದರೆ ೧೯೨೦ರಲ್ಲಿ ಬಾಲಗಂಗಾಧರ ತಿಲಕ್ ತೀರಿಕೊಂಡಾಗ ಹರತಾಳದ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಗೌರೀಶಂಕರ ಮಿಶ್ರರಂಥ ದೇಶ ಭಕ್ತರ ಭಾಷಣ ಗಳಿಂದ ಪ್ರಚೋದಿತರಾಗಿ ಇದ್ದೊಂದು ವಿದೇಶೀ ಬಟ್ಟೆಯ ಕೋಟನ್ನು ಚಿತೆಗೆಸೆಯುತ್ತಾರೆ. ೧೯೨೪ರಲ್ಲಿ ಗಾಂಧೀಜಿಯ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಸಮ್ಮೇಳನಕ್ಕೂ ಹೋಗಿ ಬರುತ್ತಾರೆ. ದೇಶ ಭಕ್ತಿಗೀತೆಗಳ ಮೂಲಕ ಜನರಲ್ಲಿ ಸ್ವಾತಂತ್ರ್ಯ ದಾಹವನ್ನು ಕೆರಳಿಸಿ, ಅವರು ಕ್ರಿಯಾಸಕ್ತರಾಗುವಂತೆ ಹುರುಪುಗೊಳಿಸುತ್ತಾರೆ. ಅವರ ಈ ದೇಶ ಪ್ರೇಮವೇ ಸ್ವಭಾಷಾಪ್ರೇಮವಾಗಿ ಪರಿಣಮಿಸುತ್ತದೆ. ಅವರ ಆ ಪ್ರೇಮ ವಿಚಾರ ಮೂಲವಾದದ್ದು ವೈಜ್ಞಾನಿಕವಾದದ್ದು. ಪ್ರಾರಂಭದಲ್ಲಿ ಅವರು ಆಂಗ್ಲ ಮೋಹಿಯಾಗಿದ್ದರೆಂಬ ಸಂಗತಿ ಅವರ ಕೃತಿಗಳಿಂದಲೇ ವಿದಿತವಾಗುತ್ತದೆ. ಇಂಗ್ಲಿಷ್ ಮಾಧ್ಯಮದ ಮೂಲಕ ಅವರು ಕನ್ನಡವನ್ನು ಪ್ರವೇಶಿಸಿದರೆಂಬ, ಜ್ಞಾನೈಶ್ವರ್ಯ ಸಂಪಾದನೆಗೆ ಇಂಗ್ಲಿಷೇ ಸಮರ್ಥ ಸಾಧನವಾಯಿತೆಂಬ, ಕನ್ನಡ ಪ್ರಬಲವಾದ ಉಪಕರಣವಾಗಲು ಆ ಭಾಷೆ ಕಾರಣವಾಯಿತೆಂಬ ಸತ್ಯ ಸಂಗತಿಯನ್ನು ಯಾರೂ ಮರೆಯುವಂತಿಲ್ಲ. ಇಂಗ್ಲಿಷ್ ಭಾಷೆಯಿಂದಾದ ಪ್ರಯೋಜನಗಳನ್ನು ಅವರು ಈ ಕೃತಿಯಲ್ಲೊಂದೆಡೆ (೧೬೯) ಪಟ್ಟಿ ಮಾಡಿದ್ದಾರೆ. ಆದರೂ ಆಂಗ್ಲ ಕನ್ನಡದ ಸ್ಥಾನಮಾನ ಗಳನ್ನಾಕ್ರಮಿಸಿಕ