ಶ್ರೀ ಕುವೆಂಪು ಅವರ ಎಪ್ಪತ್ತೇಳನೆಯ ಜನ್ಮೋತ್ಸವ ಸಮಾರಂಭದ ಅಂಗವಾಗಿ ೨೭.೧೨.೧೯೮೦ ರಂದು ‘ನೆನಪಿನದೋಣಿಯಲ್ಲಿ’ ಕೃತಿಯನ್ನು ಕುರಿತು ವಿಚಾರ ಗೋಷ್ಠಿ ಯೊಂದು ಏರ್ಪಾಡಾಗಿತ್ತು. ಅದರಲ್ಲಿ ಸರ್ವಶ್ರೀ ನ.ಭದ್ರಯ್ಯ, ಸಿ.ಪಿ. ಕೃಷ್ಣಕುಮಾರ್, ಜಿ.ಟಿ. ನಾರಾಯಣರಾವ್, ಪ.ವಿ. ಚಂದ್ರಶೇಖರ್, ದೇವಯ್ಯ ಹರವೆ, ಬೋರಲಿಂಗಯ್ಯ ಮೊದಲಾದ ವಿದ್ವಾಂಸರು ಭಾಗವಹಿಸಿದ್ದರು. ಅಂದು ಅವರು ಮಂಡಿಸಿದ ಪ್ರಬಂಧಗಳೂ, ಈಚೆಗೆ ಒಬ್ಬಿಬ್ಬರು ಮಿತ್ರರು ಬರೆದುಕೊಟ್ಟ ಲೇಖನಗಳೂ ‘ನೆನಪಿನ ದೋಣಿಯಲ್ಲಿ ಯಾತ್ರೆ’ಯ ರೂಪದಲ್ಲಿ ಹೊರಬರುತ್ತಿವೆ.

೨೪.೧೧.೮೦ರಂದು ‘ನೆನಪಿನ ದೋಣಿಯಲ್ಲಿ’ ಬಿಡುಗಡೆ ಮಾಡಿದ ಡಾ. ಜಿ.ಎಸ್. ಶಿವರುದ್ರಪ್ಪನವರು ಅದೊಂದು ಅದ್ಭುತ ಕೃತಿಯೆಂದು ಕರೆದು, ಅದು ಪ್ರಕಟವಾಗದಿದ್ದರೆ ಕುವೆಂಪು ಅವರ ಸಾಹಿತ್ಯ ಜೀವನ ಅರೆಯಾಗುಳಿಯುತ್ತಿತ್ತೆಂದೂ, ಅವರ ಕೃತಿ ಸಮುದಾಯಕ್ಕೆ ಇದೊಂದು ಗವಾಕ್ಷದಂತಿದೆಯೆಂದೂ, ಕನ್ನಡ ಸಾಹಿತ್ಯ ಅಷ್ಟರಮಟ್ಟಿಗೆ ಬಡವಾಗುತ್ತಿತ್ತೆಂದೂ ಸ್ಪಷ್ಟಪಡಿಸಿದರು. ಅದನ್ನೋದಿದ ಮಿತ್ರರೊಬ್ಬರು ಇಪ್ಪತ್ತೈದು ವರ್ಷಗಳಿಂದೀಚೆಗೆ ಅಂಥದೊಂದು ಕೃತಿಯನ್ನು ಓದಿರಲಿಲ್ಲವೆಂದೂ, ಜಗತ್ತಿನ ಶ್ರೇಷ್ಠ ಆತ್ಮಕಥೆಗಳ ಸಾಲಿನಲ್ಲಿ ಅದು ನಿಲ್ಲುವಂಥದ್ದೆಂದೂ ಹರ್ಷ ವ್ಯಕ್ತಪಡಿಸಿದರು. ಅದು ಕವಿಚೇತನದ ಪ್ರಾಮಾಣಿಕ ಚರಿತ್ರೆಯೆಂದೂ ಅದು ವಿಕಾಸೋನ್ಮುಖ ಚೇತನಗಳಗೆ ದಾರಿ ದೀಪವಾಗುತ್ತದೆಂದೂ ಮತ್ತೊಬ್ಬ ಮಿತ್ರರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಮಲೆನಾಡಿನ ಜೀವನಕ್ಕೆ ಕನ್ನಡಿ ಯಾಗಿರುವುದಲ್ಲದೆ, ನಾಗರಿಕ ಜೀವನದ ಲೋಪ ದೋಷಗಳ ಅಭಿವ್ಯಕ್ತಿ ಮಾಧ್ಯಮವೂ ಆಗಿದೆಯೆಂದು ಮಗುದೊಬ್ಬರು ನುಡಿದರು. ಇದು ಅಪ್ಪಟ ವಾಸ್ತವಾಂಶಗಳನ್ನೊಳಗೊಂಡ ಆತ್ಮಕಥೆಯಾದರೂ ಕಾದಂಬರಿಯಂತೆ ಮನಮೋಹಿಸುವ ವೈಲಾಸಿಕ ಗುಣ ಹೊಂದಿದೆ ಯೆಂದೂ, ಅದರಲ್ಲಿ ಬಳಕೆಗೊಂಡಿರುವ ಉಜ್ವಲ ಭಾಷಾ ಸೌಂದರ್ಯಕ್ಕೆ ಯಾರಾದರೂ ಸೋಲಬೇಕಾಗುತ್ತದೆಂದೂ ಕೆಲವರು ಹೇಳಿದ್ದುಂಟು. ಪುರೋಹಿತ ವರ್ಗವನ್ನು ಖಂಡಿಸುವಲ್ಲಿ ಕುವೆಂಪು ಪೂರ್ವಗ್ರಹಪೀಡಿತರಾಗಿದ್ದಾರೆಂದೂ, ಕೆಲವು ಕಡೆ ಅಹಂಭಾವದ ಬಣ್ಣ ಕಾಣುತ್ತದೆಂದೂ ಮತ್ತೆ ಕೆಲವರು ಹಿಂದೆ ಮುಂದೆ ಆಡಿಕೊಂಡದ್ದುಂಟು. ‘ನವೋದಯ ಕಾಲದಲ್ಲಿ ಶೂದ್ರವರ್ಗದಿಂದ ಬಂದ ಕುವೆಂಪು ಅನೇಕ ರೀತಿಯ ಸವಾಲುಗಳನ್ನು ಸ್ವೀಕರಿಸುತ್ತಲೇ ಬೆಳೆದು ಬಂದ ಅತ್ಯದ್ಭುತವಾದ ಚೇತನವುಳ್ಳವರು’ ಎಂದು ತಿಳಿದಿರುವವರು ಸಹ ಅವರ ವ್ಯಕ್ತಿತ್ವಕ್ಕೆ ದ್ವಂದ್ವತ್ವವನ್ನು ಆರೋಪಿಸುವುದುಂಟು.

ಆಯಾಯ ವಿಮರ್ಶಕರ ದೃಷ್ಟಿಯಿಂದ ಈ ಟೀಕೆ ಟಿಪ್ಪಣಿಗಳೆಲ್ಲ ಪ್ರಾಮಾಣಿಕವಾದು ವೆಂಬುದರಲ್ಲಿ ಸಂದೇಹವಿಲ್ಲ. ಯಾವುದೇ ಮನುಷ್ಯ ಕೃತಿಯಾಗಲೀ, ಸಾಹಿತ್ಯ ಕೃತಿಯಾಗಲೀ ನಾನಾಬಗೆಯ ವ್ಯಾಖ್ಯಾನಗಳನ್ನು ಆಕೃಷ್ಟಿಸುವುದುಂಟಷ್ಟೆ. ಒಂದೊಂದು ವಸ್ತುವೂ ಒಬ್ಬೊಬ್ಬನಿಗೆ ಒಂದೊಂದು ರೀತಿಯಾಗಿ ಕಾಣುವುದು ಸಹಜ. ಒಂದು ಕಲ್ಲು, ಒಂದು ಮನೆ, ಒಂದು ಹೂವು, ಒಂದು ಗಿಡ ಒಬ್ಬೊಬ್ಬ ವ್ಯಕ್ತಿಯಲ್ಲಿ ಒಂದೊಂದು ವಿಧವಾದ ಭಾವನೆಯನ್ನು ಪ್ರಚೋದಿಸುತ್ತದೆ. ಒಂದು ಹೂವು ಒಬ್ಬನಲ್ಲಿ ಭಕ್ತಿಯನ್ನು ಉತ್ಪಾದಿಸಿದರೆ, ಮತ್ತೊಬ್ಬನಲ್ಲಿ ಪ್ರೇಮವನ್ನು ಕೆರಳಿಸಬಹುದು, ಮಗುದೊಬ್ಬನಲ್ಲಿ ಸತ್ಯಶೋಧನಾನು ರಕ್ತಿಯನ್ನು ಕೊನರಿಸಬಹುದು. ಒಂದು ಮನೆಯನ್ನು ಒಂದೊಂದು ದಿಕ್ಕಿನಿಂದ ನೋಡಿ ದಾಗಲೂ ಒಂದೊಂದು ಅಭಿಪ್ರಾಯ ಮೂಡಬಹುದು. ಗಾಂಪನಿಗೆ ಕಲ್ಲು ಜಡವಸ್ತುವಾದರೆ, ವಿಜ್ಞಾನಿಗೆ ಅದು ಪ್ರೋನ್ಯೂಟ್ರಾನ್ ಎಲೆಕ್ಟ್ರಾನ್‌ಗಳ ವಿಲಾಸ ವೇದಿಕೆಯಾಗಿ, ಶ್ರೀ ರಾಮಕೃಷ್ಣ ಪರಮಹಂಸರಿಗೆ ಚಿನ್ಮಯವಾಗಿ ತೋರುತ್ತದೆ. ಗಿಳಿ ಸಾಮಾನ್ಯ ವ್ಯಕ್ತಿಗೆ ಕ್ಷುದ್ರವಾದೊಂದು ಪಕ್ಷಿ; ಮಹಾದೇವಿಯಕ್ಕನಿಗೆ ಚೆನ್ನಮಲ್ಲಿಕಾರ್ಜುನನನ್ನು ತೋರಿಸುವ ದೇವದೂತಿ. ಕಾಶಿಯಲ್ಲೊಬ್ಬ ಪಂಡಿತನಿದ್ದ, ಅವನು ಕಳ್ಳಸುಳ್ಳ ಲಫಂಗರಲ್ಲಿಯೂ ಒಳ್ಳೆಯದನ್ನೆ ಕಾಣುತ್ತಿದ್ದ. ಅವನನ್ನು ಪರೀಕ್ಷಿಸುವ ಸಲುವಾಗಿ ತುಂಟನೊಬ್ಬ ಕೊಳೆತ ಮಾವಿನಹಣ್ಣನ್ನು ಅವನಿಗೆ ಕಾಣಿಕೆಯಾಗಿ ನೀಡುತ್ತಾನೆ. ಪಂಡಿತ ಕೊಳೆತ ಭಾಗವನ್ನು ಬಿಸಾಡಿ, ಓಟೆಯನ್ನುಳಿಸಿಕೊಂಡು, ಇದು ಮುಂದಿನ ಮರದ ತಾಯಿ ಎನ್ನುತ್ತಾನೆ. ಮತ್ತೊಮ್ಮೆ ಗಂಗಾನದಿಗೆ ಹೋಗುವಾಗ ದಾರಿಯಲ್ಲಿ ಸತ್ತನಾಯಿಯೊಂದು ಕಣ್ಣಿಗೆ ಬೀಳುತ್ತದೆ. ಪಕ್ಕದಲ್ಲಿದ್ದವನು ಅದನ್ನು ಕಂಡು ಮೂಗು ಮುಚ್ಚಿಕೊಳ್ಳುತ್ತಾನೆ ಪಂಡಿತ ಹೊರಗೆ ಕಾಣುತ್ತಿದ್ದ ಅದರ ಶ್ವೇತಶುಭ್ರ ರದನಗಳನ್ನು ಪ್ರಶಂಸಿಸುತ್ತಾನೆ. ನೊಣಗಳಿಗೆ ಬಚ್ಚಲೇ ಲೇಸು, ದುಂಬಿಗಳಿಗೆ ಬಂಡೇ ಚೆನ್ನು; ಕೆಲವರಿಗೆ ಸಿಹಿಯೇ ಕಹಿ, ಮತ್ತೆ ಕೆಲವರಿಗೆ ಕಹಿಯೇ ಸಿಹಿ. ಕೆಲವರಿಗೆ ಖಾರ ಇಷ್ಟ, ಕೆಲವರಿಗೆ ಹುಳಿ ಇಷ್ಟ, ಕೆಲವರಿಗೆ ಬೆಳ್ಳುಳ್ಳಿ ಎಂದರೆ ತಲೆನೋವು; ಮತ್ತೆ ಕೆಲವರಿಗೆ ಅದೇ ಸರ್ವರೋಗ ನಿವಾರಕ. ಲೋಕೋಭಿನ್ನರುಚಿಃ.

ಏಳು ಬಣ್ಣಗಳು ಸೇರಿದರೇನೇ ಕಾಮನಬಿಲ್ಲಾಗುತ್ತದೆ. ಹಲವು ಸ್ವರಗಳ ಸಮ್ಮಿಲನವೇ ಸಂಗೀತ. ಪ್ರತಿಯೊಂದು ವಸ್ತುವೂ ಅನೇಕ ಗುಣಗಳ ಸಂಯುಕ್ತ ಘಟಕ. ಆ ಗುಣಗಳಲ್ಲಿ ಕೆಲವು ಒಂದು ಗುಂಪಿನ ಜನರಿಗೆ ಹಿಡಿಸುವುದಾದರೆ, ಮತ್ತೆ ಕೆಲವು ಬೇರೆ ಗುಂಪಿನ ಜನರಿಗೆ ಒಗ್ಗುವುದಿಲ್ಲ. ಇದಕ್ಕೆ ಕಾರಣ ಆ ಜನರ ಪರಿಸರ, ಸಂಸ್ಕಾರ, ಶಿಕ್ಷಣ ಮತ್ತು ಆಲೋಚನಾ ವಿಧಾನ. ಅಂದಮೇಲೆ ದ್ವಂದ್ವ ಮಾತ್ರವಲ್ಲ, ಬಹುತ್ವ ಅಥವಾ ಸಂಕೀರ್ಣತೆಯೇ ಸೃಷ್ಟಿಯ ರಹಸ್ಯ, ಜೀವನ ಕಲೆಯ ಜೀವಾಳ. ಹೀಗಿರುವಾಗ ಯಾವುದೇ ವಸ್ತುವನ್ನು ಅಥವಾ ಕೃತಿಯನ್ನು ಕುರಿತ ವ್ಯಾಖ್ಯಾನ ಸಹಜ ಹಾಗೂ ಅನಿವಾರ್ಯ. ಭಿನ್ನಪ್ರಭಿನ್ನವೆಂದು ತೋರುವ ಯಾವ ದೃಷ್ಟಿಯೇ ಆಗಲಿ, ವ್ಯಾಖ್ಯಾನವೇ ಆಗಲಿ ದೂಷ್ಯವಲ್ಲ, ತಿರಸ್ಕರಣೀಯವಲ್ಲ. ಪ್ರಪಂಚ ದಲ್ಲಿಂದು ಅನೇಕ ಮತಧರ್ಮಗಳಿವೆ, ತತ್ವಗಳಿವೆ, ದರ್ಶನಗಳಿವೆ; ದ್ವೈತಾದ್ವೈತ ವಿಶಿಷ್ಟಾದ್ವೈತ ಶಕ್ತಿವಿಶಿಷ್ಟಾದ್ವೈತಗಳಿವೆ; ಚಾರ್ವಾಕರಿದ್ದಾರೆ, ನಾಸ್ತಿಕರಿದ್ದಾರೆ. ಆಜ್ಞೇಯವಾದಿಗಳಿದ್ದಾರೆ; ವಿಜ್ಞಾನಿಗಳಿದ್ದಾರೆ, ತತ್ವವೇತ್ತರಿದ್ದಾರೆ, ಪರಮಹಂಸರಿದ್ದಾರೆ. ಸಾಧುಸಂತರಿದ್ದಾರೆ. ಸೃಷ್ಟಿಯಲ್ಲಿಯೇ ಹುಲಿ ಹುಲ್ಲೆಗಳಿವೆ, ಹಾವು ಹಲ್ಲಿಗಳಿವೆ; ಕಲ್ಪತರುಗಳಂತೆ ವಿಷವೃಕ್ಷಗಳೂ ಇವೆ; ಸುಖದಂತೆ ದುಃಖವಿದೆ. ತೇಲುನೋಟಕ್ಕೆ ಅವು ಪರಸ್ಪರ ವಿರೋಧಿಗಳಂತೆ ತೋರುವುದಾದರೂ ವೈಜ್ಞಾನಿಕವಾಗಿ ವಿಚಾರಿಸಿದಾಗ ಅವುಗಳ ಮೂಲಭೂತ ತತ್ವಗಳಲ್ಲಿ ಏಕತ್ವವಿದೆಯೆಂದೂ ವಿರೋಧಾಭಾಸಕ್ಕೆ ಆ ತತ್ವಗಳ ಪ್ರಮಾಣಭೇದ ಕಾರಣವೆಂದೂ ಸ್ಪಷ್ಟವಾಗುತ್ತದೆ. ಸಮನ್ವಯ ತತ್ವದ ಹಾಗೂ ಪೂರ್ಣದೃಷ್ಟಿಯ ಹಿನ್ನೆಲೆಯಲ್ಲಿ ವಸ್ತುರಹಸ್ಯವನ್ನರಿಯಲು ಪ್ರಯತ್ನಿಸಿದಾಗ ಈ ವಿರೋಧಾಭಾಸ ಮರೆಯಾಗುತ್ತದೆ.

ಸೃಷ್ಟಿಯಲ್ಲಿ ಮನುಷ್ಯನಂಥ ಸಂಕೀರ್ಣ ವಸ್ತು ಅಥವಾ ಪ್ರಾಣಿ ಮತ್ತೊಂದಿಲ್ಲ. ಅವನಲ್ಲಿ ಸಸ್ಯಪ್ರಜ್ಞೆಯೂ ಇದೆ; ಪ್ರಾಣಿಪ್ರಜ್ಞೆಯೂ ಇದೆ. ಅದನ್ನು ಮೀರಿದ ಆತ್ಮಪ್ರಜ್ಞೆಯೂ ಅವನಲ್ಲಿದೆ. ಅರಿಷಡ್ವರ್ಗ ಗುಣತ್ರಯಗಳ ಸಂಘರ್ಷಾಕರ್ಷಣೆಗಳಿಂದ ಬಳಲಿ ಬೆಂಡಾ ಗಿರುವುದೂ ಉಂಟು, ಜ್ಞಾನ ವಿವೇಕ ಸಾಧನೆಗಳ ನೆರವಿನಿಂದ ಪಶುತ್ವದಿಂದ ಮನುಷ್ಯತ್ವಕ್ಕೆ ಮನುಷ್ಯತ್ವದಿಂದ ದೇವತ್ವಕ್ಕೂ ಏಣಿ ಹಾಕಿದ್ದೂ ಉಂಟು. ದೈವತ್ವವೆನ್ನುವುದು ಕೈಗೆಟುಕಲಾರದ, ಅಥವಾ ಮಾನವ ಬುದ್ದಿವಿಕಾರದಿಂದ ಉದ್ಭವಿಸಬಹುದಾದ ಭ್ರಮೆಯಲ್ಲ. ಅದು ಮಾನವನ ಅಸ್ತಿತ್ವದ ಅನಿವಾರ್ಯ ಅಂಶವಾಗಿ, ಸುಪ್ತ ಸ್ಥಿತಿಯಲ್ಲಿದ್ದು, ಸಂಸ್ಕಾರ ಸಾಧನೆಗಳ ಮೂಲಕ ಪ್ರಜ್ಞಾಗೋಚರವಾಗುವ ತತ್ವವಿಶೇಷ. ದೈವತ್ವವೇ ಬುದ್ಧನ ಕರುಣೆಯಾಗಿ, ಯೇಸುವಿನ ಪ್ರೇಮವಾಗಿ, ಬಸವೇಶ್ವರನ ಲೋಕಕಾರುಣ್ಯವಾಗಿ, ಲೆನಿನ್ನನ ಮಾನವೀಯತೆಯಾಗಿ, ವಾಲ್ಮೀಕಿ ಮಿಲ್ಟನ್ನರ ಕಾವ್ಯವಾಗಿ, ಮೈಕೇಲ್ ಅಂಜಿಲೋ ಬಿಟೋವನ್‌ರ ಕಲಾ ಪ್ರಕಾರಗಳಾಗಿ ಹೊರಹೊಮ್ಮುತ್ತದೆ. ಅಂತೆಯೇ ದಾನವತೆಯೂ ಮನುಷ್ಯನ ಸ್ವಭಾವದಲ್ಲಿ ಅಂತರ್ಗತವಾಗಿರುವ ಗುಣ. ಅದು ಪರಿಸರ ಹಾಗೂ ಅವಿದ್ಯೆಯ ಫಲವಾಗಿ ರಾವಣ ದುರ್ಯೋಧನ ಸೈತಾನ ಹಿಟ್ಲರ್ ಶಕ್ತಿಯಾಗಿ ಹೊರಹೊಮ್ಮಿ ಲೋಕ ಕಂಟಕವಾಗಬಹುದು. ಪ್ರೇಮ ಕಾಮಗಳಂತೆ ದೈವತ್ವ ದಾನವತ್ವಗಳು ಒಂದೇ ಶಕ್ತಿಯ ಎರಡು ಮುಖಗಳು. ಮೃಗೀಯ ಗುಣಗಳಾದ ದ್ವೇಷಾಸೂಯೆ ಕೋಪತಾಪಗಳಿಂದ ಮುಕ್ತರಾದ ಜನ ವಿರಳ. ಅವು ಪ್ರಕೋಪ ಸ್ಥಿತಿಯನ್ನು ಮುಟ್ಟಿದಾಗ ಎಂಥ ಅನಾಹುತ ಸಂಭವಿಸುತ್ತದೆಯೆಂಬುದನ್ನು ಇತಿಹಾಸ ಸಾರುತ್ತದೆ, ಲೋಕ ತಿಳಿದಿದೆ. ಬುದ್ದಿಶಕ್ತಿಯಿಂದಾಗಿ ಮಾನವ ಪ್ರಾಣಿವರ್ಗದಿಂದ ಭಿನ್ನವಾಗಿದ್ದಾನೆ. ಅದು ಬೆಂಕಿಯಂತೆ, ಅಥವಾ ಇತರ ನಿಸರ್ಗ ವಸ್ತುಗಳಂತೆ ಮಾನವನಿಗೆ ವರವೂ ಅಹುದು, ಶಾಪವೂ ಅಹುದು. ಜಗತ್ತನ್ನಿಂದು ತಲ್ಲಣಗೊಳಿಸುತ್ತಿರುವ ಮಾರಕಾಸ್ತ್ರ ಗಳು ಬುದ್ದಿಶಕ್ತಿಯ ದುಷ್ಫಲಗಳು. ಈತನಕ ಲೋಕದಲ್ಲಿ ನಡೆದ ಯುದ್ದಗಳೆಲ್ಲ ಮೊದಲು ಮಾನವನ ಚಿತ್ತದಲ್ಲಿ ಉಗಮಗೊಂಡುವೆಂಬುದೂ, ಆದ್ದರಿಂದ ಸಮರ ಶಾಂತಿಗಳಿಗೆ ಮನಸ್ಸೇ ಕಾರಣವೆಂಬುದೂ ಸತ್ಯಸ್ಯ ಸತ್ಯ. ಈ ದೃಷ್ಟಿಯಿಂದ ಮನಸ್ಸನ್ನೇ ಕುರುಕ್ಷೇತ್ರವೆಂದು ಕರೆದಿರುವುದು ಅತ್ಯುಚಿತವಾಗಿದೆ. ವಿಭೀಷಣನಂಥ, ಧರ್ಮರಾಯನಂಥ, ಅಶೋಕನಂಥ, ಗಾಂಧಿಯಂಥ, ಕೆನಡಿಯಂಥ ಸಾತ್ವಿಕ ವ್ಯಕ್ತಿಗಳಿಲ್ಲದಿದ್ದಲ್ಲಿ ಜಗತ್ತು ಎಂದೋ ಮೃತ್ಯುವಿಗೆ ತುತ್ತಾಗುತ್ತಿತ್ತೆಂಬುದರಲ್ಲಿ ಸಂದೇಹವಿಲ್ಲ. ದುಷ್ಟಶಕ್ತಿಗಳು ಹೆಚ್ಚಿದಂತೆಲ್ಲಾ ಸಾತ್ವಿಕ ಶಕ್ತಿಗಳೂ ಉದಯಗೊಂಡು ಸಮಾಜದಲ್ಲಿ ಸಮತೋಲನವನ್ನು ಸಾಧಿಸುತ್ತವೆ. ಇದು ನಿಸರ್ಗ ಧರ್ಮ. ಗುಣತ್ರಯಗಳು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಅಂತರ್ನಿಹಿತವಾಗಿವೆ. ರಜಸ್ಸು ತಮಸ್ಸುಗಳ ಜತೆಗೆ ಸಾತ್ವಿಕ ಶಕ್ತಿಯೂ ಕೂಡಿಕೊಂಡಿರುವುದರಿಂದಲೇ, ಆಗಾಗ್ಗೆ ಅವನಲ್ಲಿ ವಿವೇಕ ಜಾಗೃತವಾಗುವುದರಿಂದಲೇ ದುಷ್ಟಶಕ್ತಿಗಳು ಹದ್ದಿನಲ್ಲಿದ್ದು, ಜೀವನ ವಾಹಿನಿ ನಿರಂತರವಾಗಿ ಸಾಗುವಂತಾಗಿದೆ. ಈ ಅರಿಷಡ್ವರ್ಗ ಗುಣತ್ರಯಗಳ ಮೇಲಾಟ ಕಾರಣವಾಗಿ ಮನುಷ್ಯ ಇಡೀ ಜೀವನದಲ್ಲಿರಲಿ, ಬೆಳಗಿನಿಂದ ಸಂಜೆಯವರೆಗೆ ಆಡುವ ಆಟಗಳಿಗೆ, ತಾಳುವ ಅವತಾರಗಳಿಗೆ, ಹಾಕುವ ಸೋಗು ಲಾಗಗಳಿಗೆ ಲೆಕ್ಕವಿಲ್ಲ. ನಿಮಿಷಕ್ಕೊಮ್ಮೆ ಊಸರವಳ್ಳಿ ಯುಂತೆ ಬಣ್ಣ ಬದಲಾಯಿಸುತ್ತಾನೆ. ಮನುಷ್ಯ ಮನುಷ್ಯನಂತೆ ಬಾಳಬೇಕಾದರೆ ಈ ಆಸುರೀ ಗುಣಗಳನ್ನು ನಿಯಂತ್ರಿಸುವ ದೈವಪ್ರಜ್ಞೆಯ ವಿಕಾಸ ಅತ್ಯಗತ್ಯ. ಅದನ್ನು ಆತ್ಮಪ್ರಜ್ಞೆ ಯೆಂದೋ, ವಿವೇಕ ಪ್ರಜ್ಞೆಯೆಂದೋ, ಸತ್ಯ ಪ್ರಜ್ಞೆಯೆಂದೋ ಯಾವ ಹೆಸರಿನಿಂದ ಕರೆದರೂ ಒಂದೇ.

ತರು ಲತೆ ಕ್ರೀಮಿ ಕೀಟ ಪ್ರಾಣಿಗಳಂತೆ ಮಾನವನೂ ನಿಸರ್ಗದ ಒಂದು ಭಾಗ. ಸಂಘರ್ಷ ಸಹಕಾರಗಳಿಲ್ಲದೆ ಲತಾ ಜೀವನವೂ ಸಾಧ್ಯವಿಲ್ಲ. ಮಳೆ ಗಾಳಿ ಚಳಿ ಬಿಸಿಲುಗಳ ಹೊಡೆತವನ್ನು ಸಹಿಸಿಕೊಂಡು ಅದು ಬಾಳಬೇಕಾಗುತ್ತದೆ, ಉಳಿಯಬೇಕಾಗುತ್ತದೆ. ಆದರೂ ಒಂದರ ಸಹಕಾರವಿಲ್ಲದೆ ಮತ್ತೊಂದು ಜೀವಿ ಬದುಕಲಾರದು. ಮರ ಕೊಡುವ ಹಣ್ಣೇ ಹಕ್ಕಿಗಳ ಜೀವನಾಧಾರ. ನೆಲನೀಯುವ ಬೆಳೆಯೇ ಜನರಿಗಾಧಾರ. ಸಹಕಾರ ಹೋರಾಟಗಳೇ ಜೀವನದ ರಹಸ್ಯವೆಂಬುದು ಈ ಅನುಭವದಿಂದ ವೇದ್ಯವಾಗುವ ಸಂಗತಿ. ಯಾವುದೋ ಆಗೋಚರ ವಾದ ಏಕೈಕ ತತ್ವ ಅಥವಾ ಸೂತ್ರ ನಿಸರ್ಗದಲ್ಲೆಲ್ಲ ಹಾಸುಹೊಕ್ಕಾಗಿ ಹರಿದಿದೆಯೆಂಬ ಮತ್ತೊಂದು ಸತ್ಯಾಂಶ ಅದರಿಂದ ಅಭಿವ್ಯಕ್ತವಾಗುತ್ತದೆ.

ಈ ವ್ಯಾಖ್ಯಾನದ ಹಿನ್ನೆಲೆಯಲ್ಲಿ ಭೌತಿಕ ವಸ್ತು ಮತ್ತು ಆತ್ಮಶಕ್ತಿಗಳ ಪರಸ್ಪರ ಸಂಬಂಧವನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಆತ್ಮಶಕ್ತಿಯ ಮೂರ್ತ ಸ್ವರೂಪವೇ ಭೌತಿಕ ವಸ್ತುವೆಂದು ಉಪನಿಷದೃಷಿಗಳಿರಲಿ, ಶ್ರೀ ರಾಮಕೃಷ್ಣ ಪರಮಹಂಸರಂಥ ಅವತಾರ ಪುರುಷರಿರಲಿ, ಇತ್ತೀಚಿನ ವಿಜ್ಞಾನಿಗಳೂ ಒಪ್ಪಿಕೊಂಡಿದ್ದಾರೆ. ಭೌತಿಕ ವಸ್ತು ಜಡವಲ್ಲ, ಅದು ಚೈತನ್ಯದ ಚಿಲುಮೆಯೆಂದು ಜಗದೀಶ ಚಂದ್ರಬೋಸ್ ಸ್ಪಷ್ಟಪಡಿಸಿದ್ದಾರೆ. ಭೌತಿಕ ವಸ್ತು ಶಕ್ತಿಯ ಒಂದು ಬಗೆಯೆಂದು ಲೆಬಾನ್ ಎಂಬ ವಿಜ್ಞಾನಿ ಸಾರಿದ್ದಾನೆ. ‘ನಿಜವಾಗಿಯೂ ನಮ್ಮ ಪ್ರಜ್ಞೆಯ ದ್ರವ್ಯವಾಗಿರುವ ಆಗೋಚರ ಶಕ್ತಿ ಭೌತಿಕ ಜಗತ್ತನ್ನೆಲ್ಲ ವ್ಯಾಪಿಸಿಕೊಂಡಿದೆ’ ಎಂಬ ಖ್ಯಾತ ವಿಜ್ಞಾನಿ ಎಡಿಂಗ್‌ಟನ್ನನ ಮಾತು

[1] ನಿರ್ಲಕ್ಷಿಸುವಂಥದಲ್ಲ. ‘ನಮ್ಮೆಲ್ಲ ನಂಬಿಕೆಗಳ ಅಂತರಾಳದಲ್ಲಿ ದೇವರಿದ್ದಾನೆ ಎಂಬ ವಿಶಿಷ್ಟತತ್ವವೊಂದು ಐತಿಹಾಸಿಕ ಸಂಗತಿಗಳ ಮೂಲಕ ಕ್ರಿಯಾಶೀಲವಾಗಿದೆಯೆಂಬ, ಬಹುದೂರದ ಅಜ್ಞಾತ ದೇವರ ಕಡೆಗೆ ಮಹಾಶಕ್ತಿ ಯೊಂದು ನಮ್ಮ ನಿಷ್ಠೆಯನ್ನು ಪರೀಕ್ಷಿಸುತ್ತಿದ್ದಂತೆ ನಮ್ಮನ್ನು ಆಕರ್ಷಿಸುತ್ತಿದೆಯೆಂಬ ಮೂಲಭೂತ ತತ್ವ ಹುದುಗಿದೆ’ ಎಂಬ ಡ್ಯೂರೆಂಟ್ ಡ್ರೇಕನ ಅಭಿಪ್ರಾಯ ವಿಜ್ಞಾನಿಗಳ ಘೋಷಣೆಯ ಹಿನ್ನೆಲೆಯಲ್ಲಿ ಗಮನಾರ್ಹವಾದುದಾಗಿದೆ.[2]

ಇಂದ್ರಿಯ ಗಮ್ಯಾನುಭವವೇ ಪರಮಸತ್ಯವೆಂದು ಸಾಮಾನ್ಯ ಜನರ ನಂಬಿಕೆ. ಸಾಧಾರಣವಾಗಿ ವಿಜ್ಞಾನಿಗಳ ಮನೋಧರ್ಮ ಅದಕ್ಕಿಂತ ಭಿನ್ನವಾದುದಲ್ಲ. ಅಂತರಿಂದ್ರಿಯದ ಅಥವಾ ಅತೀಂದ್ರಿಯದ ಅನುಭವ ಇಂದ್ರಿಯ ಗಮ್ಯವಲ್ಲವಾದ್ದರಿಂದ ವಿಶ್ವಾಸಾರ್ಹವಲ್ಲ ವೆಂದು ಭೌತವಾದಿಗಳ ತಿರಸ್ಕಾರಕ್ಕೆ ಗುರಿಯಾಗುತ್ತದೆ. ಅನೇಕ ವೈಜ್ಞಾನಿಕ ಸಂಶೋಧಗಳು ಸೇಂದ್ರಿಯ ಜ್ಞಾನದ ಮೂಲಕ ಅಭಿವ್ಯಕ್ತಗೊಂಡ ಅತೀಂದ್ರಿಯಾನುಭವವೆಂಬುದನ್ನು ತಾರ್ಕಿಕರು ಮರೆಯುವುದುಂಟು. ಮನುಷ್ಯ ರೂಪದ ದೇವರಲ್ಲಿ ನಂಬಿಕೆಯಿಲ್ಲದಿದ್ದರೂ, ಐನ್‌ಸ್ಟೀನ್ ಆಗಾಗ್ಗೆ ದೇವರ ವಿಷಯ ಪ್ರಸ್ತಾಪಿಸುತ್ತಾರೆ. ಅವರ ದೃಷ್ಟಿಯಲ್ಲಿ ಅವನೊಬ್ಬ ವಿಶ್ವನಿಯಾಮಕಶಕ್ತಿ. ‘ಭಾವನೆಗಳು ದೇವರಿಂದ ಬರುತ್ತವೆ’[3] ಎಂದೂ ಅವರು ಪದೇ ಪದೇ ನುಡಿಯುತ್ತಾರೆ. ಅವರು ಋತರೂಪಿ ಸತ್ಯದ ಉಪಾಸಕರಾಗಿದ್ದಾರೆಂಬುದಂತು ಸತ್ಯ. ಮೂರ್ತಿಗಳಷ್ಟೇ ಅವುಗಳ ಹಿಂದಿರುವ ಭಾವನೆಯೂ ಸತ್ಯ. ವಿಜ್ಞಾನವೆಂದರೆ ಭಾವನೆ ಅನುಭವಗಳು ತಾನೆ. ಒಂದು ಮನೆ, ಒಂದು ಗುಡಿ, ಒಂದು ದೇವರು, ಒಂದು ಅಣೆಕಟ್ಟು, ಒಂದು ಕವಿತೆ, ಒಂದು ಶಿಲ್ಪ ಇವೆಲ್ಲ ಮೂರ್ತ ಸ್ವರೂಪ ತಾಳುವುದಕ್ಕೆ ಮುಂದೆ ಭಾವನೆಗಳೇ ಆಗಿದ್ದವು. ಇವು ಮೊದಲು ಇಂದ್ರಿಯಾನುಭವವಾಗಿ ಅಥವಾ ತರ್ಕವಿಚಾರಗಳ ಪರಿಣಾಮ ವಾಗಿ ಹೊರಹೊಮ್ಮುತ್ತವೆಂದು ಹೇಳುವಂತಿಲ್ಲ. ಅನೇಕ ಸಾರಿ ಅಪ್ರಯತ್ನವಾಗಿ ಬುದ್ದಿ ಪೂರ್ವ ಸ್ಥಿತಿಯಲ್ಲಿ ಅವು ಹೊಳೆಯುತ್ತವೆ. ಅವುಗಳ ಹೊಳಪಿಗೆ ಕಾರಣ ಕಂಡು ಹಿಡಿಯಲಾಗದು. ಅಂತಃಪ್ರಜ್ಞೆಯಿಂದಲೋ ಸುಪ್ತ ಪ್ರಜ್ಞೆಯಿಂದಲೋ ಅವು ಇಳಿದು ಬರುವಂತೆ ತೋರುತ್ತದೆ. ಮಾನವನ ಹೃದಯವೊಂದು ಕನ್ನಡಿ; ಲೋಕ ಅದರಲ್ಲಿ ಪ್ರತಿಬಿಂಬಿಸುತ್ತದೆ; ಕನ್ನಡಿ ಮಾತ್ರವಲ್ಲ, ಅದೊಂದು ಭಾವಗ್ರಹಣಾಗಾರ; ವಿಶ್ವದ ಧ್ವನಿಗಾನ ಸಂಕೇತಗಳು ಅದರೊಳಗೆ ಪ್ರವೇಶಿಸುತ್ತವೆ. ಆದರೆ ಹೃದಯ ಅವುಗಳ ಸ್ವಾಗತಕ್ಕೆ ಸಿದ್ಧವಾಗಿರಬೇಕು. ಅಂದರೆ ಶಿಕ್ಷಣ ಸಾಧನೆಗಳ ಮೂಲಕ ಅದು ಸಂಸ್ಕಾರಗೊಳ್ಳಬೇಕು. ಅತೀಂದ್ರಿಯ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ನಾವು ಕಾಣಲಾಗದ್ದೆಲ್ಲ, ನಮಗೆ ಅರ್ಥವಾಗದ್ದೆಲ್ಲ ಅಸತ್ಯವೆಂದು ಸಾರುವುದು ಅವಿವೇಕವಾಗುತ್ತದೆ. ಚಂದ್ರಲೋಕಕ್ಕೆ ಹೋಗಬೇಕೆನ್ನುವವನು ಗಗಾರಿನ್‌ನಂತೆ ಅನೇಕ ವರ್ಷಗಳ ತರಬೇತಿ ಪಡೆಯಬೇಕಾಗುತ್ತದೆ.

ಕವಿ ಕಲಾವಿದರು, ಸಾಧು ಸಂತರು ಕೆಲವರಿಗೆ ಹುಚ್ಚರಂತೆ ತೋರುವ ಸಂಭವವುಂಟು. ಶ್ರೀ ರಾಮಕೃಷ್ಣ ಪರಮಹಂಸರೂ ಮೊದಮೊದಲು ಅಂಥ ಅಪಪ್ರಥೆಗೆ ಗುರಿಯಾಗಿದ್ದು ದುಂಟು. ಅಂಥವರ ಜೀವನದಲ್ಲಿ ಅನೇಕ ಅನನ್ವಯ ಸಂಗತಿಗಳು ಗೋಚರಿಸುವುದುಂಟು. ಗಾಂಧೀಜಿ ಸಹ ವಿರೋಧಾಭಾಸಗಳ ಮುದ್ದೆಯೆಂದು ಕೆಲವರಿಗೆ ತೋರುವುದುಂಟು. ಅವರ ವ್ಯಕ್ತಿತ್ವ ದ್ವಂದ್ವಯುಕ್ತ ಮಾತ್ರವಲ್ಲ. ಬಹುಮುಖಿಯಾದದ್ದು, ಸಂಕೀರ್ಣವಾದದ್ದು. ಆದ್ದರಿಂದಲೇ ಅವರು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕಾಣುತ್ತಾರೆ; ವಿವಾದಾಸ್ಪದ ವ್ಯಕ್ತಿಯಾಗಿಯೂ ತೋರುತ್ತಾರೆ; ಅನನ್ವಯತೆಗಳ ಗೊಂದಲವೆಂಬಂತೆ ಭಾಸವಾಗುತ್ತಾರೆ. ಇಂಥ ಪರಿಸ್ಥಿತಿಗೆ ವಿಚಾರಕನ ವಿಚಿಕಿತ್ಸೆ ಪೂರ್ವಾಗ್ರಹ ಮನೋಧರ್ಮ ಮತ್ತು ಸೀಮಿತಾನು ಭವಗಳು ಕಾರಣವಾಗುತ್ತವೆ.

ಕುವೆಂಪು ಅವರ ವ್ಯಕ್ತಿತ್ವವನ್ನು ನಾನಾ ದೃಷ್ಟಿಗಳಿಂದ, ನಾನಾ ಭಾವನೆಗಳಿಂದ, ನಾನಾ ಮಾನದಂಡಗಳಿಂದ ಅಳೆದವರಿದ್ದಾರೆ. ಕೆಲವರು ಅವರನ್ನು ಕವಿಯೆಂದು ಕರೆದರೆ ಮತ್ತೆ ಕೆಲವರು ಅವರು ಕವಿಯಲ್ಲ, ಉತ್ತಮ ಕಾದಂಬರಿಕಾರರೆನ್ನುತ್ತಾರೆ. ಅವರು ಶ್ರೇಷ್ಠ ಜೀವನ ಚರಿತ್ರೆಕಾರರೇ ಹೊರತು, ಉತ್ತಮ ನಾಟಕಕಾರಲ್ಲವೆಂಬುದು ಕೆಲವರ ಮತ. ಕೆಲವರ ದೃಷ್ಟಿಯಲ್ಲಿ ಅವರದು ಸರ್ವಾಶ್ಲಿಷ್ಟ ಗಂಭೀರ ಪ್ರೌಢ ಸಂಕೀರ್ಣ ಶೈಲಿಯಾದರೆ, ಮತ್ತಿತರರ ಪ್ರಕಾರ ಅದು ಸಂಸ್ಕೃತ ಭೂಯಿಷ್ಠವಾದ, ಅಹಿತ ಶಯ್ಯೆಯ ಪೆಡಸು ಶೈಲಿ. ಪೌರೋಹಿತ್ಯ ನಿಂದಕರಾಗಿ  ಬ್ರಾಹ್ಮಣಾವಗುಣ ವಿಮರ್ಶಕರಾಗಿ ಮೌಢ್ಯ ಸಂಪ್ರದಾಯ ವಿರೋಧಿಯಾಗಿ ಅವರು ಬ್ರಾಹ್ಮಣೇತರರಿಗೆ ಹಾಗೂ ವಿಚಾರವಾದಿಗಳಿಗೆ ಸನ್ಮಾನ್ಯರಾಗಿ ತೋರಿದರೆ, ಶ್ರೀ ರಾಮಕೃಷ್ಣ ಪರಮಹಂಸರ ಮಾನಸ ಪುತ್ರರಾಗಿ, ದೈವಭಕ್ತರಾಗಿ, ಆಧ್ಯಾತ್ಮ ಸಾಧಕರಾಗಿ ಆಸ್ತಿಕರಿಗೆ ಹಾಗೂ ಬ್ರಾಹ್ಮಣರಿಗೆ ಗೌರವಾರ್ಹ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಯಾವುದನ್ನು ಕುವೆಂಪು ಅವರು ಸತ್ಯ, ಆಧ್ಯಾತ್ಮ, ದೈವಾನುಗ್ರಹವೆಂದು ಕರೆಯುತ್ತಾರೆಯೋ ಅದಕ್ಕೆ ಕೆಲವರು ದೇವರು, ಮೌಢ್ಯ, ಕಾಕತಾಳೀಯವೆಂದು ಹೆಸರಿಟ್ಟು ಅವರನ್ನು ಹಂಗಿಸುತ್ತಾರೆ. ತಮ್ಮ ನಿಲುವಿನ ಸಮರ್ಥನೆಗಾಗಿ ಹಾಗೂ ತಮ್ಮ ಬೆಂಬಲಕ್ಕಾಗಿ ಕುವೆಂಪು ಅವರನ್ನೂ ಅವರ ಸಾಹಿತ್ಯವನ್ನೂ ವಿಚಾರವಾದಿಗಳೆಂತು ಬಳಸಿಕೊಳ್ಳುತ್ತಾರೆಯೋ ಅಂತೆಯೇ ದೈವವಾದಿಗಳು ಸಹ ತಮ್ಮ ವಾದ ಸಮರ್ಥನೆಗಾಗಿ ಕುವೆಂಪು ಸಾಹಿತ್ಯದಿಂದ ಯಥೇಚ್ಛವಾಗಿ ಉದಾಹರಣೆಗಳನ್ನು ಎತ್ತಿಕೊಳ್ಳುತ್ತಾರೆ. ಮುಂದಿನಿಂದ ಅವರನ್ನು ವಿಚಾರವಾದಿಗಳೆಂದು ಹೊಗಳಿ, ಹಿಂದಿನಿಂದ ಶ್ರೀ ರಾಮಕೃಷ್ಣರನ್ನು ಪೂಜಿಸುವ, ಅವರ ಆಶ್ರಮಕ್ಕೆ ಹೋಗುವ, ಪರೋಕ್ಷವಾಗಿ ಪುರೋಹಿತ ಧರ್ಮವನ್ನೆತ್ತಿ ಹಿಡಿಯುವ ನವ್ಯ ಬ್ರಾಹ್ಮಣರೆಂದು ತೆಗಳುವ ಶ್ರೇಷ್ಠ ದರ್ಜೆಯ ವಿಚಾರವಾದಿಗಳು ಇಲ್ಲದಿಲ್ಲ.

ಶೋಷಣೆಯನ್ನು ಪೋಷಿಸುವ ಮೂಢ ಸಂಪ್ರದಾಯಗಳೆಲ್ಲ ತ್ಯಾಜ್ಯವೆಂಬುದು ಸರಿ. ಇಂದಿನ ಯುಗಧರ್ಮಕ್ಕೆ ಹೊಂದದ ಆಚಾರ ವಿಚಾರಗಳು ಅಗ್ರಾಹ್ಯವೆಂಬುದೂ ನಿಜ. ನಿರಂತರ ವಿಕಾಸವೇ ನಿಸರ್ಗ ಧರ್ಮ. ವಿಕಾಸ ಸ್ಥಗಿತಗೊಂಡಂದು ವಿನಾಶ ಸಂಭವಿಸಲೇಬೇಕು. ಆದರೆ ಹಳೆಯದೆಲ್ಲ ಹಾನಿಕರವಾದದ್ದು, ಹೊಸದೆಲ್ಲ ಮಂಗಳಕರವಾದದ್ದೆಂದು ಭಾವಿಸ ಲಾಗದು. ಪರಂಪರಾಗತವಾದ ಚಿರಂತನ ಮೌಲ್ಯಗಳು, ಕಾಲ ದೇಶಾತೀತವಾದ ತತ್ತ್ವಗಳು ಸರ್ವದಾ ಪುರಸ್ಕಾರ ಯೋಗ್ಯ. ಗೀತೋಪನಿಷತ್ತುಗಳು ಬೋಧಿಸುವ ಅನೇಕ ಸತ್ಯಗಳು ಎಲ್ಲ ಕಾಲಕ್ಕೂ ಅನ್ವಯವಾಗುವಂಥವು. ಆ ಸತ್ಯಗಳ ಅಡಿಪಾಯದ ಮೇಲೆ ಭಾರತೀಯ ಸಾಂಸ್ಕೃತಿಕ ಪರಂಪರೆ ಬೆಳೆದುಬಂದಿದೆ; ಆ ಮೌಲ್ಯಗಳ ಹಿನ್ನೆಲೆಯಲ್ಲಿ ಜನಜೀವನ ಈ ತನಕ ಹರಿದು ಬಂದಿದೆ. ಅದನ್ನು ಅಲ್ಲಗೈಯುವ ಅನ್ಯಪ್ರಜ್ಞೆಯ ಜನ ಈ ಸಮಾಜದಲ್ಲಿರ ಲಾರರು. ವಿಚಾರವಾದದ ಹೆಸರಿನಲ್ಲಿ ಅವುಗಳನ್ನು ತಿರಸ್ಕರಿಸುವುದಾದರೆ ಜನ ತುಂಬಲಾರದ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಆಧ್ಯಾತ್ಮ ಸಾಧನೆ ವೈಚಾರಿಕ ಬುದ್ದಿಗಾಗಲೀ ವೈಜ್ಞಾನಿಕ ಮನೋಧರ್ಮಕ್ಕಾಗಲೀ ವಿರೋಧಿಯಲ್ಲ. ಆದರೆ ಗೀತೆಯಲ್ಲಿ ಹೇಳಿರುವುದೆಲ್ಲ ನೂರಕ್ಕೆ ನೂರು ಸತ್ಯ ಎನ್ನುವ ಹಠಮಾರಿತನವೂ ಶ್ರೇಯಸ್ಕರವಲ್ಲ. ತ್ರಿಕಾಲಿಕ ಸತ್ಯವಲ್ಲದ, ಕೇವಲ ಸಕಾಲಿಕವಾದ ಅನೇಕ ವಿಚಾರಗಳು ಸಹ ಅದರಲ್ಲಿ ಸೇರಿಕೊಂಡಿರುವುದು ನಿಜ.

ಕುವೆಂಪು ಅವರು ಹುಟ್ಟಿದ್ದು ಪುರೋಹಿತ ಸಂಸ್ಕೃತಿಯ ಸಂಪ್ರದಾಯಗಳನ್ನು ಅನುಕರಿಸುತ್ತಿದ್ದ ಮನೆತನದಲ್ಲಿ. ಕೂಲಿ ಮಠದ ವಿದ್ಯಾರ್ಥಿಯಾಗಿ ಮಾರ್ಕನ ಸುವಾರ್ತೆ ಯನ್ನು ಓದಿದಾಗ ಅವರ ‘ಬದುಕಿಗೆ ಒಂದು ಹೊಸ ಬಾಗಿಲು ತೆರೆದಂತಾ’ಗುತ್ತದೆ. ಅವರ ಚೇತನ ಭಕ್ತಿದೀಪ್ತವಾದದ್ದು ಆಗಲೇ. ಸೃಷ್ಟಿ, ಜೀವ, ಜಗತ್ತು, ದೇವರು, ಸಾವು, ಹುಟ್ಟು, ಪಾಪ, ಪುಣ್ಯ, ಸ್ವರ್ಗ, ನರಕ ಇತ್ಯಾದಿ ವಿಷಯಗಳಲ್ಲಿ ಅವರ ಚೇತನ ತಡಕಾಡತೊಡಗುತ್ತದೆ. ಮೈಸೂರು ಸೇರಿದ ನಂತರ ಆಂಗ್ಲ ಸಾಹಿತ್ಯದ ಜತೆ ಜತೆಗೆ ಶ್ರೀರಾಮಕೃಷ್ಣ ವಿವೇಕಾನಂದ ಸಾಹಿತ್ಯವನ್ನೂ ಹಿಂದೂ ದಾರ್ಶನಿಕರ ಉಪದೇಶದ ಜತೆ ಜತೆಗೆ ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳ ತಾತ್ವಿಕ ವಿಚಾರಗಳನ್ನೂ ಓದುತ್ತ ಓದುತ್ತ ಅವರ ಜ್ಞಾನ ಆಳವಾಗುತ್ತದೆ. ಅನುಭವ ವಿಶಾಲವಾಗುತ್ತದೆ, ಕಾವ್ರೋಜತೆಗೆ ಆಧ್ಯಾತ್ಮಿಕ ಸಾಧನೆ ನಿರಂತರವಾಗಿ ಸಾಗುತ್ತದೆ. ಶ್ರೀ ರಾಮಕೃಷ್ಣಾಶ್ರಮವನ್ನು ಸೇರಿದ ಮೇಲಂತು ಆ ಸಾಧನೆ ತೀವ್ರವಾಗುತ್ತದೆ. ಬಿನ್ನಹ, ಕೃಪೆ, ಶ್ರೀ ಜಗನ್ಮಾತೆಗೆ, ದೀಕ್ಷಾ ಶ್ರದ್ಧೆ, ಮೊದಲಾದ ಭಕ್ತಿ ಗೀತೆಗಳನ್ನು ಬರೆದ ಲೇಖನಿಯೆ ಇಂದಿನ ದೇವರು, ಆತ್ಮಶ್ರದ್ಧೆ, ಅನಿಕೇತನ, ಧ್ರಾಂಧ್ರೀಂಧ್ರೂಂ, ಮುಂತಾದ ವೈಚಾರಿಕ ಗೀತೆಗಳನ್ನು ರೇಖಿಸುತ್ತದೆ. ಶ್ರೀ ಸ್ವಾಮಿ  ಶಿವಾನಂದರಿಂದ ದೀಕ್ಷೆ ಪಡೆದ ಅವರು ‘ಜೀವನವನಿತುಂ ಜಪವೆನಗಾರಿರೆ, ಜಪಗಿಪಮಣಿ ಮಾಲೆಯದೇಕೆ?’ ಎಂದು ಪ್ರಶ್ನಿಸುತ್ತಾರೆ. ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶ್ರೀ ಅರವಿಂದರನ್ನು ಪೂಜಿಸುವವರು, ನೆಹ್ರೂ ಅವರ ವೈಜ್ಞಾನಿಕ ದೃಷ್ಟಿ ಮತ್ತು ವಿಚಾರ ಬುದ್ದಿಗಳನ್ನು ಮನಸಾರೆ ಮೆಚ್ಚುತ್ತಾರೆ. ಪುಣ್ಯಕ್ಷೇತ್ರ, ತೀರ್ಥಯಾತ್ರೆಗಳಿಗೆ ಹೋಗದವರು, ದೇವಸ್ಥಾನವನ್ನು ಪ್ರವೇಶಿಸದವರು, ತೀರ್ಥಯಾತ್ರೆಗೆ ಸಂಬಂಧಿಸಿದ ಗ್ರಂಥಕ್ಕೆ ಮುನ್ನುಡಿ ಬರೆದು, ಆ ಯಾತ್ರೆಯ ಆಧ್ಯಾತ್ಮಿಕ ಪ್ರಯೋಜನವನ್ನು ಪ್ರಶಂಸಿಸುತ್ತಾರೆ.

ಆಧ್ಯಾತ್ಮ ಸಾಧನೆಗೆ ನೆರವಾಗದ, ಕೇವಲ ಶೋಷಣೆಯ ಮಾಧ್ಯಮಗಳಾದ ಮಠ ಆಶ್ರಮ ದೇವಾಲಯ ಮೊದಲಾದ ಸಂಸ್ಥೆಗಳನ್ನು ಕುವೆಂಪು ಅವರು ಸಂಪೂರ್ಣವಾಗಿ ನಿರಾಕರಿಸುತ್ತಾರೆ. ಸುಲಿಗೆಯೇ ಬಾಳುವೆಯ ಗುರಿಯಾಗುಳ್ಳ ಪುರೋಹಿತ ಶಾಹಿಯನ್ನು ತೀವ್ರವಾಗಿ ಖಂಡಿಸು ತ್ತಾರೆ. ಪುರೋಹಿತ ವರ್ಗವೆಂದರೆ ಬರೀ ಬ್ರಾಹ್ಮಣ ವರ್ಗವಲ್ಲ; ಎಲ್ಲಾ ಮತಗಳಲ್ಲೂ ಪುರೋಹಿತಶಾಹಿ ಇದ್ದೇ ಇದೆ ಎಂದು ಅವರು ವಿಶದಪಡಿಸಿದ್ದಾರೆ. ‘ನನಗೆ ಯಾವ ಜಾತಿಯೂ ಇಲ್ಲ. ಆದ್ದರಿಂದ ಜಾತಿ ದ್ವೇಷವೂ ಇಲ್ಲ. ಪುರೋಹಿತಶಾಹಿಯ ವಿಚಾರವಾಗಿ ಮಾತಾಡು ವಾಗ ನಾನು ಯಾವುದಾದರೂ ಒಂದು ಜಾತಿಯನ್ನು ನಿರ್ದೇಶಿಸುತ್ತಿದ್ದೇನೆ ಎಂದು ಭಾವಿಸ ಬಾರದು. ನನ್ನ ಜೀವನ ದೃಷ್ಟಿ ಒಂದು ರೀತಿಯಲ್ಲಿ ಸಮಾನತಾವಾದಿಯ ದೃಷ್ಟಿ…. ಆದ್ದರಿಂದ ನಾನು ಮಾಡುವ ಟೀಕೆ ಖಂಡನೆ, ಶ್ಲಾಘನೆ, ಪ್ರಶಂಸೆ ಏನಿದ್ದರೂ ಅವು ಸಮಾನತಾವಾದಿಯ ದೃಷ್ಟಿಯಿಂದ ಹೊಮ್ಮುತ್ತವೆಯೇ ಹೊರತು ಯಾವ ಜಾತಿ ದ್ವೇಷದಿಂದಾಗಲಿ ಹೊಮ್ಮುವುದಿಲ್ಲ’.[4] ಪುರೋಹಿತ ಶಾಹಿಯ ಬಗ್ಗೆ ಅವರ ನಿಲವೇನೆಂಬುದು ಈ ಮಾತುಗಳಿಂದ ಸ್ಪಷ್ಟವಾಗುತ್ತದೆ. ಬ್ರಾಹ್ಮಣರೆಲ್ಲ ಪುರೋಹಿತರಲ್ಲ; ಒಳ್ಳೆಯದು ಕೆಟ್ಟದು ಎಲ್ಲ ಜಾತಿಗಳಲ್ಲಿಯೂ ಇದೆ. ಎಲ್ಲ ಬ್ರಾಹ್ಮಣರೂ ಕೆಟ್ಟವರಲ್ಲ, ಬ್ರಾಹ್ಮಣೇತರರೆಲ್ಲ ಒಳ್ಳೆಯವರಲ್ಲ. ಕಾಲ ಕ್ರಮೇಣ ಕೆಟ್ಟವರು ಒಳ್ಳೆಯವರಾಗುತ್ತಾರೆಂಬ ಆಶಾವಾದವೂ ಅವರಿಗಿದೆ. ಅವರ ಆರಾಧ್ಯ ವ್ಯಕ್ತಿ ಬ್ರಾಹ್ಮಣರು; ಅವರಿಗೆ ಪೂಜ್ಯಸ್ಥಾನದಲ್ಲಿದ್ದ ಗುರುಗಳು ಬ್ರಾಹ್ಮಣರು. ಆದ್ದರಿಂದ ಅವರಿಗೆ ಜಾತಿದ್ವೇಷವನ್ನಾಗಲೀ, ಬ್ರಾಹ್ಮಣ ದ್ವೇಷವನ್ನಾಗಲಿ ಆರೋಪಿಸುವುದು ತಪ್ಪಾಗುತ್ತದೆ. ಅವರ ಕೃತಿಗಳಲ್ಲಿ ಬ್ರಾಹ್ಮಣರನ್ನಾಗಲಿ ಬೇರೆ ಜಾತಿಯವರನ್ನಾಗಲಿ ಟೀಕಿಸುವ ಸಂದರ್ಭಗಳು ಒದಗಿದ್ದಾದರೆ ಅಲ್ಲಲ್ಲಿಯ ಪರಿಸರ ಸನ್ನಿವೇಶಗಳೇ ಕಾರಣವೆನ್ನಬೇಕಾಗುತ್ತದೆ.

ಪುರೋಹಿತಶಾಹಿಯ ಸ್ವರೂಪ ಲಕ್ಷಣಗಳನ್ನೂ ಇತಿಮಿತಿ ವ್ಯಾಪ್ತಿಗಳನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ವಿಮರ್ಶಕನು ದಾರಿ ತಪ್ಪುವುದು ಸಾಧ್ಯ. ಭಗವದ್ಗೀತೆಯನ್ನು ಬೋಧಿಸಿದ ಕೃಷ್ಣ, ರಾಮಾಯಣ ಭಾರತಗಳನ್ನು ರಚಿಸಿದ ವಾಲ್ಮೀಕಿ ವ್ಯಾಸರು ಬ್ರಾಹ್ಮಣ ರಲ್ಲ; ಉಪನಿಷತ್ಕಾರರೆಲ್ಲರೂ ಬ್ರಾಹ್ಮಣರಲ್ಲ. ಭಾರತೀಯ ಸಂಸ್ಕೃತಿ ಪೂರ್ಣವಾಗಿ ಬ್ರಾಹ್ಮಣ ನಿರ್ಮಿತಿಯಲ್ಲ. ಬ್ರಾಹ್ಮಣ ನಿರ್ಮಿತಿಯಾದರೂ ಚಿರಂತನ ಮೌಲ್ಯಗಳಿಂದ ಕೂಡಿದ್ದಾದರೆ ಸರ್ವಗ್ರಾಹ್ಯವಾಗುತ್ತದೆ. ಬ್ರಾಹ್ಮಣರೆಂದ ಮಾತ್ರಕ್ಕೆ ದ್ವೇಷವೇಕೆ? ಬ್ರಾಹ್ಮಣ ಕ್ಷತ್ರಿಯಾದಿ ಚತುರ್ವರ್ಣಗಳು ಎಲ್ಲ ಜಾತಿ ಜನಾಂಗಗಗಳ್ಲಿಯೂ ಯಾವಾಗಲೂ ಇದ್ದಂಥವೇ. ಆಂಗ್ಲರು ನಮ್ಮನ್ನು ದಾಸ್ಯದಲ್ಲಿಟ್ಟಿದ್ದವರೆಂದು, ನಮ್ಮ ಸಂಪತ್ತನ್ನು ದೋಚಿಕೊಂಡು ಹೋದವರೆಂದು, ನಮ್ಮ ಸಂಸ್ಕೃತಿಯನ್ನು ಕಲುಷಿತಗೊಳಿಸಿದವರೆಂದು ಅವರ ವಿದ್ಯೆ ವಿಜ್ಞಾನ ತಾಂತ್ರಿಕಜ್ಞಾನಗಳನ್ನು ತಿರಸ್ಕರಿಸಿದ್ದಾದರೆ ನಷ್ಟ ನಮಗೇ ಹೊರತು ಅವರಿಗಲ್ಲ. ಶುದ್ಧವಾದ ಗಾಳಿ ಬೆಳಕು ಎಲ್ಲಿಂದ ಬಂದರೂ ಸ್ವೀಕಾರ ಯೋಗ್ಯವೇ. ಅವನ್ನು ತಿರಸ್ಕರಿಸುವಾತ ಮೂರ್ಖನೇ ಸರಿ. ಶೂದ್ರಿತಿ ಕರೆದ ಹಾಲನ್ನು ಸಿದ್ಧಗೊಳಿಸಿದ ಮೊಸರನ್ನು ಬ್ರಾಹ್ಮಣರು ಸೇವಿಸುವುದಿಲ್ಲವೆ? ಗಾಳಿ ಬೆಳಕುಗಳೆಂತು ಪ್ರಾಕೃತಿಕ ಸಂಪತ್ತೋ ಜ್ಞಾನ ವಿಜ್ಞಾನಗಳೂ ಅಂತೆಯೇ ನಿಸರ್ಗಸಂಪತ್ತು. ಯೇಸು, ಬುದ್ಧ, ಬಸವೇಶ್ವರ, ರಾಮಾನುಜ, ಐನ್‌ಸ್ಟೀನ್, ಲೆನಿನ್, ಶೇಕ್ಸ್‌ಪಿಯರ್, ವಾಲ್ಮೀಕಿ, ಪಂಪ, ನಾರಣಪ್ಪ, ಹರಿಹರ, ಗಾಂಧೀಜಿ, ಪೆರಿಯಾರ್, ಅಂಬೇಡ್ಕರ್‌ರಂಥ ಮಹಾವ್ಯಕ್ತಿಗಳು ಯಾವ ಜಾತಿ ಕುಲ ಪಂಥಗಳಿಗೂ ಸೇರಿದವರಲ್ಲ; ಅವರ ಜಾತಿಯನ್ನು ಕೆದಕುವವರೆಂತು ಮೂರ್ಖರೋ, ಅವರ ಮೇಲೆ ಏಕಸ್ವಾಮ್ಯವನ್ನು ಸಂಸ್ಥಾಪಿಸಿಕೊಳ್ಳುವವರೂ ಅಂತೆಯೇ ಮೂರ್ಖರು. ರಾಮಾಯಣ ಭಾರತಗಳು ಮೂಲತಃ ಜಾನಪದ ಸೃಷ್ಟಿ; ಅರ್ಥಾತ್ ನಿಸರ್ಗದತ್ತ ಸಂಪತ್ತು. ಆಯಾಯ ಕಾಲದ ಕವಿಗಳು ತಂತಮ್ಮ ಸಂಸ್ಕಾರಾಭಿರುಚಿಗಳಿಗೆ ತಕ್ಕಂತೆ, ಯುಗ ಧರ್ಮಕ್ಕೊಗ್ಗುವಂತೆ ಅದನ್ನು ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಗೀತೋಪದೇಶವೂ ಅಷ್ಟೇ. ಇಂದಿನ ವಿಚಾರ ವಿಮರ್ಶೆಯ ಒರೆಗಲ್ಲಿನಲ್ಲಿ ತೇರ್ಗಡೆಯಾಗುವಂಥ ಪುರಾತನ, ಭಾವನಾಲೋಚನೆ ತತ್ತ್ವಗಳೆಲ್ಲ ಪುರಸ್ಕಾರಯೋಗ್ಯ. ಚಾಮರಸನಾಗಲಿ, ಕುಮಾರವ್ಯಾಸನಾಗಲಿ, ಬಾಣನಾಗಲಿ, ಭವಭೂತಿಯಾಗಲಿ ನಮ್ಮವರೆ; ಅವರು ಪ್ರತಿಪಾದಿಸುವ ವಿಶ್ವತತ್ವಗಳು ಆತ್ಮಶ್ರೀವರ್ಧನೆಯ ದೃಷ್ಟಿಯಿಂದಲೇ ನಮಗೆ ಬೇಕು. ಶೂದ್ರಾತಿ ಶೂದ್ರರು ತಪಕ್ಕರ್ಹರಲ್ಲವೆಂದು, ಬ್ರಾಹ್ಮಣರೇ ಸರ್ವಶ್ರೇಷ್ಠರೆಂದು, ಪುರೋಹಿತರು ಹೇಳಿದ್ದನ್ನೆಲ್ಲ ಶಿರಸಾವಹಿಸಿ ನಡಸಬೇಕೆಂದು ಬೋಧಿಸುವ ಸಾಹಿತ್ಯ ಖಂಡನಾರ್ಹ. ಅವಿವೇಕ ಎಲ್ಲಿದ್ದರೂ ನಿಂದನೀಯ. ಅದು ಯಾವ ರೂಪದಲ್ಲಿಯೇ ಇರಲಿ, ಅದರ ಮೂಲೋತ್ಪಾಟನೆಗೆ ಶ್ರಮವಹಿಸಬೇಕಾದ್ದು ಜೀವಂತ ವ್ಯಕ್ತಿಗಳ ಕರ್ತವ್ಯ. ‘ಈಗ ಕುಮಾರವ್ಯಾಸ ಇದ್ದಾನೆ. ಅವನು ಬ್ರಾಹ್ಮಣ. ಅವನು ಬ್ರಾಹ್ಮಣ ಸಂಸ್ಕೃತಿಯನ್ನೇ ಹೊರತು ಬೇರೆ ಬರೆಯಲಾರ. ಹಾಗೆಂದು ಕುಮಾರವ್ಯಾಸ ಬರೆದದ್ದೆಲ್ಲ ಬೇರೆ ಅಂತ ಹೇಳಿಬಿಟ್ಟರೆ ಶುದ್ಧ ಅವಿವೇಕವಾಗುತ್ತದೆ. ಆಗ ಏನು ಮಾಡಬೇಕಾಗುತ್ತದೆ? ನಾನು ಅದಕ್ಕೋಸ್ಕರವೆ ಪ್ರತಿಕೃತಿ ಮತ್ತು ಪ್ರತಿಮಾ ಸಿದ್ಧಾಂತವನ್ನು ತಂದೆ. ಹೇಗಾದರೂ ಮಾಡಿ ಈ ಮಹಾಕಾವ್ಯವನ್ನು ಮುಂದಿನ ಪೀಳಿಗೆಗೆ ರಕ್ಷಿಸಿಕೊಳ್ಳಬೇಕು?’[5] ಕುವೆಂಪು ಅವರ ಈ ಮಾತು ಸಾಹಿತ್ಯ ಕೃತಿಗಳಿಗೆ ಮಾತ್ರವಲ್ಲ, ಮಾನವನ ಸಕಲ ಕೃತಿಗಳಿಗೂ ಪೂರ್ಣವಾಗಿ ಅನ್ವಯಿಸುತ್ತದೆ.

ಅಮೂರ್ತತ್ವದಿಂದಾಗಿ ಇಂದ್ರಿಯ ಗಮ್ಯವಲ್ಲದ್ದಾಗಿ ದೇವರ ಕಲ್ಪನೆ ಮನುಷ್ಯನನ್ನು ಸಂದೇಹದ ಗೊಂದಲಕ್ಕೀಡುಮಾಡಿರುವುದು ಸಹಜವೇ. ಯಾವುದೋ ಒಂದು ಗೋಚರಾಗೋಚರ ಶಕ್ತಿ ವಿಶ್ವವನ್ನೆಲ್ಲ ವ್ಯಾಪಿಸಿಕೊಂಡಿದೆಯೆಂದು ವಿಜ್ಞಾನಿಗಳು ಸಹ ಒಪ್ಪಿಕೊಂಡಿದ್ದಾರೆ. ಪ್ರತಿಯೊಂದು ಬಿಂದುವಿನ ಅಸ್ತಿತ್ವಕ್ಕೆ ಕ್ವಾರ್ಕ್ ಕಾರಣವೆಂದು ಹೇಳುವ ವಿಜ್ಞಾನಿಗಳಿಗೂ ಅದರ ಮೂಲಸ್ವರೂಪ ಸ್ಪಷ್ಟವಾಗಿಲ್ಲ. ಅದು ಬರಿಯ ಬೆಳಕಾಗಿದ್ದರೂ ಅಥವಾ ಶಕ್ತಿಯಾಗಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ. ಸದ್ಯಕ್ಕಂತು ಅದು ವಿಜ್ಞಾನಿಗಳಿಗೂ ಸವಾಲಾಗಿ, ಚಿದಂಬರ ರಹಸ್ಯವಾಗುಳಿದಿದೆ. ಅದನ್ನು ಋತವೆನ್ನಿ, ಸತ್ಯವೆನ್ನಿ, ಬೇರಾವ ಮಾತಿನಿಂದಾದರೂ ಕರೆಯಿರಿ. ಅದರ ಅನುಸಂಧಾನ ವಿಧಾನವೇ ತಪಸ್ಸು ಧ್ಯಾನ, ಪೂಜೆ ಇತ್ಯಾದಿ ನಾಮಾಂತರಗಳಿಂದ ಪ್ರಚಲಿತವಾಗಿದೆ. ಅದೇ ಆಧ್ಯಾತ್ಮ ಸಾಧನೆ. ಪುರೋಹಿತ ಶಾಹಿಗೂ ಅದಕ್ಕೂ ಯಾವ ನಂಟುಗಂಟುಗಳೂ ಇಲ್ಲ. ಅವಕ್ಕೆ ಬ್ರಾಹ್ಮಣ್ಯದ  ಕವಚ ತೋಡಿಸುವುದಾದರೆ, ಇಂದು ಭಾರತೀಯ ಸಂಸ್ಕೃತಿಯ ಉಸಿರಾದ ಜ್ಞಾನ ವಿಜ್ಞಾನಗಳಲ್ಲಿ ಬ್ರಾಹ್ಮಣ್ಯದ ವಾಸನೆಯನ್ನು ಗುರುತಿಸಬೇಕಾಗುತ್ತದೆ. ಅವೇನೂ ಬ್ರಾಹ್ಮಣರ ಚೆಪ್ರೋವೈಚಾರಿಕ ಬುದ್ದಿಗೆ ವೈಜ್ಞಾನಿಕ ದೃಷ್ಟಿಗೆ ಭಂಗ ಬರದ ರೀತಿಯಲ್ಲಿ, ರಸಧರ್ಮಕ್ಕೆ ವಿರೋಧ ವಾಗದಂತೆ ಆತ್ಮಾನುಸಂಧಾನ ನಡೆಸಬಾರದೇಕೆ? ಕುವೆಂಪು ಶೋಷಣೆಯ ಮಾಧ್ಯಮಗಳಾದ ಮೂಢ ಸಂಪ್ರದಾಯಗಳನ್ನು ವಿರೋಧಿಸುತ್ತಾರೆಯೇ ಹೊರತು ಶಾಂಕರ ಸಿದ್ಧಾಂತದಲ್ಲಿಯೋ ಕಾಂಟನ ತತ್ವಪ್ರಣಾಳಿಕೆಯಲ್ಲಿಯೋ ಅಡಕಗೊಂಡಿರುವ ಚಿರಂತನ ಮೌಲ್ಯಗಳನ್ನಲ್ಲ. ಕುವೆಂಪು ಅವರು ತಾತ್ವಿಕವಾಗಿ ಪುರೋಹಿತಶಾಹಿಯನ್ನು ನಿಂದಿಸುತ್ತ, ವ್ಯಾವಹಾರಿಕವಾಗಿ ಅದನ್ನು ಅನುಷ್ಠಾನ ಗೈಯುತ್ತಿದ್ದಾರೆಂಬ ಟೀಕೆ ಸತ್ಯದೂರವಾದದ್ದು. ಅಂತೆಯೇ ಒಂದು ಪದ್ಧತಿಯನ್ನು ಹಳಿದು, ಮಂತ್ರಮಾಂಗಲ್ಯದ ರೂಪದಲ್ಲಿ ಮತ್ತೊಂದು ಅಂಥದೇ ಪದ್ಧತಿಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆನ್ನುವ ಮಾತಿನಲ್ಲಿಯೂ ನಿಜಾಂಶವಲ್ಲ. ‘ಮಂತ್ರ ಮಾಂಗಲ್ಯ’ದ ಲಕ್ಷಣ ವಿಧಾನದ ಪರಿಚಯವಿರುವವರು ಅದರಲ್ಲಿ ಕ್ರಾಂತಿಯ ಬೀಜಗಳನ್ನು ಗುರುತಿಸದಿರಲಾರರು. ಅದೇನೇ ಇರಲಿ, ಪರಂಪರೆ ನವೋನವವಾಗುತ್ತಿರ ಬೇಕೆಂಬುದೇ ಎಲ್ಲ ಸುಧಾರಕರ ಉದ್ದೇಶ. ಈ ಕೋನದಿಂದ ನೋಡಿದಾಗ ಕುವೆಂಪು ಅವರು ಸಮಾಜ ಸುಧಾರಕರೂ ಅಹುದು ಎಂಬ ಮಾತು ಸ್ಪಷ್ಟವಾಗುತ್ತದೆ. ಈ ಮಾತಿನ ಯಥಾರ್ಥತೆಗೆ ಅವರ ಜೀವನವೂ ಜ್ವಲಂತ ನಿದರ್ಶನವಾಗಿದೆ.

ಪುರೋಹಿತ ಸಂಪ್ರದಾಯಕ್ಕನುಗುಣವಾಗಿ ಕಾಕತಾಲೀಯವಾದ ಘಟನೆಗಳಿಗೆ ಕುವೆಂಪು ದೈವಿಕತೆಯನ್ನಾರೋಪಿಸುತ್ತಾರೆನ್ನುವುದು ಅವರನ್ನು ಕುರಿತ ವಿಮರ್ಶಕರ ಮತ್ತೊಂದು ಆರೋಪ. ಸೃಷ್ಟಿಯ ಅಥವಾ ನಿಸರ್ಗದ ದೃಷ್ಟಿಯಿಂದ ಯಾವೊಂದು ಘಟನೆಯೂ ಕಾಕತಾಳೀಯವಲ್ಲ. ಯಾವುದೂ ಆಕಸ್ಮಿಕವಲ್ಲ, ಪ್ರತಿಯೊಂದೂ ವಿಶ್ವ ಅಥವಾ ಋತ ನಿಯಮಕ್ಕನುಗುಣವಾಗಿಯೇ ನಡೆಯುತ್ತದೆಂದು ಬುದ್ಧನಂಥ ದಾರ್ಶನಿಕರೂ, ನ್ಯೂಟನ್ ಐನ್‌ಸ್ಟೀನ್‌ರಂಥ ವಿಜ್ಞಾನಿಗಳೂ ಒಪ್ಪಿಕೊಂಡಿದ್ದಾರೆ. ‘ವಿಶ್ವದಲ್ಲೊಂದು ಕ್ರಮವಿದೆ. ಪ್ರತಿಯೊಂದು ವಸ್ತು ಅಥವಾ ಜೀವಿಯನ್ನು ನಿಯಂತ್ರಿಸುವ ಅಪರಿವರ್ತನೀಯ ನಿಯಮವೊಂದಿದೆ. ಅದು ಕುರುಡು ನಿಯಮವಲ್ಲ. ಏಕೆಂದರೆ ಕುರುಡು ನಿಯಮ ಜೀವಿಗಳ ವರ್ತನೆಯನ್ನು ನಿಯಂತ್ರಿಸಲಾರದು’[6] ಎಂಬ ಗಾಂಧೀಜಿಯ ಮಾತನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳಬಹುದು. ಗಾಂಧೀಜಿಯ ಆಫ್ರಿಕಾ ಯಾತ್ರೆಯಾಗಲಿ, ವಿವೇಕಾನಂದ ಪರಮಹಂಸರ ಭೇಟಿಯಾಗಲಿ, ಆಂಗ್ಲರ ಲೋಕಾಕ್ರಮಣವಾಗಲಿ ವಿಚ್ಛಿನ್ನ ಘಟನೆಗಳೆಂದೊ ಆಕಸ್ಮಿಕ ಗಳೆಂದೊ ತಿಳಿಯದೆ, ವಿಶ್ವನಿಯಮಕ್ಕೊಳಪಟ್ಟ ಘಟನೆಗಳೆಂದು ಪರಿಭಾವಿಸಿದಾಗ ಅವುಗಳ ಪೂರ್ಣಾರ್ಥ ಅರಿವಾಗುತ್ತದೆ. ಈ ಘಟನೆಗಳು ಪೂರ್ವಾಪರ ಸಂಬಂಧವಿಲ್ಲದ ಆಕಸ್ಮಿಕವೆನ್ನುವುದಾದರೆ, ಮಾನವ ಜನ್ಮವೂ ಆಕಸ್ಮಿಕ ಅಥವಾ ಕಾಕತಾಳೀಯವೆನ್ನಬೇಕಾ ಗುತ್ತದೆ. ಕುವೆಂಪು ಅವರು ಮೇಲಿಂದ ಮೇಲೆ ಬಳಸುವ ದೈವಿಕತೆಯೆನ್ನುವ ಪದವನ್ನು ಈ ಅರ್ಥದಲ್ಲಿ ಗ್ರಹಿಸಬೇಕಾಗುತ್ತದೆ. ಬಾಲಕೃಷ್ಣ ತಿಂಡಿತಿಂದ ಪ್ರಸಂಗವನ್ನು ಪ್ರತಿಮಾ ದೃಷ್ಟಿಯ ಅದ್ವೈತಾನುಭವವೆಂದು ಗ್ರಹಿಸಿದರೆ ತಪ್ಪಾಗದು.

ಪುನರ್ಜನ್ಮದ ಕಲ್ಪನೆಗೂ ಪುರೋಹಿತಶಾಹಿಗೂ ಏನೇನೂ ಸಂಬಂಧವಿಲ್ಲ. ಬುದ್ಧ ಹಾಗೂ ತೀರ್ಥಂಕರರಿಂದ ಪ್ರತಿಪಾದಿತವಾಗಿ, ಭಾರತೀಯ ದಾರ್ಶನಿಕರು ಒಪ್ಪಿಕೊಂಡು, ಪ್ರಭಾವ ಬೀರುತ್ತಿರುವ ಈ ಕಲ್ಪನೆಯನ್ನು ಪೂರ್ಣವಾಗಿ ತಿರಸ್ಕರಿಸಲಾಗದು. ಬ್ರೈಡಿಮರ್ಭಿಯ ಕತೆ ಕೇಳಿದವರು, ಎಡ್ಗರ್ ಕಾಯ್ಸೆಯ ಪೂರ್ವಜನ್ಮ ಸಂಬಂಧವಾದ ಸುಪ್ತಸ್ಥಿತಿಯ ಹೇಳಿಕೆಗಳನ್ನೋದಿದವರು ಅಥವಾ ವರ್ಜೀನಿಯಾ ಬೀಚಿನ ಕಾಯ್ಸೆ ಸಂಶೋಧನಾ ಸಂಸ್ಥೆಯ ಪ್ರಯೋಗಗಳನ್ನು ನೋಡಿದವರು ಅದನ್ನು ತಿರಸ್ಕರಿಸುವ ಮುನ್ನ ಚೂಲ ಮೂಲವಾಗಿ ಜಾಗರೂಕತೆಯಿಂದ ಪುನರಾಲೋಚಿಸಬೇಕಾಗುತ್ತದೆ. ಅಮೆರಿಕೆಯಲ್ಲಿ ಮಾತ್ರವಲ್ಲ, ರುಮೇನಿಯಾ ರಷ್ಯಾಗಳಂಥ ಯೂರೋಪಿಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಪರಾಮನೋ ವಿಜ್ಞಾನದ ಸಂಶೋಧನೆಗಳು ಪಕ್ವ ಸ್ಥಿತಿಯನ್ನು ಮುಟ್ಟಿದಾಗ ಅಂಥ ಕಲ್ಪನೆಯ ಸತ್ಯಾಸತ್ಯತೆ ಗಳು ದೃಢವಾಗುತ್ತವೆ. ಅದನ್ನು ಪ್ರತಿಮಾ ದೃಷ್ಟಿಯಿಂದಲೂ ಗ್ರಹಿಸಬಹುದಾದ ಸಾಧ್ಯತೆ ಯಿದೆ.

ಈ ಮೊದಲೇ ತಿಳಿಸಿದಂತೆ ಜಗತ್ತೇ ವಿರೋಧಾಭಾಸ ವಿಪರ್ಯಾಸಗಳ ಗೊಂದಲವೆಂಬಂತೆ ತೇಲುನೋಟಕ್ಕೆ ಕಾಣುತ್ತದೆ. ದ್ವಂದ್ವತ್ವವಂತು ನಿಸರ್ಗನಿಯಮವೆಂಬಂತೆ ಎಲ್ಲೆಲ್ಲೂ ಎದ್ದು ಕಾಣುತ್ತದೆ. ಕತ್ತಲಿಲ್ಲದೆ ಬೆಳಕಿನ ಮಹತ್ವ ಮನಗಾಣದು. ಕತ್ತಲು ಸಹ ಅಸಾರ್ಥಕವಲ್ಲ. ಈ ದ್ವಂದ್ವಗಳನ್ನೊಪ್ಪಿಕೊಂಡು, ಸಮನ್ವಯವನ್ನು ಸಾಧಿಸಿ, ಸಮತೋಲನವನ್ನು ರಕ್ಷಿಸಿ, ಸಮತ್ವದಿಂದಿರುವುದೇ ಜೀವನ ಕಲೆಯ ರಹಸ್ಯ. ಕುವೆಂಪು ಪ್ರಣೀತ ಪಂಚಮಂತ್ರಗಳಲ್ಲಿ ಎರಡಾದ ಸಮನ್ವಯ ಮತ್ತು ಪೂರ್ಣದೃಷ್ಟಿಗಳನ್ನು, ಜತೆಗೆ ಔಚಿತ್ಯ ಪ್ರಜ್ಞೆಯನ್ನು ಜೀವನದ ಸಕಲ ವ್ಯಾಪಾರ ವ್ಯವಹಾರಗಳಿಗೆ ಅನ್ವಯಿಸಿದಾಗ ವಿರೋಧಾಭಾಸಗಳು ಅಳಿಯುತ್ತವೆ, ದ್ವಂದ್ವತ್ವ ಬಹುತ್ವಗಳು ಮರೆಯಾಗಿ ಅದ್ವೈತ ಸಿದ್ದಿಯಲ್ಲಿ ಪರಿಣಾಮ ಪಡೆಯುತ್ತವೆ. ಶ್ರೀ ಅರವಿಂದರ ‘ಇಂಟೆಗ್ರಲ್ ವ್ಯೆ’ನ ಪರಮಾರ್ಥವೂ ಇದೇಯೆ.

ಈ ಟಿಪ್ಪಣಿ ಯಾರೊಬ್ಬರ ಪ್ರಬಂಧವನ್ನು ನೇರವಾಗಿ ದೃಷ್ಟಿಯಲ್ಲಿಟ್ಟುಕೊಂಡು ಬರೆದುದಲ್ಲ. ಅಭಿಪ್ರಾಯ ಸ್ವಾತಂತ್ರ್ಯ ಪ್ರತಿಯೊಬ್ಬ ಮಾನವನ ಆಜನ್ಮ ಹಕ್ಕು. ಸಾಹಿತ್ಯ ಶುದ್ದಿಗಾಗಲೀ, ಜೀವನ ಶುದ್ದಿಗಾಗಲೀ ವಿಮರ್ಶಕರೂ ವಿಚಾರವಾದಿಗಳೂ ಅತ್ಯಗತ್ಯ. ವಾದವಿವಾದಗಳಿಂದ ಕ್ರಿಯೆ ಪ್ರತಿಕ್ರಿಯೆಗಳಿಂದ ಸತ್ಯ ಪ್ರಕಾಶಕ್ಕೆ ಬರುತ್ತದೆ. ವಿಮರ್ಶೆಯ ಅಗ್ನಿಕುಂಡದಲ್ಲಿ ಮಿಂದು ಹೊರಬಂದಾಗ ಮಾತ್ರ ಸಾಹಿತ್ಯ ಲೋಕಗೌರವಕ್ಕೆ ಭಾಜನ ವಾಗುತ್ತದೆ. ಖಂಡನೆ ಮಂಡನೆಗಳೆರಡೂ ವಿಮರ್ಶೆಯ ಎರಡು ಮುಖಗಳೆಂಬುದನ್ನು ಮರೆಯುವಂತಿಲ್ಲ. ಈ ದೃಷ್ಟಿಯಿಂದ ಈ ಗ್ರಂಥದ[7] ಪ್ರಬಂಧಗಳನ್ನು ಸಹೃದಯರು ಸ್ವಾಗತಿಸಬೇಕಾಗುತ್ತದೆ. ನನ್ನ ಒತ್ತಾಯವನ್ನು ತಪ್ಪಾಗಿ ತಿಳಿಯದೆ, ಪ್ರಬಂಧವನ್ನು ತಯಾರಿಸಿಕೊಟ್ಟ ಎಲ್ಲ ಸನ್ಮಿತ್ರರನ್ನು ಹೃತ್ಪೂರ್ವಕವಾಗಿ ವಂದಿಸುತ್ತೇನೆ.

 


[1]     All through the physical world runs that unknown content which must surely be the stuff of our consciousness, space, Time and Gravitation, P. ೨೦೦.

[2]     Underneath all our overbeliefs rests the basic fact that good exists, that there is an Ideal working itself out in the historic process, a great power irresistably drawing us to some far off and unknown God, and demanding our entire allegiance-Durant Drake, problems of religion, P. ೪೭

[3]     ಆಲ್‌ಬರ್ಟ್ ಐನ್‌ಸ್ಟೈನ್, ಜಿ.ಟಿ. ನಾರಾಯಣರಾವ್, ಪುಟ. ೬೪

[4]     ವಿಚಾರ ಕ್ರಾಂತಿಗೆ ಆಹ್ವಾನ, ಪುಟ ೪೯.

[5]     ವಿಚಾರ ಕ್ರಾಂತಿಗೆ ಆಹ್ವಾನ, ಪುಟ ೬೯.

[6]     Gandhi’s view of life by Chandrashakar Shukla, P. ೨೯

[7]     ನೆನಪಿನ ದೋಣಿಯಲ್ಲಿ ಯಾತ್ರೆ