‘ತಾನು ಬರೆದಾಗ ಮಾತ್ರ ಪ್ರತಿಯೊಬ್ಬನ ಜೀವನಚರಿತ್ರೆಯೂ ಶ್ರೇಷ್ಠ ಮಟ್ಟ ದ್ದಾಗಿರುತ್ತದೆ’ ಎಂಬ ಜಾನ್ಸನ್ನನ ಮಾತಿನಲ್ಲಿ ಆತ್ಮಚರಿತ್ರೆಯ ಹೆಚ್ಚುಗಾರಿಕೆ ಅಭಿವ್ಯಕ್ತ ವಾಗುತ್ತದೆ. ತನ್ನ ಜೀವನದ ಮೂಲೆ ಮೊಡಕುಗಳು, ಗುಟ್ಟು ತಿಟ್ಟುಗಳು, ಕರೆ ಕುಂದುಗಳು, ಸಾಧನೆ ಸಿದ್ದಿಗಳು, ಸೂಕ್ಷ್ಮಾತಿಸೂಕ್ಷ್ಮ ಭಾವಾನುಭವಗಳು ತನಗೆ ತಿಳಿದಿರುವಂತೆ ಬೇರೆಯ ವರಿಗೆ ಪೂರ್ಣವಾಗಿ ಗೊತ್ತಾಗುವಂತಿಲ್ಲ. ಜೀವನಚರಿತ್ರೆಕಾರ ಎಂಥ ವೀಕ್ಷಣ ಪಟುವಾಗಿರಲಿ ಪರರ ಮನಸ್ಸನ್ನು ಬೇಧಿಸುವ ಕುಶಲನಾಗಿರಲಿ, ಪ್ರಗಲ್ಭ ಪಂಡಿತನಾಗಿರಲಿ, ಪ್ರತಿ ಭಾವಂತನ್ನಾಗರಲಿ ತನ್ನ ನಾಯಕನ ಗುಣಶೀಲಗಳನ್ನು ಸಂಪೂರ್ಣವಾಗಿ ಗ್ರಹಿಸಬಲ್ಲನೆಂದು ಹೇಳುವಂತಿಲ್ಲ. ಸುತ್ತಮುತ್ತಣವರಿಂದ ಕೇಳಿ ತಿಳಿದುಕೊಂಡು, ದಾಖಲೆಗಳನ್ನು ಸಂಗ್ರಹಿಸಿ ಕೊಂಡು, ಇತರರ ಹಾಗೂ ತನ್ನ ದೃಷ್ಟಿಕೋನದಿಂದ ನಾಯಕ ತೋರುವ ರೀತಿಯಲ್ಲಿ ಅವನ ಜೀವನವನ್ನು ಪುನರ್ನಿರ್ಮಿಸುವುದು ಜೀವನಚರಿತ್ರಕಾರನ ಕೆಲಸ. ನಾಯಕ ಸಮಕಾಲೀನ ನಾದರೂ ಅವನನ್ನು ಎಲ್ಲ ನಿಟ್ಟು ನಿಲುವುಗಳಿಂದ ನೋಡುವ, ಅಥವಾ ಅವನ ಎಲ್ಲ ವ್ಯವಹಾರಸಂಬಂಧಗಳಲ್ಲಿ ಸಾಕ್ಷಿಯಾಗಿರುವ ಅವಕಾಶ ಜೀವನ ಚರಿತ್ರಕಾರನಿಗಿರುವುದಿಲ್ಲ; ಜತೆಗೆ ನಾಯಕನ ಮುಚ್ಚುಮರೆತನದಿಂದಾಗಿ ಎಷ್ಟೋ ವಿಷಯಗಳು ಅವನಿಗೆ ಲಭ್ಯವಾಗುವುದಿಲ್ಲ. ಈ ಕಾರಣದಿಂದ ಜೀವನಚರಿತ್ರೆ ಅಪೂರ್ಣವಾಗಿಯೇ ಉಳಿಯುತ್ತದೆ. ಘಟನೆಗಳ ನಿರೂಪಣೆಯಲ್ಲಿ ಪ್ರಾಮಾಣಿಕತೆಯಿದ್ದರೂ, ಅವು ವಾಸ್ತವವೆನಿಸಿದರೂ, ನಿರೂಪಣಾ ವಿಧಾನದಲ್ಲಿ ಲೇಖಕನ ವರ್ಚಸ್ಸು ಮುದ್ರೆಯೊತ್ತುತ್ತದೆ. ಲೇಖಕನ ಮಾನಸಗರ್ಭದಿಂದ ಅವು ಹೊರಹೊಮ್ಮುವಾಗ ರಾಸಾಯನಿಕ ಕ್ರಿಯೆಗೆ ಗುರಿಯಾಗುತ್ತ ವೆಂಬುದನ್ನು ಮರೆಯುವಂತಿಲ್ಲ. ನಾಯಕ ಕಾಲಮಾನದಿಂದ ಹಿಂದೆ ಹಿಂದೆ ಸರಿದಷ್ಟೂ ಈ ಕ್ರಿಯೆ ಅಧಿಕವಾಗುವ ಸಂಭವವುಂಟು. ಈ ಕಾರಣಗಳಿಂದ ಆತ್ಮಚರಿತ್ರೆ ವ್ಯಕ್ತಿಯ ಪೂರ್ಣಾಭಿವ್ಯಕ್ತಿಯ ಸಮರ್ಥ ಮಾಧ್ಯಮವೆಂದು ಧಾರಾಳವಾಗಿ ಹೇಳಬಹುದಾಗಿದೆ.

ಆದರೆ ಆತ್ಮಚರಿತ್ರೆಯ ಯಶಸ್ಸು ಕರ್ತೃವಿನ ವಸ್ತುನಿಷ್ಠೆ, ಸತ್ಯ ಪ್ರೇಮ ಮತ್ತು ಪ್ರಾಮಾಣಿಕತೆಗಳನ್ನವಲಂಬಿಸಿದೆ. ದುರಭಿಮಾನ, ಆತ್ಮವ್ಯಾಮೋಹ ಮತ್ತು ಸ್ವಪ್ರತಿಷ್ಠೆಗಳು ಆತ್ಮಾಭಿವ್ಯಕ್ತಿಯನ್ನು ಕಲುಷಿತಗೊಳಿಸುವ ಸಂಭವವುಂಟು. ಸಾಕ್ಷೀಪ್ರಜ್ಞೆಯಿಂದ ತನ್ನ ಜೀವನವನ್ನು ಶೋಧಿಸಿಕೊಳ್ಳುವ, ಅಗುಸ್ಟೀನ್, ಟಾಲ್‌ಸ್ಟಾಯ್, ರೂಸೋ ಅಥವಾ ಗಾಂಧೀಜಿಯಂತೆ ತನ್ನ ಲೋಪದೋಷಗಳನ್ನು ಸ್ವವಿಮರ್ಶೆಗೆ ಗುರಿಪಡಿಸಿ, ಲೋಕಕ್ಕೆ ಬಹಿರಂಗಪಡಿಸುವ ಕೆಚ್ಚುನೆಚ್ಚುಗಳು ಆತ್ಮಚರಿತಕಾರನಿಗೆ ಅನಿವಾರ್ಯ. ಸತ್ಯಪ್ರಕಾಶನ ಆತ್ಮಾವಹೇಳನವಾಗದು, ಆತ್ಮತೇಜೋವಧೆಯಾಗದು, ಆತ್ಮಸಾಕ್ಷಾತ್ಕಾರದ ಸಾಧನಾ ವಿಶೇಷವಾಗುತ್ತದೆ. ತನ್ನ ಮನಸ್ಸಿನ ನವುರು ಸಿವುರುಗಳನ್ನು ಅಭಿವ್ಯಕ್ತಗೊಳಿಸುವಾಗ ಬುದ್ದಿ ಚುರುಕಾಗಿ, ಪಕ್ಷಪಾತ ಮನೋಭಾವ ಬಲವಾಗಿ ಅಥವಾ ಅನೈಚ್ಛಿಕವಾಗಿಯೇ ಆಯ್ಕೆಗೆ ಮನ್ನಣೆ ದೊರೆಯಬಹುದು.

ಅದೂ ಇಲ್ಲವೆಂದಿಟ್ಟುಕೊಳ್ಳೋಣ; ಮಾನವಸಹಜವಾದ ವಿಸ್ಮೃತಿಯಿಂದಾಗಿ ಅನೇಕ ಸಂಗತಿಗಳು ಬಿಟ್ಟುಹೋಗಬಹುದು; ನ್ಯೂನತೆಗಳು ನುಸುಳಬಹುದು. ಶೈಶವದ ವಿವರಗಳನ್ನು ಹಿರಿಯರಿಂದಲೇ ತಿಳಿಯಬೇಕು. ಅಷ್ಟೇ ಅಲ್ಲ, ತಿಳಿವಳಿಕೆ ಬಂದ ನಂತರವೂ ದಿನಚರಿ ಇಡದಿದ್ದರೆ, ಮುಖ್ಯವಾದ ಘಟನೆಗಳೇ ಮರೆತು ಹೋಗಬಹುದು. ಕನಸುಗಳಂತು ಬೆಳಗಾಗುವುದರೊಳಗೆ ನಶಿಸುತ್ತವೆ. ಮೇಲಾಗಿ ಸ್ಮೃತಿಕೋಶದ ವಿಧಾನವೇ ವಿಚಿತ್ರ! ಕೆಲವು ಸಂಗತಿಗಳನ್ನು ಎಚ್ಚರಿಕೆಯಿಂದ ರಕ್ಷಿಸುತ್ತದೆ, ಬೇಡವಾದವನ್ನು ಗಾಳಿಗೆ ತೂರುತ್ತದೆ, ಮತ್ತೆ ಕೆಲವನ್ನು ರೂಪಾಂತರಿಸುತ್ತದೆ. ತನ್ನ ಕತೆ ಕಲಾತ್ಮಕವಾಗಿರಲೆಂದು ಲೇಖಕ ಉದ್ದೇಶಪೂರ್ವಕವಾಗಿ ಹಲವು ವಿವರಗಳನ್ನು ತಡೆಹಿಡಿಯಬಹುದು. ತನ್ನ ಇಷ್ಟಮಿತ್ರರ ಗೌರವವನ್ನು ರಕ್ಷಿಸುವ ಸಲುವಾಗಿ ಅನೇಕ ವಾಸ್ತವ ಸಂಗತಿಗಳನ್ನು ಕೈಬಿಡಬೇಕಾಗಬಹುದು. ಪ್ರಭಾವಶಾಲೀ ವ್ಯಕ್ತಿಗಳಿಗೆ ಹೆದರಿಕೊಂಡೋ ಅಥವಾ ಅವರ ಬಗೆಗಿನ ದಿವ್ಯ ನಿರ್ಲಕ್ಷ್ಯದಿಂದಲೋ ಸತ್ಯಕ್ಕೆ ಅಪಚಾರವೆಸಗಬೇಕಾಗಬಹುದು. ಈ ಒಂದು ಹಲವಾರು ಕಾರಣಗಳಿಂದ ಆತ್ಮಚರಿತ್ರೆ ದೋಷಪೂರ್ಣವಾಗುತ್ತದೆ. ಸಾಮಾನ್ಯವ್ಯಕ್ತಿಯ ಕೈಯಲ್ಲಿ.

ಅದೇನೇ ಇರಲಿ, ದೀರ್ಘಕಾಲದ ಸಾಧನೆ ತಪಸ್ಯೆಗಳಿಂದ ತ್ಯಾಗ ಸಾಹಸಗಳಿಂದ, ಆದರ್ಶಜೀವನದಿಂದ, ಲೋಕದ ಕ್ಷೇಮಪಾಲನೆಗೆ ಕಾರಣರಾಗಿರುವ ಹಿರಿಯ ವ್ಯಕ್ತಿಗಳ ಜೀವನ ಪರಿಚಯದಿಂದ, ಅವರ ವಿಭೂತಿತ್ವದ ಸಂಪರ್ಕದಿಂದ. ಜ್ಯೋತಿ ಮುಟ್ಟಿದ ಬತ್ತಿ ಜ್ಯೋತಿಯೇ ಆಗುವಂತೆ, ಅಲ್ಪ ಚೇತನಗಳಿಗೆ ಮಹತ್ತು ಸಿದ್ದಿಸುತ್ತದೆಂಬುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. ಒಂದಲ್ಲ ಒಂದು ಹಿರಿಯ ಚೇತನದ ಪ್ರಭಾವ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಮುದ್ರೆಯೊತ್ತದಿಲ್ಲ. ಆ ಚೇತನ ತಂದೆಯ ರೂಪದಲ್ಲಿರಬಹುದು. ತಾಯಿಯ ರೂಪದಲ್ಲಿರಬಹುದು, ಗುರುವಿನ ರೂಪದಲ್ಲಿರಬಹುದು, ಬಂಧುಮಿತ್ರರ ರೂಪದಲ್ಲಿರ ಬಹುದು; ಅಥವಾ ಹಿಂದಿನ ಕಾಲದ ವಿಭೂತಿ ಪುರುಷರ ರೂಪದಲ್ಲಿರಬಹುದು. ಕತೆ ಕಾದಂಬರಿಗಳಲ್ಲಿ ಬರುವ ವ್ಯಕ್ತಿ ಮತ್ತು ಸಂಗತಿಗಳಿಗಿಂತ ಜೀವನ ಚರಿತ್ರೆ ಅಥವಾ ಆತ್ಮಕಥೆಗಳಲ್ಲಿ ಬರುವ ವ್ಯಕ್ತಿ ಮತ್ತು ಸಂಗತಿಗಳು ಹೆಚ್ಚು ವಾಸ್ತವವಾದ್ದರಿಂದ, ವಾಚಕರಿಗೆ ತೀರ ಹತ್ತಿರವಾಗುತ್ತವೆ; ಅವರ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ನಿಸರ್ಗದ ಶಿಶುವಾಗಿ, ಶ್ರೀ ರಾಮಕೃಷ್ಣ ವಿವೇಕಾನಂದರಂಥ ವಿಭೂತಿ ಪುರುಷರ ಮಾನಸ ಪುತ್ರರಾಗಿ, ಧ್ಯಾನ ತಪಸ್ಸು ಕಾವ್ಯಯೋಗಗಳಿಂದ ಮಹಾಚೇತನರಾಗಿರುವ ಶ್ರೀ ಕುವೆಂಪುರವರ ಜೀವನ ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿ ಶಕ್ತಿಯಾಗಿ, ದಾರಿದೀಪವಾಗಿ ಪಣಮಿಸುತ್ತದೆಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ.

ಒಂದು ರೀತಿಯಲ್ಲಿ ಕಾವ್ಯ ಕವಿಯ ಆತ್ಮಾಭಿವ್ಯಕ್ತಿಯ ಮಾಧ್ಯಮವೆನ್ನಬಹುದು. ಅವನ ಅಂತರಂಗದ ವಿಶ್ವರೂಪ ದರ್ಶನಕ್ಕೆ ಅದೊಂದು ಕನ್ನಡಿಯೆಂದರೂ ಸರಿಯೆ. ಆದರೂ ಕಾವ್ಯ ಅಪೂರ್ಣ ವಿಚ್ಛಿನ್ನಪರೋಕ್ಷ ಆತ್ಮಕಥೆಯೇ ಹೊರತು, ಸಮಗ್ರ ಪ್ರತ್ಯಕ್ಷ ಕ್ರಮಬದ್ಧ ಆತ್ಮಕಥೆಯಾಗದು. ಅಷ್ಟೇ ಅಲ್ಲ, ಕವಿಜೀವನದ ಘಟನೆಗಳ ಆನುಪೂರ್ವಿಯೂ ಅದರಲ್ಲಿ ದೊರಕುವುದಿಲ್ಲ; ಹಲವು ಪಾತ್ರಗಳ ಸಂಕೀರ್ಣ ಜೀವನದಿಂದ ಕವಿಜೀವನದ ಹೊನ್ನೆಳೆಗಳನ್ನು ಬೇರ್ಪಡಿಸುವುದೂ ಕಷ್ಟವಾಗುತ್ತದೆ. ಕಾವ್ಯ ದೇಶದ ಅಥವಾ ಮನುಕುಲದ ಆತ್ಮಕಥೆಯೇ ಹೊರತು ಕವಿಯ ಆತ್ಮಕಥೆಯಲ್ಲ.

ಕುವೆಂಪು ಸಾಹಿತ್ಯವನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿದ. ಅವರ ಸಾಧನೆ ಸಿದ್ದಿಗಳನ್ನು ಅಷ್ಟಿಷ್ಟು ತಿಳಿದುಕೊಂಡಿರುವ ಸಹೃದಯರು ಅವರ ಆತ್ಮಕಥೆಯ ಬಗ್ಗೆ ಕುತೂಹಲಾವಿಷ್ಟರಾಗಿರುವುದು ಸಹಜವೇ. ಕವಿಯಿಂದಲೇ ನೇರವಾಗಿ ಅವರ ಜೀವನ ಸಂಗತಿಗಳನ್ನರಿಯುವ, ಅವರ ಅಂತರಂಗದೊಡನೆ ಪ್ರತ್ಯಕ್ಷ ಸಂಪರ್ಕವನ್ನೇರ್ಪಡಿಸಿಕೊಳ್ಳುವ ಅವಕಾಶೋದಯಕ್ಕಾಗಿ ಕನ್ನಡನಾಡಿನ ಜನ ಕಾತರರಾಗಿರುವುದಂತು ನಿಜ. ಕೆಲವು ವೇಳೆ ಕಾವ್ಯಕ್ಕಿಂತ ಕವಿಜೀವನ ದೊಡ್ಡದೆಂಬುದಕ್ಕೆ ಕುವೆಂಪು ಅವರ ಜೀವನವೇ ಸಾಕ್ಷಿಯಾಗಿದೆ. ಈ ಅರ್ಥದಲ್ಲಿ ಅವರ ಜೀವನ ಅರ್ಥಾತ್ ಅವರ ಆತ್ಮಕಥೆ ಮಹಾಕಾವ್ಯವಾಗುತ್ತದೆ; ಅವರ ಜೀವನವೇ ಲೋಕಕ್ಕೆ ಮಹಾ ಸಂದೇಶವಾಗುತ್ತದೆಂಬುದಕ್ಕೆ ಇದೊಂದು ಜ್ವಲಂತ ನಿದರ್ಶನವಾಗುತ್ತದೆ.

‘ನೆನಪಿನ ದೋಣಿಯಲ್ಲಿ’ ಈ ಆತ್ಮಕಥೆಗೆ ಸಮುಚಿತವೂ ಸಾರ್ಥಕವೂ ಸಾಂಕೇತಿಕವೂ ಧ್ವನಿಪೂರ್ಣವೂ ಆದ ಹೆಸರು. ಇಲ್ಲಿ ಕವಿಯೇ ಅಂಬಿಗನಾಗಿ ಜೀವನವಾಹಿನಿಯಲ್ಲಿ ತೇಲುತ್ತಾನೆ. ಅದನ್ನು ದಾಟುತ್ತಾನೆ. ಹುಟ್ಟುಹಾಕುತ್ತಾ ಗತಜೀವನದ ಕಡೆಗೆ ಹಿನ್ನೋಟವೆಸೆಯುತ್ತಾನೆ. ಜೀವನರಹಸ್ಯವನ್ನರಿಯಲು ಕುತೂಹಲಾವಿಷ್ಟರಾಗಿರುವವರನ್ನು ತನ್ನೊಡನೆ ಕರೆದೊಯ್ದು ತೋರಿಸಲು ಸಿದ್ಧನಾಗಿದ್ದಾನೆ. ನೆನಪಿಗೆ ಬಂದಷ್ಟೇ ಉಚಿತ ಸಂಗತಿಗಳು ಇಲ್ಲಿಯ ವಸ್ತುವೆಂಬ ಸೂಚನೆಯೂ ಇದೆ. ‘ನನ್ನ ಕವಿ ಚೇತನದ ಭಾವಾನುಭವ ಗಳನ್ನು ಚಿಂತನಗಳನ್ನೂ ಮುಚ್ಚುಮರೆಯಿಲ್ಲದೆ ಲೋಕರಂಗದಲ್ಲಿ ಬಿಚ್ಚಿದೆನಾದರೆ ನಾನು ಅಂದಿಗಿಂತಲೂ ಹೆಚ್ಚಾಗಿ ಹುಚ್ಚನಾಗಿ, ಕಾಣುವುದರಲ್ಲಿ ಸಂಶಯವಿಲ್ಲ’ (ಪುಟ. ೮೦೫) ಎಂಬ ಸಾಲುಗಳನ್ನೂ ಈ ಸಂದರ್ಭದಲ್ಲಿ ಗಮನಿಸಬಹುದು. ಕಲೆಯ ಮತ್ತು ಕಾವ್ಯದ ರಂಗದಲ್ಲಿ ಚಿಂತನೆಗಳು ವಿಪುಲವಾಗಿ ಮೈದೋರಿವೆಯೆಂದು ಅವರೇ ಹೇಳುವಲ್ಲಿ, ಈ ಆತ್ಮಕಥೆ, ಅವರ ಸಾಹಿತ್ಯಪೂರಕ್ಕೆ ಪೂರಕವೆಂದೇ ಸ್ಪಷ್ಟಪಡಿಸಬಹುದಾಗಿದೆ.

ಸಾಧನೆ ಮನುಕುಲಕ್ಕೆ ಮಾತ್ರ ಸೀಮಿತವಾದದ್ದಲ್ಲ. ಜೀವಕೋಟಿಗೂ ಅನ್ವಯವಾಗುತ್ತದೆ. ಆದರೆ ಅದು ಸ್ವರೂಪವಿಧಾನ ಗುಣ ಪ್ರಮಾಣಗಳಲ್ಲಿ ಜೀವಿಯಿಂದ ಜೀವಿಗೆ, ಜೀವಿಯಿಂದ ಮನುಷ್ಯನಿಗೆ, ಮನುಷ್ಯನಿಂದ ಮನುಷ್ಯನಿಗೆ ವ್ಯತ್ಯಾಸ ಹೊಂದುತ್ತದೆ. ರಾಜಕೀಯ ವ್ಯಕ್ತಿಯ ಸಾಧನೆಯೇ ಬೇರೆ, ಋಷಿಕವಿ ವಿಜ್ಞಾನಿಗಳ ಸಾಧನಾ ರೀತಿಯೇ ಬೇರೆ; ಒಂದು ಬಹಿರ್ಮುಖಿಯಾದರೆ ಮತ್ತೊಂದು ಅಂತರ್ಮುಖಿ; ಐಹಿಕ ಸುಖವೊಂದೇ ಒಂದರ ಗುರಿಯಾದರೆ, ಶಾಶ್ವತ ಮೌಲ್ಯಗಳ ಸಿದ್ದಿಯೇ ಮತ್ತೊಂದರ ಗುರಿ. ಹೀಗಿರುವಾಗ ಬಾಹ್ಯ ಜೀವನದ ಸಂಗತಿಗಳಿಗಿಂತ ಅಂತರಂಗ ವಿಕಾಸದ ಪ್ರಕಾಶನವೆ ಕವಿಯ ಆತ್ಮ ಚರಿತ್ರೆಯ ಪ್ರಧಾನೋದ್ದೇಶವಾಗುತ್ತದೆ. ಬಾಹ್ಯಘಟನೆಗಳೇನಿದ್ದರೂ ಆಧ್ಯಾತ್ಮ ಜೀವನಕ್ಕೆ ಪೂರಕವಾಗಿ ಬರುತ್ತವೆ. ಕೆಲವೊಮ್ಮೆ ಅಧ್ಯಾತ್ಮ ಜೀವನದ ಹಲವು ಸಂಗತಿಗಳು ನಿಗೂಢವಾಗಿಯೇ ಉಳಿಯುತ್ತವೆ. ಆದ್ದರಿಂದ ಪ್ರಸ್ತುತ ಕೃತಿಯಲ್ಲಿ ಕಾವ್ಯಜೀವನ ವಿಕಾಸದ ಚರಣಚಿಹ್ನೆಗಳನ್ನು ಮಾತ್ರ ಪ್ರಧಾನವಾಗಿ ಗುರುತಿಸಬಹುದು. ಪ್ರಾಚೀನ ಕಾವ್ಯವ್ಯಾಸಂಗ ಮತ್ತು ನಿಸರ್ಗೋಪಾಸನೆಯೇ ಕುವೆಂಪು ಅವರ ಕಾವ್ಯಜೀವನದ ತಲಕಾವೇರಿಯೆಂಬುದೂ, ಶ್ರೀ ರಾಮಕೃಷ್ಣ ಪರಮಹಂಸರ ಆಶೀರ್ವಾದದಿಂದ ಹಾಗೂ ನಿರಂತರ ತಪಸ್ಸಿನಿಂದ ಲಬ್ಧವಾದ ಜ್ಯೋತಿಯೇ ಅದರ ಪ್ರಾಣಶಕ್ತಿಯೆಂಬುದೂ, ಭಗವತ್ಕೃಪೆಯೇ ಅದರ ಚಾಲಕಶಕ್ತಿ ಯೆಂಬುದೂ ಈ ಕೃತಿಯ ಅಧ್ಯಯನದಿಂದ ಸ್ಪಷ್ಟವಾಗುತ್ತದೆ.

ಕುವೆಂಪು ಅವರದು ಒಂದು ರೀತಿಯ ವಿವಿಕ್ತ ಅಥವಾ ವಿರಕ್ತ ಜೀವನ. ಅಧ್ಯಾತ್ಮ ಸಾಧನೆಯೆನ್ನಿ, ಕಾವ್ಯಯೋಗವೆನ್ನಿ, ಅದಕ್ಕೆ ಆ ಜೀವನ ನೆರವಾಗುತ್ತದೆ; ಅದಕ್ಕೆ ನೆರವಾಗುವಂಥ ಘಟನೆಗಳ ಸಂಭವತೆಗೆ ಭಗವಂತನೇ ಹೊಂಚು ಹೂಡಿದಂತೆ ಕಾಣುತ್ತದೆ. ಅವಿಭಕ್ತ ಕುಟುಂಬದ ಸ್ಥಿತಿಗತಿಗಳು, ಬೈಬಲ್ಲಿನ ವ್ಯಾಸಂಗ, ಮಂಜಪ್ಪಗೌಡರಂಥ ವ್ಯಕ್ತಿಗಳ ಸಂಪರ್ಕ, ಮೈಸೂರಿನಲ್ಲಿದ್ದಾಗ ಹೋಟಲುವಾಸದ ನಾರಕೀಯತೆ, ನಾರಕೀಯತೆಯ ನಡುವೆಯೂ ಚಿರಂತನ ಕೃತಿಗಳ ವ್ಯಾಸಂಗದಿಂದಾಗಿ ಅನುಭವಿಸುತ್ತಿದ್ದ ಸ್ವರ್ಗಾನಂದ, ಅವರನುಭವಿಸುತ್ತಿದ್ದ ಖಾಯಿಲೆಗಳು, ಸ್ವಾಮಿ ಸಿದ್ದೇಶ್ವರಾನಂದರ ಅಧ್ಯಾತ್ಮಾಲಿಂಗನ, ಇವೇ ಮೊದಲಾದ ಆಕಸ್ಮಿಕ ಘಟನೆಗಳು ಅವರ ಜೀವನವನ್ನು ರೂಪಿಸುತ್ತವೆ. ಖಾಯಿಲೆಗಳು ಅವರ ಅಲೌಕಿಕಾನುಭವಕ್ಕೆ ಏಣಿಯಾಗುತ್ತವೆ; ಅಧ್ಯಾತ್ಮಸಿದ್ದಿಗೆ ಮುಂಗಾಣ್ಕೆಯಾಗುತ್ತವೆ. ಅವರು ಪಠ್ಯಪುಸ್ತಕಗಳನ್ನೋದಿ ದವರಲ್ಲ. ತರಗತಿಯಲ್ಲಿದ್ದಾಗಲೂ ಅವರ ಗಮನ ಕಿಟಕಿಯಾಚೆಗಿನ ನೀಲಾಕಾಶದ ಕಡೆಗೆ; ಅವರ ಗೆಳೆಯರ ಒತ್ತಾಯದಿಂದ ಪರೀಕ್ಷೆಗೆ ಮುನ್ನ ಚುಟುಕು ಓದು; ಮೊದಮೊದಲು ಇಂಗ್ಲಿಷಿನಲ್ಲಿ ಘಂಟಾಕರ್ಣಾಭಿಮಾನ; ಆಗಲೇ ಮಹಾಕವಿಯಾಗುವ ಆತ್ಮಪ್ರತ್ಯಯ. ಅವರ ಮನಸ್ಸು ಸದಾ ಗಗನಗಾಮಿಯಾಗಿದ್ದರೂ, ಆಗಾಗ್ಗೆ ಕ್ಷುದ್ರ ಲೌಕಿಕ ವ್ಯವಹಾರಗಳ ಕಡೆಗೂ ತುಯ್ಯುತ್ತಿತ್ತು. ಆದರೆ ಅದೆಲ್ಲ ಕ್ಷಣಿಕ. ಇಸ್ಪೀಟಾಟ, ಸಿನಿಮಾದರ್ಶನ ಆಗೊಮ್ಮೆ ಈಗೊಮ್ಮೆ. ಸಂಸಾರದ ಬಗೆಗಿನ ನಿರ್ಲಕ್ಷತೆಯನ್ನು ಹಾಗೂ ಮಾಧ್ಯಮಿಕ ಶಾಲಾ ಅಧ್ಯಾಪಕರ ಪಕ್ಷಪಾತ ಮನೋಭಾವವನ್ನು ಹೇಗೆ ಗಂಭೀರ ವಾಸ್ತವವಾಗಿ ವಿವರಿಸುತ್ತಾರೆಯೋ, ತಮ್ಮನ್ನು ಆಗಾಗ್ಗೆ ಕಾಡುತ್ತಿದ್ದ ಐಂದ್ರಿಯ ವಿಷಯಗಳನ್ನೂ ನಿರಾಂತಕವಾಗಿ ಮುಚ್ಚುಮರೆಯಿಲ್ಲದೆ ಬಿಚ್ಚಿ ಹೇಳುತ್ತಾರೆ. ಅವರ ಜನನ ಸಂದರ್ಭದ ವೃತ್ತಾಂತವನ್ನು, ಸೀಅಪ್ಪುವಿನ ಕತೆಯನ್ನು, ಬೇಟೆಗಾರಿಕೆಯನ್ನು, ಹೋಟೆಲಿನ ವರ್ಣನೆಯನ್ನು ಅವರ ಬಾಯಿಂದಲೇ ಕೇಳಬೇಕು! ಹೋಟಲಿನ ತಮ್ಮ ಕೋಣೆಯಲ್ಲಿ ದೋಸೆ ತಿನ್ನುವಾಗ ಬಂದ ಬಾಲಕೃಷ್ಣನ ಪ್ರಕರಣ ವಿಸ್ಮಯಕಾರಿಯಾಗಿದೆ!

ಆಂಗ್ಲಭಾಷೆಯಲ್ಲಿ ಪ್ರಾರಂಭವಾದ ಅವರ ಕಾವ್ಯರಚನೆ ಕ್ರಮಕ್ರಮೇಣ ಕನ್ನಡದ ಕಡೆಗೆ ವಾಲಿ, ಅಲ್ಲಿ ಅವರು ಸಾಧಿಸಿದ ಸಾಹಸ ವಿಕ್ರಮಗಳ ಕತೆ ಇಲ್ಲಿದೆ. ಇದೊಂದು ಕಾವ್ಯಕರ್ಮದ ಕತೆ. ಇಲ್ಲಿಯ ತನಕ ಪ್ರಕಟವಾಗದ ಆಂಗ್ಲ ಮತ್ತು ಕನ್ನಡ ಕವಿತೆಗಳು ಅವರ ಪ್ರತಿಭಾ ವಿಕಾಸಕ್ಕೆ ಹಿನ್ನೆಲೆಯಾಗಿ ಉದಾಹೃತವಾಗಿವೆ. ಕ್ವಚಿತ್ತಾಗಿ ಪತ್ರಗಳು, ಬಹುತೇಕವಾಗಿ ದಿನಚರಿಯೂ ಆತ್ಮಕತೆಯ ಪ್ರಾಮಾಣಿಕತೆಗೆ ಸಾಕ್ಷಿಯಾಗಿ, ಅದರ ಮೌಲ್ಯವರ್ಧನೆಗೆ ಕಾರಣಗಳಾಗಿವೆ. ಇದನ್ನು ಅಧ್ಯಯನ ಮಾಡಿದವರ ಚೇತನ, ಇಲ್ಲಿಯ ಭಾವಾನುಭವಗಳಿಗೆ  ಸ್ಪಂದಿಸಿದ ಜೀವ ಊರ್ಜೆ ಪಡೆಯುವಲ್ಲಿ, ಊರ್ಧ್ವಮುಖಯಾತ್ರೆ ಕೈಗೊಳ್ಳುವಲ್ಲಿ ಸಂದೇಹ ವಿಲ್ಲ. ಕವಿಜೀವನಕ್ಕೆ ಮಾತ್ರವಲ್ಲ, ಕಾವ್ಯಸಮುದಾಯಕ್ಕೂ ಇದೊಂದು ವ್ಯಾಖ್ಯಾನದಂತಿದ್ದು, ಅಲ್ಲಿಯ ಸಮಸ್ಯೆಗಳಿಗೆ ಹಾಗೂ ರಹಸ್ಯಗಳಿಗೆ ಇಲ್ಲಿ ಕೀಲಿಕೈ ಲಭಿಸುತ್ತದೆಂದು ಧಾರಾಳವಾಗಿ ಹೇಳಬಹುದಾಗಿದೆ.