‘ಸಮುದ್ರ ಲಂಘನ’ ಎಂಬ ಕಿರುಕಾವ್ಯವನ್ನು ತಾವು ರಚಿಸಿದ್ದುದಾಗಿಯೂ, ೧೯೩೦ರ ಸಮಯದ ಅರ್ಥಸಾಧಕ ಪತ್ರಿಕೆಯಲ್ಲಿ ಅದು ಅಚ್ಚಾಗಿದ್ದುದಾಗಿಯೂ ತಿಳಿಸಿ, ಆ ಪತ್ರಿಕೆ ಸಿಗುವುದಾದರೆ ಅಂದು ರಚಿಸಿದ ಕಿರುಕಾವ್ಯ ತಮ್ಮ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ರಚನೆಗೆ ಹೇಗೆ ನಾಂದಿಯಾಗಿತ್ತೆಂಬ ಸಂಗತಿಯನ್ನು ಕಾಣಬಹುದೆಂದೂ ಕುವೆಂಪು ಅವರು ಹತ್ತು-ಹನ್ನೆರಡು ವರ್ಷಗಳಿಂದ ಹೇಳುತ್ತಿದ್ದರು. ಅರ್ಥ ಸಾಧಕ ಪತ್ರಿಕೆಯ ಸಂಪಾದಕರಾದ ದಿ. ಶ್ರೀ ಹನುಮಂತೇಗೌಡರ ನೆಂಟರಿಷ್ಟರ ಬಳಿ ವಿಚಾರಿಸಿ, ಆ ಈ ಗ್ರಂಥಭಂಡಾರಗಳಲ್ಲಿ ಹುಡುಕಿ, ಪ್ರಯತ್ನ ನಿಷ್ಫಲವಾದಾಗ ತೆಪ್ಪಗಾಗಬೇಕಾಯಿತು.

೧೫.೪.೧೯೮೧ ರಂದು ಬೆಂಗಳೂರು ವಿಶ್ವವಿದ್ಯಾಲಯದ ನಾಟಕ ವಿಭಾಗದ ಮುಖ್ಯಸ್ಥ ರಾದ ಶ್ರೀ ಕ.ವೆಂ. ರಾಜಗೋಪಾಲರ ಕೋಣೆಯಲ್ಲಿ ಪ್ರಾಧ್ಯಾಪಕ ಡಾ. ಶಿವರುದ್ರಪ್ಪ ಮತ್ತು ಡಾ. ಸುಂಕಾಪುರ ಅವರೊಡನೆ ನಾನು ಹರಟೆ ಹೊಡೆಯುತ್ತಿದ್ದೆ. ಅದು ಇದು ಮಾತಾಡುತ್ತಿದ್ದಾಗ, ನಮ್ಮ ಗಮನ ಶ್ರೀರಾಮಾಯಣದರ್ಶನಂ ಕಡೆಗೆ ಹರಿಯಿತು. ರಾಜಗೋಪಾಲರು ‘ಸಮುದ್ರ ಲಂಘನ’ದ ವಿಷಯವೆತ್ತಿಕೊಂಡು, ೧೯೮೦ರ ಜುಲೈ ತಿಂಗಳ ‘ಅಂಕಣ’ ಪತ್ರಿಕೆಯಲ್ಲಿ ಅದರ ಬಗ್ಗೆ ತಾವೊಂದು ಟಿಪ್ಪಣಿ ಬರೆದಿದ್ದುದಾಗಿ ತಿಳಿಸಿದರು. ಅರಸುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾದಷ್ಟು ಆನಂದವಾಯಿತು ನನಗೆ. ನನ್ನ ಕಾಳಜಿಯನ್ನು ಕಂಡು ಮರುಗಿದ ರಾಜಗೋಪಾಲರು ‘ಸಮುದ್ರಲಂಘನ’ವುಳ್ಳ ಅರ್ಥಸಾಧಕ ಪತ್ರಿಕೆಯ ಸಂಚಿಕೆ ಗಳನ್ನು ರಟ್ಟುಹಾಕಿ, ಜೋಪಾನ ಗೈದಿದ್ದೇನೆ. ನಾಳೆಯೇ ಅದನ್ನು ನಿಮಗೆ ಕಳಿಸಿಕೊಡುತ್ತೇನೆ. ಇದಕ್ಕಾಗಿ ನೀವೇನೂ ಕಾತರಿಸಬೇಕಾಗಿಲ್ಲ’ ಎಂದರು. ಮರುದಿನವೇ ರಟ್ಟು ಕಟ್ಟಿದ ಅರ್ಥಸಾಧಕ ಪತ್ರಿಕೆಯ ಪ್ರತಿಗಳೂ, ಅಂಕಣದ ಪ್ರತಿಯೂ ನನ್ನ ಕೈಸೇರಿದುವು.

ಆ ವಿಷಯವನ್ನು ಶ್ರೀ ಕುವೆಂಪು ಅವರಿಗೆ ತಿಳಿಸಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ವತಿಯಿಂದ ಪ್ರಕಟಿಸಲು ಅನುಮತಿ ಕೊಡುವಂತೆ ಕೇಳಿಕೊಂಡಾಗ, ಅವರು ಸಂತೋಷದಿಂದ ಒಪ್ಪಿಕೊಂಡರು.

ಹೆಸರೇ ಸೂಚಿಸುವಂತೆ ‘ಸಮುದ್ರಲಂಘನ’ ಶ್ರೀ ಮದ್ರಾಮಾಯಣದ ಪ್ರಮುಖ ಪ್ರಸಂಗಗಳಲ್ಲೊಂದು. ಇಲ್ಲಿಯ ಕತೆ ಹೀಗಿದೆ. ಬೆಟ್ಟದ ತುದಿಯ ದಟ್ಟಡವಿಯ ನಡುವೆ ಚಿಂತಾಕ್ರಾಂತರಾದ ಕಪಿ ವೀರರು ಕುಳಿತಿದ್ದಾರೆ. ಸೀತಾದೇವಿಯನ್ನು ಹುಡುಕಿ ಹುಡುಕಿ ಕಾಣದೆ, ಪರಿತಪಿಸುತ್ತಿದ್ದರೆ. ಅಲ್ಲಲ್ಲಿ ಚೆದರಿ ಹೋಗಿದ್ದವರು ಅಂಗದನ ಆಣತಿಗೆ ಮಣಿದು, ಒಕ್ಕಡೆ ಸೇರುತ್ತಾರೆ. ‘ಶ್ರೀರಾಮದೂತರಿರ, ನಮ್ಮೊಡೆಯನಾಣೆಯನ್ನು ಮರೆಯದಿರಿ. ನೆಚ್ಚುಗೆಡದಿರಿ. ವೀರರಿಗೆ ನಿರಾಶೆ ಸಲ್ಲದು. ಶೂರರಿಗೆ ಶೋಕತರವಲ್ಲ. ನಮ್ಮ ಕಜ್ಜದಲ್ಲಿ ಗೆದ್ದರೆ ಜಯಶ್ರೀ ಒಲಿಯುತ್ತಾಳೆ. ಮಡಿದರೆ ಮುಕ್ತಿಶ್ರೀಯ ತೋಳುಗಳನ್ನು ಸೂರೆಗೊಳ್ಳುತ್ತೇವೆ. ಹಿರಿಯರೀಗ ಮಾರ್ಗದರ್ಶನ ಮಾಡಬೇಕು. ಬುದ್ದಿಗೆ ಬೆಳಕು ನೀಡಬೇಕು’ ಎಂಬುದಾಗಿ ಅಂಗದ ಭಾಷಣ ಮಾಡುತ್ತಾನೆ.

ಅನಂತರ ಮುದಿಜಾಂಬವನೆದ್ದು ‘ವೀರರಿಗೆ ಸೋಲಿಗಿಂತಲು ಸಾವು ಲೇಸು. ಸತ್ಕಾರ್ಯದಲ್ಲಿ ತೊಡಗಿದವರಿಗೆ ಎಡರು ಸಹಜ. ವೀರಾತ್ಮರಾದವರಿಗೆ ಕೈಗೂಡದ ಕಜ್ಜಗಳಿಲ್ಲ. ಈ ಮಹತ್ಕಾರ್ಯದಲ್ಲಿ ಜಯ ಸಾಧಿಸಿದರೆ ಯುಗಯುಗಗಳಾಚೆ ನಮ್ಮ ಕೀರ್ತಿಲತೆ ಕೊನರುತ್ತದೆ’ ಎಂದು ಘೋಷಿಸುತ್ತಾನೆ. ಕೂಡಲೇ ಹನುಮಂತ ಮೇಲೆದ್ದು ದೇವಿಯ ‘ಅನ್ವೇಷಣೆಗಾಗಿ ಜೀವವನ್ನು ಸಮೆಸುವುದಾದರೆ ಸದ್ಗತಿ ದೊರಕುತ್ತದೆಂದೂ, ಅದಕ್ಕೆ ಮಾರುತಿ ಹೊಣೆ ಯೆಂದೂ’ ನುಡಿಯುತ್ತಾನೆ.

ಅವರಿಬ್ಬರ ಮಾತುಗಳಿಂದ ಕಪಿವೃಂದದಲ್ಲಿ ಉತ್ಸಾಹ ಉಕ್ಕುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಸಂಪಾತಿಗೆ ಅಂಗದ ರಾಮನ ಕತೆಯನ್ನು ನಿರವಿಸಿ, ಜಟಾಯುವಿನ ಮರಣ ವಾರ್ತೆಯನ್ನರುಹುತ್ತಾನೆ. ಸಹೋದರ ಮರಣ ದುಃಖದಗ್ಧನಾದ ಸಂಪಾತಿ ರಾವಣನ ಲಂಕೆಯ ದಾರಿಯನ್ನು ತೋರಿಸಿ, ಗಗನಗಾಮಿಯಾಗುತ್ತಾನೆ.

ತಾನು ಎಪ್ಪತ್ತೈದು ಯೋಜನ ಲಂಘಿಸಬಹುದೇ ಹೊರತು ಇಡೀ ದೂರ ಸಾಧ್ಯವಿಲ್ಲವೆಂದೂ, ತಮ್ಮಳತೆಯನ್ನು ಮೀರಿದ ಸಾಹಸವನ್ನು ಕೈಕೊಂಡು ಮತಿವಂತರು ರಾಜಕಾರ್ಯವನ್ನು ಕೆಡಿಸುವುದಿಲ್ಲವೆಂದೂ ಗವಯ ನಮ್ರತೆಯಿಂದ ನುಡಿಯತ್ತಾನೆ. ‘ನಾನೇನೋ ತೊಂಬತ್ತು ಯೋಜನ ನೆಗೆಯಬಲ್ಲೆ. ಉಳಿದದ್ದರ ಚಿಂತೆ ನನಗುಂಟು. ಸಾಹಸಿಗೆ ಚಿಂತೆ ತರವಲ್ಲ. ನಾನೇ ಕಡಲು ನೆಗೆಯುತ್ತೇನೆ’ ಎಂದು ಜಾಂಬವ ಸಾರುತ್ತಾನೆ. ‘ತಾತನನ್ನು ಕಳಿಸಿದರೆ ಲೋಕ ನಗುತ್ತದೆ. ಸುಖದಲ್ಲಿ ಮೊದಲಾದವನು ಸಾಹಸದಲ್ಲಿಯೂ ಮೊದಲಾಗ ಬೇಕು. ಆದ್ದರಿಂದ ನಾನೇ ಈ ಸಾಹಸೋದ್ಯಮಕ್ಕೆ ಸಿದ್ಧನಾಗುತ್ತೇನೆ’ ಎಂದು ಅಂಗದ ಮುಂದಾಗುತ್ತಾನೆ. ಆಗ ಜಾಂಬವ ಅವನನ್ನು ತಡೆದು ‘ನಾಯಕನಾದ ನೀನು ಈ ಕೆಲಸಕ್ಕೆ ಮುಂದಾಗಬಾರದು. ಆಂಜನೇಯನಿಗೆ ಸಮಬಲರ ಕಾಣೆ. ಅವನಿಂದ ಈ ಪವಿತ್ರ ಸಾಹಸ ಸಾಧ್ಯ’ ಎಂದು ಅವನ ಕಡೆಗೆ ಕಣ್ಣಾಗುತ್ತಾನೆ. ಹನುಮಂತ ಅಂಗದನಿಂದ ಮುದ್ರೆಯುಂಗುರ ತೆಗೆದುಕೊಂಡು, ಕಣ್ಗೊತ್ತಿಕೊಂಡು. ಮುಂದಿನ ಸಾಹಸಕಾರ್ಯಕ್ಕೆ ಸಿದ್ಧನಾಗುತ್ತಾನೆ. ಕಪಿವೀರರು ನಾನಾ ವಿಧದ ಹೂಮಾಲೆಗಳಿಂದ, ಶ್ಲಾಘನೆಗಳಿಂದ ಅವನನ್ನು ಸನ್ಮಾನಿಸುತ್ತಾರೆ. ಮುಂದಿನ ಕೆಲವು ಕ್ಷಣಗಳಲ್ಲಿ ಹನುಮಂತ ಆಕಾಶಕ್ಕೆ ನೆಗೆದು, ಅಣುವಾಗಿ, ಮೋಡಗಳ ಹಿಂದುಗಡೆ ಮರೆಯಾಗುತ್ತಾನೆ.

ಮಹೇಂದ್ರಾಚಲದ ತುದಿಯಲ್ಲೊಂದು ರಾತ್ರಿ ವಿಶ್ರಮಿಸಿಕೊಂಡು ಮುಂದೆ ಸಮುದ್ರಕ್ಕೆ ಸಮಸ್ಪರ್ಧಿಯಾಗಿ ಹಾರುವಾಗ, ಕವಿ ಕಂಡ ದೃಶ್ಯ ರೋಮಾಂಚಕರವಾದದ್ದು. ಬಂಡೆಗಳು ದುರಿದುವಂತೆ; ಖಗಮಿಗಗಳು ಬೆದರಿ, ಓಟ ಕಿತ್ತುವಂತೆ; ಕಡಲು ತುಳುಕಿ ಗಾಳಿ ಎದ್ದಿತಂತೆ. ಕೆಳಗೆತ್ತ, ಮೇಲೆತ್ತ, ಭೂಮಿಯದೆತ್ತ, ದಿಕ್ಕುಗಳೆತ್ತ, ಎಂಬುದೇ ತೋರುತ್ತಿರಲಿಲ್ಲವಂತೆ. ಮಾಯೆಯನ್ನು ಕಡಿ ಕಡಿದು ನುಗ್ಗುವ ಯೋಗಿಯಂತೆ ಅವನು ತೋರುತ್ತಾನೆ. ಇದ್ದಕ್ಕಿದ್ದಂತೆ ಅವನನ್ನಾರೋ ಬಂಧಿಸಿದಂತಾಗುತ್ತದೆ. ಸಿಂಹಿಕೆಯೆಂಬ ರಕ್ಕಸಿಯನ್ನು ಮಾಯೆಯಿಂದ ಗೆದ್ದು, ಮುಂದೆ ಲಂಕೆಗಭಿಮುಖವಾಗಿ ಸಾಗುತ್ತಾನೆ. ಕೊನೆಗೆ ಸಂಜೆಯ ವೇಳೆಗೆ ಲಂಕೆಯರಮನೆಯ ಹೇಮಕಳಶ ಕಣ್ಣಿಗೆ ಬೀಳುತ್ತದೆ. ಆ ನಗರದ ವೈಭವ ಅವನಿಗೆ ಕನಸಿನಂತೆ ತೋರುತ್ತದೆ. ಇರುಳು ಭೂಮಂಡಲವನ್ನಪ್ಪುವ ವೇಳೆಗೆ ಅವನು ಲಂಕೆಯ ಕಡಲ ತಡಿಯಲ್ಲಿ ರಾಮನಾಮ ಸಂಕೀರ್ತನೆಯೊಡನೆ ಇಳಿಯುತ್ತಾನೆ.

ಈ ವಸ್ತು ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದ ‘ಇರ್ದುದು ಮಹೇಂದ್ರಾ ಚಲಂ’ ಸಂಚಿಕೆಯ ಕೊನೆಯ ಭಾಗವನ್ನೂ ಇಡೀ ‘ಸಾಗರೋಲ್ಲಂಘನಂ’ ಸಂಚಿಕೆಯನ್ನೂ ಆಕ್ರಮಿಸಿ ಕೊಂಡಿದೆ. ಸಂಪಾತಿಯಿಂದ ರಾವಣನ ವೃತ್ತಾಂತವನ್ನರಿತ ಕಪಿಸೇನೆಯನ್ನು ಕುರಿತು ಅಂಗದ ಸಮುದ್ರ ಲಂಘನ ಸಮರ್ಥರಾರಿಬಹುದೆಂದು ಪ್ರಶ್ನಿಸುತ್ತಾನೆ. ತನ್ನ ಪರಾಕ್ರಮ ಪ್ರದರ್ಶನಕ್ಕಾಗಿ ಮೊದಲೆದ್ದವನು ಗಜ. ಅವನ ನಂತರ ಗವಯ, ಗವಾಕ್ಷ, ಗಂಧಮಾದನ, ಮೈಂದ, ಜಾಂಬವರು ತಂತಮ್ಮ ಶಕ್ತಿಯ ಪ್ರಮಾಣವನ್ನು ವಿವರಿಸುತ್ತಾರೆ. ಶತಯೋಜನದ ಶರಧಿಯನ್ನು ತಾನು ದಾಟಬಹುದಾದರೂ ಹಿಮ್ಮರಳುವ ಶಕ್ತಿಯಲ್ಲಿ ತನಗೆ ನಂಬಿಕೆಯಿಲ್ಲ ವೆಂದು ಅಂಗದ ನುಡಿಯುತ್ತಾನೆ. ಒಡೆಯ ಮುಂದೆ ಹೋಗಿ, ಆಳು ಹಿಂದುಳಿದು, ಕೇಡಡಸುವುದಾದರೆ ಸರ್ವನಾಶ ಸಹಜವೆಂದು ಜಾಂಬವ ಹನುಮಂತನ ಕಡೆಗೆ ಕಣ್ಣಾಗಿ, ಅವನನ್ನು ಸ್ತುತಿಸುತ್ತಾನೆ. ತಾನು ಪಡೆದ ಯೌಗಿಕ ಸಿದ್ದಿಯ ಮಹಿಮೆಯನ್ನು ಪರೀಕ್ಷಾರ್ಥವಾಗಿ ಆಂಜನೇಯ ಪ್ರಯೋಗಿಸಿದಾಗ ಇಡೀ ಸಭೆಯೇ ಅವನನ್ನು ಸ್ತುತಿಸಿ, ಅವನ ಗುಣಗಾನವನ್ನು ಸಂಕೀರ್ತಿಸುತ್ತದೆ; ಅವನ ವಿರಾಡ್ ವೈಭವದ ಗೌರವದ ಯೌಗಿಕಶ್ರೀಗೆ ಕೈಮುಗಿಯುತ್ತದೆ. ಆ ಪವನ ಪಾವನ ಕಲಿಕುಮಾರ ವಾನರ ಸೈನ್ಯಕ್ಕೆ ಅಭಯವನ್ನಿತ್ತು ಸಾಗರೋಲ್ಲಂಘನಕ್ಕೆ ಸಿದ್ಧನಾಗುತ್ತಾನೆ.

ಅವನ ವೈಗುರ್ವಣ ಶಕ್ತಿಗೆ ಕಪಿಸೈನ್ಯ ಮಾತ್ರವಲ್ಲ, ಇಡೀ ನಿಸರ್ಗವೇ ಭಯ ಚಕಿತವಾಗು ತ್ತದೆ, ರೋಮಾಂಚ ಕಂಚುಕಿತಗಾತ್ರವಾಗುತ್ತದೆ. ಅವನು ಅನಂತಾಕಾಶಸಂಗಿಯಾಗಿ, ಏಕಾಂಗಿಯಾಗಿ ಗಗನ ಸಾಗರದಲ್ಲಿ ಈಜುತ್ತಾನೆ. ಗಿರಿಗಿರಿಯ ಕಂದರದ ಸಂಧಿಯಲ್ಲಿ ಮುಂಗಾರ್ಮೊದಲ ಗಾಳಿ ನುಗ್ಗಿ ಭೋರ್ಗರೆವಂತೆ ಅನಿಲಸುತ ಲಂಘನದ ವೇಗದಿಂದ ಉದ್ಭವ ವಾದ ಬಿರುಗಾಳಿ ಮೊರೆಯಿತಂತೆ; ಸಾಗರದ ನೀರು ಅಲೆಯಲೆಯಾಗಿ ಉಕ್ಕಿತಂತೆ; ಬಡಗಣಿಂದ ತೆಂಕಣಗೊಂಟಿಗುರುಳುವ ಮಹದುಲ್ಕೆಯಂತೆ ಲಂಕೆಗಾಶಂಕೆಯೊದವಿತಂತೆ. ಮೈನಾಕನನ್ನು ಕೆಳೆವಾತಿನಿಂದ ಮನ್ನಿಸಿ, ಸುರಸೆಯ ಶಾಪವನ್ನು ನೀಗಿ, ಮುಂದೆ ಕಡಲ ಕಾವಲುಗಾತಿ, ಕಾಮರೂಪಿಣಿ, ಛಾಯಾಗ್ರಾಹಿ ಸಿಂಹಿಕೆದನುಜೆಯನ್ನವನು ಎದುರಿಸುತ್ತಾನೆ. ಅವರಿಬ್ಬರಿಗೂ ಭಯಂಕರ ಶಕ್ತಿಸ್ಪರ್ಧೆ ನಡೆಯುತ್ತದೆ. ಕೊನೆಗವನು ಅಣುರೂಪಿನಿಂದ ಅಸುರಿಯ ಗರ್ಭವನ್ನು ಪ್ರವೇಶಿಸಿ ಬೆಳೆಬೆಳೆದು, ಅವಳ ಕರುಳು ಸೀಳಿ, ಕೊಂದು, ಹೋಳುಮಾಡಿ, ಬಿರುಗಾಳಿಯಂತೆ ಮುನ್ನುಗ್ಗುತ್ತಾನೆ. ಗಗನವಾಣಿಯ ಎಚ್ಚರಿಕೆಯನ್ನನುಲಕ್ಷಿಸಿ ಇಂದ್ರಜಿತುವೊಡ್ಡಿದ್ದ ಪದ್ಮಲಂಕೆಯ ಹೆಸರ ಛದ್ಮನೆಯ ಸದ್ಮದಿಂದ ಪಾರಾಗಿ, ಮುಂದೆ ಹರಿಯುವಲ್ಲಿ ಕನಕಲಂಕೆ ಅವನ ಕಣ್ಣಿಗೆ ಬೀಳುತ್ತದೆ.

‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದ ‘ಸಾಗರೋಲ್ಲಂಘನಂ’ ಭಾಗದ ಹಾಗೂ ‘ಸಮುದ್ರಲಂಘನದ ವಸ್ತುವಿನ ಹೊರಮೆಯ್ಯಲ್ಲಿ ಹೋಲಿಕೆಯಿದ್ದರೂ, ಅವೆರಡೂ ಪ್ರತ್ಯೇಕ, ಸ್ವತಂತ್ರವೆಂಬ ಭಾವನೆಗೆಡೆಗೊಡುವಷ್ಟರ ಮಟ್ಟಿನ ಕ್ರಾಂತಿಕಾರಕ ಮಾರ್ಪಾಡುಗಳು ಮೊದಲನೆಯದರ ಒಳಮೆಯ್ಯಲ್ಲಿ ಗೋಚರಿಸುತ್ತವೆಂಬುದು ಸಕೃದ್ದೃಷ್ಟಿಗೂ ವೇದ್ಯವಾಗು ತ್ತದೆ. ಸಮುದ್ರಲಂಘನದಲ್ಲಿ ಅಂಗದನಂತರ ಮಾತಾಡುವವನು ಜಾಂಬವ ಗಜ ಗವಯಾದಿ ವೀರರಲ್ಲ. ಅವನ ಹಿಂದೆಯೇ ಹನುಮಂತ ಕಪಿವೀರರ ಕಜ್ಜವನ್ನು ಕುರಿತು ತನ್ನ ಅಭಿಪ್ರಾಯ ತಿಳಿಸುತ್ತಾನೆ. ಇಲ್ಲಿ ಕೆಲವು ಘಟನೆಗಳ ಸ್ವರೂಪದಲ್ಲಿ ಮಾತ್ರವಲ್ಲ, ಆನುಪೂರ್ವಿಯಲ್ಲಿಯೂ ವ್ಯತ್ಯಾಸಗಳಿವೆಯೆಂಬುದಕ್ಕೆ ಸಂಪಾತಿಯ ಪ್ರಸಂಗ ಸಾಕ್ಷಿಯಾಗಿದೆ. ಅಲ್ಲಿಯ ಸಂಪಾತಿ ನಿಶಾಕರಮುನಿಯ ಶಾಪದಿಂದ ಸೂರ್ಯಪ್ರಭೆಗೆ ಸಿಕ್ಕಿ ರೆಕ್ಕೆ ಸೀದು ಮಹೇಂದ್ರಾಚಲದ ತುದಿಯಲ್ಲಿ ಬಿದ್ದಿದ್ದರೆ, ಇಲ್ಲಿಯ ಸಂಪಾತಿ ವಿಸ್ತಾರವಾಗಿ ರೆಕ್ಕೆಗಳನ್ನಗಲಿಸಿ. ಹೇರೆದೆಯ ಮುನ್‌ಚಾಚಿ, ರೊಯ್ಯೆಂದು ಸದ್ದುಗೈಯುತ್ತ, ಎಲ್ಲಿಂದಲೋ ಬಂದು ಗಗನದಿಂದಿಳಿಯು ತ್ತಾನೆ. ಪೂರ್ವದ ಪರಿಚಿತನೆಂಬಂತೆ ಅಂಗದ ಅವನನ್ನು ‘ಕುಶಲ ವೇನೈ ತಾತ!’ ಎಂದು ಮಾತಾಡಿಸುತ್ತಾನೆ. ಅಷ್ಟೇ ಅಲ್ಲ, ಆರು ಪದ್ಯಗಳಲ್ಲಿ ರಾಮಾಯಣದ ಕತೆಯನ್ನೆಲ್ಲ ಸಂಗ್ರಹಿಸಿ ಹೇಳುತ್ತಾನೆ. ಸಂಪಾತಿ ಲಂಕೆಯ ಕುರುಹು ಹೇಳಿ, ಕಪಿವೀರರಿಂದ ಬೀಳ್ಕೊಂಡು, ಮತ್ತೆ ಆಕಾಶಕ್ಕೆ ಹಾರಿ, ಮರೆಯಾಗುತ್ತಾನೆ. ವಾನರ ಸಂದರ್ಶನದಿಂದ ಶಾಪ ವಿಮುಕ್ತನಾದ ಅಲ್ಲಿಯ ಸಂಪಾತಿ ರಾವಣನ ಸಂಗತಿ ತಿಳಿಸಿ, ಗಗನದಲ್ಲಿ ಅಂತರ್ಧಾನನಾಗುತ್ತಾನೆ.

ಸತ್ವಪರೀಕ್ಷೆಯ ಕಾಲದಲ್ಲಿ ಇಲ್ಲಿ ಮೊದಲು ಮಾತಾಡುವವರು ಗವಯ. ಶರಭ, ಜಾಂಬವ. ಅಲ್ಲಿಯ ಆಂಜನೇಯ ರಾಮಚಂದ್ರನಿಂದಲೆ ನೇರವಾಗಿ ಮುದ್ರೆಯುಂಗುರ ಪಡೆದರೆ, ಇಲ್ಲಿಯ ಆಂಜನೇಯ ಲಂಘನಸನ್ನದ್ಧನಾದ ಸಂದರ್ಭದಲ್ಲಿ ಅಂಗದನಿಂದ ಅದನ್ನು ಪಡೆಯುತ್ತಾನೆ. ಇಲ್ಲಿ ಮೈನಾಕ ಸುರಸೆಯರ ಪ್ರಸ್ತಾಪವಿಲ್ಲ; ಸಿಂಹಿಕೆಯ ವೃತ್ತಾಂತ ಮಾತ್ರವಿದೆ.

ಸಮುದ್ರೋಲ್ಲಂಘನ ಮತ್ತು ಸಾಗರೋಲ್ಲಂಘನಗಳ ರಚನೆಯ ಕಾಲದಲ್ಲಿ ಸುಮಾರು ಹದಿನೈದು ವರ್ಷಗಳ ಅಂತರವಿದೆ. ಅವೆರಡರ ನಡುವೆ ಸ್ಪಷ್ಟವಾಗಿ ಮೈದೋರುವ ಕಲ್ಪನಾ ಪ್ರತಿಭೆ ಹಾಗೂ ಶೈಲಿಯ ಭವ್ಯತೆಗೆ ಈ ಕಾಲದ ಅಂತರ ಕಾರಣವಾಗಿದೆಯಲ್ಲದೆ ಕುವೆಂಪು ಅವರ ಕಾವ್ಯಜೀವನದ ವಿಕಾಸವನ್ನು ಸುಲಭವಾಗಿ ಗುರುತಿಸಬಹುದು. ಕಪಿಸೈನ್ಯ ಮಹೇಂದ್ರಾದ್ರಿಯಲ್ಲಿ ಬೀಡುಬಿಟ್ಟಾಗಿನ ಅವರ ದೈನಂದಿನ ಜೀವನ ವರ್ಣನೆಯನ್ನು ಹೋಲಿಸಿದಾಗ, ಇಲ್ಲಿಯದು ತೀರ ಪೇಲವವಾಗಿ ತೋರುತ್ತದೆ. ಇಲ್ಲಿಯ ವಾನರ ವೀರರು ತಂತಮ್ಮ ಸ್ವಭಾವಕ್ಕೆ ತಕ್ಕಂತೆ ವರ್ತಿಸುವುದನ್ನು ಕಾಣಬಹುದು.

ನೆಗೆನೆಗೆದು ಮುರಿಮುರಿದು ತಂದರು ಕೈಯೊಂದರಲಿ ಹಿಡಿದು ಮೇಲಿಹ
ಹರೆಯನಡಿಯಿಹ ಕೊಂಬಿನಿಂ ನೇತಾಡೆ ಲಾಂಗೂಲ!
ಬಾಲರಾದುಳಿದವರು ಕೆಳಗಿಹ ತಮ್ಮ ಗೆಳೆಯರ ಮೇಲೆ ಚಿಗುರನು
ಕೊಯ್ದೆರಚಿದರು. ಬಾಲ್ಯ ಬಲ್ಲುದೆ ಹಿರಿಯರಳಲುಗಳ?

ಕೆಲವರಂತು ಮರಕೋತಿಯಾಟದಲ್ಲಿ ತಲ್ಲೀನರಾಗುತ್ತಾರೆ. ಆದರೆ ಅಂಗದ ಕರೆದಾಗ ಬೇಟೆಗಾರರ ಶಿಸ್ತಿನಿಂದ ಓಡೋಡಿ ಬಂದು ಅವನ ಸುತ್ತಲೂ ನೆರೆಯುತ್ತಾರೆ. ಅಂಗದ ಸಭೆಯನ್ನುದ್ದೇಶಿಸಿ ಮಾಡಿದ ಎರಡು ಕಡೆಯ ಭಾಷಣಗಳಲ್ಲಿ ಅಜಗಜಾಂತರವಿದ್ದರೂ, ಅಲ್ಲಲ್ಲಿಯ ಪರಿಸರದಲ್ಲಿ ಅಲ್ಲಲ್ಲಿಯದು ಚೆಂದವಾಗಿ ತೋರುತ್ತದೆ. ‘ಲಾಂಛನ ಪ್ಲವಗಪತಾ ಕಾಕೀರ್ತಿ ಪೂರ್ಣಿಮಾ ಚಂದ್ರರಿರ’ ಎಂದು ಅಂಗದ ಅಲ್ಲಿ ಸಂಬೋಧಿಸಿದರೆ, ‘ಶ್ರೀರಾಮ ದೂತರಿರ ರವಿಸುತನಕ್ಕರೆಯ ಬಂಟರಿರ’ ಎಂದು ಇಲ್ಲಿ ಅವರನ್ನು ಹೆಸರಿಸುತ್ತಾನೆ. ಮಿತಭಾಷಿ ಆಂಜನೇಯ ಜಾಂಬವನ ಮಾತಿಗುತ್ತರವಾಗಿ ಎರಡು ಸಾರಿ ಮಾತಾಡುತ್ತಾನಷ್ಟೆ. ಮೊದಲು ಸರದಿಯ ಮಾತು ಅನವಶ್ಯವೆಂದು ತೋರದಿರಲಾರದು. ಆದರೆ ಒಂದು ಮಾತು  ಮಾತ್ರ ನಿಜ; ಹನುಮನ ಭವ್ಯವ್ಯಕ್ತಿತ್ವಕ್ಕೆ ಲೋಪವೊದಗುವ ಸನ್ನಿವೇಶವಾಗಲಿ, ವಾಕ್‌ಸರಣಿಯಾಗಲಿ ಎಲ್ಲಿಯೂ ನುಸುಳಿದಂತಿಲ್ಲ. ಇಲ್ಲಿ ಸಮುದ್ರೋಲ್ಲಂಘನಕ್ಕೆ ಉದ್ಯುಕ್ತನಾಗುವಂತೆ ಗವಯನನ್ನು ಪ್ರಚೋದಿಸುವವನು ವಾಲಿಸುತ. ಅಲ್ಲಿ ವಾಲಿಸುತ ಯಾರನ್ನೂ ಹೆಸರಿಸುವು ದಿಲ್ಲ. ಇಲ್ಲಿ ಅಂಗದ ಗವಯನನ್ನು ಪ್ರೇರಿಸಿದ್ದು ಸರಿಯಲ್ಲವೆನಿಸುತ್ತದೆ. ಗವಯ ಭರ್ತಾರನ ಆಜ್ಞೆಯನ್ನು ನಡಸಲು ಸಿದ್ಧನಾಗಿದ್ದಾನೆ. ಆದರೆ ಮತಿವಂತರಾದವರು ತಮ್ಮಳತೆಯನ್ನು ಮೀರಿರುವ ಸಾಹಸ ಕುಜ್ಜಗಿಸಿ, ಕೈಕೊಂಡು, ಕೆಡಿಸಿದರು ರಾಜಕಾರಿಯವ’ ಎಂದು ಗವಯ ಯುಕ್ತಿವಾದವನ್ನೊಡ್ಡುತ್ತಾನೆ. ಯುವರಾಜ ಯುದ್ಧಕ್ಕೆ ಮೊದಲಾಗಬಾರದೆಂದು ಜಾಂಬವ ವಾದಿಸಿದಾಗ ಅಂಗದ ಕೊಡುವ ಉತ್ತರ ಎರಡು ಕಡೆಯೂ ಒಂದೆಯಾಗಿದೆ:

ಸೈನಿಕರ ಮನ್ನಣೆಯ ಪಡೆಯುವ ದಳಪತಿಯೆ ಕಟ್ಟಾಳುತನವನು
ಮೆರೆವುದುಚಿತವು! ಸುಖದೊಳಗ್ರತೆ ವಹಿಸುವಾತನಿಗೆ
ಸಾಹಸದೊಳಗ್ರತೆಯ ವಹಿಪುದು ಭೂಷಣವು; ನೀತಿಯಿದು ಧೀರರಿ
ಗೆ………………………………………….
– ಸಮುದ್ರಲಂಘನ

ಸುಖದೊಳಾರಗ್ರಭಾಜನನವನೆ
ಕಷ್ಟದೊಳಗಗ್ರಭಾಜನನಕ್ಕುಮದೆ ನಿರತೆ ದಲ್
ಬೀರಕ್ಕೆ ಗೌರವದೊಳಗ್ರಗಣ್ಯಗೆ ಪಾಳಿಯಯ್
ಸಾಹಸದೊಳಗ್ರೇಸರತೆ………………….
– ಶ್ರೀರಾದ

ಮುಂದೆ ಆಂಜನೇಯನನ್ನು ಕುರಿತ ಜಾಂಬವನ ಪ್ರಶಂಸೆಯ ಮಾತುಗಳಲ್ಲಿ ಕಾಣುವ ಪ್ರತಿಭಾಜ್ಯೋತಿ, ಅನುಭವ ಪರಿಪಕ್ವತೆ ಹಾಗೂ ಅಧ್ಯಾತ್ಮಸಿದ್ದಿ ಸಮುದ್ರಲಂಘನದಲ್ಲಿ ದೊರೆಯುವುದಿಲ್ಲ. ಅಲ್ಲಿಯ ಶಬಲ ಸಿಂಹಿಕಾ ಪ್ರಸಂಗವೂ ಇಲ್ಲಿ ಮಂದಪ್ರಭೆಯಿಂದ ಕೂಡಿದೆಯೆಂದೇ ಹೇಳಬಹುದು. ಆದರೂ ಈ ಖಂಡ ಕಾವ್ಯ ತನ್ನಷ್ಟಕ್ಕೆ ತಾನೆ ಉತ್ತಮ ಕೃತಿಯೆಂದು ನಿಸ್ಸಂಶಯವಾಗಿ ನುಡಿಯ ಬಹುದಾಗಿದೆ.

ಶ್ರೀರಾಮಾಯಣದರ್ಶನದ ಸಂಪಾತಿಪ್ರಕರಣ ಮೂಲ ರಾಮಾಯಣದ ಅದೇ ಪ್ರಕರಣವನ್ನು ಹೋಲುತ್ತದೆ. ಆದರೆ ಅಂಗದ ರಾಮಾಯಣದ ಹಿಂದಿನ ಘಟನೆಗಳನ್ನು ಸಂಗ್ರಹಿಸಿ ಸಂಪಾತಿಗೆ ತಿಳಿಸುವ ಸಂದರ್ಭ ಮೂಲದಲ್ಲಿದ್ದು, ಎರಡು ಕಡೆಯೂ ಬರುತ್ತದೆ. ಕಪಿವೀರರು ಸಂಪಾತಿಯ ಇಷ್ಟದ ಮೇರೆಗೆ ಅವನನ್ನು ಸಮುದ್ರದ ತೀರಪ್ರದೇಶಕ್ಕೆ ಕೊಂಡೊಯ್ಯುವ ಸಂಗತಿ ಕುವೆಂಪು ಅವರ ಎರಡು ಕೃತಿಗಳಲ್ಲಿಯೂ ಕಾಣೆಯಾಗಿದೆ. ಅದು ಪ್ರಕೃತ ಸಂದರ್ಭದಲ್ಲಿ ಅನಾವಶ್ಯಕವೂ ಅಹುದು. ಲಂಘನ ಸಾಮರ್ಥ್ಯವನ್ನು ವಿವರಿಸುವಲ್ಲಿ ಶರಭ ದ್ವಿವಿದ, ಸುಷೇಣರೂ ಮೂಲರಾಮಾಯಣದಲ್ಲಿ ಇತರರೊಡನೆ ದನಿಗೂಡಿಸುತ್ತಾರೆ. ಭರ್ತಾರ ರಕ್ಷಣೀಯ, ಅವನು ಯುದ್ಧಕ್ಕೆ ಹೋಗಲಾಗದು ಎಂಬ ಜಾಂಬವನ ಮಾತಿಗೆ ಅಂಗದ ನೀಡುವ ಪೂರ್ವಲಿಖಿತ ಪ್ರತ್ಯುತ್ತರ ಮೂಲದಲ್ಲಿಲ್ಲ. ಜಾಂಬವೋಕ್ತ ಹನುಮಂತನ ಪೂರ್ವಕಥೆ ಕುವೆಂಪು ಅವರ ಎರಡು ಕೃತಿಗಳಲ್ಲಿಯೂ ಇಲ್ಲ. ಪ್ರಾಯಶಃ ಅದು ಮೂಲ ದಲ್ಲಿಯೂ ಪ್ರಕ್ಷಿಪ್ತವಾಗಿರಬಹುದು. ಸಾಗರೋಲ್ಲಂಘನಕ್ಕೆ ಸಿದ್ಧನಾದ ಆಂಜನೇಯನ ಆತ್ಮಪ್ರತ್ಯಯದ ಗಂಭೀರ ವಾಣಿಯ ತೇಜಸ್ಸಿನಲ್ಲಿ, ಲಂಘನದ ಸಾಹಸ ಕ್ರಿಯೆಯಲ್ಲಿ ಮೂಲಕ್ಕೂ ಶ್ರೀರಾಮಾಯಣ ದರ್ಶನಕ್ಕೂ ಅಗಾಧ ಅಂತರವಿದೆ. ಮೂಲದ ಪ್ರಕಾರ ಶ್ರೀರಾಮ ಆಂಜನೇಯನಿಗೆ ಮುದ್ರೆಯುಂಗುರ ಒಪ್ಪಿಸುತ್ತಾನೆಯೇ ಹೊರತು ಅಂಗದನಲ್ಲ. ಮೂಲದಲ್ಲಿ ಬರುವ ಸಮುದ್ರರಾಜ ಮೈನಾಕರ ಸಂಭಾಷಣೆ ಈ ಎರಡು ಕೃತಿಗಳಲ್ಲಿಯೂ ಇಲ್ಲವಾಗಿರುವುದೇ ಸರಿಯೆಂದು ತೋರುತ್ತದೆ. ಅಲ್ಲಿ ಸುರಸಾ ಪ್ರಕರಣ ವಿಸ್ತಾರವಾಗಿದೆ. ಸಮುದ್ರಲಂಘನ ಪ್ರಕರಣ ಮೂಲದಲ್ಲಿಯೂ ರಮ್ಯಾದ್ಭುತವಾಗಿದೆಯೆಂದೂ, ಶ್ರೀರಾಮಾಯಣದರ್ಶನಂ ಅದನ್ನು ಸಮಸ್ಪರ್ಧಿಯಾಗಿ ಭವ್ಯೀಕರಿಸಿದೆಯೆಂದೂ ತಿಳಿಯಬಹುದಾಗಿದೆ.

ಈ ಮೂರು ಕೃತಿಗಳ ಸದೃಶಪ್ರಕರಣಗಳಲ್ಲಿ ಕಾಣುವ ಸಾಮ್ಯವೈಷಮ್ಯಗಳಿಂದ ಕುವೆಂಪು ಅವರ ಕೃತಿಗಳು ಮೂಲದಿಂದ ತೀರ ಭಿನ್ನವಾಗಿವೆಯೆಂದೇ ಹೇಳಬಹುದು. ಸಮುದ್ರ ಲಂಘನದ ವೈಶಿಷ್ಟ್ಯವಿರುವುದು ಅಲ್ಲಿ ಬರುವ ವರ್ಣನೆಗಳಲ್ಲಿ ಉಪಮೆಗಳಲ್ಲಿ ಮತ್ತು ಸುಭಾಷಿತಗಳಲ್ಲಿ ಮುಗಿಲ ಮುಟ್ಟಿದ ಬೆಟ್ಟದುದಿಯೇ ಈ ಕಥೆಗೆ ವೇದಿಕೆಯಾಗುತ್ತದೆ. ಕಪಿಸೈನ್ಯದಲ್ಲಿ ವಿವಿಧ ವಯಸ್ಸಿನ, ನಾನಾ ಅಭಿರುಚಿಗಳ, ಬಹುಸ್ವಭಾವಗಳ ವೀರರಿದ್ದರಷ್ಟೆ. ಅಂಗದನಂಥ ರಾಜಕುಮಾರರು, ಜಾಂಬವನಂಥ ಮುದಿಯರು ಗಂಭೀರವಾಗಿ ಆಲೋಚನಾ ಮಗ್ನರಾಗಿ ಕುಳಿತಿದ್ದರೆ, ಯುವಕರು ಕುಣಿದು ಕುಪ್ಪಳಿಸುತ್ತಾರೆ. ಅವರು ಕೊಂಬೆಗಳಡರಿ, ಕಳಿತ ಹಣ್ಣುಗಳನ್ನು

ನೆಗೆ ನೆಗೆದು ಮುರಿ ಮುರಿದು ತಿಂದರು ಕೈಯೊಂದರಲಿ ಹಿಡಿದು ಮೇಲಿಹ
ಹರೆಯ ನಡಿಯಿಹ ಕೊಂಬಿನಿಂ ನೇತಾಡೆ ಲಾಂಗೂಲ!
ಬಾಲರಾದುಳಿದವರು ಕೆಳಗಿಹ ತಮ್ಮ ಗೆಳೆಯರ ಮೆಲೆ ಚಿಗುರನು
ಕೊಯ್ದೆರಚಿದರು ಬಾಲ್ಯ ಬಲ್ಲುದೆ ಹಿರಿಯರಳಲುಗಳ?
ಮತ್ತೆ ಕೆಲವರು ಹಾರಿ ತರುವಿಂತರುವಿಗಟ್ಟುತಲೊಬ್ಬರೊಬ್ಬರ
ನುಸುಳಿ ಲತೆಗಳಲೋಡಿದರು, ಮರಕೋತಿಯಾಡಿದರು

ಗಂಭೀರ ಸಂದರ್ಭದಲ್ಲಿ ಲಘುಪರಿಹಾಸ್ಯಕ್ಕೆಡೆಕೊಡುವ ಚೇಷ್ಟೆ ಚರ್ಯೆಗಳು ಸರಿಯೆ ಎಂಬ ಮಾನಸಿಕ ಸಂಘರ್ಷಕ್ಕೆ ಇಲ್ಲಿ ಅವಕಾಶವುಂಟು. ಜೀವನದಲ್ಲಿ ಸುಖದುಃಖಗಳು ಜತೆ ಜತೆಯಾಗಿರುವಂತೆಯೇ ಲಘುಗಂಭೀರ ಪ್ರಸಂಗಗಳೂ ಒಟ್ಟೊಟ್ಟಿಗಿರುತ್ತವೆಂಬು ದನ್ನು ಮರೆಯಲಾಗದು. ದೊಡ್ಡವರ ಚಿಂತೆ ದೊಡ್ಡವರಿಗೆ, ಸಣ್ಣವರ ರೀತಿ ನೀತಿಗಳು ಸಣ್ಣವರಿಗೆ ಎಂಬ ನಿಜ ಸ್ಥಿತಿಗಳನ್ನರಿತವರಿಗೆ ಈ ಪ್ರಸಂಗ ವಿಚಿತ್ರವಾಗಿ ತೋರದಿರಲಾರದು. ಇದು ಬಾಲಕರ ಸಹಜಸ್ವಭಾವವನ್ನು ಸ್ಪಷ್ಟಪಡಿಸುತ್ತದಲ್ಲದೆ, ಓದುಗರಲ್ಲಿ ಸಮಕಾಲೀನತೆಯ ಸಲುಗೆಯನ್ನು ಮೂಡಿಸುತ್ತದೆ. ಈ ಕತೆ ಸಹ್ಯಾದ್ರಿ ಶಿಖರದಲ್ಲಿ ನಡೆದಂತೆ ವರ್ಣಿತವಾಗಿ ರುವುದರಿಂದ ಕವಿಯ ಅನುಭವ ಸಂದೇಹಾತೀತವಾಗುತ್ತದೆ. ದೂರ ಸನಿಹದಲ್ಲಿದ್ದ ಕಪಿವೀರರು ಅಂಗದನ ಸುತ್ತ ನೆರೆದ ರೀತಿಯೂ ಸ್ವಾರಸ್ಯಪೂರ್ಣವಾಗಿದೆ. ಕೆಲವರು ಅರೆತಿಂದ ಹಣ್ಣನ್ನು ಬಿಸುಟು ಬಂದರೆ, ಮತ್ತೆ ಕೆಲವರು ನಿದ್ದೆಯನೊದ್ದು ಬಂದರಂತೆ.

ಹನುಮಂತನ ಕಡಲ ಜಿಗಿತದ ಕಲ್ಪನೆ ಹಾಗೂ ಅದರ ವರ್ಣನೆಗಳಲ್ಲಿ ನವುರಿದೆ, ಚೆಲುವಿದೆ; ಯೋಗಸಿದ್ದಿಯ ದಿವ್ಯಮಂತ್ರವನ್ನುಚ್ಚರಿಸಿದ ಕೂಡಲೆ ಅವನು ಬೊಮ್ಮನಂತೆ ಬೆಳೆಯುತ್ತಾನೆ, ಹಿಮಗಿರಿಯನ್ನಡರಿರುವ ಹಿಮಗಿರಿಯಂತೆ ರಂಜಿಸುತ್ತಾನೆ. ಮೋಡಗಳು ಕಟಿ ಬಂಧದಂತೆ ಅವನ ಸೊಂಟವನ್ನು ಸುತ್ತಿಕೊಳ್ಳುತ್ತವೆ; ತಾರಕಿತ ಬಾಂದಳ ಅವನ ಮಣಿಮಕುಟದಂತೆ ರಾರಾಜಿಸುತ್ತದೆ. ಹಕ್ಕಿ ಹೆದರುತ್ತವೆ; ಕಡಲು ತುಳುಕುತ್ತದೆ; ಗಾಳಿ ಬಿರುಸಾಗುತ್ತದೆ; ಮೋಡ ಹಿಮ್ಮೆಟ್ಟುತ್ತವೆ ರೂಢಿಯ ಈ ವರ್ಣನೆಯಲ್ಲಿ ಅಂಥ ವಿಶೇಷವೇನಿಲ್ಲ. ಫಿರಂಗಿಯಿಂದ ಸಿಡಿದ ಗುಂಡಿನಂತೆ ಅವನು ಗಗನಕ್ಕೆ ಲಂಘಿಸುತ್ತಾನೆ.

ಕುವೆಂಪು ಅವರ ವರ್ಣನಾಕೌಶಲ ಉಪಮಾರೂಪಕಗಳ ಮೂಲಕ ಕಣ್ಣಿಗೆ ಕಟ್ಟುವಂತೆ ನಿರ್ಮಿಸುವ ಚಿತ್ರಗಳಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಕಪಿವೀರರು ‘ಶೌರ್ಯತರುವಿಂಗೊಲಿದ ಸುಗ್ಗಿಯು ಪಡೆದ ಹೂಗಳ’ಂತೆ ಕುಳಿತಿದ್ದರಂತೆ. ಅಂಗದ ಕರೆದ ಕೂಡಲೆ ‘ಮಲೆಯ ನಾಡಿನ ಗಿರಿಯ ಬನದಲಿ ಬೇಟೆಗಾರನ ಕರೆಯನಾಲಿಸೆ ಬಳಿಯ ಹಳ್ಳಿಯ ಬೇಟೆಗಾರರು ನುಗ್ಗಿ ಬರುವಂತೆ’ ಬೆಟ್ಟದಲಿ ಕಡಿದಾದ ಬಂಡೆಯ ಸೆರಗಿನಲಿ ಜೋಲುತಿಹ ಹಲ್ಲೆಗೆ ಕವಿವ ಜೇನ್ನೊಣದಂತೆ’ ವಾನರ ಸೈನ್ಯ ಅವನ ಸುತ್ತ ಕಿಕ್ಕಿರಿದು ನೆರೆಯುತ್ತದೆ. ಈ ಉಪಮೆಗಳಲ್ಲಿ ಅವರ ಶಿಸ್ತು, ಭರ್ತೃಪ್ರೇಮ, ಸಹಕಾರ ಮನೋಧರ್ಮಗಳು ಹೊರಹೊಮ್ಮುತ್ತವಲ್ಲದೆ, ಅವರು ಬಂದು ನಿರಿಗೆಗೊಂಡ ರೀತಿ ಕಣ್ಣಿಗೆ ಕಟ್ಟುವಂತಿದೆ. ‘ದಟ್ಟಡವಿಯಲಿ ತರಗೆಲೆ ನೆಲಕುದುರಿ ದಟ್ಟೈಸುವಂತೆ’ ಕಿಕ್ಕಿರಿದರೆನ್ನುವಾಗ ಸೈನ್ಯದ ಅಗಾಧತೆ ಮನಕ್ಕೆ ತಟ್ಟುತ್ತದೆ. ಸೀತೆಯನ್ನು ಮೋಹಿಸಿದ ಮಾಯಾ ಜಿಂಕೆ ‘ಮಳೆಯ ಬಿಲ್ಲಿನ ಮರಿಯೋ?’ ಸುಗ್ಗಿಯ ಹೂವುಗಳ ಬಣ್ಣಗಳ ಮುದ್ದೆಯ ಮುದ್ರಿಸಿದ ಪುತ್ತಳಿಯೊ? ನವನವರತ್ನಗಳನಾಯ್ದು ಕರಗಿಸೆರಕವ ಹೊಯ್ದು ಕಡೆದಿಹ ಮಿಗದ ಮೂರ್ತಿಯೊ?’ ಎಂದು ಸಂದೇಹ ಮೂಡುವಂತೆ ಅವಳ ಕಣ್ಮುಂದೆ ಸುಳಿಯುತ್ತದೆ. ಹನುಮಂತ ಗಿರಿಯ ತುದಿಯಿಂದ ಜಿಗಿಯುವಾಗ ‘ಮಲೆನಾಡ ಬನಗಳಲಿ ಗೋಪರು ಕಳಿತ ಹಣ್ಣುಗಳಿಡಿದ ನೇರಿಲಮರವನೇರಲುಗಿಸಲು ಹಣ್ಣುಗಳುದುರುವಂದದಲಿ’ ವಿಹಂಗಮ ಕುಲ ಚೆದರುತ್ತದೆ. ‘ವಾಹಿನಿಗಳಡವಿಗಳೆಂಬ ನೀಲಿಯಲಿ ಬರೆದ ಬೆಳ್ಳನೆಯುರಗ ರೇಖೆಗಳಂತೆ’ ಆಕಾಶವನ್ನಡರಿದ ಹನುಮನಿಗೆ ಕಾಣಿಸುತ್ತವೆ. ಸಿಂಹಿಕೆಯ ಸೆಳತದಿಂದಾಗಿ ಹನುಮಂತ ‘ಕಡಿದ ದಾರದ ಗಾಳಿಪಟದಂತೆ’ ತಿರ್ರನೆ ತಿರುಗುತ್ತಾನೆ. ಲಂಕೆಯ ಬೈಗುಗಗನದ ಮುಗಿಲೊಡ್ಡು ‘ಕುಂಕುಮದಂಬುನಿಧಿ ಯಲ್ಲಾಳ್ದು ಕೆಂಪಾಗೆಸೆಯುವರಳೆಯನು ಹಿಂಜಿ ಕೆದರಿದ ರಾಶಿಯಂದದಿ, ಹೊನ್ನಿನಂಬುಧಿ ಯಲೆಗಳಂದದಿ’ ರಂಜಿಸುತ್ತದೆ. ದಶಶಿರನ ಅರಮನೆಯ ಹೊಂಗಳಸ ‘ತನಿಗೆಂಡದಲಿ ಕಡೆದ ಗೋಪುರದಂತೆ’ ಹೊಳೆಯುತ್ತದೆ. ‘ಕಡಲೊಳಿಹ ಬಡಬಾಗ್ನಿ ತೈಲವನೆಳಸುವುದೆ ತನ್ನುರಿಯ ಪೋಷಿಸೆ?’ ‘ರವಿಯು ಬೇಡುವನೆ ತನ್ನ ಕಾಂತಿಗೆ ಮಿಣುಕು ಹುಳುಗಳ’ ಎಂಬ ಆಂಜನೇಯನ ಮಾತಿನಿಂದ ವಾನರ ಸೈನ್ಯದ ಬಲ್ಮೆ ಅನನ್ಯವಾದದ್ದು, ಅನ್ಯಸಹಾಯ ನಿರಪೇಕ್ಷಿಯಾದದ್ದು ಎಂಬ ಭಾವನೆ ಸ್ಪಷ್ಟವಾಗಿ ಮೂಡುತ್ತದೆ. ವೀರನಿಗೆ ಸಾಹಸ ಹೊರೆಯಾಗದೆನ್ನುವಾಗ ‘ಹೊರೆಯೆ ಬಣ್ಣವು ಮೆರೆವ ಹೂವಿಗೆ? ಕಂಪು ಮಲಯಜಕೇನು ಭಾರವೆ?’ ಎಂದು ಅಂಗದ ಗವಯನನ್ನು ಪ್ರಶ್ನಿಸುತ್ತಾನೆ. ಈ ಉಪಮಾನಗಳಲ್ಲಿ ಹಲವು ನಿಸರ್ಗಸಂಬಂಧವಾದು ವೆಂಬುದನ್ನು ಮರೆಯುವಂತಿಲ್ಲ. ಈ ಕೃತಿಯ ಶೈಲಿ ಪ್ರಮುಖವಾಗಿ ಸಾಲಂಕಾರಿಕವಾಗಿದೆ; ಉಪಮೆ ಕವಿ ಭಾಷೆಯ ಜೀವಾಳವಾಗಿದೆ.

ಕನ್ನಡದಲ್ಲಿ ಮಹೋಪಮೆಗಳನ್ನು ಮೊತ್ತ ಮೊದಲು ಬಹೂಪಯುಕ್ತವಾಗಿ ಅರ್ಥಗರ್ಭಿತವಾಗಿ ಬಳಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲಬೇಕು. ಆ ಮಹೋಪಮೆಗಳ ಪೂರ್ವಸೂಚನೆಗಳು ಈ ಕಾವ್ಯದಲ್ಲಿಯೇ ಭ್ರೂಣಸ್ಥಿತಿಯಲ್ಲಿ ಗೋಚರಿಸುತ್ತವೆ.

೧.         ಸುತ್ತಲಿಹವಾನರರ ಚಿತ್ತದ ಪರಿಯನರಿಯಲು ಮೊಗದ ಬಗೆಯೊಳು,
ಕಣ್ದಿಟ್ಟಿಯಟ್ಟಿದನು; ಬಾನೊಳು ಬಿಚ್ಚಿ ರೆಂಕೆಗಳ
ಘಿರುತಿರುಗಿ ಮರೆಯಾಗಿ ತೋರುತ ಮೋಡಗಳ ಗುಂಪಿನಲಿ, ತನ್ನಾ
ಹಾರವನು ಹುಡುಕುತ್ತ ಹಾರುವ ವಿಹಗನಂದದಲಿ!

೨.         ಘೋರನಕ್ತಂಚರಿಯ ಕಂಡನು! ಹೊಸನಾಡುಗಳ ಕಂಡು ಹಿಡಿಯಲು
ಚಲದಿಂದ ಸಂಚರಿಸಿ, ಕಾಣದೆ ನೆಲವನಲೆಯುತ್ತ
ನಡುಗಡಲೊಳೀಸಿ ಬಹನೌಕೆಯನಲ್ಲಿ ಬಳಿಯೊಳಿಹ ಸೂಜಿಗಲ್ಲಿನ
ಪೆರ್ಬೆಟ್ಟವೆಳೆವಂದದಲಿ ಸಿಂಹಿಕೆಯು ಮಾರುತಿಯ
ಸೇದಿ ಸೆಳೆದಳು ನೆಳಲನೆಳೆಯುತ ನಭದಿ ಹಾರುವ ಪಟದ ದಾರುವ
ಹಿಡಿದು ಭರದಲಿ ಜಗ್ಗಿ ಸೆಳೆವ ಕಿಶೋರನಂದದಲಿ!

೩.         ಘಿಣರವಿಲ್ಲದಪಾರವಾರಿಧಿಯಲ್ಲಿ ತಿರುತಿರುಗಿಳೆಯ ಕಾಣದೆ
ಹಸಿದು ಕಂಗೆಟ್ಟಸುವಿನಾಸೆಯ ತೊರೆದು ನಾವಿಕನು
ತರುಲತೆಯ ಪೆಂಪಿನಿಂ ದೂರದಲೆದ್ದು ಕಂಗೊಳಿಪದ್ರಿಶೃಂಗವ
ನೊಂದ ಕಂಡೊಡನೆಂತು ಹಿಗ್ಗುವನಂತು ಪವನಜನು.

ಇವುಗಳೆಲ್ಲ ಪ್ರಚ್ಛನ್ನ ಮಹೋಪಮೆಗಳೆನ್ನಲಡ್ಡಿಯಿಲ್ಲ.

ಈ ಕೃತಿಯ ಬಹುಭಾಗದ ಕಥೆ ಸಂಭಾಷಣೆಯ ಮೂಲಕ ಸಾಗುತ್ತದೆ. ಕ್ರಿಯೆ ಮತ್ತು ಘಟನೆಗಳಿಗೂ ಅದೇ ವಾಹಕವಾಗುತ್ತದೆ. ಅನುಭವ ಶ್ರೀಮಂತತೆಯಿಂದಿಡಿದ ಸುಭಾಷಿತಗಳು ಅದರ ಮಹತ್ತಿಗೆ ಕಾರಣವಾಗಿವೆ. ತರುಣ ಕಪಿವೀರರ ಚೇಷ್ಟೆಗಳನ್ನು ವಿವರಿಸುವಾಗ ‘ಬಾಲ್ಯ ಬಲ್ಲುದೆ ಹಿರಿಯರಳಲುಗಳ?’ ಎನ್ನುವ ಮಾತು ಬರುತ್ತದೆ. ಇದು ಸರ್ವರ ಅನುಭವಕ್ಕೆ ಬಂದಿರುವ ಸಂಗತಿ. ‘ವೀರರಿಗೆ ಸಲ್ಲದು ನಿರಾಶೆಯು! ಶೂರರಿಗೆ ತರವಲ್ಲ ಶೋಕವು!’ ‘ಬಿತ್ತುವುದು ನಮ್ಮಲ್ಲಿ; ದೈವದ ಕೈಯಲ್ಲಿ ತುದಿಯ ಬೆಳೆ’ ಇವು ಕಪಿವೀರರನ್ನು ಕುರಿತು ಅಂಗದ ಹೇಳುವ ಮಾತು. ಸಮುದ್ರಲಂಘನಕ್ಕಾಗಿ ತನ್ನವರನ್ನು ಸಿದ್ಧಗೊಳಿಸುವ ಸಲುವಾಗಿ ಜಾಂಬವ ಉದ್ಗರಿಸಿದ ನುಡಿಗಳಿವು! ‘ವೀರರಿಗೆ, ಸಾಹಸದ ಭಟರಿಗೆ, ಸೋಲಿಗಿಂತಲು ಲೇಸು ಸಾವು’ ‘ಸತ್ಕಾರ್ಯದಲಿ ತೊಡಗಿದವರಿಗೆ ಸಹಜವೆಡರುಗಳಡರುವುದು’; ‘ವೀರಾತ್ಮರಾದವರಿಗೆ ಕೈಗೂಡದಿಹ ಕಜ್ಜಗಳಿಲ್ಲವದು ದಿಟ’; ‘ತನಗೆ ತಾನೆರವಾದ ನರನಿಗೆ ದೈವ ನೆರವಾಗುವುದು; ಕೆಮ್ಮನೆ ಕುಳಿತವಗೆ ಬಿದಿಯಡ್ಡ ಬರುವುದು’. ‘ಚಿಂತೆಯೆಂಬುದು ಸಾಹಸಿಗೆ ತರವಲ್ಲ’ ವೆಂಬುದೂ ಅವನ ಮಾತೆ.

ಛಂದಸ್ಸಿನ ಬಗ್ಗೆ ಕೆಲವು ಮಾತು ಹೇಳದಿದ್ದರೆ ಈ ಕೃತಿಯ ಅವಲೋಕನ ಪೂರ್ಣ ವಾಗದು. ಇದು ಪೂರ್ಣವಾಗಿ ಭಾಮಿನಿ ಷಟ್ಪದಿಯ ಕಾವ್ಯ

[1] ದ್ವಿತೀಯ ಪ್ರಾಸವನ್ನು ಕೈಬಿಟ್ಟಿರುವುದು ಕವಿ ಮಾಡಿಕೊಂಡಿರುವ ಮಹತ್ತರ ಬದಲಾವಣೆ, ಸಾಮಾನ್ಯವಾಗಿ ಷಟ್ಪದಿಯ ನಿಯಮಗಳನ್ನನುಸರಿಸುವುದುಂಟಾದರೂ, ಕೆಲವು ಕಡೆ ಕವಿ ಸ್ವಾತಂತ್ರ್ಯವಹಿಸಿ, ಗಣ ರಚನೆಯನ್ನು ವ್ಯತ್ಯಾಸ ಮಾಡಿಕೊಳ್ಳುತ್ತಾರೆ.

ತರುವಾಯ ಮೇ/ಲೆದ್ದು. ನಿಂತನು. ಕಪಿಗ.ಳಾಗ್ರಣಿ.ಯಾತ.ನಾನನ
ದಲ್ಲಿ.ತನಿವೀ.ರರಸ.ವುಕ್ಕಿತು.ಮಿಂಚು.ವಕ್ಷಿಗ.ಳು
ಹೃದಯಾಂತರಾ/ಳದ.ಲ್ಲಡಗಿಹ. ಬಾಳ. ಜೋತಿಯ.ಸೂಚಿ.ಪಂದದಿ
ಮಿಣುಕು.ತಿಹತಾ,ರೆಗಳ.ತೆರದಲಿ.ಬೆಳಕ.ಬೀರಿದುವು.

ಇಲ್ಲಿ ೧ ಮತ್ತು ೪ನೆಯ ಪಾದಗಳ ಪ್ರಾರಂಭದ ಎರಡು ಗಣಗಳನ್ನು ೫+೨ ಆಗಿಯೋ, ೪+೩ ಆಗಿಯೋ ಒಡೆಯಬೇಕಾಗತ್ತದೆ, ೨+೫ರ ಗಣ ವಿಭಾಗವೂ ಸಾಧ್ಯ. ಕೊನೆಯದೇ ಹೆಚ್ಚು ಸೂಕ್ತವೆಂದು ತೋರುತ್ತದೆ. ಏಕ ತಾನತೆಯನ್ನು ಮುರಿದು, ವೈವಿಧ್ಯವನ್ನು ಸಾಧಿಸುವ ಸಲುವಾಗಿ ಈ ವಿನೂತನರಚನೆಗೆ ಲಕ್ಷ್ಯವಿತ್ತಂತಿದೆ. ಜತೆಗೆ ಕತೆಯ ತಿರುವನ್ನೋ ಹೊಸ ಘಟ್ಟದ ಪ್ರಾರಂಭವನ್ನೋ ಸೂಚಿಸಲು ಈ ಉಪಾಯ ಯುಕ್ತವೆನಿಸುತ್ತದೆ.

ಇಂಥ ಗಣವೈವಿಧ್ಯ ಪದ್ಯದ ಮೊದಲನೆಯ ಪಾದದಲ್ಲಿ ಸಾಮಾನ್ಯವಾಗಿ ಮೊಗದೋರು ತ್ತದೆ. ಕ್ವಚಿತ್ತಾಗಿ ನಾಲ್ಕನೆಯ ಪಾದದಲ್ಲಿಯೂ ಕಾಣಿಸಿಕೊಳ್ಳುವುದುಂಟು

ಶ್ರೀರಾಮದೂತರಿರ, ರವಿಸುತನಕ್ಕರೆಯ ಬಂಟರಿರ, ನೆಚ್ಚಿನ
ರಘುರಾಮ ಚಂದಿರನು ಭುವನಗಳಂತರಾತ್ಮನು, ಪರಮ ಪುರುಷನು
ಮುಂದೇನನೆಸಗುವುದು? ತೋರುವ ದಾರಿಯಾವುದು? ಜನಕಜಾತೆಯ
ಸತ್ಕಾರ್ಯದಲಿ ತೊಡಗಿದವರಿಗೆ ಸಹಜವೆಡರುಗಳಡರುವುದು; ತಿಳಿ
ವೇದಾಂತ ಕೇಸರಿಯು, ಸತ್ಯದ ನೆಲೆಯನರಿತಿಹಯೋಗಿ ಸಿದ್ಧನು
ನಗೆದಿಂಗಳಾಡುತಿಹ ಮೊಗದಲಿ, ಮಿಂಚುತಿರೆ ನಯನಗಳ ಕಾಂತಿಯು
ಇಂತೆಂದು ವಾಯುಜನು ಸಾರಿದನು ತನ್ನ ಪೀಠಕೆ; ಸಂತಸದ ಕೋ
ಶ್ರೀರಾಮನನುಕರಿಸಿ ಕೂಗಲು ಕವಡು ಮಿಗ, ಮರುಳಾಗಿ ಜನಕಜೆ.
ನಾನಾ ವಿಚಿತ್ರಗಳ ಕಂಡೆವು, ದೇವಿ ಸೀತೆಯ ಸುಳಿವ ಕಾಣೆವು.
ಮಲೆನಾಡ ಬನಗಳಲಿ ಗೋವರು ಕಳಿತ ಹಣ್ಣುಗಳಿಡಿದ ನೇರಿಲ

ಈ ಕೃತಿಯ ೧೨೮ ಪದ್ಯಗಳ ಪೈಕಿ, ಮೇಲಣವು ಸೇರಿ ೨೭ ಪಾದಗಳಲ್ಲಿ ಮಾತ್ರ ಸಂಪ್ರದಾಯಾತಿಕ್ರಮಣ ಕಂಡುಬರುತ್ತದೆ. ಗಣರಚನೆಯ ಕಡೆಗೆ ಗಮನ ಕೊಡದೆ ಭಾವಾರ್ಥಗಳಿನುಗುಣವಾಗಿ ವಾಚಿಸಿದ್ದಾದರೆ ಲಯ ಭಂಗವಾದಂತೆ ತೋರುವುದಿಲ್ಲ. ಕೆಲವು ಕಡೆ ಲಯಭಂಗವೇ ಸ್ವಾರಸ್ಯವಾಗಿರುವಂತೆ ತೋರದಿರದು.

ಒಂದೆರಡು ಕಡೆ ಮೊದಲ ಪಾದದ ಪ್ರಥಮಾರ್ಧದ ಗಣಗಳು ೨+೫ ಆಗಿ ಒಡೆದರೂ, ವಸ್ತುತಃ ಐದು ಮಾತ್ರೆಯ ಎರಡು ಗಣಗಳು ಅನೈಚ್ಛಿಕವಾಗಿ ಸಂಘಟಿಸಿದಂತೆ ಭಾಸವಾಗುತ್ತದೆ:

ಕೆಳಗೆತ್ತ? ಮೇಲೆತ್ತ? ಭೂಮಿಯದೆತ್ತ? ದಿಕ್ಕುಗಳೆತ್ತ? ತೋರದೆ
ನುಗ್ಗುತಿರಲಾ ಬ್ರಹ್ಮಚಾರಿಯು ದೇಶ ಬ್ರಹ್ಮದಲಿ

ಇಲ್ಲಿಯ ಗಣರಚನೆಯ ವಿಲಾಸವಂತು ಚೇತೋಹಾರಿಯಾಗಿದೆ. ೫+೫/೪+೩; ೪+೩/೪ರ ಈ ರಚನೆಯಲ್ಲಿ ಲಯವೈವಿಧ್ಯವಿದೆ. ಈ ಲಯ ಭಾವಾರ್ಥಾನುಸಾರಿಯಾಗಿಯೂ, ತಾಳ ಬದ್ಧವಾಗಿದೆ. ೩+೪ ಗಣಗಳು ನಿಯತವಾಗಿ ಮೈದೋರುವಲ್ಲಿಯೂ ಮೇಲಣ ಲಯ ಬದ್ಧತೆಯನ್ನು ಗಮನಿಸಬಹುದು.

ತೋರಿದನು. ಬರಬರುತ. ಚುಕ್ಕಿಯ. ತೆರದಿ. ತುದಿಯಲಿ. ಮುಗಿಲ. ತೆರೆಯಲಿ.
ದೈನ್ಯತೆಯು. ಸಾಕು ಬಿಡು. ಬಲ್ಲೆನು. ವೀರ. ಮಾರುತಿ. ನಿನ್ನ. ಪುಣ್ಯದ

ಮೂರು ನಾಲ್ಕು ಮಾತ್ರೆಗಳ ಬೇಸರವನ್ನು ಹೋಗಲಾಡಿಸುವುದಕ್ಕಾಗಿ ಅಲ್ಲಲ್ಲಿ ಐದು ಮತ್ತು ನಾಲ್ಕು ಮಾತ್ರೆಗಳ ಲಯವನ್ನು ತರುವುದುಂಟು. ಎಲ್ಲೆಂದರಲ್ಲಿ ಇಂಥ ರಚನೆಗೆ ಉದಾಹರಣೆಗಳು ದೊರೆಯುತ್ತವೆ;

ಹೆಂಬೇಡಿ. ಯಾದೊಡೆಯು. ಹೊರಡನೆ. ಸಾಹಸವ. ಸಾಧಿಸಲು ನಮ್ಮೀ
ಲಂಘಸುವೆ. ನಂಬುಧಿಯ. ದೇವಿಯರಿ.ರವನರಿ. ವೆನು ದಿವ್ಯ.ನಾಮದ.

ಮೇಲಣ ಪಂಕ್ತಿಗಳಲ್ಲಿ (ಅಂದರೆ ಒಂದೊಂದು ಪಂಕ್ತಿಯಲ್ಲಿಯೂ ಎರಡೆರಡು ಪಾದಗಳಿವೆ.) ೫.೫.೪/೫.೫.೪ರ ರಚನೆ ಕಾಣುತ್ತದೆ. ಕಣ್ಣಾಡಿಸಿದೆಡೆ ಉದ್ದಕ್ಕೂ ಇಂಥ ರಚನೆ ಲಯ ವೈವಿಧ್ಯಗಳು ವ್ಯಕ್ತವಾಗುವುದನ್ನು ಗಮನಿಸಿದಾಗ ಇದೇ ಕನ್ನಡದ ಜಾಯಮಾನವೆಂಬಂತೆ ತೋರದಿರದು. ಕುಮಾರವ್ಯಾಸನ ಭಾಮಿನಿ ಲಯದ ರಹಸ್ಯವೂ ಇದೆಯೇ. ಇಂಥ ರಚನೆಯ ಸಾಧ್ಯತೆಯಿರುವುದರಿಂದಲೇ ಭಾಮಿನಿ ಎಲ್ಲ ರೀತಿಯ ಭಾವ ರಸಗಳ ಅಭಿವ್ಯಕ್ತಿಗೆ ಸುಂದರ ಸಮರ್ಥ ಮಾಧ್ಯಮವೆಂದೂ, ಭಾಷೆಯ ಎಲ್ಲ ಸಾಧ್ಯತೆಗಳನ್ನು ಆ ಮೂಲಕ ಸೂರೆಗೊಳ್ಳಬಹುದಾದ್ದರಿಂದ ಕನ್ನಡಕ್ಕೆ ಅದೊಂದು ವರವಾಗಿ ಪರಿಣಮಿಸಿದೆ ಯೆಂದೂ ತಿಳಿಯಬಹುದಾಗಿದೆ. ಸಮುದ್ರಲಂಘನದ ಛಂದಸ್ಸನ್ನು ಕೂಲಂಕಷವಾಗಿ ಅಧ್ಯಯನ ಮಾಡಿದಾಗ, ಅದೊಂದು ಪ್ರಯೋಗಾತ್ಮಕವಾದ ಕಾವ್ಯವಾದರೂ, ಛಂದಶ್ಶಾಸ್ತ್ರದ ಅನೇಕ ಸೂತ್ರಗಳು ಅದರ ಗರ್ಭದಲ್ಲಿ ಹುದುಗಿವೆಯೆಂದು ತಿಳಿಯಲವಕಾಶವಿದೆ. ‘ಭಾಮಿನಿ ಷಟ್ಪದಿಯ ಓಟವನ್ನು ಲೀಲಾಜಾಲವಾಗಿ ಸೂರೆಗೊಂಡ ರೀತಿಯಲ್ಲಿ ‘ಓಟ’ವಿದೆ. ಎಂಥ ವರ್ಣನೆಗೂ ಈ ಓಟ ಸಗ್ಗುತ್ತದೆ. ಕುಂಟುವುದಿಲ್ಲ… ಎಲ್ಲಿಯೂ ಭಾಷೆಯ ಕ್ಲಿಷ್ಟತೆಯಾಗಲೀ ‘ಅಪರಿಚಿತತೆ’ಯಾಗಲೀ ಕಂಡುಬರುವುದಿಲ್ಲ. ಹಾಗೆ ಮನಮುಟ್ಟುವ ಶೈಲಿಯಾಗುತ್ತದೆ’ ಎಂಬ ಕ.ವೆಂ. ರಾಜಗೋಪಾಲ್ ಅವರ ಮಾತು[2] ಈ ಸಂದರ್ಭದಲ್ಲಿ ಅಂಗೀಕಾರಯೋಗ್ಯ ವಾಗಿದೆ.

ಮಹಾಕವಿಯಾಗುವವನಿಗೆ ಪ್ರತಿಭೆ ವಿದ್ವತ್ತುಗಳಷ್ಟೆ ಸಾಲುವುದಿಲ್ಲ, ನಿರಂತರ ವ್ಯವಸಾಯವೂ ಅತ್ಯಗತ್ಯವೆಂಬುದಕ್ಕೆ ಕುವೆಂಪು ಸಾಕ್ಷಿಯಾಗಿದ್ದಾರೆ. ಛಂದಸ್ಸಿನ ಕ್ಷೇತ್ರವೊಂದ ರಲ್ಲಿಯೇ ಅವರು ನಡೆಸಿದ ಪ್ರಯೋಗ ಸಂಶೋಧನೆಗಳು ಅಸಂಖ್ಯವೆನ್ನುವ ಸಂಗತಿ ‘ನೆನಪಿನ ದೋಣಿಯಲ್ಲಿ’ ಗ್ರಂಥದಿಂದ ಸ್ಪಷ್ಟವಾಗುತ್ತದೆ. ಛಂದಸ್ಸಿನಲ್ಲಿ ಅವರಷ್ಟು ಪಟ್ಟುವರಿಸೆಗಳನ್ನು ಹಾಕಿ ಕಸರತ್ತು ಮಾಡಿರುವ ಕವಿಗಳು ಕನ್ನಡದಲ್ಲಿ ವಿರಳ. ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಮೂಡಿರುವ ‘ಮಹಾಛಂದಸ್ಸು’ ಹಲವಾರು ವರ್ಷಗಳ ಸಾಧನೆಯ ಫಲವೆಂಬುದಕ್ಕೆ ಅವರ ಸಾನೆಟ್ಟುಗಳು, ಕಥನ ಕವನಗಳು, ಚಿತ್ರಾಂಗದಾಕಾವ್ಯ, ಯಮನ ಸೋಲು, ಬಿರುಗಾಳಿ ಮೊದಲಾದ ನಾಟಕಗಳು, ಸಮುದ್ರಲಂಘನದಂಥ ಖಂಡಕಾವ್ಯಗಳು ನಿದರ್ಶನಗಳಾಗಿವೆ. ಅವರು ಸಾಹಿತ್ಯಕ್ಷೇತ್ರಕ್ಕೆ ಪ್ರವೇಶಿಸಿದ್ದು ಆಂಗ್ಲಭಾಷೆಯ ಮೂಲಕ ವೆನ್ನುವುದು ಸರ್ವವೇದ್ಯ ಸಂಗತಿಯಾಗಿದೆ. ಆ ಭಾಷೆಯಲ್ಲಿ ಕವಿತಾರಚನೆ ಮಾಡುತ್ತಿರು ವಾಗಲೇ ಅವರು ಅನೇಕಾನೇಕ ಪ್ರಯೋಗಗಳನ್ನು ನಡೆಸಿದ್ದುಂಟು. ತಮ್ಮ ಪ್ರತಿಭಾಭಿವ್ಯಕ್ತಿಗೆ ಕನ್ನಡ ಭಾಷೆಯ ಮಾಧ್ಯಮವನ್ನು ಆರಿಸಿಕೊಂಡ ನಂತರ ಮಹಾಕಾವ್ಯ ರಚನೆಗೆ ತೊಡಗುವ ತನಕ ಕನ್ನಡ ಛಂದಸ್ಸಿನ ಸಾಧ್ಯತೆಗಳನ್ನೆಲ್ಲ ಸೂರೆಗೊಂಡಿದ್ದಾರೆನ್ನುವುದಕ್ಕೆ ಸಾಕಷ್ಟು ಆಧಾರಗಳಿವೆ. ೧೦.೭.೧೯೨೪ರಂದು ಕನ್ನಡದಲ್ಲಿ ಅವರ ಮೊದಲ ತೊದಲ ಕವನ ಬೆಳಕು ಕಂಡದ್ದು. ೬.೮.೧೯೨೪ರ ರಾತ್ರಿ ಸಾನೆಟ್ ರಚಿಸುವ ಮನಸ್ಸಾಗುತ್ತದೆ ಅವರಿಗೆ. ‘this sky, this moon, these clouds, these stars etc’ ಎಂದು ಒಡನೆಯ ಹಾಡಿಕೊಳ್ಳುತ್ತಾರೆ. ಮರುಕ್ಷಣದಲ್ಲಿಯೇ ಅನೈಚ್ಛಿಕವಾಗಿ ಎಂಬಂತೆ ‘ಈ ಗಗನವೀ ಚಂದ್ರನೀ ಮುಗಿಲಿನಾನಂದ’ ಎಂಬ ಪಂಕ್ತಿ ಹೊಳೆಯುತ್ತದೆ. ‘ಬಹುಕಾಲದಿಂದ ನಾನು ಹುಡುಕುತ್ತಿದ್ದುದು, ಕನ್ನಡದಲ್ಲಿ ಬ್ಲ್ಯಾಂಕ್‌ವರ್ಸ್‌’ ಬರೆಯುವ ಗುಟ್ಟನ್ನು ಕಂಡುಹಿಡಿದೆ. ನನ್ನ ಈ ಹೊಸ ಸಿದ್ಧಾಂತದಿಂದ ನನಗನ್ನಿಸುತ್ತಿದೆ. ಕನ್ನಡ ಸಾಹಿತ್ಯದಲ್ಲಿಯೆ ಒಂದು “ಹೊಸ ಶಕದ ನವಯುಗ ಪ್ರಾರಂಭ ವಾಗುತ್ತದೆ” ಎಂಬ ಕುವೆಂಪು ಅವರ ಮಾತಿನಿಂದ[3] ಮಹಾಛಂದಸ್ಸಿನ ಕಲ್ಪನೆ ಬಹುಹಿಂದಿನ ದೆಂದು ಸ್ಪಷ್ಟವಾಗುತ್ತದೆ. ‘ಬೆಳದಿಂಗಳ ರಾತ್ರಿ’ ಎಂಬ ಶೀರ್ಷಿಕೆಯ ಆ ಕವನದಲ್ಲಿ ಹದಿನೇಳು ಪಂಕ್ತಿಗಳಿದ್ದು ಆದಿ ಅಂತ್ಯ ಪ್ರಾಸಗಳಿಂದ ಮುಕ್ತವಾಗಿದೆ.

ಮುಂದೆ ಅವರು ಹಲವು ಬಗೆಯ ಕವಿತೆಗಳನ್ನು ರಚಿಸುವಾಗಲೆಲ್ಲ ಮಹಾಛಂದಸ್ಸಿನ ಪ್ರಜ್ಞೆ  ಕ್ರಮೇಣ ವಿಕಾಸಗೊಂಡು. ರೆಕ್ಕೆಗೆದರಿ, ಮಹಾಲಂಘನ ಸಾಹಸಕ್ಕೆ ಸಿದ್ಧವಾಗುವ ಪ್ರಯತ್ನ ನಡೆಯುತ್ತಿತ್ತೆಂಬುದನ್ನು ಅವರ ಅನೇಕ ಕೃತಿಗಳಿಂದ ಗ್ರಹಿಸಬಹುದಾಗಿದೆ. ಮಹಾಛಂದಸ್ಸಿಗೆ ಮೂಲ ಮಾತೃಕೆಯಂತಿರುವ ನಾಟ್ಯಛಂದಸ್ಸು ೧೯೨೯ ಮತ್ತು ೧೯೩೦ರಲ್ಲಿ ಪ್ರಕಟವಾದ ಯಮನಸೋಲು ಮತ್ತು ಬಿರುಗಾಳಿಗಳಲ್ಲಿಯೇ ಅವತರಿಸುತ್ತದೆ. ‘ಕೃತ್ತಿಕೆ’ಯ ಸಾನೆಟ್ಟುಗಳಲ್ಲಿ ಮಹಾಛಂದಸ್ಸಿನ ಲಕ್ಷಣಗಳು ರೂಹಿಕ್ಕಿ, ಆಕಾರ ಪಡೆಯುತ್ತವೆ. ಭಾಮಿನಿಷಟ್ಪದಿಯ ಸಾಧ್ಯತೆಗಳನ್ನೆಲ್ಲ ಪ್ರಾಸಮುಕ್ತಿ ಹಾಗೂ ಗಣವಿನ್ಯಾಸ ವಿಪರ್ಯಯದ ಮೂಲಕ ಪ್ರಯೋಗಾತ್ಮಕವಾಗಿ ಪೂರೈಸಿ ಅದು ಆಧುನಿಕ ಮಹಾಕಾವ್ಯಕ್ಕೆ ವಾಹಕವಾಗುತ್ತದೆಯೆ ಎಂಬುದನ್ನು ಪರೀಕ್ಷಿಸುವ ಸಲುವಾಗಿ ‘ಸಮುದ್ರಲಂಘನ’ವನ್ನು ಕುವೆಂಪು ರಚಿಸಿದಂತೆ ಕಾಣುತ್ತದೆ. ಶ್ರೀ ರಾಮಾಯಣದರ್ಶನಕ್ಕೆ ಅದು ನಾಂದಿಯಂತೆಯೂ ಇದೆ. ಚಿತ್ರಾಂಗದಾ ಕಾವ್ಯದಲ್ಲಿ ಮಹಾಛಂದಸ್ಸಿನ ರಹಸ್ಯದ ಕೀಲಿಕೈಗಳೆಲ್ಲ ಸಂಪೂರ್ಣವಾಗಿ ಅವರಿಗೆ ವಶವಾದದ್ದನ್ನು ಗಮನಿಸಬಹುದು. ಈ ಎಲ್ಲ ದೃಷ್ಟಿಗಳಿಂದ ಕುವೆಂಪು ಸಾಹಿತ್ಯದ ಇತಿಹಾಸದಲ್ಲಿ ‘ಸಮುದ್ರಲಂಘನ’ಕ್ಕೆ ವಿಶೇಷ ಸ್ಥಾನವಿದೆಯೆಂದು ಸ್ಪಷ್ಟಪಡಿಸಬಹುದಾಗಿದೆ.

೧೯೩೦ರ ಹೊತ್ತಿಗೆ ಅಂದರೆ ‘ಸಮುದ್ರಲಂಘನ’ವನ್ನು ಬರೆದು ಮುಗಿಸುವ ವೇಳೆಗೆ ‘ಸರಳರಗಳೆಯ ಶ್ರೀಮಂತ ಶೈಲಿಯ ಧೀರವೈಖರಿ’ ಕುವೆಂಪು ಅವರನ್ನು ಮುಗ್ಧಗೊಳಿಸಿತ್ತು. ‘ಪಾಶ್ಚಾತ್ಯ ರುದ್ರನಾಟಕಗಳ ಬಲವತ್ತಾದ ಭಯಂಕರವಾದ ಶೈಲಿ ನಮ್ಮಲ್ಲಿಗೆ ಬರಬೇಕಾದರೆ ಸರಳರಗಳೆಯೊಂದರಿಂದಲೇ ಸಾಧ್ಯ’ವೆಂಬ ನಿಲುಗಡೆಗೆ ಅವರು ಬಂದಿದ್ದರು. ಕನ್ನಡ ಷಟ್ಪದಿಗಳ ಬೆಡಗು ಬಿನ್ನಾಣಗಳಿಗೂ ಅವರು ಮಾರುಹೋಗಿದ್ದರು. ಸರಳ ರಗಳೆಯಲ್ಲಿ ಈ ಎಲ್ಲ ಛಂದೋಪ್ರಕಾರಗಳ ಲಕ್ಷಣಗಳನ್ನು ಸಮನ್ವಯಿಸುವುದಾದರೆ ಮಹಾಛಂದಸ್ಸಿನ ಉಗಮ ಸಾಧ್ಯವಾಗುತ್ತದೆಂಬ ನಿರ್ಧಾರ ಕೈಗೊಳ್ಳಲು ಅನಂತರ ಅವರಿಗೆ ಬಹುದಿನ ಹಿಡಿಯಲಿಲ್ಲ. ಮಹಾಛಂದಸ್ಸಿನ ಅವತಾರಕ್ಕೆ ಸರಳರಗಳೆ ಆಧಾರವಾದರೂ, ಷಟ್ಪದಿ ಕಂದ ವೃತ್ತಗಳ ಲಯವೈವಿಧ್ಯವೂ ಅದರ ಗರ್ಭದೊಳಗೆ ಹುದುಗಿದೆಯೆಂದೂ, ಸರಳರಗಳೆಯೇ ಮಹಾಛಂದಸ್ಸಲ್ಲವೆಂದೂ ಸಹೃದಯರು ಗ್ರಹಿಸಬೇಕಾಗಿದೆ. ಆದ್ಯಂತ್ಯ ಪ್ರಾಸಗಳನ್ನು ನಿರಾಕರಿಸಿದ್ದರಿಂದ, ನಿಯತ ಪಾದಗಳುಳ್ಳ ಪದ್ಯರಚನೆಯ ಬಂಧನದಿಂದ ಬಿಡುಗಡೆ ಹೊಂದಿದ್ದರಿಂದ, ಪಾದ ಮಾತ್ರವಲ್ಲ. ಪಾದಸಮುದಾಯಗಳೂ ಈ ಛಂದಸ್ಸಿನ ಮೂಲ ಘಟಕಗಳಾಗುವ ಪ್ರಯುಕ್ತ ಕನ್ನಡದ ಪ್ರಾಚೀನಛಂದಸ್ಸುಗಳ ಲಯ ವೈವಿಧ್ಯವನ್ನು ಇದರಲ್ಲಿ ಸಮಾವೇಶಗೊಳಿಸಲು, ಅಂತೆಯೇ ವಚೋವಿಲಾಸವನ್ನು ಮೆರೆಯಲು, ಬೆಡಗು ಬಿನ್ನಾಣ ಲಾವಣ್ಯಗಳನ್ನು ಸಮ್ಮಿಲನಗೊಳಿಸಲು, ಹಲವು ಬಗೆಯ ಗತಿಗಮನಗಳನ್ನು ಪ್ರವೇಶ ಗೊಳಿಸಲು, ಗಹನತೆ ವಿಸ್ತಾರ ಔನ್ನತ್ಯ ಭವ್ಯತೆಗಳನ್ನು ಸಾಧಿಸಲು ಸಾಧ್ಯವಾಯಿತೆಂಬುದನ್ನು ಮನಗಾಣಬೇಕಾಗಿದೆ.

ಶ್ರೀ ಟಿ.ಎಸ್. ವೆಂಕಣ್ಣಯ್ಯನವರು ತಮ್ಮ ಜೀವಿತ ಕಾಲದಲ್ಲಿ ‘ಈಗೇನು ಹೊಸದು ಬರೆದಿದ್ದೀರಿ? ನೀವು ಓದಿದರೆ ಕೇಳುವುದಕ್ಕೆ ಸಿದ್ಧನಾಗಿದ್ದೇನೆ’ ಎಂದು ಆಗಾಗ್ಗೆ ಶ್ರೀ ಕುವೆಂಪು ಅವರನ್ನು ಕೇಳುತ್ತಿದ್ದುದುಂಟು. ಕುವೆಂಪು ಅವರ ರಚನೆಗಳನ್ನೆಲ್ಲ ಅವರು ಹಸ್ತಪ್ರತಿಯಲ್ಲಿ ದ್ದಾಗಲೇ ಓದಿಸಿ ಕೇಳಿ, ಆನಂದಿಸುತ್ತಿದ್ದರು. ಕುವೆಂಪು ಅವರ ಬಳಿ ಯಾವಾಗಲು ಹೊಸ ಸರಕು ಇದ್ದೇ ಇರುತ್ತಿತ್ತು. “ಸಮುದ್ರಲಂಘನ” ಎಂಬ ಲಘುಕಾವ್ಯ ಸಿದ್ಧವಾಗಿದೆ’ ಎಂದು ಉತ್ತರಿಸಿದರು. “ಯಾವಾಗ ಓದುತ್ತೀರಿ?” “ಯಾವಾಗ ಬೇಕಾದರೂ. ಆದರೆ ಅದನ್ನು ಮನೆಯೊಳಗೆ ಗೋಡೆಗಳ ನಡುವೆ ಓದತಕ್ಕದ್ದಲ್ಲ. ‘ಮುಗಿಲ ಮುಟ್ಟಿದ ಬೆಟ್ಟದುದಿಯೊಳು, ಕಿಕ್ಕಿರಿದ ದಟ್ಟಡವಿಯಡಿಯಲಿ’ ಎಂದು ಕತೆ ಪ್ರಾರಂಭವಾಗುವುದರಿಂದ ಚಾಮುಂಡಿ ಬೆಟ್ಟಕ್ಕೆ ಹೋಗುವುದು ಮೇಲು” ಎಂದು ಕುವೆಂಪು ಸೂಚಿಸಿದರು. ಸಾಮಾನ್ಯವಾಗಿ ಕಾವ್ಯವಾಚನ ವೆಂಕಣ್ಣಯ್ಯನವರ ಮನೆಯ ಉಪ್ಪರಿಗೆಯಲ್ಲಿ ಅಥವಾ ‘ಉದಯ ರವಿ’ಯಲ್ಲಿ ನಡೆಯುತ್ತಿತ್ತು. ಕುವೆಂಪು ಅವರ ಸೂಚನೆಗೆ ವೆಂಕಣ್ಣಯ್ಯನವರು ಅಸ್ತು ಎಂದರು.

ಒಂದು ದಿನ ಅಪರಾಹ್ನ ನಾಲ್ಕು ಗಂಟೆಯಹೊತ್ತಿಗೆ ತಿಂಡಿ ಕಟ್ಟಿಸಿಕೊಂಡು ವೆಂಕಣ್ಣಯ್ಯ ನವರ ಸಾಹಿತ್ಯ ಗೋಷ್ಠಿ ಕಾಲುನಡಿಗೆಯಲ್ಲಿ ಬೆಟ್ಟ ಸೇರಿತು. ಡಿ.ಎಲ್. ನರಸಿಂಹಾಚಾರ್, ತೀ.ನಂ. ಶ್ರೀಕಂಠಯ್ಯ ಆ ಗೋಷ್ಠಿಯ ಇತರ ಸದಸ್ಯರು ದೇವಾಲಯದ ಬಳಿಯ ಎತ್ತರದ ಬಂಡೆಯ ಮೇಲೆ ಎಲ್ಲರೂ ಆಸೀನರಾದರು. ಕುವೆಂಪು ವಾಚಿಸುತ್ತಿರುವಾಗ ಮಿತ್ರರು ನಡುನಡುವೆ ವ್ಯಾಖ್ಯಾನ ಮಾಡುತ್ತಿದ್ದರು. ಮೆಚ್ಚುಗೆ ಸೂಚಿಸುತ್ತಿದ್ದರು. ಕಾವ್ಯದಲ್ಲಿ ಬರುವ ಉಪಮೆ ಮಹೋಪಮೆ ವರ್ಣನೆಗಳು ನೂತನವಾದುವೆಂದು ಪ್ರಶಂಸಿಸಿ, ಛಂದೋವೈವಿಧ್ಯ ವನ್ನೂ ಹೊಸ ಪ್ರಯೋಗಗಳನ್ನೂ ಗುರುತಿಸಿ, ಕನ್ನಡ ಛಂದಸ್ಸಿಗೆ ಅದೊಂದು ವಿಶಿಷ್ಟ ಕೊಡುಗೆ ಎಂದು ವ್ಯಾಖ್ಯಾನಿಸುತ್ತಿದ್ದರು. “ರಾಮನಾಮವ ಜಪಿಸುತಿಳಿದನು ಹನುಮ ಲಂಕೆಯ ಬೈಗುಗಪ್ಪಿನ ಕಡಲ ತಡಿಯಲ್ಲಿ!” ಎಂದು ಕುವೆಂಪು ನಿಲ್ಲಿಸುವ ಹೊತ್ತಿಗೆ ಸೂರ್ಯ ದೂರದ ದಿಗಂತದಲ್ಲಿ ಮರೆಯಾಗುತ್ತಿದ್ದನು. ಅದು ಅರ್ಥಸಾಧಕ ಪತ್ರಿಕೆಯಲ್ಲಿ ಅಚ್ಚಾಗುವ ಮುಂಚೆಯೇ ನಾಡಿನ ಘನ ವಿದ್ವಾಂಸರ ವಿಮರ್ಶೆಯ ಮೂಷೆಯಲ್ಲಿ ತೇರ್ಗಡೆಯಾಗಿ ತ್ತೆಂಬುದನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳಬಹುದು.

ಕ.ವೆಂ. ರಾಜಗೋಪಾಲರು ಯಾರಿಗೂ ಬೇಡವಾಗದ, ಮಣ್ಣೊಳಗೆ ಮಣ್ಣಾಗಲಿದ್ದ ಅರ್ಥಸಾಧಕ ಪತ್ರಿಕೆಯ ಸಂಚಿಕೆಗಳನ್ನು ನಿಧಿಗಿಂತ ಮಿಗಿಲಾಗಿ ರಕ್ಷಿಸದಿದ್ದರೆ, ‘ಸಮುದ್ರ ಲಂಘನ’ ಜನಮನಸ್ಸಿನಿಂದ ಮಾತ್ರವಲ್ಲ, ಕವಿಮನಸ್ಸಿನಿಂದಲೂ ಜಗುಳಿಹೋಗಿ, ಅದರ ಪರಿಚಯಲಾಭದಿಂದ ಜಗತ್ತು ವಿವಂಚಿತವಾಗುತ್ತಿತ್ತು. ಅದನ್ನುಳಿಸಿಕೊಟ್ಟ ಕಾರಣಕ್ಕಾಗಿ ಕನ್ನಡಿಗರು ಅವರಿಗೆ ಕೃತಜ್ಞರಾಗಿರಬೇಕಾಗಿದೆ.

 


[1]     ಈ ಮುದ್ರಣದಲ್ಲಿ ಭಾಮಿನಿಷಟ್ಪದಿಯಂತೆ ಸಾಲುಗಳನ್ನು ಮುರಿದು ಅಚ್ಚು ಮಾಡಿಲ್ಲ. ಅಷ್ಟೇ ಅಲ್ಲ, ಆರು ಪಾದಗಳಿಗೊಂದು ಘಟಕವೆಂಬ ನಿಯಮವನ್ನು ಸಹ ಮೀರಲಾಗಿದೆ.

[2]     ಅಂಕಣ. ಸಂಪುಟ ೧, ಸಂಚಿಕೆ ೫, ಪುಟ ೨೭

[3]     ನೆನಪಿನ ದೋಣಿಯಲ್ಲಿ, ಪುಟ ೩೯೧