೯೩೩-೩೪ರ ಸುಮಾರಿನಲ್ಲಿ ಎಡ್ವರ್ಡ್ ಥಾಂಪ್ಸನ್ ಕವಿಯ ‘ದೇವಕೇತು’

[1] ಎಂಬ ಕವನದ ಪ್ರಭಾವದಿಂದ ಪ್ರೇರಿತವಾಗಿ ರಚನೆಗೊಂಡ ಸ್ವತಂತ್ರ ಕವಿತೆ ‘ಮುಕ್ತಿರಾಹು’. ಭಾರತೀಯ ಪೌರಾಣಿಕ ಕಲ್ಪನೆಯ ಪ್ರಕಾರ ರಾಹುಕೇತುಗಳು ಆಸುರೀ ಶಕ್ತಿಗಳು. ಅವು ಗ್ರಹಗಳೂ ಅಹುದು, ಗ್ರಹಣಕಾರಿಗಳೂ ಅಹುದು. ಅವು ಆಗಾಗ್ಗೆ ಚಂದ್ರ ಸೂರ್ಯರನ್ನು ನುಂಗಿ, ಲೋಕದಲ್ಲಿ ತಿಮಿರವನ್ನು ಹರಡುವುದಲ್ಲದೆ, ಜೀವಕೋಟಿಗೆ ಸಂಕಟವನ್ನುಂಟು ಮಾಡುತ್ತವೆ. ಅವು ರಾಕ್ಷಸರ ಹೆಸರುಗಳೂ ಆಗಿವೆ. ‘ರಾಹು’ ಪದಕ್ಕೆ ಬೇರೆ ಅರ್ಥಗಳಿ ದ್ದಂತಿಲ್ಲ. ‘ಕೇತು’ ಪದಕ್ಕಾದರೋ ಹಲವಾರು ಅರ್ಥಛಾಯೆಗಳಿವೆ. ಧ್ವಜ, ಮುಖಂಡ, ಚಿಹ್ನೆ, ಪ್ರಕಾಶ, ಕಿರಣ, ಭೂತಾಕಾರ, ಬುದ್ದಿ, ರೋಗ, ಶತ್ರು ಇವೇ ಮೊದಲಾದ ಅರ್ಥ ಗಳಿರುವುದರಿಂದ, ಪ್ರಕೃತ ಸಂದರ್ಭದಲ್ಲಿ ಅದು ಸಮುಚಿತವಾಗಿ ಹೊಂದಿಕೊಳ್ಳುತ್ತದೆ. ಅದರ ಅರ್ಥವನ್ನು ತುಸು ಹಿಗ್ಗಲಿಸಿ ಕೃಪೆ ಅಥವಾ ಅನುಗ್ರಹ ಎಂದು ಹೇಳಲೂ ಬರುತ್ತದೆ. ‘ರಾಹು’ ಪದ ಇಲ್ಲಿಗೆ ಹೊಂದಿಕೊಳ್ಳಬೇಕಾದರೆ, ಅಟ್ಟಿಸಿಕೊಂಡು ಬಂದು ಹಿಡಿಯುವ ಶಕ್ತಿಯೆಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಇವೆರಡೂ ಪದಗಳೂ ಇಲ್ಲಿ ಅನಿಷ್ಟಾರ್ಥದಿಂದ ಮುಕ್ತಗೊಂಡು, ವಿಶಿಷ್ಟಾರ್ಥದಲ್ಲಿ ಬಳಕೆಗೊಂಡಿವೆ ಎಂದು ತಿಳಿಸಿದಾಗ ಮಾತ್ರ ಅವುಗಳ ಔಚಿತ್ಯ ಮನವರಿಕೆಯಾಗುತ್ತದೆ.

ಪರಬ್ರಹ್ಮ ಅಥವಾ ಶೂನ್ಯದಿಂದ ಜಗತ್ತು ಉದ್ಭವಿಸುತ್ತದೆಂಬ, ಜೀವಸಂತಾನ ನಿರಂತರವಾಗಿ ಸಾಗುತ್ತದೆಂಬ, ಜೀವಕೋಟಿ ಜಡದಿಂದ ಹಿಡಿದು ಮಾನವ ಜನ್ಮದವರೆಗೆ ವಿಕಾಸ ಹೊಂದುತ್ತ, ‘ರೂಪರೂಪಗಳನು ದಾಟಿ’ ಕೊನೆಗೆ ಶೂನ್ಯದಲ್ಲಿಯೇ ಲಯಹೊಂದುತ್ತ ದೆಂಬ ತಾತ್ವಿಕ ವಿಚಾರವೇ ‘ಮುಕ್ತಿರಾಹು’ವಿನ ವಸ್ತು. ಈ ಅವರೋಹಣಾರೋಹಣಗಳೇ ಸೃಷ್ಟಿಯ ರಹಸ್ಯ; ಅವತರಣ ಸಾಯುಜ್ಯಗಳೇ ನಿಯತಿ ನಿಯಮ. ಸಾಗರದಿಂದ ಆವಿಯಾಗಿ ಮುಗಿಲಿಗೇರಿದ ನೀರು ಮಳೆಯ ರೂಪದಲ್ಲಿ ಭೂಮಿಯ ಮೇಲೆ ಬಿದ್ದು, ನದಿಗಳ ಮೂಲಕ ಹರಿದು ಮತ್ತೆ ಸಾಗರವನ್ನು ಸೇರುವಂತೆ, ಶೂನ್ಯದಿಂದೊಗೆದ ಜೀವ ಯುಗ ಯುಗಾಂತರದ ಸಂಚಾರದ ನಂತರ ಮತ್ತೆ ಅನಂತದಲ್ಲಿ ಲಯ ಹೊಂದುವುದೇ ನಿಸರ್ಗ ಧರ್ಮ.

ಸಾಕಾರತೆಯ ಮೂಲಕ ಮಾತ್ರವೇ ನಿರಾಕಾರ ವಸ್ತು ಜಗತ್ತಿನಲ್ಲಿ ಪ್ರಕಟವಾಗಬೇಕಾಗುತ್ತದೆ. ಅದು ಪರಮಾಣುವಿಗಿಂತಲೂ ಸೂಕ್ಷ್ಮ, ಕ್ವಾರ್ಕ್‌ಗಿಂತಲೂ ಸೂಕ್ಷ್ಮ; ಚೇತನಕ್ಕಿಂತಲೂ ಸೂಕ್ಷ್ಮ. ಆದರೆ ಅದು ಸಾಕಾರತೆ ಪಡೆಯುವಾಗ ಪರಿಸರ ಸನ್ನಿವೇಶಗಳ ಪ್ರಭಾವಕ್ಕೊಳಗಾಗುತ್ತದೆ. ಆವರಣ ಗುಣಗಳು ಅದರ ಮೂಲಸ್ವರೂಪವನ್ನು ಮರೆಸುತ್ತವೆ. ಮೂಲ ಸ್ವರೂಪವನ್ನು ಮರೆತ ಜೀವ ಎತ್ತೆತ್ತಲೋ ಅಲೆದಾಡುತ್ತದೆ. ಕರುವನ್ನನುಸರಿಸುವ ಹಸುವಿನಂತೆ ಭಗವತ್ಕೃಪೆ ಅದರ ಬೆಂಗಾವಲಿಗೆ ನಿಲ್ಲುತ್ತದೆ; ಅದನ್ನು ಎಡೆಬಿಡದೆ ಹಿಂಬಾಲಿಸುತ್ತದೆ; ಅದನ್ನು ಅಭಿಮುಖಗೊಳಿಸಿಕೊಳ್ಳಲು ಪ್ರಯತ್ನಿಸುತ್ತದೆ.  ಆದರೆ ಅಹಂಕಾರ ವಶವಾದ ಜೀವ, ಅಂತೆಯೇ ಆಸುರೀ ಶಕ್ತಿ ಅದಕ್ಕೆ ವಿಮುಖವಾಗಿ ಧಾವಿಸುತ್ತ ದೆಯೇ ಹೊರತು, ಅದಕ್ಕೆ ಮುಖಕೊಟ್ಟು ನಿಲ್ಲುವುದಿಲ್ಲ.[2]

ಶ್ರೀರಾಮಾಯಣದರ್ಶನಂ ಮಹಾಕಾವ್ಯದ ವಾಲಿಯ ಪ್ರಕರಣ ಈ ಮಾತಿಗೆ ಸಾಕ್ಷಿಯಾಗಿದೆ. ಸೂರ್ಯೋದಯವಾಗುತ್ತಿದ್ದಂತೆ ಕತ್ತಲೆಯೆಂತು ಬೆನ್ನು ತಿರುಗಿಸಿ ಓಡಿ ಹೋಗುತ್ತದೆಯೋ ಅಂತೆಯೇ ವಾಲಿ ರಾಮನ ಮುಂದೆ ನಿಲ್ಲದೆಯೇ ಸುಗ್ರೀವನನ್ನು ಹೊತ್ತುಕೊಂಡು ಓಡಿಹೋಗುತ್ತಾನೆ. ಕೊನೆಯ ತನಕ ರಾಮಶಕ್ತಿ ಅವನಿಗರಿವಾಗದೆ. ಅವನದನ್ನು ಪ್ರತಿಭಟಿಸಿ ನಿಲ್ಲುತ್ತಾನೆ.

ನಿರ್ಲಕ್ಷಿಸುತೆ ದೈವಮಂ, ಪ್ರತಿಭಟಿಸಿ
ದೈವೀಪರಂಗಳಂ ಶಕ್ತಿಯಂ ನೆಮ್ಮುತ್ತೆ
ತನ್ನಹಂಕಾರಮಂ ಸ್ವಬಲಮಂ ಸ್ವಾರ್ಥಮಂ,
ಚಲದಿಂ ವಿರೋಧಿಸಲ್ ವೈರಭಾವವನಾಂತ
ಆಸುರೀ ಸಾಧನೆಯ ದೈವೀ ವಿಮುಖಮಪ್ಪ
ಲೌಕಿಕ ಪರಾಕ್ರಮದ ಶಿಕ್ಷಾರಕ್ಷೆಗಿನ್ನಿಹುದೆ,
ಪೇಳ್, ಕೃಪಾಬಾಣಕ್ಕೆ ಬೆನ್ನಲ್ಲದನ್ಯಲಕ್ಷ್ಯಂ
ತುದಿಗೆ[3]

ರಾವಣನ ಪಾಡು ವಾಲಿಯ ಪಾಡಿಗಿಂತ ಭಿನ್ನವಾದುದಲ್ಲ. ಖಾಡಾಖಾಡಿಯಾಗಿ ರಾಮನನ್ನೆದುರಿಸಿ ಸೀತೆಯನ್ನು ಗೆದ್ದುಕೊಳ್ಳಲಾರದ ಆ ಜಗದ್ವಿಜಯಿ, ಕೈಲಾಸ ಪರ್ವತ ವನ್ನಲುಗಿಸಿದ ಆ ಧೀರ ಕಾಂಚನಮೃಗದ ಛದ್ಮನೆಯ ಮೂಲಕ ರಾಮಲಕ್ಷ್ಮಣರನ್ನು ಅರಣ್ಯಾಂತರಗೊಳಿಸಿ, ಅವಳನ್ನು ಕದ್ದೊಯ್ಯುತ್ತಾನೆ. ಆ ಸಮಯದಲ್ಲಿ ರಾಮಲಕ್ಷ್ಮಣರಿಗೆ ಸೈನ್ಯದ ಸಹಾಯವಿರಲಿಲ್ಲ, ಮಿತ್ರರ ಬೆಂಬಲವಿರಲಿಲ್ಲವೆಂಬುದನ್ನು ನೆನೆದಾಗ ತ್ರಿಜಗದ್ ಭಯಂಕರನ ಆಸುರೀಶಕ್ತಿಯ ನಿಷ್ಪ್ರಯೋಜಕತೆ ಮನದಟ್ಟಾಗುತ್ತದೆ.

ಜಗತ್ತಿನ ಪ್ರತಿಯೊಂದು ವಸ್ತುವೂ ಪ್ರೋನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್‌ಗಳ ಸಂಶ್ಲೇಷಣ ವಿಶ್ಲೇಷಣಾದಿ ಪರಿಣಾಮಕ ಕ್ರಿಯೆಗಳ ಫಲಿತವೆಂದು ವಿಜ್ಞಾನಿಗಳು ವಿಶದಪಡಿಸಿರು ವಾಗ ಜಡ ಚೈತನ್ಯಗಳ ನಡುವಣ ಭಿನ್ನತೆ ಕೇವಲ ಮಾಯೆಯೆಂದು ತೋರದಿರಲಾರದು. ಅಥವಾ ಆ ವಿಭಿನ್ನತೆಗೆ ಕಾಲದೇಶಗಳ ಅಂತರವೇ ಕಾರಣವೆನ್ನಲಡ್ಡಿಯಿಲ್ಲ. ಹೂವು ಹಣ್ಣುಗಳನ್ನು ಹೆರುವ ಮಣ್ಣಾಗಲೀ, ಪಾವಕನನ್ನು ಹುದುಗಿಸಿಕೊಂಡಿರುವ ಶಿಲೆಯಾಗಲೀ, ತನ್ನ ಬಸಿರೊಳಗೆ ಮಹಾತರುವನ್ನಡಗಿಸಿಕೊಂಡಿರುವ ಬೀಜವಾಗಲೀ, ಜೀವಿಗಳಿಗೆ ಜೀವಧಾತು ವಾಗಿರುವ ಕಾಳುಗಳಾಗಲೀ ಜಡವಸ್ತುಗಳಲ್ಲ.[4]

‘ನನ್ನ ಕೈಯಲ್ಲಿರುವ ಕಲ್ಲಿಗೆ
ಬಗೆಗೆ ಸಿಲುಕದ ಮನಸಿದೆ’
‘ಚೇತನ ಮೂರ್ತಿಯು ಆ ಕಲ್ಲು
ತೆಗೆ! ಜಡವೆಂಬುದೆ ಬರಿ ಸುಳ್ಳು’
‘ಚೈತನ್ಯವೆ ನಿದ್ರಿಸುತಿದೆ
ಜಡದ್ವಾರದಿ’
‘ಜಡವೆಂಬುದೆಲ್ಲ ಚೇತನದ ನಟನೆಯಲೀಲೆ’

ಎಂಬ ಕವಿವಾಣಿಗಳಲ್ಲಿ ಇಡೀ ಜಗತ್ತೇ ಚೈತನ್ಯಮಯಿಯೆಂಬ, ಅನಾದಿವಸ್ತು ಸಕಲ ಚರಾಚರವಸ್ತುಗಳಲ್ಲಿ ಬಚ್ಚಿಟ್ಟುಕೊಂಡಿದೆಯೆಂಬ, ಸೃಷ್ಟಿರಹಸ್ಯ ಸ್ಪಂದಿಸುತ್ತದೆ.

‘ಪಾಪಿಯ ಹೃದಯಕೂಪದೊಳ್ ಪ್ರಾರಬ್ಧದಿಂದ ನಿದ್ರಿಸಿಹ ಧರ್ಮಬುದ್ದಿ’ಯನ್ನು ಆಂಜನೇಯಶಕ್ತಿ ಜಾಗ್ರತಗೊಳಿಸುವತನಕ ಜೀವಿಗಳಿಗೆ ಅರ್ಥವಾಗುವುದಿಲ್ಲ. ಎಷ್ಟೋ ಜನ ಕಿವಿಯಿದ್ದರೂ ಸಂಗೀತ ಮಾಧುರ್ಯವನ್ನು ಸವಿಯಲಾರರೆಂಬುದು, ಕಣ್ಣಿದ್ದರೂ ಸ್ವರ್ಗೀಯ ಸೌಂದರ್ಯವನ್ನು ಗ್ರಹಿಸಲಾರರೆಂಬುದು ನಿತ್ಯಾನುಭವದ ಸಂಗತಿಯಾಗಿದೆ. ಅನೇಕರಿಗೆ ಪಂಚೇಂದ್ರಿಯಗಳ ನಿಜವಾದ ಅರ್ಥೋದ್ದೇಶಗಳ ಪ್ರಜ್ಞೆಯೂ ಇರುವುದಿಲ್ಲ. ಕೈಯಲ್ಲಿ ಲಾಟೀನಿದ್ದರೂ ಬೀಡಿಯ ಬೆಂಕಿಗಾಗಿ ಊರು ಕೇರಿಗಳಲ್ಲೆಲ್ಲ ಅಲೆದಾಡುವ ಎಗ್ಗನಂತೆ ತನ್ನೊಳಗಿರುವ ಭಗವದ್ವಸ್ತುವನ್ನು ಕಾಣದೆ ಮನುಷ್ಯ ತೊಳಲಾಡುತ್ತಿದ್ದಾನೆ. ರಾವಣ ದುರ್ಯೋಧನರಂಥ ಕೆಲವು ಜನರಿಗೆ ಅದರ ಅಸ್ತಿತ್ವ ಗೋಚರಿಸುವುದಾದರೂ, ಅಹಂಕಾರ ವಶರಾಗಿ ಅದನ್ನು ಮರೆಯಲು ಪ್ರಯತ್ನಿಸುತ್ತಾರೆ. ನಾರಾಯಣ ಸಾನ್ನಿಧ್ಯದ ಜಯವಿಜಯರೇ ರಾವಣ ಕುಂಭಕರ್ಣರಾಗಿ ಜನ್ಮವೆತ್ತಿದ್ದಾರೆ, ಅವರು ಮತ್ತೆ ಸ್ವಸ್ಥಾನಕ್ಕೆ ತೆರಳಲು ಕಾತರರಾಗಿದ್ದಾರೆನ್ನುವ ಪೌರಾಣಿಕ ಹಿನ್ನೆಲೆಯಲ್ಲಿ ಸೃಷ್ಟಿ ಚಕ್ರದ ಅರ್ಥ ಸುಸ್ಪಷ್ಟವಾಗುತ್ತದೆ. ‘ಮುಕ್ತಿರಾಹು’ವಿಗೆ ರಾಮರಾವಣರ ಅಥವಾ ಕೃಷ್ಣದುಯೋಧನರ ಕತೆ ಭವ್ರೋಪ್ರತಿಮೆಯಂತಿದೆ. ಪಾಪಿಗಳ ಉದ್ಧಾರಕ್ಕೆ ರಾಮಕೃಷ್ಣರೇ ಅವತರಿಸಿದ್ದಾರೆ, ಅವತರಿಸಿದ್ದಾರೆ ಮಾತ್ರವಲ್ಲ ತಮ್ಮ ಅವತಾರೋದ್ದೇಶ ಸಾಧನೆಗೂ ಅವರು ಪಡಬಾರದ ಕಷ್ಟಗಳನ್ನನು ಭವಿಸಿದರೆನ್ನುವುದನ್ನು ಮರೆಯಲಾಗದು.

ಈಶ್ವರ ಕೃಪೆಯ ಅವತರಣಕ್ಕೆ ಭಕ್ತನ ಉದ್ಧಾರಾಕಾಂಕ್ಷೆಯೂ ಅನಿವಾರ್ಯವಾಗುತ್ತದೆ. ಕೃಪೆ ಪ್ರಾರ್ಥನೆಗಳು ಮತ್ತು ಅಭೀಪ್ಸೆ ಸಿದ್ದಿಗಳು ಪರಸ್ಪರಾಕರ್ಷಣೆಯುಳ್ಳ, ಹೊರನೋಟಕ್ಕೆ ಭಿನ್ನವಿಭಿನ್ನವೆಂದು ತೋರುವ ಒಂದೇ ಶಕ್ತಿಯ ಎರಡು ತುದಿಗಳು. ಉದ್ಧಾರಕಾಂಕ್ಷೆ ತೀವ್ರವಾದಷ್ಟೂ ಈಶ್ವರ ಕೃಪೆಯ ಅವತರಣ ಶೀಘ್ರವಾಗುತ್ತದೆನ್ನುವುದಕ್ಕೆ ಈ ಪೌರಾಣಿಕ  ಕಥೆಗಳೇ ಸಾಕ್ಷಿಯಾಗಿವೆ. ಆಂಜನೇಯ ಲಂಕೆಯಲ್ಲಿ ಸೀತೆಯನ್ನು ಹುಡುಕುವಂತೆ, ಶ್ರೀರಾಮನೂ ಅಯೋಧ್ಯೆಯಿಂದ ಲಂಕೆಯವರೆಗೆ ರಾವಣಾನ್ವೇಷಣೆಯಲ್ಲಿ ತೊಡಗುತ್ತಾನೆ, ಪರಿಪರಿಯ ಸಾಧನೆಗಳಲ್ಲಿ ನಿರತನಾಗುತ್ತಾನೆ. ರಾವಣ ಸಹ ರಾಮತ್ವಸಿದ್ದಿಗಾಗಿ ಹಾತೊರೆ ಯುತ್ತಿದ್ದಾನೆನ್ನುವುದು ಮುಂದಿನ ವಾಕ್ಯಗಳಿಂದ ಸುಸ್ಪಷ್ಟವಾಗುತ್ತದೆ.

……..ನಿನಗಿಂ ಮಿಗಿಲ್ ಸೀತೆ
ನನಗೆ ದೇವತೆ, ಮಾತೆ! ಶ್ರದ್ಧೆಗೆಟ್ಟಿರ್ದೆನಗೆ
ಶ್ರದ್ಧೆಯಂಮರುಕೊಳಿಸುತಾತ್ಮದುದ್ಧಾರಮಂ
ತಂದ ದೇವತೆ, ಪುಣ್ಯಮಾತೆ![5] ರಾಮನಂ ಸೆರೆಗೊಳುವ ಮನದಿ
ಹತ್ತಿರಕೆ ಹತ್ತಿರಕೆ ತೇರನೊತ್ತಿದನೊತ್ತಿ
ಮುಗ್ಗುವರಿಸೇನೆಯಂ ಕೆಲಬಲಕೆ[6]

ತನ್ನ ಹೃದಯದಲ್ಲಿ ನಾಟಿದ ರಾಮ ಬಾಣವೇ ರಾಮನೆಂದು ತಿಳಿದು, ಅವನನ್ನು ತಾನು ಬಂಧಿಸಿದುದಾಗಿ ಭಾವಿಸಿ, ರಾವಣ ಮಂಡೋದರಿಯ ಬಳಿಗೆ ಧಾವಿಸುವಲ್ಲಿ ಅವನು ಸಿದ್ದಿಯ ಪರಾಕಾಷ್ಠೆಯನ್ನು ಮುಟ್ಟುತ್ತಾನೆ, ರಾಮನಲ್ಲಿ ಐಕ್ಯವಾಗುತ್ತಾನೆ. ‘ಕೃಷ್ಣನ ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲ,[7]ವೆಂಬ ಕುಮಾರವ್ಯಾಸನ ದುರ್ಯೋಧನನೂ ರಾವಣನಂತೆಯೇ ಮುಕ್ತಿಕಾತರನೆಂಬುದನ್ನಿಲ್ಲಿ ನೆನೆಯಬಹುದು.[8] ರಾಮಬಾಣ ಕಾಕಾಸುರನನ್ನು ಬೆನ್ನಟ್ಟಿದ ಪ್ರಕರಣವಾಗಲೀ ಕಿರಾತಾರ್ಜುನೀಯ ಪ್ರಸಂಗವಾಗಲೀ ಇದೇ ತತ್ತ್ವವನ್ನು ಸಮರ್ಥಿಸುತ್ತವೆ.

ಭಕ್ತ ನಿರ್ಲಕ್ಷ್ಯದಿಂದಿದ್ದರೂ ಭಗವಂತ ತಾನಾಗಿಯೇ ಅವನನ್ನು ಅರಸಿಕೊಂಡು ಹೋಗಿ, ಅವನನ್ನು ಕಾಡಿ ಬೇಡಿ, ಅವನಿಗಾಗಿ ಕಣ್ಣೀರು ಸುರಿಸಿ, ಅವನನ್ನು ತನ್ನಂತೆ ಮಾಡಿಕೊಳ್ಳು ತ್ತಾನೆನ್ನುವುದಕ್ಕೆ ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಜೀವನ ವೃತ್ತಾಂತಗಳೆ ಸಾಕ್ಷಿಯಾಗಿವೆ. ನರೇಂದ್ರನಾಥ ಪಾಶ್ಚಾತ್ಯ ವಿದ್ಯೆಯಲ್ಲಿ ನಿಷ್ಣಾತನಾದ, ಬುದ್ದಿ ಪ್ರಖರತೆಯಲ್ಲಿ ಹಾಗೂ ಪ್ರತಿಭಾ ಸಂಪನ್ನತೆಯಲ್ಲಿ ಅಸಾಧಾರಣನಾದ, ಆದರೆ ಮನಸ್ಸು ಸಂಶಯಗಳ ತಮುಲವಾಗಿದ್ದ ತರುಣ ವಿದ್ಯಾರ್ಥಿ; ಸತ್ಯ ಸಾಕ್ಷಾತ್ಕಾರಕ್ಕಾಗಿ ಹಾತೊರೆಯುತ್ತಿದ್ದ ಮುಮುಕ್ಷು. ಸುರೇಂದ್ರನಾಥ ಮಿತ್ರ ಎನ್ನುವವರ ಮನೆಯ ಉತ್ಸವವೊಂದರಲ್ಲಿ ಅವನು ಹಾಡಿದಾಗ, ಅಲ್ಲಿಯೇ ಇದ್ದ ಶ್ರೀರಾಮಕೃಷ್ಣರು ಅವನ್ನು ಹೊಗಳಿ, ಹೊಗಳಿ ದಕ್ಷಿಣೇಶ್ವರಕ್ಕೆ ಬಂದು ಹೋಗುವಂತೆ ಆಹ್ವಾನಿಸುತ್ತಾರೆ. ಅವನು ಬಂದಾಗ ಅವನಿಂದ ಸಂಗೀತ ಹಾಡಿಸಿ ಸಮಾಧಿ ಸ್ಥರಾಗುತ್ತಾರೆ; ಏಕಾಂತಕ್ಕೆ ಕರೆದುಕೊಂಕಡು ಹೋಗಿ ತಾಯಿಯಂತೆ ತಾವೇ ಅವನಿಗೆ ಸಿಹಿತಿಂಡಿ ತಿನ್ನಿಸುತ್ತಾರೆ. ಮುಂದಿನ ದಿನಗಳಲ್ಲಿ ಅವನು ಬರುವುದು ಎರಡು ದಿನ ತಡವಾದರೆ ‘ನರೇಂದ್ರ ಬರಲಿಲ್ಲವಲ್ಲ’ ಎಂದು ಪರಿತಪಿಸುತ್ತಾರೆ. ಹೊತ್ತು, ಗೊತ್ತು, ನೀತಿ, ನಿಯಮ, ಕಟ್ಟುಪಾಡು ಯಾವುದನ್ನೂ ಅನುಸರಿಸದೆ ಅವನನ್ನು ಹುಡುಕಿಕೊಂಕಡು ಹೊರಡುತ್ತಾರೆ.

ಆದರೆ ಉದ್ಧರಾಕಾಂಕ್ಷೆ ನರೇಂದ್ರನಾಥನಲ್ಲಿ ಬೀಜ ರೂಪದಲ್ಲಿ ಹುದುಗಿತ್ತೆನ್ನುವುದನ್ನು ಮರೆಯಲಾಗದು. ಸೃಷ್ಟಿಯ ಆದಿಯಿಂದಲೂ ಈ ಊರ್ಧ್ವಗಮನಾಕಾಂಕ್ಷೆ ಜೀವಿಯ ಸಹಜಗುಣವಾಗಿ, ಸಂಸ್ಕಾರ ವಶದಿಂದ ಪ್ರತಿಕ್ಷಣವೂ ನಾನಾ ರೀತಿಗಳಲ್ಲಿ ಪ್ರಕಟವಾಗುತ್ತಿದೆ.

ಹಾರೈಸಿ ಹಾರೈಸಿ
ಅನ್ನತಾನಾದುದೈ ಪ್ರಾಣ;
ಹಾರೈಸಿ ಹಾರೈಸಿ ಹಾರೈಸಿ
ಹಾರಿದುದೊ ನೀರಧಿಯ ಮೀನ![9]

ಶೂನ್ಯದಿಂದೊಗೆದ ನಿರಾಕಾರ ವಸ್ತು ಸಾಕಾರ ಪಡೆದು, ಜಡವಸ್ತು ಜೀವಿಯಾಗಿ ಜೀವಿ ಮಾನವನಾಗಿ, ಮನುಜತೆ ಮಾನವತನವನ್ನು ಮೀರಿ ಮೇಲೇರಬೇಕಾದರೆ ಯುಗ ಯುಗಗಳೇ ಬೇಕು. ಈ ಸೃಷ್ಟಿ ಚಕ್ರ ಅವಿರತವಾಗಿ ಕಾಲ ದೇಶಾತೀತವಾಗಿ ಸಾಗುತ್ತದೆ.

ಯುಗ ಯುಗ ಯುಗದತಿ ಕಷ್ಟದಿ ಜಡವನು ಜಯಿಸಿತು ಜೀವ
ಬಹುತಪದಿಂದಾ ಜೀವಕೆ ಬಂದುದು ಮಾನವ ಭಾವ
ಯುಗ ಯುಗ ಬೇಕೀ ಮನುಜತೆ ಮಾನವತನವನೆ ಮೀರಿ
ಜೀವತ್ವವ ಸಂಪಾದಿಸೆ ಸಂಯಮ ಸ್ವರ್ಗಕ್ಕೇರಿ[10]

ಈ ಆಕಾಂಕ್ಷೆ ಪ್ರತಿಯೊಬ್ಬ ಮಾನವನ ಜೀವನದಲ್ಲಿ ದಿನ ದಿನವೂ ಒಂದಲ್ಲ ಒಂದು ರೀತಿಯಲ್ಲಿ. ಅವರವರ ಸಂಸ್ಕಾರಕ್ಕನುಗುಣವಾಗಿ ತಂತಮ್ಮ ಧ್ಯೇಯೋದ್ದೇಶ ಪ್ರಯತ್ನಗಳ ಮೂಲಕ ಪ್ರಕಟವಾಗುತ್ತಿರುವುದನ್ನು ಪೂರ್ಣದೃಷ್ಟಿಯಿಂದ ಗ್ರಹಿಸಿದಾಗ ಮಾತ್ರ ಸೃಷ್ಟಿಯ ಅಂತರಾರ್ಥ ಅರಿವಾಗುತ್ತದೆ.

ಸೃಷ್ಟಿಯ ವೈವಿಧ್ಯದಂತೆ ಈಶ್ವರಕೃಪೆ ಪ್ರಕಟವಾಗುವ ಮಾಧ್ಯಮಗಳೂ ಅನಂತಾನಂತ. ಅದು ಮಂಗಳ ರೂಪದಲ್ಲಿಯೇ, ಭಕ್ತ ಇಚ್ಛಿಸಿದ ಪ್ರಕಾರದಲ್ಲಿಯೇ ಪ್ರಕಟವಾಗುವುದಿಲ್ಲ. ಭಗವದಾವಿರ್ಭಾವಕ್ಕೆ ಹೊರತಾದ ವಸ್ತುವಾಗಲೀ ಜೀವಿಯಾಗಲೀ ವಿಶ್ವದಲ್ಲಿಲ್ಲ. ಅಂತೆಯೇ ಈಶ್ವರ ಕೃಪೆ ಕಷ್ಟಕ್ಲೇಶಗಳ ರೂಪದಲ್ಲಿ, ಅನಿಷ್ಟವಾದ ಆಕೃತಿಯಲ್ಲಿ ಮೈದೋರಬಹುದು.

ಬೆಚ್ಚದಿರಂಬೆ, ನನ್ನ ಈ
ವಿಕೃತಾಂಗಮಂ ನೋಡಿ. ಹಿತಮೆನಿತೊ ಸೂಳ್ ಇಂತೆ
ನನ್ನವೋಲ್ ಬರ್ಪುದಪ್ರಿಯತೆಯಾಕೃತಿವೆತ್ತು
ಈಶಕೃಪೆಗಿಹುದು ನಾನಾ ಮುಖಂ ಸುಖದಂತೆ
ದುಃಖಮುಂ ಋತಚಿತ್ ಕೃಪಾನೃಕೇಸರಿ ನಖಂ[11]

ಅಮಂಗಳ ರೂಪದ ಬೂತು ರಾವಣ ಸತಿಯ ಮುಂದೆ ಪ್ರತ್ಯಕ್ಷವಾದಾಗ ಆಡಿದ ಮಾತಿದು. ಗಗನ ನೀಲಾಭನೂ ಭುವನಾಭಿರಾಮನೂ ಸೀತಾಲಕ್ಷಣ ಸಮೇತನೂ ಆದ ಶ್ರೀರಾಮನ ಶ್ರೀಮೂರ್ತಿಯನ್ನು ಕಲ್ಪಿಸಿಕೊಂಡಿದ್ದ ಶಬರಿಯ ಮುಂದೆ ಪ್ರತ್ಯಕ್ಷನಾದವನು ಹೊದರು ದಲೆಯ,ಕೊಳೆಯುಡೆಯ, ತೇಜೋಹೀನ ಮುಖದ, ಸೀತೆಯಿಲ್ಲದ, ರೂಕ್ಷ ರೂಪದ, ಸಂಕಟವೆ ಮೂರ್ತಿವೆತ್ತಂತಿದ್ದ ರಾಮ. ಆದ್ದರಿಂದ ಭಗವತ್ಕೃಪೆ ಮೊಸಳೆಯ, ನೃಸಿಂಹನ, ವ್ಯಾಘ್ರದ, ರೋಗ ರುಜಿನಗಳ, ಚೋರರ, ಸರ್ವಾಧಿಕಾರಿಯ ಇನ್ನೂ ಎಷ್ಟೆಷ್ಟೋ ರೂಪಗಳಲ್ಲಿ ಮೈದೋರಬಹುದು. ಈ ವಿವರಣೆಯ ಹಿನ್ನೆಲೆಯಲ್ಲಿ ಮುಕ್ತಿರಾಹು ಅಥವಾ ದೇವಕೇತು ಪದ ಪ್ರಯೋಗ ಸಮಂಜಸವೆಂದು ತೋರದಿರಲಾರದು.

ದೇವಕೇತುವಿನಲ್ಲಿ ಭಕ್ತಿಯ ಆಧಿಕ್ಯವಿದ್ದರೆ, ಮುಕ್ತಿರಾಹುವಿನಲ್ಲಿ ಜ್ಞಾನ ಮಾರ್ಗದ ಪ್ರಾಬಲ್ಯ ಮುಖ್ಯವಾಗಿ ಗಮನಿಸಬೇಕಾದ ಅಂಶವಾಗಿದೆ.

ಇಲ್ಲಿ ಬರುವ ಪಾತ್ರಗಳು ಎರಡು ಪರಮಾತ್ಮ ಮತ್ತು ಜೀವಾತ್ಮ. ಅವೆರಡರ ನಡುವಣ ಸಂಬಂಧದ ಸ್ವರೂಪ ಅಭಿವ್ಯಕ್ತಗೊಂಡಿದೆ. ಜೀವಾತ್ಮನ ಮಾತಿನಲ್ಲಿ ಅವನ ಸಾಹಸ ಯಾತ್ರೆಯೂ ಪರಮಾತ್ಮನ ನಿರಂತರಾನುಸರಣೆಯೂ ನಿರೂಪಣೆಗೊಂಡಿವೆ. ಇಲ್ಲಿಯ ಕ್ರಿಯೆಯೆಲ್ಲ ಉತ್ತಮ ಪುರುಷದಲ್ಲಿ ನಡೆಯುತ್ತದೆ. ವಾಚಕರಿಗೆ ಕಾಣುವುದು ಕೇಳಿಸುವುದು ಜೀವಾತ್ಮನ ಹೆಜ್ಜೆ, ಹಾಗೂ ಮಾತು. ಪರಮಾತ್ಮ ಅತೀಂದ್ರಿಯಾನುಭವ ವೇದ್ಯವಾದ, ಇಂದ್ರಿಯ ಗಮ್ಯವಲ್ಲದ ಶಕ್ತಿಯೆಂಬುದು ಅವನ ಅಗೋಚರತ್ವ ಹಾಗೂ ಮಾತಿಲಿತನದಿಂದ ಸ್ಪಷ್ಟವಾಗುತ್ತದೆ. ಅದು ಕೇವಲ ಸಾಕ್ಷೀಪ್ರಜ್ಞೆಯಿಂದ ಜೀವಿಯ ಗತಿಯನ್ನನುಸರಿಸುತ್ತದೆ.

ಜೀವಿಯ ಸಾಹಸಮಯ ಯಾತ್ರೆಯ ಜತೆಗೆ ಸೃಷ್ಟಿಯ ವಿಕಾಸಕ್ರಮವೂ ಸುರುಳಿ ಬಿಚ್ಚಿ ರೂಹುದೋರುತ್ತದೆ. ಸೊನ್ನೆಯಿಂದ ಸೃಷ್ಟಿ ಸಾಧ್ಯವಿಲ್ಲ. ಅನಾದಿಯೂ ಅನಂತವೂ ಆದ ಬ್ರಹ್ಮತತ್ವದಿಂದ ಉದ್ಭವಗೊಂಡ ಜ್ವಾಲಾಸದೃಶ ಜಗತ್ತು ಕಾಲಕ್ರಮೇಣ ತಣ್ಣಗಾಗಿ ಜಡವಸ್ತುವಾಗಿ, ಜಡವೇ ಜೀವವಾಗಿ, ಒಂದು ಜೀವ ಎರಡಾಗಿ ಹಲವಾಗಿ, ಭಿನ್ನ ವಿಭಿನ್ನವಾಗಿ, ಕೊನೆಗೆ ಜಗತ್ತೇ ಕರಗಿ ಬ್ರಹ್ಮನಲ್ಲಿ ಲಯವಾಗುತ್ತದೆನ್ನುವುದು ಭಾರತೀಯ ಕಲ್ಪನೆ. ವಿಜ್ಞಾನದಿಂದಲೂ ಇದಕ್ಕೆ ಸಾಕಷ್ಟು ಸಮರ್ಥನೆ ದೊರೆಯುತ್ತದೆ.

ಆ ಅನಾದಿ ಬ್ರಹ್ಮತತ್ವ ಅಜ್ಞೇಯವಾಗಿ ಶೂನ್ಯವೆಂದು ಕರೆಯಲ್ಪಡುತ್ತದೆ. ಶೂನ್ಯವೆಂದರೆ ಏನೂ ಇಲ್ಲದ್ದೆಂದು ಅರ್ಥವಲ್ಲ. ಅದರಲ್ಲಿ ಎಲ್ಲವೂ ಇದೆ. ಅದು ಅಮೂರ್ತ ಸ್ಥಿತಿ ಯಲ್ಲಿದ್ದು ಅಗೋಚರವಾಗಿರುವುದರಿಂದ ತಿಮಿರವೆಂದು ಕರೆಯುವುದೂ ಉಂಟು. ಇಲ್ಲಿ ತಿಮಿರವೆಂದರೆ ಶೂನ್ಯ.

ಮೊದಲನರಿಯದಾದಿಯಿಂದ
ಆದಿ ತಿಮಿರದುದರದಿಂದ
ಮೂಡಿ ಬಂದೆನು[12]

ಲೋಕದ ಜೀವಿಗಳಿಗೆಲ್ಲ ಆ ಆದಿತಿಮಿರವೇ ಮೊದಲು, ಅದೇ ಕೊನೆ.

ಘನ ತಿಮಿರದ ಪಾತಾಳದ
ಗರ್ಭಕೆ ಧುಮುಕಿದೆ………ಅನಂತ ಕಾಲದ
ಸುಪ್ತಿಯ ಜಠರಕೆ ಧುಮುಕಿದೆ.

ಇಲ್ಲಿಯ ‘ಪಾತಾಳ’ ಸಪ್ತಮ ಲೋಕವಲ್ಲ; ಅದು ಗಹನತೆಗೆ ಸಂಕೇತವಾಗಿದೆ. ಆದಿ ಅಂತ್ಯಗಳಿಲ್ಲದ, ಎಲ್ಲದಕ್ಕೂ, ಲಕ್ಷ್ಯವಾಗಿರುವ ಆ ತತ್ವದಲ್ಲಿ ಸೂರ್ಯ ಚಂದ್ರ ಭೂಮಿ ಗ್ರಹಗಳೆಲ್ಲ ಒಂದಾಗಿದ್ದುವು. ಅನಂತರ ಜ್ವಾಲೆಯ ರೂಪದಲ್ಲಿ ಅವು ಮುದ್ದೆಯಂತೆ ಮೊದಲು ಕಾಣಿಸಿಕೊಳ್ಳುತ್ತವೆ. ಕಾಲ ಕ್ರಮೇಣ ಆ ಬೆಂಕಿಯ ಮುದ್ದೆಯಿಂದ ಕಿಡಿಗಳುದುರಿ, ಗ್ರಹತಾರೆಗಳು ಗೋಚರಿಸುತ್ತವೆ. ಅನೇಕ ಕಲ್ಪಗಳ ನಂತರ ಆ ಕಿಡಿಗಳಲ್ಲೊಂದು ತಣ್ಣಗಾಗಿ ಬುವಿಯ ರೂಪ ತಾಳುತ್ತದೆ; ಕೊನೆಗೆ ತಿರೆಯ ಜಡತೆಯಲ್ಲಿ ಚೈತನ್ಯ ಸಂಚಾರವಾಗುತ್ತದೆ.[13]

ಈ ವಿವರಣೆಯಿಂದ ‘ಮಹದುಲ್ಕೆ ಮತ್ತು ಜ್ವಾಲಾಮಯಲಾಂಗೂಲ’ ಪದಗಳ ಅರ್ಥ ವಿಶದವಾದೀತೆಂದು ಭಾವಿಸಬಹುದಾಗಿದೆ. ತಾಯಿ ಕರುವನ್ನರಸುವಂತೆ ಕರುವೂ ತಾಯಿಯನ್ನರಸುತ್ತ ‘ಅಂಬಾ’ ಎಂದು ಕೂಗುತ್ತ ಓಡಾಡುತ್ತದೆ. ಅಂತೆಯೇ ಆದಿ ತತ್ವದಿಂದ ಸಿಡಿದ ಜೀವ ‘ಮೃತ್ಯು ಕಾತರ ವೇಗದಲಿ’ ಪುನರ್ಮಿಲನಕ್ಕಾಗಿ ಮುನ್ನುಗ್ಗುತ್ತದೆ. ‘ಮೃತ್ಯು’ ಎನ್ನುವ ಪದಕೆ ‘ಯಮ’ ಎಂಬುದೊಂದೇ ಅರ್ಥವಲ್ಲ; ಬ್ರಹ್ಮ, ವಿಷ್ಣು, ಮಾಯೆ, ಕಲಿ, ಮನ್ಮಥ ಎಂಬ ಅರ್ಥಗಳೂ ಇವೆಯೆಂಬುದು ಗಮನಾರ್ಹ ಸಂಗತಿ. ಈ ಎಲ್ಲ ಅರ್ಥ ಗಳನ್ನಿಲ್ಲಿ ಮಾನ್ಯ ಮಾಡಿದರೆ ಮಾತ್ರ ಈ ಪದಗುಚ್ಛದ ಪ್ರಯೋಗ ಸಾರ್ಥಕವಾಗುತ್ತದೆ. ಮೂಲದಿಂದ ಬೇರ್ಗೊಂಡು ಅಧೋಮುಖಿಯಾದ ಜೀವ ಜಡಸುಷುಪ್ತಿಯಲ್ಲಿ ಮುಳುಗಿ, ಮೂಲವನ್ನು ಮರೆಯುತ್ತದೆ; ಅನೇಕ ವ್ಯಾಮೋಹಗಳ ಬಲೆ ಬೀಸುವ ಮಾಯೆಗೆ ಶರಣಾ ಗುತ್ತದೆ. ಆದರೆ ಭಗವತ್ಕೃಪೆ ಪ್ರಚೋದನ ಶಕ್ತಿಯಾಗಿ ಆಶೀರ್ವಾದರಕ್ಷೆಯಾಗಿ ರಾಹುವಿನಂತೆ ಸದಾ ಅದನ್ನು ಬೆನ್ನಟ್ಟುತ್ತದೆ.[14] ‘ಬಿಡುಗಡೆ ಸಾಕು! ಸೆರೆ ಹೊರೆಬೇಕು’ ಎಂದು ಜೀವ ಕೂಗಿಕೊಳ್ಳುತ್ತದೆ. ಎಲ್ಲ ಜೀವಿಗಳ ಪಾಡೇ ಇದು. ಕಂಡೂ ಕಂಡೂ ಮಾನವ ಮೋಹದ ಬಲೆಯಲ್ಲಿ ಬಿದ್ದು ನಾನಾ ಕಷ್ಟಗಳ ಸುಳಿಯಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿದ್ದರೂ ಅವನಿಗೆ ಬಿಡುಗಡೆಯ ಬೆಲೆ ಗೊತ್ತಿಲ್ಲ, ಅದು ಬೇಕಿಲ್ಲ. ಆದರೆ ಭಗವತ್ಕೃಪೆ ‘ಬಲ್ಲೆ! ಬಲ್ಲೆ! ನಾಬಿಡೆನೆಂದೂ’ ನುಂಗಲೇಬೇಕು ಎಂದು ದೃಢ ಹಠ ಮತಿಯಿಂದ ಅದನ್ನು ಹಿಂಬಾಲಿಸುತ್ತದೆ. ಅದರಿಂದ ಪಾರಾಗುವ ಸಲುವಾಗಿ ಜೀವ ‘ಕಡೆಯಲಿ ಹುದುಗಿತು ಜಡತೆಯ ಚಿರನಿದ್ರೆ ಯೊಳದ್ದಿ!, ಜೀವಕೋಟಿ ಉದಯವಾಗುವ ಮುನ್ನಿನ ಭೂಮಿಯ ಪರಿಸ್ಥಿತಿಯನ್ನಿದು ಸೂಚಿಸುತ್ತದೆ.

ಭಗವತ್ಕೃಪೆಯೇ ಆ ಜೀವವನ್ನು ಜಡತೆಯ ಸೆರೆಯಿಂದ ಬಿಡಿಸುತ್ತದೆ. ಚೇತನ ಕಾಮಿಯಾದ ಮುಕ್ತಿರಾಹು ‘ಕ್ಷಣಕ್ಷಣದಲಿ ಕಣಕಣವನೆ ಹಿಡಿದು ಕಿತ್ತೆಳೆಯಿತು ಜಡಮೃತ್ತನೆ ಕಡೆದು’ ಜೀವಿಗೆ ಬೇಕಾದದ್ದು ಕುಂಭಕರ್ಣನ ನಿದ್ದೆ; ಶ್ರೀರಾಮನಿಗೆ ಬೇಕಾದ್ದು ಅವನ ಆಹುತಿ. ಜಗತ್ತಿನ ಉದ್ಧಾರಕ್ಕಾಗಿ, ನಿಸರ್ಗಧರ್ಮದ ಸಂರಕ್ಷಣೆಗಾಗಿ ಆಲಸ್ಯ ಅನ್ಯಾಯ ಅಧರ್ಮಗಳ ನಿರ್ಮೂಲನಕ್ಕಾಗಿ ವ್ಯಕ್ತಿಯ ಬೇಳುವೆ ಅನಿವಾರ್ಯ. ಜಡತೆಯ ನಿದ್ರೆಯನ್ನು ತೊರೆದು, ಚೈತನ್ಯರೂಪಿಯಾಗಿ ಸಸ್ಯದ ಸ್ವಪ್ನವನ್ನು ಕಂಡಾಗ ಹೂ ಹಣ್ಣು ಹಸುರುಗಳ ಆಶಾಪಾಶದಲ್ಲಿ ಜೀವಿ ಸೆರೆಗೊಳ್ಳುತ್ತದೆ, ಹೆಣ್ಣು ಹೊನ್ನು ಮಣ್ಣುಗಳ ಬಲೆಯಲ್ಲಿ ಬಂಧನಗೊಳ್ಳುವ ಶ್ರೀಮಂತನಂತೆ. ಶ್ರೀಮಂತನಿಗೆಂತು ಈ ಮೂರೇ ಸತ್ಯವೊ, ಅವುಗಳ ಆಚೆಗಿರುವ ನಿತ್ಯ ಸತ್ಯವೆಂತು ಅವನಿಗೆ ಗೋಚರಿಸುವುದಿಲ್ಲವೋ ಅಂತೆಯೇ ಸಸ್ಯಪ್ರಜ್ಞೆಯ ಜೀವಿಗೆ ಹೂ ಹಸುರುಗಳೆ ಸರ್ವಸ್ವವಾಗುತ್ತವೆ. ಕಪ್ಪೆಗೆ ಬಾವಿಯೇ ಸಾಗರ; ಹುಳುವಿಗೆ ಬಚ್ಚಲೆ ಸಗ್ಗ; ಕೋಳಿಗೆ ಹುಳು ಹುಪ್ಪಟೆಗಳೇ ಪರಮಾನ್ನ; ನಾಯಿಗೆ ಬೂದಿಯೊಲೆಯೇ ಇಂದ್ರನಾಸ್ಥಾನ; ಅಂತೆಯೇ ಜೀವಿಗೆ ಆಯಾಯ ಪರಿಸರ ಸನ್ನಿವೇಶಗಳೇ ನಂದನವಾಗುತ್ತವೆ; ಬಂಧನವೇ ಬೆಲ್ಲವಾಗುತ್ತದೆ.

ಹೀಗೆ ಬಂಧನದ ಆಮೋದವನನ್ನನುಭವಿಸುತ್ತಿರುವಾಗ ಜೀವಿಯ ದೃಷ್ಟಿ ತುಸು ಹಿಮ್ಮೊಗವಾಗುತ್ತದೆ.

ಅಯ್ಯೋ, ಮುಕ್ತಿಯ ರಾಹುವು ಮತ್ತೆ
ಅಯ್ಯೋ, ಅಮೃತದ ವಿಷದಿಂ ಸತ್ತೆ

ಎಂದು ಕಿಟಾರನೆ ಕಿರಿಚಿಕೊಳ್ಳುತ್ತದೆ; ಓಟಕೀಳಲು ಪ್ರಯತ್ನಿಸುತ್ತದೆ. ಮುಕ್ತಿ ರಾಹುವಿಗೆ ಸಿಗಬಾರದೆಂಬಾಸೆಯಿಂದ ರೆಕ್ಕೆಯನ್ನು ಬೆಳೆಸಿಕೊಂಡು, ಆಕಾಶದಲ್ಲಿ ಹಾರಾಡುತ್ತದೆ. ಭ್ರಷ್ಟಾಚಾರವನ್ನು ತೊಲಗಿಸಲು ಹೊಸಹೊಸ ಕಾನೂನನ್ನು ರಚಿಸುವುದಾದರೂ, ಆ ಕಾನೂನಿನ ಛಾಯೆ ಬಹುದೂರ ವ್ಯಾಪಿಸುವುದಾದರೂ ಭ್ರಷ್ಟಾಚಾರಿ ಅದರಿಂದ ಪಾರಾಗಲು ತನ್ನ ಸರ್ವಶಕ್ತಿಯನ್ನು ಪ್ರಯೋಗಿಸುತ್ತಾನಷ್ಟೆ. ಅಂತೆಯೇ ಜೀವ ಮುಕ್ತಿರಾಹುವಿನ ಹಿಡಿತದಿಂದ ಪಾರಾಗಲು ವಿವಿಧವೇಷ ಧರಿಸುತ್ತದೆ. ಆ ವಿವಿಧ ವೇಷಧಾರಣೆಯೇ ವಿಕಾಸಕ್ರಮ ವಾಗುತ್ತದೆ. ಈ ವಿಕಾಸ ಕ್ರಮದಲ್ಲಿ ಹಕ್ಕಿಗಳ ಉಗಮವೊಂದೆಂದು ವಿಜ್ಞಾನಿಗಳು ಸ್ಪಷ್ಟಪಡಿಸಿ ದ್ದಾರೆ. ಯಾವ ಆಶ್ರಯ ಹೊಕ್ಕರೂ ದೈವಕೃಪೆಯ ಕೃಪಾಣದಂತಿರುವ ರಾಮ ಬಾಣ ಕಾಕಾಸುರೋಪಮ ಜೀವವನ್ನು ಬೆನ್ನಟ್ಟುತ್ತದೆ.

ಹೀಗೆ ಲಕ್ಷಾಂತರ ಜೀವಕೋಟಿಯನ್ನು ದಾಟಿದ ಜೀವ ಕೊನೆಗೆ ಮಾನವ ವೇಷ ಧರಿಸುತ್ತದೆ.

ಮಾನವನೆದೆ! ಹಾ! ಆ ನಾಮವೆ ಸುಧೆ!
ಇಲ್ಲಾದರೂ ಗೆದ್ದೆನು ಎಂದೆಳಸಿದೆ

ಮಾನವ ಜನ್ಮ ಪ್ರಾಪ್ತವಾದೊಡನೆಯೆ ತನಗೆ ಮುಕ್ತಿ ದೊರಕಿದುದಾಗಿ, ಶನಿ ರಾಹುವಿನ ಉಡಹಿಡಿತದಿಂದ ಪಾರಾಗಬಹುದಾಗಿ ಜೀವಿ ಭಾವಿಸುತ್ತದೆ. ಪ್ರಾಣಿಕೋಟಿಯಲ್ಲೆಲ್ಲ ಮಾನವ ಸರ್ವಶ್ರೇಷ್ಠನೆಂಬ ಅಹಂಕಾರ ಮೂಲವಾದ ನಂಬಿಕೆ ರೂಢಿಯಲ್ಲುಂಟಷ್ಟೆ. ಏಕೆ ಶ್ರೇಷ್ಠ? ಅನ್ಯಪ್ರಾಣಿಗಳಿಗೂ ಮಾನವನಿಗೂ ಇರುವ ವ್ಯತ್ಯಾಸವೇನು

ಚಿಂತೆಗಳಿವೆ, ಭಾವಗಳಿವೆ, ಕಲೆಯಿದೆ;
ಪ್ರೇಮದ ಮೋಹದ ಪ್ರಣಯದ ಬಲೆಯಿದೆ.
ಮುಕ್ತಿರಾಹುವ ತೊಲಗಿಸಿಕೊಳ್ಳಲು
ಮುಕ್ತಿಚಿಂತೆಯನಾಚೆಗೆ ತಳ್ಳಲು,
ಮತ ಪೂಜೆಗಳಿವೆ, ಮಂತ್ರವಿದೆ;
ಶಾಸ್ತ್ರದ ಕಪಟ ಕುತಂತ್ರವಿದೆ.
ವೇದಾಂತಗಳಿವೆ, ಭಕ್ತಿಯಿದೆ,
ವಾದಜಾಲವಿದೆ, ಯುಕ್ತಿಯಿದೆ!

ಈ ಕಾರಣಗಳಿಂದಾಗಿ ‘ಮಾನವನೆದೆ, ಆ ನಾಮವೆ ಸುಧೆ’ ಎನ್ನುವಂತಾಗುತ್ತದೆ. ದೇವರನ್ನು ಮರೆಯಲು, ದೈವಕೃಪೆಯಿಂದ ದೂರವಿರಲು ಮಾನವ ಕಲ್ಪಿಸಿಕೊಂಡಿರುವ ಉಪಾಯಗಳು ಹಲವಾರು. ಊರು ಕೇರಿ ಮನೆ ಮಠ ತೋಟ ತುಡಿಕೆ, ಸರ್ವಸಜ್ಜಿತವಾದ ಸೈನ್ಯ ಪೋಲೀಸು, ಗಿರಣಿಗಳು, ಅರುವತ್ತನಾಲ್ಕು ವಿದ್ಯೆಗಳು, ಕಾರು ರೈಲು ವಿಮಾನ ನೌಕೆಗಳು, ವಿವಿಧ ವೇಷಭೂಷಣ ಭಕ್ಷ್ಯ ಭೋಜ್ಯಗಳು; ಕೆರೆ ಕಟ್ಟೆ ಕಾಲುವೆಗಳು, ಸಾಮಾಜಿಕ ಸಾಂಸ್ಕೃತಿಕ ರಾಜಕೀಯ ಸಂಸ್ಥೆಗಳು, ಎಲ್ಲಕ್ಕಿಂತ ಮಿಗಿಲಾಗಿ ಗುಡಿ ಚರ್ಚು ಮಸೀದಿಗಳು, ಜಾತಿ ಮತ ಮಂತ್ರ ವರ್ಣಾಶ್ರಮಧರ್ಮಗಳು. ಹೀಗೆಯೇ ಕೊಡುತ್ತಾ ಹೋದಂತೆ ಪಟ್ಟಿ ಅನಂತವಾಗಿ ಬೆಳೆಯುತ್ತದೆ. ಮಾನವನ ವ್ಯಾಮೋಹವನ್ನು ಉಲ್ಬಣಗೊಳಿಸಿ, ಅವನನ್ನು ಪಥ ಭ್ರಷ್ಟನನ್ನಾಗಿ ಮಾಡುವ, ಅವನ ಗುರಿಯನ್ನು ಮಸುಳಿಸುವ ಅವನನ್ನು ಗೊಂದಲಕ್ಕೊಳಗುಮಾಡುವ ಹುನ್ನಾರುಗಳಿವು.

ಈ ಸಾಲುಗಳಲ್ಲಿ ಬರುವ ಮಾತುಗಳು ಬರಿಯ ಹೇಳಿಕೆಗಳಲ್ಲ, ವಿಡಂಬನೆಯ ಗುಳಿಗೆಗಳು. ಕಟಕಿಯ ಕೃಪಾಣಗಳು. ಸಮಾಜದಲ್ಲಿ ರೂಢಮೂಲವಾಗಿರುವ ಮೌಢ್ಯ ಸಂಪ್ರದಾಯಗಳನ್ನೂ, ವಿಚಾರವಿಹೀನ ಆಚರಣೆಗಳನ್ನೂ ವ್ಯಂಗ್ಯದ ಮೂಲಕ ಕವಿ ಬಯಲಿಗೆಳೆದಿದ್ದಾರೆ. ನಮ್ಮ ಜನ ಮಂತ್ರಗಳನ್ನು ನಂಬಿದ್ದಾಯಿತು. ತಂತ್ರಗಳನ್ನು ನಡೆಸಿ ದ್ದಾಯಿತು, ಸಿಕ್ಕ ಸಿಕ್ಕ ಕಲ್ಲುಗಳಿಗೆಲ್ಲ ಕೈಮುಗಿದದ್ದಾಯಿತು, ವರ್ಷಗಟ್ಟಲೆ ಅರಮನೆ ಗುರುಮನೆಗಳಲ್ಲಿ ವಾದಗಳನ್ನು ಬೆಳೆಸಿದ್ದಾಯಿತು, ಪಂಚಾಂಗ ನೋಡಿಸಿದ್ದಾಯಿತು; ಭೂತ ಭೇತಾಳಗಳಿಗೆ ಮಾತ್ರವಲ್ಲ, ಕಂಡು ಕೇಳಿದ ದೇವತೆಗಳಿಗೆಲ್ಲ ಹರಕೆ ಕಾಣಿಕೆ ಹೊತ್ತದ್ದಾಯಿತು ಹೆಜ್ಜೆಗೊಂದು ಮಠ ಕಟ್ಟಿದ್ದಾಯಿತು, ಅನೇಕ ಮತ ಹರಕೆಗಳನ್ನು ಸೃಷ್ಟಿಸಿದ್ದಾಯಿತು, ಕಾವಿ ಜನಿದಾರ ಶಿವದಾರ ಕ್ರೂಸೆ ಧರ್ಮಮಂದಿರಗಳ ಹೆಸರಿನಲ್ಲಿ ಸುಲಿಗೆ ಮಾಡಿದ್ದಾಯಿತು. ಇಷ್ಟಾದರೂ ಮಾನವನಲ್ಲಿ ವಿವೇಕ ಮೂಡಲಿಲ್ಲ, ವಿಚಾರ ಉದಿಸಲಿಲ್ಲ. ಇವೆಲ್ಲವೂ ಮಾನವನನ್ನು ಭಗವಂತನಿಂದ ದೂರಗೊಳಿಸುವ ಸಾಧನಗಳಾಗಿವೆಯೇ ಹೊರತು, ಸಾಕ್ಷಾತ್ಕಾರದ ಮಾರ್ಗಗಳಾಗಿಲ್ಲ. ಕಪಟ, ಕುತಂತ್ರ, ಜಾಲ, ಯುಕ್ತಿ ಮೊದಲಾದ ಪದಗಳು ವಾಚ್ಯವಾಗಿಯೇ ವಿಡಂಬನೆಯನ್ನು ಹೊರಹೊಮ್ಮಿಸುತ್ತವೆ.

ಮುಂದೆ ಶೈಶವದಿಂದ ಹಿಡಿದು ವೃದ್ಧಾಪ್ಯದವರೆಗೆ ವಿವಿಧಾವಸ್ಥೆಗಳಲ್ಲಿ ಮಾನವನ ಮುಂದೆ ಸುಳಿಯಬಹುದಾದ ಕಾಂಚನಮೃಗಸದೃಶವಾದ ಆಶೆ ಆಮಿಷಗಳು ಪ್ರಾತಿನಿಧಿಕ ರೂಪದಲ್ಲಿ ನಿರೂಪಣೆಗೊಂಡಿವೆ. ಮೊಲೆಹಾಲನ್ನು ಕುಡಿಯುವ ಹಿಗ್ಗು, ಅಲ್ಲ ಸಲ್ಲದ ಬಯಕೆಯ ಸಿಗ್ಗು, ನವನವ ಪರಿಚಯಗಳ ಸಂತೋಷ, ಗೆಳೆಯರ ಕ್ರೀಡೆಯ ಹಾಸ ವಿಲಾಸ ಇವೇ ಮುಂತಾದ ಮಾಧುರ್ಯಗಳಲ್ಲಿ ಮನ ಮೈಮರೆಯುತ್ತದೆ. ಆಮೇಲೆ ಎದೆಯೊಲುಮೆಯ ಚಿಲುಮೆಯ ಹೆಣ್ಣು ಮುಕ್ತಿಯ ಕಣ್ಣಿಗೆ ಹಿಡಿಮಣ್ಣು ಆಗುತ್ತದೆ.

ಬಿಂಬಾಧರದಾಮೋದದ ಕರೆಯಲಿ;
ಮುಕ್ತಿಯ ಕಣ್ಣಿಗೆ ಮಣ್ಣೆಸೆದೆ!

ನೆಂದು ಸಾರುತ್ತದೆ ಜೀವ. ಆಮೋದ ಪ್ರಮೋದಗಳಿಗೆ ಶಾಪವಾಗಿ ವೃದ್ಧಾಪ್ಯ ಸನ್ನಿಹಿತವಾದಾಗ ವೈರಾಗ್ಯದ ಯಮಬಾಹು ಜೀವವನ್ನು ತಬ್ಬುತ್ತದೆ. ಆಗಲಾದರೂ ಅದಕ್ಕೆ ಬುದ್ದಿ ಬರುತ್ತದೆಯೆ? ಇಲ್ಲ, ಹಿಂದಿನ ವಿಡಂಬನ ಸೂತ್ರ ಮತ್ತೆ ಮುಂದುವರಿಯುತ್ತದೆ.

ತತ್ತ್ವ ವಿಚಾರದ ಗಲಭೆಗೆ ದುಡುಕಿದೆ;
ಜಪತಪ ಪ್ರಾರ್ಥನೆ ಧ್ಯಾನವ ತುಡುಕಿದೆ;
ಮುಕ್ತಿಯ ಹಾದಿಗೆ ಎಡರನು ಅಡಕಿದೆ!
ಅಯ್ಯೋ, ತತ್ತ್ವದ ಮೋಸವು ಕೂಡ,
ಅಯ್ಯೋ, ಧರ್ಮದ ವೇಷವು ಕೂಡ,
ವಂಚಿಸಲಾರದೆಹೋದುವೆ ನಿನ್ನನು?

ಇಲ್ಲಿಯ ವ್ಯಂಗ್ಯ ಸ್ಫಟಿಕಸ್ಪಷ್ಟ. ಕವಿಯ ಆಕೃತಿಮ ಮನಸ್ಸಿನ ಪಾರಿಶುದ್ಧ್ಯದಿಂದಾಗಿ ಭಾಷೆ ನಿಚ್ಛಳವಾಗಿದೆ; ಭಾವಾಲೋಚನೆಗಳು ಸ್ಪಷ್ಟವಾಗಿದ್ದಲ್ಲಿ ಮಾತೂ ಪ್ರಸನ್ನವಾಗಿರುತ್ತದೆ. ದುಡುಕಿದೆ; ತುಡುಕಿದೆ ಎನ್ನುವ ಕ್ರಿಯೆಗಳು ಜೀವದ ತಳಮಳ ಬೇಗುದಿಗಳನ್ನೂ ‘ಗಲಭೆ’ ತತ್ತ್ವ ವಿಚಾರದ ಶುಷ್ಕತೆಯನ್ನೂ ಜತೆಗೆ ಮನಸ್ಸಿನ ಸಂಘರ್ಷ ಸಂಕ್ಷೋಭೆಗಳನ್ನೂ, ಅದರ ನಿಷ್ಪ್ರಯೋಜಕತೆಯನ್ನೂ ಸೂಚಿಸುತ್ತವೆ. ‘ಎಡರನು ಅಡಕಿದೆ’ ಎನ್ನುವ ಮಾತುಗಳು ಜೀವಿಯ ಧಾರ್ಷ್ಟ್ಯವನ್ನೂ ನಿರಾಶೆಯನ್ನೂ ಪ್ರಕಟಿಸುತ್ತವೆ. ತಾನು ಹಿಡಿದ ಧರ್ಮ ಮತ್ತು ಕಂಠಪಾಠಮಾಡಿದ ತತ್ತ್ವಗಳು ದೈವವನ್ನು ವಂಚಿಸಲಿಕ್ಕೆ ಹೂಡಿದ ಸನ್ನಾಹವೆಂದು ಕೊನೆಗೆ ಅದಕ್ಕೆ ಮನವರಿಕೆಯಾಗುತ್ತದೆ. ಸಮಾಜದಲ್ಲಿ ಸದಾ ಮತಧರ್ಮಗಳ ಸೋಗಿನಲ್ಲಿ ತಾಂಡವ ವಾಡುತ್ತಿರುವ ಕಾಪಟ್ಯಕುತಂತ್ರಗಳಿಗೆ ಈ ಮಾತುಗಳು ಕನ್ನಡಿಯಂತಿವೆ. ತನ್ನ ಕಲ್ಪ ಕಲ್ಪಾಂತರಗಳ ಮೂಢಸಾಹಸವೆಲ್ಲ ಮಣ್ಣುಗೂಡಿದ ನಂತರ

ಇದೊ! ಶರಣಾದೆನು! ನಾಸೋತೆ!
ನುಂಗೆನ್ನನು! ತಪ್ಪಲಿ ರೋತೆ

ಎಂದು ಸೋಲನ್ನೊಪ್ಪಿಕೊಳ್ಳುತ್ತದೆ. ದೊಡ್ಡದರೊಡನೆ ಕಾದಾಡಿ ಅನುಭವಿಸುವ ಸೋಲು ಗೆಲವಿಗಿಂತ ಮಹತ್ತರವಾದುದು; ಅದು ನಿಜಕ್ಕೂ ಸೋಲಲ್ಲ, ಗೆಲವು. ಶರಣಾಗುವ ಬಗೆ ಜೀವದಲ್ಲಿ ತಲೆದೋರಿದಕೂಡಲೇ ಅದು ಊರ್ಧ್ವಮುಖಿಯಾಗುತ್ತದೆ ಆರೋಹಣಾಸಕ್ತ ವಾಗುತ್ತದೆ. ಆಗದಕ್ಕೆ ಯಾವ ಭಯವೂ ಇಲ್ಲ. ತಾರೆಗಳುದುರಲಿ, ಸಾಗರ ಹಾರಲಿ, ಆಗಸವೇ ಕಳಚಿ ಬೀಳಲಿ, ಯಾವುದಕ್ಕೂ ಅದು ಜಗ್ಗುವುದಿಲ್ಲ. ‘ಶೂನ್ಯದ ತೃಷೆಯಾವೇಗದಲಿ’ ಅದು ಕಡುನಿಷ್ಠೆಯಿಂದ ಮೇಲೇರುತ್ತದೆ.

ಉತ್ತಮ ಪುರುಷ ಪ್ರಯೋಗದಿಂದ ಜೀವಾತ್ಮ ಪರಮಾತ್ಮಗಳ ನಿಕಟ ಸಂಬಂಧ ಸ್ಪಷ್ಟವಾಗಿ ಮೈದೋರುವುದಲ್ಲದೆ, ಗಾಳಿ ಗಾಳಿಯಾಗಿ ಆವಿ ಆವಿಯಾಗಿ ತೇಲುತ್ತಿರುವ ಭಾವನೆಗಳಿಗೆ ಮೂರ್ತತ್ವ ಲಭಿಸಿದಂತಾಗುತ್ತದೆ, ಅಲೌಕಿಕಾನುಭವಗಳಿಗೆ ಶರೀರವೊದಗಿ ದಂತಾಗುತ್ತದ. ಆತ್ಮಕಥನದಿಂದಾಗಿ ಜೀವ ಮತ್ತು ಓದುಗರ ನಡುವಣ ಪರಿಚಯ ಗಾಢವಾಗಿ ಸಂವಹನ ಸುಲಭವಾಗುತ್ತದೆ; ಅತೀಂದ್ರಿಯಾನುಭವಗಳು ಸೇಂದ್ರಿಯಾನುಭವಗಳಾಗಿ ಪರಿವರ್ತಿತವಾಗುತ್ತವೆ. ಇಲ್ಲಿಯ ಗಹನ ತತ್ತ್ವಗಳು ಜೀವದ ಸ್ವಾನುಭವಗಳಾದ್ದರಿಂದ ಅವುಗಳು ಸತ್ಯವೆಂಬ, ನಿಖರವಾದುವೆಂಬ. ಧ್ಯಾನ ಸಾಧನೆಗಳ ಮೂಲಕ ಅವು ಎಲ್ಲರ ಅನುಭವಕ್ಕೆ ಬರಬಹುದಾದ ಸಂಗತಿಗಳೆಂಬ ಭಾವನೆ ಮೂಡದಿರದು. ಸಂಕೇತ ಪ್ರತೀಕಗಳಂತು ಭಾವಾಲೋಚನೆಗಳ ಅಭಿವ್ಯಕ್ತಿಗೆ ಸಮರ್ಥ ಮಾಧ್ಯಮವಾಗುತ್ತವೆ. ಇಲ್ಲಿ ಕ್ರಿಯೆಯ ಮೂಲಕವೇ ಕತೆ ವೇಗ ವೇಗವಾಗಿ ಹಿಗ್ಗುತ್ತದೆಯಾದ್ದರಿಂದ ಇದನ್ನು ಕಥನ ಕಾವ್ಯವೆಂದು ಕರೆಯಲಡ್ಡಿಯಿಲ್ಲ. ಜೀವನದ ಸಾಹಸ ಯಾತ್ರೆಗೆ ಇಡೀ ಕಾವ್ಯವೇ ಒಂದು ಪ್ರತಿಮೆಯಾಗಿ ವ್ಯವಹರಿಸುತ್ತದೆ.

ಈ ಕವಿತೆ ಮಂದಾನಿಲದ ಧಾಟಿಯಲ್ಲಿ ಹರಿಯುತ್ತದೆ. ಕೆಲವು ಕಡೆ ಅದು ಭಾವಾಂತರಕ್ಕನುಗುಣವಾಗಿ ಭಾಮಿನಿಯ ಗತಿಗೆ ತಿರುಗಿ, ಏಕತಾನತೆಯನ್ನು ಮುರಿಯುತ್ತದೆ:

ಮೃತ್ಯು. ಕಾತರ. ವೇಗ. ದಲಿ
ಮಧುರ. ಮೋಹನ. ಮಾಯೆ. ಮುಂಗಡೆ
ಮುಕ್ತಿ. ರಾಹುವ. ಛಾಯೆ. ಹಿಂಗಡೆ

ಯಾವುದಾದರೂ ಭಾವಕ್ಕೆ ಒತ್ತುಕೊಡಬೇಕಾದ ಸಂದರ್ಭವೊದಗಿದಾಗ ಕೊನೆಯ ಒಂದು ಗಣಕ್ಕೆ ಬಡಲಾಗಿ ಒಂದೋ ಎರಡೋ ಅಕ್ಷರಗಳು ಬರಬಹುದು. ಆಗ ವಾಚನದ ಅಥವಾ ಹಾಡುವ ಫಕ್ಕಿಯಿಂದ ಒಂದು ಗಣದ ಅವಧಿಗೆ ಅವುಗಳನ್ನೆಳೆಯಬೇಕಾಗುತ್ತದೆ.

ಅಟ್ಟಿ. ಬಂದಿತು. ಬಂದಿತು. ಅಟ್ಟಿ

ಇಂಥ ಕಡೆಯೂ ಮೂರು ಮಾತ್ರೆಗಳ ಗಣಗಳನ್ನು ನಾಲ್ಕು ಮಾತ್ರೆಗಳಂತೆ ಉಚ್ಚರಿಸಬೇಕಾ ಗುತ್ತದೆ. ಹೀಗೆ ಉಚ್ಚರಿಸಬಹುದಾದರೂ ಭಾವಾಲೋಚನೆಗಳ ಗತಿಗೆ ತಕ್ಕಂತೆ ಮಾತುಗಳು ಕುಣಿಯತ್ತವೆನ್ನಬಹುದಾಗಿದೆ. ಗಣ ಮಾತ್ರೆಗಳ ವಿಶಿಷ್ಟವಿರಚನೆಯ ಮೂಲಕ ಭಾವಾರ್ಥ ಲಯಗಳನ್ನು ಹೊರಹೊಮ್ಮಿಸುವಲ್ಲಿ, ಭಾವಾಲೋಚನೆಗಳಲ್ಲಿ ಹೊಸ ತಿರುವು ಸಾಧಿಸುವಲ್ಲಿ, ಆ ಮೂಲಕ ಹೊಸ ಹೊಸ ಗತ್ತು ಮೋಡಿಗಳನ್ನು ಪ್ರದರ್ಶಿಸುವಲ್ಲಿ ಕಾಣುವ ಕವಿ ಕೌಶಲ ಅಸಾಧಾರಣವಾದದ್ದು.

ಅಯ್ಯೋ ಎಲ್ಲಿ?
ಇಲ್ಲ!
ಇಲ್ಲಿಯು ಸುಖವಿಲ್ಲ!

ಇಂಥ ಕಡೆಗಳಲ್ಲಿ ಒಂದು, ಎರಡು ಅಥವಾ ಮೂರು ಗಣಗಳೇ ಒಂದೊಂದು ಚರಣದ ಸ್ಥಾನದಲ್ಲಿ ನಿಲ್ಲುವುದರಿಂದ ಭಾವದ್ಯೋತನ ಸ್ವಾರಸ್ಯ ಪೂರ್ಣವಾಗಿ ಸುಲಭ ಸಾಧ್ಯ ವಾಗುತ್ತದೆ. ಇಂಥ ರಚನೆಗಳಿಂದ ಪದಗಳಲ್ಲಿ ಸುಪ್ತವಾಗಿರುವ ಭಾವ ಜಾಗೃತಗೊಳ್ಳುತ್ತದೆ; ಭಾವಾಭಾವವಿದ್ದರೆ ತುಂಬಿಕೊಳ್ಳುತ್ತದೆ.

ಅಂತ್ಯ ಮತ್ತು ಅಂತರ ಪ್ರಾಸಗಳು ಈ ಛಂದಸ್ಸಿನ ಮತ್ತೊಂದು ವಿಶೇಷ; ಪಾತಾಳದ ಕಾಲದ, ತೆರದಲಿ-ಭರದಲಿ-ವೇಗದಲಿ-ಹಾಸದಲಿ, ಮುಂಗಡೆ-ಹಿಂಗಡೆ ಓಡಿದೆ-ಮಾಡಿದೆ, ತಡೆವುದೆ-ಬಿಡುವುದೆ, ಛಲದಲಿ-ಕೆಲದಲಿ, ಮುದುಗಿತು-ಹುದುಗಿತು, ಚೇತನಕಾಮಿ-ಚಿರನವಗಾಮಿ, ಎಳಸಿದೆ-ಬಳಸಿದೆ, ಪ್ರಾಸವಿಲ್ಲದ ಪಂಕ್ತಿಗಳೇ ವಿರಳ. ಒಮ್ಮೊಮ್ಮೆ ಈ ಪ್ರಾಸ ಒಂದು ಎರಡನೆಯ ವಾಕ್ಯಗಳಲ್ಲಿರದೆ, ಒಂದು ನಾಲ್ಕನೆಯ ವಾಕ್ಯಗಳಲ್ಲಿರಬಹುದು: ಒಲ್ಲೆ-ಬಲ್ಲೆ, ಬೇಕು-ಬೇಕು. ಒಳ ಪ್ರಾಸಗಳಂತು ಸಹಜವಾಗಿ ಭಾವಾರ್ಥಗಳಿಗೆ ಭಂಗವಾಗದಂತೆ ವಿಪುಲವಾಗಿ ಸಮನಿಸುತ್ತವೆ : ಬರಸಿಡಿಲಿನ ಭೀಷಣರೋಷದಲಿ, ಮಧುರ ಮೋಹನ ಮಾಯೆ ಮುಂಗಡೆ, ಹಿಂದಕೆ ತಿರುಗದೆ ನೋಡದೆ ಓಡಿದೆ. ಹಲವು ಸಾಲುಗಳಲ್ಲಿ ಇಂಥವು ಹಿಂಡು ಹಿಂಡಾಗಿ ಬರುತ್ತವೆ.

ಈ ಕವನ ಪ್ರಾರಂಭವಾಗುವುದೆ ಕ್ರಿಯಾಪದದಿಂದ. ‘ಧುಮುಕಿದೆ’ ಎನ್ನುವ ಪದವೇ ಒಂದು ವಾಕ್ಯವಾಗುತ್ತದೆ. ಇಡೀ ಕವಿತೆಯ ರಹಸ್ಯವೇ ಇದರಲ್ಲಿ ಹೆಪ್ಪುಗಟ್ಟಿದಂತಿದೆ; ಜೀವದ ಪತನ ಸೂಚಿಸುತ್ತದೆ. ಅದು ಕ್ರಿಯೆ ಮಾತ್ರವಲ್ಲ, ಪತನದ ಸಂಕೇತವೂ ಅಹುದು. ಕರ್ತೃ ಕರ್ಮಪದಗಳಿಂದ ಸುತ್ತುವರಿದಿದ್ದರೆ ಅದರ ಸಾಂಕೇತಿಕತೆಗೆ ಭಂಗವೊದಗುತ್ತಿತ್ತು. ಅದರ ಪ್ರಭಾವ ಕುಗ್ಗುತ್ತಿತ್ತು. ಆ ಪದದ ವಿರಾಮದ ನಂತರ ವಾಚಕರ ಮನಸ್ಸಿನಲ್ಲಿ ಭಯ ಸಂದೇಹ ಕಾತರತೆಗಳು ಮೂಡುತ್ತವೆ. ನಿಜ. ಮೂಡಬೇಕೆಂಬುದೇ ಕವಿಯ ಆಶಯ. ಮುಂದೊದಗುವ ಪತನದ ತೀವ್ರತೆಯನ್ನು ಗ್ರಹಿಸಿ ಭರಿಸಬೇಕಾದರೆ ಓದುಗನ ಮನಸ್ಸು ಅಣಿಗೊಳ್ಳಬೇಕಾಗುತ್ತದೆ. ‘ಘನತಿಮಿರದ ಪಾತಾಳದ ಗರ್ಭಕೆ ಧುಮುಕಿದೆ’ ಎಂಬ ಮಾತುಗಳಿಂದ ಪತನದ ಸ್ವರೂಪ ಮನದಟ್ಟಾಗುತ್ತದೆ. ಈ ಪ್ರಥಮ ವಾಕ್ಯ ಪ್ರಾರಂಭದ ಕ್ರಿಯಾಪದವನ್ನೂ ಅನಂತರದ ವಾಕ್ಯಗಳನ್ನೂ ಕೂಡಿಸುವ ಕೊಂಡಿಯಂತಿದೆ; ಅನಂತರದ ಚರಣಗಳು ಅದಕ್ಕೆ ಭಾಷ್ಯದಂತಿವೆ.

ಮೇಲುನೋಟಕ್ಕೆ ಪಾದಗಳ ಪುನರಾವರ್ತನೆ ತುಸು ಹೆಚ್ಚಾಯಿತೇನೊ ಎಂದೆನಿಸದಿರ ಲಾರದು. ಮೊದಲ ಆರು ಪಾದಗಳು ಮೂರು ಸಾರಿ ಬರುತ್ತವೆ. ಕೊಟ್ಟ ಕೊನೆಯ ಪುನರಾವರ್ತನೆ ಕಥೆ, ಕಥೆಯ ಚೌಕಟ್ಟು, ಗುರಿ, ದರ್ಶನ ಈ ಎಲ್ಲ ದೃಷ್ಟಿಗಳಿಂದಲೂ ವಿಹಿತ ಮತ್ತು ಅನಿವಾರ್ಯವೆಂದು ಯಾರಿಗಾದರೂ ಅನಿಸಬಹುದು. ಆದರೆ ನಡುವಣ ಪುನರಾವರ್ತನೆಯೋ? ಕೆಲವರ ದೃಷ್ಟಿಯಲ್ಲಿ ಅದು ತ್ಯಾಜ್ಯವೆನಿಸಬಹುದು. ಈ ಭಾಗ ಇಲ್ಲಿ ಪಲ್ಲವಿಯ ಕೆಲಸವನ್ನು ನಿರ್ವಹಿಸುತ್ತದಲ್ಲದೆ, ಜೀವಾತ್ಮನಿಗೆ ಆಗಾಗ್ಗೆ ಪತನದ ನೆನಪು ಮಾಡಿಕೊಡುವ ಸಲುವಾಗಿ ಅದು ಅತ್ಯವಶ್ಯವೆನಿಸುತ್ತದೆ. ‘ಮುಕ್ತಿರಾಹುವ ಛಾಯೆ ಹಿಂಗಡೆ’ ಎಂಬ ಪದಗುಚ್ಛಗಳ ಮರುಬಳಕೆಯ ಉದ್ದೇಶವೂ ಅಂಥದೇ ಆಗಿದೆ. ಪತನ ಮತ್ತು ದೈವಕೃಪೆಗಳ ಪ್ರಜ್ಞೆ ಜೀವವನ್ನೆಂತು ಅಕ್ರಮಿಸಿಕೊಂಡಿದೆಯೋ, ಅದೇ ಕವನದ ಕೇಂದ್ರ ಬಿಂದುವಾಗಿ, ಅದನ್ನೆಲ್ಲ ಆವರಿಸಿಕೊಂಡು ಅದರ ಸಂಕೀರ್ಣ ವೈವಿಧ್ಯಕ್ಕೆ ಕಾರಣವಾಗಿದೆ.

 


[1]     ‘Hound of Heaven’ ಎನ್ನುವುದು ಆಂಗ್ಲ ಮೂಲ. ಅದನ್ನು ಕುವೆಂಪು ಅವರೇ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ರೂಪಾಂತರವಾದರೂ, ಹೇಳದಿದ್ದರೆ ಅದು ಸ್ವತಂತ್ರ ಕವಿತೆಯೆಂದೇ ವಾಚಕರಿಗೆ ಹೊಳೆಯದಿರದು. ಉದ್ದಕ್ಕೂ ಮೂಲದ ಛಾಯೆ ಹರಿಯುವುದಾದರೂ, ಅನೇಕ ಕಡೆ ಭಾಷೆ ಭಾವನೆಗಳಲ್ಲಿ ಭಾಷಾಂತರಕಾರರು ಸ್ವಾತಂತ್ರ್ಯವಹಿಸಿದ್ದಾರೆ. ಭಾರತೀಯ ಸಂಸ್ಕೃತಿಗನುಗುಣವಾದ ಉಪಮಾ ರೂಪಕ ಸಂಕೇತ ಪ್ರತಿಮೆಗಳನ್ನು ಬಳಸುತ್ತಾರೆ. ಇದಕ್ಕೆ ಮುಂಚೆಯೇ ಮುಕ್ತಿರಾಹು ರಚಿತವಾಗಿತ್ತೆಂಬುದನ್ನು ಮರೆಯಲಾಗದು, Hound of Heaven ಎನ್ನುವ ಶಿರೋನಾಮೆಯ ಭಾಷಾಂತರದಲ್ಲಿಯೇ ಕವಿಯ ಸ್ವಾತಂತ್ರ್ಯ ಸ್ಪಷ್ಟವಾಗಿ ಕಣ್ಗಾಣುತ್ತದೆ. ಅದು ದೇವಶ್ವಾನವಾಗದೆ ದೇವಕೇತುವಾಗಿದೆ, ಮುಕ್ತಿ ರಾಹುವಿಗೆ ತಾಳೆಯಾಗುತ್ತದೆ.

[2]     ತಿಮಿರಕ್ಕೆ ರವಿ ದಸ್ಯು
ಜ್ಞಾನಮಜ್ಞಾನಕ್ಕೆ ದಸ್ಯು. ಮಾಯೆಯನಳಿಸಿ
ಮನುಜಹೃದಯವನಾಕ್ರಮಿಸುತಾತ್ಮಮಂ ತನ್ನ
ಕೃಪೆಗುಯ್ವ ಪರಮಾತ್ಮನುಂ ದಸ್ಯು
– ಶ್ರೀ ರಾಮಾಯಣದರ್ಶನಂ, ಪುಟ ೧೮೬

[3]     ಶ್ರೀರಾಮಾಯಣದರ್ಶನಂ, ಪುಟ ೩೧೧

[4]     ಶಿಲೆಯೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಶಬ್ದದಂತೆ ಗೊಹೇಶ್ವರಾ, ನಿಮ್ಮ ಶರಣ ಸಂಬಂಧ.

[5]     ಶ್ರೀರಾಮಾಯಣದರ್ಶನಂ, ಪುಟ ೭೬೮.

[6]     ಅದೇ, ೭೯೩.

[7]     ಕರ್ಣಾಟಕ ಭಾರತ ಕಥಾಮಂಜರಿ, ಉದ್ಯೋಗಪರ್ವ ೭೫.

[8]     ದುರ್ಯೋಧನ ಧೃತರಾಷ್ಟ್ರನೊಡನೆ ನುಡಿಯುವ ಈ ಮಾತುಗಳನ್ನು ಗಮನಿಸಬಹುದು.
ಸಂಗಿಯೆನಿಸನು ಜಗವ ಹುಟ್ಟಿಸಿ ನುಂಗಿದೊಡೆ ನಿಷ್ಕರುಣಿಯೆನಿಸನು,
ಅಂಗರಕ್ಷೆಯ ಮಾಡಿ ಮೋಹಿತನಲ್ಲ ಮೂಜಗಕೆ
ಜಂಗಮಸ್ಥಾವರಕೆ ಚೈತನ್ಯಾಂಗರಕ್ಷನು ಘನಕೆ ಘನ ಅಣು
ವಿಂಗೆ ತಾನಣುವೆನಿಪ ಪರತರ ವಸ್ತು ನೋಡೀತ    ಅದೇ ಪುಟ ೭೦
ಎನ್ನ ಹೃದಯದೊಳಿರ್ದು ಮುರಿವನು ಗನ್ನದಲಿ ಸಂಧಿಯನು ರಿಪುಗಳೊ
ಳಿನ್ನು ತನ್ನವರವರೊಳಿರ್ದು ನುಡಿವನೀ ಹದನ
ಭಿನ್ನನಂತಿರೆ ತೋರಿ ಭಿನ್ನಾಭಿನ್ನನೆನಿಸಿಯೆ ಮೆರೆವ ತಿಳಿಯಲ
ಭಿನ್ನನೈ ನಾವಿನ್ನಂಜಲೇಕೆಂದ           ಅದೇ ೭೧.

[9]     ಅಗ್ನಿ ಹಂಸ ಪುಟ ೮೯.

[10]    ಅದೇ (ಶತಮಾನ ಸಂಧ್ಯೆ) ಪುಟ ೮೫

[11]    ಶ್ರೀರಾಮಾಯಣದರ್ಶನಂ, ಪುಟ ೩೨೬

[12]    ಕೊಳಲು (ಮೊದಲ ಮುದ್ರಣ); ಮುಂದಕೆಲ್ಲಿಗೆ? ಪುಟ ೧೩

[13]    ಅದೇ ಕವನ ಸಂಗ್ರಹದ ನಟರಾಜದಲ್ಲಿ ಸೃಷ್ಟಿಯ ವಿಕಾಸದ ವಿವರಣೆಯಿವೆ. ಅದನ್ನೋದಿದಾಗ ಈ ಪಂಕ್ತಿಗಳ ಅಸ್ಪಷ್ಟತೆ ಮಾಯವಾಗುವ ಸಂಭವವುಂಟು. ಶಿಲಾತಪಸ್ವಿ ಕವನದ ಕೆಳಗಣ ಸಾಲುಗಳಲ್ಲಿಯೂ ಇದೇ ಭಾವನೆ ಮಿಡಿಯುತ್ತದೆ.

ಕಾಲವಲ್ಲಿರಲಿಲ್ಲ; ದೇಶವಲ್ಲಿರಲಿಲ್ಲ;
ಗ್ರಹಕೋಟಿ ಶಶಿಸೂರ್ಯ ತಾರಕೆಗಳಿರಲಿಲ್ಲ;
ಬೆಳಕು ಕತ್ತಲೆ ಎಂಬ ಭೇದಭಾವವಿನಿತಿರಲಿಲ್ಲ!
ಮಮಕಾರ ಶೂನ್ಯದಲಿ ಮುಳುಗಿದ್ದುವೆಲ್ಲ!
ಮೂಡಿದುದು ಮೊದಲು ಮಮಕಾರವೆಂಬುವ ಮಾಯೆ;
ಬೆಂಕೊಂಡು ತೋರಿದುದು ಸೃಷ್ಟಿ ಎಂಬುವ ಛಾಯೆ
ಕಾಲದೇಶದ ಕಡಲ ಕಡೆಹದಲಿ ಸಿಕ್ಕಿ
ಆದಿಮ ಲಯಾಗ್ನಿ ಹೊರ ಹೊಮ್ಮಿದುದು – ಇತ್ಯಾದಿ
ಕಲಾಸುಂದರಿ ಪುಟ ೪೬.

ಇದರ ಜೊತೆಗೆ ಅಗ್ನಿಹಂಸದ ‘ಬಲ್ಲವರದಾರು’ ‘ಋತಚಿನ್ಮೂ ಜಗನ್ಮಾತೆಗೆ!’ ಎಂಬ ಕವನಗಳನ್ನೂ ಗಮನಿಸಬಹುದು. ಇಲ್ಲೆಲ್ಲ ಅದ್ವೈತ ದರ್ಶನದ ಪ್ರಭಾವ ಸಾಂದ್ರವಾಗಿದೆ ಯೆನ್ನುವುದು ಲಕ್ಷಿಸಬೇಕಾದ ವಿಷಯ

[14]    ದೈವೀ ಮತ್ತು ಆಸುರೀಶಕ್ತಿಗಳೆರಡೂ ಮನುಷ್ಯನಲ್ಲಿವೆಯೆಂಬುದು ಸರ್ವಾನುಭವದ ಸಂಗತಿ. ದುಷ್ಠನಿಗೂ ಅನೇಕ ಸಾರಿ ತಾನೆಸಗುವ ಅಕೃತ್ಯ ಮನವರಿಕೆಯಾಗುತ್ತದೆ, ಅವನ ಮನಸ್ಸಿನ ಪಾತಾಳದಲ್ಲಿ ಹುದುಗಿರುವ ದೈವೀ ಶಕ್ತಿ ಸಾಧು ಸಂತರ ಮಹಾತ್ಮರ ಸಂಗ ದೊರೆತಾಗ, ಯುಕ್ತ ಪರಿಸರ ಸಮನಿಸಿದಾಗ ಒಡರಿಕೊಂಡು ಮೇಲ್ಮೆಯ್ಗೆ ಬರುತ್ತದೆನ್ನುವುದಕ್ಕೆ ಶ್ರೀರಾಮಕೃಷ್ಣರ ಶಿಷ್ಯನಾದ ಗಿರೀಶಚಂದ್ರನೂ, ಕಾಡಿನಲ್ಲಿ ಒಬ್ಬಂಟಿಗಳಾದ ಶಾರದಾಮಣಿ ಯನ್ನು ಪತಿಸಾನ್ನಿಧ್ಯಕ್ಕೆ ಮುಟ್ಟಿಸಿದ ಢಕಾಯಿತನೂ ಸಾಕ್ಷಿಯಾಗಿದ್ದಾರೆ, ಬುದ್ಧ, ಕ್ರಿಸ್ತ, ಬಸವೇಶ್ವರ, ಗಾಂಧೀಜಿ ಮೊದಲಾದವರ ಜೀವನದಲ್ಲಿ ಇಂಥ ಹಲವಾರು ನಿರ್ದಶನಗಳನ್ನು ಕಾಣಬಹುದು. ಪರಿಸರಸಂಸ್ಕಾರ ವಶದಿಂದ ಆಸುರೀ ಶಕ್ತಿಯೇ ದೈವೀಶಕ್ತಿಯಾಗಿ ಪರಿಣಮಿಸುತ್ತದೆನ್ನುವ ತತ್ವಕ್ಕೆ ರಾವಣಾಯನವೇ ಪ್ರತಿಮೆಯಾಗಿದೆ.