ಕನ್ನಡದಲ್ಲಿ ವಿಮರ್ಶೆ ಬೆಳೆದು ಬಂದಿರುವ ಮಾರ್ಗವನ್ನವಲೋಕಿಸಿದಾಗ ಸ್ವಜನ ಪಕ್ಷಪಾತದಿಂದ ತುಂಬಿಕೊಂಡಿರುವ ಪಟ್ಟಭದ್ರ ಹಿತಾಸಕ್ತಿಯ ವಿಮರ್ಶೆಗೆ ಅಗ್ರಗಣ್ಯ ಸ್ಥಾನ ವಿರುವುದನ್ನು ಮನಗಾಣಬಹುದು. ಬ್ರಾಹ್ಮಣ ಮತ್ತು ಶೂದ್ರ ಜಾತಿಗಳ ಹೆಸರನ್ನೆತ್ತದೆ, ಸತ್ವವಿಲ್ಲದ ಬ್ರಾಹ್ಮಣ ಸಾಹಿತ್ಯವನ್ನು ಗಗನದೆತ್ತರಕ್ಕೇರಿಸುವ, ಸತ್ವಪೂರ್ಣವಾದ ಶೂದ್ರ ಸಾಹಿತ್ಯವನ್ನು ಪ್ರಪಾತಕ್ಕೆ ದಬ್ಬುವ ಪ್ರಯತ್ನ ಅವಿರತವಾಗಿ ವ್ಯವಸ್ಥಿತವಾಗಿ ಆಸುರೀವಿಧಾನದಲ್ಲಿ ನಡೆದಿದೆಯೆಂಬುದು ಸುಸ್ಪಷ್ಟ. ಇಡೀ ಕನ್ನಡ ಸಾಹಿತ್ಯವನ್ನು ಸಿಂಹಾವಲೋಕನ ಕ್ರಮ ದಿಂದ ಸಂವೀಕ್ಷಿಸಿದಾಗ ಬ್ರಾಹ್ಮಣ ಸಾಹಿತ್ಯಕ್ಕಿಂತ ಬ್ರಾಹ್ಮಣೇತರ ಸಾಹಿತ್ಯ ಗುಣ ಗಾತ್ರದಲ್ಲಿ ಮಹತ್ವಪೂರ್ಣವಾದದ್ದೆನ್ನುವುದರಲ್ಲಿ ಲವಲೇಶವೂ ಸಂದೇಹವಿಲ್ಲ. ಈ ಮಾತು ಆಧುನಿಕ ಸಾಹಿತ್ಯಕ್ಕೂ ಸಮುಚಿತವಾಗಿ ಅನ್ವಯಿಸುತ್ತದೆ. ಆದರೆ ಶೂದ್ರ ಸಾಹಿತಿಯೊಬ್ಬ ಹಿಂದಿನ ಮತ್ತು ಸಮಕಾಲೀನ ಸಾಹಿತ್ಯ ಕೃತಿಗಳನ್ನು ಮೀರಿಸುವ, ಮೆಟ್ಟಿನಿಲ್ಲುವ ಸಾಹಿತ್ಯ ಸೃಷ್ಟಿಯನ್ನು ಪೂರೈಸಿದಾಗ ಅಪವಾದರೂಪವಾಗಿ ಕೆಲವರನ್ನುಳಿದ

[1] ಇತರ ಬ್ರಾಹ್ಮಣ ವಿಮರ್ಶಕರು ಅವನ ಮೇಲೆ ನಾನಾ ವಿಧದ ಖಂಡನೆಯ ಖಡ್ಗಗಳನ್ನು ಬೀಸುತ್ತಾರೆ. ಅಪಪ್ರಚಾರಕ್ಕೆ ಚಕ್ರವ್ಯೆಹವನ್ನು ನಿರ್ಮಿಸಿ ಅವನನ್ನು ಬೇಟೆಯಾಡುತ್ತಾರೆ, ಎಳವೆಯಲ್ಲಿಯೇ ಅವನ ಕಾವ್ಯಪ್ರತಿಭೆಗೆ ವಿಷವೂಡಲು ಪ್ರಯತ್ನಿಸುತ್ತಾರೆ. ‘ಕವಿಗೆ ಕವಿ ಮುನಿವಂ’ ಎಂಬ ಪ್ರಾಚೀನ ಸಾರೋಕ್ತಿ ಇಂದಿಗೂ ಸತ್ಯಸ್ಯ ಸತ್ಯವಾಗಿದ್ದು, ಇಂದಿನ ಕವಿಗಳಿಗೂ ಒಪ್ಪುವಂತಿದೆ. ತಾವು ಕಲಿತ ವಾಮ ವಿದ್ಯೆಯನ್ನೆಲ್ಲ ಖರ್ಚು ಮಾಡಿ, ಗಳಿಸಿದ ಸು-ದುರ್-ಬುದ್ದಿಯನ್ನೆಲ್ಲ ವ್ಯಯಿಸಿ ದೊಂಬರಲಾಗಪಟ್ಟುಗಳನ್ನೆಲ್ಲ ಹಾಕಿದರೂ ಸತ್ಯವನ್ನು ಮಸುಳಿಸುತ್ತೇವೆನ್ನುವ ರಾಹುಕೇತು ಗಳಿಗೆ ಸೋಲು ತಪ್ಪಿದ್ದಲ್ಲ.

Modern Kannda poetry, which is only about ೬೦ years old, has produced two outstanding poets during the period : Datta treya Ramachandra Bendre and Gopalakrishna Adiga. If the first half of the period was Bendre’s the second half definitely belongs to Adiga[2]  ಎಂದು ನಾಚಿಕೆ ಬಿಟ್ಟು, ಮಾನಮರ್ಯಾದೆಗಳನ್ನು ಗಾಳಿಗೆ ತೂರಿ ಸುಳ್ಳು ಹೇಳುವ, ಅಪಸಿದ್ಧಾಂತಗಳನ್ನು ಹರಡುವ, ನಿಜವಾದ ಯೋಗ್ಯತೆಯನ್ನು ನಿರ್ಲಕ್ಷಿಸುವ ಶೌನಕ ಅಥವಾ ಶೌನಿಕ ಪ್ರಜ್ಞಾಪರಂಪರೆಯ ‘ಸಾಹಿತ್ಯ ಶಿರೋಮಣಿ’ಗಳು ಇಂದಿಗೂ ಈ ನಾಡಿನಲ್ಲಿ ವಿಜೃಂಭಿಸುತ್ತಿ ರುವಾಗ ಸತ್ಯನಿಷ್ಠೆಯ ಶೂದ್ರಪ್ರಜ್ಞೆ ಸದಾ ಜಾಗ್ರತವಾಗಿರಬೇಕಾಗಿದೆ. ಅನಂತಮೂರ್ತಿ ಯವರೆಗಿನ ಗೋಕಾಕ ಪರಂಪರೆ ತನ್ನ ವರ್ಗದವರೇ ಕವಿಗಳೆಂದು, ಕುವೆಂಪು ಕವಿಯಲ್ಲವೆಂದು ಹೋದಲ್ಲಿ ಬಂದಲ್ಲಿ ಸಾರುತ್ತ, ಲೋಕವನ್ನು ವಂಚಿಸುತ್ತಿದೆ, ಸಾರಸ್ವತಲೋಕಕ್ಕೆ ದ್ರೋಹವೆಸಗುತ್ತಿದೆ. ಕುವೆಂಪು ಅವರ ‘ಕೊಳಲು’ ಪ್ರಕಟವಾದ ತರುಣದಲ್ಲಿಯೇ ಗೋಕಾಕರು ತಮ್ಮವರಿಗೆ ಅಗ್ರ ಪಟ್ಟ ಕಟ್ಟುವ ಸಲುವಾಗಿ, ತಮ್ಮ ‘ಇಂದಿನ ಕಾವ್ಯದ ಗೊತ್ತುಗುರಿಗಳು’ ಎಂಬ ಕೃತಿಯಲ್ಲಿ ಕುವೆಂಪು ಕವಿತೆಗಳನ್ನು ವಿಕಾರವಾಗಿ ವಿಶ್ಲೇಷಿಸುವ ಮೂಲಕ ನೂತನರಾದ್ಧಾಂತದ ವಿಮರ್ಶೆಯ ಪರಂಪರೆಗೆ ಅಡಿಪಾಯ ತೋಡಿದರು. ಶ್ರೀರಾಮಾಯಣ ದರ್ಶನಂ ಪ್ರಕಟಗೊಂಡಾಗ, ಇಪ್ಪತ್ತನೆಯ ಶತಮಾನದಲ್ಲಿ ಮಹಾಕಾವ್ಯ ರಚನೆ ಸಾಧ್ಯವಿಲ್ಲ ವೆಂದು ಘೋಷಿಸಿ ತೃಪ್ತಿಗೊಂಡವರೂ ಅವರೇ. ಈ ಒಂದು ವರ್ಗದ ಜನ ಕುವೆಂಪು ಅವರನ್ನು ಕಾಲು ಹಿಡಿದೆಳೆದು ಬೀಳಿಸಬೇಕೆಂದು ಪ್ರಯತ್ನಿಸಿದಷ್ಟೂ, ಕುವೆಂಪು ವಟವೃಕ್ಷದಂತೆ, ತ್ರಿವಿಕ್ರಮನಂತೆ ಬೆಳೆದೇ ಬೆಳೆದರು; ಅತ್ಯತಿಷ್ಠದ್ದಶಾಂಗುಲವಾಗಿ ವೃದ್ದಿಗೊಂಡರು. ಕುವೆಂಪು ಅವರ ಅಪಪ್ರಚಾರಕ್ಕಾಗಿಯೇ ಬಳಗಗಳು ಪತ್ರಿಕೆಗಳು ಹುಟ್ಟಿಕೊಂಡುವು. ಸ್ವೋಪಜ್ಞರೂ ಆತ್ಮಪ್ರತ್ಯಯ ಶೀಲರೂ ಆದ ಕುವೆಂಪು ಅವರು ಯಾರ ಬೆದರಿಕೆಗೂ ಸೊಪ್ಪು ಹಾಕದೆ, ಗುರುಕೃಪೆಯಿಂದ ದೈವದತ್ತವಾಗಿ ಬಂದಿದ್ದ ಅಸಾಧಾರಣ ಬುದ್ದಿ ಜ್ಞಾನ ಪ್ರತಿಭೆಗಳನ್ನು ನೆಮ್ಮಿಕೊಂಡೇ ನಿರಂತರ ಸಾಧನೆಯ ಮೂಲಕ ಸಿದ್ದಿಯನ್ನು ಪಡೆದರು.

ನೀನೇರಬಲ್ಲೆಯಾ ನಾನೇರುವೆತ್ತರಕೆ
ಗಲ್ಲಿಯ ವಿಮರ್ಶೆಯೂಳ್ ಕಿವಿಗೆ ಬೀಳುವುದುಂಟೆ?

ಎಂದು ಕವಿಯೆ ತನ್ನ ವಿಮರ್ಶಕರಿಗೆ ಉತ್ತರ ಕೊಟ್ಟದ್ದೂ ಆಯಿತು.

ಒಂದೇ ಒಂದು ವರ್ಗದ ಕೆಲವು ಜಾತ್ಯಂಧರು, ಕಿಡಿಗೇಡಿಗಳು ಮಾತ್ಸರ್ಯಶೂರರು ಮಾತ್ರ ಸುಸಂಘಟಿತರಾಗಿ ಒಂದೇ ಸಮನೆ ಪಿತೂರಿನಡೆಸಿ ಕುವೆಂಪು ಸಾಹಿತ್ಯವನ್ನು ಹಿನ್ನೆಲೆಗೆ ನೂಕಲು, ಅಪಪ್ರಚಾರದ ಧೂಳು ಹೊಗೆ ರಂಪ ಗದ್ದಲಗಳನ್ನೆಬ್ಬಿಸಿದ್ದುಂಟು. ಆದರೂ ಸತ್ವಶೀಲವೂ ಮಹತ್ವಪೂರ್ಣವೂ ಲೋಕಕಲ್ಯಾಣಕಾರಿಯೂ ಆದ ಕುವೆಂಪು ಸಾಹಿತ್ಯ ಆ ಈ ಪೀಡೆಗಳನ್ನೆಲ್ಲ ನಿಭಾಯಿಸಿಕೊಂಡು, ಭೇದಿಸಿಕೊಂಡು, ಇಕ್ಕಿಮೆಟ್ಟಿ, ತೊತ್ತಳದುಳಿದು ನವೋನವವಾಗಿ, ವಿರಾಟ್‌ಶಕ್ತಿಯಾಗಿ ಬೆಳೆಯಿತು. ಪ್ರಗತಿಶೀಲ, ನವ್ಯ ಮೊದಲಾದ ಹಣೆಪಟ್ಟಿ ಕಟ್ಟಿಕೊಂಡವರಿಗಿಂತ ಮಿಗಿಲಾಗಿ, ಅವರಿಗಿಂತ ಮೊದಲೇ ಕುವೆಂಪು ಸಾಹಿತ್ಯ ಪ್ರಗತಿ ಪಥದಲ್ಲಿ, ನವ್ಯರೀತಿಯಲ್ಲಿ ವಿಜೃಂಭಿಸುತ್ತಿತ್ತು. ಸಾಹಿತ್ಯ ಸಿಂಹಾಸನದ ಮೇಲೆ ತಮ್ಮವರನ್ನು ಕೂರಿಸಿ, ಅವರನಂತರ ತಾವೇ ಉತ್ತರಾಧಿಕಾರಿಗಳಾಗುವ, ಶೂದ್ರ ಶಕ್ತಿಯನ್ನು ಹಿಮ್ಮೆಟ್ಟಿಸುವ ಮಹದಾಕಾಂಕ್ಷೆಯೆ ವಿರೋಧಿಗಳ ದುಸ್ಸಾಹಸದ ಗುರಿ. ಐದು ಸಾವಿರ ವರ್ಷಗಳಿಂದ ಶೂದ್ರ ಶಕ್ತಿಗಳನ್ನು ಯಶಸ್ವಿಯಾಗಿ ತುಳಿದಿರುವ ಪುರೋಹಿತಶಾಹಿ ಈಗಲೂ ಶೂದ್ರ ವೇಷದಲ್ಲಿಯೇ, ಶೂದ್ರರ ಜತೆ ಸೇರಿಕೊಂಡೇ ಅದನ್ನು ಮೆಟ್ಟಲು ಪ್ರಯತ್ನಿಸುತ್ತಿದೆಯೆನ್ನುವುದಕ್ಕೆ ಸಮಕಾಲೀನ ಭಾರತೀಯ ಜನಜೀವನದ ಸರ್ವಕ್ಷೇತ್ರಗಳಲ್ಲಿ ನಿದರ್ಶನಗಳು ವಿಪುಲವಾಗಿ ದೊರೆಯುತ್ತವೆ. ಸ್ವಾರ್ಥ ಪರಾಯಣರಾದ, ಸ್ವೋಪಜ್ಞತೆಯಿಲ್ಲದ ಕೆಲವು ಶೂದ್ರರು ತಮ್ಮ ಕಾಲುಗಳ ಮೇಲೆ ನಿಲ್ಲಲು ಶಕ್ತಿಯಿಲ್ಲದೆ ಲಾಂಗೂಲ ಚಾಲನಾಚಾರ್ಯ ಪದವಿಯನ್ನು ಪಡೆದು ಪುರೋಹಿತಾರಾಧನೆಯಲ್ಲಿ ತೊಡಗಿರುವುದೂ ಉಂಟು. ಅಂಥ ಆಚಾರ್ಯರು ಸಹ ಶೂದ್ರಶಕ್ತಿಯ ಏಳ್ಗೆಗೆ ಮಾರಕರಾಗುತ್ತಿದ್ದಾರೆ.

ಮಹಾವ್ಯಕ್ತಿಯೊಬ್ಬನ ತೆಗಳಿಕೆ ಮೂದಲಿಕೆಗಳಿಂದಲೇ ಪ್ರಚಾರ ಪಡೆಯುವ, ಬೆಳಕಿಗೆ ಬರುವ ಕಿರುಕುಳರು ಇತಿಹಾಸದಲ್ಲಿ ದಂಡೆಯಾಗಿ ದೊರಕುತ್ತಾರೆ. ಶೀಘ್ರಕೀರ್ತಿ ಕಾಮಿಗಳು ಶ್ರಮವಿಲ್ಲದ ಪ್ರಯೋಜನ ಪಡೆಯಬಹುದಾದ ಸುಲಭೋಪಾಯವಿದು. ಇದು ಮಾನುಷ ಸಹಜವಾದ ಪ್ರವೃತ್ತಿಯೆಂದು ನಿರ್ಣಯಿಸಲು ಮನೋವಿಜ್ಞಾನಿಯ ವೈದುಷ್ಯ ಬೇಕಾಗಿಲ್ಲ. ಮಹಾಕಾವ್ಯದ ವಿಕೃತ ಟೀಕೆಯ ಮೂಲಕ ತಾವು ಬಹು ಬೇಗ ಪ್ರಸಿದ್ದಿಗೆ ಬರಬಹುದೆಂಬ, ತಮ್ಮವರ ಪ್ರಶಂಸೆಗೊಳಗಾಗಿ ತಮ್ಮ ಕೀರ್ತಿಯೂ ತಟಕ್ಕನೆ ಬಿಚ್ಚಳಿಸುತ್ತದೆಂಬ ಆಲೋಚನೆ ಅನೇಕ ಲೇಖಕರ ಸ್ವಭಾವ ಸಿದ್ಧಗುಣವಾಗಿದೆ. ಬ್ರಾಹ್ಮಣೇತರ ಮಹಾಕವಿಯನ್ನು ತೆಗಳಿದರೆ ತಮಗೆ ಬ್ರಾಹ್ಮಣ ಸಮುದಾಯದಲ್ಲಿ ಬಹುಬೇಗ ಪ್ರಚಾರ ಸಿಗುತ್ತದೆಂಬ ಭಾವನೆಗೆ ವಿರಳಸಂಖ್ಯೆಯ ಶೂದ್ರ ಸಾಹಿತಿಗಳು ಸೆರೆಯಾಗಿರುವುದೂ ಉಂಟು. ಬ್ರಾಹ್ಮಣ ವರ್ಗದ ಸಾಹಿತಿಗಳಿಗೆ ಅಚ್ಚುಮೆಚ್ಚಾದವರು ಮಾತ್ರ ಶ್ರೇಷ್ಠ ವಿಮರ್ಶಕರೆಂಬ ಹೆಸರಿಗೆ ಪಾತ್ರರಾಗುತ್ತಾ ರೆಂಬುದು ಸರ್ವವೇದ್ಯ ಸಂಗತಿ.

ಈ ಆಲೋಚನೆಗಳ ಹಿನ್ನೆಲೆಯಲ್ಲಿ ಸುಧಾಕರರ ‘ಕುವೆಂಪು ಸಾಹಿತ್ಯ ಸಂವೀಕ್ಷಣೆ’ಯ ಲೇಖನಗಳನ್ನು ಅಧ್ಯಯನ ಮಾಡಬಹುದಾಗಿದೆ. ‘ನಮ್ಮ ವಿಚಾರಪರರು ಮತ್ತು ವಿಮರ್ಶೆ’ ಎಂಬ ಪ್ರಥಮ ಲೇಖನವೆ ಅನಂತಮೂರ್ತಿಯವರ ಸೊಕ್ಕು ಮಚ್ಚರ ಡಾಂಭಿಕತನ ಕಿಡಿಗೇಡಿತನಗಳನ್ನು ಮುಲಾಜಿಲ್ಲದೆ ಬಯಲಿಗೆಳೆದಿದೆ. ಅನಂತಮೂರ್ತಿಯವರಿಗೆ ಬೇಂದ್ರೆ ಗೋಕಾಕರೆಂದರೆ ಎಷ್ಟು ಅಚ್ಚುಮೆಚ್ಚೋ ಕುವೆಂಪು ಎಂದರೆ ಅಷ್ಟೇ ಅಲರ್ಜಿ. ಬೇಂದ್ರೆ ಮಾತ್ರ ಕವಿ, ಕುವೆಂಪು ಅಲ್ಲ ಎಂಬ ತಮ್ಮ ಪೂರ್ವಗ್ರಹ ಪೀಡಿತ ಅಚಲ ನಿರ್ಧಾರವನ್ನು ಸಮರ್ಥಿಸಿಕೊಳ್ಳುವುದಕ್ಕೋಸ್ಕರ ಅವರ ರಕ್ತದ ಕಣ ಕಣಗಳಲ್ಲಿ ಸೇರಿಕೊಂಡಿರುವ ಜಾತಿ ಪ್ರಜ್ಞೆ ಹಲವು ದೊಂಬರಲಾಗ ಹಾಕುತ್ತದೆ. ‘ಪರಿಚಯಿಸುವ ಮೊದಲೇಟಿಗೇ ಬೇಂದ್ರೆ ಎಂದು ಹೇಳುವ, ಗೋಕಾಕರೆಂದು ಹೇಳುವ ಅನಂತಮೂರ್ತಿಯವರ ಸಂಸ್ಕೃತಪ್ರಜ್ಞೆ’ ಶೂದ್ರ ಕುವೆಂಪು ಅವರನ್ನು ಮೊದಲೇಟಿಗೆ ಹೇಳೀತು ಹೇಗೆ?’[3] ಎಂಬ ಸುಧಾಕರರ ಪ್ರಶ್ನೆ ಮಾರ್ಮಿಕವಾಗಿದೆ, ವ್ಯಂಗ್ಯಾರ್ಥ ಸಂಪನ್ನವಾಗಿದೆ. ‘ಆರ್ಷೇಯಕಾಲದಿಂದಲೂ ಆಧುನಿಕ ಕಾಲದವರೆಗೆ ಬಣ್ಣ ಬಣ್ಣದ ಮಾತುಗಳನ್ನಾಡುತ್ತಾ ಇಡೀ ಸಮಾಜವನ್ನು ಆಳಿಕೊಂಡು ಬಂದ ವರ್ಗವೊಂದರ ಸರ್ವಲಕ್ಷಣಗಳ ಅವಶೇಷವೇ ಅನಂತಮೂರ್ತಿ’[4] ಎಂಬ ಅವರ ಮಾತಿನಲ್ಲಿ ತಥ್ಯವಿಲ್ಲದಿಲ್ಲ. ೧೯೭೨ನೆಯ ಇಸವಿ ಡಿಸೆಂಬರ್ ೨೪-೨೭ ರಂದು ನಡೆದ ಹತ್ತನೆಯ ಪಿಇಎನ್ ಆಲ್ ಇಂಡಿಯಾ ರೈಟರ್ಸ್‌ ಕಾನ್‌ಫರೆನ್ಸಿನಲ್ಲಿ ಕೇಳುವವರಿದ್ದಾರೆಂದು ಅನಂತಮೂರ್ತಿಯವರು ಮಾಡಿದ ಭಾಷಣದಿಂದ ಕನ್ನಡಿಗರು ತಲೆತಗ್ಗಿಸುವಂತಾಗಿದೆ. ಕುವೆಂಪು ಅವರೊಬ್ಬರು ಅನಾಮಧೇಯರೆಂದೋ ಶೂದ್ರ ಕವಿಯ ಹೆಸರನ್ನುಚ್ಚರಿಸ ಬಾರದೆಂದೋ ತಿಳಿದು, ಅವರ ಹೆಸರು ಹೇಳದೆ, ಅವರ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಬಾರದಿತ್ತೆನ್ನುವ ಧಾರ್ಷ್ಟ್ಯ ಅವರದಾಗಿದೆ. ಇಂಥವರಿಗೆ ‘ಗ್ರಾಮಸಿಂಹ’ ಕವನವೇ ಉತ್ತರವಾಗಬೇಕಾಗಿದೆ. ಸುಧಾಕರರು ಪದರ ಪದರವಾಗಿ ಈ ವಿಮರ್ಶಕ ವರೇಣ್ಯರ ಪೊಳ್ಳುತನವನ್ನು ಅವರ ವಿರೋಧಿಗಳಿಗೂ ಅವರ ಬಗ್ಗೆ ಅನುಕಂಪೆ ಮೂಡುವಂತೆ ಬಯಲಿಗೆಳೆದಿದ್ದಾರೆ. ಶಬ್ದ ಶ್ರೀಮಂತರ ಶ್ರೀಮಂತಿಕೆಗೆ ಮಚ್ಚರಗೊಂಡು ಶಬ್ದ ದರಿದ್ರರನ್ನು ಹೊಗಳುವ ಶಬ್ದ ದರಿದ್ರ ವಿಮರ್ಶಕರ ಬಗ್ಗೆ, ಕನ್ನಡ ಸಾಹಿತ್ಯವನ್ನು ಆಳವಾಗಿ ವ್ಯಾಸಂಗಿಸದೆ, ಕನ್ನಡದ ಮರ್ಜಿಯನ್ನರಿಯದೆ ಸಾಹಿತಿಯ ಪಟ್ಟಕ್ಕೆ ಹಾತೊರೆಯುವವರ ಬಗ್ಗೆ ಹೇಳುವುದೇನಿದೆ? ಸುಧಾಕರರು ಈ ಬಗ್ಗೆಯೂ ಸುಸಮರ್ಥವಾಗಿ ಸದೃಢವಾಗಿ ಉತ್ತರ ಕೊಟ್ಟಿದ್ದಾರೆ. ಹುಟ್ಟಿನಿಂದಲೇ ವಿಚಾರಪರರಾಗಿರುವ, ನುಡಿನಡೆಗಳೊಂದಾಗಿರುವ, ಹಿಂದೂ ಸಮಾಜದ ಮೂಢ ಪದ್ಧತಿಗಳಿಗೆ ಕುಠಾರಪ್ರಾಯರಾಗಿ, ಇಂದಿನ ವಿಚಾರಪರರು ಹುಟ್ಟುವ ಮುನ್ನವೇ ಸಿಡಿದೆದ್ದ ಕುವೆಂಪು ಅವರ ವೈಚಾರಿಕ ಮನೋಧರ್ಮ ಅನಂತಮೂರ್ತಿಯವರ ವಿಚಾರಪರತೆಗಿಂತ ಹೆಚ್ಚು ಸಾಚಾತನ ಹೊಂದಿದೆಯೆಂದು ಸುಧಾಕರರು ಸಂದೇಹಕ್ಕೆಡೆ ಯಿಲ್ಲದಂತೆ ಸ್ಪಷ್ಟಪಡಿಸಿದ್ದಾರೆ.

ಮಂ.ಜಿ.ಕೆ. ಎಂಬ ಮತ್ತೊಬ್ಬ ವಿಮರ್ಶಕ ಬೃಹಸ್ಪತಿಗಳ ಕಣ್ಣಿಗೆ ‘ಕುವೆಂಪು ಅವರ ಕಾದಂಬರಿಗಳ ತುಂಬ ಕಾಣುವುದು ದೋಷಾಧಿಕ್ಯವೇ ಹೊರತು ಗುಣಾಧಿಕ್ಯವಲ್ಲ’. ‘ಕುವೆಂಪು ಕಾದಂಬರಿಗಳ ಭಾಷೆ’ ಎನ್ನುವ ಪ್ರಬಂಧದಲ್ಲಿ ಸುಧಾಕರರು ಕುವೆಂಪು ಅವರ ಗದ್ಯಶೈಲಿಯ ವೈವಿಧ್ಯಮಯ ಅನನ್ಯ ಸಾಧಾರಣತೆಯನ್ನು ಕುರಿತು ವಿವೇಚಿಸಿದ್ದಾರೆ; ಪೂರ್ವೋಕ್ತ ವಿಮರ್ಶಕರ ವ್ಯಾಖ್ಯಾನದ ಹಿನ್ನೆಲೆಯಲ್ಲಿ ಕುವೆಂಪು ಅವರ ಶೈಲಿಯ ಮಹೋನ್ನತಿಯನ್ನು ಸಾಕ್ಷೀ ಪ್ರಜ್ಞೆಯಿಂದ ಸಾಧಾರವಾಗಿ ಎತ್ತಿ ಹಿಡಿದಿದ್ದಾರೆ. ‘ಕುವೆಂಪು ಅವರ ಕಾದಂಬರಿಗಳಲ್ಲಿ ವೈಚಾರಿಕತೆ’ ಎನ್ನುವ ಲೇಖನದಲ್ಲಿ ‘ಹೂವಯ್ಯನ ವೈಚಾರಿಕತೆ ಆ ಬದುಕಿಗೆ ಖಂಡಿತವಾಗಿಯೂ ಅನಿವಾರ್ಯವಾದದ್ದು, ಸಹಜವಾದದ್ದು’[5] ಎಂದು ಹೇಳುವ ಸುಧಾಕರ ಅವರು ಸಂಕುಚಿತ ಪಂಥದ ವಿಮರ್ಶೆಯ ಬುಡಕ್ಕೆ ಕೊಡಲಿ ಹಾಕಿದ್ದಾರೆ. ಕುವೆಂಪು ಅವರ ವೈಚಾರಿಕ ಮನೋಧರ್ಮದ ಹಲವು ಮಗ್ಗಲುಗಳನ್ನಿಲ್ಲಿ ಸುಧಾಕರರು ಪಾಂಕ್ತವಾಗಿ ವಿವರಿಸಿದ್ದಾರೆ. ಉತ್ತಮ ಸಾಹಿತ್ಯದ ಹಲವಾರು ಅನಿವಾರ್ಯ ಅಂಶಗಳಲ್ಲಿ ವೈಚಾರಿಕತೆಯೂ ಒಂದೆಂಬ ಅವರ ಮಾತು ಮನನೀಯವಾಗಿದೆ. ಕುವೆಂಪು ಅವರು ಬ್ರಾಹ್ಮಣರನ್ನು ಮಾತ್ರವಲ್ಲ, ಅವೈಚಾರಿಕತೆಯ ಕೆಸರುಸುಬಿನಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿರುವ ಎಲ್ಲ ಕೋಮುಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆನ್ನುವ ಸಂಗತಿ ಅವರ ಕಾದಂಬರಿಗಳಲ್ಲಿ ಹೆಜ್ಜೆ ಹೆಜ್ಜೆಗೂ ಸುಸಂವೇದ್ಯವಾಗುತ್ತದೆ. ಮಾನವತೆಗೆ ಮಾರಕವಾಗುವ ಯಾವ ವ್ಯವಸ್ಥೆಯಾದರೂ ಅವರ ಖಂಡನೆಯ ಖಡ್ಗಕ್ಕೆ ಬಲಿಯಾಗುತ್ತದೆ. ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ಬೇರುಬಿಟ್ಟಿರುವ ಮೌಢ್ಯ ಸಂಪ್ರದಾಯಗಳನ್ನು, ಮುಖ್ಯವಾಗಿ ಪುರೋಹಿತಶಾಹಿಯನ್ನು ಅವರಷ್ಟು ನಿರ್ಭೀತಿಯಿಂದ, ನಿರ್ಭಿಡೆಯಿಂದ, ನಿಷ್ಠುರತೆಯಿಂದ ತೀಕ್ಷ್ಣವಾಗಿ ಟೀಕಿಸುವ ಸಾಹಿತಿಗಳು ಕನ್ನಡದಲ್ಲಂತು ವಿರಳ, ಇಲ್ಲವೆಂದರೂ ತಪ್ಪಾಗದು.

‘ನೀನು ಕುವೆಂಪು ಅವರ ಕಾದಂಬರಿಗಳನ್ನು ತೆಗಳಿ ಬರೆ; ಅವನು ಅವರ ಗೀತೆಗಳನ್ನು ಟೀಕಿಸಲಿ; ನಮ್ಮ ಮತ್ತೊಬ್ಬ ಗೆಳೆಯ ಅವರ ನಾಟಕಗಳನ್ನು ದೂರಲಿ; ನಾನವರ ಮಹಾಕಾವ್ಯದ ವಿರುದ್ಧವಾಗಿ ಹೋರಾಟ ನಡೆಸುತ್ತೇನೆ’ ಎಂದು ಈ ಕೆಲವರು ವಿಮರ್ಶಕರು ಮಾತಾಡಿಕೊಂಡು ಮಸಲತ್ತು ಮಾಡುತ್ತಿರುವರೆಂಬುದಂತು ಸುಸ್ಪಷ್ಟ. ರಂಗಪ್ರದರ್ಶನ ಯೋಗ್ಯತೆಯೊಂದನ್ನೇ ದೃಷ್ಟಿಯಲ್ಲಿಟ್ಟುಕೊಂಡು, ಸ್ವಕಪೋಲ ಕಲ್ಪಿತ ಸೂತ್ರಗಳನ್ನೆ ನೆಮ್ಮಿಕೊಂಡು, ಕುವೆಂಪು ಅವರ ನಾಟಕಗಳನ್ನು ಕೆಲವು ವಿಮರ್ಶಕರು ವಿಶ್ಲೇಷಿಸಿದ್ದಾರೆ. ನಾಟಕ ದೃಶ್ಯ ಪ್ರಕಾರವೂ ಅಹುದು, ಶ್ರವ್ಯಪ್ರಕಾರವೂ ಅಹುದೆಂಬುದನ್ನು ಮರೆಯುವಂತಿಲ್ಲ. ನಾಟಕ ಉತ್ತಮ ಸಾಹಿತ್ಯ ಕೃತಿಯೇ ಅಲ್ಲವೇ ಎಂಬ ಸಂಗತಿ ಮೊದಲು ಒರೆಗೊಂಡು ಸಿದ್ಧವಾಗಬೇಕು. ಅದು ಉತ್ತಮ ಸಾಹಿತ್ಯ ಕೃತಿಯಾದ ಪಕ್ಷಕ್ಕೆ, ಸಮರ್ಥ ನಿರ್ದೇಶಕ ಮತ್ತು ಶ್ರೇಷ್ಠ ನಟವರ್ಗ ಆಧುನಿಕ ಕಾಲದ ತಾಂತ್ರಿಕ ವಿಜ್ಞಾನದ ಸೌಕರ್ಯ ಸೌಲಭ್ಯಗಳನ್ನು ಬಳಸಿಕೊಂಡು ಅದನ್ನು ಯಶಸ್ವಿಯಾಗಿ ರಂಗಭೂಮಿಯ ಮೇಲೆ ತರಬಹುದೆನ್ನುವುದರಲ್ಲಿ ಸಂದೇಹವಿಲ್ಲ. ‘ಬೇಡಾದವರ ಕೃತಿಯ ಗುಣವನ್ನೇ ದೋಷವನ್ನಾಗಿ ಪರಿಗಣಿಸಿ ಹತ್ತಿಕೊಂಡು ತುಳಿಯುತ್ತ, ಬೇಕಾದವರ ಕೃತಿಯ ದೋಷವನ್ನೇ ಗುಣವನ್ನಾಗಿ ಪರಿಗಣಿಸಿ ಹೊತ್ತುಕೊಂಡು ಮೆರೆಯುತ್ತ ವಿಜೃಂಭಿಸುತ್ತಿರುವ’[6] ಪುರೋಹಿತಶಾಹೀ ವಿಮರ್ಶಕರ ವಂಚನೆಯ ಜಾಲವನ್ನು ಬಯಲಿಗೆಳೆದಿರುವ ಸುಧಾಕರರ ಜಾಣ್ಮೆ ಕೆಚ್ಚು ನೆಚ್ಚುಗಳನ್ನು ಮೆಚ್ಚಬೇಕು. ಆದರೆ ನಾಟಕಗಳ ಭಾಷೆಯನ್ನು ಕುರಿತು ಅವರು ಮಾಡಿರುವ ವ್ಯಾಖ್ಯಾನ ಸರ್ವಸಮ್ಮತವೆಂದು ಹೇಳುವಂತಿಲ್ಲ. ಶೇಕ್ಸ್‌ಪಿಯರ್ ಪ್ರಾಚೀನ ಆಂಗ್ಲ ಭಾಷೆಯನ್ನು ತನ್ನ ನಾಟಕಗಳಲ್ಲಿ ಬಳಸಿಕೊಂಡಿಲ್ಲವಾದ್ದರಿಂದ ಕುವೆಂಪು ಅವರೂ ಹಳಗನ್ನಡ ಹೊಸಗನ್ನಡ ಸಮ್ಮಿಶ್ರ ಭಾಷೆಯನ್ನು ಪ್ರಯೋಗಿಸಬಾರದಿತ್ತೆಂದು ತೀರ್ಪು ನೀಡುವುದು ಸರಿಯಲ್ಲ. ಹೊಸಗನ್ನಡದಲ್ಲಿಯೂ ಅವರು ಓಜೋನ್ವಿತವಾಗಿ ನಿರರ್ಗಳವಾಗಿ ನಾಟಕ ರಚಿಸಬಲ್ಲವರಾಗಿದ್ದಾರೆನ್ನುವುದರಲ್ಲಿ ಯಮನ ಸೋಲು, ರಕ್ತಾಕ್ಷಿ ನಾಟಕಗಳನ್ನೋದಿದ ಯಾರಿಗೂ ಸಂದೇಹವಿರಲಾರದು. ಆದರೆ ನಾಟಕಕಾರನ ಧ್ಯೇಯಾದರ್ಶಭಾವಾಲೋಚನೆ ಕಲ್ಪನೆಗಳ ಗಹನತೆ ಗಾಂಭೀರ್ಯಗಳು, ಮಹತ್ತು ಬೃಹತ್ತುಗಳು ಮತ್ತು ಹಾಸುಬೀಸುಗಳು ಅವನ ಶೈಲಿಯನ್ನು ನಿರ್ಧರಿಸುತ್ತವೆನ್ನುವುದನ್ನು ಮರೆಯುವಂತಿಲ್ಲ. ಶ್ರೇಷ್ಠ ಕವಿಗೆ ಹಳಗನ್ನಡವಾಗಲಿ, ಹೊಸಗನ್ನಡವಾಗಲಿ, ಎಲ್ಲ ಕನ್ನಡವೇ. ಕ್ಲಾಸಿಕಲ್ ಕವಿ ಇಡೀ ಭಾಷೆಯ ಸತ್ವೋನ್ನತಿಗಳನ್ನು ಸಂಪೂರ್ಣವಾಗಿ ಬಳಸಿಕೊಂಡಾಗಲೇ ಅವನ ಕೃತಿ ದೇಶಕಾಲಾಬಾಧಿತವಾಗಿ ನಿಲ್ಲುತ್ತದೆ. ಹಳಗನ್ನಡದ ಪದಗಳನ್ನು ಯಥೋಚಿತವಾಗಿ ಬಳಸಿಕೊಂಡಾಗಲೇ ಭಾಷೆಗೆ ಕಸುವು ದೊರೆಯುತ್ತದೆ. ಅವು ಪರಸ್ಪರ ವಿರೋಧಿಗಳಲ್ಲ. ಹಳಗನ್ನಡ ಹೊಸಗನ್ನಡಗಳ ನಡುವೆ ಮುಖ್ಯ ವ್ಯತ್ಯಾಸವಿರುವುದು ರೂಪಗಳಲ್ಲಿಯೇ ಹೊರತು, ಅರ್ಥದಲ್ಲಲ್ಲ. ಐತಿಹಾಸಿಕ ಮತ್ತು ಪೌರಾಣಿಕ ವಸ್ತುವನ್ನು ನಾಟಕಕ್ಕೆ ಬಳಸಿ ಕೊಂಡಾಗ, ಕಾಲ ದೇಶ ಪಾತ್ರಗಳ ದೂರವನ್ನು ಸೂಚಿಸುವ ಸಲುವಾಗಿ ಭಾಷೆ ಅನಿವಾರ್ಯವಾಗಿ ಗಂಭೀರವಾಗುತ್ತದೆ. ಉಜ್ವಲವಾಗುತ್ತದೆ, ಮಹೋನ್ನತವಾಗುತ್ತದೆ. ಶ್ರೀಯವರ ಅನುಕರಣದಿಂದಾಗಿ ಕುವೆಂಪು ಅವರ ಭಾಷೆ ಹಳನ್ನಡದ ಧಾಟಿ ಹಿಡಿಯಿತೆನ್ನುವುದಂತು ನಿಜವಲ್ಲ.[7]

ಸಂಸ್ಕೃತ ಭಾಷೆ ಬ್ರಾಹ್ಮಣರಿಗೆ ಮಾತ್ರವೇ ಮೀಸಲಾಗಿದೆ, ಆ ಭಾಷೆಯ ವಿಪುಲ ಪ್ರಮಾಣದ ಪ್ರಯೋಗಕ್ಕೆ ಬ್ರಾಹ್ಮಣ ಪ್ರಜ್ಞೆಯೇ ಕಾರಣವೆನ್ನುವ ವಾದವೂ ಉಚಿತ ವಾದದ್ದಲ್ಲ. ಕೆಲವು ವೇಷಭೂಷಣಗಳು, ಆಹಾರ ಸಾಮಗ್ರಿಗಳು, ಓದು ಬರಹಗಳು, ಸ್ಥಾನಮಾನಗಳು, ಅಧಿಕಾರ ಬಡಿವಾರಗಳು ಬ್ರಾಹ್ಮಣರಿಗೆ ಮಾತ್ರವೆ ಮುಡಿಪು, ಅವುಗಳನ್ನು ಬಳಸುವ ಯೋಗ್ಯತೆ ಶೂದ್ರರಿಗಿಲ್ಲವೆನ್ನುವಷ್ಟೇ ದಡ್ಡತನವಾಗುತ್ತದೆ, ಶೂದ್ರ ಕವಿ ಸಂಸ್ಕೃತವನ್ನು ಬಳಸಬಾರದೆನ್ನುವ ನಿಲವು. ಶೂದ್ರರು ಸಂಸ್ಕೃತಾಧ್ಯಯನಕ್ಕರ್ಹರಲ್ಲವೆಂದು ಹೇಳುತ್ತಿದ್ದ ಆಗಿನ ಬ್ರಾಹ್ಮಣರಿಗಿಂತ ಶೂದ್ರ ಕವಿ ಸಂಸ್ಕೃತವನ್ನು ಬಳಸಬಾರದೆನ್ನುವ ಈಗಿನ ಶೂದ್ರ ವಿಮರ್ಶಕರು ಯಾವಂಶದಲ್ಲಿ ಉತ್ತಮರಾಗಿದ್ದಾರೆ? ಸಂಸ್ಕೃತವನ್ನು ಸುಸಮೃದ್ಧವಾಗಿ ಸರ್ವವ್ಯಾಪಕವಾಗಿ ಸರ್ವೋನ್ನತವಾಗಿ ಬೆಳೆಸಿದವರು ವ್ಯಾಸ ವಾಲ್ಮೀಕಿ ಗಳಂಥ ಶೂದ್ರ ಮಹಾಕವಿಗಳೆನ್ನುವುದನ್ನು ಮರೆಯುವಂತಿಲ್ಲ. ಭಾಷೆಯ ಬಗ್ಗೆ ದ್ವೇಷ ಸಲ್ಲದು. ಕನ್ನಡ ಸಂಸ್ಕೃತದ ಸತ್ವವನ್ನು ಬಹುವಾಗಿ ಹೀರಿಕೊಂಡು ಬೆಳೆದಿದೆಯೆನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಸಂಸ್ಕೃತ ಪದಗಳನ್ನು ಯಥೇಚ್ಛವಾಗಿ ಬಳಸಿದ ಮಾತ್ರಕ್ಕೆ ಬ್ರಾಹ್ಮಣ ಪ್ರಜ್ಞೆ[8] ಕಾರಣವೆಂದು ಹೇಳುವುದು ತಪ್ಪು. ಅಂಧಕನಿಗೆ ವಿದ್ಯುದ್ದೀಪ ಹಿಡಿಸುವುದಿಲ್ಲ; ಶಬ್ದ ದರಿದ್ರನಿಗೆ ಸಂಸ್ಕೃತ ಭಾಷೆಯ ತೇಜಸ್ಸು ಸೇರುವುದಿಲ್ಲ. ಜಲಗಾರನ ಭಾಷೆ ಸಂಸ್ಕೃತಮಯವಾಗುವಲ್ಲಿ, ಅವನ ಸ್ವಾಭಿಮಾನ ಎದ್ದು ಕಾಣುತ್ತದೆ. ಜತೆಗೆ ಅದೊಂದು ವಿಡಂಬನ ಕೃತಿಯೆನ್ನುವುದೂ ಯೋಚಿಸಬೇಕಾದ ವಿಷಯ. ವಿಡಂಬನೆಗಾಗಿ ಸಂಸ್ಕೃತ ಸಮೃದ್ಧವಾದ ಭಾಷೆಯನ್ನು ಬಳಸಿದಂತಿದೆ.

‘ಆಧುನಿಕ ಕನ್ನಡ ಕಾವ್ಯ ಸಂದರ್ಭದಲ್ಲಿ ಪ್ರಕೃತಿಯನ್ನು ಅಧಿಕ ಪ್ರಮಾಣದಲ್ಲಿ ಕಾವ್ಯ ವಸ್ತುವನ್ನಾಗಿ ಮಾಡಿಕೊಂಡು ಅದರ ಅನಂತ ಮುಖಗಳನ್ನು ಚಿತ್ರಿಸಿದ ಕನ್ನಡ ಕವಿಗಳು-ಕುವೆಂಪು ಅವರನ್ನು ಬಿಟ್ಟರೆ ಮತ್ತೊಬ್ಬರಿಲ್ಲ ಅಂದರೆ ಅತಿಶಯೋಕ್ತಿಯಾಗಲಾರದು’ ಎನ್ನುವ ಸುಧಾಕರರ ಹೇಳಿಕೆ ಇಡೀ ಕನ್ನಡ ಸಾಹಿತ್ಯಕ್ಕೆ ಅನ್ವಯಿಸುತ್ತದೆ. ಕುವೆಂಪು ಅವರ ಪ್ರಕೃತಿ ಗೀತೆಗಳನ್ನು ಅಲ್ಲಿ ವ್ಯಕ್ತವಾಗುವ ವೈವಿಧ್ಯಮಯ ಸೌಂದರ್ಯ ಮಾಧುರ್ಯಕ್ಕಾಗಿ, ಚಿರಮೌಲಿಕವೂ ಅತ್ಯಪೂರ್ವವೂ ಆದ ದಾರ್ಶನಿಕತೆಯ ಅಭಿವ್ಯಕ್ತಿಗಾಗಿ ಮೆಚ್ಚಿಕೊಂಡ ಸುಧಾಕರರು ‘ದೇವರು ರುಜು ಮಾಡಿದನು’ ಕವಿತೆಯನ್ನು ಸಮರ್ಪಕವಾಗಿ ವಿಶ್ಲೇಷಿಸಿದ್ದಾರೆ. ಆದರೆ ‘ಸೃಷ್ಟಿಯ ರಚನೆಯ… ಬೆಳ್ಳಕ್ಕಿಯ ಹಂತಿಯ ನೆವದಿ’ ಎಂಬ ಸಾಲುಗಳು ಅನಾವಶ್ಯಕವೆಂದವರು ಉದ್ಗಾರ ತೆಗೆದಿರುವುದು ಸಮಂಜಸವಲ್ಲವೆನಿಸುತ್ತದೆ. ಇಡೀ ಕವಿತೆಯ ಅಥವಾ ಕವಿಯ ಭಾವದ ಸಾರಸರ್ವಸ್ವದಂತಿರುವ ಈ ಮಾತುಗಳಿಂದ ಧ್ವನಿಶಕ್ತಿಗೆ ಹೇಗೆ ಧಕ್ಕೆ ಬರುತ್ತದೋ ಕಾಣೆ. ಮೊಗ್ಗಿನಲ್ಲೊಂದು ಚೆಲುವಿರುವಂತೆ ಅರಳಿದ ಹೂವಿನಲ್ಲಿಯೂ ಒಂದು ಸೌಂದರ್ಯ ವಿರುತ್ತದೆ. ತಾತ್ಪರ್ಯಾರ್ಥ ಸಹೃದಯನ ಮನಸ್ಸಿಗಂಟಲೆಂದು, ಒಂದು ಪದ ಸಾಕಾಗುವ ಕಡೆ ಕವಿ ನಾಲ್ಕು ಮಾತುಗಳನ್ನು ಬಳಸುತ್ತಾನೆ. ಭಾವದ ಕಾವು ತೀಕ್ಷ್ಣವಾದಾಗ, ಕವಿಚೇತನ ಸಹಜವಾಗಿಯೇ ಅದಕ್ಕೆ ಶರಣಾಗುತ್ತದೆ; ಅದರ ಅಭಿವ್ಯಕ್ತಿಗೆ ಎರಡಲ್ಲ ಹಲವು ಮಾತು ಬೇಕಾಗುತ್ತವೆ. ಪ್ರಕೃತ ಸಂದರ್ಭದಲ್ಲಿ ಕೊನೆಯ ಸಾಲುಗಳು ಇಲ್ಲವಾಗಿದ್ದರೆ, ಆ ಕವಿತೆಯ ಭಾವ ಪೂರ್ಣವಾಗಿ ವಾಚಕರ ಹೃದಯಕ್ಕೆ ತಟ್ಟುತ್ತದೆಂದು ಹೇಳಲಾಗದು. ‘ಕಿಟಕಿಯ ಕಣ್ಣು’ ಅಸಫಲವೆಂದು ಹೇಳುವಾಗಲೇ ‘ಅವುಗಳ ಹಿಂದಿರುವ ಕವಿದರ್ಶನ ವಿನೂತನ ವಾದದ್ದು’ ಎನ್ನುವ ವಿಮರ್ಶಕರ ಮಾತೇ ಅವರಿಗೆ ಉತ್ತರವಾಗಿದೆ.

(ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ತೆಯಲ್ಲಿ ಪ್ರವಾಚಕರಾಗಿರುವ ಶ್ರೀ ಸುಧಾಕರ ಅವರು ಶ್ರೇಷ್ಠ ಜಾನಪದ ವಿದ್ವಾಂಸರಲ್ಲೊಬ್ಬರು; ಉತ್ತಮ ಕತೆಗಾರರು; ಕಾದಂಬರಿ ಕಾರರು; ಮೇಲಾಗಿ ಪೂರ್ವಗ್ರಹ ದುರಾಗ್ರಹಗಳಿಗೊಳಗಾಗದ, ನಿಷ್ಪಕ್ಷಪಾತ ಮನೋಧರ್ಮದ, ಶ್ರೇಷ್ಠ ದರ್ಜೆಯ ವಿಮರ್ಶಕರು. ಅಯೋಗ್ಯರಾದರೂ ತಮ್ಮವರನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸುವ, ಯೋಗ್ಯರಾದರೂ ಪರರನ್ನು ತೆಗಳಿ ತೆಗಳಿ ಮಟ್ಟ ಹಾಕುವ, ಪಕ್ಷ ಕಟ್ಟಿಕೊಂಡು ಸಾಧಾರಣರಾದರೂ ಸ್ವಪಕ್ಷೀಯರನ್ನು ಮಹಾಸಾಹಿತಿಗಳೆಂದು ದೇಶದಲ್ಲೆಲ್ಲ ಸಾರುವ, ಅಸಾಧಾರಣ ರಾದರೂ, ಪಕ್ಷಾತೀತರನ್ನು ಸಾಮಾನ್ಯರೆಂದು ಗುಲ್ಲುಮಾಡುವ ‘ಹೀನೋತ್ತಮ ವರ್ಗ’ಕ್ಕೆ ಸೇರಿದ ಕುತ್ಸಿತ ಬುದ್ದಿಯು ಅಹಂಭಾವದ ಕುಸಂಸ್ಕಾರದ ನೀತಿ ಬಾಹಿರ ಭೇದವಾದಿ ದುಷ್ಟ ವಿಮರ್ಶಕರನ್ನು ಯಾವ ಹಂಗಿಗೂ ಒಳಗಾಗದೆ ಖಂಡಿಸಿ ತುಂಡರಿಸುವ, ಅವರ ಅಜ್ಞಾನವನ್ನು, ಬೆಳ್ತನವನ್ನು, ರಿಕ್ತತೆಯನ್ನು ಬಯಲಿಗೆಳೆಯುವ ಸಾಮರ್ಥ್ಯವುಳ್ಳ ದಿಟ್ಟರವರು. ಪರಸ್ಪರ ಪ್ರಶಂಸೆಯ ಬೆಂಬಲದಿಂದ ವಿಮರ್ಶಕ ಪಟ್ಟಕ್ಕೇರದೆ, ಸ್ವಬುದ್ದಿ ಸ್ವಶಕ್ತಿಗಳನ್ನು ನೆಮ್ಮಿಕೊಂಡೇ ಸೃಜನಶೀಲ ವಿಮರ್ಶಕರಾಗಿರುವ ವಿದ್ವಾಂಸರವರು. ಮಹಾಕವಿಗಳನ್ನು ಟೀಕಿಸುವ ಮೂಲಕವೇ ವಿಮರ್ಶಕವರೇಣ್ಯ(?)ರೆಂದು ಸ್ವಜನರಿಂದ ಕೊಂಡಾಡಿಸಿಕೊಳ್ಳುವ, ಕನ್ನಡದಲ್ಲಿ ಸಾಕಷ್ಟು ಪಾಂಡಿತ್ಯವಿಲ್ಲದ ಟೀಕಾಕಾರರ, ಸ್ವಯಮಾಚಾರ್ಯರ ಅಶ್ಲೀಲ ವಿಮರ್ಶೆಯನ್ನು ಪುನರ್ವಿಮರ್ಶಿಸಿ, ಅದರಲ್ಲಿರುವ ಪಿತ್ತವಿಕಾರ ಜನ್ಯವಾದ, ಮಾತ್ಸರ್ಯ ಪ್ರತೀಕಾರ ಬುದ್ದಿ ಲಬ್ಧವಾದ ಲೋಪದೋಷಗಳನ್ನು ಬಯಲಿಗೆಳೆದು ಸುಧಾಕರರು ಸಾಹಿತ್ಯ ಹಾಗೂ ವಾಚಕ ಲೋಕಕ್ಕೆ ಅನುಪಮವಾದ ಉಪಕಾರವೆಸಗಿದ್ದಾರೆ. ‘ಕುವೆಂಪು ಸಾಹಿತ್ಯ ಸಂವೀಕ್ಷಣೆ’ಯಲ್ಲಿ ಬರುವ ಏಳು ವಿಮರ್ಶೆಗಳ ಪೈಕಿ ಮೊದಲ ಮೂರು ವಿಮರ್ಶೆಗಳ ವಿಮರ್ಶೆಗೆ ಮುಡಿಪಾಗಿದ್ದರೆ, ಉಳಿದುವು ಅವರವೇ ಆದ ವಿಮರ್ಶಾ ಲೇಖನಗಳು. ಅವುಗಳಲ್ಲಿಯೂ ಪ್ರಸಂಗವಶಾತ್ ವಿಮರ್ಶೆಯ ಮೇಲಣ ಪುನರ್ವಿಮರ್ಶೆಯ ಪ್ರತಿ ಬಾಣ ಪ್ರಯೋಗ ಕೌಶಲವನ್ನು ಕಾಣಬಹುದು.

ಅದೇನೇ ಇರಲಿ, ಸುಧಾಕರರ ಎಲ್ಲ ಲೇಖನಗಳು ಅವರ ನಿಷ್ಕಾಪಟ್ಯ ನಿಷ್ಪಕ್ಷಪಾತ ಧೋರಣೆಗೆ, ಸೂಕ್ಷ್ಮ ವಿವೇಚನಾ ಸಾಮರ್ಥ್ಯಕ್ಕೆ, ವಿಶಿಷ್ಟ ಕೆಚ್ಚು ಸೆಳಕು ಕಸುವುಗಳಿರುವ ಸುಂದರ ಧೀರ ಶೈಲಿಗೆ ಜ್ವಲಂತ ನಿದರ್ಶನಗಳಾಗಿವೆ. ‘ಕುವೆಂಪು, ಕೈ ಮತ್ತು ಪೈ ಅವರು ಕಂಡ ಏಕಲವ್ಯ’ ಲೇಖನ ಸಮತೋಲನ ದೃಷ್ಟಿಯ ತೌಲನಿಕ ವಿಮರ್ಶೆಗೆ ಮಾರ್ಗದರ್ಶಿಯಾಗಿದೆ. ‘ಶ್ರೀರಾಮಾಯಣದರ್ಶನಂ ಮತ್ತು ಸಮಕಾಲೀನತೆ’ ಅವಸರದ ಅಸಂಪೂರ್ಣ ಲೇಖನ ಎಂದರೂ, ಅವರ ಸೂಕ್ಷ್ಮ ಪ್ರಜ್ಞೆಯೂ ಅವರ ವ್ಯಾಖ್ಯಾನ ನೈಪುಣ್ಯವೂ ಅದರಲ್ಲಿ ಪ್ರತಿಫಲನಗೊಂಡಿವೆ.)

 


[1]    ಈ ಮಾತು ಎಲ್ಲ ಬ್ರಾಹ್ಮಣ ವಿಮರ್ಶಕರಿಗನ್ವಯಿಸುವುದಿಲ್ಲ. ಡಾ. ಕೆ.ಎಸ್. ಕೃಷ್ಣಮೂರ್ತಿ, ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ. ಡಾ. ಎ.ಎಸ್. ವೇಣುಗೋಪಾಲರಾವ್, ಡಾ. ಶಂಕರ ಮೊಕಾಶಿ ಪುಣೇಕರ್, ಶ್ರೀ ಪ್ರಧಾನ ಗುರುದತ್ ಅವರಂಥ ನಿಷ್ಪಕ್ಷಪಾತ, ಮನೋಧರ್ಮದ, ಸುಸಂಸ್ಕಾರದ, ಪ್ರಾಜ್ಞ ವಿದ್ವಾಂಸರು ಸಾಕಷ್ಟು ಮಂದಿಯಿದ್ದಾರೆ. ಇವರು ಯಾವ ಗುಂಪಿಗೂ ಸೇರಿದವರಲ್ಲ. ಸ್ವಾರ್ಥಕ್ಕಾಗಿ ಗುಂಪು ಕಟ್ಟಿಕೊಂಡಿರುವ ಕೆಲವರು ಮಾತ್ರ ಅಸಹ್ಯವಾಗಿ ವರ್ತಿಸುತ್ತಾರೆ. ಇತ್ತೀಚೆಗೆ ಪ್ರಧಾನ ಗುರುದತ್ ಅವರು ಶ್ರೀಕುವೆಂಪು ಅವರ ೮೪ನೆಯ ಜನ್ಮೋತ್ಸವ ಸಂದರ್ಭದಲ್ಲಿ ಶ್ರೀರಾಮಾಯಣದರ್ಶನಂ ಬಗ್ಗೆ ಮಾತಾಡುತ್ತ, ಅದು ಜಗತ್ತಿನ ಎಲ್ಲ ಮಹಾಕೃತಿಗಳಿಗೆಣೆಯಾಗಿದೆ, ಅಷ್ಟೇ ಅಲ್ಲ, ಅವುಗಳಿಗಿಂತ ಒಂದು ಕೈ ಮಿಗಿಲಾಗಿದೆ ಎಂದು ಹೇಳಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

[2]    Indian Express (Express magazine) Dated ೮th November ೧೯೮೭.

[3]    ಕುವೆಂಪು ಸಾಹಿತ್ಯ ಸಂವೀಕ್ಷಣೆ, ಪು. ೭.

[4]    ಅದೇ, ಪು. ೬. ಅಡಿಟಿಪ್ಪಣಿ

[5]    ಕುವೆಂಪು ಸಾಹಿತ್ಯ ಸಂವೀಕ್ಷಣೆ, ಪು. ೫೨.

[6]    ಅದೇ., ಪು. ೭೨.

[7]    ‘ಅ    ಶ್ವತ್ಥಾಮ ಪ್ರಕಟವಾದದ್ದು ೧೯೨೯ರಲ್ಲಿ. ೧೯೨೭ರ ಹೊತ್ತಿಗಾಗಲೇ ‘ಜಲಗಾರ’, ‘ಯಮನ ಸೋಲು’ ಪ್ರಕಟವಾಗಿದ್ದವು; ೧೯೨೯ರ ಹೊತ್ತಿಗೆ ‘ಬಿರುಗಾಳಿ’ ಸಿದ್ಧವಾಗಿತ್ತು. ಈ ಕೃತಿಗಳಲ್ಲಿ ಅಲ್ಲಲ್ಲೆ ಹಳಗನ್ನಡ ಪ್ರಯೋಗಗಳು ಇಣುಕುತ್ತವೆ.

[8]    ಹಾಗಾದರೆ ಇಂಗ್ಲೀಷ್ ಬೋಧಕರಾದ ಕನ್ನಡ ಸಾಹಿತಿಗಳಲ್ಲಿ ‘ಆಂಗ್ಲ ಪ್ರಜ್ಞೆ’ ವಿಪುಲ ಪ್ರಮಾಣದಲ್ಲಿದೆಯೆಂದು ಹೇಳಬೇಕಾಗುತ್ತದೆ.