ಶ್ರೀ ಕುವೆಂಪು ಅವರನ್ನು ಜಗದ ಕವಿಯೆಂದು ಯುಗದ ಕವಿಯೆಂದು ವರಕವಿ ಶ್ರೀ ಬೇಂದ್ರೆಯವರು ಕರೆದದ್ದರಲ್ಲಿ ಪ್ರವಾದಿಯ ಕಾಣ್ಮೆಯೂ, ಯಥಾರ್ಥವಾದಿಯ ವಾಸ್ತವ ಪ್ರಜ್ಞೆಯೂ, ನಿರಸೂಯಾಶೀಲ ಸಮಕಾಲೀನ ಕವಿ ಶ್ರೇಷ್ಠನ ತ್ರಿಕಾಲಿಕ ಸಾರ್ವದೇಶಿಕ ಮಹಾಬೋಧವೂ ಅಭಿವ್ಯಕ್ತಗೊಂಡಿವೆಯೆಂದು ಸ್ಪಷ್ಟಪಡಿಸಬಹುದಾಗಿದೆ. ಜಗತ್ತಿನ ಸಾಹಿತ್ಯ ಚರಿತ್ರೆಯನ್ನು ಶೋಧಿಸಿದಾಗ ಒಂದೊ ಎರಡೊ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು, ಶಿಖರಾಗ್ರಸ್ಥಾನಕ್ಕೇರಿದ ಮಹಾಸಾಹಿತಿಗಳು ಅಪಾರ ಸಂಖ್ಯೆಯಲ್ಲಿ ದೊರೆಯ ಬಹುದು; ಆದರೆ ಎಲ್ಲ ಪ್ರಕಾರಗಳಲ್ಲಿಯೂ ಏಕ ಪ್ರಕಾರವಾದ ವಿದ್ಯುತ್ ಪ್ರತಿಭೆಯನ್ನು ಬೆಳಗಿ, ಯಶಸ್ಸಿನ ಶಿಖರವನ್ನು ಮೆಟ್ಟಿದ ಸರ್ವಮಹಾಸಾಹಿತಿಗಳು ವಿರಳ; ಇಲ್ಲವೆಂದರೂ ಸಲ್ಲುತ್ತದೆ. ಅಂಥವರಲ್ಲಿ ಕುವೆಂಪು ಒಂಟಿಯಾಗಿಯೇ ನಿಲ್ಲುತ್ತಾರೆ. ಶೇಕ್ಸ್‌ಪಿಯರ್, ಮಿಲ್ಟನ್, ವರ್ಡ್ಸ್‌ವರ್ತ್‌, ಶೆಲ್ಲಿ, ಹಾರ್ಡಿ, ವರ್ಜಿಲ್, ಡಾಂಟೆ, ಗಯಟೆ, ಟಾಲ್‌ಸ್ಟಾಯ್ ಮೊದಲಾದವರು ಮಹಾನಾಟಕಕಾರರಾಗಿಯೋ, ಮಹಾಕಾವ್ಯಕಾರರಾಗಿಯೋ, ಮಹಾಕಾದಂಬರಿಕಾರರಾಗಿಯೋ ಒಂದೊಂದು ಅಥವಾ ಎರಡೆರಡು ಪ್ರಕಾರಗಳಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದ ಧ್ರುವತಾರೆಗಳಾಗಿದ್ದಾರೆ. ಇಪ್ಪತ್ತನೆಯ ಶತಮಾನದ ಪಾಶ್ಚಾತ್ಯ ಪೌರ್ವಾತ್ಯ ಸಾಹಿತ್ಯ ಪರಂಪರೆಗಳ ಪರಸ್ಪರ ಸಂಪರ್ಕ ಸಂಘರ್ಷಗಳ ಸಂಧಿ ಸಮಯದಲ್ಲಿ, ಶ್ರೀರಾಮ ಕೃಷ್ಣಾರವಿಂದ ವಿವೇಕಾನಂದರ ಅಧ್ಯಾತ್ಮ ಶ್ರೀಮಂತತೆಗೆ ವಾರಸುದಾರರಾಗಿ, ಐನ್‌ಸ್ಟೀನ್ ಗಾಂಧೀಜಿಯರಂಥ ಮಹಾಪುರುಷರ ಸಮಕಾಲೀನರಾಗಿ, ವೈಚಾರಿಕ ದೃಷ್ಟಿ ವೈಜ್ಞಾನಿಕ ಮನೋಧರ್ಮಗಳ ಜತೆಗೆ ಅಧ್ಯಾತ್ಮ ಸಾಧನೆಯಿಂದ ಸಂಲಬ್ಧವಾದ ದರ್ಶನ ಪ್ರಜ್ಞೆಯನ್ನು ಪಡೆದಿರುವ ಕುವೆಂಪು ಸರ್ವಮಹಾಸಾಹಿತಿಯ ಗೌರವಸ್ಥಾನವನ್ನು ಪಡೆದದ್ದು ಅಚ್ಚರಿಯೇನಲ್ಲ.

ಸುಜನಾರವರ ‘ಪರಂಪರೆ ಮತ್ತು ಕುವೆಂಪು’ ಎಂಬ ಮೌಲ್ಯಾತ್ಮಕವೂ ಸೃಜನಾತ್ಮಕವೂ ಆದ ದಾರ್ಶನಿಕ ವಿಮರ್ಶೆಯ ಪ್ರಬಂಧಗಳ ಸಂಗ್ರಹವನ್ನು ಓದಿದ ನಂತರ ಪೂರ್ವೋಕ್ತ ಅಭಿಪ್ರಾಯ ಮೂಡದಿರಲು ಸಾಧ್ಯವಿಲ್ಲ. ಕುವೆಂಪು ಅವರ ಪ್ರತಿಭಾಗ್ನಿ ಸಂಸ್ನಾತವಾಗಿ ಹೊರಬಂದ ಪರಂಪರೆಯ ತ್ರಿವಿಕ್ರಮ ಸಾಹಸದ ದಾರ್ಶನಿಕ ವಿವರಣೆಗೆ ಈ ಒಂಬತ್ತು ಪ್ರಬಂಧಗಳೂ ಮೀಸಲಾಗಿವೆ. ಪ್ರಾರಂಭದ ಅಧ್ಯಾಯದಲ್ಲಿ ಸಂಪ್ರದಾಯ ಮತ್ತು ಪರಂಪರೆಗಳ ನಡುವಣ ವ್ಯತ್ಯಾಸವನ್ನು ವಿವರಿಸಿ, ಪರಂಪರೆಯ ಪ್ರಗತಿಶೀಲ ಸ್ವರೂಪವನ್ನು ಸ್ಪಷ್ಟಪಡಿಸಿ, ಅದು ಹೇಗೆ ಕುವೆಂಪು ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಿದೆಯೆಂಬುದನ್ನು ಅವರ ಮಹಾಕಾವ್ಯ ನಾಟಕ ಖಂಡಕಾವ್ಯ ಕಾದಂಬರಿಗಳಿಂದ ಉದ್ಧರಿಸಿದ ಸಮೃದ್ಧವಾದ ಉದಾಹರಣೆಗಳ ಮೂಲಕ ವಿಶದಪಡಿಸುತ್ತಾರೆ.

ಕುವೆಂಪು ಅವರ ಋಷಿ ಜೀವನವನ್ನಾಗಲಿ, ಅವರ ಭೂವ್ರೋಸಾಹಿತ್ಯದ ಗಹನತೆಯನ್ನಾಗಲಿ ಅರ್ಥಮಾಡಿಕೊಳ್ಳಬೇಕಾದರೆ ಪೂರ್ವಭಾವಿಯಾಗಿ ಸರ್ವೋದಯ ಸಮನ್ವಯ ಮನುಜಮತ ವಿಶ್ವಪಥ ಮತ್ತು ಪೂರ್ಣದೃಷ್ಟಿಗಳೆಂಬ ಪಂಚಮಂತ್ರಗಳನ್ನು, ಅವರೇ ರೂಪಿಸಿರುವ ಕಾವ್ಯಸೂತ್ರಗಳನ್ನು ಆಳವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಶಿಶುಗೀತೆ ಭಾವಗೀತೆಗಳನ್ನು ರಚಿಸಿದ ಲೇಖನಿಯೇ ಶ್ರೀರಾಮಾಯಣದರ್ಶನದಂಥ ಮಹಾಕಾವ್ಯವನ್ನೂ ಕಡೆದಿದೆ; ಶೂದ್ರತಪಸ್ವಿ ಜಲಗಾರ ನಾಟಕಗಳನ್ನು ಸೃಷ್ಟಿಸಿದ ಪ್ರತಿಭೆಯೇ ಬೆರಳ್‌ಗೆ ಕೊರಳ್ ನಾಟಕವನ್ನು ಸೃಷ್ಟಿಸಿದೆ; ಸಣ್ಣ ಕಥೆ ಚಿತ್ರಗಳನ್ನು ಬಿಡಿಸಿದ ಕುಂಚವೇ ಮಹಾಕಾದಂಬರಿಗಳನ್ನು ಕುಂಚಿಸಿದೆ; ಕರಿಸಿದ್ಧ ಗಿಡ್ಡಿ ಕಿಟ್ಟಿಯ್ಯ ಐತಪೀಂಚಲುಗಳನ್ನು ಚಿತ್ರಿಸಿದ ಕೈಯೇ ಶ್ರೀರಾಮ ಲಕ್ಷ್ಮಣ ರಾವಣ ಸೀತೆ ಮಂಡೋದರಿ ಶ್ರೀರಾಮಕೃಷ್ಣ ಪರಮಹಂಸ ವಿವೇಕಾನಂದರಂಥ ಅವತಾರಿಗಳನ್ನೂ ಮಹಾಮಹಿಮರನ್ನೂ ಕಂಡರಿಸಿದೆ; ಶ್ರೀರಾಮ ನಲ್ಲೆಂತೋ ಇಬ್ಬನಿಯಲ್ಲಿಯೂ ಅವತಾರದ ಮಹಿಮೆಯನ್ನು ಗುರುತಿಸಿದ ಕವಿಗಳು ಅಸಾಮಾನ್ಯತೆಯನ್ನು ಪೂಜಿಸುವಂತೆಯೇ ಸಾಮಾನ್ಯತೆಯನ್ನು ಗೌರವಿಸುತ್ತಾರೆ; ಅವರ ವಿಚಾರಮತಿ ವೈಜ್ಞಾನಿಕ ಮನೋಧರ್ಮಗಳು ಅವರ ದೈವಶ್ರದ್ಧೆ ಮತ್ತು ಅಧ್ಯಾತ್ಮ ವಿಜ್ಞಾನಗಳಿಗೆ ವಿರೋಧವಾಗಿಲ್ಲ; ಇಂದ್ರಿಯಗಮ್ಯವಾದ ವಾಸ್ತವ ಪ್ರಜ್ಞೆಯಂತೆ ಅತೀಂದ್ರಿಯ ಸಾಧ್ಯವಾದ ಅತಿಮಾನಸ ಪ್ರಜ್ಞೆಯೂ ಕುವೆಂಪು ಸಾಹಿತ್ಯದಲ್ಲಿ ಸಾಂದ್ರವಾಗಿದೆ; ಪ್ರತಿಕೃತಿ ವಿಧಾನಕ್ಕೆಂತೊ ಪ್ರತಿಮಾ ವಿಧಾನಕ್ಕೂ ಅಂತೆಯೇ ಅಗ್ರಸ್ಥಾನವಿದೆ. ಪೂರ್ವಾಗ್ರಹ ಅಥವಾ ಪೂರ್ವಗ್ರಹ ಪೀಡಿತವಾದ ತೇಲು ನೋಟಕ್ಕೆ ಅಥವಾ ಖಂಡದೃಷ್ಟಿಗೆ ಪರಸ್ಪರ ವಿರೋಧಾತ್ಮಕ ವಾಗಿ ತೋರುವ ಸಂಗತಿಗಳು ಏಕಾಖಂಡದೃಷ್ಟಿಯ ಸಮನ್ವಯ ಪ್ರಜ್ಞೆಗೆ ಪರಸ್ಪರ ಪೂರಕವಾಗಿ, ಅತ್ಯಂತ ವೈಜ್ಞಾನಿಕವಾಗಿ ತೋರದಿರವು. ವೈವಿಧ್ಯ ಪೂರ್ಣವಾದ ಕುವೆಂಪು ಸಾಹಿತ್ಯ ಭಿನ್ನವಿಭಿನ್ನ ರುಚಿಯ ಸಹೃದಯರಿಗೆ ಹಲವು ತೆರನಾಗಿ ಕಾಣಿಸುವ ಸಾಧ್ಯತೆಯುಂಟು. ಕೆಲವರು ಕುವೆಂಪು ನಾಟಕಗಳಲ್ಲಿ ಅವರ ಪ್ರತಿಭೆಯನ್ನು ಗುರುತಿಸಿದರೆ, ಮತ್ತೆ ಕೆಲವರು ಅವರ ಭಾವಗೀತೆಗಳಲ್ಲಿ, ಇನ್ನು ಕೆಲವರು ಅವರ ಮಹಾಕಾದಂಬರಿಗಳಲ್ಲಿ, ಬೇರೆ ಕೆಲವರು ಅವರ ಮಹಾಕಾವ್ಯದಲ್ಲಿ ಅವರ ವಿಶಿಷ್ಟ ಶಕ್ತಿಸಂಪನ್ನತೆಯನ್ನು ಮನಗಾಣುತ್ತಾರೆ. ವಿಚಾರವಾದಿಗಳು ತಂತಮ್ಮ ನಿಲವುಗಳ ಸಮರ್ಥನೆಗೆ ಅವರ ವೈಚಾರಿಕ ಪ್ರಬಂಧಗಳನ್ನು ಮಾತ್ರ ಬಳಸಿಕೊಂಡು, ಅವರ ಅಧ್ಯಾತ್ಮ ಪರವಾದ ಸಾಹಿತ್ಯವನ್ನು ಮರೆಯುತ್ತಾರೆ. ಅಂತೆಯೇ ಅಧ್ಯಾತ್ಮಾನುರಕ್ತರು ಅವರ ಆಸ್ತಿಕ ಸಾಹಿತ್ಯವನ್ನು ಮೆಚ್ಚುವರಾದರೂ, ಅವರ ಕ್ರಾಂತಿ ಸಾಹಿತ್ಯವನ್ನು ಉಪೇಕ್ಷಿಸುತ್ತಾರೆ. ಅವರ ಭಾಗವತ ದೃಷ್ಟಿ ಅವರ ಕ್ರಾಂತ ದರ್ಶಿತ್ವ ಮತ್ತು ಕ್ರಾಂತಿ ಮನೋಧರ್ಮಗಳಿಗೆ ವ್ಯತಿರಿಕ್ತವಲ್ಲವೆಂಬುದು ಅವರಂಥ ದಾರ್ಶನಿಕರಿಗೆ ಮಾತ್ರ ವೇದ್ಯವಾಗುತ್ತದೆ. ಪಂಥ ಪಕ್ಷಗಳ ಅಂಧ ಶ್ರದ್ಧೆಯುಳ್ಳ, ಸತ್ಯನಿಷ್ಠೆಯಿಲ್ಲದ, ಮುಕ್ತ ಮನಸ್ಸಿರದ, ಛಿದ್ರವಿಚ್ಛಿದ್ರ ಮನೋಧರ್ಮದ ರಂಧ್ರಾನ್ವೇಷಣಕಾರರಿಗೆ ಕುವೆಂಪು ಸಾಹಿತ್ಯದಲ್ಲಿ ದ್ವಂದ್ವತ್ವವೂ, ವಿರೋಧಾಭಾಸಗಳೂ ಕಾಣುವುದುಂಟು.

ಯಾವ ಪಂಥ ಪಕ್ಷಗಳಿಗೂ ಸೇರದ ಸುಜನಾ ಅವರು ನಿಷ್ಕಪಟ ನಿರ್ಭೀತ ಸತ್ಯನಿಷ್ಠ ಸೂಕ್ಷ್ಮಮತಿಯ ಶ್ರೇಷ್ಠ ವಿಮರ್ಶಕರು. ಅವರು ಮೂರ್ತಿಭಂಜಕರೂ ಅಲ್ಲ, ಅಂಧಾ ರಾಧಕರೂ ಅಲ್ಲ; ಸತ್ಯೋಪಾಸಕರು. ಪಾಶ್ಚಾತ್ಯ ಭಾರತೀಯಕಾವ್ಯ ಕಾವ್ಯ ಮೀಮಾಂಸಾ ರಾಶಿಯಲ್ಲಿ ಈಜಾಡಿಯೂ, ಯಾವೊಂದು ಪಂಥಕ್ಕೂ ದಾಸರಾಗದೆ, ಎಲ್ಲದರ ಸಾರವನ್ನು ಹೀರಿಕೊಂಡು, ಸ್ವೋಪಜ್ಞತೆಯನ್ನು ರೂಢಿಸಿಕೊಂಡ ವಿಶಿಷ್ಟ ಸಾಧಕರಲ್ಲಿ ಒಬ್ಬರು. ಅದರಿಂದಲೇ ಅವರು ಸ್ಪಷ್ಟಪಡಿಸುತ್ತಾರೆ : ‘ಇವರ ಕೃತಿಗಳನ್ನೆಲ್ಲ ತಲೆಯ ಮೇಲಿಟ್ಟುಕೊಂಡು, ಅಲ್ಲಿರುವುದೆಲ್ಲ ಮೌಲಿಕವಾದದ್ದೆಂದು ಆರಾಧನಾ ಭಾವ ತಳೆಯುವುದಾಗಲಿ, ಅವುಗಳೇ ನಿರರ್ಥ ನೀರಸ ಅವಿಚಾರಿತವೆಂದು ಮೋಜುಗಾರ ಮೋಜಿಣಿದಾರಿಕೆ ಮಾಡ ಹೋಗು ವುದಾಗಲಿ’ ಯಾವ ಕಾರಣಕ್ಕೂ ಸಲ್ಲದೆಂದು ಕುವೆಂಪು ಸಾಹಿತ್ಯದ ನ್ಯೂನತೆಗಳನ್ನು ತಾವು ಕಂಡಿರುವುದಾಗಿ ನಿರ್ದಾಕ್ಷಿಣ್ಯವಾಗಿ ನುಡಿದಿದ್ದಾರೆ (ಪು. ೬೦). “ಕುವೆಂಪು ಅವರ ಚಿತ್ರಾಂಗದಾ ಕಾವ್ಯದ ಮುಕ್ತಾಯದಲ್ಲೂ ಋಷಿವ್ಯಾಸ ಕಲ್ಪನೆಯ ಪರಂಪರೆ ದೃಢವಾಗಿ ಮಿಡಿದಿದ್ದರೆ ಈ ಕಾವ್ಯ ಮತ್ತೂ ಶ್ರೇಷ್ಠ ಕಾವ್ಯವಾಗಿ, ಭಾರತ ಪರಂಪರೆಯಲ್ಲಿ ಮುಂದುವರಿದ ವಿಶಿಷ್ಟ ಕೃತಿ ಯಾಗಿ ಮೈದಾಳುತ್ತಿತ್ತೆಂದು ತೋರುತ್ತದೆ” (ಪು. ೧೬) ಎಂಬ ಅವರ ಸದಭಿಪ್ರಾಯ ಗಮನಾರ್ಹವಾದುದಾಗಿದೆ. ಅಂದ ಮೇಲೆ ಅವರಂಥವರ ವಿಮರ್ಶೆ ಸೃಜನಾತ್ಮಕವಾಗಿದ್ದು ನೆಲೆ ಬೆಲೆಗಳಿಂದ ಕೂಡಿರುತ್ತದೆಂಬುದರಲ್ಲಿ ಸಂದೇಹವಿಲ್ಲ.

ಮೂಲ ರಾಮಾಯಣ ಮಹಾಭಾರತಗಳ ಪರಂಪರೆಯನ್ನು ಕುವೆಂಪು ಹೇಗೆ ವ್ಯಾಪಕವಾಗಿ ಹಾಗೂ ಸಮರ್ಪಕವಾಗಿ ಮುಂದುವರಿಸಿದ್ದಾರೆನ್ನುವುದನ್ನು ಚಿತ್ರಾಂಗದಾ ಖಂಡಕಾವ್ಯ, ಶ್ಮಶಾನ ಕುರುಕ್ಷೇತ್ರ, ಬೆರಳ್‌ಗೆಕೊರಳ್, ಶೂದ್ರತಪಸ್ವಿ ನಾಟಕಗಳನ್ನು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ನಿದರ್ಶನವಾಗಿಟ್ಟುಕೊಂಡು ವಿಮರ್ಶಕರು ಅಧಿಕಾರಯುತವಾಗಿ ಸಂದೇಹಕ್ಕೆವಕಾಶವಿಲ್ಲದಂತೆ ಪ್ರತಿಪಾದಿಸಿದ್ದಾರೆ. ವ್ಯಾಸರ್ಷಿಯ ಲೋಕೋತ್ತರ ದರ್ಶನ ಪ್ರಖರವಾಗಿ ಮೂಡಿಬಂದಿರುವ ಯುದ್ಧಾನಂತರದ ಘಟನೆಗಳ ಮೂಲ ಸ್ವರೂಪ ಮುಕ್ಕಾಗ ದಂತೆ, ಸಿಂಧುವನ್ನು ಬಿಂದುವಿನಲ್ಲಿ, ಆಕಾಶವನ್ನು ಕನ್ನಡಿಯಲ್ಲಿ ತೋರಿಸುವ ಮಾಳ್ಕೆಯಿಂದ ಶ್ಮಶಾನ ಕುರುಕ್ಷೇತ್ರ ನಾಟಕವನ್ನು ರಚಿಸಲಾಗಿದೆಯೆಂದು ವಿಶದಪಡಿಸುವಲ್ಲಿ, ಬೆರಳ್‌ಗೆ ಕೊರಳ್ ಮಹಾಭಾರತದ ಮಹಾದರ್ಶನ ವ್ಯಾಖ್ಯಾನವೂ ಹೊಸ ಸೃಷ್ಟಿಯೂ, ಅಂತೆಯೇ ದಿವ್ಯ ಪರಂಪರೆಯ ಶ್ರೇಷ್ಠ ಸಂತಾನವೂ ಆಗಿ ಕನ್ನಡ ಸಾಹಿತ್ಯದ ಒಂದು ಶ್ರೇಷ್ಠ ಸಿದ್ದಿಯೆಂದು- ನುಡಿಯುವಲ್ಲಿ, ಶೂದ್ರತಪಸ್ವಿಯನ್ನು ಕುರಿತ ಟೀಕೆಗಳಿಗೆ ಯುಕ್ತರೀತಿಯ ಉತ್ತರವನ್ನು ಕೊಡುತ್ತ, ಆ ನಾಟಕ ವಾಲ್ಮೀಕಿಯ ಮಹಾದರ್ಶನವನ್ನು ಪುನರುಜ್ಜೀವಿಸುವಲ್ಲಿ, ಮೂಲ ಕವಿಗೆ ಹಾಗೂ ಶ್ರೀರಾಮನಿಗೆ ಅಂಟಿಕೊಂಡಿದ್ದ ಕಳಂಕವನ್ನು ತೊಡೆಯುವಲ್ಲಿ ಯಶಸ್ವಿ ಯಾಗಿದೆಯಂದು ಘೋಷಿಸುವಲ್ಲಿ, ಪ್ರಾಚೀನ ಅರ್ವಾಚೀನ ಯುಗ ಪ್ರಜ್ಞೆಗಳೆರಡರ ಸಮನ್ವಯವನ್ನು ಸಾಧಿಸುವ ಮೂಲಕ ಜಗತ್ತಿಗೆ ನೂತನ ದರ್ಶನವನ್ನೂ ನವೀನ ಸೃಷ್ಟಿಯನ್ನೂ ಒದಗಿಸಿ, ವಾಲ್ಮೀಕಿ ವ್ಯಾಸರ ಪರಂಪರೆಯನ್ನು ಸಂವರ್ಧಿಸುವ ಅಲಭ್ಯ ಭಾಗ್ಯ ಶ್ರೀ ಕುವೆಂಪು ಅವರದಾಯಿತು ಎಂದು ವಿವರಿಸುವಲ್ಲಿ ಸುಜನಾ ಅವರ ವೈನತೇಯ ದೃಷ್ಟಿಯೂ ನಚಿಕೇತ ಪ್ರಜ್ಞೆಯೂ ಬಹುಶ್ರುತತ್ವವೂ ಹೃದಯವಂತಿಕೆಯೂ ಹೊರ ಹೊಮ್ಮುತ್ತವೆ.

ಕುವೆಂಪು ತಮ್ಮ ಶ್ರೇಷ್ಠ ನಾಟಕಗಳಲ್ಲಿ, ಮಹಾಕಾದಂಬರಿಗಳಲ್ಲಿ, ಪ್ರಥಮ ದರ್ಜೆಯ ಭಾವಗೀತೆಗಳಲ್ಲಿ ಮತ್ತು ಮಹಾಕಾವ್ಯದಲ್ಲಿ ಸಾಮಯಿಕ ಅರ್ಥಗಳ ಅಭಿವ್ಯಕ್ತಿಗಲ್ಲದೆ ಅದಕ್ಕಿಂತ ಮಿಗಿಲಾಗಿ ವಿಶ್ವಕಲ್ಯಾಣಕಾರಕವಾದ ಲೋಕೋತ್ತರ ಸತ್ಯಗಳ ಹಾಗೂ ಚಿರಕಾಲಿಕ ಮೌಲ್ಯಗಳ ಸಂವರ್ಧನೆಗೆ ಹೆಚ್ಚು ಒತ್ತು ಕೊಡುತ್ತಾರೆಂಬ ಸತ್ಯ ಇಲ್ಲಿಯ ಎಲ್ಲ ಪ್ರಬಂಧ ಗಳಲ್ಲಿಯೂ ಪ್ರತಿಬಿಂಬಗೊಂಡಿದೆ. ಶ್ರೀರಾಮಾಯಣದರ್ಶನದಲ್ಲಿಯ ಪಾತ್ರರಚನೆ ಸನ್ನಿವೇಶ ನಿರ್ಮಾಣ, ಪ್ರಕೃತಿ ವರ್ಣನೆ ಮತ್ತು ದಾರ್ಶನಿಕ ಮೌಲ್ಯಗಳ ಅಭಿವ್ಯಕ್ತಿಯಲ್ಲಿ ಬೆಳಕೇ ಘನೀಭೂತವಾದಂತೆ, ವಿಶ್ವಚೇತನವೇ ವ್ಯಕ್ತಿತ್ವಗೊಂಡಂತೆ ಕುವೆಂಪು ಅವರ ಸ್ವೋಪಜ್ಞತೆ ಹೇಗೆ ಸಾಂದ್ರವಾಗಿ ಮಹಾಕಾವ್ಯದಲ್ಲಿ ಸರ್ವವ್ಯಾಪಿಯಾಗಿದೆಯೆಂಬುದನ್ನು ಸಮರ್ಥವಾಗಿ ವಿವರಿಸಿ, ಅದರ ಗಹನ ಸೌಂದರ್ಯ ಗ್ರಹಣಕ್ಕೆ ಬೇಕಾದ ಕೀಲಿಕೈಗಳನ್ನು ವಿಮರ್ಶಕರು ಒದಗಿಸಿದ್ದಾರೆ. ‘ಶ್ರೀರಾಮಾಯಣ ಕೃತಿಗೆ ಅಪಚಾರ ಮಾಡದಂತಹ ಶಕ್ತ ಕನ್ನಡ ಕೃತಿ ಈ ತನಕವೂ ಬಂದಿರಲಿಲ್ಲವೆನ್ನುತ್ತಿದ್ದಾಗ ಉತ್ತರವಾಗಿ ಶ್ರೀರಾಮಾಯಣದರ್ಶನ ಮೂಡಿ ಬಂದಿದೆ….. ದರ್ಶನ ಕಾವ್ಯಸಿದ್ದಿಗಳ ದೃಷ್ಟಿಯಿಂದಲ್ಲದೆ ಛಂದಸ್ಸಿನ ದೃಷ್ಟಿಯಿಂದ ಕೂಡ ಈ ಕಾವ್ಯ ಇಡೀ ಕನ್ನಡದ ಛಂದಸ್ಸನ್ನೆಲ್ಲ ಮೈಗೂಡಿಸಿಕೊಂಡು ಬೆಳೆದಂತಿದೆ – ಸಂಸ್ಕೃತ ವೃತ್ತಗಳ ಗಾಯತ್ರಿ ಮತ್ತು ಮಂತ್ರಗಳ ಛಂದೋವಿನ್ಯಾಸಗಳನ್ನು ಗರ್ಭೀಕರಿಸಿಕೊಂಡು ಮಹಾಛಂದಸ್ಸು ಸುಂದರ ಸಂಪನ್ನವಾಗಿರುವುದನ್ನೂ ಕಾಣಬಹುದು. ಆಡುಮಾತಿನ ವಿಲಾಸದಿಂದ, ಗಂಭೀರ ಸಾಗರ ಘೋಷವಾಗಿ, ಮಂದಮಾರುತವಾಗಿ, ಚಂಡ ಮದ್ದಲೆಯಾಗಿ ಮೃದಂಗ ವೀಣಾ ವೇಣುವಾಗಿ ಮಂತ್ರವತ್ತಾಗುವ ತನಕ ಬೆಳೆದಿದೆ. ಕುವೆಂಪು ಶ್ರೀರಾಮಾಯಣ ದರ್ಶನದಿಂದ ಮಹಾಕವಿಯಾದರು ಎಂಬಂತೆಯೆ, ಅವರ ಕೃತಿ ಸಮಷ್ಟಿಯಿಂದಾಗಿ ಮತ್ತೂ ಮಹಾಕವಿಯಾಗಿದ್ದಾರೆ – ತಮ್ಮ ಯುಗದ ಬಗ್ಗೆ ಚೆನ್ನಾಗಿ ಪ್ರತಿಕ್ರಿಯೆ ತೋರಿಸುವಂತೆಯೆ ನಿತ್ಯವರ್ತಮಾನದ ಬಗ್ಗೆಯೂ ಗಾಢವಾಗಿ ಪ್ರತಿಸ್ಪಂದಿಸಿದ್ದಾರೆ’ (ಪು. ೧೦೦-೧೦೧) ಎಂಬ ಸುಜನಾ ಅವರ ಒರೆನುಡಿಯಲ್ಲಿ ಯಥಾರ್ಥತೆ ಇದೆ. ಇಪ್ಪತ್ತನೆಯ ಶತಮಾನದಲ್ಲಿ ಮಹಾಕಾವ್ಯ ಹುಟ್ಟಲಾರದೆಂದು ಗಳಪುವ ಅಸೂಯಾಶೀಲರಾದ ಪ್ರತಿಭಾಕುಬ್ಜರಿಗೆ ಈ ಮಹಾಕಾವ್ಯ ಸವಾಲಾಗಿದೆಯೆಂಬುದರಲ್ಲಿ ಸಂದೇಹವಿಲ್ಲ.

ಒಂದು ನಾಡಿನ ಸಂಸ್ಕೃತಿ ಕೆನೆಗಟ್ಟಿದಾಗ, ಅಲ್ಲಿಯ ಜೀವನ ಸಾಹಸದ ತುತ್ತ ತುದಿಯನ್ನೈದಿದಾಗ ಮಾತ್ರ ಒಂದು ಮಹಾಕಾವ್ಯ ಹುಟ್ಟಬಹುದೇ ಹೊರತು ಸಂಕ್ಷೋಭೆಯ ವಾತಾವರಣದಲ್ಲಿ, ಛಿದ್ರ ವಿಚ್ಛಿದ್ರ ಮನಸ್ಸಿನ ದಾರುಣಸ್ಥಿತಿಯಲ್ಲಿ ಮೂಡಲಾರದೆಂಬುದು ಪಾಶ್ಚಾತ್ಯಾನುಕರಣ ಶೀಲರಾದ, ಸಂಪ್ರದಾಯ ಶರಣರಾದ ವಿಮರ್ಶಕವರೇಣ್ಯರ ಚಾಳಿ ನುಡಿ. ಧರ್ಮ ಅಧೋಗತಿಯಲ್ಲಿದ್ದಾಗಲೇ ಅವತಾರ ಪುರುಷರು ಜನ್ಮಧಾರಣೆ ಮಾಡು ವುದಾದರೆ, ಸಮಾಜ ಸಂಕ್ಷೋಭೆಯ ದವಡೆಯಲ್ಲಿದ್ದಾಗಲೇ ಮಹಾಕಾವ್ಯವೇಕೆ ಅವತರಿಸ ಬಾರದು? ಅದೂ ಇರಲಿ, ಭಾರತೀಯರ ಜೀವನದಲ್ಲಿ ಇಪ್ಪತ್ತನೆಯ ಶತಮಾನ ಮಹಾಪರ್ವ ಕಾಲವೆಂಬ, ತ್ರೇತಾದ್ವಾಪರ ಯುಗಗಳ ವೀರ ಜೀವನವೂ ಸ್ವಾತಂತ್ರ್ಯಾಂದೋಲನದ ಮೇರು ಸಾಹಸದ ಮುಂದೆ ಕಾಂತಿಹೀನವಾಗುತ್ತದೆಂಬ, ಶ್ರೀರಾಮಕೃಷ್ಣ ಸ್ವಾಮಿವಿವೇಕಾನಂದ ಯೋಗಿ ಅರವಿಂದ ಮಹಾತ್ಮಗಾಂಧಿಯರ ಚಿರನೂತನ ವಿಶಿಷ್ಟಾವತಾರ ಸಂಸ್ಕೃತಿ ಪರಾಕಾಷ್ಠೆಯ ಜೀವಂತ ನಿದರ್ಶನವೆಂಬ ಸಂಗತಿಗಳ ಅರಿವಿಲ್ಲದವರು, ಇಂಥ ರೋಮಾಂಚಕಾರಕ ಲೋಕವಿಸ್ಮಯಕಾರಿಯಾದ ಘಟನೆಗಳ ನಡುವೆ ಬದುಕಿದ್ದೂ ಸತ್ತಂತಿರುವವರು ಮಹಾಕಾವ್ಯದ ಹುಟ್ಟಿನ ಬಗ್ಗೆ ಶಂಕೆ ವ್ಯಕ್ತಪಡಿಸುವುದು ಸಹಜ. ಶ್ರೀರಾಮಕೃಷ್ಣರ ಸರ್ವಸಮನ್ವಯದರ್ಶನ, ಶ್ರೀ ಅರವಿಂದರ ಯೋಗ ಸಮನ್ವಯದ ಪೂರ್ಣದೃಷ್ಟಿ, ಮಹಾತ್ಮಗಾಂಧೀಜಿಯವರ ಅಹಿಂಸಾತ್ಮಕ ಸರ್ವೋದಯ ಸಂದೇಶ, ಜತೆಗೆ ವಿಜ್ಞಾನ ಯುಗದ ವೈಚಾರಿಕ ವೈಜ್ಞಾನಿಕ ಮನೋಧರ್ಮಗಳನ್ನು ಮೈಗೂಡಿಸಿಕೊಂಡೇ ಈ ಮಹಾಕಾವ್ಯ ಮೂಡಿದೆಯೆಂಬುದು ಅದನ್ನೋದಿದ ಸಹೃದಯರಿಗೆ ಮನದಟ್ಟಾಗದಿರದು. ಸನಾತನ ನೂತನಗಳು, ಪರಂಪರೆ ಪ್ರಗತಿಗಳು, ವಾಸ್ತವಾದರ್ಶಗಳು, ಮರ್ತ್ಯಾಮರ್ತ್ಯಗಳು, ವಿಜ್ಞಾನ-ಸುಜ್ಞಾನಗಳು, ವಿಚಾರ ಶ್ರದ್ಧೆಗಳು ಇಲ್ಲಿ ಪರಸ್ಪರಾಲಿಂಗನ ಕ್ರಿಯೆಯಲ್ಲಿ ಮಧುರ ಸಮ್ಮಿಳನ ದಲ್ಲಿ ಪರಿಣಾಮಗೊಂಡಿವೆಯೆಂಬುದನ್ನು ಸೂಕ್ಷ್ಮಮತಿಗಳ ಗ್ರಹಿಸಬಹುದಾಗಿದೆ. ಈ ಎಲ್ಲ ವಿಚಾರಗಳು ಇಲ್ಲಿಯ ಪ್ರಬಂಧಗಳಲ್ಲಿ ತರ್ಕಬದ್ಧವಾಗಿ ವಿವೇಕ ಪೂರ್ಣವಾಗಿ ನಿರುದ್ವಿಗ್ನವಾಗಿ ಉತ್ಪೇಕ್ಷೆ ಆಭಾಸಗಳಿಗೆಡೆಯಿಲ್ಲದಂತೆ ಪ್ರತಿಪಾದನೆಗೊಂಡಿವೆ.

ಕುವೆಂಪು ಅವರು ನಾಡಿನ ಗೌರವಕ್ಕೆ ಪಾತ್ರರಾದ ಮಹಾಕವಿ ಮಹಾಕಾದಂಬರಿಕಾರ ರಾಗಿಯೂ ವಿವಾದಾಸ್ವದ ವ್ಯಕ್ತಿಯಾಗಿದ್ದಾರೆಂಬ ನಿಜಸ್ಥಿತಿಯನ್ನು ಮರೆಮಾಚದೆ, ಅದಕ್ಕೆ ಸುಸಂಬದ್ಧವಾದ ಕಾರಣಗಳನ್ನು ಸಹ ಸುಜನಾ ವಿವರಿಸುತ್ತಾರೆ; ‘ಕಾವ್ಯ ಚಿಂತನ ಲೇಖನಗಳು ಹೇಗಿದ್ದರೂ ಮಿತಸಹೃದಯ ವರ್ಗವನ್ನು ಮುಟ್ಟುತ್ತವೆ. ಆದರೆ ವೈಚಾರಿಕ ಬರಹಗಳು ಕುವೆಂಪು ಅವರನ್ನು ವ್ಯಾಪಕ ವಾಚಕ ವೃಂದಕ್ಕೆ ಪರಿಚಯಿಸಿರುವುದಲ್ಲದೆ ಇತ್ತೀಚಿನ ದಿನಗಳಲ್ಲಿ ಚರ್ಚೆಯ ವ್ಯಕ್ತಿಯನ್ನಾಗಿಯೂ ಮಾಡಿವೆ. ನಮ್ಮಲ್ಲಿ ಯಾರೇ ಚಾರ್ವಾಕ ತತ್ವವನ್ನೇ ಹೆಳಲಿ, ಅನಧ್ಯಾತ್ಮವಾದವನ್ನೇ ಹೇಳಲಿ ಅದಕ್ಕೆ ನಾವು ಯಾರೂ ಕೋಪಿಸಿಕೊಳ್ಳಲಾರೆವು. ಆದರೆ ಯಾರಾದರೂ, ಅವರು ಎಷ್ಟೇ ಅಧ್ಯಾತ್ಮಿಯಾಗಿರಲಿ, ಮತಮೌಢ್ಯವನ್ನು ಜಾತಿಪದ್ಧತಿ ವರ್ಣವ್ಯವಸ್ಥೆಗಳನ್ನು ಖಂಡಿಸಿದರಂತೂ ಅವರ ಮೇಲೆ ಮೀಸೈಲ್‌ಗಳ ದಾಳಿಯೇ ನಡೆದೀತು. ಈಗಲೂ, ಹಿಂದೆ ಮಾತ್ರವೇ ಅಲ್ಲ, ಇದು ನಡೆದಿದೆ. ಆದ್ದರಿಂದ ಕುವೆಂಪು ಏನೂ ಅಪವಾದವಲ್ಲ (ಪು. ೮೦-೮೧). ಸುಜನಾ ಅವರ ಈ ನುಡಿಮುತ್ತು ಎಂದೂ ಹುಸಿಯಾಗದು.

(ಸುಜನಾ ನಮ್ಮ ಉತ್ತಮೋತ್ತಮ ಪ್ರಾಧ್ಯಾಪಕರಲ್ಲೊಬ್ಬರು; ಪಾಶ್ಚಾತ್ಯ ಭಾರತೀಯ ಕಾವ್ಯ ರಾಶಿ ಕಾವ್ಯ ಮೀಮಾಂಸೆಗಳನ್ನು ತೌಲನಿಕವಾಗಿ ತಲಸ್ಪರ್ಶಿಯಾಗಿ, ಮುಕ್ತ ಮನಸ್ಸಿನಿಂದ, ತಾರತಮ್ಯ ವಿವೇಕದಿಂದ ಅಧ್ಯಯನ ಮಾಡಿ ಬಹುಶ್ರುತರಾಗಿರುವ ಘನ ವಿದ್ವಾಂಸರು; ಗಹನವೂ ಗಾಢವೂ ವ್ಯಾಪಕವೂ ಆದ ಅಧ್ಯಯನದಿಂದ ಸಂಲಬ್ಧವಾದ ಪಾಂಡಿತ್ಯದಿಂದಾಗಿ, ಸನಾತನ ನೂತನ ಪ್ರಜ್ಞೆಗಳ ಸಂಲಗ್ನದಿಂದ ಪ್ರಖರಗೊಂಡ ಪ್ರತಿಭೆಯಿಂದಾಗಿ, ಶ್ರೀರಾಮಕೃಷ್ಣ ವಿವೇಕಾನಂದ ಅರವಿಂದ ಸಾಹಿತ್ಯದ ಶ್ರದ್ಧಾಪೂರ್ಣವ್ಯಾಸಂಗದಿಂದಾಗಿ ಸಂಪ್ರಾಪ್ತವಾದ ಸುಸಂಸ್ಕೃತ ಚೇತನರು. ಅವರಂಥ ಸ್ವಸ್ಥಮನಸ್ಸಿನ, ನಿರ್ವಿಕಾರ ಮನೋಭಾವದ, ವ್ಯಾಪಕ ವ್ಯಾಸಂಗದ, ಸೂಕ್ಷ್ಮಮತಿಯ, ಸತ್ಯನಿಷ್ಠೆಯ, ವಿಚಾರ ಶೀಲತೆಯ, ಸಾಕ್ಷೀ ಪ್ರಜ್ಞೆಯ ವಿಮರ್ಶಕರು ಕನ್ನಡದಲ್ಲಿ ವಿರಳ.

ಎಂಥ ಶ್ರೇಷ್ಠ ದರ್ಜೆಯ ಪಾಶ್ಚಾತ್ಯ ವಿಮರ್ಶಕನೂ ಮೆಚ್ಚಬಹುದಾದ ಅಥವಾ ಕರುಬಬಹು ದಾದ ಸಹೃದಯ ವಿಮರ್ಶಕವರೇಣ್ಯರೆಂದು ಅವರನ್ನು ಕುರಿತು ಪುತಿನ ಅವರು ಆಗಾಗ್ಗೆ ಹೆಮ್ಮೆಯಿಂದ ಹೇಳುವುದುಂಟು. ತಮ್ಮ ಸಾಹಿತ್ಯವನ್ನು ಮೂಲಚೂಲವಾಗಿ ಅಭ್ಯಸಿಸಿ, ಪದರ ಪದರವಾಗಿ ಹಿಂಜಿ, ಹಕ್ಕಿ, ಸೋಸಿ, ಅದರ ಸ್ವರೂಪವನ್ನು ಒಳ ಹೊರಮಗ್ಗುಲುಗಳನ್ನೂ ಅದರ ಅಂತರಂಗ ವನ್ನೂ ಕರಾರುವಾಕ್ಕಾಗಿ ಅರ್ಥಮಾಡಿಕೊಂಡು ವ್ಯಾಖ್ಯಾನ ಮಾಡಬಲ್ಲ ಸಮರ್ಥರಲ್ಲಿ ಅವರು ಅಗ್ರಗಣ್ಯರೆಂಬುದನ್ನು ಕುವೆಂಪು ಸಹ ಬಲ್ಲರು.)