‘ಕನ್ನಡ ಸಾರಸ್ವತಲೋಕದ ಸಾರ್ವಭೌಮ, ಮಹಾಕಾವಿ, ರಾಷ್ಟ್ರಕವಿ, ದಾರ್ಶನಿಕ ಕ್ರಾಂತಿಕಾರ ಶ್ರೀ ಕುವೆಂಪು ಅವರಿಗೆ ಕನ್ನಡ ಸಾಹಿತ್ಯದ ಅತ್ಯುಚ್ಚ ಗೌರವವಾದ ಪಂಪ ಪ್ರಶಸ್ತಿಯನ್ನು ಪ್ರಪ್ರಥಮಬಾರಿಗೆ ನೀಡುವ ಭಾಗ್ಯ. ಲಭಿಸಿದ್ದಕ್ಕಾಗಿ ನಾನು ಧನ್ಯ; ಇಂಥ ಧನ್ಯತೆ ದೊರಕಿದ ದಿನವೇ ಸುದಿನ; ನನ್ನ ಜೀವನದಲ್ಲಿಯೇ ಇದೊಂದು ಮಹಾಸುದಿನ. ಎಂ.ಎನ್. ರಾಯ್ ಅವರ ನವಮಾನವತಾವಾದ ಕುವೆಂಪು ಕೃತಿಗಳಲ್ಲಿ ರೂಪುಗೊಂಡಿದೆ. ಎಲ್ಲ ಶೋಷಣೆಗಳಿಂದ ಮುಕ್ತಗೊಳಿಸುವುದೇ ಸ್ವಾತಂತ್ರ್ಯದ ಗುರಿ; ಅದು ಬದುಕಿನ ಗುರಿಯೂ ಅಹುದು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ದೊರೆಯಬೇಕು. ಇದು ಕುವೆಂಪು ಅವರ ವಿಶ್ವಮಾನವ ಸಂದೇಶದ ಸಾರ.

‘ಇಂದು ಎಲ್ಲ ಕಡೆ ಜಾತಿ ಭಾಷೆ ವರ್ಗಗಳ ಹೆಸರಿನಲ್ಲಿ ಕಚ್ಚಾಟ ನಡೆಯುತ್ತಿದೆ. ದುಷ್ಟಶಕ್ತಿಗಳು ಸಮಾಜವನ್ನು ಅಂಧಕಾರಕ್ಕೆ ನೂಕುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಎಲ್ಲ ಜಾತಿ, ಮತ, ಬಣ್ಣ, ಲಿಂಗ, ದೇಶ, ಭಾಷೆಗಳಿಗೆ ಅತೀತವಾದ ಮಾನವೀಯತೆ ಬೆಳೆಯ ಬೇಕೆಂಬುದು ವಿಶ್ವದರ್ಶನವನ್ನು ಸಾರಿದ ಕುವೆಂಪು ಅವರ ಅಭಿಲಾಷೆ. ವಿಚಾರ ಕ್ರಾಂತಿಯಿಲ್ಲದೆ ಪ್ರಗತಿ ಸಾಧ್ಯವಿಲ್ಲವೆಂದು ಸಾಹಿತ್ಯದ ಮೂಲಕ ಇಡೀ ಸಮಾಜಕ್ಕೆ ಚೈತನ್ಯ ನೀಡಿದವರು ಕುವೆಂಪು’ ಎಂಬುದಾಗಿ ಕುವೆಂಪು ಅವರಿಗೆ ಪಂಪ ಪ್ರಶಸ್ತಿಯನ್ನು ನೀಡುವ ಸಮಯದಲ್ಲಿ ಮುಕ್ತಕಂಠದಿಂದ ಘೋಷಿಸಿದವರು ರಾಜ್ಯದ ಮುಖ್ಯಮಂತ್ರಿ ಶ್ರೀ ಎಸ್.ಆರ್. ಬೊಮ್ಮಾಯಿಯವರು.

ಭಾರತದ ಸ್ವಾತಂತ್ರ್ಯ ಪ್ರಾಪ್ತಿಯ ಈ ನಲವತ್ತು ವರ್ಷಗಳಲ್ಲಿ ಕನ್ನಡದಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಸೃಜನಶೀಲ ಕೃತಿ ಎಂಬ ಕಾರಣಕ್ಕಾಗಿ ೧೯೮೮ನೆಯ ಸಾಲಿನ ಪ್ರಶಸ್ತಿಗೆ ಶ್ರೀ ಕುವೆಂಪು ಅವರ ‘ಶ್ರೀ ರಾಮಾಯಣದರ್ಶನಂ’ ಆಯ್ಕೆಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೈಸೂರಿನ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ೨೫.೩.೧೯೮೯ರಂದು ಸಂಜೆ ನೆರವೇರಿಸಿತು. ಸಮಾರಂಭದ ಅದ್ವಿತೀಯ, ಅಪೂರ್ವ, ಆಕರ್ಷಕ ವ್ಯವಸ್ಥೆ ದೇವತೆಗಳಿಗೂ ದರ್ಶನೀಯವಾಗಿತ್ತು. ಆವರಣದ ದ್ವಾರದಲ್ಲಿ ವರ್ಣರಂಜಿತ ವೇಷಭೂಷಣಗಳಿಂದಲಂಕೃತರಾಗಿದ್ದ ನಾಲ್ವರು ಅಶ್ವಾರೋಹಿಗಳು ದರ್ಶನ ಕುತೂಹಲಿಗಳಾಗಿ ಬರುತ್ತಿದ್ದವರಿಗೆ ಗೌರವ ಸಲ್ಲಿಸುವ ರೀತಿಯಲ್ಲಿ ನೆಲೆಗೊಂಡಿದ್ದರು. ಮಂದಿರದ ಪ್ರವೇಶ ದ್ವಾರದಲ್ಲಿ ಸರ್ವಾಲಂಕಾರ ಭೂಷಿತವಾಗಿದ್ದ ಎರಡು ಗಜರಾಜಗಳು ಕವಿಗಳ ಸ್ವಾಗತಕ್ಕಾಗಿ ನಿಂತಿದ್ದುವು. ರಾಷ್ಟ್ರಕವಿಯ ವಿವಿಧ ಭಾವಚಿತ್ರಗಳು ವಿದ್ಯುದ್ದೀಪಗಳ ಕಾಂತಿಯಲ್ಲಿ ರಾರಾಜಿಸುತ್ತಿದ್ದುವು. ಆಸನ ವ್ಯವಸ್ಥೆಯಲ್ಲಿಯೂ ವಿಶೇಷತೆ ಎದ್ದು ಕಾಣುತ್ತಿತ್ತು. ‘ಪರಮ ಜೀನೇಂದ್ರವಾಣಿಯೆ ಸರಸ್ವತಿ’ ಮತ್ತು ‘ಜಯ್ ಭಾರತ ಜನನಿಯ ತನುಜಾತೆ’ ಎಂಬ ಪ್ರಾರ್ಥನೆಯೊಡನೆ ಕಾರ್ಯಕ್ರಮಗಳು ಆರಂಭವಾದುವು.

ಸ್ವಾಗತಾ ನಂತರ ಪ್ರಶಸ್ತಿ ವರಣ ಸಮಿತಿಯ ಅಧ್ಯಕ್ಷರಾದ ಪ್ರೊ. ವಿ.ಕೃ. ಗೋಕಾಕ ಅವರು ‘ಪೂಜ್ಯ ಶ್ರೀ ಕುವೆಂಪು ಅವರೆ’ ಎಂದು ಸಂಬೋಧಿಸಿ, ಶ್ರೀರಾಮಾಯಣದರ್ಶನಂ ಮಹಾಕಾವ್ಯವನ್ನು ಪ್ರಥಮ ಪ್ರಶಸ್ತಿಗೆ ಆಯ್ದುದರ ಔಚಿತ್ಯವನ್ನು, ಆ ಕಾವ್ಯದ ಹಿರಿಮೆಯನ್ನು ವಿಶದಪಡಿಸಿದರು. ‘ಕುವೆಂಪು ನವೋದಯ ಕಾಲದ ಆದಿಕವಿ, ಉಚ್ಚಕವಿ ಎಂಬುದರಲ್ಲಿ ಸಂಶಯವಿಲ್ಲ. “ಸೂರ್ಯೋದಯ ಚಂದ್ರೋದಯ ದೇವರದಯೆ ಕಾಣೊ” ಎಂಬ ಕವಿತೆಯಿಂದ ಕಾವ್ಯ ಕೃಷಿಯನ್ನು ಆರಂಭಿಸಿದ ಕವಿ ಕುವೆಂಪು ಅವರು “ಓ ನನ್ನ ಚೇತನ ಆಗು ನೀ ಅನಿಕೇತನ” ಎಂಬುದಾಗಿ ಭಾರತೀಯ ದರ್ಶನ ದೃಷ್ಟಿಯನ್ನು ತಮ್ಮ ಕೃತಿಗಳ ಮೂಲಕ ಹರಡಿದ್ದಾರೆ ಎಂದು ನುಡಿದು, ವಿಶ್ವಮಾನವ ಸಂದೇಶದ ಸ್ವರೂಪವನ್ನು ವಿವರಿಸಿದರು.

ಅಭಿನಂದನ ಭಾಷಣ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಬಿ.ಕೆ. ಭಟ್ಟಾಚಾರ್ಯ ಅವರು ಕಲೆ, ಸಾಹಿತ್ಯ, ಸಂಸ್ಕೃತಿಗಳ ಬೆಳವಣಿಗೆಗೆ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಪ್ರೋಅತ್ಯಗತ್ಯವೆಂದು ಪ್ರತಿಪಾದಿಸಿದರು. ‘ಸೃಜನಶೀಲತೆಯ ಭವ್ಯತೆಗೆ ಕುವೆಂಪು ಸಂಕೇತವಾಗಿದ್ದಾರೆ. ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ತತ್ತ್ವಗಳು ಶ್ರೀ ರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಹಾಸುಹೊಕ್ಕಾಗಿ ಹರಿದಿವೆ. ಭಯೋತ್ಪಾದಕತೆ, ಕ್ಷೋಭೆ, ಮಾಲಿನ್ಯ ಸರ್ವತ್ರ ತಾನೇ ತಾನಾಗಿ ಹರಡುತ್ತಿರುವ ಈ ಸಮಯದಲ್ಲಿ ಕುವೆಂಪು ಅವರ ವಿಶ್ವಮಾನವ ಸಂದೇಶ ಅರ್ಥಪೂರ್ಣವಾಗಿದೆ. ಕುವೆಂಪು ಎಲ್ಲ ದೃಷ್ಟಿಯಿಂದಲೂ ನೊಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ’ ಎಂದವರು ನುಡಿದರು.

‘ಕುವೆಂಪು ಅವರು ಸಮಕಾಲೀನ ಕನ್ನಡ ಸಾಹಿತ್ಯದ ಕೆಲವೇ ಕೆಲವು ಶಿಖರ ಸಾಹಿತಿಗಳಳ್ಲಿ ಅತ್ಯಂತ ಪ್ರಮುಖರಾದವರು. ತುಂಗಾತೀರದ ಸಹ್ಯಾದ್ರಿ ಗಿರಿಶ್ರೇಣಿಗಳ ದಟ್ಟವಾದ ಅರಣ್ಯ ಪರಿಸರದಿಂದ ಮೂಡಿ ಬಂದ ಈ ಕಾಡಿನ ಕವಿ ನಮ್ಮ ನಾಡಿನ ಪ್ರೀತಿಯ ಕವಿಯಾಗಿ, ಇಡೀ ರಾಷ್ಟ್ರದ ಕವಿಯಾಗಿ, ವಿಶ್ವಮಾನವ ಪ್ರಜ್ಞೆಯನ್ನು ಜೀವಂತವಾಗಿ ಮೈಗೂಡಿಸಿಕೊಂಡ ಮಹಾವ್ಯಕ್ತಿಯಾಗಿ ನಮ್ಮ ನಡುವೆ ಇರುವುದು ನಮಗೆಲ್ಲ ಒಂದು ಹೆಮ್ಮೆಯ ಹಾಗೂ ಧನ್ಯತೆಯ ಸಂಗತಿಯಾಗಿದೆ. ಕುವೆಂಪು ಅವರ ಬಹುಮುಖ ಪ್ರತಿಭೆಯ, ಸೃಜನಶೀಲ ವ್ಯಕ್ತಿತ್ವ ಪ್ರಾಚ್ಯ ಪಾಶ್ಚಾತ್ಯ ಸಾಹಿತ್ಯ ಹಾಗೂ ವಿವಿಧ ಜ್ಞಾನಗಳ ಶಾಖೆಗಳ ಪರಂಪರೆಯಿಂದ ಸತ್ವ ಸಂಪನ್ನವಾಗಿ ಕನ್ನಡ ಸಾಹಿತ್ಯದ ಸಮಸ್ತ ಪ್ರಕಾರಗಳಲ್ಲಿಯೂ ನಿಶ್ಚಿತವಾದ ಎತ್ತರದ ಕೃತಿಗಳನ್ನು ನಿರ್ಮಿಸಿ, ಕನ್ನಡ ಸಾಹಿತ್ಯಕ್ಕೆ ಜಾಗತಿಕ ಸಾಹಿತ್ಯದಲ್ಲಿ ಸುಭದ್ರವಾದ ಸ್ಥಾನವನ್ನು ಗಳಿಸಿಕೊಟ್ಟಿದೆ.

‘ಭಾರತೀಯ ರಾಷ್ಟ್ರೀಯ ಆಂದೋಲನದ ಸಮಯದಲ್ಲಿ ಒಂದು ನಿರ್ಭಯ ಪ್ರತಿಭಟನೆಯ ಪ್ರಮುಖ ವಾಣಿಯಾಗಿ ಅಂದಿನ ಹೋರಾಟಕ್ಕೆ ಸ್ಫೂರ್ತಿಯನ್ನು ನೀಡಿದ ಕುವೆಂಪು ಅವರ ಸಾಹಿತ್ಯ ನಿರ್ಮಿತಿ ಈ ರಾಷ್ಟ್ರದ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲದ ಆಶೋತ್ತರಗಳನ್ನೂ ಸ್ಥಿತ್ಯಂತರಗಳನ್ನೂ ಪ್ರತಿಬಿಂಬಿಸಿದ ಹಾಗೂ ವಿಮರ್ಶೆಗೆ ಗುರಿ ಪಡಿಸಿದ ಮಹತ್ವದ ಸಾಂಸ್ಕೃತಿಕ ದಾಖಲೆಯೂ ಹೌದು. ಅಧ್ಯಾತ್ಮ ವೈಚಾರಿಕತೆ ಹಾಗೂ ಅದಮ್ಯವಾದ ನಿಸರ್ಗ ಪ್ರೀತಿಯನ್ನು ಮೂಲದ್ರವ್ಯವನ್ನಾಗಿ ಮಾಡಿಕೊಂಡ ಅವರ ಸಾಹಿತ್ಯವು ಶ್ರೀ ಸಾಮಾನ್ಯರ ಬದುಕನ್ನು ನಿಯಂತ್ರಿಸುವ ಹಾಗೂ ಶೋಷಿಸುವ ಸಂಪ್ರದಾಯವನ್ನು ಉಗ್ರವಾದ ಚಿಕಿತ್ಸೆಗೆ ಗುರಿಪಡಿಸಿ, ಸರ್ವೋದಯ, ಸಮನ್ವಯ ಮತ್ತುಪೂರ್ಣದೃಷ್ಟಿಯ ನೆಲೆಯಲ್ಲಿ ಮನುಷ್ಯನ ವ್ಯಕ್ತಿತ್ವವು ನಿರಂಕುಶವಾಗಿ ಹಾಗೂ ಅನಿಕೇತನವಾಗಿ ವಿಕಾಸಗೊಳ್ಳುವ ಕಳಕಳಿಯನ್ನು ಅನನ್ಯವಾಗಿ ಪ್ರತಿಪಾದಿಸುವ ಸ್ವರೂಪದ್ದಾಗಿದೆ.

‘ಭಾರತದ ಮಾತ್ರವಲ್ಲ, ಜಾಗತಿಕ ಮಹಾಕಾವ್ಯ ಪರಂಪರೆಯ ಸತ್ವವನ್ನು ಮೈಗೂಡಿಸಿ ಕೊಂಡು, ಸಮಕಾಲೀನ ಕನ್ನಡ ಸಂದರ್ಭದಲ್ಲಿ ಆವಿರ್ಭವಿಸಿರುವ ಶ್ರೀ ರಾಮಾಯಣ ದರ್ಶನಂ ಮೇರುಕೃತಿ ವಿಶ್ವವಾಣಿಯ ಮುಡಿಯ ಮಣಿಯಾಗಿದೆ. ಪಂಪನಿಂದ ಕುವೆಂಪುವರೆಗೆ ಎಂಬ ನುಡಿಗಟ್ಟು ಪಂಪನಿಗೂ ಕುವೆಂಪುವಿಗೂ ಇರುವ ಸಾದೃಶ್ಯವನ್ನು ಸೂಚಿಸುವುದರ ಜತೆಗೆ ಕನ್ನಡ ಸಾಹಿತ್ಯದ ಸೀಮಾರೇಖೆಗಳನ್ನೂ ಸೂಚಿಸುತ್ತದೆ. ವಾಸ್ತವವಾಗಿ ಪಂಪ-ಕುವೆಂಪು ಇಬ್ಬರೂ ಕನ್ನಡ ಸಾಹಿತ್ಯದ ಸೀಮಾ ಪುರುಷರು.’

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ವಿಠಲ ಮೂರ್ತಿಯವರು ಸರ್ಕಾರದ ಪರವಾಗಿ ಮಾಡಿದ ಪ್ರಶಸ್ತಿ ಘೋಷಣೆಯ ಸಾರಾಂಶವಿದು.

ಸಚಿವ ಶ್ರೀ ಎಂ.ಪಿ. ಪ್ರಕಾಶ್ ಅವರು ಪಂಪ ಮತ್ತು ಕುವೆಂಪು ಅವರ ನಡುವಣ ಸಾದೃಶ್ಯಗಳನ್ನು ವಿವರಿಸಿ, ಅವರ ಆಂತರಂಗಿಕ ಸಂಬಂಧವನ್ನು ನಿರೂಪಿಸಿ, ಕುವೆಂಪು ಅವರ ಕೃತಿಗಳು ‘ಅಪೌರುಷೇಯ’ ಸದೃಶವಾದುವೆಂದು ತಿಳಿಸಿದರು. ತಮ್ಮ ‘ಪೂಜ್ಯಗುರು’ ಶ್ರೀ ಕುವೆಂಪು ಅವರು ‘ತಮ್ಮ ಕೃತಿಗಳ ಮೂಲಕ ವರ್ಣಾಶ್ರಮ ಧರ್ಮದ ಕೊಳಕನ್ನೆತ್ತಿ ತೋರಿಸಿ, ದಲಿತರಲ್ಲಿ ನವಚೈತನ್ಯವನ್ನು ಮೂಡಿಸಿದ್ದಾರೆ’ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಮಂತ್ರಿ ಶ್ರೀ ಬಿ. ರಾಚಯ್ಯನವರು ನುಡಿದರು.

ಕೊನೆಯಲ್ಲಿ ಶ್ರೀ ಕುವೆಂಪು ಅವರು ‘ಪಂಪ ಪ್ರಶಸ್ತಿ ತಮ್ಮ ಕಾವ್ಯ ಸಮಸ್ತದಲ್ಲಿಯೂ ಪ್ರವಹಿಸುವ ವಿಶ್ವಮಾನವ ಸಂದೇಶಕ್ಕೆ ಸಂದ ಗೌರವ’ ಎಂದು ತಮ್ಮ ವಂದನಾ ಭಾಷಣದಲ್ಲಿ ತಿಳಿಸಿದರು. ‘ಸರ್ವ ಭಾಷಾಮಯಿ ಸರಸ್ವತಿಗೆ ನಮಸ್ಕಾರ’ ಎಂಬ ಸಂಬೋಧನೆಯೊಡನೆ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ‘ನನ್ನ ಬಗ್ಗೆ ಮಾತಾಡಿದ ಶ್ರೀ ಬೀರೇಂದ್ರ ಕುಮಾರ ಭಟ್ಟಾಚಾರ್ಯರೂ, ಡಾ. ವಿ.ಕೃ. ಗೋಕಾಕರೂ “ಕವಿಗೆ ಕವಿ ಮುನಿವಂ” ಎಂಬುದನ್ನು ಸುಳ್ಳು ಮಾಡಿ “ಕವಿಗೆ ಕವಿ ನಮಿಪಂ” ಎಂಬ ಹೊಸ ಸೂಕ್ತಿಯ ಉದಯಕ್ಕೆ ಕಾರಣರಾಗಿದ್ದಾರೆ. ಕರ್ನಾಟಕ ಸರ್ಕಾರ ಮೊದಲಿನಿಂದಲೂ ನನ್ನ ವಿಷಯದಲ್ಲಿ ತುಂಬ ಅಭಿಮಾನವನ್ನು ತೋರಿಸುತ್ತ ಬಂದಿದೆ. ಅರುವತ್ತು ವರ್ಷಗಳಿಂದ ಲಕ್ಷಾಂತರ ಕನ್ನಡಿಗರು ಪ್ರೀತಿ ಅಭಿಮಾನಗಳನ್ನು ಧಾರೆಯೆರೆದು ನನಗೆ ಧನ್ಯತೆಯ ಭಾವವನ್ನು ನೀಡಿದ್ದಾರೆ. ಪಂಪ ಪ್ರಶಸ್ತಿ ನನಗೆ ದೊರೆತಿರುವುದು ಹೊರನೋಟಕ್ಕೆ ಕೇವಲ ಆಕಸ್ಮಿಕವೆಂದು ತೋರಬಹುದು. ಆದರೆ ಕನ್ನಡದ ಆದಿಕವಿ ಪಂಪನಿಗೂ ನನಗೂ ಇರುವ ಅಂತರಂಗ ಸಂಬಂಧವನ್ನು ನೆನೆದರೆ ಈ ಪ್ರಶಸ್ತಿ ಲಾಭ ಎಷ್ಟು ಅರ್ಥಪೂರ್ಣ ಎಂಬುದು ಸ್ಪಷ್ಟವಾಗುತ್ತದೆ. ಈ ಪ್ರಶಸ್ತಿಯನ್ನು ಅತ್ಯಂತ ಕೃತಜ್ಞತೆಯಿಂದ ಸ್ವೀಕರಿಸಿ, ಎಂದಿನಂತೆ ಸರ್ವಧರ್ಮ ಸಮನ್ವಯಾಚಾರ್ಯ ಶ್ರೀ ರಾಮಕೃಷ್ಣ ಪರಮಹಂಸರ ಅಡಿದಾವರೆಗಳಿಗೆ ಅರ್ಪಿಸುತ್ತೇನೆ’ ಎಂದು ನುಡಿದು, ಹೊರ ಗೊಳಗೆ ಕಿಕ್ಕಿರಿದಿದ್ದ ಶ್ರೋತೃಗಳ ಕರತಾಡನ ಮೊಳಗುತ್ತಿರುವಾಗ ವಿಶ್ವಮಾನವ ಕುವೆಂಪು ಅವರು ತಮ್ಮ ಭಾಷಣವನ್ನು ಮುಗಿಸಿದರು.

‘ಯುಗದ ಕವಿ, ಜಗದ ಕವಿ’ಯೆಂದು ಎಂದೋ ವರಕವಿ ಬೇಂದ್ರೆಯವರಿಂದ ಹೊಗಳಿಸಿ ಕೊಂಡ ಕುವೆಂಪು ಭರತಖಂಡದ ಅತ್ಯುಚ್ಚ ಗೌರವ ಪ್ರಶಸ್ತಿಗಳನ್ನು ಪಡೆದುಕೊಂಡ ಮೊದಲಿಗರಾಗಿದ್ದಾರೆ. ಅವು ಅವರ ಅರ್ಹತೆಗೆ ಸಂದ, ಸಾಧನೆ ಸಿದ್ದಿಗಳಿಗೆ ಲಭಿಸಿದ ಪುರಸ್ಕಾರಗಳೆ ಹೊರತು, ಲೌಕಿಕಾಧಿಕಾರಕ್ಕೆ ದಾಕ್ಷಿಣ್ಯಕ್ಕೆ ಬಲಾತ್ಕಾರಕ್ಕೆ ಪ್ರತ್ಯುಪಕಾರ ನಿರೀಕ್ಷೆಗೆ ಲಬ್ಧವಾದ ಮುಯ್ಯಿ ಕಾಣಿಕೆಗಳಲ್ಲ. ದೊಲನ ಅವರು ಹೇಳುವಂತೆ ಕುವೆಂಪು ದೇವರ ಮನುಷ್ಯ, ದೇವಮಾನವರೆಂಬುದು ನಿಜ. ಅವರು ದೇವಮಾನವರಾದದ್ದು ಕೇವಲ ಹೊಗಳಿಕೆ ಯಿಂದಲ್ಲ, ಕಟ್ಟುಕತೆಗಳಿಂದಲ್ಲ, ಪುರಾಣಗಳ ನೇಯ್ಗೆಯಿಂದಲ್ಲ, ಏಳುಬೀಳುಗಳ, ತೊಡರೆಡರುಗಳ, ನಿಂದಾಪಹಾಸ್ಯಗಳ, ದ್ವೇಷಾಸೂಯೆಗಳ ಬೆಂಕಿಯುರಿಯಲ್ಲಿ ಬೆಂದು, ಶತಶತ ವಿಘ್ನಗಳ ಜಂಝೆುಯಲ್ಲಿ ತತ್ತರಿಸಿ, ನಿರಂತರ ತಪಶ್ಚರ್ಯೆಯ, ಶ್ರದ್ಧಾಪೂರ್ಣ ಸಾಧನೆಯ ಶಿಖರವನ್ನೇರಿದನಂತರ. ಶ್ರೀ ರಾಮಕೃಷ್ಣ ಪರಮಹಂಸರ ಗೋತ್ರದಲ್ಲಿ, ಶ್ರೀ ವಿವೇಕಾನಂದರ ಮಾನಸ ಪುತ್ರರಾಗಿ, ಶ್ರೀ ಮಹಾಪುರುಷರ ಶಿಷ್ಯರಾಗಿ, ಪ್ರಕೃತಿಯಾರಾಧಕರಾಗಿ, ಪ್ರಾಚ್ಯ ಪಾಶ್ಚಾತ್ಯ ಜ್ಞಾನ ಧೇನುವಿನ ಕೆಚ್ಚಲುಂಡು ಪರಿಪುಷ್ಟರಾಗಿ, ವಿಜ್ಞಾನ ವೈಚಾರಿಕ ಹಾಗೂ ಸ್ವಾತಂತ್ರ್ಯಾಂದೋಲನ ಯುಗಗಳ ಮಂಥನ ಲಬ್ಧ ವಿಚಾರಾಮೃತಪಾನದಿಂದ ಸಚೇತನರಾಗಿ, ದಿನದಿನವೂ ಅನಿಕೇತನರಾಗಿ, ಅನಂತವಾಗಿ, ನಿರ್ದಿಗಂತವಾಗಿ ಬೆಳೆದ ವಿಶ್ವಮಾನವರವರು.

ಜಗತ್ತಿನಲ್ಲಿ ಮಹಾಕವಿಗಳೇ ವಿರಳ; ಯುಗಕ್ಕೊಬ್ಬ; ಮಹಾಪುರುಷರೂ ಅಷ್ಟೇ. ಮಹಾಪುರುಷ ಮಹಾಕವಿಯಾದದ್ದಿಲ್ಲ. ಮಹಾಕವಿ ಮಹಾಪುರುಷರು ಒಮ್ಮೆಯ್ಯೆಗಿ ರುವುದಂತು ದುರ್ಲಭ: ಆ ದುರ್ಲಭತೆ ಕುವೆಂಪು ಅವರಲ್ಲಿ ಸಾಧ್ಯವಾಗಿರುವುದು ಕನ್ನಡಕ್ಕೆ, ಕನ್ನಡನಾಡಿಗೆ, ಇಡೀ ಭಾರತಕ್ಕೆ ಸಂದ ಗೌರವವೆಂದು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ನೆನೆಯಬೇಕಾಗಿದೆ.

ಶ್ರೀ ಕುವೆಂಪು ಅವರ ವಿಸ್ಮಯಕಾರಿ ಅಂತಶ್ಚೈತನ್ಯದ ತ್ವರಿತ ವಿಕಾಸಗತಿಯನ್ನು ಅಮಲನ ಕತೆ ಕೊಳಲು ಮೊದಲಾದ ಅವರ ಪ್ರಾರಂಭದ ಕೃತಿಗಳಿಂದ ಹಿಡಿದು ಅವರ ಶ್ರೀ ರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು ಮುಂತಾದ ಶಿಖರ ಪ್ರಾಯದ ಕೃತಿಗಳವರೆಗಿನ ಅವರ ಸಾಹಿತ್ಯ ರಾಶಿಯಲ್ಲಿ ಗುರುತಿಸಬಹುದು. ಬಾಲ್ಯದಲ್ಲಿಯೇ ಹಿರಿಯರೊಬ್ಬರಿಂದ ಕೇಳಿದ ಲಾಂಗ್‌ಫೆಲೊ ಕವಿಯ ‘ದಿ ಸಾಮ್ ಆಫ್ ಲೈಫ್’ ಎಂಬ ಕವಿತೆ ಅವರ ‘ಆತ್ಮಕ್ಕೆ ಚೈತನ್ಯಪೂರ್ಣವಾದ ಮಂತ್ರದೀಕ್ಷೆಯನ್ನೆ’ ನೀಡುತ್ತದೆ; ಅದನ್ನು ಆಲಿಸುತ್ತಾ ಆಲಿಸುತ್ತಾ ‘ನನ್ನ ಜೀವ ಜ್ವಾಲಾಮಯವಾಯ್ತು, ನನ್ನ ಅಂತಶ್ಚೇತನಕ್ಕೊಂದು ಮೊತ್ತಮೊದಲನೆಯ ಉಪನಯನವಾಯ್ತು’ ಎಂದವರೆ ಸ್ಪಷ್ಟಪಡಿಸಿದ್ದಾರೆ. ಅವರು ಮೊದಮೊದಲು ರಚಿಸುತ್ತಿದ್ದ ಆಂಗ್ಲ ಕವಿತೆಗಳಲ್ಲಿಯೇ ಅವರ ಊರ್ಧ್ವಮುಖ ಚಿಂತನೆಯ, ಕಲ್ಪನಾ ವೈಭವದ, ಭಾವಾನುಭವ ಶ್ರೀಮಂತಿಕೆಯ ಸಂಸ್ಪರ್ಶವನ್ನು ಗುರುತಿಸಬಹುದು.

ಎಲ್ಲಿ ಧರ್ಮದ ಧ್ವಜವು ಇರುವುದೊ,
ಎಲ್ಲಿ ಸತ್ಯವು ಆಳುತಿರುವುದೊ,
ಎಲ್ಲಿ ಕರುಣೆಯ ಪಾಡುತಿರುವುದೊ,
ಅಲ್ಲಿ ನೆಲಸುವೆ ನಿತ್ಯವು

ಎಂಬ ಅಮಲನ ಕಥೆಯ ಪದ್ಯವೂ, ಕೊಳಲು ಸಂಗ್ರಹದ ‘ಮುಂದಕೆಲ್ಲಿಗೆ?’, ‘ಗುರಿ’, ‘ಅಡವಿಯಲ್ಲಿ’, ‘ಬಡವನೆಂದುಸುರಲತಿ ನಾಚುವೆನು ದೇವ’, ‘ಇನ್ನೇನು ಬೇಕೆನಗೆ ದೇವ?’ ಇವೇ ಮೊದಲಾದ ಹಲವಾರು ಕವಿತೆಗಳೂ ಕುವೆಂಪು ಅವರ ಅಂತಶ್ಚೇತನದ ಸ್ವರೂಪಕ್ಕೂ, ಅವರ ಜೀವನ ಧ್ಯೇಯಕ್ಕೂ ಕನ್ನಡಿ ಹಿಡಿಯುತ್ತವೆ.

ಕುವೆಂಪು ಅವರ ಕವಿತೆಗಳ ಸೃಷ್ಟಿ ಬಹು ವಿಸ್ತಾರವಾದದ್ದು, ಬಹುಮುಖವಾದದ್ದು, ಭಾವಾಂಶ, ಕಲ್ಪನಾಂಶ, ಚಿಂತನಾಂಶ ಹಾಗೂ ರೂಪಾಂಶಗಳಿಂದ ಸಮೃದ್ಧವಾದದ್ದು. ಇಪ್ಪತ್ತೈದು ಭಾವಗೀತೆಗಳ ಸಂಗ್ರಹಗಳಲ್ಲಿ (ಎರಡು ಆಂಗ್ಲ ಕವಿತಾ ಸಂಗ್ರಹಗಳೂ ಸೇರಿ), ಎರಡು ಕಥನಕಾವ್ಯಗಳಲ್ಲಿ, ಒಂದು ಪ್ರಗಾಥದಲ್ಲಿ, ಎರಡು ಖಂಡ ಮಹಾಕಾವ್ಯಗಳಲ್ಲಿ ಹಾಗೂ ಒಂದು ವಚನ ಕಾವ್ಯದಲ್ಲಿ ಸಮಗ್ರ ಜೀವನದ ನೋಟವನ್ನು, ಸೇಂದ್ರಿಯವೂ ಸೇಂದ್ರಿಯಾತೀತವೂ ಆದ ರುಂದ್ರ ಸಾಂದ್ರ ರಮ್ಯಭಾವ ವಿಸ್ತಾರವನ್ನು, ಲೋಕಾನುಭವ ಸಮೃದ್ದಿಯನ್ನು ಕಾಣಬಹುದು. ಮಾನವನ ಗುಣ ದೋಷ ದೌರ್ಬಲ್ಯಗಳು, ಹಿತಾಹಿತಗಳು, ಅವನ ಅಂತರಂಗದಲ್ಲಿ ಅವಿರತವಾಗಿ ಜರುಗುತ್ತಿರುವ ಕ್ರಿಯೆ ಪ್ರಕ್ರಿಯೆ ಪ್ರತಿಕ್ರಿಯೆಗಳು, ಪ್ರಣಯ, ಪ್ರೇಮ, ವಾತ್ಸಲ್ಯ, ಭಕ್ತಿ, ಕರುಣೆ, ಪಾಪ ಪುಣ್ಯ, ಕರ್ಮ ಅಕರ್ಮ, ನಾನಾ ದ್ವಂದ್ವಗಳ ಸಂಘರ್ಷ ಇವೇ ಮೊದಲಾದ ಜೀವನಲೀಲಾ ವಿಲಾಸಗಳು, ಸಾಮಾಜಿಕ ಹಾಗೂ ಆರ್ಥಿಕ ರೀತಿ ನೀತಿ ಅಸಮತೆ ವಿಷಮತೆ ರೂಢಿ ಸಂಪ್ರದಾಯಗಳು, ರಾಜಕೀಯ ಸಂಗತಿ ವಿಸಂಗತಿಗಳು, ರಾಷ್ಟ್ರೀಯ ಅಂತಾರಾಷ್ಟ್ರೀಯ ವಿಚಾರಗಳು, ಭಾಷೆ ಪ್ರದೇಶ ಜಾತಿ ಮತಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಪ್ರಾಕೃತಿಕ ವ್ಯಾಪಾರಗಳು, ಸತ್ಯ ಸೌಂದರ್ಯಾದಿ ಜೀವನ ಮೌಲ್ಯಗಳು, ದರ್ಶನಾನುಭೂತಿ – ಇವೇ ಮೊದಲಾದ ನೂರಾರು ಸಾವಿರಾರು ವಿಷಯಗಳು ಅವರ ಕೃತಿಗಳಲ್ಲಿ ಪಡಿಮೂಡಿವೆ, ಅನುರಣಿಸುತ್ತಿವೆ. ಇಡೀ ವಿಶ್ವವೇ ಅವರ ಕಾವ್ಯದ ವಸ್ತು ವಾಗುತ್ತದೆ. ಅವರು ಈ ಜಗತ್ತನ್ನು ಗಾಢವಾಗಿ ಪ್ರೀತಿಸುತ್ತಾರೆ; ಜಗತ್ತಿನ ಮೂಲಕವೇ ಜಗತ್ತನ್ನು ವ್ಯಾಪಿಸಿಕೊಂಡಿರುವ ಹಾಗೂ ಅದರಾಚೆಗಿರುವ ಸತ್ಯವನ್ನು ಕಾಣುತ್ತಾರೆ. ‘ಆನಂದಮಯ ಈ ಜಗ ಹೃದಯ’ ಎಂಬುದು ಅವರಿಗೆ ಅನುಭವೈಕ ವೇದ್ಯ. ಬಿತ್ತರದಾಗಸದ ಹಿನ್ನೆಲೆಯಲ್ಲಿ ತೇಲುತ್ತ ಬಂದ ಬಲಾಕ ಪಂಕ್ತಿ ದೇವರ ರುಜುವಾಗಿ ಪರಿಣಮಿಸಿ, ಅವರನ್ನು ಆನಂದಾಬ್ಧಿಯಲ್ಲಿ ಮುಳುಗಿಸುತ್ತದೆ. ಸಹಧರ್ಮಿಣಿಯಲ್ಲಿ ಜಗನ್ಮಾತೆಯ, ಆದಿಶಕ್ತಿಯ ಅವತಾರವನ್ನು ಕಾಣುವ ದಿವ್ಯಪ್ರೇಮ ಅವರದು. ಸಾಮಾಜಿಕ ಸ್ವಾಸ್ಥ್ಯದಲ್ಲಿ ನಾಡಿನ ಆರೋಗ್ಯವನ್ನು, ಭಾರತೀಯ ಸ್ವಾತಂತ್ರ್ಯದಲ್ಲಿ ವಿಶ್ವಶಾಂತಿಯನ್ನು, ಸಮಬಾಳು ಸಮಪಾಲು ಗಳಲ್ಲಿ ಸರ್ವಸಾಮರಸ್ಯವನ್ನು, ಸರ್ವಭಾವರಸಗಳು ದಿವ್ಯಪ್ರೇಮದಲ್ಲಿ ಪರಿಣಾಮಗೊಂಡಾಗ ಭೂಮಿಯಲ್ಲಿ ಸ್ವರ್ಗೋದಯವಾಗುತ್ತದೆನ್ನುವ ಸತ್ಯವನ್ನವರು ತಮ್ಮ ಕವಿತೆಗಳಲ್ಲಿ ಅಭಿವ್ಯಕ್ತ ಗೊಳಿಸಿದ್ದಾರೆ. ಕುವೆಂಪು ಚೈತನ್ಯದ ಮೂಲ ದ್ರವ್ಯ ಆಧ್ಯಾತ್ಮಭಾವ. ವಸ್ತು ಯಾವುದೇ ಇರಲಿ, ಆ ಭಾವ ಅವರ ಅನೇಕ ಕವಿತೆಗಳ ಮೂಲದಲ್ಲಿ ಪ್ರಕಾಶಿಸುತ್ತದೆ ಮಾತ್ರವಲ್ಲ, ಅದೇ ವಸ್ತುವಾಗಿರುವ ಕವಿತೆಗಳು ಹಲವಾರಿವೆ; ಸೃಷ್ಟಿಯ ಪ್ರತಿಯೊಂದು ವಸ್ತುವಿನಲ್ಲಿಯೂ ಋತಚಿತ್‌ಶಕ್ತಿಯ ವಿಲಾಸವನ್ನು ದರ್ಶಿಸಿ, ತಾವು ಕಂಡುಂಡ ದರ್ಶನವನ್ನು ಶಬ್ದ ಚಿತ್ರದಲ್ಲಿ ಹಿಡಿದಿಡುತ್ತಾರೆ. ‘ಗೊಲ್ಲನ ಗಾಯತ್ರಿ’ಯಿಂದ ಹಿಡಿದು ಋತಚಿನ್ಮಯೀ ಜಗನ್ಮಾತೆಯನ್ನು ಕುರಿತ ತಾತ್ತಿಕ ಪ್ರಾರ್ಥನಾ ಗೀತೆಯ ತನಕ ಅವರ ದಾರ್ಶನಿಕ ಕವನಗಳು ಹಬ್ಬಿವೆ. ಅವರ ಅಧ್ಯಾತ್ಮಯಾತ್ರೆಯ ಮತ್ತು ಆತ್ಮವಿಕಾಸದ ಅಗ್ನಿಪಥವೇ ಅವರ ಕವಿತಾವಾಹಿನಿ. ಸಕಲ ಭಾವರಸಗಳಿಗೆ ಅಧ್ಯಾತ್ಮಭಾವರಸಗಳೇ ಅಂತಿಮ ಆಶ್ರಯವೆನ್ನುವುದು ಕುವೆಂಪು ಅವರ ಸಿದ್ಧಾಂತ.

ಕುವೆಂಪು ಅವರ ಕಾವ್ಯಪ್ರಜ್ಞೆ ಶ್ರೀ ರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಸಿದ್ದಿವಡೆದಿದೆ ಯೆಂಬ, ಯುಗ ಪ್ರಜ್ಞೆಗೆ ಅದು ಕನ್ನಡಿಯಾಗಿದೆಯೆಂಬ, ಅದು ಕಾಲ ದೇಶಾತೀತವಾದ ಚಿರಂತನ ಮೌಲ್ಯಗಳಿಂದ ಅಮರ ಕಾವ್ಯವಾಗಿದೆಯೆಂಬ ಸಂಗತಿ ರೂಢ ಮೂಲವಾಗಿ ಸಂಸ್ಥಾಪನೆಗೊಂಡಿದೆ.ತಮ್ಮ ಕಾವ್ಯಕ್ಕೆ ಕವಿ ಆರಿಸಿಕೊಂಡಿರುವ ಕಥೆ ಆದ್ಯಂತ್ಯವಿಲ್ಲದ್ದು, ಕಾಲ ದೇಶಾತೀತವಾದದ್ದು; ಆ ಕತೆಯಲ್ಲಿ ಬರುವ ಪಾತ್ರಗಳು ಅನಾದಿ ಅನಂತ; ಮನುಕುಲ ವನ್ನು ಪ್ರತಿನಿಧಿಸುವ ಪ್ರತಿಮಾ ಸ್ವರೂಪರು. ಆದ್ದರಿಂದ ಆ ಕಥೆ ಮತ್ತು ಆ ಪಾತ್ರಗಳು ಸದಾ ವಿಕಾಸಶೀಲವಾಗಿದ್ದು, ಸಾರ್ವಕಾಲಿಕ ಸಾರ್ವದೇಶಿಕ ವಿಶ್ವಪ್ರಜ್ಞೆಯ ಅಭಿವ್ಯಕ್ತಿಗೆ ಸೂಕ್ತ ಸಮರ್ಥ ಮಾಧ್ಯಮಗಳಾಗಿವೆ. ತಮ್ಮ ಕಾವ್ಯಕೃಷಿಯ ಪ್ರಾರಂಭದಲ್ಲಿಯೇ ತಾವು ಮಹಾಕವಿ ಯಾಗುವುದಾಗಿ ಕನಸು ಕಂಡಿದ್ದರು. ೧೯೨೭ನೆಯ ಸಂವತ್ಸರದಲ್ಲೊಂದು ದಿನ ‘ನಾನೊಂದು ಬೃಹದ್‌ಗಾತ್ರದ ಅಪ್ರಾಸ ಛಂದಸ್ಸಿನ (ಬ್ಲಾಂಕ್‌ವರ್ಸ್) ಮಹಾಕಾವ್ಯ ರಚಿಸಿದ್ದೇನೆ. ಅದು ಅಚ್ಚಾಗಿ ಬಂದಿದೆ! ಕೈಯಲ್ಲಿ ಹಿಡಿದಿದ್ದೇನೆ. ತೂಕವಾಗಿದೆ!’ ಎಂಬಂಥ ಕನಸು ಕಂಡುದಾಗಿ ‘ನೆನಪಿನ ದೋಣಿಯಲ್ಲಿ’ ಆತ್ಮಕಥೆಯ ೭೬೫ನೆಯ ಪುಟದಲ್ಲಿ ಅವರೇ ತಿಳಿಸಿದ್ದಾರೆ. ಪ್ರಾಚೀನ-ಅರ್ವಾಚಿಃನ ಪ್ರಾಚ್ಯ ಪಾಶ್ಚಾತ್ಯ ದರ್ಶನಶಾಸ್ತ್ರಗಳ ಅಧ್ಯಯನ ಹಾಗೂ ಚಿಂತನಮಂಥನಗಳಿಂದ ಲಬ್ಧವಾದ ವಿನೂತನ ಆಲೋಚನಾನುಭವಗಳ ಅಭಿವ್ಯಕ್ತಿಗಾಗಿ, ಪರಂಪರಾಗತ ಪ್ರಗತಿಪರ ಆಧುನಿಕ ವೈಜ್ಞಾನಿಕ ವೈಚಾರಿಕ ಜ್ಞಾನವಾಹಿನಿಯಲ್ಲಿ ಮಿಂದ ಫಲವಾಗಿ ಮೂಡಿದ ಅಮೃತಸ್ವರೂಪದ ಮೌಲ್ಯಗಳ ಅಭಿವರ್ಣನೆಗಾಗಿ, ಸಮಕಾಲೀನ ಘಟನಾವಳಿ ಸಮೀಕ್ಷೆಯಿಂದ ಹಾಗೂ ದೀರ್ಘತಪಸ್ಸಿನ ಅಧ್ಯಾತ್ಮಸಿದ್ದಿಯಿಂದ ಉದ್ಭೂತ ವಾದ ದಾರ್ಶನಿಕ ಸತ್ಯಗಳ ಉದ್ದೀಪನಕ್ಕಾಗಿ ಕವಿ ಪ್ರತಿಭೆ ಕಾರ್ಯನಿರತವಾದಾಗ ಕತೆ ಮತ್ತು ಪಾತ್ರಗಳು ಸಹಜವಾಗಿಯೇ ಹೊಸ ರೂಪ ಪಡೆಯುತ್ತವೆ; ಅವು ಹೊಸ ರೂಪ ಪಡೆದಂತೆ ಶೈಲಿಗೂ ಹೊಸ ಮೆರಗು ಹೊಗರು ವ್ಯಾಪ್ತಿಗಳು ಸಮನಿಸುತ್ತವೆ. ಶ್ರೀ ರಾಮಕೃಷ್ಣ ವಿವೇಕಾನಂದ ಅರವಿಂದ ಗಾಂಧೀಜಿಯವರ ಅಭೂತಪೂರ್ವ ವ್ಯಕ್ತಿತ್ವದ ಪ್ರಭಾವವೂ, ಅದಕ್ಕಿಂತ ಮಿಗಿಲಾಗಿ ವಿಶ್ವಮಾನವ ಪ್ರಜ್ಞೆಯೂ ಈ ಕಾವ್ಯದಲ್ಲಿ ಆದ್ಯಂತವಾಗಿ ಹಾಸು ಹೊಕ್ಕಾಗಿ ಹಬ್ಬಿಕೊಂಡಿವೆ. ಅನಂತದಿಂದ ಬಂದ ಜೀವ ದೀರ್ಘಯಾತ್ರೆ ಹೋರಾಟ ಸಾಧನೆಗಳ ಫಲವಾಗಿ ಅನಂತವನ್ನೆ ಸೇರುತ್ತದೆಂಬ ದರ್ಶನ ಧ್ವನಿಗೆ ಇಡೀ ಕಾವ್ಯವೇ ಪ್ರತಿಮೆಯಾಗಿದೆ. ಈಗಾಗಲೇ ಈ ಕೃತಿಯ ಬಗ್ಗೆ ಸಾಕಷ್ಟು ವಾದವಿವಾದಗಳು ನಡೆದಿವೆ; ಖಂಡನೆಮಂಡನೆಗಳು ಜರುಗಿವೆ. ಇದು ಜಗತ್ತಿನ ಶ್ರೇಷ್ಠ ಮಹಾಕಾವ್ಯಗಳ ಅಗ್ರಪಂಕ್ತಿಯಲ್ಲಿ ಅವುಗಳಿಗೆ ಹೆಗಲೆಣೆಯಾಗಿ ನಿಲ್ಲಬಲ್ಲ ಕೃತಿಯೆಂಬ ನೆಲೆಯಲ್ಲಿ ವಿಮರ್ಶೆ ಬಂದು ನಿಂತಿದೆ.

ಮಹಾಕಾವ್ಯದಲ್ಲಿ ಸಕಲ ಸೃಜನಶೀಲ ಸಾಹಿತ್ಯ ಪ್ರಕಾರಗಳು ಉಚಿತ ಪ್ರಮಾಣದಲ್ಲಿ ಒಡಲುಗೊಳ್ಳುತ್ತವೆಂಬುದು ನಿಜವಾದರೂ, ಕುವೆಂಪು ಅವರ ಪರುಷ ಸದೃಶ ಲೇಖನಿಯಿಂದ ಪ್ರತ್ಯೇಕವಾಗಿ ಹೊರಹೊಮ್ಮಿದ ಸಾಹಿತ್ಯ ಪ್ರಕಾರಗಳು ತಮ್ಮಷ್ಟಕ್ಕೆ ತಾವೇ ಅಗ್ರಸ್ಥಾನ ಪಡೆದಿವೆ. ಅವರು ರಚಿಸಿರುವ ಕಥೆಗಳು ಸಂಖ್ಯಾದೃಷ್ಟಿಯಿಂದ ಹೆಚ್ಚಿಲ್ಲವಾದರೂ, ಸಮಾಜದ ಲೋಪದೋಷಗಳನ್ನು ಎತ್ತಿತೋರಿಸುವಲ್ಲಿ, ಮಾನವ ಸ್ವಭಾವವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿವೆ. ‘ಧನ್ವಂತರಿಯ ಚಿಕಿತ್ಸೆ’ಯೊಂದೇ ಸಾಕು, ಅವರ ಕಥನಕೌಶಲಕ್ಕೆ ಹಾಗೂ ಧ್ವನಿಪೂರ್ಣವಾದ ವಿಡಂಬನೆಗೆ ಸಾಕ್ಷಿಯಾಗಿ. ಕುವೆಂಪು ರಚಿಸಿರುವ ಕಾದಂಬರಿಗಳು ಎರಡೇ ಎರಡು: ಕಾನೂರು ಹೆಗ್ಗಡಿತಿ ಮತ್ತು ಮಲೆಗಳಲ್ಲಿ ಮದುಮಗಳು; ಗುಣಗಾತ್ರಗಳಿಂದ ಜಗತ್ತಿನ ಅಗ್ರಗಣ್ಯ ಕಾದಂಬರಿಗಳಿಗೆ ಹೊಯ್‌ಕಯ್ಯಗಿ ನಿಲ್ಲುವಂಥವು. ಮಲೆನಾಡಿನ ಭಾರತಗಳಂತಿರುವ ಈ ಎರಡು ಕಾದಂಬರಿಗಳಲ್ಲಿ ಒಂದೇ ಒಂದನ್ನು ಬರೆದಿದ್ದರೂ ಅವರ ಹೆಸರು ಜಾಗತಿಕ ಸಾರಸ್ವತ ಪ್ರಪಂಚದಲ್ಲಿ ಶಾಶ್ವತವಾಗಿ ಉಳಿಯುತ್ತಿತ್ತು. ಮಲೆನಾಡಿನ ಹಿನ್ನೆಲೆಯಲ್ಲಿ, ನಿಸರ್ಗ ಸೌಂದರ್ಯಾಮೃತವಾರ್ಧಿಯಿಂದ ಮೂಡಿರುವ ಈ ಎರಡು ಕಾದಂಬರಿಗಳಲ್ಲಿ ಸಮಾಜ ಪುರುಷನ ನೂರಾರು ಅವತಾರಗಳನ್ನು, ಜೀವನದ ಸಹಸ್ರಮುಖ ಗಳನ್ನು, ಮಾನವನ ಸ್ವಭಾವಚೇಷ್ಟೆಗಳ ಅನಂತತೆಯನ್ನು ಗುರುತಿಸಬಹುದು. ಇಲ್ಲಿಯ ವಸ್ತುಸನ್ನಿವೇಶ ಪಾತ್ರಗಳನ್ನು ವಾಸ್ತವತೆಯಲ್ಲದ್ದಿ ತೆಗೆದಂತಿದ್ದರೂ, ಕ್ವಚಿತ್ತಾಗಿ ಆದರ್ಶದ ಹೋಳಿಯ ರಂಗಿನ ಗೆರೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಆ ರಂಗುರಂಗಿನ ಗೆರೆಗಳು ಸ್ವಾದನೀಯ ಎಂಬುದನ್ನು ಮರೆಯುವಂತಿಲ್ಲ.

ಕುವೆಂಪು ಅವರು ಸುಸಮೃದ್ಧವಾಗಿ ಬೆಳೆಸಿರುವ ಮತ್ತೊಂದು ಸಾಹಿತ್ಯ ಪ್ರಕಾರ ನಾಟಕ, ಅವರು ರಚಿಸಿರುವ ಹದಿನಾಲ್ಕು ನಾಟಕಗಳಲ್ಲಿ ‘ನನ್ನ ಗೋಪಾಲ’ ಮತ್ತು ‘ಮೋಡಣ್ಣನ ತಮ್ಮ’ ಮಕ್ಕಳ ನಾಟಕಗಳು; ಒಂದು ಭಕ್ತಿಪ್ರಧಾನ ನಾಟಕವಾದರೆ, ಮತ್ತೊಂದು ವಾಸ್ತವತೆಯನ್ನು ಪ್ರತಿಬಿಂಬಿಸುವ ಕಾಲ್ಪನಿಕ ಕೃತಿ; ಚಂದ್ರಹಾಸ, ಯಮನ ಸೋಲು, ಮಹಾರಾತ್ರಿ, ಶ್ಮಶಾನ ಕುರುಕ್ಷೇತ್ರ, ವಾಲ್ಮೀಕಿಯ ಭಾಗ್ಯ, ಕಾನೀನ, ಶೂದ್ರ ತಪಸ್ವಿ ಮತ್ತು ಬೆರಳ್‌ಗೆ ಕೊರಳ್ ಪೌರಾಣಿಕ ನಾಟಕಗಳು. ಶೇಕ್ಸ್‌ಪಿಯರ್‌ನ ಟೆಂಟೆಸ್ಟ್ ನಾಟಕದ ಭಾವಾನುವಾದ ‘ಬಿರುಗಾಳಿ’; ರಕ್ತಾಕ್ಷಿ ಐತಿಹಾಸಿಕ ನಾಟಕ; ಜಲಗಾರ ದಲಿತ ಪ್ರಜ್ಞೆಯ ಸಾಮಾಜಿಕ ನಾಟಕ; ಬಲಿದಾನ ಪೌರಾಣೇತಿಹಾಸ ನಾಟಕ. ಯಮನ ಸೋಲು, ರಕ್ತಾಕ್ಷಿ, ಶೂದ್ರ ತಪಸ್ವಿ, ಬೆರಳ್‌ಗೆಕೊರಳ್ ನಾಟಕಗಳು ವಸ್ತು, ಪಾತ್ರ, ಸಂದೇಶ ಹಾಗೂ ನಾಟಕೀಯತೆಗಳ ದೃಷ್ಟಿಯಿಂದ ಅವರ ಅತ್ಯುತ್ತಮ ಕಲಾ ಕೃತಿಗಳು ಮಾತ್ರವಲ್ಲ, ನಾಟಕ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕರ್ಹವಾದವುಗಳು. ನಾಟ್ಯ ಛಂದಸ್ಸಿನ ಪ್ರಯೋಗದಲ್ಲಿ, ಪಾತ್ರ ಸನ್ನಿವೇಶಾನುಗುಣವಾದ ಸಂಭಾಷಣೆಯನ್ನು ರೂಪಿಸುವ ಕೌಶಲದಲ್ಲಿ, ಪುರಾಣಗಳ ಪ್ರಾಚೀನತೆಯ ಗರ್ಭದಲ್ಲಿ ನವೀನತೆಯ ಕುಸುಮಗಳನ್ನರಳಿಸುವಲ್ಲಿ, ದಾರ್ಶನಿಕ ನಿತ್ಯಸತ್ಯ ಗಳನ್ನು ಅಭಿವ್ಯಕ್ತಗೊಳಿಸುವಲ್ಲಿ, ಪರಸ್ಪರ ವಿರೋಧವಾಗದಂತೆ ಲೌಕಿಕಾಲೌಕಿಕ ಸಂಗತಿಗಳನ್ನು ಸಮರಸವಾಗಿ ಮಿಲನಗೊಳಿಸುವಲ್ಲಿ ಕುವೆಂಪು ಸಫಲರಾಗಿದ್ದಾರೆ.

‘ಗದ್ಯಂ ಕವೀನಾಂ ನಿಕಷಂ ವದಂತಿ’ ಎಂಬ ಸೂಕ್ತಿ ವಿಖ್ಯಾತವಾಗಿದ್ದರೂ, ಹಳಗನ್ನಡ ನಡುಗನ್ನಡ ಸಾಹಿತ್ಯವೆಲ್ಲ, ಕೆಲವು ಅಪವಾದಗಳನ್ನುಳಿದರೆ, ಬಹುಪಾಲು ಪದ್ಯಕಾವ್ಯಗಳಿಂದ ಕಿಕ್ಕಿರಿದಿದೆ. ಪಾಶ್ಚಾತ್ಯ ಸಾಹಿತ್ಯದ ಸಂಪರ್ಕದಿಂದಾಗಿ ಕಾದಂಬರಿ ಪ್ರಬಂಧ ಮೊದಲಾದ ಅನೇಕ ಸಾಹಿತ್ಯ ಪ್ರಕಾರಗಳು ಉದಯಿಸಿದಂತೆ, ಪಾಶ್ಚಾತ್ಯ ನಾಗರಿಕತೆಯ ಪರಿಣಾಮವಾಗಿ, ವಿಜ್ಞಾನ ತಂತ್ರ ವಿಜ್ಞಾನಗಳ ಪ್ರಭಾವದಿಂದಾಗಿ ಚಾಲನೆಗೊಂಡ ಹೊಸ ವಿಚಾರಾಲೋಚನೆಗಳ ಅಭಿವ್ಯಕ್ತಿಗಾಗಿ ಬಹು ಆಯ ಆಯಾಮಗಳ ಆಯಾತವಾದ ಹೊಸ ರೀತಿಯ ಗದ್ಯ ಅನಿವಾರ್ಯ ವಾಯಿತು. ಅಂಥ ವೈವಿಧ್ಯಮಯ ಗದ್ಯಸೃಷ್ಟಿ ನವೋದಯ ಕಾಲದ ಸಾಹಿತಿಗಳಿಗೆ, ಪತ್ರಕರ್ತರಿಗೆ ಹಾಗೂ ಎಲ್ಲ ಬಗೆಯ ವಿಚಾರವಂತರಿಗೆ ಸವಾಲಾಯಿತು. ಆ ಸವಾಲನ್ನೆದುರಿಸಿ, ಕನ್ನಡವನ್ನು ಪುಷ್ಟಿಗೊಳಿಸಿ, ಅದಕ್ಕೆ ಸಕಲ ಸಾಮರ್ಥ್ಯ ತೇಜಸ್ಸುಗಳನ್ನು ದಾನಮಾಡಿ, ಅದನ್ನು ಶ್ರೀಮಂತಗೊಳಿಸಿದವರಲ್ಲಿ ಕುವೆಂಪು ಅಗ್ರಗಣ್ಯರು. ಅವರ ಗದ್ಯದಲ್ಲಿ ಸೂರ್ಯ ಪ್ರಭೆಯಿದೆ, ನಕ್ಷತ್ರಗಳ ಮಿಂಚಿದೆ, ಸಿಂಹಗಾಂಭೀರ್ಯವಿದೆ, ಮಂದ ಮಂದಾಕಿನಿಯ ವೈಭವವಿದೆ, ನಿರ್ಝರಿಣಿಯ ಆವೇಶವಿದೆ. ವಾಯುವಿನ ವ್ಯಾಪಕತೆಯಿದೆ, ತೇಜಿಯ ಚಟುಲತೆಯಿದೆ, ಮಯೂರನ ನೃತ್ಯವಿಲಾಸವಿದೆ. ನಿಸರ್ಗದ ಚೆಲುವಿದೆ, ನೆಲದ ಸೊಗಡಿದೆ, ಕಾವ್ಯದ ಮೋಹಕತೆಯಿದೆ, ಲಯದ ಮೋಡಿಯಿದೆ; ಕತೆಗಾರಿಕೆಯೆ, ನಾಟಕೀಯತೆಯೆ, ಚರಿತ್ರೆಯೆ, ತತ್ವಶಾಸ್ತ್ರವೆ, ತರ್ಕವೆ, ಕಾವ್ಯಮೀಮಾಂಸೆಯೆ, – ಎಂಥ ಗಹನ ಸೂಕ್ಷ್ಮ ವಿಚಾರಗಳನ್ನಾದರೂ ಮೂರ್ತೀಕರಿಸಬಲ್ಲ ಅಗಾಧಶಕ್ತಿ ಅದಕ್ಕಿದೆ. ಕನ್ನಡ ಗದ್ಯ ಸಮೂಹದಲ್ಲೆದ್ದು ಕಾಣುವ ಭವ್ಯ ದೈತ್ಯಶೈಲಿ ಕುವೆಂಪು ಅವರದು. ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಗಳು ಗದ್ಯಕಾವ್ಯಗಳಾಗಿವೆ. ಗದ್ಯದ ವಿವಿಧ ಲಾಸ್ಯ ತಾಂಡವಗಳಿಗೆ ಕಾದಂಬರಿಗಳು ಹಾಗೂ ಅವರ ಆತ್ಮಕಥೆ ವೇದಿಕೆಗಳಾಗಿವೆ.

ಕುವೆಂಪು ಗದ್ಯ ಲಾಲಿತ್ಯಕ್ಕೆ ಹಾಗೂ ಸೌಕುಮಾರ್ಯಕ್ಕೆ ‘ಮಲೆನಾಡಿನ ಚಿತ್ರಗಳು’ ನಿದರ್ಶನವಾಗಿದೆ; ಕತೆಗಳೂ ಅಲ್ಲದ, ಪ್ರಬಂಧಗಳೂ ಅಲ್ಲದ ಆ ಚಿತ್ರಗಳ ಗದ್ಯದಲ್ಲಿ ಮಲೆನಾಡಿನ ವನರಾಜಿಯ ಸೌಮ್ಯವರ್ಣಗಳ ಲಾವಣ್ಯವನ್ನು ಕಾಣಬಹುದು. ಗದ್ಯದಲ್ಲಿ ಸಮುದ್ರಘೋಷದ ಗಾಂಭೀರ್ಯವನ್ನು, ಗಗನೌನ್ನತ್ಯವನ್ನು, ವಿಯತ್‌ಪರ್ಯಟನ ಸಾಮರ್ಥ್ಯ ವನ್ನು, ಬೀಸು ಬಿರುಸು ಬನಿಗಳನ್ನು ಕಾಣಬೇಕಾದರೆ ಅವರ ಉಪನ್ಯಾಸಗಳನ್ನೂ ಪ್ರಬಂಧ ಗಳನ್ನೂ ಮರೆಹೊಗಬೇಕು. ಕಾವ್ಯಮೀಮಾಂಸೆ ಮತ್ತು ವಿಮರ್ಶೆಗಳ ಗದ್ಯ ಹೊಚ್ಚ ಹೊಸದಾಗಿದ್ದು, ಅದು ಕನ್ನಡ ಭಾಷೆಗೊಂದು ವಿಶಿಷ್ಟ ಕೊಡುಗೆಯಾಗಿದೆಯೆಂದೇ ಹೇಳಬಹುದು. ಸಂಸ್ಕೃತಿ, ಸಮಸಂಸ್ಕೃತ, ತತ್ಸಮಗಳನ್ನು ಕನ್ನಡಕ್ಕೆ ಸರಿ ಮಾಡಿ, ಕನ್ನಡದ ಮೇಲೆ ಕಸಿಕಟ್ಟಿ, ಕನ್ನಡ ಪದಗಳೊಡನೆ ಸಂಗಳಿಸಿದಾಗ, ಅವು ವ್ಯಾಕರಣದ ನಿಯಮಗಳನ್ನು ಪಾಲಿಸಿ, ಅದರ ಪ್ರಕ್ರಿಯೆಗಳನ್ನೊಪ್ಪಿಕೊಂಡು, ಕನ್ನಡದ ಗೋತ್ರವನ್ನು ಸ್ವೀಕರಿಸಿದಾಗ ಕನ್ನಡದ ಗದ್ಯ ಅನುಪಮ ಸೌಂದರ್ಯದಿಂದ ವಿರಾಜಿಸುತ್ತದೆ. ಸಂಸ್ಕೃತ ಪದಗಳಿಗೆ ಹೊಸ ಅರ್ಥವನ್ನು ಕಲ್ಪಿಸಿ, ಅವುಗಳಿಂದ ವಿನೂತನ ಪದಗಳನ್ನು ಟಂಕಿಸಿ, ನಿರ್ಜೀವ ಪದಗಳಿಗೆ ಪ್ರಾಣದಾನ ಮಾಡಿ ಹೊಸ ಪರಿಭಾಷೆಯನ್ನವರು ನಿರ್ಮಿಸಿದ್ದಾರೆ. ಅರ್ಥಸ್ಫುರಣಕ್ಕೆ ವಿಘ್ನವಾಗದ ಕಾವ್ಯ ಸೌಂದರ್ಯ ಇಲ್ಲಿಯ ಗದ್ಯದ ಪ್ರಮುಖ ಲಕ್ಷಣಗಳಲ್ಲೊಂದಾಗಿರುವುದರಿಂದ, ಈ ಪ್ರಬಂಧಗಳು ಸುಲಭಗಮ್ಯವಾಗುತ್ತವೆ.

ಶಿಶುಸಾಹಿತ್ಯದಿಂದ ಹಿಡಿದು ಪ್ರೌಡ ಸಾಹಿತ್ಯದವರೆಗೆ, ಸರ್ವ ಪ್ರಕಾರಗಳಲ್ಲಿ ಸಾಧನಾ ನಿರತರಾಗಿ, ಶಿಖರ ಸ್ಥಾನವನ್ನು ತಲುಪಿರುವ ಹೆಗ್ಗಳಿಕೆ ಕುವೆಂಪು ಅವರದು. ಇಂಥ ಬಹುಮುಖ ಪ್ರತಿಭೆಯ ಸಾಹಿತಿಗಳು ಪಾಶ್ಚಾತ್ಯ ಸಾಹಿತ್ಯ ಲೋಕದಲ್ಲಿಯೂ ವಿರಳ. ಶ್ರೀ ರಾಮಕೃಷ್ಣ ಪರಮಹಂಸರ ಸರ್ವಧರ್ಮ ಸಮನ್ವಯ ತತ್ತ್ವವನ್ನು, ಸ್ವಾಮಿ ವಿವೇಕಾನಂದರ ವೇದಾಂತ ದರ್ಶನವನ್ನು, ಶ್ರೀ ಅರವಿಂದರ ಪೂರ್ಣದೃಷ್ಟಿಯನ್ನು, ಗಾಂಧೀಜಿಯ ಸರ್ವೋದಯ ಸಿದ್ಧಾಂತವನ್ನು ತಮ್ಮ ಬದುಕಿನಲ್ಲಿ ಅರಗಿಸಿಕೊಂಡಿರುವ ಕುವೆಂಪು ಅವರಿಗೆ ಜಾತಿ, ಮತ, ವರ್ಣ ವರ್ಗಗಳ ಸೂತಕವಾಗಲಿ, ಯಾವುದೇ ತಾರಮತ್ಯದ ದೋಷವಾಗಲಿ ತಗಲುವುದಿಲ್ಲ; ಅವರಿಗೆ ಶೋಷಣೆಯೆಂದರಾಗದು; ಅಸಾಮಾನ್ಯರಲ್ಲೆಷ್ಟೋ ಸಾಮಾನ್ಯರಲ್ಲಿಯೂ ಅಷ್ಟೇ ಗೌರವ; ಹಿಂದಿನ ಸಾಹಿತ್ಯದಲ್ಲೆಲ್ಲಿಯೂ ಕಾಣಸಿಗದ ದಾಂಪತ್ಯ ದರ್ಶನ ಪ್ರೇಮೋಪನಿಷತ್ತಿ ನಂತಿರುವ ಹಲವು ಕವನಗಳಲ್ಲಿ ಮೈದೋರಿದೆ; ಮನುಕುಲದ ಅಂತಿಮ ಶ್ರೇಯಸ್ಸಿನಲ್ಲಿ. ಮಾನವತೆ ಅತಿ ಮಾನವತೆಯ ಕಡೆಗೆ ಯಾತ್ರೆಗೈಯುತ್ತಿದೆಯೆಂಬ ಋಷಿವಾಣಿಯಲ್ಲಿ ಅವರಿಗೆ ವಿಶ್ವಾಸವಿದೆ. ಈ ಎಲ್ಲ ಪ್ರೇರಣೆಗಳ ಹಾಗೂ ವಿಶ್ವಾಸದ ಪರಿಣಾಮವಾಗಿ ಅವರ ಮಾನಸ ತೀರ್ಥದಲ್ಲಿ ವಿಶ್ವಪ್ರಜ್ಞೆ ಅರಳಿದೆ; ಅದೇ ಅವರ ವಿಶ್ವಮಾನವ ಸಿದ್ಧಾಂತಕ್ಕೆ ಸ್ಫೂರ್ತಿ ಶಕ್ತಿಯಾಗಿದೆ.

ಈ ವಿಶ್ವಮಾನವ ಸಂದೇಶ ದಿಢೀರನೆ ಸಿದ್ಧಗೊಂಡ ಅಪರಿಪಕ್ವಪಾಕವಲ್ಲ; ಅದು ಕವಿಯ ಇಡೀ ಬದುಕಿನ ಸಾರಸರ್ವಸ್ವವಾಗಿದೆ. ಅವರ ಮೊದಮೊದಲ ಕವಿತೆಗಳಲ್ಲಿಯೇ ಅದು ಅಂಕುರಾರ್ಪಣೆಗೊಂಡಂತೆ ತೋರುತ್ತದೆ. ‘ನಿನ್ನ ಬಾಂದಳದಂತೆ ನನ್ನ ಮನವಿರಲಿ | ನಿನ್ನ ಸಾಗರದಂತೆ ನನ್ನ ಎದೆಯಿರಲಿ’ ಎಂಬ ಸ್ತೋತ್ರದಲ್ಲಿಯೇ ಕವಿಯ ಅಭೀಪ್ಸೆ ಸುವ್ಯಕ್ತ ವಾಗುತ್ತದೆ. ಅದು ಕಾಲಕ್ರಮೇಣ ವಿಕಾಸಗೊಂಡದ್ದನ್ನು ‘ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬನ್ನಿ’; ‘ಯಾವ ಮತದವನಲ್ಲ, ಎಲ್ಲ ಮತದವನು | ಯಾವ ಪಂಥವು ಅಲ್ಲ, ಬಹು ಪಂಥದವನು’; ‘ಇದು ಸರ್ವರ ಕಾಲ; ಸರ್ವೋದಯ ಯುಗಮಂತ್ರ’ ಎಂಬ ವೇದ ಸದೃಶ ಮಂತ್ರಗಳನ್ನು ಅವರು ಕೊನೆತನಕ ಘೋಷಿಸುತ್ತ ಬಂದಿದ್ದಾರಲ್ಲದೆ, ತಮ್ಮ ಬಳಿಗೆ ಬಂದವರಿಗೆಲ್ಲ ಅವುಗಳನ್ನೇ ಉಪದೇಶಿಸುತ್ತಾರೆ. ‘ಆ ಮತದ ಈ ಮತದ ಹಳೆಮತದ ಸಹವಾಸ | ಸಾಕಿನ್ನು ಸೇರಿರೈ ಮನುಜಮತಕೆ | ಓ ಬನ್ನಿ, ಸೋದರರೆ, ವಿಶ್ವಪಥಕೆ’ ಎಂದವರು ಅರ್ಧ ಶತಮಾನದ ಹಿಂದಿನಿಂದ ಒಂದೇ ಸಮನೆ ಹೇಳುತ್ತಿದ್ದಾರೆ. ೭.೫.೧೯೩೭ ರಂದು ೩೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಮಾತಾಡುತ್ತ, ಸೆಕ್ಯೂಲರ್ ಸ್ಟೇಟ್ ಎಂದರೆ ಸಮನ್ವಯ ರಾಷ್ಟ್ರವೆಂದು ಅರ್ಥೈಸಿ, ‘ಎಲ್ಲ ಮತಗಳೂ ಸತ್ಯದೆಡೆಗೆ ನಮ್ಮನ್ನು ಕೊಂಡೊಯ್ಯುವ ಬೇರೆ ಬೇರೆ ಪಥಗಳು’ ಎಂದು, ರಿಪಬ್ಲಿಕ್ ಅಥವಾ ಸರ್ವಪ್ರಜಾಧಿಪತ್ಯದ ಗುರಿ ಸರ್ವೋದಯ, ಸಮತೆ ಮತ್ತು ಸಮದರ್ಶನ’ ಎಂದು, ‘ಮಾನವನ ಬ್ರಾಹ್ಮೀಪ್ರಜ್ಞಾ ವಿಕಾಸಕ್ಕೆ ಪೂರ್ವ ಭಿತ್ತಿರೂಪವಾಗಿರುವ ಪೂರ್ಣ ದೃಷ್ಟಿಯ ರಸಸ್ಯಂದಿಯಾದ ಪ್ರತಿಪಾದನೆ’ ಅಗತ್ಯವೆಂದು, ‘ಈ ವಿಶ್ವಮಾನವ ರಚನೆಯೆ ನಮ್ಮ ಇತರ ಎಲ್ಲ ಉದ್ದಾರೋದ್ಯಮಗಳ ಮತ್ತು ಸುಖ ಸಾಧನೆಯ ಸಾಹಸಗಳ ಅಂತರಾತ್ಮದಲ್ಲಿ ಅಡಗಿರುವ ಪ್ರಚ್ಛನ್ನ ಪ್ರೇರಣೆ’ ಎಂದು, ‘ಈ ಪೂರ್ಣ ದೃಷ್ಟಿ ದೇಶ ಕಾಲ ಪೂರ್ವ ಪಶ್ಚಿಮ ಮತ ಜಾತಿ ವರ್ಣ ಪಕ್ಷ ಪಂಥ ಸಿದ್ಧಾಂತಾದಿ ಎಲ್ಲ ತೆರನಾದ ಸೀಮೆಗಳನ್ನು ಉಲ್ಲಂಘಿಸಿ ಅತೀತವಾಗಿ ರುತ್ತದೆ. ಅನಿಕೇತನವಾಗಿರುತ್ತದೆ, ನಿತ್ಯವಾಗಿರುತ್ತದೆ’ ಎಂದವರು ಸ್ಪಷ್ಟಪಡಿಸುತ್ತಾರೆ. ವಿಶ್ವಮಾನವ ಸಂದೇಶದ ಜೀವಾಳದಂತಿರುವ ‘ಅನಿಕೇತನ’ ಕವಿತೆ ಸೃಷ್ಟಿಯಾದದ್ದು ಇನ್ನೂ ಹಿಂದೆ ಎಂಬುದು ಗಮನಾರ್ಹ ಸಂಗತಿ. ೧೯೫೯ರಲ್ಲಿ ಮಡಿಕೇರಿಯಲ್ಲಿ ನೀಡಿದ ಉಪನ್ಯಾಸ ವೊಂದರಲ್ಲಿ, ವಿಶ್ವಪ್ರಜ್ಞೆಯ ವಿಕಾಸಕ್ಕೆ, ವಿಶ್ವಮೈತ್ರಿಯ ಸಂಘಟನೆಗೆ, ವಿಶ್ವಮಾನವ ರಚನೆಗೆ ವಿಶ್ವವಿದ್ಯಾನಿಲಯಗಳು ಪ್ರಯತ್ನಿಸಬೇಕೆಂದು ಲೋಕಕ್ಕೆ ಕರೆಕೊಡುತ್ತಾರೆ. ಸುಮಾರು ಅದೇ ಸಮಯದಲ್ಲಿ ಪುತ್ತೂರಿನಲ್ಲಿ ನೀಡಿದ ಉಪನ್ಯಾಸದಲ್ಲಿಯೂ ಸಮನ್ವಯ ರಾಷ್ಟ್ರದಲ್ಲಿ ವಿಶ್ವವಿದ್ಯೆಯ ಅಗತ್ಯವನ್ನು ಒತ್ತಿ ಹೇಳುತ್ತಾರೆ. ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ತಮಗೆ ಡಾಕ್ಟರೇಟ್ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿಯೂ ಇದೇ ಭಾವನೆ ಮೊಳಗುತ್ತದೆ; ‘ಉಗ್ರ ಪ್ರಾಂತೀಯತೆಯ ಸ್ವಾರ್ಥತೆ ಸ್ವಪ್ರತಿಷ್ಠೆಗಳು ರಾಷ್ಟ್ರೀಯತೆಯ ಪ್ರೇಮ ಸೌಹಾರ್ದದಲ್ಲಿ, ಉಗ್ರ ರಾಷ್ಟ್ರೀಯತೆಯ ಸಂಕುಚಿತ ಭಾವನೆಗಳು ಅಂತಾರಾಷ್ಟ್ರೀ ಯತೆಯ ವಿಶಾಲ ಭಾವನೆಯಲ್ಲಿ ಲೀನವಾಗದ ಹೊರತು ನಾಡಿಗೆ ಕ್ಷೇಮವಿಲ್ಲ, ಲೋಕಕ್ಕೆ ಕಲ್ಯಾಣವಿಲ್ಲ. ಜೀವನವನ್ನು ಪೂರ್ಣದೃಷ್ಟಿಯಿಂದ ನೋಡಿ, ಅನೇಕತೆಯನ್ನು ಸಮನ್ವಯ ಗೊಳಿಸುವ ಬುದ್ದಿ ತಲೆದೋರಿದಾಗ ಎಲ್ಲೆಲ್ಲೂ ಸಮತಾಭಾವ ಮೈದೋರಿ, ಸರ್ವೋದಯ ಸಿದ್ದಾಂತ ಸಂಸ್ಥಾಪಿತವಾಗುತ್ತದೆ’ (ಷಷ್ಠಿನಮನ, ಪು. ೨೨೦). ಮನುಕುಲದ ಐಕ್ಯ ಸಾಧನೆಗೆ ನೆರವಾಗಬೇಕಾಗಿದ್ದ, ಮಾನವ ಹೃದಯದಲ್ಲಿ ಅಧ್ಯಾತ್ಮ ಬೀಜವನ್ನು ಬಿತ್ತಬೇಕಾಗಿದ್ದ, ಯುದ್ಧಕಲಹಗಳನ್ನು ಸ್ತಂಭನಗೊಳಿಸಬೇಕಾಗಿದ್ದ ಮತ ಅನೈಕ್ಯಕ್ಕೆ ಮೌಢ್ಯಕ್ಕೆ ಹಾಗೂ ಯುದ್ಧ ಕಲಹಗಳಿಗೆ ಚೋದಕ ಶಕ್ತಿಯಾಗುತ್ತಿರುವುದನ್ನು ಕಂಡಾಗ ಕುವೆಂಪು ಕಳವಳಕ್ಕೀಡಾ ಗುತ್ತಾರೆ. ವಿಶ್ವಮಾನವನಾಗಿ ಹುಟ್ಟಿದ ಮಗು ಮತೀಯ ಸಂಕೋಲೆಯಲ್ಲಿ ಬೆಳೆಯುವಾಗ, ಲೋಕದಲ್ಲಿ ಶಾಂತಿಸ್ಥಾಪನೆ ಸಾಧ್ಯವೆ ಎಂದವರು ಪ್ರಶ್ನಿಸುತ್ತಾರೆ.

ಕುವೆಂಪು ಅವರ ಬದುಕಿನ ಸಮಸ್ತ ಚೈತನ್ಯದ ಸಾರವಾಗಿ, ಅವರ ಕಾವ್ಯ ಪ್ರತಿಭೆಯ ವೈಜ್ಞಾನಿಕ ಮನೋಧರ್ಮದ ವೈಚಾರಿಕ ಬುದ್ದಿಯ ಕ್ರಾಂತಿಕಾರಿ ಮತಿಯ ಸಾರಾಯವಾಗಿ, ಸುದೀರ್ಘಾನುಭವ ಹಾಗೂ ಅನುಭಾವದ ಪರಿಣಾಮವಾಗಿ, ಅವರ ಸಮಗ್ರ ಕಾವ್ಯ ಸಂದೇಶಕ್ಕೆ ಶಿಖರಪ್ರಾಯವಾಗಿ, ವಿಶ್ವಮಾನವ ಸಂದೇಶ ಹೊರಹೊಮ್ಮಿದೆ. ಅವರೀಗ ಕಾರಯಿತ್ರಿ ಪ್ರತಿಭೆಯನ್ನು ಸ್ಥಗಿತಗೊಳಿಸಿ, ಆಗಾಗ್ಗೆ ತಾವೇ ಸೃಷ್ಟಿಸಿದ ಕಾವ್ಯಲೋಕದಲ್ಲಿ ವಿಹರಿಸುತ್ತ, ಅಧ್ಯಾತ್ಮ ಸಾಧನೆಯನ್ನು ಮುಂದುವರಿಸುತ್ತ, ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ನಡೆಸುತ್ತ, ಸಂದರ್ಶನಾರ್ಥಿಗಳಾಗಿ ಬಂದವರಿಗೆ ವಿಶ್ವಮಾನವ ಸಂದೇಶವನ್ನು ಉಪದೇಶಿಸುತ್ತ, ನಿರ್ಲಿಪ್ತರಂತಿದ್ದಾರೆ. ಶ್ರೀ ರಾಮಾಯಣ ದರ್ಶನಂ ವಿಶ್ವಮಾನವ ಸಂದೇಶಕ್ಕೆ ಭಾಷ್ಯದಂತಿದೆ. ಅದು ಕುವೆಂಪುವನ್ನು ಸೃಜಿಸಿದಂತೆ, ವಿಶ್ವಮಾನವ ಸಂದೇಶ ಅವರನ್ನು ವಿಶ್ವಮಾನವತ್ವ ಕ್ಕೇರಿಸಿದೆ.