ಹಳ್ಳಿಯವರಾಗಲಿ, ಡಿಳ್ಳಿಯವರಾಗಲಿ, ಇಬ್ಬರೋ ಹಲವರೋ ಒಂದೆಡೆ ಸೇರಿದಾಗ ಸಂವಾದ ಪ್ರಾರಂಭವಾಗುತ್ತದೆ. ವಿಷಯ, ಭಾವ, ಆಲೋಚನೆ, ಸ್ವಭಾವ, ಪರಿಸರಗಳಿಗನು ಗುಣವಾಗಿ ಮಾತಿನ ಸರಣಿ, ಮೋಡಿ, ಗತ್ತು, ತಿರುವು ಮುರುವು, ಬನಿ, ಬಾಗುಚೇಗುಗಳು, ಪಟ್ಟುವರಿಸೆಗಳು ವ್ಯತ್ಯಾಸವಾಗುತ್ತವೆ. ತನ್ನ ಭಾವಾವೇಶ ಅನುಭವಾಲೋಚನೆಗಳಿಗೆ ಸೂಕ್ತಾಭಿವ್ಯಕ್ತಿ ನೀಡಬೇಕೆಂದು, ತಾನು ಹೇಳುವ ವಿಷಯ ತನ್ನಂತೆ ಇತರರಿಗೂ ಗ್ರಹಿಕೆಯಾಗ ಲೆಂದು ಪ್ರತಿಯೊಬ್ಬ ಮಾತುಗಾರನೂ ಅಪೇಕ್ಷಿಸುತ್ತಾನೆ, ಹವಣಿಸುತ್ತಾನೆ. ಸಂವಾದ ಸಮಯದಲ್ಲಿ ಸಂವಾದಕನ ಮನಸ್ಸಿನಲ್ಲಿ ಮೂಡಿದ ಚಿತ್ರ ಅಥವಾ ಕಲ್ಪನೆ ಕೇಳುವವನ ಮನಸ್ಸಿನಲ್ಲಿ ಮೂಡದಿದ್ದಾಗ, ಒಬ್ಬನ ಅನುಭವ ಮತ್ತೊಬ್ಬನ ಮನಸ್ಸಿನಲ್ಲಿ ಮೂರ್ತತ್ವವನ್ನು ಪಡೆಯದಿದ್ದಾಗ, ಬಂಡೆಯ ಮೇಲೆ ಬಿದ್ದ ನೀರಿನಂತೆ, ಉರಿಮರಳಿನಲ್ಲಿ ಬಿದ್ದ ಬೀಜದಂತೆ ಮಾತು ನಿಷ್ಫಲವಾಗುತ್ತದೆ. ಆ ಕಾರಣದಿಂದಾಗಿ ಮಾತು ಹಲವಂಗದ ಬಿಂಬಗುಂಬಗಳನ್ನು, ರಂಗು ಗುಂಗುಗಳನ್ನು ಬಿಂಕಬಿನ್ನಾಣಗಳನ್ನು, ಬಳುಕುತಳುಕುಗಳನ್ನು ತಳೆಯುತ್ತದೆ. ‘ಪಟೇಲರ ಬಟ್ಟೆ ಸೋರೆಹೂವಿನಂತಿವೆ’; ‘ಪಶ್ಚಿಮದಲ್ಲಿ ಮಳೆ ಕಾಲೂರಿದೆ’; ‘ಕನ್ನಂಬಾಡಿಯ ತೂಬಿನಲ್ಲಿ ತೆಂಗಿನ ತುರಿ ಹರಿಯುತ್ತಿದೆ‘; ‘ಮೂಗು ಸಂಪಿಗೆಯಂತಿದೆ’; ‘ಮುಖಂಡರ ಮನಸ್ಸು ಯಾವಾಗಲೂ ತಿಪ್ಪೆ; ಅವರು ಯಾವಾಗಲೂ ನಾಯಿಗಳಂತೆ ಕಚ್ಚಾಡುತ್ತಾರೆ’; ‘ಮನುಷ್ಯರಕ್ತ ರುಚಿ ಬಲ್ಲ ಹುಲಿ ನಮ್ಮೂರ ಗೌಡ’; ‘ನಮ್ಮೂರ ಶಾನುಭೋಗ ಜಿಗಣೆ’:- ಇವು ದಿನ ಬೆಳಗಾದರೆ ಅವಿದ್ಯಾವಂತ ಹಳ್ಳಿಗರ ಬಾಯಲ್ಲಿ ಸಲೀಸಾಗಿ ಹೊರ ಹೊಮ್ಮುವ ರಚನೆಗಳು; ನಿರಾಯಾಸವಾಗಿ, ಯುಕ್ತಿ ಮುಕ್ತವಾಗಿ, ಆಲೋಚನಾ ನಿರಪೇಕ್ಷವಾಗಿ, ಮೊಗ್ಗಿನಿಂದ ಪರಿಮಳ ಬಿಚ್ಚಳಿಸುವಂತೆ, ಅಂತರಂಗದಿಂದ ನೇರವಾಗಿ ಮೂಡಿದ ವಾಕ್‌ಲಹರಿ. ಇಲ್ಲಿ ಅನುಭವ ಬೇರೆಯಲ್ಲ; ಮಾತು ಬೇರೆಯಲ್ಲ ಅವೆರಡೂ ಒಟ್ಟಾಗಿ, ಒಂದೆಯಾಗಿ, ಅಭೇದವಾಗಿ ಕಾಲಭೇದವಿಲ್ಲದೆ, ಹೂವಿನ ಬಣ್ಣ ಕಂಪುಗಳಂತೆ ಜನ್ಮಧಾರಣೆ ಮಾಡಿದ ಮಾನಸಿಕ ಚಿತ್ರಗಳು. ಅನುಭವ ಸಾಂದ್ರತೆಗೆ ತೀಕ್ಷ್ಣತೆಯೊದಗಿದಾಗ ಮಾತು ಪ್ರಜ್ವಲಿಸುತ್ತದೆ. ಬಟ್ಟೆ ಬೆಳ್ಳಗಿದೆ ಯೆನ್ನುವುದು ಅತ್ಯಂತ ಸಾಮಾನ್ಯ ಭಣಿತೆ. ನೈರ್ಮಲ್ಯ ಶುಭ್ರತೆಗಳಲ್ಲಿ ಶ್ವೇತವರ್ಣದಲ್ಲಿ ಸೋರೆ ಹೂವನ್ನು ಹೋಲುವ ವಸ್ತು ಮತ್ತೊಂದಿಲ್ಲ. ಅಗಸನ ಮಡಿಯಲ್ಲಿಯೂ ಕಳಂಕವಿರಬಹುದು; ಸೋರೆಹೂವಿನಲ್ಲಂತು ಸಾಧ್ಯವಿಲ್ಲ. ಆದ್ದರಿಂದ ಗ್ರಾಮೀಣರ ಕವಿಮನ ಬಟ್ಟೆಯನ್ನು ಸೋರೆ ಹುವಿಗೆ ಹೋಲಿಸುತ್ತದೆ; ಹಾಗೆ ಹೋಲಿಸಿದಾಗ ಮಾತ್ರ ಅವನ ಮನಸ್ಸು ಅನುಭವದ ತೀಕ್ಷ್ಣತೆಯಿಂದ ಬಿಡುಗಡೆ ಹೊಂದಿ, ಪ್ರಶಾಂತವಾಗುತ್ತದೆ. ಮದುವೆಯ ಅಡುಗೆ ಮನೆಯಲ್ಲಿ ತೆಂಗಿನ ತುರಿಯ ಒಡ್ಡನ್ನು ನೋಡಿದವರಿಗೆ ಮಾತ್ರ ಕನ್ನಂಬಾಡಿಯ ತೂಬಿನ ನೀರಿನ ಹೋಲಿಕೆ ಅರ್ಥವಾಗುತ್ತದೆ.

ಹಳ್ಳಿಗರ ವಾಕ್ಕೋಶದಲ್ಲಿ ಇಂಥ ಸಾವಿರಾರು ಉಪಮೆಗಳು ದೊರೆಯುತ್ತವೆಂಬುದಕ್ಕೆ ಜನಪದ ಸಾಹಿತ್ಯದ ಅಕ್ಷಯ ನಿಧಿಯನ್ನು ನೆನೆಸಿಕೊಳ್ಳಬಹುದು. ‘ನಾಗ ಸೊರದಂತೆ ದನಿ ಎತ್ತಿ ಹಾಡಿ’ದಾಗ ಮಾತ್ರ ಬೀಸುವ ಕಲ್ಲಿನಲ್ಲಿ ಹಿಟ್ಟು ಬೀಳುತ್ತದಂತೆ. ಹಲ್ಲುಗಳನ್ನು ದಾಳಿಂಬಕ್ಕೆ ಹೋಲಿಸುವುದು ಶಿಷ್ಟಸಂಪ್ರದಾಯ; ‘ನೆಲ್ಲಕ್ಕಿಯಂಥ ಸುಲಿಪಲ್ಲು’ ಎಂಬುದು ಜಾನಪದ ಕವಿಯ ಭಣಿತೆಯ ಭಂಗಿ. ಅಕ್ಕಿ ದಿನನಿತ್ಯ ಬಳಸುವ ಅನಿವಾರ್ಯವಸ್ತುವಾದರೂ, ಇಂಥ ಹೋಲಿಕೆ ಹೊಳೆದದ್ದು ಜಾನಪದ ಕವಿಗೆ ಮಾತ್ರ; ಶಿಷ್ಟಪದ ಕವಿಗಲ್ಲ. ‘ಆಕಳಂಥಾ ಅತ್ತಿ, ಗೋಕುಲಂಥಾ ಮಾವ, ಶ್ರೀಕೃಷ್ಣನಂಥ ಪತಿರಾಯನಿದ್ದರ’ ಹೆಣ್ಣು ಸಾಕಿದ ತವರನ್ನು ಮರೆಯುತ್ತಾಳಂತೆ. ಹಳ್ಳಿಗರಿಗೆ ಆಕಳೇ ಸರ್ವಸ್ವ; ಕರೆಯುವ ಹಯನಿದ್ದ ಮನೆ ಸುಭಿಕ್ಷದ, ಆರೋಗ್ಯದ, ಸಂಪತ್ತಿನ ನಿಧಿ. ಗೋಕುಲ ಶ್ರೀಕೃಷ್ಣರನ್ನು ಹಳ್ಳಿಯ ಮುಗ್ಧೆ ಕೇಳಿ ತಿಳಿದವಳೆ ಹೊರತು, ನೋಡಿ ಬಲ್ಲವಳಲ್ಲ, ಆದರೆ ಸಾವಿರಾರು ವರ್ಷಗಳಿಂದ ಜನಮನಸ್ಸಿನಲ್ಲಿ ಅವುಗಳ ಕಲ್ಪನೆ ನಿತ್ಯನೂತನವಾಗಿ, ಆಕಾಶ ಸದೃಶವಾಗಿ ಬೆಳೆಯುತ್ತಿದೆಯೆಂಬುದನ್ನು ಮರೆಯುವಂತಿಲ್ಲ. ಗಂಡನ ಮನೆಯಲ್ಲಿರುವ ಮಗಳು ತನ್ನ ತವರಿನ ಮತ್ತು ಹೆತ್ತ ತಾಯಿಯ ನೆನಪನ್ನು ಮೆಲುಕು ಹಾಕುತ್ತ, ಸುಖವನ್ನನುಭವಿಸುತ್ತಾಳೆ.

ಬ್ಯಾಸಕಿ ದಿವಸಕ ಬೇವಿನ ಮರ ತಂಪ
ಭೀಮರತಿಯೆಂಬ ಹೊಳಿ ತಂಪ ಹಡದಮ್ಮ
ನೀ ತಂಪ ನನ್ನ ತವರೀಗಿ.
ಹಣ್ಣು ಹಾಲಿಗಿಂತ ಬೆಣ್ಣೆತುಪ್ಪಕ್ಕಿಂತ
ಚೆನ್ನಾಗಿ ಕಳಿತ ರಸಬಾಳೆ ಹಣ್ಗಿಂತ
ಚೆನ್ನ ಕಾಣೆ ತಾಯಿ ಎದೆಹಾಲು.

ತವರು ಮನೆ ಇದ್ದದ್ದು ಭೀಮರತಿಯೆಂಬ ಹೊಳೆಯ ದಡದ ಮೇಲೆ. ಆ ದಡದಲ್ಲಿಯೇ ಬೇವಿನ ಮರದ ತೋಪು. ಹೊಳೆಯ ಮೇಲಿಂದ ಬೀಸಿ ಬರುತ್ತಿದ್ದ ತಂಗಾಳಿಯ ಹಾಗೂ ಬೇವಿನ ಮರದ ನೆಳಲ ತಂಪನ್ನು ಆ ಮಗಳು ತವರಿನಲ್ಲಿದ್ದಾಗ ಅನುಭವಿಸಿರಬೇಕು. ಆ ಮರ, ಆ ಹೊಳೆ ಊರಿಗೆಷ್ಟು ಪ್ರಯೋಜನವೋ ತಾಯಿ ತವರಿಗಷ್ಟೇ ಕ್ಷೇಮಂಕರಿಯಾಗಿದ್ದಾಳೆ. ತಾಯಿಯ ಎದೆಹಾಲು ಸರ್ವೋತ್ಕೃಷ್ಟವಾದದ್ದೆಂಬ ಸತ್ಯ ಹಳ್ಳಿಯ ಹೆಣ್ಣಿಗೆ ಗೊತ್ತೇ ಹೊರತು, ಪಟ್ಟಣದ ಸ್ವಸುಖಾಸಕ್ತೆ, ದೇಹಾನುರಕ್ತೆ ಬಿಂಕದ ಹೆಣ್ಣಿಗಲ್ಲ; ಆಧುನಿಕ ವೈದ್ಯನಿಗಂತು ಅಲ್ಲ.

ಹಳ್ಳಿಯ ಹೆಣ್ಣಿನ ಪುತ್ರವಾತ್ಸಲ್ಯ ಅಮೇಯ, ಅಪ್ರತಿಮ, ಅಕಳಂಕ; ತನ್ನೆಲ್ಲವನ್ನು ಸೂರೆಗೊಟ್ಟು, ಹೆತ್ತಿರುವ, ಬೆಳೆಸಿರುವ, ತನ್ನ ಪತಿರಾಯನ ಪ್ರತಿಬಿಂಬವೆನಿಸಿರುವ ಮಗುವನ್ನು ವರ್ಣಿಸುವಾಗ ಅವಳ ಮಾತೆಲ್ಲ ಉಪಮೆಯ ರೂಪದಲ್ಲಿ ಮೈದೋರಿ ಕಾವ್ಯವಾಗುತ್ತದೆ; ‘ತೊಟ್ಟಿಲದಾಗೊಂದು ತೊಳೆದ ಮುತ್ತನು ಕಂಡೆ’; ‘ಅಳುವ ಕಂದನ ತುಟಿಯು ಹವಳದ ಕುಡಿಯಂಗ, ಕುಡಿಹುಬ್ಬು ಬೇವಿನೆಸಳಂಗ’; ‘ಕಾಮನ ಬಿಲ್ಲು ಹೋಲ್ತಾವೆ ಕುಡಿಹುಬ್ಬು’;

ಬಾಲಕರಿಲ್ಲದ ಬಾಲೀದ್ಯಾತರ ಜನ್ಮ
ಬಾಡೀಗಿ ಎತ್ತು ದುಡಿದ್ಹಂಗ ಬಾಳೆಲೆಯ
ಹಾಸ್ಯುಂಡು ಬೀಸಿ ಒಗೆದಂಗ

ಗಾಢವಾದ ಪ್ರೀತಿ ವಾತ್ಸಲ್ಯಗಳು ಸಾಮಾನ್ಯವಾಗಿ ಮಾತಿಗೆ ನಿಲುಕದಂಥವು, ಉಪಮಾನ ಧ್ವನಿಯ ಮೂಲಕ ಅವುಗಳ ಆಳವನ್ನರಿಯಲು ಅಮೂರ್ತ ಸ್ವರೂಪವನ್ನು ತಿಳಿಯಲು ಸಾಧ್ಯವಾಗುತ್ತದೆ.

ಭಾವಾವೇಗ ತೀವ್ರವಾಗಿದ್ದಾಗ, ಅನುಭವ ಸಂಪತ್ತು ಸಮೃದ್ಧವಾಗಿದ್ದಾಗ, ಪಂಡಿತ ಪಾಮರರ ಭಾಷೆ ಉಪಮಾಶೈಲಿಯಾಗಿ ಮಾರ್ಪಾಡಾಗುತ್ತದೆ. ವಿದ್ಯುಚ್ಛಕ್ತಿಯ ಪ್ರವಾಹ ಮಾಧ್ಯಮವಾಗಿ ತಾಮ್ರದ ತಂತಿ ಅನಿವಾರ್ಯ. ಅಂತೆಯೇ ಅನುಭವ ಕಾವೇರಿದಾಗ ಉಪಮಾ ಮಾಧ್ಯಮ ಅನೈಚ್ಛಿಕವಾಗಿಯೇ ಅಭಿವ್ಯಕ್ತಗೊಳ್ಳುತ್ತದೆ. ಅದೊಂದು ಅಲಂಕಾರವೆನ್ನುವುದಕ್ಕಿಂತ ಕಾವ್ಯಾಂಶ ಅಥವಾ ಕಾವ್ಯ ಜೀವಾಳವೆಂದೇ ಹೇಳಬಹುದು. ದೇಹದಿಂದ ಪ್ರತ್ಯೇಕಗೊಂಡ ಅಲಂಕಾರದಂತಲ್ಲದೆ ಅದು ಸ್ನಾಯು ರಕ್ತನಾಳಗಳಂತೆ ಕಾವ್ಯ ಶರೀರದ ಒಂದು ಅಂಗವಾಗಿ ರುತ್ತದೆ; ಅಂಗವೆನ್ನುವುದಕ್ಕಿಂತ ಅದರ ಜೀವಧಾತುವೆಂದರೂ ಸಲ್ಲುತ್ತದೆ. ಜೀವಧಾತುವಾಗದೆ ಕೇವಲ ಅಲಂಕಾರವಾದಾಗ ಅದು ಭಾರವಾಗುವ ಸಂಭವವೂ ಉಂಟು.

ಎರಡು ವಸ್ತುಗಳ ನಡುವೆ ತೋರುವ ಸಾದೃಶ್ಯ ಸಂಪತ್ತನ್ನು ಉಪಮೆಯೆಂದು ಕರೆಯಲಾಗುತ್ತದೆ. ಉಪಮಾನ ಹೋಲಿಸುವ ವಸ್ತು, ಉಪಮೇಯ ಹೋಲಿಸಲ್ಪಡುವ ವಸ್ತು. ಈ ಎರಡೂ ಅಥವಾ ಅವುಗಳಲ್ಲೊಂದು ಅಪರಿಚಯದ ಅಥವಾ ಸುಪರಿಚಯದ, ವಾಸ್ತವ ಅಥವಾ ಕಾಲ್ಪನಿಕ ವಸ್ತುವಾಗಿರಬಹುದು. ‘ಅವನು ದೇವರಂಥ ಮನುಷ್ಯ’ ಎನ್ನುವಾಗ, ಯಾರೂ ದೇವರನ್ನು ನೋಡಿಲ್ಲವೆಂಬುದು ವಾಸ್ತವ ಸತ್ಯ. ಕಾಲ್ಪನಿಕತೆ ಅದರ ಸುತ್ತ ಆವರಿಸಿಕೊಂಡಿದೆ. ‘ಕಡಲೊಳಿಹ ಬಡಬಾಗ್ನಿ ತೈಲವನೆಳಸುವುದೆ ತನ್ನುರಿಯ ಪೋಷಿಸೆ’ ಎಂಬಲ್ಲಿ ಬಡಬಾಗ್ನಿಯನ್ನು ನೋಡಿದವರಾರು? ಅದೊಂದು ಕವಿಸಮಯ. ಅದು ಸಾಮಾನ್ಯ ವಾಗಿ ಕಲ್ಪನಾ ಪ್ರತಿಭೆಯ ಕವಿಯ ಮಾನಸಾನ್ನದಿಂದ ಪೋಷಿತವಾದದ್ದು. ಅಂಥ ಸಂದರ್ಭ ಗಳಲ್ಲಿ ಸಾದೃಶ್ಯ ಕಲ್ಪನೆಯ ಮೂಲಕವೇ ಅನುಲಕ್ಷಿತವಾಗುತ್ತದೆ. ಅಂದ ಮೇಲೆ ಉಪಮೆಯಲ್ಲಿ ಸಾದೃಶ್ಯ ಮುಖ್ಯವೇ ಹೊರತು, ಅದರಲ್ಲಿಯೂ ಸಾದೃಶ್ಯ ಯಾವುದೋ ಒಂದು ಗುಣಕ್ಕೆ ಅಥವಾ ಭಾವಕ್ಕೆ ಸಂಬಂಧಿಸಿದ್ದೇ ಹೊರತು ಆ ವಸ್ತುಗಳಿಂದ ಹೊರ ಹೊಮ್ಮುವ ಸರ್ವಭಾವ ಗುಣಲಕ್ಷಣಗಳಿಲ್ಲವೆಂಬುದು ಗಮನಿಸಬೇಕಾದ ಸಂಗತಿ. ‘ಗಜಗಮನೆ’ ಎನ್ನುವಾಗ ಗಾಂಭೀರ್ಯವೆಂಬ ಲಕ್ಷಣದ ಹೋಲಿಕೆ ಮುಖ್ಯವೇ ಹೊರತು, ಆ ‘ವಸ್ತು’ಗಳ ಇತರ ಲಕ್ಷಣಗಳಲ್ಲ; ಅವು ಉಪಮೆಯಲ್ಲಿ ಅಪ್ರಕೃತ.

ಉಪಮೆಯೆಂಬುದು ಬರಿಯ ವಾಚ್ಯಾರ್ಥ ಪ್ರಧಾನವಾದ ಶಬ್ದವ್ಯೆಹವಲ್ಲ; ವಾಚ್ಯಾರ್ಥ ದಾಚೆಗಿನ ಭಾವಾನುಭವ ರಸಾರ್ಥ ವಿಶೇಷಗಳ ಅಕ್ಷಯಕೋಶ. ಕವಿ ಸಹೃದಯರ ಮನಸ್ಸಂಸ್ಕಾರ ಜ್ಞಾನವಿಸ್ತಾರ ಕಲ್ಪನಾ ಸಾಮರ್ಥ್ಯಗಳಿಗನುಗುಣವಾಗಿ ಆ ಕೋಶ ಹಿಗ್ಗುತ್ತದೆ, ವಿಸ್ತಾರಗೊಳ್ಳುತ್ತದೆ, ಅಸೀಮವಾಗುತ್ತದೆ. ಆದ್ದರಿಂದ ಕಾವ್ಯಕ್ಕೆ ಉಪಮೆಯಿಂದಾಗುವ ಪ್ರಯೋಜನ ಅಪಾರ. ಅದು ಹೊಸ ಭಾವ ಭಾವನೆಗಳನ್ನು ಪ್ರಚೋದಿಸುತ್ತದಲ್ಲದೆ, ವಸ್ತು ಪಾತ್ರ ಸನ್ನಿವೇಶಗಳ ಮೇಲೆ ಬೆಳಕು ಚೆಲ್ಲಿ, ರಸಗ್ರಹಣಕ್ಕೆ ನೆರವಾಗುತ್ತದೆ. ಉಪಮೆಯೇ ಸಕಲಾಲಂಕಾರಗಳಿಗೆ ಮೂಲವೆನ್ನುವ ಭಾವನೆ ಸಾವಿರಾರು ವರ್ಷಗಳಿಂದ ಇಂದಿನ ತನಕ ಹರಿದುಬಂದಿದೆಯಷ್ಟೆ. ಅಷ್ಟರಿಂದಲೇ ಅದರ ಮಹತ್ವಪ್ರಾಶಸ್ತ್ಯಗಳು ಮನದಟ್ಟಾಗುತ್ತವೆ. ರೂಪಕ ಸಂಕೇತ ಪ್ರತೀಕ ಮತ್ತು ಪ್ರತಿಮೆಗಳು ಉಪಮೆಯ ರೂಪಾಂತರಗಳೆಂದೊ, ವಿಕಾಸಾತ್ಮಕ ಅವಸ್ಥಾಂತರಗಳೆಂದೊ ಹೇಳಬಹುದು.

ಉಪಮೆಯೊಂದೆ ಕಾವ್ಯದ ಸರ್ವಸ್ವವಲ್ಲವಾದರೂ, ಅದು ಕವಿಪ್ರತಿಭೆಯ ಒರೆಗಲ್ಲೆಂಬು ದರಲ್ಲಿ ಸಂಶಯವಿಲ್ಲ. ವಿಶಾಲ ಲೋಕಾನುಭವ, ಸೂಕ್ಷ್ಮ ವೀಕ್ಷಣ ಸಾಮರ್ಥ್ಯ ಹಾಗೂ ವಸ್ತುಸ್ವರೂಪ ದರ್ಶನೋಪಮಾನ ಚಾತುರ್ಯವುಳ್ಳ ಸಾಹಿತಿ ಅನಾಯಾಸವಾಗಿ ಉಪಮೆ ಗಳನ್ನು ಸೃಷ್ಟಿಸುತ್ತಾನೆ; ಸೃಷ್ಟಿಸುತ್ತಾನೆನ್ನುವುದಕ್ಕಿಂತ, ಅವು ರೇಷ್ಮೆ ಹುಳುವಿನೊಡಲ ತಂತುವಿನಂತೆ ಅವನ ಅಂತಶ್ಚೇತನದಿಂದ ತಾವಾಗಿಯೇ ಹೊರಹೊಮ್ಮುತ್ತವೆಂದು ಸ್ಪಷ್ಟಪಡಿಸ ಬಹುದಾಗಿದೆ. ಮಾನವಸೃಷ್ಟಿಯನ್ನೊಳಗೊಂಡ ಇಡೀ ವಿಶ್ವವೇ ಉಪಮೆಗಳ ತವನಿಧಿ; ಸಾಹಿತಿಗಳು ಅವನ್ನು ಮೊಗೆಮೊಗೆದಷ್ಟೂ ವರ್ಧಿಸುತ್ತದೆ, ಅಕ್ಷಯವಾಗುತ್ತದೆ.

ಕುವೆಂಪು ಅವರ ಉಪಮಾ ಪ್ರಪಂಚ ಅಸೀಮವಾದದ್ದು. ಅವರ ಭಾಷೆಯೇ ಉಪಮಾ ಸರಸ್ಸು. ಅವರು ಮಾತೆತ್ತಿದರೆ ಸಾಕು, ಗರಿಗೆದರಿದ ನವಿಲುಗಳಂತೆ ಉಪಮೆಗಳು ನರ್ತಿಸುತ್ತವೆ. ಅವರು ಭಾವಪರವಶರಾದಾಗಲಂತು ಅಕ್ಷಯ ತೂಣೀರದಿಂದಲೆಂಬಂತೆ ಅವು ಪುಂಖಾನು ಪುಂಖವಾಗಿ ನುಗ್ಗುತ್ತವೆ. ಅವರು ಉಪಮೆಗಳಲ್ಲಿ ಮಾತಾಡುತ್ತಾರೆಂದರೂ ಅತಿಶಯೋಕ್ತಿ ಯಾಗಲಾರದು. ಅವರ ಸಾಹಿತ್ಯ ಕೃತಿಗಳಲ್ಲಿ ಬರುವ ಉಪಮೆಗಳನ್ನು ಗಣನೆಗೆ ತೆಗೆದು ಕೊಂಡರೂ ಅವೊಂದು ವಿಶ್ವಕೋಶವಾಗುತ್ತವೆ. ಅವುಗಳನ್ನೆಲ್ಲ ಒಟ್ಟುಗೂಡಿಸಿ ಲೆಕ್ಕ ಹಾಕಿದಾಗ, ನಾಲ್ಕು ಸಾವಿರ ಸಂಖ್ಯೆಯನ್ನು ಮೀರಬಹುದೆಂದು ಅಂದಾಜು ಮಾಡಲಾಗಿದೆ. ಈ ಅಂದಾಜಿನಲ್ಲಿ ರೂಪಕಾದಿ ಇತರ ಉಪಮಾ ಸಂತಾನವನ್ನು ಸೇರಿಸಿಲ್ಲ. ಅವರ ಉಪಮಾ ವೈಭವವೊಂದೆ ಸಾಕು ಅವರ ದೈತ್ಯ ಪ್ರತಿಭೆಗೆ ಸಾಕ್ಷಿಯಾಗಿ; ಅದು ಅವರ ಮಾನಸ ಗಂಗೋತ್ರಿಯ ಜೀವಂತ ಪ್ರವಾಹ. ಅವರ ಪ್ರಾರಂಭದ ಕವಿತೆಗಳಲ್ಲಿಯೇ ಉಪಮೆಗಳ ಸುಗ್ಗಿಯನ್ನು, ಅವುಗಳ ಚೈತ್ರ ಸೌಂದರ್ಯವನ್ನು ಗಮನಿಸಬಹುದು.

‘ಹಾಳೂರು’ ಕುವೆಂಪು ಅವರ ಕಾವ್ಯ ಜೀವನದ ಪ್ರಾರಂಭದಲ್ಲಿ ಪ್ರಕಟಗೊಂಡ ನೀಳ್ಗವಿತೆ. ಅಲ್ಲಿಯ ಉಪಮೆಗಳನ್ನೆ ಮೊದಲು ಗಮನಿಸೋಣ. ಹಳ್ಳಿಗರ ಬಡತನಕ್ಕೆ ಮುಖ್ಯವಾದ ಕಾರಣಗಳಲ್ಲೊಂದು ಅವರ ಕೋರ್ಟು ವ್ಯವಹಾರಗಳು,

ಮೊಂಡ ಕುರಿಗಳ ತೆರದಿ ಹಳ್ಳಿಗರು ಬಂದು
ಲಾಯರೊಡ್ಡುವ ಬಲೆಗೆ ಬೀಳುತಿಹರೆಂದೂ.

ಈ ಉಪಮೆಯಿಂದ ಲಾಯರ ಕಟುಕತನ ವ್ಯಕ್ತವಾಗುತ್ತದೆ. ‘ಪರಭಾಷೆಯೆಂದರದು ನಮಗೆ ಬೆಲ್ಲ’ ಎನ್ನುವಾಗ ನಮ್ಮ ಜನರ ಹೀನವರ್ತನೆ ಸ್ಪಷ್ಟವಾಗುತ್ತದೆ, ನಮ್ಮ ಜನ ನೊಣಗಳಿಗಿಂತ ಮೇಲಲ್ಲವೆಂಬುದು ವಿಶದವಾಗುತ್ತದೆ. ‘ಚೀರುತಿದೆ ಮಾರಿಯಂದದಿ ಯಂತ್ರ ಘೋಷ’ ಎನ್ನುವಲ್ಲಿ ಆಧುನಿಕ ನಾಗರಿಕತೆಯ ಮಾರಕ ಪರಿಣಾಮಗಳೆಲ್ಲ ನೆನಪಿಗೆ ಬರುತ್ತವೆ. ಮಾರಿಯ ಹೋಲಿಕೆ ಅತ್ಯಂತ ಉಚಿತವಾಗಿದೆ. ‘ಬಡತನದ ಬಾವುಟಗಳನುಟ್ಟ ಬಟ್ಟೆ…ಮೈ ಮೇಲೆ ಪಟವಾಡುವುದು ಹರಿದ ಅಂಗಿ’ ಎಂಬ ಗೋಪಾಲ ತಿಮ್ಮನ ವರ್ಣನೆಯಲ್ಲಿ ದಾರಿದ್ರ್ಯದ ನಗ್ನತೆ ಎದ್ದು ಕಾಣುತ್ತದೆ.

ನೀಲ ನಿರ್ಮಲ ನಭದಿ ಹಾರುತಿಹ ಹದ್ದು
ಶುಭ್ರ ನಭಕಾಶಿಸದೆ ಕೊಳೆತ ಹೆಣ ಬಿದ್ದು
ನಾರುತೆಲ್ಲಿಹುದೆಂದು ದೃಷ್ಟಿಯಿಡುವಂತೆ
ನೋಡುವುದು ಒಣವೇದ ಪಂಡಿತರ ಸಂತೆ!

ನ್ಯಾಯ ನೀತಿ ಧರ್ಮಗಳನ್ನು ಕಾಡಿಗಟ್ಟಿ ದೀನದಲಿತರನ್ನು ಶೋಷಿಸುವ, ಮಾನವೀಯತೆ ಇಲ್ಲದ ಎಲ್ಲ ಮಾನವರಿಗೂ ಈ ಉಪಮೆ ಅನ್ವಯಿಸುತ್ತದೆ.

ಮೊತ್ತಮೊದಲು ಪ್ರಕಟಗೊಂಡ ಅವರ ಕವನ ಸಂಗ್ರವೆಂದರೆ ‘ಕೊಳಲು’ ಅಲ್ಲಿಯ ಪ್ರತಿಯೊಂದು ಕವಿತೆಯಲ್ಲಿಯೂ ಉಪಮೆಗಳೊ, ಉಪಮೆಗಳ ಸರಮಾಲೆಗಳೊ ಸಹೃದಯರ ನ್ನೆದುರುಗೊಳ್ಳುತ್ತವೆ. ಕವಿತೆಯ ಸಂಪರ್ಕಲಭಿಸುವ ಮುನ್ನ ಕವಿ ಹೇಗಿದ್ದ, ಕವಿತೆಯ ಸಂಗಮಹಿಮೆಯಿಂದ ಅವನೆಂತು ಪುಣ್ಯಭಾಜನನಾದನೆಂಬುದನ್ನು ಉಪಮಾ ಸರಮಾಲೆಯ ಮೂಲಕ ವಿವರಿಸಲಾಗಿದೆ.

ತಿರುಕನಂತೆ ತಿರುಪೆ ಬೇಡಿ ತಿರುಗುತಿದ್ದೆನು
ಉರಿವ ಮರಳು ಗಾಡಿನಲ್ಲಿ
ಗಂಗೆ ಹುಟ್ಟಿ ಹರಿಯುವಂತೆ
ಕಣ್ಣನಿರಿವ ಕತ್ತಲಲ್ಲಿ
ಮಿಂಚು ಮೂಡಿ ನಿಲ್ಲುವಂತೆ
ಬಿಸಿಲಿನಿಂದ ಬೆಂದ ಎದೆಗೆ
ತಂಪುಗಾಳಿ ಬೀಸುವಂತೆ
ಬಂದೆ. ರಮಣಿಯೆ!
ನಿನ್ನ ಸಂಗದಿಂದ ತಿರುಕ
ರಾಜನಾದನು!

ಈ ಪದ್ಯದಲ್ಲಿ ಬರುವ ಮೂರು ಉಪಮೆಗಳೂ ಸರ್ವರಿಗು ಸುಪರಿಚಿತವಾಗಿದ್ದು, ಕವಿಯ ಎರಡು ಅವಸ್ಥೆಗಳ ಚಿತ್ರವನ್ನು ಕಣ್ಣಿಗೆ ಕಟ್ಟುತ್ತವೆ, ಕವಿತೆಯ ಕಾರುಣ್ಯವೊದಗುವ ಮುನ್ನ ಅವನ ಬಾಳು ಉರಿಯುವ ಮರುಳುಗಾಡಾಗಿತ್ತು. ಕಣ್ಣನ್ನು ಇರಿಯುವ ಕತ್ತಲಾಗಿತ್ತು. ಬಿಸಿಲಿನಿಂದ ಬೆಂದ ಎದೆಯಾಗಿತ್ತು; ಅದು ಒದಗಿದನಂತರ ಗಂಗೆ ಹುಟ್ಟಿದಂತಾಗಿ, ಮಿಂಚು ಮೂಡಿದಂತಾಗಿ, ತಂಪುಗಾಳಿ ಬೀಸಿದಂತಾಗಿ ಅವನ ಬದುಕು ಸುಖ ಸಂತೋಷಗಳ ಮಡು ವಾಗುತ್ತದೆ. ಎಂದಾದರೊಮ್ಮೆ ಕವಿತೆ ತನ್ನಿಂದ ದೂರ ಸರಿದಂತೆ ತೋರಿದಾಗ ಕವಿ

ಪತಿಯನುಳಿದು ತವರು ಮನೆಗೆ
ತರಳೆ ಹೋಗುವಂತೆ, ನೀನು
ಕೆಲವು ಸಾರಿ ಎನ್ನ ಬಿಟ್ಟೆ
ಕಬ್ಬದಂಗನೆ!

ಎಂದು ಹಂಬಲಿಸುತ್ತಾನೆ. ತವರು ಮನೆಗೆ ಹೋದ ಸತಿ ಬೇಗ ಹಿಂದಿರುಗುತ್ತಾಳೆಂಬ, ಸಾಕಷ್ಟು ಸಿರಿಯನ್ನು ತರುತ್ತಾಳೆಂಬ ವಿಶ್ವಾವೂ ಕವಿಗಿದೆ. ಅವಳು ಹಿಂದಿರುಗಿದ ಕೂಡಲೇ ‘ಸುಗ್ಗಿ ಮಳೆಯ ಹನಿಗಳಂತೆ ಗಾನಸುರಿಸುವುದು’! ಅಷ್ಟೇ ಅಲ್ಲ.

ಪದಗಳೆಂಬ ಮಣಿಗಳೆಲ್ಲ
ಭಾವವೆಂಬ ದಾರದಲ್ಲಿ
ತಮಗೆ ತಾವೆ ಕೋದುಕೊಂಡು
ಕಬ್ಬಮಾಲೆಯಾಗಿ ಮೆರೆಯೆ

ಕಾವ್ಯಸೃಷ್ಟಿ ವಿಧಾನದ ಸೂಚನೆ ಇಲ್ಲಿ ಮೈದೋರಿದೆ. ತಿಣುಕಿದರೆ ಕಾವ್ಯವಾಗದು; ಕರುವನ್ನು ನೋಡಿದ ಕೂಡಲೇ ಹಸು ಸೊರೆಬಿಡುವಂತೆ ಉತ್ತಮಕಾವ್ಯ ಆವಿರ್ಭವಿಸುತ್ತದೆಂಬ ಧ್ವನಿ ಇಲ್ಲಿದೆ. ಕಾಣದ ಕಡಲನ್ನು ಕವಿ ಕಲ್ಪಿಸಿಕೊಂಡಾಗ ಅವನ ಮನದಲ್ಲಿ ಕೆರಳಿದ ಭಾವ ಕೋಲಾಹಲ ‘ಕಾಣದ ಕಡಲಿಗೆ’ ಎಂಬ ಕವಿತೆಯಲ್ಲಿ ಪಡಿಮೂಡಿದೆ. ಕಡಲ ಒಡಲಿಂದೇಳುವ ತೆರೆಗಳಂತೆ ಕವಿ ಹೃದಯ ಮನಗಳಲ್ಲಿ ಭಾವದಲೆಗಳೇಳುತ್ತವೆ. ಕವಿ ಕಾವ್ಯಗಳಲ್ಲಿ ಕಡಲ ವರ್ಣನೆಯನ್ನೋದಿ, ನೋಡಿದವರಿಂದ ಅದರ ವರ್ಣನೆಯನ್ನು ಕೇಳಿ ಆನಂದಪರವಶ ನಾಗಿದ್ದಾನೆ, ತನ್ನ ಕಲ್ಪನೆ ಪ್ರತಿಭೆಗನುಗುಣವಾಗಿ ಅದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಂಡಿದ್ದಾನೆ; ಆದರೂ ಅವನಿಗೆ ತೃಪ್ತಿಯಿಲ್ಲ.

ಒಲಿದ ರಮಣಿ ದೂರವಿರಲು,
ಅವಳ ಚಿತ್ರಪಟವ ಕಂಡು,
ಅವಳ ದನಿಯ ನೆನೆಸಿಕೊಂಡು,
ಎದೆಯು ತಣಿವುದೆ?
ಅವಳ ನೆನಪು ತರುವ ಕುರುಹು
ಮನವ ಕೆಣಕದೆ?

ಕಡಲನ್ನು ಕಾಣುವ, ಅದರ ಚೆಂದ ಸೊಬಗುಗಳನ್ನು ಸವಿಯುವ, ಅದರ ಘನ ಗಾಂಭೀರ್ಯ ಗುಣ್ಪು ಅಸೀಮತೆಗಳಿಗೆ ಸೋಲುವ, ಅದನ್ನು ಕಣ್ಣಲ್ಲಿ ಬಾಚಿಕೊಂಡು, ಮನದಲ್ಲಿ ತುಂಬಿ ಕೊಂಡು ತಣಿಯುವ ಹಂಬಲ ಈ ಉಪಮೆಯಲ್ಲಿ ಪ್ರತಿಬಿಂಬಿಸುತ್ತದೆ.

ಕುವೆಂಪು ಅವರಂತೆ ರೈತರ ಕಷ್ಟಕಾರ್ಪಣ್ಯಗಳನ್ನು ಬಲ್ಲ, ಅವರ ತ್ಯಾಗಯೋಗಗಳನ್ನು ಕಣ್ಣಾರೆ ಕಂಡಿರುವ, ಅವರ ಬಗ್ಗೆ ಸಹಾನುಭೂತಿ ಅನುಕಂಪೆಗಳನ್ನುಳ್ಳ ಕವಿಗಳು ಭಾರತೀಯ ಸಾಹಿತ್ಯದಲ್ಲಿಯೆ ವಿರಳ; ಕನ್ನಡ ಸಾಹಿತ್ಯದಲ್ಲಂತು ಇಲ್ಲವೇ ಇಲ್ಲ; ಅವರಂತೆ ರೈತರ ಸ್ಥಿತಿಗತಿಗಳ ಬಗ್ಗೆ ಸ್ಪಂದಿಸುವ ಕವಿ ಮತ್ತೊಬ್ಬನಿಲ್ಲ. ಅವರನ್ನು ನೆನೆದಾಗ ಅವರು ಭಾವಾವಿಷ್ಟ ರಾಗುತ್ತಾರೆ; ಭಾವತೀಕ್ಷ್ಣತೆ ಉಪಮಾಮಾಲೆಯಾಗಿ ಹೊರ ಹೊಮ್ಮುತ್ತದೆ.

ನಮ್ಮ ಕೈಗಳೆ ಭೂಮಿಗಿಳಿದಿಹ ಕಲ್ಪವೃಕ್ಷಗಳು,
ನಮ್ಮ ಕಾಲುಗಳಿಳೆಗೆ ಬಂದಿಹ ಕಾಮಧೇನುಗಳು;
ಕೆಸರು ದೂಳುಗಳಿಂದ ಕೆದರಿದ
ನಮ್ಮ ತಲೆ ವೈಕುಂಠವು!
ಬಿಸಿಲ ಬೇಗೆಗೆ ಬೆಂದು ಕಂದಿಹ
ನಮ್ಮ ಎದೆ ಕೈಲಾಸವು!
ನಮ್ಮ ಬೆವರಿಳಿದಿಳೆಗೆ ಬೀಳುವ
ವರೆಗು ಗಂಗೆಯು ಬತ್ತಳು;
ನಮ್ಮ ಕರ್ಮದ ಮಂತ್ರದಿಂದಲೆ
ಬರದ ಮಾರಿಯು ಸತ್ತಳು;
ನಮ್ಮ ಕಂಗಳ ಕಾಂತಿಯಿಂದಲೆ
ದಿನವು ಹರಿವುದು ಕತ್ತಲು!

ಹೀಗೆಯೇ ಉಪಮಾ ಪ್ರವಾಹ ಮಳೆಗಾಲದ ನಿರ್ಝರಿಣಿಯಂತೆ ಧುಮು ಧುಮುಕುತ್ತ, ಮುಂದುವರಿಯುತ್ತದೆ. ರೈತರೆ ಚಲಿಸುವ ಗುಡಿಗಳೆಂದು, ಕುಳದ ಗೆರೆಯ ಪಯಣ ಮುಕ್ತಿ ಮಾರ್ಗವೆಂದು,

ಮಣ್ಣಿನಿಂದ ಅನ್ನತೆಗೆವ ನಮ್ಮ ಕುಳಗಳು
ಸಗ್ಗವನ್ನು ದಿನವು ತೆರೆವ ಕೀಲಿ ಕೈಗಳು!

ಎಂದು ಕೊಂಡು ಕೊನೆಯುತ್ತಾನೆ. ಈ ಉಪಮೆಗಳಲ್ಲಿ ಭಾವುಕತೆ ತುಂಬಿ ತುಳುಕುತ್ತಿದ್ದರೂ, ವಾಸ್ತವಿಕತೆಯೇ ಅದರ ಉಸಿರೆಂಬುದನ್ನು ಮರೆಯುವಂತಿಲ್ಲ.

‘ಮಳೆಯ ಬಿಲ್ಲ ಕರಗಿಸಿಂತು ನಿನ್ನ ಕಡೆದನೆ’? ಎಂಬ ಸಾಲನ್ನೋದಿದಾಗ ನವಿಲಿನ ಚೆಲುವು ಓದುಗರ ಹೃದಯಗಳನ್ನು ಪುಳಕಗೊಳಿಸುತ್ತದೆ; ಅವು ಸಾರ್ಥಕ ಪರಸ್ಪರೋಪ ಮಾನಗಳಾಗಿ ಸೃಷ್ಟಿಯ ಅದ್ಭುತವನ್ನು ಬಗೆಗಣ್ಣಿಗೆ ಹೊಳೆಯಿಸುತ್ತವೆ. ‘ಎನ್ನಿನಿಯಳು’ ಎಂಬ ಕವಿತೆಯಲ್ಲಿ ಮಾಲೆಗೊಂಡಿರುವ ಮೂರು ಉಪಮೆಗಳು ಹೆಣ್ಣಿನ ಎಳನಗೆಯ ಕಮನೀಯತೆಯನ್ನು ಪ್ರಕಾಶ ಪಡಿಸುತ್ತವೆ. ಕವಿಯ ಬಗೆಗಣ್ಣಿಗೆ ಮಳೆಬಿಲ್ಲು ‘ಬಾನ್ದೇ ವಿಯಾಂತ ಮಣಿಹಾರ’ದಂತಿದೆ; ‘ಚೆಲುವಿಕೆಯ ಚೈತನ್ಯ ಬಿಲ್ಲಾ’ದಂತಿದೆ; ‘ವೈಣಿಕನು ಮೀಟುತಿಹ ಬೀಣೆ’ಯಂತಿದೆ. ‘ತಿಂಡಿ’ಯನ್ನು ಯಾಚಿಸುವ ಮಗು ತಾಯಿಗೆ ಅನೇಕ ಆಶೆಗಳನ್ನು ತೋರಿಸುತ್ತದೆ :

ಮೂಡುತಿಹ ಚಂದಿರನ ಸೆರೆಹಿಡಿದು ತಂದು
ಕೂಡುವೆನು ನಿನ್ನ ಮಾಂಗಲ್ಯದಲಿ ಇಂದು
ಮಿಣುಕುತಿಹ ತಾರೆಗಳನೆಲ್ಲವನು ಕೊಯ್ದು
ಮಣಿಮಾಲೆಗಳ ಮಾಡುವೆನು ನಿನಗೆ ನೇಯ್ದು;
ಮಳೆ ಬಿಲ್ಲುಗಳನೆಲ್ಲ ಹಿಡಿದೆಳೆದು ತಂದು
ನೇಯುವೆನು ನಿನಗೊಂದು ಸೀರೆಯನು ಇಂದು;
ಏಳು ಕಡಲನು ದಾಟಿ, ಏಳು ಗಿರಿಗಳ ನೆಗೆದು,
ಕೂದಲಿಗೆ ತಹೆ ತೈಲದಂಬುಧಿಯ ಮೊಗೆದು

ದೊಡ್ಡವರ ದೃಷ್ಟಿಯಿಂದ ಅತ್ಯುಕ್ತಿಗಳಂತೆ ಅತಿಶಯೋಕ್ತಿಗಳಂತೆ ಕಾಣುವ ಈ ಉಪಮೆಗಳು ಮಗುವಿನ ದೃಷ್ಟಿಯಿಂದ ಸ್ವಭಾವೋಕ್ತಿಗಳಾಗುತ್ತವೆ; ಆ ಸಾಹಸ ಕೃತ್ಯಗಳು ಮಗುವಿಗೆ ಅಸಾಧ್ಯವೆಂದು ತೋರುವುದೇ ಇಲ್ಲ. ಈ ಉಕ್ತಿಗಳಲ್ಲಿ ಅವನ ಮುಗ್ಧತೆ, ಹೃದಯ ನೈರ್ಮಲ್ಯ ಹಾಗೂ ಮಾತೃಪ್ರೇಮಗಳು ರಗರಗಿಸುತ್ತವೆ, ತುಂಬಿ ತುಳುಕುತ್ತವೆ; ಮೇಲಾಗಿ ಮಗು ತಾಯಿಗೆ ಮಾಡಿಸುವ ಒಡವೆಗಳು ಎಂಥ ಅಮೂಲ್ಯವಾದುವೆಂಬುದನ್ನೂ ಅಲೌಕಿಕ ಸೌಂದರ್ಯವರ್ಧನಕಾರಿಗಳೆಂಬುದನ್ನೂ ಗಮನಿಸಬೇಕಾಗಿದೆ.

‘ಸಮುದ್ರ ಲಂಘನ’ವೆಂಬ ಕಿರುಕಾವ್ಯವನ್ನು ಕುವೆಂಪು ರಚಿಸಿದ್ದು ಸಹ ‘ಕೊಳಲು’ ಪ್ರಕಟವಾದ ಸಮಯದಲ್ಲಿಯೇ. ಯುದ್ಧಕ್ಕೆ ಮುನ್ನ ಸೈನಿಕ ಕಾಲೇಜಿನಲ್ಲಿ ಯೋಧ ಪಡೆಯುವ ತರಬೇತಿ ಹಾಗೂ ಅಭ್ಯಾಸಗಳಂತಿದೆ ಅದು. ಮಹಾಕಾವ್ಯ ರಚನೆಗೆ ಸಿದ್ಧತೆಯೆಂಬಂತಿದೆ ಈ ಕಾವ್ಯದಲ್ಲಿ ಕವಿ ನಡೆಸಿದ ಸಾಧನೆ. ಕಾವ್ಯಕ್ಕೆ ಉಪಮೆ ಜೀವಾತುವೆಂಬುದಕ್ಕೆ ಈ ಕಾವ್ಯ ಅನೇಕ ನಿದರ್ಶನಗಳನ್ನೊದಗಿಸುತ್ತದೆ.

[1] ಸೀತಾನ್ವೇಷಣ ಕಾತರರಾದ ಕಪಿವೀರರು ಕಾನನ ನಿಬಿಡ ಪರ್ವತ ಶಿಖರದಲ್ಲಿ ಚೆಲ್ಲಾಟವಾಡುತ್ತಿದ್ದಾಗ, ಅಂಗದನ ಕರೆಕೇಳಿ, ಆತನಿದ್ದೆಡೆಗೆ ನುಗ್ಗುತ್ತಾರೆ.

ಮಲೆಯನಾಡಿನ ಗಿರಿಯ ಬನದಲಿ ಬೇಟೆಗಾರನ ಕರೆಯ ನಾಲಿಸೆ
ಬಳಿಯ ಹಳ್ಳಿಯ ಬೇಟೆಗಾರರು ನುಗ್ಗಿ ಬರುವಂತೆ;
ಬೆಟ್ಟದಲಿ ಕಡಿದಾದ ಬಂಡೆಯ ಸೆರಗಿನಲಿ ಜೋಲುತಿಹಹಲ್ಲೆಗೆ
ಕವಿವ ಜೇನ್ನೊಣದಂತೆ, ಬಳಸುತ ಕವಿದು ಕಿಕ್ಕಿರಿದು;
ಗಗನ ಚುಂಬಿತ ಸಹ್ಯಪರ್ವತ ಶೃಂಗದೆಡೆ ಬಿರುಗಾಳಿ ಬೀಸಲು,
ಮುಂಗಾರ ಕಾರ್ಮುಗಿಲ ಮೊತ್ತವು ಮುತ್ತು ವಂದದಲಿ
ಮುತ್ತಿದರು, ಬಳಸಿದರು, ಕವಿದರು, ಕಿಕ್ಕಿರಿದರಂಗದನ ಸುತ್ತಲು.

ಕಪಿವೀರರ ಒಂದೊಂದು ಕ್ರಿಯೆಯನ್ನು ಮೂರು ಉಪಮೆಗಳ ಮೂಲಕ ತುಂಬ ಸ್ವಾರಸ್ಯವಾಗಿ, ಔಚಿತ್ಯಪೂರ್ಣವಾಗಿ ಉತ್ತೇಜಿಸಿ, ಅವರ ಕರ್ತವ್ಯ ಪ್ರಜ್ಞೆ ಪ್ರಭುನಿಷ್ಠೆ, ಏಕೋಭಾವ ಹಾಗೂ ಉತ್ಸಾಹಶೀಲಗಳನ್ನು ಅಭಿವ್ಯಕ್ತಗೊಳಿಸಲಾಗಿದೆ. ಆ ವೀರ ಸಮೂಹ ದಳಪತಿಯ ಬೆಸನಕ್ಕೆ ಹಾತೊರೆಯುತ್ತ, ‘ಬಿಡುಗಣ್ಣರಂದದಲಿ, ಚಿತ್ರ ಸಭೆ’ಯಂತೆ ಮಿಡುಕದೆ ಕುಳಿತಿತ್ತಂತೆ. ಅಂಗದ ಮಾತಾಡಲೆದ್ದಾಗ, ಅವನ ‘ಮಿಂಚು ವಕ್ಷಿಗಳು….ಮಿಣುಕುತಿಹ ತಾರೆಗಳತೆರದಲಿ ಬೆಳಕ ಬೀರಿದುವು!’ ವೀರರ ಜಯಕಾರದಿಂದ ಗಿರಿಗಳ ಗಬ್ಬ ಕಂಪಿಸುತ್ತದೆ. ಬಣ್ಣ ಬಣ್ಣದ ಹೂ ತಳಿರುಗಳಿಂದ ಸಾಹಸಯಾತ್ರಿ ಆಂಜನೇಯನನ್ನು ಗೆಳೆಯರು ಅಲಂಕರಿಸಿದಾಗ ‘ಬಗ್ಗಿಸುವ ಕೋಗಿಲೆಯನೆಳೆಯುತ, ಸುಗ್ಗಿಯಲ್ಲಿ ಪಲ್ಲವಿಸಿ ಹಿಗ್ಗುವ ತರುಣ ಮಾಮರದಂತೆ’ ಮಾರುತಿಯ ಮೈಮೆರೆಯುತ್ತದೆ. ಆಕಾಶಕ್ಕೆ ನೆಗೆದ ಹನುಮಂತ ‘ರೆಂಕೆಯಿಹ ಚೂತ ತರುವಂದದಿ’ ಕಾಣುತ್ತಾನೆ. ಆಕಾಶವಿಹಾರಿ ಮಾರುತಿಯ ಸೊಂಟವನ್ನು ‘ಮೋಡಗಳು ಕಟಿಬಂಧ ದಂದದಿ’ ಸುತ್ತುತ್ತವೆ; ‘ಆಭರಣಗಳ ಕಾಂತಿಯನ್ನು ಚೆಲ್ಲಿ’ ಮಿಂಚುಗಳು ಹೊಳೆಯುತ್ತವೆ;

ಮಲೆನಾಡ ಬನಗಳಲಿ ಗೋಪರು ಕಳಿತ ಹಣ್ಣುಗಳಿಡಿದ ನೇರಿಲ
ಮರವನೇರಲುಗಿಸಲು ಹಣ್ಣುಗಳುದುರುವಂದದಲಿ

ಅವನ ಉಡ್ಡಯನದ ರಭಸಕ್ಕೆ ಖಗಮೃಗಗಳು ಬೆದರಿದುವಲ್ಲದೆ, ನಿಸರ್ಗದಲ್ಲಿ ತಳಮಳ ವುಂಟಾಗುತ್ತದೆ; ಲಂಘನಾವಸರದಲ್ಲವನು ‘ಕರ್ಬೊಗೆಯ ಕಾರುವ ಫಿರಂಗಿಯು ಸಿಡಿದ ಗುಂಡೋ’ ಎಂಬಂತೆ ಕಾಣುತ್ತಾನೆ; ಸಿಂಹಿಕಾಗ್ರಹಣದಿಂದ ಮುಕ್ತನಾದ ಹನುಮಂತ ‘ತುಂಡು ಮೋಡವು ನೀಲನಭದೊಳಗೈಕ್ಯ ಹೊಂದುತಲಡಗುವಂದದಲಿ’ ಮಾಯವಾಗುತ್ತಾನೆ. ‘ಸಂಜೆವೆಣ್ಣಿನ ಹಣೆಯೊಳೆಸೆಯುವ ಕುಂಕುಮದ ಪೆರ‌್ಬೆ’ಟ್ಟಕ್ಕೆ ಬೈಗುಹೊತ್ತನ್ನು ಕವಿ ಹೋಲಿ ಸುವಾಗ, ಸಂಜೆಗಗನದ ಚಿತ್ರವೂ ಅದರ ಸೌಂದರ್ಯವೂ ಓದುಗರ ಕಣ್ಣಿಗೆ ಕಟ್ಟಿದಂತಾಗುತ್ತದೆ.

ವನಮಾಲೆಗಳ ಧರಿಸಿ ಮಂಜುಳನಾದದಿಂದೋಡುತಿಹ ತುಂಗೆಯ
ಮೇಲೆ ಮೀಂಗುಲಿ ತನ್ನ ಬೇಂಟೆಯ ನೋಡುತಾಗಸದಿ
ಬರೆದ ಚಿತ್ತರದಂತೆಯಲುಗದೆ ನಿಲ್ಲುವಂದದಿ, ಚಲಿಸಲಾರದೆ –
ಯಂತರಾಳದಿ ನಿಂತು, ತನ್ನನು ಬಿಗಿದ ಶಕ್ತಿಯನು
ತಿಳಿಯಲಾರದೆ, ಮುಂದುಗಾಣದೆ, ರಾಮನಾಮವ ಜಪಿಸಿ, ಬಲ್ಮೆಯ
ಬೇಡುತಿರೆ, ಕೆಳಗೆಳೆಯತೊಡಗಿತ್ತು ಶಕ್ತಿ ಜಟ್ಟಿಯನು

ಗಾತ್ರದಲ್ಲಲ್ಲದಿದ್ದರೂ ಗುಣದಲ್ಲಿ ಸತ್ವದಲ್ಲಿ ಮಹೋಪಮೆಯಂತೆ ತೋರುವ ಈ ಉಪಮೆ ಸಿಂಹಿಕಾಗ್ರಹಣ ಸಂದರ್ಭದ ಹನುಮಂತನ ಸ್ಥಿತಿಯನ್ನು ಮನಮುಟ್ಟಿಸುತ್ತದೆ.

ಪ್ರಾರಂಭದ ಸಾಹಿತ್ಯ ಸೃಷ್ಟಿಯಿಂದಲೇ ಮೊಗದೋರಿದ ಈ ಉಪಮಾ ವೈಭವ ಮುಂದಿನ ಸಾಹಿತ್ಯದಲ್ಲಿ ಹಾಗೂ ಮಹಾಕಾವ್ಯದಲ್ಲಿ ಹೇಗೆ ವಿಶ್ವರೂಪಿಯಾಗಿ, ಭವ್ರೋನಿತ್ಯನೂತನವಾಗಿ, ಕಾವ್ಯದ ಜೀವಧಾತುವಾಗಿ ವಿಕಾಸಗೊಳ್ಳುತ್ತದೆಂಬುದನ್ನು ಪರಾಮರ್ಶಿಸ ಬೇಕಾದರೆ ಪ್ರತ್ಯೇಕ ವಿಸ್ತೃತಾಧ್ಯಯನ ಅತ್ಯಗತ್ಯ. ಕವಿಯ ಲೌಕಿಕ ಜೀವನ ಕಾವ್ಯ ಜೀವನಗಳು ಅದ್ವೈತ ಸ್ಥಿತಿಯನ್ನು ತಲುಪಿ, ಪ್ರತಿಭೆ ಸ್ಥಾಯೀ ರೂಪವನ್ನು ಪಡೆದಾಗ ಮಾತ್ರ ಅಭೂತ ಪೂರ್ವ ಉಪಮಾ ಸೃಷ್ಟಿ ಸಾಧ್ಯವಾಗುತ್ತದೆ.

ಅನಂತವೂ ಅನವರತ ವಿಕಾಸಶೀಲವೂ ಆದ ಸೃಷ್ಟಿಯಂತೆ ಉಪಮಾ ಪ್ರಪಂಚವೂ ಅನಂತವಾದುದು. ಅರಿವಿಗೆ ನಿಲುಕದ ಈ ಸೃಷ್ಟಿಯ ವಸ್ತುಗಳು, ತತ್ತ್ವಗಳು, ನಾಮರೂಪಗಳು, ಭಾವಾಲೋಚನೆಗಳು ಅದ್ಭುತ, ಅನಂತ ಹಾಗೂ ವೈವಿಧ್ಯಮಯ. ಉಪಮಾ ಪ್ರಪಂಚವೂ ಸೃಷ್ಟಿಯಷ್ಟೇ ಅದ್ಭುತವಾದುದು. ಉಪಮೆಗಳನ್ನು ಮೊಗೆದು ಕೊಂಡಂತೆಲ್ಲ, ಚಿಲುಮೆಯ ಜಲದಂತೆ, ಸೃಷ್ಟಿಯ ಜಲವೂ ಬತ್ತದೆ ನಿರಂತರವಾಗಿ ಉಕ್ಕಿ ಹರಿಯುತ್ತದೆ. ಜಗತ್ತಿನ ಮಹಾಕವಿಗಳು ಸೃಷ್ಟಿಯನ್ನು ಸೂರೆಗೊಂಡು ತಂತಮ್ಮ ಉಪಮಾ ಪ್ರಪಂಚಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಆ ಎಲ್ಲ ಉಪಮೆಗಳ ರೂಪ ಸ್ವರೂಪ ಉಗಮ ವಿಧಾನಗಳು ಒಂದೆಯಾದರೂ, ಸೃಷ್ಟಿಕರ್ತರ ಮನೋಧರ್ಮ ಸಂಸ್ಕಾರಾಭಿರುಚಿ ಪರಿಸರ ಪರಿಸ್ಥಿತಿಗಳಿಗನು ಗುಣವಾಗಿ ಹಲಕೆಲವು ವ್ಯತ್ಯಾಸಗಳು ಮೊಗದೋರಬಹುದು. ಉದಾಹರಣೆಗೆ ಪಾಶ್ಚಾತ್ಯ ಕವಿ ಸುಂದರಿಯ ತುಟಿಗಳನ್ನು ಗುಲಾಬಿಗೆ ಹೋಲಿಸಿದರೆ, ಪೌರ್ವಾತ್ಯ ಕವಿ ತೊಂಡೆಹಣ್ಣಿಗೆ ಹೋಲಿಸಬಹುದು. ಜಡೆಯ ಹೋಲಿಕೆಗಳು ಭಾರತೀಯ ಕವಿಗೆಷ್ಟು ಮುಖ್ಯವೋ ಆಂಗ್ಲ ಕವಿಗಷ್ಟೇ ಅಮುಖ್ಯವಾಗಬಹುದು. ಸ್ತ್ರೀವದನದಲ್ಲಿ ಚಂದ್ರನ ಸೌಂದರ್ಯವನ್ನು ಕಾಣುವ, ನಕ್ಷತ್ರಗಳನ್ನು ಕಣ್ಣುಗಳೊಡನೆ ಹೋಲಿಸುವ, ಭಾವಗಳನ್ನು ಹಾರುವ ಹಕ್ಕಿಗಳೊಡನೆ ತಳುಕು ಹಾಕುವ ಪರಿಪಾಠ ಜಗತ್ತಿನ ಎಲ್ಲ ಕವಿಗಳಲ್ಲಿಯೂ ಕಾಣುವಂತದ್ದಾಗಿದೆ.

ಎಲ್ಲ ಕವಿಗಳು ಒಂದೇ ರೀತಿಯಲ್ಲಿ ಯೋಚಿಸುವುದರಿಂದ, ಕೆಲವೊಮ್ಮೆ ಪರಸ್ಪರಾ-ಭಿನ್ನವಾದ ತದ್ವತ್ತಾಗಿರುವ ಉಪಮೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು; ಅವುಗಳ ಬಾಹ್ಯರೂಪ ಒಂದೇ ತೆರನಾಗಿದ್ದರೂ ಅವು ಸತ್ವದಲ್ಲಿ ಸಾದೃಶ್ಯದಲ್ಲಿ ತೀರ ಭಿನ್ನವಾಗಿರ ಬಹುದು. ಉಪಮೆಗಳೂ ಭಾಷೆಯಿಂದ ಭಾಷೆಗೆ, ಊರಿಂದೂರಿಗೆ. ಪ್ರಾಂತ್ಯದಿಂದ ಪ್ರಾಂತ್ಯಕ್ಕೆ, ಗೋಲದಿಂದ ಗೋಲಕ್ಕೆ ವಲಸೆ ಹೋಗುವುದುಂಟು. ಭಾಷಾಂತರ, ಅನ್ಯಭಾಷಾಕೃತಿಗಳ ಅಧ್ಯಯನ, ಭಿನ್ನ ಭಿನ್ನ ಜನಾಂಗಗಳ ಸಂಪರ್ಕ, ಇವು ಈ ವಲಸೆಗೆ ಮುಖ್ಯ ಕಾರಣಗಳು.

ಕಾವ್ಯ ಸೌಂದರ್ಯ ಸಂವರ್ಧನೆಯೆ ಉಪಮೆಗಳ ಮುಖ್ಯ ಗುರಿ; ಕಾವ್ಯ ಸೌಂದರ್ಯಾ ಸ್ವಾದನೆಗೆ ಹಾಗೂ ಕಾವ್ಯಾಂಶಗಳ ಗ್ರಹಿಕೆಗೆ ಅವು ತುಂಬ ನೆರವಾಗುತ್ತವೆ, ಭಾವಾನುಭವ ರಸಾಭಿವ್ಯಂಜನಕ್ಕೆ ಅವು ಸಹಾಯವಾಗುತ್ತವೆ, ಜತೆಗೆ ಪಾತ್ರಗಳ ಗುಣ ಸ್ವಭಾವಗಳ ಮೇಲೆ ಬೆಳಕು ಚೆಲ್ಲುತ್ತವೆ; ಕವಿಯ ಮನೋಧರ್ಮಕ್ಕೆ ಕನ್ನಡಿ ಹಿಡಿಯುತ್ತವೆ; ಅವನ ಸೃಜನಶೀಲ ಪ್ರತಿಭೆಗೆ ಒರೆಗಲ್ಲಾಗುತ್ತವೆ; ಭಾಷೆಯ ಸತ್ವವನ್ನು ಪ್ರತಿಬಿಂಬಿಸುತ್ತವೆ. ಒಂದೇ ಒಂದು ಉಪಮೆ ನಾನಾ ಸಂದರ್ಭಗಳಲ್ಲಿ ಬಳಕೆಗೊಂಡು, ಪರಸ್ಪರ ಭಿನ್ನವಾದ ಭಾವಾನುಭವಗಳನ್ನು ಹೊರಹೊಮ್ಮಿಸುವ ಸಂಭವವೂ ಉಂಟು. ಮಾನವನ ಮೂಲ ಪ್ರಜ್ಞೆಯನ್ನರಿಯಬೇಕೆನ್ನು ವವರಿಗೆ, ವಿಶ್ವಪ್ರಜ್ಞೆಯನ್ನು ರೂಪಿಸಬೇಕೆನ್ನುವವರಿಗೆ, ಮನೋವಿಜ್ಞಾನಿಗಳಿಗೆ, ಜನಾಂಗ ತಜ್ಞರಿಗೆ ಭಾಷಾಪರಿಣತರಿಗೆ, ಶೈಲಿ ಶಾಸ್ತ್ರಜ್ಞರಿಗೆ, ಸಾಂಸ್ಕೃತಿಕ ಇತಿಹಾಸಕಾರರಿಗೆ ಉಪಮೆಗಳ ಅಧ್ಯಯನದಿಂದ ಅಪಾರ ಪ್ರಯೋಜನ ಲಭಿಸುತ್ತದೆ. ಇವುಗಳಿಗೆ ನಿದರ್ಶನಗಳಾಗಿ, ಶ್ರೀರಾಮಾಯಣದರ್ಶನಂ ಮಹಾಕಾವ್ಯದಿಂದ ಕೆಲವು ಉಪಮೆಗಳನ್ನು ಉಲ್ಲೆಖಿಸಬಹುದು:

ನೆತ್ತರೊಳ್ ಮಿಂದು ಕೆಂಗಾವಿಯಂ ತೊಟ್ಪೆಸೆವ
ಸಾಕ್ಷಾತ್ ಮೃತ್ಯುವಿಂ ದೀಕ್ಷೆಯನ್ನಾಂತ, ತಾಂತ್ರಿಕ
ತಪಸ್ಸಾಧನಾಸಕ್ತ ರಕ್ತಾಜಿನಾಭೀಳ
ಕಾಪಾಲಿಕನ ವೋಲ್
ಶ್ರೀರಾ : ಲಂಸಂ ೧೩/೪೦-೪೩
ಚಿಃ! ಕಡಲ್ಗಿದಿರ್
ಪನಿಗೇಂ ಪ್ರದರ್ಶನಂ?
ತನ್ನ ತಾನ್
ಇಲ್ಲಗೈವುದೆ ಎಲ್ಲ ಸಾಧನೆಗೆ ಕೊನೆಯ ಗುರಿ

ಶ್ರೀರಾ : ಶ್ರೀಸಂ : ೧೨/೨೮೪-೨೮೮
ಸೂರ್ಯನಾತಪಕೆ ಕಾಲದ ತಪಂ ನೆರವಾಗಲಾ
ಬಜ್ಚರತನಂ ಬರ್ಪುದೊಯ್ಯನಿದ್ದಲಿಗೆನಲ್
ಶ್ರೀರಾ : ಕಿಸಂ ೮/೧೮೫-೧೮೬
ಕುಳಿರ್ಗಾಳಿ ಬೀಸಲ್ಕೆ ತಳಿರ ತುದಿಯೊಳಗಿರ್ದು
ತಳಿಸುವಿರ್ಪನಿ ತರತರನೆ ಕಂಪಿಸುವ ತೆರದಿ
ಶ್ರೀರಾ : ಅಸಂ-೨/೨೩೫-೨೩೬
ಮಂತ್ರಶಕ್ತಿಗೆ ಸಿಲ್ಕಿ ಹಾವಾಡಿಗಂ ಬರೆದ
ಮಂಡಲದ ತಡೆಯೊಳಗೆ ಬುಸುಗುಟ್ಟುವಹೀಂದ್ರನೊಲ್
ಶ್ರೀರಾ : ಅಸಂ-೩/೪೪೩-೪೪೪
ಕಾರ್ದ ವಿಷಮಂ ತಾನೆ ಮರಳಿ ಪೀರಲ್ಕೆಳಸಿ
ಬಳಿ ಸಾರ್ವ ನೀಲನಾಗಿನಿಯಂತೆ

ಶ್ರೀರಾ : ಅಂಸ-೩/೪೪೫-೪೪೬
ಹಾಳುಹಂಪೆಯ ಹೊಕ್ಕ ಕನ್ನಡಿಗರಂತಾದರೈ
ಶ್ರೀರಾ : ಅಸಂ:೫/೧೮೮-೧೮೯

ಉಪಮೆಗಳ ವ್ಯವಸ್ಥಿತ ಅಧ್ಯಯನದಿಂದ ಹಲವು ಪ್ರಯೋಜನಗಳುಂಟೆಂಬುದು ಮೇಲಿನ ವಿವರಣೆಯಿಂದ ಸ್ಪಷ್ಟವಾಗುತ್ತದೆ.

ಸಂಗ್ರಹಣ, ವರ್ಗೀಕರಣ, ವಿಶ್ಲೇಷಣ, ತೋಲನ ಮತ್ತು ವಿಮರ್ಶನ – ಈ ಐದೂ ಅಧ್ಯಯನದ ಸೋಪಾನಗಳು. ವೈಜ್ಞಾನಿಕ ಅಧ್ಯಯನದಲ್ಲಿ ವರ್ಗೀಕರಣಕ್ಕೆ ಪ್ರಥಮ ಪ್ರಾಶಸ್ತ್ಯ ಅನಿವಾರ್ಯ; ಮುಂದಿನ ಸೋಪಾನಗಳಿಗೆಲ್ಲ ಅದೇ ಆಧಾರ. ಆದರೆ ವೈವಿಧ್ಯ ಬಾಹುಳ್ಯ ಗಳಿಂದಾಗಿ ಉಪಮೆಗಳ ವರ್ಗೀಕರಣ ನಿಶಿತಮತಿಗೂ ಸವಾಲಾಗುತ್ತದೆ. ಸಂಕೀರ್ಣತೆಯಲ್ಲಿ, ವೈವಿಧ್ಯದಲ್ಲಿ, ವಿಸ್ತಾರದಲ್ಲಿ ಕುವೆಂಪು ಅವರ ಉಪಮಾ ಪ್ರಪಂಚ ವಿಶಿಷ್ಟವಾದದ್ದು. ಆಲಂಕಾರಿಕರ ಉಪಮಾ ವಿಭಜನೆ ಇಲ್ಲಿಗೆ ಸುಸಂಗತವೂ ಅಲ್ಲ, ಉಪಾದೇಯವೂ ಅಲ್ಲ.[2] ಒಂದಾನೊಂದು ಉಪಮೆ ಎರಡು ಮೂರು ವರ್ಗಗಳಲ್ಲಿ ಮೈಚಾಚಿಕೊಂಡಿರಬಹುದಾದ ಸಂಭವವಿರುವುದರಿಂದ, ಅದರ ಬಗ್ಗೆ ನಿಶ್ಚಿತ ಸ್ಥಾನ ಕಲ್ಪಿಸಲು ಸಾಧ್ಯವಾಗಲಾರದು. ಉದಾಹರಣೆಗೆ,

ದೂರದರ್ಶಕ ಯಂತ್ರದಕ್ಷಿಯೊಳ್ ಕಣ್ಣಿಟ್ಟು
ಗಗನ ವಿಜ್ಞಾನಿ ತಾಂ ರಾತ್ರಿಯಾಕಾಶದಲಿ
ಕಾಣ್ಬೊಂದು ತಾರಾಗರ್ಭದಂತೆ
ಶ್ರೀರಾ : ಅಸಂ-೧/೨೭೩-೨೭೫

ಇದು ವಿಜ್ಞಾನೋಪಮೆಯೂ ಆಗಬಹುದು, ನಿಸರ್ಗೋಪಮೆಯೂ ಆಗಬಹುದು. ವರ್ಗೀಕರಣದಲ್ಲಿ ಸಾಮಾನ್ಯವಾಗಿ ಉಪಮಾನಗಳನ್ನು ಗಣನೆಗೆ ತೆಗೆದುಕೊಳ್ಳಬಹುದೇ ಹೊರತು, ಉಪಮೇಯಗಳನ್ನಲ್ಲ.

ಶೀಶೆಯಂ
ಕಾಯಿಸೆ ತಟಿಲ್ಲೆಂದು ಮುಚ್ಚಳಂ ಸಿಡಿವವೋಲ್
ಚಂಡವಾನರ ಗಂಡುಗಂಡಕೆ ಸಿಡಿಲ್ದುದಾ
ಬಂಡೆ
ಶ್ರೀರಾ : ಅಸಂ-೪/೮೯-೯೨
ಮಹಾತ್ರಿಶೂಲವನೆತ್ತಿ
ವಾಮಕರದಿಂ, ನುಗ್ಗಿದನು ರಾಮನಿರ್ದೆಡೆಗೆ,
ಕೋವಿಗಾರನ ಮೇಲೆ ಪಾಯ್ವಪೆರ್ಬುಲಿಯಂತೆ
ಗುಡುಗುಡಿಸಿ
ಶ್ರೀರಾ : ಶ್ರೀಸಂ-೨/೨೬೧-೨೬೪

ಮೇಲಣ ಉದಾಹರಣೆಗಳಲ್ಲಿ ಬಂಡೆ ಮತ್ತು ಕುಂಭಕರ್ಣ ಉಪಮೇಯಗಳು; ಮುಚ್ಚಳ ಮತ್ತು ಪೆರ್ಬುಲಿ ಉಪಮಾನಗಳು. ವಾಸ್ತವವಾಗಿ ಇಲ್ಲಿ ಎರಡೆರಡು ಉಪಮಾನ ಉಪಮೇಯಗಳಿವೆ; ಶೀಶೆ-ಕೋವಿಗಾರ, ಚಂಡವಾನರ-ರಾಮ. ಕೊನೆಯವೆರಡು ಜೋಡಿ ಪೋಷಕೋಪಮಾನ, ಪೋಷಕೋಪಮೇಯಗಳೆಂದು ಗ್ರಹಿಸುವುದಾದರೆ, ವರ್ಗೀಕರಣ ಸುಲಭವಾಗುತ್ತದೆ. ಈ ಸಂದರ್ಭದಲ್ಲಿ ಮೊದಲಿನವೆರಡು ಜೋಡಿ ಮಾತ್ರ ಮುಖ್ಯ ತಾನೆ. ಈ ಎರಡು ಉಪಮೆಗಳಲ್ಲಿಯೂ ವೀರರಸಾಭಿವ್ಯಂಜನೆಯೆ ಮುಖ್ಯ. ಇಂಥವನ್ನು ಮಿಶ್ರೋಪಮೆಗಳೆಂದು ಕರೆಯಬಹುದಾಗಿದೆ.

ಉಪಮೆಗಳನ್ನೆಲ್ಲ ಸ್ಥೂಲವಾಗಿ, ರೂಪೋಪಮೆ, ಗುಣೋಪಮೆ ಮತ್ತು ಭಾವೋಪಮೆಗಳೆಂಬುದಾಗಿ ವಿಂಗಡಿಸಬಹುದೆಂದು ಕುವೆಂಪು ಸೂಚಿಸುತ್ತಾರೆ.[3] ಲಕ್ಷ್ಮೀಶನ ಉಪಮೆಗಳನ್ನು ಪರಿಶೀಲಿಸುತ್ತ ಅವರು ಕೊಡುವ ಸೂಚನೆಗಳಿವು: ಪ್ರಕೃತಿ ಪ್ರಪಂಚದಿಂದ ಆಯ್ದು ಕೊಂಡವುಗಳೇ ಬಹುಸಂಖ್ಯಾಕವಾಗಿವೆ. ಬಹುಪರಿಚಿತವಾದ ವ್ಯವಹಾರ ಪ್ರಪಂಚದ ಉಪಮೆ ಗಳೂ ವಿಶೇಷವಾಗಿವೆ. ಉಳಿದವುಗಳಲ್ಲಿ ಕೆಲವು ಪುರಾಣ ಮತ್ತು ಪೂರ್ವಕಥಾ ಪ್ರಪಂಚಕ್ಕೆ ಸಂಬಂಧಪಟ್ಟವು; ಮತ್ತೆ ಕೆಲವು ಕಲ್ಪನಾಕಲ್ಪಿತವಾದುವು; ಇನ್ನೂ ಕೆಲವು ಜನಸಾಮಾನ್ಯ ಜೀವನಕ್ಕೆ ಸೇರಿದ ಗಾದೆಗಳಿಂದ ಮಾಡಿದುವಾಗಿವೆ; ಐತಿಹ್ಯ, ಧರ್ಮಶಾಸ್ತ್ರ, ಶೃಂಗಾರ ಇವುಗಳಿಗೆ ಸೇರಿದ ಉಪಮಾನಗಳೂ ಕೆಲವಿವೆ.[4] ಹೀಗೆ ಒಂಬತ್ತು ವರ್ಗಗಳಲ್ಲಿ ಲಕ್ಷ್ಮೀಶನ ಉಪಮೆಗಳ ಅಧ್ಯಯನ ನಡೆದಿದೆ.

‘ಉಪಮಾ ಸರಸ್ಸು’ ಎಂಬ ಗ್ರಂಥದ ಹೆಸರಿನಲ್ಲಿ ಕುವೆಂಪು ಅವರ ಉಪಮೆಗಳನ್ನು ಅಧ್ಯಯನ ಮಾಡಿರುವ ಕೃಷ್ಣಶೆಟ್ಟರು ಮುಂದೆ ಸೂಚಿಸಿರುವ ವರ್ಗಗಳನ್ನು ರಚಿಸಿ ಕೊಂಡಿದ್ದಾರೆ; ಆಧ್ಯಾತ್ಮಿಕೋಪಮೆಗಳು, ಐತಿಹಾಸಿಕೋಪಮೆಗಳು, ಔದ್ಯೋಗಿ ಕೋಪಮೆ ಗಳು, ಕಲೋಪಮೆಗಳು, ಕಾವ್ರೋಕ್ರೀಡೋಪಮೆಗಳು, ಕೌಟುಂಬಿಕೋಪಮೆಗಳು. ಗಗನೋಪಮೆಗಳು, ನಗರೋಪಮೆಗಳು, ನಾಗರೋಪಮೆಗಳು, ನೈಸರ್ಗೀಕೋಪಮೆಗಳು. ಪೌರಾಣಿಕೋಪಮೆಗಳು, ಮಾಲೋಪಮೆಗಳು ಮಿಶ್ರೋಪಮೆಗಳು, ವೈಜ್ಞಾನಿಕೋಪಮೆಗಳು, ಸಾಗರೋಪಮೆಗಳು – ಇಲ್ಲಿ ಒಟ್ಟು ೧೬ ವರ್ಗಗಳಿವೆ. ಮಾಲೋಪಮೆ ಮತ್ತು ಮಿಶ್ರೋಪಮೆ ಗಳು ರಚನೆಗೆ ಸಂಬಂಧಿಸಿದುವೇ ಹೊರತು, ಅರ್ಥವಸ್ತು ಗುಣ ಸ್ವರೂಪಗಳಿಗೆ ಸಂಬಂಧಿಸಿ ದುವಲ್ಲ. ಒಂದೇ ಒಂದು ಉಪಮೇಯವಿದ್ದು, ಸಾದೃಶ್ಯವುಳ್ಳ ಹಲವಾರು ಉಪಮಾನಗಳನ್ನು ಜೋಡಿಸಿದಾಗ ಮಾಲೋಪಮೆಯಾಗುತ್ತದೆ.[5]

ಜರೆಯ ಬೀಳ್ಕೊಳುವಂತೆ
ಜವ್ವನಂ, ನರೆಯನುಳಿವಂತೆ ಹರೆಯಂ, ಮತ್ತೆ
ಸಾಹಸಂ ಶಾಂತಿಯನಗಲ್ವವೋಲ್ ಸೀತೆಯುಂ
ರಾಮನುಂ ಸೌಮಿತ್ರಯುಂ ಬಿಟ್ಟು ಮುನಿಗಳಂ
ಪೊಕ್ಕರಯ್ ದುರ್ಗಮದ ದಂಡಕಾರಣ್ಯಮಂ
ಶ್ರೀರಾ : ಅಸಂ-೧೦/೯೨೯೬
ಮಿಶ್ರೋಪಮೆಯ ವಿಷಯ ಹಿಂದೆಯೇ ಬಂದಿದೆ.

ಕೆಲವರು ಇವುಗಳ ಜತೆಗೆ ಹಾಸ್ಯೋಪಮೆ, ಶೃಂಗಾರೋಪಮೆಗಳನ್ನೂ ಸೇರಿಸುವುದುಂಟು. ವಸ್ತುವೋ, ತತ್ತ್ವವೋ, ರಸವೋ, ಗುಣವೋ-ಹೀಗೆ ಯಾವುದಾದರೊಂದು ವೈಶಿಷ್ಟ್ಯವನ್ನು ಆಧಾರವಾಗಿಟ್ಟುಕೊಂಡು ಮಾಡಿದ ವರ್ಗೀಕರಣ ಕ್ರಮಬದ್ಧವಾಗುತ್ತದೆ; ಉಳಿದದ್ದೆಲ್ಲ ಅವೈಜ್ಞಾನಿಕವಾಗುತ್ತದೆ, ಕಲಬೆರಿಕೆಯಾಗುತ್ತದೆ. ಉಪಮಾನಗಳ ವಸ್ತುವನ್ನು ಮಾತ್ರ[6] ಗಮನದಲ್ಲಿರಿಸಿಕೊಂಡು ಉಪಮಾವರ್ಗಗಳನ್ನು ವಿಂಗಡಿಸಲಾಗಿದೆ: ೧. ನೈಸರ್ಗಿಕ, ೨. ಆಧ್ಯಾತ್ಮಿಕ, ೩. ಸಾಂಸಾರಿಕ, ೪. ಸಾಮಾಜಿಕ, ೫. ಐತಿಹಾಸಿಕ, ೬. ವೈಜ್ಞಾನಿಕ, ೭. ಪ್ರಾಣಿಸಂಬಂಧಿ, ೮. ಪೌರಾಣಿಕ, ೯. ಕ್ರೀಡಾತ್ಮಕ, ೧೦. ಕಾಲ್ಪನಿಕ, ೧೧. ವೃತ್ತಿಸಂಬಂಧಿ, ೧೨. ಸಂಕೀರ್ಣ ಅಥವಾ ಅವರ್ಗೀಯ ಉಪಮೆಗಳು. ಈ ವರ್ಗೀಕರಣವೇ ಪರಮಪವಿತ್ರ ವೆಂದಾಗಲಿ, ಅಂತಿಮವೆಂದಾಗಲಿ ಹೇಳಲಾಗದು. ಇದು ಅಸಮರ್ಪಕವೆಂದು ಹೇಳಲಿಕ್ಕೂ ಸಾಧ್ಯತೆಯಿದೆ. ಮತೀಯ ಹಾಗೂ ಧಾರ್ಮಿಕ ಉಪಮೆಗಳಿಗೆ ಈ ವರ್ಗೀಕರಣದಲ್ಲಿ ಜಾಗವಿಲ್ಲ ವೆಂಬ ಆಕ್ಷೇಪಣೆಗೂ ಅವಕಾಶವುಂಟು. ಅವನ್ನು ಆಧ್ಯಾತ್ಮಿಕವರ್ಗದಡಿ ತರುವುದೆಂದು ಯೋಚಿಸಲಾಗಿದೆ. ಮತ ಅಥವಾ ಧರ್ಮ ಅಧ್ಯಾತ್ಮಕ್ಕಿಂತಲೂ ವ್ಯಾಪಕವಾದದ್ದರಿಂದ, ಅಧ್ಯಾತ್ಮೋಪಮೆಗಳನ್ನು ಅವುಗಳೊಡನೆ ಲಗತ್ತಿಸಬಹುದಿತ್ತೆಂಬ ಅಭಿಪ್ರಾಯವೂ ಸಾಧುವಾದದ್ದೇ. ಆದರೆ ಕುವೆಂಪು ಸಾಹಿತ್ಯದಲ್ಲಿ ಮತ ಅಥವಾ ಧರ್ಮಕ್ಕಿಂತ ಅಧ್ಯಾತ್ಮ ವಿಷಯಗಳೇ ಅಪಾರ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವುದರಿಂದ, ಮೊದಲಿನವನ್ನು ಕೈಬಿಡ ಲಾಗಿದೆ. ಕೆಲವೇ ಕೆಲವು ನಿದರ್ಶನಗಳ ಮೂಲಕ ಈ ವರ್ಗೀಕರಣದ ಪ್ರಯೋಜನ ವನ್ನರಿಯಲು ಮುಂದೆ ಪ್ರಯತ್ನಿಸಲಾಗಿದೆ.

೧. ನಿಸರ್ಗ ಕವಿಯಾದ ಕುವೆಂಪು ಅವರ ಸಾಹಿತ್ಯದಲ್ಲಿ ಕಣ್ಣು ಹರಿದೆಡೆ ನೈಸರ್ಗಿಕೋಪಮೆ ಗಳು ರಾಶಿ ರಾಶಿಯಾಗಿ ದೊರೆಯುತ್ತವೆ. ಶ್ರೀರಾಮಾಯಣದರ್ಶನಂ ಮಹಾಕಾವ್ಯವಾಗ ಬಹುದು. ಮಲೆಗಳಲ್ಲಿ ಮದುಮಗಳು ಆಗಬಹುದು, ಕಿಂಕಿಣಿಯಾಗಬಹುದು-ನೈಸರ್ಗಿಕೋಪಮೆಗಳು ನಕ್ಷತ್ರ ಪುಂಜದಂತೆ ರಾರಾಜಿಸುತ್ತವೆ. ಕೇವಲ ದಿಗ್ದರ್ಶನಾರ್ಥವಾಗಿ ಮೂರ್ನಾಲ್ಕನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ.

ಜಲಮಂ ತಿರಸ್ಕರಿಸಿ
ಪೊರಮಟ್ಟ ತಾವರೆಯೆರ್ದೆಗೆ ರವಿಯೆ ಗುರುವೈರಿ
ತಾನೆಂತುಂಟಂತೆ, ಕೇಳ್, ರಾಮನಂ ಬಿಸುಟೆರ್ದೆಗೆ
ಭರತನಹಿತಂ
ಶ್ರೀರಾ : ಅಸಂ-೬/೬೪-೬೭

ಕೇಕಯ ಪುರದಿಂದ ಬಂದು, ಅಯೋಧ್ಯೆಯ ಅವಸ್ಥೆಯನ್ನು ಕಂಡು ದುಃಖಿತನಾಗಿ ತಾಯಿಯನ್ನು ನಿಂದಿಸುತ್ತಿದ್ದ ಭರತನೆದುರಿಗೆ ಶತ್ರುಘ್ನತಾಡಿತ ಶೋಕಸಂತಪ್ತ ಮಂಥರೆ ಓಡಿಬರಲಾಗಿ, ಅವನವಳನ್ನು ಮಾತಿನ ಬಾಣದಿಂದ ಪ್ರಹರಿಸುವ ಸಂದರ್ಭದಲ್ಲಿ ಈ ಉಪಮೆ ಹೊರಹೊಮ್ಮಿದೆ. ಈ ಮಿಶ್ರೋಪಮೆಯಲ್ಲಿ ಮೂರು ಉಪಮಾನಗಳೂ, ಮೂರು ಉಪಮೇಯಗಳೂ ಇವೆ; ಜಲ-ರಾಮ, ತಾವರೆ-ಮಂಥರೆ, ರವಿ­-ಭರತ. ನೀರಿನಲ್ಲಿರುವ ತನಕ ತಾವರೆಯ ಸಖ ರವಿ; ಅಂತೆಯೇ ರಾಮನನ್ನು ಪ್ರೀತಿಸುವ ತನಕ ಮಂಥರೆ ಭರತ ನೊಲುಮೆಗೆ ಪಾತ್ರಳಾಗುತ್ತಾಳೆ. ರಾಮನಿಗೆ ಬೇಡವಾದವಳು ಭರತನಿಗೂ ಬೇಡವಾಗುತ್ತಾಳೆ; ಮೂವರು ವ್ಯಕ್ತಿಗಳ ಸಂಬಂಧದ ಮೇಲೆ ಬೆಳಕು ಚೆಲ್ಲುವ ಈ ಉಪಮಾಚಕ್ರ ಬಹೂಚಿತ ವಾಗಿದೆ.

ರಾಮನ ಕಿರೀಟದಾ
ರನ್ನವಣಿಯೋಲೆ ರಮ್ಯಂ, ಪಂಚವಟಿಯೊಳ್
ದಿನೇಶೋದಯದ ಶಾದ್ವಲದ ಪಸುರ್‌ಗರುಕೆಯೊಳ್
ತೃಣಸುಂದರಿಯ ಮೂಗುತಿಯ ಮುತ್ತುಪನಿಯಂತೆ
ಮಿರುಮಿರುಗಿ ಮೆರೆವ ಹಿಮಬಿಂದುವುಂ
ಶ್ರೀರಾ : ಅಸಂ-೧/೧೧೧-೧೧೫

ಕುವೆಂಪು ಅವರ ದಾರ್ಶನಿಕ ದೃಷ್ಟಿಯ ಪ್ರಕಾರ ಸೃಷ್ಟಿಯಲ್ಲಿ ಮೇಲುಕೀಳುಗಳೆ ಇಲ್ಲ. ಸೂರ್ಯೋದಯ ಸಮಯದಲ್ಲಿ ಹಸುರು ಗರುಕೆಯ ಎಸಳಿನ ತುದಿಯಲ್ಲಿ ಮಿರುಗುವ ಹನಿ ರಾಮನ ಕಿರೀಟದ ರತ್ನದಷ್ಟೇ ರಮ್ಯ. ಆ ಹನಿಯಲ್ಲಿಯೇ ಕವಿ ಶ್ರೀರಾಮನನ್ನು ಕಾಣುತ್ತಾರೆ. ಬೇರೊಂದೆಡೆ ಕವಿ ಇಬ್ಬನಿಯನ್ನು ಅವತಾರವೆಂದೆ ಕರೆಯುತ್ತಾರೆ; ಗರುಕೆ ಮೂಗುತಿಯಂತೆ, ರನ್ನದ ಸೊಡರಿನಂತೆ ಚೆಲ್ವುರಿವ ಹುಲ್ಲು ಹನಿಗೆ ಚಕ್ರವರ್ತಿಯ ಸಂಪತ್ತು ಸಮನಲ್ಲವೆಂದು ಇನ್ನೊಂದೆಡೆ ಘೋಷಿಸುತ್ತಾರೆ. ಇಲ್ಲಿ ರಾಮನ ಕಿರೀಟದಾ ರನ್ನವಣಿ ಉಪಮಾನ, ಹಿಮಬಿಂದು ಉಪಮೇಯ; ಈ ಉಪಮೇಯದ ಜತೆಯಲ್ಲಿಯೇ, ಅದಕ್ಕೆ ಪೋಷಕವಾಗಿಯೇ ಮತ್ತೊಂದು ಗೌಣೋಪಮಾನವನ್ನೂ ಇಲ್ಲಿ ಕಾಣಬಹುದು. ಅದೆ ತೃಣಸುಂದರಿಯ ಮೂಗುತಿಯ ಮುತ್ತುಪನಿ. ಇಲ್ಲಿ ವ್ಯಕ್ತೀಕೃತ ಅಥವಾ ಚೇತನೀಕೃತ ಶಾದ್ವಲದ ಸೌಂದರ್ಯ ವಿಲಾಸ ಆಸ್ವಾದನೀಯವಾಗಿದೆ. ಇದನ್ನೇ ಮತ್ತೊಂದೆಡೆ ‘ಸೌಂದರ್ಯ ದೇವತೆಯ ಮೂಗುತಿಯ ಹನಿಮುತ್ತು’ ಎಂದು ಕವಿ ವರ್ಣಿಸುತ್ತಾರೆ.

ನಭೋನೀಲ ವಾರಿಧಿಯ
ವೀಚಿಮಯ ವಿಸ್ತಾರದಲಿ ಮೀಸುತಿರುವೊಂದು
ತಿಮಿರದ ಸಲಾಕೆಯಂದದ ಕರಿಯುರಗನಂತೆ
ಪಕ್ಷಿಕಾಶಿ, ಪು. ೭೬

ಎಂದು ಕೊಂಚೆವಿಂಡಿನ ಗೆರೆಯನ್ನು ವರ್ಣಿಸುವಾಗ ಓದುಗನ ಮನಃಪಟಲದ ಮೇಲೆ ಸುಸ್ಪಷ್ಟ ಚಿತ್ರವೊಂದು ಮೂಡುತ್ತದೆ.

ಅಂತಹ ಆದರ್ಶವಾದಿಗಳ ಸೌಮ್ಯತೆ ಸಿಡಿಲನಡಗಿಸಿಕೊಂಡಿರುವ
ಕಾರ್ಮುಗಿಲಿನ ಗಾಂಭೀರ್ಯದಂತೆ ಅಪಾಯಕರ
ರಕ್ತಾಕ್ಷಿ, ಪು. ೧೦೦

ಬಸವಯ್ಯನ ಕೊಲೆಯನಂತರ ಬಿದನೂರಿನ ಅರಮನೆಯಲ್ಲಿ ನಿಂಬಯ್ಯ, ಚೆಲುವಾಂಬೆ ಮತ್ತು ಸೋಮಯ್ಯ ಮಾತಾಡುತ್ತಿದ್ದಾರೆ. ಹೊನ್ನಯ್ಯನೇ ರಾಜಪುತ್ರನನ್ನು ಕೊಂದನೆಂಬ ಸುದ್ದಿ ಊರೊಳಗೆಲ್ಲ ಹರಡಿದೆ: ಚೆಲುವಾಂಬೆ ಕಡೆಯವರು ಆ ಸುದ್ದಿಯನ್ನು ನಂಬುವಂತಿಲ್ಲ. ಏಕೆಂದರೆ ಹೊನ್ನಯ್ಯನೇ ತನ್ನ ಸ್ನೇಹಿತನನ್ನು ಕೊಂದಿರಲು ಸಾಧ್ಯವಿಲ್ಲ. ಆ ಆದರ್ಶವಾದಿಯ ಸೌಮ್ಯತೆ ಕಾರ್ಮುಗಿಲಿನ ಗಾಂಭೀರ್ಯದಂತಿದೆ. ಕಾರ್ಮುಗಿಲಿನ ಮರೆಯಲ್ಲಿ ಸಿಡಿಲಿದೆ ಎಂಬುದು ಸರ್ವವೇದ್ಯ; ಅಂತೆಯೇ ಅವನ ಸೌಮ್ಯತೆಯ ಹಿಂದೆ ಕ್ರೌರ್ಯವಿದೆಯೆಂಬುದು ಆ ಮಾತು ಹೇಳುವ ನಿಂಬಯ್ಯನ ಇಂಗಿತ. ಈ ಉಪಮೆ ಹೊನ್ನಯ್ಯನ ಸ್ವಭಾವದ ಮೇಲೆ ಬೆಳಕು ಬೀರುವುದಕ್ಕಿಂತ ನಿಂಬಯ್ಯನ ಕೆಟ್ಟ ಹೃದಯದ ದುಷ್ಟಭಾವಗಳನ್ನು ಪ್ರತಿಬಿಂಬಿಸುತ್ತದೆ. ತನ್ನನ್ನೇ ತಾನು ನಂಬದವನು ಪರರನ್ನು ನಂಬುವುದುಂಟೆ? ಪಾಪದಿಂದ ಪಾಪಕ್ಕೆ ಧುಮುಕುವ ಕೇಡಿಯ ಮನಸ್ಸು ಸಜ್ಜನರ ಹೃದಯದಲ್ಲಿಯೂ ಕೇಡನ್ನೇ ಕಾಣುತ್ತದೆ.

ಈ ಬಗೆಯ ಉಪಮೆಗಳ ಸರ್ವಮುಖಗಳನ್ನೂ, ಸಕಲ ಪ್ರಯೋಜನಗಳನ್ನೂ ಇಲ್ಲಿ ಪ್ರಸ್ತಾಪಿಸಲು ಸಾಧ್ಯವಾಗಿಲ್ಲ. ಅವಷ್ಟೆಯೇ ಪ್ರತ್ಯೇಕ ಮಹಾನಿಬಂಧದ ವಸ್ತುವಾಗುವುದರಲ್ಲಿ ಸಂಶಯವಿಲ್ಲ.

೨. ಕುವೆಂಪು ಅವರ ಮನೋಧರ್ಮ ಸಂಸ್ಕಾರಾಭಿರುಚಿಗಳಿಗೆ ಸಹಜವೆನಿಸುವ ಮತ್ತೊಂದು ಬಗೆಯ ಉಪಮೆಗಳು ಅಧ್ಯಾತ್ಮಕ್ಕೆ ಸಂಬಂಧಿಸಿದುವಾಗಿವೆ. ಇವುಗಳ ಸಂಖ್ಯೆಯೂ ಅಪಾರವಾಗಿದೆ. ಕೆಲವನ್ನು ಮಾತ್ರ ಇಲ್ಲಿಯ ಪರಿಶೀಲನೆಗೆ ಆರಿಸಿಕೊಳ್ಳಲಾಗಿದೆ.

ದಿವಾರಾತ್ರಿಗಳ ಆಲಿಂಗನ ಸಮಯದ ದೀನ ಪ್ರದೋಷ ಜ್ಯೋತಿ ನಿರ್ಜನ ನಿಕುಂಜಗಳ
ಮೇಲೆ ಮಾಯೆಯ ಚುಂಬನದಂತೆ ಪವಡಿಸಿದೆ.
ಸ್ವರ್ಗ ಮರ್ತ್ಯಂಗಳ ಆಲಿಂಗನ ಸ್ಥಾನವಾದ ದಿಗಂತವು ಸಹಸ್ರ ರಹಸ್ಯಗರ್ಭಧಾರಿಯಾಗಿ
ಸತ್ಯಮಿಥ್ಯೆಗಳ ನಡುವೆ ಬೆಳೆದಿರುವ ಅನಂತ ಮಾಯಾರೇಖೆಯಂತೆ ಸುದೀರ್ಘ
ಭೂಮವಾಗಿದೆ.
ಕಿಂಕಿಣ, ಪು. ೩೧

ಈ ವಚನ ಪದ್ಯ ‘ದಿಗಂತದೇವ’ನನ್ನು ಕುರಿತ ಧ್ಯಾನಮಂತ್ರ-ಹಗಲಿರುಳುಗಳ ಸಂಧಿ ಸಮಯವೇ ಮುಚ್ಚಂಜೆ. ಮುಚ್ಚಂಜೆಯಲ್ಲಿ ಬೆಳಕೂ ಇಲ್ಲ. ಕತ್ತಲೆಯೂ ಇಲ್ಲ; ಬೆಳಕು ಕತ್ತಲೆಗಳ ಕಲಸು ಮೆಲಸು. ಈ ಬೆಳ್ಗತ್ತಲೆ ಜಗತ್ತಿನ ಮೇಲೆ, ಅದರಲ್ಲಿಯೂ ನಿರ್ಜನ ನೀರವ ಕಾನನದ ಮೇಲಿಳಿಯುವಾಗ ಯಾವುದೋ ಅರ್ಥವಾಗದ ರಹಸ್ಯವನ್ನು ತನ್ನೊಡ ಲೊಳಗೆ ಹುದುಗಿಸಿಕೊಂಡಿರುವಂತೆ ತೋರುತ್ತದೆ; ಅದು ಮಾಯೆಯಂತಲ್ಲ, ಮಾಯೆಯ ಚುಂಬನದಂತೆ ನಿಕುಂಜಗಳ ಮೇಲೆ ಪವಡಿಸಿದೆ: ಇಲ್ಲಿ ಮಾಯೆಯೆಂದರೆ ಅಜ್ಞಾನವಲ್ಲ, ದುರ್ಭೇದ್ಯ ರಹಸ್ಯ; ಅದು ಸಮ್ಮೋಹನಕಾರಿಯೂ ಹೌದು. ಮುಂದಿನ ಸಾಲುಗಳಲ್ಲಿ ಇದೇ ಅರ್ಥವಿವರಣೆ ಸುಸ್ಪಷ್ಟವಾಗಿ ಮೈದೋರಿದೆ. ಆಕಾಶ ಭೂಮಿಗಳ ಸಂಧಿಸ್ಥಾನವೇ ದಿಗಂತ; ಅದನ್ನೇ ಕವಿ ಸ್ವರ್ಗಮರ್ತ್ಯಗಳ ಆಲಿಂಗನ ಸ್ಥಾನವೆಂದು ಕರೆದಿದ್ದಾರೆ. ಆ ದಿಗಂತ ದಲ್ಲಿ ಅಡಗಿರುವ ರಹಸ್ಯ ಅನಂತವೂ ಅಹುದು, ಅನಿರ್ವಚನೀಯವೂ ಅಹುದು; ಅದು ಧ್ಯಾನಾಸಕ್ತ ಕಲ್ಪನಾನುಭವಕ್ಕೆ ಮಾತ್ರ ನಿಲುಕುವಂಥದು. ಸತ್ಯಮಿಥ್ಯೆಗಳ ನಡುವಣ ಮಾಯಾರೇಖೆ ಅಗಮ್ಯ, ದುರ್ಭೆದ್ಯ; ಅದು ಅನಂತವೂ ಅಹುದು. ಭೂಮವೂ ಅಹುದು. ಅಂಥ ಮಾಯಾರೇಖೆಯನ್ನು ದಿಗಂತ ರೇಖೆಯೊಡನೆ ಹೋಲಿಸಲಾಗಿದೆ.

ಪಾಪಿಯಂ ಬೆಂಬಿಡದೆ
ಹಿಂಬಾಲಿಸಟ್ಟಿ ಹಿಡಿಯುವ ಕೃಪಾಕೇತುವೋಲ್
ಮುಟ್ಟಿ ಹಿಡಿದನು ಪಾದಯುಗ್ಮಮಂ
ಶ್ರೀರಾ : ಅಸಂ-೯/೪೫೩-೪೫೫

ಶ್ರೀರಾಮನನ್ನು ಅರಣ್ಯದಿಂದ ಅರಮನೆಗೆ ಕರೆತರುವ ಸಲುವಾಗಿ ಬಂಧು ಪರಿವಾರ ಸಮೇತ ಭರತ ಚಿತ್ರಕೂಟಕ್ಕೆ ತೆರಳಿದಾಗ, ರಾಮ ಕೈಕೆಯನ್ನರಸಿ, ಅವಳ ಬಳಿಗೈದಿ, ಅವಳ ಕಾಲುಗಳಿಗೆ ನಮಸ್ಕರಿಸಿದ ಸಂದರ್ಭದಲ್ಲಿ ಈ ಉಪಮೆ ಬರುತ್ತದೆ. ಭಗವಂತ ಭಕ್ತ ಪಕ್ಷಪಾತಿಯಾದರೂ, ಪಾಪಿಗಳ ಹೃದಯದಲ್ಲಿಯೂ ನೆಲಸಿರುತ್ತಾನೆ. ಜಗತ್ತಿನಲ್ಲಿ ಪಾಪಿಗೂ ಉದ್ಧಾರವಿದೆ ಎಂಬ ತತ್ತ್ವ ಶ್ರೀರಾಮಾಯಣದರ್ಶನದಲ್ಲಿ ಉದ್ದಕ್ಕೂ ಅನುರಣನ ಗೈಯುತ್ತದೆ. ಪಾಪಿ ಭಗವಂತನಿಂದ, ಅಂದರೆ ಸತ್ಯದಿಂದ ದೂರ ಸರಿಯಲು ಪ್ರತಿಕ್ಷಣವೂ ಪ್ರಯತ್ನಿಸುತ್ತಾನೆ; ಆದರೆ ಭಗವಂತ ಅವನನ್ನು ಎಡೆ ಬಿಡದೆ ಹಿಂಬಾಲಿಸುತ್ತಾನೆ: ಒಮ್ಮೆ ಪಾಪಿ ಭಗವಂತನ ಕಡೆಗೆ ಮುಖತಿರುಗಿಸಿದಾಗಲೇ ಅವನಿಗೆ ಮುಕ್ತಿ ಕಟ್ಟಿಟ್ಟ ಬುತ್ತಿ. ಇಲ್ಲಿ ಕೈಕೆಯೇ ಪಾಪಿ, ಶ್ರೀರಾಮನೇ ಕೃಪಾಕೇತು. ಇಂಥ ಉಪಮೆಗಳು ಮೇಲಿಂದ ಮೇಲೆ ಈ ಮಹಾಕಾವ್ಯದಲ್ಲಿ ಬರುತ್ತವೆ. ‘ಪಾಪಿಯೆರ್ದೆಯಂ ಪುಗುವ ಕ್ಲೇಶರೂಪಿ ಭಗವತ್ ಕೃಪೆಯವೊಲ್’ (ಕಿ.ಸಂ. ೧೨/೩೦೦-೩೦೧); ‘ಪಾಪಿಯ ಹೃದಯ ಕೂಪದೊಳ್ ಪ್ರಾರಬ್ಧದಿಂ ನಿದ್ರಿಸಿಹ ಧರ್ಮಬುದ್ದಿಯಂ ಜಾಗ್ರತಂಗೊಳಿಸಲೆಳಸುತ್ತದಂ ಅರಸುವ ಕೃಪಾಕೃಪಾಣದ ಕಿರಣದೋಲಾಂಜನೇಯಂ’ (ಲಂ. ಸಂ. ೧/೫೭-೬೦); ‘ಶೋಕಸಂತಪ್ತ ಪಾಪಿಯ ಚೇತನಂಬುಗುವ ದಿವ್ಯಕೃಪೆಯಂತೆ’ (ಶ್ರೀ ಸಂ. ೧೦/೧೭೯-೧೮೦) ಇವುಗಳಲ್ಲೆಲ್ಲ ಹೊನಲಿಡುವ ತತ್ತ್ವವೊಂದೆಯಾದರೂ, ಅವುಗಳನ್ನು ಬಳಸಿರುವ ಸನ್ನಿವೇಶವೇ ಬೇರೆ, ಆ  ಸನ್ನಿವೇಶಗಳಿಗನುಗುಣವಾಗಿ ಹೊರಹೊಮ್ಮುವ ಅರ್ಥವೇ ಬೇರೆ ಎಂಬುದನ್ನು ಓದುಗರು ಮನಗಾಣಬಹುದು. ಇದೇ ಸಂದರ್ಭದಲ್ಲಿ ‘ಮುಕ್ತಿರಾಹು’ ಮತ್ತು ‘ದೇವಕೇತು’ ಎಂಬ ಕವಿತೆಗಳ ಕಡೆಗೂ ಗಮನಹರಿಸಬಹುದು.

ದೇವಾಲಯವೀ ಹೂವಿನ ತೋಟಂ!
ರಸಸಾಧನೊ ಯೋಗದ ನೋಟಂ!
ಜೀವನ ದೇವನ ಈ ಹೂಬೇಟಂ
ಮೂಲೋಕವನಾಲಿಂಗಿಸಿದೆ!
ಭಗವದ್ ಭೋಗದ ಈ ಜೇನೂಟಂ
ತೃಷ್ಣೆಯ ಬೇರನೆ ಭಂಗಿಸಿದೆ !
ಅನಿಕೇತನ, ಪು. ೩೫

‘ಹೂವಿನ ತೋಟದಲ್ಲಿ’ದ್ದಾಗ ಕವಿಯ ಧ್ಯಾನಲೀನ ಮನಸ್ಸಿನಲ್ಲಿ ಉಕ್ಕಿಹರಿದ ಅಧ್ಯಾತ್ಮ ಭಾವಗಳಿವು. ಅವರ ಪಾಲಿಗೆ ಹೂವಿನ ತೋಟವೇ ದೇವಾಲಯ; ನೋಟವೆ ರಸಸಾಧನೆ; ಜೀವಾತ್ಮ ಪರಮಾತ್ಮಗಳೆರಡೂ ಪರಸ್ಪರಾಲಿಂಗನದಲ್ಲಿ ತಲ್ಲೀನಗೊಂಡಿವೆ. ಭಗವದ್ ಭೋಗದ ಜೇನೂಟವಾಗಿ, ಪಾರಮಾರ್ಥಿಕ ತೃಷ್ಣೆಯನ್ನು ನೀಗಿದೆ.

. ಸಾಂಸಾರಿಕೋಪಮೆ

ಬಿರಿಯುವಲರಂತೆ, ಸುಳಿಸುಳಿವ ತೆಂಬಲರಂತೆ
ಮಿರುಪ ಹೊಂಬಿಸಿಲಲ್ಲಿ ನಲಿವ ಕೆಂದಳಿರಂತೆ
ಬಿರಿಮುಗುಳ ಮುಡಿದಿರುವ ಮಲ್ಲಿಗೆಯ ಹೊದರಂತೆ
ಹೊಸ ಮುಗಿಲಿನಲಿ ನಲಿವ ಕಾಮನ ಬಿಲ್ಲಿನಂತೆ,
ನೊರೆಯ ಸೇಸೆಯ ಚೆಲ್ಲಿ ಬಿಂಕದಿಂ ಪರಿಯುತಿಹ
ತೊರೆಯಂತೆ, ಮುಂಬೆಳಗಿನೈಸಿರಿಯ ಮುಗುಳ್ನಗೆಯಂತೆ
ಮೆರೆಯುತಿಹೆ, ಓ ನಲ್ಲೆ, ಚೈತ್ರದಾಗಮನದಲಿ
ನಳ ನಳಿಸಿ ನಲಿವ ಬನ ಮಾಲೆಯಂತೆ
ರಕ್ತಾಕ್ಷಿ, ಪು. ೨೯

ಬಸವಯ್ಯ ರುದ್ರಾಂಬೆಯನ್ನು ಹೊಗಳುವ ಸಂದರ್ಭದಲ್ಲಿ ಸರಳ ಸುಲಭ ಮಾಲೋಪಮೆಗಳು ಬಳಕೆಗೊಳ್ಳುತ್ತವೆ. ಇಲ್ಲಿಯ ಉಪಮಾನಗಳೆಲ್ಲವೂ ರುದ್ರಾಂಬೆಯ ಸೌಂದರ್ಯವನ್ನು ಮೆರೆಸುತ್ತವೆ.

ತಾಯಿಯೆದೆಯನ್ನಪ್ಪಿ ನಲಿಯುವ
ಹಾಲು ಹಸುಳೆಯ ತೆರದಿ ಬನಗಳ
ಮೇಲೆಯೊರಗಿತು ಚೆಲುವಿನೊರತೆಯ
ತಿಂಗಳಿನ ಹೊಂಬೆಳಕು.
ಕಥನ ಕವನಗಳು, ಪು. ೭೮

‘ಕುಮುದಿನಿ’ ಎಂಬ ಕವಿತೆಯ ಪ್ರಾರಂಭದಲ್ಲಿ ಪ್ರಕೃತಿ ವರ್ಣನೆಯ ಸಂದರ್ಭದಲ್ಲಿ ಈ ಉಪಮೆ ಬಂದಿದೆ. ತಾಯಿಯ ಎದೆಯನ್ನಪ್ಪಿಕೊಂಡು ಹಾಲು ಕುಡಿಯುತ್ತಿರುವ ಶಿಶುವಿನ  ನಿಷ್ಕಳಂಕ ಮುಗ್ಧ ವದನದ ಸೌಂದರ್ಯ ಎಣೆಯಿಲ್ಲದ್ದು. ಹಸುರಿಡಿದ ಕಾನನದ ಮೇಲೆ ಹಬ್ಬಿರುವ ಚಂದ್ರನ ಹೊಂಬೆಳಕು ಅದರಷ್ಟೇ ಮೋಹಕವಾಗಿದೆಯೆಂಬುದೇ ಈ ಉಪಮಾನದ ಸ್ವಾರಸ್ಯ.

ಕುದಿದಪ್ಪಿದಣ್ಣನಾ
ತೋಳ್ತಳ್ಕೆ ತಾಯ ಮಡಿಲಾದುದೆನೆ ಭರತಂ
ಬಳಲ್ದ ಶಿಶು ನೋವಂ ಮರೆತು ನೆಮ್ಮದಿಯನರಿತು
ಮುಗ್ಧ ನಿದ್ರಾ ಮುದ್ರೆಯಪ್ಪಂತೆ, ಜನಕಜಾ
ರಮಣ ಧೀರೋದಾತ್ತ ವಕ್ಷವಾರ್ಧಿಯ ನೀಲ
ನಾವೆಯೊಳ್ ತೇಲಿದನು ಶಾಂತಿಯ ತುರೀಯಕೆ!

ಭರತ ಅರಣ್ಯದಲ್ಲಿ ಶ್ರೀರಾಮಚಂದ್ರನನ್ನು ಸಂಧಿಸಿದ ಸಂದರ್ಭ. ರಾಮನನ್ನು ಕಂಡ ಕೂಡಲೇ ಭರತ ಓಡೋಡಿ ಬಂದು, ಅವನ ಪಾದಗಳ ಮೇಲೆ ದಿಂಡುರುಳುತ್ತಾನೆ. ರಾಮ ಅವನನ್ನು ಹಿಡಿದೆತ್ತಿ ತನ್ನ ತೋಳ್ತೆಕ್ಕೆಯಲ್ಲಿ ಆತುಕೊಳ್ಳುತ್ತಾನೆ. ತಂದೆಯ ಮರಣದಿಂದ, ತಾಯಿಯ ಅಪರಾಧದಿಂದ, ಅಣ್ಣನ ವನವಾಸದಿಂದ, ಪ್ರಯಾಣದ ಶ್ರಮದಿಂದ ಬಳಲಿದ ಭರತನಿಗೆ ರಾಮನ ತೋಳ್ತಕ್ಕೆಯೇ ತಾಯ ಮಡಿಲಾಗುತ್ತದೆ; ಆಯಾಸಗೊಂಡ ಮಗು ತಾಯ ಮಡಿಲಿನಲ್ಲಿ ಎಲ್ಲ ನೋವನ್ನು ಮರೆತು ಮಲಗುವಂತೆ, ಶ್ರೀರಾಮನ ವಕ್ಷದಲ್ಲೊರಗಿದ ಭರತ ಎಲ್ಲ ಶ್ರಮಗಳನ್ನು ಮರೆಯುತ್ತಾನೆ, ಶಾಂತಿಯ ಪರಾಕಾಷ್ಠೆಯನ್ನು ಮುಟ್ಟುತ್ತಾನೆ. ತಾಯ ಮಡಿಲ್ ಮತ್ತು ಶಿಶು ಉಪಮಾನಗಳಾದರೆ ತೋಳ್ತಕ್ಕೆ ಮತ್ತು ಭರತ ಉಪಮೇಯ ಗಳಾಗುತ್ತಾರೆ. ತಾಯ ಮಡಿಲಿನ ಸುಖವನ್ನನುಭವಿಸಿದವರಿಗೆ ಮಾತ್ರ ಈ ಉಪಮೆಯ ಸ್ವಾರಸ್ಯ ಸ್ವಾದುವಾಗುತ್ತದೆ.

ತೊದಲುನುಡಿ ನುಡಿವಣುಗನಂ ನೋೞ್ಪಜ್ಜನಂದದಿಂ
ಪರಿಚಯವನರಿತುಮೌದಾಸೀನ್ಯಮಂ ನಟಿಸಿ
ಶ್ರೀ ರಾ ಕಿಸಂ-೧೦/೬೨೪-೨೫

ಸೀತಾನ್ವೇಷಣೆಗಾಗಿ ಹೊರಟು, ದಾರಿಯಲ್ಲಿ ಸಿಕ್ಕಿದ ಸಂಪಾತಿಯನ್ನು ಅಂಗದನ ಕಡೆಯ ಕಪಿವೀರರು ತುಸು ಹಗುರವಾಗಿ ಮಾತಾಡಿಸಿದಾಗ, ಖಗರಾಜ ನಡೆದುಕೊಂಡ ರೀತಿ ಈ ಉಪಮೆಯಲ್ಲಿ ಅಡಕಗೊಂಡಿದೆ. ರಾಮಕಾರ್ಯಾತುರರಾಗಿ ಹೊರಟಿರುವ ಆ ವೀರರ ಬಗ್ಗೆ ಸಂಪಾತಿಗೆ ಸ್ವಲ್ಪವೂ ಖತಿಯಿಲ್ಲ. ಅವರೆಲ್ಲರೂ ಅವನಿಗೆ ಮೊಮ್ಮಕ್ಕಳಂತಿದ್ದಾರೆ. ಅವರ ಬಾಲಿಶವಾಣಿಯನ್ನು ಕೇಳಿ ಅವನಿಗೆ ನಗು ಬರುತ್ತದೆ. ಇಲ್ಲಿ ಅಜ್ಜ ಉಪಮಾನ ಖಗರಾಜ ಉಪಮೇಯ; ಅಂತೆಯೇ ಅಣುಗ ಉಪಮಾನ, ಕಪಿವೀರರು ಉಪಮೇಯ, ವಾತ್ಸಲ್ಯ ಶೌರ್ಯ ಭಾವಗಳೆರಡೂ ಇಲ್ಲಿ ಪ್ರತೀತವಾಗುತ್ತವೆ.

. ಸಾಮಾಜಿಕೋಪಮೆ

‘ನಿಮ್ಮೆದುರು ದೇಶಭಕ್ತಿಯ ವಿಚಾರವಾಗಿ ಒಂದೆರಡು ಮಾತುಗಳನ್ನಾದರೂ
ಆಡದಿದ್ದರೆ ನನ್ನ ಭಾಷಣ ಮಂಗಳ ಸೂತ್ರವಿಲ್ಲದ ವಧುವಿನಂತೆ ಅವಲಕ್ಷಣವಾಗುತ್ತದೆ.’
ನಿರಂಕುಶಮತಿಯಿಂದ ಆತ್ಮಶ್ರೀಗೆ, ಪು. ೨೮

ಮಂಗಳಸೂತ್ರ ಧಾರಣೆಯೊಂದು ಸಾಮಾಜಿಕ ಪದ್ಧತಿ. ಅದು ಸತೀತ್ವದ ಲಕ್ಷಣ. ಅದು ಇಲ್ಲದಾಗ ಅವಲಕ್ಷಣವಾಗುತ್ತದೆ, ಅಮಂಗಳವಾಗುತ್ತದೆ. ಈ ಉಪಮಾನ ದೇಶ ಭಕ್ತಿಯ ಅಗತ್ಯವನ್ನು ಶ್ರುತಪಡಿಸುತ್ತದೆ. ಸ್ವಾತಂತ್ರ್ಯಪೂರ್ವದ ಭರತಖಂಡದಲ್ಲಿ ನಾಯಕರ ಭಾಷಣ ಗಳೆಲ್ಲವೂ ದೇಶ ಭಕ್ತಿಯಿಂದ ತುಂಬಿರುತ್ತಿದ್ದುವು. ದೇಶ ಭಕ್ತಿ ವಿರಹಿತವಾದ ಭಾಷಣಕ್ಕೆ ಮಾನ್ಯತೆ ಸಿಗುವುದು ಕಷ್ಟವಾಗುತ್ತಿತ್ತು.

. ಐತಿಹಾಸಿಕೋಮೆಗಳು

ಜಯಶಾಲಿಯಾದ ಅಲೆಗ್ಸಾಂಡರನಂತೆ ಕಿಶೋರನು ಠೀವಿಯಿಂದ ನನ್ನ ಕಡೆಗೆ ಬಂದು.
ಕತೆಗಳೊಡನೆ ಆರಂಭದಲ್ಲಿ, ಪು. ೧೦೩
‘ಕನಸಿನ ಕನಸು’ ಎಂಬ ಕತೆಯಲ್ಲಿ ಬರುವ ಉಪಮಾನವಿದು. ಇದಕ್ಕೆ ವಿವರಣೆ ಅನಗತ್ಯ.
ಆ ಬಡವನ ರೋಗದ ವಿಷಮಾವಸ್ಥೆಯು ಭರತಖಂಡದ ಸ್ವಾತಂತ್ರ್ಯ
ಸಂಗ್ರಾಮದಂತೆಯೇ ಮುಖ್ಯವಾಗಿ ಕಂಡಿತು.
ಮಲೆನಾಡಿನ ಚಿತ್ರಗಳು, ಪು. ೯೭

‘ಅಣ್ಣಪ್ಪನ ರೇಷ್ಮೆಕಾಯಿಲೆ’ ಎಂಬ ಚಿತ್ರದಲ್ಲಿ ಈ ಉಪಮಾನವನ್ನು ಬಳಸಲಾಗಿದೆ. ಪರಕೀಯ ದಾಸ್ಯದಿಂದ ನರಳುತ್ತಿದ್ದ ಕಾಲದಲ್ಲಿ ಭಾರತೀಯರಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಮುಖ್ಯವಾದ ಸಂಗತಿ ಮತ್ತೊಂದಿರಲಿಲ್ಲವಷ್ಟೆ. ಅಣ್ಣಪ್ಪನ ಕಾಯಿಲೆ ಸಿಂಧುವಿನಲ್ಲೊಂದು ಬಿಂದುವಿನಂತಿತ್ತು, ನಿಜ. ಆದರೆ ಆ ರೋಗಿಯ ನರಳನ್ನು ನೋಡಿದಾಗ ಉಳಿದದ್ದೆಲ್ಲ ಮರೆತು ಹೋಗುತ್ತಿತ್ತು; ಅದೇ ಎಲ್ಲವೂ ಎನ್ನುವಂತೆ ತೋರುತ್ತಿತ್ತು.

. ವೈಜ್ಞಾನಿಕೋಪಮೆಗಳು : ವಿಶಾಲ ಲೋಕಾನುಭವ ಮಹಾಕವಿಯ ಬಂಡವಾಳ. ನಿತ್ಯ ನೂತನವಾಗಿ ಜಗತ್ತಿನಲ್ಲಿ ನಡೆಯುವ ವ್ಯಾಪಾರಗಳು ಕವಿಯ ಬುದ್ದಿ ಹೃದಯಗಳನ್ನು ಸಂಸ್ಪರ್ಶಿಸದಿದ್ದಾಗ, ಕವಿಯ ವೀಕ್ಷಣ ಸಾಮರ್ಥ್ಯ, ಅವನ ಸಂವೇದನಾಶೀಲ ಚುರುಕಾಗಿಲ್ಲವೆಂದೇ ಹೇಳಬೇಕಾಗುತ್ತದೆ. ವಿಜ್ಞಾನ ತಂತ್ರವಿಜ್ಞಾನಗಳು ಮಾನವನಿಗೆ ಸಕಲ ಸೌಲಭ್ಯಗಳನ್ನೊದಗಿಸುತ್ತಿರುವಾಗ, ಪ್ರಲಯ ಸಾಧನಗಳಂತೆಯೂ ವರ್ತಿಸುತ್ತಿರುವಾಗ, ಅವನ ಜೀವನವನ್ನು ರೂಪಿಸುತ್ತಿರುವಾಗ, ಅವು ಅನಿವಾರ್ಯವಾಗಿ ಕವಿ ಜೀವನವನ್ನು ಪ್ರವೇಶಿ ಸಲೇಬೇಕು. ಕುವೆಂಪು ಸಾಹಿತ್ಯದಲ್ಲಿ ಬಳಕೆಗೊಂಡಿರುವ ಹಲವಾರು ವೈಜ್ಞಾನಿಕೋಪಮೆಗಳು ಅವರ ಸಮಕಾಲೀನ ಪ್ರಜ್ಞೆಗೆ ಸಾಕ್ಷಿಯಾಗಿವೆ.

ಮಧ್ಯದೊಳಗ್ನಿಕುಂಡದುರಿ
ದೇದೀಪ್ಯಮಾನ ಮಾದುದು, ವಿಪುಲದೊರದಲಿ
ದೂರದರ್ಶಕ ಯಂತ್ರದಕ್ಷಿಯೊಳ್ ಕಣ್ಣಿಟ್ಟು,
ಗಗನ ವಿಜ್ಞಾನಿ ತಾಂ ರಾತ್ರಿಯಾಕಾಶದಲಿ
ಕಾಣ್ಬೊಂದು ತಾರಾಗರ್ಭದಂತೆ,
ಶ್ರೀ ರಾ : ಸಅಂ.೧/೨೭೧-೨೭೫

ದಶರಥ ಸಾತ್ವಿಕ ರೀತಿಯಲ್ಲಿ ಪುತ್ರಕಾಮೇಷ್ಟಿಯಾಗವನ್ನು ಮಾಡಲುಜ್ಜುಗಿಸಿದಾಗ, ಋತ್ವಿಜರು ಸಮೆದ ಅಧ್ವರಶಾಲೆಯ ಮಧ್ಯದಲ್ಲಿ ಸಂಸ್ಥಾಪನೆಗೊಂಡ ಅಗ್ನಿಕುಂಡದ ವರ್ಣನೆಯಿದು. ರಾತ್ರಿಯ ಕಾಲದಲ್ಲಿ ಗಗನ ವಿಜ್ಞಾನಿ ದೂರದರ್ಶಕ ಯಂತ್ರದ ಮೂಲಕ ನೋಡುವ ತಾರಾಗರ್ಭದಂತೆ ಅಗ್ನಿಕುಂಡದ ಜ್ವಾಲೆ ರಾರಾಜಿಸುತ್ತದೆ. ತಾರಾಗರ್ಭವೇ ಉಪಮಾನ. ಅಗ್ನಿಕುಂಡದುರಿಯೇ ಉಪಮೇಯ; ದಶರಥನೇ ಇಲ್ಲಿ ಗಗನ ವಿಜ್ಞಾನಿ. ಯಾಗ ಫಲಪ್ರದವಾಗುತ್ತದೆಂಬ, ವಿಶ್ವಚಿತ್‌ಶಕ್ತಿಯೇ ಈ ಲೋಕದಲ್ಲಿ ಅವತರಿಸುತ್ತದೆಂಬ ಧ್ವನಿ ಈ ಉಪಮಾನದಲ್ಲಿದೆ.

ರಾಮರಾವಣ ಸಂಗ್ರಾಮ ಸಮಯದಲ್ಲಿ ಮೇಘನಾದ ನಡೆಸಿದ ಮಾಯಾ ಯುದ್ಧ ಆಧುನಿಕ ಯುಗದ ಯುದ್ಧಕ್ಕಿಂತ ಹೆಚ್ಚು ಪ್ರಲಯಕಾರಿಯಾಗಿತ್ತೆಂಬ ಭಾವವನ್ನು ಮುಂದಿನ ಉಪಮೆಯಲ್ಲಿ ಕಾಣಬಹುದು.

ಮುಗಿಲ ಮರೆಯಂ ಸೇರ್ದು, ಮಾಯೆಯಿಂ
ಮೆಯ್ಗರೆದು, ಕರೆಯತೊಡಗಿದನಸ್ತ್ರವರ್ಷಮಂ,
ವೈರಿಯ ವಿನಾಶಕಾಧುನಿಕ ವಿಜ್ಞಾನಕಲೆ
ಕೈಕೊಳ್ಳುತಿರ್ಪತಿ ಭಯಾನಕೋಪಾಯಗಳ್
ಪೋಲ್ವೆಗೆ ಬರಿ ಶಿಶುಕ್ರೀಡೆಯಪ್ಪಂತೆ
ಶ್ರೀರಾ ಲಂ.ಸಂ.-೧೩/೧೪೪-೧೪೮

ಮೇಘನಾದನ ಯುದ್ಧದ ಮುಂದೆ ಆಧುನಿಕ ಶಸ್ತ್ರಾಸ್ತ್ರ ಯುದ್ಧವೂ ಶಿಶು ಕ್ರೀಡೆಯಂತೆ ತೋರುತ್ತದೆ.

೭. ಪ್ರಾಣಿ ಸಂಬಂಧವಾದ ಉಪಮೆಗಳು ಕುವೆಂಪು ಅವರ ಗದ್ಯ ಪದ್ಯ ಕೃತಿಗಳಲ್ಲಿ ಯಥೇಚ್ಛವಾಗಿ ದೊರೆಯುತ್ತವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉದ್ಧರಿಸಲಾಗಿದೆ. ‘ಚಿತ್ರದ ಪುಲಿಯನೋತು ದಿಟದ ಪುಲಿಯಂ ಪಿಡಿದ ಪಸುಳೆ ಪಾಂಗಾಯ್ತಲಾ ನಮಗೆ!’ (ಇಕ್ಷುಗಂಗೋತ್ರಿ, ಪು. ೨೮) ಎಂದು ಕವಿ ಸ್ವಾತಂತ್ರ್ಯ ಲಕ್ಷ್ಮಿಯನ್ನು ಕುರಿತು ಪ್ರಥಮ ಸ್ವಾತಂತ್ರ್ಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಉದ್ಗಾರ ತೆಗೆಯುತ್ತಾರೆ. ಚಿತ್ರದ ಹುಲಿಯೆಂದು ತಿಳಿದು ಹಸುಳೆ ದಿಟದ ಹುಲಿಯನ್ನು ಹಿಡಿದುಕೊಂಡಾಗ ಏನು ಅನಾಹುತ ಸಂಭವಿ ಸುತ್ತದೆಯೋ ಅಂಥದೇ ಅನಾಹುತ ಸ್ವಾತಂತ್ರ್ಯಾನಂತರ ಸಂಭವಿಸಿದೆಯೆಂದು ಕವಿ ಮರುಗುತ್ತಾರೆ; ‘ಬಾಗಿಲಂತೆರೆದ ಬೋನಿನೊಳಿರ್ಪ ಕೋಳ್ಮಿಗಂ ನೆಗೆದು ಹೊರಚಿಮ್ಮಿ ದಂತಾಯ್ತಲಾ!’ (ಅದೇ, ಪು. ೨೮).

ಕೂಡಿಟ್ಟ ತುಪ್ಪಕ್ಕೆ ಕೊಳ್ಳೆ ಬಪ್ಪಾತನಂ
ಜೇನ್ಬುಳು ಮುಸುರ್ವವೊಲ್, ದೈತ್ಯನ ವರೂಥಮಂ
ಮುತ್ತಿದುದವನ ಸೇನೆ
ಶ್ರೀರಾ. ಶ್ರೀಸಂ.-೮/೧೭೦-೧೭೨

ವಾನರ ಪಡೆಯ ದಳಪತಿ ದರೀಮುಖ ರಾವಣನ ಮೇಲೆ ಬಿದ್ದು, ಅವನ ಬಾಣಕ್ಕೆ ತುತ್ತಾಗಿ ಕೆಳಗೆ ಕೆಡೆದಾಗ, ದರೀಮುಖನ ಸೈನ್ಯ ರಾವಣನ ಮೇಲೆ ಬಿದ್ದ ಸಂದರ್ಭದಲ್ಲಿ ಈ ಉಪಮೆ ಬಂದಿದೆ; ಸೈನ್ಯದ ಚಿತ್ರ ಕಣ್ಮುಂದೆ ಕಟ್ಟಿದಂತಿದೆ.

. ಪೌರಾಣಿಕೋಪಮೆಗಳು : ಆರು ತಿಂಗಳೊಳಗಾಗಿ ಮತ್ತೆ ಬರುವುದಾಗಿ ಚಿತ್ರಾಂಗದೆಗೆ ಆಶ್ವಾಸನೆ ನೀಡಿ ಅರ್ಜುನ ಹಸ್ತಿನಾವತಿಯ ಕಡೆಗೆ ತೆರಳಿದ ಸಂದರ್ಭದಲ್ಲಿ ‘ಹೊರಹೊಂಟನಾ ಸವ್ಯಸಾಚಿ, ದಮಯಂತಿಯಂ ನಳನೃಪಂ ನಡುಗಾಡಿನಲ್ಲಿ ಬಿಟ್ಟು ಹೋದಂತೆ’ (ಚಿತ್ರಾಂಗದಾ, ಪು. ೫೪) ದಮಯಂತಿ ಮಲಗಿದ್ದಾಗ ನಳ ಅವಳನ್ನು ತೊರೆದು ಹೋದಂತೆ, ಅರ್ಜುನನೂ ಚಿತ್ರಾಂಗದೆ ನಿದ್ರಿಸುತ್ತಿದ್ದಾಗ ಹೊರಟು ಹೋಗುತ್ತಾನೆ.

‘ಅದರಲ್ಲಿಯೂ ಬ್ರಾಹ್ಮಣರಲ್ಲದ ಶೂದ್ರ ವರ್ಗದವರು ಆ ಪರೀಕ್ಷೆಗೆ (ಲೋಅರ್ ಸೆಕೆಂಡರಿ) ಕೂರುವುದೆಂದರೆ, ತೇರ್ಗಡೆಯ ಮಾತಿರಲಿ-ವಿಶ್ವಾಮಿತ್ರನಿಗೆ ಬ್ರಹ್ಮರ್ಷಿಪಟ್ಟ ದಯಪಾಲಿಸಿದ್ದಷ್ಟೆ ಮಹತ್ವದ್ದಾಗಿತ್ತು’ (ನೆನಪಿನ ದೋಣಿಯಲ್ಲಿ, ಪು. ೯೨) ‘ವಿಶ್ವಾಮಿತ್ರ ದೊಡ್ಡ ಚಕ್ರವರ್ತಿ, ಮಹಾವಿದ್ವಾಂಸ, ತಪಸ್ವಿ; ಆದರೂ ಅವನು ಬ್ರಹ್ಮರ್ಷಿಯಲ್ಲವೆಂಬ ಅಪಪ್ರಥೆಗೆ ಪಾತ್ರನಾಗಿದ್ದ. ತಾನೂ ಬ್ರಹ್ಮರ್ಷಿ ಎನಿಸಿಕೊಳ್ಳಬೇಕೆಂದು ಅವನು ಹಲವು ವರ್ಷ ಕಠೋರ ಸಾಧನೆಯಲ್ಲಿ ತೊಡಗಿ ಜಯಶೀಲನಾಗುತ್ತಾನೆ. ಲೋಅರ್ ಸೆಕೆಂಡರಿ ಬ್ರಾಹ್ಮಣರಿಗೆ ಮಾತ್ರ ಮೀಸಲೆಂಬ ಭಾವನೆ ಒಂದಾನೊಂದು ಕಾಲದಲ್ಲಿ ರೂಢಿಯಲ್ಲಿತ್ತು. ವಿಡಂಬನೆಗೆ ಇದೊಂದು ಒಳ್ಳೆಯ ನಿದರ್ಶನ.

. ಕ್ರೀಡೋಪಮೆಗಳು : ಜಗಳಕ್ಕೆ ಬಿಟ್ಟೊಡನೆಯೇ ‘ಹುಂಜಗಳೆರಡೂ ಒಂದನ್ನೊಂದು ಮಲೆತು ನೋಡುತ್ತ, ನಟನೆಗಾಗಿ ನೆಲವನ್ನು ಕುಕ್ಕುತ್ತ, ಕುಸ್ತಿಯಾಡುವ ಜಟ್ಟಿಗಳು ಪಟ್ಟು ನೋಡಿ ಒಬ್ಬರನ್ನೊಬ್ಬರು ಸೆಣಸುವಂತೆ ಹೊಂಚಿ ಸೆಣಸುತ್ತ’ (ಕಾನೂರು ಹೆಗ್ಗಡಿತಿ, ಅಧ್ಯಾಯ ೬೨) ಒಂದನ್ನೊಂದು ಒದೆಯಲಾರಂಭಿಸಿದುವು. ಜಟ್ಟಿಕಾಳಗವನ್ನು ನೋಡಿದವರಿಗೆ ಈ ಉಪಮೆಯ ಸ್ವಾರಸ್ಯ ಅನುಭವಕ್ಕೆ ಬರುತ್ತದೆ.

ಅಸಮ ಸಾಹಸದಿಂದ ಹೋರಾಡಿ, ಕಪಿ ಸೈನ್ಯವನ್ನು ಒಕ್ಕಲಿಕ್ಕಿ, ತನ್ನ ನಿರ್ಯಾಣ ಸಮಯ ಸನ್ನಿಹಿತವಾದಾಗ ಮಹಾಪಾರ್ಶ್ವ ಕಪಿಸೇನೆಯ ಅವಸ್ಥೆಯನ್ನು ಕುರಿತು ತನ್ನ ಸೂತನೊಡನೆ ಈ ರೀತಿ ಹೇಳುತ್ತಾನೆ :

ಬೇಂಟೆಗಾರರಿಂ
ಕಡುಗಾಯಪಡೆದ ಪೆರ್ಬುಲಿಯೆಂತು ಪಳುವೊಳ್
ಜುಣುಂಗಿ, ನೆತ್ತರ್ ನೆಕ್ಕಿ ಕೊಳ್ಳುತಾಸರ್ಗಳೆಯೆ
ಮಗ್ಗುಲಿಕ್ಕುವುದೊ ತಾನಂತೆವೋಲ್ ಕಪಿಸೇನೆ,
ಕಳೆದ ರಾತ್ರಿಯೊಳೆನ್ನ ಕೈಯುಪಹತಿಗೆ ಸಿಲ್ಕಿ,
ಮಗ್ಗುಲಿಕ್ಕಿದೆ ಸರಿದು ಶಿಖರಕ್ಕೆ
ಶ್ರೀರಾ. ಶ್ರೀ ಸಂ.-೧/೧೧೦-೧೧೫

ಈ ಉಪಮೆಯಲ್ಲಿ ಮಹಾಪಾರ್ಶ್ವನ ಶೌರ್ಯದ ಜತೆಗೆ ಕಪಿಸೈನ್ಯದ ಭವಿಷ್ಯವೂ ಸೂಚಿತವಾಗಿದೆ. ಗಾಯಗೊಂಡ ಹುಲಿ, ಅಂದರೆ ಕಪಿಸೈನ್ಯ, ತನ್ನ ಶತ್ರುವನ್ನುಳಿಸಲಾರದೆಂಬ ಸೂಚನೆ ಇಲ್ಲಿದೆ.

೧೦. ಕಾಲ್ಪನಿಕೋಪಮೆಗಳು : ಸಾಮಾನ್ಯವಾಗಿ ಲೌಕಿಕ ಸ್ತರದಲ್ಲಿ ಕಾಣಲಾಗದ, ಕಲ್ಪನೆಗೆ ಮಾತ್ರ ನಿಲುಕುವ ಅಲೌಕಿಕಾನುಭವಗಳು ಸಹ ಉಪಮಾನದ ವಸ್ತುಗಳಾಗುತ್ತವೆ. ಶ್ರೀರಾಮ ಕಾಂಚನಮೃಗದ ಮೇಲೆ ಬಾಣವನ್ನು ಪ್ರಯೋಗಿಸಿದ ಸಂದರ್ಭ. ಅದು ಮಾಯಾ ಮೃಗವೆಂಬುದು ಅವನಿಗೆ ಗೊತ್ತಿಲ್ಲ. ಅದು ನಿಜವಾದ ಜಿಂಕೆಯಲ್ಲ. ಅದನ್ನು ಕೊಂದಾಗಲೇ ನಿಜಾಂಶ ಅರಿವಾಗುತ್ತದೆ. ಅದೆಲ್ಲ ರಾಕ್ಷಸರ ಮಾಯಾಜಾಲವೆಂದು ಅರ್ಥವಾಗುತ್ತದೆ. ಅಂದರೆ ಮಿಥ್ಯೆಯನ್ನು ಭೇದಿಸಿದಾಗಲೇ ಸತ್ಯದರ್ಶನವಾಗುತ್ತದೆಂಬ ತತ್ತ್ವ ಇಲ್ಲಿ ಅಡಕಗೊಂಡಿದೆ. ನಮ್ಮ ಕಣ್ಣಿಗೆ ಕಾಣುವ ವಸ್ತುಗಳೆಲ್ಲ ನಶ್ವರವೆಂಬುದು ಸರ್ವವೇದ್ಯ. ಆದರೆ ಆ ವಸ್ತುಗಳ ಹೃದಯದಲ್ಲಿ ಶಾಶ್ವತತೆ ಸದಾ ಪ್ರವಹಿಸುತ್ತದೆಂಬುದು ದಾರ್ಶನಿಕ ಕವಿಗೆ ಅನುಭವ ಸಾಧ್ಯ. ಕಾಂಚನ ಮೃಗದ ಈ ಪ್ರಸಂಗ ಈ ತತ್ತ್ವಕ್ಕೊಂದು ಪ್ರತಿಮೆಯಾಗಿದೆ.

ಶಾಶ್ವತವನರಿಯಲ್ಕೆ ನಶ್ವರದ ಹೃದಯಮಂ
ಭೇದಿಸುವ ಕವಿಯ ದರ್ಶನದಂತೆ, ಖರಶರಂ
ಛಿದ್ರಿಸಲ್ಕಾ ಕಿತವ ಪಶುಕಳೇಬರದಿಂದೆ
ಜಗುಳ್ದುದು ನಿಶಾಚರಾಕೃತಿ, ಮಿಥ್ಯೆ ಬಿರಿಯಲ್ಕೆ
ಸತ್ಯಂ ಪ್ರತ್ಯಕ್ಷ ಮಪ್ಪಂತೆವೋಲ್
ಶ್ರೀರಾ. ಕಿಸಂ.-೨/೨೬೦-೨೬೪

ಶ್ರೀರಾಮಾಯಣದರ್ಶನದಲ್ಲಿ ಇಂಥ ಹಲವಾರು ಉಪಮೆಗಳು ಓದುಗರ ಗಮನಕ್ಕೆ ಬರುತ್ತವೆ. ಕಲೆ ಮತ್ತು ಕಾವ್ಯಕ್ಷೇತ್ರಗಳಿಗೆ ಸಂಬಂಧಿಸಿದ ಉಪಮೆಗಳನ್ನು ಸಹ ಈ ವರ್ಗ ದಲ್ಲಿಯೇ ಸೇರಿಸಬಹುದು. ಉದಾಹರಣೆಗಾಗಿ :

ಕಾವ್ಯಯಾತ್ರೆಗೆ ಮುನ್ನಮಾವೇಶದುನ್ನತಿಯ
ನಾಂದಿಗೇರುವ ಕವಿಯ ಕಲ್ಪನೆಯ ಪಾಂಗಿಂದೆ
ಶ್ರೀರಾ. ಕಿಸಂ.-೧೧/೧-೨
ನಾಟ್ಯರಂಗದಲಿ
ಭಾವಾನು ಭಾವಂಗಳಿಂ ವಿಭಾವಂಗಳಿಂ
ರಸವನಾಸ್ವಾದಿಸುವ ರಸಿಕ ಕೋವಿದನಂತೆ
ಶ್ರೀರಾ. ಶ್ರೀ ಸಂ.-೪/೩೩೩-೫೩೫

೧೧. ವೃತ್ತಿ ಸಂಬಂಧವಾದ ಉಪಮೆಗಳು

ದಶರಥನೃಪಂ
ಮಕ್ಕಳ್ಗೆ ಮದುವೆಯಂ ನೆನೆದನಾಸಾರಮಂ
ನೆನೆವಂತುಟೊಕ್ಕಲಿಗನುತ್ತು ಬಿತ್ತಂಬಿತ್ತಿ
ಹರಗಿ
ಶ್ರೀರಾ. ಅಸಂ.-೨/೫-೮

ಉತ್ತುಬಿತ್ತಿ ಹರಗಿದನಂತರ ಮಳೆ ಬೀಳದಿದ್ದರೆ ರೈತನ ಭವಿಷ್ಯವೇ ಮಸಕಾಗುತ್ತದೆ; ಲೋಕದ ಕ್ಷೇಮ ಕ್ಷೀಣವಾಗುತ್ತದೆ. ಅಂತೆಯೇ ಮಕ್ಕಳಿಲ್ಲದ ದೊರೆಯ ಸಾಮ್ರಾಜ್ಯ ಅಸಾರ್ಥಕ ವಾಗುತ್ತದೆ. ಅಷ್ಟೇ ಅಲ್ಲ, ಲೋಕಕಲ್ಯಾಣದ ದೃಷ್ಟಿಯಿಂದಲೂ ದಶರಥ ಮಕ್ಕಳು ಪಡೆಯ ಬೇಕಾಗಿದೆಯೆಂಬ ಇಂಗಿತವೂ ಈ ಉಪಮೆಯಲ್ಲಿದೆ.

ಹಿಂಡಿಕೊಂಡುದು ತನ್ನ ಬಾಯ್ಬಿಲಕೆ,
ತಿಲದಿಂದೆ ತೈಲಮಂ ಪಿಳಿವ ಗಾಣಿಗನಂತೆ
ನೆಣಮಜ್ಜೆಯಂ
ಶ್ರೀರಾ. ಶ್ರೀಸಂ.-೧/೨೬೧-೨೬೩

ಕುಂಭಕರ್ಣನನ್ನೆಬ್ಬಿಸುವ ಸಲುವಾಗಿ ನಾನಾ ಪ್ರಾಣಿಗಳನ್ನು ಆಹುತಿ ಕೊಡುವ ಸಂದರ್ಭದಲ್ಲಿ ಈ ಉಪಮೆ ಬಳಕೆಗೊಂಡಿದೆ. ಗಾಣಿಗ ಎಳ್ಳಿನಿಂದ ಎಣ್ಣೆಯನ್ನು ಹಿಂಡುವಂತೆ ಭೂತವೊಂದು ಹಂದಿಯ ಕೊಬ್ಬುನೆಣಗಳನ್ನು ತನ್ನ ಬಾಯಿಗೆ ಹಿಂಡಿಕೊಳ್ಳುವ ದೃಶ್ಯವನ್ನಿಲ್ಲಿ ಚಿತ್ರಿಸಲಾಗಿದೆ.

೧೨. ಅವರ್ಗೀಯ ಉಪಮೆಗಳು : ಮೇಲ್ಕಂಡ ಯಾವ ವರ್ಗಕ್ಕೂ ಸೇರದೆ ಹೊರಗುಳಿ ಯುವ ಉಪಮೆಗಳು ನೂರಾರಿವೆ. ಎಲ್ಲ ಉಪಮೆಗಳನ್ನು ಆಳವಾಗಿ ಕೂಲಂಕಷವಾಗಿ ಅಧ್ಯಯನ ಮಾಡಿದಾಗ ಮಾತ್ರ ವ್ಯವಸ್ಥಿತವಾದ ವರ್ಗೀಕರಣ ಸಾಧ್ಯ. ಅಂಥ ವರ್ಗೀಕರಣ ಸಾಧ್ಯವಾದಾಗ, ಮೇಲ್ಕಂಡ ವಿಂಗಡಣೆ ವ್ಯತ್ಯಾಸವಾಗಬಹುದು; ಹೊಸ ವರ್ಗಗಳು ಅಸ್ತಿತ್ವಕ್ಕೆ ಬರಬಹುದು; ಸದ್ಯದಲ್ಲಿ ವರ್ಗೀಕರಣಕ್ಕಳವಡದ ಉಪಮೆಗಳು ಹೊಸ ವರ್ಗಗಳಲ್ಲಿ ಸೇರ್ಪಡೆಗೊಳ್ಳಬಹುದು. ಅಂಥ ಕೆಲವೇ ಕೆಲವು ಉಪಮೆಗಳನ್ನಿಲ್ಲಿ ಉದ್ಧರಿಸಿದೆ :

ಪ್ರಳಯಾಗ್ನಿ ಚಕ್ರಕೇಂದ್ರ ದೊಳಿರ್ಪ ಸುಧೆಯವೊಲ್
ಶ್ರೀರಾ. ಅಂಸ -೨/೭೩
ಚಕ್ಕಮುಕ್ಕಿಯ ಕಲ್ಲಿನಂತರಂಗದೊಳಗಗ್ನಿ ಗುಪ್ತವಾಗಿರ್ಪಂತೆ
ಶ್ರೀರಾ. ಅಸಂ-೧/೬೧೯-೬೨೦
ಘನಂ ದ್ರವಮಾಗುವೋಲುರಿಗೆ ಕಪ್ಪುರಂ ಕರಗುವೊಲ್ ಕರಗಿದನು ಗುರು.
ಶ್ರೀರಾ. ಶ್ರೀಸಂ-೧೩/೧೪-೧೫
ಕೊಳೆಗೆ ತಗುಳಲ್ಕಗ್ನಿ ಕೊಳೆಯುಮುರಿಯಪ್ಪುದಂತೆಯೆ
ಶ್ರೀರಾ. ಕಿಸಂ-೭/೧೬೪-೧೬೫
ಕಲ್ಲೆತಾಂ ಬೆಣ್ಣಿಯಾಯ್ತೆನೆ, ಬಂಡೆ ಕಂಪಿಸಿತು.
ಶ್ರೀರಾ. ಅಸಂ-೨/೨೮೦
ತನಿಗೆಂಡದಲಿ ಕಡೆದ ಗೋಪುರದಂತೆ ರಂಜಿಸೆ

ಉಪಮೆಗಳ ಈ ಅಧ್ಯಯನ ಅವಸರದ ಪ್ರಯತ್ನವಾಗಿದೆಯೇ ಹೊರತು, ಸಾವಧಾನದ ಸುವ್ಯವಸ್ಥಿತ ಅಭ್ಯಾಸವಾಗಿಲ್ಲ. ಕುವೆಂಪು ಸಾಹಿತ್ಯದ ಈ ಮುಖದ ಕಡೆಗೆ ವಿದ್ಯಾರ್ಥಿವೃಂದದ ಗಮನ ಸೆಳೆಯುವುದು ಮಾತ್ರ ಈ ಲೇಖನದ ಉದ್ದೇಶ. ಕುವೆಂಪು ಶೈಲಿಯ ದೃಷ್ಟಿಯಿಂದಂತು ಉಪಮೆಗಳ ಅಧ್ಯಯನ ಅತ್ಯಗತ್ಯ. ಈ ಅಗತ್ಯ ಬೇಗ ಪೂರೈಕೆಯಾಗಲೆಂದು ಹಾರೈಸುತ್ತೇನೆ.[7]

 


[1]    ‘ಸಮುದ್ರಲಂಘನ-ಒಂದು ಖಂಡಕಾವ್ಯ’ ಎಂಬ ನನ್ನದೊಂದು ಲೇಖನದಲ್ಲಿ ಇಲ್ಲಿ ಬರುವ ಕೆಲವು ಉಪಮೆಗಳನ್ನು ಪರಾಮರ್ಶಿಸಲಾಗಿದೆ – ಕುವೆಂಪು ಸಾಹಿತ್ಯ : ಕೆಲವು ಅಧ್ಯಯನಗಳು, ಪು. ೧೦೭-೧೦೮. ನೋಡಿ.

[2]    ರಚನೆಗನುಗುಣವಾಗಿ ಅವನ್ನು ಪೂರ್ಣೋಪಮೆ ಲುಪ್ರೋವಿಂಗಡಿಸುತ್ತಾರೆ. ಇವುಗಳ ಜತೆಗೆ ಉಪಪ್ರಭೇದಗಳೂ ಇವೆ.

[3]    ಇತ್ಯಾದಿ, ಪು. ೨೨.

[4]    ಅದೇ, ಪು. ೨೫.

[5]    ‘ನೆನಪಿನ ದೋಣಿಯಲ್ಲಿ’ ಸೇರಿಸಿರುವ ‘ಬಂದೆನ್ನ ಸೇರು’ ಎಂಬ ಕವಿತೆಯನ್ನು (ಪು. ೫೨೮) ನೋಡಿ. ಅಲ್ಲಿರುವ ಐದು ಪದ್ಯಗಳೂ ಉಪಮಾ ಮಾಲೆಗಳಾಗಿವೆ.

[6]    ಉಪಮೆಗಳಲ್ಲಿ ಉಪಮಾನಗಳೇ ಪ್ರಧಾನವಾದ್ದರಿಂದ, ಉಪಮೇಯಗಳಿಗೆ ಅವು ಪೋಷಕವಾದ್ದ ರಿಂದ, ಸಾಮಾನ್ಯವಾಗಿ ಉಪಮಾನಗಳ ವಸ್ತುವನ್ನೆ ಗಮನಕ್ಕೆ ತೆಗೆದುಕೊಳ್ಳಲಾಗುತ್ತದೆ, ಉಪಮೇಯಗಳ ವಸ್ತುವನ್ನಲ್ಲ.

[7]    ಶ್ರೀ ಕೃಷ್ಣಶೆಟ್ಟರು ‘ಉಪಮಾ ಸರಸ್ಸು-ಶ್ರೀರಾಮಾಯಣದರ್ಶನಂ’ ಎಂಬ ಹೆಸರಿನ ತಮ್ಮ ಗ್ರಂಥದಲ್ಲಿ ಆ ಮಹಾಕಾವ್ಯದಲ್ಲಿ ಬರುವ ಉಪಮೆಗಳನ್ನು ಕುರಿತು ಅಧ್ಯಯನ ನಡೆಸಿದ್ದಾರೆ. ಆ ದಿಶೆಯಲ್ಲಿ ಅದೊಂದು ಪ್ರಾಮಾಣಿಕ ಪ್ರಯತ್ನವಾದರೂ, ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯವೆಂದು ತೋರುತ್ತದೆ.