ನಿಸರ್ಗದ ನಂತರ ಶ್ರೀ ಕುವೆಂಪು ಅವರ ಸಮಗ್ರ ಜೀವನದ ಮೆಲೆ ಅತ್ಯಂತ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿರುವ ಶಕ್ತಿಗಳೆಂದರೆ ಶ್ರೀ ರಾಮಕೃಷ್ಣ ಪರಮ ಹಂಸರು ಮತ್ತು ಸ್ವಾಮಿ ವಿವೇಕಾನಂದರು. ಆ ಎರಡು ಮಹಾಚೇತನಗಳ ಚಿತ್ಕಲೆ ಅವರ ಮಾನಸಗರ್ಭವನ್ನು ಪ್ರವೇಶಿಸಿದಾಗಿನಿಂದ ಅವರ ಗತಿಗಮ್ಯಗಳು ಸುಸ್ಪಷ್ಟವಾಗುತ್ತವೆ; ಕಾಲಕ್ರಮೇಣ ಅದು ಅವರ ಜೀವನ ಸಮಸ್ತವನ್ನೆಲ್ಲ ವ್ಯಾಪಿಸಿಕೊಂಡಾಗ, ಅದೇ ಅವರ ಚೇತನವಾಗಿ ಪರಿಣಮಿಸಿದಾಗ ಅವರಿಗಾದ ಅನುಭವ ಉಪಮಾತೀತವಾದದ್ದು. ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದಾಗಲೆ ಮೈಸೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಶ್ರೀ ರಾಮಕೃಷ್ಣ-ವಿವೇಕಾನಂದ ಸಾಹಿತ್ಯ ಅವರ ಕಣ್ಣಿಗೆ ಬಿದ್ದ ಸಂದರ್ಭ ಅವರ ಪಾಲಿಗೆ ಅಮೃತಗಳಿಗೆಯಾಗುತ್ತದೆ. ‘ಹೀಗೆ ನೋಡುತ್ತಿದ್ದಾಗಲೆ ನನಗೆ ನನ್ನ ಜೀವನದ ದಿಕ್ಕನ್ನೇ ತಿರುಗಿಸಿ, ನನ್ನ ಬದುಕನ್ನೆಲ್ಲ ಮೌಢ್ಯದಿಂದ ಅಮರ್ತ್ಯಕ್ಕೆತ್ತಿ ಬೀಸಿದ ಭಗವತ್ ಕೃಪಾ ಹಸ್ತರೂಪದ ಶ್ರೀ ರಾಮಕೃಷ್ಣ-ವಿವೇಕಾನಂದ ವಿಷಯಕವಾದ ಕೃತಿ ಶ್ರೇಣಿಯ ದರ್ಶನ ವಾದದ್ದು.

[1] ‘ಆ ಸಮಯದಲ್ಲಿ ನನ್ನ ಚೇತನ ಸ್ವಾಮಿ ವಿವೇಕಾನಂದರ ಭಾಷಣಗಳನ್ನೋದಿ ತನ್ನ ಅಗ್ನಿಪಕ್ಷಗಳನ್ನು ಬಿದಿರ್ಚಿ ಆಕಾಶಗಾಮಿಯಾಗುತ್ತಿತ್ತು’ ಎಂದವರು ಹೇಳಿಕೊಳ್ಳುತ್ತಾರೆ. ಆ ಕ್ಷಣದಿಂದಲೇ ಆ ಗುರುಕೃಪೆಯ ಅವತರಣವನ್ನು ಅವರ ಎಲ್ಲ ಕೃತಿಗಳಲ್ಲಿಯೂ ಕಾಣಬಹುದಾಗಿದೆ.

೧೬.೯.೧೯೨೪ರಲ್ಲಿ ಬರೆದೊಂದು ಸಾನೆಟ್ಟೇ ಶ್ರೀ ರಾಮಕೃಷ್ಣರನ್ನು ಕುರಿತ ಮೊದಲ ಕೃತಿಯೆಂದು ತೋರುತ್ತದೆ. ಸಾನೆಟ್ ರೂಪವಲ್ಲದೆ ಬೇರೆ ಯಾವ ಕಾವ್ಯಾಂಶದ ವೈಶಿಷ್ಟ್ಯವೂ ಅದಕ್ಕಿಲ್ಲದುದರಿಂದಲೇ ಅದೆಲ್ಲಿಯೂ ಅಚ್ಚಾಗಿಲ್ಲ. ‘ಗುರುದೇವ, ಅದ್ವೈತ ದೇವನಂ ಮರೆತಿಹೆವು, ಪರೆಯನಿವ, ಶೂದ್ರನಿವ, ಬೌದ್ಧನಿವ, ಕ್ರೈಸ್ತನಿವ, ತುರುಕನಿವ ಎಂಬ ಖಳವೇದವನು ಕಲಿತಿಹೆವು. ಶಿವನಾನು ಎಂಬುದನು ಕಲಿಸೆನಗೆ’ ಮುಂತಾದ ಭಾವಗಳು[2] ಅದರಲ್ಲಿ ಅಭಿವ್ಯಕ್ತಗೊಂಡಿವೆ. ಕವಿಗಳ ನಿರ್ಜಾತೀಯ ನಿರ್ಮತೀಯ ಮನೋಭಾವ ಆಗಲೇ ಅವರ ಬಾಳಿನಲ್ಲಿ ರೂವಿಕ್ಕುತ್ತಿದ್ದುದನ್ನು ಈ ಸಂರ್ಭದಲ್ಲಿ ಗಮನಿಸಬಹುದು.

ಶ್ರೀ ರಾಮಕೃಷ್ಣರನ್ನು ಕುರಿತು ಸಾನೆಟ್ ರಚಿಸುವುದಕ್ಕೆ ಮುಂಚೆಯೇ ಅವರು ೧೯೨೪ರ ಫೆಬ್ರವರಿ ತಿಂಗಳಲ್ಲಿ ಸ್ವಾಮಿ ವಿವೇಕಾನಂದರ ಮೇಲೊಂದು ಸಾನೆಟ್ ರಚಿಸಿದ್ದುಂಟು. ಅದು ಇಂಗ್ಲಿಷಿನಲ್ಲಿದೆ. ಅದರ ಕೊನೆಯ ಆರು ಸಾಲುಗಳಿವು :

Like a great dazzling Meteor didst thou come
Enlightening all; and flashed across the sky;
Then wonder thrilled each slumbering heart, while dumb
All stood adoring thee with wrinklcss eye!
Again and let again, Ascetic blest
And Guide Divine, the Orient rays blaze west![3]

ಈ ಕವಿತೆಯ ಪ್ರಾರಂಭದಲ್ಲಿ ಅವರು ವಿವೇಕಾನಂದರನ್ನು ವಿಶ್ವಗುರುವೆಂದು, ಅಧ್ಯಾತ್ಮ ದೈತ್ಯರೆಂದು, ಭಗವಂತನ ಮಹಾಯೋಧರೆಂದು, ಧೀರಸಾಧುವೆಂದು, ಸಾವಿಲ್ಲದ ಜ್ಯೋತಿ ಯೆಂದು, ಭೂಸ್ವರ್ಗಗಳ ಮಹಾಸೇನಾನಿಯೆಂದು ಸ್ತುತಿಸುತ್ತಾರೆ.

ಕುವೆಂಪು ಅವರೊಮ್ಮೆ ಲೋಟಸ್ ಲೀಫ್ ಯುನಿಯನ್ನಿನ ಶಾಖೆಯನ್ನು ತೆರೆಯುವ ಸಲುವಾಗಿ ಬೆಂಗಳೂರಿಗೆ ಹೋಗಿ, ಭೂಪಾಳಂ ಚಂದ್ರಶೇಖರಯ್ಯನವರ ಕೊಠಡಿಯಲ್ಲಿ ತಂಗಿದ್ದಾಗ, ಅವರ ಮೇಜಿನ ಮೇಲೆ ಅವರ ಜೀವನ ನೌಕೆಯ ಕರ್ಣಧಾರ ಸ್ವರೂಪವಾಗಲಿದ್ದ ಒಂದು ಮಹಾ ಪೂಜ್ಯ ಅನರ್ಘ್ಯ ವಸ್ತುವನ್ನು ಸಂದರ್ಶಿಸುತ್ತಾರೆ. ‘ಶ್ರೀ ರಾಮಕೃಷ್ಣ ಜೀವನ ಚರಿತ್ರೆ ಅನೇಕ ಅಧಿಕೃತ ಮೂಲಗಳಿಂದ ಸಂಗ್ರಹಿಸಿದುದು’ ಎಂಬುದೇ ಆ ವಸ್ತು. ಅದರ ಬಗ್ಗೆ ಕವಿಗಳ ಮನಸ್ಸಿನಲ್ಲಿದ್ದ ಭಾವವೀಚಿಗಳಿವು: ‘ನನ್ನ ಪ್ರಜ್ಞೆಗೆ ಅರಿಯದಂತೆಯೆ ದೇವ ದೇವ ಮಹಾದೇವನ ಪುಸ್ತಕ ರೂಪಿ ಕೃಪಾಹಸ್ತ ತನ್ನ ಕಂದನನ್ನೆತ್ತಿ ಎದೆಗಪ್ಪಿಕೊಳ್ಳಲು ಕೈಚಾಚಿದಂತಿತ್ತು! ಶ್ರೀ ತಾಯಿಯ ಕರುಣೆ ಮೈದಾಳಿದಂತಿತ್ತು! ನಾನು ಅದುವರೆಗೆ ಸ್ವಾಮಿ ವಿವೇಕಾನಂದರ ಭಾಷಣಗಳಲ್ಲಿ ಅಲ್ಲಲ್ಲಿ ಬರುವ ಶ್ರೀ ರಾಮಕೃಷ್ಣರ ವಿಚಾರ ಓದಿದ್ದೆನಾದರೂ ಅವರ ಜೀವನ ಚರಿತ್ರೆಯನ್ನು ಓದಿರಲಿಲ್ಲ. ವಿವೇಕಾನಂದರ ಗುರುಗಳೆಂದು ಅವರಲ್ಲಿ ಗೌರವವಿದ್ದಿತಾದರೂ ವಿವೇಕಾನಂದರ ಪರವಾಗಿ ನನ್ನಲ್ಲಿದ್ದ ಪೂಜ್ಯ ಬುದ್ದಿಯಷ್ಟು ತೀವ್ರವಾಗಿ ರಲಿಲ್ಲ, ಪರಮಹಂಸರಲ್ಲಿದ್ದ ಆ ಗೌರವ.”[4] ಊಟ ನಿದ್ದೆಗಳ ಕಡೆಗೂ ಲಕ್ಷ್ಯವಿಲ್ಲದೆ ಆ ಪುಸ್ತಕವನ್ನವರು ಓದುತ್ತಾರೆ.

೧೯೨೬ರ ಪ್ರಾರಂಭದಲ್ಲಿ ಬನುಮಯ್ಯ ಪ್ರೌಢಶಾಲೆಯ ಸಭಾಂಗಣದಲ್ಲಿ ಏರ್ಪಾಡಾಗಿದ್ದ ಸ್ವಾಮಿ ವಿವೇಕಾನಂದರ ಜನ್ಮೋತ್ಸವದಲ್ಲಿ ಭಾಗವಹಿಸಿದ್ದಾಗ ಅವರು ಶ್ರೀ ರಾಮಕೃಷ್ಣಾ ಶ್ರಮದ ಶ್ರೀ ಸ್ವಾಮಿ ಸಿದ್ದೇಶ್ವರಾನಂದರ ಕಣ್ಣಿಗೆ ಬೀಳುತ್ತಾರೆ. ಸ್ವಾಮೀಜಿಯವರ ಆಹ್ವಾನದ ಮೇರೆಗೆ ಅವರು ಆಗಾಗ್ಗೆ ಆಶ್ರಮಕ್ಕೆ ಹೋಗಿ ಬರುತ್ತ ಆಧ್ಯಾತ್ಮಿಕ ಸಾಧನೆಯ ಕಡೆಗೆ ಅವರ ಗಮನ ಹರಿಯುತ್ತದೆ. ಸುಮಾರು ಅದೇ ಸಮಯದಲ್ಲಿ ‘ಸ್ವಾಮಿ ವಿವೇಕಾನಂದ’ ಎಂಬ ಕವಿತೆಯನ್ನು ರಚಿಸುತ್ತಾರೆ. ಆ ಕವಿತೆಯ ಏಳು ಪದ್ಯಗಳಲ್ಲಿ ಮೂರನ್ನು ಮಾತ್ರ ಮುಂದೆ ಉದ್ಧರಿಸಲಾಗಿದೆ :

ಶ್ರೀ ವಿವೇಕಾನಂದನೆ! ಬ್ರಹ್ಮಾನಂದನೆ
ನಿನಗೆ ಪರಮ ಮಂಗಳಂ! ಓಂ ಓಂ ಮಂಗಳಂ
ಪರಮಹಂಸರ! ಪರಮ ಶಿಷ್ಯನೆ
ಆರು ಅರಿಗಳ! ವೀರ ವೈರಿಯೆ….ಶ್ರೀ…
ವಿಶ್ವಹೃದಯನೆ! ವಿಶ್ವದಾತ್ಮನೆ
ವಿಶ್ವಕಾಯನೆ! ನೀನೆ ವಿಶ್ವವು….ಶ್ರೀ[5]

ಆ ಹೊತ್ತಿಗಾಗಲೇ ವಿವೇಕಾನಂದರು ಅವರ ಜೀವನದ ಸರ್ವಸ್ವವಾಗಿರುವ, ಸ್ಫೂರ್ತಿ ಚೈತನ್ಯವಾಗಿರುವ ಸಂಗತಿ ಈ ಕವಿತೆಯಿಂದ ಸ್ಪಷ್ಟವಾಗುತ್ತದೆ.

ಈಚೆಗೆ ‘ಶ್ರೀ ಗುರು’ ಎಂಬ ಶೀರ್ಷಿಕೆಯಿಂದ ಅಗ್ನಿಹಂಸದಲ್ಲಿ ಅಚ್ಚಾಗಿರುವ ಕವಿತೆ ‘ಶ್ರೀ ರಾಮಕೃಷ್ಣ ಪರಮಹಂಸ’ ಎಂಬ ಹೆಸರಿನಲ್ಲಿ ರಚಿತವಾದದ್ದು ಆಗಲೇ. ಪರಮ ಹಂಸರನ್ನು ಕುರಿತ ಸ್ತೋತ್ರ ಗೀತೆಗಳಲ್ಲಿ ಇಂದಿಗೂ ಅದರ ಸ್ಥಾನ ತುಂಬ ಎತ್ತರದಲ್ಲಿದೆ. ಶ್ರೀ ರಾಮಕೃಷ್ಣರ ಜೀವನ ಹಾಗೂ ಜೀವನ ಸಂದೇಶಗಳು ಇಲ್ಲಿಯ ಆರು ಪದ್ಯಗಳಲ್ಲಿ ಬಹು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿವೆ.

ಭರತ ಖಂಡದ ನೀಲಗಗನವ ತಿಮಿರ ಮುಸುಗಿರಲು,
ಭಾರತೀಯರು ತಮ್ಮ ಧ್ಯೇಯವ ಮರೆತು ಮಲಗಿರಲು,
ಪರಮಹಂಸನೆ, ಉದಯ ಸೂರ್ಯನ ತೆರದಿರಂಜಿಸಿದೆ,
ಹೃದಯ ನಭದಜ್ಞಾನ ತಿಮಿರವನಿರದೆ ಭಂಜಿಸಿದೆ.
ಸರ್ವಮಾರ್ಗಗಳೊಂದೆ ನಿಲಯಕೆ ಪೋಪುವೆಂಬುದನು
ಯೋಗ ವಿದ್ಯೆಯೊಳರಿತು ಮಾನವ ಕುಲಕೆ ಬೋಧಿಸಿದೆ!
ಕ್ರೈಸ್ತ ಹಿಂದೂ ಮಹಮದೀಯರೆ ಬೌದ್ಧ ಮೊದಲಾದ
ಮತಗಳಾತ್ಮವದೊಂದೆ ಎಂಬುದ ತಿಳುಹಿ ಪಾಲಿಸಿದೆ.

ಭೂಸ್ವರ್ಗಗಳನ್ನು ಸೇರಿಸುವ ಸೇತುವೆ ಅವರು. ಜಗತ್ತಿನ ಎಲ್ಲ ಅವತಾರ ಪುರುಷರೂ ಪವಿತ್ರ ಗ್ರಂಥಗಳೂ ಅವರಲ್ಲಿ ಐಕ್ಯವಾಗಿವೆ ಎಂಬ ಭಾವನೆಗಳು ಈ ಕವನದಲ್ಲಿ ಮೂರ್ತಿ ವತ್ತಾಗಿ ಬಂದಿವೆ.

ಇನ್ನು ಮುಂದೆ ಶ್ರೀ ರಾಮಕೃಷ್ಣರೇ ಅವರಿಗೆ ಆಶೀರ್ವಾದ ರಕ್ಷೆಯಾಗುತ್ತಾರೆ. ವಿವೇಕಾ ನಂದರೇ ಅವರಿಗೆ ದಾರಿದೀಪವಾಗುತ್ತಾರೆ. ಪ್ರಲೋಭನೆಗಳಿಗಾಗಿ, ದಾರಿ ತಪ್ಪುವ ಸೂಚನೆ ಕಂಡಾಗಲೆಲ್ಲ ಅವರು ಆ ಎರಡು ಶಕ್ತಿಗಳನ್ನು ತಮ್ಮ ದೇಹಕ್ಕೆ ಆವಾಹಿಸಿಕೊಂಡು, ಅಪಾಯ ದಿಂದ ಪಾರಾಗುತ್ತಾರೆ, ನವಚೈತನ್ಯವನ್ನು ಪಡೆಯುತ್ತಾರೆ. ‘ಪ್ರಲೋಭನಕ್ಕೆ ಮತ್ತೆ ಎಂದಿಗೂ ಒಳಗಾಗುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿ ಶ್ರೀ ರಾಮಕೃಷ್ಣರಿಗೆ ಪ್ರಾರ್ಥನೆ ಸಲ್ಲಿಸಿದೆ. ಅದಕ್ಕಿಂತಲೂ ದೃಢತರ ವ್ರತವನ್ನು ಹಿಂದೆಂದೂ ಕೈಕೊಂಡಿರಲಿಲ್ಲ ಎಂದು ತಮ್ಮ ದಿನಚರಿಯಲ್ಲಿ ಬರೆದುಕೊಳ್ಳುತ್ತಾರೆ.[6] ‘ಓಂ ರಾಮ ಕೃಷ್ಣ, ಓಂ ವಿವೇಕಾನಂದ; ಓಂ ಶ್ರೀ ರಾಮಕೃಷ್ಣ ನನ್ನನ್ನು ರಕ್ಷಿಸು, ಗಿರೀಶಚಂದ್ರ ಘೋಷನನ್ನು ನೀನೆಂತು ರಕ್ಷಿಸಿದೆಯೊ ಅಂತೆಯೆ! ನಾನೇರಿದ ಎತ್ತರದಿಂದ ಬಿದ್ದು ಬಿಟ್ಟೆನಲ್ಲಾ!’ ಎಂಬಂಥ ಆರ್ತನಾದವನ್ನು ದಿನಚರಿಯಲ್ಲಿ ಓದುಗರು ಮೇಲಿಂದ ಮೇಲೆ ಎದುರುಗೊಳ್ಳಬಹುದಾಗಿದೆ. ಮನೆಮಾರು ಬಿಟ್ಟು ಅವರು ಸನ್ಯಾಸಿಯಾಗುತ್ತಾರೆಂಬ ವಾರ್ತೆಯೂ ಅವರ ನೆಂಟರಿಷ್ಟರಲ್ಲಿ ಹಬ್ಬುತ್ತದೆ.

೧೯೨೬ರ ಅಂತ್ಯ ಭಾಗದಲ್ಲಿ ಶ್ರೀ ವಿವೇಕಾನಂದ ರೋವರ್ ಸ್ಕೌಟುಗಳ ಉಪಯೋಗ ಕ್ಕೆಂದು ಒಂದು ಹಾಡನ್ನು ‘ವಿವೇಕಾನಂದ ಬಾಲಚಾರರ ಹಾಡು’ ಎಂಬ ತಲೆ ಹೆಸರಿನಲ್ಲಿ ರಚನೆಗೊಳ್ಳುತ್ತದೆ. ಒಂಬತ್ತು ಪದ್ಯಗಳಿರುವ ಈ ಹಾಡಿನಲ್ಲಿ ಭಾರತ ಮಾತೆಯ ಮಹಿಮಾ ವೈಭವದ ವರ್ಣನೆಯಿದೆ.

ಭಾರತೀಯ ಬಾಲಕರು ನಾವುಗಳು ಬನ್ನಿ!
ಭಾರತಿಗೆ ಸೇವೆಯೆಂಬಾರತಿಯ ತನ್ನಿ !
ಭಾರತಿಯ ಮೂರುತಿಗೆ ಮಂಗಳು ಎನ್ನಿ
ಮಂಗಳಂ! ಮಂಗಳಂ! ಮಂಗಳಂ. ಮಾತೆ!
ಶ್ರೀ ವಿವೇಕರಮಲ ದಳದ ಬಾಲಚಾರರು
ದೇವಿ, ನಾವು ನಿನ್ನ ಭಜಿಪ ತರುಣವೀರರು!
ಶ್ರಿ ವಿವೇಕರಂದದಿ
ನಿನ್ನ ಸೇವೆಗೈವೆವು,
ಶ್ರೀ ವಿವೇಕ ನಮಿತಪಾದೆ ಭಾರತಾಂಬೆಯೆ![7]

ಆ ಕಾಲದಲ್ಲವರಿಗೆ ವಿವೇಕಾನಂದ ನಾಮವೆ ಸ್ಫೂರ್ತಿಮಂತ್ರ; ಕಲ್ಪತರು ಕಾಮಧೇನು ಎಲ್ಲವೂ. ‘ಅಭೀಃ’ ಎಂಬ ವಿವೇಕಾನಂದರ  ಸಂದೇಶದಿಂದ ಪ್ರೇರಿತರಾಗಿ ‘ಭಯಪಡಬೇಡ-ಇಲ್ಲ ಅಪಾಯ! ಜಯಿಸಲು ನಿನಗೆ-ಇಹುದು ಉಪಾಯ!’ ಎಂಬ ಕವಿತೆಯನ್ನವರು ರಚಿಸುತ್ತಾರೆ.7 ‘ಎದ್ದೇಳು! ಎದ್ದೇಳು!’ ಎಂಬುದು ಅಂಥದೇ ಮತ್ತೊಂದು ಕವಿತೆ. ಅವರ ಮನಸ್ಸಿನಲ್ಲಿ ಜರುಗುತ್ತಿದ್ದ ಒಳತೋಟಿಗಳಿಗೆ ಅವರಂತರಾತ್ಮನಿಂದ ಹೊರಹೊಮ್ಮಿದ ಪ್ರತಿಕ್ರಿಯೆಗಳಿವು.

ಭಗವತ್ಕೃಪೆ ಮಂಗಳರೂಪದಲ್ಲಿ ಮಾತ್ರವಲ್ಲ, ಅಮಂಗಳ ರೂಪದಲ್ಲಿಯೂ ಕಾಣಿಸಿ ಕೊಳ್ಳುತ್ತದೆಂಬ ತಮ್ಮ ಸಿದ್ಧಾಂತಕ್ಕೆ ಅವರೇ ಲಕ್ಷ್ಯವಾಗಿದ್ದಾರೆ. ಅವರು ಸಂತೆಪೇಟೆಯ ಗಲಿಬಿಲಿಯ ಕೊಳಕು ಹೋಟೆಲಿನಲ್ಲಿದ್ದಾಗ ಅವರ ಆರೋಗ್ಯ ದಿನೇ ದಿನೇ ಕೆಟ್ಟು, ಹಾಸುಗೆ ಹಿಡಿಯುತ್ತಾರೆ. ಕ್ಲೇಶರೂಪಿ ಭಗವತ್ ಕೃಪೆಯ ಗದೆಯಾಘಾತ ಕಾಯಿಲೆಯ ರೂಪದಲ್ಲಿ ಅವರ ಮೇಲೆ ಬಂದೆರಗುತ್ತದೆ. ಕೆಲವು ದಿನಗಳಿಂದ ಆಶ್ರಮದ ಕಡೆಗೆ ಬರದಿದ್ದ ಕುವೆಂಪು ಅವರನ್ನು ಸಿದ್ದೇಶ್ವರಾನಂದ ಸ್ವಾಮಿಗಳು ನೆನೆಸಿಕೊಂಡು ಹೇಳಿ ಕಳಿಸುತ್ತಾರೆ. ಅವರ ದೇಹಸ್ಥಿತಿಯ ವಿಷಯ ತಿಳಿದಾಗ ಸ್ವಾಮಿಗಳೇ ತಮ್ಮ ಸ್ನೇಹಿತರೊಡಗೂಡಿ, ಅವರ ಕೋಟಡಿಗೆ ಹೋಗಿ ನೋಡಿ, ಅವರನ್ನು ಆಸ್ಪತ್ರೆಗೆ ಸೇರಿಸಿ, ಧೈರ್ಯ ಹೇಳಿ ಬರುತ್ತಾರೆ. ಗುರುಸ್ಮೃತಿಯ ಕೃಪಾಶ್ರಯದಲ್ಲಿ ಅವರ ರೋಗ ಗುಣವಾದ ನಂತರ, ಸ್ವಾಮಿಗಳು ಅವರನ್ನು ಆಶ್ರಮಕ್ಕೆ ಕರೆತಂದು ಧನ್ವಂತರಿಗಿಂತ, ತಂದೆ ತಾಯಿಯರಿಗಿಂತ ಮಿಗಿಲಾಗಿ ಉಪಚರಿಸುತ್ತಾರೆ. ಜೀವ, ಜಗತ್ತು, ಈಶ್ವರ, ಜನ್ಮಾಂತರ, ಕರ್ಮ, ಕೃಪೆ, ಪ್ರಾರ್ಥನೆ, ಸಾಧನೆ ತಪಸ್ಯೆ, ಗುರು, ಅವತಾರ ಇತ್ಯಾದಿ ನಾನಾ ವಿಚಾರಗಳ ಬಗ್ಗೆ ಕುವೆಂಪು ಸ್ವಾಮೀಜಿ ಜತೆಯಲ್ಲಿ ಜಿಜ್ಞಾಸೆ ನಡೆಸುತ್ತಾರೆ; ನಿರಂತರವಾಗಿ ಜಗನ್ಮಾತೆಯ ಪೂಜಾನುಸಂಧಾನಗಳಲ್ಲಿ ತೊಡಗುತ್ತಾರೆ. ‘ಸಂಸಾರ ಬರಿ ಮೋಸ ಎನಬೇಡ, ದಾಸ, ತಾಯಲೀಲೆಯ ನೀನು ಬಲು ಬಲ್ಲೆಯೇನು?’ ಎಂದು ಸಂಸಾರ ಮಾಯೆಯೆನ್ನುವವರನ್ನು ಪ್ರಶ್ನಿಸುತ್ತಾರೆ.

೧೯೨೭ನೆಯ ವರ್ಷದ ಕ್ರಿಸ್‌ಮಸ್ ರಜೆಯಲ್ಲಿ ಅವರು ಸ್ವಾಮಿ ಸಿದ್ದೇಶ್ವರಾನಂದ ಹಾಗೂ ಇತರ ಮಿತ್ರರೊಡನೆ ಜೋಗಕ್ಕೆ ಹೋಗಿದ್ದಾಗ, ಜ್ವರಗ್ರಸ್ತರಾಗುತ್ತಾರೆ. ಸ್ವಾಮಿಜಿ ಮಿತ್ರರೊಡನೆ ಮೈಸೂರಿಗೆ ಹಿಂದಿರುಗಿದ ನಂತರ ಕುವೆಂಪು ಅವರಿಗೆ ಸಿಡುಬು ತಗುಲಿದೆಯೆಂದು ಗೊತ್ತಾಗುತ್ತದೆ. ಜ್ವರದ ಸನ್ನಿಯಲ್ಲಿ ಅವರು ಬಾಹ್ಯ ಪ್ರಜ್ಞೆ ಕಳೆದುಕೊಂಡಿದ್ದರೂ, ಯಾವಾಗಲೂ ತಮ್ಮ ಬಳಿ ಇರುತ್ತಿದ್ದ ಗುರುಮಹಾರಾಜ್, ಮಹಾಮಾತೆ, ಸ್ವಾಮೀಜಿಯವರ ಚಿತ್ರಪಟ ತಮಗೆ ಬೇಕೆಂದು ಬಡಬಡಿಸುತ್ತಾರೆ. ಅದು ಸಿಕ್ಕಿದಾಗ ಹಣೆಗೆ ಕಣ್ಣಿಗೆ ಎದೆಗೆ ಒತ್ತಿಕೊಂಡು, ಕಂಕುಳಲ್ಲಿ ಭದ್ರಪಡಿಸಿಕೊಳ್ಳುತ್ತಾರೆ. ಯಾರಾದರೂ ಅವರ ಹೆಸರು ಹಿಡಿದು ಕರೆದರೆ ‘ಪುಟ್ಟಪ್ಪ ಸತ್ತ ಅವನಿಲ್ಲ. ನಾನು ವಿವೇಕಾನಂದ’ ಎಂದು ಅಬ್ಬರಿಸುತ್ತಾರೆ. ಅಂಥದೊಂದು ಸಂದರ್ಭದಲ್ಲಿ

ಪರಬ್ರಹ್ಮ ಎನಗೆ ತಂದೆ,
ಮಹಾಕಾಳಿ ಎನ್ನ ತಾಯಿ;
ರಾಮಕೃಷ್ಣರೆನಗೆ ಗುರುವು,
ಶ್ರೀ ವಿವೇಕಾನಂದರೆನಗೆ ಗುರುಭಾಯಿ![8]

ಎಂಬೊಂದು ಕವನವನ್ನು ರಚಿಸುತ್ತಾರೆ. ಗುರುಭಾಯಿ ಎಂದು ತಮ್ಮನ್ನು ಕರೆದುಕೊಂಡದ್ದು ಅತಿಯಾಯಿತೆಂದು ಅವರೇ ಅನಂತರ ಸೂಚಿಸುತ್ತಾರೆ.

ಎಂ.ಎ. ಪದವಿಯನ್ನು ಪಡೆದು, ಅಧ್ಯಾಪಕರಾದ ನಂತರ ಅವರು ಸಿದ್ಧೇಶ್ವರಾನಂದ ಸ್ವಾಮಿ ಮತ್ತು ಮಾನಪ್ಪ ಅವರೊಡನೆ ದೀಕ್ಷಾಕಾಂಕ್ಷೆಯಿಂದ ಬೇಲೂರು ಮಠಕ್ಕೆ ಹೋಗು ತ್ತಾರೆ. ೮.೧೦.೧೯೨೯ನೆಯ ಮಂಗಳವಾರ ಶ್ರೀ ರಾಮಕೃಷ್ಣರ ಶಿಷ್ಯರೂ, ಮಹಾಪುರುಷ ಎಂದು ಹೆಸರು ಪಡೆದವರೂ ಆದ ಸ್ವಾಮಿ ಶಿವಾನಂದಜಿಯವರಿಂದ ದೀಕ್ಷೆ ಪಡೆಯುತ್ತಾರೆ. ಗುರು ಮಹಾರಾಜ್, ಮಹಾಮಾತೆ ಮತ್ತು ಸ್ವಾಮಿಜಿಯವರು ಜೀವಂತ ಕಾಲದಲ್ಲಿ ವಾಸಿಸುತ್ತಿದ್ದ, ಅಡ್ಡಾಡುತ್ತಿದ್ದ, ತಪಸ್ಸು ಮಾಡುತ್ತಿದ್ದ ಸ್ಥಳಗಳನ್ನೆಲ್ಲ ನೋಡುತ್ತಾರೆ. ಬೇಲೂರಿನಿಂದ ದಕ್ಷಿಣೇಶ್ವರಕ್ಕೆ ದೋಣಿಯಲ್ಲಿ ಹೋದಾಗ ತಮ್ಮ ಹೃದಯದಲ್ಲಿ ಮೂಡಿದ ಭಾವತರಂಗಗಳಿಗೆ ಮಾತಿನ ಉಡಿಗೆ ತೊಡಿಸುತ್ತಾರೆ.

ಶ್ರೀ ರಾಮಕೃಷ್ಣ ಗುರುದೇವನಂ ನೆರೆ ನೆನೆದು
ದೋಣಿಯಿಂದಿಳಿ ಕೆಳಗೆ, ಯಾತ್ರಿಕನೆ ಭವರೋಗಿ,
ದಿವಿಜಗಂಗೆಯ ನಿರ್ಮಲ ಸುತೀರ್ಥದೊಳು ಮಿಂದು
ಪರಿಶುದ್ಧನಾಗಿ, ಪಾವನನಾಗಿ ಮೇಲೇರು.
ಕೈಮುಗಿದು ತಲೆಬಾಗಿ ಬಗೆಯ ಕೊಳೆಯನು ನೀಗಿ
ಸ್ನಾನಘಟ್ಟವ ನಡರು, ರಸಯೋಗಿ ಕಬ್ಬಿಗನೆ,
ಸುಂದರ ವಸುಂಧರೆಯ ವೈಕುಂಠ ಮಂದಿರಂ
ಮುಂದಿಹುದು ಚಂದದಲಿ, ನೋಡು ಆನಂದದಲಿ[9]

ಎಂದು ಮುಂತಾಗಿ ಈ ದೀರ್ಘ ಕವನ ಹರಿಯುತ್ತದೆ. ಕಲಿಯುಗದ ಮಹಾವತಾರನೆಂದು, ವಿಶ್ವಗುರುವರ್ಯನೆಂದು ಶ್ರೀ ರಾಮಕೃಷ್ಣರನ್ನು ಸ್ತುತಿಸುತ್ತಾರೆ; ಭೂಸ್ವರ್ಗವೆಂದು ದಕ್ಷಿಣೇಶ್ವರ ವನ್ನು ಬಣ್ಣಿಸುತ್ತಾರೆ.

ಕುವೆಂಪು ಅವರೇ ತಮ್ಮ ಯಾತ್ರೆಯ ಅನುಭವಗಳನ್ನು ‘ಮನುಜಮತ-ವಿಶ್ವಪಥ’ದಲ್ಲಿ ಅಚ್ಚಾಗಿರುವ ‘ದೀಕ್ಷಾಯಾತ್ರೆ’ಯೆಂಬ ಲೇಖನದಲ್ಲಿ ಯಥಾವತ್ತಾಗಿ ವಿವರಿಸಿದ್ದಾರೆ. ದಕ್ಷಿಣೇ ಶ್ವರದಿಂದ ಹಿಂದಿರುಗಿದ ನಂತರ ರಚಿಸಿದ ‘ಧೃವತಾರೆ’ ಎಂಬ ಕವನ ಶ್ರೀ ರಾಮಕೃಷ್ಣರನ್ನೆ ಉದ್ದೇಶಿಸುತ್ತದೆ :

ಅಗಣಿತ ತಾರಾಗಣಗಳ ನಡುವೆ
ನಿನ್ನನೆ ನೆಚ್ಚಿಹೆ ನಾನು,
ನನ್ನೀ ಜೀವನ ಸಮುದ್ರಯಾನಕೆ
ಚಿರಧ್ರುವತಾರೆಯು ನೀನು!

ಕೊಳಲಿನಲ್ಲಿ ಅಚ್ಚಾಗಿರುವ ‘ನಡೆ ಮುಂದೆ’ ಎಂಬ ಕವನವೂ ಅದೇ ಸಮಯದಲ್ಲಿ ರಚನೆಗೊಂಡದ್ದು. ‘ವೇದಾಂತ ಕೇಸರಿಯೆ ನುಗ್ಗಿ ನಡೆ ಮುಂದೆ’ ಎನ್ನುವ ಪಂಕ್ತಿ ಸ್ವಾಮಿವಿವೇಕಾನಂದರನ್ನು ನೆನಪಿಗೆ ತಂದು ಕೊಡುತ್ತದೆ. ೧೮.೭.೧೯೩೨ರ ದಿನಚರಿ ಶ್ರೀರಾಮಕೃಷ್ಣರಲ್ಲಿ ನಿವೇದಿಸಿಕೊಂಡ ಮೊರೆಯನ್ನೊಳಗೊಂಡಿದೆ. ‘ಹೇ ಗುರುದೇವ, ನೀನು ಸರ್ವಶಕ್ತಿ ಪೂರ್ಣನಾಗಿರುವೆ. ನನ್ನ ಹೃದಯದ ದುರ್ಬಲತೆಯನ್ನು ದೂರಮಾಡಿ ಆದರ ಶೂನ್ಯವನ್ನು ಪೂರ್ಣಗೈ. ಸಲಸಲವೂ ನವಪ್ರತಿಜ್ಞೆಯಿಂದ ನವ ಉತ್ಸಾಹದಿಂದ ನವ ಆಶೆಯಿಂದ ನನ್ನಾತ್ಮವು ರೆಕ್ಕೆಬಿಚ್ಚಿ ಹಾರುತ್ತಿರುವುದು. ಸ್ವಲ್ಪ ದೂರ ಹೋಗುವುವರಲ್ಲಿಯೆ ಭೂಸ್ಪರ್ಶ ಮಾಡುವುದು. ಬಿಂಕದಲಿ ಹೆಡೆಯೆತ್ತಿದ ನನಗೆ ನಮ್ರತೆಯ ನೀಡಲೆಂದೇ ನೀನು ಅಪಜಯದ ಮೇಲೆ ಅಪಜಯವ ಹೇರುತ್ತಿರುವುದು?’[10] ಹೀಗೆಯೇ ಈ ಮೊರೆ ಮುಂದು ವರಿಯುತ್ತದೆ. ಸೋಲು ನಿರಾಶೆಗಳು ಎದುರಾದ ಹಾಗೆಲ್ಲ ಅವರು ಗುರುದೇವನನ್ನು ಆಶ್ರಯಿಸುತ್ತಾರೆ.

ಕುವೆಂಪು ದಕ್ಷಿಣೇಶ್ವರಿಂದ ಮೈಸೂರಿಗೆ ಮರಳಿದ ನಂತರ ಅವರ ಚೇತನ ದಕ್ಷಿಣೇಶ್ವರ ನಿತ್ಯಯಾತ್ರೆ ಕೈಗೊಳ್ಳುತ್ತದೆ. ಧ್ಯಾನನದಿಯಲ್ಲಿ, ಕಲ್ಪನೆಯ ನಾವೆಯಲ್ಲಿ ದಿನದಿನವೂ ದಕ್ಷಿಣೇಶ್ವರಕ್ಕೆ ಹೋಗಿ ಬರುವಾಗ ‘ಪೂತ ಸಾನ್ನಿಧ್ಯದಲ್ಲಿ ರೋಮಾಂಚವನು ತಾಳಿ’ ಅವರ ಎದೆಯರಳಿ ಚಿಮ್ಮುತ್ತದೆ. ಅವರ ಆತ್ಮ ಪಂಚವಟಿಯಲ್ಲಿ ಸುಳಿದು, ಮಂದಾಕಿನಿಯಲ್ಲಿ ಮಿಂದು, ಜಗದಂಬೆಯಾಲಯದಿ ಪೂಜೆಗೈದು, ಪರಮಹಂಸ ಬೋಧೆಯಲ್ಲಿ ಸಂಸ್ನಾತ ಗೊಂಡು ಹಿಂದಿರುಗುತ್ತದೆ.

ನೀನೆನ್ನ ಜೀವನ ಚಿರಂತನ ಧ್ರುವತಾರೆ
ಸರ್ವರುಚಿ ಭಾವಸಂಸ್ಕಾರಗಳ ಸ್ಪರ್ಶಮಣಿ,
ಆಶೆ ಆಕಾಂಕ್ಷೆ ಆದರ್ಶಗಳ ರತ್ನಖನಿ,
ಹೇ ಸಮನ್ವಯ ಮೂರ್ತಿ! ನೀನಿಳೆಗೆ ಮೈದೋರೆ
ಮುಕ್ತಿಯರಳಿತು ಧರ್ಮಸೇವಾ ತಪಸ್ಸಿನಲಿ
ಮನುಜ ಗೌರವ ಗಿರಿಯ ಮಾನಸ ಸರಸ್ಸಿನಲಿ

ಈ ಭಾವಾನುಭವಗಳು ‘ಗುರುದೇವನಿಗೆ’ ಎನ್ನುವ ಕವಿತೆಯಲ್ಲಿ ಮೈಗೊಂಡಿವೆ. ಕವಿಯ ಜೀವನದಲ್ಲಿ ಪರಮಹಂಸರ ಚಿತಕ್ತಿ ಎಷ್ಟರಮಟ್ಟಿಗೆ ಸಮಾವೇಶಗೊಂಡಿದೆಯೆಂಬುದು ಈ ಕವಿತೆಯಿಂದ ಗೊತ್ತಾಗುತ್ತದೆ. ಪರಮಹಂಸರ ಸಾಕ್ಷಾತ್ ಶಿಷ್ಯ ಸ್ವಾಮಿ ಶಿವಾನಂದರಿಂದ ದೀಕ್ಷೆ ತೆಗೆದುಕೊಂಡದ್ದರಿಂದ ಕುವೆಂಪು ಅವರ ಆನಂದ ಹೇಳತೀರದು; ಆ ಸಂದರ್ಭವನ್ನು ನೆನೆದಂತೆಲ್ಲ ಶ್ರದ್ಧೆ ಮಿಗಿಲಾಗುತ್ತದೆ. ‘ಕಂಡವರ ಕಂಡಿಹೆ ನಾ ಧನ್ಯ; ಕಂಡವರನು ಕಾಣುವುದೂ ಮೋಕ್ಷಂಕರ ಪುಣ್ಯ’ ಎಂದು ಹರ್ಷಪುಲಕಿತರಾಗಿ ಹಾಡುತ್ತಾರೆ. ಪರಮಹಂಸರ ಸಾನ್ನಿಧ್ಯ ಸಾಕ್ಷಾತ್ಕಾರಕ್ಕಾಗಿ ಹಾತೊರೆಯುವ ಭಕ್ತನ ಮನಃಸ್ಥಿತಿ ‘ನಿನ್ನಡಿದಾವರೆಯಲಿ’ ‘ಭಕ್ತನ ಭರವಸೆ’ ‘ಚಿರವಾಗಲಿ’[11] ಮೊದಲಾದ ಕವಿತೆಗಳಲ್ಲಿ ಪ್ರಕಟಗೊಳ್ಳುತ್ತದೆ, ರವೀಂದ್ರನಾಥ ಠಾಕೂರರ ಒಂದು ವಚನ ಕವನವನ್ನು ‘ಶ್ರೀರಾಮಕೃಷ್ಣ ಪರಮಹಂಸದೇವನಿಗೆ’ ಎಂಬ ತಲೆ ಹೆಸರಿನಲ್ಲಿ ಭಾಷಾಂತರಿಸಿದ್ದಾರೆ.

ಕುವೆಂಪು ಅವರು ಆಗಾಗ್ಗೆ ಮಲೆನಾಡಿಗೆ ಹೋಗಿ ಬರುತ್ತಿದ್ದ ಸಮಯದಲ್ಲಿ ಪ್ರತಿ ವರ್ಷವೂ ಕುಪ್ಪಳಿಯಲ್ಲಿ ಶ್ರೀ ರಾಮಕೃಷ್ಣರ ಜಯಂತ್ಯುತ್ಸವವನ್ನು ಆಚರಿಸುತ್ತಾರೆ. ೧೫.೫. ೧೯೩೩ರಂದು ಸಂಜೆ ಜಯಂತ್ಯುತ್ಸವಕ್ಕಾಗಿ ಬಂಧುಮಿತ್ರರೊಡನೆ ಕವಿಶೈಲಕ್ಕೆ ಹೋಗುತ್ತಾರೆ. ಇದ್ದಕ್ಕಿದ್ದಂತೆ ಅವರ ಅಂತರಂಗದಲ್ಲಿ ಸ್ಫೂರ್ತಿಯ ಚಿಲುಮೆ ಉಕ್ಕುತ್ತದೆ. ಅವರು ಮಿತ್ರರಿಂದ ದೂರ ಸರಿದು, ಒಂದು ಬಂಡೆಯ ಮೇಲೆ ಕುಳಿತು ‘ಆಹ್ವಾನ’ ಎಂಬ ಕವನವನ್ನು ರಚಿಸುತ್ತಾರೆ. ನವವರ್ಷದಿಂದ ಮಿಂದಿರುವ ಮಲೆನಾಡಿಗೆ, ಸಹ್ಯಾದ್ರಿಯ ಸುಂದರ ಮಂದಿರಕ್ಕೆ ಶ್ರೀ ಗುರುದೇವನನ್ನು ಆಹ್ವಾನಿಸುವ ಆ ಹಾಡನ್ನು ಎಲ್ಲರೂ ಸಾಮೂಹಿಕವಾಗಿ ಹಾಡುತ್ತಾರೆ. ಸಮನ್ವಯ ಧರ್ಮವನ್ನು ಬಿತ್ತುವ ಮೂಲಕ ಮತಭೇದದ ವಿಷವನ್ನು ಹೋಗಾಡಿ ‘ಲೋಕದ ದೃಷ್ಟಿಗೆ ಸಮತೆಯನ್ನು ನೀಡಿ ಕಾಪಾಡಿದ ಪಾವನ ಮೂರುತಿ’ಯನ್ನು ಕವಿ ನಾಡಿಗೆ ಸುಖ ಶಾಂತಿ ಕಾಂತಿಯನ್ನು ನೀಡಲೆಂದು ಆಹ್ವಾನಿಸುತ್ತಾರೆ. ಕ್ಯಾಲಿಫೋರ‌್ನಿಯಾದಲ್ಲಿ ನಿರ್ಮಾಣ ಗೊಂಡಿದ್ದ ನೂತನ ಭವನವೊಂದರ ಉದ್ಘಾಟನ ಸಮಯದಲ್ಲಿ ಅದನ್ನು ಸಾಮೂಹಿಕವಾಗಿ ಅಲ್ಲಿಯ ಭಕ್ತರು ಹಾಡಿದಾಗ, ನೆರೆದ ಸಭೆ ರೋಮಾಂಚನಗೊಳ್ಳುತ್ತದೆ. ಕವಿಯ ಚಿತ್ತ ನೈಜ ಸ್ವಭಾವ ಮತ್ತು ಸ್ವಧರ್ಮಗಳ ವಿಚಾರದಲ್ಲಿ ನಿಶ್ಚಿತತೆಯಿಲ್ಲದೆ, ಅತ್ತ ಇತ್ತ ಉಯ್ಯಲೆ ಯಾಡುತ್ತಿದ್ದಾಗ ಕೊನೆಯ ನಿರ್ಣಯವನ್ನು ಶ್ರೀ ಗುರುವಿಗೆ ಬಿಟ್ಟು ಕೊಡುತ್ತದೆ. ‘ಮುಕ್ತಿಯನ್ನೊಪ್ಪಲೋ? ಮಾಯೆಯನಪ್ಪಲೋ? ತಿಳಿದ ನೀನೆನ್ನನಟ್ಟು’ ಎಂದು ಕವಿಚೇತನ ಸರ್ವ ಜವಾಬ್ದಾರಿಯನ್ನು ಗುರುವಿಗೆ ವಹಿಸುತ್ತದೆ. ‘ಶರಣು’ ಕವಿತೆಯ ಅಂತರಾರ್ಥವೇ ಇದು. ಮನಸ್ಸಿನಲ್ಲಿ ಕಳಂಕ ತೋರಿದಾಗಲೆಲ್ಲ ಆತ್ಮಶೋಧನಾರ್ಥವಾಗಿ ಅವರು ಗುರುವನ್ನೇ ಮರೆಹೊಗುತ್ತಾರೆ. ಈ ಆತ್ಮಶೋಧನೆ ಪ್ರತಿಯೊಬ್ಬ ಸಾಧಕನ ಜೀವನದಲ್ಲಿ ಕಾಣುವ ಮುಖ್ಯ ಸಂಗತಿ.

ಮನಸಿಗೆ ಮೈಲಿಗೆಯಾಗಿದೆ. ಗುರುವೇ
ಬಿದ್ದಿತು ಕೋಪದ ಕೊಚ್ಚೆಯಲಿ.
ಪಶ್ಚಾತ್ತಾಪದ ಸೀಗೆಯೊಳುಜ್ಜಿ
ಮಡಿಮೀಯಿಸೋ ತೀರ್ಥೇಚ್ಛೆಯಲಿ

ಎಂದವರು ಮೊರೆಯಿಡುತ್ತಾರೆ. ತಾನು ಸಜ್ಜನನೆಂದು, ಪರರಿಂದ ತನಗೆ ಅನ್ಯಾಯ ವಾಗುತ್ತದೆಂದು ಹೇಳಿಕೊಳ್ಳುವುದು, ತನ್ನಿಂದ ಪರರನ್ನು ದೂರವಿರಿಸೆಂದು ಕೇಳಿಕೊಳ್ಳುವುದು ಅರಿಷಡ್ವರ್ಗಗಳಿಗೆ ದಾಸನಾದ ಮಾನವನ ಸಹಜ ಸ್ವಭಾವ, ಆದರೆ ಸಾಧಕನ ಪರಿಯೇ ಬೇರೆ :

ಅನ್ಯರಿಗೆ ನನ್ನಿಂದ ಅನ್ಯಾಯವಾಗುವೊಡೆ
ಅಗಲಿಸೆನ್ನನು ಅವರ ಸರಣಿಯಿಂದ
ನಿಂದು ನಿನ್ನಡಿಪುಡಿಯ ಧನ್ಯತಾ ದೂರದಲಿ
ವಂದಿಸುವೆ, ಓ ಗುರುವೆ, ದೈನ್ಯದಿಂದ

ತನ್ನ ದೋಷ ದೌರ್ಬಲ್ಯಗಳಿಂದಾಗಿ ಪರರಿಗೆ ಅನ್ಯಾಯವಾಗುವುದಾದರೆ ತನ್ನಿಂದ ಅವರನ್ನು ದೂರವಿರಿಸೆಂದು ಪ್ರಾರ್ಥಿಸುವುದು ಎತ್ತರಕ್ಕೇರಿದ ವ್ಯಕ್ತಿಯ ಹೆಗ್ಗುಣ. ಇಲ್ಲಿ ಕಾಣುವುದು ಅಜ್ಞಾನಿಯ ಮುಗ್ಧ ದೈನ್ಯವಲ್ಲ, ಸುಜ್ಞಾನಿಯ ದಿವ್ಯದೈನ್ಯ. ಶ್ರೀರಾಮ ಕೃಷ್ಣರಂಥ ಪರಮ ಹಂಸರ ಮಾನಸ ಪುತ್ರರಿಗೆ ಮಾತ್ರ ಈ ದೈನ್ಯ ಸಾಧ್ಯ ಮತ್ತು ಸಹಜ.

ಬೆರಳ್‌ಗೆ ಕೊರಳ್ ನಾಟಕದ ದ್ರೋಣ ಮತ್ತು ಏಕಲವ್ಯ ಶ್ರೀರಾಮಕೃಷ್ಣ ಮತ್ತು ಶ್ರೀ ಕುವೆಂಪು ಅವರ ಪ್ರತೀಕಗಳೆಂದು ಈ ಸಂದರ್ಭದಲ್ಲಿ ಊಹಿಸಿದರೂ ತಪ್ಪಾಗಲಾರದು. ‘ನೆನಪಿನ ದೋಣಿ’ಯಲ್ಲಿ ಕೃಷ್ಣ ದೋಸೆ ತಿನ್ನುವ ಪ್ರಸಂಗವಂತು ಶ್ರೀ ರಾಮಕೃಷ್ಣರು ರಾಮಲಾಲರೊಡನೆ ಹೊಂದಿದ್ದ ಸಂಬಂಧವನ್ನು ನೆನಪಿಗೆ ತರುತ್ತದೆ.

ಶ್ರೀರಾಮಕೃಷ್ಣರ ಅಧ್ಯಾತ್ಮ ಸಾಧನೆಯ ಯಶಸ್ಸಿಗೆ ಅವರ ಸಹಧರ್ಮಿಣಿ ಶ್ರೀ ಶಾರದಾದೇವಿ ಯವರು ಪ್ರಪ್ರಥಮ ಕಾರಣ. ಶ್ರೀರಾಮಕೃಷ್ಣರಿಗೆ ಚಂದ್ರಮಣಿದೇವಿ ಶರೀರವಿತ್ತ ತಾಯಿ ಯಾದರೆ, ಶಾರದಾದೇವಿ ಆತ್ಮವಿತ್ತ ತಾಯಿ, ಒಬ್ಬರನ್ನುಳಿದ ಮತ್ತೊಬ್ಬರ ಅಸ್ತಿತ್ವವೇ ನಾಸ್ತಿ. ಅವರಿಬ್ಬರೂ ಅಪ್ರತ್ಯೇಕ, ಅಭಿನ್ನ. ಆದ್ದರಿಂದ ಕವಿಯ ದೃಷ್ಟಿಯಲ್ಲಿ ಇಬ್ಬರೂ ವಂದ್ಯರು; ಅಷ್ಟೇ ಅಲ್ಲ, ಜಗನ್ಮಾತೆಯ ಅವತಾರವಾದ ಶಾರದಾದೇವಿಯೇ ಅವರಿಗೆ ಅಗ್ರವಂದ್ಯರು.

‘ಮಹಾಮಾತೆ’ ಎನ್ನುವ ಕವನ ಶ್ರೀ ಶಾರದಾಮಣಿ ದೇವಿಯರನ್ನು ಕುರಿತ ಪ್ರಾರ್ಥನೆ ಯಾಗಿದೆ. ಕವಿ ಅವರನ್ನು ಕಲಿಯುಗದ ಸೀತೆಯೆಂದು, ಕಾಳಿ ಲಕ್ಷ್ಮಿ ಸರಸ್ವತಿಯೆಂದು ಸ್ತುತಿಸುತ್ತಾರೆ. ಅವರ ನಾಮ ಸುರನದಿಯ ತೀರ್ಥಕ್ಕೆಣೆಯಾದುದು. ಅವರ ನೆನಪೇ ಗುರುತಪಶ್ಯಕ್ತಿ ಅವರ ಗಾಂಭೀರ್ಯ ಗಗನದಂತಿದೆ; ಅವರ ತೇಜಸ್ಸಿನ ಒಂದು ಭಾಗವೇ ಸೂರ್ಯ. ಕವಿಗಳ ಪಾಲಿಗೆ ‘ಋತ ಚಿನ್ಮೂ ಜಗನ್ಮಾತೆ’ ಬೇರೆ ಅಲ್ಲ ಈ ಮಹಾಮಾತೆ ಬೇರೆ ಅಲ್ಲ ಎಂಬ ಭಾವನೆ ಆ ತಾಯಿಯನ್ನು ಕುರಿತ ಪ್ರತಿಯೊಂದು ಸ್ತುತಿಯಲ್ಲಿಯೂ ಪುಟಿಯುತ್ತದೆ. ಅವರ ದೃಷ್ಟಿಯಲ್ಲಿ ಪ್ರತಿಯೊಬ್ಬ ಸ್ತ್ರೀಯೂ ಜಗನ್ಮಾತೆಯ ಅಂಶ; ತಮ್ಮ ತಾಯಿಯಲ್ಲಿ ಮಡದಿಯಲ್ಲಿ ಸಹ ಜಗನ್ಮಾತೆಯನ್ನೆ ಕಾಣುತ್ತಾರೆ.

ಜಗದಮ್ಮನಿರಬಹುದು;
ಗೊತ್ತೆ ನನಗೇನು?
ನನಗೆ ಗೊತ್ತಿಹುದೊಂದೆ;
ನನ್ನಮ್ಮ ನೀನು![12]

ಜಗನ್ಮಾತೆಯ ಅಂಶವಾದರೂ ಒಬ್ಬೊಬ್ಬರು ಪೂರ್ಣ ಎನ್ನುವ ದರ್ಶನ ‘ನನ್ನಮ್ಮ ಜಗದಮ್ಮ’ದಲ್ಲಿ ವ್ಯಕ್ತಗೊಂಡಿದೆ. ‘ನನ್ನಮ್ಮನಾಗಿಯೂ ಜಗದಮ್ಮ! ಜಗದಮ್ಮನಾಗಿಯೂ ನನ್ನಮ್ಮ!’[13] ಎಂಬ ತತ್ತ್ವ ಪೂರ್ಣದೃಷ್ಟಿಗೆ ಮಾತ್ರ ವೇದ್ಯ.

ಕೇಡನೆಲ್ಲ ಭಕ್ಷಿಸು;
ಕಿವಿಯ ಹಿಂಡಿ ಶಿಕ್ಷಿಸು;
ರಟ್ಟೆ ಹಿಡಿದು ರಕ್ಷಿಸು;
ಕೃಪಣೆಯಾಗ ಬೇಡ, ಅಮ್ಮಾ,
ಓ, ಕೃಪಾಕಟಾಕ್ಷಿಸು![14]

ಎಂದವರು ತಾಯಿಗೆ ಮೊರೆಯಿಡುತ್ತಾರೆ.

ತಮ್ಮ ಸತಿಯಲ್ಲಿಯೇ ಜಗನ್ಮಾತೆಯನ್ನು ದರ್ಶಿಸಿ, ಅರಾಧಿಸುವ ವಿಶಿಷ್ಟ ದಾರ್ಶನಿಕ ಕವಿ ಕುವೆಂಪು.[15]

ತಾಯ ಚರಣ ಕಿರಣವೊಂದು
ಕೃಪೆಯೊಳೆನ್ನ ಪೊರೆಯಲೆಂದು
ನಿನ್ನ ರೂಪದಿಂದ ಬಂದು
ಸಲಹುತಿರುವುದೆನ್ನನಿಂದು![16]

‘ಸತಿಗೆ’ ಎಂಬ ಕವಿತೆಯಲ್ಲಿ ಬರುವ ಈ ಮಾತು ಕೇವಲ ಕಲ್ಪನೆಯ ಚಾಪಲ್ಯದ ಫಲವಾಗದೆ, ಅನುಭೂತಿಯ ಪರಿಣಾಮವಾಗಿದೆ. ಕವಿಗೆ ಸಂಸಾರವೂ ಪೂಜೆ. ಏಕೆಂದರೆ ಸಂಸಾರದ ಸೇವೆಯೇ ‘ಶ್ರೀಪಾದದ ಪೂಜೆ’; ನಾಲ್ವರು ಮಕ್ಕಳು ಮತ್ತು ಸತಿ ಶ್ರೀ ಮಾತೆಯ ಪಾದದ ಬೆರಳುಗಳು.[17] ‘ಜಗವನಾಳುವ ತಾಯೆ ನನ್ನನಾಳುವ ಮಾಯೆ ತಾನಾಗಿ ಬಂದಿಹಳು ನನ್ನ ಜಾಯೆ!’ ಎಂಬುದು ಅವರ ದಿವ್ಯಶ್ರದ್ಧೆ; ಮಹಾಮಾತೆಯ ಶ್ರೀಪಾದ ಪದ್ಮವೆ ತಮ್ಮ ಸತಿಯ ರೂಪವನ್ನು ಧರಿಸಿದೆಯೆಂಬುದು ಅವರ ನಿರಂತರ ಪ್ರಜ್ಞೆ; ತ್ರಿಜಗನ್ಮಾತೆಯ ವಕ್ಷದ  ವಾತ್ಸಲ್ಯವೇ ತಮ್ಮ ಪಕ್ಕದಲ್ಲಿ ಸತಿಯಾಗಿ ಪವಡಿಸಿದೆಯೆಂಬುದು ಅವರ ಪರಾಪ್ರಜ್ಞೆ. ಕಷ್ಟವೋ ನಷ್ಟವೋ ದುಷ್ಟಪೀಡನೆಯೋ ನಿಂದಾ ಸ್ತುತಿಯೋ, ಏನೇ ಬರಲಿ, ‘ಓಂ ಅನವರತವೂ ನಿನ್ನ ಮಡಿಲೊಳೆಯೆ ಮಲಗಿರುವೆನೆಂಬೊಂದು ಶಿಶುನಿರ್ಭರತೆ ನನ್ನದಾಗಿರಲಿ, ತಾಯಿ’ ಎಂದು ಸದಾ ಮಾತೃವಕ್ಷದ ಆಶ್ರಯವನ್ನು ನೆಮ್ಮಿಕೊಳ್ಳುತ್ತಾರೆ.

ಮಾನವ ಸ್ತ್ರೀಯರಲ್ಲಿ ಮಾತ್ರವಲ್ಲ, ಸಕಲ ಸಚರಾಚರ ವಸ್ತುಗಳಲ್ಲಿಯೂ ಜಗನ್ಮಾತೆಯ ಕೃಪೆಯೇ ಮೈತಳೆದಿದೆಯೆಂಬ ಭಾವನೆ ಅವರಲ್ಲಿ ಸದಾ ಜಾಗೃತವಾಗಿರುತ್ತದೆ. ಗೃಹದೇವತೆ ಯಲ್ಲವರು ಮಹಾಮಾತೆಯನ್ನು ಕಾಣುತ್ತಾರೆ. ಹೊಸ ಕಾರು ಮನೆ ಬಂದಾಗ ಚಕ್ರಚರಣೆ ಯೆಂದು ಮಹಾಶಕ್ತಿಯೆಂದು ಅವಳಿಗೆ ಸ್ವಾಗತ ಬಯಸುತ್ತಾರೆ. ಗಗನದಲ್ಲಿ ಚಿತ್ತಾರವನ್ನು ರಚಿಸಿ ಹಾರುವ ಬೆಳ್ಳಕ್ಕಿಯ ಪಂಕ್ತಿ ಅವರ ದೃಷ್ಟಿಯಲ್ಲಿ ‘ಜಗನ್ಮಾತೆಯ ಆಶೀರ್ವಾದದ ಬಾನಕ್ಷತೆಯಾಗುತ್ತದೆ; ಕುವೆಂಪು ಅವರ ಈ ಒಂದೊಂದು ಅನುಭವವೂ ಪೂರ್ಣದೃಷ್ಟಿಯ ಫಲವಾಗಿ ‘ಸತ್ಯಂ ಶಿವಂ ಸುಂದರಂ’ ಎಂಬ ಮಂತ್ರದಿಂದ ಪ್ರೇರಿತವಾಗಿದೆಯೆಂಬುದನ್ನು ಮರೆಯಲಾಗದು.

ಶ್ರೀರಾಮಕೃಷ್ಣರ ಶತಮಾನೋತ್ಸವ ಸಂದರ್ಭದಲ್ಲಿ ಅವರು ಹಾಡಿದ ‘ಶತಮಾನ ಸಂಧ್ಯೆ’ ಎಂಬ ನೀಳ್ಗವನದಲ್ಲಿ ಗುರುಮಹಾರಾಜರ ಸಂದೇಶದ ಅನುಷ್ಠಾನವೇ ಜಗತ್ತಿನ ಎಲ್ಲ ಬೇನೆಗಳಿಗೆ ಭೇಷಜವೆಂದು ಸ್ಪಷ್ಟಪಡಿಸುತ್ತಾರೆ. ಅವರು ಹುಟ್ಟಿ ಒಂದು ಶತಮಾನ ವಾದರೂ ‘ಮತಿಹೀನತೆ ಮತಕಲಹಂ ಗತಿಸವು ಮೌಢ್ಯದ ಭಾವ’ ಎಂದವರು ತವಕಿಸುತ್ತಾರೆ. ಇನ್ನೂ ರಕ್ತದ ಬಾಯಾರಿಕೆ ಆರಿಲ್ಲ; ದಾರಿದ್ರ್ಯ ತೊಲಗಿಲ್ಲ; ದೌರ್ಜನ್ಯ ಹೆಡೆಯೆತ್ತಿದೆ; ಶಾಂತಿಯ ಪರದೆಯ ಹಿಂದುಗಡೆ ಕ್ರಾಂತಿಯ ರಣಸನ್ನಾಹ ನಡೆದಿದೆ; ಪಶ್ಚಿಮದಲ್ಲಂತು ಉನ್ಮಾದದ ರಣಮೋಡದ ಮದ್ದಿನ ಗುಂಡಿನ ಲೀಲೆ ಸಾಗಿದೆ; ವಿಜ್ಞಾನ ವಿಸ್ಮಯಕಾರಿಯಾಗಿ ವಿಕಾಸಗೊಂಡಿದ್ದರೂ ನೊಣಮೀಸೆಯನ್ನು ಹುಳು ಹೆಜ್ಜೆಯನ್ನು ಎಣಿಸುವಷ್ಟು ಅದು ಮುಂದು ವರಿದಿದ್ದರೂ ‘ತನ್ನಾತ್ಮವ ತಾನರಿಯುವ ಸಾಧನೆಯೊಂದನು ಒಲ್ಲ!’ ಯುಗ ಚಕ್ರವನ್ನು ಮುನ್ನೂಕಲು ಗುರುದೇವನ ಶಕ್ತಿಯ ಸಹಾಯ ಇದ್ದೇ ಇದೆ; ಅವನ ಕೃಪೆಗೆ ಪಾತ್ರವಾಗಿ ಉದ್ಧಾರವಾದ ಚೇತನಗಳಿಗೆ ಲೆಕ್ಕವಿಲ್ಲ. ಇದು ಅಂದಿನ ಪರಿಸ್ಥಿತಿಯ ವಾಸ್ತವ ಚಿತ್ರಣ. ಗುರುಮಹಾರಾಜರ ಮರಣೋತ್ತರ ಶತಮಾನೋತ್ಸವ ಸಮಯದಲ್ಲಿಯೂ ಆ ಪರಿಸ್ಥಿತಿ ಬದಲಾಗಿಲ್ಲವೆಂಬುದು ನಿಜ. ‘ಯುಗದೊಳ್ಪಿಗೆ ಜಗದೊಳ್ಪಿಗೆ ನಿನ್ನೊಳ್ಪನೆ ನೀಂ ಗೆಲ್ಲು!’ ಎಂದು ಮತಿವಂತ ಮಾನವನಿಗೆ ಕವಿ ಕರೆ ನೀಡುತ್ತಾರೆ.

೧೯೩೭ನೆಯ ವರ್ಷ ಮದುವೆಯಾಗುವ ಮುನ್ನ ಕುವೆಂಪು ತಮ್ಮನ್ನು ಮುಂದಿನ ಬದುಕಿನಲ್ಲಿ ಆಶೀರ್ವದಿಸುವಂತೆ ಗುರುದೇವನಲ್ಲಿ ಮೊರೆಯಿಡುತ್ತಾರೆ. ಅವರಿಗೆ ದೀಕ್ಷಾ ಗುರು ಬೇರೆಯಲ್ಲ, ಪರಮಹಂಸರು ಬೇರೆಯಲ್ಲ.

ವಂದಿಸುವೆ ಚರಣಾರವಿಂದಕ್ಕೆ ಮುಡಿಯಿಟ್ಟು!
ಇಂದು ಆಶೀರ್ವದಿಸು ಕಂದನನು, ಗುರುದೇವ,
ಮುಂದೆ ಬರುವಂದು ಸಂಸಾರಿ ನಾನು!
ಬಿದ್ದಂದು ಮೇಲೆತ್ತಿ ಕೆಚ್ಚೊರೆದು ಸಂತವಿಸಿ
ಬ್ರಹ್ಮಚರ್ಯದೊಳೆಂತು ಕೈಹಿಡಿದು ಕಾಯ್ದಿಹೆಯೊ
ಅಂತೆ ಸಂಸಾರಿಯನು ಸಲಹು ನೀನು!

‘ನಿಮ್ಮ ದಿವ್ಯೇಚ್ಛೆ ನಮ್ಮದಾಗುವಂತೆ ಆಶೀರ್ವದಿಸು’ ಎಂದು ಪ್ರಾರ್ಥಿಸುತ್ತಾರೆ. ಅಂತೆಯೇ ಬ್ರಹ್ಮಚರ್ಯವ್ರತವನ್ನು ಕೈಗೊಳ್ಳುವ ಸಮಯದಲ್ಲಿ ನೋಂಪಿಗೆಲುವಂತೆಮ್ಮ ಹರಸಿ, ತಾಯಿ’ ಎಂದು ‘ವ್ರತಭಿಕ್ಷೆ’ ಬೇಡುತ್ತಾರೆ. ‘ಸಾಧನೆಯ ಕಣದಿ ಗೆಲ್ಲುವೆವು ಗುರುಕೃಪೆಯಿಂದ ಹೆಜ್ಜೆ ಹೆಜ್ಜೆಗೆ ಹೋರಿ ಕೆಡದು ಸೋತು’ ಎಂದು ‘ವಿಜಯಸೇತು’ ಎಂಬ ಕವಿತೆಯಲ್ಲಿ ತಮ್ಮ ಆತ್ಮಪ್ರತ್ಯಯವನ್ನು ಮೆರೆಯುತ್ತಾರೆ.

ತಮ್ಮ ಸರ್ವೋದ್ಧಾರಕ್ಕೆ ಗುರುಕೃಪೆಯೇ ಕಾರಣವೆಂದು, ಅದೇ ತಮ್ಮ ವಜ್ರ ರಕ್ಷೆಯೆಂದು, ಅದು ನಾನಾ ರೂಪಗಳಲ್ಲಿ ಹಲವು ಒದಗೆಗಳ ಮೂಲಕ ಹರಿದು ಬಂದು ತಮ್ಮ ಅಭ್ಯುದಯಕ್ಕೆ ಏಣಿಯಾಗಿದೆಯೆಂದು ಎಷ್ಟು ಸಾರಿ ಪುನರುಕ್ತಿಸಿದರೂ ಅವರಿಗೆ ತೃಪ್ತಿಯಿಲ್ಲ. ಮುಖ್ಯವಾಗಿ ಶ್ರೀ ಗುರುಕೃಪೆ ತಮ್ಮ ಸತಿಯ ರೂಪದಲ್ಲಿ ಮೈದೋರಿ ತಮ್ಮನ್ನು ಸದಾ ಆಶೀರ್ವದಿಸುತ್ತಿದೆ ಯೆಂಬ ಅಚಲ ಶ್ರದ್ಧೆ ಅವರದು. ಕುವೆಂಪು ಅವರ ಜನನ ಕಾಲದಲ್ಲಿ ‘ನನಗಿಹುದು ಇವನೊಡನೆ ಸಹಧರ್ಮಿಣಿಯ ಯೋಗ ಲಗ್ನ’ ಎಂದು ಗುರುಕೃಪೆ ಸಹ್ಯಾದ್ರಿ ದೇವಿಯೊಡನೆ ನುಡಿಯುತ್ತಾಳೆ.[18]

ಶ್ರೀ ಗುರು ಕೃಪೆಯೆ ಮೆಯ್ವೆತ್ತು ಬಂದಿರುವ
ಶ್ರೀ ಮಹಾಮಾತೆಯಡಿದಾವರೆಯೆ ಆಗಿರುವ
ಸತಿಯ ಒಲವಿನ ಸೆರೆಯ ನಾನು…..
ನಾ…, ನು, ನಾ….ನು, ನಾ….ನು
ಹೇ…..ವಿೂ…..ಗಂ….ಡ!

ಎಂದು ‘ಸ್ವರ್ಗದ್ವಾರದಿ ಯಕ್ಷ ಪ್ರಶ್ನೆಗೆ ಉತ್ತರ ಕೊಡುತ್ತಾರೆ.[19] ಕವಿಗೆ ಗುರುವು ಕೊಟ್ಟ ಪರಮ ಭಿಕ್ಷೆಯೆಂದರೆ ಸತಿ. ಸತಿ ತಮ್ಮ ಕಣ್ಮುಂದೆ ಸುಳಿದಾಗ ಗುರುಕೃಪೆಯೇ ಪ್ರತ್ಯಕ್ಷವಾದಂತೆ ಕವಿ ಭಾವಿಸುತ್ತಾರೆ.

ದೇವರ ಮನೆ ಕಡೆ ನೋಡುತ್ತಿರೆ ನಾ
ಧ್ಯಾನಾನಂದದಲಿ
ಬಂಧಿಸಿ ಹೃದಯವ ಬಂದುದು ಗುರುಕೃಪೆ
ಸುಂದರಿಯಂದದಲಿ![20]

ತಮ್ಮೆಲ್ಲ ಭೌತಿಕ ಸುಖಕ್ಕೆ ಸಾಧನವಾಗಿ ಆಧ್ಯಾತ್ಮಿಕ ಸಾಧನೆಗೆ ಅಡರ್ಪಾಗಿ, ಕಾವ್ಯಶಕ್ತಿಗೆ ಸ್ಫೂರ್ತಿಯಾಗಿ, ತಮ್ಮ ಚೇತನದ ತಾವರೆಯ ಉದ್ಧಾರಕ್ಕೊಂದು ಸೌರಶಕ್ತಿಯಾಗಿ, ಸೌಂದರ್ಯದ ತವನಿಧಿಯಾಗಿ, ಇಷ್ಟಾರ್ಥವನ್ನು ನೆರವೇರಿಸುವ ಕಾಮಧೇನುವಾಗಿ ತಮ್ಮನ್ನು ನಡೆಸುತ್ತಿರುವ ಸತಿಯಲ್ಲಿ ಗುರುಕೃಪೆಯ ಮಹಿಮೆಯನ್ನು ಕಾಣುವಲ್ಲಿ, ಅನುಭವಿಸುವಲ್ಲಿ ಕಿಂಚಿತ್ತೂ ಉತ್ಪ್ರೇಕ್ಷೆಯಿಲ್ಲ. ‘ಇಷ್ಟ ಸಮಾಗಮದೊಲು ಬಾರ!’ ಎಂದು ಗುರುವನ್ನವರು ಪ್ರಾರ್ಥಿಸುತ್ತಾರೆ. ಸತಿ ಮಕ್ಕಳೊಡನೆ ತವರಿನಲ್ಲಿರುವಾಗ ಅವರ ರಕ್ಷೆಗೆ ಗುರುಕೃಪೆಯನ್ನೆ ನೆಮ್ಮುತ್ತಾರೆ.[21] ಮಕ್ಕಳ ಹುಟ್ಟಿದ ಹಬ್ಬದ ಸಮಯದಲ್ಲಿ ಗುರುದೇವರ ಆಶೀರ್ವಾದವೇ ಅವರಿಗೆ ರಕ್ಷೆಯಾಗಲೆಂದು ಹರಸುತ್ತಾರೆ. ತಮ್ಮ ಹೇಮಾಂಗಿಯನ್ನು ಕೃಪೆಯ ತೊಟ್ಟಿ ಲೊಳಿಟ್ಟು ಕಾಪಾಡುವಂತೆ ಗುರುದೇವನನ್ನು ಪ್ರಾರ್ಥಿಸುತ್ತಾರೆ. ಆ ಗುರು ಎಂದೋ ಹುಟ್ಟಿ ಕಾಲಗರ್ಭದಲ್ಲಿ ಮರೆಯಾದವನಲ್ಲ. ಅವನು ನಿತ್ಯಾವತಾರಿ. ನಿತ್ಯಾವತಾರಿಯಾದದ್ದರಿಂದಲೇ ಅವನು ಸಕಲ ಸಚರಾಚರ ವಸ್ತುಗಳ ಮುನ್ನಡೆಗೆ ಕಣ್ಣಾಗಿ ನಡೆಸುತ್ತಾನೆ. ಅವನು ನರರೂಪ ಚೇತನದಲ್ಲಿ ನಿತ್ಯವೂ ಮೂಡಿ ನಾರಾಯಣತ್ವಕ್ಕೆ ದಾರಿ ತೋರಿಸುತ್ತಾನೆ. ಅವನೇ ರಾಮನಾಗಿ, ಕೃಷ್ಣನಾಗಿ, ಕ್ರಿಸ್ತನಾಗಿ, ರಾಮಕೃಷ್ಣನಾಗಿ ವಿವಿಧ ವೇಷಗಳಲ್ಲಿ ಸಂಭವಿಸುತ್ತಾನೆ.

ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ,
ನಿತ್ಯವೂ ಅವತರಿಪ ಸತ್ಯಾವತಾರ![22]

ಹೀಗೆ ಪ್ರಾರ್ಥಿಸುವ ಆರ್ತನೂ ಗುರುವಿನೊಡನೆ ನಿತ್ಯವೂ ಅವತರಿಸುತ್ತಾನೆ; ನಿತ್ಯವೂ ಹೊಸದಾಗುತ್ತಾನೆ; ಆದ್ದರಿಂದ ಅವನ ಜನ್ಮೋತ್ಸವ ವರ್ಷಕ್ಕೊಮ್ಮೆ ನಡೆಯುವಂಥದಲ್ಲ; ದಿನದಿನವೂ ನಡೆಯುವಂಥದು; ಅವರ ಜನ್ಮೋತ್ಸವ ನಿತ್ಯೋತ್ಸವವಾಗುತ್ತದೆ.

ರಾಣಿ ರಾಸಮಣಿಯ ಅಳಿಯ ಮಥುರ ಬಾಬು ಶ್ರೀ ರಾಮಕೃಷ್ಣರನ್ನು ಕಂಡ ಕಾಣ್ಕೆಯೇ ‘ಮಥುರನ ದರ್ಶನ’ವಾಗಿ ಹೊರಹೊಮ್ಮಿದೆ.[23] ದಕ್ಷಿಣೇಶ್ವರದ ಕಾಳಿಯ ಗುಡಿಯ ಮುಂದೆ, ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ದೇವಾಲಯದ ಪೂಜಾರಿ ಶತಪಥ ತಿರುಗುತ್ತಿದ್ದಾನೆ. ತನ್ನ ಸೌಧದಲ್ಲಿ ಕುಳಿತಿದ್ದ ಮಥುರ ಬಾಬುವಿನ ಕಣ್ಣಿಗೆ ಅವನು ಕಾಲಿಕ ಪಾಲಿಯರಂತೆ ಕಾಣುತ್ತಾನೆ. ‘ಇದೇನು ಕನಸೋ ನನಸೊ? ನಾನು ಎಚ್ಚತ್ತಿರುವೆನೆ?’ ಎಂದು ಮಥುರ ವಿಸ್ಮಯಗೊಳ್ಳುತ್ತಾನೆ. ಕಣ್ಣುಜ್ಜಿಕೊಂಡು ಮತ್ತೆ ಪೂಜಾರಿಯ ಕಡೆ ಅವನು ನೋಡು ತ್ತಾನೆ. ಮತ್ತೆ ಅದೇ ದೃಶ್ಯ. ಪೂಜಾರಿಯೊಮ್ಮೆ ಚರ‌್ಮಾಂಬರ, ಶ್ವೇತಭಸ್ಮಧರ, ಫಣಿಸುಂದರ, ಚಂದ್ರಶೇಖರನಾಗಿ ಕಂಡರೆ, ಮತ್ತೊಮ್ಮೆ ಭವತಾರಿಣಿ, ನರಮೂಂಡಮಾಲಿನಿ, ಕಾಳಮೇಘ ವರ್ಣನಿ, ಜಗಜ್ಜನನಿಯಾಗಿ ಕಾಣುತ್ತಾನೆ. ಮಥುರ ಬಾಬು ದಿಗ್ಗನೆದ್ದು, ತಾನು ರಾಸಮಣಿಯ ಅಳಿಯನೆಂಬುದನ್ನು ಮರೆತು, ಪೂಜಾರಿಯೆಡೆಗೆ ಓಡೋಡಿ, ದಿಂಡುರುಳಿ ಅವನ ಕಾಲು ಹಿಡಿದು, ‘ದೇವ ದೇವ, ಹೇಮಹಾದೇವ, ಹೇ ಜಗನ್ಮಾತೆ ಚಿನ್ಮೂ!’ ಎಂದು ಗದ್ಗದಿಸು ತ್ತಾನೆ.

ಏನಿದೇನಿದು ನೀನು ಮಾಡುತ್ತಿರುವುದು,
ರಾಣಿ ಅಳಿಯ ತಾನಾಗಿ?
ಏಳು, ಬೇಗೇಳು, ಕಂಡರೇನೆನ್ನುವರು ಜನ?
ಸಣ್ಣ ಭಟ್ಟಾಚಾರಿ ಮಾಟ ಮಾಡಿಹನೆಂಬರು!
ಏಳು ಬೇಗೇಳು!

ಎಂದು ಶ್ರೀರಾಮಕೃಷ್ಣರು ಕಾತರಿಸುತ್ತಾರೆ. ‘ನೀವಲ್ಲದೆ ಶಿವಕಾಳಿ ಬೇರೆಯಿಲ್ಲ’ ಎಂದು ಮಥುರ ನುಡಿಯುತ್ತಾನೆ. ‘ನನಗೊಂದೂ ಗೊತ್ತಿಲ್ಲ, ಅದೆಲ್ಲವೂ ಜಗದಂಬೆಯಲೀಲೆ’ ಎಂದು ಶ್ರೀ ರಾಮಕೃಷ್ಣರು ಅವನನ್ನು ಮೇಲೆಬ್ಬಿಸುತ್ತಾರೆ. ಭೈರವಿ ತೋತಾಪುರಿಯರ ಜತೆಗೆ ಅವರ ದಿವ್ಯಲೀಲೆಯನ್ನು ಲೋಕಕ್ಕೆ ಮೊದಲು ಮನದಟ್ಟು ಮಾಡಿಕೊಟ್ಟ ಕೀರ್ತಿ ಮಥುರ ಬಾಬುವಿಗೆ ಸಲ್ಲಬೇಕಾಗಿದೆ. ಶಿವಕಾಳಿಯರ ಅಭೇದತ್ವದ ದರ್ಶನವೂ ಅವನ ಮೂಲಕ ಲೋಕಕ್ಕೆ ವೇದ್ಯವಾಗುತ್ತದೆ.

‘ರಾಣಿಯ ಮೊಕದ್ದಮೆ’ ಎಂಬ ಕವಿತೆ[24] ಪರಮಹಂಸರ ಪವಾಡ ಮಹಿಮೆಯನ್ನೂ, ರಾಸಮಣಿಯ ಹಿರಿಮೆಯನ್ನೂ ಶ್ರುತಪಡಿಸುತ್ತದೆ. ಪರಮಹಂಸರು ಅವತಾರ ಪುರುಷರೆಂಬ ವಿಷಯದಲ್ಲಿ ಅವಳಿಗೆ ಸಂದೇಹ ಲವಲೇಶವೂ ಇಲ್ಲ.

ನನ್ನೆಲ್ಲ ಚಿನ್ನ ಇಂದು ಚಿನ್ಮಯವಾಯ್ತು!
ಚಿದ್ಭನವಾಯ್ತು ನಾ ಕಟ್ಟಿಸಿದಕಲ್ಲು ಮಣ್ಣು!
ಅಗಣ್ಯವಾಯ್ತು ನನ್ನ ಹಿರಿಯರ ಪುಣ್ಯದೇಳ್ಗೆ!
ದಕ್ಷಿಣೇಶ್ವರವಾಯ್ತು ಇನ್ನು ಲೋಕಕ್ಕೆ ಕಣ್ಣು!
ಕೃಪೆಯಾಗಿ
ಭಗವಂತನವತರಿಸಿದನು ಭಾರತದಬಾಳ್ಗೆ!

ಎಂಬ ಅನನ್ಯ ಶ್ರದ್ಧೆ ಅವಳದು. ಗುರುಪಾದ ಧೂಳಿಯಾಗುವ ಪುಣ್ಯ ತನಗೆ ಲಭಿಸಿತೆಂದು ಹಿಗ್ಗುತ್ತಾಳೆ. ಗಂಗೆಯಲ್ಲಿ ಮಿಂದು ಮಡಿಯುಟ್ಟು ಅವಳು ಪೂಜೆಯ ಹೊತ್ತಿಗೆ ಭವತಾರಿಣಿಯ ಮುಂದೆ ನಿಲ್ಲುತ್ತಾಳೆ. ಎಲ್ಲ ಅವತಾರಗಳೂ ಒಟ್ಟಿಗೆ ಭವತಾರಣಿಯಲ್ಲುದ್ಭವಿಸಿ, ಪರಮಹಂಸ ದಿವ್ಯಪೂಜೆಯನ್ನು ಸ್ವೀಕರಿಸುತ್ತಿದ್ದಂತೆ ನೆರದಿದ್ದವರಿಗೆಲ್ಲ ಅನುಭವವಾಗುತ್ತದೆ. ಪೂಜಾಂತ್ಯ ದಲ್ಲಿ ರಾಣಿಯ ಭಕ್ತಿ ನಿರ್ಭರದ ಪ್ರಾರ್ಥನೆಗೆ ಓಗೊಟ್ಟು ಪರಮಹಂಸರು ಭಕ್ತಿಗೀತೆಗಳನ್ನು ಹಾಡುತ್ತಾರೆ. ಇದ್ದಕ್ಕಿದ್ದಂತೆ ಅವರು ಹಾಡು ನಿಲ್ಲಿಸಿ, ‘ಇಲ್ಲಿಯೂ ಮೊಕದ್ದಮೆಯ ಆಲೋಚನೆಯೆ? ಮಾರುಕುಟ್ಟೆಯ ಮಾಡುವಿರೆ ನನ್ನ ತಂದೆಯ ಮನೆಯ?’ ಎಂದು ಕ್ರಿಸ್ತಾ ವತಾರವನ್ನಭಿನಯಿಸುವವರಂತೆ ಅವರು ರಾಣಿಯ ಕೆನ್ನೆಗೆ ತಟ್ಟುತ್ತಾರೆ. ಹಾಳು ಭಟ್ಟಾಚಾರಿ ಯಿಂದ ರಾಣಿಗವಮಾನ ವಾಯ್ತೆಂದೂ, ಅವನನ್ನು ದೇವಮಂದಿರದಿಂದ ತಳ್ಳಿರೆಂದೂ ರಾಣಿಯ ಕಡೆಯವರು ಮುನ್ನುಗ್ಗುತ್ತಾರೆ. ‘ಭಟ್ಟಾಚಾರ್ಯರು ತಪ್ಪು ಮಾಡಿಲ್ಲ; ನಾನೇ ತಪ್ಪಿತಸ್ತೆ. ಆಚೆ ನಡೆಯಿರಿ’ ಎಂದು ರಾಣಿ ಸೇವಕರಿಗೆ ಆಜ್ಞೆ ಮಾಡುತ್ತಾಳೆ. ಏನೂ ನಡೆದಿಲ್ಲ ವೆಂಬಂತೆ ಪರಮಹಂಸರ ಹಾಡು ಮುಂದುವರಿಯುತ್ತದೆ. ಭಕ್ತಿ ಭಕ್ಥೆ  ಮತ್ತು ಆರಾಧ್ಯ ಈ ಮೂವರೂ ಆನಂದ ತುಂದಿಲರಾಗುತ್ತಾರೆ.

ಶ್ರೀ ರಾಮಕೃಷ್ಣ ಶ್ರೀ ಶಾರದಾದೇವಿಯರ ದಾಂಪತ್ಯ ಸಂಬಂಧ ಜಗತ್ತಿನಲ್ಲಿಯೇ ಅತ್ಯಪೂರ್ವವಾದದ್ದು; ಹರಗಿರಿಜೆಯರ ದಾಂಪತ್ಯವನ್ನು ಸಹ ಮೀರಿಸಿದ್ದು. ದಾಂಪತ್ಯ ಸಂಬಂಧದ ಉಚ್ಚತಮ ಧ್ಯೇಯ ಅಧ್ಯಾತ್ಮಸಿದ್ದಿಯೇ ಹೊರತು, ಇಂದ್ರಿಯ ಸುಖವಲ್ಲವೆಂಬ ಸತ್ಯ ಆ ದೇವ ದಂಪತಿಗಳ ನಿರ್ಮಲ ಜೀವನದಲ್ಲಿ ಸ್ಫಟಿಕ ಸ್ಪಷ್ಟವಾಗಿ ಮೈದೋರಿದೆ. ಅದಕ್ಕೆ ಸಾಕ್ಷಿಯಾಗಿ ಅವರ ಜೀವನದಲ್ಲಿ ನಡೆದ ಅತ್ಯದ್ಭುತವೂ ರೋಮಾಂಚನಕಾರಿಯೂ ಅದೊಂದು ಘಟನೆ ‘ಎಂಟು ತಿಂಗಳು!’[25] ಎಂಬ ಕವಿತೆಯಲ್ಲಿ ನಿರೂಪಣೆಗೊಂಡಿದೆ. ಸುಂದರಿಯೂ ಷೋಡಶಿಯೂ ಆದ ಶ್ರೀಮಾತೆ ಮತ್ತು ನವಯೌವನದಲ್ಲಿ ಕಾಲಿಟ್ಟಿದ್ದ ಶ್ರೀಗುರು ಇಬ್ಬರೂ ಒಂದೆ ಮಂಚದ ಮೇಲೆ, ಒಂದೆ ಹಾಸುಗೆಯಲ್ಲಿ ಎಂಟು ತಿಂಗಳು ರಾತ್ರಿ ಕಳೆದಿದ್ದರಂತೆ. ಜ್ವಾಲಾಮುಖಿಯ ನಡುವಿದ್ದರೂ ಅವರು ತಣ್ಣಗೆ ನಿದ್ದೆ ಮಾಡುತ್ತಿದ್ದ ರಂತೆ. ಬೆವರು ಬೇಗೆಗಳಿಲ್ಲ! ಉದ್ವೇಗ ಪ್ರಯತ್ನಗಳಿಲ್ಲ; ಒಂದೇ ತೊಟ್ಟಿಲಲ್ಲಿ ಮಲಗಿದ್ದ ಎರಡು ಶಿಶುಗಳಂತಿದ್ದರಂತೆ. ಈ ಪವಾಡದ ಮುಂದೆ ಜಗತ್ತಿನ ಕೋಟಿ ಕೋಟಿ ಪವಾಡಗಳು ನಾಚಿ ತಲೆತಗ್ಗಿಸುತ್ತವೆಂಬ ಕವಿಯ ಮಾತು ಸಹಜವಾಗಿದೆ. ಆ ಘಟನೆಯ ಭವ್ಯತೆಯನ್ನು ನೆನೆದಾಗ, ಕವಿಯ ಹಣೆ ಮಾತ್ರವಲ್ಲ, ಸಮಸ್ತ ಲೋಕಗಳ ಹಣೆಗಳು ಮಣಿದು ಕೃತಾರ್ಥ ವಾಗುತ್ತವೆ.

ನನ್ನ ಭಕ್ತಿಯ ಭವ್ಯ ಜ್ವಾಲೆ
ಲೋಕ ಲೋಕಗಳಾಚೆ ಯಾಕಾಶಕೇರಿ
ಕೈಲಾಸಗಳೆ ಕರಗುತ್ತವೆ,
ಮರ್ತ್ಯಕ್ಕೆ ಧವಳ ಭಾಗೀರಥಿಯವತರಿಸುವಂತೆ!
ರೋಮಾಂಚನವನನುಭವಿಸುವ ಈ ಬದ್ಧ ಜೀವಕ್ಕೆ
ಕೃಪೆದೋರುತ್ತದೆ ಭಾವಬುದ್ಧ ಸಮಾಧಿ!

ಆ ಲೋಕ ವಿಸ್ಮಯಕಾರಿ ಘಟನೆಯನ್ನು ನೆನೆಯುವ ಮರ್ತ್ಯರಲ್ಲಿಯೂ ಅಮರ್ತ್ಯತ್ವ ಪ್ರಾಪ್ತವಾಗದಿರುವುದಿಲ್ಲ.

ತಮ್ಮ ಮನಸ್ಸಿನಲ್ಲಿ ದೋಷ ದೌರ್ಬಲ್ಯಗಳು ತಲೆಯೆತ್ತುವ ಕುರುಹು ಕಂಡ ಕೂಡಲೆ ಕುವೆಂಪು ಗುರುವಿನ ಮರೆಹೊಗುತ್ತಾರೆ. ಗುರು ಕರುಣೆಯೇ ‘ಶಿಷ್ಯನ ಧೈರ್ಯ’ವಾ ಗಿ ಹರಿದು ಬರುತ್ತದೆ. ‘ನನ್ನ ಪುಣ್ಯದೊಳೆನಗೆ ನೆಚ್ಚಿಲ್ಲ, ಗುರುದೇವ, ನಿನ್ನ ಕರುಣೆಯೆ ನನಗೆ ಹಿರಿಯನೆಚ್ಚು’ ಎಂದವರು ‘ದೈನ್ಯತೆ’ಯಿಂದ ನೊಂದು ಕೈಮುಗಿಯುತ್ತಾರೆ. ‘ನನ್ನ ಇಷ್ಟಕೆ ಇದಿರೆ. ಹೊರೆಯದಿದ್ದರೆ ನೀನು ಗುರುದೇವನೆಂಬ ಒಲವಿಗೆ ಅರುಹನೇನು?’ ಎಂದು ಗುರುವಿಗೆ ಸವಾಲೊಡ್ಡಿ, ‘ಧೈರ್ಯ ಭಿಕ್ಷೆ’ ಹಾಕುವಂತೆ ನಿವೇದಿಸಿಕೊಳ್ಳುತ್ತಾರೆ. ಮನೆಯಲ್ಲಾಗಲಿ ಬೇರೆ ಕಡೆಯಲ್ಲಾಗಲಿ ಅಲ್ಪ ಸ್ವಲ್ಪ ಕೇಡು ಪ್ರಾಪ್ತವಾಗುವುದಾದರೆ, ಗುರುಪಾದವನ್ನು ನೆನೆದು ಸುಮ್ಮನಿದ್ದು ಬಿಡುತ್ತಾರೆ. ‘ಈವೊತ್ತೊಂದು ದಿನ’ ಸುಮ್ಮನಿದ್ದು ಬಿಡುವಂತೆ ಮನಸ್ಸಿಗೆ ಬುದ್ದಿ ಹೇಳುತ್ತಾರೆ. ತಾವು ನೆಟ್ಟು ನೀರು ಹೊಯ್ದು ಸಾಕಿದ ಸಂಪಗೆಯ ಮರ ಬಿಟ್ಟ ಮೊದಲ ಹೂವನ್ನು ಶ್ರೀ ಗುರುವಿಗೆ ಸಮರ್ಪಿಸಿದಾಗ ಕವಿಗಳು ಧನ್ಯತೆಯ ಸುಖವನ್ನನು ಭವಿಸುತ್ತಾರೆ. ಮೇದಿನಿಯಲ್ಲಿ ಅದು ಮೊದಲ ಹೂವಲ್ಲವಾದರೂ, ಅಂಥ ಹೂಗಳು ರಾಶಿ ರಾಶಿಯಾಗಿ ಗುರುಪಾದದಲ್ಲಿ ಬಿದ್ದಿದ್ದರೂ, ತಾವು ಬೆಳೆದ ಮೊದಲ ಹೂವೆಂಬ ಹೆಮ್ಮೆ ಅವರದು.[26]

ಕವಿ ಎಲ್ಲಿಯೇ ಇರಲಿ ಯಾವ ಕಾಲದಲ್ಲಿಯೇ ಆಗಲಿ, ಯಾವ ಅವಸ್ಥೆಯಲ್ಲಿಯೇ ಇರಲಿ, ಅವರ ದಕ್ಷಿಣೇಶ್ವರದ ‘ಸಂಧ್ಯಾ ಯಾತ್ರೆ’[27] ಮಾತ್ರ ಎಂದೂ ತಪ್ಪಿದ್ದಲ್ಲ.

ಸಂಜೆಯಾಗಲು ತವಕಿಪುದು ಮನ
ದಕ್ಷಿಣೇಶ್ವರ ಯಾತ್ರೆಗೆ,
ಪರಮಹಂಸರ ತೀರ್ಥವಾಣಿಯ
ಪಂಚ ಅಮೃತದ ಪಾತ್ರೆಗೆ!

ಯಾತ್ರೆ ಹೋದಾಗಲೆಲ್ಲ ಗುಪ್ತ ದಪ್ತರ ಬರೆಯುವ ಮಹೇಂದ್ರ ಗುಪ್ತನನ್ನು ನೋಡುತ್ತಾರೆ; ಪ್ರಶ್ನೆಗಳ ವರ್ಷವನ್ನು ಕರೆಯುವ ನರೇಂದ್ರನ ವಾದವನ್ನು ಆಲಿಸುತ್ತಾರೆ. ಪರಮಹಂಸರಿಗೆ ಭಕ್ತಿಯ ನಮನಗಳನ್ನು ಸಲ್ಲಿಸುವ ಕೇಶವ ಚಂದ್ರಸೇನ ಮತ್ತು ಗಿರೀಶ ಘೋಷರ ಭಕ್ತಿಕೈಂಕರ್ಯವನ್ನು ಈಕ್ಷಿಸುತ್ತಾರೆ. ತಮ್ಮ ದೇವರ ಮನೆಯಲ್ಲಿಯೇ ಹರಿದ್ವಾರ ವಾರಣಾಸಿ ಹೃಷೀಕೇಶ, ದಕ್ಷಿಣೇಶ್ವರ ರಾಮೇಶ್ವರಗಳನ್ನು ಕವಿ ಕಾಣುತ್ತಾರೆ. ಸರ್ವ ದೇವಾವತಾರನಾದ ಗುರುದೇವನೂ ಯಾವಾಗಲೂ ಅಲ್ಲಿಯೇ ನೆಲೆಸಿದ್ದಾನೆ.

ಕುವೆಂಪು ಅವರು ದಕ್ಷಿಣೇಶ್ವರದಿಂದ ಹಿಂದಿರುಗಿದ ಕೂಡಲೇ ರಚಿಸಿದ ‘ಶ್ರೀ ಗುರು ದೇವನಿಗೆರಗುವೆನು’[28] ಎಂಬ ಹಾಡು ಇಂದಿಗೂ ನವೋನವವಾಗಿ, ಭಕ್ತಿಸೌಗಂಧದಿಂದ ಕೂಡಿದುದಾಗಿ, ಕೇಳಿದವರ ಮನಸ್ಸನ್ನು ತೋಯಿಸುತ್ತದೆ, ತೇಲಿಸುತ್ತದೆ. ‘ಶ್ರೀ ಗುರುದೇವನಿ ಗೆರಗುವೆನು; ಗುರು ಚರಣದಲಿ ನಾ ಕರಗುವೆನು!’ ಎಂಬ ಪಲ್ಲವಿಯಿಂದ ಅದು ಪ್ರಾರಂಭವಾಗುತ್ತದೆ. ಪ್ರತಿಯೊಂದು ಪಂಕ್ತಿಯೂ ಪರಮಹಂಸರ ಚಿಜ್ಜ್ಯೋತಿಗೆ ಕನ್ನಡಿ ಯಾಗಿದೆ. ಶ್ರೀರಾಮಕೃಷ್ಣರು ವೈರಾಗಿಯೂ ಅಹುದು. ತ್ಯಾಗಿಯೂ ಅಹುದು; ಸಚ್ಚಿದಾ ನಂದಾತ್ಮನೂ ಅಹುದು; ಮಿಗಿಲಾಗಿ ಈವರೆಗಿನ ಅವತಾರ ಪುರುಷರ ಸಾಲಿನಲ್ಲಿ ಅಗ್ರಸ್ಥಾನಕ್ಕೆ ಯೋಗ್ಯರಾದವರು. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿಯೂ ಜಾತ್ಯತೀತರಾಗಿ, ಸಂಸಾರಿ ಯಾಗಿಯೂ ವೀರಬ್ರಹ್ಮಚಾರಿಯಾಗಿ, ಲೌಕಿಕ ರೀತಿಯಲ್ಲಿ ದಾಂಪತ್ಯ ಸುಖವನ್ನನು ಭವಿಸದಿದ್ದರೂ ಅಧ್ಯಾತ್ಮಿಕವಾಗಿ ಅದ್ವೈತಸಿದ್ದಿಯ ಶಿಖರಕ್ಕೇರಿ, ಹಿಂದುವಾಗಿಯೂ ನಿರ್ಮತೀಯರಾಗಿ, ಮತಾತೀತರಾಗಿ, ಸರ್ವಧರ್ಮ ಸಮನ್ವಯಾಚಾರ್ಯರಾಗಿ, ಧರ್ಮ ಸಂರಕ್ಷಣಾರ್ಥವಾಗಿ ಅವತರಿಸಿದ್ದರೂ ಯುದ್ಧವೆಂಬುದನ್ನೇ ಮರೆತು ಯೋಗ ತಪಸ್ಸು ಪ್ರಾರ್ಥನೆ ಉಪದೇಶಗಳ ಮೂಲಕವೇ ಅಧರ್ಮವನ್ನು ವಿನಾಶಗೈದು, ಅಹಿಂಸಾತ್ಮಕವಾಗಿ ವೇದಾಂತ ದರ್ಶನದ ಮೂಲಕವಾಗಿಯೇ ಜಗತ್ತಿನಲ್ಲಿ ಶಾಂತಿ ಬೇರೂರುತ್ತದೆಂದು ಮಾರ್ಗದರ್ಶನ ಮಾಡಿದ ಶ್ರೀ ರಾಮಕೃಷ್ಣರು ವಿಶಿಷ್ಟ ಅವತಾರ ಪುರುಷರೆಂಬುದು ಈ ಪ್ರಾರ್ಥನೆಯ ಸಾರಾಂಶ.

ಈಚೆಗೆ ಕುವೆಂಪು ರಚಿಸಿದ ‘ಶ್ರೀರಾಮಕೃಷ್ಣ ಸುಪ್ರಭಾತಂ’ ಮೇಲಣ ಪ್ರಾರ್ಥನೆಗೆ ಪೂರಕದಂತಿದೆ. ಶ್ರೀ ರಾಮಕೃಷ್ಣರು ‘ಸಕಲ ತತ್ತ್ವದಸಾರ ಶ್ರೀಮೂರ್ತಿ’ಯೆಂದು, ‘ಅಧ್ಯಾತ್ಮ ವೈಜ್ಞಾನಿಕ ಕ್ರಾಂತಿ’ವೀರರೆಂದು, ‘ಸರ್ವಾವತಾರ ಸಂಪೂರ್ಣ ವಿಭು’ವೆಂದು ಈ ಪ್ರಾರ್ಥನೆ ಅವರ ಮಹಿಮೆಯನ್ನು ಕೀರ್ತಿಸುತ್ತದೆ. ಏಕಮೇವಾ ದ್ವಿತೀಯವಾಗಿರುವ ಭಾಗವತ ಶಕ್ತಿ ಒಂದೊಂದು ಯುಗದಲ್ಲಿ ಒಂದೊಂದು ಕಡೆ ಒಂದೊಂದು ಅವತಾರವಾಗಿ ಜಗತ್ತಿಗಿಳಿದು, ಕಲಿಯುಗದಲ್ಲಿ ಹಿಂದಿನ ಅವತಾರಗಳನ್ನೆಲ್ಲ ಒಳಗೊಂಡು, ಅವತಾರ ತತ್ವದ ವಿಕಾಸಪಥ ಶ್ರೀ ರಾಮಕೃಷ್ಣರಲ್ಲಿ ಶಿಖರ ಸ್ಥಾನವನ್ನು ಮುಟ್ಟಿದೆಯೆಂಬುದೇ ಈ ಸುಪ್ರಭಾತದಲ್ಲಿ ಅಡಕಗೊಂಡಿರುವ ದಾರ್ಶನಿಕ ವಿಚಾರ.

ತ್ರೇತೆಯೊಳ್ ಶ್ರೀ ರಾಮನೋಲವತರಿಸಿ ಬಂದೆ;
ದ್ವಾಪರದೊಳಾ ಕೃಷ್ಣ ಶ್ರೀರೂಪದಲ್ಲಿ ನಿಂದೆ;
ಸರ್ವಧರ್ಮಾವತಾರಂ ಕಲಿಯುಗದಿ ಸಂದೆ;
ಶ್ರೀ ರಾಮಕೃಷ್ಣ ಪ್ರಭೋ ತವ ಸುಪ್ರಭಾತಂ!
ನಜರೇತಿನಲ್ಲಿ ಯೇಸು ಸ್ವಾಮಿಯಾಗಿದ್ದೆ;
ನದಿಯದೊಳ್ ಶ್ರೀ ಕೃಷ್ಣ ಚೈತನ್ಯನಾಗಿದ್ದೆ;
ಮತ್ತೆ ಭಾರತದಲ್ಲಿ ನೀ ಮೈದೋರು ತೆದ್ದೆ;
ಶ್ರೀ ರಾಮಕೃಷ್ಣ ಪ್ರಭೋ ತವ ಸುಪ್ರಭಾತಂ!

ಯಾರು ರಾಮನೋ ಯಾರು ಕೃಷ್ಣನೋ ಅವನೇ ಶ್ರೀ ರಾಮಕೃಷ್ಣ ಎಂದು ಶ್ರೀ ರಾಮಕೃಷ್ಣರೇ  ಜಗತ್ತಿಗೆ ಸಾರಿದ್ದುಂಟು. ಹಿಂದೆ ತಾವು ನಜರೇತಿನಲ್ಲಿ ಯೇಸು ಸ್ವಾಮಿಯಾಗಿದ್ದ ಸಂಗತಿ ಯನ್ನೊಮ್ಮೆ ಅವರು ನೆನೆಸಿಕೊಂಡರೆಂದು ಶ್ರೀ ರಾಮಕೃಷ್ಣ ವಚನ ವೇದದಲ್ಲಿ ಉಲ್ಲೇಖ ಗೊಂಡಿದೆ. ರಾಮಕೃಷ್ಣಾದಿ ಅವತಾರ ಪುರುಷರು ಯುದ್ಧದ ಮೂಲಕ ಅಧರ್ಮವನ್ನು ತೊಡೆದರೆ, ಬುದ್ಧ ಯೇಸು ಶ್ರೀ ರಾಮಕೃಷ್ಣರು ಅಹಿಂಸೆ ಪ್ರೇಮ ಸರ್ವೋದಯ ಸಮನ್ವಯ ಪೂರ್ಣದೃಷ್ಟಿಗಳ ಮೂಲಕ ಮಾನವ ಹೃದಯವನ್ನು ಶುದ್ದೀಕರಿಸಲು ಪ್ರಯತ್ನಿಸಿದ್ದಾರೆ. ದ್ವೇಷವನ್ನು ಪ್ರೇಮದಿಂದ ಗೆಲ್ಲಬಹುದೇ ಹೊರತು ಸೇಡಿನಿಂದಲ್ಲ, ಯುದ್ಧದಿಂದಲ್ಲ ಎಂಬುದನ್ನವರು ಅನುಷ್ಠಾನದ ಮೂಲಕ ತೋರಿಸಿಕೊಟ್ಟಿದ್ದಾರೆ.

ಇಡೀ ವಿಶ್ವವನ್ನೆ ತಬ್ಬಿಕೊಂಡಿರುವ ಬ್ರಾಹ್ಮೀಶಕ್ತಿ ಮಾನವ ಚೇತನಕ್ಕಿಳಿಯುವಾಗ ತನ್ನನ್ನು ತಾನೇ ಕುಗ್ಗಿಸಿಕೊಳ್ಳುವ ಕಷ್ಟವನ್ನನುಭವಿಸಬೇಕಾಗುತ್ತದೆ; ಅಣುತನವನ್ನು ಪಡೆಯ ಬೇಕಾಗುತ್ತದೆ. ಮಹಾವ್ರೋಮರ್ತ್ಯಕ್ಕಿಳಿಯುವಾಗ ಭೂತತ್ತ್ವಕ್ಕನುಗುಣವಾಗಿ ನಾಮರೂಪ ಸ್ವರೂಪ ಗಾತ್ರಾಕಾರಗಳನ್ನು ಪಡೆಯಬೇಕಾಗುತ್ತದೆ. ಲೋಕಸಂಗ್ರಹಾರ್ಥವಾಗಿ ಭೂತತ್ತ್ವ ವನ್ನೊಪ್ಪಿಕೊಂಡು, ಮಾನವತೆಯನ್ನಪ್ಪಿಕೊಂಡು ಬಂದ ಬ್ರಾಹ್ಮೀಶಕ್ತಿಯೇ ಈ ದಿವ್ಯಗುರು. ತಮ್ಮ ಕಲಶಚೇತನದ ಗುಹೆಯಲ್ಲಿ ಪರಿತಪಿಸುತ್ತಿರುವ ಆತ್ಮವನ್ನುದ್ಧರಿಸುವಂತೆ ಗುರುರೂಪದ ಕರುಣಾ ನೃಸಿಂಹನನ್ನು ಕವಿ ಪ್ರಾರ್ಥಿಸುತ್ತಾರೆ. ‘ಮದ್ಗುರುಃ ಶ್ರೀ ಜಗದ್ಗುರುಃ’ ಎಂಬ ಸಾನೆಟ್ಟಿನಲ್ಲಿ. ಕವಿ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಯೂ ಆ ಸಾನೆಟ್ಟಿನ ಮಹತ್ವವನ್ನರಿತು ಪ್ರಾರ್ಥಿಸಿದಾಗ, ಕವಿಯಂತೆಯೇ ದಿವ್ಯಗುರುವಿನ ‘ಜ್ಯೋತಿರ್ವಕ್ಷದಮೃತವಜ್ರದಿ ಮಿಂದು’, ಸುಧಾ ಪೂರ್ಣತ್ವವನ್ನು ಪಡೆಯುವುದರಲ್ಲಿ ಸಂದೇಹವಿಲ್ಲ.

ಪ್ರತಿಯೊಬ್ಬ ಅವತಾರ ಪುರುಷನ ಸಂದೇಶ ಕಾಲ ದೇಶಾತೀತವಾಗಿ ಮೊಳಗಲು ಅವರ ಶಿಷ್ಯ ಪ್ರಶಿಷ್ಯರೇ ಕಾರಣ. ಶ್ರೀ ರಾಮಕೃಷ್ಣರನ್ನು ನವಯುಗಾವತಾರರೆಂದು ಕರೆದು, ಅವರ ಸಂದೇಶ ದೇಶವಿದೇಶಗಳಲ್ಲಿ ಸದಾಕಾಲ ವ್ಯಾಪಕವಾಗಿ ಹರಡುವಂತೆ, ಅವರ ಕೀರ್ತಿ ದಶದಿಕ್ಕುಗಳಲ್ಲಿ ಅನುರಣಿಸುವಂತೆ ಪ್ರಚಾರ ಮಾಡಿದವರು ಅವರ ಭೀಮ ಶಿಷ್ಯರಾದ ಸ್ವಾಮಿ ವಿವೇಕಾನಂದರು; ಅವರಂಥ ಶಿಷ್ಯ ಶ್ರೀ ರಾಮಕೃಷ್ಣರಿಗೆ ಸಿಗದಿದ್ದರೆ, ಜಗತ್ತಿನ ಅನೇಕ ಅಜ್ಞಾತ ಆವತಾರ ಪುರುಷರಂತೆ ಅವರೂ ವಿಸ್ಮೃತಿಯ ಗರ್ಭದಲ್ಲಿ ಮರೆಯಾಗುತ್ತಿದ್ದ ರೆಂಬುದಂತು ಸತ್ಯ. ಗುರುವಿನ ಕೃಪಾಕಟಾಕ್ಷಕ್ಕೊಳಗಾದ ಶಿಷ್ಯ, ಶಿಷ್ಯನ ಗೌರವಕ್ಕೆ ಪಾತ್ರನಾದ ಗುರು, ಇಬ್ಬರೂ ಪುಣ್ಯವಂತರೇ! ಪರಂಪರೆಗೆ ವಿರುದ್ಧವಾಗಿ ಬ್ರಾಹ್ಮಣ ಜಾತಿಗೆ ಸೇರದ ಶಿಷ್ಯನನ್ನು ಆರಿಸಿಕೊಂಡದ್ದರಲ್ಲಿ ಗುರುವಿನ ಭವಿಷ್ಯಜ್ಞಾನದ ಮಹಿಮೆ ಪ್ರಕಾಶಗೊಳ್ಳುತ್ತದೆ. ಶ್ರೀರಾಮಕೃಷ್ಣ ಶ್ರೀ ಶಾರದಾ ದೇವಿಯರ ಅಪೂರ್ವ ಅಲೌಕಿಕ ವ್ಯಕ್ತಿತ್ವ ಕುವೆಂಪು ಅವರಿಗೆ ಮೊದಲು ಪರಿಚಯವಾದದ್ದು ವಿವೇಕಾನಂದರ ಮೂಲಕವಾಗಿಯೇ. ಮುಂದಿನ ಅವರ ಸಕಲ ಸಾಧನೆ ಸಿದ್ದಿಗಳಿಗೆ ಆ ಇಬ್ಬರು ದಿವ್ಯಶಕ್ತಿಗಳೆ ಮುನ್ನೆಲೆ ಕಣ್ನೆಲೆಯಾಗುತ್ತಾರೆ. ಪರಮಹಂಸರು ಆರಾಧ್ಯ ದೇವತೆಯಾದರೆ, ವಿವೇಕಾನಂದರು ಅವರ ಆದರ್ಶ ಮೂರ್ತಿಯಾಗು ತ್ತಾರೆ. ವಿವೇಕಾನಂದರನ್ನು ಕುರಿತ ಕವಿತೆಗಳೇ ಮೊದಲು ಅವರ ಲೇಖನಿಯಿಂದ ಹೊರಹೊಮ್ಮುತ್ತವೆಂಬುದನ್ನು ಈ ಹಿಂದೆಯೇ ಗಮನಿಸಲಾಗಿದೆ.

ವಿವೇಕಾನಂದರನ್ನು ನೆನೆಯುವಾಗ ಭಾರತವೂ, ಭಾರತವನ್ನು ನೆನೆಯುವಾಗ ವಿವೇಕಾನಂದರೂ ಸದಾ ಕುವೆಂಪು ಅವರ ಕಣ್ಮುಂದೆ ನಿಲ್ಲುತ್ತಾರೆ. ‘ಸ್ವಾಮಿ ವಿವೇಕಾನಂದ’ ಎಂಬ ಕವಿತೆ ಕವಿ ಸ್ವಾಮಿಜಿಯ ಮಹಾಚೇತನಕ್ಕೆತ್ತಿದ ಮಂಗಳಾರತಿಯಾಗಿದೆ; ಅವರ ಗೌರವಕ್ಕಾಗಿ ನಿರ್ಮಿಸಿದ ಶಬ್ದರೂಪದ ಸ್ಮಾರಕ ಗೋಪುರವಾಗಿದೆ. ಸ್ವಾಮಿಜಿ ನವಯುಗಾ ಚಾರ್ಯರು, ವೀರ ವೇದಾಂತಿ, ರಾಮಕೃಷ್ಣರ ಭೀಮ ಶಿಷ್ಯ, ಸಾಧು ಭೈರವ, ನಿಜ; ಎಲ್ಲಕ್ಕಿಂತ ಮಿಗಿಲಾಗಿ ಭಾರತಾಂಬೆಯ ಧೀರಪುತ್ರ. ಆದ್ದರಿಂದಲೇ ಕವಿ

ಚಿದ್ ಋತಾಗ್ನಿಯ ಚಂಡಕಾಂತಿಯೆ, ಮೇರು ಸನ್ಯಾಸಿ,
ಭರತಖಂಡದ ನಂದಿದಿದ್ದಲಿಗಿತ್ತೆ ತೇಜವನು
ಬೊಮ್ಮದಂಬುಧಿಗಲೆಯನೀಯುವ ಭರದ ಬಿರುಗಾಳಿ,
ಬೂದಿ ಮುಚ್ಚಿದ ಭರತ ಭೂಮಿಯನೂದಿ ಬೆಳಗಿಸಿದೆ!
ಭರತ ಖಂಡದೊಳರಚುತಲೆಯುವ ಮನುಜ ಕುರಿಗಳಿಗೆ
ಸಿಂಹ ಹೃದಯವನಿತ್ತು ಗರ್ಜಿಸುವಂತೆ ನೀ ಮಾಡಿ
ಕುರಿಯ ದೊಡ್ಡಿಯ ಮುರಿದು ಸಿಂಹದ ಗುಹೆಯ ವಿರಚಿಸಿದೆ,
ಸಿಂಹ ಹೃದಯನೆ, ಶ್ರೀ ವಿವೇಕಾನಂದ ಯೋಗೀಂದ್ರ.

ಭರತಖಂಡದ ಅವನತಿಗಾಗಿ ಅವರಂತೆ ಚಿಂತಾಕ್ರಾಂತಕರಾದ ಸನ್ಯಾಸಿಗಳು ವಿರಳ. ಭಾರತೀಯರನ್ನು ಕುರಿಗಳಿಗೆ ಹೋಲಿಸಿರುವುದಂತು ಅತ್ಯಂತ ಉಚಿತವಾಗಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವೇದಾಂತದ ಹಿರಿಮೆಯನ್ನು ಸಾರಿ, ಅದಕ್ಕಿಂತ ಉತ್ತಮವಾದ ದರ್ಶನ ಶಾಸ್ತ್ರ ಮತ್ತೊಂದಿಲ್ಲವೆಂದು ವಿಶದಪಡಿಸುವ ಮೂಲಕ ಭಾರತದ ಕೀರ್ತಿಕೇತನವನ್ನು ನಭದಲ್ಲಿ ಹಾರಾಡಿಸಿದ್ದಾರೆಂದೂ, ಭಾರತೀಯರಿಗೀಗ ಬೇಕಾದದ್ದು ಅವರ ಧೈರ್ಯ ಸ್ಥೈರ್ಯ ದೃಢತೆ ಹಾಗೂ ಪವಿಶಕ್ತಿಗಳೆಂದೂ ಕವಿ ಆ ರಾಜಯೋಗಿ ರುದ್ರ ಸನ್ಯಾಸಿಯನ್ನು ಪ್ರಶಂಸಿಸುತ್ತಾರೆ.

‘ಶ್ರೀ ವಿವೇಕಾನಂದ ಸಂಭೂತಿ’ ಎಂಬ ಸಾನೆಟ್ಟು[29] ಶ್ರೀರಾಮಕೃಷ್ಣರು ಸಮಾಧಿ ಸ್ಥಿತಿಯಲ್ಲಿ ಕಂಡ ಅದ್ಭುತ ದರ್ಶನವೊಂದನ್ನು ಕನ್ನಡಿಸುತ್ತದೆ. ‘ಸಪ್ತರ್ಷಿಗಳಲ್ಲೊಬ್ಬನಾದ ನರಮಹರ್ಷಿ ಚಿನ್ಮಯ ಲೋಕದಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿದ್ದಾಗ, ರಾಮಕೃಷ್ಣರ ಆತ್ಮಜ್ಯೋತಿ ಆ ಲೋಕವನ್ನು ಸಾರಿ, ಘನೀಭೂತವಾಗಿ ದಿವ್ಯ ಶಿಶುವಿನ ಆಕಾರವನ್ನು ತಾಳಿ, ತನ್ನ ಕೋಮಲ ಬಾಹುಗಳಿಂದ ಆ ಮಹರ್ಷಿಯ ಕೊರಳನ್ನಪ್ಪಿಕೊಂಡು, ಸಮಾಧಿ ಸ್ಥಿತಿಯಿಂದ ಕೆಳಗಿಳಿಯುವಂತೆ ಅವನನ್ನು ಕರೆಯುತ್ತದೆ. ಆ ಋಷಿಯ ಅಂಶವೇ ಜ್ಯೋತಿರೂಪ ದಿಂದ ಧರಾಭಿಮುಖವಾಗಿ ಅವತರಿಸುತ್ತಿದ್ದುದನ್ನು ಕಂಡು ವಿಸ್ಮಿತನಾದೆ. ನರೇಂದ್ರನನ್ನು ನೋಡಿದಾಕ್ಷಣವೆ ಆ ಋಷಿಯೆಂದು ಗುರುತು ಹಿಡಿದೆ.’[30] ಪರಮಹಂಸರು ವಿವೇಕಾನಂದರಿಗೆ ತಮ್ಮೆಲ್ಲ ತಪಶ್ಯಕ್ತಿಯನ್ನು ಧಾರೆಯೆರೆದದ್ದಕ್ಕೆ, ತಾವು ಪಟ್ಟಶಿಷ್ಯತ್ವವನ್ನು ನೀಡಿದ್ದಕ್ಕೆ ಕಾರಣ ಇಲ್ಲಿದೆ. ಮಹಾಕಾವ್ಯದಿಂದ ಸಿಡಿದು ಬಂದ ಜ್ಯೋತಿಃಖಂಡದಂತಿದೆ ಈ ಸಾನೆಟ್ಟು.

ಭಾರತಕ್ಕೆ ಕೇಡಡಸಿದಾಗಲೆಲ್ಲ, ಭಾರತೀಯರು ಕುರಿಗಳಂತೆ ವರ್ತಿಸಿದಾಗಲೆಲ್ಲ ಕುವೆಂಪು ಸ್ವಾಮೀಜಿಯನ್ನು ನೆನೆಯುತ್ತಾರೆ. ೧೯೬೦ನೆಯ ಸಂವತ್ಸರದ ಅಕ್ಟೋಬರ್ ತಿಂಗಳ ಮೊದಲವಾರ. ಹಳೆಯ ಪಾಳೆಯಗಾರಿಕೆಯ ಹೊಸ ಪ್ರಹಸನದಂತಿದ್ದ ದಸರಾ ದರ್ಬಾರನ್ನು, ಭಾರತದ ರಾಜ್ಯಾಂಗಕ್ಕೆ ಆಗುತ್ತಿದ್ದ ಅವಮಾನವನ್ನು ಕಂಡು ಕವಿಯ ಮನಸ್ಸಿನಲ್ಲಿ ಅಸಹನೆ ಮೂಡಿದಾಗ ಗಾಂಧೀಜಿ ಮತ್ತು ಸ್ವಾಮಿಜೀಯವರ ನೆನಪಾಗುತ್ತದೆ.

ಸ್ವಾಮೀಜಿಯ ಭಾವ ಚಿತ್ರ ಇದಿರು ಗೋಡೆಯ ಮೇಲೆ
ತನ್ನ ಚಿಕಾಗೋ ಭಾಷಣದ ಭಂಗಿಯಲ್ಲಿ
ಮಂದ ಹಾಸದಲ್ಲಿ ನಿಂತಿತ್ತು ತೂಗಿ

ಅದೇ ಸಮಯದಲ್ಲಿ ಪ್ರಧಾನಿ ನೆಹರೂ ನ್ಯೂಯಾರ್ಕಿನ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುತ್ತಿದ್ದಾಗ ಭೋರ್ಗರೆದ ಚಪ್ಪಾಳೆಗಳ ಮೊಳಗನ್ನು ಕೇಳಿ ಕವಿಯ ಮನಸ್ಸು ಹೆಮ್ಮೆಯಿಂದ ಬೀಗುತ್ತದೆ.

ಕುವೆಂಪು ಅವರ ಅನೇಕ ಕೃತಿಗಳಲ್ಲಿ ವಿವೇಕಾನಂದರ ವೀರವಾಣಿಯ ಮೊಳಗು ಮತ್ತೆ ಮತ್ತೆ ಮಾರ್ದನಿಗೊಡುತ್ತದೆಂಬುದಕ್ಕೆ ನಿದರ್ಶನವಾಗಿ ‘ಇಂದಿನ ದೇವರು’ ‘ಪಾಂಚಜನ್ಯ’ ‘ಆತ್ಮಶ್ರದ್ಧೆ’ ಮೊದಲಾದ ಕವಿತೆಗಳನ್ನು ಹೆಸರಿಸಬಹುದು. ಅಂತೆಯೇ ಅವರ ಚಿತ್ತಪಶ್ಯಕ್ತಿ ಅವರ ಕಾವ್ಯ ಶರೀರದಲ್ಲಿ ಅಲ್ಲಲ್ಲಿ ಮಿಂಚುತ್ತದೆನ್ನುವುದನ್ನು ಶ್ರೀ ರಾಮಾಯಣ ದರ್ಶನದ ಕೆಲವು ಸನ್ನಿವೇಶಗಳಲ್ಲಿ ಗುರುತಿಸಬಹುದು. ಶ್ರೀ ರಾಮ ರಾವಣನ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನಂತರ, ರಾವಣ ಪ್ರಾಣ ರಾಮನಾತ್ಮದಲ್ಲಿ ಮೋಕ್ಷವನ್ನು ಪಡೆಯುವ ಸಂದರ್ಭದಲ್ಲಿ ಮೂರ್ಛಿತನಾದ ಶ್ರೀರಾಮ ‘ಎಲ್ಲಿ ನನ್ನೊಡಲೆಲ್ಲಿ, ಪೇಳ್, ತಾಯಿ ಕೌಸಲ್ಯಾ ತನೂಜತನು?’ ಎಂದು ಮೈ ತಿಳಿಯುವ ಸಮಯದಲ್ಲಿ ನುಡಿಯುತ್ತಾನಷ್ಟೆ. ವಿವೇಕಾನಂದ ರೊಮ್ಮೆ ನಿರ್ವಿಕಲ್ಪ ಸಮಾಧಿಯಿಂದ ಮೈತಿಳಿದೆದ್ದಾಗ ‘ಅಯ್ಯೋ, ನನ್ನ ಶರೀರವೆಲ್ಲಿ?’ ಎಂದು ಕೂಗಿಕೊಳ್ಳುತ್ತಾರೆ. ಕುವೆಂಪು ಸಿಡುಬಿನಿಂದ ನರಳುತ್ತಿದ್ದಾಗ ಯಾರಾದರೂ ಬಂದು ‘ಪುಟ್ಟಪ್ಪ’ ಎಂದು ಕರೆದರೆ ‘ನಾನು ಪುಟ್ಟಪ್ಪನಲ್ಲ, ಪುಟ್ಟಪ್ಪ ಸತ್ತುಹೋದ. ನಾನು ವಿವೇಕಾನಂದ’ ಎಂದು ಅಬ್ಬರಿಸುತ್ತಾರೆ. ಇಂಥ ಸಂದರ್ಭಗಳನ್ನು ಗಮನಿಸಿದಾಗ ಶ್ರೀ ರಾಮಕೃಷ್ಣ-ವಿವೇಕಾನಂದರು ಅವರ ಬದುಕಿನ ಮೇಲೆ ಬೀರಿದ್ದ ಪ್ರಭಾವ ಅವರ್ಣನೀಯ ವಾದದ್ದೆಂದೂ ವಿವೇಕಾನಂದ-ಕುವೆಂಪು ಅವರಲ್ಲಿ ಅವಿನಾಭಾವ ಸಂಬಂಧವಿದ್ದಿತೆಂದೂ ತೋರದಿರಲಾರದು. ಕುವೆಂಪು ಕೃತಿಗಳನ್ನೋದುತ್ತಿದ್ದರೆ, ಶ್ರೀರಾಮಕೃಷ್ಣ ವಿವೇಕಾನಂದರೆ ಕವಿಯ ಮೂಲಕ ಮಾತಾಡುತ್ತಿರುವಂತೆ ಭಾಸವಾಗುತ್ತದೆ.

ಸ್ವಾಮಿವಿವೇಕಾನಂದರು ರಚಿಸಿರುವ ಸಂನ್ಯಾಸಿ ಗೀತೆಯನ್ನು ಕುವೆಂಪು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆದರ್ಶ ಸಂನ್ಯಾಸಿ ಪಾಲಿಸಬೇಕಾದ ಕರ್ತವ್ಯ ಕರ್ಮಗಳು ಮತ್ತು ಅನುಸರಿಸಬೇಕಾದ ವಿಧಿನಿಯಮಗಳು ಇದರಲ್ಲಿ ಉಲ್ಲೇಖಗೊಂಡಿವೆ. ಮಾಯೆ ಬಿಗಿದಿರುವ ಹಗ್ಗವನ್ನು ಪುಡಿ ಪುಡಿ ಮಾಡುವಂತೆ, ಭವದ ತೃಷ್ಣೆಯನ್ನು ಬತ್ತಿಸಲು ಗುರಿಯು ದೊರಕುವ ತನಕ ಮುನ್ನುಗ್ಗಿ ನಡೆಯುವಂತೆ, ತತ್ತ್ವಮಸಿ ಎನ್ನುವ ತತ್ತ್ವವನ್ನರಿಯುವಂತೆ ಭೇದವನ್ನು ತೊರೆಯುವುದೆ ಮುಕ್ತಿಗೆ ಸೇತುವೆಂಬುದನ್ನು ತಿಳಿಯುವಂತೆ, ವೇದ ಶಾಸ್ತ್ರಗಳಲ್ಲಿ ಗುಡಿ ಗುಹೆಗಳಲ್ಲಿ ನಾಮರೂಪಾತೀತನನ್ನು ಹುಡುಕದೆ ತನ್ನೊಳಗೆ ಹುಡುಕುವಂತೆ, ಜೀವಜಂತುಗಳಿಗೆ ಹಿಂಸೆಯಾಗದ ರೀತಿಯಲ್ಲಿ ಶಾಂತಿಯನ್ನು ನೆಲೆಗೊಳಿಸುವಂತೆ, ಸರ್ವಸಂಗ ಪರಿತ್ಯಾಗಿಯಾಗಿ ಗಗನವೇ ಮನೆಯಾಗಿ ಹಸುರೆ ಹಾಸುಗೆಯಾಗಿ, ಸಿಕ್ಕಿದಾಗ ತಿಂದು ಸರಳ ಜೀವನವನ್ನು ನಡೆಸುವಂತೆ, ಕರ್ಮಶಕ್ತಿಯು ಮುಗಿಯುವವರೆಗೂ ಮುಂದೆ ಸಾಗುತ್ತ ನಾನು ನೀನುಗಳಳಿದು ಕಡೆಯಲ್ಲಿ ಆತ್ಮದೊಳಿಳಿದು ಮರೆಯಾಗುವಂತೆ ಸನ್ಯಾಸಿಗಳಿಗೆ ಕರೆ ಕೊಡುತ್ತಾರೆ. ತ್ಯಾಗವೇ ಸನ್ಯಾಸಿಯ ಜೀವಸತ್ತ್ವವೆಂಬುದನ್ನೂ ಆ ಮೂಲಕ ತಾಯ್ನಡನ್ನು ಸೇವಿಸಬೇಕೆಂಬುದನ್ನೂ ಬಗೆಗಾಣಿಸುತ್ತಾರೆ.

ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು;
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಡನು!

ಎಂಬ ತೂರ್ಯ ಧ್ವನಿ ಈ ಗೀತೆಯುದ್ಧಕ್ಕೂ ಅನುರಣಿಸುತ್ತದೆ.

ಆತ್ಮೋದಯವಲ್ಲ, ಸರ್ವೋದಯ ಸನ್ಯಾಸಿಯ ಗುರಿಯಾಗಿರಬೇಕೆಂದು ಅವರು ಮೇಲಿಂದ ಮೇಲೆ ಘೋಷಿಸುತ್ತಾರೆ. ಕನ್ಯಾಕುಮಾರಿಯ ಕಡಲ ನಡುವೆ ನಿಂತು ಭಾರತ ವರ್ಷದ ಕಡೆಗೆ ಮುಖವಾಗಿ ಸಂಬೋಧಿಸಿದ ಗಂಭೀರ ವಾಣಿ ಇಂದಿಗೂ ನಾಡಿನ ಗಿರಕಂದರಗಳಲ್ಲಿ ಮಾರ್ದನಿಗೊಡುತ್ತಿದೆ. ಅದು ಕಿವಿಯಿದ್ದವರಿಗೆ ಕೇಳಿಸೀತು, ಎದೆಯಿದ್ದ ವರಿಗೆ ಅರಿವಾದೀತು.

‘ಇರಲಿ’ ನಾವೇನು ಮಾಡಿದ್ದೇವೆ? ಸನ್ಯಾಸಿಗಳು ನಾವೇನು ಮಾಡಿದ್ದೇವೆ? ಭರತಮಾತೆಯ ತೊಡೆಯ ಮೇಲೆ ಚಕ್ಕಂದದಿಂದ ನಲಿದಾಡುವ ಸನ್ಯಾಸಿಗಳು, ನಾವೇನು ಮಾಡಿದ್ದೇವೆ? ಕಾಷಾಯ ವಸ್ತ್ರಧಾರಿಗಳಾಗಿ ಮೂರ್ಖಜನರ ತಾಮ ಸಾತಿಥ್ಯದಿಂದ ಉದರ ಪೋಷಣೆ ಮಾಡಿಕೊಳ್ಳುತ್ತ ಅಲೆಯುತ್ತಿರುವ ಲಕ್ಷಾಂತರ ಸಂನ್ಯಾಸಿಗಳು, ನಾವೇನು ಮಾಡಿದ್ದೇವೆ? ತತ್ತ್ವ ಬೋಧನೆ? ತತ್ತ್ವಬೋಧನೆ ತತ್ತ್ವ ಬೋಧನೆ! ಚಿಃ ಚಿಃ ಬೈರಾಗಿಗಳೆ ನಿಮ್ಮ ತತ್ತ್ವಬೋಧನೆಗೆ ಬೆಂಕಿಯಿಡಲಿ’! ಹುಚ್ಚು! ಹುಚ್ಚು! ನಿಮಗೆಲ್ಲ ಹುಚ್ಚು! ಹೊಟ್ಟೆಗಿಲ್ಲದೆ ಕಂಗೆಟ್ಟಿರುವ ದೇಶದಲ್ಲಿ ನಿಮ್ಮ ತತ್ತ್ವ ಬೋಧನೆ|’…..ಅನ್ನವಿಲ್ಲದ ವಸ್ತ್ರವಿಲ್ಲದ ಕುರಿಗಳಿಗೆ ವೇದಾಂತ ಬೋಧನೆ ಮಾಡುತ್ತಿದ್ದೇವೆ.[31]

ಸ್ವಾಮಿಜಿಯ ಧಮನಿ ಧಮನಿಗಳಲ್ಲಿ ತಾಯ್ನಡಿನ ಕ್ಷೇಮಕಾತರತೆ ಕಳವಳಗಳು ಸದಾ ಮಿಡಿಯುತ್ತಿದ್ದುವೆನ್ನುವ ಸಂಗತಿ ಅವರ ನಡೆನುಡಿಗಳಿಂದ ಸುವ್ಯಕ್ತವಾಗುತ್ತದೆ.

ವಿವೇಕಾನಂದರು ರಚಿಸಿರುವ ‘ಸಮಾಧಿ’ ಮತ್ತು ‘ಮುಕ್ತನಗೀತೆ’ ಮತ್ತೆರಡು ಕೃತಿಗಳನ್ನು  ಕುವೆಂಪು ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ವಯಂ ಸಮಾಧಿ ಸುಖವನ್ನನುಭವಿಸಿದ ಸ್ವಾಮೀಜಿ ಸಮಾಧಿಯ ಸ್ವರೂಪವನ್ನು ‘ಸಮಾಧಿ’ ಕವಿತೆಯಲ್ಲಿ ವಿವರಿಸಿದ್ದಾರೆ. ರವಿ ಶಶಿ ತಾರೆಗಳಿಗೆ ಮುನ್ನ, ಕಾಲ ಕಣ್ತೆರೆಯುವ ಮೊದಲೇ ಮುಕ್ತ ಇದ್ದವನಾದ್ದರಿಂದ, ಕಾಲದೇಶ ಕಾರ್ಯಕಾರಣ ಮನೋಬುದ್ದಿಗಳನ್ನು ಮೀರಿದವನಾದ್ದರಿಂದ, ಎಂಥ ವಿಪತ್ತುಗಳಿಗೂ ಹೆದರದೆ ಮುನ್ನುಗ್ಗುವವನೆ ಮುಕ್ತ ಎಂಬುದು ‘ಮುಕ್ತನಗೀತೆ’ಯ ಅಂತರಾರ್ಥ.

ಸರ್ವಸೃಷ್ಟಿಯೂ ನಿನ್ನ ವಿನಾಶಕೆ
ಬದ್ಧ ಭ್ರುಕುಟಿಯಲಿ
ಸಂಚು ಹೂಡಿದರೂ ಏನಂತೆ,
ಓ ನನ್ನಾತ್ಮಾ,
ಅರಿ, ನೀನೆಂದೂ ಭವ್ಯ[32]

ಅಂಥ ಮುಕ್ತನ ಮುಂದೆ ವೇದಶಾಸ್ತ್ರಾಗಮಗಳು ಸೋಲುತ್ತವೆ; ಮಾಯೆ ಬೆನ್ನು ತಿರುಗಿಸುತ್ತದೆ; ನಿಯತಿ ನಿಯಮಗಳೆಲ್ಲ ಮುಗ್ಗರಿಸುತ್ತವೆ.

ಕುವೆಂಪು ಅವರ ಜೀವನವನ್ನು ರೂಪಿಸಿರುವ ಈ ಮೂರು ಮಹಾಶಕ್ತಿಗಳು ಎಲ್ಲ ಸ್ಥಿತಿಗತಿಗಳಲ್ಲಿ, ಅವಸ್ಥಾತ್ರಯಗಳಲ್ಲಿ ಅವರ ಕಣ್ಮುಂದೆ ನಿಲ್ಲುತ್ತವೆ; ಅವರ ಮನವನ್ನು ಸೂರೆಗೊಳ್ಳುತ್ತವೆ; ಪ್ರತಿಭೆಯ ರೂಪದಲ್ಲಿ ವ್ಯಕ್ತವಾಗುತ್ತವೆ; ಅವರ ನಡೆನುಡಿಗಳನ್ನು ತಿದ್ದುತ್ತವೆ; ಅವರ ಉಸಿರಿನ ಉಸಿರಾಗಿವೆ; ಅವರ ಜೀವನ ಸಮಸ್ತವನ್ನು ಅವು ಆಕ್ರಮಿಸಿ ಕೊಂಡಿವೆಯೆಂದರೂ ತಪ್ಪಾಗದು. ಆತ್ಮೋದ್ಧಾರಕ್ಕಾಗಿ ಮಾತ್ರವಲ್ಲ ರಾಷ್ಟ್ರೋದ್ಧಾರ ಕ್ಕಾಗಿಯೂ ಆ ಶಕ್ತಿಗಳನ್ನು ಸದಾ ನೆನೆಯುತ್ತಾರೆ. ಸ್ವಾತಂತ್ರ್ಯೋದಯದ  ದಿನವೇ ಶ್ರೀ ರಾಮಕೃಷ್ಣರ ಸಮಾಧಿಯ ದಿನವೂ ಆದ್ದರಿಂದ

ಶ್ರೀ ದಿನಂ, ದಿಟಮಿದು ಮಹಾದಿನಂ, ವಿರಾಡ್ ದಿನಂ;
ಗುರುದೇವ ಪರಮಹಂಸ ಮಹಾಸಮಾಧಿಯ ದಿನಂ!

ಎಂದು ‘ಸ್ವಾತಂತ್ರ್ಯೋತ್ಸವ ಮಹಾಪ್ರಗಾಥ’ದಲ್ಲಿ ನೆನೆಯುತ್ತಾರೆ. ‘ಅರ್ಪಿತವಾಗಲಿ ಈ ಸ್ವಾತಂತ್ರ್ಯಂ ಪರಮಹಂಸ ಗುರುವರನಡಿಗೆ’ ಎಂದು ಹಾಡಿದ ಕವಿ ‘ರಕ್ಷೆಯಾಗಲಿ ದಕ್ಷಿಣೇಶ್ವರ ಪರಮಗುರುದೇವ!’ ಎಂದು ಪ್ರಾರ್ಥಿಸುವಲ್ಲಿ, ಭರತಖಂಡದ ಸ್ವಾತಂತ್ರ್ಯಕ್ಕೆ ಪರಮಹಂಸರ ಪರೋಕ್ಷ ಆಶೀರ್ವಾದವಿದೆಯೆಂಬುದು ಸ್ಪಷ್ಟವಾಗುತ್ತದೆ. ‘ಶ್ರೀ ರಾಮಕೃಷ್ಣ ವಚನವೇದ’ಕ್ಕೆ ಬರೆದ ಮುನ್ನುಡಿಯಲ್ಲಿ ‘ಈ ನವಯುಗ ಪ್ರವರ್ತಕನಾದ ಭಗವಾನ್ ಶ್ರೀ ರಾಮಕೃಷ್ಣನು ಹಿಂದೆ ಅವತರಿಸಿದ ಯುಗಧರ್ಮ ಪ್ರವರ್ತಕ ಸಮೂಹದ ಪುನಸ್ಸಂಸ್ಕೃತ ಮಹಾಪ್ರಕಾಶವಾಗಿರುತ್ತಾನೆ’ ಎಂಬ ವಿವೇಕಾನಂದರ ಋಷಿವಾಣಿಯನ್ನು ಕುವೆಂಪು ಉದ್ಧರಿಸುತ್ತಾರೆ.[33] ಪ್ರಕಾಶಕರ ಬಿನ್ನಹದಲ್ಲಿ ಪ್ರಕಾಶಕರೆ ತಿಳಿಸಿರುವಂತೆ ‘ಶ್ರೀ ಕುವೆಂಪು ಅವರು ಈ ಗ್ರಂಥಕ್ಕೆ ಮುಖ್ಯ ಸಂಪಾದಕರಂತೆಯೇ ಇದ್ದಾರೆ. ಅವರ ನೇತೃತ್ವದಲ್ಲಿ ಈ ಪುಣ್ಯ ಕೆಲಸ ಸಾಗಿ ಮುಗಿದಿದೆ. ಶ್ರೀ ರಾಮಕೃಷ್ಣರ ಮೇಲೆ ಅವರಿಗೆ ಇರುವ ಅಪರಿಮಿತ ಶ್ರದ್ಧೆ ಭಕ್ತಿಗಳ ಜತೆಗೆ ಕನ್ನಡ ಅಭಿಮಾನವೂ ಅವರಲ್ಲಿ ಪ್ರೇರಕವಾಗಿ ನಿಂತು ಈ ಕೆಲಸವನ್ನು ಮಾಡಿಸಿದೆ. ಕನ್ನಡದ ‘ಶ್ರೀ ರಾಮಕೃಷ್ಣ ಲೀಲಾ ಪ್ರಸಂಗ’ಕ್ಕೆ ಬರೆದ ಮುನ್ನುಡಿಯಲ್ಲಿ, ‘ಇವೆರಡೂ ಬೃಹದ್ ಗ್ರಂಥಗಳು ಒಂದಕ್ಕೊಂದು ಪೂರಕವಾಗಿ, ಶ್ರೀ ಗುರುವಿನ ಮಹಾದ್ಭುತ ಜೀವನ ಸಾಗರಕ್ಕೆ ಭೂವ್ರೋಸದೃಶವಾದ ವಿಸ್ತಾರ ವೇದಿಕೆಯನ್ನು ನಿರ್ಮಿಸಿವೆ. ಆ ಪವಿತ್ರ ವೇದಿಕೆಯನ್ನು ಪ್ರವೇಶಿಸುವ ಚೇತನಕ್ಕೆ ಬಡತನವುಂಟೆ? ಭಯವುಂಟೆ? ಅದರ ಪುಣ್ಯಕ್ಕೆಣೆಯುಂಟೆ? ಅದರ ಧನ್ಯತೆಗೆ ಪಾರವುಂಟೆ?’ ಎಂದು ಪ್ರಸ್ತಾಪಿಸಿ, ಓದುಗರನ್ನು ತಮ್ಮೊಡನೆ ಭವಲೋಕದಿಂದ ಭಾವಲೋಕಕ್ಕೊಯ್ಯುತ್ತಾರೆ. ಶ್ರೀ ರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಅಲ್ಲಲ್ಲಿ ಕಣ್ಣಿಗೆ ಬೀಳುವ ಗುರು, ಗುರುಕೃಪೆಯೆಂಬ ಪದಗಳು ಪರಮಹಂಸರಿಗೆ ಅನ್ವಯವಾಗುತ್ತವೆಂದೇ ತಿಳಿಯಬಹುದಾಗಿದೆ. ತಾವು ‘ಶ್ರೀರಾಮಕೃಷ್ಣ ಭಗವದ್ ಗೋತ್ರ ಸಂಜಾತ’ರೆಂದು ಹೇಳಿಕೊಳ್ಳುತ್ತಾರೆ. ‘ಅಭಿಷೇಕ ವಿರಾಡ್ ದರ್ಶನಂ’ ಸಂಚಿಕೆಯ ಪ್ರಾರಂಭದಲ್ಲಿ ಬರುವ ಭವತಾರಿಣಿಯ ಪ್ರಾರ್ಥನೆ ದಕ್ಷಿಣೇಶ್ವರ, ಗುರುಮಹಾ ರಾಜ್ ಮತ್ತು ಮಹಾಮಾತೆಯರನ್ನು ನೆನಪಿಗೆ ತರುತ್ತದೆ. ಅಲ್ಲಿಯೇ ಬರುವ ಗುರುಕೃಪಾವಾಣಿ ಅನಾದಿಕವಿಗೆಂತೋ ಶ್ರೀ ರಾಮಕೃಷ್ಣರಿಗೂ ಅನ್ವಯವಾಗುತ್ತದೆ. ದೀಕ್ಷಾಗುರುಗಳಾದ ಸ್ವಾಮಿಶಿವಾನಂದರ ಮಾತುಕತೆಗಳನ್ನು ಕುವೆಂಪು ಭಾಷಾಂತರಿಸಿ ‘ಗುರುವಿನೊಡನೆ ದೇವರಡಿಗೆ’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಆ ಗ್ರಂಥದ ಅನೇಕ ಪುಟಗಳಲ್ಲಿ ಶ್ರೀರಾಮಕೃಷ್ಣ ಹಾಗೂ ವಿವೇಕಾನಂದರನ್ನು ಕುರಿತು ಹಲವು ಸಂಗತಿಗಳು ತಲೆದೋರುತ್ತವೆ. ‘ಪರಮಹಂಸರ ವಚನಾಮೃತದಲ್ಲಿ ದೃಷ್ಟಾಂತ ಕಥಾವಿಧಾನ’ ಎಂಬ ಪ್ರಬಂಧದಲ್ಲಿ ಶ್ರೀ ರಾಮಕೃಷ್ಣರು ತಮ್ಮ ಉಪದೇಶದಲ್ಲಿ ಬಳಸುತ್ತಿದ್ದ ಸಾಮತಿಗಳ ಸ್ವರೂಪ ಲಕ್ಷಣ ತಾತ್ಪರ್ಯಗಳನ್ನು ಕುರಿತ ವ್ಯಾಖ್ಯಾನ ವಿಶ್ಲೇಷಣೆಯಿದೆ.[34]

‘ಲೌಕಿಕ ಭಾರತಕ್ಕೆ ಸ್ವಾಮಿವಿವೇಕಾನಂದರ ಜೀವನ ಸಂದೇಶ’ ಎಂಬ ದೀರ್ಘ ಪ್ರಬಂಧಲ್ಲಿ[35] ಕುವೆಂಪು ಅವರು ಸ್ವಾಮಿಜೀಯ ಜೀವನ ಸಂದೇಶದ ಸಾರವನ್ನು ಭಟ್ಟಿಯಿಳಿಸಿದ್ದಾರೆ. ಪ್ರಾರಂಭದ ಪ್ಯಾರಾದಲ್ಲಿಯೇ ಲೇಖನದ ಸೂಚಿಯನ್ನು ನೀಡಿದ್ದಾರೆ. ‘ವ್ಯಷ್ಟಿ ಸಿದ್ದಿ’, ‘ಸಮಷ್ಟಿ ಸಿದ್ದಿಗಾಗಿ’ ಮತ್ತು ‘ದೃಷ್ಟಿಯಂತೆ ಸೃಷ್ಟಿ’ ಈ ಲೇಖನದ ಮೂರು ಹಸುಗೆಗಳು. ‘ಆ ವ್ಯಕ್ತಿತ್ವದ ಪ್ರಚಂಡ ಜ್ಯೋತಿಯ ಮುಂದೆ, ಅದರ ಅಪ್ರತಿಹತವಾದ ದೈತ್ಯೋಪಮವಾದ ದಿವ್ಯಾಧಿಕಾರದ ಮುಂದೆ ಓದುಗನ ಕಿರಿಯ ವ್ಯಕ್ತಿತ್ವ ಅಪ್ಪಳಿಸಿದಂತಾಗಿ ಶರಣು ಹೋಗುತ್ತದೆ. ಆದರೂ ಒಡನೊಡನೆಯೆ ಅದರ ಭೀಮ ಶಕ್ತಿ ನಮ್ಮ ನಾಡಿ ನಾಡಿಗಳಲ್ಲಿ ಹರಿದು ಅಲ್ಲಿಯ ದುರ್ಬಲತೆ ಅಲ್ಪತೆಗಳನ್ನೆಲ್ಲ ಕೊಚ್ಚಿ ನಮ್ಮ ಹೃದಯ ಗಳಲ್ಲಿಯೂ ತನ್ನ ಮಹಾಶಕ್ತಿಯನ್ನು ಉದ್ದೀಪಿಸಿ, ನಮ್ಮನ್ನು ತನ್ನತನಕ್ಕೆ ಏರಿಸುತ್ತಿರುವ ದಿವ್ಯಾನುಭವವೂ ಸ್ಫುರಿಸುತ್ತದೆ.’ ಇಂಥ ವ್ಯಕ್ತಿತ್ವ ರೂಪುಗೊಂಡ ಬಗೆಯನ್ನು ಪೂರ್ಣದೃಷ್ಟಿಯ ವಿಧಾನದಲ್ಲಿ ಕುವೆಂಪು ಸುಸ್ಪಷ್ಟಪಡಿಸುತ್ತಾರೆ. ಗುರುಮಹಾರಾಜರು ತಮ್ಮ ಪಟ್ಟ ಶಿಷ್ಯನಿಗೆ ತಮ್ಮ ತಪಶ್ಯಕ್ತಿಯನ್ನೆಲ್ಲ ಧಾರೆಯೆರೆದಿದ್ದುದು ನಿಜ; ಆ ಶಿಷ್ಯ ನಿರ್ವಿಕಲ್ಪ ಸಮಾಧಿಯಲ್ಲಿ ಮುಳುಗಿರುವ ಶಕ್ತಿಯನ್ನು ಸಂಪಾದಿಸಿದ್ದುದೂ ನಿಜ. ಹಾಗೆ ಸದಾ ಮುಳುಗಿರಬೇಕೆಂಬ ಆಸೆಯನ್ನು ಅವನು ವ್ಯಕ್ತಪಡಿಸಿದ್ದೂ ಉಂಟು. ಆದರೆ ಗುರುಗಳು ಅವನಿಗೆ ನೀಡುವ ಎಚ್ಚರಿಕೆಯಾದರೂ ಏನು? ‘ಮತ್ತೆ ಮತ್ತೆ ಅದೇ ಕತೆ! ನಿನಗೆ ನಾಚಿಕೆಯಾಗದೆ? ಇಷ್ಟು ಕಾಲ ಮಹಾವಟ ವೃಕ್ಷದಂತೆ ಬೆಳೆದಿರುವೆ. ಸಾವಿರಾರು ಜನರಿಗೆ ಶಾಂತಿ ಛಾಯೆಯನ್ನು ನೀನು ನೀಡಬೇಕಾಗಿದೆ. ಅದನ್ನು ಬಿಟ್ಟು ಸ್ವಂತ ಮುಕ್ತಿಗಾಗಿ ಬಾಯಿ ಬಾಯಿ ಬಿಡುತ್ತೀಯಲ್ಲಾ! ಎಂತಹ ಕ್ಷುದ್ರ ಆದರ್ಶ ನಿನ್ನದು!’ ಲೋಕ ಸಂಗ್ರಹಾರ್ಥವಾಗಿ ಯೋಗ್ಯನಾದ ಶಿಷ್ಯನನ್ನು ಆರಿಸಿಕೊಂಡು, ಅವನಿಗೆ ತರಬೇತಿ ನೀಡಿದ, ಅಂತೆಯೇ ಅವನೂ ಗುರುವಿನ ನಿರೀಕ್ಷೆಗನುಗುಣ ವಾಗಿ ಬೆಳೆದ ಬಗೆಯನ್ನು ಕುವೆಂಪು ಆಧ್ಯಾತ್ಮಿಕ ದೃಷ್ಟಿಯ ಹಿನ್ನೆಲೆಯಲ್ಲಿ ವಿವರಿಸುತ್ತಾರೆ.

ಸ್ವಾಮೀಜಿಯವರ ಶತಮಾನೋತ್ಸವ ಸಮಯದಲ್ಲಿ ಪ್ರಕಟಗೊಂಡ ಅವರ ಸಮಗ್ರ ಕೃತಿಗಳ ಭಾಷಾಂತರಕ್ಕೆ ಬರೆದ ಮುನ್ನುಡಿಯಲ್ಲಿ ಹೇಳಿರುವ[36] “ಭಾರತದ ಪುನರುತ್ಥಾನದ ಪ್ರಥಮ ಮುಹೂರ್ತದಲ್ಲಿ ಸ್ವಾಮಿ ವಿವೇಕಾನಂದರ ಪಾಂಚಜನ್ಯ ಸದೃಶವಾದ ಧೀರ ಮತ್ತು ಶಕ್ತಿ ಸಂಚಾರಕ ಸಿದ್ಧವಾಣಿ ಏನು ಕೆಲಸ ಮಾಡಿತು ಎಂಬುದನ್ನು ಅಳೆಯಲಾದೀತೆ? ವ್ಯಕ್ತಿ ವ್ಯಕ್ತಿಗಳಲ್ಲಿ ಮತ್ತು ರಾಷ್ಟ್ರ ಸಮಗ್ರದಲ್ಲಿ ಸುರುಳಿ ಸುತ್ತಿ ಸುಪ್ತವಾಗಿದ್ದ ಕುಂಡಲಿನೀ ಶಕ್ತಿಯನ್ನೆ ಅವರು ಹೇಗೆ ಎಚ್ಚರಿಸಿ ಕಾರ್ಯಶೀಲವನ್ನಾಗಿ ಮಾಡಿದರು ಎಂಬುದನ್ನು ಅರಿಯಬೇಕಾದರೆ ಅವರ ಜೀವನ ಚರಿತ್ರೆಯ ಮುಂದೆ ಧ್ಯಾನಸ್ಥರಾಗಬೇಕಾಗುತ್ತದೆ; ಅವರ ಕೃತಿಗಳ ಅಧ್ಯಯನವೆ ನಮ್ಮ ತಪಸ್ಸಾಗಬೇಕಾಗುತ್ತದೆ. ನಮ್ಮ ರಾಷ್ಟ್ರದ ಸರ್ವತೋಮುಖವಾದ ಉದ್ಧಾರದ ಮಾತಂತಿರಲಿ. ಇತರ ದಾಸ ದೇಶಗಳ ಸ್ವಾತಂತ್ರ್ಯ ತೃಷೆಯ ಕೆರಳಿಕೆಗೂ ಅವರು ಪ್ರತ್ಯಕ್ಷ ವಾಗಿಯೊ ಪರೋಕ್ಷವಾಗಿಯೊ ಕಾರಣರಾದರೆಂಬ ಸಂಗತಿ ಆಯಾ ನಾಯಕರ ಸ್ಫೂರ್ತಿ ಮೂಲಗಳಿಂದ ಗೊತ್ತಾಗುತ್ತದೆ’ ಎಂಬ ಮಾತು ಭಾರತೀಯರ ಹೃದಯಗಳಲ್ಲಿ ನವೋತ್ಸಾಹ ವನ್ನು ಉದ್ದೀಪಿಸದಿದ್ದರೆ, ಅವರು ಮುಂದೆಯೂ ಕುರಿಗಳಂತೆ ಬಾಳು ಸಾಗಿಸುತ್ತಾರೆಂದೇ ಹಾಗೂ ಭರತಖಂಡಕ್ಕೆ ಭವಿಷ್ಯವಿಲ್ಲವೆಂದೇ ಹೇಳಬೇಕಾಗುತ್ತದೆ.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿಯೂ ವಿವೇಕಾನಂದರ ಪ್ರಸ್ತಾಪ ಬರುತ್ತದೆ.[37] ಸ್ವಾಮೀಜಿ ಅಮೆರಿಕೆಯಿಂದ ಹಿಂದಿರುಗಿದನಂತರ, ಭರತಖಂಡದಲ್ಲೆಲ್ಲ ಸಂಚರಿಸಿ, ಬೋಧಿಸಿ, ಹೊಸದೊಂದು ಯುಗಶಕ್ತಿಯನ್ನೆ ಉದ್ಭೋಧನಗೊಳಿಸುತ್ತಾರೆ, ವೈಚಾರಿಕ ಯುಗಕ್ಕೆ ನಾಂದಿ ಹಾಡುತ್ತಾರೆ ಎಂಬ ಸಂಗತಿಯನ್ನಲ್ಲಿ ತಿಳಿಸುತ್ತಾರೆ. ‘ಆ ಸ್ವಾಮಿ ವಿವೇಕಾನಂದರಿಂದ ಜಾಗ್ರತವಾಗುವ ಯುಗಧರ್ಮ ಶಕ್ತಿಗೆ ಸೇವೆ ಸಲ್ಲಿಸುವ ಚೇತನಗಳು ನಿಮ್ಮ ಸಂತಾನದಲ್ಲಿ ಮುಂದೆ ಸಂಭವಿಸಲಿವೆ! ಒಂದು ರೀತಿಯಿಂದ ಕೆಲವಾಗಲೆ ಸಂಭವಿಸಿಯೂ ಆಗಿದೆ!….’ ಎಂದು ಗಡ್ಡದಯ್ಯ ಮುಕುಂದಯ್ಯನಿಗೆ ಹೇಳುವ ಮಾತು ಅರ್ಥವತ್ತಾಗಿದೆ; ಆ ಮಾತಿನ ಸತ್ಯ ಈಗಾಗಲೇ ಕರ್ನಾಟಕಕ್ಕೆ ವೇದ್ಯವಾಗಿದೆ. ‘ನನ್ನ ಗೋಪಾಲ’ ಎಂಬ ಚಿತ್ತಾಕರ್ಷಕ ಜನಪ್ರಿಯ ಶಿಶುನಾಟಕ ವಿವೇಕಾನಂದರ ‘The story of the boy gopala’[38] ಎಂಬ ಕವಿತೆಯ ಆಧಾರದ ಮೇಲೆ ರಚನೆಗೊಂಡಿದೆ.

ಕುವೆಂಪು ಅವರು ರಚಿಸಿರುವ ಪೂರ್ಣಾಕಾರದ ಜೀವನ ಚರಿತ್ರೆಗಳು ಎರಡನೇ ಎರಡು. ಕನ್ನಡ ಜೀವನ ಚರಿತ್ರೆಗಳ ಇತಿಹಾಸದಲ್ಲಿ ಅವೆರಡೂ ಕ್ಲಾಸಿಕ್ ಜಾತಿಗೆ ಸೇರಿದಂಥವು : ಒಂದು, ಶ್ರೀ ರಾಮಕೃಷ್ಣ ಪರಮಹಂಸ, ಎರಡು, ಸ್ವಾಮಿವಿವೇಕಾನಂದ. ಅನೇಕ ವರ್ಷ ಶ್ರೀ ರಾಮಕೃಷ್ಣಾಶ್ರಮದ ದಿವ್ಯವಾತಾವರಣದಲ್ಲಿ ಬಾಳನ್ನು ಬೆಳಗಿಕೊಂಡು, ರಾಮಕೃಷ್ಣ ವಿವೇಕಾನಂದ ಸಾಹಿತ್ಯ ಗಂಗೆಯಲ್ಲಿ ದಿನ ದಿನವೂ ಮಿಂದು, ಸ್ವಾಮಿಸಿದ್ದೇಶ್ವರಾನಂದರಂಥ ಸಿದ್ಧ ಗುರುಗಳ ಕೃಪೆಯ ರಕ್ಷೆಯಲ್ಲಿ ತಮ್ಮ ಚೇತನವನ್ನು ಪೋಷಿಸಿಕೊಂಡು, ವಿವೇಕಾನಂದ ಸ್ವಾಮಿಗಳಿಂದ ದೀಕ್ಷೆ ಪಡೆದು, ಅವರ ಆಶೀರ್ವಾದದಿಂದ ಅಧ್ಯಾತ್ಮನಂದನದಲ್ಲಿ ವಿಹಾರ ಗೈದು, ಪ್ರಾಚ್ಯಪಾಶ್ಚಾತ್ಯ ತತ್ತ್ವಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡು ಗುರುಕೃಪೆಯಿಂದ ಸಹಜ ಕವಿಯಾಗಿರುವ ಕುವೆಂಪು ಅವರಿಗಲ್ಲದೆ ಆ ಕೃತಿಗಳನ್ನು ರಚಿಸುವ ಯೋಗ್ಯತೆ ಮತ್ತಾಗಿರಿದೆ? ಕುವೆಂಪು ಅವರಂಥ ಸಾಧಕರಿಗೆ ಮಾತ್ರ ಆ ಮಹಾಚೇತನಗಳ ಅಂತರಂಗದ ರಹಸ್ಯ ಮತ್ತು ಅವುಗಳ ದಿವ್ಯಲೀಲಾ ವೈಭವಗಳು ಮನವರಿಕೆಯಾದಾವು. ಸಾಧಕನ ತನ್ಮಯತೆಯಿಂದ, ಭಕ್ತನ ಭಾವುಕತೆಯಿಂದ, ಜ್ಞಾನಿಯ ಸತ್ಯ ಶ್ರದ್ಧೆಯಿಂದ ಹಾಗೂ ಕವಿಯ ಕಲಾಕೌಶಲ್ಯದಿಂದ ಇವು ಶ್ರೇಷ್ಠತಮ ಜೀವನ ಚರಿತ್ರೆಗಳಾಗಿ ಬಹು ಜನಪ್ರಿಯವಾಗಿವೆ. ಸುಮಾರು ಹತ್ತು ಹನ್ನೆರಡು ಮುದ್ರಣಗಳನ್ನು ಕಂಡಿರುವ ಈ ಕೃತಿಗಳನ್ನು ಓದದಿರುವ ಅಕ್ಷರಸ್ತ ಕನ್ನಡಿಗರೇ ಇಲ್ಲವೆಂದು ಹೇಳಬಹುದು. ಇವು ತರುಣರ ಮೇಲೆ ಬೀರಿರುವ ಪ್ರಭಾವವಂತು ಅಸದೃಶವಾದುದು. ಇವು ಹಿಡಿದವರ ಕರತಲ ತಪೋಭೂಮಿಯಾಗುತ್ತವೆ, ಸ್ಪರ್ಶಮಣಿಗಳಾಗುತ್ತವೆ, ಅಮೃತಕುಂಭಗಳಾಗುತ್ತವೆ. ಈ ಕೃತಿ ದೇವಾಲಯಗಳ ಗರ್ಭಾಂಕಣ ವನ್ನು ಹೊಕ್ಕವರು ನೂತನ ತೇಜಸ್ವಿಗಳಾಗಿ ಹೊರಬರುತ್ತಾರೆ. ಹೊಸಲೋಕಕ್ಕೆ ಹೊಸ ಯುಗಕ್ಕೆ ಪದಾರ್ಪಣಮಾಡಿದ ಅನುಭವವನ್ನು ಪಡೆಯುತ್ತಾರೆ. ಶ್ರೀರಾಮಕೃಷ್ಣ ಮಹಾಸಂಘ ಗಳ ಪ್ರಭಾವವಲಯಕ್ಕಿಂತ ಇವುಗಳ ಪ್ರಭಾವವಲಯ ವಿಸ್ತಾರವಾದದ್ದು, ವ್ಯಾಪಕವಾದದ್ದು. ಏಕೆಂದರೆ, ಇವು ಇದ್ದೆಡೆಯೇ ದಕ್ಷಿಣೇಶ್ವರ, ಅಲ್ಲಿಯೇ ಬೇಲೂರು; ಅಲ್ಲಿಯೇ ಶ್ರೀ ರಾಮಕೃಷ್ಣ ಶ್ರೀ ಶಾರದಾದೇವಿ ಶ್ರೀ ವಿವೇಕಾನಂದರು ಪ್ರತ್ಯಕ್ಷರಾಗುತ್ತಾರೆ! ಈ ವಿಭೂತಿ ಪುರುಷರ ಸಂದೇಶವನ್ನು ಕನ್ನಡ ನಾಡಿನ ಮನೆಮನೆಗಳಿಗೆ, ಕನ್ನಡಿಗರ ಮನಮನಗಳಿಗೆ ಮುಟ್ಟಿಸುವಲ್ಲಿ ಕುವೆಂಪು ಕೃತಿಗಳು ಇತರ ಸಾಧನ ಮಾಧ್ಯಮಗಳಿಗಿಂತ ಹೆಚ್ಚು ಯಶಸ್ವಿಯಾಗಿವೆಯೆಂದೇ ಹೇಳಬಹುದು.

ಶ್ರೀ ಕುವೆಂಪು ಅವರು ನಿರ್ಮಿಸಿರುವ ರಾಮಕೃಷ್ಣ-ವಿವೇಕಾನಂದ ಸಾಹಿತ್ಯ ಗುಣಗಾತ್ರ ಗಳಲ್ಲಿ ಮಹೋನ್ನತವಾಗಿದೆ. ಪ್ರಾಯಶಃ ಒಬ್ಬಿಬ್ಬರು ಆಶ್ರಮವಾಸಿ ಸಾಹಿತಿಗಳನ್ನು ಬಿಟ್ಟರೆ, ಇವರಷ್ಟು ವಿಪುಲವಾಗಿ ಇಂಥ ಸಾಹಿತ್ಯವನ್ನು ಸೃಷ್ಟಿಸಿರುವ ಕನ್ನಡ ಸಾಹಿತಿಗಳು ಇಲ್ಲವೆಂದರೂ ಸೋಜಿಗವಾಗದು. ಒಂದು ರೀತಿಯಲ್ಲಿ ಇವರೂ ಆಶ್ರಮ ವಾಸಿಗಳೇ ಅಹುದು; ಉದಯ ರವಿಯೇ ಒಂದು ಆಶ್ರಮ; ದಕ್ಷಿಣೇಶ್ವರದ ಒಂದು ಕಿರಣ!

 

[1]     ನೆನಪಿನ ದೋಣಿಯಲ್ಲಿ,ಭಾಗ-೧, ಪು. ೧೨೮ ಮತ್ತು ೨೦೦.

[2]     ಅದೇ., ಪು. ೫೨೪.

[3]     Alien Harp, p. ೪೯.

[4]     ನೆನಪಿನ ದೋಣಿಯಲ್ಲಿ, ಪು. ೪೫೩.

[5]     ನೆನಪಿನ ದೋಣಿಯಲ್ಲಿ, ಪು. ೫೭೦-೭೧.

[6]     ಅದೇ., ಪು. ೫೮೮.

[7]     ನೆನಪಿನ ದೋಣಿಯಲ್ಲಿ, ಪು. ೬೫೪.

[8]     ನೆನಪಿನ ದೋಣಿಯಲ್ಲಿ, ಪು. ೮೧೨.

[9]     ನೆನಪಿನ ದೋಣಿಯಲ್ಲಿ, ಪು. ೮೮೯.

[10]    ಅದೇ., ಪು. ೯೭೦.

[11]    ಈ ಕವಿತೆಗಳು, ಇನ್ನೂ ಇಂಥವು ‘ಅಗ್ನಿಹಂಸ’ದಲ್ಲಿ ಅಚ್ಚಾಗಿವೆ.

[12]    ಕುಟೀಚಕ, ಪು. ೫೫.

[13]    ಮಂತ್ರಾಕ್ಷತೆ, ಪು. ೪೫.

[14]    ಅದೇ., ಪು. ೩೬.

[15]    ಶ್ರೀ ಕುವೆಂಪು ಅವರ ‘ನಾಲ್ಕು ಮಹಾಕವನಗಳು’ ಎಂಬ ಕಿರುಹೊತ್ತಿಗೆಯ ಆರಂಭದಲ್ಲಿ ಬರುವ ‘ದಾಂಪತ್ಯ ದರ್ಶನದ ಪರಮಾಗಮ’ ಎಂಬ ಭಾಗವನ್ನು ಓದಿ.

[16]    ಚಂದ್ರಮಂಚಕೆ ಬಾ ಚಕೋರಿ, ಪು. ೭.

[17]    ಅದೇ., ಪು. ೨೬.

[18]    ವರ್ಧಂತಿ, ಅನುತ್ತರಾ, ಪು. ೩೩.

[19]    ಅದೇ. ಪು. ೮.

[20]    ಗುರುಕೃಪೆ, ಪ್ರೇಮಕಾಶ್ಮೀರ, ಪು. ೬೪.

[21]    ಆಶೀರ್ವಾಣಿ, ಚಂದ್ರಮಂಚಕೆ ಬಾ ಚಕೋರಿ, ಪು. ೫೬.

[22]    ಜನ್ಮೋತ್ಸವ, ಅಗ್ನಿಹಂಸ, ಪು. ೯೬.

[23]    ಕುಟೀಚಕ, ಪು. ೩೪-೩೬.

[24]    ಕುಟೀಚಕ, ಪು. ೩೭-೪೦.

[25]    ಕುಟೀಚಕ, ಪು. ೪೨-೪೩.

[26]    ಪ್ರಥಮ ಕುಸುಮ ಸಮರ್ಪಣ, ಅದೇ. ಪು. ೧೯.

[27]    ಅದೇ., ಪು. ೫೨.

[28]    ಕುಟೀಚಕ, ಪು. ೧-೨.

[29]    ಕೃತ್ತಿಕೆ, ಪು. ೯೨.

[30]    ಶ್ರೀರಾಮಕೃಷ್ಣ ಪರಮಹಂಸ, ಪು. ೧೯೬.

[31]    ಸ್ವಾಮಿ-ವಿವೇಕಾನಂದ, ಪು. ೭-೮.

[32]    ಕುಟೀಚಕ, ಪು. ೪೭.

[33]    ಷಷ್ಟಿನಮನ, ಪು. ೮೯.

[34]    ವಿಭೂತಿ ಪೂಜೆ, ಪು. ೬೪-೭೧.

[35]    ಅದೇ., ಪು. ೪೩-೬೩.

[36]    ಷಷ್ಟಿನಮನ, ಪು. ೨೩೦-೨೩೭.

[37]    ಮಲೆಗಳಲ್ಲಿ ಮದುಮಗಳು, ಪು. ೫೨೨.

[38]    The Complete works of Swami Vivekananda, Vol-VI, pp. ೧೩೯-೧೪೫.