ಸಾಹಿತಿ ಭೂಮ್ಯೋಮಗಳನ್ನು ಕೂಡಿಸುವ ಸೇತು ಶಕ್ತಿ. ಅವನು ಆಗಾಗ್ಗೆ ಕಲ್ಪನಾ ವಿಹಾರಿಯಾದರೂ ಬಹುತೇಕವಾಗಿ ಭೂಸಂಚಾರಿ. ವೃಕ್ಷದ ಶಿಖರ ಸೂರ್ಯ ತೇಜಸ್ಸನ್ನೂ ವಾಯು ಶಕ್ತಿಯನ್ನೂ ಅದರ ಬೇರು ಮೃತ್‌ಶಕ್ತಿ, ಜಲಶಕ್ತಿಗಳನ್ನೂ ಹೀರಿಕೊಂಡು ವಿಶ್ವತೋಮುಖವಾಗಿ ಪರಿಪುಷ್ಟವಾಗಿ ಬೆಳೆವಂತೆಯೇ ಅವನ ಚೇತನ ಅತೀಂದ್ರಿಯ ಸೇಂದ್ರಿಯಾನು ಭವಗಳನ್ನೂ ಅಲೌಕಿಕ ಲೌಕಿಕಾನುಭವಗಳನ್ನೂ ಸ್ವೀಕರಿಸಿ, ತ್ರಿವಿಕ್ರಮನಂತೆ ಬೆಳೆಯುತ್ತದೆ. ಅವನು ತನ್ನ ಕೃತಿಯಲ್ಲಿ ಅಲೌಕಿಕ ನಿತ್ಯ ಸತ್ಯಗಳನ್ನು ಪ್ರತಿಮಿಸುವಂತೆಯೇ ಲೌಕಿಕ ಸತ್ಯಗಳನ್ನು ಪ್ರತಿಬಿಂಬಿಸುತ್ತಾನೆ. ಸಂವೇದನಾಶೀಲನಾದ ಸಾಹಿತಿಯ ಸೂಕ್ಷ್ಮತಮ ಬಹಿರಂತರ್ದೃಷ್ಟಿಗಳಿಗೆ ಸಾಮಾನ್ಯದೃಷ್ಟಿಗೆ ಹೊಳೆಯದ ಅನೇಕ ಲೌಕಿಕ ಸತ್ಯಗಳು ಮಿಂಚುತ್ತವೆ. ಅಂತರ್ದೃಷ್ಟಿ ತೀಕ್ಷ್ಣವಾದಾಗ ಅಲೌಕಿಕ ಸತ್ಯಗಳೂ, ಬಹಿರ್ದೃಷ್ಟಿ ಪ್ರಖರವಾದಾಗ ಲೌಕಿಕ ಸತ್ಯಗಳೂ ಸಾಹಿತ್ಯದಲ್ಲಿ ಪ್ರಮುಖವಾಗಿ ಅಭಿವ್ಯಕ್ತಗೊಳ್ಳುವುದುಂಟು. ಸಾಮಾಜಿಕ ಸಂಗತಿಗಳನ್ನೊಳ ಗೊಂಡ ಲೌಕಿಕ ಸತ್ಯಗಳು ಅಸಂಖ್ಯಾತವಾಗಿದ್ದು ಸಾಹಿತ್ಯಲೋಕದ ಸಂಪತ್ತಾಗಿವೆ.

ಕವಿ ಅಥವಾ ಸಾಹಿತಿ ಪರಿಸರದ ಶಿಶು. ನಿಸರ್ಗ ಮತ್ತು ಸಮಾಜಗಳು ಅವನನ್ನು ತೀಡಿ ತಿದ್ದುತ್ತವೆ, ಬಡಿದು ರೂಪಿಸುತ್ತವೆ. ಅವನ ಬದುಕಿನ ಏರಿಳಿತಗಳಿಗೆ, ನೋವು ನಲಿವುಗಳಿಗೆ, ಚಟ ಚಾಳಿಗಳಿಗೆ ಅವು ಕಾರಣವಾಗುವುದುಂಟು. ಅವನ ಮನಸ್ಸಿನ ಮೇಲೂ ಅವು ಪರಿಣಾಮ ಬೀರುವುದುಂಟು. ಅವನು ಸಮಾಜದಲ್ಲಿ ಒಂದು ಭಾಗವಾಗಿ, ಅದರ ನಡುವೆಯೇ ಬಾಳಬೇಕಾಗಿರುವುದರಿಂದ ಅದರೊಡನೆ ಆತ್ಮೀಯತೆಯಿಂದ ಬೆರೆಯಬಲ್ಲನು; ಸಹಾನುಭೂತಿ ಯಿಂದ ವ್ಯವಹರಿಸಬಲ್ಲನು; ಸಾಕ್ಷೀಪ್ರಜ್ಞೆಯಿಂದ ಅದರ ಹೊರಗೊಳಗುಗಳನ್ನು ಪರಿಕಿಸಬಲ್ಲನು. ಸಮಾಜದ ಆಗುಹೋಗುಗಳ ಬಗ್ಗೆ ಕಳಕಳಿ, ಕಳವಳ ಕಾತರತೆಯಿದ್ದಷ್ಟೂ ಅದರ ಬಗೆಗಿನ ಅವನ ಪ್ರಜ್ಞೆ ಸಾಂದ್ರವಾಗುತ್ತದೆ. ಅದು ಎಷ್ಟು ಸಾಂದ್ರವಾಗಿದ್ದರೆ ಅಷ್ಟೂ ಸಾಹಿತ್ಯದ ಮೂಲಕ ಅಭಿವ್ಯಕ್ತಿಯನ್ನು ಪಡೆಯುತ್ತದೆ.

ಸಾಮಾಜಿಕ ಋಣವನ್ನು ತೀರಿಸಬೇಕಾದ್ದು ಸಾಹಿತಿಯ ಆದ್ಯ ಕರ್ತವ್ಯ. ಅವನು ನಿರ್ವಹಿಸಬೇಕಾದ ಸಾಮಾಜಿಕ ಜವಾಬ್ದಾರಿಯನ್ನು ಬೇರೆ ಯಾರೂ ನಿರ್ವಹಿಸಲಾರರು. ಸಾಧು ಸಂತ ಋಷಿ ಸನ್ಯಾಸಿಗಳ ಏಕಮೇವ ಉದ್ದೇಶ ಬ್ರಹ್ಮ ಸಾಕ್ಷಾತ್ಕಾರವಾದ್ದರಿಂದ, ವೈರಾಗ್ಯವೇ ಅವರ ಸಾಧನ ಮಾರ್ಗವಾದ್ದರಿಂದ ಅವರು ಸಾಮಾಜಿಕ ಹೊಣೆಯನ್ನು ಭರಿಸಲಾರರು. ರಾಜಕಾರಣಿಗಳಿಗೆ ಅಧಿಕಾರ ಪದವಿ ಸಂಪತ್ತುಗಳೆ ಮುಖ್ಯವಾದ್ದರಿಂದ ಸಾಮಾಜಿಕ ಕ್ಷೇಮದ ಬಗೆಗಿನ ಅವರ ಕಾತರತೆ ಸೀಮಿತವಾಗಿರುತ್ತದೆ; ಅಷ್ಟೇ ಅಲ್ಲ, ಸಮಾಜವನ್ನು ಸಾಕ್ಷೀಪ್ರಜ್ಞೆಯಿಂದ ನೋಡುವ ನಿರ್ಲಿಪ್ತತೆಯಾಗಲಿ, ಅದನ್ನು ಒಳಹೊಕ್ಕು ನೋಡುವ ಪರಕಾಯಪ್ರವೇಶ ಸಾಮರ್ಥ್ಯವಾಗಲಿ ಅವರಿಗಿರುವುದಿಲ್ಲ. ಸಮಾಜವಿಜ್ಞಾನಿ ವಿಜ್ಞಾನಿಗಳಂಥ ತಜ್ಞರಿಗೆ ಸಮಾಜ ಕಲ್ಯಾಣದ ಬಗ್ಗೆ ಆಸ್ಥೆಯಿರುವುದಾದರೂ ಸಾಹಿತಿಯ ಅಂತರ್ದೃಷ್ಟಿಯಾಗಲಿ, ಸಂವೇದನೆ ಸಾಮರ್ಥ್ಯವಾಗಲಿ ಅವರಿಗಿರುವುದಿಲ್ಲ. ಈ ಕಾರಣಗಳಿಂದ ಸಾಹಿತಿಯ ಹೊಣೆ ಹೆಚ್ಚಿನದೆಂದೇ ಹೇಳಬೇಕು.

ಕುವೆಂಪು ನಿಸರ್ಗ ಹಾಗೂ ದಾರ್ಶನಿಕ ಕವಿ ಮಾತ್ರವಲ್ಲ, ಸಾಮಾಜಿಕ ಪ್ರಜ್ಞೆಯ ಮಹತ್ವ ಪೂರ್ಣರಾದ ಕವಿಯೂ ಅಹುದು. ನಿಸರ್ಗೋಪಾಸನೆಯ ಮತ್ತು ಅಧ್ಯಾತ್ಮ ಸಾಧನೆಯ ಪ್ರಖರ ಪ್ರಭಾವ ಅವರ ಸಾಹಿತ್ಯದಲ್ಲಿ ಉದ್ದಕ್ಕೂ ಎದ್ದು ಕಾಣುವುದಾದರೂ, ಸಮಾಜದ ಸೂಕ್ಷ್ಮವೀಕ್ಷಣೆಯಿಂದ ಸಂಲಬ್ಧವಾಗುವ ಲೋಕಾನುಭವದ ಶ್ರೀಮಂತತೆಯನ್ನು ಸಹ ಸಮಪ್ರಮಾಣದಲ್ಲಿ ಗುರುತಿಸಬಹುದು. ಅವರ ದೃಷ್ಟಿಯಲ್ಲಿ ಸಮಾಜವೆಂದರೆ, ಉತ್ತಮ ಕುಲದವರಿಗೆ ಮತ್ತು ಶ್ರೀಮಂತ ವರ್ಗಕ್ಕೆ ಮಾತ್ರ ಸೀಮಿತವಾದ ಪ್ರತಿಷ್ಠೆಯ ಕಿರುಪ್ರಪಂಚ ವಲ್ಲ; ಬಹುಸಂಖ್ಯೆಯ ಶ್ರೀಸಾಮಾನ್ಯರನ್ನೊಳಗೊಂಡ ಬೃಹತ್ ಪ್ರಪಂಚ. ಶ್ರೀಮಂತರಿಂದ ಬಡವರಿಗೆ, ಭೂಮಾಲೀಕರಿಂದ ಜೀತದವರಿಗೆ, ಬ್ರಾಹ್ಮಣರಿಂದ ಶೂದ್ರರಿಗೆ ಆಗುತ್ತಿರುವ ಅನ್ಯಾಯ ಕಿರುಕುಳ ಕೋಟಲೆಗಳ ವಾಸ್ತವ ಚಿತ್ರ ಕುವೆಂಪು ಸಾಹಿತ್ಯದಲ್ಲಿ ಯಥೇಚ್ಛವಾಗಿ ದೊರೆಯುತ್ತದೆ. ಜತೆಗೆ ದೇವರ ಹೆಸರಿನಲ್ಲಿ, ಪವಿತ್ರ ಗ್ರಂಥಗಳ ಹೆಸರಿನಲ್ಲಿ ತಂತ್ರ ಮಂತ್ರ ಪೂಜೆಪುನಸ್ಕಾರಾದಿ ಸಂಪ್ರದಾಯಗಳ ಹೆಸರಿನಲ್ಲಿ, ಮತಧರ್ಮಗಳ ಹೆಸರಿನಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಶೋಷಣೆಯ ಯಥಾವತ್ತಾದ ಬಣ್ಣನೆ ಇಲ್ಲಿ ಹೇರಳವಾಗಿದೆ. ಅಕೃತಕವೂ ನಿರಾಡಂಬರವೂ ಅನಾಮಧೇಯವೂ ಆದ ರಿಕ್ತ ಸ್ಥಿತಿಯ ಸಾಮಾನ್ಯ ಜೀವನದ ಸಮಗ್ರ ಚಿತ್ರ ರಾಶಿ ರಾಶಿಯಾಗಿ ದೊರೆಯುತ್ತದೆ. ಅಜ್ಞಾನದಾರಿದ್ರ್ಯ ಮೌಢ್ಯಗಳಿಂದ ಕುಸಿದು ಕುಗ್ಗಿ ಕಂಗಾಲಾಗಿರುವ ರೈತರ, ಜೀತಗಾರರ ಹಾಗೂ ಪಂಚಮರ ದಾರುಣ ಜೀವನದ ಹೃದಯ ವಿದ್ರಾವಕ ಚಿತ್ರವಂತು ಕಣ್ಣಿಗೆ ಕಟ್ಟಿದಂತೆ ವರ್ಣಿತವಾಗಿದೆ. ಅಂತೆಯೇ ಪುರುಷನ ಹಿಂಸೆ ಕ್ರೌರ್ಯಲಂಪಟತನಗಳಿಗೊಳಗಾದ ಅಬಲೆಯರ ಸಂಕಟಮಯ ಭೀಕರ ಪರಿಸ್ಥಿತಿಯ ವರ್ಣನೆಯೂ ಇಲ್ಲಿ ಮಡುಗೊಂಡಿದೆ. ಬ್ರಾಹ್ಮಣರು, ಗೌಡರು, ಕ್ರಿಶ್ಚಿಯನ್ನರು, ಮುಸಲ್ಮಾನರು, ಪಂಚಮರು, ಹಳೇಪೈಕದವರು, ಸೇರೆಗಾರರು, ಬೇಲರು, ಕಮ್ಮಾರರು, ಮುಸಲ್ಮಾನರು, ಪಂಚಮರು, ಹಳೇಪೈಕದವರು, ಸೇರೆಗಾರರು, ಬೇಲರು, ಕಮ್ಮಾರರು, ಆಬಾಲವೃದ್ಧರು, ಸಮಸ್ತ ಗ್ರಾಮ ಜೀವನವನ್ನು ಪ್ರತಿನಿಧಿಸುವ ಎಲ್ಲ ವರ್ಗಗಳ ಎಲ್ಲ ವೃತ್ತಿಗಳ ಜನರು ಕಾದಂಬರೀ ವೇದಿಕೆಯ ಮೇಲೆ ಸುಳಿಯುತ್ತಾರೆ.

ಕಾವ್ಯ ಜೀವನದ ಪ್ರಾರಂಭದಲ್ಲಿಯೇ ಕುವೆಂಪು ಅವರ ಸಾಮಾಜಿಕ ಪ್ರಜ್ಞೆ ಸಾಮಾನ್ಯ ಜೀವನದ ಸರ್ವಾಂಗಗಳನ್ನು ಬಾಚಿ ತಬ್ಬಿಕೊಳ್ಳುತ್ತದೆ. ಸಾಮಾನ್ಯ ಜನತೆಯನ್ನು ಬಲ್ಲವರ ಮತ್ತು ಬಲಿಷ್ಠರ ಬೌದ್ದಿಕ ಹಾಗೂ ಆರ್ಥಿಕ ದಾಸ್ಯದಿಂದ, ಅವರ ಪಾಶವಿಕ ಶೋಷಣೆಯಿಂದ ಪಾರುಮಾಡುವ ಸಲುವಾಗಿ ಕುವೆಂಪು ಅವರು ಲೇಖನ ಭಾಷಣ ಸಂಭಾಷಣೆಗಳ ಮೂಲಕ ಜನತೆಯನ್ನೆಚ್ಚರಿಸಲು, ಅವರಲ್ಲಿ ನಿರಂಕುಶಮತಿತ್ವವನ್ನೂ, ವೈಚಾರಿಕ ಬುದ್ದಿಯನ್ನೂ, ವೈಜ್ಞಾನಿಕ ಮನೋಧರ್ಮವನ್ನೂ ರೂಢಿಸಲು ಪ್ರಯತ್ನಿಸುತ್ತಾರೆ. ‘ಬಹುಕಾಲದ ದೀರ್ಘಮಂಥನದಿಂದ, ಪ್ರಶಾಂತ ಧ್ಯಾನದಿಂದ, ಅನ್ಯಾಯಗಳನ್ನೂ ಅವಿವೇಕಗಳನ್ನೂ ಅಜ್ಞಾನಜನ್ಯವಾದ ಕ್ರೂರವರ್ತನೆಗಳನ್ನೂ ಕಂಡಾಗ ಮೂಡಿದ ಸಾತ್ವಿಕ ಕ್ರೋಧದಿಂದ, ನಮ್ಮ ದೇಶ ನಮ್ಮ ನಾಡು ನಮ್ಮ ಭಾಷೆ ನಮ್ಮ ಸಂಸ್ಕೃತಿ ನಮ್ಮ ಸ್ಥಿತಿಗತಿಗಳು ಉಚ್ಛ್ರಾಯ ವಾಗಬೇಕೆಂಬ ಹಂಬಲದಿಂದ’

[1] ಸಮಾಜದಲ್ಲಿ ರೂಢಮೂಲವಾಗಿದ್ದ ಹಾನಿಕಾರಕ ಮೌಢ್ಯ ಸಂಪ್ರದಾಯಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತಾರೆ. ಮತದ ಹೆಸರಿನಲ್ಲಿ ಚಾಲ್ತಿ ಯಲ್ಲಿರುವ ಕಟ್ಟುಕಟ್ಟಳೆಗಳನ್ನು ಹಂಗಿಸುತ್ತಾರೆ. ನೂರಾರು ದೇವರುಗಳನ್ನು ಗುಡಿಯಿಂದಾಚೆ ದಬ್ಬಿ ಒಬ್ಬ ಸರ್ವೇಶ್ವರನನ್ನು ಪೂಜಿಸುವಂತೆ, ಅಧ್ಯಾತ್ಮ ಸಾಧನೆಯಲ್ಲಿ ತೊಡಗುವಂತೆ ಜನರಿಗೆ ಕರೆ ಕೊಡುತ್ತಾರೆ. ಬಾಲ್ಯವಿವಾಹ, ಮದ್ಯಪಾನ, ದುಂದುವೆಚ್ಚ, ಕೋರ್ಟು ವ್ಯವಹಾರ ಮೊದಲಾದ ಅನಿಷ್ಟಗಳನ್ನು ತ್ಯಜಿಸಿ, ಶ್ರೇಯಸ್ಸಾಧಕವಾದ ಸುಜ್ಞಾನವನ್ನು ಸಂಪಾದಿಸುವಂತೆ ಮಲೆನಾಡಿನ ಯುವಕ ಸಂಘದ  ಮೂಲಕ ನಾಡನ್ನು ಎಚ್ಚರಿಸುತ್ತಾರೆ.

‘ಮಲೆನಾಡಿನ ಚಿತ್ರಗಳು’ ಅಲ್ಲಿನ ಜನ ಜೀವನಕ್ಕೆ ಕನ್ನಡಿಯಂತಿವೆ. ಅಲ್ಲಿಯವರಿಗೆ ಕೃಷಿಯಂತೆಯೇ ಬೇಟೆಯೂ ಬದುಕಿನ ಅವಿಭಾಜ್ಯಾಂಗ. ಅವರಿಗೆ ಬೇಟೆ ಬರಿಯ ವೃತ್ತಿಯಲ್ಲ; ಅದೊಂದು ಮನರಂಜನೆಯ ಕಲೆಯೂ ಅಹುದು, ಧೈರ್ಯ ಸ್ಥೈರ್ಯ ಸಾಹಸಗಳನ್ನು ಪ್ರದರ್ಶಿಸುವ ಸಾಧನವೂ ಅಹುದು. ಮಲೆನಾಡಿನ ಬೇಟೆಗಾರರ ಮತ್ತು ಬೇಸಾಯಗಾರರ ಜೀವನದೊಂದಿಗೆ ಕುವೆಂಪು ಅವರ ಜೀವನವೂ ಅವಿಭಕ್ತ ಸಂಬಂಧವನ್ನು ಹೊಂದಿದ್ದರಿಂದ, ಅವರು ಬೇಟೆ ಮತ್ತು ಬೇಸಾಯಗಳ ಪ್ರಾಯೋಗಿಕಾನುಭವವನ್ನು ಪಡೆದಿದ್ದುದರಿಂದ ಬೇಸಾಯಗಾರರ ಮತ್ತು ಬೇಟೆಗಾರರ ಜೀವನವನ್ನು ತಾದಾತ್ಮ್ಯದಿಂದ ಹೃದಯ ಸ್ಪರ್ಶಿ ಯಾಗುವಂತೆ ಬಣ್ಣಿಸುತ್ತಾರೆ. ರಂಗಯ್ಯನ ಮರಸು ಬೇಟೆ, ಪುಟ್ಟಾಚಾರಿಯ ಕಾಡು ಕೋಳಿಯ ಬೇಟೆ, ಗೋಪಾಲ ಹಿರಗರ ಕೆಲಸಕಾರ್ಯಗಳು, ಅಜ್ಜಯ್ಯನ ಅಭ್ಯಂಜನ, ಕತೆಗಾರ ಮಂಜಣ್ಣನ ಕರ್ಮಾಚರಣೆಗಳು – ಇವೇ ಮೊದಲಾದವು ಮಲೆನಾಡಿನ ಜನಜೀವನವನ್ನು ಯಥಾವತ್ತಾಗಿ ಪ್ರತಿಬಿಂಬಿಸುತ್ತವೆ. ಅಣ್ಣಪ್ಪನ ರೇಷ್ಮೆ ಕಾಯಿಲೆಯಂತು ಅನುಕಂಪೆ ಮರುಕಗಳ ವರ್ಣನೆಯಾಗಿದೆ. ಒಬ್ಬೊಬ್ಬ ವ್ಯಕ್ತಿಯೂ ಅಲ್ಲಿಯ ಜೀವನ ವೈವಿಧ್ಯದ ಪ್ರತಿನಿಧಿಯಾಗಿ ದ್ದಾನೆ.

ಕುವೆಂಪು ಅವರ ಜನ ಜೀವನದ ಅನುಭವ ಅವರ ಕತೆಗಳಲ್ಲೆಲ್ಲ ಹಾಸುಹೊಕ್ಕಾಗಿ ಹರಿದಿದೆ. ಗೃಹತ್ಯಾಗಮಾಡಿ ಸನ್ಯಾಸಿಯಾದ ಯುವಕನೊಬ್ಬ ಮತ್ತೆ ಸಂಸಾರಿಯಾದದ್ದು, ಬ್ರಹ್ಮಚರ್ಯದ ಪ್ರತಿಪಾದಕನೊಬ್ಬ ಎರಡು ಮದುವೆಯಾದದ್ದು, ವಿದ್ಯಾರ್ಥಿದಶೆಯಲ್ಲಿ ಆದರ್ಶ ಸಾಧನೆಯ ಬಗ್ಗೆ ಉಪನ್ಯಾಸ ನೀಡುತ್ತಿದ್ದ ಯುವಕ ಪಾದ್ರಿಯ ಮಗಳಿಗಾಗಿ ಮತಾಂತರದ ದುರಂತವನ್ನಪ್ಪಿದ್ದು, ಹರಕುಗಿವಿಯ ಗಂಡು ಸೊಟ್ಟಗೈಯ ಹೆಣ್ಣನ್ನು ಮದುವೆಯಾದದ್ದು ಜನಜೀವನದಲ್ಲಿ ಪ್ರತಿನಿತ್ಯ ನೋಡಬಹುದಾದ ಸಂಗತಿಗಳು. ಈ ಕತೆಗಳಲ್ಲಿ ವಕೀಲರ ವಂಚನೆಯ ಮತ್ತು ವೈದ್ಯರ ಲಂಚಕೋರತನದ ವಿಡಂಬನೆಯಿದೆ. ಪ್ರತ್ಯಕ್ಷ ಯಮನಂತಿದ್ದ ಗುಂಡಪ್ಪ ಮೇಷ್ಟ್ರರು ಬಾಲಕರಿಗೆ ಕೊಡುತ್ತಿದ್ದ ಕಿರುಕಳದ ವರ್ಣನೆಯಲ್ಲಿ, ಗುಪ್ತಧನವನ್ನು ಹೊರತೆಗೆಯುವಲ್ಲಿ ಜೋಯಿಸ ಮಾಡಿದ ವಂಚನೆಯ ಪ್ರಕರಣದಲ್ಲಿ ಬ್ರಾಹ್ಮಣರ ಶೋಷಣೆಯ ಮತ್ತು ಗರ್ವಾಂಧತೆಯ ವಿಡಂಬನೆಯಿದೆ. ಅನ್ನಪ್ರಾಣಗಳನ್ನು ಕೊಟ್ಟ ಒಡೆಯನಿಗಾಗಿ ಪ್ರಾಣವನ್ನೆ ಪಣವೊಡ್ಡಿದ ಆಳುಲಿಂಗ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿದ್ದಾನೆ. ಸಾಲದ ಮಗು ಸುಬ್ಬನ ಬಗ್ಗೆ ಗೌಡರು ತೋರಿಸಿದ ಅಮಾನುಷ ಕ್ರೌರ್ಯ ಶ್ರೀಮಂತರು ಮತ್ತು ಭೂಪತಿಗಳು ದಿನದಿನವೂ ಎಸಗುತ್ತಿರುವ ಪಾಪಕ್ಕೆ ಸಾಕ್ಷಿಯಂತಿದೆ. ‘ನನ್ನ ದೇವರು’ ಕತೆಯಲ್ಲಿ ಬಾಲ ವಿಧವೆಯ ಗೋಳಿನ ಚಿತ್ರಣವಿದೆ. ಮುಸಲ್ಮಾನ ಜಾತಿಯ ಪೋಲೀಸ್ ಇನ್‌ಸ್ಪೆಕ್ಟರ್ ಅನುಭವಕ್ಕೆ ಬಾರದ ದೆವ್ವದ ಕಾಟ ಹಿಂದೂ ಇನ್‌ಸ್ಪೆಕ್ಟರನ್ನು ಮಾತ್ರ ಬಾಧಿಸುತ್ತದೆನ್ನುವುದರಲ್ಲಿ ಮೌಢ್ಯದ ವಿಡಂಬನೆಯಿದೆ. ಕುವೆಂಪು ಅವರಿಗೆ ರೈತನ ಬಗೆಗಿರುವ ಸಹಾನುಭೂತಿ ಅನನ್ಯವಾದದ್ದು. ರೈತರ ಮನೆತನದಲ್ಲಿ ಹುಟ್ಟಿ, ರೈತರ ಕಷ್ಟಕ್ಲೇಶಗಳನ್ನು ಕಣ್ಣಾರೆ ಕಂಡವರಾದ್ದರಿಂದ, ಅವರ ಸ್ಥಿತಿಗತಿಗಳ ವಾಸ್ತವ ಚಿತ್ರಣವನ್ನು ಅವರ ಕತೆ ಕವನ ಕಾದಂಬರಿಗಳಲ್ಲಿ ಕಾಣಬಹುದು. ‘ರೈತನ ಎದೆಯ ಮೇಲೆ ಸಮಸ್ತ ಚಕ್ರಾಧಿಪತ್ಯವೂ ಮಹಾ ಪರ್ವತಾಕಾರವಾಗಿ ನಿಂತಿತ್ತು. ಋಷಿಗಳು ನೋಡಿಕೊಂಡು ಬಂದಿದ್ದ ಆ ಮುಖ್ಯ ಪಟ್ಟಣವು ಅವರ ನೆತ್ತಿಯಲ್ಲಿ ರಾಜಿಸುತ್ತಿದೆ! ಅಲ್ಲಿಯ ದೇವಾಲಯ ಗಳೂ ವಿದ್ಯಾನಿಲಯಗಳೂ ಕ್ರೀಡಾಮಂದಿರಗಳೂ ಪ್ರಮೋದವನಗಳೂ ಕರ್ಮಸೌಧಗಳೂ ಕಾರ್ಖಾನೆಗಳೂ ರಾಜಪ್ರಸಾದಗಳೂ ತಮ್ಮ ಭಾರವನ್ನೆಲ್ಲಾ ರೈತನ ಎದೆಯ ಮೇಲೆ ಹಾಕಿ, ಸಂಸ್ಕೃತಿ ಮತ್ತು ನಾಗರಿಕತೆ ಎಂಬ ಕೀರ್ತಿಯಿಂದ ಮೆರೆಯುತ್ತಿವೆ!’[2] ಎಂಬ ಮಾತು ಯಾವ ಕಾಲಕ್ಕೂ ಯಾವ ದೇಶಗಳಿಗೂ ಅನ್ವಯಿಸುವಂತಿದೆ.

ಕರಿಯರದೊ ಬಿಳಿಯರದೊ ಯಾರದಾದರೆ ಏನು?
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ?
ವಿಜಯನಗರವೊ? ಮೊಗಲರಾಳ್ವಿಕೆಯೊ ಇಂಗ್ಲೀಷರೊ?
ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ?
ಕತ್ತಿ ಪರದೇಶಿಯಾದರೆ ಮಾತ್ರ ನೋವೆ?
ನಮ್ಮವರೆ ಹದ ಹಾಕಿ ತಿವಿದರದು ಹೂವೆ?[3]

ಎಂಬುದು ರೈತನ ಪ್ರಾಮಾಣಿಕ ದೃಷ್ಟಿ. ‘ಸೋಮಾರಿಗಳಿಗೆ ಸುಖಿಗಳಿಗೆ ರಸಿಕರಿಗಲ್ತೆ ಸಾಮ್ರಾಜ್ಯವೆಂಬುದದು ಕಾಮಧೇನು?’ ಎನ್ನುವ ಮಾತು ಇಂದಿಗೂ ಸತ್ಯವಾಗಿದೆ. ‘ಗೊಬ್ಬರ’ ಎಂಬ ವಿಡಂಬನಾತ್ಮಕ ಕವಿತೆಯಲ್ಲಿಯೂ ರೈತನ ನಾನಾ ಪ್ರಕಾರದ ಶೋಷಣೆಯ ಭಯಾನಕ ಚಿತ್ರಣವಿದೆ. ‘ನೇಗಿಲಯೋಗಿ’ ಮತ್ತು ‘ಕುಳದ ಕಲಿಗೆ’ ಕವಿತೆಗಳಲ್ಲಿ ರೈತನ ಹಿರಿಮೆಯ ಮೆಚ್ಚುಗೆ ಇದೆ. ‘ಬರಿಯ ಉಳುವ ಕುಳದ ಗೆರೆಯೆ? ನಾಡ ಹಣೆಯಬರೆಹ ಬರೆವೆ!’ ಎಂದು ಅವನನ್ನು ಕೀರ್ತಿಸುತ್ತಾರೆ.

ಸಮಯ ಸಿಕ್ಕಿದಾಗಲೆಲ್ಲ ಕುವೆಂಪು ಅವರು ಮುಚ್ಚುಮರೆಯಿಲ್ಲದೆ ನಿರ್ದಾಕ್ಷಿಣ್ಯವಾಗಿ ರೈತ ಕಲ್ಯಾಣದ ಬಗ್ಗೆ ಕಾತರತೆಯನ್ನು, ಅವರ ಅನಾಥ ದುಸ್ಥಿತಿಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಾರೆ. ೮-೧೨-೧೯೭೪ರಂದು ಬೆಂಗಳೂರು ವಿಶ್ವವಿದ್ಯಾಲಯದ ಹತ್ತನೆಯ ಘಟಿಕೋತ್ಸವ ಸಮಯದಲ್ಲಿ ತಾವು ಮಾಡಿದ ಭಾಷಣದಲ್ಲಿ ರೈತರ ಅಸಹಾಯಕ ಪರಿಸ್ಥಿತಿಯ ಕಡೆಗೆ ಅಲ್ಲಿದ್ದವರೆಲ್ಲರ ಗಮನ ಸೆಳೆಯುತ್ತಾರೆ. ಪ್ರಾಯಶಃ ಪ್ರಪಂಚದ ವಿಶ್ವವಿದ್ಯಾಲಯಗಳ ಇತಿಹಾಸದಲ್ಲಿಯೇ ರೈತನ ಪರವಾಗಿ ಮಾಡಿದ ಘಟಿಕೋತ್ಸವ ಭಾಷಣ ಮತ್ತೊಂದಿಲ್ಲವೆಂದೇ ಹೇಳಬಹುದು. ‘ಹೀಗೆ ಅನೇಕ ರೀತಿಯ ಭೋಗದ ಮತ್ತು ಷೋಕಿಯ ವಸ್ತುಗಳ ತಯಾರಿಕೆಗೆ ಬಡ ರೈತರ ತೆರಿಗೆಯ ಧನವನ್ನು ವ್ಯಯ ಮಾಡಿದೆವು. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಭೋಗ ಜೀವನ ನಡೆಸುವ ಶ್ರೀಮಂತರ ಸುಖಕ್ಕಾಗಿ, ಹಳ್ಳಿಗಳನ್ನೂ ರೈತ ವರ್ಗವನ್ನೂ ಮರೆತು ಬಿಟ್ಟೆವು ಅಥವಾ ಮರೆತೇ ಬಿಟ್ಟೆವು ಎಂಬ ದೂರಿನಿಂದ ಪಾರಾಗುವುದಕ್ಕಾಗಿಯೂ ಮತ್ತು ಅವರು ಸಂಪೂರ್ಣವಾಗಿ ನಿರ್ಜೀವವಾದರೆ ನಮಗಾಗಿ ದುಡಿಯುವವರು ಯಾರೂ ಇಲ್ಲದಂತೆ ಆಗಬಾರದು ಎಂಬುದಕ್ಕಾಗಿಯೂ ಜೀವವಾಡುವಷ್ಟರ ಮಟ್ಟಿಗೆ ಅವರ ಭಿಕ್ಷಾ ಪಾತ್ರೆಗೂ ಕಾಸು ಎಸೆದದ್ದುಂಟು. ಬಡ ರೈತನನ್ನು ಹಿಂಡಿ ತೆಗೆದ ತೆರಿಗೆ ದವಸಧಾನ್ಯಗಳು ನಗರಗಳ ಶ್ರೀಮಂತ ವರ್ಗಕ್ಕೂ ಅಧಿಕಾರ ವರ್ಗದ ಧಾಳಾಧೂಳಿಗೂ ವ್ಯಯವಾಯಿತು.’[4] ಈ ದೃಷ್ಟಿಯಿಂದಲೇ ಅವರು ಏಷಿಯಾ ಕ್ರೀಡೆಗಳಿಗೆ, ಅಲಿಪ್ತ ಸಮ್ಮೇಳನಕ್ಕೆ ವಿಶ್ವಕನ್ನಡ ಮೇಳಕ್ಕೆ ಮಾಡುವ ದುಂದುಗಾರಿಕೆಯನ್ನು ನಿರ್ಭೀತರಾಗಿ ಖಂಡ ತುಂಡವಾಗಿ ಖಂಡಿಸುತ್ತಾರೆ.

ರೈತ ಯಾವುದೋ ಜಾತಿಯ ಅಥವಾ ವೃತ್ತಿ ಜೀವನದ ಪ್ರತಿನಿಧಿಯಲ್ಲ, ಅವನು ಶೋಷಿತ ವರ್ಗದ ಪ್ರತಿನಿಧಿಯಾಗಿ ಕುವೆಂಪು ಸಾಹಿತ್ಯದಲ್ಲಿ ಕಾಣಿಸಿಕೊಳ್ಳುತ್ತಾನೆ. ಸುಲಿಗೆಯಿಂದ ತತ್ತರಿಸುತ್ತಿರುವ ಕಾರ್ಮಿಕರ ದೀನದಲಿತರ ಮತ್ತು ಹಿಂದುಳಿದವರ ಪ್ರತಿನಿಧಿಯಾಗಿ ಅವನಿಲ್ಲಿ ಚಿತ್ರಣಗೊಂಡಿದ್ದಾನೆನ್ನುವುದನ್ನು ಮರೆಯಬಾರದು. ‘ಹಾಳೂರು’ ಎಂಬ ದೀರ್ಘ ಕವನದಲ್ಲಿ ನಾಗರಿಕತೆ ಹಾಗೂ ಬೃಹತ್ ಕೈಗಾರಿಕೆಗಳು ಹಳ್ಳಿಗಳಿಗೆ ತಂದ ಕಷ್ಟನಷ್ಟಗಳ ವಿವರಣೆಯುಂಟಷ್ಟೆ. ಪೇಟೆಯ ವ್ಯಾಮೋಹಕ್ಕೆ ಬಲಿಯಾದ ಹಳ್ಳಿಯ ವ್ಯಾಪಾರಿ ಸಿದ್ದಣ್ಣ ಪಾಪರಾಗಿ, ಕಳ್ಳತನಕ್ಕೆ ಬಿದ್ದು, ಜೈಲು ಸೇರುತ್ತಾನೆ. ಹಿಂದಿನಂತೆ ಹಳ್ಳಿಗಳಲ್ಲಿ ಕುಮಾರವ್ಯಾಸ ಜೈಮಿನಿ ಭಾರತಗಳ ಸುಶ್ರಾವ್ಯ ಸಂಗೀತ ಕೇಳಿಸುತ್ತಿಲ್ಲ. ನಗರದ ಕೈಗಾರಿಕೆಗಳ ಆರ್ಭಟದಿಂದಾಗಿ ಅಕ್ಕಸಾಲಿಗರು, ಕುಮ್ಮಾರರು, ನೇಕಾರರು ಹೊಟ್ಟೆಬಟ್ಟೆಗಿಲ್ಲದೆ ಸಾಯುವಂತಾಗಿದೆ. ಜಾತೀಯತೆಯಿಂದಾಗಿ ಮತಾಂತರದಿಂದಾಗಿ ನಾಡು ಹರಿದು ಹಂಚಿ ಹೋಗುತ್ತಿರುವ ದುರುಂತ ಚಿತ್ರ ಅಲ್ಲಿದೆ.

ದೇಶಗಳು ಹಾಳಾದುವತಿ ಭೋಗದಿಂದ,
ನೀತಿನಾಶವು ಕೀರ್ತಿನಾಶವದರಿಂದ
ಬೇಸಾಯದಾಧಾರದಿಂದಿರುವ ದೇಶ
ಎಂದಿಗೂ ಸುಖಕರವು ಅದಕಿಲ್ಲ ನಾಶ!
ಹಳ್ಳಿಯಿಲ್ಲದ ದೇಶವದು ನಿತ್ಯರೋಗಿ,
ಕೊಳೆಯುವುದು ನಿರ್ಜೀವ ಶವದಂತೆಯಾಗಿ[5]

ಹಳ್ಳಿಗಳ ಉದ್ಧಾರದಲ್ಲಿ ಸಮಷ್ಟಿಯ ಕಲ್ಯಾಣವಿದೆಯೆಂಬುದನ್ನು ಕವಿ ಮರೆತಿಲ್ಲ.

ಜಾತೀಯತೆ, ಮತೀಯತೆ ಮತ್ತು ಅಸ್ಪೃಶ್ಯತೆ ಸಮಾಜ ಪುರುಷನ ದೇಹಕ್ಕಂಟಿಕೊಂಡು ಬಂದಿರುವ ಮಾರಕ ರೋಗಗಳೆಂಬುದನ್ನೂ ಅವು ನಿರ್ನಾಮವಾಗುವ ತನಕ ದೇಶ ಕ್ಷೇಮ ಮುಗಿಲ ಮಲ್ಲಿಗೆಯೆಂಬುದನ್ನೂ ಅವರು ಮೇಲಿಂದ ಮೇಲೆ ಸ್ಪಷ್ಟಪಡಿಸಿದ್ದಾರೆ. ಅವರಂತೆ ಸಮಾಜಾಭ್ಯುದಯದ, ರಾಷ್ಟ್ರ ಕಲ್ಯಾಣದ ಚಿಂತನೆಯನ್ನು ಅಂಟಿಸಿಕೊಂಡವರು ಕಡಿಮೆ. ‘ವರ್ಣಾಶ್ರಮ, ಚಾತುರ್ವರ್ಣ್ಯ, ಜಾತಿಬೇಧ ಇತ್ಯಾದಿ ಕೃತಕ ತಾರತಮ್ಯಗಳನ್ನು ತಾವೇ ಕಲ್ಪಿಸಿ ಅವುಗಳನ್ನು ಭಗವಂತ ಸೃಷ್ಟಿಸಿದನೆಂದು ಸುಳ್ಳು ಶಾಸ್ತ್ರಗಳನ್ನು ಅವರು ತಿಳಿಯದ ಸಂಸ್ಕೃತ ಭಾಷೆಯಲ್ಲಿ ರಚಿಸಿ, ಅವುಗಳಿಗೆ ಧರ್ಮಶಾಸ್ತ್ರಗಳು ಎಂಬ ದೊಡ್ಡ ಹೆಸರಿಟ್ಟು, ಅವುಗಳನ್ನು ಯಾರೂ ಉಲ್ಲಂಘಿಸಬಾರದೆಂಬ ಕಟ್ಟು ಕಲ್ಪಿಸಿ, ಆ ಕಟ್ಟಿನ ಕಾನೂನು ರಕ್ಷೆಗೆ ಕ್ಷತ್ರಿಯ ವರ್ಗದ ರಾಜರನ್ನು ಕೈಗೊಂಬೆಗಳನ್ನಾಗಿ ಸಿಂಹಾಸನಕ್ಕೇರಿಸಿ, ರಾಜನೇ ಪ್ರತ್ಯಕ್ಷ ದೇವರು ಎಂಬ ಹುಸಿ ಹೆದರಿಕೆ ಹುಟ್ಟಿಸಿ, ಶೂದ್ರರನ್ನು ಗುಲಾಮರನ್ನಾಗಿ ಮಾಡಿ, ಮೂಢ ಪಶುಗಳಿಗಿಂತಲೂ ಕೀಳುಮಟ್ಟದಲ್ಲಿಟ್ಟು, ಅವರ ದುಡಿಮೆಯಿಂದ ತಾವು ಸುಖಭೋಗಿ ಗಳಾಗಿರುವ ಅಚಾರ್ಯ ನಾಮಕ ನೀಚರನ್ನು ವಿಚಾರವೇದಿಕೆಯ ಸಾಕ್ಷಿ ಪೆಟ್ಟಿಗೆಯಲ್ಲಿ ನಿಲ್ಲಿಸುವ ಧೈರ್ಯ ದೃಢತೆಗಳನ್ನು ನಮ್ಮ ತರುಣರಿಗೆ ಕಲಿಸಬೇಕು…ಹಳೆಯ ಶಾಸ್ತ್ರ, ಬೂಸಲು ಧರ್ಮ, ಕೇಡಿ ಜಗದ್ಗುರು, ಸ್ವಾರ್ಥಶೀಲ ಆಚಾರ್ಯ ಇವರನ್ನೆಲ್ಲಮುಲಾಜಿಲ್ಲದೆ ಧಿಕ್ಕರಿಸುವಂತಾಗಬೇಕು.

‘ಹಳ್ಳಿಯ ತರುಣನನ್ನು ಹಳೆಯ ಮೌಲ್ಯಗಳಿಂದ ಪಾರುಮಾಡಬೇಕಾಗಿ ಬರುತ್ತದೆ.ಅವು ನಿಜವಾಗಿ ಮೌಲ್ಯಗಳಲ್ಲ, ಸ್ವಾರ್ಥಕ್ಕಾಗಿ ಮೇಲುವರ್ಗದವರು ಹುಟ್ಟಿಸಿರೊ ಭ್ರಾಂತಿಗಳು; ಅವು ನಿತ್ಯ ಮೌಲ್ಯಗಳಲ್ಲ, ನಿಜ. ಭಕ್ತಿ ಶ್ರದ್ಧೆ ಅಭೀಪ್ಸೆ ಇಂಥವುಗಳೆಲ್ಲಾ ನಿತ್ಯಮೌಲ್ಯಗಳು. ಆದರೆ ಆ ಮೌಲ್ಯಗಳ ಹೆಸರನ್ನು ಹೇಳಿ ಅವನ್ನು ಏತಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ? ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಭಕ್ತಿಪೂಜೆಯ ಹೆಸರಿನಲ್ಲಿ, ಧರ್ಮಸ್ಥಳದ ಹೆಸರಿನಲ್ಲಿ ಜನರನ್ನು ಹೆದರಿಸಿ ಯಾವ ರೀತಿ ಸುಲಿಗೆ ಮಾಡುತ್ತಿದ್ದಾರೆ? ಮೋಸ ಮಾಡುತ್ತಿದ್ದಾರೆ?’[6] ಕುವೆಂಪು ಅವರ ಈ ಮಾತುಗಳಲ್ಲಿ ಅಭಿವ್ಯಕ್ತಗೊಂಡಿರುವಂಥದು ಜಾತಿ ದ್ವೇಷವಲ್ಲ, ಮತೀಯ ದ್ವೇಷವಲ್ಲ, ನಿರ್ಜಾತೀಯ ನಿರ್ಮತೀಯ ಸಮಾಜ ನಿರ್ಮಾಣದ ಬಗೆಗಿನ ಕಾತರತೆ. ಈ ಮಾತುಗಳ ಪ್ರೇರಣೆಗೆ ಅವರ ಮಾನವ ಪ್ರೇಮ ಮತ್ತು ಲೋಕ ಕಾರುಣ್ಯಗಳೆ ಕಾರಣವಾಗಿವೆ. ಸಾಮಾಜಿಕ ಪ್ರಜ್ಞೆಯ ಜಾಗ್ರತಿಗೆ ಮರುಕ ಅನುಕಂಪೆಗಳೇ ಜೋದಕಗಳು. ಅವರು ಅನುದಿನವೂ ಪ್ರತಿಪಾದಿಸುತ್ತಿರುವ, ಅಂತೆಯೇ ಅನುಸಂಧಾನ ಮಾಡುತ್ತಿರುವ ಪಂಚ ಮಂತ್ರಗಳ ಹಲವು ಗುರಿಗಳಲ್ಲಿ ಸಾಮಾಜಿಕ ಸುಸ್ಥಿತಿಯೂ ಒಂದೆನ್ನಬಹುದು.

ಗಾಂಧೀಜಿಯಂತೆಯೇ ಅಸ್ಪೃಶ್ಯತೆ ಒಂದು ಶಾಪವೆಂದು ಕುವೆಂಪು ಘಂಟಾ ಘೋಷವಾಗಿ ಸಾರಿ ಹೇಳುತ್ತಾರೆ. ಅಸ್ಪೃಶ್ಯತಾ ರೋಗಕ್ಕೂ ಜಾತಿ ವಿನಾಶವೇ ಸಿದ್ಧೌಷಧವೆಂಬುದು ಅವರ ಅಚಲ ನಂಬಿಕೆ. ದೇವಾಲಯ ಪ್ರವೇಶದ ಪ್ರಶ್ನೆಯನ್ನು ಸಹ ಅವರು ಸುಲಭವಾಗಿ ಬಗೆಹರಿಸುತ್ತಾರೆ. ‘ಒಬ್ಬರು ಕೃತವಿದ್ಯರಾದ ಗೌರವಸ್ಥರು ದೇವಾಲಯಕ್ಕೆ ಹೋಗಿ ಬಂದುದಕ್ಕೆ ಪ್ರತಿಯಾಗಿ ಸಂಪ್ರೋಜುಲುಮಾನೆ ಕೊಡಬೇಕಾಗಿ ಬಂದಿತಂತೆ. ಕಾರಣ, ಅವರು ಅಸ್ಪೃಶ್ಯರ ಜಾತಿಗೆ ಸೇರಿದವರಂತೆ. ಅವರಿಗಿಂತಲೂ ಮೂಢರೂ ಕೊಳಕರೂ ದುಷ್ಟರೂ ರೋಗಿಗಳೂ ದುರಾಚಾರಿಗಳೂ ಆದ ಸ್ಪೃಶ್ಯರೆನಿಸಿಕೊಂಡಿರುವವರು ಗುಡಿಯೊಳಗೆ ಹೋದರೆ ಮೈಲಿಗೆಯಾಗುವುದಿಲ್ಲವಂತೆ! ಸ್ಪೃಶ್ಯ ಯುವಕರು ತಮ್ಮ ಸಹೋದರನಿಗಾದ ಅವಮಾನ ತಮ್ಮದೆಂದು ಭಾವಿಸಿ ದೇವಾಲಯಗಳಿಗೆ ಹೋಗುವುದನ್ನೇ ಬಿಟ್ಟು, ಹೊರಗೆ, ಪ್ರಕೃತಿ ಸೌಂದರ್ಯದಲ್ಲಿ, ಉದಯಿಸುವ ಸೂರ್ಯನಲ್ಲಿ, ಸಾಹಿತ್ಯದಲ್ಲಿ, ಸಂಸ್ಕೃತಿಯಲ್ಲಿ, ದರಿದ್ರ ನಾರಾಯಣನ ಸೇವೆಯಲ್ಲಿ ತಮ್ಮ ದೇವಾಲಯಗಳನ್ನು ಕಟ್ಟಿಕೊಂಡು, ಮತದ ಅನೌದಾರ್ಯ ವನ್ನು ಮುರಿಯಬೇಕು. ಅಸ್ಪೃಶ್ಯ ಯುವಕರಿಗೆ ನನ್ನದೊಂದು ಬಿನ್ನಹ. ನೀವು ಅವಮಾನಿಸಿ ಕೊಂಡು ದೇವಾಲಯಕ್ಕೆ ಹೋಗದಿದ್ದರೆ ಏನಾಗುತ್ತದೆ? ….ಗುಡಿಯೊಳಗೆ ಹೋಗಿ ಮತದ ಮೌಢ್ಯಕ್ಕೂ ಪುರೋಹಿತರ ಸುಲಿಗೆಗೂ ಓಳಗಾಗುವುದಕ್ಕಿಂತ ದೂರವಾಗಿದ್ದುಕೊಂಡು ಎದೆಯ ದೇಗುಲದಲ್ಲಿಯೆ ಈಶ್ವರನನ್ನು ಇನ್ನಷ್ಟು ಅತಿಶಯವಾದ ಭಾವ ಭಕ್ತಿಯಿಂದ ಪೂಜಿಸ ಬಾರದೇ? ಅಸ್ಪೃಶ್ಯರನ್ನು ದೇವಾಲಯಗಳಿಗೆ ಪ್ರವೇಶ ಮಾಡಲು ಬಿಡಬೇಕೆಂದು ಹೇಳುತ್ತಿ ರುವುದು ಉಚ್ಚವರ್ಗದ ಹಿಂದುಗಳ ಪರಿಶುದ್ಧತೆಗಾಗಿ ಮತ್ತು ದೃಷ್ಟಿ ವೈಶಾಲ್ಯ ಸಾಧನೆಗಾಗಿಯೇ ಹೊರತು ಹರಿಜನರ ಮೋಕ್ಷಕ್ಕಾಗಿಯಲ್ಲ.[7]

ಅಸ್ಪೃಶ್ಯತೆಯ ಬಗೆಗಿನ ಅವರ ವಿರೋಧಾತ್ಮಕವಾದ ನಿಲವು ‘ಜಲಗಾರ’ ನಾಟಕದಲ್ಲಿ ಸುಸ್ಪಷ್ಟವಾಗಿ ಮೂರ್ತೀಭವಿಸಿದೆ. ಇಲ್ಲಿ ಬರುವ ರೈತ ಕರ್ಮಯೋಗಿ, ಕಾಮಧೇನು, ಕಲ್ಪವೃಕ್ಷ ಎಲ್ಲ ನಿಜ. ಆದರೆ ಅವನು ಜಲಗಾರನಂತೆ ವಿಚಾರವಂತನಲ್ಲ. ಪೌರೋಹಿತ್ಯದ ಬಲಿಪಶು.

ಶಿವಗುಡಿಯ ಶಿವನು ಜೋಯಿಸರ ಶಿವನಂತೆ;
ನನ್ನ ಶಿವನೀ ಮಣ್ಣಿನಲ್ಲಿಹನು ನನ್ನ ಶಿವ
ಕೊಳೆತ ಕಸದೊಳಗಿಹನು. ಕಪ್ಪುರದೊಳಿಲ್ಲ;
ಮಂಗಳಾರತಿಯೊಳಿಲ್ಲ ಹೂವುಗಳಲಿಲ್ಲ. (ಪು. ೧೦)

ಎಂದು ಹೇಳುವ ಜಲಗಾರನ ಎತ್ತರಕ್ಕೆ ರೈತ ಏರಿಲ್ಲ. ‘ನಿನ್ನ ನೇಗಿಲ ಗೆರೆಯ ದಿವ್ಯ ದೇವಾಲಯದ ಶಿವನ ಕಾಣೆಯ ನೀನು? ಉಳುವಾಗ ನೆಡುವಾಗ ಪೂಜೆ ಮಾಡುವೆ ನೀನು? ಎಂದು ಜಲಗಾರ ಅವನಿಗೆ ದಾರಿ ತೋರಿಸುತ್ತಾನೆ. ಸಂಪ್ರದಾಯ ಶರಣನಾದ ರೈತನಿಗೆ ಅವನ ಉಪದೇಶ ಹಿಡಿಸುವುದಿಲ್ಲ. ‘ಭೂಮಿಯಲಿ ಹುಟ್ಟು ಕುರುಡರಿಗಿಂತ ಕಣ್ಣುಳ್ಳ ಕುರುಡರೆನಿತೊಳರು?’ ಎಂದು ಜಲಗಾರ ಅವನ ಬಗ್ಗೆ ಕನಿಕರ ಸೂಸುತ್ತಾನೆ. ‘ಗುಡಿಗಳಿವು ಪಾಪಿಗಳ ಭೋಗಿಗಳ ಗೂಡುಗಳು’ ಎಂದು ತಿರುಕ ಸಾರುತ್ತಾನೆ,

ಲೋಕದಲಿ ಕಂಬನಿಯನೊಂದ ನೊರಸಿದ ನರನೆ
ಧನ್ಯ! ನಿಟ್ಟುಸಿರನೊಂದ ಸಂತೈಸುವನೆ
ಮಾನ್ಯ! ಹಸಿದ ಹೊಟ್ಟೆಗೆ ಮರುಗಿ ತುತ್ತೊಂದ
ನೀಡುವನೆ ಶಿವನಿಗೆಣೆ! ಹೆರರ ಗೋಳನು ಕಂಡು,
ಎದೆ ಬೆಂದು, ಬಟ್ಟೆಗೆಟ್ಟೊಬ್ಬನನು ಕೈ ಹಿಡಿದು,
ಜೀವನದ ಕರಿಮಣಿಯ ಕತ್ತಲಲಿ ಕಿರಣವೊಂದನು
ತಂದು ಭರವಸೆಯನೀಯುವಾತನೆ ಋಷಿ! (ಪು. ೧೯-೨೦)

ಜಲಗಾರನ ಈ ಅಮೃತವಾಣಿಯಲ್ಲಿ ಸುಸಂಸ್ಕೃತ ಚೇತನದ ಸಾಮಾಜಿಕ ಪ್ರಜ್ಞೆ ಹೆಪ್ಪುಗಟ್ಟಿದೆ. ರೈತನೆನ್ನುವಂತೆ ಅವನಲ್ಲ ಹಳ್ಳಿಯ ಗಮಾರ, ಮರುಳು ಜಲಗಾರನೂ ಅಲ್ಲ. ಆ ವಿಶೇಷಣಗಳು ಹಾಗೆನ್ನುವ ರೈತನಿಗೆ ಅನ್ವಯಿಸುತ್ತವೆ. ಜಲಗಾರ ಶಿವತ್ವವನ್ನು ಪಡೆಯು ವಂತೆಯೇ, ಶೂದ್ರಮುನಿ ಶಂಬುಕ ರಾಮತ್ವವನ್ನು ಪಡೆಯುತ್ತಾನೆ, ‘ಶೂದ್ರ ತಪಸ್ವಿ’ ನಾಟಕದಲ್ಲಿ. ಸಾಮಾಜಿಕ ಪ್ರಜ್ಞೆಯಿಲ್ಲದ ಸಂಪ್ರದಾಯ ಜಡನಾದ ಸಾಹಿತಿ ಎಂದೂ ಇಂಥ ನಾಟಕಗಳನ್ನು ರಚಿಸಲಾರ.

ಸಮಾಜದಲ್ಲಿ ಪ್ರಮುಖವಾಗಿರುವ ವರ್ಗಗಳು ಎರಡು : ಒಂದು ಶ್ರೀಮಂತರದು, ಎರಡು ದರಿದ್ರರದು. ಒಂದು ವರ್ಗದ ಭೋಗವಿಲಾಸ ಮತ್ತೊಂದು ವರ್ಗದ ರೋಗ ವಿಲಾಪಕ್ಕೆ ಕಾರಣವಾಗಿದೆ. ಒಂದು ಕಡೆ ಅಜೀರ್ಣ ರೋಗ, ಮತ್ತೊಂದು ಕಡೆ ಕ್ಷುಧಾರೋಗ. ಒಂದು ಕಡೆ ಪೀತಾಂಬರಗಳ ರಾಶಿ, ಮತ್ತೊಂದು ಕಡೆ ಚಿಂದಿಗೂ ಗತಿಯಿಲ್ಲ. ಕೊನೆಗೆ ಬಡವರ ಜಠರಾಗ್ನಿ ಶ್ರೀಮಂತರ ಸೌಧಗಳಿಗೂ ಹಬ್ಬುತ್ತದೆ. ಇದು ‘ಕಲ್ಕಿ’ ಕವನದ ಒಟ್ಟು ತಾತ್ಪರ್ಯ. ಬಡವ ವಡಬನಾಗುತ್ತಾನೆಂದು ಎಂದೋ ಕವಿ ನುಡಿದ ಭವಿಷ್ಯವಾಣಿ ಇಂದು ನಿಜವಾಗುತ್ತಿದೆ.

ಸದಾ ಜಾಗೃತನಾಗಿರುವ, ಸಂವೇದನಾ ಶೀಲನಾದ ಕವಿಯ ಸೂಕ್ಷ್ಮ ದೃಷ್ಟಿಯಿಂದ ಯಾವ ಸಾಮಾಜಿಕ ಸಮಸ್ಯೆಯೂ ತಪ್ಪಿಸಿಕೊಳ್ಳಲಾರದು. ಭರತಖಂಡದ ಬಡತನಕ್ಕೆ ಜನಸಂಖ್ಯೆಯ ಆಸ್ಫೋಟವೂ ಪ್ರಮುಖ ಕಾರಣವೆಂಬುದನ್ನು ಎಲ್ಲ ಕ್ಷೇತ್ರಗಳ ತಜ್ಞರು ಒಪ್ಪಿಕೊಂಡಿದ್ದಾರೆ. ‘ಪ್ರೇತಕ್ಯೂ’ ಎಂಬ ಕವಿತೆ ವ್ಯಂಗ್ಯ ವಿಧಾನದಿಂದ ಆ ಆಸ್ಫೋಟದ ಘೋರ ಪರಿಣಾಮವನ್ನು ಭಯಾನಕವಾಗಿ ಚಿತ್ರಿಸುತ್ತದೆ. ಜನಸಂಖ್ಯೆ ಮಿತಿಮೀರಿ ಬೆಳೆದು ಹೊಟ್ಟೆಗಿಲ್ಲದೆ ಕಂಗಾಲಾಗಿ ನರಳುತ್ತಿದ್ದರೂ, ಪ್ರೇತಗಳೆಲ್ಲ ಭೂಮಿಯ ಕಡೆ ನುಗ್ಗಲು ಸಾಲುಗಟ್ಟಿ ನಿಂತಿವೆಯಂತೆ. ನಾನೋಪಾಯ ಸಾಧನಗಳಿಂದ ಅವುಗಳ ನೂಕು ನುಗ್ಗಲನ್ನು ತಡೆಯಲು ವಿಜ್ಞಾನಿ ತನ್ನೆಲ್ಲ ಪ್ರತಿಭೆಯನ್ನು ಸೂರೆಗೊಳ್ಳುತ್ತಿದ್ದರೂ ಇಚ್ಛಿತ ಫಲ ಲಭಿಸುತ್ತಿಲ್ಲ.

ಯಾಕಿಂತು
ಕ್ಯೂನಿಂತು
ನುಗ್ಗುತಿರುವಿರಿ ಜನ್ಮಧಾರೆಣೆಗೆ,
ಓ ನತದೃಷ್ಟ ಪ್ರೇತಗಳಿರಾ?[8]

ಎಂದು ಕವಿ ಅವುಗಳನ್ನು ಪ್ರಶ್ನಿಸುತ್ತಾನೆ. ‘ನಿಮಿಷ ನಿಮಿಷಕೆ ಹುಟ್ಟಿ ಮುಲುಗುಡುವ ಶಿಶುಶಂಖ್ಯೆಯಲ್ಲಿ’ ಎಂಬ ವಾಕ್ಯದಲ್ಲಿ ಬರುವ ‘ಮುಲುಗುಡುವ’ ಎನ್ನುವ ಪದ ಬಚ್ಚಲಲ್ಲಿ ಒದ್ದಾಡುವ ಕ್ರಿಮಿಕೀಟಾದಿಗಳನ್ನು ನೆನಪಿಗೆ ತರುತ್ತದೆ. ಜನನ ನಿಯಂತ್ರಣದಿಂದಲ್ಲದೆ ನಾಡಿನ ಯಾವ ಸಮಸ್ಯೆಯೂ ಬಗೆ ಹರಿಯಲಾರದೆಂಬುದನ್ನು ಕವಿ ಮಾರ್ಮಿಕವಾಗಿ ನಿರವಿಸಿದ್ದಾರೆ. ಕ್ಷಣಕ್ಷಣವೂ ಬೆಳೆಯುತ್ತಿರುವ ಪ್ರೇತಸಂತಾನದ ಪೋಷಣೆಗೆಂಬಂತೆ, ಸೋಮಾರಿಗಳ ರಕ್ಷಣೆಗೆಂಬಂತೆ ಸರಕಾರ ವಿಧಿಸುತ್ತಿರುವ ತೆರಿಗೆಯ ಭಾರ ಭಯಂಕರ ಪ್ರಮಾಣವನ್ನು ಮುಟ್ಟುತ್ತಿದೆ. ಹುಚ್ಚುನಾಯಿಯಂತೆ ತೆರಿಗೆ ಜನರ ಮೇಲೆ ಬೀಳುತ್ತಿದೆ. ಅದು ಕಳ್ಳರಿಗೆ ಹೆದರಿಕೊಳ್ಳುತ್ತದೆ, ಒಳ್ಳೆಯವರನ್ನು ಬಲಿ ತೆಗೆದುಕೊಳ್ಳುತ್ತದೆ.

ತೆರಿಗೆಯಿರುವ ನಾಕವೂ
ನರಕ ಲೋಕವೆ!
ತೆರಿಗೆಯಿರದ ನರಕವೂ
ನಿಜದಿ ನಾಕವೆ![9]

ಭರತಖಂಡದ ರಾಜ್ಯಾಂಗ ಅರಸೊತ್ತಿಗೆಗೆ ಎಳ್ಳು ನೀರು ಬಿಟ್ಟು, ಪ್ರಜಾಪ್ರಭುತ್ವಕ್ಕೆ ನಡೆಮುಡಿ ಹಾಸಿದೆ. ಅರಸರು ಹೋದರೂ ಅವರ ಗುಲಾಮರು ಇನ್ನೂ ಇದ್ದಾರೆ, ರಾಜಸೇವಾಧುರಂಧರರಾಗಿ. ಸ್ವಾತಂತ್ರ್ಯವೇ ಅವರಿಗೆ ಶಾಪವಾಗಿ ಪರಿಣಮಿಸಿದೆ. ಅವರಿಗೆ ಬೇಕಾದ್ದು ‘ದಸರಾ ದರ್ಬಾರು, ಜರಿಯ ಪೇಟ, ಕರಿಯ ಕೋಟು! ಬಿಳಿ ಷರಾಯಿ, ಉತ್ತರೀಯ! ಬಗ್ಗು ಸೊಂಟ, ಡೊಗ್ಗು ಸಲಾಮು!’ ದಿನದಿನವೂ ಅವರು ರಾಜ್ಯಾಂಗಕ್ಕೆ ಅವಮಾನವೆಸಗುತ್ತಿದ್ದಾರೆ. ಅವರೇ ಏಕೆ? ಮತೀಯತೆಯ ಜಾತೀಯತೆಯ ಹೆಸರಿನಲ್ಲಿ ನಾಯಕರೇ ರಾಜ್ಯಾಂಗಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಸೆಕ್ಯೂಲರ್ ರಾಷ್ಟ್ರವೆಂದು ಹೇಳಿ ಕೊಂಡು ಮತಾಚಾರ್ಯರಿಗೆ ಮಠಾಧಿಪತಿಗಳಿಗೆ ನೀಡುತ್ತಿರುವ ಮನ್ನಣೆ ಅಸಹ್ಯತೆಯ ಮಟ್ಟಕ್ಕೇರಿದೆ. ಈಗಲೂ ಮತ ಮತ್ತು ಮಠಗಳು, ಜತೆಗೆ ಒಂದೇ ಕೋಮಿನವರು ಪ್ರಚ್ಛನ್ನ ವೇಷಗಳಲ್ಲಿ ರಾಜ್ಯಭಾರ ನಡೆಸುತ್ತಿರುವುದು ಸರ್ವವೇದ್ಯ.

ನಮ್ಮ ದೇಶಕೆ ಏನು ಬಂದರೇನಂತೆ?
ಕೊನೆಗೆ
ಕಮ್ಯೂನಿಸಂ ಏ ಬಂದರೂ;
ಹಾಕುವೆವು ಅದಕ್ಕೂ ಮೂರು ನಾಮ!
ಅದರ ಹೆಗಲಿಗೂ ಬೀಳುವುದು ಜನಿವಾರ!
ಅದಕ್ಕೂ ಕಟ್ಟುವೆವು ಲಿಂಗ!
ಕ್ರಾಸು ತಗುಲಿಸಿದರೂ ಆಶ್ಚರ್ಯವಿಲ್ಲ!
ಇಲ್ಲಿ ಕಮ್ಯೂನಿಸಂ ಊ ಕಿರಸ್ತಾನ!
ಕೊನೆಗೆ,
ಹಿಂದೂಸ್ಥಾನದಲ್ಲಿಯೂ ಅದು ಮುಸಲ್ಮಾನ!
ನಮ್ಮ ರಾಜ್ಯಾಂಗದಲ್ಲಿ ಮಾತ್ರ
ನಾವು ಧರಿಸಿಹುದು ಸೆಕ್ಯೂಲರ್ ಯಜ್ಞ ಸೂತ್ರ![10]

ಇದು ನಮ್ಮ ದೇಶದ ಸಾವಿರಾರು ವರ್ಷಗಳ ಇತಿಹಾಸದ ಕತೆ; ಆ ಕತೆ ಇನ್ನೂ ಮುಗಿದಿಲ್ಲ. ಹೀಗಿರುವಾಗ ಸಾಮಾಜಿಕ ಭದ್ರತೆಯಾಗಲಿ, ರಾಷ್ಟ್ರದ ಕಲ್ಯಾಣ ಸಾಧನೆಯಾಗಲಿ ಹೇಗೆ ಸಾಧ್ಯ? ಇದು ಕವಿ ಕಂಡಿರುವ ನಿಷ್ಠುರ ಸತ್ಯ.

ಸರ್ವಪ್ರಜಾಧಿಪತ್ಯದಲ್ಲಿ ರೈತ ಕಾರ್ಮಿಕ ಮಂತ್ರಿ ಸೇನಾನಿ ಯಾರೇ ಆಗಲಿ ಎಲ್ಲರೂ ಸರಿಸಮಾನ; ಪದವಿ ಅಧಿಕಾರ ಅಂತಸ್ತುಗಳ ತಾರತಮ್ಯಕ್ಕೆ ಎಡೆಯಿರಬಾರದೆಂಬುದು ಕವಿಯ ಆಶಯ: ‘ಅಧ್ಯಕ್ಷನೊ ಸೇನಾನಿಯೊ, ಕಮ್ಮಾರನೊ ಚಮ್ಮಾರನೊ ಕಾಯಕವೆಲ್ಲವೂ ಪೂಜ್ಯ; ಕೈಗಾರನೊ ಕಲೆಗಾರನೊ ಇರ್ವರಿಗೂ ಸಮಭೋಜ್ಯ.’[11] ‘ಸರ್ವೋದಯವೇ ಸ್ವಾತಂತ್ರ್ಯದ ಶ್ರೀ ತಂತ್ರ’ ಎಂದು ಘೋಷಿಸುತ್ತಾರೆ. ‘ಶ್ರೀ ಸಾಮಾನ್ಯನೆ ಭಗವನ್‌ಮಾನ್ಯಂ’ ಆದ್ದರಿಂದ ಒಬ್ಬರಿಗೊಬ್ಬರು ಗರ್ವದಿಂದ ಮೆರೆಯುವುದಾಗಲಿ, ಒಬ್ಬರೊಬ್ಬರನ್ನು ತುಳಿಯುವುದಾಗಲಿ ಮಹಾಪರಾಧವೆಂದು ಅವರು ಸ್ಪಷ್ಟಪಡಿಸುತ್ತಾರೆ. ಉಣಿಸಿಗೆ, ಉಡುಪಿಗೆ ಯಾರೇ ಆಗಲಿ ಬೇರೊಬ್ಬರ ಕಾಲನ್ನು ಹಿಡಿಯಬೇಕಾಗಿಲ್ಲ; ಏಕೆಂದರೆ ಈ ಕನಿಷ್ಠ ಸೌಲಭ್ಯಗಳು ಸರ್ವರಿಗೂ ಎಟಕುವಂತೆ ಏರ್ಪಾಡು ಮಾಡಬೇಕಾದದ್ದು ಸರ್ಕಾರದ ಕರ್ತವ್ಯವೆಂಬುದು ಅವರ ಅನಿಸಿಕೆ.

ಮರೆ ಮೋಸದ ಬೂಟಾಟಿಕೆಗಿದೊ ಮರ್ದನದಮನಂ!
ಧರ್ಮದ ಸೋಗಿನ ದುರ್ಲಾಭಕೆ ಕೋ ಧಿಕ್ಕಾರದ ಶಮನಂ

ಎಂಬುದೇ ಶ್ರೀ ಸಾಮಾನ್ಯನ ಘೋಷಣೆಯಾಗಿದೆ. ‘ಹಿಡಿಯದಿರಲಿ ನಿನಗಾದರು ಗಂಡ ಸರಾ ಕುತ್ತ: ಪ್ರಖ್ಯಾತಿಯ ಪಡೆಯುವೊಂದು ಪ್ರಾಪಂಚಿಕ ಪಿತ್ತ’[12]ವೆಂದು ಕವಿ ‘ಸೌಖ್ಯದ ನೆಲೆ, ಶಾಂತಿಯ ಮನೆ, ಸೌಂದರ್ಯದ ಶಿವಮಂದಿರೆ, ಸಾಮಾನ್ಯದ ಸಿರಿತವರೆ’ ಆಗಿರುವ ಗೃಹತಪಸ್ವಿನಿಯನ್ನು ಪ್ರಾರ್ಥಿಸುತ್ತಾರೆ. ಸಂಸ್ಕೃತಿಯನ್ನು ರಕ್ಷಿಸಿ ಪೋಷಿಸುತ್ತಿರುವ ಮನೆಮನೆಯ ತಪಸ್ವಿನಿಗೂ ರಾಜಕೀಯ ಜ್ವರ ತಗುಲಿದರೆ ಅದಕ್ಕೆ ದುರ್ಗತಿಯೊದಗುತ್ತ ದೆಂಬುದೇ ಕವಿಯ ತೀರ್ಮಾನ.

ಕುವೆಂಪು ಅವರ ಸಾಮಾಜಿಕ ಪ್ರಜ್ಞೆಯೇ ಕನ್ನಡ ನಿಷ್ಠೆಯಾಗಿ ಪರಿಣಮಿಸಿದೆಯೆನ್ನುವುದನ್ನು ಮರೆಯುವಂತಿಲ್ಲ. ಆಂಗ್ಲಭಾಷೆ ಶಿಕ್ಷಣ ಮಾಧ್ಯಮವಾಗಿರುವುದರಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಹಿಂಸೆ, ಅದು ಆಡಳಿತ ಮಾಧ್ಯಮವೂ ಆಗಿರುವುದರಿಂದ ಶ್ರೀ ಸಾಮಾನ್ಯ ಎದುರಿಸಬೇಕಾಗಿರುವ ಶೋಷಣೆ ಕವಿ ಹೃದಯವನ್ನು ತಳಮಳಗೊಳಿಸಿದೆ. ವಿದೇಶೀಯ ಭಾಷೆಯ ಮಾಧ್ಯಮದಿಂದಾಗಿ ಪ್ರತಿನಿತ್ಯವೂ ಕೋಟಿ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಯೆಂದು ಅವರು ಅಂದಾಜು ಮಾಡಿದ್ದಾರೆ. ಭಾರಿ ಸಂಖ್ಯೆಯ ವಿದ್ಯಾರ್ಥಿಗಳ ಅನುತ್ತೀರ್ಣತೆ ಯಿಂದ ಹಣ ನಷ್ಟವಾಗುವುದಿರಲಿ ಬೌದ್ದಿಕ ಮತ್ತು ಮಾನಸಿಕ ಶಕ್ತಿ ಕುಸಿದು, ಅವರು ನಿರಾಶೆಗೆ ಬಲಿಯಾಗುತ್ತಾರೆ. ಈ ನಿರಾಶೆಯಿಂದಾಗಿ ಇಡೀ ಜೀವನವೇ ಹಾಳಾಗುವ ಸಂಭವವುಂಟು; ಈ ನಷ್ಟವನ್ನು ತುಂಬುವ ಬಗೆ ಹೇಗೆ? ಎಂದು ಕುವೆಂಪು ಪದವಿ ಸ್ವೀಕಾರ ಸಮಾರಂಭದ ಭಾಷಣವಾಗಲಿ, ಅರ್ಥಾತ್ ಯಾವ ವೇದಿಕೆಯ ಭಾಷಣವಾಗಲಿ, ಅವರು ಈ ವಿಷಯವನ್ನು ಮರೆಯುವುದಿಲ್ಲ. ಜತೆಗೆ ಆ ವಿಷಯವನ್ನು ಕುರಿತು ಹಲವು ಕವಿತೆಗಳನ್ನು ಸಹ ರಚಿಸಿದ್ದಾರೆ.

ಪಾರು ಮಾಡೆಮ್ಮನೀ ಇಂಗ್ಲೀಷಿನಿಂದ,
ಪೂತನಿಯ ಅಸುವೀಂಟಿ ಕೊಂದ ಗೋವಿಂದ[13] ಎಂದು ಗೋವಿಂದನನ್ನವರು ಪ್ರಾರ್ಥಿಸುತ್ತಾರೆ.
ಇಂಗ್ಲಿಷಿನ ಜಿಲೊಟಿನ್ನಿನಡಿ ನಿಮ್ಮ ಕೊರಳೊಡ್ಡಿ
ವರುಷ ವರುಷವು ಕೋಟಿ ಕೊಲೆಯಪ್ಪಿರೇಕೆ[14] ಎಂದು ಮಕ್ಕಳಿಗೆ ಎಚ್ಚರಿಕೆ ನೀಡುತ್ತಾರೆ.

ಮಾನವಕೋಟಿ, ಅದರಲ್ಲಿಯೂ ಶ್ರೀ ಸಾಮಾನ್ಯ ಎದುರಿಸಬೇಕಾದ ಪ್ರಮುಖ ಸಮಸ್ಯೆಗಳು ಕುವೆಂಪು ಸಾಹಿತ್ಯಕ್ಕೆ ವಸ್ತುವಾಗಿವೆ ಮಾತ್ರವಲ್ಲ, ಅಲ್ಲೆಲ್ಲ ಅವರ ಸಾಮಾಜಿಕ ಪ್ರಜ್ಞೆ  ಸಾಂದ್ರವಾಗಿ ಹರಡಿಕೊಂಡಿದೆ. ‘ಮೊದಲನೆ ದೇವರು ಈ ಹಣ್ಮುದುಕಿ’, ‘ದೇವರು ಸೆರೆಯಾಳ್’, ‘ಹೊಸಬಾಳಿನ ಗೀತೆ’, ‘ಯಾವಕಾಲದ ಶಾಸ್ತ್ರವೇನು ಹೇಳಿದರೇನು?’ ‘ಮೌಢ್ಯ ಮೇಧ’, ‘ಅಷ್ಟಗ್ರಹ’, ‘ಬ್ರಾಹ್ಮನಾಯಿ-ಶೂದ್ರಕೋಳಿ’, ‘ಗೊಲ್ಲನ ಬಿನ್ನಹ’, ‘ಸುಗ್ಗಿ ಹಾಡು’, ‘ಬಾಲ ವಿಧವೆ’, – ಇವೇ ಮೊದಲಾದ ಹಲವಾರು ಕವಿತೆಗಳಲ್ಲಿ ಕುವೆಂಪು ಅವರು ಕವಿ ಸಹಜ ರೀತಿಯಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ನೂತನ ಸಾಮಾಜಿಕ ಮೌಲ್ಯಗಳ ಪ್ರತಿಷ್ಠಾಪನೆಯಲ್ಲಿ ಯಶಸ್ವಿಯಾಗಿದ್ದಾರೆ. ಕಿಟ್ಟಯ್ಯ, ಕರಿ ಸಿದ್ಧ, ನಾಗಿಯರು ಶ್ರೀ ಸಾಮಾನ್ಯರ ಪ್ರತಿನಿಧಿಗಳಾಗಿ, ರಾಜಮಹಾರಾಜರಿಗೆ ಕಡಿಮೆಯಲ್ಲ ಎನ್ನುವಂತೆ ಚಿತ್ರಿತರಾಗಿದ್ದಾರೆ. ಗ್ರಾಮ ಕಲ್ಯಾಣವೇ ರಾಷ್ಟ್ರ ಕಲ್ಯಾಣವೆಂದು ಗಾಂಧೀಜಿ ತಿಳಿದಿದ್ದರು. ಅಂತೆಯೇ ಶ್ರೀಸಾಮಾನ್ಯನ, ದೀನ ದಲಿತರ ಅಭ್ಯುದಯವೇ ಸಮಷ್ಟಿಯ, ಅರ್ಥಾತ್ ಸಮಾಜದ ಅಭ್ಯುದಯವೆಂಬುದು ಕುವೆಂಪು ಅವರ ನಂಬಿಕೆ. ಈ ನಂಬಿಕೆಯೇ ಅವರ ಸಾಮಾಜಿಕ ಪ್ರಜ್ಞೆಗೆ ಮೂಲಾಧಾರ.

ಈ ತೆರನ ಪ್ರಾಮಾಣಿಕ ಶ್ರದ್ಧೆಯ ಅಭಿವ್ಯಕ್ತಿಯನ್ನು ಅವರ ನಾಟಕಗಳಲ್ಲಿ ಬರುವ ಅನೇಕ ಪಾತ್ರಗಳಲ್ಲಿ ಕಾಣಬಹುದು. ಬೆರಳ್‌ಗೆ ಕೊರಳ್ ನಾಟಕದ ದ್ರೋಣ-ಏಕಲವ್ಯರ ಸಂಬಂಧದಲ್ಲಿ, ಶ್ಮಶಾನ ಕುರುಕ್ಷೇತ್ರದಲ್ಲಿಯ ಕೃಷ್ಣನ ಕೊನೆಯ ಮಾತುಗಳಲ್ಲಿ, ರಕ್ತಾಕ್ಷಿ ನಾಟಕದ ಕೆಂಚಣ್ಣ, ತಿಮ್ಮ ಜಟ್ಟಿ, ರೈತ, ಸನ್ಯಾಸಿಯರ ಸಂಭಾಷಣೆಗಳಲ್ಲಿ ಸಹ ಆ ಶ್ರದ್ಧೆ ಎದ್ದು ಕಾಣುತ್ತದೆ.

ಕುವೆಂಪು ಅವರ ಸಾಮಾಜಿಕ ಪ್ರಜ್ಞೆ ಅತ್ಯಂತ ಸಾಂದ್ರವಾಗಿ ಅಭಿವ್ಯಕ್ತಗೊಂಡಿರುವ ಕೃತಿಗಳೆಂದರೆ ಅವರ ಎಡು ಮಹಾಕಾದಂಬರಿಗಳು. ಕಾದಂಬರಿಕಾರರ ಪ್ರಕಾರ ಕಾನೂರು ಹೆಗ್ಗಡಿತಿಯಲ್ಲಿ ಚಿತ್ರಿತವಾಗಿರುವುದು ಮಲೆನಾಡಿನ ಬಾಳಿನ ಕಡಲಿನಲ್ಲಿ ಒಂದು ಹನಿಯಾದರೂ, ಅದೊಂದು ಮಲೆನಾಡಿನ ಮಹಾಭಾರತವೆಂದು ವಿಮರ್ಶಕರು ಒಪ್ಪಿಕೊಂಡಿ ದ್ದಾರೆ. ಅಂತೆಯೇ ‘ಮಲೆಗಳಲ್ಲಿ ಮದುಮಗಳು’ ಸಹ ಮಲೆನಾಡಿನ ಬೃಹದ್ಭಾರತವಾಗಿದೆ. ಇವೆರಡೂ ಪ್ರಾದೇಶಿಕ ಮಹಾಕಾದಂಬರಿಗಳೆಂದು ಹೆಸರು ಪಡೆದಿದ್ದರೂ ಅಲ್ಲಿ ಮೈಗೊಂಡಿ ರುವ ಮಾನವ ಸಹಜವಾದ ಆಸೆ ಆಕಾಂಕ್ಷೆಗಳು, ಆಚಾರ ವಿಚಾರಗಳು, ವ್ಯಾಪಾರ ವ್ಯವಹಾರ ಗಳು, ನಂಬಿಕೆ ನಡತೆಗಳು, ಕಟ್ಟುನಿಟ್ಟುಗಳು, ಧ್ಯೇಯ ಸಾಹಸಗಳು, ದೋಷ ದೌರ್ಬಲ್ಯಗಳು ಜಗತ್ತಿನ ಯಾವ ಪ್ರದೇಶದಲ್ಲಾದರೂ ಕಾಣಬಹುದಾದಂಥವೆ ಆಗಿವೆ. ಹಲಕೆಲವು ವಿವರಗಳಲ್ಲಿ ವ್ಯತ್ಯಾಸವಿರಬಹುದಾದರೂ ಜಗಜ್ಜೀವನದ ಪ್ರತಿಬಿಂಬವನ್ನಲ್ಲಿ ದರ್ಶಿಸಬಹುದಾಗಿದೆ. ಆ ಎರಡು ಕಾದಂಬರಿಗಳನ್ನು ಒಟ್ಟಾಗಿ ನೋಡುವಾಗ ಅವುಗಳಲ್ಲಿ ಕಂಡುಬರುವ ಜೀವನ ವೈವಿಧ್ಯ ಸೃಷ್ಟಿಕರ್ತನನ್ನು ಸಹ ಬೆರಗುಗೊಳಿಸುವಂತಹುದಾಗಿದೆ. ಕಾನೂರು ಚಂದ್ರಯ್ಯಗೌಡರ ಪರಿವಾರ, ಕೆಳಕಾನೂರ ಅಣ್ಣಯ್ಯಗೌಡರ, ಮುತ್ತಳ್ಳಿ ಶಾಮಯ್ಯಗೌಡರ, ಸೀತೆಮನೆ ಸಿಂಗಪ್ಪಗೌಡರ ಮತ್ತು ನೆಲ್ಲುಹಳ್ಳಿಯ ಪೆದ್ದೇಗೌಡರ ಸಂಸಾರಗಳು, ಸಿಂಭಾವಿಯ ಭರಮೈ ಹೆಗ್ಗಡೆ, ಹಳೆಮನೆ ಸುಬ್ಬಣ್ಣಹೆಗ್ಡೆ, ಹೂವಳ್ಳಿ ವೆಂಕಟಣ್ಣ ನಾಯಕ, ಕೋಣೂರು ರಂಗಪ್ಪಗೌಡ, ಬೆಟ್ಟಳ್ಳಿ ಕಲ್ಲಯ್ಯಗೌಡ – ಇವರ ಕುಟುಂಬಗಳು, ಮೇಗರವಳ್ಳಿಯ ಕಣ್ಣಾಪಂಡಿತ ಕಾವೇರಿ ಕರ್ವಿೂನು ಸಾಬಿ ಪುಡಿ ಸಾಬಿಯರು, ತೀರ್ಥಹಳ್ಳಿಯ ಜೀವರತ್ನಯ್ಯ, ಬಾವಿ ಕೊಪ್ಪದ ನಾಗಣ್ಣ ನಾಗಕ್ಕ ನಾಗತ್ತೆಯರು, ಲಕ್ಕುಂದದ ಸೇಸನಾಯ್ಕ ತಿಮ್ಮ ನಾಯ್ಕರು, ನಾಯಿಗುತ್ತಿ ಮರಾಟಿಮಂಜ ಚೀಂಕ್ರ ಪಿಜಣ ಐತ ದೊಡ್ಡಬೀರ ಸೇಸಿ ಇತ್ಯಾದಿ ಇತ್ಯಾದಿಯರನ್ನೊಳಗೊಂಡ ಒಂದು ಲೋಕವೇ ಈ ಕಾದಂಬರಿಗಳಲ್ಲಿ ಸೃಷ್ಟಿಗೊಂಡಿದೆ. ಈ ಮಾನವ ಲೋಕದ ಜತೆಗೆ ಲಚ್ಚ, ನಂದಿ, ಟೈಗರ್, ಬಲೀಂದ್ರ, ಹುಲಿಯ ಮುಂತಾದು ವನ್ನೊಳಗೊಂಡ ಪ್ರಾಣಿಲೋಕಕ್ಕೂ ಅಲ್ಲಿ ಆಶ್ರಯವುಂಟು. ಸಂಸಾರದ ಸರಸ ವಿರಸಗಳು, ನೋವು ನಲಿವುಗಳು, ಕಾಮ ಪ್ರೇಮಗಳು, ಅರೆ ಕೊರೆಗಳು, ರೀತಿ ರಿವಾಜುಗಳು, ಆ ಜೀವನದಲ್ಲಿ ಕಾಣುವ ಬೇಟೆ ಶಿಕಾರಿಗಳು, ದೆಯ್ಯದ್ಯಾವರುಗಳು, ಅಹಾರ ಪಾನೀಯಗಳು, ಆ ಸಮಾಜದಲ್ಲಿ ತೋರುವ ಅನ್ಯೋನ್ಯ ಸಂಬಂಧಗಳು, ವಿಲಾಸ ವಿಕಾರಗಳು, ಪ್ರಕೃತಿ ಮಾನವರ ಒಡನಾಟಗಳು, ಪರಸ್ಪರಾಕರ್ಷಣೆ ಸಂಘರ್ಷಗಳು ವಿರೋಧ ವೈಪರೀತ್ಯಗಳು, ವ್ಯಕ್ತಿ ವ್ಯಕ್ತಿಗಳಲ್ಲಿ ಹಸಿಹಸಿಯಾಗಿ ಮೈದೋರುವ ಚಾಳಿಚರ್ಯೆಗಳು ಚಟತಟವಟಗಳು ಕೋಪತಾಪಗಳು ಒಲವು ನಿಲವುಗಳ ಕ್ರಿಯೆ ಪ್ರತಿಕ್ರಿಯೆಗಳು ರಂಗುರಾಡಿಗಳು ಆಶೆನಿರಾಶೆಗಳು ಸೋಲುಗೆಲವುಗಳು ಅಹಂಭಾವ ದೈನ್ಯಗಳು ರಕ್ತಿ ವಿರಕ್ತಿಗಳು, ಇಂತೆಯೇ ಹಲವಾರು ಅರ್ಥಾನರ್ಥಗಳು ಸಂಗತಿ ವಿಸಂಗತಿಗಳು ಭಾವಭಾವನೆಗಳು ಅನುಭವಾಶಯಗಳು ಪ್ರತಿಭಾವಂತ ವಿಮರ್ಶಕರನ್ನು ಸಹ ಬೆರಗುಗೊಳಿಸುವಂತಿದ್ದು ಕುವೆಂಪು ಅವರ ಅನುಪಮವಾದ ಸಾಮಾಜಿಕ ಪ್ರಜ್ಞೆಗೆ ಜ್ವಲಂತ ನಿದರ್ಶನಗಳಾಗಿವೆ.

ಕುವೆಂಪು ಅವರ ವಿರಾಟ್ ಪ್ರತಿಭೆಯ ವಿಶ್ವರೂಪ ದರ್ಶನಕ್ಕೆ ಆದರ್ಶದಂತಿರುವ ಶ್ರೀ ರಾಮಾಯಣದರ್ಶನಂ ದಾರ್ಶನಿಕ ಮಹಾಕಾವ್ಯದಲ್ಲಿಯೂ ಸಹ ಸಾಮಾಜಿಕ ಪ್ರಜ್ಞೆಯ ಹೊಳಹುಗಳನ್ನು ದೂರ ದೂರಕ್ಕಾದರೂ ಗಮನಿಸಬಹುದು. ಸಾಕೇತ ನಗರಿಯೆಂದರೆ ದಶರಥವಶಿಷ್ಠ ಸುಮಂತ್ರರ ಸೌಧಗಳಷ್ಟೆ ಅಲ್ಲ; ಗುರುಸಚಿವ ಸೇನಾನಿವಾದಿ ವಾಗ್ಮಿಗಳ ಮನೆಗಳಷ್ಟೇ ಅಲ್ಲ; ಅಲ್ಲಿ ಕೃಷೀವಲರ ಗುಡಿಸಿಲುಗಳೂ ಇವೆಯೆಂಬುದನ್ನು ಕವಿ ಮರೆಯುವುದಿಲ್ಲ. ವನವಾಸೋದ್ಯುಕ್ತನಾಗಿ ಅಯೋಧ್ಯೆಯ ಬೀದಿಯಲ್ಲಿ ಸೀತಾಲಕ್ಷ್ಮಣ ಸಮೇತನಾಗಿ ಹೋಗುತ್ತಿದ್ದ ಶ್ರೀ ರಾಮನನ್ನೂ ಅವನನ್ನು ಹಿಂಬಾಲಿಸುತ್ತಿದ್ದ ಮೆರವಣಿಗೆ ಯನ್ನೂ ಬೇಸಾಯದಾಯಾಸದಿಂದ ಎತ್ತುಗಳೊಡನೆ ಗೋಧೂಳಿ ಸಮಯದಲ್ಲಿ ಗುಡಿಸಿಲಿಗೆ ಹಿಂದಿರುಗುತ್ತಿದ್ದ ರೈತ ಹೊತ್ತಿದ್ದ ಹುಲ್ಲಿನ ಹೊರೆಯನ್ನಿಳುಹಿ, ಸೋಜಿಗವಟ್ಟು ನೋಡುತ್ತಾನೆ. ವನವಾಸ ಸಮಯದಲ್ಲಿ ಒಂದು ದಿನ ಹಸಿಯ ಸೌದೆಯಿಂದಾಗಿ ಪರ್ಣಕುಟಿಯೆಲ್ಲ ಹೊಗೆಯಾಗಿ, ಕಣ್ ಮೂಗುಗಳಲ್ಲಿ ನೀರೂರಿ, ಮೈ ಮೋರೆಯೆಲ್ಲ ಮಸಿಯಾಗಿ ಸಿಡುಕುತ್ತಿದ್ದ ಸೀತೆಯ ದೃಶ್ಯವನ್ನು ಕಣ್ಣಲ್ಲಿರಿಸಿಕೊಂಡಾಗ ಗ್ರಾಮೀಣ ಗೃಹಿಣಿ ತಪಸ್ವಿನಿಯ ನೆನಪಾಗುತ್ತದೆ. ಪ್ರಾಣೋತ್ಕ್ರಮಣ ಸಮಯದಲ್ಲಿಯೂ ವಾಲಿ ತನ್ನ ತಮ್ಮನನ್ನು ಬೆನ್ನ ಮೇಲೆ ಹೊತ್ತುಕೊಂಡು ಉಪ್ಪಾಟವಾಡಿದ್ದನ್ನು ನೆನೆದುಕೊಳ್ಳುವ, ಕುಂಭಕರ್ಣ ಪುಟ್ಟ ಅನಲೆಯನ್ನು ಆಗಸಕ್ಕೆತ್ತಿ ಎಸೆದು ಹಿಡಿದುಕೊಂಡು ‘ನೀನೊಂದು ಪೂವಿನ ಚೆಂಡು’ ಎಂದು ಮುದ್ದಾಡುತ್ತಿದ್ದ ದೃಶ್ಯ ಗಳನ್ನು ಕದನದ ಮಧ್ಯದಲ್ಲಿಯೂ ಹಿಮ್ಮಿಂಚಿನಂತೆ ತೋರಿಸುವ ಕವಿಯ ಸಾಮಾನ್ಯತಾ ಪ್ರಜ್ಞೆ ಅಸಾಮಾನ್ಯವಾದುದು.

ಕುವೆಂಪು ಅವರ ಪ್ರತಿಭಾ ಸಂಸ್ಪರ್ಶದಿಂದ ಸಾಮಾಜಿಕ ಪ್ರಜ್ಞೆಯೂ ದಾರ್ಶನಿಕ ಪ್ರಜ್ಞೆಯಾಗಿ ಪರಿವರ್ತನೆಗೊಳ್ಳುತ್ತದೆ. ಅವರು ಅಂತರ್ಮುಖಿಯಾಗಿರುವಾಗಲೂ ಆ ಪ್ರಜ್ಞೆ ಸದಾ ಜಾಗ್ರತವಾಗಿರುತ್ತದೆ. ಅವರ ಸಾಹಿತ್ಯದ ಯಶಸ್ಸಿಗೆ ಆ ಪ್ರಜ್ಞಾ ವಿಶೇಷವೂ ಒಂದು ಕಾರಣವೆನ್ನಬೇಕು.

 

 


[1]    ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ, ಪು. ೧.

[2]    ಧನ್ವಂತರಿಯ ಚಿಕಿತ್ಸೆ : ನನ್ನ ದೇವರು ಮತ್ತು ಇತರ ಕಥೆಗಳು, ಪು. ೯೪.

[3]    ರೈತನ ದೃಷ್ಟಿ, ಕೋಗಿಲೆ ಮತ್ತು ಸೋವಿಯಟ್ ರಷ್ಯಾ, ಪು. ೧೩.

[4]    ವಿಚಾರ ಕ್ರಾಂತಿಗೆ ಆಹ್ವಾನ, ಪು. ೩-೪.

[5]    ಹಾಳೂರು, ಪು. ೨೩.

[6]    ಜನತಾ ಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ, ಪು. ೧೩-೧೫.

[7]    ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ಪು. ೮-೯.

[8]    ಪ್ರೇತ-ಕ್ಯೂ, ಪು. ೭೪.

[9]    ಅದೇ., ಪು. ೪೬.

[10]   ಪ್ರೇತ-ಕ್ಯೂ, ಅಲ್ಲಿ-ಇಲ್ಲಿ, ಪು. ೩೯-೪೦.

[11]   ‘ಶ್ರೀ ಸಾಮಾನ್ಯ’ರ ದೀಕ್ಷಾಗೀತೆ, ಇಕ್ಷುಗಂಗೋತ್ರಿ, ಪು. ೨.

[12]   ಮನೆ ಮನೆಯ ತಪಸ್ವಿನಿಗೆ, ಇಕ್ಷುಗಂಗೋತ್ರಿ, ಪು. ೭.

[13]   ಪ್ರಾರ್ಥಿಸಿ, ಓ ಮಕ್ಕಳಿರಾ!, ಪ್ರೇತ-ಕ್ಯೂ, ಪು. ೪೮.

[14]   ಸಾಕು ಈ ಬಲಾತ್ಕಾರ, ಪ್ರೇತ-ಕ್ಯೂ, ಪು. ೬೨.