ಮುಂದೆ ಕೈಹಿಡಿದು ಸಹಧರ್ಮಿಣಿಯಾಗಲಿರುವ ಮಗುವಿನ ನಾಮಕರಣ ಮಾಡುವ ಸುಯೋಗ ಜಗತ್ತಿನಲ್ಲಿ ಯಾವ ಪತಿಗೂ ದೊರಕುವುದು ಅಸಂಭವ. ಶ್ರೀ ಕುವೆಂಪು ಅವರು ಅಂಥ ಸುಯೋಗಕ್ಕೆ ಭಾಜನರಾದ ವಿಶಿಷ್ಟ ವ್ಯಕ್ತಿ. ಅವರ ಸಾಹಿತ್ಯದಲ್ಲೆಂತೋ ಅಂತೆಯೇ ಅವರ ಜೀವನದಲ್ಲಿಯೂ ವೈಶಿಷ್ಟ್ಯಗಳ ಸರಮಾಲೆ ಗೋಚರಿಸುತ್ತದೆಂಬುದಕ್ಕೆ ಅವರು ತಮ್ಮ ಭಾವೀಸತಿಗೆ ಹೆಸರು ಕೊಟ್ಟ ಪ್ರಸಂಗ ಸಾಕ್ಷಿಯಾಗಿದೆ. ೧೯೨೧ನೆಯ ಇಸವಿ ಸೆಪ್ಟೆಂಬರ್ ೨೭ ರಂದು ದೇವಂಗಿಯ ಶ್ರೀ ರಾಮಣ್ಣಗೌಡರ ಹೊಸ ಸಂಬಂಧದಲ್ಲಿ ಮೊದಲನೆಯ ಮಗು ಹುಟ್ಟುತ್ತದೆ, ತವರು ಮನೆ ನಂಬಳದಲ್ಲಿ. ಹದಿನೇಳು ವರ್ಷ ತುಂಬುವುದರಲ್ಲಿದ್ದ ಕುವೆಂಪು ಅವರ ಬಾಳಿಗೆ ಆಗತಾನೆ ಹುಟ್ಟಿದ ಆ ಶಿಶು ಪ್ರವೇಶಿಸುತ್ತದೆ ಎಂದು ಯಾರು ತಾನೆ ಊಹಿಸಲು ಸಾಧ್ಯವಾಗಿತ್ತು?

ಅದೊಂದು ಸಂಜೆ ಐದು ಗಂಟೆಯ ಹೊತ್ತಿನಲ್ಲಿ ಇತರ ಮಕ್ಕಳೊಂದಿಗೆ ಆಟ ವಾಡುತ್ತಿದ್ದಾಗ ರಾಮಣ್ಣಗೌಡರು ಅವರ ಬಳಿ ಬಂದು ‘ಬರ‌್ತೀಯೇನೋ ನಂಬಳಕ್ಕೆ ಹೋಗಿ ಬರೋಣ’ ಎಂದು ಅವರೊಬ್ಬರನ್ನೇ ಕರೆಯಬೇಕೆ? ಬಾಲೆಯನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರಕ್ಕಾಗಿ ಗೌಡರು ನಂಬಳಕ್ಕೆ ಹೋಗುತ್ತಿದ್ದುದಾಗಿ ಪಕ್ಕದ ಗೆಳೆಯರಿಂದ ಕುವೆಂಪು ಅವರಿಗೆ ತಿಳಿಯುತ್ತದೆ. ಇತರ ಮಕ್ಕಳನ್ನುಳಿದು ತಮ್ಮೊಬ್ಬರನ್ನೇ ಗೌಡರು ಜತೆಗೆ ಕರೆದದ್ದಕ್ಕೆ ಅವರು ಸೋಜಿಗಗೊಳ್ಳುತ್ತಾರೆ. ದಟ್ಟವಾದ ಕಾಡಿನ ಒಳದಾರಿಯಲ್ಲಿ ಹಾಯ್ದು ಹೋಗುತ್ತಿದ್ದಾಗ ಗೌಡರು ಮಾತು ಮಾತಿನ ನಡುವೆ ಹೆಣ್ಣು ಮಗುವಿಗೊಂದು ಹೆಸರು ಸೂಚಿಸುವಂತೆ ಅವರನ್ನು ಕೇಳಿಕೊಳ್ಳುತ್ತಾರೆ. ಗೌಡರು ಅವರನ್ನು ಹಾಗೆ ಕೇಳಿದ್ದಕ್ಕೆ ಕಾರಣ ಅವರ ಸಾಹಿತ್ಯಿಕ ಕೀರ್ತಿಯೆಂಬುದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿಲ್ಲ.

‘ಆದರೆ ಲೀಲಾಮೂ ಜಗದಂಬೆ ಮುಂದೆ, ಹದಿನಾರು ವರ್ಷಗಳ ಅನಂತರ ೧೯೩೭ರಲ್ಲಿ, ನನಗೆ ಸಹಧರ್ಮಿಣಿಯಾಗಿ ನನ್ನ ಜೀವನವನ್ನು ಪಾವನಗೊಳಿಸಿ ಮಧುಮಯ ವನ್ನಾಗಿ ಮಾಡಲಿದ್ದ ಆ ತೊಟ್ಟಿಲ ಕೂಸಿಗೆ ನಾನೆ ಹೆಸರಿಡುವಂತೆ ವ್ಯೆಹ ಯೋಜನೆ ವಿಧಿಸಿದ್ದಳು. ಅದೇನಾದರೂ ಅಂದು ಹೊಳೆದಿದ್ದರೆ! ಬೇಸರವಾಗುತ್ತಿತ್ತೆ?’

[1] ಎಂದು ಪ್ರಶ್ನಿಸಿಕೊಂಡ ಕುವೆಂಪು ‘ಬಾಲೆ ತೊಟ್ಟಿಲಿಗೆ ಹಾಕುವ ಶಾಸ್ತ್ರ ಪೂರೈಸಿ’, ನಮಗೆಲ್ಲ ಔತಣದೂಟವಾಯಿತು : ಲೋಕಕ್ಕೆ ಅವತರಿಸಿದ್ದಳು, ಹೆಸರಾಂತು : ‘ಹೇಮಾವತಿ!’ ಎಂದು ವಿಸ್ಮಯ ವ್ಯಕ್ತಪಡಿಸುತ್ತಾರೆ.

ಕುವೆಂಪು ಅವರು ಶ್ರೀ ರಾಮಕೃಷ್ಣಾಶ್ರಮವಾಸಿಯಾಗಿ, ಕಾವ್ಯ ಕೃಷಿ ಮತ್ತು ಅಧ್ಯಾತ್ಮ ಸಾಧನೆಯಲ್ಲಿ ತೊಡಗಿರುತ್ತ, ಜೀವಾನಂದ, ಬ್ರಹ್ಮಾನಂದ ಮತ್ತು ಕಾವ್ಯಾನಂದಗಳನ್ನು ತುಂಬಿಕೊಳ್ಳುತ್ತ, ಬಹುದಿನಗಳವರೆಗೆ ಮದುವೆಯ ಕಡೆಗೆ ಗಮನಹರಿಸಲಿಲ್ಲವಾಗಿ, ಅವರು ಸನ್ಯಾಸಿಯಾಗಿಯೇ ಉಳಿದುಬಿಡುತ್ತಾರೆಂದು ಹಲವು ಜನ ಊಹಿಸಿಕೊಂಡಿದ್ದು ಸಹಜವೇ. ೧೯೨೯ನೆಯ ಅಕ್ಟೋಬರ್ ತಿಂಗಳಲ್ಲಿ ಅವರು ಸ್ವಾಮಿಸಿದ್ದೇಶ್ವರಾನಂದರೊಡನೆ ಬೇಲೂರು ಮಠಕ್ಕೆ ಹೋಗಿ, ಶ್ರೀರಾಮಕೃಷ್ಣ ಪರಮಹಂಸರ ಅಂತರಂಗ ಶಿಷ್ಯರಲ್ಲೊಬ್ಬರೂ, ಶ್ರೀರಾಮಕೃಷ್ಣ ಮಿಷನ್ನಿನ ಅಧ್ಯಕ್ಷರೂ ಆಗಿದ್ದ ಮಹಾಪುರುಷ ಸ್ವಾಮಿ ಶಿವಾನಂದರಿಂದ ದೀಕ್ಷೆ ಪಡೆದು ಬಂದನಂತರ ಹಲವರ ಊಹೆ ದೃಢವಾಯಿತೆಂದೇ ಹೇಳಬೇಕು. ಆದರೂ ದೀಕ್ಷಾಯಾತ್ರೆಯ ನಂತರ ರಚಿಸಿದ ಅನೇಕ ಪ್ರೇಮ ಕವನಗಳಲ್ಲಿ ಅವರ ಪ್ರಣಯ ಪ್ರವೃತ್ತಿ ಜಾಗರೂಕವಾಗಿರುವುದು ಸ್ಪಷ್ಟವಾಗಿದೆ. ‘ಎನ್ನಿನಿಯಳು’, ‘ಸಾಧನೆ’, ‘ರಸಿಕರ್ಷಿ’ ಮುಂತಾದ ಹಲವು ಕವಿತೆಗಳು ಈ ಮಾತಿಗೆ ಸಾಕ್ಷಿಯಾಗಿವೆ. ತಾವೆಂದೂ ಮದುವೆಯಾಗುವುದಿಲ್ಲವೆಂದು ಅವರೆಲ್ಲಿಯೂ ಹೇಳಿಕೊಂಡಿಲ್ಲ. ಅಷ್ಟೇ ಅಲ್ಲ, ೧೯೩೨ನೆಯ ಇಸವಿ ಅಕ್ಟೋಬರ್ ತಿಂಗಳಲ್ಲಿ ಶ್ರೀ ಮಂಜಪ್ಪಗೌಡರಿಗೆ ಬರೆದ ಪತ್ರವೊಂದರಲ್ಲಿ ‘ನಿಮ್ಮೊಡನೆ ಸತ್ಯವಾಗಿ ಹೇಳುವುದಾದರೆ, ನನಗೆ ಮದುವೆಯಲ್ಲಾಗಲಿ ಸಂಸಾರದಲ್ಲಾಗಲಿ ಜಿಗುಪ್ಸೆಯೂ ಇಲ್ಲ; ಅದು ಪಾಪವೆಂದೂ ತಿಳಿದಿಲ್ಲ. ಆದರೆ ವಿವಾಹವೂ ಅದರ ತರುವಾಯ ಬರುವ ಬಂಧನಗಳೂ ನನ್ನ ಧ್ಯೇಯ ಸಾಧನೆಗೆ ಅಡಚಣೆಗಳೆಂದು ತ್ಯಾಗ ಮಾಡಿರುತ್ತೇನೆ’[2] ಎಂದು ತಮ್ಮ ಮನೋಧರ್ಮವನ್ನು ವಿಶದಪೃಡಿಸಿದ್ದಾರೆ.

ಮತ್ತೆ ಕುವೆಂಪು ಅವರ ಮದುವೆಯ ಪ್ರಸ್ತಾಪವೆತ್ತಿದವರು ವಿಶ್ವ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ತಿರುಮಲೆ ತಾತಾಚಾರ್ಯ ಶರ್ಮ ಅವರು. ೧೧.೧.೧೯೩೪ರಂದು ಕವಿಗಳಿ ಗೊಂದು ಪತ್ರ ಬರೆದು, ‘ಕೆಲವು ಕಾಲದ ಹಿಂದೆ ಹಲವರು ನಮ್ಮಿಬ್ಬರ ಬಾಂಧವ್ಯ ಕಂಡು ನಾನು ನಿಮ್ಮ ಅಂತರಂಗಕ್ಕೆ ಸೇರಿದವನೆಂದು ತಿಳಿದು ವಿವಾಹದ ಮಾತನ್ನೆತ್ತಿದರು….. ನನ್ನ ಕಿವಿಗೆ ಬಿದ್ದಿರುವ ಸುದ್ದಿಗಳಿಂದ ನೀವು ಗೃಹಸ್ಥಾಶ್ರಮ ವಿರೋಧಿಗಳಲ್ಲವೆಂದು ತಿಳಿದು ಬಂತು. ಗಾರ್ಹಸ್ಥ್ಯವೇ ಪೂರ್ಣತೆಯ ಸಂಕೇತ’[3] ಎಂದು ಮುಂತಾಗಿ ವಿವರಿಸಿ, ಮದುವೆಯಾಗುವಂತೆ ಅವರನ್ನು ಪ್ರೇರಿಸಲು ಪ್ರಯತ್ನಿಸುತ್ತಾರೆ. ೧೫.೧.೧೯೩೬ ರಂದು ಆ ಪತ್ರಕ್ಕೆ ಉತ್ತರ ಬರೆಯುತ್ತ, ‘ಸಂಸಾರ ಸಂನ್ಯಾಸಗಳೆರಡನ್ನೂ ಪ್ರಶಂಸಿಸುತ್ತಿದ್ದೇನೆಂದು ನಗಬೇಡಿ. ನನ್ನ ದರ್ಶನಕ್ಕೆ ಅವೆರಡು ಪಥಗಳಲ್ಲಿಯೂ ಸರಿಯಾಗಿ ನಡೆದವರು ಜೀವಿತಾ ದರ್ಶವನ್ನು ಸೇರಿಯೇ ಸೇರುತ್ತಾರೆ ಎಂದು ವೇದ್ಯವಾಗಿದೆ. ನನ್ನದು ಕವಿಯ ಮಾರ್ಗ. ಏನೆನ್ನುತ್ತೀರೋ? ನಾನು ಕಾವಿಯುಟ್ಟು ಸಂನ್ಯಾಸಿಯಾಗುವುದಿಲ್ಲ. ಏಕೆಂದರೆ ನಾನು ಪ್ರಕೃತಿ ಸೌಂದರ್ಯ ಉಪಾಸಕನು. ಸಂನ್ಯಾಸಿಯು ಮಾಯಾಪ್ರಪಂಚದಿಂದ ವಿಮುಖನಾಗಿ ವೈರಾಗಿ ಯಾಗಿರಬೇಕು. ಹಾಗೆಯೆ ನನಗೆ ವಿವಾಹ ಮಾಡಿಕೊಳ್ಳುವುದೂ ಭಯಂಕರವಾಗಿದೆ. ಪ್ರಪಂಚವು ನಾನು ಬಯಸುವ ಆದರ್ಶ ಜಗತ್ತಿನಂತೆ ಇದ್ದಿದ್ದರೆ ನಾನು ವಿವಾಹಿತ ನಾಗಿರುತ್ತಿದ್ದೇನೆಂದು ತೋರುತ್ತದೆ’ ಎಂದು[4] ತಮ್ಮ ಮನೋಗತವನ್ನು ಖಚಿತಪಡಿಸಿ ಕೊಳ್ಳುತ್ತಾರೆ.

ಸುಮಾರು ಎರಡು ವರ್ಷಗಳ ನಂತರ, ಅಂದರೆ ೧೩.೭.೧೯೩೬ರಂದು ಶ್ರೀ ಮಂಜಪ್ಪಗೌಡರಿಗೆ ಬರೆದ ಪತ್ರದಲ್ಲಿ ದೇಹದ ಸಂಗಾತಿ ಮಾತ್ರವಲ್ಲ, ಆತ್ಮದ ಸಂಗಾತಿ ಯಾಗಲಿರುವ ಕನ್ಯೆಯೊಂದು ತಮಗೆ ಬೇಕಾಗಿದೆಯೆಂದೂ, ವೈವಾಹಿಕ ಜೀವನದ ಕಡೆಗೆ ತಮ್ಮ ಮನಸ್ಸು ತುಯ್ಯುತ್ತಿದೆಯೆಂದೂ[5] ಕುವೆಂಪು ತಿಳಿಸುತ್ತಾರೆ. ತಮ್ಮ ಹೆಣ್ಣುಮಕ್ಕಳು ಮದುವೆಯಾಗುವ ಮುನ್ನ ಬೇರೆಯವರ ಮುಖಾಂತರ ದೇವಂಗಿ ರಾಮಣ್ಣಗೌಡರು ಕುವೆಂಪು ಅವರ ಮನಸ್ಸನ್ನು ಅರಿಯಲು ಪ್ರಯತ್ನಿಸಿದ್ದುಂಟು. ದೇವಂಗಿಗೂ ಕುಪ್ಪಳ್ಳಿಗೂ ಹಿಂದಿನಿಂದ ಕೊಟ್ಟು ತರುವ ಸಂಬಂಧ ಬೆಳೆದು ಬಂದಿತ್ತಷ್ಟೆ. ಆದ್ದರಿಂದಲೇ ಗೌಡರು ಕುವೆಂಪು ಅವರಿಗೆ ಹೇಳಿಕಳಿಸಿದ್ದು. ಆದರೆ ಆಗ ಕುವೆಂಪು ಅವರ ಮಾತಿಗೆ ಮನ್ನಣೆ ನೀಡುವುದಿಲ್ಲ. ಮತ್ತೊಮ್ಮೆ ‘ಶಿವಮೊಗ್ಗೆಯಲ್ಲಿ ಹೊಸ ಮನೆ ಮಂಜಪ್ಪಗೌಡರೊಡನೆ ಮಾನಪ್ಪನ ಜತೆಯಲ್ಲಿ ದೇವಂಗಿ ಅಡಕೆ ಮಂಡಿಯಲ್ಲಿ ಉಳಿದಿದ್ದಾಗ ಮಂಜಪ್ಪಗೌಡರು ನನ್ನ ವೈವಾಹಿಕ ಜೀವನದ ಮಾತನ್ನೆತ್ತಿ ರಾಮಣ್ಣ ಗೌಡರ ಮಗಳು ಹೇಮಾವತಿಯನ್ನೇಕೆ ಮದುವೆಯಾಗಬಾರದು ಎಂದೂ, ಆ ವಿಚಾರವಾಗಿ ನನ್ನೊಡನೆ ಪ್ರಸ್ತಾಪಿಸಲು ಶ್ರೀ ರಾಮಣ್ಣಗೌಡರೇ ಹೇಳಿದ್ದಾರೆಂದೂ ತಿಳಿಸಿದ್ದರು. ಆಗಲೂ ನಾನು ನಕ್ಕು, ಅದೆಂದಿಗೂ ಅಸಾಧ್ಯ ಎಂಬುದಾಗಿ ಹೇಳಿಬಿಟ್ಟಿದ್ದೆ’ ಎಂದು ಕುವೆಂಪು ತಮ್ಮ ಆತ್ಮಕಥೆಯಲ್ಲಿ[6] ಬರೆಯುತ್ತಾರೆ.

ರಾಮಣ್ಣಗೌಡರು ಬೆಂಗಳೂರಲ್ಲಿದ್ದಾಗ ಕುವೆಂಪು ಅವರಿಗೆ ಶ್ರೀರಕ್ಷೆಯಂತಿದ್ದ ಸ್ವಾಮಿ ಸಿದ್ಧೇಶ್ವರಾನಂದರೊಡನೆ, ಕುವೆಂಪು ಅವರ ಮನೆಯ ಸ್ಥಿತಿಗತಿಗಳನ್ನು ವಿವರಿಸಿ, ಅವರ ಮದುವೆಯ ಪ್ರಸ್ತಾಪವೆತ್ತುತ್ತಾರೆ. ಗುರುಮಹಾರಾಜರ ಶತಮಾನೋತ್ಸವವನ್ನು ವಿಜೃಂಭಣೆ ಯಿಂದ ಆಚರಿಸುವ ಸಲುವಾಗಿ ಮಲೆಮಾಡಿನ ಶಿಷ್ಯರು ಸ್ವಾಮೀಜಿಯವರನ್ನು ಆಹ್ವಾನಿ ಸುತ್ತಾರೆ. ತಮ್ಮ ಅಂತರಂಗದ ಶಿಷ್ಯನಿಗೆ ಹೆಣ್ಣು ಕೊಡಲು ಹವಣಿಸುತ್ತಿದ್ದ ಮನೆತನದ ಸಂಗಾತಿಗಳನ್ನು ಕಣ್ಣಾರೆ ನೋಡುವ ಮನಸ್ಸು ಸ್ವಾಮೀಜಿಯವರಿಗಿದ್ದಂತೆ ತೋರುತ್ತದೆ. ಅವರು ಕುಪ್ಪಳ್ಳಿಯಲ್ಲಿದ್ದಾಗ ‘ನೇರವಾಗಿ ಆ ಮಾತನ್ನೇನೂ ಎತ್ತದೆ, ನನ್ನ ಮತ್ತು ನನ್ನ ಭಾವೀ ಸಹಧರ್ಮಿಣಿಯ ವಿಚಾರವಾಗಿಯೂ ತಿಳಿಯಬಹುದಾದ ವಿವರಗಳನ್ನು ಸಂಗ್ರಹಿಸಿಕೊಂಡರು. ಆ ಸಂಬಂಧದಿಂದ ನನ್ನ ಲೌಕಿಕ ಮತ್ತು ಆಧ್ಯಾತ್ಮಿಕ ಶ್ರೇಯಸ್ಸಿಗೆ ಪ್ರತಿಕೂಲವಾಗುವುದಿಲ್ಲ ಎಂಬುದನ್ನೂ ಗ್ರಹಿಸಿದರೆಂದು ತೋರುತ್ತದೆ. ನನ್ನ ಸ್ವಭಾವ ಮತ್ತು ಸ್ವಧರ್ಮಗಳಿಗೆ ಸಂನ್ಯಾಸವು ಪರಧರ್ಮವಾಗಿ ಭಯಾವಹವಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಅರಿತಿದ್ದ ಅವರಿಗೆ ಮುಂದೆ ನನಗೆ ಆ ವಿಚಾರದಲ್ಲಿ ಏನು ಸಲಹೆ ಕೊಡಬೇಕು ಎಂಬುದನ್ನೂ ನಿಶ್ಚಯಿಸಿಕೊಂಡರೆಂದು ತೋರುತ್ತದೆ[7] ನಿಜಕ್ಕೂ ಸ್ವಾಮೀಜಿಯೆ ಗಂಡಿನ ತಂದೆಯಾಗಿ ತಾಯಿಯಾಗಿ ಮಗನಂತಿದ್ದ ಕವಿಗಳಿಗೆ ಕನ್ಯಾನ್ವೇಷಣೆ ನಡೆಸುತ್ತಾರೆ. ಕುವೆಂಪು ಅವರ ಪ್ರೇಮ ಕವನಗಳನ್ನೋದಿದ ಅವರ ಹಿತಚಿಂತಕರು ಮತ್ತು ಮಿತ್ರರು ಅವರೊಡನೆ ಮಾತ್ರವಲ್ಲ, ಸ್ವಾಮಿಜಿಯೊಡನೆಯೂ ಹೇಳುತ್ತಿದ್ದರು. ಕವಿ ಜೀವನ ಗೃಹಸ್ಥ ಧರ್ಮಕ್ಕೆ ಯೋಗ್ಯವಾದುದೇ ಹೊರತು ಸಂನ್ಯಾಸಕ್ಕೆ ಅರ್ಹವಾದುದಲ್ಲ ಎಂದು.

ಸಂನ್ಯಾಸ ಧರ್ಮ ತಮ್ಮದಲ್ಲವೆಂದು ಅವರು ಎಂದೋ ಅರಿತುಕೊಂಡದ್ದೂ, ದೇಹ ಧ್ಯೇಯಗಳ ನಡುವಣ ಹೋರಾಟ ಮನವರಿಕೆಯಾದದ್ದೂ ಅವರ ಅನೇಕ ಕವಿತೆಗಳಲ್ಲಿ ಅಭಿವ್ಯಕ್ತಗೊಂಡಿವೆ :

ಧ್ಯೇಯವೋ ಗಗನದಲಿ;
ದೇಹವೋ ಭೂಮಿಯಲಿ;
ಬಲವಿಲ್ಲ ಭಕ್ತಿಯಲಿ,
ಮನದ ಶಕ್ತಿಯಲಿ[8]

ಎಂಬ ಕವಿತೆಯಂತು ೧೯೩೦ರಲ್ಲಿಯೇ ಅಚ್ಚಾಯಿತೆಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು. ೧೯೩೪ರ ಪ್ರಾರಂಭದಲ್ಲಿ ರಚಿಸಿದ ‘ಮಾಯೆ-ಮುಕ್ತಿ’ ಎಂಬೊಂದು ಸಾನೆಟ್ಟಿನಲ್ಲಿ[9] ಸಂನ್ಯಾಸಿಯ ಆದರ್ಶ ಜೀವನಕ್ಕೂ ಕವಿ ಜೀವನಕ್ಕೂ ಧ್ರುವಾಂತರವೆಂಬುದನ್ನು ಕಂಡುಕೊಂಡಿದ್ದಾರೆ.

ಮರುಭೂಮಿ ಮಾರ್ಗದಲಿ! ವೈರಾಗ್ಯ ಸಾಧನದಿ
ಮುಕ್ತಿ? ನಾನದನೊಲ್ಲೆ ಅದು ನನ್ನ ಪಥವಲ್ಲ,
ರಸತಪಸ್ಸಿನ ಕವಿಯ ದರ್ಶನದ ಮತವಲ್ಲ.
ಸೌಂದರ್ಯ ಮಾಧುರ್ಯ ಸಂಮ್ಮೋಹನಂದನದಿ,
ಮಾಯಾ ಜಗತ್ತಿನ ಸಹಸ್ರಾರು ಬಂಧನದಿ,
ಮಳೆ ಬಿಲ್ಲಿನಲಿ ಬಣ್ಣಗಳು ರಮಿಸುವಂದದಲಿ
ನಲಿಯುವೆನು ಹಾಸುಹೊಕ್ಕಾಗಿ ಆನಂದದಲಿ
ಬಂಧನದ ನಾಡಿಯಲಿ ಹರಿಯುತಿದೆ ಮುಕ್ತಿ ನದಿ!

‘ತ್ಯಾಗ ಭೋಗಗಳ ಎರಡರ ಆದರ್ಶವನ್ನೂ ಸಮನ್ವಯಗೊಳಿಸುವ ಒಂದು ರೀತಿಯ ಆತ್ಮವಂಚನೆಯ ಸೋಗು ಕೆಲಕಾಲ ಟಕ್ಕಾಟಿಕ್ಕಿಯ ಜೋಕಾಲಿಯಲ್ಲಿ ಆಟವಾಡುತ್ತಿತ್ತು’[10] ಎಂದು ಕುವೆಂಪು ಅವರೇ ತಮ್ಮ ಮನಸ್ಸಿನೊಳಗಣ ತುಮುಲವನ್ನು ಬಹಿರಂಗಗೊಳಿಸಿದ್ದಾರೆ. ಇದಕ್ಕೂ ಮುಂಚೆಯೇ ರಚಿಸಿದ ‘ಹೆಣ್ಣು’ ಎಂಬ ಮತ್ತೊಂದು ಸಾನೆಟ್ಟಿನಲ್ಲಿ[11] ಹೆಣ್ಣಿನ ಮಹಿಮೆಯನ್ನೂ, ಕಾವ್ಯ ತಪಸ್ಸಿಗೆ ಕವಿ ಜೀವನಕ್ಕೆ ಅವಳಿಂದೊದಗುವ ಸಿದ್ದಿಯನ್ನೂ ಎಳೆ ಎಳೆಯಾಗಿ ಬಿಡಿಸಿ ವಿವರಿಸಿದ್ದಾರೆ :

ಪರಮ ಸಂಪೂರ್ಣತೆಯೆ ಕೋಮಲತೆಯೊಡಗೂಡಿ
ಸೌಂದರ್ಯ ರೂಪದಿಂದಿಳೆಗೆ ಬರಲದೆ ಹೆಣ್ಣು
ತಾನಾಗಿ ಮೋಹಿಸುತ್ತಿದೆ. ಕಬ್ಬಿಗನ ಕಣ್ಣು
ರೂಪಾಗ್ನಿರಾಶಿಗೆ ಪತಂಗದಂದದೊಳೋಡಿ
ಮುಗ್ಗುತಿದೆ. ಮೃತ್ಯು ಮಾಧುರ್ಯಕೆ ಮನಸೋತು:
ನೀನಿರಲ್ಕೆಲ್ಲ ಸಾಧನೆಗೆ ನೀಂ ಫಲಂ, ಸಿದ್ದಿ!
ನೀನಿಲ್ಲದಿಹ ತಪಕಿಹುದೆ ಶುದ್ದಿ, ಮೇಣ್ ಬುದ್ದಿ?11

ಹೀಗೆಯೇ ಅವರ ಇನ್ನೂ ಹಲವಾರು ಗೀತೆಗಳಲ್ಲಿ ಅವರ ಪ್ರೇಮ ಜೀವನ ವಿಕಾಸದ ಹೆಜ್ಜೆಗಳನ್ನು ಗುರುತಿಸಬಹುದಾಗಿದೆ. ‘ಚಿತ್ರಾಂಗದಾ’ ಕಾವ್ಯವಂತು ಮುಖ್ಯವಾಗಿ ಪ್ರೇಮ ಕಾವ್ಯ ವೆಂಬುದರಲ್ಲಿ ಸಂದೇಹವಿಲ್ಲ. ಅದನ್ನು ರಚಿಸಿದ ಕವಿ ಸನ್ಯಾಸಿಯಾಗುವುದುಂಟೆ? ಎಂದು ಯಾರ ಮನಸ್ಸಿಗಾದರೂ ಅನಿಸಬಹುದು. ‘ಕಬ್ಬಿಗಗೆ ನಿನ್ನೆದೆಯೆ ಕಟ್ಟಕಡೆಯಾಶ್ರಮಂ, ಮೇಣುತ್ತಮಾಶ್ರಯಂ’ ಎನ್ನುವಷ್ಟರಮಟ್ಟಿಗೆ ಕವಿಯ ಮೈ ಮನಗಳು ಹೆಣ್ಣಿನ ಸಂಗಕ್ಕಾಗಿ ಕಾತರಿಸುತ್ತವೆ.

ಪ್ರೇಮಾವತಾರಿಣಿಯೆ, ಓ ನನ್ನ ಹೇಮಾಕ್ಷಿ
ನಿನ್ನಪ್ಪುಗೆಯೆ ನನ್ನ ಸತ್ಯಸ್ಯ ಸತ್ಯಮಂ
ತೋರ್ಪುದಾನಂದಮಂ. ಮಿಕ್ಕೆಲ್ಲ ಮಿಥ್ಯಮಂ
ವಿಸ್ಮತಿಯೊಳದ್ದಿಲ್ಲಗೈದು![12]

‘ಪ್ರೇಮಕ್ಕೆ’ ಎನ್ನುವ ಈ ಸಾನೆಟ್ಟು ತಮ್ಮ ಭಾವೀ ಪತ್ನಿಯನ್ನೇ ಕುರಿತು ರಚಿಸಿದಂತಿದೆ. ಕವಿಯ ಮಾತಿನಲ್ಲಿಯೇ ಹೇಳುವುದಾದರೆ ‘ನಲ್ಲೆಯೊಬ್ಬಳ ಆವಶ್ಯಕತೆಯ ಉತ್ಕಟತೆ ಎಂತಹ ವಿಷಮ ಮಟ್ಟಕ್ಕೇರಿತು ಎಂಬುದನ್ನು ಬಹಿರಂಗಗೊಳಿಸುತ್ತದೆ ಆ ಕವನ!’

ದೀರ್ಘ ಕಾಲದ ಮನಸ್ಸಿನ ತುಮುಲ ಸಂಘರ್ಷ ಸಂದೇಹಗಳ ನಂತರ ಅವರು ಮದುವೆಯಾಗಲೇಬೇಕೆಂಬ ಇತ್ಯರ್ಥಕ್ಕೆ ಬರುತ್ತಾರೆ. ೧೬.೮.೧೯೩೬ರಂದು ಮಂಜಪ್ಪ ಗೌಡರಿಗೆ ಬರೆದ ಪತ್ರದಲ್ಲಿ ಅವರು ತಮ್ಮ ನಿಶ್ಚಯವನ್ನು ನಿಸ್ಸಂಕೋಚವಾಗಿ ತಿಳಿಸುತ್ತಾರೆ: ‘ಇನ್ನು ವಿವಾಹದ ವಿಚಾರ. ತಮ್ಮ ಮತ್ತು ಇತರರ ಪ್ರಯತ್ನಗಳಿಗೆ ನಾನು ಚಿರಕೃತಜ್ಞ. ಜಾತಕದ ವಿಚಾರ : ಆ ವಿಚಾರದಲ್ಲಿ ನನಗೂ ಶ್ರೀ ರಾಮಣ್ಣಗೌಡರಷ್ಟೇ ನಂಬಿಕೆ! ಜಾತಕ ಗೀತಕದ ಗೋಜು ದಯವಿಟ್ಟು ಬೇಡ. ನನಗೆ ಈ ಕಗ್ಗದಲ್ಲಿ ಸಹನೆಯಿಲ್ಲ. ಆದರೆ ಪ್ರಾರ್ಥನೆಯಲ್ಲಿ ನಂಬಿಕೆ! ನಾನು ಗುರುದೇವನನ್ನು ಪ್ರಾರ್ಥಿಸುವಂತೆಯೇ ನೀವೆಲ್ಲರೂ ಪ್ರಾರ್ಥಿಸಿದರೆ ಅದಕ್ಕಿಂತಲೂ ಮಂಗಳವಾದದ್ದು ಬೇರೆ ಏನೂ ಇಲ್ಲ! ವರನಂತೆ ವಧುವು ಪ್ರಾರ್ಥಿಸಲಿ! ಇದನ್ನು ತೀರ್ಥರೂಪಗಳಿಗೆ ತಿಳಿಸಿ; ಈ ಒಂದು ವಿವಾಹದಲ್ಲಿಯಾದರೂ  ಅತೀ ಹಳೇ ಸಂಪ್ರದಾಯವನ್ನು ಮನ್ನಾ ಮಾಡಬೇಕೆಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿ! ಅವರು ತೀಕ್ಷ್ಣಮತಿಗಳು, ಪ್ರಗತಿಗಾಮಿಗಳು ಅಲ್ಲ ಎನ್ನುವುದಿಲ್ಲ! ಜಾತಕ ಗೀತಕ ಬೇಡ!

‘ಮಾನಪ್ಪನೊಡನೆ ಒಂದು ವಿಚಾರ ಹೇಳಿದ್ದೆ. ಅದೇನೆಂದರೆ ಹೆಣ್ಣಿನ ಒಪ್ಪಿಗೆ. (On Principle I want that bride also must consent) ಗಂಡನ್ನು ಮಾತ್ರ ಕೇಳಿದರೆ ಸಾಲದು. ಹೆಣ್ಣೂ ಒಪ್ಪಬೇಕು! ನಾನು ಹೇಮಾವತಿಯನ್ನು ಒಪ್ಪಿದಂತೆ ಆಕೆಯೂ ನನ್ನನ್ನು ಒಪ್ಪುತ್ತಾಳೆಂದು ನಂಬಿದ್ದೇನೆ. ಹೆಣ್ಣಿಗೆ ಒಪ್ಪಿಗೆ ಸಂಪ್ರದಾಯದಲ್ಲಿಲ್ಲದಿದ್ದರೂ ಹೆಣ್ಣಿಗೂ ವ್ಯಕ್ತಿತ್ವವಿದೆ, ಆಶಯಗಳಿವೆಯೆಂಬುದನ್ನು ಗಮನಿಸಬೇಕು’[13]

ಪತ್ರ ವ್ಯವಹಾರ, ಮಾತುಕತೆ ಅಂತಿಮ ಹಂತವನ್ನು ತಲುಪುತ್ತಿದ್ದಂತೆ, ‘ರಸವೊಂದೆ ಕವಿಗೆ ನೀತಿ’[14] ಎಂಬ ತಮ್ಮೊಂದು ಸಾನೆಟ್ಟಿನಲ್ಲಿ ಕವಿ ತಮ್ಮ ಸೋಲನ್ನೊಪ್ಪಿಕೊಳ್ಳುತ್ತಾರೆ!

ಸೋತೆನ್; ಎನ್ನಿಂದಾಗದಿನ್ ಮೇಲೆ; ಗುರುದೇವ,
ಮನ್ನಿಸೆನ್ನನ್ ಹಿಂದೆ ಹೇಳ್ದನಲ್ಲವೆ ಯೇಸು!
‘ಕುದಿಯುವುದಕ್ಕಿಂತಲೂ ಮದುವೆಯಪ್ಪುದೆ ಲೇಸು’
ಸಂಯಮದ ಹೆಮ್ಮಯಾ ಸಗ್ಗದಾಸೆಗೆ ನೋವ
ನರಕದಿ ತಪಂಗೈದೆನಿದುವರೆಗದುವೆ ಸಾಕು.

ಸಂಯಮದ ಹೆಮ್ಮೆಗಾಗಿ ನರಕದ ಯಾತನೆಯನ್ನನುಭವಿಸಿದ ಭಾವನೆ ಅವರ ಮನವನ್ನಾವರಿಸಿ ಕೊಳ್ಳುತ್ತದೆ. ಕವಿಯ ಮನಸ್ಸು ತೆರೆದ ಪುಸ್ತಕವೆನ್ನುವುದಕ್ಕೆ ಇದು ಮತ್ತು ಇಂಥ ಕವಿತೆಗಳೇ ಸಾಕ್ಷಿ.

ಅಷ್ಟರಲ್ಲಿ ಬೆಂಗಳೂರಿನಲ್ಲಿದ್ದ ತಮ್ಮ ತಂದೆಯವರನ್ನು ನೋಡಲು ಹೋಗಿದ್ದ ಮಾನಪ್ಪ ನವರು ಸ್ವಾಮಿ ಸಿದ್ಧೇಶ್ವರಾನಂದರಿಂದ ಸಂದೇಶವೊಂದನ್ನು ತಂದು ಕುವೆಂಪು ಅವರಿಗೆ ಮುಟ್ಟಿಸುತ್ತಾರೆ. ಸ್ವಾಮಿ ಶಿವಾನಂದರಲ್ಲಿಗೆ ಕರೆದೊಯ್ದು ದೀಕ್ಷೆ ಕೊಡಿಸಿದ್ದ ಸ್ವಾಮೀಜಿಯವರೆ ಮದುವೆಯಾಗಿ ಸಂಸಾರಿಯಾಗುವಂತೆ ಪ್ರೋಅವರನ್ನು. ‘ದೇವಂಗಿಯ ಮನೆತನ ತುಂಬ ದೊಡ್ಡ ಮನೆತನ. ನೀನು ಮಾನಪ್ಪನ ತಂಗಿಯನ್ನೇಕೆ ಮದುವೆಯಾಗಬಾರದು?’ ಎಂಬುದೇ ಸ್ವಾಮೀಜಿಯವರ ಪತ್ರದ ಸಂದೇಶ. ಮಾನಪ್ಪನವರಿಗೆ ಸಮ್ಮತಿ ಸೂಚಿಸುತ್ತಿದ್ದಂತೆ, ‘ಹೇಮಾವತಿಯನ್ನೇ ವರಿಸಬೇಕೆಂಬ ಆದೇಶ ಹೊತ್ತು’ ಮಂಜಪ್ಪ ಗೌಡರ ಕಾಗದವೂ ಅವರ ಕೈ ಸೇರುತ್ತದೆ.

ಕುವೆಂಪು ಅವರ ಪ್ರೇಮಗೀತೆಗಳನ್ನೋದಿದವರು ಅವರ ಮತ್ತು ಹೇಮಾವತಿಯವರ ವಿವಾಹ ಪೂರ್ವ ಸಂಬಂಧದ ಮೇಲೆ ಏನೇನೋ ಕಟ್ಟುಕತೆಗಳನ್ನು ಕಟ್ಟಿ ನಲಿದಾಡಿದ್ದುಂಟು. ಹೇಮಾವತಿಯವರು ಹುಟ್ಟಿದ ಹನ್ನೊಂದನೆಯ ದಿನ ನಡೆದ ತೊಟ್ಟಿಲ ಶಾಸ್ತ್ರ ಸಮಾರಂಭಕ್ಕೆ ಕುವೆಂಪು ಹೋಗಿದ್ದುದೂ ಆ ಕಟ್ಟುಕತೆಗಳಿಗೆ ಕಾರಣವಾಗಿದ್ದಿರಬಹುದು. ವಾಸ್ತವವಾಗಿ ಅವರು ಆ ಸಮಾರಂಭದಲ್ಲಿಯೂ ಮಗುವಿನ ಕಡೆಗೆ ಕಣ್ಣು ಹಾಯಿಸಿರುವುದಿಲ್ಲ. ಆಗಾಗ್ಗೆ ಇಂಗ್ಲಾದಿಯಲ್ಲಿ ತಂಗುತ್ತಿದ್ದಾಗ ಅವರು ಆ ಮನೆಯ ಇತರ ಹುಡುಗಿಯರನ್ನೆಂತೋ ಅಂತೆಯೇ ಹೇಮಾವತಿಯವರನ್ನು ನೋಡುತ್ತಿದ್ದಿರಬಹುದು. ‘ಆದರೆ ನಾನು ಗಮನಿಸು ವಂತಹ ಯಾವ ಆಕರ್ಷಣೆಯ ವಿಶೇಷತೆಯೂ ಅವಳಲ್ಲಿ ನನಗೆ ಕಂಡಿರಲಿಲ್ಲ. ಒಮ್ಮೆ, ಆಗಿನ್ನು ಅವಳು ತರುಣಿಯಾಗಿರಲಿಲ್ಲ, ತಾರುಣ್ಯದ ಹೊಸ್ತಿಲಿಗೆ ಕಾಲಿಡುತ್ತಿದ್ದಳಷ್ಟೆ. ಉಡುಗೆ ಇನ್ನು ಲಂಗವಾಗಿಯೇ ಇದ್ದು ಸೀರೆಯ ಸ್ಥಿತಿಗೆ ಏರಿರಲಿಲ್ಲ. ಒಮ್ಮೆ ನಾನು ಬೇಸಗೆಯ ರಜದಲ್ಲಿ ಕುಪ್ಪಳ್ಳಿಯಿಂದ ಇಂಗ್ಲಾದಿಗೆ ಬಂದಿದ್ದೆ. ಅವಳೂ ಶಿವಮೊಗ್ಗದಿಂದ ತನ್ನ ಇತರ ಅಕ್ಕಂದಿರೊಡನೆ ಇಂಗ್ಲಾದಿಗೆ ಕೆಲದಿನಗಳ ಹಿಂದೆ ಬಂದಿದ್ದು, ಮತ್ತೆ ಒಂದು ಬೆಳಗ್ಗೆ ಅವರ ಕಾರಿನಲ್ಲಿ ಶಿವಮೊಗ್ಗೆಗೆ ಹೊರಟಿದ್ದಳು. ಆಗ ತೀರ್ಥಹಳ್ಳಿಯ ತುಂಗಾನದಿಗೆ ಇನ್ನೂ ಸೇತುವೆ ಆಗಿರಲಿಲ್ಲವಾದುದರಿಂದ ಕಾರು ಕೊಪ್ಪ ನರಸಿಂಹರಾಜಪುರಗಳ ಮಾರ್ಗವಾಗಿಯೆ ಶಿವಮೊಗ್ಗಕ್ಕೆ ಹೋಗಬೇಕಾಗಿತ್ತು. ನಾನೂ ಕುಪ್ಪಳ್ಳಿಗೆ ಹೊರಟಿದ್ದೆ. ಸಾಮಾನ್ಯವಾಗಿ ಕಾಲುಹಾದಿಯಲ್ಲಿ ನಡೆದುಕೊಂಡೇ ಹೋಗುತ್ತಿದ್ದುದು ನನ್ನ ರೂಢಿ; ಆದರೆ ಮಿತ್ರ ದೇ.ರಾ.ವೆಂ. ಹೇಳಿದರು ಡ್ರೈವರಿಗೆ “ದಾರಿಯಲ್ಲಿ ಇವರನ್ನು ಕುಪ್ಪಳ್ಳಿಗೆ ಬಿಟ್ಟು ಹೋಗು” ಎಂದು. ಸರಿ, ನಾನು ಮುಂದಿನ ಸೀಟಿನಲ್ಲಿ ಡ್ರೈವರ್ ಪಕ್ಕದಲ್ಲಿ ಕುಳಿತೆ. ಕಾರು ಕುಪ್ಪಳ್ಳಿಯ ಮನೆಯ ಹೊರ ಅಂಗಳದ ಕಣದಲ್ಲಿ ನಿಂತಿತು’[15] ಎಂದು ಕವಿಯೇ ಮೊಟ್ಟ ಮೊದಲ ಸಾರಿ ಹೇಮಾವತಿಯವರನ್ನು ಕಂಡ ಸಂದರ್ಭವನ್ನು ಚಿತ್ರಿಸುತ್ತಾರೆ. ಅವರು ಮುಂದುವರಿದು ‘ಅವಳು ಒಂದು ಒರಟು ಬಟ್ಟೆಯ ಲಂಗ ಉಟ್ಟಿದ್ದು, ಹುಡುಗರು ಹಾಕಿಕೊಳ್ಳುವ ಒಂದು ತುಂಬು ತೋಳಿನ ಕೋಟು ಧರಿಸಿದ್ದಳು. ಅದೂ ಬಣ್ಣಗೆಟ್ಟು ಬಡ್ಡಾಗಿದ್ದಂತೆ ತೋರುತ್ತಿತ್ತು. ಹುಡುಗಿಯಾಗಿದ್ದ ಅವಳಲ್ಲಿ ನನಗೆ ಯಾವ ಮನಮೋಹಕತೆಯೂ ಗೋಚರಿಸಲಿಲ್ಲ. ಲಲನಾಕೋಮುಲತೆಗೆ ಬದಲಾಗಿ ಅವಳಲ್ಲಿ ಎಲ್ಲವೂ ಬಲಿಷ್ಠತೆಯಾಗಿಯೇ ಕಾಣಿಸುತ್ತಿತ್ತು. ಅಗಲವಾದ ದುಂಡು ಮುಖದಲ್ಲಿ ಬಾಲಿಕಾ ಮುಗ್ಧ ಭಾವ ವಿನಾ ಪ್ರಣಯ ಭಾವನೆಯ ಲವಲೇಶದ ಪ್ರವೇಶಕ್ಕೂ ಅಲ್ಲಿ ಅವಕಾಶವಿದ್ದಂತಿರಲಿಲ್ಲ’ ಎಂದು ಹೇಳುವಾಗ ಗಾಳಿ ಮಾತುಗಳಿಗೆ ಬೆಲೆಯಿಲ್ಲವೆಂದೇ ಹೇಳಬೇಕು. ಮತ್ತೊಮ್ಮೆ ಬೇಸಗೆಯ ರಜೆಯಲ್ಲಿ ಅವರು ಗೆಳೆಯರೊಡನೆ ಇಂಗ್ಲಾದಿಗೆ ಹೋಗಿದ್ದ ಸಮಯದಲ್ಲಿ ಅಪ್ರಜ್ಞಾಪೂರ್ವಕವಾಗಿ ನಡೆದ ಕರವಸ್ತ್ರದ ಪ್ರಸಂಗವೊಂದು ರೊಮ್ಯಾಂಟಿಕ್ ಘಟನೆಯಾಗಿ ಪರಿಣಮಿಸುತ್ತದೆ;[16] ಆಗ ಹೇಮಾವತಿಯವರು ‘ಸೀರೆಯುಟ್ಟು ಸೌಂದರ್ಯ ಪ್ರಜ್ಞೋದಯವಾಗಿದ್ದ ತರಳೆ’ ಯೆಂಬುದನ್ನು ಅವರು ಗಮನಿಸುತ್ತಾರೆ. ಹೇಮಾವತಿಯವರು ಹದಿನೈದು ವರ್ಷದ ತುರುಣಿಯಾಗಿದ್ದಾಗ ನಡೆದ ಇನ್ನೊಂದು ಘಟನೆ ಕುವೆಂಪು ಅವರನ್ನು ಆಗಾಗ್ಗೆ ಭಾವೋಜ್ವಲವಾದ ಇಂದ್ರಲೋಕದ ಕಲ್ಪನಾನಂದನಕ್ಕೆ ಕೊಂಡೊಯ್ಯುತ್ತದೆ. ಜತೆಯ ಗೆಳೆಯರು ಗಾಳಿ ಸಂಚಾರಕ್ಕೆ ಹೋಗಿದ್ದಾಗ, ಧ್ಯಾನಮನಸ್ಕರಾದ ಕುವೆಂಪು ಅವರು ಅಡಿಕೆ ಚಪ್ಪರವನ್ನೇರಿ ಕುಳಿತಿದ್ದ ಸಂದರ್ಭದಲ್ಲಿ ಮನೆಯೊಳಗೆ ನಡೆದು ಬಂದು ಲ್ಯಾಂಪಿನ ಬೆಳಕಲ್ಲಿ ನಿಂತು ತಮ್ಮನ್ನೇ ನೋಡುತ್ತಿದ್ದ ನೀಲಿ ಬಣ್ಣದ ಸೀರೆಯ ಹೇಮಾವತಿಯವರ ಸುಂದರ ರೂಪು ಅವರನ್ನು ಆಕರ್ಷಿಸುತ್ತದೆ. ಆದರೂ ‘ನಾನು ಮದುವೆಯಾಗುವ ವಿಚಾರವೇ ನನ್ನ ಮನಸ್ಸಿನಲ್ಲಿ ಇಲ್ಲದಿದ್ದರೂ ಹೆಣ್ಣಿನ ಚೆಲುವನ್ನು ಯಾವ ದುರ್ಭಾವನೆಯೂ ಇಲ್ಲದೆ ಗಂಡಸು ನೋಡುವಂತೆ ನೋಡಿದೆ!’ ಎಂದು ಹೇಳಿ, ‘ಈ ಘಟನಾವಳಿ ಬರಿಯ ಕಾಕತಾಳೀಯ ಮಾತ್ರವಾಗಿದ್ದು ಕವಿಯ ಪ್ರಚ್ಛನ್ನ ಪ್ರಣಯ ಕಲ್ಪನೆ ಜೋಡಿಸಿ ಕಟ್ಟಿದ ಕಥೆಯಾಗಿರಲಿಕ್ಕೂ ಸಾಕು!…. ವಿವಾಹ ಪೂರ್ವದಲ್ಲಿ ಎಂದೂ ನಾವು ಒಬ್ಬರನ್ನೊಬ್ಬರು ಮುಖಾಮುಖಿಯಾಗಿ ಮಾತಾಡಿಸಿಯೂ ಇರಲಿಲ್ಲ’[17]ವೆಂದು ನುಡಿದು ಕೈಕಾಲಿಲ್ಲದ ಕಥೆಗಳಿಗೆ ಮಂಗಳ ಹಾಡುತ್ತಾರೆ.

ಈ ಕೊನೆಯ ಘಟನೆ ಸಂಭವಿಸಿದ ಕೆಲವಾರು ತಿಂಗಳಲ್ಲಿಯೇ ಕುವೆಂಪು-ಹೇಮಾವತಿ ಯವರ ಮದುವೆ ನಿಶ್ಚಯವಾಗುತ್ತದೆ. ಅವರ ಮದುವೆ ‘ಅರಂಜಿತವೂ ನೀರಸವೂ ಸಂಪ್ರದಾಯ ಸಾಮಾನ್ಯವೂ’ ಆದ ಘಟನೆಯಾಗಿದೆ. ಕುವೆಂಪು ಅವರ ಮನಸ್ಸಿಗೆ ಬೇಸರ ವಾಗದಂತೆ ಪ್ರಗತಿ ಮನೋಧರ್ಮದ ಅವರ ಮಾವಂದಿರು ಯಾವ ಹಳೆಯ ಸಂಪ್ರದಾಯಕ್ಕೂ ಮಣಿಯದೆ, ಸರಳ ರೀತಿಯಲ್ಲಿ ಮದುವೆಯನ್ನು ನಡೆಸಿಕೊಡುತ್ತಾರೆ. ನೂರಾರು ಆಚಾರ ಸಮೂಹಗಳನ್ನು ನಿರ್ಲಕ್ಷಿಸುತ್ತಾರೆ. ಅವರು ವಿಚಾರಶೀಲರಾದ್ದರಿಂದಲೇ ‘ವಿಪರೀತ ಸಾಲದಲ್ಲಿ ಮುಳುಗಿದ್ದ ಒಂದು ಮನೆತನದ ಒಬ್ಬ ಕನಸುಣಿ ಭಾವೋನ್ಮಾದಿ ಯುವಕನಿಗೆ, ಅದರಲ್ಲಿಯೂ ಹಣ ಸಂಪಾದನೆಗೆ ಪೀಠಪ್ರಾಯವಾಗಿದ್ದ ಅಮಲ್ದಾರಿಕೆಯಂತಹ ಹುದ್ದೆಯೆಲ್ಲದೆ ಬರಿಯ ವಿಶ್ವವಿದ್ಯಾಲಯದ ನೂರು ರೂಪಾಯಿ ಸಂಬಳದ ಒಬ್ಬ ಲೆಕ್ಚರನಿಗೆ ಕೊಡಲು ದುಂಬಾಲು ಬಿದ್ದು ಮುಂದುವರಿಯುತ್ತಿರಲಿಲ್ಲ[18]ವೆಂಬುದು ಕವಿಯ  ಮಾತುಗಳಿಂದಲೇ ಸುಸಂವೇದ್ಯ ವಾಗುತ್ತದೆ. ಗೌಡರು ಬಂಧು ಮಿತ್ರರ ಟೀಕಾವಹೇಳನಗಳಿಗೆ ಸೊಪ್ಪು ಹಾಕದೆ, ಮೌಢ್ಯಾಚಾರ ಗಳಿಗೆ ಎಳ್ಳು ನೀರು ಬಿಟ್ಟು ತಮ್ಮ ಮಗಳನ್ನು ಸಂತೋಷದಿಂದ ಕವಿಗೆ ಮದುವೆ ಮಾಡಿಕೊಡುತ್ತಾರೆ.

೫.೪.೧೯೩೭ರಂದು, ಮದುವೆ ಒಂದು ತಿಂಗಳಿದ್ದಾಗ, ರಚಿಸಿದ ಕವಿತೆಯೊಂದರಲ್ಲಿ, ಬ್ರಹ್ಮಚಾರಿಯನ್ನು ಕೈಹಿಡಿದು ನಡೆಸಿದಂತೆ ಸಂಸಾರಿಯನ್ನು ಸಲಹುವಂತೆ, ಕೈ ಹಿಡಿದ ನಲ್ಲೆಯ ಜತೆಯಲ್ಲಿ ಪ್ರೇಮ ನೈವೇದ್ಯವನ್ನು ಅರ್ಪಿಸುವಂತೆ ಕೃಪೆಗೈಯಬೆಕೆಂದು ಗುರುವನ್ನು ಪ್ರಾರ್ಥಿಸುತ್ತಾರೆ :

ವಂದಿಸುವೆ ಚರಣಾರವಿಂದಕ್ಕೆ ಮುಡಿಯಿಟ್ಟು!
ಇಂದು ಆಶೀರ್ವದಿಸು ಕಂದನನು, ಗುರುದೇವ,
ಮುಂದೆ ಬರುವಂದು ಸಂಸಾರಿ ನಾನು!
ಬಿದ್ದಂದು ಮೇಲೆತ್ತಿ ಕೆಚ್ಚೊರೆದು ಸಂತವಿಸಿ
ಬ್ರಹ್ಮಚರ್ಯದೊಳೆಂತು ಕೈ ಹಿಡಿದು ಕಾಯ್ದಿಹೆಯೊ
ಅಂತೆ ಸಂಸಾರಿಯನು ಸಲಹು ನೀನು!
ನಲ್ಮೆಯಿಂದೆನ್ನ ನಲ್ಲೆಯ ಕೈಯ ಮೆಲ್ಲನೆಯೆ
ಪಿಡಿಯುತಾದರದಿ ನೋಯದ ವೋಲೆ ನಿನ್ನಡಿಗೆ
ನಮ್ಮೆದೆಗಳೊಂದೆ ಹೂಮುಡಿಪನಿಡುವೆ;
ಪ್ರೇಮ ನೈವೇದ್ಯವನೆ ಪೂಜೆಗೊಡುವೆ!
ಸರಸ ಮೋಹಕೆ ಮನವ ಮಾರಿ ನಿನ್ನನು ಮರೆತು
ಜಡಹೃದಯನಾಗದಂತೆನಗೆ ಕೃಪೆಗ್ಯೆ, ಗುರುವೆ,
ಓ ಎನ್ನ ಜೀವನದ ಕಲ್ಪತರುವೆ![19]

ಅವರ ವೈವಾಹಿಕ ಜೀವನದ ಗೊತ್ತುಗುರಿ ಸ್ಥಿತಿಗತಿಗಳಿಗೆ ಇದು ಮುನ್ನುಡಿಯಂತಿದೆ.

ಶ್ರೀರಾಮ ಸೀತೆಯರ ಮದುವೆ ದಿಬ್ಬಣಗಳೆಂತು ಚಿಟಕಿ ಚಪ್ಪರದಲ್ಲಿ ಮುಗಿದು ಹೋಗುತ್ತವೆಯೋ ಅಂತೆಯೇ ಶ್ರೀ ಕುವೆಂಪು-ಹೇಮಾವತಿಯರ ವಿವಾಹ ಸದ್ದು ಗದ್ದಲ ಆಡಂಬರಗಳಿಲ್ಲದೆ ಕ್ಷಿಪ್ರದಲ್ಲಿ ಮುಕ್ತಾಯಗೊಳ್ಳುತ್ತದೆ. ನವ ನಾಗರಿಕ ತರುಣ ತರುಣಿಯ ರಂತೆ ಅವರು ಮಧುಚಂದ್ರ ಯಾತ್ರೆಗೆಂದು ಊರೂರು ಅಲೆಯದೆ ಇದ್ದಲ್ಲಿಯೇ ಶೃಂಗಾರ ಸಾಗರದಲ್ಲಿ ಓಲಾಡುತ್ತಾರೆ.

ಪೆಣ್ಣೊಲಿದ ನಲ್ಲನಿರೆ, ಗಂಡೊಲಿದ ನಲ್ಲೆಯಿರೆ,
ಸಿರಿಬಾಳ್ತೆ ಸಿಂಗಾರ ಸೊಗಕೆ ಹೊಯಿಕೈಯಿಹುದೆ ಪೇಳ್
ಬದುಕಿನಲಿ?[20]

ಎಂಬುದು ಅವರ ಪ್ರಣಯೋಪನಿಷತ್ತು. “ಇನಿಯಳ ಜೀವ ದೀವಿಗೆಗೆ ತೈಲಮುಂ ಕಾಂತಿಯುಂ ತಾನಾಗಿ ರಸವಾಹದೊಳ್” ಕವಿ ತೇಲುತ್ತಾರೆ ಶ್ರೀರಾಮನಂತೆ ಕವಿ.

(ಪ್ರಿಯ ಸತಿಯ) ಚೆಲುವಲರ
ಬಂಡಿಡಿದ ಬಟ್ಟಲಂ ಪೀರ್ದನೆರ್ದೆ ತುಟಿಯಿಂದೆ
ತಣಿವಿನಂ ತನ್ನಾತ್ಮ ತೃಷ್ಣೆ, ಕಣ್ಣೆವೆಯಿಡದೆ
ನೋಡಿದನು ಶೃಂಗಾರ ಸಾರ ಸಂಪೂರ್ಣೆಯಂ;
ದಂತ ಸುಸ್ನಿಗ್ಧ ಕಾಂತಿಯ ತನುರುಚಿರ ಕಾಂತೆ
ಕಮ್ಮನೆಯ ಬಿಸಿಯ ನೀರಂ ಮಿಂದು ಕೆಂಪೇರ್ದು
ಬಾನ ಬಣ್ಣದ ತಿಳಿಯ ನೀಲಿಯ ದಳಿಂಬಮಂ
ನಿರಿಯುಟ್ಟು, ಪೊರವಾರ್ಗಳೆಲ್ಲೆಯಂ ದಾಂಟಿ ಮುಡಿ
ಸೋರ್ವಂತೆ ಕರ್ಪುಗುವ ಧಮ್ಮಿಲ್ಲಮಂ ಬಿರ್ಚಿ
ನೇಲ್ಗೆದರಿ ಮೆರೆಯೆ, ನೋಡಿದನು ಕಣ್ಣೆವೆಯಿಡದೆ
ಸೌಂದರ್ಯ ಸುಖದಿಂ ಸಮಾಧಿ ದೊರೆಕೊಂಡನೋಲ್!
ನಲಿಯುವನ್ ನೋಡಿ ಕಣ್ತುಂಬಿ. ದನಿಯಂಕೇಳ್ದು
ಸವಿಯುವನ್, ಪುಳಕಿಸುವನೆರ್ದೆಮೆಯ್ಯ ಸೋಂಕಿಂಗೆ
ಹರವಸತೆವೆತ್ತು.[21]

ಅವರ ರಸದೃಷ್ಟಿ ದೇಹಾತ್ಮ ಭೇದವನ್ನು ಮಿಥ್ಯೆಗೊಳಿಸುತ್ತದೆ. ಹೊರನೋಟಕ್ಕೆ ಅವರು ದ್ವೈತಿಗಳಂತೆ ಕಂಡರೂ, ನಿಜದ ನೆಲೆಯಲ್ಲಿ ಅವರು ಅದ್ವೈತಿಗಳೆ ಆಗುತ್ತಾರೆ; ‘ಸೊಗದ ಪಾಲ್ ಜೇನಿನೊಳ್ ಬಾಳ್ ದೋಣಿಯಂ’ ಸಾಗಿಸುತ್ತಾರೆ. ಹಾಲು ಸಕ್ಕರೆಯ ಸಮ್ಮಿಲನವೇ ಅವರ ಸಂಸಾರವೆಂಬುದಕ್ಕೆ ಅವರ ಪ್ರೇಣ ಕವನಗಳೇ ನಿದರ್ಶನ. ಮೊದಲು ಕನಸಿನಲ್ಲಿ ಕಂಡ, ಸೀತೆಯಾಗಿ ಚಿತ್ರಾಂಗದೆಯಾಗಿ ಮೀನಾಕ್ಷಿಯಾಗಿ ಕವಿಯ ಮಾನಸ ಗರ್ಭದಿಂದ ಅವತರಿಸಿದ ಹೆಣ್ಣೇ ನನಸಾಗಿ ಹೇಮಾವತಿಯಾಗಿ ಮೂರ್ತೀಭವಿಸಿ, ಅವರ ಕಾವ್ಯ ತಪಸ್ಸಿಗೆ ಸ್ಫೂರ್ತಿಶಕ್ತಿಯಾಗಿ, ಅಧ್ಯಾತ್ಮ ಸಾಧನೆಗೆ ಚೈತನ್ಯ ಶಕ್ತಿಯಾಗಿ, ಅವರ ಸಾಧನೆ ಸಿದ್ದಿಗಳಲ್ಲಿ ಲೀನವಾಗುತ್ತಾಳೆ. ಕವಿಗೆ ‘ಹೇಮಾವತಿ’ ಎನ್ನುವ ಪದ ಪ್ರಣಯ ಮಂತ್ರವಾಗಿ, ಜೀವನ ತಂತ್ರವಾಗಿ, ಸಿದ್ದಿಯ ಯಂತ್ರವಾಗಿ ಪರಿಣಮಿಸುತ್ತದೆ. ಹೇಮಾ, ಹೇಮಾಂಗಿನಿ, ಹೇಮಾಪಕ್ಷಿ, ಹೇಮಪಂಜರ ಮೊದಲಾದ ನುಡಿಗಳು ಅವರ ಕೃತಿಗಳಲ್ಲಿ ಮೇಲಿಂದ ಮೇಲೆ ಬರುತ್ತವೆ. ಶ್ರೀರಾಮನಿಗೆ ಸೀತೆ ಹೇಮ ಸುಂದರಗಾತ್ರೆ. ಬಾನ ಬಣ್ಣದ ತಿಳಿಯ ನೀಲಿಯ ದಳಿಂಬ ಸೀತೆಗೆಂತೊ ಅಂತೆಯೇ ಹೇಮಾವತಿಯರಿಗೂ ತುಂಬ ಇಷ್ಟ. ಕವಿಗಂತು ಹುಚ್ಚು. ಅವರ ದೃಷ್ಟಿಯಲ್ಲಿ ನೀರೆಗೂ ನೀಲಿ ಸೀರೆಗೂ ಅವಿಭಾಜ್ಯ ಸಂಬಂಧವಿರುವಂತೆ ಅವರ ಅನೇಕ ಕವಿತೆಗಳಿಂದ ವ್ಯಕ್ತವಾಗುತ್ತದೆ. ಸತಿಪತಿಯರಿಬ್ಬರೂ ಸರ್ವಲೋಕದ ಸರ್ವ ವೈವಿಧ್ಯವನ್ನು ಪರಸ್ಪರವಾಗಿ ಕಂಡುಕೊಂಡಾಗ ಜೀವನದಲ್ಲಿ ಅರಕೆಯೇ ಇರುವುದಿಲ್ಲ.

ಹದಿಬದೆಗೆ ತೋರ್ದಪುದು ತನ್ನಿನಿಯನೊರ್ವನೊಳೆ
ಸರ್ವ ಮನುಜರ, ಮತ್ತೆ ಸರ್ವಲೋಕದ ಸರ್ವ
ವೈವಿಧ್ಯಮುಂ. ಪ್ರೇಮನಿಷ್ಠೆಯ ಪತಿಗುಮಂತೆ
ತನ್ನ ಸತಿಯೊಳೆ ತೋರ್ದಪುದು ಸರ್ವಲಲನೆಯರ
ಸರ್ವಶೃಂಗಾರಮುಂ![22]

ಅಪ್ಪಟ ಪ್ರೇಮವಿರುವಲ್ಲಿ ಬೇಕು ಬೇಡಗಳೆಲ್ಲ ಕಾಣೆಯಾಗುತ್ತವೆ.

ಧರ್ಮಸೂಕ್ಷ್ಮವನ್ನರಿತು ವರ್ತಿಸುವ ಪ್ರಣಯಿಗಳ ಜೀವನದಲ್ಲಿ ಕಾಮಪ್ರೇಮಗಳ ಗಡಿರೇಖೆಯನ್ನು ಗುರುತಿಸುವುದು ಕಷ್ಟವಾಗುತ್ತದೆ. ಕಾಮವಿಲ್ಲದೆ ಪ್ರೇಮವಿಲ್ಲ; ಪ್ರೇಮವಿಲ್ಲದೆ ಕಾಮವೂ ಇಲ್ಲ. ಕಾಮದ ಕೆಸರಿನಲ್ಲಿಯೇ ಪ್ರೇಮದ ಕಮಲ ಅರಳ ಬೇಕಾಗುತ್ತದೆ. ವಿಕಾರ ವೈಪರೀತ್ಯಗಳು ಕಾಮದ ಲಕ್ಷಣಗಳಾದರೆ, ಸಂಯಮ ಸಾತ್ವಿಕತೆ ಮತ್ತು ಸಾಮರಸ್ಯಗಳು ಪ್ರೇಮದ ಲಕ್ಷಣಗಳಾಗುತ್ತವೆ. ಶೃಂಗಾರ ಪ್ರೇಮ ವಾತ್ಸಲ್ಯಭಕ್ತಿ ಇವು ಪರಸ್ಪರ ಅಭಿನ್ನವೇನಲ್ಲ. ಸತಿಪತಿಗಳೊಂದಾಗಿ, ಆತ್ಮಸಾಧನೆಗಾಗಿ ನಡೆಸುವ ಸಂಸಾರ ಪೂಜೆಯಾಗುತ್ತದೆ. ಪೂಜೆಯ ಉದ್ದೇಶದಿಂದ ನಡೆಸುವ ಇಂದ್ರಿಯ ಭೋಗ ಸಾಧನೆಯ ವಿಧಾನವಾಗುತ್ತದೆ. ‘ಜಗದೀಶ್ವರನೆ ವಿಶ್ವಸಂಸಾರಿಯಾಗಿರಲು ಸಂಸಾರಪಾಶ’ವಾಗಲಾರದು.

ಮಾಡುವುದನೆಲ್ಲ ತನ್ನಾತ್ಮ ಸಾಧನೆಯೆಂದು
ಕರ್ಮಗೈ; ಅದುವೆ ಪೂಜೆಯ ಮರ್ಮವೈ
ಶಿವನ ಕಾರ್ಯದೊಳಾವು ಶಿರಬಾಗಿ ನೆರವಾಗೆ
ನಮಗದುವೆ ಪರಮ ಪಾಪನ ಧರ್ಮವೈ[23]

ಎಂಬುದು ಕುವೆಂಪು ದಂಪತಿಗಳ ಸಂಸಾರ ಮೀಮಾಂಸೆಯ ರಹಸ್ಯ. ಆದರ್ಶ ಸಂಸಾರದಲ್ಲಿ ರಾಗವೇ ವೈರಾಗ್ಯವಾಗುತ್ತದೆ, ಭೋಗವೇ ತ್ಯಾಗವಾಗುತ್ತದೆ, ಮೋಹವೇ ಭಕ್ತಿಯಾಗುತ್ತದೆ, ಪ್ರೇಮವೇ ಮುಕ್ತಿಯಾಗುತ್ತದೆ.[24] ಕವಿಗೆ ಸತಿ ಬರಿಯ ಚೆಲುವೆಯಲ್ಲ, ಗುರುವಿನ ಕೃಪೆ.

ಗುರುವು ಕೊಟ್ಟ ಪರಮ ಭಿಕ್ಷೆ
ನೀನೆ ನನಗೆ ರಕ್ಷೆ;
ನಿನ್ನ ನೆನಪೆ ನೀತಿ ಶಿಕ್ಷೆ
ಪ್ರೇಮದೆನ್ನ ಹೃದಯಕೆ![25]

ಅಂದ ಮೇಲೆ ಕುವೆಂಪು ದಂಪತಿಗಳ ಸಂಸಾರ ನಾಡಾಡಿಗಳ ಸಂಸಾರ ಮಾತ್ರವಲ್ಲ, ಲೌಕಿಕಾಲೌಕಿಕತೆಗಳು ಕೂಡಿದ ಅನಂತ ಸಂಸಾರವೆಂದೇ ಹೇಳಬಹುದು. ಅದರಲ್ಲಿ ಕಾಮದ ಗದ್ದಲವಿದೆ, ಕಾತರ ಆಶೆ ಆಕಾಂಕ್ಷೆ ನಿರೀಕ್ಷೆ ವಿರಹಗಳ ತಾಪವಿದೆ, ಮೇಲಾಗಿ ಸಾತ್ವಿಕ ಪ್ರೇಮದ ಸಮರತಿಯಿದೆ, ಆತ್ಮನಿವೇದನೆಯಿದೆ, ಗೋಪಗೋಪಿಯರ ಮಧುರಭಾವವಿದೆ.

ಪ್ರಥಮಮಿಲನದಲ್ಲಿಯೇ ಸತಿಯಲ್ಲಿ ಚಿರಪರಿಚಿತೆಯನ್ನು, ಜನ್ಮ ಜನ್ಮಾಂತರದ ನಲ್ಲೆಯನ್ನು ಕಂಡಂತೆ ಅವರಿಗೆ ಭಾಸವಾಗುತ್ತದೆ.[26] ಇನಿಯ ರಾಣಿ ಮನೆಗೆ ಬಂದಾಗ ಕವಿಯ ವಾಣಿ ಮೂಕವಾಗುತ್ತದೆ.[27] ಮೊದಮೊದಲು ನಾಚಿಕೆಯಿಂದ ದೂರನಿಲ್ಲುವ ಹೆಣ್ಮನ್ನು ಚಿನ್ನದ ಚೆಲುವೆ, ಹೂವಿನ ಒಲವೆ, ಪುಣ್ಯದ ಫಲವೆ, ರತಿಪತಿಯ ಹಣೆಗಣ್ಣೆ, ರಸದ ಬಾಳೆಯಹಣ್ಣೆ, ಹಾಲುಜೇನಿನ ಬೆಣ್ಣೆ, ಮಲೆಯ ಮೋಹದ ಹೆಣ್ಣೆ ಎಂದವರು ಲಲ್ಲೆಗರೆಯುತ್ತಾರೆ.[28] ಸ್ವಾತಂತ್ರ್ಯವಿಲ್ಲದ ಯಂತ್ರದಂತೆ ವರ್ತಿಸುವ, ಬಹುಬೇಗನೆ ಲಜ್ಜೆಯಿಲ್ಲದೆ ಸಜ್ಜೆವನೆಯ ಕಿಟಕಿಯೊಳಿಣುಕಿ ಏಕಾಂತವನ್ನು ಕೆಡಿಸುವ ರವಿಯನ್ನು ಕವಿ ಸಹಜವಾಗಿಯೇ ನಿಂದಿಸುತ್ತಾರೆ.[29] ಸತಿ ಬಳಿಯಿರಲಾಗಿ ಜಗವೆಲ್ಲ ಹಾಲಜೇನ್ ಸಕ್ಕರೆ ಬೆಲ್ಲ; ಇಲ್ಲದಿರೆ ಸೊಗವೆಂಬುದೇ ಸೊನ್ನೆ.

ಪಕ್ಕದಲಿ ಪವಡಿಸಿರೆ
ಅಕ್ಕರೆಯ ಚೆಲುವೆ
ಅಪ್ಸರಿಯರೆದೆಸಿರಿಯ
ಸಕ್ಕರೆಯ ಗೆಲುವೆ
ಇಂದ್ರ ಸಿಂಹಾಸನವ
ಸವಿ ಸೂರೆಗೊಳುವ[30]

ಎಂದವರು ಬಿಂಕದಿಂದ ನುಡಿಯುತ್ತಾರೆ.

ಮೈಗೆ ಮೈ ಸೋಂಕಿದರೆ
ನಂದನವೊ ನಮ್ಮಧರೆ!
ಮೈಗೆ ಮೈ ಸೋಂಕಿದರೆ
ದೇವಗಂಗೆಯಲಿ ತೆರೆ
ಪುಲಕಿಸುವುದುಕ್ಕಿ![31]

ಈ ಅನುಭವ ಒಬ್ಬರದೆ ಅಲ್ಲ, ಇಬ್ಬರದು. ಅವರ ಅಪ್ಪುಗೆಯ ಆನಂದದಲ್ಲಿ ದೇಹ ಭಾವವಳಿಯುತ್ತದೆ, ಬ್ರಹ್ಮಾಂಡಲಯವಾಗುತ್ತದೆ, ಅದ್ವೈತದ ಸಿದ್ದಿ ದೊರೆಯುತ್ತದೆ. ಷೋಡಶ ಚೈತ್ರದ ಸುಂದರಿಯ ಅಂಗಾಂಗಗಳ ವರ್ಣನೆಯಲ್ಲಿ ನಿಸರ್ಗ ಸೌಂದರ್ಯದ ಸಂಪತ್ತನ್ನು ಕಂಡು, ತೇಂಕಾಡಿ, ತಮ್ಮ ಸರ್ವಸ್ವದ ಮೃತ್ಯುವನ್ನು ಗುರುತಿಸಿ, ಅದರಲ್ಲಿ ಲಯವಾಗುತ್ತಾರೆ.[32] ಪ್ರಾರಂಭದಲ್ಲಿ ನೀರೆಯ ಅಂಗಾಂಗಳ ಸೌಂದರ್ಯದಿಂದಾಗಿ ನೀರನ ಕಾಮ ಹುಚ್ಚೆದ್ದು ಕುಣಿಯುವುದನ್ನೂ ಬರಬರುತ್ತ ಆ ಸೌಂದರ್ಯ ಮಾಸಿಹೋಗುವುದನ್ನೂ ಅವರು ಬಲ್ಲರು. ಆದ್ದರಿಂದಲೆ ‘ಕುದಿಯಲೆಮ್ಮ ಕಾಮ ಕನಕ ಪ್ರೇಮ ಎಂಬ ಹೆಸರಿನಲ್ಲಿ’ ಎಂದವರು ಹಂಬಲಿಸುತ್ತಾರೆ. ‘ನಿನ್ನೊಂದು ಚೆಂದುಟಿಯ ಸವಿಮುತ್ತಿಗೆಂದು ನಾ ಜನ್ಮಜನ್ಮ ಗಳನೆತ್ತಿ ಬಯಸಿ ಬಂದೆ’ ಎನ್ನುವ ಪತಿಯ ನುಡಿಗೆ ಇಂದೋ ನಾಳೆಯೋ ತುಕ್ಕು ಹಿಡಿಯುವ ‘ಮೈ ಚೆಲುವಿಗೆ ನೀನೊಲಿಯದಿರೆನ್ನ’ ಎಂದು ಸತಿ ಎಚ್ಚರಿಸುತ್ತಾರೆ. ರಂಭೆ ತಿಲೋತ್ತಮೆ ಮೇನಕೆ ಶಚೀದೇವಿಯರ ಶೃಂಗಾರ ಸಮಸ್ತವನ್ನು ಕವಿ ತಮ್ಮ ಮಾವನ ಮುದ್ದಿನ ಸಿರಿಮಗಳಲ್ಲಿ ಕಾಣುತ್ತಾರೆ.

ನೋಡಿ ಕಣ್ ಸಾರ್ಥಕ!
ಕೇಳಿ ಕಿವಿ ಸಾರ್ಥಕ!
ಸೋಂಕಿ ಮೆಯ್ ಸಾರ್ಥಕ!
ಅಪ್ಪಿ ಬಾಳ್ ಸಾರ್ಥಕ![33]

ಎಂದವರು ಆನಂದಾಬ್ಧಿಯಲ್ಲಿ ಮುಳುಗಿ, ‘ಒಲವುಗಡಲಿಗಿಹುದೆ ಕೊನೆ’! ಎಂದು ವಿಸ್ಮಯ ಪಡುತ್ತಾರೆ. ಅವರ ಪಾಲಿಗೆ ಗೃಹಿಣಿಯೆ ಅಪ್ಸರಿ, ಗೃಹವೆ ನಂದನ. ಸತಿ ನಕ್ಕರೆ ಹಾಲು ಸಕ್ಕರೆ. ತಮ್ಮಿಬ್ಬರ ಸೇರುವೆಯ ಕ್ಷಣದಲ್ಲಿ ಶಾಶ್ವತವನ್ನೆ ಹೀರುತ್ತಾರೆ. ಸತಿಪತಿ ಎರಡು ಹೆಸರಾದರೂ ಉಸಿರು ಮಾತ್ರ ಒಂದೆ.

ನೀ ಬಂಧಿಸೆ ನಾ ವಿಮುಕ್ತ;
ಆಲಿಂಗಿಸೆ ಯೋಗಯುಕ್ತ!
ಎರಡು ಹೆಸರಿಗೊಂದೆ ಉಸಿರು;
ನಾನು ಪತಿ, ನೀನು ಸತಿ,
ಒಂದೆ ದಂಪತಿ![34]

ಸತಿಪತಿಯರ ಐಕ್ಯವನ್ನೂ ಅವರ ಅರ್ಧನಾರೀಶ್ವರತ್ವವನ್ನೂ ದಂಪತಿ ಎಂಬ ಪದ ಸೂಚಿಸುತ್ತದೆ. ವಿಮುಕ್ತ, ಯೋಗಯುಕ್ತ ಮೊದಲಾದ ಪದಗಳ ಬಳಕೆಯಿಂದ ಪ್ರೇಮವೂ ಒಂದು ಯೋಗವೆಂಬುದು ಸ್ಪಷ್ಟವಾಗುತ್ತದೆ.

ಕುವೆಂಪು ಅವರಿಗೆ ಸ್ತ್ರೀತ್ವದ ಬಗ್ಗೆ ಅವರ ಗೌರವವಿದೆ; ಆ ಭಾವನೆ ಕಾವ್ಯದಲ್ಲೆಂತೋ ಅಂತೆಯೇ ಅವರ ಜೀವನದಲ್ಲಿಯೂ ಸುಪ್ರಕಟವಾಗುತ್ತದೆ. ಕಾನೂರು ಹೆಗ್ಗಡಿತಿಯ ಹೀನವರ್ತನೆಯನ್ನು ಚಿತ್ರಿಸುವಲ್ಲಿಯೂ ಅನುಕಂಪೆಯನ್ನು ವ್ಯಕ್ತಪಡಿಸುತ್ತಾರೆ; ಕೈಕೆಯ ನಿಂದೆಯ ಹಿಂದೆ ಮರುಕ ಗೌರವಗಳು ಇದ್ದೇ ಇವೆ. ಅಂದ ಮೇಲೆ ತಮ್ಮ ಬದುಕಿನ ಒಂದು ಭಾಗವಾದ, ಅದರಲ್ಲಿ ರಸ ಚೈತನ್ಯವನ್ನು ಹರಿಸಿದ ಸತಿಯ ಬಗ್ಗೆ ಕವಿಯ ಕನಸು ಮನಸುಗಳಲ್ಲಿ ಅಕ್ಕರೆ ನಣ್ಪು ಮೆಲ್ಪು ಹೆಮ್ಮೆಗಳೆ ಹೊರತಾಗಿ, ಅಗೌರವ ಕಾಠಿನ್ಯಗಳಿಗೆ ಲವಲೇಶವೂ ಅವಕಾಶವಿಲ್ಲ. ಆದರೂ ಪ್ರೇಮ ಜೀವನದಲ್ಲಿ ಅಳು ಮುನಿಸು ಗಟ್ಟಿ ಮಾತುಗಳು ಆಸ್ವಾದ್ಯವೂ ಆಹುದು. ಕಹಿನಿವಾರಕವೂ ಅಹುದು. ಅವು ಶೃಂಗಾರಕ್ಕೆ ವ್ಯಭಿಚಾರೀ ಭಾವಗಳಷ್ಟೆ.

ಮಲರುತಿದೆ ಕಣ್ಣೀರೆ ಕೆರೆಯಲ್ಲಿ ನಗೆದಾವರೆಯ ಮುಗುಳು;
ಮುನಿದತ್ತು ಮತ್ತೆ ನಗುತಿಹಳೆನ್ನ ಅತ್ತೆ ಮಾವರ ಮಗಳು![35]

ಹರೆಯದ ಹೆಣ್ಣು ಮುನಿದು ಮುಖ ಕೆಂಪೇರಿದಾಗ ಮೂಡುವ ಸೌಂದರ್ಯ ಲಹರಿ ಮತ್ತೆಲ್ಲಿಯೂ ಕಾಣದಂಥಾದ್ದು. ಅವಳ ಮನಮೈಗಳ ಚೆಲುವು ಕಣ್ಣೀರಿನಲ್ಲಿ ಪ್ರತಿಫಲನ ಗೊಂಡಾಗ ಗಂಡೆದೆ ತಲ್ಲಣಿಸದಿರುತ್ತದೆಯೆ? ಅದಕ್ಕೇನೇ ಹಳ್ಳಿಯ ರಸಿಕ ಹೇಳಿದ್ದು ‘ಗಂಡ ಹೆಂಡರ ಜಗಳ ಗಂಧ ತೀಡಿದ್ಹಾಂಗ’ ಎಂದು. ‘ಈವೊತ್ತೊಂದು ದಿನ ಸುಮ್ಮ ನಿದ್ದು ಬಿಡು, ಮನ! ಏನಾದರೂ ಮಾಡಲಿ ಆಳು; ಎಲ್ಲಾದರು ಆಗಲಿ ಹಾಳು’ ಎಂಬ ಮಾತಿನಲ್ಲಿರುವ ಕವಿಯ ಮುನಿಸು ಆಳಿಗೆ ಸಂಬಂಧಿಸಿದ್ದಲ್ಲವೆನಿಸುತ್ತದೆಯಲ್ಲವೆ? ಒಲಿದೆದೆಗಳಿಗೆ ಬೇಕಾದ್ದು ಅಧಿಕಾರವಲ್ಲ, ಶ್ರೀಮಂತಿಕೆಯಲ್ಲ, ಭೋಗಾನುಕೂಲಗಳಲ್ಲ. ಅವುಗಳ ಅಭಾವದಿಂದಾಗಿ ಅವರು ಮುನಿಸಿಕೊಳ್ಳುವುದೂ ಇಲ್ಲ.

ಕಷ್ಟವೊ, ನಷ್ಟವೊ, ಬಡವೋ, ಸಿರಿಯೋ,
ಗಂಜಿಯೊ ನೀರೋ ಸಾಕೆಮಗೆ;
ಪ್ರೇಮ ಕೃಪಾಬಲ ಬೇಕೆಮೆ[36]

ಎಂದವರು ಗುರುದೇವನಲ್ಲಿ ಮೊರೆ ಇಡುತ್ತಾರೆ. ಕವಿಪದವಿಗಿಂತ ಉತ್ತಮ ಪದವಿ ಮತ್ತೊಂದಿಲ್ಲವೆಂಬ ಸತ್ಯಸಂಗತಿ ಆ ಸತಿಪತಿಯರಿಗೆ ತಿಳಿಯದಂಥದೇನೂ ಅಲ್ಲ. ವಿವಾಹದ

ಮೊದಲನೆಯ ವರ್ಧಂತಿಯಂದು.
ಮುಗಿಯಿತಿಂದಿಗೊಂದು ವರುಷ;
ಮುಗಿಯದಿರಲಿ ನಮ್ಮ ಹರುಷ,
ಕರುಣಿಸಯ್ಯ ಮಹಾಪುರುಷ,
ಕಯ್ಯ ಮುಗಿವೆವು.
ಚರಣತಳದೊಳನವರತವು
ಶರಣು ಹೊಗುವೆವು.[37]

ಅವರ ಜೀವನವೆಲ್ಲ ಕಾವ್ಯ; ಅವರ ಕಾವ್ಯವೆಲ್ಲ ಜೀವನ; ಅವು ಅಭಿನ್ನ, ಅವಿಭಾಜ್ಯ; ಅವರ ಪ್ರಣಯ ಜೀವನವೂ ಒಂದು ಮಹಾಕಾವ್ಯ ಎಂಬ ಸಂಗತಿ ಅವರ ಪ್ರೇಮಕವನಗಳ ನ್ನೋದಿದವರಿಗೆ ವೇದ್ಯವಾಗದಿರದು.

ವಿಪ್ರಲಂಭ ಶೃಂಗಾರ ಪ್ರೇಮಿಯನ್ನು ಪರೀಕ್ಷೆಗೀಡುಮಾಡಿ, ಅವನ ವಿಚಿಕಿತ್ಸಕ ಬುದ್ದಿ ಯನ್ನು ಅಂತ್ಯಗೊಳಿಸಿ, ತಿತಿಕ್ಷೆಯನ್ನು ಬಲಗೊಳಿಸಿ, ಹೃದಯವನ್ನು ಶುದ್ಧಗೊಳಿಸಿ, ಪ್ರೇಮದ ಚೊಕ್ಕತನವನ್ನು ಸಂರಕ್ಷಿಸುತ್ತದೆ. ಕಾಲ ದೇಶಗಳ ದೂರ ದೇಹಕ್ಕೆ ಹೊರತು, ಆತ್ಮಕ್ಕಲ್ಲ, ಹೃದಯಕ್ಕಲ್ಲ. ದೇಹಗಳು ದೂರವಿದ್ದಷ್ಟೂ ನೆನಹು ಧ್ಯಾನಗಳ ಮೂಲಕ ಹೃದಯಗಳು ಒಂದಾಗುತ್ತವೆ. ಮಡದಿ ಬಳಿಯಿರೆ ‘ಹೊತ್ತು ಹರಿಯುವುದು ಹೊನಲಾಗಿ’ ‘ಬಾಳ ಕೊಳ ತುಳುಕುವುದು ತುಂಬಿ’; ‘ಇಲ್ಲದಿರೆ ಕಾಲ ನಿಲ್ಲುವುದು ಕಲ್ಲಾಗಿ’, ‘ಬದುಕು ಶೂನ್ಯತೆಯ ಸುಳಿಯಲ್ಲಿ ಹೊರಳುರುಳಿ ಕಂತುವುದುಸಿರ್ ಕಟ್ಟಿ.[38] ತವರು ಮನೆಯಲ್ಲಿ ಮಡದಿಯನ್ನು ಬಿಟ್ಟು ಇರುಳು ಹತ್ತಿದ ರೈಲು ‘ನೆನಹಿನಿರುಳು ಬಯಲಿನಲ್ಲಿ’ ಸಾಗುತ್ತದೆ. ವಿರಹಿ ಕವಿಯ ಪಾಲಿಗೆ ಇರುಳು ಶನಿಯಾಗುತ್ತದೆ, ತಾರೆಗಳ ಬೆಳಕು ಬಾಡುತ್ತದೆ. ಕವಿಯ ಕರುಳು ಚಿತೆ ಯಾಗುತ್ತದೆ: ಪ್ರೇತದಂತೆ ‘ಉದಯ ರವಿ’ಗೆ ನಡೆದು ಹೋಗುತ್ತಾರೆ. ಆ ಮನೆಯೊ ‘ಗೋಡೆ ಸುತ್ತಿದೊಂದು ಟೊಳ್ಳು? ಗೃಹಿಣಿ ಇಲ್ಲದ ಗೃಹ ‘ಮಸಣದೊಂದು ಹಾಳು ಭಾವಿ’

ಹೇಮಲತೆ, ಪ್ರೇಮ ಲಕ್ಷ್ಮಿ,
ನನ್ನ ಪಂಚ ಪ್ರಾಣ ಲಕ್ಷ್ಮಿ,
ಗಾಳಿ ನೀನೆ ಬೆಳಕು ನೀನೆ;
ಉಲ್ಲಾಸದ ಉಸಿರು ನೀನೆ;
ನನಗೆ ಮನೆಗೆ ಎಲ್ಲ ನೀನೆ!
ನೀನೆ ಕವಿಗೆ ಹೃದಯ, ಭಾವ,
ಮೇಣಾತ್ಮಕೆ ರಸದ ಜೀವ![39]

ಎಂದು ಕವಿಚೇತನ ಹಲವರಿದು ಹಂಬಲಿಸುತ್ತದೆ; ‘ವಿಯೋಗದೀ ಶಾಪಕೆ ಆಶೀರ್ವಾದವಾಗಿ ಬಾ’ ಎಂದು ಬೇಡುತ್ತದೆ; ಅವರ ಆತ್ಮಶಿಶು ಕೈಚಾಚಿ ಶೂನ್ಯವನ್ನೆ ಶೋಧಿಸುತ್ತದೆ.[40]

ಸಾಮಾನ್ಯವಾಗಿ ಹೆರಿಗೆ ತವರಿನಲ್ಲಿ ನಡೆಯುವುದುಂಟಷ್ಟೆ. ಆಗ ಹಿರಿಯ ಮಕ್ಕಳು ಸಹ ತಾಯಿಯ ಜತೆಯಲ್ಲಿ ಅಜ್ಜಿಯ ಮನೆಗೆ ಹೋಗುತ್ತವೆ. ಆಗ ಗಂಡಸಿನ ವಿರಹಯಾತನೆ ದ್ವಿಗುಣವಾಗುತ್ತದೆ. ಪ್ರೀತಿಯ ತಂದೆಯ ಹೊಟ್ಟೆಯುರಿಸಿ ಬಂಡಿ ಕಣ್ಮರೆಯಾಗುತ್ತದೆ. ಕವಿ ತೆವಳುತ್ತ ತೊಳಲುತ್ತ ಬಾಡಿಗೆಯ (ಆಗ ಬೆಂಗಳೂರಲ್ಲಿ) ಮನೆ ಸೇರುತ್ತಾರೆ. ಮಕ್ಕಳ ಆಟಪಾಟಗಳು, ಅವರ ಆಟಿಕೆಯ ವಸ್ತುಗಳು ಅವರ ಮನಸ್ಸನ್ನು ತಿವಿತಿವಿದು ಕೆಣಕುತ್ತವೆ. ದೂರದಲ್ಲಿರುವ ಮಕ್ಕಳ ಯೋಗಕ್ಷೇಮದ ಬಗ್ಗೆ ಹಲವಾರು ಕಲ್ಪನೆಗಳು ಮೂಡಿದಾಗ ಮನಸ್ಸು ಗೋಳಿನಿಂದ ಸೀಳಾಗುತ್ತದೆ. ವಿರಹದ ಕಟುನಿಮಿಷದಲ್ಲಿ

ಹೆತ್ತವರು ಸತ್ತರೆಂದೋ;
ಸತ್ತರೊಡಹುಟ್ಟಿದವರೂ.
ಚಿತ್ತದಲಿ ಸಮಸಖರನಿನ್ನುಮಾನ್ ಪಡೆದಿಲ್ಲ
ಕೈ ಹಿಡಿದ ಸತಿಗೋ
ತಾಯಿ ತಂದೆಯರಿಹರು; ತವರಿಹುದು;
ನಾನೆ ಸರ್ವಸ್ವವಲ್ಲ.
ಮುದ್ದು ಕಂದಂಗಿಹಳು ಮುದ್ದಾಡುವಾ ತಾಯಿ.
ಕಡೆಗೆ ನಾನೊಬ್ಬನೇ ಬೀದಿ ನಾಯಿ![41]

ಎಂದು ಕವಿ ಕೊರಗುತ್ತಾರೆ. ಕವಿ ಭಾವುಕನಾದಷ್ಟೂ ವಿರಹ ಯಾತನೆಯ ತೀವ್ರತೆ ಶಿಖರ ಮುಟ್ಟುತ್ತದೆಂಬುದಕ್ಕೂ, ಅವರ ಪ್ರೇಮದ ಪ್ರಗಾಢತೆಗೂ, ಅಂತೆಯೇ ಅವರ ಹೃದಯದ ಮೇಲೆ ಮತ್ತೆ ಮತ್ತೆ ಧಾಳಿ ಮಾಡುತ್ತಿದ್ದ ಕವಿ ಪತ್ನಿಯ ಪವಿತ್ರ ಸ್ಮೃತಿಗೂ ಈ ಕವಿತೆಯ ಹಲವು ಸಾಲುಗಳು ಸ್ಮಾರಕವಾಗಿವೆ.

ಸತಿ ತವರಿಗೆ ತೆರಳಿದನಂತರ ತೋಟದ ಒಂದೊಂದು ಹೂವೂ ಮನವನ್ನು ಕಲಕಿ, ಮೋಹವನ್ನರಳಿಸಿ, ಸಂಗದಾಸೆಯ ಉರಿಯನ್ನು ಕೆರಳಿಸುತ್ತವೆ. ‘ಬರುವಳೆಂದು ಗೃಹಿಣಿ’ ಎಂದು ಗೃಹದೇವತೆಯನ್ನು ಕವಿ ಸ್ವಾಮಿ ಯಾಚಿಸುತ್ತಾರೆ. ಪರಸ್ತ್ರೀವ್ಯಸನಿಯಲ್ಲದ, ಏಕಪತ್ನೀವ್ರತಸ್ಥನಾದ ಕವಿಯ ವಿರಹತೃಷ್ಣೆ ಅಂಗಾಂಗಗಳನ್ನೆಲ್ಲ ವ್ಯಾಪಿಸುವುದು ಸಹಜವೇ. ‘ನೀ ಹೋದರೆ ದೂರ, ಅರಳೆಯೆ ಗಿರಿಭಾರ’ವೆಂಬ, ‘ನೀನೊಡನಿರೆ ನಾ ರಸ ಸಂಗಿ; ದಿಟ ನೀನಿರೆ ಸಂಸಾರ, ತಾನಿಕ್ಷುಕ್ಷೀರ[42]ವೆಂಬ ಮಾತು ಕವಿಯ ಪಾಲಿಗೆ ಸ್ವಭಾವೋಕ್ತಿಯೇ ಹೊರತು, ಅತಿಶಯೋಕ್ತಿಯಲ್ಲ.

ಪ್ರಾಣೇಶ್ವರೀ ಪ್ರಾಣೇಶ್ವರೀ,
ನೀನಿರದಿರೆ ಚಣ ಚಣವೂ
ನಾರಕಯುಗ ದೀರ್ಘ
ನೀನೊಡನಿರೆ ಯುಗಯುಗವೂ
ಕ್ಷಣದಿವ್ಯಂ ಸ್ವರ್ಗ![43]

ಲೋಕದಲ್ಲಿ ಸತಿಯೇ ಸರ್ವಸ್ವವಾದವರಿಗೆ ಮಾತ್ರ ಈ ಮಾತಿನ ಯಥಾರ್ಥತೆ ಮನದಟ್ಟಾ ಗುತ್ತದೆ. ಉದಯರವಿಯಲ್ಲಿಯೆ ಬ್ರಹ್ಮಾಂಡವನ್ನು ಕಾಣುವ, ಲೋಕಗುರುಗಳನ್ನೆಲ್ಲ ಪ್ರತಿನಿತ್ಯ ಅಲ್ಲಿಗೆ ಆಹ್ವಾನಿಸುವ, ಜಗದ ಸದ್ದುಗದ್ದಲಗಳಿಂದ ದೂರವಿರುವ, ಅನೇಕತ್ವದ ನಡುವೆಯೂ ಏಕಾಂತವಾಗಿರುವ ಕಲೆಯನ್ನು ಬಲ್ಲ ಕುವೆಂಪು ದಂಪತಿಗಳಿಬ್ಬರಿಗೂ ತಾವು ತಾವೇ ಸರ್ವಸ್ವವಾಗುತ್ತಾರೆ. ಆದ್ದರಿಂದಲೇ

ಇನ್ನೇನಾದರು ನೀ ಮಾಡು,
ಅಗಲುವುದೊಂದುಳಿದು
ಮನ್ನಿಸಿ ಕರುಣಿಸಿ ಕಾಪಾಡು,
ಕವಿ ಹೃದಯವ ತಿಳಿದು,
ಚಿತೆಯಾಗಿದೆ ಬಾಳ್, ಮನೆಯೆ ಶ್ಮಶಾನ!
ಹದಿನೈದೇ ದಿನಗಳ್ ಶತಮಾನ!
ಅಡಿಹುಡಿಯಾಗಿದೆ ಗೌರವ, ಮಾನ!
ದುಮ್ಮಾನದಿ, ಸತಿ, ನಾನತಿದೀನ!

ಎಂದು ಕವಿ ‘ಪ್ರಿಯೆಯಲ್ಲಿ ಭಿಕ್ಷೆ’ ಬೇಡುತ್ತಾರೆ.[44] ಇಂತೆಯೇ ‘ಸೌಭಾಗ್ಯವತಿಗೆ’, ‘ಬಂಧುಲೂನ’, ‘ನಿನಗಿರ್ಪುದಯ್ ಶಾಂತಿ ನಿನ್ನಾಕೆಯೋಲ್!’ ‘ಈ ಸುಂದರ ಸಂಜೆ’, ‘ನಾಕ-ನರಕ’, ‘ನೀನೆನ್ನ ಬಳಿಯಿರಲು’ – ಇವೇ ಮುಂತಾದ ಹಲವು ಕವಿತೆಗಳು ವಿರಹ ಯಾತನೆಯನ್ನನುಭವಿಸುವ ಸತಿಪತಿಗಳ ನಾನಾ ಅವಸ್ಥೆಗಳಿಗೆ ಕನ್ನಡಿಯಾಗಿವೆ.

ಸಹನೆಯೇ ಮೂರ್ತಿವೆತ್ತಂತಿರುವ ಹೆಣ್ಣು ಬದುಕಿನ ನೋವು ನಲಿವುಗಳನ್ನು ನೀರವವಾಗಿ ಮೂಕಳಂತೆ ಅನುಭವಿಸುತ್ತಾಳೆ. ಗಂಡು ನೋವು ಬಂದಾಗ ಕೂಗಿಕೊಳ್ಳುತ್ತಾನೆ, ನಲಿವು ಸಮನಿಸಿದಾಗ ಕೇಕೆ ಹಾಕಿ ಕುಣಿಯುತ್ತಾನೆ. ಮಾತಿನ ಮೂಲಕ ಭಾವಗಳನ್ನು ಹರಿಸಿ, ಹೃದಯವನ್ನು ಹಗುರ ಮಾಡಿಕೊಳ್ಳುವ ತನಕ ಕವಿಗೆ ಸಮಾಧಾನವಿಲ್ಲ. ಸ್ತ್ರೀಹೃದಯವನ್ನರಿತ ಕವಿ ಅವಳ ಭಾವನೆಗಳಿಗೆ ನಾಲಗೆಯಾಗುತ್ತಾನೆ. ಆದ್ದರಿಂದ ಕವಿ ಪರವಾದುವೆಂದು ತೋರುವ ಅನೇಕ ಕವಿತೆಗಳಲ್ಲಿ ಸ್ತ್ರೀಹೃದಯದ ಮಿಡಿತವನ್ನು ಸಹ ಗುರುತಿಸಬಹುದು. ಸತಿಪತಿ ಗಳೊಂದಾಗಿರುವಾಗ ಕವಿಯ ಆತ್ಮಕಥೆಯಲ್ಲಿ ಸತಿಯ ಆತ್ಮಕಥೆಯೂ ವಿಲೀನಗೊಂಡಿದೆ ಯೆಂದೇ ಹೇಳಬಹುದು. ಗೃಹದಲ್ಲಿದ್ದುಕೊಂಡೇ ಗೃಹಿಣಿ ಪತಿಯ ಮೂಲಕ ಜಗವನ್ನಾ ಳುತ್ತಾಳೆ. ಅವಳ ಆರೈಕೆ, ಹಾರೈಕೆ, ಸ್ಫೂರ್ತಿ, ಪ್ರೋತ್ಸಾಹ, ಉತ್ತೇಜನ, ಹಾವಭಾವ ಶೃಂಗಾರ ಗಳಿಂದಲ್ಲದೆ ಗಂಡಸಿನ ಜೀವನ ಪೂರ್ಣವಾಗದು. ಅಂದಮೇಲೆ ಕವಿಯ ಜೀವನದಲ್ಲಿ ಸತಿಯ ಚೇತನ ಸದಾ ಪ್ರವಹಿಸುತ್ತದೆಯೆಂದೇ ಭಾವಿಸಿದರೆ ತಪ್ಪಾಗದು. ಒಮ್ಮೊಮ್ಮೆ ಕವಿ ಸತಿಯ ‘ಹಂಬಲಿಕೆ’ಯನ್ನು ನೇರವಾಗಿಯೇ ನಿರೂಪಿಸುವುದುಂಟು.

ದಿನವೊಂದೆಯಾದರೂ ನೀನಿಲ್ಲದಿರೆ ಮನವು
ಕೊರಗುವುದು ಕುದಿಯುವುದು, ಓ ಎನ್ನ ಮನದನ್ನ!
ಬೇಸರಿಕೆಯಿಂದ ಬೇವುದು ಜೀವ; ಕಾತರಿಸಿ
ಕೋರಿ ಬಾಯಾರುವುದು ಕಣ್ಣು ನಿನ್ನಾಕೃತಿಯ
ಸುಧೆಗೆ, ಓ ಚೆನ್ನ[45]

ಅಗಲಿದ ಪತಿಯ ಹೃತ್ತಾಪದ ಪ್ರಖರತೆ ದೂರದಲ್ಲಿದ್ದರೂ ಸತಿಯ ಹೃದಯವನ್ನು ಬೇಯಿಸುತ್ತದೆ. ಮನೆಯ ಬಾಗಿಲಲ್ಲಿ ಒಬ್ಬಳೇ ಕುಳಿತು ಹಾದಿ ನೋಡುತ್ತಾಳೆ. ಬೇಗನೆ ಬಂದು ಹೃದಯ ಶೂನ್ಯತೆಯನ್ನು ಪರಿಹರಿಸಿ, ಪೂರ್ಣತೊಯುವಂತೆ ಪರಿತಪಿಸುತ್ತಾಳೆ.[46]

‘ಪ್ರಿಯೆಯಪತ್ರ’ ಪತಿಯ ಬೆಂದ ಹೃದಯಕ್ಕೆ ಸಂಜೀವನವಾಗುತ್ತದೆ. ಪತ್ರದ ಆಗಮನವೇ ಇಷ್ಟ ಸಮಾಗಮವಾಗುತ್ತದೆ; ಆ ಮೂಲಕ ಶ್ರೀ ಗುರುವಿನ ದಯೆ ಹರಿದು ಬಂದಂತೆ ಅವರು ಭಾವಿಸುತ್ತಾರೆ.[47] ‘ನಾಳೆ ಬಹೆನೆಂದು ಬರೆಯಲು ನೀನು ನಾಡಿ ನಾಡಿಯಲಿ ಹರಿದುದು ಜೇನು’ ಎಂದು ನಲಿದಾಡುತ್ತಾರೆ.[48] ಆದರೂ ಒಂದು ದಿನವನ್ನು ನೂಕುವುದಾದರೂ ಎಂತು? ನಾಳೆಯೆಂಬುದು ಪಾತಾಳದಂತೆ ಬಾಯಿಬಿಟ್ಟುಕೊಂಡಿರುತ್ತದೆ. ಸತಿಯ ಮೈಯನ್ನು ನೆನೆದು, ಅವಳ ಹೆಸರನ್ನು ಕರೆದು, ನೂರು ಸಾವಿರ ಸಾರಿ ಬರೆಬರೆದು, ಕಂಬನಿಯಿಂದ ಮತ್ತೆ ಮತ್ತೆ ಅಳಿಸುತ್ತಾರೆ.[49]

ಬರುತಾಳೆ ಬರುತಾಳೆ ಬರುತಾಳೆ ನಾಳೆ
ಕೈಹಿಡಿದ ಮನದನ್ನೆ ಚೆನ್ನೆ ಬರುತಾಳೆ![50]

ಎಂದವರು ಹಿಗ್ಗುತ್ತಾರೆ. ‘ಕವಿಯ ಬಾಳಿರುಳಿಗೆ ಹೊಂಬೆಳಕು ಬರುವಂತೆ’ ಎಂದು ಹಾಡಿಪಾಡಿ ನಲಿಯುತ್ತಾರೆ. ಇಷ್ಟಮಿಲನ ಬೇಗ ಬರಲೆಂದು ಶಂಕರನನ್ನು ಪ್ರಾರ್ಥಿಸುತ್ತಾರೆ. ವರ್ಷದಷ್ಟು ದೀರ್ಘವಾದ ಆ ದಿನವೂ ಬಂದೇ ಬರುತ್ತದೆ.

ಹೋದ ಹರಣಗಳನೆ ತಂದೆ,
ಓ ಜೀವಿತೇಶ್ವರಿ!
ನೀನಿಲ್ಲದೆ ಬದುಕು ಗುಂಡು
ಕಲ್ ಭಾರ!
ನೀನಿಲ್ಲದೆ ಟೊಳ್ಳು, ಬೆಂಡು,
ನಿಸ್ಸಾರ![51]

ಎಂದು ನುಡಿದು, ಮರಳಿ ಬಂದ ಸತಿಗೆ ಸುಖಾಗಮನವನ್ನು ಬಯಸಿ, ತಪ್ಪಿದ್ದರೆ ಕ್ಷಮಿಸಿ ಕರುಣಿಸುವುದೆಂದು ಪ್ರಾರ್ಥಿಸುತ್ತಾರೆ.

ಕುವೆಂಪು ಅವರ ಪ್ರಣಯ ಗೀತೆಗಳಿಗೆ ಅವರ ಸಾಂಸಾರಿಕ ಜೀವನ ಕೇಂದ್ರವೆಂತೊ ಅಂತೆಯೇ ನೇಮಿಯಾಗಿದ್ದರೂ, ಚಿಲುಮೆಯಂತಿದ್ದರೂ, ಸರ್ವಕಾಲದ ಸರ್ವದೇಶಗಳ ಸರ್ವ ಮನುಜರ, ಜತೆಗೆ ಜಗತ್ತಿನ ಮಾತಾಪಿತರ ನಿರಂತರ ಪ್ರಣಯಮಾಧುರ್ಯವೂ ವಿರಹಯಾತನೆಯೂ ಅವುಗಳಲ್ಲಿ ಪ್ರತಿಬಿಂಬಗೊಂಡಿವೆಯೆಂದೇ ಹೇಳಬಹುದು. ಅವುಗಳಲ್ಲಿ ಚಿತ್ರಿತವಾಗಿರುವ ಪ್ರಣಯ ವಿರಹಗಳು ಒಬ್ಬಿಬ್ಬರಿಗೆ, ಕವಿ ಮತ್ತು ಕವಿ ಪತ್ನಿಯರಿಗೆ ಮಾತ್ರ ಸೀಮಿತವಾದದ್ದೆಂದು ತಿಳಿಯುವುದು ಅರಸಿಕತನವಾಗುತ್ತದೆ, ಅವಿವೇಕವಾಗುತ್ತದೆ. ಸಾಮಾನ್ಯದಲ್ಲಿ ಅಸಾಮಾನ್ಯವನ್ನೂ, ಅಲ್ಪದಲ್ಲಿ ಭೂಮವನ್ನೂ, ಅಣುವಿನಲ್ಲಿ ಮಹತ್ತನ್ನೂ, ಜೀವಾತ್ಮದಲ್ಲಿ ಅಧ್ಯಾತ್ಮವನ್ನೂ ಕಾಣುವ ದೃಷ್ಟಿಯಿದ್ದರೆ ಮಾತ್ರ ಈ ಗೀತೆಗಳ ವೈಶಿಷ್ಟ್ಯ ಎದ್ದು ಕಾಣುತ್ತದೆ. ಇಲ್ಲವಾದರೆ ದೇಹ ಧ್ಯೇಯಗಳ ಭೇದವಾಗಲಿ, ಕಾಮ ಪ್ರೇಮಗಳ ವ್ಯತ್ಯಾಸವಾಗಲೀ ಗೊತ್ತಾಗುವುದಿಲ್ಲ. ಇಲ್ಲಿಯ ಕವಿ ಒಬ್ಬ ವ್ಯಕ್ತಿಯಲ್ಲ, ವಿಶ್ವಕವಿ; ಸತಿ ಸಾಮಾನ್ಯ ಸ್ತ್ರೀಯಲ್ಲ, ವಿಶ್ವಮಾತೆ. ಇಲ್ಲಿ ಕಾಮ ಪ್ರೇಮವಾಗಿದೆ. ಪ್ರೇಮ ಗೋಪಿಯರ ಮಧುರ ಭಾವವಾಗಿದೆ. ಇಲ್ಲಿಯ ಕವಿ ಬರಿಯ ರಸಿಕ ಮಾತ್ರವಲ್ಲ, ಪ್ರಣಯಿ ಮಾತ್ರವಲ್ಲ, ಸಾಧಕನೂ ಅಹುದು, ಭಕ್ತನೂ ಅಹುದು, ಪ್ರೇಯಸ್ಸಿನ ಮೂಲಕ ಶ್ರೇಯಸ್ಸನ್ನು ಸಾಧಿಸುವ, ಭೋಗದ ಮೂಲಕ ಯೋಗವನ್ನು ಬಳಸುವ, ಬಳಸಿಯೂ ಬ್ರಹ್ಮಚಾರಿಯಾಗಿ ರಾಗದ ಮೂಲಕವೇ ವೈರಾಗ್ಯಕ್ಕಣಿಯಾಗುವ ಸಮನ್ವಯಾಚಾರ್ಯ. ಕಾಮವೊಂದೇ ಪ್ರೇಮಕ್ಕೆ ಊರೆಯಲ್ಲ; ಒಂದು ದೈಹಿಕವಾದುದಾದರೆ ಮತ್ತೊಂದು ಅಂತರಂಗಿಕವಾದುದೆಂದು ತಿಳಿದು, ಕೇವಲ ೯-೧೦ ವರ್ಷಗಳ ಶಾರೀರಕ ಸಂಬಂಧದ ನಂತರ ಕಾಮಕ್ಕೆ ವಿರಾಮ ಹಾಕಿದ ಕಠೋರ ಸಂಯಮಿಗಳು. ಇಬ್ಬರೂ ಗುರುಮಾತೆಯರನ್ನು ಪೂಜಿಸಿ, ಬ್ರಹ್ಮಚರ್ಯವ್ರತವನ್ನು ಕೈಗೊಳ್ಳುತ್ತಾರೆ. ಇಂದ್ರಿಯ ಸುಖವನ್ನು ಕಂಡವರು ಯೌವನವಿದ್ದಾಗಲೇ ಬ್ರಹ್ಮಚರ್ಯವ್ರತ ವನ್ನು ಪಾಲಿಸುವುದೆಂದರೆ ಮುಳ್ಳಾವಿಗೆಯ ಮೇಲೆ ನಡೆದಷ್ಟೇ ಕಠಿಣ. ಐಂದ್ರಿಯ ಭೋಗಕ್ಕೆಂತು ಗುರುಕೃಪೆ ಕಾರಣವೋ, ಇಂದ್ರಿಯ ಜಯಕ್ಕೂ ಅದೇ ನೆಮ್ಮಾಗಬೇಕು.

ನಮ್ಮಹಂಕಾರದಿಂ ನಾವಿದನು ಕೈಕೊಂಡು
ಕಡೆ ಹಾಯಿಸುವ ಹೆಮ್ಮೆ ನಮ್ಮದಿನಿತಲ್ಲ;
ನಮ್ಮ ಭಕ್ತಿಗೆ ಒಲಿವ ನಿಮ್ಮ ಕೃಪೆ ತಾಂ ಶಕ್ತಿ;
ಅದನುಳಿದರೆಮಗಾವ ಬೇರೆ ಬಲವಿಲ್ಲ.[52]

ಎನ್ನುವ ಅವರ ಬಿನ್ನಹದಲ್ಲಿ ಸಂದೇಹವಿದೆ, ವಿನಯವಿದೆ, ಮೊರೆಯಿದೆ, ನಿಷ್ಠೆಯಿದೆ. ಜನ್ಮ ಜನ್ಮಾಂತರದ ಸಂಸ್ಕಾರ ಸಂಗವನ್ನು ಹಠಾತ್ತನೆ ವಿಸರ್ಜಿಸುವುದೆಂದರೆ ಎಂಥ ಯೋಗಿಗಾದರೂ ಕಷ್ಟ. ಆದರೆ ಧ್ಯೇಯನಿಷ್ಠೆ, ದೀರ್ಘಸಾಧನೆ, ನಿರಂತರ ಹೋರಾಟ ಮತ್ತು ಗುರುಕೃಪೆಗಳಿಂದ ವಿಜಯ ಸಾಧಿಸುವ ಆತ್ಮ ಪ್ರತ್ಯಯ ಅವರಿಗುಂಟು.

ಸಾಧನೆಯ ಕಣದಿ ಗೆಲ್ಲುವೆವು ಗುರುಕೃಪೆಯಿಂದ
ಹೆಜ್ಜೆ ಹೆಜ್ಜೆಗೆ ಹೋರಿ ಕೆಡೆದು ಸೋತು.
ಸೋಲಿನ ಕಮಾನುಗಳೆ ಸಾಲ್ಗಟ್ಟಿ ನಿಲೆ, ಹುಟ್ಟಿ
ಬಟ್ಟೆವರಿವುದು ನಮ್ಮ ವಿಜಯ ಸೇತು![53]

ಕೊನೆಗೂ ಅವರ ಚಲ ಗೆಲ್ಲುತ್ತದೆ. ಕೈ ಹಿಡಿದು ಬಂದ ಮಡದಿಯೇ ರಕ್ಷಿಸುವ ಮಾತೆಯಾಗಿ, ದಿಕ್ಕಾಗಿ. ದಾರಿ ಕಾಣಿಸುವ ಕಣ್ಬೆಳಕಾಗಿ, ನಿತ್ಯಸಂಗಿಯಾಗಿ, ಮುಕ್ತಿ ಶ್ರೀಯಾಗಿ ಏಕಾತ್ಮರಾಗಿ, ಸರ್ವಸ್ವವಾಗುತ್ತಾರೆ ಕವಿಗೆ.

ವ್ರತಧಾರಣೆಗೆ ಮುಂಚೆಯೇ ಗುರುಕೃಪೆ ಸತಿಯ ರೂಪದಲ್ಲಿ ವರವಾಗಿ ಪ್ರಾಪ್ತ ವಾಗಿತ್ತೆಂದೂ, ಜಗನ್ಮಾತೆಯೇ ಪೂರ್ವ ಪುಣ್ಯದಿಂದ ಗೃಹಿಣಿಯಾಗಿ ಬಂದು ತಮಗೆ ರಕ್ಷೆಯಾಗಿದ್ದಾಳೆಂದೂ ಅವರು ನುಡಿಯುವಲ್ಲಿ ಅಧ್ಯಾತ್ಮಿಕ ಸತ್ಯವಿದೆಯೆಂಬುದು ಸ್ಪಷ್ಟ. ‘ನಮಿಸಿ ನಮಿಸಿ ನೀನು ನನ್ನ ದೇವಗೈದಿಹೆ’, ‘ಒಂದೊಂದೆಯೆ ನಮನದಿಂದೆ ನನ್ನಲ್ಪವನೆಲ್ಲ ಕೊಂದೆ’ ಎಂಬ[54] ಮಾತು ಕೇವಲ ಔಪಚಾರಿಕವಾಗಿರದೆ ಪ್ರಶಂಸಾತ್ಮಕವಾಗಿರದೆ ಕವಿ ಹೃದಯದ ಆಳದಿಂದ ಅನುಭವವಾಗಿ ಹೊರಹೊಮ್ಮಿದೆಯೆಂದೇ ಹೇಳಬೇಕು. ಸತಿಯ ಮೋಹದ ಪಾಶ ಪತಿಯನ್ನು ಮುಕ್ತಿಯೆಡೆಗೊಯ್ಯುವ ಸಾಧನವೆ ಹೊರತು ಕೊರಳಿಗುರುಳಲ್ಲ ವೆಂದೂ, ಅವಳ ಅಂಗಾಂಗದ ಅನಂಗರಂಗದಲ್ಲಿ ತಾನು ನಿರಂತರ ರಸತಪಸ್ವಿಯೆಂದೂ[55] ಕವಿ ನುಡಿಯುವಾಗ ಹೆಣ್ಣು ಮಾಯೆಯೆಂದಾಗಲೀ, ಜಗತ್ತು ಮಿಥ್ಯೆಯೆಂದಾಗಲೀ ಅವನು ಭಾವಿಸುವುದಿಲ್ಲ. ತಾಯಿಯ ಚರಣಕಿರಣವೇ ಸತೀರೂಪದಿಂದ ಬಂದು ಪತಿಯನ್ನು ಸಲಹುವ ಪ್ರೇಮಾವತಿ, ಭಗವತಿ ಎನ್ನುವ ನುಡಿಯಲ್ಲಿ[56] ವಿಶ್ವ ಸತ್ಯವೇ ಹುದುಗಿದೆ. ಶಿವಶಿವಾಣಿಯರು ಬೇರೆಯಲ್ಲ. ಕವಿ ಕವಿ ಪತ್ನಿಯರು ಬೇರೆಯಲ್ಲ.

ಶಿವನೆಂದನು ಆಲಿಂಗಿಸಿ
ಸತಿಯ ಚುಂಬಿಸಿ:-
‘ನಾ ಕುವೆಂಪು ನೀನೆ ಹೇಮಿ!’
ಸತಿಗೆಂದನೊ ಶಿವಸ್ವಾಮಿ!-
ಆ ಶಿವನ ಆ ಶಿವೆಯ
ಆಟದೊಂದು ಅಂಗ
ನನ್ನ ನಿನ್ನ ಸಂಗ![57]

ಸತಿಪತಿಯರಾಟವೇ ಸೃಷ್ಟಿಮೂಲ; ಶಿವಶಿವಾಣಿಯರ ಅನಂತ ಲೀಲೆಯಿಂದಾಗಿಯೇ ಸತಿಪತಿಗಳ ಸಂಗ. ಆದ್ದರಿಂದ ಅವರ ಶೃಂಗಾರ ಭೋಗ ವೈಭವಗಳೆಲ್ಲ ನಿಸರ್ಗ ಸಹಜವಾಗಿ ಶಿವಾರ್ಪಿತವಾಗುತ್ತವೆ.

ಕವಿ ಅನೇಕ ನೆಲೆಗಳಿಂದ ಸತೀಲೀಲೆಯನ್ನು ಬಣ್ಣಿಸುತ್ತಾರೆ. ಕೆಲವು ಕ್ಷಣಗಳ ಕಾಮತೃಪ್ತಿ ಯೊಂದೇ ವಿವಾಹೋದ್ದೇಶವಾಗಿದ್ದರೆ, ಅವನು ಆ ಬಂಧನಕ್ಕೊಳಗಾಗಲಾರ. ತಾಯಿಯ ನಂತರ ಮನುಷ್ಯನಿಗೆ ಜಗತ್ತಿನಲ್ಲಿ ಅತ್ಯಂತ ಪ್ರಿಯವಾದ, ಗೌರವ ವಿಶ್ವಾಸಗಳಿಗೆ ಪಾತ್ರವಾದ, ಸಕಲಾರಿಷ್ಟಗಳಿಗೆ ತಾರಕ ಮಂತ್ರವಾದ ಏಕಮಾತ್ರ ವ್ಯಕ್ತಿಯೆಂದರೆ ಸತಿ; ಪತಿಯ ಹೃದಯದ ಕಾಲುಷ್ಯವನ್ನು ಹೀರುವ, ಅವನ ಚೇತನಕ್ಕೆ ಸಂಜೀವನವಾಗುವ ಶಕ್ತಿ ಅವಳಲ್ಲಿದೆ ಎಂಬ ಮಾತು ಲೌಕಿಕವಾಗಿಯೂ ಸತ್ಯ.

ಈ ಜಗದ ಜಂಜಡಕೆ, ಈ ಜನದ ಕೋಟಲೆಗೆ,
ನಿನ್ನ ಅವಲೋಕನವೆ ಸಿದ್ಧೌಷಧ;
ವಂದಿಸುವ ಈರ್ಷ್ಯೆಗೂ ಮತ್ಸರಿಪ ನಿಂದೆಗೂ
ನಿನ್ನ ಆಲಿಂಗನವೆ ಪರಮೌಷಧ;
ಇಂದ್ರಿಯದ, ಮನದ, ಬುದ್ದಿಯ ತೊಂದರೆಯೆ ತೊಲಗೆ
ನಿನ್ನೊಳೊಂದಾಗುವುದೆ ದಿವ್ಯೌಷಧ![58]

ಸತಿಯ ತೋಳ್ತೆಕ್ಕೆಯಲ್ಲಿರುವಾಗ, ಅವಳ ಇನಿಮುತ್ತುಗಳ ಸವಿಯಲ್ಲಿ ಮುಳುಗಿರುವಾಗ, ಅವಳ ಮಧುರವಾಣಿಯ ಅಮೃತ ಸರಸಿಯಲ್ಲಿ ತೇಲಾಡುವಾಗ, ಅವಳ ಸುಸ್ನಿಗ್ಧ ಸಂಗದ ಕಲ್ಪತರುವಿನ ಚಾರುತರ ಛಾಯೆಯಲ್ಲಿ ವಾಸಿಸುವಾಗ ಪತಿಯ ಬಡತನ ಮಾಯವಾಗುತ್ತದೆ, ದೈಹಿಕ ಮಾನಸಿಕ ಕ್ಲೇಶಗಳು ದೂರವಾಗುತ್ತವೆ. ಅರಿಷಡ್ವರ್ಗಗಳು ಸತ್ವಹೀನವಾಗುತ್ತವೆ, ಲೋಕದ ಹಾಗೂ ಸಮಾಜದ ಕಷ್ಟಕಾರ್ಪಣ್ಯಗಳು ಕಾಣೆಯಾಗುತ್ತವೆ. ಮರ್ತ್ಯವೇ ಸ್ವರ್ಗವಾಗಿ, ಗುಡಿಸಲೇ ಇಂದ್ರನರಮನೆಯಾಗಿ, ಮನಃಶಾಂತಿ ಲಭಿಸುತ್ತದೆ. ಒಡಹುಟ್ಟಿದವರು ಕೈ ಬಿಡಲಿ, ನೆಂಟರಿಷ್ಟರು ಕೈಕೊಡಲಿ, ಸುತ್ತಮುತ್ತಿನವರು ಕೃತಘ್ನರಾಗಲಿ, ಹಗೆಗಳು ಹಿಂಸಿಸಲಿ, ಅಧಿಕಾರಿಗಳ ಕ್ರೌರ್ಯದ ಸಿಡಿಲೆರಗಲಿ, ನಿಂದಾವಹೇಳನಗಳು ಧಾಳಿಯಿಡಲಿ, ನಿಂತ ನೆಲವೇ ಹಗೆಯಾಗಲಿ, ಸಾಧ್ವೀಸತಿಯ ಎದೆಯಾಸರೆಯಲ್ಲಿ ಪತಿ ಸದಾ ಸುಕ್ಷೇಮಿ. ಪತ್ನೀ ಪ್ರೇಮದಲ್ಲಿ ಮುಳುಗಿದವನಿಗೆ ಜಗದ ಪುರಸ್ಕಾರ ತಿರಸ್ಕಾರಗಳೆಲ್ಲ ಒಂದೆ.[59] ತಾಯಿಯ ಸ್ತನ್ಯಪಾನದೊಡನೆ ಎಲೆಯಿಕ್ಕಿದ ಪ್ರೇಮ ಮಡದಿಯ ಕೂಟದಿಂದ ಹೊರವಾಗಿ ಬೆಳೆದು, ಕುಸುಮಿಸಿ, ಫಲಪೂರ್ಣವಾಗುತ್ತದೆ. ಪ್ರೇಮಕ್ಕೆ ತವರಾದ ಈ ಇಬ್ಬರು ಮಾನಿನಿಯರಲ್ಲಿ ಪ್ರೇಮದ ಸೆಲೆಯನ್ನು ಕಾಣದವನು ಮಾನವ ದ್ವೇಷಿಯಾಗುತ್ತಾನೆ, ರಾಕ್ಷಸನಾಗುತ್ತಾನೆ, ಲೋಕಕಂಟಕನಾಗುತ್ತಾನೆ. ಜಗತ್ತಿನಲ್ಲಿ ಪ್ರೇಮವೊಂದೇ ಸತ್ಯ, ಅದೇ ಶಾಶ್ವತ, ಅದೇ ಶಾಂತಿಯ ಮೂಲ. ಅದೇ ಸರ್ವ ರೋಗಗಳಿಗೆ ಭೇಷಜ ಎನ್ನುವುದನ್ನು ಮಾತೆ ಸತಿಯರಿಂದ ಕಲಿತುಕೊಳ್ಳಬೇಕಾಗಿದೆ.

ಈ ವಿವರಣೆಯ ಹಿನ್ನೆಲೆಯಲ್ಲಿ ಗುರುಕಾರುಣ್ಯ ಮತ್ತು ಮಾತೃವಾತ್ಸಲ್ಯಗಳೇ ಸತಿಯ ರೂಪದಲ್ಲಿ ಜನ್ಮ ತಾಳುತ್ತವೆ. ಸತಿಯೇ ಪುರುಷಾರ್ಥ ಸಾಧನೆಯ ಸಾಧನ ಸ್ಫೂರ್ತಿ ಎಂಬ ತತ್ವವೇ ಕುವೆಂಪು ಪ್ರೇಮ ಸಿದ್ಧಾಂತದ ತಿರುಳು. ‘ಅನುತ್ತರಾ’ ಸಂಕಲನ ಈ ಸಿದ್ಧಾಂತವನ್ನು ಪ್ರತಿಪಾದಿಸುವ ಪ್ರೇಮೋಪನಿಷತ್ತಾಗಿದೆ. ಜಗದ ಜನ ಗಣತಿ ಪಟ್ಟಿಯಲ್ಲಿ ಅವರ ಹೆಸರು ಹೇಮಾವತಿಯಾದರೂ

ಭೂಮೆ ತಾನಲ್ಪೆಯಾಗಿ,
ಸರ್ವಜ್ಞೆ ತಾನಜ್ಞೆಯಾಗಿ,
ಪೂರ್ಣಸುಖೆ ತಾಂ ಸುಖದುಃಖೆಯಾಗಿ,
ಆಜ್ಞಾನಲೀಲೆಗೊಪ್ಪುತೆ ನನ್ನನುದ್ಧರಿಸಲೆಂದೆನ್ನ
ಆರ್ಧಾಂಗಿಯಾಗಿ,
ಸಂಸಾರ ಸಾಗರದಿ ಮುಳುಗಿ ತೇಲುವ ನನ್ನ
ಬೆನ್ಗೆ ಬೆಂಡಾಗಿ,
ಜನ್ಮ ಜನ್ಮದಲಿ ಕೃಪೆದೋರಿ ಬೆಂಬಿಡದ
ನಾವೆಯಾಗಿ[60]

ಕಾಲ ದೇಶಾತೀತೆಯಾದರೂ ಕಾಲದೇಶವಶಿಯಾಗಿ, ನಿರಾಕಾರೆಯಾದರೂ ಸಾಕಾರೆಯಾಗಿ, ನಿರ್ಗುಣೆಯಾದರೂ ಸಗುಣೆಯಾಗಿ ಸರ್ವ ಗೃಹಗಳಲ್ಲಿಯೂ ಗೃಹಿಣಿಯ ರೂಪದಲ್ಲಿ ಕಾಣಿಸಿಕೊಳ್ಳುವ ಜಗನ್ಮಾತೆ. ಅವಳೇ ತಾಯ್ ತಂದೆ ಗುರು ದೇವರು ಎಲ್ಲವೂ ಆಗುತ್ತಾಳೆ. ಆ ಮಹಾಮಾತೆಯ ಅಂಗಾಂಗಗಳು ಪತಿಯ ಸಾಧನರಂಗವಾಗುತ್ತವೆ. ಲೋಕರಂಗದಲ್ಲಿ ಯಾರು ಸತಿಯೋ ನಿತ್ಯದಲ್ಲಿ ಭಗವತಿಯೇ ಆಗಿದ್ದಾಳೆ.

ಕವಿಯ ಸಕಲಾರಾಧನೆ ಸಾಧನೆಗಳಿಗೆ ಸತಿಯೇ ಹಿನ್ನೆಲೆ ಮುನ್ನೆಲೆ ಕಣ್ಣೆಲೆಗಳೆಂಬುದನ್ನು ಅವರು ಮೇಲಿಂದ ಮೇಲೆ, ಪುನರಾವೃತ್ತಿಯ ದೋಷಕ್ಕೂ ಬೇಸರಿಸದೆ, ಹಲವಂಗದಲ್ಲಿ, ಹಲವಾರು ಮಾತುಗಳಲ್ಲಿ ಸಿದ್ಧಪಡಿಸುತ್ತಾರೆ. ‘ಸ್ವರ್ಗದ್ವಾರದಿ ಯುಕ್ಷ ಪ್ರಶ್ನೆ’[61] ಎಂಬ ಕವಿತೆಯಲ್ಲಿ ಬರುವ ಸ್ವಪ್ನ ದೃಶ್ಯ ಕವಿಯ ಯಶಸ್ಸಿಗೆ ಹಾಗೂ ಸಿದ್ದಿಗೆ ಸತಿಯೇ ಮೂಲಕಾರಣ, ಉಳಿದದ್ದೆಲ್ಲ ಅಪ್ರಸ್ತುತವೆನ್ನುವ ಭಾವನೆ ಮಾರ್ಮಿಕವಾಗಿ ಸುಂದರವಾಗಿ ಪರಿಣಾಮಕಾರಿ ಯಾಗಿ ಅಭಿವ್ಯಕ್ತಗೊಂಡಿದೆ. ಸ್ವರ್ಗದ ಮಾರ್ಗದಲ್ಲಿದ್ದ ಫಲಕಗಳ ಲಿಪಿ ಅರ್ಥವಾಗದೆ, ‘ನರಕಕ್ಕೆ ದಾರಿ’ ಎಂಬ ಕನ್ನಡ ಲಿಪಿಯನ್ನು ಕಂಡು ಕವಿ ಆ ಎಡೆಗೆ ಧಾವಿಸುತ್ತಾನೆ. ‘ನಿನಗೆ ನರಕದಲ್ಲಿ ಪ್ರವೇಶವಿಲ್ಲ, ನಾಕಕ್ಕೆ ಹಿಂತಿರುಗು’ ಎಂದು ದೌವಾರಿಕ ಗರ್ಜಿಸುತ್ತಾನೆ. ಅನಂತರ ಕವಿ ನಾಕದ ದ್ವಾರದಲ್ಲಿದ್ದ ಕಾವಲುಗಾರನ ಪ್ರಶ್ನೆಮಾಲಿಕೆಯನ್ನೆದುರಿಸಬೇಕಾಗುತ್ತದೆ. ಪುಟ್ಟಪ್ಪ, ಕುವೆಂಪು ಎಂದು ತನ್ನ ವಿಳಾಸವನ್ನು ಸುರಿದರೂ, ತನ್ನ ಅಧಿಕಾರ ಬಿರುದು ಬಾವಲಿಗಳನ್ನೊದರಿದರೂ ‘ನರಕ ಲೋಕ ಮನ್ನಣೆಯ ಆ ಹೆಸರುಗಳಿಗಿಲ್ಲಿ ಬೆಲೆಯಿಲ್ಲ…. ಎಲ್ಲ ತಲೆಕೆಳಗು’ ಇಲ್ಲಿ ಎಂದು ಕಾವಲುವಾಣಿ ಉಗ್ಗಡಿಸುತ್ತದೆ. ಇದ್ದಕಿದ್ದಂತೆ ಅರಿವಿನ ಬೆಳಕು ಮಿಂಚಿದಂತಾಗಿ ನಾಚಿಕೆಯನ್ನು ಆಚೆ ತಳ್ಳಿ

ನನ್ನನುದ್ಧರಿಸೆ,
ಶ್ರೀಗುರುಕೃಪೆಯೆ ಮೆಯ್ವೆತ್ತು ಬಂದಿರುವ
ಶ್ರೀ ಮಹಾಮಾತೆಯಡಿದಾವರೆಯೆ ಆಗಿರುವ
ಸತಿಯ ಒಲವಿನ ಸೆರೆಯು ನಾನು –
ನಾ…ನು, ನಾ…ನು, ನಾ…ನು
ಹೇ…ವಿೂ…ಗಂ…ಡ

ಎಂದು ಕವಿ ತೊದಲುತ್ತಾನೆ. ಆ ಕೂಡಲೇ ಸಗ್ಗದ ಬಾಗಿಲು ಪದ್ಮದಲ ಬಿರಿವಂತೆ ತೆಗೆದು ಕೊಳ್ಳುತ್ತದೆ. ಕವಿಯ ತತ್ವನಿಷ್ಠೆಗೆ ಸ್ವಪ್ನವೂ ಸಾಕ್ಷಿಯಾಗುತ್ತದೆ; ಆಗ ನಿಜಕ್ಕೂ ‘ಕೃಪೆಯ ಸಾಕ್ಷಾತ್ಕಾರ’ವಾಗುತ್ತದೆ.[62]

ಸೂರ್ಯ ನಕ್ಷತ್ರಾದಿ ಭೂವ್ರೋಸಾಗರವ
ಮಾಡಿ ಆಡಿಪ ದಿವ್ಯ ಆ ಸರ್ವಶಕ್ತಿ
ಇಲ್ಲಿಅಬಲೆಯೆ ಆಗಿ, ಒಲಿದ ಹೆಂಡತಿಯಾಗಿ,
ಮಕ್ಕಳೊಂದಿಗೆ ಚಿಕ್ಕ ಸಂಸಾರಾನುರಕ್ತೆ

ಖಂಡದೃಷ್ಟಿಗೆ ದ್ವೈತವಾಗಿ ಅಪೂರ್ಣವಾಗಿ ಕಾಣುವ ದಾಂಪತ್ಯ ತತ್ವಪೂರ್ಣ ದೃಷ್ಟಿಗೆ ಅದ್ವೈತವಾಗಿ ಅಖಂಡವಾಗಿ ಗೋಚರಿಸುತ್ತದೆನ್ನುವ ಭಾವನೆ ಕುವೆಂಪು ಅವರ ಎಲ್ಲ ಪ್ರೇಮ ಕವನಗಳಲ್ಲಿ ಅವಿಚ್ಛಿನ್ನವಾಗಿ ಹರಿದಿದೆ. ಅವರ ಕಲ್ಪನೆಯ ದಾಂಪತ್ಯ ದರ್ಶನವನ್ನು ಮೈಗೂಡಿಸಿಕೊಂಡು ಅನುಷ್ಠಾನ ಗೈಯುವುದಾದರೆ ಜಗತ್ತಿನ ಕಾಷ್ಠವ್ಯಸನಗಳು ಅವರನ್ನು ಕಾಡಲಾರವೆಂಬುದಕ್ಕೆ ಅವರ ಬದುಕೇ ಸಾಕ್ಷಿಯಾಗಿದೆ.

ಪೂರ್ಣದೃಷ್ಟಿಯ ಸಮನ್ವಯ ಮನೋಭಾವದಿಂದ ವ್ಯಾಸಂಗ ಮಾಡಿದಾಗ ಮಾತ್ರ ಕುವೆಂಪು ಅವರ ಪ್ರೇಮಗೀತೆಗಳ ಸ್ವರೂಪ ಲಕ್ಷಣಗಳೂ, ಪ್ರೇಮದ ನಾನಾಸ್ತರಗಳೂ ಅದರ ಮಹತ್ವವೂ ಮನವರಿಕೆಯಾದಾವು. ಅವುಗಳಲ್ಲಿ ಲೌಕಿಕ ಪ್ರೇಮದಿಂದ ಹಿಡಿದು ಆಧ್ಯಾತ್ಮಿಕ ಪ್ರೇಮದವರೆಗಿನ ಎಲ್ಲ ಭೇದಪ್ರಭೇದಗಳೂ ರೀತಿನೀತಿಗಳೂ ವರ್ಗ ಪ್ರಕಾರಗಳೂ ಛಾಯಾವಸ್ಥೆಗಳೂ ಪ್ರತಿಫಲನಗೊಂಡಿವೆ. ತಮ್ಮ ಸಾಧನೆಗೆ ಸತಿಯೊಂದು ನಿಮಿತ್ತ. ಸತಿಯ ಮೈ ಕವಿಯ ದೃಷ್ಟಿಯಲ್ಲಿ ಮೃಣ್ಮಯವಲ್ಲ, ಅದೊಂದು ದೇಗುಲ; ಅಲ್ಲಿ ಕವಿಯೇ ಪೂಜಾರಿ. ಶುದ್ಧ ದೃಷ್ಟಿಗೆ ಆ ಕವಿತೆಗಳ ಲೌಕಿಕ ಭೂಮಿಕೆಯಲ್ಲಿಯೂ ರತಿಯಾರಾಧನೆಗಿಂತ ಶಕ್ತಿಯುಪಾಸನೆಯ ಮಹತ್ತನ್ನೇ ಗುರುತಿಸಬಹುದು. ‘ಪ್ರತಿಭೆಗೆ ನೀನೆ ಭಾವವಿದ್ಯುಚ್ಛಕ್ತಿ; ಕಲೆಗೆ ವಿದ್ಯಾಶಕ್ತಿ; ಪ್ರಾಣಕೆ ಪ್ರೇಮಶಕ್ತಿ![63] ಎಂಬ ಮಾತು ಕೇವಲ ಭಾವಾತ್ಮಕವಾಗಿರದೆ ಅನುಭವಾತ್ಮಕವೂ ಆಗಿವೆ. ‘ನನ್ನವಳು’, ‘ಗರ್ಭಗುಡಿ’, ‘ಜೀವನಕಲ್ಪತರು’, ‘ಮಹಾ ಲಿಂಗನಾ’, ‘ಅನಂಗವಂದನಾ’, ‘ಮಂತ್ರಗಾರ್ತಿ’, ‘ಸಾಮಾನ್ಯವೆ ಈ ಸಂಗತಿ’, ‘ಎದೆಯ ಹೊಂಗಿಂಡಿ’, ‘ರಸಋಷಿ ಪರಿರಂಭಿಸಿ’, ‘ಶ್ರೀಪಾದ ಪೂಜೆ’, – ಇವೇ ಮೊದಲಾದ ಕವಿತೆಗಳಲ್ಲಿ ಬರುವ ಸ್ತುತಿ, ವರ್ಣನೆ, ಪ್ರಾರ್ಥನೆಗಳು ಒಬ್ಬ ಅನುಭಾವಿಯ ಅನುಭವಗಳೆಂದೇ ಹೇಳಬೇಕು.

ಕೇವಲ ಲೌಕಿಕ ದೃಷ್ಟಿಯಿಂದ ನೋಡಿದರೂ ಕವಿ ಸತಿ ಹೇಮಾವತಿಯವರು ಆದರ್ಶಸತಿ ಆದರ್ಶಮಾತೆ, ಆದರ್ಶ ಗೃಹಿಣಿ; ಕುವೆಂಪು ಅವರಿಗೆ ಸರ್ವ ವಿಧದಲ್ಲಿಯೂ ಅನುರೂಪೆ ಯಾದವರು. ಸಾಧಕ ಕುವೆಂಪು ಅವರ ಸಾಧನೆ ಸಿದ್ದಿಗಳಿಗೆ, ಅವರ ಸರ್ವ ಯಶಸ್ಸುಗಳಿಗೆ ಕಾರಣವಾಗಿ, ಅವರ ಹೃದಯಕ್ಕೆ ಮಾತ್ರವಲ್ಲ, ಕಾವ್ಯಕ್ಕೂ ಒಡತಿಯಾಗಿ. ಅವರ ಪ್ರಶಂಸೆ, ಪ್ರಶಸ್ತಿ, ಆರಾಧನೆಗಳಿಗೆ ಪಾತ್ರರಾದವರೆಂದರೆ ಅವರ ಹಿರಿಮೆ ಹಾಗೂ ಸಿದ್ದಿಯ ಪರಾಕಾಷ್ಠೆ ಮನವರಿಕೆಯಾಗದಿರಲಾರದು. ಅವರು ಸಂಸಾರದ ಕೊರಳಿಗೆ ಕಲ್ಗುಂಡಾಗದೆ, ಅದರ ಬೆನ್ನಿಗೆ ಬೆಂಡಾಗುತ್ತಾರೆ. ಉದಯರವಿಯ ಆವರಣವನ್ನು ನೋಡಿದವರಿಗೆ ಅವರ ತೋಟಗಾರಿಕೆಯ ಕೌಶಲವೂ, ಅಡುಗೆಯ ರುಚಿಯನ್ನನುಭವಿಸಿದವರಿಗೆ ಪಾಕ ಕಲೆಯ ನೈಪುಣ್ಯವೂ, ಮನೆಯ ಒಪ್ಪ ಓರಣಗಳನ್ನು ಕಂಡವರಿಗೆ ಅವರ ಜೀವನ ಕಲೆಯ ಪೂರ್ಣತಾ ಸಿದ್ದಿಯೂ ಯಾರಿಗಾದರೂ ಮನದಟ್ಟಾಗಲಿರವು. ಸೋಗು ಆಡಂಬರಗಳ ಮೆರೆವಣಿಗೆ ಅವರ ಜಾಯ ಮಾನಕ್ಕೆ ಬಂದದ್ದಲ್ಲ. ತಮ್ಮ ಪತಿ ರಾಷ್ಟ್ರಕವಿಯೆಂಬ ಪ್ರತಿಷ್ಠೆಯಾಗಲೀ, ಲೋಕಪ್ರಸಿದ್ಧ ಮಹಾಪುರುಷರೆಂಬ ಅಹಂಕಾರವಾಗಲೀ, ಕುಲಪತಿಯೆಂಬ ಬಿಗುಮಾನವಾಗಲೀ, ಮಂತ್ರಿ ಮಾನ್ಯರ ಪ್ರಶಂಸೆಗೊಳಗಾಗಿ, ಮಾಲೆ ಮಾಲೆಯಾಗಿ ಬಿರುದು ಬಹುಮಾನ ಬಾವಲಿಗಳನ್ನು ಪಡೆದ ಕೀರ್ತಿಶಾಲಿಯೆಂಬ ಬಿಂಕವಾಗಲೀ ಅವರ ಬಳಿ ಸುಳಿಯುವುದಿಲ್ಲ. ಕವಿಯ ಗೌರವಾರ್ಥವಾಗಿ ನಡೆದ ಸಭೆ ಸಮಾರಂಭಗಳಲ್ಲಿ ವೇದಿಕೆಯೇರುವುದಿರಲಿ, ಸಭಿಕರ ಮಧ್ಯದಲ್ಲಾದರೂ ಕುಳಿತು ಹರ್ಷಘೋಷ, ಕರತಾಡನಗಳಿಗೆ ಬೀಗುವ ಪ್ರವೃತ್ತಿಯೂ ಅವರದಲ್ಲ. ಆಕಸ್ಮಾತ್ತಾಗಿ ಸಮಾರಂಭಕ್ಕೆ ಹೋದರೆಂದರೆ ಹಿಂದಿನ ಸಾಲಲ್ಲೆಲ್ಲಿಯೋ ತಲೆ ಬಗ್ಗಿಸಿಕೊಂಡು ಕುಳಿತಿದ್ದು, ನಿರ್ಲಿಪ್ತತೆಯಿಂದಲೇ ಹೊರಗೆ ಬರುವ ನಿರಾಡಂಬರದ ಮನೋಧರ್ಮದವರು ಅವರು. ಪತಿಯೆಂತು ಸತಿಯಲ್ಲಿ ಜಗದಂಬೆಯನ್ನು ಕಂಡರೋ ಅಂತೆಯೇ ಅವರು ಪತಿಯಲ್ಲಿ ಜಗದೀಶ್ವರನನ್ನು ಕಂಡು ಕೈಂಕರ್ಯವೆಸಗಿ ತಣಿದು, ಸಿದ್ದಿಯನ್ನು ಪಡೆದವರು.

ಪತಿ ಜೀವನದಲ್ಲಿ ತಮ್ಮ ಬದುಕನ್ನು ಕರಗಿಸಿ, ಎಲೆಯ ಮರೆಯ ಕಾಯಂತೆ ಬಾಳಿದ, ಅವರ ಜೀವನ ಪ್ರವಾಹವಾದ ಗತಿ ಗಮನಗಳು ಜಗದ ಕಣ್ಣಿಗೆ ಬೀಳುವಂಥವಲ್ಲ. ಕವಿಸತಿ ಕವಿಯ ಜೀವನದಲ್ಲಿ ಮಾತ್ರವಲ್ಲ, ಅವರ ಕಾವ್ಯದ ಪಾತ್ರಗಳಲ್ಲಿ ಲಯವಾಗಿದ್ದಾರೆ; ಅವರ ಪ್ರೇಮಗೀತೆಗಳಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದ್ದಾರೆ. ಆ ಪ್ರೇಮಗೀತೆಗಳು ಅವರ ಜೀವನೇತಿಹಾಸದ ಪುಟಗಳೆಂದರೂ ಸಲ್ಲುತ್ತದೆ. ಅನೇಕ ಕಡೆ ಗುಪ್ತಗಾಮಿನಿಯಾಗಿ ಹರಿದಿರುವ ಅವರ ಜೀವನ ಪ್ರವಾಹದ ಒಂದೆರಡು ಝರಿಗಳು ‘ನೆನಪಿನ ದೋಣಿಯಲ್ಲಿ’ ಒಂದೆರಡು ಕಡೆ ಮಾತ್ರ ಕಾಣಿಸಿಕೊಂಡು, ಗೃಹಿಣೀಧರ್ಮದ ಹಿರಿಮೆಗೂ, ಅವರ ವಿನೋದ ಪ್ರಕೃತಿಗೂ, ಸಂಸಾರದ ಸಾಮರಸ್ಯಕ್ಕೂ ನಿದರ್ಶನವಾಗಿವೆ. ಅಜ್ಜಿ ಬೇಯಿಸಿಕೊಡುತ್ತಿದ್ದ ಸ್ಞಿ ಇ ಅಪ್ಪುವಿನ ಬಾಲ್ಯಾನುಭವದ ಕಂಪಿನ ನೆನಪು ಅವರ ವಯಸ್ಸಿನ ಘ್ರಾಣೇಂದ್ರಿಯವನ್ನು ಕೆರಳಿಸಿ, ಮಾತಿನಲ್ಲಿ ಪ್ರಕಟವಾದಾಗ, ‘ನಿಮಗೆ ಅಂದು ಅದು ರುಚಿಯಾಗಿದ್ದಿರಬಹುದು. ಆದರೆ ಈಗ ಅದನ್ನು ಮಾಡಿಕೊಟ್ಟರೆ ನೀವು ತಿನ್ನುತ್ತೀರೋ ಇಲ್ಲವೋ’ ಎಂದು ಅವರ ಸೌಭಾಗ್ಯವತಿ ಸವಾಲೆಸೆಯಲಾಗಿ ಕವಿ ಅದನ್ನು ಸ್ವೀಕರಿಸುತ್ತಾರೆ.[64] ಅಪ್ಪು ಅಣಿಗೊಂಡು, ಕವಿ ರುಚಿ ನೋಡಿದ, ಮಡದಿ ಮಕ್ಕಳು ಅವರು ತಿನ್ನುವುದನ್ನೇ ನೋಡುತ್ತಿದ್ದ ಪ್ರಸಂಗ ತುಂಬ ಸ್ವಾರಸ್ಯವಾಗಿದೆ. ಹಸಿಯ ಸೌದೆಯಿಂದ ಕೋಣೆಯೆಲ್ಲ ಹೊಗೆಸುತ್ತಿಕೊಂಡು ಮುಖವೆಲ್ಲ ಮಸಿಯಾಗಿ, ಪಾಡುಪಟ್ಟ ಸೀತೆಯ ಪ್ರಸಂಗಕ್ಕೆ ತಮ್ಮ ಸೌಭಾಗ್ಯವತಿಯ ಅಂಥದೇ ಪ್ರಕರಣವೊಂದು ಪ್ರೇರಣೆ ನೀಡಿದ್ದರೂ ಇರಬಹುದು. ಇಂಥ ನೂರಾರು ಸ್ವಾರಸ್ಯಕರ ಪ್ರಸಂಗಗಳಿಂದ ಜಗತ್ತು ವಂಚಿತವಾಗಬಾರದಿತ್ತೆಂದು ಸಹೃದಯರು ನಿರೀಕ್ಷಿಸುವುದು ಸಹಜವೇ.

ಪ್ರತಿಯೊಬ್ಬ ಮಹಿಳೆಯೂ ಮನೆ ಮನೆಯ ಮಹಾತಪಸ್ವಿನಿಯೆಂಬುದನ್ನು ಕುವೆಂಪು ಅವರು ತಮ್ಮ ಶ್ರೀಮತಿಯವರ ಬದುಕಿನಿಂದ ಮನದಟ್ಟು ಮಾಡಿಕೊಂಡಿದ್ದಾರೆ. ‘ಮನೆ ಮನೆಯ ತಪಸ್ವಿನಿಗೆ,[65] ಎಂಬ ಕವಿತೆಗೆ ಅವರ ಜೀವನ ಸ್ಫೂರ್ತಿಯೆ ಸೆಲೆಯಾಗಿರುವಂತೆಯೆ, ಅದು ಅವರ ಜೀವನ ಚಿತ್ರವೂ ಆಗಿದೆ. ಸರೋಜಿನಿ, ಲಕ್ಷ್ಮೀಬಾಯಿ, ವಿಜಯಲಕ್ಷ್ಮಿಯರಿಗೆಲ್ಲ ಗೃಹಸ್ತ್ರೀಯೇ ಬಸಿರು, ಉಸಿರು. ವಿಜಯ ಲಕ್ಷ್ಮಿಯ ವಾಗ್ಮಿತೆ ಅಧ್ಯಾತ್ಮಿಕ ಸಂಪತ್ತಿನ ಭೂಮದ  ಇದಿರಿನಲ್ಲಿ ಅಲ್ಪ.

ಅಡುಗೆ ಮನೆಯೆ ಪರ್ಣಶಾಲೆ;
ಒಲೆಯ ಅಗ್ನಿ ಮುಖಜ್ವಾಲೆ!
ಬಿಡುವಿಲ್ಲದ ಕಟುತಪಸ್ಯೆ;
ಹುಣ್ಣಿಮೆಯೂ ಅಮಾವಾಸ್ಯೆ!
ಆದರೂ ದೀನಾಸ್ಯೆ
ನೀನೆ ನಮಗೆ ಧೈರ್ಯ, ಆಶೆ |
ನಿನ್ನ ಪಾದಕಿದೋ ಪೂಜೆ;
ಪೂತಕವನಧವಳ ಲಾಜೆ!

ಎಂದು ಕೃತಜ್ಞತಾ ಕುಸುಮಾಂಜಲಿಯನ್ನು ಅರ್ಪಿಸಿದ ಕವಿ

ಹಿಡಿಯದಿರಲಿ ನಿನಗಾದರು
ಗಂಡಸರಾ ಕುತ್ತ!
ಪ್ರಖ್ಯಾತಿಯ ಪಡೆಯುವೊಂದು
ಪ್ರಾಪಂಚಿಕ ಪಿತ್ತ!
ಹೊಸಲಾಚೆಗೆ ನೀನೋತರೆ
ಹೊಸಲೀಚೆಗೆ ಬೆಳಕಿಲ್ಲ!
ಹೆಸರಾಸೆಗೇ ನೀ ಸೋತರೆ
ಉಸಿರಾಸೆಯ ನಮಗಿಲ್ಲ!

ಎಂದು ಕಟುಸತ್ಯವನ್ನು ವ್ಯಕ್ತಪಡಿಸುತ್ತಾರೆ; ಋತದರ್ಶಿನಿಯಾಗಿ, ಮನುಕುಲ ಕಲ್ಯಾಣಿಯಾಗಿ ಲೋಕವನ್ನು ಋಜುಪಥವಲ್ಲಿ ನಡೆಸುವಂತೆ ಪ್ರಾರ್ಥಿಸುತ್ತಾರೆ. ಸೋಕ್ರತೀಸ್, ಪ್ಲೇಟೋ, ಬುದ್ಧ, ವಾಲ್ಮೀಕಿ, ಕಾಳಿದಾಸ, ಶಂಕರಚಾರ್ಯ, ಬಸವೇಶ್ವರ, ಗಾಂಧೀಜಿ, ಐನ್‌ಸ್ಟೀನ್ ಮೊದಲಾದ ಲೋಕ ಗುರುಗಳ ತಾಯಂದಿರಾಗಲಿ ಮಡದಿಯರಾಗಲಿ ಲೋಕದ ಕಣ್ಣಿಗೆ ಬೀಳದೆ, ಅಜ್ಞಾತರಾಗಿಯೇ ಉಳಿದು, ಜಗತ್ತಿಗೆ ಬೆಳಕು ನೀಡಿದ ಮಹಾಪುರುಷರನ್ನು ಹಡೆದವರು ಅಥವಾ ಪಡೆದವರು. ಅಂಥ ತಾಯಂದಿರಲ್ಲಿ ಹೇಮಾವತಿಯವರೂ ಒಬ್ಬರು.

ತಾಯಿ ಹೇಮಾವತಿಯವರನ್ನು ನೆನೆದಾಗಲೆಲ್ಲ ಶ್ರೀ ರಾಮಾಯಣದರ್ಶನಂ ಮಹಾಕಾವ್ಯದ ಉರ್ಮಿಳಾದೇವಿಯ ದಿವ್ಯಚಿತ್ರ ಕಣ್ಮುಂದೆ ನಿಲ್ಲುತ್ತದೆ. ಆ ಚಿತ್ರವನ್ನು ಕಡೆಯು ವಲ್ಲಿ ಕವಿಗೆ ತಮ್ಮ ಪತ್ನಿಯೇ ರೂಪದರ್ಶಿಯಾಗಿರಬೇಕೆಂದು ತೋರುತ್ತದೆ. ಅವಳಂತೆ ಇವರೂ ‘ನೀರವ ಧ್ಯಾನ ವಧೂ’, ‘ಮೂಕಸತಿ’, ‘ಗೋಚರಾತೀತೆ’, ‘ಪೆಣ್ಣೆಂಬ ತಪಕೆ ನಿರುಪಮ ಪ್ರತಿಮೆ![66] ಶ್ರೀರಾಮ ಸೀತಾಗಮನವಾರ್ತೆಯನ್ನರುಹಿ, ನಂದಿಗ್ರಾಮಕ್ಕೆ ಬೇಗ ತೆರಳುವಂತೆ ಅಕ್ಕ ಮಾಂಡವಿ ಎಚ್ಚರಿಸಿದಾಗ ‘ಮೀಯದುಡದೆಯ ತೊಡದೆ ಪೋಪುದೇನ ವರೆಡೆಗೆ’ ಎಂದು ಉರ್ಮಿಳಾದೇವಿ ನುಡಿಯುತ್ತಾಳೆ. ‘ನೋಡಬಾರದೆ ಅವರ್ ನಿನ್ನ ನಿಡುಕಡುನೋಂಪಿಯಂ’ ಎಂದು ಅಕ್ಕ ಸಲಹೆ ನೀಡಿದಾಗ

ಚಿಃ! ಕಡಲ್ಗಿದಿರ್
ಪನಿಗೇಂ ಪ್ರದರ್ಶನಂ? ದೇವರ ತಪಕ್ಕಿದಿರ್
ನಮ್ಮದೊರ್ ತೃಣಮಲ್ತೆ! ಸಂತೋಷ ಸಮಯದೊಳ್
ತೋರ್ಪುದನುಚಿತವೆಮ್ಮ ಕಷ್ಟಮಂ! ತನ್ನ ತಾನ್
ಇಲ್ಲಗೈವುದೆ ಎಲ್ಲ ಸಾಧನೆಗೆ ಕೊನೆಯ ಗುರಿ;
ಮೇಣ್ ತಪಕೆ ಕೇಳ್, ತಂಗೆ, ಪರಮ ಪ್ರಯೋಜನಂ![67]

ಎಂದು ತಂಗೆ ಹಸನ್ಮುಖಿಯಾಗಿ, ಮಿಂದುಟ್ಟು ತೊಟ್ಟು ತೆರಳುತ್ತಾಳೆ. ಇಂಥ ತಪಸ್ವಿ ನಿಯರು ಜಗತ್ತಿನಲ್ಲಿಯೇ ವಿರಳ. ಭಾರತೀಯ ಸಂಸ್ಕೃತಿಯೇ ಮೂರ್ತಿವೆತ್ತಂತಿರುವ, ಭಾರತೀಯ ಸ್ತ್ರೀ ಲೋಕದ ಪ್ರತಿನಿಧಿಯಂತಿರುವ ಹೇಮಾವತೀ ತಾಯಿಗೆ ಊರ್ಮಿಳೆಯ ನೆವದಲ್ಲಿ ಕವಿ ಸಲ್ಲಿಸಿರುವ ನುಡಿಕಾಣ್ಕೆ ಭಾರತೀಯ ಸ್ತ್ರೀಯ ಮಹಿಮೆಗೆತ್ತಿದ ಗೌರವ ಪತಾಕೆಯಾಗಿದೆ.

ಕೀರ್ತಿಯಾ ಮಾಯೆ,
ಪೊನ್ನ ಪೊಳಪೊಲ್, ಸುಲಭ ವೇದ್ಯ; ಮಹಿಮಾ ಜ್ಯೋತಿ,
ಸಂಯಮದ ಸಂಪತ್ತಿನೊಲ್, ಸಂಸ್ಕೃತಿಗೆ ಮಾತ್ರ
ಗೋಚರಂ-ಹನುಮಂತ ರಾಮ ಲಕ್ಷ್ಮಣ ಸೀತೆ
ಕೈಕೊಳಲಿ ಜನಪೂಜೆಯಂ ನಿನಗೆ ಸಂಪ್ರೀತಿ
ನನ್ನದಿದೆಕೋ, ಜನನಿ: ನನ್ನ ಜೀವನ ನೇತ್ರೆ
ನಿನ್ನ ಬಾಳಂತಿರ್ಕೆ, ಹೇ ಗೋಚರಾತೀತೆ![68]

ಬಾಳಿನಲ್ಲೆಂತೊ ಸಾವಿನಲ್ಲಿಯೂ ಅವರು ಗೋಚರಾತೀತೆಯಾಗಿ ಸದ್ದುಗದ್ದಲವಿಲ್ಲದೆ, ಮೈಸೂರಿನ ಚಾಮುಂಡಿಕಾ ಸನ್ನಿಧಿಯ ವಿದ್ಯುಚ್ಚಿತ್ತೆಯನ್ನೇರಿ, ದೇಹವನ್ನುಳಿದು, ವಿಶ್ವಶಕ್ತಿಯಲ್ಲಿ ವಿಲೀನರಾಗಿ, ಕವಿಯ ಆತ್ಮದಲ್ಲಿ ಒಂದಾಗಿ, ಬೆಳಕಾಗಿ, ಪ್ರಾಣಶಕ್ತಿಯಾಗಿ, ಅಮರರಾಗಿದ್ದಾರೆ. ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳುವಾಗ ಗೃಹದೇವತೆಗೆ ಕೈ ಮುಗಿದು, ವೃಕ್ಷದೇವತೆಗಳಿಗೆ ನಮಸ್ಕರಿಸಿ, ಮತ್ತೆ ಬರುವುದಾಗಿ ನುಡಿದು, ಕಾರು ಹತ್ತಿದ್ದರಂತೆ. ೧೫.೯.೧೯೮೨ರಂದು ಬೆಂಗಳೂರಿನ ಮಗಳು ಅಳಿಯಂದಿರ ಮನೆಯಲ್ಲಿ, ಪತಿದೇವರ ಸನ್ನಿಧಿಯಲ್ಲಿ ವಸ್ತುಬಿಟ್ಟಿದ್ದರು. ಅವರ ಕೊನೆಯ ಬಯಕೆಯನ್ನು ಈಡೇರಿಸುವ ಸಲುವಾಗಿ ಅವರ ಕಳೇಬರವನ್ನು ಉದಯರವಿಗೆ ರಾತ್ರಿ ೯.೩೦ ಗಂಟೆಗೆ ತರಲಾಯಿತು. ದೂರದ ಹತ್ತಿರದ ಆಪ್ತೇಷ್ಟರು ಶ್ರೀರಾಮಕೃಷ್ಣಾಶ್ರಮದ ಸ್ವಾಮಿಗಳು ಬಂದು ತಾಯಿಯ ಅಂತಿಮ ದರ್ಶನವನ್ನು ಪಡೆದುಕೊಂಡರು. ಸೀತಾಮಾತೆಯ ಸಾನ್ನಿಧ್ಯದಿಂದ ವಂಚಿತನಾದ ಶ್ರೀರಾಮನಂತೆ ಕುವೆಂಪು ವಿಹ್ವಲಚಿತ್ತರಾದರು. ಕಠೋರ ಸಂಯಮಿಗಳಾಗಿ ದುಃಖನಿಗ್ರಹ ಸಾಮರ್ಥ್ಯವನ್ನು ಪಡೆದವರಾದರೂ ಕವಿಯಾಗಿ ಆಗಾಗ್ಗೆ ಭಾವವಶರಾಗುವುದು ಅಸಹಜವೇನಲ್ಲ!

 

 

 


[1]    ನೆನಪಿನ ದೋಣಿಯಲ್ಲಿ, ಪು. ೧೯೪.

[2]    ಕುವೆಂಪು ಪತ್ರಗಳು, ಸಂಪಾದಕ – ಹರಿಹರ ಪ್ರಿಯ, ಪು. ೨೨.

[3]    ನೆನಪಿನ ದೋಣಿಯಲ್ಲಿ – ಕುವೆಂಪು, ಪು. ೧೦೦-೪೧.

[4]    ಕುವೆಂಪು ಪತ್ರಗಳು : (ಸಂ) ಹರಿಹರ ಪ್ರಿಯ, ಪು. ೩೬-೩೮.

[5]    ಕುವೆಂಪು ಪತ್ರಗಳು, (ಸಂ) ಹರಿಹರ ಪ್ರಿಯ, ಪು. ೪೨. ಈ ಪತ್ರ ಇಂಗ್ಲೀಷಿನಲ್ಲಿದೆ.

[6]    ನೆನಪಿನ ದೋಣಿಯಲ್ಲಿ – ಕುವೆಂಪು, ಪು. ೧೧೦೨.

[7]    ನೆನಪಿನ ದೋಣಿಯಲ್ಲಿ – ಕುವೆಂಪು, ಪು. ೧೧೦೮.

[8]    ಅದೇ., ಪು. ೧೧೧೨.

[9]    ಕೃತ್ತಿಕೆ, ಪು. ೧೮.

[10]   ನೆನಪಿನ ದೋಣಿಯಲ್ಲಿ, ಪು. ೧೧೧೩.

[11]   ಕೃತ್ತಿಕೆ, ಪು. ೧೫.

[12]   ಅದೇ., ಪು. ೧೭.

[13]   ಕುವೆಂಪು ಪತ್ರಗಳು, (ಸಂ.) ಹರಿಹರ ಪ್ರಿಯ, ಪು. ೪೫-೪೬.

[14]   ಕೃತ್ತಿಕೆ, ಪು. ೧೬.

[15]   ನೆನಪಿನ ದೋಣಿಯಲ್ಲಿ, ಪು. ೧೧೨೧-೧೧೨೨.

[16]   ಅದೇ., ಪು. ೧೧೨೩.

[17]   ನೆನಪಿನ ದೋಣಿಯಲ್ಲಿ, ಪು. ೧೧೨೪-೨೫.

[18]   ಅದೇ., ಪು. ೧೧೨೭.

[19]   ನೆನಪಿನ ದೋಣಿಯಲ್ಲಿ, ಪು. ೧೧೩೩.

[20]   ಶ್ರೀರಾಮಾಯಣದರ್ಶನಂ, ಸಂಪುಟ ೧, ಸಂಚಿಕೆ ೩, ಪಂಕ್ತಿಗಳು, ಪು. ೧-೩.

[21]   ಶ್ರೀರಾಮಾಯಣದರ್ಶನಂ, ಸಂಪುಟ ೧, ಸಂಚಿಕೆ ೩, ಪಂಕ್ತಿ, ಪು. ೨೯-೪೨.

[22]   ಅದೇ., ಸಂಪುಟ ೧, ಸಂಚಿಕೆ ೧೧, ಪಂಕ್ತಿ, ಪು. ೩೭೫-೩೭೯.

[23]   ಒಬ್ಬ ತಾಯಿಗೆ, ಪ್ರೇಮ ಕಾಶ್ಮೀರ, ಪು. ೭.

[24]   ಹೃದಯ ಮಂದಿರದಲ್ಲಿ, ಅದೇ. ಪು. ೧೪.

[25]   ನನ್ನವಳಿಗೆ, ಅದೇ, ಪು. ೬೫.

[26]   ಜೇನಿರುಳು ಅಥವಾ ಪ್ರಥಮ ಮಿಲನ, ಜೇನಾಗುವಾ, ಪು. ೪.

[27]   ಮೂಕವಾಗಿಹುದೇಕೆ ಕವಿಯ ವಾಣಿ, ಅದೇ, ಪು. ೭.

[28]   ನಲ್ಲೆ, ಅದೇ. ಪು. ೮.

[29]   ರವಿಗೆ ಕವಿಯ ಸರಸನಿಂದೆ, ಜೇನಾಗುವಾ, ಪು. ೧೦.

[30]   ಬಿಂಕದೊಲುಮೆ, ಪ್ರೇಮ ಕಾಶ್ಮೀರ, ಪು. ೪೫.

[31]   ಮೈಗೆ ಮೈ ಸೋಂಕಿದರೆ, ಅದೇ. ಪು. ೬೩.

[32]   ನೀನು-ನಾನು, ಅದೇ., ಪು. ೪೮.

[33]   ಪ್ರೇಮ ಹೇಮರಂಗದಿ, ಚಂದ್ರ ಮಂಚಕೆ ಬಾ ಚಕೋರಿ, ಪು. ೧೯.

[34]   ದಂಪತಿ, ಚಂದ್ರ ಮಂಚಕೆ ಬಾ ಚಕೋರಿ, ಪು. ೨೩.

[35]   ಮಂತ್ರಾಕ್ಷತೆ, ಪು. ೬.

[36]   ದಂಪತಿ ಪ್ರಾರ್ಥನೆ, ಕದರಡಕೆ, ಪು. ೩೫.

[37]   ವಿವಾಹ ವರ್ಧಂತಿ, ಮಂತ್ರಾಕ್ಷತೆ, ಪು. ೬.

[38]   ಪ್ರಥಮವಿರಹ, ಜೇನಾಗುವಾ, ಪು. ೫.

[39]   ವಿರಹಚಿತೆ, ಜೇನಾಗುವಾ, ಪು. ೨೨.

[40]   ಶೂನ್ಯಶೋಧನೆ, ಅದೇ., ಪು. ೨೭.

[41]   ವಾತ್ಸಲ್ಯ ವಿರಹಿ, ಅದೇ., ಪು. ೫೨-೬೭.

[42]   ಅರ್ಧಾಂಗಿಗೆ, ಚಂದ್ರ ಮಂಚಕೆ ಬಾ. ಚಕೋರಿ, ಪು. ೩೮.

[43]   ಪ್ರಾಣೇಶ್ವರಿಗೆ, ಅದೇ., ಪು. ೪೩.

[44]   ಚಂದ್ರಮಂಚಕೆ ಬಾ, ಚಕೋರಿ, ಪು. ೫೩.

[45]   ಪ್ರೇಮ ಕಾಶ್ಮೀರ, ಪು. ೪೨.

[46]   ಬಾ ಬೇಗನೆ!, ಅದೇ., ಪು. ೪೦.

[47]   ಇಷ್ಟ ಸಮಾಗಮದೊಲುಬಾರ, ಚಂದ್ರ ಮಂಚಕೆ ಬಾ, ಚಕೋರಿ, ಪು. ೫೫.

[48]   ಅದೇ., ಪು. ೪೫.

[49]   ಎಂತು ನೂಕಲಿ ನಾಳೆಯೊಂದು ದಿನವನು, ಚೆನ್ನಾ?, ಪ್ರೇಮ ಕಾಶ್ಮೀರ, ಪು. ೪೧.

[50]   ಬರುತಾಳೆ ನಾಳೆ, ಚಂದ್ರಮಂಚಕೆ ಬಾ, ಚಕೋರಿ, ಪು. ೫೪.

[51]   ಸತಿಗೆ ಸುಖಾಗಮನ, ಚಂದ್ರ ಮಂಚಕೆ ಬಾ, ಚಕೋರಿ, ಪು. ೪೯.

[52]   ವ್ರತಭಿಕ್ಷೆ, ಚಂದ್ರಮಂಚಕೆ ಬಾ, ಚಕೋರಿ, ಪು. ೪೭.

[53]   ವಿಜಯಸೇತು, ಅದೇ., ಪು. ೪೮.

[54]   ನನ್ನ ನಮರಗೈದಿಹೆ, ಚಂದ್ರಮಂಚಕೆ ಬಾ, ಚಕೋರಿ, ಪು. ೬೭.

[55]   ಸತಿಗೆ, ಮಂತ್ರಾಕ್ಷತೆ, ಪು. ೫೦.

[56]   ಸತಿಗೆ, ಚಂದ್ರಮಂಚಕೆ ಬಾ., ಚಕೋರಿ, ಪು. ೭.

[57]   ಹರಗಿರಿಜಾ, ಅದೇ. ಪು. ೧೭.

[58]   ದಿವ್ಯೌಷಧ, ಅನುತ್ತರಾ, ಪು. ೯.

[59]   ಯಾರು ಪುರಸ್ಕರಿಸಲೇನು?, ಅದೇ., ಪು. ೧೩.

[60]   ಅನುತ್ತರಾ, ಅದೇ., ಪು. ೨.

[61]   ಅದೇ., ಪು. ೧೬-೨೦.

[62]   ಅನುತ್ತರಾ, ಪು. ೩೪.

[63]   ಪ್ರಿಯಸತಿಗೆ, ಜೇನಾಗುವಾ, ಪು. ೨೬.

[64]   ನೆನಪಿನ ದೋಣಿಯಲ್ಲಿ, ಪು. ೬-೭.

[65]   ಇಕ್ಷುಗಂಗೋತ್ರಿ, ಪು. ೬-೯.

[66]   ಶ್ರೀ ರಾಮಾಯಣ ದರ್ಶನಂ, ಸಂಪುಟ ೧, ಸಂಚಿಕೆ ೪, ಪಂಕ್ತಿ ೫೬೯.

[67]   ಅದೇ., ಸಂಪುಟ ೪, ಸಂಚಿಕೆ ೨, ಪಂಕ್ತಿ ೨೮೪-೮೯.

[68]   ಊರ್ಮಿಳಾದೇವಿ, ಕೃತ್ತಿಕೆ, ಪು. ೫೦.