ಕ್ರಿ.ಶ. ೧೮೭೨ನೆಯ ಸಂವತ್ಸರದ ಮೇ ತಿಂಗಳ ಅಮಾವಾಸ್ಯೆಯ ರಾತ್ರಿ ಕಾಳಿಕಾ ಪೂಜೆಗೆ ಪ್ರಶಸ್ತವಾದ ಶುಭಸಮಯ. ಶ್ರೀ ರಾಮಕೃಷ್ಣಪರಮಹಂಸರು ತಮ್ಮ ಕೊಠಡಿಯಲ್ಲಿ ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸಿಕೊಂಡು, ತಮ್ಮಸತಿ ಶಾರದಾದೇವಿಯರನ್ನು ಬರಮಾಡಿ ಕೊಂಡು, ಅಣಿಗೊಂಡಿದ್ದ ಪೀಠದ ಮೇಲೆ ಅವರನ್ನು ಕೂರಿಸುತ್ತಾರೆ. ಶಾರದಾದೇವಿ ಪತಿಯ ಆಣತಿಯಂತೆ ಪೀಠದ ಮೇಲೆ ಕುಳಿತು ಭಾವಮಗ್ನರಾಗುತ್ತಾರೆ. ಭಾವ ಸಮಾಧಿಯಲ್ಲಿ ಮುಳುಗಿದ್ದ ಪರಮಹಂಸರು ಎಚ್ಚತ್ತನಂತರ, ಮಹಾಮಾತೆಯ ಪದತಲದಲ್ಲಿ ಸಕಲ ಪೂಜಾ ಸಾಮಗ್ರಿಗಳನ್ನು ನಿವೇದಿಸಿ,

ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ

ಎಂದು ಮೊದಲಾಗಿ ದೇವೀಸ್ತುತಿಯನ್ನು ಮಾಡುತ್ತ ಸಾಷ್ಟಾಂಗ ಪ್ರಣಾಮ ಮಾಡುತ್ತಾರೆ. ಪರಮಹಂಸರಿಂದ ಪೂಜಿತರಾದ ಶಾರದಾದೇವಿ ಲೋಕದ ಮಹಾಮಾತೆಯಾಗುತ್ತಾರೆ.

ಆ ಸತಿಪತಿಯ ದಿವ್ಯ ಸಂಬಂಧದ ವೈಶಿಷ್ಟ್ಯವನ್ನು ಕುವೆಂಪು ಅವರ ಮಾತಿನ ಮೂಲಕವೇ ಗ್ರಹಿಸುವುದು ಮೇಲು: ‘ಶ್ರೀ ರಾಮಕೃಷ್ಣ ಮತ್ತು ಶ್ರೀ ಶಾರದಾದೇವಿಯರ ಪವಿತ್ರ ಸಂಬಂಧವು ಜಗಜ್ಜೀವನ ಜಾಲದಲ್ಲಿ ಒಂದು ನೂತನ ಜ್ಯೋತಿಸ್ಸೂತ್ರವಾಗಿದೆ. ಕಾಮವಾಸನೆ ಲವಲೇಶ ಮಾತ್ರವೂ ಇಲ್ಲದ ಆ ಪಾವನ ಪ್ರೇಮಸ್ರೋತವು ಗಂಗೆಗೆ ಗಂಗೆಯಾಗಿದೆ. ಪರಮಹಂಸರು ತಮ್ಮ ಜೀವನಮಾನದೆಲ್ಲ ಶಾರದಾದೇವಿಯನ್ನು ತಂಗಿಯಂತೆ ಅಕ್ಕರೆಯಿಂದ ಲಾಲಿಸಿ ಪಾಲಿ ಸಿದರು; ಸಹೋದರನಂತೆ ವ್ಯವಹಾರದ ವಿಷಯಗಳನ್ನು ಕಲಿಸಿದರು; ಗುರುವಿನಂತೆ ದಿವ್ಯಜ್ಞಾನವನ್ನು ಬೋಧಿಸಿದರು; ಶಿಶು ತಾಯಿಯನ್ನು ಪೂಜಿಸುವಂತೆ ಪೂಜಿಸಿಯೂ ಪೂಜಿಸಿದರು.’

[1] ಶ್ರೀ ರಾಮಕೃಷ್ಣರು ಸನ್ಯಾಸಗ್ರಹಣ ಮಾಡಿದ್ದರೂ, ಕಾಮಿನೀ ಕಾಂಚನಗಳನ್ನು ತ್ಯಜಿಸಿದ್ದರೂ, ಪಾರಲೌಕಿಕ ಜೀವಿಯಾಗಿದ್ದರೂ, ಆಜನ್ಮ ಬ್ರಹ್ಮಚರ್ಯ ವ್ರತವನ್ನು ಕೈಗೊಂಡಿದ್ದರೂ, ಸತಿ ಇಚ್ಛಿಸಿದರೆ ವಿವಾಹ ಬಂಧನದ ಋಣವನ್ನು ತೀರಿಸಲು ಸಿದ್ಧ ರಾಗುತ್ತಾರೆ. ತಮ್ಮ ಜೀವನದ ಗಂತವ್ಯವನ್ನು ತಿಳಿಸಿದಾಗ ಸತಿ ಅವರ ಪಾರಲೌಕಿಕ ಜೀವನಕ್ಕೆ ಅನುಕೂಲೆಯಾಗಿರಲು ವಚನ ನೀಡುತ್ತಾರೆ. ಇಬ್ಬರೂ ಸರ್ವತ್ಯಾಗಕ್ಕೆ ಸಿದ್ಧರಾದಾಗಲೇ ಶ್ರೀ ರಾಮಕೃಷ್ಣರು ಸತಿಯನ್ನು ಜಗಜ್ಜನನಿಯ ಸ್ಥಾನದಲ್ಲಿರಿಸಿ, ಪೂಜಿಸಿ, ಪರಮಹಂಸ ರಾದದ್ದು.

ಜಗತ್ತಿನಲ್ಲಿ ಮಾತೃಪ್ರೇಮಕ್ಕೆ ಸಮಾನವಾದ ಪ್ರೇಮ ಮತ್ತೊಂದಿಲ್ಲ. ಒಂದು ಹೆಣ್ಣು ತಾಯಿಯಾಗಿ, ತಂಗಿಯಾಗಿ, ಮಡದಿಯಾಗಿ, ಮಗಳಾಗಿ ಜಗತ್ತಿನಲ್ಲೆಲ್ಲ ಪ್ರೇಮಾ ಮೃತವನ್ನು ವರ್ಷಿಸಿ, ಚೈತನ್ಯದಾಯಿಯಾಗಿ, ಜೀವ ಕೋಟಿಯನ್ನು ಪೋಷಿಸುತ್ತಾಳೆ. ಬದುಕಿನ ಚಲನೆಗೆ ಪ್ರೇರಕಳಾಗುತ್ತಾಳೆ. ಸೃಷ್ಟಿಪ್ರಲಯಗಳಿಗೆ, ಆಕರ್ಷಣೆ ವಿಕರ್ಷಣೆಗಳಿಗೆ, ವಿದ್ಯೆ ಅವಿದ್ಯೆಗಳಿಗೆ ಅವಳೇ ಕಾರಣಳಾಗುತ್ತಾಳೆ. ಪಿತೃ ಅಥವಾ ಪುರುಷ ತತ್ವಕ್ಕಿಂತ ಮಾತೃ ಅಥವಾ ಸ್ತ್ರೀ ತತ್ಪಕ್ಕೆ ಹೆಚ್ಚು ಪ್ರಾಶಸ್ತ್ಯವುಂಟಷ್ಟೆ. ಮಾತೃತ್ವದೊಡನೆ ದೈವೀ ಶಕ್ತಿಯೂ, ಸರ್ವಶಕ್ತತ್ವವೂ ಸಂಗತ ಗೊಂಡಿವೆ. ಜಗನ್ಮಾತೆ ಸರ್ವಾಂತರ್ಯಾಮಿ, ಸರ್ವಶಕ್ತಿ ಹಾಗೂ ಕರುಣಾಮಯಿ. ಅವಳು ಅವಿಭಕ್ತೆಯಾಗಿಯೂ ಸುವಿಭಕ್ತೆ; ಋತು ಚಿನ್ಮೂ; ಅವಳು ಎಲ್ಲವನು ಮಾಡಿ, ಎಲ್ಲರೊಳಗಿದ್ದು, ಎಲ್ಲವಾಗಿದ್ದಾಳೆ; ಅವಳು ರೋಗಶಕ್ತಿಯೂ ಅಹುದು, ಔಷಧಿ ಶಕ್ತಿಯೂ ಅಹುದು; ಅವಳು ಜಡಶಕ್ತಿಯೂ ಅಹುದು, ವಿಜ್ಞಾನ ಶಕ್ತಿಯೂ ಅಹುದು; ಗಾಳಿ ಬೆಂಕಿ ನೀರುಗಳ ಅಂತಸ್ಸತ್ವವೂ ಅವಳೇ; ಅವಳಿಂದಲೇ ಜನ್ಮ, ಅವಳಿಂದಲೇ ಜೀವನ, ಅವಳಿಂದಲೇ ಮುಕ್ತಿ.[2] ಶ್ರೀರಾಮಕೃಷ್ಣರು ಕಾಳಿಕಾದೇವಿ ಮತ್ತು ಶ್ರೀ ಶಾರದಾ ದೇವಿಯವರಲ್ಲಿ ಅಭೇದವನ್ನು ಗುರುತಿಸುತ್ತಾರೆ; ಆ ಭವತಾರಿಣಿಯನ್ನು ಪೂಜಿಸುತ್ತ, ನಿತ್ಯವಿಮುಕ್ತರಾಗಿ, ಜಗದ್ವಂದ್ವ ರಾಗುತ್ತಾರೆ. ದೇವಮಾನ್ಯರಾಗುತ್ತಾರೆ.

ಶ್ರೀ ರಾಮಕೃಷ್ಣರ ಕೃಪೆಗೆ ಪಾತ್ರರಾದ ಕುವೆಂಪು ಪ್ರತಿಯೊಬ್ಬ ಸ್ತ್ರೀಯಲ್ಲಿಯೂ ಜಗಜ್ಜನನಿಯನ್ನೆ ಕಾಣುತ್ತಾರೆ; ನಿಸರ್ಗ ಸೌಂದರ್ಯದಲ್ಲಿ ಜಗನ್ಮಾತೆಯ ಚೆಲುವನ್ನೆ ದರ್ಶಿ ಸುತ್ತಾರೆ; ಆ ಜನನಿ ರೂಪೆಯೂ ಅಹುದು, ಅರೂಪೆಯೂ, ಅಹುದು, ರೂಪಾತೀತೆಯೂ ಅಹುದು. ಆ ತಾಯಿ ಮಮತೆಯ ಸುಳಿಯೂ ಅಹುದು, ಕಾಮಹರೆಯೂ ಅಹುದು, ಪ್ರೇಮ ನಿಧಿಯೂ ನಿಜ. ರಮಣನಾನಂದಕ್ಕಾಗಿ ತನ್ನೆಲ್ಲ ರತಿತನವನ್ನು ಸೂರೆಗೊಟ್ಟು ಇನಿಯನ ಕಾಮಕಲೆಯನ್ನು ಪ್ರೇಮ ಸುಧೆಯನ್ನಾಗಿ ಪರಿವರ್ತಿಸಿದ ಮಡದಿಯೇ ಪತಿಗೆ ಕಣ್ಣಾಗಿ, ದಿಕ್ಕಾಗಿ, ಆಸರೆಯಾಗಿ, ಭಗವತ್ಸಾನ್ನಿಧ್ಯಕ್ಕೆ ಕೈ ಹಿಡಿದು ನಡೆಸುವ ವಾತ್ಸಲ್ಯ ನಿಧಿ ಮಾತೆಯಾಗಿಯೂ ಪರಿಣಮಿಸುತ್ತಾಳೆ. ಸತೀತತ್ವ ಮಾತೃತತ್ವಗಳು ಎರಕಗೊಂಡಂತಿರುವ ಮಂಡೋದರಿಯೇ ಈ ಲಕ್ಷಣಕ್ಕೊಂದು ಅಪೂರ್ವ ಲಕ್ಷ್ಯ. ಬ್ರಹ್ಮಚರ್ಯವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸುವವರಾದರೂ ಕುವೆಂಪು ವಿರಕ್ತರಲ್ಲ; ಕಾವಿಯ ಬಹಿರ್ವಾಸವನ್ನುಟ್ಟು ಅಂತರಂಗದಲ್ಲಿ ಕಾಮದೇವನನ್ನು ಆರಾಧಿಸುವ ಬೂಟಾಟಿಕೆಯ ಸನ್ಯಾಸಿಯೂ ಅಲ್ಲ; ಇಂದ್ರಿಯ ಚಾಪಲ್ಯಕ್ಕೆ ವಶರಾಗಿ, ಹೆಣ್ಣನ್ನು ಭೋಗವಸ್ತುವೆಂದು ತಿಳಿದು, ಪರಸ್ತ್ರೀಯನ್ನು ಸ್ವಸ್ತ್ರೀಯೆಂದು ತಿಳಿಯುವ ಅಧರ್ಮಿಲಂಪಟರೂ ಅಲ್ಲ. ಸ್ವಸ್ತ್ರೀಯಲ್ಲಿ ಭೋಗ ವೈವಿಧ್ಯವನ್ನನುಭವಿಸಿ, ಇಂದ್ರಿಯ ನಿಗ್ರಹವನ್ನು ಸಾಧಿಸಿ, ಮಡದಿಯಲ್ಲಿ ಹೆತ್ತ ತಾಯಿಯನ್ನು ಜಗಜ್ಜನನಿಯನ್ನು ಕಂಡುಕೊಂಡು, ಅಧ್ಯಾತ್ಮ ಸಾಧನೆಯಲ್ಲಿ ನಿಮಗ್ನರಾದ ಭೀಷ್ಮ ಸಂಕಲ್ಪರವರು, ಅಂತೆಯೇ ಋಷಿ ಪುಂಗವರು. ದಾಂಪತ್ಯದ ಪೂರ್ಣ ಸುಖವನ್ನನು ಭವಿಸಬಯಸುವವರು ರಾಮನ ಮುಂದಿನ ಸೂಕ್ತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮೇಲು:

ಹದಿಬದೆಗೆ ತೋರ್ದಪುದು ತನ್ನಿನಿಯನೊರ್ವನೊಳೆ
ಸರ್ವಮನುಜರ, ಮತ್ತೆ ಸರ್ವಲೋಕದ ಸರ್ವ
ವೈವಿಧ್ಯಮುಂ. ಪ್ರೇಮನಿಷ್ಠೆಯ ಪತಿಗುಮಂತೆ
ತನ್ನ ಸತಿಯೊಳೆ ತೋರ್ದಪುದು ಸರ್ವಲಲನೆಯರ
ಸರ್ವಶೃಂಗಾರಮುಂ![3]

ಇದು ಕುವೆಂಪು ಕಲ್ಪನೆಯ ದಾಂಪತ್ಯದರ್ಶನದ ಒಂದು ಮುಖ.

ದಾಂಪತ್ಯ ದರ್ಶನದ ಮತ್ತೊಂದು ಮುಖವನ್ನು ಸೀತಾರಾಮರ ವಿವಾಹಾನಂತರದ ಮೊದಲ ದಿನಗಳ ಒಲ್ಮೆವೇಟದಲ್ಲಿ ಈಕ್ಷಿಸಬಹುದು. ಜನಕ ಜಾತೆ ಸೀತೆ ತನ್ನ ಜೀವನದ ಪರಮ ಪುರುಷಾರ್ಥವನ್ನೂ ಅಖಿಳ ಸೃಷ್ಟಿಲೀಲಾಮಹೋದ್ದೇಶವನ್ನೂ ಶ್ರೀರಾಮ ಪ್ರೇಮದಲ್ಲಿ ಕಾಣುತ್ತಾಳೆ; ತನ್ನಿನಿಯನ ಚೆಲುವಿನಲ್ಲಿ ಅವಳು ನಿಸರ್ಗ ಸೌಂದರ್ಯವನ್ನು ದರ್ಶಿಸುತ್ತಾಳೆ; ರಾಮಚಂದ್ರ ಸಹ ಪ್ರಕೃತಿ ಲೋಕದಲ್ಲಿ ಸೀತೆಯ ಪ್ರತಿಬಿಂಬವನ್ನು ಕಾಣುತ್ತಾ,

ತಿರೆಮಗಳ ಚೆಲುವಲರ
ಬಂಡಿಡಿದ ಬಟ್ಟಲಂ ಪೀರ್ದನೆರ್ದೆತುಟಿಯಿಂದೆ
ತಣಿವಿನಂ ತನ್ನಾತ್ಮತೃಷ್ಣೆ.
…………………….
ಧರಣಿಜೆಯ
ಪುಣ್ಯಾತ್ಮಮಂ ಪ್ರೀತಿಸಿದ ವೋಲೆ ಸೀತೆಯಾ
ದೇಹಾತ್ಮ ಭೇದಮಂ ಪೇಳ್ ಮಿಥ್ಯೆಗೊಳಿಸದೆ ರಸದ
ದೃಷ್ಟಿ.[4]

ಕವಿಯ ಸಾಂಸಾರಿಕ ಜೀವನದ ವಾಸ್ತವ ಚಿತ್ರವೇ ಸೀತಾರಾಮರ ವೈವಾಹಿಕ ಜೀವನದಲ್ಲಿ ಮಾರ್ಪೊಳೆದಿದೆಯೆಂದರೆ ಅತಿಶಯೋಕ್ತಿಯಾಗದು. ವಿವಾಹ ಪೂರ್ವದಿಂದಲೂ ಕುವೆಂಪು ಶ್ರೀ ರಾಮಕೃಷ್ಣ ಶ್ರೀ ಶಾರದಾದೇವಿಯರ ಉಪಾಸಕರಾಗಿ ಅವರ ಜೀವನೋಪದೇಶಗಳಿಂದ ಪ್ರಭಾವಿತರಾಗಿದ್ದಾರೆಂಬುದೂ ಗಮನಿಸಬೇಕಾದ ಅಂಶ. ಇಂದ್ರಿಯಗಳ ಇಂದ್ರನಂದನದಲ್ಲಿ ಹತ್ತು ವರ್ಷಗಳು ವಿಹರಿಸಿದ ನಂತರ ಅವರು ಬ್ರಹ್ಮ ಚರ್ಯವ್ರತವನ್ನು ಕೈಗೊಳ್ಳುತ್ತಾರೆ.[5] ತಾಯಿಯ ಚರಣ ಕಿರಣವೇ ತಮ್ಮನ್ನು ಪೊರೆಯುವ ಸಲುವಾಗಿ ಸತಿಯ ರೂಪದಲ್ಲಿ ಬಂದಿದೆಯೆಂಬುದರಲ್ಲಿ, ಜಗವನಾಳುವ ತಾಯಿಯೆ ತಮ್ಮ ಜಾಯೆಯಾಗಿ ಜನ್ಮತಳೆದಿದ್ದಾ ಳೆಂಬುದರಲ್ಲಿ ಕವಿಗೆ ಸ್ವಲ್ಪವೂ ಸಂದೇಹವಿಲ್ಲ.

ಕುವೆಂಪು ಅವರ ಕಲ್ಪನೆಯ ದಾಂಪತ್ಯದರ್ಶನವನ್ನೂ, ಅದನ್ನವರು ಸಾಕ್ಷಾತ್ಕರಿಸಿ ಕೊಂಡಿರುವ ಅನುಪಮ ರೀತಿಯನ್ನೂ ಅವರ ಹರಗಿರಿಜಾ,[6] ಅನುತ್ತರಾ, ಸ್ವರ್ಗದ್ವಾರದಿ ಯಕ್ಷಪ್ರಶ್ನೆ, ವರ್ಧನ್ತಿ[7] ಎಂಬ ನಾಲ್ಕು ಮಹಾ ಕವನಗಳಲ್ಲಿ ಆಲೋಕಿಸಬಹುದು.

ಹರಗಿರಿಜಾ

ಸೃಷ್ಟಿಸ್ಥಿತಿಲಯಗಳನ್ನೊಳಗೊಂಡ ವಿಶ್ವವ್ಯಾಪಾರಗಳೆಲ್ಲವೂ ಹರಗಿರಿಜೆಯರ ಲೀಲೆ ಯೆಂಬುದು ಕವಿದಾರ್ಶನಿಕರ ಮತ. ಅವರಿಬ್ಬರೂ ಅಪ್ರತ್ಯೇಕ. ಜಗತ್ತಿನ ಚಲನೆಗೆ ಅವರಿಬ್ಬರ ಮಿಲನ ಅನಿವಾರ್ಯ, ಅವರಿಬ್ಬರಲ್ಲಿ ಯಾರೊಬ್ಬರಿರದಿದ್ದರೂ ವಿಶ್ವವೇ ಸ್ಥಗಿತಗೊಳ್ಳುತ್ತ ದೆಂಬುದು ವೈಜ್ಞಾನಿಕ ಸತ್ಯ. ವಿವಿಧ ಪರಮಾಣುಗಳ ಸಾಹಚರ್ಯದಿಂದ, ಕ್ರಿಯೆ ಪ್ರತಿಕ್ರಿಯೆಗಳಿಂದ ಪ್ರತಿಯೊಂದು ವಸ್ತುವೂ ಸೃಷ್ಟಿಯಾಗುತ್ತದಷ್ಟೆ. ವಿಜ್ಞಾನದ ಭಾಷೆಯಲ್ಲಿ ಆ ಪರಮಾಣುಗಳಿಗೆ ಪ್ರೋನ್ಯೂಟ್ರಾನ್ ಎಲೆಕ್ಟ್ರಾನ್ ಹೆಸರುಗಳಿರುವಂತೆಯೇ ಅಧ್ಯಾತ್ಮದ ಪರಿಭಾಷೆಯಲ್ಲಿ ಸೃಷ್ಟಿಯ ಮೂಲ ಕಾರಣಗಳಿಗೆ ಶಿವ ಶಿವಾಣಿಯರೆಂದು, ಪುರುಷ ಪ್ರಕೃತಿಯರೆಂದು ಹೆಸರಿವೆ. ಅನಾದಿಕಾಲದಿಂದ ಅನಂತ ಕಾಲದವರೆಗೆ ಅವರಿಬ್ಬರ ಪ್ರತಿಕ್ಷಣದ ಸಮ್ಮಿಲನದಿಂದ ಸೃಷ್ಟಿ ಕಾರ್ಯ ನಡೆಯುತ್ತಿರುತ್ತದೆ; ವಿಶ್ವದ ಸ್ಥಿತಿ ಪ್ರಲಯಗಳು ಜರುಗುತ್ತಿರುತ್ತವೆ. ಜಗತ್ತಿನ ಚಲನವಲನ ಯೋಗ ಕ್ಷೇಮಗಳಿಗೆಲ್ಲ ಅವರ ಕೂಟವೇ ಮೂಲ. ವಿಶ್ವಕ್ಷೇಮಕ್ಕಾಗಿ ಅವರ ಒಸಗೆ ಅನುಕ್ಷಣದಲ್ಲಿಯೂ ಅವಿರತವಾಗಿ ನಡೆಯುತ್ತಿರುತ್ತದೆ.

ಪರ್ವತವಧೂಪಾರ್ವತಿಯನ್ನು ಹರ ವರನಾಗಿ ಮದುವೆಯಾದ ನಂತರ, ಅವನು ಸತಿಯನ್ನು ಆಲಿಂಗಿಸಿಕೊಂಡು, ಚುಂಬಿಸಿ ‘ನೀನು ಸರೋವರ, ನಾನು ದೇವಕುಂಜರ’ ಎಂದು ನುಡಿಯುತ್ತಾನೆ. ಸುರ ಸರೋವರ ಪ್ರಕೃತಿಗೂ, ಸುರಕುಂಜರ ಪುರುಷನಿಗೂ ಸಂಕೇತಗಳಾಗಿವೆ. ಸರೋವರ ಕುಂಜರಗಳ ಸಮಾಗಮದ ಇಚ್ಛೆಯಿಂದ ಇಡೀ ವಿಶ್ವವೇ ರೋಮಾಂಚನಗೊಳ್ಳುತ್ತದೆ. ಶಿವನ ಇಚ್ಛೆ ಬೇರೆಯಲ್ಲ. ಸೃಷ್ಟಿ ಬೇರೆಯಲ್ಲ. ಇಚ್ಛೆ ಪ್ರಕಟವಾಗುತ್ತಿದ್ದಂತೆ ಸತೀರೂಪದ ಸರೋವರ ಹಾಲ್ಗಡಲಿಗೆ ಪ್ರತಿಸ್ಪರ್ಧಿಯಾಗಿ ಹಿಗ್ಗುತ್ತದೆ; ಅದು ಹಿಗ್ಗುತ್ತಿದ್ದಂತೆ ಪತಿರೂಪದ ಐರಾವತವೂ ಮಂದರಗಿರಿಯನ್ನು ಮೀರಿಸಿ ವರ್ಧಿಸುತ್ತದೆ. ಹಾಲ್ಗಡಲು ವಿಶ್ವದ ಸಮಸ್ತ ಅಪೂರ್ವ ವಸ್ತುಗಳ ನಿಧಿಯೆಂಬ, ಮಂದರ ಪರ್ವತ ಭೂಮಿಗೆ ಊರೆಯಾಗಿದೆಯೆಂಬ ಪ್ರತಿಮೆಗಳನ್ನೂ ಸಾಗರ ಮಥನದ ಪೌರಾಣಿಕ ಕಥೆಯನ್ನೂ ನೆನೆದಾಗ ಇಲ್ಲಿ ಕವಿ ಬಳಸಿರುವ ಪ್ರತಿಮೆಗಳ ಪೂರ್ಣಾರ್ಥ ಗ್ರಾಹ್ಯವಾಗುತ್ತದೆ. ಲೌಕಿಕಾರ್ಥದಲ್ಲಿ ಸರೋವರ ಮಂದರ ಹಾಗೂ ಮಥನಗಳು ಲೈಂಗಿಕ ಕ್ರಿಯೆಗೂ ಸಂತಾನವೃದ್ದಿಗೂ ಪ್ರತೀಕ ಗಳಾಗಿವೆಯೆಂದು ಪರಿಭಾವಿಸಬಹುದಷ್ಟೆ.

ಸರೋವರದ ಅಂಚೇ ಸುರನಂದನ : ಅಪ್ಸರಿಯರ ಗಾನವೇ ಪಕ್ಷಿ ಕೂಜನ. ಗಂಧರ್ವಗಾನವೇ ಕ್ರೌಂಚ ಹಂಸಗಳ ರೂಪ ಪಡೆದಿದೆ. ಸುರರ ನೋಟಗಳೆ ಆ ಕೊಳದ ಮೆಯ್ಯಲ್ಲಿ ಮೂಡಿದ ಕಮಲಗಳು. ಐರಾವತ ಸರೋವರದಲ್ಲಿ ಧುಮುಕುತ್ತಿದ್ದಂತೆಯೆ ಸರೋವರದ ನೀರ ಸೀರೆ ಚೆಲ್ಲಾಪಿಲ್ಲಿಯಾಗುತ್ತದೆ. ನೀರಿನ ನಿರಿ ನಿರಿಗಳೊಳಗೆ ಅಗ್ನಿಯ ಇಷ್ಟಾರ್ಥ ಈಡೇರುತ್ತದೆ. ಪಂಚ ಭೂತಗಳಲ್ಲೊಂದಾದ ಈ ಅಗ್ನಿ ಮಾನವನ ಮಿತ್ರ, ಭೂಮಿಯ ಕೇಂದ್ರ ಬಿಂದು, ವಿಶ್ವವ್ಯಾಪಕವಾಗಿ ಅಲ್ಲಿ ನಡೆಯುವ ಎಲ್ಲ ಕ್ರಿಯೆಗಳನ್ನು ನೋಡುತ್ತ, ಆಹಾರ ಐಶ್ವರ್ಯಗಳನ್ನೂ ಮಕ್ಕಳನ್ನೂ ಕೊಡುವ ಸುರ ಪುರೋಹಿತ. ಅವನು ವಿರಾಟ್ ಪುರುಷನ ಮುಖದಿಂದ ಜನಿಸಿದ ತೇಜೋವಂತ. ನೀರಿನಿಂದ ಹುಟ್ಟಿದವನೆಂದೂ ಹೇಳುವುದುಂಟು. ಅವನು ಹುತವಹನಾಗಿ ಮಾನವರ ಇಷ್ಟಾರ್ಥಗಳನ್ನು ಸ್ವರ್ಗಕ್ಕೆ ಮುಟ್ಟಿಸುವ ಮನುಕುಲದ ಸಂರಕ್ಷಕನೂ ಅಹುದು. ಶಿವ ಶಿವಾಣಿಯರ ಸಮಾಗಮದಿಂದಲ್ಲದೆ ಅವನ ಇಷ್ಟಾರ್ಥ ಸಿದ್ದಿಸದು.

ರತಿ ಮನ್ಮಥರ ನೆರವಿಲ್ಲದಿದ್ದರೆ ಸೃಷ್ಟಿಕಾರ್ಯ ಸ್ಥಗಿತಗೊಳ್ಳುವುದುಂಟಷ್ಟೆ. ಹೀಗೆಂದು  ಮನ್ಮಥ ಕಾಲದೇಶಗಳ ಔಚಿತ್ಯವನ್ನು ಮೀರುವಂತಿಲ್ಲ. ಅಸ್ಥಾನದಲ್ಲಿ  ಅಕಾಲದಲ್ಲಿ  ಅವನ ಉಪಟಳ ಹಾನಿಕರವಾಗಿ ಪರಿಣಮಿಸಬಹುದು. ಈಶ್ವರನ ತಪಸ್ಸನ್ನು ಭಂಗಗೊಳಿಸಿದ್ದಕ್ಕಾಗಿ ಅವನು ಭಸ್ಮೀಕೃತನಾಗುತ್ತಾನೆ; ಪಾರ್ವತಿಯ ತಪಸ್ಸನ್ನು ಮೆಚ್ಚಿದ ಶಿವ ಅವಳ ಕೈ ಹಿಡಿಯಲೊಪ್ಪಿದಾಗ, ಅತನುವಾದ ಮನ್ಮಥ ಸತನುವಾಗುತ್ತಾನೆ. ಪುನಸ್ಸಮಾಗಮದಲ್ಲಿ ಗಿರಿಜಾಶಂಕರರು ರತಿ ಮನ್ಮಥರಾಗಿ, ವಿಶ್ವಕಲ್ಯಾಣಕ್ಕೆ ಕಾರಣರಾಗುತ್ತಾರೆ. ಯುಗ ಯುಗಗಳು ಕಳೆದರೂ ‘ಬತ್ತದಾ ಸರೋವರ; ಸೋಲದು ಸುರಕುಂಜರ!” ಅಂದರೆ ಸೃಷ್ಟಿ ಕಾರ್ಯ ನಿರಂತರವಾಗಿ ಸಾಗುತ್ತದೆ.

ಹರ ಗಿರಿಜೆಯನ್ನು ಚುಂಬಿಸಿ ‘ನೀ ಬಸಂತ ಬನಸಿರಿ!’ ಎನ್ನುತ್ತಾನೆ. ತಾನು ಎಂದಿಗೂ ಮುಪ್ಪಾಗದ, ಮೋಹಕವಾದ ವಸಂತ ಶ್ರೀಯಾದರೆ, ತನ್ನ ಪತಿ ನಿಸರ್ಗದ ನಡುವೆ ಕುಣಿದು ಕುಪ್ಪಳಿಸುವ ಖಗಮೃಗ ಮಾರುತಗಳಾಗಲೆಂದು ಗಿರಿಜೆ ಆಶಿಸುತ್ತಾಳೆ. ಜಗತ್ತಿನ ಆ ಮಾತಾಪಿತರಿಗೆ  ಕಾಲಗಳೆಲ್ಲ ವಸಂತವೆ, ನಾಡುಗಳೆಲ್ಲ ಚೆಲುವೇ. ಸಕಲ ಸಚರಾಚರ ವಸ್ತುಗಳ ಮೂಲಕ ಅವರು ಗಂಡು ಹೆಣ್ಣುಗಳಾಗಿ ಮೊಗದೋರುತ್ತಾರೆ. ಪುರುಷ ಪ್ರಕೃತಿ  ತತ್ತ್ವಕ್ಕೆಂತೋ ಸೃಷ್ಟಿಗೂ ಅವರೆ ಮೂಲ. ಅವರಿಬ್ಬರ ಮಿಲನ ಭೋಗಲೀಲೆಗಳಿಂದ ಸೃಷ್ಟಿ: ಅವರಿಬ್ಬರೂ ಅಭೇದತ್ವದಿಂದ ಒಂದು ಗೂಡಿದಾಗ ಶೂನ್ಯ.

ಸಕಲ ಸಚರಾಚರ ವಸ್ತುಗಳಲ್ಲಿ ಹುದುಗಿರುವ ಅವರ ಅಸದೃಶವೂ ಅನಂತವೂ ಆದ ಭೋಗಲೀಲೆ ಅವುಗಳ ಮೂಲಕವೇ ಪ್ರಕಟಗೊಳ್ಳುತ್ತದೆ. ಹೂವಿನ ಚೆಲುವಿನಲ್ಲಿ, ನವಿಲಿನ ಕುಣಿತದಲ್ಲಿ, ದುಂಬಿಯ ಝೇಂಕಾರದಲ್ಲಿ, ಕಾರೊಡಲಿನ ಮಿಂಚಿನಲ್ಲಿ, ಉದಯಾಸ್ತಗಳ ದಿವ್ಯ ಸೌಂದರ್ಯದಲ್ಲಿ, ಆಗಸದ ಮುಗಿಲಿನ ಚಿತ್ತಾರದಲ್ಲಿ, ತಾರೆಗಳ ಮಿಣುಕಿನಲ್ಲಿ, ತಿಂಗಳಿನ ಇಂಪಿನಲ್ಲಿ, ಪ್ರಾಣಿಗಳ ಮಿಲನದಲ್ಲಿ ಅವರು ಚಿರಂತನ ಯೌವನದಿಂದ ಮೆರೆಯುತ್ತಾರೆ. ಕುವೆಂಪು ಹೇಮಾವತಿಯವರೂ ಆ ಹರಗಿರಿಜೆಯರ ಚಿತ್ಕಲೆಯ ಅಂಶಗಳೆ ಆಗಿದ್ದಾರೆ. ಅವರ ಲೀಲೆಗಳು ಏನಿದ್ದರೂ ಶಿವ ಶಿವಾಣಿಯರ ಲೀಲೆಗಳೆ ಆಗಿವೆ. ಈ ಕುವೆಂಪು ಹೇಮಾವತಿಯವರ ಈ ಲೀಲೆ ಅನಾದಿಕಾಲದಿಂದ ನಡೆದು ಬಂದಿದೆ; ಅನಂತ ಕಾಲದವರೆಗೆ ನಡೆಯುತ್ತದೆ. ಅವರ ಸಾವು ಸಾವಲ್ಲ, ಅಮೃತದ ನೆಲೆ, ಅದರದೊಂದು ಲೀಲೆ.

ಆದಿ ಅಂತ್ಯಗಳಲ್ಲಿ ಹರಗಿರಿಜೆಯರಾಗಲಿ, ಕುವೆಂಪು ಹೇಮಾವತಿಯರಾಗಲಿ ಏಕವೇ ಹೊರತು ಪ್ರತ್ಯೇಕವಲ್ಲ. ಈ ತತ್ತ್ವವೇ ಅರ್ಧನಾರೀಶ್ವರ ಕಲ್ಪನೆಯಲ್ಲಿ ಪ್ರಕಟವಾಗುತ್ತದೆ. ಭೌತಿಕ ನೇತ್ರಗಳಿಗೆ ಎರಡಾಗಿ ತೋರುವ ಗಂಡು ಹೆಣ್ಣುಗಳು ಅಧ್ಯಾತ್ಮಿಕ ದೃಷ್ಟಿಗೆ ಒಂದೇ ಶಕ್ತಿಯ ಎರಡು ಮುಖಗಳಾಗಿ-ಎಲೆಕ್ಟ್ರಾನ್ ನ್ಯೂಟ್ರಾನ್ ಪ್ರೋ- ತೋರುತ್ತವೆ. ದ್ವಿಲಿಂಗಿಗಳೇ ಒಂದು ಕಾಲದಲ್ಲಿ ವಿವಿಧ ಲಿಂಗಿಗಳಾಗಿ ಪರಿವರ್ತನೆಗೊಂಡುವೋ ಏನೋ? ಭೌತಿಕವಾಗಿಯೂ ಲಿಂಗಭೇದವೊಂದನ್ನು ಮರೆತರೆ, ಗಂಡು ಹೆಣ್ಣುಗಳು ವಿಭಿನ್ನವಲ್ಲವೆಂಬ ಅಂಶ ಯಾರಿಗಾದರೂ ಮನವರಿಕೆಯಾಗದಿರದು. ಗಂಡಿನಲ್ಲಿ ಹೆಣ್ಣೂ, ಹೆಣ್ಣಿನಲ್ಲಿ ಗಂಡೂ ಲೀನಗೊಂಡಿವೆಯೆಂದರೂ ತಪ್ಪಾಗದು. ನಿಷ್ಕಳಂಕವಾದ ಅಂತಸ್ಸೌಂದರ್ಯ, ದ್ವೈತಕ್ಕೆಡೆಯಿಲ್ಲದ ಏಕತೆ, ಅಹಂಕಾರ ಮಮಕಾರಗಳಿಂದ ಮುಕ್ತಗೊಂಡ ಪರಿಶುದ್ಧ ಭಾವನೆ ಪ್ರೇಮದ ಲಕ್ಷಣಗಳು. ಅದ್ವೈತ ಸಿದ್ದಿಯಲ್ಲಿ ಪರ್ಯವಸಾನವಾಗುವ ದಿವ್ಯ ಪ್ರೇಮವೇ ದಾಂಪತ್ಯ ದರ್ಶನದ ತಿರುಳು.

ಅನುತ್ತರಾ

ಈ ದರ್ಶನದ ಉತ್ಕರ್ಷವನ್ನು, ಅದರ ಪರಾಕಾಷ್ಠೆಯನ್ನು ಅನುತ್ತರಾ, ಸ್ವರ್ಗ ದ್ವಾರದಿ ಯಕ್ಷಪ್ರಶ್ನೆ, ವರ್ಧಂತಿ ಎಂಬ ಮೂರು ಮಹಾ ಕವನಗಳಲ್ಲಿ ಕಾಣಬಹುದು. ಇತರ ಅರ್ಥಗಳ ಜತೆಗೆ, ಅದ್ವಿತೀಯೆ, ಶ್ರೇಷ್ಠತಮೆ, ಅನನ್ಯೆ ಎಂಬೆಲ್ಲ ಅರ್ಥಗಳು ‘ಅನುತ್ತರಾ’ ಎಂಬ ಪದದಿಂದ ಹೊಮ್ಮುತ್ತವೆ. ಜಗನ್ಮಾತಾ ಸ್ವರೂಪಿಯಾದ ಹೇಮಾವತಿಯವರು ಕವಿಯನ್ನು ರಕ್ಷಿಸಲೆಂದೇ ಜನ್ಮಧಾರಣೆ ಮಾಡಿದ ‘ಅನುತ್ತರಾ’ ಎಂಬ ದಾರ್ಶನಿಕ ದೃಷ್ಟಿಯ ಅಭಿವ್ಯಕ್ತಿಯೇ ಈ ಕವನದ ಉದ್ದೇಶ.

‘ಯಾರಿವಳು ಮಲಗಿರುವಳು?’ ಎಂಬ ಪ್ರಾರಂಭ ಪ್ರಶ್ನಾರ್ಥಕ ಪಂಕ್ತಿಯೇ ಕವಿಯ ಮನಸ್ಸಿನಲ್ಲಿ ಕಾತರತೆ, ಕುತೂಹಲ ಮತ್ತು ಚಿಂತನೆಗಳನ್ನು ಕೆರಳಿಸುತ್ತದೆ, ಅವನ ಅಂತರಾತ್ಮವನ್ನು ಜಾಗ್ರತಗೊಳಿಸುತ್ತದೆ. ಕವಿ ಮೊದಮೊದಲು ಸತಿಯ ಶಾರೀರಕ ಸೌಂದರ್ಯ ಪಾನೋನ್ಮತ್ತನಾಗಿ, ಅವಳಿಂದ ಪಡೆದ ಸುಖದ ಆನಂದದಲ್ಲಿ ತೇಂಕಾಡುತ್ತಾನೆ. ಸತಿ ಸಹ ಪತಿಯ ಸುಖಕ್ಕಾಗಿ ತನ್ನ ಸರ್ವಸ್ವವನ್ನು ಸೂರೆ ನೀಡಿದ್ದಾಳೆ. ಬರಬರುತ್ತ ಕವಿ ಸತಿಯಲ್ಲಿ ಜಗನ್ಮಾತೆಯ ಅಂಶವನ್ನೆಲ್ಲ, ಜಗನ್ಮಾತೆಯನ್ನೇ ಕಾಣುತ್ತಾರೆ. ಮಂಚ, ಭೋಗಾಸನ, ಚುಂಬನ, ಆಲಿಂಗನ, ಪ್ರಣಯ ಮಂತ್ರ ಎಲ್ಲವೂ ಯೋಗವೇದಿಕೆಯಾಗಿ, ಯೋಗಾಸನವಾಗಿ, ಧ್ಯಾನಮುದ್ರೆಯಾಗಿ, ಯೋಗನಿದ್ರೆಯಾಗಿ, ನಿಧುವನ ಪ್ರಲಯವಾಗಿ ಪರಿಣಮಿಸುತ್ತವೆ. ನಿಧುವನ ಸಮಾಧಿಯಲ್ಲಿ ದ್ವೈತ ಅದ್ವೈತದಲ್ಲಿ ಸಿದ್ದಿಸುತ್ತದೆ. ಸತಿಯ ಅಂಗಾಂಗವೆ ಸಾಧನ ರಂಗವಾಗಿರಲು, ಸೇಂದ್ರಿಯ ಭೋಗದಲ್ಲಿಯೂ ಅತೀಂದ್ರಿಯ ಸುಖವನ್ನು ಮರೆಯದೆ, ಅವರಲ್ಲಿ ಸರ್ವಾಂತರಾತ್ಮೆಯನ್ನು ಕಾಣುತ್ತಾರೆ. ತನ್ನ ಕಾವ್ಯ ಶರೀರದಲ್ಲಿ ಕವಿ ಓತಪ್ರೋಸೇರಿಕೊಂಡಿರುವಂತೆ, ಸೃಷ್ಟಿಯಲ್ಲಿ ಸೃಷ್ಟಿ ಶಕ್ತಿ ಸಂಲೀನವಾಗಿರುತ್ತದೆ. ಸ್ತ್ರೀ ಅಬಲೆಯೆಂಬುದು ಲೋಕದ ನಂಬಿಕೆ. ಈ ವಿಷಯದಲ್ಲಿ ಕುವೆಂಪು ಅವರ ದೃಷ್ಟಿಯೇ ಬೇರೆ. ಬ್ರಾಹ್ಮೀ ಸ್ವರೂಪದ ಪ್ರಚಂಡ ವಿಶ್ವಶಕ್ತಿ ಸಂಕುಚಿತಗೊಂಡು ಅವರೋಹಣವಾಗುವಾಗ ಕೆಳ ಕೆಳಗಿಳಿ ದಂತೆಲ್ಲ ಬೃಹನ್ ಮಹಾಶಕ್ತಿ ಪ್ರಯೋಗವಾಗಬೇಕಾಗುತ್ತದೆಯೆಂಬುದೂ ಅಬಲೆಯಾಗ ಬೇಕಾದರೆ ಮಹಾಶಕ್ತಿಯೆ ಬೇಕೆಂಬುದೂ ಅವರ ನಿಲುವು.

ಸೂರ್ಯ ನಕ್ಷತ್ರಾದಿ ಭೂವ್ರೋಸಾಗರವ
ಮಾಡಿ ಆಡಿಪ ದಿವ್ಯೆ ಆ ಸರ್ವಶಕ್ತೆ
ಇಲ್ಲಿ ಅಬಲೆಯೆ ಆಗಿ, ಒಲಿದ ಹೆಂಡತಿಯಾಗಿ,
ಮಕ್ಕಳೊಂದಿಗೆ ಚಿಕ್ಕ ಸಂಸಾರಾನುರಕ್ತೆ![8]

ಆ ಸರ್ವಶಕ್ತೆ ಸ್ವ-ಇಚ್ಛೆಯಿಂದ ನಾನಾ ರೂಪ ನಾಮ ಆಕೃತಿಗಳನ್ನು ತಳೆದಾಗ ತನ್ನ ಸ್ವಭಾವವನ್ನು ನಿಯತಿಗನುಗುಣವಾಗಿ ನಿಯಂತ್ರಿಸಿಕೊಳ್ಳುತ್ತಾಳೆ.

ಭೂಮೆಯೂ, ಸರ್ವಜ್ಞೆಯೂ, ಪೂರ್ಣಸುಖೆಯೂ, ಲೀಲಾವಿನೋದೆಯೂ ಆದ ಜಗನ್ಮಾತೆ ಭೂಮಿಯಲ್ಲವತರಿಸಿದಾಗ ಆಯಾಯ ಪ್ರಾಕೃತಿಕ ಸ್ವಭಾವಕ್ಕನುಗುಣವಾಗಿ ಅಲ್ಪೆಯಾಗಿ, ಆಜ್ಞೆಯಾಗಿ, ಸುಖದುಃಖೆಯಾಗಿ ವರ್ತಿಸುತ್ತಾಳೆ. ಇಲ್ಲಿ ‘ಅಲ್ಪೆ’ ‘ಅಜ್ಞೆ’ ಎನ್ನುವ ಪದಗಳನ್ನು ರೂಢಿಯ ನಿಕೃಷ್ಟಾರ್ಥದಲ್ಲಿ ಬಳಸಿಲ್ಲವೆಂಬುದನ್ನು ವಾಚಕರು ಅರಿಯ ಬೇಕು. ಭೂಮಿಯಲ್ಲವತರಿಸಿದ ಆ ತಾಯಿ ಗಾತ್ರದಲ್ಲಿ ಸಣ್ಣೆಯಾದರೂ ಗುಣದಲ್ಲಿ ಪೂರ್ಣೆ ಯೆನ್ನುವುದನ್ನು ಮರೆಯುವಂತಿಲ್ಲ. ‘ಅದು ಪೂರ್ಣ; ಇದು ಪೂರ್ಣದಂಶವು ಪೂರ್ಣ’ ಎಂಬ ಉಪನಿಷನ್ಮಂತ್ರವನ್ನು ಈ ಸಂದರ್ಭದಲ್ಲಿ ಗಮನಕ್ಕೆ ತಂದುಕೊಳ್ಳಬೇಕು. ವೇದಾಂತದ ಪ್ರಕಾರ ‘ಅವಿದ್ಯೆ’ ಎಂದರೆ ಲೌಕಿಕ ವಿದ್ಯೆ ಎಂದು ಅರ್ಥವೇ ಹೊರತು, ವಿದ್ಯಾವಿಹೀನತೆಯಲ್ಲ. ಅಂತೆಯೇ ‘ಅಜ್ಞೆ’ ಎಂದರೆ ಏನೂ ತಿಳಿಯದವಳೆಂದಲ್ಲ; ಸರ್ವಜ್ಞೆಯ ದೃಷ್ಟಿಯಿಂದ ಮಿತಜ್ಞಾನಿಯೆಂದಷ್ಟೆ ಅರ್ಥ. ಅಧ್ಯಾತ್ಮ ದೃಷ್ಟಿಗೆ ನಿರಾಕಾರೆಯಾಗಿ ನಿರ್ಗುಣೆಯಾಗಿ ಅರೂಪೆಯಾಗಿ ಕಾಣುವ ಆಕೆ ಲೌಕಿಕ ದೃಷ್ಟಿಗೆ ಸಾಕಾರೆಯಾಗಿ, ಸುಗುಣೆಯಾಗಿ ರೂಪವತಿ ಯಾಗಿ ತೋರುತ್ತಾಳೆ. ಇಲ್ಲಿ ‘ಅರೂಪೆ’ ಎಂದರೆ ರೂಪಾತೀತಳೆಂದೇ ಅರ್ಥ. ಅವಳು ಕುರೂಪಿಯಾಗಿಯೂ ಕಾಣಿಸಿಕೊಳ್ಳಬಲ್ಲಳು.

ಸತ್ಯ ಸಾಕ್ಷಾತ್ಕಾರಕ್ಕಾಗಿ ಬುದ್ಧನಂತೆ ಮಡದಿ ಮಕ್ಕಳನ್ನು ಭೂಮಿ ಕಾಣಿಗಳನ್ನು ತ್ಯಾಗ ಮಾಡಿದವರಿದ್ದಾರೆ. ಯೇಸು ವಿವೇಕಾನಂದರಂತೆ ಅಧ್ಯಾತ್ಮ ಸಿದ್ದಿಗಾಗಿ ಆಜನ್ಮ ಬ್ರಹ್ಮಚಾರಿ ಗಳಾಗುಳಿದವರಿದ್ದಾರೆ. ಮಹಮ್ಮದ ಬಸವೇಶ್ವರರಂತೆ ಹಲವರೊ ಇಬ್ಬರೊ ಮಡದಿಯರನ್ನು ಮಾಡಿಕೊಂಡು, ಭೋಗ ಭೂಮಿಯಲ್ಲಿದ್ದು, ಸತ್ಯ ಸಾಕ್ಷಾತ್ಕಾರವನ್ನು ಅನುಭವಿಸಿದವರಿದ್ದಾರೆ. ಶ್ರೀ ರಾಮಕೃಷ್ಣ ಶ್ರೀ ಶಾರದಾದೇವಿಯವರಂತೆ ವಿವಾಹಾನಂತರ ಸತಿಪತಿಗಳಂತೆ ಜತೆ ಯಲ್ಲಿದ್ದರೂ ಸಂಪೂರ್ಣವಾಗಿ ಲೈಂಗಿಕಾಸಕ್ತಿಯಿಂದ ಮುಕ್ತರಾಗಿ, ನಿರ್ಲಿಪ್ತರಾಗಿದ್ದುಕೊಂಡು, ಒಬ್ಬರು ಮತ್ತೊಬ್ಬರಲ್ಲಿ ಜಗದೀಶ್ವರನನ್ನೂ ಜಗನ್ಮಾತೆಯನ್ನೂ ಕಂಡುಕೊಂಡು ದ್ವೆವತ್ವಕ್ಕೇರಿ ದವರು ಈ ಜಗತ್ತಿನಲ್ಲಿ ಇದ್ದಂತಿಲ್ಲ. ಮಹಾತ್ಮ ಗಾಂಧೀಜಿಯಂತೆ ಕೆಲಕಾಲ ಮಾತ್ರ ವೈವಾಹಿಕ ಕರ್ಮವನ್ನು ನೆರವೇರಿಸಿ. ಬ್ರಹ್ಮಚರ್ಯವ್ರತವನ್ನು ಕೈಕೊಂಡು, ಸೋದರ ಸೋದರಿ ಯರಂತೆ ಬಾಳಿದ ಸಂಯಮ ಶೀಲರು ಈ ಜಗತ್ತಿನಲ್ಲಿ ವಿರಳ. ಶ್ರೀ ರಾಮಕೃಷ್ಣರ ಮಾನಸ ಪುತ್ರರಾದ ಶ್ರೀ ಕುವೆಂಪು ಅವರೂ ಸಹ ಮದುವೆಯಾದ ನಂತರ ಎಂಟು ಹತ್ತು ವರ್ಷ ಮಾತ್ರ ಪುರುಷಾರ್ಥಗಳಲ್ಲೊಂದಾದ ಕಾಮಜೀವನವನ್ನು ಧಾರ್ಮಿಕವಾಗಿ ನಡೆಸಿ, ಬ್ರಹ್ಮಚರ್ಯ ವ್ರತವನ್ನು ಕೈಗೊಳ್ಳುತ್ತಾರೆ.[9] ಅಷ್ಟೇ ಅಲ್ಲ, ತಮ್ಮ ಸತಿ ಹೇಮಾವತಿಯವರಲ್ಲಿ ಜಗನ್ಮಾತೆ ಯನ್ನು ಕಾಣುತ್ತಾರೆ. ಅವರು ಲೌಕಿಕ ರೀತಿಯಲ್ಲಿ ದೇವಂಗಿ ರಾಮಣ್ಣ ಗೌಡರ ಮಗಳಾದರೂ, ಕುಪ್ಪಳಿಯ ವೆಂಕಟಪ್ಪಗೌಡ ಮಗನ ಹೆಂಡತಿಯಾದರೂ, ಅವರು ಆಧ್ಯಾತ್ಮಿಕವಾಗಿ ಆದಿಶಕ್ತಿ, ಮಹಾಮಾಯೆ.

ಅನುತ್ತರಾ

ಮರ್ತ್ಯನೊಂದು ಮನಃಸ್ಥಿತಿಯ ವಿಸ್ಮೃತಿಯಿಂದಾಗಿ ತಲೆಯೆತ್ತಿದ ಕಾಮನಲ್ಲಿಯೂ ರಾಮನನ್ನು, ಮೃಣ್ಮಯದಲ್ಲಿಯೂ ಚಿನ್ಮಯ ರತಿಯನ್ನು ಕಂಡವರು ಕುವೆಂಪು. ಬರಬರುತ್ತ ಅವರ ಪ್ರೇಮ ದಿವ್ಯಾನುರಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ.

ತಾಯ ಚರಣ ಕಿರಣಪೊಂದು
ಕೃಪೆಯೊಳೆನ್ನ ಪೊರೆಯಲೆಂದು
ನಿನ್ನ ರೂಪದಿಂದ ಬಂದು
ಸಲಹುತಿರುವುದೆನ್ನನಿಂದು![10]

ಕಾಮದ ಕಿಲುಬು ಹರಿಯುತ್ತಿದ್ದಂತೆ ಹೇಮಾವತಿಯವರು ಅವರಿಗೆ ಕಾಣಿಸಿಕೊಂಡ ರೀತಿಯಿದು, ‘ನಮಸ್ಕರಿಸಿ ನಮಸ್ಕರಿಸಿ, ನನ್ನ ನಮರಗೈದಿಹೆ’ ಎಂಬ ಕವಿಯ ಸಂಬೋಧನೆ ಯಲ್ಲಿ ಅಪೂರ್ವವಾದ ನಿತ್ಯ ಸತ್ಯದ ಪ್ರಬೋಧೆಯಿದೆ.

ನನ್ನ ದನುಜತನದ ಕೊಲೆಗೆ
ನಮನವೊಂದು ಕೈದುವಾಗೆ,
ದೇವರಡಿಗಳಿಳಿವ ಕಲೆಗೆ
ಮುಡಿಯ ಮಣಿಹ ಸೇತುವಾಗೆ,
ಒಂದೊಂದೆಯೆ ನಮನದಿಂದೆ
ನನ್ನಲ್ಪವನೆಲ್ಲ ಕೊಂದೆ
ಧಮನಿ ಧಮನಿಯಲ್ಲಿ ಹರಿವ
ನೆತ್ತರೆಲ್ಲ ಅಮೃತವಾಗೆ
ಮನುಜತನವನಳಿಸಿಹೆ
ದಿವಿಜತನವನಿಳಿಸಿಹೆ
ನನ್ನನಳಿಸಿ ಉಳಿಸಿಹೆ[11]

ಇದು ಕವಿ ಕಲ್ಪನೆಯ ಅವಾಸ್ತವ ಜಲ್ಪವೂ ಅಲ್ಲ; ರಂಗಮಂದಿರದ ವೇಷಧಾರಿಯ ಪ್ರಲಾಪವೂ ಅಲ್ಲ; ಬಹಿರಂಗದಲ್ಲಿ ರಾಮನನ್ನೂ ಅಂತರಂಗದಲ್ಲಿ ಕಾಮನನ್ನೂ ನೆನೆಯುವ ಪ್ರಚಾರ ಪ್ರಿಯ ಕಾವಿಧಾರಿಗಳ ಬೂಟಾಟಿಕೆಯ ವಾಗ್ಧಾರೆಯೂ ಅಲ್ಲ; ಶುದ್ಧಾಂತಃಕರಣದ ಅಧ್ಯಾತ್ಮ ಸಾಧಕರ ಸ್ವಾನುಭವ ಜನ್ಯ ಮುಕ್ತಾಫಲಗಳು. ಶ್ರೀ ರಾಮಕೃಷ್ಣರ ಪೂಜೆಯಿಂದೆಂತು ಶಾರದಾದೇವಿ ಜಗಜ್ಜನನಿಯಾದರೊ ಶಾರದಾದೇವಿಯವರ ಪೂಜೆಯಿಂದ ಅಂತೆಯೆ ಶ್ರೀರಾಮಕೃಷ್ಣರು ಜಗದೀಶ್ವರರಾಗುತ್ತಾರೆಂಬುದನ್ನು ಈ ಸಂದರ್ಭದಲ್ಲಿ ನೆನೆಯಬಹುದು. ದಾರ್ಶನಿಕ ಕವಿಯ ದಾಂಪತ್ಯ ಜೀವನದಲ್ಲಿ ಈ ಅನುಭವ ಸತ್ಯದ ಪರಾಕಾಷ್ಠೆಯನ್ನು ಮುಟ್ಟಿದ್ದರೆ, ಸಾಮಾನ್ಯರ ಜೀವನದಲ್ಲಿ ಅದನ್ನು ಅಲ್ಪ ಪ್ರಮಾಣದಲ್ಲಾದರೂ ಗುರುತಿಸಬಹುದಾಗಿದೆ.

ಓ ನನ್ನ ಮಹಾಮಾತಾ
ಶ್ರೀ ಪಾದಪದ್ಮವೇ,
ಸತೀ ಶರೀರರೂಪಿ ಓ
ಪ್ರೇಮ ಹೇಮಸದ್ಮವೆ[12]

ಎಂದು ಮಡದಿಯ ನಿಜ ಸ್ವರೂಪವನ್ನು ತಿಳಿದಿರುವ ಕವಿ ‘ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ’ ಎಂದು ಆರಾಧಿಸುವಲ್ಲಿ ಆಶ್ಚರ್ಯವಿಲ್ಲ.

ಸ್ವರ್ಗದ್ವಾರದಿ ಯಕ್ಷಪ್ರಶ್ನೆ

ಹೆಣ್ಣೂ ಪೂರ್ಣ, ಗಂಡೂ ಪೂರ್ಣ, ಅವೆರಡೂ ಸೇರಿದಾಗ ಅನಂತ ಎಂಬ ದಾಂಪತ್ಯ ದರ್ಶನ ಸಾಮಾನ್ಯ ದೃಷ್ಟಿಗೆ ಹೊಳೆಯುವಂಥದಲ್ಲ. ಅದು ಸ್ಪಷ್ಟವಾಗಿ ಹೊಳೆಯದಿದ್ದರೂ ಆ ತತ್ವ ಮಾತ್ರ ಎಲ್ಲರ ಬಾಳಿನಲ್ಲಿಯೂ ಸದಾ ಕ್ರಿಯಾಶೀಲವಾಗಿರುತ್ತದೆ. ಸ್ಫೂರ್ತಿಯ ಚಿಲುಮೆಯಾಗಿ, ಚೈತನ್ಯದ ಬುಗ್ಗೆಯಾಗಿ, ದಾರಿ ತೋರಿಸುವ ಬೆಳಕಾಗಿ, ಸರ್ವಾರಿಷ್ಟಗಳ ಧನ್ವಂತರಿಯಾಗಿ, ನೀತಿ ಮಾರ್ಗದಲ್ಲಿ ನಡೆಸುವ ಸೂತ್ರಧಾರಿಯಾಗಿ, ಭವವನ್ನು ದಾಟಿಸುವ ತಾರಿಣಿಯಾಗಿ ಸತಿ ಗಂಡನ ಉದ್ಧಾರಕ್ಕೆ ನೆರವಾಗುತ್ತಾಳೆನ್ನುವುದು ಸರ್ವವೇದ್ಯ ಸಂಗತಿ. ಹಾಗಿಲ್ಲದಿದ್ದರೆ ಗೃಹ, ಸಂಸಾರ, ವಿವಾಹಗಳಿಗೆ ಅರ್ಥವಿರುತ್ತಿರಲಿಲ್ಲ; ಅವು ಅಸ್ತಿತ್ವದಲ್ಲಿ ರುತ್ತಿರಲಿಲ್ಲ. ಪತಿಯ ಕ್ಷೇಮಾಭ್ಯುದಯಗಳಿಗೆ ಸತಿಯ ಪ್ರಭಾವವೇ ಬಹುಪಾಲು ಕಾರಣ. ಅವರವರ ಸಂಸ್ಕಾರಾಭಿರುಚಿಗಳಿಗನುಗುಣವಾಗಿ ಆ ಪ್ರಭಾವದಲ್ಲಿ ಅಂತರವಿರಬಹುದೇ ಹೊರತು, ಅದರ ಅಭಾವದಿಂದ ಲೋಕವೇ ಶೂನ್ಯವಾಗುತ್ತದೆಂಬುದನ್ನು ಎಲ್ಲರೂ ಬಲ್ಲರು.

ಸಾಧನಾನಿರತನಾದ ಕವಿಯ ಜೀವನವನ್ನೆಲ್ಲ ದೇವಮಾನ್ಯೆಯಾದ ಸತಿ ಹೇಗೆ ತುಂಬಿ ಕೊಂಡಿರುವಳೆಂಬುದಕ್ಕೆ, ಅಂಥ ಸತಿಯನ್ನು ಪಡೆದ ಋಷಿ ಕವಿಯ ಕಾವ್ಯ ಭುವನ ಸ್ತುತ್ಯವಾಗುತ್ತದೆನ್ನುವುದಕ್ಕೆ ಕುವೆಂಪು, ಹೇಮಾವತಿ ಮತ್ತು ಕುವೆಂಪು ಸಾಹಿತ್ಯಗಳೆ ಸಾಕ್ಷಿಯಾಗಿವೆ. ವಿವಾಹಾನಂತರದ ಕುವೆಂಪು ಅವರ ಕೃತಿಗಳಲ್ಲೆಲ್ಲ ಮಾತೆ ಹೇಮಾವತಿಯವರು ತುಂಬಿಕೊಂಡಿದ್ದಾರೆನ್ನುವುದಕ್ಕೆ ನೂರಾರು ನಿದರ್ಶನಗಳು ಸಿಗುತ್ತವೆ.[13] ಅವುಗಳನ್ನು ನೋಡಿದಾಗ, ಸತಿಯೇ ಕವಿಯ ಚೈತನ್ಯವೆನ್ನುವ, ಸತಿಯಿಲ್ಲದಾಗ ಕವಿಯ ಲೇಖನಿ ಸ್ಥಗಿತಗೊಳ್ಳುತ್ತದೆಂಬ ಸಂಗತಿ ಮನದಟ್ಟಾಗುತ್ತದೆ. ಕವಿಯೊಡನೆ ಕವಿ ಸತಿಯೂ ಆ ಕೃತಿಗಳಲ್ಲಿ ಹುದುಗಿಕೊಂಡಿದ್ದಾರೆ, ಎಂಬುದಂತು ನೂರಕ್ಕೆ ನೂರು ಪಾಲು ನಿಜ.

ಈ ಹಿನ್ನೆಲೆಯನ್ನರಿತಾಗ ಈ ಮಹಾಕವನದ ತಾತ್ಪರ್ಯ ಹಾಗೂ ದಾರ್ಶನಿಕ ಸತ್ಯ ಗ್ರಾಹ್ಯವಾಗುತ್ತದೆ. ಇದೊಂದು ಸ್ವಪ್ನದರ್ಶನ. ಕವಿ ರೆಕ್ಕೆ ಬಂದವನಂತೆ ಮುಂದೆ ಮುಂದೆ ಸಾಗುತ್ತಿದ್ದಾಗ, ದಾರಿಯಲ್ಲಿ ಹಲವಾರು ಬೋರ್ಡುಗಳು ಕಣ್ಣಿಗೆ ಬೀಳುತ್ತವೆ. ಅವುಗಳಲ್ಲಿ ಅಂಕಿತಗೊಂಡಿದ್ದ ನಾನಾ ತರದ ಚಿತ್ರ ವಿಚಿತ್ರ ಲಿಪಿಗಳನ್ನವನು ಓದಲಾಗುವುದಿಲ್ಲ. ಒಂದು ಕಡೆ ‘ನರಕಕ್ಕೆ ದಾರಿ’! ಎಂದು ಕನ್ನಡದಲ್ಲಿ ಬರೆದಿತ್ತು. ಅರ್ಥವಾಗದ ಸಗ್ಗ ಬೇಡವೇ ಬೇಡ, ಅರ್ಥವಾಗುವ ನರಕವೇ ಜೇನೆಂದು ಅವನು ಆ ದಾರಿಯಲ್ಲಿ ನುಗ್ಗುತ್ತಾನೆ. ‘ನಿನಗಿಲ್ಲಿ ಪ್ರವೇಶವಿಲ್ಲ; ನಾಕಕ್ಕೆ ಹಿಂದಿರುಗು’ ಎಂಬೊಂದು ದನಿ ಗರ್ಜಿಸುತ್ತದೆ. ‘ನಾಕವಾದರೂ ಬಾಯಿಪಾಠದ ಬದುಕು ಸಪ್ಪೆ; ಅರ್ಥವಾಗುವ ನರಕ ಲೇಸೆಂದು’ ಕವಿ ನುಡಿದರೂ, ದಾರಿ ಮುಚ್ಚಿಕೊಳ್ಳುತ್ತದೆ. ಅನಂತರ ವಿಧಿಯಿಲ್ಲದೆ ಅವನು ಸ್ವರ್ಗದ ಮಹಾದ್ವಾರದ ಕಡೆಗೆ ನಡೆಯುತ್ತಾನೆ.

‘ಭೂಲೋಕದ ವೇಷಗಳು ಇಲ್ಲಿ ನಡೆಯುವುದಿಲ್ಲ. ಲೋಕದಲ್ಲಿ ಗಳಿಸಿದ ಹೆಸರಿಗಿಲ್ಲಿ ಬೆಲೆಯಿಲ್ಲ. ನೀನೀಗ ಏನಾಗಿದ್ದೀಯೋ, ಅದಕ್ಕೆ ಕಾರಣವಾದ ಹೆಸರನ್ನು ಹೇಳು. ನಿನ್ನ ಅಂತರಾತ್ಮದಲ್ಲಿದ್ದುಕೊಂಡು, ನಿನ್ನನ್ನು ರಕ್ಷಿಸುತ್ತಿರುವ ಹೆಸರನ್ನು ಉಸುರು’ ಎಂದು ಬಾಗಿಲಲ್ಲಿದ್ದ ಪಹರೆಯವ ಮೊಳಗುತ್ತಾನೆ. ‘ಪುಟ್ಟಪ್ಪ’ ಎಂದು ಅಣಕವಾಡುತ್ತಾನೆ. ‘ಕೆ.ವಿ.’ ಎಂಬ ಪ್ರಥಮಾಕ್ಷರಗಳನ್ನು ಕೂಡಿಸಿ ನುಡಿದಾಗಲೂ ಬಾಗಿಲು ಅಲ್ಲಾಡುವುದಿಲ್ಲ. ಆಂಗ್ಲೇಯ ಅಕ್ಷರಗಳ ಬೆರಕೆಯೇ ತಪ್ಪಾಯಿತೆಂದು ‘ಕವಿ ಕುವೆಂಪು’ ಎಂದು ಉಚ್ಚರಿಸುತ್ತಾನೆ. ಮಾನಪತ್ರ ಪುಷ್ಪಹಾರಗಳ ರಾಶಿಯಲ್ಲಿ ಬೆಳೆದ ಆ ಹೆಸರಿಗೂ ಬೆಲೆಯಿಲ್ಲವಾಗುತ್ತದೆ. ಅನಂತರ ಕವಿ ‘ರಾಷ್ಟ್ರಕವಿ’ ಮೊದಲಾದ ತನಗೆ ದೊರೆತ ಪದವಿ ಬಿರುದುಗಳ ಮಾಲೆಯನ್ನು ಅವನ ಮುಂದೊಡ್ಡುತ್ತಾನೆ. ಆದರೂ ಸಗ್ಗದ ಬಾಗಿಲು ಜಗ್ಗದು.

‘ನರಲೋಕ ಮುನ್ನಣೆಯ ಆ ಹೆಸರುಗಳಿಗಿಲ್ಲಿ ಬೆಲೆಯಿಲ್ಲ. ಆವುದಿದೆ ನಿನ್ನೊಳಗು, ನಿನ್ನೊಳಗಿನಾ ಬೆಳಗು….ನಿನ್ನ ಹೃದಯದ ಹೃದಯದಾತ್ಮದೊಲವಿನ ಹೆಸರನುಸಿರು’ ಎಂದು ದೌವಾರಿಕ ಕವಿಯ ಪೇಚಾಟಕ್ಕೆ ಮನಕರಗಿ ನುಡಿಯುತ್ತಾನೆ. ಇದ್ದಕ್ಕಿದ್ದಂತೆ ಕವಿಯ ಅಂತರಂಗದಲ್ಲಿ ತಿಳಿವಿನ ಬೆಳಕು ಮಿಂಚಿದಂತಾಗುತ್ತದೆ. ನಾಲಗೆಯ ತುದಿಗೆ ಬಂದ ಹೆಸರನ್ನುಸಿರಲು ಅವನಿಗೆ ನಾಚಿಕೆ. ಸತ್ಯಕಥನೇಚ್ಛೆ ನಾಚಿಕೆಯನ್ನು ಹಿಂಬದಿಗೆ ಸರಿಸುತ್ತದೆ.

ನನ್ನನುದ್ಧರಿಸೆ
ಶ್ರೀ ಗುರುಕೃಪೆಯೆ ಮೆಯ್ವೆತ್ತು ಬಂದಿರುವ
ಶ್ರೀ ಮಹಾಮಾತೆಯಡಿದಾವರೆಯೆ ಆಗಿರುವ
ಸತಿಯ ಒಲವಿನ ಸೆರೆಯ ನಾನು……
ಹೇ…..ವಿೂ….ಗಂ…..ಡ

ಎಂಬುದಾಗಿ ಕವಿವಾಣಿ ತೊದಲುತ್ತದೆ. ಕೂಡಲೇ ಸಗ್ಗದ ಬಾಗಿಲು ತೆರೆಯುತ್ತದೆ.

ತಾವಿದ್ದಲ್ಲಿಯೆ, ತಮ್ಮ ಬಳಿಯಲ್ಲಿಯೇ ಜಗದೀಶ್ವರ ಜಗನ್ಮಾತೆಯರನ್ನು ಕಾಣಲಾರದೆ ಜನ ತೀರ್ಥಯಾತ್ರೆಯ ನೆವದಿಂದ ಊರೂರು ಸುತ್ತುತ್ತಾರೆ. ಆ ಸುತ್ತಾಟದಿಂದ ಅವರಿಗೆ ದೊರಕುವ ಲಾಭವಾದರೂ ಏನು? ಬರಿಯ ನಿರಾಶೆ ಹಾಗೂ ಮನಸ್ಸಿನ ತೊಳಲಾಟ. ತನ್ನ ಹೃದಯದಲ್ಲಿಲ್ಲದ ದೇವರು ಗುಡಿಮಠಗಳಲ್ಲಿರುವನೆ? ತನ್ನ ತಾಯಿ ತಂಗಿಯರಲ್ಲಿ, ತನ್ನ ಸತಿಯಲ್ಲಿ ಕಾಣದ ಜಗನ್ಮಾತೆಯನ್ನು ಹೊರಗರಸಿ ಪ್ರಯೋಜನವೇನು? ಸತಿಯ ಕೈವಿಡಿದು ನಿರ್ವಾಣ ಸತಿಯನ್ನು ಸಾಧಿಸಬಹುದೆಂಬುದು ಶರಣರ ಮತ. ಕುವೆಂಪು ಅವರ ದೃಷ್ಟಿಯಲ್ಲಿ ಹೇಮಾವತಿಯವರು ನಾಡಾಡಿ ಹೆಂಗಸಲ್ಲ. ಕೇವಲ ಭೋಗ ವಸ್ತುವಲ್ಲ, ಶ್ರೀ ಗುರುಕೃಪೆಯೇ ಮೂರ್ತಿವೆತ್ತಂತಿರುವ, ಶ್ರೀ ಮಹಾಮಾತೆಯ ‘ಅಡಿದಾವರೆಯೆ’ ಆಗಿರುವ ಮಹಾಮಾತೆ, ಕೇವಲ ಮನರಂಜನೆಗಾಗಿ, ಕೌಶಲ ಪ್ರದರ್ಶನಕ್ಕಾಗಿ ಬಳಸಿರುವ ರೂಪಕಗಳಲ್ಲ ಇವು; ಶಬ್ದರೂಪವನ್ನು ಪಡೆದಿರುವ ವಾಸ್ತವಾನುಭವಗಳು.

ಇದು ನಿಜಕ್ಕೂ ಕವಿಯ ಸ್ವಪ್ನದರ್ಶನವಲ್ಲ, ನಿತ್ಯದರ್ಶನ. ಸ್ವಪ್ನ ದರ್ಶನವಾಗು ವುದಾದರೂ ಆಶ್ಚರ್ಯಪಡಬೇಕಾಗಿಲ್ಲ. ಜಾಗ್ರತ್ ಸ್ವಪ್ನ ಸುಷುಪ್ತ್ಯಾವಸ್ಥೆಗಳಲ್ಲೆಲ್ಲ ಗುರುಕೃಪೆ ಆ ತಾಯಿಯ ರೂಪದಲ್ಲಿ ಕವಿಯನ್ನು ರಕ್ಷಿಸುತ್ತದೆ. ವಿಪ್ರಲಂಭ ಸಂಭೋಗ ಶೃಂಗಾರಗಳಲ್ಲಿ ದೈವೀ ಪ್ರೇಮವನ್ನು ಕಾಣುವ, ಅವುಗಳನ್ನು ದೈವೀಕರಿಸಿಕೊಂಡು, ಭಗವದಾನಂದವನ್ನ ನುಭವಿಸುವ ಚೈತನ್ಯ ಅವರಿಗೆ ಗುರುಕೃಪೆಯಿಂದ ಲಭ್ಯವಾಗಿದೆ. ಆದ್ದರಿಂದ ಸ್ವಪ್ನದಲ್ಲಿ ಮಾತ್ರವಲ್ಲ, ಜಾಗ್ರದವಸ್ಥೆಯಲ್ಲಿಯೂ ಕುವೆಂಪು ತಮ್ಮ ಸತಿಯಲ್ಲಿ ಸದಾ ಗುರುಕೃಪೆಯನ್ನೆ ದರ್ಶಿಸುತ್ತಾರೆ. ಅವರು ಯಾವಾಗಲೂ ಸತಿಯ ಸಾನ್ನಿಧ್ಯದಲ್ಲಿ ಭಗವಂತನ ಸಾನ್ನಿಧ್ಯ ಸುಖವನ್ನನುಭವಿಸುತ್ತಾರೆ. ಈ ಮಾತಿನ ಅರ್ಥ

ಎ, ಚ್ಚ, ತ್ತಿ, ದ್ದೆ ! ಎ, ಚ್ಚ, ತ್ತಿ, ದ್ದೆ ! ಎ, ಚ್ಚ, ತ್ತಿ, ದ್ದೆ !!

ಎಂಬ ಪದದ ಪುನರಾವೃತ್ತಿಯಲ್ಲಿ, ಹಾಗೆಯೇ ಅಲ್ಲಿಯ ಅಕ್ಷರಗಳ ವಿರಳ ಉಚ್ಚಾರಣೆಯಲ್ಲಿ ಧ್ವನಿತವಾಗುತ್ತದೆ. ಇಲ್ಲಿ ಪುನರಾವೃತ್ತಿಗೊಳ್ಳುತ್ತಿರುವ ಪದ ಒಂದೆಯಾದರೂ, ಅರ್ಥ ಧ್ವನಿ ಮಾತ್ರ ಬೇರೆ ಬೆರೆಯಾಗುತ್ತವೆ. ಶಾರೀರಕ ಸಂಬಂಧವನ್ನು ಮೀರಿದ ಅಂತರಂಗ ಸಂಬಂಧ ಬಗೆ ಗಣ್ಣಿಗೆ ಹೊಳೆದಾಗ ಕುವೆಂಪು ಅವರಿಗೆ ಎಚ್ಚರಿಕೆಯಾಗುತ್ತದೆ.

ಯುಗಯುಗಾಂತರದಲ್ಲಿ ಹುಡುಕಿ ತೊಳಲುತೆ ಬಳಲಿ
ಕಡೆಗಿಂದು ನಿಂದಿಹನು ನಿನ್ನ ಮುಂದೆ

ಎಂದು ಮುದಗೊಳ್ಳುತ್ತಾರೆ. ಅವರ ಈ ಅನುಭವ ಅನುಭಾವವಾದ ಸಂಗತಿ ಎರಡನೆಯ ಆವೃತ್ತಿಯಲ್ಲಿ ಧ್ವನಿತಗೊಳ್ಳುತ್ತದೆ. ಸತಿ ಗುರುಕೃಪೆ ಮಾತ್ರವಲ್ಲ, ಜಗನ್ಮಾತೆಯ ಅಂಶ ಮಾತ್ರವಲ್ಲ, ಜಗನ್ಮಾತೆಯೇ ಅಹುದು ಎಂಬ ಎಚ್ಚರದಲ್ಲಿ ಅವರ ಅಂತಿಮ ಬಯಕೆ ಸಿದ್ದಿಸುತ್ತದೆ. ಆ ಪದದ ಮೂರು ಆವೃತ್ತಿಗಳಲ್ಲಿ ಅವರ ಚೇತನದ ಸಾಧನೆಯ, ತಪಸ್ಸಿನ, ಸಿದ್ದಿಯ ಸೋಪಾನಗಳನ್ನು ಗುರುತಿಸಬಹುದು. ಅವುಗಳಲ್ಲಿ ಕ್ರಮವಾಗಿ, ಅವರ ನಿಜ ಸಂಬಂಧ, ಅನುಭಾವದ ನೆಲೆ ಮತ್ತು ಅಧ್ಯಾತ್ಮ ಸಿದ್ದಿಗಳು ದ್ಯೋತಕವಾಗುತ್ತವೆ.

ವರ್ಧನ್ತಿ

ಈ ಗುರುಕೃಪೆಯ ಆವತರಣ ಸಾಧನ ವಿಧಾನಗಳು ಐವತ್ತನಾಲ್ಕನೆಯ ವರ್ಧನ್ತಿ ದಿನದಂದು ರಚಿಸಿದ ಕವನದಲ್ಲಿ ಪ್ರತಿಮಾ ವಿಧಾನದಲ್ಲಿ ಅಭಿವ್ಯಕ್ತಗೊಂಡಿವೆ. ಈ ಗುರುಕೃಪೆ ಬರಿಯ ಕಲ್ಪನೆಯಲ್ಲ, ಅದು ಸತ್ಯಸ್ಯ ಸತ್ಯವೆಂಬುದು ಕಾವ್ಯ ತಪಸ್ಸಿನ ಪ್ರಾರಂಭದೊಡನೆಯೇ ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಸಂಗಗೊಂಡಿದೆಯೆಂಬುದು ‘ನೆನಪಿನ ದೋಣಿ ಯಲ್ಲಿ’ ಓದಿದವರಿಗೆ ಅರಿವಾಗದಿರದು. ತಮ್ಮ ಪೂಜ್ಯ ಗುರುಗಳಾದ ಶ್ರೀ ಸಿದ್ದೇಶ್ವರಾನಂದ ಹಾಗೂ ಶ್ರೀ ಶಿವಾನಂದರ ಮೂಲಕ, ನಿರಂತರ ಧ್ಯಾನ ಪ್ರಾರ್ಥನೆ ಪ್ರಣಿಧಾನಗಳ ನಂತರ ಅವರಿಗೆ ಪರಮಗುರು ಶ್ರೀ ರಾಮಕೃಷ್ಣ ಪರಮಹಂಸರ ಹಾಗೂ ಸ್ವಾಮಿ ವಿವೇಕಾನಂದರ ಚಿತ್ಕಲೆಯ ದರ್ಶನವಾಗುತ್ತದೆ. ಹೀಗಾಗಿ ಅವರು ಮದುವೆಯಾದಂದಿನಿಂದಲೇ ಸತಿ ತಮ್ಮ ಯೋಗ ಭೋಗಗಳ ಸಮನ್ವಯಕ್ಕೆ ಸಾಧನವಾಗುತ್ತಾರೆ; ಅಧ್ಯಾತ್ಮ ಸಿದ್ದಿಗೆ ದ್ವಾರವಾಗುತ್ತಾರೆ. ‘ಸತಿಯ ವಿಚಾರದಲ್ಲಿ ಮೊದಲಿಂದಲೂ ನನಗಿದ್ದ ಈ ಪವಿತ್ರ ಭಾವನೆಯೇ ಮೇಲೇರುತ್ತಾ ಹೋಗಿ, ನಾನಾ ಘಟ್ಟಗಳನ್ನು ದಾಟಿ ತುತ್ತ ತುದಿಯಲ್ಲಿ ಆಕೆ ಋತ ಚಿನ್ಮೂ ಜಗನ್ಮಾತೆಯ ಕೋಟ್ಯಂತರ ಅಸಂಖ್ಯ ಆವಿರ್ಭಾವದ ಅವತರಣಗಳಲ್ಲಿ ಒಂದೆಂಬ ಬುದ್ದಿಗೆ ನೆಲಸಿತು! ಅದರ ಪ್ರಪ್ರಥಮ ಬೀಜ ಸ್ವರೂಪವನ್ನು, ಹೇಮಾವತಿ ಮೈಸೂರಿಗೆ ಬಂದು, ನಾವಿಬ್ಬರೂ ಸರ್ವ ರೀತಿಯಿಂದಲೂ ಗಂಡ ಹೆಂಡಿರಾದ ನಾಲ್ಕು ತಿಂಗಳಲ್ಲಿ, ಎಂದರೆ ೨೨.೧೧.೧೯೩೭ರಲ್ಲಿ ನಾನು ರಚಿಸಿರುವ ‘ಗುರುಕೃಪೆ’ ಎಂಬ ಹೆಸರಿನ ಪ್ರೇಮಗೀತೆಯಲ್ಲಿ ಅಭಿವ್ಯಕ್ತಗೊಂಡುದನ್ನು ಗುರುತಿಸಬಹುದು. ಅಲ್ಲಿ ಆಕೆ ನನ್ನ ಗುರುಕೃಪೆಯೆ ಮೈವೆತ್ತವಳೆಂದು ಒಲಿದಿದೆ :

‘ದೇವರ ಮನೆ ಕಡೆ ನೋಡುತ್ತಿರೆ ನಾ
ಧ್ಯಾನಾನಂದದಲಿ
ಬಂಧಿಸಿ ಹೃದಯವ ಬಂದುದು ಗುರುಕೃಪೆ
ಸುಂದರಿಯಂದದಲಿ!’[14]

ಸತಿಯ ಸೌಂದರ್ಯೋಪಾಸನೆಯ ಮೂಲಕ ಅವರು ಶಿವ ಸತ್ಯಗಳ ಸಾಕ್ಷಾತ್ಕಾರಕ್ಕೆ ಅನುವಾಗು ತ್ತಾರೆ. ಅವರಿಗೆ ಸತಿಯ ಮೆಯ್ ‘ದೇವನಿತ್ತ ಧರಾಸ್ವರ್ಗ’!; ಅವರ ‘ನಿತಂಬಾದಿ ಅಂಗಾಂಗ ನನಗಿಂದಾಗಿವೆ (ಕವಿಗಾಗಿವೆ) ತಪೋರಂಗ’ ‘ಆಲಿಂಗಿಸಿ ನಾ ಮಹರ್ಷಿ; ಭೋಗಿಸಿಯೂ ನಾ ತಪಸ್ವಿ; ರಸಋಷಿ ಪರಿರಂಭಿಸಿ’ ಎಂಬ ಅವರ ಪ್ರತಿಯೊಂದು ಉಕ್ತಿಯಲ್ಲಿಯೂ ಅವರ ಸಾಕ್ಷಾತ್ಕಾರದ ಮಾರ್ಗವನ್ನು ಕಾಣಬಹುದು. ‘ಹೀಗೆ ನನ್ನ ಕೈಹಿಡಿದವಳು ನನ್ನ ಶ್ರೀ ಗುರುಕೃಪೆ ಎಂಬ ಭಾವನೆ ನಮ್ಮ ದಾಂಪತ್ಯ ಜೀವನದಲ್ಲಿ ಮೊದಲಿಂದಲೂ ಬೀಜ ರೂಪದಿಂದಿದ್ದು ಮೊಳೆತು ಗಿಡವಾಗಿ ಮರವಾಗಿ ಪ್ರೇಮದ ದೈವೀಕರಣದ ಭಾವದಲ್ಲಿ ಸಫಲಗೊಂಡಿದೆ’.[15] ‘ನೀ ದೇವತಾ ವ್ಯಕ್ತಿ’ಯೆಂದವರು ಸತಿಯನ್ನು ಕೊಂಡಾಡುತ್ತಾರೆ.

ನೀನು ಮಾವನ ಮಗಳೆ, ಗುರುಕರುಣೆಯಿತ್ತ ಕೃಪೆ;
ಅವನ ಆಶೀರ್ವಚನವೀ ಚೆಲ್ವುರೂಪದಿಂ
ಬಂದೆನ್ನನೆತ್ತುತಿದೆ ಕತ್ತಲೆಯ ಕೂಪದಿಂ
ಬೆಳಕಿನೆತ್ತರಕೆ ಎಂದೆದೆ ಮುಟ್ಟಿನಂಬಿದಪೆ![16]

ಎಷ್ಟೆಷ್ಟೋ ಸಾರಿ, ವಿವಿಧ ಪದ ಭಂಗಿಯಲ್ಲಿ ಹೇಳಿಕೊಂಡರೂ ಕವಿಗೆ ತೃಪ್ತಿಯಿಲ್ಲ. ಮತ್ತೆ ಮತ್ತೆ ಹೇಳಿಕೊಂಡಷ್ಟೂ ಅವರ ನಿಷ್ಠೆ ಗಟ್ಟಿಯಾಗುತ್ತದೆ, ಹರಳಾಗುತ್ತದೆ.

ಆ ಗುರುಕೃಪೆ ತಮ್ಮೆಡೆಗೆ ಹರಿದು ಬಂದ ರೀತಿಯನ್ನು ಕುವೆಂಪು ಕಾವ್ಯ ಭಾಷೆಯಲ್ಲಿ ವರ್ಣಿಸುವಾಗ, ಆ ವರ್ಣನೆಯ ಆ ಮಹಾಘಟನೆಯ ಅಲೌಕಿಕತೆಗೆ ಓದುಗ ಅಚ್ಚರಿ ಪಡುವಂತಾಗುತ್ತದೆ. ಕವಿಯ ಹಾಗೂ ಕಾವ್ಯ ಜೀವನದ ಬೆಳವಣಿಗೆಯ ಕಡೆಗೆ ಲಕ್ಷ್ಯ ಹರಿಸಿದಾಗ ಅದೆಲ್ಲ ಕಠೋರ ವಾಸ್ತವವೆಂದೇ ತೋರದಿರಲಾರದು. ದೇವಿ ಸೀತಮ್ಮನವರು ಪ್ರಸವ ತಪಸ್ಸಿನಲ್ಲಿರುವಾಗ, ದಕ್ಷಿಣೇಶ್ವರ ಮತ್ತು ಹಿರಿಕೊಡಿಗೆಗಳಿಗೆ ದೇವ ಸೇತುವೆಯಾಗಿ ಮಹಾಮಳೆಬಿಲ್ಲೊಂದು ಕಮಾನು ಕಟ್ಟುತ್ತದೆ. ತಾಯಿಯ ಇಚ್ಛೆಯನ್ನು, ಲೋಕದ ಬಯಕೆಯನ್ನು ಈಡೇರಿಸುವ ಗುರುಕೃಪೆಯ ಆವತರಣಕ್ಕೆ ಆ ಕಾಮನ ಬಿಲ್ಲೊಂದು ಸಾಧನವಾಗುತ್ತದೆ. ಸಹ್ಯಾದ್ರಿಯ ಅಧಿದೇವಿಯೂ ಮಗುವನ್ನು ನೋಡುವ ಕಾತರತೆಯಿಂದ ಹಿರಿಕೊಡಿಗೆಯ ಕಡೆಗೆ ಬರುತ್ತಿದ್ದಾಗ, ಶ್ರೀ ಗುರುಕೃಪೆಯ ಸಮಾಗಮವಾಗುತ್ತದೆ. ಮಗುವಿನ ಉತ್ತರೋತ್ತರವನ್ನು ತಿಳಿಯಲು ಸಹ್ಯಾದ್ರಿ ದೇವಿ ಕುತೂಹಲ ವ್ಯಕ್ತಪಡಿಸುತ್ತಾಳೆ. ‘ಶ್ರೀ ಗುರುಕೃಪೆಯಿಂದಾದ ವಾಗ್ದೇವಿಯ ಮಾನಸ ಶಿಶು ಇವನು. ಇವನ ಗುರು (ಸ್ವಾಮಿ ಶಿವಾನಂದರು) ಕಾಶಿಯಲ್ಲಿ ತಪೋಮಗ್ನನಾಗಿದ್ದಾನೆ. ಆ ಗುರುವಿನೆಡೆಗೊಯ್ಯುವ, ಇವನನ್ನು ಕೈಹಿಡಿದು ನಡೆಸುವ ಹಿತೈಷಿ ರಸಯೋಗಿ (ಸ್ವಾಮಿ ಸಿದ್ಧೇಶ್ವರಾನಂದರು) ಮಲೆಯಾಳದ ಕೊಚ್ಚಿಯ ಅರಮನೆಯಲ್ಲಿ ತದೇಕ ಧ್ಯಾನದಲ್ಲಿದ್ದಾನೆ. ಇವನಿಗೆ ರಕ್ಷೆಯಾಗಿ, ಇವನ ಆತ್ಮೋದ್ಧಾರಕ್ಕೆ ನೆರವಾಗಿ ನಾನಿವನಿಗೆ ಸಹಧರ್ಮಿಣಿಯಾಗಲಿದ್ದೇನೆ’ ಎಂದು ಗುರುಕೃಪೆ ನುಡಿಯುತ್ತದೆ. ‘ಈ ಕಾಡಿನ ಕೊಂಪೆಯಲ್ಲಿ ಕವಿಯ ಅವತಾರವೇ?’ ಎಂದು ಸಹ್ಯಾದ್ರಿದೇವಿ ಅಚ್ಚರಿ ವ್ಯಕ್ತಪಡಿಸುತ್ತಾಳೆ. ‘ಆ ಮಹಾಚೇತನಕ್ಕೆ ಈ ಸಹ್ಯಾದ್ರಿಯೆ ಲಿಂಗ ಶರೀರವಾಗ ಬೇಕಾಗಿದೆ. ಆ ಚೇತನದ ವಿಕಾಸಕ್ಕೆ ಈ ನಿಸರ್ಗದ ಲಾಲನೆ ಪಾಲನೆಗಳ ಸಂಸ್ಕಾರ ಅತ್ಯವಶ್ಯ. ಅವನ ಒಡನಾಡಿಯಾಗಿ, ದಾದಿಯಾಗಿ, ಅವನಿಗೆ ಕೈಂಕರ್ಯವನ್ನು ಸಲ್ಲಿಸುವ, ಅವನ ಬೆಳವಣಿಗೆಯನ್ನು ಕಾಣುವ ಪುಣ್ಯ ನಿನ್ನದಾಗಿದೆ’ ಎಂದು ಗುರುಕೃಪೆ ನುಡಿಯಲಾಗಿ, ಇಬ್ಬರೂ ಮುನ್ನಡೆದು, ಮಾತೃವಕ್ಷದೊಳಿದ್ದ ಶಿಶುವನ್ನು ಕಂಡು ಹಿಗ್ಗುತ್ತಾರೆ. ಶ್ರೀ ಗುರು ಕೃಪೆಯೇ ಮಾತಾಪಿತೃಗಳ ಮತ್ತು ನಿಸರ್ಗದ ರೂಪದಲ್ಲಿ, ಮೇಲಾಗಿ ಸಹಧರ್ಮೀಣಿಯ ರೂಪದಲ್ಲಿ, ಕೊನೆಗೆ ಶ್ರೀ ರಾಮಾಯಣ ದರ್ಶನಾದಿ ಕೃತಿರೂಪದಲ್ಲಿ ತಮ್ಮನ್ನು ಸೃಜಿಸಿದೆಯೆಂಬುದು ಕುವೆಂಪು ಅವರ ನಂಬಿಕೆ. ಅದು ಬರಿಯ ನಂಬಿಕೆಯಲ್ಲ, ವಾಸ್ತವ ಸತ್ಯ. ಈ ಕೃಪೆಯೇ ಅವರ ಇಚ್ಛಾಶಕ್ತಿಯಾಗಿ, ಕ್ರಿಯಾಶಕ್ತಿಯಾಗಿ ಅವರ ನಾನಾ ಕೃತಿಗಳಲ್ಲಿ  ಮೈದೋರಿದೆ.

ಇದು ಈ ನಾಲ್ಕು ಮಹಾಕವನಗಳಲ್ಲಿ ಕುವೆಂಪು ಚಿತ್ರಿಸಿರುವ ದಾಂಪತ್ಯ ದರ್ಶನ. ಇದು ಕೇವಲ ಕಲ್ಪನಾಲೋಕದ ವರ್ಣಮಯ ಚಿತ್ರಣವಲ್ಲ; ಸ್ವಾನುಭೂತಿಯ ಪರಿಣಾಮವಾಗಿ ಅವರು ಕಂಡುಕೊಂಡ ಸತ್ಯದರ್ಶನ. ಇದು ಕವಿ ಸಂಸಾರಕ್ಕೆ ಮಾತ್ರವೇ ಸೀಮಿತವಾದ ದಾಂಪತ್ಯ ದರ್ಶನವಲ್ಲ; ಅನಾದಿ ಕಾಲದಿಂದ ಸರ್ವಲೋಕಗಳಲ್ಲಿ ಪ್ರತಿಕ್ಷಣವೂ ಸಕಲ ಜೀವರಾಶಿಗಳ ಮೂಲಕ ಅಭಿವ್ಯಕ್ತಗೊಳ್ಳುತ್ತಿರುವ ವಿಶ್ವ ಸತ್ಯ. ಶ್ರೀ ಕುವೆಂಪು ಹೇಮಾವತಿ ಯರಿಲ್ಲಿ ನೆಪ ಮಾತ್ರ. ಅವರ ಜೀವನದಲ್ಲಿ ಈ ದಾಂಪತ್ಯ ದರ್ಶನ ಪರಾಕಾಷ್ಠೆಯನ್ನು ಮುಟ್ಟಿರುವುದಂತು ನಿಜ. ಈ ವ್ಯಷ್ಟಿ ದರ್ಶನ ಸಮಷ್ಟಿ ದರ್ಶನವಾದಾಗ ಗೃಹಶಾಂತಿ, ಸಮಾಜ ಕಲ್ಯಾಣ ಮತ್ತು ಲೋಕ ಕ್ಷೇಮಗಳು ಸಿದ್ದಿಸುವುದರಲ್ಲಿ ಸಂದೇಹವಿಲ್ಲ.

ಆಧುನಿಕ ಕನ್ನಡ ಕ್ಷೇತ್ರದಲ್ಲಿ ಪ್ರೇಮ ಸಾಹಿತ್ಯ ತಕ್ಕ ಮಟ್ಟಿನ ಪ್ರಮಾಣದಲ್ಲಿ ಪ್ರಕಟವಾಗಿರುವುದು ನಿಜ. ಅದರಲ್ಲಿ ಬಹುಪಾಲು ಬಾಹ್ಯ ಸೌಂದರ್ಯದ ವರ್ಣನೆಗೆ ಸೀಮಿತಗೊಂಡಂತಿದೆ. ಆ ಪ್ರಣಯ ಗೀತೆಗಳಲ್ಲಿ ಶೃಂಗಾರದ ವಿವಿಧ ಮುಖಗಳ ಅಭಿವ್ಯಕ್ತಿ ಯಿದೆ; ವಿಭಾವಾನುಭಾವ ಸಂಚಾರಿ ಭಾವಗಳ ಸಮಾರಂಭವಿದೆ; ಮನವನ್ನು ಮುಟ್ಟುವ, ರಮಿಸುವ, ಮರಸುವ ಸೌಂದರ್ಯವಿದೆ. ಅವು ಬಹು ಜನಪ್ರಿಯವಾಗಿರುವುದೂ ಉಂಟು. ಆದರೆ ಪ್ರೇಮವನ್ನು ದೈವೀಕರಿಸಿ, ಆತ್ಮದರ್ಶನಕ್ಕೆ, ಸತಿಪತಿಯರ ಅದ್ವೈತ ಸಿದ್ದಿಗೆ ನೆರವಾಗುವ ದಾಂಪತ್ಯ ದರ್ಶನದ ಮಹತ್ವವನ್ನು ಕುವೆಂಪು ಅವರ ಉಪನಿಷತ್ ಸದೃಶವಾದ ಪ್ರೇಮ ಗೀತೆಗಳಲ್ಲಲ್ಲದೆ ಬೇರೆಲ್ಲಿಯೂ ಕಾಣುವಂತಿಲ್ಲ.

ಕವಿಯ ಈ ಕಾಣ್ಕೆಯ ಪ್ರಯೋಜನ ಕನ್ನಡ ನಾಡಿನ – ಏಕೆ? ಸಮಸ್ತ ಲೋಕದ – ಸತಿಪತಿಯರಿಗೆ ದೊರಕಲೆಂಬ ಉದ್ದೇಶದಿಂದ ಕುವೆಂಪು ಅವರ ದಾಂಪತ್ಯ ದರ್ಶನದ ನಾಲ್ಕು ಮಹಾಕವನಗಳನ್ನು ಮೇಲಿನ ವ್ಯಾಖ್ಯಾನದೊಡನೆ ಪ್ರಕಟಿಸಲಾಗಿದೆ.

 

 


[1]    ಶ್ರೀ ರಾಮಕೃಷ್ಣ ಪರಮಹಂಸ, ಪು. ೯೮.

[2]    ಕುವೆಂಪು ಅವರ ‘ಋತ ಚಿನ್ಮೂ ಜಗನ್ಮಾತೆ’ ಎಂಬ ಕವಿತೆಯನ್ನು ಓದಿ.

[3]    ಶ್ರೀ ರಾಮಾಯಣದರ್ಶನಂ, ಅಯೋಧ್ಯಾ ಸಂಪುಟಂ, ಪಂಚವಟಿಯ ಪರ್ಣಕುಟಿ, ಪು. ೨೦೮.

[4]    ಅದೇ., ಮಮತೆಯ ಸುಳಿಮಂಥರೆ, ಪು. ೫೫.

[5]    ಚಂದ್ರಮಂಚಕೆ ಬಾ, ಚಕೋರಿ, ಪು. ೪೭.

[6]    ಅದೇ., ಪು. ೧೫-೧೮.

[7]    ಈ ಮೂರೂ ‘ಅನುತ್ತರಾ’ ಕವನ ಸಂಗ್ರಹದಲ್ಲಿವೆ.

[8]    ಕೃಪೆಯ ಸಾಕ್ಷಾತ್ಕಾರ, ಅನುತ್ತರಾ, ಪು. ೩೪.

[9]    ಬ್ರಹ್ಮಚರ್ಯದ ನಾನಾಸ್ತರಗಳನ್ನು ‘ನೆನಪಿನ ದೋಣಿಯಲ್ಲಿ’ (ಎರಡನೆ ಭಾಗ-ಪು. ೪೬) ಓದಿ ತಿಳಿಯಬಹುದು.

[10]   ಸತಿಗೆ, ಚಂದ್ರಮಂಚಕೆ ಬಾ, ಚಕೋರಿ!, ಪು. ೭.

[11]   ನನ್ನ ನಮರಗೈದಿಹೆ, ಅದೇ, ಪು. ೬೭.

[12]   ರಸಋಷಿ ಪರಿರಂಭಿಸಿ! ಚಂದ್ರ ಮಂಚಕೆ ಬಾ, ಚಕೋರಿ, ಪು. ೧೪.

[13]   ‘ಶ್ರೀಮತಿ ಹೇಮಾವತಿ ಕುವೆಂಪು’ ಎಂಬ ಗ್ರಂಥದಲ್ಲಿ ಅಚ್ಚಾಗಿರುವ ದೇಜಗೌ ಅವರ ‘ದಾಂಪತ್ಯ ದರ್ಶನ’ ಎಂಬ ಪ್ರಬಂಧ (ಪು. ೮೫-೧೧೯)ವನ್ನು ಓದಿ.

[14]   ನೆನಪಿನ ದೋಣಿಯಲ್ಲಿ, ಭಾಗ-೨, ಪು. ೪೨.

[15]   ಅದೇ., ಪು. ೪೩.

[16]   ಪ್ರಿಯ ಸತಿಗೆ, ಜೇನಾಗುವಾ, ಪು. ೨೬.