ಕುವೆಂಪು ಮಾನವ ಪ್ರೇಮಿ, ಸರ್ವೋದಯವೇ ಅವರ ಬಾಳಿನ ಮಂತ್ರ. ಮಾನವನ ಹಿರಿಮೆಗರಿಮೆಗಳಲ್ಲಿ, ಅವನ ಸಾಹಸಸಿದ್ದಿಗಳಲ್ಲಿ, ಅವನ ಅತಿಮಾನಸ ಸಾಧನೆಯ ಯಾತ್ರೆಯಲ್ಲಿ ಅವರಿಗೆ ಅಪಾರ ವಿಶ್ವಾಸವುಂಟು. ‘ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೆಹ ರಚನೆಯೊಳ್’ ಎಂಬುದು ಅವರ ನಿಶ್ಚಿತಮತ. ಸ್ತ್ರೀಸಮಾಜದ ವಿಷಯದಲ್ಲಂತು ಅವರಿಗೆ ಅಪಾರ ಗೌರವ, ವಿಶೇಷ ವಿಶ್ವಾಸ, ನಿರ್ವ್ಯಾಜ ಪ್ರೇಮ. ಸೌಂದರ್ಯದ ಅಧಿದೇವತೆಯೆಂದಲ್ಲ, ಲಾವಣ್ಯದ ಮೂರ್ತಿಯೆಂದಲ್ಲ, ಅಂತಸ್ಸೌಂದರ್ಯದ ತವನಿಧಿಯೆಂದು, ನಿಷ್ಕಲ್ಮಷ ಪ್ರೇಮದ ತವರೆಂದು, ಸೃಷ್ಟಿಯ ಸ್ಫೂರ್ತಿ ಶಕ್ತಿಯೆಂದು ಅವಳು ಅವರ ಶ್ಲಾಘನೆಗೆ ಭಾಜನಳಾಗಿದ್ದಾಳೆ. ನಿಸರ್ಗ ಸೌಂದರ್ಯದಂತೆಯೆ ಮಾನಿನಿಯ ಬಾಹ್ಯ ಸೌಂದರ್ಯವೂ ಆಕರ್ಷಣೀಯವಾಗಿದೆ, ನಿಜ; ಸಚ್ಚಿದಾನಂದ ಸ್ವರೂಪಿಯಾದ ಅವಳ ಅಂತಸ್ಸತ್ವಕ್ಕೆ ಅವರು ಮಾರುಹೋಗಿದ್ದಾರೆ, ಅವರ ದೃಷ್ಟಿಯಲ್ಲಿ ಹೆಣ್ಣು ವಿಲಾಸಿನಿಯಲ್ಲ, ಗಂಡಸಿಗೆ ಆನಂದ ಕೊಡುವ ಬರಿಯ ಮಡದಿಯಲ್ಲ, ಅವನ ಮನಸ್ಸಿನ ಕಲ್ಮಷವನ್ನು ಪರಿಹರಿಸುವ ಮಗಳೂ ಅಹುದು, ಅವನನ್ನು ಪೋಷಿಸಿ ರಕ್ಷಿಸುವ ತಾಯಿಯೂ ಅಹುದು’, ಅವನನ್ನು ಕೈ ಹಿಡಿದು ಆತ್ಮದ್ವಾರದ ಕಡೆಗೆ ನಡೆಸುವ ದೇವಿಯೂ ಅಹುದು.

ಕುವೆಂಪು ಅವರು ಸೃಷ್ಟಿಸಿರುವ ಸ್ತ್ರೀಪ್ರಪಂಚ ಸಮಾಜದ ಸರ್ವಸ್ತರಗಳನ್ನೊಳ ಗೊಳ್ಳುವುದಲ್ಲದೆ, ಪುರಾಣ ಹಾಗೂ ದೇವಲೋಕಗಳತನಕ ವ್ಯಾಪಿಸುತ್ತದೆ. ಪೀಂಚಲು ಮಂಥರೆಯರಿಂದ ಹಿಡಿದು ಚಿನ್ನಮ್ಮ ಸುಬ್ಬಮ್ಮ ಚೆಲುವಾಂಬೆ ಸೀತೆ ಮಂಡೋದರಿ ಕೈಕೆಯರ ತನಕ ಸ್ತ್ರೀ ಸಮಾಜದ ವೈವಿಧ್ಯ ಪಸರಿಸುತ್ತದೆ. ಅದರಲ್ಲಿ ಕಾಡಾಡಿ ನಾಡಾಡಿಗಳಿದ್ದಾರೆ: ಆಳು ಕೂಲಿಗಳಿದ್ದಾರೆ; ಬಡವಿಸಿರಿವಂತೆಯರಿದ್ದಾರೆ; ದಾರಿತಪ್ಪಿದವರಿದ್ದಾರೆ, ಪತಿವ್ರತೆಯರಿದ್ದಾರೆ; ದಿಕ್ಕುತಪ್ಪಿ ದುರ್ದಶೆಗೆ ಬಿದ್ದವರಿದ್ದಾರೆ. ಬಿದ್ದು ಮೇಲೆದ್ದವರಿದ್ದಾರೆ; ಸೌಂದರ್ಯವತಿಯರ ನಡುವೆ ಕುರೂಪಿಗಳಿದ್ದಾರೆ; ಪಾಪಿಷ್ಠೆಯರಂತೆ ಪುಣ್ಯವಂತೆಯರೂ ಇದ್ದಾರೆ; ದೇವತೆಗಳಿಗೂ ದುರ್ಲಭರಾದ ಸನ್ಮಾನ್ಯೆಯರಿದ್ದಾರೆ. ಪೀಂಚಲು ಸೇಸಿ ಕಾವೇರಿ ಹೂವಿ ಸುಬ್ಬಮ್ಮ ನಾಗಮ್ಮ ಚೆಲುವಾಂಬೆ ರುದ್ರಾಂಬೆಯರೆಂತು ವಾಸ್ತವ ಲೋಕದ ಮಹಿಳೆಯರ ಪ್ರತಿನಿಧಿಗಳೋ, ಶಾರದಾದೇವಿ ಭುವನೇಶ್ವರಿಯರೆಂತು ಐತಿಹಾಸಿಕ ವ್ಯಕ್ತಿ ಗಳೋ, ಅಂತೆಯೇ ಊರ್ಮಿಳೆ ಸೀತೆ ಕೈಕೆ ಸಾವಿತ್ರಿ ಮಂಡೋದರಿಯರಿಗೆ ಕವಿ ಕಂಡಿರಬಹುದಾದ, ತಮ್ಮೊಡನೆ ಬದುಕಿರಬಹುದಾದ ಆದರ್ಶ ವ್ಯಕ್ತಿಗಳೇ ರೂಪದರ್ಶಿಗಳು.

ಪರಮ ಸಂಪೂರ್ಣತೆಯೆ ಕೋಮಲತೆಯೊಡನೆ ಸೌಂದರ್ಯರೂಪದಲ್ಲಿ ಹೆಣ್ಣಾಗಿ ಬಂದು ಪುರುಷಕುಲವನ್ನು ಮೋಹಿಸುತ್ತಿದೆ.

ತುಟಿ, ಬಾಯಿ, ಕಣ್ಣು, ಕೆನ್ನೆ, ಹಣೆ, ಹುಬ್ಬು, ಮುಡಿ,
ಹೆದೆಯೇರ್ದ ಬಿಲ್ಲಿನೆದೆ ಬಳ್ಳಿನಡು ಮುತ್ತಿನಡಿ

[1]

ಮೊದಲಾದವು ಕಬ್ಬಿಗನನ್ನು ಸೆರೆಹಿಡಿಯಲು ‘ನಿನ್ನನುಳಿದಿರೆ ತಿರೆಯ ಬದುಕು ಮರುಧರೆ, ಸೊನ್ನೆ’, ‘ನೀನಿರಲ್ಕೆಲ್ಲ ಸಾಧನೆಗೆ ನೀ ಫಲಂ ಸಿದ್ದಿ!’ ಎಂದವನು ಉದ್ಗಾರ ತೆಗೆಯುವಂತಾ ಗುತ್ತದೆ. ವೈರಾಗ್ಯನಿಧಿ ಅಲ್ಲಮ ಪ್ರಭುವಿನಂತೆ ರಸಋಷಿ ಕುವೆಂಪು ಅವರೂ ಹೆಣ್ಣು ಮಾಯೆಯೆಂದೆನ್ನುವುದಿಲ್ಲ; ‘ರಸವೊಂದೆ ನಿಯತಿಕೃತ ನಿಯಮರಹಿತನೇ ಕವಿಯೆನಗೆ ನೀತಿ’[2] ಎನ್ನುತ್ತಾರೆ; ‘ಕಬ್ಬಿಗಗೆ ನಿನ್ನೆದೆಯ ಕಟ್ಟಕಡೆಯಾಶ್ರಮಂ’ ಎಂದು ಉದ್ಗರಿಸುತ್ತಾರೆ.

ತತ್ವಕ್ಕೆ ಕಾವ್ಯಕ್ಕೆ ಪ್ರಕೃತಿ ಸೌಂದರ್ಯಕ್ಕೆ ವಿಜ್ಞಾನಕ್ಕೆ
ಭೋಗಕ್ಕೆ ತ್ಯಾಗಕ್ಕೆ ಮೇಣ್ ಬ್ರಹ್ಮಚರ್ಯಕ್ಕೆ
ಪ್ರೇರಕಂ ಪರಮಗತಿ ಸರ್ವಮುಂ ನೀನಕ್ಕೆ![3]

ಹೆಣ್ಣಿನ ಸರ್ವತ್ವವನ್ನೂ ಅವಳ ವಿಶ್ವರೂಪವನ್ನೂ ಕೊಂಡಾಡುತ್ತಾರೆ : ಹೆಣ್ಣು ರಕ್ತಿ ಶಕ್ತಿ ಮುಕ್ತಿಗಳ ಸಂಕೇತವೆಂದವರು ಭಾವಿಸುತ್ತಾರೆ; ಹೆಣ್ಣು ಶಿವನ ಅರ್ಧಾಂಗಿ ಮಾತ್ರವಲ್ಲ, ಅವನ ತಲೆಯೇರಿದವಳು, ವಿಷ್ಣುವಿನ ಹೃದಯವಾಸಿ, ಬ್ರಹ್ಮನ ನಿತ್ಯಸಂಗಿ ಎನ್ನುವಲ್ಲಿ, ಅವಳೇ ಕ್ಷಾತ್ರ ತೇಜಸ್ಸಿಗೆ, ಸಕಲ ಸಂಪತ್ತುಗಳಿಗೆ, ಜ್ಞಾನ ಶ್ರೀಗೆ ಅಧಿದೇವತೆ ಎನ್ನುವಲ್ಲಿ, ಅವಳಿಲ್ಲದೆ ಸೃಷ್ಟಿಯಿಲ್ಲ, ಅವಳಿಲ್ಲದೆ ಮುಕ್ತಿಯಿಲ್ಲ ಎನ್ನುವಲ್ಲಿ ಆರ್ಷಕಲ್ಪನೆಯ ಸಾರ್ಥಕತೆ ಸುವ್ಯಕ್ತವಾಗುತ್ತದೆ.

ಆದ್ದರಿಂದಲೇ ಕುವೆಂಪು ದೃಷ್ಟಿಯಲ್ಲಿ ಪ್ರೇಮವೂ ಒಂದು ತಪಸ್ಸು. ಭಕ್ತ ಭಗವಂತನ ಅನುಗ್ರಹಕ್ಕಾಗಿ ಅನಂತಕಾಲ ತಪಗೈಯುವಂತೆ ಪ್ರಣಯಿ ಪ್ರೇಯಸಿಯ ಸವಿಮುತ್ತಿಗಾಗಿ ಜನ್ಮ ಜನ್ಮಾಂತರಗಳಲ್ಲಿ ತೊಳಲಾಡುತ್ತಾನೆ. ‘ಪ್ರೇಮ ಸಾಮ್ರಾಜ್ಯದಲ್ಲಿ ರಾಗವೇ ವೈರಾಗ್ಯ; ಭೋಗವೇ ತ್ಯಾಗ; ಮೋಹವೇ ಭಕ್ತಿ: ಪ್ರೇಮವೇ ಮುಕ್ತಿ, ಅಕ್ಕರೆಯ ಚೆಲುವೆ ಪಕ್ಕದಲಿ ಪವಡಿಸಿರೆ ಇಂದ್ರ ಸಿಂಹಾಸನವೇ ಅವನಿಗೆ ವಶವಾದಂತೆ ಸುಖಿಸುತ್ತಾನೆ, ಇಹದಲ್ಲಿ ಪರವನ್ನು ಕಾಣುತ್ತಾನೆ. ಇಂಥವರದು ಹೀನ ಕೂಟವಲ್ಲ. ಇವರ ಒಲವು ಬೇಟ, ಅಮೃತ ಕೂಟ ದೇವರಿಚ್ಚೆಗೆ ಒಪ್ಪಿಗೆಯಾದದ್ದು. ಅವನ ಒಪ್ಪಿತವಿಲ್ಲದಿದ್ದರೆ ಅದುವೆ ಮೃತ್ಯುಕಾಳಕೂಟ ವಾದೀತು. ಆದ್ದರಿಂದಲೇ ಅವಳು ಈತನಿಗೆ ಧರ್ಮರಕ್ಷೆ. ಅವನ ನೆನಪೆ ಒಂದು ನೀತಿ ಶಿಕ್ಷೆ.’

ಹೆಣ್ಣು ಗಂಡಿನ ಭೋಗವಸ್ತು ಮಾತ್ರ ಎಂದು ತಿಳಿದ ಮಾನವ ದಾನವನಾಗುತ್ತಾನೆ; ಸಂಯಮರಹಿತವಾದ ಪಾಶವಿಕ ಭೋಗಲಾಲಸೆ ಪ್ರೇಮವಲ್ಲ; ಪ್ರೇಮ ಪ್ರಥಮತಃ ಹೃದಯ ಸಂಬಂಧಿಯೇ ಹೊರತು ದೇಹ ವಶಿಯಾದದ್ದಲ್ಲ, ಕಾಮವಿಕಾರದಿಂದ ಮುಕ್ತವಾದಾಗಲೇ ಪ್ರೇಮ ಶುದ್ಧ ಅಪರಂಜಿಯಂತೆ ಥಳಥಳಿಸುತ್ತದೆ, ಸಂಭೋಗದ ಗುರಿ ಸಂತಾನೋತ್ಪತ್ತಿ. ಅನಿಯಂತ್ರಿತವಾದ ಸಂತಾನೋತ್ಪತ್ತಿ ಪಶು ಸಹಜ ಲಕ್ಷಣ; ಸೃಜನೋದ್ದೇಶವಿಲ್ಲದ ಕೂಟ ನೀತಿಬಾಹಿರವಾದದ್ದು. ಕಾಮವಿಕಾರಕ್ಕೆ ವಶವಾದ ಹೆಣ್ಣಾಗಲೀ ಗಂಡಾಗಲೀ ಸೃಷ್ಟಿ ನಿಯಮಕ್ಕೆ ಬಾಹಿರರಾಗುತ್ತಾರೆ : ಮಾನವ ದ್ವೇಷಿಗಳಾಗುತ್ತಾರೆ. ಇದು ಪ್ರೇಮ-ಕಾಮಗಳ ಬಗೆಗಿನ  ಗಾಂಧೀಜಿ ನಿಲವು : ಕಾಮದ ನರಕದಿಂದ ಪ್ರೇಮದ ಸ್ವರ್ಗಕ್ಕೇರುವುದೇ ಸಂಸಾರ ಯೋಗದ ಗುರಿ ಎಂಬುದು ಕುವೆಂಪು ಕಂಡಿರುವ ಸತ್ಯ. ತಾವು ಕಂಡ ಸತ್ಯವೇ ವ್ರತವಾಗಲಾಗಿ, ಸಾಧನೆಯ ಕಣದಲ್ಲಿ ವಿಜಯಿಯಾಗಲಾಗಿ ಯೋಗ ಭೋಗಗಳ, ಪಾರಮಾರ್ಥಿಕ ಲೌಕಿಕಗಳ ಸಮನ್ವಯವನ್ನು ಸಾಧಿಸಿದ ಕೀರ್ತಿಗೆ ಅವರು ಭಾಜನರಾಗುತ್ತಾರೆ.

ಆದ್ದರಿಂದಲೇ ಸ್ತ್ರೀತ್ವದ ಬಗ್ಗೆ ಅವರಿಗೆ ಅಪಾರ ಗೌರವವಿದೆ : ಆಕೆಯಲ್ಲವರು ಜಗಜ್ಜನನಿ ಯನ್ನೇ ದರ್ಶಿಸುತ್ತಾರೆ. ಐತಪೀಂಚಲರ ಮುಗ್ಧ ಪ್ರಣಯವನ್ನು ರೂಕ್ಷವಾಗಿ ಒಣ್ಣಿಸುವಾಗ, ಸೇರೆಗಾರ ಸುಬ್ಬಮ್ಮರ ಕಾಮವಿಕಾರವನ್ನು ಭೀಭತ್ಸಪೂರ್ಣವಾಗಿ ವರ್ಣಿಸುವಾಗ ಕಾದಂಬರಿ ಕಾರನ ನಿರ್ಲಿಪ್ತ ಸಾಕ್ಷೀಪ್ರಜ್ಞೆ ಸದಾ ಎಚ್ಚರವಾಗಿದ್ದು, ಓದುಗರಲ್ಲಿ ಅನುಕಂಪ ಕನಿಕರಗಳನ್ನು ಮೂಡಿಸುತ್ತದೆ. ಹೂವಯ್ಯನಂತೆ ಕುವೆಂಪು ಅವರೂ ಸುಬ್ಬಮ್ಮನ ನಡತೆಯ ಬಗ್ಗೆ ಮರುಕತಾಳುತ್ತಾರೆ. ಚೆಲುವಾಂಬೆಯ ಪತನದಲ್ಲಿ ಅವರ ಸಾತ್ವಿಕ ರೋಷ ಭುಗಿಲಾಗುತ್ತದೆ. ಕಥೆ ನಾಟಕ ಕಾದಂಬರಿಗಳಲ್ಲಿ ಬರುವ ಸ್ತ್ರೀಪಾತ್ರಗಳಂತಿರಲಿ, ಮಹಾಕಾವ್ಯದ ಸ್ತ್ರೀ ಪಾತ್ರಗಳಲ್ಲಿ ಮಹಿಳಾ ಕುಲದ ಬಗೆಗಿನ ಅವರ ಆದರಾಭಿಮಾನಗಳಿಗೆ ಜ್ವಲಂತ ಸಾಕ್ಷಿ ದೊರಕುತ್ತದೆ.

ಶ್ರೀ ರಾಮಾಯಣದರ್ಶನದಲ್ಲಿ ಸೋತ ಸುಗ್ರೀವನ ಸತಿ ರುಮೆ ವಾಲಿಯ ಶಯನವೇರು ವುದಿಲ್ಲ. ತಮ್ಮನ ಪತ್ನಿ ಅವನ ಪಾಲಿಗೆ ಮಗಳೆಣೆ. ಶಾಪಗ್ರಸ್ತಳಾಗಿ ಶಿಲಾರೂಪದಲ್ಲಿ ತಪೋನಿರತೆಯಾದ ಅಹಲ್ಯೆ ರಾಮ ಪಾದಸಂಸ್ಪರ್ಶದಿಂದ ಪಾಪದೂರೆಯಾಗಿ ಪತಿ ಗೌತಮ ಮುನಿಗೆ ಮಾತ್ರವಲ್ಲ, ದೇವತೆಗಳಿಗೂ ಮಾನ್ಯಳಾಗುತ್ತಾಳೆ. ಭಗವಂತನ ಸಾಮ್ರಾಜ್ಯದಲ್ಲಿ ಪಾಪಿಗೂ ಉದ್ಧಾರವುಂಟೆಂಬುದಕ್ಕೆ ಮಂಥರೆಯೆ ಸಾಕ್ಷಿಯಾಗಿದ್ದಾಳೆ. ವಿಕಾರವೇ ಮೈವೆತ್ತಂತಿದ್ದ ಕುಬ್ಜೆ ಮಂಥರೆಯ ಹೃದಯದಲ್ಲಿ ಕವಿ ಪ್ರೇಮದ ಝರಿಯನ್ನಲ್ಲದೆ ಬೇರೇನನ್ನೂ ಕಾಣರು. ದಶರಥನ ಅರಮನೆಯಲ್ಲಿ ಕರುಬಿಗರ ಅವಮಾನದ ಪಾತಿಯಲ್ಲಿ ಬೆಳೆದ ಮಂಥರೆಯ ಹೃದಯದಲ್ಲಿ ಕೈಕೆ ಭರತರು ಮಾತ್ರ ಆರಾಧ್ಯದೇವತೆಗಳಾಗುಳಿಯುತ್ತಾರೆ. ಒಂದೇ ಜಾಗದಲ್ಲಿ ಎರಡು ವಸ್ತುಗಳ ನೆಲಸಿಗೆ ಅವಕಾಶವಿಲ್ಲವಷ್ಟೆ. ಒಮ್ಮೊಮ್ಮೆ ಒಬ್ಬರ ಪರವಾದ ಪ್ರೇಮ ಮತ್ತೊಬ್ಬರ ಮೇಲಣ ದ್ವೇಷವಾಗಿ ಪರಿಣಮಿಸುವುದು ಅಸಹಜವೇನಲ್ಲ. ಭರತ ಕೈಕೆಯರಲ್ಲಿ ಸರ್ವಲೋಕಗಳನ್ನು ಕಂಡ ಮಂಥರೆ ಅವರಿಬ್ಬರ ಕ್ಷೇಮಕಲ್ಯಾಣಗಳಲ್ಲಿ ಕಾತರಳಾದದ್ದು ಸೋಜಿಗವೇನಲ್ಲ. ಮಾತುಲಗೃಹದಿಂದ ಹಿಂದಿರುಗಿದ ಶತ್ರುಘ್ನ ಅರಮನೆಯ ದಾರುಣ ಪರಿಸ್ಥಿತಿಯ ಕಾರಣವನ್ನರಿತು ಆ ಪ್ರೇಮ ರಾಹುವನ್ನು ಪ್ರಹರಿಸುತ್ತಿದ್ದಾಗ ಭರತ

ನಿಲ್, ಪೊಯ್ಯದಿರ್, ಸೋದರನೆ,
ಪೆಣ್ಗೊಲೆಗೆ ಪೇಸುವಂ ಪಿರಿಯಣ್ಣನದರಿಂದೆಯುಂ,
ಬಿಡುಕೋಪಮಂ

ಎಂದವನನ್ನು ಸಂತೈಸುತ್ತಾನೆ. ‘ರಾಮನಂ ಬಿಸುಟೆರ್ದೆಗೆ ಭರತನಹಿತಂ’ ಎಂದು ಮಂಥರೆಯನ್ನು ತಿರಸ್ಕರಿಸುತ್ತಾನೆ. ‘ಭರತನಳ್ಕರೆಯೊಂದೆ ಪಿರಿಯ ನೆಮ್ಮಾಗಿರ್ದ’ ಆಕೆಯ ಕನಸು ಬರಿಯ ಗುಳ್ಳೆಯಾಗುತ್ತದೆ.

ಓ ಕುಬ್ಜೆ, ಓ ಮಂಥರೆಯೆ, ಮರುಗುವೆನ್ ನಿನಗೆ
ಕವಿ ಸಹಜ ಕರುಣೆಯಿಂ ಲೋಕಕ್ರೋಧ ಮದಹಸ್ತಿ
ಪದದಲನ ರೋಷದಾವಾಗ್ನಿಗಾಹುತಿಯಾಗಿ
ಬಿಳ್ದ ನಿನ್ನಾ ಭಸ್ಮರಾಶಿಯಂ ತೊಳೆವುದಿದೊ
ಕಣ್ಗಂಗೆ ಕಾವ್ಯಮಹಿಮಾ ಸಿಂಧು ತೀರ್ಥಕ್ಕೆ!

ಎಂದು ಪಾಪಿಷ್ಠೆ ಅಹಲ್ಯೆಯನ್ನುದ್ಧರಿಸಿದ ಕವಿ ಲೇಖನಿಯೆ ಮಂಥರೆಯ ಹೆಸರಿಗಂಟಿಕೊಂಡಿದ್ದ ಕಿಲ್ಬಿಷವನ್ನು ತೊಡೆಯುತ್ತದೆ.

ಭರತ ಭ್ರಾತೃಪ್ರೇಮಿ ಎಂಬುದನ್ನರಿತ ಮಂಥರೆ ಶ್ರೀ ರಾಮನನ್ನು ಹಿಂದಕ್ಕೆ ಕರೆತರುವ ಸಲುವಾಗಿ, ಅವನು ಮನೆಗೆ ಹಿಂದಿರುಗಿದ್ದಾದರೆ ಭರತ ಕೈಕೆಯರಿಗೆ ಆನಂದವಾಗುತ್ತದೆಂಬ ಭಾವನೆಯಿಂದ ಅವನು ಹೋದ ದಾರಿಯನ್ನೆ ಹಿಡಿದು ಅರಣ್ಯದೊಳಗೆ ಜಾರುತ್ತಾಳೆ.

ಹಾ, ಜೀವನದೊಳೆನಿತೆನಿತು
ದ್ವೇಷ ನಿಷ್ಠುರ ವೈರ ಕಷ್ಟಗಳಿಗೆಲ್ಲಮಾ
ಪ್ರೇಮವೆ ಪಿತಾಮಹನ್

ಎಂಬ ಕವಿವಾಣಿಗೆ ಕೈಕೆ ಮಂಥರೆಯರೆ ಸಾಕ್ಷಿಯಾಗಿದ್ದಾರೆ.

ಓ ಭರತನಣ್ಣಯ್ಯ,
ಓ ನನ್ನ ರಾಮಯ್ಯ; ಬಾರಯ್ಯ ದಮ್ಮಯ್ಯ

ಎಂದು ಅಬ್ಬರಿಸುತ್ತ, ಕಾಡಿನೊಳಗೆ ಓಡೋಡಿ, ದಾವಾಗ್ನಿಯನ್ನೆ ರಾಮನೆಂದು ತಿಳಿದು, ಅದರೊಳಗೆ ಪ್ರವೇಶಿಸುತ್ತಾಳೆ. ಅವಳ ಅಂತರಾತ್ಮದ ದಯಾಲಕ್ಷ್ಮಿ ಆಕಾಶಯಾತ್ರಿಯಾಗಿ ಶ್ರೀರಾಮ ಸೀತಾ ಲಕ್ಷ್ಮಣರ ರಕ್ಷೆಯಾಗಿ ಅವರ ಗತಿಯನ್ನನುಸರಿಸುತ್ತಾಳೆ.

ರಾಮಾಯಣದಲ್ಲಿ ಸಂಭವಿಸುವ ಮೊದಲನೆಯ ದುರಂತಕ್ಕೆ, ಅಯೋಧ್ಯೆಯ ಗೋಳಿಗೆ ಮಂಥರೆ ಕಾರಣಳಾದರೆ, ಎರಡನೆಯ ದುರಂತಕ್ಕೆ ಲಂಕೆಯ ಸಂಕಟಕ್ಕೆ ರಾವಣನ ತಂಗಿ ಚಂದ್ರನಖಿ ಕಾರಣಳಾಗುತ್ತಾಳೆ. ಪ್ರೇಮ ಮಂಥರೆಯ ದೌರ್ಬಲ್ಯವಾದರೆ ಕಾಮವಿಕಾರ ಚಂದ್ರನಖಿಯ ದುರ್ಗುಣವಾಗುತ್ತದೆ; ಕೊನೆಗೆ ಸೀತೆಯ ಸಾನ್ನಿಧ್ಯದಿಂದ ಅವಳ ದುರ್ಗುಣ ದಹನಗೊಂಡು, ತನ್ನ ನಡತೆಗೆ ತಾನೇ ಹೇಸಿ, ಸಾತ್ವಿಕ ಮಾರ್ಗದಲ್ಲಿ ಸಂಪೂರ್ಣವಾಗಿ ಪರಿವರ್ತನೆ ಹೊಂದುತ್ತಾಳೆ.

ಮಾನಿನಿಯ ಮಾನಕ್ಕೆ
ಕುಂದಿನಿತುಮಾಗದೋಲಾನೆ ಹೊಣೆ, ಸನ್ಮಾನ್ಯೆ,
ತಿರ್ದ್ದಿದಪೆನೆಂತಾದೊಡಂ ಅಣ್ಣನೀಗೈದುದು
ಅವಿವೇಕಮಂ

ಎಂಬ ಚಂದ್ರನಖಿಯ ನುಡಿಯಲ್ಲಿ ಕವಿಯ ಸ್ತ್ರೀಮಾನ ಸಂರಕ್ಷಣಾ ಕಾತರತೆ ವ್ಯಕ್ತವಾಗುತ್ತದೆ.

ನಾನ್ ಪೊತ್ತಿಸಿದ ಕಿಚ್ಚನಾನ್ ನಂದಿಸಲ್ಕೆನಗೆ
ನೀಡು ನಿನ್ನನುಮತಿಯ ಭಿಕ್ಷೆಯಂ

ಎಂಬುದಾಗಿ ಯುದ್ಧದಲ್ಲಿ ಮೇಲಿಂದ ಮೇಲೆ ಸೋಲನ್ನನುಭವಿಸುತ್ತಿದ್ದ, ಸೀತೆಯ ಬಗೆಗೆ ಮನಃ ಪರಿವರ್ತನೆಯ ಹಾದಿಯಲ್ಲಿದ್ದ ಅಣ್ಣನನ್ನವಳು ಪ್ರಾರ್ಥಿಸುತ್ತಾಳೆ. ಸೀತೆಯನ್ನು ರಾಮನಿಗೊಪ್ಪಿಸುವ ಸಲುವಾಗಿ ಅವನ ಆಣತಿಯನ್ನು ಬಯಸುತ್ತಾಳೆ. ತನ್ನ ಪೂರ್ವ ಪಾಪದ ಕಿಲ್ಬಿಷವನ್ನು ಕಣ್ಣೀರಲ್ಲಿ ತೊಳೆಯುತ್ತಾಳೆ; ರಾವಣನ ಮನಃಪರಿವರ್ತನೆಗೆ ಅವಳೂ ಕಾರಣಳಾಗುತ್ತಾಳೆ.

ಶ್ರೀ ರಾಮಾಯಣದರ್ಶನದಲ್ಲೆಲ್ಲ ಕವಿಯ ಹಾಗೂ ವಾಚಕರ ವಿಶೇಷ ಸಹಾನುಭೂತಿಗೆ ಭಾಜನರಾದ ಮಾನಿನಿಯರೆಂದರೆ ಕೈಕೆ ಮಂಡೋದರಿಯರು. ಮುಪ್ಪಿನ ದಶರಥನ ಮೂರನೆಯ ಹೆಂಡತಿಯಾಗಿ ಸವತಿಯರ ಹೊಟ್ಟೆಯುರಿಗೆ ಕಾರಣವಾಗಿ ಅರಮನೆಯಲ್ಲಿ ಕಾಲಿಟ್ಟ ಲಲನೆ ಕೈಕೆಗೆ ಮಂಥರೆಯೆ ಒರಗುಗಂಬ; ಆದರೆ ಕಿಸುರು ಕೈತವಗಳನ್ನರಿಯದ ಮುಗ್ಧ ಷೋಡಶಿ ಯಾಕೆ: ರಾಮ ಬೇರೆ ಭರತ ಬೇರೆ ಎಂದು ಕನಸು ನನಸುಗಳಲ್ಲಿ ಎರಡೆಣಿಸದ ಶುಭ್ರ ಹೃದಯದ ನಿಷ್ಕಪಟಿಯವಳು :

ನಿನಗಿದೊ ಕೊಡುಗೆ, ಶುಭದ ವಾರ್ತೆಯಂ ತಂದುದಕೆ
ರಾಮನೇಂ? ಭತನೇಂ? ಮಕ್ಕಳಿರ್ವರುಮೆನ್ನವರ್

ಎಂದು ರಾಮಪಟ್ಟಾಭಿಷೇಕದ ವಾರ್ತೆಯನ್ನು ತಂದ ಮಂಥರೆಗೆ ಕೊರಳ ಸರವನ್ನು ನೀಡಿದ ಸಾಧ್ವೀಶಿರೋಮಣಿಯಾಕೆ. ಮಂಥರಾ ರೂಪದ ವಿಧಿಯ ಕೂಳಿಗೆ ತಾತ್ಕಾಲಿಕವಾಗಿ ಸೆರೆಯಾದ ಅಭಾಗಿನಿಯಳು; ಮೃದು ಹೃದಯದ ಕನಿಕರದ ಕವಿಯ ಪ್ರತಿಭೆ ಪಡೆದ ಭರತಮಾತೆ ಪುಣ್ಯವಂತೆಯಾಕೆ.

ಕವಿ ಸ್ತ್ರೀಪಕ್ಷಪಾತಿ. ಅವರದು ಹೆಂಗರುಳೆನ್ನುವುದಕ್ಕೆ ಈ ಪಾತ್ರ ರಚನೆಯೇ ಸಾಕ್ಷಿ. ರಾಮ ಅರಣ್ಯಾಭಿಮುಖಿಯಾಗಿ, ದಶರಥ ದಿವಂಗತನಾದ ಕ್ಷಣದಲ್ಲಿಯೇ ತನ್ನ ತಪ್ಪಿನ ಅರಿವಾಗಿ ಅವಳು ಶೋಕದ ಕಡಲಲ್ಲಿ ಮುಳುಗುತ್ತಾಳೆ; ಅಂದು ಅವನತಮುಖಿಯಾದ ಅವಳು ಮತ್ತೆ ತಲೆಯೆತ್ತಿದುದಿಲ್ಲ; ಅಂದು ಎದೆಯನ್ನಾವರಿಸಿಕೊಂಡ ಕಿಚ್ಚು ಮುಂದೆಂದೂ ನಂದಿದುದಿಲ್ಲ. ಯಾವ ಮಗನ ಅಭ್ಯುದಯಕ್ಕಾಗಿ ತನ್ನಾತ್ಮ ಶ್ರೀಯನ್ನೇ ಹೋಮಮಾಡಲು ಸಿದ್ಧಳಾಗಿದ್ದಳೋ ಆ ಮಗನೆ ‘ನಿಲ್! ನಿಲ್! ಕೊಲೆ ಗೈಯದಿರ್. ತಾಯೇ. ಹಾಲೂಡಿದೆದೆ ಯೊಳೆ ಹಾಲಾಹಲವನುಗುಳಿ!’ ಎಂದು ತನ್ನನ್ನು ದೂರನೂಕಿದಾಗ ಅವಳು ಕರುಣದೈನ್ಯದ ಮೂರ್ತಿಯಾಗುತ್ತಾಳೆ; ಬಿನ್ನಹಕ್ಕೆ ಬಾಯ್ ಬಂದಂತೆ ಗೋಳಾಡುತ್ತಾಳೆ :

ಕೈಬಿಡದಿರೆನ್ನ, ಮಗನೆ, ಕೆಟ್ಟಳೆನ್
ಜಗವೆ ಕೈಬಿಟ್ಟಳೆನ್! ನೂಂಕು ನರಕಕೆ; ಸಹಿಸಿ
ಬಹೆನೊ ಕೇಡಂ ತವಿಸಿ: ನೂಂಕದಿರೊ ಶೂನ್ಯತೆಗೆ!

ಎಂದು ಮಗನಡಿಗೆ ಮುಡಿಚಾಚಿ ಹಲುಬುತ್ತಾಳೆ; ಕುದಿ ಬೇನೆಯ ಕಂಬನಿಯಲ್ಲಿ ಅವಳ ಬಗೆಯ ಮೈಲಿಗೆ ಮಡಿಯಾದರೂ ಅವಳ ಮೂಕ ಸಂಟಕ್ಕೆ ಕೊನೆಯಿಲ್ಲವಾಗುತ್ತದೆ; ‘ಕೇಳ್, ಕೈಕೆಗಿನ್ ಬಾಯಿಲ್ಲೋ!’ ಎಂಬ ಅವಳ ಆ ಮಾತು ನಿಜವಾಗುತ್ತದೆ.

ಇಡೀ ಕಾವ್ಯದಲ್ಲಿ ಅವಳು ಮತ್ತೆ ಮಾತಾಡಿದುದಿಲ್ಲ. ತನ್ನನ್ನು ಅಯೋಧ್ಯೆಗೆ ಹಿಂದಿರು ಗಿಸಲಿಕ್ಕಾಗಿ ಬಂದ ಭರತನ ಪರಿವಾರದ ಕೊನೆಯಂಚಿನಲ್ಲಿ ಪಶ್ಚಾತ್ತಾಪದಗ್ಧ ಶೋಕ ಭಾರಾಕ್ರಾಂತಳಾದ ಕಿರಿಯಮ್ಮನ ಪಾದಗಳನ್ನು ರಾಮ ಹಿಡಿದಾಗ, ಅವಳು ಅವನ ಅಂಘ್ರಿಗಳ ಮೇಲೆ ಕೆಡೆಯುತ್ತಾಳೆಯೇ ಹೊರತು ಅವಳ ಬಾಯಿಂದ ಒಂದಕ್ಷರವೂ ಹೊರಡುವುದಿಲ್ಲ. ರಾಮಾಗಮನ ವಾರ್ತೆ ಅಯೋಧ್ಯೆಯನ್ನು ಮುಟ್ಟಿದಾಗ

ಊರ್ಮಿಳೆ, ನಮ್ಮ ಸಂಕಟಕಿಂದು ಬಂದುದು
ವಿರಾಮಮಾ ಕೈಕೆಯ ಮನೋವ್ಯಥೆಗೆ ಪೇಳೆಂದು
ಬರ್ಪುದೊ ಪರಿಸಮಾಪ್ತಿ?

ಎಂಬ ಸುಮಿತ್ರೆಯ ಮಾತು ಧ್ವನಿಪೂರ್ಣವಾಗಿದೆ. ರಾಮ ನಂದಿಗ್ರಾಮಕ್ಕೆ ಮರಳಿ, ತನ್ನಡಿಗೆ ಮಣಿದಾಗ ಅವಳು ಚಿನ್ಮಯ ಮಹಾಮೌನದಿಂದ ಅವನನ್ನು ಹರಸಿದಳೆ ಹೊರತು ತುಟಿಪಿಟಕ್ಕೆ ನ್ನುವುದಿಲ್ಲ. ರಾಮಾಯಣದಲ್ಲಿ ಲೋಕ ಶೋಕವೆ ಮೂರ್ತಿವೆತ್ತಂತಿರುವವಳು ಸೀತೆಯಲ್ಲ. ಕೈಕೆ.

ಸ್ವಯಂಕೃತಾಪರಾಧಕ್ಕಾಗಿ ಕೈಕೆ ಚಿರ ದುಃಖಿನಿಯಾದರೆ, ಮಂಡೋದರಿ ಪತಿತ ಪತಿ ರಾವಣನ ಆತ್ಮೋದ್ಧಾರಕ್ಕಾಗಿ ಸಂಕಟಾಗ್ನಿಯ ನಡುವೆ ತಪೋಮಗ್ನೆಯಾಗುತ್ತಾಳೆ. ಶ್ರೀರಾಮ ವನವಾಸದ ಮೂಲಕ ಕೈಕೆ ಪರೋಕ್ಷವಾಗಿ ಲೋಕ ಕಲ್ಯಾಣಕ್ಕಾಗಿ ತನ್ನ ಕಾಣ್ಕೆಯನ್ನು ಸಲ್ಲಿಸಿದರೆ, ಮಂಡೋದರಿ ಪ್ರತ್ಯಕ್ಷವಾಗಿ ರಾವಣನ ಆತ್ಮೋದ್ಧಾರಕ್ಕಾಗಿ ತಪಗೈಯುವ ಮೂಲಕ ಲೋಕ ಕ್ಷೇಮ ಸಾಧನೆಯಲ್ಲಿ ನೆರವಾಗುತ್ತಾಳೆ. ಕವಿಗೆ ಸೀತೆಯ ಮೇಲೆಷ್ಟು ಗೌರವವಿದೆಯೋ ಅದಕ್ಕಿಂತಲೂ ಒಂದು ಕೈ ಮಿಗಿಲಾದ ಗೌರವ ಮಂಡೋದರಿಯ ಮೇಲಿದೆ. ಏಕಪತ್ನೀವ್ರತಸ್ಥನೂ ಲೋಕ ಸಂಪೂಜ್ಯನೂ ಆದ ಶ್ರೀರಾಮಚಂದ್ರನ ಮಡದಿಯಾಗು ವುದಾಗಲೀ, ಅವನ ರಕ್ಷೆಯಲ್ಲಿ ಪತಿವ್ರತಾಧರ್ಮವನ್ನು ಕಾಪಾಡಿಕೊಳ್ಳುವುದಾಗಲಿ ವಿಶೇಷ ಸಂಗತಿಯಾಗಲಾರದು; ಆದರೆ ಲೋಕ ಕಂಟಕನೂ ಪರದಾರಚೋರನೂ ಆದ ರಾವಣನ ಮಡದಿಯಾಗಿ, ಪತಿವ್ರತಾಧರ್ಮವನ್ನುಳಿಸಿಕೊಂಡು, ಪತಿಯ ಆತ್ಮಕಲ್ಯಾಣಕ್ಕಾಗಿ ಹಗಲಿರುಳು ಕಡು ನೋಂಪಿಯ ಕ್ಲೇಶವನ್ನನು ಭವಿಸುವುದು ಸಾಮಾನ್ಯ ವಿಷಯವಲ್ಲ. ಪರಸತಿಯರಿಗೆ ಅಳುಪುವುದು ಅಧರ್ಮವೆಂದು ಸತಿ ಪತಿಗೆ ಬುದ್ದಿ ಹೇಳಿ ‘ಪೆಣ್ತನಕೆ ಸಾಜಂ ಸವತಿಮಚ್ಚರಂ’ ಎಂದು ಅನ್ನಿಸಿಕೊಳ್ಳಬೇಕಾಗುತ್ತದೆ. ಆದರೆ ಅವಳು ಸೀತೆಯಂಥ ಸಪ್ಪೆ ಹೆಣ್ಣಲ್ಲ.

ಮತ್ತೊರ್ವ ನಿದ್ದಿದ್ದರೀ ತೆರನ ರಾವಣಂ
ತೋರುತಿರ್ದಳ್ ನಿನಗೆ ಹದಿಬದೆಯರಿರ್ಪುದಂ
ಹದಿಬದೆತನದ ಹಿರಿಮೆಯಂ, ನಿನ್ನ ಈ ಮಯನ
ಮಗಳಬಲೆ!

ಎನ್ನುವ ಮಡದಿಯ ದಿಟ್ಟ ನೋಟಕ್ಕೆ, ಅವಳ ದನಿಯ ದಾರ್ಢ್ಯಕ್ಕೆ, ಅವಳ ಧರ್ಮ ಧೈರ್ಯಕ್ಕೆ ದನುಜನೆದೆ ಅಳುಕುತ್ತದೆ, ದಿಟ್ಟಿ ಸಿಡಿಲನ್ನು ಉಪಸಂಹರಿಸುವಂತೆ ತ್ರಿಜಗ ದ್ವಿಜಯಿ ರಾವಣ ಮಡದಿಯ ಮುಂದೆ ಅಂಗಲಾಚುತ್ತಾನೆ. ಪತಿಗನುರೂಪೆಯಾದ ಸತಿ ಅವಳು.

ಅವಳು ಸೀತೆಯನ್ನು ಸಂಧಿಸಿದಾಗ ‘ನನ್ನವೋಲತಿದುಃಖಿ,ಲಂಕೆಯೊಳಗಂತಿರ್ಕೆ, ಸೃಷ್ಟಿ ಯೊಳಗಿಲ್ಲವೆಂದರಿ’ ಎನ್ನುವ ಅವಳ ಮಾತಿನಲ್ಲಿ ಯಾಥಾರ್ಥ್ಯವಿದೆ. ಮಂಡೋದರಿ ಸೀತೆಯ ಹದಿಬದೆತನದ ರಕ್ಷಣೆಯ ಹೊಣೆ ಹೊತ್ತಿದ್ದರಿಂದ ಸೀತೆಯ ತಪಸ್ಸು ಯಶಸ್ವಿಯಾಗುತ್ತದೆ; ರಾವಣನ ನಾಯಿತನವಳಿದು, ಅವನ ಹೃದಯ ಶುದ್ದಿ ಸಾಧ್ಯವಾಗುತ್ತದೆ. ಮಂಡೋದರಿಯ ಚಿತ್ತೈಕಾಗ್ರತೆಯ ಕಠಿನವ್ರತದ ಪರಿಣಾಮವೆಂಬಂತೆ ‘ಪಾಪಿಯಂ ಕೈ ಬಿಡದೆ ಪುಣ್ಯ ಕೊಯ್ಯುವ ದೇವಿ ನನಗೆ ನಿನೊರ್ವಳೆಯೆ ದಲ್!’ ‘ನಿನಗಿಂ ಮಿಗಿಲ್ ಸೀತೆ, ನನಗೆ ದೇವತೆ, ಮಾತೆ!’ ಎನ್ನುವಷ್ಟರಮಟ್ಟಿಗೆ ರಾವಣನ ಹೃದಯ ಪರಿವರ್ತನೆಯಾಗುತ್ತದೆ. ಆದರೂ ಕೊನೆಗೆ ಸಂಭವಿಸಿದ್ದೇನು? ರಾವಣ ರಾಮತ್ವವನ್ನು ಹೊಂದುತ್ತಾನೆ; ಮಂಡೋದರಿ ಅವನೊಡನೆ ಚಿತೆಯೇರುತ್ತಾಳೆ. ಸೀತೆ ರಾಮನೊಡನೆ ಅಗ್ನಿಸ್ನಾತೆಯಾಗಿ ಅಯೋಧ್ಯೆಗೆ ಹಿಂದಿರುಗಿ, ಸುಖವಾಗಿರುತ್ತಾಳೆ. ತನ್ನ ಪತಿಯ ಷಾಪಕರ್ಮಗಳಿಗಾಗಿ ತನ್ನ ಸರ್ವಸ್ವನ್ನು ಬೇಳ್ವೆಗೈದ ಮಂಡೋದರಿ ಲೋಕದ ಕಣ್ಣಲ್ಲಿ ಮಹಾಪತಿವ್ರತೆಯಾಗಿ ಮಹಾವ್ಯಕ್ತಿಯಾಗಿ ಪ್ರಜ್ವಲಿಸಿದರೆ, ಕವಿ ಹೃದಯದಲ್ಲಿ ಅವಳಿಗೆ ಮಹೋನ್ನತ ಸ್ಥಾನ ದೊರಕಿದ್ದರೆ ಅತ್ಯಾಶ್ಚರ್ಯವಾಗದು.

ಕವಿಯ ದೃಷ್ಟಿಯಲ್ಲಿ ಶ್ರೀ ರಾಮಾಯಣ ದರ್ಶನದ ಸೀತೆ ಮರ್ತ್ಯ ಪ್ರಜ್ಞೆಗೆ ಸಂಕೇತವಾಗಿ, ಅಲ್ಲಿಯ ಕಾಂಚನ ಮೃಗ ಪ್ರಕರಣ ಹೆಣ್ಬಯಕೆಗೆ ಪ್ರತೀಕವಾಗಿದ್ದು, ಭಾವೋದ್ವೇಗದ ಸಂದರ್ಭದಲ್ಲಿ ‘ಹೆಣ್ಣಿನ ಹಣೆಯ ಬರಹ ಮಿಂತುಟೆವಲಂ’ ಎಂಬುದಾಗಿ ಕವಿಲೇಖನಿ ಅವಳನ್ನು ವರ್ಣಿಸುವುದಾದರೂ, ಅವಳು ರಾವಣಾವಿದ್ಯೆಯನ್ನು ಪರಿಹರಿಸುವ ಸಲುವಾಗಿ ಅವತರಿಸಿದ ಶ್ರೀರಾಮಚಂದ್ರನ ಮಡದಿಯೆಂಬುದನ್ನು ಕವಿ ಎಲ್ಲಿಯೂ ಮರೆಯುವುದಿಲ್ಲ. ಭೂಲೋಕದ ಆದರ್ಶದಂಪತಿಗಳ ಪ್ರಣಯ ಕ್ರೀಡೆ ಹಾಗೂ ಸಾಂಸಾರಿಕ ವ್ಯವಹಾರಗಳ ಪ್ರತಿಬಿಂಬಗಳನ್ನು ಕವಿ ರಾಮಸೀತೆಯರ ವೈವಾಹಿಕ ಜೀವನದಲ್ಲಿ ಕಾಣುತ್ತಾರೆ. ಅನ್ನಮಯ ಕೋಶದಲ್ಲಿ ವ್ಯವಹರಿಸುವಾಗ ದೇವತೆಗಳಾದರೂ ಮಾನವ ಸಹಜವಾಗಿ ವರ್ತಿಸಬೇಕಲ್ಲವೆ? ತನ್ನ ಪತಿರಾಮನ ಸಂತೋಷಾರ್ಥವಾಗಿ ಸೀತೆ ತನ್ನತನವನ್ನೆ ಸೊನ್ನೆ ಮಾಡಿ, ತನ್ನೆಲ್ಲವನ್ನು ನೈವೇದ್ಯ ನೀಡುತ್ತಾಳಂತೆ. ಪತಿಯ ಸಹವಾಸವೇ ಸ್ವರ್ಗಸುಖವೆಂದರಿತೇ ಅವಳು ರಾಮನೊಡನೆ ಅರಣ್ಯವಾಸಕ್ಕೆ ತೆರಳುತ್ತಾಳೆ; ಮಂದಾಕಿನಿಯ ಸಲಿಲದಲ್ಲಿ ಮೀಯುತ್ತಾಳೆ : ಗೋದಾವರಿಯ ಮಳಲಿನಲ್ಲಿ ಆಟವಾಡುತ್ತಾಳೆ; ಹಸಿ ಸೌದೆ ಉರಿಯದಿದ್ದಾಗ ಮುನಿಸಿಕೊಳ್ಳುತ್ತಾಳೆ. ಶಶಿಮೌಳಿ ಯೆಂಬ ಹತ್ತು ವರ್ಷದ ಋಷಿಕುಮಾರನೊಡನೆ ಗಳಹುತ್ತಾಳೆ; ಕಾನನ ಸುಖ ಅರಮನೆಯ ಸುಖಕ್ಕಿಂತ ಮಿಗಿಲಾಗಿ ತೋರುತ್ತದೆ. ಕಾಂಚನ ಮೃಗದ ಪ್ರಕರಣ ಅವಳ ಈ ಎಲ್ಲ ಸುಖಗಳಿಗೆ ಮಂಗಳ ಹಾಡಿ ಮುಂದಿನ ಅವಳ ಊರ್ಧ್ವಮುಖ ಜೀವನದ ವಿಕಾಸಕ್ಕೆ ನೆರವಾಗುವ ಕ್ಲೇಶ ಸಂಕಟಮಯ ಕಠೋರ ತಪಸ್ಸಿಗೆ ಅವಳನ್ನು ಅಣಿಗೊಳಿಸುತ್ತದೆ.

ಶ್ರದ್ದೆ ಗೆಟ್ದಿರ್ದೆನಗೆ
ಶ್ರದ್ಧೆಯಂ ಮರುಕೊಳಿಸುತಾತ್ಮದುದ್ದಾರಮಂ
ತಂದ ದೇವತೆ, ಪುಣ್ಯ ಮಾತೆ!

ಎಂದು ರಾವಣನೇ ಒಪ್ಪಿಕೊಳ್ಳುವಷ್ಟರಮಟ್ಟಿಗೆ ಸೀತೆಯ ತಪಸ್ಸು ಯಶಸ್ವಿಯಾಗುತ್ತದೆ.

ಪುರುಷನನ್ನು ಪಾಪದ ನರಕದಿಂದ ಪುಣ್ಯದ ಸ್ವರ್ಗಕ್ಕೊಯ್ಯುವ, ಅವನ ಆಸುರೀ ಪ್ರವೃತ್ತಿಯನ್ನು ಸಾತ್ವಿಕತೆಯ ಕಡೆಗೆ ತಿರುಗಿಸುವ, ಅವನ ಹೃದಯದ ಕಾಳಿಕೆಯನ್ನು ಹೀರಿ ಅಂತಃಕರಣವನ್ನು ಶುದ್ದಿಗೊಳಿಸುವ ವಿಶಿಷ್ಟಶಕ್ತಿ ಹೆಣ್ಣಿನಲ್ಲಿದೆಯೆಂದೂ, ಹೆಣ್ಣಿಲ್ಲದೆ ಗಂಡಸಿನ ಬಾಳು ಅಪೂರ್ವವೆಂದೂ ಕವಿಯ ದೃಢನಿರ್ಧಾರ. ಇದಕ್ಕೆ ಸೀತೆ ಮಂಡೋದರಿಯರೇ ಸಾಕ್ಷಿಯಾಗಿದ್ದಾರೆ. ತಾರಾಕ್ಷಿಯಂಥ ಷೋಡಶಿ ತನ್ನ ಪತಿ ಇಂದ್ರಜಿತುವಿನ ಮೂಲಕ ಮಾವನ ತಪ್ಪನ್ನು ತಿದ್ದಲು ಪ್ರಯತ್ನಿಸುತ್ತಾಳೆ. ತಮ್ಮ ಸುಗ್ರೀವನ ಮೇಲೆ ಕೋಪ ಕಾರುತ್ತಿದ್ದ ಪತಿಯ ಕಾಲು ಹಿಡಿದು ಕಣ್ಣೀರು ಸುರಿಸುತ್ತ ‘ಮಾರದಿರ್ ಚಲಕೆ ಜೀವನ ಶ್ರೇಯಮಂ’ ಎಂದು ತಾರೆ ನುಡಿದು, ವಾಲಿಯ ಮನಃಪರಿವರ್ತನಗೆ ಕಾರಣಳಾಗುತ್ತಾಳೆ. ರಾವಣನ ಮನಸ್ಸಿನ ಕಾಠಿನ್ಯವನ್ನು ಕ್ರೌರ್ಯವನ್ನು ಮಾರ್ದವಗೊಳಿಸುವಲ್ಲಿ ಮಂಡೋದರಿಯಂತೆಯೇ ವಿಭೀಷಣನ ಮಗಳು ಅನಲೆಯೂ ಕಾರಣಳೆಂಬುದರಲ್ಲಿ ಸಂದೇಹವಿಲ್ಲ. ‘ಇವಳೆನ್ನ ಕಾಪಿಡುವ ದೇವಿ!’ ‘ಪುಣ್ಯಪ್ರಚೋದಿಯೆನಗಿದೊಂದೆ ಸೌಂದರ್ಯಮನಲೆಯೀ ಮುದ್ದು ಚೆಲ್ವು!’ ಎಂಬ ರಾವಣನ ಮಾತಿನಲ್ಲಿ ಅವನ ಬಾಳಿನ ಗುರಿ ಹೊಳಲುಗೊಡುತ್ತದೆ. ತಂದೆಯನ್ನು ಕಾಮದ ಕೆಸರಿನಿಂದ ಪಾರುಮಾಡಿ, ಪುಣ್ಯದ ಕಡೆಗೆ ಲಕ್ಷ್ಯ ತಿರುಗಿಸುವ ಮಂತ್ರಶಕ್ತಿ ಮಗಳಲ್ಲಿದೆ ಯೆಂಬುದು ಕವಿಯ ನಂಬಿಕೆ.

ಮಗಳ್ ನಿನಗೆ
ಪುಟ್ಟಿರ್ದಳಿರ್ಪೊಡೆಯೆಲ್ಲಿಯದೆಮಗೆ ಮೇಣೆಮ್ಮ
ಲಂಕೆಗೀ ತೋರ್ಪ ದುರ್ಮುಂಗಳಂ?

ಎಂಬ ಅವಿಂಧ್ಯನ ಮಾತಿನಲ್ಲಿ ಕವಿಯ ಹೃದಯವಡಗಿದೆ.

ಶಾರದಾಮಣಿ ದೇವಿಯಲ್ಲಿ ಜಗನ್ಮಾತೆಯನ್ನೂ ಸಾವಿತ್ರಿಯಲ್ಲಿ ಆದರ್ಶಸತಿಯನ್ನೂ ಕಂಡ ಕುವೆಂಪು ಕಾನೂರುಹೆಗ್ಗಡಿತಿಯ ಸೀತೆಯಲ್ಲಿ, ಮಲೆಗಳಲ್ಲಿ ಮದುಮಗಳು ಕಾದಂಬರಿಯ ಚಿನ್ನಮ್ಮನಲ್ಲಿ ತಮ್ಮ ಮನಸ್ಸಿನ ಅಂತರಾಳದಲ್ಲಿ ಸುಪ್ತವಾಗಿದ್ದ, ತಮ್ಮ ಕಲ್ಪನೆಯಲ್ಲಿ ರೂಹುಗೊಳ್ಳುತ್ತಿದ್ದ ಭಾವೀಸತಿಯ ರೂಪರೇಖೆ ಲಕ್ಷಣಗಳನ್ನು ಗುರುತಿ ಸುತ್ತಾರೆ. ವಿವಾಹಾನಂತರ ಪೂರ್ಣಗೊಂಡ ಶ್ರೀರಾಮಾಯಣ ದರ್ಶನದ ನಾನಾ ಸ್ತ್ರೀ ಪಾತ್ರಗಳಲ್ಲಿ ತಮ್ಮ ಪ್ರೀತಿಯ ಸತಿಯ ಜೀವನ ವಿಕಾಸವನ್ನೂ, ಅವರ ಸಾಧನೆ ಸಿದ್ದಿಗಳನ್ನೂ, ಅವರ ಆಧ್ಯಾತ್ಮಿಕ ಪರಿಪೂರ್ಣತೆಯನ್ನೂ ಗುರುತಿಸುತ್ತಾರೆ. ಆ ಪಾತ್ರಗಳನ್ನು ಕಂಡರಿಸುವಲ್ಲಿ ಹೇಮಾವತಿಯವರ ಚಿತ್ರವೇ ಅವರ ಕಣ್ಮುಂದೆ ನಿಲ್ಲುತ್ತದೆ. ವಾಲ್ಮೀಕಿ ಸೃಷ್ಟಿಸಿದ ಪಾತ್ರಗಳ ಅಸ್ಥಿಪಂಜರದಲ್ಲಿ ಕುವೆಂಪು ತಮ್ಮ ಸತಿ ಸಾಧ್ವೀಮಣಿಯ ರೂಪಸ್ವರೂಪ ಭಾವ ಸ್ವಭಾವ ಗುಣಲಕ್ಷಣಗಳನ್ನು ತುಂಬುತ್ತಾರೆ. ಕೈಕೆ ಮೊದಲಾದವರನ್ನು ಹೇಮಾಂಗಿನಿಯರೆಂದು, ಪ್ರೇಮ ಪಕ್ಷಿಯ ಹೇಮಪಂಜರಗಳೆಂದು, ಹೇಮಸುಂದರಗಾತ್ರೆಯರೆಂದು ವರ್ಣಿಸುವಲ್ಲಿ ಅವರ ಲೇಖನಿ ಸೋಲುವುದಿಲ್ಲ, ‘ಕೊಡಗಿನುಡುಗೆಯ ಸೀರೆ ಸಿಂಗರಿಸಿದಾ ನೀರೆ’ ಎಂದು ತಾರೆ ಯನ್ನು, ‘ತರುಣಿ, ಷೋಡಶಿ’ ಎಂದು ಸೀತೆಯನ್ನು, ‘ವೇದಂಬೊಲೊರೆದೀ ಮಹಾಕಾವ್ಯಮಂ ನೀನೆಲ್ಲಿ ಕಲಿತಪ್ ಕೆಳದಿ?’ ಎಂದು ತ್ರಿಜಟೆಯನ್ನು. ‘ಪುಟ್ಟ ಹೃದಯದೊಳೆಂತು, ಪೇಳನಲೆ, ಇಂತಪ್ಪ ದಿಟ್ಟತನ ವಿರಿಸಿರ್ಪೆ? ಪದಿನಾರ್ ಬಸಂತಗಳ ಮುದ್ರೆಯಂ ತಳೆದಿರ್ಪ ನಿನ್ನಮೆಯ್ ಪಿರಿಯುಸಿರ್ ಬೀಡು, ಪೆರ್ಬಗೆಯ ಪೆರ್ಮೆಗೆ ತವರ್ ನಾಡು!’ ಎಂದು ಅನಲೆಯನ್ನು, ‘ಪಾಪಿಯಂ ಕೈಬಿಡದೆ ಪುಣ್ಯಕೊಯ್ಯುವ ದೇವಿ ನನಗೆ ನೀನೊರ್ವಳೆಯೆ’ ದಲ್!’ ‘ಧನ್ಯೆ! ಪುಣ್ಯಾತ್ಮೆ! ಮಾತಾಯಿ ಹದಿಬದೆಯರರಸಿ ದಲ್!’ ಎಂದು ಮಂಡೋದರಿಯನ್ನು, ‘ಪೆಣ್ಣೆಂಬ ತಪಕೆ ನೀಂ ನಿರುಪಮ ಪ್ರತಿಮೆಯೌ!’ ಎಂದು ಸಂತೆಗಣ್ಗಳಿಗೆ ಬೀಳದ ಚಿರತಪಸ್ವಿನಿ ಊರ್ಮಿಳೆಯನ್ನು ಕುರಿತು ಕವಿ ಮಾಡುವ ವರ್ಣನೆಯಲ್ಲಿ ತಾಯಿ ಹೇಮಾವತಿಯ ವಿಮಲ ಪ್ರತಿಬಿಂಬವಿದೆ. ಕವಿಯ ಎಲ್ಲ ಪ್ರೇಮ ಕವನಗಳಿಗೆ ಅವರೇ ಸ್ಫೂರ್ತಿಯ ಸೆಲೆ. ಅವರೇ ವಸ್ತುವಾಗಿರುವ ‘ಮನೆ ಮನೆಯ ತಪಸ್ವಿನಿಗೆ’ ಎಂಬ ಕವಿತೆ ಜಗತ್ತಿನ ಸ್ತ್ರೀ ಕುಲದ ಗೌರವಕ್ಕೆತ್ತಿದ ನಂದಾದೀವಿಗೆಯಾಗಿದೆ; ಅವಳ ಮಹಿಮೆಗೆ ಸಲ್ಲಿಸಿದ ಕೀರ್ತಿಮಂತ್ರವಾಗಿದೆ.

ತಾಳುತ್ತಿದೆ, ಬಾಳುತ್ತಿದೆ
ನಿನ್ನಿಂದೆಮ್ಮ ಇಳೆ,
ಹೇ ದಿವ್ಯೆ, ಸಾಮಾನ್ಯೆ
ಮನೆ ಮನೆಯ ಊರ್ಮಿಳೆ,
ಗೃಹಿಣಿ, ಗರತಿ, ದೇವಿ, ತಾಯಿ,
ಹೆಸರಿಲ್ಲದ ಮಹಿಳೆ,
ಮಣಿವನು ಇದೊ ನಿನ್ನಡಿಗೀ
ಹುಸಿವೆಸರಿಗೆ ಮರುಳಾಗದ
ಹೆಸರೊಲ್ಲದ ಹಸುಳೆ!

ಸ್ತ್ರೀ ಪಾತ್ರರಚನೆಯ ಸಮಯದಲ್ಲಿ ಕುವೆಂಪು ಅವರಿಗೆ ಪ್ರೇರಣೆ ನೀಡಿರುವ ಮತ್ತೊಂದು ವ್ಯಕ್ತಿಯೆಂದರೆ, ಅವರ ತಾಯಿ ಸೀತಮ್ಮನವರು. ಸೀತಮ್ಮನವರೇ ವಸ್ತುವಾಗಿರುವ ಕೆಲವು ಕವನಗಳುಂಟಾದರೂ ನಾಗಮ್ಮ, ಶಬರಿ, ಕೌಸಲ್ಯೆಯರನ್ನು ಚಿತ್ರಿಸುವಾಗ ಅವರ ನೆನಪು ಅನಿವಾರ್ಯವಾಗಿ ಅವರ ಚಿತ್ಕೋಶವನ್ನು ಆವರಿಸಿಕೊಳ್ಳುತ್ತದೆ. ಶ್ರೀರಾಮ ವನವಾಸೋದ್ಯುಕ್ತ ನಾಗಿ ಕೌಸಲ್ಯೆಯಿಂದ ಬೀಳ್ಕೊಳ್ಳುವ ಸಂದರ್ಭದಲ್ಲಿ ತಾಯಿ ಸೀತಮ್ಮನ ಶೋಕವೇ ಕಾವ್ಯದಲ್ಲಿ ಉಕ್ಕಿ ಹರಿಯುವಂತೆ ಭಾಸವಾಗುತ್ತದೆ; ಅವರೇ ಕವಿಯನ್ನು ಹರಸಿ, ಕಳಿಸಿಕೊಡುವಂತೆ ವೇದ್ಯವಾಗುತ್ತದೆ. ಮಾತೃವಾತ್ಸಲ್ಯದಿಂದ ಶ್ರೀರಾಮಚದ್ರನನ್ನುಪಚರಿಸಿ, ಅವನ ರುಜೆಗೆ ತನ್ನನ್ನು ತಾನೇ ನಿವೇದಿಸಿಕೊಂಡ ಶಬರಿಯಲ್ಲಿ ಸೀತಮ್ಮನ ಚಿತ್ರವನ್ನೆ ಕಾಣಬಹುದಾಗಿದೆ. ಇಲ್ಲಿಯೂ ಕವಿಯ ಸ್ತ್ರೀಪರವಾದ ನಿಷ್ಕಳಂಕ ಗೌರವ ಮುಗಿಲು ಮುಟ್ಟುತ್ತದೆ. ಅವರು ಮಡದಿ ಮೊದಲುಗೊಂಡು ಪ್ರತಿಯೊಬ್ಬ ಸ್ತ್ರೀಯಲ್ಲಿಯೂ ಜಗಜ್ಜನನಿಯನ್ನೆ ಕಾಣುತ್ತಾರೆ.

೨೬.೪.೧೯೮೩ರಂದು ಉದಯರವಿಗೆ ಹೋಗಿದ್ದಾಗ, ಮಾತಿನ ನಡುವೆ ತಾಯಿ ಹೇಮಾವತಿಯವರ ಪ್ರಸ್ತಾಪ ಬಂದು, ಕುವೆಂಪು ಅವರು ಈ ರೀತಿ ನುಡಿದರು: ‘ಶ್ರೀರಾಮಾಯಣದರ್ಶನದಲ್ಲಿ ಬರುವ ‘ಚಿಃ! ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ!…. ತನ್ನ ತಾನ್ ಇಲ್ಲಗೈವುದೆ ಎಲ್ಲ ಸಾಧನೆಗೆ ಕೊನೆಯ ಗುರಿ’ ಎಂಬ ಮಾತುಗಳಿಗೆ ಅವರೇ ಸ್ಫೂರ್ತಿ. ಅವರನ್ನು ನೋಡಿಯೇ ಆ ಪಂಕ್ತಿಗಳನ್ನು ರಚಿಸಿದ್ದು. ಊರ್ಮಿಳೆ, ಅನಲೆ, ಮಂಡೋದರಿ ಮೊದಲಾದ ಸ್ತ್ರೀ ಪಾತ್ರಗಳ ಬಾಯಲ್ಲಿ ಹೊರಸೂಸುವ ಅನೇಕ ಪಂಕ್ತಿಗಳಿಗೆ ಅವರೇ ಮೂಲ ಸೆಲೆ. ಅವರಿಲ್ಲದಿದ್ದರೆ ಶ್ರೀರಾಮಾಯಣದರ್ಶನ ಸಹ ಈಗಿರುವಷ್ಟರಮಟ್ಟಿಗೆ ಯಶಸ್ವಿಯಾಗುತ್ತಿರಲಿಲ್ಲವೇನೋ! She is too great to be Praised. (ಅವರು ವರ್ಣನೆಗೆ ನಿಲುಕುವಂಥವರಲ್ಲ). I cannot think of her without tears.’ ಕೊನೆಯ ಮಾತು ಹೊರಹೊಮ್ಮುವಾಗ ಅವರ ಉಸಿರು ಏದುತ್ತಿತ್ತು.

ಕುವೆಂಪು ಅವರು ನಾರೀಕುಲದ ಮೇಲಿಟ್ಟಿರುವ ಆದರಾಭಿಮಾನ ಗೌರವಗಳಿಗೆ ಪ್ರಧಾನವಾಗಿ ತಾಯಿ ಹೇಮಾವತಿಯವರ ಸ್ಫೂರ್ತಿಯೇ ಮೂಲ ಕಾರಣ. ಸುನಿರ್ಮಲವೂ, ನಿಷ್ಕಳಂಕವೂ, ಅಕ್ಷಯವೂ ಆದ ಮಾತೃವಾತ್ಸಲ್ಯವಂತು ಸಕಲ ಸದ್ಭಾವನೆಗಳ ಗಂಗೋತ್ರಿ ಯಾಗಿರುವುದು ಸತ್ಯ. ಲೋಕದ ಸರ್ವಸ್ತ್ರೀಯರಲ್ಲಿ ಮಾತೃತ್ವವನ್ನು ಮಾತ್ರ ಕಾಣುತ್ತಿದ್ದ ಶ್ರೀರಾಮಕೃಷ್ಣರ ದಿವ್ಯಪ್ರಭಾವವೂ ಕುವೆಂಪು ಅವರ ಈ ಮನೋಧರ್ಮವನ್ನು ರೂಪಿಸಿದೆ ಯೆಂದರೆ ತಪ್ಪಾಗದು.

 

 


[1]    ಕೃತ್ತಿಗೆ, ಪು. ೧೫

[2]    ಅದೇ, ಪು. ೧೬.

[3]    ಅದೇ. ಪು. ೧೭.