ಪ್ರಿಯ ಮಿತ್ರರಾದ ಡಾ. ಎ.ಎಸ್. ವೇಣುಗೋಪಾಲರಾವ್ ಅವರು ‘ಶ್ರೀ ಕುವೆಂಪು ಅವರ ಕಾವ್ಯದಲ್ಲಿ ವಾತ್ಸಲ್ಯಭಾವ’ ಎಂಬ ವಿಮರ್ಶಾ ಕೃತಿಯನ್ನು ರಚಿಸಿ, ಅದರ ಮೂಲಕ ಈಗಾಗಲೇ ವಿಪುಲ ಪ್ರಮಾಣದಲ್ಲಿ ಪ್ರಕಟವಾಗಿರುವ ಶ್ರೀ ಕುವೆಂಪು ಸಾಹಿತ್ಯ ವಿಮರ್ಶೆಯ ಕ್ಷೇತ್ರಕ್ಕೆ ವಿಶಿಷ್ಟವೂ ವಿನೂತನವೂ ಆದ ಆಯಾಮವನ್ನು ಜೋಡಿಸಿ, ವಿಮರ್ಶಕರ ಶ್ಲಾಘನೆಗೂ ಅಭಿನಂದನೆಗೂ ಪಾತ್ರರಾಗಿದ್ದಾರೆ. ಇದು ಕೇವಲ ವಿವರಣಾತ್ಮಕ ವಿಮರ್ಶೆ ಯಾಗಿರದೆ ದರ್ಶನ ವಿಮರ್ಶೆಯೂ ಆಗಿದೆ. ‘ಶ್ರೀ ಕುವೆಂಪು ಕೃತಿಗಳನ್ನು ಒಟ್ಟಾಗಿ ಗಮನಿಸಿ ದಾಗ ಅಲ್ಲಿಯ ಮೂಲಭೂತವೂ ಅತಿದೃಢವೂ ಆದ ಭಾವ ‘ವಾತ್ಸಲ್ಯ’ ಎಂಬುದು ಖಚಿತವಾಗುತ್ತದೆ. ಅದರ ಹೃದಯದ ಒಳ ಪ್ರಜ್ಞೆಯ ಶ್ವಾಸ ಅದು, ಕೃತಿಯ ಪ್ರಾಣ ಅದು, ಕವಿಯ ಅಂತರಂಗದ ಮೆಲುದನಿ ಅದು, ಮೂಲ ದನಿ ಅದು ಎಂದು ನನ್ನ ವಿಶ್ವಾಸ’ ಎಂದವರು ಕೃತಿಯಲ್ಲಿ ಪ್ರಾರಂಭದಲ್ಲಿ (ಪು. ೫-೬) ವ್ಯಕ್ತಪಡಿಸಿರುವ ಅಭಿಪ್ರಾಯ ಆದರಣೀಯವಾಗಿದೆ;

ದರ್ಶನ ಧ್ವನಿರಸಾಮೃತಪಾನದಾನಂದದಿಂ
ಲೋಕಶೋಕವನಳಿಸಿ ಭುವನ ತ್ರಯಂಗಳಂ
ತಣಿಪ ನಂದನ ತಪೋದೀಕ್ಷೆಯಂ ಕೊಂಡೆಸಪ
ರಸಋಷಿಗೆ ಯೋಗಮತಿ ಸಹೃದಯ ವಿಭೂತಿಗೆ ನಮೋ!

ಎಂಬ ಕವಿಯ ಮಾತುಗಳನ್ನು ಗಮನಿಸಿದಾಗ, ದಾರ್ಶನಿಕತೆ ಮತ್ತು ರಸಾಭಿ ವ್ಯಕ್ತಿಗಳೆರಡೂ ಅವರ ಸಮಸ್ತ ಕಾವ್ಯದ ಅಂತರ್ದೃಷ್ಟಿಗಳೆಂಬುದು, ಅವರ ಚೇತನದ ಎರಡು ಮುಖ ಗಳೆಂಬುದು ಸ್ಪಷ್ಟವಾಗುತ್ತದೆ. ದಾರ್ಶನಿಕತೆಯೆ ಅವರ ಮತ; ರಸವೆ ಅವರ ಪಥ. ವೇಣುಗೋಪಾಲರಾವ್ ಹೇಳುವಂತೆ ‘ವಾತ್ಸಲ್ಯಭಾವ’ ಅವರ ಬದುಕಿನ ಸರ್ವಸ್ವವಾಗಿರುವಂತೆ, ಅವರ ಸಾಹಿತ್ಯದ ಜೀವಧಾತುವಾಗಿದೆ, ನಿಜ. ದರ್ಶನಾನುಭವ ಅವರ ವಾತ್ಸಲ್ಯಭಾವದಲ್ಲಿ ಸಮರಸವಾಗಿ ಬೆರೆತಿದೆಯೆನ್ನುವುದಕ್ಕೆ ಮಂಥರೆ, ವಾಲಿ, ರಾವಣ ಮೊದಲಾದ ಪಾತ್ರಗಳ ವಿಶ್ಲೇಷಣೆಯಿಂದ ರುಜುವಾತು ಒದಗುತ್ತದೆ. ಕುವೆಂಪು ಅವರ ಕಾವ್ಯಗಳಲ್ಲೆಂತೋ ಅವರ ಕಾದಂಬರಿ ನಾಟಕ ಜೀವನ ಚರಿತ್ರೆಗಳಲ್ಲಿಯೂ ಈ ವಾತ್ಸಲ್ಯಭಾವ ತುಂಬುಹೊಳೆಯಾಗಿ, ವಿದ್ಯುತ್ ಹಾಗೂ ಚುಂಬಕ ಶಕ್ತಿಯಾಗಿ, ದರ್ಶನ ದೀಪ್ತವಾಗಿ ಪ್ರವಹಿಸುತ್ತದೆಯೆನ್ನಬಹುದು. ರಾವ್ ಅವರ ಮೀಮಾಂಸೆಗೆ ಪೂರಕವಾಗಿ ಮಾತ್ರ ಕುವೆಂಪು ಕಾದಂಬರಿ ನಾಟಕಗಳಲ್ಲಿ ಮೈದೋರುವ ವಾತ್ಸಲ್ಯಭಾವದ ಕೆಲವು ಸನ್ನಿವೇಶಗಳನ್ನು ಈ ಮುಂದೆ ಸಂಕ್ಷೇಪವಾಗಿ ನಿರೂಪಿಸಲಾಗುತ್ತದೆ.

ವಾತ್ಸಲ್ಯಕ್ಕೂ ಮಾತೃಹೃದಯಕ್ಕೂ ಅತಿ ನಿಕಟ ಸಂಬಂಧ; ತಾಯ್ತನ ಮತ್ತು ವಾತ್ಸಲ್ಯಗಳು ಅಭಿನ್ನವೆಂದರೂ ಸಲ್ಲುತ್ತದೆ. ವಾತ್ಸಲ್ಯದ ತವರು ಮಾತೃಹೃದಯ, ಕಾನೂರು ಹೆಗ್ಗಡಿತಿಯ ನಾಗಮ್ಮ ಮತ್ತು ಗೌರಮ್ಮರು ವಾತ್ಸಲ್ಯವೇ ಸಾಕಾರಗೊಂಡ ತಾಯಂದಿರು. ತಾಯಂದಿರಿಗೆ ಮಕ್ಕಳೇ ಬಂಧು ಬಳಗ, ಅವರೇ ದೇವರು, ಅವರೇ ಸಕಳೈಶ್ವರ್ಯ, ಅವರೇ ಸ್ವರ್ಗ, ಅವರೇ ಸರ್ವಸ್ವ. ಮಕ್ಕಳುಳ್ಳ ತಾಯಿಗೆ ಬಡತನದ ಬವಣೆಯಿಲ್ಲ, ಆಳಲ ಅಂಜಿಕೆಯಿಲ್ಲ. ಮಕ್ಕಳು ಸುರೂಪಿಗಳಾಗಿರಲಿ, ಕುರೂಪಿಗಳಾಗಿರಲಿ, ತಾಯಂದಿರಿಗಂತು ಅವು ಮುದ್ದು, ಕಾದಂಬರಿಕಾರ ಕುವೆಂಪು ಈ ಇಬ್ಬರು ತಾಯಂದಿರನ್ನು ಚಿತ್ರಿಸುವಾಗ ಗತಿಸಿದ ತಮ್ಮ ತಾಯಿ ಸೀತಮ್ಮನವರ ಬದುಕಿನ ವಾಸ್ತವ ಚಿತ್ರವೇ ಅವರ ಕಣ್ಮುಂದೆ ನಿಂತಿರಬೇಕೆಂದು ತೋರುತ್ತದೆ. ಗೌರಮ್ಮನವರ ಮಗ ಚಿನ್ನಯ್ಯ. ಗೌರಮ್ಮನವರು ‘ಹೆಜ್ಜೆ ಇಟ್ಟಂತೆಲ್ಲ ಅವರ ಕೈಗಳ ಕಡಗ ಮತ್ತು ಬಳೆಗಳಿಂದ ಹೊರಹೊಮ್ಮುತ್ತಿದ್ದ ಝಣತ್ಕಾರವು ಚಿನ್ನಯ್ಯನ ಮನಸ್ಸಿಗೆ ತಾಯಿಯ ಪ್ರೀತಿಯ ಮಹಿಮೆಯನ್ನು ಸಾರುವ ಡಿಂಡಿಮದಂತಿತ್ತು…. ಆ ಮಾತೃದೇವಿ ಚಿನ್ನಯ್ಯನ ಬಳಿಗೆ ಬಂದು ನಿಲ್ಲಲು ಅವನಿಗೊಂದು ಅನಿರ್ವಚನೀಯ ಆಹ್ಲಾದವಾಯಿತು. ತಾನು ಮತ್ತೆ ಶಿಶುವಾಗಿ ಆ ಮಾತೆಯ ತೊಡೆಯ ಮೇಲೆ ಕುಳಿತು, ಆಕೆಯ ದಿವ್ಯವೃಕ್ಷದ ಮೇಲೆ ನಲಿದಾಡಿ, ತಲೆಯ ಕೂದಲಲ್ಲಿಯೂ, ಮುಖದ ಮೇಲೆಯೂ ಕೈಯಾಡಿ ಆಕೆ ಕೊಡುವ ಮುತ್ತುಗಳಿಂದ ತಣಿಯಬೇಕು ಎನ್ನಿಸಿತು,’ ತಾಯಿಯ ವಾತ್ಸಲ್ಯವೇ ಮಕ್ಕಳ ಮನದಲ್ಲಿ ಪ್ರತಿಬಿಂಬಿಸುತ್ತದೆ. ಮಾತೃವಾತ್ಸಲ್ಯ ಮತ್ತು ಪುತ್ರಪ್ರೇಮ ಒಂದಕ್ಕೊಂದು ಎಣೆಯಾಗಿ ವಿಜೃಂಭಿಸುತ್ತವೆ. ಮಕ್ಕಳು ರೋಗ ಪೀಡಿತರಾಗಿಯೋ, ಕಷ್ಟಕ್ಲೇಶಗಳಿಗೆ ಸಿಕ್ಕಿಯೋ ನರಳುವಾಗ ತಾಯಂದಿರು ನರಕಯಾತನೆಗೊಳಗಾಗುತ್ತಾರೆ; ತಮ್ಮೆಲ್ಲ ಸುಖ ಸಂಪತ್ತುಗಳನ್ನು ಅವರಿಗಾಗಿ ತ್ಯಜಿಸುತ್ತಾರೆ; ಅವರ ಕ್ಷೇಮಕ್ಕಾಗಿ ಪ್ರಾಣ ಒತ್ತೆಯಿಡಲೂ ಸಿದ್ಧ. ಪ್ರಣಯ ಭಂಗದಿಂದಾಗಿ ಕ್ರೂರವಾದ ಮಾನಸಿಕ ಕ್ಲೇಶಕ್ಕೆ ಒಳಗಾಗಿದ್ದ ಮಗಳು ಸೀತೆಗಾಗಿ ಗೌರಮ್ಮನವರು ಪಟ್ಟಪಾಡು ಅವರ್ಣನೀಯ. ಅವಳ ಅಮಂಗಳ ನಿವಾರಣೆಗಾಗಿ ತಾವು ಕಂಡು ಕೇಳಿದ ಪರಿಹಾರೋಪಾಯ ಗಳನ್ನೆಲ್ಲ ಚಾಚೂ ತಪ್ಪದೆ ಕಾರ್ಯಗತಗೊಳಿಸುತ್ತಾರೆ.

ಮೈಸೂರಿನಿಂದ ಮರಳುವಾಗ, ತೀರ್ಥಹಳ್ಳಿ ಮುತ್ತಳ್ಳಿಗಳ ನಡುವೆ ಗಾಡಿಯುರುಳಿ ಮಗನಿಗೆ ಪೆಟ್ಟಾಗಿ, ಮುತ್ತಳ್ಳಿಯಲ್ಲುಳಿದಿದ್ದಾನೆಂಬ ಸುದ್ದಿ ತಿಳಿದಾಗ ವಿಧವೆ ಹೂವಯ್ಯನ ತಾಯಿ ನಾಗಮ್ಮನ ಸಂಕಟ ಅಮೇಯವಾದದ್ದು. ಗಂಡನನ್ನು ಕಳೆದುಕೊಂಡ ನಂತರ ಅವರು ತಮ್ಮ ಏಕಮಾತ್ರ ಪುತ್ರನೊಬ್ಬನ ಕ್ಷೇಮಕ್ಕಾಗಿ ಅವಿಭಕ್ತ ಕುಟುಂಬದ ತಿಳ್ಳಿತಿಸರ, ಕಿಸುರು ಕಿಸುಗುಳ, ಲೊಟ್ಟೆಲೊಸಕು, ಉಪದ್ರವ ಉಬ್ಬಸಗಳನ್ನೆಲ್ಲ ಸಹಿಸಿಕೊಂಡಿದ್ದಾರೆ. ಅವರು ಮಗನನ್ನು ನೋಡಿದ ಕೂಡಲೇ ಕಂಡ ಕಂಡ ದೇವರು ದಿಂಡರಿಗೆಲ್ಲ ಮುಡಿಪು ಕಟ್ಟುತ್ತಾರೆ: ಅವನ ಹಣೆ, ಕೆನ್ನೆ, ತಲೆ, ಕೈ, ತೋಳುಗಳನ್ನು ಸವರಿ ಲಲ್ಲೆಗೈಯುತ್ತಾರೆ. ತಾಯಿಯ ವಾತ್ಸಲ್ಯ ಸ್ರೋತದಲ್ಲಿ ಈಜಾಡಿದ ಹೂವಯ್ಯ ಗಾಡಿಯ ಕೊಡಕ, ಪೆಟ್ಟು, ನೋವು, ಎಲ್ಲವನ್ನು ಮರೆಯುತ್ತಾನೆ. ವಾತ್ಸಲ್ಯವೇ ಅವನಿಗೆ ಧನ್ವಂತರಿ ಚಿಕಿತ್ಸೆಯಾಗುತ್ತದೆ. ಜಮೀನು ಹಿಸ್ಸೆಯಾಗುವಾಗ, ತಮ್ಮ ಮಗನಿಗೆ ಅನ್ಯಾಯವಾಗುತ್ತಿದೆ ಎಂದು ಕಂಡರೂ, ತಮ್ಮ ಮಗನೇ ತಮಗೊಂದು ದೊಡ್ಡನಿಧಿಯೆಂದು ಹೆಮ್ಮೆಗೊಳ್ಳುತ್ತಾರೆ. ಹಿಸ್ಸೆ ಮುಗಿದು, ಬೇರೆಡೆ ನೆಲಸಿದ ಮೇಲಂತು ನಾಗಮ್ಮನವರು ಮಗನಿಗೆ ಕಣ್ಣೀರು ಬರುವಷ್ಟರಮಟ್ಟಿಗೆ ಮನೆ ಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ. ಎಷ್ಟೇ ಕಷ್ಟಗಳಿದ್ದರೂ ತಾಯಿಯ ಸಾನ್ನಿಧ್ಯದಲ್ಲಿ ಹೂವಯ್ಯನ ಬದುಕು ನಿರುದ್ವಿಗ್ನವಾಗಿ ಆನಂದಾತಿಶಯದಿಂದ ಸಾಗುತ್ತದೆ. ಮಗನು ಮದುವೆಯಾಗದಿದ್ದಾಗ ನಾಗಮ್ಮನವರು ಚಿಂತಿಸಿ ಚಿಂತಿಸಿ ಸೀಕಲಾಗುತ್ತಾರೆ. ಪ್ರಪಂಚದ ಕಲ್ಯಾಣವೆಲ್ಲ ತಮ್ಮ ಮಗನ ಮದುವೆಯ ಮೇಲೆ ನಿಂತಂತೆ ಅವರಿಗನ್ನಿಸಿದ್ದರೆ ಸೋಜಿಗಪಡ ಬೇಕಾಗಿಲ್ಲ. ಹೂವಯ್ಯನ ತೊಂದರೆಗಳಿಗೆ, ಮನೆಯ ಸಮಸ್ಯೆಗಳಿಗೆ, ಜಗತ್ತಿನ ನೋವು ನರಳುಗಳಿಗೆ, ಮಗ ಮದುವೆಯಾಗದಿದ್ದುದೇ ಕಾರಣವೆಂದು ಅವರು ನುಡಿಯುತ್ತಾರೆ. ತಮ್ಮ ಪ್ರಾಣ ಉತ್ಕೃಮಣ ಸ್ಥಿತಿಯಲ್ಲಿದ್ದಾಗ ‘ನೀನು ಮದುವೆ ಮಾಡಿಕೊಳ್ತೀನಿ ಅಂತಾ ಮಾತು ಕೊಟ್ಟಿದ್ರೆ ಯತೆಯಿಲ್ಲದೆ ಸಾಯ್ತಿದ್ದೆ. ಅವರಿದ್ದಿದ್ರೆ ನಿನಗೆ ಮದುವೆಯಾಗ್ತಿತ್ತು. ನಾನೂ ಮೊಮ್ಮಕ್ಕಳನ್ನು ನೋಡಿಕೊಂಡೇ ಸಂತೋಷದಿಂದ ಸಾಯ್ತಿದ್ದೆ’ ಎಂದವರು ಅಳುತ್ತಾರೆ. ಮಗ ‘ಆಗಲವ್ವ’ ಎಂದಾಗ ಅವರ ಮುಖದ ಮೇಲೆ ಕಳೆ ತಾಂಡವವಾಡುತ್ತದೆ. ಮಲೆನಾಡಿನ ಬಂಧುಬಳಗಗಳ ಮಾತ್ಸರ್ಯದ, ಉದ್ವೇಗದ, ಕಲಹದ, ಕೋಲಾಹಲದ, ಕಿತಾಪತಿಯ, ಅನೀತಿಯ, ಕ್ಷೋಭೆಯ, ನಿಸ್ಸಾರದ ಬದುಕಿನಲ್ಲಿ, ಅದಕ್ಕೆ ಆಸರೆಯಾಗಿ, ಆಶಾಜ್ಯೋತಿಯಾಗಿ, ಅರ್ಥವತ್ತಾಗಿ ಬೆಳಗುವ ಶಕ್ತಿಯೆಂದರೆ ಮಾತೃವಾತ್ಸಲ್ಯ.

ಈ ಮಾತು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಗೂ ಸಮುಚಿತವಾಗಿ ಒಪ್ಪುತ್ತದೆ. ಇಲ್ಲಿ ಪ್ರತಿಪಾದನೆಗೊಂಡಿರುವ ವಾತ್ಸಲ್ಯದ ಮಹಿಮೆ ಮನುಷ್ಯರಿಂದ ಹಿಡಿದು ಪ್ರಾಣಿಗಳತನಕ ವ್ಯಾಪಿಸಿಕೊಂಡಿದೆ. ಗುತ್ತಿಯ ಮತ್ತು ಅವನ ನಾಯಿಯ ಒಡಲೆರಡಾದರೂ  ಜೀವ ಮಾತ್ರ ಒಂದೇ. ಹುಲಿಯ ಬರಿಯ ಕ್ಷುದ್ರ ಜಂತುವಲ್ಲ; ಅದೊಂದು ಜೀವಂತ ಪಾತ್ರ. ಅದು ಬೇರೆಯಲ್ಲ, ಗುತ್ತಿ ಬೇರೆಯಲ್ಲ. ಆ ಇಬ್ಬರ ನಡುವೆ ಅವಿನಾಭಾವ ಸಂಬಂಧವಿದೆ. ಸುಖದುಃಖಗಳಲ್ಲಿ, ಕಷ್ಟಕ್ಲೇಶಗಳಲ್ಲಿ ಅವರಿಬ್ಬರೂ ಸಮಭಾಗಿಗಳು. ಆದ್ದರಿಂದಲೇ ಹುಲಿಯನ ಒಡೆಯನಿಗೆ ನಾಯಿಗುತ್ತಿಯೆಂದು ಹೆಸರು ಬಂದಿದೆ. ಗುತ್ತಿಗಾಗಿ ಅದು ಭೋರ್ಗರೆಯುವ ಪ್ರವಾಹದಲ್ಲಿ ಧುಮುಕುವಂತೆ, ಅವನು ಹುಲಿಯನ ಕ್ಷೇಮಕ್ಕಾಗಿ ಎಂಥ ತ್ಯಾಗಕ್ಕಾದರೂ ಸಿದ್ಧ. ಹುಲಿಯ ಗುತ್ತಿಯ ನಿಷ್ಠಾವಂತ ಅಂಗರಕ್ಷಕ, ಪ್ರಾಮಾಣಿಕ ಸೇವಕ, ಪ್ರಾಣಾಧಿಕ ಮಿತ್ರ. ಗುತ್ತಿಯೂ ತನ್ನ ಒಡಹುಟ್ಟಗಿಂತ ಮಿಗಿಲಾಗಿ ಅದನ್ನು ಪ್ರೀತಿಸುತ್ತಾನೆ. ಹುಲಿಕಲ್ಲು ನೆತ್ತಿಯಲ್ಲಿ ಕುರ್ಕನೊಡನೆ ಹೋರಾಡಿ ಗಾಯಗೊಂಡಿದ್ದ ಹುಲಿಯನನ್ನು ಗುತ್ತಿ ಹೊತ್ತುಕೊಂಡೇ ಸಿಂಭಾವಿಯ ಕಡೆಗೆ ನಡೆ ಬೆಳೆಸುತ್ತಾನೆ. ಕಾನೂರಿಗೆ ಹೋಗುವ ಸಲುವಾಗಿ, ತೀರ್ಥಹಳ್ಳಿಯ ಬಳಿ ಹೊಳೆ ದಾಟುವಾಗ ಅಂಬಿಗ ದೋಣಿಯಲ್ಲಿ ನಾಯಿಯನ್ನು ಸೇರಿಸ ದಿರಲು ಗುತ್ತಿ ಕಣ್ಣೀರು ಸುರಿಸುತ್ತಾನೆ. ಹೆಂಡತಿಯನ್ನು ಲಕ್ಷಿಸದೆ ನಾಯಿಗಾಗಿ ನೀರಿಗಾದರೂ ಬಿದ್ದು ಬಿಟ್ಟಾನು ಎಂದು ಸಹ ಪ್ರಯಾಣಿಕರು ಬಯ್ಯುವಷ್ಟರಮಟ್ಟಿಗೆ ಅವನ ಮನಸ್ಸು ತುಡಿಯುತ್ತದೆ.

ಸೇಸಿ ಕೀಳು ಜಾತಿಯವಳಾದರೂ, ಅವಳ ಬಡತನ ಹರಿಯದ ಜಾಡ್ಯವಾಗಿದ್ದರೂ, ಅವಳ ಮಾತೃವಾತ್ಸಲ್ಯ ಮೇರೆಯಿಲ್ಲದ್ದು. ತನ್ನ ಮಗಳು ತಿಮ್ಮಿಯನ್ನು ಅವಳ ಕ್ಷೇಮದ ದೃಷ್ಟಿಯಿಂದ ಬಚ್ಚನಿಂದ ವಂಚಿಸಿ, ಗುತ್ತಿಗೆ ಮದುವೆ ಮಾಡಿಕೊಡುವ ಸನ್ನಾಹದಲ್ಲಿದ್ದಾಗ ಗೌಡರ ಕೋಪ, ಗಂಡನ ಕ್ರೋಧ, ಬಚ್ಚನ ರೌದ್ರ, ಕೇರಿಯವರ ನಿಂದೆಗಳೆಲ್ಲವನ್ನು ಮರೆಯುತ್ತಾಳೆ. ವಾತ್ಸಲ್ಯ ಅವೆಲ್ಲವನ್ನು ಮರೆಸುತ್ತದೆಂದರೂ ತಪ್ಪಲ್ಲ. ತಿಮ್ಮಿಯ ಪತ್ತೆಯನ್ನು ಹೇಳಿಲ್ಲವೆಂಬ ಕಾರಣಕ್ಕಾಗಿ ತನ್ನ ಮಗ ಸಣ್ಣಬೀರನನ್ನು ಗೌಡರ ಆಜ್ಞೆಯಂತೆ ಇಜಾರದ ಸಾಬು ಕಂಬಕ್ಕೆ ಕಟ್ಟಿ ಪ್ರಜ್ಞೆ ತಪ್ಪುವತನಕ ಹುಣಿಸೇ ಬರಲಿಂದ ಥಳಿಸಿದಾಗ, ಸೇಸಿ ತನ್ನ ಬಿಡಾರದಿಂದ ಓಡೋಡಿ ಬಂದು, ಸಾಬಿಯ ಕೈಯಲ್ಲಿದ್ದ ಹುಣಿಸೆ ಬರಲನ್ನು ಕಸಿದೆಸೆದು, ಅವನನ್ನು ತಳ್ಳಿ, ತಲೆ ಜೋಲುತ್ತಿದ್ದ ತನ್ನ ಮಗನನ್ನು ಆತುಕೊಳ್ಳುತ್ತಾಳೆ. ಅವಳು ತಳ್ಳಿದೊಡನೆ ದಾಂಡಿಗ ಸಾಬಿ ಎರಡು ಮಾರು ಹಿಂದಕ್ಕೆ ಜಗ್ಗಿ ಮೈ ಪ್ರಜ್ಞೆಯಿಲ್ಲದವನಂತೆ ನಿಂತು ಬಿಡುತ್ತಾನೆ. ಮಾತೃವಾತ್ಸಲ್ಯದ ಮುಂದೆ ಕ್ರೂರತಮ ಧೂರ್ತತನವೂ ಅಂಜುತ್ತದೆಂಬುದಕ್ಕೆ ಅನ್ಯ ಸಾಕ್ಷಿ ಅನಾವಶ್ಯಕ.

ಹೆಣ್ಣು ಎಂಥ ಕ್ರೂರಿಯೇ ಆಗಿರಲಿ, ಗಂಡ ಸಂಕಟಕ್ಕೊಳಗಾದಾಗ, ತಾಯ್ತನವನ್ನೆಲ್ಲ ಸೂರೆ ಮಾಡಿ ಅವನನ್ನು ಉಪಚರಿಸುತ್ತಾಳೆನ್ನುವುದಕ್ಕೆ ಕಾನೂರು ಹೆಗ್ಗಡಿತಿಯೇ ಸಾಕ್ಷಿ. ಒಲಿದ ಹೆಣ್ಣು ಗಂಡುಗಳಾದರಂತು, ಹೆಂಡತಿಯ ತಾಯ್ತನ ಗಂಡನಿಗೆ ರಕ್ಷೆಯಾಗಿ ಅವನನ್ನು ಸದಾ ಸುತ್ತುವರಿಯುತ್ತದೆ. ಐತನೊಮ್ಮೆ ಹೆಂಡತಿಯೊಡನೆ ಮುನಿಸಿಕೊಂಡು, ಅಳುತ್ತಿದ್ದಾಗ, ಪೀಂಚಲುವಿನ ಕರುಳು ಮರುಗಿ ತಾಯ್ತನಕ್ಕೇರುತ್ತದೆ. ‘ಐತನೊಂದು ರಚ್ಚೆ ಹಿಡಿದ ಅರಿಯದ ಮಗುವೊ’ ಎಂಬಂತೆ ಅವನನ್ನು ಮುದ್ದು ಮಾಡಿ ಲಲ್ಲಯಿಸುತ್ತಾಳೆ. ಉಣಲೊಲ್ಲೆನೆಂದು ಮಲಗಿದ್ದವನು ಎದ್ದು ಬಕಾಸುರನಂತೆ ತಿನ್ನುತ್ತಾನೆ. ಹೊರಗೆ ಬೆಳಗಿನಿಂದ ಗೆಯ್ದು ಬರುವ ಗಂಡನ ಶ್ರಮವನ್ನು ರುಚಿಕರವಾದ ತಿನಿಸುಗಳಿಂದ, ಸುಖಸ್ಪರ್ಶದಿಂದ, ಲಲ್ಲೆ ವಾತುಗಳಿಂದ ತಣಿಸುವಲ್ಲಿ ಅವಳ ತಾಯ್ತನ ಮೆರೆಯುತ್ತದೆ. ಸಿಂಬಾವಿ ಭರಮೈ ಹೆಗ್ಡೆಯವರೊಡನೆ ನಡೆಯಬೇಕಾಗಿದ್ದ ಚಿನ್ನಮ್ಮನ ವಿಷಮ ವಿವಾಹವನ್ನು ತಪ್ಪಿಸಿ, ಅವಳನ್ನು ಮುಕುಂದಯ್ಯ ನೊಡನೆ ಸೇರಿಸುವ ಅವಳ ಸಾಹಸದಲ್ಲಿ ಮಾತೃವಾತ್ಸಲ್ಯದ ಸ್ಫೂರ್ತಿಯಿದೆ.

ಚಿನ್ನಮ್ಮನ ತಾಯಿ ಅಕಾಲಮರಣವನ್ನಪ್ಪಿದನಂತರ ಅವಳನ್ನು ಸಾಕುವ, ಪೋಷಿಸುವ ಹೊರೆ ಅಜ್ಜಿಯ ಹೆಗಲಿಗೇರುತ್ತದೆ. ಅವಳ ತಬ್ಬಲಿತನವನ್ನು ಮರೆಸುವಷ್ಟರಮಟ್ಟಿಗೆ ಅಜ್ಜಿಯ ವಾತ್ಸಲ್ಯ ಮೇರೆಯಿಲ್ಲದಂತೆ ವರ್ಧಿಸುತ್ತದೆ. ಅಜ್ಜಿ ಮೊಮ್ಮಗಳಲ್ಲಿ ತಾನು ಹೊತ್ತು ಹೆತ್ತು ಸಾಕಿದ ಮಗಳನ್ನು ಕಾಣುತ್ತಾಳೆ. ಮೊಮ್ಮಗಳ ಆಸರು ಬೇಸರಗಳನ್ನು ಪರಿಹರಿಸುವಲ್ಲಿ, ಅವಳ ಆಶೆ ಆಕಾಂಕ್ಷೆಗಳನ್ನು ಪೂರೈಸುವಲ್ಲಿ, ಅವಳ ಬೇಕು ಬೇಡಗಳನ್ನು ನಡೆಸಿಕೊಡುವಲ್ಲಿ ಅವಳು ತನ್ನ ಶ್ರಮವನ್ನು ಮರೆಯುತ್ತಾಳೆ. ತನ್ನ ಮೊಮ್ಮಗಳು ಭರಮೈ ಹೆಗ್ಡೆಯವರನ್ನು  ಮದುವೆಯಾಗಿ, ಶ್ರೀಮಂತ ಕುಟುಂಬವನ್ನು ಸೇರುತ್ತಾಳಾದ್ದರಿಂದ ಅವಳಿಗೆ ಹರ್ಷವಾಗುತ್ತದೆ. ಆದರೆ ಮದುವೆ ಮನೆಯಲ್ಲಿ ಚಿನ್ನಮ್ಮ ಕಾಣೆಯಾದಾಗ ಅವಳು ತತ್ತರಿಸಿ, ಹಾಸುಗೆ ಹಿಡಿಯುತ್ತಾಳೆ. ಮೊಮ್ಮಗಳು ಹಿಂದಕ್ಕೆ ಬಂದಾಗ, ನಡೆದ ಘಟನೆಯನ್ನು ವಿವರಿಸಿದಾಗ, ಅಳಿಯನ ಸಾವು ಅಪವಾದಗಳನ್ನು ನಿರ್ಲಕ್ಷಿಸಿ, ಚೇತರಿಸಿಕೊಳ್ಳುತ್ತಾಳೆ. ತಾಯಿಲ್ಲದಾಗ ಅಜ್ಜಿಯೇ ಗತಿಮತಿಯಾಗಿ ಅವಳನ್ನು ನೋಡಿಕೊಳ್ಳದಿದ್ದರೆ, ಹೂವಳ್ಳಿಯ ಮನೆತನ ಅಂತ್ಯಗೊಳ್ಳುತ್ತಿತ್ತೆಂಬುದನ್ನೂ, ಮುಂದೆ ನಡೆಯಬೇಕಾಗಿದ್ದ ಮಹಾಘಟನೆಗಳು ಮುರುಟಿ ಹೋಗುತ್ತಿದ್ದುವೆಂಬುದನ್ನೂ ಈ ಸಂದರ್ಭದಲ್ಲಿ ನೆನೆಯಬೇಕಾಗಿದೆ. ನಾಗಕ್ಕ ಚಿನ್ನಮ್ಮನ ಬಲತಾಯಿಯಾದರೂ, ತನ್ನ ಮಲಮಗಳ ಭವಿಷ್ಯಜ್ಜೀವನದ ಯೋಗಕ್ಷೇಮವೇ ಅವಳ ಚಿಂತೆಯಾದದ್ದಕ್ಕೂ ಅವಳ ಮಾತೃವಾತ್ಸಲ್ಯವೇ ಕಾರಣ. ನಿಸ್ಸಂತಾನಳಾಗಿ, ನಿರ್ಜನಾರಣ್ಯದಲ್ಲಿ ಒಂಟಿ ಬಾಳು ಸಾಗಿಸುತ್ತಿದ್ದ ಹಳೆ ಪೈಕದ ಮುದುಕಿ ಯೆಂಕಿ ಮದುವೆ ಮನೆಯಿಂದ ಮುಕುಂದಯ್ಯದಿ ಸಹಚರರೊಡನೆ ಓಡಿಬಂದ ಚಿನ್ನಮ್ಮನನ್ನು ಕಂಡಾಗ ಅವಳ ತಾಯ್ತನ ತಾನಾಗಿಯೆ ಸೊರೆಯುತ್ತದೆ.

ಶ್ರೀಮಂತಿಕೆಯ ಉಡಾಫೆ ಅಟ್ಟಹಾಸ, ವೃದ್ಧಾಪ್ಯದ ಲೈಂಗಿಕಾಪರಾಧ, ಅಶ್ಲೀಲ ಮತಾಂತರೀಕರಣದ ಘೋರ ಅನಾಹುತ, ಅತ್ತಿಗೆ ನಾದಿನಿಯರ ಜಟಾಪಟಿ, ಜೀತದಾಳುಗಳ ಮೂಕಯಾತನೆ, ಜಾತೀಯತೆಯ ಗಂಡಾಂತರ, ಕುಡಿತ ಚಾಳಿಯ ಕೊಳಕು ಬದುಕು, ಹಲವು ತೆರನ ಸಾಂಸಾರಿಕ ಕ್ಲೇಶಗಳ ಜಂಜಾಟ, ಪ್ರಣಯ ಮಾತ್ಸರ್ಯದ ಘರ್ಷಣೆ, ದಯಾಶೂನ್ಯ ಸಾಬರ ಹಿಂಸಾಕೃತ್ಯ, ಹಾರುವರ ಕಿತಾಪತಿ, ಗೌಡ ಜನರ ಮೌಢ್ಯ ಜೀವನ – ಇಂಥ ಹಲವಾರು ಕ್ಷೋಭಕಾರಕ ವಿಚಾರಗಳ ನಡುವೆ ಸಮಾಧಾನಕರವೂ ಶಾಂತಿದಾಯಕವೂ ಆದ ಸಂಗತಿಗಳೆಂದರೆ ಮುಂಕುಂದಯ್ಯ-ಚಿನ್ನಮ್ಮರ, ಗುತ್ತಿ-ತಿಮ್ಮಿಯರ, ಐತ-ಪೀಂಚಲುಗಳ ಮುಗ್ಧಸ್ನಿಗ್ಧ ಸುನಿರ್ಮಲ ಪ್ರಣಯಯಾತ್ರೆ ಹಾಗೂ ನಡುನಡುವೆ ಮಿಂಚುವ ವಾತ್ಸಲ್ಯ.

ಶ್ರೀ ಜಗನ್ಮಾತೆಯ ವಾತ್ಸಲ್ಯವೇ ಶ್ರೀ ರಾಮಕೃಷ್ಣ ಪರಮಹಂಸರ ರೂಪದಲ್ಲಿ ಸಾಕಾರ ಗೊಂಡಿದೆಯೆಂದೂ, ಅದೆ ಅವರ ಬದುಕಾಗಿದೆಯೆಂದೂ, ಅದೇ ಸಂಕ್ಷೋಭೆೆಗೊಳಗಾಗಿರುವ ಜಗತ್ತಿನ ರಕ್ಷಾಶಕ್ತಿಯೆಂದೂ ಹೇಳಬಹುದಾಗಿದೆ. ಶ್ರೀ ರಾಮಕೃಷ್ಣರು ಲೋಕದ ಸಮಸ್ತ ಸ್ತ್ರೀ ವರ್ಗದಲ್ಲಿ, ಮುಕ್ಯವಾಗಿ ತಮ್ಮ ತಾಯಿ ಮತ್ತು ಮಡದಿಯರಲ್ಲಿ ಜಗನ್ಮಾತೆಯನ್ನು ಕಾಣುತ್ತಾರಷ್ಟೆ. ತಮ್ಮ ಮಗನ ದಿವ್ರೋಜನ ಲೌಕಿಕ ರೀತಿಯಲ್ಲಿ ‘ಹುಚ್ಚು’ ಎಂಬ ಹೆಸರನ್ನು ಕೊಟ್ಟಾಗ ಚಂದ್ರಮಣಿದೇವಿಯವರ ಮಾತೃ ಹೃದಯಕ್ಕೆ ಅಪಾರ ಯಾತನೆಯಾಗುತ್ತದೆ. ಅವರು ಮಗನನ್ನು ಊರಿಗೆ ಕರೆಸಿಕೊಂಡು ಔಷಧ ಕೊಡಿಸಿ, ತಾವೇ ಅವರ ಶುಶ್ರೂಷೆಗೆ ನಿಲ್ಲುತ್ತಾರೆ. ಯೌವನದ ರುಜೆಗೆ ಮದುವೆಯೇ ಮದ್ದೆಂದು ತಿಳಿದು, ಮಗ ಸೂಚಿಸಿದ ಕನ್ಯೆಯನ್ನೆ ತಂದುಕೊಂಡು ಮದುವೆ ಪೂರೈಸುತ್ತಾರೆ. ದಕ್ಷಿಣೇಶ್ವರಕ್ಕೆ ಹಿಂದಿರುಗಿದ ಶ್ರೀ ರಾಮಕೃಷ್ಣರು ಎಂದಿನಂತೆಯೇ ತಮ್ಮ ಸಾಧನೆಯಲ್ಲಿ ಮುಂದುವರಿ ಯುತ್ತಾರೆ. ಕಡೆಗೆ ತಾಯಿಯೂ ಮಗನ ಉಪಚಾರಕ್ಕೆಂದು ದಕ್ಷಿಣೇಶ್ವರದಲ್ಲಿಯೇ ಬಿಡಾರ ಹೂಡುತ್ತಾರೆ. ಅಧ್ಯಾತ್ಮ ಸಾಧನೆಯ ಮಾರ್ಗವನ್ನು ಹೇಳಿಕೊಡುವಲ್ಲಿ ಭೈರವಿ ಬ್ರಾಹ್ಮಣಿ ಮಾತೃವಾತ್ಸಲ್ಯದ ಹೊನಲನ್ನೆ ಅವರ ಮೇಲೆ ಹರಿಸುತ್ತಾರೆ. ಕಠೋರ ತಪಸ್ವಿನಿ ಅಘೋರ ಮಣಿದೇವಿ ಶ್ರೀ ರಾಮಕೃಷ್ಣರನ್ನು ತಮ್ಮ ಶಿಶುವಿನೋಪಾದಿಯಲ್ಲಿ ಕಂಡು, ಅವರು ಕೇಳಿದ ತಿಂಡಿ ತೀರ್ಥಗಳನ್ನು ನೀಡಿ, ವಾತ್ಸಲ್ಯದ ಪರಾಕಾಷ್ಠೆಯನ್ನು ಮೆರೆಯುತ್ತಾರೆ. ಜಟಾಧಾರಿ ಯೆಂಬೊಬ್ಬ ಭಕ್ತ ಸನ್ಯಾಸಿ ತಂದುಕೊಟ್ಟ ರಾಮಲಾಲ ಎಂಬ ವಿಗ್ರಹದಲ್ಲಿ ಶ್ರೀ ರಾಮಕೃಷ್ಣರು ಶಿಶು ರಾಮಚಂದ್ರನನ್ನು ಕಂಡು, ಅವನಲ್ಲಿ ಸಕಲ ಬಾಲಲೀಲೆಗಳ ಸೊಬಗನ್ನನುಭವಿಸಿ, ವಾತ್ಸಲ್ಯ ಭಾವ ಸಾಧನೆಯ ಮೂಲಕ ಶ್ರೀ ರಾಮಚಂದ್ರನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ಮಡದಿಯಾಗಿ ಬಂದ ಶ್ರೀ ಶಾರದಾಮಣಿ ದೇವಿಯವರು ಜಗಜ್ಜನನಿಯ ಪ್ರತಿನಿಧಿಯಾಗಿ ತಮ್ಮ ಪತಿಯ ಮೇಲೆ ತಾಯ್ತನದ ಪ್ರೇಮವನ್ನು ವರ್ಷಿಸುತ್ತಾರೆ. ಜಗನ್ಮಾತೆಯಿಂದ ತಾವು ಪಡೆದ ವಾತ್ಸಲ್ಯವನ್ನು ಶ್ರೀರಾಮಕೃಷ್ಣರು ತಮ್ಮ ಶಿಷ್ಯ ವೃಂದಕ್ಕೂ ಅನುಗ್ರಹಿಸುತ್ತಾರೆ. ನರೇಂದ್ರನ ಪ್ರಥಮ ದರ್ಶನದಲ್ಲಿಯೇ ಆನಂದ ಬಾಷ್ಪವನ್ನು ಸುರಿಸುವಲ್ಲಿ, ತಾಯಿಯಂತೆ ತಿಂಡಿಯನ್ನವನಿಗೆ ತಿನ್ನಿಸುವಲ್ಲಿ, ಅವನ ಆಗಮನ ವಿಲಂಬವಾದಾಗ ಅವನ ದರ್ಶನಕ್ಕಾಗಿ ಪರಿತಪಿಸುವಲ್ಲಿ, ತಾವು ಸಾಧಿಸಿದ ಸಿದ್ಧ ಸಮಸ್ತವನ್ನು ಅವನಿಗೆ ಧಾರೆಯೆರೆಯುವಲ್ಲಿ ಶ್ರೀ ರಾಮಕೃಷ್ಣರ ವಾತ್ಸಲ್ಯ ಪರಮಾವಧಿಯನ್ನು ಮುಟ್ಟುತ್ತದೆ.

ವಾತ್ಸಲ್ಯ ಪ್ರೇಮಗಳಿಗೆ ಎಂಥ ಆಸುರೀಶಕ್ತಿಯೂ ಬಾಗುತ್ತದೆನ್ನುವುದಕ್ಕೆ ದಕ್ಷಿಣೇಶ್ವರಕ್ಕೆ ಹೋಗುವ ದಾರಿಯಲ್ಲಿ ಶಾರದಾಮಣಿದೇವಿ ಎದುರಿಸಬೇಕಾದ ಡಕಾಯಿತನ ಪ್ರಸಂಗ ಸಾಕ್ಷಿಯಾಗಿದೆ. ಕಗ್ಗತ್ತಲ ರಾತ್ರಿ; ತನ್ನವರು ಹತ್ತಿರವಿಲ್ಲ. ಅನ್ಯಮಾರ್ಗ ಕಾಣದೆ ಅವರ ಡಕಾಯಿತನನ್ನೂ ಅವನ ಮಡದಿಯನ್ನೂ ತಂದೆತಾಯಿಯರೆಂದೇ ಸಂಬೋಧಿಸುತ್ತಾರೆ. ಡಕಾಯಿತ ದಂಪತಿಗಳು ಶ್ರೀಮಾತೆಯ ಮುಗ್ಧ ಪ್ರೇಮಕ್ಕೆ ಮಾರುಹೋಗಿ, ಮಗಳಿಗಿಂತ ಮಿಗಿಲಾಗಿ ಅವರನ್ನು ನೋಡಿಕೊಂಡು, ದಕ್ಷಿಣೇಶ್ವರಕ್ಕೆ ಕರೆತಂದು ಬಿಡುತ್ತಾರೆ.

ಅಪಾರವಾದ ಮಾತೃವಾತ್ಸಲ್ಯದ ಶ್ರೀಮಂತಿಕೆಯ ಸುಖವನ್ನುಂಡ ಪುಣ್ಯ ಸ್ವಾಮಿ ವಿವೇಕಾನಂದರಿಗೆ ಸೇರಿದ್ದು, ತುಂಟ ಗಮನ ತಂಟೆ ತಕರಾರುಗಳನ್ನೆಲ್ಲ ಸಹಿಸಿಕೊಂಡು, ಅವನ ಎಳೆ ಹೃದಯದಲ್ಲಿ ಭಕ್ತಿ ಬೀಜವನ್ನು ಬಿತ್ತಿ, ಪುರಾಣ ಪುಣ್ಯಕಥೆಗಳ ಮೂಲಕ ರಾಷ್ಟ್ರಪ್ರೇಮವನ್ನು ಪ್ರಜ್ವಲಗೊಳಿಸಿ, ಲೋಕಸಂಗ್ರಹ ಕಾರ್ಯಕ್ಕೆ ಮಗನನ್ನು ಅಣಿಗೊಳಿಸಿದ ಭುವನೇಶ್ವರಿ ದೇವಿಯರಂಥ ಮಾತೆಯರು ಭೂಲೋಕದಲ್ಲಿಯೇ ವಿರಳ. ‘ಅಮ್ಮನ ಅಂಕದ ಮೇಲೆ ಮುದ್ದಿನ ಮುದ್ದೆಯಂತೆ ಮುದ್ದಾಗಿ ಕುಳಿತುಕೊಂಡು ಅನನ್ಯಮನಸ್ಕನಾಗಿ ಆಕೆಯ ಮುದ್ದಿನಿಂದ ಮುದ್ದಾಗಿ ಕುಳಿತುಕೊಂಡು ಅನನ್ಯಮನಸ್ಕನಾಗಿ ಆಕೆಯು ಮುದ್ದಿನಿಂದ ಹೇಳುತ್ತಿದ್ದ ರಾಮಾಯಣ ಭಾರತ ಕತೆಗಳನ್ನು ಆಲಿಸುತ್ತಿದ್ದ ನರೇಂದ್ರನ ಚಿತ್ರದ ಕಲ್ಪನೆ ಎಲ್ಲ ಎಳೆಯರ ಹೃದಯವನ್ನು ಪಾವನಗೊಳಿಸದಿರಲಾರದು. ಜಗತ್ತಿನ ಸ್ತ್ರೀಯರೆಲ್ಲ, ಅಮೆರಿಕೆಯ ಸ್ತ್ರೀಯರನ್ನೊಳಗೊಡಂತೆ, ತನಗೆ ಮಾತೃ ಸಮಾನರೆಂಬ ನರೇಂದ್ರನ ಭಾವನೆಗೆ ಹೆತ್ತ ತಾಯಿಯ ವಾತ್ಸಲ್ಯವೇ ಮುಖ್ಯ ಕಾರಣ. ಹೆತ್ತ ತಾಯಿಯ ಮತ್ತು ಪಡೆದ ಗುರುವಿನ ವಾತ್ಸಲ್ಯವೇ ನರೇಂದ್ರನ ಅಪೂರ್ವ ಕೀರ್ತಿಗೆ ಹಾಗೂ ಅವನು ಸಾಧಿಸಿದ ಸಕಲ ಸಿದ್ದಿಗಳಿಗೆ ಮೂಲ ಸ್ಥಾನದಲ್ಲಿದೆಯೆಂಬುದಂತು ನಿಜ.

‘ಮಹಾರಾತ್ರಿ’ಯ ಬುದ್ಧನ ಮಹಾತ್ಯಾಗದಲ್ಲಿ, ಅಂತೆಯೇ ವಾಲ್ಮೀಕಿಯ ಭಾಗ್ಯದ ವಾಲ್ಮೀಕಿಯ ನಿಸ್ವಾರ್ಥ ಸೇವೆಯಲ್ಲಿ ಲೋಕ ಕಲ್ಯಾಣಕರವಾದ ವಾತ್ಸಲ್ಯವೇ ಎದ್ದು ಕಾಣುತ್ತದೆ. ವಾತ್ಸಲ್ಯದ ಗಂಗೋತ್ರಿ ಸ್ತ್ರೀ ಹೃದಯವೆಂಬುದು ಸಾಮಾನ್ಯ ನಂಬಿಕೆ.  ಗಂಡಿ ನಲ್ಲಿಯೂ ಸ್ತ್ರೀ ಹೃದಯವಿದೆಯೆಂಬುದಕ್ಕೆ ಬುದ್ಧ, ಯೇಸು, ಶ್ರೀ ರಾಮಕೃಷ್ಣಾದಿ ಅವತಾರ ಪುರುಷರೇ ಸಾಕ್ಷಿಯಾಗಿದ್ದಾರೆ. ತಬ್ಬಲಿಯಾದ ಚಂದ್ರಹಾಸನನ್ನು ಸಲಹಿದ ಮುದುಕಿ ಯಂತೆಯೇ, ತಾಯಿಯನ್ನು ಕಳೆದುಕೊಂಡ ಗೌರಾಂಬೆಯನ್ನು ಲಾಲಿಸಿ, ಪೋಷಿಸಿ, ರಾಜಕುಮಾರನಿಗೆ ಮದುವೆ ಮಾಡಿಕೊಟ್ಟ ‘ಬಿರುಗಾಳಿ’ಯ ಭೈರವ ನಾಯಕನೂ ವಾತ್ಸಲ್ಯದ ಕಡಲಾಗಿದ್ದಾನೆ. ತಮ್ಮನ ಕುತಂತ್ರದಿಂದ ರಾಜ್ಯವನ್ನು ಕಳೆದುಕೊಂಡ ನಾಯಕ ತಾನು ಸಂಪಾದಿಸಿದ ಸಿದ್ದಿಯನ್ನೆಲ್ಲ ವ್ಯಯಮಾಡಿ, ಬಾಳು ಹೊರೆದುಕೊಂಡಿರುವುದು ಮಗಳ ಕ್ಷೇಮಕ್ಕಾಗಿಯೇ ಹೊರತು, ಮತ್ತೆ ರಾಜ್ಯ ಸಂಪಾದಿಸಲೆಂದಲ್ಲ. ಬಿರುಗಾಳಿಯಿಂದ ಎದುರಾಳಿಗಳ ನೌಕೆ ತತ್ತರಗೊಂಡು, ಮಗಳು ದುಃಖಕ್ರಾಂತೆಯಾದಾಗ

ನಿನಗಾಗಿ, ಎನ್ನ ಮುದ್ದಿನ ಮಗಳೆ, ನಿನಗಾಗಿ,
ನಿನಗೋಸುಗವೆ ನಾನು ಇಂತೆಲ್ಲಮೆಸಗಿರ್ಪೆ

ಎಂದು ತಂದೆ ಅವಳನ್ನು ಸಮಾಧಾನ ಪಡಿಸುತ್ತಾನೆ. ಮಗಳನ್ನು ದೇವತೆಯೆಂದೇ ಭಾವಿಸುತ್ತಾನೆ.

ನಿನ್ನಿಂದ,
ನಿನ್ನಿಂದಲೇ ಬದುಕಿದೆನು. ಮುಗುಳು ನಗೆಯಿಂದ
ನೀನೆನ್ನ ಹುರಿದುಂಬಿಸಿದೆ. ನಿನ್ನ ಕಣ್ಬೆಳಗೆ
ಬಟ್ಟೆದೋರಿದುದೆನಗೆ; ಬಲ್ಮೆಯನು ನೀಡಿದುದು.

ಅಳಿಯನಾಗಲಿರುವ ಶಿವನಾಯಕನ ಮತ್ತು ಮಗಳು ಗೌರಾಂಬೆಯ ನಲವಿನಲ್ಲಿ ತನ್ನ ಸೊಗವನ್ನು ಕಾಣುವ ತಂದೆಯ ವಾತ್ಸಲ್ಯ ಎಣೆಯಿಲ್ಲದ್ದು.

ಅವರ ಸೊಗಕಿಂತಲುಂ ಎನ್ನ ಸೊಗಸಮಧಿಕತರಂ!
ಮಗಳ ಸಂತಸವಲ್ಲದಿನ್ನಾವ ಸಂತಸವು
ನನಗಿಹುದು?

ಎನ್ನುವ ಭೈರವ ನಾಯಕನ ಮಾತಿನಲ್ಲಿ ಇಡೀ ನಾಟಕದ ಧ್ಯೇಯ ಸೂತ್ರ ಹುದುಗಿದೆ.

ಕರ್ಣನ ಹಿರಿಮೆಗೆ, ಅವನ ಹೆತ್ತತಾಯಿಯಲ್ಲ, ಸಾಕುತಾಯಿ ರಾಧೆಯೇ ಮುಖ್ಯ ಕಾರಣಳಷ್ಟೆ. ಪ್ರಾಯಶಃ ಕರುಣೆಯನ್ನು ಬಿಟ್ಟರೆ, ವಾತ್ಸಲ್ಯ ಭಾವನೆಗೆ ಸಮನಾದದ್ದು ಮತ್ತೊಂದಿರಲಾರದು. ಅವೆರಡು ಅವಳಿ ಜವಳಿಗಳೆಂದೇ ತೋರುತ್ತದೆ. ಲೋಕ ಉಳಿದಿರುವುದೇ ಅವೆರಡರಿಂದ. ಅವೇ ತಾಯಿ ನಿರಾಕರಿಸಿದ ಕರ್ಣನನ್ನು ಉಳಿಸುತ್ತವೆ, ಪೊರೆಯುತ್ತವೆ. ಸಾಕು ಮಗನ ಬೇಸರವನ್ನು ಕಂಡು ತಳಮಳಗೊಂಡ ‘ಕಾನೀನ’ ನಾಟಕದ ರಾಧೆ ‘ಕಂದ, ನೀನೆಮ್ಮ ಜೀವನದ ಜೀವ, ನಿನಗಿನಿತು ಅಶಾಂತಿಯುಂಟಾದರೂ ನನ್ನೆದೆ ಹಾರುವುದು. ನೀನಿಂತು ಏಕಾಂಗಿಯಾಗಿ ತಿರುಗುವುದನ್ನೂ ಒಬ್ಬನೇ ಒಂದು ಕಡೆ ಕುಳಿತು ಆಲೋಚಿಸುವುದನ್ನೂ ಕಂಡು ನನಗೇಕೋ ಹೆದರಿಕೆ ಉಂಟಾಗಿದೆ’ ಎಂದೆನ್ನುವಾಗ ವಾತ್ಸಲ್ಯವೇ ಮಾತಾಡಿದಂತೆ ತೋರುತ್ತದೆ.

ಅಪವಾದದ ದೆಸೆಯಿಂದಾಗಿ ಹೆತ್ತ ಮಗನನ್ನು ಗಂಗೆಯ ಮಡಿಲಿಗೊಪ್ಪಿಸಿದರೂ ಕುಂತಿಯ ಬಾಳೆಲ್ಲ ದುಃಖದ ಹೊಳೆಯಾಗಿರಬೇಕೆಂದೇ ತೋರುತ್ತದೆ. ಮಹಾಭಾರತದಲ್ಲಿ ಅವಳಷ್ಟು ಗುಪ್ತ ಶೋಕದಿಂದ ಬೆಂದವಳು, ನಮೆದವಳು ಬೇರೊಬ್ಬರಿಲ್ಲವೆಂದೇ ಹೇಳಬೇಕು. ಪತಿಯ ಮರಣ, ದಾಯಾದಿ ಮಾತ್ಸರ್ಯ, ಅರಣ್ಯವಾಸ, ಕುರುಕ್ಷೇತ್ರ ಯುದ್ಧ ಇವೇ ಮೊದಲಾದ ಘೋರ ಘಟನೆಗಳು ಅವಳ ಹೃದಯವನ್ನು ಜರ್ಜರಗೊಳಿಸಿವೆ, ನಿಜ. ಆದರೆ ಈ ಘಟನೆಗಳಿಂದಾಗಿ ಅವಳನುಭವಿಸುವ ಶೋಕವೊಂದು ತೂಕವಾದರೆ, ಕರ್ಣನಿಗೆ ತಾನೆಸಗಿದ ಅನ್ಯಾಯದ ದುಃಖವೊಂದು ತೂಕವಾಗಿರಬೇಕು. ನಿರಂತರವಾದ ಈ ಮೂಕಶೋಕ ಅವಳ ಹೃದಯವನ್ನು ಹಿಂಡುತ್ತಿರಬೇಕು. ಇಡೀ ಜೀವನದುದ್ದಕ್ಕೂ ಮಡುಗೊಂಡಿದ್ದ ಅವಳ ದುರ್ದಮ್ಯ ದುಃಖ ಸಹದೇವನೊಡನೆ ಮಗನ ಶವವನ್ನು ಹುಡುಕುವಾಗಿನ ಸಂದರ್ಭದಲ್ಲಿ ಸಮಸ್ತ ಕುರುಕ್ಷೇತ್ರವನ್ನೇ ವ್ಯಾಪಿಸಿಕೊಳ್ಳುವಂಥ ಲಾವಾರಸವಾಗಿ ಚಿಮ್ಮುತ್ತದೆ. ‘ಮಗೂ, ಎಂತಹ ಬಸಿರೆನ್ನದು? ಅಂದು ಸುಡುಗಾಡುಂ ಬೆಸಲೆಯಾದೀ ಬಸಿರ್, ಇಂದು ಸೂಡಿನ ಬೆಂಕಿಯಿಂ ಬೇಗುದಿಗೊಳ್ಳುತಿಹುದಲ್ಲಾ!’ ಎನ್ನುವ ಮಾತಿನಲ್ಲಿ ಮಗನನ್ನು ಕಳೆದುಕೊಂಡ ಲೋಕದ ತಾಯಂದಿರ ಶೋಕವೆಲ್ಲ ಒಬ್ಬುಳಿಗೊಂಡಂತಿದೆ, ಸಹದೇವ ತಿಳಿದೂ ತಿಳಿಯದವನಂತೆ ಕೇಳಿದ ಪ್ರಶ್ನೆಗಳಿಗೆ ‘ಮಗೂ ನೊಂದ ಬಸಿರಂ ಕೆಣಕದಿರ್! ಎನ್ನೊಡಲೊಳ್ ನರಕಮನೆಳ್ಚರಿಸದಿರ್!’ ಎನ್ನುವ ತಾಯಿಯ ಕರುಳಿನ ವಚನ ಎಂಥ ಕಲ್ಲು ಹೃದಯ ವನ್ನಾದರೂ ಕರಗಿಸುವಂಥದು, ಕರ್ಣನ ಶವವನ್ನು ಕಂಡಾಗ ‘ಶ್ಮಶಾನ ಕುರುಕ್ಷೇತ್ರಂ’ ನಾಟಕದ ಕುಂತಿಯ ದುಃಖಾಕ್ರಾಂತ ಹೃದಯದಿಂದ ಹೊರಹೊಮ್ಮುವ ಚರಮಗೀತೆ ಅವಳ ಬಾಳಿನ ಶೋಕಗೀತೆಯಾಗಿದೆ. ಅಭಿಮನ್ಯು ಘಟೋತ್ಕಚರ ಶವಗಳೊಡನೆ ಕರ್ಣನ ಶವವನ್ನು ದಹಿಸುವಂತೆ ಕುಂತಿ ತನ್ನ ಮಕ್ಕಳೆದುರಿಗೆ ಅಂಗಲಾಚುವಾಗ ದುರ್ಯೋಧನನ ಶವದೊಡನೆ ಅದನ್ನು ದಹಿಸುವ ಸಲುವಾಗಿ ಕೊಂಡೊಯ್ಯಲು ಬಂದ ಅಶ್ವತ್ಥಾಮನನ್ನು ಯಾಚಿಸುವಾಗ, ತಾಯಿಯ ಅಂತಸ್ಥವನ್ನು ತಿಳಿಯಲಾರದೆ ಭೀಮ ಹಿಂದಿನ ಸೇಡನ್ನೆ ಸಾಧಿಸುವಾಗ ಕುಂತಿಯ ಅವಸ್ಥೆ ನಾರಕೀಯವಾಗುತ್ತದೆ; ಸ್ವನಿಂದೆಯ ಪಶ್ಚಾತ್ತಾಪದ ದಾವಾಗ್ನಿಯಲ್ಲಿ ಬೇಯುತ್ತಾಳೆ.

ಓ ಎನ್ನ ಕಂದಾ, ಓ ಕರ್ಣಾ
ಈಗಳಿವರೆಲ್ಲರುಂ ನಿನ್ನವರೆ, ನಾನೆ
ಪಾಪಿ, ಪರಕೀಯಳಾದೆನಲ್ತೆ?
ಲೋಕವಿವರಾರನುಂ ನಿಂದಿಸದು, ಎನ್ನನೋ,
ಮಗನ ಕೊಲೆಯಂಗೈದ ಕಡುಪಾಪಿ ಎಂದು
ಪೇಸುವುದು!

ಎಂಬ ಅವಳ ಚೀರುಲಿಯಲ್ಲಿ ಕೋಟಿ ಕೋಟಿ ತಾಯಂದಿರ ಶೋಕದ, ಮಹಾಭಾರತದ ದುರಂತ ಮೂಲದ, ಬಾಳಿನ ನಿರರ್ಥಕತೆಯ ಮಾರ್ದನಿಯನ್ನು ಆಲಿಸಬಹುದಾಗಿದೆ. ಇಲ್ಲೆಲ್ಲ ನಾವು ಕಾಣುವುದು ವಾತ್ಸಲ್ಯದ ದುರಂತತೆಯನ್ನು! ಯುದ್ಧದಲ್ಲಿ ಮಡಿದ ತಂತಮ್ಮ ಮಕ್ಕಳನ್ನು ಗಂಡಂದಿರನ್ನು ಅರಸುವ, ಗೋಳಾಡುವ ಗಾಂಧಾರಿ, ಮುದುಕಿ ಮೊದಲಾದವರ ದುಃಖ ಕುಂತಿಯ ದುಃಖದ ಮುಂದೆ ಮಸಕಾಗುತ್ತದೆ.

‘ನನ್ನ ಗೋಪಾಲ’ ನಾಟಕದಲ್ಲಿ ಭಕ್ತಿ ವಾತ್ಸಲ್ಯಗಳ ಮಧುರ ಸಮ್ಮಿಲನವನ್ನು ಕಾಣ ಬಹುದು. ಅಲ್ಲಿಯ ಗೋಪಾಲನ ತಾಯಿ ಈ ಎರಡು ಭಾವಗಳ ಸಂಗಮವಾಗಿದ್ದಾಳೆ. ವೇಣುಗೋಪಾಲನನ್ನು ‘ಶ್ರೀ ಕೃಷ್ಣ, ನನ್ನ ಮುದ್ದಿನ ಕಂದ, ಗೋಪಾಲ, ನಿನ್ನನ್ನೆ ನಂಬಿರುವೆ’ ಎಂದು ಪ್ರಾರ್ಥಿಸುತ್ತಾಳೆ. ಆ ವೇಣುಗೋಪಾಲನ ಭಕ್ತೆ ಗೋಪಾಲನ ಹೆಸರನ್ನೆ ಹೊತ್ತ ತನ್ನ ಮಗುವಿಗೆ ವಾತ್ಸಲ್ಯದ ಮಾತೆಯಾಗಿದ್ದಾಳೆ. ಆ ಗೋಪಾಲರಿಬ್ಬರಿಗೂ ಅವಳು ತಾಯಿಯೇ. ತಾಯಿಯ ಬೋಧೆಯ ಮೇರೆಗೆ, ಶಾಲೆಗೆ ಹೋಗುವಾಗ ತನಗೆ ಹೆದರಿಕೆಯಾದರೆ ಮನೆಯ ಗೋಪಾಲ ತನ್ನಣ್ಣ ಬನದ ಗೋಪಾಲನನ್ನು ಕರೆಯುತ್ತಾನೆ. ಬನದ ಗೋಪಾಲ ತಮ್ಮನಿಗೆ ಬೇಕಾದುದೆಲ್ಲವನ್ನು ಕೊಡುತ್ತಾನೆ. ತಾಯಿಗಂತೂ ಆ ಇಬ್ಬರು ಗೋಪಾಲರು ಅಭಿನ್ನರು.

‘ಬೆರಳ್‌ಗೆ ಕೊರಳ್’ ನಾಟಕದಲ್ಲಿ ವಾತ್ಸಲ್ಯದ ಪರಿಪೂರ್ಣ ಸ್ವರೂಪವನ್ನು ಕಾಣ ಬಹುದು. ಶಿಷ್ಯ ವಾತ್ಸಲ್ಯವಾಗಲಿ, ಪುತ್ರ ವಾತ್ಸಲ್ಯವಾಗಲಿ ಒಂದೇ ಭಾವದ ವಿಭಿನ್ನ ಅಭಿವ್ಯಕ್ತಿ ಯೆಂಬಂತೆ ಮೈದೋರುತ್ತವೆ. ಯುವಕನಾದರೂ ಹೆತ್ತ ತಾಯಿಗೆ ಮಗ ಮಗುವೆ. ತಂದೆ ಯಿಲ್ಲದ ಮಗನನ್ನು ಅಬ್ಬೆ ತನ್ನೆರಕದ ಪಂಜರದಲ್ಲಿಟ್ಟು ಪೋಷಿಸುತ್ತಾಳೆ; ಮೈಯೆಲ್ಲ ಕಣ್ಣಾಗಿ, ಮನವೆಲ್ಲ ರಕ್ಷೆಯಾಗಿ ಸಾಕುತ್ತಾಳೆ. ಅವನು ಕಾಡಿನಲ್ಲಲೆದಾಡಿದರೆ ಬಳಲಿರಬೇಕೆಂದು ಉಬ್ಬೆಗಗೊಳ್ಳುತ್ತಾಳೆ. ಸಕಾಲದಲ್ಲಿ ಮನೆಗೆ ಬಂದು ಊಟ ಮಾಡದಿದ್ದರೆ ಹಸಿದಿರಬೇಕೆಂದು ಸಂತಪಿಸುತ್ತಾಳೆ. ತಾನೇ ಅವನಿರುವಡೆಗೆ ಉಣಿಸನ್ನೊಯ್ಯುತ್ತಾಳೆ. ಮಗನನ್ನು ಕೂಗುತ್ತ, ಸದ್ದು ಬಂದ ದಿಕ್ಕಿಗೆ ಹೆಜ್ಜೆ ಹಾಕುತ್ತ ಮುಂದುವರಿಯುತ್ತಾಳೆ. ಅವನ ಬಿಲ್ಲಾಟ ಗೊಂಬೆ ಯಾಟಗಳನ್ನು ನೋಡಿ

ಹ್ಞು! ಅಣುಗನಲ್ತೆ ಆಡಲಿ!
ಪಿಂತಿಲ್ಲ, ಮುಂತಿಲ್ಲ; ಬೆನ್ನಿಲ್ಲ, ಬಸಿರಿಲ್ಲ
ಒರ್ವನೊಂಟಿಗನಲ್ತೆ? ಬೇಸರ್ ಕಳೆವುದೆಂತು?
ಮಿಗಗಳ್, ಪಕ್ಕಿಗಳ್, ಮರಗಳ್, ಕಲ್ಗಳ್,
ತಿಂಗಳ್, ನೇಸರ್, ಉದಯಾಸ್ತಂಗಳ್,
ತೊರೆಗಳ್, –
ಮೇಣಿಂತಪ್ಪ ನೀರ್ ಬೀಳಗಳ್
ಇವೆ ಅಲ್ತೆ ಒಡವುಟ್ಟುಗಳ್ ಮೇಣ್ ಒಡನಾಡಿಗಳ್

ಎಂದು ಮಗನ ಬಗ್ಗೆ ಕನಿಕರ ವ್ಯಕ್ತಪಡಿಸುತ್ತಾಳೆ. ಒಂದನೆಯ ದೃಶ್ಯದಲ್ಲಿ ಬರುವ ತಾಯಿ ಮಕ್ಕಳ ಸಂವಾದದಲ್ಲಿ ಪವಿತ್ರ ಪುತ್ರ ವಾತ್ಸಲ್ಯ ಮಾತೃಪ್ರೇಮಗಳ ಜೇನಾರ್‌ಗಳು ಸಂಗಮ ಗೊಂಡಿವೆ. ತಾಯಿ ಮಕ್ಕಳ ಇಂಥ ಸಂವಾದ ಸಾಹಿತ್ಯ ಕ್ಷೇತ್ರದಲ್ಲಿಯೇ ಅಲಭ್ಯ.

ಈ ಸಂವಾದದಲ್ಲಿಯೇ ಗುರು ದ್ರೋಣಾಚಾರ್ಯರ ಮತ್ತು ಶಿಷ್ಯ ಏಕಲವ್ಯನ ಪವಿತ್ರ ಸಂಬಂಧವೂ ಅಭಿವ್ಯಕ್ತವಾಗುತ್ತದೆ. ಏಕಲವ್ಯನ ಪಾಲಿಗೆ ದ್ರೋಣರು ‘ತಿಳಿದವನ್, ಅಕ್ಕರೆಯುಳ್ಳವನಂ, ತಿಳಿಗೊಂಡವನ್. ದಿವ್ಯಜ್ಞಾನಿಯೆಂಬರ್, ಸಮದರ್ಶಿಯೆಂಬರ್, ಧನುರ್ವಿದ್ಯಾ ದೇವನೆಂಬರ್’ ಅರ್ಜುನನ ಈರ್ಷ್ಯೆಯನ್ನು ತಣಿಸಲೋಸುಗ ಏಕಲವ್ಯನ ಬಲಗೈ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆಯಲು ಬಂದಾಗ ಅರಣ್ಯದಲ್ಲಿ ನಡೆಯುವ ದ್ರೋಣಾಶ್ವತ್ಥಾಮರ ಸಂವಾದದಲ್ಲಿ ಶಿಷ್ಯವಾತ್ಸಲ್ಯ ಜನ್ಮ ಜನ್ಮಾಂತರ ವ್ಯಾಪಿ ಮಾತ್ರವಲ್ಲ, ವಿಧಿಕೃಪೆಯ ಕೃಪಾಣವೆಂಬ ದರ್ಶನ ಧ್ವನಿಯೂ ಪ್ರಸ್ಫುಟವಾಗುತ್ತದೆ. ಏಕಲವ್ಯನನ್ನು ಶಿಷ್ಯನನ್ನಾಗಿ ಪಡೆದದ್ದು ತನ್ನ ಪುಣ್ಯವೆಂದು ತನ್ನೊಳಗೆ ತಾನಾಡಿಕೊಳ್ಳುವ ಹಿರಿಮೆ ದ್ರೋಣನದು :

ಎನ್ನ ಹಿರಿಮೆಯನೆನಗೆ ತೋರಿದಯ್
ಗುರುಕೃಪಾಮಹಿಮೆಯಂ ಲೋಕಕ್ಕೆ ಸಾರಿದಯ್.
ನೀನು ಗುರುವೆಂದೊಲಿದೆ ನನಗೆ ಗುರುತನವಿತ್ತೆ.
ಮೇಣ್, ಗುರುವಾದೆ.
ಶಿಷ್ಯನನ್ನೇ ಗುರುವೆಂದೊಪ್ಪಿಕೊಳ್ಳುವ ಗುರುದೆವ ದುರ್ಲಭ.

ಅಂಥ ಶಿಷ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳುವುದಾದರೂ ಹೇಗೆ? ಸುತ್ತು ಬಳಸಿನ ಮಾತುಗಳ ಮೂಲಕ ತನ್ನ ಅಂತಸ್ಸಂಕಟವನ್ನು ಗುರು ಅತ್ಯಂತ ಸಂಕಟದಿಂದ ಪ್ರಕಟಿಸುತ್ತಾನೆ. ತನ್ನ ದುಃಖ ಕಾರಣವನ್ನು ಗುರು ವಿವರಿಸುತ್ತಾನೆ.

ನಿನ್ನಿಂದೆ ಕಲ್ತೆನಧ್ಯಾತ್ಮಮಂ
ಪಡೆವುದೆಲ್ಲಂ ಕೊಡುವುದಕ್ಕಲ್ತೆ, ಆರ್ಯ?
………………………………………
ಏಕಲವ್ಯನ ಕೊಡುವ ಕಾಣ್ಕೆಗಲ್ಪತ್ವ ಮೊದಗದಿರ್ಕೆ.

ಎಂದು ಏಕಲವ್ಯ ಗುರುಕ್ಷಿಣೆಯನ್ನು ಹೆಸರಿಸುವಂತೆ ದ್ರೋಣರನ್ನು ಕಾಡುತ್ತಾನೆ. ಏಕಲವ್ಯನ ಬೆರಳ ಬೇಳ್ವೆಯಲ್ಲಿ ದ್ರೋಣರು ತಮ್ಮ ಪ್ರಾಣದ ಮಾರಣ ಹೋಮವನ್ನೆ ಕಾಣುತ್ತಾರೆ. ತಾವುಳಿಯುವುದೇ ಅವರಿಗೆ ಬೇಡವಾಗುತ್ತದೆ. ಮಾತೃವಾತ್ಸಲ್ಯದ ಶಾಪದ ಮುಂದೆ ಗುರುಶಕ್ತಿಯೂ ತೇಜೋಹೀನವಾಗುತ್ತದೆಂಬುದನ್ನವರು ಬಲ್ಲರು. ವಾತ್ಸಲ್ಯದ ಪರಮಾರ್ಥ ಈ ನಾಟಕದಲ್ಲಿ ಹಾಸುಹೊಕ್ಕಾಗಿ ಪ್ರವೇಶಿಸಿದೆಯೆಂಬ ಸಂಗತಿ ಮೇಲಿನ ನಿರೂಪಣೆಯಿಂದ ವೇದ್ಯವಾದೀತೆಂದು ಭಾವಿಸಲಾಗಿದೆ.

(ಡಾ. ವೇಣುಗೋಪಾಲರಾವ್ ಅವರ ಆಳವಾದ ಅಧ್ಯಯನಕ್ಕೆ ಮುನ್ನುಡಿ ರೂಪದ ಈ ಟಿಪ್ಪಣಿ ಕೇವಲ ಪೂರಕವಾಗಿದೆಯೆಂಬುದನ್ನು ಪ್ರಾರಂಭದಲ್ಲಿಯೆ ಶ್ರುತಪಡಿಸಲಾಗಿದೆ. ಅವರ ಈ ಅಧ್ಯಯನದಲ್ಲಿ ತೂಕವಿದೆ, ಸಹೃದಯತೆಯಿದೆ, ಪ್ರಾಮಾಣಿಕತೆಯಿದೆ, ಖಚಿತತೆಯಿದೆ, ವಿಶ್ಲೇಷಣೆ ಯಲ್ಲಿ ಹಾಳತವಿದೆ, ಶೈಲಿಯಲ್ಲಿ ಸ್ಪಷ್ಟತೆಯಿದೆ, ನಿರ್ಣಯ ನಿರೂಪಣೆಯಲ್ಲಿ ಪಕ್ವಾನುಭವದ ಸಾಂಗತ್ಯವಿದೆ. ವಾತ್ಸಲ್ಯವನ್ನು ಪ್ರತ್ಯೇಕ ರಸವೆಂದು ಭಾವಿಸಬಹುದೆ? ಎಂಬ ಪ್ರಶ್ನೆಯ ಬಗ್ಗೆ ಕೊನೆಯಲ್ಲಿ ಆಲೋಚನೆ ನಡೆಸಿದ್ದಾರೆ. ಶೃಂಗಾರ ರಸದಲ್ಲಿ ಅದನ್ನು ವಿಲಯನಗೊಳಿಸಬಹುದೆಂಬ ಅವರ ವಾದ ವಿಚಾರಣೀಯ. ಶೃಂಗಾರದ ಅರ್ಥವನ್ನು ಹಿಗ್ಗಲಿಸಿದಾಗ ಅವುಗಳ ಸಮನ್ವಯ ಸಾಧ್ಯವಾಗಬಹುದು. ಆದರೂ ಸಂಶಯ ಉಳಿದೇ ಉಳಿಯುತ್ತದೆ. ಅದೇನೇ ಇರಲಿ, ಈ ಕೃತಿಯ ನ್ನೋದಿದ ನಂತರ ಆ ವಿಷಯದ ಬಗ್ಗೆ ಪುನರಾಲೋಚನೆ ಅಗತ್ಯವೆನಿಸದಿರದು.)

ಕುವೆಂಪು ಕಥಾ ಸಾಹಿತ್ಯ
(ಒಂದು ಕಿರುನೋಟ)

ಮಕಾಲೀನ ವಿಮರ್ಶೆಯ ಒರೆಗಲ್ಲಿನಲ್ಲಿ ಕುವೆಂಪು ಕೃತಿಗಳು ನಾನಾ ಬಗೆಗಳಲ್ಲಿ ಪರೀಕ್ಷೆಗೀಡಾಗಿವೆ. ನೂರಾರು ವಿಮರ್ಶಕರು ನೂರಾರು ರೀತಿಗಳಲ್ಲಿ ಅವರ ಕೃತಿಗಳನ್ನು ವಿಮರ್ಶಿಸಿದ್ದಾರೆ, ವ್ಯಾಖ್ಯಾನಿಸಿದ್ದಾರೆ, ಗುಣದೋಷಗಳನ್ನು ಎತ್ತಿಹಿಡಿದಿದ್ದಾರೆ. ಅವರವರ ರುಚಿ ಅಭಿರುಚಿ ಪ್ರತಿಭೆ ಪಾಂಡಿತ್ಯ ಧರ್ಮ ಕರ್ಮ ಸ್ವಭಾವ ಸಂಸ್ಕಾರ ಪೂರ್ವ ಗ್ರಹ ದುರಾಗ್ರಹಗಳು ಅವುಗಳಲ್ಲಿ ಪ್ರತಿಫಲನಗೊಂಡಿವೆ. ಕೆಲವರ ದೃಷ್ಟಿಯಲ್ಲಿ ಕುವೆಂಪು ಮಹಾಕವಿಯಾದರೆ, ಮತ್ತೆ ಕೆಲವರ ದೃಷ್ಟಿಯಲ್ಲಿ ಅವರು ಮಹಾಕಾದಂಬರಿಕಾರರು; ಒಂದು ಗುಂಪಿನ ದೃಷ್ಟಿಯಲ್ಲಿ ಅವರು ಉತ್ತಮ ನಾಟಕಕಾರರಾದರೆ, ಮತ್ತೊಂದು ಗುಂಪಿನ ದೃಷ್ಟಿಯಲ್ಲಿ ಅವರು ಶ್ರೇಷ್ಠ ವಿರ್ಮಶರು. ಒಂದು ಕಾಲದಲ್ಲಿ ಕುವೆಂಪು ಅವರು ಕವಿಯೇ ಅಲ್ಲ, ಉತ್ತಮ ಲೇಖಕರೂ ಅಲ್ಲ ಎಂದು ಕಟುವಾಗಿ, ಅಸಹ್ಯವಾಗಿ, ಖಾರವಾಗಿ ಅಮಲೇರಿ ದಂತೆ ಟೀಕಿಸುತ್ತಿದ್ದ ವಿಮರ್ಶಕ ವರೇಣ್ಯರ ದೃಷ್ಟಿಯಲ್ಲಿ ಅವರೇ ಪ್ರತಿಭಾವಂತ ಆದರ್ಶಕವಿ ಯಾಗಿ ಅನನ್ಯ ಸಾಧಾರಣ ವಿಚಾರವಂತರಾಗಿ ಈಚೀಚೆಗೆ ಕಾಣುತ್ತಿರುವುದು ಕನ್ನಡಿಗರ ಪುಣ್ಯವೆಂದೇ ಹೇಳಬೇಕು. ಅದೇನೇ ಇರಲಿ, ಕುವೆಂಪು ಅವರಂಥ ಶ್ರೀಮಂತ ಧೀಮಂತ ವಿಚಾರವಂತ ಮಹಾಸಾಹಿತಿಗೆ ಇಂದಾಗಲೀ ಮುಂದಾಗಲೀ ಯಾರ ವಶೀಲಿಯಾಗಲಿ ವಕಾಲತ್ತಾಗಲಿ ಬೇಕಿಲ್ಲವೆಂಬುದಂತು ಸುಸ್ಪಷ್ಟ.

ಕುವೆಂಪು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಪ್ರೋಯಶಸ್ವಿಯಾಗಿ ಕೈಯಾಡಿಸಿರುವುದುಂಟಷ್ಟೆ. ಕತೆಗಾರ ಕುವೆಂಪು ಮಹಾಕವಿ-ಮಹಾಕಾದಂಬರಿಕಾರ ಕುವೆಂಪು ಅವರ ಪ್ರಖರ ಪ್ರಭಾವದಿಂದಾಗಿ ಮಸುಕು ಮಸುಕಾಗಿ ಕಾಣಿಸುತ್ತಾರೆಂಬುದಂತು ನಿಜ. ಮಹಾಕಾವ್ಯ ಮಹಾಕಾದಂಬರಿಗಳ ಬೃಹತ್ಕುಕ್ಷಿಗಳಿಗೆ ಸಣ್ಣ ಕಥೆಗಳೇ ಆಧಾರವೆಂಬುದನ್ನೂ ಮರೆಯುವಂತಿಲ್ಲ. ಮಹಾಕಾವ್ಯ ಮಹಾಕಾದಂಬರಿಗಳ ದೃಷ್ಟಿ ಧ್ಯೇಯ ಪ್ರಮಾಣ ರಚನೆಗಳು ಬೇರೆಯಾದರೂ ಬಹುಮುಖ ಪ್ರತಿಭೆಯ ಕಲ್ಪನಾ ಸಾಮರ್ಥ್ಯದ ಶ್ರೇಷ್ಠ ಕಥೆಗಾರನಲ್ಲದವನು ಮಹಾಕವಿಯಾಗಲಾರ. ಅದೇನೇ ಇರಲಿ, ಹದಿನೇಳೆನೇ ಕಥೆಗಳನ್ನು ಕಟ್ಟಿರುವ ಕುವೆಂಪು ಕನ್ನಡದ ಅತ್ಯುತ್ತಮ ಕಥೆಗಾರರಲ್ಲೊಬ್ಬರೆಂಬುದಂತು ನಿಜ.

ಪುಸ್ತಕಗಳ ಪ್ರಾರಂಭದಲ್ಲಿ ಅಚ್ಚಾಗಿರುವ ಪ್ರಕಟಣೆಯ ವರ್ಷಗಳನ್ನು ಲಕ್ಷಿಸುವುದಾದರೆ ‘ಸಂನ್ಯಾಸಿ ಮತ್ತು ಇತರ ಕಥೆಗಳು’ ೧೯೩೬ಕ್ಕೆ ಹಿಂದೆ, ಅಂದರೆ ಕತೆಗಾರರ ವಿವಾಹಪೂರ್ವ ದಲ್ಲಿ, ಕಾನೂರು ಸುಬ್ಬಮ್ಮ ಹೆಗ್ಗಡತಿ ಮಹಾಕಾದಂಬರಿ ಪ್ರಕಟವಾಗುವ ಮುನ್ನ, ‘ನನ್ನ ದೇವರು ಮತ್ತು ಇತರ ಕಥೆಗಳು’ ೧೯೪೦ಕ್ಕೆ ಮುನ್ನ ಅಚ್ಚಾಗಿವೆ. ೧೯೩೮ರ ಹೊತ್ತಿಗೆ ‘ನನ್ನ ದೇವರು ಮತ್ತು ಇತರ ಕಥೆಗಳು’ ಅಚ್ಚಿಗೆ ಸಿದ್ಧವಾಗಿತ್ತೆಂಬುದಾಗಿ ‘ಕಾನೂರು ಸುಬ್ಬಮ್ಮ ಹೆಗ್ಗಡಿತಿ’ಯಲ್ಲಿ ಪ್ರಕಟವಾಗಿರುವ ಪುಸ್ತಕಗಳ ಪಟ್ಟಿಯಿಂದ ವ್ಯಕ್ತವಾಗುತ್ತದೆ. ಅಂದ ಮೇಲೆ ಈ ಕಥೆಗಳೆಲ್ಲ ಕಾದಂಬರಿಯ ಜತೆ ಜತೆಗೆ, ಯೌವನದ ಕಾವಿನಲ್ಲಿ ಕುಸುರಿಗೊಂಡವೆಂದು ಅರಿಯಬಹುದಾಗಿದೆ.

ಈ ಹದಿನೇಳು ಕತೆಗಳ ಪೈಕಿ ಏಳರಲ್ಲಿ ಗಂಡು ಹೆಣ್ಣುಗಳ ಪ್ರಣಯದ ವಿವಿಧ ಮುಖಗಳ ಅಭಿವ್ಯಕ್ತಿಯನ್ನು ಗುರುತಿಸಬಹುದಾಗಿದೆ. ಬಲಾತ್ಕಾರದ ಮದುವೆಯಿಂದಾಗಿ ವಿರಕ್ತ ಮನೋಧರ್ಮದ ರಮೇಶ ಪ್ರಯಾಗದ ಪ್ರೇಮಾನಂದರ ಬಳಿ ಬ್ರಹ್ಮಚರ್ಯ ದೀಕ್ಷೆ ಪಡೆದು, ಚೈತನ್ಯನಾಗಿ ಸಾಧನಾ ನಿರತನಾಗುತ್ತಾನೆ. ಇಂದಿರೆ ಅನ್ವೇಷಣೆಯ ಮೂಲಕ ಪತಿಯ ನೆಲೆಯನ್ನರಿತು, ವೇಷಾಂತರದಿಂದ ಮುಕುಂದನೆಂಬ ಹೆಸರಿನಿಂದ ಪತಿಯ ಶಿಷ್ಯೆಯಾಗಿ ನಿಲ್ಲುತ್ತಾಳೆ. ಅವಳೊಮ್ಮೆ ಪ್ರೇಮಾನಂದರ ಬಳಿ ಮನಬಿಚ್ಚಿ ತನ್ನ ಕತೆಯನ್ನೆಲ್ಲ ವಿವರಿಸಿ. ಪತಿಭಿಕ್ಷೆ ಬೇಡಿ, ಇಷ್ಟಾರ್ಥವನ್ನು ನೆರವೇರಿಸಿಕೊಳ್ಳುತ್ತಾಳೆ. ಕಾಮಲೇಪವಿಲ್ಲದ ಪರಿಶುದ್ಧ ಪ್ರೇಮಕ್ಕೆ ಸೋಲಿಲ್ಲವೆಂಬುದಕ್ಕೆ ಈ ಕತೆಯೊಂದು ನಿದರ್ಶನವಾಗಿದೆ. ಅಷ್ಟೇ ಅಲ್ಲ, ಗೃಹಸ್ಥಾಶ್ರಮ ಸನ್ಯಾಸಾಶ್ರಮಗಳಲ್ಲಿ ಯಾವುದೂ ಕೀಳಲ್ಲ, ಯಾವುದೂ ಮೇಲಲ್ಲವೆಂಬ ತತ್ವವೂ ಇಲ್ಲಿ ಪ್ರತಿಪಾದನೆಗೊಂಡಿದೆ. ದುರ್ಬಲ ಮನಸ್ಸಿಗೂ ಆದರ್ಶ ಸಾಧನೆಗೊ ಬಲುದೂರವೆಂಬ ನಿರುತ ‘ಆದರ್ಶಸಾಧನೆ’ಯಲ್ಲಿ ಅಭಿವ್ಯಕ್ತಗೊಂಡಿದೆ. ಆದರ್ಶ ಸನ್ಯಾಸಿ ಯಾಗುವುದಾಗಿ ಎಣಿಕೆ ಹಾಕಿಕೊಂಡಿದ್ದ ಕಥಾನಾಯಕ ಬರಬರುತ್ತ ಸನ್ಯಾಸಕ್ಕೆ ವಿರುದ್ಧವಾಗಿ ಮಾತಾಡುತ್ತ, ಬ್ರಹ್ಮಚರ್ಯ ನಿಸರ್ಗ ಧರ್ಮವಲ್ಲವೆಂದು ವಾದಿಸಿ, ಮದುವೆಯಾಗಿ ಏಕಪತ್ನೀವ್ರತದ ಬಗ್ಗೆ ಭಾಷಣ ಮಾಡುತ್ತ, ಮೊದಲನೆಯ ಹೆಂಡತಿ ತೀರಿಕೊಂಡಾಗ ಎರಡನೆಯ ಮದುವೆಗೂ ಸಮ್ಮತಿಸುವ, ತನ್ನ ಚಪಲ ಮನೋಧರ್ಮವನ್ನು  ಸಮರ್ಥಿಸಿ ಕೊಳ್ಳುವ ಆತ್ಮವಂಚನೆಯ ಸಮಯವರ್ತಿ. ಮದುವೆಯಾದ ತರುಣದಲ್ಲಿಯೇ ಗಂಡನನ್ನು ಕಳೆದುಕೊಂಡ ತರುಣಿಯ ಮೂಕವೇದನೆ ಸಕಲಗುಣ ಸಂಪನ್ನನೂ ಅವಿವಾಹಿತನೂ ಆದ ಭಾವನ ಮೇಲಣ ಪ್ರೇಮವಾಗಿ ಪರಿಣಮಿಸಿ ಅವನ ಸ್ಥಿತಪ್ರಜ್ಞತ್ವವನ್ನು ಕಂಡಾಗ ಅವನಿಗೆ ಶರಣಾಗತಳಾಗುವಲ್ಲಿ ತೋರುವ ಮುಗ್ಧ ಪ್ರೇಮ ‘ನನ್ನ ದೇವರು ಕತೆ’ಯ ಜೀವಾಳ. ಕಪಟವೇಷದ ಮೂಲಕ ದೇವರ ಹೆಸರಿನಲ್ಲಿ ಸದ್ಗೃಹಿಣಿಯರನ್ನು ವಂಚಿಸುವ ಲಂಪಟನೊಬ್ಬನ ಕತೆ ‘ವೈರಾಗ್ಯದ ಮಹಿಮೆ’ಯ ವಸ್ತು. ಯೌವನದ ಧ್ಯೇಯಾದರ್ಶಗಳು ವ್ಯಾಮೋಹದ ಬಂಡೆಗೆ ಡಿಕ್ಕಿ ಹೊಡೆದಾಗ ಜೀವನವೇ ಹೇಗೆ ನುಚ್ಚುನೂರಾಗುತ್ತದೆಂಬ ಮಾತಿಗೆ ‘ಕ್ರಿಸ್ತನಲ್ಲ ಪಾದ್ರಿಯ ಮಗಳು’ ಎಂಬ ಕತೆ ದೃಷ್ಟಾಂತವನ್ನೊದಗಿಸುತ್ತದೆ. ಭಾರತ ಮಾತೆಯ ಸೇವೆಗಾಗಿ ಸದಾ ಬ್ರಹ್ಮಚಾರಿಯಾಗಿರುವುದಾಗಿ ಸಂಕಲ್ಪ ತೊಟ್ಟಿದ್ದ ಕ್ರಿಸ್ತಮತವನ್ನು ಹೀಯಾಳಿಸುತ್ತಿದ್ದ ಯೋಗಿನ್ ಪಾದ್ರಿಯ ಮಗಳನ್ನು ಕಂಡ ಕೂಡಲೇ ವ್ರತಚ್ಯುತನಾಗಿ, ಜಾನ್ ವಿಲಿಯಂ ಆಗಿ, ಕೊನೆಗೆ ಅವಳಿಂದಲೂ ತಿರಸ್ಕೃತನಾಗಿ, ಧ್ಯೇಯ ದುರಂತದಲ್ಲಿ ಮರೆಯಾದದ್ದೇ ಇಲ್ಲಿಯ ವಸ್ತು. ಮನೆಯ ಪಾಠ ಹೇಳಿ ಕೊಡುವ ಮೂಲಕ ಹಣಗಳಿಸಿ ವಿದ್ಯಾರ್ಥಿ ಜೀವನವನ್ನು ಸಾಗಿಸುತ್ತಿದ್ದ ಕಲ್ಪನಾಲೋಕ ವಿಹಾರಿಯಾದ ಬಡ ತರುಣನೊಬ್ಬ ಶ್ರೀಮಂತ ಮನೆತನದ ಮುಗ್ಧ ಶಿಷ್ಯೆಯ ಮನಸ್ಸನ್ನರಿಯದೆ ಪ್ರೀತಿಸಿ, ವಾಸ್ತವ ಪ್ರಜ್ಞೆಯಿಲ್ಲದೆ ಬೇಸ್ತು ಬಿದ್ದದ್ದೇ ‘ಮೀನಾಕ್ಷಿಯ ಮನೆಯ ಮೇಷ್ಟರು’ ಕತೆಯ ವಸ್ತು. ಬಲಗಿವಿಯಿಲ್ಲದ ಕುರೂಪಿ ನಾಗರಾಜ ಮತ್ತು ಮೋಟು ಗೈಯ ಲಲಿತಮ್ಮ ತಂತಮ್ಮ ದೈಹಿಕ ದೋಷಗಳನ್ನು ಮರೆಮಾಡಿ ಪತ್ರಿಕೆಯ ಜಾಹಿರಾತಿನ ಮೂಲಕ ಮದುವೆ ಮಾಡಿಕೊಂಡ ಪ್ರಸಂಗದ ಸುತ್ತ ‘ಈಶ್ವರನೂ ನಕ್ಕಿರಬೇಕು’ ಕತೆಯನ್ನು ಹೆಣೆದಿದೆ.

ದ್ವಿತೀಯ ವಿವಾಹ ಸಂಬಂಧದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಒದಗಿದರೂ, ಆತ್ಮಹತ್ಯೆಗೆ ಕಾರಣ ತಿಳಿಸಿ ಬರೆದಿಟ್ಟ ಪತ್ರದಲ್ಲಿ ಅವಳ ದುಷ್ಟತನವನ್ನು ಉಲ್ಲೇಖಿಸದ ಔದಾರ್ಯ ಡೇವಿಡ್ ಮೇಷ್ಟರದು. ‘ಔದಾರ್ಯ’ದ ಕತೆಯ ತಿರುಳೂ ಇದೇ. ಆತ್ಮಹತ್ಯೆ ಮಾಡಿಕೊಂಡವರು ದೆವ್ವವಾಗಿ ಸುಳಿಯುತ್ತಾರೆಂಬ ನಂಬಿಕೆಯೂ ಉಂಟಷ್ಟೆ. ಭ್ರಮಾಮೂಲ ವಾದ ಕಲ್ಪನಾ ಚಮತ್ಕಾರವೂ ಈ ಕಥೆಯ ಚಾಲಕ ಶಕ್ತಿಯಾಗಿದೆ. ಭೂತಪ್ರೇತಗಳು ಮನೆಗಳಲ್ಲಿ ಸೇರಿಕೊಂಡು ಜನರಿಗೆ ಕಾಟಕೊಡುತ್ತವೆಂಬ ಸಾಮಾಜಿಕ ನಂಬಿಕೆಯೇ ‘ಮಾಯದ ಮನೆ’ಯ ನೆಲಗಟ್ಟು. ರೋಗಿಗಳನ್ನು ನಿರ್ದಯವಾಗಿ ಸುಲಿಯುತ್ತಿದ್ದ ವೈದ್ಯ ಸುರೇಂದ್ರ ಬಾಬುವಿನ ಮನಸ್ಸೇ ಮಾಯದ ಮನೆಯಾಗಿ ತುಮುಲ ರಂಗವಾದ ಮನೋವೈಜ್ಞಾನಿಕ ಸನ್ನಿವೇಶವೇ ಇದರ ಭೂಮಿಕೆಯೆಂದರೂ ತಪ್ಪಾಗದು. ಪಟ್ಟಣದಲ್ಲಿ ವಾಸಿಸುತ್ತಿದ್ದ ಯಜಮಾನ ರಂಗರಾಯರು ನವಿಲೂರಿನ ಮನೆಗೆ ಬಂದದ್ದಾದರೆ ತನಗಿರುವ ಸೌಕಾರ್ಯಾನು ಕೂಲಗಳು ತಪ್ಪಿ ಹೋಗಬಹುದೆಂಬ ಸಂಕಟದಿಂದ ಅವರಿದ್ದಾಗ ಕಲ್ಲುತೂರಿ, ‘ದೆವ್ವದ ಮನೆ’ಯೆಂಬ ಭ್ರಮೆ ಮೂಡಿಸಿದಾಗ, ಪೋಲೀಸಿನವರ ಚಮತ್ಕಾರದ ಜಾಲಕ್ಕೆ ಸಿಕ್ಕಿಬಿದ್ದ ಮನೆಯಾಳು ಮುತ್ತಣ್ಣನ ಪ್ರಕರಣ ಪತ್ತೆದಾರಿ ಕತೆಯ ಜಾಡನ್ನನುಸರಿಸುತ್ತದೆ. ಹಿಂದಿನವರು ಹೂಳಿಟ್ಟ ಹಣವನ್ನು ಮಂತ್ರಮಾಟಗಳ ಮೂಲಕ ಹೊರತೆಗೆಯಬಹುದೆಂಬ ಮೂಢ ನಂಬಿಕೆಯ ಆಧಾರದ ಮೆಲೆ ‘ಗಂಟು ಅಥವಾ ಗುಪ್ತಧನ’ ಎಂಬ ಕತೆ ಹಬ್ಬಿದೆ.

ವಕೀಲನೊಬ್ಬನ ಪ್ರತೀಕಾರ ಬುದ್ದಿಯಿಂದಾಗಿ ಶ್ರೀಮಂತಿಕೆಯನ್ನೆಲ್ಲ ಕಳೆದುಕೊಂಡು ಭಿಕ್ಷುಕನಾಗಿ ಮತ್ತೊಬ್ಬ ವಕೀಲನ ಮತ್ತು ಗೆಳೆಯರ ಸಹಾಯದಿಂದಾಗಿ ಕೋರ್ಟಿನ ಮೂಲಕ ತನ್ನ ಆಸ್ತಿಪಾಸ್ತಿಗಳನ್ನೆಲ್ಲ ಹಿಂದಕ್ಕೆ ಪಡೆದು, ಬಡತನ ಸಿರಿತನ ಶಾಶ್ವತವಲ್ಲ, ಸತ್ಕಾರ್ಯವೊಂದೇ ಶಾಶ್ವತವೆನ್ನುವ ತಥ್ಯವನ್ನು ಪ್ರಕಟಿಸುವ ನವಾಬ್ ಸಿಂಗನ ಜೀವನ ವೃತ್ತಾಂತವೇ ‘ಆರಾಣೆ ಮೂರು ಕಾಸು’ ಕತೆ. ಎಳೆವಯಸ್ಸಿನ ತಬ್ಬಲಿ ಜೀತದಾಳು ಸುಬ್ಬಣ್ಣಗೌಡರಂಥವರ ಕ್ರೌರ್ಯಕ್ಕೆ ತುತ್ತಾದ ಹೃದಯ ವಿದ್ರಾವಕ ಕತೆಯೇ ‘ಸಾಲದ ಮಗು’. ಜೈಲಿನಲ್ಲಿದ್ದವನೆಂದು ಯಾರೂ ಹತ್ತಿರ ಸೇರಿಸದಿದ್ದಾಗ ಸುಬ್ಬಣ್ಣಗೌಡರ ಆಶ್ರಯದಲ್ಲಿ ನಿಂತು, ಮಳೆಗಾಲದ ಒಂದು ದಿನ ಪ್ರವಾಹವೇರಿ ಅವರು ಸಂಕಟಕ್ಕೊಳಗಾದಾಗ ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಅವರನ್ನೂ ಅವರ ಕುಟುಂಬಗಳನ್ನೂ ರಕ್ಷಿಸಲು ಹೋರಾಟ ನಡೆಸಿದ ಲಿಂಗನೇ ‘ಯಾರೂ ಅರಿಯದ ವೀರ’. ರೈತನ ಸಂಕಟಕ್ಕೆ ಅವನು ಹೊತ್ತ ಸಮಸ್ತ ಚಕ್ರಾಧಿಪತ್ಯದ ಭಾರವೇ ಕಾರಣವೆಂಬುದು ‘ಧನ್ವಂತರಿಯ ಚಿಕಿತ್ಸೆ’ಯಲ್ಲಿ ಅಭಿವ್ಯಕ್ತವಾಗುವ ಸತ್ಯ.

ಶಾಲೆಯಲ್ಲಿ ಓದುತ್ತಿದ್ದಾಗ ಜೇಬಿನಲ್ಲಿದ್ದ ಹೋಳಿಗೆಯೇ ಕಾರಣವಾಗಿ ಮೇಷ್ಟರ ಬೆತ್ತದ ಬಿಸಿಯನ್ನನುಭವಿಸಿದ ವಿದ್ಯಾರ್ಥಿಯೊಬ್ಬ ಹೋಳಿಗೆಯನ್ನೇ ತಿನ್ನುವುದಿಲ್ಲವೆಂದು ಮಾಡಿದ ಹುಡುಗಾಟದ ಸಂಕಲ್ಪವೇ ‘ಹೋಳಿಗೆ ಪ್ರತಿಜ್ಞೆ’.

ಹಳೇ ಪೈಕದ ರಂಗನ ಎಮ್ಮೆ ತಪ್ಪಿಸಿಕೊಂಡು ನಾಲೂರು ನಾಗಣ್ಣಗೌಡರ ಗದ್ದೆಯ ಪೈರು ಮೇಯುವಾಗ ಗೌಡರು ಅದನ್ನು ತಮ್ಮ ದನದ ಕೊಟ್ಟಿಗೆಗೆ ಸೇರಿಸುತ್ತಾರೆ. ಹಾಲಿಲ್ಲದೆ ಕಣ್ಣೀರು ಸುರಿಸುತ್ತ ಅರಚಿಕೊಳ್ಳುತ್ತಿದ್ದ ಕರುವಿನ ಸಂಕಟವನ್ನು ತಡೆಯಲಾರದೆ ರಂಗ ಅದನ್ನು ಹುಡುಕಿಕೊಂಡು ಹೋಗುತ್ತಾನೆ. ಅದು ಗೌಡರ ಗದ್ದೆಯನ್ನು ಹೊಕ್ಕಿತ್ತು ಎಂಬ ಸುದ್ದಿ ಕೇಳಿದೊಡನೆ ರಂಗ ಅಂಜುತ್ತಾನೆ. ಖಾಯಿಲೆಯಿಂದ ನರಳುತ್ತಿದ್ದ ನಾಗಣ್ಣಗೌಡರ ಕಿರಿಯ ಮಗ ವಾಸು ಕರುವಿನ ಕನಿಕರದ ಕತೆಯನ್ನು ಕೇಳಿ ಕಂಬನಿದುಂಬಿಕೊಂಡು ಎಮ್ಮೆಯನ್ನು ಬಿಡಿಸುತ್ತಾನೆ. ‘ದೇವರೇ ಇವರನ್ನು ಉಳಿಸು’ ಎಂದು ರಂಗ ಪ್ರಾರ್ಥಿಸಿ, ಎಮ್ಮೆಯನ್ನು ಹೊಡೆದುಕೊಂಡು ಹೋಗುತ್ತಾನೆ. ಆ ಕಡೆ ಎಮ್ಮೆ ತನ್ನ ಕರುವನ್ನು ಮೂಸುತ್ತಿದ್ದಾಗ ಈ ಕಡೆ ವಾಸುವಿನ ಜ್ವರ ಇಳಿಮುಖವಾಗುತ್ತದೆ. ‘ಶ್ರೀಮನ್ಮೂಕವಾಗಿತ್ತು’ ಕತೆಯ ಸಾರಾಂಶವಿದು.

ಈ ಹದಿನೇಳು ಕಥೆಗಳನ್ನು ಪ್ರಣಯ ಕಥೆ, ಸಾಮಾಜಿಕ ಕಥೆ, ಹಾಸ್ಯ ಕಥೆ ಮತ್ತು ದಾರ್ಶನಿಕ ಕಥೆಗಳೆಂಬುದಾಗಿ ವಿಂಗಡಿಸಬಹುದಾದರೂ, ಈ ವಿಂಗಡಣೆಯಲ್ಲಿ ಪರಸ್ಪರ ವ್ಯಾಪ್ತಿಯಾಗಲಿ ಒಳಸೇರುವೆಯಾಗಲಿ ಇಲ್ಲವೆನ್ನುವಂತಿಲ್ಲ. ‘ಔದಾರ್ಯ’ ಕಥೆ ಪ್ರಣಯ ವ್ಯಾಪಾರಕ್ಕೆ ಸಂಬಂಧಿಸಿದ್ದಾದರೂ, ಮೊದಲನೆಯ ಮಡದಿ ಮಡಿದು, ಒಂದು ಮಗುವಿದ್ದು, ಎರಡನೆಯ ಮದುವೆ ಮಾಡಿಕೊಳ್ಳುವುದರಿಂದ ಸಂಭವಿಸಬಹುದಾದ ಅನಾಹುತಗಳ ಉಲ್ಲೇಖವಿರುವುದರಿಂದ ಅದನ್ನು ಸಾಮಾಜಿಕ ಕಥೆ ಎಂದು ಕರೆಯಲೂ ಸಾಧ್ಯ. ದೆವ್ವದ ಕಾಟ, ಮಾಯದ ಮನೆಗಳ ಜತೆಗೆ ಅದನ್ನು ಸಹ ದೆವ್ವದ ಕಥೆಯೆಂದೇ ಹೆಸರಿಸಬಹುದಾಗಿದೆ. ದೆವ್ವದ ಕಥೆಗಳನ್ನು ಸಾಮಾಜಿಕ ಕಥೆಗಳಿಂದ ಪ್ರತ್ಯೇಕಿಸಲೂ ಸಾಧ್ಯವಿದೆ. ಮಾಯದ ಮನೆ ವೈರಾಗ್ಯದ ಮಹಿಮೆ ಕಥೆಗಳು ವಿಡಂಬನಾತ್ಮಕ ಕಥೆಗಳೆಂಬ ಹೆಸರಿಗೂ ಪಾತ್ರವಾಗುತ್ತವೆ. ದುಃಖ ಮಾನವ ಕೋಟಿಗೆ ಮಾತ್ರವೇ ಸೀಮಿತವಾದದ್ದಲ್ಲ, ಅದರ ತೀಕ್ಷ್ಣತೆಯನ್ನು ಪ್ರಾಣಿ ಪ್ರಪಂಚವೂ ಅನುಭವಿಸುತ್ತದೆಂಬ, ಅಷ್ಟೇ ಅಲ್ಲ, ಪ್ರಾಣಿಗಳ ದುಃಖ ಮಾನವ ಜೀವನದ ಮೇಲೂ ಪರಿಣಾಮ ಬೀರುತ್ತದೆಂಬ ದಾರ್ಶನಿಕ ಸತ್ಯ ‘ಶ್ರೀಮನ್ಮೂಕವಾಗಿತ್ತು’ ಕಥೆಯಲ್ಲಿ ಪ್ರತಿಫಲಿತವಾಗಿದೆ.

ಪ್ರಯಾಗ ಕ್ಷೇತ್ರದಲ್ಲಿ ನಡೆಯುವ ‘ಸನ್ಯಾಸಿ’ ಕಥೆ ಸಂಭಾಷಣೆಯ ತಂತ್ರದ ಮೂಲಕ ಸುರುಳಿ ಬಿಚ್ಚುತ್ತದೆ. ಸಂಭಾಷಣೆಯೇ ಪಾತ್ರಗಳ ಸ್ವರೂಪ ಸ್ವಭಾವಗಳಿಗೆ ಕನ್ನಡಿ ಹಿಡಿ ಯುತ್ತದೆ. ‘ಕ್ರಿಸ್ತನಲ್ಲ, ಪಾದ್ರಿಯ ಮಗಳು’, ‘ಆದರ್ಶ ಸಾಧನೆ’ ‘ನನ್ನ ದೇವರು’ ಮತ್ತು ‘ಔದಾರ್ಯ’ ಕಥೆಗಳ ಆತ್ಮಕಥಾ ವಿಧಾನ ವಾಚಕರ ಮತ್ತು ಪಾತ್ರಗಳ ನಡುವೆ ಆತ್ಮೀಯತಾ ಮನೋಭಾವವನ್ನು ಮೂಡಿಸುತ್ತದೆ. ಕತೆಗಾರನೇ ಪ್ರತ್ಯಕ್ಷ ದರ್ಶಿಯಾಗಿರುವಾಗ ಕತೆಗಳ ಘಟನೆಗಳ ಬಗ್ಗೆಯೂ ಓದುಗರಲ್ಲಿ ವಿಶ್ವಾಸ ಕುದುರುವಂತಾಗುತ್ತದೆ. ಗಂಟು ಅಥವಾ ಗುಪ್ತಧನ ಮತ್ತು ಹೋಳಿಗೆ ಪ್ರತಿಜ್ಞೆ ಕಥೆಗಳು ಆತ್ಮಕಥಾ ವಿಧಾನದಲ್ಲಿ ಪ್ರಾರಂಭವಾಗಿ, ಪ್ರಥಮ ಪುರುಷದ ಕಥನ ವಿಧಾನದಲ್ಲಿ ಸಾಗುತ್ತವೆ. ಉಳಿದ ಕತೆಗಳಲ್ಲೆಲ್ಲ ಕಾಣುವ ಏಕಮುಖತೆ, ಕುತೂಹಲ ಚೋದನೆ, ಪರಿಣಾಮ ರಮಣೀಯತೆ, ವರ್ಣನೆಗಳ ಔಚಿತ್ಯ ಹಾಗೂ ಪಾತ್ರಗಳ ಮಿತಸಂಯೋಜನೆ ಉತ್ತಮ ಕಲಾವಂತಿಕೆಯ ಸಲ್ಲಕ್ಷಣಗಳಾಗಿವೆ. ‘ಧನ್ವಂತರಿಯ ಚಿಕಿತ್ಸೆ’ಯಲ್ಲಿ ರೈತನ ಗೋಳನ್ನು ಪರಿಣಾಮಕಾರಿಯಾಗಿ ನಿವಾರಿಸಲು ಪ್ರತಿಮಾ ವಿಧಾನವನ್ನಾಶ್ರಯಿಸಲಾಗುತ್ತದೆ. ಕೇವಲ ಎರಡೇ ಎರಡು ಪಾತ್ರಗಳಿಂದ ಘಟಿತವಾದ, ಪ್ರತಿಬಂಧಕ ಪರಿಹಾರಗಳ ಸಮಸ್ಯೆಯಿಲ್ಲದ, ಒಂದೇ ಒಂದು ಘಟನೆ ಆಧಾರವಾಗಿರುವ ನೇರಸರಳ ವಸ್ತುವುಳ್ಳ ಕಥೆ ‘ಸಾಲದ ಮಗು’, ಈ ಕತೆಯ ಜೀವಾಳವಿರುವುದು ಅದರ ಕಲಾವಂತಿಕೆಯಲ್ಲಲ್ಲ, ಗೌಡರ ಕ್ರೌರ್ಯವನ್ನೂ ಜೀತದಾಳಿನ ಸಂಕಷ್ಟವನ್ನೂ ಚಿತ್ರಿಸುವ ಹೃದಯ ವಿದ್ರಾವಕವಾದ ಸನ್ನಿವೇಶದಲ್ಲಿ. ಅಂತೆಯೇ ‘ಈಶ್ವರನೂ ನಕ್ಕಿರಬೇಕು’ ಮತ್ತು ‘ಹೋಳಿಗೆ ಪ್ರತಿಜ್ಞೆ’ಗಳ ಸ್ವಾರಸ್ಯವಿರುವುದು ಅಲ್ಲಿ ಬರುವ ಲಘು ಹಾಸ್ಯದಲ್ಲಿಯೇ ಹೊರತು, ಕಲಾತಂತ್ರ ಅಥವಾ ಸಾಮಾಜಿಕ ದರ್ಶನದಲ್ಲಲ್ಲ, ‘ಯಾರೂ ಅರಿಯದ ವೀರ’ ದುರಂತದಲ್ಲಿ ಪರ್ಯವಸಾನವಾಗಿದ್ದರೆ ಅದರ ಪರಿಣಾಮ ಹೆಚ್ಚು ಸ್ವಾರಸ್ಯವಾಗಿರುತ್ತಿತ್ತೆಂದು ತೋರುತ್ತದೆ. ‘ಯಾರೂ ಅರಿಯದ ವೀರ’ ‘ಮಾಯದ ಮನೆ’ ‘ಶ್ರೀಮನ್ಮೂಕವಾಗಿತ್ತು’, ‘ಸಾಲದ ಮಗು’ ಮತ್ತು ‘ಔದಾರ್ಯ’ ಕತೆಗಳಲ್ಲಿ ಬರುವ ಘಟನೆಗಳು ಒಂದೇ ರಾತ್ರಿಯಲ್ಲಿ ನಡೆದು ಮುಗಿದು ಹೋಗುತ್ತವೆ. ‘ಧನ್ವಂತರಿಯ ಚಿಕಿತ್ಸೆ’ಯಲ್ಲಿ ಕಥಾನಾಯಕ ಒಬ್ಬ ವ್ಯಕ್ತಿಯಲ್ಲ, ಒಂದು ಸಮಾಜವನ್ನು ಪ್ರತಿನಿಧಿಸುವ ರೈತ.

ಕಂಡು, ಕೇಳಿದ ಘಟನೆಗಳೇ ಕತೆಗಳಿಗೆ ಆಧಾರವಷ್ಟೆ. ಪಾತ್ರಗಳು ಸಹ ಜೀವನದಿಂದ ಮೂಡಿದುವೇ ಆಗಿರುತ್ತವೆ. ಆದರೆ ಅವುಗಳನ್ನು ಬಳಸಿಕೊಳ್ಳುವ ಅಥವಾ ರೂಪಿಸುವ ರೀತಿ ವಿಧಾನಗಳು ಪ್ರತಿಭಾ ಮೂಲವಾದ ಸೃಷ್ಟಿಕಾರ್ಯಕ್ಕೆ ಸಂಬಂಧಿಸಿದುವು. ‘ಅರಾಣೆ ಮೂರುಕಾಸು’ ಕಥೆಗೆ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ. ಕೆ.ಬಿ. ಮಾಧವ ವಿವರಿಸಿದ ವೃತ್ತಾಂತವೇ ಆಧಾರ. ಕಥೆಗಾರರು ಆಶ್ರಮವಾಸಿಯಾಗಿದ್ದಾಗ ಪ್ರಿಯನಾಥ್ ಮಹಾರಾಜರು ಬಂಗಾಳದಲ್ಲಿ ನಡೆದದ್ದೆಂದು ಹೇಳಿದ ಒಂದು ಘಟನೆಯ ಸುತ್ತ ‘ಮಾಯದ ಮನೆ’ ಬೆಳೆದಿದೆ. ಆಗುಂಬೆ ರಾಮರಾಯರ ಮನೆಯಲ್ಲಿ ನಡೆಯಿತೆಂದು ಹೇಳಲಾದ ಸಂಗತಿಯೇ ‘ದೆವ್ವದ ಕಾಟ’ವಾಗಿ ಪರಿಣಮಿಸಿದೆ. ‘ಶ್ರೀಮನ್ಮೂಕವಾಗಿತ್ತು’ ಕತೆಗೂ ನಡೆದ ಘಟನೆಗಳೇ ಆಧಾರ.

ಸಾಮಾಜಿಕ ದರ್ಶನವೇ ಕುವೆಂಪು ಅವರ ಅನೇಕ ಕಥೆಗಳ ಅಣಿ ಗುರಿ. ಬಲಾತ್ಕಾರವಾಗಿ ಮದುವೆನಡೆದದ್ದಿರಬಹುದಾದರೂ ಸಾಂಸಾರಿಕ ಹೊಣೆಗಾರಿಕೆಯನ್ನು ಪೂರೈಸಬೇಕಾದ್ದು ಪತಿಯ ಕರ್ತವ್ಯವೆಂಬುದು ‘ಸನ್ಯಾಸಿ’ ಕತೆಯಲ್ಲಿ ಅಭಿವ್ಯಕ್ತಗೊಂಡಿರುವ ತತ್ತ್ವ. ವಕೀಲನ್ನು ಹಗೆಗೊಂಡದ್ದಾದರೆ ಮನೆಯೇ ಮುಳುಗುತ್ತದೆಂಬುದಕ್ಕೆ ‘ಆರಾಣೆ ಮೂರು ಕಾಸು’ ಕತೆ ಯಲ್ಲಿಯ ನವಾಬ್ ಸಿಂಗನ ಜೀವನವೇ ನಿದರ್ಶನ. ‘ಯಾರೂ ಅರಿಯದ ವೀರ’ ಲಿಂಗ ಕಳ್ಳು ಕುಡಿದ ಪರಿಣಾಮವಾಗಿ ಜೈಲು ಸೇರಬೇಕಾಗುತ್ತದೆ. ವಕೀಲರಂತೆ ವೈದ್ಯರೂ ಶ್ರೀಮಂತ ದರಿದ್ರರೆನ್ನದೆ ಎಲ್ಲರನ್ನೂ ಏಕ ರೀತಿಯಾಗಿ ನಿರ್ದಯದಿಂದ ಸುಲಿಯುವ, ಕಟುಕರೆನ್ನುವ ಕಟು ಸತ್ಯ ‘ಮಾಯದ ಮನೆ’ಯಲ್ಲಿ ಪ್ರತಿ ಪಾದನೆಗೊಂಡಿದೆ. ನಂಬಿಸಿ ಮೋಸ ಮಾಡುವ ಸೇವಕನ ಕೃತಘ್ನತೆ ಹಾಗೂ ದೆವ್ವದ ಅಸ್ತಿತ್ವದ ಬಗೆಗಿನ ಮೂಢನಂಬಿಕೆ ‘ದೆವ್ವದ ಕಾಟ’ದಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ. ಬಡತನದ ಸಂಕಟ ಮತ್ತು ಸಿರಿತನದ ಸೊಕ್ಕು ‘ಶ್ರೀಮನ್ಮೂಕ ವಾಗಿತ್ತು’ ಮತ್ತು ‘ಸಾಲದ ಮನೆ’ಗಳಲ್ಲಿ ಓದುಗರ ಕರುಳಿರಿಯುವಂತೆ ಪಡಿಮೂಡಿವೆ. ತಾರುಣ್ಯದಲ್ಲಿಯೇ ಗಂಡನನ್ನು ಕಳೆದುಕೊಂಡ ಹೆಂಡತಿಯ ಭವಿಷ್ಯದ ಪ್ರಶ್ನೆಯನ್ನು ‘ನನ್ನ ದೇವರು’ ಕಥೆಯಲ್ಲಿ ಎತ್ತಲಾಗಿದೆ. ಸಮಾಜದಲ್ಲಿ ಬೇರು ಬಿಟ್ಟಿರುವ ಮೂಢ ನಂಬಿಕೆಯ ಪ್ರಸ್ತಾವನ್ನೆ ‘ಗಂಟು ಅಥವಾ ಗುಪ್ತಧನ’ದಲ್ಲಿಯೂ ಬರುತ್ತದೆ. ರಾಷ್ಟ್ರದ ಉನ್ನತಿ ಅವನತಿಗಳಿಗೆ ರೈತನೇ ಬೆನ್ನೆಲುಬಾದರೂ, ಅವನ ಎಲುಬನ್ನೇ ನಿರಿನಿಟಿಲುಗೊಳಿಸುವ ಅಧಿಕಾರ ಷಾಹಿಯಿಂದಾಗಿ ರೈತನ ಸಂಕಷ್ಟ ಅವರ್ಣನೀಯ ಎಂಬ ಕಠೋರವಾಸ್ತವತೆ ‘ಧನ್ವಂತರಿಯ ಚಿಕಿತ್ಸೆ’ಯಲ್ಲಿ ಪರಿಣಾಮಕಾರಿಯಾಗಿ ಚಿತ್ರಣಗೊಂಡಿದೆ. ರಾಯಚರಣನಂಥ ವಂಚನೆಯೇ ಮೂರ್ತಿವೆತ್ತಂತಿರುವ ಬೈರಾಗಿಗಳಿಂದಾಗಿ ಸಾಮಾಜಿಕ ನೀತಿ ತಲೆಕೆಳಕಾಗಿ, ಸಮಾಜ ಸಂಕ್ಷೋಭೆಗೊಳಗಾಗುತ್ತದೆನ್ನುವುದು ‘ವೈರಾಗ್ಯದ ಮಹಿಮೆ’ಯಿಂದ ಸಿದ್ಧಗೊಳ್ಳುವ ಸತ್ಯ.

ಕುವೆಂಪು ಅವರ ಹಲವು ಕತೆಗಳ ವೈಶಿಷ್ಟ್ಯವೆಂದರೆ ವಿಡಂಬನೆ; ಅದೇ ಅವುಗಳ ಜೀವಸತ್ವ ವೆಂದರೂ ಸಲ್ಲುತ್ತದೆ. ವಿದ್ಯಾರ್ಥಿದಶೆಯ ಆದರ್ಶ ಪಾದ್ರಿಯೊಬ್ಬನ ಮಗಳ ಮುಂದೆ ಹೇಗೆ ನುಚ್ಚುನೂರಾಗುತ್ತದೆನ್ನುವುದು ‘ಕ್ರಿಸ್ತನಲ್ಲ, ಪಾದ್ರಿಯ ಮಗಳು’ ಕಥೆಯ ಸಾರಾಂಶ. ಕ್ರೈಸ್ತ ಪಾದ್ರಿಗಳನ್ನೂ ಕ್ರಿಸ್ತಮತ ಪ್ರಚಾರಕರನ್ನೂ ನಿಂದಿಸಿ, ಕ್ರೈಸ್ತರಾದ ಹಿಂದುಗಳನ್ನು ಶುದ್ದಿ ಮಾಡಿ ಹಿಂದಕ್ಕೆ ತೆಗೆದುಕೊಳ್ಳಬೇಕೆಂದೂ ಕ್ರೈಸ್ತ ಪಾದ್ರಿಗಳ ಹಾವಳಿಯನ್ನು ನಿಲ್ಲಿಸಬೇಕೆಂದೂ ಪ್ರಚಾರ ಮಾಡುತ್ತಿದ್ದ ವ್ಯಕ್ತಿ ಕ್ರೈಸ್ತ ಪಾದ್ರಿಗಳ ಬೋಧನೆಗಿಂತ ಮಿಗಿಲಾಗಿ ಪಾದ್ರಿಯ ಮಗಳ ರೂಪಲಾವಣ್ಯಕ್ಕೆ ಮರುಳಾಗಿ ಮತಾಂತರ ಹೊಂದುತ್ತಾನೆ. ‘ವೇದಾಂತ ಕೇಸರಿಯ ಮುಂದೆ ಕ್ರಿಸ್ತನ ಕೇಕೆಯಂತೆ!’ ಎಂದು ಸಾರುತ್ತಿದ್ದವನೇ ‘ದೇವರು ಕೈಬಿಟ್ಟ ಮೇಲೆ ಸೈತಾನನೇ ಗತಿ’ ಎಂದು ಕ್ರೈಸ್ತನಾಗುತ್ತಾನೆ. ಇಲ್ಲಿಯ ಕ್ರಿಸ್ತಪಾದ್ರಿಗಳ ವಿಡಂಬನೆಯಲ್ಲಿ ವಾಸ್ತವ ಸತ್ಯವಿದೆ. ‘ಅಕ್ಷರ ವಿದ್ಯೆಗಿಂತಲೂ ಮರ್ದನ ವಿದ್ಯೆಯಲ್ಲಿ’ ಗುಂಡಪ್ಪ ಮೇಷ್ಟರು ಪ್ರವೀಣರಾಗಿದ್ದರೆಂದೂ, ಅವರು ಬ್ರಾಹ್ಮಣರಾದರೂ ಕೋಪಿಷ್ಠರೆಂದೂ ಜಾತಿವಾದಿ ಯೆಂದೂ, ಹಿಂದಿನ ಕಾಲದ ಪ್ರಾಥಮಿಕ ಶಾಲಾ ಉಪಾಧ್ಯಾಯರನ್ನೂ ಮಠಗಳಲ್ಲಿ ತಿಂದು ತೇಗುವ ಜಡದೇಹಿಗಳನ್ನೂ ‘ಹೋಳಿಗೆ ಪ್ರತಿಜ್ಞೆ’ಯಲ್ಲಿ ವಿಡಂಬಿಸಲಾಗಿದೆ. ವೈದ್ಯರ ವಿಡಂಬನೆಯಂತು ‘ಮಾಯದ ಮನೆ’ಯಲ್ಲಿ ಮಾರ್ಮಿಕವಾಗಿ, ಅಂತೆಯೇ ಭೀಕರವಾಗಿ ನಡೆದಿದೆ. ‘ದೆವ್ವದ ಕಾಟ’ದಲ್ಲಿ ಮೂಢನಂಬಿಕೆಗಳ ವಿಡಂಬನೆಯ ಜತೆಗೆ, ಜೋಯಿಸರ ಕಾಟದ ಅಹಸ್ಯಕೇಕೆಯೂ ಕೇಳಿಸುತ್ತದೆ. ಮಂಗನ ಹಳ್ಳಿಯ ಸಿಂಗಾ ಜೋಯಿಸರು ತಾವು ಮಂತ್ರ ಬಲದಿಂದ ಕಲ್ಲೆಸೆಯುವ ಕಳ್ಳರನ್ನು ನಿಂತಲ್ಲಿಂದ ಅಲುಗಾಡದಂತೆ ಮಾಡಬಲ್ಲೆನೆಂದು ನುಡಿದು, ಕಾಡಿನಿಂದ ಕಾಡಿಗೆ ಜನರನ್ನು ತೊಳಲಿಸಿ ಬಳಲಿಸಿದರೂ ಕಳ್ಳ ಪತ್ತೆಯಾಗುವುದಿಲ್ಲ. ಮಂತ್ರ ಬಲದಿಂದ ಕಳ್ಳ ನಿಜವಾಗಿಯೂ ಬಂದಿಯಾಗಿದ್ದಾನೆ. ಹುಡುಕುವವರು ಸರಿಯಾಗಿ ಹುಡುಕಲಿಲ್ಲ ಎಂದು ಅವರು ಪಾರಾಗುತ್ತಾರೆ. ಮೂಢನಂಬಿಕೆಯಲ್ಲಿ ವಿಶ್ವಾಸವಿರುವ ಹಿಂದೂ ಪೋಲೀಸರಿಗೆ ಸಿಗದ ಕಳ್ಳ ಮುಸಲ್ಮಾನ ಪೋಲೀಸರಿಗೆ ಸಿಕ್ಕಿಕೊಳ್ಳುತ್ತಾನೆ. ಹಿಂದೂ ಸಮಾಜ ವನ್ನು ದುಸ್ಥಿತಿಗೆ ತಂದ ಸಾಮಾಜಿಕ ದೋಷ ದೌರ್ಬಲ್ಯಗಳಿಗೆ ಈ ಕತೆ ಕನ್ನಡಿ ಹಿಡಿಯುತ್ತದೆ. ಮನೆಯ ಜನಕ್ಕೆ ರೋಗ ಬಂದಾಗ, ದನಕರುಗಳು ಮಾಯವಾದಾಗ ಜೋಯಿಸರ ನಿಮಿತ್ತವೇ ಪರಮ ಪ್ರಮಾಣವೆಂಬ ಅಣಕ ‘ಶ್ರೀಮನ್ಮೂಕವಾಗಿತ್ತು’ ಕತೆಯಲ್ಲಿ ಅಭಿವ್ಯಕ್ತಗೊಂಡಿದೆ. ಕೀರಣಕೇರಿ ಶಂಕರ ಶಾಸ್ತ್ರಿಗಳು ನಿಮಿತ್ತ ಹೇಳುವ ವೈಖರಿ. ಅದರ ಸುಲಿಗೆಯ ವಿಧಾನ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ವರ್ಣಿತವಾಗಿವೆ. ವಿಧವೆ ತರುಣಿಯಾದರೂ ಶ್ಮಶಾನದಲ್ಲಿ ಅವಳ ಬಳೆ ಒಡೆಯುವ, ಆಭರಣಗಳನ್ನೂ ಮಂಗಳ ಸೂತ್ರವನ್ನೂ ಬಿಚ್ಚುವ ಹೃದಯ ವಿದ್ರಾವಕವಾದ ಸನ್ನಿವೇಶ ‘ನನ್ನ ದೇವರು’ ಕಥೆಯಲ್ಲಿ ವಿಶದಗೊಂಡಿದೆ. ಶೂದ್ರರು ವೇದೋಪನಿಷತ್ತು ಗೀತೆಗಳನ್ನೋದುವುದು ಪಾಪಕರವೆಂಬ ಸಂಗತಿಯೂ ಅದೇ ಕಥೆಯಲ್ಲಿ ನಿರೂಪಣೆಗೊಂಡಿದೆ. ಬಾಯಿಯಲ್ಲಿ ಆದರ್ಶ ಸೂತ್ರವನ್ನು ಜಪಿಸುತ್ತ, ಪರೀಕ್ಷೆಯೊದಗಿದಾಗ ಅದಕ್ಕೆ ತಿಲತರ್ಪಣವೆರೆಯುವ ಚಪಲ ಚಿತ್ತದ ತರುಣರ ಸ್ವಭಾವ ‘ಆದರ್ಶ ಸಾಧನೆ’ಯಲ್ಲಿ ಹಾಸ್ಯಾಸ್ಪದವಾಗಿ ವಿವರಣೆಗೊಂಡಿದೆ. ಮಂತ್ರವಾದಿಗಳು ಬೈರಾಗಿಗಳು ಹಾಗೂ ಜೋಯಿಸರು ಸಮಾಜದ ಹೆಗಲೇರಿರುವ ಭೇತಾಳಗಳೆಂಬ ಕಟುಸತ್ಯ ‘ಗಂಟು ಅಥವಾ ಗುಪ್ತಧನ’ದಲ್ಲಿ ವಿಡಂಬನಾತ್ಮಕವಾಗಿ ಉಲ್ಲೇಖಗೊಂಡಿದೆ. ಟಿಪ್ಪಣಿಗಳು ಲೇಖನಗಳಿಗೆ ಗಡ್ಡದ ಕೂದಲು ಗಳಿದ್ದಂತೆ’ ಎಂಬ ಗೇಲಿಯ ಮಾತೂ ಅಲ್ಲೇ ಬರುತ್ತದೆ. ‘ಧನ್ವಂತರಿಯ ಚಿಕಿತ್ಸೆ’ ಕಥೆಯ ವಿಶ್ವಾಮಿತ್ರನ ವರ್ಣನೆಯ ಸ್ವರ್ಗ ವಾಸಿಗಳಲ್ಲಿ ಉನ್ಮತ್ತ ಅಧಿಕಾರಿಗಳ ಹಾಗೂ ರಾಜಕಾರಣಿ ಗಳ ಲೇವಡಿಯಿದೆ. ‘ಏನು ಸ್ವರ್ಗವೊ ಏನೋ? ಪಡಖಾನೆಗಿಂತಲೂ ಕಡೆಯಾಗಿ ಹೋಗಿದೆ! ನರಕದಲ್ಲಿಯಾದರೂ ಯಾತನೆಯ ಗಾಂಭೀರ್ಯವಿರುತ್ತದೆ. ಇಲ್ಲಿಯ ಲಘುತ್ವಕ್ಕೋ ಇತಿಯಿಲ್ಲ ಮಿತಿಯಿಲ್ಲ’ವೆನ್ನುವ ಮಾತು ಇಂದಿನ ಪರಿಸ್ಥಿತಿಗೂ ಹೊಂದಿಕೊಳ್ಳುತ್ತದೆ. ರೈತನ ನರಳು ಕಂದಾಚಾರಗಳಲ್ಲಿ ನಂಬಿಕೆಯಿಲ್ಲದ ವಿಶ್ವಾಮಿತ್ರನಿಗೆ ಕೇಳಿಸಿದರೆ, ವೈಕುಂಠವಾಸಿ ವಸಿಷ್ಠರಿಗೆ ಕೇಳಿಸುವುದಿಲ್ಲ! ಗುಡಿಯಲ್ಲಿ ದೇವರಿಲ್ಲವೆಂಬ ನಂಬುಗೆಯಿಂದ ಪೂಜಾರಿ ಭಕ್ತವೃಂದದಿಂದ ಹಣ ಸುಲಿಯುತ್ತಾನೆ. ದೊರೆಗಳಿಗೆ ತಕ್ಕಂತೆ ಪೂಜಾರಿಗಳು ವರ್ತಿಸುತ್ತಾರೆನ್ನುವ ಪರಶುರಾಮನ ದೂರಿನಲ್ಲಿಯೂ ಮರ್ಮಾ ಘಾತವನ್ನುಂಟುಮಾಡುವ ಚಾಟಿಯೇಟಿದೆ. ಆಧುನಿಕ ನಾಗರಿಕತೆಯ ಹಾಗೂ ಸಮತಾ ಪ್ರಚಾರದ ವೈಫಲ್ಯದ ಅಣಕವಿದೆ. ಸಮಾಜ ದರ್ಶನಕ್ಕೆ ದರ್ಪಣವಾಗಿರುವ ಈ ಸಣ್ಣ ಕತೆಯ ಕಿರಿಮೆಯಲ್ಲಿ ಮಹಾಕಾವ್ಯ ಕಾದಂಬರಿಗಳ ಘನತೆ ಹಾಗೂ ಸತ್ವಗಳಿವೆ. ವಿರಾಗದಲ್ಲಿ ಅನುರಾಗವನ್ನು ಕಾಣುವುದೇ ‘ವೈರಾಗ್ಯದ ಮಹಿಮೆ’. ‘ಧರ್ಮ ಸಾಧನೆಗಳಲ್ಲಿ ವೈಷ್ಣವ ವೈರಾಗ್ಯಕ್ಕಿಂತಲೂ ಸೊಗಸಾದುದು ಮತ್ತೊಂದಿಲ್ಲ. ಪ್ರಪತ್ತಿಯೊಂದಿದ್ದರೆ ಏನೇನು ಮಾಡಿದರೂ ಎಲ್ಲಕ್ಕೂ ಕ್ಷಮೆ’ ಎನ್ನುವ ಮಾತಿನಲ್ಲಿ ವ್ಯಂಗ್ಯ ವಿದೆ. ಆ ಹೇಳಿಕೆಯನ್ನು ಹರಪುರ ಗ್ರಾಮದ ರಾಯಚರಣ ನಿಜಗೊಳಿಸುತ್ತಾನೆ. ವಿಡಂಬನೆಯ ಎಲ್ಲ ಪ್ರಕಾರಗಳು ಈ ಕತೆಗಳಲ್ಲಿ ಹಾಸುಹೊಕ್ಕಾಗಿ ಹರಿದು ಹೃದಯಾಹ್ಲಾದ ಆತ್ಮೋದ್ಧಾರ ಗಳೆರಡನ್ನೂ ಸಾಧಿಸುತ್ತವೆ. ಸಾಮಾಜಿಕ ಪ್ರಜ್ಞೆ ಸಾಂದ್ರವಾಗಿ ನಿವಿಷ್ಟವಾಗಿರುವ ಈ ಕತೆಗಳಲ್ಲಿ ನಡುನುಡವೆ ರೇಷ್ಮೆ ಸೀರೆಯಲ್ಲಿ ಸಾಲುಸಾಲಾಗಿ ಹರಿಯುವ ಕಲಾಬತ್ತಿನ ಎಳೆಗಳಂತೆ ಹಾಗೂ ಅಂಚಿನಂತೆ ತಾತ್ವಿಕ ವಿಚಾರಗಳು ಮಿಂಚುತ್ತವೆ. ಮೂಢನಂಬಿಕೆಗಳ ಖಂಡನೆ, ಕಂದಾಚಾರದ ಸಂಪ್ರದಾಯಗಳ ಅವಹೇಳನ, ಆರ್ಥಿಕ ಅಸಮಾನತೆಯ ನಿಂದನೆ, ಬಾಳಿನ ಏರು ಬೀಳು ಕುಂದುಕೊರತೆಗಳು ಓರೆಕೋರೆಗಳು ಇಲ್ಲಿಯ ಪುಟ ಪುಟಗಳಲ್ಲಿಯೂ ಮಾರ್ದನಿ ಸುತ್ತವೆ. ಸಮಾಜೋನ್ನತಿಯ ಕಾತರತೆಯೇ ಈ ದೋಷ ದೌರ್ಬಲ್ಯಗಳ ಪ್ರಸ್ತಾವನೆಯ ಗುರಿಯೆಂದು ಹೇಳಬಹುದು.

ಕುವೆಂಪು ಅವರ ಹಾಸ್ಯ ಪ್ರವೃತ್ತಿ ವಿಡಂಬನೆ ಇಲ್ಲದೆಡೆಯೂ ಶುದ್ಧ ಸ್ಥಿತಿಯಲ್ಲಿ ಪ್ರಕಟವಾಗುತ್ತದೆ. ‘ಈಶ್ವರನೂ ನಕ್ಕಿರಬೇಕು’ ಮತ್ತು ‘ಹೋಳಿಗೆ ಪ್ರತಿಜ್ಞೆ’ಗಳು ಹಾಸ್ಯ ರಸಾಭಿವ್ಯಕ್ತಿಗೆ ಮೀಸಲಾಗಿರುವಂತಿವೆ. ವಿಡಂಬನಾತ್ಮಕವಾದ ಹಾಸ್ಯದಲ್ಲಿ ಕುಟುಕುವ, ಕೆರಳಿಸುವ, ತಿದ್ದುವ ಗುಣವಿದ್ದರೆ ಶುದ್ಧ ಹಾಸ್ಯದಲ್ಲಿ ಮನೋರಂಜಕವೂ ಅನುಕಂಪ ನಾತ್ಮಕವೂ ಆದ ಗುಣವಿರುತ್ತದೆ.

ನಿಸರ್ಗೋಪಾಸನೆ ಕುವೆಂಪು ಅವರ ಬದುಕಿನ ಅವಿಭಕ್ತಾಂಶವಾದ್ದರಿಂದ ಪ್ರಾಕೃತಿಕ ವರ್ಣನೆಗೆಡೆಯಿರದ ಸೃಜನ ಸಾಹಿತ್ಯವಿಲ್ಲವೆಂದೇ ಹೇಳಬಹುದು. ಕೇವಲ ಮೋಜಿಗಾಗಿ ಅದು ಕಥೆಯ ಶರೀರದೊಳಗೆ ಪ್ರವೇಶಿಸಬಾರದು; ಔಚಿತ್ಯ ಮೀರದಂತೆ, ಉಪಯುಕ್ತತೆಗೆ ಭಂಗ ಬರದಂತೆ ಅದು ಕ್ರಿಯೆಗೆ ಪಾತ್ರ ರಚನೆಗೆ ಸನ್ನಿವೇಶ ನಿರ್ಮಾಣಕ್ಕೆ ದರ್ಶನಾಭಿವ್ಯಕ್ತಿಗೆ ಅನುವಾಗುವಂತೆ ಬಂದದ್ದಾದರೆ ಅದರ ಸ್ವಾರಸ್ಯ ಬಹುಗುಣವಾಗುತ್ತದೆ. ‘ಸನ್ಯಾಸಿ’ ಕಥೆಯ ಪ್ರಾರಂಭದಲ್ಲಿ ಬರುವ ಪ್ರಕೃತಿಯ ಚಿತ್ರಣ ರಮೇಶ ಇಂದಿರೆಯರ ಮುಂದಿನ ಸಂಗಮಕ್ಕೆ, ಸಂಕೇತದಂತಿದೆ. ಮುನ್ಸೂಚನೆಯಂತಿದೆ, ಪ್ರೇಮ ವಾತಾವರಣಕ್ಕೆ ಪರಿಮಳವನ್ನು ಸಿಂಪಡಿಸಿದಂತಿದೆ. ಸೌಂದರ್ಯ ಯಾವ ರೂಪದಲ್ಲಿದ್ದರೂ ಪ್ರೇಮವರ್ಧನ ಮಾತ್ರವಲ್ಲ. ಅದು ಪ್ರೇಮವಾಗಿಯೇ ಪ್ರಕಟವಾಗುತ್ತದಷ್ಟೇ. ‘ಕ್ರಿಸ್ತನಲ್ಲ, ಪಾದ್ರಿಯ ಮಗಳು’ ಕಥೆಯ ಅಂತ್ಯದಲ್ಲಿ ಬರುವ ಅಸ್ತಮಾನ ಸೂರ್ಯನ ಹ್ರಸ್ವ ವರ್ಣನೆ ವಿವಿಧ ಪಾತ್ರಗಳ (ಇಲ್ಲಿ ಕತೆಗಾರನೂ ಒಂದು ಪಾತ್ರವಷ್ಟೆ) ಭೌತಿಕ ಮಾನಸಿಕ ಸ್ಥಿತಿಯನ್ನು ಸಂಕೇತಿಸುವಂತಿದೆ. ‘ಸಾಲದ ಮಗು’, ‘ಯಾರೂ ಅರಿಯದ ವೀರ’, ‘ದೆವ್ವದ ಕಾಟ’, ‘ಶ್ರೀಮನ್ಮೂಕವಾಗಿತ್ತು’, ‘ಔದಾರ್ಯ’ ಮತ್ತು ‘ಗಂಟು ಅಥವಾ ಗುಪ್ತಧನ’ – ಈ ಕಥೆಗಳ ಕಾರ್ಯ ಸ್ಥಾನ ಮಲೆನಾಡೇ ಆದ್ದರಿಂದ, ಪ್ರಕೃತಿ ವ್ಯಾಪಾರ ಕಥಾಕ್ರಿಯೆಯ ಒಂದು ಭಾಗವಾದ್ದರಿಂದ, ಕಥೆಗಳಿಗೆ ಅದೇ ನೆಲಗಟ್ಟಾದ್ದರಿಂದ ಪ್ರಕೃತಿ ವರ್ಣನೆ ಅನಿವಾರ್ಯ. ಅಲ್ಲಿಯ ಘಟನೆಗಳು ಪ್ರಕೃತಿಯ ಒಡಲಿಂದ ಉದ್ಭವವಾದಂತೆ ತೋರುತ್ತವೆ. ಅಷ್ಟೇ ಅಲ್ಲ, ಪ್ರತಿಯೊಂದು ಕಥೆಯಲ್ಲಿಯೂ ಪ್ರಕೃತಿ ವಿಶೇಷ ಪಾತ್ರವಹಿಸುತ್ತದೆಂದರೂ ಸಲ್ಲುತ್ತದೆ.

ಪಾತ್ರಗಳ ಬಾಹುಳ್ಯ ಸಣ್ಣ ಕತೆಗಳಿಗೆ ಭಾರವಾಗುವ, ಕ್ರಿಯೆಗೆ ಹಾಗೂ ವಸ್ತು ರಚನೆಗೆ, ಏಕಮುಖತೆಗೆ, ಅಂತ್ಯ ಪರಿಣಾಮಕ್ಕೆ, ಪ್ರಮುಖ ಪಾತ್ರದ ವಿಕಾಸಕ್ಕೆ ತೊಡಕಾಗುವ ಸಂಭವ ವುಂಟು. ಇಲ್ಲಿಯ ಹದಿನೇಳು ಕತೆಗಳಲ್ಲಿ ತೊಂಬತ್ತಕ್ಕೂ ಮೀರಿ ಪಾತ್ರಗಳು ಸೃಷ್ಟಿಯಾಗಿದ್ದರೂ ಕತೆಗಾರರ ಗಮನವೆಲ್ಲ ಪ್ರಮುಖ ಪಾತ್ರಗಳಲ್ಲಿ ಕೇಂದ್ರೀಕೃತವಾಗಿರುತ್ತದೆ. ಪರಿವಾರ ಪಾತ್ರಗಳು ಮೊಗದೋರಿ, ತಮ್ಮತನವನ್ನು ಪ್ರದರ್ಶಿಸದೆ ಮರೆಯಾಗುತ್ತವೆ. ಆದರ್ಶವನ್ನು ಕೈಬಿಡದ ರಮೇಶ, ಆದರ್ಶ ಚ್ಯುತನಾದ ಯೋಗಿನ್, ಗಳಿಗೆಗೊಮ್ಮೆ ಬಣ್ಣ ಬದಲಾಯಿಸುವ ಖೋಟಾ ಆದರ್ಶವಾದಿ ‘ಆದರ್ಶ ಸಾಧನೆಯ’ ನಾಯಕ, ಸುಳ್ಳು ಹೇಳಿಯಾದರೂ ಮದುವೆಯಾಗಬೇಕೆನ್ನುವ ನಾಗರಾಜ, ಉಪಕಾರ ಮರೆಯದ ನವಾಬ್‌ಸಿಂಗ್, ಜಾತಿವಾದಿ ಕ್ರೂರ ಹಿಂಸಕ ಗುಂಡಪ್ಪ ಮೇಷ್ಟರು, ವೈದ್ಯ ವೃತ್ತಿಗೆ ಅಭಿಶಾಪದಂತಿರುವ ಸುರೇಂದ್ರಬಾಬು, ನಂಬಿದವರಿಗೆ ಎರಡು ಬಗೆಯುವ ಮುತ್ತಣ್ಣ, ಸ್ಥಿತಪ್ರಜ್ಞನಾದ ಭಾವ, ಕ್ರೌರ್ಯವೇ ರೂಪ ತಾಳಿದ ಗೌಡರು, ದ್ವಿತೀಯ ವಿವಾಹದ ದುಷ್ಟ ಸಂಬಂಧದಿಂದ ಜರ್ಝರಿತರಾದ ಡೇವಿಡ್ ಮೇಷ್ಟರು. ಆಶೆ ಬುರುಕ ಮೌಢ್ಯಶರಣ ಮಂಜಣ್ಣ, ವ್ಯವಹಾರಜ್ಞನಲ್ಲದ ಮನೆ ಮೇಷ್ಟರು, ನಿರಂತರ ಶೋಷಣೆಗೊಳಗಾದ ರೈತ, ವಿಷಯ ಲಂಪಟ ಬಹುರೂಪಿ ವಂಚಕ ರಾಯಚರಣ-­ಜೀವನದ ವಿವಿಧ ಮುಖಗಳನ್ನು ಪ್ರತಿನಿಧಿಸುವ ಈ ಜೀವಂತ ಪಾತ್ರಗಳು ಎಂದೆಂದಿಗೂ ವಾಚಕರ ನೆನಪಿನಲ್ಲಿ ನಿಲ್ಲುವಂಥವು. ಸ್ತ್ರೀ ಪಾತ್ರಗಳ ಪೈಕಿ ಪತಿ ತೋರಿದ ಮಾರ್ಗದಿಂದಲೇ ಅವನನ್ನು ಗೆಲ್ಲುವ ಇಂದಿರೆ ಮತ್ತು ‘ನನ್ನ ದೇವರು’ ಕಥೆಯ ಆತ್ಮಕಥನಕಾತಿ ಓದುಗರ ಗೌರವಕ್ಕೆ ಹಾಗೂ ಅನುಕಂಪೆಗೆ  ಭಾಜನರಾಗುವ ವ್ಯಕ್ತಿಗಳು. ಜೀತಗಾರಿಕೆಯ ಅಮಾನುಷ ಕ್ರೌರ್ಯಕ್ಕೆ ತುತ್ತಾದ ಸುಬ್ಬ, ಒಡೆಯನಿಗಾಗಿ ಪ್ರಾಣ ತೆರಲು ಸಿದ್ಧನಾಗಿರುವ ಲಿಂಗ, ಮೂಕ ಪ್ರಾಣಿಗಳ ಸಂಕಟಕ್ಕೆ ಪ್ರತಿಸ್ಪಂದಿಸುವ ಹಳೆ ಪೈಕದ ರಂಗ – ಈ ಮೂವರು ಶ್ರೀ ಸಾಮಾನ್ಯತೆಯ ಪ್ರತಿನಿಧಿಗಳಂತಿದ್ದು, ಸಹೃದಯರ ಕನಿಕರಕ್ಕೆ ಪಾತ್ರರಾಗಬೇಕಾದ ವ್ಯಕ್ತಿಗಳು. ವಿಶ್ವಾಮಿತ್ರ ಪರಶುರಾಮ ಧನ್ವಂತರಿಯರು ಪ್ರಧಾನ ಪಾತ್ರವಹಿಸಿದರೂ ಒಂದು ಸಲವಾದರೂ ಬಾಯಿ ತೆರೆಯದಿದ್ದರೂ ರೈತನೇ ಕೇಂದ್ರಬಿಂದುವಾಗಿ ಕತೆಯನ್ನೆಲ್ಲ ವ್ಯಾಪಿಸಿಕೊಂಡು, ಪರಿಣಾಮಕಾರಿ ಯಾದ ಪ್ರಭಾವ ಬೀರಿರುವ ಮಹಾಮೌನಪಾತ್ರವಾಗಿದ್ದಾನೆ. ರಂಗನಂತೆಯೇ ಪ್ರಾಣಿಗಳ ವೇದನೆಗೆ ಎದೆಮಿಡಿಯುವ ಮಗು ವಾಸುವಿನ ಪಾತ್ರವನ್ನು ಸಹ ಮರೆಯುವಂತಿಲ್ಲ, ಸಮಾಜ ವನ್ನು ಶೋಷಿಸುವ ಪುರೋಹಿತರು, ಪೂಜಾರಿಗಳು ಮತ್ತು ಬೈರಾಗಿಗಳ ವಂಚನೆಯ ನಾಟಕದ ಸ್ಮೃತಿಯಂತು ಓದುಗರ ಮನಸ್ಸಿನಿಂದ ಮಾಸುವಂತಿಲ್ಲ.

ವೈವಿಧ್ಯಮಯ ಶೈಲಿಯಿಂದ ಕನ್ನಡ ಭಾಷೆಯ ಸತ್ವವನ್ನು ವೃದ್ದಿಗೊಳಿಸಿರುವ, ಅದರ ಸರ್ವಾಂಗ ಸೌಂದರ್ಯವನ್ನು ಶ್ರೀಮಂತಗೊಳಿಸಿರುವ ಸಾಹಿತಿಗಳಲ್ಲಿ ಕುವೆಂಪು ಅಗ್ರಗಣ್ಯರು. ವಿಮರ್ಶೆ ಪ್ರಬಂಧ ಭಾವಗೀತೆ ಮಹಾಕಾವ್ಯ ಸಣ್ಣ ಕಥೆ ಮಹಾಕಾದಂಬರಿ ಜೀವನ ಚರಿತ್ರೆ ನಾಟಕ – ಈ ಒಂದೊಂದು ಪ್ರಕಾರವೂ ಬಹುರೂಪದ ಶೈಲಿಯ ನಿರ್ಮಾಣಕ್ಕೆ ನಿಮಿತ್ತವಾಗಿವೆ. ಕ್ಲಿಷ್ಟಪದಗಳ ಭಾರವಿಲ್ಲದೆ, ಸುತ್ತು ಬಳಸಿನ ಸುದೀರ್ಘ ವಾಕ್ಯಗಳ ಗೊಂದಲವಿಲ್ಲದೆ, ಗಗನವಿಹಾರಿಯಾದ ಕಾವ್ಯ ಶೈಲಿಯ ತೊಡಕಿಲ್ಲದೆ, ಪಾತ್ರ ಘಟನೆ ಸನ್ನಿವೇಶ ವರ್ಣನೆ ಹಾಗೂ ಭಾವಾಲೋಚನೆಗಳಿಗೆ ತಕ್ಕಂತೆ ಹೊಂದಿಕೊಳ್ಳುವ ಲಲಿತವೂ ಸುಭಗವೂ ರಯಗಮನ ಶೀಲವೂ ಆದ ಸುಂದರ ಗದ್ಯ ಕಥನ ಶೈಲಿ ಎಲ್ಲ ಕಥೆಗಳಲ್ಲಿಯೂ ರಂಜಿಸುತ್ತದೆ. ಕ್ವಚಿತ್ತಾಗಿ ಬರುವ ‘ಆವಾಙ್ಮನಾತೀತ’ ‘ಸೋಪಪತ್ತಿಕವಾಗಿ’ ‘ಆಸನ್ನ ನಿರ್ವಾಣ’ ‘ಘೂರ್ಣಾಯಮಾನ ವಾಗಿ’ ‘ಅಘಟನ ಘಟನಕಾರಿಯಾದ’ ಪದ ಜಾಲಗಳನ್ನು ತಡೆ ಹಿಡಿಯಬಹುದಾಗಿದ್ದರೂ ದೂರದೂರಕ್ಕೆ ಗೋಚರಿಸುವ ಕವಿ ಸಹಜವಾದ ಕಾವ್ಯ ಶೈಲಿಯಿಂದ ಪಾರಾಗುವುದಂತು ಕಷ್ಟ. ನಾಟಕೀಯವಾದ ಸಂಭಾಷಣೆ ಪಾತ್ರೋಚಿತವಾದ ಮಾತುಗಾರಿಕೆ ಹಾಗೂ ಉಪಮೆಗಳು ಶೈಲಿಗೆ ಮೆರುಗು ಕೊಡುತ್ತವೆ. ಕುವೆಂಪು ಅವರ ಶೈಲಿ ವಿಶಿಷ್ಟವಾಗಿದ್ದು ಅದನ್ನು ಅವರ ವ್ಯಕ್ತಿತ್ವದಿಂದ ಪ್ರತ್ಯೇಕಿಸಲಾಗದೆಂಬುದನ್ನು ಮರೆಯುವಂತಿಲ್ಲ.

(ನಾನಾ ದೃಷ್ಟಿಕೋನಗಳಿಂದ ಕುವೆಂಪು ಕಥೆಗಳ ಅಧ್ಯಯನ ಇನ್ನೂ ನಡೆಯಬೇಕಾಗಿದೆ. ಅವುಗಳ ಸಮಗ್ರ ಅಧ್ಯಯನದ ದಾರಿಯಲ್ಲಿ ಡಾ. ವೇಣುಗೋಪಾಲರಾಯರ ಪ್ರಯತ್ನವೊಂದು ಪ್ರಶಸ್ತವಾದ ಮಜಲಾಗಿದೆ. ಕುವೆಂಪು ಕಥೆಗಳನ್ನು ಸಹೃದಯತೆಯಿಂದ ಅಭ್ಯಸಿಸಿ, ಅವುಗಳ ಬಗ್ಗೆ ತಮಗೆ ಅನಿಸಿದ್ದನ್ನು ಪ್ರಾಮಾಣಿಕವಾಗಿ ಲಿಖಿಸಿದ್ದಾರೆ. ಅಭಿಪ್ರಾಯ ಭೇದಕ್ಕೆ ಅವಕಾಶವಿರಬಹುದಾದರೂ ಅವರ ವ್ಯಾಖ್ಯಾನದಲ್ಲಿ ನಿಷ್ಕೃಷ್ಟತೆಯಿದೆ, ಗಾಂಭೀರ್ಯವಿದೆ, ನಿಚಿತತೆಯಿದೆಯೆಂಬುದಂತು ಸತ್ಯ. ಕುವೆಂಪು ಅವರ ಶ್ರೇಷ್ಠ ಕಥೆಗಳಲ್ಲೊಂದಾದ ‘ಧನ್ವಂತರಿಯ ಚಿಕಿತ್ಸೆ’ಯ ವ್ಯಾಖ್ಯಾನ ಅಸಮರ್ಪಕ ವೆಂದು ತೋರುತ್ತದೆ. ‘ಶ್ರೀ ಕುವೆಂಪು ನವೋದಯ ಸಾಹಿತ್ಯ ಯುಗದ ಶ್ರೇಷ್ಠ ಕತೆಗಾರರಲ್ಲಿ ನಿಸ್ಸಂದೇಹವಾಗಿ ಒಬ್ಬರು. ಆದರೆ ಅವರ ಧೀಮಂತ ಪ್ರತಿಭೆ ಮಹಾಕಾವ್ಯ ಕಾದಂಬರಿಗಳನ್ನು ಸಹಜವಾಗಿಯೇ ಒಲಿದುದರಿಂದ, ಅಲ್ಲಿಯ ಪಾಂಚಜನ್ಯದ ದುಂದುಭಿಯಲ್ಲಿ ಈ ಕೊಳಲಗಾನ ಒಮ್ಮೊಮ್ಮೆ ಕ್ಷೀಣವಾದಂತೆ ತೋರುತ್ತದೆ’ ಎಂಬ ವಿಮರ್ಶಕರ ಮಾತಿನಲ್ಲಿ ಹುರುಳಿದೆ.

ವೇಣುಗೋಪಾಲರಾಯರು ಶ್ರೇಷ್ಠ ವಿದ್ವಾಂಸರು, ಉತ್ತಮ ವಿಮರ್ಶಕರು, ನಿರಾಡಂಬರವೂ ಸಾರ್ಥಕವೂ ಆದ ಶೈಲಿಗೆ ಹೆಸರಾದವರು. ಕುವೆಂಪು ಕತೆಗಳ ವಿಮರ್ಶೆಯಲ್ಲಿ ಅವರ ಶ್ರದ್ಧೆ ಕಲಾವಂತಿಕೆ ಮತ್ತು ಸಂವೇದನಾಶೀಲಗಳ ಅಭಿವ್ಯಕ್ತಿಯನ್ನು ಸುಸ್ಪಷ್ಟವಾಗಿ ಗುರುತಿಸಬಹುದು.)