ಚಿತ್ಕೋಶದ ಅಂತರಾಳದಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಜಾಗ್ರತಗೊಳಿಸ ಬೇಕಾದರೆ ದೀರ್ಘಕಾಲದ ಶ್ರಮಸಾಧ್ಯವಾದ ಸಾಧನೆ ಅನಿವಾರ್ಯ. ನಿಸರ್ಗದಲ್ಲಾಗಲಿ, ಜೀವನದಲ್ಲಾಗಲಿ ನಡೆಯುವ ಪ್ರತಿಯೊಂದು ಘಟನೆಯ ಹಿಂದೆ ಬಹುಕಾಲದ ತಪೋರೂಪದ ಸಿದ್ಧತೆಯ ಸಾಹಸ ಪ್ರಯತ್ನವಿದೆಯೆಂಬುದನ್ನು ಮರೆಯುವಂತಿಲ್ಲ. ಯಾವ ಕ್ಷೇತ್ರದಲ್ಲಿಯೇ ಆಗಲಿ, ಸಾಧಾರಣವೊ ಅಸಾಧಾರಣವೊ ಆದ ಸಿದ್ದಿಯನ್ನು ಪಡೆಯುವ ಮುನ್ನ ಅವಿರತವಾದ ಸಾಧನೆ ಪ್ರಯತ್ನ ಪ್ರಯೋಗಗಳೂ ನಾನಾ ವಿಧದ ಪ್ರೇರಣೆ ಸ್ಫೂರ್ತಿ ಪ್ರಚೋದನೆಗಳೂ ಅತ್ಯಗತ್ಯ. ಬೀಜದಲ್ಲಿ ವ್ಯಕ್ಷವಡಗಿದೆ, ನಿಜ. ಅದು ಮೊಳಕೆಯಾಗಿ, ಸಸಿಯಾಗಿ, ಮರವಾಗಿ, ಹೂವಾಗಿ, ಹೀಚಾಗಿ, ಕಾಯಾಗಿ, ಹಣ್ಣಾಗಿ, ಮತ್ತೆ ಬೀಜವಾಗುವುದೊಂದು ಅದ್ಭುತ ಪವಾಡ. ಆ ಪವಾಡ ಸಿದ್ದಿಸುವ ಮುನ್ನ ಅದೆಷ್ಟು ನೈಸರ್ಗಿಕ ವ್ಯಾಪಾರಗಳು ನಡೆಯುತ್ತವೆ, ಸೂರ್ಯ ಚಂದ್ರ ವಾಯು ಮೃತ್ತಿಕೆ ಜಲ ಮೊದಲಾದ ನಾನಾ ಶಕ್ತಿಗಳ ಸಹಾಯ ಸಹಕಾರಗಳು ಒದಗುತ್ತವೆ, ಅದೆಂಥ ರಾಸಾಯನಿಕ ಕ್ರಿಯೆಗಳು ಜರುಗುತ್ತವೆಂಬುದನ್ನು ಊಹಿಸಿಕೊಂಡಾಗ ಬೆರಗು ಮೂಡುತ್ತದೆ.

ಸಾಹಿತ್ಯ ಸೃಷ್ಟಿ ನಡೆಯುವುದೂ ಹೀಗೆಯೇ. ಪ್ರತಿಭೆ ಹೊರಗಿನಿಂದ ಹಚ್ಚಬಹುದಾದ ಹಣತೆಯಲ್ಲ; ಮಿಂಚು ಹುಳುವಿನ ಒಡಲಲ್ಲಿ ಹುಟ್ಟುವಾಗಲೇ ಪ್ರತಿಷ್ಠಾಪನೆಗೊಂಡಿರುವ ವಿದ್ಯುತ್ತಿನಂತಿದೆ, ಮಾನವನ ಅಂತರಂಗದಲ್ಲಿ ಮಲಗಿರುವ ದಿವ್ಯಜ್ಯೋತಿ. ಬಿದಿರು ಬಿದಿರಿಗೆ ತಿಕ್ಕಿದರೆ ಅವುಗಳೊಳಗೆ ಸುಪ್ತವಾಗಿರುವ ಬೆಂಕಿ ಕಾರುತ್ತದೆ. ಜಡ ಶಿಲೆಗೆ ಚೈತನ್ಯವೊದಗ ಬೇಕಾದರೆ ರಾಮಪಾದ ಸಂಸ್ಪರ್ಶ ಅತ್ಯವಶ್ಯ. ಅಂತೆಯೇ ಅಭ್ಯಾಸ, ಅಧ್ಯಯನ, ಚಿಂತನೆ ಮತ್ತು ಪ್ರತಿಭಾ ಸಂಪರ್ಕಗಳಿಂದ ಕಾವ್ಯಶಕ್ತಿ ಉದ್ಬೋಧವಾಗುತ್ತದೆ; ಕವಿ ತನ್ನ ಆತ್ಮಶಕ್ತಿಯನ್ನರಿಯಲು ಸಾಧ್ಯವಾಗುತ್ತದೆ. ಶ್ರೀರಾಮಾಯಣದರ್ಶನಂ ಮಹಾಕಾವ್ಯ ಕವಿಯ ಚಿತ್ಕೋಶ ದಲ್ಲಿ ರೂಹಿಕ್ಕುವ ಮುನ್ನ ಅವರೆಸಗಿದ ತಪಸ್ಸಿಗೆ, ನಡೆಸಿದ ವ್ಯವಸಾಯ ಪ್ರಯೋಗಗಳಿಗೆ, ಬೇರೆ ಬೇರೆ ಕಡೆಗಳಿಂದ ಪಡೆದ ಸ್ಫೂರ್ತಿ ವಿಶೇಷಗಳಿಗೆ ಅವರ ಚೊಚ್ಚಲು ರಚನೆಗಳಲ್ಲಿ, ಆಂಗ್ಲ ಕವಿತೆಗಳಲ್ಲಿ, ಸಾನೆಟ್ಟುಗಳಲ್ಲಿ, ಸಮುದ್ರಲಂಘನ ಮಹಾದರ್ಶನಾದಿ ಖಂಡಕಾವ್ಯ ಗಳಲ್ಲಿ, ಚಿತ್ರಾಂಗದಾ ಕಾವ್ಯದಲ್ಲಿ, ಅವರ ಪ್ರಗಾಥಗಳಲ್ಲಿ ಸಾಕ್ಷಿ ಮೊರೆಯುತ್ತದೆ. ಹೂ ಎಲೆ ಹಣ್ಣುಗಳ ಸೊಗಸು ಬೇರಿನಲ್ಲಿ ಕಾಣಲಾಗದಿದ್ದರೂ ಆ ಬೇರೇ ಅವುಗಳೆಲ್ಲಕ್ಕೂ ಆಧಾರವಾಗಿರುವಂತೆ, ತ್ರಿಲೋಕ ಸುಂದರವಾದ ಅರಮನೆಯ ತಳಹದಿಯಲ್ಲಿ ಮೊರಡು ಗಲ್ಲುಗಳ ಪೇರಣೆಯಿರುವಂತೆ, ಎಲ್ಲ ಶ್ರೇಷ್ಠ ಸಾಹಿತ್ಯದ ಹಿನ್ನೆಲೆಯಲ್ಲಿ, ಪ್ರಾಯಶಃ ಜಗತ್ತಿನ ಕಣ್ಣಿಗೆ ಬೀಳದ ರೂಕ್ಷರೂಪದ ಅಥವಾ ಪ್ರಾಥಮಿಕ ಸ್ವರೂಪದ ಸಿದ್ಧತೆ ನಡೆದಿರುತ್ತದೆ. ನಾವು ವಿದ್ಯಾರ್ಥಿಗಳಾಗಿದ್ದಾಗ ಕುವೆಂಪು ಅವರೇ ಹೇಳುತ್ತಿದ್ದರು. ‘ನನ್ನ ಪ್ರಕಟಿತ ಸಾಹಿತ್ಯಕ್ಕಿಂತ ಅಪ್ರಕಟಿತ ಸಾಹಿತ್ಯವೇ ಬಹುಪ್ರಮಾಣದಲ್ಲಿದೆ’ ಎಂದು; ‘ಅದರಲ್ಲಿ ಬಹುಭಾಗ ಯಜ್ಞೇಶ್ವರ ನಿಗೆ ಆಹುತಿಯಾಗಿದೆ’ ಎಂದು. ಬರೆದದ್ದೆಲ್ಲ ಸಾಹಿತ್ಯವಾಗುತ್ತದೆಂದು, ಮೌಲಿಕವಾದದ್ದೆಂದು ತಿಳಿಯುವ ದಿಢೀರ್ ಪ್ರಜ್ಞೆಯ ಈ ಕಾಲದಲ್ಲಿ ಕುವೆಂಪು ಅವರ ಸ್ವಯಮವಹೇಳನಕ್ಕೆ ಪಾತ್ರವಾಗಿರುವ ಅವರ ಭೂತಕಾಲದ ಚೊಚ್ಚಲುತನದ ಸಾಹಿತ್ಯಕ್ಕೂ ಮಾನ್ಯತೆಯೊದಗದಿರ ಲಾರದೆಂದು ಭಾವಿಸಬಹುದಾಗಿದೆ; ಎಳೆಯಮಕ್ಕಳ ಆಟಪಾಠ ತೊದಲುನುಡಿ ಅಂಬೆಗಾಲು ತಿಪ್ಪತಿಪ್ಪ ಹೆಜ್ಜೆಗಳಲ್ಲಿಯೂ ಹೃದಯಾಹ್ಲಾದಕಾರಿಯಾದ ಸೌಂದರ್ಯವುಂಟಷ್ಟೆ. ಹೆಪ್ಪು ಗಟ್ಟಿದ ಭಾವಸಂಯಮವಾಗಲಿ, ಪರಿಪಕ್ವಗೊಂಡ ಆಲೋಚನಾ ಸಮುದಾಯವಾಗಲಿ, ಸಂಸ್ಕಾರಗೊಂಡ ಕಲಾ ತಂತ್ರವಾಗಲಿ, ಭಾವ ಭಾಷೆಗಳ ಹಾಳತವಾದ ಹುದುವಾಗಲಿ ಅವರ ಪ್ರಾಥಮಿಕಾವಸ್ಥೆಯ ಸಾಹಿತ್ಯದಲ್ಲಿ ವಿಪುಲವಾಗಿ ದೊರಕದಿರಬಹುದು; ಶ್ರೀರಾಮಾಯಣ ದರ್ಶನಂ ಓದಿದವರಿಗೆ ‘ಮಹಾದರ್ಶನ’ ನಿರಾಶೆಗೆ ಕಾರಣವಾಗಬಹುದು. ಆದರೆ ಮಹಾತಾತ್ತ್ವಿಕನೊಬ್ಬನ ಜನನಕ್ಕೆ ಪಾತ್ರವಾದ ನಿರಕ್ಷರಕುಕ್ಷಿ ಗ್ರಾಮೀಣ ಮುಗ್ಧೆಯನ್ನಾಗಲಿ, ಮಹಾಕವಿಯ ಅವತಾರಕ್ಕೆ ಕಾರಣವಾದ ವ್ಯಾಧನನ್ನಾಗಲಿ, ದೇವತೆಗಳ ಆರಾಧನೆಗೂ ಪಾತ್ರವಾದ ತಾವರೆಹುಟ್ಟಿ ಬೆಳೆದ ಪಂಕವನ್ನಾಗಲಿ ನಿರ್ಲಕ್ಷಿಸಬಾರದಷ್ಟೇ. ಆ ಪ್ರಾಥಮಿಕ ಸಾಹಿತ್ಯದಲ್ಲಿ ಪ್ರತಿಭಾ ವ್ಯಾಪಾರದ ನಿರಂತರತೆಯನ್ನು ನಿರೀಕ್ಷಿಸಲಾಗದಿದ್ದರೂ ಸುಪ್ತಾವಸ್ಥೆ ಯಿಂದ ಜಾಗ್ರದವಸ್ಥೆಯ ಕಡಗೆ ಅಭಿಮುಖವಾಗುತ್ತಿರುವ ಭವಿಷ್ಯತ್ ಜ್ಯೋತಿಯ ಸೆಳಕುಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಕವಿಯ ಕಾವ್ಯ ಜೀವನದ ವಿಕಾಸಕ್ಕೆ ಅವು ತೋರುಬೆರಳಾಗುವುದರಲ್ಲಿ ಸಂದೇಹವಿಲ್ಲ. ಕುವೆಂಪು ಅವರು ಏರಿರುವ ಶಿಖರ ಸ್ಥಾನದಿಂದ ಅವು ನಿಕೃಷ್ಟವೆಂಬಂತೆ ತೋರಿದರೂ, ಭೂಮಿಯ ಮೇಲೆ ನಿಂತಿರುವವರ ದೃಷ್ಟಿಯಲ್ಲಿ ಅವು ಸ್ವೀಕಾರ್ಯವಾಗುತ್ತವೆಂದು ತಿಳಿಯಬಹುದಾಗಿದೆ.

ಈ ಸಂಗ್ರಹದಲ್ಲಿ ಎಂಟು ಕತೆಗಳಿವೆ. ಇವುಗಳಲ್ಲಿ ಮೂರು ಟಾಲ್‌ಸ್ಟಾಯ್ ಕತೆಗಳ ಭಾಷಾಂತರಗಳು. ‘ಅವಶ್ಯವಿದ್ದುದು ಆರಡಿ, ಆಸೆ ಪಟ್ಟದ್ದು ಊರಿಡಿ’ ಎನ್ನುವುದು How much land does a man need?’ ಕತೆಯ ಭಾಷಾಂತರವಾದರೆ, ‘ಧರ್ಮಪುತ್ರ’ ಎನ್ನುವುದು ‘The godson’ ಎಂಬ ಕತೆಯ ತರ್ಜುಮೆಯಾಗಿದೆ. ಜನತೆಯ ಬಾಯಲ್ಲಿ ಚಾಲ್ತಿಯಲ್ಲಿದ್ದ ಕತೆಗಳನ್ನೇ ತಾವು ತಮ್ಮ ಶಿಷ್ಟ ಭಾಷೆಯಲ್ಲಿ ಹೇಳುತ್ತಿರುವುದಾಗಿ ಮೂಲ ಲೇಖಕರು ತಿಳಿಸುತ್ತಾರೆ. ಫ್ರೆಂಚ್ ಕತೆಯೊಂದರ ಆಧಾರದ ಮೇಲೆ ರಚನೆಗೊಂಡಿರುವ ‘The Coffee House of Surat’ ಎಂಬ ಕತೆಯ ಭಾಷಾಂತರ ‘ಸೂರತ್ತಿನ ಛತ್ರ’. ರವೀಂದ್ರನಾಥ ಠಾಕೂರರ ‘ಕಾಬೂಲಿವಾಲ’ ಅದೇ ಹೆಸರಿನಿಂದ ಕನ್ನಡಕ್ಕೆ ಬಂದಿದೆ. ಒಟ್ಟಾರೆ ಇವು ಮೂಲಕತೆಗಳ ನೇರವಾದ ಭಾಷಾಂತರಗಳೆಂದು ಹೇಳಬಹುದಾದರೂ, ಕನ್ನಡದ ಕತೆಗಾರರು ಒಮ್ಮೊಮ್ಮೆ ಭಾವಾನುವಾದದ ಕಡೆಗೆ ವಾಲುವುದುಂಟು. ಉದ್ದಕ್ಕೂ ಅವರು ಮೂಲದ ಹೆಸರುಗಳನ್ನೆ ಉಳಿಸಿಕೊಂಡಿದ್ದಾರೆ. ನಿಜಕ್ಕೂ ಮನುಷ್ಯನಿಗೆಷ್ಟು ಜಮೀನು ಬೇಕೆಂಬುದೇ ‘ಅವಶ್ಯವಿದ್ದುದು ಆರಡಿ, ಆಸೆ ಪಟ್ಟಿದ್ದು ಊರಿಡಿ’ ಎಂಬ ಕತೆಯಲ್ಲಿ ಅಡಕಗೊಂಡಿರುವ ತತ್ವ. ಮೂಲಕತೆಯ ಹೆಸರು ಪ್ರಶ್ನಾರ್ಥಕವಾಗಿದ್ದರೆ, ಅನುವಾದಿತ ಕತೆಯ ಹೆಸರು ಅದಕ್ಕೆ ಉತ್ತರ ರೂಪದಲ್ಲಿರುವಂತಿದೆ. ನಗರ ಜೀವನ ಪ್ರಕ್ಷುಬ್ಧವಾದದ್ದು, ಗ್ರಾಮಜೀವನ ಪ್ರಶಾಂತ ವಾದದ್ದೆಂಬ ಭಾವನೆ ಸರ್ವೇಸಾಮಾನ್ಯವಾದದ್ದು. ತೃಪ್ತಿಯಿಲ್ಲದ ಮನುಷ್ಯ ಎಲ್ಲಿದ್ದರೂ ಒಂದೆ, ಅವನ ಬಾಳಿನಲ್ಲಿ ಶಾಂತಿಯಿರಲಾರದೆಂಬ ಕಟುಸತ್ಯದ ಅಭಿವ್ಯಕ್ತಿಯನ್ನು ಈ ಕತೆಯ ನಾಯಕ ಪಾಹಾಮನ ಜೀವನದಲ್ಲಿ ಕಾಣಬಹುದಾಗಿದೆ. ಅವನಿಗೆ ಎಷ್ಟು ಭೂಮಿಯಿದ್ದರೂ ತೃಪ್ತಿಯಿಲ್ಲ; ಯಾವು ಯಾವುದೋ ನೆಪದ ಮೇಲೆ ವಿಶಾಲವಾದ ಭೂಮಿಯನ್ನು ಹುಡುಕಿಕೊಂಡು ಅವನು ಊರಿಂದೂರಿಗೆ ಹೋಗುತ್ತಾನೆ. ‘ಬೆಳಗಿನಿಂದ ಸಂಜೆಯವರೆಗೆ ನೀನೆಷ್ಟು ಭೂಮಿಯನ್ನು ಬಳಸಿ ಬರುತ್ತೀಯೋ ಅಷ್ಟು ಭೂಮಿ ನಿನ್ನದಾಗುತ್ತದೆ’ ಎಂಬ ಬಾಷ್ಕೀರ ಪ್ರಾಂತದ ಮುಖಂಡನ ಶರತ್ತನ್ನು ಪಾಮಾಹ ಒಪ್ಪಿಕೊಂಡು, ನಡೆದು ನಡೆದು ಸುಸ್ತಾಗಿ, ಗತಪ್ರಾಣನಾಗುತ್ತಾನೆ. ಅವನು ಬಿದ್ದ ಕಡೆ ಅವನ ಸೇವಕ ಆರು ಅಡಿ ಉದ್ದದ ಗುಂಡಿ ತೋಡಿ ಹೂಳುತ್ತಾನೆ. ಅವನು ಬದುಕಿದ್ದಾಗ ಬಯಸಿದ್ದು ಇಡೀ ಊರು; ಸತ್ತಾಗ ಬೇಕಾದ್ದು ಆರೇ ಅಡಿ!

‘ಸೂರತ್ತಿನ ಛತ್ರ’ ಕತೆಯ ಭೂಮಿಕೆ ಇಂಡಿಯಾ ದೇಶದ ಸೂರತ್‌ನಗರ. ಆ ನಗರದ ಛತ್ರದಲ್ಲೊಂದು ದಿನ ಪರ್ಷಿಯಾ, ಆಫ್ರಿಕಾ, ಭಾರತ, ಇಸ್ರೇಲ್, ಇಟಲಿ, ಚೀನಾ, ಈಜಿಪ್ಟ್, ಇಂಗ್ಲೆಂಡ್ ಮೊದಲಾದ ದೇಶಗಳಿಂದ ಬಂದಿದ್ದ ವರ್ತಕರು ಮತ್ತು ಪ್ರಯಾಣಿಕರು ದೇವರ ರೂಪ ಸ್ವರೂಪ ಮಹಿಮೆಗಳ ಬಗೆಗೆ ನಡೆಸಿದ ವಾದವಿವಾದಗಳೇ ಈ ಕತೆಯ ವಸ್ತು, ಪ್ರತಿಯೊಬ್ಬರೂ ತಂತಮ್ಮ ದೇವರೇ ದೊಡ್ಡವನೆಂದು ಹೇಳಿಕೊಳ್ಳುತ್ತಿದ್ದಾಗ, ಪ್ರಪಂಚದ ಎಲ್ಲ ಭಾಗಗಳಿಗೆ ಏಕರೀತಿಯಾಗಿ ಬೆಳಕು ಬೀರುವ ಸೂರ್ಯನಂತೆ ಎಲ್ಲ ಜನಾಂಗಗಳ ದೇವರು ಒಬ್ಬರೇ; ಈ ಪ್ರಪಂಚವೇ ಒಂದು ದೇವಾಲಯವೆಂದು ನಾವಿಕನೊಬ್ಬ ನುಡಿದು, ಸತ್ಯದ ನಿಲುವನ್ನು ತೋರಿಸಿಕೊಟ್ಟು, ದೇವರ ಬಗೆಗಿನ ವಾದವಿವಾದಗಳು ಅನುಚಿತವೆಂದು ಸ್ಪಷ್ಟಪಡಿಸಿದಾಗ ಉಳಿದವರು ತೆಪ್ಪಗಾಗುತ್ತಾರ. ‘Coffee House’ ಎನ್ನುವ ಪದವನ್ನು ‘ಛತ್ರ’ವೆಂದು ಭಾಷಾಂತರಿಸಿರುವುದರ ಔಚಿತ್ಯವನ್ನು ಗಮನಿಸಬಹುದು.

‘ಧರ್ಮಪುತ್ರ’ವೊಂದು ಜಾನಪದ ಸಂಪ್ರದಾಯದ ರಮ್ಯಾದ್ಭುತ ಕತೆ. ತನಗೆ ಎಳವೆಯಲ್ಲಿ ಕ್ರೈಸ್ತ ಸ್ನಾನ ಮಾಡಿಸಿದ ಧರ್ಮಪಿತನನ್ನು ಹುಡುಕಿ ಹುಡುಕಿ, ಕೊನೆಗೆ ಸಿಕ್ಕಿದ ಅವನು ತನ್ನ ಅಭ್ಯುದಯಕ್ಕಾಗಿ ಕೆಲವು ಶರತ್ತುಗಳನ್ನು ವಿಧಿಸಿ, ಅವನ್ನು ಪರಿಪಾಲಿಸಲಾರದೆ, ನಾನಾ ಸಂಕಟಗಳಿಗೊಳಗಾಗಿ, ಕೊನೆಗೆ ಅವನ ಅನುಗ್ರಹದಿಂದಲೇ ಅವುಗಳಿಂದ ಪಾರಾಗಿ ಆನಂದ ಪರವಶನಾದ ಧರ್ಮಸುತನೊಬ್ಬನ ಕತೆಯಿದು. ಶ್ರದ್ಧಾ ಯುಕ್ತವಾದ ಭಕ್ತಿಗೆ ಭಾಗವತ ಶಕ್ತಿ ಒಲಿಯುತ್ತದೆಂಬ, ನಾನಾ ರೂಪಗಳಲ್ಲಿ ಅಭಿವ್ಯಕ್ತವಾಗುವ ಭಗವಂತನ ಸಂದೇಶವನ್ನು ಸರಿಯಾಗಿ ಗ್ರಹಿಸಿಕೊಂಡು ಅದರಂತೆ ನಡೆಯದಿದ್ದರೆ ಮನುಷ್ಯ ತಾನು ನಷ್ಟಗಳನ್ನನುಭವಿಸ ಬೇಕಾಗುತ್ತದೆಂಬ, ಪಾಪಕ್ಕೆ ಪ್ರಾಯಶ್ಚಿತ್ತ ಅನಿವಾರ್ಯವೆಂಬ ತತ್ವಗಳು ಈ ರೂಪಕ ಕತೆಯಲ್ಲಿ ಮೊನೆದೋರುತ್ತವೆ. ಕೊನೆಯ ಈ ಎರಡು ಕತೆಗಳಲ್ಲಿ ಅಂಕಿತನಾಮಗಳ ಗೋಜೇ ಇಲ್ಲವೆಂಬುದನ್ನು ಗಮನಿಸಬಹುದು.

ಕಾಬೂಲಿವಾಲ ಬಹು ಜನಪ್ರಿಯವಾದ, ಅನುಕಂಪೆ ಕರುಣೆಗಳ ಮಡುವಂತಿರುವ ಶ್ರೇಷ್ಠ ಕತೆ. ಐದು ವರ್ಷದ ಗಿರಿಜೆಯೆಂಬ ಹೆಣ್ಣು ಮಗುವಿನ ಮುಗ್ಧತೆಯನ್ನೂ ಅವಳು ಬೆಳೆಯುತ್ತ ಬೆಳೆಯುತ್ತ ಅವಳ ಮನಸ್ಸಿನಲ್ಲುಂಟಾಗುವ ಪರಿವರ್ತನೆಯನ್ನೂ ಅವಳ ಸೂಕ್ಷ್ಮ ಭಾವನೆಗಳನ್ನೂ ಅತ್ಯಂತ ವಾಸ್ತವ ರೀತಿಯಲ್ಲಿ ಪದರ ಪದರವಾಗಿ ಮನೋಜ್ಞವಾಗಿ ವಿವರಿಸುವ ಸುಂದರ ಕತೆ. ಜತೆಗೆ ಅವಳ ಮನೋಧರ್ಮದ ಅಭಿವ್ಯಕ್ತಿಗೆ ಕಾರಣವಾಗಿರುವ ಬೀದಿಯ ವ್ಯಾಪಾರಿ ಕಾಬೂಲಿವಾಲನ ಬಾಳಿನ ಕರುಣಕತೆಯೂ ಆ ಮಗುವಿನ ಕತೆಯೊಡನೆ ಹಾಸುಹೊಕ್ಕಾಗಿ ಹೆಣೆದುಕೊಂಡಿದೆ. ಮಗಳನ್ನು ದೂರದ ತಾಯ್ನಡಿನಲ್ಲಿ ಬಿಟ್ಟು ಜೀವನ  ಯಾಪನೆಗಾಗಿ ಅಲೆದಾಡುತ್ತಿರುವ, ಗಿರಿಜೆಯಲ್ಲಿ ತನ್ನ ಮಗಳನ್ನು ಕಂಡು ತೃಪ್ತಿ ಪಟ್ಟು ಕೊಳ್ಳುವ, ಅವಳ ಮೇಲೆ ತನ್ನ ವಾತ್ಸಲ್ಯವನ್ನೆಲ್ಲ ಸುರಿಯುವ ಆ ಚುಂಗಡಿ ವ್ಯಾಪಾರಿಯ ಅಂತರಂಗದ ನವಿರಾದ ಭಾವ ಭಾವನೆಗಳನ್ನು ಮಾತಿನಲ್ಲಿ ಹಿಡಿದಿಟ್ಟಿರುವ ಕತೆಗಾರರ ಜಾಣ್ಮೆ ಮೆಚ್ಚುವಂಥದು. ಪಠಾಣ ಕಾಬೂಲಿವಾಲನ ತಪ್ತ ಹೃದಯವನ್ನು ಅರ್ಥ ಮಾಡಿಕೊಳ್ಳುವ ಗಿರಿಜೆಯ ತಂದೆ ವಾತ್ಸಲ್ಯದ ಸರಸ್ಸಿನಂತಿರುವ ಕಾಬೂಲಿವಾಲ ತಂದೆಯ ಸ್ಥಾನದಲ್ಲಿರುವುದಲ್ಲದೆ, ಸಹೃದಯ ವಾಚಕರ ಪ್ರತಿನಿಧಿಯೂ ಆಗಿದ್ದಾನೆ. ಕಾಬೂಲಿವಾಲ ಸೆರೆಯಿಂದ ಮುಕ್ತನಾಗಿ, ಮದುವೆಯ ಸಮಯಕ್ಕೆ ಬಂದು ಲಜ್ಜಾನ್ವಿತೆಯಾದ ಗಿರಿಜೆಯನ್ನು ನೋಡುವಾಗಿನ, ವೈಭವಾನ್ವಿತವಾದ ಮದುವೆಯ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರಿಂದ ಉಳಿಸಬಹುದಾಗಿದ್ದ ಹಣವನ್ನು ಕಾಬೂಲಿವಾಲನ ಕೈಗೆ ಕೊಟ್ಟು ಊರಿಗೆ ಹಿಂದಿರುಗಿ  ಮಗಳನ್ನು ನೋಡುವ ಅವಕಾಶವನ್ನು ಅವನಿಗೆ ಗಿರಿಜೆಯ ತಂದೆ ಕಲ್ಪಿಸಿಕೊಟ್ಟು ಪಿತೃವಾತ್ಸಲ್ಯ ವನ್ನು ವ್ಯಕ್ತಪಡಿಸುವಾಗಿನ ಕೊನೆಯ ದೃಶ್ಯಗಳು ಪರಿಣಾಮಕಾರಿಯಾಗಿದ್ದು, ದೇವತೆಗಳಿಗೂ ದರ್ಶನೀಯವಾಗುತ್ತವೆ. ‘ಅವನು ಕೊಲೆಪಾತಕನಾದರೇನು? ಅವನೂ ಮನುಷ್ಯನೇ; ಅವನೂ ನನ್ನಂತೆಯೇ ಒಬ್ಬಾಕೆಯ ತಂದೆ’ ಎಂಬ ಗಿರಿಜೆಯ ತಂದೆಯ ಕರುಣಾರಸದ ಮಡುವಿನಂತಿರುವ ಮಾತುಗಳಲ್ಲಿ ಇಡೀ ಕತೆಯ ಸಾರ ಕೊಳಗೊಂಡಂತಿದೆ.

ಈ ಸಂಗ್ರಹದಲ್ಲಿ ಉಳಿದ ಕತೆಗಳು ಕುವೆಂಪು ಅವರ ಸ್ವಂತ ಸೃಷ್ಟಿಗಳಾಗಿವೆ. ಮಲೆನಾಡಿನ ರಾತ್ರಿಯಲ್ಲಿ ಮಳೆ ಸುರಿಯುತ್ತಿದ್ದಾಗ ಮಲಗುವ ಮುಂಚೆ ಬೇಸರ ಕಳೆಯುವ ಸಲುವಾಗಿ ಮಕ್ಕಳು ಆಳು ಲಿಂಗನ ಸುತ್ತ ಸೇರಿಕೊಂಡು, ಅವನ ಬಾಯಿಂದ ಬಿದ್ದ ಕತೆಗಳನ್ನು ಮೈಯೆಲ್ಲ ಕಿವಿಯಾಗಿ ಕೇಳುವ ಆಸಕ್ತಿ, ಲಿಂಗ ಹೇಳುವ ದೆವ್ವದ ಕತೆಗಳು ಒಬ್ಬೊಬ್ಬರ ಮೇಲೆ ಬೀರುವ ಕುತೂಹಲಕಾರಿ ಪರಿಣಾಮಗಳ ವರ್ಣನೆಯಲ್ಲಿ ವ್ಯಕ್ತವಾಗುವ ತಿಳಿಹಾಸ್ಯ ‘ಅಂದಿನ ರಾತ್ರಿ’ ಕತೆಗೆ ಕಳೆಕಟ್ಟುವ ಸಂಗತಿಗಳಾಗಿವೆ.

ಶೈಶವ ಲೀಲೆಯ ಅಪೂರ್ವ ಸೊಗಸು ವಯಸ್ಸಾಗುತ್ತ ಆಗುತ್ತ, ಪ್ರಾಪಂಚಿಕದಂಧೆ ದರದುಗಳಲ್ಲಿ ತೊಡಗಿಕೊಂಡಂತೆಲ್ಲ ಕಮರಿ ಹೋಗಿ, ಕೇವಲ ಕನಸಾಗುಳಿಯುತ್ತದೆನ್ನುವ ಸಂಗತಿ ‘ಕನಸಿನ ಕನಸು’ ಎಂಬ ಕತೆಯಲ್ಲಿ ಪ್ರತಿಪಾದನೆಗೊಂಡಿದೆ; ವಯಸ್ಸಾದ ವರ ಮತ್ತು ಎಳೆಯರ ನಡುವಣ ಮಾನಸಿಕ ದೂರವನ್ನು ಹಾಗೂ ವ್ಯತ್ಯಾಸಗಳನ್ನು ಕತೆಗಾರರು ಚಂದ್ರ ಮತ್ತು ಕಿಶೋರರ ಕೇವಲ ಕೆಲವು ನಿಮಿಷಗಳ ವರ್ತನೆಯಲ್ಲಿ ಮನಮುಟ್ಟುವಂತೆ ನಿರೂಪಿಸಿದ್ದಾರೆ. ದೊಡ್ಡವರು ಬಾಲಲೀಲೆಗಳನ್ನು ನೋಡಿ ಆನಂದಿಸಬಹುದೇ ಹೊರತು, ಮಕ್ಕಳೊಡನೆ ಮಕ್ಕಳಾಗಿ ಆಟವಾಡುವುದು ಮಾನಸಿಕವಾಗಿ ಮಾತ್ರವಲ್ಲ ದೈಹಿಕವಾಗಿಯೂ ಕಷ್ಟ. ‘ದೊಡ್ಡವನಾದ ಮೇಲೆ ಈ ಆಟಗಳಿಗೆ ಕಾಲ ಸಿಗುವುದೆ? ಕಾಲ ಸಿಕ್ಕಿದರೂ ಮನಸ್ಸೊಡಂಬಡುವುದೆ?…. ಈ ವಿನೋದಗಳ ಸಿಂಹಾಸನವು ನಿನಗೆ ತಿಳಿಯದ ಶತ್ರುಗಳಿಂದ ಅಪಹರಿಸಲ್ಪಡುವುದು. ದೊಡ್ಡವರಾದ ಮೇಲೆ ನೀನು ಗಾಡಿಯಾಟ ಆಡಿದರೆ ಪೋಕರಿ ಎನ್ನುತ್ತಾರೆ. ಜೇಬಿಗೆ ಹೋಳಿಗೆ ಬೇವುಬೆಲ್ಲ ಹಲಸಿನತೊಳೆ – ಇವನ್ನು ಹಾಕಿದರೆ ಕೊಳಕ ಎನ್ನುತ್ತಾರೆ’ ಎನ್ನುವ ಮಾತುಗಳಲ್ಲಿ ವಯೋಧರ್ಮದ ಮರ್ಮವೂ ಕತೆಯ ಗಮ್ಯವೂ ಅಭಿವ್ಯಕ್ತವಾಗುತ್ತವೆ. ಈ ಕತೆ ಮಕ್ಕಳ ಮನಸ್ಸನ್ನು ರಂಜಿಸುತ್ತದಲ್ಲದೆ, ಅವರ ಮನೋ ವ್ಯಾಪಾರವನ್ನು ತಿಳಿಸುವ ಮಾಧ್ಯಮವೂ ಆಗಿದೆ.

ಹಂಗಾಮಿ ನೌಕರಿಯನ್ನು ಕಳೆದುಕೊಂಡು, ಇದ್ದಬದ್ದ ಜಮೀನನ್ನು ಮಾರಿ ತನ್ನನ್ನೋ ದಿಸಿದ ತಂದೆ ತಾಯಿಯ ರಿಕ್ತ ಸ್ಥಿತಿಯನ್ನು ಹಸಿದ ಹೊಟ್ಟೆಗಳನ್ನು ನೆನೆನೆನೆದು ರೋದಿಸಿ, ‘ಅಯ್ಯೋ ಬಿ.ಎ. ಡಿಗ್ರಿಯೆ, ತಂದೆ ತಾಯಿಗಳಿಗೆ ಸುಖ ಕೊಡಬಲ್ಲೆಯಾ’? ಎಂದು ಶಪಿಸುತ್ತ, ಕೊನೆಗೆ ಊರಿಗೆ ಹಿಂದಿರುಗುವಾಗ ದಾರಿಯಲ್ಲಿ ಕಳ್ಳರ ಕೈಗೆ ಸಿಕ್ಕಿ ತೊಳಲಾಡುತ್ತಿದ್ದ ಶ್ರೀಮಂತನೊಬ್ಬನನ್ನು ರಕ್ಷಿಸಿ, ಅವನ ಮಗಳನ್ನು ಮದುವೆಯಾಗಿ, ತನ್ನ ತಂದೆ ತಾಯಿಯರಿಗೆ ಸುಖವನ್ನುಂಟುಮಾಡಿ, ತಾನೂ ಸುಖದ ಮಂಚವೇರಿದ ರಾಮಯ್ಯನ ಬದುಕೇ ‘ಮಾತಾಪಿತೃಭಕ್ತಿ’ ಎಂಬ ಕತೆಯ ವಸ್ತು. ಹೆಸರೇ ಸೂಚಿಸುವಂತೆ ನೀತಿಬೋಧೆಯೇ ಈ ಕತೆಯ ಗುರಿ. ರಾಮಯ್ಯನಿಗೆ ಸರ್ಕಾರಿ ನೌಕರಿ ದೊರೆಯದಿದ್ದರೂ, ಆಕಸ್ಮಿಕವೆನ್ನುವಂತ ಶ್ರೀಮಂತ ಮನೆತನದ ಹೆಣ್ಣು ದೊರಕಿ, ಅವನ ಜೀವನ ಸುಖಮಯವಾದದ್ದು ಅವನ ಪುಣ್ಯ. ನೂತನ ವಸ್ತ್ರಗಳಿದ್ದರೂ ಅವನ ತಂದೆತಾಯಿಯರು ಮಗನ ಮದುವೆಯ ಸಂದರ್ಭ ದಲ್ಲಿ ಅವನು ದುಡಿಮೆ ಮಾಡಿ ಖರೀದಿಸಿಕೊಂಡು ಬಂದಿದ್ದ ಬಟ್ಟೆಗಳನ್ನೇ ಉಟ್ಟುಕೊಂಡಿದ್ದು ಪುತ್ರವಾತ್ಸಲ್ಯಕ್ಕೂ, ಆಕಸ್ಮಾತ್ತಾಗಿ ಕೈಗೆ ಸಿಕ್ಕಿದ ಭಾವೀ ಪತಿಯ ಹರಕು ಕರವಸ್ತ್ರವನ್ನು ಅವನ ಭಾವೀ ಸತಿ ರಕ್ಷಿಸಿಕೊಂಡದ್ದು ಅನುರಾಗಕ್ಕೂ ದ್ಯೋತಕಗಳಾಗಿವೆ. ಜಗತ್ತಿನ ಎಲ್ಲ ದೇವತೆಗಳನ್ನು ಸಾಕ್ಷಿಗಾಗಿ ಕರೆಯುವುದು ಬೇಡ, ಆತ್ಮಸಾಕ್ಷಿಯೊಂದೆ ಸಾಕು ಎಂದು ಮದುವೆ ಮಾಡಿಸುತ್ತಿದ್ದ ಪುರೋಹಿತನನ್ನು ರಾಮಯ್ಯ ಛೀಮಾರಿಸಿದ ಪ್ರಸಂಗದ ನಿರೂಪಣೆಯಿಂದ ಕುವೆಂಪು ಅವರು ಬಹು ಹಿಂದೆಯೇ ಮೌಢ್ಯ ಸಂಪ್ರದಾಯಗಳಿಗೆ ವಿರುದ್ಧವಾಗಿ ಸಡ್ಡು ಹೊಡೆಯುತ್ತಿದ್ದರೆಂಬ ವಿಷಯ ವೇದ್ಯವಾಗುತ್ತದೆ.

‘ತಿಮ್ಮಾ ಬೋಯಿಯ ಕತ್ತೆ’ ಭಾವ ಭಾಷೆಗಳ ಸಾಮರಸ್ಯ ಹಾಗೂ ಕಲಾವಂತಿಕೆಯ ದೃಷ್ಟಿಗಳಿಂದ ಉತ್ತಮವಾದ ಕತೆ. ಹಾಸ್ಯ ವ್ಯಂಗ್ಯ ಕರುಣೆ ಅನುಕಂಪಗಳಿಂದ ರಸಾರ್ದ್ರ ವಾಗಿರುವ ಈ ಕತೆ ಓದುಗರ ಮನಸ್ಸನ್ನು ಸೆರೆಗೊಳ್ಳುವಂತಿದೆ. ತನ್ನ ಮಡದಿ ಮಕ್ಕಳು ತೀರಿಕೊಂಡ ನಂತರ, ತನ್ನ ಹೆಂಡತಿಗೆ ಬಳುವಳಿಯಾಗಿ ಬಂದಿದ್ದ ಕತ್ತೆಯೇ ತಿಮ್ಯಾಬೋಯಿಗೆ ಸರ್ವಸ್ವವಾಗುತ್ತದೆ; ಅದರೊಡನೆ ಅವಿನಾಭಾವ ಸಂಬಂಧ ಬೆಳೆಯುತ್ತದೆ. ಅವನ ಪ್ರೀತಿ ಸ್ನೇಹಗಳಿಗೆ ಅದೇ ಏಕಮಾತ್ರ ಆಲಂಬವಾಗುತ್ತದೆ. ತನ್ನನ್ನು ಅಟ್ಟಿಸಿಕೊಂಡು ಬಂದ ನೆರೆಮನೆಯ ನಾಯಿಯನ್ನದು ಒದ್ದಾಗ, ಅದರ ಎರಡು ಹಲ್ಲು ಕಳಚಿ ಬೀಳುತ್ತವೆ. ಕೊನೆಗೊಂದು ರಾತ್ರಿ ಕಬ್ಬಿನ ಗದ್ದೆಯನ್ನು ಮೇಯಲು ಬರುತ್ತಿದ್ದ ಹಂದಿಗಳಿಗೆಂದು ಕಟ್ಟಿದ್ದ ಕೋವಿ ಸಿಡಿದು, ಕತ್ತೆಗೆ ತಗುಲಿ ಅದು ಮರಣವನ್ನಪ್ಪುತ್ತದೆ. ತಿಮ್ಮಾಬೋಯಿ ಈ ಜಗತ್ತಿನಲ್ಲಿ ಒಂಟಿಯಾಗುತ್ತಾನೆ, ಹೆಜ್ಜೆ ಹೆಜ್ಜೆಗೂ ಕುತೂಹಲ ಹುಟ್ಟಿಸುವ ಈ ಕತೆಯಲ್ಲಿ ಬರುವ ‘ಆ ಬಡ ಪ್ರಾಣಿಗೆ ಜಾತಕರ್ಮ ನಾಮಕರಣಗಳನ್ನು ಮಾಡಿದವರಾರು? ಜೋಯಿಸರಲ್ಲ; ಯೋಗಿಯ ಕಣ್ಣುಗಳಂತೆ ತಳ ತಳ ಹೊಳೆಯುವುವು ಎಂದೆಲ್ಲಾ ಹೇಳುವರು. ರಾತ್ರಿಯಾಯಿ ತೆಂದರೆ ಸರಿ. ಅದರ ಕಣ್ಣುಗಳು ಧ್ರುವತಾರೆಯನ್ನು ಏಳಿಸುವ ಎರಡು ನಕ್ಷತ್ರಗಳಾಗಿದ್ದುವು; ಈ ತಿಮ್ಮಾಬೋಯಿಗೆ ಸದಾ ಸತ್ತ ಕತ್ತೆಯ ಚಿಂತೆ; ದನಗಳು ಅಂಬಾ ಎಂದು ಕೂಗಿದರೂ ಅವನ ಕಿವಿಗೆ ಕತ್ತೆ ಕೂಗಿದ ಹಾಗಾಗಿ ಅಳುತ್ತಾನೆ’ – ಇಂಥ ವಾಕ್ಯಗಳು ಭಾವನಿರ್ಭರತೆಯಿಂದ ಕೂಡಿವೆಯೆಂದು ಹೇಳಬೇಕಾಗಿಲ್ಲ.

ಇಲ್ಲಿಯ ಎಲ್ಲ ಕತೆಗಳು ೧೯೨೬ ಮತ್ತು ೧೯೨೭ನೆಯ ವರ್ಷಗಳಲ್ಲಿ ಭಾಷಾಂತರ ಗೊಂಡಂಥವು; ಅಥವಾ ರಚಿತವಾದಂಥವು. ಭಾವಸಂಪತ್ತಿಯಲ್ಲಿ ಕೊರತೆಯಿರದಿದ್ದರೂ ಭಾಷೆ ಕುವೆಂಪು ಅವರ ವ್ಯಕ್ತಿತ್ವವನ್ನು ಅಭಿವ್ಯಕ್ತಗೊಳಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುವ ದಾರಿಯಲ್ಲಿದೆಯೆಂಬ ಸಂಗತಿ ಈ ಕತೆಗಳನ್ನೋದಿದವರಿಗೆ ಅನಿಸದಿರಲಾರದು. ‘ತಿಮ್ಮಾ ಬೋಯಿಯ ಕತ್ತೆ’ಯಲ್ಲಿ ಅದು ತನ್ನತನವನ್ನು ಕಂಡುಕೊಂಡಿದೆಯೆಂದು ತಿಳಿಯ ಬಹುದಾಗಿದೆ. ಭಾಷೆ ಸರಳವಾಗಿದ್ದರೂ ಹತ್ತೊಂಬತ್ತನೆಯ ಶತಮಾನದ ಪದ ಪ್ರಯೋಗ ಮತ್ತು ವಾಕ್ಯರಚನೆಗಳನ್ನು ಕ್ವಚಿತ್ತಾಗಿಯಾದರೂ ಗಮನಿಸಬಹುದು. ಕರುವು, ಪಾಪವು , ಯತಿಯು, ಧರ್ಮಪುತ್ರನು, ಮನೆಯು, ಆತನು ಎಂಬ ಪದಗಳಲ್ಲಿ ಆಗಿನ ಕಾಲಕ್ಕೆ ಪ್ರಯೋಗದಲ್ಲಿದ್ದು ಇಪ್ಪತ್ತನೆಯ ಶತಮಾನದಲ್ಲಿ ಕಾಣೆಯಾಗಿರುವ ಪ್ರಥಮಾ ವಿಭಕ್ತಿ ಪ್ರತ್ಯಯದ ದುಂದುಗಾರಿಕೆಯನ್ನು ನೋಡಬಹುದು. ಶೈಲಿಯ ದೃಷ್ಟಿಯಿಂದ ‘ಚಳಿಯಲ್ಲಿ ಅಲ್ಪಸೆಕೆಯೇ ತುಂಬ ಸ್ವಾಗತವಾಗಿತ್ತು’ ಎನ್ನುವ ವಾಕ್ಯದಲ್ಲಿ ವ್ಯಾಕರಣಸಮ್ಮತವಾದ ವಿಭಕ್ತಿಪಲ್ಲಟವಿದ್ದು, ಕ್ರಿಯಾವಿಶೇಷಣ ರೂಪದಲ್ಲಿ ಪ್ರಯೋಗಗೊಂಡಿರುವ ಸ್ವಾಗತದ ಸ್ವಾರಸ್ಯವನ್ನು ಗ್ರಹಿಸಬಹುದು. ‘ನನ್ನ ಹೃದಯವನ್ನು ಚುಂಬಿಸುವುವು’ ಎಂಬಲ್ಲಿಯ ಭವಿಷ್ಯತ್ ಕ್ರಿಯಾರ್ಥಕದ ಬಳಕೆ ಈಗ ಕಡಿಮೆ. ‘ಮರೀಚಿಕೆಯಿಂದ ಉಚ್ಚಿಸಲ್ಪಟ್ಟ ಜಲಕಣಗಳು’, ‘ಕಾಬೂಲಿವಾಲನನ್ನು ನೋಡಿದ ಕೂಡಲೆ ನಾನು ಇಕ್ಕಟ್ಟಾದ ಕಣಿವೆಗಳಿಂದ ಸರಿಯಲ್ಪಟ್ಟ ಗಿರಿಶಿಖರಗಳಿಂದಲೂ, ಗಗನವನ್ನೇ ಚುಂಬಿಸುತ್ತಿರುವ ಉನ್ನತ ಶೃಂಗಗಳಿಂದಲೂ ಕೂಡಿದ ಪ್ರದೇಶಕ್ಕೆ ಒಯ್ಯಲ್ಪಡುತ್ತಿದ್ದೆನು’ – ಇಂಥ ಕಡೆಗಳಲ್ಲಿ ಬಳಕೆಯಾಗಿರುವ ಕರ್ಮಣಿ ಪ್ರಯೋಗಗಳು ಈಗಂತೂ ಚಾಲ್ತಿಯಲ್ಲಿಲ್ಲ. ಕುವೆಂಪು ಅವರ ಪ್ರಾರಂಭ ಕಾಲದ ಭಾಷಾ ಸ್ವರೂಪವನ್ನು ತಿಳಿಯಲು ಈ ಕತೆಗಳು ಸಹಾಯಕವಾಗುವುದರಿಂದ, ಭಾಷೆಯನ್ನು ತಿದ್ದದೆ, ಇದ್ದಂತೆಯೇ ಉಳಿಸಿಕೊಂಡಿದೆ. ಕುವೆಂಪು ಅವರ ಈ ಪ್ರಾರಂಭದ ರಚನೆಗಳನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಅವರ ಮುಂದಿನ ರಚನೆಗಳನ್ನು ತೂಗಿ ನೋಡುವಾಗ ಅವರ ಪ್ರತಿಭೆ ವಿಕಾಸಗೊಳ್ಳುತ್ತಿದ್ದಂತೆ, ಅವರ ಕೃಷಿ ಮುಂದುವರಿದಂತೆ ಕನ್ನಡ ಭಾಷೆಯ ಒಡಲಲ್ಲಿ ಹುದುಗಿದ್ದ ಶಕ್ತಿ ಸಾಮರ್ಥ್ಯಗಳು ಹೊರಹೊಮ್ಮಿದ ರೀತಿಯಾಗಲಿ ಅದರ ಸರ್ವಸಾಧ್ಯತೆಗಳನ್ನು ಸೂರೆಗೊಂಡಾಗ ಅದಕ್ಕೊದಗಿದ ವೈವಿಧ್ಯ ಶ್ರೀಮಂತತೆಗಳ ಅಪಾರತೆಯಾಗಲಿ ಬೆರಗುಗೊಳಿಸುವಂಥವೆಂಬುದನ್ನು ಓದುಗರು ಮನಗಾಣಬಹುದಾಗಿದೆ.