ಶ್ರೀ ಕುವೆಂಪು ಅವರು ಕಾವ್ಯಸಿದ್ದಿಯ ಧವಳ ಗೌರೀಶಂಕರದಲ್ಲಿ ಪದಾರ್ಪಣ ಮಾಡುವ ಮುನ್ನ ಅವರು ಕ್ರಮಿಸಿದ ವಿಪಿನಾಂತರ್ಗತ ಜಟಿಲ ಕುಟಿಲತಮ ಕಂಟಕಿತ ಸಾಧನ ಮಾರ್ಗದ ಕಠೋರ ವ್ರತದ ಪರಿಚಯ ‘ನೆನಪಿನ ದೋಣಿಯಲ್ಲಿ’ ಓದುಗರಿಗೆ ಸಾಕಷ್ಟಾಗಿರುತ್ತದೆ. ಕಾವ್ಯ ತಪಸ್ಸಾಧನೆಯ ಶೈಶವಾವಸ್ಥೆಯಲ್ಲಿ ಅವರು ರಚಿಸಿದ ಕೆಲವು ಕತೆ ಮತ್ತು ಕವಿತೆಗಳು ತುಂಬ ಎಳಸಾಗಿವೆಯೆಂಬ ಕಾರಣಕ್ಕಾಗಿ ಪ್ರಕಟನೆಯ ಗೌರವಕ್ಕೆ ಪಾತ್ರ ವಾಗಿಲ್ಲವೆಂಬುದು ಅವರ ಅಭಿಪ್ರಾಯ. ಅವರ ದೃಷ್ಟಿಯಲ್ಲಿ ಎಳಸೆಂದು ತೋರುವ ಕೃತಿ ಗಳಲ್ಲಿಯೂ ಅನೇಕ ವಿಶಿಷ್ಟಾಂಶಗಳಿವೆ. ಮುಂದಿನ ಮಹಾಕಾವ್ಯ ಮಹಾಕಾದಂಬರಿಗಳಿಗೆ ಕಾರಣವೆನ್ನಬಹುದಾದ ಬೀಜಾಂಶಗಳು ಭ್ರೂಣಸ್ಥಿತಿಯಲ್ಲಿವೆ. ಅಷ್ಟೇ ಅಲ್ಲ, ಇತಿಹಾಸ ಲಕ್ಷಿಸಬಹುದಾದ ಸಂಗತಿಗಳೂ ಅವುಗಳಲ್ಲಿ ಹುದುಗಿವೆ ಎಂಬ ಸಂಗತಿ ಅವುಗಳ ಮೇಲೆ ಕಣ್ಣಾಡಿಸಿದವರಿಗೆ ವೇದ್ಯವಾಗದಿರದು. (ಬಹುದಿನಗಳ ಒತ್ತಾಯವ ಫಲವಾಗಿ ಆ ಕೃತಿಗಳ ಹಸ್ತಪ್ರತಿಗಳು ಟ್ರಸ್ಟಿಗೆ ದೊರೆತು, ಅವುಗಳ ಪ್ರಕಟಣೆ ಸಾಧ್ಯವಾದದ್ದು ಸಂತೋಷದ ಸಂಗತಿ).

ಕುವೆಂಪು ಅವರ ಕಲ್ಪನಾ ಪ್ರತಿಭೆ ಶರೀರಧಾರಣೆ ಮಾಡುವ ಮುನ್ನ ಯೋಗ್ಯವಾದ ಮಾಧ್ಯಮವನ್ನರಸುತ್ತಿತ್ತೆನ್ನುವುದಕ್ಕೆ ಹಾಗೂ ಕವಿ ನಾನಾ ಪ್ರಯೋಗಗಳಲ್ಲಿ ನಿಮಗ್ನರಾಗಿದ್ದ ರೆನ್ನುವುದಕ್ಕೆ ‘ನೆನಪಿನ ದೋಣಿಯಲ್ಲಿ’ ಉದ್ಧೃತವಾಗಿರುವ ಅನೇಕ ಆಂಗ್ಲ ಮತ್ತು ಕನ್ನಡ ಕವಿತೆಗಳು ನಿದರ್ಶನವಾಗಿವೆ. ಮಹಾಛಂದಸ್ಸಿನ ರೂಪರೇಷೆ ರಹಸ್ಯಗಳು, ಅದರ ಘನತೆ ಗಾಂಭೀರ್ಯ ಮಹತ್ತುಗಳು ತಮಗೆ ಗೋಚರವಾಗುವ ತನಕ ಅವರು ನಡೆಸಿದ ಪ್ರಯತ್ನಗಳಿಗೆ ಲೆಕ್ಕವಿಲ್ಲ. ಅಂಥ ಪ್ರಯತ್ನಗಳಲ್ಲಿ ‘ಸಮುದ್ರಲಂಘನ’

[1] ಮತ್ತು ‘ಮಹಾದರ್ಶನ’ಗಳಿಗೆ ಪ್ರಮುಖ ಸ್ಥಾನ ಸಲ್ಲುತ್ತದೆ.

‘ಮಹಾದರ್ಶನ’ದ ಪುಟಗಳನ್ನು ತೆರೆಯುತ್ತಿದ್ದಂತೆ ಮೊದಲು ವಾಚಕರ ಗಮನವನ್ನು ಸೆಳೆಯುವ ವಿಶೇಷಾಂಶವೆಂದರೆ, ಅಲ್ಲಿ ಬಳಕೆಗೊಂಡಿರುವ ಛಂದಸ್ಸು. ಇದು ರಗಳೆಯ ಮಾದರಿಯಲ್ಲಿದ್ದರೂ, ಹಿಂದಿನಿಂದ ಪರಿಚಯವಾಗಿರುವ ಯಾವ ರಗಳೆಯ ಗುಂಪಿಗೂ ಸೇರುವುದಿಲ್ಲ. ಸರಳ ರಗಳೆಯಂತೆಯೇ ಇದು ದ್ವಿತೀಯಾಂತ್ಯ ಪ್ರಾಸಗಳಿಂದ ಮುಕ್ತಗೊಂಡಿದೆ. ಪ್ರಾಸವಿರಲೇ ಕೂಡದೆಂಬ ನಿಯಮವಂತು ಇಲ್ಲ. ಜತೆಗೆ ಭಾವಾರ್ಥಗಳು ಒಂದೊಂದು ಪಂಕ್ತಿಯ ಕೊನೆಯಲ್ಲಿ ವಿರಾಮಗೊಳ್ಳದೆ ಹಲವಾರು ಪಂಕ್ತಿಗಳಿಗೆ ಹಬ್ಬುವುದೂ ಉಂಟು. ಆದರೆ ರಚನೆಯ ದೃಷ್ಟಿಯಿಂದ, ಅಂದರೆ ಪಂಕ್ತಿಗಳ ದೀರ್ಘತೆಯಿಂದ ಹಾಗೂ ಗಣವಿಭೇದ ದಿಂದಾಗಿ ಇದು ಸರಳ ರಗಳೆಯೆನಿಸಿಕೊಳ್ಳಲಾರದು,[2] ಇದರ ಪ್ರತಿಯೊಂದು ಸಾಲಿನಲ್ಲಿಯೂ ಐದು ಮಾತ್ರೆಯ ಐದು ಗಣಗಳೂ, ಕೊನೆಯಲ್ಲಿ ಮೂರು ಮಾತ್ರೆಯ ಒಂದು ಗಣವೂ ಬರುತ್ತವೆ.

ಮುನ್ನೀರಿ | ನಿಂದುದಿಸಿ! ಅರಳಿದಂ ಬುಜದಂತೆ | ಕಂಗೊಳಿಸಿ | ಮೆರೆವ
ಸಿಂಹಳದ | ಹೂಮಣೆಯ | ಮೇಲೆ, ಯುಗ | ಯುಗಗಳಿಂ | ದಡಿಯೂರಿ | ನಿಂತು,
ಇಳೆಗೆ ಸ | ಗ್ಗದ ಸೊಗ ವ | ಹಾರೈಸಿ | ಜಯಿಸಿ ಸೆರೆ | ಗೈಯಲೆಂ | ದೆಳಸಿ,
ಧ್ಯಾನದೊಳು | ನಿಂತಿರುವ |  ಭಾರತಾಂ | ಬೆಯ ಮಂಗ | ಳದ ಅಡಿಯ! ಗುಡಿಯ
ಕಾಲುಂಗು | ರದ ಹೊಳೆವ | ಮಣಿಕಲಶ ವೆಂಬಂತೆ | ಬಿತ್ತರದ ಕಡಲಿ
ನಿಂದೆದ್ದು | ರಾಜಿಸುವ | ಕನ್ಯಾಕು | ಮಾರಿಯರೆ | ಯಲ್ಲಿ ಗುರು | ವರನು
ಪರಮಹಂಸರ ಪರಮಶಿಷ್ಯ ಚೂಡಾಮಣಿಯು, ಸಾಧು ಭೈರವನು

ಮೂರು ಮಾತ್ರೆಯ ಆರನೆಯ ಗಣದ ಕೊನೆಯಲ್ಲಿ ವಿರಾಮ ಅಥವಾ ಯತಿ ಅನಿವಾರ್ಯ ವೆಂಬಂತೆ ತೋರುತ್ತದೆ. ಭಾವಾರ್ಥಗಳು ಮುಂದಿನ ಪಂಕ್ತಿಗೆ ಚಾಚಿಕೊಳ್ಳುವುದಾದರೂ, ತ್ರಿಮಾತ್ರಾಗಣದ ದೆಸೆಯಿಂದಾಗಿ ಉಸಿರು ತುಸು ತಡೆದಂತಾಗುತ್ತದೆ.

ತೀರವಿಲ್ಲದಪಾರವಾರಿಧಿಯು ಸಂತಸದಿ ಗುರುವರನ ಬಳಸಿ
ಬಲಗೊಂಡು ಹಿಗ್ಗಿದುದು.

ಆರನೆಯ ಗಣದ ಸ್ಥಾನದಲ್ಲಿ ಬಳಕೆಯಾಗುವ ಪದ ಅಲ್ಲಿಗೇ ಮುಗಿಯದೆ ಮುಂದಿನ ಸಾಲಿನಲ್ಲಿ ಪೂರ್ಣಗೊಳ್ಳುವ ಸಂದರ್ಭದಲ್ಲಿ ಈ ವಿರಾಮ ಹ್ರಸ್ವವಾಗುವ ಸಂಭವವುಂಟು.

ಬಾಂಬೊಳೆಯು ವಂಗ ಕೊಲ್ಲಿಯಂ ದಾಂಟ, ಭಾರತಿಯ ಸಿರಿಯಡಿಗೆ ಬೀಳ
ಲೆಂದೆಳಸಿ,

ಮಹಾಛಂದಸ್ಸಿನಂತಲ್ಲದೆ, ಇಲ್ಲಿ ಐದು ಮೂರು ಮಾತ್ರೆಯ ಗಣಗಳು ಯಾಂತ್ರಿಕವಾಗಿ, ಲೆಕ್ಕಾಚಾರವಾಗಿ ಬರುತ್ತವೆಯೆಂದೇ ಹೇಳಬೇಕು. ಇಂಥ ಕಡೆಗಳಲ್ಲಿಯೂ ಕೆಲವೆಡೆ ವೈವಿಧ್ಯ ವನ್ನು ತರಲು ಪ್ರಯತ್ನ ನಡೆದಿದೆ.

ನಿನ್ನ | ಮೈಮೆಯ | ಬರೆವೆ. ನಿನ್ನ | ಹೆಸರನೆ ಕರೆವೆ. ನಿನಾಗಿ | ತೊರೆವೆ
ಕಣ್ವ! ಸಂತತಿ | ಬಂದು! ಸಂಗ | ಸಂತತಿ | ನಿಂದು! ಹೂಣರೈ | ತಂದು

ಇಂಥ ಕಡೆ ಭಾಮಿನಿಯ ಓಟವನ್ನು ಗುರುತಿಸಬಹುದಾಗಿದೆ. ಕನ್ನಡ ಭಾಷೆಯ ಜಾಯ ಮಾನಕ್ಕೊಗ್ಗಿಕೊಂಡಿರುವ ಛಂದೋಪ್ರಕಾರಗಳೆಂದರೆ ರಗಳೆ, ಷಟ್ಪದಿ ಮತ್ತು ಸಾಂಗತ್ಯ ವೆಂಬುದನ್ನೂ, ರಗಳೆ ಷಟ್ಪದಿಗಳಿಗೆ ಹೊಕ್ಕುಳ ಬಳ್ಳಿಯ ಸಂಬಂಧವಿದೆಯೆಂಬುದನ್ನೂ ಈ ಸಂದರ್ಭದಲ್ಲಿ ಗಮನಿಸಬಹುದು.

‘ಪ್ರಾಯಶ್ಚಿತ್ತ’ ಕವಿತೆಯ ರೂಪ ರಗಳೆಯಂತೆ ತೋರಿದರೂ, ಪ್ರಸಿದ್ಧವಾಗಿರುವ ಯಾವ ರಗಳೆಯ ಜಾತಿಗೂ ಸೇರಿದಂತೆ ಕಾಣುವುದಿಲ್ಲ. ಮೊದಲ ನಾಲ್ಕು ಪಂಕ್ತಿಗಳು ಪ್ರಾಸರಹಿತ ಚತುಷ್ಟದಿಯಂತೆಯೂ, ಅನಂತರದ ಎರಡು ಪಂಕ್ತಿಗಳು ಪ್ರಾಸಸಹಿತ ದ್ವಿಪದಿಯಂತೆಯೂ ಕಾಣುತ್ತವೆ.

ಪುಟ್ಟಣ್ಣ | ನೊಡಗೂಡಿ ನಾನೊಂದು | ದಿನ ನಮ್ಮ
ಮಲೆನಾಡ | ಕಾಡುಗಳ | ಲಲೆದಾಡು ತಿದ್ದೆ.
ಕೈಯಲ್ಲಿ | ಕೋವಿಗಳು | ಜೊತೆಯಲ್ಲಿ | ನಾಯಿಗಳು,
ತೋಟಗಳು | ಜೇಬಿನೊಳು | ಬೇಟೆ ಮನ | ದಲ್ಲಿ
ಬೆಟ್ಟಗಳ | ಹತ್ತಿದೆವು | ಕಣಿವೆಗಳ | ನಿಳಿದು
ತೊರೆಗಳನು | ದಾಟಿದೆವು | ನೀರಡಿಕೆ | ಕಳೆದು.

ಮೊದಲ ಕಂಡಿಕೆಯ ಕೊನೆಯ ಪಂಕ್ತಿಯಲ್ಲಿ ೫.೫.೫.೫. (ಕೊನೆಯ ತ್ರಿಮಾತ್ರಾಗಣ ಐದು ಮಾತ್ರೆಯ ಗಣದ ಸ್ಥಾನದಲ್ಲಿ ಬಂದಿದೆಯಷ್ಟೆ) ಮಾತ್ರೆಗಳಿವೆಯೆಂಬುದನ್ನು ಲಕ್ಷಿಸಬಹುದು. ಕೆಲವು ಕಡೆ ಒಂದೇ ಅಕ್ಷರ ಷಟ್ಪದಿಯ ಮೂರನೆಯ ಸಾಲಿನ ಕೊನೆಯಲ್ಲಿರುವಂತೆ ಒಂದು ಗಣದ ಸ್ಥಾನದಲ್ಲಿ ನಿಲ್ಲುತ್ತದೆ.

ಕಡೆಗೊಂದು  | ಕರ್ವೆಳಗ | ಬೀರುತಿಹ | ದಟ್ಟಡವಿ
ಗೈತಂದು | ಮರದ ತಂ | ಪೊಳು ಕುಳಿತೆ | ವು

ಕೆಲವು ಕಡೆಯಂತು ದ್ವಿಪದಿಗಳ ಸಾಲುಗಳಂತೆಯೇ ಓರಣಗೊಳ್ಳುತ್ತವೆ.

ಪುಟ್ಟಣ್ಣ ಎಲೆಯಡಕೆ ಚೀಲವನು ಬಿಚ್ಚಿ
ಹೊಗೆಯಸೊಪ್ಪಿನ ಡಬ್ಬಿಯನು ತೆರೆದು ಮುಚ್ಚಿ
ಬಣ್ಣಗಾರನ ತೆರದಿ ಸುಣ್ಣವನು ಹಚ್ಚಿ
ಕೆಂಪುರಂಗನು ಮಾಡೆ ದವಡೆಯಲಿ ಕೊಚ್ಚಿ
ನೋಡಿದೆನು ಕವಿಯಾದ ನಾನದನು ಬೆಚ್ಚಿ
ಪುಟ್ಟಣ್ಣ ನಾಕಲೆಗೆ ಪುಟ್ಟ ಕವಿ ಮೆಚ್ಚಿ!

ಸಮ್ಮಿಶ್ರ ಸರಳ ರಗಳೆಯಂತೆ ತೋರುವ ಈ ಛಂದೋಪ್ರಕಾರವನ್ನು ರೂಪಿಸುತ್ತಿದ್ದಾಗ ಕುವೆಂಪು ಅವರ ಪೂರ್ಣ ಗಮನ ಛಂದಸ್ಸಂಶೋಧನೆಯಲ್ಲಿ ಕೇಂದ್ರೀಕೃತವಾಗಿತ್ತೆಂದು ತೋರುತ್ತದೆ. ಕುವೆಂಪು ಛಂದಸ್ಸಿನ ಅಧ್ಯಯನಕ್ಕೆ ಈ ರಚನೆಗಳು ಅತ್ಯಂತ ಸಹಕಾರಿಯಾಗುತ್ತ ವೆನ್ನುವುದರಲ್ಲಿ ಸಂದೇಹವಿಲ್ಲ.

ಮಹಾದರ್ಶನವೊಂದು ಖಂಡ ಕಾವ್ಯ. ಸರ್ವಧರ್ಮಸಮನ್ವಯಾಚಾರ್ಯ, ಪರಮ ಪರಮಾವತಾರಿ ಯುಗಪುರುಷ ಶ್ರೀರಾಮಕೃಷ್ಣಪರಮಹಂಸರ ಶಿಷ್ಯಾಗ್ರೇಸರ ಶ್ರೀ ಸ್ವಾಮಿ ವಿವೇಕಾನಂದರು ತಾಯ್ನಡಿನ ದರ್ಶನೋದ್ದೇಶದಿಂದ ಪರಿವ್ರಾಜಕ ಸನ್ಯಾಸಿಯಾಗಿ ಹಿಮಾಚಲದಿಂದ ಕನ್ಯಾಕುಮಾರಿಯವರೆಗೆ ಯಾತ್ರೆ ಕೈಗೊಂಡು ಕಡಲುಗಳು ಕೂಡುವೆಡೆಯ ಬಂಡೆಯ ಮೇಲೆ ಉತ್ತರಾಭಿಮುಖವಾಗಿ ನಿಂತು, ತಾವು ಆಪಾದ ಮಸ್ತಕವಾಗಿ  ದರ್ಶಿಸಿದ ಭಾರತಮಾತೆಯ ಸುಂದರ ವಿಗ್ರಹವನ್ನು ಭಾವಾತ್ಮಕವಾಗಿ ಗ್ರಹಿಸುವಾಗ ಪ್ರಾಚೀನೇತಿಹಾಸದ ದೃಶ್ಯಗಳು ನೆನಹುಗಣ್ಮುಂದೆ ಸುಳಿಯುವಾಗ, ಜ್ಯೋತಿಸ್ಸ್‌ಸ್ವರೂಪಿ ಗುರುದೇವರ ಆಶೀರ್ವಾದ ಸಾಕಾರತೆವೆತ್ತು ತಮ್ಮ ಕಣ್ಮುಂದೆ ನಿಂತಂತಿರುವಾಗ, ಆ ಧ್ಯಾನಮೂರ್ತಿಯ ಕಲ್ಪನಾಪ್ರತಿಭೆ ರೆಕ್ಕೆಬಿಚ್ಚಿ, ಕಾಲದೇಶಾತೀತವಾದ ಲೋಕ ಲೋಕಾಂತರಗಳಲ್ಲಿ ಉಡ್ಡಯನಗೈಯುತ್ತದೆ. ಭರತಖಂಡದ ಪೂರ್ವೋತ್ತರ ವರ್ತಮಾನಗಳೆಲ್ಲವೂ ಅವರ ಮನದಲ್ಲಿ ಚಲನಚಿತ್ರಗಳಂತೆ ಮಿಂಚತೊಡಗುತ್ತವೆ.[3] ಆ ಸಂದರ್ಭದಲ್ಲಿ ಅವರ ಚಿತ್ಸಾಗರ ದಲ್ಲಿ ಮೂಡಿದ ಭಾವತರಂಗಗಳು ಮತ್ತು ಆಲೋಚನಾ ವೀಚಿಗಳು ದರ್ಶನಾತ್ಮಕವಾಗಿ ಕಾವ್ಯ ರೂಪವನ್ನು ಪಡೆಯುತ್ತವೆ.

ಪ್ರಾರಂಭದಲ್ಲಿ ವ್ಯಾಸ, ವಾಲ್ಮೀಕಿ, ಕಾಳಿದಾಸ, ಲಕ್ಷ್ಮೀಶ, ರನ್ನ, ಪಂಪ, ಹೋಮರ್, ಮಿಲ್ಟನ್ ವರ್ಜಿಲ್ ಮೊದಲಾದ ಪೌರ್ವಾತ್ಯ ಪಾಶ್ಚಾತ್ಯ ಕವಿಗಳನ್ನು ನೆನೆಯುತ್ತಾರೆ. ಅನಂತರ ರಸಿಕ ಜನ ಮೆಚ್ಚುವಂತೆ ಪಂಡಿತರು ದಣಿವಂತೆ ಪಾಮರರು ತಣಿಯುವಂತೆದೆ ಕುಣಿಯುವಂತೆ…. ಬಾಂದಳವನಪ್ಪಲೆಳಸುವ ಬಾಲಕನಂತೆ ಪುಟ್ಟ ಭಾರತವನ್ನು ರಚಿಸುವುದಾಗಿ ಸಂಭ್ರಮಗೊಳ್ಳುತ್ತಾರೆ. ಮುಂದೆ ಶ್ರೀಪರಾತ್ಪರಮೂರ್ತಿ ಮತ್ತು ಸರಸ್ವತಿಯರನ್ನು ಸ್ತುತಿ ಸುತ್ತಾರೆ. ವಾಲ್ಮೀಕಿ ವ್ಯಾಸರ ಮೂಲಕ ರಾಮಾಯಣ ಭಾರತಗಳನ್ನು ಹಾಡಿದ ಸರಸ್ವತಿಯೇ ತಮ್ಮ ಮೂಲಕ ಮಹಾದರ್ಶನವನ್ನು ನುಡಿಸುವಂತೆ ಪ್ರಾರ್ಥಿಸುತ್ತಾರೆ.

ಭಾರತಾಂಬೆಯು ಮುಡಿದ ಬಿಳಿಯ ಕಮಲಗಳಂತೆ ಹಿಮಗಿರಿಯ ಶಿಖರಗಳು ಪ್ರಕಾಶಿಸುತ್ತವೆ. ಆ ಗಿರಿಶಿಖರದಿಂದುದ್ಭವಿಸಿದ ಲೋಕಪಾವನೆ ಗಂಗೆ ಪರಮಹಂಸರ ಪಾದ ಪುಷ್ಪವನ್ನು ಮುಡಿದು, ದಕ್ಷಿಣೇಶ್ವರದ ಸೋಪಾನಗಳನ್ನು ತೊಳೆದು, ಬಂಗಾಳಕೊಲ್ಲಿಯನ್ನು ದಾಟಿ, ಕನ್ಯಾಕುಮಾರಿಯರೆಯನ್ನು ಬಳಸಿ, ತುಂತುರಿನ ಮುತ್ತುಗಳಿಂದ ಯೋಗೀಶನಿಗೆ ಪಾದಪೂಜೆ ಸಲ್ಲಿಸುತ್ತಾಳೆ. ಬಂಡೆಯ ಮೇಲೆ ಭಾವವಶನಾಗಿ ನಿಂತಯೋಗಿ ತನ್ನೆದುರಿನ ಭಾರತ ದೇಶವನ್ನು ನೋಡುತ್ತ ನೋಡುತ್ತ ಧ್ಯಾನ ಮಗ್ನನಾಗುತ್ತಾನೆ. ಆ ಪವಿತ್ರ ಭೂಮಿಯಲ್ಲಿ ಹುಟ್ಟಿ ಧನ್ಯನಾದುದಾಗಿ ರೋಮಾಂಚನಗೊಳ್ಳುತ್ತಾನೆ. ಹೊಲಗದ್ದೆ ತೋಟ ಗಿರಿ ತೊರೆ ಹಕ್ಕಿಯುಲಿ, ಪ್ರತಿಯೊಂದು ಸಂಗತಿಯೂ ಅವನ ದೇಶಾಭಿಮಾನವನ್ನುಕ್ಕಿಸುತ್ತವೆ. ಭಾರತಿಯ ಕೀಳ್ಗತಿಯನ್ನು ಸಹಿಸಲಾರದೆ ಕುದಿ ಕುದಿದು ಮೇಲ್ವಾಯುವ ಅಲೆಗಳನ್ನು ಕುರಿತು ‘ಎಲ್ಲಿಗೆ ನುಗ್ಗುತ್ತೀರಿ?’ ಎಂದು ಪ್ರಶ್ನಿಸುತ್ತಾನೆ.

ಅಷ್ಟರಲ್ಲಿ ಶ್ರೀರಾಮಕೃಷ್ಣರು ಪ್ರತ್ಯಕ್ಷರಾಗಿ ‘ಭಾರತಿಗೆ ಬಂದ ಈ ಕೀಳ್ಗತಿಯು ಚಿರವಲ್ಲ… ಸ್ವಾತಂತ್ರ್ಯದೂರಾಗಿ. ಶಾಂತಿಯಾಗರವಾಗಿ, ಸಿರಿಗೆ ಹೂವಾಗಿ, ಮೆರೆಯುವುದು ಎಲೆ ನರೇಂದ್ರನೆ, ನಿನ್ನ ಕೈ ಬೀಸಿ ಕರೆಯುವುದು ನೋಡು’ ಎಂದು ನುಡಿದು ಮರೆಯಾಗುತ್ತಾರೆ. ಆ ಮಹಾದರ್ಶನದಿಂದ ಮೈಮರೆತು ಕಣ್ಮುಚ್ಚಿದ ಯೋಗೀಶನ ಮುಂದೆ

ದೃಶ್ಯಗಳ ಮೇಲ್ವಾಯ್ದು ದೃಶ್ಯಗಳು ನುಗ್ಗಿ, ವರ್ಷಗಳ ಮೇಲ್ವಾಯ್ದು
ವರ್ಷಗಳು ಮಸಗಿದುವು; ಮಿಂಚಿದುವು ಶತಮಾನಗಳು ಕಣ್ಣಮುಂದೆ
ನಾಡುಗಳು ಹಾರಿದುವು.

ಹಿಂದು ಮುಂದಿಂದುಗಳು ಅವನ ಕಣ್ಮುಂದೆ ನಲಿಯುತ್ತವೆ. ದ್ರಾವಿಡರ ಕಾಲದಿಂದ ಹಿಡಿದು ಈ ತನಕ ನಡೆದು ಬಂದಿರುವ ಭರತಖಂಡದ ಇತಿಹಾಸ ಸುರುಳಿ ಬಿಚ್ಚುತ್ತಿದ್ದಂತೆಲ್ಲ ಅವನ ಮನಸ್ಸು ಹರ್ಷ ದುಃಖಗಳ ಹಿಗ್ಗುಕುಗ್ಗುಗಳ ತೂಗುಯ್ಯಲೆಯಾಗುತ್ತದೆ. ವೇದೋ ಪನಿಷತ್ತುಗಳು ರಾಮಾಯಣ ಭಾರತಗಳು ಕಲಾತತ್ವಗಳು ಅವನ ಮನಸ್ಸನ್ನು ಸೂರೆ ಗೊಳ್ಳುತ್ತವೆ: ಮೌಢ್ಯ ಸಂಪ್ರದಾಯಗಳ ಘೋರಾಂಧಕಾರದಲ್ಲಿ ತನ್ನ ತಾಯ್ನಡು ತೊಳಲಾಡು ವಾಗ ಅವನ ಹೃದಯ ಹಿಂಡಿದಂತಾಗುತ್ತದೆ; ಬೌದ್ಧಾವತಾರದ ಹೊಸ ಬೆಳಕು ಕಂಡಾಗ ಅವನ ಚಿತ್ತ ನಲವೇರುತ್ತದೆ. ಮುಸಲರಾಗಮನದಿಂದ ಭರತಮಾತೆಗೆ ಮತ್ತೊಂದು ನಾಗರಿಕತೆಯ ಸಂಗವಾಯ್ತೆಂದು ಅವನ ಮನಸ್ಸಿಗೆ ಉಲ್ಲಾಸವಾಗುತ್ತದೆ. ಶಂಕರ ರಾಮಾನುಜ ಬಸವ ಮಾಧವಾಚಾರ್ಯ ವಿದ್ಯಾರಣ್ಯರ ಜನನ ಮತ್ತು ವಿಜಯನಗರ ಸಾಮ್ರಾಜ್ಯದ ಉದಯಗಳನ್ನು ಕಂಡು ಉಬ್ಬುತ್ತಿರುವಾಗಲೆ, ಮೊಗಲರಾಸ್ಥಾನದಲ್ಲಿ ಆಂಗ್ಲ ರಾಯಭಾರಿ ಯನ್ನು ಕಂಡು, ‘ಇನ್ನೊಬ್ಬ ದತ್ತುಮಗನುದಿಸುವನೆ ಭಾರತಿಗೆ ಎಂದು’ ಬೆರಗಾಗುತ್ತಾನೆ. ಹಿಂದೂ ಮುಸಲ್ಮಾನರಲ್ಲಿ ಮೂಡಿದ ಮನಸ್ಯವನ್ನು ತಡೆಗಟ್ಟುವ ಸಲುವಾಗಿ ನಾನಕ, ಕಬೀರ, ರಾಮಾನಂದ, ತುಕಾರಾಮ, ರಾಮದಾಸರು ನಡೆಸಿದ ಪ್ರಯತ್ನಗಳಿಂದ ಸಮಾಧಾನ ತಾಳುತ್ತಾನೆ. ಶಿವಾಜಿ ಮಹಾರಾಜನ ಆಸೀಮ ಸಾಹಸಕ್ಕೆ ತಲೆ ತೂಗುತ್ತಾನೆ. ಮೈಸೂರು ಅರಸು ಮನೆತನದ ರಾಜನೊಬ್ಬನ ಧಾರ್ಮಿಕತೆಗೆ ಮನಸೋತು ಅವನನ್ನು ಆಶೀರ್ವದಿ ಸುತ್ತಾನೆ. ಪಾಶ್ಚಾತ್ಯ ಸಂಸ್ಕೃತಿ ಭಾರತೀಯ ಸಂಸ್ಕೃತಿಯನ್ನು ಕೊಚ್ಚುವಾಗ, ಕ್ರೈಸ್ತ ಜಾತಿಗೆ ಸೇರದವರೆಲ್ಲ ಸೈತಾನರೆಂದು ಪಾದ್ರಿಗಳು ಭಾರತೀಯರನ್ನು ಅವಹೇಳನಗೈಯುವಾಗ, ಬೆಂದು ನೊಂದ ಭಾರತಾಂಬೆಯ ದುಃಖವನ್ನು ಕಂಡು ವಿವೇಕಾನಂದ ಯೋಗಿ ಕಂಬನಿಗರೆಯುತ್ತಾನೆ. ಪರಿಪರಿಯ ಗೋಳು ರೋದನಗಳಿಂದ ಸೈತಾನನ ನರಕದಂತಾದ ಭಾರತಾಂಬೆಯ ದುರ್ಗತಿಯನ್ನು ನೆನೆದು ಬೆಚ್ಚುತ್ತಾನೆ.

ತನ್ನ ತಾಯಿಗೆ ಮುಕ್ತಿಯಿಲ್ಲವೆ ಎಂದು ಆಲೋಚಿಸುತ್ತಿರುವಾಗ ಅವನ ಕಣ್ಮುಂದೆ ವೈಕುಂಠ ಕೈಲಾಸಗಳೆ ಗೋಚರಿಸಿದಂತಾಗುತ್ತದೆ: ಸಿದ್ಧಗರುಡ ಯಕ್ಷ ಗಂಧರ್ವಾದಿ ಸತ್ಯಲೋಕ ನಿವಾಸಿಗಳು ಭೂಲೋಕಕ್ಕೈದಿ ಭಾರತಿಯ ಸಂಕಟವನ್ನು ಪರಿಹರಿಸುವ ಸಲುವಾಗಿ ತಮಗನುಮತಿ ನೀಡುವಂತೆ ನಾರಾಯಣನಲ್ಲಿ ಬಿನ್ನವಿಸಿಕೊಳ್ಳುವ ದೃಶ್ಯ ಅವರ ಕಣ್ಣಿಗೆ ಕಟ್ಟುತ್ತದೆ. ದೇವತೆಗಳನ್ನು ಸಂಬೋಧಿಸಿ, ವೇದ ಮಂತ್ರದಂತೆ ಹೊರಹೊಮ್ಮಿದ ದೇವವಾಣಿ ಅವನ ಕಿವಿಗೆ ಬೀಳುತ್ತದೆ.

‘ಭಾರತಿಯ ಸುತರೆಲ್ಲ ದಾಸರಾಗಿಹರು; ರಾಜರುಗಳೀಗಿಲ್ಲ.
ದಶರಥರು ಅಲ್ಲಿಲ್ಲ, ವಸುದೇವ ದೇವಕಿಯರಿಲ್ಲ; ಅದರಿಂದ
ಮೂಡುವೆಂ ಚಂದ್ರಮಣಿದೇವಿಯರ ಬಸಿರಿನಿಂ, ಸಿರಿದೊಟ್ಟಿಲಲ್ಲಿ!
ಬಲುಮೆಯಿಂದೆಸಗಿರುವ ಧರ್ಮ ಸಂಸ್ಥಾಪನೆಯು ಚಿರಮಪ್ಪದೆಂದು
ಸರ್ವಾವತಾರಗಳ ಪುಣ್ಯ ಮಹಿಮೆಯನೊಂದುಗೂಡಿಸುತ ತರುವೆ
ಸರ್ವಧರ್ಮಸಮನ್ವಯವ ತೋರಿಸಲು ತಿರೆಗೆ ನಾನಿಳಿದು ಬರುವೆ’
ಎಂಬ ದೇವವಾಣಿಯ ಆಶ್ವಾಸನೆಯಿಂದ ಅವನ ಮೈಯಲ್ಲಿ ಪುಳಕಾಂಕುರವಾಗುತ್ತದೆ.

ದೇವವಾಣಿ ನಿಂತ ಕ್ಷಣವೇ ಧ್ಯಾನಮೇರೆಯ ಮೀರಿದ ಅವ್ಯಕ್ತಲೋಕ ಅವನಿಗೆ ಗೋಚರವಾಗುತ್ತದೆ. ವಿಜ್ಞಾನದನ್ವೇಷಣೆಯಲ್ಲಿ ತನ್ನ ಜೀವಮಾನವನ್ನೆಲ್ಲ ತೇದು ಕೊನೆ ಗೊಂದು ದಿನ ತಾನು ನಿರೀಕ್ಷಿಸಿದ ಯಂತ್ರತತ್ವವನ್ನೆಡಹಿ ಸಂಧಿಸಿದ ವಿಜ್ಞಾನಿ ಸಂತೋಷದಲ್ಲೋ ಡುವಂತೆ ಯೋಗೀಶ ಅವ್ಯಕ್ತಲೋಕದ ವೈಭವ ದರ್ಶನದಿಂದ ಆನಂದ ಸಾಗರದಲ್ಲಿ ತೇಂಕಾಡುತ್ತಾನೆ. ತನ್ನ ತೊಡೆಯ ಮೇಲೆ ಕುಳಿತ ಶಿಶು ನರಮಹರ್ಷಿಯನ್ನು ಕುರಿತು ‘ನಾರಾಯಣ ಕರೆಯುತ್ತಿದ್ದಾನೆ. ಈ ಸಮಾಧಿ ಸಾಕು ಮೇಲೇಳು. ನಾನು ಶ್ರೀ ರಾಮಕೃಷ್ಣನಾಗಿ ತಿರೆಯಲ್ಲಿ ಜನಿಸುತ್ತೇನೆ. ನೀನು ವಿವೇಕಾನಂದನಾಗಿ ಹುಟಿ ಬಾ’ ಎಂದು ಅವನನ್ನು ಮುದ್ದಿಸುತ್ತಾನೆ.

ಆ ಎರಡು ಜ್ಯೋತಿಃ ಪುಂಜಗಳು ಸಗ್ಗದಿಂದಿಳಿಯುವಾಗ ಧರಾವನಿತೆಯ ಒಡಲಿನಲ್ಲಿ ಅಪೂರ್ವ ಚೈತನ್ಯ ಸಂಚಾರವಾಗುತ್ತದೆ. ಆಗ

ಭಾರತಾಂಬೆಯು ವಂಗಸುತೆಯೊಡನೆ ಕನ್ನಡಾಂಬೆಯ ಕೂಡಿಕೊಂಡು
ಭರದಿಂದಲೈತಂದಳಾಯೆಡೆಗೆ ಧರ್ಮದೇವಿಯ ಕರವ ಪಿಡಿದು
ಗಂಗೆ ಬಂದೆರಗಿದಳು ಪದತಳಕೆ-ಭಕ್ತಿಯಿಂ ನಮಿಸಿದಳು ಜಗುನೆ.
ಪೊಡಮಟ್ಟು ಸಂತಸದ ಕಂಬನಿಗಳರ್ಘ್ಯಪಾದ್ಯಂಗಳಂ ನೀಡಿ
ಕೈ ಮುಗಿದಳಾ ದಿವ್ಯ ಪುರುಷರಿಗೆ ಭಯ ಭರಿತ ಭಕ್ತಿಯಿಂ ತುಂಗೆ

ಇಲ್ಲಿ ಕನ್ನಡಾಂಬೆ ತುಂಗೆಯರ ಪಾತ್ರಗಳ ಔಚಿತ್ಯವನ್ನು ಗಮನಿಸಬಹುದು. ಪರಮಹಂಸರು  ಸರ್ವಧರ್ಮಗಳ ಸಾರವನ್ನು ತಮ್ಮ ಬಾಳಿನಲ್ಲಿ ತೋರಿ, ತನಗೆ ತಮ್ಮೆಲ್ಲ ಶಕ್ತಿಯನ್ನೂ ದಾನ ಮಾಡಿ, ದೇಶವಿದೇಶಗಳಲ್ಲಿ ತಮ್ಮ ಧರ್ಮವನ್ನು ಬಿತ್ತುವಂತೆ ಆದೇಶ ನೀಡಿ ನಿರ್ವಾಣ ಹೊಂದಿದ ಮಹಾಶ್ಚರ್ಯಕರ ದೃಶ್ಯವನ್ನು ಕಂಡು ಯೋಗಿ ಪರಮಾನಂದ ಭರಿತನಾಗುತ್ತಾನೆ.

ಭಾರತಾಂಬೆಯ ಪಾದಮೂಲದಲ್ಲಿ ಧ್ಯಾನಸ್ಥರಾದ ಶ್ರೀ ಸ್ವಾಮಿ ವಿವೇಕಾನಂದರು ತಾವು ಕಂಡ ಮಹಾದರ್ಶನದಲ್ಲಿ ತಮ್ಮ ಜೀವಿತೋದ್ದೇಶವನ್ನು ಸ್ಪಷ್ಟವಾಗಿ ಗುರುತಿಸಿಕೊಂಡ ರೆಂಬುದೇ ಈ ಖಂಡ ಕಾವ್ಯದ ಗುರಿ. ಸಿಂಹಾವಲೋಕನ ಕ್ರಮದಿಂದ ಭಾರತೀಯ ಇತಿಹಾಸದ ಮೈಲಿಗಲ್ಲುಗಳನ್ನಿಲ್ಲಿ ತೋರಿಸಲಾಗಿದೆ. ಶ್ರೀರಾಮಕೃಷ್ಣ ಪರಮಹಂಸರ ಮತ್ತು ಸ್ವಾಮಿ ವಿವೇಕಾನಂದರ ಅವತಾರಕ್ಕೆ ಇತಿಹಾಸದ ಅವಶ್ಯಕತೆಯೇ ಕಾರಣವೆಂಬುದನ್ನಿಲ್ಲಿ ಮನದಟ್ಟು ಮಾಡಿಕೊಡಲಾಗಿದೆ. ಖಡ್ಗದಿಂದಲೇ ಅಧರ್ಮವನ್ನೆದುರಿಸಬೇಕಾಗಿಲ್ಲ. ಪ್ರೇಮದಿಂದಲೂ ಅದನ್ನು ನಿವಾರಿಸಬಹುದೆಂಬ ಪರಮಸತ್ಯದ ಪ್ರತಿಪಾದನೆಯಿಲ್ಲಿದೆ. ಎಲ್ಲ ಅವತಾರ ಗಳನ್ನೊಳಗೊಂಡ, ಎಲ್ಲ ಧರ್ಮಗಳ ಸಾರವೇ ಸಾಕಾರಗೊಂಡಂತಿದ್ದ ಪರಮಾವತಾರವನ್ನೂ ಪ್ರೇಮಾವತಾರವನ್ನೂ ಕವಿ ಪರಮಹಂಸರಲ್ಲಿ ಕಾಣುತ್ತಾರೆ. ಶ್ರೀ ರಾಮಕೃಷ್ಣರೊಡನೆ ಯಕ್ಷ ಗರುಡ ಸಿದ್ಧಕಿಂ-ಪುರುಷಾದಿ ದೇವತೆಗಳೆಲ್ಲ ಉದಯಿಸಿದರೆಂಬ ಸುಳುಹೂ ಈ ಕೃತಿಯಲ್ಲಿ ಮೊಗದೋರುತ್ತದೆ. ಮೇಲಾಗಿ ನರನಾರಾಯಣರೇ ವಿವೇಕಾನದ ಪರಮಹಂಸರಾಗಿ ಜನಿಸಿದ ರೆಂಬ ಭಾವನೆಯೂ ಇಲ್ಲಿ ಸ್ಪಷ್ಟವಾಗಿ ಮೈದೋರಿದೆ. ಮುಸ್ಲಿಮಾಂಗ್ಲರು ಭಾರತಾಂಬೆಯ ದತ್ತುಪುತ್ರರೆಂಬ ಹಾಗೂ ಭಾರತೀಯ ಸಂಸ್ಕೃತಿಯ ಒಡಲಿನಲ್ಲಿ ಅವೆರಡೂ ಸಂಸ್ಕೃತಿಗಳು ವಿಲಯನ ಹೊಂದಿವೆಯೆಂಬ ಭಾವುಕಾಭಿಪ್ರಾಯವೂ ಇಲ್ಲಿ ಅಭಿವ್ಯಕ್ತಗೊಂಡಿದೆ.

ಕಥನಕಾವ್ಯಕ್ಕೆ ವಸ್ತುವಾಗಬಹುದಾಗಿದ್ದ ‘ಪ್ರಾಯಶ್ಚಿತ್ತ’ದ ಪುಟ್ಟಣ್ಣ-ತಮ್ಮಣ್ಣರ ಕಥೆ ಕುಗ್ಗಿ ಸಾಮಾನ್ಯ ಕವಿತೆಯಾಗಿದೆ. ತಮ್ಮಣ್ಣನ ದುರಂತ ಜೀವನ ಕವಿತೆಯ ನಾಮಕರಣಕ್ಕೆ ಪ್ರೇರಣೆಯಾಗಿದೆಯಷ್ಟೆ, ಕವಿಗೆ ಆ ಕತೆ ಹೇಳಿದವನು ಪುಟ್ಟಣ್ಣ. ಆದರೆ ಅದಕ್ಕೆ ಈ ಕವಿತೆಯಲ್ಲಿ ಅರ್ಧದಷ್ಟಾದರೂ ಸ್ಥಳಾವಕಾಶವಿಲ್ಲದೆ, ಅದು ತುಂಬ ತೆಳ್ಳೆಯಾಗಿದೆ, ದುರ್ಬಲವಾಗಿದೆ, ಪೇಲವವಾಗಿದೆ. ಕಣೆಹಂದಿ ಕಾಡು ಹಂದಿಗಳನ್ನು ಹೊಡೆಯಲೆಂದು ಮರಸು ಕೂತ ತಮ್ಮಣ್ಣ ಏನೇನೋ ಕನಸು ಕಾಣುತ್ತಿದ್ದು, ಭಯದಿಂದ ಚೀರಿದ ಸದ್ದಿಗೆ ಕಣೆಹಂದಿ ಬೆದರಿ ಓಡಿ ಹೋಗಲಾಗಿ, ನಿರಾಶೆಯಿಂದ ಬೇಯುತ್ತಿರುವಾಗ, ಮುಂಜಾನೆಯ ಮಂಪರಿನಲ್ಲಿ ಪ್ರಾಣಿ ಬಂದ ಶಬ್ದವಾಗಿ, ಕೋವಿಯನ್ನು ಹಾರಿಸಿದ, ಮರದಿಂದ ಕೆಳಗಿಳಿದು ನೋಡುವಾಗ ತನ್ನ ಪ್ರೀತಿ ಎತ್ತುಗಳು ಬಲಿಯಾದದ್ದನ್ನು ಕಂಡು ಗೋಳಾಡಿದ, ಆ ಗೋಳಾಟದಲ್ಲಿಯೇ ನಮೆನಮೆದು ಸತ್ತ ವಿಷಯವೇ ಈ ಕವಿತೆಯ ವಸ್ತು. ಇದು ನಡೆದ ಕಥೆ ನಿಜ. ಈ ಕವಿತೆಯಲ್ಲಿ ಕವಿ ಮತ್ತು ಕತೆಗಾರರಿಬ್ಬರೂ ‘ಕೊಂದುದಕೆ ಎಲ್ಲರಿಗೂ ಸಾವೆ ಪ್ರಾಯಶ್ಚಿತ್ತ’ ಎಂಬ ತತ್ವವನ್ನು ಕಾಣುತ್ತಾರೆ.

ಶ್ರೀ ಕುವೆಂಪು ಸಾಹಿತ್ಯವನ್ನೋದಿದವರಿಗೆ ಪುಟ್ಟಣ್ಣ ಅಪರಿಚಯಸ್ತನೇನಲ್ಲ. ಅವನು ಕುಪ್ಪಳ್ಳಿ ಮಹಾಮನೆಯ ಮನೆತನಕ್ಕೆ ಸೇರದವನಾದರೂ, ಅದರ ಕೌಟುಂಬಿಕ ಜೀವನ ಪ್ರವಾಹದಲ್ಲೊಂದು ಹನಿಯಾದರೂ, ಕವಿಗೆ ಬೇಟೆಯ ಗೆಳೆಯನಾಗಿ, ಅನೇಕ ಕಥೆಗಳ ನಿರೂಪಕನಾಗಿ, ಅವರ ಕತೆ ಕವಿತೆ ಕಾಂದಬರಿಗಳಲ್ಲಿ ಯೋಗ್ಯ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ‘ಕಾಡುರುಷಿ’ಯವನು. ಈ ಕವಿತೆಯಲ್ಲಿ ಬರುವ ಮುಂದಿನ ಭಾಗ ಅವನ ಮೇಲಣ ಗೌರವ ದಿಂದ ಕವಿ ರಚಿಸಿದ ಸ್ಮಾರಕವಾಗಿದೆ.

ಪುಟ್ಟಣ್ಣ ಬಲು ಬಡವ, ಮನೆಯಿಲ್ಲ ಮಠವಿಲ್ಲ:
ಸತಿಸುತರು ಯಾರಿಲ್ಲ: ನೆಲವಿಲ್ಲ: ಹಣವಿಲ್ಲ:
ಸಂಸಾರವೆಂಬುದರ ಕೋಟಲೆಯು ಇಲ್ಲ!
ಓದು ಬರಹಗಳಿಲ್ಲ; ಕೆಟ್ಟ ಚಾಳಿಗಳಿಲ್ಲ
ಅವನಿಗಿಹ ಬಾಳಿನಾಸೆಯು ಕೋವಿ, ಬೇಟೆ!
ಕಾಡುಗಳೆ ಅವನ ಮನೆ; ಹೆದರಿಕೆಯ ಕಂಡರಿಯ,
ನಟ್ಟಿರುಳಿನಲ್ಲಿಯೂ ಕಾಡುಗಳಲಲೆಯುವನು:
ನಿದ್ದೆ ಬಂದರೆ ಅಲ್ಲೆ ಹಾಸುಗೆಯ ಮಾಡುವನು
ಹೆಚ್ಚೇನು ಅವನೊಬ್ಬ ಕಾಡುರುಷಿಯು!

ಅವನ ಅನುಭವ ರಾಶಿ ಮೂರ್ನಾಲ್ಕು ಹಳ್ಳಿಗಳಿಗೆ ಸೀಮಿತವಾದುದಾದರೂ, ವೈವಿಧ್ಯವಾದದ್ದು. ವಾಸ್ತವತೆಯ ಚೈತನ್ಯದಿಂದ ಕಳಕಳಿಸುವಂಥದು. ಅವನ ಸ್ಮೃತಿ ಅನೇಕ ಕಥೆಗಳ ನಿಧಿ.

ಕಥೆಗೆ ಯಾವ ರೀತಿಯಲ್ಲಿಯೂ ಅಗತ್ಯವೆಂದು ತೋರದ ಬನದೇವಿಯ ಸ್ತುತಿ ನಾಲ್ಕು ಪುಟಗಳಷ್ಟು ಹಬ್ಬಿಕೊಂಡಿದೆ. ಕಥಾಶಿಲ್ಪದ ದೃಷ್ಟಿಯಿಂದ ಅದು ಅನಗತ್ಯವಾದರೂ, ಕವಿಯ ಮನೋಧರ್ಮವನ್ನರಿಯುವಲ್ಲಿ ಅದು ಉಪಾದೇಯವಾಗುತ್ತದೆ. ಕಾಡಿನ ಮೌನ, ತಂಪು, ಏಕಾಂತ, ಶಾಂತಿ, ವಿಶ್ರಾಂತಿ ಹಾಗೂ ಅವುಗಳಿಂದ ಸಂಲಬ್ಧವಾಗುವ ಆನಂದ ಅಲ್ಲಿ ಅಲೆದಾಡುವ ಪುಣ್ಯಾತ್ಮರಿಗೆ ಮಾತ್ರ ಗೊತ್ತು. ಕವಿಗೆ ಕಾಡೇ ಹಾಲಿತ್ತ ತಾಯಿ, ಆತ್ಮವನ್ನು ಪೋಷಿಸಿದ ತಂದೆ; ಕಲ್ಪನೆಯ ಕಣ್ಣುಗಳನ್ನು ದಾನ ಮಾಡಿದ ಗುರು; ಕಬ್ಬದೂರಿಗೆ ಒಯ್ದ ಪರಮ ಗೆಳೆಯ. ಎಳವೆಯಲ್ಲಿ ಗುಟ್ಟಾಗಿ ಕಿವಿಯಲ್ಲಿ ಹೇಳಿದ ಬನದಮ್ಮನ ಮಾತುಗಳು ಕವಿ ಬೆಳೆಯುತ್ತ ಬೆಳೆಯುತ್ತ ಅರ್ಥವಾಗುತ್ತವೆ.

ನಾನೇನು ಬರೆದರೂ ಅದು ಎಲ್ಲ ನಿನ್ನದೇ;
ನನ್ನ ಕೀರ್ತಿಯನ್ನೆಲ್ಲ ಅರ್ಪಿಸುವೆ ನಿನಗೆ!

ಎಂದು ಕವಿ ತಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಪಟ್ಟಣದ ಗದ್ದಲವನ್ನು ಸಹಿಸಲಾರದೆ ಬಳಲಿ ಬೇಸತ್ತು, ಬೆಂಡಾಗಿ, ಬವಣೆಗೊಂಡಾಗ, ಕಂಬನಿಯ ಕರೆಯುವಾಗ ಬನದಮ್ಮನ ನೆನಪು ಅವರನ್ನು ಸಾಂತ್ವನಗೊಳಿಸುತ್ತದೆ.

ಕವಿಯು ಬರೆಯುವುದೆಲ್ಲ ಕೀರ್ತಿಗಲ್ಲಮ್ಮ
ಹಾಡಿರುವ ಹಾಡುಗಳಲಿನಿತಾದರೂ ಅವನ
ಎದೆ ತುಂಬಿ ತುಳುಕಿರುವ ಕಂಬನಿಗಳಮ್ಮ

ಎಂಬ ಕವಿಯ ಮಾತುಗಳಲ್ಲಿ ಕಾವ್ರೋವಿಧಾನವೂ, ಕವಿತೆಯ ಸ್ವರೂಪೋದ್ದೇಶಗಳೂ ವ್ಯಕ್ತವಾಗುತ್ತವೆ.

‘ಮಹಾದರ್ಶನ’ ಮತ್ತು ‘ಪ್ರಾಯಶ್ಚಿತ್ತ’ಗಳು ಬೆಳೆಯುತ್ತಿರುವ ಕವಿ ಚೇತನದ ಪ್ರಯೋಗಾವಸ್ಥೆಯ ಶಿಥಿಲ ಬಂಧಗಳೆಂಬುದು ನಿಜ. ಮುಂದೆ ಮಹಾಕವಿಯಾಗಲಿರುವ ಮಹಾಚೇತನದ ಕಲ್ಪನಾ ಪ್ರತಿಭೆಯ ಹೊಳಹುಗಳನ್ನು ನಡುನಡುವೆ ಗುರುತಿಸಬಹು ದೆಂಬುದಕ್ಕೆ ತಾಜಮಹಲ್ ವರ್ಣನೆಯನ್ನು ನಿದರ್ಶನಾರ್ಥವಾಗಿ ಇಲ್ಲಿ ಉದ್ಧರಿಸ ಬಹುದಾಗಿದೆ :

ಹೆಪ್ಪಾದ ಕೌಮುದಿಯೊ, ಗಡ್ಡೆಕಟ್ಟಿದ ಸುಧೆಯೊ, ತಿರೆಯ ಕಬ್ಬಿಗರ
ಕಬ್ಬಗಳನೆಲ್ಲಮಂ ಕರಗಿಸಿಳಿಸಿದ ಕಲ್ಪನೆಯ ಮುದ್ದೆಯಂತೆ
ಆದಿಯಿಂದಿಳೆಯಲುದಿಸಿದ ಶಿಲ್ಪಿವರರಮಲಕೀರ್ತಿಯೆಂಬಂತೆ,
ಪ್ರೇಮ ದುಃಖವನೆಲ್ಲ ಹಿಂಡಿ ತೆಗೆದಾನಂದ ರೂಪುಗೊಂಡಂತೆ
ಒಲಿದವರ ವಿರಹ ತಾಪವು ಚೆಲ್ಲಿದಮೃತ ಶಿಲೆಯಾಗಿ ಬಂದಂತೆ
ಪ್ರಣಯಿಗಳ ಚುಂಬನಗಳಾನಂದವೊಂದಾಗಿ ಮೂರ್ತಗೊಂಡಂತೆ,
ಪ್ರೇಮದಮೃತವ ಕರೆದು ಎದೆಯ ಬಟ್ಟಲೊಳಿಟ್ಟು, ವಿರಹದುರಿಮಾಡಿ,
ಆಮಲತೆಯ ಭೋಗಕುಸುಮಗಳಾಯ್ದು, ರಾಗ ಮಧುರಾಗಮಂ ಪೊಯ್ದು
ನಲ್ವಾತಿನಿಂ ಪೂಡಿ, ನೇಹಗಲಹದ ಕಲ್ಲು ಸಕ್ಕರೆಯ ಸುರಿದು,
ಚೆಂದುಟಗಳೆರಕದಿಂದನುರಾಗ ಚುಂಬನಗಳಿಟ್ಟಿಗೆಯನೆರೆದು
ಕಂಬನಿಗಳಂಬುವಿಂದಗಲಿದರ ಬಿಸುಸುಯ್ಲಿನಿಂದತನು ಶಿಲ್ಪಿ
ಕಟ್ಟಿದರಮನೆಯಂತೆ ಭುವನ ಮನಮೋಹಿಸಿತು ತಾಜಮಹಲೆಸೆದು,
ಯಾತ್ರಿಕರ ಗುಡಿಯಾಗಿ, ಶಿಲ್ಪಿಗಳ ಗುರುವಾಗಿ, ಕವಿಗಳಲರಾಗಿ
ಕಲೆಗಳಿಗೆ ಕಣ್ಣಾಗಿ, ಹೃದಯಗಳಿಗೊಲವಾಗಿ, ಸೊಬಗುವನೆಯಾಗಿ,
ಬಣ್ಣಿಪರ ಬೆಡಗಾಗಿ, ಕಂಗಳಿಗೆ ಬೆಳಕಾಗಿ, ತಿರೆ ಸಗ್ಗವಾಗಿ.

ತಾಜಮಹಲನ್ನು ಕುರಿತ ಹದಿನೈದು ಪಂಕ್ತಿಗಳ, ಈ ಶ್ರೇಷ್ಠ ಭಾವಗೀತೆಯಲ್ಲಿ ಭಾವ ಭಾಷೆಗಳ ಸಾಮರಸ್ಯವಿದೆ, ಸ್ವರ್ಗೀಯ ಮಾಧುರ್ಯವಿದೆ, ಕಲ್ಪನಾವಿಲಾಸವಿದೆ, ಉಪಮಾ ರೂಪಕಗಳ ಲಾಲಿತ್ಯವಿದೆ.

ಅದಿರಿನಲ್ಲಿ ನಡುನಡುವೆ ಕಾಣಿಸುವ ರೇಕುಗಳಂತೆ ಈ ರಚನೆಗಳಲ್ಲಿ ಮೊಳಮಾರಿಗೆ ಹೊಸ ಭಾವಭಾವನೆಗಳು ಮಿಂಚುತ್ತವೆ. ಭಾರತಿಯ ದುರ್ಗತಿಯನ್ನು ಕಂಡ ವೇದವ್ಯಾಸ ಬೆದರುತ್ತಾನೆ; ತನ್ನ ರಾಮಾಯಣರ ಭಾರತಿಯು ವಿಧವೆಯಾಗುವಳೆಂದು ವಾಲ್ಮೀಕಿ ಕೊರಗುತ್ತಾನೆ; ವೀರ ಶಿವರಾಯ ಕೆರಳುತ್ತಾನೆ, ‘ತನಗೆ ಮುಕುತಿಯನಿತ್ತ ಜಾನಕಿಯ ಹೆತ್ತ ಭಾರತಿಗೆ ಕಡುನೊಂದು’ ಬೆಂದ ರಾವಣ ರಾಮನನ್ನು ಕೂಗುತ್ತಾನೆ; ‘ಭೀಮ ಭೀಮಾ’ ಎಂದು ಕೌರವ ಚೀರುತ್ತಾನೆ.! ವೀರಹನುಮಂತ ಬೊಬ್ಬಿರಿಯುತ್ತಾನೆ. ಅವರೆಲ್ಲರ ಆರ್ತತೆ ಯನ್ನು ಪರಿಹರಿಸಲೆಂಬಂತೆ, ಲೋಕ ಕ್ಷೋಭೆಯನ್ನು ಅಡಗಿಸಲೆಂಬಂತೆ, ಭವತಾರಿಣಿಯ ಇಚ್ಚೆಯೆಂಬಂತೆ ಸಚ್ಚಿದಾನಂದ ಶಕ್ತಿ ಭಾರತಿಯ ಬಸಿರಿನಲ್ಲುದಯಿಸಲು ಅಣಿಯಾಗುತ್ತದೆ. ‘ಮೂಲೋಕದಾನಂದ ಮೂರ್ತಿಗೊಂಡೆಳೆ ಮಗುವಿನಾಕಾರವಾಂತು’ ಧ್ಯಾನಮಗ್ನನಾದ ಯೋಗಿಯ ತೊಡೆಯ ಮೇಲೇರುತ್ತದೆ. ‘ನರಋಷಿಯ ಗಲ್ಲವನ್ನು ತನ್ನ ನಳಿದೋಳ್ಗಳಿಂ ಪಿಡಿದು ಮೇಲೆತ್ತಿ ನೋಡಿ’ದ ಆ ಮಗು

“ಏಳು ನರನೇ ಏಳು! ಕರೆವೆ ನಾರಾಯಣಂ! ಸಾಕೀ ಸಮಾಧಿ!
ಮರಳಿ ಭೂತಳಕಿಳಿವ ಕಾಲವೊದಗಿದೆ ಏಳು ರೋದನವ ಕೇಳು!
ಹಿಂದಿನವತಾರಗಳನೆಲ್ಲಮಂ ಸಂಗ್ರಹಿಸುತವತರಿಪೆ ನಾನು
ಶ್ರೀರಾಮಕೃಷ್ಣಾಭಿಧಾನದಲಿ ಮೇಲೇಳು, ಬಾ ಹಿಂದೆ ನೀನು,
ಮಂಗಳದ ವಂಗಸುತೆಯುದರದಿಂ ಶ್ರೀ ವಿವೇಕಾನಂದನಾಗಿ”

ಶ್ರೀ ರಾಮಕೃಷ್ಣ ವಿವೇಕಾನಂದರ ಜೀವಿತೋದ್ದೇಶ ಸಾಧನೆ ಸಿದ್ದಿಗಳ ಮುನ್ಸೂಚನೆಗಳನ್ನಿಲ್ಲಿ ಕಾಣಬಹುದಾಗಿದೆ. ಈ ದರ್ಶನ ಕವಿಕಲ್ಪಿತವೇನಲ್ಲ. ಶ್ರೀ ರಾಮಕೃಷ್ಣರು ತಾವು ಕಂಡು, ಶಿಷ್ಯರಿಗೆ ವಿವರಿಸಿದ, ಮಹಾಸ್ವಪ್ನವೇ ಈ ದರ್ಶನಕ್ಕೆ ಆಧಾರವಾಗಿದೆ. ಹಲವು ದರ್ಶನಗಳ ನ್ನೊಳಗೊಂಡ ಮಹಾದರ್ಶನವಿದೆಂಬುದನ್ನು ವಾಚಕರು ಗ್ರಹಿಸಬೇಕಾಗಿದೆ.

‘ಪ್ರಾರಂಭದ ಇಂಥ ನನ್ನ ರಚನೆಗಳಲ್ಲಿ ಭಾಷೆ ಅಂಬೆಗಾಲಿಡುತ್ತಿದೆ, ಮಾತು ತೊದಲುತ್ತಿದೆ’ ಎಂದು ಕುವೆಂಪು ಅವರೇ ಹೇಳುವುದುಂಟು. ಇಲ್ಲಿಯ ಪದ ಪ್ರಯೋಗದಲ್ಲಿ ಬಿಗುವಿಲ್ಲ, ಬನಿಯಿಲ್ಲ; ನಡೆಯಲ್ಲಿ ಹದವಿಲ್ಲ; ಹೆಜ್ಜೆ ತಪ್ಪುವುದೂ ಉಂಟು; ಜತೆಗೆ ಪುನರುಕ್ತಿದೋಷಗಳು ನುಸುಳುತ್ತವೆಂದು ಹೇಳುವುದೂ ಸುಲಭ. ಆದರೂ ಜೊಲ್ಲಿನ ಜತೆಗೂಡಿದ ತೊದಲಿನಲ್ಲೊಂದು ಮಾಧುರ್ಯವಿದೆ; ತಿಪ್ಪ ತಿಪ್ಪ ಹೆಜ್ಜೆಯಲ್ಲೊಂದು ಸೊಗಸಿದೆಯೆನ್ನುವುದನ್ನು ಮರೆಯಲಾಗದು. ಕುವೆಂಪು ಸಾಹಿತ್ಯದ ಉಪಮಾ ಸಂಪತ್ತೇ ವಿಸ್ಮಯಕಾರಿಯಾದ ಸುಂದರ ಜಗತ್ತು; ಆ ಜಗತ್ತಿನಲ್ಲಿ ವಿಹಾರಗೈಯುವ ಯಾತ್ರಿಕರ ಭಾವಕೋಶ ಶ್ರೀಮಂತವಾಗುತ್ತದೆ; ಸುಪ್ತ ಕಲ್ಪನಾ ಪ್ರತಿಭೆ ಜಾಗೃತಗೊಳ್ಳುತ್ತದೆ; ಸೃಷ್ಟಿಯ ಅನೇಕ ಆಗೋಚರ ರಹಸ್ಯಗಳು ಮನದಟ್ಟಾಗುತ್ತವೆ, ಆ ಉಪಮಾ ಶ್ರೀಮಂತಿಕೆಯ ಗಂಗೋತ್ರಿಯನ್ನಿಲ್ಲಿಯೇ ಗುರುತಿಸಬಹುದಾಗಿದೆ. ಹಿಂದೂ ಮುಸ್ಲಿಮರ ನಡುವೆ ತಲೆದೋರಿದ ವೈಷಮ್ಯವನ್ನು ವಿವರಿಸುವಾಗ ಬಳಸಿರುವ

ಸಂಗೀತವಾಹಿನಿಯ ನಡುವೆ ಬಹುದುಃಸ್ವರಗಳರೆಯ ತೆರೆಯಂತೆ
ದಿವ್ಯ ಸೃಷ್ಟಿಯ ಮಧ್ಯೆ ತೋರಿಬಹ ಘೋರತರ ಯಮಪಾಪದಂತೆ
ಸೌಂದರ್ಯ ದೇವತೆಯ ವದನಾರವಿಂದದ ವಿರೂಪವೆಂಬಂತೆ
ಎಂಬ ಉಪಮೆಗಳು ಮನೋಜ್ಞವಾಗಿವೆ. ಅರ್ಥವತ್ತಾಗಿವೆ, ವಿನೂತನವಾಗಿವೆ.
ಹಾವುಗಳು ಹಾವಾಡಿಗನ ಕೊಳಲಿನಿಂಚರಕೆ ಮರುಳಾಗುವಂತೆ
ಹಕ್ಕಿಗಳು ಬೇಡರವನೆರಚಿರುವ ತೆನೆಗಳಿಗೆ ಬಂದೆರಗುವಂತೆ

ಭಾರತಾಂಬೆಯ ಸುತರು ಪಾಶ್ಚಾತ್ಯ ಸಂಸ್ಕೃತಿಯ ವೈಭವಕ್ಕೆ ಮನಸೋಲುತ್ತಾರೆನ್ನುವಲ್ಲಿಯ ಉಪಮೆಗಳು ಹೃದ್ಯವಾಗಿವೆ.

‘ಸಮುದ್ರಲಂಘನ’ದಂತೆ ಇವು ಸಹ ಕುವೆಂಪು ಅವರ ಪ್ರಥಮ ದರ್ಜೆಯ ರಚನೆಗಳಲ್ಲ, ನಿಜ. ಆದರೂ ಅವುಗಳಲ್ಲಿ ಆಸ್ವಾದ್ಯವಾದ ಭಾವಬಂಧುರತೆಯಿದೆಯೆಂಬುದನ್ನು ಉಪೇಕ್ಷಿಸ ಲಾಗದು. ಇವು ಕುವೆಂಪು ಸಾಹಿತ್ಯದ ತಲಕಾವೇರಿಗಳೆಂಬುದಂತು ದಿಟ.

 

 


[1]    ೧೯೮೧ನೆಯ ಇಸವಿಯಲ್ಲಿ ಇದು ಸಹ್ಯಾದ್ರಿ ಪ್ರಕಾಶನದಿಂದ ಅಚ್ಚಾಗಿದೆ.

[2]    ಸೌಕರ್ಯಕ್ಕಾಗಿ ಇದನ್ನು ವಾರ್ಧಿಕ ರಗಳೆಯೆಂದು ಹೊಸ ಹೆಸರಿನಿಂದ ಕರೆಯಬಹುದೆ?

[3]    ಶ್ರೀ ಕುವೆಂಪು ಅವರ ‘ಸ್ವಾಮಿ ವಿವೇಕಾನಂದ’ ಗ್ರಂಥದ ‘ಯಾರಿವನು?’ ಎಂಬ ಅಧ್ಯಾಯವನ್ನು ಓದಿ.