ಡಾ. ಕೆ.ಎಸ್. ಭಗವಾನರು ಪ್ರಜ್ಞಾವಂತ ಲೇಖರು, ಪ್ರಾಮಾಣಿಕ ವಿಚಾರವಂತರು, ಅದ್ಯತನ ಶ್ರೇಷ್ಠ ವಿರ್ಮಶಕರಲ್ಲೊಬ್ಬರು; ಗೊಡ್ಡುಸಂಪ್ರದಾಯ, ಸುಲಿಗೆ, ದಬ್ಬಾಳಿಕೆ, ಪ್ರತಿಗಾಮೀ ವ್ಯವಸ್ಥೆ ಎಲ್ಲಿದ್ದರೂ ಅದರ ವಿರುದ್ಧ ಸೆಣಸುವ ನಿಷ್ಠಾವಂತ ಹೋರಾಟಗಾರರು, ಸಂಕಲ್ಪ ನಿಷ್ಠ ಬಂಡಾಯಗಾರರು. ಸುಮಾರು ಎರಡು ದಶಕಗಳಿಂದ ಪುರೋಹಿತಶಾಹಿಯ ವಿರುದ್ಧ ಸತತವಾಗಿ, ನಿರ್ಭಿಡೆಯಿಂದ ದಾಳಿ ಮಾಡುತ್ತಿರುವ ಕೆಚ್ಚೆದೆಯ ಕಲಿಗಳು. ಅವರು ತ್ರಿಭಾಷಾ ಪಂಡಿತರು; ಅವರ ವೃತ್ತಿಭಾಷೆ ಇಂಗ್ಲಿಷ್; ಕಲಿತ ಭಾಷೆ ಸಂಸ್ಕೃತ; ಮಾತೃಭಾಷೆ ಕನ್ನಡ. ಈ ಮೂರು ಭಾಷೆಗಳಲ್ಲಿರುವ ಸಾಹಿತ್ಯದ ಗಾಢ ಅಧ್ಯಯನದಿಂದ ಅವರು ಅನುಭವ ಶ್ರೀಮಂತರಾಗಿದ್ದಾರೆ; ಅವರ ಆಲೋಚನೆಯಲ್ಲಿ ಸ್ವೋಪಜ್ಞತೆಯಿದೆ, ಅವರ ಶೈಲಿಯಲ್ಲಿ ಕಸುವಿದೆ, ಅರ್ಥವಂತಿಕೆಯಿದೆ, ದೀಪ್ತಿಯಿದೆ; ಕ್ರಾಂತಿಕಾರಕವಾದ ವಿಚಾರಸಾಹಿತ್ಯದಿಂದಾಗಿ ಅವರ ಹೆಸರು ಕರ್ನಾಟಕದಲ್ಲೆಲ್ಲ ಪಸರಿಸಿದೆ.

ಕುವೆಂಪು ಸಾಹಿತ್ಯವನ್ನು ಕುರಿತು ನಾನಾ ಸಂದರ್ಭಗಳಲ್ಲಿ ಬರೆದ ಲೇಖನಗಳ ಸಂಕಲನವೇ ‘ಕುವೆಂಪು ಯುಗ’. ಕನ್ನಡ ಸಾಹಿತ್ಯ ಚರಿತ್ರೆಯ ಇಪ್ಪತ್ತನೆಯ ಶತಮಾನದ ಅವಧಿಯನ್ನು ‘ಕುವೆಂಪು ಯುಗ’ವೆಂದು ಅವರು ಘೋಷಿಸಿದ್ದಾರೆ. ತಮ್ಮ ಘೋಷಣೆಯನ್ನವರು ಸಾಕಷ್ಟು ಸಾಕ್ಷಿ ಪುರಾವೆಗಳಿಂದ ಸಮರ್ಥಿಸಿಕೊಂಡಿದ್ದಾರೆ. ಕುವೆಂಪು ಅವರ ಲೇಖನಿಯಿಂದ ಮೂಡದ ಸಾಹಿತ್ಯಪ್ರಕಾರವಿಲ್ಲ; ಆ ಒಂದೊಂದು ಪ್ರಕಾರವೂ ಕಾಲಮಾನದ ದೃಷ್ಟಿಯಿಂದ ಮೊದಲು, ಗುಣದ ದೃಷ್ಟಿಯಿಂದ ಪ್ರಥಮ. ಅವರ ಸಾಹಿತ್ಯದಲ್ಲಿ ಕ್ಲಾಸಿಕಲ್, ನವೋದಯ, ಪ್ರಗತಿಶೀಲ, ಭಾವಾಂಶ, ರೂಪಾಂಶ, ಅರ್ಥಾಂಶ, ಮೌಲ್ಯಾಂಶ, ದರ್ಶನಾಂಶ, ವಿಚಾರಾಂಶ ಪ್ರತಿಯೊಂದ ರಲ್ಲಿಯೂ ಕುವೆಂಪು ಸಾಹಿತ್ಯ ಸಿದ್ದಿಯ ಶಿಖರವನ್ನೇರಿದೆ; ಈ ಕಾರಣದಿಂದಾಗಿ ‘ಕುವೆಂಪು ಯುಗ’ವೆಂಬುದು ಅತ್ಯುಚಿತವಾಗಿದೆ, ಅರ್ಥವತ್ತಾಗಿದೆ ಎಂದವರು ಸ್ಪಷ್ಟಪಡಿಸಿದ್ದಾರೆ. ‘ಚಾತುರ್ವರ್ಣ್ಯದ ಅಮಾನುಷ ಅಸಮಾನತೆಯ ಬಗ್ಗೆ ಕುವೆಂಪು ಅವರನ್ನು ಬಿಟ್ಟರೆ ಅವರ ತಲೆಮಾರಿನ ಯಾವ ಲೇಖಕನೂ ಅದರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿಲ್ಲ. ಸ್ವಾತಂತ್ರ್ಯ ಸಮಾನತೆ ಸರ್ವೋದಯ ಸೋದರತ್ವ ಕುವೆಂಪು ಸಾಹಿತ್ಯದ ಉಸಿರಾಗಿರುವಂತೆ…ಬೇರೆ ಬರಹಗಾರರ ಧ್ಯೇಯ ಧೋರಣೆಗಳ ಸೂತ್ರಗಳಾಗಿಲ್ಲ’ (೩) ಎಂಬ ಭಗವಾನರೆ ಮಾತು ನಿಜ.

ಬೆಂಗಳೂರಿನಲ್ಲಿ ನಡೆದ ಕುವೆಂಪು ಅವರ ಎಪ್ಪತ್ತೈದನೆಯ ಜನ್ಮೋತ್ಸವ ಸಂದರ್ಭದಲ್ಲಿ ಮಾಸ್ತಿಯವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಕನ್ನಡ ವಿಮರ್ಶಾಕ್ಷೇತ್ರದ ಟಿ.ಎಸ್. ಎಲಿಯಟ್ ಎನ್ನಬಹುದಾದ ವರಕವಿ ಜಿ.ಎಸ್. ಶಿವರುದ್ರಪ್ಪ ನವರು ಕುವೆಂಪು ಸಾಹಿತ್ಯದ ಬಗ್ಗೆ ಮಾತನಾಡುತ್ತ ಭಗವಾನರು ಈಗ ಏನು ಹೇಳಿದ್ದಾರೋ ಅದೇ ಅರ್ಥ ಬರುವಂತೆ ಹೇಳಿದರು. ‘ಕುವೆಂಪು ಯುಗ’ ಎನ್ನುವ ಮಾತನ್ನವರು ಬಳಸಲಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಸಿದ್ದಿಯನ್ನು ಸಾಧಿಸಿರುವ ಕುವೆಂಪು ಇತರ ಸಾಹಿತಿಗಳಿಗಿಂತ ಭಿನ್ನರಾಗಿದ್ದಾರೆ, ವಿಶಿಷ್ಟರಾಗಿದ್ದಾರೆ, ಎತ್ತರದಲ್ಲಿದ್ದಾರೆ ಎಂದು ನುಡಿದದ್ದುಂಟು. ಈ ಅವಧಿಯನ್ನು ಕುವೆಂಪು ಯುಗವೆಂದು ಕರೆಯುವಲ್ಲಿ ಭಗವಾನರು ಮುಂದಾಲೋಚನೆಯನ್ನು ನಿರ್ಭೀತಿಯನ್ನು ನಿರಸೂಯತೆಯನ್ನು ಮೆರೆದಿದ್ದಾರೆಂದೇ ಹೇಳಬೇಕು.

ಗದ್ಯಪದ್ಯಗಳೆರಡರಲ್ಲಿಯೂ ಕುವೆಂಪು ಅದ್ವಿತೀಯ ಸವ್ಯಸಾಚಿಯೆಂಬ ಹುರುಳಿನ ತಮ್ಮ ನಿಲವನ್ನು ವಿಮರ್ಶಕರು ‘ಕುವೆಂಪು ಅವರ ಗದ್ಯ’ ಎಂಬ ಪ್ರಬಂಧದಲ್ಲಿ ಸಮರ್ಥಿಸಿಕೊಂಡಿದ್ದಾರೆ. ಅಧ್ಯಯನದ ಅನುಕೂಲಕ್ಕಾಗಿ ಕುವೆಂಪು ಗದ್ಯವನ್ನು ಚಿಂತನಗದ್ಯ, ವಿಮರ್ಶಾಗದ್ಯ ಮತ್ತು ಕಥನಗದ್ಯ ಎಂದು ಮೂರು ಭಾಗಗಳಾಗಿ ವಿಂಗಡಿಸಿಕೊಂಡಿದ್ದಾರೆ. ಕ್ವಚಿತ್ತಾಗಿ ನಾಟಕಗಳಲ್ಲಿ, ವಿಶೇಷವಾಗಿ ಸಂಭಾಷಣೆಗಳಲ್ಲಿ ಬರುವ ಗದ್ಯವನ್ನು ನಾಟಕ ಗದ್ಯವೆಂದು ಪ್ರತ್ಯೇಕಿಸಬಹುದಿತ್ತು. ಜೀವನ ಚರಿತ್ರೆಯನ್ನು ಕಥನಗದ್ಯದ ಪರಿಧಿಯಲ್ಲಿ ಸಮೀಕ್ಷಿಸಬಹು ದಿತ್ತೇನೊ ಎನಿಸುತ್ತದೆ. ಚಿಂತನೆ ಭಾವನೆಗಳ ಜತೆಗೆ ಸಮತೂಕವಾಗಿ ಕಾವ್ಯಾಂಶಗಳನ್ನೂ ಒಳಗೊಂಡಿರುವ ಸಂಕೀರ್ಣತೆಯಿಂದಾಗಿ ಕುವೆಂಪು ಗದ್ಯದ ವಿಂಗಡಣೆ ಹಾಗೂ ವಿಶ್ಲೇಷಣೆ ವಿಮರ್ಶಕನಿಗೆ ಸವಾಲಾಗುತ್ತದೆ. ಚಿಂತನ ಗದ್ಯದಡಿಯಲ್ಲಿ ವಿಮರ್ಶಕರು ಜೀವನ ಚರಿತ್ರೆಯ ಗದ್ಯದ ವಿಷಯವನ್ನು ಪ್ರಸ್ತಾಪಿಸಿಲ್ಲ.

ಪದ್ಯದಂತೆ ಗದ್ಯವೂ ಒಂದು ಕಲೆ, ರೂಪಾಂಶದಲ್ಲಿ ಅವೆರಡರ ನಡುವೆ ವ್ಯತ್ಯಾಸವಿದ್ದರೂ ಅವೆರಡೂ ಪರಸ್ಪರ ಪೂರಕಗಳು. ಅವೆರಡೂ ಕಾವ್ಯದ ಎರಡು ಕಣ್ಣುಗಳು, ಅವೆರಡರಲ್ಲಿ ಯಾವುದೇ ದುರ್ಬಲವಾದರೂ ಸಾಹಿತ್ಯಕ್ಕೆ ಕೇಡು ಸಮನಿಸುತ್ತದೆಂದೂ, ಪ್ರಜಾಪ್ರಭುತ್ವದ ವೈಚಾರಿಕ ಹಾಗೂ ವೈಜ್ಞಾನಿಕ ಯುಗದಲ್ಲಿ ಗದ್ಯ ಸರ್ವವ್ಯಾಪಕವಾಗಿ ಮೆರೆಯಬೇಕಾಗಿದೆ ಯೆಂದೂ, ವೈಚಾರಿಕ ವಿವರಣೆಗೆ ಹಾಗೂ ಲೋಕವ್ಯವಹಾರಗಳ ಅಭಿವ್ಯಕ್ತಿಗೆ ಗದ್ಯ ಸಮರ್ಥ ಮಾಧ್ಯಮವಾಗಬೇಕಾಗಿದೆಯೆಂದೂ ಕುವೆಂಪು ಬಹುಹಿಂದೆಯೇ ಮನಗಂಡರಲ್ಲದೆ, ಪದ್ಯ ದಷ್ಟೇ ಸಮಪ್ರಮಾಣದಲ್ಲಿ ಗದ್ಯವನ್ನು ಸಹ ಸೃಷ್ಟಿಸಿದ್ದಾರೆ. ಕುವೆಂಪು ಪ್ರಧಾನವಾಗಿ ಕವಿ, ಆದ್ದರಿಂದ ಅವರ ಕಾವ್ಯ ಪ್ರತಿಭೆ ಅನಾಯಾಸವಾಗಿ ಧಾರೆ ಧಾರೆಯಾಗಿ ಗದ್ಯದಲ್ಲಿಯೂ ಪ್ರವಹಿಸುತ್ತದೆ. ಉಪಮೆ, ರೂಪಕ ಪ್ರತಿಮೆಗಳ ಲಾಸ್ಯವನ್ನು ಹೆಜ್ಜೆ ಹೆಜ್ಜೆಗೂ ಕಾಣಬಹುದು. ‘ಅವರದು ಭಾವಾಲೋಚನೆಯಿಂದ ಹದಗೊಂಡ ಅಭಿಜಾತಗದ್ಯ.. ರೂಪಕಗಳನ್ನೂ ವಿಶೇಷಣಗಳನ್ನೂ ವಿಚಾರದ ಸ್ಪಷ್ಟತೆಗಾಗಿ ಅನುಭವದ ಅನಾವರಣಕ್ಕಾಗಿ ಬಳಸುತ್ತಾರೆಯೇ ಹೊರತು ಕೇವಲ ಅಲಂಕಾರಕ್ಕಾಗಿ ಅಲ್ಲ… ಅವರು ಬಿಡಿಸಿರುವಷ್ಟೆ ನೂತನ ಭಾವಾಲೋಚನೆ ಗಳು, ಕೋದಿರುವಷ್ಟು ಹೊಸ ಪದಪುಂಜಗಳು ಬೇರೆ ಯಾರ ಲೇಖನಿಯಿಂದಲೂ ಬಂದಿಲ್ಲ’ ಎಂಬ ವಿಮರ್ಶಕರ ತೂಕದ ಮಾತು ನೂರಕ್ಕೆ ನೂರು ಪಾಲು ದಿಟ. ಕುವೆಂಪು ಎಂದೂ ಪದಗಳಿಗಾಗಿ ತಿಣುಕುವುದಿಲ್ಲ, ವಾಕ್ಯರಚನೆಗಾಗಿ ಹಣಕುವುದಿಲ್ಲ. ಸಂಸ್ಕೃತವೊ, ಹಳಗನ್ನಡವೊ, ಹೊಸಗನ್ನಡವೊ, ಹಳ್ಳಿಯ ಕನ್ನಡವೊ, ಡಿಳ್ಳಿಯ ಕನ್ನಡವೊ ಯಾವುದ ರಲ್ಲಿಯೂ ಅವರು ಭೇದವೆಣಿಸುವುದಿಲ್ಲ. ಅವು ತಮ್ಮ ಭಾವಾಲೋಚನೆಗಳನ್ನು ಪೂರ್ಣವಾಗಿ ಪ್ರತಿಬಿಂಬಿಸಿದರೆ ಸಾಕು; ಅರ್ಥ ಸೌಂದರ್ಯ ಲಯ ಮಾಧುರ್ಯ ತುಂಬಿಕೊಂಡಿದ್ದರಾಯಿತು; ಪದಮೈತ್ರಿ ಹಾಗೂ ಶ್ರವಣ ಸುಭಗವೂ ಸುಸೌಷ್ಠವವೂ ವೈವಿಧ್ಯಪೂರ್ಣವೂ ಆದ ವಿನೂತನ ರೀತಿಯ ಪದಬಂಧವಿದ್ದರೆ ಸರಿ. ಆದ್ದರಿದಲೇ ‘ಕುವೆಂಪು ಭಾಷೆ ಕನ್ನಡದ ವೈವಿಧ್ಯವನ್ನೆಲ್ಲ ಕೊಳ್ಳೆಹೊಡೆದಿರುವ ಏಕೈಕ ಆಧುನಿಕ ನಿದರ್ಶನ’ ಎಂದು ಭಗವಾನ್ ಹೇಳುತ್ತಾನೆ.

ಕುವೆಂಪು ಅವರ ಚಿಂತನ ಹಾಗೂ ಕಥನಗದ್ಯ ಸತ್ವಪೂರ್ಣವಾದದ್ದೆಂದು, ಸರ್ವಂಕಷ ವಾದದ್ದೆಂದು ಸಕಲಾಯಾಮಗಳನ್ನೊಳಗೊಂಡದ್ದೆಂದು, ಕಲಾಸುಂದರಿಯ ಮುನ್ನುಡಿ ಶ್ರೇಷ್ಠ ಮೀಮಾಂಸಾ ಪ್ರಬಂಧವೆಂದು ಮೆಚ್ಚಿಕೊಂಡಿರುವ ವಿಮರ್ಶಕರು ‘ವಿಮರ್ಶೆಗೆ ಬೇಕಾದ ಒಂದು ಹಾಳತವಾದ ಗದ್ಯಶೈಲಿಯನ್ನು ರೂಪಿಸುವುದರಲ್ಲಿ ಕುವೆಂಪು ಸಫಲವಾಗಿಲ್ಲ’ವೆಂದು ತಮ್ಮ ಅನಿಸಿಕೆಗಳನ್ನು ನಿಸ್ಸಂದಿಗ್ಧವಾಗಿ ಸ್ಪಷ್ಟಪಡಿಸಿದ್ದಾರೆ. ಅದೇ ಉಸಿರಿನಲ್ಲಿಯೆ ಅವರು (ಕುವೆಂಪು) ವಿಮರ್ಶೆಯಲ್ಲಿಕೂಡ ಸೃಜನಶೀಲ ಸಾಹಿತಿಯಾಗಿ ಬಿಡುವುದರಿಂದ ಅವರ ವಿಮರ್ಶೆ ಆಕರ್ಷಣೀಯವಾಗುತ್ತದೆ ಎಂದು ನುಡಿದು, ಮಹಾಶ್ವೇತೆಯ ತಪಸ್ಸು, ಸರೋವರದ ಸಿರಿಗನ್ನಡಿಯಲ್ಲಿ, ಪಂಪನ ಭವ್ಯತೆ ಇತ್ಯಾದಿ ಪ್ರಬಂಧಗಳನ್ನು ದೃಷ್ಟಿಯಲ್ಲಿಟ್ಟು ಕೊಂಡು ‘ವಾಚನೀಯತೆ ಕುವೆಂಪು ಗದ್ಯದ ಪ್ರಮುಖ ಗುಣ’ವೆಂದು ವಿಶದಪಡಿಸಿದ್ದಾರೆ. ಒಂದು ಕಡೆ ಕುವೆಂಪು ಅವರ ವಿಮರ್ಶಾಗದ್ಯ ಸಫಲವಾಗಿಲ್ಲವೆಂದು ಹೇಳಿ, ಮತ್ತೊಂದು ಕಡೆ ‘ಅವರ ಗದ್ಯ ಕೃತಿಗಳ ವಾಚನದಿಂದ ಸಹೃದಯ ವಿಚಾರವಂತನಾಗುವುದರ ಜತೆಗೆ ಪಾಂಡಿತ್ಯವನ್ನು ಗಳಿಸುತ್ತಾನೆ’ ಎಂದಿರುವಲ್ಲಿ ವಿಮರ್ಶಕರ ತಾಕಲಾಟದ ಜತೆಗೆ, ಕುವೆಂಪು ಗದ್ಯದ ಸಂಕೀರ್ಣತೆಯೂ ಭವ್ಯತೆಯೂ ವ್ಯಕ್ತವಾಗುತ್ತವೆ. ಕಾವ್ಯವಿಹಾರ ವಿಭೂತಿಪೂಜೆಗಳ ಗದ್ಯ ಬಗ್ಗಡವಿಲ್ಲದ ನೀರಿನಂತೆ, ಹರಿದ್ವಾರದ ಬಳಿಯ ಗಂಗೆಯಂತೆ ಸಲಿಲವಾಗಿ ಸುಲಲಿತ ವಾಗಿ ಪಾರದರ್ಶಕವಾಗಿ ಹರಿಯುತ್ತದೆಯೇ ಹೊರತು ಕ್ಲಿಷ್ಟತೆಯ ಸಂದರ್ಭಗಳೇ ಅಪರೂಪ.

ನಿಜ, ಮೀಮಾಂಸಾಕ್ಷೇತ್ರಕ್ಕೆ ಬಂದಾಗ ಕುವೆಂಪು ಅವರ ಗದ್ಯ ಭಾವಾಲೋಚನೆಗಳ ಒತ್ತಡದಿಂದ ಭಾರವಾಗುವುದುಂಟು. ಇಂಥ ಸಂದರ್ಭಗಳಲ್ಲಿಯೂ ಕುವೆಂಪುಅವರ ಗದ್ಯ ಒತ್ತು ಸೇವೆಗೆಯಂತಲ್ಲದೆ ಕರುವನ್ನು ಕಂಡು ಹಸು ಸೊರೆಬಿಡುವಂತೆ ಹರಿಯುತ್ತದೆಂದು, ಅದಕ್ಕೊಂದು ವಿಶಿಷ್ಟವಾದ ಪ್ರವಹನ ಶಕ್ತಿ ಇದೆಯೆಂದು ಹೇಳಬೇಕಾಗುತ್ತದೆ. ಸಾಮಾನ್ಯವಾಗಿ ಕ್ಲಿಷ್ಟವೆನಿಸಬಹುದಾದ ಸಂಸ್ಕೃತಭೂಯಿಷ್ಠ ವಾಕ್ಯಗಳು ಕಾಣಿಸಿಕೊಳ್ಳುವುದುಂಟು. ಕನ್ನಡ ಸಂಸ್ಕೃತಗಳ ನಂಟು ಎರಡು ಸಾವಿರ ವರ್ಷಗಳ ಅವಧಿಗೂ ಮೀರಿದ್ದು. ಇದರಿಂದಾಗಿ ಕನ್ನಡದಲ್ಲಿ ಎರಡು ಪ್ರಧಾನ ಭೇದಗಳು ರೂಢಿಯಲ್ಲಿವೆ; ಅಚ್ಚಗನ್ನಡ, ಸಂಸ್ಕೃತ ಕನ್ನಡ. ಅವೆರಡರ ನಡುವೆ ನಿರಂತರವಾಗಿ ನಡೆಯುವ ಕ್ರಿಯೆ ಪ್ರತಿಕ್ರಿಯೆ ಸಂಪರ್ಕ ಸಂಘರ್ಷ ಸಂಲಗ್ನಗಳ ಪರಿಣಾಮವಾಗಿ ಕನ್ನಡ ಭಾಷೆ ಸಮೃದ್ಧವಾಗಿ, ಸರ್ವಾಲಿಂಗನ ರೀತಿಯಲ್ಲಿ ಬೆಳೆಯುತ್ತಿದೆ. ಸ್ಥಾನ ಸಂದರ್ಭಗಳಿಗನುಗುಣವಾಗಿ ಕನ್ನಡ ಸಂಸ್ಕೃತಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಆಧುನಿಕ ವಿಜ್ಞಾನದ ಸಾಧನೆ ಸಿದ್ದಿಗಳ ಪರಿಣಾಮವಾಗಿ ಜಗತ್ತಿನ ಸಕಲ ರಾಷ್ಟ್ರಗಳ ನಡುವೆ ದಿನೇ ದಿನೇ ಸಂಪರ್ಕ ಅಧಿಕಗೊಳ್ಳುತ್ತಿರುವಾಗ, ನೂತನ ಭಾವನಾಲೋಚನೆಗಳ ಪ್ರಸರಣ ವಿಕಾಸ ಸಹಜ ಹಾಗೂ ಅನಿವಾರ್ಯ. ಈ ಭಾವನಾಲೋಚನೆಗಳ ಅಭಿವ್ಯಕ್ತಿಗೆ ವಿನೂತನ ಮಾಧ್ಯಮ, ಅಂದರೆ ಹೊಸ ಭಾಷೆಯನ್ನು ಕಂಡುಕೊಳ್ಳಬೇಕಾಗುತ್ತದೆ, ಇಲ್ಲವೆ ನಾಣ್ಯೀಕರಿಸಿಕೊಳ್ಳಬೇಕಾಗುತ್ತದೆ. ಅವಶ್ಯವೆನಿಸಿದರೆ ಭಾರತೀಯೇತರ ಭಾಷೆಗಳಿಂದಲೂ ಶಬ್ದ ಸಾಮಗ್ರಿಯನ್ನು ಎರವಲು ಪಡೆದುಕೊಂಡು, ನಮ್ಮ ಭಾಷೆಯೊಡನೆ ಒಗ್ಗಿಸಿಕೊಳ್ಳ ಬೇಕಾಗುತ್ತದೆ. ಪ್ರತಿಮೆ, ಭವ್ಯತೆ, ಭೂಮಾನುಭೂತಿ, ಮೊದಲಾದವುಗಳನ್ನು ಕನ್ನಡಿಸಲು ಸಾಧ್ಯವೆ? ಇವುಗಳಿಗೆ ಸಂಬಂಧಿಸಿದ ವ್ಯಾಖ್ಯಾನವನ್ನು ಮೇಲಿಂದ ಮೇಲೆ ಅಧ್ಯಯನ ಮಾಡದ ಹೊರತು ಈ ಬಿಡಿ ಬಿಡಿ ಪದಗಳ ಅರ್ಥ ಸಹ ಪಾಮರರಿಗಿರಲಿ, ಪಂಡಿತರಿಗೂ ವೇದ್ಯವಾಗಲಾರದು.

‘ಅವರ (ಕುವೆಂಪು) ಸಾಹಿತ್ಯ ವಿಮರ್ಶೆ (ಅಂದರೆ ಆನ್ವಯಿಕ ವಿಮರ್ಶೆ) ಮತ್ತು ಕಾವ್ಯಮೀಮಾಂಸೆ (ಕಾವ್ಯತತ್ವಗಳ ಜಿಜ್ಞಾಸೆ) ತತ್ವಜ್ಞಾನ ಹಾಗೂ ಯೌಗಿಕದರ್ಶನದಿಂದ ದೀಪ್ತಗೊಂಡಿರುವುದರಿಂದ ಅವರ ವಿಮರ್ಶಾಗದ್ಯ ಅನಾವಶ್ಯಕವಾಗಿ ಕ್ಲಿಷ್ಟವೂ ಸಂಸ್ಕೃತಭೂಯಿಷ್ಠವೂ ಆಗಿ, ವಿಚಾರಗ್ರಹಣಕ್ಕಿಂತ ಭಾಷೆಯನ್ನು ಅರಗಿಸಿಕೊಳ್ಳುವುದರಲ್ಲೇ ಓದುಗನ ಶಕ್ತಿಸಹನೆಗಳು ಬಳಲಿ ಬೆಂಡಾದರೆ ಅಚ್ಚರಿಪಡಬೇಕಾಗಿಲ್ಲ’ (೨೨) ವಿಮರ್ಶಕರ ಸಂದೇಹಕ್ಕೆ ಅವರ ಈ ಹೇಳಿಕೆಯಲ್ಲಿಯೇ ಉತ್ತರ ಅಡಗಿದೆಯೆನ್ನುವುದನ್ನು ತೋರಿಸ ಬಹುದು. ‘ಕಾವ್ಯಮೀಮಾಂಸೆ ತತ್ವಜ್ಞಾನ ಹಾಗೂ ಯೌಗಿಕ ದರ್ಶನದಿಂದ ದೀಪ್ತ ಗೊಂಡಿರು ವುದರಿಂದ’ ಎಂದು ಹೇಳಿ ತಮಗೆ ಅರಿವಿಲ್ಲದಂತೆಯೇ ಇಲ್ಲಿಯ ಭಾಷಾಕ್ಲಿಷ್ಟತೆಗೆ ಕಾರಣ ಕೊಟ್ಟಿದ್ದಾರೆ. ಭಾರತೀಯ ಕಾವ್ಯಮೀಮಾಂಸೆ ಅವೆರಡನ್ನೂ ಒಳಗೊಂಡಿದೆ ಎಂಬ ಅಂಶ ಸಂಸ್ಕೃತ ಕಾವ್ಯಮೀಮಾಂಸೆಯನ್ನು ಓದಿ ಅರಗಿಸಿಕೊಂಡಿರುವ ವಿಮರ್ಶಕರಿಗೆ ಗೊತ್ತೇ ಇರಬೇಕು. ಸಕ್ಕರೆಯ ತುಣುಕೊಂದನ್ನು ಹೊರಬಲ್ಲ ಇರುವೆ ಕಬ್ಬಿಣದ ಯಮಭಾರವನ್ನು ಹೊರಲಾರದು; ಅದನ್ನು ಹೊರಲು ಆನೆಯೇ ಬೇಕು. ಆನೆಗೆ ಅಂಬಾರಿ ಭೂಷಣವೇ ಹೊರತು ಹರಿಣಿಗಲ್ಲ.

‘ಸಚ್ಚಿದಾನಂದ ಬ್ರಹ್ಮದ ಆನಂದಾಕಾಶವೆ ಲೋಕದಲ್ಲಿ ಸೌಂದರ್ಯಶಕ್ತಿಯಾಗಿಯೂ ನಮ್ಮ ಪ್ರಜ್ಞೆಯಲ್ಲಿ ಸೌಂದರ್ಯಾನುಭವ ಸಾಮರ್ಥ್ಯವಾಗಿಯೂ ಗೋಚರಿಸುತ್ತದೆಂದು ಒಪ್ಪಿಕೊಂಡರೆ ಭವ್ಯತೆ ಸೌಂದರ್ಯವಾಗಿ ವ್ಯಕ್ತಗೊಂಡಿರುವ ಆ ಆನಂದಾಂಶದ ಮೂಲಕವಾಗಿ ಮೈದೋರುವ ಬ್ರಹ್ಮದ ‘ಭೂಮ’ತ್ವದಿಂದ ಸಿದ್ದಿಸುತ್ತದೆ. ಎಂದರೆ, ಭೂಮದ ಅವತರಣವಿಲ್ಲದೆ ಸೌಂದರ್ಯದ ಉತ್ಕರ್ಷಮಾತ್ರದಿಂದಲೆ ಭವ್ಯತೆ ಸಿದ್ದಿಸುವುದಿಲ್ಲ’ (ರಸೋ ವೈಸಃ ಪು. ೧೦೯) ಈ ವಾಕ್ಯಗಳಲ್ಲಿರುವ ಕ್ಲಿಷ್ಟತೆಗೆ ಕಾರಣ ಪದಗಳಲ್ಲ. ಆಲೋಚನೆ ಭಾವನೆಗಳೆಂಬುದನ್ನು ಸಹೃದಯರು ಅರಿಯಬೇಕಾಗಿದೆ, ವೇದವೇದಾಂತಗಳ ಪರಿಚಯವಿದ್ದವರಿಗೆ ಮಾತ್ರ ಅರ್ಥವಾಗುತ್ತವೆ, ಸಚ್ಚಿದಾನಂದ, ಬ್ರಹ್ಮ, ಭೂಮ ಮೊದಲಾದ ಪದಗಳು. ಈ ಮಾತುಗಳನ್ನು ತೆಗೆದು, ಅವುಗಳ ಸ್ಥಳಗಳಲ್ಲಿ ಬೇರೆ ಮಾತುಗಳನ್ನು ಬಳಸಲಾಗದು; ಅಂಥ ಮಾತುಗಳು ಸಿಗುವುದೂ ಇಲ್ಲ. ವಾಕ್ಯರಚನೆಯಲ್ಲಿ ಗೋಜಲಿಲ್ಲ, ಸುತ್ತು ಬಳಸಿಲ್ಲ. ಎಳನೀರು ಬೇಕಾದರೆ ತೆಂಗಿನ ಮರವನ್ನೇರಲೇಬೇಕು; ಗೌರೀಶಂಕರವನ್ನು ತಲುಪಬೇಕಾದರೆ ಹಿಮಾಲಯವನ್ನೇರಲೇಬೇಕು; ವಿಂಬಲ್‌ಡನ್ ಬಹುಮಾನ ಬೇಕಾದರೆ ಹತ್ತಾರುವರ್ಷಗಳ ಕಠೋರ ಸಾಧನೆ ಅನಿವಾರ್ಯ. ಮಾನವ ದೀರ್ಘಕಾಲದ ಅಭ್ಯಾಸವಿಲ್ಲದೆ ಏಕ್‌ದಂ ಗಗನಯಾತ್ರಿಯಾಗಲಾರ. ಸಮುದ್ರತಳವನ್ನು ಮುಟ್ಟಬಲ್ಲವನಿಗೆ ಮುತ್ತು ಮಾಣಿಕ್ಯ ಗಳು ದೊರೆಯುತ್ತವೆಯೆ ಹೊರತು, ದಡದಲ್ಲಿ ಕುಳಿತವನಿಗಲ್ಲ; ಎಂ.ಎ. ಪಾಸುಮಾಡಿದ ವನಿಗೆ ಪ್ರಾಧ್ಯಾಪಕ ಪದವಿ ಪ್ರಾಪ್ತವಾಗುತ್ತದೆಯೆ ಹೊರತು, ಇಂಟರ್‌ಮೀಡಿಯಟ್ ಪರೀಕ್ಷೆಯಲ್ಲಿ ಫೇಲಾದವನಿಗಲ್ಲ. ಆದ್ದರಿಂದ ಕ್ಲಿಷ್ಟತೆಯನ್ನು ಹಾಗೂ ಸಂಸ್ಕೃತ ಭೂಯಿಷ್ಠತೆಯನ್ನು ಗಮನದಲ್ಲಿರಿಸಿಕೊಂಡು ಕುವೆಂಪು ಅವರ ವಿಮರ್ಶಾಭಾಷೆ ಸಫಲವಾಗಿಲ್ಲವೆಂಬ ಮಾತು ಅಸಮಂಜಸವೆಂದು ತೋರುತ್ತದೆ. ಹೆಳವ ತೇನ್‌ಸಿಂಗನನ್ನು ಅಣಕಿಸುವಂತೆ, ಪೂರ್ವಗ್ರಹಪೀಡಿತರಾದ ವಿಮರ್ಶಕರು ಹಾಗೆಲ್ಲ ಹೇಳಬಹುದೇ ಹೊರತು, ಭಗವಾನ್‌ರಂಥ ವಿದ್ವಾಂಸರು, ಶ್ರೇಷ್ಠ ವಿಮರ್ಶಕರು ಹೇಳಿದ್ದಾರೆಂದರೆ ಅಚ್ಚರಿಯಾಗುತ್ತದೆ. ‘ಕೃತಿಯಲ್ಲಿ ಭಾಷೆಯ ಕ್ಲಿಷ್ಟಾಕ್ಲಿಷ್ಟತೆ ಮುಖ್ಯವಲ್ಲ; ಹಾಗೆ ಬಳಕೆಯಾದ ಭಾಷೆ ಎಷ್ಟರಮಟ್ಟಿಗೆ ಚರ್ಚಿತವಾಗುವ ಕೃತಿಯ ಸತ್ವವನ್ನು ಹೆಚ್ಚಿಸಿದೆ ಅಥವಾ ಪ್ರಕಟಿಸಿದೆ ಎನ್ನುವುದು ಮುಖ್ಯ’ (೫೦) ಎನ್ನುವ ವಿಮರ್ಶಕರ ಮಾತು ಗದ್ಯ ಸಮೀಕ್ಷೆಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ.

‘ದ್ರೌಪದಿಯ ಶ್ರೀಮುಡಿ ಎಂಬ ಪ್ರಬಂಧದಲ್ಲಿ ಕನ್ನಡ “ಶಾರದೆಯ ಮೂರಂ ಗುಲದ ಮೂಗಿಗೆ ಮೊಳದುದ್ದದ ಈ ಸಂಸ್ಕತ ಮೂಗುತಿಯೇಕೆ?” ಎಂದು ವಿಮರ್ಶಕರೊಬ್ಬರು ಮಾಡಿರುವ ಟೀಕೆಗೆ ಕುವೆಂಪು ಕೊಡುವ ಉತ್ತರವನ್ನು ಅವರ ದೈತ್ಯಶೈಲಿಗೂ ಅನ್ವಯಿಸಬಹುದು. ‘ಈ ಎಲ್ಲ ವಸ್ತುರಸಧ್ವನಿಯನ್ನು ಸಹೃದಯನ ಹೃದಯದಲ್ಲಿ ಒಮ್ಮೆಗೆ ಆಸ್ಫೋಟಿಸುವ ಸಲುವಾಗಿಯೇ ಕವಿಪ್ರತಿಭೆ ತನ್ನ ಗೌಡೀ ರೀತಿಯ ವಿಚಿತ್ರ ಮಾರ್ಗದ ಈ ಮಹಾಶೈಲಿಯನ್ನು ಆಶ್ರಯಿಸಿದೆ. ಆದರೆ ಆ ವ್ಯಂಗ್ಯಾರ್ಥ, ಆ ಧ್ವನಿ ನಮಗೆ ತಟಕ್ಕನೆ ಸ್ಫುರಿಸದಿದ್ದರೆ ಈ ಶೈಲಿ ಬರಿಯ ಶಬ್ದಾಡಂಬರವಾಗಿ ತೋರುವುದರಲ್ಲಿ ಸಂದೇಹವಿಲ್ಲ, (ದ್ರೌಪದಿಯ ಶ್ರೀಮುಡಿ, ೧೧) ಕೊಂಪೆಯಿಂದ ಕೊಂಪೆಗೆ ಕುದುರೆಗಾಡಿ ಸಾಕು, ನಗರದಿಂದ ನಗರಕ್ಕೆ ಕಾರುಬೇಕು, ರಾಷ್ಟ್ರದಿಂದ ರಾಷ್ಟ್ರಕ್ಕೆ ವಿಮಾನ ಅನಿವಾರ್ಯ, ಹಡಗಿನಲ್ಲಿ ಸಾಗಿಸಬಹು ದಾದ್ದನ್ನು ಎತ್ತಿನಗಾಡಿಯಲ್ಲಿ ಸಾಗಿಸಲಾಗದು. ಕಥಾನಕಕ್ಕೆ ಸರಳ ಸುಂದರ ಲಲಿತ ಶೈಲಿಯೇ ಸಾಕು; ಮಹೋನ್ನತ ಭಾವನಾಲೋಚನೆಗಳ ಅಭಿವ್ಯಕ್ತಿಗೆ ದೈತ್ಯ ಶೈಲಿಯೇ ಬೇಕು. ‘ಕುವೆಂಪು ಭಾಷೆ ಕನ್ನಡದ ವೈವಿಧ್ಯವನ್ನೆಲ್ಲ ಕೊಳ್ಳೆ ಹೊಡೆದಿರುವ ಏಕೈಕ ಆಧುನಿಕ ನಿದರ್ಶನ ಎಂದು ನನಗನ್ನಿಸಿದೆ’ (ಪು. ೧೮) ಎಂಬ ವಿಮರ್ಶಕರ ಮತು ನಿಜವಾಗಬೇಕಾದರೆ ಕುವೆಂಪು ಅವರ ದೈತ್ಯ ಶೈಲಿಯನ್ನು ಮರೆಯಲಾಗದು.

ಕುವೆಂಪು ಅವರ ಮಹಾಕಾವ್ಯದಲ್ಲಿ ಬರುವ ಹಲವಾರು ಮಹೋಪಮೆಗಳನ್ನು ಕುರಿತಂತೆ ಈಗಾಗಲೇ ಅನೇಕ ವಿದ್ವಾಂಸರು ವ್ಯಾಖ್ಯಾನಗಳನ್ನು ಮಂಡಿಸಿದ್ದಾರೆ. ಕನ್ನಡದಲ್ಲಿ ಅಂಥ ಮಹೋಪಮೆಗಳನ್ನು ಸಮೃದ್ಧವಾಗಿ ಸೃಷ್ಟಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲಬೇಕು. ಅವರ ಗದ್ಯ ಮಹಾಕಾವ್ಯಗಳಲ್ಲಿ ಅಂದರೆ ಮುಖ್ಯವಾಗಿ ಅವರ ಕಾದಂಬರಿಗಳಲ್ಲಿ ಬರುವ ಮಹೋಪಮೆಗಳನ್ನು ಗುರುತಿಸಿದ, ಅಂತೆಯೇ ವ್ಯಾಖ್ಯಾನಿಸಿದ ಪ್ರಥಮ ಯಶಸ್ಸು ಭಗವಾನರಿಗೆ ಸಲ್ಲಬೇಕು. ಸುಬ್ಬಮ್ಮನ ಬದುಕಿನ ದಾರುಣ ದುರಂತವನ್ನು ಸಂಕೇತಿಸುವ ದುಃಸ್ವಪ್ನ, ಚಿನ್ನಯ್ಯ ಪುಟ್ಟಮ್ಮನವರ ಜೀವನ ಸುಖವನ್ನು ಪ್ರತಿಮಿಸುವ ಸಮುದ್ರ ದ್ವೀಪಗಳ ಚಿತ್ರ, ಹಾಗೂ ಹೂವಯ್ಯನ ಅಂತರಾತ್ಮದ ವ್ಯಾಪಾರಗಳ ವರ್ಣನೆ (ಕಾ.ಹೆ.ಪು. ೮೬) ಇವೇ ಮೊದಲಾದವು ಕುವೆಂಪು ಕಾದಂಬರಿಗಳ ಮಹೋನ್ನತಿಗೆ ಕಾರಣವಾಗಿವೆ ಎಂಬುದನ್ನವರು ಸನಿದರ್ಶನವಾಗಿ ಸಾಬೀತುಗೊಳಿಸಿದ್ದಾರೆ. ಮಲೆನಾಡಿನ ಚಿತ್ರಗಳನ್ನು ಕಾನೂರು ಹೆಗ್ಗಡಿತಿಯೊಡನೆ ಹೋಲಿಸಿ, ಅವು ‘ಸಾಧಾರಣ’ ಎನ್ನುವ ವಿಮರ್ಶಕರ ವಿಮರ್ಶೆಯೂ ಅಂಗೀಕಾರಾರ್ಹವಲ್ಲವೆಂದೇ ಹೇಳಬೇಕು. ಏಕೆಂದರೆ ಅವುಗಳ ವಸ್ತು ಸಂದರ್ಭ ತಂತ್ರಗಳಲ್ಲಿಯೇ ಮೂಲತಃ ವ್ಯತ್ಯಾಸವಿದೆ ಎನ್ನುವುದನ್ನು ಮರೆಯಲಾಗದು.

ಕುವೆಂಪು ಅವರ ಗದ್ಯಕ್ಕೂ ಪದ್ಯಕ್ಕೂ ಹೇಳಿಕೊಳ್ಳುವಂಥ ಅಂತರವಿಲ್ಲವೆಂಬ ತಮ್ಮ ಪ್ರಮೇಯವನ್ನವರು ಉದ್ದಕ್ಕೂ ಯಶಸ್ವಿಯಾಗಿ ಸಾಬೀತುಗೊಳಿಸಿದ್ದಾರೆ. ಭಾವಾರ್ಥ ಶಬ್ದಗಳ ಮಧುರ ಸಮ್ಮಿಲನದಿಂದಾಗಿ ಅರ್ಥಸೌಂದರ್ಯ ನಾದಮಾಧುರ್ಯಗಳಿಂದಾಗಿ, ತಾತ್ವಿಕತೆ ವೈಚಾರಿಕತೆ ನಾಟಕೀಯತೆ ಹಾಗೂ ದಾರ್ಶನಿಕತೆಗಳ ಹಾಳತವಾದ ಸಮಾವೇಶ ದಿಂದಾಗಿ, ಸಂಕೀರ್ಣತೆ ವೈವಿಧ್ಯಗಳ ಸಮೃದ್ದಿಯಿಂದಾಗಿ, ಉಚಿತ ಕಾವ್ಯಾಂಶಗಳ ಹಾಸುಹೊಕ್ಕಿ ನಿಂದಾಗಿ ಕುವೆಂಪು ಗದ್ಯ ವಿಶಿಷ್ಟವಾಗಿದೆ, ಅಜೇಯವಾಗಿದೆ, ಶ್ರೀಮಂತವಾಗಿದೆ, ಪದ್ಯರಚಕ ರಾಗಿ ಇಷ್ಟೊಂದು ಗದ್ಯವನ್ನು ಸೃಜಿಸಿರುವ, ಗದ್ಯ ಲೇಖಕರಾಗಿ ಅಪಾರಕವಿತೆ ಮಹಾಕಾವ್ಯ ಗಳನ್ನು ನೀಡಿರುವ ಸಾಹಿತಿ ಯಾವ ಭಾಷೆಯಲ್ಲಾದರೂ ಅಪರೂಪವೆಂದೇ ಹೇಳಬೇಕು.

‘ಕುವೆಂಪು ಕನ್ನಡ ಸಾಹಿತ್ಯದ ಮೊಟ್ಟಮೊದಲ (ಪ್ರಾಯಶಃ ಹನ್ನೆರಡನೆಯ ಶತಮಾನದ ವಚನ ಸಾಹಿತ್ಯವನ್ನು ಬಿಟ್ಟರೆ -ಸಂ) ಬಂಡಾಯ ದನಿ. ಅವರಷ್ಟು ದಿಟ್ಟವಾಗಿ ಹಿಂದೂ ಸಮಾಜದ ಅನಿಷ್ಟಗಳನ್ನು ಬೊಟ್ಟು ಮಾಡಿ ತೋರಿದವರಿಲ್ಲ’ (ಪು. ೮೨) ಎಂಬ ಸತ್ಯದ ಕಡೆಗೆ ಭಗವಾನ್‌ರು ‘ಕಾನೂರು ಹೆಗ್ಗಡಿತಿ ಮತ್ತು ಬಂಡಾಯ’ ಎಂಬ ಪ್ರಬಂಧದಲ್ಲಿ ಬೆರಳು ಮಾಡಿ ತೋರಿಸಿದ್ದಾರೆ. ಕುವೆಂಪು ಅವರ ಯಾವ ಕೃತಿಗಳನ್ನು ಕೈಗೆ ತೆಗೆದುಕೊಂಡರೂ ಅವರ ಸಾಮಾಜಿಕ ಪ್ರಜ್ಞೆ ದಟ್ಟವಾಗಿ ಮೊಗದೋರುತ್ತದೆ. ಕೊನೆಗೆ ಶ್ರೀರಾಮಾಯಣದರ್ಶನಂ ಮಹಾಕಾವ್ಯದ ಲಕ್ಷ್ಮಣ, ವಾಲಿ, ರಾವಣ, ವಿಭೀಷಣ ಮೊದಲಾದ ಪಾತ್ರಗಳ ನಡೆವಳಿಯಲ್ಲಿ ತಕ್ಕಮಟ್ಟಿನ ಬಂಡಾಯ ದನಿಯನ್ನು ಗುರುತಿಸಬಹುದು. ಅವರ ಅನೇಕ ಕವಿತೆಗಳಲ್ಲಿ, ಕೆಲವು ಕತೆಗಳಲ್ಲಿ, ನಾಟಕಗಳಲ್ಲಿ ಹಾಗೂ ಕಾದಂಬರಿಗಳಲ್ಲಿ ಆ ದನಿ ಹೊಳಲುಗೊಡುತ್ತದೆ.

‘ರಾಮಾಯಣ ಮತ್ತು ಮಹಾಭಾರತ ವಿಶ್ವಸಾಹಿತ್ಯದ ಮೊಟ್ಟಮೊದಲ ದಲಿತ ಮಹಾಕಾವ್ಯಗಳು’ ಎಂಬುದಾಗಿ ‘ಕುವೆಂಪು ಕಂಡ ದಲಿತ ಜೀವನ’ ಪ್ರಬಂಧದಲ್ಲಿ ಭಗವಾನ್ ಪ್ರಸ್ತಾಪಿಸಿರುವ ಸಂಗತಿ ಚೋದ್ಯವಾಗಿದೆ. ರಾಮ ಲಕ್ಷ್ಮಣ ಸೀತೆ ಮತ್ತು ಪಾಂಡವರು ಹುಟ್ಟಿನಿಂದ ಬಲ್ಲಿದರಾದರೂ ಅನಿವಾರ್ಯ ಇಕ್ಕಟ್ಟಿನಿಂದ ದಟ್ಟ ದಲಿತರಾಗುತ್ತಾರೆಂದು ಅವರು ತಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳುವ ರೀತಿ ಯುಕ್ತಿಯುಕ್ತವಾಗಿದೆ. ಮೋಜಿನಿಂದ ಕೂಡಿದೆ. ನನಗೆ ತಿಳಿದಂತೆ ಈ ಮೊದಲು ಯಾರೂ ಈ ರೀತಿ ಆ ಪಾತ್ರಗಳನ್ನು ಸಮೀಕ್ಷಿಸಿದಂತೆ ಕಾಣೆ. ಹರಿಶ್ಚಂದ್ರ ಕಾವ್ಯದಲ್ಲಿ ಉಲ್ಲೇಖಗೊಂಡಿರುವ ದಲಿತ ಸಮಸ್ಯೆಯನ್ನು ಸಹ ವಿಮರ್ಶಕರು ಬುದ್ದಿಭಾವಗಳಿಗೆ ಸಮ್ಮತವಾಗುವಂತೆ ವಿವೇಚಿಸಿದ್ದಾರೆ. ಹಿಂಸೆಗೊಳ ಗಾದವನೆ ದಲಿತ ಎಂಬ ಅರ್ಥ ಸರಳವಾದರೂ, ಸತ್ಯವೆಂದೇ ಹೇಳಬೇಕಾಗುತ್ತದೆ. ಈ ಅರ್ಥದಲ್ಲಿ ಕಾನೂರು ಹೆಗ್ಗಡಿತಿಯ ಓಬಯ್ಯ ದಲಿತ; ಮಲೆಗಳಲ್ಲಿ ಮದುಮಗಳು ಕಾದಂಬರಿಯ ಸಣ್ಣಬೀರ, ಮೊಡಂಕಿಲ ಬಾಗಿ, ಚೀಂಕ್ರ ದೇಯಿ, ಪಿಜಣ ಅಕ್ಕಣಿ, ಐತ ಪೀಂಚಲು ಇವರೆಲ್ಲ ದಲಿತರು. ಈ ಪಾತ್ರಗಳ ನಿರೂಪಣೆಯಲ್ಲಿ ಕಠೋರ ವಾಸ್ತವ ಸತ್ಯವಿದೆ, ಕನಿಕರವಿದೆ, ಸಹಾನುಭೂತಿ ಇದೆ. ಸರ್ವೋದಯದಲ್ಲಿ, ವಿಶ್ವಮಾನವತ್ವದಲ್ಲಿ ಭರವಸೆ ಹೊಂದಿರುವ ಕುವೆಂಪು ಅವರ ದೃಷ್ಟಿಯಲ್ಲಿ ಲೋಕಶಾಂತಿಗೆ ಇಡೀ ಮನುಕುಲದ ಸರ್ವಸ್ತರಗಳ ಏಳಿಗೆ ಅನಿವಾರ್ಯವೆಂಬ ಸಂಗತಿ ಅವರ ಕತೆ ಕವಿತೆ ಕಾದಂಬರಿಗಳಲ್ಲಿ ಧ್ವನಿತಗೊಳ್ಳುತ್ತದೆ. ಅದನ್ನೇ ಭಗವಾನ್ ಈ ಪ್ರಕರಣದಲ್ಲಿ ಕೂಲಂಕಷವಾಗಿ ವಿವರಿಸಿದ್ದಾರೆ.

ಈ ಸಂಕಲನದ ಮತ್ತೊಂದು ಪ್ರಬಂಧ ರಕ್ತಾಕ್ಷಿ ಮತ್ತು ಹ್ಯಾಮ್ಲೆಟ್. ಈ ಎರಡು ನಾಟಕಗಳನ್ನು ವಿಮರ್ಶಕರು ತೌಲನಿಕವಾಗಿ ವಿಮರ್ಶಿಸಿ ಹ್ಯಾಮ್ಲೆಟ್ ಮುಂದೆ ರಕ್ತಾಕ್ಷಿ ಪೇಲವವಾಗುತ್ತದೆಂದು ತಮ್ಮ ನಿಷ್ಕಪಟ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಇಂಗ್ಲಿಷ್ ನಾಟಕವನ್ನು ಆಸ್ಥೆಯಿಂದ ಅಭ್ಯಾಸಮಾಡಿರುವ ಭಗವಾನ್‌ರ ಅಭಿಪ್ರಾಯ ಪ್ರಾಮಾಣಿಕವೆಂದೇ ಹೇಳಬೇಕಾಗುತ್ತದೆ. ಇಡೀ ಪ್ರಬಂಧವನ್ನು ಓದಿ ಮುಗಿಸಿದನಂತರ ಒಂದು ಮತ್ತೊಂದರ ಭಾಷಾಂತರವೂ ಅಲ್ಲ, ರೂಪಾಂತರವೂ ಅಲ್ಲ, ಭಾವಾನುವಾದವೂ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ತೌಲನಿಕ ವಿಮರ್ಶೆಯ ಪ್ರಯತ್ನ ಶ್ಲಾಘನೀಯವೇ ಹೌದು. ಒಂದನ್ನು ಮತ್ತೊಂದರ ಪಕ್ಕದಲ್ಲಿಟ್ಟು ಹೋಲಿಸಿ, ಭಿನ್ನ ವಿಭಿನ್ನ ಸಂಸ್ಕೃತಿಗಳ ಹಿನ್ನೆಲೆಯಲ್ಲಿ  ಮೂಡಿದ ಈ ನಾಟಕಗಳಲ್ಲಿ ಒಂದು ಅಸಾಧಾರಣವಾದದ್ದು, ಮತ್ತೊಂದು ಅತ್ಯಂತ ಸಾಮಾನ್ಯವಾದದ್ದು ಎಂದು ತರ್ಕಿಸುವುದು ಸರಿಯೆ ಎಂಬ ಸಂಗತಿ ವಿಚಾರಣೀಯ.

ರಕ್ತಾಕ್ಷಿ ಕನ್ನಡ ನಾಟಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಜನಪ್ರಿಯ ನಾಟಕ ವೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ನಾಟಕಕಾರರು ಇಂಗ್ಲಿಷ್ ನಾಟಕವನ್ನು ಓದಿರುವ ಸುಳಿವು ಕೆಲವು ಕಡೆ ಕಾಣಿಸಿದರೂ ರಕ್ತಾಕ್ಷಿ ಸ್ವತಂತ್ರ ನಾಟಕವೆಂಬುದರಲ್ಲಿ ಸಂದೇಹವಿಲ್ಲ. ಭಾರತೀಯ ಸಂಸ್ಕೃತಿಯ ಪೋಷಣೆಯಲ್ಲಿ ಬೆಳೆದಿರುವ ಬಸವಯ್ಯನನ್ನು ಪಾಶ್ಚಾತ್ಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬೆಳೆದಿರುವ ಹ್ಯಾಮ್ಲೆಟ್‌ನೊಡನೆ ಹೋಲಿಸಿ, ಅವರ ವ್ಯಕ್ತಿತ್ವದ ಬಗ್ಗೆ ಅಂತಿಮ ನಿರ್ಣಯ ನೀಡುವುದು ಸರಿಯೆ ಎಂದು ಯೋಚಿಸಬೇಕಾಗಿದೆ. ಅನ್ಯಾಯದ ವಿರುದ್ಧ ಹೆಡೆಯೆತ್ತಿದ ಸೇಡು ಎರಡು ನಾಟಕಗಳ ಏಕಮಾತ್ರ ಆಶಯವಾಗಿದೆ. “ಓ ಚಂಚಲತೆ, ನಿನ್ನ ಹೆಸರೇ ಸ್ತ್ರೀಯಲ್ತೆ?” ಎಂಬ ಸಾಮಾನ್ಯೀಕರಣ ರುದ್ರಾಂಬೆಯ ವ್ಯಕ್ತಿತ್ವವನ್ನು ಪರಿಶೀಲಿಸಿದಾಗ ನಿಜವಾಗುವುದಿಲ್ಲ ಎಂಬಲ್ಲಿ ಅತಿವ್ಯಾಪ್ತಿ ದೋಷವಿದೆ ಯೆಂದೇ ತೋರುತ್ತದೆ. ಒಬ್ಬ ಹೆಂಗಸಿನ ಮಾನಭಂಗ ಮಾಡಿದ ಇಬ್ಬರು ಹುಡುಗರನ್ನು  ಉದಾಹರಣೆಯಾಗಿಟ್ಟುಕೊಂಡು, ಈಗಿನ ಕಾಲದ ಹುಡುಗರೇ ಹೀಗೆ ಎಂದು ಹೇಳಿದಂತಾಗಿದೆ. ಕುವೆಂಪು ಅವರೆಂದೂ ಸಾರಾಸಗಟಾಗಿ ಸ್ತ್ರೀಕುಲವನ್ನು ದ್ವೇಷಿಸಿದವರಲ್ಲ; ದುಷ್ಟಸ್ತ್ರೀಯರ ಬಗ್ಗೆಯೂ ಅವರಿಗೆ ಬುದ್ಧನ ಅನುಕಂಪೆಯಿದೆ ಎನ್ನುವುದನ್ನು ಮರೆಯ ಲಾಗದು.

ಬಸವಯ್ಯ ಚೆಲುವಾಂಬೆಯರ ಕ್ಲಾಡಿಯಸ್ ಗರ್‌ಟ್ರೂಡರ ಪರಸ್ಪರ ಸಂಬಂಧದಲ್ಲಿಯೇ ವ್ಯತ್ಯಾಸವಿದೆ : ಒಬ್ಬಳು ಮಲತಾಯಿ, ಮತ್ತೊಬ್ಬಳು ಹೆತ್ತತಾಯಿ; ಒಬ್ಬನು ಸೇನಾಪತಿ, ಮತ್ತೊಬ್ಬನು ಮೈದುನ. ಬಸವಯ್ಯ ಅಂತರ್ಮುಖಿ, ಭಾವುಕ; ತನ್ನ ಮಲತಾಯಿಯ ಪಾಪಕರ್ಮಕ್ಕಿಂತ ಮಿಗಿಲಾಗಿ, ತನ್ನ ತಂದೆಯ ದುರಂತ ಅವನನ್ನು ದುಃಖಕ್ಕೀಡುಮಾಡುತ್ತದೆ. ಮೋಸದ ಮರಣದಿಂದಾಗಿ ಸೇಡು ಮಸೆಯಲವನಿಗೆ ಅವಕಾಶವಾಗುವುದಿಲ್ಲ. ಒಂದು ಪಕ್ಷ ಬದುಕಿದ್ದರೂ ಸೇಡು ತೀರಿಸಿಕೊಳ್ಳುವ ಛಲ ಅವನಲ್ಲಿರುತ್ತಿತ್ತೆ? ಆ ಮುಗ್ಧ ವ್ಯಕ್ತಿಗೆ ಅಕಾಲ ಮರಣವೇ ವರವಾಗಿ ಪರಿಣಮಿಸುತ್ತದೆ. ಅವನ ಜತೆಯಲ್ಲಿ ಸೇಡೂ ಸಾಯುತ್ತದೆ. ಸತ್ತವನಿಗೆ ಸೇಡು ತೀರಿದರೆಷ್ಟು, ತೀರದಿದ್ದರೆಷ್ಟು? ತನ್ನ ಸೇಡನ್ನು ತೀರ್ಚುವಂತೆ ಅವನು ತನ್ನ ಆಪ್ತಮಿತ್ರ ಹೊನ್ನಯ್ಯನಿಗೆ ಹೇಳಿದ್ದರಲ್ಲಿ ತಪ್ಪಿಲ್ಲ. ಸಾಯುವಾಗ ಹೊನ್ನಯ್ಯ ಬಸವಯ್ಯನ ಬಯಕೆಯನ್ನು ರುದ್ರಾಂಬೆಗೆ ರವಾನಿಸಿದ್ದು ಸಹಜವೇ. ಆ ಪರಿಸ್ಥಿತಿಯಲ್ಲಿ ಅದಾವುದೂ ಕೃತಕವಲ್ಲ. ತನ್ನ ಆಪ್ತಮಿತ್ರನಿಗಾಗಿ ಪ್ರಾಣವನ್ನೇ ಬಲಿಗೈದುಕೊಂಡ ಹೊನ್ನಯ್ಯನ ಉಜ್ವಲ ತ್ಯಾಗ ಸೇಡೆಂಬ ಆಸುರೀ ಗುಣಕ್ಕಿಂತ ಶ್ರೇಷ್ಠವಲ್ಲವೆ? ಬಸವಯ್ಯನೇ ತನ್ನ ಪ್ರಾಣಾಧಿಕೆ ರುದ್ರಾಂಬೆಯಲ್ಲಿ ಮೈದುಂಬಿಕೊಂಡು ಸೇಡು ತೀರಿಸಿಕೊಂಡದ್ದು ಅತ್ಯಂತ ಸಹಜ. ಒಲಿದ ಜೀವಕ್ಕಾಗಿ ತನ್ನನ್ನು ತಾನೇ ಬೇಳ್ವೆಗೊಂಡ ರುದ್ರಾಂಬೆಯ ಆತ್ಮಸಮರ್ಪಣೆ ಅಕುಟಿಲ ನಿಸ್ವಾರ್ಥ ಪ್ರೇಮಕ್ಕೆತ್ತಿದ ದಿವ್ಯಾರತಿಯಾಗಿದೆ. ಆಸುರೀಗುಣ ದೈವೀಗುಣದಲ್ಲಿ ವಿಲಯನಗೊಳ್ಳುವುದೆ ಭಾರತೀಯ ಸಂಸ್ಕೃತಿಯ ಹೆಗ್ಗುಣ. ಹ್ಯಾಮ್ಲೆಟ್ ಅಂತ್ಯಕ್ಕಿಂತ ರಕ್ತಾಕ್ಷಿಯ ಅಂತ್ಯ ಭಾರತೀಯ ದೃಷ್ಟಿಯಿಂದ ಈ ದೃಷ್ಟಿಯಿಂದ ಹೆಚ್ಚು ಸಹಜ ಹಾಗೂ ಉಚಿತವೆಂದೇ ಹೇಳಬೇಕು. ಕನ್ನಡ ನಾಟಕ ಸ್ವತಂತ್ರವೆನ್ನುವುದಕ್ಕೆ, ಅದು ಇಂಗ್ಲಿಷ್ ನಾಟಕವನ್ನು ನಿಕಟವಾಗಿ ಅನುಸರಿಸಿಲ್ಲ ಎಂಬುದಕ್ಕೆ, ಇದೂ ಒಂದು ಕಾರಣ.

ವಿಮರ್ಶಕರು ಎತ್ತಿರುವ ಎಲ್ಲ ಕೊರತೆಗಳಿಗೂ ಉತ್ತರವನ್ನು ಕೊಡಬಹುದು. ಆದರೆ ಮುನ್ನುಡಿ ದೀರ್ಘವಾಗುತ್ತದೆಂಬ ಶಂಕೆಯಿಂದ, ಇಲ್ಲಿ ಅದೆಲ್ಲ ಅಪ್ರಸ್ತುತವೆಂಬ ಭಾವನೆಯಿಂದ ವಿಮರ್ಶೆಯ ವಿಮರ್ಶೆಯನ್ನು ನಿಲ್ಲಿಸಬೇಕಾಗಿದೆ. ‘ಇದು ಕನ್ನಡಕ್ಕೆ ಹ್ಯಾಮ್ಲೆಟ್ ಕಾವ್ಯ. ಇಂಗ್ಲಿಷಿನಲ್ಲಿ ಹ್ಯಾಮ್ಲೆಟ್ ಹುಟ್ಟಿದಾಗ ಅದರ ಸಾಹಿತ್ಯವು ಅತ್ಯುನ್ನತ ಶಿಖರವನ್ನೇರಿತು. ರಕ್ತಾಕ್ಷಿಯಂಥ ಶ್ಲಾಘ್ಯ ಸ್ವತಂತ್ರ ಐತಿಹಾಸಿಕ ನಾಟಕವು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹುಟ್ಟಿದಾಗ ಅದರ ಮಟ್ಟವು ಬಹುಎತ್ತರಕ್ಕೆ ಏರಿರುವುದೆನ್ನುವುದರಲ್ಲಿ ಸಂದೇಹವಿಲ್ಲ’ ಎಂಬ ಎ.ಆರ್. ಕೃಷ್ಣಶಾಸ್ತ್ರಿಗಳ ಅಭಿಪ್ರಾಯ ತುಸು ಹೆಚ್ಚೆನ್ನಬಹುದಾದರೂ, ಖಂಡಿತವಾಗಿ ಆಕ್ಷೇಪಾರ್ಹವಾದದ್ದಲ್ಲ. ಅಂತೆಯೇ ‘ಅದು (ರಕ್ತಾಕ್ಷಿ) ಕನ್ನಡದ ಒಂದು ಒಳ್ಳೆಯ ನಾಟಕವಲ್ಲ’ ಎಂಬ ವಿಮರ್ಶಕರ ಖಂಡನೆ ಆನಂದಾರವಾದದ್ದೆಂದೂ, ಆ ಮಾತಿನ ಹಿಂದಿರುವ ಮನೋಭಾವ ಅರ್ಥವಾಗದೆಂದೂ ಹೇಳಬೇಕಾಗಿದೆ.

ಈ ವಿಷಯದಲ್ಲಿ ವಿಮರ್ಶಕರ ಅಭಿಪ್ರಾಯಕ್ಕೂ ನನ್ನ ಅಭಿಪ್ರಾಯಕ್ಕೂ ತುಂಬ ಅಂತರವಿದೆ; ಈ ಅಭಿಪ್ರಾಯ ಭೇದ ಪ್ರಾಮಾಣಿಕವಾದದ್ದೇ. ಏಕೆಂದರೆ ಭಗವಾನ್‌ರು ಶ್ರೇಷ್ಠ ವಿಮರ್ಶಕರೆಂಬುದನ್ನು ಈ ಹಂತದಲ್ಲಿಯೂ ಹೃತ್ಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಅಭಿಪ್ರಾಯ ಸ್ವಾತಂತ್ರ್ಯವೇ ಸಾಹಿತ್ಯದ ಆರೋಗ್ಯಕ್ಕೆ ಸಾಧನ. ಆದರೆ ಆ ಸ್ವಾತಂತ್ರ್ಯ ಸ್ವಾಚ್ಛಂದ್ಯವಾಗಬಾರದು; ಹಾನಿಕಾರಕವಾಗಬಾರದು. ಒಬ್ಬೊಬ್ಬರಿಗೆ ಒಂದೊಂದು ರೀತಿ ಕೃತಿಯಲ್ಲಿ (Hamlet) ಕಂಡಿದೆ ಎನ್ನುವುದೇ ಕೃತಿಯ ಸಂಕೀರ್ಣತೆಗೆ ಸಾಕ್ಷಿ’ (೧೫೨) ಎನ್ನುವ ಭಗವಾನ್‌ರ ಸದುಕ್ತಿಯ ಕೆಳಗೆ ನಾನು ಸಹ ರುಜು ಹಾಕುತ್ತೇನೆ.

ಕುವೆಂಪು ಮತ್ತು ರೊಮೆಯ್ನ ರೋಲಾಂಡ್ ಈ ಸಂಕಲನದ ಕೊನೆಯ ಲೇಖನ. ‘ರೊಮೆಯ್ನ ರೋಲಾಂಡ್ ಮತ್ತು ಕುವೆಂಪು ಹಲವು ಅಂಶಗಳಲ್ಲಿ, ವಿಶೇಷವಾಗಿ ಸಾಹಿತ್ಯಕ್ಷೇತ್ರದಲ್ಲಿ ಸಮಾನ ಭೀಷ್ಮ ವ್ಯಕ್ತಿತ್ವವುಳ್ಳವರಾಗಿ ಕಾಣುತ್ತಾರೆ. ಇಬ್ಬರಲ್ಲೂ ಒಂದೇ ಬಗೆಯ ಆಧ್ಯಾತ್ಮಿಕ ಹಸಿವು ಗೋಚರಿಸುತ್ತದೆ’ (೧೫೫) ಎಂಬ ನಾಂದಿ ವಾಕ್ಯಗಳೊಡನೆ ಈ ಲೇಖನವನ್ನು ಪ್ರಾರಂಭಿಸಲಾಗಿದೆ. ಈ ಇಬ್ಬರ ಕೃತಿಗಳ ತೌಲನಿಕ ವಿಮರ್ಶೆಗಿಂತ ಮಿಗಿಲಾಗಿ ಶ್ರೀ ರಾವಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಸಾಧನೆ ಸಿದ್ದಿ ಮತ್ತು ಪ್ರಭಾವಗಳ ಸೊಗಸಾದ ವಿವರಣೆಯ ಕಡೆಗೆ ವಿಮರ್ಶಕರ ಗಮನ ಹರಿದಿದೆ. ‘ವಿವೇಕಾನಂದರ ಹಿಂದೂ ಸಮಾಜದ ಖಂಡನೆಯನ್ನು ಮರೆಮಾಚುವುದರಿಂದ ಅವರಿಗೆ ಭಾರಿ ಅನ್ಯಾಯ ಮಾಡಿದಂತಾಗುತ್ತದೆ’ (೧೬೩) ಎಂಬ ವಿಮರ್ಶಕರ ನಿರ್ಣಯ ಯಥಾರ್ಥ ವಾಗಿದೆ.

‘ರೊಮೆಯ್ನ ರೋಲಾಂಡರ ಕೃತಿಗಳನ್ನು ಮಾದರಿಯಾಗಿಟ್ಟುಕೊಂಡು ಕುವೆಂಪು ತಮ್ಮೆರಡು ಗ್ರಂಥಗಳನ್ನು ಬರೆದಿರುವಂತೆ ತೋರುತ್ತದೆ. ಸ್ಥೂಲವಾಗಿ ನೋಡಿದರೆ ಅನೇಕ ವಾಕ್ಯಗಳನ್ನು, ಕೆಲವು ವಾಕ್ಯಖಂಡಗಳನ್ನು ನೇರವಾಗಿ ಭಾಷಾಂತರಮಾಡಿ ಕೊಂಡಿರುವಂತೆ ತೋರುತ್ತದೆ’ (೧೬೬-೧೬೭) ಎಂದು ವಿಮರ್ಶಕರು ಮೊದಲಲ್ಲೇ ತಮ್ಮ ತೀರ್ಪನ್ನು ಸಾಮಾನ್ಯೀಕರಿಸುತ್ತಾರೆ. ಉದ್ಧೃತವಾಕ್ಯಗಳಲ್ಲಿ ಕೆಲವು ಭಾವಾನುವಾದವಾಗಿವೆ, ಕೆಲವು ಮೂಲಕ್ಕಿಂತ ಉತ್ತಮವಾಗಿವೆ. ಇಬ್ಬರಿಗೂ ಒಂದೇ ಮೂಲ ಆಧಾರವಾಗಿದ್ದಿರಬಹುದಾರೂ, ಕುವೆಂಪು ಅವರಿಗೆ ಫ್ರೆಂಚ್ ಜೀವನ ಚರಿತ್ರಕಾರನ ಕೃತಿಗಳು ಮಾದರಿಯಾಗಿದ್ದುವೆನ್ನುವುದರಲ್ಲಿ ಸಂಶಯವಿಲ್ಲ. ಮಾದರಿ ಗ್ರಂಥಗಳಿಗಿಂತ ಕುವೆಂಪುಅವರ ಗ್ರಂಥಗಳು ಉತ್ತಮವಾಗಿವೆ ಎಂಬುದನ್ನು ಸರ್ವಧರ್ಮ ಸಮ್ಮೇಳನಕ್ಕೆ ವಿವೇಕಾನಂದರು ಸಾಗರ ಮಹಾಯಾತ್ರೆಯನ್ನು ಕೈಗೊಂಡ ಸಂದರ್ಭವನ್ನು ಉಲ್ಲೇಖಿಸಿ ವಿಮರ್ಶಕರೇ ಸಮರ್ಥಿಸಿಕೊಂಡಿದ್ದಾರೆ.

‘ಇಲ್ಲಿ ಉದ್ಧೃತವಾದ ಹತ್ತು ಹನ್ನೆರಡು ಪುಟಗಳಾಗುವಷ್ಟು ಸಾದೃಶ್ಯಗಳನ್ನು ಬಿಟ್ಟರೆ, ಐನೂರಕ್ಕೂ ಮಿಕ್ಕ ಪುಟಗಳಲ್ಲಿ ವ್ಯಾಪಿಸಿಕೊಂಡಿರುವ ಈ ಎರಡು ಕೃತಿಗಳು ಉತ್ತಮ ಜೀವನ ಚರಿತ್ರೆಗಳಾಗಿವೆ’ (೧೮೧) ಎಂಬ ವಿಮರ್ಶಕರ ತೀರ್ಮಾನ ಸಾಧುವಾಗಿದೆ. ೧೬೬ನೆಯ ಪುಟದಲ್ಲಿ ತಾವು ನೀಡಿದ ತೀರ್ಪನ್ನು ತಿದ್ದಿಕೊಂಡಂತಿದೆ.

ಶ್ರೀ ರಾಮಕೃಷ್ಣ ಮಹಾಸಂಘದ ಮಹೋದ್ದೇಶಗಳಲ್ಲೊಂದು ವರ್ಣಾಶ್ರಮ ಧರ್ಮದ ಪರವಾಗಿದೆ. ‘ಅದನ್ನು ಕುವೆಂಪು ಸಾರಾಸಗಟು ಒಪ್ಪಿಕೊಂಡಿದ್ದಾರೆಂದು ಓದುಗರಿಗೆ ಮನವರಿಕೆ ಯಾಗುತ್ತದೆ’ ಎಂದು ಭಗವಾನರು ಉದ್ಗಾರ ತೆಗೆದಿದ್ದಾರೆ. ಸಂಘದ ಉದ್ದೇಶಗಳನ್ನು ಇಲ್ಲಿ ಮಕ್ಕಿಕಾಮಕ್ಕಿಯಾಗಿ ಪ್ರತಿಮಾಡಲಾಗಿದೆಯೇ ಹೊರತು, ವರ್ಣಾಶ್ರಮ ಧರ್ಮದಲ್ಲಿ ಕುವೆಂಪು ಅವರಿಗೆ ಎಳ್ಳಷ್ಟೂ ನಂಬಿಕೆಯಿಲ್ಲದ್ದು ಅವರ ಪ್ರಾರಂಭದ ಕೃತಿಗಳಿಂದಲೇ ಸ್ಪಷ್ಟವಾಗುತ್ತದೆ. ಈ ವಿಷಯದಲ್ಲಿ ಕುವೆಂಪು ಅವರದು ಮಾಹೇಶ್ವರನಿಷ್ಠೆ ಎಂಬುದನ್ನು ಅವರ ಕೃತಿಗಳ ಓದುಗರು ಮತ್ತು ಅವರೊಡನೆ ಸಂಪರ್ಕವುಳ್ಳವರೆಲ್ಲ ಬಲ್ಲರು.

ಒಟ್ಟಿನಲ್ಲಿ ಈ ಸಂಕಲನದ ಲೇಖನಗಳು ವಿಚಾರಪೂರ್ಣವಾಗಿವೆ; ಕುವೆಂಪು ಸಾಹಿತ್ಯದ ಅಧ್ಯಯನಕ್ಕೆ ದಿಕ್ಸೂಚಿಗಳಾಗಿವೆ; ಓದುಗರ ಕುತೂಹಲಾಸಕ್ತಿಗಳನ್ನು ಕೆಣಕಿ ಅವರನ್ನೂ ವಿಚಾರಪರತೆಯ ಕಡೆಗೆ ತಿರುಗಿಸುತ್ತವೆ. ಸಾವಿರಾರು ವರ್ಷಗಳನಂತರವೂ ಕುವೆಂಪು ಸಾಹಿತ್ಯದ ಅಧ್ಯಯನ ನಡೆಯುತ್ತದೆ; ಪರ ವಿರೋಧ ವಿಮರ್ಶೆ ವಿಪುಲವಾಗಿ ಬೆಳೆಯುತ್ತದೆ. ಬೀದಿಯಲ್ಲಿ ಆಡಾಗಲಿ ಟಾಂಗಾ ಆಗಲಿ ಹೋಗುತ್ತಿದ್ದರೆ ಯಾರೂ ಆ ಕಡೆಗೆ ಗಮನಹರಿಸುವುದಿಲ್ಲ; ಆನೆಯಾಗಲಿ ರಥವಾಗಲಿ ಹೋಗುತ್ತಿದ್ದರೆ ಜನ ಕಿಕ್ಕಿರಿಯುತ್ತಾರೆ; ಅವರವರ ವಯೋಮಾನ ರುಚಿ ಅಭಿರುಚಿ ಸಂಸ್ಕಾರಗಳಿಗನುಗುಣವಾಗಿ ಅವುಗಳಬಗ್ಗೆ ಮಾತುಕತೆ ಹರಿಯುತ್ತದೆ. ಭಗವಾನರು ಪ್ರತಿಭಾವಂತ ವಿಮರ್ಶಕರು. ಯಾರಿಗೂ ಸೊಪ್ಪು ಹಾಕದ ಸ್ವತಂತ್ರ ಆಲೋಚಕರು. ತಮಗನಿಸಿದ್ದನ್ನು ನೇರವಾಗಿ ಹೇಳಿಬಿಡುವ ನಿಷ್ಕಪಟಿಗಳು, ಸಾರಾಸಾರ ವಿವೇಕವುಳ್ಳವರು. ಅಭಿಪ್ರಾಯಭೇದವನ್ನು ಗೌರವಿಸುವ ಪ್ರಗಲ್ಭರು, ಸತ್ಯಾನ್ವೇಷಣೆಯ ದೃಷ್ಟಿಯಿಂದ ಒಮ್ಮೊಮ್ಮೆ ವಿವಾದವನ್ನೆಬ್ಬಿಸುವ ಸಾಹಸಿಗಳು. ಕನ್ನಡ ಸಾರಸ್ವತಲೋಕ ಅವರಿಂದ ದೊಡ್ಡ ಮೊತ್ತದ ಅಮೂಲ್ಯ ಕೊಡುಗೆಗಳನ್ನು ನಿರೀಕ್ಷಿಸುತ್ತದೆ. ಆ ನಿರೀಕ್ಷೆ ಹುಸಿಯಾಗದಿರಲಿ ಎಂದು ನಾನು ಹಾರೈಸುತ್ತೇನೆ.