ಕನ್ನಡದಲ್ಲಿ ಮುನ್ನುಡಿ ಸಾಹಿತ್ಯ, ಅದೇ ಒಂದು ಸಾಹಿತ್ಯ ಪ್ರಕಾರವೆಂಬಂತೆ ವಿಪುಲವಾಗಿ ಬೆಳೆಯುತ್ತಿದೆ. ಸಾಹಿತ್ಯ ಕೃತಿಗಳ ಗುಣ ಕಥನ ಹಾಗೂ ಕೃತಿಕಾರನ ಉತ್ತೇಜನ ಸಾಮಾನ್ಯವಾಗಿ ಮುನ್ನುಡಿಯ ಉದ್ದೇಶ. ಕುವೆಂಪು ಅವರು ಮುನ್ನುಡಿಗಳನ್ನು ಬರೆದದ್ದೇ ಕಡಿಮೆ. ಅವರೇ ಒಂದು ಕಡೆ ಹೇಳಿಕೊಳ್ಳುತ್ತಾರೆ: ‘ನಾನು ಕುಲಪತಿಯಾಗಿ ಪ್ರಸಾರಾಂಗದ ಅಧಿಕೃತ ಪುಸ್ತಕಗಳಗೆ ಕರ್ತವ್ಯಾಂಗವಾಗಿ ಬರೆದ ಮುನ್ನುಡಿಗಳನ್ನು ಬಿಟ್ಟರೆ, ವ್ಯಕ್ತಿ ಲೇಖಕರ ಕೃತಿಗಳಿಗೆ ಒಂದು ಕೈಬೆರಳೆಣಿಕೆಯಷ್ಟು ಮುನ್ನುಡಿಗಳನ್ನು ಬರೆದಿಲ್ಲ ಎಂದು ತೋರುತ್ತದೆ’ ಎಂಬುದಾಗಿ ೧೯೫೧ರಲ್ಲಿ ‘ಕನ್ನಡಿಗರೆ, ಎಚ್ಚರಗೊಳ್ಳಿ’ ಎಂಬ ದೇಜಗೌ ಅವರ ಪುಸ್ತಕಕ್ಕೆ ‘ಕನ್ನಡಕ್ಕಾಗಿ ಕೈಯೆತ್ತು’

[1] ಎಂಬ ತಲೆ ಹೆಸರಿನಲ್ಲೊಂದು ಮುನ್ನುಡಿ ಬರೆದಿದ್ದರು. ‘ತೀರ್ಥ ಯಾತ್ರೆ’[2] ಸ್ವಾಮಿ ಸೋಮನಾಥಾನಂದರ ‘ಹೈಮಾಚಲ ಸಾನ್ನಿಧ್ಯದಲ್ಲಿ’ ಎಂಬ ಪ್ರವಾಸ ಗ್ರಂಥಕ್ಕೆ ಬರೆದದ್ದು. ಸ್ವಾಮಿ ಜ್ಞಾನಘನಾನಂದರು ಭಾಷಾಂತರಿಸಿ, ಮೈಸೂರು ಶ್ರೀರಾಮಕೃಷ್ಣಾ ಶ್ರಮ ಪ್ರಕಟಿಸಿರುವ ಮಹೇಂದ್ರನಾಥ ಗುಪ್ತರ ದಿನಚರಿಗೆ ಬರೆದ ಮುನ್ನುಡಿ ‘ಶ್ರೀ ರಾಮಕೃಷ್ಣ ವಚನದೇವ’[3] ‘ಶ್ರೀವಿನೋಬಾಜಿ’[4] ಶಿವಮೊಗ್ಗ ಜಿಲ್ಲೆಯಲ್ಲಿ ಪಾದಯಾತ್ರೆ ಮಾಡಿದ ಕಾಲದಲ್ಲಿ ಕೊಟ್ಟ ಪ್ರವಚನಗಳ ಸಂಗ್ರಹಕ್ಕೆ ಬರೆದದ್ದು. ಸ್ವಾಮಿ ಸೋಮನಾಥಾನಂದರು ಕನ್ನಡಕ್ಕೆ ಅನುವಾದಿಸಿರುವ ಶ್ರೀ ವಿವೇಕಾನಂದರ ಕೆಲವು ಭಾಷಣಗಳಿಗೆ ಬರೆದಿರುವ ಮುನ್ನುಡಿ[5] ‘ಕೊಲಂಬೊ ಇಂದ ಆಲ್ಮೋರಕೆ’. ಸ್ವಾಮಿ ವಿವೇಕಾನಂದರ ಸಮಗ್ರ ಕೃತಿಗಳ ಭಾಷಾಂತರಕ್ಕೆ ಬರೆದ ಮುನ್ನುಡಿಯೇ ‘ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ’.[6] ಸ್ವಾಮಿ ಶಾರದಾನಂದರು ಬಂಗಾಳಿಯಲ್ಲಿ ಬರೆದು, ಸ್ವಾಮಿ ಪ್ರಣವೇಶಾನಂದರು ಕನ್ನಡಕ್ಕೆ ಪರಿವರ್ತಿಸಿ ರುವ ‘ಶ್ರೀರಾಮಕೃಷ್ಣ ಲೀಲಾಪ್ರಸಂಗ’ಕ್ಕೆ ಬರೆದಿರುವ ಮುನ್ನುಡಿಗೂ ಅದೇ ಹೆಸರಿದೆ.[7] ಇವುಗಳಲ್ಲಿ ಎರಡನ್ನು ಬಿಟ್ಟರೆ, ಉಳಿದುವೆಲ್ಲ ಶ್ರೀರಾಮಕೃಷ್ಣಾಶ್ರಮದ ಸ್ವಾಮಿಗಳು ರಚಿಸಿದ ಅಥವಾ ಭಾಷಾಂತರಿಸಿದ ಕೃತಿಗಳೆಂಬುದು ಗಮನಾರ್ಹ.

ಮೇಲಿನವೆಲ್ಲವನ್ನು ಕುವೆಂಪು ಅವರೇ ತಮ್ಮ ಕೆಲವು ಗದ್ಯಲೇಖನಗಳ ಸಂಗ್ರಹಗಳಲ್ಲಿ ಸೇರಿಸಿದ್ದಾರೆ. ತಾವು ಪ್ರಸಾರಾಂಗದ ಪ್ರಕಟನ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕೆಲವು ಗ್ರಂಥಗಳಿಗೆ ಬರೆದಿರುವ ಮುನ್ನುಡಿಗಳು ಎಲ್ಲಿಯೂ ಸಂಗ್ರಹಗೊಂಡಿಲ್ಲ. ಕಾಲಾನಂತರದಲ್ಲಿ ಅವು ಮರೆಸಿಹೋಗುವ ಸಂಭವವುಂಟು. ಅವುಗಳನ್ನು ಸಂಗ್ರಹಿಸಿ ಗ್ರಂಥರೂಪದಲ್ಲಿ ಪ್ರಕಟಿಸುವಬಗ್ಗೆ ಅವರಿಗೆ ಆಸಕ್ತಿ ಇರಲಿಲ್ಲ. ಮೇಲಿಂದ ಮೇಲೆ ಮಾಡಿದ ಒತ್ತಾಯದ ಫಲವಾಗಿ, ತಮ್ಮ ಮುನ್ನುಡಿಗಳೆಲ್ಲವನ್ನು ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಸಹ್ಯಾದ್ರಿ ಪ್ರಕಾಶನದ ಮೂಲಕ ಗ್ರಂಥರೂಪದಲ್ಲಿ ಪ್ರಕಟಿಸಲು ಅವರು ಅನುಮತಿ ನೀಡಿದ್ದಾರೆ. ‘ಮುನ್ನುಡಿ ತೋರಣ’ವೆಂಬ ಶೀರ್ಷಿಕೆಯಲ್ಲಿ ಈಗ ಇಪ್ಪತ್ತೊಂದು ಮುನ್ನುಡಿಗಳನ್ನು[8] ಮಾತ್ರ ಕೂಡಿಸಲಾಗಿದೆ. ಇವುಗಳಲ್ಲಿ ಒಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿಂದೆ ಪ್ರಕಟಿಸಿದ ಕುಮಾರವ್ಯಾಸ ಭಾರತದ ಜನಪ್ರಿಯ ಆವೃತ್ತಿಗೆ ಬರೆದ ಮುನ್ನುಡಿ; ಆರು ಶಿಷ್ಯಮಿತ್ರರ ಗ್ರಂಥಗಳಿಗೆ ಬರೆದವು; ಉಳಿದುವು ಪ್ರಸಾರಾಂಗದ ಗ್ರಂಥಗಳಿಗೆ ಬರೆದ ಪೀಠಿಕೆಗಳು ಅಥವಾ ಮುನ್ನುಡಿಗಳು.

ಕೇವಲ ಐತಿಹಾಸಿಕ ಮೌಲ್ಯಕ್ಕಾಗಿಯೇ ಈ ಮುನ್ನುಡಿಗಳ ಸಂಕಲನವನ್ನು ಪ್ರಕಟಿಸ ಬೇಕಾಗಿರಲಿಲ್ಲ. ಕುವೆಂಪು ಅವರು ಏನೇ ಬರೆಯಲಿ ಪತ್ರವಾಗಲಿ, ದಿನಚರಿಯಾಗಲಿ, ಟಿಪ್ಪಣಿಯಾಗಲಿ, ಹೇಳಿಕೆಯಾಗಲಿ ಅದರಲ್ಲಿ ಕುವೆಂಪು ಮುದ್ರೆ ಇದ್ದೇ ಇರುತ್ತದೆನ್ನುವುದು ಸಾಹಿತ್ಯಲೋಕಕ್ಕೆ ಗೊತ್ತಿರುವ ಸಂಗತಿ. ಆಲೋಚನಾಸರಣಿಯಲ್ಲಿ, ವಿಷಯ ನಿರೂಪಣೆ ಯಲ್ಲಿ, ಶೈಲಿಯಲ್ಲಿ ಅವರ ವ್ಯಕ್ತಿತ್ವದ ಪ್ರಭಾವವನ್ನು ಗುರುತಿಸಬಹುದು. ಅವರ ಸಾಹಿತ್ಯಕೃತಿಗಳಲ್ಲಿ ಕಾಣದ ಅನೇಕ ವಿಶಿಷ್ಟ ಭಾವನೆಗಳು, ಆಲೋಚನೆಗಳು ಮುನ್ನುಡಿಗಳಲ್ಲಿ ಕಣ್ಣೊಡದಿವೆ. ಇವನ್ನು ಕನ್ನಡಿಗರ ಗಮನಕ್ಕೆ ತರುವುದೇ ಈ ಸಂಗ್ರಹದ ಉದ್ದೇಶ.

ಈ ಮುನ್ನುಡಿಗಳನ್ನು ಮೂರು ಪಂಗಡಗಳಾಗಿ ವಿಂಗಡಿಸಿಕೊಳ್ಳಬಹುದು : ಒಂದು, ‘ಕರ್ಣಾಟ ಭಾರತ ಕಥಾಮಂಜರಿ’ಗೆ ತಯಾರಿಸಿದ್ದ ಮುನ್ನುಡಿ (ತೋರಣ ನಾಂದಿ); ಅದೊಂದು ಹಲವು ವಿಮರ್ಶೆಗಳ ಹಾರ; ವಿನೂತನ ಪ್ರಯೋಗ; ಎರಡು, ವ್ಯಕ್ತಿಕೃತಿಗಳಿಗೆ ಬರೆದ ಮುನ್ನುಡಿಗಳು; ಮೂರು, ವಿಶ್ವವಿದ್ಯಾನಿಲಯದ ಗ್ರಂಥಮಾಲೆಗೆ ಬರೆದ ಮುನ್ನುಡಿಗಳು.

‘ಕರ್ಣಾಟ ಭಾರತ ಕಥಾಮಂಜರಿ’ಯ ಸಂಪಾದಕರಲ್ಲೊಬ್ಬರಾದ ಕುವೆಂಪು ಮುನ್ನುಡಿ ಬರೆದಿಲ್ಲ ನಿಜ. ಅದರ ಜಾಗದಲ್ಲಿ ಬಂದಿರುವ ‘ತೋರಣನಾಂದಿ’ ಎಂಬ ಸಮಸ್ತಪದ ದಲ್ಲಿಯೇ ಕುವೆಂಪು ಅವರ ಛಾಪು ಎದ್ದುಕಾಣುತ್ತದೆ. ‘ಇದು ಸಮಷ್ಟಿರೂಪದ ಒಂದು ಸಹೃದಯ ವಿಮರ್ಶೆ; ಕನ್ನಡ ನಾಡಿನ ಹಿರಿಯ ಲೇಖಕ ವಿಮರ್ಶಕರ ಬರವಣಿಗೆಗಳಿಂದ ಆಯ್ದುಕೊಂಡ ತೋರಣನಾಂದಿಯಾಗಿದೆ’ ಎಂದವರು ಲೇಖನಾಂತ್ಯದ ಅಡಿಟಿಪ್ಪಣಿಯಲ್ಲಿ ಹೇಳಿದ್ದಾರೆ. ಸಾಹಿತ್ಯ ಪ್ರಪಂಚದಲ್ಲಿ ಒಬ್ಬ ಕವಿಯ ಕೃತಿಯನ್ನು ಕುರಿತ ಇಂಥ ಸಾಮೂಹಿಕ ವಿಮರ್ಶೆ ಇದೆಯೋ ಇಲ್ಲವೋ, ನನಗೆ ಗೊತ್ತಿಲ್ಲ; ಕನ್ನಡದಲ್ಲಂತು ಇದೇ ಮೊದಲು. ಕುಮಾರವ್ಯಾಸನ ಅಧ್ಯಯನಕ್ಕೆ ಇದೊಂದು ಅತ್ಯುತ್ಕೃಷ್ಟವಾದ ಪ್ರವೇಶಿಕೆಯಾಗಿದೆಯೆಂದು ಧಾರಾಳವಾಗಿ ಹೇಳಬಹುದು.

ಕೊಳಂಬೆ ಪುಟ್ಟಣಗೌಡರು ಅಚ್ಚಗನ್ನಡದಲ್ಲಿ ರಚಿಸಿರುವ ಒಂದು ಸಾವಿರ ಮುಕ್ತಕಗಳ ಸಂಕಲನವಾದ ‘ನುಡಿವಣಿಗಳು’ ಗ್ರಂಥಕ್ಕೆ ಬರೆದ ಮುನ್ನಡಿಯ ಕೊನೆಯಲ್ಲಿ ಕುವೆಂಪು ಅವರು ಆ ಮುಕ್ತಕಗಳ ಒಟ್ಟು ಸಾರವನ್ನು ನಾಲ್ಕು ವಾಕ್ಯಗಳಲ್ಲಿ ಸಂಕ್ಷೇಪಿಸಿ ಹೇಳಿದ್ದಾರೆ. ‘ಸಮಸ್ತ ಜೀವನವೂ ಒಂದು ನಿರಂತರ ಯೋಗ. ಅದನ್ನು ಅರಿತಿರಲಿ ಬಿಡಲಿ, ಜೀವಿಗಳೆಲ್ಲ ಅದಕ್ಕೆ ಅನುಗುಣವಾಗಿ ಜೀವಿಸುತ್ತಿವೆ. ಆ ಪರಮತತ್ತ್ವದ ಕಡೆಗೆ ನಡೆಯುತ್ತಿವೆ. ಈ ರಹಸ್ಯವನ್ನು ಅರಿತರೆ ಮಾನವನ ಬಾಳು ಪೂರ್ಣವಾಗುತ್ತದೆ. ಇದೇ ಪ್ರಧಾನವಾಗಿ ಶ್ರೀ ಕೊಳಂಬೆ ಪುಟ್ಟಣ್ಣಗೌಡರು ತಮ್ಮ ಈ ಸಾವಿರ ಮುಕ್ತಕಗಳಲ್ಲಿ ರಸಾತ್ಮಕವಾಗಿ ಪ್ರತಿಪಾದಿ ಸಿರುವ ಪ್ರಧಾನತತ್ವ’ ಆ ಕೃತಿಯನ್ನು ಕೈಗೆತ್ತಿಕೊಂಡವರಿಗೆ ಈ ವಾಕ್ಯಗಳು ಕೈಮರಗಳಾಗುತ್ತವೆ. ಅರವಿಂದರ ಕೃತಿಗಳ್ನು ಮೊತ್ತಮೊದಲ ಸಲ ಓದಿದಾಗ, ತಮ್ಮ ಮನಸ್ಸಿನ ಮೇಲಾದ ಪ್ರಭಾವವನ್ನು ಕುವೆಂಪು ‘ದಿವ್ಯಜೀವನ’ ಎಂಬ ಕೋ. ಚನ್ನಬಸಪ್ಪನವರ ಅನುವಾದ ಗ್ರಂಥಕ್ಕೆ ಬರೆದ ಮುನ್ನುಡಿಯಲ್ಲಿ ವಿಶದಪಡಿಸಿದ್ದಾರೆ. ‘ಆ ಕೃತಿಗಳ ಪ್ರಥಮ ಪರಿಚಯದಲ್ಲಿಯೆ ನಾನು ಬುದ್ದಿ ತತ್ತರಿಸಿಹೋದೆ. ಹೃದಯತಲ್ಲಣಿಸಿ ಹೋದೆ, ಸರ್ವವಿದ್ಯಾ ಸ್ತರಗಳಲ್ಲಿಯೂ ನಿಶ್ಯಿಖರವೂ ನಿರ್ದಿಗಂತವೂ ಆಗಿರುವ ಆಸೀಮ ಮಹತ್ತು ಬೃಹತ್ತುಗಳನ್ನು ಸಂದರ್ಶಿಸಿ ದರ್ಶನ ಸ್ತಬ್ಧನಾದೆ. ದರ್ಶನ ಮತ್ತನಾದೆ, ದರ್ಶನಾರಾಮನಾದೆ’ ಸಿದ್ದಯ್ಯ ಪುರಾಣಿಕರ ಗದ್ಯರೂಪದ ‘ಶರಣ ಚರಿತಾಮೃತ’ಕ್ಕೆ ಬರೆದ ಮುನ್ನುಡಿಯಲ್ಲಿ ಅಲ್ಲಿಯ ಜೀವನಚರಿತ್ರೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಇಲ್ಲಿಯ ‘ಬಹುಪಾಲು ಭಾವೋಪಯೋಗಿಯಾಗಿರುವ ಪ್ರತಿಮಾ ವಿಧಾನದ ಪ್ರತೀಕಗಳಂತಿವೆ. ಅವುಗಳಲ್ಲಿ ಎಲ್ಲದರಲ್ಲಿಯೂ ಲೋಕ ಸಂವಾದವನ್ನೇ ನಿರೀಕ್ಷಿಸಿ, ವಾಚ್ಯಾರ್ಥದಲ್ಲಿಯೂ ಅವು ಅಕ್ಷರಶಃ ಸತ್ಯಗಳೆಂದು ಭಾವಿಸಿ, ಪವಾಡಗಳನ್ನೇ ಅಧ್ಯಾತ್ಮದ ಪ್ರಗತಿಯ ಲಕ್ಷಣಗಳೆಂದು ತಿಳಿದು ಮೌಢ್ಯದ ಆಧೋಗತಿಗೆ ನಮ್ಮ ಜನತೆ ಇಳಿಯಬಾರದು’ ಎಂದವರು ಎಚ್ಚರಿಕೆ ನೀಡಿದ್ದಾರೆ. ಶರಣ ಜೀವನದ ದರ್ಶನ ಧ್ವನಿಯನ್ನು ಗ್ರಹಿಸಿ, ವಿಚಾರಬುದ್ದಿಯಿಂದ ವಿವೇಚಿಸಿದಾಗ ಮಾತ್ರ ಈ ಜೀವನ ಚರಿತ್ರೆಗಳ ಮಹತ್ವ ತಿಳಿಯುತ್ತದೆಂದು ಪ್ರತಿಪಾದಿಸು ತ್ತಾರೆ. ಪುರಾಣಗಳನ್ನೂ ಪುರಾಣ ಕಾವ್ಯಗಳನ್ನೂ ಪ್ರತಿಮಾ ದೃಷ್ಟಿಯಿಂದ ಅಧ್ಯಯನ ಮಾಡಿದಾಗ ಮಾತ್ರ ಅವುಗಳ ಹೃದಯಸ್ಥ ಮೌಲಿಕ ಸಂದೇಶ ಸಹೃದಯರಿಗೆ ಲಭ್ಯವಾಗುತ್ತ ದೆಂಬುದನ್ನು ಅವರ ಮೇಲಣ ವಿವರಣೆಯಿಂದರಿತುಕೊಳ್ಳಬಹುದು.

ತ.ಸು. ಶಾಮರಾಯರ ‘ಪ್ರಾಧ್ಯಾಪಕ ವೆಂಕಣ್ಣಯ್ಯ’ ಎಂಬ ಜೀವನಚರಿತ್ರೆಗೆ ಬರೆದ ಮುನ್ನುಡಿಯಲ್ಲಿ, ಇಲ್ಲಿಯವರೆಗೆಲ್ಲಿಯೂ ಬಹಿರಂಗಪಡಿಸದ ರಹಸ್ಯ ಸ್ವರೂಪದ ಅನುಭವ ವೊಂದನ್ನು ಕುವೆಂಪು ಪ್ರಕಾಶಪಡಿಸಿದ್ದಾರೆ. ವೆಂಕಣ್ಣಯ್ಯನವರು ವಿಧಿವಶರಾದ ದಿನ ರಾತ್ರಿ ತಮ್ಮ ಮಹಾಕಾವ್ಯದ ಅರ್ಪಣೆಯ ಭಾಗವನ್ನು ಬರೆಯತೊಡಗಿದರಂತೆ. ‘ಆಗ ತಮ್ಮ ಕೋಣೆಯ ಕದವನ್ನು ಯಾರೋ ತಟ್ಟಿದಹಾಗಾಯಿತಂತೆ; ಕದ ತೆರೆದು ನೋಡಿದರೆ ಯಾರೂ ಇಲ್ಲ, ಅದೇ ಶಬ್ದ ಮತ್ತೆ; ಯಾರೂ ಇಲ್ಲ’. ವೆಂಕಣ್ಣಯ್ಯನವರ ಮತ್ತು ಕುವೆಂಪು ಅವರ ಲೋಕೋತ್ತರ ಸ್ವರೂಪದ ಸಂಬಂಧಕ್ಕೆ ಈ ಅನುಭವವೊಂದು ಚಿರಸಾಕ್ಷಿಯಾಗಿದೆ. ತಮ್ಮ ‘ಮೇಲೆ ಬೀರಿದ ದೈವಿಕಪ್ರಭಾವದಲ್ಲಿ ವೆಂಕಣ್ಣಯ್ಯನವರು ಪೂಜ್ಯ ಸಿದ್ದೇಶ್ವರಾನಂದರಿಗಷ್ಟೇ ಎರಡನೆಯವರಾಗಿದ್ದರು’ ಎಂಬುದನ್ನವರು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಾರೆ. ಎಸ್.ವಿ. ಪರಮೇಶ್ವರಭಟ್ಟರು ‘ರಾಗಿಣಿ’ ಕವನ ಸಂಗ್ರಹಕ್ಕೆ ಬರೆದ ಮುನ್ನುಡಿಯೂ[9] ಕವನ ರೂಪದಲ್ಲಿದೆಯೆಂಬುದು ಗಮನಿಸಬೇಕಾದ ವಿಶಿಷ್ಟ ಸಂಗತಿ. ಕುವೆಂಪು ಅವರೆಷ್ಟು ಶಿಷ್ಯವಾತ್ಸಲ್ಯರೆಂಬುಕ್ಕೆ ಅವರು ಪ್ರಭುಶಂಕರರ ‘ಅಮೇರಿಕದಲ್ಲಿ ನಾನು ಶಾಂತಿ’ ಎಂಬ ಗ್ರಂಥಕ್ಕೆ ಬರೆದ ಮುನ್ನುಡಿಯೆ ಸಾಕ್ಷಿಯಾಗಿದೆ. ಅದರಲ್ಲಿಯೂ ಕೊನೆಯ ವಾಕ್ಯಗಳಲ್ಲಿ ಆ ಗ್ರಂಥವನ್ನೋದಿ ತಾವನುಭವಿಸಿದ ಸುಖರಸವೂ, ಗ್ರಂಥ ಕರ್ತೃವಿನ ಬಗೆಗಿನ ಅಭಿಮಾನವೂ ವ್ಯಕ್ತವಾಗುತ್ತವೆ; ‘ಈ ಘಟನಾಪರಂಪರೆಗಳ, ಈ ಅದ್ಭುತ ದೃಶ್ಯಮಾಲಾ ಮನೋಹರತೆಯ ಮತ್ತು ಭೀಷ್ಮ ಭಯಂಕರತೆಯ ಈ ಅಜ್ಞಾತವೋ ಎಂಬಂತಹ ಎಲೆಮರೆಯ ಹೂವಿನ, ಆದರೆ ನಿಜವಾಗಿಯೂ ಸುವಿಖ್ಯಾತ ಯೋಗ್ಯರಾದ ಮನುಜಮನುಜೆಯರ ನಡುವೆ ತೆಳುಗಾಳಿಯಂತೆ ಸುಳಿದು ನುಸುಳುತ್ತಾ, ಸದ್ದುಗದ್ದಲವಿಲ್ಲದೆ ಸುಳಿಸುಳಿಯುವ ಪ್ರಭುಶಂಕರರ ಬಹುಮುಖಪ್ರತಿಭೆಯ ವ್ಯಕ್ತಿತ್ವದ ಶತಶತದಲ ಮಹಾಪದ್ಮವು ಒಯ್ಯಯ್ಯನೆ ವಿಕಸಿತವಾಗಿ ಮನಂಗೊಳಿಸುವ ನಮ್ರವೈಭವವನ್ನು ನೋಡಿ ಅನುಭವಿಸಿದರೆ ಹೃದಯ ಅವರ ಪರವಾದ ಸ್ನೇಹ ಮೈತ್ರಿಗಳಿಂದ ಹಿಗ್ಗಿಹೋಗುತ್ತದೆ’.

‘ಭರತತೇಶವೈಭವ ಸಂಗ್ರಹ’ಕ್ಕೆ[10] ಕುವೆಂಪು ಬರೆದಿರುವ ಮುನ್ನುಡಿಯಲ್ಲಿ, ಅವರು ರತ್ನಾಕರವರ್ಣಿಯ ಸ್ಥಾನಮಾನಗಳನ್ನು ಸರಿಯಾಗಿಯೇ ನಿರ್ದೇಶಿಸಿದ್ದಾರೆ. ‘ರತ್ನಾಕರ ವರ್ಣಿ ಮಹಾಕವಿಗಳಲ್ಲಿ ಅಗ್ರಗಣ್ಯನಲ್ಲದಿದ್ದರೂ, ಮಹಾಕವಿಯೆಂಬುದನ್ನವರು ಸಾಧಾರವಾಗಿ ಸಮರ್ಥಿಸುತ್ತಾರೆ. ಆ ಸಮರ್ಥನೆಗೆ ಮುಖ್ಯವಾದ ಆಧಾರ ತ್ಯಾಗಭೋಗಗಳ ಸಮನ್ವಯದ ಯೋಗದರ್ಶನವನ್ನು ಕವಿ ಸುಂದರವಾಗಿ ಪ್ರತಿಮಿಸಿರುವುದೇ ಆಗಿದೆ. ಕವಿ ಈ ಆದರ್ಶವನ್ನು ಭರತನ ಜೀವನದಲ್ಲಿ ಮಾತ್ರವೇ ಅಲ್ಲದೆ ಇಡೀ ಕಾವ್ಯದ ವಿವರ ವಿವರಗಳಲ್ಲೆಲ್ಲ ಬುದ್ದಿ ಪೂರ್ವಕವಾಗಿ ಪ್ರತಿಮಿಸಿರುವುದನ್ನು ನೋಡಿದರಂತೂ ಇಂತಹ ಕಾವ್ಯಸೃಷ್ಟಿ ಜಗತ್ತಿನ ಮತ್ತಾವ ಸಾಹಿತ್ಯದಲ್ಲೂ ಆಗಿರುವಂತೆ ಕಾಣುವುದಿಲ್ಲ’ ಎಂದು ಕುವೆಂಪು ಅವರಂಥ ಪೌರ್ವಾತ್ಯ ಪಾಶ್ಚಾತ್ಯ ಸಾಹಿತ್ಯಗಗನದಲ್ಲಿ ಲೀಲಾಜಾಲವಾಗಿ ಹಾರಾಡಿರುವ ಮಹಾಕವಿ ಹೇಳುವಾಗ, ಕನ್ನಡಿಗರೆಲ್ಲ ಅಭಿಮಾನದಿಂದ ತಲೆಯೆತ್ತಬಹುದು. ‘ಇದೊಂದು ದ್ವಿತೀಯ ವರ್ಗದ ಕಾವ್ಯವೆಂದೆನ್ನಿಸಿದರೂ ಕಾವ್ಯವಸ್ತುವಿನ ಮಹಿಮೆಯಿಂದಲೇ ಇದು ಜನಪ್ರಿಯವೂ ಪೂಜ್ಯವೂ ಆಗಿದೆ’ಯೆಂದು ಚಾಟುವಿಠ್ಠಲನ ಶ್ರೀಕೃಷ್ಣ ಚರಿತೆಯ[11] ಬಗ್ಗೆ ಅಪ್ರಿಯವಾದರೂ ಸತ್ಯವನ್ನೆ ನುಡಿದಿದ್ದಾರೆ.

ರಾಜಕೀಯ ಸಾಮಾಜಿಕಾದಿ ವ್ಯವಸ್ಥೆಗಳ ಬಗ್ಗೆ ಕುವೆಂಪು ಅವರ ನಿಲವೇನೆಂಬುದು ನಾ. ಕಸ್ತೂರಿಯವರು ರಚಿಸಿದ ‘ಅಶೋಕ’ ಎಂಬ ಜೀವನಚರಿತ್ರೆಗೆ ಬರೆದ ಮುನ್ನುಡಿಯಿಂದ ಸ್ಪಷ್ಟವಾಗುತ್ತದೆ. ರಾಜಕೀಯ ಧಾರ್ಮಿಕ ಆಧ್ಯಾತ್ಮಿಕ ಇತ್ಯಾದಿಗಳು ಪರಮ ಪುರುಷಾರ್ಥ ಸಾಧನೆಗೆ ಪರಸ್ಪರ ಪೋಷಕಗಳೇ ಹೊರತು, ಅನ್ಯವಲ್ಲ, ಪ್ರತಿಸ್ಪರ್ಧಿಯಲ್ಲ ಎಂದವರು ಪ್ರತಿಪಾದಿಸುತ್ತಾರೆ. ಆಶೋಕನ ಆತ್ಮೋರ್ಜೆಯೇ ಗಾಂಧಿಯಲ್ಲಿ ಪುನರುತ್ಥಾನ ರೂಪದಲ್ಲಿ ವಿಕಾಸಗೊಂಡಿದೆಯೆಂಬ ಅವರ ಮಾತಿನಲ್ಲಿ ಕಾವ್ಯಸತ್ಯ ಮಾತ್ರವಲ್ಲ, ವಾಸ್ತವ ಸತ್ಯವೂ ಅಡಕಗೊಂಡಿದೆ. ‘ಅಪ್ರತಿಹತವೂ ದುರ್ದಮ್ಯವೂ ಆಗಿರುವ ಆಸುರೀಶಕ್ತಿಗಳ ಎದುರಿನಲ್ಲಿ ಅಶೋಕ ಚಕ್ರವರ್ತಿ ಯಾವ ಧರ್ಮಶ್ರದ್ಧೆಯ ಧೈರ್ಯವನ್ನು ಲೋಕ ಬೆರಗಾಗುವಂತೆ ಪ್ರದರ್ಶಿಸಿದನೋ ಆ ಶ್ರದ್ಧಾ ಧೈರ್ಯದ ಪುನರುತ್ಥಾನರೂಪರಾದ ಪೂಜ್ಯ ಮಹಾತ್ಮಾ ಗಾಂಧೀಜಿಯವರ ದೈವೀಪ್ರಯತ್ನದಿಂದ ನಾಡಿಗೆ ರಾಜಕೀಯ ಸ್ವಾತಂತ್ರ್ಯ ಲಭಿಸಿದೆ’ ಎಂಬ ಅವರ ಮಾತು ಬ್ರಾಹ್ಮೀಸತ್ಯವೆನಿತ್ತದೆ.

ಮಹಾತ್ಮಾಗಾಂಧಿಯವರ ಸಹವರ್ತಿ ಪ್ಯಾರೇಲಾಲರಿಂದ ರಚಿತವಾಗಿ, ಕೆ.ವಿ. ಶಂಕರಗೌಡ ರಿಂದ ಅನುವಾದಗೊಂಡಿರುವ ‘ಮಹಾತ್ಮಾಗಾಧಿ ಅಂತಿಮ ಹಂತ’ವೊಂದು ವಿಭೂತಿ ಕೃತಿಯೆಂದು, ಕೃತಿರೂಪದ ಅವತಾರವೆಂದು, ಸಾಹಿತ್ಯ ಕೃತಿಯಲ್ಲದಿದ್ದರೂ, ಸಾಹಿತ್ಯ ಸಮಸ್ತಕ್ಕೂ ಶ್ವಾಸಪ್ರಾಯವಾದ ಜೀವನೋನ್ನತಿ, ಮೌಲ್ಯಸಮೃದ್ದಿ, ಮಾನವೀಯ ಸ್ವಾರಸ್ಯಸಂಪತ್ತಿ ಅದರಲ್ಲಿದೆಯೆಂದು ಕುವೆಂಪು ಸೂತ್ರರೂಪದಲ್ಲಿ ಅದರ ಲಕ್ಷಣವನ್ನೂ ಮಹತ್ವವನ್ನೂ ಎತ್ತಿತೋರಿಸಿದ್ದಾರೆ. ಪರಿಪೂರ್ಣತಾ ಸಿದ್ದಿಗೆ ದೊಡ್ಡ ದೊಡ್ಡ ಸಂಗತಿಗಳೆಷ್ಟು ಮುಖ್ಯವೋ ಅಲ್ಪಸಂಗತಿಗಳೂ ಅಷ್ಟೇ ಮುಖ್ಯವೆಂದು, ಅದಕ್ಕೆ ಗಾಂಧೀಜಿಯ ಬದುಕೇ ನಿದರ್ಶನವಾಗಿದೆಯೆಂದವರು ಹೇಳುತ್ತಾರೆ. ಭಾಷಾಂತರ ಕಾರ್ಯದ ಬಗ್ಗೆ ಮಹಾಕವಿ ಕುವೆಂಪು ಅವರು ಹೇಳಿರುವ ಮಾತನ್ನು ಭಾಷಾಂತರವನ್ನಲ್ಲಗಳೆಯುವ ಕ್ಷುದ್ರ ಸಾಹಿತಿಗಳು ತಿಳಿಯಬೇಕಾಗಿದೆ. ‘ಭಾಷಾಂತರ ಕಾರ್ಯ ಲಘುವಾದುದಲ್ಲ; ಅದೂ ಕೂಡ ಸ್ವತಂತ್ರ ಕೃತಿಯಂತೆ ಪ್ರತಿಭಾನ ಮೂಲವಾದದ್ದು. ಉತ್ತಮ ಭಾಷಾಂತರ ಎಲ್ಲೋ ಕೆಲವು ಅಧಿಕಾರಿ ಚೇತನಗಳಿಗೆ ಮಾತ್ರ ಸಾಧ್ಯ’, ಈ ಕವಿವಾಣಿ ಬ್ರಹ್ಮಾದೇಶದಂತಿದೆ. ‘ಯಾವುದೇ ಭಾಗವನ್ನು ತೆಗೆದುಕೊಂಡು ನೋಡಿದರೂ ಮೂಲಪುಸ್ತಕದ ಒಂದು ಪುಟ ಸಾಮಾನ್ಯವಾಗಿ ಭಾಷಾಂತರ ದಲ್ಲೂ ಒಂದೇ ಪುಟದಷ್ಟೇ ಆಗಿರುವುದನ್ನು ಗಮನಿಸಬಹುದು’. ಉತ್ತಮ ಭಾಷಾಂತರಕ್ಕೆ ಇದೂ ಒಂದು ಒರೆಗಲ್ಲೆಂಬುದನ್ನು ಭಾಷಾಂತರಕಾರರು ತಿಳಿಯಬೇಕು.

ಒಮ್ಮೊಮ್ಮೆ ಜನಜನಿತವಾದ ಕಥೆಯಲ್ಲಿ ಹೆಚ್ಚು ಸತ್ಯಾಂಶ ಪ್ರಕಟವಾಗುವುದುಂಟು ಎಂದು ‘ಕಾಳಿದಾಸ’[12] ಎಂಬ ಕೃತಿಗೆ ಬರೆದ ಮುನ್ನುಡಿಯಲ್ಲಿ ತಿಳಿಸುವುದರ ಮೂಲಕ ಕಾಳಿದಾಸ ಕುರುಬನೆಂದವರು ಒಪ್ಪಿಕೊಳ್ಳುತ್ತಾರೆ. ‘ಅದಕ್ಕೆ ಅನುರೂಪವಾದ ವಿಮರ್ಶೆಯನ್ನೂ ಒದಗಿಸಿದ್ದರೆ ಇನ್ನೂ ಹೆಚ್ಚಿಗೆ ಲಾಭವಾಗುತ್ತಿತ್ತು’ ಎಂದು ಆ ಕೃತಿಯ ಅಸಮರ್ಪಕತೆಯನ್ನು ನಿರ್ದಾಕ್ಷಿಣ್ಯವಾಗಿ ಎತ್ತಿತೋರಿಸಿದ್ದಾರೆ. ತೀ.ನಂ.ಶ್ರೀಯವರ ‘ಭಾರತೀಯ ಕಾವ್ಯ ಮೀಮಾಂಸೆ’ಯನ್ನು ಆಚಾರ್ಯ ಕೃತಿಯೆಂದು ಕರೆದು ‘ಕಾವ್ಯಮೀಮಾಂಸೆ ಬೆಳೆಯದೆ ಅದರ ಪ್ರಾಯೋಗಿಕ ರೂಪವಾದ ಉತ್ತಮ ಸಾಹಿತ್ಯ ವಿಮರ್ಶೆ ಬೆಳೆಯಲು ಸಾಧ್ಯವಿಲ್ಲ’ ಎಂದು ಹೇಳಿ ಅವರು ಅದರ ಉಪಯುಕ್ತತೆಯನ್ನು ಕೊಂಡಾಡುತ್ತಾರೆ. ‘ಸಾಹಿತ್ಯ ಸೃಷ್ಟಿಯಲ್ಲಿ ಹೇಗೋ ವಿಮರ್ಶದೃಷ್ಟಿಯಲ್ಲಿಯೂ ಹಾಗೆಯೆ ಪಾಶ್ಚಾತ್ಯಪ ಅಂಧಾನುಕರಣವಾಗಲಿ ಭಾರತೀ ಯತೆಯ ಅಂಧಾನುಸರಣವಾಗಲಿ ಉತ್ತಮ ಸೃಷ್ಟಿಗೆ ಕಾರಣವಾಗದು ಎಂದ ಮೇಲೆ ಕನ್ನಡದ ಕಾವ್ಯವಿಮರ್ಶೆ ಸಮನ್ವಯ ರೂಪದ ಒಂದು ನವವಿಧಾನವನ್ನು ಅನುಸರಿಸಿ ತನ್ನ ವೈಶಿಷ್ಟ್ಯ ವನ್ನು ಸ್ಥಾಪಿಸ’ಬೇಕೆನ್ನುವಲ್ಲಿ ಕನ್ನಡ ಸ್ವತಂತ್ರವಾಗಿ ಬೆಳೆದು, ಲೋಕದ ಕಾವ್ಯ ವಿಮರ್ಶೆಗೂ ಕಾಣಿಕೆ ನೀಡುವ ಮಟ್ಟಕ್ಕೇರಬೇಕೆಂಬುದು ಅವರ ಹಾರೈಕೆಯಾಗಿದೆ. ಕೆ. ಕೃಷ್ಣಮೂರ್ತಿಯವರ ‘ಸಂಸ್ಕೃತ ಕಾವ್ಯ’ ಎ.ಆರ್. ಕೃಷ್ಣಶಾಸ್ತ್ರಿಗಳ ವಿದ್ವತ್ಪೂರ್ಣವಾದ ಅದ್ವಿತೀಯ ವಿಮರ್ಶಾಗ್ರಂಥ ವಾದ ‘ಸಂಸ್ಕೃತ ನಾಟಕ’ಕ್ಕೆ ಪೂರಕವಾಗಿದೆ ಎಂದವರು ಎಣಿಸಿದ್ದಾರೆ. ಡಾ. ಎಸ್.ವಿ. ರಂಗಣ್ಣನವರ ‘ಪಾಶ್ಚಾತ್ಯ ಗಂಭೀರ ನಾಟಕಗಳು’ ಕೃತಿಗೆ ಮುನ್ನುಡಿ ಬರೆಯುತ್ತ, ‘ಇವುಗಳ ಜತೆಗೆ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಬೆಳೆದಿರುವ ನಾಟಕಗಳ, ಇತರ ಪೌರ್ವಾತ್ಯ ದೇಶಗಳ ನಾಟಕಗಳ ಮತ್ತು ಪಾಶ್ಚಾತ್ಯ ಹಾಸ್ಯನಾಟಕಗಳ ಪರಿಚಯವನ್ನೂ ಬಲ್ಲವರು ನಮಗೆ ಮಾಡಿಕೊಟ್ಟರೆ ಕನ್ನಡದಲ್ಲಿ ಮೂರು ನಾಲ್ಕು ಉತ್ತಮ ಗ್ರಂಥಗಳು ದೊರೆತಂತಾ ಗುತ್ತದೆ’ ಎಂದು ಕುವೆಂಪು ಹಾರೈಸುತ್ತಾರೆ.

‘ಭಾರತೀಯ ಸಂಸ್ಕೃತಿ’ಗೆ[13] ತಾವು ಬರೆದ ಮುನ್ನುಡಿಯಲ್ಲಿ ಕುವೆಂಪು ಅವರು ತುಂಬ ಸಂಕ್ಷೇಪವಾಗಿ, ದೇಹಕ್ಕೆ ಬೇಕಾದ ಸಕಲ ಶಕ್ತಿಗಳನ್ನೊಟ್ಟುಗೂಡಿಸಿ ತಯಾರಿಸಿದ ಘುಟಿಕೆ ಯಂತೆ, ಸಂಸ್ಕೃತಿಯ ಗುಣ ಲಕ್ಷಣಗಳನ್ನು ನಿರವಿಸಿದ್ದಾರೆ. ‘ಮಾನವನ ಊರ್ಧ್ವಗಮನದ ಸಾಹಸ ದ್ವಿಮುಖಿಯಾದದ್ದು ನಾಗರಿಕತೆ ಮತ್ತು ಸಂಸ್ಕೃತಿ, ಒಂದು ಬಹಿರ್ಮುಖ, ಮತ್ತೊಂದು ಅಂತರ್ಮುಖ. ಆದರೆ ಅವುಗಳಿಗೆ ಪರಸ್ಪರ ವಿನಾಭಾವವೇನೂ ಇಲ್ಲ. ಒಂದರ ಪ್ರಭಾವಕ್ಕೆ ಮತ್ತೊಂದನ್ನು ರೂಪಿಸುವ ಶಕ್ತಿಯಿರುತ್ತದೆ. ಮಾನವಕುಲದ ಈ ಸಾಹಸವೇ ಋಷಿ, ಕವಿ, ಶಿಲ್ಪಿ, ಯೋಗಿ, ಪ್ರವಾದಿ, ಮಹಾತ್ಮ, ಆಚಾರ್ಯ, ಪರಮಹಂಸಾದಿ ವಿಭೂತಿ ಪುರುಷರನ್ನು ನಿರ್ಮಿಸಿದೆ. ಅಸಂಖ್ಯ ಮನಸ್ಸುಗಳ ಸಮಷ್ಟಿಯಲ್ಲಿ ಸಂಭವಿಸಿ, ಪ್ರಕಟವಾಗಿ, ಸಿದ್ಧವಾಗುವ ಒಂದು ದೇಶದ ಸಮಷ್ಟಿ ಮನಸ್ಸಿನ ಚಿತ್ ಶಕ್ತಿಯ ರಸಗಂಗೆಯೆ ಆ ದೇಶದ ಸಂಸ್ಕೃತಿ… ಮನುಷ್ಯ ಚೇತನದ ಸರ್ವತೋಮುಖವೂ ವಿಕಾಸಮಾನವೂ ಆದ ಆತ್ಮಶ್ರೀಯನ್ನು ಸಂಸ್ಕೃತಿ ಎಂದು ಸಂಕೇತಿಸಬಹುದೆಂದು’ ಇಡಿಯನ್ನು ಹಿಡಿಯಲ್ಲಿ ಹಿಡಿದಿಟ್ಟಿರುವ ಸೂತ್ರ ಪ್ರಾಯದ ಈ ಲಕ್ಷಣ ವಿವರಣೆಗೆ ಹತ್ತಾರು ಪುಟಗಳಾದರೂ ಸಾಲವು. ‘ಚಾತುರ್ವರ್ಣ್ಯಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ’ ಎಂಬ ಗೀತಾ ವಾಕ್ಯವನ್ನು ಗೊಡ್ಡು ಸಂಪ್ರದಾಯ ವಾದಿಗಳ ಮಾರ್ಗವನ್ನು ಬಿಟ್ಟು ವೈಚಾರಿಕವಾಗಿ ವ್ಯಾಖ್ಯಾನ ಮಾಡಿದ್ದಾರೆ.

ಕುವೆಂಪು ಅವರ ಮುನ್ನುಡಿಗಳಲ್ಲೆಲ್ಲ ‘ಇಸ್ಲಾಂ ಸಂಸ್ಕೃತಿಗೆ’[14]  ಬರೆದಿರುವ ಮುನ್ನುಡಿಯೇ ಅತ್ಯಂತ ದೀರ್ಘವಾದದ್ದು. ‘ಭರತವರ್ಷದ ರಾಜಕೀಯ ಇತಿಹಾಸವನ್ನು ನಿರಂತರವಾದ ಸುಲಿಗೆಯ ಕಥೆ ಎಂಬೊಂದು ಮಾತಿನಲ್ಲಿ ಬಣ್ಣಿಸಬಹುದು’ ಎಂದವರು ಮಾರ್ಮಿಕವಾಗಿ ತಮ್ಮ ಮುನ್ನುಡಿಯನ್ನು ಪ್ರಾರಂಭಿಸುತ್ತಾರೆ. ಮುಸ್ಲಿಮರ ಪ್ರಭುತ್ವ ಸಂಪಾದನೆಗೆ ಕಾರಣ ಗಳನ್ನು ವಿವರಿಸಿದನಂತರ, ‘ಇದನ್ನು ಸಮರದ ಕಥೆ ಎನ್ನುವುದಕ್ಕಿಂತಲೂ ಒಂದು ಸಮನ್ವಯ ಸಾಧನೆಯ ಕಥೆ, ಆರ್ಯ ಸಂಸ್ಕೃತಿಯ ನಿರಂತರವೂ ಅವ್ಯಾಹತವೂ ಅದ್ವಿತೀಯವೂ ಆದ ದಿಗ್ವಿಜಯ ಪರಂಪರೆಯ ಕಥೆ ಎನ್ನುವುದು ಹೆಚ್ಚು ಸಮಂಜಸವಾದೀತೆಂದು ವಿಚಾರಮತಿಗೆ ವೇದ್ಯವಾಗುತ್ತದೆ’ ಎಂದು ಹೇಳುತ್ತಾರೆ. ತಮ್ಮ ವಾದ ಸಮರ್ಥನೆಗಾಗಿ ಅವರು ವಿಜಿತ ಗ್ರೀಕ್ ಸಂಸ್ಕೃತಿ ವಿಜೇತ ರೋಮನ್ ಜನಾಂಗದ ಮೇಲೆ ಬೀರಿದ ಪ್ರಭಾವವನ್ನು ಉದಾಹರಿಸುತ್ತಾರೆ. ಈ ಸಮನ್ವಯಕ್ರಿಯೆಯ ಕಡೆಗೆ ಯಾವ ಇತಿಹಾಸಕಾರನೂ ಗಮನ ಹರಿಸಲಿಲ್ಲವೆಂಬುದು ಗಮನಿಸಬೇಕಾದ ಅಂಶ. ಆದರೆ ಇಲ್ಲಿ ನೆಲಸಿ ನಿಂತ ಜನಜನಾಂಗಗಳ ಘನಿಷ್ಠವಾದ ಸಂಸರ್ಗದಿಂದ ಅನಿವಾರ್ಯವಾಗಿ ಅವಿರ್ಭವಿಸಿದ ಸಂಸ್ಕೃತಿ ಶ್ರೀಸಂವರ್ಧನೆಯ ಅಮೋಘವಾದ ಆಖ್ಯಾನದ ಉಲ್ಲೇಖನವೆ ಸಾಕಷ್ಟು ಪ್ರಮಾಣದಲ್ಲಿ ನಡೆದಿಲ್ಲವೆಂದು ವಿಷಾದದಿಂದ ಉದ್ದವಾಗಿಸುತ್ತಿರುವ ಜನ ಸಂಸ್ಕೃತಿ ಸಮನ್ವಯ ಸಿದ್ದಿಯ ಅಧ್ಯಯನದ ಕಡೆಗೆ ಲಕ್ಷ್ಯಹರಿಸಬೇಕಾಗಿದೆ. ಭಾರತೀಯ ಸಂಸ್ಕೃತಿ ವಿಕಾಸಕ್ಕೆ ಪ್ರೇರಕವಾದ ಶಕ್ತಿಗಳ ಅರಿವಿಲ್ಲದಿರುವುದೇ ರಾಷ್ಟ್ರವಿಭಜನೆಗೆ ಮುಖ್ಯಕಾರಣವೆನ್ನಬಹುದು. ಮತೀಯ ವಿರಸಗಳಿಗೆ ಮುಖ್ಯವಾದ ಕಾರಣ ಸತ್ಯದ ಬಗೆಗಿನ ದರ್ಶನದ ಅಭಾವ. ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ ಎಂಬ ವೇದೋಕ್ತಿ ಪರರಿಗೆ ಗೊತ್ತಿಲ್ಲ, ವೇದಗಳ ನಾಡಿನವರು ಮರೆತಿದ್ದಾರೆ. ಈ ಎರಡು ಸಂಸ್ಕೃತಿಗಳ ಪರಸ್ಪರ ಪ್ರಭಾವದಿಂದ ಸಂಲಬ್ಧವಾದ ಸಮನ್ವಯ ಸಂಸ್ಕೃತಿಯ ಅಧ್ಯಯನದ ಫಲ ಇಲ್ಲಿ ಉತ್ಕೃಷ್ಟ ಪ್ರಬಂಧದಂತೆ ಮೂಡಿಬಂದಿದೆ, ಇದು ತತ್ತ್ವಶಾಸ್ತ್ರಜ್ಞ ರನ್ನು ಇತಿಹಾಸಕಾರರನ್ನು ಧರ್ಮಶಾಸ್ತ್ರಜ್ಞರನ್ನು ನಾಚಿಸುವಂತಿದೆ.

‘ಭಾರತೀಯ ಶಿಕ್ಷಣದ ಇತಿಹಾಸ’[15], ‘ಸಸ್ಯಸಂರಕ್ಷಣೆ’[16], ‘ಗೃಹವಿಜ್ಞಾನ’[17], ‘ಪ್ರವಾಸಿ ಕಂಡ ಇಂಡಿಯಾ’[18] ಈ ನಾಲ್ಕು ಗ್ರಂಥಗಳ ಮುನ್ನುಡಿಗಳಲ್ಲಿ ಕುವೆಂಪು ಅವರು ವಿಶೇಷವಾಗಿ ದೇಶಭಾಷಾಮಾಧ್ಯಮ, ದ್ವಿಭಾಷಾಸೂತ್ರವೇ ಮೊದಲಾದ ನಾಡಿನ ಪ್ರಮುಖ ಜೀವಂತ ಶೈಕ್ಷಣಿಕ ಸಮಸ್ಯೆಗಳನ್ನು ಕುರಿತು ಚರ್ಚಿಸಿದ್ದಾರೆ. ಅವರ ಆಲೋಚನೆಗಳು ನಾಡಿನ ಆರೋಗ್ಯಕ್ಕೆ ಸಾಧಕ, ಶಿಕ್ಷಣ ಶಾಸ್ತ್ರಕ್ಕೆ ಪೂರಕ. ಭಾಷಾಶಿಕ್ಷಣ ಸಂಬಂಧವಾದ ಸಮಸ್ಯೆಗಳಿಗೆ ಇಲ್ಲಿ ಸೂಚಿಸಿರುವ ಪರಿಹಾರಗಳು ಅಮೋಘವಾದುವೆಂದೇ ಹೇಳಬೇಕು.

ಕುವೆಂಪು ಅವರ ಮುನ್ನುಡಿಗಳನ್ನು ಕುರಿತ ಈ ಮುನ್ನುಡಿ ಅವರ ಮಾತುಗಳನ್ನೆ ಜೋಡಿಸಿ, ಅಣಿಗೊಳಿಸಿದ ತೋರಣವಾಗಿದೆ. ಅವು ಕಾಲಗರ್ಭದಲ್ಲಿ ಹೂತು ಹೋಗಿದ್ದರೆ ಮಹಾಕವಿಯ ಹಲವು ಅಮೂಲ್ಯ ಆಲೋಚನೆಗಳು ನಷ್ಟವಾಗುತ್ತಿದ್ದುವೆನ್ನುವುದನ್ನು ಓದುಗರು ಅರಿಯದಿರಲಾರರು.

 

 


[1]     ಅದೀಗ ‘ಮನುಜಮತ ವಿಶ್ವಪಥ’ ಅಚ್ಚಾಗಿದೆ, ಪು. ೧-೨.

[2]     ಪಷ್ಟಿನಮನ, ಪು. ೭೬-೮೮.

[3]     ಅದೇ, ಪು. ೮೯-೧೧೦.

[4]     ಅದೇ, ಪು. ೧೩೪-೧೪೪.

[5]     ಅದೇ, ಪು. ೨೦೨-೨೦೯.

[6]     ಅದೇ, ಪು. ೨೩-೨೩೭.

[7]     ಅದೇ, ಪು. ೨೩೮-೧೪೭

[8]     ನನ್ನ ಕಣ್ಣಿಗೆ ಬಿದ್ದವನ್ನು ಮಾತ್ರ ಇಲ್ಲಿ ಪೋಣಿಸಲಾಗಿದೆ. ಇಲ್ಲಿ ಬಿಟ್ಟು ಹೋಗಿರುವವರನ್ನು ಗಮನಕ್ಕೆ ತಂದರೆ ಮುಂದಿನ ಮುದ್ರಣದಲ್ಲಿ ಸೇರಿಸಲಾಗುವುದು.

[9]     ಡಿ.ವಿ.ಜಿಯವರ ಮಂಕುತಿಮ್ಮನಕಗ್ಗ ನಮ್ಮ ಕೈಸೇರಿದಾಗ ಮುಕ್ತಕರೂಪದಲ್ಲಿಯೇ ಅವರು ತಮ್ಮ ಪ್ರಶಂಸೆ ವ್ಯಕ್ತಪಡಿಸಿದ್ದನ್ನು ನೆನೆಯಬಹುದು.

[10]    ತ.ಸು. ಶಾಮರಾಯರ ಸಂಪಾದನೆ.

[11]    ಕೆ. ವೆಂಕಟರಾಮಪ್ಪನವರ ಸಂಪಾದನೆ.

[12]    ಎಂ. ಲಕ್ಷ್ಮೀನರಸಿಂಹಯ್ಯ ಗ್ರಂಥಕರ್ತರು.

[13]    ಎಸ್. ಶ್ರೀಕಂಠಶಾಸ್ತ್ರಿಗಳು ಇದರ ಗ್ರಂಥಕರ್ತರು.

[14]    ಇದರ ಕರ್ತೃ ಮಹಮದ್ ಅಬ್ಬಾಸ್ ಷೂಸ್ತ್ರಿಯವರು, ಅವರು ಬರೆದದ್ದು ಆಂಗ್ಲಭಾಷೆಯಲ್ಲಿ. ಅದನ್ನು ಕನ್ನಡಕ್ಕೆ ಮಾಡಿದವರು ಬ.ಎಂ. ಶ್ರೀಕಂಠಯ್ಯನವರು.

[15]    ಬರೆದವರು ಎನ್.ಎಸ್. ವೀರಪ್ಪ.

[16]    ಡಿ. ಶೇಷಗಿರಿರಾವ್.

[17]    ಬಿ. ಸುಶೀಲಾ ಲಿಂಗಯ್ಯ.

[18]    ಎಚ್.ಎಲ್. ನಾಗೇಗೌಡ.