ಶ್ರೀಮದ್ರಾಮಾಯಣ, ಮಹಾಭಾರತ, ಭಾಗವತಗಳು ಆದಿಅಂತ್ಯವಿಲ್ಲದ ಚಿರಂತನ ಕೃತಿಗಳು : ಅವು ಪರಬ್ರಹ್ಮನ ಪ್ರತಿಬಿಂಬಗಳು ಮಾತ್ರವಲ್ಲ, ಪರಬ್ರಹ್ಮ ಸ್ವರೂಪಿ ಗಳೆಂದರೂ ಸಲ್ಲುತ್ತದೆ. ಇವು ವಿಶ್ವದ ವಿಕಾಸದಂತೆ ಅನವರತ ವಿಕಾಸಮುಖಿ ಆಗಿವೆ. ಮಾನವ ವಿಕಾಸದ ಮಹಾಯಾತ್ರೆಯ ವಿಕ್ರಮಗಳನ್ನಿಲ್ಲಿ ಗುರುತಿಸಬಹುದು. ಅಧಿಮಾನಸ ಕ್ಕೇರಿದ ವಿಶ್ವಪುರುಷನ, ಪುರುಷೋತ್ತಮನ, ಪರಾತ್ಪರವಸ್ತುವಿನ ಪರಿಪೂರ್ಣಾಭಿ ವ್ಯಕ್ತಿಯವರೆಗಿನ ಮಾನವನ ವಿಕಾಸ ರಾಮಕಥೆಯ ವಿಕಾಸದಲ್ಲಿ ಮೇಳೈಸಿದೆಯೆಂದರೆ ಆಶ್ಚರ್ಯ ವಾಗದು. ಆದ್ದರಿಂದಲೇ ರಾಮಾಯಣ ನಿತ್ಯ ರಾಮಾಯಣವೆಂದು ಕರೆಸಿಕೊಳ್ಳುತ್ತಿದೆ.

ಪ್ರಾಯಶಃ ಬೈಬಲ್ ಹೊರತಾಗಿ, ಜಗತ್ತಿನ ಯಾವ ಪವಿತ್ರಗ್ರಂಥವೇ ಆಗಲಿ, ಪುರಾಣೇತಿಹಾಸಗಳೇ ಆಗಲಿ ಮೇಲ್ಕಂಡ ಭಾರತೀಯ ಗ್ರಂಥಗಳಷ್ಟು ವ್ಯಾಪಕವಾಗಿ ಕಾಲಾತೀತವಾಗಿ. ಆಯಾಯ ಸಮಾಜಗಳ ಮೇಲೆ ಪ್ರಭಾವ ಬೀರಿದಂತಿಲ್ಲ. ಇಲಿಯಡ್ ಈನಿಯಡ್ ಷಹನಾಮಾದಿ ಮಹಾಕಾವ್ಯಗಳು ಆಯಾಯ ದೇಶಗಳಲ್ಲಿ ಗ್ರಂಥಾಲಯಗಳ ಕಪಾಟುಗಳಲ್ಲುಳಿದಿವೆಯೆ ಹೊರತು, ಅಲ್ಲಿಯ ಜನರ ಬದುಕಿನಲ್ಲಿ ಒಂದಾಗಿಲ್ಲ; ಅಂದರೆ ಅವು ರಾಮಾಯಣದಂತೆ ನಿಚ್ಚಹಸುರಾಗಿರುವ, ಜೀವಂತ ಗ್ರಂಥಗಳಾಗಿ ಉಳಿದಿಲ್ಲ. ರಾಮಾಯಣ ಭಾರತ ಭಾಗವತಗಳನ್ನಾಧರಿಸಿದ ಸಾಹಿತ್ಯ ಕೃತಿಗಳು ಅಂದಿನಿಂದ ಇಂದಿನವರೆಗೆ ಸಂಖ್ಯಾಪ್ರಮಾಣ ಗುಣಗಾತ್ರಗಳಲ್ಲಿ ವಿಪುಲವಾಗಿ ಬೆಳೆದಿರುವಂತೆ, ಮುಂದೆ ಬೆಳೆಯುವಂತೆ ಜಗತ್ತಿನ ಇತರ ಮಹಾಕಾವ್ಯಗಳನ್ನಾಧರಿಸಿದ ಗ್ರಂಥಗಳು ಬೆಳೆಯುತ್ತಿಲ್ಲ, ಮುಂದೆ ಬೆಳೆಯುವಂತಿಲ್ಲ.

ಫಣಿರಾಯ ತಿಣುಕುವಷ್ಟರ ಮಟ್ಟಿಗೆ ರಾಮಾಯಣ ಕಥಾ ಪರಂಪರೆ ಬೆಳೆದಿದ್ದರೂ, ಭರತಖಂಡ ಎಲ್ಲ ಭಾಷೆಗಳಲ್ಲಿ ರಾಮಾಯಣವನ್ನಾಧರಿಸಿದ ಸಾಹಿತ್ಯ ಕೃತಿಗಳು ವಿಪುಲ ಪ್ರಮಾಣದಲ್ಲಿ ಇನ್ನೂ ಪ್ರಕಟವಾಗುತ್ತಿವೆ; ಮುಂದೆಯೂ ಪ್ರಕಟವಾಗಲಿವೆ. ಸರ್ವಮಾನವರ ಸಕಲಾಭೀಪ್ಸೆಗಳ ಅಭಿವ್ಯಕ್ತಿಗೆ ವಾಹಕವಾಗಬಹುದಾದ. ವಿಶ್ವಪುರುಷ ತತ್ತ್ವದ ಸಂವಹನಕ್ಕೆ ಮಾಧ್ಯಮವಾಗಬಹುದಾದ, ಭಾರತೀಯ ವೇದವೇದಾಂತ ಮಾತ್ರವಲ್ಲ, ಬುದ್ಧ ಬಸವ ಗಾಂಧಿಯರ ಸಂದೇಶವನ್ನು ಗರ್ಭೀಕರಿಸಿಕೊಳ್ಳಬಹುದಾದ, ಸಾಮರ್ಥ್ಯ ಸಾಧ್ಯತೆಗಳು ರಾಮಕಥೆಗಿವೆಯೆನ್ನುವುದಕ್ಕೆ ರಾಮಾಯಣ ರಾಶಿಯೆ ಸಾಕ್ಷಿಯಾಗಿದೆ. ಆದ್ದರಿಂದ ರಾಮನೊಬ್ಬ ಚಾರಿತ್ರಿಕ ವ್ಯಕ್ತಿಯಲ್ಲ, ಆಗಿಹೋಗಿರುವ, ಮುಂದೆ ಆಗಬೇಕಾದ ಮನುಕುಲದ ನಿತ್ಯಮೂಲಶಕ್ತಿಯೆಂದೂ, ಅಂತೆಯೇ ರಾಮಾಯಣ ನಡೆದು ಹೋದ ಕತೆ ಮಾತ್ರವಲ್ಲ, ನಡೆಯಬೇಕಾಗಿರುವ ಮೂಲಾದರ್ಶನ ನಿತ್ಯ ಮೂಲಕಥೆಯೆಂದೂ ಪರಿಗಣಿಸಬೇಕಾಗುತ್ತದೆ.

ಹೀಗಾಗಿ ರಾಮಾಯಣದ ಸರ್ವಂಕಷ ತೌಲನಿಕ ಅಧ್ಯಯನ ನಿರಂತರವಾಗಿ ಪಡೆಯ ಬೇಕಾಗಿದೆ. ಯಾವುದೇ ಭಾಷೆಯಲ್ಲಿ ರಾಮಾಯಣಾಧರಿತವಾದ ಮೌಲಿಕ ಕೃತಿ ಪ್ರಕಟ ಗೊಂಡಾಗ, ಭಾರತೀಯ ರಾಮಾಯಣ ಪರಂಪರೆಯ ಹಿನ್ನೆಲೆಯಲ್ಲಿ ಅದರ ತೌಲನಿಕಾಧ್ಯ ಯನ ನಡೆಯಬೇಕಾದ್ದು ಸೂಕ್ತ. ಈ ದೃಷ್ಟಿಯಿಂದ ‘ಕುವೆಂಪು ಸಾಹಿತ್ಯ ಲೋಕ ನಾಲ್ಕು’ ಎಂಬ ವಿಮರ್ಶಾಗ್ರಂಥ ಸಮಯೋಚಿತವಾಗಿದೆ. ಇದರಲ್ಲಿ ಹದಿನಾರು ಪ್ರಬಂಧಗಳಿದ್ದು, ಮೂರು ಮಾತ್ರ ಬೇರೆ ಬೇರೆ ಭಾಷೆಗಳ ರಾಮಾಯಣಗಳ ತೌಲನಿಕಾಭ್ಯಾಸಕ್ಕೆ ಮುಡಿಪಾಗಿವೆ. ಜನಪದ ರಾಮಾಯಣಗಳು, ಜೈನರಾಮಾಯಣ, ವೈದಿಕರಾಮಾಯಣ, ವಾಲ್ಮೀಕಿ ರಾಮಾಯಣ ಮತ್ತು ತೊರವೆರಾಮಾಯಣಗಳ ಹಾಗೂ ಶ್ರೀರಾಮಾಯಣದರ್ಶನದ ನಡುವಣ ಸಾದೃಶ್ಯ ವೈದೃಶ್ಯಗಳ ಅಧ್ಯಯನ ಐದು ಅಧ್ಯಾಯಗಳಲ್ಲಿ ನಡೆದಿದೆ. ಇವು ವಿಚಾರಸಂಕಿರಣದಲ್ಲಿ ಕೇವಲ ಇಪ್ಪತ್ತು ಮೂವತ್ತು ನಿಮಿಷಗಳ ಅವಧಿಯಲ್ಲಿ ಮಂಡನೆ ಗೊಂಡ ಪ್ರಬಂಧಗಳಾದ್ದರಿಂದ, ಇವುಗಳಲ್ಲಿ ತಲಸ್ಪರ್ಶಿಯಾದ ಸರ್ವಂಕಷವಾದ ಅಧ್ಯಯನ ವನ್ನು ನಿರೀಕ್ಷಿಸುವಂತಿಲ್ಲ; ಮುಂದಿನ ವ್ಯಾಸಂಗಕ್ಕೆ ಅವು ತೋರುಬೆರಳಾಗಿವೆಯೆಂದು ಮಾತ್ರ ಭಾವಿಸಬಹುದಾಗಿದೆ. ‘ಶ್ರೀರಾಮಾಯಣದರ್ಶನಂ-ಮಲಯಾಳ ರಾಮಾಯಣಗಳು’ ಲೇಖನದಲ್ಲಿ ತೌಲನಿಕಾಂಶವೂ ಇಲ್ಲ, ವಿಮರ್ಶೆಯೂ ಇಲ್ಲ; ನಿರಾಶೆಯುಂಟುಮಾಡುವ ಜೊಳ್ಳು ಬರೆಹವದು. ‘ಶ್ರೀರಾಮಾಯಣದರ್ಶನಂ-ತೆಲುಗು ರಾಮಾಯಣಗಳು’ ಲೇಖನವು ಸಹ ಆರಿಸಿಕೊಂಡ ವಿಷಯಕ್ಕೆ ನ್ಯಾಯ ಸಲ್ಲಿಸಿಲ್ಲ; ಅದರಲ್ಲಿ ಆಳವೂ ಇಲ್ಲ, ವಿಸ್ತಾರವೂ ಇಲ್ಲ; ಪರೀಕ್ಷೆಯ ಉತ್ತರದಂತಿದೆ. ಶ್ರೀರಾಮಾಯಣದರ್ಶನಂ ಹೆಸರಿಸುವ ಅನೇಕ ಮಹಾಕವಿಗಳ ಗುಂಪಿನಲ್ಲಿ ‘ಮರಾಠಿ ಕವಿಗಳಲ್ಲಿ ಯಾರೊಬ್ಬರದೂ ಹೆಸರಿಲ್ಲ. ಆದುದರಿಂದ ತೌಲನಿಕ ಅಧ್ಯಯನಕ್ಕೆ ಇಲ್ಲಿ ಕಾಲಿಡಲು ತೆರಪಿಲ್ಲ. ಏನಾದರೂ ಸಂಬಂಧ ಕಲ್ಪಿಸ ಹೊರಟರೆ ಅದು ಇಮಾಮ್‌ಸಾಬಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧವನ್ನೇ ಹೇಳಿದಂತಾ ಗುತ್ತದೆ!’ ಎನ್ನುವ ಮಾತು ಬಾಲಿಶವಾಗಿದೆ. ಹೀಗಿರುವಾಗ ಈ ಲೇಖನದಲ್ಲಿ ಗಂಭೀರವಾದ ಅಧ್ಯಯನವನ್ನು ನಿರೀಕ್ಷಿಸಲಾಗದು. ಉಳಿದ ಲೇಖನಗಳಲ್ಲಿ, ಸಮಯಸಂದರ್ಭಾನು ಗುಣವಾಗಿ ಪ್ರಾಮಾಣಿಕ ಅಭ್ಯಾಸ ನಡೆದಿದೆಯೆಂದು ಹೇಳಬಹುದು.

‘ಶ್ರೀರಾಮಾಯಣದರ್ಶನಂ-ವೇದೋಪನಿಷತ್ತುಗಳ ಸಾರ’ ಮತ್ತು ‘ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಅಧ್ಯಾತ್ಮ’- ಈ ಎರಡು ಈ ಸಂಪುಟದ ಅತ್ಯುತ್ಕೃಷ್ಟ ಮೌಲಿಕ ಪ್ರಬಂಧಗಳು. ಶ್ರೀರಾಮಾಯಣದರ್ಶನಂ ಮಹಾಕಾವ್ಯದ ವಿವಿಧ ಮುಖಗಳನ್ನು ಕುರಿತಂತೆ ಈವರೆಗೆ ಸಾಕಷ್ಟು ಅಭ್ಯಾಸ ನಡೆದಿದ್ದರೂ, ಮಹಾಕಾವ್ಯದ ಈ ಎರಡು ಮೂಲಭೂತಾಂಶಗಳ ಕಡೆ ವಿಮರ್ಶಕರ ಗಮನ ಹೆಚ್ಚಾಗಿ ಹರಿದಿರಲಿಲ್ಲ. ಈ ವಿಷಯಗಳ ಅಧ್ಯಯನಕ್ಕೆ ವೇದ ವೇದಾಂತ ದರ್ಶನಗಳ ಆಳವಾದ ಪಾಂಡಿತ್ಯ ಅತ್ಯವಶ್ಯವಾಗಿ ಇರಬೇಕಾಗುತ್ತದೆ. ಆ ಪಾಂಡಿತ್ಯದ ಆಳ ಬಿತ್ತರಗಳನ್ನು ಈ ಪ್ರಬಂಧಗಳಲ್ಲಿ ಕಾಣಬಹುದಾಗಿದೆ. ಇವುಗಳ ಅಧ್ಯಯನ ದಲ್ಲಿ ಪ್ರಾಮಾಣಿಕತೆಯಿದೆ, ನಿಷ್ಠೆಯಿದೆ, ಶ್ರದ್ಧೆಯಿದೆ, ಅವತಾರ ತತ್ತ್ವವನ್ನು ಕುರಿತು ಈ ತನಕ ನಡೆದಿರುವ ಜಿಜ್ಞಾಸೆಯನ್ನು ವಿವರಿಸಿ, ಕುವೆಂಪು ಅವರು ಅದನ್ನು ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಿರುವ ಹೊಸ ತಾತ್ಪರ್ಯವನ್ನೆ ನೀಡಿರುವ ಅಂಶವನ್ನು ‘ವೇದೋಪ ನಿಷತ್ತುಗಳ ಸಾರ’ ಎಂಬ ಪ್ರಬಂಧದಲ್ಲಿ ಸರಿಯಾಗಿಯೇ ಗುರುತಿಸಲಾಗಿದೆ. ಯುಗಶಕ್ತಿಯೇ ಅವತಾರವೆಂದು, ಜನಮನದ ಅಭೀಪ್ಸೆಯೇ, ಅಂದರೆ ಸಮಷ್ಟಿಶಕ್ತಿಯೇ ಮಹಾತ್ಮರನ್ನು ಇಳೆಗೆಳೆದುತರುತ್ತದೆಂದೂ, ಕೃತಿರೂಪದಲ್ಲಿಯೂ ಭಗವಂತ ಅವಿರ್ಭವಿಸುತ್ತಾನೆಂದೂ ಕುವೆಂಪು ಹೇಳುವಾಗ ಅವತಾರ ತತ್ತ್ವಕ್ಕೆ ಅವರು ನೂತನಾಯಾಮವನ್ನು ಒದಗಿಸುತ್ತಾರೆ. ಅಧ್ಯಾತ್ಮವೇ ಈ ಮಹಾಕಾವ್ಯದ ಉಸಿರೆಂಬುದನ್ನು ‘ಮಹಾಕಾವ್ಯದಲ್ಲಿ ಅಧ್ಯಾತ್ಮ’ ಎಂಬ ಪ್ರಬಂಧದಲ್ಲಿ ವಿವರಣಾತ್ಮಕವಾಗಿ, ಪಾಂಕ್ತವಾಗಿ ನಿರವಿಸಲಾಗಿದೆ. ‘ಶ್ರೀರಾಮಾಯಣ ದರ್ಶನಂನಲ್ಲಿ ಉಪಾಖ್ಯಾನಗಳು’ ಎಂಬ ಪ್ರಬಂಧವೂ ಅಚ್ಚುಕಟ್ಟಾಗಿದೆ, ವಿಚಾರಾತ್ಮಕ ವಾಗಿದೆ, ಸುಸಂಗತವಾಗಿದೆ; ವಿಷಯಕ್ಕೆ ತಕ್ಕ ನ್ಯಾಯ ಸಂದಿದೆಯೆಂದೇ ಹೇಳಬಹುದು.

‘ಕುವೆಂಪು ಅವರ ಕಾವ್ಯ ವಾಲ್ಮೀಕಿಯ ಶ್ರೀರಾಮಾಯಣವನ್ನು ಅನೇಕ ವಿವರಗಳಲ್ಲಿ ಮೀರಿ ನಿಲ್ಲುತ್ತದೆ’ ಎಂದು ‘ಶ್ರೀರಾಮಾಯಣದರ್ಶನಂ’ ಎಂಬ ಪ್ರಬಂಧದಲ್ಲಿ ಸನಿದರ್ಶನ ವಾಗಿ ವಿವರಿಸಲಾಗಿದೆ. ಬಹುಶ್ರುತರೂ ಶ್ರೇಷ್ಠ ವಿದ್ವಾಂಸರೂ ಆದ ಈ ಪ್ರಬಂಧ ಕರ್ತೃಗಳು ಸುದೀರ್ಘಾಭ್ಯಾಸದ ಪರಿಣಾಮವಾಗಿ ಸಿದ್ಧಪಡಿಸಿರುವ ಈ ಪ್ರಬಂಧದಲ್ಲಿ ಉತ್ಪ್ರೇಕ್ಷೆಗಳಿಗವಕಾಶವಿಲ್ಲವೆಂದೇ ಹೇಳಬಹುದು. ‘ಕುವೆಂಪುಯುಗ’ ಎಂಬ ಪ್ರಬಂಧವನ್ನು ಬರೆದಿರುವವರು ಆಂಗ್ಲ ಕನ್ನಡ ಸಾಹಿತ್ಯಗಳನ್ನು ಮೂಲಚೂಲವಾಗಿ ಅಧ್ಯಯನ ಮಾಡಿರುವ ನಿರ್ಭಿಡೆಯ ಗಂಭೀರ ವಿಮರ್ಶಕರು. ಆಧುನಿಕ ಸಾಹಿತ್ಯಕಾಲವನ್ನು ಕುವೆಂಪು ಯುಗವೆಂದವರು ಸಾಧಾರವಾಗಿ ಪ್ರತಿಪಾದಿಸುವುದರಲ್ಲಿ ಔಚಿತ್ಯವಿದೆ, ಸತ್ಯವಿದೆ. ಪಂಪನ ಎತ್ತರಕ್ಕೇರದ ಪೊನ್ನ ರನ್ನರನ್ನು ಅವನೊಂದಿಗೆ ಸೇರಿಸಿ, ಅವರನ್ನು ರತ್ನತ್ರಯರೆಂದು ಕರೆಯುವುದರಲ್ಲಿ ಸ್ವಲ್ಪವೂ ಔಚಿತ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಬೇಕಾಗಿದೆ. ದಾಕ್ಷಿಣ್ಯ ಪ್ರವೃತ್ತಿಯ, ಪೂರ್ವಗ್ರಹಪೀಡಿತ ವಿಮರ್ಶಕರು ಮಾತ್ರ ಅಡ್ಡಗೋಡೆಯ ಮೇಲೆ ಕುಳಿತು ಯಾವ ಕಡೆಗೆ ಯಾವಾಗ ಏನು ಮಾತಾಡಬೇಕೆಂದು ತಮ್ಮೆಲ್ಲ ಬುದ್ದಿಶಕ್ತಿಯನ್ನು ಖರ್ಚುಮಾಡುತ್ತಾರೆ. ‘ಹಿಂದಿ ರಾಮಾಯಣಗಳು’ ಎಂಬ ಲೇಖನ ಈ ಸಂಕಲನಕ್ಕೆ ಅಪ್ರಸ್ತುತವೆಂದು  ಸ್ಪಷ್ಟಪಡಿಸಬೇಕಾಗಿದೆ.

ಸರ್ವೇಸಾಮಾನ್ಯವಾಗಿ ಇಲ್ಲಿರುವ ಎಲ್ಲ ಲೇಖನಗಳೂ ಕುವೆಂಪು ಅವರ ಪ್ರತಿಭೆಯನ್ನೂ ಹಿರಿಮೆಯನ್ನೂ ಗುರುತಿಸುವುದರಲ್ಲಿ ತೊಡಗಿವೆ. ಈ ಲೇಖನದಾರರಲ್ಲಿ ಯಾರೊಬ್ಬರೂ ಕಣ್ಣು ಮುಚ್ಚಿಕೊಂಡು ಕುವೆಂಪು ಅವರನ್ನು ಹೊಗಳಿಲ್ಲವೆಂದೇ ನನ್ನ ಭಾವನೆ. ಹೊಗಳಿಕೆ ತೆಗಳಿಕೆಗಳಿಂದ ಕುವೆಂಪು ಅವರಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ‘ದುಃಖೇಷು ಅನುದ್ವಿಗ್ನಮನಾಃ ಸುಖೇಷು ವಿಗತ ಸ್ಪೃಹಃ’ ಎಂಬ ಗೀತೋಪದೇಶದಂತೆ ಅವರ ಬದುಕು ಸಾಗಿದೆ. ನಿಂದಾಸ್ತುತಿಗಳ ಕಡೆಗೆ ಅವರ ಮನಸ್ಸು ಯಾವಾಗಲೂ ವಿಮುಖವಾಗಿರುತ್ತದೆ. ಸ್ವಾರ್ಥೈಕ ದೃಷ್ಟಿಯಿಂದ ಯಾರನ್ನೋ ಮೆಚ್ಚಿಸುವ ಸಲುವಾಗಿ ಸತ್ಯಕ್ಕೆ ದ್ರೋಹವೆಸಗುವ, ಕುವೆಂಪು ಸಾಹಿತ್ಯವನ್ನು ಆಳವಾಗಿ ಅಭ್ಯಾಸಮಾಡುವ ಜನ ಅಡ್ಡಗೋಡೆಯ ಮೇಲೆ ಕುಳಿತಿರುವುದುಂಟು. ಕ್ರಿಮಿಕೀಟಗಳಿಗೆ ಬಚ್ಚಲುದಕವೇ ಸ್ವಾದು; ಜೇನು ಹುಳುಗಳಿಗೆ ಪುಷ್ಪಮಕರಂದವೇ ಬೇಕು. ಕೆಲವರಿಗೆ ಹಸುವಿನ ಮೂತ್ರ ಪ್ರಧಾನವಾಗಿ ಕಂಡರೆ, ಕೆಲವರಿಗೆ ಕ್ಷೀರ ಪ್ರಧಾನವಾಗಿ ಕಾಣುತ್ತದೆ. ‘ಲೋಕೋಭಿನ್ನರುಚಿಃ’ ಅದೇನೇ ಇರಲಿ, ಕುವೆಂಪು ಸಾಹಿತ್ಯಾಧ್ಯಯನಕ್ಕೆ ಇದೊಂದು ಉಪಯುಕ್ತ ಕೊಡುಗೆಯೆಂದೇ ಹೇಳಬಹುದು.

ಶ್ರೀ ಕುವೆಂಪು ಅವರಿಗೆ ೭೫ ವರ್ಷ ತುಂಬಿದಾಗ ‘ಸರ್ಕಾರವೇ ಒಂದು ಸಮಾರಂಭ ಏರ್ಪಡಿಸಿತು’ ಎಂದು ಸಂಪಾದಕರು ತಮ್ಮ ‘ಮಾತು’ ಬರೆದು ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೈಸೂರು ಕುವೆಂಪು ವಿದ್ಯಾವರ್ಧಕ ಟ್ರಸ್ಟು ಸಮಾರಂಭ ಏರ್ಪಡಿಸಿತ್ತೇ ಹೊರತು, ಸರ್ಕಾರವಲ್ಲ ಎಂದು ತಿದ್ದಿಕೊಳ್ಳಬಹುದು. ತುಮಕೂರಿನಲ್ಲಿ ೧೯೮೭ರಲ್ಲಿ ಯಶಸ್ವಿಯಾಗಿ ಕುವೆಂಪು ಸಾಹಿತ್ಯ ಗೋಷ್ಠಿಯನ್ನು ನಡೆಸಿ, ಅಲ್ಲಿ ಮಂಡನೆ ಗೊಂಡಿದ್ದ ಲೇಖನಗಳನ್ನು ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಪರವಾಗಿ ಸಂಗ್ರಹಿಸಿ, ಸಂಪಾದಿಸಿ ಕೊಟ್ಟಿರುವವರು ಕನ್ನಡ ನಾಡಿನ ಸುಪ್ರಸಿದ್ಧ ಸಾಹಿತಿಗಳೂ ಸಂಶೋಧಕರೂ ವಿದ್ವಾಂಸರೂ ಆದ ಶ್ರೀ ಹ.ಕ. ರಾಜೇಗೌಡರು.