ಶ್ರೀ ಕುವೆಂಪು ಅವರ ಜೀವನ ಮತ್ತು ಕೃತಿಗಳನ್ನು ಕುರಿತ ಸಾಹಿತ್ಯಸಾಮಗ್ರಿ ವಿಪುಲವಾಗಿ ವಿಸ್ತಾರವಾಗಿ ಬೆಳೆಯುತ್ತಿದೆ. ಕೃತಿಕಾರನಿಂದ ಕೃತಿ ಹೊರಹೊಮ್ಮುವಾಗ ಕೃತಿಯಲ್ಲಿ ಕೃತಿಕಾರ ಲೀನಗೊಂಡಿದ್ದಾನೆಂದು ತಿಳಿದು ಆ ಕೃತಿ ಮತ್ತು ಕೃತಿಕಾರರ ನಡುವೆ ಅವಿನಾಭಾವ ಸಂಬಂಧವನ್ನು ಕಲ್ಪಿಸಿಕೊಳ್ಳಬಹುದಾಗಿದೆ. ಆದರೆ ಈ ಮಾತನ್ನು ಎಲ್ಲ ಕೃತಿಕಾರರಿಗೂ ಅನ್ವಯಿಸುವುದು ಕಷ್ಟವಾಗುತ್ತದೆ. ಅನೇಕ ವೇಳೆ ಕೃತಿ ಎಷ್ಟೇ ಮಹತ್ವ ದ್ದಾಗಿರಲಿ, ಕೃತಿಕಾರ ಅದಕ್ಕಿಂತ ಎತ್ತರದ ಮಟ್ಟದಲ್ಲಿ ಬೆಳೆದು ನಿಂತಿರುತ್ತಾರೆ. ಈ ಮಾತು ಶ್ರೀ ಕುವೆಂಪು ಅವರಿಗೆ ಅಕ್ಷರಶಃ ಅನ್ವಯಿಸುತ್ತದೆ.

ಶ್ರೀ ಕುವೆಂಪು ಅವರ ಜೀವನವನ್ನು ಕುರಿತಾದ ಸಂಗತಿಗಳು ಅದಿರಿನೊಳಗಿರುವ ಲೋಹದಂತೆ, ಹೂವಿನೊಳಗಣ ಪರಿಮಳದಂತೆ ಅವರ ಕೃತಿಗಳಲ್ಲಿ ಆಗೋಚರವಾಗಿ ಹುದುಗಿಕೊಂಡಿರುತ್ತವೆ; ಅವರ ಜೀವನ ಚರಿತ್ರೆಗಳಲ್ಲಿ, ಅವರಿಗೂ ಅವರ ಮಿತ್ರರಿಗೂ ನಡೆದ ಪತ್ರ ವ್ಯವಹಾರ ಹಾಗೂ ಸಂಭಾಷಣೆಗಳಲ್ಲಿ, ಇನ್ನೂ ಎಷ್ಟೆಷ್ಟೊ ಆಕರಗಳಲ್ಲಿ ಸೇರಿಕೊಂಡಿರುತ್ತವೆ. ಜೀವನ ಚರಿತ್ರೆಗಳಲ್ಲಿಯ ಸಂಗತಿಗಳು ಒಂದಾದ ಮೇಲೊಂದು ಕಥನ ರೂಪದಲ್ಲಿ ಅನುಸ್ಯೂತವಾಗಿ ಬರುವುದರಿಂದ ಒಂದೊಂದರ ಪ್ರಾಮುಖ್ಯವೂ ಸ್ಪಷ್ಟ ಗೋಚರವಾಗದೆ, ಅವು ಮಸುಕುಮಸುಕಾಗಿ ಮನಸ್ಸಿನಲ್ಲುಳಿಯುತ್ತವೆ. ಇಲ್ಲವೆ ಬಹುಬೇಗನೆ ಆವಿಯಾಗಿ ಮರೆಯಾಗುತ್ತವೆ. ಅವರಜೀವನ, ದರ್ಶನ ಮತ್ತು ಕೃತಿಗಳನ್ನು ಕುರಿತ ಸಂಗತಿಗಳನ್ನು ಬಿಡಿಬಿಡಿಯಾಗಿ ಆಯ್ದುಜೋಡಿಸುವುದರಿಂದ ಅವರ ವ್ಯಕ್ತಿತ್ವದ ವಿವಿಧ ಮುಖಗಳು ಸ್ಪಷ್ಟವಾಗಿ ಕಣ್ಣೆದುರು ನಿಲ್ಲುವಂತಾಗುತ್ತದೆ. ಜೀವನ ಚರಿತ್ರೆಯ ವ್ಯಾಸಂಗ ಚೌ ಚೌ ತಿಂಡಿಯನ್ನು ಮುಕ್ಕಿಕೊಂಡು ತಿಂದಂತಾದರೆ ಸಂಗತಿಗಳ ಸಂಗ್ರಹದ ಓದು ಪೆಪ್ಪರಮೆಂಟನ್ನೂ ಚಾಕೋಲೇಟನ್ನೂ ಚಪ್ಪರಿಸಿದಂತೆ.

ಈ ದೃಷ್ಟಿಯಿಂದ ‘ಇವರು ಕುವೆಂಪು’ ಎಂಬ ಸಂಗತಿ ಸಂಗ್ರಹ ತುಂಬ ಉಪಯುಕ್ತ ವಾಗುತ್ತದೆ. ಇಂಥ ಸಂಗ್ರಹ ಜೀವನ ಚರಿತ್ರೆಯ ಓದಿಗೆ ಪ್ರಚೋದಕವಾಗುವುದಾದರೆ ಒಳ್ಳೆಯದೇ. ಚೌಚೌವಿನ ರುಚಿಯೇ ಬೇರೆ ಚಾಕೋಲೇಟಿನ ರುಚಿಯೇ ಬೇರೆ ಎನ್ನುವ ವಿಷಯವನ್ನು ಬಲ್ಲವರಿಗೆ ಹೇಳಿಕೊಡಬೇಕಾಗಿಲ್ಲ. ರಾಷ್ಟ್ರಕವಿ ಕುವೆಂಪು, ಗಂಗೋತ್ರಿ, ಕುವೆಂಪು ಸಂದರ್ಶನ, ರಸಋಷಿ, ಕವಿಶೈಲ ಮೊದಲಾದ ಕೃತಿಗಳಿಂದ ಆಯ್ಕೆಗೊಂಡ ಆಣಿಮುತ್ತುಗಳಂಥ ಸಂಗತಿಗಳು ಈ ಕೃತಿಯಲ್ಲಿ ಜೋಡಣೆಗೊಂಡಿವೆ. ಅನೇಕ ಸಂಗತಿಗಳನ್ನು ಸಂಗ್ರಾಹಕ ಲೇಖಕರು ತಮ್ಮದೇ ಆದ ತಿಳಿ ಭಾಷೆಯಲ್ಲಿ ಸ್ವಾರಸ್ಯವಾಗಿ ವಿವರಿಸಿದ್ದಾರೆ. ಸರಳತೆ, ಸಂಕ್ಷಿಪ್ತತೆ ಹಾಗೂ ನೇರ ನಡೆಗೆ ಈ ಸಂಗತಿಗಳೆ ಲಕ್ಷ್ಯಗಳಾಗಿದ್ದು ಅವುಗಳ ಸೊಗಸು ಹೆಚ್ಚಿದೆ. ಅವುಗಳ ಆಯ್ಕೆ, ಜೋಡಣೆ ಮತ್ತು ನಿರೂಪಣೆಗಳಲ್ಲಿ ಲೇಖಕರ ಆಭಿರುಚಿ ಶಕ್ತಿಸಾಮರ್ಥ್ಯಗಳು ಪ್ರತಿಬಿಂಬಗೊಂಡಿವೆ.

ಇಂಥ ಕೃತಿ ಯಾವಾಗಲೂ ಸಂಪೂರ್ಣವಾಗಿರುತ್ತದೆ, ಸಮಗ್ರವಾಗಿರುತ್ತದೆ ಎಂದು ಹೇಳುವಂತಿಲ್ಲ. ಎಷ್ಟೊ ಸಂಗತಿಗಳು ಕಾರಣಾಂತರದಿಂದ ಬಿಟ್ಟುಹೋಗಬಹುದು; ಕೆಲವರಿಗೆ ಮಹತ್ವಪೂರ್ಣವೆಂದು ತೋರುವ ಸಂಗತಿಗಳು ಇವರಿಗೆ ಸಾಧಾರಣವಾಗಿ ತೋರಬಹುದು; ಇವರಿಗೆ ಸಾಧಾರಣವೆಂದು ತೋರುವ ಸಂಗತಿಗಳು ಮತ್ತೆ ಕೆಲವರಿಗೆ ವಿಶೇಷವೆಂದು ತೋರಬಹುದು. ಅಷ್ಟೇ ಅಲ್ಲ, ಸಾಮಾನ್ಯತೆಯಲ್ಲಿ ಅಸಾಮಾನ್ಯತೆಯನ್ನು ಕಾಣುವ ಕಣ್ಣೂ ಇರುತ್ತದೆಂಬುದನ್ನು ಮರೆಯುವಂತಿಲ್ಲ. ಒಟ್ಟಿನಲ್ಲಿ ಮೊದಲಿಂದ ಕೊನೆಯತನಕ ಈ ಕೃತಿಯನ್ನೋದಿದಾಗ ವಾಚಕನಿಗೆ ಸಂತೃಪ್ತಿಯೊದಗುವುದಾದರೆ ಲೇಖಕ ಸಂಪಾದಕರ ಶ್ರಮ ಸಾರ್ಥಕವಾದಂತಾಗುತ್ತದೆ. ‘ಇವರು ಬಾಪು’ ಎಂಬ ಆರ್.ಕೆ. ಪ್ರಭು ಅವರ ಗ್ರಂಥದಿಂದ ಪ್ರಚೋದನೆಗೊಂಡು ಮೂಡಿರುವ ಈ ಕೃತಿ ಕನ್ನಡಕ್ಕೆ ಹೊಸದು. ಏಕೆಂದರೆ ‘ಇವರು ಬಾಪು’ ಎನ್ನುವುದು ಆಂಗ್ಲದಿಂದಾದ ಭಾಷಾಂತರ. ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಹಲವಾರು ರೀತಿ ದುಡಿಯುತ್ತಿರುವ ಶ್ರೀ ‘ಹರಿಹರ ಪ್ರಿಯ’ರ ಪ್ರಯತ್ನ ಶ್ಲಾಘ್ಯವಾದದ್ದು ಮಾತ್ರವಲ್ಲ, ಅತ್ಯಂತ ಯಶಸ್ವಿಯಾಗಿದೆಯೆಂದೇ ನನ್ನ ಭಾವನೆ.

ಪ್ರತಿಯೊಂದು ಸಂಗತಿಗೂ ಅವರು ನೀಡಿರುವ ತಲೆ ಹೆಸರುಗಳು ಅರ್ಥವತ್ತಾಗಿದ್ದು, ಕುವೆಂಪು ಅವರ ಜೀವನದ ವಿವಿಧ ಮುಖಗಳನ್ನು ವಿಶದಪಡಿಸುತ್ತವೆ. ಆದರೆ ಮೊದಲನೆಯ ಸಂಗತಿಗೆ ಕೊಟ್ಟಿರುವ ‘ಕಿತಾಪತಿ’ ಎಂಬ ಹೆಸರು ನಾನು ತಿಳಿದುಕೊಂಡಿರುವ ಅರ್ಥ ನಿಜವಾದರೆ, ಎಷ್ಟರಮಟ್ಟಿಗೆ ಅದಕ್ಕೊಪ್ಪುತ್ತದೆಯೋ ಕಾಣೆ. ತುಂಟತನ ಎಂಬ ಅರ್ಥ ಕೆಲವು ಕಡೆಯಿರಬಹುದಾದರೆ ಅದು ಸರಿಹೋಗುತ್ತದೆ. ಅಂತೆಯೇ ‘ಎರಡು ಹಿಮಾಚಲ’ (ಪುಟ ೫) ಎಂಬ ಸಂಗತಿಯೊಳಗೆ ಬರುವ ‘ಅರವಿಂದರು ಗಾಂಧೀಜಿಗಣಿ’ ಎನ್ನುವ  ಮಾತು ತಪ್ಪೆಂದು ತೋರುತ್ತದೆ. ಪ್ರಾಯಶಃ ಇದು ಅಚ್ಚಿನ ತಪ್ಪಿರಬೇಕೆಂದು ತಿಳಿಯುತ್ತೇನೆ.

ಇಂಥ ಕೃತಿ ಎಲ್ಲ ವಿದ್ಯಾರ್ಥಿಗಳ ಕೈ ಸೇರಿ, ಶ್ರೀ ಕುವೆಂಪು ಅವರ ಜೀವನದಿಂದ ಸ್ಫೂರ್ತಿ ಪಡೆದು, ಅವರ ಆದರ್ಶವನ್ನನುಕರಿಸುವಂತಾಗಿ ವಿದ್ಯಾರ್ಥಿ ಜೀವನ ಪರಿಪೂರ್ಣ ವಾಗಲೆಂದು ಹಾರೈಸುತ್ತೇನೆ.