ಮಹಾಕವಿಗಳೇ ವಿರಳ, ಮಹಾವ್ಯಕ್ತಿಗಳಂತು ಇನ್ನೂ ವಿರಳ; ಮಹಾಕವಿ ಮಹಾವ್ಯಕ್ತಿಯಾಗಿ ರುವುದಂತು ತೀರ ಅಪರೂಪ. ಭುವನದ ಭಾಗ್ಯದಿಂದ, ಒಂದು ಜನಾಂಗದ ಪುಣ್ಯದಿಂದ ಅಂಥ ವ್ಯಕ್ತಿ ದಶ ಶತಮಾನಕ್ಕೊಬ್ಬ ಭೂಮಿಯ ಮೇಲೆ ಜನ್ಮಧಾರಣೆ ಮಾಡಿದರೆ ಹೆಚ್ಚು. ಇಂಥ ಅಸಾಧಾರಣ ದೇವಮಾನವರಲ್ಲಿ ಕುವೆಂಪು ಒಬ್ಬರು.

ಬಾಲ್ಯದಲ್ಲಿಯೇ ನಿಸರ್ಗಮಹಿಮೆಯಿಂದ ಅಧ್ಯಾತ್ಮದ ಕಡೆಗೆ ವಾಲಿದ ಅವರು ಸ್ವಾಮಿ ಶ್ರೀ ಸಿದ್ದೇಶ್ವರಾನಂದರ ಪ್ರೇರಣೆ ಪ್ರೋಶ್ರೀ ರಾಮಕೃಷ್ಣಾಶ್ರಮ ವಾಸಿಯಾಗಿ, ಸ್ವಾಮಿ ಶ್ರೀ ಶಿವಾನಂದರ ದೀಕ್ಷಾಶೀರ್ವಾದ ಕೃಪೆಯಿಂದ ಶ್ರೀ ರಾಮಕೃಷ್ಣ ಪರಮಹಂಸರ ಕರಕಮಲ ಸಂಜಾತರಾಗಿ ಮಹಾ ಸಾಧನೆ ತಪಸ್ಸುಗಳಿಂದ ಸಿದ್ದಿಯ ಶಿಖರವೇರುತ್ತಾರೆ; ಶ್ರೀ ಸ್ವಾಮಿ ವಿವೇಕಾನಂದರ ಆರಾಧಕರಾಗಿ, ಆರಾಧ್ಯವಸ್ತುವೇ ಆಗುತ್ತಾರೆ.

ವೇದೋಪನಿಷತ್ತುಗಳ ಕಾಲದ ಋಷಿಗಳನ್ನು ನೆನಪಿಗೆ ತರುವ, ಅಧ್ಯಾತ್ಮ ಕ್ಷೇತ್ರದಲ್ಲಿ ಅನುಭವ ಅನುಭಾವ ವಿದ್ವತ್ತುಗಳನ್ನು ಬಿತ್ತಿ ಅಮರ ಸಾಹಿತ್ಯದ ಬೆಳೆಯನ್ನು ತೆಗೆದಿರುವ ಕುವೆಂಪು ಕವಿಕುಲತಿಲಕರು; ಅಧ್ಯಾತ್ಮಯೋಗ ಕಾವ್ಯಯೋಗಗಳೆರಡರಲ್ಲಿಯೂ ಸಿದ್ದಿ ಪಡೆದ ಯೋಗಪುರುಷರವರು. ಜಗತ್ತಿಗೆ ಶುಭವಾಗಲೆಂದು, ಮನುಕುಲದ ಬದುಕು ಹೊನ್ನಾಗಲೆಂದು ಅವರು ತಪಸ್ಸಿನಲ್ಲಿ ಮುಳುಗಿ, ಕಾವ್ಯರತ್ನಗಳನ್ನು ಹೊರತೆಗೆದು ಚೆಲ್ಲಿದ್ದಾರೆ. ಅವರ ಹಲವು ಕಾವ್ಯ ಮಹಾಕಾವ್ಯ ಮಹಾನಾಟಕ ಮಹಾಕಾದಂಬರಿ ಕತೆ ಪ್ರಬಂಧಗಳಲ್ಲಿ ಅವರ ಅಲೌಕಿಕ ಪ್ರತಿಭೆ ಮತ್ತು ಪ್ರಖರ ವ್ಯಕ್ತಿತ್ವ ಜತೆಗೆ ಅವರ ಚಿರಂತನಾಲೋಚನೆ ತತ್ತ್ವ ಸಂದೇಶಗಳು ಹೆಣೆದುಕೊಂಡಿವೆ. ಜಗತ್ತಿನಲ್ಲಿ ಶಾಂತಿ ನೆಲಸಬೇಕಾದರೆ ಅವರು ನೀಡಿರುವ ವಿಶ್ವಮಾನವ ಸಂದೇಶವನ್ನು ಮಾನವರು ಪಾಲಿಸಿದಾಗ ಮಾತ್ರ ಸಾಧ್ಯ. ಅವರ ಕೃತಿವಾಚನ ಮನನ ಆಚರಣೆಯಿಂದ ಬದುಕು ಹಸನಾಗುವುದಲ್ಲದೆ ಪ್ರತಿಯೊಬ್ಬ ಮಾನವನೂ ಯೋಗಮತಿಯಾಗುವ ಸಾಧ್ಯತೆಯಿದೆ.

ಕಾಲದೇಶ ಜನಾಂಗಗಳ ಎಲ್ಲೆಯನ್ನು ಮೀರಿದ ಇಂಥ ಋಷಿ ಕವಿ, ಮನುಕುಲದ ಗುರು ಗಂಗೋತ್ರಿಯಂತೆ ಎಲ್ಲೋ ಒಂದೆಡೆ ಹುಟ್ಟಿದರೂ ಇಡೀ ಜಗತ್ತಿನ ಆಸ್ತಿಯಾಗುಳಿ ದಿದ್ದಾರೆ. ಇಂಥ ಮಹಾ ತಪಸ್ವಿಗಳನ್ನು ನೋಡಿದವರ ಕಣ್ಣು ಸಾರ್ಥಕ, ಅವರ ಕಾವ್ಯ ವನ್ನೋದಿದ ನಾಲಗೆ ಧನ್ಯ, ಅವರ ಕೃತಿಗಳನ್ನೋದಿಸಿ ಕೇಳಿದ ಕಿವಿಗೆ ಪುಣ್ಯ.

ಪ್ರಕೃತಿಯಿಂದ ಬಂದು, ಪ್ರಕೃತಿಯೊಡಲಲ್ಲಿ ಬೆಳೆದು, ಪ್ರಕೃತಿಯ ಕೃಪೆಗೆ ಪಾತ್ರರಾಗಿದ್ದ ಕುವೆಂಪು ಅವರ ಭೌತಿಕ ದೇಹ ಪ್ರಕೃತಿಯಲ್ಲಿ ಲೀನವಾಗಿದೆ (೧೦.೧೧.೯೪). ತನ್ನ ಲೀಲಾ ವಿಲಾಸಕ್ಕೆ ತನ್ನ ಮಹಿಮಾಭಿವೃದ್ದಿಗೆ, ತನ್ನ ಉದ್ದೇಶದ ಈಡೇರಿಕೆಗೆ ಆ ದೇಹಶ್ರೀಯನ್ನು ಪ್ರವೇಶಿಸಿದ್ದ ವಿಶ್ವಚೈತನ್ಯ ಅವರ ಕೃತಿಗಳಲ್ಲಿ ತನ್ನತನದ ಮುದ್ರೆಯೊತ್ತಿ ಇದೀಗ ನಿಕೇತನದಿಂದ ಹೊರ ಬಂದು ನಿರ್ದಿಗಂತವಾಗಿ ವಿಶ್ವ ವ್ಯಾಪಿಯಾಗಿದೆ.

೧೦.೧೧.೧೯೯೪ರಂದು ಈ ಶೋಕಾಚರಣೆಯ ಸಂದರ್ಭದಲ್ಲಿ ಜಗತ್ತಿನ ಸಮಸ್ತ ಕನ್ನಡಿಗರ ಕಂಬನಿಯನ್ನೂ ಸೇರಿಸುವ ಇಚ್ಛೆಯಿಂದ ಪುಸ್ತಕ ಪ್ರಪಂಚದ ಸಂಪಾದಕರು, ಅದರ ವಾಚಕರು ಹಾಗೂ ಕರ್ನಾಟಕ ರಾಜ್ಯದ ವಯಸ್ಕ ಶಿಕ್ಷಣ ಸಮಿತಿ ಈ ವಿಶೇಷ ಸ್ಮರಣ ಸಂಚಿಕೆಯನ್ನು ಪ್ರಕಟಿಸುತ್ತಿದೆ. ಇದರ ಪ್ರಕಟಣೆಗೆ ನೆರವಾದ ಲೇಖಕ ಬಂಧುಗಳನ್ನು, ಪ್ರೋನೀಡಿದ ಅಧ್ಯಕ್ಷರನ್ನೂ, ಪ್ರಧಾನ ಕಾರ್ಯದರ್ಶಿಗಳನ್ನೂ, ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರನ್ನು ವಂದಿಸುತ್ತೇನೆ.