ಕುವೆಂಪು ದಿವಂಗತರಾಗಿ ಸರಿಸುಮಾರು ಎರಡೂವರೆ ತಿಂಗಳು ಕಳೆದರೂ (೨೯.೧.೧೯೯೫) ಅವರನ್ನು ಕುರಿತ ಸ್ಮರಣ ನಮನ ಸಮಾರಂಭಗಳು ಇನ್ನೂ ಕೊನೆ ಗೊಂಡಿಲ್ಲ. ಕರ್ನಾಟಕದ ಎಲ್ಲ ಕಡೆಗಳಲ್ಲಿ ಸ್ವಯಂ ಸ್ಫೂರ್ತಿಯಿಂದ ಪ್ರತಿದಿನವೂ ನಾನಾ ರೀತಿಯ ಕಾರ್ಯಕ್ರಮಗಳು ಜರುಗುತ್ತಿವೆ. ಹಳೆಯ ಮೈಸೂರು ಭಾಗದಲ್ಲಂತು ಹಳ್ಳಿ ಹಳ್ಳಿಗಳಲ್ಲಿ ಎಡೆಬಿಡದೆ ವಿಚಾರಗೋಷ್ಠಿಗಳು, ಕುವೆಂಪು ಗೀತಾ ಗಾಯನ ಕಾರ್ಯಕ್ರಮಗಳು. ಅವರ ಭಾವಚಿತ್ರ ಮೆರವಣಿಗೆ, ಸಾಹಿತ್ಯಿಕ ಸ್ಪರ್ಧೆಗಳು ಕರ್ತವ್ಯ ಕರ್ಮವೆಂಬಂತೆ ದೈವನಾನು ಶಾಸನವೆಂಬಂತೆ ನಡೆಯುತ್ತಿವೆ. ಈ ಸಂದರ್ಭದಲ್ಲಿ ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಮತ್ತು ಮೈಸೂರಿನ ಕುವೆಂಪು ವಿದ್ಯಾವರ್ಧಕ ಟ್ರಸ್ಟು ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡದ್ದುಂಟು. ಅವುಗಳಲ್ಲಿ ಕುವೆಂಪು ಮೇಲಣ ಕವಿತಾ ಸ್ಪರ್ಧೆಗೆ ೯೮ ಕವಿತೆಗಳು ಬಂದಿವೆ. ಪ್ರಬಂಧ ಸ್ಪರ್ಧೆಗೆ ನಾಲ್ಕು ವಿಷಯಗಳನ್ನು ಸೂಚಿಸಲಾಗಿತ್ತು. ೧. ನೀವು ಕುವೆಂಪು ಅವರನ್ನು ಮೆಚ್ಚಿಕೊಂಡಿದ್ದೇಕೆ? ೨. ನೀವು ಮೆಚ್ಚಿಕೊಂಡಿರುವ ಕುವೆಂಪು ನಾಟಕ ೩. ಕುವೆಂಪು ಸಾಹಿತ್ಯದಲ್ಲಿ ನಾಯಿಯ ಪ್ರಸಂಗಗಳು ೪. ಕುವೆಂಪು ಟಂಕಿಸಿರುವ ಶಬ್ದ ಸಂಪತ್ತು. ೨೪ ಪ್ರಬಂಧಗಳು ಬಂದಿವೆ. ಒಬ್ಬಿಬ್ಬರು ಬಿಟ್ಟರೆ, ಹಲವು ಮಂದಿ ಮೊದಲನೆಯ ವಿಷಯ ವನ್ನು ಮಾತ್ರವೇ ಕುರಿತು ಪ್ರಬಂಧವನ್ನು ಬರೆದು ಕಳಿಸಿದ್ದಾರೆ.

ಈ ಕವಿತೆ ಮತ್ತು ಪ್ರಬಂಧಗಳನ್ನು ಪರಿಶೀಲಿಸುವ ಸಲುವಾಗಿ ಪ್ರೊ. ಸುಧಾಕರ, ಪ್ರೊ. ಕೆ.ಎಸ್. ಭಗವಾನ್ ಮತ್ತು ಶ್ರೀ ಎಂ.ಎನ್. ಲಿಂಗಪ್ಪನವರನ್ನೊಳಗೊಂಡ ತೀರ್ಪು ಸಮಿತಿ ಯನ್ನು ನೇಮಿಸಲಾಯಿತು. ಅವರು ಹಲವು ಗಂಟೆ ಕಾಲ ಶ್ರಮಿಸಿ ತೀರ್ಪು ನೀಡಿದ್ದಲ್ಲದೆ, ಪ್ರಕಟಣಯೋಗ್ಯವಾದ ಕವಿತೆ ಲೇಖನಗಳನ್ನು ಆರಿಸಿಕೊಟ್ಟಿದ್ದಾರೆ. ಅವರಿಗೆ ಹಾಗೂ ಸ್ಪರ್ಧಿ ಗಳಿಗೆ ಪ್ರತಿಷ್ಠಾನದ ಧನ್ಯವಾದಗಳು.

ಕುವೆಂಪು ನಿಧನಾನಂತರ ಮಿತ್ರರು ಎತ್ತಿರುವ ಮೂರು ಮುಖ್ಯ ಆಕ್ಷೇಪಣೆಗಳ ಬಗ್ಗೆ ಇದೇ ಸಂದರ್ಭದಲ್ಲಿ ಕೆಲವು ಮಾತುಗಳನ್ನು ಹೇಳುವುದು ಅಪ್ರಸ್ತುತವಾಗಲಾರದು. ಊರು ಕೇರಿ ಮನೆ ಮಠಗಳಿಗೆ ಶಾಲೆ ಕಾಲೇಜು ಅಂಗಡಿ ಮುಂಗಟ್ಟುಗಳಿಗೆ ಕುವೆಂಪು ಹೆಸರನ್ನು ಬಳಸಿಕೊಳ್ಳುವುದು ಸರಿಯಲ್ಲ; ಅವರ ಪ್ರತಿಮೆಗಳ ಪ್ರತಿಷ್ಠಾಪನೆತರವಲ್ಲ; ಅವರ ಹೆಸರಿನಲ್ಲಿ ಮಠ ಕಟ್ಟಕೊಡದು. ಇವು ಕುವೆಂಪು ಅವರಿಗೆ ಬೇಕಿರಲಿಲ್ಲ. ಅಂಥ ಸಂಗತಿಗಳನ್ನವರು ವಿರೋಧಿಸುತ್ತಿದ್ದರು. ಈ ಆಕ್ಷೇಪಣೆಗಳನ್ನೆತ್ತಿದವರು ನಾಡಾಡಿಗಳಲ್ಲ. ಬೀದಿಹೋಕರಲ್ಲ. ಅವಿದ್ಯಾವಂತರಲ್ಲ, ಕೂಪಮಂಡೂಕಗಳೂ ಅಲ್ಲ; ಕುವೆಂಪು ಅವರಿಗೆ ಅತಿ ನಿಕಟವಾಗಿದ್ದೆ ವೆಂದು ಹೇಳಿಕೊಳ್ಳುವ ಪ್ರಾಧ್ಯಾಪಕರು, ನಾಗರಿಕರು, ವಿದ್ವಾಂಸರು, ಪ್ರಬುದ್ಧರು, ದೇಶ ವಿದೇಶ ತಿರುಗಿದವರು. ನನಗೆ ತಿಳಿದಂತೆ ಕುವೆಂಪು ಆ ಸಂಗತಿಗಳನ್ನೆಂದೂ ವಿರೋಧಿಸಲಿಲ್ಲ. ಅಥವಾ ಪ್ರೋಇಲ್ಲ; ಆ ಬಗ್ಗೆ ಅವರೂ ಪೂರ್ಣ ನಿರ್ಲಿಪ್ತರು. ಅಷ್ಟೇ ಅಲ್ಲ, ಅವರು ಬದುಕಿದ್ದಾಗಲೇ ಅವರನ್ನು ಗೌರವಿಸುತ್ತಿದ್ದ ಜನ ತಮಗೆ ಬೇಕಾದ ಹಾಗೆ ಅವರ ಹೆಸರನ್ನು ಬಳಸಿಕೊಳ್ಳುತ್ತಿದ್ದುದುಂಟು; ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದ್ದುಂಟು; ಅವರ ಹೆಸರಿನ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದದ್ದುಂಟು. ಕುವೆಂಪು ವಿದ್ಯಾವರ್ಧಕ ಟ್ರಸ್ಟು ಅವರ ಕಣ್‌ನಿಟ್ಟಿನಲ್ಲಿಯೇ ಸ್ಥಾಪಿತವಾಗಿ ಮೂವತ್ತೆರಡು ವರ್ಷಗಳಾದುವೆಂಬುದನ್ನು ಜನ ಮರೆಯಬಾರದು. ಕುವೆಂಪು ಬದುಕಿದ್ದಾಗ ಆ ಬಗ್ಗೆ ಉಸಿರೆತ್ತದ ಅವರ ನಿಕಟವರ್ತಿಗಳು ಅವರು ತೀರಿಕೊಂಡ ಕೂಡಲೇ ಕುವೆಂಪು ಅವರ ಮನೋಧರ್ಮ ತಮಗೆ ಮಾತ್ರ ಗೊತ್ತು. ಬೇರೆಯ ವರಿಗೆ ಗೊತ್ತಿಲ್ಲವೆನ್ನುವಂತೆ ಪ್ರಚಾರಪ್ರಿಯತೆಗಾಗಿ, ಏನೇನೋ ಹೇಳುತ್ತಿರುವುದನ್ನು ಕೇಳಿದಾಗ ಆಶ್ಚರ್ಯವಾಗುತ್ತದೆ.

ಹಳೆಯ ಮೈಸೂರಿನ ಯಾವ ಭಾಗಕ್ಕೆ ಹೋದರೂ ಕಣ್ಣು ಕುಕ್ಕುವಷ್ಟು ಪ್ರಮಾಣದಲ್ಲಿ ಕುವೆಂಪು ಹೆಸರು ಮೊಳಗುತ್ತಿದೆ. ದೊಡ್ಡ ಊರುಗಳಲ್ಲಿ ಕುವೆಂಪು ನಗರಗಳಿವೆ, ರಸ್ತೆಗಳಿವೆ, ವೃತ್ತಗಳಿವೆ; ಅವರ ಹೆಸರಿನ ದರ್ಜಿ ಅಂಗಡಿಗಳಿವೆ, ಹೋಟಲುಗಳಿವೆ, ದವಸದ ಅಂಗಡಿ ಗಳಿವೆ. ಹಣ್ಣಿನ ಅಂಗಡಿಗಳಿವೆ. ಆ ಹೆಸರಿನ ಅಂಗಡಿಗಳ ಒಬ್ಬಿಬ್ಬರನ್ನು ನಾನು ಪ್ರಶ್ನಿಸಿದೆ : ಕುವೆಂಪು ಅವರ ಹೆಸರು ಬಳಸಿಕೊಳ್ಳಲು ನೀವು ಅವರ ಅನುಮತಿ ಪಡೆದುಕೊಂಡಿದ್ದೀರಾ? ಅವರ ಹೆಸರೇಕೆ ಇಟ್ಟುಕೊಂಡಿರಿ? ಎಂದು. ನನ್ನ ಪ್ರಶ್ನೆಗಳಿಗೆ ಅವರು ಹೇಳಿದ ಉತ್ತರಗಳಿವು : ಕುವೆಂಪು ಈಗ ವ್ಯಕ್ತಿಯ ಹೆಸರಲ್ಲ; ಸಾರ್ವತ್ರಿಕವಾದ ಹೆಸರು : ಅವರು ಯಾವುದೇ ಕುಟುಂಬದ ಆಸ್ತಿಯಲ್ಲ, ದೇಶದ ಆಸ್ತಿ; ನಮಗೆ ಆ ಹೆಸರು ಪೂಜ್ಯ; ಆ ಹೆಸರಿಟ್ಟು ಕೊಂಡದ್ದರಿಂದ ನಮ್ಮ ಭಾಗ್ಯ ಕುದುರುತ್ತದೆ. ಭಾರತದಲ್ಲಿ ಯಾರಾದರೂ ಸ್ಟ್ಯಾಲಿನ್, ಲೆನಿನ್ ಹೆಸರಿಟ್ಟುಕೊಂಡರೆ ರಷ್ಯಾ ಜನ ಅಥವಾ ಸರ್ಕಾರ ಅವರ ಮೇಲೆ ಕಟ್ಲೆ ಹೂಡ ಬಹುದೇನು? ಎಷ್ಟು ಜನ ವಿವೇಕಾನಂದ, ಗಾಂಧಿ, ನೆಹರೂ, ರಾಮ, ಬಸವ, ಸಿದ್ಧರಾಮ, ಚೆನ್ನಬಸವ, ಇವರೇ ಮೊದಲಾದವರ ಹೆಸರಿಟ್ಟುಕೊಂಡಿಲ್ಲ! ಗಾಂಧಿ ಎಂಬ ಹೆಸರನ್ನ ವಲಂಬಿಸಿದ ನೆಹರೂ ಕುಟುಂಬದ ಜನ ಉದ್ಧಾರವಾದರಲ್ಲ, ಗಾಂಧಿ ಮಕ್ಕಳು ಮೊಮ್ಮಕ್ಕಳು ಅವರ ಮೇಲೆ ಫಿರ್ಯಾದು ಹೂಡಿದರೆ? ಗಾಂಧಿ, ಬಸವ, ಚೆನ್ನಬಸವ, ಜಯಪ್ರಕಾಶ್, ವಿೂರಾ ಮುಂತಾದವರ ಹೆಸರಿಟ್ಟುಕೊಂಡು ಆ ಹೆಸರಿಗೆ ಕಳಂಕ ಬರುವಂತೆ ವರ್ತಿಸಿ ದವರಿಲ್ಲವೆ? ಆದಿ ಪುರಾಣದ ಭರತ ಚಕ್ರವರ್ತಿ ತನ್ನದಿಗ್ವಿಜಯ ಯಾತ್ರೆಯ ವೈಭವವನ್ನು ಬರೆಸಲು ವಿಜಯಾರ್ಧಪರ್ವತದಲ್ಲಿ ಖಾಲಿ ಜಾಗ ಹುಡುಕುತ್ತಾನೆ. ಜಾಗವೇ ಇಲ್ಲ! ಅಂಥ ನಿರಾಶೆಯ ಪರಿಸ್ಥಿತಿಯಲ್ಲಿ, ಹೊಟ್ಟೆಯ ಉರಿ ಬೇಯುತ್ತಿರುವಾಗ ಕುವೆಂಪು ಹೆಸರಿನ ಬಳಕೆಯನ್ನು ವಿರೋಧಿಸುವುದು ಸಹಜವೇ. ಹೆಸರಿನ ಮರೆಯಲ್ಲಿ ಅವರ ಕೃತಿಗಳು ಹಿಂಜರಿಯುತ್ತವೆ ಎಂಬ ವಾದ ನಗೆ ಪಾಟಲಿಗೆ ಕಾರಣವಾಗುತ್ತದೆ. ಹೆಸರಿನ ಪ್ರಸಿದ್ದಿಯೇ ಹೊಸಬರಿಗೆ ಕುತೂಹಲಕಾರಿಯಾಗಿ, ಕೃತಿಗಳ ಕಡೆಗೆ ತೋರುದೀಪವಾಗುವುದಿಲ್ಲವೇ?

ಹೆಸರುಗಳಂತೆ ಪ್ರತಿಮೆಗಳೂ ಕೃತಿ ಪ್ರಪಂಚಕ್ಕೆ ಕೈಮರಗಳಾಗುತ್ತವೆ, ಮುಂದಿನ ಜನಾಂಗಕ್ಕೆ ಸ್ಫೂರ್ತಿಶಕ್ತಿಗಳಾಗುತ್ತವೆ; ಜನರ ಕೃತಜ್ಞತೆಯ ಗೌರವದ ಸಂಕೇತಗಳಾಗುತ್ತವೆ. ಸಾಂಸ್ಕೃತಿಕ ನಿಶಾನೆಗಳಾಗುತ್ತವೆ; ಜತೆಗೆ ಶಿಲ್ಪಕಲೆಯ ವಿಕಾಸಕ್ಕೆ ಪ್ರೇರಣೆಗಳಾಗುತ್ತವೆ. ಬೆಂಗಳೂರಿನ ಬಸವ ಭವನದ ಬಳಿ ಬಸವಣ್ಣನವರ ಪ್ರತಿಮೆಯನ್ನು ನಿಲ್ಲಿಸಿದಾಗ, ವಿಧಾನಸೌಧದ ಮುಂದೆ ನೆಹರೂ ಮೊದಲಾದವರ ವಿಗ್ರಹಗಳನ್ನು ಪ್ರತಿಷ್ಠಿಸಿದಾಗ, ಮೈಸೂರಿನ ಚೆಲುವಾಂಬ ಪಾರ್ಕಿನ ಬಳಿ ವಿವೇಕಾನಂದರ ಶಿಲ್ಪಕೃತಿಯನ್ನು ಮೆರೆಸಿದಾಗ, ಊರೂರುಗಳಲ್ಲಿ ಅಂಬೇಡ್ಕರ್‌ರ ಆಕೃತಿಗಳನ್ನು ಸಂಸ್ಥಾಪಿಸಿದಾಗ ಬಾಯಿ ಮುಚ್ಚಿಕೊಂಡಿದ್ದ ಜನ ಕುವೆಂಪು ತೀರಿಕೊಂಡ ಸಮಯದಲ್ಲಿ ಕೀರಲು ದನಿ ಎತ್ತಬೇಕಾದರೆ ಅವರು ಪೂರ್ವಗ್ರಹಪೀಡಿತ ರಾಗಿರಬೇಕು. ಇಲ್ಲವೆ ಷಂಡರಾಗಿರಬೇಕೆಂಬುದು ಸ್ಪಷ್ಟ. ಅವರ ಈ ಬೊಬ್ಬೆ ಅವರು ಮರೆಗೊರಳುಗೊಯ್ಕರಿರಬಹುದೆಂಬ ಸಂದೇಹಕ್ಕೂ ಕಾರಣವಾಗಬಹುದಲ್ಲವೆ? ಸ್ತೂಪ, ಸಮಾಧಿ, ಗ್ರಂಥ, ಲಿಂಗ, ದೇವಾಲಯ, ಚರ್ಚು ಎಲ್ಲವೂ ಪ್ರತಿಮೆಗಳೆಂದೇ ಹೇಳಬೇಕಾ ಗುತ್ತದೆ. ಇವೊಂದೂ ಬೇಡವೆನ್ನುವವರು ಕೊರಾನ್ ಪರಂಪರೆಗೆ ಸೇರಿದವರಾದರೆ ಅವರನ್ನು ಆಕ್ಷೇಪಿಸಬೇಕಾಗಿಲ್ಲ.

ಕೆಲವು ಮಠಗಳ ಭಕ್ತರೇ, ಹೋದಲ್ಲೆಲ್ಲ ಅವುಗಳ ಪ್ರಯೋಜನವನ್ನು ಪಡೆಯುವವರೇ ಅವುಗಳ ವಿರುದ್ಧವಾಗಿ ಖಡ್ಗವೆತ್ತಿದ್ದಾರೆಂದರೆ ಅವರು ಕಪಟಿಗಳೆಂದೇ ಹೇಳಬೇಕಾಗುತ್ತದೆ. ಇವರು ಯಾರಪ್ಪ ಅಂದರೆ ‘ಭಕ್ತರ ಕಂಡರೆ ಬೋಳಪ್ಪಿರಯ್ಯ’ ಎಂದು ಮುಂತಾಗಿ ಬಸವಣ್ಣನವರು ವರ್ಣಿಸಿರುವ ಪಂಥಕ್ಕೆ ಸೇರಿದವರೆಂದೇ ಸ್ಪಷ್ಟಪಡಿಸಬೇಕಾಗುತ್ತದೆ. ಮಠ ಪದಕ್ಕೆ ಎರಡು ಮುಖ್ಯ ಅರ್ಥಗಳಿವೆ; ಸಂನ್ಯಾಸಿಗಳ ಆಶ್ರಯಸ್ಥಾನ; ಪಾಠಶಾಲೆ. ಈ ಎರಡೂ ಒಳ್ಳೆಯ ಅರ್ಥಗಳೆ. ಹೀನಾರ್ಥದಲ್ಲಿ ಅದೊಂದು ಹೊಟ್ಟೆಬಾಕರ, ಶೋಷಕರ, ಪಿಂಜರಾಪೋಲರ ಆಸರೆಯೆಂದೂ ಕಲ್ಪನಾ ಸಮರ್ಥರ ಮನೋಧರ್ಮಕ್ಕನುಗುಣವಾಗಿ ಅರ್ಥವಾಗಬಹುದು. ಕಾಮಾಲೆಗಣ್ಣಿನವರಿಗೆ ಜಗತ್ತೆಲ್ಲ ಹಳದಿಯಾಗಿ ಕಾಣುತ್ತದೆ; ಕುಡುಕರಿಗೆ ಗಿಡಮರಗಳೂ ಕುಡಿದು ಮತ್ತೇರಿದಂತೆ ಕಾಣುತ್ತವೆ. ತಮ್ಮ ಸುತ್ತಮುತ್ತಣ ಜನರಿಗೆ ವಸ್ತುಗಳಿಗೆ ತಂತಮ್ಮ ಗುಣಗಳನ್ನಾರೋಪಿಸುವುದೂ ಸಹಜವೇ. ನಾಯಿ ಗೊಂತಿನಲ್ಲಿದ್ದುಕೊಂಡು ತಾನೂ ಮೇಯೊಲ್ಲ, ದನಗಳನ್ನೂ ಮೇಯಗೊಡುವುದಿಲ್ಲ. ಕ್ಷಯರೋಗಿ ಸುಪುಷ್ಟ ಬಲಿಷ್ಠನನ್ನು ಹೀಯಾಳಿಸುತ್ತಾನೆ; ಹೆಳವ ಲೋಕ ಪರ್ಯಟನಕಾರರನ್ನು ದುಂದುಗಾರರೆಂದು ಹಳಿಯುತ್ತಾನೆ; ಕುಳ್ಳ ಉದ್ದನೆಯವನನ್ನು ದೂಷಿಸುತ್ತಾನೆ; ಶಿಖಂಡಿ ಭೋಗ ರಸಿಕನನ್ನು ನಿಂದಿಸುತ್ತಾನೆ; ಕೈಲಾಗದವರು ಕ್ರಿಯಾಶೀಲರನ್ನು ಹಂಗಿಸುತ್ತಾರೆ. ಅಲಸ ಜೀವಿಗಳಿಗೆ ಮತ್ತು ಮಾತ್ಸರ್ಯ ಧುರೀಣರಿಗೆ ಮತ್ತೊಬ್ಬರನ್ನು ಬಯ್ಯುವುದೇ ಕೆಲಸ. ಮತ್ತೆ ಕೆಲವರಿಗಂತು ನಿಷ್ಕಾರಣವಾಗಿ ಮತ್ತೊಬ್ಬರನ್ನು ಭರ್ತ್ಸನೆ ಮಾಡುತ್ತಿರಬೇಕು. ಹಾಗೆ ಮಾಡದಿದ್ದರೆ ಅವರ ತಿಂದನ್ನ ಜೀರ್ಣವಾಗುವುದಿಲ್ಲ. ಇವರೆಲ್ಲ ಮನೋರೋಗಿಗಳೇ! ಪರೋಪದ್ರವವೇ ಸ್ವಭಾವವಾಗುಳ್ಳವನಿಗೆ ಕುವೆಂಪುವಿರಲಿ ಭಗವಂತನೇ ಪ್ರತ್ಯಕ್ಷನಾಗಿ ವಿವೇಕ ಹೇಳಿದರೂ ಕೇಳಿಸುವುದಿಲ್ಲ. ಉದ್ಯೋಗಶೀಲನಿಗೆ ಪರರ ದೋಷಗಳನ್ನು ಹುಡುಕಲು ಸಮಯವಿರುವುದಿಲ್ಲ. ‘ಪರ ಚಿಂತೆ ನಮಗೇಕಯ್ಯ? ನಮ್ಮ ಚಿಂತೆ ನಮಗೆ ಸಾಲದೆ?’ ಎಂಬುದು ಅವನ ಜೀವನ ಮಂತ್ರ. ಯಾವುದಾದರೂ ಸಂಖ್ಯೆಯ ಬಗ್ಗೆ, ಯಾರಾದರೂ ವ್ಯಕ್ತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವಮುನ್ನ ಅದರ ಅಥವಾ ಅವನ ಮೂಲ ಚೂಲಗಳನ್ನರಿತುಕೊಂಡು, ತದನಂತರ ಖಂಡನೆ ಮಂಡನೆ ಮಾಡಬೇಕಾದ್ದು ವಿವೇಕಿಯ, ವಿದ್ವಾಂಸನ ಮತ್ತು ಸಭ್ಯನ ಲಕ್ಷಣ. ನನ್ನ ಗುರು ನನಗೆ ಕಲಿಸಿರುವುದೇ ಇದು. ಗುರು ರಚಿತ ‘ಗ್ರಾಮಸಿಂಹ’ ಸಾನೆಟ್ಟೂ ಈ ಸಂದರ್ಭದಲ್ಲಿ ನನ್ನ ನೆನಪಿಗೆ ಬರುತ್ತಿದೆ.

ಸದ್ಯಕ್ಕೆ ಸಾಕು. ಹೃದಯದ ಭಾರವನ್ನು ಇಳಿಸಿಕೊಳ್ಳುವ ಸಲುವಾಗಿ, ಆ ನೋವು ಅಲ್ಲಿಯೇ ನಿಂತು ಕೊಳೆಯದಿರಲೆಂದು ಇಷ್ಟು ಹೇಳಬೇಕಾಯಿತು. ಶ್ರೀಮಾನ್ ಎಸ್. ಬಂಗಾರಪ್ಪನವರ ಅಭಿಮಾನದಿಂದಾಗಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂತು. ಪ್ರತಿಷ್ಠಾನದ ಸದಸ್ಯ ಮಿತ್ರರ ಸಹಕಾರದಿಂದಾಗಿ ಪೂರ್ವೋಕ್ತ ಸ್ಪರ್ಧೆಗಳನ್ನು ಏರ್ಪಡಿಸಲು ಸಾಧ್ಯವಾದದ್ದಲ್ಲದೆ, ಆಯ್ದ ಕವಿತೆ ಪ್ರಬಂಧಗಳನ್ನು ‘ಕುವೆಂವು ನಮನ’ ಎಂಬ ಹೆಸರಿನಲ್ಲಿ ಪ್ರಕಟಿಸಲಾಗುತ್ತಿದೆ. ಕುಲಪತಿ ಡಾ. ಎಂ.ಆರ್. ಗಜೇಂದ್ರ ಗಢ್ ಅವರೂ, ಕಾರ್ಯದರ್ಶಿ ಗಳಾದ ಜಿಲ್ಲಾಧಿಕಾರಿಗಳೂ, ಖಜಾಂಚಿ ಶ್ರೀ ಕೆ.ಟಿ. ನಾರಾಯಣ ಮೂರ್ತಿಯವರೂ, ಮುಖ್ಯವಾಗಿ ಸಮಕಾರ್ಯದರ್ಶಿ ಡಾ. ಎಚ್.ಜೆ. ಲಕ್ಕಪ್ಪಗೌಡರೂ ಪ್ರತಿಷ್ಠಾನದ ಚಾಲನೆ ಗಾಗಿ ತುಂಬ ಶ್ರಮವಹಿಸುತ್ತಿದ್ದಾರೆ. ಅವರೆಲ್ಲರಿಗೂ ನನ್ನ ನೆನಕೆಗಳು.

ಅಗಲಿದ ಚೇತನವನ್ನು ನನ್ನ ಹೃದಯದಲ್ಲಿ ತುಂಬಿಕೊಳ್ಳುತ್ತ, ಅಂತರಾಳದ ನುಡಿ ನಮನಗಳನ್ನು ಅರ್ಪಿಸುತ್ತಾ, ಅವರ ನೆನಪಿನಾಳದಲ್ಲಿ ಹೂತು ಹೋಗಬಯಸುತ್ತೇನೆ, ಎಂಬ ಪ್ರಬಂಧಕಾರ್ತಿ ಶ್ರೀಮತಿ ತಾಯಮ್ಮನವರ ಮಾತನ್ನು ಮೆಲುಕು ಹಾಕುತ್ತ, ಪೂಜ್ಯ ಗುರುಗಳಿಗೆ ನನ್ನ ನಮನ ಸಲ್ಲಿಸುತ್ತೇನೆ.