ಕುವೆಂಪು ವಿಶ್ವವಿದ್ಯಾನಿಲಯ ಪ್ರಾರಂಭಗೊಂಡಾಗಲೇ ಶ್ರೀ ಕುವೆಂಪು ಅವರ ಜನ್ಮೋತ್ಸವ ಆಚರಣೆ ವ್ರತರೂಪದ ಅನಿವಾರ್ಯ ಕಾರ್ಯಕ್ರಮವೆಂಬ ರೀತಿಯಲ್ಲಿ ಮೊದಲಾಗ ಬೇಕಿತ್ತು. ವಿಜ್ಞಾನತಜ್ಞರೂ ಸಾಹಿತ್ಯಪ್ರಿಯರೂ ಬಹುಭಾಷಾಪ್ರವೀಣರೂ ಆದ ಡಾ. ಗಜೇಂದ್ರ ಗಡ್‌ಕರ್ ಕುಲಪತಿಯಾದ ವರ್ಷದಲ್ಲಿಯೇ ಈ ಮಹಾಸುಯೋಗವನ್ನು ದೊರಕಿಸಿ ಕೊಂಡದ್ದಕ್ಕಾಗಿ ಅವರನ್ನು ತುಂಬಿದೆದೆಯಿಂದ ಅಭಿನಂದಿಸುತ್ತೇನೆ. ಅಂಥದೇ ಸೌಭಾಗ್ಯ ಕುಲಸಚಿವರೂ ಕುವೆಂಪು ಸಾಹಿತ್ಯಭಾಷ್ಯಕಾರರೂ ಆದ ಡಾ. ಲಕ್ಕಪ್ಪಗೌಡರಿಗೆ, ಇಲ್ಲಿಯ ಪ್ರಾಧ್ಯಾಪಕಮಿತ್ರರಿಗೆ, ವಿದ್ಯಾರ್ಥಿ ಬಂಧುಗಳಿಗೆ, ನೌಕರಬಳಗಕ್ಕೆ ದೊರೆತದ್ದೇ ಒಂದು ಪುಣ್ಯವಿಶೇಷ. ಕರ್ನಾಟಕದ ಸಾಂಸ್ಕೃತಿಕ ಹೃದಯದಂತಿರುವ, ಪಂಪ ಕುವೆಂಪು ಅವರನ್ನು ರೂಪಿಸಿದ ನಿಸರ್ಗಸೌಂದರ್ಯದ ಮಡಲಿನಂತಿರುವ ಈ ಭುವನಮೋಹಕ ಕಲಾಲಕ್ಷ್ಮಿಯ ಆವಾಸಸ್ಥಾನದಲ್ಲಿ ಇಂದು ಜರುಗುತ್ತಿರುವ ಉದ್ಘಾಟನಾ ಸಮಾರಂಭ ಇಂದಿನ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಮಾತ್ರವಲ್ಲ, ಮುಂದೆ ಅನಂತಕಾಲದವರೆಗೆ ನಡೆಯಲಿರುವ ‘ಕವಿ’ ಜನ್ಮೋತ್ಸವದ ಉದ್ಘಾಟನಾ ಮಹೋತ್ಸವವೆಂದೂ, ಇದಕ್ಕೆ ಆದ ಇಂದಿನ ಕುಲಪತಿಗಳು, ಕುಲಸಚಿವರು, ರಾಜಕೀಯ ನಾಯಕರೂ, ಮಲೆನಾಡಿನವರೆ ಆದ ಶ್ರೀ ಕಾಗೋಡು ತಿಮ್ಮಪ್ಪನವರು, ಘನವಿದ್ವಾಂಸರಾದ ಸುಜನಾ, ಸಿ.ಪಿ.ಕೆ., ಗಿರಡ್ಡಿ ಗೋವಿಂದರಾಜರು, ಇಲ್ಲಿ ನೆರೆದಿರುವ ಸಹೃದಯ ಸಭಾಸದರು, ಮಿಗಿಲಾಗಿ ಇಲ್ಲಿಯ ನೃಪತುಂಗ ಸರೋವರ

[1]ವನ್ನೊಳಗೊಂಡಂತೆ ಸೌಂದರ್ಯಲಕ್ಷ್ಮಿಯೇ ಮೂರ್ತಿವೆತ್ತಂತಿರುವ ಕಾನ್‌ಮಲೆ ಗಿಡ, ಮರ, ಬಳ್ಳಿ, ಮೃಗ ಪಕ್ಷಿಗಳಾದ ಸಚರಾಚರವಸ್ತುಗಳು ಸಾಕ್ಷಿಸ್ಥಾನವನ್ನಲಂಕರಿಸಿವೆಯೆಂದು ನಾನು ಭಾವಿಸುತ್ತೇನೆ.

ನನ್ನನ್ನು ಭಾವುಕನೆಂದು ಕರೆದರೂ ಸರಿಯೆ, ಇದೊಂದು ಐತಿಹಾಸಿಕ ಘಟನೆಯೆಂಬುದು ನನ್ನ ನಿಚ್ಚಳ ನಂಬಿಕೆ. ಈ ಪುಣ್ಯಸಂದರ್ಭದಲ್ಲಿ ‘ಕುವೆಂಪು ಅವರನ್ನು ನಾನೇಕೆ ಗೌರವಿಸು ತ್ತೇನೆ’ ಎಂಬ ಬಗ್ಗೆ ಕೆಲವು ಮಾತು ಹೇಳಬೇಕೆಂದು ನನಗನಿಸಿದೆ. ಅವರ ಮತ್ತು ಬೇಂದ್ರೆ ಯವರ ಹೆಸರು ನನಗೆ ಮೊದಲು ಪರಿಚಯವಾದದ್ದು ೧೯೩೪ನೆಯ ಸಂವತ್ಸರದಲ್ಲಿ, ಎಸ್.ಎಸ್.ಎಲ್.ಸಿ. ಪರೀಕ್ಷೆಗೆಂದು ‘ಶಂಕರಾಚಾರ್ಯ’ ಮತ್ತು ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಕವಿತೆಗಳನ್ನು ಉರುಹಚ್ಚಿದಾಗ. ಕುವೆಂಪು ಅವರ ಭೌತಿಕದೇಹವನ್ನು ನೋಡುವ ಮುನ್ನ ಅವರ ಆತ್ಮತೇಜಸ್ಸಿಗೆ ಮರುಳಾದದ್ದುಂಟು. ಇಂಟರ್‌ವಿೂಡಿಯಟ್ ಪರೀಕ್ಷೆಗೆಂದು ನಿಗದಿಸಿದ್ದ ‘ಶ್ರೀ ರಾಮಕೃಷ್ಣ ಪರಮಹಂಸ’ ಮತ್ತು ‘ಚಿತ್ರಾಂಗದಾ’ ಕೃತಿಗಳನ್ನು ವ್ಯಾಸಂಗ ಮಾಡಿದಾಗ, ಗ್ರಾಮೀಣ ಮುಗ್ಧತರುಣನ ಪರಿಸರಪ್ರೇರಿತ ದೌರ್ಬಲ್ಯಗಳನ್ನು ಜಾಲಾಡಿಸಿ. ಅವನ ಸರಳ ಹೃದಯಕ್ಕೊಂದು ಶಿವಶಕ್ತಿಯಾಗಿ, ಚೈತನ್ಯದಾಯಿಯಾಗಿ, ಅವನ ಬದುಕಿಗೊಂದು ದಾರಿದೀಪವಾದದ್ದು ದ್ವಿತೀಯವಲ್ಲದ ಅದ್ವಿತೀಯ ಕೃತಿ, ‘ಶ್ರೀರಾಮಕೃಷ್ಣ ಪರಮಹಂಸ’. ಆದರೆ ಅದರ ಬೆನ್ನಿನಲ್ಲಿಯೇ ‘ಸ್ವಾಮಿ ವಿವೇಕಾನಂದ’ರ ಜೀವನ ಚರಿತ್ರೆಯನ್ನೋದಿದಾಗ ಧಮನಿಧಮನಿಗಳಲ್ಲಿ ವಿದ್ಯುತ್ಸಂಚಾರವಾಗುತ್ತದೆ. ಸೃಷ್ಟಿಯಲ್ಲಿ ಸೃಷ್ಟಿಕಾರ ಹುದುಗಿದ್ದಾನೆನ್ನುವ ಮಾತು ನನ್ನ ಪಾಲಿಗಂತು ವಾಸ್ತವ ಸತ್ಯವಾಗಿ, ಕುವೆಂಪು ಭಕ್ತಿಯೆನ್ನಿ, ಕುವೆಂಪು ಗೌರವವೆನ್ನಿ, ಅದು ಅಂಕುರಿಸಿ, ಕಾಲಕ್ರಮೇಣ ವೃದ್ದಿಯಾಗ ತೊಡಗುತ್ತದೆ. ೧೯೩೬ನೆಯ ಸಂವತ್ಸರದಲ್ಲಿ ಅವರೊಮ್ಮೆ ಬೆಂಗಳೂರಿಗೆ ಯಾವುದೋ ಕಾರ್ಯಕ್ರಮಕ್ಕೆ ಬಂದಿದ್ದಾಗ, ದೂರದಿಂದಲೇ ನೋಡಿ ಹರ್ಷಪುಳಕಿತನಾಗಿ, ಜನ್ಮ ಸಾರ್ಥಕವಾಯಿತೆಂದು, ಅವರನ್ನು ಕಂಡ ಕಣ್ಣು ಧನ್ಯವಾಯಿತೆಂದು, ಅವರ ಗೇಯವನ್ನು ಕೇಳಿದ ಕಿವಿ ಕೃತಕೃತ್ಯವಾಯಿತೆಂದು, ನಾನು ಆನಂದಪರವಶನಾದದ್ದುಂಟು. ನಾನು ಕನ್ನಡ ಆನರ್ಸ್ ಪ್ರವೇಶಿಸಿದ್ದಕ್ಕೆ ಕುವೆಂಪು ಅವರ ಆಕರ್ಷಣೆಯೆ ಕಾರಣ; ಶ್ರೀರಾಮಕೃಷ್ಣ ವಿದ್ಯಾರ್ಥಿ ನಿಲಯವನ್ನು ಸೇರಿದ್ದಕ್ಕೆ ಅವರ ಆದರ್ಶವೆ ನಿದರ್ಶನ. ನನ್ನ ಪುಣ್ಯದಿಂದಾಗಿ ಅದೇ ವರ್ಷ ಆನರ್ಸ್ ತರಗತಿಗೆ ಪಾಠ ತೆಗೆದುಕೊಳ್ಳುವ ಅವಕಾಶ ಅವರಿಗೆ ದೊರಕಬೇಕೆ? ನನಗೆ ಸಾಹಿತ್ಯಪಾಠದ ಶ್ರೀಕಾರವನ್ನು ಬೋಧಿಸಿದ ಆದಿಗುರು, ಮಹಾಗುರು ಅವರು. ತರಗತಿಯಲ್ಲಿ ಸಾಹಿತ್ಯ ಬೋಧೆಮಾತ್ರವಲ್ಲ ಆತ್ಮಬೋಧೆಯೂ ಜತೆಜತೆಯಾಗಿ ಸಾಗುತ್ತಿತ್ತೆಂಬುದು ನನಗೆ ಲಭಿಸಿದ ಅಪೂರ್ವ ಸುಯೋಗ.

ಆನಂತರ ಆರೇಳು ವರ್ಷಗಳ ತನಕ, ಗುರುಕೃಪೆ ನನ್ನನ್ನು ಕೈಹಿಡಿದೆತ್ತುವವರೆಗೆ, ಜೀವನಾಸಕ್ತಿಯಿಲ್ಲದ ಗಾಂಪನಂತೆ, ಬರುಬನಾಗಿ ಅಜ್ಞಾತಾಂಧಕಾರದಲ್ಲಿ ತೊಳಲಾಡುತ್ತಿದ್ದೆ. ಗುರುಕೃಪೆಯ ಎಳೆತಕ್ಕೊಳಗಾದ ನಂತರ  ನನ್ನಲ್ಲಿ ಜೀವನಾಸಕ್ತಿ ಚಿಮ್ಮುತ್ತದೆ; ಶ್ರದ್ಧೆ ಮೂಡುತ್ತದೆ. ಕಾಯಕವೇ ನನ್ನ ಪಾಲಿಗೆ ದೈವವಾಗುತ್ತದೆ. ಕುವೆಂಪು ಅವರ ಮಾತೆ ನನಗೆ ಉಪನಿಷತ್ತಾಗುತ್ತದೆ. ಅವರ ಕೃತಿಯೆ ನನಗೆ ಆದರ್ಶವಾಗುತ್ತದೆ, ಅವರ ನೆನಪೆ ನನ್ನ ದೌರ್ಬಲ್ಯಗಳಿಗೆ ದಿವ್ಯೌಷಧಿಯಾಗುತ್ತದೆ. ಅವರ ಹರಕೆಯೆ ನನಗೆ ವಜ್ರ ರಕ್ಷೆಯಾಗುತ್ತದೆ. ನನ್ನಲ್ಲಿ ಹುದುಗಿದ್ದ ಸಾಹಿತ್ಯಶಕ್ತಿ ಗುರುಸಂಪರ್ಕದಿಂದ ಅರಳುತ್ತದೆ. ‘ಅನ್ಯರಲ್ಲಿದ್ದು ಸದ್ಯಕ್ಕೆ ತನಗಿಲ್ಲದ ಆದರೂ ಪಡೆಯಲಾಶಿಸುವ ಮನೋಧರ್ಮ ಪ್ರಸಂಶೆಯ ರೂಪದಲ್ಲಿ ಮೊದಲು ಮೈದೋರುತ್ತದೆ. ಇಂದು ತಾನಾಗಿಲ್ಲದಿದ್ದರೂ ಮುಂದೆ ತಾನಾಗಲೆ ಬೇಕೆಂಬ ಎದೆಹಂಬಲ ತೀವ್ರವಾದಂತೆಲ್ಲ ಆ ಪ್ರಶಂಸೆ ಪೂಜಾ ರೂಪಕ್ಕೆ ತಿರುಗುತ್ತದೆ. ಪೂಜಾವಸ್ತು ಆದರ್ಶವಾಗಿ ಪರಿಣಮಿಸುತ್ತದೆ. ತನ್ನ ಆಕಾಂಕ್ಷೆಯ ಆತ್ಮಶ್ರೀಯನ್ನು ಪಡೆದಿರುವ ಆ ವ್ಯಕ್ತಿ ಪೂಜ್ಯನಾಗು ತ್ತಾನೆ.[2] ವ್ಯಕ್ತಿಯೊ ಶಕ್ತಿಯೊ ವಸ್ತುವೊ ಭಾವನೆಯೊ, ಮೌಲ್ಯವೊ, ಸೌಂದರ್ಯವೊ ಒಂದಲ್ಲ ಒಂದು ಪ್ರತಿಯೊಬ್ಬ ಮಾನವನಿಗೂ ಆರಾಧ್ಯಸ್ಥಾನದಲ್ಲಿರುತ್ತದೆ. ತಂದೆತಾಯಿಯರ ಮೇಲಣ ಗೌರವ, ಮಡದಿಯ ಮೇಲಣ ಪ್ರೇಮ, ಸ್ನೇಹಿತರ ಪರವಾದ ಆದರೆ ಕಾಲಕ್ರಮೇಣ ಆರಾಧನೆಯಾಗಿ ಪರಿಣಮಿಸುವ ಸಂಭವವುಂಟು, ಅದು ಸಾಧ್ಯವಿಲ್ಲವೆನ್ನುವವನು ಆತ್ಮವಂಚಕನಾಗುತ್ತಾನೆ. ಕೃತಘ್ನನಾಗುತ್ತಾನೆ. ಭಿತ್ತಿಯಿಲ್ಲದೆ ಚಿತ್ರವಿಲ್ಲ, ತಂದೆಯಿಲ್ಲದೆ ಮಗನಿಲ್ಲ, ಧರೆಯಿಲ್ಲದೆ ಬೆಳೆಯಿಲ್ಲವೆಂಬುದನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳಬೇಕಾ ಗುತ್ತದೆ. ಅಹಂಕಾರವರ್ಜಿತನೂ, ಮಾತ್ಸರ್ಯದೂರನೂ, ಪೂರ್ವಗ್ರಹಮುಕ್ತನೂ ಆದ ವ್ಯಕ್ತಿಗೆ ಮಾತ್ರ ಮಹದ್ವ್ಯಕ್ತಿಯ ಮಹತ್ತು ವೇದ್ಯವಾಗುತ್ತದೆ.

ನಾನು ಕುವೆಂಪು ವ್ಯಕ್ತಿತ್ವದ ಕಡಲ ತಡಿಯಲ್ಲಿ ನಿಂತ ಮೂಕಪ್ರೇಕ್ಷಕನೆ ಹೊರತು, ಅದರಲ್ಲಿ ಮುಳುಗುವ ಅಥವಾ ಅದರಂತಾಗುವ ಭ್ರಮೆ ನನಗಿಲ್ಲ, ಯೋಗ್ಯತೆಯೂ ಇಲ್ಲ. ಆದರೂ ಅವರ ಸಾಹಿತ್ಯವನ್ನೋದಿದಾಗ ನನಗಾದ ಆನಂದವನ್ನು ಆಗಾಗ್ಗೆ ನನ್ನ ತೊದಲು ನುಡಿಯಲ್ಲಿ ಅಭಿವ್ಯಕ್ತಗೊಳಿಸುವುದುಂಟು.  ಅಷ್ಟಕ್ಕೆ ಹೊಟ್ಟೆಕಿಚ್ಚಿನ ಗುಂಪುಗುಳಿ ಜನ ನನ್ನನ್ನು ನಿಂದಿಸುವುದುಂಟು. ‘ಏನಾದರೂ ಮಾಡುತಿರು ತಮ್ಮ’ ಎಂದು ಸಾಹಿತ್ಯ ಗ್ಯಾಂಗಿನ ಜನ ಬಯ್ದದ್ದುಂಟು. ನಾನು ಕುವೆಂಪು ಅವರ ಕೊನೆಯ ಶಿಷ್ಯನೇ ಹೊರತು, ಯಾವ ಗ್ಯಾಂಗಿಗೂ ಸೇರಿದವನಲ್ಲ, ನಾನಾಯಿತು, ನನ್ನ ಕೆಲಸವಾಯಿತು; ಇದೇ ನನ್ನ ಜೀವನಧೋರಣೆ. ಕುವೆಂಪು ಅವರ ಹಿಂದೆ ಓಡಾಡುತ್ತಿದ್ದೆನೆಂಬ ಕಾರಣಕ್ಕಾಗಿಯೇ ಒಬ್ಬಿಬ್ಬರು ಬೋಧಕರಿಗೆ ನನ್ನ ಬಗ್ಗೆ ಅನಾದರ. ಅವರಲ್ಲೊಬ್ಬರು ನನ್ನನ್ನು ಪಿತೃವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದ ತೀನಂಶ್ರೀಯವರ ಮುಂದೆ ನನ್ನ ಬಗ್ಗೆ ಮಾತ್ಸರ್ಯವನ್ನು ವಮನಮಾಡಿ ದ್ದುಂಟು. ಆಗ ತೀನಂಶ್ರೀಯವರು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ದ್ದರು. ವಿಶೇಷೋಪನ್ಯಾಸಕ್ಕಾಗಿ ಮೈಸೂರಿಗೆ ಬಂದವರು ಅಸ್ವಸ್ಥರಾದರು. ಅವರನ್ನು ಉಪಚರಿಸುವ ಭಾಗ್ಯ ನನ್ನ ಪಾಲಿಗೊದಗಿತ್ತು. ಅವರಾಗ ‘ಏನು ಜವರೇಗೌಡ, ನೀವು ಕುವೆಂಪು ಭಕ್ತರಂತೆ. ಹೀಗಂತ “ನ” ಹೇಳಿದರು. ಹೌದೆ?’ ಎಂದು ಪ್ರಶ್ನಿಸಿದರು. ‘ಹೌದು ಸಾರ್. ನೂರಕ್ಕೆ ನೂರು ಪಾಲು ಸತ್ಯ. ಇಂದು ನಾನೇನಾಗಿದ್ದೇನೆಯೊ ಅದಕ್ಕವರು ಕಾರಣರಾದ ದ್ದನ್ನು ಮರೆಯುವ ಕೃತಘ್ನನಲ್ಲ ನಾನು. ಹೆತ್ತ ತಾಯಿಯನ್ನೆಂತೊ ಸಾಕುತಾಯಿಯನ್ನು ಸಹ ಅಂತೆಯೇ ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ಒಂದು ದೇವರಲ್ಲಿ ಅಚಲವಾದ ಭಕ್ತಿಯನ್ನಿಟ್ಟುಕೊಂಡವನು ಮತ್ತೊಂದು ದೇವರನ್ನು ದ್ವೇಷಿಸಲಾರ. ಒಬ್ಬ ಕವಿಯನ್ನು ಪ್ರೀತಿಸುತ್ತ, ಮತ್ತೊಬ್ಬನನ್ನು ದ್ವೇಷಿಸಿದ್ದಾದರೆ ಅವನು ಮತಾಂಧನಾಗುತ್ತಾನೆ, ಸರಸ್ವತೀ ದ್ರೋಹಿಯಾಗುತ್ತಾನೆ’ ಎಂದು ನಾನು ವಿನಯಪೂರ್ವಕವಾಗಿ ಉತ್ತರ ನೀಡಿದೆ. ‘ಯಾರೇನೇ ಹೇಳಲಿ, ನೀವು ಹಿಡಿದಿರುವ ದಾರಿ ಬಿಡಬೇಡಿ. ನಿಮ್ಮ ಮನಸ್ಸು ನನಗರ್ಥವಾಗಿದೆ’ ಎಂದವರು ನನ್ನ ದುಗುಡವನ್ನು ಹೋಗಲಾಡಿಸಿದ್ದಲ್ಲದೆ, ತಾವು ಕೊನೆಯನ್ನೈದುವವರೆಗೆ ಏಕರೀತಿಯ ವಾತ್ಸಲ್ಯದಿಂದ ನಡೆಸಿಕೊಂಡರು, ಹರಸಿದರು. ಅಂದಿನ ಸಾಹಿತ್ಯಿಕ ವಾತಾವರಣದ ಸ್ವರೂಪವನ್ನು ತಿಳಿಯುವ ಸಲುವಾಗಿ ಕೇವಲ ಒಂದು ನಿದರ್ಶನವನ್ನಿಲ್ಲಿ ಉದಾಹರಿಸಲಾಗಿದೆ.

ಅದೇನೇ ಇರಲಿ, ನನ್ನ ಜೀವನದ ಗುರಿಯನ್ನು ನಾನು ಕಂಡುಕೊಂಡದ್ದು, ನನ್ನ ಸಾಹಿತ್ಯಾಸಕ್ತಿಯನ್ನು ಕೆರಳಿಸಿದ್ದು, ಹಾಗೂ ನನ್ನ ಸಾಹಿತ್ಯಶಕ್ತಿಯನ್ನು ಪೋಷಿಸಿದ್ದು ಕುವೆಂಪು ಸಾಹಿತ್ಯ ಹಾಗೂ ನಾನವರೊಡನೆ ತಿರುಗಾಟದ ಕಾಲದಲ್ಲಿ ನಡಸುತ್ತಿದ್ದ ಸಾಹಿತ್ಯಿಕ ಚರ್ಚೆಗಳೆಂಬುದರಲ್ಲಿ ಅನುಮಾನವೇ ಇಲ್ಲ. ಕುವೆಂಪು ಅವರ ವಾಚನ ಕಲೆಯಿಂದ ಪ್ರೇರಿತನಾಗಿ ನಾನು ಮೊದಲು ಕೊಂಡ ಕವಿತಾ ಸಂಗ್ರಹಗಳು ‘ಕೊಳಲು’ ಮತ್ತು ‘ನವಿಲು’. ಕುಳಿತಲ್ಲಿ, ನಿಂತಲ್ಲಿ ಅವುಗಳೊಳಗಿನ ಕವಿತೆಗಳನ್ನು ಮಣಕಿಸಿಕೊಳ್ಳುತ್ತಿದ್ದೆ. ಮೊದಮೊದಲು ನನ್ನ ಮನವನ್ನು ಸೆಳೆದ ಕವಿತೆಗಳೆಂದರೆ, ನೇಗಿಲಯೋಗಿ, ಸುಗ್ಗಿಹಾಡು, ಅಂಗಳದವರೆಯ ಚಪ್ಪರದಡಿಯಲಿ, ದನಗಾಹಿ, ರೈತನ ದೃಷ್ಟಿ, ಗೊಬ್ಬರ, ಹಳ್ಳಿಯ ಹುಡುಗಿ, ಸುಗ್ಗಿ ಬರುತಿದೆ, ನನ್ನ ಬಯಕೆ, ಗೊಲ್ಲನ ಬಿನ್ನಹ, ಕಿಟ್ಟಯ್ಯ ಇತ್ಯಾದಿ ಗ್ರಾಮಜೀವನವನ್ನು ಚಿತ್ರಿಸುವಂಥವು. ಹಳ್ಳಿಯಲ್ಲಿ ಹುಟ್ಟಿ ಬೆಳೆದು ಅಲ್ಲಿಯ ಅನುಭವಗಳನ್ನು ರಕ್ತಗತವಾಗಿಸಿಕೊಂಡಿದ್ದ ನನಗೆ ಸಹಸ್ಪಂದನ ಸಾಧ್ಯವಾಗುತ್ತದೆ. ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ನನ್ನ ಮನವನ್ನು ರಂಜಿಸಿದರೂ, ನನ್ನ ಮೆಚ್ಚುಗೆಯನ್ನು ಗಳಿಸಿದ ಕೃತಿ ‘ಹಾಳೂರು’. ಅಲ್ಲಿಯ ಹಲವು ದೃಶ್ಯಗಳು ಕಣ್ಣಿಂದ ಮುಟ್ಟಬಹುದಾದಂಥವು. ಅಲ್ಲಿಯ ಊರಗೌಡ, ಕಾಲೇಜು ವಿದ್ಯಾರ್ಥಿ ಗಳು, ಗೋಪಾಲ, ತಿಮ್ಮ, ಅಂಗಡಿ ಸಿದ್ದಣ್ಣ, ವಕೀಲರು. ಇವರೆಲ್ಲರು ನನಗೆ ಸುಪರಿಚಿತರೆ. ನಾನೆಂದೂ ಗುಡಿಗೆ ಹೋದವನಲ್ಲ, ಅಕಸ್ಮಾತ್ ಹೋದರೂ ತಂದೆಯ ಏಟು ಬಿದ್ದನಂತರ. ಆದರೆ ನಿರಕ್ಷರ ಕುಕ್ಷಿಯಾದ ತಂದೆಯ ಮುಗ್ಧಭಕ್ತಿ ಮೊಲೆಹಾಲ ಹಸುಳೆಯಾಗಿದ್ದಾಗಲೆ ನನ್ನ ಮೈಮನಗಳನ್ನೆಲ್ಲ ವ್ಯಾಪಿಸಿಕೊಂಡಿತ್ತು. ಆ ಕಾರಣದಿಂದಲೇ ಇರಬಹುದು. ‘ಮುಂದಕೆಲ್ಲಿಗೆ?’, ‘ಗುರಿ’, ‘ಬಡವನೆಂದುಸುರಲತಿನಾಚುವೆನು ದೇವ’, ‘ಇನ್ನೇನು ಬೇಕೆನಗೆ ದೇವ?’, ‘ತವರೂರು’, ‘ಪ್ರಾರ್ಥನೆ’, ‘ಕಳಚಿ ಬೀಳುವೆನಯ್ಯ’, ‘ಬಿನ್ನಹ’, ‘ಅಂತೆ’, ‘ಎನ್ನನತಿಕಿರಿದು ಮಾಡಲುದೇವ ನೀನು’, ‘ನಿನ್ನವನು ನಾನಲ್ಲವೆ?’, ‘ವನಸುಮ’, ‘ಎಂತಿಹೆ?’, ‘ಎಲ್ಲಿಹೆ?’, ‘ಕೃಪೆ’, ‘ದಾರಿತೋರೆನಗೆ’ ಮೊದಲಾದ ಕವಿತೆಗಳು ನನ್ನ ಮನವನ್ನೆಲ್ಲ ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದುವಲ್ಲದೆ, ನನಗೆ ಉಡುಪಿಯ ಕೃಷ್ಣನ ದರ್ಶನವನ್ನು ಸಹ ಮಾಡಿಸಿದುವು. ಇದೆಲ್ಲ ನನ್ನ ಮನಸ್ಸಿನ ಭ್ರಾಂತಿಯೆಂದು ಕೆಲವರಿಗನ್ನಿಸ ಬಹುದಾದರೂ, ನನ್ನ ಪಾಲಿಗಂತು ಆ ಹೊತ್ತಿಗೆ ಸತ್ಯ.

ನಾನು ನೇಗಿಲಯೋಗಿಯ ಮಗ. ವಿದ್ಯಾರ್ಥಿದಶೆಯಲ್ಲಿದ್ದಾಗ ಅಗೆದಿದ್ದೇನೆ, ನಾಟಿ ಹಾಕಿದ್ದೇನೆ, ಉತ್ತಿದ್ದೇನೆ, ಬಿತ್ತಿದ್ದೇನೆ, ರೈತಾಪಿ ಕೆಲಸವನ್ನೆಲ್ಲ ಮಾಡಿದ್ದೇನೆ, ಹಿತ್ತಲಿನ ಗಿಡಗಳಿಗೆ ಗೊಬ್ಬರ ನೀರುಗಳನ್ನುಣಿಸುವುದು; ಬೆಳಗಾಗ ಎದ್ದು ಅವುಗಳ ಬೆಳವಣಿಗೆಯನ್ನು ವೀಕ್ಷಿಸುವುದು, ಒಮ್ಮೊಮ್ಮೆ ಅವುಗಳನ್ನು ತಬ್ಬಿಕೊಂಡು ಮುತ್ತಿಕ್ಕುವುದು ನನಗೆ ಪ್ರಿಯವಾದ ನಿತ್ಯಕರ್ಮ. ಬೇಸಿಗೆಯ ದಿನಗಳನ್ನು ವಿಶೇಷವಾಗಿ ಮರಗಳ ನೆಳಲಲ್ಲಿ ಕಳೆಯುತ್ತಿದ್ದುದುಂಟು. ಕುರಿ ದನ ಹುಲ್ಲು ಸೊಪ್ಪು ತಿನ್ನುವಾಗ ನಾನೇ ಅವುಗಳ ಮೂಲಕ ತಿನ್ನುತ್ತಿದ್ದೇನೇನೋ ಎಂಬಂತೆ ಭಾಸವಾಗುತ್ತಿತ್ತು. ಇದರಿಂದಾಗಿ ಕುವೆಂಪು ಅವರ ಪ್ರಕೃತಿಗೀತೆಗಳನ್ನೋದುವಾಗ ಮೈಮರೆಯುತ್ತಿದ್ದೆ. ಅವುಗಳ ದಾರ್ಶನಿಕ ಮೌಲ್ಯ ನನಗಾಗ ಅರ್ಥವಾಗುತ್ತಿರಲಿಲ್ಲ, ನಿಜ. ಮಲೆನಾಡಿನ ನಿಸರ್ಗವೈಭವದ ಪರಿಚಯವಾದದ್ದೇ ಅವರ ಕವಿತೆಗಳ ಮೂಲಕ. ಮಲೆನಾಡಿಗೆ ಒಂದೆರಡು ಸಲ ತಮ್ಮೊಂದಿಗೆ ಕರೆದೊಯ್ದು, ತಮ್ಮ ನಿಸರ್ಗ ಕವಿತೆಗಳ ಉದಯಕ್ಕೆ ನಿಮಿತ್ತವಾದ ನವಿಲುಕಲ್ಲು ಕವಿಶೈಲ ಸಿಬ್ಬಲುಗುಡ್ಡೆ ಏಳುಸೀಳು ರಾಮತೀರ್ಥ ಅಶೋಕವನ ಮೊದಲಾದ ರಮ್ಯ ಸ್ಥಳಗಳಲ್ಲಿ ಸುತ್ತಾಡಿಸಿ, ಅವು ಹೇಗೆ ತಮ್ಮ ಅಧ್ಯಾತ್ಮ ಸಾಧನೆಗೆ ನೆರವಾಗಿವೆಯೆಂಬುದನ್ನು ವಿವರಿಸುವ ಮೂಲಕ ನಿಸರ್ಗ ವಿಭೂತಿಯ ದರ್ಶನಕ್ಕೆ ಬೇಕಾದ ಒಳಗಣ್ಣು ತೆರೆಯಿಸಿದವರು ಗುರು ಕುವೆಂಪು ಅವರು. ‘ದೇವರು ರುಜು ಮಾಡಿದನು’ ಕವಿತೆ ನನಗರ್ಥವಾದದ್ದೇ ಅದನ್ನು ಪ್ರೇರಿಸಿದ ದಿವ್ಯಭವ್ಯ ಸ್ಥಾನದಲ್ಲಿ ಕುಳಿತು ಅವರೇ ಪ್ರಾಯೋಗಿಕ ವಿಮರ್ಶೆಯನ್ನು ನಡಸಿದಾಗ. ನಿಸರ್ಗಸೌಂದರ್ಯದ ದೇಗುಲಕ್ಕೆ ನನಗೆ ಪ್ರವೇಶ ದೊರಕಿಸಕೊಟ್ಟವರೇ ಅವರು.

ಹಿಂದಿನ ಕಾಲದಲ್ಲಿ ವಿದ್ಯಾವಂತರಿಲ್ಲದ ಹಳ್ಳಿಗಳಲ್ಲಿ ಪಟೇಲ, ಶ್ಯಾನುಭೋಗ, ಶ್ರೀಮಂತರದೆ ದರ್ಬಾರು. ಅವರ ಕಿರುಕುಳದ ಇಕ್ಕುಳದಲ್ಲಿ ಸಿಕ್ಕಿಕೊಂಡ ಬಡವರ ಪಾಡು ಹೇಳತೀರದ್ದು. ಅವರ ಕಣ್ಮುಂದೆ ಬಡವರು ಬಿಳಿ ಬಟ್ಟೆ ಉಡಬಾರದು, ಅವರ ಮಕ್ಕಳು ವಿದ್ಯಾವಂತರಾಗಬಾರದು. ವಿದ್ಯಾವಂತರಾದರೆ ತಮ್ಮ ಸ್ಥಾನಮಾನ ಪ್ರತಿಷ್ಠೆಗಳಿಗೆಲ್ಲಿ ಕುತ್ತೊದಗುತ್ತದೆಯೊ ಎಂಬ ಭಯ ಅವರಿಗೆ. ಇಂಥ ಜನರ ನಡುವೆಯೂ ನನ್ನ ತಂದೆ  ಸ್ವಾಭಿಮಾನಿ, ಛಲಗಾರ. ತಂದೆಯ ಆ ಗುಣಗಳು ನನ್ನ ರಕ್ತದಲ್ಲಿಳಿದಿದ್ದರೂ, ಪರಿಸರ ಪ್ರಭಾವದಿಂದ ಇಣುಕುತ್ತಿದ್ದ ಕೀಳರಿಮೆ ಮತ್ತು ಸಂಕೋಚಸ್ವಭಾವಗಳು ಛಲ ಸ್ವಾಭಿಮಾನ ಗಳು ತಲೆಯೆತ್ತದಂತೆ ತಡೆಯುತ್ತವೆ. ಕಾನೂನು ಹೆಗ್ಗಡಿತಿಯ ಹೂವಯ್ಯನ ವ್ಯಕ್ತಿತ್ವ ಪಾಂಚಜನ್ಯದ ಕವಿ, ಪಾಂಚಜನ್ಯ, ಆತ್ಮಶ್ರದ್ಧೆ, ಮಲ್ಲಗೀತೆ, ಕಲ್ಕಿ ಮೊದಲಾದ ಕವಿತೆಗಳು ಹಾಗೂ ಗುರುಸಾನ್ನಿಧ್ಯ ನನ್ನ ಕೀಳರಿಮೆ, ಸಂಕೋಚಪ್ರವೃತ್ತಿ ಮತ್ತು ಭೀತಿಯನ್ನು ಭಸ್ಮ ಮಾಡುತ್ತವೆ; ಸುಪ್ತಸ್ಥಿತಿಯಲ್ಲಿದ್ದ ಛಲ ಸ್ವಾಭಿಮಾನಗಳನ್ನು ಕೆರಳಿಸುತ್ತವೆ. ‘ಸಾವಿನಲಿ ಹೊಸಬಾಳು ಹುದುಗಿಹುದು; ನಾಶದಲಿ ನವಸೃಷ್ಟಿ ಪವಡಿಸಿದೆ’.[3] ‘ಜಗ್ಗದೆಯೆ, ಕುಗ್ಗದೆಯೆ, ಹಿಗ್ಗಿ ನಡೆ ಮುಂದೆ’[4] ‘ಎಷ್ಟು ದೇವರ ನೀನೆಷ್ಟು ನಂಬಿದರೇನೊಂದಿಷ್ಟು ನೀ ನಂಬದಿರೆ ನಿನ್ನ ನೀನು?’ ‘ಶ್ರದ್ಧೆಯಿರುವುದೆ ನಾಕ, ಅಶ್ರದ್ಧೆಯೇ ನರಕ’[5] ‘ಒಳ್ಳಿತಾಗುವುದೆಲ್ಲ! ಬೇವು ತುದಿಯಲಿ ಬೆಲ್ಲ!’ ‘ನೆಚ್ಚಿರಲಿ! ಕೆಚ್ಚಿರಲಿ! ಮುಂಬರಿವ ಹುಚ್ಚಿರಲಿ!’[6] ಎಂಬ ಕವಿಯ ಸ್ವಾನುಭವಸೂಕ್ತಿಗಳು ನನ್ನ ಮನಹೃದಯಗಳಿಗೆ ಅಮೃತಾಹಾರವಾಗಿವೆ, ನನ್ನ ಬಾಳಿಗಾಧಾರ ವಾಗಿವೆ. ನನ್ನ ಕೀಳರಿಮೆಯ ತೊಡೆಹದಲ್ಲಿ ಮತ್ತೊಬ್ಬ ಗುರು ತೀನಂಶ್ರೀಯವರ ಪಾತ್ರವೂ ಕಡಿಮೆಯಲ್ಲವೆಂದು ಈ ಸಂದರ್ಭದಲ್ಲಿ ನೆನೆದುಕೊಳ್ಳಬೇಕಾಗಿದೆ.

ಮೊತ್ತಮೊದಲು ನನಗೆ ಕನ್ನಡದ ದೀಕ್ಷೆಯನ್ನು ಕೊಟ್ಟವರೇ ಕುವೆಂಪು. ನಲವತ್ತೈದು ವರ್ಷಗಳ ಹಿಂದೆಯೇ (೧೯೪೯) ನಾನು ಲೇಖನ ಭಾಷಣಗಳ ಮೂಲಕ ಕನ್ನಡ ಪರವಾದ ಹೋರಾಟವನ್ನಾರಂಭಿಸಿದಾಗ ನನ್ನಲ್ಲಿ ಕೆಚ್ಚುನೆಚ್ಚುಗಳನ್ನು ಬಿತ್ತಿದವರು ಅವರು. ಅವರ ಬಲದಿಂದಲೇ ಸರ್ಕಾರವನ್ನು ಟೀಕಿಸಿ, ಮಂತ್ರಿಗಳ ಕೆಂಗಣ್ಣಿಗೆ ಗುರಿಯಾಗಿ, ಅವರ ಮೇಲೆ ಸಿಡಿದದ್ದೂ ಉಂಟು. ‘ಕನ್ನಡಿಗರೆ, ಎಚ್ಚರಗೊಳ್ಳಿ’ ಎಂಬ ನನ್ನ ಲೇಖನ ಬಾಂಬುಗಳ ಸಂಗ್ರಹಕ್ಕೆ ‘ಕನ್ನಡಕ್ಕಾಗಿ ಕೈಯೆತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ! ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೂಡುತ್ತದೆ! ಕನ್ನಡಕ್ಕಾಗಿ ಕಿರುಬೆರಳೆತ್ತಿದ್ದರೂ ಸಾಕು ಇಂದು ಅದೇ ಗೋವರ್ಧನಗಿರಿಯಾಗುತ್ತದೆ’ ಎಂದವರು ಮುನ್ನುಡಿ ಕಿಡಿಯ ಹರಕೆಯನ್ನಿತ್ತು, ನನಗೆ ವಜ್ರರಕ್ಷೆಯಾದವರು ಅವರು. ಕರ್ನಾಟಕ ರಾಜ್ಯ ರಚನೆಗೊಂಡು ಮೂರುವರೆ ದಶಕಗಳಾ ದರೂ, ಕುವೆಂಪು ಗೋಕಾಕರಂಥವರ ಸಲಹೆಗಳನ್ನು ಪ್ರತಿಯೊಂದು ಸರ್ಕಾರವೂ ಉಪೇಕ್ಷಿಸುತ್ತ ಬಂದಿದೆ. ‘ಆರು ತಿಂಗಳಲ್ಲಿ ಕನ್ನಡವನ್ನು ಸರ್ವಮಾಧ್ಯಮವಾಗಿ ಜಾರಿಗೆ ತರುವುದು ಸಾಧ್ಯವೆ?’ ಎಂದು  ತನಗಿಂತ ಹಿಂದೆ ಸರ್ಕಾರವೇ ಇರಲಿಲ್ಲವೆನ್ನುವ ಧೋರಣೆ ಯಲ್ಲಿ ಪ್ರತಿಯೊಂದು ಸರ್ಕಾರವೂ ಹೇಳುತ್ತ ಬಂದಿದೆ. ಇದು ದಕ್ಷರು, ಸ್ವಾಭಿಮಾನಿಗಳು, ವಿವೇಕಿಗಳು ಹೇಳುವ ಮಾತಲ್ಲ.

ಬೋಧನೆಯ ಮಾರ್ಗಕ್ಕೆ ಶತಮಾನಗಳೆ ವೇಳ್ಕುಂ
ವಿಪ್ಲವದ ಪಥವಿಡಿಯೆ ದಿನಮೆರಡೆ ಸಾಲ್ಗುಂ
ಯುಗಯುಗಗಳೆದೆಗೆ ಒರ್ದಿನಂ ಗದೆಗೆ
ಎಂಬ ಕುವೆಂಪು ಅವರ ಮಾತುಗಳೆ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತವೆ.[7]

ಈ ಕಾರ್ಯ ಕೇವಲ ಆರು ತಿಂಗಳಲ್ಲಿ ಸಾಧ್ಯವೆಂದು ಆಡಳಿತಾನುಭವವುಳ್ಳ ನಾನು ಸತ್ಯದ ಮೇಲಾಣೆಯಿಟ್ಟು ಹೇಳುತ್ತೇನೆ. ಏಕೀಕರಣ ಚಳುವಳಿಯ ಕಾಲದಲ್ಲಿ, ಅದರ ಪರವಾಗಿ ಹೋದೆಡೆಯಲ್ಲೆಲ್ಲ ಅವರು ಕಾವೇರಿಸುತ್ತಿದ್ದಾಗ ಆಗಿನ ಸರ್ಕಾರ ನೀಡಿದ ಎಚ್ಚರಿಕೆ ಗುತ್ತರವಾಗಿ ‘ಅಖಂಡ ಕರ್ನಾಟಕ : ಅಲ್ತೊ ನಮ್ಮ ಕೂಗಾಟದ ರಾಜಕೀಯ ನಾಟಕ!’ ಎಂದು ಗುಡುಗಿದಂತೆ, ‘ಕನ್ನಡ ಸರ್ವಮಾಧ್ಯಮ : ಅಲ್ತೊ ನಿಮ್ಮ ಸ್ವಾರ್ಥದ ರಾಜಕೀಯ ನಾಟಕ!’ ಎಂದು ಘೋಷಿಸಬೇಕಾಗಿದೆ.

ಪೌರೋಹಿತ್ಯ ಜಾತೀಯತೆಗಳಿಂದಾಗಿ ಮಾನವೀಯತೆ ಮಂಗಮಾಯವಾಗಿದೆ, ದೇಶ ಅಭದ್ರವಾಗಿ ಪತನಾಭಿಮುಖಿಯಾಗಿದೆಯೆಂದು ಜ್ಞಾನಾಂಜನ ಶಲಾಕೆಯಿಂದ ನನ್ನ ಅಜ್ಞಾನದ ತಿಮಿರವನ್ನು ಹೋಗಲಾಡಿಸಿ, ವೈಚಾರಿಕೆ ಹಾಗೂ ವೈಜ್ಞಾನಿಕ ಮನೋಧರ್ಮಗಳೇ ಅಧ್ಯಾತ್ಮವಿದ್ಯೆಗೆ ನಾಂದಿಯೆಂದು, ವೈಚಾರಿಕತೆಗೂ ಅಧ್ಯಾತ್ಮ ಸಾಧನೆಗೂ ವಿರೋಧವಿಲ್ಲ ವೆಂದು ಕಲಿಸಿದ, ಇಂದಿನ ಏಕೈಕ ಆಚಾರ್ಯರೆಂದರೆ ಕುವೆಂಪು ಅವರೆ. ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಅವರ ಉಪನ್ಯಾಸ ಸಂಗ್ರಹವನ್ನೋದಿದಾಗ ನನ್ನ ಬಾಳಿನ ಲ್ಲೊಂದು ಹೊಸ ತಿರುವು ಆರಂಭವಾಗುತ್ತದೆ. ಕಂಡ ಕಡೆ ಮೌಢ್ಯವನ್ನು ಪ್ರತಿಭಟಿಸುವ, ಪುರಾಣಾಗಮಶಾಸ್ತ್ರಪುರೋಹಿತ ಕರ್ಮಗಳನ್ನು ಪ್ರಶ್ನಿಸುವ, ಮತಿಶಕ್ತಿಯನ್ನು ತುಂಬಿ ಸ್ವತಂತ್ರವಾಗಿ ಆಲೋಚಿಸುವ ಸಾಮರ್ಥ್ಯ ಪ್ರಾಪ್ತವಾದದ್ದೇ ತದನಂತರ. ‘ವಿಚಾರಕ್ರಾಂತಿಗೆ ಆಹ್ವಾನ’ ಮತ್ತು ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ಯಂಥ ಪಾಂಚಜನ್ಯತೂರ್ಯವನ್ನಾಗಲಿ, ಡಮರುಗ ಧ್ವನಿಯನ್ನಾಗಲಿ, ಕೋದಂಡ ಟಂಕಾರವನ್ನಾಗಲಿ ಧೀರ ಧೀಮಂತ ಶ್ರೀಮಂತ ವ್ಯಕ್ತಿತ್ವವಿಲ್ಲದ ಸ್ವಾಭಿಮಾನ ಆತ್ಮಗೌರವವಿಲ್ಲದ ಷಂಡ ಸಾಹಿತಿಗಳಿಂದ ಭಂಡಮುಖಂಡ ರಿಂದ ನಿರೀಕ್ಷಿಸುವಂತಿಲ್ಲ. ಹಂಗು ಮುಲಾಜುಗಳಿಲ್ಲದೆ ಸರ್ಕಾರದ ಸಮಾಜದ ಲೋಪ ದೋಷಗಳನ್ನು ಭ್ರಷ್ಟಾಚಾರ ಅತ್ಯಾಚಾರಗಳನ್ನು ನಿರ್ಭಿಡೆಯಿಂದ ಬಯಲಿಗೆಳೆಯಬಲ್ಲ ಆತ್ಮಶಕ್ತಿಯುಳ್ಳ ಸಾಹಿತಿ ಮತ್ತೊಬ್ಬನಿಲ್ಲ. ಆದ್ದರಿಂದಲೆ ಅವರ ಬಗ್ಗೆ ನನಗೆ ಗೌರವ.

ಮೆಲುಕು ಹಾಕಿದಷ್ಟೂ ಜೀವಧಾತುವನ್ನು ಸ್ರವಿಸುವ, ಚಪ್ಪರಿಸಿದಷ್ಟೂ ರಸವನ್ನು ಸುರಿಸುವ ಎಂದೂ ಕರಗದ, ಸಮೆಯದ ಕುವೆಂಪು ಸೂಕ್ತಿ ಮಾತ್ರೆಗಳು, ಪೆಪ್ಪರಮೆಂಟುಗಳು ನನ್ನ ನೆನಪಿನ ಕೋಶದಲ್ಲಿ ಮನೆಮಾಡಿಕೊಂಡು, ಸದಾ ನನ್ನ ಬಾಳನ್ನು ತಿದ್ದುತ್ತಿವೆ, ಹೊಸ ಹೊಸ ಆಲೋಚನೆಗಳನ್ನು ಪ್ರಚೋದಿಸುತ್ತಿವೆ; ಮೌಢ್ಯಗಳ ಕಗ್ಗಲ್ಲಿಗೆ ತಲೆ ತಾಕದಂತೆ, ಕಾಲು ಎಡಹದಂತೆ ಸದಾ ನನ್ನನ್ನೆಚ್ಚರಿಸುತ್ತಿವೆ.

ಕರಿಯರದೊ ಬಿಳಿಯರದೊ ಯಾರದಾದರೆ ಏನು?
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ!
ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?
ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು!
ಹಳೆ ಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ
ಕೊಚ್ಚಿ ಹೋಗಲಿ, ಬರಲಿ ವಿಜ್ಞಾನ ಬುದ್ದಿ,
ನಿಮ್ಮ ನುಡಿ ನಿಮ್ಮ ಗಂಡಸುತನಕೆ ಹಿರಿಸಾಕ್ಷಿ
ಗೆಲವಿದ್ದರದಕೆ ನಿಮಗಿಹುದು ಶಕ್ತಿ
ಶಾಸ್ತ್ರದ ಆಚಾರದ ಧರ್ಮದ ಕಬ್ಬಿಣ ನೇಣು
ಸಿಲುಕಿಹುದದರಲಿ ಮಾನವನಮೃತಾತ್ಮದ ಗೋಣು!
ವಿಶ್ವ ಧರ್ಮಕೆ ಎರಡು ನಾಲಗೆಗಳಿಲ್ಲ
ದೇಶ ನನ್ನದು ನನ್ನದು ನಾಡು
ಎನ್ನದ ಮಾನವನೆದೆ ಸುಡುಗಾಡು
ಕೊನೆದೊರೆಯ ಕೊರಳಿಗಾ ಕೊನೆ ಪುರೋಹಿತನ ಕರುಳ್
ಉರುಳಾಗುವಾವರೆಗೆ ಸುಖವಿಲ್ಲ ಈ ಧರೆಗೆ

ರಾಶಿರಾಶಿಯಾಗಿ ಬರುವ ಇಂಥ ಸ್ವಾನುಭವದ ಸೂಕ್ತಿಗಳು ವೃಷ್ಟಿ ಸಮಷ್ಟಿಗಳ ಆರೋಗ್ಯಕ್ಕೆ ಪಥ್ಯವೆಂಬುದನ್ನು ಒತ್ತಿಹೇಳಬೇಕಾಗಿಲ್ಲ. ಬಸವಣ್ಣನವರ ಹಾಗೆ ಕುವೆಂಪು ಅವರ ಬುದುಕು ನಡೆನುಡಿಗಳ, ಅಂತರಂಗ ಬಹಿರಂಗ ಶುದ್ದಿಗಳ ಸಮನ್ವಯ ತಪೋನಂದನವಾಗಿದೆ.

ಹನ್ನೆರಡನೆಯ ಶತಮಾನದ ವಚನಕಾರರು ಹಾಗೂ ಇತ್ತೀಚಿನ ಬಂಡಾಯ ಸಾಹಿತಿಗಳು ವಿನಾ, ಕುವೆಂಪು ಅವರಂತೆ ಸಾಮಾಜಿಕ ಬದ್ಧತೆ ಇರುವ ಸಾಹಿತಿಗಳು ವಿರಳ. ಜಾತಿಮತ ಮೌಢ್ಯಗಳಿಂದ ನರಕವಾಗಿರುವ ಇಂಡಿಯಾದಂಥ ದೇಶದ ಸಾಹಿತಿಗಳ ಪ್ರಥಮ ಜವಾಬ್ದಾರಿ ಎಂದರೆ, ಅಲ್ಲಿಯ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಹುಡುಕುವುದೆ ಆಗಿದೆ; ಮನರಂಜನೆಯ ಭೋಗಾನುಭವ ದ್ವಿತೀಯ ಸ್ಥಾನದಲ್ಲಿರಬೇಕು. ಗ್ರಾಮೀಣರ ಮತ್ತು ದೀನದಲಿತರ ಕಷ್ಟಕಾರ್ಪಣ್ಯಗಳನ್ನು, ಗ್ರಾಮನಗರ ಜೀವನಗಳ ತಾರತಮ್ಯವನ್ನು, ಪುರೋಹಿತರ ಅಧಿಕಾರಿಗಳ ಮಂತ್ರಿಗಳ ವರ್ತಕರ ಲೂಟಿ ಶೋಷಣೆಗಳನ್ನು ನಿರ್ಭಯವಾಗಿ ನಿರ್ದಾಕ್ಷಿಣ್ಯವಾಗಿ ಅಶನಿನಿಘೋಷವೆಂಬಂತೆ ಅವರು ಖಂಡಿಸುತ್ತಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೆಯ ಘಟಿಕೋತ್ಸವದಲ್ಲಿ ಮಾಡಿದ ‘ವಿಚಾರಕ್ರಾಂತಿಗೆ ಆಹ್ವಾನ’ ಎಂಬ ಅವರ ಭಾಷಣವನ್ನೋದಿದವರಿಗೆ ಅವರ ಭೀಮವಾಣಿಯ ಪರಿಚಯವಾಗುತ್ತದೆ.[8] ಜಾತಿಭೇದ ವರ್ಣಭೇದಗಳನ್ನು ಸೃಷ್ಟಿಸಿ, ದೇಶವನ್ನು ಪರರಿಗೆ ಮಾರಲು ಕಾರಣವಾದ, ಇಪ್ಪತ್ತನೆಯ ಶತಮಾನದ ಕೊನೆಯಲ್ಲಿಯೂ ಎಚ್ಚತ್ತು ಕೊಳ್ಳದಂತೆ ಮೌಢ್ಯ ಮೋಹ ಜಾಲವನ್ನು ಬೀಸಿರುವ ಪುರಾಣ ಪುಣ್ಯಕತೆಗಳ ಅಪಾಯವನ್ನು ಕುತಂತ್ರವನ್ನು ಜಳ್ಳುತನವನ್ನು ಬೀಸಿರುವ ಪುರಾಣ ಪುಣ್ಯಕಥೆಗಳ ಅಪಾಯವನ್ನು ಕುತಂತ್ರವನ್ನು ಜಳ್ಳುತನವನ್ನು ಶೂದ್ರತಪಸ್ವಿ ಜಲಗಾರ ನಾಟಕಗಳ ಮೂಲಕ ಬಯಲಿಗೆಳೆದಿದ್ದಾರೆ. ‘ಶೂದ್ರನಪ್ಪೊಡಂ ತಪಂ ಶಕ್ತಿದಾಯಕಂ’ ‘ಎಲ್ಲವೂ, ಎಲ್ಲವೂ ಜಲಗಾರನೊಬ್ಬನಿಗೆ ಋಣಿಯಾಗಿ ಬಾಳುತಿವೆ!’ ಎಂದು ಕೆಚ್ಚುನುಡಿಯನ್ನೊರೆದ ಮತ್ತೊಬ್ಬ ಕವಿ ನಾಟಕಕಾರರು ಹುಡುಕಿದರೂ ಸಿಗಲಾರರು.

ಅಧ್ಯಾತ್ಮಸಾಧನೆ, ರಸೋಪಾಸನೆ, ಪ್ರಕೃತಿಯಾರಾಧನೆ ತಮ್ಮ ಜೀವನದ ಪರಮ ಗಂತವ್ಯವಾದರೂ, ಕುವೆಂಪು ಸಾಮಾಜಿಕ ಜವಾಬ್ದಾರಿಯನ್ನು ಮರೆಯುವುದಿಲ್ಲ. ಮನೆಗೊಂದು ಮಾರಿ, ಕೇರಿಗೊಂದು ಮಸಣಿ, ಊರಿನಲ್ಲಿ ಹತ್ತಾರು ದೈವಗಳು, ದೇಶದಲ್ಲಿ ನೂರಾರು ಸಹಸ್ರಾರು ದೇವತೆಗಳು, ಜತೆಗೆ ತನ್ನ ದೇವರು ಮೇಲು ಬೇರೆ ದೇವರು ಕೀಳು ಎಂಬ ಹೇಯ ಭಾವನೆ – ನಾಡಿನ ಇಂಥ ಪರಿಸ್ಥಿತಿಯಲ್ಲಿ ಭಾವೈಕ್ಯವಾಗಲಿ ರಾಷ್ಟ್ರೈಕ್ಯವಾಗಲಿ ಸಾಧ್ಯವೆ ಎಂಬುದು ನಿರ್ವಿಕಾರದ ಶುದ್ಧ ಮನಸ್ಸಿಗೆ ಹೊಳೆಯುವ ಸಂಗತಿ. ಆದ್ದರಿಂದಲೇ ಅವರು

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯ ದೇವಿ ನಮಗಿಂದು ಪೂಜಿಸುವ ಬಾರ
……………..
ಸತ್ತ ಕಲ್ಗಳ ಮುಂದೆ ಅತ್ತುಕರೆದುದು ಸಾಕು,
ಜೀವದಾತೆಯನಿಂದು ಕೂಗಬೇಕು!

ಎಂದು ಘೋಷಿಸುತ್ತಾರೆ. ಕಲ್ಲುಗಳನ್ನು ಪೂಜಿಸಿ ಕಲ್ಲಾಗಿರುವ ಜನರಿಗೆ ಈ ಘೋಷಣೆ ಕೇಳಿಸುತ್ತದೆಯೆ? ಮೌಢ್ಯಮೇಧಕ್ಕಾಗಿ

ಎತ್ತಿ ಋತ್ವಿಕ್ಕರನು ಎಸೆ ಹೋಮಕುಂಡಕ್ಕೆ
ಅಷ್ಟಗ್ರಹಕೂಟ ದೋಷ ಪರಿಹಾರಕ್ಕೆ!
ಎಂದು ಹೇಳುವ ಕೆಚ್ಚು ಈ ದೇಶದಲ್ಲಿ ಯಾರಿಗಿದೆ?.

ಮಹಾಕಾವ್ಯವೊ ಮಹಾಕಾದಂಬರಿಯೊ ನಾಟಕವೊ, ಯಾವುದನ್ನೇ ರಚಿಸುತ್ತಿರಲಿ, ಅವಕಾಶ ಕಲ್ಪಿಸಿಕೊಂಡು ಸಾಮಾಜಿಕ ಕಳಕಳಿಯನ್ನು ಅಭಿವ್ಯಕ್ತಗೊಳಿಸುತ್ತಾರೆ. ಅವರ ಈ ಸಾಮಾಜಿಕ ಪ್ರಜ್ಞೆ ಮಹಾನಿಬಂಧವೊಂದಕ್ಕೆ ವಸ್ತುವಾಗುವುದರಿಂದ ಅದರ ವಿವರಣೆಯ ಸಾಹಸಕ್ಕೆ ಕೈಹಾಕದೆ, ಕ್ಲಾಸಿಕ್ ಎನಿಸಿಕೊಳ್ಳಬಲ್ಲ ‘ಧನ್ವಂತರಿಯ ಚಿಕಿತ್ಸೆ’ ಎಂಬೊದು ಕತೆಯ ಕಡೆಗೆ ಮಾತ್ರ ಅನಿವಾರ್ಯವಾಗಿ ಗಮನ ಹರಿಸಬೇಕಾಗಿದೆ. ರೈತನ ದುರಂತಾವಸ್ಥೆಯನ್ನು ಕಂಡು ವಿಶ್ವಾಮಿತ್ರ ಪರುಶುರಾಮ ಧನ್ವಂತರಿಯರು ಉದ್ಘೋಷಿಸುವ ಕೋಪಸಂಕಟಮಯ ವಾಣಿಗಳಿವು, ರೈತನ ಎದೆಯ ಮೇಲೆ ಸಮಸ್ತ ಚಕ್ರಾಧಿಪತ್ಯವೂ ಮಹಾಪರ್ವತಾಕಾರವಾಗಿ ನಿಂತಿತ್ತು. ಋಷಿಗಳು ನೋಡಿಕೊಂಡು ಬಂದಿದ್ದ ಆ ಮುಖ್ಯ ಪಟ್ಟಣವು ಅದರ ನೆತ್ತಿಯಲ್ಲಿ ರಾಜಿಸುತ್ತಿದೆ! ಅಲ್ಲಿಯ ದೇವಾಲಯಗಳೂ ವಿಶ್ವ ವಿದ್ಯಾನಿಲಯಗಳೂ ಕ್ರೀಡಾಮಂದಿರಗಳೂ ಪ್ರಮೋದವನಗಳೂ ಕರ್ಮಸೌಧಗಳೂ ಕಾರ್ಖಾನೆಗಳೂ, ರಾಜಪ್ರಸಾದಗಳೂ ತಮ್ಮ ಭಾರವನ್ನೆಲ್ಲಾ ರೈತರ ಎದೆಯ ಮೇಲೆ ಹಾಕಿ, ಸಂಸ್ಕೃತಿ ಮತ್ತು ನಾಗರಿಕತೆ ಎಂಬ ಕೀರ್ತಿಯಿಂದ ಮೆರೆಯುತ್ತಿವೆ!’ ಇಂಡಿಯಾ ದೇಶದ ಅಭ್ಯುದಯದ ಬಗ್ಗೆ ಕಳಕಳಿ ಇರುವ ಯಾವ ವ್ಯಕ್ತಿಯಾದರೂ ಕುವೆಂಪು ಅವರ ಸಾಮಾಜಿಕ ಬದ್ಧತೆಗೆ ಮಾರುಹೋಗದಿರಲಾರ.

ಬಿ.ಎಂ.ಶ್ರೀ., ಕುವೆಂಪು, ಮಾಸ್ತಿ, ಟಾಗೂರ್, ಗಾಂಧಿ, ಲೋಹಿಯಾ ಮೊದಲಾದವರು ಭಾಷೆಯ ಬಗ್ಗೆ ಹೇಳಿರುವ ಮಾತುಗಳು ಗೋರ್ಕಲ್ಲ ಮೇಲೆ ಮಳೆಗರೆದಂತಾಗಿದೆ. ೨೪.೧೨.೧೯೯೧ರಂದು ಬೆಂಗಳೂರಿನಲ್ಲಿ ನಡೆದ ಹಿಂದಿ ಪ್ರಚಾರ ಸಮಿತಿಯ ಸಭೆಯೊಂದ ರಲ್ಲಿ ತಮಗೆ ‘ರಾಜಭಾಷಾಭೂಷಣ’ ಎಂಬ ಬಿರುದು ಲಭಿಸಿದಾಗ ನಿಜಲಿಂಗಪ್ಪನವರು ದೇಶದ ಪ್ರತಿಯೊಬ್ಬ ಪ್ರಜೆಯೂ ಹಿಂದಿಯನ್ನು ಕಲಿಯಬೇಕೆಂದು ಘೋಷಿಸಿದುದೂ, ಅದೇ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ರಾಮಕೃಷ್ಣ ಹೆಗ್ಡೆಯವರು ಈ ಹೊತ್ತಿಗೆ ಹಿಂದಿ ಏಕೈಕ ರಾಷ್ಟ್ರಭಾಷೆಯಾಗಿದ್ದರೆ ದೇಶದಲ್ಲಿ ಭಾಷಾಸಂಬಂಧವಾದ ವೈಷಮ್ಯ ಉಳಿಯುತ್ತಿರಲಿಲ್ಲವೆಂದೂ, ದೇಶಕ್ಕೆಲ್ಲ ಒಂದು ರಾಜ್ಯಾಂಗ, ಒಂದು ಧ್ವಜ, ಒಂದು ಭಾಷೆ ಇರಬೇಕೆಂದು ಸಾರಿದ್ದು ಅವರ ಸ್ವಾರ್ಥಪರತೆಯನ್ನು ವಿವೇಕದಾರಿದ್ರ್ಯವನ್ನು ಚಂಚಲ ಪ್ರವೃತ್ತಿಯನ್ನು ಎತ್ತಿತೋರಿಸುತ್ತದೆ.[9] ದೇಶಕ್ಕೆಲ್ಲ ಒಂದು ಜಾತಿ ಇರಬೇಕೆಂದು ಮಾತ್ರ ಅವರು ಹೇಳಲಾರರೇನೋ? ಜಾತೀಯತೆಯಿಂದಾಗುತ್ತಿರುವ ಅನ್ಯಾಯ, ಒದಗಲಿರುವ ಅಪಾಯ ಈ ಮನೀಷಿಗಳಿಗೇಕೆ ಕಾಣಿಸಲಿಲ್ಲವೊ ಕಾಣೆ. ಇಂಥವರಿಗೆ ಕುವೆಂಪು ಕೊಡುವ ಉತ್ತರವಿದು.

ಮುಂದೆ ದಿಳ್ಳಿಯ ಮಂತ್ರಿಯಾಗುವವ ನೀನೊ?
ಬೇಡವೆಂಬುವರಾರು? ಹಿಂದಿಯನು ಕಲಿಯೊ!
ಬದುಕಿ ಇಲ್ಲಿಯೆ ಬಾಳಿ ಸಾಯುವವ ನಾನೂ!
ನಿನ್ನ ಸೂತ್ರಕೆ ಏಕೆ ನನ್ನಬಲಿಯೊ?
ಮುಂದೆ ಇಂಗ್ಲೆಡಿನಲಿ ನೀ ರಾಯಭಾರಿ?[10] ಬೇಡವೆಂಬುವರಾರು?
ಹೊಟ್ಟೆ ಬಿರಿಯ ಕುಡಿಯೊ ಇಂಗ್ಲಿಷಿನ ಹೆಂಡ ಹೀರಿ!
ನನ್ನ ಮೇಲೇತಕ್ಕೆ ಮಾಡುವೇ ಬಲಾತ್ಕಾರ ಸವಾರಿ?[11]

ಇಂಥ ಮುಖ್ಯಮಂತ್ರಿಗಳಿಂದಲೆ ಕನ್ನಡಕ್ಕೆ ಕುತ್ತೊದಗಿದೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ಅಕ್ಕಪಕ್ಕದ ಮುಖ್ಯಮಂತ್ರಿಗಳನ್ನೂ ಉತ್ತರದ ಭಾಷಾಂಧರನ್ನೂ ನೋಡಿ, ರಷ್ಯಾ ಯುಗೊಸ್ಲಾವಿಯಾ ಕೆನಡಾ ದೇಶಗಳಲ್ಲಿ ಏನಾಗುತ್ತಿದೆಯೆಂಬುದನ್ನು ಮನದೆರೆದು ತಿಳಿದು ಪಾಠ ಕಲಿಯಬೇಡವೆ? ಈ ಸಂದರ್ಭದಲ್ಲಿ ಬಸವಣ್ಣನವರ ಮಾತು ನೆನಪಿಗೆ ಬರುತ್ತದೆ.

ಭಕ್ತರ ಕಂಡಡೆ ಬೋಳರೆಪ್ಪಿರಯ್ಯ;
ಸವಣರ ಕಂಡಡೆ ಬತ್ತಲೆಯಪ್ಪಿರಯ್ಯ;
ಹಾರುವರ ಕಂಡಡೆ ಹರಿನಾಮವೆಂಬಿರಯ್ಯ
ಅವರವರ ಕಂಡಡೆ ಅವರವರಂತೆ,
ಸೂಳೆಗೆ ಹುಟ್ಟಿದವರ ಎನಗೆ ತೋರದಿರಯ್ಯ
ಕೂಡಲಸಂಗಮದೇವರ ಪೂಜಿಸಿ, ಅನ್ಯದೈವಂಗಳಿಗೆಱಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯ![12]

ಇಂಥ ನರಸತ್ತ ಎಡಬಿಡಂಗಿ ನಾಯಕರನ್ನು ಹೆತ್ತದ್ದಕ್ಕಾಗಿ ಕನ್ನಡ ತಾಯಿ ಕೊರಗುತ್ತಿದ್ದಾಳೆ. ಆದ್ದರಿಂದಲೇ

ಸತ್ತಂತಿಹರನು ಬಡಿದೆಚ್ಚರಿಸು
ಹೊಟ್ಟೆಯಕಿಚ್ಚಿಗೆ ಕಣ್ಣೀರ್ಸುರಿಸು
ಕಚ್ಚಾಡುವರನು ಕೂಡಿಸಿ ಒಲಿಸು,
ಒಟ್ಟಿಗೆ ಬಾಳುವ ತೆರದಲಿ ಹರಸು

ಎಂದು ಕನ್ನಡ ಡಿಂಡಿಮವನ್ನು ಬಾರಿಸುವಂತೆ ಕವಿ ಕರ್ಟಕ ಹೃದಯ ಶಿವನನ್ನು ಮೊರೆ ಹೊಗುತ್ತಾರೆ.

ಇಂದಿನ ಜಗತ್ತಿನ ಸಮಸ್ಯೆಗಳಿಗೆ ಪರಿಹಾರಸೂಚಕವಾಗಿ ಕವಿಗಳು ಪ್ರವಾದಿಯಂತೆ ಪಂಚಮಂತ್ರ ಸಪ್ತಸೂತ್ರ ಮತ್ತು ಅನಿಕೇತನ ಗೀತೆಗಳ ರೂಪದಲ್ಲಿ ವಿಶ್ವಮಾನವ ಸಂದೇಶವನ್ನು ನೀಡಿದ್ದಾರೆ. ವಿಶ್ವಮಾನವ ಸಂದೇಶಕ್ಕೆ ಮಹಾಭಾಷ್ಯವೆನ್ನುವಂತೆ ಶ್ರೀ ರಾಮಾಯಣದರ್ಶನಂ ಮಹಾಕಾವ್ಯ ಅವತರಿಸಿದೆ. ಮೂಲ ರಾಮಾಯಣದ ಉಗಮಕ್ಕೆ ಹಿಂಸೆಯೇ ಕಾರಣವಾದರೆ ಕುವೆಂಪು ರಾಮಾಯಣ ಪ್ರೇಮಾಹಿಂಸೆಗಳ ಕೋಶದಿಂದ ಉದ್ಭವಿಸುತ್ತದೆ. ‘ಹಿಂಸೆಯಿಂ ಪ್ರೇಮಮೂರ್ತಿಗಳಾದ ಸಂತಾನಮುದಿಸದಯ್’ ಎಂಬುದಾಗಿ ದಶರಥ ಪುತ್ರಕಾಮೇಷ್ಠಿಯಾಗವನ್ನು ನಿವಾರಿಸುತ್ತಾನೆ. ‘ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೆಹ ರಚನೆಯೊಳ್’ ಎಂಬಂತೆ ಈ ಮಹಾಕಾವ್ಯದಲ್ಲಿ ಮಂಥರೆ ಕೈಕೆ ರಾವಣ ರೆಲ್ಲರೂ ಕೊನೆಗೆ ತಮ್ಮ ಅಲ್ಪತನ ದುಷ್ಟತನವನ್ನು ಕಳೆದುಕೊಂಡು ರಾಮತ್ವವನ್ನು ಪಡೆಯು ತ್ತಾರೆ. ‘ತನ್ನತಾನ್ ಇಲ್ಲಗೈವುದೆ ಎಲ್ಲ ಸಾಧನೆಗೆ ಕೊನೆಯ ಗುರಿ’ ಇದು ಗುರು ಕರುಣಿಸಿರುವ ವಿಶ್ವವಾಣಿಗೆ ಮುಡಿಮಣಿಯಾಗಬಹುದಾದ ವಿಶ್ವಮಂತ್ರ. ‘ಕೊಂದ ಕತದಿಂದೇಂ ಪೆರ್ಮನಾದನೆ ರಾಮನಾ ಮಾತನುಳಿ…ಮಣಿಯುವೆನು ರಾಮನಡಿದಾವರೆಗೆ : ದಶಶಿರನ ವಧೆಗಾಗಿಯಲ್ತು; ಮಂದಾಕಿನಿಯ ತಿಳಿವೊನಲ ಮೀಯುತಿರಲೊರ್ದಿನಂ ತಾಂ ಕಂಡ ದೃಶ್ಯ ಸೌಂದರ್ಯದಿಂದಾತ್ಮದರ್ಶನಕೇರ್ದ ರಸ ಸಮಾಧಿಯ ಮಹಿಮೆಗಾಗಿ!’[13] ಉದಯ ಕಾಲದ ಮಂದಾಕಿನಿಯನ್ನು ದರ್ಶಿಸಿದಾಗ ರಾಮನಿಗೆ ಅರ್ಥಾತ್ ಕವಿಗೆ ಮಾತೃದರ್ಶನವಾದಂತೆ ರಸವಶನಾಗುತ್ತಾನೆ. ತಾನೆ ಹೊಳೆಯಾದಂತೆ, ಅಡವಿಯಾದಂತೆ, ಗಿರಿಯಾದಂತೆ, ಬಾನಾದಂತೆ, ತಾನೆಲ್ಲವಾದಂತೆ ಭೂಮಾನು ಭೂತಿಯಿಂದ ಮೈಮರೆಯುತ್ತಾನೆ. ವಿಶ್ವಪ್ರಜ್ಞೆ ಅಥವಾ ಅಲೌಕಿಕಪ್ರಜ್ಞೆ ಇಲ್ಲದವರಿಗೆ ಇಂಥ ದರ್ಶನ ಸಾಧ್ಯವಿಲ್ಲ. ಇಂಥ ಮಹಾಕಾವ್ಯಕ್ಕೆ ಕವಿಯಿರಲಿ, ನನ್ನಂಥವರು ಮಣಿಯದಿರಲು ಸಾಧ್ಯವೆ?.

ಮಹಾಕವಿಯೊಬ್ಬನ ಸಮಕಾಲೀನನಾಗಿ ಬದುಕುವುದೇ ಒಂದು ಪುಣ್ಯ; ಅವರೊಡನೆ ಮಾತಾಡುವ, ಅವರನ್ನು ಸದಾ ನೋಡುವ, ಅವರ ಅಮೃತವಾಣಿಯನ್ನು ಕೇಳುವ, ಅವರೊಡನೆ ತಿರುಗಾಡುವ, ಪ್ರಯಾಣಮಾಡುವ, ಅವರ ಅನುಗ್ರಹಕ್ಕೆ ಪಾತ್ರವಾಗುವ ಸುಯೋಗ ಸಾಮಾನ್ಯವಾದದ್ದಲ್ಲ; ಅವರೊಡನೆ ಅನೇಕ ಲೌಕಿಕ ವ್ಯವಹಾರಗಳಲ್ಲಿ ತೊಡಗಿ ಕೊಳ್ಳುವ, ವಿಶ್ವವಿದ್ಯಾನಿಲಯದಂಥ ಮಹಾಸಂಸ್ಥೆಯನ್ನು ಬೆಳೆಸುವ, ಅವರ ನೇತೃತ್ವದಲ್ಲಿ ಕನ್ನಡವನ್ನು ಕಟ್ಟುವ ಮಹಾಯಜ್ಞ ಕಾರ್ಯದಲ್ಲಿ ಅವರಿಗೆ ಕೈಂಕರ್ಯವೆಸಗುವ ಆನಂದ ಎಲ್ಲರಿಗೂ ದೊರೆಯುವಂಥದಲ್ಲ. ಇದನ್ನೆಲ್ಲ ಮೆಲುಕುಹಾಕುವಾಗ ‘ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯ’ ಎಂಬ ಪ್ರಭುದೇವರ ವಚನ ನೆನಪಿಗೆ ಬರುತ್ತದೆ.

ನುಡಿಗೇಳ್ದು,
ನಡೆನೋಳ್ದು, ಸಾನ್ನಿಧ್ಯದೊಳೆ ಪಗಲಿರುಳುಮಳ್ದು,
ಪೂರ್ವಜನ್ಮದ ಪುಣ್ಯಫಲದಿ ನಿನ್ನನ್ನರಿವ
ಕೃಪೆಯೊದಗಿದೆನಗೆ, ಪೇಳೆ, ಅಂತು ನುಡಿವನಿತದೇನ್
ಪಿರಿ?

ಇಂದು ರಸಋಷಿಗಳ ಹೆಸರಿನ ವಿಶ್ವ ವಿದ್ಯಾನಿಲಯದಲ್ಲಿ, ಅವರ ಜನ್ಮೋತ್ಸವದಲ್ಲಿ ಭಾಗವಹಿಸಿ ಭಾಷಣಮಾಡುವ ಸಾಮರ್ಥ್ಯ ಏನಿದ್ದರೂ ಅವರಿಂದಲೇ ಪ್ರಾಪ್ತವಾದದ್ದೆಂದು ಹೆಮ್ಮೆ  ಪಡುತ್ತೇನೆ.

ಇಂದಿನ ವಿಶ್ವವಿದ್ಯಾನಿಲಯಕ್ಕೆ ಬೀಜರೂಪವಾಗಿ, ಭಿತ್ತಿರೂಪವಾಗಿ ತಳಹದಿರೂಪವಾಗಿ ಸ್ನಾತಕೋತ್ತರ ಕೇಂದ್ರವನ್ನಂದು ಪ್ರಾರಂಭಿಸುವ ಸುವರ್ಣಾವಕಾಶ ನನ್ನ ಪಾಲಿಗೆ ದೊರೆತದ್ದು ನನ್ನ ಪುಣ್ಯವೆಂದೇ ಭಾವಿಸಿದ್ದೇನೆ. ಆಗಲೇ ಇಲ್ಲಿಯ ಕೇಂದ್ರಕ್ಕೆ ಕುವೆಂಪು ಅವರ ಹೆಸರಿಡ ಬೇಕೆಂದು ಪ್ರಯತ್ನಿಸಿದ್ದೆ, ಆಗ ಸಾಧ್ಯವಾಗಲಿಲ್ಲ. ಈ ವಿಶ್ವವಿದ್ಯಾನಿಲಯಕ್ಕೆ ಕುವೆಂಪು ಅವರ ಹೆಸರಿಡಬೇಕೆಂದು ಇಡೀ ಶಾಸನಸಭೆ ಒಕ್ಕೊರಲಿನಿಂದ ಸಮ್ಮತಿ ನೀಡಿದಾಗ ನನಗಾದ ಆನಂದಕ್ಕೆ ಪಾರವಿರಲಿಲ್ಲ. ನನ್ನ ಯೋಜನೆ, ನನ್ನ ಶ್ರಮ ಸಾರ್ಥಕವಾಯಿತೆಂದು ಹಿಗ್ಗಿದೆ. ಕೇಂದ್ರ ಸ್ಥಾಪನೆಯಾದಾಗ ನನ್ನೊಡನೆ ಸಹಕರಿಸಿ ಸಹಾಯಮಾಡಿದ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಅಧ್ಯಕ್ಷರಾದ ಡಾ. ಡಿ. ಎಸ್. ಕೊಠಾರಿ, ಅಂದಿನ ವಿದ್ಯಾಮಂತ್ರಿ ಗಳಾದ ಶ್ರೀ ಎ.ಎರ್. ಬದರಿನಾರಾಯಣ್, ಆಯೋಗದ ಕಾರ್ಯದರ್ಶಿಗಳಾಗಿದ್ದ ಡಾ. ಡಿ. ಶಂಕರನಾರಾಯಣ, ಸೆನೆಟ್ ಸದಸ್ಯರಾಗಿದ್ದ ಶ್ರೀ ಕೆ.ಆರ್. ಲಿಂಗಪ್ಪ ಮೊದಲಾದ ಇನ್ನೂ ಹಲವು ಮಿತ್ರರನ್ನು ಈ ಸುಸಂದರ್ಭದಲ್ಲಿ ಕೃತಜ್ಞತೆಯಿಂದ ನೆನೆಯುತ್ತೇನೆ.

ಪಿತೃಋಣ, ಮಾತೃಋಣ, ಗುರುಋಣಗಳನ್ನು ಒಂದು ಜನ್ಮದಲ್ಲಿ ತೀರಿಸುವುದು ಸಾಧ್ಯವಿಲ್ಲ. ಜನ್ಮಾಂತರವಿದ್ದರೆ ಮುಂದಿನ ಜನ್ಮದಲ್ಲಾದರೂ ತೀರಿಸಬಹುದಿತ್ತೇನೊ? ಅದು ಗೊತ್ತಿಲ್ಲದ ಸಂಗತಿ. ಇದ್ದರೆ ಬೇಡವೆನ್ನುವುದಿಲ್ಲ; ಇಲ್ಲದಿದ್ದರೆ ಬೇಕೆನ್ನುವುದಿಲ್ಲ; ಬೇಕು ಬೇಡ ಎನ್ನುವ ಹಕ್ಕು ನನಗಿಲ್ಲ. ಆದ್ದರಿಂದ ಈ ಜನ್ಮದಲ್ಲಿ ಕಿಂಚಿತ್ತಾದರೂ ಗುರು ಋಣವನ್ನು ಪರಿಹರಿಸುವ ಕಾತರತೆಯಿಂದ ೧೯೬೩ರಲ್ಲಿಯೇ ಕುವೆಂಪು ವಿದ್ಯಾವರ್ಧಕ ಟ್ರಸ್ಟನ್ನು ಸ್ಥಾಪಿಸಿದೆ. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಸರ್ಕಾರಿ ಇಲಾಖೆಗಳಿಗಿಂತ ಸ್ವಯಂಸೇವಾ ಸಂಸ್ಥೆಗಳು ರಾಜಕೀಯವನ್ನು ಬೆರಸದೆಯೆ ಯಶಸ್ವಿಯಾಗಿ, ಪರಿಣಾಮಕಾರಿಯಾಗಿ ನಡಸುತ್ತವೆಂಬುದು ನನ್ನ ನಿಶ್ಚಿತಮತ, ಇದಕ್ಕೆ ಧಾರವಾಡದ ವಿದ್ಯಾವರ್ಧಕ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತುಗಳೇ ನಿದರ್ಶನ. ಆದರೆ ಅವೆರಡರಿಂದಲೇ ಕರ್ನಾಟಕದಂಥ ವಿಶಾಲ ರಾಜ್ಯದ ನಾಲ್ಕುವರೆ ಕೋಟಿ ಜನರ ಅವಶ್ಯಕತೆ ಆಶೋತ್ತರಗಳನ್ನು ಪೂರೈಸುವುದು ಸಾಧ್ಯವಿಲ್ಲ. ಆದ್ದರಿಂದ ಕೊನೆಯ ಪಕ್ಷ ಅಂಥ ಹತ್ತು ಸಂಸ್ಥೆಗಳಾದರೂ ಬೇಕು. ಕುವೆಂಪು ಹೆಸರಿನ ಟ್ರಸ್ಟನ್ನು ಸ್ಥಾಪಿಸಿದ ಉದ್ದೇಶವಾದರೂ ಇದೇಯೆ. ಸರ್ಕಾರದ ಧನಸಹಾಯವಿಲ್ಲದಿದ್ದರೂ, ಟ್ರಸ್ಟ ಮೇಲ್ಕಂಡ ಎರಡು ಸಂಸ್ಥೆಗಳಿಗೆ ಕಡಮೆಯಿಲ್ಲ ಎನ್ನುವಷ್ಟರಮಟ್ಟಿಗೆ ಶೈಕ್ಷಣಿಕ, ಸಾಹಿತ್ಯಿಕ  ಮತ್ತು ಸಾಂಸ್ಕೃತಿಕ ಚಟುವಟಿಕೆ ಗಳನ್ನು ಅವಿಚ್ಛಿನ್ನವಾಗಿ ನಡಸಿಕೊಂಡು ಬರುತ್ತಿದೆ.

ಕುವೆಂಪು ಅವರ ಏಳ್ಗೆಯನ್ನು ಕಂಡು ಎಂಥ ಜನ ಕರುಬುತ್ತಿದ್ದರೊ ಅಂಥ ಜನರೆ ‘ಕುವೆಂಪು ಹೆಸರಿನಲ್ಲಿ ಮಠ ಕಟ್ಟುತ್ತಿದ್ದಾರೆ’ ಎಂದು ಅಪಪ್ರಚಾರದ ಅಪಲಾಪದ ದಾಳಿಯನ್ನು ಪ್ರಾರಂಭಿಸಿದ್ದುಂಟು. ಅಂಥ ಜನರನ್ನು ನೋಡಿದಾಗ ಪಂಚತಂತ್ರದಲ್ಲಿಬರುವ ಮೇಕೆ ಹೊತ್ತ ಬ್ರಾಹ್ಮಣನ ಮತ್ತು ನಾಲ್ವರು ಕಳ್ಳರ ಕತೆ ನೆನಪಿಗೆ ಬರುತ್ತದೆ. ಅಪಪ್ರಚಾರವೊಂದೇ ಆ ಷಂಡರ ಆಯುಧ; ಆ ಆಯುಧ ಪುಸ್ ಎಂದಾಗ ತೆಪ್ಪಗಾಗುತ್ತಾರೆ. ಬೇಂದ್ರೆ ಮಾಸ್ತಿಯವರ ಹೆಸರಲ್ಲೇಕೆ ಅಂಥ ಸಂಸ್ಥೆ ತೆರೆಯಬಾರದೆಂದು ನನ್ನನ್ನು ಪ್ರಶ್ನಿಸಿದವರೂ ಉಂಟು. ಪ್ರತಿಯೊಬ್ಬ ಶ್ರೇಷ್ಠ ಕವಿಯ ಹೆಸರಿನಲ್ಲಿಯೂ ಒಂದೊಂದು ಸಂಸ್ಥೆ ಅಥವಾ ಒಂದೊಂದು ಪೀಠ ಇರಬೇಕಾದ್ದೇ. ಆದರೆ ನಾಲ್ಕಾರು ಜನರ ಹೆಸರಿನಲ್ಲಿ ಪೀಠಗಳನ್ನು ತೆರೆಯುವ ಸಾಹಸ ಒಬ್ಬನಿಂದ ಸಾಧ್ಯವಾಗದೆಂಬುದು ವ್ಯವಹಾರಜ್ಞರಿಗೆ ಅರ್ಥವಾಗುತ್ತದೆ. ಅದೇನೇ ಇರಲಿ, ಈ ದೇಶದಲ್ಲಿ ಒಬ್ಬ ಕವಿಯ ಹೆಸರಿನಲ್ಲಿ ಪ್ರತಿಷ್ಠಾಪನೆಗೊಂಡ ಮೊತ್ತಮೊದಲ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆ ಇದೊಂದೇ ಎಂದು ಧಾರಾಳವಾಗಿ ಹೇಳಬಹುದು.

ಸುಮಾರು ನಲವತ್ತು ವರ್ಷಗಳ ಹಿಂದೆ ಕುವೆಂಪು ಅವರೊಡನೆ ನಾನು ಹಿರಿಕೊಡಿಗೆಗೆ ಹೋಗಿದ್ದೆ. ಆಗ ಅಳಿಕೆ ಪುಟ್ಟಯ್ಯನಾಯ್ಕರು ಬದುಕಿದ್ದರು. ಕುವೆಂಪು ಅವರ ತಾತಂದಿರ (ತಾಯಿ ಕಡೆಯಿಂದ) ಆಸ್ತಿ ಪರಭಾರೆಯಾದ ಸಂಗತಿಯನ್ನು ವಿವರಿಸಿ, ಅವರು ತಾಯಿ ಗರ್ಭದಿಂದ  ಹೊರಬಂದು ಭೂಸ್ಪರ್ಶ ಮಾಡಿದ ಸ್ಥಳವನ್ನು ನಾಯ್ಕರು ತೋರಿದರು. ಆ ಸ್ಥಳವೊಂದು ತಿಪ್ಪೆಗುಂಡಿಯಾಗಿತ್ತು. ಕುವೆಂಪು ಅವರು ಅದನ್ನು ನೋಡಿದಾಗ ಅವರ ಮುಖದ ಮೇಲೆ ಖಿನ್ನತೆಯ ಅಲೆ ಸುಳಿದು ಮಾಯವಾದಂತಾಯಿತು. ಆ ಜಾಗವನ್ನು ಟ್ರಸ್ಟಿನ ಹೆಸರಿಗೆ ಬರೆಸಿಕೊಟ್ಟದ್ದಾದರೆ, ಅಲ್ಲೇನಾದರೂ ಒಂದು ಸ್ಮಾರಕವನ್ನು ಸ್ಥಾಪಿಸಬಹು ದೆಂದು ನಾನು ಪುಟ್ಟಯ್ಯನಾಯಕರಿಗೆ ತಿಳಿಸಿದೆ. ಅವರು ಕೂಡಲೆ ಆ ಜಾಗದ ಮಾಲೀಕರಾದ ಭಟ್ಟರನ್ನು ಕರೆಸಿ, ಮಾತಾಡಿ, ಟ್ರಸ್ಟಿನ ಹೆಸರಿಗೆ ಮುಫತ್ತಾಗಿ ಬರೆಸಿಕೊಟ್ಟರು. ಆದರೆ ಚಿಕ್ಕಮಗಳೂರು ಜಿಲ್ಲಾ ಪರಿಷತ್ತು ಅಸ್ತಿತ್ವಕ್ಕೆ ಬರುವ ತನಕ ಅಲ್ಲಿ ಏನೇನೂ ಮಾಡ ಲಾಗಲಿಲ್ಲ. ಸುದೈವದಿಂದ ನನಗೆ ಬಲ್ಲವರು ಅಧ್ಯಕ್ಷರಾಗಲಾಗಿ, ಬಂದ ಅಡ್ಡಿಗಳನ್ನೆಲ್ಲ ನಿವಾರಿಸಿಕೊಂಡು ಹಿರಿಕೊಡಿಗೆಯಲ್ಲೊಂದು ವಿಶ್ವಮಾನವ ಸಂದೇಶಭವನ ಸಂಸೃಷ್ಟಿ ಯಾಯಿತು. ಕುವೆಂಪು ವಿಶ್ವವಿದ್ಯಾನಿಲಯ ಅದನ್ನೀಗ ತನ್ನ ವಶಕ್ಕೆ ತೆಗೆದುಕೊಳ್ಳಲೊಪ್ಪಿದೆ ಎಂಬ ಸುದ್ದಿಯನ್ನು ತಿಳಿದು ಸಂತೋಷವಾಗಿದೆ.

ಇದೇ ಸಂದರ್ಭದಲ್ಲಿ ಕುಪ್ಪಳಿಯ ಸಂಕೀರ್ಣವನ್ನು ಕುರಿತು ಸಂಕ್ಷೇಪವಾಗಿ ಪ್ರಸ್ತಾಪ ಮಾಡುವುದು ಸೂಕ್ತವೆಂದು ತೋರುತ್ತದೆ. ಈ ಬಗ್ಗೆಯೂ ಒಂದು ನೀಲಿನಕ್ಷೆಯನ್ನು ತಯಾರಿಸಿ, ಕುವೆಂಪು ಅವರ ಅನುಮೋದನೆಯನ್ನು ಪಡೆದು, ಸರ್ಕಾರಕ್ಕೆ ಕಳಿಸಲಾಗಿತ್ತು. ಅಂದಿನ ಗ್ರಾಮಾಭಿವೃದ್ದಿ ಇಲಾಖೆಯ ಮಂತ್ರಿಗಳಾಗಿದ್ದ ಶ್ರೀ ನಜೀರ್ ಸಾಹೇಬರು ಈ ಯೋಜನೆಯ ಬಗ್ಗೆ ಅಪಾರ ಆಸಕ್ತಿಯನ್ನು ಸಹ ವ್ಯಕ್ತಪಡಿಸಿದ್ದರು. ಅವರೊಂದು ಸಾರಿ ಕರೆದಿದ್ದ ಸಭೆಯಲ್ಲಿ ಹಾಜರಿದ್ದ ಅಂದಿನ ಶಿಕ್ಷಣ ಸಚಿವರು ಒಂದೆರಡು ಸ್ನಾತಕೋತ್ತರ ಇಲಾಖೆಗಳನ್ನು ಆ ಸಂಕೀರ್ಣದೊಳಗೆ ಸೇರಿಸುವ ಅಭಿಪ್ರಾಯವನ್ನು ಸಹ ಸೂಚಿಸಿದ್ದರು. ನಾನು ನಾಲ್ಕಾರು ಸಾರಿ ಸಚಿವ ನಜೀರ್ ಬಳಿ ಹೋಗಿ ಈ ವಿಷಯವನ್ನು ಪ್ರಸ್ತಾಪಿಸಿದ್ದುಂಟು. ಕೊನೆಯ ಸಲ ಆ ಸಜ್ಜನರು ತಮ್ಮ ಸಹೋದ್ಯೋಗಿ ನಾಯಕರ ಧೋರಣೆಯನ್ನು ಬಹಿರಂಗಗೊಳಿಸಲಾರದೆ, ನಿರಾಶೆಯನ್ನಷ್ಟೆ ವ್ಯಕ್ತಪಡಿಸಿದರು. ಈ ನಿರಾಶೆಯ ಹಿನ್ನೆಲೆಯಲ್ಲಿ ನೋವಿತ್ತು. ಅವರ ನಾಲಗೆ ತೆಪ್ಪಗಿದ್ದರೂ ಹೃದಯ ಮಾತಾಡಿತು. ನನಗರ್ಥವಾಯಿತು. ವಿಶ್ವವಿದ್ಯಾನಿಲಯ ಕುಪ್ಪಳಿಯನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ.

ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು  ಪ್ರಭಾವಶಾಲಿಯಾಗಿರುವ, ಈ ಜಿಲ್ಲೆಯವರೇ ಆದ ಶ್ರೀ ಕಾಗೋಡು ತಿಮ್ಮಪ್ಪನವರು ಇಲ್ಲಿದ್ದುದರಿಂದಾಗಿ, ಕುಲಪತಿ ಕುಲಸಚಿವರುಗಳು ಇಂಗಿತಜ್ಞರು ಹಾಗೂ ಸುಸಂಸ್ಕೃತರು ಎಂಬ ಕಾರಣಕ್ಕಾಗಿ ಹಿರಿಕೊಡಿಗೆ ಮತ್ತು ಕುಪ್ಪಳಿಗಳ ವಿಷಯವನ್ನು ಪ್ರಸ್ತಾಪಿಸಬೇಕಾಯಿತು. ಈ ವಿಶ್ವವಿದ್ಯಾನಿಲಯದಲ್ಲಿ ಮುಂದೆ ಅವಿರತವಾಗಿ ನಡೆಯಲಿರುವ ಜನ್ಮೋತ್ಸವ ಪರಂಪರೆಗೆ ನಾಂದಿ ಹಾಡಿರುವ, ಇಂಥ ಉತ್ಸವವನ್ನು ಉದ್ಘಾಟಿಸುವ ಸದವಕಾಶವನ್ನು ಕಲ್ಪಿಸಿಕೊಟ್ಟಿರುವ ವಿಶ್ವವಿದ್ಯಾನಿಲಯದ ಅಧಿಕಾರ ವರ್ಗವನ್ನು, ಅದರಲ್ಲಿಯೂ ಕುಲಪತಿ ಕುಲಸಚಿವರನ್ನು ಹೃತ್ಪೂರ್ವಕವಾಗಿ ವಂದಿಸುತ್ತೇನೆ.

ಪೂಜಿಸುವರೆಲ್ಲರೂ ಪೂಜ್ಯರೆನಗೆ
ಪೂಜ್ಯರನು ಪೂಜಿಸುವುದೂ ಪೂಜೆ ನಿನಗೆ !
ಸರ್ವರಿಗೂ ನಮಸ್ಕಾರ.

 


[1]    ಭದ್ರಾ ಜಲಾಶಯಕ್ಕೆ ಈ ಹೆಸರು ಕೊಟ್ಟವರು ರಾಷ್ಟ್ರಕವಿ ಕುವೆಂಪು ಅವರು ‘ಪ್ರೇತಕ್ಯೂ’ನಲ್ಲಿ ಅಚ್ಚಾಗಿರುವ ‘ಅನಧಿಕೃತ ನಾಮಕರಣೋತ್ಸವ’ ಎಂಬ ಅವರ ಕವನವನ್ನೋದಿ.

ಎಲ್ಲ ಮುಗಿದ ಮೇಲೆ, ಮುಂದೆ,
ಯಾರಾದರು ಏನಾದರೂ ಹೆಸರಿಡಲಿ.
ಹೆಸರನಿಡುವೆ ನಿನಗೆ ಇಂದೆ,
ಓ ಶ್ರಮಜೀವರ ಶತಶತಶತ ಹಸ್ತಕೃತ,
ನಾನು, ಮಲೆಯ ಕವಿ, ಅನಧಿಕೃತ!
ಕರೆಯಲೆಲ್ಲ ಇಂದಿನಿಂದೆ,
ನಿನ್ನ ಹೆಸರು ಇನ್ನು ಮುಂದೆ,
“ನೃಪತುಂಗ ಸರೋವರ!”

ಇಲ್ಲಿಯ ವಿಶ್ವವಿದ್ಯಾನಿಲಯಕ್ಕೆ ಕುವೆಂಪು ಹೆಸರು ಬಂದನಂತರವಾದರೂ ಈ ಸರೋವರಕ್ಕೆ ‘ನೃಪತುಂಗ’ನ ಹೆಸರು ಅತ್ಯಂತ ಉಚಿತವಾದದ್ದೆಂದೂ, ಇಲ್ಲಿಯ ಬೋಧಕ ವಿದ್ಯಾರ್ಥಿ ಗಳೆಲ್ಲರೂ ಆ ಹೆಸರು ಹಿಡಿದೆ ಈ ಸರೋವರವನ್ನು ಕರೆಯಬೇಕೆಂದೂ, ಇಂದಿನ ಕುಲಪತಿ ಗಳು ಮತ್ತು ಮುಖ್ಯ ಅತಿಥಿಗಳು (ಕಾಗೋಡು ತಿಮ್ಮಪ್ಪನವರು) ಸರ್ಕಾರ ಅಧಿಕೃತವಾಗಿ ಈ ಹೆಸರನ್ನು ಮಾನ್ಯಮಾಡುವಂತೆ ಒತ್ತಾಯ ತರಬೆಕೆಂದೂ ಈ ಸಂದರ್ಭದಲ್ಲಿ ಆಶಿಸುತ್ತೇನೆ.

[2]    ವಿಭೂತಿ ಪೂಜೆ, ಕುವೆಂಪು, ಪು. ೧.

[3]    ಸ್ಮಶಾನ ಕುರುಕ್ಷೇತ್ರಂ, ಪು. ೭.

[4]    ಪಾಂಚಜನ್ಯ, ಪು. ೧.

[5]    ಅದೇ, ಪು. ೪೫.

[6]    ಅದೇ, ಪು. ೫೦.

[7]    ಸ್ಮಶಾನ ಕುರುಕ್ಷೇತ್ರಂ, ಪು. ೨೩.

[8]    ಇದೇ ಸಂದರ್ಭದಲ್ಲಿ ಅವರ ಜನತಾಪ್ರಜ್ಞೆ ಮತ್ತು ವಿಚಾರ ಜಾಗೃತಿ ಎಂಬ ಭಾಷಣವನ್ನು ಓದಬಹುದು.

[9]    ನನ್ನ ದೇವರು ಮತ್ತು ಇತರ ಕಥೆಗಳು, ಪು. ೯೪.

[10]   ಹಿಂದೂ, ೨೫.೧೨.೯೧.

[11]   ಬಲಾತ್ಕಾರದ ಭಾಷಾತ್ರಿಶೂಲ, ಪ್ರೇತಕ್ಯೂ, ಪು. ೬೩.

[12]   ಈ ಮಂತ್ರಿಗಳು ಯಾವ ಸಭೆಗೆ ಹೋಗಲಿ, ಅಲ್ಲಿಯವರ ಮರ್ಜಿ ತಿಳಿದುಕೊಂಡು ಭಾಷಣ ಮಾಡಿ, ಅವರಿಂದ ಹೊಗಳಿಸಿಕೊಂಡು ಖುಷಿಪಡುತ್ತಾರೆ. ಸೂಳೆಯರ ಮೇಳಕ್ಕೆ ಹೋದರೆ, ದೇಶದ ಸ್ತ್ರೀಯರೆಲ್ಲ ಸೂಳೆಯರಾಗಲಿ ಎಂದು ಆಶೀರ್ವದಿಸುತ್ತಾರೆ; ದರೋಡೆಕೋರರ ಸಭೆಗೆ ಹೋದರೆ ನಾಡಿನ ಗಣ್ಯವ್ಯಕ್ತಿಗಳೆಲ್ಲ ದರೋಡೆಕೋರರಾಗಲಿ ಎಂದು ಹರಸುತ್ತಾರೆ. ರೈತರ ಕೂಟಕ್ಕೆ ಹೋದರೆ, ಅವರ ಮಕ್ಕಳು ಮರಿಮಕ್ಕಳೆಲ್ಲರೂ ರೈತರಾಗಿಯೇ ಉಳಿಯ ಬೇಕೆಂದು ಘೋಷಿಸುತ್ತಾರೆ. ಕನ್ನಡದ ಬಗ್ಗೆ ಕರ್ನಾಟಕದ ಬಗ್ಗೆ ಇವರಿಗೆ ಗೌರವವಿದ್ದದ್ದಾದರೆ ಮೊದಲು ಅವುಗಳಿಗೆ ಮಂಗಳಾರತಿಯನ್ನೆತ್ತಿ, ತದನಂತರ ಉಳಿದವುಗಳ ಕಡೆಗೆ ಗಮನ ಹರಿಸುತ್ತಿದ್ದರು. ಇವರ ಮನಸ್ಸಿನ ತುಯ್ಯಲಾಟವನ್ನು ಅಡ್ಡಗೋಡೆತನದ ವರ್ತನೆಯನ್ನು, ಬೇನಿಷ್ಠೆಯನ್ನು ನೆರೆಹೊರೆಯವರು ಉತ್ತರದವರು ಮತ್ತು ಕೇಂದ್ರದವರು ಷಂಡತನವೆಂದು ಹೆಸರಿಸಿ, ಇವರಿಗೆ ಕಾಸಿನ ಕಿಮ್ಮತ್ತನ್ನು ಕೊಡುವುದಿಲ್ಲ. ‘ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ’. ತಮಿಳುನಾಡಿನ ಪುರುಷರನ್ನು ಹಾಗೂ ಅಲ್ಲಿಯ ಸ್ತ್ರೀರೂಪದ ಪುರುಷರನ್ನು ನೋಡಿಯಾದರೂ ಇವರಲ್ಲಿ ಪೌರುಷ ಮತ್ತು ಕೇಣಗಳು ಅಂಕುರಿಸಬಾರದೆ?.

[13]   ಶ್ರೀರಾದ, ಅಯೋಧ್ಯಾ ಸಂಪುಟಂ, ಸಂ. ೮, ಸಾಲು ೧೯೩-೨೦೫.