ನಿಸರ್ಗದರ್ಶನ, ವೇದಾಂತದರ್ಶನ ಮತ್ತು ಮಾನವದರ್ಶನವೆಂಬ ಮೂರು ಮಾತುಗಳಲ್ಲಿ ಕುವೆಂಪು ಜೀವನ ಮತ್ತು ಸಾಹಿತ್ಯಗಳ ಸ್ವರೂಪಲಕ್ಷಣಗಳನ್ನು ಸಂಗ್ರಹಿಸಬಹುದೆಂದು ತೋರುತ್ತದೆ. ಕೇವಲ ಸೌಲಭ್ಯಕ್ಕಾಗಿ ಈ ಸಂಗ್ರಹ ಸದ್ಯಕ್ಕೆ ಅಗತ್ಯವೆಂದು ಕಂಡುಬಂದರೂ, ಕುವೆಂಪು ಅವರ ವ್ಯಕ್ತಿತ್ವ ಅಗಾಧವಾದದ್ದು, ಬಹುಮುಖವಾದದ್ದು, ಸಂಕೀರ್ಣವಾದದ್ದೆಂಬು ದನ್ನು ನಾನು ಬಲ್ಲೆ. ಕವಿಯೊಬ್ಬ ಲೋಕಗುರು, ಋಷಿ, ಅಘೋಷಿತ ಶಾಸಕನೆಂದು, ಮಹಾಚೇತನವೊಂದರ ಪೂರ್ಣ ವ್ಯಕ್ತಿತ್ವವೇ ಭಟ್ಟಿಯಿಳಿದ ರಸಪಾಕವೇ ಅವನ ಕಾವ್ಯವೆಂದು,  ಹೇಳುವಲ್ಲಿ ಉತ್ಪ್ರೇಕ್ಷೆಯಿರಲಾರದು. ಇಂಥ ಕವಿಯ ಲೋಕಜೀವನ ಮತ್ತು ಕಾವ್ಯಜೀವನಗಳ ನಡುವೆ ಸಂದಿರಲಾರದೆಂದು ಜನನಿರೀಕ್ಷಿಸುವುದು ಸಹಜ. ಆದರೆ ಇಂಥ ನಿರೀಕ್ಷೆಗೆ ಅಪವಾದಗಳೇ ಅಧಿಕವಾಗಿರುವಂತೆ ತೋರುತ್ತದೆ. ಶ್ರೀರಾಮನ ಏಕಪತ್ನೀವ್ರತವನ್ನು ಮುಗಿಲಿಗೇರಿಸಿ ಬಣ್ಣಿಸಿದವನು ವ್ಯಭಿಚಾರಿಯಾಗಿರಬಹುದು; ಮಡದಿಯನ್ನು ಸದಾ ಥಳಿಸುವವನು ಜನಪ್ರಿಯ ಪ್ರೇಮಕವಿಯಾಗಿರಬಹುದು; ಬುದ್ಧನ ಕಾವ್ಯ ರಚಿಸಿದವನು ಮಾನವ ದ್ವೇಷಿಯಾಗಿರಬಹುದು; ಲಂಚ ಪ್ರೇಮಿ ಭ್ರಷ್ಟಾಚಾರಿ ಸಮಾಜವಾದಿಯಾಗಿರ ಬಹುದು. ಆಡಿದಂತೆ ಮಾಡುವ ಜನರಾಗಲಿ, ಪ್ರಾಧ್ಯಾಪಕರಾಗಲಿ, ನಾಯಕರಾಗಲಿ, ಕವಿಗಳಾಗಲಿ ಅಪರೂಪ. ಸಾಹಿತ್ಯ ರಚನೆಮಾಡುತ್ತ ಅದರೊಡನೆ, ಅದರೆತ್ತರಕ್ಕೆ, ಅದಕ್ಕಿಂತಲೂ ಎತ್ತರವಾಗಿ ಬೆಳೆದ ಕುವೆಂಪು ಮಹಾಕವಿಯಾಗಿಯೂ ಮಹಾವ್ಯಕ್ತಿ ಯಾಗಿಯೂ ಬಾಳಿದವರು. ‘ಶ್ರೀ ಕುವೆಂಪುವ ಸಜಿಸಿದೀ ಮಹಾಛಂದಸಿನ ಮೇರುಕೃತಿ ಮೇಣ್ ಜಗದ್ಭವ್ಯ ರಾಮಾಯಣಂ’ ಎಂಬ ಪಂಕ್ತಿಯೇ ಅವರ ವ್ಯಕ್ತಿತ್ವ ಮಹಿಮೆಗೆ ಹಿಡಿದ ಕನ್ನಡಿಯಾಗಿದೆ.

ಒಬ್ಬ ಸಾಹಿತಿಯನ್ನು ಹಲವು ನಿಟ್ಟುಗಳಿಂದ, ಅನೇಕ ಸಂದರ್ಭಗಳಲ್ಲಿ, ವಿವಿಧ ಅವಸ್ಥೆಗಳಲ್ಲಿ ನೋಡುವಾಗ ಆಗುವ ಅಖಂಡಾನುಭವವೇ ಬೇರೆ; ಯಾವಾಗಲೋ ಒಮ್ಮೆಯೋ ಇಮ್ಮೆಯೋ ಅಥವಾ ದೂರದಿಂದಲೋ ನೋಡಿದಾಗ ಆಗುವ ಖಂಡಾನು ಭವವೇ ಬೇರೆ. ಸಾಹಿತಿಯ ಸಂಪರ್ಕವಿಲ್ಲದವರು ಸಹ ಅವನ ಸಾಹಿತ್ಯದ ಅಧ್ಯಯನದಿಂದಲೆ ಅವನನ್ನರಿಯಬಹುದಾದ ಸಾಧ್ಯತೆಯುಂಟು. ಸೃಷ್ಟಿಯಲ್ಲಿ ಸೃಷ್ಟಿಕರ್ತ ಕಲೆಯಲ್ಲಿ ಕಲೆಗಾರ, ಸಾಪೇಕ್ಷ ಸಿದ್ಧಾಂತದಲ್ಲಿ ಐನ್‌ಸ್ಟೀನ್ ಹುದುಗಿರುವಂತೆ ಸಾಹಿತ್ಯದಲ್ಲಿ ಸಾಹಿತಿ ಹುದುಗಿರು ತ್ತಾನೆ. ವಾಸ್ತವವಾಗಿ ಸಾಹಿತಿಯ ಸಾಹಿತ್ಯವೆಲ್ಲ ಅವನ ಆತ್ಮಕಥೆಯೆ ಆಗಿರುತ್ತದೆ. ಕೆಲವು ಶ್ರೇಷ್ಠ ಗ್ರಂಥಗಳನ್ನು ಓದಿದನಂತರ ಅವುಗಳ ಕರ್ತೃಗಳೊಡನೆ ಸಂಪರ್ಕ ಬೆಳೆಸಿದಾಗ ನಿರಾಶೆಯಾಗುವ ಸಂಭವವೂವುಂಟು. ಆದರೆ ಕುವೆಂಪು ಅವರಂಥ ಮಹಾಕವಿಗಳ ಮುಂದೆ ಕುಳಿತಾಗ ವಿಶಾಲ ಸಾಗರದ ಮುಂದೆ, ನಭಶ್ಚುಂಬಿ ಹಿಮಾಲಯದ ಮುಂದೆ, ಶ್ರವಣ ಬೆಳ್ಗೊಳದ ಗೊಮ್ಮಟನ ಮುಂದೆ ಕುಳಿತಂತೆ ಅನಿರ್ವಚನೀಯ ಅನುಭವವಾಗುತ್ತದೆ; ಅವರೊಡನೆ ಮಾತಾಡುವಾಗ ವಿಧಿಸತಿಯೊಡನೆ ಸಂಭಾಷಿಸುವಂತೆ ಭಾಸವಾಗುತ್ತದೆ. ಅವರ ಮುಂದೆ  ಬಹುಹೊತ್ತು ಕುಳಿತಿದ್ದರೂ, ಬಹಳಷ್ಟು ಅವರ ಮಾತು ಕೇಳಿದರೂ, ಇನ್ನಷ್ಟು ಕುಳಿತಿರುವಂತೆ, ಕೇಳುವಂತೆ ಮನಸ್ಸಾಗುತ್ತದೆ. ಅವರ ಕಾವ್ಯಶ್ರೀಯನ್ನು ಅವಗತಮಾಡಿ ಕೊಂಡಂತೆಲ್ಲ ಅವರನ್ನು ನೋಡುವ ಅವರೊಡನೆ ಮಾತಾಡುವ ಹಂಬಲ ಅಧಿಕವಾಗುತ್ತದೆ. ಅಂಥ ವ್ಯಕ್ತಿಗಳ ಮಹತ್ತಿನ ಬಗ್ಗೆ ಬಳಸಬಹುದಾದ ಒಂದು ಪದವೆಂದರೆ ‘ವಿಸ್ಮಯ’!

ಪೂರ್ವೋಕ್ತ ದರ್ಶನತ್ರಯಗಳ ಸಮರಸಸಮನ್ವಯವೇ ಕುವೆಂಪು ಜೀವನ. ಭ್ರೂಣಸ್ಥಿತಿ ಯಲ್ಲಿದ್ದಾಗಲೇ ಅವರನ್ನು ಪೋಷಿಸಿದ, ಪಾಲಿಸಿದ, ಅವರ ಬದುಕನ್ನು ರೂಪಿಸಿದ ಶಕ್ತಿಯೇ ನಿಸರ್ಗ. ಅದೇ ಅವರ ಮೊದಲ ಗುರು, ತಾಯಿ, ದೇವರು. ಅವರ ಸಕಲ ಸಾಹಿತ್ಯ ಪ್ರಕಾರಗಳ ನಾಡಿನಾಡಿಗಳಲ್ಲಿ ನಿಸರ್ಗಧಾತು ಅವಿಚ್ಛಿನ್ನವಾಗಿ, ನಿಸರ್ಗದ ಬಸುರಿಂದಲೇ ಆ ಸಾಹಿತ್ಯ ಆವಿರ್ಭವಿಸಿದೆಯೋ ಎನ್ನುವಂತೆ, ಪ್ರವಹಿಸುತ್ತದೆ. ಇಡೀ ನಿಸರ್ಗವೆ ಅವರಿಗೆ ‘ಸುಂದರ ಮಹೇಶ್ವರನ ರಸಮಯ ಶರೀರ’ದಂತೆ ತೋರುತ್ತದೆ. ನಿಸರ್ಗ ಸೌಂದರ್ಯ ಎದುರಾದ ಕೂಡಲೇ ಅವರು ಭಾವಸಮಾಧಿಯನ್ನೈದುತ್ತಾರೆ. ಅವರೊಮ್ಮೆ ತಮ್ಮ ಶಿಷ್ಯರ ಮತ್ತು ಸ್ನೇಹಿತರ ಜತೆಯಲ್ಲಿ ಕಾವೇರಿಯರ್ಕಾವತಿಗಳ ಸಂಗಮಕ್ಕೆ ಹೋಗುತ್ತಾರೆ. ಆ ಸಲಿಲಸಂಗಮ ವನ್ನು ತಲುಪಿದಾಗ ಸಂಜೆ ರವಿ ಪಶ್ಚಿಮ ದಿಗಂತದಲ್ಲಿ ಓಕುಳಿಯೆರಚಿತ್ತು. ಮೂರು ಕಡೆ ನಿದ್ದೆಯಲ್ಲದ್ದಿದ, ಕಾನನಶ್ರೇಣಿ ಇಡಿಕಿರಿದ ಪರ್ವತಪಂಕ್ತಿಗಗನವನ್ನು ಹೊತ್ತು ನಿಶ್ಚಿಂತೆ ನಶ್ಚಲತೆಯಿಂದ ನಿಂತಿದ್ದುವು. ಕುವೆಂಪು ವ್ಯಾನಿ ನಿಂದಿಳಿಯುತ್ತಿದ್ದಂತೆ, ಎರಡು ನೀರು ಕೂಡುವೆಡೆಯಲ್ಲಿ ನೀರಿನಲ್ಲಿ ನಡೆದು ಹಿಳಿಲಿನಾಕಾರದ ಬಂಡೆಯಮೇಲೆ ಪದ್ಮಾಸನಹಾಕಿ ಪರ್ವತೇಶ್ವರನಿಗೆದುರಾಗಿ ಕುಳಿತರು; ಕುತೂಹಲಿತ ನೇತ್ರಗಳು ಸೌಂದರ್ಯಸಮಸ್ತವನ್ನೇ ಕೆಲವು ಕ್ಷಣಗಳಲ್ಲಿ ಹೀರಿಕೊಳ್ಳುವಂತೆ ಅವರ ಮಿಂಚುಗಣ್ಣುಗಳು ಅರಳರಳಿ, ಬರಬರುತ್ತ ಇಂದ್ರಿಯಗಳನ್ನೆಲ್ಲ ಒಳಗೆ ಸೇದಿಕೊಳ್ಳುವ ಮಾಳ್ಕೆಯಲ್ಲಿ ಅರ್ಧನಿವಿೂಲಿತವಾದುವು. ಜತೆಯವರು ದೂರದಲ್ಲಿ ಕುಳಿತು ಹರಟೆ ಹರಿಯಿಸಿದರು, ಆಕಳಿಸಿದರು, ಮೈಮುರಿದರು, ಅಡ್ಡಾಡಿದರು; ನಿಮಿಷಗಳು ಕಳೆದುವು; ಗಂಟೆಯೂ ಆಯಿತು; ಕಪ್ಪು ತಿರೆಯ ಹೊದಿಕೆಯಾಗಿ ವಸ್ತುತಾರತಮ್ಯವೇ ಇಲ್ಲವಾಯಿತು. ಅಂಧಕಾರದ ಗರ್ಭದಲ್ಲಿ ಶ್ವೇತಸ್ವಪ್ನವೊಂದು ಕುಳಿತಿದ್ದಂತೆ ದೂರ ಕುಳಿತಿದ್ದವರಿಗೆ ಭಾಸವಾಗುತ್ತಿತ್ತು. ತುಸು ಹೊತ್ತಿನಲ್ಲಿ ಆ ಸ್ವಪ್ನ ಚಲಿಸುತ್ತಿದ್ದಂತೆ, ಮನುಷ್ಯಾಕಾರ ಪಡೆದಂತೆ, ತಮ್ಮ ಕಡೆಗೆ ಬರುವಂತೆ ಕಂಡಿತು. ಎದ್ದು ನಿಂತವರ ಬಳಿ ಬಂದ ಕುವೆಂಪು ‘ನಿಮ್ಮನ್ನು ಕಾಯಿಸಿಬಿಟ್ಟೆ. ನನ್ನ ತವರುಸೀಮೆಯನ್ನು ಪ್ರವೇಶಿಸಿದಂತಾಗಿ ಕಾಲದೇಶಗಳೆರಡೂ ಮರೆತುಹೋದವು’ ಎಂದರು. ಊಟ ಮಾಡಿ, ನಿದ್ದೆ ಬರುವ ತನಕ ನಿಸರ್ಗ ವ್ಯಾಪಾರ ಹೊರತಾಗಿ ಬೇರೆ ಮಾತುಗಳಿಗೆ ಅವಕಾಶವಿರಲಿಲ್ಲ.

ವಾರಕ್ಕೆರಡು ಮೂರು ದಿನಗಳಾದರೂ ಕುವೆಂಪು ಅವರೊಡನೆ ಸಂಜೆಯ ವೇಳೆ ವಾಯುಸಂಚಾರಕ್ಕೆ ಹೋಗುವ ಸುಯೋಗ ನನ್ನದಾಗಿತ್ತು. ಆ ಕಾಲದಲ್ಲಿ ಕಾಡುಹರಟೆಗಾಗಲಿ, ಪರರ ಭರ್ತ್ಸನೆಗಾಗಲಿ ಎಳ್ಳಷ್ಟು ಅವಕಾಶವಿರಲಿಲ್ಲ. ಸಾಹಿತ್ಯದ, ಲೋಕಾನುಭವದ, ಶ್ರೀರಾಮಕೃಷ್ಣ, ವಿವೇಕಾನಂದ, ಅರವಿಂದರ, ವಾಲ್ಮೀಕಿ, ಕಾಳಿದಾಸ, ಟಾಲ್‌ಸ್ಟಾಯ್, ಮಿಲ್ಟನ್, ಪಂಪ, ಕುಮಾರವ್ಯಾಸರ ಸಂದೇಶಾಮೃತದ ಸವಿಯೂಟ ನನಗೆ ದೊರೆಯುತ್ತಿತ್ತು. ಅಕಸ್ಮಾತ್ತಾಗಿ ಬೇರೆ ಗೆಳೆಯರು ಜತೆಗೂಡಿ ಲೋಕಾಭಿರಾಮವಾಗಿ ಪ್ರಾಧ್ಯಾಪಕರ ಅಥವಾ ನಾಯಕರ ಬಗ್ಗೆ ಟೀಕಾಸ್ತ್ರಗಳನ್ನು ಹಾರಿಸುತ್ತಿದ್ದರೆ ಕುವೆಂಪು ಕೂಡಲೆ ಅವರ ಬಾಯಿಗೆ ಕಡಿವಾಣ ಹಾಕುತ್ತಿದ್ದರು. ‘ಈ ಸುಂದರ ಪ್ರಶಾಂತ ಸಂಧ್ಯಾಕಾಲದಲ್ಲಿ ಅನ್ಯರ ಟೀಕೆಗಳಿಂದ ನಿಮ್ಮ ಮನಸ್ಸನ್ನೇಕೆ ಹೊಲಸುಮಾಡಿಕೊಳ್ಳುತ್ತೀರಿ. ರಾತ್ರಿಯ ವಿಶ್ರಾಂತಿಗೆ ಮುನ್ನ ಸತ್ಸಂಗತಿಗಳನ್ನು ನೆನೆಯಿರಿ’ ಎಂದವರು ವಿವೇಕ ಹೇಳುತ್ತಿದ್ದರು. ಇಂಡಿಯಾ ಪಾಕಿಸ್ತಾನಗಳ ನಡುವೆ ಯುದ್ಧ ನಡೆಯುತ್ತಿದ್ದ ಸಮಯ. ಕಾಳಿದಾಸ ರಸ್ತೆಯನ್ನು ದಾಟಿ ಪಡುವಣ ಕಡೆಯ ಹೊಲಗಳಲ್ಲಿ ಹಾದುಹೋಗುತ್ತಿದ್ದೆವು. ಅದೆ ತಾನೆ ದಿಗಂತದಲ್ಲಿ ರವಿಬಿಂಬ ಮರೆಯಾಗುತ್ತಿತ್ತು. ಕುವೆಂಪು ತಟಕ್ಕನೆ ನಿಂತರು. ಪಶ್ಚಿಮ ದಿಗಂತದಲ್ಲಿ ನಾಟಿದ್ದ ಅವರ ದೃಷ್ಟಿ ಕಾಲಬಳಿಯ ಗೊಬ್ಬರ ಹುಳುಗಳ ಕಡೆಗೆ ಹರಿಯಿತು. ‘ನೋಡಿ. ಆ ಜನ ರಕ್ತದಾಹ ದಿಂದ ಯುದ್ಧಮಾಡುತ್ತಿದ್ದರು. ಆ ರಕ್ತ ಆಕಾಶದಲ್ಲಿ ಹೆಪ್ಪುಗಟ್ಟಿದಂತಿದೆ. ಇಲ್ಲಿ ನೋಡಿ ಈ ಹುಳು ಗೊಬ್ಬರದುಂಡೆಯನ್ನು ನೇಗಿಲ ಸಾಲಿನಲ್ಲಿ ಬಿಡುತ್ತವೆ. ಅದು ವಿನಾಶಕಾರ್ಯವಾದರೆ, ಇದು ಸೃಷ್ಟಿಕಾರ್ಯ. ಈ ಹುಳುಗಳಿಂದಾದರೂ ಮನುಷ್ಯ ಪಾಠ ಕಲಿಯಬಾರದೆ? ಯಾವ ರೀತಿಯಲ್ಲಿ ಈ ಹುಳು ಮನುಷ್ಯನಿಗೆ ಕಡಮೆ?’ ಎಂದು ನುಡಿಯುತ್ತ ಈಶಾವಾಸ್ಯೋಪನಿಷತ್ತಿನ ‘ಈಶಾವಾಸ್ಯಮಿದಂ ಸರ್ವಂ’ ಎಂಬ ಶ್ಲೋಕವನ್ನು ವ್ಯಾಖ್ಯಾನಿಸ ತೊಡಗಿದರು. ವಿಶ್ವದ ಸಕಲ ಸಂಗತಿಗಳನ್ನು ವಿಸ್ಮಯದಿಂದ ಬ್ರಾಹ್ಮೀದೃಷ್ಟಿಯಿಂದ ನೋಡುವ ಪರಿಪಾಠ ಅವರಿಗೆ ಎಳವೆಯಿಂದಲೇ ಸ್ವಭಾವಸಿದ್ಧವಾಗಿತ್ತು.

ನಿಸರ್ಗ ಮತ್ತು ವೇದಾಂತದರ್ಶನಗಳ ಫಲವಾಗಿಯೇ ಅವರ ಮಾನವತಾದರ್ಶನ ಅವರ ಸ್ವಭಾವದಲ್ಲಿ ಬೇರೂರಿತೆಂದು ಹೇಳಬೇಕು. ಅವರ ಸಕಲ ಸಾಹಿತ್ಯ ಪ್ರಕಾರಗಳಲ್ಲಿ ಈ ದರ್ಶನದ ಅಭಿವ್ಯಕ್ತಿಯನ್ನು ಗುರುತಿಸಬಹುದು. ಕಿಟ್ಟಯ್ಯ, ಕರಿಸಿದ್ಧ, ಧನ್ವಂತರಿ ಚಿಕಿತ್ಸೆಯ ರೈತ, ಲಿಂಗ, ಬಾಡುಗಳ್ಳ ಸೋಮ, ನಾಯಿಗುತ್ತಿ, ಜಲಗಾರ, ಶಂಬುಕ, ವಾಲಿ, ಕೈಕೆ ಮೊದಲಾದ ಪಾತ್ರಗಳನ್ನು ನಿದರ್ಶನಾರ್ಥವಾಗ ಉದಾಹರಿಸಬಹುದು. ‘ಶ್ರೀಸಾಮಾನ್ಯನೆ ಭಗವನ್ ಮಾನ್ಯಂ’, ‘ಸರ್ವೋದಯವೇ ಸ್ವಾತಂತ್ರ್ಯದ ಶ್ರೀತಂತ್ರ’, ‘ಬಡವರ ಜಠರಾಗ್ನಿಯೆ ಬಡಬಾಗ್ನಿ’, ‘ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೆಹರಚನೆಯೊಳ್’ ಇಂಥ ಸೂಕ್ತಿ ಮಂತ್ರಗಳು ಕುವೆಂಪು ಸಾಹಿತ್ಯದಲ್ಲಿ ಸಾವಿರಾರು.

ಸಾಕಿದ ದನ, ಎಮ್ಮೆಗಳಿಗಾಗಿ ಮನೆಯಲ್ಲಿ ಹುಲ್ಲಿರಲಿಲ್ಲ. ವರ್ತನೆಯವನು ಬರಲಿಲ್ಲ. ಮಂಚೇಗೌಡನ ಕೊಪ್ಪಲಿಗೆ ಹೋಗಿ ತಂದುಕೊಡುವುದಾಗಿ ಅವರಿಗೆ ನಾನು ಹೇಳಿದೆ. ತಿರುಗಾಡಿದಂತಾಗುತ್ತದೆ. ನಾನೂ ಬರುತ್ತೇನೆ ಎಂದರು. ಹಳ್ಳಿಯವರ ಸ್ವಭಾವ ನನಗೆ ಗೊತ್ತಿದ್ದುದರಿಂದ ರೈತನೊಡನೆ ನಾನು ಚೌಕಾಶಿಗಾರಂಭಿಸಿದೆ. ಕೆಲವು ಕ್ಷಣಗಳ ನಂತರ ಕುವೆಂಪು ಅವರೇ ರೈತನನ್ನು ಕುರಿತು ‘ನಾನೊಂದು ಬೆಲೆ ಹೇಳುತ್ತೇನೆ. ನೀವಿಬ್ಬರೂ ಚೌಕಾಶಿಮಾಡಬೇಡಿ’ ಎಂದೊಂದು ಮೊಬಲಗನ್ನು ಸೂಚಿಸಿದರು. ಅದನ್ನು ಕೇಳಿ ರೈತನ ಕಣ್ಣಿನಲ್ಲಿ ಆನಂದದ ಮಿಂಚು ಸಂಚರಿಸಿತು. ಒಪ್ಪಿಕೊಂಡ. ಮನೆಯ ಕಡೆಗೆ ಹಿಂದಿರುಗಿದಾಗ ಕುವೆಂಪು ‘ನೋಡಿ, ರೈತನ ಕಷ್ಟ ನಿಮಗೂ ಗೊತ್ತಿದೆ ನನಗೂ ಗೊತ್ತಿದೆ, ಇಷ್ಟು ಹುಲ್ಲು ಬೆಳೆಯಬೇಕಾದರೆ ಅವನು, ಅವನ ಮಡದಿ ಮಕ್ಕಳು, ಜತೆಗೆ ಅವನ ಎತ್ತುಗಳು ಎಷ್ಟು ಬೆವರಿಳಿಸಿರಬೇಕು. ಅದನ್ನರಿಯದೆ ನಾವು ನಾಗರಿಕರ ರೀತಿ ಚೌಕಾಶಿ ಮಾಡುತ್ತೇವೆ. ಒಂದು ಪಕ್ಷ ವ್ಯಾಪಾರಸಂಬಂಧವಾದ ನಮ್ಮ ಅಜ್ಞಾನದಿಂದಾಗಿ ಅವನಿಗೆ ಎರಡು ಕಾಸು ಹೆಚ್ಚಾಗಿ ಕೊಟ್ಟರೆ, ಅವನ ಮಕ್ಕಳಿಗೆ ಒಂದಿಷ್ಟು ಗಂಜಿ ಸಿಗುತ್ತದೆ; ಮುಂದಿನ ಸಲ ಹೆಚ್ಚಾಗಿ ಬೆಳೆಯುತ್ತಾನೆ. ಈ ಹೊಲದ ಗಾಂಧಿಯಿಂದ ರಾಷ್ಟ್ರ ಸ್ವಾತಂತ್ರ್ಯ ಉಳಿಯಬೇಕಾಗಿದೆ’ ಎಂದರು. ನಾನು ಅವಾಕ್ಕಾದೆ. ಅಧ್ಯಾತ್ಮ ದೃಷ್ಟಿಗೂ ಮಾನವತಾ ದೃಷ್ಟಿಗೂ ಅಂತರವಿಲ್ಲವೆಂಬ ಸಂಗತಿ ನನಗಾಗ ಹೊಳೆಯಿತು. ‘ಮಾನವನೆ ದೇವತೆಯು ನರನೆ ನಾರಾಯಣನು’ ಎಂಬ ಅವರ ಮಾತಿನ ಅರ್ಥ ಅವರ ಬದುಕಿನಿಂದಲೆ ಸ್ಪಷ್ಟವಾಯಿತು.

ಬುದ್ದಿ ಕಂಡಾಗಿನಿಂದ ಕುವೆಂಪು ಕೊಳೆತು ನಾರುತ್ತ ಅಸಹ್ಯ ಹುಟ್ಟಿಸುವ ವ್ಯವಸ್ಥೆಗೆ ವಿರುದ್ಧವಾಗಿ ಬಂಡಾಯದ ಪಾಂಚಜನ್ಯವಾದದ್ದು, ಪ್ರತಿಭಟನೆಯ ಸಿಡಿಲಾದದ್ದು ಸರ್ವ ವೇದ್ಯ. ‘ನೂರು ದೇವರನೆಲ್ಲ ನೂಕಾಚೆದೂರ’. ‘ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು’, ‘ಹಳೆ ಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ’ ಎಂದಾಗ ಗರ್ಜಿಸಿದರು. ನಿರಂಕುಶಮತಿಗಳಾಗುವತೆ ಯುವಕರಿಗೆ ಕರೆಯಿತ್ತರು. ಅಜ್ಞಾನ ಮೌಢ್ಯಗಳ ವಿರುದ್ಧ ಖಡ್ಗವೆತ್ತಿದರು; ಜಾತೀಯತೆಯ ವಿರುದ್ಧ ಸಮರ ಸಾರಿದರು. ತಮ್ಮ ಆರೋಗ್ಯ ಸರಾಗವಾಗಿರುವ ತನಕ ಅವರು ತಮ್ಮ ಭಾಷಣಗಳಲ್ಲಿ ಸಮಾಜಸುಧಾರಣೆಯ ಬಗ್ಗೆ ಉಪದೇಶ ನೀಡುತ್ತಿದ್ದರು; ಅವರು ಬರಿಯ ಸಿದ್ಧಾಂತಲೋಲುಪರಾಗಿರದೆ ಪ್ರಯೋಗಪಟುಗಳೂ ಆಗಿದ್ದರು. ಸರಳ ಮಂತ್ರ ಮಾಂಗಲ್ಯ ಪದ್ಧತಿ ಮೊದಲುಗೊಂಡು ಅವರು ರೂಪಿಸಿದ ಸಾಮಾಜಿಕ ಬದಲಾವಣೆಗಳು ಬಹುಜನರ ಜೀವನದಲ್ಲಿ ಬೇರೂರಿವೆ. ಜಗತ್ತಿನ ಅಶಾಂತಿಗೆ ಪುರೋಹಿತಶಾಹಿ ಕಾರಣನೆಂದೂ, ಅದು ಎಲ್ಲ ಮತಗಳ ಬಂಡವಾಳ ವಾಗಿದೆ ಎಂದೂ ಅವರು ಸಾತ್ವಿಕ ಕ್ರೋಧದಿಂದ ನುಡಿಯುತ್ತಾರೆ. ಆದರೆ ಆಧ್ಯಾತ್ಮ ಸಿದ್ದಿ ಯಲ್ಲಿ ಗಾಢವಿಶ್ವಾಸವುಳ್ಳ ಮಹಾಸಾಧಕರವರೆಂಬುದನ್ನು ಮರೆಯುವಂತಿಲ್ಲ.

ಅವರು ಶ್ರೇಷ್ಠ ಶಿಕ್ಷಣತಜ್ಞರಾಗಿ ಹಾಗೂ ಮನೋವಿಜ್ಞಾನದ ಗಂಭೀರ ವಿದ್ಯಾರ್ಥಿಯಾಗಿ ಕನ್ನಡದ ಸ್ಥಾನಮಾನಗಳ ಬಗ್ಗೆ ಅವಿರತವಾಗಿ ಹೋರಾಟ ನಡಸಿದರೇ ಹೊರತು, ಭಾವುಕತೆ ಯಿಂದಲ್ಲ. ಅವರು ಭಾಷಾಂಧರೂ ಅಲ್ಲ, ಭಾಷಾದ್ವೇಷಿಗಳೂ ಅಲ್ಲ. ಜಗತ್ತಿನ ಯಾವ ರಾಷ್ಟ್ರದಲ್ಲಿಯೇ ಆಗಲಿ, ಅಲ್ಲಿಯ ಎಲ್ಲ ಭಾಷೆಗಳಿಗೆ ಸಮಾನ ಸ್ಥಾನಾವಕಾಶ ಸಾಧ್ಯವಿಲ್ಲ. ಅವುಗಳ ಅಗತ್ಯಗಳನ್ನು ಕಣ್ಮುಂದಿರಿಸಿಕೊಂಡು, ಸ್ಥಾನಮಾನಗಳನ್ನು ನಿರ್ಧರಿಸಬೇಕಾಗುತ್ತದೆ. ಆಯಾಯ ರಾಜ್ಯಗಳಲ್ಲಿ ಅಲ್ಲಲ್ಲಿಯ ಭಾಷೆಗಳಿಗೆ ಅಗ್ರಸ್ಥಾನ; ಕರ್ನಾಟಕದಲ್ಲಿ ಕನ್ನಡಕ್ಕೆ. ಕನ್ನಡವನ್ನುಳಿದ ಯಾವ ಭಾಷೆಯಾಗಲಿ ಶ್ರೀಸಾಮಾನ್ಯರ ಪಾಲಿಗೆ ಹೆಣಭಾರವಾಗುತ್ತವೆ. ಪ್ರಜಾತಂತ್ರದ ಮತ್ತು ಶೈಕ್ಷಣಿಕ ಯಶಸ್ಸಿನ ದೃಷ್ಟಿಯಿಂದ ಕನ್ನಡ ಸರ್ವಮಾಧ್ಯಮ ವಾಗಬೇಕಾದ್ದು ಅನಿವಾರ್ಯವೆಂಬುದು ಅವರ ಸಂಕಲ್ಪ. ಅವರ ದೃಷ್ಟಿಯಲ್ಲಿ ಕನ್ನಡವೆಂಬುದು ಮೂರಕ್ಷರಗಳ ವ್ಯರ್ಥಪದಲ್ಲ; ಅದೊಂದು ಶಕ್ತಿ, ಜ್ಯೋತಿಃಪುಂಜ, ಜಯ ಡಿಂಡಿಮ; ಪಾಂಚಜನ್ಯ; ಶ್ರೀ ಚಕ್ರ; ಅದು ಸರ್ವೋದಯದ ಮಂತ್ರ, ತಂತ್ರ, ಯಂತ್ರ; ಶ್ರೀಸಾಮಾನ್ಯರ ರಕ್ಷಾಯಂತ್ರ, ಸರಸ್ವತೀತತ್ವ. ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಅನ್ಯವೆನಲದೆ ಮಿಥ್ಯಾ’ ಎಂದದ್ದು ಈ ಅರ್ಥದಲ್ಲಿಯೇ.

ಶಿಸ್ತು ಕುವೆಂಪು ಅವರ ಬದುಕಿನ ಮೂಲಮಂತ್ರ. ಕಾವ್ಯರಚನೆಯಲ್ಲಿ ಮಾತ್ರವಲ್ಲ, ಜೀವನದ ಸರ್ವವ್ಯವಹಾರಗಳಲ್ಲಿಯೂ ಅಚ್ಚುಕಟ್ಟು ಎದ್ದುಕಾಣುತ್ತದೆ. ಅದು ಜೀವನಶ್ರದ್ಧೆಯ ಸುಲಕ್ಷಣ. ‘ಮಾಳ್ಪ ಕೆಲಸಗಳೆಲ್ಲ ನೈವೇದ್ಯ’ವೆಂಬುದು ಅವರ ಪ್ರತಿಯೊಂದು ಕ್ರಿಯೆಯ ಗುಟ್ಟು. ಕಾಲ ಅಮೂಲ್ಯವೆಂಬುದು ಅವರ ಅಭಿಮತ. ತರಗತಿ ಗಾಗಲಿ, ಕಚೇರಿಗಾಗಲಿ, ಸಾರ್ವಜನಿಕ ಕಾರ್ಯಕ್ರಮಗಳಿಗಾಗಲಿ, ಕೊನೆಗೆ ವಾಯುವಿಹಾರ ಕ್ಕಾಗಲಿ ತಡಮಾಡಿದವರಲ್ಲ. ಸಭೆ ಸಮಾರಂಭಗಳಲ್ಲಿ ಜನರನ್ನು ಕಾಯಿಸಿ, ಮಾನವಕಾಲ ವನ್ನಪಹರಿಸುವುದು ಮಹಾಪರಾಧವೆಂದು ತಿಳಿದಿದ್ದರು. ಹತ್ತು ನಿಮಿಷ ಮುಂಚಿತವಾಗಿಯೆ ಸಜ್ಜಾಗಿ ಕಾರ್ಯಕ್ರಮದ ವ್ಯವಸ್ಥಾಪಕರ ಆಗಮನಕ್ಕಾಗಿ ಕಾಯುವುದು ಅವರ ರೂಢಿ. ಸೂರ್ಯನಿಗೇ ಸವಾಲೆಸೆಯುವ ಕಾಲಪ್ರಜ್ಞೆ ಅವರದು.

ಅವರು ಮನುಷ್ಯತ್ವಕ್ಕೆ ಗೌರವ ಸಲ್ಲಿಸುತ್ತಿದ್ದರೇ ಹೊರತು, ಅಧಿಕಾರಕ್ಕಲ್ಲ, ಶ್ರೀಮಂತಿಕೆಗಲ್ಲ, ವೇಷಭೂಷಣಗಳಿಗಲ್ಲ. ಅವರು ಯಾರನ್ನೂ ಕೀಳಾಗಿ ಕಂಡವರಲ್ಲ; ಜವಾನರಿಗೂ ಕಠಿನವಾದ ಮಾತು ಬಳಸಿದವರಲ್ಲ. ಚಿಕ್ಕಮಕ್ಕಳನ್ನು ಸಹ ಅಕ್ಕ, ಅಣ್ಣ ಎಂದೇ ಸಂಬೋಧಿಸುತ್ತಿದ್ದರು. ಸಮಕಾಲೀನ ಸಾಹಿತ್ಯವನ್ನೋದಲು ಅವರಿಗೆ ಸಮಯ ವಿರುತ್ತಿರಲಿಲ್ಲ; ಆದರೆ ಅದನ್ನು ಟೀಕಿಸುವಾಗಲೂ ಸಂಯಮ ಸಹಾನುಭೂತಿ ಮೃದುತ್ವಗಳು ಪ್ರದರ್ಶಿತವಾಗುತ್ತಿದ್ದುವು. ಕ್ವಚಿತ್ತಾಗಿ ಇತರರ ಬಗೆ ಅಭಿಪ್ರಾಯ ವ್ಯಕ್ತಪಡಿಸುವ ಸಂದರ್ಭವೊದಗಿದ್ದಾದರೆ, ಅವರ ಮಾತು ಔದಾರ್ಯದ ಕಡೆಗೆ ವಾಲುತ್ತಿದ್ದುವು. ಆದರೆ ಎಂಥ ಸನ್ನಿವೇಶದಲ್ಲಿಯೇ ಆಗಲಿ ಜಾತೀಯತೆ ತಲೆಯೆತ್ತಿದ್ದಾದರೆ ಅವರು ರುದ್ರರಾಗುತ್ತಿದ್ದು ದುಂಟು. ಬೇರೆ ಯಾವಾಗಲೂ ಅವರು ಶಾಂತಿಯ ಸಹನೆಯ ಹಾರ್ದಿಕತೆಯ ಎಲ್ಲೆ ಮೀರಿದವರಲ್ಲ. ಅವರು ಯಾರ ಮತವನ್ನೂ ಹಳಿದವರಲ್ಲ; ಅವುಗಳ ಹೊಟ್ಟನ್ನು ತೂರಿ ಸ್ವೀಕರಿಸಬೇಕೆಂದು ಘೋಷಿಸಿದರು. ಅವರ ವಿಶ್ವಮಾನವ ಸಂದೇಶ ಬರಿಯ ಸಿದ್ದಾಂತವಲ್ಲ, ಅವರ ಜೀವನದ ಸಾರವತ್ತಾದ ಪರಿಪಾಕವೆಂದರೆ ಅತಿಶಯೋಕ್ತಿಯಾಗದು.