ಸಾಹಿತ್ಯ ಸಂಸ್ಕೃತಿಯ ತಾಯಿಬೇರು, ಸುಸಮೃದ್ಧಖನಿ, ರಕ್ಷಾಗಾರ ಹಾಗೂ ಸಂವರ್ಧನ ಸಾಧನ. ಕತೆ ಕಾದಂಬರಿ ನಾಟಕ ಮಹಾಕಾವ್ಯಗಳಲ್ಲಿ ಆಯಾಯ ಕಾಲ ದೇಶಗಳ ಸಾಂಸ್ಕೃತಿಕ ಸಂಗತಿಗಳು ಸಾಂದ್ರವಾಗಿ ವ್ಯಾಪಿಸಿಕೊಂಡಿರುತ್ತವೆ. ಸಾಹಿತ್ಯ ಜನಜೀವನದ ಪ್ರತಿಬಿಂಬವೆನ್ನುವುದು ಈ ಅರ್ಥದಲ್ಲಿಯೇ. ಜನತೆಯ ಜೀವನವನ್ನು ಪ್ರತಿಬಿಂಬಿಸದ ಅವರ ಆಶೆ ಆಕಾಂಕ್ಷೆ ಅಭೀಪ್ಸೆಗಳನ್ನು ಗರ್ಭೀಕರಿಸಿಕೊಳ್ಳದ, ಭೂತಕಾಲದ ಕೈಪಿಡಿಯಾಗಿ, ವರ್ತಮಾನದ ಕನ್ನಡಿಯಾಗಿ, ಭವಿಷ್ಯದ ಮುನ್ನುಡಿಯಾಗಿ ರೂಪುಗೊಳ್ಳದ ಸಾಹಿತ್ಯ ಬೇರಿಲ್ಲದ ವೃಕ್ಷವಾಗುತ್ತದೆ, ಜೀವವಿಲ್ಲದ ದೇಹವಾಗುತ್ತದೆ. ಒಂದು ಮಹಾಕೃತಿಯ ಮಹತ್ತಿಗೆ ಮತ್ತು ಸಮಗ್ರತೆಗೆ ಕಾವ್ಯಲಕ್ಷಣಗಳ ಜತೆಗೆ ಜನಜೀವನದ ಅಭಿವ್ಯಕ್ತಿಯೂ ಕಾರಣವಾಗುತ್ತದೆ.

ಕುವೆಂಪು ಸಾಹಿತ್ಯ ಕೃತಿಗಳು ಸಂಸ್ಕೃತಿಯ ಸುಸಮೃದ್ಧ ಖನಿಗಳಾಗಿವೆ. ಅವರ ಎರಡು ಮಹಾ ಕಾದಂಬರಿಗಳನ್ನು ಪ್ರಾದೇಶಿಕ ಎಪಿಕ್‌ಗಳೆಂದು, ಮಲೆನಾಡಿನ ರಾಮಾಯಣ ಮಹಾಭಾರತಗಳೆಂದು ಕರೆಯಲಾಗಿದೆ. ಮಲೆನಾಡಿನ ರಾಮಾಯಣ ಮಹಾಭಾರತಗಳಾದರೂ ಅಲ್ಲಿ ಕಾಣುವುದು ಭಾರತೀಯ ಸಂಸ್ಕೃತಿಯ ಮಹಾಜ್ಯೋತಿ. ಹೂವಯ್ಯ ಮುಕುಂದಯ್ಯ ರನ್ನು ಜಗತ್ತಿನ ಯಾವ ಭಾಗದಲ್ಲಾದರೂ ಕಾಣಬಹುದು; ಚಂದ್ರಯ್ಯಗೌಡ ಸುಬ್ಬಣ್ಣ ಹೆಗ್ಗಡೆಯವರು ಮಹಾರಾಷ್ಟ್ರದ ಸಹ್ಯಾದ್ರಿ ತಪ್ಪಲಿನಲ್ಲಿಯೂ ಸಿಗುವಂಥವರು; ಸೀತೆ ಚಿನ್ನಮ್ಮ ರಾಜಾಸ್ಥಾನದಲ್ಲಿಯೂ ಕಾಣುವಂಥವರು; ನಾಗಕ್ಕ ಸುಬ್ಬಮ್ಮ ಅಸ್ಸಾಂನಲ್ಲಿ ಸಿಗುವುದಿಲ್ಲವೆ? ಐತ ಪೀಂಚಲು ಗುತ್ತಿಯರು ಅಂತೆಯೇ ಹುಲಿಯ ನಾಡಿನ ಯಾವ ಕೊಂಪೆಯಲ್ಲಾದರೂ ಇರುವಂಥವರೇ. ಇಲ್ಲಿ ಚಿತ್ರಿತವಾಗಿರುವ ಜಾತೀಯತೆ, ಅಸ್ಪೃಶ್ಯತೆ, ತಾರತಮ್ಯ ಭೇದ, ಪುರೋಹಿತಶಾಹಿ ಹಾಗೂ ಮತಾಂತರ ಭಾರತೀಯ ಸಂಸ್ಕೃತಿಯ ವಿಶಿಷ್ಟ ಲಕ್ಷಣಗಳು! ಅಂದ ಮೇಲೆ ಇವನ್ನು ರಾಷ್ಟ್ರೀಯ ಕಾದಂಬರಿಗಳೆಂದೇ ಕರೆಯಬಹುದು.

ಈ ಕಾದಂಬರಿಗಳಲ್ಲಿ ದೃಷ್ಟಿ ಹಾಯಿಸಿದೆಡೆ ಸಾಮಾಜಿಕ ಚಿತ್ರಗಳು, ದೃಶ್ಯಗಳು, ವಿಚಾರಗಳು ಕಣ್ಣಿಗೆ ಹೊಡೆದಂತೆ ಗೋಚರಿಸುತ್ತವೆ. ಜನರ ಆಚಾರ ವಿಚಾರಗಳು, ವೃತ್ತಿ ಪ್ರವೃತ್ತಿಗಳು, ನಂಬಿಕೆ ನಡವಳಿಗಳು, ವಿಧಿ ನಿಷೇಧಗಳು, ಪೂಜೆ ಪುನಸ್ಕಾರಗಳು, ಪದ್ಧತಿ ಸಂಪ್ರದಾಯಗಳು, ಆಟಪಾಟಗಳು, ಅಭಿರುಚಿ ಮನೋಧರ್ಮಗಳು, ಹೀಗೆ ನೂರಾರು ವಿಷಯಗಳು ಓದುಗರ ಮನಸ್ಸನ್ನು ಸೆರೆಹಿಡಿಯುತ್ತವೆ. ಜನಾಂಗ ವಿಜ್ಞಾನಿಗಳಿಗೆ ಸಾಹಿತ್ಯ ಕ್ಷೇತ್ರವಿನ್ನೂ ಸಂಶೋಧನೆಯ ಕನ್ನೆನೆಲವಾಗಿಯೇ ಉಳಿದಿದೆ. ಆ ಕಡೆಗೆ ಅವರ ಗಮನ ಹರಿಯದಿರುವುದು ಆತಂಕದ ಸಂಗತಿಯಾಗಿದೆ. ಪ್ರಾಯಶಃ ಅವರ ಸಂಕುಚಿತ ಮನೋ ಭಾವವೇ ಅವರ ಉಪೇಕ್ಷೆಗೆ ಕಾರಣವಾಗಿರಬಹುದು.

ಜನಾಂಗ ವಿಜ್ಞಾನಿಗಳ ವಿಚಾರವೇನೇ ಇರಲಿ, ಸಾಹಿತ್ಯ ವಿದ್ಯಾರ್ಥಿಗಳು ಈಚೀಚೆಗೆ ಈ ಕಡೆಗೆ ಗಮನ ಹರಿಸುತ್ತಿರುವುದು ಶುಭೋದಯದ ಸೂಚನೆಯಾಗಿದೆ. ರಸಾಲಂಕಾರ ರೀತಿ ಛಂದಸ್ಸು ವಸ್ತು ಪಾತ್ರತಂತ್ರವರ್ಣನೆಗಳೇ ಸಾಹಿತ್ಯಾಧ್ಯಯನದ ಮುಖ್ಯ ವಿಷಯಗಳೆಂದು ಸಾಹಿತ್ಯ ಪಂಡಿತರು ಇತ್ತೀಚಿನ ತನಕ ತಿಳಿದುಕೊಂಡಿದ್ದರು. ಸಾಂಸ್ಕೃತಿಕ ಅಧ್ಯಯನವೂ ಅಷ್ಟೇ ಪ್ರಾಮುಖ್ಯವೆಂದು ಅವರಿಗರಿವಾದದ್ದು ಕೇವಲ ಎರಡು ದಶಕಗಳಿಂದೀಚೆಗೆ. ಕುವೆಂಪು ಸಾಹಿತ್ಯದಲ್ಲಿ ಅರಳಿರುವ ಸಾಮಾಜಿಕಪ್ರಜ್ಞೆಯ ಬಗ್ಗೆ ಈಗಾಗಲೇ ತಕ್ಕಮಟ್ಟಿಗೆ ಅಧ್ಯಯನ ನಡೆದಿದೆ. ಇದೀಗ ಡಾ. ಗುರುಪಾದಪ್ಪ ಮರಿಗುದ್ದಿಯವರು ಕುವೆಂಪು ಕಾದಂಬರಿಗಳ ಸಾಂಸ್ಕೃತಿಕ ಅಧ್ಯಯನವನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಗುರುಪಾದಪ್ಪನವರು ತಮ್ಮ ಅಧ್ಯಯನಕ್ಕಾಗಿ ಆರಿಸಿಕೊಂಡಿರುವ ವಿಷಯವನ್ನು ಹತ್ತುಭಾಗಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಈ ವಿಂಗಡಣೆ ಸರ್ವಸಮರ್ಪಕವಾಗಿದೆ. ಈ ಎರಡು ಕಾದಂಬರಿಗಳನ್ನು ಅವರು ಕೂಲಂಕಷವಾಗಿ, ಚೂಲ ಮೂಲವಾಗಿ, ಅತ್ಯಂತ ಜಾಗರೂಕತೆಯಿಂದ ಅಧ್ಯಯನ ಮಾಡಿದ್ದಾರೆ, ತಾವು ಸಂಗ್ರಹಿಸಿದ ವಿಷಯಗಳನ್ನು ಜಿಜ್ಞಾಸೆಯಿಂದ ಜಾಣ್ಮೆಯಿಂದ ವಿಶ್ಲೇಷಿಸಿದ್ದಾರೆ ಎನ್ನುವುದಕ್ಕೆ ಈ ಮಹಾನಿಬಂಧ ನಿದರ್ಶನ ವಾಗಿದೆ. ಕೃತಿಗಳ ಅಧ್ಯಯನದಷ್ಟೇ ನಿಷ್ಠೆಯಿಂದ ತಮ್ಮ ಅನುಮಾನಗಳ ಪರಿಹಾರಕ್ಕಾಗಿ, ತಾಳೆನೋಡುವ ಸಲುವಾಗಿ ಕ್ಷೇತ್ರಕಾರ್ಯವನ್ನು ಸಹ ಕೈಗೊಂಡದ್ದರಿಂದ ಅವರ ಹೇಳಿಕೆಗಳು ಮತ್ತು ನಿರ್ಣಯಗಳು ಅಧಿಕೃತವಾಗುತ್ತವೆ. ತಮ್ಮ ಅಧ್ಯಯನಕ್ಕೆ ಪರಿಪೋಷಕವಾಗಿ ಜನಾಂಗ ವಿಜ್ಞಾನ, ಜಾನಪದ ವಿಜ್ಞಾನ, ಭಾಷಾವಿಜ್ಞಾನ ಹಾಗೂ ಸಾಂಸ್ಕೃತಿಕ ತತ್ತ್ವಶಾಸ್ತ್ರವನ್ನು ಅಭ್ಯಸಿಸಿ ಅವುಗಳ ಜ್ಞಾನವನ್ನು ಈ ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಕುವೆಂಪು ಅವರ ‘ಮಲೆನಾಡಿನ ಚಿತ್ರಗಳು’ ಸಹ ಅನೇಕ ಸಾಂಸ್ಕೃತಿಕ ವಿಚಾರಗಳನ್ನೊಳಗೊಂಡಿವೆಯಾದ್ದರಿಂದ, ಇಲ್ಲಿಯ ವಿಚಾರಗಳೊಡನೆ ಹೋಲಿಕೆಗೆ ಅವನ್ನೂ ಬಳಸಿಕೊಂಡಿದ್ದಾರೆ. ಒಟ್ಟಿನಲ್ಲಿ ಎರಡಲ್ಲ, ಮೂರು ಕೃತಿಗಳ ಅಧ್ಯಯನದ ಲಾಭ ಈ ನಿಬಂಧದಲ್ಲಿ ದೊರಕುತ್ತದೆ. ಗುರುಪಾದಪ್ಪನವರ ಅಳವಾದ ಪಾಂಡಿತ್ಯ, ನಿಷ್ಕೃಷ್ಟವಾದ ಸಂಶೋಧನಾನುಭವ, ಪ್ರಾಮಾಣಿಕವಾದ ವಿಶ್ಲೇಷಣ ಸಾಮರ್ಥ್ಯ, ವಸ್ತುನಿಷ್ಠ ನಿರೂಪಣೆಯಿಂದಾಗಿ ಇದೊಂದು ಮಾರ್ಗದರ್ಶಕ ಕೃತಿಯಾಗಿದೆ; ಅನಾವಶ್ಯಕ ವಾದ, ದಾರಿತಪ್ಪಿಸುವ, ಆಡಂಬರೋದ್ದೇಶದ ವಿವರಣೆಗಳಿಂದ ಇದು ಮುಕ್ತವಾಗಿದೆ; ಸರಳತೆ ಕಮನೀಯತೆ ಸ್ಪಷ್ಟತೆ ನಿಖರತೆ ಸಂವಹನತೆ ಅವರ ಶೈಲಿಯ ಹೆಗ್ಗುಣಗಳು.

ಈ ನಿಬಂಧ ಮತ್ತಷ್ಟು ವಿಸ್ತಾರವಾಗಬಹುದಿತ್ತೆಂದು ಸೂಚಿಸಲು ಅವಕಾಶವಿದೆಯೆಂದು ತೋರುತ್ತದೆ. ಮೇಲುವರ್ಗದ ಸ್ತ್ರೀಯರಿಗಿಂತ ಕೆಳವರ್ಗದ ಸ್ತ್ರೀಯರು ಹೆಚ್ಚು ಸ್ವಾತಂತ್ರ್ಯ ಸಮಾನತೆಗಳನ್ನು ಪಡೆದಿದ್ದರೆಂಬುದನ್ನು ನಿಬಂಧಕಾರರು ಸರಿಯಾಗಿಯೇ ಗುರುತಿಸಿದ್ದಾರೆ. ಆದರೆ ಬ್ರಾಹ್ಮಣರ ಹೆಂಗಸರು ದುಡಿಮೆಯಿಲ್ಲದೆ ಹೊಟ್ಟೆ ಹೊರೆಯುವಾಗ ಒಕ್ಕಲು ಹೆಣ್ಣುಮಕ್ಕಳ ದುಡಿಮೆಯ ಅಗಾಧತೆಯನ್ನೂ ಶ್ರಮವನ್ನೂ ವಿವರಿಸಬಹುದಿತ್ತು. ಅಡುಗೆ ಮಾಡುವುದೇ ಮೊದಲಾದ ಮನೆಯೊಳಗಿನ ಕೆಲಸಗಳ ಜತೆಗೆ ಅವರ ಕೈಲಿ ಮನೆಗೆ ಕಟ್ಟಿಗೆ ಹೊರಿಸುತ್ತಿದ್ದರು; ಕೊಟ್ಟಿಗೆಗೆ ಸೊಪ್ಪು ತರಗು ಹೊರಿಸುತ್ತಿದ್ದರು; ಗದ್ದೆಗೆ ಗೊಬ್ಬರ ಹಾಕಿಸುತ್ತಿದ್ದರು; ಸಸಿ ನಡಿಸುತ್ತಿದ್ದರು; ಕಳೆ ಕೀಳಿಸುತ್ತಿದ್ದರು; ಎಂಟು ದಿನಕ್ಕೊಮ್ಮೆಯಲ್ಲದೆ ಮೀಯಗೊಡುತ್ತಿರಲಿಲ್ಲ. ಉಡುತ್ತಿದ್ದುದು ಜಡ್ಡು ಸೀರೆ. ಅದನ್ನೂ ಹರಡು ಮುಚ್ಚುವಂತೆ ಉಟ್ಟುಕೊಂಡರೆ ಗ್ರಹಚಾರ ಬಿಡಿಸುತ್ತಿದ್ದರು. ‘ಒಕ್ಕಲು ಮಕ್ಕಳಿಗೆ ಮೊಳಕಾಲು ಮುಚ್ಚಿದರೆ ಸಾಕು, ಬಿರಾಂಬರು ಉಟ್ಟ ಹಾಂಗೆ ಉಟ್ಟಿರೋ ಮನೆ ತೊಳೆದು ಹೋಗುತ್ತದೆ’, ಎಂದು ಮುಖದ ಮೇಲೆ ನೀರಿಳಿಯುವಂತೆ ಬಯ್ಯುತ್ತಿದ್ದರು. ಇದು ಸುಬ್ಬಣ್ಣ ಹೆಗ್ಗಡೆ ಮನೆಯ ಹೆಂಗಸರ ಪಾಡು.

[1] ಶ್ರೀಮಂತ ಒಕ್ಕಲಿಗರ ಮನೆಗಳ ಹೆಂಗಸರು ಬ್ರಾಹ್ಮಣಿಯರಂತೆ ದುಡಿಯಬೇಕಾಗಿರಲಿಲ್ಲವಾದರೂ, ಇತರ ಒಕ್ಕಲು ಹೆಂಗಸರು ದುಡಿಯದಿದ್ದರೆ ಸಂಸಾರ ನಿರ್ವಹಣೆ ಕಷ್ಟವಾಗುತ್ತಿತ್ತು.

ಶೂದ್ರ ಮನೆತನಗಳ ವಿನಾಶ ಕಾರ್ಯದಲ್ಲಿ ಪುರೋಹಿತಶಾಹಿಯ ಪಾತ್ರವನ್ನು ನಿದರ್ಶನಗಳೊಡನೆ ವಿವರಿಸಬಹುದಿತ್ತು. ಚಾಡಿ ಬೆಸೆದು ತಂದೆ ಮಕ್ಕಳನ್ನು ಬೇರ್ಪಡಿಸುವುದು, ಶೂದ್ರರಿಗೆ ವಿದ್ಯಾಭ್ಯಾಸ ಮಾಡಿಸಿದರೆ ವಂಶ ನಿರ್ನಾಮವಾಗುತ್ತದೆಂದು ಹೆದರಿಸು ವುದು, ಮೌಢ್ಯಪ್ರಸಾರದ ಮೂಲಕ ಹಳ್ಳಿಗರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು, ತಾವು ಹೊಟ್ಟೆ ಹೊರೆದುಕೊಳ್ಳುವುದು ಇಂಥ ಸಂದರ್ಭಗಳನ್ನು ನಿಬಂಧಕಾರರು ಮೊಟಕುಗೊಳಿಸಿದ್ದಾರೆ. ಹೂವಯ್ಯ ಗಾಡಿಯಲ್ಲಿ ಪೆಟ್ಟುತಿಂದು ಮುತ್ತಳ್ಳಿಯಲ್ಲಿ ನೋವು ತಿನ್ನುತ್ತಿದ್ದಾಗ ಅವನಿಗೂ ಅಗ್ರಹಾರದ ವೆಂಕಪ್ಪಯ್ಯ ಜೋಯಿಸರಿಗೂ ನಡೆದ ವಾಗ್ವಾದವನ್ನು ಉದ್ಧರಿಸಬಹುದಿತ್ತು.

ಆಹಾರ ಪಾನೀಯಗಳ ವಿಷಯ ಪ್ರಸ್ತಾಪಿಸುವಾಗ ‘ಶೂದ್ರ ಮಹಾಸಂಘದ ಸಭೆಯಲ್ಲಿ’ ನಡೆದ ಸಂಗತಿಗಳನ್ನೂ ಅದರ ಫಲಶ್ರುತಿಯನ್ನೂ ವಿವರಿಸಿದ್ದರೆ ಕುಡಿತದ ಚಾಳಿ ಒಕ್ಕಲಿಗರ ಮನೆತನಗಳಿಗೆ ಎಷ್ಟು ಹಾನಿಕಾರಕವಾಗಿತ್ತೆಂಬುದು ಮತ್ತಷ್ಟು ವೇದ್ಯವಾಗುತ್ತಿತ್ತು.

ಬೆಳೆದ ಮಕ್ಕಳಿರುವಾಗ ಚಪಲಕ್ಕಾಗಿ ಮೂರನೆಯ ಮದುವೆ ಮಾಡಿಕೊಂಡದ್ದಾದರೆ ದುರಂತಕ್ಕೆ ಆಹ್ವಾನ ನೀಡಿದಂತಾಗುತ್ತದೆಂಬ ಸತ್ಯಸಂಗತಿಯನ್ನೆತ್ತಿ ತೋರಿಸಬಹುದಿತ್ತು. ಕಡೆಗೋಲು ಕಂಬವೇ ಆ ದುರಂತಕ್ಕೆ ಮೂಕಸಾಕ್ಷಿಯಾಗಿದೆ.

ಕುವೆಂಪು ಅವರ ಭಾಷಾಪ್ರಯೋಗಗಳ ಬಗ್ಗೆಯೇ ಪ್ರತ್ಯೇಕ ನಿಬಂಧವನ್ನು ಬರೆಯಬಹು ದಾಗಿದೆ. ಆದರೂ ಕಾದಂಬರಿಗಳಿಗೆ ಸಂಬಂಧಿಸಿದಂತೆ ನಿಬಂಧಕಾರರು ‘ಭಾಷಿಕ ವಿವೇಚನೆ’ ಎಂಬ ಶೀರ್ಷಿಕೆಯಡಿಯಲ್ಲಿ ಮಾಡಿರುವ ಅಧ್ಯಯನ ಸಮಂಜಸವಾಗಿದೆ. ಬೇರೆ ಕಡೆ ರೂಢಿಯಲ್ಲಿಲ್ಲದ ಇನ್ನೂ ಕೆಲವು ಪದಗಳ ಕೋಶವೊಂದನ್ನು ಸಿದ್ಧಪಡಿಸಬಹುದಿತ್ತು; ಪಡೆನುಡಿಗಳ ಅರ್ಥಪ್ರಪಂಚವನ್ನು ವಿವರಿಸಬಹುದಿತ್ತು. ಕೆಲವು ಪದಗಳಿಗೆ ಅರ್ಥ ಗೊತ್ತಿಲ್ಲದಾಗ, ಗೊತ್ತಿಲ್ಲ ಎಂದು ಹೇಳಿರುವುದು ವಿದ್ವನ್ನಿಷ್ಠವಾದ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಅವರು ‘ಒಳ ಶುಂಠಿ’ ಎಂಬ ಪದಕ್ಕೆ (ಪು. ೧೦೧) ಕೊಟ್ಟಿರುವ ಅರ್ಥ ಸರಿಯಲ್ಲ. ಶಿಕ್ಷೆಯ ದೃಷ್ಟಿಯಿಂದ ತೊಡೆಯ ಮೃದುಭಾಗಗಳನ್ನು ಹಿಂಡುವ ಕ್ರಿಯೆಗೆ ಆ ಹೆಸರಿದೆ. ಗಂಡಸರು ಹೆಂಗಸರಿಬ್ಬರೂ ಸರಿಗೆ ಬಳೆ (ಪು. ೨೧೯)ಗಳನ್ನು ಧರಿಸುತ್ತಾರೆ. ಒಡಹುಟ್ಟಿದವರೆಲ್ಲರೂ ಸತ್ತುಹೋದಾಗ, ಆಪಶಕುನ ನಿವಾರಣೆಗಾಗಿ ಅದನ್ನು ಧರಿಸುವ ರೂಢಿ ಇತ್ತಣ ಬಯಲುಸೀಮೆಯ ಕೆಲವು ಭಾಗಗಳಲ್ಲಿ ರೂಢಿಯಲ್ಲಿದೆ.

ಹಳ್ಳಿಗಾಡಿನಲ್ಲಿ ರೂಢಿಯಲ್ಲಿರುವ ನಾನಾ ಬಗೆಯ ಶೋಷಣೆಯ ಘಟನೆಗಳು ಸಹ ಸಂಕ್ಷಿಪ್ತವಾದುವೆಂದೇ ಹೇಳಬೇಕು. ಗ್ರಾಮಾಂತರ ಪ್ರದೇಶದ ಆರ್ಥಿಕ ದುಸ್ಥಿತಿಗೆ ಈ ಶೋಷಕ ಘಟನೆಗಳೇ ಪ್ರಬಲ ಕಾರಣಗಳೆಂಬುದನ್ನು ಮರೆಯುವಂತಿಲ್ಲ. ಪಾಣಿ ಪಂಚೆ ಯುಟ್ಟು ಸಟ್ಟುಗ ಹಿಡಿದುಕೊಂಡು ಬಂದು, ಮೊದಮೊದಲು ಜನರನ್ನು ಕಾಡಿ ಬೇಡಿ ಹೊಟ್ಟೆ ಹೊರೆಯುತ್ತಿದ್ದ ಭಟ್ಟ ಏಳೆಂಟು ವರ್ಷಗಳಲ್ಲಿ ಶ್ರೀಮಾತನಾದದ್ದು ಹೇಗೆ? ಒಬ್ಬ ಭಟ್ಟ ಮಾತ್ರವಲ್ಲ, ಎಲ್ಲ ಶ್ರೀಮಂತರ ಶ್ರೀಮಂತಿಕೆಯ ರೀತಿ ಇದು. ದುಡಿಯುವವ ಎಂದೂ ಶ್ರೀಮಂತನಾಗಲಾರ. ದರೋಡೆಕೋರರು ಶೋಷಕರು ವಂಚಕರು ಮಾತ್ರವೇ ಶ್ರೀಮಂತರಾಗುತ್ತಾರೆಂಬುದು ಎಲ್ಲ ಕಾಲದೇಶಗಳಲ್ಲಿ ಕಾಣುವ ವಾಸ್ತವ ಸತ್ಯವಾಗಿದೆ.

ಒಕ್ಕಲಿಗರದು ವಿಶಿಷ್ಟ ಧಾರ್ಮಿಕ ಜೀವನವೆನ್ನುವುದನ್ನು ಗ್ರಂಥಕರ್ತರು ಸರಿಯಾಗಿಯೇ ಅರ್ಥಮಾಡಿಕೊಂಡಿದ್ದಾರೆ.[2] ಅವರು ಯಾವ ಮತಕ್ಕೂ ಅಂಟಿಕೊಂಡವರಲ್ಲ, ಯಾವ ಮತವನ್ನೂ ದೂಷಿಸಿದವರಲ್ಲ. ಜೈನರ ಪ್ರಭಾವವಿದ್ದಾಗ ಜೈನರಾದರು, ವೀರಶೈವರು ಆಳುವಾಗ ವೀರಶೈವರಾದರು, ಪಾದ್ರಿಗಳ ಉಪದೇಶಕ್ಕೆ ಸೋತು ಕ್ರಿಶ್ಚಿಯನ್‌ರಾದರು; ಅಷ್ಟೇ ಅಲ್ಲ, ಮತಾಂತರವಾಗದೆಯೆ ಎಲ್ಲ ಮತೀಯರ ದೇವರುಗಳಿಗೆ ನಡೆದುಕೊಳ್ಳುತ್ತಾರೆ; ಎಲ್ಲ ಮಠಗಳಿಗೂ ಹೋಗುತ್ತಾರೆ. ಇವರನ್ನು ಹಿಂದುಗಳ ಗುಂಪಿಗೆ ಸೇರಿಸುವುದೂ ಕಷ್ಟವಾಗುತ್ತದೆ. ಏಕೆಂದರೆ ಹಿಂದುವಾದವನು ಯಾವ ಯಾವ ವಿಧಿ ನಷೇಧಗಳನ್ನನುಸರಿಸಬೇಕೆಂದು ಸಂಪ್ರದಾಯಸ್ಥರು ಹೇಳುತ್ತಾರೆಯೋ ಅವುಗಳಲ್ಲೊಂದೂ ಅವರಿಗನ್ವಯಿ ಸುವುದಿಲ್ಲ. ಹಿಂದೂ ಎಂಬ ಪ್ರಜ್ಞೆಯೂ ಅವರಿಗಿಲ್ಲ. ಪ್ರಜ್ಞೆ ಇದ್ದರೆ ಬಾಬಯ್ಯನ ಹಬ್ಬದಲ್ಲಿ ಹುಲಿವೇಷ ಹಾಕುತ್ತಿದ್ದರೆ? ಪಾದ್ರಿಗಳ ಕಾಲಿಗೆ ಬೀಳುತ್ತಿದ್ದರೆ?

ಕಾದಂಬರಿಯ ಕಾಲದಲ್ಲಿ ಜಾತಿ ಭೇದವಿತ್ತು ನಿಜ. ‘ಇದ್ದರೂ ಭಟ್ಟರು, ಜೋಯಿಸರು, ಗೌಡರು, ಹೆಗ್ಗಡೆಯವರು, ಹಳೆಪೈಕ, ಬೇಲ, ಹಸಲ, ಹೊಲೆಯರೆಲ್ಲ ಬದುಕಿನ ಒಳಗೆ ತತ್ಪರರಾಗಿ ಹೋಗಿದ್ದಾರೆ’ ಎನ್ನುವ ಮಾತು ನೂರಕ್ಕೆ ನೂರು ಪಾಲು ಸತ್ಯ. ಈ ಮೂವತ್ತು ನಲವತ್ತು ವರ್ಷಗಳ ಅಂತರದಲ್ಲಿ, ಸ್ವಾತಂತ್ರ್ಯಾನಂತರ ಹಳ್ಳಗಳಲ್ಲಿ ಉರಿಯುತ್ತಿರುವ ಜಾತಿವೈಷಮ್ಯವನ್ನು ನೋಡುವಾಗ ದೇಶಕ್ಕೆ ಭವಿಷ್ಯವುಂಟೇ ಎಂಬ ಆತಂಕ ಎಲ್ಲ ದೇಶಪ್ರೇಮಿ ಗಳನ್ನು ಕಾಡುತ್ತದೆ.

ಅದೇನೇ ಇರಲಿ, ಪ್ರಾಮಾಣಿಕತೆ ಸತ್ಯನಿಷ್ಠೆ ಕಾಯಕಶ್ರದ್ಧೆ ಈ ನಿಬಂಧದ ಪಂಕ್ತಿ ಪಂಕ್ತಿಯಲ್ಲಿಯೂ ಎದ್ದುಕಾಣುತ್ತವೆಂಬುದು ನಿಜ. ಕನ್ನಡದ ಎಲ್ಲ ಶ್ರೇಷ್ಠ ಕಾದಂಬರಿಗಳ ಬಗ್ಗೆ  ಇಂಥ ಅಧ್ಯಯನ ನಡೆಯಬೇಕೆಂಬುದಕ್ಕೆ ಇದು ತೋರು ಬೆರಳಾಗಿದೆ; ಅಂಥ ಅಧ್ಯಯನಕ್ಕೆ ನಾಂದಿಯಾಗಿದೆ. ಇಂಥ ಅತ್ಯುತ್ತಮ ಸಂಶೋಧನೆ ನಡಸಿ, ಯಶಸ್ವಿಯಾಗಿರುವ, ತರುಣ ವಯಸ್ಸಿನ ಡಾ. ಗುರುಪಾದಪ್ಪನವರು ಎಂಥ ವಿದ್ವತ್ ಸಂಸ್ಥೆಗಾದರೂ ಭೂಷಣ ರಾಗುತ್ತಾರೆಂದೂ, ಕನ್ನಡ ಲೋಕ ಅವರಿಂದ ಇನ್ನೂ ಹೆಚ್ಚಿನ ಸಾಹಿತ್ಯ ಕೃತಿಗಳನ್ನು ನಿರೀಕ್ಷಿಸುತ್ತದೆಂದೂ ನಾನಂದುಕೊಂಡಿದ್ದೇನೆ.

 [1]    ಮ.ಮ., ಪು. ೩೬.

[2]    ಕುವೆಂಪು ಕಾದಂಬರಿಗಳ ಸಾಂಸ್ಕೃತಿಕ ಅಧ್ಯಯನ, ಪು. ೧೧೮.