ಸುದೀರ್ಘ ತಪಸ್ಸಿನಿಂದ, ಅನೂನ ಲೋಕಾನುಭವದಿಂದ, ಬಹುಶ್ರುತತ್ವದಿಂದ, ವಿಚಾರಾತ್ಮಕವೂ ವೈಜ್ಞಾನಿಕವೂ ಆದ ಚಿಂತನೆಯಿಂದ, ಅಧ್ಯಾತ್ಮ ದರ್ಶನಾನುಭವದಿಂದ, ಪಾರದರ್ಶಕ ಪರಿಶುದ್ಧ ಜೀವನದಿಂದ, ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಪ್ರಭಾವದಿಂದ ಶ್ರೀ ಕುವೆಂಪು ಮಹಾಕವಿಯಾಗಿದ್ದಾರೆ, ವಿಶ್ವಕವಿಯಾಗಿದ್ದಾರೆ, ವಿಶ್ವಮಾನವ ರಾಗಿದ್ದಾರೆ, ಹಿಮಾಲಯಸದೃಶರಾಗಿದ್ದಾರೆ; ಮರ್ತ್ಯಸ್ವರ್ಗಗಳ ಸಂಗಮ ಸ್ಥಾನವಾಗಿದ್ದಾರೆ. ಅವರು ಸಾಧಿಸಿರುವ ಪಾರಮಾರ್ಥಿಕ ಹಾಗೂ ಲೌಕಿಕ ಸಿದ್ದಿಗಳಿಂದಾಗಿ ಅವರ ಜೀವನ ಬಹುಮುಖಿಯಾಗಿದೆ, ಸಂಕೀರ್ಣವಾಗಿದೆ, ವ್ಯಾಪಕವಾಗಿದೆ, ಮಹತ್ವಪೂರ್ಣವಾಗಿದೆ, ಪ್ರಭಾವಶಾಲಿಯಾಗಿದೆ, ಪರಾತ್ಪರರೂಪಿ ಶ್ರೀರಾಮನ ವಿನೂತನಾವತಾರಕ್ಕೆ ಕಾರಣವಾಗಿದೆ, ಅಂತೆಯೇ ಅವರು ಮಹಾನುಭವ ಪಂಕ್ತಿಗೆ ಸೇರಲರ್ಹರಾಗಿದ್ದಾರೆ. ಅವರ ಕೃತಿಗಳನ್ನು ಆಳವಾಗಿ, ಎಚ್ಚರಿಕೆಯಿಂದ ಅಭ್ಯಾಸಮಾಡಿದವರಿಗೆ ಅಥವಾ ಅವರನ್ನು ತೀರ ಹತ್ತಿರದಿಂದ ನೋಡಿದವರಿಗೆ ಮಾತ್ರು ಅವರ ಭವ್ಯಾದ್ಭುತ ವ್ಯಕ್ತಿತ್ವದ ಆಂಶಿಕ ಪರಿಚಯ ಸಾಧ್ಯವಾಗ ಬಹುದು. ಕವಿ ತನ್ನ ಕೃತಿಗಳಲ್ಲಿ ವಿಲೀನವಾಗಿದ್ದಾನೆನ್ನುವುದು ಕುವೆಂಪು ಅವರ ಸಂದರ್ಭದಲ್ಲಿ ಅಕ್ಷರಶಃ ಸತ್ಯ. ಅವರವರ ಸಂಸ್ಕಾರ ಶ್ರಮ ಕಲ್ಪನಾಪ್ರತಿಭೆ ಯೋಗ್ಯತೆಗಳಿಗನುಗುಣವಾಗಿ ಕುವೆಂಪು ಅವರ ವ್ಯಕ್ತಿತ್ವ ಗರಿಗೆದರುತ್ತದೆ ಅಥವಾ ಪದರ ಪದರವಾಗಿ ಬಿಚ್ಚಿಕೊಳ್ಳುತ್ತದೆ.

‘ನೆನಪಿನ ದೋಣಿಯಲ್ಲಿ’ ಕವಿಯ ಆತ್ಮಕಥೆ, ನಿಜ. ಕಾವ್ಯ ಜೀವನದ ಕೆಲವು ಘಟನೆಗಳು ಮಾತ್ರ ಅಲ್ಲಿ ನಿರೂಪಣೆಗೊಂಡಿವೆ. ವಾಸ್ತವವಾಗಿ ಕವಿಯ ಬಾಹ್ಯ ಹಾಗೂ ಆಂತರಿಕ ಜೀವನ ಅವನ ಭಾವಗೀತೆಗಳಲ್ಲಿ, ಕತೆ ಕಾದಂಬರಿಗಳಲ್ಲಿ, ನಾಟಕಗಳಲ್ಲಿ, ಮಹಾಕಾವ್ಯದಲ್ಲಿ ಅಭಿವ್ಯಕ್ತಗೊಳುತ್ತದೆ. ಮನುಷ್ಯನ ಬಾಳು ಪ್ರತಿನಿತ್ಯ ಅವಸ್ಥಾತ್ರಯಗಳ ಮೂಲಕ ಸಂಚರಿಸು ವುದುಂಟಷ್ಟೆ. ಆದರೆ ಅವರ ಆಂತರಂಗಿಕ ಜೀವನದ ಸಂಚಾರಕ್ಕೆ ಮತ್ತೊಂದು ಅವಸ್ಥೆ ಅನಿವಾರ್ಯವಾಗುತ್ತದೆ. ಅದನ್ನೇ ಧ್ಯಾನಾವಸ್ಥೆಯೆಂದು ಕರೆಯಬಹುದು. ಆಗ ಮಾತ್ರ ಐಂದ್ರಿಯ ನಿಸ್ಸಂಗತ್ವವೊದಗಿ ಸತ್ಯದರ್ಶನವಾಗುತ್ತದೆ, ಆತ್ಮತೇಜಸ್ಸು ಉದ್ದೀಪನ ಗೊಳ್ಳುತ್ತದೆ, ಅವನ ನಿಜವಾದ ವರ್ಚಸ್ಸು ತಲೆದೋರುತ್ತದೆ; ಅಂಥ ಅವಸ್ಥೆಯಲ್ಲಿಯೇ ಸಕಲ ಸೃಜನಕಾರ್ಯಗಳು ನಡೆಯುವಂಥಾದ್ದು. ಕವಿ ಋಷಿ ವಿಜ್ಞಾನಿ ಕಲಾವಿದರೆಲ್ಲರ ಸೃಜನಕಾರ್ಯ ನಡೆಯುವ ದಾರಿಯೇ ಇದು. ಅಂದಮೇಲೆ ಅವರ ಕೃತಿಗಳ ಅಂತರಾಳವನ್ನು ಪ್ರವೇಶಿಸಬಲ್ಲ ವಿದಗ್ಧ ಸಹೃದಯರಿಗೆ ಮಾತ್ರ ಅವರ ಆಂತರಿಕ ಜೀವನ ತೆರೆದುಕೊಳ್ಳುತ್ತದೆ. ಆದ್ದರಿಂದಲೇ ಮೇಲೆ ಹೇಳಿದ್ದು ಅಂಥ ಮಹಾಪುರುಷರ ವ್ಯಕ್ತಿತ್ವ ಅಭ್ಯಾಸಿಗಳ ಶಕ್ತಿಸಾಮರ್ಥ್ಯ ಗಳಿಗನುಗುಣವಾಗಿ ಗೋಚರವಾಗುತ್ತದೆಂದು. ಹೀಗಾಗಿ ಈ ಮಹಾಕವಿಗಳ ಬಗ್ಗೆ ಹಲವಾರು ಜೀವನ ಚರಿತ್ರೆ ಚಿತ್ರಗಳು ರಚನೆಗೊಳ್ಳುವ ಸಾಧ್ಯತೆಯಿದೆ.

ಡಾ. ಎಚ್.ಜೆ. ಲಕ್ಕಪ್ಪಗೌಡರು ಶ್ರೀ ಕುವೆಂಪು ಅವರನ್ನು ಹತ್ತಿರದಿಂದ ಬಲ್ಲವರು; ಕುವೆಂಪು ಸಾಹಿತ್ಯವನ್ನು ಅವರಷ್ಟು ನಿಷ್ಠೆಯಿಂದ, ಸಹೃದಯತೆಯಿಂದ, ಸೂಕ್ಷ್ಮ ದೃಷ್ಟಿಯಿಂದ ಅಭ್ಯಾಸ ಮಾಡಿದವರಾಗಲಿ, ವಿಶ್ಲೇಷಿಸಿದವರಾಗಲಿ ತೀರ ವಿರಳ. ಆದ್ದರಿಂದ ಕುವೆಂಪು ಅವರನ್ನು ಕುರಿತು ರಚಿಸಿರುವ ಈ ಚಿಕ್ಕ ಚೊಕ್ಕ ಕಿರುಹೊತ್ತಿಗೆ ‘ವಿಶ್ವಕವಿ ಕುವೆಂಪು’ ಕುವೆಂಪು ಸಾಹಿತ್ಯಾಧ್ಯಯನಕ್ಕೊಂದು ಪ್ರವೇಶದ್ವಾರದಂತಿದೆ ಎಂದೇ ಹೇಳಬಹುದು; ಕುವೆಂಪು ಅವರ ವ್ಯಕ್ತಿತ್ವ ದರ್ಶನಕ್ಕೊಂದು ದರ್ಪಣವಾಗಿದೆ.