ಮಹಾಕಾವ್ಯಗಳ ಕಾಲ ಎಂದೋ ಮುಗಿದುಹೋಯಿತು. ಇಪ್ಪತ್ತನೆಯ ಶತಮಾನ ದಲ್ಲಂತು ಅದರ ಹುಟ್ಟು  ಸಾಧ್ಯವೇ ಇಲ್ಲ, ಎನ್ನುತ್ತಿದ್ದ ಪಾಶ್ಚಾತ್ಯ ಹಾಗೂ ಪೌರ್ವಾತ್ಯ ಸಾಹಿತಿ ವಿದ್ವಾಂಸರ ಅಭಿಪ್ರಾಯಕ್ಕೆ ಸವಾಲಾಗಿ ಶ್ರೀರಾಮಾಯಣದರ್ಶನಂ ಮಹಾಕಾವ್ಯವೆಂಬ ಮೇರುಕೃತಿಯ

[1] ಅವತಾರವಾಗಿದೆ. ಅದು ಪ್ರಕಟವಾದಾಗಿನಿಂದ ಅದರ ಅಧ್ಯಯನ ಚರ್ಚೆ ವ್ಯಾಖ್ಯಾನ ನಿರಂತರವಾಗಿ ಸಾಗುತ್ತಿವೆ. ಅದರ ವೈಶಿಷ್ಟ್ಯ ಮಹತ್ತುಗಳನ್ನು ಕುರಿತು ಬಹುಮಂದಿ ಸಹೃದಯ ವಿದ್ವಾಂಸರು ಸಾಧಾರವೂ, ವಿಚಾರಪೂರ್ಣವೂ, ನ್ಯಾಯಾತ್ಮಕವೂ, ತರ್ಕಬದ್ಧವೂ ಆದ ಸದಭಿಪ್ರಾಯವನ್ನು ಅಭಿವ್ಯಕ್ತಗೊಳಿಸಿದ್ದಾರೆ; ಮಹತ್ವಪೂರ್ಣ ಪ್ರಬಂಧಗಳನ್ನೂ ಸುದೀರ್ಘ ವಿಮರ್ಶೆ ವ್ಯಾಖ್ಯಾನಗಳನ್ನೂ ಬರೆದಿದ್ದಾರೆ; ಅಸೂಯಾಪರರೂ ಪೂರ್ವಗ್ರಹ ಪೀಡಿತರೂ ದುರಾಗ್ರಹಪ್ರಮತ್ತರೂ ಆದ ಟೀಕಾಕಾರರು ಆ ಮಹಾಕಾವ್ಯದ ಅಮೃತಾಂಶ ಗಳನ್ನು ಮುಚ್ಚಿ, ತಮ್ಮ ಮಂದ ಅಥವಾ ವಿಕಾರ ದೃಷ್ಟಿಗೆ ಮಾತ್ರವೇ ಕಾಣುವ ಅಥವಾ ತಮ್ಮ ದೃಷ್ಟಿಗನುಗುಣವಾಗಿ ಆರೋಪಿಸಬಹುದಾದ ಇಲ್ಲವೇ ವಿಕೃತಗೊಳಿಸಬಹುದಾದ ಅಂಶಗಳಿಗೆ ಭೂತಗನ್ನಡಿ ಹಿಡಿದಿರುವುದೂ ಉಂಟು. ಪುಟಗಳನ್ನು ಸರಸರನೆ ಮಗುಚಿ ಅಲ್ಲೊಂದು ಇಲ್ಲೊಂದು ಪುಟದ ಮೇಲೆ ತೇಲುನೋಟ ಹರಿಸಿದಷ್ಟರಿಂದಲೇ ಸರ್ವಾರ್ಥ ಸಿದ್ದಿ ಲಭಿಸಿತೆಂದು ಏನೇನೋ ಗೀಚಿ ತೃಪ್ತಿಪಟ್ಟುಕೊಂಡ ಅಹಂಜೀವಿಗಳಾದ ಪಂಡಿತರೂ ಉಂಟು. ಪೌರ್ವಾತ್ಯ ಪಾಶ್ಚಾತ್ಯ, ಪ್ರಾಚೀನ ಅರ್ವಾಚೀನ ಮಹಾಕೃತಿಗಳ, ದರ್ಶನ ಗ್ರಂಥಗಳ, ವೈಜ್ಞಾನಿಕ ವಿಚಾರಗಳ ಅಭ್ಯಾಸದಿಂದಲ್ಲದೆ, ಶ್ರದ್ಧಾಪೂರ್ವಕವಾದ ಸುದೀರ್ಘ ಅಧ್ಯಯನ ಮನನಗಳಿಂದಲ್ಲದೆ, ಈ ವಿನೂತನ ಮಹಾಕಾವ್ಯ ಕಾಯ ಪ್ರವೇಶ ಸಾಮರ್ಥ್ಯದಿಂದಲ್ಲದೆ ಇದು ತನ್ನ ಅಂತರಂಗವನ್ನು ಬಿಟ್ಟು ಕೊಡುವುದಿಲ್ಲವೆಂಬ ಪ್ರಜ್ಞೆ ವಾಚಕರಿಗಿರಬೇಕಾದ್ದು ಅತ್ಯವಶ್ಯ. ‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ. ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರೆಪಿಲ್ಲ’ ಎಂಬ ಮಾತು ಒಂದು ಕಾಲಕ್ಕೆ ಒಬ್ಬ ಕವಿಗೆ ಸಮುಚಿತವಾಗಿ ತೋರಿರಬಹುದು. ಮಾನವನ ವಿಕಾದೊಂದಿಗೆ ರಾಮನ ಕತೆಯ ವಿಕಾಸವೂ ತಳುಕು ಹಾಕಿಕೊಂಡಿದೆ ಎಂಬುದನ್ನು ಮರೆಯುವಂತಿಲ್ಲ. ಅಂದಮೇಲೆ ನಾನಾವಿಷ್ಕಾರಗಳ ಸಾತ್ತ್ವಿಕ ವಿಚಾರಗಳ ಹಾಗೂ ಜ್ಞಾನಾನುಭವ ಆಲೋಚನೆಗಳ ದೃಷ್ಟಿಯಿಂದ ಸುಸಮೃದ್ಧ ವಾಗಿರುವ ಇಪ್ಪತ್ತನೆಯ ಶತಮಾನದಲ್ಲಿ ರೂಪುಗೊಂಡಿರುವ ಈ ಕಾವ್ಯ ಹಿಂದಿನ ಕಾವ್ಯ ಗಳಿಗಿಂತ ತೀರ ಭಿನ್ನವಾದದ್ದೆಂದೇ ಹೇಳಬೇಕು. ಆದ್ದರಿಂದ ಇದರ ಅಧ್ಯಯನಕ್ಕೆ ವಿನೂತನ ಮಾನಸಿಕ ಸುಯ್ದನ ಸಂಧಾನಪೂರ್ವ ಸಿದ್ಧತೆಗಳು ಅತ್ಯವಶ್ಯವೆಂಬುದನ್ನು ಸಹೃದಯರು ಮತ್ತು ಪಂಡಿತರು ಮರೆಯಲಾಗದು. ಸಮಷ್ಟಿ ಪ್ರಜ್ಞೆ ವಿಕಾಸವಾದಂತೆಲ್ಲ ಈ ಕೃತಿಯ ಬಾಹ್ಯಾಂತರಂಗದ ಔನ್ನತ್ಯ ವೈಶಾಲ್ಯ ಭವ್ಯತೆಗಳು ಓದುಗರ ಸಂಸ್ಕಾರಾನುಗುಣವಾಗಿ ಅರಳುತ್ತ, ಗರಿಬಿಚ್ಚಿಕೊಳ್ಳುತ್ತ, ನೆರೆಯೇರುತ್ತ, ದಿಗಂತಸದೃಶವಾಗಿ ವಿಸ್ತೃತವಾಗುತ್ತವೆಂದು ಊಹಿಸಬಹುದಾಗಿದೆ.

ಈ ಮಹಾಕೃತಿಯನ್ನು ಕುರಿತಂತೆ ಈಗಾಗಲೇ ಹಲವು ಲೇಖನಗಳು ಮತ್ತು ಗ್ರಂಥಗಳು ಪ್ರಕಟವಾಗಿವೆಯೆಂದು ಮೇಲೆ ಹೇಳಿತಷ್ಟೆ. ಆ ಹೊತ್ತಿಗೆ ಪ್ರಕಟವಾದ ಸುದೀರ್ಘ ವ್ಯಾಖ್ಯಾನ   ಕೃತಿಗಳ ಪೈಕಿ ಶ್ರೀ ಕೋ. ಚೆನ್ನಬಸಪ್ಪನವರ “ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ” ಎಂಬ ಕೃತಿಗೆ ಅಗ್ರಮಾನ್ಯತೆ ಲಭಿಸಬೇಕಾಗಿದೆ. ಅಲ್ಲಿಂದೀಚೆಗೂ ಆ ಮಹಾಕೃತಿಯ ವಿವಿಧ ಮುಖಗಳ, ಅಂಗಾಂಗಗಳ, ಪಾತ್ರಗಳ, ಸನ್ನಿವೇಶಗಳ, ವರ್ಣನೆಗಳ, ಅಂತೆಯೇ ಭಿನ್ನವಿಭಿನ್ನ ಮೌಲ್ಯಗಳ ವಿಶ್ಲೇಷಣೆ ಅವಿಚ್ಛಿನ್ನವಾಗಿ ನಡೆಯುತ್ತಿದೆ. ಅದೊಂದು ಅಕ್ಷಯ ನಿಧಿಯಾದ್ದರಿಂದ  ಸಾವಿರ ವರ್ಷಗಳಾಚೆಗೂ ಈ ಕೃತಿಯ ಅಧ್ಯಯನ ನಾನಾ ರೀತಿಯಲ್ಲಿ ನಡೆಯಲಿದೆ. ಹಿಂದಿನ ಮತ್ತು ಮುಂದಿನ ಇಂಥ ಅಧ್ಯಯನಗಳಿಗೆ ಪ್ರೊ. ಎಚ್.ಜೆ. ಲಕ್ಕಪ್ಪಗೌಡರ ‘ಶ್ರೀರಾಮಾಯಣದರ್ಶನಂ ಒಂದು ವಿಮರ್ಶಾತ್ಮಕ ಅಧ್ಯಯನ’ವೊಂದು ಸೇತುವೆಯಾಗಿ, ಸ್ಫೂರ್ತಿಶಕ್ತಿಯಾಗಿ, ಕೈಮರವಾಗಿ ಪರಿಣಮಿಸಲಿದೆ ಎಂಬ ವಿಶ್ವಾಸ ನನಗಿದೆ. ಲಕ್ಕಪ್ಪಗೌಡರು ಇದರ ಸಿದ್ಧತೆಗಾಗಿ ಹದಿನೆಂಟು ವರ್ಷಗಳ ಕಾಲ ನಿಷ್ಠೆಯಿಂದ, ಪ್ರಾಮಾಣಿಕತೆ ಯಿಂದ, ಏಕಾಗ್ರತೆಯಿಂದ ಶ್ರಮಿಸಿದ್ದಾರೆ. ಅಭ್ಯಸಿಸಿದ್ದಾರೆ ಹಾಗೂ ಸಂಧಾನ ಮಾಡಿದ್ದಾರೆ ನ್ನುವುದನ್ನು ನೆನೆದಾಗ ಕಾಲವೂ ಅಂಜುವಂತಾಗುತ್ತಾದೆ. ಈ ಅವಧಿಯಲ್ಲಿ ಅವರು ಗಳಿಸಿರುವ ಅಪಾರ ಪಾಂಡಿತ್ಯಕ್ಕೆ ಗ್ರಂಥಋಣವೇ ಸಾಕ್ಷಿಯಾಗಿದೆ. ಪಡೆದಿರುವ ಅನುಭವ ವೈಭವಕ್ಕೆ ಮಹಾನಿಬಂಧವೆ ರುಜುವಾತಾಗಿದೆ. ಜಗತ್ತಿನ ಪ್ರಾಚೀನ ಅರ್ವಾಚೀನ ಕಾವ್ಯಮೀಮಾಂಸಾ ಸೂತ್ರಗಳನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ; ಹೋಮರ್ ವರ್ಜಿಲ್ ದಾಂಟೆ ಮಿಲ್ಟನರ ಮಹಾಕೃತಿಗಳನ್ನು ಅರಗಿಸಿಕೊಂಡಿದ್ದಾರೆ; ಶ್ರೀರಾಮಾಯಣದರ್ಶನಂ ಕಾವ್ಯದ ಪದಗಳನ್ನು ಮಾತ್ರವಲ್ಲ, ಅಕ್ಷರಗಳನ್ನು ಸಹ ಹಿಂಜಿ ಹಿಂಜಿ, ಬಿಡಿಸಿ ಬಿಡಿಸಿ, ಅವುಗಳ ಭಾವಾರ್ಥ ಹೃದಯಗಳನ್ನು ಹೊಕ್ಕು ಅವುಗಳ ರೂಪ ಸ್ವರೂಪ ಸತ್ವ ಮಹತ್ವ ಜಾಯಮಾನ ಧ್ವನಿವ್ಯಂಗ್ಯಗಳನ್ನು ಸಂಪೂರ್ಣವಾಗಿ ಅರಿತುಕೊಂಡಿದ್ದಾರೆ; ಅದರ ಅಂಗಾಂಗಳ ನಡುವಣ ಹೊಂದಾಣಿಕೆಯನ್ನು ಪಾತ್ರಗಳ ಸನ್ನಿವೇಶಗಳ ವರ್ಣನೆಗಳ ಉಪಮಾರೂಪಕಗಳ ಮಹೋಪಮೆಗಳ ಸಂಯೋಜನೆಯ ಔಚಿತ್ಯವನ್ನು ಸಂದೇಹಕ್ಕೆಡೆಯಾಗದಂತೆ ವಿವೇಚಿಸಿದ್ದಾರೆ.

ಈ ಕೃತಿಯ ತೌಲನಿಕ ಅಧ್ಯಯನಕ್ಕನುವಾಗುವಂತೆ ಪಾಶ್ಚಾತ್ಯ ಪೌರ್ವಾತ್ಯ ಮಹಾಕಾವ್ಯ ಲಕ್ಷಣಗಳನ್ನೂ, ರಾಮಾಯಣ ಪರಂಪರೆಯ ವಿಕಾಸವನ್ನೂ ಸಂಕ್ಷೇಪವಾಗಿ, ಆದರೆ ಸಮಗ್ರ ವಾಗಿ ನಿರೂಪಿಸಿದ್ದಾರೆ. ವಸ್ತು ವಿನ್ಯಾಸ, ಪಾತ್ರಸೃಷ್ಟಿ, ಸನ್ನಿವೇಶ ರಚನೆ, ವರ್ಣನೆಗಳ ಮೆರವಣಿಗೆ, ವಿಶ್ವಪ್ರಜ್ಞೆ, ಯುಗಧರ್ಮ, ಜಾನಾಂಗಿಕ ಸಂಸ್ಕೃತಿಗಳ ಪ್ರತಿಫಲನ ಹಾಗೂ ಕಲೆ ಮತ್ತು ದರ್ಶನಗಳ ಪರಸ್ಪರ ಸಮಾವೇಶ ಇವುಗಳ ದೃಷ್ಟಿಕೋನದಿಂದ ಅಳೆದಾಗ ಇಂದಿನ ಮಹಾಕೃತಿ ಹಿಂದಿನ ಕೃತಿಗಳಿಗಿಂತ ಹೇಗೆ ಭಿನ್ನವಾಗಿದೆ, ವಿಶಿಷ್ಟವಾಗಿದೆ, ಮಹತ್ವಪೂರ್ಣ ವಾಗಿದೆ; ಅಂತೆಯೇ ಕುವೆಂಪು ಅವರ ಅಸಾಧಾರಣ ಸ್ವೋಪಜ್ಞತೆ, ಸೃಜನಸಾಮರ್ಥ್ಯ, ಪ್ರತಿಭಾವಿಲಾಸಗಳು ಅತ್ಯಂತ ಪ್ರೋಆಶ್ಚರ್ಯಕರವಾದ ರೀತಿಯಲ್ಲಿ ಇವುಗಳಲ್ಲಿ ಹೇಗೆ ಅಭಿವ್ಯಕ್ತಗೊಂಡಿವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಪಾಶ್ಚಾತ್ಯ ಪೌರ್ವಾತ್ಯ ಹಾಗೂ ಪ್ರಾಚೀನ ಅರ್ವಾಚೀನಗಳ ಸುಮಧುರ ಸಂಗಮದಿಂದ ಭವಿಷ್ಯತ್ತಿಗೊಂದು ಆಶಾದಾಯಕ ವಾದ ಮುನ್ನುಡಿಯಾದದ್ದರಿಂದ ಪಾತ್ರಗಳ ಅನು ಸೃಷ್ಟಿಯಿಂದ, ಹೊಸ ಪಾತ್ರಗಳ ಸುಮಧುರ ಸಾಮರಸ್ಯದಿಂದ, ಗಾತ್ರದ ಮಹೋನ್ನತಿಯಿಂದ, ಮಹಾಶೈಲಿ ಮಹಾಛಂದಸ್ಸುಗಳ ಸುಮನೋಹರ ಸಮ್ಮಿಳದಿಂದ, ಮಹೋಪಮೆಗಳ ಸಾಂಗತ್ಯದಿಂದ, ಅಲೌಕಿಕ ನಿತ್ಯಸತ್ಯ ಗಳನ್ನು ಅಭಿವ್ಯಕ್ತಗೊಳಿಸುವ ಪ್ರತಿಮಾ ವಿಧಾನದಿಂದ, ಕಾವ್ಯದ ಮಹೋನ್ನತಿಗೆ ಅತ್ಯವಶ್ಯ ವಾದ ಕಲಾವಂತಿಕೆಯಿಂದ, ‘ಪಾಪಿ ಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೆಹ ರಚನೆಯೊಳ್’ ಎಂಬ ದಿವ್ಯದರ್ಶನದ ಅಂತರ್ಗಾಮೀಸ್ರೋತದಿಂದ ಈ ಕೃತಿ ಹೇಗೆ ಮಹಾಕಾವ್ಯವಾಗಿದೆ ಎಂಬುದನ್ನು ನಿಬಂಧಕಾರರು ಸಾಧಾರವಾಗಿ, ಸಮರ್ಥವಾಗಿ ಸಮರ್ಥಿಸಿದ್ದಾರೆ.

ಮಹಾಕಾವ್ಯವೊಂದರ ಮಹಾವ್ಯಾಖ್ಯಾನಕಾರರಿಗಿರಬೇಕಾದ ಸಕಲಶಕ್ತಿಗಳು ವಿದ್ವತ್‌ಪ್ರತಿಭೆ, ಕಲ್ಪನಾ ಸಾಮರ್ಥ್ಯ, ಪರಕಾಯಪ್ರವೇಶ ಕೌಶಲ, ಚಿಂತನಶೀಲತೆ, ಸೂಕ್ಷ್ಮಗ್ರಹಣ ಚಾತುರ್ಯ, ಸಂಶೋಧನ ಪ್ರಾವೀಣ್ಯ, ಹರಿತವಾದ ವಿಶ್ಲೇಷಣಮತಿ ಇವರಲ್ಲಿ ಸಮೃದ್ಧವಾಗಿರುವುದರಿಂದಲೇ ಇಂಥ ಬೃಹತ್ ಭಾಷ್ಯವನ್ನು ರಚಿಸಲು ಸಾಧ್ಯವಾಗಿದೆ. ಇಷ್ಟಿದ್ದರೆ ಸಾಲದು, ಅಭಿವ್ಯಕ್ತಿಸಾಮರ್ಥ್ಯವೂ ಅತ್ಯಂತ ಮುಖ್ಯವಾದದ್ದು. ಅದೊಂದಿಲ್ಲದಿದ್ದರೆ, ಅದ್ವಿತೀಯವಾದ ವಿದ್ವತ್ತಾಗಲಿ, ಅಸಾಧಾರಣವಾದ ಪ್ರತಿಭೆಯಾಗಲಿ ಪ್ರಯೋಜನ ವಾಗುವುದಿಲ್ಲ. ವಕ್ತೃತ್ವ ಮತ್ತು ಅಭಿವ್ಯಕ್ತಿ ಸಾಮರ್ಥ್ಯಗಳು ಲಕ್ಕಪ್ಪಗೌಡರ ಯಶಸ್ಸಿನ ಮೂಲ ಬಂಡವಾಳ. ಎಂಥ ಗಹನವಾದ ಆಲೋಚನೆಗಳನ್ನಾಗಲಿ, ಮಹತ್ತರವಾದ ಅನುಭವಗಳನ್ನಾಗಲಿ, ಸೂಕ್ಷ್ಮಾತಿಸೂಕ್ಷ್ಮ ಭಾವನೆಗಳನ್ನಾಗಲಿ, ಅಂತರಂಗದ ಗುಹ್ಯಾತ್ ಗುಹ್ಯತರ ಸುಳುಹುಹೊಳಹುಗಳನ್ನಾಗಲಿ ಮನಮುಟ್ಟುವಂತೆ, ಹೃದಯವನ್ನು ತಟ್ಟುವಂತೆ, ಕಲ್ಪನೆಯನ್ನು ಕೆರಳಿಸುವಂತೆ, ಸಹೃದಯ ಸಂವೇದ್ಯವಾಗುವಂತೆ ಶಬ್ದಶಿಲ್ಪವನ್ನು ವರ್ಣಚಿತ್ರವನ್ನು ನಿರ್ಮಿಸುವ ವಾಕ್ಸಿದ್ದಿ ಅವರಿಗೆ ವಶವಾಗಿದೆ. ಸಂಸ್ಕೃತ ಸಮ್ಮಿಶ್ರಣದ, ಕನ್ನಡದ ಜಾಯಮಾನವನ್ನು ಬಿಡದ ಸುಪ್ರೌಢ ಸಂಮೋಹಕ ಶೈಲಿ ಅವರದು. ಪದಪ್ರಯೋಗ ದಲ್ಲಾಗಲಿ, ವಾಕ್ಯರಚನೆಯಲ್ಲಾಗಲಿ ಅವರೆಂದೂ ತಿಣುಕುವುದಿಲ್ಲ, ತಡವರಿಸುವುದಿಲ್ಲ. ನಿಸರ್ಗಸಹಜವಾದ ಕಾರಂಜಿಯಂತೆ, ತುಂಬಿದ ಕನ್ನಂಬಾಡಿಯ ಬಾಗಿಲಲ್ಲಿ ಭೋರ್ಗರೆವ ಮುತ್ತುಗಳ ಪ್ರವಾಹದಂತೆ ಶಬ್ದರೂಪವನ್ನು ಪಡೆದ ಭಾವಾಲೋಚನೆಗಳು ಲೀಲಾಜಾಲವಾಗಿ ಪ್ರವಹಿಸುತ್ತವೆ. ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಮಹಾಶೈಲಿಗೆ ಗೌರವ ಪ್ರಾಪ್ತವಾಗುವ ರೀತಿಯಲ್ಲಿ ಈ ಮಹಾವ್ಯಾಖ್ಯಾನದ ಶೈಲಿ ರೂಪುಗೊಂಡಿದೆ. ಮಹದನು ಭವಗಳನ್ನು ಮತ್ತು ಮಹದಾಲೋಚನೆಗಳನ್ನು ಹೆಮ್ಮೆಯಿಂದ ಹೊತ್ತ ಮುಂಚೂಣಿಯ ಚಟುಲ ರಣತೇಜಿಯಂತೆ ಅದು ಕುಂಟದೆ ಕುಸಿಯದೆ ಕೋಡದೆ ಗಂಭೀರವಾಗಿ ಹರಿಯುತ್ತದೆ. ಜೀವಂತವಾದ ಸರಸವಾದ ಮಾತುಗಳ ಮೋಡಿಯಿಂದಾಗಿ, ಗಾರುಡಿಗತನದಿಂದಾಗಿ ಎಲ್ಲಿಯೂ ಶುಷ್ಕತೆ ಸುಳಿಯುವುದಿಲ್ಲ. ಬೇಸರಕ್ಕವಕಾಶವಿಲ್ಲ. ಕೆಲವು ಅಧ್ಯಾಯಗಳಿಗೆ ಹೆಸರು ಕೊಡುವುದರಲ್ಲಿಯೇ ಅವರ ಮಾತಿನ ಜಾಣ್ಮೆ ಮತ್ತು ಧ್ವನಿ ಶಕ್ತಿ ಎದ್ದುಕಾಣುತ್ತವೆ; ಸರ್ವಗುಣ ಪರಿಪೂರ್ಣ ಶ್ರೀರಾಮ; ಸೋದರಪ್ರೇಮದ ಶ್ರೀಮೂರ್ತಿ ಲಕ್ಷ್ಮಣದೇವ; ಪುತ್ರ ವಾತ್ಸಲ್ಯದ ಸೀಮಾಪುರುಷ ದಶರಥ; ವಾತ್ಸಲ್ಯ ವಿದ್ವೇಷಗಳ ಸೋದರರು ವಾಲಿಸುಗ್ರೀವರು; ಅಸಮಾನಯೋಗಪುರುಷ ಮಹಾಮಹಿಮ ಹನುಮಂತ; ಮಹಾಸಾಧಕ ಶ್ರೀ ರಾವಣ; ರಾಮತ್ವ ಪ್ರಕಾಶಿನಿ ಕೈಕೆ; ರಾಮಾಯಣದ ಜೀವಶಕ್ತಿ ಮಂಥರಾದೇವಿ; ಇತ್ಯಾದಿ. ಶ್ರೀ ರಾಮಾಯಣದರ್ಶನಂ ಮಹಾಕಾವ್ಯ ಕುರಿತ ಈವರೆಗಿನ ವ್ಯಾಖ್ಯಾನಗಳಲ್ಲಿ ಗುಣಗಾತ್ರಗಳೆರಡರ ದೃಷ್ಟಿಯಿಂದಲೂ ಇದಕ್ಕೆ ಅಗ್ರಸ್ಥಾನ ಲಭಿಸಬೇಕಲ್ಲದೆ, ಮುಂದಿನವರಿಗೆ ಅಥವಾ ಈ ಮಾದರಿಯ ವ್ಯಾಖ್ಯಾನವನ್ನು ಬರೆಯುವವರಿಗೆ ಇದು ಆದರ್ಶವಾಗಲಿದೆ.

‘ಸಾಕಷ್ಟು ಸುದೀರ್ಘವಾದ ಅಧ್ಯಯನ ಸಂಶೋಧನೆಗಳ ಬೆಂಬಲದಿಂದ ಈ ಪ್ರಬಂಧವನ್ನು ರಚಿಸಿರುವೆನಾದರೂ, ಇದು ಸಂಪೂರ್ಣ ಸಮರ್ಪಕ ಎಂದು ನಾನು ಭಾವಿಸಿಲ್ಲ. ಕುವೆಂಪು ಅವರ ಈ ಮಹಾಪ್ರತಿಭಾಸಮುದ್ರದಲ್ಲಿ ಈಸುವ ಬಾಲ ಸಾಹಸ ಮಾಡಿದ್ದೇನೆ. ಈ ಕಾವ್ಯದ ಒಂದೊಂದು ಅಂಶವನ್ನೇ ಕುರಿತು ಒಂದೊಂದು ಪ್ರತ್ಯೇಕವಾದ ಮಹಾಪ್ರಬಂಧ ರಚನೆಗೆ ಆಸ್ಪದವಿದೆ…. ಇನ್ನೂ ಹೇಳಬೇಕಾದ ಅಂಶಗಳಿವೆಯೆಂಬ ಅತೃಪ್ತಿ ನನ್ನನ್ನು ಬಾಧಿಸುತ್ತಲೇ ಇದೆ’- ನಿಜವಾದ ವಿದ್ವಾಂಸರು ಆಡುವ ಮಾತಿದು. ಶ್ರೇಷ್ಠ ವಿದ್ವಾಂಸ ನಿರಂತರ ವಿದ್ಯಾರ್ಥಿ ಹಾಗೂ ಸಾಧಕ, ನಯವಿನಯಸಂಪನ್ನ; ಅರೆ ವಿದ್ವಾಂಸ ಗರ್ವಿ ಸ್ವಪ್ರತಿಷ್ಠಾವಂತ ಅರೆ ವಿದ್ಯಾರ್ಥಿ, ಈ ಮಹಾಕಾವ್ಯದ ಮುಂದಿನ ಅಭ್ಯಾಸಕ್ಕೆ ಈ ವಿಮರ್ಶಾತ್ಮಕ ಅಧ್ಯಯನವೊಂದು ಸುಭದ್ರ ಸೋಪಾನವೆಂದು ಹೇಳಬಹುದಾಗಿದೆ.

ಲಕ್ಷ್ಯದಿಂದ ಲಕ್ಷಣ, ಮಹಾಕಾವ್ಯದಿಂದ ಮಹಾಕಾವ್ಯಲಕ್ಷಣ ಹೊರಹೊಮ್ಮುವುದು ಸಾಮಾನ್ಯರೂಢಿ. ಹೋಮರ್, ವರ್ಜಿಲ್, ದಾಂಟೆ, ಮಿಲ್ಟನ್ ಮೊದಲಾದ ಮಹಾಕವಿಗಳ ಮಹಾಕೃತಿಗಳು ಹೊರಬಂದನಂತರ ಪಾಶ್ಚಾತ್ಯ ಮಹಾಕಾವ್ಯಲಕ್ಷಣಗಳನ್ನು ಕ್ರಮಗೊಳಿಸ ಲಾಗಿದೆಯಷ್ಟೆ; ಅಂತೆಯೇ ಭಾರತೀಯ ಮಹಾಕಾವ್ಯಲಕ್ಷಣಶಾಸ್ತ್ರ ವಿಕಾಸಗೊಂಡದ್ದು ರಾಮಾಯಣ ಮಹಾಭಾರತ ರಘುವಂಶ ಕಿರಾತಾರ್ಜುನೀಯಾದಿ ಕಾವ್ಯಗಳ  ಅಧ್ಯಯನ ವಿಶ್ಲೇಷಣೆ ವಿಮರ್ಶೆ ಪರಿಪಕ್ವವಾದನಂತರ. ಒಂದೊಂದು ಯುಗದ ಅಗತ್ಯಕ್ಕೆ ತಕ್ಕಂತೆ ಮಹಾಕಾವ್ಯಗಳು ಉದ್ಭವಿಸುತ್ತವಾದ್ದರಿಂದ ಮಹಾಕಾವ್ಯ ಲಕ್ಷಣಶಾಸ್ತ್ರ ಅತ್ಯಾಧುನಿಕ ಮಹಾಕಾವ್ಯಗಳಿಂದ ಸೂಸುವ ಕಾವ್ಯತತ್ವಗಳ್ನು ಗರ್ಭೀಕರಿಸಿಕೊಳ್ಳಬೇಕಾಗುತ್ತದೆ. ಅವುಗಳ ಮಾನದಂಡದಿಂದಲೇ ಶ್ರೀರಾಮಾಯಣದರ್ಶನಂ ಮಹಾಕಾವ್ಯವನ್ನು ಅಳೆಯಬೇಕಾಗುತ್ತದೆ. ಈ ದೃಷ್ಟಿಯಿಂದ ಶ್ರೀ ಲಕ್ಕಪ್ಪಗೌಡರ ಈ ಮಹಾನಿಬಂಧದ ಓದಿನಿಂದ ಹಾಗೂ ಸ್ವಂತ ಅಭ್ಯಾಸದಿಂದ ಫಲಿತವಾಗುವ ಕೆಲವು ಅಣಿಲಕ್ಷಣ ಸೂತ್ರಗಳನ್ನಿಲ್ಲಿ ನಿರೂಪಿಸಲಾಗಿದೆ.

೧.         ವಸ್ತು ಉದಾತ್ತವೂ ವಿಸ್ತಾರವೂ ವ್ಯಾಪಕವೂ ರಾಷ್ಟ್ರೀಯ ಸಂಸ್ಕೃತಿಯನ್ನು ಪ್ರತಿಬಿಂಬಿ ಸುವಂಥದೂ ಆಗಿರಬೇಕು; ಅದು ಐತಿಹಾಸಿಕವಾಗಿರಬಹುದು, ಪೌರಾಣಿಕವಾಗಿರ ಬಹುದು; ಅನ್ಯಸಿದ್ಧವಸ್ತುವಾಗಿರಬಹುದು.

೨.         ಅದು ಅಖಂಡವಾಗಿರಬೇಕು; ಅಂದರೆ ಪೂರ್ಣಪ್ರಮಾಣದ್ದೂ ಅಖರ್ವವೂ ಅಕ್ಷರವೂ ಆಗಿರಬೇಕು.

೩.         ಸುದೀರ್ಘತೆಯ ಕಾರಣದಿಂದ ಅದನ್ನು ಸಂಪುಟ ಮತ್ತು ಸಂಚಿಕೆಗಳಾಗಿ ವಿಭಜಿಸ ಬೇಕು. ವಸ್ತುವಿನ್ಯಾಸದಲ್ಲಿ ಕಲಾವಂತಿಕೆ, ಸಾತತ್ಯಗಳಿರಬೇಕು.

೪.        ಪೂರ್ವ ಅಥವಾ ಸಮಕಾಲೀನ ಕವಿಸ್ಮರಣೆಗೆ ಅವಕಾಶವಿರಬೇಕು.

೫.        ಪರಸ್ಪರ ವಿರೋಧಾತ್ಮಕವಾದ ಎರಡು ಶಕ್ತಿಗಳ ಸಂಘರ್ಷದ ಜತೆಜತೆಗೆ ಆಸುರೀಶಕ್ತಿ ದೈವೀಶಕ್ತಿಯಾಗಿ ಪರಿಣಾಮಗೊಳ್ಳುವ ಮಹಾವಿಜಯಸಿದ್ದಿ ಕಾವ್ಯದ ಉದ್ದೇಶ ವಾಗಿರಬೇಕು.

೬.         ಉಪಮಾರೂಪಕಾಲಂಕಾರಗಳು ಸಮೃದ್ಧವಾಗಿರಬೇಕಾದರೂ ಉಳಿದ ಅಲಂಕಾರಗಳು ಹಿತಮಿತವಾಗಿ ಬಳಕೆಗೊಳ್ಳಬೇಕು. ಕಾವ್ಯದ ಮಹೋನ್ನತಿಗೆ ಸಾಧಕವಾಗುವ ಕಲಾ ಪರಿಕರಗಳು ಸಮಾವೇಶಗೊಂಡಿರಬೇಕು; ಮಹೋನ್ನತಿ ಸ್ಥಾಯಿಯಾಗಿ ನೆಲೆಗೊಳ್ಳ ಬೇಕು.

೭.         ಔಚಿತ್ಯಪೂರ್ಣವಾದ ಮಹೋಪಮೆಗಳ ಬಳಕೆ ಅಗತ್ಯ.

೮.         ಪದಗಳಲ್ಲಿ, ವಾಕ್ಯಗಳಲ್ಲಿ, ಅಲಂಕಾರಗಳಲ್ಲಿ ಶುಷ್ಕತೆಗೆ ಎಡೆಯಿರಬಾರದು; ಧ್ವನಿಗೆ ಪ್ರಾಶಸ್ತ್ಯವಿರಬೇಕು.

೯.         ಸನ್ನಿವೇಶ ರಚನೆಯಲ್ಲಿ ಭವ್ಯತೆ ಅನ್ಯೋನ್ಯತೆ ಮತ್ತು ಮಹತ್ತುಗಳ ವರ್ಣನೆಗಳಲ್ಲಿ ಸಾಮರಸ್ಯ ಸೌಂದರ್ಯಗಳು ಎದ್ದು ಕಾಣಬೇಕು. ಆದರೆ ವರ್ಣನೆಗಾಗಿ ವರ್ಣನೆ ಕೂಡದು.

೧೦.      ಸಿದ್ಧಕತೆ ಮತ್ತು ಸಿದ್ಧಪಾತ್ರಗಳು ನವೀಕರಣಗೊಳ್ಳಬೇಕು. ಪುನರ್ಸೃಷ್ಟಿಗೊಳ್ಳಬೇಕು. ಹಳೆಯ ಪಾತ್ರಗಳನ್ನು ವಿಕೃತಗೊಳಿಸದೆ, ಅವುಗಳ ಧಮನಿಧಮನಿಗಳಲ್ಲಿ ಅಭೂತಪೂರ್ವ ಓಜಸ್ಸು ಮತ್ತು ಕಾಂತಶಕ್ತಿಗಳು ಹರಿಯುತ್ತಿದ್ದು ಅವು ವಿನೂತನ ಸೃಷ್ಟಿಯೆಂಬಂತೆ ಕಂಗೊಳಿಸಬೇಕು.

೧೧.      ಮನುಕುಲದ ಸಮಸ್ತ ಸ್ತರಗಳನ್ನು, ವಿಶ್ವರೂಪವನ್ನು, ಗುಣಾವಗುಣ ವೈವಿಧ್ಯವನ್ನು, ರಾಗದ್ವೇಷಗಳನ್ನು, ಧ್ಯೇಯಾಭೀಪ್ಸೆಗಳನ್ನು, ಸಾಮಾನ್ಯತೆ ಅಸಾಮಾನ್ಯತೆಯನ್ನು, ಊರ್ಧ್ವಸ್ಥಿತಿ ಅಧೋಗತಿಗಳ್ನು ಪ್ರತಿಬಿಂಬಿಸುವಂಥ ನೂರಾರು ಪಾತ್ರಗಳಿರಬೇಕು.

೧೨.      ಮೂಲಕಥೆ ಮತ್ತು ಪಾತ್ರಗಳಿಗೆ ಹೊಂದಿಕೊಳ್ಳುವಂತೆ ಹೊಸ ಪಾತ್ರಗಳನ್ನು ಸೃಷ್ಟಿಸಿಕೊಳ್ಳಬಹುದು. ಇಪ್ಪತ್ತನೆಯ ಶತಮಾನ ಶ್ರೀಸಾಮಾನ್ಯರ ಯುಗವಾದ್ದರಿಂದ ಅವರಿಗೂ ಸ್ಥಾನ ಕಲ್ಪಿಸಬೇಕು.

೧೩.       ಪ್ರತಿಯೊಬ್ಬ ವ್ಯಕ್ತಿಯೂ ದೈವಾಂಶಸಂಭೂತನಾಗಿದ್ದು ಪರಿಸರವಶಾತ್ ಪುಣ್ಯನೋ ಪಾಪಿಯೋ ಆಗಿರಬಹುದಾಗಿ ಕಾಲಮಹಿಮೆಯಿಂದ ಪಾಪಿಗೂ ಉದ್ಧಾರ ಉಂಟೆಂಬ ದಾರ್ಶನಿಕ ಸತ್ಯ ಕಾವ್ಯದುದ್ದಕ್ಕೂ ಮಿಂಚಬೇಕು.

೧೪.      ನಾಯಕ ಪ್ರತಿನಾಯಕರಿಬ್ಬರೂ ಮಹಾವೀರರೂ, ಸಾಹಸಪ್ರಿಯರೂ, ಸಾಧನಾ ನಿರತರೂ ಆಗಿರುತ್ತಾರೆ. ಅವರಿಬ್ಬರ ತಪಸ್ಸಿನಿಂದಾಗಿ ಸಾಹಚರ್ಯದಿಂದಾಗಿ ಸಮಸ್ತ ಜನರಿಗೆ ಕಲ್ಯಾಣ ಒದಗುತ್ತದೆ.

೧೫.      ಕತೆ ಪ್ರಪ್ರಾಚೀನವಾದದ್ದರಿಂದ, ಅದು ಆ ಈ ಲೋಕಗಳ ನಡುವೆ ಸಂಚರಿಸುವುದ ರಿಂದ, ಪಾತ್ರಗಳು ಆಗಾಗ್ಗೆ ಈ ನೆಲದ ಮೇಲೆ ಓಡಾಡುವುದಾದರೂ ಭವ್ಯತೆಯ ಅಂಚಿನಲ್ಲಿಯೇ ವ್ಯವಹರಿಸುವುದರಿಂದ, ಗಹನವೂ ಅತ್ಯಾಧುನಿಕವೂ ಆದ ತತ್ತ್ವದರ್ಶನ ಆಲೋಚನೆಗಳನ್ನು ಬಿಡಬೇಕಾದ ಸಂದರ್ಭವಿದ್ದದ್ದರಿಂದ ಸುಸಮೃದ್ಧವೂ ಓಜೋನ್ವಿತವೂ ಸರ್ವಾಲಿಂಗನಸಮರ್ಥವೂ ನವೋನವವೂ ಆದ ಪರಿಪಕ್ವ ಪ್ರೌಢ ಭಾಷೆಯ ವಿನೂತನ ಸೃಷ್ಟಿ ಅತ್ಯಗತ್ಯ. ಇದಕ್ಕಾಗಿ ಎಲ್ಲ ಯುಗಗಳ ಕನ್ನಡವನ್ನು ಹಾಗೂ ಅದರ ಜತೆಗೆ ಅದರ ಬಂಧು ಅಥವಾ ಪರಿವಾರ ಭಾಷೆಗಳ ಸತ್ವವನ್ನು ಬಂಧುರತ್ವಕ್ಕೆ ಮತ್ತು ಪ್ರಮಾಣತೆಗೆ ಭಂಗ ಬರದಂತೆ ಸಮೀಚೀನವಾಗಿ ಸೂರೆಗೊಳ್ಳಬೇಕು; ಭಟ್ಟಿಯಿಳಿಸಿ ಬನಿಗೊಳಿಸಬೇಕು. ದೀರ್ಘತಪಸ್ಸಾಧ್ಯವಾದ ವಿಜ್ಞಾನ ಯುಗದ ವಿನೂತನಾನುಭವಗಳ ಆಧ್ಯಾತ್ಮ ವಿಚಾರಗಳ ಸಮರ್ಥಾಭಿವ್ಯಕ್ತಿಗೆ ಮಹಾಶೈಲಿಯ ದಿವ್ಯವಾಹನ ಅತ್ಯವಶ್ಯ.

೧೬.      ಕನ್ನಡ ಭಾಷೆಯಲ್ಲಿ ಪ್ರಾರಂಭವಾದ ಚಾಲ್ತಿಯಲ್ಲಿರುವ ಛಂದೋಪ್ರಕಾರಗಳ ಮೇಲೆ ಆಂಗ್ಲ ಛಂದೋಬಂಧಗಳನ್ನು ಕಸಿ ಕಟ್ಟಿ ಸಿದ್ಧಪಡಿಸಿದ ಸತ್ವವೈವಿಧ್ಯಸಂಪನ್ನವಾದ ಸಾರ್ವಭೌಮ ಛಂದಸ್ಸಿನ, ಅಂದರೆ ಮಹಾಛಂದಸ್ಸಿನ ನಿರ್ಮಾಣ ಅನಿವಾರ್ಯ.

೧೭.      ಜಾತಿ ಮತಗಳ ಹೆಸರಿನಲ್ಲಿ ಅಸಮತೆಯನ್ನು ಪೋಷಿಸುವ ಐಕ್ಯಭಂಗಕಾರಿಗಳಾದ ಮೌಢ್ಯಜನ್ಯ ವಿಕೃತ ಜಡ ಸಂಪ್ರದಾಯಗಳ ಪ್ರಸಾರಕ್ಕೆ ಕಾವ್ಯದಲ್ಲಿ ಅವಕಾಶವಿರ ಕೂಡದು.

೧೮.      ಕಾವ್ಯದ ನಾನಾ ಅಂಗಗಳ ಮೂಲಕ ವಿಶ್ವಮಾನವ ಸಂದೇಶ ಹಾಗೂ ವಿಶ್ವಪ್ರಜ್ಞೆ ಹೊರಹೊಮ್ಮುವಂತಿರಬೇಕು.

೧೯.       ವೈಜ್ಞಾನಿಕ ಮನೋಧರ್ಮ ಮತ್ತು ವೈಚಾರಿಕತೆ ಸಿಂಹಾಸನಾರೋಹಣ ಮಾಡಬೇಕು. ವಿಧಿ ಕರ್ಮ ಪ್ರಾರ್ಥನೆ ಸಾಧನೆಗಳ ಪರಿಕಲ್ಪನೆ ವೈಚಾರಿಕತೆಗೆ ವಿರೋಧವಾಗಬಾರದು.

೨೦.      ಸಮಗ್ರ ರಾಷ್ಟ್ರದ, ಜನಾಂಗದ ಅಥವಾ ಸಮಕಾಲೀನ ಯುಗದ ಸಾಂಸ್ಕೃತಿಕ ವೈಭವದ ವಾಣಿಯಾಗಿ, ಸಾಧನೆ ಶೋಧನೆ ಧೋರಣೆಗಳನ್ನೊಳಗೊಂಡ ಮಹತ್ವದ ಸಂಗತಿಗಳ ಸಾರಸರ್ವಸ್ವವಾಗಿ ಕಾವ್ಯ ವಿಕಾಸಗೊಳ್ಳುವುದಾದರೂ, ದೇಶಕಾಲಾತೀತ ಪ್ರಜ್ಞಾನ ಸುಜ್ಞಾನಗಳು ಪ್ರತಿಮಾವಿಧಾನದಲ್ಲಿ ವ್ಯಕ್ತ ಸ್ವರೂಪವನ್ನು ಪಡೆಯುವಂತಾಗಬೇಕು; ಪರಮ ಮೌಲ್ಯಗಳ ತವನಿಧಿಯಾಗಬೇಕು.

೨೧.      ಪೌರ್ವಾತ್ಯ ಪಾಶ್ಚಾತ್ಯಗಳ ಉತ್ತರ ದಕ್ಷಿಣಗಳ ಪ್ರಾಚೀನ ಅರ್ವಾಚೀನಗಳ ಸಂಗಮ ವಾಗಿ, ಭವಿಷ್ಯಕ್ಕೆ ಮುನ್ನುಡಿಯಾಗಬೇಕು.

೨೨.       ಭಾಷಣ ಕಲೆ ಹಾಗೂ ನಾಟಕೀಯತೆ ಸೇರಿದಂತೆ ಅದು ಸಾಹಿತ್ಯದ ಸರ್ವಪ್ರಕಾರಗಳನ್ನು ಗರ್ಭೀಕರಿಸಿಕೊಂಡಿರಬೇಕು.

೨೩.       ವಿಪಾಕಗೊಂಡ ಸಾವಿರಾರು ಭಾವಾನುಭವಗಳ ಮಹದಾಲೋಚನೆಗಳ ಗಂಗೋತ್ರಿ ಯಾಗಬೇಕು.

೨೪.      ಬಹಿರ್ಘಟನೆಯನ್ನು ಪ್ರತಿಕೃತಿಸುವ ಲೌಕಿಕ ಚರಿತ್ರೆಯಾಗದೆ, ಅಲೌಕಿಕ ನಿತ್ಯಸತ್ಯಗಳನ್ನು ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನವಾಗಬೇಕು.

೨೫.      ಕಲೆ ಮತ್ತು ನಿದರ್ಶನಗಳು ಅಭೇದ್ಯವೆನ್ನುವಂತೆ, ಸಪೋಟ ಹಣ್ಣಿನೊಳಗಣ ಸಿಹಿಯಂತೆ, ಹಾಲಿನೊಳಗಣ ಬೆಣ್ಣೆಯಂತೆ, ಮಲ್ಲಿಗೆಯ ಪರಿಮಳದಂತೆ, ಬಳ್ಳಿಯೊಳ ಗಣ ಕುಸುಮದಂತೆ ಪರಿಸರ ಮೇಳವಿಸಿಕೊಂಡಿರಬೇಕು.

ಈ ಮಹಾಕಾವ್ಯವನ್ನು ಅಧ್ಯಯನ ಮಾಡಿದಂತೆಲ್ಲ ಇನ್ನೂ ಹಲವು ಲಕ್ಷಣಗಳು ಹೊಳೆದರೆ ಆಶ್ಚರ್ಯವಲ್ಲ.

ಉತ್ತಮ ಗ್ರಂಥವೊಂದರ ಪ್ರಕಟಣೆ ಎಂದರೆ ಸೂರ್ಯೋದಯದಂಥ, ವಿದ್ಯುದಾಗಾರದ ಉದ್ಘಾಟನೆಯಂಥ, ಅಣೆಕಟ್ಟಿನಂಥ ಮಹದ್ಘಟನೆಯೆಂದೇ ಹೇಳಬೇಕು. ಡಾ. ಲಕ್ಕಪ್ಪಗೌಡರ ಈ ಮಹಾಕೃತಿಯೂ ಆ ಸಾಲಿಗೆ ಸೇರಿದ್ದು. ಶ್ರೀರಾಮಾಯಣ ದರ್ಶನದಂಥ ಮೇರುಕೃತಿಗೆ ಇದೊಂದು ಅಮೂಲ್ಯ ಅಪೂರ್ವ ಸಹಾಯಗ್ರಂಥವೆಂದೇ (Companion Volume) ಹೇಳಬಹುದಾಗಿದೆ.

 


[1]    ‘ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸ್ಸಿನ ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ’ ಶ್ರೀ ರಾಮಾಯಣದರ್ಶನಂ ಶ್ರೀ ವೆಂಕಣ್ಣಯ್ಯನವರಿಗೆ, ಸಾಲು ೨೬-೨೭.