ಮಗ್ರ ಮೂಲಭೂತ ಸರ್ವವ್ಯಾಪೀ ವಿಶ್ವವಿಚಾರಧಾರೆ ಕುವೆಂಪು ಸಾಹಿತ್ಯದ ವಿಶಿಷ್ಟ ಲಕ್ಷಣ. ಆಧ್ಯಾತ್ಮಿಕ ಲೌಕಿಕ, ಧಾರ್ಮಿಕ ಸಾಮಾಜಿಕ, ವೈಜ್ಞಾನಿಕ ವೈಚಾರಿಕ, ಸಾಂಸಾರಿಕ, ಸನ್ಯಾಸಿಕ, ರಾಷ್ಟ್ರೀಯ, ಜಾಗತಿಕ, ಶೈಕ್ಷಣಿಕ, ರಾಜಕೀಯ, ಪ್ರೇಮ ನೀತಿ, ನಿಸರ್ಗ ನಾಡು ನುಡಿ, ಪ್ರಾಚೀನ ಅರ್ವಾಚೀನ ಇವೇ ಮೊದಲಾದ ನೂರಾರು, ಸಾವಿರಾರು ವಿಷಯಗಳನ್ನು ಕುವೆಂಪು ಸಾಹಿತ್ಯ ಗರ್ಭೀಕರಿಸಿಕೊಂಡಿದೆ. ಅವುಗಳ ಅಭಿವ್ಯಕ್ತಿಗಾಗಿ ಪುರಾತನ ನೂತನ ಆಂತರಿಕ ಅಂತರರಾಷ್ಟ್ರೀಯ ರೀತಿಮಾರ್ಗ ಛಂದಸ್ಸು ಭಾಷೆಯೇ ಮೊದಲಾದ ಸಾಹಿತ್ಯ ಪರಿಕರ ಸಂಬಾರಗಳನ್ನು ಬಳಸಿಕೊಂಡಿದೆ; ನವೋದಯ, ಪ್ರಗತಿಶೀಲ, ನವ್ಯ,ಬಂಡಾಯ ಎಲ್ಲ ಪಂಥ ಪಾಡುಗಳನ್ನು ರೂಪಿಸಿಕೊಂಡಿದೆ; ಸಕಲ ಸಾಹಿತ್ಯ ಪ್ರಕಾರಗಳನ್ನು ಯಶಸ್ವಿಯಾಗಿ ಬಳಸಿಕೊಂಡಿದೆ. ಈ ದೃಷ್ಟಿಯಿಂದ ಕುವೆಂಪು ಸಾಹಿತ್ಯವನ್ನು ಸಮಗ್ರ ಸಾಹಿತ್ಯವೆಂದೇ ಹೆಸರಿಸಬಹುದಾಗಿದೆ, ಅದರಲ್ಲಿ ಲೌಕಿಕ ಅಲೌಕಿಕಗಳು, ಭೂತ ವರ್ತಮಾನ ಭವಿಷ್ಯಗಳು, ಮರ್ತ್ಯಾಮರ್ತ್ಯಗಳು, ಪಾಶ್ಚಾತ್ಯ ಪೌರ್ವತ್ಯಗಳು, ಉತ್ತರ ದಕ್ಷಿಣಗಳು, ಕ್ರಾಂತಿ ಶಾಂತಿಗಳು ಸಂಗಮಗೊಂಡಿವೆ. ‘ಅಧ್ಯಾತ್ಮವಿದ್ಯಾ ವಿದ್ಯಾನಾಂ’ ಎಂಬ ಶ್ರೀಕೃಷ್ಣನ ಮಾತೇ ಅವರ ಬಾಳಿಗೆ ದೀವಿಗೆ.

ಇಂಥ ಲೋಕಕ್ಷೇಮಕರ ಸಮಗ್ರ ಸಂಕೀರ್ಣ ಸಾಕಲ್ಯ ಸಮೀಚೀನ ಸಾಹಿತ್ಯ ಸಮಸ್ತ ಸಾಮಾನ್ಯ ಜನ ಮನವನ್ನು ತಲುಪಬೇಕಾದರೆ ವಿದ್ವಾಂಸರಿಂದ ಅದರ ನಿರಂತರಾಧ್ಯಯನ, ಸಂಶೋಧನೆ, ವ್ಯಾಖ್ಯಾನ, ವಿಮರ್ಶೆಗಳು ನಡೆಯಬೇಕಾಗಿದೆ. ಆ ದಿಶೆಯಲ್ಲಿ ನಾಂದಿಪೂಜೆ ಈಗಾಗಲೆ ಆರಂಭವಾಗಿದೆ; ಗುದ್ದಲಿಪೂಜೆ ನಡೆದಿದೆ, ಹೊನ್ನಾರು ಹೂಡಲಾಗಿದೆ. ಈ ತನಕ ಕೇವಲ ಕೆಲವು ಮುಖಗಳನ್ನು ಕುರಿತಂತೆ ಒಂದು ರೀತಿಯ ಮೇಲ್ಮೆಯ್ಯ ಸ್ಥೂಲ ಅಧ್ಯಯನ ನಡೆದಿದೆಯೇ ಹೊರತು, ಸೂಕ್ಷ್ಮಾತಿಸೂಕ್ಷ್ಮವೂ ಸರ್ವಸಮರ್ಪಕವೂ ಗಾಢವೂ ಗಹನವೂ ಆದ ಅಧ್ಯಯನ ಸಾಕಷ್ಟು ನಡೆದಿಲ್ಲ. ಲೌಕಿಕ ಸಾಹಿತ್ಯವಾಗಲಿ, ಅಲೌಕಿಕ ಸಾಹಿತ್ಯವಾಗಲಿ, ದರ್ಶನದ ಮಿಂಚು ಒಂದಲ್ಲ ಒಂದು ಪ್ರಮಾಣದಲ್ಲಿ ಕುವೆಂಪು ಸಾಹಿತ್ಯ ದಲ್ಲೆಲ್ಲ ಹರಿದಿದೆ. ಇಲ್ಲಿ ಹಾಸುಹೊಕ್ಕಾಗಿ ಹರಿದಿರುವ ದಾರ್ಶನಿಕ ವಿಚಾರಗಳೇ ನಾಲ್ಕಾರು ಮಹಾನಿಬಂಧಗಳಿಗೆ ಗ್ರಾಸವಾಗುವಷ್ಟಿವೆ. ಅಂಥ ನಿಬಂಧಗಳಿಗೆ ಡಾ. ಎ.ಎಸ್. ವೇಣು ಗೋಪಾಲರಾಯರ ಪ್ರಕೃತ ಗ್ರಂಥ ‘ಶ್ರೀ ಕುವೆಂಪು ಅವರ ದಾರ್ಶನಿಕ ವಿಚಾರಗಳು’ ಮಾರ್ಗದರ್ಶಿಯಾಗಿದೆ. ಆದರ್ಶಪ್ರಾಯವಾಗಿದೆ.

ಕುವೆಂಪು ಅವರಿಗೆ ಪ್ರಕೃತಿಯೇ ಪ್ರಥಮಗುರು. ಭೂಮಿಗವತರಿಸುತ್ತಿದ್ದಂತೆಯೇ ಅವರಿಗೆ ಪ್ರಕೃತಿ ಕಾಮಧೇನುವಿನ ದುಗ್ಧಾಭಿಷೇಕವಾಗುತ್ತದೆ; ಬೆಳೆಬೆಳೆಯುತ್ತಿದ್ದಂತೆ ಅವರ ಆತ್ಮ ಶಿವಸತ್ಯರೂಪಿಯಾದ ನಿಸರ್ಗಸೌಂದರ್ಯದ ಸ್ನಾನಪಾನಗಳಿಂದ ಉದ್ದೀಪ್ತವಾಗುತ್ತದೆ. ರಾಮಾಯಣ ಮಹಾಭಾರತಗಳ ಪಠನ ಅವರ ಕಿವಿಯ ಮೇಲೆ ಬಿದ್ದಿರಬಹುದಾದರೂ ಹತ್ತು ಹನ್ನೆರಡು ವರ್ಷದ ಬಾಲಕ ಬಾಳೆಹಣ್ಣಿನ ಸಿಪ್ಪೆಯ ನೆಪದಲ್ಲಿ ಭಗವದಿಚ್ಚೆಯ ಮೇಲೆ ಸವಾಲೆಸೆದು ಶರಣಾಗತನಾದದ್ದು ಅದ್ಭುತ ಸಂಗತಿಯೇ ಸರಿ. ಬೈಬಲ್ಲಿನ ವ್ಯಾಸಂಗ ಅವರ ಎಳೆಮನಸ್ಸಿನ ಮೇಲೆ ಅಚ್ಚೊತ್ತಿದ್ದರೂ, ಸ್ವಾಮಿ ವಿವೇಕಾನಂದರ ಕೃತಿಕಾಶಿ ಗಂಗಾವಾರಿಯಲ್ಲಿ ಸಂಸ್ನಾತರಾಗಿ, ಪ್ರೌಢಾವಸ್ಥೆಯನ್ನು ತಲುಪುತ್ತಿದ್ದಂತೆಯೇ ವೇದೋಪನಿಷತ್ತುಗಳ ವೇದಾಂತ ದರ್ಶನ ಅವರ ಬದುಕಿನ, ಅವರ ವ್ಯಕ್ತಿತ್ವದ, ಅವರ ಎಲ್ಲ ಸಾಧನೆಯ ಅವಿಭಾಜ್ಯ ಅಂಗವಾಗುತ್ತದೆ. ಅದನ್ನು ಅವರ ನಡೆನುಡಿಗಳಲ್ಲಿ ಕೃತಿಗಳಲ್ಲಿ ಹೆಜ್ಜೆ ಹೆಜ್ಜೆಗೂ ಗುರುತಿಸಬಹುದು.

ಕುವೆಂಪು ಕಾವ್ಯಕ್ಷೇತ್ರವನ್ನು ಪ್ರವೇಶಿಸಿದ್ದು ಇಂಗ್ಲಿಷಿನ ಹೆಬ್ಬಾಗಿಲ ಮೂಲಕವೆಂಬುದು ಸರ್ವವೇದ್ಯ ಸಂಗತಿ. ಇಪ್ಪತ್ತು ವಷದ ತರುಣ ಕವಿ ಆ ಭಾಷೆಯಲ್ಲಿ ರಚಿಸಿದ ‘Lines’ ಎಂಬ ಕವಿತೆಯಲ್ಲಿಯೇ ಅದ್ವೈತಪರ ದರ್ಶನವನ್ನು ಅಭಿವ್ಯಕ್ತಗೊಳಿಸಿದ್ದಾರೆಂಬುದು ಗಮನಿಸ ಬೇಕಾದ ಅಂಶ.

While I stand beneath these mango trees
Where flowers blossoming fresh and green
Kiss infinite at my heart,
I feel I am not a part
Of glory absolute, but whole !
That my soul is all being’s soul!

[1]

೧೮-೨೦ ವರ್ಷಗಳ ಬಾಲ್ಯದಲ್ಲಿಯೇ ರಚಿಸಿದ ಹಲವು ಕವಿತೆಗಳಲ್ಲಿ ಕವಿಯ ದರ್ಶನ ಸಮೃದ್ಧವಾದ ಮನೋಧರ್ಮವನ್ನು ಗುರುತಿಸಬಹುದು. ಜೀವನ ಸಂಸ್ಕಾರಕ್ಕೆ ಸಾವು ಅತ್ಯಗತ್ಯವೆಂಬ ಶಾಶ್ವತ ತತ್ತ್ವ ಇಲ್ಲಿ ಅಡಕಗೊಂಡಿದೆ.

All things begin where they shall end,
Destruction only helps to mend
And why not I
When I shall die
Be born again
To swim the main[2]

ಗುಬ್ಬಚ್ಚಿಯ ಅಂತರಂಗದಲ್ಲಿ ವಾಸಿಸುವ ಆತ್ಮನೇ ತಮ್ಮೊಳಗೂ ಇದ್ದಾನೆಂದವರು Sparrow ಎಂಬ ಕವಿತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆಗಿನ್ನೂ ಅವರು ಹದಿನೆಂಟು ವಯಸ್ಸಿನವರೆಂಬುದನ್ನು ಮರೆಯಬಾರದು.

Happy and gay
To sign thy lays
Art thou not He
Who dwells in me?[3]

ತತ್‌ತ್ವಮಸಿ ಸಿದ್ಧಾಂತದ ಛಾಯೆಯನ್ನಿಲ್ಲಿ ಈ ಗ್ರಂಥಕರ್ತರು ಸರಿಯಾಗಿಯೆ ಗುರುತಿಸಿದ್ದಾರೆ. ‘To A Bul bul’ ಎಂಬ ಪಕ್ಷಿಯನ್ನು ಕುರಿತು ‘Om is thy voice’[4] ಎಂದವರು ಧ್ವನಿಸುತ್ತಾರೆ. ಬೀಸುವ ಗಾಳಿಯಲ್ಲಿ ಜುಳು ಜುಳು ಹರಿಯುವ ನದಿಯಲ್ಲಿ ದುಂಬಿಗಳ ಝೇಂಕಾರದಲ್ಲವರು ಓಂಕಾರನಾದವನ್ನೇ ಅನುಭವಿಸುತ್ತಾರೆ.

ಗ್ರಂಥರೂಪದ ಸಾರಸ್ವತ ಶಕ್ತಿಯೇ ಕುವೆಂಪು ಅವರ ಎರಡನೆಯ ಗುರು. ಸ್ವಾಮಿ ವಿವೇಕಾನಂದ ಕೃತಿ ವಾಙ್ಮಯಕ್ಕೆ ಅವರ ಇಡೀ ವ್ಯಕ್ತಿತ್ವವೇ ಋಣಿಯಾಗಿದೆ. ಕುವೆಂಪು ಅವರ ದಾರ್ಶನಿಕ ಚೈತನ್ಯವನ್ನೆಚ್ಚರಿಸಿ ಅವರಿಗೆ ವೇದಾಂತದೀಕ್ಷೆಯನ್ನು ನೀಡಿದ್ದೇ ಆ ವಿವೇಕಾನಂದ ಶಕ್ತಿ. ಆ ಸಣ್ಣ ವಯಸ್ಸಿನಲ್ಲಿಯೇ ಅವರು ಜಗತ್ತಿನ ಒಂದೊಂದು ವಸ್ತುವನ್ನೂ, ಘಟನೆಯನ್ನೂ ಬ್ರಾಹ್ಮೀದೃಷ್ಟಿಯಿಂದಲೇ ವೀಕ್ಷಿಸುವ ಸಾಮರ್ಥ್ಯವನ್ನು ಪಡೆಯುತ್ತಾರೆ. ಅವರ ದೃಷ್ಟಿಯಲ್ಲಿ, ಚಿಂತನೆಯಲ್ಲಿ, ಅವರ ಸಕಲ ವ್ಯವಹಾರಗಳಲ್ಲಿ ದಾರ್ಶನಿಕ ಧಾತುವೆ ಪ್ರಧಾನವಾಗುತ್ತದೆ. ಬೈಬಲ್ಲು, ಪಾಶ್ಚಾತ್ಯ ತತ್ತ್ವಶಾಸ್ತ್ರ ಭಾರತೀಯ ದರ್ಶನ ಪರಂಪರೆಗಳನ್ನು ಅಧ್ಯಯನ ಮಾಡಿದನಂತರ ವೇದಾಂತವೇ ಸರ್ವಶ್ರೇಷ್ಠ ದಾರ್ಶನಿಕ ನಿಧಿಯೆಂದು, ಅದ್ವೈತ ದರ್ಶನವೆ ಪರಮ ಪರಮಾರ್ಥವೆಂದು ಅವರಿಗೆ ಮನದಟ್ಟಾಗುತ್ತದೆ. ಶ್ರೀರಾಮಕೃಷ್ಣ ಪರಮಹಂಸ, ಶ್ರೀ ಅರವಿಂದ, ಶ್ರೀರಮಣ ಮಹರ್ಷಿಗಳ ಸಂದೇಶ ಮಕರಂದಪಾನದಿಂದ ಅವರ ದಾರ್ಶನಿಕ ದೃಷ್ಟಿಗೆ ಪುಷ್ಟಿ ದೊರೆಯುತ್ತದೆ. ಚೈತನ್ಯದೇವನ ಚರಿತ್ರೆಯನ್ನೋದಿದ ಮೇಲಂತು ಕೃಷ್ಣಭಾವ ಅವರ ಮನಹೃದಯ ದೇಹ ಸಮಸ್ತವನ್ನು ಆವರಿಸಿಕೊಳ್ಳುತ್ತದೆ. ಶ್ರೀರಾಮಕೃಷ್ಣೋಪದೇಶಕ್ಕೆ ತಮ್ಮನ್ನೊಪ್ಪಿಸಿಕೊಂಡನಂತರ ಕಾಳಿಕಾಶಕ್ತಿ ಅವರ ಬದುಕನ್ನೆಲ್ಲ ಆಕ್ರಮಿಸಿಕೊಳ್ಳುತ್ತದೆ.

ಅವರ ಆಧ್ಯಾತ್ಮ ಸಾಧನೆಯಲ್ಲಿ ಮಹಾಪುರುಷ ಸಂಶ್ರಯ ಮೂರನೆಯ ಮಜಲಾಗುತ್ತದೆ. ಸ್ವಾಮಿ ಸಿದ್ದೇಶ್ವರಾನಂದ, ಸ್ವಾಮಿ ಶರ್ವಾನಂದ ಮತ್ತು ದೀಕ್ಷಾಗುರು ಸ್ವಾಮಿ ಶಿವಾನಂದರ ಸಂಪರ್ಕ ಸಹವಾಸ ಅವರ ಪಾಲಿಗೆ ಬ್ರಾಹ್ಮೀ ಘಟನೆಯಾಗುತ್ತವೆ. ಕ್ಲೇಶರೂಪದಲ್ಲಿ ಭಾಗವತಶಕ್ತಿ ಅವರ ಜೀವನವನ್ನು ಪ್ರವೇಶಿಸಿತೆಂಬುದಕ್ಕೆ ಅವರ ಕಾಯಿಲೆಗಳೆ ನಿದರ್ಶನ ವಾಗಿವೆ. ಅವರ ಅಧ್ಯಾತ್ಮಸಾಧನೆಯ ಪರಿಪಕ್ವತೆಗೆ ಶ್ರೀರಾಮ ಕೃಷ್ಣಾಶ್ರಮವಾಸ ಪೂರಕ ವಾಗುತ್ತದೆ. ಸಾಧನಾಪೂರ್ವದಲ್ಲವರು ಅನಿವಾರ್ಯವಾಗಿ, ಸಹಜವಾಗಿ ಸಂದೇಹ ಮಾರ್ಗವನ್ನು ಹಿಡಿದಿದ್ದರೆಂಬುದನ್ನು ಮರೆಯುವಂತಿಲ್ಲ. “ಸಂದೇಹ” ಎಂಬ ಅವರ ಸುದೀರ್ಘ ಕವನ[5] ಪ್ರಶ್ನಾವಳಿಯಿಂದ ಇಡಿಕಿರಿದಿದೆ. ಆದರವರು ಬಹುಬೇಗ ನಾಸ್ತಿಕ್ಯ ಸಂದೇಹಗಳಿಂದ ಪಾರಾಗು ತ್ತಾರೆ. ಶ್ರೀರಾಮಕೃಷ್ಣರ ಸಮನ್ವಯ ದೃಷ್ಟಿ, ಅರವಿಂದರ ಪೂರ್ಣದೃಷ್ಟಿ, ಗಾಂಧೀಜಿಯ ಸರ್ವೋದಯ ಸಿದ್ಧಾಂತಗಳಿಗೆ ಅವರು ಮಾರುಹೋಗುತ್ತಾರೆ.

ಒಬ್ಬ ಸಂತ ಸಾಧಕನ ಸಾಧನಾ ಜೀವನದಲ್ಲಿ ಕಾಣುವ ಸಂದೇಹ, ಕಳವಳ, ದುಃಖ, ಮೊರೆ, ಕ್ಲೇಶ, ಆರ್ತತೆ, ವಿಷಾದ, ರೋಷ, ಪ್ರತಿಜ್ಞೆ, ಮೌನ, ಬೆರಗು, ಪ್ರಾರ್ಥನೆ, ಪೂಜೆ ಇವೇ ಮೊದಲಾದ ಹಲವು ಅವಸ್ಥಾಗ್ನಿಗಳಲ್ಲಿ ಬೆಂದು ಅವರ ಆತ್ಮ ಪರಿಶುದ್ಧವಾಗುತ್ತದೆ. ದರ್ಶನ ಪಾರಮ್ಯವನ್ನು ಮುಟ್ಟುತ್ತದೆ.

ಸೋತು ಬಂದೆನೊ, ಗುರುವೆ, ನಿನ್ನ ಬಳಿಗೆ
ಸೋತ ಜೀವವನಾತುಕೋ ಒಂದು ಗಳಿಗೆ[6]
ನಿನ್ನಡಿದಾವರೆಯಲಿ ಹೂ ಕಡಿಯುವ
ಮರಿದುಂಬಿಯು ನಾನು[7]
ಮುಕ್ತಿಯನ್ನಪ್ಪಲೋ? ಮಾಯೆಯನ್ನಪ್ಪಲೋ?
ತಿಳಿದ ನೀನೆನ್ನನಟ್ಟು[8]
ವಿವಿಧ ಪಯೋಜದಿ ವ್ಯರ್ಥಾಯಾಸದಿ
ತೊಳಲಿದೆ ತೃಪ್ತಿಯ ಚಿರನಿಧಿಗೆ[9]
ಕವಲೊಡೆದ ಹಾದಿಗಳು;
ಕವಿದಿಹುದು ಕತ್ತಲೆಯು;
ಕಿವಿಗೊಟ್ಟು ಕೇಳಿದರೆ
ಕರೆವದನಿಯಿಲ್ಲ,
ಕಣ್ಣಿಟ್ಟು ನೋಡಿದರೆ
ಹೊಳೆವ ಸೊಡರಿಲ್ಲ[10]
ಚೋರರು ಹೃದಯದೊಳಡಗಿಹರು
ಮನವೇ, ಬಲು ಜೋಕೆ[11]
ಸಗ್ಗದ ಬಾಗಿಲು ಎಲ್ಲಿಹುದಣ್ಣಾ?
ನುಗ್ಗಿದೆನೆಲ್ಲಿಯು ಸಿಗಲಿಲ್ಲಣ್ಣಾ![12]

ಕಾವ್ಯಕೃಷಿಯ ಪ್ರಾರಂಭದಲ್ಲಿಯೇ ಇಂಥ ಹಲವು ಕವನಗಳನ್ನು ವಾಚಕರು ಎದುರುಗೊಳ್ಳುತ್ತಾರೆ.

ಕುವೆಂಪು ಅವರ ಪ್ರಪ್ರಥಮ ಅಧ್ಯಾತ್ಮಗುರು ನಿಸರ್ಗವೆಂದು ಈ ಮೊದಲೇ ಸೂಚಿಸ ಲಾಗಿದೆ. ಅವರೆಂತು ನಿಸರ್ಗದ ಒಂದು ಅವಿಭಾಜ್ಯ ಭಾಗವೊ, ಅಂತೆಯೇ ನಿಸರ್ಗ ಸಹಅವರ ಜೀವನದ ಅವಿಭಾಜ್ಯ ಭಾಗವಾಗುತ್ತದೆ. ಭಗವಂತ ಸರ್ವವ್ಯಾಪಿ ಎಂಬ ತತ್ತ್ವವನ್ನವರು ಮೊದಲು ನಿಸರ್ಗದಿಂದಲೆ ಕಲಿಯುತ್ತಾರೆ

ಅಂದು ನೀ ವನಗಳಲಿ ನುಡಿದ ಪಿಸುಮಾತು
ಇಂದಿಗೂ ಮೊರೆಯುತಿದೆ ಕರ್ಣಗಳಲಿ
ಅಂದು ನೀನಡವಿಗಳಲಿತ್ತ ದರ್ಶನವೆ
ಇಂದಿಗೂ ತುಂಬಿಹುದು ನಯನಗಳನು[13]

ಮಾತೃಗರ್ಭದಲ್ಲಿದ್ದಾಗಲೇ ಅವರ ಕಿವಿಗೆ ಸೃಷ್ಟಿಯ ಬೃಹದ್ಗಾನ ಕೇಳಿಸುತ್ತಿದ್ದಿರಬೇಕು; ನಿಸರ್ಗದ ನಡುವೆ ಬೆಳೆಯುತ್ತಿದ್ದಂತೆ ಭಾಗವತ ಸೌಂದರ್ಯವೇ ಕಣ್ಮುಂದಿನ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದಂತೆ ಅವರ ಮನಕ್ಕೆ ಅರಿವಾಗಿರಬೇಕು. ಬತ್ತದ ಗದ್ದೆಯ ತೆಮರಿನ ಮೇಲೆ ಹೋಗುತ್ತಿದ್ದಾಗ ಕರ್ಮುಗಿಲ ನಭದಲ್ಲಿ ರೇಖೆಯಂತೆ ತೇಲಿ ಬಂದ ಬೆಳ್ಳನೆಯ ಬಲಾಕಪಂಕ್ತಿ ಯನ್ನು ಕಂಡಾಗ ಶ್ರೀರಾಮಕೃಷ್ಣರಿಗೆ ಏನನುಭವವಾಯಿತೋ ಅದೇ ಅನುಭವ ಬಾಲ್ಯದಲ್ಲಿ ಕುವೆಂಪು ಅವರಿಗೂ ಆಗಿರಬೇಕೆಂಬುದಕ್ಕೆ, ಅನೇಕ ನಿಸರ್ಗ ಕವಿತೆಗಳು ಸಾಕ್ಷಿ ನುಡಿಯುತ್ತವೆ. ‘ದೇವರು ರುಜುಮಾಡಿದನು’, ‘ಪಕ್ಷಿಕಾಶಿ’, ‘ಬಾ, ಫಾಲ್ಗುಣರವಿದರ್ಶನಕೆ’, ‘ಹಸುರು’, ‘ಇಬ್ಬನಿಯವತಾರ’, ‘ಪುಷ್ಪಭಗವಾನ್’, ‘ಪಕ್ಷಿ;, ‘ಅಧಿದೇವತಾ ಆವಿರ್ಭೂತಿ’, ‘ಪುಷ್ಪ ಭಗವಾನ್’, ಇಂಥ ನೂರಾರು ಕವನಗಳಲ್ಲಿ ಕುವೆಂಪು ಅವರ ಆಧ್ಯಾತ್ಮ ಜೀವನದ ಹಾಗೂ ನಿಸರ್ಗಶಕ್ತಿಯ ನಡುವಣ ಅವಿನಾಭಾವಸಂಬಂಧ ಅಭಿವ್ಯಕ್ತವಾಗುತ್ತದೆ.

ಕುವೆಂಪು ಅವರ ದೃಷ್ಟಿಯಲ್ಲಿ ‘ಸೂರ್ಯೋದಯ ಚಂದ್ರೋದಯ ದೇವರ ದಯೆ’, ‘ಚೇತನ ಮೂರ್ತಿಯು ಆ ಕಲ್ಲು’ ತೆಗೆ! ‘ಜಡವೆಂಬುದು ಬರಿಸುಳ್ಳು!’;[14] ‘ರಸಾನುಭೂತಿಯ ರಸಪಥವಲ್ಲದೆ ಸತ್ಯಕೆ ಗತಿಯಿಲ್ಲ’[15], ‘ರಸತೀರ್ಥದಲಿ ಮಿಂದವಗೆ ಭವದ ಭಯವೇಕೆ?’[16]:  ‘ದರ್ಶನವೊಂದಿರೆ ಸಗ್ಗಕೆ ಬಟ್ಟೆ ಹೂವಿನ ತುಟಿಯನು ಚುಂಬಿಪ ಚಿಟ್ಟೆ!’[17]. ‘ಸುಂದರ ಮಹೇಶ್ವರನ ರಸಮಯ ಶರೀರವಿದು’ ಇಂಥ ಅಸಂಖ್ಯ ಸೂಕ್ತಿಗಳು ಅವರ ದಾರ್ಶನಿಕ ಮಹತ್ವಕ್ಕೆತ್ತಿದ ಆರತಿಯ ಹಣತೆಗಳಾಗಿವೆ. ಗಿರಿವನಪ್ರಿಯನಾದ್ದರಿಂದಲೇ ರಾಮ ಅವರ ದೃಷ್ಟಿಯಲ್ಲಿ ಆರಾಧ್ಯದೇವತೆ.

ಮಣಿಯುವೆನು ರಾಮನಡಿದಾವರೆಗೆ,
ದಶಶಿರನ ವಧೆಗಾಗಿಯಲ್ತು : ಮಂದಾಕಿನಿಯ
ತಿಳಿವೊನಲ ಮೀಯುತಿರಲೊರ್‌ದಿನಂ ತಾಂ ಕಂಡ
ದೃಶ್ಯಸೌಂದರ್ಯದಿಂದಾತ್ಮದರ್ಶನ ಕೇರ್ದ
ರಸ ಸಮಾಧಿಯ ಮಹಿಮೆಗಾಗಿ[18]

ಮಂದಾಕಿನಿಯಲ್ಲಿ ಮೀಯುವ ಶ್ರೀರಾಮನ ಅನುಭವ ಸಮಸ್ತವೂ ಕವಿಯ ಸ್ವಾನುಭವ, ಹಾಗೂ ದಾರ್ಶನಿಕಾನುಭಾವವಾಗಿವೆಯೆಂದರೆ ಆಶ್ಚರ್ಯವಾಗದು.[19]

ಕವಿಯ ದಿವ್ಯಾನುಭವವೇ ಸಕಾರವೆತ್ತಂತಿರುವ ‘ವರ್ಧನ್ತಿ’ ಕವಿತೆಯ ಪಂಕ್ತಿಗಳಲ್ಲಿ ಕವಿಚೇತನ ನಿಸರ್ಗ ಚೇತನಗಳೆರಡರ ನಡುವಣ ಅಭೇದ ಸ್ಪಷ್ಟವಾಗಿ ಮೈದೋರಿದೆ.

ಓಃ! ಆ ಚೇತನಕೀ ಸಹ್ಯಾದ್ರಿಯ ಲಿಂಗಶರೀರ!
ಮುಂದವನಿಂದಾಗುವ ಕಬ್ಬಕೆ ಇಂದೀ
ಕಾಡೇ
ಹಾಡುತ್ತಿದೆ ನಾಂದಿ!
ಶಕ್ತಿಯ ವಿಕಸನಕಾವಶ್ಯಕವೀ ಸಂಸ್ಕಾರ
ಹುಲಿಯಾರ್ಭಟೆ, ಹಕ್ಕಿಯ ಇಂಚರ, ಮೋಡದ ಸಂಚಾರ,
ದುಮುದುಮುಕುವ ಹೊಳೆ ನೀರಾಟ,
ಹಸುರಿನ ಹೂವಿನ ಹಣ್ಣಿನ ರಸದೂಟ!…

ಕುವೆಂಪು ನಿಸರ್ಗದ ಶಿಶು; ದರ್ಶನವೆ ಅವರ ಮತ; ಕಾವ್ಯವೆ ಅವರ ಪಥ; ಲೋಕಹಿತ ರಕ್ಷಣೆಯೆ ಅವರ ವ್ರತ; ಭಗವತ್ಸಾಕ್ಷಾತ್ಕಾರವೇ ಅವರ ಎಲ್ಲ ಸಾಧನೆಯ ಗುರಿಯೆಂಬುದು ಅವರ ಪ್ರತಿಯೊಂದು ವ್ಯವಹಾರದಲ್ಲಿಯೂ ಮುಕ್ಕುಳಿಸುತ್ತವೆ.

ಇದೇ ಭಗವದನುಭವ ಅಥವಾ ದಾರ್ಶನಿಕ ಸತ್ಯಾಭಿವ್ಯಕ್ತಿ ಪ್ರೇಮೋಪನಿಷತ್ತುಗಳಂತಿರುವ ಅವರ ಪ್ರೇಮಗೀತೆಗಳಲ್ಲಿಯೂ ಮೈದೋರಿದೆ. ಅವರ ಪಾಲಿಗೆ ಹೆಣ್ಣೆಂದರೆ ಕೀಳು ಪ್ರಾಣಿಯೂ ಅಲ್ಲ, ಭೋಗವಸ್ತುವೂ ಅಲ್ಲ, ತಮ್ಮ ಸತಿ ಶಕ್ತಿಯಂಶವೆಂಬುದೇ ಅವರ ಪ್ರಾಮಾಣಿಕ ವಿಶ್ವಾಸ.

ತಾಯ ಚರಣಕಿರಣವೊಂದು
ಕೃಪೆಯೊಳೆನ್ನ ಪೊರೆಯಲೆಂದು
ನಿನ್ನ ರೂಪದಿಂದ ಬಂದು
ಸಲಹುತಿರುವುದೆನ್ನನಿಂದು[20]

ತೋರ್ಕೆಗಾಗಿ ಜನಮನವನ್ನು ಮೆಚ್ಚಿಸುವ ಸಲುವಾಗಿ ಈ ಪಂಕ್ತಿಗಳನ್ನು ಹೊಸೆದದ್ದಲ್ಲ; ಸತಿಯ ಸಹವಾಸದಿಂದ ಅವರ ಹೃತ್ಕಮಲದಲ್ಲಿ ಸ್ರವಿಸಿದ ಮಕರಂದದ ಅಮೃತಬಿಂದು ಧಾರೆಯಿವು. ಶಿವ ತನ್ನ ಸತಿಯನನಾಲಂಗಿಸಿ ಚುಂಬಿಸುತ್ತ

‘ನಾ ಕುವೆಂಪು? ನೀನೆ ಹೇಮಿ’

ಎಂದು ಹೇಳುತ್ತಾನೆಂದು. ಜಗನ್ಮಾತೆಯೆ ಸತೀರೂಪದಲ್ಲಿ ಬಂದು ತಮ್ಮನ್ನು ಕ್ಷಣ ಕ್ಷಣವೂ ಉದ್ಧರಿಸುತ್ತಿದ್ದಾಳೆಂಬ ನಂಬುಗೆ ಅವರದು.

ಜಗವನಾಳುವ ತಾಯೆ ನನ್ನನಾಳುವ ಮಾಯೆ
ತಾನಾಗಿ ಬಂದಿಹಳು ನನ್ನ ಜಾಯೆ!
ಭೂಮೆ ತಾನಾಗಿಯೂ ಅಲ್ಪೆ ತಾನೆನುವೋಲು
ಒಲಿದಪ್ಪಿ ಮಲಗಿಹಳು ಈ ಕೃಪಾಲು[21]

ಈ ಕವಿ ಭಾಷೆಯಲ್ಲಿ ಆಡಂಬರವೂ ಇಲ್ಲ, ಅಲಂಕಾರವೂ ಇಲ್ಲ, ಅವರ ವಾಸ್ತವಾನುಭವ ಇಲ್ಲಿ ಹೆಪ್ಪುಗಟ್ಟಿದೆ. ತಮ್ಮ ಸತಿಯಲ್ಲಿ ಮಾತ್ರವಲ್ಲ, ಅವರ ಅಂಗಾಂಗಗಳಲ್ಲಿ ಜಗನ್ಮಾತೆಯ ಪೂರ್ಣಾಂಶವನ್ನೇ ಗುರುತಿಸುತ್ತಾರೆ. ಅವರ ಪಾಲಿಗೆ ಸತಿಪತಿಗಳ ಸಂಯೋಗ ಶೃಂಗಾರಯೋಗ ವಾಗಿದೆ, ನಿಧುವನ ಯೋಗವಾಗಿದೆ, ಅದ್ವೈತಯೋಗವಾಗಿದೆ, ಲಿಂಗಾಂಗಸಾಮರಸ್ಯ ಯೋಗವಾಗಿದೆ.

‘ಜನ್ಮ ಜನ್ಮದಲಿ ಕೃಪೆದೋರಿ ಬೆಂಬಿಡದ ನಾವೆಯಾಗಿ’ ಆ ಸತೀರೂಪದ ಜಗನ್ಮಾತೆ ಅವರನ್ನು ಹಿಂಬಾಲಿಸುತ್ತಿದ್ದಾಳೆ, ಅವರನ್ನುದ್ಧರಿಸುವ ಸಲುವಾಗಿ. ಅವಳು ನಿರಾಕಾರೆಯಾದರೂ ಇಲ್ಲಿ ಸಾಕಾರೆಯಾಗಿದ್ದಾಳೆ.

ಇಷ್ಟಮಂತ್ರದ ಜಪದ
ನಿಧುವನ ಪ್ರಲಯದಲಿ,
ದಿಗಂಬರಾ ಬುದ್ದಿಯಲಿ
ನಿರ್ವಾಣ ಸಿದ್ದಿಯಲಿ
ದ್ವೈತತಾನದ್ವೈತಿಲಯ ಸಮಾಧಿಯಲಿ![22]

ಸೃಷ್ಟಿಪೂರ್ವಕಾಲದಿಂದ ಈ ತನಕ ಜಗತ್ತಿನಲ್ಲಿ ವಿಕಾಸಗೊಂಡಿರುವ ಹೆಣ್ಣು ಗಂಡುಗಳ ಸಂಬಂಧದ ಇತಿಹಾಸದ ಹಿನ್ನೆಲೆಯಲ್ಲಿ ಕುವೆಂಪು ಕಂಡಿರುವ ಈ ದಾರ್ಶನಿಕ ಸತ್ಯವನ್ನು ಪರಿಶೀಲಿಸಬಹುದಾಗಿದೆ. ಜಗತ್ತಿನ ಮಾತಾಪಿತರ ಲೋಕಕಲ್ಯಾಣಕರ ಪವಿತ್ರತಮ ಸಂಲಗ್ನ ದಂತೆ ಇಲ್ಲಿಯ ದಾಂಪತ್ಯಯೋಗ ಪರಾಕಾಷ್ಠೆಯನ್ನು ಮುಟ್ಟಿದೆ ಎಂದೇ ಹೇಳಬಹುದು. ಶ್ರೀರಾಮಕೃಷ್ಣ ಪರಮಹಂಸ ಶಾರದಾಮಣಿ ದೇವಿಯವರ ದಾಂಪತ್ಯ ಯೋಗ ಕುವೆಂಪು ಅವರ ಮೇಲೆ ಅಪಾರ ಪ್ರಭಾವ ಬೀರಿರುವುದಾದರೂ, ಕುವೆಂಪು ಹೇಮಾವತಿಯವರ ದಾಂಪತ್ಯಯೋಗದ ಸ್ವರೂಪ ಲಕ್ಷಣಗಳೇ ವಿಭಿನ್ನ ವಿಶಿಷ್ಟವೆಂಬುದು ಸುಸ್ಪಷ್ಟ. ಇಲ್ಲಿ ಈ ದಾಂಪತ್ಯಯೋಗ ಹಾಗೂ ಅದರ ದಾರ್ಶನಿಕ ಸತ್ಯ ಅದೇ ಅಂತಿಮ ಎನ್ನುವಂಥ ಉಚ್ಚತಮ ಸಿದ್ದಿಯನ್ನು ಪಡೆದಿದೆ ಎಂದೇ ಹೇಳಬಹುದಾಗಿದೆ.

ಏನು ಆನಂದವನು ತುಂಬಿಟ್ಟುಕೊಂಡಿರುವೆ
ನಿನ್ನೆದೆಯ ಹೊಂಬೆಳ್ಳಿಗಿಂಡಿಯಲ್ಲಿ?
ಕೈಲಾಸ ವೈಕುಂಠಗಳೆ ಕರಗಿ ಹರಿದುವೈ
ಕ್ಷೀರಾಬ್ಧಿಯಂತೆ ಮೈಕಂಡಿ ಕಂಡಿಯಲಿ,
ನನ್ನ ಕೈ ಸೋಂಕಿನಲ್ಲಿ![23]

ಜಗತ್ತಿನ ಅಂದಿಂದಿನ ಪ್ರೇಮಸಾಹಿತ್ಯದಲ್ಲಿ ಅಲೌಕಿಕ ನಿತ್ಯಸತ್ಯವನ್ನು ಪ್ರತಿಬಿಂಬಿಸುವ ಗೀತೆಗಳೆ ಅಪರೂಪ. ಸತಿಯ ಅಂಗಾಂಗಗಳೆಲ್ಲವೂ ಅವರ ತಪೋರಂಗವಾಗಿವೆ (ಮಂಚ ಯೋಗಿ). ಅದ್ವೈತದರ್ಶನದ ನಿಧಿ ಈ ಪ್ರೇಮಗೀತಾವಾರಿಧಿ. ಉಪನಿಷತ್ಕಾಲದ ಋಷಿವ ರೇಣ್ಯರಿಗೂ ಲಭ್ಯವಾಗದ ಪ್ರೇಮಮೂಲದ ದಾರ್ಶನಿಕ ಸತ್ಯ ಕುವೆಂಪು ಅವರಿಗೆ ಲಭ್ಯವಾಗಿರುವುದೊಂದು ಕನ್ನಡದ ಪುಣ್ಯ.

ತಾಯಿ ಕಾಯಿಲೆ ಮಲಗಿದ್ದಾಗ ಅವರೊಮ್ಮೆ ‘ನೀನು ಅಂದರೆ ಬರಿಯ ಈ ನಿನ್ನ ದೇಹವೇನು? ನೀನು ಸತ್ತರೂ ನಿನ್ನ ಆತ್ಮ ಅಮರವಾಗಿರುತ್ತದೆ’ ಎಂದು ಹೇಳಿದ್ದುಂಟು.[24] ತಾಯಿ ಸತ್ತಾಗ ಅವರು ಮೈಸೂರಿನಲ್ಲಿ ಇಸ್ಪೀಟಾಟದಲ್ಲಿ ತೊಡಗಿದ್ದರು. ಟೆಲಿಗ್ರಾಂ ಅನ್ನು ಜೇಬಿ ನಲ್ಲಿಟ್ಟು ಕೊಂಡರು. ‘ಆ ಬ್ರಹ್ಮಮಯಾ ಮಾತೆ ದೇಹತ್ಯಾಗ ಮಾಡಿದ್ದರು! ಶೋಕಾಘಾತ ದಿಂದ ಚೇತನ ತತ್ತರಿಸಿತು, ಒಂದು ಕ್ಷಣ! ಒಡನೆಯ ನನ್ನ ಅದ್ವೈತ ಬುದ್ದಿಯ ಅನೆಸ್ತಿಶಿಯಾ ಕೆಲಸ ಮಾಡಿತು. ಏನು ಎಂತು ಎಂದು ಪ್ರಶ್ನಿಸಿದ ಮಿತ್ರರಿಗೆ ಏನೂ ವಿಶೇಷದ್ದಲ್ಲ ಎಂಬಂತೆ ಉತ್ತರಿಸಿ, ಮತ್ತೆ ಆಟದಲ್ಲಿ ತೊಡಗಿದೆ… ಅವರ ದೇಹ ಭಸ್ಮೀಭೂತವಾಗಿದ್ದರೂ ಅವರಾತ್ಮ ಅಮೃತವಾಗಿ ನನ್ನ ತಂದೆಯ ಆತ್ಮದೊಡನೆ ಇರುತ್ತಾ ಮಕ್ಕಳ ಕ್ಷೇಮಕ್ಕಾಗಿ ಆ ಲೋಕದಿಂದ ಮಾಡಬಹುದಾದ್ದನ್ನು ಮಾಡುತ್ತಿರುತ್ತದೆ’[25]  ಎಂದವರು ಹೇಳುವಾಗ ಅವರು ಅದ್ವೈತ ಸಾಧನೆಯಲ್ಲಿ ನಿರತರಾಗಿದ್ದರೆಂದೇ ತೋರುತ್ತದೆ, ಆ ಸಮಯದಲ್ಲಿ,

ಡಾ. ರಾಯರು ಕುವೆಂಪು ಪ್ರಣೀತ ಅದ್ವೈತವನ್ನು ಭಕ್ತಿದೀಪ್ತ ಅದ್ವೈತವೆಂದು (ಪು. ೨೭೩) ಕರೆದು, ತಮ್ಮ ನಿಲವನ್ನು ತರ್ಕಸಮ್ಮತವಾಗಿ ಸಮರ್ಥಿಸಿಕೊಂಡಿದ್ದಾರೆ. ಆದರೆ ಪ್ರೇಮದರ್ಶನದ ಹಿನ್ನೆಲೆಯಲ್ಲಿ ಸಮೀಕ್ಷಿಸಿದಾಗ, ಅವರ ಅದ್ವೈತವನ್ನು ಪ್ರೇಮದೀಪ್ತ ಅದ್ವೈತ ಅಥವಾ ಪ್ರೇಮಾದ್ವೈತವೆಂದು ಹೆಸರಿಸಬಹುದೆಂದು ತೋರುತ್ತದೆ. ಭಕ್ತಿಯೂ ಪ್ರೇಮದ ಒಂದು ಬಾಹುತಾನೆ!

ತಪಸ್ಸು ಪೂಜೆ ಮತ್ತು ಪ್ರಾರ್ಥನೆ ಕುವೆಂಪು ಅವರ ದಾರ್ಶನಿಕ ಸತ್ಯ ಸಾಕ್ಷಾತ್ಕಾರದ ಗಂಗೋತ್ರಿಗಳೆಂದು ಹೇಳಬಹುದು. ಪ್ರಾರ್ಥನೆಗೆ ಸಂಬಂಧಿಸಿದಂತೆ ನೂರಾರು ಕವನ ಗಳನ್ನವರು ರಚಿಸಿದ್ದಾರೆ. ಕಾದಂಬರಿ ನಾಟಕ ಮಹಾಕಾವ್ಯಗಳಲ್ಲಿ ಅವೇ ಜೀವನಾಡಿಗಳೆಂಬಂತೆ ಹೆಣೆದುಕೊಂಡಿವೆ. ಚಿತ್ರಾಂಗದಾ ಕಾವ್ಯದಲ್ಲಿ ಅರ್ಜುನ ಚಿತ್ರಾಂಗದೆಯರ ತಪಸ್ಸೇ ಬಹುಪ್ರಧಾನವೆಂಬಂತೆ ಆ ಕಾವ್ಯದ ಮೂಲಧಾತುಎಂಬಂತೆ ಮೈದೋರುತ್ತದೆ. ಶ್ರೀರಾಮನ ಜನನದಿಂದ ಹಿಡಿದು, ಅಲ್ಲಿಯ ತಪೋವನಗಳನ್ನೊಳಗೊಂಡು, ರಾವಣನಿಗೆ ರಾಮತ್ವ ಪ್ರಾಪ್ತವಾಗುವತನಕ ಪೂಜೆ ಪ್ರಾರ್ಥನೆ ತಪಸ್ಸುಗಳೇ ಶ್ರೀರಾಮಾಯಣದರ್ಶನಂ ಮಹಾಕಾವ್ಯದ ಮೂಲ ಸೆಲೆಗಳೆಂಬುದಂತು ಸುಸ್ಪಷ್ಟ. ಸೀತೆಯ ಪಾಲಿಗೆ ‘ಪೂಜೆ ತಾಂ ಶಕ್ತಿ!’ ‘ನಿನ್ನೊರ್ ತಪಶ್ಯಕ್ತಿ ಪೇಳ್ ಚಲಿಸಲಾರದೆ ಋತ ಪ್ರಕೃತಿಯಂ?’ ಎಂದು ನೀಲ ರಾಮನ ಶಕ್ತಿಯನ್ನು ಕೊಂಡಾಡುತ್ತಾನೆ. ‘ಆವುದಾಗಲಿ ನೆಪಂ ಫಲದಾಯಕಂ ತಪಂ’, ‘ಕಲ್ಲಾದರೇನ್ ತೀವ್ರತಪದಿಂದ ಚೇತನ ಸಿದ್ದಿಯಾಗದೇಂ ಜಡಕೆ?’ ‘ಪ್ರಾರ್ಥನೆಯ ಸಾಧಿಸದ ಕಾರ್ಯವೊಂದಿಲ್ಲ’, ‘ತಪಂ ತಾನಿರ್ದೆಡೆಯೊಳೆ ದೂರಕರ್ಮಿ’.

ಪ್ರಾರಂಭದಿಂದ ಸಿದ್ದಿಯತನಕ ಕುವೆಂಪು ಅವರ ಆಧ್ಯಾತ್ಮ ಸಾಧನೆ ಮತ್ತು ಧಾರ್ಮಿಕಪ್ರಜ್ಞೆ ವಿಕಾಸಗೊಂಡ ಕ್ರಮವನ್ನೂ, ಅವುಗಳ ಸ್ವರೂಪವನ್ನೂ ಸೋದಾಹರಣವಾಗಿ ಸಮರ್ಥವಾಗಿ ವಿವರಿಸಿದ ನಂತರ ರಾಯರು ಅವುಗಳಗೆ ಮೂಲ ಆಕರದಂತಿರುವ ಅವರ ಮನಃಶಕ್ತಿಯ ಅದ್ಭುತ ಮಹಿಮೆಯನ್ನು ವಿವೇಚಿಸಲು ತೊಡಗುತ್ತಾರೆ. ಮಾನವನ ಸಕಲ ಸೃಷ್ಟಿಗಳಿಗೆ, ಅವನ ಸಾಧನೆ ಸಿದ್ದಿಗಳಿಗೆ, ಅವನ ಸರ್ವತೋಮುಖವಾದ ಪ್ರಗತಿಗೆ ಅವನ ಮನಸ್ಸೇ ಗರ್ಭಾಶಯವಷ್ಟೆ. ಮೂಲ ಪ್ರವೃತ್ತಿ, ಸಂಸ್ಕಾರಪ್ರೇರಣೆ, ಪರಿಸರ ಪ್ರಭಾವ ಮತ್ತು ಸಾಧನೆ ಈ ನಾಲ್ಕು ಸ್ತರಗಳಲ್ಲಿ ಮನಸ್ಸು ವಿಕಾಸಗೊಳ್ಳುತ್ತದೆಂಬುದನ್ನು ಕುವೆಂಪು ಸಾಹಿತ್ಯದ ಸಂದರ್ಭ ಪಾತ್ರಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾರೆ.

ಕುವೆಂಪು ಸಾಹಿತ್ಯದಲ್ಲಿ ಬಹುವರ್ಣರಂಜಿತ ಸ್ವಪ್ನಗಳದ್ದೇ ದೊಡ್ಡದೊಂದು ಪ್ರಪಂಚ. ಅವು ಅವರ ಬದುಕಿನ ಒಂದು ಭಾಗವಾಗಿರುವಂತೆ, ಅವರ ಸಾಹಿತ್ಯದ ಅವಿಭಾಜ್ಯ ಅಂಗಗಳೂ ಆಗಿವೆ. ಲೋಕಲೋಕೋತ್ತರಾನುಭವಗಳಿಗೆ ಅವು ಸಂಕೇತ ಪ್ರತಿಮೆಗಳಾಗುವಂತೆ ಕಥನಕ್ರಿಯೆಗೆ ಪ್ರಚೋದಕಗಳಾಗುತ್ತವೆ, ಪಾತ್ರ ವಿಕಾಸಕ್ಕೆ ಸಹಾಯಕವಾಗುತ್ತವೆ. ‘ಸ್ವಪ್ನ ಪ್ರಪಂಚವನ್ನು ಇಷ್ಟು ಸಮರ್ಥವಾಗಿ ಅಧ್ಯಾತ್ಮ ವಿಜ್ಞಾನ ಕಾವ್ಯಗಳ ದಿವ್ಯಸಂಗಮವಾಗಿ ಬಳಸಿಕೊಂಡ ಕವಿಗಳು ವಿಶ್ವ ಸಾಹಿತ್ಯದಲ್ಲಿಯೇ ಅಪೂರ್ವವೆಂದು ತೋರುತ್ತದೆ. ಮುಖ್ಯವಾಗಿ ಗಮನಿಸಬೇಕಾದುದು, ಈ ಕವಿ ಮನೋವಿಜ್ಞಾನಸ್ತರದಲ್ಲಿಯೇ ವಿರಮಿಸದೆ, ಮುಂದುವರಿದು ಅಧ್ಯಾತ್ಮಸ್ತರದಲ್ಲಿ ರಮಿಸುವುದು. ಕಾಲ ದೇಶಗಳ ನಾಮರೂಪಗಳ ಕನಸು ನನಸುಗಳ ನಡುವಣ ಮಾನವನಿರ್ಮಿತ ಕೃತಕ ರೇಖೆಗಳನ್ನು ಅಳಿಸಿ ಅದ್ವೈತದ ಅಖಂಡಾನುಭವವನ್ನೇ ಸಾಧಿಸಿ ತೋರುವುದು’ (ಪು. ೩೫೩) ಎಂಬ ರಾಯರ ಅಭಿಪ್ರಾಯ ಸಾಧುವಾದದ್ದೇ. ಕುವೆಂಪು ಜೀವನದಲ್ಲೆಂತೊ ಅಂತೆಯೇ ಅವರ ಸಾಹಿತ್ಯದಲ್ಲಿ ಅತೀಂದ್ರಿಯಾನುಭಾವಗಳಿಗೆ ಅಪಾರ ಪ್ರಾಶಸ್ತ್ಯವುಂಟು. ಅವುಗಳಲ್ಲಿ ಹಲವನ್ನು ವಿವರಿಸಿ, ಜಗತ್ತಿನ ಹಲವು ಸಂತ ದಾರ್ಶನಿಕರ ಜೀವನದಿಂದ ನಿದರ್ಶನಗಳನ್ನು ನೀಡುವ ಮೂಲಕ ಅವನ್ನು ಸಮರ್ಥಿಸುತ್ತಾರೆ. ಅವರ ಸಾಹಿತ್ಯ ಕೃತಿಗಳು, ಮುಖ್ಯವಾಗಿ ‘ಶ್ರೀ ರಾಮಾಯಣ ದರ್ಶನಂ’ ಅತೀಂದ್ರಿಯ ವ್ಯಾಪಾರದ ದಿವ್ಯ ಫಲವೆಂದೇ ಹೇಳಬಹುದು.

‘ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು, ಅಲೌಕಿಕ ನಿತ್ಯಸತ್ಯಂಗಳಂ
ಪ್ರತಿಮಿಸುವ ಸತ್ಯಸ್ಯಸತ್ಯ ಕಥನಂ ಕಣಾ’

ಎನ್ನುವಲ್ಲಿಯೇ ಮೇಲಿನ ಮಾತಿಗೆ ಸಮರ್ಥನೆ ದೊರೆಯುತ್ತದೆ. ‘ಬರಿಯ ಗ್ರಂಥಸ್ಥ ವಿದ್ಯೆಯಾಗದೆ ಅನುಭವದಲ್ಲಿ ದಕ್ಕಿಸಿಕೊಳ್ಳುವ ಅವರ ಕಾಳಜಿ, ಶ್ರೀ ಕುವೆಂಪು ಅವರನ್ನು ಜಗತ್ತಿನ ಶ್ರೇಷ್ಠ ಅಧ್ಯಾತ್ಮ ಕವಿಯನ್ನಾಗಿಸಿದೆ, ಬ್ರಹ್ಮಾನುಭವಿಯನ್ನಾಗಿಸಿದೆ, ತತ್ತ್ವಜ್ಞಾನಿ ಯನ್ನಾಗಿಸಿದೆ. ಕಾವ್ಯ ಅಧ್ಯಾತ್ಮ ಅನುಭಾವಗಳು ಅವರಲ್ಲಿ ಅಪೂರ್ವವಾಗಿ ಅಭಿನ್ನವಾಗಿ ಸಮರಸವಾಗಿವೆ’ (ಪು. ೩೭೫) ಎನ್ನುವ ರಾಯರ ಉಪಸಂಹಾರವಾಣಿ ಉಚಿತವಾಗಿದೆ.

ಪುನರ್ಜನ್ಮ ಕರ್ಮತತ್ತ್ವಗಳ ವಿಷಯ ಕುವೆಂಪು ಸಾಹಿತ್ಯದಲ್ಲಿ ಮೇಲಿಂದ ಮೇಲೆ ಬರುತ್ತದೆ. ಪ್ರಾಣಿತ್ವ ಮನುಷ್ಯತ್ವಗಳು ಅಥವಾ ಪರಮಾತ್ಮ ಪ್ರತೀಕವಾದ ಜೀವಾತ್ಮ ನಿರಂತರ ವಾಹಿನಿಯೆನ್ನುವುದಾದರೆ ಆ ಜೀವಿಯ ಕರ್ಮವೂ ನಿರಂತರವಾದದ್ದೆಂದೇ ಒಪ್ಪಿಕೊಳ್ಳ ಬೇಕಾಗುತ್ತದೆ. ಪೂರ್ವಸಂಸ್ಕಾರ ರೂಪದ ಕರ್ಮಜನ್ಮಸಂಸ್ಕಾರ ಪರಿಸರ ಪ್ರಭಾವ ಮತ್ತು ಆತ್ಮಸಾಧನೆಯಿಂದ ಪರಿಷ್ಕಾರಗೊಳ್ಳುತ್ತದೆಯೆ ಹೊರತು, ಅದು ನಿಂತು ಮಡುವಾಗುವುದಿಲ್ಲ. ಯೂರೋಪು ಅಮೆರಿಕಗಳಲ್ಲಿ ಪರಾಮನೋವಿಜ್ಞಾನಿಗಳು, ಪುನರ್ಜನ್ಮ ಸಿದ್ಧಾಂತಿಗಳು ಆ ಬಗ್ಗೆ ಸಾಕಷ್ಟು ಪ್ರಯೋಗಗಳನ್ನು ನಡೆಸಿ, ಪುನರ್ಜನ್ಮದ ಯಥಾರ್ಥತೆಯನ್ನು ಸಾಧಿಸಿದ್ದಾರೆ. ಪಿಟ್ಸ್‌ಬರ್ಗನ ರಾಲ್ಫ್‌ಗ್ರಾಸಿ, ಮಸಚುಸೆಟ್ಸ್ ಫ್ರೇಮಿಂಗ್ ಹ್ಯಾಮ್‌ನ ಕುಷಿಂಗ್ ಆಸ್ಪತ್ರೆಯ ಕಾಸ್ಟೆನ್ ಬಾಮ್, ಕ್ಯಾಲಿಪೋರ‌್ನಿಯಾದ ಮನೋವಿಜ್ಞಾನಿ ರಿಚರ್ಡ್ ಕಾಲಿಷ್, ಸ್ಕಾಟ್ಲೆಂಡಿನ ಥಾಮಸ್ ಸಿ.ಜಿ.ಸ್ಮಿತ್, ಓಕ್ಲಹಾಮಾ ಷಾಪೆನ್‌ಬರ್ಗ್‌ ಸಂಶೋಧನ ಪ್ರತಿಷ್ಠಾನದ ಎಚ್.ಎನ್. ಬ್ಯಾನರ್ಜಿ ಮೊದಲಾದ ವಿಜ್ಞಾನಿಗಳು ರಕ್ತವನ್ನು ಮಂಥನಿಸುವಂಥ ಅದ್ಭುತ ಫಲಿತಾಂಶಗಳನ್ನು ಹೊರಗೆಡಹಿದ್ದಾರೆ. ಅಮೆರಿಕೆಯ ಸುಪ್ತಪ್ರವಾದಿ ಎಡ್ಗರ್ ಕಾಯ್ಸೆಯ ಪ್ರವಾದಗಳಂತು ರೋಮಾಂಚಕಾರಿಯಾದುವು. ಡಾ. ರಾಯರು ಕುವೆಂಪು ಪರಿಕಲ್ಪನೆಯ ಪುನರ್ಜನ್ಮ ಕರ್ಮತತ್ವಗಳನ್ನು ವ್ಯಾಖ್ಯಾನಿಸಿ, ಅನೇಕ ತಜ್ಞರ, ಸಂತರ, ಮನೋವಿಜ್ಞಾನಿಗಳ ಘೋಷಣೆಗಳನ್ನು ಉದಾಹರಿಸಿ, ಅವುಗಳನ್ನು ಸಮರ್ಥವಾಗಿ ಸಮರ್ಥಿಸಿದ್ದಾರೆ. ಈ ಸಿದ್ಧಾಂತಗಳು ದಾರ್ಶನಿಕ ದೃಷ್ಟಿಗೆ ಮಾತ್ರ ನಿಲುಕುವಂಥವೆಂಬುದನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ಆದರೆ ಈ ಸಂದರ್ಭದಲ್ಲಿ ವಿಚಾರವಾದಿಗಳು ಒಂದಂಶವನ್ನು ಅವಶ್ಯ ವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಕುವೆಂಪು ಪ್ರಣೀತ ಪುನರ್ಜನ್ಮ ಕರ್ಮತತ್ವಗಳು ಸಂಪ್ರದಾಯದೂರವಾಗಿ ಮಾನವಕೃತ ಜಾತಿ ಮತ ಭೇದಗಳಿಂದ ಮುಕ್ತವಾಗಿದ್ದು, ಸಮಾನತೆ ಸರ್ವೋದಯಗಳ ಆಧಾರದ ಮೇಲೆ ನಿಂತಿರುವುದೇ ಅವುಗಳ ವೈಶಿಷ್ಟ್ಯ.

ಆರನೆಯ ಕೋಶದಲ್ಲಿ ಕುವೆಂಪು ಅವರ ಜೀವನ ಸಾರಸಂಗ್ರಹದಂತಿರುವ ‘ವಿಶ್ವಮಾನವ ಸಂದೇಶ’ದ ಭಾಷ್ಯವಿದೆ. ಆ ಸಂದೇಶದ ಅಭ್ಯಾಸಿಗಳಿಗೆ ಇದು ತುಂಬ ಉಪಯುಕ್ತವಾಗಿದೆ. ಬ್ರಹ್ಮಸೂತ್ರಗಳಿಗೆಂತು ಶಂಕರ ಭಾಷ್ಯವಿದೆಯೋ ವಿಶ್ವಮಾನವ ಸಂದೇಶಕ್ಕೆ ಅಂತೆಯೇ ವೇಣುಗೋಪಾಲ ಭಾಷ್ಯವಿದೆ.

ಡಾ. ವೇಣುಗೋಪಾಲರಾಯರ ಈ ಅಧ್ಯಯನ ಫಲಶ್ರುತಿಯನ್ನು ಅವರ ಮಾತಿನಲ್ಲಿಯೇ ಸಂಗ್ರಹಿಸಲು ಇಲ್ಲಿ ಯತ್ನಿಸಲಾಗಿದೆ :

ಕಾವ್ಯಕ್ರಿಯೆಯನ್ನು ಅಧ್ಯಾತ್ಮಾನುಭವದ ಸಶಕ್ತ ಅಭಿವ್ಯಕ್ತಿಯಾಗಿ ಶ್ರೀ ಕುವೆಂಪು ಸ್ವೀಕರಿಸಿದ್ದಾರೆ. ಆದುದರಿಂದಲೇ ಅವರು ಶ್ರೀ ಅರವಿಂದರಂತೆ ಋಷಿಕವಿ. ದರ್ಶನಕವಿ. ಈ ವಿಷಯದಲ್ಲಿ ಅವರು ಶಂಕರರನ್ನೇ ಹೋಲುತ್ತಾರೆ. (೪೩೬); ‘’ಶ್ರೀ ಕುವೆಂಪು ನಿಸರ್ಗ ದೃಶ್ಯಗಳಲ್ಲಿ ಅನುಭವಿಸುತ್ತಿದ್ದುದು ಕೇವಲ ಅದರ ಚೆಲುವಿನ ಆರಾಧನೆಯಲ್ಲ. ಈ ಚೆಲುವಿನ ಮೂಲಶಕ್ತಿಯಲ್ಲಿ ತನ್ಮಯೀಭವನದಿಂದ ಸಿದ್ದಿಸುವ ಆತ್ಮಸಿದ್ದಿ. ಈ ಅಂಶವೇ ಶ್ರೀ ಕುವೆಂಪು ಅವರನ್ನು ಇತರ ಕೇವಲ ಪ್ರಕೃತಿ ಕವಿಗಳಿಗಿಂತ ಒಂದು ಹಂತದಲ್ಲಿ ವರ್ಡ್ಸ್‌ವರ್ತ್‌ ಷೆಲ್ಲಿ ಕೀಟ್ಸ್‌ರಂತಹ ಪಾಶ್ಚಾತ್ಯ ರಮ್ಯ ಕವಿಗಳನ್ನೂ ಮೀರುವ ಉನ್ನತ ಸ್ತರದ ದಾರ್ಶನಿಕ ಕವಿಯಾಗಿಸಿರುವುದು…ಅದ್ವೈತ ದರ್ಶನದಲ್ಲಿ ಮೂಲತಃ ಭಿನ್ನತೆಯಿಲ್ಲ ದಿದ್ದರೂ ಶ್ರೀಕುವೆಂಪು ತಮ್ಮ ಅನುಭೂತಿಯ ಪ್ರತಿಪಾದನೆಗೆ ಪ್ರಕೃತಿಯನ್ನು ಬಳಸಿ ಕೊಂಡಷ್ಟು ಸಮೃದ್ಧವಾಗಿ ಸಾರ್ಥಕವಾಗಿ ಹೃದಯಂಗಮವಾಗಿ ಇತರ ದಾರ್ಶನಿಕರು ಬಳಸಿಕೊಂಡಿಲ್ಲ ಎಂಬುದನ್ನು ಒಪ್ಪಲೇಬೇಕು’ (ಪು. ೪೩೮).

ಕುವೆಂಪು ಅವೈದಿಕ ಕುಟುಂಬದಲ್ಲಿ ಜನಿಸಿದವರಾದ್ದರಿಂದ, ಹುಟ್ಟುವಾಗಲೇ ಯಾವ ಸಿದ್ಧಾಂತಕ್ಕೂ ಅಂಟಿಕೊಳ್ಳಲಿಲ್ಲವಾದ್ದರಿಂದ, ಸ್ವತಂತ್ರವಾಗಿ ಆಲೋಚಿಸುವ ಮತ್ತು ಸಾಧನೆಯಲ್ಲಿ ತೊಡಗುವ ಅವಕಾಶ ಅವರಿಗೆ ಲಭಿಸಿತೆನ್ನುವ ರಾಯರ ಮಾತು ಉಪಾದೇಯ ವಾದದ್ದೇ. ‘ಈ ವಿಷಯದಲ್ಲಿ ಅವೈದಿಕ ಕುಟುಂಬದಿಂದ ಬಂದ ಶ್ರೀ ಕುವೆಂಪು ಅದೃಷ್ಟವಂತ ರೆಂದೇ ಹೇಳಬೇಕು! ಅವರಿಗೆ ಸಂಪ್ರದಾಯದಿಂದ ಬಂದ ಕುಟುಂಬದತ್ತವಾದ ಸಿದ್ಧಾಂತ ವಿರಲಿ. ವೈದಿಕ ಕುಟುಂಬದಲ್ಲಿ ಸಹಜವಾಗಿ ದೊರೆಯುವ ಸೌಲಭ್ಯಗಳಿಂದ ಅವರು ವಂಚಿತ ರಾಗಿದ್ದುದರಿಂದ ಸ್ವಂತ ಕುತೂಹಲ, ಅಪಾರ ಅಧ್ಯಯನ, ಆಧ್ಯಾತ್ಮ, ಮನೋಧರ್ಮಗಳೇ ಅವರ ಬಂಡವಾಳವಾದವು. ಈ ಅಧ್ಯಯನ ಆಲೋಚನೆ ಅನುಭೂತಿಗಳು ಅವರನ್ನು ಅದ್ವೈತ ಸಿದ್ಧಾಂತದ ಆಧುನಿಕ ಋಷಿಕವಿಯನ್ನಾಗಿಸಿತು. ಅದು ಅದ್ವೈತದ ಮಹತ್ವವೂ ಅಹುದು. ಆ ಸಿದ್ಧಾಂತ ಆಧುನಿಕ ಋಷಿಕವಿಯನ್ನಾಗಿಸಿತು. ಅದು ಅದ್ವೈತದ ಮಹತ್ವವೂ ಅಹುದು. ಸಿದ್ಧಾಂತ ಒಬ್ಬ ವಿನೂತನ ಋಷಿಕವಿಯನ್ನು ಪಡೆದುಕೊಂಡಿತು’ (ಪು. ೪೪೨). ‘(ತಮ್ಮ ವಿನೂತನದ ದರ್ಶನದಿಂದಾಗಿ) ಅವರು ತಮ್ಮ ಸಮಕಾಲೀನ ಕವಿಶ್ರೇಷ್ಠರಿಂದ ಬೇರೆಯಾಗಿ, ವಿಶಿಷ್ಟವಾಗಿ ನಿಲ್ಲುತ್ತಾರೆ. ದರ್ಶನ ಕವಿಗಳ ಹಾಗೂ ತತ್ತ್ವವಿದರ ಪ್ರಥಮ ಪಂಕ್ತಿಯಲ್ಲಿ ವಿರಾಜಿಸುತ್ತಾರೆ’ (ಪು. ೪೪೩). ‘ಶ್ರೀ ಕುವೆಂಪು ಅವರ ಮಹಾಕಾವ್ಯ ಕಥೆಯಲ್ಲ, ದರ್ಶನ; ಚರಿತ್ರೆಯಲ್ಲ, ನಿತ್ಯಸತ್ಯಗಳನ್ನು ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನ’ (ಪು. ೪೪೬).

ಭಾರತೀಯ ಸಾಹಿತ್ಯಕ್ಕೊಂದು ದಾರ್ಶನಿಕ ಮಹಾಕಾವ್ಯವನ್ನು ನೀಡಿದ ಯಶಸ್ಸು ಕುವೆಂಪು ಅವರಿಗೆ ಸೇರಬೇಕೆನ್ನುವುದರಲ್ಲಿ ಸಂಶಯವಿಲ್ಲ. ‘ಭಾರತೀಯರಿಗೆ, ವಿಶೇಷವಾಗಿ ಕನ್ನಡಿಗರಿಗೆ ವೇದಾಂತ ದರ್ಶನದ ಬಗ್ಗೆ ಆತ್ಮಪ್ರತ್ಯಯವನ್ನು ತಂದುಕೊಟ್ಟ ಕವಿ ಎಂದರೆ ಶ್ರೀ ಕುವೆಂಪು ಎಂದು ಈ ಪ್ರಬಂಧಕಾರ ಪೂರ್ಣವಿಶ್ವಾಸ… ಶ್ರೀ ಕುವೆಂಪು ಸಮಕಾಲೀನರಂತೆ ಪಾಶ್ಚಾತ್ಯ ಕಾವ್ಯ ಪ್ರಕಾರಗಳನ್ನು ಛಂದಸ್ಸನ್ನು ಕನ್ನಡಕ್ಕೆ ತಂದುಕೊಂಡುದು ನಿಜವಾದರೂ, ಅವರ ಕಾವ್ಯದ ಮೂಲಸತ್ವ ಸಂಪೂರ್ಣವಾಗಿ ಭಾರತೀಯವಾಗಿತ್ತು’. ಕಾವ್ಯವಿಮರ್ಶೆಯಲ್ಲಂತೂ ಅವರು ಬಿ.ಎಂ.ಶ್ರೀ ಸಂಪ್ರದಾಯವನ್ನು ಕೈಬಿಟ್ಟರೆಂದೇ ಹೇಳಬೇಕು ಎಂಬ ಮಾತು ಗಮನಾರ್ಹ.

ಕುವೆಂಪು ದರ್ಶನದಲ್ಲಿ ವಿಜ್ಞಾನ ವೇದಾಂತದ ವೈಚಾರಿಕತೆಗಳ ಅಪೂರ್ವ ಸಾಮರಸ್ಯ ವನ್ನೂ, ಅವರ ಸಾಹಿತ್ಯದಲ್ಲಿ ಈ ಮೂರರ ಜತೆಗೆ ಕಾವ್ಯದ ಅಮೂಲ್ಯ ವಿಶಿಷ್ಟ ರಸಸಂಗಮ ವನ್ನೂ ಕಾಣಬಹುದಾಗಿದೆ. ‘ಆದ್ದರಿಂದಲೇ ವೇದಾಂತ ಪರಿವೇಶವನ್ನು ಕಟ್ಟುವುದೂ, (ಪು. ೨೭೫) ಅವರಿಗೆ ಸಾಧ್ಯವಾಗುತ್ತದೆ. ಈ ಕಾರಣದಿಂದಲೇ ಇವರ ಶೈಲಿಗೆ ಹೊಸ ಸೊಗಸು ಹೊಗರು ಪೆಂಪು ಸೊಂಪು ಗುಣ್ಪು ಬಿಣ್ಪುಗಳು ಸಮನಿಸಿವೆಯೆಂದು ಹೇಳಬಹುದು.

ಕುವೆಂಪು ಸಾಹಿತ್ಯದ ಹಲವು ಮುಖಗಳನ್ನು ಕುರಿತಂತೆ ಈಗಾಗಲೇ ತಕ್ಕಮಟ್ಟಿಗೆ ವ್ಯಾಖ್ಯಾನ ವಿಮರ್ಶೆ ಸಾಹಿತ್ಯ ಪ್ರಕಟವಾಗಿದೆ. ಆದರೆ ಅವರ ಸಾಹಿತ್ಯದ ಅತ್ಯಂತ ಪ್ರಮುಖವಾದ ದಾರ್ಶನಿಕ ಮುಖದ ಬಗ್ಗೆ ವ್ಯಾಖ್ಯಾನವನ್ನು ರಚಿಸವ ಎದೆಗಾರಿಕೆ ಈ ತನಕ ಯಾರಲ್ಲಿಯೂ ಇದ್ದಂತಿಲ್ಲ. ಅಲ್ಲಿಷ್ಟು ಇಲ್ಲಿಷ್ಟು ಬಿಟ್ಟರೆ ತೌಲನಿಕ ವಿಮರ್ಶೆಯ ಗತಿಯೂ ಇಷ್ಟೇ. ವಿಶ್ವವಿದ್ಯಾನಿಲಯಗಳ ನಿವೃತ್ತ ಹಾಗೂ ಹಾಲಿ ತತ್ತ್ವಶಾಸ್ತ್ರ ಪ್ರಾಧ್ಯಾಪಕರ ಮುಂದೆ ಆ ಬಗ್ಗೆ ಪ್ರಬಂಧಗಳನ್ನು ಬರೆದುಕೊಡುವಂತೆ ದಮ್ಮಯ್ಯಗುಡ್ಡೆ ಹಾಕಿದೆ. ಹಣದ ಆಮಿಷವನ್ನು ತೋರಿಸಿದೆ. ಅವರಲ್ಲಿ ಕೆಲವರೀಗ ದಿವಂಗತರಾಗಿದ್ದಾರೆ. ವಿದ್ವಚ್ಚೋರರಿಗೆ ಎರವಲು ಬುದ್ದಿಯವರಿಗೆ ಪರಾನುಕರಣ ಪ್ರವೀಣರಿಗೆ, ಪ್ರತಿಭಾಶೂನ್ಯರಿಗೆ ಗಾಢ ಅಧ್ಯಯನ ಚಿಂತನೆಗಳನ್ನು ನಿರೀಕ್ಷಿಸುವ ಈ ಮಹತ್ಕಾರ್ಯ ಸಾಧ್ಯವಾಗದುದರಿಂದ ನನ್ನ ಪ್ರಾರ್ಥನೆ ವಿನಂತಿಗಳು ಮರುಧರೆಯ ರೋದನಗಳಾದುವು. ದುರ್ದೈವವೆಂದರೆ, ಈ ನಾಡಿನಲ್ಲಿ ತತ್ತ್ವಶಾಸ್ತ್ರ ಪ್ರಾಧ್ಯಾಪಕರು, ಸಮಾಜವಿಜ್ಞಾನಿಗಳು, ಜನಾಂಗವಿಜ್ಞಾನಿಗಳು, ಇಂಗ್ಲಿಷ್ ಪ್ರಾಧ್ಯಾಪಕರು, ಸಂಸ್ಕೃತ ಪ್ರಾಧ್ಯಾಪಕರು, ಭಾಷಾವಿಜ್ಞಾನಿಗಳು ಮಾಡಬೇಕಾದ ಕೆಲಸವನ್ನು ಕನ್ನಡ ಪ್ರಾಧ್ಯಾಪಕರೇ ಮಾಡಬೇಕಾಗಿದೆ.

‘ಕುವೆಂಪು ದಾರ್ಶನಿಕ ವಿಚಾರಗಳು’ ಎಂಬ ಪ್ರಬಂಧವನ್ನು ಬರೆಯಲು ಸಾಮರ್ಥ್ಯವುಳ್ಳ ಮನೋಧರ್ಮವುಳ್ಳ ಕನ್ನಡ ಪ್ರಾಧ್ಯಾಪಕರನ್ನು ಅರಸುತ್ತಿರುವಾಗ, ನನಗೆ ತಟಕ್ಕನೆ ಹೊಳೆದ ಹೆಸರು ಡಾ. ಎ.ಎಸ್. ವೇಣುಗೋಪಾಲರಾವ್ ಅವರದ್ದು. ಅವರ ಶರೀರದ ಕಣಕಣವೂ ರಮಣ ಮಹರ್ಷಿದರ್ಶನದಲ್ಲಿ ನಿಮಜ್ಜನಗೊಂಡಿರುವ ಸಂಗತಿ ನನಗೆ ಗೊತ್ತಿತ್ತು. ಅಂದ ಮೇಲೆ ಭಾರತೀಯ ದರ್ಶನ ಅವರಿಗೆ ಕರತಲಾಮಲಕವೆಂಬುದೂ ನನಗೆ ತಿಳಿದಿತ್ತು.  ಕನ್ನಡದ ಪ್ರಾಚೀನ ಅರ್ವಾಚೀನ ಸಾಹಿತ್ಯ ಅವರಿಗೆ ರಕ್ತಗತವಾಗಿದೆ. ಅವರು ನಾಡಿನ ಅಪೂರ್ವ ವಾಗ್ಮಿಗಳಲ್ಲೊಬ್ಬರು. ಅವರ ಭಾಷಣಗಳನ್ನು ಕೇಳಿದವರಿಗೆ, ಅವರ ಗ್ರಂಥಗಳನ್ನು ಓದಿದವರಿಗೆ ಅವರ ಪ್ರತಿಭಾಸಂಪನ್ನ ವಿದ್ವತ್ತು ಗೊತ್ತಿದ್ದದ್ದೇ, ಯಾರ ಬಗ್ಗೆಯಾಗಲಿ ಪೂರ್ವಗ್ರಹ ದುರಾಗ್ರಹಗಳಿಲ್ಲದ ಸತ್ಯನಿಷ್ಠೆಯ ನಿಷ್ಕೃಷ್ಟ ಜ್ಞಾನದ ಪ್ರಾಮಾಣಿಕ ಮನೋ ಧರ್ಮದ ಸಾತ್ವಿಕರೆಂಬುದನ್ನು ನಾನು ಬಲ್ಲವನಾಗಿದ್ದೆ.

ಅವರು ಕಾಲೇಜಿನಿಂದ ನಿವೃತ್ತರಾಗುತ್ತಿದ್ದಂತೆ ಈ ನನ್ನ ಕೊರಗನ್ನವರಲ್ಲಿ ತೋಡಿಕೊಂಡೆ. “ನನಗೆ ಪಾಶ್ಚಾತ್ಯ ತತ್ತ್ವಶಾಸ್ತ್ರದ ಪರಿಚಯವಿಲ್ಲ. ಭಾರತೀಯ ತತ್ತ್ವಶಾಸ್ತ್ರದಲ್ಲಿ ನಾನು ಪ್ರವೀಣನಲ್ಲ” ಎಂಬುದಾಗಿ ಅವರು ಸಹಜ ವಿನಯದಿಂದ ನುಡಿದರು. ಅವರ ಮಾತಿನಲ್ಲಿ ವಿನಯವಿತ್ತೇ ಹೊರತು, ಆತ್ಮಪ್ರತ್ಯದ ಕೊರತೆ ಇರಲಿಲ್ಲ. ‘ನೀವು ಮನಸ್ಸು ಮಾಡಿದರೆ ಒಂದೆರಡು ತಿಂಗಳಲ್ಲಿ ಅವುಗಳಲ್ಲಿ ಪ್ರಭುತ್ವವನ್ನು ಪಡೆಯಬಲ್ಲಿರಿ. ಮೀನಿಗೆ ಈಜು ಕಲಿಸಬೇಕೆ? ಗರುಡನಿಗೆ ಉಡ್ಡಯನ ಕಲಿಸಬೇಕೆ?’ ಎಂದು ನಾನವರಿಗೆ ಮಾರುತ್ತರವಿತ್ತೆ. ಕನ್ನಡದ ಸೊಗಸು ಸೊವಡುಗಳನ್ನರಿಯಬೇಕಾದರೆ, ಕನ್ನಡ ಪಾಂಡಿತ್ಯ ಮಹಿಮೆಯನ್ನರಿಯ ಬೇಕಾದರೆ ಅವರ ಉಪನ್ಯಾಸಗಳನ್ನು ಕೇಳಬೇಕು. ಅವರು ಕನ್ನಡ ವಿದ್ವತ್ತಿಗೊಂದು ತಲೆಮಣಿ ಯಾಗಿದ್ದಾರೆ.

ಅವರು ನನ್ನ ವಿನಂತಿಯನ್ನು ಮನ್ನಿಸಿದರು; ಆರೇ ತಿಂಗಳಲ್ಲಿ ಹಸ್ತಪ್ರತಿ ಕಳಿಸಿದರು. ಮುಂದಿನ ಇಂಥ ಗ್ರಂಥಗಳಿಗೆ ಇದು ಪ್ರಚೋದಕವಾದೀತು, ಆದರ್ಶವಾದೀತು ಎಂಬ ಭರವಸೆ ನನಗಿದೆ. ಅವರಿಗೆ ನಮಸ್ಕಾರ!

ಈ ಕೃತಿಯನ್ನು ರಚಿಸಿದ್ದು ಕುವೆಂಪು ವಿದ್ಯಾವರ್ಧಕ ಟ್ರಸ್ಟಿಗಾಗಿ. ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ವತಿಯಿಂದ ಇದನ್ನು ಪ್ರಕಟಿಸಬಹುದೆಂಬ ಸೂಚನೆಯನ್ನು ಅದರ ಮುಂದಿಟ್ಟಾಗ ಸದಸ್ಯರೆಲ್ಲರೂ ಸಂತೋಷದಿಂದ ಸ್ವಾಗತಿಸಿದ್ದಲ್ಲದೆ, ಅದರ ಮಾರಾಟದ ಹಕ್ಕುಗಳನ್ನು ಮೈಸೂರಿನ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ಗೆ ವಹಿಸಲೊಪ್ಪಿದರು; ಅದಕ್ಕಾಗಿ ಅವರಿಗೆ ಪ್ರಣಾಮಗಳು.

ಅಜಾಗರೂಕತೆಯಿಂದ ಹಸ್ತಪ್ರತಿಯಲ್ಲುಳಿದಿರುವ ದೋಷಗಳಿಂದಾಗಿ ಹಸ್ತಲಿಪಿಯ ಅಪರಿಚಯತೆಯಿಂದಾಗಿ, ಗ್ರಂಥಕರ್ತರಿಗೆ ಪ್ರೂಫು ತಿದ್ದುವ ಅವಕಾಶವಿರಲಿಲ್ಲವಾಗಿ ಅಲ್ಲೊಂದು ಇಲ್ಲೊಂದು ಮುದ್ರಣ ದೋಷಗಳು ಉಳಿದಿರುವ ಸಂಭವವುಂಟು. ಅದಕ್ಕಾಗಿ ವಾಚಕರ ಕ್ಷಮೆ ಯಾಚಿಸುತ್ತೇನೆ.[1]    Alien Harp, P. ೧೨.

[2]    ನೆನಪಿನ ದೋಣಿಯಲ್ಲಿ, ಪು. ೨೦೩.

[3]    ಅದೇ, ಪು. ೨೧೦.

[4]    ಅದೇ, ಪು. ೪೮೯.

[5]    ಹೊನ್ನ ಹೊತ್ತಾರೆ, ಪು. ೧-೧೧.

[6]    ನವಿಲು, ಪು. ೮೦.

[7]    ಅಗ್ನಿಹಂಸ, ಪು. ೧೧.

[8]    ಅದೇ, ಪು. ೧೪.

[9]    ಅದೇ, ಪು. ೧೧.

[10]   ಕೊಳಲು, ಪು. ೧೦೨.

[11]   ಅದೇ, ಪು. ೧೦೦.

[12]   ಅದೇ, ಪು. ೭೮.

[13]   ಕೊಳಲು, ಪು. ೧೪.

[14]   ಪಕ್ಷಿಕಾಶಿ, ಪು. ೭.

[15]   ಅದೇ, ಪು. ೧೪.

[16]   ಅದೇ, ಪು. ೧೮.

[17]   ಅದೇ, ಪು. ೬೭.

[18]   ‘ಶ್ರೀರಾದ, ಅಯೋಧ್ಯಾ ಸಂಪುಟ’, ಸಂಚಿಕೆ ೮, ಸಾಲು. ೨೦೧-೨೦೫.

[19]   ೧೯೪೯ ಅಥವಾ ೧೯೫೦ರಲ್ಲಿ ಕನಕಪುರ ತಾಲ್ಲೂಕಿನ ಕಾವೇರಿ ಅರ್ಕಾವತಿಗಳ ಸಂಗಮಕ್ಕೆ ಹೋಗಿದ್ದಾಗ ಸೂರ್ಯೋದಯ ಸಮಯದಲ್ಲಿ ಅವರು ಅಲ್ಲಿ ಮೀಯುತ್ತ ಬಹು ಹೊತ್ತು ಏಕಾಗ್ರ ಚಿತ್ತರಾಗಿ ಬಾಹ್ಯ ಜ್ಞಾನವಿಲ್ಲದೆ ಧ್ಯಾನಮಗ್ನರಾಗಿದ್ದುದನ್ನು ಜತೆಗಿದ್ದ ನಾನು ಮತ್ತು ಮೂವರು ಮಿತ್ರರು ನೋಡಿದ್ದೇವೆ.

[20]   ಚಂದ್ರಮಂಚಕೆ ಬಾ, ಚಕೋರಿ, ಸತಿಗೆ, ಪು. ೭.

[21]   ಅನುತ್ತರಾ ಕೃಪೆಯ ಸಾಕ್ಷಾತ್ಕಾರ, ಪು. ೩೪.

[22]   ಅದೇ, ಅನುತ್ತರಾ, ಪು. ೪.

[23]   ಅನುತ್ತರಾ, ಎದೆಯ ಹೊಂಗಿಂಡಿ, ಪು. ೧೧.

[24]   ನೆನಪಿನ ದೋಣಿಯಲ್ಲಿ, ಪು. ೧೮೯.

[25]   ಅದೇ, ಪು. ೪೦೮.