‘ಮೋಡಣ್ಣನ ತಮ್ಮ’ ಎಂಬ ಮಕ್ಕಳ ನಾಟಕದಿಂದ ಪ್ರಾರಂಭಿಸಿ ‘ಕಾನೀನ’ತನಕ ಕುವೆಂಪು ಹದಿನಾಲ್ಕು ನಾಟಕಗಳನ್ನು ರಚಿಸಿದ್ದಾರೆ. ಅವರ ಹಲವು ನಾಟಕಗಳಿಗೆ ರಾಮಾಯಣ (ಶೂದ್ರತಪಸ್ವಿ, ವಾಲ್ಮೀಕಿಯ ಭಾಗ್ಯ), ಮಹಾಭಾರತ (ಬೆರಳ್‌ಗೆ ಕೊರಳ್, ಶ್ಮಶಾನ ಕುರುಕ್ಷೇತ್ರಂ, ಕಾನೀನ), ಪುರಾಣ (ಯಮನ ಸೋಲು), ಜೈಮಿನಿ ಭಾರತ (ಚಂದ್ರಹಾಸ), ಬುದ್ಧ ಚರಿತೆ (ಮಹಾರಾತ್ರಿ)ಗಳು ಗ್ರಾಸವನ್ನೊದಗಿಸಿವೆ. ರಕ್ತಾಕ್ಷಿಯ ವಸ್ತು ಐತಿಹಾಸಿಕ ವಾದದ್ದು. ಬಿರುಗಾಳಿಯ ವಸ್ತು ಐತಿಹಾಸಿಕ ವೇಷವನ್ನು ಹಾಕಿಕೊಂಡ ಕಾಲ್ಪನಿಕ ಘಟನೆ. ಜಲಗಾರ ಸಾಮಾಜಿಕ ವೇಷವನ್ನು ತೊಟ್ಟ  ಪ್ರತಿಮಾಸೃಷ್ಟಿ. ಉಳಿದ ಮೂರು (ಬಲಿದಾನ, ಮೋಡಣ್ಣನ ತಮ್ಮ ಮತ್ತು ನನ್ನ ಗೋಪಾಲ) ಕಾಲ್ಪನಿಕವೆಂದೇ ಹೇಳಬಹುದು. ಇವುಗಳಲ್ಲಿ ರಕ್ತಾಕ್ಷಿ, ಚಂದ್ರಹಾಸ, ಕಾನೀನ, ಬಲಿದಾನ ಮತ್ತು ನನ್ನ ಗೋಪಾಲ ಬಿಟ್ಟರೆ, ಉಳಿದುವು ಕೆಲವು ನಿಮಿಷಗಳಿಗೆ, ಗಂಟೆ, ಒಂದು ದಿನ ಅಥವಾ ಒಂದು ರಾತ್ರಿಯಲ್ಲಿ ಮುಗಿಯು ವಂಥವಾಗಿ ಐಕ್ಯತ್ರಯವನ್ನು ಕಾಪಾಡಿಕೊಂಡಿವೆ. ವಸ್ತು ಯಾವುದೇ ಆಗಲಿ, ಎಲ್ಲಿಂದಲೇ ತೆಗೆದುಕೊಂಡಿರಲಿ, ಅಥವಾ ಸ್ವತಂತ್ರಸೃಷ್ಟಿಯೇ ಆಗಿರಲಿ, ಅವುಗಳ ನರನಾಡಿಗಳಲ್ಲೆಲ್ಲ ವೈಚಾರಿಕ ಮನೋಧರ್ಮ ಮತ್ತು ವೈಜ್ಞಾನಿಕ ಬುದ್ದಿಗಳನ್ನೊಳಗೊಂಡ ಆಧ್ಯಾತ್ಮಿಕ ಅಥವಾ ದಾರ್ಶನಿಕ ಚಿಂತನೆ ನಿರಂತರವಾಗಿ ಹರಿಯುತ್ತಿವೆಯೆಂಬುದನ್ನು ಮರೆಯುವಂತಿಲ್ಲ. ನಿಸರ್ಗದರ್ಶನವಂತು ಹಲವು ನಾಟಕಗಳ ಜೀವದ್ರವ್ಯವಾಗಿದೆ.

ಸಾಮಾನ್ಯವಾಗಿ ಬಾಲ್ಯ ತನ್ನ ಸುತ್ತಮುತ್ತಣ ನಿಸರ್ಗದೊಡನೆ ಒಂದಾಗಿ ಬಾಳಲೆಳಸುತ್ತದೆ. ತನ್ನ ಮತ್ತು ನಿಸರ್ಗದ ಬಾಳಿನಲ್ಲನವನಿಗೆ ಸಂದು ಕಾಣಿಸದು. ಮೋಡದಂತೆ ತೇಲಲು, ಹಕ್ಕಿಯಂತೆ ಹಾರಲು, ಚಂದ್ರನನ್ನು ಹಿಡಿದುಕೊಳ್ಳಲು, ಚುಕ್ಕಿಗಳನ್ನು ಬೊಗಸೆಯಲ್ಲಿ ತುಂಬಿಕೊಳ್ಳಲು ಮಗುವಿನ ಮನಸ್ಸು ಹಾತೊರೆಯುತ್ತದೆ. ಅದವನಿಗೆ ಅಸಾಧ್ಯವೆನಿಸುವುದಿಲ್ಲ. ಅದರಿಂದಾಗಿ ನೈಸರ್ಗಿಕ ಶಕ್ತಿಗಳ ವ್ಯಕ್ತೀಕರಣವಿಲ್ಲಿ ನಡೆದಿದೆ. ಈ ನಾಟಕದ ಕಿಟ್ಟಣ್ಣ ಮೋಡ, ಗಿರಿ, ಕಾಡುಗಳನ್ನು ಅಣ್ಣಂದಿರೆಂದೇ ಕರೆಯುತ್ತಾರೆ. ಮಾನವಜೀವನ ಮತ್ತು ಪ್ರಕೃತಿಜೀವನಗಳ ನಡುವೆ ಎಲ್ಲಿಯವರೆಗೆ ಈ ರಕ್ತ ಅಥವಾ ಅವಿನಾಭಾವ ಸಂಬಂಧವಿರುತ್ತ ದೆಯೋ ಅಲ್ಲಿಯವರೆಗೆ ಎರಡಕ್ಕೂ ಚ್ಯುತಿಯಿಲ್ಲವೆಂಬುದು ಈ ನಾಟಕದಿಂದ ಹೊಹೊಮ್ಮುವ ತತ್ತ್ವ; ನಿಸರ್ಗನಾಶ ಮತ್ತು ಜಾತಿವೈರಗಳು ಮನುಕುಲದ ವಿನಾಶಕ್ಕೆ ಕಾರಣವಾಗುತ್ತವೆಂಬುದನ್ನು ನಾಟಕ ಸ್ಪಷ್ಟಪಡಿಸುತ್ತದೆ.

ಭಕ್ತಿಯ ಮಹಿಮೆಯನ್ನು ಸರಳ ಗದ್ಯದಲ್ಲಿ ಸರ್ವರಿಗೂ ಹೃದ್ಯವಾಗುವಂತೆ ಬಿತ್ತರಿಸುವುದೇ ‘ನನ್ನ ಗೋಪಾಲ’ ನಾಟಕದ ಉದ್ದೇಶ. ‘ತಿಳಿವಳಿಕೆಗೆ ನಾ ಸಿಲುಕೇ ಮನುಜಾ/ ಒಲುಮೆಗೆ ನಾ ಸೆರೆಯಾಗುವೆನು’ ಎಂಬ ಭಗವತ್ಸಂದೇಶಕ್ಕೆ ಇದೊಂದು ಪ್ರಾಯೋಗಿಕ ಘಟನೆಯಾಗಿದೆ. ವಿಧವೆಯಾದ ಬಡ ಹೆಂಗಸೊಬ್ಬಳು ಶಾಲೆಗೆ ಹೋಗುವ ತನ್ನ ಮುದ್ದು ಬಾಲಕ ಗೋಪಾಲನ ಬಯಕೆಗಳನ್ನು ಈಡೇರಿಸಲಾರದೆ ಬನದ ಗೋಪಾಲ ಆತನ ಅಣ್ಣನೆಂದೂ, ಆತ ತನ್ನ ತಮ್ಮನ ಆಶೆಗಳನ್ನೆಲ್ಲ ಪೂರೈಸುತ್ತಾನೆಂದು ಹೇಳುತ್ತಾಳೆ. ಆ ಎಳೆಯ ತಾಯಿಯ ಮಾತನ್ನು ನಂಬುತ್ತಾನೆ; ಶಾಲೆಗೆ ಹೋಗುವ ದಾರಿಯಲ್ಲಿ ಗೋಪಾಲಣ್ಣ ನನ್ನು ಕರೆದು, ಈಪ್ಸಿತಾರ್ಥವನ್ನು ಪಡೆಯುತ್ತಾನೆ. ಆದರೆಗೋಪಾಲನ ಜತೆಯಲ್ಲಿದ್ದರೂ ಅವನ ಗುರುಗಳಿಗೆ ಬನದ ಗೋಪಾಲನ ದರ್ಶನಲಾಭವಾಗದು. ಪ್ರಪೂರ್ಣ ಅನನ್ಯ ಭಕ್ತಿಯಿಂದ ಮಾತ್ರ ಸಿದ್ದಿ. ಅಲ್ಲಿಭಕ್ತನಿಗೂ ಭಗವಂತನಿಗೂ ಭೇದವಿಲ್ಲವೆಂಬ ಪರಂಪರೆಯ ಅಭಿವ್ಯಕ್ತಿಗೆ ಇದೊಂದು ಮಾದರಿಯಾಗಿದೆ.

‘ಬಲಿದಾನ’ ನಡೆಯುವ ಸ್ಥಳ ಕಾಳಿಕಾದೇವಾಲಯ. ಕಾಳಿಕಾದೇವತೆಯ ಭೈರವ ಸ್ವರೂಪವನ್ನು ಮರೆಯಲಾಗಿ, ಭರತಖಂಡ ಪಾರತಂತ್ರ್ಯಕ್ಕೊಳಗಾಗಿದೆ. ಅಲ್ಲಿಯೇ ಮಲಗಿದ್ದ ಭರತಸುತ ಭಾರತಾಂಬೆಯ ದುಸ್ಥಿತಿಯನ್ನು ನೋಡಿ, ಸಂಕಟಗೊಳ್ಳುತ್ತಾನೆ. ಅವನ ಸಂಕೋಲೆಗಳನ್ನು ಕಳಚುತ್ತಿದ್ದಂತೆ ಸ್ವಾತಂತ್ರ್ಯೋತ್ಸವ ಮಹಾಪ್ರಗಾಥ ಕೇಳಿಸುತ್ತದೆ. ಜೀರ್ಣೋದ್ಧಾರಗೊಂಡ, ಅಲಂಕೃತವಾದ ದೀಪಸ್ತಬಕ ವಿರಾಜಿತ ಕಾಳಿಕಾ ಮಂದಿರದಲ್ಲಿ ಸ್ವಾತಂತ್ರ್ಯೋತ್ಸವ ನಡೆಯುತ್ತದೆ. ಅದರಲ್ಲಿ ಭಾರತ ಮಾತೆಯೇ ಇಲ್ಲ. ಭರತಸುತ ಅವಳಿಗಾಗಿ ಹುಡುಕುತ್ತಾನೆ. ಕಾಳಿಕಾ ವಿಗ್ರಹದಲ್ಲಿಯೇ ಕಾಣಿಸಿಕೊಂಡ ಜಗದಂಬೆ ‘ನಾನಿನ್ ಅಶರೀರಿ ಮೇಣ್ ವಿರಾಟ್‌ಶರೀರಿ. ಕರ್ಬೊನ್ನ ಸಂಕೋಲೆಯಂ ಕಳಚಿ, ಚೆಂಬೊನ್ನ ಮಿಳಿಗಳಂ ಸ್ವಾತಂತ್ರ್ಯದರ್ಥಮಂ ಬಂಧಿಸದಿರನರ್ಥದಿಂ. ನುಡಿವರೆಡೆಯಿಂ ಮಿಗಿಲ್ ದುಡಿವರೆಡೆ ಸೊಗಸೆನಗೆ! ಆಂತರದ ಶೃಂಖಲೆಗಳೊಳವು ವಜ್ರೋಪಮಂ’ ಎಂದವನಿಗೆ ಅವಳು ದಿವ್ಯದೃಷ್ಟಿ ಯನ್ನು ನೀಡಿ ನವಕಾಲಿಯ ದೃಶ್ಯವನ್ನು ಕಾಣಿಸುತ್ತಾಳೆ. ಮತವೈರ ವಿಷದುರಿಗಳ ಮಧ್ಯದಲ್ಲಿ ಹೋರಾಡುತ್ತಿರುವ ಸ್ವಾತಂತ್ರ್ಯಶಿಲ್ಪಿ ಮಹಾತ್ಮ ಗಾಂಧಿಯನ್ನು ಕಂಡು ಅವನು ಬೆಕ್ಕಸ ಗೊಳ್ಳುತ್ತಾನೆ. ತಾನು ಗಾಂಧೀಜಿಯ ಚೈತನ್ಯಶಕ್ತಿಯಾಗಿ, ಅವನನ್ನು ಹರಸುತ್ತಿರುವುದಾಗಿ ಭಾರತಾಂಬೆ ಉಸಿರುತ್ತಾಳೆ. ‘ಮಗೂ, ಬಲಿದಾನಕುಂಟೆ ಕೊನೆ? ಬಲಿಪರಂಪರೆಯಲ್ತೆ ಸ್ವಾತಂತ್ರ್ಯ ಜೀವನಂ?’.

ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯ ಸಿದ್ದಿ, ಸ್ವಾತಂತ್ರ್ಯಾನಂತರದ ಪರಿಣಾಮಗಳು. ಈ ಮೂರು ಹಂತಗಳ ವಾಸ್ತವಿಕ ಚಿತ್ರವನ್ನು ಪ್ರತಿಮಾಸಂಕೇತಗಳ ಮೂಲಕ ಬಿಡಿಸಿರುವುದರಿಂದ, ನಾಟಕದ ಕಥೆಗೆ ಚಿರವರ್ತಮಾನತ್ವ ಲಭಿಸಿದೆ. ಸ್ವಾತಂತ್ರ್ಯಮೋಕ್ಷಕಾಮಿಗಳಾದ ಭಾರತೀ ಯರನ್ನು ಭರತಸುತ ಸಂಕೇತಿಸುತ್ತಾನೆ. ಕವಿವಾಣಿ ಋಷಿವಾಣಿಗಳು, ಮಡಿದ ಕೋಟಿ ಕೋಟಿ ಜೀವಿಗಳ ಛಾಯಾಧ್ವನಿಗಳು ಭಾರತೀಯರ ಆಶೆ ಆಕಾಂಕ್ಷೆಗಳನ್ನು, ಸ್ವಾತಂತ್ರ್ಯವೀರರ ತ್ಯಾಗ ಬಲಿದಾನಗಳನ್ನು ಪ್ರತಿಧ್ವನಿಸುತ್ತ, ಭರತಖಂಡದ ಅಂತಃಶಕ್ತಿಯ ವಿರಾಟ್ ಸ್ವರೂಪ ವನ್ನೂ ಅವಿನಶ್ವರತೆಯನ್ನೂ ಘೋಷಿಸುತ್ತವೆ. ಲೋಕಶಾಂತಿಗಾಗಿ, ಎಲ್ಲ ದಾಸ್ಯ ರಾಷ್ಟ್ರಗಳ ಮುಕ್ತಿಗಾಗಿ ಭಾರತ ಸ್ವತಂತ್ರವಾಗಬೇಕು, ಪರರಾಷ್ಟ್ರಗಳಿಗೆ ಸಮಗೈಯಾಗಿ ಮೆರೆಯಬೇಕು, ಸ್ವಾತಂತ್ರ್ಯರಕ್ಷಣೆಗೆ ನುಡಿವವರಿಗಿಂತ ದುಡಿವವರು ಬೇಕು, ಸ್ವಾತಂತ್ರ್ಯ ಜೀವನಂ ಬಲಿ ಪರಂಪರೆಯೆಂಬ ಬಲಿದಾನ ತತ್ತ್ವದಿಂದ ಮಾತ್ರ ಸಾರ್ಥಕತೆ ಪಡೆಯುತ್ತದೆಂಬ ದರ್ಶನ ಧ್ವನಿ ಈ ನಾಟಕದುದ್ದಕ್ಕೂ ಅನುರಣಿಸುತ್ತದೆ. ತ್ಯಾಗ ಬಲಿದಾನ ಸ್ವಾತಂತ್ರ್ಯಪರವಾದ ಕುವೆಂಪು ಕವಿತೆಗಳೇ ಈ ನಾಟಕದ ಹೂರಣ. ಭಾರತೀಯರೆಲ್ಲರೂ ಸದಾ ಓದಿ ಮನನ ಮಾಡಬೇಕಾದ ಸ್ವಾತಂತ್ರ್ಯ ಮೀಮಾಂಸೆಯ ರಸವತ್ತಾದ ಕೃತಿಯಿದು.

ಋತಧರ್ಮವನ್ನು ಯಾರೂ ಮೀರುವಂತಿಲ್ಲವಾದರೂ ಪೂಜಾವ್ರತಗಳಿಂದ ಬಲಿದ ಅನುರಾಗಕ್ಕೆ ಅದು ಶರಣಾಗುತ್ತದೆಂಬ, ತಪಸ್ಸಿಗೆ ವಿಶ್ವಚೇತನಗಳೂ ಮಣಿಯುತ್ತವೆಂಬ ಋತಸತ್ಯ ‘ಯಮನ ಸೋಲು’ ನಾಟಕದಲ್ಲಿ ನಿರೂಪಣೆಗೊಂಡಿದೆ. ಪುರಾಣದಲ್ಲಿ ಉಗಮ ಗೊಂಡ, ಕವಿಋಷಿಗಳ ಮಾನಸಾನ್ನದಿಂದ ಪುಷ್ಟಿ ಪಡೆದು, ಪರಂಪರೆಯಲ್ಲಿ ವಿಕಾಸಗೊಂಡ, ಸಾವಿತ್ರಿಯ ಕತೆಯೇ ಈ ನಾಟಕದ ವಸ್ತು. ಕತೆಯಲ್ಲಿ ವ್ಯತ್ಯಾಸವಿಲ್ಲದಿದ್ದರೂ, ಸಂವಿಧಾನ ಕೌಶಲದಿಂದ, ಅರ್ಥಗರ್ಭಿತ ಹಿತಮಿತ ಮೃದು ಪದರಚನೆಯಿಂದ, ಕಲಾತ್ಮಕತೆ ಹಾಗೂ ದರ್ಶನಗಳ ಆಲಿಂಗನದಿಂದ ಇದೊಂದು ಸರ್ವಪ್ರಿಯ ಶ್ರೇಷ್ಠ ನಾಟಕವಾಗಿದೆ.

ನಿಯಮ ಜಾಲವ ಮೀರಿರುವ ನಿಯಮವೊಂದಿಹುದು
ಯಮದೂತ! ನುಡಿಗೆ ನಿಲುಕದ, ಬುದ್ದಿಯರಿಯದಿಹ,
ಅತ್ಯನಿರ್ವಚನೀಯ ತತ್ತ್ವವೊಂದೀ ಸರ್ವ
ವಿಶ್ವವನು ಸರ್ವತ್ರ ತುಂಬಿ ಮರೆಯಾಗಿಹುದು.
ಆ ಪರಮತತ್ತ್ವಸ್ವರೂಪವೇಪ್ರೇಮ!

ಪೂಜೆ ತಪಸ್ಸುಗಳಿಂದ ಮಾತ್ರವೇ ಪರಿಶುದ್ಧವಾದ ಪ್ರೇಮ ಸಂವರ್ಧನೆ ಸಾಧ್ಯವೆಂಬುದಕ್ಕೆ ಪಾರ್ವತಿ ಸಾವಿತ್ರಿಯವರೆ ನಿದರ್ಶನವಾಗಿದ್ದಾರೆ.

ಒಂದೇ ರಾತ್ರಿಯಲ್ಲಿ ನಡೆದ ಬುದ್ಧನ ಜೀವನದ ಮಹತ್ತರ ಸನ್ನಿವೇಶವೊಂದು ‘ಮಹಾರಾತ್ರಿ’ ನಾಟಕದ ವಸ್ತು. ಇಲ್ಲಿ ಕಥೆ ಮುಖ್ಯವಲ್ಲ. ಅದು ಕೇವಲ ಸೂಜಿಮೊನೆ ಯಷ್ಟಿದೆ. ಧ್ಯೇಯಸಾಧನೆಯೇ ಈ ನಾಟಕದ ಜೀವದ್ರವ್ಯ, ಅದರ ಚಾಲಕಶಕ್ತಿ. ಮೌಢ್ಯ ದಾರಿದ್ರ್ಯ ಅಸಮಾನತೆಗಳಿಂದ ಜಗತ್ತನ್ನು ಪಾರುಮಾಡಿ, ಸರ್ವಸೃಷ್ಟಿಯ ಹರ್ಷಕ್ಕಾಗಿ, ಸರ್ವಜೀವರ ಶಾಂತಿಗಾಗಿ, ರಾಜಭೋಗ ರಾಣಿಸುತ ಮೋಹವನ್ನು ತೊರೆದು ಬೆಳಕನ್ನರಸಿ ಹೊರಟ ಆ ಸನ್ನಿವೇಶ ಜಗತ್ತಿನ ಇತಿಹಾಸದಲ್ಲಿಯೇ ಅಪೂರ್ವವಾದದ್ದು. ಆ ರಾತ್ರಿ ಬುದ್ಧನ ಜೀವನದಲ್ಲಿ ಮಾತ್ರವಲ್ಲ, ಜಗತ್ತಿನ ಜೀವನದಲ್ಲಿ ನೂತನಾಧ್ಯಾಯವನ್ನು ತೆರೆಯುತ್ತದೆ. ಲೋಕವೊಡ್ಡಿದ ಆಮಿಷಗಳಿಂದ ವಿಚಲಿತನಾಗದೆ, ಒಳಸೋರದೆ ಅದೇ ತಾನೆ ತನ್ನ ರೂಪವನ್ನು ಹೊತ್ತು ಹುಟ್ಟಿದ ಮಗುವಿನ ವ್ಯಾಮೋಹದಿಂದಾದ ಒಳತೋಟಿ ಯನ್ನು ಗೆದ್ದು, ವೈರಾಗ್ಯವನ್ನು ಹೊದ್ದು, ಜಗತ್ತಿನ ಕತ್ತಲೆಯನ್ನು ಪರಿಹರಿಸಲು ಹೊರಟ ಬುದ್ಧನ ಸಾಹಸೋನ್ನತಿಯನ್ನು ಹೋಲುವ ಮತ್ತೊಂದು ಸಂಗತಿಯನ್ನಿನ್ನೂ ಜಗತ್ತು ಕಾಣಬೇಕಾಗಿದೆ. ರೋಮಾಂಚನಕಾರಿಯಾದ ಈ ಜಗದ್ಭವ್ಯ ಸಂಗತಿಯನ್ನು ವಾಚಕರ ಮತ್ತು ಪ್ರೇಕ್ಷಕರ ಮೈನವಿರೇಳುವಂತೆ ನಾಟಕೀಕರಿಸಿರುವ ಕುವೆಂಪು ಅವರ ಜಾಣ್ಮೆ ಸ್ವೋಪಜ್ಞತೆಗಳು ಮನೋಜ್ಞವಾದವು. ಮುದ್ದಿನ ಕೆಂಡದಂತಿದ್ದ ರಾಹುಲನನ್ನು ಕಂಡಾಗ ಅವನ ಹೃದಯಸಾಗರ ದಲ್ಲೆದ್ದ ತಳಮಳದಲ್ಲಿ, ಚನ್ನನನ್ನು ಸಮಾಧಾನ ಪಡಿಸುವಲ್ಲಿ, ತನ್ನ ವಸ್ತ್ರಾಭರಣಗಳನ್ನು ರಾಲ ಕೈಲಾಸರಿಗೆ ಹಂಚುವಲ್ಲಿ, ಮಾರನೊಡನೆ ನಡಸುವ ವಾಗ್ಯುದ್ಧದಲ್ಲಿ, ಹಾಗೂ ಭಿಕ್ಷುಕನ ಉಟ್ಟರಿವೆಗಳೊಡನೆ ತನ್ನ ಸಿರಿಯುಡುಗೆಗಳನ್ನು ವಿನಿಮಯ ಮಾಡಿಕೊಳ್ಳುವಲ್ಲಿ ಸಿದ್ಧಾರ್ಥನ ಅಚಲನಿಷ್ಠೆ ವ್ಯಕ್ತವಾಗುತ್ತದೆ.

ಸಿದ್ಧಾರ್ಥ ಬುದ್ಧನಾಗುವಲ್ಲಿ, ಜಗತ್ತಿನ ಕತ್ತಲೆಯನ್ನು ಪರಿಹರಿಸುವಲ್ಲಿ ಚನ್ನನ ಪಾತ್ರ ದಂತೆ ಕಂಥಕನ ಪಾತ್ರವೂ ಅಸಾಮಾನ್ಯವಾದದ್ದು.

ನಿನ್ನ ನಡೆಯೊಂದರೊಳು
ಕುಕ್ಕೋಟ ಒಂದೊಂದರೊಳಗಿಂದು ಲಕ್ಷಾಂತ
ರಾತ್ಮರಿಗೆ ಸೊದೆಯುಂಟು. ನಿನ್ನಡಿ ಅದೊಂದರೊಳು
ತಿರೆಯ ಚರಿತೆಯು ಬಿದ್ದು ಮುಳುಗೆದ್ದು ತೇಲುತಿದೆ.
ಅಮಿತ ಸಂಖ್ಯೆಯ ಜನರ ಪುಣ್ಯ ಭಾರವನಿಂದು
ಹೊತ್ತಿರುವೆ

ಸಿದ್ಧಾರ್ಥನ ಈ ಮಾತಿನಲ್ಲಿ ಜಗತ್ತಿನ ಜೀವಿಗಳ ಬಗೆಗಿನ ಪ್ರೇಮ ಅನುಕಂಪ ತಾದಾತ್ಮ್ಯಗಳು ಅಭಿವ್ಯಕ್ತಗೊಳ್ಳುತ್ತವೆ. ಸಿದ್ಧಾರ್ಥನ ಸಾಧನೆಯಲ್ಲಿಇಡೀ ವಿಶ್ವವೇ ನೆರವಾಗುತ್ತದೆನ್ನುವುದಕ್ಕೆ ಯಕ್ಷ ಗಂದರ್ಭ ಕಿನ್ನರರ ಪಾತ್ರವೇ ಸಾಕ್ಷಿಯಾಗಿದೆ.

ಕೇವಲ ಒಂದು ಹನಿಯಲ್ಲಿ ಸಾಗರವನ್ನು, ಒಂದು ಕ್ಷಣದಲ್ಲಿ ಜಗತ್ತನ್ನು, ಒಂದು ಅಂಗಾಂಶದಲ್ಲಿ ಬೃಹದ್ ವೃಕ್ಷವನ್ನು ತೋರುವ ಅಣುವಿನಲ್ಲಿ ವಿಭುವನ್ನು   ತರುವ ಅದ್ಭುತಕಾರ್ಯ ಈ ನಾಟಕದಲ್ಲಿ ನಡೆದಿದೆ. ಒಂದೇ ಒಂದು ಸನ್ನಿವೇಶವನ್ನೆತ್ತಿಕೊಂಡು ಮಹಾಜೀವನವನ್ನು ಕನ್ನಡಿಸುವ, ಸಾಧಕನ ಜೀವನದಲ್ಲಿ ಎದುರಾಗುವ ಮಾನವೀಯ ದೌರ್ಬಲ್ಯ ತಳಮಳಗಳನ್ನು, ಸಂಕಲ್ಪನಿಷ್ಠೆ ಪ್ರೇಮಾನುಕಂಪಗಳ ಮೂಲಕ ಅವುಗಳನ್ನು ಗೆಲ್ಲಬಹುದೆಂಬುದನ್ನು ತೋರಿಸುವ ಈ ನಾಟಕ ವಿಶಿಷ್ಟವಾದದ್ದು.

ಸೀತೆಯ ಚಿತಾರೋಹಣ ಮತ್ತು ಪರಿತ್ಯಾಗ ಪ್ರಸಂಗಗಳು ರಾಮಾಯಣದಲ್ಲಿ ಬರುವ ಎರಡು ಅಪರಿಹಾರ್ಯ ಸಮಸ್ಯೆಗಳೆಂದು ಹೇಳುವುದುಂಟು. ಅವು ವಾಸ್ತವವಾಗಿ ಸಮಸ್ಯೆ ಗಳಲ್ಲ. ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಸಾಮಾಜಿಕ ರೂಢಿಗಳಿಗೆ ಹಾಗೂ ಪುರುಷನ ಸ್ವಾರ್ಥಾಹಂಕಾರಗಳಗೆ ಅವು ನಿದರ್ಶನಗಳೆಂಬುದನ್ನು ಮರೆಯಲಾಗದು, ಸೀತಾಪರಿತ್ಯಾಗದ ಹೃದಯವಿದ್ರಾವಕವಾದ ಸನ್ನಿವೇಶವನ್ನು ಲಕ್ಷ್ಮೀಶ, ಮುದ್ದಣರು ಅತ್ಯಂತ ಮನೋಜ್ಞವಾಗಿ ರಸಾತ್ಮಕವಾಗಿ ಚಿತ್ರಿಸಿದ್ದಾರೆ. ಕುವೆಂಪು ಅವರ ಪೂರ್ಣ ದೃಷ್ಟಿಗೆ ಆ ಸನ್ನಿವೇಶ ವಾಲ್ಮೀಕಿಯ ಭಾಗ್ಯವೆಂಬಂತೆ ತೋರುತ್ತದೆ. ಭಾರತೀಯರ ಮೇಲೆ ವಾಲ್ಮೀಕಿ ಮತ್ತು ಶ್ರೀ ಮದ್ರಾಮಾಯಣ ಬೀರಿರುವ ಪ್ರಭಾವವನ್ನೂ, ಜಾಗತಿಕ ಸಾಂಸ್ಕೃತಿಕ ಇತಿಹಾಸದ ಮೇಲೆ ಆ ಎರಡು ಶಕ್ತಿಗಳು ಒತ್ತಿರುವ ಮುದ್ರೆಯ ಪರಿಣಾಮವನ್ನೂ ಗಮನಿಸಿದಾಗ, ವಾಲ್ಮೀಕಿಯ ಭಾಗ್ಯ ಎಂಬ ಹೆಸರು ಈ ನಾಟಕಕ್ಕೆ ಎಷ್ಟು ಉಚಿತ, ಅರ್ಥಪೂರ್ಣ ಎಂಬುದು ಸ್ಪಷ್ಟವಾಗದಿರದು.

ಈ ನಾಟಕದ ಕೆಲವೆಡೆಗಳಲ್ಲಿ ಲಕ್ಷ್ಮೀಶ ಮುದ್ದಣರ ಮಾತುಗಳನ್ನುಹಾಗೆ ಹಾಗೆಯೇ ಬಳಸಿಕೊಂಡಿದ್ದರೂ, ಈ ಸನ್ನಿವೇಶದಲ್ಲಿ ಅವುಗಳಿಂದ ಮೂಡುವ ಅರ್ಥವೇ ಬೇರೆ, ಧ್ವನಿಯೇ ಬೇರೆ. ಆ ಮಾತುಗಳಲ್ಲಿ ಮರುಕವಿದೆ, ಅನುಕಂಪೆಯಿದೆ, ಕನಿಕರವಿದೆ, ಕಟಕಿಯಿದೆ, ಅಣಕವಿದೆ, ಹಾಸ್ಯವಿದೆ, ಆತ್ಮತಿರಸ್ಕಾರವಿದೆ, ಪತಿಯಾದೇಶದ ಕಟುತ್ವ ಚಿರದುಃಖಿನಿ ಆ ಪತಿವ್ರತೆಗೆ ಗೊತ್ತಿಲ್ಲದಿದ್ದರೂ, ಮನಕರಿವಾಗದಿದ್ದರೂ ಎದೆಗರಿವಾಗುವ ದುರ್ದಮನೀಯ ವಾದ ದುಶ್ಯಕುನರೂಪದ ಸಂಕಟ ಅವಳನ್ನು ಬಾಧಿಸುತ್ತದೆ. ಅಣ್ಣನ ಆಜ್ಞೆಯಿಂದ ತನ್ನತ್ತಿಗೆಗೆ ಸಂಭವಿಸಬಹುದಾ ಅಪಾಯಗರಗಸ ಲಕ್ಷ್ಮಣನ ಎದೆಯನ್ನು ಸೀಳುತ್ತಿದೆ. ಆ ನಿರ್ಜನಾರಣ್ಯ ದಲ್ಲಿ ಶ್ರೀರಾಮಾಜ್ಞೆಯನ್ನು ಸಾರುವ, ಸಾರಿದ ನಂತರದ ದೃಶ್ಯವನ್ನೆದುರಿಸುವ ಶಕ್ತಿ ಆ ಇಂದ್ರಜಿತುಸೂದನನಿಗೂ ಇಲ್ಲವಾಗಿದೆ. ಅಂಥದೊಂದು ಅಪೂರ್ವ ಸೂಕ್ಷ್ಮ ಸಂದಿಗ್ಧ ಸಂದರ್ಭವನ್ನು ಕರುಣೆಯೇ ಹೊನಲಿಡುವಂತೆ ನಾಟಕಕಾರರು ನಿರ್ವಹಿಸಿದ್ದಾರೆ. ಲಕ್ಷ್ಮೀಶ ಮುದ್ದಣರ ಕತೆಯ ಕೊಂಬೆಯ ಮೇಲೆ ತಮ್ಮ ಕಲ್ಪನೆಯ ದರ್ಶನದ ಕಸಿಯನ್ನು ಕಟ್ಟಿ, ಆ ಈ ಶೈಲಿಗಳೆರಡನ್ನು ಹಾಳತವಾಗಿ ಹದವಾಗಿ ಬೆಸೆದು ಸೃಷ್ಟಿಸಿದ ಈ ನಾಟಕ ವಿನೂತವಾದದ್ದು.

ಇಲ್ಲಿಯ ಒಂದೊಂದು ವಾಕ್ಯವೂ ಪದವೂ ರಸಭಾವಾರ್ಥಗಳಿಂದ ಬಿಣ್ಬಾಗಿವೆ. ಇಲ್ಲಿ ಯಾವುದೂ ವ್ಯರ್ಥವಲ್ಲ, ಯಾವುದೂ ಅನುಚಿತವಲ್ಲ, ಎಲ್ಲೂ ಮಾರ್ಮಿಕ. “ಬಟ್ಟೆ ದಪ್ಪಿದೆನೊ ಏನೋ ಎಂದು ಕಳವಳಂ, ರಘುಕುಲೇಶಂ ಅರಮನೆಯೊಳಾನಂದದಿಂದಿರ್ಪಂ ರಘುಕುಲೋದ್ವಹಂ ನೇವರಿಸಿ ಬಿಟ್ಟು ಕಾಂತಾರಕ್ಕೆ ಕಳುಹಿ ಬಾ ಎಂದೆನಗೆ ನೇಮಿಸಿದೊಡೆ” ಎನ್ನುವ ಲಕ್ಷ್ಮಣನ ಮಾತುಗಳಲ್ಲಿ ‘ಆ ರಘುನಾಥನೇಕಾಕಿಯಾಗಿರ್ಪನಲ್ತೆ?’ ‘ಎನಗೆ ಬಳುವಳಿ ಬಂದಾವಿನ ತಬ್ಬಲಿ ಎಳಗರುವಂ ಬಡವಾಗದಂತೆ ನೋಡಿಕೊಳ್ವುದೆಂದು ನಿನ್ನಿನಿಯಳ್ಗೆ ಪೇಳಯ್!’ ಎಂಬ ಸೀತೆಯ ಮಾತುಗಳಲ್ಲಿ ರಾಮ ಸೀತೆ ಲಕ್ಷ್ಮಣರ ಮನಸ್ಸುಗಳ ಒಳನೋಟ ವಿದೆ. ‘ನೀನೆನ್ನ ಮಹಕಾವ್ಯದ ಸವಿಗಣ್ಣಲ್ತೆ? ಕಥಾನಾಯಿಕೆಯಲ್ತೆ? ವಾಲ್ಮೀಕಿಯ ಭಾಗ್ಯ ಮಲ್ತೆ!’ ಎನ್ನುವ ವಾಲ್ಮೀಕಿಯ ಘೋಷಣೆಯಲ್ಲಿ ಈ ನಾಟಕದ ಪರಮಾರ್ಥವಿದೆ, ಋತಶಕ್ತಿಯ ವಿಜಯ ಸೂಚನೆಯಿದೆ.

ಷೇಕ್ಸ್‌ಪಿಯರ್‌ನ ಪ್ರಭಾವಕ್ಕೊಳಗಾಗಿ ರಚನೆಗೊಂಡ ಎರಡು ನಾಟಕಗಳಲ್ಲಿಬಿರುಗಾಳಿ ಮೊದಲನೆಯದು. ಇದರಲ್ಲಿ ಎರಡು ಭಾಗ ಕುವೆಂಪು ಪ್ರತಿಭೆ, ಒಂದು ಭಾಗ ಷೇಕ್ಸ್‌ಪಿಯರ್ ಪ್ರತಿಭೆ ಮೇಳವಿಸಿವೆಯೆಂದು ಹೇಳಬಹುದು. ಈ ನಾಟಕ ಮೇಲುನೋಟಕ್ಕೆ ಐತಿಹಾಸಿಕವೆಂದು ತೋರಿದರೂ ಒಳಹೊಕ್ಕು ನೋಡಿದಾಗ ಕಾಲ್ಪನಿಕವೆಂಬುದೇ ಸರಿ. ಭಾರತೀಯ ಸಮಾಜಕ್ಕೆ ಪರಕೀಯವಾಗಿ ಕಾಣಬಾರದು. ಭಾರತೀಯ ಸಾಂಸ್ಕೃತಿಕ ಪರಂಪರೆಗೆ ವಿಭಿನ್ನವಾಗಿ ತೋರ ಬಾರದು, ಭಾರತೀಯ ಮನಸ್ಸನ್ನು ಸುಲಭವಾಗಿ ಪ್ರವೇಶಿಸುವಂತಿರಬೇಕು ಎಂಬ ದೃಷ್ಟಿಯಿಂದ ಮೂಲದ ಜಾಡಿನಲ್ಲಿಯೇ ಕತೆಯನ್ನು ಬೆಳೆಸಲಾಗಿದೆ; ಆದರೆ ಪಾತ್ರಗಳು ವಿಕಾಸಗೊಳ್ಳುವಾಗ, ಕೆಲವುಕಡೆ ಮೂಲದ ಸಂಭಾಷಣೆಗಳು ಭಾಷಾಂತರಗೊಳ್ಳಬಹುದು, ಛಾಯಾಂತರವಾಗ ಬಹುದು; ಹಲವು ಕಡೆ ಕುವೆಂಪು ಅವರ ಪ್ರತಿಭೆಯೇ ಪ್ರಜ್ವಲಿಸಬಹುದು. ಅಲ್ಲಿಯ ಪ್ರಾಸ್ಟೆರೊ, ಮಿರಾಂಡ, ಅಲೊನ್ಸೊ, ಆಂಟೋನಿಯೋ, ಗಂಜಾಲೋ, ಫರ್ಡಿನೆಂಡ್, ಏರಿಯಲ್ ಮತ್ತು ಕಾಲಿಬಾನ್ ಕ್ರಮವಾಗಿ ಇಲ್ಲಿ ಭೈರವನಾಯಕ, ಗೌರಾಂಬೆ, ರಣನಾಯಕ, ರುದ್ರನಾಯಕ, ಜಯದೇವ, ಶಿವನಾಯಕ, ಕಿನ್ನರ ಮತ್ತು ಶನಿಶಕ್ತಿಗಳಾಗಿದ್ದಾರೆ.

ನಾಟಕ ಪ್ರಾರಂಭವಾಗುವ ಹೊತ್ತಿಗೆ, ನಗರದರಸ ರಣನಾಯಕನ ನೆರವಿನಿಂದ, ತಮ್ಮ ರುದ್ರನಾಯಕನ ಒಳಸಂಚಿನಿಂದ ರಾಜ್ಯವನ್ನು ಕಳೆದುಕೊಂಡ ಭೈರವನಾಯಕ ದ್ವೀಪಕ್ಕೆ ಬಂದು ಹನ್ನೆರಡು ವರ್ಷಗಳಾಗಿವೆ. ದೀರ್ಘಕಾಲದ ತಪಸ್ಸಿನಿಂದವನು ಅಲೌಕಿಕ ಶಕ್ತಿಯನ್ನು ಸಂಪಾದಿಸಿಕೊಂಡು, ಕಿನ್ನರ ಶನಿಯರಿಂದ ತನಗೆ ಬೇಕಾದಂತೆ ದುಡಿಸಿಕೊಳ್ಳುತ್ತಾನೆ. ರಣ ನಾಯಕ, ರುದ್ರನಾಯಕ, ಶಿವನಾಯಕ ಜಯದೇವರಿದ್ದ ದೋಣಿ ಬಿರುಗಳಿಗೆ ಸಿಕ್ಕಿ ತತ್ತರಿಸಿ, ಕಿನ್ನರನ ನೆರವಿನಿಂದ ದ್ವೀಪದ ದಡ ಸೇರುತ್ತಾರೆ. ಅವನ ನಿಯಂತ್ರಣಕ್ಕೊಳಗಾಗುತ್ತಾರೆ. ಅವನೊಡ್ಡಿದ ಉಪಾಯದಿಂದ ಶಿವನಾಯಕ ಭೈರವಗೌರಾಂಬೆಯರ ಹದ್ದುಬಸ್ತಿನೊಳಗೆ ಬರುತ್ತಾನೆ. ಶಿವನಾಯಕ ಗೌರಾಂಬೆಯರ ಪ್ರೇಮ ಸಿದ್ದಿಯಿಂದ ಭೈರವ ತೃಪ್ತನಾಗುತ್ತಾನೆ. ರಣನಾಯಕನ ಪರಿವಾರದ ಮುಂದೆ ತನ್ನ ರಹಸ್ಯವನ್ನು ರಟ್ಟುಮಾಡುವಲ್ಲಿಗೆ ಒಂದು ದಿನದ ನಾಟಕ ಮುಕ್ತಾಯವಾಗುತ್ತದೆ. ಕೆಳದಿಯಲ್ಲಿ ಮದುವೆ ದಿಬ್ಬಣಗಳು ಮುಗಿದು, ಅವನು ತಪೋನಿರತನಾಗುತ್ತಾನೆಂಬ ಸೂಚನೆಯೂ ನಾಟಕಾಂತ್ಯದಲ್ಲಿ ಮಿಂಚುತ್ತದೆ.

ಮುಯ್ಗೆ ಮುಯ್ಯಂ ತೀರ್ಜಿಕೊಳ್ವುದದು ಜಸಮಲ್ಲ?
ದಂಡನೆಯು ದೊಡ್ಡವರ ಕಾರ್ಯಮಾಗದು. ಕ್ಷಮೆಯೆ
ಪುಣ್ಯಾತ್ಮರಿಗೆ ಹಿರಿಯಪೊಂದೊಡಿಗೆ

ಎಂಬಂತೆ ಈ ನಾಟಕದ ಸಂದೇಶಸಾರ. ತಪಶ್ಯಕ್ತಿಗೆ ಪ್ರಕೃತಿಯೂ ಶರಣಾಗುತ್ತದೆಂಬ, ಅದೇ ಈ ನಾಟಕದ ಜಾಲಕಶಕ್ತಿಯೆಂಬ, ಅಂತ್ಯದಲ್ಲಿ ಸಾತ್ವಿಕ ಶಕ್ತಿಗೆ ಗೆಲವೆಂಬ, ಅದರ ಪ್ರಭಾವದಿಂದ ದುರ್ಜನರೂ ಪರಿವರ್ತನೆಗೊಳ್ಳುತ್ತಾರೆಂಬ ವಿಶ್ವಸತ್ಯಕ್ಕೆ ಇದೊಂದು ಪ್ರತಿಮೆಯಾಗಿದೆ. ಅನ್ನಮಯಕೋಶದಿಂದ ವಿಜ್ಞಾನಮಯಕೋಶದ ತನಕ ಜರುಗುವ ವಿಕಾಸಕ್ಕೆ ಈ ನಾಟಕವೊಂದು ಸಂಕೇತವಾಗಿರುವಂತಿದೆ.

ಇದು ಕನ್ನಡಕ್ಕೆ ‘ಹ್ಯಾಮ್ಲೆಟ್ ಕಾವ್ಯ’ ಎಂದು ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದ್ದೇ ತಡ, ಆ ವಾಕ್ಯದ ವಿವರಣೆಯ ಕಡೆಗೆ ಗಮನ ಹರಿಸದೆಯೆ ವಿಮರ್ಶಕರು ‘ರಕ್ತಾಕ್ಷಿ’ ಹ್ಯಾಮ್ಲೆಟ್ ನಾಟಕದ ಭಾಷಾಂತರವೆಂದು ಸಾರಿಬಿಟ್ಟರು. ಕುವೆಂಪು ಹ್ಯಾಮ್ಲೆಟ್ ನಾಟಕವನ್ನು ಅಧ್ಯಯನ ಮಾಡಿದ್ದರು, ನಿಜ. ಆ ಅಧ್ಯಯನದ ಪ್ರಭಾವ ಅವರಮನಸ್ಸಿನಲ್ಲಿ ಕಾವು ಕೂತಿದ್ದುದೂ ದಿಟ. ಆದರದನ್ನವರ ಪಕ್ಕದಲ್ಲಿಟ್ಟುಕೊಂಡು ಭಾಷಾಂತರಮಾಡಿದರೆಂಬುದು ಮಾತ್ರ ಬೆಪ್ಪುತನ. ಎರಡು ನಾಟಕಗಳ ಹೆಸರುಗಳಲ್ಲಿಯೇ ಅಜಗಜಾಂತರವಿದೆ. ಹೆಸರು ಸಹ ನಾಟಕದ ವಿನ್ಯಾಸ ವಿಕಾಸಗಳನ್ನು ನಿರ್ಧರಿಸುತ್ತದೆನ್ನುವುದನ್ನು ಮರೆಯುವಂತಿಲ್ಲ. ಇಲ್ಲಿಯ ಪಾತ್ರಗಳು ಅಲ್ಲಿಯ ಪಾತ್ರಗಳ ಇಂಗಾಲ ಪ್ರತಿಗಳಲ್ಲ. ಅವು ಪರಸ್ಪರಾತಿಭಿನ್ನ ಸ್ವತಂತ್ರ. ಬಸವಯ್ಯ ಹ್ಯಾಮ್ಲೆಟ್ಟನಿಗಾಗಲಿ, ರುದ್ರಾಂಬೆ ಒಫಿಲಿಯಾಳಿಗಾಗಲಿ ಕಿಂಚಿತ್ತೂ ಹೋಲಿಕೆಯಿಲ್ಲ. ಇಲ್ಲಿ ಬಸವಯ್ಯನನ್ನು ದೇಶೋಚ್ಛಾಟನೆ ಮಾಡುವ ಸಂಗತಿಯಾಗಲಿ, ನಾಟಕಮಂಡಲಿಯೊಂದು ರಾಜನೊಬ್ಬನ ಮರಣದ ಕತೆಯನ್ನು ಕಟ್ಟಿ ಮಲತಾಯಿ ಮತ್ತು ಅವಳ ಪ್ರಿಯಕರನ ಮುಂದೆ ಆಡಿಸುವ ಪ್ರಸಂಗವಾಗಲಿ ಇಲ್ಲ. ಎರಡೂ ನಾಟಕಗಳ ಅಂತ್ಯ ದಲ್ಲಿಯೂ ಸಾದೃಶ್ಯವಿಲ್ಲ. ರೌದ್ರಯುಕ್ತವಾದ ದುರಂತತೆಯ ಘೋರ ಪರಿಣಾಮ ರಕ್ತಾಕ್ಷಿ ಯಲ್ಲಿ ಉಗ್ರತಮ ಭಯಂಕರವಾಗಿ ಅಭಿವ್ಯಕ್ತಗೊಂಡಿದೆಯೆಂದೇ ಹೇಳಬಹುದು. ಎರಡು ನಾಟಕಗಳಿಗೂ ಭೂತದ ಪ್ರಸಂಗವೊಂದೇ ಸಮಾನ.

ಪ್ರಣಯಭಂಗ ವಿವಂಚನೆ, ರಾಜದ್ರೋಹ, ಭರ್ತೃದ್ರೋಹ ಮತ್ತು ಪ್ರತೀಕಾರ ಬುದ್ದಿಗಳು ಈ ನಾಟಕವನ್ನು ಮುನ್ನಡೆಸುವ ಕೀಲೆಣ್ಣೆ ಕಲ್ಲೆಣ್ಣೆ ಹಬೆಗಳಾಗಿವೆ. ಸಮಾಜದ ಶಾಂತಿಯನ್ನು ಕದಡುವ ಬಿದನೂರಿನ ರಾಣಿ ಚೆಲುವಾಂಬೆಯ ಅತೃಪ್ತಕಾಮಾಗ್ನಿ ನಿಂಬಯ್ಯ ಶಿವಯ್ಯರ ಅತಿ ಕಾಮುಕತೆ ನಾಟಕಕ್ರಿಯೆಯನ್ನು ಬೇಗಬೇಗ ದುರಂತತೆಯ ಕಡೆಗೆ ಚುರುಕುಗೊಳಿಸುತ್ತದೆ. ಇದರಲ್ಲಿ ವಿಧಿಯ ಪಾತ್ರದ ಪರಿಣಾಮವೂ ಇದ್ದೇ ಇದೆ. ಜಗತ್ತಿನ ನಾನಾ ದುರಂತಗಳಿಗೆ ಪ್ರತೀಕಾರಮನೋಭಾವವೇ ಮೂಲಕಾರಣವೆನ್ನುವುದಕ್ಕೆ ಬಸವಯ್ಯ ಶಿವಯ್ಯ ರುದ್ರಾಂಬೆ ಹೊನ್ನಯ್ಯರ ಜೀವನಗಳೇ ನಿದರ್ಶನಗಳಾಗಿವೆ. ‘ಓ ರಕ್ತಾಕ್ಷಿ, ಮುಯ್ಯಿ ತೀರಿಸಿಕೋ  ಎನ್ನುವ ಬಸವಯ್ಯನ ಮಾತಿನ ಮತ್ತು ಮುಯ್ಗೆ ಮುಯ್ಯಂ ತೀರ‌್ಚಿಕೊಳ್ಳುವ ಜಸಮಲ್ಲ’ ಎಂಬ ಬಿರುಗಾಳಿಯ ಭೈರವನಾಯಕನ ಮಾತಿನ ಅಂತರವನ್ನು ಗ್ರಹಿಸಬಹುದು.

ಕೆಳದಿಯ ನಾಯಕ ಮನೆತನಕ್ಕೆ ಸಂಬಂಧಿಸಿದ ಐತಿಹಾಸಿಕ ವಸ್ತುವಿನ ಹಂದರದ ಮೇಲೆ ನಾಟಕದ ಹೆಬ್ಬಳ್ಳಿಯನ್ನು ಹಬ್ಬಿಸಲಾಗಿದೆ. ಕೆಳದಿಯ ದೊರೆ ಬಸವಪ್ಪನಾಯಕನಿಗೆ ಚೆನ್ನಮ್ಮಾಜಿ ವೀರಮ್ಮಾಜಿಯರೆಂಬ ಇಬ್ಬರು ಪತ್ನಿಯರಿದ್ದರೂ, ಮಕ್ಕಳಿಲ್ಲದ ಕಾರಣಕ್ಕಾಗಿ ಚೆನ್ನಬಸವನಾಯಕನನ್ನು ದತ್ತು ತೆಗೆದುಕೊಳ್ಳಲಾಗುತ್ತದೆ. ಬಸವಪ್ಪನಾಯಕನ ಮರಣಾನಂತರ, ಹೆಸರಿಗೆ ಚೆನ್ನಬಸವನಾಯಕ ಪಟ್ಟವೇರಿದರೂ, ವೀರಮ್ಮಾಜಿಯೇ ರಾಜ್ಯ ಸೂತ್ರಗಳನ್ನು ಹಿಡಿದುಕೊಳ್ಳುತ್ತಾಳೆ. ಸೇನಾಧಿಪತಿ ನಿಂಬಯ್ಯನೊಡನೆಯೆ ಅವಳ ಸ್ನೇಹ ಚನ್ನಬಸವನಾಯಕನಿಗೆ ತಿಳಿದು, ತಮ್ಮ ಮೇಲೆ ಅವನು ತಿರುಗಿ ಬೀಳಬಹುದೆಂದು ಗೊತ್ತಾ ದಾಗ, ವೀರಮ್ಮಾಜಿ ದತ್ತುಮಗನನ್ನು ಕೊಲ್ಲಿಸಿ, ಸಿಂಹಾಸನವೇರಿ, ಸೋಮಶೇಖರ ಎಂಬುವನನ್ನು ದತ್ತುತೆಗೆದುಕೊಳ್ಳುತ್ತಾಳೆ. ಅವಳೊಡ್ಡಿದ ಹಣದ ಅಮಿಷಕ್ಕೆ ಮೋಹಗೊಳ್ಳದೆ ಹೈದರಾಲಿ ಬಿದನೂರನ್ನು ಮುತ್ತಲಾಗಿ ರಾಣಿ ಕೌಲೇದುರ್ಗಕ್ಕೆ ಓಡಿಹೋಗುತ್ತಾಳೆ. ಅಲ್ಲವಳು ಹೈದರಾಲಿಗೆ ಸೆರೆಯಾಗುತ್ತಾಳೆ. ಈ ಕತೆ ನಾಟಕಕ್ಕೆ ಕೇವಲ ತಡಿಕೆ.

ಚೆನ್ನಬಸವನಾಯಕನೇ ನಾಟಕದ ಬಸವಯ್ಯನಾದರೂ, ತೀರಿಕೊಂಡ ದೊರೆಯ ಔರಸಪುತ್ರನೇ ಹೊರತು ದತ್ತುಪುತ್ರನಲ್ಲ. ಔರಸಪುತ್ರನಾದ್ದರಿಂದಲೇ ಮಲತಾಯಿಯ ದುರ್ನಡತೆಯ ಬಗೆಗಿನ ಅವನ ಕ್ರೋಧ, ತಂದೆಯ ಅಸಹಜ ಮರಣದ ಬಗೆಗಿನ ಕುದಿ ಸಂತಾಪ ಶಂಕೆಗಳು, ಮತ್ತು ಭೂತ ಪ್ರಸಂಗಗಳು ಅತ್ಯಂತ ಸಹಜವಾಗಿ ತೋರುತ್ತವೆ. ನಾಟಕದ ರಾಣಿ ಚೆಲುವಾಂಬೆ ಬಸವಯ್ಯನನ್ನು ಕೊಲ್ಲಿಸಲು ಸಿದ್ಧಳಾಗಿಲ್ಲವೆಂದು ಅವಳ ಮಾತಿನಿಂದಲೆ ಸ್ಪಷ್ಟವಾಗುತ್ತದೆ. ಆ ಕೊಲೆ ವಿಷಯಲಂಪಟ ಶಿವಯ್ಯನಿಗೆ ಮೀಸಲು. ಶಿವಯ್ಯ, ಹೊನ್ನಯ್ಯ, ಮಹಮ್ಮದಾಲಿ, ಸಂನ್ಯಾಸಿ, ಬ್ರಹ್ಮಚಾರಿ, ತಿಮ್ಮಜಟ್ಟಿ, ಕೆಂಚಣ್ಣ, ಸಿಂಗಣ್ಣ, ಲಿಂಗಣ್ಣ, ರುದ್ರಾಂಬೆಯೇ ಮೊದಲಾದ ಹೊಸ ಪಾತ್ರಗಳ ಸೃಷ್ಟಿ ನಾಟಕದ ಪೂರ್ಣ ಬೆಳವಣಿಗೆಗೆ ಮತ್ತು ತಾಂತ್ರಿಕ ಯಶಸ್ಸಿಗೆ ಅನಿವಾರ್ಯವಾಗಿತ್ತು. ನಾಯಕಪಾತ್ರದಿಂದ ಹಿಡಿದು ಸಹಾಯಕ ಪಾತ್ರದವರೆಗೆ ಒಂದೊಂದೂ ಉಚಿತಪ್ರಮಾಣದಲ್ಲಿ ವಿಕಾಸಗೊಂಡಿವೆ ಯೆಂಬುದನ್ನು ಗಮನಿಸಬೇಕು. ಲಿಂಗಣ್ಣನ ಪಾತ್ರದ ಪರಿಪಕ್ವ ಜೀವನದ ಉದಾತ್ತತೆ, ರಕ್ತಾಕ್ಷಿಯ ಪಾತ್ರದ ಅನುಪಮ ಭೀಕರ ತೇಜೋವಂತಿಕೆ ನಾಟಕ ಸಾಹಿತ್ಯದಲ್ಲಿಯೇ ವಿರಳ. ಕಥಾವಸ್ತುವಿನ ನಾವೀನ್ಯದಲ್ಲಿ, ಸನ್ನಿವೇಶ ಸಂದರ್ಭಗಳ ಸಂವಿಧಾನ ಕೌಶಲದಲ್ಲಿ, ಪಾತ್ರಪೋಷಣೆಯಲ್ಲಿ, ಪಾತ್ರಾನುರೂಪವಾದ ಸಂಭಾಷಣಾಶೈಲಿಯಲ್ಲಿ ದೃಶ್ಯಾವಳಿಯ ಹೊಂದಾಣಿಕೆಯಲ್ಲಿ ಕುವೆಂಪು ಅವರ ಸ್ವತಂತ್ರ ನಾಟಕೀಯ ಪ್ರತಿಭೆ ಮಿರುಗುತ್ತದೆ.

ಇದೊಂದು ಅಪ್ಪಟ ಅಪೂರ್ವ ರುದ್ರನಾಟಕವೆಂಬುದರಲ್ಲಿ ಸಂಶಯ ಲವಲೇಶ ವಿಲ್ಲ.ದುರಂತವೇ ಭಾರತೀಯ ಪ್ರಧಾನ ಧರ್ಮವಲ್ಲ. ಜೀವನದಲ್ಲಿ ಅದೇ ಶಾಶ್ವತವಲ್ಲ. ಸುಖವಿಲ್ಲದೆ ದುಃಖವಿಲ್ಲ, ದುಃಖವಿಲ್ಲದೆ ಸುಖವಿಲ್ಲ, ಅವೆರಡೂ ಒಂದನ್ನೊಂದು ಹಿಂಬಾಲಿಸುತ್ತವೆಂಬ, ಸಮಸ್ತ ಜೀವನವ್ಯಾಪಾರಗಳು ಶುಭದಲ್ಲಿ ಅಂತ್ಯವಾಗುತ್ತವೆಂಬ ದಾರ್ಶನಿಕ ಸೂಚನೆಯೂ ಮರಣೋನ್ಮುಖವಾದ ಹೊನ್ನಯ್ಯನ ಮಾತಿನಲ್ಲಿ ಅರಳುತ್ತದೆ.

ತುದಿಗೆಲ್ಲ ಸೊಗವಹುದು! ನನ್ನ ನುಡಿಯನು ನಂಬು!
ನೂರು ಜನ್ಮದ ಬೇವು ನೂರು ಜನ್ಮಕೆ ಬೆಲ್ಲ!
ನೂರು ನಿಟ್ಟುಸಿರುಗಳು ಸೇರಿದರೆ ಒಂದು ನಗು
ಹೊಮ್ಮುವುದು! ನೆಚ್ಚಿರಲಿ ನೆಚ್ಚಿರಲಿ! ನೆಚ್ಚಿರಲಿ!

ಲಕ್ಷ್ಮೀಶನ ಜೈಮಿನಿಭಾರತಾಂತರ್ಗತವಾದ ಚಂದ್ರಹಾಸನ ಕತೆಯನ್ನು ಮಾತ್ರವಲ್ಲ, ಕೆಲವೊಮ್ಮೆ ಅವನ ಮಾತುಗಳನ್ನು ಸಹ ತಮ್ಮ ಪೂರ್ಣದೃಷ್ಟಿಯ ದರ್ಶನಾಭಿವ್ಯಕ್ತಿಗಾಗಿ ಅದೇ ಹೆಸರಿನ ಈ ನಾಟಕದಲ್ಲಿ ಬಳಸಿಕೊಂಡಿದ್ದಾರೆ. ನಾಟಕದ ಪ್ರತಿನಾಯಕ ಕುಂತಳ ರಾಜ್ಯದ ಮಂತ್ರಿ. ದುಷ್ಟಬುದ್ದಿಯ ಏಕಮಾತ್ರ ಸದ್ಗುಣವೆಂದರೆ ಪುತ್ರವ್ಯಾಮೋಹ. ಸ್ವಾರ್ಥಕ್ಕಾಗಿ ಮಕ್ಕಳ ಅಭ್ಯುದಯಕ್ಕಾಗಿ ಎಂಥ ಘೋರ ದುಷ್ಕರ್ಮವನ್ನಾದರೂ ಎಸಗಬಲ್ಲ ಪಾಪಿ, ನಿರ್ದಯಿಯವನು. ವಿಪರೀತ ಪುತ್ರವ್ಯಾಮೋಹ ದುಷ್ಟಬುದ್ದಿಯೊಡನೆ ತೆಕ್ಕೆಹಾಕಿ ಕೊಂಡಾಗ ದೇಶಕ್ಕೆ, ಧರ್ಮಕ್ಕೆ, ನ್ಯಾಯಕ್ಕೆ ಹಾನಿಯೊದಗುತ್ತದೆಂಬುದು ಎಲ್ಲ ದೇಶಗಳಲ್ಲಿ, ಎಲ್ಲ ಯುಗಗಳಲ್ಲಿ ಗೋಚರವಾಗಿರುವ ಸತ್ಯ. ಭಕ್ತಿ ಸತ್ತ್ವದ ಮುಂದೆ, ವಿಧಿಯಿಚ್ಛೆಯೆದುರಿಗೆ ಎಂಥ ವಿಲಯೋಪಮ ದುಷ್ಟಶಕ್ತಿಯಾದರೂ ಸೋತುಹೋಗುತ್ತದೆಂಬುದು ಈ ನಾಟಕದ ಸಂದೇಶ.

ಬಿದಿಯ ತಿದ್ದಲು ನಾವುಗೆಯ್ವ ಪ್ರಯತ್ನವೇ
ತಳ್ಳುವುದು ನಮ್ಮನಾ ಬಿದಿಯ ಒಡ್ಡಿದ ಬಲೆಗೆ!

ಎನ್ನುವ ದುಷ್ಟಬುದ್ದಿಯ ಸತಿ ತಾರಕಾಕ್ಷಿಯ ಭಣಿತೆ ಇಡೀ ನಾಟಕದಲ್ಲೆಲ್ಲ ಅನುರಣಿಸುತ್ತದೆ. ‘ಬಾಳೆಂಬುದಿದು ಬಿದಿಯ ಮೂದಲಿಕೆ’ ಎಂಬ ಸತ್ಯ ದುಷ್ಟಬುದ್ದಿಗೂ ಕೊನೆಯಲ್ಲಿ ಅರಿವಾಗುತ್ತದೆ. ‘ಮತ್ಸರದಿ ಬಾಳುವವರು, ಕರುಬುವವರು, ಅತ್ಯಾಶೆಮಾಡುವವರೆಲ್ಲ ಬಂದೆನ್ನ ನೋಡಿ ’ಎಂಬ ಆತನ ಪಶ್ಚಾತ್ತಾಪಧ್ವನಿ ಲೋಕಕ್ಕೆ ಎಚ್ಚರಿಕೆ ಗಂಟೆಯಾಗಿದೆ.

ಸತ್ಕಾರ್ಯಕ್ಕಡ್ಡವಾದ ವಿಘ್ನಗಳೆಲ್ಲ ಅದರ ಮಹಿಮೆಯಿಂದಲೇ ಅದಕ್ಕಿಂಧನವಾಗುತ್ತವೆಂಬ ಕುವೆಂಪು ಕಾಣ್ಕೆ ಅವರ ಸಾಹಿತ್ಯದ ಕಣ್ಣಾಗಿದೆ, ಬದುಕಿನ ಉಸಿರಾಗಿದೆ. ಜಗತ್ತಿನಲ್ಲೆಲ್ಲ ಚಂದ್ರಿಕೆಯನ್ನು ಪಸರಿಸಬೇಕಾದ ಚಂದ್ರಹಾಸ ತಬ್ಬಲಿಯಾದರೂ ಅವನಿಗೆ ವಿಶ್ವಶಕ್ತಿಗಳೆ ಕಾಪು ನಿಲ್ಲುತ್ತವೆ. ಮುದುಕಿಯ ರೂಪದಲ್ಲಿ ಅವನನ್ನು ರಕ್ಷಿಸುತ್ತವೆ. ಅವುಗಳ ಆಶೀರ್ವಾದ ದಿಂದವನು ಶತ್ರುಪಕ್ಷದ ಮಕ್ಕಳಹಾಗೂ ಕಟುಕರ ಅನುಕಂಪೆಗೆ ಪಾತ್ರನಾಗುತ್ತಾನೆ.

ಲೋಕವನು ನಾಕಕ್ಕೆ ಬೆಸೆಯೆ
ನಾಕವನು ಲೋಕಕ್ಕೆ ಹೊಸೆಯೆ
ಮತ್ತು ಭಗವಂತನಡಿಯರಸಿ

ಭಕ್ತಿದೇವಿ ಪ್ರಾರ್ಥನಾದೇವಿಯರು ಮುಂಬರುತ್ತಿರುವಷ್ಟರಲ್ಲಿ ಕೃಪಾದೇವಿ ‘ವಿಭೂತಿ ರಕ್ಷೆಗೆ ನೋಂತು’ ತಿರೆಗಿಳಿಯುತ್ತಾಳೆ. ಚಂದ್ರಹಾಸನ ಪ್ರಾರ್ಥನಾ ಭಕ್ತಿಗಳೆ ಭಗವಂತನ ಕೃಪೆಯನ್ನಾ ಕರ್ಷಿಸುತ್ತವೆ. ಈ ಮೂರು ಶಕ್ತಿಗಳು ಅದೃಶ್ಯವಾಗಿದ್ದುಕೊಂಡು ಕತೆಯನ್ನು ಮುನ್ನಡೆಸುತ್ತವೆ. ಕಟುಕರಾದಿಯಾಗಿ ಶಕ್ತಿಗಳು ಮರೆಯಲ್ಲಿದ್ದುಕೊಂಡು ಕತೆಯನ್ನು ಮುನ್ನಡೆಸುತ್ತವೆ. ಕಟುಕರಾದಿಯಾಗಿ ಎಲ್ಲ ಪಾತ್ರಗಳ ಮೇಲೆ ಪ್ರಭಾವ ಬೀರುತ್ತವೆ. ಭಕ್ತಿ ಪ್ರಾರ್ಥನೆಗಳು ವ್ಯರ್ಥವಲ್ಲ, ಭಗದ್ಭಕ್ತನಿಗೆ ಸೋಲಿಲ್ಲವೆಂಬ ಚಿರಂತನ ತತ್ತ್ವಕ್ಕೆ ಈ ನಾಟಕವೊಂದು ಪ್ರತಿಮೆಯಾಗಿದೆ.

ಭಗವಂತ ಭಕ್ತನಿಗೆ ಮಂಗಳರೂಪದಲ್ಲಿಯೇ ಕಾಣಿಸಿಕೊಳ್ಳುತ್ತಾನೆಂದು ಹೇಳುವಂತಿಲ್ಲ. ಅಮಂಗಳ ರೂಪದಲ್ಲಿಯೂ ಗೋಚರಿಸಬಹುದೆನ್ನುವುದು ಕುವೆಂಪು ಕಂಡ ಸತ್ಯ. ಶಬರಿಗೆ ಕಾಣಿಸಿಕೊಂಡವನು ಮಲಿನ ವಸನದ ಕೆದರುದಲೆಯ ಶೀರ್ಣ ದೇಹದ ಕರ್ಕಶವದನದ ರಾಮನೇ ಹೊರತು ಸೀತಾಸಮೇತನಾದ, ರಾಜಭೂಷಣಾಲಂಕೃತನಾದ ಪ್ರಸನ್ನವದನದ ಭುವನಾಭಿರಾಮನಾದ ಕೋದಂಡಪಾಣಿ ಶ್ರೀರಾಮನಲ್ಲ. ಚಂದ್ರಹಾಸನ ಬದುಕೆಲ್ಲ ಶುಭಾಶುಭಗಳ ಪರಂಪರೆಯೆ ಆಗಿದೆ; ಅಶುಭವೂ ಶುಭದ ಮೆಟ್ಟಲೇ ಆಗಿದೆ. ‘ಭಗವತ್ಕೃಪೆ ಸುಖದ ಗುರಿಗೆಮ್ಮನೊಯ್ಯಲ್ ಒಮ್ಮೊಮ್ಮೆ ನಿರ್ಮಿಪುದು ಕ್ಲೇಶ ಕಷ್ಟದ ಸೇತುವಂ…ಕಾಣ್ ಕೃಪಾನಿಧಿಯ ಕೈಯನೀ ದುರ್ವಿಧಿಯೊಳುಂ’ ಎಂದು ಸಾಮಾನ್ಯ ಹೆಂಗಸೊಬ್ಬಳು ಮುದುಕಿಗೆ ನೀಡುವ ಸಾಂತ್ವನದಲ್ಲಿಯೂ ಈ ಪರಮಾರ್ಥವೇ ಹುದುಗಿದೆ. ‘ಈಶ್ವರ ಕೃಪೆಗೆ ನಾನಾ ಮುಖಂಗಳೊಳವು. ನಖಂಗಳುಂ ಒಳವು’ ಎಂಬ ಆಧ್ಯಾತ್ಮಿಕ ಮೌಲ್ಯಕ್ಕೆ ಈ ನಾಟಕವೊಂದು ಪ್ರತಿಮೆಯಾಗಿದೆ.

ಹಿಮಮಣಿಯಲ್ಲಿ ಸೂರ್ಯನನ್ನೆ ಪ್ರತಿಬಿಂಬಿಸುವ, ದೂರದರ್ಶನದ ಪೆಟ್ಟಿಗೆಯಲ್ಲಿ ಜಗತ್ತಿನ ಘಟನಾವಳಿಗಳನ್ನು ಹಿಡಿಯುವ, ಶ್ರೀ ಕೃಷ್ಣನ ಬಾಯಲ್ಲಿ ವಿಶ್ವದರ್ಶನವನ್ನೆ ಮಾಡಿಸುವ ಅದ್ಭುತ ಪವಾಡ ‘ಶ್ಮಶಾನ ಕುರುಕ್ಷೇತ್ರ’ದಲ್ಲಿ ನಡೆದಿದೆ. ಇಡೀ ಮಹಾಭಾರತದ ಕತೆಯನ್ನು ಕಣ್ಣಿಗೆ ಕಟ್ಟುವಂತೆ ಮಗುಳ್ಚುವ, ಒಂದೇ ಒಂದು ರಾತ್ರಿಯಲ್ಲಿ ಯುಗ ಸಂಧಿಕಾಲವನ್ನು ಮಾತ್ರವಲ್ಲ ಎರಡು ಮಹಾ ಯುಗಗಳ ಮಹತ್ತನ್ನು ಪ್ರತಿಮಿಸುವ, ಶ್ಮಶಾನದಲ್ಲಿಯೆ ಸೃಷ್ಟಿಲೀಲೆಯನ್ನು ಕಾಣುವ ಮಾಂತ್ರಿಕ ಸಾಧನೆಯೊಂದು ಈ ಎಪಿಕ್ ನಾಟಕದಲ್ಲಿ ಸಿದ್ದಿಸಿದೆ. ಆ ಒಂದು ರಾತ್ರಿಯ ಶ್ಮಶಾನಪರ್ವದಲ್ಲಿ ಏಕೋದ್ದೇಶಕ್ಕಾಗಿ ಮೃತರ ಶೋಧನೆಗಾಗಿ ಭೂತಪ್ರೇತ ಮರುಳುಗಳ ಮಧ್ಯದಲ್ಲಿ ರಾಜಪರಿವಾರದವರು, ಸಾಮಾನ್ಯರು, ಸ್ತ್ರೀಯರು, ವೃದ್ಧರು, ಬಾಲಕರು ಗೋಳ್ಗರೆಯುತ್ತ ಅಲೆದಾಡುವಾಗ ಯುದ್ಧದ ದುರಂತತೆ, ಕ್ರೌರ್ಯ, ವಿನಾಶನ, ಆತ್ಮದೌರ್ಬಲ್ಯವೇ ಕಾರಣವಾದ ಮಾನವನ ವೈಫಲ್ಯ, ವಿಧಿಯ ಅಣಕ ಒಂದೊಂದೂ ವಿಕಟಾಟ್ಟಹಾಸದಿಂದ ಹಲ್ಗಿರಿಯುತ್ತವೆ.

ಸಾಕಾರತೆವೆತ್ತ ದ್ವಾಪರ ಸಂಭಾಷಣೆಯಲ್ಲಿಯೆ ದ್ವಾಪರ ಕಲಿಯುಗಗಳ ಮಹಿಮೆ ಮಾತ್ರವಲ್ಲ, ಸೃಷ್ಟಿಲೀಲೆಯ ವಿಲಾಸಗಳೆಲ್ಲ ಅಭಿವ್ಯಕ್ತವಾಗುತ್ತವೆ. ಸೃಷ್ಟಿ ವಿನಾಶಗಳೆರಡೂ ಪರಸ್ಪರ ಪೂರಕವಾದ್ದರಿಂದ ಸುಮ್ಮಾನ ದುಮ್ಮಾನಗಳಾಗಲಿ ಆಶೆನಿರಾಶೆಗಳಾಗಲಿ ಅನವಶ್ಯವೆಂಬುದು ಅವರ ಮಾತಿನಿಂದ ವ್ಯಕ್ತವಾಗುತ್ತದೆ. ಅಂತ್ಯ ಸಮೀಪಿಸಿದ ದ್ವಾಪರನನ್ನು ಉದಯೋನ್ಮುಖವಾದ ಕಲಿಯೇ ಸಂತೈಸಬೇಕಾಗುತ್ತದೆ :

ವ್ಯಕ್ತ ಸೃಷ್ಟಿಯನೆಲ್ಲ
ತನ್ನೊಡಲಿನೊಳ್ ಪೊತ್ತು ಸಲಹಿದಾ ನಿತ್ಯತೆ
ಮರಳಿಯದನ್ ಅವ್ಯಕ್ತಮನ್ನಾಗಿ ಮಾಡಲೈ
ಯುಗಪುರುಷನಾದ ನೀನದಕೇಕೆ ದುಮ್ಮಾನಂ
ಗೊಳ್ಳುತಿಹೆ? ರಸಪೂರ್ಣಶೂನ್ಯದಿಂದೊಗೆತಂದುದೀ
ವಿಶ್ವಂ; ಅದರೊಳೆ ವಿಲೀನಮಾಗಡಗುವುದು ತಾನ್
ಆದೊಡೇನ್? ಮರಳಿ ಬೇರೊಂದಾಕೃತಿಯ ತಳೆದು,
ಬೇರೊಂದು ಕಟ್ಟಳೆಗೆ ತಲೆಬಾಗಿ, ಬೇರೊಂದು
ಕಾಲದಲಿ ಮೂಡುವುದು. ಲೀಲೆಯೆಂಬುವುದೆಲ್ಲ
ಮೂಡುವುದು ಮುಳುಗುವುದರಲ್ಲಿಹುದು

ಸೃಷ್ಟಿಲೀಲೆಯ ಮರ್ಮವನ್ನು ತಿಳಿದವರಿಗೆ ನಿರಾಶೆಯೂ ಇಲ್ಲ. ಅತೃಪ್ತಿಯೂ ಇಲ್ಲ.

ಪ್ರಗತಿಶೀಲ ವಿಶ್ವದಲ್ಲಿ ಒಂದೊದು ಸಂಸ್ಕೃತಿಗೂ ಕಾಲಮಿತಿಯುಂಟು; ಹಳೆಯದರ ಸಮಾಧಿಯ ಮೇಲೆ ಹೊಸತು ನಿರ್ಮಾಣಗೊಳ್ಳುತ್ತದೆ. ಇದು ವಿಶ್ವನಿಯಮ. ಇದನ್ನೇ ಕಲಿ

ಸಾವಿನಲಿ ಹೊಸಬಾಳು ಹುದುಗಿಹುದು; ನಾಶದಲಿ
ನವಸೃಷ್ಟಿ ಪವಡಿಸಿದೆ…
ಸಾವೆ ಹೊಸಬಾಳಿಗಾಧಾರಮಾಗಿರ್ಪುದು
ನಾಶಮೇ ನವಸೃಷ್ಟಿಗುತ್ಸಾಹಮಾದಪುದು!

ಎಂದು ಸ್ಪಷ್ಟಪಡಿಸುತ್ತಾನೆ. ಅಂತಿಮ ದೃಶ್ಯದಲ್ಲಿ ಭಸ್ಮರಾಶಿಯ ಮೇಲೆ ನಿಂತ ರುದ್ರನಿಗೆ ಕೃಷ್ಟ ಕಲಿಯುಗ ಮಹಾಕಾವ್ಯವನ್ನು ವರ್ಣಿಸುವಲ್ಲಿ ಕಲಿಯ ಹೇರುಬ್ಬಟೆ ಕೆಚ್ಚುನೆಚ್ಚುಗಳನ್ನೆ ಅನುಮೋದಿಸುತ್ತಾನೆ. ಪ್ರವಾದಿಕವಿ ಸೂತ್ರಧಾರಿ ಕೃಷ್ಣನ ಮೂಲಕ ತೋರಿಸುವ ಜಗನ್ನಾಟಕದ ದೃಶ್ಯಗಳು ರೋಮಾಂಚನಕಾರಿಯಾಗಿವೆ; ಅನನುಕರಣೀಯ ರಮ್ಯಾದ್ಭುತ ಶೈಲಿಯ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಸಿದ್ದಿಗಳ ವರ್ಣನೆಗೆ ಮಹಾ ವಿದ್ವನ್ಮಣಿ ಎನ್.ಎಸ್. ಸುಬ್ಬರಾಯರೇ ಬೆರಗು ವ್ಯಕ್ತಪಡಿಸಿದರೆಂಬುದು ಜನಜನಿತ ಸಂಗತಿಯಾಗಿದೆ. ಇಡೀ ಜಗತ್ತಿನಲ್ಲಿಯೇ ಸಾರ್ವಭೌಮತ್ವ ಕೊನೆಗೊಂಡು, ಸರ್ವಪ್ರಜಾಧಿಪತ್ಯ ಸಂಸ್ಥಾಪನೆಗೊಳ್ಳು ತ್ತದೆಂಬ, ಸಾಮಾನ್ಯ ಮಾನವ ಸಂಸಾರವೂ ಶೃಂಗಾರಪೂರ್ಣವಾಗಿರುತ್ತದೆಂಬ ಭವಿಷ್ಯವನ್ನು ಕುವೆಂಪು ಈ ಶತಮಾನದ ಮೂರನೆಯ ದಶಕದ ಅಂತ್ಯದಲ್ಲಿಯೇ ಮುಂಗಂಡಿದ್ದರೆಂಬ ವಿಷಯ ವಿಸ್ಮಯಕಾರಿಯಾದದ್ದು.

ಮಕ್ಕಳುಮರಿಗಳ ವೃದ್ಧರ ವಿಧವೆಯರ ಮಾತೆಯರ ತಬ್ಬಲಿಗಳ ಕಣ್ಣುಗಳ ಮೂಲಕ ಕಂಡ ಯುದ್ಧಾಂತ್ಯದ ಘೋರ ದೃಶ್ಯ ಮನುಕುಲದ ಮನಹೃದಯಗಳನ್ನೆ ಜರ್ಝರಗೊಳಿಸು ವಂಥದು, ವಿಚ್ಛೇದನಗೊಳಿಸುವಂಥದು; ಸರ್ವತ್ರ ಅಶಾಂತಿಯನ್ನು ಹರಡುವಂಥದು. ಸಾವಿನ ಎದುರಲ್ಲಿ ಪಾಂಡವರ ಕಡೆಯವರಾಗಲಿ, ಕೌರವರ ಕಡೆಯವರಾಗಲಿ, ಸಾಮಾನ್ಯರಾಗಲಿ, ಅಸಾಮಾನ್ಯರಾಗಲಿ, ಎಲ್ಲರೂ ಒಂದೇ ಎನ್ನುವ ಶಾಶ್ವತ ಸತ್ಯಕ್ಕೆ ಇಲ್ಲಿಯ ಒಂದೊಂದು ದೃಶ್ಯವೂ ಪ್ರತಿಮೆಯಾಗಿದೆ. ‘ಕೌರವನು ಸೋತು ಸೋತವನಲ್ಲ; ಭೀಮನು ಗೆದ್ದು ಗೆದ್ದವನಲ್ಲ’ ಎಂಬ ಸತ್ಯ ಜಗತ್ತಿನ ಎಲ್ಲ ಯುದ್ಧಗಳಿಗೂ ಅನ್ವಯಿಸುತ್ತದೆಯಾದರೂ ಮಾನವನಿಗೆ ಬುದ್ದಿ ಬಂದಿಲ್ಲ. ಒಮ್ಮೆ ವೀರ್ಯಶೌರ್ಯ ಪ್ರತಾಪಗಳ ರಣರಂಗವಾಗಿದ್ದ ಕುರುಕ್ಷೇತ್ರ ಶ್ಮಶಾನವಾಗಿ ಪರಿವರ್ತನೆಯಾದಾಗ ಕರುಣ ರಸದ ನೆರೆಯೆ ಉಕ್ಕುತ್ತದೆ. ತೊಡೆಯುಡಿದು ಆಸನ್ನಮಾರಣನಾಗಿರುವ ಕೌರವ ದ್ವಾಪರ ಅಶ್ವತ್ಥಾಮರೊಡನೆ ಆಡುವ ಮಾತಿನಲ್ಲಿ, ಕರ್ಣನನ್ನು ತನ್ನ ದೇಹದೊಡನೆ ದಹಿಸಬೇಕೆನ್ನುವ ಅವನ ಬೇಡಿಕೆಯಲ್ಲಿ, ಅವನ ಮತ್ತು ಕೃಷ್ಣನ ಸಂಭಾಷಣೆಯಲ್ಲಿ ಕೌರವನ ಮಹಾತ್ಮ್ಯ ವ್ಯಕ್ತವಾಗುತ್ತದೆ. ಕೃಷ್ಣನೇ ಅವರನ್ನು ‘ಕೌರವ ಕೃಷ್ಣ’ ಎಂದು ಕರೆಯುವಲ್ಲಿ ಶ್ರೀ ರಾಮಾಯಣ ದರ್ಶನದ ಮುನ್ಸೂಚನೆ ಯನ್ನು ಗುರುತಿಸಬಹುದಾಗಿದೆ. ಕರ್ಣನ ಶವವನ್ನು ಹುಡುಕುತ್ತಿರುವ ಕುಂತಿಯ ತಾಯ್ತನದ ಬೇಗೆಯಾಗಲಿ ತನ್ನ ಹಳೆಯ ಕತೆಯವೆತೆಯ ಸುರಿವಾಗಲಿ ಜಗತ್ತನ್ನೇ ಸುಡುವಂಥದು. ಕುಂತಿ ಕರ್ಣರ ದುರಂತ ಕಥೆಯನ್ನು ಕೇಳಿದಾಗ ಭೀಮ ಹೇಳುವ ‘ಕಡೆಗುಂ ಪೊಲಸಾದುದೀ ಭಾರತ ಸಂಗ್ರಾಮಂ’ ಎಂಬ ಸೂತ್ರರೂಪದ ಸತ್ಯವಾಕ್ಯ ನಿತ್ಯವಾದದ್ದು. ಯುದ್ಧವೂ ಸೃಷ್ಟಿಲೀಲೆ; ಯುದ್ಧದ ಒಡಲಿಂದಲೇ ನವಸೃಷ್ಟಿಯ ಅಭಿವ್ಯಕ್ತಿ; ಅದರಿಂದ ಮಾನವನ ಮನಸ್ಸು ಛಿನ್ನವಿಚ್ಛಿನ್ನವಾಗಬೇಕಿಲ್ಲ ಎಂಬ ಮಹಾಸಂದೇಶ ಈ ನಾಟಕದಲ್ಲಿ ಪ್ರತಿಮಿತ ವಾಗುತ್ತದೆ.

ಹದಿವಯಸ್ಸು ಪ್ರಾರಂಭವಾಗುವ ವೇಳೆಗೆ ಕುವೆಂಪು ಚಿಂತನಶೀಲರಾಗುತ್ತಿದ್ದರೆಂದು, ನಿಸರ್ಗವ್ಯಾಪಾರಗಳೆಂತೆ ತಮ್ಮ ಸುತ್ತಮುತ್ತ ಪೈಶಾಚಿಕ ನೃತ್ಯವೆಸಗುತ್ತಿದ್ದ ಸಾಮಾಜಿಕ ಪಿಡುಗುಗಳೂ ಅಂತೆಯೇ ಅವರ ಚಿಂತನೆಯ ವಸ್ತುವಾಗಿದ್ದುವೆಂದು ತೋರುತ್ತದೆ. ಆ ಚಿಂತನೆಯೆ ಬಲಿತು ಮಾಗಿ ನಾಟಕ ರೂಪದಲ್ಲಿ ಅಭಿವ್ಯಕ್ತವಾಗುತ್ತದೆ. ನಾಟಕದಲ್ಲಿ ಮಾತ್ರವಲ್ಲ, ಅವರ ಕತೆ ಕಾದಂಬರಿ ಕಾವ್ಯಗಳಲ್ಲಿಯೂ ಸಾಂದ್ರವಾಗಿ ಕಾಣಿಸಿಕೊಳ್ಳುತ್ತದೆ. ಸಾಮಾಜಿಕ ಚಿಂತನೆಯೂ ದಾರ್ಶನಿಕ ಶಿಖರಕ್ಕೇರಿದಾಗ ಸಾಂಕೇತಿಕ ಮತ್ತು ಪ್ರತಿಮಾವಿಧಾನ ದಲ್ಲಿ ಪ್ರಕಟವಾಗುತ್ತದೆ. ಹಾಗೆ ಪ್ರಕಟಗೊಂಡ ಮಾಧ್ಯಮಗಳಲ್ಲಿ ‘ಜಲಗಾರ’ ನಾಟಕ ಅತ್ಯಪೂರ್ವವಾದದ್ದು. ಯಾವೊಂದು ಪಾತ್ರವೂ ಅಂಕಿತನಾಮ ಹೊಂದದಿರುವುದೇ ಅದು ಸಾಂಕೇತಿಕ ಅಥವಾ ರೂಪಕ (Allegory) ನಾಟಕವೆಂಬುದಕ್ಕೆ ಸಾಕ್ಷಿಯಾಗಿದೆ. ಅಸ್ಪೃಶ್ಯ ನಾದರೂ ಜಲಗಾರ ಪ್ರಬುದ್ಧತೆಗೆ, ವಿವೇಕಕ್ಕೆ, ಸ್ವಾಭಿಮಾನಕ್ಕೆ, ಕರ್ತವ್ಯಪ್ರಜ್ಞೆಗೆ, ಪ್ರಾಮಾಣಿ ಕತೆಗೆ ಸಂಕೇತವಾಗಿದ್ದಾನೆ. ಬೆಪ್ಪುತನ ಅಜ್ಞಾನಗಳಿಗೆ ರೈತ, ಕ್ರೂರ ಜಾತಿಗರ್ವಾಂಧತೆಗೆ ಪಾರ್ವ, ಅನಿಶ್ಚಯತೆಗೆ ಯುವಕ, ಅಸಹಾಯಕತೆ ದಾರಿದ್ರ್ಯಗಳಿಗೆ ತಿರುಕ, ವೈಚಾರಿಕತೆಯ ಬೂಟಾಟಿಕೆಗೆ ಸೊಕ್ಕಿಗೆ ತರುಣರು, ಮುಗ್ಧತೆಗೆ ಹುಡುಗಿ, ಕನಸುಗಾರಿಕೆಗೆ ಕಬ್ಬಿಗ ಸಂಕೇತವಾಗಿದ್ದಾರೆ. ಮಾನವನ ಮೂಲಗುಣಸ್ವಭಾವಗಳು ಸಾಕಾರಗೊಂಡಿರುವುದನ್ನಿಲ್ಲಿ ಕಾಣಬಹುದಾಗಿದೆ. ಕುವೆಂಪು ವಿಚಾರಪರವಾದ ಲೇಖನಗಳಲ್ಲಿ ಸಾಮಾಜಿಕ ಲೋಪದೋಷ ಗಳನ್ನು ಮಾನವನ ದೌರ್ಬಲ್ಯಗಳನ್ನು ಖಂಡತುಂಡವಾಗಿ ನೇರವಾಗಿ ನಿರ್ಭಯವಾಗಿ ಬಯಲ್ಚುವಂತೆ ಕತೆ ಕಾದಂಬರಿ ನಾಟಕಗಳಂಥ ಸೃಜನಶೀಲ ಕೃತಿಗಳಲ್ಲಿ ಗುಪ್ತವಾಗಿ ಕಲಾತ್ಮಕ ವಾಗಿ ನಿರವಿಸುತ್ತಾರೆ. ಧರ್ಮದ ಹಾಗೂ ದೇವರ ಹೆಸರಿನಲ್ಲಿ ಪುಷ್ಟಿಗೊಂಡಿರುವ ಅಜ್ಞಾನ ಅಂಧಶ್ರದ್ಧೆ ಅನ್ಯಾಯ ಆಡಂಬರ ಅನಾಚಾರಗಳನ್ನು ಅಸಮತೆ ಶೋಷಣೆಗಳನ್ನು ರಟ್ಟು ಮಾಡುವುದರಲ್ಲಿ ಈ ನಾಟಕ ಯಶಸ್ವಿಯಾಗಿದೆ.

ಜಲಗಾರನೊಬ್ಬನನ್ನು ಅಲೌಕಿಕ ಔನ್ನತ್ಯಕ್ಕೇರಿಸಿ ರಚನೆಗೊಂಡಿರುವ ಸಾಹಿತ್ಯ ಕೃತಿಗಳು ಜಗತ್ತಿನ ಸಾಹಿತ್ಯೇತಿಹಾಸದಲ್ಲಿ ಕಾಣುವಂಥವಲ್ಲ. ಇಲ್ಲಿಯ ಜಲಗಾರ ನಿಸರ್ಗಾರಾಧಕ; ಕರ್ತವ್ಯಪರಾಯಣ. ಸಮಾಜ ತನ್ನನ್ನು ಕೀಳ್ಮಟ್ಟದಲ್ಲಿಟ್ಟಿದ್ದರೂ, ಅದರ ಮಾಲಿನ್ಯವನ್ನು ತೊಡೆಯುವ ಕರ್ತವ್ಯದಿಂದ ಅವನೆಂದೂ ವಿಮುಖನಾಗಿಲ್ಲ. ತನಗೆ ದೇವಾಲಯ ಪ್ರವೇಶ ವಿಲ್ಲವೆಂಬ ದೈನ್ಯಬುದ್ದಿಯಾಗಲಿ ಪ್ರತೀಕಾರ ಮನೋಭಾವವಾಗಲಿ ಅವನಲ್ಲಿಲ್ಲ.

ನನ್ನ ಭಾಗಕೆ ಪೊರಕೆ ಆರತಿ, ಗುಡಿಸುವುದೆ
ನನ್ನ ದೇವರ ಪೂಜೆ!……
ಶಿವಗುಡಿಯ ಶಿವನು ಜೋಯಿಸರ ಶಿವನಂತೆ;
ನನ್ನ ಶಿವನೀ ಮಣ್ಣಿನಲ್ಲಿಹನು. ನನ್ನ ಶಿವ
ಕೊಳೆತ ಕಸದೊಳಗಿಹನು…….
ನಾನೆಲ್ಲಿ ಸತ್ಕರ್ಮವೆಸಗುವೆನೊ
ಅಲ್ಲಿ ಮೈದೋರುವನು

ಎಂದವನು ರೈತನಿಗೆ ಉಪನಿಷನ್ಮಂತ್ರಸದೃಶನಾದ ಸಂದೇಶವನ್ನು ನೀಡುತ್ತಾನೆ; ‘ನಿನ್ನ ನೇಗಿಲಗೆರೆಯ ದಿವ್ಯ ದೇವಾಲಯದಿ ಶಿವನ ಕಾಣೆಯ ನೀನು?’ ಎಂದವನನ್ನು ಹಂಗಿಸುತ್ತಾನೆ. ನಿಸರ್ಗಸೌಂದರ್ಯದಲ್ಲಿ ಭಗವಂತನನ್ನು ಕಾಣಲಾರದೆ ರೈತನಂಥವರನ್ನು ಗಮನದಲ್ಲಿರಿಸಿ ಕೊಂಡು ‘ಭೂಮಿಯಲಿ ಹುಟ್ಟುಕುರುಡರಿಗಿಂತ ಕಣ್ಣುಳ್ಳ ಕುರುಡರೆನಿ ತೊಳರು?’ ಎಂದವನು ಅಣಕವಾಡುತ್ತಾನೆ.

ಶಿವ ಗುಡಿಯೊಳಗಿಲ್ಲ ಕಾಯಕ ಜೀವಿಗಳ, ಶ್ರದ್ಧಾವಂತ ಭಕ್ತರ, ನಿಸರ್ಗಾರಾಧಕರ ಹೃದಯದಲ್ಲಿದ್ದಾನೆನ್ನುವ ಆಧ್ಯಾತ್ಮಿಕ ಸತ್ಯವನ್ನು ಜಾಹೀರುಗೊಳಿಸುವ ಸಲುವಾಗಿ ನಾಟಕ ಕ್ಕೊಂದು ಅಲೌಕಿಕ ಯೌಗಿಕ ವಾತಾವರಣವನ್ನು ನಿರ್ಮಿಸಲೆಂದು ನಾಟಕಕಾರರು ಶಿವನ ಪಾತ್ರವನ್ನು ರಂಗದ ಮೇಲೆ ತಂದಿದ್ದಾರೆ. ಅಲ್ಲಿಯ ವಿಡಂಬನೆಯಿಂದಾಗಿ ಲೌಕಿಕಾ ಲೌಕಿಕಗಳೆ ಸಂಗಮಗೊಂಡಂತೆ ತೋರದಿರಲಾರದು. ಪುರಾಣಗಳ ಪುಂಡಾಟವನ್ನು, ಪುರೋಹಿತರ ಪುಸಿ ಹುಳುಕುಗಳನ್ನು ಬೀದಿಗೆಳೆಯುವಲ್ಲಿ ಈ ವಿಡಂಬನೆ ಸಾರ್ಥಕವಾಗುತ್ತದೆ. ತಾನು ಜಲಗಾರ ಶಿವನಾದ್ದರಿಂದ ತನ್ನ ನಿಜಸ್ವರೂಪವನ್ನು ಮರೆಮಾಡುವ ಸಲುವಾಗಿ ಶಾಸ್ತ್ರಿಗಳು ತನಗೆ ಚಂದ್ರ ಗಂಗೆ ಫಾಲನೇತ್ರಾದಿಗಳನ್ನು ತೊಡಿಸಿದರೆಂದು ಶಿವ ಜಲಗಾರನಿಗೆ ತಿಳಿಸುತ್ತಾನೆ.

ಬೀದಿಗುಡಿಸುವ ಬಡವನೆದೆಯಲ್ಲಿ ನಾನಿರುವೆ
ಉಳುತಿರುವ ಒಕ್ಕಲಿಗನೆಡೆಯಲ್ಲಿ ನಾನಿರುವೆ!
ಎಲ್ಲಿ ಹೊಳೆಯನು ನನ್ನ ಕಾರ್ಯದಲಿ ತೊಡಗಿಹನೊ
ಅಲ್ಲಿ ನಾನವನ ಪಕ್ಕದೊಳಿರುವೆ….

ಹೀಗೆಯೇ ಶಿವ ತಾನಿರುವ ಎಡೆಗಳನ್ನು ತಿಳಿಸುವಲ್ಲಿ ಪುರೋಹಿತಷಾಹಿ ದೇವಾಲಯ ಸಂಸ್ಕೃತಿಗಳ ವಿಫಲತೆಯನ್ನೂ ಅವುಗಳ ವಿನಾಶದ ಅಗತ್ಯವನ್ನೂ ಸ್ಪಷ್ಟಪಡಿಸುತ್ತಾನೆ. ಸಾಮಾಜಿಕ ಸಮಸ್ಯೆಯನ್ನು ಪೂರ್ಣದೃಷ್ಟಿಯಿಂದ ಪರಿಕಿಸಿ, ಆಧ್ಯಾತ್ಮಿಕ ಪರಿಹಾರವನ್ನು ಪ್ರತಿಮಾವಿಧಾನದಿಂದ ನೀಡುತ್ತದೆ ಈ ನಾಟಕ.

ಭಾರತ ರಾಮಾಯಣಗಳ ವಸ್ತು ಕಾಲಕಾಲಕ್ಕೆ ಜನಪದರ, ಪುರಾಣಿಕರ, ಪಂಡಿತರ ಮಾನವ ಮೂಷೆಯಿಂದ ಹೊರಗೆ ಬರುವಾಗ ರೂಪಾಂತರ ಪಡೆಯುವುದು ಅಸಹಜವೇನಲ್ಲ. ಹಾಗೆ ರೂಪಾಂತರ ಹೊಂದುವಾಗ ಮೂಲಪಾತ್ರಗಳು ಉಜ್ವಲತಮವಾಗುವುದೂ ಉಂಟು. ಕಾಂತಿಹೀನವಾಗುವುದೂ ಉಂಟು. ಸೀತಾವನವಾಸ ಶಂಬೂಕವಧ ಪ್ರಸಂಗಗಳು ಶ್ರೀರಾಮನಿಗೆ ಕಳಂಕಪ್ರಾಯವಾಗಿರುವುದಲ್ಲದೆ ವಾಲ್ಮೀಕಿ ಕವಿಯ ಪ್ರಸಂಗಗಳು ಶ್ರೀರಾಮನಿಗೆ ಕಳಂಕ ಪ್ರಾಯವಾಗಿರುವುದಲ್ಲದೆ ವಾಲ್ಮೀಕಿ ಕವಿಯ ವರ್ಚಸ್ಸಿಗೂ ಭಂಗ ತಂದಿವೆ ಎಂಬುದರಲ್ಲಿ ಸಂದೇಹವಿಲ್ಲ. ಉತ್ತರಕಾಂಡದ ಆ ಪ್ರಸಂಗಗಳು ಪ್ರಕ್ಷಿಪ್ತಗಳೆಂಬ ಅಭಿಪ್ರಾಯವೂ ಉಂಟು.

[1] ಆದರೂ ಸಂಪ್ರದಾಯನಿಷ್ಠರ ದೃಷ್ಟಿಯಲ್ಲಿ ಅವು ಸತ್ಯಸ್ಯಸತ್ಯ. ಸೀತಾವನವಾಸದ ಕ್ರೌರ್ಯವನ್ನು ಕುವೆಂಪು ‘ವಾಲ್ಮೀಕಿಯ ಭಾಗ್ಯ’ದಲ್ಲಿ ಸೌಮ್ಯಗೊಳಿಸಿದ್ದಾರೆ. ಶೂದ್ರನ ತಪಸ್ಸು ಧರ್ಮ ವಿರುದ್ಧವೆಂಬ, ಅದು ತಿಳಿದ ಕೂಡಲೇ ಶ್ರೀರಾಮ ವಿವೇಚನಾರಹಿತನಾಗಿ ಶಂಬೂಕನನ್ನು ಕೊಂದನೆಂಬ ಎರಡು ನ್ಯೂನತೆಗಳನ್ನು ವ್ಯಾಧಕವಿ ವಾಲ್ಮೀಕಿ ಎಸಗಿರಬಹುದೆ ಎಂಬ ಸಂದೇಶ ವೈಜ್ಞಾನಿಕ ಹಾಗೂ ವೈಚಾರಿಕ ಯುಗದ ಕವಿಗೆ ಸಹಜವಾದದ್ದೇ. ‘ಶೂದ್ರ ತಪಸ್ವಿ’ ನಾಟಕದಲ್ಲಿ ಕುವೆಂಪು ಈ ಎರಡು ನ್ಯೂನತೆಗಳನ್ನು ಸರಿಪಡಿಸಿರುವುದಲ್ಲದೆ, ಬ್ರಾಹ್ಮಣನ ಪ್ರತಿಷ್ಠೆಯನ್ನು ಸಹ ಹೆಚ್ಚಿಸಿದ್ದಾರೆ.

ವನದಲ್ಲಿ ಹೂತಿರಿಯಲೆಂದು ತನ್ನ ಕಂದನೊಡನೆ ಬ್ರಾಹ್ಮಣನೊಬ್ಬ ಹೋಗಿರಲಾಗಿ, ಕಂದ ಹಾವು ಕಚ್ಚಿ ಮೂರ್ಛೆ ಹೋಗುತ್ತಾನೆ. ಶಾಸ್ತ್ರಸಂಮೂಢನೂ ಸಂಪ್ರದಾಯ ಬದ್ಧನೂ ಆದ ಬ್ರಾಹ್ಮಣನ ದೃಷ್ಟಿಯಲ್ಲಿ ಶೂದ್ರನ ತಪೋರೂಪದ ಅಧರ್ಮವೇ ಅವನ ಮಗನ ಸಾವಿಗೆ ಕಾರಣ. ರಾಮರಾಜ್ಯದಲ್ಲಿ ಅಂಥ ಅಧರ್ಮಕ್ಕೆಡೆಯಿರಬಾರದೆಂದು ನಿಜವಾದ ಧರ್ಮದ ಸ್ವರೂಪವನ್ನಾಗಲಿ, ರಾಮರಾಜ್ಯದ ಕಲ್ಪನೆಯನ್ನಾಗಲಿ ಹೊಂದಿಲ್ಲದ ಬ್ರಾಹ್ಮಣ ಗೋಳ್ಗರೆಯುತ್ತಾನೆ. ನಾಟಕಕಾರರಿಗೆ ಧರ್ಮವಿರುದ್ಧವಾದ ಸಂಪ್ರದಾಯವನ್ನು ಪೋಷಿಸುವ ಬ್ರಾಹ್ಮಣ್ಯದ ಬಗೆಗೆ ಅಸಹನೆಯೆ ಹೊರತು, ಬ್ರಾಹ್ಮಣನ ಬಗೆಗಲ್ಲ. ಅವನ ಬಾಯಿ ಯಲ್ಲಿಯೆ ನಾಟಕಕಾರರು ಹೇಳಿಸುವ ಮಾತುಗಳನ್ನು ಗಮನಿಸಬಹುದು :

ನಾನಾವ ಪಾಪಮನ್ ಎಸಗಿದುದೆನಗೆ ನೆನಪಿಲ್ಲ.
ಎಂದುಂ ಅನೃತವನೊರೆದೆನಿಲ್ಲ.
ಮೇಣ್ ಹಿಂಸೆಯಂಗೆಯ್ದೆನಿಲ್ಲಾವ ಜೀವಿಗುಂ

ಎನ್ನುವ ಅವನ ಮಾತುಗಳಲ್ಲಿ ಪ್ರಾಮಾಣಿಕತೆಯಿದೆ. ಅಪ್ರಜ್ಞಾಪೂರ್ವಕವಾಗಿಯೆ ರಾಮ ಕಥನದ ಮೂಲಕ ಮರ್ಮಭೇದಕವಾದ ವಾಗ್ಬಾಣಗಳಿಂದ ರಾಮನ ಎದೆಯನ್ನಿರಿಯುತ್ತಾನೆ.

ಬೆಂಕೆವೊಕ್ಕೆಯ್ತಂದ ಪರಿಶುದ್ಧೆಯಂ,
ಸೌಂದರ್ಯಲಕ್ಷ್ಮಿ ಆ ಸೀತಾದೇವಿಯಂ
ತುಂಬು ಬಸಿರಿಯೆಂದೆರ್ದೆಸೋರದಡವಿಗಟ್ಟಿ
ನಿನ್ನಾ ಭಿಷ್ಮಪೌರುಷವ ಮೆರೆದೆಯಲ್ತೆ

ಯಾವುದನ್ನು ಎಲ್ಲಿ ಹೇಗೆ ಹೇಳಬೇಕೆಂಬುದೂ ಬ್ರಾಹ್ಮಣನಿಗೆ ಗೊತ್ತಿಲ್ಲ. ಅವನು ಕುಹಕಿಯೊ ಕುತಂತ್ರಿಯೊ ಆಗಿದ್ದರೆ ಕಟಕಿ ನುಡಿಯುತ್ತಿರಲಿಲ್ಲ. ಸೀತಾಪರಿತ್ಯಾಗ ಪ್ರಸಂಗದಲ್ಲಾಗಲಿ, ಬ್ರಾಹ್ಮಣನ ವಿಡಂಬನೆಯನ್ನು ಕೇಳುವಾಗಲಾಗಲಿ ಶ್ರೀರಾಮನ ಸ್ಥಿತಪ್ರಜ್ಞಾ ಸ್ಥಿತಿ ವ್ಯಕ್ತ ವಾಗುತ್ತದೆ.

ವ್ಯಂಗ್ಯ ರೀತಿಯಲ್ಲಿಯೆ ಶ್ರೀರಾಮ ಅವನಿಗೆ ಬುದ್ದಿ ಕಲಿಸಲು ಪ್ರಯತ್ನಿಸುತ್ತಾನೆ. ‘ಪೇಸಲಿಲ್ಲಾವಗಂ ಸತ್ಯಮನ್ನಾಲಿಸಲ್ಕೀ ದಶರಥಾತ್ಮಜಂ’; ‘ರಾಮರಾಜ್ಯದೊಳ್ ಅಧರ್ಮಮೆ ಮೃತ್ಯು. ಅಧರ್ಮ ಸಂಹಾರಮೆ ಮೃತ್ಯುವಿಜಯಂ! ಬರ್ದುಕಲ್ ಧರ‌್ಮಂ ಬರ್ದುಕುವನ್ ನಿನ್ನಣುಗನ್!’ ‘ರೋದಿಸದಿರ್ ಅಬೋಧನೊಲ್, ವೇದವೇತ್ತ’ ಎಂಬ ಕಟಕಿಗಳು ಬ್ರಾಹ್ಮಣನ ತಲೆಗಾಗಲಿ ಎದೆಗಾಗಲಿ ಹೋಗುವುದಿಲ್ಲ. ಅವನಲ್ಲಿ ಅವಿದ್ದರೆ ತಾನೆ? ವರ್ಣಗ ರ್ವಾಂಧ ಶಾಸ್ತ್ರ ಮೂರ್ಖ ಯಾರೇ ಆದರೂ ಅವನಿಗೆ ಅರಿವು ಮೂಡುವುದಿಲ್ಲವೆಂಬುದು, ಶ್ರೀರಾಮನ ಮಾತೂ ಅವನ ಕಿವಿಯ ಮೇಲೆ ಬೀಳುವುದಿಲ್ಲವೆಂಬುದು, ಬ್ರಾಹ್ಮಣನ ನಡವಳಿಕೆಯಿಂದ ಸ್ಪಷ್ಟವಾಗುತ್ತದೆ. ತನಗರಿವಿಲ್ಲದಂತೆಯೆ ‘ಸೀತೆಯನ್ ಅರಣ್ಯಕೆ ವಿಸರ್ಜಿಸಿದೀತಂಗೆ ಅರಣ್ಯ ಸೀತೆಯಾಗಿರ್ಪಳ್’ ಎಂದವನು ನುಡಿಯುವಾಗ ರಾಮನ ನಿಜಸ್ಥಿತಿಯ ಅರಿವಾಗುತ್ತದೆ.

ಶ್ರೀರಾಮ ಒಮ್ಮೆಯೂ ಬ್ರಾಹ್ಮಣನನ್ನು ಅಗೌರವದಿಂದ ಕಾಣುವುದಿಲ್ಲ. ತಾತ್ಸಾರದಿಂದ ಮಾತಾಡಿಸುವುದಿಲ್ಲ. ತನ್ನ ವಾದಚಾತುರ್ಯದಿಂದ ಬ್ರಾಹ್ಮಣನಲ್ಲಿ ವಿವೇಕವನ್ನು ಚಿಗುರಿಸುತ್ತಾನೆ. ‘ತಪಂಗೆಯ್ವನುಂ ಪೂಜ್ಯನಲ್ತೆ?’ ಎಂಬ ಶ್ರೀರಾಮನ ಪ್ರಶ್ನೆಗೆ ‘ದಿಟಂ’ ಎಂದು ಬ್ರಾಹ್ಮಣ ಉತ್ತರಿಸುತ್ತಾನೆ. ಆದರೆ ಮರುಕ್ಷಣದಲ್ಲಿಯೆ ‘ತರ್ಕಕೆ ಮಿಗಿಲ್ ಶ್ರುತಿವಾಕ್ಯಮೈಸೆ! ತಪಕ್ಕನಧಿಕಾರಿ ಶೂದ್ರನ್ ಎಂಬುದದು ಶಾಸ್ತ್ರಪ್ರಸಿದ್ಧಂ’ ಎಂದವನು ನುಡಿಯುತ್ತಾನೆ. ಶ್ರೀರಾಮ ಬಿಟ್ಟ ಬ್ರಹ್ಮಾಸ್ತ್ರ ತನ್ನ ಕಡೆಗೆ ಬಂದಾಗ

ಬೋಧಮಾಯ್ತೆನಗೀಗಳ್, ಮಹಾಪ್ರಾಜ್ಞ.
ಬುದ್ದಿಗಲಿಸಿದಯ್ ಸಂಪ್ರದಾಯಬದ್ಧಂಗೆ,
ಶಾಸ್ತ್ರ ಸಂಮೂಢಂಗೆ, ಜಾತಿಗರ್ವಾಂಧಂಗೆ

ಎಂದು ಬ್ರಾಹ್ಮಣ ವಲ್ಮೀಕದೊಳಗಣ ಶಂಬೂಕಂಗೆ ಸಾಷ್ಟಾಗ ಪ್ರಣಾಮ ಮಾಡುತ್ತಾನೆ. ‘ಶೂದ್ರನಪ್ಪೊಡಂ ತಪಂ ಶಕ್ತಿದಾಯಕಂ’, ತಪಸ್ಸಿಗೆ ಜಾತಿವರ್ಣಭೇದವಿಲ್ಲ ಎಂಬ ತತ್ತ್ವಾಭಿವ್ಯಕ್ತಿಗೆ ಈ ನಾಟಕ ಪ್ರತಿಮೆಯಾಗಿದೆ.

‘ಬೆರಳ್‌ಗೆ ಕೊರಳ್’ ನಾಟಕ ಕುವೆಂಪು ಅವರರ ಶ್ರೇಷ್ಠತಮ ದಾರ್ಶನಿಕ ಎಪಿಕ್ ನಾಟಕವೆಂದು, ನಾಟಕ ಪ್ರಪಂಚದ ಧವಳ ಗೋತ್ರಗಳಲ್ಲೊಂದೆಂದು ಹೇಳಲಾಗಿದೆ. ಅದನ್ನೋದಿದ ಅವರ ಸಹಾಧ್ಯಾಯಿ ದೋಲನ ಅವರು ಆನಂದಪುಲಕಿತರಾಗಿ, ಕುವೆಂಪು ಅವರಿಗೇ ಆಶ್ಚರ್ಯವಾಗುವ ರೀತಿಯಲ್ಲಿ, ಅವರಿಗೆ ನಮಸ್ಕಾರ ಮಾಡಿದ್ದುಂಟು. ಬಿಲ್ವಿದ್ಯೆ ಯಲ್ಲಿ ಅದ್ವಿತೀಯನಪ್ಪಂತೆ ಕಲಿಸುವುದಾಗಿ ಏಕಲವ್ಯ ಹಸ್ತಿನಾವತಿಗೆ ಬರುವುದಕ್ಕೆ ಮುಂಚೆಯೇ ಪಾಂಡವಮಧ್ಯಮ ಕ್ಷತ್ರಿಯಕುಮಾರ ಅರ್ಜುನನಿಗೆ ದ್ರೋಣ ಮಾತು ಕೊಟ್ಟಿದ್ದ. ಶಬ್ದವೇಧೀ ವಿದ್ಯೆಯಲ್ಲಿ ತನ್ನನ್ನು ಮೀರಿಸಬಲ್ಲ ಬಿಲ್ಗಾರನನ್ನು ಕಂಡಾಗ ಬಿಂಕಗುಳಿ ಅರ್ಜುನನ ಅಹಂಕಾರ ಮಾತ್ಸರ್ಯ ಪ್ರತೀಕಾರ ಬುದ್ದಿಗಳು ಹೆಡೆಯೆತ್ತುತ್ತವೆ. ಕ್ಷತ್ರಿಯರ ವರ್ಣಗರ್ವಾಂಧತೆಯಿಂದಾಗಿ ಏಕಲವ್ಯ ಅವರೊಡನೆ ಧನುರ್ವಿದ್ಯೆ ಕಲಿಯಲಾರದೆ ದ್ರೋಣನ ಮನೆಯಲ್ಲಿ ಆಳಿನಂತಿದ್ದು, ಗರಡಿಮನೆಗೆ ಬಂದು ಹೋಗುತ್ತ ಬಿಲ್ವಿದ್ಯೆ ಕಲಿಯುತ್ತಾನೆ. ತಂದೆ ತೀರಿಕೊಳ್ಳಲಾಗಿ ಅವನು ತನ್ನೂರಿಗೆ ಹಿಂದಿರುಗಿ, ದ್ರೋಣನ ವಿಗ್ರಹ ವನ್ನು ಮರಗಳ ಮೇಲೆ ಬಂಡೆಗಳ ಮೇಲೆ ಕೆತ್ತಿ ತನ್ಮುಂದೆ ನಿಲ್ಲಿಸಿಕೊಂಡು. ಅತೀಂದ್ರಿ ಯಾನುಭೂತಿಯ ಮೂಲಕ ಸರ್ವವಿದ್ಯಾಪಾರಂಗತನಾಗುತ್ತಾನೆ. ಗುರುವೇ ಪರಬ್ರಹ್ಮನಾಗಿ, ಪರಬ್ರಹ್ಮನೇ ಅವನ ಗುರುವಾಗಿ, ನಿಸರ್ಗವೇ ಪರಬ್ರಹ್ಮಶಕ್ತಿಯಾಗಿ ಅವನಿಗೆ ನರಕಲ್ಪನೆಗೂ ಊಹಿಸಲ ಸಾಧ್ಯವಾದ ವಿದ್ಯೆಯನ್ನು ಬೋಧಿಸುತ್ತದೆ. ಏಕನಿಷ್ಠೆಯ ಭಕ್ತಿಗೆ ಗುರುತತ್ವ ಮಣಿಯುತ್ತದೆಂಬುದಕ್ಕೆ ನಾಟಕದ ಮೊದಲ ಭಾಗವೇ ನಿದರ್ಶನ. ಗುರುಶಕ್ತಿಯ ಮುಂದೆ ಬಿಂಕಗುಳಿ ಅರ್ಜುನನ ಶೌರ್ಯ ನಡೆಯುವುದಿಲ್ಲ. ಏಕಲವ್ಯ ಹಂದಿಯನ್ನು ಹೊಡೆದಾಗ ವೀರನಂತೆ ಸೋದರ ಶಿಷ್ಯನಂತೆ ಸೋಲೊಪ್ಪಿಕೊಳ್ಳದೆ, ಹೇಡಿಯಂತೆ ದ್ರೋಣನ ಮುಂದೆ ತನ್ನ ಮಾತ್ಸರ್ಯವನ್ನು ತೋಡಿಕೊಳ್ಳುತ್ತಾನೆ. ಅವನಿಗೆ ಸ್ವಾರ್ಥಾಹಂಕಾರ ಮುಖ್ಯವೇ ಹೊರತು ಧರ್ಮವೂ ಅಲ್ಲ, ಗುರುವೂ ಅಲ್ಲ.

ಸ್ವಾರ್ಥಮಾತ್ಸರ್ಯಗಳ ಕೆಸರಿನಲ್ಲಿ ಮುಳುಗಿದ್ದಾಗಲೇ ದ್ರೋಣ ಅರ್ಜುನನಿಗೆ ವಾಗ್ದಾನಮಾಡಿದ್ದು. ವಿಧಿಯ ಕೂಳಿಯ ಮಿಣಿ ಅವನನ್ನು ಕರ್ಮದಿಂದ ಕರ್ಮಕ್ಕೆ ನೂಕುತ್ತಿದೆ. ಇದೇ ಕರ್ಮತತ್ವ. ‘ಮರಿಗೆ ಮರಿ; ಮರಿಗೆ ಮರಿ; ಅಂತೆ ಕರ್ಮದ ಪಾಂಗು’ ದ್ರೋಣಮಾತ್ರನಲ್ಲ ಮಾನವರೆಲ್ಲರೂ ವಿಶ್ವಚಿನ್  ವಿನ್ಯಾಸದ ಅಂತೆಯೆ ವಿಲಾಸದ ಹರಕೆಗುರಿಗಳು.

ಜೀವಿಗಳ ಕರ್ಮ ಜಟಿಲತೆ, ಏಕಲವ್ಯ, ಈ
ಕುಟಿಲ ಕಾವ್ಯಂಗಳಿಗೆ ನಮ್ಮನ್ ನಿಯೋಜಿಪುದು
ದೇವನಿಚ್ಛೆಯ ದಿವ್ಯಲೀಲಾ ಪ್ರಯೋಜನಕೆ

ಎನ್ನುವುದೇ ಸತ್ಯ, ಉಳಿದದ್ದೆಲ್ಲವೂ ಮಿಥ್ಯೆ.

ಸರ್ವಸಮರ್ಪಣ ಭಾವವೇ ಯಜ್ಞ. ಯಜ್ಞಕ್ರಿಯೆಯಿಲ್ಲದೆ ಜಗತ್ತು ನಡೆಯುವುದಿಲ್ಲ. ಪಡೆದ ನೀರನ್ನು ಸಮುದ್ರ ಮತ್ತೆ ಹಿಂದಿರುಗಿಸುತ್ತದೆ, ಮರ ಗೊಬ್ಬರವನ್ನುಂಡು ಫಲ ಕೊಡುತ್ತದೆ. ಈ ಯಜ್ಞಚಕ್ರ ನಿರಂತರವಾಗಿ ಉರುಳುತ್ತಿರುವುದರಿಂದಲೇ ಜೀವ ಜೀವನ ವ್ಯಾಪಾರ ಅವಿಚ್ಛಿನ್ನವಾಗಿ ಸಾಗುತ್ತಿದೆ. ಇದು ವೇದವೇದಾಂತ ಭಗವದ್ಗೀತೆಗಳ ಪ್ರಮುಖ ಸಂದೇಶಗಳಲ್ಲೊಂದು. ಅದೇ ತತ್ತ್ವದ ಪರಿಷ್ಕೃತರೂಪ ಪ್ರತಿಮಾ ವಿಧಾನದಲ್ಲಿ ಈ ನಾಟಕ ದಲ್ಲಿ ನಿರೂಪಣೆಗೊಂಡಿದೆ. ಏಕಲವ್ಯ ದ್ರೋಣನಿಗೆ ಹೇಳುವ ಮಾತಿನಲ್ಲಿ ಈ ಅಧ್ಯಾತ್ಮದೃಷ್ಟಿ ಅಡಕಗೊಂಡಿದೆ :

ಪಡೆವುದೆಲ್ಲಂ ಕೊಡುವುದಕ್ಕಲ್ತೆ, ಆರ್ಯ? ಮೇಣ್,
ಪೂರ್ಣಮಂ ಕೊಡದೆ ಪಡೆದಪೆವೆಂತು ಪೂರ್ಣಮಂ?

ಏಕಲವ್ಯ ಹೇಳುವ ಮತ್ತೊಂದು ಮಾತೂ ಗಮನಾರ್ಹವಾದದ್ದು: ‘ಇತ್ತ ಗುರು ವಿಂಗೀವುದೇನ್ ತ್ಯಾಗಮೆ?’ ಈಶಾವಾಸ್ಯೋಪನಿಷತ್ತಿನ ‘ಈಶಾವಾಸ್ಯಮಿದಂ ಸರ್ವಂ’ ಸೂತ್ರಕ್ಕೆ ಈ ನಾಟಕವೊಂದು ಭಾಷ್ಯದಂತಿದೆ.

ಈ ಮೂರೂ ತತ್ತ್ವಗಳಲ್ಲಿ ವಿಶ್ವಾಸವುಳ್ಳವನೆ, ಅವನ್ನು ಆಚರಿಸುವವನೆ ಸ್ಥಿತಪ್ರಜ್ಞ. ಇವು ಮಾನವನಿಗೆ ಗೋಚರಿಸಲಿ ಗೋಚರಿಸದಿರಲಿ, ಜಗಜ್ಜೀವನದ ಅಂತರಾಳದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿವೆಯೆಂಬುದಂತು ನಿಜ. ಈ ಅಧ್ಯಾತ್ಮತತ್ತ್ವಗಳನ್ನು ಕಲಾತ್ಮಕವಾಗಿ ಹಾಗೂ ವ್ಯಂಜನೀಯವಾಗಿ ಅಭಿವ್ಯಕ್ತಿಸುವ ಭಾಷೆ, ಅಂತೆಯೇ ಆ ಚಲನಶೀಲ ಭಾಷೆಯಲ್ಲಿ ಮೈದೋರುವ ನಾಟಕೀಯತೆ ಸಾರ್ಥಕವೆಂದೇ ಹೇಳಬೇಕು.

ಕುವೆಂಪು ಅವರ ಕೊನೆಯ ನಾಟಕವೇ ‘ಕಾನೀನ’. ಹೆಸರೇ ಸೂಚಿಸುವಂತೆ ಕನ್ಯೆಯೊಬ್ಬಳ ಮಗನ ಕತೆಯೆ ಇದರ ವಸ್ತು. ಇಲ್ಲಿ ವಿಧಿಯೂ ಸೇತುರೂಪದ ಒಂದು ಪಾತ್ರವಾಗಿದೆ. ಕರ್ಣನ ಜನನ, ವಿದ್ಯಾರ್ಜನ, ಹಸ್ತಿನಾವತಿ ಪ್ರಯಾಣ, ಕೌರವ ಸಖ್ಯ ಈ ನಾಟಕದಲ್ಲಿ ನಡೆಯುವ ಘಟನೆಗಳು. ಇಲ್ಲಿಯ ಕರ್ಣ ಪರಶುರಾಮನಿಂದ ತನ್ನ ಜಾತಿಯನ್ನು ಮರಸುವು ದಿಲ್ಲ. ಪರಶುರಾಮನು ಸಹ ಔದಾರ್ಯಸಂಪನ್ನನೂ ನಿರ್ಮತ್ಸರನೂ ಜಾತ್ಯತೀತನೂ ಮಹಾತ್ಮನೂ ಆದ ಸದ್ಗುರು. ಬ್ರಾಹ್ಮಣ ಯಾರೆಂಬುದನ್ನು ಪರಶುರಾಮನೇ ವಿವರಿಸುತ್ತಾನೆ.

ಯಾವಾತನ ಮೊಗದಲ್ಲಿ ತೇಜಸ್ಸು
ತೋರುವುದೊ, ಯಾವನೊಳು ಬಾಂದಳದ ಗಾಂಭೀರ್ಯ
ಮೆರೆಯುವುದೊ, ಯಾವನು ಸದಾ ಸತ್ಯವಾಡುವನೊ,
ಅವನೆಲ್ಲಿಯೆ ಇರಲಿ, ಅವನಾರೆ ಆಗಿರಲಿ,
ಬ್ರಾಹ್ಮಣನು!………………
…… ಸಂಪ್ರದಾಯವೂ ಯೋಗ್ಯತೆಯ ಮುಂದೆ
ಬಹುಕಾಲ ನಿಲ್ಲಲರಿಯದು.

ಇದು ನಿಜವಾದ ಗುರುವಿನ ಆದರ್ಶಗುಣ. ಇದರಿಂದಾಗಿ ಅವನು ಕರ್ಣನಿಗೆ ಶಾಪಕೊಡುವ ಸಂಭವವೆ ಒದಗುವುದಿಲ್ಲ. ಅಷ್ಟೇ ಅಲ್ಲ, ಇಲ್ಲಿಯ ಪರಶುರಾಮ ಕ್ಷತ್ರಿಯ ದ್ವೇಷಿಯೂ ಅಲ್ಲ.

ಗುರು ಪರಶುರಾಮನ ಆಶ್ರಮಕ್ಕೆ ಗೌರವಸಮರ್ಪಣೆಯ ಸಲುವಾಗಿ ಬಂದಿದ್ದ ಭೀಷ್ಮನ ಹಿಂದೆಯೇ ಪರುಶುರಾಮ ಕರ್ಣನನ್ನು ಗಜಪುರಿಗೆ ಕಳಿಸಿಕೊಡುತ್ತಾನೆ. ಚೆಲುವಿನಲ್ಲಿ ಸೆರೆಯಾದ ಒಲುಮೆಯಂತೆ ಕರ್ಣ ಕೌರವನ ನೇಹದ ಬಲೆಯಲ್ಲಿ ಮೈಮರೆಯುತ್ತಾನೆ. ಆದರೆ ಹಳ್ಳಿಯಲ್ಲಿದ್ದ ತನ್ನ ಮಾತಾಪಿತೃಗಳನ್ನವನು ಮರೆಯುವುದಿಲ್ಲ.

ನನ್ನ ತಾಯಿಯು ನನ್ನನ
ನೆನೆಯುತಿಹಳಲ್ಲಿ. ನಲಿಯುತಿಹೆ ನಾನಿಲ್ಲಿ.
ನನ್ನ ತಾಯಿಯ ನೋಡಲೆನ್ನೆದೆಯು ತವಕ
ಪಡುತಿಹುದು.

ಪ್ರಾಯಶಃ ನಾಟಕಕಾರರು ತಮ್ಮ ತಾಯಿಯನ್ನು ನೆನೆದು ಕೆತ್ತಿದ ಪಂಕ್ತಿಗಳಿವೆಂದು ತೋರುತ್ತದೆ. ಮಾತೃಪ್ರೇಮಿಯಾಗಿ, ಸದ್ಗುರುವಿನ ಸಚ್ಛಿಷ್ಯನಾಗಿ, ಅದ್ವಿತೀಯ ಬಿಲ್ಗಾರನಾಗಿ, ಸ್ನೇಹನಿಧಿಯಾಗಿ ಇಲ್ಲಿಯ ಕರ್ಣ ವಿರಾಜಿಸುತ್ತಾನೆ.

ಕುವೆಂಪು ಮೂಲಭೂತವಾಗಿ ಹಾಗೂ ಪ್ರಧಾನವಾಗಿ ದಾರ್ಶನಿಕ ಕವಿ. ಅವರ ಜೀವನ ಕಾವ್ಯ ಜೀವನವನ್ನೆಲ್ಲ ದಾರ್ಶನಿಕ ದೃಷ್ಟಿ ವ್ಯಾಪಿಸಿಕೊಂಡಿದೆ. ಆದರೆ ಈ ದಾರ್ಶನಿಕ ದೃಷ್ಟಿ ಮಾನವೀಯತೆಯನ್ನು ಹೊರತುಪಡಿಸುವುದಿಲ್ಲ. ವಿಶ್ವಮಾನವಸಂದೇಶದ ಪಂಚಮಂತ್ರಗಳು ಮಾನವೀಯತೆಯ ತಂತ್ರಗಳೆಂದರೂ ಸಲ್ಲುತ್ತದೆ. ಅಷ್ಟೇ ಅಲ್ಲ, ದಾರ್ಶನಿಕರಾದ್ದರಿಂದಲೇ ಅವರು ಮಾನವೀಯತೆಯ ಸಾಕಾರವಾಗಿದ್ದಾರೆ. ಯಾವಾತನಲ್ಲಿ ಮಾನವೀಯನುಕಂಪೆ ಯಿಲ್ಲವೋ ಅವನು ದಾರ್ಶನಿಕನಲ್ಲ. ಕುವೆಂಪು ಮಹಾ ಮಾನವತಾವಾದಿಯೆಂಬುದಕ್ಕೆ ನಿದರ್ಶನ ಅವರ ಜೀವನ ಹಾಗೂ ಸಾಹಿತ್ಯ ಕೃತಿಗಳಲ್ಲಿ ಹೆಜ್ಜೆಹೆಜ್ಜೆಗೂ ಎದುರಾಗುತ್ತವೆ. ಪುರೋಹಿತಶಾಹಿ, ಗೌಡಿಕೆ ಮತ್ತು ಪಾಳೆಗಾರಿಕೆಗಳನ್ನು ವಿಡಂಬಿಸುವ ಅವರ ಎರಡು ಕಾದಂಬರಿಗಳಂತೂ ಮಾನವೀಯತೆಯ ಕಾರಂಜಿಗಳಾಗಿವೆ. ಮೋಳೆಗಳಾಗಿವೆ. ಯಾರೂ ಅರಿಯದ ವೀರ, ಸಾಲದ ಮಗು, ಧನ್ವಂತರಿಯ ಚಿಕಿತ್ಸೆ ಕಥೆಗಳಲ್ಲಿ ಉಕ್ಕಂದವಾಗಿ ಹರಿಯುವ ಮಾನವೀಯತೆಗೆ ಬೇರೆ ಎಣೆಯೇ ಇಲ್ಲ. ಶ್ರೀರಾಮಾಯಣದರ್ಶನಂ ಓದುವಾಗ ಆ ಕಥೆ ಎಂದೋ ನಡೆದು ಮುಗಿದದ್ದಲ್ಲ, ಇಂದಿಗೂ ನಮ್ಮಸುತ್ತಮುತ್ತ ನಡೆಯುತ್ತಿರುವ ನಿತ್ಯವರ್ತ ಮಾನದ ಕತೆಯೆಂಬಂತೆ ಮನಹೃದಯಗಳನ್ನು ಮುಟ್ಟುತ್ತದೆ. ಈ ಮಾತು ಪೂರ್ಣವಾಗಿ ಕುವೆಂಪು ನಾಟಕಗಳಿಗೂ ಅನ್ವಯಿಸುತ್ತದೆ.

 


[1]    ಈ ಮಾತನ್ನು ಒಪ್ಪದವರೂ ಇದ್ದಾರೆ. ಇವರ ಪ್ರಕಾರ, ವಾಲ್ಮೀಕಿ ಆ ಹೊತ್ತಿನ ಸಮಾಜದ ಚಿತ್ರವನ್ನು ವಸ್ತುನಿಷ್ಠೆಯಿಂದ ಪ್ರತಿಬಿಂಬಿಸಿದ್ದಾನೆನ್ನುವುದು ಅವರ ಅಭಿಪ್ರಾಯ.