ಹೊಸದಾಗಿ ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸುವ ಕಿರಿಯರಿಗೆ ಪರಿಚಯಾತ್ಮಕವಾದ ಮುನ್ನುಡಿ ಬೇಕಾಗಬಹುದು; ಡಾ. ಮಳಲಿ ವಸಂತಕುಮಾರರಂಥ ವಿದಗ್ಧರಿಗಲ್ಲ. ಮಳಲಿ ಯವರು ಕನ್ನಡ ನಾಡಿನ ಶ್ರೇಷ್ಠ ವಾಗ್ಮಿಗಳು, ಸಾಹಿತ್ಯಕ್ಷೇತ್ರದಲ್ಲಿ ತಮ್ಮ ನೆಲೆಬೆಲೆಗಳನ್ನು ಕಂಡುಕೊಂಡಿರುವ ಘನ ವಿದ್ವಾಂಸರು; ವಿದ್ಯಾರ್ಥಿವೃಂದದಲ್ಲಿ ಅಪಾರ ಗೌರವ ಸಂಪಾದಿಸಿ ರುವ ಉತ್ತಮ ಪ್ರಾಧ್ಯಾಪಕರು. ತಮ್ಮ ಸಂಶೋಧನೆಗೆ ಆರಿಸಿಕೊಂಡಿರುವ ವಸ್ತು ‘ಕುವೆಂಪು ಅವರ ನಾಟಕಗಳು’ ಅನರ್ಘ್ಯವಾದದ್ದು. ಸಾಹಿತ್ಯಕ್ಷೇತ್ರದಲ್ಲಿ ಹೆಸರು ಮಾಡಿರುವ ತಜ್ಞರು ಇದನ್ನೋದಿ ಪಿಎಚ್.ಡಿ. ಪದವಿಗೆ ಅತ್ಯರ್ಹವಾದದ್ದೆಂದು ಬೆಲೆ ಕಟ್ಟಿದ್ದಾರೆ. ಇಂಥ ಗ್ರಂಥಕ್ಕೆ, ಇಂಥ ವಿದ್ವಾಂಸರಿಗೆ ಯಾರ ಪ್ರಶಂಸೆಯಾಗಲಿ, ಶಿಫಾರಸಾಗಲಿ ಅನಗತ್ಯ. ವಸಂತಕುಮಾರ ರಂಥ ಮಿತ್ರರು ಅನಾಯಾಸವಾಗಿ, ಅನಪೇಕ್ಷಿತವಾಗಿ ನೀಡುವ ಗೌರವವನ್ನು ಧಿಕ್ಕರಿಸುವ ದಾರ್ಷ್ಟ್ಯ ನನ್ನದಲ್ಲವಾಗಿ ಎರಡು ಮಾತು ಸಂತೋಷದಿಂದ ಬರೆಯುತ್ತಿದ್ದೇನೆ.

ಕುವೆಂಪು ನಾಟಕಗಳ ಅಧ್ಯಯನಕ್ಕೆ ಹಿನ್ನೆಲೆಯಾಗಿ ನಾಟಕಗಳ ಸ್ವರೂಪಲಕ್ಷಣಗಳನ್ನು, ಕನ್ನಡ ನಾಟಕಗಳ ಇತಿಹಾಸವನ್ನು ವಿಹಂಗಮದೃಷ್ಟಿಯಿಂದ ನಡೆಸಿರುವ ವಿವೇಚನೆ ಅತ್ಯಂತ ಉಚಿತವಾಗಿದೆ, ಸಾರವತ್ತಾಗಿದೆ. ಮುಂದೆ ಕುವೆಂಪು ಅವರ ಹದಿನಾಲ್ಕು ನಾಟಕಗಳನ್ನು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಎಂದು ಮೂರು ಬಗೆಗಳಾಗಿ ವಿಂಗಡಿಸಿಕೊಂಡು ಅವು ಗಳನ್ನು ಸಂಕ್ಷೇಪವಾಗಿಯಾದರೂ ಕೂಲಂಕಷವಾಗಿ, ವರ್ಣನಾತ್ಮಕ, ದರ್ಶನಾತ್ಮಕ ಮತ್ತು ತೌಲನಿಕ ದೃಷ್ಟಿಗಳಿಂದ ಅಧ್ಯಯನ ನಡೆಸಿದ್ದಾರೆ, ನಿಬಂಧಕಾರರು. ಒಂದೊಂದು ನಾಟಕ ವನ್ನೂ ವ್ಯವಸ್ಥಿತ ಕ್ರಮದಲ್ಲಿ ಅಭ್ಯಾಸ ಮಾಡುತ್ತಾರೆ. ಮೂಲಕೃತಿಯ ಕಥಾಸಾರ, ನಾಟಕದ ಕಥಾಸಂಗ್ರಹ, ಈ ಎರಡರ ಸಾಮ್ಯವೈಷಮ್ಯಗಳ ವಿವರಣೆ ಮತ್ತು ಪರಾಮರ್ಶೆ, ಅದೇ ವಸ್ತುವನ್ನು ಕುರಿತ ಇತರ ಕೃತಿಗಳೊಡನೆಯ ಹೋಲಿಕೆ ಇದು ಅವರನುಸರಿಸುವ ಕ್ರಮ. ಪೌರಾಣಿಕ ವಸ್ತುಪಾತ್ರಗಳಲ್ಲಿ ಎದ್ದುಕಾಣುವ ಅಸಾಂಗತ್ಯ ವಿರೋಧಾಭಾಸಗಳನ್ನು ವೈಚಾರಿಕ ದೃಷ್ಟಿಯಿಂದ ಪರೀಕ್ಷಿಸಿ, ಚಿರನೂತನ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವುದೇ ಕುವೆಂಪು ಅವರ ನಾಟಕ ರಚನೆಯ ಉದ್ದೇಶವೆಂಬುದನ್ನು ಪ್ರಬಂಧಕಾರರು ಉದ್ದಕ್ಕೂ ಸ್ಪಷ್ಟಪಡಿಸಿದ್ದಾರೆ. ಹಳೆಯ ವಸ್ತುವಿನ ಚೌಕಟ್ಟಿನಲ್ಲಿ ಹೊಸ ವಿಚಾರಗಳನ್ನು ಅಭಿವ್ಯಕ್ತ ಗೊಳಿಸುವಲ್ಲಿ ಕುವೆಂಪು ಸಫಲರಾಗಿದ್ದಾರೆಂಬುದನ್ನವರು ವಿಶದಪಡಿಸಿದ್ದಾರೆ. ತೌಲನಿಕವಾಗಿ ಬೆಲೆ ಕಟ್ಟುವಾಗ ನಿರ್ಭಿಡೆಯಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಗೊಳಿಸುತ್ತಾರೆ.

ಬೆರಳ್‌ಗೆಕೊರಳ್ ನಾಟಕದಲ್ಲಿ ಮೂಲದ ಕಥೆ ಉದಾತ್ತಗೊಂಡಿದೆ. ದ್ರೋಣನಪಾತ್ರ ಉತ್ಕೃಷ್ಟಗೊಂಡಿದೆ. ವರ್ಣವರ್ಗ ವ್ಯವಸ್ಥೆಗಳ ಖಂಡನೆಯಿದೆ. ಆ ಎಲ್ಲದರ ಜತೆಗೆ ಮಾತೃ ವಾತ್ಸಲ್ಯ ಪರಾಕಾಷ್ಠೆಗೇರಿದೆ ಎಂಬುದನ್ನು ಮನಂಬುಗುವಂತೆ ವಿವರಿಸಿದ್ದಾರೆ. ಕರ್ಮತತ್ತ್ವ ಮಹಾಭಾರತವನ್ನೆಲ್ಲ ಆವರಿಸಿಕೊಂಡಿದೆಯೆಂಬುದನ್ನು ಸೂಚ್ಯವಾಗಿ ಮನಗಾಣಿಸಿದ್ದಾರೆ. ಯುದ್ಧದ ಭೀಕರ ಪರಿಣಾಮಗಳನ್ನು ಚಿತ್ರಿಸುವ, ಪ್ರತಿಮಾ ವಿಧಾನದಿಂದ ಸಮಕಾಲೀನ ಸಮಸ್ಯೆಗಳಿಗೆ ಕನ್ನಡಿ ಹಿಡಿದು ಯುಕ್ತ ಸಾರ್ವಕಾಲಿಕ ಮೌಲ್ಯಗಳನ್ನು ಬಿತ್ತರಿಸುವ, ಹಳತು ಹೊಸತುಗಳ ಸಂಗಮವನ್ನು ನೈಜ ರೀತಿಯಲ್ಲಿ ನಿರೂಪಿಸುವ ‘ಶ್ಮಶಾನ ಕುರುಕ್ಷೇತ್ರ’ ನಾಟಕವನ್ನು ಮಹಾನಾಟಕವೆಂದು ಕರೆದಿರುವುದರಲ್ಲಿ ಔಚಿತ್ಯವಿದೆ. ‘ಕಾನೀನ’ ನಾಟಕದ ಪರಶುರಾಮನ ಉದ್ಗಾರದಲ್ಲಿ ಕವಿಯ ಕಾಣ್ಕೆಯನ್ನು ಗುರುತಿಸಿರುವುದು ಮೆಚ್ಚತಕ್ಕ ಜಾಣತನ. ‘ವಾಲ್ಮೀಕಿಯ ಭಾಗ್ಯ’ದಲ್ಲಿ ಕುವೆಂಪು ಅವರ ಹೊಸ ದರ್ಶನವೇನೂ ಇಲ್ಲವೆನ್ನುತ್ತ, ‘ಪರಿತ್ಯಕ್ತ ಸೀತೆ ಮತ್ತು ಲಕ್ಷಣ ಇದರ ಅಂತರಂಗದ ಒಳತೋಟಿಯನ್ನು ಪರಿಣಾಮಕಾರಿ ಯಾಗಿ ನಾಟ್ಯೀಕರಿಸುವಲ್ಲಿ’ ಕುವೆಂಪು ಅವರ ಸಾಧನೆ ಇದೆಯೆನ್ನುವುದು ಸರಿಯೇ ಸರಿ. ‘ವರ್ಣವ್ಯವಸ್ಥೆಯ ಹೆಸರಿನಲ್ಲಿ ಅಂದು ಸಾಮೂಹಿಕವಾಗಿ ಹೇರಿಬಿಟ್ಟಿದ್ದ ಭಯಂಕರ ಮೌಢ್ಯ ಮತ್ತು ಅದನ್ನು ಪ್ರತಿಪಾದಿಸುತ್ತಿದ್ದ ಪುರೋಹಿತಶಾಹಿಗಳ ವಿರೋಧವೇ ಶೂದ್ರ ತಪಸ್ವಿಯ ಮೂಲಧಾತು ಎಂಬುದನ್ನು ವಿಮರ್ಶೆಯಲ್ಲಿ ಎತ್ತಿತೋರಿಸಲಾಗಿದ. ಮೃತ್ಯು ಜಿಜ್ಞಾಸೆಯನ್ನು ಕುರಿತ ಕನ್ನಡದ ವಿರಳ ಸಾಹಿತ್ಯ ಕೃತಿಗಳಲ್ಲಿ ‘ಯಮನಸೋಲು’ ನಾಟಕಕ್ಕೆ ಅಗ್ರಸ್ಥಾನವಿದೆ ಎಂಬುದನ್ನು ವಿಮರ್ಶಕರು ಪ್ರಬಲವಾಗಿ ಸಮರ್ಥಿಸಿದ್ದಾರೆ. ತುಂಬ ಸಹಜವಾದ ಪ್ರಕೃತಿ ಚಿತ್ರಣ ಮತ್ತು ಪಾತ್ರರಚನೆ ‘ಚಂದ್ರಹಾಸ’ ನಾಟಕದ ಗುಣಾಂಶಗಳೆಂದು ಹೇಳಿದ್ದರೂ, ಅದೊಂದು ಕಳಪೆ ನಾಟಕವೆಂಬುದೇ ವಿಮರ್ಶಕರ ಸಿದ್ಧಾಂತ.

‘ಒಂದು ಘಟನೆಯ ಹಿಂದಿರುವ ಮಾನಸಿಕ ವಿಶ್ಲೇಷಣೆಯನ್ನು ಪದರ ಪದರವಾಗಿ ಬಿಡಿಸಿತೋರುವುದು ಸಾಹಿತ್ಯದ ಕೆಲಸವೆಂದು ಒಪ್ಪಿಕೊಳ್ಳುವುದಾದರೆ (ಅದು ಸಾಹಿತ್ಯದ ಕೆಲಸವಲ್ಲವೆ? ಇಲ್ಲಿ ‘ರೆ’ ಏಕೆ?) ಅದನ್ನು ಈ ನಾಟಕ (ಮಹಾರಾತ್ರಿ) ಯಶಸ್ವಿಯಾಗಿ ನಿರ್ವಹಿಸಿರುವುದನ್ನು ಕಾಣುತ್ತೇವೆ. ಸಿದ್ಧಾರ್ಥನನ್ನು ಮಾನವೀಯ ಮಟ್ಟದಲ್ಲಿ ನಿಲ್ಲಿಸಿದ್ದಾರೆ. ಎಂಬ ಡಾ. ತಿಪ್ಪೇರುದ್ರಸ್ವಾಮಿಯವರ ಅಭಿಪ್ರಾಯದೊಂದಿಗೆ ಪ್ರಬಂಧಕಾರರು ಈ ನಾಟಕದ ಮೇಲ್ಮೆಯನ್ನು ಎತ್ತಿಹಿಡಿದಿದ್ದಾರೆ. ರಕ್ತಾಕ್ಷಿ ಮತ್ತು ಹ್ಯಾಮ್‌ಲೆಟ್ ನಾಟಕಗಳಲ್ಲಿ ಕಂಡುಬರುವ ಸಾದೃಶ್ಯ ವೈದೃಶ್ಯಗಳನ್ನು ಗುರುತಿಸಿದರೂ, ಚೆಲುವಾಂಬೆ ನಿಂಬಯ್ಯರಂಥ ಅಪರಾಧಿಗಳಲ್ಲಿಯೂ ಕವಿ ಅನುಕಂಪೆಯನ್ನು ತೋರಿಸುತ್ತಾನೆಂಬುದನ್ನು ಪತ್ತೆಹಚ್ಚಿದರೂ, ರಕ್ತಾಕ್ಷಿ ನಾಟಕದ ನೆಲೆಬೆಲೆಗಳ ಬಗ್ಗೆಮಳಲಿಯವರು ಮೌನದಿಂದಿದ್ದಾರೆ. ‘ಬಿರುಗಾಳಿ’ ನಾಟಕದ ಷೇಕ್ಸ್‌ಪಿಯರ್ ಕವಿಯ ‘ದಿ ಟೆಂಪೆಸ್ಟ್’ ನಾಟಕದ ‘ಯಥಾವತ್ತಾದ ನೇರ ಅನುವಾದವಲ್ಲ, ಸ್ವತಂತ್ರ ಕೃತಿಯೂ ಅಲ್ಲ. ಇದನ್ನು ಒಂದು ಬಗೆಯ ರೂಪಾಂತರ ಎಂದು ಕರೆಯಬಹುದು’… ಪಾತ್ರಗಳಿಗೆ ಹೊಂದಿಕೆ ಆಗುವಂತೆ ನೆಲಗಟ್ಟನ್ನು ಬದಲಾಯಿಸಿ ದ್ದಾರೆ ಎನ್ನುವ ಅವರ ತೀರ್ಮಾನ ಸರಿಯಾಗಿದೆ. ದುಷ್ಟಶಿಷ್ಟ ಶಕ್ತಿಗಳ ನಡುವೆ ಸಂಘರ್ಷ ವೊದಗಿದಾಗ ಶಿಷ್ಟಶಕ್ತಿಗೆ ಜಯವೆಂಬ, ತಪೋಬಲದ ಮುಂದೆ ಎಂಥ ದುಷ್ಟಶಕ್ತಿಯಾದರೂ ತಲೆಬಾಗುತ್ತದೆಂಬ ಸತ್ಯದ ಪ್ರತಿಪಾದನೆಯೆ ಈ ನಾಟಕದ ಉದ್ದೇಶ. ಷೇಕ್ಸ್‌ಪಿಯರ್ ಕುವೆಂಪು ಇಬ್ಬರೂ ತಮ್ಮ ನಾಟಕಗಳಲ್ಲಿ ಒಳಿತು ಕೆಡಕು(God and evil)ಗಳ ಸಮಸ್ಯೆಗಳನ್ನು ಬಿಡಿಸಲು ಯತ್ನಿಸಿದ್ದಾರೆಂದೇ ಹೇಳಬಹುದು.

ವರ್ಣಾಶ್ರಮವ್ಯವಸ್ಥೆಯನ್ನು ಉಗ್ರವಾಗಿ ವಿರೋಧಿಸಿದ, ವಿರೋಧವನ್ನು ಅಭಿವ್ಯಕ್ತ ಗೊಳಿಸುವ ಸಲುವಾಗಿ ಕಲಾತ್ಮಕವಾದ ವಿಡಂಬನ ಕೃತಿಯನ್ನು ರಚಿಸುವ ಎದೆಗಾರಿಕೆಯನ್ನು ತೋರಿದ ಅದ್ವಿತೀಯ ಧೀಮಂತ ಕವಿ ಕುವೆಂಪು. ‘ಜನಸಾಮಾನ್ಯರ ದಿನದ ಬದುಕನ್ನು ಕಾವ್ಯದ ಉತ್ತುಂಗ ಸ್ಥಾನಕ್ಕೇರಿಸಿರುವುದು ಕುವೆಂಪು ಅವರ ಹೆಗ್ಗಳಿಕೆ’ ಎಂಬ ಅವರ ಮಾತು ಗಮನಾರ್ಹವಾದದ್ದು. ‘ಕನ್ನಡ ಸಾಹಿತ್ಯದಲ್ಲಿ ಜಲಗಾರನೊಬ್ಬನನ್ನು ಮಹಾನ್ ನಾಯಕ ಪಾತ್ರವನ್ನಾಗಿ ಚಿತ್ರಿಸಿರುವ (ನಾಟಕ) ಕೃತಿಗಳು ಇಲ್ಲವೆಂದೇ ಹೇಳಬೇಕು’ ಎನ್ನುವ ಅಭಿವ್ಯಕ್ತಿಯಲ್ಲಿ ಉತ್ಪ್ರೇಕ್ಷೆಯಿಲ್ಲ. ಪ್ರತಿಮಾ ವಿಧಾನ ಮತ್ತು ಪೂರ್ಣದೃಷ್ಟಿಯ ಅಭಿವ್ಯಕ್ತಿಗೆ ಕುವೆಂಪು ತಮ್ಮ ನಾಟಕಗಳಲ್ಲಿ ಒತ್ತುಕೊಡುತ್ತಾರೆನ್ನುವುದಕ್ಕೆ ‘ಬಲಿದಾನ’ವೂ ಒಂದು ನಿದರ್ಶನ. ‘ಕುವೆಂಪು ಅವರ ಉಜ್ವಲ ರಾಷ್ಟ್ರಪ್ರೇಮದ ಪ್ರತೀಕ’ ವಿದು, ಸ್ವಾತಂತ್ರ್ಯ ಸಂಪಾದನೆಗೆಂತೆ ಸ್ವಾತಂತ್ರ್ಯ ರಕ್ಷಣೆಗೂ ಬಲಿದಾನ ಅನಿವಾರ್ಯವೆಂಬ ಸಾರ್ವಕಾಲಿಕ ತತ್ತ್ವ ಸಂಕೇತ ಪ್ರತಿಮೆಗಳ ಮೂಲಕ ಹೊರಹೊಮ್ಮಿರುವ ಈ ಕಲಾಕೃತಿಯನ್ನು ದಾರ್ಶನಿಕ ರೂಪಕವೆಂದು ಕರೆದಿರುವುದರಲ್ಲಿ ಔಚಿತ್ಯವಿದೆ. ಭಗವದ್ಗೀತೆ ಮತ್ತು ಭಾಗವತಗಳ ಸಾರವೆಲ್ಲ ಕಲಾತ್ಮಕವಾದ ಈ ಸರಳ ಸುಂದರ ‘ನನ್ನ ಗೋಪಾಲ’ ನಾಟಕದಲ್ಲಿ ಭಟ್ಟಿಯಿಳಿದಿದೆಯೆಂದು, ನಿರ್ಮಲ ಮುಗ್ಧಭಕ್ತಿಗೆ ಭಗವಂತ ಶರಣಾಗುತ್ತಾನೆಂದು ವಿಮರ್ಶಕರು ವ್ಯಾಖ್ಯಾನಿಸಿದ್ದಾರೆ. ಬಾಲಕರಿಗಾಗಿ ಬರೆದ, ಬಾಲಕನೇ ವಸ್ತುವಾಗಿರುವ, ಕಲ್ಪನಾ ಪ್ರಧಾನವಾದ ಈ ಕಿರುನಾಟಕ ದಲ್ಲಿ ಪ್ರಕೃತಿಯೇ ಪ್ರಮುಖ ಪಾತ್ರ. ನಿಸರ್ಗದಲ್ಲಿ ಪ್ರತಿಯೊಂದು ವಸ್ತುವಿಗೂ ಜೀವಿಗೂ ತನ್ನದೇ ಆದ ಸ್ಥಾನವಿದೆ, ಕರ್ತವ್ಯವಿದೆ. ಅದನ್ನು ಮೀರಲಾಗದು ಎಂಬ ತತ್ತ್ವವನ್ನು ಪ್ರತಿಪಾದಿಸುವ ಈ ನಾಟಕದಲ್ಲಿ ಕವಿಯ ಪರಿಸರಪ್ರಜ್ಞೆಯನ್ನು ವಿಮರ್ಶಕರು ಸರಿಯಾಗಿಯೇ ಗುರುತಿಸಿದ್ದಾರೆ. ಪರಿಸರಪ್ರಜ್ಞೆ ಆಜನ್ಮ ನಿಸರ್ಗೋಪಾಸಕರಾದ ಕವಿ ಕುವೆಂಪು ಅವರ ಚೇತನದ ಅವಿಭಾಜ್ಯ ಭಾಗವಾಗಿದೆಯೆಂಬುದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.

‘ಕುವೆಂಪು ಅವರ ನಾಟಕಗಳ ಯಶಸ್ಸಿಗೆ ಬಹುಮಟ್ಟಿಗೆ ಕಾರಣವಾದ ಅಂಶಗಳೆಂದರೆ, ಪಾತ್ರರಚನೆ ಮತ್ತು ಸನ್ನಿವೇಶ ಕಲ್ಪನೆ’ಯೆಂದೂ, ಹೊಸ ವಸ್ತವಿನ ಸೃಷ್ಟಿಗೆ ಕೈಹಾಕದೆ, ಹಳೆಯ ವಸ್ತುವನ್ನೆ ಬಳಸಿಕೊಂಡು, ಪಾತ್ರಗಳ ಮೂಲಕ ತಾವು ಕಂಡ ಮೌಲಿಕ ಸತ್ಯಕ್ಕೆ ರೂಪಕೊಡುತ್ತಾರೆಂಬ ವಿಮರ್ಶಕರ ಅಭಿಪ್ರಾಯ ಅಂಗೀಕಾರಾರ್ಹವಾಗಿದೆ. ನಾಟಕಕಾರರು ಪಾತ್ರಗಳ ವಿಕಾಸದಲ್ಲಿಯೇ ನಾಟಕಕ್ರಿಯೆ ಚಾಲನೆಯನ್ನೂ ರಸಾಭಿವ್ಯಕ್ತಿಯನ್ನೂ ಅತ್ಯಂತ ರಮಣೀಯ ಪರಿಣಾಮಕಾರಿಯಾಗಿ ಸಾಧಿಸುತ್ತಾರೆನ್ನುವುದನ್ನು ‘ಶ್ಮಶಾನ ಕುರುಕ್ಷೇತ್ರಂ’ ನಾಟಕದ ಭೀಮನ ಪಾತ್ರರಚನಾಕೌಶಲ ಪ್ರಶಂಸೆಯ ಮೂಲಕ ವಿಮರ್ಶಕರು ವಿದ್ವದ್ರಸ ಪೂರ್ಣವಾಗಿ ಪ್ರತಿಪಾದಿಸಿದ್ದಾರೆ. ‘ಇಲ್ಲಿನ ಎಲ್ಲಾ ಪಾತ್ರಗಳ ಮೇಲೆ ಕುವೆಂಪುತನದ ಮುದ್ರೆ ಯಿದೆ. ಯಾವ ಪಾತ್ರವೂ ಮೂಲ ಪಾತ್ರಗಳ ಪ್ರತಿಕೃತಿಗಳಾಗಿಲ್ಲ. ಬದಲಿಗೆ ಹೊಸ ಹುಟ್ಟನ್ನು ಪಡೆದುಕೊಂಡಿವೆ’ ಎಂಬ ಸಹೃದಯ ವಿಮರ್ಶೆ ಸಂಯಮದಿಂದ ಕೂಡಿದೆ, ಪರಿಪಕ್ವವಾಗಿದೆ. ಕುವೆಂಪು ಪ್ರತಿಭಾಮೂಷೆಯಿಂದ ಮೂಡಿದ ಶೂದ್ರ ತಪಸ್ವಿಯ ಶ್ರೀರಾಮ, ಬೆರಳ್‌ಗೆ ಕೊರಳ್ ನಾಟಕದ ದ್ರೋಣ, ಕಾನೀನ ನಾಟಕದ ಪರಶುರಾಮ ತಮ್ಮ ಪೂರ್ವಜೀವನ ಕ್ಕಂಟಿಕೊಂಡಿದ್ದ ಕಾಳಿಕೆಯನ್ನು ಕಳೆದುಕೊಂಡು, ಶ್ರೀರಾಮನ ಪಾದಸ್ಪರ್ಶದಿಂದ ತಮ್ಮ ಶಾಪವನ್ನು ಕಳೆದುಕೊಂಡ ಅಹಲ್ಯೆಯಂತೆ ರಮ್ಯೋಜ್ವಲರಾಗಿದ್ದಾರೆ. ಹಾಗಾಗಿ ಅವತಾರ ತತ್ತ್ವಕ್ಕೂ ಗುರುತತ್ತ್ವಕ್ಕೂ ಉಜ್ವಲ ಕ್ರಾಂತಿ ಸಮನಿಸಿದೆ. ‘ಚಂದ್ರಹಾಸ’ ನಾಟಕದ ದುಷ್ಟ ಬುದ್ದಿಯ ಪಾತ್ರ ಆಟಕದ ದಷ್ಟಪುಷ್ಟತೆಗೆ, ರಂಗುರಂಗಿಗೆ, ಚಂದ್ರಹಾಸನ ವ್ಯಕ್ತಿತ್ವದ ಪ್ರಕಾಶನಕ್ಕೆ ಕಾರಣವಾಗಿದೆ. ದುಷ್ಟಬುದ್ದಿ ಲೋಕಪಾತ್ರದಲ್ಲಿ ಅಧಮನಾಗಿದ್ದರೂ ಕಲಾಪಾತ್ರದಲ್ಲಿ ಮಹೋಜ್ವಲಸ್ಥಾನ ಪಡೆದನು;… ಅವನ ದೋಷಗಳು ಸಹ ಮಗನ ಮೇಲಿನ ಅತಿಯಾದ ಮಮತೆಯಿಂದಲೇ ಉಂಟಾಗುತ್ತವೆ ಎನ್ನುವ ವಿಮರ್ಶೆ ನಾಟಕಕಾರರ ಕೀರ್ತಿಗೆ ತೊಡಿಸಿದ ಕಾಂಚನ ಕಿರೀಟವಾಗಿದೆ. ‘ವೃಕ್ಷ ಭೈರವ ಪಾತ್ರವಂತು ಇಡೀ ಭಾರತೀಯ ಸಾಹಿತ್ಯದಲ್ಲೇ (ಅಷ್ಟೇ ಏಕೆ, ವಿಶ್ವಸಾಹಿತ್ಯದಲ್ಲಿಯೇ) ವಿನೂತನವಾಗಿದೆ ಎಂಬ ಉಕ್ತಿ ಸೂಕ್ತವಾಗಿದೆ. ಬೆರಳ್‌ಗೆಕೊರಳ್ ನಾಟಕದ ಅಬ್ಬೆಯ ಪಾತ್ರವೂ ಅಷ್ಟೇ ವಿನೂತನವಾದುದು. ಅಷ್ಟೇ ವಿಶಿಷ್ಟವಾದುದು. ‘ಚಂದ್ರಹಾಸ’ ನಾಟಕವನ್ನು ಮಾನವೀಯ ಭಾವನೆಗಳ ಕೋಶ ವೆಂದೇ ಮಳಲಿಯವರು ಕರೆದಿದ್ದಾರೆ. ತಮ್ಮ ಮಾತನ್ನು ನಿದರ್ಶನಗಳ ಮೂಲಕ ಸಮರ್ಥಿಸಿ ಕೊಂಡಿದ್ದಾರೆ. ‘ಯಮನ ಸೋಲು’ ಶುದ್ಧದಾಂಪತ್ಯಪ್ರೇಮದ ಉಪನಿಷತ್ತೆನ್ನುವುದರಲ್ಲಿ ಸಂಶಯವಿಲ್ಲ.

ಸಾಹಿತ್ಯದ ಯಾವುದೇ ಪ್ರಕಾರವನ್ನು ಕುಂಚಿಸುತ್ತಿರಲಿ, ಕುವೆಂಪು ಅವರ ಆಧ್ಯಾತ್ಮ ಮತ್ತು ಸಾಮಾಜಿಕಪ್ರಜ್ಞೆಗಳು ಸದಾ ಜಾಗೃತವಾಗಿರುತ್ತವೆನ್ನುವುದರಲ್ಲಿ ಲವಲೇಶವೂ ಸಂದೇಹವಿಲ್ಲ. ಸಮಕಾಲೀನಪ್ರಜ್ಞೆಯ ಅಭಿವ್ಯಕ್ತಿಯ ಮೂಲಕವೇ ಅವರು ಶಾಶ್ವತ ಮೌಲ್ಯ ಗಳ ಅಮೃತವನ್ನು ಹರಿಸುತ್ತಾರೆ. ಕುವೆಂಪು ಅವರಂತೆ ದೀನ ದಲಿತರ ಬದುಕನ್ನು ಸಾಹಿತ್ಯ ಸಿಂಹಾಸನಕ್ಕೇರಿಸಿದ ಸಾಹಿತಿಗಳು ವಿರಳ. ಜಲಗಾರ ನಾಟಕವೊಂದು ರೂಪಕವೂ ಹೌದು, ವಾಸ್ತವ ಜೀವನದ ಪ್ರತೀಕವೂ ಹೌದು. ‘ಇಲ್ಲಿ ಬರುವ ಒಂದೊಂದು ಪಾತ್ರವೂ ಒಂದೊಂದು ಸಮಸ್ಯೆಯ ಪ್ರತೀಕವಾಗಿದೆ. ಭಟ್ಟರು ಶೋಷಣೆಗೆ, ತರುಣರು ಉದ್ಧಟತನಕ್ಕೆ, ತಿರುಕ ಮತ್ತು ಹುಡುಗಿ ಅಸಹಾಯಕತನಕ್ಕೆ ರೈತ ಮೌಢ್ಯಕ್ಕೆ ಸಂಕೇತವಾದರೆ ಜಲಗಾರ ಜಾಗೃತಿಗೆ ಪ್ರತಿನಿಧಿಯಾಗಿದ್ದಾನೆ’. ಎನ್ನುವ ಈ ಒಂದು ವಾಕ್ಯದಲ್ಲಿ ಪ್ರಬಂಧಕಾರರು ಇಡೀ ನಾಟಕದ ಸತ್ವಸ್ವರೂಪಗಳನ್ನು ಸಂಗ್ರಹಿಸುವಲ್ಲಿ ತಮ್ಮ ಜಾಣ್ಮೆಯನ್ನು ಮೆರೆದಿದ್ದಾರೆ. ‘ಸಮಕಾಲೀನ ಮಹಾಕಾವ್ಯಕ್ಕೆ ವಸ್ತುವಾಗಬಹುದಾದ ಸಂಗತಿಗಳು ಸಾಂಕೇತಿಕವಾಗಿ ಇಡಿಕಿರಿದಿವೆ’ ಎಂಬ ‘ಬಲಿದಾನ’ವನ್ನು ಕುರಿತ ಮಾತು ವಿಮರ್ಶಕರ ಕಲ್ಪನಾ ಜಾಗೃತಿಗೆ ಸಾಕ್ಷಿಯಾಗಿವೆ. ಕುವೆಂಪು ಅಧ್ಯಾತ್ಮದ ತಳಹದಿಯ ಮೇಲೆ ಕ್ರಾಂತಿಯನ್ನು ರೂಪಿಸಿದರೆಂಬುದಕ್ಕೆ, ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿ ಮಂತ್ರಗಳ ಹಿನ್ನೆಲೆಯಲ್ಲಿ ವೈಚಾರಿಕದರ್ಶನ ಸದಾ ಎಚ್ಚತ್ತಿರುತ್ತದೆಂಬುದಕ್ಕೆ ವಿಮರ್ಶಕರು ನಾಟಕಗಳಿಂದಲೇ ಸಾಕಷ್ಟು ನಿದರ್ಶನಗಳನ್ನು ಒದಗಿಸುತ್ತಾರೆ. ಕುವೆಂಪು ಜೀವನದ ಹಾಗೂ ಅವರ ಸಾಹಿತ್ಯದ ಅವಿಭಾಜ್ಯಾಂಗ ಪ್ರಕೃತಿ. ಅದು ಅವರ ಜೀವನವನ್ನೆಂತೊ ಅಂತೆಯೇ ಅವರ ಸಾಹಿತ್ಯವನ್ನೂ ರೂಪಿಸುತ್ತದೆ, ಪ್ರಭಾವಿಸು ತ್ತದೆ. ಕತೆ ಕವಿತೆ ನಾಟಕ ಕಾದಂಬರಿಗಳಿರಲಿ, ಅವರ ವಿಮರ್ಶಾ ಕೃತಿಗಳಲ್ಲಿಯೂ ಪ್ರಕೃತಿ ನಡು ನಡುವೆ ಇಣುಕುತ್ತದೆ. ಪ್ರಕೃತಿ ಮತ್ತು ಜನಜೀವನ ಸಮರಸದಿಂದ ಬೆರೆತಾಗಲೇ ಲೋಕಶಾಂತಿ ಮತ್ತು ಅಭ್ಯುದಯಗಳು ಸಾಧ್ಯವೆನ್ನುವುದು ಅವನ ಜೀವನದ ಹಾಗೂ ಸಾಹಿತ್ಯದ ಅಮರ ಸಂದೇಶ. ‘ಕುವೆಂಪು ಅವರ ನಾಟಕಗಳೆಲ್ಲ ಬಹುಮಟ್ಟಿಗೆ ಪ್ರಕೃತಿಯ ರಂಗಸ್ಥಳದಲ್ಲೇ ನಡೆಯುತ್ತವೆಂಬುದನ್ನು ನಿಬಂಧಕಾರರು ಸರಿಯಾಗಿಯೇ ಗುರುತಿಸಿದ್ದಾರೆ. ಅದನ್ನವರು ನಿಸರ್ಗ ನಾಟಕಗಳೆಂದೇ ಕರೆದಿದ್ದಾರೆ.

ಬಿ.ಎಂ.ಶ್ರೀ. ಅವರ ಅಶ್ವತ್ಥಾಮನ್ ಮತ್ತು ಪಾರಸಿಕ ನಾಟಕಗಳು ಅವರಿಗೆ (ಕುವೆಂಪುಗೆ) ಸಂವಿಧಾನ, ತಂತ್ರ ಮತ್ತು ಭಾಷೆಯ ದೃಷ್ಟಿಯಿಂದ ಮಾದರಿಯಾಗಿದ್ದವು ಎನ್ನುವ ಮಳಲಿಯವರ ಮಾತು ಸತ್ಯದೂರವಾದದ್ದೆಂದು ತೋರುತ್ತದೆ. ನಾಟಕಗಳಲ್ಲಿ ಸರಳರಗಳೆ ಯನ್ನು ಮೊತ್ತಮೊದಲು ಬಳಸಲು ತೊಡಗಿದವರಲ್ಲಿ ಕುವೆಂಪು ಅಗ್ರಗಣ್ಯರು ಎನ್ನುವ ವೆಂಕಣ್ಣಯ್ಯನವರ ಮಾತು ಈ ಸಂದರ್ಭದಲ್ಲಿ ಗಮನಾರ್ಹವಾದದ್ದು.ಕುವೆಂಪು ಅವರ ಭಾಷಾಶೈಲಿಯನ್ನು ಕುರಿತು ಪ್ರಸ್ತಾಪಿಸುವಾಗ ವಸಂತಕುಮಾರರು ಗೊಂದಲದ ಬಲೆಯಲ್ಲಿ ಸಿಕ್ಕಿಕೊಂಡಿರುವಂತೆ ಕಾಣುತ್ತದೆ. ಕುವೆಂಪು ಅವರ ಸಂಸ್ಕೃತಭೂಯಿಷ್ಠವಾದ ಭಾಷೆಗೆ ಕಾರಣ, ಬ್ರಾಹ್ಮಣ ಬರಹಗಾರರೊಡನೆಯ ಸ್ಪರ್ಧಾ ಮನೋಭಾವವಲ್ಲ, ಅವರ ವಿದ್ವತ್ತೆಂದು ಒಂದು ಕಡೆ ಸ್ಪಷ್ಟಪಡಿಸುತ್ತಾರೆ. ‘ಕುವೆಂಪು ಅವರು ಕ್ಲಾಸಿಕಲ್ ಭಾಷೆಯನ್ನು ಬಳಸಲು ಮುಖ್ಯಕಾರಣ ಅವರ ನಾಟಕಗಳ ವಸ್ತು ಸಹ ಬಹುಮಟ್ಟಿಗೆ ಕ್ಲಾಸಿಕಲ್ ಆಗಿರುವುದು… ವಸ್ತುವಿನ ಹಿರಿಮೆ, ಉನ್ನತ ಪಾತ್ರಗಳ ಗಾಂಭೀರ್ಯ, ಪೌರಾಣಿಕ ಮತ್ತು ಐತಿಹಾಸಿಕ ಪರಿಸರ ಇವುಗಳಿಗೆ ಸಂಬಂಧಿಸಿದ ಭಾಷೆ ಪ್ರೌಢವಾಗಿರಬೇಕೆಂಬ ಕಲ್ಪನೆ ಕುವೆಂಪು ಅವರ ಭಾಹೆಯ ಗಟ್ಟಿತನಕ್ಕೆ ಕಾರಣವಾಗಿದೆ’ ಎನ್ನುವಾಗ ವಿಮರ್ಶಕರು ಕುವೆಂಪು ಅವರ ಶೈಲಿಯನ್ನು ಸಮರ್ಥಿಸಿಕೊಂಡಿದ್ದಾರೆಂದೇ ಹೇಳಬಹುದು. ‘ಜನಸಾಮಾನ್ಯರನ್ನು ತಲುಪುವಲ್ಲಿ ಬೇಕಾದ ಸಲಿಲತೆ ಸಾಲದಾಯಿತು’ ಎನ್ನುವ ಟೀಕೆ ನಿಜ. ನಮ್ಮ ದೇಶದಲ್ಲಿ ಜನಸಾಮಾನ್ಯರೆಂದರೆ ನಿರಕ್ಷರಿಗಳು ತಾನೆ. ಅವರಿಗೆ ಯಾವ ಭಾಷೆಯಾದರೂ ಒಂದೆಯೇ. ಪ್ರಾದೇಶಿಕ ಉಪಭಾಷೆ ಗಳಲ್ಲಿ ರಚನೆಗೊಂಡ ಕೆಲವುಕೃತಿಗಳು ವಿದ್ಯಾವಂತರಿಗೂ ಅರ್ಥವಾಗುವುದಿಲ್ಲ. ಕುಕ್ಕರಹಳ್ಳಿ ಕೆರೆಯ ಬಳಿ ನಡೆದೇ ಸಲೀಸಾಗಿ ಹೋಗಬಹುದು; ಮಾನಸಸರೋವರವನ್ನು ತಲುಪಬೇಕಾದರೆ ಅಪಾರ ಧೈರ್ಯ ಸಾಹಸಗಳು ಅವಶ್ಯಕ. ಪುರಾತನ ಗಂಭೀರ ವಾತಾವರಣವನ್ನು ಸೃಷ್ಟಿಸುವಲ್ಲಿ ಭಾಷೆ ಸಂಕೀರ್ಣವಾಗಲೇಬೇಕು. ಮಳಲಿಯವರೇ ಒಂದು ಕಡೆ ‘ಪಾತ್ರೋಚಿತವಾದ ಭಾಷೆ ಮತ್ತು ಸಂಭಾಷಣೆಯ ಬಳಕೆಯಿಂದಾಗಿ ಅವು ನೈಜವಾಗುತ್ತವೆ’ ಎಂದು ನುಡಿದಿರುವುದನ್ನೂ ಮರೆಯಲಾಗದು. ‘ಹೊಸಗನ್ನಡ ಹಳೆಗನ್ನಡ ಪದಶಯ್ಯೆ ಕುವೆಂಪು ಅವರಲ್ಲಿ ಸೊಗಸಾಗಿದೆ. ಸಂಸ್ಕೃತ ಹಳೆಗನ್ನಡ ಹೊಸಗನ್ನಡಗಳ ಮೇಲೆ ಲೇಖಕರಿಗೆ ಒಳ್ಳೆಯ ಪ್ರಭುತ್ವವಿದೆ. ಹೀಗಾಗಿ ಭಾಷೆಯಲ್ಲಿ ವೈವಿಧ್ಯತೆ ಸಂಕೀರ್ಣತೆಗಳು ಸಾಧ್ಯವಾಗಿದೆ. ಅದು ಭಾವನಾನುಸಾರಿಯಾಗಿ ಸೂಕ್ತ ಪದಪುಂಜಗಳೊಡನೆ ಓತಪ್ರೋಹರಿಯುತ್ತದೆ. ಎಲ್ಲಿಯೂ ಎಡರು ತೊಡರು ಕಂಡುಬರುವುದಿಲ್ಲ; ಕಷ್ಟಪಟ್ಟು ತಿಣುಕಿರುವುದಿಲ್ಲ. ಅದು ತನಗೆ ತಾನೆ ಸಹಜ ಸುಂದರ ವಾಗಿದೆ. ಒಟ್ಟಿನಲ್ಲಿ ಅವರು ಕುವೆಂಪು ಶೈಲಿಯನ್ನು ಮೆಚ್ಚಿಕೊಂಡಿದ್ದಾರೆಂದೇ, ಅವರ ಮಾತಿನಲ್ಲಿ ಕಾಣುವ ವೈರುಧ್ಯ ಆಕಸ್ಮಿಕವೆಂದೇ ಹೇಳಬೇಕು.

ಕುವೆಂಪು ನಾಟಕಗಳ ರಂಗಪ್ರಯೋಗದ ಬಗ್ಗೆಯೂ ಮಳಲಿಯವರು ಸಹಜವಾಗಿಯೇ ಕೆಲವು ಆಕ್ಷೇಪಗಳನ್ನೆತ್ತಿದ್ದಾರೆ. ಜಗತ್ತಿನಲ್ಲಿ ಸೃಷ್ಟಿಯಾಗುತ್ತಿರುವ ಎಲ್ಲ ನಾಟಕಗಳೂ ರಂಗದ ಮೇಲೆ ಯಶಸ್ವಿಯಾಗುವುದಿಲ್ಲವೆಂಬುದು ದಿಟ. ಕೆಲವು ಶ್ರವ್ಯ ನಾಟಕಗಳು, ಕೆಲವು ಕೇವಲ ಮಾನಸಿಕ ರಂಗವನ್ನಪೇಕ್ಷಿಸುವಂಥವು. ಕುವೆಂಪು ಅವರಿಗೂ ಅದೆಲ್ಲ ಗೊತ್ತಿದೆ. ಆದರೂ ಆಧುನಿಕ ತಂತ್ರಜ್ಞಾನ ಸಲಕರಣೆಗಳಿರುವ ಈ ಕಾಲದಲ್ಲಿ ಅದನ್ನು ಸಹ ರಂಗದ ಮೇಲೆ ಯಶಸ್ವಿಯಾಗಿ ತರಬಹುದೆಂಬುದಕ್ಕೆ ‘ಶೂದ್ರ ತಪಸ್ವಿ’ಯೇ ಸಾಕ್ಷಿಯಾಗಿದೆ. ಒಂದು ನಾಟಕದ ಯಶಸ್ಸಿಗೆ ನಟ ನಿರ್ದೇಶಕರೂ ಕಾರಣ. ಭಾಷಾ ಕ್ಲಿಷ್ಟತೆಯ ಜತೆಗೆ, ಪಾತ್ರಗಳ ದೀರ್ಘ ಸಂಭಾಷಣೆ ಸಂವಹನಕ್ಕೆ ತೊಡಕಾಗುತ್ತದೆನ್ನುವ ಅವರ ಮಾತಿನಲ್ಲಿ ಸತ್ವವಿಲ್ಲ. ಅರ್ಜುನ ಏಕಲವ್ಯರ ವಾಗ್ವಾದದ ಘಟನೆಯನ್ನು ಸಿಂಹಾವಲೋಕನಕ್ರಮದಿಂದ ಅಳವಡಿಸಿರುವುದು ನಾಟಕದಲ್ಲಿ ಒಂದು ವೈವಿಧ್ಯತೆಯನ್ನು ಸಾಧಿಸಿದಂತಾಗಿದೆ’ ಎಂದು ಅವರೇ ಹೇಳಿದ್ದಾರೆ. ನಾಟಕಕಾರರು ಆರಂಭದಲ್ಲಿ ನಾಲ್ಕು ಪುಟಗಳಷ್ಟು ಮಾತುಗಳನ್ನು ಏಕಲವ್ಯನಿಂದ ಆಡಿಸಿರುವುದು ನಿಜ. ಆದರೆ ಆ ಎಲ್ಲ ಮಾತುಗಳು ಏಕಲವ್ಯನವಲ್ಲ. ಆ ಸಂದರ್ಭದಲ್ಲಿ ಏಕಪಾತ್ರಾಭಿನಯದ ತಂತ್ರವನ್ನು ಬಳಸಿಕೊಳ್ಳಲಾಗಿದೆ. ಸಂಭಾಷಣೆ ಹ್ರಸ್ವ ವಾಗಿರಬೇಕು ನಿಜ. ಆದರೆ ಭಾವಾಲೋಚನೆ ಸಂದರ್ಭಗಳಘನತೆ ಗಾಂಭೀರ್ಯಗಳು ದೀರ್ಘ ಸಂಭಾಷಣೆಯನ್ನಪೇಕ್ಷಿಸುತ್ತವೆ. ಅಲ್ಲೆಲ್ಲ ಔಚಿತ್ಯವೇ ಮುಖ್ಯ. ಮೇಲಣ ಪರಿಶೀಲನೆಯ ಪರಿಣಾಮವಾಗಿ ಕುವೆಂಪು ನಾಟಕಗಳನ್ನು ನಾಟಕಕಾವ್ಯಗಳೆಂದೂ ದಾರ್ಶನಿಕ ನಾಟಕಗಳೆಂದೂ ಕರೆಯಬಹುದಾಗಿದೆ.

ಮಳಲಿಯವರು ಒಟ್ಟಾರೆ ಕುವೆಂಪು ನಾಟಕಗಳನ್ನು ಮೆಚ್ಚಿಕೊಂಡಿದ್ದಾರೆ. ತಮಗೆ ಸರಿಯಲ್ಲವೆಂದು ತೋರಿದ ಸಂಗತಿಗಳನ್ನು ಟೀಕಿಸಿದ್ದಾರೆ. ಯಕ್ಷ ಕಿನ್ನರ ಭಕ್ತಿದೇವಿ, ಪ್ರಾರ್ಥನಾದೇವಿ, ಕೃಪಾದೇವಿ ಮೊದಲಾದ ಮನುಷ್ಯೇತರ ಪಾತ್ರಗಳಿಂದಾಗಿ, ಅಲೌಕಿಕ ಘಟನೆಗಳಿಂದಾಗಿ ಕೆಲವು ಕಡೆ ಕೃತಕತೆ ಉಂಟಾಗುತ್ತದೆಂಬುದು ಅವರ ವಾದ. ಪ್ರತಿಮಾಸತ್ಯದ ಅಭಿವ್ಯಕ್ತಿಗೆ ಇಂಥ ಪಾತ್ರಗಳ ಸೃಷ್ಟಿ ಅನಿವಾರ್ಯ. ಅಷ್ಟೇ ಅಲ್ಲ ನಾಟಕ ತಂತ್ರದ ದೃಷ್ಟಿ ಯಿಂದಲೂ ಅವುಗಳಿಗೆ ಔಚಿತ್ಯವುಂಟು. ‘ರಕ್ತಾಕ್ಷಿ ಸತ್ವಶಾಲಿ ಕೃತಿಯಲ್ಲ’ ಎಂಬ ಯಾರದೋ ಅಭಿಪ್ರಾಯವನ್ನು ಉಲ್ಲೇಖಿಸಿ, ಅದು ಸರಿಯೆಂದು ಸಮರ್ಥನೆ ಮಾಡಿಕೊಂಡಿಲ್ಲ; ಸರಿಯಲ್ಲವೆಂದು ವಿರೋಧಿಸಿಲ್ಲ. ಅದು ಸ್ವತಂತ್ರ ನಾಟಕವಲ್ಲವೆಂಬುದು ಕೆಲವರ ವಾದ. ನಾಟಕವನ್ನು ಕೂಲಂಕಷವಾಗಿ ಅಧ್ಯಯನ ಮಾಡದ ವಿದ್ವಾಂಸರ ಅವಸರದ ನಿರ್ಣಯ. ಅದರ ಮೇಲೆ ಹ್ಯಾಮ್ಲೆಟ್ ಪ್ರಭಾವವಿದೆ, ನಿಜ. ಆದರೆ ಅವೆರಡೂ ಪೂರ್ಣ ಭಿನ್ನ, ಒಂದು ಮತ್ತೊಂದರ ನಕಲಲ್ಲವೆಂಬುದು ಆ ನಾಟಕಗಳ ಹೆಸರುಗಳಿಂದ, ಪಾತ್ರರಚನೆಯಿಂದ ಸುಸ್ಪಷ್ಟವಾಗುತ್ತದೆ. ಮಳಲಿಯವರ ಕೆಲವು ಟೀಕೆಗಳು ಕುತ್ಸಿತ ಬುದ್ದಿಯಿಂದ ಉದ್ಭವಿಸಿ ದವಲ್ಲ, ಪ್ರಾಮಾಣಿಕ ಆಲೋಚನೆಯ ಫಲಿತಗಳೆಂಬುದು ನಿಜ. ಆದ್ದರಿಂದಲೇ ಅವು ಗಮನಾರ್ಹವಾಗುತ್ತವೆ. ಕುಬ್ಜಮತಿಯ, ಪೂರ್ವಗ್ರಹದ, ಅಸೂಯೆಯ ಟೀಕೆಗಳಾಗಿದ್ದರೆ ಅವುಗಳ ಕಡೆಗೆ ಗಮನಹರಿಸಬೇಕಾಗಿರಲಿಲ್ಲ. ವಿದ್ವತ್ಪ್ರತಿಭೆಗಳಿಂದ ಹಾಗೂ ಸುದೀರ್ಘ ಕೃಷಿಯಿಂದ ಸಾಹಿತ್ಯಕ್ಷೇತ್ರದಲ್ಲಿ ಸುಭದ್ರವೂ ಉನ್ನತವೂ ಆದ ಸ್ಥಾನವನ್ನು ಸಂಪಾದಿಸಿ ಕೊಂಡಿರುವ ಡಾ. ಮಳಲಿಯವರ ಕಿರೀಟದಲ್ಲಿ ಇದೊಂದು ಚಿನ್ನದ ಗರಿ. ಕುವೆಂಪು ನಾಟಕಗಳ, ಅಷ್ಟೇ ಏಕೆ ಅವರ ಸಮಗ್ರ ಸಾಹಿತ್ಯದ ಅಭ್ಯಾಸಿಗಳಿಗೆ ಇದೊಂದು ಅನಿವಾರ್ಯ ವಾದ ಕೀಲಿಕೈಯಾಗಲಿದೆ, ಮಾರ್ಗದರ್ಶಿದೀಪ್ತಿಯಾಗಲಿದೆ. ಇದರಿಂದಾಗಿ ಅವರು ಅಭಿನಂದನೀಯರು.