ಬಂಡಾಯ ಚಳುವಳಿಯಲ್ಲಿ ಹೆಸರಾಂತ ಶ್ರೀ ಶಿವರಾಮು ಕಾಡನಕುಪ್ಪೆಯವರು ಮನಸ್ಸಾಕ್ಷಿಗೊಪ್ಪುವಂತೆ ಸಾಹಿತ್ಯವನ್ನು ವಿಶ್ಲೇಷಿಸಬಲ್ಲ ಆಧುನಿಕ ದೃಷ್ಟಿಯ ಸಮರ್ಥ ಯುವ ವಿಮರ್ಶಕರು; ವಿದ್ಯಾರ್ಥಿ ದಶೆಯಿಂದಲೇ ನವೋದಯ, ನವ್ಯ, ದಲಿತ ಬಂಡಾಯ ಸಾಹಿತ್ಯವನ್ನು ವ್ಯಾಪಕವಾಗಿ, ತಲಸ್ಪರ್ಶಿಯಾಗಿ, ತೌಲನಿಕ ದೃಷ್ಟಿಯಿಂದ ಅಧ್ಯಯನಮಾಡಿ, ಸದಭಿರುಚಿಯನ್ನು ಬೆಳೆಸಿಕೊಂಡು, ಪ್ರಾಮಾಣಿಕ ವಿಮರ್ಶಕರೆಂದು ಹೆಸರು ಪಡೆದ ಉತ್ಸಾಹಿ ಲೇಖಕರು. ಕನ್ನಡ ಸಾಹಿತ್ಯದ ಆರೋಗ್ಯಕರ ಬೆಳವಣಿಗೆಯಲ್ಲಿ ಆಸಕ್ತಿಯಿರುವ ಇವರು ‘ಕುವೆಂಪು ಸಾಹಿತ್ಯವಿಚಾರ’ ಸಂಕಲನದ ಪ್ರಬಂಧಗಳ ಮೂಲಕ ಆಧುನಿಕ ವಿಮರ್ಶಾ ಸೂತ್ರಗಳ ಹಿನ್ನೆಲೆಯಲ್ಲಿ ಸಾಹಿತ್ಯದ ಪರಮ ಮೌಲ್ಯಗಳನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ. ವಿಕಾರಾತ್ಮಕ ಸಂಪ್ರದಾಯಗಳ ತಿರಸ್ಕಾರ, ಪರಂಪರಾಗತ ಚಿರಮೌಲ್ಯಗಳ ಪುನರುತ್ಥಾನ, ಅಧ್ಯಾತ್ಮದರ್ಶನದಿಂದ ಸ್ಫುರಿತವಾದ ಮಾನವೀಯತೆಯ ಸಂಪರ್ಕವುಳ್ಳ ಸಾಮಾಜಿಕ ಬದ್ಧತೆ ಇವು ಶ್ರೇಷ್ಠ ಸಾಹಿತ್ಯದ ಲಕ್ಷಣಗಳೆಂದು ಹೇಳುವಲ್ಲಿ ವಿಮರ್ಶಕರ ಮೌಲ್ಯಪ್ರಜ್ಞೆ ಸದಾ ಜಾಗೃತವಾಗಿದೆಯೆಂದು ಹೇಳಬಹುದಾಗಿದೆ.

ವರ್ತಮಾನದಲ್ಲಿ ನಿಂತಿದ್ದರೂ ಸಂಪ್ರದಾಯಶರಣರ ದೃಷ್ಟಿ ಭೂತದ ಕಡೆಗೆ ತಿರೋಗಾಮಿ ಯಾಗಿರುತ್ತದೆಯೆ ಹೊರತು, ಸದ್ಯದ ಅರಿವಾಗಲಿ, ಭವಿಷ್ಯತ್ತಿನ ಕಲ್ಪನೆಯಾಗಲಿ ಅವರಿ ಗಿರುವುದಿಲ್ಲ. ಅಂಥವರ ಮನಸ್ಸು ಸದಾ ವಿಕೃತವಾಗಿದ್ದು, ಸಾಮಾಜಿಕ ಪ್ರಗತಿಯ ಕಡೆಗೆ ಹರಿಯುವುದಿಲ್ಲ. ಆದ್ದರಿಂದಲೇ ‘ತಮ್ಮ ಸಮಕಾಲೀನರಿಗಿಂತ ಭಿನ್ನವಾಗಿ ಬರೆಯಲು ಬೆಳೆಯಲು’ ಕುವೆಂಪು ಅವರಿಗೆ ಸಾಧ್ಯವಾದದ್ದು ಅವರ ಸಾಮಾಜಿಕ ಸಂವೇದನೆಯಿಂದ ಎಂಬುದಾಗಿ ಶಿವರಾಮು ಸ್ಪಷ್ಟಪಡಿಸಿದ್ದಾರೆ. ‘ಅವರ ನಾಟಕಗಳು ಮತ್ತು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ “ಭೂತ”ವನ್ನು ವಿಮರ್ಶಿಸುವ, ಬೆಲೆಕಟ್ಟುವ ಕೆಲಸಕ್ಕೆ ಉತ್ತಮ ಕೊಡುಗೆಗಳು…ಶಿಷ್ಟ ಪರಂಪರೆಯ ಜತೆಗೆ ದುಡಿಯುವ ವರ್ಗದ ನೋವು ದುಮ್ಮಾನಗಳ ನಿಕಟ ಪರಿಚಯ ಮತ್ತು ಸಂವೇದನೆ ಕುವೆಂಪು ಅವರನ್ನು ಕನ್ನಡದ ಮೊತ್ತಮೊದಲ ಸಾಮಾಜಿಕ ಕವಿಯನ್ನಾಗಿ ಮಾಡಿತು’ (೨) ಎನ್ನುವ ವಿಮರ್ಶಕರ ಮಾತು ಗಮನಾರ್ಹ ವಾದದ್ದು. ಸಂಪ್ರದಾಯದ ಇಕ್ಕಟ್ಟಿನಲ್ಲಿ ಬೆಳೆದವರು ಕುವೆಂಪು ಸಾಹಿತ್ಯದಂಥ ಸಾಹಿತ್ಯವನ್ನು ನಿರ್ಮಿಸಲಾರರೆಂಬುದಂತೂ ನಿಜ.

ಕುವೆಂಪು ಸಾಹಿತ್ಯ ಅವರ ನಂತರ ಬಂದ ಹಲವು ಸಾಹಿತಿಗಳ ಮೇಲೆ, ನವ್ಯರ ಮೇಲೆ, ದಲಿತ ಬಂಡಾಯ ಸಾಹಿತಿಗಳ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಅಥವಾ ಪ್ರಮಾಣದಲ್ಲಿ ಪ್ರಭಾವ ಬೀರಿದೆಯೆಂಬುದನ್ನು ವಿಮರ್ಶಕರು ಉದ್ದಕ್ಕೂ ಸಾಧಾರವಾಗಿ ಎತ್ತಿ ತೋರಿಸಿದ್ದಾರೆ. ‘ಕುವೆಂಪು ಅವರ ಕಾದಂಬರಿಗಳು ಕನ್ನಡದ ಈಚಿನ ಸಾಹಿತ್ತಿಕ ಚಳುವಳಿಗಳಾದ ದಲಿತ – ಬಂಡಾಯದ ಮೇಲೆ  ಮಾಡಿರುವ  ಪ್ರಭಾವ ಅಪಾರ…ಪ್ರವೃತ್ತಿಯ ಮಟ್ಟದಲ್ಲಿ ಗುತ್ತಿಗೂ ಗುತ್ತಿನಾಯಿಗೂ ಅಂತರವಿಲ್ಲವೇನೋ ಎಂಬಂತೆ ದಲಿತ ಬದುಕು ಕಲಾತ್ಮಕವಾಗುತ್ತದೆ… ದಲಿತ-ಬಂಡಾಯದ ಲೇಖಕರಿಗೆ ಮತ್ತ್ಯಾವ ಲೇಖಕರೂ ಹತ್ತಿರವಾಗುವುದಿಲ್ಲ’ (೨-೪) ಎಂದವರು ಸತ್ಯವನ್ನೆ ನುಡಿದಿದ್ದಾರೆ.

ಕಾಡನಕುಪ್ಪೆಯವರು ಎತ್ತಿರುವ ಮತ್ತೊಂದು ವಿಷಯ ಮನನೀಯವಾಗಿದೆ. ಅದು ವಿಚಾರವಾದ ನಾಸ್ತಿಕವಾದಗಳಿಗೆ ಸಂಬಂಧಿಸಿದ ಸಂಗತಿ. ‘ಕುವೆಂಪು ಅವರಲ್ಲಿ ವಿಚಾರ ವಾದಕ್ಕೂ ನಾಸ್ತಿಕವಾದಕ್ಕೂ ತುಂಬ ವ್ಯತ್ಯಾಸವಿದೆ…ಅವರ  ಈ ನಿಲುವಿಗೆ ನಮ್ಮ ವಿಚಾರ ವಾದಿಗಳ ವರ್ತನೆ ಹಿನ್ನೆಲೆಯಾಗಿದೆ. ವಿಚಾರವಾದಿಗಳು ನಾಸ್ತಿಕವಾದಿಗಳೂ ಆಗಿ ತೀರಾ ರಿಜಿಡ್ ಆಗಿರುವುದು ಕಂಡುಬರುತ್ತದೆ. ನಾಸ್ತಿಕವಾದಿಯಲ್ಲಿ ಹೊಸ ಆಲೋಚನೆಗಳನ್ನು ಸ್ಥಿರೀಕರಿಸುವ ಮನೋಭಾವವಿರುವುದಿಲ್ಲ. ಆದರೆ ವಿಚಾರವಾದಿಯ ಮನಸ್ಸು ಸದಾ ಮಥಿಸುತ್ತಿರುತ್ತದೆ. ತನ್ನ ನಂಬಿಕೆ ಧೋರಣೆಗಳನ್ನು ಇತರರ ನಂಬಿಕೆ ಧೋರಣೆಗಳೊಡನೆ ತೂಗಿ ನೋಡುತ್ತಿರುತ್ತಾನೆ. ವಿಚಾರ ವಿನಿಮಯದಲ್ಲಿ ಸತ್ಯದ ಅನ್ವೇಷಣೆಯಿರುತ್ತದೆ. ತನ್ನದು ಸರಿಯಲ್ಲ ಎಂದು ಗೊತ್ತಾದಾಗ ನಿಜವಾದ ವಿಚಾರವಾದಿ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಾನೆ; ಬೇರೆಯವರ ವಿಚಾರಗಳಿಗೆ ಮಾನ್ಯತೆ ಕೊಡುತ್ತಾನೆ. ಹೀಗಾಗಿ ವಿಚಾರವಾದಿ, ಸದಾ ಬೆಳೆಯುತ್ತಿ ರುತ್ತಾನೆ. ಈ ಹಿನ್ನೆಲೆಯಿಂದ ವಿಚಾರವಾದಿ, ಸದಾ ಬೆಳೆಯುತ್ತಿರುತ್ತಾನೆ. ಈ ಹಿನ್ನೆಲೆಯಿಂದ ವಿಚಾರವಾದಿ ನಾಸ್ತಿಕವಾದಿಗಿಂತ ಬೇರೆಯಾಗುತ್ತಾನೆ (೭-೮). ಈ ಮಾತು ಸರ್ವ ಮಾನ್ಯ ತೆಗರ್ಹವಾಗುತ್ತದೆ. ಆದರೆ ವಸ್ತುಸ್ಥಿತಿಯೇ ಬೇರೆ ಎನ್ನುವುದನ್ನು ವಿಷಾದದಿಂದ ಸೂಚಿಸ ಬೇಕಾಗಿದೆ.

ಕೆಲವು ವಿಚಾರವಾದಿಗಳಿಗೆ ಮಾತ್ರ ಹಿಡಿಸದ ಆಧ್ಯಾತ್ಮ ಮತ್ತು ದರ್ಶನ ಮೌಲ್ಯಗಳ ಹಿನ್ನೆಲೆಯಲ್ಲಿ ಕುವೆಂಪು ಸಾಹಿತ್ಯದ ಶ್ರೇಷ್ಠತೆಯನ್ನೊಪ್ಪಿಕೊಂಡಿರುವುದು ಇಲ್ಲಿಯ ವಿಮರ್ಶೆಯ ವಿಶೇಷ. ಗುತ್ತಿ ತಿಮ್ಮಿಯರ ಪಾತ್ರಗಳು ಶ್ರೀರಾಮ ಸೀತೆಯರಿಗಿಂತ ಯಾವ ಅರ್ಥದಲ್ಲಿಯೂ ಕಡಿಮೆ ಇಲ್ಲದ ಅಧ್ಯಾತ್ಮಸ್ತರವನ್ನು ತಲುಪುತ್ತವೆ; ಸಫಲವಾಗುತ್ತವೆ. ಶೋಷಿತ ಬದುಕಿನ ಸ್ವಾಭಿಮಾನ ಸಾಹಸಗಳಿಗೆ ಸಂಕೇತವಾಗಿ, ಉಜ್ವಲ ಮಾನವೀಯ ಪ್ರೇಮಮೂರ್ತಿಗಳಾಗಿ ನಿಲ್ಲುತ್ತವೆ. ಇಂಥ ಪಾತ್ರ ಸೃಷ್ಟಿಗಳಿಂದ ಜೀವನ ಪರಿಕ್ರಮವನ್ನು ಬಿಡಿಸುತ್ತಾ ತಮ್ಮ ಸಾಹಿತ್ಯದಲ್ಲಿ ಅಸಾಮಾನ್ಯ ಹಾಸ್ಯಯುಕ್ತ ರಸಿಕತನದಿಂದ ಬದುಕನ್ನು ಪ್ರೀತಿಸಿದ ಕವಿ ಕನ್ನಡದಲ್ಲಿ ಮತ್ತೊಬ್ಬನಿಲ್ಲ’ (೭೮) ಎನ್ನುವ ಈ ವಿಮರ್ಶಕರ ಮಾತಿನಲ್ಲಿ ಉತ್ಪ್ರೇಕ್ಷೆ ಲವಲೇಶವೂ ಇಲ್ಲ. ಎಲ್ಲ ಶೋಷಣೆಗಳ ವಿರುದ್ಧ ಬಂಡೇಳಬೇಕೆಂದು ತಮ್ಮ ವಿಚಾರ ಸಾಹಿತ್ಯದಲ್ಲಿ ನೇರವಾಗಿ ಯುವ ಜನತೆಗೆ ಕರೆ ನೀಡುವುದು ಮಾತ್ರವಲ್ಲ, ಆ ಕರೆಯನ್ನು ಕುವೆಂಪು ತಮ್ಮ ಬದುಕಿನಲ್ಲಿ ಕಾರ್ಯಗತಗೊಳಿಸಿದ್ದಾರೆ. ಉಳಿದ ಸಾಹಿತ್ಯದ ಕಡೆಗೆ ಕಣ್ಣು ಹಾಯಿಸುವಾಗ, ಬಸವೇಶ್ವರ ಕುವೆಂಪು ಅವರನ್ನು ಬಿಟ್ಟರೆ, ಇತರರ ಕಾವ್ಯದ ಬದುಕೇ ಬೇರೆ, ಅದನ್ನು ರಚಿಸಿದ ಕವಿಯ ಬದುಕೇ ಬೇರೆ ಎನ್ನುವುದು ಸಾಮಾನ್ಯ ಓದುಗನಿಗೂ ಖಚಿತವಾಗದಿರದು. ಕಾವ್ಯಜೀವನ ನಿಜಜೀವನ ಒಂದಾಗಿರುವ ಸಾಹಿತಿಗಳ ಸಂಖ್ಯೆ ವಿರಳ. ಎರಡೂ ಒಂದಾದಾಗ ಮಾತ್ರ ಮಹಾಕವಿ ಮಹಾ ಮಾನವನೂ ಆಗುತ್ತಾನೆ.

‘ಕುವೆಂಪು ಸಾಹಿತ್ಯ ಒಂದು ಯುಗಧರ್ಮದ ಅಭಿವ್ಯಕ್ತಿ’ (ಪು. ೯೫) ಕುವೆಂಪು ನವೋದಯ ಕಾಲದಲ್ಲೇ, ಅವರ ಸಮಕಾಲೀನರಿಗೆ ಸವಾಲಾಗಿದ್ದ ಕವಿ; ನವ್ಯರಿಗೆ ಸವಾಲಾಗಿ ಬೆಳೆದ ಕವಿ: ಇಂದು ಕೂಡ ನಮಗೆ ಆದರ್ಶವಾಗಿರುವ ಕವಿ. ನಮ್ಮಂಥ ಯುವಕರು ಅವರ ಕೆಲವು ತತ್ವಗಳಲ್ಲಿ ಭಿನ್ನಾಭಿಪ್ರಾಯ ತಳೆದರೂ, ನವ್ಯರಿಗಿಂತ ಹೆಚ್ಚು ಪ್ರಸ್ತುತವಾಗುವ ಹಲವಾರು ಅಂಶಗಳನ್ನು ಅವರಲ್ಲಿ ಗುರುತಿಸುತ್ತೇವೆ (೯೭)’ ಕಾಡನ ಕುಪ್ಪೆಯವರ ಈ ವಾಕ್ಯಗಳು ಕುವೆಂಪು ಅವರ ಹಿರಿಮೆಗೆ, ಅವರ ಸಾಹಿತ್ಯದ ಶ್ರೇಷ್ಠತೆಗೆ ಕೈಮರಗಳಾಗಿವೆ. ಇದೇ ಕೊನೆಯ ಮಾತೆಂಬಂತೆ ಅವರು ಹೇಳಿದ್ದರೂ, ಒಂದೆರಡು ಮಾತನ್ನು ಬದಲಾಯಿಸಿ ಕೊಳ್ಳಬೇಕಾದ ಕಾಲ ಬಂದರೂ ಬರಬಹುದು. ಕನ್ನಡದ ಒಬ್ಬ ಪ್ರಸಿದ್ಧ ಕವಿಯ ಬಗ್ಗೆ ಮಾತಾಡುವಾಗ ಒಬ್ಬ ವಿಮರ್ಶಕ ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಎಂಬುದಾಗಿ ಅವರ ಬಗ್ಗೆ ಮೊದಲು ಹೇಳಿ, ಆಮೇಲೆ ಅವರೇ ಮಾತನ್ನು ಹಿಂದಕ್ಕೆ ತೆಗೆದುಕೊಂಡದ್ದುಂಟು. ಇದನ್ನು ಕಾಡನಕುಪ್ಪೆಯವರೇ ಉದಾಹರಿಸಿದ್ದಾರೆ. ಮೊದಮೊದಲು ಮಿಲ್ಟನ್‌ನನ್ನು ಕಟುವಾಗಿ ಟೀಕಿಸಿದ ಇಲಿಯಟ್ ಕೊನೆಗೆ ಅವನ ಕಾವ್ಯದ ಹಿರಿಮೆಯನ್ನು ಒಪ್ಪಿಕೊಂಡ ದ್ದುಂಟು. ಕಾಲಕಳೆದಂತೆ ಬದುಕೂ ಮಾಗುತ್ತದೆ, ಮನಸ್ಸೂ ತಿಳಿಯಾಗುತ್ತದೆ. ಅದೇನೇ ಇರಲಿ, ಕಲ್ಕಿ ಪ್ರೇತಕ್ಯೂಗಳನ್ನು ಕುರಿತು ಮಾಡಿರುವ ಕಾಡನಕುಪ್ಪೆಯವರ ವ್ಯಾಖ್ಯಾನ ಸೃಜನಾತ್ಮಕ ಶ್ರೇಷ್ಠ ವಿಮರ್ಶೆಯಾಗಿದೆ; ಇದಿಷ್ಟೇ ಸಾಕ್ಷಿ ಸಾಕು, ಅವರು ಶ್ರೇಷ್ಠ ವಿಮರ್ಶಕ ರಾಗಿದ್ದಾರೆ, ಪ್ರಬುದ್ಧ ವ್ಯಾಖ್ಯಾನಕಾರರಾಗಿದ್ದಾರೆ ಎನ್ನುವುದಕ್ಕೆ, ಕುವೆಂಪು ಅವರನ್ನು ಹತ್ತಿಕ್ಕಲು ‘ಗೆಳೆಯರ ಗುಂಪು’ ಮಾಡಿದ ಪ್ರಯತ್ನವನ್ನೂ, ಕೊನೆಗೆ ಅದೇ ಗುಂಪು ಕುವೆಂಪು ಅವರ ಹಿರಿಮೆಯನ್ನೊಪ್ಪಿಕೊಂಡದ್ದನ್ನೂ ವಿಮರ್ಶಕರು ಸೂಚಿಸಿದ್ದಾರೆ (೭೯).

ಕುವಂಪು ಅವರ ಪ್ರಭಾವಕ್ಕೊಳಗಾಗದ ಸಾಹಿತಿಗಳಿಲ್ಲ ಎಂದು ಅನೇಕ ಕಡೆ ಪ್ರಸ್ತಾಪಿಸಿದ ವಿಮರ್ಶಕರು ಕುವೆಂಪು ಅವರ ನೇರ ಪ್ರಭಾವಕ್ಕೆ ಸಿಕ್ಕಿದವರು ಅವರ ಶಿಷ್ಯರು (೭೯) ಎಂದು ಹೇಳಿ, ‘ಆ ಶಿಷ್ಯರು ತಮ್ಮ ಗುರುಗಳ ಸಾಹಿತ್ಯವನ್ನು ಭಯ ಭಕ್ತಿ ಗೌರವ ಸಂಮಿಶ್ರ ಭಾವದಿಂದ ಅಧ್ಯಯನ ಮಾಡಲು ತೊಡಗಿದರು’ ಎಂದು ಉದ್ಗಾರ ತೆಗೆದಿದ್ದಾರೆ. ಭಯ ಎನ್ನುವ ಪದಪ್ರಯೋಗ ಅನುಚಿತವೆಂದೇ ಹೇಳಬೇಕು. ಏಕೆಂದರೆ ಕುವೆಂಪು ಅವರಂಥ ಸಾತ್ವಿಕ ವ್ಯಕ್ತಿಯ ಬಗ್ಗೆ ಯಾರಿಗೂ ಭಯ ಅನಾವಶ್ಯಕ. ಕುವೆಂಪು ಅವರು ಶ್ರೇಷ್ಠತಮ ಮಾನವ ಎಂಬ ಕಾರಣಕ್ಕಾಗಿ ಶಿಷ್ಯರು ಭಕ್ತಿ ಗೌರವಗಳನ್ನು ಸಲ್ಲಿಸಿದರೆ ಅಪರಾಧವಾಗದು. ಅದೊಂದು ದೊಡ್ಡ ಗುಣವೆಂದೇ ಹೇಳಬೇಕು; ದೊಡ್ಡ ಗುಣವನ್ನು ಗುರುತಿಸಿ, ಗೌರವಿಸ ಬೇಕಾದರೂ ಅರ್ಹತೆಬೇಕು. ಕುವೆಂಪು ಶಿಷ್ಯರು ಜಾತ್ಯಂಧರಿಗೆ, ವ್ಯಭಿಚಾರಿಗಳಿಗೆ, ಕುಡುಕರಿಗೆ, ನೀತಿಭ್ರಷ್ಟರಿಗೆ, ಆಚಾರ ವಿಚಾರಗಳಲ್ಲಿ ಹೊಂದಾಣಿಕೆ ಇಲ್ಲದವರಿಗೆ ಮಣೆ ಹಾಕುವುದಿಲ್ಲ, ನಿಜ. ಬಯ್ದರೆ ಮಾತ್ರ ವಿಮರ್ಶಕ, ಗುಣಗಳನ್ನು ಮಾತ್ರ ಎತ್ತಿ ತೋರಿಸಿದರೆ ವಿಮರ್ಶಕನಲ್ಲ ಎನ್ನುವುದೇ ಸರಿಯಲ್ಲ. ಯೋಗ್ಯ ಗುರುಗಳ ಪಾದಕ್ಕೆರಗುವುದು ಅಸಭ್ಯ ಲಕ್ಷಣವೂ ಅಲ್ಲ. ಅಪರಾಧವೂ ಅಲ್ಲ; ಗೌರವಾಭಿವ್ಯಕ್ತಿಯ ಹಲವು ಸಾಧನಗಳಲ್ಲಿ ಅದೂ ಒಂದು; ಗೌರವ ಪ್ರದರ್ಶನಕ್ಕಾಗಿ ಕೆಲವು ಸಮಾಜಗಳಲ್ಲಿ ಚುಂಬನಕ್ರಿಯೆಯ ಅತಿರಿಕ್ತತೆಯನ್ನು ಗಮನಿಸಬಹುದು : ಅದು ತಪ್ಪೆಂದು ಭಾವಿಸುವುದೇ ಬೆಪ್ಪು. ಕೆಲವರಿಗೆ  ಚಂದ್ರನಲ್ಲಿ ಕಪ್ಪೊಂದೇ ಕಾಣಬಹುದು, ಸಾಕ್ರತೀಸ್‌ನಂಥ ವ್ಯಕ್ತಿಗಳಲ್ಲಿ ಮುಖ ವಿಕಾರವೊಂದೇ ಕಾಣಬಹುದು, ಕಬ್ಬಿನಲ್ಲಿ ಗೆಣ್ಣೊಂದೇ ಕಾಣಬಹುದು; ಅದು ಅವರವರ ಅಭಿರುಚಿ ಮನೋಧರ್ಮ ಹಣೆ ಬರಹಗಳಿಗೆ ಸಂಬಂಧಿಸಿದ ವಿಷಯ.

ಈ ಅಭಿರುಚಿ ಮನೋಧರ್ಮಗಳಿಗೆ ಸಂಬಂಧಿಸಿದಂತೆ ವಿಮರ್ಶೆಯನ್ನು ಗುಣ ಗ್ರಹಣ ವಿಮರ್ಶೆ, ಸಮನ್ವಯ ವಿಮರ್ಶೆ, ಖಂಡನಾ ವಿಮರ್ಶೆ, ಗುಂಪುಗಾರಿಕೆ ಅಥವಾ ಪರಸ್ಪರ ಸ್ತುತಿ ವಿಮರ್ಶೆ ಎಂದು ವಿಭಜಿಸಬಹುದು. ಇವುಗಳ ವಿವರಣೆ ವ್ಯಾಖ್ಯಾನ ಸದ್ಯದಲ್ಲಿ ಅಪ್ರಸ್ತುತವಾದ್ದರಿಂದ ಈ ವಿಚಾರವನ್ನು ಇಲ್ಲಿಗೆ ಕೈಬಿಡುತ್ತೇನೆ. ಆದರೆ ಈ ಎಲ್ಲ ಪ್ರಬಂಧಗಳನ್ನು ಒಟ್ಟಾರೆ ನೋಡುವಾಗ ಇಲ್ಲಿಯದು ಗುಣಗ್ರಹಣ ವಿಮರ್ಶೆ ಎಂದೇ ಹೇಳಬಹುದು. ಕೆಲವು ಶಿಷ್ಯರು ಕುವೆಂಪು ಅವರ ಸನಿಹದಲ್ಲಿರುವುದರಿಂದ ಅವರ ವಿಮರ್ಶೆ ದೋಷಪೂರಿತವಾಗುತ್ತದೆಂದು ಹೇಳಿದರೆ ಆ ಮಾತು ಎಲ್ಲ ನಮ್ಮ ನಾಡಿನ ವಿಮರ್ಶಕರಿಗೂ ಅನ್ವಯಿಸುತ್ತದೆ. ಪೂರ್ವಗ್ರಹ ಮನೋಭಾವದಿಂದ, ಶಕ್ತಿಯುಳ್ಳ ಕವಿಗಳನ್ನು ಹತ್ತಿಕ್ಕುವ ಮೂಲಕ ತನ್ನವರನ್ನು ಮೆರೆಸಬೇಕೆನ್ನುವ ಚಲದಿಂದ ಕಟು ವಿಮರ್ಶೆ ತಲೆದೋರಿದಾಗ ಅಂಥ ವಿಗ್ರಹಭಂಜನ ವಿಮರ್ಶೆಯನ್ನು ಖಂಡಿಸಬೇಕಾದ್ದು ಸಾಹಿತ್ಯಾರೋಗ್ಯದ ದೃಷ್ಟಿಯಿಂದ ಅನಿವಾರ್ಯ. ಈ ಬಗ್ಗೆಯೂ ಮಾತಿನ ವಿಸ್ತರಣೆ ಇಲ್ಲಿ ಅನಾವಶ್ಯಕ, ಈ ಸಂಕಲನದ ಬಹುಭಾಗ ವಿಮರ್ಶೆ ಸಹ ‘ಆತ್ಮಾನಂದ’ದಿಂದ ಕೂಡಿದೆಯೆಂದರೆ ತಪ್ಪಾಗಲಾರದು.

‘ಕುವೆಂಪು ಸಾಹಿತ್ಯವನ್ನು ಗುತ್ತಿಗೆ ತೆಗೆದುಕೊಂಡವರಂತೆ ಕೆಲವು ಲೇಖಕರು ನಡೆದು ಕೊಳ್ಳುತ್ತಿದ್ದಾರೆ’ (೮೪) ಎಂಬ ಮಾತು ಸಹ ಸತ್ಯದೂರವಾದದ್ದು, ಭ್ರಮಾ ಶೀಲವಾದದ್ದು. ಇದು ಕುವೆಂಪು ಅವರಂಥ ಮಹಾವ್ಯಕ್ತಿಗೂ ಗೌರವ ತರುವಂಥ ಮಾತಲ್ಲ. ಗುತ್ತಿಗೆ ತೆಗೆದುಕೊಂಡವರಿದ್ದರೆ, ಗುತ್ತಿಗೆ ಕೊಡುವವರು ಯಾರು? ಸಾಹಿತ್ಯ ಪ್ರಕಟಗೊಂಡ ಕೂಡಲೇ ಸಾರ್ವಜನಿಕ ಸ್ವತ್ತಾಗುತ್ತದೆ. ನಿಸರ್ಗವನ್ನು ಬಳಸಿಕೊಳ್ಳುವಂತೆ ಯಾರು ಬೇಕಾದರೂ ಅದನ್ನು ನ್ಯಾಯಬದ್ಧವಾಗಿ ಶಿಷ್ಟಸಂಹಿತೆಗನುಗುಣವಾಗಿ ಬಳಸಿಕೊಳ್ಳಬಹುದು. ಆದರೆ ಅದನ್ನು ದುರುದ್ದೇಶಪೂರಿತರಾಗಿ ಬಳಸಿಕೊಂಡದ್ದಾದರೆ ಆಮ್ಟೆಯಂಥ,

[1] ಬಹುಗುಣರಂಥ ನಿಸರ್ಗ ಪ್ರಿಯರು ಮಾಲಿನ್ಯ ವಿರೋಧಿಗಳು ಖಂಡನೆಯ ಖಡ್ಗವೆತ್ತಬೇಕಾಗುತ್ತದೆ. ಸತ್ಯಾಗ್ರಹ ಹೂಡಬೇಕಾಗುತ್ತದೆ. ನಿಸರ್ಗವನ್ನು ಗುತ್ತಿಗೆಗೆ ತೆಗೆದುಕೊಂಡಿದ್ದಾರೆಂದು ಆಮ್ಟೆ ಬಹುಗುಣ ರನ್ನು ನಿಂದಿಸಲಾದೀತೆ? ಕುವೆಂಪು ಸಾಹಿತ್ಯ ಸೂರ್ಯನ ಬಿಸಿಲಿನಂತೆ ಗಾಳಿ ಮಳೆಗಳಂತೆ ಎಲ್ಲರೂ ಸಮಾನವಾಗಿ ಅನುಭವಿಸಬೇಕಾದ ಸಂಪತ್ತು. ತಮಗೆ ಬಿಸಿಲು ಬೇಡವೆಂದು ಯಾರಾದರೂ ಗುಹೆ ಹೊಕ್ಕರೆ, ಬಿಸಿಲು ಜಾಸ್ತಿಯಾಯಿತೆಂದು ಯಾರಾದರೂ ಬಯ್ದರೆ ಅದು ಅವರವರ ಧರ್ಮವೆನ್ನಬೇಕಾಗುತ್ತದೆ. ಹಾಗೆಯೇ ಗುಣಗ್ರಾಹಿಗಳು ಕುವೆಂಪು ಸಾಹಿತ್ಯದ ಗುಣಗಳನ್ನು ಎತ್ತಾಡಿದರೆ, ಅದನ್ನೊಪ್ಪದಿದ್ದರೂ, ಸಹಿಸಿಕೊಳ್ಳುವ, ತಾವು ಬಯ್ದರೆ ಹೇಗೋ ಹಾಗೆಯೇ ಇತರರು ಹೊಗಳಲೂ ಹಕ್ಕಿದೆಯೆಂದು ಅನಸೂಯಪರರಾಗಿ ತೆಪ್ಪಗಿರಬೇಕಾ ಗುತ್ತದೆ. ಕುವೆಂಪು ಸಾಹಿತ್ಯದ ಗುಣಗಳನ್ನು ಪ್ರಕಾಶಕ್ಕೆ ತಂದರೆ ಜನ ಏನೆಂದುಕೊಂಡಾರೋ ಎನ್ನುವ ಭೀತಿ ಕೆಲವರಿಗೆ ಇದೆ. ಶಿವರುದ್ರಪ್ಪ ಅವರಂಥ ಇಲಿಯಟ್‌ನನ್ನು ಮೀರಿಸುವಂಥ ವಿಮರ್ಶಕರಿಗೆ ಆ ಭಯ ಲವಲೇಶವೂ ಇಲ್ಲ. ಇದ್ದಿದ್ದರೆ ಮಾಸ್ತಿಯವರ ಸಮ್ಮುಖದಲ್ಲಿ ಕುವೆಂಪು ಕನ್ನಡನಾಡಿನ ಸರ್ವಶ್ರೇಷ್ಠ ಸಾಹಿತಿಯೆಂದು ಹೇಳುತ್ತಿರಲಿಲ್ಲ. ಆದ್ದರಿಂದ ಕುವೆಂಪು ಸಾಹಿತ್ಯವನ್ನು ಯಾರೂ ಗುತ್ತಿಗೆಗೆ ತೆಗೆದುಕೊಂಡಿಲ್ಲವೆಂದಿಲ್ಲಿ ಸ್ಪಷ್ಟಪಡಿಸಬೇಕಾಗಿದೆ.

‘ಕುವೆಂಪು ಜಾತಿ ಬಿಟ್ಟರೂ ಜಾತಿಯವರು ಕುವೆಂಪು ಅವರನ್ನು ಬಿಟ್ಟಂತೆ ಕಾಣುತ್ತಿಲ್ಲ…. ಅವರನ್ನು ಮಠದೊಳಕ್ಕೂ ಎಳೆಯುತ್ತಿರುವುದು ಕಂಡುಬರುತ್ತಿದೆ’ (೯೮) ಕಾಡನಕುಪ್ಪೆ ಯವರಂಥ ತ್ರಿಕರಣಶುದ್ದಿಯ ಜಾತಿವಿರೋಧಿಗಳು ಹೀಗೆ ಹೇಳಿದ್ದು ಸರಿಯೇ ಸರಿ. ಆದರೆ ಪಾಪಪೂರಿತವಾದ ಈ ಹಿಂದೂ ಸಮಾಜದ ಯಾವುದೇ ಜಾತಿಯಲ್ಲಿ ಹುಟ್ಟಿದ್ದೇ ಆಕಸ್ಮಿಕ. ನಿರ್ಜಾತೀಯ ನಿರ್ಮತೀಯ ಪ್ರಜ್ಞೆಯ ಕುವೆಂಪು ಅವರ ಶಿಷ್ಯರಲ್ಲಿ ಕೆಲವರು ಜಾತಿವಾದಿಗಳು ಮಾತ್ರವಲ್ಲ, ಮಠ ಗುಲಾಮರೆಂಬುದೂ ನಿಜ. ನಾಡಿನ ಅವನತಿಗೆ ಜಾತೀಯತೆ ಮತೀಯತೆ ಎರಡೇ ಆದ್ಯಕಾರಣಗಳೆಂಬುದು ನಿಜ. ಇವುಗಳನ್ನು ಪೋಷಿಸುವ ಜನರಾಗಲಿ ಮಠಗಳಾಗಲಿ ಇರುವತನಕ ದೇಶಕ್ಕೆ ಕ್ಷೇಮವಿಲ್ಲವೆಂದು ಕುವೆಂಪು ಸಾರುತ್ತಿರುವುದು ಸರ್ವವೇದ್ಯ. ಕುವೆಂಪು ಅವರ ಬಳಿ ಎಲ್ಲ ಜಾತಿಯ ಜನರೂ ಬರುತ್ತಾರೆ. ಸ್ವಾಮಿಗಳೂ ಬರುತ್ತಾರೆ. ಅವರಿಗೂ ವಿಶ್ವಮಾನವ ಸಂದೇಶವನ್ನು ಬೋಧಿಸುತ್ತಾರೆ; ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಆದರೆ ಹುಟ್ಟು ಆಕಸ್ಮಿಕವಾಗಿರುವಾಗ ಒಕ್ಕಲಿಗರೆನಿಸಿಕೊಂಡಿರುವವರು ಕುವೆಂಪು ಅವರನ್ನು ಮೆರೆದಾಡಿದರೆ ತಪ್ಪೆ? ಒಕ್ಕಲಿಗರೂ ಬ್ರಾಹ್ಮಣರಂತೆ ಲಿಂಗಾಯತರಂತೆ ಮಾನವರಲ್ಲವೆ? ಆ ಮೂಲಕ ಜಾತೀಯತೆಯನ್ನು ಉಲ್ಭಣಗೊಳಿಸಿದರೆ ಮಾತ್ರ ಅಪರಾಧ. ಬಸವೇಶ್ವರನನ್ನು ಲಿಂಗಾಯತರು ಹೊತ್ತು ಮೆರೆದರೆ ತಪ್ಪೆ? ಇತರರು ಬಸವೇಶ್ವರರನ್ನು ಮೆರೆಸಬಾರದೆಂದು ಲಿಂಗಾಯತರು ಕಟ್ಟುಮಾಡಿದರೆ ತಪ್ಪು ಮಾತ್ರವಲ್ಲ, ಬಸವದ್ರೋಹವೂ ಆಗುತ್ತದೆ. ಆದರೆ ಎಷ್ಟು ಮಂದಿ ಲಿಂಗಾಯತೇತರರು ಬಸವಣ್ಣನವರನ್ನು ಗೌರವಿಸುತ್ತಾರೆ, ಅವರ ವಚನಗಳನ್ನೋದುತ್ತಾರೆ? ಕ್ರಿಶ್ಚಿಯನ್ನರು ಕ್ರಿಸ್ತನನ್ನು ಪೂಜಿಸಿದರೆ ತಪ್ಪಲ್ಲ, ಕೃಷ್ಣ ಜೊರಾಸ್ತರ್ ಅಲ್ಲಾ ಮೊದಲಾದವರ ಪೂಜೆ ಸಲ್ಲದೆಂದು ಹೇಳುವುದು ಅಪರಾಧ. ಕುವೆಂಪು ಅವರು ತಮ್ಮವರೆಂದು ಯಾರನ್ನೂ ಹತ್ತಿರಕ್ಕೆ ಸೇರಿಸಿಕೊಂಡಿಲ್ಲ, ಬೇರೆಯವರೆಂದು ಯಾರನ್ನೂ ದೂರ ಮಾಡಿಲ್ಲ; ಅವರಿಗೆ ಅಂಥ ಯೋಚನೆಯೇ ಹೊಳೆಯುವುದಿಲ್ಲ. ಅದೇನೇ ಇರಲಿ, ಕುವೆಂಪು ಒಕ್ಕಲಿಗರಿಗೆ ಮಾತ್ರ ಮೀಸಲೆನ್ನುವ ಒಕ್ಕಲಿಗರು ಮೂರ್ಖರಾಗುತ್ತಾರೆ, ಕಾವ್ಯದ್ರೋಹಿಗಳಾಗುತ್ತಾರೆ, ಸತ್ಯಚ್ಯುತರಾಗುತ್ತಾರೆನ್ನುವುದಂತು ಸ್ಪಷ್ಟ.

ಕಾಡನಕುಪ್ಪೆಯವರು ನಮ್ಮ ಉತ್ತಮ ಸೃಜನಾತ್ಮಕ ವಿಮರ್ಶಕರಲ್ಲೊಬ್ಬರೆನ್ನುವುದರಲ್ಲಿ ಎರಡು ಮಾತಿಲ್ಲ. ವಿಮರ್ಶೆಯ ನಡುವೆ ಕೆಲವು ಸಮಸ್ಯೆಗಳನ್ನೆತ್ತಿ ಉಪಕಾರ ಮಾಡಿದ್ದಾರೆಂದೇ ಹೇಳಬಹುದು.

* * *[1]     ಆಮ್ಟೆಯಂಥವರ ನಿಲವನ್ನು ಸಹ ನಾನು ಪೂರ್ತಿಯಾಗಿ ಮೆಚ್ಚುವುದಿಲ್ಲ. ಅವರ ಮಾನವೀಯತೆ ತಪ್ಪುದಾರಿ ಹಿಡಿದಿದೆ. ಮನೆಮಠ ಕಳೆದುಕೊಂಡವರಿಗೆ ಅನುಕೂಲ ಕಲ್ಪಿಸಿಕೊಡಲಿ, ಹೊಸ ಕಾಡುಗಳನ್ನು ಬೆಳೆಸಲು ಸರ್ಕಾರವನ್ನು ಒತ್ತಾಯಪಡಿಸಲಿ ಅಥವಾ ಅವರೇ ಬೆಳೆಯಲಿ, ಆದರೆ ಲಕ್ಷ ಲಕ್ಷ ಜನರಿಗೆ ಅನ್ನ ಉದ್ಯೋಗ ನೀಡುವ ಅಣೆಕಟ್ಟುಗಳು ಬೇಡವೆನ್ನುವುದು ಅವಿವೇಕತನ.