ಒಂದು ಪ್ರದೇಶದ ಆರ್ಥಿಕಾಭಿವೃದ್ಧಿಗೆ ವ್ಯಾಪಾರವು ಅಗತ್ಯವಾಗಿದೆ. ಆಂತರಿಕ ಹಾಗೂ ವಿದೇಶೀ ವ್ಯಾಪಾರಗಳು ದೇಶದ ಪ್ರಗತಿಯ ಸೂಚ್ಯಂಗಳಾಗಿವೆ.

ಒಂದು ಪ್ರದೇಶದಲ್ಲಿ ಆದರ ನೈಸರ್ಗಿಕ ಸಂಪನ್ಮೂಲಗಳಿಂದ ಉತ್ಪಾದಿಸಿದ ಉತ್ಪನ್ನಗಳನ್ನು, ಆ ಉತ್ಪನ್ನಗಳ ಕೊರತೆ ಹಾಗು ಅದಕ್ಕೆ ಬೇಡಿಕೆ ಇರುವ ಪ್ರದೇಶಕ್ಕೆ ರಫ್ತು ಮಾಡಿ ಅನುಬೋಗಿಗಳಿಗೆ ಒದಗಿಸುವ ಕಾರ್ಯವನ್ನು ವ್ಯಾಪಾರ ಮತ್ತು ವಾಣಿಜ್ಯವ್ಯವಸ್ಥೆ ನಿರ್ವಹಿಸುತ್ತದೆ; ಹೊಸ ಬೇಡಿಕೆಗಳನ್ನು ಸೃಷ್ಟಿಸುತ್ತದೆ. ಹೀಗೆ ವಾಣಿಜ್ಯ ಮತ್ತು ವ್ಯಾಪಾರದ ಬೆಳವಣಿಗೆ ಒಂದು ಪ್ರದೇಶದ ಭೌಗೋಳಿಕತೆ ಪ್ರಮುಖ ಪಾತ್ರವಹಿಸುತ್ತದೆ. ಅಂತೆಯೇ ಐತಿಹಾಸಿಕ ಘಟನೆಗಳೂ ಮುಖ್ಯವಾಗುತ್ತವೆ.ಹೈದಾರಾಲಿ ಬೇದನೂರನ್ನು ಜಯಿಸಿ ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಇಂಗ್ಲಿಷನವರು ಬೇದನೂರು ರಾಜ್ಯದ ಘಟ್ಟದ ಕೆಳಗಿನ ಭಾಗವನ್ನು ಮಾತ್ರ ತೆಗೆದುಕೊಂಡು ಘಟ್ಟದ ಮೇಲಿನ ಬಾಗವನ್ನು ಮೈಸೂರಿನ ರಾಜರಿಗೆ ಕೊಟ್ಟಿದ್ದರು (ಕೃಷ್ಣರಾವ್ ೧೯೪೨). ಹೀಗೆ ಐತಿಹಾಸಿಕ ಕಾರಣದಿಂದ ಮಲೆನಾಡಿನವರು ತಮ್ಮ ರಾಜರನ್ನು ಕಳೆದುಕೊಂಡು ಬೇರೆ ಬೇರೆ ರಾಜರ ಪ್ರಜೆಗಳಾದರು. ಇದರಿಂದಾಗಿ ಭೌಗೋಳಿಕ ಭೇದವೂ ಬೆಳೆದು ಘಟ್ಟದ ಕೆಳಗಿನವರು, ಘಟ್ಟದ ಮೇಲಿನವರೆಂಬ ಅಂತರಗಳು ಬೆಳೆಯತೊಡಗಿದವು. ಅಲ್ಲದೆ ಇದರಿಂದಾಗಿ ಮೈಸೂರು ರಾಜ್ಯಕ್ಕೆ ಕರಾವಳಿ ಪ್ರದೇಶ ತಪ್ಪಿ ಹೋಯಿತು. ರಾಜ್ಯದ ಸುತ್ತಲೂ ಬೆಟ್ಟ ಗುಡ್ಡಗಳು ಗೋಡೆಯಂತೆ ನಿಂತಿದ್ದವು. ಅಲ್ಲದೆ ನದಿಗಳು ಕೂಡ ವ್ಯಾಪಾರಕ್ಕೆ ಅನುಕೂಲಕರವಾಗಿರಲಿಲ್ಲ. ಹೀಗೆ ಭೌಗೋಳಿಕ ಅಂಶಗಳು ಮೈಸೂರಿನ ಹೊರರಾಜ್ಯದ ವ್ಯಾಪಾರಕ್ಕೆ ಪ್ರತಿಕೂಲವಾಗಿದ್ದವು.

ರಾಜ್ಯದಲ್ಲಿ ೧೯ನೇ ಶತಮಾನದ ಆರಂಭದ ಕಾಲದಲ್ಲಿ ಮತ್ತು ನಂತರ ಹೆಚ್ಚಿನ ಸಂಖ್ಯೆಯಲ್ಲಿ ಹೆದ್ದಾರಿಗಳು ಇರಲಿಲ್ಲ. ಇದ್ದದ್ದು ಕೇವಲ ಎತ್ತಿನಗಾಡಿಯ ಗಾಡಿದಾರಿಗಳು. ಬೆಟ್ಟಗುಡ್ಡ ಕಾಡುಗಳಲ್ಲಿ ಸಂಚಾರ ಮಾಡಬೇಕಾಗುತ್ತಿದ್ದುದರಿಂದ ಮಳೆಗಾಲದಲ್ಲಿ ಇವನ್ನು ಬಳಸುವುದು ಕಷ್ಟವಾಗಿತ್ತು. ಅಲ್ಲದೆ ಎತ್ತಿನ ಗಾಡಿಯೂ ಆಗಿನ ಕಾಲದಲ್ಲಿ ದುರ್ಲಭವಾಗಿತ್ತು.

ತೀರ್ಥಹಳ್ಳಿ ಆಗುಂಬೆಯ ಮುಖಾಂತರವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ವ್ಯಾಪಾರಿಗಳು ಹೋಗಿ ಬರುತ್ತಿದ್ದರು. ಅಲ್ಲದೆ ಇಂಥ ದಾರಿಗಳಲ್ಲಿ ದರೋಡೆಕೋರರ ಭಯವೂ ಇತ್ತು. ಹೀಗೆ ಆಮದಾದ ವಸ್ತುಗಳು ಮತ್ತು ಆಂತರಿಕವಾಗಿ ಉತ್ಪನ್ನವಾದ ದವಸ-ಧಾನ್ಯ ಮತ್ತು ಇತರ ಸಾಮಾನುಗಳ ಮಾರಾಟಕ್ಕೆ ಸಂತೆ ಜಾತ್ರೆಗಳು ಪ್ರಮುಖ ತಾಣಗಳಾಗಿದ್ದವು.

ಪರಸ್ಥಳ ವ್ಯಾಪಾರಿಗಳು

‘ಮೈಸೂರಿನಲ್ಲಿ ಸ್ಥಳೀಯ ಮುಸಲ್ಮಾನರೂ ಇದ್ದಾರೆ, ಪರಸ್ಥಳದವರೂ ಇದ್ದಾರೆ. ಮಾಪ್ಳ ಬೇರಿ, ಲಬ್ಬೆ, ಮೆಮಾನ್ ಇವರು ಪರಸ್ಥಳೀಕರು. ಮಾಪ್ಳಾಗಳು ಬಂಗಾರದ ಗಣಿ, ಜೋಗ, ಭದ್ರಾವತಿ ಮುಂತಾದ ಕೈಗಾರಿಕೆಯ ಕೇಂದ್ರಗಳಲ್ಲಿ ಕೂಲಿ ಮತ್ತು ಮೇಸ್ತ್ರಿಗಳಾಗಿ ಕೆಲಸ ಮಾಡುವುದಲ್ಲದೆ ಪಟ್ಟಣಗಳಲ್ಲಿ ಹಣ್ಣಿನ ವ್ಯಾಪಾರ, ಹಗ್ಗ, ಚಾಪೆ ವ್ಯಾಪಾರ ಮತ್ತು ಇತರ ಚಿಲ್ಲರೆ ವ್ಯಾಪಾರಿಗಳಲ್ಲಿದ್ದಾರೆ, ಬೇರಿಗಳು ಕ್ರಮೇಣ ಮಲೆನಾಡಿನ ವ್ಯಾಪಾರವನ್ನು ತಮ್ಮ ಹತೋಟಿಯಲ್ಲಿ ತಂದುಕೊಳ್ಳುತ್ತಿದ್ದಾರೆ’. ಎಂದು ಪಿ.ಎಚ್. ಕೃಷ್ಣರಾವ್ ಗುರುತಿಸಿದ್ದಾರೆ (೧೯೪೨, ೧೨).

ಮಲೆನಾಡಿಗೆ ಬೇರೆ ಬೇರೆ ರಾಜ್ಯದಿಂದ – ಮುಖ್ಯವಾಗಿ ಘಟ್ಟದ ಕೆಳಗಿನವರು ವ್ಯಾಪಾರಕ್ಕೆ ಬರುತ್ತಿದ್ದರು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಅಜಿಸಾಬರು, ಇಜಾರುಸಾಬಿ, ಲುಂಗೀಸಾಬಿ ಇವರು ಘಟ್ಟದ ಕೆಳಗಿನವರು.

ಉಪ್ಪು, ಸೀಮೆ ಎಣ್ಣೆ ಮತ್ತು ಇತರ ಸಾಮಾನುಗಳನ್ನು ದಕ್ಷಿಣ ಕನ್ನಡದಿಂದ ತಂದು ಮಲೆನಾಡಿನಲ್ಲಿ ಮುಸ್ಲಿಂ ಹಾಗು ಶೆಟ್ಟರು ವ್ಯಾಪಾರಿಗಳು ಮನೆ ಮನೆಗೆ ತಿರುಗಿ ಮಾರುತ್ತಿದ್ದರೆಂದು ಶ್ರೀ ಶೇಷಪ್ಪಗೌಡರು ಸ್ಮರಿಸುತ್ತಾರೆ (ನೋಡಿ : ಅನುಬಂಧ – ೩).

ಕೆಲವರು ವ್ಯಾಪಾರಕ್ಕೆ ಬಂದು ಚಿಲ್ಲರೆ ಸಾಲ ಕೊಟ್ಟು ಹೆಸರು ಗಳಿಸಿದ್ದರು. ಮಾಪಿಳ್ಳೆಯವರಾಗಿದ್ದ ‘ಕರೀಂ ಸಾಬಿ ಗಟ್ಟದ ಮೇಲಕ್ಕೆ ಬಂದು ಬಹಳ ವರ್ಷಗಳಾಗಿತ್ತು. ಮೊದಲು ಬಂದಾಗ ಅವನು ಕರಿಮೀನು ಹೊತ್ತುಕೊಂಡು ಮನೆ ಮನೆಗೂ ತಿರುಗಿ ಅಕ್ಕಿಗೋ ಭತ್ತಕ್ಕೋ ಅಡಿಕೆಗೋ ವಿನಿಮಯ ವ್ಯಾಪಾರ ಮಾಡುತಿದ್ದನಾದ್ದರಿಂದಲೂ, ಹಳ್ಳಿಗರ ಕಿವಿಗೆ ಕರೀಂ ಮತ್ತು ಕರಿಮೀನು ಎಂಬ ಪದಗಳು ಸಮಪದಗಳಾಗಿ ತೋರಿದುದರಿಂದಲೂ ಅಂಕಿತನಾಮವನ್ನು ಅನ್ವರ್ಥನಾಮವನ್ನಾಗಿ ಮಾಡಿದ್ದರು. ತರುವಾಯ ಕರೀಂಸಾಬಿ ಇತರ ಪದಾರ್ಥಗಳನ್ನು ಮಾರತೊಡಗಿದ್ದರೂ ಅವನ ಮೊದಲಿನ ಹೆಸರು ಬದಾಲಾಯಿಸಿರಲಿಲ್ಲ. ಹಾಗೆ ಮಂಗಳೂರು ನಶ್ಯಪುಡಿಯನ್ನು ತಯಾರು ಮಾಡಿ ಮಾರುತ್ತಿದ್ದ ಅವನ ತಮ್ಮನಿಗೆ ‘ಪುಡೀ ಸಾಬಿ’ ಎಂಬ ಹೆಸರು ಬಂದಿತ್ತು. ಅಂತೂ ಕರಿಮೀನು ಸಾಬರು ಮತ್ತು ಪುಡಿಸಾಬರು ಎಂದರೆ ಗುತ್ತಿಯಂತಹ ಜನಗಳಿಗೆ ತಕ್ಕಮಟ್ಟಿಗೆ ಗೌರವದ ವ್ಯಕ್ತಿಗಳೇ ಆಗಿದ್ದರು. ಅವರು ಚಿಲ್ಲರೆ ಸಾಲವನ್ನು ಕೊಡುತ್ತಿದ್ದರಿಂದ ಆ ಹಂಗಿಗೆ ಒಳಗಾದವರೆಲ್ಲರಿಗೂ ಅವರಲ್ಲಿ ದ್ವೇಷ ಮಿಶ್ರಿತವಾದ ಭಯ-ಭಕ್ತಿಯೂ ಇತ್ತು’ (ಕುವೆಂಪು ೨೦೦೬ಬ, ೨೩). ಹೀಗೆ ಕರೀಂಸಾಬಿ ಮೇಗರವಳ್ಳಿಯಲ್ಲಿಯೇ ಒಂದು ಅಂಗಡಿಯನ್ನೂ ಇಟ್ಟುಕೊಂಡಿದ್ದನು.

ಮೇಗರವಳ್ಳಿಯ ಚಮಡ ಸಾಗಿಸುವ ಅಜ್ಜಿಸಾಬು ಕುದರೆ ಮೇಲೆ ಸ್ವಾರ್ಲು ಮತ್ತು ಬಂಗಡೆ ಮೀನನ್ನು ಮನೆಮನೆಗೆ ಹೋಗಿ ವ್ಯಾಪಾರ ಮಾಡುತ್ತಿದ್ದರು. ಹೊಲಗೇರಿಯವರು ಆಕಳ ಚರ್ಮವನ್ನು ಇವರಿಗೇ ಮಾರುತ್ತಿದ್ದರು.

“…..ಗೋಮಾತೆಯ ಚರ್ಮವನ್ನಂತೂ ವಾಡಿಕೆಯಂತೆ ಕುದುರೆ ತಟ್ಟಿನ ಮೇಲೆ ಸವಾರಿ ಮಾಡಿಕೊಂಡು ಬಂದ ಮೇಗರವಳ್ಳಿಯ ‘ಕರ್ಮೀನು ಸಾಬರ’ ಕಡೆಯ ‘ಅಜ್ಜೀಸಾಬರಿಗೆ’ ಮಾರಿದ್ದರು!” (ಕುವೆಂಪು ೨೦೦೬ಬ, ೧೬೪).

ಅಂತಂಗ ವ್ಯಾಪಾರ, ಬಹಿರಂಗ ವ್ಯಾಪಾರಿ

ಕರಿಮೀನು ಸಾಬರು ಸಂಸಾರಕ್ಕೆ ಅವಶ್ಯಕವಾದ ಸಾಮಾನು ಹಾಗು ಮಕ್ಕಳು ಆಸೆ ಪಡುವ ತಿನಿಸುಗಳನ್ನು ಘಟ್ಟದ ಕೆಳಗಿನಿಂದ ಮಾರಲು ತರುತ್ತಿದ್ದರು.

“ಕರ್ಮೀನ್ ಸಾಬರು ನೀರುಳ್ಳಿ, ಬೆಳ್ಳುಳ್ಳಿ, ದಿನಸಿ, ಒಣಮೀನು ಮುಂತಾದ ದೊಡ್ಡವರಿಗೆ ಸಂಸಾರ ನಡೆಸಲು ಅವಶ್ಯಕವಾದ ಪದಾರ್ಥಗಳ ಜೊತಗೆ ಕೊಬ್ಬರಿ, ಕಡಲೆ, ಉತ್ತುತ್ತೆ, ಓಲೆಬೆಲ್ಲ, ಕರ್ಜೂರ, ಮಿಠಾಯಿ, ಬತ್ತಾಸು, ಬೆಂಡು ಮೊದಲಾದ, ವಿಶೇಷವಾಗಿ ಮಕ್ಕಳ ಹಿಗ್ಗಿಗೆ ಕಾರಣವಾಗುವ, ಪದಾರ್ಥಗಳನ್ನು ಮಾರಾಟಕ್ಕೆ ತರುತ್ತಿದ್ದರು. ಮೊದಲನೆಯ ವರ್ಗದ ಸರಕನ್ನು ಬಹಿರಂಗವಾಗಿಯೇ, ಎಂದರೆ ಮನೆಯ ‘ಮುಂಚೆ ಕಡೆಯೆ ವ್ಯಾಪಾರ ಮಾಡಿತ್ತಿದ್ದರು, ಮನೆಯ ಯಜಮಾನರ ಸಮ್ಮುಖದಲ್ಲಿ, ಎರಡನೆಯ ವರ್ಗದ ಸರಕಿನ ವ್ಯಾಪಾರವೆಲ್ಲ ಸಾಧಾರಾಣವಾಗಿ ಅಂತರಂಗದಲ್ಲಿ, ಎಂದರೆ ಮನೆಯ ಹಿತ್ತಲು ಕಡೆಯ ಬಾಗಿಲಲ್ಲಿ, ಹೆಂಗಸರು ಮಕ್ಕಳೊಡನೆ ನಡೆಯುತ್ತಿತ್ತು. ‘ಹಿತ್ತಲು ಕಡೆಯ’ ಮಾರುಕಟ್ಟೆಯಲ್ಲಿಯೇ ಅವರಿಗೆ ಚೆನ್ನಾಗಿ ಗಿಟ್ಟುತ್ತಿದ್ದುದು!…..” (ಕುವೆಂಪು ೨೦೦೬ಬ, ೩೨೦).

ಮನೆಯ ಹಿತ್ತಲು ಕಡೆಯಲ್ಲಿ ಮಾಡುತ್ತಿದ್ದ ವ್ಯಾಪಾರ ಮನೆ ಮಕ್ಕಳನ್ನು, ಹೆಂಗಸರನ್ನು ಆಕರ್ಷಿಸುತ್ತಿತ್ತು. ಇದಕ್ಕೋಸ್ಕರ ಮನೆಯ ಅಡಿಕೆಯನ್ನೇ ಅವರು ಕದ್ದು ಕರ್ಮೀನ್ ಸಾಬರಿಗೆ ಕೊಡುತ್ತಿದರು. ಅಡಿಕೆಯ ಮೂಲದ ಗುಟ್ಟು ತಿಳಿದ ಸಾಬರು ಅವರ ಅಸಹಾಯಕತೆಯನ್ನು ಶೋಷಿಸಿ ಲಾಭ ಮಾಡಿಕೊಳ್ಳುತ್ತಿದ್ದರು.

ಸಿಂಬಾವಿಯ ಮನೆಗೆಲಸದ ದೊಳ್ಳ, ಅಡುಗೆ ಕೆಲಸದ ಮರಾಟಿ ಮಂಜನ ಕದರಡಿಕೆಯ ಗೋಣಿ ಚೀಲದ ಗಂಟನ್ನು ಲಪಟಾಯಿಸಿದ್ದನು. ಆದರೆ ಅದು ಕೇವಲ ಕದರಡಿಕೆಯಾಗಿದ್ದ ಬರಿಯ ಬೆಟ್ಟೆ ಗೋಟು ಎಂದು ಕಂಡು ಬಂದದ್ದರಿಂದ ‘ಅದರ ಜೊತೆಗೆ ಸ್ವಲ್ಪ ಹಸ ಮತ್ತು ದಳಗಳನ್ನಾದರೂ ಬೆರಕೆ ಮಾಡದಿದ್ದರೆ ಸಾಬರು ಕಡಲೆ ಕೊಬ್ಬರಿ ಬತ್ತಾಸುಗಳನ್ನು ಸರಿಯಾದ ಪರಿಮಾಣದಲ್ಲಿ ತನಗೆ ಕೊಡುವುದಿಲ್ಲ ಎಂದು ಶಂಕಿಸಿ, ಮನೆಯ ಸ್ವಂತ ಮಾರಾಟದ ಅಡಿಕೆ ರಾಶಿಗಳಿದ್ದ ಗರಡೀಕೋಣೆಗೂ ಕದ್ದು ನುಗ್ಗಿ, ಮರಾಟಿ ಮಂಜನ ದಾಸ್ತಾನಿನಲ್ಲಿ ಕಂಡು ಬಂದಿದ್ದ ನ್ಯೂನತೆಯನ್ನು ನಿವಾರಿಸಿ ಕೊಂಡಿದ್ದನು’ (ಕುವೆಂಪು ೨೦೦೬ಬ, ೩೭೧).

ಆದರೆ ಇದು ಕರ್ಮೀನು ಸಾಬರಿಗೆ ಬುರ್ನಾಸು ಅಡಿಕೆಯಂತೆ ತೋರುತ್ತಿತ್ತು! “ದೊಳ್ಳತಂದಿದ್ದ ಗೋಣಿಚೀಲದ ಗಂಟನ್ನು ಉದ್ದೇಶಪೂರ್ವಕವಾದ ತಿರಸ್ಕಾರದ ಭಾವದಿಂದಲೂ ಔದಾಸೀನ್ಯದಿಂದಲೂ ನಿಧನವಾಗಿ ಬಿಚ್ಚುತ್ತಾ, ಅದರಲ್ಲಿದ್ದ ಅಡಿಕೆಯ ಗುಣಕ್ಕೂ ಪ್ರಮಾಣಕ್ಕೂ ಒಳಗೊಳಗೆ ಹೃದಯ ಹಿಗ್ಗುತ್ತಿದ್ದರೂ ಮುಖವನ್ನು ಸಿಂಡರಿಸುತ್ತಾ, ಕರೀಂ ಸಾಬಿ, ‘ತ್ಚು! ತ್ಚು! ತ್ಚು! ಏ ಹುಡುಗ, ಎಂಥಾ ಬುರ್ನಾಸು ಅಡಿಕೆಯೋ ಇದು? ಎಲ್ಲಿ ಸಿಕ್ಕಿತೋ ನಿನಗೆ?’ ಎನ್ನುತ್ತಾ ಅಡಿಕೆಯಲ್ಲಿ ಕೈಯಾಡಿಸಿ, ತನ್ನ ತಮ್ಮ ಪುಡಿಸಾಬಿಗೆ ಎನನ್ನೊ ಮಲೆಯಾಳಿಯಲ್ಲಿ ಹೇಳಿ ಕಣ್ಣು ಮಿಟುಕಿಸಿದನು” (ಕುವೆಂಪು ೨೦೦೬ಬ, ೩೭೧).

ಹಸ ಮತ್ತು ದಳಗಳನ್ನು ಸೇರಿಸಿದ್ದರೂ ಅದನ್ನು ಕರ್ಮೀನು ಸಾಬರು ಬರೀ ಗೋಟು, ಬೆಟ್ಟೆಯಂತೆ ಪರಿಗಣಿಸುವರು. ಆದರೂ ಅವರಿಗೆ ಮಾಲು ಕೈ ಬಿಡುವ ಶಂಕೆ. ಆದ್ದರಿಂದಲೆ ‘…ಅವಸವಸರವಾಗಿ, ದೊಳ್ಳನ ಯಾವ ಅಭಿಪ್ರಾಯಕ್ಕೂ ಕಾಯದೆ, ಅಡಿಕೆಯನ್ನೆಲ್ಲ ತಮ್ಮ ದೊಡ್ಡ ಹಸುಬೆ ಚೀಲಕ್ಕೆ ಸುರಿದು ಕೊಂಡು, ದೊಳ್ಳನ ಹರಕಲು ಚೀಲವನ್ನು ಅವನಿಗೆ ಕೊಟ್ಟು ಬಿಟ್ಟು, ಅವನು ಅಲ್ಲಿ ಇದ್ದಾನೆಯೆ ಇಲ್ಲವೆ ಎಂಬ ಪ್ರಜ್ಞೆಯ ಇಲ್ಲದವರಂತೆ, ಅನ್ಯಕಾರ್ಯದಲ್ಲಿ ಮಗ್ನರಾದರು ‘ಕರ್ಮೀನು ಸಾಬ್ರು’! (ಅದೇ.).

ಆದರೆ ದೊಳ್ಳನಿಗೆ ಕರ್ಮೀನು ಸಾಬರು ಮೋಸ ಮಾಡುತ್ತಿರುವುದು ಗೊತಿದ್ದರೂ ಅದು ಕದ್ದ ಮಾಲಾದ್ದರಿಂದ ಆಸಹಾಯಕನಾಗಿದ್ದನು. “ಮರಾಟೆ ಮಂಜನಾಗಲಿ ಮತ್ತೆ ಯಾರಾದರಾಗಲಿ ಬಂದು ತಾನು ಮಾಡುತ್ತಿದ್ದ ವ್ಯಾಪಾರವನ್ನು ಗಮನಿಸಿದರೆ, ಎಲ್ಲಿ ಸಿಕ್ಕಿ ಬೀಳುತ್ತೇನೆಯೊ ಎಂದು ಅಂಜಿ, ವಿನಿಮಯ ಕಾರ್ಯವನ್ನು ಅದಷ್ಟು ಬೇಗನೆ ಮುಗಿಸುವ ಆತುರದಿಂದ ಪುಡಿಸಾಬರ ಕಡೆಗೆ ಹೋದನು” (ಅದೇ.).

ತಾನು ಕೊಟ್ಟ ಮಾಲಿನ ಬೆಲೆಗೆ ತಕ್ಕಂತೆ ಉತ್ತುತ್ತೆ, ಕರ್ಜೂರ, ಓಲೆ ಬೆಲ್ಲ, ಬತ್ತಾಸು, ಬೆಂಡು, ಮಿಠಾಯಿಯ ಆಸೆ ಇರಿಸಿಕೊಂಡಿದ ದೊಳ್ಳನಿಗೆ ಪುಡಿಸಾಬು ಬಿದಿರಿನ ಗೆಣ್ಣೆ ಕತ್ತರಿಸಿ ರಚಿಸಿದ್ದ ಒಂದು ಸಣ್ಣ ಸಿದ್ದೆಯಲ್ಲಿ ಅಳೆದು ಹಳೆಯ ಮುಗ್ಗುಲು ಹುರಿದ್ಗಡಲೆಯನ್ನು ಕೊಟ್ಟನು.

ದೊಳ್ಳ ಕಣ್ಣೀರು ಸುರಿಸಲು ‘ಪಕ್ಕದಲ್ಲಿ ಏನೋ ಬಹುಮುಖ್ಯವಾದ ಕೆಲಸದಲ್ಲಿ ತೊಡಗಿರುವನಂತೆ ನಟಿಸಿಯೂ ಎಲ್ಲವನ್ನೂ ಗಮನಿಸುತ್ತಿದ್ದ ಕರ್ಮೀನು ಸಾಬು ಪುಡಿಸಾಬಿಗೆ ಕನ್ನಡದಲ್ಲಿಯೇ ‘ಹೋಗಲಿ, ಪಾಪ! ಒಂದೊಂದೇ ಉತ್ತುತ್ತೆ ಕರ್ಜೂರ ಬತ್ತಾಸು ಕೊಟ್ಟು ಕಳಿಸು’ ಎಂದನು. ದೊಳ್ಳ ಕೊಟ್ಟಿದ್ದ ಅಡಿಕೆಯ ಬೆಲೆ ಅದಕ್ಕೆ ನೂರು ಮಡಿ ಆಗುತ್ತದೆ ಎಂದು ಅವನಿಗೆ ಗೊತ್ತಿಲ್ಲವೆ?’ (ಕುವೆಂಪು ೨೦೦೬ಬ, ೩೭೨).

ಹೀಗೆ ‘ಅಂತರಂಗದ’ ವ್ಯಾಪಾರದಲ್ಲೇ ಈ ವ್ಯಾಪಾರಸ್ಥರು ಸಾಕಷ್ಟು ಲಾಭ ಗಳಿಸುತ್ತಿದ್ದರು. ಮಾರುಕಟ್ಟೆಯ ಮತ್ತು ವಸ್ತುಗಳ ಬೆಲೆಯ ಅರಿವಿಲ್ಲದ ಮುಗ್ಧ ಮಕಳನ್ನು ಹಳ್ಳಿಗರನ್ನು ವ್ಯಾಪಾರಿಗಳು ಶೋಷಿಸಿ ತಮ್ಮ ಜೇಬನ್ನು ತುಂಬಿಸಿಕೊಳ್ಳುತ್ತಿದ್ದರು.

ಈ ಕಳ್ಳ ವ್ಯಾಪಾರದಲ್ಲಿ ಸಿಂಬಾವಿ ಹೆಗ್ಗಡೆಯವರ ತಂಗಿ ಲಕ್ಕಮ್ಮ ತನ್ನ ಅತ್ತಿಗೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮನೆಯ ಅಡಿಕೆ ರಾಶಿಯಿದ್ದ ಕೋಣೆಯಿಂದ ಹಸನಡಕೆಯನ್ನು ಕದ್ದು ಮರಾಟಿ ಮಂಜುನಿಂದ ಕರ್ಮೀನು ಸಾಬರಿಂದ ಓಲೆಬೆಲ್ಲ, ಉತ್ತುತ್ತೆ ಕರ್ಜೂರ ಮುಂತಾದ ತಿಂಡಿಗಳನ್ನು ತರಿಸಿಕೊಳ್ಳುತ್ತಿದ್ದಳು. ಕರ್ಮೀನ ಸಾಬರು ಇವರಿಗೂ ಮೋಸ ಮಾಡುತ್ತಿದ್ದರೂ , ದೊಳ್ಳನಿಗೆ ಮಾಡುವಂತೆ ಬುಡಮುಟ್ಟ ಚೌರ ಮಾಡುತ್ತಿರಲಿಲ್ಲ. ಮಲೆನಾಡ ಅಡಿಕೆ ಉತ್ತಮವಾದ ಅಡಿಕೆಯಾಗಿದ್ದು ಅದಕ್ಕೆ ಬೆಲೆ ಹೆಚ್ಚೇ ಇರುತ್ತಿತ್ತು. ಈ ರೀತಿಯ ಕಳ್ಳ ವ್ಯಾಪಾರದಿಂದ ವ್ಯಾಪಾರಿಗಳು ಅಡಿಕೆಯ ಲಾಭವನ್ನು ಗಳಿಸುತ್ತಿದ್ದರು.

ವಿನಿಮಯ

ವಸ್ತು ವಿನಿಮಯ ವಿಧಾನ ಪ್ರಾಚೀನ ಅರ್ಥ ವ್ಯವಸ್ಥೆಯ ಪ್ರಮುಖ ಲಕ್ಷಣವಾಗಿದೆ. ಈ ವ್ಯಪಾರದಲ್ಲಿ ವಸ್ತುಗಳು ಹಾಗು ಸೇವೆ ಶ್ರಮ ವ್ಯಾಪಾರದ ಮಾಧ್ಯಮವಾಗಿರುತ್ತದೆ. ಹಣಕಾಸಿನ ವ್ಯವಸ್ಥೆ ಇಲ್ಲದ ಸಮಾಜದಲ್ಲಿ ಹಾಗೂ ಹಣ ಚಲಾವಣೆ ಕಡಿಮೆ ಇರುವ ಸಮಾಜದಲ್ಲಿ ವಸ್ತು ವಿನಿಮಯ ಪದ್ಧತಿಯನ್ನು ಕಾಣಬಹುದು. ಈ ವಿನಿಮಯ ಪದ್ಧತಿಯ ಮೂರು ಮುಖ್ಯ ಅನಾನುಕೂಲಗಳು ಹೀಗಿವೆ. ಅವು ಯಾವುದೆಂದರೆ ವಸ್ತು ವಿಭಜನೆ, ಬೇಡಿಕೆಗಳ ಸಾಮ್ಯತೆ ಮತ್ತು ಸಾಗಾಣಿಕೆಯ ತೊಂದರೆ.

ವಿನಿಮಯವಾಗಬೇಕಿದ್ದ ವಸ್ತುವಿನ ಮೌಲ್ಯವನ್ನು ತಿಳಿಯಲು ಯಾವ ಸಾರ್ವತ್ರಿಕ ಪ್ರಮಾಣಗಳು ಇರಲಿಲ್ಲ. ಹಾಗಾಗಿ ಅಸಮಾನ ವಸ್ತುಗಳ ನಡುವೆ ವ್ಯಾಪಾರ ನಡೆಯುವ ಸಂಭವವಿರುತ್ತಿತ್ತು. ಉದಾಹರಣೆಗೆ, ಒಬ್ಬ ಗ್ರಾಹಕನು ಹಸುವನ್ನು ವಿನಿಮಯ ಮಾಡಲು ತಯಾರಿದ್ದು ಅವನಿಗೆ ಒಂದು ಜೋಡು ಎಕ್ಕಡ ಬೇಕಾದಲ್ಲಿ ಅವನು ಹಸುವನ್ನು ವಿನಿಮಯ ಮಾಡಲೇಬೇಕಿತ್ತು. ಮೌಲ್ಯದಲ್ಲಿ ಎರಡಕ್ಕೂ ಅಜಗಜಾಂತರ ವ್ಯತ್ಯಾಸವಿದ್ದರೂ, ಆಕಳನ್ನು ಮೌಲ್ಯಕ್ಕೆ ತಕ್ಕಂತೆ ವಿಭಜಿಸಲು ಸಾಧ್ಯವಿಲ್ಲದಿರುವುದರಿಂದ ಇಂಥ ವಿನಿಮಯ ನಡೆಯುತ್ತಿತ್ತು. ವಿಕ್ರೇತನು ಕೊಡುವ ವಸ್ತುಗಳನ್ನು ಕೆಲವೊಮ್ಮೆ ಮೌಲ್ಯದಲ್ಲಾಗಲಿ, ಪ್ರಮಾಣದಲ್ಲಾಗಲಿ ಹೆಚ್ಚು ಕಡಿಮೆ ಮಾಡಲಾಗುವುದಿಲ್ಲ. ಇಲ್ಲಿ ಅಸಮಾನ ಬೆಲೆ, ಮೌಲ್ಯವಿರುವ ವಸ್ತುಗಳ ವಿನಿಮಯವಾಗುತ್ತದೆ.

ಬೇಡಿಕೆಗಳ ಸಾಮ್ಯತೆ ಎಂದರೆ ಒಬ್ಬ ಗ್ರಾಹಕನ ಬಳಿ ಹಣ್ಣುಗಳಿದ್ದು ಅವನಿಗೆ ನೇಗಿಲು ಬೇಕಾದರೆ ಅವನು ಹಣ್ಣುಗಳನ್ನು ಬಯಸುವ ಕಮ್ಮಾರನನ್ನೇ ಹುಡಕಬೇಕಿತ್ತು. ಈ ಇಬ್ಬರ ಬೇಡಿಕೆಗಳು ಒಂದಾದಲ್ಲಿ ಮಾತ್ರ ವಿನಿಮಯ ವ್ಯಾಪಾರ ನಡೆಯಬಹುದಾಗಿತ್ತು. ಅಕ್ಕಿಯನ್ನು ಕೊಟ್ಟು ಎಣ್ಣೆ ಪಡೆಯಬೇಕಾದರೆ, ಅಕ್ಕಿ ಇರುವವನು ಎಣ್ಣೆ ಇರುವವನನ್ನೇ ಸಮೀಪಿಸಬೇಕು ಹಾಗು ಎಣ್ಣೆ ಇರುವವನಿಗೆ ಅಕ್ಕಿಯೇ ಬೇಕಾಗುವುದು ಅಗತ್ಯ. ಅವನಿಗೆ ಅಕ್ಕಿ ಬೇಡವಾಗಿದ್ದರೆ ಅಕ್ಕಿ ಇದ್ದವನಿಗೆ ಎಣ್ಣೆ ಪಡೆಯಲು ಸಾಧ್ಯವಿಲ್ಲ. ಸಾಗಾಣಿಕೆ ತೊಂದರೆ ಎಂದರೆ ಒಂದೂರಿನಿಂದ ಇನ್ನೊಂದೂರಿಗೆ ವಿನಿಮಯವಾಗುವ ವಿವಿಧ ತೂಕ, ಗಾತ್ರಗಳಲ್ಲಿರುವ ವಸ್ತುವಿನ ಸಾಗಾಣಿಕೆಯಲ್ಲಿ ಉಂಟಾಗುವ ತೊಂದರೆ.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಕಾಲಘಟ್ಟದಲ್ಲಿ ವಸ್ತು ವಿನಿಮಯ ಪದ್ಧತಿ ರೂಢಿಯಲ್ಲಿತ್ತು. ವಸ್ತು ವಿನಿಮಯ ಅಥವಾ ಸಾಟೆ ಪದ್ಧತಿಯಲ್ಲಿ ವಿಕ್ರೇತನು ತನ್ನ ಸ್ವಂತ ಉಪಯೋಗಕ್ಕಿಂತ ಹೆಚ್ಚಾಗಿ ಮಿಕ್ಕಿರುವ ವಸ್ತುವಿನಿಂದ ತನ್ನಲ್ಲಿ ಇಲ್ಲದ ವಸ್ತುವನ್ನು ಪಡೆಯಲು ಸಿದ್ಧನಾಗುವನು.

ಗ್ರಾಮೀಣ ನೆಲೆಯಲ್ಲಿ ವ್ಯವಹಾರವೆಲ್ಲವೂ ಸಾಟೆ ವ್ಯಾಪಾರವನ್ನೇ ಆಧರಿಸುವುದು. ಚಿಕ್ಕಮಟ್ಟದಲ್ಲಿ ಸ್ವತಂತ್ರವಾಗಿ ಜೀವಿಸುವ ಗ್ರಾಮೀಣ ಸಮಾಜದಲ್ಲಿ ಹಣದ ಬಳಕೆ ಅತಿ ಕಮ್ಮಿ. ಕಾನೂರು ಹೆಗ್ಗಡಿತಿಯ ಕಾಲದಲ್ಲಿ ಹಣ ಚಲಾವಣೆಯಲ್ಲಿತ್ತಾದರೂ ‘ಪಡಿ’ ಕೊಡುವ ಸಂದರ್ಭದಲ್ಲಿ ವಿನಿಮಯ ಪದ್ಧತಿ ಕಂಡು ಬರುತ್ತಿತ್ತು. ಸಮಾಜದ ಶ್ರೀಮಂತರಲ್ಲಿ, ಜಮೀನ್ದಾರರಲ್ಲಿ ಹಣದ ಚಲಾವಣೆ ಇತ್ತು. ಇವರು ಅಡಿಕೆ ವ್ಯಾಪಾರ, ಸರ್ಕಾರಕ್ಕೆ ಕಂದಾಯದ ಪಾವತಿ ಮುಂತಾದ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುತ್ತಿದ್ದರಿಂದ ಹಣದ ಬಳಕೆ ಈ ವರ್ಗದ ಜನರಲ್ಲಿತ್ತು.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಪಡಿ, ಮಾಪಿಳ್ಳೆಗಳ ವ್ಯಾಪಾರ, ಮುಂತಾದ ಸಂದರ್ಭಗಳಲ್ಲಿ ಪುರಾತನ ವ್ಯವಸ್ಥೆಯಾದ ವಿನಿಮಯ/ಸಾಟೆ ಎದ್ದು ಕಾಣುವಂಥದ್ದು, ಹೆಂಗಸರು ಮಕ್ಕಳು, ಆಳುಗಳು, ಹೊಲೆಯರು ಮುಂತಾದವರು ಅಕ್ಕಿ, ಭತ್ತ ಅಡಿಕೆಯಂತಹ ಬೆಳೆಯ ಸಾಮಾನುಗಳನ್ನೋ, ಕತ್ತಿ ಸವೆಗೋಲು, ಮೆಟ್ಟುಗತ್ತಿಯಂತಹ ಕದ್ದ ಹತಾರುಗಳನ್ನೋ ಕರೀಂ ಸಾಬರಿಗೆ ಕೊಟ್ಟು ತಿಂಡಿ ತಿನಿಸುಗಳನ್ನು ಕೊಳ್ಳುತ್ತಿದ್ದರು. ‘ಗಂಡಸರು ಅನೇಕರು ತಮ್ಮ ಸಂಸಾರಕ್ಕೆ ವರ್ಷಕ್ಕೆ ಬೇಕಾಗುವ ದಿನಸಿ ಕೊಬ್ಬರಿ ಕೊತ್ತುಂಬರಿ ಇತ್ಯಾದಿ ವಸ್ತುಗಳನ್ನು ಸಾಮಾನಿಗೋ ದುಡ್ದಿಗೋ ಒಡವೆ ವಸ್ತ್ರಗಳಿಗೋ ಬಹಿರಂಗವಾಗಿಯೇ ವಿನಿಮಯ ವ್ಯಾಪಾರ ಮಾಡಿಯೋ ಕೊಂಡು ಕೊಂಡು ಹೋಗುತ್ತಿದ್ದರು’ (ಕುವೆಂಪು ೨೦೦೬ಬ, ೩೭೫). ಇಲ್ಲಿ ‘ವಿನಿಮಯ ವ್ಯಾಪಾರ’ವು ಚಾಲ್ತಿಯಲ್ಲಿತ್ತೆಂದು ಸ್ಪಷ್ಟವಾಗಿ ಹೇಳಿದೆ.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಗುತ್ತಿ ತನ್ನ ಹೆಂಡತಿಗೆ ಮದುವೆಯಲ್ಲಿ ಹಾಕಿದ್ದ ಜದೇಬಿಲ್ಲೆಯನ್ನು ಕರ್ಮೀನ್ ಸಾಬರಿಗೆ ಕೊಟ್ಟು ಸಾಮಾನನ್ನು ಕೊಂಡುಕೊಳ್ಳುತ್ತಾನೆ. ಮತ್ತು ಹಿಂದೆ ಮಾಡಿದ ಸಾಲವನ್ನು ತೀರಿಸುತ್ತಾನೆ.

ಪಡಿ

ಪಡಿ (ಪ್ರತಿ) ಎಂದರೆ ಶ್ರಮಕ್ಕೆ ನೀಡುವ ಪ್ರತಿಫಲ; ಆಳುಗಳು ಕೆಲಸಕ್ಕಾಗಿ ಪಡೆಯುತ್ತಿದ್ದ ಸಂಭಾವನೆ, ದವಸ-ಧಾನ್ಯಗಳ ರೂಪದಲ್ಲಿ ಇರುತ್ತಿದ್ದು ಇದನ್ನು ಪ್ರತಿದಿನ ಕೆಲಸ ಮುಗಿದ ನಂತರ ಇಲ್ಲವೆ ವಾರಕ್ಕೆ ಒಮ್ಮೆ ಕೊಡುತ್ತಿದ್ದರು. ಇದರೊಂದಿಗೆ ‘ಬಾಯಿಗೆ ನೀಡುವುದು’ ಎಂದರೆ ಪಡಿಯ ಜೊತೆಗೆ ನಾಲ್ಕೈದು ಅಡಿಕೆಗಳನ್ನು ಮತ್ತು ಹೊಗೆಸೊಪ್ಪನ್ನು ಕೊಡುವ ಪದ್ಧತಿಯೂ ಇತ್ತು (ಮರಿಗುದ್ದಿ ೧೯೮೯, ೧೬೫).

ಕೆಲಸಕ್ಕೆ ಪ್ರತಿಯಾಗಿ ಹಣದ ಬದಲು ನಿತ್ಯೋಪಯೋಗಿ ಸಾಮಾನು, ದವಸ-ಧಾನ್ಯಗಳನ್ನು ಕೊಡುವುದು ವಿನಿಮಯದ ಒಂದು ರೀತಿ ಎಂದೇ ಹೇಳಬಹುದು. ಶ್ರಮಕೆ ದುಡ್ಡಿನ ಬದಲಾಗಿ ಕೊಡುತ್ತಿದ್ದ ಒಡೆಯರ ಮನೆಯಲ್ಲಿ ಹೆಚ್ಚಿಗೆ ಇರುವ ಸಾಮಾನುಗಳಾದ ಅಕ್ಕಿ, ಹೊಗೆಸೊಪ್ಪು, ಉಪ್ಪು, ಬಾಯಿಗೆ ಅಡಿಕೆ – ಇವೆಲ್ಲವೂ ವಿನಿಮಯದ ಸಾಮಾನುಗಳು.

ವರ್ಷಕೊಮ್ಮೆ ಬಟ್ಟೆ, ಹಬ್ಬ ಹರಿದಿನಕ್ಕೆ ದುಡ್ಡು ಕೂಡ ಒಡೆಯರು ಆಳುಗಳಿಗೆ ಕೊಡುತ್ತಿದ್ದರು ಎಂದು ಶೇಷಪ್ಪ ಗೌಡರು ಸ್ಮರಿಸುತ್ತಾರೆ (ನೋಡಿ : ಅನುಬಂಧ – ೩). ಯುಗಾದಿ ಹಬ್ಬಕ್ಕೆ ಸಣ್ಣವರು ದೊಡ್ಡವರಿಗೆಲ್ಲ ಹಾಸಲು ಹೊದೆಯಲು ಒಡೆಯರು ಕೊಡುತ್ತಿದ್ದರು, ಹಾಗು ೨ ಸೇರು ಅಕ್ಕಿ, ೧/೨ ಕೆ. ಜಿ. ಮೆಣಸು, ೧ ತೆಂಗಿನಕಾಯಿ, ಹುಣಸೆ ೧/೪ ಕೆ. ಜಿ., ಬೆಲ್ಲ ೧ ಕೆ. ಜಿ. ಇವು ಹಬ್ಬದ ಕಾಲದ ಪಡಿಯಾಗಿತ್ತು. ಈ ಪಡಿ ಸಂಸಾರ ಗಾತ್ರಕೆ ಅನುಗುಣವಾಗಿರುತ್ತಿತ್ತು ಎಂದು ಹಾಲಪ್ಪ ಸ್ಮರಿಸುತ್ತಾರೆ (ನೋಡಿ : ಅನುಬಂಧ – ೨).

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಕೋಣೂರಿನ ಪಡಿಯಲ್ಲಿ ಇತರ ಸಾಮಾನುಗಳೊಡನೆ ಉಪ್ಪು ಮೆಣಸು, ಬಾಳೆಕಾಯಿ, ಅಕ್ಕಿ, ಎಲೆ, ಅಡಿಕೆ, ಹೊಗೆಸೊಪ್ಪನ್ನು ಕೊಡುತಿದ್ದರು (ಕುವೆಂಪು ೨೦೦೬ಬ, ೪೯೪).

ಕಡಿದಾಳು ರಾಮಪ್ಪಗೌಡರು ‘ಪಡಿ’ಯನ್ನು ಈ ರೀತಿ ದಾಖಲಿಸಿದ್ದಾರೆ. ನಿತ್ಯ ಕೆಲಸಮಾಡುವ ಜೀತದಾಳುಗಳಿಗೆ ಗಂಡಸರು, ಹೆಂಗಸರು ಎಲ್ಲರಿಗೂ ದಿನಕ್ಕೆ ಒಂದು ಕೊಳಗೆ ಭತ್ತ, ಒಂದು ಮುಷ್ಟಿ, ಉಪ್ಪು, ಒಂದು ಮುಷ್ಟಿ ಮೆಣಸಿನಕಾಯಿ ಇಷ್ಟನ್ನು ಕೊಟ್ಟರೆ ಆಯಿತು. ನಗದು ಕೂಲಿ ಕೊಡುವ ವ್ಯವಹಾರವೆ ಇಲ್ಲ. ಇನ್ನು ಹಬ್ಬ ಹರಿದಿನ ಬಂದಾಗ ಖರ್ಚಿಗೆ ಎಂಟಾಣೆನೊ ಒಂದು ರೂಪಾಯಿಯನ್ನೋ ಕೊಟ್ಟರೆ ಆಯಿತು. ವರ್ಷಕ್ಕೆ ಯುಗಾದಿ ಹಬ್ಬದಲ್ಲಿ ಇವರಿಗೆಲ್ಲ ಬಟ್ಟೆ ಕೊಡುವ ಪದ್ಧತಿ, ಗಂಡಸರಿಗೆ ಒಂದು ಅಂಗಿ, ನಾಲ್ಕು ಮೊಳ ಉದ್ದದ ಒಂದು ಬಾರ ಫರಧಿ ಪಂಚೆ ತಲೆಗೆ ಕಟ್ಟುವುದಕ್ಕೆ ನಾಲ್ಕು ಮೊಳ ಉದ್ದದ ಎಲಿ ವಸ್ತ್ರ. ಮಳೆಗಾಲಕ್ಕೆ ಸೂಡಲು ಒಂದು ಕಂಬಳಿ, ಹೆಂಗಸರಿಗೆ ಹದಿನೆಂಟು ಮೊಳ ಉದ್ದದ ಜಿಡ್ಡು ಸೀರೆ. ಗಂಡು ಹುಡಗರಿಗೆ ಒಂದು ಅಂಗಿ, ಹೆಣ್ಣು ಹುಡಗರಿಗೆ ಒಂದು ಪರಿಕಾರ (ಲಂಗ) ಇಷ್ಟನ್ನು ಕೊಡುತ್ತಿದ್ದರು….. ಇವರಿಗೆ ಸಂಬಳ ಇಲ್ಲದ್ದರಿಂದ ಭತ್ತವೆ ಕೂಲಿ. ಪಡಿಯ ವಸ್ತುಗಳು ದಿನಬಳಕೆಯ ಅಡುಗೆ ಸಾಮಾನಾಗಿದ್ದುವು. ಅದೂ ಕೆಲಸಕ್ಕೆ ಹೋದರೆ ಮಾತ್ರ (೧೯೯೮, ೪೮).

ಕಳ್ಳಂಗಡಿಯಲ್ಲಿ ವಿನಿಮಯ

ಕಳ್ಳಂಗಡಿ ವ್ಯಾಪಾರ ವಿನಿಮಯ ಆಧಾರದ ಮೇಲೆ ನಡೆಯುತ್ತಿತ್ತು. ಎರಡೂ ಕಾದಂಬರಿಗಳಲ್ಲಿ ಕಳ್ಳಂಗಡಿಯ ವಿನಿಮಯ, ಅದರ ರೂಪ, ವಿನಿಮಯವಾಗುತ್ತಿದ್ದ ವಿವಿಧ ವಸ್ತುಗಳ ಚಿತ್ರಣ ಸಿಗುತ್ತದೆ.

“ಆಳುಗಳು ಒಕ್ಕಲುಗಳು ಕಳ್ಳಂಗಡಿಗೆ ಹೋಗುವಾಗ ದಿನಗೂಲಿಯ ಭತ್ತವನ್ನು ಕಳ್ಳಂಗಡಿಗೆ ಕೊಟ್ಟು ಕಳ್ಳು ಕುಡಿದು ಬರುತ್ತಿದ್ದರು. ಕೆಲವು ಸಾರಿ ಕತ್ತಿ ಹಾರೆ ಗುದ್ದಲಿ ಮೊದಲಾದ ಸಾಮಾನುಗಳನ್ನು ಕದ್ದು ತಂದುಕೊಟ್ಟು ಕಳ್ಳು ಹೆಂಡಗಳನ್ನು ಕುಡಿಯುತ್ತಿದ್ದರು” (ಕುವೆಂಪು ೨೦೦೬ಅ, ೯೧).

‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ಬರುವ ಬಾಡುಗಳ್ಳ ಸೋಮ, ತನ್ನ ಕಳ್ಳಂಗಡಿಯ ಸಾಲ ತೀರಿಸಲು ಹಳೆಪೈಕದ ತಿಮ್ಮನ ದೊಡ್ಡ ಹುಂಜವೊಂದನ್ನು ಕದ್ದು ಕಳ್ಳಂಗಡಿಯವನಿಗೆ ಕೊಟ್ಟನು. ಕಳ್ಳಂಗಡಿಯವನು ಅಂತಹ ಕಳ್ಳ ವ್ಯಾಪಾರಗಳಿಂದಲೆ ಹೆಚ್ಚಾಗಿ ಹಣ ಸಂಪಾದನೆ ಮಾಡುತ್ತಿದ್ದ (ಕುವೆಂಪು ೨೦೦೬ಅ. ೨೯೬).

ಮುಂದೆ ಈ ಹುಂಜದ ಚೊಟ್ಟಿ ಪುಕ್ಕಗಳನ್ನು ಕತ್ತರಿಸಿ, ಯಾರೂ ಕಾಣದಂತೆ ಕತ್ತಲಲ್ಲಿ ಅದನ್ನು ಸಾಕಿ, ಕೆಲವು ತಿಂಗಳ ನಂತರ ಕೋಳಿಯಂಕದಲ್ಲಿ ಸೋಮನಿಗೆ ಅದನ್ನು ‘ಕಟ್ಟಿ ಸಾಕಿದ ಅಂಕದ ಹುಂಜ’ ಎಂದು ಮೋಸ ಮಾಡಿ ಮೂರು ರೂಪಾಯಿಗಳಿಗೆ ಮಾರುವನು. ವಿನಿಮಯದಲ್ಲಿ ಪಡೆದ ವಸ್ತುಗಳಿಂದ ಹಣಗಳಿಸುವುದು ಕಳ್ಳಂಗಡಿಯವನಿಗೆ ಚೆನ್ನಾಗಿ ತಿಳಿದಿತ್ತು.

ಹಾಗೆಯೆ ಬೇಲರ ಬೈರ, ಅವನ ಹೆಂಡತಿ ಸೇಸಿ, ಅವನ ಮಗ ಗಂಗ ಹುಡುಗ ನಾನಾ ವಿಧದಲ್ಲಿ ಕಳ್ಳಂಗಡಿಯವನ ಸಾಲ ತೀರಿಸುವುದನ್ನು ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ನೋಡಬಹುದು.

‘ಬೇಲರ ಬೈರನೂ, ತಾನು ಮತ್ತೆ ಬಗನಿ ಕಟ್ಟಿ ಕಳ್ಳು ಮಾರಿ ಸಾಲ ತೀರಿಸುವುದಾಗಿ ಮಾತು ಕೊಟ್ಟು, ಕಳ್ಳಂಗಡಿಯವನನ್ನು ಸಮಾಧಾನಪಡಿಸಿದನು. ಅವನ ಹೆಂಡತಿ ಸೇಸಿಯೂ ತಾನು ‘ಸರಿ ಪಾಲಿಗೆ’ ಸಾಕಿದ್ದ ಒಂದೆರಡು ಹೇಂಟೆಗಳ ಮರಿಗಳನ್ನು ಕಳ್ಳಂಗಡಿಯವನಿಗೇ ಮೀಸಲಾಗಿಟ್ಟು ಪಾರಾದಳು. ಗಂಗ ಹುಡುಗ ಮಾತ್ರ ಕಳ್ಳಂಗಡಿಯವನ ಕಣ್ಣಿಗೆ ಬೀಳದಂತೆ ತಪ್ಪಸಿಕೊಂಡು ತಿರುಗುತ್ತಿದ್ದನು. ಅವನು ಕಳ್ಳಂಗಡಿಯವನಿಗೆ ತಾನು ಕೊಡಬೇಕಾಗಿದ್ದ ಸಾಲದ ವಿಚಾರವಾಗಿ ತನ್ನ ಅಪ್ಪನಿಗೆ ತಿಳಿಯದಂತೆ ಸಂಚು ಮಾಡಿಕೊಂಡಿದ್ದನು. ಅನೇಕ ಸಾರಿ ಅವರಿವರು ಬೆಳೆದಿದ್ದ ಹಿತ್ತಲು ಕೊಪ್ಪಲುಗಳಿಂದ ತರಕಾರಿ, ಬದನೆಕಾಯಿ, ಬಾಳಿಗೊನೆ, ಕುಂಬಳಕಾಯಿ ತಿಂಗಳವರೆಕಾಯಿ ಇತ್ಯಾದಿಗಳನ್ನು ಕದ್ದು ಸಾಲ ತೀರಿಸಿದ್ದನು. ಕೆಲವು ಸಾರಿ ಗೌಡರ ಮನೆಯಿಂದ ಕತ್ತಿ ಗುದ್ದಲಿ ಮೊದಲಾದ ಹತಾರುಗಳನ್ನು ಕದ್ದು ಕಳ್ಳಂಗಡಿಗೆ ಸಾಗಿಸಿದ್ದನು. ಹೆಂಡ ಕುಡಿಯುವ ಚಪಲತೆ ಅವನನ್ನು ಅಷ್ಟು ಚಿಕ್ಕಂದಿನಲ್ಲಿಯೆ ಚೌರ್ಯದಲ್ಲಿ ಪ್ರವೀಣನನ್ನಾಗಿ ತರಬೇತಿ ಮಾಡಿತ್ತು (ಕುವೆಂಪು ೨೦೦೬ಅ, ೨೯೭).

ಕಳ್ಳಂಗಡಿಯವನನ್ನು ಗಂಗ ಹುಡುಗ, ‘ಕಾನೂರು ಮನೆಯ ಸಮೀಪದಲ್ಲಿದ್ದ ಒಂದು ಕಾಡಿಗೆ ಕರೆದುಕೊಂಡು ಹೋಗಿ, ಮಣ್ಣು ಅಗೆದು ನಾಲ್ಕಾರು ಕೆಲಸದ ಕತ್ತಿಗಳು, ಎರಡು ಹಿತ್ತಾಳೆ ಚೊಂಬುಗಳು, ಒಂದು ಹಾರೆ, ಒಂದು ಗುದ್ದಲಿ, ಕೆಲವು ನೇಗಿಲ ಕುಳಗಳನ್ನು ಕೊಟ್ಟನು (ಅದೇ.). ಅದು ಗಾಡಿ ಹೊಡೆಯುವ ನಿಂಗ ಹೂತಿಟ್ಟ ಸ್ವತಃ ಸಂಪಾದಿಸಿದ್ದ ಆಸ್ತಿ ಆಗಿದ್ದವು.

ಆಳುಗಳ ಬಳಿ ಹಣ ಇಲ್ಲದೆ ಇದ್ದುದರಿಂದ ಒಂದು ರೀತಿಯಲ್ಲಿ ಈ ವಿನಿಮಯ ಪದ್ಧತಿ ವ್ಯಾಪಾರಸ್ಥರಿಗೆ ಅನುಕೂಲಕರವಾಗಿಯೇ ಇತ್ತು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಕಣ್ಣಾ ಪಂಡಿತರ ಯೋಚನೆ ಈ ಅಂಶವನ್ನು ಸ್ಪಷ್ಟ ಪಡಿಸುತ್ತದೆ.

‘ಆ ಹೊಲೆಯನಿಂದ ಹಣ ವಸೂಲು ಮಾಡಿಕೊಳ್ಳುವುದೂ, ಹಸುವಿನ ಕೊಂಬಿನಿಂದ ಹಾಲು ಕರೆಯುವುದೂ ಒಂದೇ’ ಎಂದು ಚೆನ್ನಾಗಿ ಅರಿತಿದ್ದ ಕಣ್ಣಾ ಪಂಡಿತರು ‘ನನಗೆ ನಿನ್ನಿಂದ ದುಡ್ಡು ಕಾಸೂ ಏನೂ ಬೇಡ…. ನನಗೆ ಬೇಕಾದಾಗ ಒಂದೊಂದು ಕೋಳಿ ಕೊಟ್ಟರೆ ಸಾಕು – ‘ ಎಂದು ಹೇಳುತ್ತಾನೆ (ಕುವೆಂಪು ೨೦೦೬ಬ, ೨೬).

ಇಂಥ ಒಪ್ಪಂದಗಳು ಹಣ ಕೊಡುವುದಕ್ಕಿಂತ ಸುಲಭವಾಗಿರುವಂಥದ್ದು. ಇದಕ್ಕೆ ಕಾರಣ ಮತ್ತು ಸ್ವರೂಪವನ್ನು ಇದೇ ಕಾದಂಬರಿಯಲ್ಲಿ ಕುವೆಂಪು ವಿವರಿಸಿದ್ದಾರೆ. ಗುತ್ತಿ, ಕೋಣೂರು, ಹಳೆಮನೆ, ಹೂವಳ್ಳಿ, ಬೆಟ್ಟಳ್ಳಿ ಮೊದಲಾದೆಡೆಗಳಿಗೆಲ್ಲಾ ಹೋಗಿ ಬರುವಾಗ ಅಂತಕ್ಕ ಸೆಟ್ತಿಯ ‘ಒಟ್ಲು ಮನೆ’ಯಲ್ಲಿ ಹಸಿವು, ಬಯಾರಿಕೆ, ದಣಿವನ್ನು ನಿವಾರಿಸಿಕೊಂಡು ಹೋಗುತ್ತಿದ್ದ.

‘ಬೆಲ್ಲ ನೀರುಗಳನ್ನೊ, ಹೆಂಡ ಕರಿಮೀನು ಚಟ್ನಿಯನ್ನೋ ಕಳ್ಳು ಸ್ವಾರ್ಲು ಮೀನನ್ನೊ, ಕಡೆಗೆ ಮಜ್ಜಿಗೆ ಉಪ್ಪಿನಕಾಯಿಯನ್ನೊ ಸವಿದೇ ಮುಂದುವರಿಯುತ್ತಿದ್ದನು. ಅದಕ್ಕೆ ಬದಲಾಗಿ ಅವನು ಇತರ ಪ್ರಯಾಣಿಕರಂತೆ ದುಡ್ಡು ಕಾಸು ಕೊಡುತ್ತಿರಲಿಲ್ಲ. ಅವನ ಹತ್ತಿರ ಆ ಪದಾರ್ಥ ಇರುತ್ತಿದ್ದುದೂ ಅಷ್ಟಕ್ಕಷ್ಟೇ! ಜಾತ್ರೆಗೊ ತೇರಿಗೋ ಹೋಗುವಾಗ ಹೆಗ್ಗಡೇರ ಹತ್ತಿರ ಗೋಗೆರದು ಒಂದೆರಡಾಣೆ ದಕ್ಕಿಸಿಕೊಂಡರೆ ಅದೇ ಯಥೇಚ್ಛ, ಆದರೆ ಕಾಡಿನಲ್ಲಿ ಬರುವಾಗ, ಅದು ಸಮಯವಾಗಿದ್ದರೆ, ಒಳ್ಳೆಯ ಎಳೆ ಕಳಲೆ ಮುರಿದು ತಂದುಕೊಡುತ್ತಿದ್ದನು. ಪಯಣ ಕೈಕೊಳ್ಳುವ ಸಮಯದಲ್ಲಿ ತಾನು ಒಡ್ಡಿದ ಶೆಬೆಗೆ ಕಾಡು ಕೋಳಿಯೊ ಚಿಟ್ಟುಕೋಳಿಯೊ ಸಿಕ್ಕಿಬಿದ್ದಿದ್ದರೆ ಅದನ್ನೂ ಎಷ್ಟೋ ಸಾರಿ ತಂದುಕೊಟ್ಟಿದ್ದನು. ಅಣಬೆಯ ಕಾಲದಲ್ಲಿ ಅಕ್ಕಿ ಅಳಿಬಿ, ಹೆಗ್ಗಾಲಳಿಬಿ, ಚುಳ್ಳಳಿಬಿ, ಕಾಸರ್ಕನಳಿಬಿ ಇವುಗಳನ್ನು ತಂದುಕೊಡುತ್ತಿದ್ದನು. ಒಂಮೊಮ್ಮೆ ಇತರರ ಅಡಿಕೆ ಬಾಳೆ ತೋಟಗಳಲ್ಲಿ ಹಾದು ಬೇಲಿಯ ತಡಬೆ ದಾಟಿ ಬರುವ ಪ್ರಮೇಯ ಒದಗಿದಾಗ ಬಾಳೆಯ ಗೊನೆಗಳನ್ನೂ ತಂದು ಕೊಡುತ್ತಿದ್ದುದೂ ಉಂಟು! ಅಲ್ಲದೆ ತಾನು ಅಲ್ಲಿಗೆ ಬಂದಾಗ ಅಂತಕ್ಕ ಸೆಟ್ತಿಯವರಿಗೆ ಏನಾದರೂ ತುರುತ್ತಾಗಿ ಆಗಬೇಕಾದ ಸಣ್ಣ ಪುಟ್ಟ ಕೆಲಸಗಳನ್ನೂ ಮಾಡಿಕೊಡುತ್ತಿದ್ದನು’ (ಕುವೆಂಪು ೨೦೦೬ಬ, ೫೧).

ದೇವಯ್ಯ ಅಂತಕ್ಕ ಸೆಟ್ಟಿಯ ಮಗಳು ಕಾವೇರಿಗೆ ಒಂದು ಹರಳುಂಗುರ ಕೊಟ್ಟಿದ್ದನು. ಅದು ಎಲ್ಲೋ ಬಿದ್ದಾಗ ಚೀಂಕ್ರನ ಕೈ ಸೇರಿತು. ಅವನು ಅದನ್ನು ಕರೀಂಸಾಬಿಯ ಬಳಿಗೊಯ್ದು ತನಗೆ ಬೇಕಾದ ಸಾಮಾನುಗಳನ್ನು ಮಳಿಗೆಯಿಂದ ತೆಗೆದುಕೊಂಡು ಹೋದನು (ಕುವೆಂಪು ೨೦೦೬ಬ, ೫೧೦).

ವ್ಯಾಪಾರಿಗಳಿಗೂ ಒಕ್ಕಲುಗಳಿಂದ ಮತ್ತು ಆಳುಗಳಿಂದ ಹಣ ದೊರೆಯುವುದಿಲ್ಲವೆಂಬ ಸತ್ಯ ತಿಳಿದು ಬಿಟ್ಟಿತ್ತು. ಹೀಗೆ ವಿನಿಮಯದ ಮೂಲಕವೇ ಮಲೆನಾಡಿನ ಆಂತರಿಕ ವ್ಯಾಪಾರ ನಡೆಯುತ್ತಿತ್ತು.

ಇಂತಹ ವ್ಯಾಪಾರದಲ್ಲಿ ಹೊರಗಿನಿಂದ ಮುಖ್ಯವಾಗಿ ದಕ್ಷಿಣ ಕನ್ನಡದಿಂದ ಬಂದ ಮುಸ್ಲಿಂ ಜನಾಂಗದ ವ್ಯಾಪರಿಗಳೇ ಮುಖ್ಯರಾಗಿದ್ದರು. ಹೀಗೆ ವ್ಯಾಪಾರಕ್ಕಾಗಿ ಮಲೆನಾಡಿಗೆ ಬಂದು ವ್ಯಾಪಾರ ಮಾಡಿ ಮರಳಿ ತಮ್ಮ ನಾಡಿಗೆ ಹಿಂದಿರುಗುತ್ತಿದ್ದರು. ಅಲ್ಲದೆ ಈ ವ್ಯಾಪಾರಿಗಳು ಲೇವಾದೇವಿ ವ್ಯವಹಾರದಲ್ಲೂ ತೊಡಗಿಕೊಂಡಿದ್ದರು.

ಇವರು ಮಲೆನಾಡಿನಲ್ಲಿ ಖಾಯಂ ಆಗಿ ನೆಲೆಸಿದ್ದು ಕಡಿಮೆ. ಹಾಗಾಗಿ ಇಲ್ಲಿ ದೊರೆತ ಲಾಭ ರಾಜ್ಯದ ಹೊರಗೆ ದಕ್ಷಿಣ ಕನ್ನಡಕ್ಕೆ ಹರಿಯಿತು. ನಮ್ಮ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದರು. ಮಲೆನಾಡ ಜನರ ಅಜ್ಞಾನ ಮುಗ್ಧತೆಯನ್ನು ಶೋಷಿಸಿ, ಮಲೆನಾಡ ಐಶ್ವರ್ಯವನ್ನು ತಮ್ಮ ನಾಡಿಗೆ ಸಾಗಿಸಿದರು.

ಈ ಅಂಶವನ್ನು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಸೂಚಿಸಲಾಗಿದೆ. ಚೀಂಕ್ರ ದೇವಯ್ಯ ಕಾವೇರಿಗೆ ಕೊಟ್ಟ ಹರಳುಂಗುರವನ್ನು ಕದ್ದು ಕರೀಂಸಾಬಿಗೆ ಕೊಟ್ಟಾಗ, ಅವರು ಅದರ ಪೂರ್ವೇತಿಹಾಸವನ್ನು ನೆನಪಿಸಿಕೊಳ್ಳುವರು. ಆ ಉಂಗುರ ಸೋನಗಾರರ ದಂಪತಿಗಳದಾಗಿದ್ದು, ಇವರ ದರೋಡೆಯ ಗುಂಪು ಆಗುಂಬೆ ಘಾಟಿಯಲ್ಲಿ ನಡೆಸಿದ್ದ ಒಂದು ಕೊಲೆಯಲ್ಲಿ ದೊರಕಿದ್ದು ಎಂದು ನೆನಪಿಸಿಕೊಳ್ಳುತ್ತಾರೆ. ಆ ನವದಂಪತಿಗಳು ಘಟ್ಟದ ಮೇಲಣ ದುಡಿಮೆಯನ್ನು ಘಟ್ಟದ ಕೆಳಗಿದ್ದ ತಮ್ಮ ಊರಿಗೆ ಕೊಂಡೊಯ್ಯುತ್ತಿದ್ದರು ಎಂಬ ವಿಷಯವನ್ನು ಸೇರಿಸುತ್ತಾರೆ (ಕುವೆಂಪು ೨೦೦೬ಬ, ೫೧೯). ಇದು ಕರಿಂಸಾಬರು ಯುವಕರಾಗಿದ್ದಾಗ ನಡೆದ ಘಟನೆ. ಹಾಗಾಗಿ ಘಟ್ಟದ ಮೇಲಿನ ದುಡಿಮೆಯನ್ನು ಘಟ್ಟದ ಕೆಳಗೆ ಸಾಗಿಸುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿತ್ತು ಎಂಬ ವಿಷಯ ತಿಳಿಯುತ್ತದೆ.

ವ್ಯಾಪರದಲ್ಲಿ ಮೋಸ

ಮಲೆನಾಡು ಘಟ್ಟದ ಮೇಲಿನ ಪ್ರದೇಶವಾದ್ದರಿಂದ ಒಂದು ಊರಿನಿಂದ ಇನ್ನೊಂದು ಊರಿನ ಪೇಟೆಗೆ ಪ್ರಯಾಣ ಮಾಡುವುದು ಸುಲಭವಾಗಿರಲಿಲ್ಲ. ಹಾಗಾಗಿ ೧೯ನೇ ಶತಮಾನದಲ್ಲಿ ಚಿಕ್ಕ ಊರುಗಳಲ್ಲಿ ವ್ಯಾಪಾರದ ಮಾಧ್ಯಮ ವಸ್ತು ವಿನಿಮಯವೇ ಆಗಿತ್ತು. ಹೊರಗಿನ ಸಂಪರ್ಕ ಅಷ್ಟಾಗಿ ಇರಲಿಲ್ಲವೆಂದೇ ಹೇಳಬಹುದು.

ಈ ಕಾರಣದಿಂದಾಗಿ ಅಲ್ಲಿಯ ಜನರಿಗೆ ಪ್ರಪಂಚದ ಜ್ಞಾನ ಅಷ್ಟಾಗಿ ಇರಲಿಲ್ಲವಾಗಿ ವಸ್ತುಗಳ ಮೌಲ್ಯ, ಬೆಲೆ ತಿಳಿಯುವುದು ಅವರಿಗೆ ಸಾಧ್ಯವೇ ಇರಲಿಲ್ಲ ಇವರ ಅಜ್ಞಾನ ಅಸಹಾಯಕತೆಗಳನ್ನು ಶೋಷಿಸಿ, ವ್ಯಾಪಾರಿಗಳು ಸಾಕಷ್ಟು ಲಾಭಗಳಿಸಿದ್ದರು.

ಇದಕ್ಕೆ ದೊಳ್ಳನ ಪ್ರಕರಣ ಒಂದು ಉದಾಹರಣೆಯಾದರೆ, ಚೀಂಕ್ರನದ್ದು ಮತ್ತೊಂದು ಕಾವೇರಿಯ ಹರಳುಂಗುರ ಕದ್ದ ಚೀಂಕ್ರ ಕರೀಂಸಾಬಿಗೆ ಅದನ್ನು ತೋರಿಸುತ್ತಾನೆ. ಕರೀಂಸಾಬಿಗೆ ಅದರ ಬೆಲೆ ಗೊತ್ತಿದ್ದರೂ, ಅವನ ಬಾಯಿಂದ ಬಂದ ಮಾತೇ ಬೇರೆ.

‘ಅಲ್ಲವೋ, ಚೀಂಕ್ರ, ನಿನಗೆ ಎಲ್ಲಿ ಸಿಕ್ಕುತ್ತವೆಯೋ ಇಂಥ ಪಡಪೋಸಿ ಮಾಲು, ಬರೀ ಗಿಲೀಟು. ಮೂರು ಕಾಸು ಬಾಳುವುದಿಲ್ಲ…. ಮೊನ್ನೆ ನೀನು ತಂದು ಕೊಟ್ಟ ಅಡಿಕೆಯೂ ಪಡಪೋಸಿಯದ್ದೆ! ಹಸಿ ಅಡಿಕೆಯನ್ನೆ ತಟ್ಟೆಯಿಂದ ಹೊತ್ತು ತಂದಿದ್ದೆಯೋ ಏನೋ?…. ಸರಿ, ಇರಲಿ ಬಿಡು. ಆಮೇಲೆ ಮಾತಾಡುವಾ. ಈಗ ನನಗೆ ಸಮಯ ಇಲ್ಲ. ನಿನಗೆ ಏನು ಸಾಮಾನು ಬೇಕೋ ಅಂಗಡಿಯಿಂದ ತೆಗೆದುಕೊಂಡು ಹೋಗಿರು. ಆಮೇಲೆ ಲೆಕ್ಕ ಮಾಡಿದರಾಯಿತು….’ (ಕುವೆಂಪು ೨೦೦೬ಬ, ೫೧೯) ಎಂದು ಮರುಮಾತಿಗೆ ಆಸ್ಪದವಿಲ್ಲದಂತೆ ಒಳಗೆ ನಡೆದನು. ದೊಳ್ಳನ ಅಡಿಕೆ ವಿನಿಮಯದ ಸಂದರ್ಭದಲ್ಲೂ ಹೀಗೆ ಮಾಡಿದ್ದನು. ವಸ್ತುವಿನ ನಿಜವಾದ ಮೌಲ್ಯಕ್ಕೆ ತಕ್ಕಂತೆ ಸಾಮಾನು ಕೊಡದೆ ಲಾಭ ಪಡೆದುಕೊಳ್ಳುತ್ತಿದ್ದನು.

ತಾನು ಕೊಟ್ಟ ವಸ್ತುವಿನ ಬೆಲೆ ತಿಳಿದ ಚೀಂಕ್ರನಾಗಲಿ ಅಥವಾ ದೊಳ್ಳ ಮುಂತಾದವರಾಗಲಿ ಏನೂ ಹೇಳುವಂತಿರಲಿಲ್ಲ. ಏಕೆಂದರೆ ಅವರು ಕರ್ಮೀನ್‌ಸಾಬರಿಗೆ ಕೊಟ್ಟಿದ್ದು ಕಳ್ಳ ಮಾಲು. ‘ಕಳುವಿನ ವ್ಯಾಪಾರದಲ್ಲಿ ಚೌಕಾಸಿಗೆ ಅವಕಾಶವೆಲ್ಲಿ?’ ಇವರ ಇಂಥ ಗುಟ್ಟು ತಿಳಿದ ಕರ್ಮೀನ್‌ಸಾಬಿಯಂಥ ವ್ಯಾಪಾರಿಗಳು ಅದರ ಪೂರ್ಣ ಲಾಭ ಪಡೆಯುತ್ತಿದ್ದರು.

ಕಡಿದಾಳು ರಾಮಪ್ಪಗೌಡರು ಅಡಿಕೆ ಬೆಳೆಗಾರರನ್ನು ಶೋಷಿಸುತ್ತಿದ್ದ ಪರವೂರಿನ ವ್ಯಾಪಾರಸ್ಥರ ಬಗ್ಗೆ ತಮ್ಮ ಕೃತಿಯಲ್ಲಿ ಹೀಗೆ ದಾಖಲಿಸಿದ್ದಾರೆ.

ಅಡಿಕೆ ವ್ಯಾಪಾರಸ್ಥರು ಸುಮಾರು ಡಿಸೆಂಬರ್ ಜನವರಿ ಫೆಬ್ರವರಿ ಈ ಮೂರು ತಿಂಗಳ ಕಾಲ ಮಲೆನಾಡಿನಲ್ಲಿದ್ದು ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಹೊಸನಗರ ಮುಂತಾದ ಪ್ರದೇಶಗಳಿಂದ ಅಡಿಕೆ ಖರೀದಿಸುತ್ತಿದ್ದರು. ಖರೀದಿಸಿದ ಅಡಿಕೆಯನ್ನು ಗಾಡಿಯಲ್ಲಿ ಶಿವಮೊಗಕ್ಕೆ ಸಾಗಿಸಿ ಅಲ್ಲಿಂದ ರೈಲಿನಲ್ಲಿ ಬೀರೂರು ಬಳ್ಳಾರಿ ಕಡೆಗೆ ಸಾಗಿಸುತ್ತಿದ್ದರು (ರಾಮಪ್ಪಗೌಡ ೧೯೯೫).

ಹೀಗೆ ಕರೀಂಖಾನ್‌ಸಾಹೇಬರು ಎಂಬ ಒಬ್ಬ ವ್ಯಾಪಾರಸ್ಥರು ಗೌಡರ ಅಥವಾ ಭಟ್ಟರ ಮನೆಗೆ ಅಡಿಕೆ ತೂಕಕ್ಕೆ ಬರುವಾಗ ಅಡಿಕೆ ತೂಕಕ್ಕೆ, ಮೂಟೆಗಳನ್ನು ಹೊರುವುದಕ್ಕೆ, ಅಡಿಕೆಯನ್ನು ತಕ್ಕಡಿಗೆ ಏರಿಸುವುದಕ್ಕೆ, ಚೀಲ ಹಿಡಿಯುವುದಕ್ಕೆ ಹೀಗೆ ಎಲ್ಲ ಕೆಲಸಗಳಿಗೂ ತಮ್ಮ ಜನರನ್ನೇ ಕರೆತರುತ್ತಿದ್ದರು.

‘ರಾಶಿಯಾದ ಕೂಡಲೆ ತರಪಡಿ ಅಂತ ತೂಕಕ್ಕೆ ಮುಂಚೆ ಎರಡು ಕೈ ಬೊಗಸೆ ಮಾಡಿ ರಾಶಿಯಿಂದ ಕೈಗೆ ಹಿಡಿದಷ್ಟು ಅಡಿಕೆಯನ್ನು ಚೀಲಕ್ಕೆ ಹಾಕುತ್ತಾರೆ. ಈ ರೀತಿ ಮೂರ ಸಲ ಹಾಕಬೇಕು. ಇದಾದ ನಂತರ ತೂಕ ಶುರು. ಆಗ ನಲವತ್ತನಾಲ್ಕು ಸೇರಿಗೆ ಒಂದು ಮಣ, ಹನ್ನೊಂದು ಸೇರಿನ ಒಂದು ತೂಕದ ಕಲ್ಲನ್ನು ತಕ್ಕಡಿಯ ಒಂದು ಭಾಗಕ್ಕೆ ಇಡುತ್ತಾರೆ. ಈ ಕಲ್ಲಿಗೆ ದಡಿಯದ ಗುಂಡೆಂದು ಹೆಸರು (ರಾಮಪ್ಪಗೌಡ ೧೯೯೫, ೯೦).

ಮೊದಲನೆಯ ತಕ್ಕಡಿ ಅಡಿಕೆ ತೂಕ ಮಾಡಿ ಚೀಲಕ್ಕೆ ಹಾಕಿದ ಕೂಡಲೆ ತೂಕ ಮಾಡುವವನು ಲಾಭ ಲಾಭ ಎನ್ನುತ್ತಾನೆ. ಅದು ಲಾಭದ ಸೆರೆ ಎಂದು ಮೂರು ಬೊಗಸೆ ಅಡಿಕೆಯನ್ನು ಚೀಲಕ್ಕೆ ಹಾಕುತ್ತಾನೆ.

‘ಎರಡನೇ ತಕ್ಕಡಿ ಹಾಕಿ ಒಂದೋ ಒಂದೋ ಎನ್ನುತ್ತಾನೆ. ಮೊದಲನೆಯ ತಕ್ಕಡಿಯ ಲೆಕ್ಕವನ್ನೆ ಬಿಟ್ಟು ಬಿಡುತ್ತಾನೆ. ಹೀಗೆ ಆರನೆ ತಕ್ಕಡಿಯವರೆಗೆ ಹಾಕಿ ಏಳನೇ ತಕ್ಕಡಿ ಹಾಕಿದವನು ಮತ್ತೊಂದೋ ಮತ್ತೊಂದೋ ಎಂದು (ಏಳನೇ ತಕ್ಕಡಿಗೆ ಹೇಳುತ್ತಾ) ಎಂಟನೇ ತಕ್ಕಡಿ ಹಾಕಿ ಏಳೋ ಏಳೋ ಎನ್ನುತ್ತಾನೆ. ಹೀಗೆಲ್ಲಾ ಪೂರ ತೂಕ ಆದ ಮೇಲೆ ತಳರಾಶಿ ಎಂದು ದೂಳಿನ ಅಂಶಕ್ಕೆ ಅಡಿ ಸೇರು ಪಂಚೇರು ಜಾಸ್ತಿ ತೂಕ ಮಾಡಿ ಹಾಕುತ್ತಾನೆ. ಎಲ್ಲಾ ತೂಕ ಆದ ಮೇಲೆ ಎಷ್ಟು ಮೂಟೆ ಅಡಿಕೆ ಆಯಿತು, ಹಸ ಎಷ್ಟು ಬೆಟ್ಟೆ ಗೊರಬಲು ಎಷ್ಟು ಎಲ್ಲಾ ಲೆಕ್ಕ ಹಾಕುತ್ತಾರೆ. ಒಟ್ಟು ತರಪಡಿ, ತಳರಾಶಿ, ಲಾಭ ಸೆರೆ – ತೂಕದಲ್ಲಿ ಹೀಗೆ ಎಷ್ಟೋ ಅಡಿಕೆಯನ್ನು ಮೋಸದಿಂದ ಹೊಡೆಯುತ್ತಾ ಇದ್ದರು. ಈ ರೀತಿಯ ತೂಕ ಸಾಹೇಬರೊಬ್ಬರದ್ದೇ ಅಲ್ಲ ಅಡಿಕೆಯ ಲೇವಾದೇವಿ ವ್ಯಾಪಾರಿಗಳು ಹೆಚ್ಚು ಕಡಿಮೆ ಒಂದೇ . . . . ಇವರಿಗೆ ಅಲ್ಲಲ್ಲಿ ಸ್ವಜಾತಿಯ ಏಜೆಂಟರುಗಳೂ ಇರುತ್ತಿದ್ದರು. ಅವರಿಗೆ ಹಣ ಕೊಟ್ಟು ಕಮಿಷನ್ನಿನ ಮೇಲೆ ವ್ಯಾಪಾರ ಮಾಡುತ್ತಿದ್ದರು….. ಸೀಮೆಧಾರಣೆ ಹಾಕುವ ಲೇವಾದೇವಿಗಾರರಿಂದಲೂ ಕರೀಂ ಖಾನ್‌ಸಾಹೇಬರಂತಹ ವ್ಯಾಪಾರಿಗಳಿಂದಲೂ ಅಂದಿನ ಅಡಿಕೆ ಬೆಳೆಗಾರರು ಸಾಲದಿಂದ ಭೂಗತರಾಗಿದ್ದರು (ರಾಮಪ್ಪಗೌಡ ೧೯೯೫, ೯೨). ಹೀಗೆ ವ್ಯವಸ್ಥಿತವಾಗಿ ವ್ಯಾಪಾರದಲ್ಲಿ ಮೋಸ ನಡೆಯುತ್ತಿತ್ತು.

ವಸಲೆ

ವ್ಯಾಪಾರದ ಕಾರಣಕ್ಕಾಗಿ ಘಟ್ಟದ ಕೆಳಗಿನ ವ್ಯಾಪಾರಿಗಳು ಘಟ್ಟದ ಮೇಲೆ ಅಂದರೆ ಮಲೆನಾಡಿಗೆ ಬರುತ್ತಿದ್ದರು ಎಂಬ ವಿಷಯ ಕುವೆಂಪು ಅವರ ಕಾದಂಬರಿಗಳಲ್ಲಿ ಚಿತ್ರಿತವಾಗಿದೆ. ಈ ವಿಷಯದಷ್ಟೇ ಇನ್ನೊಂದು ಮುಖ್ಯ ವಿಷಯ ಘಟ್ಟದ ಕೆಳಗಿನ ಆಳುಗಳ ಮಲೆನಾಡ ವಲಸೆ.

ಒಂದು ಊರಿನಿಂದ ಇನ್ನೊಂದು ಊರಿಗೆ ಕೆಲಸಕ್ಕೆ ವಲಸೆ ಹೋಗಬೇಕೆಂದರೆ ಕೆಲವು ಮುಖ್ಯ ಕಾರಣಗಳನ್ನು ಗಮನಿಸಬೇಕು. ಅವುಗಳನ್ನು ಮುಖ್ಯವಾಗಿ ಹೀಗೆ ಗುರುತಿಸಬಹುದು – ಸ್ವಂತ ಊರಿನಲ್ಲಿ ಉದ್ಯೋಗದ ಕೊರತೆ ಮತ್ತು ಪರವೂರಿನಲ್ಲಿ ಕೂಲಿ ಆಳುಗಳಿಗೆ ಬೇಡಿಕೆ.

ಕುವೆಂಪು ಅವರ ಕಾದಂಬರಿಗಳಲ್ಲಿ ಘಟ್ಟದ ಕೆಳಗಿನಿಂದ ಅಂದರೆ ದಕ್ಷಿಣ ಕನ್ನಡದಿಂದ ಘಟ್ಟದ ಮೇಲಕ್ಕೆ ಅಂದರೆ ಮಲೆನಾಡಿಗೆ ಕೆಲಸಗಾರರು, ಆಳುಗಳು ವಲಸೆ ಬರುತ್ತಾರೆ. ಇದಕ್ಕೆ ಸ್ವಂತ ಊರಿನಲ್ಲಿ ಉದ್ಯೋಗದ ಕೊರತೆ ಕಾರಣವಾಗಿರಲಾರದು. ಏಕೆಂದರೆ ದಕ್ಷಿಣ ಕನ್ನಡವು ಕರಾವಳಿ ಪ್ರದೇಶವಾಗಿದ್ದು ಸಮುದ್ರದ ಮೂಲಕ ಹೊರದೇಶಗಳೊಡನೆ ಸಂಪರ್ಕ ಹೊಂದಿತ್ತು. ಅನೇಕ ವಸ್ತುಗಳ ಆಮದು ರಪ್ತು ಈ ಬದರುಗಳ ಮೂಲಕ ಆಗುತ್ತಿತ್ತು. ಆದ್ದರಿಂದ ಅಲ್ಲಿ ಉದ್ಯೋಗಕ್ಕೇನು ಕೊರತೆಯಾಗಿರಲಾರದು. ಆದ್ದರಿಂದ ಎರಡನೆ ಕಾರಣವು ಪ್ರಮುಖವಾಗಿರಬೇಕು.

ಮಲೆನಾಡಿನಲ್ಲಿ ಜನಸಂಖ್ಯೆ ಕಡಿಮೆ ಇತ್ತು. ಅಲ್ಲಿ ಮುಖ್ಯವಾಗಿ ಇದ್ದವರು ಜಮೀನ್ದಾರರು. ಒಕ್ಕಲಿಗರು, ಜೀತದಾಳುಗಳು. ಒಕ್ಕಲುಗಳು ತಮ್ಮ ಒಕ್ಕಲು ಗದ್ದೆಯನ್ನು ನೋಡಿಕೊಳ್ಳುತ್ತಿದ್ದರು. ಜೀತದಾಳುಗಳು ಸಾಮಾನ್ಯವಾಗಿ ಜಮೀನ್ದಾರರ ಮನೆಯ ಕೆಲಸಗಳನ್ನು ಮಾಡುತ್ತಿದ್ದರು. ಹಾಗಾಗಿ ಹೆಚ್ಚಿನ ಆಳುಗಳ ಅವಶ್ಯಕತೆ ಮಲೆನಾಡಿಗಿತ್ತು. ಕೆಲವು ವಿಶೇಷ ಕೆಲಸಗಳಾದ ಅಡಿಕೆಗೆ ಕೊಟ್ಟೆ ಕಟ್ಟುವುದು, ಕೊನೆ ತೆಗೆಯುವುದು ಇಂತಹ ತೋಟದ ಕೆಲಸಗಳಿಗೆ ದಕ್ಷಿಣ ಕನ್ನಡದವರು ಪಳಗಿದ್ದರು. ಈ ಕೆಲಸಗಳನ್ನು ಜೀತದಾಳುಗಳು ಹಾಗು ಒಕ್ಕಲುಗಳು ಕಲಿಯಲಿಲ್ಲ ಎಂದು ಹಾಲಪ್ಪ ನೆನಪಿಸಿಕೊಳ್ಳುತ್ತಾರೆ (ನೋಡಿ : ಅನುಬಂಧ – ೨).

ಘಟ್ಟದ ಕೆಳಗಿನಿಂದ ಸೇರೆಗಾರರು ಘಟ್ಟದಾಳುಗಳ ಗುಂಪನ್ನು ಘಟ್ಟದ ಮೇಲೆ ಕರೆದುಕೊಂಡು ಬಂದು, ಜಮೀನ್ದಾರರ ಬ್ರಾಹ್ಮಣರ ಗದ್ದೆ ತೋಟಗಳಲ್ಲಿ ಕೆಲಸ ಮಾಡಿಸುತ್ತಿದ್ದರು. ಈ ಗುಂಪಿನಲ್ಲಿದ್ದ ಮರಾಠಿಗರು ಕೊನೆ ಇಳಿಸುವುದರಲ್ಲಿ ನಿಷ್ಣಾತರಾಗಿದ್ದರು. ಈ ಸೇರೆಗಾರರು ಸಾಮಾನ್ಯವಾಗಿ ಸೆಟ್ಟರಾಗಿರುತ್ತಿದ್ದರು. ಜಮೀನಿನ ಉಸ್ತುವಾರಿಯ ಕೆಲಸ ಇವರದಾಗಿರುತ್ತಿತ್ತು. ಮಂಗಳೂರು, ಉಡುಪಿ ಕುಂದಾಪುರದಿಂದ ಕೆಲಸದವರನ್ನು ಕೆಲಸಕ್ಕೆ ಕರೆದುಕೊಂಡು ಬರುತ್ತಿದ್ದರು. ಇವರ ಭಾಷೆ ತುಳು (ನೋಡಿ : ಅನುಬಂಧ – ೩). ಅಲ್ಲದೆ ೧೯೨೦ರಿಂದ ಈಚೆಗೆ ಬಯಲು ಸೀಮೆಯ ಜನ ಮಲೆನಾಡಿಗೆ ಕೆಲಸದ ಸಲುವಾಗಿ ಬರುತ್ತಿರುವರು. ಈಗಲೂ ಬಯಲುಸೀಮೆಯಲ್ಲಿ ಮಳೆ ಇಲ್ಲದೆ ಕೃಷಿ ಚಟುವಟಿಕೆಗಳು ಕಡಿಮೆಯಾದಾಗ ಬಯಲುಸೀಮೆಯವರು ಮಲೆನಾಡಿಗೆ ಕೆಲಸಕ್ಕೆ ಬರುವುದುಂಟು.

ಜಮೀನ್ದಾರರಿಗೆ ದೊಡ್ಡ ಗದ್ದೆ ತೋಟಗಳು ಇರುತ್ತಿದ್ದರಿಂದ ಸೇರೆಗಾರರು ಘಟ್ಟದಾಳುಗಳನ್ನು ಕಟ್ಟಿಕೊಂಡು ಮೇಸ್ತ್ರಿಯಂತೆ ಅವರಿಂದ ಕೃಷಿ ಕೆಲಸಗಳನ್ನು ಮಾಡಿಸುತ್ತಿದ್ದರು. ಇವರಿಗೇ ಪ್ರತ್ಯೇಕವಾದ ಬಿಡಾರ ಇರುತ್ತಿತ್ತು. ಕೆಲಸಕ್ಕೆ ಪ್ರತಿಯಾಗಿ ದವಸ-ಧಾನ್ಯ ಹಾಗೂ ಹಣವನ್ನು ಪಡೆದುಕೊಂಡು ಗುತ್ತಿಗೆ ಕೆಲಸ ಮುಗಿಸಿದ ನಂತರ ತಮ್ಮ ನಾಡಿಗೆ ಮರಳುತ್ತಿದ್ದರು. ಇದಕ್ಕೆ ಭೂಮಾಲೀಕರ ಹಾಗು ಸೇರೆಗಾರರ ನಡುವೆ ಲಿಖಿತ ಒಪ್ಪಂದ ಇರುತ್ತಿತ್ತು (ನೋಡಿ : ಅನುಬಂಧ – ೬).

ಸೇರೆಗಾರರು ಆಳುಗಳೊಂದಿಗೆ ಇರುತ್ತಿದ್ದರು. ನಿತ್ಯ ಆಳುಗಳಿಂದ ಕೆಲಸ ಮಾಡಿಸುವುದು ಹಾಗೂ ಸಾಹುಕಾರನ ಸ್ವಂತ ಸಾಗುವಳಿಯಲ್ಲಿರುವ ಅಡಿಕೆ ತೋಟದ ಕೊನೆ ಅಲ್ಲೇ ತೆಗೆದು ರೇಖೆ ಮಾಡಿಸುವುದು ಗದ್ದೆ ನಾಟಿ ಮಾಡಿಸುವುದು, ಕೊಯ್ಲು ಒಕ್ಕಣೆ ಕೆಲಸ ಮುಂತಾದ ಕೆಲಸಗಳನ್ನು ಮಾಡಿಸುತ್ತಿದ್ದರು. ಅದರೊಂದಿಗೆ ಒಕ್ಕಲುಗಳ ಮನೆಯಲ್ಲಿ ಗೇಣಿ ಭತ್ತ ಅಳಿಸಿ ಗಾಡಿಯಲ್ಲಿ ತುಂಬಿಸಿಕೊಂಡು ಸಾಹುಕಾರರ ಮನೆ ಪಣತಕ್ಕೆ ತುಂಬಿಸಬೇಕಿತ್ತು. ಅಡಿಕೆ ರೇಖೆಯನ್ನು ಇವರೇ ಮಾಡಿಸುತ್ತಿದ್ದರು. ಜಮೀನ್ದಾರರು ಇವರನ್ನು ಸಂಪೂರ್ಣವಾಗಿ ನಂಬಿ ಜವಾಬ್ದಾರಿ ಕೊಡುತ್ತಿದ್ದುದರಿಂದ ಇವರು ಸುಳ್ಳು ಲೆಕ್ಕ ತೋರಿಸಿ ತಮ್ಮ ಸಂಪಾದನೆಯನ್ನು ಘಟ್ಟದ ಕೆಳಗಿರುವ ತಮ್ಮ ಮನೆಗೆ ಸಾಗಿಸುತ್ತಿದ್ದರು. ಹಾಗಾಗಿ ಇವರ ಮೋಸ ಭೂಮಾಲೀಕರಿಗೆ ತಿಳಿಯುತ್ತಿರಲಿಲ್ಲ.

‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ಸೇರೆಗಾರ ರಂಗಪ್ಪಸೆಟ್ಟರ ಬಗ್ಗೆ ಹೀಗಿದೆ.

‘ರಂಗಪ್ಪಸೆಟ್ಟ’ರು ಘಟ್ಟದ ಕೆಳಗಿನವರು. ಕೂಲಿಯಾಳುಗಳನ್ನು ಘಟ್ಟದ ಮೇಲಕ್ಕೆ ತಂದು ಮೇಸ್ತ್ರಿಯಾಗಿ ಕೆಲಸ ಮಾಡಿಸುತ್ತಿದ್ದರು. ದಕ್ಷಿಣ ಕನ್ನಡದ ಜಿಲ್ಲೆಯಿಂದ ಬರುವ ಮೇಸ್ತ್ರಿಗಳನ್ನು ಸೇರೆಗಾರರೆಂದು ಕರೆಯುತ್ತಾರೆ.

ಸೆಟ್ಟರು ಕಾನೂರಿನಲ್ಲಿ ಐದು ವರ್ಷಗಳಿಂದಲೂ ಆಳಿಟ್ಟುಕೊಂಡು ಬಹಳ ನಂಬಿಕೆಯಿಂದ ಇದ್ದರು….. ತಮ್ಮ ನಿಜವಾದ ಸಂಸಾರವು ಊರಿನಲ್ಲಿದ್ದುದರಿಂದ ಘಟ್ಟದ ಮೇಲೊಂದು ತಾತ್ಕಾಲಿಕ ಸಂಸಾರವನ್ನಿಟ್ಟು ಕೊಳ್ಳವುದು ಅಷ್ಟೇನೂ ಮಹಾ ಪಾಪವೆಂದು ಅವರು ಬಾವಿಸಿರಲಿಲ್ಲ. ತಮ್ಮ ಬೇಟದ ಹೆಣ್ಣಿನ ಸಹಾಯದಿಂದಲೆ ಅವರು ಚಂದ್ರಯ್ಯಗೌಡರನ್ನು ಒಳಗೆ ಹಾಕಿಕೊಂಡಿದ್ದಾರೆಂದು ವದಂತಿಯಿತ್ತು (ಕುವೆಂಪು ೨೦೦೬ಅ, ೪೧). ರಂಗಪ್ಪಸೆಟ್ಟರು ಚಂದ್ರಯ್ಯಗೌಡರಿಗೆ ವಂಚಿಸುತ್ತಿದ್ದ ವಿಷಯವು ಇದರಿಂದ ತಿಳಿಯುತ್ತದೆ.

ಘಟ್ಟದ ಕೆಳಗಿನ ಹೆಣ್ಣಾಳು ಗಂಡಾಳುಗಳು ತುಳು ಭಾಷೆಯಲ್ಲಿ ಮಾತಾಡುತ್ತ ಕಾನುರಿನ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಡುಗಳ್ಳ ಸೋಮ ಕೂಡ ಘಟ್ಟದ ಆಳಾಗಿದ್ದನು. ಕಾದಂಬರಿಯ ಕೊನೆಯಲ್ಲಿ ಅವನೇ ಘಟ್ಟದ ಕೆಳಗಿನಿಂದ ಆಳುಗಳನ್ನು ತಂದು ಸೇರೆಗಾರನಾಗುತ್ತಾನೆ.

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರುವ ಐತ, ಪೀಂಚಲು, ಚೀಂಕ್ರ, ಅಕ್ಕಣಿ, ಪಿಜಿಣ, ಮೊಡಂಕಿಲ, ದೇಯಿ ಮೊದಲಾದವರು ಘಟ್ಟದಾಳುಗಳು. ಐತ, ಪೀಂಚಲು ಬಾಲ್ಯದ ದಿನಗಳಿಂದಲೇ ಅಲ್ಲಿದ್ದು ಮುಕುಂದಯ್ಯ ಚಿನ್ನಮ್ಮನ ಒಡನಾಡಿಗಳಾಗಿದ್ದರು. ಅನಂತರ ಚಿನ್ನಮ್ಮ ಮುಕುಂದಯ್ಯರೊಡನೆ ಹೂವಳ್ಳಿಯಲ್ಲಿ ನೆಲೆಸುತ್ತಾರೆ.

ಮೇಗರವಳ್ಳಿಯಲ್ಲಿ ‘ಓಟ್ಲು ಮನೆ’ ಇಟ್ಟುಕೊಂಡಿದ್ದ ಅಂತಕ್ಕ ಸೆಟ್ತಿಯ ಗಂಡನೂ ಸೇರೆಗಾರನಾಗಿದ್ದನು. ಇವನು ಹಳೆಮನೆ ಸುಬ್ಬಣ್ಣನ ಬಳಿ ಕೆಲಸ ಮಾಡುತ್ತಿದ್ದು ಸುಬ್ಬಣ್ಣನ ಪ್ರೀತಿಗೆ ಪಾತ್ರನಾಗಿದ್ದನು. ತನ್ನ ಗಂಡನ ಸಾವಿನ ನಂತರ ಅಂತಕ್ಕ ಸೆಟ್ತಿ ಮೇಗಳವಳ್ಳಿಯಲ್ಲೇ ನೆಲೆಸಿದ್ದಳು. ದಕ್ಷಿಣ ಕನ್ನಡದಿಂದ ವಲಸೆ ಬಂದವರಲ್ಲಿ ಕೋಣೂರಿನ ಐಗಳು ಅನಂತಯ್ಯನವರೂ ಒಬ್ಬರು.

ಕೃಷಿ ಕೆಲಸಕ್ಕಲ್ಲದೆ ವ್ಯಾಪಾರಕ್ಕಾಗಿ ಕರೀಂಸಾಬ, ಪುಡಿಸಾಬ, ನಾಟಿ ವೈದ್ಯರಾದ ಮಲೆಯಾಳಿ ಕಣ್ಣಾ ಪಂಡಿತ, ದಕ್ಷಿನ ಕನ್ನಡದಿಂದ ಮಲೆನಾಡಿಗೆ ಬಂದು ನೆಲೆಸಿದವರು. ಜವಳಿ ಅಂಗಡಿ ಕಾಮತರು, ದಿನಸಿ ಅಂಗಡಿ ಪೈಗಳು – ಇವರ ಬಗ್ಗೆ ‘ಮಲೆನಾಡಿನಲ್ಲಿ ಮದುಮಗಳು’ ಕಾದಂಬರಿಯಲ್ಲಿ ಸೂಚಿತವಾಗಿದೆ. ಹೆಸರುಗಳಿಂದ ಇವರೂ ಘಟ್ಟದ ತಗ್ಗಿನವರು ಎಂದು ಊಹಿಸಬಹುದು.

ಘಟ್ಟದಾಳುಗಳನ್ನು ಮಲೆನಾಡಿಗರು ಎಷ್ಟರಮಟ್ಟಿಗೆ ಅವಲಂಬಿಸದ್ದರೆಂದು ಕಡಿದಾಳು ರಾಮಪ್ಪಗೌಡರು ಹೀಗೆ ತಿಳಿಸಿರುವರು. ಮಳೆಗಾಲ ಆರಂಭವಾಗುತ್ತಿದ್ದಂತೆ ಅದಕ್ಕೆ ಮುಂಚಿತವಾಗಿ ಮುಗಿಸಬೇಕಾದ ಕೆಲಸಗಳಲ್ಲಿ ಮುಖ್ಯವಾದ್ದದ್ದು ಅಡಿಕೆ ಕೊನೆಗಳಿಗೆ ಕೊಟ್ಟೆ ಕಟ್ಟಬೇಕಾದುದು. ಇಂದಿನಂತೆ ಅಂದು ಬೋರ್ಡೋ ದ್ರಾವಣವನ್ನು ಸಿಂಪಡಿಸುವ ಕ್ರಮ ಇರಲಿಲ್ಲ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೊಳೆ ರೋಗ ಬಂದು ಅಡಿಕೆ ಕಾಯಿಗಳು ಉದುರಿ ಹೋಗುತ್ತವೆ.

ಒಮ್ಮೆ ಕೊಟ್ಟೆ ಕಟ್ಟುವರು ಬಂದು ಕೆಲಸಕ್ಕೆ ಮುಂಗಡ ಹಣ ಪಡೆದುಕೊಂಡಿರಲಿಲ್ಲ. ಈ ವರ್ಷ ಅವರು ಬರುತ್ತಾರೋ ಇಲವೋ? ಆ ಕೆಲಸ ತಾವೇ ಕಲಿಯೋಣವೆಂದರೆ ಕೊನೆಯ ಗಳಿಗೆಯಲ್ಲಿ ಅದು ಅಸಾಧ್ಯ ಎಂದು ಜಮೀನ್ದಾರರು, ಶ್ರೀಮಂತರು ಯೋಚಿಸಿದರು. ಏಕೆಂದರೆ ಮರ ಹತ್ತಲು ಕಲಿತರೂ ಮರದ ತಲೆಯಲ್ಲಿ ಕುಳಿತು ಮರಗಳನ್ನ ದೋಟಿಯಿಂದ ಎಳೆದು ಕೊಟ್ಟೆ ಕಟ್ಟುವುದು ಕಷ್ಟವೇ. ಅಕಸ್ಮಾತ್‌ಕೈತಪ್ಪಿದರೆ ಐವತ್ತು ಅರವತ್ತು ಅಡಿ ಎತ್ತರದಿಂದ ಬೀಳುವ ಭಯವಿತ್ತು. ಸಾವಿರಕ್ಕೆ ಹತ್ತು – ಹದಿನೈದು ರೂಪಾಯಿಗಳನ್ನು ಕೊಟ್ಟೆ ಕಟ್ಟುವವರು ಕೇಳಿದಷ್ಟು ಕೊಡುತ್ತಾ ಬಂದರೂ ಏನೂ ಪ್ರಯೋಜನವಾಗಲಿಲ್ಲ ಎಂದ ಮರುಗಿದರು. ಆ ಆಳುಗಳು ಸೇತುವೆ ಕಟ್ಟುವ ಕೆಲಸಕ್ಕೆ ಹೋಗಿರುವರೆಂದು ತಿಳಿದು ಕಂಗಾಲದರು. ಘಟ್ಟದಾಳುಗಳು ಅಡಿಕೆಗೆ ಕೊಟ್ಟೆ ಕಟ್ಟಲು ಬರದೇ ಇದ್ದರೆ ಆಗುವ ಪರಿಣಾಮಗಳು ಒಬ್ಬ ಅಡಿಕೆ ಬೆಳಗಾರನಿಂದ ತಿಳಿಯುತ್ತದೆ.

“…. ಹೆಚ್ಚು ಕಡಿಮೆ ಆದರೆ ಕೊಳೆ ರೋಗ ಬಂದು ಒಂದು ವಾರದಲ್ಲೇ ಅಡಿಕೆ ಕಾಯಿ ಎಲ್ಲಾ ಉದುರಿ ನೆಲ ಸೇರುತ್ತೆ. ಇದೇ ಸಮಯ ಅಂತ ಸಾಲ ಕೊಟ್ಟವ ಆಸ್ತಿ ಒಳಗ್ಹಾಕಾಕೆಗೀಂತಾನೆ. ಈ ಮೂರು ನಾಲ್ಕು ರೂಪಾಯಿಯ ಅಡಿಕೆ ಧಾರಣೇಲಿ ಸಾಲ ತೀರಿಸುವುದಾದರೂ ಹೇಗೆ? ಅದರಾಗೂ ಕೊಳೆ ರೋಗ ಬಂದು ಉದುರಿ ಹೋದರೆ ಅವ ನೆಗೆದು ಬಿದ್ದಂಗೆ. ನೆಗೆದು ಬೀಳೋದು ಏನು ಬಂತು? ಹೋದ ವರ್ಷ ಆ ಮೊಳಲಿಮನೆ ಈರೇಗೌಡರು ತ್ವಾಟಕ್ಕೆ ಕೊಟ್ಟೆ ಕಟ್ಟೋಕೆ ಸಕಾಲಕ್ಕೆ ಜನ ಸಿಗದೆ ಕೊಳೆ ರೋಗ ಬಂದು ಪೂರಾ ಅಡಿಕೆ ಉದುರಿ ಹೋಗಿ ಪರ್ವತಪುರದ ಮಂಜಭಟ್ಟರಿಂದ ಮಗನ ಮದುವೆಗೆ ತಂದ ಸಾಲದ ಅಸಲು ಹೋಗಲಿ, ಬಡ್ಡಿ ಕಟ್ಟೂಕೂ ಆಗಲಿಲ್ಲ. ಕಡೆಗೆ ಮಂಜಭಟ್ಟರು ದಾವಾ ಹಾಕಿ ಅವನ ಮನೆ ಜಪ್ತಿ ಮಾಡಿಸಿದ್ರು. ಈರೇಗೌಡ ಮರ್ಯಾದಸ್ತ. ಅವನು ರಾತ್ರಿಯೇ ನೇಣು ಹಾಕಿಕೊಂಡು ಸತ್ತ” (ರಾಮಪ್ಪಗೌಡ ೧೯೯೫, ೧೧೧).

ಕೃಷಿ ಕೆಲಸಕ್ಕೆ ಘಟ್ಟದಾಳುಗಳನ್ನು ಕರೆದುಕೊಂಡು ಬರುತ್ತಿದ್ದ ಸೇರೆಗಾರರು ಭೂಮಾಲೀಕರೊಡನೆ ಕೆಲಸದ ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಅದನ್ನು ಮೀರಿದರೆ ‘ಬ್ರೀಚ್‌ಆಫ್‌ಕಾಂಟ್ರಾಂಕ್ಟ್‌’ ಎಂದು ಕೋರ್ಟಿಗೆ ದಾವಾ ಹಾಕುವ ಹಕ್ಕು ಭೂಮಾಲೀಕರಿಗಿರುತ್ತಿತ್ತು (ನೋಡಿ : ಅನುಬಂಧ – ೫).