ನಮ್ಮ ದೇಶದ ಬಹುತೇಕ ಕೃಷಿ ಕಾರ್ಮಿಕರು ಮೂಲತಃ ಕೆಳಜಾತಿ ಹಾಗು ಬುಡಕಟ್ಟುಗಳಿಗೆ ಸೇರಿದವರು. ವರ್ಣಾಧಾರಿತ ಶ್ರೇಣೀಕೃತ ಜಾತಿಗಳಲ್ಲದೆ ಊಳಿಗಮಾನ್ಯಪದ್ಧತಿ ಸಹ ಗ್ರಾಮೀಣ ಬಡತನಕ್ಕೆ ಕಾರಣವಾಗಿದೆ. ಇದರೊಂದಿಗೆ ಪುರೋಹಿತಶಾಹಿಗಳ ಪ್ರಭಾವ ಆರ್ಥಿಕ ಅಸಮಾನತೆಗಳು, ಕೆಲವೇ ಜನರಲ್ಲಿ ಅಧಿಕಾರದ, ಆಸ್ತಿಯ ಕೇಂದ್ರೀಕರಣ ಇವು ಹಳ್ಳಿಗಳ ಜನಜೀವನದ ಏರುಪೇರಿಗೆ ಕಾರಣವಾದ ಅಂಶಗಳು.

ಆರ್ಥಿಕ ಅಸಮಾನ ಆದಾಯದ ಹಂಚಿಕೆ ಸಂಬಂಧಿಸಿದ್ದು. ಇದಕ್ಕೆ ಕಾರಣ ಅಸಮಾನ ಅವಕಾಶಗಳು. ಅಸಮಾನ ಆಸ್ತಿಯ ಒಡೆತನ ಮತ್ತು ಇನ್ನಿತರ ಸಾಂಸ್ಥಿಕೇತರ ಅಂಶಗಳು ಇದು ಬಡತನಕ್ಕೆ ಕಾರಣವಾಗುವಂಹದ್ದು ಭಾರತದಲ್ಲಿ ಅಸಮಾನ ಆಸ್ತಿಯ ಒಡೆತನ, ವಿಶೇಷವಾಗಿ ಭೂಮಿಯ ಒಡೆತನ ವರಮಾನದ ಆರ್ಥಿಕ ಅಸಮಾನತೆಯನ್ನು ನಿರ್ಧರಿಸುತ್ತದೆ ಎಂದು ಆರ್ಥಶಾಸ್ತ್ರಜ್ಞರಾದ ದಾಂಡೇಕರ್ ಮತ್ತು ರತ್ ಆಬಿಪ್ರಾಯಪಡುತ್ತಾರೆ (ತಿಮ್ಮಯ್ಯ ೧೯೮೩). ಕುವೆಂಪು ಅವರ ಕಾದಂಬರಿಗಳು ಅನಿಸಿಕೆಯನ್ನು ಸತ್ಯವೆಂದು ರುಜುವಾತು ಮಾಡುತ್ತವೆ.

ಶ್ರಮ, ಜನಸಂಖ್ಯೆ, ಆಭಿವೃದ್ಧಿ ಮುಂತಾದ ಆರ್ಥಿಕ ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಜಗತ್ತಿನ ಯಾವ ಸಿದ್ಧಾಂತ ಪ್ರಮೇಯಗಳೂ ಗ್ರಾಮೀಣ ಕೃಷಿಯಾಧಾರಿತ ಆರ್ಥಿಕತೆಗೆ ಒಳಪಡುವುದಿಲ್ಲ. ಪಾಶ್ಚಾತ್ಯದಲ್ಲಿ ಕೃಷಿಯೂ ಸಹ ಬಂಡವಾಳಶಾಹಿಯ ಹಿನ್ನೆಲೆಯಲ್ಲಿ ಇರುವುದರಿಂದ ಅವರ ಪ್ರಮೇಯಗಳು ಅವರಿಗಷ್ಟೇ ಅನ್ವಯವಾಗುತ್ತವೆ. ಭಾರತದಲ್ಲಿನ ಸಾಂಸ್ಕೃತಿಕ, ಭೌಗೋಳಿಕ, ಸಾಮಾಜಿಕ ಭಿನ್ನತೆಗಳಿಂದ ಪಾಶ್ಚಾತ್ಯ ಸಿದ್ಧಾಂತಗಳಿರಲಿ, ಯಾವುದೇ ಒಂದು ಸಿದ್ಧಾಂತವನ್ನು ಇಡೀ ದೇಶಕ್ಕೆ ಅನ್ವಯಿಸುವುದು ಕೂಡ ಕಷ್ಟಕರವಾದದ್ದು.

ಕೃಷಿಯು ಭಾರತದಲ್ಲಿ ಬಹುತೇಕ ಜೀವನಾಧಾರಿತ ಕುಲಕಸುಬುದಾದ್ದರಿಂದ ಇದರಲ್ಲಿ ಬರುವ ಲಾಭ ಕಡಿಮೆ. ಆದ್ದರಿಂದ ಪಾಶ್ಚಾತ್ಯ ಅರ್ಥಶಸ್ತ್ರಜ್ಞರಾದ ರಿಕಾರ್ಡೋ, ಜೇಮ್ಸ್ ಮಿಲ್, ಆಡಂಸ್ಮಿತ್ ಅವರ ವಿಚಾರಧಾರೆ, ಸಿದ್ಧಾಂತಗಳು ಭಾರತದಲ್ಲಿ ಯಶಸ್ವಿಯಾಗಲಿಲ್ಲ. ನಿಯಮಗಳಿಂದ ಬ್ರಿಟಿಷರ ಕಂದಾಯ ಹೆಚ್ಚಿಸಿರಬಹುದಾದರೂ ಆಂತರಿಕ ಆರ್ಥಿಕ ಸ್ಥಿತಿಗತಿಗಳನ್ನು ಅದು ಕಡೆಗಣಿಸಿತು. ಅಂಶಗಳನ್ನು ಜಮೀನುನ್ದಾರರಿಂದ ಒಕ್ಕಲುಗಳ, ಜೀತಾದಾಳುಗಳ ಶೋಷಣೆಯ ಸಂದರ್ಭದಲ್ಲಿ ಕಾಣಬಹುದು.

ಕರೆನ್ಸಿ ಪದ್ಧತಿದೇಶಾದ್ಯಂತ ಜಾರಿಗೆ ಬರುತ್ತಿದ್ದ ಸಂದರ್ಭದಲ್ಲಿ ಮಲೆನಾಡಿನ ಸಮಾಜ, ವಸ್ತು ವಿನಿಮಯ ಪದ್ಧತಿಯನ್ನೇ ಅನುಸರಿಸಿತ್ತು. ಪರವೂರಿನ ವ್ಯಾಪಾರಿಗಳು ಮುಗ್ಧ ಜನರನ್ನು ಶೋಷಿಸಿ ಲಾಭ ಪಡೆದು ಲಾಭವನ್ನು ತಮ್ಮ ಊರಿಗೆ ಸಾಗಿಸುತ್ತಿದ್ದರು. ಮೂಲಕ ಮಲೆನಾಡಿನ ಆಸ್ತಿಯ ಸೋರಿಕೆಯಾಗುತ್ತಿತ್ತು. ಅಲ್ಲದೆ ಮಲೆನಾಡ ಸಮಾಜ ತನ್ನ ಜನರಿಗೆ ಮುಂಬರುವ ಅವಕಾಶ ಕೊಡದೆ ಪರವೂರಿನವರ ಮೇಲೆ ಅವಲಂಬಿತವಾಗಿತ್ತು. ಆಡಕೆಗೆ ಕೊಟ್ಟೆ ಕಟ್ಟುವ ಕೆಲಸವನ್ನು ಮಲೆನಾಡಿನ ಜನ ಕಲಿಯದೆ ಘಟ್ಟದ ಕೆಳಗಿನವರನ್ನೇ ಆಶ್ರಯಿಸುವುದನ್ನು ನೋಡಿದರೆ, ಜನರಲ್ಲಿ ಹೊಸ ಕೆಲಸ ಕಲಿಯುವಲ್ಲಿ ಉತ್ಸಾಹದ ಕೊರತೆಯನ್ನು ಸೂಚಿಸುತ್ತದೆ. ಉತ್ಪಾದನೆಯು ಬಿಕರಿಯಾಗುವುದು ಮಾರುಕಟ್ಟೆಯ ಮೂಲಕ. ಇದರ ಮುಖ್ಯ ಕಾರ್ಯ ನಿರ್ವಾಹಕ ವ್ಯಾಪಾರಿ. ಮಲೆನಾಡಿನ ಸ್ಥಳೀಯ ಜನರು ಕೃಷಿ, ಕೃಷಿಯಾಧಾರಿತ ತೊಂದರೆಗಳಲ್ಲಿ ಮುಳುಗಿದಾಗ ಪರವೂರಿನ ಜನರು ವ್ಯಾಪಾರದ ಲಾಭ ಪಡೆದು ಕೊಂಡರು. ಕೇವಲ ತಮ್ಮ ಭೌಗೋಳಿಕ ವ್ಯಾಪ್ತಿಗಷ್ಟೇ ಸೀಮಿತವಾದ ಮಲೆನಾಡ ಜನ ಕೃಷಿ ಬಿಟ್ಟು ಇತರ ಕೆಲಸದ ಕಡೆ ಗಮನಹರಿಸಿದ್ದು ಕಡಿಮೆ ಎಂದು ತೋರುತ್ತದೆ.

ಏಳೆಂಟು ಮೈಲಿ ದೂರದಲ್ಲಿದ್ದ ತೀರ್ಥಹಳ್ಳಿಯನ್ನು ನೋಡದ ಜನ ಮೇಗರವಳ್ಳಿಯನ್ನೇ ಪಟ್ಟಣವೆಂದು ತಿಳಿಯುವರು. ಇಂಥವರು ಭೌಗೋಳಿಕವಾದ ಅಂಶಗಳಿಂದಾಗಿ ದೇಶದ ಮುಖ್ಯವಾಹಿನಿಯಿಂದ ದೂರವುಳಿದವರು. ಆಗ ದೇಶದಲ್ಲಿ ಬ್ಯಾಂಕುಗಳನ್ನು ಸ್ಥಾಪಿಸುವ ಪ್ರಕ್ರಿಯೆ ಆರಂಭಗೊಂಡು, ಲೇವಾದೇವಿಗಾರರ ಅಕ್ರಮ ಬಡ್ಡಿದರ ನಿಯಂತ್ರಣಕ್ಕೆ ಸರ್ಕಾರವು ಶ್ರಮಿಸುತ್ತಿದ್ದರೆ, ವರ್ಗ ಯಾರ ಭಯವಿಲ್ಲದೆ ತನ್ನ ಮನಸೋ ಇಚ್ಛೆ ಬಡ್ಡಿ, ಚಕ್ರಬಡ್ಡಿಯನ್ನು ಆಕರಗೊಳಿಸಿ ಜನರನ್ನು ಶೋಷಿಸುತ್ತಿತ್ತು. ಹತ್ತೊಂಭತ್ತನೆಯ ಶತಮಾನದ ಅಂತ್ಯದಲ್ಲಿ ಕಂಡ ವ್ಯವಸ್ಥೆ ಇಪ್ಪತ್ತನೆ ಶತಮಾನದಲ್ಲೂ ಮುಂದುವರೆದ್ದಿತ್ತು. ಕಾನೂರಿನ ಜನ ೧೯೩೦ರ ದಶಕದಲ್ಲೂ ನೋಟನ್ನು ನೋಡಿರಲಿಲ್ಲವೆಂದರೆ, ಸಮಾಜ ಹೊರಜಗತ್ತಿನ ಬಗ್ಗೆ, ತನ್ನ ಸುತ್ತ ನಡೆಯುತ್ತಿದ್ದ ಬೆಳವಣಿಗೆಯ ಬಗ್ಗೆ ಹೇಗೆ ನಿರ್ಲಿಪ್ತವಾಗಿತ್ತು. ಮಾಹಿತಿ ರಹಿತವಾಗಿತ್ತು ಎಂಬುದು ತಿಳಿಯುತ್ತದೆ. ದಟ್ಟ ಆರಣ್ಯ ಪರ್ವತಗಳಿಂದ ಆವೃತವಾದ ನಾಡು ಹೊರ ಜಗತ್ತಿಗೆ ಕ್ರಿಶ್ಚಿಯನ್ ಮಿಶನರಿಗಳ ಮೂಲಕ ತೆರೆದುಕೊಳ್ಳಲಾರಂಭಿಸಿತು. ಆದರೂ ಮೌಢ್ಯ ಅಸಮಾನತೆಗಳಿಂದ ತುಂಬಿತ್ತು. ಇದರಿಂದ ಜನರು ನಿರಂತರವಾಗಿ ಒಂದಲ್ಲ ಒಂದು ಶೋಷಣೆಯನ್ನು ಅನುಭವಿಸುತ್ತಿದ್ದರು. ಸಂಪದ್ಭರಿತ ನಾಡಾದರೂ ಶ್ರೀಮಂತಿಗೆ ಎಂಬುದು ಕೈಹಿಡಿಯಷ್ಟು ಜನರ ಸ್ವತ್ತಾಗಿತ್ತು. ಆದರೂ ಪಾಶ್ಚಾತ್ಯ ದೇಶಗಳಲ್ಲಿ ಆಗುವಂತೆ ಉಳ್ಳವರ ಮತ್ತು ಬಡವರ ನಡುವಿನ ಘರ್ಷಣೆಯನ್ನು ನಾವು ಕಾಣುವುದಿಲ್ಲ. ಕಂಡರೂ ಅಲ್ಪ ಪ್ರಮಾಣದಲ್ಲಿಯೇ ಹೊರತು ಶೋಷಣೆಯನ್ನು ಹೋಗಲಾಡಿಸುವಷ್ಟು ದೊಡ್ಡ ಪ್ರಮಾಣದಲ್ಲಿ ಕ್ರಾಂತಿಯನ್ನು ಉಂಟು ಮಾಡುವಂತೆ ಇರಲಿಲ್ಲ. ಹಾಗು ಪ್ರತಿಭಟನೆಯು ಅಸಂಘಟಿತವಾದ್ದರಿಂದ ಅದಕ್ಕೆ ಇಡೀ ವ್ಯವಸ್ಥೆಯನ್ನು ಪ್ರಶ್ನಿಸುವ ಬಲವಿರಲಿಲ್ಲ. ಹಾಗಾಗಿ ಅಂಥ ಪ್ರತಿಭಟನೆ ಘರ್ಷಣೆಯನ್ನು ಸುಲಭವಾಗಿ ಹತ್ತಿಕ್ಕಲಾಗುತಿತ್ತು.

ಒಂದು ಜನ ಸಮುದಾಯದ ಮೇಲೆ ಸಾಮಾಜಿಕ ಹಾಗು ಆರ್ಥಿಕ ಅಂಶಗಳು ಒತ್ತಡ ಹೇರಿ, ಅದರ ಗತಿಯನ್ನೇ ಬದಲಿಸಬಹುದು. ಎರಡು ಅಂಶಗಳ ಮಧ್ಯೆ ಭಿನ್ನತೆಯ ಗೆರೆ ಎಳೆಯಲಾಗದಂತೆ ಇವೆರಡೂ ಒಂದಾಗಿವೆ. ವರ್ಣಶ್ರೇಣಿಯಾಧಾರಿತ ಸಮಾಜವು ಮೇಲಿಕೀಳೆಂಬ ಜಾತಿ ಅಂತರಗಳನ್ನು ಸೃಷ್ಟಿಸಿದರೆ, ಅರ್ಥಿಕ ಅಂಶಗಳು ಹಣಕಾಸು ಆಸ್ತಿ, ಒಡೆತನದ ಆಧಾರದಿಂದ ಮೇಲುವರ್ಗ ಕೆಳವರ್ಗಗಳನ್ನು ಸೃಷ್ಟಿಸಿತು.

ತಮ್ಮ ಪರಿಸರದ ಚಿತ್ರಣವನ್ನು ಓದುಗರೆದುರು ತೆರೆದಿಡುತ್ತ ಇಂತಹ ಅಂಶಗಳನ್ನು ಕುವೆಂಪು ಅವರು ಅಪ್ರಜ್ಞಾಪೂರ್ವಕವಾಗಿ ತಮ್ಮ ಕಾದಬಂರಿಗಳಲ್ಲಿ ತಂದಿದ್ದಾರೆ. ಒಂದು ಕಥೆಯ ಹಂದರದಲ್ಲಿ ವಾಸ್ತವತೆಯನ್ನು ತಂದು ತಮ್ಮ ಭಾಗದ ಸಾಮಾಜಿಕ ಇತಿಹಾಸದಂತೆಯೇ ಆರ್ಥಿಕ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ. ಮಲೆನಾಡಿನ ಕೃಷಿಕ ಸಮಾಜದ ಚಿತ್ರವನ್ನು ಅದರ ಸಮಗ್ರ ಸೂಕ್ಷ್ಮತೆಗಳೊಂದಿಗೆ ಚಿತ್ರಿಸಿದ್ದಾರೆ. ಇದರಿಂದ ಒಂದು ಸಾಹಿತ್ಯವು ತನ್ನಲ್ಲಿ ಆಡಗಿಸಿಕೊಂಡಿರಬಹುದಾದ ಅನೇಕ ವಿಷಯಗಳತ್ತ ಗಮನಹರಿಸುವಂತೆ ಮಾಡಿದ್ದಾರೆ.

ಕುವೆಂಪು ಕಾದಂಬರಿಗಳ ಮಹಿಳೆಯ ಪಾತ್ರಗಳ ವಿಶ್ಲೇಷಣೆಯಿಂದ ಅಂದಿನ ಮಹಿಳೆಯರ ಸಾಮಾಜಿಕ ಸ್ಥಾನಮಾನದ ಕಡೆ ಗಮನಹರಿಸುವುದರೊಂದಿಗೆ, ಮೂಲಕ ಅವರ ಅರ್ಥಿಕ ಹಿಂದುಳುವಿಕೆಯ ಅಧ್ಯಯನ ಮಾಡಬಹುದು. ಇಲ್ಲಿ ಕಂಡುಬರುವ ಜೀತ, ವ್ಯಾಪಾರ, ಲೇವಾದೇವಿ, ಜಮೀನ್ದಾರಿ (ರೈತವಾರಿ) ಪದ್ಧತಿ ಇವುಗಳ ಅಧ್ಯಯನ ಕೈಗೊಂಡು ಕರ್ನಾಟಕದ ಇತರ ಭಾಗಗಳ ಪದ್ಧತಿಯೊಂದಿಗೆ ಹೋಲಿಸಿ, ಪ್ರದೇಶ ಅನನ್ಯತೆಯನ್ನು ತಿಳಿಯುವ ಪ್ರಯತ್ನ ಮಾಡಬಹುದು. ಕೇವಲ ಸಂಸ್ಕೃತಿಯ ಮೂಲಕ ಒಂದು ಕೃತಿಯನ್ನು ಅಧ್ಯಯನ ಮಾಡದೆ ಅದು ಕಟ್ಟಿಕೊಡುವ ಆರ್ಥಿಕ ಸ್ಥಿತಿಗತಿಗಳನ್ನು , ಅವುಗಳಿಗೆ ಕಾರಣಗಳು, ಪ್ರಭಾವಗಳು, ಪರಿಣಾಮಗಳನ್ನು ವಿಶ್ಲೇಷಿಸುವಂತಹ ಅಧ್ಯಯನಗಳನ್ನೂ ಕೈಗೊಳ್ಳಬಹುದಾಗಿದೆ.

ಕುವೆಂಪು ಅಂದಿನ ನಿಮ್ನ ವರ್ಗದ ಜನರ ಕಥೆಯನ್ನೂ ಅದೇ ಸಮಯದಲ್ಲಿ ಮೇಲುವರ್ಗದ ಜನರ ಬದುಕಿನ ಚಿತ್ರಣವನ್ನೂ ಕಾದಂಬರಿಗಳಲ್ಲಿ ಏಕ ಪ್ರಕಾರದಲ್ಲಿ, ಯಾವುದೇ ಪಕ್ಷ ಪಾತವಿಲ್ಲದೆ ಕೊಡುತ್ತಾರೆ. ಸಮಾಜದಲ್ಲೇ ಕೆಳಮಟ್ಟದಲ್ಲಿ ನಡೆಯುವ ಪ್ರತಿಭಟನೆಯ ಸಂಗತಿಗಳನ್ನು ವಿವರಿಸುತ್ತಾರೆ. ನಿಟ್ಟಿನಲ್ಲಿ ಕುವೆಂಪು ಅವರ ಕಾದಂಬರಿಗಳನ್ನು ನಾನಾ ಶಿಸ್ತಿನ ಮುಖಾಂತರ ಅಂದರೆ ಮಹಿಳಾ ಅಧ್ಯಯನ, ಸಾಂಸ್ಕೃತಿಕ ಅಧ್ಯಯನ, ಸಾಮಾಜಿಕ, ಅರ್ಥಿಕ, ಮನಶಾಸ್ತ್ರೀ, ನೈಸರ್ಗಿಕ ಸಂಪನ್ಮೂಲ, ಭೌಗೋಳಿಕ, ಐತಿಹಾಸಿಕ ದೃಷ್ಟಿಕೊಣಗಳಿಂದಲೂ ಗ್ರಹಿಸಲು ಸಾಧ್ಯವಾಗುತ್ತದೆ. ಕಳೆದ ಶತಮಾನದ ವಿವರಣೆಗಳನ್ನು ಹೊಂದಿದ ಕಾದಂಬರಿಗಳನ್ನು ಹಿನ್ನೆಲೆಯಾಗಿಟ್ಟುಕೊಂಡು, ಇಂದಿನ ಬದಲಾದ ಪರಿಸ್ಥಿತಿ, ಅಭಿವೃದ್ಧಿಯತ್ತ ಗಮನಹರಿಸಿ ತೌಲನಿಕ ಆಧ್ಯಯನ ಮಾಡಬಹುದಾಗಿದೆ.

            ಇಲ್ಲಿ
ಯಾರೂ ಮುಖ್ಯರಲ್ಲ:
ಯಾವುದೂ ಅಮುಖ್ಯವಲ್ಲ
ಯಾವುದೂ ಯಃಕಶ್ಚಿತವಲ್ಲ!

            ಇಲ್ಲಿ
ಯಾವುದಕ್ಕೂ ಮೊದಲಿಲ್ಲ:
ಯಾವುದಕ್ಕೂ ತುದಿಯಿಲ್ಲ:
ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ:
ಕೊನೆ ಮುಟ್ಟುವುದೂ ಇಲ್ಲ!

            ಇಲ್ಲಿ
ಎಲ್ಲಕ್ಕೂ ಇದೆ ಅರ್ಥ:
ಯಾವುದೂ ಅಲ್ಲ ವ್ಯರ್ಥ:
ನೀರಲ್ಲ ತೀರ್ಥ! (ಕುವೆಂಪು ೨೦೦೬ಬ)

ಮಲೆಗಳಲ್ಲಿ ಮದುಮಗಳುಕಾದಂಬರಿಯನ್ನು ಓದುವ ಓದುಗರಿಗೆ ಕುವೆಂಪು ಅವರು ಮೊದಲು ಮೇಲಿನ ಸೂಚನೆಯನ್ನು ಕೊಡುತ್ತಾರೆ. ಕಾದಂಬರಿಯಲ್ಲಿ ಬರುವ ಸೂಕ್ಷ್ಮ ಚಿತ್ರಣವೂ ಒಂದೊಂದು ಮಹತ್ತಾದ ಆರ್ಥವಂತಿಕೆಯನ್ನು ಪಡೆದಿವೆ. ಸುಬ್ಬಮ್ಮ, ಓಬಯ್ಯ ನೋಟನ್ನು ಕಂಡರಿಯದ ಒಂದು ಸಣ್ಣ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಂದಿನ ಹಣಕಾಸಿನ ವ್ಯವಸ್ಥೆಯ ಒಂದು ಪ್ರಮುಖ ನೋಟ ಸಿಗುತ್ತದೆ. ಹೀಗೆ ಪ್ರತಿಯೊಂದು ಘಟನೆಯೂ ಅನೇಕ ಗಂಭೀರವಾದ ಹೊಳಹನ್ನು ತನ್ನಲ್ಲಿ ಆಡಗಿಸಿಕೊಂಡಿದೆ. ಸಮುದಾಯದ ಅರ್ಥಿಕ ಸ್ಥಿತಿಗತಿಗಳನ್ನರಿಯಲು ಕಾದಂಬರಿಗಳು ಒಂದು ಆಧಾರವನ್ನು ಒದಗಿಸಿವೆ.

ಸಾಹಿತಿಯ ಗ್ರಹಿಕೆಯಿಂದ ಯಾವುದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜದ ವಸ್ತುನಿಷ್ಠ ಚಿತ್ರಣವನ್ನು ಸಾಹಿತ್ಯದಲ್ಲಿ ಕಥೆ ನಡೆಯುವ ಸ್ಥಳ, ಪಾತ್ರಗಳು, ಅವುಗಳೊಳಗಿನ ಸಂಬಂಧ, ಘರ್ಷಣೆ ಇವುಗಳು ಕಾದಂಬರಿ ಕಥೆಗಳಲ್ಲಿ ಸಹಜವಾಗಿ ಬಂದಿರುತ್ತವೆ. ಇಂಥ ಚಿತ್ರಣಗಳು ಸಮಾಜದ ಅಧ್ಯಯನಕ್ಕೆ ಹೆಚ್ಚು ಸೂಕ್ತವಾಗಿದೆ. ಸಾಹಿತ್ಯವನ್ನು ಶಿಸ್ತುಬದ್ಧ ಜ್ಞಾನಕ್ಕೆ ಪರ್ಯಾಯವಾಗಿ ಬಳಸಿಕೊಳ್ಳಲಾಗುವುದಿಲ್ಲ. ಆದರೆ ಅದನ್ನು ಪೂರಕವಾಗಿ ಬಳಸಿಕೊಳ್ಳಬಹುದಾಗಿದೆ.

ಸಮಾಜವಿಜ್ಞಾನದಲ್ಲಿ ಅಮೂರ್ತವಾಗಿ (ಅಬ್ಸ್ಟ್ರ್ಯಾಕ್ಟ್ ಆಗಿ) ನೋಡುವ ವಿಷಯಗಳನ್ನು ಸಾಹಿತ್ಯದ ಮೂಲಕ ಸೂಕ್ಷ್ಮವಾಗಿ ನೋಡುವ (ಮೈಕ್ರೋಸ್ಟಡಿ) ಅವಕಾಶ ದೊರೆಯುತ್ತದೆ. ಕೇವಲ ಜೀತಪದ್ಧತಿ, ಲಿಂಗಾನುಪಾತದ ಕುಸಿತ, ವ್ಯಾಪಾರ ಮುಂತಾದವನ್ನು ಸೈದ್ಧಾಂತಿಕವಾಗಿ ಸಮಾಜವಿಜ್ಞಾನಗಳಲ್ಲಿ ನೋಡುತ್ತೇವೆ. ಆದರೆ ಸಾಹಿತ್ಯ ಸಮಾಜದ ಆಗುಹೋಗುಗಳ ಸಮೀಪದ ನೋಟ ದೊರೆತು, ಅವುಗಳು ತಲೆದೋರಲು ಇರುವ ಕಾರಣಗಳ ವಿಶ್ಲೇಷಣೆಗೆ ಅನುವು ಮಾಡಿಕೊಡುತ್ತದೆ. ಸಾಮಾಜಿಕ ಅಂಶಗಳಿಂದ ರೂಪಿತವಾಗುವ ಆರ್ಥಿಕ ಸ್ಥಿತಿಗತಿಯ ಸೂಕ್ಷ್ಮ ಅಧ್ಯಯನಕ್ಕೆ ಇದು ಸಹಾಯವಾಗಿದೆ.