ಭಾರತ ಮೂಲತಃ ಕೃಷಿ ಪ್ರಧಾನ ಸಮಾಜವಾಗಿದೆ. ಅಲ್ಲಿಯ ಸಮಾಜದ ಸಂಬಂಧಗಳು ಕೃಷಿ ಚಟುವಟಿಕೆ ಮತ್ತು ಜಾತಿ ವ್ಯವಸ್ಥೆಯನ್ನು ಅವಲಂಬಿಸಿವೆ. ಕರ್ನಾಟಕವು ಇದಕ್ಕೆ ಹೊರತಾಗಿಲ್ಲ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಹಿನ್ನೆಲೆಯನ್ನು ಐತಿಹಾಸಿಕವಾಗಿ, ಸಾಮಾಜಿಕವಾಗಿ ಈ ಅಧ್ಯಾಯದಲ್ಲಿ ಗಮನಿಸಲಾಗಿದೆ. ಇದರಲ್ಲಿ ಭೂಮಿಯ ಸಂಬಂಧಗಳು, ಅನುಸರಿಸುತ್ತಿದ್ದ ವಿಧಾನಗಳು, ಕಂದಾಯ, ಗೇಣಿ ಮುಂತಾದ ಅಂಶಗಳನ್ನು ಚರ್ಚಿಸಲಾಗಿದೆ. ಅಲ್ಲದೆ ಶ್ರೇಣಿಕೃತ ಭಾರತೀಯ ಸಮಾಜದಲ್ಲಿ ಜಮೀನ್ದಾರರ ಮತ್ತು ಒಕ್ಕಲುಗಳ ಸಂಬಂಧ ಹೇಗಿತ್ತು ಎಂಬುದನ್ನು ಅರಿಯುವುದು ಈ ಅಧ್ಯಯನದ ಉದ್ದೇಶ.

ಮಲೆನಾಡ ಮುಖ್ಯ ಆರ್ಥಿಕ ಚಟುವಟಿಕೆಗಳು

ಮೈಸೂರು ಸಂಸ್ಥಾನದ ಶಿವಮೊಗ್ಗ ಜಿಲ್ಲೆಯ ಮಲೆನಾಡು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ನರಸಿಂಹರಾಜಪುರ ಮತ್ತು ಶೃಂಗೇರಿಯನ್ನು ಒಳಗೊಳ್ಳುತ್ತದೆ. ಈ ಭಾಗಗಳು ದಟ್ಟ ಕಾಡು ಪ್ರದೇಶಗಳಿಂದ ಪಶ್ಚಿಮ ಘಟ್ಟಗಳ ಗುಡ್ಡ ಪರ್ವತಗಳಿಂದ ಕೂಡಿದ್ದು ವರ್ಷಕ್ಕೆ ಇನ್ನೂರರಿಂದ ಮುನ್ನೂರು ಇಂಚು ಮಳೆ ಸುರಿಯುತ್ತಿದಂತಹ ಪ್ರದೇಶವಾಗಿದೆ.

ಕೃಷಿಯೇ ಮಲೆನಾಡ ಆರ್ಥಿಕ ಚಟುವಟಿಕೆಯಾಗಿತ್ತು. ಕೃಷಿಕರು ಮುಖ್ಯವಾಗಿ ಅಡಿಕೆ, ಭತ್ತ, ಕಬ್ಬನ್ನು ಬೆಳೆಯುತ್ತಿದ್ದರು. ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಮೆಣಸು, ಏಲಕ್ಕಿ, ಬಾಳೆಹಣ್ಣನ್ನು ಬೆಳೆಯುತ್ತಿದ್ದರು. ಅಡಿಕೆಯನ್ನು ಬೀರೂರು ಮೂಲಕ ಬಳ್ಳಾರಿ ವಲಜ್‌ಗೆ ಕಳುಹಿಸಿ ವ್ಯಾಪಾರ ಮಾಡುತ್ತಿದ್ದರು (ರಾವ್‌೧೯೨೯ಡ, ೧೩೪೮).

ಪಶುಪಾಲನೆ ಮುಖ್ಯವಾಗಿದ್ದರೂ ಮಲೆನಾಡಿನಲ್ಲಿ ದೊಡ್ಡ ಪ್ರಮಾಣದ ಹೈನುಗಾರಿಕೆ ಇರಲಿಲಲ್ಲವೆಂದು ಕಂಡುಬರುತ್ತದೆ. ಮಲೆನಾಡಿನ ವಿಶಿಷ್ಟ ತಳಿಯ ಆಕಳುಗಳು ಬಯಲುಸೀಮೆಯ ಆಕಳುಗಳಂತೆ ಹೆಚ್ಚಾಗಿ ಹಾಲು ಕೊಡುವುದಿಲ್ಲ. ಇವು ಬಯಲು ಪ್ರದೇಶದ ಆಕಳುಗಳಿಗೆ ಹೋಲಿಸಿದರೆ ಕುಳ್ಳಗಿರುವುದರಿಂದ ಇದನ್ನು ‘ಮಲೆನಾಡ ಗಿಡ್ಡ’ ಎಂದು ಕರೆಯುತ್ತಾರೆ. ಈ ಆಕಳುಗಳಿಂದ ಕೇವಲ ಮನೆಗೆ ಸಾಕಾಗುವಷ್ಟು ಹಾಲು ದೊರಕುತ್ತಿರಬಹುದು. ಆಕಳಿನ ಗೊಬ್ಬರವನ್ನು ಗದ್ದೆ ತೋಟಗಳಿಗೆ ಬಳಸುತ್ತಿದ್ದರು. ಕಾದಂಬರಿಗಳಲ್ಲಿ ಎಲ್ಲಿಯೂ ಹೈನುಗಾರಿಕೆಯ ವಿಷಯವಿಲ್ಲ ಆದರೆ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಹಳೆಮನೆ ಸುಬ್ಬಣ್ಣ ಹೆಗ್ಗೆಡೆಯ ಮನೆಯಲ್ಲಿ ಕೋಳಿ ಒಡ್ಡಿ, ಹಂದಿ ಒಡ್ಡಿ, ಇರುವ ವಿಷಯ ಬರುತ್ತದೆ. ಅದನ್ನು ಅವರು ಮಾರುತ್ತಿದ್ದರು. ಆದ್ದರಿಂದ ಪ್ರಾಣಿ ಸಾಕುವುದು ಆದಾಯದ ಮತ್ತೊಂದು ಮೂಲವಾಗಿತ್ತು ಎಂಬುದಾಗಿ ಊಹಿಸಬಹುದು.

ಜಮೀನ್ದಾರರು

ಈ ಪ್ರದೇಶದಲ್ಲಿ ಗೌಡರು ಪ್ರಮುಖ ಜನಾಂಗದವರಾಗಿದ್ದಾರೆ. ಇವರನ್ನು ಒಕ್ಕಲಿಗರೆಂದೂ ಕರೆಯುವುದುಂಟು. ಒಕ್ಕಲು ಎಂದರೆ ಕೃಷಿಕ ಎಂದು ಆರ್ಥ ಮಲೆನಾಡಿನ ಒಕ್ಕಲಿಗರು ನಾಮಧಾರಿ ಗೌಡ ಜನಾಂಗದವರು. ಇವರು ಮೊದಲು ಜೈನರಾಗಿದ್ದು ಶ್ರೀವೈಷ್ಣವ ಮತ ಸ್ಥಾಪಕರಾದ ಶ್ರೀರಾಮಾನುಜಾಚಾರ್ಯರ ಪ್ರಭಾವಕ್ಕೆ ಒಳಗಾಗಿ ಮತಾಂತರಗೊಂಡು ನಾಮಧಾರಿ ಗೌಡರಾಗಿದ್ದಾರೆ (ರಾಮಪ್ಪಗೌಡ ೧೯೯೮).

‘ಗೌಡ’ ಎಂಬ ಶಬ್ಧ ‘ಗ್ರಾಮ ಮುಖಂಡ’ ಎಂಬ ಅರ್ಥವನ್ನು ಕೊಡುತ್ತದೆ. ಒಕ್ಕಲಿಗ ಅಂದರೆ ಕೃಷಿಕ ಒಕ್ಕಲಿಗ, ಗೌಡ ಜಾತಿಯ ಸೂಚಕವಾಗಿದೆ (ಆದೇ.) ಇವರ ಕುಲದೇವರು ತಿರುಪತಿ ವೆಂಕಟರಮಣ. ಇವರನ್ನು ಮಲೆನಾಡಿನಲ್ಲಿ ಗೌಡ, ನಾಯ್ಕ ಹೆಗ್ಗಡೆ ಎಂದು ಕರೆಯುತ್ತಾರೆ. ಈ ಪದ್ಧತಿ ವಿಜಯನಗರ ಕಾಲದ ಐತಿಹಾಸಿಕ ಸಂಬಂಧವಿದೆ. ವಿಜಯನಗರದ ಅರಸರ ಕಾಲದಲ್ಲಿ ಅವರ ಆಸ್ಥಾನದಲ್ಲಿ ಆಡಳಿತವನ್ನು ನಿರ್ವಹಿಸುತ್ತಿದ್ದವನಿಗೆ ಗೌಡ ಎಂದೂ ಸೈನ್ಯಾಧಿಕಾರಿಗೆ ನಾಯ್ಕ ಎಂದೂ ನ್ಯಾಯಾಂಗವನ್ನು ನೋಡಿಕೊಳ್ಳುತ್ತಿದ್ದವನಿಗೆ ಹೆಗ್ಗಡೆ ಎಂದೂ ಹೆಸರು ಕೊಡುತ್ತಿದ್ದರು. ಯುದ್ಧದ ಸಮಯದಲ್ಲಿ ಇವರು ಮಲೆನಾಡಿನ ಈ ಭಾಗಕ್ಕೆ ಬಂದು, ಇಲ್ಲಿಯ ಶ್ರೀವೈಷ್ಣವ ಸಂಪ್ರದಾಯದ ನಾಮಧಾರಿ ಗೌಡರೊಂದಿಗೆ ಸಂಬಂಧ ಬೆಳೆಸಿ, ಶ್ರೀವೈಷ್ಣವ ಸಂಪ್ರದಾಯಕ್ಕೆ ಒಳಗಾದರು (ಅದೇ.).

ಒಕ್ಕಲಿಗರಿಗೆ ವ್ಯವಸಾಯವೇ ಪ್ರಮುಖ ವೃತ್ತಿಯಾಗಿತ್ತು. ಕೃಷಿ ಭೂಮಿ ವಿಸ್ತರಿಸುವುದು ಇವರ ಪ್ರಬಲವಾದ ಹವ್ಯಾಸ. ಇವರಿಗೆ ವ್ಯವಸಾಯ, ಪಶುಪಾಲನೆ ಮುಖ್ಯ ವೃತ್ತಿ ಆದ್ದರಿಂದಲೇ ಇವರಿಗೆ ಒಕ್ಕಲಿಗ ಎಂಬ ಹೆಸರು ಬರಲು ಕಾರಣ. ಅಂತೆಯೇ ಗೇಣು ಭೂಮಿಗಾಗಿ ಸರ್ವಸ್ವವನ್ನು ಬಲಿಗೊಡುವ ಹಟಮಾರಿಗಳು (ರಾಮಪ್ಪಗೌಡ ೧೯೯೮) ಇವರು ಅನೇಕ ಎಕರೆ ಜಮೀನಿನ ಒಡೆಯರಾಗಿದ್ದು, ಕೆಲವು ಗದ್ದೆ, ತೋಟಗಳನ್ನು ಗೇಣಿಯಾಧಾರದ ಮೇಲೆ ಒಕ್ಕಲುಗಳಿಗೆ ಕೊಡುತ್ತಿದ್ದರು. ಒಕ್ಕಲಿಗರು ಅರ್ಥಿಕವಾಗಿ ಸಾಮಾಜಿಕವಾಗಿ ಹಾಗು ರಾಜಕೀಯವಾಗಿ ಅನುಕೂಲಸ್ಥರಾಗಿದ್ದರು.

ಕುವೆಂಪು ಕಾದಂಬರಿಗಳಲ್ಲಿ ಸಾಮಾಜಿಕ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರು ಜಾತಿ ಶ್ರೇಣಿಯ ತುತ್ತ ತುದಿಯಲ್ಲಿರುವರು. ಇವರ ನಂತರ ಒಕ್ಕಲಿಗರು, ನಂತರ ಅವರ ಆಳುಗಳು. ಬ್ರಾಹ್ಮಣರನ್ನು ಬಿಟ್ಟರೆ ಒಕ್ಕಲಿಗರೆ ಉತ್ತಮ ಜಾತಿಯವರಾಗಿದ್ದರು. (ಶಿವಶಂಕರ್ ೨೦೦೪). ಇದೇ ಮುಂದುವರೆದು ಊಳಿಗಮಾನ್ಯ ಪದ್ಧತಿಯಲ್ಲಿ ಒಕ್ಕಲಿಗರು, ಜಮೀನ್ದಾರರು ತುತ್ತತುದಿಯಲ್ಲಿದ್ದರೆ, ಅವರ ನಂತರ ಒಕ್ಕಲುಗಳು ಮತ್ತು ಕೆಳಗಿನ ಶ್ರೇಣಿಯಲ್ಲಿ ಶ್ರಮಜೀವಿಗಳು – ಬಿಲ್ಲವರು, ಹಸಲೇರರು, ಕುಂಬಾರರು, ಹಳೆಪೈಕದವರು, ಸೆಟ್ಟರು, ಕರಾದಿಗಳು, ಬೇಲರು ಮತ್ತು ದಲಿತರು ಬರುತ್ತಾರೆ. ಇವರು ಹೊಲಗದ್ದೆಗಳಲ್ಲಿ ದುಡಿಯುವ ಶ್ರಮಜೀವಿಗಳು. ಬ್ರಾಹ್ಮಣರು ಬೌದ್ಧಿಕವಾಗಿ ಸಮಾಜದ ಎಲ್ಲ ವರ್ಗಗಳ ಮೇಲೂ ಹಿಡಿತವನ್ನಿಟ್ಟುಕೊಂಡಿದ್ದರೆ, ಗೌಡರು ಆರ್ಥಿಕವಾಗಿ ಅದಕ್ಕಿಂತಲೂ ಬಿಗಿ ಹಿಡಿತವನ್ನು ಇಟ್ಟುಕೊಂಡಿದ್ದರು (ಶಿವಶಂಕರ್ ೨೦೦೪).

ಕರ್ನಾಟಕದಲ್ಲಿ ದೊಡ್ಡ ರೈತರಿಗೆ ಜಮೀನ್ದಾರರು ಎಂದು ಕರೆದರೂ ಮೊದಲಿನಿಂದಲೂ ಇದ್ದ ಜಮೀನ್ದಾರಿ ಪದ್ಧತಿಗೂ, ಬ್ರಿಟಿಷರು ತಂದ ಜಮೀನ್ದಾರಿ ಪದ್ಧತಿಗೂ ಏನು ಸಂಬಂಧವಿರಲಿಲ್ಲ. ಇಲ್ಲಿಯ ದೊಡ್ಡ ರೈತರನ್ನು ಜಮೀನ್ದಾರರೆಂದು ಕರೆಯುತ್ತಿದ್ದದ್ದು ವಾಡಿಕೆಯಲ್ಲಿತ್ತು.

ಜಮೀನುದಾರರು ಸಾವಿರಾರು ಎಕರೆಯ ಜಮೀನಿಗೆ ಒಡೆಯರಾಗಿರುತ್ತಿದ್ದರು. ಲಕ್ಕುಂದದ ಜಮೀನಿನಲ್ಲಿ ಮುಕ್ಕಾಲು ಪಾಲು ಸಿಂಬಾವಿ ಭರಮೈ ಹೆಗ್ಗಡೆಯವರಿಗೆ ಸೇರಿತ್ತು (ಕುವೆಂಪು ೨೦೦೬ಬ, ೮). ದೇವಂಗಿಯ ಜಮೀನ್ದಾರರು ಸುಮಾರು ೨೦೦೦ ಎಕರೆ ಜಮೀನನ್ನು ಸಾಗುವಳಿ ಮಾಡುತ್ತಿದ್ದರು ಎಂದು ದೇವಂಗಿ ಮನುದೇವ್ ಹೇಳುತ್ತಾರೆ (೨೦೦೫, ೨). ಇದರ ಬೇಸಾಯ ಮಾಡಲು ಒಕ್ಕಲುಗಳು ಕೃಷಿ ಕಾರ್ಮಿಕರು ಇರುತ್ತಿದ್ದರು. ಜಮೀನ್ದಾರಿಕೆ ವಂಶಪಾರಂಪರ್ಯವಾಗಿತ್ತು.

ಜಮೀನ್ದಾರರು ಮತ್ತು ಕಂದಾಯ

ಕೃಷಿಯೇ ಮುಖ್ಯ ಆರ್ಥಿಕ ಚಟುವಟಿಕೆಯಾದ್ದರಿಂದ ಇದರಿಂದ ಕಂದಾಯ ಸರ್ಕಾರಕ್ಕೆ ನಿಯಮಿತವಾಗಿ ಸಲ್ಲಿಸಲಾಗುತ್ತಿತ್ತು. ಶ್ರೀಮಂತ ಭೂಮಾಲೀಕರು ರೈತರಿಗೆ ಸಾಲ ಕೊಡುವಾಗ ಅವರ ಜಮೀನನ್ನು ಅಡ ಇಟ್ಟುಕೊಳ್ಳುತ್ತಿದ್ದರು. ಆ ಜಮೀನು ಎಷ್ಟೇ ದೂರವಿದ್ದರೂ ಸರಿ. ಆ ರೈತನಿಗೆ ಸಾಲ ತೀರಿಸಲು ಕಷ್ಟವಾದಾಗ ಅವರ ಜಮೀನು ಒಡೆಯರದ್ದೇ ಆಗುತ್ತಿತ್ತು. ಹೀಗೆ ಗಳಿಸಿದ ಜಮೀನಿನೊಂದಿಗೆ, ವಂಶ ಪಾರಂಪರ್ಯವಾಗಿ ಬಂದ ಹಾಗೂ ತಾವೇ ಕೊಂಡ ಜಮೀನಿನ ವಿಸ್ತಾರ ಹೆಚ್ಚಾಗಿ, ಒಕ್ಕಲುಗಳಿಗೆ ಜಮೀನನ್ನು ಇಂತಿಷ್ಟು ವರ್ಷಗಳಿಗೆ ಗೇಣಿ ನಿಗದಿಮಾಡಿ ಸಾಗುವಳಿಗೆ ಕೊಡುತ್ತಿದ್ದರು. ನಂತರ ಕೊಯಿಲು ಆದಾಗ ಗೇಣಿ ಗುತ್ತಿಗೆಯನ್ನು ಪಡೆದು ಸರ್ಕಾರಕ್ಕೆ ಕಂದಾಯ ಸಲ್ಲಿಸುತ್ತಿದ್ದರು. ಶ್ರೀ ಮನುದೇವ್ ಅವರು ದೇವಂಗಿ ಜಮೀನ್ದಾರರ ಬಗ್ಗೆ ಹೀಗೆ ಬರೆದಿದ್ದಾರೆ ‘…. (ದೇವಂಗಿಯದು) ಸುಮಾರು ೨೦೦೦ ಎಕರೆ ಜಮೀನನ್ನು ಬೇಸಾಯ ಮಾಡಲು ಕೃಷಿ ಕಾರ್ಮಿಕರೂ ಒಕ್ಕಲುಗಳೂ ಇರುತ್ತಿದ್ದ ಜಮೀನ್ದಾರಿ ಕುಟುಂಬ. ತಮ್ಮ ಜಮೀನ್ದಾರಿ ಪದ್ಧತಿಯಿಂದ ಮೈಸೂರು ಆರಸರಿಗೆ ಈ ಮನೆತನ ಅಪಾರ ಕಂದಾಯ ಪಾವತಿಸುತ್ತಿದ್ದರು’ (ಮನುದೇವ್ ೨೦೦೫, ೨).

ಹೀಗೆ ನೂರಾರು ಎಕರೆ ಜಮೀನಿದ್ದ ಭೂಮಾಲೀಕರು ಸರ್ಕಾರಕ್ಕೆ ನಿಯಮಿತವಾಗಿ ಕಂದಾಯ ಕಟ್ಟುವುದರ ಮೂಲಕ ಖಾತೆದಾರರಾಗುತ್ತಿದ್ದರು. ಇವರಿಗೆ ಮತದಾನದ ಹಕ್ಕು ಸಿಗುತ್ತಿತ್ತು. ಹೆಚ್ಚಿನ ಜಮೀನನ್ನು ಹೊಂದಿ, ಹೆಚ್ಚಿನ ಕಂದಾಯವನ್ನು ಸಲ್ಲಿಸುತ್ತಿದ್ದ ಜಮೀನ್ದಾರರು ಮೈಸೂರಿನ ಒಡೆಯರ ಆಸ್ಥಾನದಲ್ಲಿ ನಡೆಯುವ ವಿಶೇಷ ಸಂದರ್ಭಗಳಿಗೆ ಆಮಂತ್ರಿತರಾಗುತ್ತಿದ್ದರು (ಮನುದೇವ್ ೨೦೦೫, ೩).

ವಾಯಿದೆಗೆ ಸರಿಯಾಗಿ ಖಾತೆದಾರ ಕಂದಾಯ ಕಟ್ಟದೆ ಇದ್ದರೆ ಆ ಜಮೀನನ್ನು ಕಂದಾಯ ಬಾಕಿ ಹರಾಜಿಗೆ ತಂದು ಹರಾಜು ಮಾಡುತ್ತಿದ್ದರು. ಆಗ ಹಣವಂತರು ಬಿಡ್ದಿನಲ್ಲಿ ಅದನ್ನು ಪಡೆಯುತ್ತಿದ್ದರು (ರಾಮಪ್ಪಗೌಡ ೧೯೯೫). ಅಲ್ಲದೆ ಲೈಸನ್ಸ್ ಪಡೆದುಕೊಂಡೇ ಒಡೆಯರು ಬಗನಿ ಕಳ್ಳು ಇಳಿಸುವುದು ಮತ್ತು ನಾಟಾ ಕಡಿಸುವುದು ಮಾಡುತ್ತಿದ್ದರು. ಇಲ್ಲದಿದ್ದರೆ ಶಿಕ್ಷೆಗೆ ಗುರಿಯಾಗಬೇಕಿತ್ತು. ಅದಕ್ಕಾಗಿ ‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ಬೇಲರ ಬೈರ ಮಾರ್ಕ್ ಬಂದಾಗ ತಲೆಬೋಳಿಸಿಕೊಂಡು ತನ್ನ ಗುರುತು ಸಿಗದಂತೆ ತಪ್ಪಿಸಿಕೊಂಡಿದ್ದನು (ಕುವೆಂಪು ೨೦೦೬ಅ, ೨೧೯).

ಸರ್ಕಾರ ಮತ್ತು ಜಮೀನ್ದಾರರ ಮಧ್ಯೆ ನಿರಂತರ ಸಂಪರ್ಕವಿರುತ್ತಿತ್ತು. ಸರ್ಕಾರ ಏನೇನೋ ಹೊಸ ‘ರೂಲೀಸು’ (ನಿಯಮಗಳನ್ನು) ಮಾಡಿರುವ ಬಗ್ಗೆ, ಹೊಸ ಅಮಲ್ದಾರರು ‘ಲೋಟೀಸು’ ಜಾರಿ ಮಾಡಿದ್ದರ ಬಗ್ಗೆ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಪ್ರಸ್ತಾಪವಿದೆ (ಕುವೆಂಪು ೨೦೦೬ಬ, ೧೧೬).

ಭೂ ಹಿಡುವಳಿ ಪದ್ಧತಿ

ಭೂ-ಹಿಡುವಳಿ ಪದ್ಧತಿ ಎಂದರೆ ಒಬ್ಬ ವ್ಯಕ್ತಿಯು ಸಾಗುವಳಿಯ ಜಮೀನನ್ನು ಸರ್ಕಾರದಿಂದ ಇಲ್ಲವೆ ಜಮೀನುದಾರನಿಂದ ಯಾವ ಷರತ್ತುಗಳ ಮೇಲೆ ಪಡೆದಿದ್ದಾನೆ ಎಂಬುದನ್ನು ಸೂಚಿಸುವ ಪದ್ಧತಿಯಾಗಿದೆ. (ಬಸವ ೧೯೯೯). ಸಾಗುವಳಿಯ ಜಮೀನನ್ನು ಸರ್ಕಾರದಿಂದ ನೇರವಾಗಿ ಪಡೆದಿದ್ದರೆ ಅವನು ಅದರ ಸ್ವಾಮಿತ್ವದ ಹಕ್ಕನ್ನು ಪಡೆದಿರುತ್ತಾನೆ. ಇದಕ್ಕೆ ಸ್ವಾಮಿತ್ವದ ಹಕ್ಕು ಅಥವಾ ಸ್ವಾಮಿತ್ವದ ಹಿಡುವಳಿ (Proprietory Tenure) ಎಂದು ಕರೆಯುತ್ತಾರೆ. ಸಾಹುವಳಿಯ ಹಕ್ಕನ್ನು ಜಮೀನುದಾರನಿಂದ ಪಡೆದ್ದಿದ್ದರೆ ಆಗವನು ಕೇವಲ ಸಾಗುವಳಿಯ ಹಕ್ಕನ್ನು ಪಡೆದಿರುತ್ತಾನೆ. ಅದಕ್ಕೆ ಸಾಗುವಳಿಯ ಹಕ್ಕು ಅಥವಾ ಸಾಗುವಳಿಯ ಹಿಡುವಳಿ (Culitivation Tenure) ಎಂದು ಕರೆಯುತ್ತಾರೆ. ಒಕ್ಕುಲುಗಳಿಗೆ ಸಾಗುವಳಿಯ ಹಕ್ಕು ಇರುತ್ತಿತ್ತು.

ಸ್ವಾತ್ರಂತ್ರ್ಯಪೂರ್ವದಲ್ಲಿ ಭಾರತದಲ್ಲಿ ಮೂರು ರೀತಿಯ ಭೂ-ಹಿಡುವಳಿ ಪದ್ಧತಿಗಳಿದ್ದವು. ಅವು ಕ್ರಮವಾಗಿ ಜಮೀನ್ದಾರಿ ಪದ್ಧತಿ, ಮಹಲ್ವಾರಿ ಪದ್ಧತಿ ಮತ್ತು ರೈತವಾರಿ ಪದ್ಧತಿ

ಭಾರತದ ಕೈಗಾರಿಕೆಗಳ ಅಭಿವೃದ್ಧಿಯನ್ನು ಹತ್ತಿಕ್ಕಿದ ಬ್ರಿಟಿಷ್ ವಸಾಹತುಶಾಹಿ ಭಾರತದ ಕೃಷಿಯನ್ನು ಅನಿವಾರ್ಯವಾಗಿ ಅವಲಂಬಿಸಬೇಕಾಯಿತು. ತಮ್ಮ ಮುಖ್ಯ ಆದಾಯದ ಭೂ ಕಂದಾಯವನ್ನು ಲಾಭದಾಯಕವನ್ನಾಗಿ ಮಾಡಲು ಭಾರತದಲ್ಲಿ ವಿವಿಧ ಕೃಷಿ ಭೂಮಿ ಧೋರಣೆಗಳನ್ನು ಅನುಸರಿಸಿದರು.

ಕಾರ್ನ್‌ವಾಲೀಸ್ ೧೭೯೩ರಲ್ಲಿ ಖಾಯಂಗುತ್ತಾ ಪದ್ಧತಿ (The Permanent Land Settlement) ಅಥವಾ ಜಮೀನುದಾರಿ ಪದ್ಧತಿಯನ್ನು ಬಂಗಾಳ, ಬಿಹಾರ ಮತ್ತು ಔಧ್ ಪ್ರಾಂತ್ಯಗಳಲ್ಲಿ ಜಾರಿಗೆ ತಂದನು. ಇದರ ಪ್ರಕಾರ ದೊಡ್ಡ ಭೂಮಾಲೀಕರಿಗೆ ಸರ್ಕಾರವು ಕೆಲವು ಎಕರೆ ಜಮೀನನ್ನು ಕೊಡುತ್ತಿತ್ತು. ಇದರಿಂದ ಪ್ರತಿವರ್ಷ ನಿರ್ದಿಷ್ಟವಾದ ಹಣ ಸರ್ಕಾರದ ಖಜಾನೆಗೆ ಭೂಕಂದಾಯದ ರೂಪದಲ್ಲಿ ಸಲ್ಲುತ್ತಿತ್ತು. ಆಡಂಸ್ಮಿತ್ ನ ವಿಚಾರಗಳ ಪ್ರಭಾವದಿಂದ ಈ ಪದ್ಧತಿಯನ್ನು ರೂಪಿಸಲಾಗಿತ್ತು. ಈ ಪದ್ಧತಿಯಲ್ಲಿ ಜಮೀನ್ದಾರ ತನ್ನ ಸ್ವಂತ ಜಮೀನಿಗೆ ಮಾತ್ರ ಒಡೆಯನಾಗಿದ್ದನು; ಸರ್ಕಾರದಿಂದ ಬಂದ ಜಮೀನಿಗಲ್ಲ . ಸರ್ಕಾರದ ಜಮೀನನ್ನು ಮಾರುವ, ಅಡವಿಡುವ, ಕೌಟುಂಬಿಕ ಆಸ್ತಿಯಂತೆ ಹಂಚುವ ಹಕ್ಕು ಆತನಿಗೆ ಇರಲಿಲ್ಲ (ಶಿವಣ್ಣ ೧೯೮೪).

ಆದರೆ ಜಮೀನ್ದಾರರು ಸರ್ಕಾರದ ಪ್ರತಿನಿಧಿಗಳಂತೆ ಭೂ ಕಂದಾಯವನ್ನು ಒಕ್ಕಲುಗಳಿಂದ ವಸೂಲಿ ಮಾಡುತ್ತಿದ್ದರು. ನಿಶ್ಚಿತರೂಪದಲ್ಲಿ ಭೂಕಂದಾಯ ಕಟ್ಟಿ ಜಮೀನುದಾರರು ಭೂ ಹಿಡುವಳಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಹೀಗೆ ಅವರು ಗ್ರಾಮೀಣ ಪ್ರದೇಶಗಳಲ್ಲಿನ ಜಮೀನುಗಳ ಒಡೆತನ ಪಡೆಯುವಂತಾಯಿತು.

ಜಮೀನ್ದಾರರು ಭೂಮಿಯನ್ನು ಸಾಗುವಳಿ ಮಾಡುವ ಕೃಷಿ ಕಾರ್ಮಿಕರಿಂದ ಪ್ರತಿವರ್ಷ ನಿಗದಿಯಾದ ಗೇಣಿಯನ್ನು ಪಡೆದು, ಗೇಣಿ ಹಣದ ಒಂದು ಭಾಗವನ್ನು ಭೂ ಕಂದಾಯವೆಂದು ಸರ್ಕಾರಕ್ಕೆ ಕೊಟ್ಟು ಉಳಿದುದನ್ನು ತಾವೇ ಇಟ್ಟುಕೊಳ್ಳುತ್ತಿದ್ದರು. ಆದು ಅವರ ನಿವ್ವಳ ಆದಾಯವಾಗಿತ್ತು.

ಜಮೀನ್ದಾರಿ ಪದ್ಧತಿಯಲ್ಲಿ ಅನೇಕ ಲೋಪದೋಷಗಳಿದ್ದವು. ಜಮೀನ್ದಾರರಿಗೆ ಕೃಷಿ ಕಾರ್ಮಿಕರಿಂದ ತಮಗೆ ಬರಬೇಕಿದ್ದ ಗೇಣಿಯ ಬಗ್ಗೆ ಮಾತ್ರ ಆಸಕ್ತಿಯಿತ್ತೇ ವಿನಾ ಸಾಗುವಳಿಯನ್ನು ಸುಧಾರಿಸಲು ಯಾವ ಆಸಕ್ತಿಯೂ ಇರಲಿಲ್ಲ. ಗೇಣಿದಾರರಿಗೆ ಭೂಮಿಯ ಉತ್ಪಾದನೆಯನ್ನು ಹೆಚ್ಚಿಸಲು ಯಾವ ಸಹಾಯವನ್ನೂ ಮಾಡುತ್ತಿರಲಿಲ್ಲ. ಆದರೂ ಜಮೀನ್ದಾರರು ಸ್ವತಃ ಸಾಗುವಳಿ ಮಾಡದಿದ್ದರೂ ಭೂ-ಒಡೆಯರಾಗಿದ್ದರು. ಇದರಿಂದ ಅನುಪಸ್ಥಿತಿಯ ಜಮೀನ್ದಾರಿ ಪದ್ಧತಿ ಪ್ರಾರಂಭವಾಯಿತು. ಇದರಿಂದ ಗೇಣಿದಾರರ ಸ್ಥಿತಿ ಶೋಚನೀಯವಾಯಿತು. ಅಲ್ಲದೆ ಜಮೀನುದಾರರು ಗೇಣಿಯನ್ನು ತಮ್ಮ ಮನಬಂದಂತೆ ಹೆಚ್ಚಿಸುತ್ತಿದ್ದರು. ಗೇಣಿಯನ್ನು ಕೊಡಲಾಗದ ಗೇಣಿದಾರರನ್ನು ಒಕ್ಕಲೆಬ್ಬಿಸುತ್ತಿದ್ದರು ಮತ್ತು ಗೇಣಿದಾರರ ಕೃಷಿ ಸಲಕರಣೆ, ಮನೆ, ಆಸ್ತಿ ಮೊದಲಾದವನ್ನು ಜಪ್ತಿ ಮಾಡಿ ತಮ್ಮ ವಶಮಾದಿಕೊಳ್ಳುತ್ತಿದ್ದರು. ಇದರೊಂದಿಗೆ ಒಕ್ಕುಲುಗಳಿಂದ ಪುಕ್ಕಟೆ ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದರು. ಹೀಗೆ ಗೇಣಿದಾರರು ಭೂ ಸಾಗುವಳಿ ಮಾಡಿದರೂ ಅದರ ಒಡೆತನದ ಹಕ್ಕನ್ನು ಜಮೀನ್ದಾರರು ಪಡೆದಿದ್ದರು. ಅಕ್ರಮವಾಗಿ ನಿಗದಿಯಾದ ಗೇಣಿಯನ್ನು ಕೊಡಬೇಕಾಗಿದ್ದರಿಂದ ಸಾಗುವಳಿಯಲ್ಲಿ ಒಕ್ಕುಲುಗಳ ಆಸಕ್ತಿ ಕಡಿಮೆಯಾಯಿತು. ಅಲ್ಲದೆ ಗೇಣಿದಾರರನ್ನು ಯಾವಾಗ ಬೇಕೆಂದರೂ ತಮ್ಮ ಮನಸ್ಸಿಗೆ ಬಂದಂತೆ ಜಮೀನಿನಿಂದ ಹೊರಹಾಕಬಹುದಾದ್ದರಿಂದ ಅವರಲ್ಲಿ ಅಭದ್ರತೆ ಕಾಡುತ್ತಿತ್ತು. ಆದರೆ ಜಮೀನ್ದಾರರು ಗೇಣಿದಾರರಿಂದ ಪಡೆಯುವ ಗೇಣಿಯನ್ನು ಪ್ರತಿವರ್ಷ ಹೆಚ್ಚಿಸಿದರೂ ಸರ್ಕಾರಕ್ಕೆ ಅದರಿಂದ ಹೆಚ್ಚಿನ ವರಮಾನ ಬರಲಿಲ್ಲ. ಜಮೀನ್ದಾರರೇ ಹೆಚ್ಚಿನ ಲಾಭ ಪಡೆಯುತ್ತಿದ್ದರು. ಆದ್ದರಿಂದ ಪ್ರೊ. ಕಾರ್ವರ ಅವರು ‘ಮಹಾಯುದ್ಧ, ಮಹಾ ಅಂಟುರೋಗ ಮತ್ತು ಬರಗಾಲಗಳ ನಂತರ, ಗ್ರಾಮೀಣ ಜನತೆಗೆ ಅತ್ಯಂತ ಅನಿಷ್ಟವಾದುದೆಂದರೆ ಅನುಪಸ್ಥಿಯ ಜಮೀನುದಾರ ಪದ್ಧತಿ’ ಎಂದು ಹೇಳಿದ್ದಾರೆ. (ಬಸವ ೧೯೯೯).

ಮಹಲವಾರಿ/ಮಹಲ್ವಾರಿ ಪದ್ಧತಿಯಲ್ಲಿ ಒಂದು ಗ್ರಾಮದ (ಮಹಲು ಇದರ ಅರ್ಥ ಗ್ರಾಮ) ಎಲ್ಲ ರೈತರು ಸಾಮೂಹಿಕವಾಗಿ ಸರ್ಕಾರಕ್ಕೆ ನೇರವಾಗಿ ಭೂ-ಕಂದಾಯ ಕೊಡುತ್ತಿದ್ದರು. ಗ್ರಾಮದ ರೈತರೆಲ್ಲರಿಗೂ ತಾವು ಉಳುವ ಭೂಮಿಯ ಒಡೆತನದ ಹಕ್ಕು ಇತ್ತು. ಇದು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಪ್ರಚಲಿತವಿದ್ದು ಅಕ್ಬರ್ ನ ಕಾಲದ ವ್ಯವಸ್ಥೆಯಾಗಿತ್ತು.

ರೈತವಾರಿ ಪದ್ಧತಿಯಲ್ಲಿ ಉಳುವವರೇ ಭೂಮಿಯ ಒಡೆಯರಾಗಿದ್ದರು. ಅವರೇ ನೇರವಾಗಿ ಭೂ ಕಂದಾಯ ಪಾವತಿಸುತ್ತಿದ್ದರು. ಭೂ-ಕಂದಾಯವನ್ನು ಸರ್ಕಾರಕ್ಕೆ ಕೊಡುವವರೇ ಭೂ-ಮಾಲೀಕರೆಂದು ಪರಿಗಣಿಸಲ್ಪಡುತ್ತಿದ್ದರು. ಅವನು ತನ್ನ ಭೂಮಿ ಮೇಲೆ ಸಂಪೂರ್ಣ ಒಡೆತನ ಹೊಂದಿದ್ದರಿಂದ ಅದನ್ನು ಅಡವು ಇಡಬಹುದು ಗೇಣಿಗೆ ಕೊಡಬಹುದು, ಬೇರೆಯವರಿಗೆ ಮಾರಾಟ ಮಾಡಬಗುದು ಅಥವಾ ವಂಶಜರಿಗೆ ಹಂಚಬಹುದು.

ವಸಾಹತು ಪೂರ್ವದ ಕರ್ನಾಟಕದಲ್ಲಿ ಹೈದರನ ಆಡಳಿತದ ಕಾಲದಲ್ಲಿ ‘ಕಂದಾಚಾರ ಪದ್ಧತಿ’ ರೂಢಿಯಲ್ಲಿತ್ತು. ಅಂದರೆ ರೈತರು ಭೂಮಿಯ ಸಾಗುವಳಿ ಮಾಡುವುದಲ್ಲದೆ ಯುದ್ಧ ಕಾಲದಲ್ಲಿ ರಾಜನ ಸೈನಿಕರಾಗಿ ಹೋರಾಡಬೇಕಿತ್ತು. ಅಂದರೆ ಒಕ್ಕಲಿಗರು ಕೃಷಿಯೋಧ (ಅಗ್ರೋ-ಮಾರ್ಶಲ್) ರಾಗಿದ್ದರು. ಕೃಷಿಕರೇ ರಾಜ್ಯಗಳ ಆರ್ಥಿಕ ಶಕ್ತಿಯ ಮೂಲವಾಗಿರುವುದರ ಜೊತೆಗೆ ಸೇನಾಶಕ್ತಿಗೂ ಬಲವಾಗಿದ್ದರು. ಏಕೇಂದರೆ ಬಹುಸಂಖ್ಯಾತ ಪ್ರಜೆಗಳು ಕೃಷಿಕರೇ ಆಗಿದ್ದರು.

ಬ್ರಿಟಿಷರ ಜೊತೆ ಹೈದರ್ ಮೇಲಿಂದ ಮೇಲೆ ಯುದ್ಧ ಮಾಡಬೇಕಾದ ಸಂದರ್ಭಗಳು ಒದಗಿದ್ದುದರಿಂದ, ತನ್ನ ಸೇನೆಗೆ ಐರೋಪ್ಯರಂತೆ ಶಿಸ್ತು ಇರುವುದು ಅನಿವಾರ್ಯ ಎಂದು ಕಂಡುಕೊಂಡು, ಎಲ್ಲ ವರ್ಗದ, ಎಲ್ಲ ಪಂಗಡದ, ಭಾರತದ ಇತರ ಭಾಗಗಳಿಂದ ಇರಾಕ್ ಇರಾನ್ ನಂಥ ದೇಶಗಳಿಂದಲೂ ಜನರನ್ನು ಸೇನೆಗೆ ಭರ್ತಿ ಮಾಡಿದ. ಆದ್ದರಿಂದ ಸೇನಾಸೇವೆಯ ಕಟ್ಟುಪಾಡಿನಿಂದ ರೈತರು ಮುಕ್ತರಾದರು. ಟಿಪ್ಪುವಿನ ಕಾಲದಲ್ಲಿ ಭೂ ಕಂದಾಯವನ್ನು ಶೇ. ೩೭.೫ರಷ್ಟು ಹೆಚ್ಚಿಸಲಾಯಿತು. ಟಿಪ್ಪು ಕಂದಾಚಾರ ಪದ್ಧತಿಯನ್ನು ಸಂಪೂರ್ಣ ರದ್ದು ಮಾಡಿದ. ಹೆಚ್ಚಿನ ಕಂದಾಯ ಕೊಡಬೇಕಾದ್ದರಿಂದ ಭೂಮಿಯ ಮೇಲೆ ರೈತರ ಒಡೆತನದ ಹಕ್ಕು ಬಲವಾಯಿತು. ಇದರಿಂದ ಒಂದು ರೀತಿಯ ‘ರೈತವಾರಿ ಪದ್ಧತಿ’ ಜಾರಿಗೆ ಬಂತು (ಕಾಮತ್ ೨೦೦೬, ೧೭೫).

ಬ್ರಿಟಿಷ್ ವಸಾಹತುಶಾಹಿಯಲ್ಲಿ ರೈತವಾರಿ ಪದ್ಧತಿಯ ರೂವಾರಿ ಥಾಮಸ್ ಮನ್ರೋ ಎಂಬ ಆಡಳಿತಾಧಿಕಾರಿ. ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರು ದಕ್ಷಿಣ ಭಾರತದಲ್ಲಿ ಜಾರಿಗೆ ತಂದ ಕಂದಾಯ ಪದ್ಧತಿಯು ಆ ಕಾಲದ ಆರ್ಥಶಾಸ್ತ್ರಜ್ಞರಾದ ಡೇವಿಡ್ ರಿಕಾರ್ಡೋ ಮತ್ತು ಜೇಮ್ಸ್‌ಮಿಲ್ ರ ವಿಚಾರಗಳಿಂದ ಪ್ರಭಾವಿತವಾಗಿತ್ತು. ಇಂಗ್ಲೆಡಿನ ಖ್ಯಾತ ಸಮಕಾಲೀನ ಆರ್ಥಶಾಸ್ತ್ರಜ್ಞನಾದ ಡೇವಿಡ್ ರಿಕಾರ್ಡೋ ಗುತ್ತಿಗೆ ಸಿದ್ಧಾಂತವನ್ನು ಮಂಡಿಸಿದ. ಅವನ ಪ್ರಕಾರ ಗುತ್ತಿಗೆ ಎಂಬುದು ಏಕಸ್ವಾಮ್ಯ ಮೌಲ್ಯ ಉಳ್ಳದ್ದು (ಮಾನವಿಕ ಕರ್ನಾಟಕ ೧೯೮೪, ೪೧). ಕೃಷಿ ಭೂಮಿ ಉತ್ಪಾದನಾ ಮಾಧ್ಯಮವಾಗಿ ಸೀಮಿತವಾಗಿದೆ. ಆದ್ದರಿಂದ ಅದನ್ನು ಶಾಸನ ಒಡೆತನಕ್ಕೆ ಅಳವಡಿಸಬಹುದು ಎಂದು ಆತ ಪ್ರತಿಪಾದಿಸಿದ ಅಲ್ಲದೆ ಜಮೀನುದಾರರು ಸಮಾಜದ ಪರಾವಲಂಬಿ ವರ್ಗಗಳ ಹಿತಾಸಕ್ತಿಗಳಿಗೆ ವಿರುದ್ಧವಾದ ನಿಲುವನ್ನು ಹೊಂದಿರುತ್ತಾರೆ. ಆದ್ದರಿಂದ ಗುತ್ತಿಗೆಯನ್ನು ತೆರಿಗೆಯ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ತೆಗೆದುಕೊಳ್ಳಬಹುದು. ಇದರಿಂದ ಆಗುವ ಕಿಂಚಿತ್ ಲಾಭ (profit) ಕೂಲಿ (wage) ಅಥವಾ ವಸ್ತುಗಳ ಬೆಲೆಗಳ ಮೇಲೆ ಪರಿಣಾಮವಾಗುವುದಿಲ್ಲ ಎಂದು ರಿಕಾರ್ಡೋ ವಾದಿಸಿದ (ಅದೇ).

ಹೀಗೆ ಜಮೀನುದಾರ ವರ್ಗವನ್ನು ಕೈಬಿಟ್ಟು ನೇರವಾಗಿ ಕಂದಾಯವನ್ನು ನಿಗದಿಪಡಿಸುವ ರೈತವಾರಿ ಪದ್ಧತಿಯನ್ನು ಬ್ರಿಟಿಷರು ತಮ್ಮ ಲಾಭದ ಉದ್ದೇಶದಿಂದ ಜಾರಿಗೆ ತಂದರು. ಈ ವ್ಯವಸ್ಥೆಯಲ್ಲಿ ರೈತನಿಗೆ ಆಸ್ತಿಯ ಹಕ್ಕು ಬಂದಿತು. ಆದರೆ ನಿಗದಿ ಮಾಡಿದ ಕಂದಾಯ ರೈತರಿಗೆ ಭಾರವಾಗಿದ್ದರಿಂದಲೂ ಮತ್ತು ಅದನ್ನು ಕಠಿಣ ಕ್ರಮಗಳ ಮೂಲಕ ವಸೂಲಿ ಮಾಡುತ್ತಿದ್ದುದರಿಂದಲೂ ರೈತನು ಲೇವಾದೇವಿ ಮಾಡುವವರ ಬಲೆಗೆ ಬೀಳುವಂತಾಯಿತು. ಇದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಋಣಬಾಧೆ ಹೆಚ್ಚಿತು (ಮಾನವಿಕ ಕರ್ನಾಟಕ ೧೯೮೪, ೪೪)

ರೈತವಾರಿ ಪದ್ಧತಿಯು ಅನೇಕ ಅನುಕೂಲಗಳನ್ನು ಹೊಂದಿತ್ತು. ಭೂಮಿಯನ್ನು ಸಾಗುವಳಿ ಮಾಡುವ ರೈತನೇ ಭೂಮಿಯ ಒಡೆಯನಾದ್ದರಿಂದ ಭೂಮಿ ಸಾಗುವಳಿಯಲ್ಲಿ ರೈತನು ಹೆಚ್ಚು ಆಸಕ್ತಿಯನ್ನು ಹೊಂದಿ ಹೆಚ್ಚಿಗೆ ಉತ್ಪಾದಿಸಲು ಪ್ರಯತ್ನಿಸುತ್ತಿದ್ದನು. ಸರ್ಕಾರ ಮತ್ತು ರೈತರ ಮಧ್ಯ ನೇರ ಸಂಪರ್ಕ ಬಂದು ಯಾವ ಮಧ್ಯಸ್ಥರೂ ಇಲ್ಲದ ಕಾರಣ ರೈತರು ಶೋಷಣೆಗೆ ಒಳಗಾಗುತ್ತಿರಲಿಲ್ಲ. ಹಾಗೂ ಸರ್ಕಾರವು ಭೂಮಿಯ ಸುಧಾರಣೆಗೆ ಅನೇಕ ಸೌಲಭ್ಯಗಳನ್ನು ನೇರವಾಗಿ ರೈತರಿಗೆ ಒದಗಿಸಬಹುದಾಗಿತ್ತು.

ಆದರೆ ರೈತವಾರಿ ಪದ್ಧತಿಯಲ್ಲಿಯೂ ಅನೇಕ ದೋಷಗಳು ಇದ್ದವು. ಅನೇಕ ರೈತ ಹಿಡುವಳಿಗಳು ಅತಿ ಚಿಕ್ಕದಾಗಿರುವುದರಿಂದ ಅದರಲ್ಲಿ ಸಾಗುವಳಿ ಮಾಡುವುದು ಲಾಭದಾಯಕವಾಗಿರಲಿಲ್ಲ. ಸಣ್ಣ ರೈತರ ವಾರ್ಷಿಕ ವರಮಾನ ಕಡಿಮೆ ಇದ್ದುದರಿಂದ ಭೂಮಿಯಲ್ಲಿ ಸುಧಾರಣೆ ಮಾಡಿ ಹೆಚ್ಚು ಉತ್ಪಾದಿಸಲು ಸಾಧ್ಯವಿರಲಿಲ್ಲ. ಅಲ್ಲದೆ ಸರ್ಕಾರವು ಭೂ-ಕಂದಾಯವನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಿದ್ದುದ್ದರಿಂದ ರೈತರಿಗೆ ಅದರಿಂದ ತೊಂದರೆಯುಂಟಾಗಿತ್ತು. ಹೀಗೆ ಕೆಲವೊಮ್ಮೆ ಭೂಕಂದಾಯ ಹೆಚ್ಚಾಗಿ ಇರಬೇಕಾದರೆ ಧರಣಿ ಒಕ್ಕುಲುಗಳ ನಡುವೆ ಸಂಘರ್ಷ ಏರ್ಪಡುತ್ತಿತ್ತು. ಹೀಗೆ ಅನೇಕ ದೋಷಗಳಿದ್ದರೂ ರೈತವಾರಿ ಪದ್ಧತಿಯು ಜಮೀನುದಾರಿ ಮತ್ತು ಮಹಲವಾರಿ ಪದ್ಧತಿಗಿಂತ ಉತ್ತಮವಾಗಿತ್ತು (ಬಸವ ೧೯೯೯).

ಸಾಗುವಳಿ ಭೂಮಿಯ ವಿಧಗಳು

ವ್ಯವಸಾಯದ ಬೆಳೆಯನ್ನು ಬಾಗಾಯ್ತು. ತರಿ ಮತ್ತು ಕುಶ್ಕಿ ಎಂದು ಮೂರು ರೀತಿಯಲ್ಲಿ ವಿಂಗಡಿಸಲಾಗಿದೆ. ಬಾಗಾಯ್ತು ಎಂದರೆ ತೋಟ, ಅಡಿಕೆ ಮತ್ತು ತೆಂಗಿನ ಕಾಯಿ ಇದರ ಬೆಳೆ. ಇದಕ್ಕೆ ನೀರಿನ ವ್ಯವಸ್ಥೆ ಚೆನ್ನಾಗಿರಬೇಕಾಗುತ್ತದೆ. ಮಲೆನಾಡಿನಲ್ಲಿ ಅಡಿಕೆ ತೋಟಗಳು ಸಾಕಷ್ಟಿದ್ದು ಮಳೆಗಾಲದಲ್ಲಿ ಅಧಿಕವಾಗಿ ನೀರಿನ ಪೂರೈಕೆಯಾಗುತ್ತದೆ. ಇನ್ನುಳಿದ ಕಾಲದಲ್ಲಿ ತೊರೆಯ ಬಳಿಯಿರುವ ಸಣ್ಣ ಹೊಂಡ, ತೊಟ್ಟಿಗಳಿಂದ ಒದಗುವ ಸ್ವಾಭಾವಿಕ ತೇವಾಂಶವನ್ನು ಅವಲಂಬಿಸುತ್ತವೆ. ಇಂತಹ ತೋಟಗಳನ್ನು ಸುಸ್ಥಿತಿಯಲ್ಲಿಡಲು ಹೆಚ್ಚಿನ ಆರೈಕೆಯ ಅವಶ್ಯಕತೆ ಇದ್ದು ಹೆಚ್ಚು ಖರ್ಚಾಗುವುದು (ಅದೇ.).

ಮಲೆನಾಡಿನ ಮುಖ್ಯ ಬೆಳೆ-ಭತ್ತ ಇದು ಮುಖ್ಯವಾದ ತರಿ ಬೆಳೆಯಾಗಿದೆ. ಮಲೆನಾಡಿನಲ್ಲಿ ಭೂಮಿ ಉಳುವ ರೈತನ ಗುಡಿಸಲು ಜಮೀನಿಗೆ ಅಂಟಿಕೊಂಡೇ ಅಥವಾ ಜಮೀನಿನ ಒಳಗೇ ಇರುತ್ತದೆ (ರಾವ್ ೧೯೨೯ಎ). ಮುಂಗಾರು ಮಳೆಯ ಸಮಯದಲ್ಲಿ ಇದರ ಕೆಲಸ ಶುರುವಾಗಿ ಮೂರು ನಾಲ್ಕು ತಿಂಗಳಲ್ಲಿ ಇದರ ಬೆಳೆ ಬರುತ್ತದೆ. ಭತ್ತಕೆ ಹೆಚ್ಚು ನೀರಿನ ಅವಶ್ಯಕತೆಯಿದೆ. ಹೆಚ್ಚು ಮಳೆಯಾಗುವ ಮತ್ತು ನೀರಾವರಿ ಸೌಲಭ್ಯವಿರುವ ಪ್ರದೇಶದಲ್ಲಿ ಬೆಳೆಯುತ್ತದೆ. ೧೯೨೩ – ೨೪ರಲ್ಲಿ ಮೈಸೂರು ರಾಜ್ಯದಲ್ಲಿ ಭತ್ತ ಬೆಳೆದ ಪ್ರದೇಶ ೭,೦೭,೫೦೯ ಎಕರೆ ಇದ್ದರೆ, ಅದರಲ್ಲಿ ಗರಿಷ್ಠ ೨,೦೪,೨೧೧ ಎಕರೆ ಶಿವಮೊಗ್ಗದ ಭತ್ತದ ಗದ್ದೆಗಳೇ ಆಗಿದ್ದವು.

ಕುಷ್ಕಿ ಎಂದರೆ ಒಣ ಭೂಮಿ ಮಳೆಗಾಲದಲ್ಲಿ ಚೆನ್ನಾಗಿ ಮಳೆ ಬಿದ್ದರೆ, ಅನಂತರದ ತಿಂಗಳುಗಳಲ್ಲಿ ಅಷ್ಟಾಗಿ ನೀರಿನ ಅವಶ್ಯಕತೆ ಇರುವುದಿಲ್ಲ. ಈ ಭೂಮಿಯಲ್ಲಿ ಮಲೆನಾಡಿಗರು ತೆಂಗಿನಕಾಯನ್ನು ಬೆಳೆಯುತ್ತಿದ್ದರು.

ಮಲೆನಾಡಿನ ಈ ಭಾಗದ ಕಾಫಿಯನ್ನು ಕಡಿಮೆ ಬೆಳೆಯುತ್ತಿದ್ದರು ಅಥವಾ ಇಲ್ಲವೇ ಇಲ್ಲ ಎಂದು ಹೇಳಬಹುದು. ವಾಣಿಜ್ಯ ಬೆಳೆಯಾದ ಕಾಫಿ ಬೆಳೆಯ ಬಗ್ಗೆ ‘ಮಲೆಗಳಲ್ಲಿ ಮದುಮಗಳು’ ಮತ್ತು ‘ಕಾನೂರು ಹೆಗ್ಗಡಿತಿ’ ಕಾದಂಬರಿಗಳಲಿ ಎಲ್ಲೂ ದಾಖಲಾಗದಿದ್ದನ್ನು ಗಮನಿಸಿದರೆ ಬಹುಶಃ ಜನರ ಒಲವು ಅತ್ತ ಇರಲಿಲ್ಲ ಎಂದು ಊಹಿಸಬಹುದು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಕಾಫಿ ಆಗತಾನೆ ಪರಿಚಯವಾಗುತ್ತಿತ್ತು. ಸುಬಣ್ಣ ಹೆಗ್ಗಡೆಯಂಥ ಹಳೆ ತಲೆಮಾರಿನವರಿಗೆ ಕಾಫಿಗಿಂತ ಕಷಾಯವೇ ಹೆಚ್ಚು ಆಪ್ಯಾಯಮಾನವಾಗಿತ್ತು. ‘ಕಾನೂರು ಹೆಗ್ಗಡಿತಿ’ಯಲ್ಲಿ ಕಾಫಿ ಕುಡಿಯುವುದು ನಿತ್ಯಜೀವನದ ಒಂದು ವಿಧಾನವಾಗಿದೆ. ಆದರೂ ಕಾಫಿ ಬೆಳೆ ಬಗ್ಗೆ ಎಲ್ಲೂ ಪ್ರಸ್ತಾಪವಿಲ್ಲ.

ಲಾಭದಾಯಕವಾದ ತೆಂಗು ಅಡಿಕೆ ತೋಟಗಳನ್ನು ಜಮೀನ್ದಾರರು, ಶ್ರೀಮಂತರು ತಾವೇ ಸಾಗುವಳಿ ಮಾಡುತ್ತಿದ್ದರು. ಅಡಿಕೆ ತೋಟವೂ ಅನೇಕ ಎಕರೆಗಳಿದ್ದರೆ, ಆಗ ಅವನ್ನು ಗುತ್ತಿಗೆಗೆ ಕೊಡುತ್ತಿದ್ದರು. ಆಸ್ತಿ ಸಣ್ಣದಿದ್ದರೆ ತಾವೇ ಅದನ್ನು ನೋಡಿಕೊಳ್ಳುತ್ತಿದ್ದರು. ಅದರ ನಿರ್ವಹಣೆಗೆ ಕೂಲಿಯಾಳುಗಳನ್ನು ನೇಮಿಸಿಕೊಳ್ಳುತ್ತಿದ್ದರು. ತೋಟದ ಮಣ್ಣಿನ ತೇವಾಂಶ ಕಾಪಾಡಲು ಮರದ ಸುತ್ತ ದರಗು ಹಾಕುವುದು, ಅಗೆಯುವುದು, ನೀರುಣಿಸುವುದು ಮುಂತಾದ ಕೆಲಸಗಳಿಗೆ ಹೆಚ್ಚಿನ ಬಂಡವಾಳದ ಅವಶ್ಯಕತೆಯಿತ್ತು. ಇದನ್ನು ನಿರ್ವಹಿಸಲು ತೋಟದ ಮಾಲೀಕರೂ ಸಾಕಷ್ಟು ಸ್ಥಿತಿವಂತರಾಗಬೇಕಿತ್ತು. ಅದಕ್ಕೆ ಇಂತಹ ಶ್ರೀಮಂತ ತೋಟಗಳ ಒಡೆಯರಾಗಿದ್ದರೂ, ಅವರು ಸಾಲಗಾರರಾಗಿರುತ್ತಿದ್ದರು. ಕಾನೂರಿನ ಚಂದ್ರಯ್ಯ ಗೌಡ ಮುತ್ತಳ್ಳಿ ಶ್ಯಾಮಯ್ಯಗೌಡರ ಬಳಿ ಸಾಲ ಮಾಡಿದ್ದರು. ಕಾನೂರಿನ ರಾಮಯ್ಯ ತನ್ನ ಮನೆಯ ಖರ್ಚ ವೆಚ್ಚ ನಿರ್ವಹಿಸಲು ಹಾಗು ಸಾಲ ತೀರಿಸಲು ಸೀತೆಮನೆ ಸಿಂಗಪ್ಪಯ್ಯನವರಿಗೆ ಒಂದು ಜಮೀನನ್ನು ಮಾರಲು ನಿರ್ಧರಿಸಿದ್ದನ್ನು ‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ಕಾಣಬಹುದು.