ಗೇಣಿ

ಮಲೆನಾಡಿನ ವ್ಯವಸಾಯದ ಹೆಚ್ಚಿನ ಪಾಲು ಬ್ರಾಹ್ಮಣ ಮತ್ತು ಒಕ್ಕಲಿಗರ ಹಿಡಿತದಲ್ಲಿತ್ತು ಭತ್ತ ಹಾಗು ಕಬ್ಬು ತರಿ ಬೆಳೆಯಾಗಿದ್ದು, ಈ ಗದ್ದೆಗಳನ್ನು ಗೇಣಿಯಾಧಾರದ ಮೇಲೆ ಒಕ್ಕಲುಗಳಿಗೆ ಕೊಡುತ್ತಿದ್ದರು. ಜಮೀನ್ದಾರರು ಲಾಭದಾಯಕವಾದ ಅಡಿಕೆ ತೋಟವನ್ನು ತಾವೇ ನೋಡಿಕೊಳ್ಳುತ್ತಿದ್ದರು.

‘ಗೇಣಿ ಪದ್ಧತಿ’ ಎಂದರೆ ಭೂ ಒಡೆಯನು ತನ್ನ ಜಮೀನನ್ನು ಸಾಗುವಳಿ ಮಾಡಲು ರೈತ ಕಾರ್ಮಿಕರಿಗೆ ವಾರ್ಷಿಕ ಗೇಣಿಯ ಕರಾರಿನ ಮೂಲಕ ಕೊಡುವ ಪದ್ಧತಿ. ಗೇಣಿ ಪದ್ಧತಿಯಲ್ಲಿ ಮುಖ್ಯವಾಗಿ ಎರಡು ವಿಧಗಳನ್ನು ಕಾಣಬಹುದು. ಒಂದು, ಹಕ್ಕುದಾರ ಗೇಣಿದಾರರು (Occupancy Tenants) ಮತ್ತೊಂದು ಹಕ್ಕು ರಹಿತ ಗೇಣಿದಾರರು (Non-Occupancy Tenants).

ಹಕ್ಕುದಾರ ಗೇಣಿದಾರರು ತಾವು ಸಾಗುವಳಿ ಮಾಡುವ ಜಮೀನುದಾರನ ಜಮೀನಿನ ಮೇಲೆ ಸಾಗುವಳಿಯ ಶಾಶ್ವತ ಹಕ್ಕನ್ನು ಪಡೆದಿರುತ್ತಾರೆ. ಇವರು ನಿರ್ದಿಷ್ಟವಾದ ಗೇಣಿಯನ್ನು ಜಮೀನ್ದಾರರಿಗೆ ಕೊಡುತ್ತಿರುತ್ತಾರೆ. ಇವರನ್ನು ಜಮೀನಿನಿಂದ ಹೊರದೂಡಲು ಸಾಧ್ಯವಿಲ್ಲ. ಗೇಣಿಯು ನಿರ್ದಿಷ್ಟವಾಗಿರುವುದರಿಂದ ಅದನ್ನು ಜಮೀನುದಾರರು ಏರಿಸುವಂತಿಲ್ಲ.

ಹಕ್ಕು ರಹಿತ ಗೇಣಿದಾರರು ತಾವು ಸಾಗುವಳಿ ಮಾಡುವ ಜಮೀನ್ದಾರನ ಜಮೀನಿನ ಮೇಲೆ ಸಾಗುವಳಿಯ ಶಾಶ್ವತ ಹಕ್ಕನ್ನು ಪಡೆದಿರುವುದಿಲ್ಲ. ಗೇಣಿಯ ದರ ನಿರ್ದಿಷ್ಟವಾಗಿರುವುದಿಲ್ಲ. ಜಮೀನ್ದಾರ ಅದನ್ನು ತನ್ನಿಚ್ಛೆಗೆ ತಕ್ಕಂತೆ ಏರಿಳಿಸಬಹುದು. ಹಾಗೇ ತಮಗೆ ಬೇಡವೆನಿಸಿದಾಗ ಗೇಣಿದಾರರನ್ನು ಜಮೀನಿನಿಂದ ಹೊರದೂಡಬಹುದು. ಮಲೆನಾಡಿನಲ್ಲಿ ಕಂಡು ಬರುವ ಒಕ್ಕಲುಗಳು ಹಕ್ಕು ರಹಿತ ಗೇಣಿದಾರರು.

ಈ ಗೇಣಿ ಪದ್ಧತಿಯು ಅನೇಕ ಲೋಪದೋಷಗಳನ್ನು, ಸಮಸ್ಯೆಗಳನ್ನು ಎದುರಿಸುತ್ತಿದ್ದವು. ಮೊದಲನೆಯ ಅತಿ ಮುಖ್ಯ ದೋಷವೆಂದರೆ ಅನುಪಸ್ಥಿತಿಯ ಭೂಮಾಲೀಕ ಸ್ಥಿತಿ. ಈ ಪದ್ಧತಿಯಲ್ಲಿ ಭೂಮಿಯ ನಿಜವಾದ ಒಡೆಯ ಭೂ ವ್ಯವಸಾಯ ಮಾಡುವುದಿಲ್ಲ. ಹಿಡುವಳಿಯ ಯಜಮಾನ ಕೃಷಿ ಮಾಡದೆ ಇರುವ ಕ್ರಮಕ್ಕೆ ‘ಗೈರು ಹಾಜರಿಯ ಭೂ ಒಡೆತನ’ ಎಂದು ಹೆಸರು. ತಾವು ಸಾಗುವಳಿ ಮಾಡುತ್ತಿರುವ ಜಮೀನು ತಮ್ಮದಲ್ಲವಾದ್ದರಿಂದ ಸಾಗುವಳಿಯಲ್ಲಿ ತೀವ್ರ ಆಸಕ್ತಿಯನ್ನು ತೋರಿಸುತ್ತಿರಲಿಲ್ಲ. ಇದರಿಂದ ಕೃಷಿಯ ಉತ್ಪಾದನೆಯು ಕುಂಠಿತವಾಯಿತು.

ಮತ್ತೊಂದು ಗೇಣಿಯ ಏರಿಕೆಗೆ ಸಂಬಂಧಿಸಿದ್ದು. ಜಮೀನ್ದಾರರು ಪ್ರತಿ ವರ್ಷ ಗೇಣಿಯನ್ನು ತಮಗೆ ಇಷ್ಟ ಬಂದಂತೆ ಹೆಚ್ಚಿಸುತ್ತಿದ್ದರು. ಯಾರು ಅತಿ ಹೆಚ್ಚಿನ ಗೇಣಿಕೊಡಲು ಒಪ್ಪುವರೋ ಅವರಿಗೆ ಜಮೀನಿನ ಸಾಗುವಳಿ ಕೊಡುತ್ತಿದ್ದರು. ಇದರಿಂದ ಗೇಣಿದಾರರು ಅತಂತ್ರ ಸ್ಥಿತಿಯಲ್ಲಿ ಇರಬೇಕಾಗುತ್ತಿತ್ತು. ಅಂದರೆ ಗೇಣಿಯ ಭದ್ರತೆ ಇರಲಿಲ್ಲ. ಒಕ್ಕಲುಗಳಿಗೆ ತಾವೇ ಪ್ರತಿವರ್ಷ ಮುಂದುವರಿಯುತ್ತೇವೆಂಬ ಭರವಸೆ ಇರಲಿಲ್ಲ. ಜಮೀನ್ದಾರರು ಹೆಚ್ಚು ಗೇಣಿ ಕೊಡುವವರಿಗೆ ಭೂಮಿ ಸಾಗುವಳಿಯನ್ನು ಕೊಡುತ್ತಿದ್ದರು, ಸ್ವಾಧೀನರಹಿತ ಒಕ್ಕಲಿಗರದೇ ಬಹು ಸಂಖ್ಯೆಯಾದುದರಿಂದ, ಭೂಮಿಯ ಒಡೆಯ ಯಾವಾಗ ಬೇಕಾದರೂ ಒಕ್ಕಲುತನದಿಂದ ಕೃಷಿಕರನ್ನು ಓಡಿಸಬಹುದು. ಆದರೆ ಅತ್ಯಧಿಕ ಮೊತ್ತದ ಗೇಣಿಯನ್ನು ಕೊಡುವ ಗೇಣಿದಾರರು ಸಾಗುವಳಿಯಿಂದ ಯಾವ ಲಾಭವನ್ನೂ ಪಡೆಯುತ್ತಿರಲಿಲ್ಲ. ಕೃಷಿ ಉತ್ಪಾದನೆ ಕಡಿಮೆ ಇದ್ದುದರಿಂದ ಗೇಣಿಯನ್ನು ಕೊಟ್ಟು ಒಕ್ಕಲುಗಳಿಗೆ ಉಳಿಯುತ್ತಿದ್ದದ್ದು ಕಡಿಮೆ. ಆದ್ದರಿಂದ ಅವರು ಯಾವಾಗಲೂ ಸಾಲದಲ್ಲಿಯೇ ಮುಳುಗಿರಬೇಕಾಗುತ್ತಿತ್ತು.

ಗುತ್ತ

ಜಮೀನಿನ ಸಾಗುವಳಿಗೆ ಪ್ರತಿಯಾಗಿ ಒಕ್ಕಲುಗಳು ಆ ಭೂಮಿಯ ಬಾಡಿಗೆ ಅಥವಾ ಗುತ್ತಿಗೆಯಾಗಿ ಬೆಳೆಯಲ್ಲಿ ನಿರ್ದಿಷ್ಟವಾದ ಪಾಲನ್ನು ಜಮೀನ್ದಾರರಿಗೆ ಕೊಡ ಬೇಕಿತ್ತು. ಇದನ್ನು ‘ಗುತ್ತ’ ಎಂದು ಕರೆಯುತ್ತಿದ್ದರು. ಹೀಗೆ ಗುತ್ತಿಗೆಗೆ ಕೊಟ್ಟ ಗದ್ದೆಗಳ ಉಳುವ ಬಿತ್ತುವ ಮುಂತಾದ ಯಾವುದೇ ವಿಷಯದಲ್ಲಿ ಒಡೆಯರು ಹಸ್ತಕ್ಷೇಪ ಮಾಡುವುದಿಲ್ಲ. ಕೆಲವೊಮ್ಮೆ ಅವರು ತಮ್ಮ ಗದ್ದೆ ಎಲ್ಲಿದೆ ಎಂದೇ ನೋಡಿರುವುದಿಲ್ಲ. ಒಟ್ಟಿನಲ್ಲಿ ಒಕ್ಕಲಾದವನು ಭತ್ತದ ಕೊಯ್ಲು ಆದಾಗ ನಿಯತ್ತಾಗಿ ಒಡೆಯರ ಪಾಲನ್ನು ಕೊಡುತ್ತಿದ್ದನು. ಇಲ್ಲವೆ ಒಡೆಯರ ಆದೇಶದ ಮೇರೆಗೆ ಒಡೆಯರ ಪಾಲನ್ನು ಮಾರಿ ಬಂದ ಹಣವನ್ನು ಜಮೀನ್ದಾರರಿಗೆ ತಲುಪಿಸುತ್ತಿದ್ದನು.

ಇಂತಹ ಗುತ್ತಿಗೆಯ ಅವಧಿ ಮೂರು ವರ್ಷಕ್ಕಿಂತ ಕಡಿಮೆ ಇರುತ್ತಿರಲಿಲ್ಲ. ಗುತ್ತದ ಪ್ರಮಾಣದಲ್ಲೂ ಸ್ಪರ್ಧೆ ಇದ್ದು, ಒಂದು ಖಂಡುಗ (೧೮೦ ಪಾವುಗಳು) ಭತ್ತದಿಂದ ಐದು ಖಂಡುಗ ಭತ್ತದವರೆಗೆ ಏರುತ್ತಿತ್ತು. ಗದ್ದೆ ಫಲವತ್ತಾಗಿದ್ದರೆ ಏಳು ಖಂಡುಗವೂ ಆಗುತ್ತಿತ್ತು. ಈ ಗುತ್ತಿಗೆಯು ಬೆಳೆಯ ಸುಮಾರು ಅರ್ಧ ಭಾಗವಾಗುತ್ತಿತ್ತು. ಬಾಗಾಯ್ತು ಸಾಗುವಳಿ ಮಾಡಿದವರು ಎಕರೆ ಒಂದಕ್ಕೆ ಹನ್ನೆರಡು ಮಣದಿಂದ ಹದಿನಾರು ಮಣ ಅಡಿಕೆ ಕೊಡುತ್ತಿದ್ದರು ಎಂದು ಕಡಿದಾಳು ರಾಮಪ್ಪಗೌಡರು ಸ್ಮರಿಸಿಕೊಂಡಿದ್ದಾರೆ (ರಾಮಪ್ಪಗೌಡ ೧೯೯೮.). ಒಂದು ಎಕರೆ ಗದ್ದೆಗೆ ಆರು ಖಂಡುಗ ಭತ್ತವನ್ನು ಗೇಣಿಯಾಗಿ ನಿಗದಿ ಮಾಡಲಾಗಿತ್ತು ಎಂದು ಹಾಲಪ್ಪ ಹೇಳುತ್ತಾರೆ ( ನೋಡಿ : ಅನುಬಂಧ – ೨).

ಜಮೀನ್ದಾರರು ಗೇಣಿಯಿಂದ ಭೂ ಕಂದಾಯ, ರಸ್ತೆ ತೆರಿಗೆ ಮುಂತಾದ ತೆರಿಗೆಗಳನ್ನು ಪಾವತಿಸುತ್ತಿದ್ದರು. ರಾಜ್ಯ ಸರ್ಕಾರಕ್ಕೆ ಕಟ್ಟಬೇಕಾದ ಕಂದಾಯ ಕಟ್ಟಿದಾಗ ಭೂಮಿಯ ಒಡೆತನದ ಹಕ್ಕನ್ನು ಸರ್ಕಾರವು ಭೂಮಾಲೀಕರಿಗೆ ಕೊಡುತ್ತಿತ್ತು. ಒಕ್ಕಲುಗಳು ಬೇಸಾಯದ ಎಲ್ಲ ಖರ್ಚನ್ನು ಭರಿಸುತ್ತಿದ್ದರು. ಕೆಲವೊಮ್ಮೆ ಒಡೆಯರಿಂದ ಸಾಲವನ್ನೂ ಪಡೆಯುತ್ತಿದ್ದರು.

ಅಡಿಕೆ ತೋಟದ ಗುತ್ತಿಗೆಯು ಅಪರೂಪವಾಗಿತ್ತು. ಗುತ್ತಿಗೆ ಕೊಟ್ಟರೆ ಅದು ದೀರ್ಘಾವಧಿಯದಾಗಿರುತ್ತಿತು. ನೂರು ಫಲವತ್ತಾದ ಅಡಿಕೆ ಮರಗಳಿಗೆ ಇಂತಿಷ್ಟು ಗುತ್ತ ಎಂದು ನಿಗದಿಯಾಗಿರುತ್ತಿತ್ತು. ಇದು ಒಟ್ಟು ಬೆಳೆಯ ಶೇಕಡ ೩೩ರಷ್ಟಾಗುತ್ತಿತ್ತು. ಗುತ್ತಿಗೆಯ ಅವಧಿ ಹತ್ತು ವರ್ಷಗಳಿಗಿಂತಲೂ ಹೆಚ್ಚಿಗೆ ಇರುತ್ತಿತ್ತು. ಈ ಗುತ್ತಿಗೆ ಕರಾರು, ತೋಟದ ಉಸ್ತುವಾರಿಗೆ ಅಗತ್ಯವಾದ ಕಠಿಣ ನಿಯಮಗಳನ್ನು ಒಳಗೊಂಡಿರುತ್ತಿತ್ತು. ಇದರ ಖರ್ಚು ಒಟ್ಟು ಉತ್ಪಾದನೆಯ ೧/೩ ರಷ್ಟಾಗುತ್ತಿತ್ತು. ಉಳಿದ ೧/೩ ರಷ್ಟು ಭಾಗ ಒಕ್ಕಲಿನ ಪಾಲಾಗಿತ್ತು.

ಅಡಿಕೆ ಬೆಳೆಯಿಂದ ಬರುವ ಆದಾಯವು ನಿಯಮಿತವಾಗಿರುತ್ತಿರಲಿಲ್ಲ. ಆದು ಭಾರಿ ಏರುಪೇರುಗಳಿಂದ ಕೂಡಿತ್ತು. ಅದಕ್ಕೆ ಮೂರು ಮುಖ್ಯ ಕಾರಣಗಳನ್ನು ಗುರುತಿಸಬಹುದು. ಒಂದು, ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯ ಏರಿಳಿತ; ಎರಡು, ಅಡಿಕೆ ಬೆಳೆಗೆ ತಾಗುವ ರೋಗ; ಮತ್ತು ಮೂರನೆಯದು, ಮಳೆ ಬಿರುಗಾಳಿ ಸಿಡಿಲಿನಿಂದ ಉಂಟಾಗುವ ಹಾನಿ ಅಲ್ಲದೆ, ಅಡಿಕೆಗೆ ಕೊಳೆ ರೋಗ ಬಂದು ಉದುರಿ ಹೋಗಿ ಒದೊಂದು ವರ್ಷ ಗುತ್ತಿಗೆ ಅಡಿಕೆ ಬಾಕಿ ಉಳಿಯುತ್ತಿತ್ತು. ಈ ಬಾಕಿಯು ಹಿಂದಿನ ಸಾಲದೊಂದಿಗೆ ಸೇರಿ ಒಕ್ಕಲುಗಳ ಸಾಲದ ಹೊರೆ ಹೆಚ್ಚುತ್ತಿತ್ತು.

ಕರ್ನಾಟಕದಲ್ಲಿ ಅಡಿಕೆ ತೋಟದ ವ್ಯಾಪ್ತಿ ೧೯೨೨ – ೨೩ರಲ್ಲಿ ೫೩,೨೪೨ ಎಕರೆಗಳಷ್ಟು ಇದ್ದರೆ, ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚಿನ ಅಡಿಕೆ ತೋಟದ ಎಕರೆಗಳು – ೧೫,೪೦೯ರಷ್ಟು ಇದ್ದವು. ಹಾಗು ಇದರ ರಫ್ತು ಸುಮಾರು ೧,೫೭೮ ಟನ್ ಗಳಷ್ಟಿತ್ತು. ಅಡಿಕೆಯನ್ನು ಬೀರೂರು ಮುಖಾಂತರ ಬಳ್ಳಾರಿ ಹಾಗೂ ವಲಜ್‌ಗೆ ರಫ್ತು ಮಾಡಲಾಗುತ್ತಿತ್ತು.

ಏಲಕ್ಕಿ, ಮೆಣಸು ಹಾಗೂ ವೀಳೆದೆಲೆಯನ್ನು ಅಡಿಕೆ ಮರಕ್ಕೆ ಹಬ್ಬಿಸಲಾಗುತ್ತಿತ್ತು. ಮೆಣಸನ್ನು ಕೆನರಾ ಪ್ರದೇಶಕ್ಕೂ, ಏಲಕಿಯನ್ನು ಧಾರವಾಡಕ್ಕೂ ರಫ್ತು ಮಾಡಲಾಗುತ್ತಿತ್ತು. (ರಾವ್ ೧೯೩೦, ೧೩೪೮).

ಒಕ್ಕಲು ಮತ್ತು ಜಮೀನ್ದಾರರ ಸಂಬಂಧ

ಒಕ್ಕಲುಗಳು ತಾವು ಬೆಳೆದ ಬೆಳೆಯಲ್ಲಿ ಒಡೆಯರಿಗೆ ನಿದದಿ ಮಾಡಿದ ಪಾಲನ್ನು ಕೊಟ್ಟು ನಿಷ್ಠೆಯಿಂದಿದ್ದರು. ಒಡೆಯರೂ ಒಕ್ಕಲುಗಳನ್ನು ವಿಶ್ವಾಸದಿಂದ ನೋಡಿ ಕೊಳ್ಳುತ್ತಿದ್ದರು.

ಒಕ್ಕಲಿನ ಮನೆಯಲ್ಲಿ ನಡೆಯುವ ಮದುವೆ ಶುಭಕಾರ್ಯಗಳು ಮತ್ತು ಇತರ ಎಲ್ಲ ವೆಚ್ಚಗಳಿಗೆ ಒಡೆಯರು ಸಾಲ ಕೊಡುತ್ತಿದ್ದರು. ‘ಕಾನೂರು ಹೆಗ್ಗಡಿತಿ’ ಕಾದಂಬರಿಯ ಕಾನೂರಿನ ಚಂದ್ರಯ್ಯಗೌಡರು ಕೆಳ ಕಾನೂರಿನ ಅಣ್ಣಯ್ಯಗೌಡರಿಗೆ ೮೦೦ ರೂಪಾಯಿಗಳ ಸಾಲವನ್ನು ಅವರ ಮದುವೆಗಾಗಿ ಕೊಟ್ಟಿದ್ದನ್ನು ನೋಡಬಹುದು. ಹೀಗೆ ಕೊಟ್ಟಸಾಲಕ್ಕೆ ಬಡ್ಡಿಯನ್ನೂ ಹಾಕುತ್ತಿದ್ದರು.

ಮಲೆನಾಡಿನಲ್ಲಿ ಬಿಟ್ಟಿ ಕೆಲಸವನ್ನು ಸಹ ಒಕ್ಕಲುಗಳು ಮಾಡಬೇಕಾದ ಪರಿಸ್ಥಿತಿಯನ್ನು ನೋಡುತ್ತೇವೆ. ಭೂಮಾಲೀಕರ ಮನೆಯ ಮದುವೆ ಮುಂತಾದ ಸಮಾರಂಭಗಳಲ್ಲಿ ಅಥವಾ ಅವರ ಮನೆಯ ಕೆಲಸವಿದ್ದಾಗ ಒಕಲುಗಳು ಅಲ್ಲಿ ಹೋಗಿ ಕೆಲಸ ಮಾಡಬೇಕಾಗುತ್ತಿತ್ತು. ಇದು ಬಿಟ್ಟ ಕೆಲಸವಾಗಿದ್ದು, ಉಣ್ಣಲು ಮಾತ್ರ ಒಡೆಯರು ಕೊಡುತ್ತಿದ್ದರು. ಎಂದು ಶ್ರೀ ಶೇಷಪ್ಪಗೌಡರು, ಶ್ರೀ ಹಾಲಪ್ಪ ಹಾಗು ಶ್ರೀಮತಿ ಲಕ್ಷೀ ದೇವಮ್ಮನವರು ಸ್ಮರಿಸಿಕೊಂಡಿದ್ದಾರೆ (ನೋಡಿ : ಅನುಬಂಧ – ೧).

ಗದ್ದೆ ಬಿತ್ತನೆ ಕಾಲದಲ್ಲಿ ಒಂದು ಜೊತೆ ಎತ್ತು, ಹೂಟೆ ಆಳು ಮತ್ತು ಒಂದು ಹೆಣ್ಣಾಳು ಒಂದೆರಡು ದಿನ ಒಡೆಯರ ಗದ್ದೆ ಬಿತ್ತನೆ ಕೆಲಸ ಮಾಡಬೇಕು. ಅವರ ಮನೆ ಹೊದಿಸಲು, ಕಟ್ಟಿಗೆ ಕಡಿಯಲು, ಸಸಿ ನೆಟ್ಟಿ, ಹೂಟೆ ಮುಂತಾದ ಕಾರ್ಯಗಳಿಗೆ ಒಕ್ಕಲುಗಳು ಒಡೆಯರ ಮನೆಗೆ ಬರುತ್ತಿದ್ದರು. ಒಕ್ಕಲುಗಳ ಮನೆಯ ಸಾಧಾರಣ ವಯಸ್ಸಿನ ಹೆಣ್ಣು ಮಕ್ಕಳು ಒಡೆಯರ ಮನೆ ಮಕ್ಕಳಾಡಿಸಲು ಮತ್ತು ಸ್ಪಲ್ಪ ದೊಡ್ಡ ಹುಡುಗರು ಒಡೆಯರ ಮನೆಯ ದನ ಕಾಯಲು ಹೋಗಲೇಬೇಕಿತ್ತು. ಈ ಕೆಲಸಗಳಿಗೆ ಏನಾದರೂ ಸಂಬಳ ಕೊಡುತ್ತಿದ್ದರು (ರಾಮಪ್ಪಗೌಡ ೧೯೯೮). ಇದಲ್ಲದೆ ವರ್ಷಕ್ಕೆ ೧೦-೧೫ ಆಳು ಮಾಡುವ ಕೆಲಸವನ್ನು ಗೇಣಿ ರೈತ ಉಚಿತವಾಗಿ ಮಾಲೀಕರ ಮನೆಯಲ್ಲಿ ಮಾಡಬೇಕಿತ್ತು (ಕೂಡ್ಲಿಕೆರೆ ೨೦೦೫).

ಒಕ್ಕಲೆಬ್ಬಿಸುವುದು

ಭೂಮಾಲೀಕ ಸ್ವಂತ ಸಾಹುವಳಿ ಮಾಡುವ ಇಚ್ಛೆ ಹೊಂದಿದ್ದರೆ, ಒಕ್ಕಲು ಭೂಮಿಯನ್ನು ಹಾಳುಗೆಡವಿದ್ದರೆ, ಒಕ್ಕಲು ಗೇಣಿ ಸರಿಯಾಗಿ ಸಲ್ಲಿಸದ್ದಿದ್ದರೆ ಭೂಮಾಲೀಕರು ಗೇಣಿದಾರರನ್ನು ಒಕ್ಕಲೆಬ್ಬಿಸುತ್ತಿದ್ದರು. ಬಹುತೇಕ ಗೇಣಿ ಒಕ್ಕಲುಗಳು ಬಾಯ್ದೆರೆ ಒಕ್ಕಲಾಗಿ, ವಂಶಪಾರಂಪರ್ಯ ಒಕ್ಕಲಾಗಿದ್ದರೂ ಯಾವ ಅಧಿಕೃತ ದಾಖಲೆಗಳನ್ನೂ ಹೊಂದಿರಲಿಲ್ಲ (ನಾಗರಾಜ್ ೨೦೦೬).

ಗೇಣಿ ಅಳೆಯುವುದರಲ್ಲಿ ಅವ್ಯವಹಾರ

ರೈತರು ಕೊಡುವ ಗೇಣಿಯನ್ನು ಅಳೆಯಬೇಕಾದರೆ ಕೆಲವು ಒಡೆಯರು ಅಕ್ರಮ ಪದ್ಧತಿಯನ್ನು ಅನುಸರಿಸುತ್ತಿದ್ದರು. ಮಲೆನಾಡಿನ ಒಂದು ಭಾಗವಾದ ಕಾಗೋಡಿನಲ್ಲಿ ‘ಗೇಣಿ ರೈತರು ಭೂಮಾಲೀಕರಾದ ಒಡೆಯರಿಗೆ ಗೇಣಿ ನೀಡುವಾಗ ಭತ್ತವನ್ನು ಅಳೆಯುತ್ತಿದ್ದ, ಮೂರುವರೆ ಸೇರು ಅಥವಾ ನಾಲ್ಕು ಸೇರಿನ ಕೊಳಗದಲ್ಲಿಯೇ ನೀಡಬೇಕಿತ್ತು. ಒಡೆಯರು ಮಾತ್ರ ರೈತರಿಗೆ ಸಾಲ ನೀಡುವಾಗ ಮೂರು ಸೇರಿನ ಸರ್ಕಾರಿ ಕೊಳಗದಲ್ಲಿಯೇ ಅಳೆದು ಕೊಡುತ್ತಿದ್ದರು. ಅಳತೆಯಲ್ಲಿ ವ್ಯತ್ಯಾಸ ಮಾಡಿ ಗೇಣಿ ರೈತರನ್ನು ವಂಚಿಸುತ್ತಿದ್ದರು. ಇದಲ್ಲದೆ ಒಡೆಯರ ಮನೆಗೆ ಹುಲ್ಲು, ಸಲಿಗೆ ಭತ್ತ, ಹೆಚ್ಚಿನ ಭತ್ತ ಮುಂತಾದ ರೂಪಗಳಲ್ಲಿ ಗೇಣಿ ನೀಡಬೇಕಿತ್ತು (ಕೂಡ್ಲಿಕೆರೆ ೨೦೦೫). ಇದೇ ಮುಂದೆ ೧೯೫೧ರಲ್ಲಿ ಕಾಗೋಡು ಚಳುವಳಿಗೆ ನಾಂದಿಯಾಯಿತು.

ಒಕ್ಕಲುಗಳ ಸಾಲ

ಒಕ್ಕಲುಗಳ ಕಷ್ಟ ಸುಖಕ್ಕೆ ಜಮೀನ್ದಾರರು ಸಹಾಯ ಮಾಡುತ್ತಿದ್ದರು. ಅವರ ಮನೆಯ ಮದುವೆ ಸಮಾಂಭ ಇತ್ಯಾದಿಗೆ ಸಾಲ ಕೊಡುವುದಲ್ಲದೆ ಕೃಷಿಯಾಧಾರಿತ ಚಟುವಟಿಕೆಗಳಿಗೂ ಸಾಲ ಕೊಡುತ್ತಿದ್ದರು. ಅಡಿಕೆ ಕೂಳೆ ರೋಗ ಬಂದು ಉದುರಿ ಹೋಗಿ ಒಂದು ವರ್ಷ ಒಡೆಯರ ಪಾಲು ಕೊಡಲಾಗದೆ ಗುತ್ತಿಗೆ ಅಡಿಕೆ ಬಾಕಿಯಾಗುತ್ತಿತು ಹಿಂದಿನದು ಏನಾದರೂ ಸಾಲ ಕೊಡುವುದು ಬಾಕಿ ಇದ್ದರೆ, ಅದರೊಂದಿಗೆ ಈ ಬಾಕಿ ಸಾಲವೂ ಸೇರಿ ಸಾಲದ ಹೊರೆ ಹೆಚ್ಚಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಒಡೆಯರ ಗೇಣಿ ಕೊಟ್ಟು ಒಕ್ಕಲುಗಳಿಗೆ ಭತ್ತ ಹೆಚ್ಚು ಉಳಿಯುತ್ತಿರಲಿಲ್ಲ. ಆ ವರ್ಷ ಊಟಕ್ಕೆ ತೊಂದರೆಯಾಗಿ ಒಡೆಯರ ಮನೆಯಿಂದ ಭತ್ತ ಕಡ ತೆಗೆದುಕೊಂಡು ಹೋಗುತ್ತಿದ್ದರು. ಅದಕ್ಕೂ ಹುಲಿ ಭತ್ತ ಸೇರಿಸಿ ಬಾಕಿ ಮಾಡುತ್ತಿದ್ದರು (ರಾಮಪ್ಪಗೌಡ ೧೯೯೮).

‘ಹುಲಿ ಭತ್ತ’ ಎಂದರೆ ಒಡೆಯರ ಮನೆಯಿಂದ ಭತ್ತ ಕಡ ತಂದಿದ್ದರೆ, ಗದ್ದೆ ಕೊಯಿಲಿನ ನಂತರ ಎಷ್ಟು ಭತ್ತ ಕಡ ತಂದಿದ್ದರೋ, ಅದಕ್ಕೆ ಮತ್ತಷ್ಟು ಭತ್ತ ಸೇರಿಸಿ ಅಂದರೆ ಅವನು ತಂದ ಭತ್ತ ಖಂಡುಗ ಒಂದಕ್ಕೆ ಹೆಚ್ಚಿಗೆ ಹತ್ತು ಕೊಳಗದಿಂದ ಒಂದು ಖಂಡುಗದವರೆಗಾದರೂ ಸೇರಿಸಿ ಕೊಡುವುದು (ರಾಮಪ್ಪಗೌಡ ೧೯೯೮).

ಒಕ್ಕಲುಗಳು ಸಾಲವನ್ನು ಮರುಪಾತಿಸದಿದ್ದಲ್ಲಿ ಅಥವಾ ಪಾವತಿಸಲು ತಡಮಾಡಿದಲ್ಲಿ ಒಡೆಯರು ತಮ್ಮ ವಸೂಲಿ ಸಾಬರನ್ನು ಸಾಲದ ವಸೂಲಿಗೆ ಕಳುಹಿಸುತ್ತಿದ್ದರು. ಭತ್ತದ ಕೊಯಿಲು ಆಗುತ್ತಿದ್ದಂತೆಯೇ ಇವರು ಒಕ್ಕಲುಗಳ ಮನೆಗೆ ಹೋಗಿ ಸಾಲದ ಭತ್ತ ಅಥವಾ ಹಣ ಪಡೆಯುತ್ತಿದ್ದರು. ‘ಮಲೆಗಳಲ್ಲಿ ಮದುಮಗಳು ‘ ಕಾದಂಬರಿಯ ಕಲ್ಲೂರ ಮಂಜುಭಟ್ಟರು, ಸಿಂಬಾವಿ ಭರಮೈ ಹೆಗ್ಗಡೆ, ಹಳೆಮನೆ ಸುಬ್ಬಣ್ಣನಾಯಕ, ಮೊದಲಾದವರು ವಸೂಲಿ ಸಾಬರ ಸೇವೆಯನ್ನು ಪಡೆಯುತ್ತಿದ್ದರು.

ಸಾಲವನ್ನು ಬಡ್ಡಿ ಸಮೇತ ಮರು ಪಾವತಿಸುವವರೆಗೂ ಒಕ್ಕಲು ಜಮೀನನ್ನು ಬಿಟ್ಟು ಹೋಗುವಂತಿರಲಿಲ್ಲ. ಕಾನೂರಿನ ಅಣ್ಣಯ್ಯಗೌಡ ಸಂಸಾರ ಸಮೇತ ಸೀತೆಮನೆ ಸಿಂಗಪ್ಪಗೌಡರ ಮನೆಗೆ ಕದ್ದು ಹೋಗುತ್ತಿದ್ದಾಗ ಚಂದ್ರಯ್ಯಗೌಡರಿಗೆ ಸಿಕ್ಕಿಬಿದ್ದರು. ಆಗ,

“…..ಆ ದಿನವೆ ಚಂದ್ರಯ್ಯಗೌಡರು ಕೆಳಕಾನೂರು ಅಣ್ಣಯ್ಯಗೌಡರ ಪಾತ್ರೆ ಪರಟಿ ಸರಕು ಸಾಮಾನು ದನಕರು ಜಾನುವಾರುಗಳನ್ನೆಲ್ಲ ತಮ್ಮ ಸಾಲಕ್ಕೆ ಮುಟ್ಟುಗೋಲು ಹಾಕಿಕೊಂಡು ಅಣ್ಣಯ್ಯಗೌಡರನ್ನು ಅವರ ಮಗ ಮಗಳು ಸಮೇತವಾಗಿ ಊರಿನಿಂದ ಹೊರಡಿಸಿದರು. ಅವರ ಕೋಳಿಗಳನ್ನು ಕೂಡ ಅವರಿಗೆ ಬಿಡಲಿಲ್ಲ. ಅವರಿಗೆ ಉಳಿದುದೆಂದರೆ ಕರಿಯ ಬಣ್ಣದ ಕುರೂಪಿಯಾದ ಅವರ ಕಂತ್ರಿ ನಾಯಿ” (ಕುವೆಂಪು ೨೦೦೬ಅ, ೨೬೫). ಹೀಗೆ ತೀರದ ಸಾಲಕ್ಕೆ ಸಾಮಾನುಸಂರಂಜಾಮುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪದ್ಧತಿ ಆಗಲೂ ಇತ್ತು ಎಂದು ತಿಳಿಯುತ್ತದೆ.

ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ

ಹಿಂದುಳಿದ ದೇಶಗಳಲ್ಲಿ ಅಸಮಾನತೆಯು ವಿವಿಧ ರೂಪಗಳನ್ನು ತಳೆಯುತ್ತದೆ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾದವರು ಇದರ ನೇರ ಪರಿಣಾಮವನ್ನು ಎದುರಿಸುತ್ತಾರೆ. ಕಡಿಮೆ ಸಂಖ್ಯೆಯ ಭೂಮಾಲೀಕರು ತಮಗಿಂತ ಕೆಳಗಿರುವ ಭೂರಹಿತ ಕೂಲಿಯಾಳು, ಕೃಷಿಕಾರ್ಮಿಕರನ್ನು ಶೋಷಿಸುತ್ತಾರೆ. ಕೂಲಿಯಾಳುಗಳು, ಒಕ್ಕಲುಗಳು ಸಮಾಜದ ಅರ್ಧಕ್ಕಿಂತ ಹೆಚ್ಚಾದ ಜನಸಂಖ್ಯೆ ಇದ್ದರೂ ಅನುಪಸ್ಥಿತ ಭೂಮಾಲೀಕರು ಅವರನ್ನು ತಮ್ಮ ಬಿಗಿ ಹಿಡಿತದಲ್ಲಿರಿಸಿಕೊಂಡಿರುತ್ತಾರೆ.

ಇಂತಹ ಅಸಮಾನತೆಗಳು ಭಾರತದಲ್ಲಿ ಒಂದು ಸಮಾಜಿಕ ನಿಯಮವಾಗಿದೆ. ಪರಂಪರೆ, ಮನುಧರ್ಮ, ಶಾಸ್ತ್ರಗಳು ಭಾರತದ ಸಮಾಜವನ್ನು ಕಸುಬುಗಳನ್ನಾಧರಿಸಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳಾಗಿ ವಿಂಗಡಿಸಿದೆ. ಕಸುಬನ್ನು ಆಧರಿಸಿ ಮಾಡಿದ ವರ್ಣಭೇದವು ಮುಂದೆ ಜಾತಿಯಾಗಿ ಬೆಳೆದು ಬಂದಿದೆ, ಎಷ್ಟರ ಮಟ್ಟಿಗೆ ಅಂದರೆ ಒಂದು ಜಾತಿಯವರು ಇನ್ನೊಂದು ಜಾತಿಯ ಕಸುಬನ್ನು ಮಾಡುವುದು ಒಂದು ಶಿಕ್ಷಾರ್ಹ ಅಪರಾಧವೇನೋ ಎಂಬಂತೆ. ಭಾರತವು ಪಾಶ್ಚಾತ್ಯ ದೇಶಗಳಂತೆ ಬಂಡವಾಳಶಾಹಿ ರಾಷ್ಟ್ರವಲ್ಲ. ಆದ್ದರಿಂದ ಈ ಸಮಾಜದಲ್ಲಿ ವರ್ಗಗಳಿಗಿಂತ ಜಾತಿಪದ್ಧತಿ ಮುಖ್ಯವಾಗುತ್ತದೆ. ಅಸಮಾನತೆಗಳೇನಿದ್ದರೂ ಜಾತಿಯನ್ನಾಧರಿಸಿರುತ್ತದೆ. ಜಾತಿ ಪದ್ಧತಿ ಆಸ್ತಿಯ ಹಂಚಿಕೆಯನ್ನು ಪ್ರಭಾವಿಸುತ್ತದೆ.

ಅಂತೆಯೇ ಕುವೆಂಪು ಅವರ ಕಾದಂಬರಿಗಳಲ್ಲಿ ಎರಡು ವರ್ಣ, ಎರಡು ಜಾತಿಗಳ ಘರ್ಷಣೆ ಕಾಣಬಹುದು. ಬ್ರಾಹ್ಮಣ, ಶೂದ್ರ ಎಂಬ ಎರಡು ವರ್ಣಗಳಿದ್ದರೆ, ಬ್ರಾಹ್ಮಣ, ಒಕ್ಕಲಿಗ ಎಂಬ ಎರಡು ಜಾತಿಗಳನ್ನು ಮುಖ್ಯವಾಗಿ ಕಾಣಬಹುದು. ಇವುಗಳೊಂದಿಗೆ ನಿಮ್ನ ವರ್ಗವೊಂದಿದೆ. ಅವರೇ ಹೊಲೆಯರು ಅಥವಾ ಅಸ್ಪೃಶ್ಯರು. ಈ ವರ್ಗದವರು ಯಾವ ಜಾತಿಗೂ ಸೇರುವುದಿಲ್ಲ. ಇವರು ಜಾತಿ, ವರ್ಣಭೇದವಿಲ್ಲದೆ ಎಲ್ಲ ವರ್ಣ ಜಾತಿಯವರ ಸೇವೆ ಮಾಡುವುದೇ ಇವರ ಕಸುಬು ಉತ್ತಮ ಜಾತಿಯವರೆಲ್ಲ ಮಾಡಲು ಇಚ್ಛಿಸದ ಕೆಲಸಗಳನ್ನು ಇವರೇ ಮಾಡಬೇಕು.

ಜಮೀನ್ದಾರಿ ಪದ್ಧತಿಯಲ್ಲಿ ಶೂದ್ರ ವರ್ಣದವರಾದ ಭೂಮಾಲೀಕರು ಕೃಷಿ ಕಾರ್ಮಿಕರು ಹಾಗು ತಮಗಿಂತ ಕೆಳಗಿನ ಶ್ರೇಣಿಯಲ್ಲಿರುವ ಅಸ್ಪೃಶ್ಯರನ್ನು ಕಡೆಗಣಿಸುತ್ತಿದ್ದ ರೀತಿಯನ್ನು ನೋಡಿದಾಗ, ಶ್ರೀಮಂತ ಹಾಗು ಬಡ ವರ್ಗದ ಜನರ ನಡುವಿನ ವ್ಯತ್ಯಾಸ, ಸಂಬಂಧ ತಿಳಿಯುತ್ತದೆ. ಹಾಗಾಗಿ ವರ್ಗ ವರ್ಣ ತಾರತಮ್ಯವು ಜಾತಿ ತಾರತಮ್ಯದಷ್ಟೇ ಪ್ರಬಲವಾಗಿದೆ. ಸಾಮಾಜಿಕ ಕಾರಣಗಳಿಗಿಂತ ಆರ್ಥಿಕ ಕಾರಣಗಳು ಪ್ರಬಲವಾಗುತ್ತದೆ.

ವರ್ಣ ಶ್ರೇಣಿಯ ತುತ್ತತುದಿಯಲ್ಲಿರುವ ವರ್ಗವು ಪೌರೋಹಿತ, ಪೂಜೆ, ನಿಮಿತ್ತ ಹೇಳುವುದು, ಜಾತಕ ನೋಡುವುದು ಮುಂತಾದ ವಂಶಪಾರಂಪರ್ಯ ಕೆಲಸಗಳಲ್ಲಿ ಗುರುತಿಸಿಕೊಂಡಿತ್ತು. ವಿದ್ಯಾಭ್ಯಾಸವನ್ನು ಬಲ್ಲ, ವೇದೋಪನಿಷತ್ತನ್ನು ಅಧ್ಯಯನ ಮಾಡಿದ ಈ ವರ್ಗದವರ ಉದ್ಯೋಗಗಳಲ್ಲಿ ಮುಖ್ಯವಾದುವೆಂದರೆ ದೇವರ ಪೂಜೆ, ನಿಮಿತ್ತ ನೋಡುವುದು, ಭವಿಷ್ಯ ಹೇಳುವುದು, ಜಾತಕ ಬರೆಯುವುದು ಮತ್ತು ನೋಡುವುದು, ಶೂದ್ರರ ಭೂತಾದಿಗಳಿಗೆ ರಕ್ತದ ಬಲಿಕೊಡುವ ಮೊದಲು ಹಣ್ಣು ಕಾಯಿ ಮಾಡುವುದು, ಮಂತ್ರದಿಂದ ದೆವ್ವಗಳನ್ನು ಬಿಡಿಸುವುದು ಮತ್ತು ಹಿಡಿಸುವುದು ಇತ್ಯಾದಿ. ಆದ ಕಾರಣ ಹಳ್ಳಿಯವರಿಗೆಲ್ಲ ಅವರನ್ನು ಕಂಡರೆ ಭಯ ಭಕ್ತಿ (ಕುವೆಂಪು ೨೦೦೬ಅ, ೬೨). ಜನರ ಮೌಢ್ಯ ಅಜ್ಞಾನವೇ ಇವರ ಬಂಡವಾಳವಾಗಿತ್ತು. ಇದಕ್ಕಾಗಿ ಶರಶಯ್ಯೆಯಲ್ಲಿ ಮಲಗಿರುವ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೂ ಹಳ್ಳಿಗರಿಗೆ ಬಿಡುತ್ತಿರಲಿಲ್ಲ.

‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ಕೆಳಕಾನೂರಿನ ಅಣ್ಣಯ್ಯ ಗೌಡರ ಹೆಂಡತಿ ರೋಗಗ್ರಸ್ಥೆಯಾಗಿ ಮಲಗಿದ್ದಾಗ, ರೋಗದ ಉಲ್ಬಣಾವಸ್ಥೆಯನ್ನು ಕಂಡು ಕೆಲವರು ಅಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಡಾಕ್ಟರಿಗೆ ತೋರಿಸಲು ಸಲಹೆ ನೀಡಿದರು. ಆಗ ಅಗ್ರಹಾರದ ಜೋಯಿಸ ವೆಂಕಪ್ಪಯ್ಯನವರು ‘ಭೂತ ಜಕ್ಕಣಿಗಳಿಂದಲೂ ಆಗದ ಕಾರ್ಯ ಆಸ್ಪತ್ರೆ ಡಾಕ್ಟರುಗಳಿಂದೇನಾಗುತ್ತದೆ? ಎಷ್ಟೋ ಜನರಿಗೆ ತಾನೇ ಉಪದೇಶ ಮಾಡಿಲ್ಲವೇ ಆಸ್ಪತ್ರೆಗೆ ಹೋಗಬೇಡಿ ಎಂದು? ‘ಅಪ್ಪ ಅವ್ವ ಸತ್ರೆ ಆಸ್ಪತ್ರೆ!’ ಎಂದು ಗಾದೆಯಿಲ್ಲವೆ? ವೇದ ಸುಳ್ಳಾದರೂ ಗಾದೆ ಸುಳ್ಳಾಗದು ! …. ಎಲ್ಲಾ ಕರ್ಮದ ಫಲ’ ಎಂದು ಹೇಳಿ ಅಣ್ಣಯ್ಯಗೌಡನಿಗೆ ದುರ್ಬೋಧನೆ ಮಾಡಿದನು (ಕುವೆಂಪು ೨೦೦೬ಅ, ೭೯). ಇದರ ಫಲವಾಗಿ ಅಣ್ಣಯ್ಯಗೌಡರ ಹೆಂಡತಿ ತೀರಿಕೊಂಡಿದ್ದಳು.

ಬೇರೆಯವರಲ್ಲಿ ತಮಗೆ ದ್ವೇಷವಿದ್ದರೆ ಜಾತಕ ನಿಮಿತ್ತದ ಮೂಲಕ ತಮ್ಮ ಸೇಡನ್ನು ತೀರಿಸಿಕೊಳ್ಳುತ್ತಿದ್ದರು. ‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ಸೀತೆ ಹಾಗು ಹೂವಯ್ಯನ ಮದುವೆಗೆ ಜಾತಕ ಸರಿಯಿಲ್ಲವೆಂದು ಸುಳ್ಳು ಹೇಳಿ ತನ್ನ ವೃತ್ತಿಯನ್ನೇ ಪ್ರಶ್ನಿಸಿದ್ದ ಹೂವಯ್ಯನ ಮೇಲೇ ತನ್ನ ಸೇಡು ತೀರಿಸಿಕೊಳ್ಳುತ್ತಾನೆ.

ವಿದ್ಯಾವಂತರಾಗುತ್ತಿದ್ದ ಇತರ ಜಾತಿಯವರ ಬಗ್ಗೆ ಅಸಮಾಧಾನವೂ ಇವರಿಗೆ ಇತ್ತು. ಇತರರು ವಿದ್ಯವಂತರಾಗುವುದರಿಂದ ಅವರ ದುಡಿಮೆಯ ಮೂಲಕ್ಕೆ ಧಕ್ಕೆಯಾಗುತ್ತಿತ್ತು. ವಿದ್ಯಾವಂತರ ಮಾತು ಕೇಳಿ ಜನರಿಗೆ ತಮ್ಮ ಮೇಲೆ ನಂಬಿಕೆ ಕಡಿಮೆಯಾಗಿ ತಮ್ಮ ಆದಾಯಕ್ಕೆ ಕುತ್ತು ಬರುವುದು ಎಂಬ ಭಯ ಅವರನ್ನು ಕಾಡುತ್ತಿತ್ತು. ಅಲ್ಲದೆ ಅಕ್ಷರಾಭ್ಯಾಸ ಮಾಡಲೂ ನಿರುತ್ಸಾಹಗೊಳಿಸುತ್ತಿದ್ದರು. ಅಲ್ಲದೆ ತಮ್ಮ ವಂಶಪಾರಂಪರ್ಯವಗಿ ಬಂದ ಜ್ಞಾನವನ್ನು ಇತರರು ಪಡೆಯಬಾರದೆಂದು ಅವರ ಧೈರ್ಯಗೆಡಿಸುತ್ತಿದ್ದರು. ಅದ್ದರಿಂದ ಹೂವಯ್ಯ ರಾಮಯ್ಯ ಇವರ ವಿದ್ಯಾಭ್ಯಾಸ ನಿಲ್ಲಿಸುವಂತೆ ಕಾನೂರಿನ ಚಂದ್ರಯ್ಯ ಗೌಡರಿಗೆ ಹೇಳುತ್ತಾರೆ.

‘ಈಗಿನ ವಿದ್ಯಾಭ್ಯಾಸ ಹುಡುಗರನ್ನು ಹಾಳು ಮಾಡಿಬಿಡುತ್ತದೆ. ದೇವರು ದಿಂಡರು ಭಕ್ತಿ ಗಿಕ್ತಿ ಎಲ್ಲ ನಿರ್ನಾಮ! ಜೊತೆಗೆ ನೂರಾರು ಹವ್ಯಾಸಗಳನ್ನು ಬೇರೆ ಕಲಿತುಬಿಡುತ್ತಾರೆ. ನಿನ್ನ ಮನೆ ಜಮೀನು ಉಳಿಯಬೇಕಾದರೆ ಅವರ ಓದು ನಿಲ್ಲಿಸಿ ಮದುವೆ ಗಿದುವೆ ಮಾಡಿ ಕೆಲಸ ಹಚ್ಚು’ (ಕುವೆಂಪು ೨೦೦೬ಅ, ೬೭). ಎಂದು ಉಪದೇಶಿಸಿ ವಿದ್ಯಾಭ್ಯಾಸವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದರು.

“ಈ ಶೂದ್ರ ಮಕ್ಕಳಿಗೆಲ್ಲ ಉಪನಿಷತ್ತು ಭಗವದ್ಗೀತೆಗಳ ಗಂಧವಾದರೂ ಗೊತ್ತಾಗುತ್ತದೆಯೆ? ನಮಗೇ ಗೊತ್ತಾಗುವುದಿಲ್ಲ….’ ಎಂತೆಂಥ ಆಚಾರ್ಯರೇ ಅವುಗಳಿಗೆ ವ್ಯಾಖ್ಯಾನ ಬರೆಯಲು ತಿಣಿಕಿ ಬಿಟ್ಟಿದ್ದಾರೆ. ಅವರಲ್ಲಿಯೇ ಏಕಮತವಿಲ್ಲ…. ಈ ಶೂದ್ರ ಮಕ್ಕಳಿಗೆಲ್ಲ ಗೊತ್ತಾಗುತ್ತದೆಯೇ… ಅದನ್ನೆಲ್ಲ ಓದಿ ಮನೆ ಹಾಳು ಮಾಡಿಕೊಳ್ಳುತ್ತಾರೆ. ಅಷ್ಟೇ…” (ಕುವೆಂಪು ೨೦೦೬ಅ, ೬೭).

ಅಷ್ಟೇ ಅಲ್ಲದೆ ಮುಗ್ಧ ಜನರನ್ನು ದೇವರು ದಿಂಡರ ಹೆಸರಿನಲ್ಲಿ ಹೆದರಿಸಿ ಮಾನಸಿಕ ದಾಸ್ಯಕ್ಕೆ ಒಳಗು ಮಾಡಿದ್ದರು. ಹೂವಯ್ಯ ರಾಮಯ್ಯರ ಓದು ನಿಲ್ಲಿಸಿದರೆ ಚಂದ್ರಯ್ಯನ ಮನೆ ಉಳಿಯುತ್ತದೆಂದೂ ಇದರಿಂದ ‘ದೇವರ ಕೋಪಕ್ಕಾದರೂ ಪಾತ್ರರಾಗಬಹುದು ಏಕೆಂದರೆ, ಅವನು ದಯಾಸಾಗರ, ಕರುಣಾಶಾಲಿ, ಆದರೆ ಈ ಭೂತ ದೆವ್ವಗಳ ಸಿಟ್ಟಿಗೆ ಬಿದ್ದರೆ ಉಳಿಗತಿಯಿಲ್ಲ….’ ಎಂದು ಹೆದರಿಸುತ್ತಿದ್ದರು (ಕುವೆಂಪು ೨೦೦೬ಅ, ೬೮).

ಇದರೊಂದಿಗೆ ಜಾತಿ ಶ್ರೇಣಿಯಲ್ಲಿ ಕೆಳಗಿದ್ದರೂ ಮೇಲ್ವರ್ಗಕ್ಕೆ ಸೇರಿದ ಗುಂಪುಗಳು ತಮಗಿಂತ ಕೆಳಗಿರುವ ಗುಂಪುಗಳು ತಮ್ಮಂತೆ ಆಸ್ತಿ ಹೊಂದಿರಬಾರದೆಂಬ ಭಾವನೆ ಹೊಂದಿದ್ದರು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಇದನ್ನು ಹೀಗೆ ಪ್ರತಿಬಿಂಬಿಸಲಾಗಿದೆ:

“ಸಾಧಾರಣವಾಗಿ ಒಕ್ಕಲಿಗ ಒಡೆಯರ ಒಕ್ಕಲುಗಳಾಗಿದ್ದುಕೊಂಡು ಬಗನಿಯ ಮರದಿಂದ ಕಳ್ಳು ಇಳಿಸಿ ಕುಡಿದು, ಮಾರಿ, ಜೀವನ ಮಾಡುವ ಹಳೆಪೈಕದವರಿಗೆ (ಅವರಿಗೆ ‘ದೀವರು ‘ಎಂಬ ಹೆಸರೂ ಉಂಟು) ಸ್ವಂತ ಜಮೀನಿರುವುದು ಬಹಳ ಅಪೂರ್ವ; ಹಾಗೆ ಜಮೀನು ಹೊಂದುವುದು ಮಹಾ ಅನಾಚಾರವೆಂದೂ ಅನೇಕರ ಮನಸ್ಸು, ವೇದ ಕಲಿಯುವುದು ಶೂದ್ರರಿಗೆ ಹೇಗೆ ನಿಷಿದ್ಧವೋ ಹಾಗೆಯೇ ಸ್ವಂತ ಜಮೀನು ಮಾಡುವುದು ಹಳೆಪೈಕದವರಿಗೆ ನಿಷಿದ್ಧ ಎಂದೂ ಒಕ್ಕಲಿಗರಾಗಿದ್ದ ಹೆಗ್ಗಡೆ ಗೌಡ ನಾಯಕರುಗಳೆಲ್ಲ ಸೇರಿ ತೀರ್ಮಾನ ಮಾಡಿದ್ದರು” (ಕುವೆಂಪು ೨೦೦೬ಬ, ೮).

ಹೀಗೆ ಆಯಾ ಜಾತಿಗೆಂದು ಒಂದೊಂದು ಕಸುಬು ಮೀಸಲಾಗಿತ್ತು. ಆ ನಿಯಮವನ್ನೇನಾದರೂ ಮೀರಿದರೆ ಜಾತಿಯಿಂದ ಬಹಿಷ್ಕಾರ ಹಾಕುತ್ತಿದ್ದರು. ಆರ್ಥಿಕ ಚಟುವಟಿಕೆಯ ಉಲ್ಲಂಘನೆಯಿಂದ ಸಾಮಾಜಿಕವಾಗಿ ಬಹಿಷ್ಕಾರದ ಶಿಕ್ಷೆ ಅನುಭವಿಸಬೇಕಾಗುತ್ತಿತ್ತು. ಹಾಗಾಗಿ ವರ್ಣ ವರ್ಗ ಜಾತಿಯ ಕಟ್ಟಳೆಯನ್ನು ಅನುಸರಿಸಿ ಸಮಾಜ ಅಸಮಾನತೆಯನ್ನು ಸಮರ್ಥಿಸಿಕೊಂಡು, ಪಾಲಿಸಿಕೊಂಡು ಬಂದಿದೆ. ಒಂದೊಂದು ವೃತ್ತಿಯೂ ಒಂದೊಂದು ಜಾತಿಯ ಸ್ವತ್ತಾಗಿತ್ತು. ಇದರಿಂದ ಹಿಂದುಳಿದವರು ಹಿಂದೆಯೇ ಉಳಿಯುತ್ತಿದ್ದರು. ಉತ್ತಮ ಕುಲದವರು ಇನ್ನೂ ಉನ್ನತಿ ಪ್ರಗತಿಗಳನ್ನು ಸಾಧಿಸುತ್ತ ಮುಂದುವರಿಯುತ್ತಿದ್ದರು. ಇದು ಸಮಾಜದ ಆರ್ಥಿಕ ವ್ಯವಸ್ಥೆಯಲ್ಲಿ ಗಣನೀಯವಾದ ಬಿರುಕನ್ನುಂಟು ಮಾಡಿತು.

ಆದರೆ ಉತ್ತಮ ಕುಲದವರು ಇನ್ನೂ ಉತ್ತಮ ಆರ್ಥಿಕ ಲಾಭ ಗಳಿಸುವಲ್ಲಿ ತಮ್ಮ ಜಾತಿ ಕುಲ ಕಸುಬನ್ನು ಮೀರಿದ್ದು ಕಾದಂಬರಿಗಳಲ್ಲಿ ಕಾಣಬಹುದು. ಘಟ್ಟದಕೆಳಗಿನಿಂದ ಬಂದ ಕಲ್ಲೂರು ದೇವಾಸ್ಥನದಲ್ಲಿ ಪುರೋಹಿತನಾಗಿ ನೆಲೆಸಿದ ಮಂಜಪ್ಪ ಭಟ್ಟರು ಲೇವಾದೇವಿ ವ್ಯವಹಾರ, ಸಾಲ ನೀಡುವುದು ಮುಂತಾದ ಚಟುವಟಿಕೆಗಳಿಂದ ಸಾಕಷ್ಟು ಜಮೀನುಗಳನ್ನು ಹೊಂದಿದ್ದರು ಅಷ್ಟೇ ಅಲ್ಲದೆ ಜಮೀನ್ದಾರರಿಗೆ ಸಾಲ ಕೊಡುವಷ್ಟು ಶ್ರೀಮಂತರಾದರು.

ಹೀಗೆ ಪುರೋಹಿತ ವರ್ಗದವರು ವರ್ಣ ವ್ಯವಸ್ಥೆಯಲ್ಲಿ ತಮಗಿಂತ ಕೆಳಗಿನವರಾದ ಮೂರೆನೇ ಸ್ತರದಲ್ಲಿರುವ ವೈಶ್ಯರ ಕುಲಕಸುಬಾದ ಲೇವಾದೇವಿಯಂತಹ ಹಣಕಾಸಿನ ವ್ಯವಹಾರಕ್ಕೆ ಕೈಹಾಕಿ ಸಹ ಲಾಭ ಪಡೆದುಕೊಂಡರು.

ಒಕ್ಕಲಿಗರು ತಮಗಿಂತ ಮೇಲಿನವರಾದ ವೈಶ್ಯರಂತೆ ಹಣಕಾಸು ವ್ಯವಹಾರವನ್ನೂ ಮಾಡಿ ಲಾಭಗಳಿಸಿದರು ಕಾನೂರು ಹೆಗ್ಗಡಿತಿಯ ಕಾನೂರಿನ ಚಂದ್ರಯ್ಯಗೌಡರು, ಸೀತೆಮನೆ ಸಿಂಗಪ್ಪಗೌಡರು, ಸಿಂಬಾವಿ ಭರಮೈ ಹೆಗ್ಗಡೆಯವರು, ಮುತ್ತಳ್ಳಿ ಶ್ಯಾಮಯ್ಯ ಗೌಡರು, ಹಳೆಮನೆ ಸುಬ್ಬಣ್ಣ ಇವರೆಲ್ಲರೂ ತಮ್ಮ ಒಕ್ಕಲುಗಳಿಗೆ ಸಾಲು ಕೊಡುವುದು ಲೇವಾದೇವಿ ವ್ಯವಹಾರ ಮಾಡುವುದು, ಸಾಲಕ್ಕೆ ಭೂಮಿ ಆಡವಿಟ್ಟುಕೊಳ್ಳುವುದು ಮಾಡಿ ಹಣ ಆಸ್ತಿ ಸಂಪಾದಿಸಿದ್ದರು.

ಅಲ್ಲದೆ ತಮ್ಮ ಜನಾಂಗದವರೇ ಆದರೂ ಹಣ ಆಸ್ತಿ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿದ್ದರು. ಇದಕ್ಕೆ ಉತ್ತಮ ಉದಾಹರಣೆ ಕೆಳಕಾನೂರಿನ ಅಣ್ಣಯ್ಯಗೌಡರು ಚಂದ್ರಯ್ಯಗೌಡರ ಬಳಿ ಮಾಡಿದ ಸಾಲ ತೀರಿಸಲಾಗಿದೆ ತಮ್ಮ ಮನೆ ಸಾಮಾನು, ಜಾನುವಾರುಗಳನ್ನು ಗಾಡಿಯಲ್ಲಿ ಹೇರಿಕೊಂಡು ರಾತ್ರಿ ಸಾಗಿಸುತ್ತಿದ್ದಾಗ ಚಂದ್ರಯ್ಯಗೌಡ ಅದನ್ನು ತಡೆದು ಆ ಸಾಮಾನುಗಳನ್ನು ತನ್ನ ಸಾಲಕ್ಕೆ ಮುಟ್ಟುಗೋಲು ಹಾಕುತ್ತಾನೆ. ಸಜಾತಿಯವನಾದರೂ ಸಹ ಅದು ಮುಖ್ಯವಾಗಿರದೆ ಅವನು ಕೊಡಬೇಕಾದ ಸಾಲ ತೀರಿಸಲಾರದೆ ಒಕ್ಕಲು ಕೀಳುವುದು ಜಮೀನ್ದಾರಿ ಪದ್ಧತಿಯಲ್ಲಿ ಅಕ್ಷಮ್ಮ್ಯ ಅಪರಾಧವಾಗಿತ್ತು.

ಆರ್ಥಿಕವಾಗಿ ಪರಿಸ್ಥಿತಿ ಹೀಗಿದ್ದರೆ, ಸಾಮಾಜಿಕವಾಗಿ ಇದು ಮತ್ತೊಂದು ರೂಪ ಪಡೆಯುತ್ತಿತ್ತು. ಮದುವೆ ಮೊದಲಾದ ಸಂಭ್ರಮಗಳಲ್ಲಿ ಹಳೆಪೈಕದವರು ಒಕ್ಕಲಿಗರನ್ನು ಅನುಸರಿಸಬಾರದು. ಮದುಮಗ ಕುದುರೆ ಮೇಲೆ ಸವಾರಿ ಮಾಡಬಾರದು. ಅವರ ಮದುಮಕ್ಕಳು ದಂಡಿಗೆಯ ಮೇಲೆ ಕೂರಬಾರದು ಎಂದು ಒಕ್ಕಲಿಗರು ತೀರ್ಮಾನಿಸಿದ್ದರು. ಇದನ್ನು ಮೀರಿದರೆ ಮದುಮಕ್ಕಳಿಗೆ ಮತ್ತು ದಿಬ್ಬಣದವರಿಗೆ ಉಳಿಗತಿಯಿರಲಿಲ್ಲ. ಸರ್ಕಾರವೂ ಒಕ್ಕಲಿಗರ ಪರವಾಗಿಯೇ ತೀರ್ಮಾನ ಕೊಟ್ಟಿತೆಂದು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಕುವೆಂಪು ತಿಳಿಸಿರುವರು. ಆರ್ಥಿಕವಾಗಿ ಮುಂದುವರಿದ ಜನಾಂಗ ತಮಗಿಂತ ಕೆಳಗಿನ ವರ್ಗವನ್ನು ಹೇಗೆ ಸಾಮಾಜಿಕವಾಗಿ ಹದ್ದುಬಸ್ತಿನಲ್ಲಿಡುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.

ಈ ವಿವರ ಕಥೆಯ ಓಟಕ್ಕೆ ಬೇಕಾದ ಘಟನೆಯಾಗಿರದೇ ಮಲೆನಾಡಿನಲ್ಲಿ ನಡೆದ ನಿಜ ಘಟನೆಯ ಮೇಲೆ ಆಧಾರಿತವಾಗಿದೆ. ೧೯೩೬ಗಿಂತ ಹಿಂದೆ ಹಳೆಪೈಕದವರಿಗೂ ಒಕ್ಕಲಿಗರಿಗೂ ಇದರ ಬಗ್ಗೆ ಜಗಳ ನಡೆಯಿತು. ಇದು ವಿಕೋಪಕ್ಕೆ ತಿರುಗಿ ಕೋರ್ಟಿಗೆ ಹೋಗಿ, ಬ್ರಿಟಿಷ್ ಸರ್ಕಾರ ಒಕ್ಕಲಿಗರ ಪರವಾಗಿಯೇ ತೀರ್ಪನ್ನು ಕೊಟ್ಟಿತೆಂದು ಶೇಷಪ್ಪಗೌಡರು ಸ್ಮರಿಸುತ್ತಾರೆ (ನೋಡಿ: ಅನುಬಂಧ ೩) ಅರಗದಲ್ಲಿ ಹಳೆಪೈಕದವರಿಗೂ ಒಕ್ಕಲಿಗರಿಗೂ ಮದುವೆಯಲ್ಲಿ ಬಳಸುವ ದಂಡಿಗೆಯ ವಿಷಯದಲ್ಲಿ ಹೊಡೆದಾಟವಾಯಿತು. ಈ ಕೇಸು ನಗರದ ಡಿವಿಷನಲ್ ಕೋರ್ಟಿಗೆ ಒಬ್ಬ ಬ್ರಟಿಷ್ ಜಡ್ಜ್ ನ ಎದುರು ಬಂದಿತ್ತು. ಆಗ ಅವರು ದಂಡಿಗೆ ದಿಬ್ಬಣ ಇದು ಒಕ್ಕಲಿಗರಿಗೆ ವಂಶ ಪಾರಂಪರ್ಯವಾಗಿ ಬಂದ ಹಕ್ಕಾದ್ದರಿಂದ ಬೇರೆಯವರು ಇದನ್ನು ಅನುಸರಿಸುವಂತಿಲ್ಲ ಎಂದು ತೀರ್ಪುತ್ತರು. ಇದನ್ನು ಶ್ರೀ ಅಲಿಗೆ ಗಣಪಯ್ಯ ನಾಯಕರು ಹಾಗು ಅಲೆಮನೆ ಶ್ರೀ ಸುರೇಶ್ ಅವರು ಒಂದು ದಾಖಲೆ ಪತ್ರದ ಆಧಾರದ ಮೇಲೆ ತಿಳಿಸಿರುವರು.

ಹಳೆಪೈಕದವರು ಒಕ್ಕಲಿಗರ ವಿರುದ್ಧ ಪ್ರತಿಭಟನೆ ತೋರಿದರೆ, ಕುವೆಂಪು ಅವರು ತಮ್ಮ ಕಾದಂಬರಿಗಳಲ್ಲಿ ಪುರೋಹಿತಶಾಹಿ ವ್ಯವಸ್ಥೆ, ಯಜಮಾನ ಸಂಸ್ಕೃತಿ ಹಾಗು ಮತಧರ್ಮ ಮೌಢ್ಯಗಳನ್ನು ಏಕಕಾಲಕ್ಕೆ ಖಂಡಿಸಿ, ಪ್ರತಿಭಟನೆ ತೋರುತ್ತಾರೆ. ‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ಹೂವಯ್ಯನ ಮೂಲಕ ಈ ಜಡ ಸಂಪ್ರದಾಯಗಳನ್ನು ಪ್ರಶ್ನಿಸಿದರು.

ಇವೆಲ್ಲವೂ ಗುನ್ನಾರ್ ಮಿರ್ಡಾಲ್ ಅವರ ಆನಿಸಿಕೆಯನ್ನು ಬೆಂಬಲಿಸುವಂತಿವೆ. ಗುನ್ನಾರ್ ಮಿರ್ಡಾಲ್ ಪ್ರಕಾರ ‘ಸಾಮಾಜಿಕ ಅಸಮಾನತೆಯು ಸಮಾಜದಲ್ಲಿ ದೊರೆಯುವ ಗೌರವ ಇದಕ್ಕೆ ಸೀಮಿತವಾದರೆ ಆರ್ಥಿಕ ಅಸಮಾನತೆಯು ಆಸ್ತಿ ಮತ್ತು ಆದಾಯಕ್ಕೆ ಸಂಬಂಧಿಸಿದುದಾಗಿದೆ. ಆದರೂ ಇವೆರಡರ ನಡುವೆ ಬೇರ್ಪಡಿಸಲಾಗದಂತಹ ಅತ್ಯಂತ ನಿಕಟವಾದ ಸಂಬಂಧವಿದೆ. ಸಾಮಾಜಿಕ ಅಸಮಾನತೆ ಆರ್ಥಿಕ ಅಸಮಾನತೆಗೆ ಕಾರಣವಾದರೆ, ಆರ್ಥಿಕ ಅಸಮಾನತೆಯು ಸಾಮಾಜಿಕ ಅಸಮಾನತೆಯನ್ನು ಬೆಂಬಲಿಸುತ್ತದೆ’. ಮತ್ತು ‘ವಂಶಪಾರಂಪರ್ಯವಾದ ಸಾಮಾಜಿಕ ಮತ್ತು ಅರ್ಥಿಕ ಅಸಮಾನತೆಯನ್ನು ಯಾವುದೇ ಹಂತದಲ್ಲೂ ಬೆಂಬಲಿಸುವ ಪ್ರಚಂಡವಾದ ಸಾಮಾಜಿಕ ಚಲನಶಕ್ತಿಯಾಗುವುದೇ ಚಾಲ್ತಿಯಲ್ಲಿರುವ ಧರ್ಮದ ಸಾಮಾನ್ಯ ಗುಣವಾಗಿದೆ’ (ಮಿರ್ಡಾಲ್ ೧೯೭೦, ೫೯).

ಜಾತಿ ಧರ್ಮದ ಆಶ್ರಯದಲ್ಲಿ ಎಲ್ಲ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗಳು ಪ್ರಶ್ನಾತೀತವಾಗುತ್ತವೆ, ದೈವಕ್ಕೆ ಅಧೀನವಾಗುತ್ತವೆ. ಹಾಗಾಗಿ ‘ವರ್ಗಗಳು ಪ್ರಜ್ಞಾವಂತ ವರ್ಗಗಳಾಗಿ ರೂಪುಗೊಂಡು ಪ್ರಗತಿಪರ ಚಾರಿತ್ರಿಕ ಹೋರಾಟ ನಡೆಸುವುದು ಇಂತಹ ಸಮಾಜಗಳಲ್ಲಿ ಅಸಾಧ್ಯ’ ಎಂದು ಡಿ. ಆರ್. ನಾಗರಾಜ್ ಅಭಿಪ್ರಾಯಪಡುತ್ತಾರೆ (ಶಿವಶಂಕರ್ ೨೦೦೪, ೩೫೦). ಆದರೂ ಕಾನೂರು ಹೆಗ್ಗಡಿತಯಲ್ಲಿ ಹೂವಯ್ಯ ಹಳೆಯ ಕಂದಾಚಾರ ಗೊಡ್ಡು ಸಂಪ್ರದಾಯಗಳನ್ನು, ಮೇಲ್ಜಾತಿಯವರ ರೀತಿ ನೀತಿಯನ್ನು ಪ್ರಶ್ನಿಸಿ ಪ್ರತಿಭಟನೆ ಸೂಚಿಸುತ್ತಾನೆ.