ಕೃಷಿಯಾಧಾರಿತ ಸಮಾಜದಲ್ಲಿ ಅಥವಾ ಒಕ್ಕಲು ಪ್ರಧಾನ ಆರ್ಥಿಕತೆಯಲ್ಲಿ ಸಾಲವನ್ನು ಉತ್ಪಾದಕ ಹಾಗು ಅನುತ್ಪಾದಕ ಕಾರಣಗಳಿಗಾಗಿ ಪಡೆಯಲಾಗುತ್ತಿತ್ತು. ಉತ್ಪಾದಕ ಸಾಲವನ್ನು ಸಾಗುವಳಿಗಾಗಿ ಉಪಯೋಗಿಸುತ್ತಿದ್ದರು. ಅನುತ್ಪಾದಕ ಸಾಲವನ್ನು ಮನೆಯ ಖರ್ಚಿಗಾಗಿ, ಮದುವೆ ಮುಂತಾದ ಕಾರ್ಯಗಳಿಗೆ ಉಪಯೋಗಿಸುತ್ತಿದ್ದರು. ಉತ್ಪಾದಕ ಸಾಲವನ್ನು ಕೃಷಿ ಉತ್ಪಾದನೆ ಹೆಚ್ಚಿ ರೈತನ ವರಮಾನ ಮತ್ತು ಜೀವನಮಟ್ಟ ಸುಧಾರಿಸುತ್ತದೆ. ಆದರೆ ಅನುತ್ಪಾದಕ ಸಾಲದಿಂದ ರೈತರ ಸಾಲದ ಹೊರೆ ಅಧಿಕವಾಗುತ್ತದೆ. ಅಷ್ಟೇ ಅಲ್ಲದೆ ಅನುತ್ಪಾದಕ ಸಾಲವನ್ನು ಅದರ ಬಡ್ಡಿಯೊಂದಿಗೆ ಮರುಪಾವತಿ ಮಾಡುವುದು ಕಠಿಣವಾಗುತ್ತದೆ.

ಕುವೆಂಪು ಅವರ ಕಾದಂಬರಿಗಳಲ್ಲಿ ಕೇವಲ ಅನುತ್ಪಾದಕ ಕಾರಣಗಳಿಗೆ ಒಕ್ಕಲುಗಳು ಹಾಗು ಜೀತದಾಳುಗಳು, ಸಾಲ ಪಡೆಯುವುದನ್ನು ಮತ್ತು ಅದರ ಪರಿಣಾಮಗಳನ್ನು ಕಾಣುತ್ತೇವೆ. ಉತ್ಪಾದಕ ಕಾರಣಗಳಿಗೆ ಜವೀನ್ದಾರರು ಸಹ ಸಾಲ ಪಡೆದು ಉದಾಹರಣೆ ಇಲ್ಲಿ ಸಿಗುವುದಿಲ್ಲ.

ಹಣಕಾಸಿನ ವ್ಯವಹಾರಕ್ಕೆ ಬ್ಯಾಂಕುಗಳಂತಹ ಸಾಂಸ್ಥಿಕ ಮೂಲಗಳು ಮಲೆನಾಡಿನ ಹಳ್ಳಿಗಳಲ್ಲಿ ಇರಲಿಲ್ಲ. ಅಸಂಘಟಿತ, ಸಾಂಸ್ಥಿಕೇತರ ಮೂಲಗಳೇ ಸಾಲ ಕೊಡುವ ವ್ಯವಹಾರದಲ್ಲಿ ತೊಡಗಿದ್ದವು. ಇವುಗಳಲ್ಲಿ ಸಾಹುಕಾರರು, ವ್ಯಾಪಾರಸ್ಥರು ಮತ್ತು ದಲ್ಲಾಳಿಗಳು ಆಪ್ತರು ಹಾಗೂ ಜಮೀನುದಾರರು – ಇವು ಮುಖ್ಯವಾದ ಸ್ಥಳೀಯ ಸಾಂಸ್ಥೀಕೇತರ ಮೂಲಗಳು ಆಗಿದ್ದವು (ಬಸವ ೧೯೯೯).

ಆಪ್ತರು ಕೊಡುವ ಸಾಲ ನಗದು ಅಥವಾ ಧಾನ್ಯರೂಪದಲ್ಲಿರುತ್ತದೆ. ಇಂಥ ಸಾಲವು ಅನೌಪಚಾರಿಕವಾಗಿದ್ದು ಅದರ ಮೇಲೆ ಬಡ್ಡಿಯನ್ನು ಸಾಮಾನ್ಯವಾಗಿ ಆಕರಿಸುವುದಿಲ್ಲ. ಬಡ್ಡಿ ಇದ್ದರೂ ಬಹಳ ಕಡಿಮೆ ಇರುತ್ತದೆ. ವ್ಯಾಪಾರಸ್ಥರೂ ಬಡ್ಡಿಗೆ ಸಾಲ ಕೊಡುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ಶ್ರೀಮಂತರು ಮತ್ತು ಜಮೀನ್ದಾರರು ಕೊಡುವ ಸಾಲ ಬಹು ಮುಖ್ಯವೆನಿಸಿವೆ. ಇವರು ಅತಿ ಹೆಚರಚಿನ ಬಡ್ಡಿಗೆ ಸಾಲ ನೀಡುತ್ತಿದ್ದರು. ಕುವೆಂಪು ಅವರ ಕಾದಂಬರಿಗಳಲ್ಲಿ ಇವುಗಳೇ ಸಾಲ ಕೊಡುವ ವರ್ಗಗಳು. ಜಮೀನ್ದಾರರಿಗೂ ಸಾಲ ಕೊಡುತ್ತಿದ್ದ ಸಾಹುಕಾರ ಲೇವಾದೇವಿಗಾರರು ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರವಹಿಸುತ್ತಾರೆ.

ಲೇವಾದೇವಿ ವ್ಯವಹಾರಸ್ಥರು ಅಥವಾ ಸಾಹುಕಾರರು

ಇವರು ಗ್ರಾಮೀಣ ಪ್ರದೇಶದಲ್ಲಿ ಅನೇಕ ಶತಮಾನಗಳಿಂದ ಕಾರ್ಯನಿರ್ವಹಿಸುತ್ತ ಬಂದಿರುವರು. ಇವರಲ್ಲಿ ಎರಡು ವರ್ಗಗಳಿವೆ. ಮೊದಲನೆಯದು ಕೇವಲ ಲೇವಾದೇವಿ ವ್ಯವಹಾರ ಮಾಡುವ ವೃತ್ತಿದಾರರ ವರ್ಗ. ಇವರಿಗೆ ಸಾಹುಕಾರ, ಬನಿಯಾ, ಮಹಾಜನ, ಶೆಟ್ಟಿ ಎಂದು ಮುಂತಾಗಿ ಕರೆಯುತ್ತಾರೆ. ಎರಡನೆಯದು ಲೇವಾದೇವಿ ವ್ಯವಹಾರ ಮಾಡುವ ರೈತ ವರ್ಗ. ಇವರು ಶ್ರೀಮಂತ ಜಮೀನದಾರರು. ಇವರ ಮುಖ್ಯ ಕಸುಬು ಬೇಸಾಯ, ಉಪ ಕಸುಬು ಲೇವಾದೇವಿ ವ್ಯವಹಾರ. ಈ ಎರಡೂ ವರ್ಗಗಳು ಹಳ್ಳಿ ಜನರಿಗೆ ಸಾಲ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಸ್ವಾತಂತ್ರ್ಯ ದೊರೆತ ನಂತರದ ದಶಕಗಳಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಸಾಲವನ್ನು ಸಾಂಸ್ಥಿಕೇತರ ಮೂಲಗಳಿಂದಲೇ ಪಡೆಯಲಾಗುತ್ತಿತ್ತು. ಇದರಿಂದ ಸ್ವಾತಂತ್ರ್ಯಪೂರ್ವದಲ್ಲಿದ್ದ ಸಾಂಸ್ಥಿಕೇತರ ಸಾಲದ ಮೂಲಗಳ ಮಹತ್ವ ಎಷ್ಟಿತ್ತೆಂದು ಈ ಮೂಲಕ ಸ್ಪಷ್ಟವಾಗುತ್ತದೆ.

ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಪ್ರಮಾಣದಲ್ಲಿ ಇವರ ಮೇಲೆಯೇ ಅವಲಂಬಿಸುವುದಕ್ಕೆ ಕೆಲವು ಪ್ರಮುಖ ಕಾರಣಗಳಿವೆ. ಇದರ ಬಹುಮುಖ್ಯ ಕಾರಣ ಇವರು ಅನುಸರಿಸುವ ವಿಧಾನಗಳು. ಇವು ಸುಲಭವಾಗಿರುವುದಲ್ಲದೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಹೊಂದಿಕೊಳ್ಳುವಂಥವು. ಅಂದರೆ ಸಾಲ ಪಡೆಯುವ ಮೊದಲು ಯಾವುದೇ ರೀತಿಯ ವಿಧಿವತ್ತಾದ ಕ್ರಮಗಳನ್ನು ಅನುಸರಿಸಬೇಕಾದ ಪ್ರಮೇಯವಿರುವುದಿಲ್ಲ. ಏಕೆಂದರೆ, ಲೇವಾದೇವಿದಾರರು ಹಾಗೂ ಸಾಲ ಪಡೆಯುವ ಜನರು ಒಂದೇ ಪ್ರದೇಶಕ್ಕೆ ಸೇರಿದವರಾದ್ದರಿಂದ ಪರಸ್ಪರ ಪರಿಚಯವಿರುತ್ತದೆ. ಇದಲ್ಲದೆ, ಹೆಚ್ಚಿನ ಪ್ರಮಾಣದ ಸಾಲಕ್ಕೆ ರೈತರ ಜಮೀನಿನ ಆಧಾರದ ಮೇಲೆ ಅಥವಾ ವಾಗ್ದಾನ ಪತ್ರ (ಪ್ರಾಮಿಸರಿ ನೋಟ್‌)ಗಳ ಆಧಾರದ ಮೇಲೆ ಕೂಡಲೇ ಸಾಲ ಕೊಡುವರು. ಸಾಲ ಕೊಡಬೇಕಾದರೆ ಸಾಲದ ಕಾರಣಗಳು ಮುಖ್ಯವಾಗುವುದಿಲ್ಲ. ಹೀಗಾಗಿ ಉತ್ಪಾದಕ ಮತ್ತು ಅನುತ್ಪಾದಕ ಚಟುವಟಿಕೆಗಳಿಗೆ ಸಾಲವನ್ನು ಸುಲಭವಾಗಿ ಪಡೆಯಬಹುದು.

ಇಷ್ಟೆಲ್ಲ ಅನುಕೂಲತೆಗಳು ಇದ್ದರೂ ಲೇವಾದೇವಿ ವ್ಯಾಪಾರದಲ್ಲಿ ಅನೇಕ ಅನಾನುಕೂಲತೆಗಳೂ ಇದ್ದವು. ಈ ವಿಧಾನದಲ್ಲಿ ಹೆಚ್ಚು ಮೋಸದ ಪ್ರಕರಣಗಳು ಇರುತ್ತಿದ್ದವು. ಗ್ರಾಮೀಣ ಜನರು ಅನಕ್ಷರಸ್ಥರಾದುದರಿಂದ ಬಿಳಿಯ ಕಾಗದದ ಮೇಲೆ ಜನರಿಂದ ಸಹಿ ಪಡೆದು, ಅನಂತರ ಕೊಟ್ಟ ಹಣಕ್ಕಿಂತಲೂ ಹೆಚ್ಚು ಹಣ ಅದರಲ್ಲಿ ನಮೂದಿಸುತ್ತಿದ್ದರು. ಅದರೊಂದಿಗೆ ಕೊಟ್ಟ ಸಾಲಕ್ಕೆ ಅತಿ ಹೆಚ್ಚಿನ ಬಡ್ಡಿ ದರ ನಿಗದಿ ಮಾಡುವುದು ಅಥವಾ ಕೆಲವೊಮ್ಮೆ ಚಕ್ರಬಡ್ಡಿಯನ್ನು ಆಕರಿಸುವುದನ್ನು ಮಾಡುತ್ತಿದ್ದರು ಇದು ಜನರು ಸದಾ ಸಾಲಗಾರರಾಗಿಯೇ ಇರುವಂತಹ ಪರಿಸ್ಥಿತಿಗೆ ತಂದೊಡ್ಡುತ್ತಿತ್ತು ಹೀಗಾಗಿ ಸಾಲದ ಹಣದ ಮರುಪಾವತಿ ಅಸಾಧ್ಯವೆಂದು ತೋರಿದಾಗ ಆಧಾರವಾಗಿಟ್ಟುಕೊಂಡ ಜಮೀನು, ಆಸ್ತಿಯನ್ನು ಲೇವಾದೇವಿದಾರರು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದರು (ಬಸವ ೧೯೯೯). ಹೀಗೆ ಅನೇಕ ದೋಷಯುಕ್ತ ವಿಧಾನಗಳನ್ನು ಲೇವಾದೇವಿಗಾರರು ಅನುಸರಿಸುತ್ತಿದ್ದರು.

ಕುವೆಂಪು ಅವರ ಕಾದಂಬರಿಗಳಲ್ಲಿ ಲೇವಾದೇವಿ ವ್ಯವಹಾರದಲ್ಲಿ ತೊಡಗಿಸಿಕೊಂಡವರೆಂದರೆ ಪುರೋಹಿತ ಮಂಜಭಟ್ಟ ಹಾಗೂ ಜಮೀನ್ದಾರರು. ವ್ಯಾಪಾರಸ್ಥರಾದ ಕರ್ಮೀನು ಸಾಬರ ಸಾಲದ ವ್ಯವಹಾರದ ಬಗ್ಗೆ ಒಂದು ದೃಷ್ಟಿ ಬೀರಿದ್ದಾರೆ. ಆದರೆ ಆಪ್ತ ವಲಯದ ಸಾಲದ ಬಗ್ಗೆ ಹೇಳಿಲ್ಲ. ಬಹುಶಃ ಅದು ಅನೌಪಚಾರಿಕವಾಗಿದುದರಿಂದಲೂ, ಅದರ ಪರಿಣಾಮ ಜೀವನದ ಮೇಲೆ ಗಣನೀಯವಾಗಿ ಆಗುತ್ತಿರಲಿಲ್ಲವಾದ್ದರಿಂದಲೂ ಅಥವಾ ಕಥಾ ಹಂದಕರಕ್ಕೆ ಸೂಕ್ತವಾಗುತ್ತಿರಲಿಲ್ಲವೆಂದೋ ಅದನ್ನು ಕೈಬಿಟ್ಟಿರಬೇಕು.

ಸ್ವಾತಂತ್ರ್ಯಪೂರ್ವದ ಹಳ್ಳಿಗಳ ಅಸಂಘಟಿತ ಹಣಕಾಸು ವ್ಯವಸ್ಥೆ

ಕುವೆಂಪು ಅವರ ಕಾದಂಬರಿಗಳ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಪೂರ್ವದ ಹಳ್ಳಿಗಳಲ್ಲಿದ್ದ ಹಣಕಾಸಿನ ವ್ಯವಸ್ಥೆಯತ್ತ ಗಮನಹರಿಸೋಣ. ಹಳ್ಳಿಗಳು ಮೂಲತಃ ಕೃಷಿಯಾಧಾರಿತವಾದದ್ದರಿಂದ ಲೇವಾದೇವಿ ವ್ಯವಹಾರ ಮಾಡುವವರು ಬಹುಪಾಲು ದೊಡ್ಡ ಭೂಮಾಲೀಕರೇ ಆಗಿರುತ್ತಿದ್ದರು. ಸ್ವಾತಂತ್ರ್ಯಪೂರ್ವ ಗ್ರಾಮೀಣ ಮಲೆನಾಡಿನಲ್ಲಿ ಬ್ಯಾಂಕುಗಳು ಇರಲಿಲ್ಲ. ಅದರ ಬದಲು ಸ್ಥಳೀಯ ಶ್ರೀಮಂತರು, ಭೂಮಾಲೀಕರು ಸಾಲವನ್ನು ನೀಡುತ್ತಿದ್ದರು. ಇಂತಹ ಅಸಂಘಟಿತ ಹಣಕಾಸಿನ ವ್ಯವಸ್ಥೆ ಆಂತರಿಕ ವ್ಯಾಪಾರವನ್ನು ಶೇಕಡ ೯೦ ರಷ್ಟನ್ನು ನಿಯಂತ್ರಿಸುತ್ತಿತ್ತು ಎಂದು ೧೯೨೯ರಲ್ಲಿ ಸೆಂಟ್ರಲ್‌ಬ್ಯಾಂಕಿಂಗ್‌ಎನ್‌ಕ್ವೈರಿ ಕಮಿಟಿ ಸಮೀಕ್ಷೆಯಿಂದ ತಿಳಿದು ಬಂದಿದೆ. ಮದ್ರಾಸ್‌ಬ್ಯಾಕಿಂಗ್‌ಎನ್‌ಕ್ವೈರಿ ಕಮಿಟಿ ಪ್ರಕಾರ ಇಂತಹ ಲೇವಾದೇವಿಗಾರರಿಂದಲೇ ಶೇಕಡ ೭೫ರಷ್ಟು ದಕ್ಷಿಣ ಭಾರತದ ರೈತರು ಸಾಲ ಪಡೆಯುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ಸುಮಾರು ೯೦ರಷ್ಟು ಸಾಲ ಅಸಂಘಟಿತ ಲೇವಾದೇವಿಗಾರರಿಂದ ಪೂರೈಕೆಯಾಗುತ್ತಿತ್ತು. ಇವರು ಹೆಚ್ಚಿನ ಬಡ್ಡಿದರ ನಿಗದಿಮಾಡುತ್ತಿದ್ದುದಲ್ಲದೆ ಅನೇಕ ಅವ್ಯವಹಾರ ಮೋಸಗಳನ್ನೂ ಮಾಡುತ್ತಿದ್ದುದು ಭಾರತೀಯ ಗ್ರಾಮೀಣ ಸಾಲ ವ್ಯವಸ್ಥೆಯ ವಿಶಿಷ್ಟ ಲಕ್ಷಣವಾಗಿದೆ (ಧರ್ಮಕುಮಾರ್ ೧೯೮೪).

ಅನೇಕ ನಿಯಮಗಳನ್ನು ಜಾರಿಗೆ ತಂದು ಬಡ್ಡಿದರ ನಿಯಂತ್ರಣ ಮಾಡಲು ಪ್ರಯತ್ನಿಸಿದ ಬ್ರಿಟಿಷ್‌ಸರ್ಕಾರ, ಗ್ರಾಮೀಣ ಸಾಂಸ್ಥಿಕೇತರ ಸಾಲದ ಬಡ್ಡಿ ದರ ನಿಯಂತ್ರಿಸುವಲ್ಲಿ ಮಾತ್ರ ವಿಫಲವಾಯಿತು. ಹಿಂದಿನಿಂದ ಹಾಗೇ ಉಳಿದುಕೊಂಡು ಬಂದ ವಂಶಪಾರಂಪರ್ಯವಾದ ಗ್ರಾಮೀಣ ಸಾಲ ೧೯೧೮ರ ಸಮಯದಲ್ಲಿ ಸುಮಾರು ತೊಂಬತ್ತು ಬಿಲಿಯನ್‌ಷ್ಟಿತ್ತು. ಅಲ್ಲದೆ ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ ಕೃಷಿ ಮಾರುಕಟ್ಟೆಯ ಮೌಲ್ಯ ಇಳಿದು ಪರಿಸ್ಥಿತಿ ಇನ್ನೂ ವ್ಯತಿರಿಕ್ತವಾಯಿತು. ಹಾಗಾಗಿ ಬಡ್ಡಿದರಲ್ಲಿ ಸರ್ಕಾರವು ಜಾರಿಗೊಳಿಸಬೇಕೆಂದಿದ್ದ ಕಾನೂನು ಸಫಲವಾಗಲಿಲ್ಲ. ವೃತ್ತಿಪರ ಲೇವಾದೇವಿಗಾರರನ್ನು ಗುರುತಿಸುವುದೂ ಕಷ್ಟವಿತ್ತು. ಏಕೆಂದರೆ ಅನೇಕರು ತಮ್ಮ ಮೂಲ ವೃತ್ತಿಯೊಡನೆ ಲೇವಾದೇವಿ ವ್ಯವಹಾರವನ್ನು ಮಾಡುತ್ತಿದ್ದರು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಮಂಜಭಟ್ಟರು ಪೌರೋಹಿತ್ಯದೊಂದಿಗೆ ಲೇವಾದೇವಿ ವ್ಯವಹಾರವನ್ನು ಮಾಡುತ್ತಿದ್ದ ಚಿತ್ರಣವನ್ನು ಕುವೆಂಪು ಕೊಡುತ್ತಾರೆ ಎಂಬುದನ್ನು ಗಮನಿಸಬಹುದು.

೧೯೫೦ರ ದಶಕದಲ್ಲಿ ಭಾರತದ ಆರ್ಥಿಕತೆಯಲ್ಲಿ ಅಸಂಘಟಿತ ಲೇವಾದೇವಿಗಾರರ ಪಾಲು ಸುಮಾರು ಶೇಕಡ ೪೩ರಷ್ಟು ಗ್ರಾಮೀಣ ಪ್ರದೇಶದಲ್ಲೂ ಶೇಕಡ ೮ ರಿಂದ ೧೧ರಷ್ಟು ನಗರ ಪ್ರದೇಶದಲ್ಲಿಯೂ ಇತ್ತು ಎಂದು ನ್ಯಾಷನಲ್‌ಸ್ಯಾಂಪಲ್‌ಸರ್ವೆ ತಿಳಿಸುತ್ತದೆ. ಹಾಗಿದ್ದರೆ ೧೯೫೦ರ ದಶಕದ ಹಿಂದಿನ ಪಾಲು ಇದಕ್ಕಿಂತಲೂ ಹೆಚ್ಚು ಇದ್ದಿರಬೇಕೆಂದು ಊಹಿಸಬಹುದು.

ಲೇವಾದೇವಿಯ ಪ್ರಕಾರಗಳು

ಕಡಿದಾಳು ರಾಮಪ್ಪಗೌಡರು ತಮ್ಮ ಕಾಲದಲ್ಲಿ ಮಲೆನಾಡಿನಲ್ಲಿ ಪ್ರಚಲಿತದಲ್ಲಿ ಇದ್ದ ಮೂರು ವಿಧದ ಲೇವಾದೇವಿಯನ್ನು ದಾಖಲಿಸಿದ್ದಾರೆ. ಮೊದಲನೆಯದು ಆಸ್ತಿಯನ್ನು ಆಧಾರವಾಗಿಡುವುದು. ಅಂದರೆ, ಜಮೀನಿರುವ ಕೃಷಿಕನು ಸಾಲ ತೆಗೆದುಕೊಂಡರೆ ಲೇವಾದೇವಿಗಾರನಿಂದ ತೆಗೆದುಕೊಂಡ ಸಾಲಕ್ಕೆ ತನ್ನ ಕೃಷಿ ಭೂಮಿ ಅಥವಾ ಯಾವುದೇ ಸ್ಥಿರಾಸ್ತಿಯನ್ನು ಲೇವಾದೇವಿಗಾರರಿಗೆ ಆಧಾರವಾಗಿ ಕೊಡಬೇಕಿತ್ತು. ಎರಡು, ಸಾಲಕ್ಕೆ ಅಡಿಕೆ, ಭತ್ತ ವಸೂಲಿ, ಇದರಡಿಯಲ್ಲಿ ಸಾಲ ತೆಗೆದುಕೊಂಡವನು ಸಾಲವನ್ನು ಅಡಿಕೆ ಅಥವಾ ಭತ್ತದ ಮೂಲಕ ಮರುಪಾವತಿ ಮಾಡಬೇಕಿತ್ತು. ಮೂರು, ಬೆಲೆ ಬಾಳುವ ಸಾಮಾನುಗಳನ್ನು ಅಡವಿಟ್ಟುಕೊಳ್ಳುವುದು. ಇತರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಅನುಸರಿಸಲಾಗುತ್ತಿದ್ದ ಪದ್ಧತಿ ಬಂಗಾರ, ಬೆಳ್ಳಿ ಆಭರಣಗಳು, ತಾಮ್ರ, ಹಿತ್ತಾಳೆ, ಪಾತ್ರ ಪಗಡನ್ನು ಸಾಲಕ್ಕೆ ಅಡವಿಡುವುದು. ಹೀಗೆ ಸಾಲದ ಮರುಪಾವತಿ ಜಮೀನು, ಭತ್ತ, ಅಡಿಕೆ ಮೂಲಕ ಆಗುತ್ತಿತ್ತು (ರಾಮಪ್ಪಗೌಡ ೧೯೯೫).

ಇದರಿಂದ ಕೆಲವರು ಸಾಕಷ್ಟು ಸ್ಥಿತಿವಂತರಾಗಿದ್ದರು ಸ್ವಾತಂತ್ರ್ಯಪೂರ್ವದ ಮಲೆನಾಡಿನಲ್ಲಿ ಗೌಡರು, ಪುರೋಹಿತರು ಲೇವಾದೇವಿ ವ್ಯವಹಾರ ಮಾಡುತ್ತಿದ್ದರು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಕಲ್ಲೂರು ಪುರೋಹಿತರಾದ ಮಂಜಭಟ್ಟ ಪುರೋಹಿತನಾಗಿ ಮಲೆನಾಡಿಗೆ ಬಂದು ತನ್ನ ಪೌರೋಹಿತ್ಯದೊಂದಿಗೆ ಲೇವಾದೇವಿ ವ್ಯವಹಾರಮಾಡಿ ಶ್ರೀಮಂತನಾಗಿದ್ದ. ಇನ್ನೂ ಅನೇಕ ಗೌಡರು ಇದರಲ್ಲಿ ತೊಡಗಿಕೊಂಡು ಸಾಕಷ್ಟು ಜಮೀನು ಸಂಪಾದಿಸಿದ್ದರು ಎಂಬುದು ಕಾದಂಬರಿಗಳಲ್ಲಿ ಕಾಣುತ್ತೇವೆ.

ಆಸ್ತಿ/ಜಮೀನಿನ ಆಧಾರ

ಇದು ಆಧುನಿಕ ಬ್ಯಾಂಕಿಂಗ್‌ನ ಸಾಲದ ರೀತಿಯಂತಿದ್ದು ಯಾರು ಲೇವಾದೇವಿಗಾರರಿಂದ ಸಾಲ ತೆಗೆದುಕೊಳ್ಳುತ್ತಾರೋ ಅವರು ತಮ್ಮ ಆಸ್ತಿಯನ್ನು ಅವರಿಗೇ ದೀಡುಮಾಡಿಕೊಡಬೇಕು, ಇಲ್ಲವೇ ಭೋಗ್ಯ ಮಾಡಿಕೊಡಬೇಕು ಅಥವಾ ನಂಬಿಕೆ ಕ್ರಯ ಮಾಡಬೇಕು.

[1] ಸಾಲ ತೀರಿಸಲು ಒಪ್ಪಂದವಾದ ಅವಧಿಯೊಳಗೆ ಹಣವನ್ನು ಬಡ್ಡಿ ಸಮೇತ ಮರುಪಾವತಿಸದಿದ್ದಲ್ಲಿ, ಆಧಾರ ಮಾಡಿದ ಆಸ್ತಿ. ಜಮೀನು ಸಾಲ ಕೊಟ್ಟವರ ಪಾಲಾಗುತ್ತಿತ್ತು. ಕೆಲವು ಲೇವಾದೇವಿಗಾರರು ಸಾಲ ತೆಗೆದುಕೊಂಡ ಮುಗ್ಧರಿಂದ ರೆಜಿಸ್ಟರ್ ಕಾಲದಲ್ಲಿ ಎಷ್ಟು ಜಾಮೀನು ಬೇಕಾದರೂ ಬರೆಯಿಸಿಕೊಂಡು ರುಜುವಿಗೆ ಉದ್ದ ಅಥವಾ ಅಡ್ಡ ಎರಡು ಗೆರೆ ಹಾಕುವಂತೆ ಮಾಡುತ್ತಿದ್ದರು (ನೋಡಿ : ಅನುಬಂಧ ೭). ಇದರಿಂದಾಗಿ ಅನೇಕ ಖಾತೆದಾರರು ಇಂಥಾ ಲೇವಾದೇವಿದಾರರಿಗೇ ಗೇಣಿದಾರರಾದರು.

ಈ ಲೇವಾದೇವಿಗಾರರಿಗೆ ಆಸ್ತಿ ಸಂಪಾದನೆಯೇ ಸಾಲ ಕೊಡುವ ಅಂತಿಮ ಗುರಿಯಾಗಿತ್ತು. ಹೀಗಾಗಿ ಜಮೀನು ಎಷ್ಟೇ ದೂರದಲ್ಲಿದ್ದರೂ ಅದನ್ನು ಅಡವಿಟ್ಟುಕೊಂಡು ಸಾಲ ಕೊಡುತ್ತಿದ್ದರು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಸಿಂಬಾವಿ ಭರಮೈ ಹೆಗ್ಗಡೆ, ಕಲ್ಲೂರು ಮಂಜಭಟ್ಟರು, ಹಳೆಮನೆ ಸುಬ್ಬಣ್ಣ ಗೌಡರು ತಮ್ಮ ಊರಿಂದ ದೂರವಿದ್ದರೂ ಹೂವಳ್ಳಿ ವೆಂಕಟಣ್ಣನಿಂದ ಜಮೀನು ಬರೆಸಿಕೊಂಡು ಸಾಲ ಕೊಟ್ಟಿದ್ದರು. ಸಾಲ ಮಾಡಿದವನು ಅದನ್ನು ತೀರಿಸಲಾಗದೆ ತನ್ನ ಆಸ್ತಿಯನ್ನು ಲೇವಾದೇವಿಗಾರನಿಗೇ ಕ್ರಯಕ್ಕೆ ಬರೆದು ಅವರ ಒಕ್ಕಲಾಗುತ್ತಿದ್ದ. ಅದೇ ಜಮೀನನನ್ನು ಗೇಣಿ ಸಾಗುವಳಿಗೆ ಮಾಡುತ್ತಿದ್ದ. ಭೂಮಾಲೀಕರು ಎಷ್ಟೇ ದೂರದಲ್ಲಿದ್ದರೂ ಗೇಣಿ ಕೊಡುತ್ತಿದ್ದ ಅಥವಾ ಒಡೆಯರ ಪರವಾಗಿ ಅವರ ಸೇರೆಗಾರ ಗೇಣಿಯನ್ನು ಸಂಗ್ರಹಿಸುತ್ತಿದ್ದ. ಹೀಗೆ ಯಾವ ಖರ್ಚು ಶ್ರಮವಿಲ್ಲದೇ ಭೂಮಾಲೀಕರಿಗೆ ಗೇಣಿ ಬರುತ್ತಿತ್ತು. ಹೀಗೆ ಶ್ರೀಮಂತರಾದ ಅನೇಕ ಭೂಮಾಲೀಕರಿದ್ದರು.

ಈ ರೀತಿಯ ವ್ಯವಹಾರವನ್ನು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಹೂವಳ್ಳಿ ವೆಂಕಟಣ್ಣನ ಸಂದರ್ಭದಲ್ಲಿ ನೋಡಬಹುದು. ಹೂವಳ್ಳಿ ವೆಂಕಟಣ್ಣ ಕಲ್ಲೂರ ಸಾಹುಕಾರ ಮಂಜಭಟ್ಟನ ಬಳಿ ಸಾಲ ಮಾಡಿದ್ದನು. ಆ ಸಾಲಕ್ಕೆ ತನ್ನ ಜಮೀನನ್ನು ನಂಬಿಕೆ ಕ್ರಯಕ್ಕೆ ಬರೆದುಕೊಟ್ಟಿದ್ದನು. ಮಾಡಿದ ಸಾಲವನ್ನು ತೀರಿಸಲಿಲ್ಲ. ಹಾಗಾಗಿ ‘ಮಂಜಭಟ್ಟರ ಕರಣಿಕನಾಗಿದ್ದ ಕಿಟ್ಟ ಐತಾಳರು ನೇಗಿಲುಗಳನ್ನು ಹೊತ್ತು ಹತ್ತಿಪ್ಪತ್ತು ಜನರೊಂದಿಗೆ ಬಂದು ವೆಂಕಟಣ್ಣನ ಗದ್ದೆಯನ್ನು ಊಳ ತೊಡಗಿದರು. ಇದನ್ನು ತಡೆಯಲು ಹೋದಾಗ ವೆಂಕಟಣ್ಣ ಅವನನ್ನು ಲುಂಗಿಸಾಬು, ಇಜಾರದಸಾಬು, ಅಜ್ಜಿಸಾಬು ಇತರ ಆಳುಗಳ ಬೆಂಬಲದೊಡನೆ ಹೊಡೆದು ಗದ್ದೆಯಿಂದಾಚೆ ನೂಕಿದರು’.

‘ಕೋಣೂರು ರಂಗಪ್ಪಗೌಡರು ಬಂದು ವಿಚಾರಿಸಲಾಗಿ ಹೂವಳ್ಳಿ ವೆಂಕಟಪ್ಪ ನಾಯಕರು ತಮ್ಮ ಜಮೀನನ್ನೆಲ್ಲ ಕಲ್ಲೂರು ಸಾಹುಕಾರರಿಗೆ ಕ್ರಯಕ್ಕೆ ಬರೆದು ಕೊಟ್ಟಿರುವುದರಿಂದ ಅವರಿಗೆ ಸೇರುವ ಜಮೀನಿನ ಬೇಸಾಕ್ಕೆ ಅವರು ಏರ್ಪಾಡು ಮಾಡಿರುವರೆಂದು ಕಿಟ್ಟ ಐತಾಳ ಹೇಳಿದ’ (ಕುವೆಂಪು ೨೦೦೬ ಬ, ೩೫೩).

ರಂಗಪ್ಪಗೌಡರು ಪಂಚಾಯಿತಿ ಮಾಡಿ ಕಿಟ್ಟಿ ಐತಾಳರು ಆಳು ಮತ್ತು ನೇಗಿಲುಗಳನ್ನೆಲ್ಲ ವಾಪಸ್ಸು ಕಳಿಸಿ, ಇನ್ನೊಂದು ವಾರದೊಳಗಾಗಿ ವೆಂಕಟ್ಟ ನಾಯಕರು ಸಾಹುಕಾರರಲ್ಲಿಗೆ ಬಂದು ಯಾವುದನ್ನು ಇತ್ಯರ್ಥ ಮಾಡಿಕೊಳ್ಳಬೇಕೆಂದೂ, ತಡಮಾಡಿದರೆ ಮಳೆ ಹಿಡಿಯುವುದರೊಳಗೆ ಗದ್ದೆಯ ಬೇಸಾಯಕ್ಕೆ ತೊಡಗುವುದಾಗಿ ತಿಳಿಸಿ ಹಿಂದುರುಗಿದರು (ಕುವೆಂಪು ೨೦೦೬ಬ, ೩೫೪).

“…….ಹೂವಳ್ಳಿ ವೆಂಕಟಣ್ಣ ತನಗೆ ಭಟ್ಟರಲ್ಲಿದ್ದ ಸಾಲದ ಮೊತ್ತವನ್ನು ತಿಳಿಸಿ, ನಂಬಿಕೆ ಕ್ರಯ ಬರೆದುಕೊಟ್ಟಿದ್ದನ್ನು ನಿಜಕ್ರಯವೆಂದೇ ಮೋಸ ಮಾಡಿದ್ದಾರೆಂದು ಅವರನ್ನು ನಿಂದಿಸತೊಡಗಿದರು ಭಟ್ಟರು ಸಾಹುಕಾರ ವಂಚನೆಯ ರೀತಿಗಳನ್ನು ವೆಂಕಟಣ್ಣನ ನೆನಪಿಗೆ ತಂದು ಕೊಟ್ಟು ‘ಅವರ ಹತ್ರ ಹೋದವರು ಅನೇಕರು ಹಾಳಾಗಿದ್ದಾರೆ. ನೀನು ಹೇಗಾದರು ಉಪಾಯದಿಂದ ಪಾರಾಗದಿದ್ದರೆ ನಿನ್ನ ಜಮೀನು ಉಳಿಯುವುದಿಲ್ಲ’ ಎಂದು ರಂಗಪ್ಪಗೌಡರು ಎಚ್ಚರಿಕೆ ಹೇಳಿದ್ದಕ್ಕೆ ವೆಂಕಟಣ್ಣ ನರಿನಗೆ ನಗುತ್ತಾ ಕಣ್ಣು ಮಿಂಚಿಸಿ ಹೇಳಿದನು: ‘ಕಾನೂನು ಪ್ರಕಾರ ಅವರು ನನ್ನ ಜಮೀನು ದಕ್ಕಿಸಿಕೊಳ್ಳಾದು ಅಷ್ಟೇನು ಸುಲಭ ಅಲ್ಲಾ! ಅವರಿಗೆ ಬರಕೊಡಾಕೆ ಮುಂಚೇನೆ ಅದರಲ್ಲಿ ಸುಮಾರು ಪಾಲು ಗದ್ದೆ ತೋಟಾನ ಬೆಟ್ಟಳ್ಳಿಗೌಡರಿಗೆ. ಹಳೇಮನೆ ಹೆಗ್ಗಡೇರಿಗೆ, ಸಿಂಬಾವಿ ಹೆಗ್ಗಡೇರಿಗೆ ಎಲ್ಲ ದೀಡು, ಭೋಗ್ಯ, ಕ್ರಯ ಎಲ್ಲ ಮಾಡಿಟ್ಟೇನಿ!…. ಅವರಲ್ಲೂ ಒಬ್ಬೊಬ್ರ ಹತ್ರಾನೂ ಸುಮಾರು ಸಾಲ ಅದೆ ನನಗೆ!” (ಕುವೆಂಪು ೨೦೦೬ ಬ, ೩೫೪).

ಹೀಗೆ ಲೇವಾದೇವಿಗಾರರು ಸಾಲಗಾರರ ಜಮೀನನ್ನು ಪಡೆಯಲು ನಾನಾ ವಿಧದ ತಂತ್ರಗಳಿಂದ ಪ್ರಯತ್ನಿಸುತ್ತಿದ್ದರು ಹಾಗೂ ಸಫಲರೂ ಆಗಿ ಬಹು ಶ್ರೀಮಂತ ಜಮೀನ್ದಾರರಾಗಿದ್ದರು. ಮಂಜಭಟ್ಟರು ಇಂಥ ವ್ಯವಹಾರದಿಂದ ಆ ಭಾಗದ ದೊಡ್ಡ ಜಮೀನ್ದಾರರಿಗೇ ಸಾಲಕೊಡುವಷ್ಟು ಶ್ರೀಮಂತರಾಗಿದ್ದರು.

ಸಾಲಕ್ಕೆ ಅಡಿಕೆ ಭತ್ತ ವಸೂಲಿ

ಕೆಲವೊಮ್ಮೆ ಸಾಲ ತೆಗೆದುಕೊಂಡ ಒಕ್ಕಲು ಸಾಲವನ್ನು ಅಡಿಕೆ ಭತ್ತದ ಮೂಲಕ ಮರುಪಾವತಿ ಮಾಡುತ್ತಿದ್ದ. ಇದಕ್ಕೆ ವರ್ಷಕ್ಕೆ ಒಂದು ವಿಶಿಷ್ಟ ದಿನದಂದು ಲೆಕ್ಕ ಮಾಡುತ್ತಿದ್ದರು. ಅಂದರೆ ಭೂಮಾಲೀಕರು, ಸಾಹುಕಾರರು ಲೆಕ್ಕ ಮಾಡುವುದು ಆಶ್ವೀಜ ಬಹುಳ ಅಮಾವಾಸ್ಯೆ ದಿನದಂದು. ಇದು ಇವರ ಲೆಕ್ಕದ ವರ್ಷದ ಆಖೈರು ಅಥವಾ ಕೊನೆಯ ದಿನ. ಇಂದಿನ ಹಣಕಾಸು ವರ್ಷದ ಕೊನೆಯ ದಿನ ಮಾರ್ಚ್‌೩೧ ಇದ್ದಂತೆ. ಆದರೆ ಅವರು ಸಾಲ ಕೊಟ್ಟು ಬಡ್ಡಿಯನ್ನು ಲೆಕ್ಕ ಮಾಡುತ್ತಿದ್ದ. ರೀತಿ ವಿಚಿತ್ರವಾಗಿತ್ತು. ಸಾಲಗಾರರನ್ನು ಸಾಹುಕಾರರು ಮನಸೋ ಇಚ್ಚೆ ಹೇಗೆ ಶೋಷಿಸುತ್ತಿದ್ದರು ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ.

ಆಶ್ವೀಜ ಬಹುಳ ಅಮಾವಸ್ಯೆಗೆ ಮೊದಲು ಸಾಲ ತೆಗೆದುಕೊಂಡರೆ ಆ ಹಣಕ್ಕೆ ಒಂದು ವರ್ಷವಾಗಿದ್ದರೆ ಅದಕ್ಕೆ ವರ್ಷದ ಬಡ್ಡಿಯನ್ನು ಲೆಕ್ಕ ಹಾಕುತ್ತಿದ್ದರು. ಸಾಲದ ಬಡ್ಡಿಯನ್ನು ಆಶ್ವೀಜ ಬಹುಳ ಅಮಾವಾಸ್ಯೆಯ ದಿನವೇ ಬೆಲೆ ನಿರ್ಧರಿಸುತ್ತಿದ್ದರು. ಅದೂ ‘ಸೀಮೆಧಾರಣೆ’ಯ ಆಧಾರದ ಮೇಲೆ.

‘ಸೀಮೆಧಾರಣೆ’ ಅಂದರೆ ಆ ಸೀಮೆಯಲ್ಲಿ ಇತರ ಲೇವಾದೇವಿಗಾರರು, ಅಡಿಕೆ ವ್ಯಾಪಾರಸ್ಥರು, ಆ ವರ್ಷ ಅಡಿಕೆ ಭತ್ತಕ್ಕೆ ಯಾವ ಬೆಲೆ ನಿಗದಿ ಮಾಡಿದ್ದಾರೆ, ಯಾವ ರೇಟು ನಡೆಯುತ್ತಿದೆ ಎಂಬುದನ್ನು ತಿಳಿದು ತುಲನೆ ಮಾಡಿ, ಅದರಲ್ಲಿ ಕಡಿಮೆ ದರ ಯಾವುದೆಂದು ನೋಡುತ್ತಿದ್ದರು. ಹೀಗೆ ಕಡಿಮೆ ದರವನ್ನು ಅಡಿಕೆಗೆ ಭತ್ತಕ್ಕೆ ಹಾಕಿ ಎಷ್ಟು ಹಣ ಆಗುತ್ತೋ ಅದನ್ನು ಅವನ ಲೆಕ್ಕಕ್ಕೆ ಜಮಾ ಮಾಡಿಕೊಳ್ಳುತ್ತಿದ್ದರು. ಆದರೆ ಇವನು ಅಡಿಕೆ ಭತ್ತ ಕೊಟ್ಟು ಹತ್ತು ತಿಂಗಳುಗಳಾಗಿದ್ದರೂ, ಅಂದೇ ಅವರು ಆತನ ಲೆಕ್ಕಕ್ಕೆ ಜಮಾ ತೆಗೆದುಕೊಳ್ಳುತ್ತಿರಲಿಲ್ಲ. ರೇಟು ನಿಗದಿಯಾಗದ್ದರಿಂದ ಅವನ ಹಣಕ್ಕೆ ಬಡ್ಡಿ ಇಲ್ಲ. ಲೇವಾದೇವಿಗಾರರ ಹಣಕ್ಕೆ ವರ್ಷವೆಲ್ಲ ಬಡ್ಡಿ. ಹೀಗಾಗಿ ಸೀಮೆಧಾರಣೆಯ ಪದ್ಧತಿ ಅತಾರ್ಕಿಕವಾಗಿತ್ತು. ಇದರಿಂದ ಸಾಹುಕಾರರ ಬಡ್ಡಿ ಏರುತ್ತಲೇ ಇತ್ತು. ಸಾಲಗಾರ ಮರುಪಾವತಿಸಿದ್ದೆಲ್ಲ ಬಡ್ಡಿಗೆ ಹೋಗಿ ಅಸಲು ಹಣ ಬೆಳೆಯುತ್ತಾ ಬಂದು, ಅಸ್ತಿಗಳೆಲ್ಲಾ ಲೇವಾದೇವಿಗಾರರ ಪಾಲಾಗುತ್ತಿತ್ತು. ಹೀಗೆ ಒಕ್ಕಲುಗಳ ಸಂಖ್ಯೆ ಬೆಳೆಯುತ್ತ ಬಂತು ಅಲ್ಲದೆ ಕೆಲವರು ಸಾಲ ಮಾಡಿ ಹೊಸದಾಗಿ ಆಸ್ತಿ ಸಂಪಾದಿಸಲು ಹೋಗಿ ಪಿತ್ರಾರ್ಜಿತ ಆಸ್ತಿಯನ್ನೂ ಕಳೆದುಕೊಂಡಿದ್ದರು (ರಾಮಪ್ಪಗೌಡ ೧೯೯೮, ೪೩).

ಬೆಲೆ ಬಾಳುವ ಸಾಮಾನುಗಳನ್ನು ಅಡವಿಡುವುದು

ಈ ವಿಧದ ಲೇವಾದೇವಿ ಪದ್ಧತಿಯಲ್ಲಿ ಸಾಲಕ್ಕೆ ಆಧಾರವಾಗಿ ಬಂಗಾರ, ಬೆಳ್ಳಿ ಆಭರಣಗಳು, ತಾಮ್ರ, ಹಿತ್ತಾಳೆ ಪಾತ್ರೆ ಪಗಡವನ್ನು ಸಾಲಕ್ಕೆ ಅಡವಿಟ್ಟುಕೊಳ್ಳುತ್ತಿದ್ದರು. ಇಟ್ಟ ಸಾಮಾನಿನ ಅರ್ಧ ಬೆಲೆಯಷ್ಟು ಕೊಡುತ್ತಿದ್ದರು. ಇಪ್ಪತ್ತು ರೂಪಾಯಿ ಬೆಲೆ ಬಾಳುವ ಪಾತ್ರೆಯನ್ನು ಅಡವಿಟ್ಟರೆ ಹತ್ತು ರೂಪಾಯಿ ಸಾಲ ಕೊಡುತ್ತಿದ್ದರು. (ನೋಡಿ : ಅನುಬಂಧ ೨). ಅಡಿಕೆ ಭತ್ತ ಸಾಲಕ್ಕೆ ಆಶ್ವೀಜ ಬಹುಳ ಅಮಾವಾಸ್ಯೆ ಮತ್ತು ಸೀಮೆಧಾರಣೆ ಲೆಕ್ಕದಿಂದ ಶ್ರೀಮಂತರು ಲಾಭ ಗಳಿಸಿದರೆ, ಇದರಲ್ಲಿ ವಸ್ತು ಬಿಡಿಸಿಕೊಳ್ಳಲು ಇರುವ ವಾಯಿದೆ ಮೂಲಕ ಲಾಭ ಗಳಿಸುತ್ತಿದ್ದರು. ಆಂದರೆ ಅಡವಿಟ್ಟ ಮಾಲನ್ನು ಇಷ್ಟು ದಿನಗಳ ಒಳಗೇ ಆಸಲು ಬಡ್ಡಿ ಕೊಟ್ಟು ಬಿಡಿಸಿಕೊಂಡು ಹೋಗಬೇಕೆಂಬ ಕರಾರು ಆಗಿರುತ್ತಿತ್ತು. ವಾಯಿದೆ ದಿನ ಸಾಲಗಾರರು ಸಾಮಾನನ್ನು ಬಿಡಿಸಿ ಕೊಳ್ಳದಿದ್ದರೆ, ಅದು ಶ್ರೀಮಂತರಿಗೇ ಸೇರುತ್ತಿತ್ತು. ವಾಯಿದೆಯ ದಿನವನ್ನು ಮುಂದೂಡುತ್ತಿರಲಿಲ್ಲ.

ಆದರೆ ಇಲ್ಲೂ ಸಹ ಶ್ರೀಮಂತರು ಲಾಭ ಗಳಿಸುವ ವಿಧಾನವನ್ನು ಕಂಡುಕೊಂಡಿದ್ದರು. ಆಭರಣ, ತಾಮ್ರಾ, ಹಿತ್ತಾಳೆಯ ಪಾತ್ರೆ ಪಗಡೆಯ ಆಸೆಗೆ ಅದನ್ನು ತಮ್ಮ ಕೈವಶಮಾಡಿಕೊಳ್ಳುತ್ತಿದ್ದರು. ಮಾಲನ್ನು ಅಡ ಇಟ್ಟವನು ವಾಯಿದೆಗೆ ಸರಿಯಾಗಿ ಹಣವನ್ನು ಕೊಟ್ಟು ತನ್ನ ಮಾಲನ್ನು ಬಿಡಿಸಿಕೊಳ್ಳಲು ಬರುವುದು ಮುಂಚಿತವಾಗಿ ತಿಳಿದರೆ, ಆ ದಿನ ಸಾಲ ಕೊಟ್ಟ ಶೀಮಂತರು ಮನೆಯಲ್ಲಿ ಇರುತ್ತಲೇ ಇರಲಿಲ್ಲ. ಸಾಲಗಾರನು ಕಾದು ಕಾದು ಹಿಂದಿರುಗಬೇಕಿತ್ತು. ಮರುದಿನ ಬಂದರೆ ಕರಾರು ಆಗಿದ್ದ ವಾಯಿದೆ ದಿನ ಮುಗಿಯಿತೆಂದು ಹೇಳಿ ಮಾಲನ್ನು ಒಳಗೆ ಹಾಕಿಕೊಳ್ಳುತ್ತಿದ್ದರು. ಸಾಲಗಾರ ತಾನು ವಾಯಿದೆಯ ದಿನವೇ ಬಂದಿದ್ದೇ ಎಂದರೂ ಅವನ ಮಾತನ್ನು ಕೇಳುತ್ತಿರಲಿಲ್ಲ.

ಕೆಲವೊಮ್ಮೆ ಗುಟ್ಟಾಗಿ ಈ ವ್ಯವಹಾರ ನಡೆಯುತ್ತಿತ್ತು. ವಸ್ತು ಅಡವಿಟ್ಟು ಸಾಲ ಪಡೆದಿರುವುದು ಇತರರಿಗೆ ತಿಳಿದರೆ ತನಗೆ ಅವಮಾನವೆಂದು ಬಗೆದು, ಸಾಲ ಪಡೆಯುವವರ ಹಾಗು ಕೊಡುವವರ ನಡುವೆ ರಹಸ್ಯವಾಗಿ ಈ ವ್ಯವಹಾರ ನಡೆಯುತ್ತಿತ್ತು. ಈ ಗೌಪ್ಯತೆಯ ಲಾಭವನ್ನು ವೇವಾದೇವಿಗಾರ ಬಳಸಿಕೊಂಡು ಆ ಸಾಮಾನನ್ನು ಪಡೆಯಲು ವಾಯಿದೆಯ ನೆಪ ಹೇಳಿ ತನ್ನಲ್ಲೇ ಇರಿಸಿಕೊಳ್ಳುತ್ತಿದ್ದ. ಮರ್ಯಾದೆಯ ಪ್ರಶ್ನೆಯಿದ್ದರಿಂದ ಸಾಲ ಪಡೆದವನು ಶ್ರೀಮಂತನನ್ನು ಪ್ರಶ್ನಿಸುವಂತಿರಲಿಲ್ಲ.

ಹುಲಿಭತ್ತದ ವ್ಯವಹಾರ

ಇನ್ನೊಂದು ರೀತಿ ವ್ಯವಹಾರವಿತ್ತು. ಅದಕ್ಕೆ ಹುಲಿಭತ್ತದ ವ್ಯವಹಾರವೆಂದು ಹೆಸರು. ಒಕ್ಕಲುಗಳಿಂದ ಬಂದ ಗೇಣಿ ಭತ್ತದ ದಾಸ್ತಾನು ಭೂಮಾಲೀಕರ ಬಳಿ ಇರುತ್ತಿತ್ತು. ಊಟಕ್ಕೆ ಭತ್ತ ಕಡಿಮೆಯಾದವರು ಭೂಮಾಲೀಕರಿಂದ ಭತ್ತವನ್ನು ಸಾಲವಾಗಿ ಪಡೆಯುತ್ತಿದ್ದರು. ಅನೇಕ ಗೇಣಿದಾರರ ಬಳಿ ಒಡೆಯರಿಗೆ ಸಲ್ಲಬೇಕಾದ ಗೇಣಿ ಕೊಟ್ಟ ನಂತರ ಕಡಿಮೆ ಭತ್ತ ಉಳಿಯುತ್ತಿತ್ತು. ಅದು ಮಳೆಗಾಲ ಮುಗಿಯುವುದರೊಳಗೇ ಖರ್ಚಾಗಿಬಿಡುತ್ತಿತ್ತು. ಆಗ ಅವರು ಒಡೆಯರಿಂದ ಭತ್ತವನ್ನು ಸಾಲ(ಕಡ) ವಾಗಿ ತಂದು, ಮುಂದೆ ಗದ್ದೆ ಕೊಯಿಲು ಮುಗಿದ ತಕ್ಷಣ ಒಡೆಯರಿಗೆ ಹಿಂದಿರುಗಿಸುತ್ತಿದ್ದರು. ಇದಕ್ಕೂ ಬಡ್ಡಿ ಸೇರಿಸಿ ಕೊಡಬೇಕಿತ್ತು. ಅಂದರೆ ಅವನು ಒಂದು ಖಂಡುಗ ಭತ್ತ ತಂದರೆ ಒಂದಕ್ಕೆ ಹೆಚ್ಚಿಗೆ ಹತ್ತು ಕೊಳಗದಿಂದ ಒಂದು ಖಂಡುಗದವರೆಗೆ ಸೇರಿಸಿ ಕೊಡಬೇಕಿತ್ತು. ಈ ಹೆಚ್ಚಿಗೆ ಕೊಡುವ ಭತ್ತಕ್ಕೆ ಹುಲಿಭತ್ತವೆಂದು ಹೆಸರು. ಈ ರೀತಿ ಅನೇಕ ಜನರು ತಮಗೆ ಬಂದ ಗೇಣಿ ಭತ್ತವನ್ನೆ ಹೋಗಿ ಕೊಡುತ್ತಿದ್ದರು. ಲೇವಾದೇವಿಗಾರರು ನೂರಾರು ಕಂಡುಗ ಭತ್ತವನ್ನು ಪುಕ್ಕಟೆಯಾಗಿ ಸಂಪಾದಿಸುತ್ತಿದ್ದರು (ರಾಮಪ್ಪಗೌಡ ೧೯೯೮).

ಸಾಲ ವಸೂಲಿ ಕ್ರಮ

ಕುವೆಂಪು ಅವರು ಆಸ್ತಿಯನ್ನು ಅಡವಿಟ್ಟುಕೊಂಡು ಸಾಹುಕಾರರಾದ ಕಲ್ಲೂರು ದೇವಸ್ಥಾನದ ಬ್ರಾಹ್ಮಣ ಮಂಜುಭಟ್ಟರ ಬಗೆ ಮಲೆಗಳಲ್ಲಿ ಮದುಮಗಳಲ್ಲಿ ಪರಿಣಾಮ ಕಾರಿಯಾಗಿ ಹೇಳಿದ್ದಾರೆ. ಮಂಜುಭಟ್ಟರು ಅಜ್ಞರನ್ನು ಬಡಬಗ್ಗರನ್ನೂ ನಾನಾ ರೀತಿಯಿಂದ ಸುಲಿದು ಸಾಹುಕಾರರೆನಿಸಿಕೊಂಡಿದ್ದರು. ಅವರು ಸಾಲ ವಸೂಲಿ ಮಾಡಲು ಸಾಬರನ್ನು ನೇಮಿಸಿಕೊಂಡಿದ್ದರು.

‘ಹೊನ್ನಳ್ಳಿ ಹೊಡೆತದ ಮೂಲ ಪ್ರಪಿತಾಮಹರೆಂದರೆ ಕಲ್ಲೂರು ಸಾಹುಕಾರ ಮಂಜಭಟ್ಟರು. ಘಟ್ಟದ ಕೆಳಗಣಿಂದ ಪಂಚಪಾತ್ರೆ ಪಾಣಿ ಪಂಚೆಯೊಡನೆ ಪೂಜಾರಿಯಾಗಿ ಮೇಲೆ ಬಂದವರು. ಸ್ವಸಾಮರ್ಥ್ಯದಿಂದಲೂ, ನೈಪುಣ್ಯದಿಂದಲೂ, ಪುಣ್ಯದಿಂದಲೂ, ಶ್ರೀಮಂತರೂ ಜಮೀನುದಾರರೂ ಆದರು. ಸಾಲ ಕೊಟ್ಟೂ ಸಾಲ ಕೊಟ್ಟಂತೆ ಬರೆಯಿಸಿಕೊಂಡೋ ಅಕ್ಷರ ಬಂದವರಿಂದ ರುಜು ಹಾಕಿಸಿಕೊಂಡೋ, ಅಕ್ಷರ ಬಾರದವರಿಂದ ಹೆಬ್ಬಟೊತ್ತಿಸಿಕೊಂಡೋ ಎಲ್ಲರ ಭಯ ಗೌರವಗಳಿಗೆ ಪಾತ್ರರಾಗಿ ಸುಪ್ರಸಿದ್ಧರಾದರು. ಆದರೆ ದಂಡಶಕ್ತಿ ಇಲ್ಲದಿದ್ದರೆ ಲಕ್ಷ್ಮಿಯನ್ನುಳಿಸಿಕೊಳ್ಳುವುದು ಕಷ್ಟ ಎಂಬುದು ಅವರಿಗೆ ಬೇಗನೆ ಅನುಭವಕ್ಕೆ ಬಂತು’ (ಕುವೆಂಪು ೨೦೦೬ಬ, ೨೩೫).

ಕೊಟ್ಟ ಸಾಲ ವಸೂಲಿ ಮಾಡಲು ಮಂಜುಭಟ್ಟರು ಹಿಂಸಾ ಮಾರ್ಗವನ್ನು ಕಂಡುಕೊಂಡರು. ತಾವು ದೈಹಿಕವಾಗಿ ಬಲಶಾಲಿಯಲ್ಲವಾದ್ದರಿಂದ ಹೊನ್ನಳ್ಳಿಯಿಂದ ಕೆಲವು ಉಂಡಾಡಿಗಳಾದ ಪುಂಡ ಸಾಬರನ್ನು, ಮೇಗರವಳ್ಳಿಯ ಕರಿಮೀನು ಸಾಬು ಮತ್ತು ಅವನ ತಮ್ಮ ಪುಡೀ ಸಾಬು ಮುಖಾಂತರ ಕರೆಸಿ ಅವರನ್ನು ‘ವಸೂಲಿ ಸಾಬ’ ರನ್ನಾಗಿ ನೇಮಿಸಿಕೊಂಡರು.

ಈ ವ್ಯವಸ್ಥೆ ಇಂದಿನ ಬ್ಯಾಂಕುಗಳು ತಮ್ಮ ಸಾಲ ವಸೂಲಿಗೆ ನಿಯಮಿಸಿಕೊಳ್ಳುವ ‘ರಿಕವರಿ ಆಫೀಸರ್’ ನಂತೆ ಇರುವುದು. ಇದಕ್ಕೂ ಕೂಡ ಮಂಜಭಟ್ಟರು ಪ್ರಳಯಾಂತಕ ಬುದ್ಧಿವಂತೆಕೆಯನ್ನು ಉಪಯೋಗಿಸಿದ್ದರು; ಇದಕ್ಕೆ ಆವರದ್ದೇ ಆದ ಕಾರಣವಿತ್ತು.

‘ಊರು ಮನೆಯವರನ್ನು ಆ ಕೆಲಸಕ್ಕೆ ಗೊತ್ತು ಮಾಡಿಕೊಂಡರೆ ಅವರು ನಿರ್ದಾಕ್ಷಿಣ್ಯವಾಗಿ ವರ್ತಿಸುವುದು ಸಾಧ್ಯವಿಲ್ಲ. ತಲತಲಾಂತರದಿಂದ ಗುರುತು ಪರಿಚಯ ಇರುವವರನ್ನೂ, ದೂರವೊ ಹತ್ತಿರವೊ ಆದ ಸಂಬಂಧಿಗಳನ್ನೂ, ಹಿಂದೆ ಪ್ರತಿಷ್ಠಿತರಾದಾಗ ತಮಗೆ ನೆರವಾಗಿದ್ದು ತಮ್ಮ ಗೌರವಕ್ಕೂ ಪಾತ್ರರಾಗಿದ್ದು ಈಗ ಅವನತಿಗಿಳಿದಿದ್ದವರನ್ನು ದಯೆ ದಾಕ್ಷಿಣ್ಯಗಳಿಲ್ಲದೆ, ಮುಖ ಮೋರೆ ನೋಡದೆ, ಸ್ಥಾನಮಾನಗಳೊಂದನ್ನೂ ಗಣನೆಗೆ ತರದೆ ‘ವಸೂಲಿ’ ಕೆಲಸ ಮಾಡಬೇಕಾದರೆ ಸ್ಥಳದಿಂದಲೂ ಜಾತಿಮತಗಳಿಂದಲೂ ದೂರವಾಗಿರುವ ಸಾಬರೆ ಅದಕ್ಕೆ ತಕ್ಕವರೆಂದು ನಿರ್ಣಯಿಸಿತು. ಭಟ್ಟರ ರಾಜಕೀಯ ಅರ್ಥಶಾಸ್ತ್ರ ಪ್ರತಿಭೆ! (ಕುವೆಂಪು ೨೦೦೬ಬ, ೨೩೫).

ಹೀಗೆ ಬಂದ ಸಾಬರ ನಿಷ್ಪಕ್ಷಪಾತ ಸೇವೆಯನ್ನು ‘ಶ್ರೀಮಂತರಾಗಿದ್ದು ಒಕ್ಕಲುಗಳಿಗೂ ಇತರರಿಗೂ ಸಾಲ ಕೊಟ್ಟಿದ್ದ ಬೆಟ್ಟಳ್ಳಿ ಕಲ್ಲಯ್ಯಗೌಡರು, ಹಳೆಮನೆ ಸುಬ್ಬಣ್ಣ ಹೆಗ್ಗಡೆಯುವರು. ಸಿಂಬಾವಿ ಭರಮೈ ಹೆಗ್ಗಡೆಯವರು, ಲಕ್ಕುಂದದ ಹಳೆಪೈಕದ ಸೇಸ ನಾಯಕರು ಮೊದಲಾದವರೆಲ್ಲ ತಮ್ಮ ನಿಮ್ಮ ದಢೂತಿಗೆ ತಕ್ಕಂತೆ ದುಡ್ದಿಗೋ ಭತ್ತಕ್ಕೋ ಅಡಿಕೆಗೋ ವಸೂಲಿ ಸಾಬರ ಸೇವೆಯನ್ನು ಪಡೆಯತೊಡಗಿದರು’ (ಅದೇ).

ಪುರೋಹಿತರಾಗಿದ್ದ ಮಂಜುಭಟ್ಟರು ಶ್ರೀಮಂತರಾದ ಬಗ್ಗೆ ಕುವೆಂಪು ಹೀಗೆ ವರ್ಣಿಸುತ್ತಾರೆ.

‘ದುರ್ಗದ ಪಾಳೆಗಾರರಲ್ಲಿ ದಂಡನಾಯಕರಾಗಿದ್ದವರ ವಂಶದವನು ಎಂಬ ಆ ಹಳೆಯ ನೆನಪಿಗೆ ಗೌರವಕ್ಕಾಗಿ ಅನೇಕರು (ಹೂವಳ್ಳಿ ವೆಂಕಟಪ್ಪನಾಯಕರಿಗೆ) ಸಾಲ ಕೊಟ್ಟಿದ್ದರು. ಇವತ್ತಲ್ಲಾ ನಾಳೆ ಅದನ್ನು ಬಡ್ಡಿಯೊಡನೆ ತೀರಿಸುತ್ತಾನೆ ಎಂಬ ಧೈರ್ಯದಿಂದ. ಆದರೆ ಕಲ್ಲೂರು ಸಾಹುಕಾರ ಮಂಜುಭಟ್ಟರಂತಹ ಬುದ್ಧಿವಂತ ಬ್ರಾಹ್ಮಣರು ಜನೀನನ್ನು ಲಪಟಾಯಿಸಿಕೊಳ್ಳುವುದಕ್ಕೆ ಒಂದು ನೆಪವಾದರೂ ಇರಲಿ ಎಂದೇ ಮಂದಬುದ್ಧಿಯ ಗೌಡರು, ನಾಯಕರು ಹೆಗ್ಗಡೆಗಳಿಗೆ ಸಾಲಕೊಡುತ್ತಿದ್ದರು. ಹಾಗಲ್ಲದಿದ್ದಲ್ಲಿ. ಕಲ್ಲೂರು ದೇವಸ್ಥಾನಕ್ಕೆ ಪೂಜಾರಿಯಾಗಿ ಕನ್ನಡ ಜಿಲ್ಲೆಯಿಂದ ಬಂದಾತನು ಕೆಲವು ವರ್ಷದಲ್ಲಿಯೆ ನಾಡಿನಲ್ಲೆಲ್ಲ ದೊಡ್ಡ ಜಮೀನುದಾರನೂ ಶ್ರೀಮಂತನೂ ಎಂದು ಹೆಸರು ಪಡೆಯಲು ಹೇಗೆ ಸಾಧ್ಯವಾಗುತ್ತಿತ್ತು? ತೊಟ್ಟ ಜನಿವಾರ, ಉಟ್ಟ ಪಾಣಿಪಂಚೆ, ಬಹುಶಃ ಕೈಲೊಂದು ಪಂಚಪಾತ್ರೆ ಇಷ್ಟೆ ಆಸ್ತಿಯಾಗಿ ಬಂದಿದ್ದ ಬಡ ಹಾರುವನು, ಈಗ ದೊಡ್ಡ ಚೌಕಿ ಮನೆಯ ಯಜಮಾನನಿಗೆ ದರ್ಬಾರು ನಡೆಸಲು ಹೇಗೆ ಸಾಧ್ಯವಾಗುತ್ತಿತ್ತು? ಗೌಡ ಹೆಗ್ಗಡೆ ನಾಯಕರುಗಳ ಮನೆ ಮನೆಗೆ ಅಲೆದು, ದೇಶಾವರ ನಡೆಸಿ, ಸಂಭಾವನೆ ಬೇಡಿ ಅಡಿಕೆ ಅಕ್ಕಿ ಕಾಯಿಪಲ್ಯಗಳನ್ನು ಒಟ್ಟು ಮಾಡಿ ಜೀವನಯಾಪನೆ ಮಾಡುತ್ತಿದ್ದರು. ಈಗ ಗೌಡಾ ಹೆಗ್ಗಡೆ ನಾಯಕರುಗಳನ್ನೆಲ್ಲ ತನ್ನ ಮನೆಯ ಅಂಗಳದ ಕೆಳಜಗುಲಿಯಲ್ಲಿ ನಿಲ್ಲಿಸಿಯೋ ಅಜ್ಞೆ ಮಾಡಿ, ತಪ್ಪಿದರೆ ಶಿಕ್ಷೆ ವಿಧಿಸುತ್ತೇನೆ ಎಂದು ಗರ್ಜಿಸಲು ಹೇಗೆ ಸಾಧ್ಯವಾಗುತ್ತಿತ್ತು? ಮೊದ ಮೊದಲು ‘ಏನು ವೆಂಕಟಪ್ಪನಾಯಕರಿಗೆ?’ ಎಂದು ಸಂಬೋಧಿಸುತ್ತಿದ್ದವನು ಬರಬರುತ್ತಾ ‘ಏನು ವೆಂಕಣ್ಣ? ‘ ಎಂದು ಸಲಿಗೆಯಿಂದ ಕರೆಯುವಂತಾಗಿ ಈಗ ‘ಏನೊ ಬಂದೆಯೊ, ಎಂಕ್ಟ?’ ಎಂದು ಪ್ರಶ್ನಿಸಲು ಹೇಗೆ ಸಾಧ್ಯವಾಗುತ್ತಿತ್ತು? (ಕುವೆಂಪು ೨೦೦೬ಬ, ೧೮೭).

ಮಂಜುಭಟ್ಟರು ಪುರೋಹಿತರಾಗಿದ್ದರಿಂದ ಬೇರೆ ಜಾತಿಯವರಿಗಿಲ್ಲದ ಒಂದು ವಿಶೇಷ ಉಪಯೋಗ ಅವರಿಗಿತ್ತು.

“ದೇವರು ಅವರೊಡನೆ ಗೃಹಕೃತ್ಯದ ಸಮಸ್ಯೆಗಳ ವಿಚಾರವಾಗಿ ಒಮ್ಮೊಮ್ಮೆ ಸಂವಾದ ನಡೆಸುತ್ತಿದ್ದನೆಂದೂ ಜನರು ಹೇಳುತ್ತಿದ್ದರು! ವಿವಾದಗಳನ್ನು ಮಂಜುಭಟ್ಟರ ಮುಖೇನ ಇತ್ಯರ್ಥಪಡೆಸುತ್ತಿದ್ದರಂತೆ! ಹಾಗೆ ಇತ್ಯರ್ಥವಾಗಿದ್ದ ಎಷ್ಟೋ ವಿವಾದಗಳು ಮಂಜುಭಟ್ಟರಿಗೇ ಸಂಬಂಧಪಟ್ಟವುಗಳಾಗಿ ಇರುತ್ತಿದ್ದುದ್ದರಿಂದ ಅವರು ಬಹುಬೇಗನೆ ಪುಣ್ಯವಂತರಾಗಿದ್ದರು!” (ಕುವೆಂಪು ೨೦೦೬ಬ, ೪೩೧).

ಹೀಗೆ ಜನರ ಮುಗ್ಧತೆಯನ್ನು ಶೋಷಿಸಿ ಪ್ರಭಾವಿಗಳಾಗಿದ್ದರು ಮಂಜುಭಟ್ಟರಂಥ ಶ್ರೀಮಂತರು. ಇವರ ಬಳಿ ಜಮೀನು ಅಡ ಇಟ್ಟು ಸಾಲ ಪಡೆದ ಒಕ್ಕಲುಗಳಿಗೆ ಜಾಮೀನಾಗಲು ಯಾರೂ ಒಪ್ಪುತ್ತಿರಲಿಲ್ಲ. ಏಕೆಂದರೆ ಅವರ ಆಸ್ತಿಗೆ ತೊಂದರೆ ಬರುವ ಸಾಧ್ಯತೆಗಳು ಇದ್ದವು. ಮುಂಜುಭಟ್ಟರ ಸಾಲಕ್ಕೆ ರಂಗಪ್ಪಗೌಡರು ಜಾಮೀನು ನಿಂತು ತನ್ನ ನಂಬಿಕೆಯ ಕ್ರಯಪತ್ರವನ್ನು ಬಿಡಿಸಿಕೊಡಬೇಕೆಂದು ವೆಂಕಣ್ಣ ಕೇಳಿದಾಗ ಕೋಣರು ರಂಗಪ್ಪಗೌಡರು ಮತ್ತು ಮುಕುಂದಯ್ಯ ನಿರಾಕರಿಸಿದರು (ಕುವೆಂಪು ೨೦೦೬ಬ).

ಕುವೆಂಪು ಅವರ ಆತ್ಮಕಥೆಯಲ್ಲಿ ಹಿರಿಕೊಡುಗೆಯವರಿಗೆ ಜಾಮೀನಾಗಿದ್ದ ಕುಪ್ಪಳ್ಳಿ ಮನೆತನ ೧೯೩೧ರ ಸಮಯದಲ್ಲಿ ಪಟ್ಟ ಪಾಡು ಹೀಗೆ ದಾಖಲಾಗಿದೆ.

“…ನನ್ನ ತಾಯಿಯ ಅಣ್ಣ ಹಿರಿಕೊಡಿಗೆ ಸುಬ್ಬಯ್ಯನಾಯಕರು ಕಡಿದಾಳು ಸುಬ್ಬಯ್ಯಗೌಡರು ಎಂಬುವರ ಕೈಯಲ್ಲಿ ಸಾಲ ಮಾಡಿದ್ದರಂತೆ….. ಆ ಸಾಲಕ್ಕೆ ಅವರ ಮೇಲೇ ದಾವಾಹಾಕಿ ಜಪ್ತಿಗೆ ಬಂದಾಗ ಅವರು ಕಪ್ಪಳ್ಳಿ ರಾಮಣ್ಣಗೌಡ ಮೊರೆ ಹೊಕ್ಕರಂತೆ. ಕಪ್ಪಳ್ಳಿ ರಾಮಣ್ಣಗೌಡರು ತೀರಿ ಹೋದ ಮೇಲೆ ಹಿರಿಕೊಡಿಗೆಯ ಸಬ್ಬಯ್ಯ ನಾಯಕರೂ ತೀರಿ ಹೋದರಂತೆ. ಇವರ ಮಧ್ಯೆ ಕುಪ್ಪಳಿಯ ಮನೆಯ ಕೆಲವು ಜಮೀನುಗಳನ್ನೆಲ್ಲ ದೇವಂಗಿ ಮಂಡಿಗೆ ಸಾಲಕ್ಕಾಗಿ ಬರೆದು ಕೊಟ್ಟ ಮೇಲೆ ಬಹುಶಃ ಕಡಿದಾಳು ಸುಬ್ಬಯ್ಯಗೌಡರಿಗೆ ತನ್ನ ಸಾಲ ಹಿರಿಕೊಡಿಗೆಯವರಿಂದ ಬರುವುದಿಲ್ಲ. ಎಂದು ಗೊತ್ತಾಗಿ, ಕುಪ್ಪಳಿಯವರೂ ತಮ್ಮ ಜಮೀನುಗಳನ್ನೆಲ್ಲ ಬರೆದುಕೊಟ್ಟ ಮೇಲೆ ಜಾಮೀನಾಗಿದ್ದ ಅವರಿಂದಲೂ ತನಗೆ ಸಾಲದ ಹಣ ಬರುವುದಿಲ್ಲವೆಂದು ಹೆದರಿ ಜಾಮೀನು ನಿಂತವರ ಮೇಲೆ ದಾವಾ ಹಾಕಿ ಕುಪ್ಪಳಿ ಮನೆ ಜಪ್ತಿ ಆರ್ಡರ್ ತಂದಿರಬೇಕು” (ಕುವೆಂಪು ೨೦೦೫ಬ, ೯೪೫).

ಅಡಿಕೆ ಬೆಳೆಗಾರರು ತಮಗೆ ಬೇಕಾದಾಗ, ಎಂದರೆ ಮನೆ ಸಂಸಾರದ ಖರ್ಚಿಗೂ ಹೊಸ ಜಮೀನು ಕೊಳ್ಳುವುದಕ್ಕೂ, ಮದುವೆ ಮುಂತಾದವುಗಳಿಗೆ ಲೇವಾದೇವಿಗಾರರಿಂದ ಸಾಲ ಪಡೆಯುತ್ತಿದ್ದರು. ಕೆಲವು ಸಂಸಾರಗಳಲ್ಲಿ ಮದುವೆ, ಹರಕೆ ಇತ್ಯಾದಿಗಳಿಂದ ಖರ್ಚು ಹೆಚ್ಚಾಗಿ ಬಡ್ಡಿ ಕಟ್ಟುವುದು ಸಾಧ್ಯವಾಗದೆ ತಂದ ಸಾಲ ಒಂದಕ್ಕೆ ನಾಲ್ಕರಷ್ಟಾಗಿ ಹೊಸದಾಗಿ ಕೊಂಡ ಜಮೀನು ಮತ್ತು ಹಿಂದಿದ್ದ ಜಮೀನು ಎಲ್ಲವೂ ಸಾಲಕೊಟ್ಟ ಲೇವಾದೇವಿಗಾರರ ಪಾಲಾಗುತ್ತಿತ್ತು. ಹೀಗಾಗಿ ಅನೇಕ ಲೇವಾದೇವಿಗಾರರು ಭೂಮಾಲೀಕರಾದರು. ಭೂಮಾಲೀಕರು ಇವರಿಗೆ ಗೇಣಿ ಒಕ್ಕಲಾಗಬೇಕಾದ ಸ್ಥಿತಿ ಒದಗಿತು. ಹೀಗೆ ಪುರೋಹಿತಶಾಹಿಗಳು ತಮ್ಮ ಸಾಲ ವಸೂಲಿಗೆ ನಾನಾ ವಿಧದ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದರೆ, ಒಕ್ಕಲಿಗ ಜಮೀನ್ದಾರರು ಬೇರೆ ಮಾರ್ಗವನ್ನು ಕಂಡುಕೊಂಡಿದ್ದರು.


[1] ಬೋಗ್ಯ ಮಾಡು : ಸಾಲಗಾರ ಸಾಹುಕಾರನಿಂದ ಹಣ ಪಡೆದು ತನ್ನ ಜಮೀನನ್ನು ನಿರ್ದಿಷ್ಟ ಸಮಯಕ್ಕೆ ಅಂದರೆ ಸಾಲ ಮರುಪಾವತಿಸುವವರೆಗೆ ಸಾಹುಕಾರನಿಗೆ ಪ್ರಾಮಿಸರಿ ನೋಟಿನ ಮೇಲೆ ಬರೆದು ಕೊಡುತ್ತಾನೆ. ತನ್ನ ಜಮೀನಿನಲ್ಲಿ ತಾನೇ ದುಡಿದು, ಬೆಳೆಯನ್ನು ಒಪ್ಪಂದ ಮಾಡಿದ ಪರಿಮಾಣದಲ್ಲಿ ಸಾಹುಕಾರನಿಗೆ ಕೊಟ್ಟು ಉಳಿದುದನ್ನು ತಾನಿಟ್ಟುಕೊಳ್ಳುತ್ತಾನೆ.

ನಂಬಿಕೆ ಕ್ರಯ : ಸಾಲಗಾರ ಹಾಗು ಸಾಹುಕಾರನ ಮಧ್ಯೆ ವಿಶ್ವಾಸವಿದ್ದಾಗ ಕೇವಲ ಬಾಯಿಮಾತಿನಲ್ಲಿ ಸಾಲಗಾರ ಸಾಹುಕಾರನಿಗೆ ಸಾಲಕ್ಕೆ ಅಧಾರವಾಗಿ ತನ್ನ ಜಮೀನು ಕೊಡುವುದಾಗಿ ಹೇಳಿರುತ್ತಾನೆ. ಇದಕ್ಕೆ ಪ್ರಾಮಿಸರಿ ನೋಟನ್ನು ಬರೆಸುವುದಿಲ್ಲ. ಗದ್ದೆಯಲ್ಲಿ ಕೆಲಸ ಮಾಡುವುದು, ಬೆಳೆಯ ಲಾಭ ಪಡೆಯುವುದು ರೈತನೇ ಹೊರತು ಸಾಹುಕಾರನಲ್ಲ ಹೇಳಿದ ಸಮಯಕ್ಕೆ ಸಾಲ ಹಿಂದಿರುಗಿಸದಿದ್ದರೆ ಅವನ ಜಮೀನನ್ನು ವಶಪಡಿಸಿಕೊಳ್ಳಲು ಸಾಹುಕಾರನಿಗೆ ಹಕ್ಕಿತ್ತು.

ದೀಡು ಮಾಡುವುದು : ಎಂದರೆ ಬೆಲೆ ಬಾಳುವ ಆಭರಣಗಳನ್ನು ಅಥವಾ ಪಾತ್ರೆ ಮತ್ತು ಇತರ ಸಾಮಾನುಗಳನ್ನು ಇಂತಿಷ್ಟು ದಿನ ಎಂದು ಮಾತು ಮಾಡಿ, ಸಾಹುಕಾರನಲ್ಲಿ ಅಡವಿಟ್ಟು ದಿನೊದೊಳಗೆ ತಮ್ಮ ಸಾಮಾನುಗಳನ್ನು ಬಿಡಿಸಿಕೊಳ್ಳುವುದು. </fnote>