ಜಮೀನ್ದಾರರು ಸಾಲ ವಸೂಲಿ

ಜಮೀನ್ದಾರರೂ ಸಾಮಾನ್ಯ ಪದ್ಧತಿಯಂತೆಯೆ ಸಾಲ ವಸೂಲಿ ಮಾಡುತ್ತಿದ್ದರು ಕೆಲವು ವಿಶೇಷ ಸಂದರ್ಭಗಳಲ್ಲಿ ಕೊಟ್ಟ ಸಾಲ ಬೇರೆ ರೀತಿಯಲ್ಲಿ ಬಳಕೆಯಾಗುತ್ತಿತ್ತು. ಅಂದಿನ ಹೆಂಗಸರು ಹೆರಿಗೆ, ಬಾಣಂತನದಲ್ಲಿ ಸರಿಯಾದ ಜಿಕಿತ್ಸೆಯಿಲ್ಲದೆ ಬಹುಬೇಗ ಮರಣವನ್ನಪ್ಪುತ್ತಿದ್ದರು. ಆಗ ಜಮೀನ್ದಾರರು ಮರು ಮದುವೆಯಾಗುತ್ತಿದ್ದರು. ಹೀಗೆ ಒಕ್ಕಲಿಗ ಜಮೀನ್ದಾರರು ಮೂರು ನಾಲ್ಕು ಮದುವೆಗಳನ್ನು ಆಗುತ್ತಿದ್ದರು. ತಮ್ಮ ಒಬ್ಬ ಹೆಂಡತಿಯಿಂದ ಹೆಣ್ಣು ಸಂತಾನ ಅಥವಾ ಗಂಡು ಸಂತಾನ ಪ್ರಾಪ್ತಿಯಾಗಲಿಲ್ಲವೆಂದರೂ ಮರು ಮದುವೆಯಾಗುತ್ತಿದ್ದರು.

ಸಿಂಬಾವಿ ಭರಮೈ ಹೆಗ್ಗಡೆ ತನ್ನ ಮೊದಲ ಹೆಂಡತಿ ಜಟ್ಟಮ್ಮನಿಂದ ಸಂತಾನ ಪ್ರಾಪ್ತಿಯಾಗಲಿಲ್ಲವೆಂದು ಹೂವಳ್ಳಿ ವೆಂಕಟಪ್ಪನ ಮಗಳು ಚೆನ್ನಮ್ನನನ್ನು ತೆರ ಕೊಟ್ಟು ಮದುವೆಯಾಗಲು ಪ್ರಯತ್ನಿಸುತ್ತಿದ್ದನು (ಕುವೆಂಪು ೨೦೦೬ಬ).

ಈ ಸಂದರ್ಭದಲ್ಲಿ ಅವರು ತಾವು ಸಾಲ ಕೊಟ್ಟ ಒಕ್ಕಲಿನ ಹೆಣ್ಣುಮಗಳನ್ನು ವಿವಾಹವಾಗುತ್ತಿದ್ದರು. ಇದರಿಂದ ‘ತೆರ’ದ ಹಣದಿಂದ ಒಕ್ಕಲಿನ ಸಾಲವೂ ತೀರುತ್ತಿತ್ತು. ಗೌಡರಿಗೆ ಒಬ್ಬ ಹೆಂಡತಿಯೂ ದೊರತಂತಾಗುತ್ತಿತ್ತು.

ಸ್ವಾತಂತ್ರ್ಯಪೂರ್ವ ಮಲೆನಾಡಿನ ಘಟನೆಗಳನ್ನು ದಾಖಲಿಸಿರುವ ಕಡಿದಾಳು ರಾಮಪ್ಪ ಗೌಡರು ಸಹ ಈ ವಿಷಯದ ಬಗ್ಗೆ ಒಂದು ಘಟನೆಯನ್ನು ದಾಖಲಿಸದ್ದಾರೆ. ಕಾಸರ್ಕನಹಳ್ಳಿ ಕೇಶವಯ್ಯ ಗೌಡರ ತಂಗಿ ಅಂದರೆ ಕುಂಬ್ರಿಕೋಡು ನಾಗಪ್ಪಗೌಡರ ಹೆಂತಿ ತೀರಿಕೊಂಡಿದ್ದಳು. ಹಾಗಾಗಿ ಕುಂಬ್ರಿಕೋಡು ನಾಗಪ್ಪಗೌಡರಿಗೆ ಮರು ಮದುವೆ ಮಾಡುವ ವಿಚಾರ ಮಾಡಿದರು. ಇದಕ್ಕಾಗಿ ತಮ್ಮ ಒಕ್ಕಲಾಗಿದ್ದ ಲಿಂಗಣ್ಣಗೌಡರ ಮಗಳನ್ನು ಕೊಡಲು ಕೇಳಿದರು. ಆಗ ಲಿಂಗಣ್ಣಗೌಡ ಮದುವೆಯಾಗುವ ಅರವತ್ತು ವರ್ಷದ ನಾಗಪ್ಪಗೌಡರಿಗೆ ‘ಒಂದು ಸಾವಿರ ರೂಪಾಯಿ ತೆರ, ಐದು ನೂರು ಕಡಾಚ, ನಾಕು ಕಂಡಗ ಭತ್ತ, ಎಲ್ಡು ಬೆಲ್ಲದ ಡಬ್ಬಿ ಕೇಳಿ ೧೮ ವರ್ಷದ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿದರು (ರಾಮಪ್ಪಗೌಡ ೧೯೯೫).

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಹೂವಳ್ಳಿ ವೆಂಕಟಪ್ಪ ಮಂಜಭಟ್ಟರಲ್ಲಿ ಸಾಲ ಮಾಡಿದ್ದರು. ಮಂಜಪ್ಪಭಟ್ಟರ ಸಾಲ ತೀರಿಸದೆ ಇರಲು ಕಿಟ್ಟ ಐತಾಳ್‌ಜನರನ್ನು ಕರದುಕೊಂಡು ಬಂದು ಹೂವಳ್ಳಿ ಜಮೀನನ್ನು ಉಳಲು ಶುರುಮಾಡಿದ. ಜಾಮೀನಾಗಲು ಯಾರೂ ಒಪ್ಪಲಿಲ್ಲ. ಈ ಸಾಲಕ್ಕೆ ಸಿಂಬಾವಿ ಭರಮೈ ಹೆಗ್ಗಡೆಯವರು ಜಾಮೀನಾಗಿ ನಿಲ್ಲಲ್ಲು ಒಪ್ಪಿಕೊಂಡಿದ್ದರು. ಆಗ ವೆಂಕಟಪ್ಪ ಯೋಚಿಸಿ, ಸಿಂಬಾವಿ ಭರಮೈ ಹೆಗ್ಗಡೆಯಿಂದ ಭಾರಿ ಮೊತ್ತದ ‘ತೆರ’ದ ಹಣ ಪಡೆದು ಮಂಜಭಟ್ಟರ ಸಾಲದಿಂದ ಮುಕ್ತನಾಗಲು ಯೋಚಿಸಿ, ಚಿನ್ನಮ್ಮನ ಮದುವೆಯನ್ನು ಭರಮೈ ಹೆಗ್ಗಡೆಯೊಡನೆ ಮಾಡಲು ತಯಾರಿ ಮಾಡುವನು (ಕುವೆಂಪು ೨೦೦೬ಅ).

‘ಕಾನೂರು ಹೆಗ್ಗಡಿತಿ’ಯಲ್ಲಿ ಕಾನೂರು ಚಂದ್ರಯ್ಯಗೌಡರಿಗೆ ಸಾವಿರಾರು ರೂಪಾಯಿಗಳ ಸಾಲವನ್ನು ಮುತ್ತಳ್ಳಿ ಶ್ಯಾಮಯ್ಯಗೌಡರು ಕೊಟ್ಟಿದ್ದರು. ಅದನ್ನು ಪಡೆಯುವುದಕ್ಕಾಗಿ ಕೋರ್ಟುಮನೆ ಹತ್ತುವುದು ಅಲೆಯುವುದು ಶ್ಯಾಮಯ್ಯನವರಿಗೆ ಇಷ್ಟವಾಗುತ್ತಿರಲಿಲ್ಲ. ಚಂದ್ರಯ್ಯ ಗೌಡರಿಗೆ ಹಿತವಾಗಿದ್ದುಕೊಂಡೆ ತಮ್ಮ ಸಾಲ ಹಿಂದಕ್ಕೆ ಪಡೆಯಬೇಕೆಂಬುದು ಅವರ ಯೋಚನೆಯಾಗಿತ್ತು. ಹಾಗಾಗಿ ಕಾನೂರಿನ ರಾಮಯ್ಯನಿಗೆ ತನ್ನ ಮಗಳು ಸೀತೆಯನ್ನು ಮದುವೆ ಮಾಡಿಕೊಡಲು ಒಪ್ಪಿದನು.

ಅಂದರೆ ಸಾಲದ ಹಣದ ಬದಲು ಮಗಳನ್ನು ಸಾಲ ಪಡೆದ ಜಮೀನ್ದಾರನೊಂದಿಗೆ ಮದುವೆ ಮಾಡುತ್ತಿದ್ದರು. ಹೆಣ್ಣನ್ನು ಸಾಲ ವ್ಯವಹಾರದ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದರು! ವರ ತನ್ನ ತಂದೆಯ ಅಥವಾ ಅಜ್ಜನ ವಯಸ್ಸನವನಾದರೂ ಸಾಲವಂದಿಗರ ಹೆಣ್ಣು ಮಕ್ಕಳು ಈ ಮದುವೆಗೆ ಒಪ್ಪಲೇಬೇಕಿತ್ತು. ವಿದುರ ಭೂಮಾಲೀಕನ ಮರುಮದುವೆಗೆ ಸಾಲ ಒಂದು ನೆಪವಾದಂತೆ ಕೆಲವೊಮ್ಮೆ ತೋರುತ್ತದೆ.

ಸಾಲಕ್ಕೆ ಕಾರಣಗಳು

ಮಲೆನಾಡಿನಲ್ಲಿ ಅನುತ್ಪಾದಕ ಕಾರಣಗಳಿಗೆ ಜನರು ಸಾಲಗಾರರಾಗುತ್ತಿದ್ದುದನ್ನು ಕಾದಂಬರಿಗಳ ಮೂಲಕ ಕಾಣಬಹುದು. ಮಲೆನಾಡಿಗರು ಸಾಲ ಮಾಡಲು ಕೆಲವು ಮುಖ್ಯ ಕಾರಣಗಳನ್ನು ಗುರುತಿಸಬಹುದು. ಅವುಗಳನ್ನು ಸಾಮಾನ್ಯವಾಗಿ ಹೀಗೆ ಗುರುತಿಸಬಹುದು – ಮದುವೆಯ ತೆರ, ಕಳ್ಳು ಮತ್ತು ಮೂಢನಂಬಿಕೆ. ಇಂಥ ಸಾಲಗಳಿಂದ ಅಧೋಗತಿಗಿಳಿದ ಕುಟುಂಬಗಳು ಭೂಮಾಲೀಕರ ಒಕ್ಕಲುಗಳೋ ಅಥವಾ ಜೀತದಾಳುಗಳೋ ಆಗಿ ಬದುಕು ಸಾಗಿಸಬೇಕಿತ್ತು.

ಹೆಣ್ಣಿಗೆ ತೆರ

ಮಲೆನಾಡಿನಲ್ಲಿ ಒಂದು ಪದ್ಧತಿ ಇತ್ತು. ಮದುವೆಯಾಗುವ ಗಂಡು ಮದುವೆಯಾಗುವ ಹೆಣ್ಣಿನ ತಂದೆ ತಾಯಿಗೆ ತೆರ ಕೊಟ್ಟು ಅನಂತರ ಅವರ ಮಗಳನ್ನು ಮದುವೆಯಾಗಬೇಕಿತ್ತು.

ಅಂದಿನ ಕಾಲದಲ್ಲಿ ಮಲೆನಾಡಿನಲ್ಲಿ ಮಲೇರಿಯಾ ರೋಗಕ್ಕೆ ತುತ್ತಾಗಿ ಅನೇಕ ಹೆಣ್ಣು ಮಕ್ಕಳು ಮರಣವನ್ನಪ್ಪುತ್ತಿದ್ದರು. ಅಲ್ಲದೆ ಹೆರಿಗೆ ಸಮಯದಲ್ಲಿ ಸೂಕ್ತ ಚಿಕಿತ್ಸೆ ಮೇಲ್ವಿಚಾರಣೆ ಇಲ್ಲದೆ ಮಹಿಳೆಯರು ಸಾವನ್ನಪ್ಪುತ್ತಿದ್ದರು. ಈ ಕಾರಣಕ್ಕಾಗಿ ಒಬ್ಬ ಗಂಡಸು ಮೂರು ನಾಲ್ಕು ಮದುವೆ ಮಾಡಿಕೊಳ್ಳುತ್ತಿದ್ದನು. ಮಹಿಳೆಯರ ಸಂಖ್ಯೆ ಪುರಷರ ಸಂಖ್ಯೆಗಿಂತ ಕಡಿಮೆ ಇದ್ದುದರಿಂದ ಹೆಚ್ಚು ತೆರ ಕೊಡುವವನು ಮದುವೆಯಾಗಬಹುದಿತ್ತು.

ತೆರ ಅಂದರೆ ಇಂದಿನ ವರದಕ್ಷಿಣೆಯಂತೆ ಹೆಣ್ಣಿಗೆ ಕೊಡುವ ವಧುದಕ್ಷಿಣೆ (ಮದುವೆಯಾಗುವ ಗಂಡನ ಮೊದಲ ಹೆಂಡತಿ ಅಥವಾ ಹೆಂಡತಿಯರು ತೀರಿ ಕೊಂಡಿದ್ದರೆ ತೆರದ ಮೊತ್ತ ಹೆಚ್ಚಾಗುತ್ತಿತ್ತು. ಕೈ ತುಂಬ ತೆರ ಕೊಟ್ಟರೆ ಹೆಣ್ಣನ್ನು ಮದುವೆ ಮಾಡಿಕೊಡುತ್ತಿದ್ದರು.) ಮದುವೆಯಾಗುವ ಗಂಡು ಹುಡುಗಿಯ ತಂದೆಯ ಅಥವಾ ಅಜ್ಜನ ವಯಸ್ಸಿನವನಿದ್ದರೂ ತೆರದ ಮೊತ್ತದ ಎದುರು ಅವೆಲ್ಲ ಗೌಣವಾಗುತ್ತಿತ್ತು. ಹೆಣ್ಣಿಗೆ ತನ್ನ ಇಚ್ಛೆ ವ್ಯಕ್ತಪಡಿಸಲು ಸ್ವಾತಂತ್ರ್ಯವಿರಲಿಲ್ಲ. ಅಲ್ಲದೆ ದುಡಿಯುವ ‘ಹೆಣ್ಣಾಳು’ ಹೋಗುವುದರಿಂದ ಆಗುವ ಆರ್ಥಿಕ ಹಾನಿಯನ್ನು ತುಂಬಿಕೊಡುವ ಪರಿಹಾರ ನಿಧಿಯಂತೆ ‘ತೆರ ಪದ್ಧತಿ’ ಇತ್ತೆಂದು ತೋರುತ್ತದೆ. ಇದು ಜೀತದಾಳುಗಳ ಮದುವೆ ವಿಷಯದಲ್ಲಿ ಸ್ಪಷ್ಟವಾಗುತ್ತದೆ.

‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ಕಾನೂರು ಚಂದ್ರಯ್ಯಗೌಡನ ಒಕ್ಕಲು ಅಣ್ಣಯ್ಯಗೌಡರು. ‘ಒಕ್ಕಲತನದಲ್ಲಿ ಮೊದಲು ನೆಮ್ಮದಿಯಾಗಿದ್ದವರು ಹೆಣ್ಣಗಳಿಗಾಗಿ ತೆರವನ್ನು ತೆತ್ತೂ ತೆತ್ತೂ…… ದರಿದ್ರಾವಸ್ಥೆಗೆ ಇಳಿದಿದ್ದರು, ಅವರ ಗ್ರಹಚಾರಕ್ಕೆ ತಕ್ಕಂತೆ ಮೂವರು ಹೆಂಡರೂ ಸತ್ತು ನಾಲ್ಕನೇ ಹೆಂಡತಿಯೂ ರೋಗದಿಂದ ನರಳುತ್ತಿದ್ದಳು’ (ಕುವೆಂಪು ೨೦೦೬ಅ, ೬೩).

ಅವರಿಗೆ ಇಬ್ಬರು ಮಕ್ಕಳು – ದ್ವಿತೀಯ ಪತ್ನಿಯಲ್ಲಿ ಹುಟ್ಟಿದ್ದ ಓಬಯ್ಯನೆಂಬ ಇಪ್ಪತೈದು ವರ್ಷದ ಮಗ ಮತ್ತು ತೃತೀಯ ಪತ್ನಿಯಲ್ಲಿ ಹುಟ್ಟಿದ ಏಳೆಂಟು ವರುಷದ ಹುಡುಗಿ ಇದ್ದರು. ಓಬಯ್ಯನ ಬಳಿ ಮದುವೆಯಾಗುವ ಹೆಣ್ಣಿಗೆ ತೆರ ಕೊಡಲು ಹಣವಿರಲಿಲ್ಲ. ಆದ್ದರಿಂದ, ಅವನಿಗೆ ಇನ್ನೂ ಮದುವೆಯಾಗಿರಲಿಲ್ಲ, ಅಲ್ಲದೆ ಒಬಯ್ಯನದು ಮೊದಲ ಮದುವೆಯಾದ್ದರಿಂದ ಅವನಿಗೆ ಕಡಿಮೆ ತೆರಕ್ಕೆ ಹೆಣ್ಣು ದೊರೆಯುತ್ತಿತ್ತು! ಕಾದಂಬರಿಯಲ್ಲಿ ಅವನು ಅವಿವಾಹಿತನಾಗಿಯೇ ಉಳಿಯುವನು. ಅಣ್ಣಯ್ಯಗೌಡರು ಈಗಾಗಲೇ ತಮ್ಮ ನಾಲ್ಕು ಮದುವೆಗಳಿಗೆ ತೆರದ ಹಣ ಕೊಡಲು ಕಾನೂರು ಚಂದ್ರಯ್ಯಗೌಡರ ಬಳಿ ಸಾಕಷ್ಟು ಸಾಲ ಮಾಡಿ, ‘ಬಡ್ಡಿ ಕೂಡಿ ಸಾವಿರದ ಇನ್ನೂರು ಮುಕ್ಕಾಲು ಮೂರು ವೀಸ ಬೇಲೆ ಆರು ಪೈ’ ಬಾಕಿ ಇತ್ತು.

ತೆರದ ಹಣ ಕೊಡುವುದಲ್ಲದೇ ಭತ್ತ, ಬೆಲ್ಲದ ಡಬ್ಬಿ, ಇವನ್ನೂ ಕೂಡ ವಧುವಿನ ತಾಯಿ ತಂದೆಗೆ ಕೊಡಬೇಕಿತ್ತು ಹಾಲಪ್ಪ ತಮ್ಮ ಮದುವೆಗೆ ಆಲೆಮನೆ ಶಿದ್ದಪ್ಪನಾಯಕರ ತಂದೆಯ ಬಳಿ ‘ತೆರ’ದ ಹಣ ಕೊಡಲು ಆರುನೂರು ರೂಪಾಯಿ ಸಾಲ ಮಾಡಿದ್ದಲ್ಲದೆ ಒಡೆಯರಿಂದ ಐವತ್ತು ಸೇರು ಅಕ್ಕಿ ಪಡೆದು ಹೆಣ್ಣಿನ ಕಡೆಯವರಿಗೆ ಕೊಟ್ಟಿದ್ದರು ಎಂದು ಸ್ಮರಿಸುತ್ತಾರೆ. ಅಲ್ಲದೆ ಒಡೆಯರಿಂದ ವಧುವಿಗೆ ಒಂದು ತಾಳಿ, ನಾಲ್ಕು ಗುಂಡು ಪಡೆದುಕೊಂಡಿದ್ದರು, ಇದೂ ಸಹ ಮದುವೆ ಸಾಲದ (ನೋಡಿ : ಅನುಬಂಧ – ೨) ಲೆಕ್ಕದಲ್ಲಿರುತ್ತಿತ್ತು.

ಹೀಗೆ ‘ತೆರ’ ಕೊಟ್ಟರೇ ಮಾತ್ರ ಮದುವೆ ಮಾಡುವ ಸಂಪ್ರದಾಯ ಅಂದಿನ ಒಕ್ಕಲುಗಳು ಹಾಗು ಆಳುಗಳಲ್ಲಿ ಇತ್ತು. ‘ತೆರ’ದ ಹಣ ಕೊಡಲಾಗದ ಓಬಯ್ಯ ಅವಿವಾಹಿತನಾಗಿಯೇ ಉಳಿಯುವನು. ಓಬಯ್ಯನ ತಂದೆ ಈಗಾಗಲೇ ಹೆಣ್ಣುಗಳಿಗೆ ತೆರವನ್ನು ಸಾಕಷ್ಟು ಕೊಟ್ಟಿದ್ದರಿಂದ ಅವರು ಸಾಲಗಾರರಾಗಿದ್ದರು. ಎಷ್ಟೆಂದರೆ ಆ ಸಾಲವನ್ನು ತೀರಸಲಾಗದೇ ರಾತ್ರೋರಾತ್ರಿ ಕೆಳಕಾನೂರಿನಿಂದ ಓಡಿ ಹೋಗಿದ್ದರು.

ಹೀಗೆ ಸಾಹುಕಾರರು, ಜಮೀನ್ದಾರರು ಮದುವೆಯ ‘ತೆರ’ಕ್ಕೆ ಸಾಲ ಕೊಟ್ಟು ಕೆಳಜಾತಿಯ ಜನರನ್ನು ಸಾಲಗಾರರನ್ನಾಗಿ ಮಾಡಿ ಜೀತದಾಳುಗಳನ್ನಾಗಿ ಮಾಡಿಕೊಳ್ಳುತ್ತಿದ್ದರು. ಸಾಮಾಜಿಕ ರೀತಿ ರಿವಾಜು ಅವರನ್ನು ಆರ್ಥಿಕವಾಗಿ ದುರ್ಬಲರನ್ನಾಗಿ ಮಾಡಿ ಅವರ ಸಾಸ್ವಂತ್ರ್ಯಹರಣ ಮಾಡುತ್ತಿತ್ತು. ಜೀವನಪರ್ಯಂತ ಮತ್ತು ವಂಶಪಾರಂಪರ್ಯವಾಗಿ ದಾಸ್ಯಕ್ಕೆ ನೂಕುತ್ತಿತ್ತು.

ಕಳ್ಳು

ಮಲೆನಾಡಿಗರಲ್ಲಿ ಕಳ್ಳು ಕುಡಿಯುವ ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗಿತ್ತು. ಒಕ್ಕಲುಗಳು ಜೀತದಾಳುಗಳು ಹಾಗೂ ಘಟ್ಟದಾಳುಗಳು ಕಳ್ಳಂಗಡಿಯಲ್ಲಿ ಸಾಲ ಮಾಡಿ ಕಳ್ಳು ಕುಡಿಯುತ್ತಿದ್ದರು.

ಹಾಲಪ್ಪ ನೆನಪಿಸಿಕೊಳ್ಳುವಂತೆ ಒಂದು ಮೊಗೆ ಕಳ್ಳಿನ ಬೆಲೆ ನಾಕಾಣಿ ಇತ್ತು ಅವರ ಸಂಬಳ ಒಂದು ರೂಪಾಯಿ. ಜನರು ಕೇವಲ ಒಂದೇ ಮೊಗೆ ಕುಡಿಯುತ್ತಿರಲಿಲ್ಲ. ಚೆನ್ನಾಗಿ ಮತ್ತೇರುವವರೆಗೂ ಕುಡಿಯುತ್ತಿದ್ದರು (ನೋಡಿ : ಅನುಬಂಧ – ೨). ಅವರ ಸಂಬಳ ಕಳ್ಳು ಕುಡಿಯಲು ಸಾಲುತ್ತಿರಲಿಲ್ಲ. ಹಾಗಾಗಿ ಕಳ್ಳಂಗಡಿಯಲ್ಲಿ ಅವರ ಸಾಲ ಬೆಳೆಯುತ್ತಿತ್ತು.

ಕೆಲಸದ ಜನರು ಹಣ ಕೊಟ್ಟು ತಾವು ಕುಡಿಯುವ ಕಳ್ಳಿನ ಸಾಲ ತೀರಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಕೋಳಿ, ಕುರಿ, ಕೃಷಿ ಸಲಕರಣೆಗಳು, ಬಾಳೆಗೊನೆ, ತರಕಾರಿ, ಹಲಸಿನ ಹಣ್ಣು ಮುಂತಾದ ಕೈಗೆಟಕುವ ಸಾಮಾನುಗಳನ್ನು ಕೊಟ್ಟು ತಮ್ಮ ಲೆಕ್ಕ ಚುಕ್ತ ಮಾಡಿಕೊಳ್ಳುತ್ತಿದ್ದರು.

‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ಕಳ್ಳಂಗಡಿಗೆ ಬಾಡುಗಳ್ಳ ಸೋಮ, ಬೇಲರ ಬೈರ, ಅವನ ಹೆಂಡತಿ ಸೇಸಿ, ಅವರ ಮಗ ಗಂಗ ಹುಡುಗ, ಬೇಲರ ಸಿದ್ಧ, ಗಾಡಿ ಹೊಡೆಯುವ ನಿಂಗ, ಸೇರೆಗಾರ ರಂಗಪ್ಪಸೆಟ್ಟರು ಕಡೆಯ ಘಟ್ಟದಾಳುಗಳು ಸಾಲಗಾರರಾಗಿದ್ದರು.

ಬಾಡುಗಳ್ಳ ಸೋಮ, ತಿಮ್ಮನ ಕೋಳಿ ಕದ್ದು ಕಳ್ಳಂಗಡಿಯ ಚಿಕ್ಕಣ್ಣನಿಗೆ ಕೊಟ್ಟನು ಬೈರ ತಾನು ಬಗನಿ ಕಟ್ಟಿ ಕಳ್ಳು ಮಾರಿ ಸಾಲತೀರಿಸುವುದಾಗಿ ಮಾತುಕೊಟ್ಟನು. ಅವನ ಹೆಂಡತಿ ಸೇಸಿ ಒಂದೆರಡು ಹೇಂಟೆಗಳ ಮರಿಗಳನ್ನು ದೊಡ್ಡದು ಮಾಡಿ ಕೊಡುವುದಾಗಿ ಹೇಳಿದಳು. ಗಂಗ ಹುಡುಗ ಗಾಡಿ ನಿಂಗನು ಹೂತಿಟ್ಟಿದ್ದ ತನ್ನ ಪಾಲಿನ ಕೃಷಿ ಸಲಕರಣೆಗಳಾದ ಕೆಲಸದ ಕತ್ತಿ, ಹಿತ್ತಾಳೆ ಚೊಂಬು, ಹಾರೆ, ಗುದ್ದಲಿ ನೇಗಿಲ ಕುಳಗಳನ್ನು ಕೊಟ್ಟು ಸಾಲ ತೀರಿಸುತ್ತಾನೆ ಓಬಯ್ಯ ತನ್ನ ತಂಗಿಯ ಕೈಯ ಬೆಳ್ಳಿ ಕಡಗವನ್ನು ಕೊಡುತ್ತಾನೆ. ಹೀಗೆ ಕಳ್ಳಂಗಡಿಯಲ್ಲಿಯೂ ಜನರ ಸಾಲ ಇರುತ್ತಿತ್ತು.

ಮೂಢನಂಬಿಕೆ

‘ದೈಯದ ಹರಕೆ’ ಎಂಬುದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಮಲೆನಾಡಿನ ಆಚರಣೆಯಾಗಿತ್ತು. ಒಕ್ಕಲುಗಳು ತಮ್ಮ ಜಮೀನಿನಲ್ಲಿ ಜಕ್ಕಿಣಿ, ಭೂತ ಮುಂತಾದವು ನೆಲಸಿ, ಕಳ್ಳತನವಾಗದಂತೆ ಜಮೀನನ್ನು ಕಾಪಾಡುತ್ತವೆ ಎಂದು ನಂಬಿದ್ದರು. ಜನರಿಗೆ ದೆವ್ವಭೂತ ದೇವತೆಗಳೆಂಬ ಅಪ್ರಾಪಂಚಿಕವಾದ ಪೋಲಿಸಿನಲ್ಲಿ ಅತಿ ಭೀತಿ ಇತ್ತು ಎಂದು ಕುವೆಂಪು ಹೇಳುತ್ತಾರೆ. ಹೀಗಾಗಿ ವರ್ಷದಲ್ಲಿ ಒಮ್ಮೆ ದೈಯದ ಹರಕೆ ಮಾಡುತ್ತಿದ್ದರು. ಇದಕ್ಕಾಗಿ ಕುರಿ ಕೋಳಿಗಳನ್ನು ತಂದು, ಬಲಿ ಕೊಟ್ಟು, ನೆರೆದ ನೆಂಟರಿಷ್ಟರಿಗೂ ಊಟ ಹಾಕಿಸುತ್ತಿದ್ದರು.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಹೂವಳ್ಳಿ ವೆಂಕಟ್ಟಪ್ಪ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರಿಂದ ಒಂದು ಹಂದಿಯನ್ನು ಸಾಲವಾಗಿ ತೆಗೆದುಕೊಂಡು ಬರುತ್ತಾನೆ. ದೆಯ್ಯದ ಹರಕೆಗೆ ಬರುವ ನೆಂಟತಿಯರಿಗೆ ಉಡುಗೊರೆಯಾಗಿ ಕೊಡಲು ಸೀರೆಗಳನ್ನು ಸಹ ತಂದಿರುತ್ತಾನೆ.

ದಯ್ಯದ ಹರಕೆಯ ಗಲಾಟೆ ಸಂಭ್ರಮ ಕಾನೂರು ಹೆಗ್ಗಡಿತಿಯಲ್ಲೂ ವರ್ಣಿಸಲ್ಪಟ್ಟಿದೆ. ಕಾನೂರು ಮನೆಯಲ್ಲಿ ‘ದೆಯ್ಯದ ಹರಕೆ’ಯಲ್ಲಿ ನೆಂಟರಿಷ್ಠರು, ಒಕ್ಕಲು, ಕನ್ನಡ ಜಿಲ್ಲೆಯ ಘಟ್ಟದ ಆಳುಗಳು ಎಲ್ಲರೂ ಭಾಗಿಗಳಾಗುತ್ತಿದ್ದರು. ಎಲ್ಲರೂ ಸೇರಿಕೊಂಡು ಹರಕೆಯ ಅನೇಕ ಕಾರ್ಯಗಳನ್ನು ವಹಿಸಿಕೊಂಡು ಮಾಡುತ್ತಿದ್ದರು. ಕೆಲವು ಕುರಿಗಳು, ಅನೇಕ ಕುಕ್ಕುಟಗಳೂ ಆ ದಿನ ಭೂತ, ರಣ, ಬೇಟೆರಣ ಚಡಿ, ಪಂಜ್ರೋಳ್ಳಿ ಮುಂತಾದ ‘ದೆಯ್ಯ ದ್ಯಾವರು’ಗಳಿಗೆ ಬಲಿಯಾಗುತ್ತಿದ್ದವು.

ನಿಂಗ ಹೂತಿಟ್ಟ ಕೃಷಿ ಸಲಕರಣೆಗಳನ್ನು ಕದ್ದ ಗಂಗ ಹುಡುಗ, ನಿಂಗನ ತೆಂಗನಿಕಾಯಿ ಮುಟ್ಟಿ ರಕ್ತ ಕಾರಿ ಸಾವನಪ್ಪಿದನು. ಇದರಿಂದ ಆ ಜನರಿಗೆ ದೆಯ್ಯದ ಬಗ್ಗೆ ಇದ್ದ ಭಯ ಎಷ್ಟು ಪ್ರಬಲವಾಗಿತ್ತು ಎಂದು ತಿಳಿಯುತ್ತಿದೆ. ಜನರ ಸುಪ್ತ ಮನಸ್ಸನ್ನು ಸಹ ದೇವ ದೆಯ್ಯದ ಭಯ ಆವರಿಸಿತ್ತು. ಹಾಗಾಗಿ ಯಾರೂ ದಯ್ಯದ ಹರಕೆ ಮಾಡದೆ ಇರುತ್ತಿರಲಿಲ್ಲ. ಸಾಲ ಮಾಡಿಯಾದರೂ ಸರಿ ದಯ್ಯಗಳಿಗೆ ಹರಕೆ ಕೊಡಲೇಬೇಕಿತ್ತು. ಅಲ್ಲದೇ ಮಲೆನಾಡಿನ ಜನರು ಆರೋಗ್ಯ ಕೆಟ್ಟರೆ ಚಿಕಿತ್ಸೆ ಮಾಡಿಸದೆ ಯಂತ್ರ, ತಾಯಿತ ಕಟ್ಟಿಸುವುದು, ನಿಮಿತ್ತ ಕೇಳುವುದು, ಚೀಟು ವಿಭೂತಿ ಹಾಕಿಸುವುದು ಮುಂತಾದವುಗಳನ್ನು ಹಣ ತೆತ್ತು ಮಾಡಿಸುತ್ತಿದ್ದರು.

ಆಚರಣೆಗಳಿಗೆ ಮಾಡುವ ಹಣದ ವ್ಯಯವನ್ನು ಕುವೆಂಪು ಅವರು ‘ಶೂನ್ಯ ಖಾತೆಯ ಖರ್ಚು’ ಎಂದು ಕರೆಯುತ್ತಾರೆ. ಭೂತ ಪಿಶಾಚಿಗಳ ಆರಾಧನೆಗೆ ಸಾಕಷ್ಟು ಖರ್ಚಾಗುವುದು. ದಡ್ಡಿರುವವರಿಗೆ ಇದು ಮಹಾಭೋಗದ ವಿಷಯ. ಆದರೆ ಅದನ್ನು ಅನುಸರಿಸುವ ಬಡವರು ಮನೆಯ ದುರವಸ್ಥೆಯನ್ನು ಗಣನೆಗೆ ತಾರದೆ ಸಾಲ ಮಾಡಿ ‘ಸುಳ್ಳು ಭಯದಿಂದ ಪ್ರೇರಿತರಾಗಿ ವರ್ಷ ವರ್ಷವೂ ಮರಗಳ ಬುಡದಲ್ಲಿರುವ ಕಲ್ಲುಗಳಿಗೆ ಕುರಿ ಕೋಳಿಗಳನ್ನು ಬಲಿ ಇತ್ತು ಸರ್ವನಾಶವಾಗುತ್ತಿದ್ದಾರೆ’ ಎಂದು ಕುವೆಂಪು ನೊಂದು ನುಡಿದಿದ್ದಾರೆ (ಕುವೆಂಪು ೧೯೯೮ ೧೮).

ಹೀಗೆ ಮತದ ಹೆಸರಿನಲ್ಲಿ, ದೆವ್ವ ಪಿಶಾಚಿ ಗ್ರಹಗಳ ಹೆಸರಿನಲ್ಲಿ ದುರ್ವ್ಯಯವಾಗುತ್ತಿರುವ ಸಂಪತ್ತನ್ನು ತಡೆಗಟ್ಟಿ, ಅದನ್ನು ಹೆಚ್ಚು ಅವಶ್ಯಕವಾಗಿರುವ ಮತ್ತು ಹೆಚ್ಚು ಯಪಯೋಗಕರವಾಗಿರುವ ಜೀವನ ಪಥಗಳಲ್ಲಿ ವಿನಿಯೋಗಿಸಬೇಕೆಂದು ಕುವೆಂಪು ಮಲೆನಾಡಿಗರಲ್ಲಿ ಹೇಳುತ್ತಾರೆ.

ಅಲ್ಲದೆ ಒಡವೆಗಳನ್ನು ಮಾಡಿಸಲು ಜನ ಸಾಲ ಮಾಡುತ್ತಿದ್ದರು. ಮೊದಲೇ ಸಾಲಗಾರನಾದ ಹೂವಳ್ಳಿ ವೆಂಕಟಪ್ಪ. ಅದನ್ನು ಪರಿಗಣಿಸದೇ ತನ್ನ ಮಗಳು ಚಿನ್ನಮ್ಮ ಹಾಗೂ ನಾಗಕ್ಕನಿಗೆ ಸಾಕಷ್ಟು ಒಡವೆಗಳನ್ನು ಮಾಡಿಸಿರುತ್ತಾನೆ. ಕಾನೂರಿನಲ್ಲೂ ಹೂವಯ್ಯನ ತಾಯಿ ನಾಗಮ್ಮ ಚಂದ್ರಯ್ಯಗೌಡರು ತಮ್ಮ ಹೊಸ ಹೆಂಡತಿಗೆ ಜರತಾರಿ ಸೀರೆ, ಉಂಗುರ, ಅಡ್ಡಿಗೆ, ಡಾಬು, ಕಾಸಿನಸರ, ಕಟ್ಟಾಣಿ ಹೊಂಬಳೆ ಇವನ್ನು ಮಾಡಿಸಿ ಸಾಲ ಆಗಿದೆ ಎಂದು ಹೇಳುವರು.

ಹೀಗೆ ಅನೇಕ ಕಾರಣಗಳಿಂದ ಒಕ್ಕಲುಗಳು ಆಳುಗಳು ಸಾಲಗಾರರಾಗುತ್ತಿದ್ದರು. ಅಲ್ಲದೆ ಶ್ರೀಮಂತ ಜಮೀನ್ದಾರರೇ ಸಾಲ ಮಾಡಿ ಅದನ್ನು ತೀರಿಸಲು ತಮ್ಮ ಜಮೀನನ್ನು ಮಾರುತ್ತಿದ್ದರು. ಹೊರಗಿನ ಪ್ರಪಂಚದಿಂದ ದೂರವಿದ್ದ ಮಲೆನಾಡು ಯಾವ ಬಡ್ಡಿದರ ನಿಯಂತ್ರಣದ ಕಾಯಿದೆಗೆ ಒಳಗಾಗಲಿಲ್ಲ. ಹೀಗಾಗಿ ಲೇವಾದೇವಿಗಾರರು ಹೆಚ್ಚಿನ ಬಡ್ಡಿಗೆ ಸಾಲ ಕೊಟ್ಟು ಸಾಲವಂದಿಗರನ್ನು ಶೋಷಿಸುತ್ತದ್ದರು. ಇದರಿಂದಾಗಿ ಆ ಸಮಾಜದಲ್ಲಿ ಆರ್ಥಿಕ ಅಸಮಾನತೆಯ ಕಂದರ ಹೆಚ್ಚುತ್ತಲಿತ್ತು.