ಜೀತಪದ್ಧತಿ ಎಲ್ಲಾ ನಾಗರಿಕತೆಗಳ ಸಾಮಾಜಿಕ ಮತ್ತು ಆರ್ಥಿಕತೆಯ ಅಂಗವಾಗಿದೆ, ಭಾರತದಲ್ಲಿ ಪರಂಪರೆ, ಧರ್ಮ, ಸಂಪ್ರದಾಯಗಳಿಂದ ಅನುಮೋದಿತವಾಗಿ ಅನಾದಿಕಾಲದಿಂದಲೂ ಅಸ್ಥಿತ್ವದಲ್ಲಿದೆ.

ಜೀತಪದ್ಧತಿಯ ಮೂಲವನ್ನು ಶ್ರೇಣೀಕೃತ ಜಾತಿಪದ್ಧತಿಯಲ್ಲಿ ಕಾಣಬಹುದು. ನಾಲ್ಕು ಜಾತಿಗಳಿಗೆ ಸೇರದ ಮತ್ತೊಂದು ನಿಮ್ನ ವರ್ಗವೊಂದಿತ್ತು. ಮೇಲ್ಜಾತಿಯ ಜನರಾರೂ ಮಾಡಲು ಒಪ್ಪದ ಇತರೇ ಕೆಲಸಗಳನ್ನು ಇವರು ಮಾಡಬೇಕಿತ್ತು. ಉತಮ್ಮ ಜಾತಿಗಳ ಸೇವೆಯನ್ನು ಮಾಡಬೇಕಿತ್ತು. ಇದಲ್ಲದೆ ಅವರಿಗೆ ಇವರ ನಾಗರಿಕತೆಯಲ್ಲಿ ಸಮಾಜದಲ್ಲಿ ಬೆರೆಯುವ ಆವಕಾಶವಿರಲಿಲ್ಲ. ಊರಿನಿಂದ ಹೊರಗೆ ಇವರ ಗುಡಿಸಲುಗಳಿರುತ್ತಿದ್ದವು.

ಕೃಷಿಯಾಧಾರಿತ ಆರ್ಥಿಕತೆಯು ಊಳಿಗಮಾನ್ಯ ಪದ್ಧತಿಯ ಆಧಾರದ ಮೇಲೆ ಆಭಿವೃದ್ಧಿ ಆಗಿರುವಂಥದ್ದು ಸಾಮಾಜಿಕ ಅಂತಸ್ತು ಹಾಗು ಪದವಿಗಳು ಜನ್ಮದ ಆಧಾರದ ಮೇಲೆ ನಿರ್ದರಿಸಲ್ಪಡುತ್ತಿದ್ದವು. ಇಂತಹ ಶೋಷಣೆ ಮತ್ತು ಒತ್ತಡದ ಹಿನ್ನೆಲೆಯಲ್ಲಿ ಜೀತಪದ್ಧತಿಯು ಸಾಮಾನ್ಯವಾಗಿತ್ತು (ತ್ರಿಪಾಟಿ ೧೯೮೯).

‘ಕೃಷಿಯೇ ಸಂಸ್ಕೃತಿಯ ಅತಿ ಪ್ರಾಚೀನ ರೂಪ’, ಎಂದಿರುವ ವಿಲ್ ಡ್ಯುರ್ಯಾಂಟ್, ‘ಕೃಷಿಯು ನಾಗರಿಕತೆಯನ್ನು ಸೃಷ್ಟಿಸುವುದರ ಜೊತೆಗೆ ಖಾಸಗಿ ಆಸ್ತಿಯನ್ನು ಹುಟ್ಟು ಹಾಕಿ ಗುಲಾಮಗಿರಿಯ ಸೃಷ್ಟಿಗೂ ಕಾರಣವಾಯಿತು’, ಎಂದಿದ್ದಾನೆ. ‘ಕೃಷಿಯ ಆರಂಭದಿಂದಲೇ ಸಾಮಾಜಿಕವಾಗಿ ದುರ್ಬಲರಾದವರನ್ನು ಸಬಲರು ದುಡಿಸಿಕೊಳ್ಳುವ ಅಸಮಾನತೆಯ ಪರಿಪಾಠವೂ ಮೊದಲಾಯಿತು’ (ಕಾಮತ್ ೨೦೦೬). ಆದ್ದರಿಂದ ದಾಸ್ಯವು ಕೃಷಿಯ ಅವಿಭಾಜ್ಯ ಅಂಗವಾಗಿದೆ ಎಂದು ಸೂರ್ಯನಾಥ ಕಾಮತ್ ಆಭಿಪ್ರಾಯಪಡುತ್ತಾರೆ (ಅದೇ.).

ರೋಮ್, ಗ್ರೀಸ್ ಹಾಗು ಭಾರತದಲ್ಲೂ ಸಹ ದಾಸ್ಯ ಪದ್ಧಿತಿಯು ಅಸಮಾನ ಸಾಮಾಜಿಕ, ಆರ್ಥಿಕ ಪದ್ಧತಿಯ ಫಲವಾಗಿತ್ತು. ಈ ವ್ಯವಸ್ಥೆಯಡಿ ಸಾಲಗಾರ-ಲೇವಾದೇವಿಗಾರ ಸಂಬಂಧವು ದಾಸ-ಒಡೆದು ಸಂಬಂಧವಾಗಿ ಪರಿವರ್ತಿತವಾಯಿತು (ಕಾಮತ್ ೨೦೦೬, ೮).

ಸಾಲಗಾರ ದಾಸನೂ/ಆಳೂ ಆಗಿರುವುದರಿಂದ ತನ್ನ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಕೇಳಲಾಗುವುದಿಲ್ಲ. ಕಡಿಮೆ ಕೂಲಿಗೆ ತೃಪ್ತನಾಗಿರಬೇಕಿತ್ತು. ಇದರಿಂದ ಅವನು ಮತ್ತೆ ಮತ್ತೆ ಸಾಲ ಪಡೆದುಕೊಳ್ಳುತ್ತ ನಿರಂತರ ಸಾಲಗಾರನಾಗುತ್ತಾನೆ. ಅವನ ಸಾಲವು ಅವನ ಜೀವನಪರ್ಯಂತ ತೀರುವುದಿಲ್ಲ. ಅವನೊಡನೆ ಅವನ ಕುಟುಂಬದ ಜನರೂ ಒಡೆಯರ ಮನೆಯಲ್ಲಿ ಅತಿ ಕಡಿಮೆ ಕೂಲಿಗೆ ಕೆಲಸ ಮಾಡುವ ಪರಿಸ್ಥಿತಿ ಉಂಟಾಗುತ್ತದೆ.

ಆರ್ಥಿಕ ಅವಲಂಬನೆ ಬಡತನ ಹಾಗು ಕೃಷಿ ಪ್ರಧಾನ ಸಮಾಜವು ಜನರನ್ನು ಸಾಲಗಾರರನ್ನಾಗಿಸಿ ದಾಸರಾಗುವಂತೆ ಮಾಡಿವೆ. ಅನಕ್ಷರಸ್ಥ ಜನರ ಸರಳತೆ ಅಜ್ಞಾನ ಈ ದಾಸ್ಯವನ್ನು ಸುಲಭವಾಗಿಸಿತು.

ಬೇರೆ ಪ್ರದೇಶದಲ್ಲಿ ಇರುವ ಜೀತಪದ್ಧತಿಗೂ ಮಲೆನಾಡಿನ ಪದ್ಧತಿಗೂ ವ್ಯತ್ಯಾಸವುಂಟು. ಈ ವ್ಯತ್ಯಾಸದಿಂದ ಮಲೆನಾಡಿನ ಜೀತ ಪದ್ಧತಿ ವಿಶಿಷ್ಟವಾಗಿದೆ.

ಮಲೆನಾಡು ಮಲೆಗಳಿಂದ ತುಂಬಿದ ದುರ್ಗಮವಾದ ಪ್ರದೇಶವಾಗಿದ್ದು, ಜನರು ನೆಲೆಸಲು ಸ್ಪಲ್ಪ ಕಷ್ಟವೇ. ಜೋರಾಗಿ ಸುರಿಯುವ ಮಳೆ, ಗುಡ್ಡಗಾಡು ಪ್ರದೇಶ, ಕಾಡುಪ್ರಾಣಿಗಳು – ಈ ಕಾರಣಗಳಿಂದ ಜನರು ಅಲ್ಲಿ ನೆಲೆಸಿದ್ದು ಕಡಿಮೆ ಎನ್ನಬಹುದು ಬಯಲುಸೀಮೆಗೆ ಇರುವ ಅನುಕೂಲಗಳು ಸಮತಟ್ಟಾದ ನೆಲಮಲೆನಾಡಿಗೆ ಸಹಜವಾಗಿ ಇಲ್ಲ.

ಹೀಗಿರುವಲ್ಲಿ ಕುವೆಂಪು ಚಿತ್ರಿಸಿದ ಮಲೆನಾಡಿನ ಪ್ರದೇಶಗಳಲ್ಲಿ ಜನಸಂಖ್ಯೆ ಬಹಳ ಕಡಿಮೆ ಇತ್ತು. ಕುವೆಂಪು ಅವರೇ ಹೇಳುವಂತೆ ‘ಊರೆಂದರೆ ಒಂದೇ ಮನೆ’ ಎಂಬಂತೆ. ಈ ಒಂದೇ ಮನೆಯಲ್ಲಿರುವ ಜಮೀನ್ದಾರರು ತಮ್ಮ ಮನೆಯ ಸುತ್ತಮುತ್ತಲು ಕಾಡಿನ ಪ್ರದೇಶಗಳನ್ನು ಸವರಿ ಗದ್ದೆ ಹಾಗೂ ಅಡಿಕೆ ತೋಟಗಳನ್ನು ಮಾಡಿಕೊಂಡಿದ್ದರು. ಕಾಡಿನಲ್ಲಿ ಭೂಮಿ ಸಾಕಷ್ಟು ಇರುವುದರಿಂದ ಹಾಗು ಕಾಡನ್ನು ಗದ್ದೆ ತೋಟಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಬಹುಶಃ ಆಗ ಯಾರ ಕಟ್ಟುಪಾಡು ಇರಲಿಲ್ಲವಾದ್ದರಿಂದ ಸೂಕ್ತವಾದ ಜಾಗಗಳಲ್ಲಿ ಗದ್ದೆ ತೋಟಗಳನ್ನು ಸಾಕಷ್ಟು ಮಾಡಿದ್ದರು.

ಒಬ್ಬ ಜಮೀನ್ದಾರನ ಮನೆಯ ಸಮೀಪ ಅವರ ಗದ್ದೆ ತೋಟಗದಲ್ಲಿ ಕೆಲಸ ಮಾಡುವ ಆಳುಗಳ ಬಿಡಾರ ಇರುತ್ತಿತ್ತು. ಇವರು ಒಂದಲ್ಲ ಒಂದು ಕಾರಣಕ್ಕೆ ಜಮೀನ್ದಾರರಲ್ಲಿ ಸಾಲ ಮಾಡಿ ಅವರ ಜೀತದಾಳುಗಳಾಗಿದ್ದರು. ಜೀತದಾಳುಗಳ ನಿವಾಸಕ್ಕೆ ಬಿಡಾರ ಅಥವಾ ಗುಡಿ ಎಂದು ಕರೆಯುತ್ತಿದ್ದರು. ಶ್ರೀಮಂತರ ನಿವಾಸಕ್ಕೆ ಮಾತ್ರ ‘ಮನೆ’ ಎಂದು ಕರೆಯುತ್ತಿದ್ದರು.

ಸಾಮಾನ್ಯ ಜೀತ ಪದ್ಧತಿ

ಜೀತಪದ್ಧತಿಯು ಒಪ್ಪಂದದ ಕರಾರಿನ ಊಳಿಗವಾಗಿದೆ. ಅದರಡಿ ಬಡಮನುಷ್ಯನು ಸಾಹುಕಾರನ ಸೇವೆಯನ್ನು ಒಂದರಿಂದ ಮೂರು ವರ್ಷದವರೆಗೆ ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳುವನು. ಕರಾರಿನ ಪ್ರಕಾರ ಸೇವೆಗೆ ಒಡೆಯನು ಕೂಲಿಯನ್ನು ಕೊಟ್ಟು ಅದನ್ನು ಬರೆದಿಟ್ಟುಕೊಳ್ಳುತ್ತಿದ್ದನು. ಆರಂಭದಲ್ಲಿ ಒಡೆಯನು ಒಂದಿಷ್ಟು ಹಣವನ್ನು ಆಳಿಗೆ ಅಥವಾ ಆಳಿನ ಕಡೆಯವರಿಗೆ ಕೊಡುವನು. ಇದನ್ನು ಸೇವಕನು ದುಡಿದು ತೀರಿಸಬೇಕು. ಸಾಮಾನ್ಯವಾಗಿ ಇದಕ್ಕೆ ಬಡ್ಡಿಯನ್ನು ಹಾಕುತ್ತಿರಲಿಲ್ಲ. ಆದರೆ ಸೇವಕನು ಓಡಿ ಹೋಗುವ ಪ್ರಯತ್ನ ಮಾಡಿದರೆ ಅಥವಾ ಕರಾರನ್ನು ಮುರಿದರೆ ಕೊಟ್ಟ ಹಣಕ್ಕೆ ಬಡ್ಡಿ ಹೇರಲಾಗುತ್ತಿತ್ತು. ಸೇವಕನ ಬಟ್ಟೆ ಬರೆ ಮತ್ತು ಊಟವನ್ನು ಒದಗಿಸುವುದು ಒಡೆಯನ ಕರ್ತವ್ಯವಾಗಿತ್ತು. ಇದರ ಲೆಕ್ಕ ಇಡುತ್ತಿರಲ್ಲ.

ಮೊದಲ ಸಾಲವನ್ನು ಪೂರೈಸುವುದರೊಳಗಾಗಿ ಸೇವಕ ಅಥವಾ ಅವನ ಪೋಷಕ ಮತ್ತೊಮ್ಮೆ ಸಾಲ ಪಡೆಯುತ್ತಿದ್ದು, ಸೇವೆಯ ಅವಧಿಯು ಮತ್ತೆ ಮುಂದುವರಿಯುತ್ತಿತ್ತು. ಒಬ್ಬ ಮನುಷ್ಯ ತನ್ನ ಇಡೀ ಜೀವಿತಾವಧಿಯ ಅಂದರೆ ಹತ್ತರಿಂದ ಎಪ್ಪತ್ತು ವರ್ಷಗಳವರೆಗೆ ಜೀತದಾಳಾಗಿಯೇ ದುಡಿಯುತ್ತಿರಲಿಲ್ಲ (ಶ್ರೀನಿವಾಸ ೧೯೬೭). ಸಾಲ ಚುಕ್ತ ಆಗಿ ಅವರು ಸ್ವತಂತ್ರರಾಗುತ್ತಿದ್ದರು. ಇಂತಹ ಜೀತಪದ್ಧತಿಯಲ್ಲಿ ಸಾಲ ತೀರುವ ಭರವಸೆಯಿತ್ತು. ಇಲ್ಲ ಸಾಲಪಡೆದ ಕುಟುಂಬದ ಒಬ್ಬ ವ್ಯಕ್ತಿ, ಆ ಸಾಲ ತೀರಿಸಲು ಬಾಧ್ಯಸ್ಥನಾಗುತ್ತಾನೆ ಮಲೆನಾಡಿನ ಜೀತದಾಳುಗಳ ಸ್ಥಿತಿ ಹೀಗಿರಲಿಲ್ಲ.

ಮಲೆನಾಡಿನ ಜೀತ ಪದ್ಧತಿ

ಅಂದು ಮಲೆನಾಡಿನ ಶ್ರೀಮಂತರು ಜಮೀನುದಾರರಾದ ಗೌಡರು, ಪುರೋಹಿತ ವರ್ಗದವರು ತಮ್ಮ ಜಮೀನು ಮತ್ತು ಇತರೆ ಕೆಲಸಕ್ಕೆ ಖಾಯಂ ಆಗಿ ಆಳುಗಳನ್ನು ಇಟ್ಟುಕೊಳ್ಳುತ್ತಿದ್ದರು. ಇವರು ಹೆಚ್ಚಾಗಿ ಅಸ್ಪೃಶ್ಯರು/ದಲಿತರೇ ಆಗಿರುತ್ತಿದ್ದರು.

ಅಂದಿನ ಪದ್ಧತಿಯಂತೆ ಮದುವೆಯಲ್ಲಿ ಮದುಮಗನು ಮದುಮಗಳ ಪೋಷಕರಿಗೆ ತೆರ – (ವಧುದಕ್ಷಿಣೆ) ಕೊಡಬೇಕಿತ್ತು. ‘ತೆರ’ ಕೊಡದೆ ಮದುವೆಯಾಗುವುದು ಸಾಧ್ಯವಿರಲಿಲ್ಲ.

ಒಬ್ಬನೆಗೆ ಮದುವೆ – ‘ಕುಹಲುಮೊರೆ’ ಮಾಡಿಸಿದರೆ ಅವನು, ಅವನ ಹೆಂಡತಿ ಮಕ್ಕಳೂ ಎಲ್ಲರೂ ಒಡೆಯರ ಮನೆಯಲ್ಲಿ ಖಾಯಂ ಆಗಿ ದುಡಿಯಬೇಕು. ಇವರಿಗೆ ಕೂಲಿ ಹಣರೂಪದಲ್ಲಿ ಇರಲಿಲ್ಲವಾದ್ದರಿಂದ ಇವರು ತೆಗೆದುಕೊಂಡ ಸಾಲ ತೀರುವ ಪ್ರಮೇಯವೇ ಇರುತ್ತಿರಲಿಲ್ಲ. ಹೀಗೆ ಮದುವೆಗೆ ಸಾಲ ಕೊಟ್ಟರೆ, ಇಡೀ ಕುಟುಂಬದವರು ಖಾಯಂ ಆಳುಗಳಾಗಿ ಒಡೆಯರ ಮನೆಯಲ್ಲಿ ದುಡಿಯುತ್ತಿದ್ದರು. ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಳ್ಳುವುದಕ್ಕಿಂತ ಸಾಲ ಕೊಟ್ಟು ಇಡೀ ಕುಟುಂಬವನ್ನು ದುಡಿಯಲು ಇಟ್ಟುಕೊಳ್ಳುವುದು ಒಡೆಯರಿಗೆ ಅಗ್ಗ ಹಾಗು ಸುಲಭವಾಗಿತ್ತು. ಕೊಟ್ಟ ಹಣಕ್ಕೆ ಬಡ್ಡಿಯನ್ನು ಹಾಕುತ್ತಿದ್ದರಾದ್ದರಿಂದ ಸಾಲಕ್ಕಿಂತ ಬಡ್ಡಿಯೇ ಹೆಚ್ಚಾಗಿ ಜೀತ ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದಿತ್ತು.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಶುರುವಾಗುವುದೇ ಇಂತಹ ಒಬ್ಬ ಜೀತದಾಳಿನಿಂದ. ಗುತ್ತಿಯ ತಂದೆ ತಾಯಿ ಸಹ ಸಿಂಬಾವಿ ಭರಮೈ ಹೆಗ್ಗಡೆಯವರ ಬಳಿ ಕೆಲಸ ಮಾಡುತ್ತಿದರು. ಗುತ್ತಿಯೂ ಸಹ ಅವರಲ್ಲೆ ಕೆಲಸಕ್ಕಿದ್ದ. ಆದರೆ ಅವರ ಸಂಬಳ ದವಸಧಾನ್ಯಗಳ ರೂಪದಲ್ಲಿದ್ದವು. ಇದಕ್ಕೆ ‘ಪಡಿ’ ಎಂದು ಹೆಸರು.

ತಮ್ಮ ಮನೆಯಲ್ಲಿದ್ದ ಜೀತದಾಳುಗಳ ಯೋಗಕ್ಷೇಮ ಎಲ್ಲವೂ ಆ ಒಡೆಯರದಾಗಿತ್ತು. ವರ್ಷದ ಯುಗಾದಿ ಹಬ್ಬದಲ್ಲಿ ಜೀತದಾಳುಗಳಿಗೆ ಒಡೆಯರು ಬಟ್ಟೆಯನ್ನು ಕೊಡುತ್ತಿದ್ದರು.

‘ಗಂಡಸರಿಗೆ ಒಂದು ಅಂಗಿ ನಾಲ್ಕು ಮೊಳ ಉದ್ದ ಒಂದು ಬಾರ ಫರದಿ ಪಂಚೆ, ತಲೇಗೆ ಕಟ್ಟುವುದಕ್ಕೆ ನಾಲ್ಕು ಉದ್ದದ ಎಲೆವಸ್ತ್ರ, ಮಳೆಗಾಲಕ್ಕೆ ಸೂಡಲು ಒಂದು ಕಂಬಳಿ; ಹೆಂಗಸರಿಗೆ ಹದಿನೆಂಟು ಮೊಳ ಉದ್ದದ ಜಿಡ್ಡು ಸೀರೆ; ಗಂಡು ಮಕ್ಕಳಿಗೆ ಒಂದು ಅಂಗಿ, ಹೆಣ್ಣು ಮಕ್ಕಳಿಗೆ ಒಂದು ಪರಿಕಾರ (ಲಂಗ) ಇಷ್ಟನ್ನು ಕೊಡುತ್ತಿದ್ದರು (ರಾಮಪ್ಪಗೌಡ ೧೯೯೮). ನಗದಿನ ಕೂಲಿಜೀತದಾಳುಗಳಿಗೆ ಕೊಡುತ್ತಿರಲಿಲ್ಲ. ಅದರ ಬದಲಾಗಿ ಅವರಿಗೆ ‘ಪಡಿ’ಯನ್ನು ನಿಗದಿಪಡಿಸುತ್ತಿದ್ದರು. ಅಂದರೆ ಒಂದು ಕೊಳಗ ಭತ್ತ, ಒಂದು ಮುಷ್ಟಿ ಉಪ್ಪು, ಒಂದು ಮುಷ್ಟಿ ಮೆಣಸಿನಕಾಯಿ ಹಾಗು ‘ಬಾಯಿ’ಗೆ ಎಲೆ ಅಡಿಕೆ, ಹೊಗೆಸೊಪ್ಪು ಇತ್ಯಾದಿಗಳನ್ನು ಕೊಡುತ್ತಿದ್ದರು.

ಶಿಕ್ಷೆ

ಒಂದು ವೇಳೆ ಅಚಾತುರ್ಯ ನಡೆದು ಜೀತದಾಳು ಏನಾದರು ತಪ್ಪೆಸಗಿದರೆ ಅವನಿಗೆ ‘ಪಡಿ’ಯನ್ನು ಕೊಡುತ್ತಿರಲಿಲ್ಲ.

‘ಕಾನೂರು ಹೆಗ್ಗಡಿತಿ’ಯ ಸಿದ್ಧ, ಭೈರ, ರಾಮಯ್ಯ, ಹೂವಯ್ಯರಿಗೆ ನೇಗಿಲು ಕೊಟ್ಟರು. ನೆಲವನ್ನು ಉಳುತ್ತಿದ್ದಂತೆ ಹೂವಯ್ಯನ ಎತ್ತುಗಳು ಕ್ರಮ ತಪ್ಪಿ ಗದ್ದೆಯಲ್ಲಿ ಸಿಕ್ಕಿದ ಕಡೆಗೆ ನುಗ್ಗ ತೊಡಗಿದವು. ನಡೆದ ಗಲಾಟೆಯಲ್ಲಿ ಒಂದು ಎತ್ತಿನ ಕಾಲಿಗೆ ಕತ್ತಿಯಿಂದ ಕಡಿದಂತೆ ಗಾಯ ಆಗಿ ನೆತ್ತರು ಹರಿಯಿತು. ಅಷ್ಟೇ ಅಲ್ಲದೆ ಬಂದ ನೇಗಿಲು ಮುರಿಯಿತು.

ನಡೆದ ವಿಷಯವನ್ನು ಗೌಡರಿಗೆ ಹೇಳಲು ಭೈರನ ಕಪಾಳಿಗೆ ಚಂದ್ರಯ್ಯಗೌಡರು ಹೊಡೆದು ಅವರ ಕೂಲಿ ಭತ್ತ ವಜಾ ಮಾಡಲು ಸೇರೆಗಾರರಿಗೆ ಆಜ್ಞೆ ಮಾಡಿದರು.

ಅಂದಿನ ದುಡಿತಕ್ಕೆ ಅಂದೇ ಪಡಿ ಸಾಮಾಗ್ರಿಯನ್ನು ಜೀತದಾಳುಗಳು ಪಡೆಯುತಿದ್ದರು. ಒಂದು ದಿನ ಪಡಿ ಪಡೆಯಲ್ಲಿಲ್ಲವೆಂದರೆ ಅವರ ಗುಡಿಸಲುಗಳಲ್ಲಿ ಆಗುತ್ತಿದ್ದ ಘಟನೆ ದಯನೀಯವಾದದ್ದು.

ಬೈರ ಪಡಿ ಪಡೆಯದೆ ಇದ್ದ ದಿನವೇ ಅವನ ಹೆಂಡತಿ ಸೇಸಿ ಆರೋಗ್ಯ ಸರಿಯಿಲ್ಲದೆ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದಳು. ಹಾಗಾಗಿ ಅಂದು ಬೈರನ ‘ಪಡಿ’ಯಿಂದಲೇ ಅವರು ಗಂಜಿ ಮಾಡಿ ಉಣ್ಣ ಬೇಕಿತ್ತು. ಗುಡಿಸಿಲಲ್ಲಿ ಯಾರಿಗೂ ಪಡಿ ದೊರೆಯಲಿಲ್ಲವೆಂದರೆ ಅಂದು ಅವರಿಗೆ ಉಪವಾಸವೇ ಗತಿ.

ಸಾಲಪಡೆದು ಜೀತದಾಳುಗಳು ಕೇವಲ ತಮ್ಮ ಅರ್ಥಿಕ ಸ್ವಾತ್ರಂತ್ರ್ಯವನ್ನು ಮಾತ್ರ ಬಲಿಗೊಡದೆ ತಮ್ಮ ಖಾಸಗಿ ಸ್ವಾತ್ರಂತ್ರ್ಯವನ್ನು ಒಡೆಯರ ಅದೀನಮಾಡಿದ್ದರು.

‘ಪ್ರತಿ ಗೌಡರ ಮನೆಗೂ ಸಂಬಂಧಿಸಿದಂತೆ, ಉಪಗ್ರಹಗಳ ಪರವಾಲಂಬಿ ಬದುಕು ಸಾಗಿಸುವ ನಿಮ್ನ ಜಾತಿಯ ಹಾಗೇ ನಿಮ್ನ ವರ್ಗದ ಜೀತದಾಳುಗಳೂ – ಆಯಾಯಾ ‘ಮನೆ’ಗೇ ಸೇರಿದವರು. ಇವರ ಸುಖ-ದುಃಖ ಮಾನ-ಅವಮಾನ, ಸತಿಪತ್ನಿ ಸಂಬಂಧದಂತೆ ಅತಿ ಖಾಸಗಿ ಸಂಬಂಧಗಳನ್ನೂ ನಿರ್ಧರಿಸುವವರು ಧಣಿ ಗೌಡರು (ಶಿವರುದ್ರಪ್ಪ ೧೯೭೧, ೧೧೭). ಸಾಲ ಪಡೆದುಕೊಂಡ ಜೀತದಾಳುಗಳು ಗೌಡರ ಆಸ್ತಿಯಾಗಿದ್ದರು.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಬೆಟ್ಟಳ್ಳಿಯ ಕಲ್ಲಯ್ಯಗೌಡರ ಮನೆಯ ಜೀತದಾಳದ ಸೇಸಿ ತನ್ನ ಮಗಳ ಮದುವೆಯನ್ನು ತನ್ನ ಅಣ್ಣನ ಮಗನಾದ ಗುತ್ತಿಯೊಂದಿಗೆ ಮಾಡುವ ಆಸೆ. ಆದರೆ ಬೇಟ್ಟಳ್ಳಿ ಗೌಡರು ತಿಮ್ಮಿಯನ್ನು ಬಚ್ಚನೊಂದಿಗೆ ಲಗ್ನ ಮಾಡಲು ಆಜ್ಞಾಪಿಸಿದರು.

“ಒಡೆಯರ ಆಸ್ತಿಯಾಗಿದ್ದ ಅವರನ್ನು ಯಾರಿಗೆ ಕೊಡಬೇಕು? ಎಲ್ಲಿಗೆ ಕೊಡಬೇಕು? ಎಂಬುದನ್ನು ತಂದೆ ತಾಯಿಗಳು ನಿರ್ಧರಿಸಲು ಸಾಧ್ಯವೇ? ತಮ್ಮ ಜಾನುವಾರುಗಳನ್ನು ಬಿಕರಿ ಮಾಡುವ ಹಕ್ಕು ಎಂತೋ ಅಂತೆ ಬೇಲರು, ಹೊಲೆಯರು ಮಾದಿಗರು ಮೊದಲಾದ ಹೆಣ್ಣು ಗಂಡು ಜೀತದಾಳುಗಳನ್ನು ಇಡುವ ಕೊಡುವ ಬಿಡುವ ಹಕ್ಕು ಅವರದ್ದೆ ತಾನೆ?” (ಕುವೆಂಪು ೨೦೦೬ಬ, ೩೪೪).

ದುಡಿಮೆಯ ಘಟಕವಾಗಿ ಪ್ರತಿಯೊಬ್ಬ ಜೀತದಾಳು ಭೂಮಾಲೀಕನಿಗೆ ಅವಶ್ಯಕವಾಗಿದ್ದನು. ಹಾಗಿದ್ದಲ್ಲಿ ಒಂದು ಕೇರಿಯ ಹೆಣ್ಣು ಇನ್ನೊಂದು ಕೇರಿಯವನೊಡನೆ ಮದುವೆಯಾಗುವುದು ಅಕ್ಷಮ್ಯ ಅಪರಾಧವಾಗಿತ್ತು. ಇದರಿಂದ ದುಡಿಯುವ ಒಂದಾಳು ಕಡಿಮೆಯಾಗುತ್ತಿತ್ತು. ತಿಮ್ಮಿಯ ತಂದೆ ದೊಡ್ಡ ಬೀರ ತನ್ನ ಒಡೆಯನ ಆಸೆಯಂತೆ ಅವಳನ್ನು ಬಚ್ಚನಿಗೆ ಮದುವೆ ಮಾಡಿಕೊಡಲು ಸಿದ್ಧನಾಗಿದ್ದನು.’ಗೌಡರ ಜೀತದಾಳಾಗಿ, ಅವರಲ್ಲಿ ಸಾಲ ಮಾಡಿ, ಅವರಿಗೆ ತನ್ನನ್ನು ಸಂಪೂರ್ಣವಾಗಿ ಮಾರಿಕೊಂಡಿದ್ದ ದೊಡ್ಡ ಬೀರ ಆ ವಿಚಾರದಲ್ಲಿ ನಿರುಪಾಯನಾಗಿ ಒಡೆಯರ ಆಜ್ಞೆಗೆ ತಲೆಬಾಗಿದ್ದನು (ಕುವೆಂಪು ೨೦೦೬ಬ, ೧೬೩).

ಒಡೆಯರ ಈ ನಿರ್ಧಾರಕ್ಕೆ ಅವರ ಹಿಂದಿದ್ದ ಸ್ವಾರ್ಥ ಮನೋಧರ್ಮದ ಪರಿಚಯವನ್ನು ಕುವೆಂಪು ಹೀಗೆ ಮಾಡಿ ಕೊಡುತ್ತಾರೆ.

‘ಒಡೆಯರಿಗೆ ಬೇಕಾಗಿದ್ದುದು ಜೀತ ಮಾಡಲು ಒಂದು ಆಳು – ತಮ್ಮ ಹೊಲಗೇರಿಯ ಒಂದು ಹೆಣ್ಣು ಹೊರಗೆ ಕೊಟ್ಟರೆ ತಮ್ಮ ಕೆಲಸಕ್ಕೆ ಒಂದಾಳು ಖೋತ ಬೀಳುತ್ತದೆ. ಆದ್ದರಿಂದ ಕೇರಿಯ ಹೆಣ್ಣನ್ನು ಕೇರಿಯ ಗಂಡೇ ಮದುವೆಯಾಗಬೇಕು ಎಂಬುದು ಅವರ ಕಟ್ಟಪ್ಪಣೆ. ಬೇರೆ ರೀತಿಯಿಂದ ವರ್ತಿಸಿದರೆ, ಆ ಹೆಣ್ಣು ಇನೊಬ್ಬ ಬೇರೆ ಹಳ್ಳಿಯ ಕೇರಿಯವನಿಂದ ತಾಳಿಕಟ್ಟಿಸಿಕೊಂಡಿದ್ದರೂ ಸರಿ. ಅವಳನ್ನು ಎಳೆದು ತರಿಸಿ, ತಾಳಿ ಕೀಳಿಸಿ, ತಮ್ಮ ಕೇರಿಯವನಿಗೇ ಮದುವೆ ಮಾಡಿಸುತ್ತಿದ್ದರೆಂಬುದರಲ್ಲಿ ಸಂದೇಹವಿಲ್ಲ. ಅಪಿ ತಪ್ಪಿ ಒಡೆಯರ ಇಚ್ಛೆಗೆ ವಿರೋಧವಾಗಿ ನಡೆದವರಿಗೆ ಹಿಂದೆ ಅಂತಹ ಗತಿಯೇ ಒದಗಿತ್ತು. ಕೀಳು ಜಾತಿಯವರಿಗೆ ಅವರ ಇಚ್ಚಾನುಸಾರ ಒಲವು ಅಕ್ಕರೆ ಇರುವುದೆಂದರೇನು? ಒಲವು ಅಕ್ಕರೆ ಏನಿದ್ದರೂ ಎಲ್ಲ ಒಡೆಯರ ಲಾಭದ ವಲಯದೊಳಗಿದ್ದು ಅವರ ಇಚ್ಛಾಧೀನವಾಗಿರಬೇಕು. ಅವರ ಅಜ್ಞೆಯ ಗೆರೆ ದಾಟುವಂತಿರಲಿಲ್ಲ (ಕುವೆಂಪು ೨೦೦೬ಬ, ೧೬೩).

ಸಿಂಬಾವಿ ಭರಮೈ ಹೆಗ್ಗಡೆ ಗುತ್ತಿಯೊಡನೆ ಓಡಿ ಬಂದ ತಿಮ್ಮಿಯನ್ನು ಅಂದರೆ ಒಂದು ದುಡಿಯುವ ಆಳನ್ನು ಕಳೆದುಕೊಳ್ಳಲು ಇಚ್ಛಿಸದೇ ಬೆಟ್ಟಳ್ಳಿ ಗೌಡರ ಕಡೆಯಿಂದ ಕಾಗದ ಅಥವಾ ಜನರು ಬರುವ ಮೊದಲೇ ಗುತ್ತಿ ತಿಮ್ಮಿಯ ಲಗ್ನ ನೆರವೇರಿದರೆ ತಮ್ಮ ಕೇರಿಗೆ ಒಂದು ಹೆಣ್ಣಾಳನ್ನು ಹೆಚ್ಚಿಸಿಕೊಂಡಂತಾಗುವುದಲ್ಲದೇ ಬೆಟ್ಟಳ್ಳಿ ಮನೆತನದ ಮೇಲೆ ಸಿಂಬಾವಿ ಮನೆತನದ ಒಂದು ವಿಜಯ ಸಾಧಿಸದಂತಾಗುತ್ತದೆ ಎಂದು ಅಂದಿನ ರಾತ್ರಿಯೇ ಲಗ್ನ ಮಾಡಲು ಬೇಕಾದ ಸಾಮಾನು, ಅಕ್ಕಿ, ಬೆಲ್ಲ, ಹೆಣ್ಣಿಗೆ ಗಂಡಿಗೆ ಉಡಲು ತೊಡಲು ಬೇಕಾದ ಸಾಮಾನುಗಳನ್ನು ಕೊಟ್ಟು ಆವಸರದಲ್ಲಿ ಮದುವೆ ಮಾಡಿಸಿದನು.

ಕಾದಂಬರಿಯಲ್ಲಿ ಗುತ್ತಿ ತಿಮ್ಮಿಯ ಮದುವೆ ನಡೆಯುವುದು. ಆಗ ಬೆಟ್ಟಳ್ಳಿಯ ಕಲ್ಲಯ್ಯಗೌಡರು ಉಪಾಯದಿಂದಾಗಲಿ ಅಥವಾ ಬಲಪ್ರಯೋಗದಿಂದಾಗಲಿ ತಮ್ಮ ಜೀತದವಳಾಗಿ ತಮಗೆ ಸೇರಿರುವ ತಮ್ಮ ಕೇರಿಯ ಹುಡುಗಿಯನ್ನು ಕರೆತಂದೋ ಎಳೆತಂದೋ ಬಚ್ಚನಿಗೆ ಮದುವೆ ಮಾಡಿಸಿಯೇ ತಿರಬೇಕೆಂದು ನಿರ್ಧರಿಸಿದರು (ಕುವೆಂಪು ೨೦೦೬ಬ, ೩೪೯).

ಇನ್ನೊಂದು ಉಪಾಯ, ಆಳಿಗೆ ಆಳನ್ನು ಬದಲು ತರುವುದು ಅದರಂತೆ ಬೆಟ್ಟಳ್ಳಿಗೌಡರು ಸಿಂಬಾವಿ ಹೆಗ್ಗಡೆಯವರಿಗೆ ಕಾಗದ ಬರೆದರು.

“….. ಆದರೆ ನಮ್ಮ ಹೊಲಿಗೇರಿಯ ಹೆಣ್ಣಿಗೆ ಬದಲಾಗಿ ನಿಮ್ಮ ಹೊಲಗೇರಿಯಿಂದ ಒಂದು ಹೆಣ್ಣನ್ನು ನಮ್ಮ ಕೇರಿಯ ಆಳು ಹುಡುಗನೊಬ್ಬನಿಗೆ ತಂದುಕೊಳ್ಳುವ ಇಚ್ಛೆ ಇದೆ. ನಿಮ ಆಳು ಹುಡುಗ ಹಾರಿಸಿಕೊಂಡು ಹೋದ ದೊಡ್ಡಬೀರನ ಮಗಳನ್ನು ಈ ಹುಡಗನಿಗೆ ಲಗ್ನ ಮಾಡಲು ಏರ್ಪಾಡೂ ಆಗಿತ್ತು…” (ಕುವೆಂಪು ೨೦೦೬ಬ, ೩೬೯).

ಒಲಿದ ಜೀವಗಳು ತಮ್ಮ ಗೌಡರ ಒಪ್ಪಿಗೆ ತೆಗೆದುಕೊಂಡು ಮದುವೆಯಾಗಲೂ ತೆರ, ಸಾಲದ ಅಡಚಣೆಯಿತ್ತು.

ಗುತ್ತಿ ತನ್ನ ಒಡೆಯ ಸಿಂಬಾವಿ ಭರಮೈ ಹೆಗ್ಗಡೆಯರ ಬಳಿ ಬೆಟ್ಟಳ್ಳಿಯ ತಿಮ್ಮಿಯೊಡನೆ ಮದುವೆಯಾಗುವ ವಿಷಯ ತಿಳಿದಾಗ, ಅವರು ಕೋಪಗೊಂಡು,

‘….ಅವರ ಸಾಲಾನೆಲ್ಲ ತೀರಿಸಿ, ಅವಳಿಗೆ ಅಷ್ಟೊಂದು ತೆರಾ ಕೊಟ್ಟು, ನಾ ನಿನಗೆ ಮದುವೆ ಮಾಡ್ಸಿ ನನ್ನ ಮನೇ ಹಾಳು ಮಾಡಿಕೊಳ್ಳಲೇನೋ? ನಿನಗೆ, ನಿನ್ನ ಅಪ್ಪಗೆ ಕೊಟ್ಟ ಸಾಲಾನೇ ಕುತ್ತರೆ ಬೆಳಧಾಂಗೆ ಬೆಳೆದು ನಿಂತದೆ! ಅದನ್ನೇ ನೀವು ತೀರಿಸಾದು ಯಾವಾಗಲೋ…. ಹೇಳ್ತೀನಿ, ನೋಡು. ನಿಂಗೆ ಅವಳನ್ನ ಮದೇ ಮಾಡಿಕೊಳ್ಳೇಬೇಕು ಅಂತಾ ಅಷ್ಟೊಂದು ತೆವಲು ಹತ್ತಿದ್ರೆ, ಬೆಟ್ಟಳ್ಳಿ ಗೌಡ್ರಿಂದಲೆ ಸಾಲಾ ತಗೊಂಡು, ನನ್ನ ಸಾಲಾನೆಲ್ಲ ತೀರ್ಸಿ. ಅವರ ಕೇರಿಗೇ ಹೋಗಿ ಅವಳನ್ನೇ ಮದೇ ಮಾಡಿಕೊಂಡು ಸುಕಾಗಿರು!…’ ಎಂದು ಕೋಪದಿಂದ ಹೇಳುತ್ತಾನೆ (ಕುವೆಂಪು ೨೦೦೬ಬ, ೩೨೬).

ಈ ಹಿಂದೆ ಗುತ್ತಿಯ ತಂದೆ ಕರಿಸಿದ್ದಗೆ ಬೆಟ್ಟಳ್ಳಿ ಕೇರಿಯ ದೊಡ್ಡಬೀರನ ತಂಗಿ ಗಿಡ್ಡಿಯನ್ನು ತಂದಾಗಲೆ ಬೆಟ್ಟಳ್ಳಿ ಕಲ್ಲಯ್ಯಗೌಡರಿಗೂ ಭರಮೈ ಹೆಗ್ಗಡೆಯ ತಂದೆ ಸಿಂಬಾವಿ ದಿವಂಗತ ಗುಡ್ಡಣ್ಣ ಹೆಗಡೆಯವರಿಗೂ ಹೊಡೆದಾಟವಾಗುವುದರಲ್ಲಿತ್ತು. ಆಗ ಕಲ್ಲೂರು ಸಾಹುಕಾರ ಮಂಜಭಟ್ಟರ ಮಧ್ಯಸ್ತಿಕೆಯಲ್ಲಿ ಕರಿಸಿದ್ದನ ತಂಗಿ ಸೇಸಿಯನ್ನು ಬೆಟ್ಟಳ್ಳಿ ಕೇರಿಯ ತಿಮ್ಮಿಯ ಅಪ್ಪ ದೊಡ್ದಬೀರನಿಗೆ ಮದುವೆ ಮಾಡಿಸಿ, ಆಳಿಗೆ ಆಳು ಬದಲು ಬಂದು ತುಂಬಿಕೊಳ್ಳುವಂತೆ ಮಾಡಿದ್ದರು. ಹೀಗೆ ಆಳುಗಳ ವಿಷಯದಲ್ಲಿ ಸಾಹುಕಾರಗೌಡರ ನಡುವೆ ಪರಸ್ಪರ ಸ್ಪರ್ಧಾಭಾವವೂ ಪ್ರತಿಷ್ಠೆಯ ಪೈಪೋಟಿಯೂ ನಡೆಯುತ್ತಿತು.

ಜೀತದಾಳುಗಳು ತಪ್ಪುಮಾಡಿದಾಗ ಜಮೀನ್ದಾರರಿಂದ ಸಿಗುತ್ತಿದ್ದ ಶಿಕ್ಷೆ ಘೋರವಾಗಿರುತ್ತಿತ್ತು. ಒಮ್ಮೆ ಜೀತದಾಳು ಒಬ್ಬನ ಎದೆಯ ಮೇಲೆ ಹಲಗೆ ಹಾಕಿಸಿ ಮೆಟ್ಟಿಸಿ, ಅವನು ರಕ್ತ ಕಾರಿಕೊಂಡು ತರುವಾಯ ಮೃತನಾಗಿದ್ದ ಎಂದು ಕುವೆಂಪುರವರು ಕಾದಂಬರಿಯಲ್ಲಿ ಬರೆಯುತ್ತಾರೆ.

ತಿಮ್ಮಿ ಗುತ್ತಿಯೊಂದಿಗೆ ಓಡಿ ಹೋದಾಗ ಬೆಟ್ಟಳ್ಳಿ ಕಲ್ಲಯ್ಯ ಗೌಡರು ಅವಳ ಅಣ್ಣ ಸಣ್ಣಬೀರನನ್ನು ಕಂಬಕ್ಕೆ ಕಟ್ಟಿಸಿ ಇಜಾರಸಾಬಿಯಿಂದ ಚೆನ್ನಾಗಿ ಹೊಡೆಸಿದರು. ಅದರ ವರ್ಣನೆಯನ್ನು ಕುವೆಂಪು ಹೀಗೆ ಕೊಡುತ್ತಾರೆ.

“ಇಜಾರದ ಸಾಬು ತನ್ನ ಕೈಯಿಂದ ಉಗ್ರಸನ್ನೆ ಮಾಡಿ ತಲೆಯಾಡಿಸಿ ಕರೆದೊಡನೆಯ, ಗಾಡಿಯ ನೊಗಕ್ಕೆ ಹೆಗಲು ಕೊಟ್ಟೂ ಕೊಟ್ಟೂ ಆಭ್ಯಾಸವಿದ್ದ ಗಾಡಿಯೆತ್ತು ಗಾಡಿ ಹೊಡೆಯುವವನು ಮೂಕಿಗೆ ಕೈಹಾಕಿ ಎತ್ತಿ ಲೊಚಗುಟ್ಟಿದೊಡನೆಯ ನೊಗಕ್ಕೆ ವಿಧೇಯತೆಯಿಂದ ಹೆಗಲು ಕೊಡುವಂತೆ, ಸಣ್ಣಬೀರ ನಡು ನಡುಗತ್ತಲೆ, ನಾಲಗೆ ಬಿದ್ದು ಹೋಗಿ ಮಾತು ಸತ್ತವನಂತೆ, ಮೂಕ ಪಶುವಿನಂತೆ… ಶಿಕ್ಷಾಸ್ತಂಭದ ಕಡೆ ಮುಂದುವರಿದನು. ಅವನು ಹೋದ ರೀತಿ, ಆ ಕಂಬವನ್ನು ತಬ್ಬಿ ನಿಂತ ರೀತಿ, ಎರಡು ಕೈಗಳನ್ನು ಜೋಡಿಸಿ ಹಗ್ಗ ಬಿಗಿಸಿಕೊಂಡ ರೀತಿ, ಹೇಗಿತ್ತು ಎಂದರೆ ಆ ಯೂಪಸ್ತಂಭಕ್ಕೆ ಬಲಿ ಕಟ್ಟಿಸಿಕೊಳ್ಳುವ ಯಜ್ಞ ವಿಧಾನ ಅವನಿಗೆ ಪೂರ್ವ ಪರಿಚತವಾದದ್ದು ಎಂಬುದು ಚೆನ್ನಾಗಿ ಗೊತ್ತಾಗುವಂತಿತ್ತು. ತಾನು ಮಾತ್ರವೆ ಅಲ್ಲದೆ ಇತರ ಅಪರಾಧಿಗಳೂ ಗೌಡರ ಕ್ರೋಧಕ್ಕೆ ಪಾತ್ರರಾಗಿ ಆ ಯೂಪಸ್ತಂಭಕ್ಕೆ ಯಜ್ಞ ಪಶುಗಳಾಗಿದ್ದುದನ್ನು ಅವನು ಹಿಂದೆ ಎಷ್ಟೋ ಸಾರಿ ಕಂಡೂ ಇದ್ದನು, ಅನುಭವಿಸಿಯೂ ಇದ್ದನು. ಆಜ್ಞೆಯಾದೊಡನೆಯೆ ಹೋಗಿ, ನೊಗಕ್ಕೆ ಹೆಗಲು ಕೊಡುವಂತೆ ಕಂಬವನ್ನು ತಬ್ಬಿ ನಿಂತು ಕೈಕಟ್ಟಿಸಿಕೊಳ್ಳಲು ಒಪ್ಪದೆ ಪ್ರತಿಭಟಿಸಿದವರಿಗೆ ಏನು ಯಮಶಿಕ್ಷೆ ಒದಗುತ್ತಿತ್ತು ಎಂಬುದೂ ಅವನಿಗೆ ಗೊತ್ತಿದ್ದ ವಿಷಯವೇ ಆಗಿತ್ತು. ಆದ್ದರಿಂದಲೆ ಅವನು ಚಕಾರವೆತ್ತದೆ ಬೇಗ ಬೇಗ ಹೋಗಿ ಕಂಬವನ್ನಪ್ಪಿ ಕೈ ಕಟ್ಟಿಸಿ ಕೊಂಡದ್ದು “ಲುಂಗಿಸಾಬನ ಏಟಿಗೆ ಮೈಮೇಲೆ ಬಾಸುಂಡೆಗಳೆದ್ದು, ನೆತ್ತರು ಚಿಮ್ಮಿ ಸಣ್ಣಬೀರನ ಕೂಗು ನಿಂತು, ತಲೆ ಕತ್ತಿನ ಮೇಲೆ ನಿಲ್ಲದೆಜೋಲಿತು! (ಕುವೆಂಪು ೨೦೦೬ಬ, ೩೩೫). ‘ದೇವಯ್ಯನಿಗೆ ಸೈಕಲ್ ಕಲಿಸುವಾಗ ದೊಡ್ದಬೀರ ಮತ್ತು ಬಚ್ಚರು ಎತ್ತಿನ ಗಾಡಿಯ ಥರ ಮಾಡಿದ ನೊಗಕ್ಕೆ ಹೆಗಲು ಕೊಟ್ಟು ತಿರುಗುವ ಪ್ರಸಂಗ ಜೀತದ ಹಾಗೂ ಶೋಷಣೆಯ ಕ್ರೌರ್ಯದ ಪರಮಾವಧಿ ಎಷ್ಟು ಭೀಕರ’ ಎಂದು ಕರೀಗೌಡ ಬೀಚನಹಳ್ಳಿ ಅವರು ಅಭಿಪ್ರಾಯ ಪಡುತ್ತಾರೆ (೨೦೦೪, ೨೩೦).

ಆಳುಗಳು ಹಾಗು ಜೀತದಾಳುಗಳು ತಮ್ಮ ಒಡೆಯರನ್ನು ಬಿಟ್ಟು ಹೋಗುತ್ತಿರಲಿಲ್ಲ. ಅದು ಸುಲಭವೂ ಆಗಿರಲಿಲ್ಲ. ಒಂದು ಕೇರಿಯ ಜೀತಾದಾಳು ಬೇರೆ ಕೇರಿಯ ಭೂಮಾಲೀಕರ ಬಳಿ ಕೆಲಸಕ್ಕೆ ಸೇರಬೇಕೆಂದರೆ ಅವರು ಪೂರ್ವದ ಒಡೆಯರ ಬಳಿ ಇದ್ದ ಅವನ ಸಾಲವನ್ನೆಲ್ಲ ತೀರಿಸಬೇಕಿತ್ತು. ಆಗ ಆಳು ಹೊಸ ಒಡೆಯರ ಬಳಿ ಮತ್ತೆ ಜೀತಾದಾಳಾಗಿಯೇ ಇರುತ್ತಿದ್ದ. ಮಧ್ಯೆ ಮತ್ತೆ ಮತ್ತೆ ಒಡೆಯರಿಂದ ಸಾಲಪಡೆಯುತ್ತಿದ್ದುದರಿಂದ ಜೀತದಿಂದ ಅವರಿಗೆ ಮುಕ್ತಿಯೇ ಇರಲಿಲ್ಲ. ಜೀತ ವಂಶಪಾರಂಪರ್ಯವಾಗಿತ್ತು.

ಜೀತದಿಂದ ತಪ್ಪಿಸಿಕೊಳ್ಳಬೇಕೆಂದರೆ ಬೇರೆ ಸೀಮೆಗೆ ಓಡಿಹೋಗುವುದೊಂದೇ ಉಪಾಯ. ಕೆಲಸ ದಾಳುಗಳಿಗೆ ಒಬ್ಬ ಭೂಮಾಲೀಕನಿಂದ ಮತ್ತೊಬ್ಬನಲ್ಲಿ ಹೋಗುವುದು ಅತಿ ದೈನ್ಯತೆಯೆಡೆಗೆ ಸಾಗುವಂಥದಾಗಿತ್ತು.

ಜೀತದಾಳುಗಳ ಸುಖದುಃಖಕ್ಕೆ ಒಡೆಯರು ಸಹಾಯ ಮಾಡುತ್ತಿದ್ದರು. ಪಿಜಿಣ ಸತ್ತಾಗ ಅವನ ಕರ್ಮ ಕ್ರಿಯೆಯನ್ನು ಮಾಡಲು ಕೋಣೂರು ರಂಗಪ್ಪಗೌಡರು ಸಹಾಯ ಮಾಡಿದರು.

ಗುತ್ತಿ ತಿಮ್ಮಿಯರ ಮದುವೆ ನಂತರ ಸಾಬರೊಡನೆ ನಡೆದ ಜಗಳದ ವಿಷಯದಲ್ಲಿ ಪೋಲಿಸಿನವರು ಗುತ್ತಿಯನ್ನು ಸೆರೆ ಹಿಡಿದರು. ಆಗ ಭರಮೈ ಪೋಲಿಸರಿಗೆ ‘ಕಪ್ಪ ಕಾಣಿಕೆ’ಯನ್ನು ಅರ್ಪಿಸಿದನು. ಅಲ್ಲದೆ ಗುತ್ತಿ ಪೋಲಿಸರಿಂದ ತಪ್ಪಿಸಿಕೊಂಡು ಬಂದಾಗ ಅವನಿಗೆ ಕೊಪ್ಪದ ಸೀಮೆ, ಮುತ್ತೂರು ಸೀಮೆ ಕಡೆ ಓಡಿ ಹೋಗಲು ಸಲಹೆ ಕೊಡುತ್ತಾರೆ.

ಹೀಗೆ ಗೌಡರು ಮತ್ತು ಆಳಿನ ಸಂಬಂಧ ಕೆಲವೊಮ್ಮೆ ಕ್ರೌರ್ಯದಿಂದಿದ್ದರೆ ಕೆಲವೊಮ್ಮೆ ಮಾನವೀಯ ಸಂಬಂಧಗಳ ಔದಾರ್ಯತೆಯನ್ನು ಹೊಂದಿತ್ತು. ಇದಕ್ಕೆ ಉದಾಹರಣೆ ಕೆಳ ಕಾನೂರಿನ ಅಣ್ಣಯ್ಯಗೌಡರು. ಇವರು ತಮ್ಮ ಮಗ ಓಬಯ್ಯ ಹಾಗು ಏಳೆಂಟು ವರ್ಷದ ಮಗಳೊಡನೆ ಕಾನೂರನ್ನು ಬಿಟ್ಟು ಬೇರೆ ಕಡೆಗೆ ಕೆಲಸ ಮಾಡಲು ಹೋದರು. ಅವರ ಅನುಭವವು ಕಾದಂಬರಿಯಲ್ಲಿ ಈ ರೀತಿಯಲ್ಲಿದೆ. ‘(ಅಣ್ಣಯ್ಯಗೌಡರು ಆಶ್ರಯವೊಂದನ್ನು ಹುಡುಕುತ್ತ ಮುಂದುವರಿದರು)… ಆಶ್ರಯ ದೊರೆಯುವುದಂತಿರಲಿ, ಹೊಟ್ಟೆಗೆ ಸಿಕ್ಕುವುದೂ ಒಮ್ಮೊಮ್ಮೆ ಬಹು ಪ್ರಯಾಸವಾಯಿತು. ಅಲ್ಲಿ ಇಲ್ಲಿ ಅಲೆದು ಒಂದು ತಿಂಗಳ ಮೇಲೆ ಮೇಗರವಳ್ಳಿಗೆ ಹೋಗಿ, ಅಲ್ಲಿ ಒಬ್ಬ ಹೆಗ್ಗಡೆಯವರ ಮನೆಯಲ್ಲಿ ಸಂಬಳಕ್ಕೆ ನಿಂತರು. ಜಿಪುಣರೆಂದು ಪ್ರಸಿದ್ಧರಾಗಿದ್ದರೂ ಅವರು ಓಬಯ್ಯನನ್ನು ತಿಂಗಳಿಗೆ ಒಂದು ರೂಪಾಯಿನ ಸಂಬಳದಂತೆ ಕೆಲಸಕ್ಕೆ ನೇಮಿಸಿಕೊಂಡರು. ಅಣ್ಣಯ್ಯಗೌಡರಿಗೆ ಕೆಲಸಕ್ಕೆ ಬಂದ ದಿನ ಪಡಿ ಕೊಡಲು ಮಾತ್ರ ಒಪ್ಪಿದರು. ಅಂತೂ ಅಲ್ಲಿ ಮಳೆಗಾಲ ಕಳೆಯುವುದೇ ಕಷ್ಟವಾಯಿತು. ಆ ಹೆಗ್ಗಡೆಯವರು ಸಂಬಳ ಕೊಡುವ ವಿಚಾರದಲ್ಲಿ ಬಹಳ ಜಿಪುಣರಾಗಿದ್ದರೂ ಕೆಲಸ ತೆಗೆದುಕೊಳ್ಳುವುದರಲ್ಲಿ ಅತ್ಯಂತ ಉದಾರಿಯಾಗಿದ್ದರು. ಹುಡುಗರು ಮುದುಕರು ಎಂಬ ಪಕ್ಷಪಾತವಿಲ್ಲದೆ ಎಲ್ಲರಿಂದಲೂ ಬೆನ್ನು ಮುರಿದು ಕೆಲಸ ಮಾಡಿಸುತ್ತಿದ್ದರು. ಅಷ್ಟು ಮಾಡಿದರೂ ಪ್ರತಿ ಸಾಯಂಕಾಲವೂ ಬೈಗುಳ ತಪ್ಪುತ್ತಿರಲಿಲ್ಲ’ (ಕುವೆಂಪು ೨೦೦೬ಬ, ೫೦೨).

ಕುಟುಂಬದ ಆಸ್ತಿ ಹಂಚಿಕೆಯ ಸಂದರ್ಭದಲ್ಲಿ ಜೀತದಾಳುಗಳನ್ನು ಸಹ ಪಾಲು/ಹಿಸ್ಸೆ ಮಾಡಿಕೊಳ್ಳುತ್ತಿದ್ದರು. ಜೀತದಾಳುಗಳು ಯಾರ ಪರ ವಹಿಸುವರೋ ಅವರ ಜೊತೆ ಹೋಗಬಹುದಾಗಿತ್ತು.

ಜೀತದಾಳುಗಳ ದಯನೀಯ ಸ್ಥಿತಿಯನ್ನು ಅವರ ವೇಷಭೂಷಣಗಳೂ ಪ್ರತಿ ಫಲಿಸುತ್ತವೆ. ವರ್ಷಕ್ಕೆ ಒಮ್ಮೆ ಯುಗಾದಿ ಹಬ್ಬದಲ್ಲಿ ಮಾತ್ರ ಒಡೆಯರಿಂದ ಇವರಿಗೆ ಬಟ್ಟೆ ದೊರಕುತ್ತಿತ್ತು. ‘ಕಾನೂರು ಹೆಗ್ಗಡಿತಿ’ಯ ಕಾನೂರಿನ ಜೀತದಾಳು ಬೇಲರ ಬೈರನ ಚಿತ್ರಣ ಹೀಗಿದೆ.

“….ಅವನ ಕೊಳಕಾಗಿದ್ದ ಕರಿಯ ದೇಹದಲ್ಲಿ ಮೊಳಕಾಲಿನವರೆಗಿದ್ದ ಸೊಂಟದ ಪಂಚೆಯೊಂದಲ್ಲದೆ ಬೇರೆ ನೂಲು ಎಂಬ ಪದಾರ್ಥನೆ ಇರಲಿಲ್ಲ. ಮುಂದಲೆಯಲ್ಲಿ ಕೂದಲು ಹುಟ್ಟಿದ್ದರೂ ಲಾಳದಾಕಾರವಾಗಿ ಕೆತ್ತಿದ್ದ ಚೌರದ ಗುರುತು ಕಾಣುತ್ತಿತ್ತು. ಅವನ ಜುಟ್ಟು ಕಟ್ಟಿದ್ದರೂ ಕಾಲಾಂತರದಿಂದ ಎಣ್ಣೆ ಕಾಣದೆ ಒರಟಾಗಿ ಸಿಕ್ಕು ಸಿಕ್ಕಾಗಿ ಕೆದಿರಕೊಂಡಿತ್ತು. ಗಡ್ಡ ಮೀಸೆಗಳು ಅಂಗುಲ ಅಂಗುಲ ಬೆಳೆದಿದ್ದವು. ಕಿವಿಯಲ್ಲಿ ಒಂಟಿಗಳೂ, ತೊಳಿನಲ್ಲಿ ಕರಿಯ ದಾರದಿಂದ ಬಿಗಿದು ಕಟ್ಟಿದ್ದ ತಾಮ್ರದ ತಾತಿಯೂ ಇದ್ದುವು. ಮಲೇರಿಯಾದ ಪ್ರಭಾವ ಹೊಟ್ಟೆಯ ಗಾತ್ರದಲ್ಲಿ ಮೈದೋರಿದ್ದರೂ ಅವನು ಆಳುತನದಲ್ಲೇನೂ ಕಡಿಮೆಯಾಗಿರಲಿಲ್ಲ. ಅವನ ಮೈ ಮೇಲಿದ್ದ ಸುಟ್ಟ ಗಾಯದ ಕಲೆಗಳು ಹಳ್ಳಿಯ ವೈದ್ಯದ ರಾಕ್ಷಸೀ ಪ್ರಭಾವಕ್ಕೆ ಪ್ರಮಾಣವಾಗಿದ್ದುವು” (ಕುವೆಂಪು ೨೦೦೬ಅ, ೪೪).