ಅರ್ಥವ್ಯವಸ್ಥೆ ಮತ್ತು ಸಮಾಜ ಎರಡೂ ಒಂದಕ್ಕೊಂದು ಪೂರಕವಾಗಿ ಒಂದನ್ನೊಂದು ಪ್ರಭಾವಿಸಿಕೊಂಡು, ಪೋಷಿಸಿಕೊಂಡು ಅವಿನಾಭವ ಸಂಬಂಧವನ್ನು ಹೊಂದಿವೆ. ಸಮಾಜದ ಜನಜೀವನ ಆರ್ಥಿಕ ಅಂಶಗಳಿಂದ ಪ್ರಭಾವಗೊಂಡಂತೆ, ಆರ್ಥಿಕ ವ್ಯವಸ್ಥೆಯು ಸಾಮಾಜಿಕ ಸಂಬಂಧಗಳಿಂದ ನಡೆಸಲ್ಪಟ್ಟಿದೆ. ಹಾಗಾಗಿ ಇದರಲ್ಲಿ ಸಮಾಜಶಾಸ್ತ್ರದ ಪಾತ್ರವೂ ಬಹಳ ಮುಖ್ಯ ಎಂದು ಸ್ಥಾಪಿತವಾಗಿದೆ.

ಸಮಾಜ ಮತ್ತು ಆರ್ಥಿಕವ್ಯಸ್ಥೆಯ ಸಂಬಂಧವನ್ನು ಕುರಿತು ಮ್ಯಾಕ್ಸ್‌ವೇಬರ್ ಡರ್ಕೀಮ್‌, ಸಿಮ್ಮಲ್‌ಮುಂತಾದ ಚಿಂತಕರು ಇಪ್ಪತ್ತನೆಯ ಶತಮಾನದ ಆದಿಯಲ್ಲಿಯೇ ತಮ್ಮ ವಿಚಾರವನ್ನು ಮಂಡಿಸಿದ್ದಾರೆ. ಎಕನಾಮಿಕ್‌ಸೋಶಿಯಾಲಜಿ ಎಂಬ ಜ್ಞಾನಶಾಖೆ ಈ ಎರಡೂ ಶಿಸ್ತುಗಳನ್ನು ಒಟ್ಟಾಗಿ ನೋಡುವ, ಅವುಗಳ ಪರಸ್ಪರ ಪ್ರಭಾವಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತದೆ. ಸಾಮಾಜಿಕ ಸಂಬಂಧಗಳು ಮತ್ತು ಸಾಮಾಜಿಕ ಸಂಸ್ಥೆಗಳು ಆರ್ಥಿಕ ವ್ಯವಸ್ಥೆಯಲ್ಲಿ ಯಾವ ಪಾತ್ರ ನಿರ್ವಹಿಸುತ್ತವೆ ಎಂದು ಇದರಿಂದ ತಿಳಿಯಬಹುದು. ಈ ವಿಧಾನದಿಂದ ಮುಖ್ಯವಾಹಿನಿಯ ಅರ್ಥಶಾಸ್ತ್ರದಿಂದ ಇದು ವಿಭಿನ್ನವಾಗಿದೆ. ಸಮಾಜದಲ್ಲಿ ಇರುವುದೆಂದರೆ ಇತರ ಜನರೊಂದಿಗೆ ಸಂಪರ್ಕಕ್ಕೆ ಬರುವುದು ಮತ್ತು ಅದರ ಸಂಸ್ಥೆಗಳಲ್ಲಿ ಭಾಗವಹಿಸುವುದು. ಇದು ಎಲ್ಲ ಆರ್ಥಿಕ ಚಟುವಟಿಕೆಗಳನ್ನು ವೈಯಕ್ತಿಕ ನೆಲೆಯಲ್ಲಿ ಹಾಗೂ ಒಟ್ಟಾರೆಯಾಗಿ ಪ್ರಭಾವಿಸುತ್ತದೆ. ಸಾಮಾಜಿಕ ಸಂಪರ್ಕಗಳು, ಜನರು ನಿರ್ಮಿಸುವ ಸಂಸ್ಥೆಗಳು, ಅವನ್ನು ತಮ್ಮ ಜೀವನೋಪಾಯಕ್ಕೆ ಲಾಭಕ್ಕೆ ಬಳಸಿಕೊಳ್ಳುವ ರೀತಿ ಅಥವಾ ಮಾದರಿ ಎಕನಾಮಿಕ್ ಸೋಶಿಯಾಜಿಯ ಮುಖ್ಯ ವಿಷಯವಾಗಿದೆ.

ಆರ್ಥಿಕ ಚಟುವಟಿಕೆಯು ಮೂಲತಃ ಮಾನವ ಚಟುವಟಿಕೆಯಾಗಿದೆ. ಆದರ ಇತಿಹಾಸವು ಮಾನವ ಇತಿಹಾಸದೊಂದಿಗೆ ಬೆರತು ಹೋಗಿದೆ. ಅದ್ದರಿಂದ ಅರ್ಥಶಾಸ್ತ್ರವು ಇತರ ವಿಷಯಗಳಿಂದ ಅಂದರೆ ಮಾನವಶಾಸ್ತ್ರ, ಸಮಾಜಶಾಸ್ತ್ರ, ಮಹಿಳಾ ಆಧ್ಯಯನ, ಸಾಂಸ್ಕೃತಿಕ ಅಧ್ಯಯನ ಮತ್ತು ಸಾಹಿತ್ಯದೊಂದಿಗೆ ಸಂವಾದ ನಡೆಸುವುದು ಆವಶ್ಯಕವಾಗಿದೆ ಎಂದು ಕೆ. ಟಿ. ರಾಮ್ ಮೋಹನ್ ಆಭಿಪ್ರಾಯಪಡುತ್ತಾರೆ. ಹಿಂದಿನಿಂದಲೂ ಆರ್ಥಶಾಸ್ತ್ರವನ್ನು ಗಣಿತ ಮತ್ತು ಇನ್ನಿತರ ವಿಜ್ಞಾನ ವಿಷಯಗಳೊಂದಿಗೆ ತಳಕು ಹಾಕಿಕೊಂಡು ಬರಲಾಗಿದೆ. ವಿಕಸನವಾದದ ಹಿನ್ನೆಲೆಯಲ್ಲಿ ಜೀವಶಾಸ್ತ್ರದೊಂದಿಗೂ ಸಹ ಅದನ್ನು ಇರಿಸಿ ನೋಡಲಾಗುತ್ತಿದೆ. ಇದರ ಪರಿಣಾಮವಾಗಿ ಎವೊಲ್ಯೂಶನರಿ ಎಕನಾಮಿಕ್ಸ್ ಎಂಬ ಶಿಸ್ತು ಶತಮಾನದಲ್ಲಿ ಪ್ರಾರಂಭವಾಯಿತು. ಅಲ್ಲದೆ ಕಂಪ್ಯೂಟರ್ ತಂತ್ರಜ್ಞಾನವೂ ಇದರ ತರ್ಕಬದ್ಧ ನಿರ್ವಹಣೆಗೆ ಒಂದು ಸಾಧನ ಎಂದು ಪ್ರಸ್ತಾಪಿಸಲಾಯಿತು. ಹೀಗೆ ಆರ್ಥಶಾಸ್ತ್ರವನ್ನು ವಿಜ್ಞಾನ ಎಂಬಂತೆ ಹೆಚ್ಚು ಬಿಂಬಿಸಲಾಗುತ್ತಿತ್ತು. ಆದರೆ ಸಾಹಿತ್ಯ ಮತ್ತು ಆರ್ಥಶಾಸ್ತ್ರ ಎರಡೂ ವಿಭಿನ್ನ ನೆಲೆಗಳಿಂದ ಹುಟ್ಟಿದವುಗಳು. ಸಾಹಿತ್ಯವು ಪ್ರಮುಖವಾಗಿ ಸೃಜನಶೀಲವಾಗಿದೆ. ಇದಕ್ಕೆ ವಿರುದ್ಧವಾಗಿ ಆರ್ಥಶಾಸ್ತ್ರವು ವೈಜ್ಞಾನಿಕ ತಳಹದಿಯ ಮೇಲೆ ಜ್ಞಾನದ ಶೋಧವನ್ನು ಮಾಡುತ್ತದೆ. ಆದರೂ ಎರಡೂ ಮೇಲೆ ತೋರುವಂತೆ ಸಂಪೂರ್ಣವಾಗಿ ಪ್ರತ್ಯೇಕವಾಗಿಲ್ಲ. ಐತಿಹಾಸಿಕವಾಗಿ ನೋಡಿದರೆ, ಸಾಹಿತ್ಯವು ಕಲ್ಪನೆ ಸಂವೇದನೆಗಳನ್ನು ವ್ಯಕ್ತಪಡಿಸುವ ಮಾಧ್ಯಮವಲ್ಲದೆ, ಜ್ಞಾನ ಹಾಗೂ ಐತಿಹಾಸಿಕ ಘಟನೆಗಳ ವಾಹಕವೂ ಆಗಿದೆ. ಸಾಹಿತ್ಯ ಸತ್ಯವನ್ನು ಕಂಡುಕೊಳ್ಳುವ ಮತ್ತು ಮಾನವ ವರ್ತನೆಯನ್ನು ಆರ್ಥ ಮಾಡಿಕೊಳ್ಳುವ ಸಾಧನ, ಜ್ಞಾನದ ಆಕರ ಎಂದೇ ಭಾವಿಸಲಾಗುತ್ತಿತ್ತು. ಆದರೆ ಸಾಹಿತ್ಯದಲ್ಲಿ ಆರ್ಥಿಕ ಅಂಶಗಳನ್ನೂ ಚರ್ಚಿಸಲಾಗಿದೆ. ಶೇಕ್ಸ್‌ಪಿಯರ್, ಸರ್ವಾಂಟಿಸ್, ಮಿಲ್ಟನ್, ಗೋಥೆ ಮುಂತಾದ ಸಾಹಿತಿಗಳು ತಾವಿರುವ ಸಮಾಜದ ಚಿತ್ರಣವನ್ನು ತಮ್ಮ ಕೃತಿಗಳಲ್ಲಿ ತಂದಿದ್ದಾರೆ. ಸಾಹಿತ್ಯದಲ್ಲಿ ಅವರು ಅನೇಕ ವಿಧದಲ್ಲಿ ವಿಷಯವನ್ನು ಪರಿಶೀಲಿಸುತ್ತಾರೆ ಎಂದು ಬ್ರೂನಾ ಇರ್ನ್ಗಾವ್ ಅಭಿಪ್ರಾಯಪಡುತ್ತಾರೆ (೨೦೦೯). ಮಾರುಕಟ್ಟೆಯನ್ನು ಕುರಿತು ಆರ್ಥಶಾಸ್ತ್ರ ಹೇಳಿದರೆ, ಮಾರುಕಟ್ಟೆಯ ವಿವಿಧ ಆಯಾಮಗಳನ್ನು ಸಾಹಿತ್ಯ ಪರಿಶೀಲಿಸುತ್ತದೆ. ಅಂದರೆ ಮಾರುಕಟ್ಟೆಯ ರಚನೆ, ಸಾಲ, ಉಳಿತಾಯ, ಕೂಲಿ ಮುಂತಾದ ಆರ್ಥಿಕ ಚಟುವಟಿಕೆಗಳನ್ನು ಸಾಹಿತ್ಯದಲ್ಲಿ ಪರಿಶೀಲಿಸಲಾಗುತ್ತದೆ. ನೇರವಾಗಿ ಸಮಾಜ ಮತ್ತು ಅರ್ಥವ್ಯವಸ್ಥೆ ಬಗ್ಗೆ ಹೇಳದಿದ್ದರೂ ಕೃತಿಯ ಕಥೆಯನ್ನು ಈ ಹಿನ್ನೆಲೆಯಲ್ಲಿ ಚಿತ್ರಿಸಿರುತ್ತಾರೆ. ಚಾಲೆರ್ಟ್ ಬ್ರಾಂಟೆ ಸ್ವತಂತ್ರವಾಗಿ ದುಡಿದು ಆದಾಯ ಗಳಿಸಲು ಒಬ್ಬ ಮಹಿಳೆ ಕಷ್ಟಗಳನ್ನು ವಿಲ್ಲೆಟ್ ಕಥೆಯಲ್ಲಿ ನಿರೂಪಿಸಿದರೆ, ಚಾರ್ಲ್ಸ್ ಡಿಕೆನ್ಸ್ ತನ್ನ ಕಾಲದ ಸಾಲ, ಬ್ಯಾಂಕಿಂಗ್ ವ್ಯವಸ್ಥೆ, ಹಣಕಾಸು, ಆದಾಯದ ಅಸಮಾನತೆ ಬಡತನ ಮುಂತಾದವನ್ನು ತನ್ನ ಕೃತಿಗಳಲ್ಲಿ ಚಿತ್ರಿಸಿದ್ದಾನೆ. ಇದೇ ರೀತಿ ಕನ್ನಡದಲ್ಲಿ ಶಿವರಾಮ ಕಾರಂತರ ಚೋಮನ ದುಡಿ, ತೇಜಸ್ವಿಯವರ ಮಾಯಾಲೋಕ ಮುಂತಾದವನ್ನು ಹೆಸರಿಸಬಹುದು. ಹೀಗೆ ಇದರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹೀಗಾಗಿ ಸಾಹಿತ್ಯವು ಐತಿಹಾಸಿಕ ಸಂದರ್ಭ ಮತ್ತು ಸಾಮಾಜಿಕ ಪರಿಸರವನ್ನು ಅರ್ಥ ಮಾಡಿಕೊಳ್ಳುವ ಅವಾಕಾಶವನ್ನು ಕೊಡುತ್ತದೆ. ಇದರಿಂದ ಆರ್ಥಶಾಸ್ತ್ರದ ಇತಿಹಾಸವನ್ನು ಅರಿಯಲು ಸಾಧ್ಯವಿದೆ. ಆರ್ಥಿಕ ಚಿಂತನೆಗಳಲ್ಲಿ ಮಾನವನ ಆಯ್ಕೆ ಹಾಗೂ ಕ್ರಿಯೆಯನ್ನು ಪ್ರಭಾವಿಸುವ ಸಂವೇದನೆಯ ಅಸಮ ಪಾರ್ಶ್ವಗಳನ್ನು ಗೊಂದಲಗಳನ್ನು ಸಾಹಿತ್ಯವು ಪ್ರತಿಬಿಂಬಿಸುತ್ತದೆ (ಇನ್ಗಾರಾವ್ ೨೦೦೯).

ಬರಹಗಾರ ಸಮಾಜದ ಸದಸ್ಯನಾದ್ದರಿಂದ ಅದರ ಪ್ರಭಾವದಿಂದ ಹೊರಬರಲು ಸಾಧ್ಯವಿಲ್ಲ. ಬರಹಗಾರ ತಾನಿರುವ ಸಮಾಜದ ಚಿತ್ರಣವನ್ನು ತನ್ನ ಸಾಹಿತ್ಯದಲ್ಲಿ ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ನೀಡುತ್ತಾನೆ. ಸಾಹಿತ್ಯದ ಓಘಕ್ಕೆ ಅಥವಾ ಕಥಾಹಂದರಕ್ಕೆ ಇದು ಮುಖ್ಯವಾಗಿರುತ್ತದೆ. ಸಮಾಜ ಚಿತ್ರಣವನ್ನು ಕೆಲವು ಸಾಹಿತ್ಯದಲ್ಲಿ ವೈಭವೀಕರಿಸಿ, ಮಾರ್ಪಾಡು ಮಾಡಿಯೋ ಮುಂತಾದ ರೀತಿಯಲ್ಲಿ ನೀಡಿದರೆ, ಕೆಲವು ಸಾಹಿತ್ಯದಲ್ಲಿ ಯಥಾವತ್ತಾದ ಸಮಾಜದ ಚಿತ್ರಣಗಳು ಮೂಡಿಬರುತ್ತವೆ. ಒಟ್ಟಿನಲ್ಲಿ ಒಂದು ಸಾಹಿತ್ಯ ಕೃತಿಯು ಆ ದೇಶದ ಸಂಸ್ಕೃತಿಯನ್ನು, ಪರಂಪರೆಯನ್ನು ತೋರಿಸುವ ಒಂದು ಕೈಗನ್ನಡಿ. ಲೇಖಕರು ಆ ಸಮಾಜದ, ಸಂಸ್ಕೃತಿಯ ಕೂಸಾಗಿರುತ್ತಾರೆ. ಅವರ ಸಾಹಿತ್ಯ ಕೃತಿಗಳಲ್ಲಿ ತಮ್ಮ ಸುತ್ತಲಿನ ಪರಿಸರ, ಘಟನೆಗಳು, ಆಚರಣೆಗಳು ಮಾಡಿದ ಪ್ರಭಾವವನ್ನು ಸಾಹಿತ್ಯ ಕೃತಿಯ ಮೂಲಕ ವ್ಯಕ್ತಪಡಿಸುತ್ತಾರೆ. ಓದುಗರಿಗೆ ಒಂದು ಹೊಸ ಜಗತ್ತನ್ನು ತೆರೆದಿಡುತ್ತಾರೆ.

ಬರಹಗಾರನೊಬ್ಬನಿಗೆ ಯಾವತ್ತೂ ಅವನ ಕಾಲದ ಪ್ರಜ್ಞೆ ಮತ್ತು ಅವನ ಪ್ರದೇಶದ ಪ್ರಜ್ಞೆ ಇರುತ್ತದೆ. ಇರಬೇಕಾಗುತ್ತದೆ. ವಾಸ್ತವವಾಗಿ ಬರಹಗಾರನ ಎಲ್ಲ ಸೃಷ್ಟಿಯನ್ನು ಪ್ರಭಾವಿಸುವ ಈ ಎರಡು ಮಹತ್ವದ ಆಯಾಮಗಳನ್ನು ಬೇರ್ಪಡಿಸುವುದು ಅಸಾಧ್ಯ ಎಂದು ಕಂಬಾರರ ಆಭಿಪ್ರಾಯವಾಗಿದೆ (ಕಂಬಾರ ೨೦೧೦). ಈ ಹಿನ್ನೆಲೆಯಲ್ಲಿ ನೋಡಿದಾಗ ಸಮಾಜದ ಆಗುಹೋಗುಗಳು ಬರಹಗಾರನ ಚಿಂತನೆಯ ಮೇಲೆ ಬೀರುವ ಪ್ರಭಾವವನ್ನು ಊಹಿಸಬಹುದು. ಇದರಿಂದಾಗಿ ಸಾಹಿತ್ಯ ಕೃತಿಯು ನಮ್ಮ ಸುತ್ತಮುತ್ತ ಇರುವ ಪಾತ್ರಗಳನ್ನು ಚಿತ್ರಿಸುತ್ತದೆ. ಅದರ ಪ್ರಭಾವವನ್ನು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಸಹ ಕಾಣುತ್ತೇವೆ. ಹೀಗೆ ಸಾಹಿತ್ಯವು ಸಮಾಜದ ಬದಲಾವಣೆಗೆ ತನ್ನದೇ ವಿಶಿಷ್ಟ ಕೊಡುಗೆಯನ್ನು ನೀಡಿದೆ. ಸಮಾಜದಲ್ಲಿ ನಡೆಯುವ ಒಂದು ಚಿಕ್ಕ ಘಟನೆಯೇ ಸಾಹಿತ್ಯ ಕೃತಿಯ ವಸ್ತುವಾಗಬಹುದು, ಆದನ್ನು ಲೇಖಕ ಕಲಾತ್ಮಕವಾಗಿ ನಿರೂಪಿಸುತ್ತಾನೆ (ಅಬೂಬಕ್ಕರ್ ೨೦೦೭).

ಇಂತಹ ಒಬ್ಬ ಸಾಹಿತಿ ಕುವೆಂಪು. ಇವರು ಕರ್ನಾಟಕ ಕಂಡ ಅಪರೂಪದ ಹಾಗೂ ಮಹತ್ವಪೂರ್ಣ ಸಾಹಿತಿ. ಅವರು ಕವಿಯಾಗಿ, ನಾಟಕಕಾರರಾಗಿ, ಕಾದಂಬರಿಕಾರರಾಗಿ ನಾಡಿನಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು. ಇವರು ಮಹತ್ವಪೂರ್ಣವಾದ ಎರಡು ಕಾದಂಬರಿಗಳನ್ನು ಬರೆದರು. ಈ ಕಾದಂಬರಿಗಳ ನಿರೂಪಣೆ, ಪಾತ್ರ ಚಿತ್ರಣ, ಪ್ರಾದೇಶಿಕತೆ, ಎಲ್ಲವೂ ವಿಶಿಷ್ಟವಾಗಿ ಹೊರಹೊಮ್ಮಿವೆ. ಕರ್ನಾಟಕದ ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲಿರುವ ಮಲೆನಾಡಿನ ಜನಜೀನದ ಪರಿಚಯವನ್ನು ತಮ್ಮ ಕೃತಿಗಳ ಮೂಲಕ ಮಾಡಿಸಿದ್ದಾರೆ.

ಪ್ರಸ್ತುತ ಅಧ್ಯಯನದಲ್ಲಿ ಭಾರತದ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಪ್ರಭಾವಿಸುವ ಸಾಮಾಜಿಕ ಪರಿಸರವು ಹೇಗಿದೆ, ಅದನ್ನು ಪ್ರಭಾವಿಸುವ ಅಂಶಗಳು ಯಾವುವು ಎಂದು ತಿಳಿಯಲು ಪ್ರಯತ್ನಿಸಲಾಗಿದೆ. ನಿರ್ದಿಷ್ಟವಾಗಿ ಸ್ವಾತಂತ್ರ್ಯಪೂರ್ವದ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಸಮಾಜವನ್ನು ಅರಿತುಕೊಳ್ಳಲು ಪ್ರಯತ್ನಿಸಲಾಗಿದೆ. ಇದಕ್ಕಾಗಿ ಕುವೆಂಪು ಅವರ ಎರಡು ಪ್ರಮುಖ ಕಾದಂಬರಿಗಳಾದ ಮಲೆಗಳಲ್ಲಿ ಮದುಮಗಳು ಹಾಗೂ ಕಾನೂರು ಹೆಗ್ಗಡಿತಿ – ಇವುಗಳ ಮೂಲಕ ತಿಳಿಯುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ ಕಾದಂಬರಿಯಲ್ಲಿ ಚಿತ್ರಿತವಾದ ಅಂಶಗಳನ್ನು ಸ್ಪಷ್ಟಪಡಿಸಿಕೊಳ್ಳಲು ಲಭ್ಯವಿರುವ ಗ್ಯಾಸೆಟಿಯರ್, ಆತ್ಮಕಥೆಗಳು, ಸ್ಥಳೀಯ ಹಳೆತಲೆಮಾರಿನ ಜನರೊಂದಿಗಿನ ಚರ್ಚೆಯನ್ನು ಹಾಗೂ ದೊರೆತ ದಾಖಲೆಗಳನ್ನು ಬಳಸಿಕೊಳ್ಳಲಾಗಿದೆ. ಅನುಬಂಧದಲ್ಲಿ ಇವನ್ನು ನೀಡಲಾಗಿದೆ. ಇವುಗಳ ಮೂಲಕ, ಒಂದು ಸಮಾಜದ ಆರ್ಥಿಕ ವ್ಯವಸ್ಥೆಯನ್ನು ಸಾಹಿತ್ಯ ಕೃತಿಗಳ ಮೂಲಕ ಅರಿಯಬಹುದೆ? ಸಮಾಜದ ಸೂಕ್ಷ್ಮತೆಗಳು ಆರ್ಥವ್ಯವಸ್ಥೆಯನ್ನು ಹೇಗೆ ಪ್ರಭಾವಿಸುತ್ತವೆ ಹಾಗೂ ಆರ್ಥಿಕ ಪರಿಸ್ಥಿಯು ಸಮಾಜದ ಆಗುಹೋಗುಗಳನ್ನು ಹೇಗೆ ಪ್ರಭಾವಿಸುತ್ತದೆ. ಎಂದು ಪರಿಶೀಲಿಸುವ ಯತ್ನ ಮಾಡಲಾಗಿದೆ.

ಮಲೆನಾಡಿನ ವರ್ಣನೆಯನ್ನು ಕುವೆಂಪು ಅವರು ತಮ್ಮ ಸಾಹಿತ್ಯ ಪ್ರಕಾರಗಳಲ್ಲೆಲ್ಲ ವರ್ಣಿಸಿರುವರು. ಇಂಥ ಸುಂದರ ಹಾಗು ಸಮೃದ್ಧ ನೈಸರ್ಗಿಕ ಸಂಪನ್ಮೂಲವನ್ನು ಹೊಂದಿರುವ ಮಲೆನಾಡಿನ ಆರ್ಥಿಕತೆಯನ್ನು ಕುವೆಂಪು ಅವರ ಕಾದಂಬರಿಗಳ ಮೂಲಕ ಅಧ್ಯಯನ ಮಾಡುವುದು ಪ್ರಸ್ತುತ ಉದ್ದೇಶ ಲಾಭದಾಯಕವಾದ ಅಡಕೆ, ಏಲಕ್ಕಿ, ಮೆಣಸಿನಂತಹ ವಾಣಿಜ್ಯ ಬೆಳೆಗಳನ್ನು ರಫ್ತು ಮಾಡುತ್ತಿದ್ದ ಅಂದಿನ ಮಲೆನಾಡ ಸಮಾಜದ ಆಗುಹೋಗುಗಳನ್ನು ಪರಿಚಯಿಸಿಕೊಳ್ಳುವ ಪ್ರಯತ್ನವನ್ನು ಈ ಇಲ್ಲಿ ಮಾಡಲಾಗಿದೆ.

‘ಕಾನೂರು ಹೆಗ್ಗಡಿತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ – ಇವು ಕನ್ನಡ ಸಾಹಿತ್ಯದ ಕ್ಲ್ಯಾಸಿಕ್ಸ್ ಎಂದು ಕರೆದರೂ ತಪ್ಪಾಗುವುದಿಲ್ಲ. ೧೯೩೬ರಲ್ಲಿ ಪ್ರಕಟವಾದ ‘ಕಾನೂರು ಹೆಗ್ಗಡಿತಿ’ ೨೦ನೇ ಶತಮಾನದ ಮೊದಲ ಘಟ್ಟಕ್ಕೆ ಸೇರಿದ್ದು. ಇದಾದ ಮೂರು ದಶಕಗಳ ನಂತರ ೧೯೬೭ರಲ್ಲಿ ‘ಮಲೆಗಳಲ್ಲಿ ಮದುಮಗಳು’ ಪ್ರಕಟವಾಯಿತು. ಇದರಲ್ಲಿ ೧೯ನೇ ಶತಮಾನದ ಕೊನೆಯ ಕಾಲಘಟ್ಟದ ಜೀವನ ಕ್ರಮವನ್ನು ಚಿತ್ರಿಸಲಾಗಿದೆ. ಈ ಕಾಲಾವಧಿಯಲ್ಲಿ ಆಗುತ್ತಿದ್ದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಆಗು ಹೋಗುಗಳನ್ನು ಈ ಕೃತಿಗಳಲ್ಲಿ ಚಿತ್ರಿಸಿದ್ದಾರೆ. ಕುವೆಂಪು ಅವರು ತಾವು ಹುಟ್ಟುವ ಮೊದಲೆ ಇದ್ದ ಸಮಾಜದ ಚಿತ್ರಣವನ್ನು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಕಟ್ಟಿಕೊಟ್ಟರು. ಕುವೆಂಪು ವಿದ್ಯಾರ್ಥಿದೆಸೆಯಿಂದ ಕುಪ್ಪಳಿಯ ಹೊರಗಿದ್ದು ವಿದ್ಯಾಭ್ಯಾಸ ಮಾಡಿದವರು. ರಜೆಯಲ್ಲಿ ಕುಪ್ಪಳಿಗೆ ಹೋಗುತ್ತಿದ್ದರು. ಆದ್ದರಿಂದ ಅವರು ‘ಕಾನೂರು ಹೆಗ್ಗಡಿತಿ’ಯಲ್ಲಿ ಇದ್ದ ಆರ್ಥಿಕ ಸಂದರ್ಭಗಳು ಕಾಲ್ಪನಿಕವೇ? ಎಂಬ ಸಂದೇಹ ಬರುತ್ತದೆ. ಏಕೆಂದರೆ ಸೃಜನಶೀಲ ಸಾಹಿತ್ಯದ ಮೂಲಕ ಸಮಾಜದ ವಸ್ತುನಿಷ್ಠ ಅಧ್ಯಯನ ಮಾಡಲು ಹೊರಟಾಗ ಕಾಲ್ಪನಿಕ ಸಂಗತಿಗಳು ಮುಖ್ಯವಾಗುವುದಿಲ್ಲ ಆದ್ದರಿಂದ ಕಾಲ್ಪನಿಕ ಹಾಗೂ ವಸ್ತು ನಿಷ್ಠತೆಯ ಮಧ್ಯೆ ಸ್ಪಷ್ಟತೆಯನ್ನು ಉಂಟು ಮಾಡಿಕೊಳ್ಳುವುದು ಅಗತ್ಯವಾಗಿದೆ.

ಒಂದು ಪ್ರದೇಶದ ಆರ್ಥಿಕ ವ್ಯವಸ್ಥೆಯನ್ನು, ಅಲ್ಲಿಯ ಸಾಮಾಜಿಕ, ಧಾರ್ಮಿಕ ಗುಣಗಳು ನಿಯಂತ್ರಿಸುತ್ತವೆ. ಆರ್ಥಿಕ ವಿಷಯಗಳು ಸಮಾಜದ ಆಗುಹೋಗುಗಳನ್ನು ನಿರ್ಧರಿಸುತ್ತವೆ. ಆದ್ದರಿಂದ ಕಾದಂಬರಿಗಳಲ್ಲಿರುವ ಸಮಾಜೋ-ಆರ್ಥಿಕ ವಿಷಯಗಳು ಹೇಗೆ ಪರಸ್ಪರ ಪ್ರಭಾವ ಭೀರುತ್ತವೆ ಎಂದು ತಿಳಿಯುವ ಪ್ರಯತ್ನ ಈ ಆಧ್ಯಯನದಲ್ಲಿ ಮಾಡಲಾಗುವುದು.

ಭಾರತ ಕೃಷಿಯಾಧಾರಿತ ಸಮಾಜವಾಗಿದೆ. ಸಾವಿರಾರು ವರ್ಷಗಳಿಂದಲೂ ವ್ಯವಸಾಯ ಮಾಡಿಕೊಂಡು ಬಂದಿದ್ದರೂ ಕೃಷಿ ಕೇವಲ ಜೀವನಾಧಾರ (ಸಬ್ ಸಿಸ್ಟೆನ್ಸ್ ಲೆವೆಲ್ ) ಮಟ್ಟದಲ್ಲಿದೆಯೇ ಹೊರತು ಪಾಶ್ಚಾತ್ಯರಂತೆ ಬಂಡವಾಳಶಾಹಿ ವ್ಯವಸಾಯ ಆಗಿಲ್ಲ. ವಸಾಹತುಶಾಹಿಯ ಆಳ್ವಿಕೆ ಪ್ರಾರಂಭವಾದ ನಂತರ ಭಾರತದ ಜನ ಸಮುದಾಯದ ಮೇಲೆ ಪಾಶ್ಚಾತ್ಯ ಚಿಂತನೆಗಳನ್ನು ಹೇರುವ ಕಸರತ್ತು ಪ್ರಾರಂಭವಾಯಿತು. ಅದರ ಮುಖ್ಯ ಧ್ಯೇಯೋದ್ದೇಶ ತಮ್ಮ ಸರ್ಕಾರದ ಕಂದಾಯವನ್ನು ಹೆಚ್ಚಿಸಿಕೊಳ್ಳವುದೇ ಆಗಿತ್ತು. ಇದರ ಪರಿಣಾಮವಾಗಿ ಜಮೀನ್ದಾರರು ಒಕ್ಕಲುಗಳಿಂದ ಹೆಚ್ಚಿನ ಗೇಣಿಯನ್ನು ವಸೂಲಿ ಮಾಡುತ್ತಿದ್ದರು.

ರಾಜ್ಯದ ಬೊಕ್ಕಸಕ್ಕೆ ಕೃಷಿಯು ಕಂದಾಯದ ಮೂಲವಾಗಿತ್ತು. ಸಾಂಪ್ರದಾಯಕ ರಾಜಾಡಳಿತ, ವಸಾಹತು ಶಾಹಿ ಆಡಳಿತ ಬಂದಾಗಲೂ ಈ ಸ್ಥಿತಿ ಬದಲಾಗಲಿಲ್ಲ. ಬ್ರಿಟಿಷರು ಆಡಂ ಸ್ಮಿತ್, ಡೇವಿಡ್ ರಿಕಾರ್ಡೋ, ಜೇಮ್ಸ್ ಮಿಲ್ ರಂಥ ಅರ್ಥಶಾಸ್ತ್ರಜ್ಞರ ವಿಚಾರಧಾರೆಯ ಪ್ರಭಾವಕ್ಕೆ ಒಳಗಾಗಿ ಲಾಭದಾಯಕವಾದ ಕೃಷಿಭೂಮಿ ನೀತಿಯನ್ನು ಭಾರತದಲ್ಲಿ ಪ್ರತಿಪಾದಿಸಿದರು. ಇದರ ಫಲವಾಗಿ ೧೭೯೩ರಲ್ಲಿ ಕಾರ್ನ್ ವಾಲೀಸನು ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದನು. ಆನಂತರ ೧೮೨೦ರಲ್ಲಿ ಮದ್ರಾಸ್ ಮತ್ತು ಬೊಂಬಾಯಿ ಪ್ರೆಸಿಡೆನ್ಸಿಯಲ್ಲಿ ರೈತವಾರಿ ಪದ್ಧತಿ ಜಾರಿಗೆ ಬಂದಿತು. ‘ಭೂಮಿಯ ಒಟ್ಟು ಉತ್ಪಾದನೆ (ಗ್ರಾಸ್ ಪ್ರಾಡ್ಯೂಸ್) ಯಲ್ಲಿ ಅತಿ ಹೆಚ್ಚಿನ ಭಾಗ ಸರ್ಕಾರಕ್ಕೆ ಸಲ್ಲುತ್ತಿದ್ದಂಥ ಕಂದಾಯ ಆಡಳಿತ ವ್ಯವಸ್ಥೆಗೆ ಬ್ರಿಟಿಷರು ಭಾರತದಲ್ಲಿ ಉತ್ತರಾಧಿಕಾರಿಗಳಾಗಿದ್ದರು’ (ಶಿವಣ್ಣ ೧೯೮೪, ೪೨).

ಮಲೆನಾಡಿನಲ್ಲಿ ಸಾಂಪ್ರದಾಯಿಕ ರೈತವಾರಿ ಪದ್ಧತಿ ಇತ್ತು. ನಿಯಮಿತವಾಗಿ ಸರ್ಕಾರಕ್ಕೆ ಕಂದಾಯ ಕಟ್ಟುವವರು ಖಾತೆದಾರರಾಗಿ ಭೂ ಸ್ವಾಮಿತ್ವ ಪಡೆಯುತ್ತಿದ್ದರು. ಇವರು ಒಕ್ಕಲುಗಳಿಂದ ವಸೂಲಿ ಮಾಡಬೇಕಾದ ಗೇಣಿಯನ್ನು ನಿಗದಿಪಡಿಸಿರಲಿಲ್ಲ. ಹಾಗಾಗಿ ಕಂದಾಯವೂ ನಿಗದಿಯಾಗಿರಲಿಲ್ಲ. ಕಂದಾಯ ಹಾಗು ಗೇಣಿಯ ದರದಲ್ಲಿ ಏರಿಳಿತಗಳಿದ್ದವು. ಈ ವ್ಯವಸ್ಥೆಯು ಮಲೆನಾಡಿನ ಸ್ವಾತಂತ್ರ್ಯ ಪೂರ್ವ ಸಮಾಜದ ಜನಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಎರಡನೆಯ ಅಧ್ಯಾಯದಲ್ಲಿ ಕಂಡುಕೊಳ್ಳಲು ಪ್ರಯತ್ನಿಸಿದೆ.

ಕೃಷಿಯಾಧಾರಿತ ಬಡ ಸಮಾಜವನ್ನು ಶ್ರೀಮಂತರು ಲೇವಾದೇವಿ ವ್ಯವಹಾರದಿಂದ ತಮ್ಮ ಕೈವಶಮಾಡಿಕೊಂಡಿದ್ದರು. ಬಡ್ಡಿ ಚಕ್ರಬಡ್ಡಿಗಳಿಂದ ಜನರು ಸಾಲ ಮರುಪಾವತಿಸಲಾಗದಂತೆ ಮಾಡಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರು. ಇದರಿಂದ ಬಡವರ ಮತ್ತು ಶ್ರೀಮಂತರ ನಡುವೆ ಆಳವಾದ ಕಂದರವೇರ್ಪಟ್ಟಿತ್ತು. ಲೇವಾದೇವಿಯ ಪ್ರಕಾರಗಳು, ಆದರ ಕಾರಣಗಳನ್ನು ಮೂರನೆಯ ಅಧ್ಯಾಯದಲ್ಲಿ ವಿಶ್ಲೇಷಿಸಲಾಗಿದೆ.

ಸ್ವಾತ್ರಂತ್ರ್ಯಪೂರ್ವದ ಮಲೆನಾಡಿನಲ್ಲಿ ಕರ್ನಾಟಕದಲ್ಲೆಲ್ಲಿಯೂ ಕಾಣದ ಜೀತ ವ್ಯವಸ್ಥೆ ಚಾಲ್ತಿಯಲ್ಲಿತ್ತು. ಸಾಲ ಪಡೆದ ವ್ಯಕ್ತಿ ಮಾತ್ರ ಒಡೆಯರ ಬಳಿ ಕೆಲಸ ಮಾಡಿ ಸಾಲ ತೀರಿಸುವವನಾಗಿರದೆ ಅವನ ಇಡೀ ಕುಟುಂಬವೇ ಜೀತಪದ್ಧತಿಗೆ ತನ್ನನ್ನು ಒಡ್ದಿಕೊಳ್ಳುತ್ತಿದ್ದಂತಹ ವಿಲಕ್ಷಣ ಸ್ಥಿತಿ ಅಲ್ಲಿದ್ದುದನ್ನು ಕಾಣುತ್ತೇವೆ. ಜೀತಾದಾಳುಗಳ ಪರಿಸ್ಥಿತಿಯ ಬಗ್ಗೆ. ಅದಕ್ಕೆ ಇರಬಹುದಾದ ಕಾರಣಗಳನ್ನು ಕುರಿತು ನಾಲ್ಕನೆಯ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

ಭತ್ತ ಮತ್ತು ವಾಣಿಜ್ಯ ಬೆಳೆಯಾದ ಅಡಿಕೆಯೇ ಮೂಲ ಬೆಳೆಯಾಗಿರುವ ಮಲೆನಾಡು ಏಲಕ್ಕಿ, ಮೆಣಸನ್ನೂ ರಫ್ತು ಮಾಡುತ್ತಿದ್ದಂತಹ ನಾಡು. ಈ ಹಿನ್ನೆಲೆಯಲ್ಲಿ ಅಧ್ಯಯನ ಪ್ರದೇಶದ ವ್ಯಾಪಾರದ ಬಗ್ಗೆ, ಪರಸ್ಥಳ ವ್ಯಾಪಾರಿಗಳ ವ್ಯಾಪಾರದ ರೀತಿ, ವಸ್ತು ವಿನಿಮಯ ಅಧ್ಯಯನ ನಡೆಸಲು ಐದನೆಯ ಅಧ್ಯಾಯದಲ್ಲಿ ಪ್ರಯತ್ನ ಮಾಡಲಾಗಿದೆ.

ಅರನೆಯ ಅಧ್ಯಾಯವು ಅರ್ಥಶಾಸ್ತ್ರ ಮತ್ತು ಸಾಹಿತ್ಯ ಸಂಬಂಧಗಳಿಗಿರುವ ಇತರ ಸಾಧ್ಯತೆಗಳನ್ನು ಸೂಚಿಸುತ್ತದೆ.

ಮಲೆನಾಡಿನ ಸಮಾಜದ ಮೇಲೆ ಅರ್ಥಿಕ ಅಂಶಗಳ ಬಲವಾದ ಪ್ರಭಾವವನ್ನು ಇಲ್ಲಿ ಕಾಣಬಹುದು ಮತ್ತು ಸಾಮಾಜಿಕ ವ್ಯವಸ್ಥೆಯೂ ಆರ್ಥಿಕ ಶೋಷಣೆಗೆ ಹೇಗೆ ಕಾರಣವಾಗಿದೆ ಎಂಬುದನ್ನೂ ಜೊತೆಯಲ್ಲಿಯೇ ಪರಿಶೀಲಿಸಲಾಗಿದೆ. ಕಾದಂಬರಿಗಳೊಡನೆ, ಅದಕ್ಕೆ ಪೂರಕವಾಗಿರುವ ಅಂದಿನ ದೈನಂದಿನ ಸ್ಥಿತಿಗಳನ್ನು ಆಭ್ಯಸಿಸುವುದರೊಂದಿಗೆ ಕಾದಂಬರಿಗಳಲ್ಲಿರುವ ವಿವರಗಳು ಕಾಲ್ಪನಿಕವೇ? ವಾಸ್ತವಿಕವೇ? ಎಂಬುದನ್ನು ಚರ್ಚಿಸುತ್ತಾ ಅವುಗಳ ಅರ್ಥಶಾಸ್ತ್ರೀಯ ಹಿನ್ನೆಲೆಯನ್ನು ವಿಶ್ಲೇಷಿಸಲಾಗಿದೆ.