ಶ್ರೀ ಹಾಲಪ್ಪ, ಕುಪ್ಪಳಿ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ. ಇವರು ಕುಪ್ಪಳಿಯವರು. ಕುವೆಂಪು ಅವರ ಪೂರ್ವಿಕರ ಕುಪ್ಪಳಿ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದರು. ಕಾಲಕ್ರಮೇಣ ಜೀತ ಪದ್ಧತಿ ಅಳಿದ ನಂತರ ಅರಣ್ಯ ಇಲಾಖೆಯಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಕುಪ್ಪಳಿ ಮನೆಯಲ್ಲಿ ಸಮಾರು ನಲವತ್ತು ಜೀತದಾಳುಗಳಿದ್ದರು. ಇವರ ಬಿಡಾರ ಒಡೆಯರ ಮನೆಗಿಂತ ದೂರದಲ್ಲಿರುತ್ತಿತ್ತು. ಪ್ರತಿದಿನ ಒಡೆಯರ ಕಡೆಯವರು ಬಿಡಾರಕ್ಕೆ ಬಂದು ಅವರನ್ನೆಲ್ಲ ಕೆಲಸಕ್ಕೆ ಕರೆಯುತ್ತಿದ್ದರು. ಆದರೆ ಬಿಡಾರದ ಒಳಗೆ ಬರುತ್ತಿರಲಿಲ್ಲ ಅವರ ಸಂಬಳ ಮೊದಲು ಐವತ್ತು ಪೈಸೆಯಾಗಿತ್ತು. ಅನಂತರ ಕ್ರಮೇಣ ಎರಡು ರೂಪಾಯಿಗೇರಿತು.

ದೀನ ದಲಿತ ಜನರಿಗೆ ಜೀತದಾಳು ಸ್ಥಾನ ಪ್ರಾಪ್ತವಾಗುತ್ತಿದ್ದುದು ಮದುವೆಯಿಂದ. ಹೆಣ್ಣಿಗೆ ತೆರ ಕೊಟ್ಟು ಗಂಡಿನ ಕಡೆಯವರು ಮದುವೆ ಮಾಡಕೊಳ್ಳಬೇಕಿತ್ತು. ಏನಿಲ್ಲವೆಂದರೂ ಒಂದು ಮದುವೆಗೆ ಆಗ ಸುಮಾರು ೨೦೦ ರೂಪಾಯಿಗಳು ಬೇಕಾಗುತ್ತಿತ್ತು. ಮದುವೆಯಲ್ಲಿ ಕನಿಷ್ಠ ೧೨ ಸೇರು ಅಕ್ಕಿ, ೫೦ ರಿಂದ ೧೦೦ ರೂಪಾಯಿಗಳವರೆಗೆ ಹೆಣ್ಣಿಗೆ ಕೊಡಬೇಕು. ನೂರರಿಂದ ನೂರೈವತ್ತು ಜನ ಮದುವೆಗೆ ಬರುತ್ತಿದ್ದರು. ಅವರಿಗೆಲ್ಲ ಸರಿಯಾದ ಊಟೋಪಚಾರ ಆಗಬೇಕಿತ್ತು.

ಹಾಲಪ್ಪ ತಮ್ಮ ಮದುವೆಗೆ ಆಲೆಮನೆ ಶಿದ್ದಪ್ಪನಾಯ್ಕರ ತಂದೆಯ ಹತ್ತಿರ ಆರು ನೂರು ರೂಪಾಯಿ ಸಾಲ ಮಾಡಿ ಅಲ್ಲೇ ಮದುವೆಯಾಗಿದ್ದರು. ಹೆಣ್ಣಿಗೆ ೫೦ ಸೇರು ಅಕ್ಕಿ ಕೊಟ್ಟಿದ್ದರು. ಅಲ್ಲದೆ ಒಡೆಯರು ಒಂದು ತಾಳಿ, ನಾಲ್ಕು ಬಂಗಾರದ ಗುಂಡುಗಳನ್ನು ಮಾಡಿಸಿಕೊಟ್ಟಿದ್ದರು. ಇದೂ ಸಾಲದ ಲೆಕ್ಕದಲ್ಲಿರುತ್ತಿತ್ತು.

ಈ ಸಾಲ ತೀರಿಸುವುದು ಕಷ್ಟವಾಯಿತು. ಏಕೆಂದರೆ ಮೊದಲು ಹಾಲಪ್ಪನವರ ಸಂಬಳ ಕೇವಲ ಐವತ್ತು ಪೈಸೆ. ಸಂಬಳ ಎರಡು ರೂಪಾಯಿಗೆ ಏರಿದಾಗ ತಮ್ಮ ಮದುವೆಯ ಸಾಲವನ್ನು ತೀರಿಸಿದರು.

ಜೀತದಾಳುಗಳು ತಾವು ಮಾಡಿದ ಸಾಲ ತಿರಿಸುವವರೆಗೆ ಬೇರೆಡೆಗೆ ಕೆಲಸಕ್ಕೆ ಹೂಗುವಂತಿರಲಿಲ್ಲ. ಸಾಲ ತೀರಿಸುವುದು ಇವರಿಗೆ ಕಷ್ಟವೂ ಹೌದು. ಜೀತದಾಳುಗಳ ಸಂಬಳ ಒಂದು ಸೇರು ಅಕ್ಕಿ ಮತ್ತು ಐವತ್ತು ಪೈಸೆ. ಐವತ್ತು ಪೈಸೆ ಸಂಸಾರದ ಖರ್ಚಿಗೆ ಸಾಕಾಗುತ್ತಿರಲಿಲ್ಲ.

ಯುಗಾದಿ ಹಬ್ಬದಂದು ಗೌಡರು ಜೀತದಾಳುಗಳಿಗೆ ಅವರ ಹೆಂಡಿರು, ಮಕ್ಕಳಿಗೆಲ್ಲ ಬಟ್ಟೆ, ಹಾಸಲು ಹೊದೆಯಲು ಕಂಬಳಿ ಕೊಡುತ್ತಿದ್ದರು. ಯುಗಾದಿ, ದೀವಾವಳಿ, ಗೌರಿಹಬ್ಬದಂದು ಒಂದು ಕುಟುಂಬಕ್ಕೆ ಎರಡು ಸೇರು ಅಕ್ಕಿ, ಅರ್ಧ ಕೆ. ಜಿ. ಮೆಣಸು, ಒಂದು ತೆಂಗಿನಕಾಯಿ, ಕಾಲು ಕೆ. ಜಿ. ಹುಣಸೆ, ಅರ್ಧ ಕೆ. ಜಿ. ಬೆಲ್ಲವನ್ನು ಕೊಡುತ್ತಿದ್ದರು. ಈ ಹಬ್ಬಗಳನ್ನು ಬಿಟ್ಟರೆ ಬೇರೆ ಯಾವಾಗಲೂ ಹೀಗೆ ಕೊಡುತ್ತಿರಲಿಲ್ಲ.

ಒಡೆಯರ ಬಳಿ ಮಾಡಿದ ಸಾಲ ತೀರಿಸದೆ ಆಳುಗಳು ಬೇರೆ ಕಡೆಗೆ ಕೆಲಸಕ್ಕೆ ಹೋಗುವಂತಿರಲಿಲ್ಲ. ಜಮೀನ್ದಾರರ ಉಪಟಳದಿಂದ ತಪ್ಪಿಸಕಿಕೊಳ್ಳಬೇಕೆಂದರೆ ಓಡಿ ಹೋಗುವುದೊಂದೇ ಮಾರ್ಗವಾಗಿತ್ತು.

ಜೀತದಾಳುಗಳು ಬೇರೆ ಊರಿಗೆ ಹೋದಾಗ ಒಡೆಯರ ಕಾರ್ಯನಿಮಿತ್ತ ಹೋದರೆ ‘ಕುಪ್ಪಳಿ ಮನೆಯಿಂದ ಬಂದಿದ್ದೀವಿ’ ಎಂದು ಹೇಳಿಕೊಳ್ಳುತ್ತಿದ್ದರು. ಸ್ವಂತ ಕೆಲಸದ ಮೇಲೆ ಹೋದರೆ ಕುಪ್ಪಳಿ ಬಿಡಾರದಿಂದ ಬಂದಿರುವುದಾಗಿ ಹೇಳಿಕೊಳ್ಳುತ್ತಿದ್ದರು. ಜೀತದಾಳುಗಳ ನಿವಾಸಗಳಿಗೆ ‘ಬಿಡಾರ’ ಒಡೆಯರ ನಿವಾಸಕ್ಕೆ ‘ಮನೆ’ ಎಂದು ಕರೆಯುತ್ತಿದ್ದರು.

ಜೀತದಾಳುಗಳಿಗೆ ಬಾಳೇಹೊನ್ನೂರಿನ ಲಿಂಗಾಯತ ಮಠವಿತ್ತು. ಮನೆಯಲ್ಲಿ ನಡೆಯುವ ಮದುವೆ ಮುಂತಾದ ಶುಭಕಾರ್ಯಕ್ಕೆ ಮಠದ ಪೂರ್ವಾನುಮತಿ ಪಡೆಯಬೇಕಿತ್ತು. ಇಲ್ಲವೆ ಮಠ ಅಂಥವರಿಗೆ ದಂಡ ವಿಧಿಸುತ್ತಿತ್ತು. ಆಗ ಮಠದ ಕಡೆಯವರು ಬಂದು ಆ ಶುಲ್ಕವನ್ನು ಪಡೆದುಕೊಂಡು ಹೋಗುತ್ತಿದ್ದರು.

ಒಡೆಯರ ಮನೆಗೆ ಮಂಜುನಾಥ, ಸುಬ್ಬಯ್ಯನಾಯ್ಕರು ಇತ್ಯಾದಿಯಾಗಿ ಒಕ್ಕಲುಗಳಿದ್ದರು. ಅವರ ಗೇಣಿ ಒಂದು ಎಕರೆಗೆ ಆರು ಖಂಡುಗ ಭತ್ತ ಎಂದು ನಿಗದಿ ಪಡಿಸಲಾಗಿತ್ತು. ಅದರ ಅಳತೆ ಹೀಗಿದೆ:

೨೦ ಕೊಳಗ – ೧ ಖಂಡುಗ
೨೦ ಗುಂಟೆ – ೧ ಎಕರೆ

ಭೂ ಸುಧಾರಣೆ ಕಾಯಿದೆ ಬಂದ ನಂತರ ಒಕ್ಕಲುಗಳು ಇಲ್ಲವಾದರು.

ಹಿಂದಿನ ಕಾಲದಲ್ಲಿ ಮನೆಯ ಪಾತ್ರೆಗಳನ್ನು ಅಡವಿಟ್ಟು ಸಾಲ ಪಡೆದುಕೊಳ್ಳುತ್ತಿದ್ದರು. ಲೇವಾದೇವಿದಾರ ಮೋಸ ಮಾಡುತ್ತಿದ್ದರು. ಇಪ್ಪತ್ತು ರೂಪಾಯಿ ಬೆಲೆಯ ಸಾಮಾನನ್ನು ಅಡವಿಟ್ಟುಕೊಂಡು ಹತ್ತೇ ರೂಪಾಯಿ ಕೊಡುತ್ತಿದ್ದರು. ಬಂಗಾರಕ್ಕೂ ಕೂಡ ಹೀಗೆ ಮಾಡುತ್ತಿದ್ದರು. ನೂರು ರೂಪಾಯಿಗೆ ಕೂಡ ಜಮೀನನ್ನು ಆಗ ಅಡವಿಡುತ್ತಿದ್ದರು. ಸರ್ಕಾರವು ವಸ್ತುಗಳನ್ನು ಸಾಲಕ್ಕೆ ಅಡವಿಡಬಾರದು ಎಂಬ ಕಾನೂನು ಜಾರಿಗೆ ತಂದಮೇಲೆ ವಸ್ತುಗಳನ್ನು ಅಡವಿಟ್ಟುಕೊಂಡು ಸಾಲ ಕೊಡುವ ಪದ್ಧತಿ ನಿಂತು ಹೋಯಿತು.

ಇವರ ಕೆಲಸದ ವೇಳೆ ಬೆಳಿಗ್ಗೆ ಏಳರಿಂದ ಸಂಜೆ ಆರರವರೆಗೆ ಇರುತ್ತಿತ್ತು. ಪ್ರತಿದಿನ ಒಡೆಯರ ಕಡೆಯವರು ಬಂದು ಎಲ್ಲರನ್ನು ಕೆಲಸಕ್ಕೆ ಕರೆಯುತ್ತಿದ್ದರು. ಇವರು ಸ್ವತಃ ಶಾಲೆಗೆ ಹೋಗಲಿಲ್ಲ. ಆದರೆ ಮಕ್ಕಳನ್ನು ಗಡಿಕಲ್‌ನಲ್ಲಿದ್ದ ಶಾಲೆಗೆ ಕಳುಹಿಸುತ್ತಿದ್ದರು. ಶಾಲೆಯಲ್ಲಿ ಅಧ್ಯಾಪಕರು ಜೀತದಾಳುಗಳಿಗೆ, ನಿಮ್ನ ವರ್ಗದವರಿಗೆ ನೇರವಾಗಿ ಕೋಲಿನಲ್ಲಿ ಹೊಡೆಯುತ್ತಿರಲಿಲ್ಲ. ಅವರತ್ತ ಕೋಲನ್ನು ಅಡ್ಡ ಅಡ್ಡವಾಗಿ ಬೀಸುತ್ತಿದ್ದರು. ಇದನ್ನು ‘ಅಡ್ಡ ಬಡಿಗೆ’ ಎಂದು ಕರೆಯುತ್ತಿದ್ದರು. ಶಾಲೆಯಲ್ಲಿ ಕೂರಲು ಇವರಿಗೆ ಪ್ರತ್ಯೇಕ ಸ್ಥಳವಿತ್ತು.

ಇಂಥ ಶಾಲೆಗೆ ಹೋಗುವ ಹುಡುಗರನ್ನು ಒಡೆಯರು ಆದೇಶಿಸಿದರೆ ಶಾಲೆಗೆ ಕಳಿಸುವುದು ಬಿಡಿಸಿ ಒಡೆಯರ ಮನೆಯಲ್ಲಿ ಮಕ್ಕಳನ್ನಾಡಿಸುವುದು, ದನ ಕಾಯುವುದು ಮುಂತಾದ ಕೆಲಸಗಳಿಗೆ ಸಂಬಳವಿಲ್ಲದೆ ಕಳುಹಿಸಬೇಕಿತ್ತು. ಹೀಗಾಗಿ ಜೀತದಾಳುಗಳ ಮಕ್ಕಳು ಓದಲಾಗುತ್ತಿರಲಿಲ್ಲ. ಒಡೆಯರ ಆಸ್ತಿ ಭಾಗವಾಗುತ್ತಿದ್ದ ಸಂದರ್ಭದಲ್ಲಿ ಜೀತದಾಳುಗಳ ಹಿಸ್ಸೆಯಾಗುತ್ತಿತ್ತು. ಜೀತದಾಳುಗಳು ಅಡಕೆ ಕೊನೆ ತೆಗೆಯುವ ಕೆಲಸ ಕಲಿಯಲಿಲ್ಲ. ಸೇರೆಗಾರರ ಕಡೆಯವರು ಅಂದರೆ ಮರಾಠಿಗಾರರು, ಶೆಟ್ಟರು, ಪೂಜಾರ್ರು – ಇವರು ಅಡಕೆ ಕೊನೆ ತೆಗೆಯುತ್ತಿದ್ದರು. ಇವರು ಆಣೆ, ಒಂದು ಬಿಲ್ಲೆಯನ್ನು ಮುಸ್ಲಿಂ ವ್ಯಾಪಾರಿಗಳಿಗೆ ಕೊಟ್ಟು ಸಾಮಾನುಗಳನ್ನು ಕೊಳ್ಳುತ್ತಿದ್ದರು. ಮನೆಗೆ ಬೇಕಾಗುವ ಕಡಲೆಕಾಯಿ, ತೊಗರಿಬೇಳೆ, ಕೊಬ್ರಿ ಮುಂತಾದ ವಸ್ತುಗಳನ್ನು ಕೊಳ್ಳುತ್ತಿದ್ದರು. ಮುಸ್ಲಿಂ ವ್ಯಾಪಾರಿಗಳು ಮೀನು ವ್ಯಾಪಾರವನ್ನು ಮಾಡುತ್ತಿದ್ದರು. ಅನಂತರ ಬಯಲು ಸೀಮೆಯ ಜನರು ವ್ಯಾಪಾರ ಪ್ರಾರಂಭಿಸಿದರು.