ಶ್ರೀ ಶೇಷಪ್ಪಗೌಡರು, ಕುಪ್ಪಳಿ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ. ಜಮೀನ್ದಾರರು ಭೂ ಕಂದಾಯವನ್ನು ಕಟ್ಟಿ ಖಾತೆದಾರರಾಗುತ್ತಿದ್ದರು. ಇವರಿಗೆ ಮತದಾನದ ಹಕ್ಕು ಇರುತ್ತಿತ್ತು. ಇಲ್ಲಿ ಜಾತಿ ತಾರತಮ್ಯ ಇರುತ್ತಿರಲಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಹಾಗು ಸ್ವಾತಂತ್ರ್ಯ ದೊರೆತ ಆರಂಭದ ವರ್ಷಗಳಲ್ಲಿ ಕುಪ್ಪಳಿಯಲ್ಲಿ ಇವರದೊಂದೇ ಮನೆ ಇತ್ತು. ಅದರ ಸುತ್ತ ಮುತ್ತ ಸುಮಾರು ೫೦-೧೦೦ ಜನ ಆಳುಗಳು-ಒಕ್ಕಲು ಹಾಗೂ ಜೀತದಾಳುಗಳು ಇದ್ದರು.

ಜಮೀನ್ದಾರರು ಒಕ್ಕಲುಗಳಿಂದ ಗೇಣಿಯನ್ನು ಪಡೆಯುತ್ತಿದ್ದರು. ಜಮೀನ್ದಾರರು ಒಕ್ಕಲುಗಳು ತಮಗೆ ಎಷ್ಟು ಪಾಲನ್ನು ಕೊಡಬೇಕು ಎಂದು ನಿಗದಿ ಪಡಿಸುವರು. ಇದಕ್ಕೆ ‘ಪಡಿ’ ಎನ್ನುವರು. ಒಕ್ಕಲುಗಳು ತಪ್ಪದೆ ಆ ‘ಪಡಿ’ಯನ್ನು ಒಡೆಯರಿಗೆ ಕೊಡಬೇಕು.

ಒಕ್ಕಲುಗಳ ಯೋಗಕ್ಷೇಮ ಜಮೀನ್ದಾರರು ನೋಡಿಕೊಳ್ಳುತ್ತಿದ್ದರು. ಜಮೀನ್ದಾರರಿಗೆ ಕಷ್ಟವಾದಾಗ ಅಥವಾ ಕೆಲಸವಿದ್ದಾಗ ಒಕ್ಕಲುಗಳು ಬಂದು ಕೆಲಸ ಮಾಡಿಕೊಡಬೇಕು. ಒಡೆಯರ ಮನೆಯಲ್ಲಿ ಒಕ್ಕಲುಗಳು ಕೆಲಸ ಮಾಡಿದಾಗ ಅದಕ್ಕೆ ಸಂಬಳ ಕೊಡುತ್ತಿರಲಿಲ್ಲ. ಬಿಟ್ಟಿ ಕೆಲಸ ಮಾಡಬೇಕಿತ್ತು. ಗೌಡರು ಬರೀ ಊಟ ಕೊಡುತ್ತಿದ್ದರು. ಆದರೂ ಈ ಕೆಲಸ ಕಡ್ಡಾಯವಾಗಿತ್ತು.

ಜೀತದಾಳುಗಳಿಗೆ ಹಬ್ಬ ಹರಿದಿನಕ್ಕೆ ಒಡೆಯರು ದುಡ್ಡು ಕೊಡುತ್ತಿದ್ದರು. ಹಾಗು ವರ್ಷಕೊಮ್ಮೆ ಬಟ್ಟೆ ಕೊಡುತ್ತಿದ್ದರು. ದಿನದ ಕೆಲಸಕ್ಕೆ ಒಬ್ಬನಿಗೆ ಎರಡು ಸೇರು ಭತ್ತ ಕೊಡುತ್ತಿದ್ದರು. ಜೀತದಾಳುಗಳ ಕಾಯಿಲೆಗೆ ಗೌಡರು ಹಣಕಾಸು ಸಹಾಯ ಮಾಡುತ್ತಿದ್ದರು. ಜೀತದಾಳಿಗೆ ಜಮೀನ್ದಾರರು ತಂದೆಯಿದ್ದಂತೆ. ಅವರ ಆಗು ಹೋಗುಗಳಿಗೆ ಗೌಡರೇ ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು.

ಹೆಣ್ಣು ಮಕ್ಕಳಿಗೆ ಮದುವೆ ಸಮಯದಲ್ಲಿ ‘ತೆರ’ ಕೊಡುವ ಪದ್ಧತಿ ಕೇವಲ ಜೀತದಾಳುಗಳಲ್ಲಿ ಮಾತ್ರವಲ್ಲದೆ ಒಕ್ಕಲಿಗರಲ್ಲೂ ಇತ್ತು. ಕಾರಣ ಹೆಣ್ಣು ಮಕ್ಕಳು ಆಗಿನ ಕಾಲದಲ್ಲಿ ಹೆಚ್ಚು ಬದುಕುತ್ತಿರಲಿಲ್ಲ. ಆಸ್ಪತ್ರೆಗಳ ಕೊರತೆ ಇದ್ದುದರಿಂದ ಅವರು ಗರ್ಭಿಣಿಯಾದಾಗ ಬದುಕುಳಿಯುವ ಸಂದರ್ಭ ಕಡಿಮೆಯಿತ್ತು. ಹಾಗಾಗಿ ಹೆಂಗಸರ ಸಂಖ್ಯೆ ಕಡಿಮೆ ಇತ್ತು. ಇದರಿಂದಾಗಿ ಹೆಣ್ಣಿಗೆ ಮದುವೆಯಲ್ಲಿ ‘ತೆರ’ ಕೊಡುವ ಪದ್ಧತಿ ಜಾರಿಗೆ ಬಂತು. ಮಲೇರಿಯಾ ಕೂಡ ಹೆಂಗಸರ ಸಾವಿಗೆ ಕಾರಣವಾಗಿತ್ತು.

ಸ್ವಾತಂತ್ರ್ಯಪೂರ್ವದಲ್ಲಿ ಹಳೇಪೈಕದವರು ಮದುವೆಯಲ್ಲಿ ದಂಡಿಗೆ ಏರುವಂತಿರಲಿಲ್ಲ ಹಾಗು ಮದುಮಕ್ಕಳ ಮೆರವಣಿಗೆ ಮಾಡಬಾರದು ಎಂಬ ನಿರ್ಬಂಧವಿತ್ತು. ಜಮೀನ್ದಾರರಿಗೆ ಬ್ರಿಟಿಷ್‌ಸರ್ಕಾರದಿಂದ ಇದಕ್ಕೆ ಬೆಂಬಲ ಇತ್ತು. ಸರ್ಕಾರಕ್ಕೆ ಭೂಕಂದಾಯವನ್ನು ಜಮೀನ್ದಾರರೇ ಕಟ್ಟುತ್ತಿದ್ದರಿಂದ ಅಂದಿನ ಸರ್ಕಾರವು ಜಮೀನ್ದಾರರಿಗೆ ಅನುಕೂಲ ಮಾಡಿಕೊಡುತ್ತಿತ್ತು.

ದಂಡಿಗೆ ಮತ್ತು ಮೆರವಣಿಗೆಯನ್ನು ಹಳೇಪೈಕದವರು ತಾವೂ ಮಾಡುವುದಾಗಿ ಜಮೀನ್ದಾರರ ನಿರ್ಬಂಧವನ್ನು ಕಡೆಗಣಿಸಿ ಮುಂದುವರಿದಾಗ, ಜಮೀನ್ದಾರರಿಗೂ ಹಳೇಪೈಕದವರಿಗೂ ಸಾಕಷ್ಟು ಹೊಡೆದಾಟ ಆಗಿ ಖೂನಿ ಸಹ ಆಗಿದೆ. ಈ ಘಟನೆ ೧೯೩೬ಕ್ಕಿಂತ ಮುಂಚೆ ನಡೆದಿದೆ. ಇದು ಎನ್‌.ಆರ್. ಪುರ ಮಲಂದೂರು ಕೇಸ್‌ಎಂದು ಹೆಸರುವಾಸಿಯಾಗಿದೆ ಸ್ವಾತಂತ್ರ್ಯ ಬಂದ ಮೇಲೆ ಈ ಕಟ್ಟಳೆಯನ್ನು ಯಾರೂ ಅನುಸರಿಸಲಿಲ್ಲ.

ಇವರ ಕಾಲದಲ್ಲಿ ಕುಪ್ಪಳಿಯಲ್ಲಿ ಐಗಳ ಶಾಲೆ ಇರಲಿಲ್ಲ. ಗಡಿಕಲ್‌ನಲ್ಲಿ ಒಂದು ಶಾಲೆಯಿತ್ತು. ಅದು ಪ್ರಾಥಮಿಕ ಶಾಲೆಯಾಗಿದ್ದು ಅದರಲ್ಲಿ ನಾಲ್ಕನೇ ತರಗತಿಯವರೆಗೆ ಬೋಧನೆ ನಡೆಯುತ್ತಿತ್ತು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೀರ್ಥಹಳ್ಳಿಗೆ ಹೋಗಬೇಕಿತ್ತು.

ಸ್ವಾತಂತ್ರ್ಯದ ನಂತರ ಭೂಸುಧಾರಣೆ ಕಾನುನು ಜಾರಿಗೆ ಬಂತು. ಉಳುವವನೇ ಭೂಮಿಯ ಒಡೆಯನಾದ, ಗೇಣಿಪದ್ಧತಿ ರದ್ದಾಯಿತು. ಜಮೀನ್ದಾರರು ಗೇಣಿಗೆ ಕೊಟ್ಟ ಜಮೀನು ಅವರ ಕೈಬಿಟ್ಟು ಹೋಯಿತು. ಇದರಿಂದ ಅವರಿಗೆ ಹೊಡೆತ ಬಿತ್ತು ತಮ್ಮ ಎಲ್ಲ ಜಮೀನನ್ನು ಒಕ್ಕಲುಗಳಿಗೆ ಕೊಟ್ಟವರು ಭಾರಿ ನಷ್ಟಕ್ಕೆ ಒಳಗಾಗಿ ಊರು ಬಿಟ್ಟು ಹೋದರು. ಸುಮಾರು ಒಕ್ಕಲುಗಳು ಶ್ರೀಮಂತರಾದರು. ಗೇಣಿದಾರರಾಗಿದ್ದವರಲ್ಲಿ ಹಳೇಪೈಕದವರೇ ಹೆಚ್ಚಿದ್ದರು. ಅನಂತರ ಬೇಲರು ಮತ್ತು ಚಲುವಾದಿಯವರು ಇತ್ಯಾದಿ. ಭೂಸುಧಾರಣೆ ಕಾನೂನಿನಿಂದ ಇವರೆಲ್ಲರಿಗೂ ತಾವು ಸಾಗುವಳಿ ಮಾಡುತ್ತಿದ್ದ ಭೂಮಿಯ ಒಡೆತನ ದೊರಕಿತು.

ಜಾತಿಯಾಧಾರಿತ ಮೇಲುಕೀಳಿನ ಭಾವನೆ ಅಂದಿನ ಸಮಾಜದಲ್ಲಿ ಇತ್ತು. ಹೋಟೇಲುಗಳಲ್ಲಿ ಕೆಳವರ್ಗದವರಿಗೆ ಬೇರೆ ಸ್ಥಳಿವಿತ್ತು. ಅವರಿಗೆ ಕಾಫಿ ಕುಡಿಯಲು ತೆಂಗಿನ ಗರಟ ಇಡುತ್ತಿದ್ದರು. ಶಾಲೆಗಳಲ್ಲಿ ಅತ್ಯಂತ ಕೆಳಜಾತಿಯವರಿಗೆ ಪ್ರತ್ಯೇಕ ಬೆಂಚುಗಳಿರುತ್ತಿದ್ದವು.

ಜಮೀನ್ದಾರರು ಬ್ರಾಹ್ಮಣರ ಮನೆಗೆ ಹೋದರೆ ಗೋಣಿ ಚೀಲದ ಮೇಲೆ ಕೂರಬೇಕಿತ್ತು ಎಷ್ಟೇ ದೊಡ್ಡ ಜಮೀನ್ದಾರನೂ ಜೀಲದ ಮೇಲೆಯೇ ಕೂರಬೇಕಿತ್ತು. ಹಾಗಾಗಿ ಸಾಮಾನ್ಯವಾಗಿ ಬ್ರಾಹ್ಮಣರ ಮನೆಗೆ ಜಮೀನ್ದಾರರು ಹೋಗುತ್ತಿರಲಿಲ್ಲ. ಒಂದು ವೇಳೆ ಅವರು ಊಟಕ್ಕೆ ಇರಸಿಕೊಂಡರೆ, ಬ್ರಾಹ್ಮಣರ ಊಟವಾದ ನಂತರ ಇವರು ಹೊರಗಡೆ ಚೌಕಿ ಮೇಲೆ ಕೂತು ಊಟ ಮಾಡಿ, ಸೆಗಣಿ ಸಾರಿಸಿ ಬರಬೇಕಿತ್ತು.

ಜನರ ಮೂಢನಂಬಿಕೆಯಿಂದ ಬ್ರಾಹ್ಮಣ ಸಾಹುಕಾರನಾದ. ಕಾಯಿಲೆ ಬಂದಾಗ ವಿಭೂತಿ, ಚೀಟು, ಪೂಜೆ ಇತ್ಯಾದಿಯಿಂದ ದುಡ್ಡು ಮಾಡಿ ಜಮೀನ್ದಾರರಿಗೇ ಸಾಲ ಕೊಡುವಂತಾದ.

ಈಗಲೂ ಕೆಲ ಮೂಢನಂಬಿಕೆಗಳಿವೆ. ಜಮೀನಿನಲ್ಲಿ ಭೂತ, ದಯ್ಯ ಇದೆ ಎಂದು ಜನ ಈಗಲೂ ನಂಬುತ್ತಾರೆ ಭೂತಕ್ಕೆ ಕೊಡುವ ಹರಕೆಯ ಆಚರಣೆ ಇನ್ನೂ ಚಾಲ್ತಿಯಲ್ಲಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಸಂತೆ ಕಡಿಮೆಯಿತ್ತು. ತರೀಕೆರೆಯಲ್ಲಿ ಸಂತೆ ನಡೆಯುತ್ತಿತ್ತು. ಸಂತೆಯಲ್ಲಿ ಸಿಗುವ ಗೃಹೋಪಯೋಗಿ ಸಾಮಾನುಗಳನ್ನು ಮುಸ್ಲಿಂ ಮತ್ತು ಶೆಟ್ಟರು ಗಾಡಿ ಮೇಲೆ ತಂದು ಮನೆಯ ಬಾಗಿಲಲ್ಲೇ ಮಾರುತ್ತಿದ್ದರು. ಉಪ್ಪು, ಸೀಮೆಎಣ್ಣೆಯನ್ನು ದಕ್ಷಿಣ ಕನ್ನಡದಿಂದ ಶೆಟ್ಟರು ತಂದು ಮಾರುತ್ತಿದ್ದರು. ಬ್ಯಾರಿಗಳು ಅಡಕೆಯನ್ನು ಪಡೆದು ಸಾಮಾನುಗಳನ್ನು ಕೊಡುತ್ತಿದ್ದರು. ವಿನಿಮಯಕ್ಕೆ ಮುಖ್ಯವಾಗಿ ಭತ್ತ ಮತ್ತು ಅಡಕೆ ಮಾಧ್ಯಮವಾಗಿದ್ದವು.

ಮದುವೆ, ಕಾಯಿಲೆ ಎಂದು ಮುಂತಾದ ಕಾರಣಗಳಿಗೆ ಜಮೀನ್ದಾರರಿಂದ ಸಾಲ ಪಡೆದು ಅದನ್ನು ತೀರಿಸುತ್ತಿರಲಿಲ್ಲ. ಆದ್ದರಿಂದ ಬಡ್ಡಿ ಬೆಳೆದು ಅದನ್ನು ತೀರಿಸಲು ಇಡೀ ಕುಟುಂಬವೇ ದುಡಿಯಬೇಕಿತ್ತು. ಜೀತದಾಳುಗಳು ಕೆಲಸಕ್ಕೆ ಬರಲು ನೆಪ ಹೇಳುತ್ತಿದ್ದರು. ಹಾಗಾಗಿ ಪ್ರತಿದಿನ ಅವರ ಬಿಡಾರದ ಬಳಿ ಹೋಗಿ ಕೆಲಸಕ್ಕೆ ಕರಿಯಬೇಕಾಗಿತ್ತು.

ಇವರ ಸಾಲಕ್ಕೆ ಬಡ್ಡಿ ಹಾಕುತ್ತಿದ್ದರಾದ್ದರಿಂದ ಇವರ ಸಾಲ ತೀರುತ್ತಲೇ ಇರಲಿಲ್ಲ ಆದ್ದರಿಂದ ಜೀತದಾಳುಗಳು ಕೆಲಸ ಬಿಡುತ್ತಿರಲಿಲ್ಲ. ಒಂದು ವೇಳೆ ತಮ್ಮ ಒಡೆಯರ ಬಳಿ ಕೆಲಸ ಬಿಟ್ಟು ಬೇರೆ ಜಮೀನ್ದಾರರ ಬಳಿ ಹೋದರೆ, ಆ ಜಮೀನ್ದಾರ ಇವನ ಸಾಲ ತೀರಸಬೇಕಿತ್ತು. ಆದ್ದರಿಂದ ಜೀತದಾಳುಗಳು ಒಡೆಯರನ್ನು ಬದಲಾಯಿಸುತ್ತಿರಲಿಲ್ಲ.

ಲೇವಾದೇವಿಗಾರರು ತಮ್ಮ ಸಾಲ, ಬಡ್ಡಿಯ ಲೆಕ್ಕ ಹಾಕುತ್ತಿದ್ದುದು ಮಾಘ ಬಹುಳ ಅಮಾವಾಸ್ಯೆಯಂದು. ಒಂದು ಮಾಘ ಬಹುಳ ಅಮಾವಾಸ್ಯೆಯಿಂದ ಮುಂದಿನ ಮಾಘ ಬಹುಳ ಅಮಾವಾಸ್ಯೆ ತನಕ ಒಂದು ವರ್ಷವೆಂದು ಇವರಿಗೆ ಲೆಕ್ಕ. ಯಾವುದೇ ತಿಂಗಳಲ್ಲಿ ಸಾಲ ತೆಗೆದುಕೊಂಡರೂ ಒಂದು ವರ್ಷದ ಲೆಕ್ಕ ಹಾಕಿಯೇ ಬಡ್ಡಿ ಕೊಡಬೇಕಿತ್ತು. ಆದ್ದರಿಂದ ಲೇವಾದೇವಿಗಾರರು ಸಾಕಷ್ಟು ಸಾಹುಕಾರರಾಗಿದ್ದರು.

ಜಮೀನು, ಬಂಗಾರ, ತಾಮ್ರ, ಹಿತ್ತಾಳೆ, ಮುಂತಾದ ಸಾಮಾನುಗಳನ್ನು ಅಡವಿಡುವುದಕ್ಕು ಮಾಘ ಬಹುಳ ಅಮಾವಾಸ್ಯೆಯ ಲೆಕ್ಕ ಹಾಕುತ್ತಿದ್ದರು. ಈ ಸಾಮಾನುಗಳನ್ನು ವಾಯಿದೆಗೆ ಸರಿಯಾಗಿ ಬಿಡಿಸಿಕೊಂಡು ಬರಬೇಕಿತ್ತು ಪರೋಹಿತರು ಈ ಪದ್ಧತಿಯನ್ನು ಅನುಸರಿಸುತ್ತಿದ್ದರು.

ಸಾಲ ಕೊಟ್ಟವರು ಸಾಲ ವಸೂಲಿ ಮಾಡಲು ಅಡಕೆ ಭತ್ತದ ಕೊಯಿಲಿನ ಸಮಯದಲ್ಲಿ ಬಂದು ವಸೂಲಿ ಮಾಡಿಕೊಳ್ಳುತ್ತಿದ್ದರು. ಇವರ ಕಾಲದಲ್ಲಿ ವಸುಲಿ ಸಾಬರ ಕಾಟ ಹೆಚ್ಚಾಗಿ ಈ ಭಾಗದಲ್ಲಿ ಇರಲಿಲ್ಲ.

ಗದ್ದೆ ತೋಟದ ಕೆಲಸಕ್ಕೆ ದಕ್ಷಿಣ ಕನ್ನಡ ಜಿಲ್ಲೆಗಳಾದ ಮಂಗಳೂರು, ಉಡುಪಿ, ಕುಂದಾಪುರದಿಂದ ಶೆಟ್ಟರು, ಬಂಟರು ಜನರನ್ನು ಕರೆದುಕೊಂಡು ಗುಂಪಾಗಿ ಬರುತ್ತಿದ್ದರು. ಇವರಲ್ಲಿ ಹಸಲರು, ಮರಾಠಿಗರು, ಶೆಟ್ಟರು ಇರುತ್ತಿದ್ದರು. ಇವರು ಗದ್ದೆ, ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಎತ್ತರದ ಅಡಕೆ ಮರ ಹತ್ತಿ ಅಡಕೆಗೆ ಕೊಟ್ಟೆ ಕಟ್ಟುವ ಕೆಲಸದಲ್ಲಿ ಮರಾಠಿಗರು, ಶೆಟ್ಟರು ನಿಪುಣರಾಗಿದ್ದರು. ಜಮೀನುದಾರರಿಗೆ ದೊಡ್ಡ ಜಮೀನು ಇರುತ್ತಿದ್ದರಿಂದ ಅವರಿಗೆ ಸೇರೆಗಾರರ ಅವಶ್ಯಕತೆ ಇತ್ತು.

ಬಯಲುಸೀಮೆಯ ಜನರು ಸಮಾರು ೧೯೩೦ರಿಂದ ಈಚೆಗೆ ಮಲೆನಾಡಿಗೆ ಕೆಲಸಕ್ಕೆ ಬರುತ್ತಿದ್ದಾರೆ. ಬಯಲುಸೀಮೆಯಲ್ಲಿ ಮಳೆ ಕಡಿಮೆಯಾಗಿ ದುಡಿಮೆಗೆ ಜನ ಮಲೆನಾಡಿಗೆ ಬರುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಇದು ಕಡಿಮೆಯಾಗಿದೆ. ಏಕೆಂದರೆ ಬಯಲು ಸೀಮೆಯಲ್ಲಿ ಮಳೆಯಿಲ್ಲದಿದ್ದರೂ ಬೋರ್ವೆಲ್‌ವ್ಯವಸ್ಥೆಯಿಂದ ಅಲ್ಲಿ ಕೆಲಸದ ಅವಕಾಶಗಳು ಹೆಚ್ಚಿವೆ.