ನೌಕರಿ ಕರಾರು ಪತ್ರ

ಸನ್‌ಸಾವಿರದ ಒಂಬೈನೂರ ಇಪ್ಪತ್ತೇಳನೇ ಇಸವಿ ನವೆಂಬರ್ ತಾರೀಕು ಒಂಭತ್ತರಲ್ಲು ಕೊಪ್ಪ ತಾಲೂಕು ಕಸಬಾ ಹೋಬಳಿ ಹಿರೇಕೊಡಿಗೆ ಗ್ರಾಮದಲ್ಲಿರುವ ಹೊರಬೈಲು ಆಲೆಮನೆ ಸಿದ್ಧಪ್ಪ ನಾಯಕರು ಮತ್ತು ತಮ್ಮಯ್ಯ ನಾಯಕರು ಇವರಿಗೆ ತಾಲೂಕು ಮಾಗಣೆ ಮಜಕೂರು ಕುಂಬಾರಕೊಪ್ಪ ಗ್ರಾಮದಲ್ಲಿರುವ ಸುರೇಕೊಪ್ಪದ ವಾಸಿ ದಕ್ಷಿಣ ಕನ್ನಡ ಜಿಲ್ಲಾ ಉಡುಪಿ ತಾಲೂಕು ಬಳಿ ಸಾವಿರ ಮಾಗಣೆ ಕಟ್ಟಿಂಗೇರಿ ಗ್ರಾಮದಲ್ಲಿರುವ ಎಡಮೇರು ದೊಡ್ಡಮನೆ ದಾಸಸೆಟ್ರ ಜಾಗದಲ್ಲಿರುವ ಕರಾದಿ ಜಾತಿ ಕೆಂಚನ ಅಳಿಯಂದಿರು ಮೆಣಪ ಒಂದು ಮೊಡಂಕಿಲ ಒಂದು ಕೂಡ ಎರಡು ಜನರು ಬರ್ಸಿಕೊಟ್ಟ ನೌಕರಿ ಕರಾರು ಏನೆಂದರೆ ನಿಮ್ಮ ಬಾಬ್ತು ಸದರಿ ಸೊರೆಕೊಪ್ಪ ಮತ್ತು ದೋರಗಲ್ಲು ಹೊರಬೈಲು ಆಲೆಮನೆ ಈ ಸ್ಥಳಗಳ್ಳಲ್ಲಿರುವ ತರಿ ಬಾಗಾಯ್ತು ಜಮೀನುಗಳಿಗೆ ಆಗಬೇಕಾದ ಈ ಕೆಳಗೆ ಕಾಣುವ ಕಾಂಗಾರಿಗಳನ್ನು ಮಾಡುವುದಕ್ಕೆ ಒಪ್ಪಿಕೊಂಡು ಈ ದಿವ್ಸ ನಾವು ನಿಮ್ಮ ಕೈಯ ಅಡ್ವಾನ್ಸು ಒಂದು ನೂರು ರೂಪಾಯಿಗಳನ್ನು ತೆಗೆದುಕೊಂಡಿರುತ್ತೇವೆ. ಆದ್ದರಿಂದ ನಾಳೆ ತಾರೀಕು ಲಾಗಾಯ್ತು ನಾವು ಮತ್ತು ನಮ್ಮ ಕಡೆ ಹೆಣ್ಣಾಳು ಗಂಡಾಳಿನಿಂದ ಇನ್ನೂ ನಾಲ್ಕು ಜನ ಕೂಡ ಆರು ಜನರು ಕೆಸಲದ ಮೇಲೆ ಹಾಜರಾಗಿ ತರಿ ಜಮೀನಿಗೆ ಗೊಬ್ಬರ ಹಾಕುವುದು ಸಸಿ ನಟ್ಟಿ ಹೂಟೆ ಮಾಡುವುದು ಕಳೆ ತೆಗೆಯುವುದು ಗದ್ದೆ ಕೊಯ್ಲು ಮಾಡುವುದು ವಗೈರೆ ಮತ್ತು ಬಾಗಾಯ್ತು ಜಮೀನುಗಳಿಗೆ ಅಗತೆ ಗೊಬ್ಬರ ಮಣ್ಣು ಸೊಪ್ಪು ಉದಿ ಕಪ್ಪು ಸಹ ಮುಂತಾದ ಕಾಂಗಾರಿಯನ್ನು ನೀವು ಯಾ ನಿಮ್ಮ ಕಡೆಯವರು ಹೇಳಿದಂತೆ ಮಾಡಿಕೊಂಡು ಕೆಲಸಕ್ಕೆ ಬಂದ ಆಳು ಒಂದಕ್ಕೆ ಕೇಸಕ್ಕಿ ಒಂದು ಸೇರಿನಂತೆಯೂ ಮತ್ತು ರೋಜು ಮೂವತ್ತು ಆಳಿಗೆ ಒಂದೊಂದು ಸೇರು ಉಪ್ಪು ಮೆಣಸು ಸಹ ನಮ್ಮ ಹೊಟ್ಟೆ ಖರ್ಚಿಗೆ ನಿಮ್ಮಿಂದ ತೆಗೆದುಕೊಂಡು ಬರುವುದಲ್ಲದೆ ನಿಷ್ಕರ್ಷೆ ಮಾಡಿಕೊಂಡಿರುವ ಪ್ರಕಾರ ಕೆಲಸದ ಹಾಜರು ಮೂವತ್ತು ಆಳಿಗೆ ಅಂದ್ರೆ ಗಂಡಾಳಿಗೆ ಐದು ರೂಪಾಯಿನಂತೆಯೂ ಹೆಣ್ಣಾಳು ಮೂವತ್ತಕ್ಕೆ ನಾಲ್ಕು ರೂಪಾಯಿನಂತೆಯೂ ಆಗುವ ಸಂಬಳದ ಮೊಬಲಗು ಪೈಕಿ ನಮ್ಮ ಖರ್ಚಿಗೋಸ್ಕರ ಬೇಕಾದಲ್ಲಿ ರೋಜು ಮೂವತ್ತು ಆಳಿಗೆ ಒಂದೂವರೆ ರೂಪಾಯಿನಂತೆ ನಿಮ್ಮಿಂದ ತೆಗೆದುಕೊಂಡು ಜಾತಾ ಉಳಿಕಿ ಮೊಬಲಗನ್ನು ಮೇಲ್ಕಂಡ ಅಡ್ವಾನ್ಸು ಮೊಬಲಗಿಗೆ ವಸೂಲು ಕೊಡುತ್ತೇವೆ. ಈ ಪ್ರಕಾರ ಪೂರಾ ಅಡ್ವಾನ್ಸು ಮೊಬಲಗನ್ನು ಈ ಲಾಗಾಯ್ತು ಒಂದು ವರುಷದೊಳಗೆ ತೀರ್ಮಾನಿಸುತ್ತೇವೆ. ಈ ಅಡ್ವಾನ್ಸು ಮೊಬಲಗು ತೀರ್ಮಾನ ಆದ ವಿನಹ ಬೇರೆ ಯಾರಿಂದ್ಲು ಯಾವ ವಿಧಧ ಅಡ್ವಾನ್ಸು ತೆಗೆದುಕೊಳ್ಳುವುದಿಲ್ಲ. ಇದಕ್ಕೆ ವಿರೋಧವಾಗಿ ನಡೆದರೆ ಬ್ರಿಚ್‌ಆಫ್‌ಕಾಂಟ್ರ್ಯಾಕ್ಟ್‌ಆಕ್ಟಿನ ಶಿಕ್ಷೆಗೆ ಗಿರಿಯಾಗಲು ಬದ್ಧರಾಗಿರುತ್ತೇವೆ ಎಂಬುದಾಗಿ ನಮ್ಮ ಖುದ್ದು ರಾಜಿಯಿಂದ ಆಲೆಮನೆಯಲ್ಲೂ ಬರ್ಸಿ ಕೊಟ್ಟ ನೌಕರಿ ಕರಾರು.

(ಆಲೆಮನೆ ಸುರೇಶ್‌, ಆಲೆಮನೆ, ಕೊಪ್ಪ ತಾಲೂಕು, ಚಿಕ್ಕಮಗಳೂರು ಜಿಲ್ಲೆ ಇವರಲ್ಲಿ ದೊರೆತ ದಾಖಲೆ, ಜಮೀನ್ದಾರರು ಸೇರೆಗಾರರ ಮಧ್ಯೆ ನಡೆಯುತ್ತಿದ್ದ ಒಪ್ಪಂದದ ಕರಾರು ಪತ್ರ. ಕೆಲಸಗಾರಿಗೆ ಕೊಡಬೇಕಾದ ಪಡಿ, ಸಂಬಳ ಅಷ್ಟೇ ಅಲ್ಲದೆ, ಗಟ್ಟದ ಕೆಳಗಿನ ಆಳುಗಳು ಗದ್ದೆ, ಅಡಕೆ ತೋಟಗಳಲ್ಲಿ ಏನೇನು ಕೆಲಸಗಳನ್ನು ಮಾಡುತ್ತಿದ್ದರು ಎಂಬುದು ತಿಳಿಯಬಹುದು. ಕೆಲಸದ ಒಪ್ಪಂದದ ಪ್ರಕಾರ ಜಮೀನ್ದಾರರ ಸಾಲ ತೀರುವವರೆಗೆ ಬೇರೆಲ್ಲೂ ಕೆಲಸವನ್ನು ಆರಿಸಿಕೊಂಡು ಹೋಗುತ್ತಿರಲಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅವರ ವಿರುದ್ಧ ಕೋರ್ಟಿನಲ್ಲಿ ದಾವಾ ಹಾಕಬಹುದಿತ್ತು. ಪತ್ರದಲ್ಲಿ ಎರಡು ಹೆಬ್ಬೆಟ್ಟು ಗುರುತುಗಳು ಸಹ ಇದೆ.)