ಜೀತಪದ್ಧತಿಗೆ ಇರಬುದಾದ ಕಾರಣಗಳು

ಈ ಪರಿಸರದ ಇಂತಹ ವಿಶಿಷ್ಟ ಪದ್ಧತಿಗೆ ಕಾರಣಗಳ ಬಗ್ಗೆ ಯೋಚಿಸಿದಾಗ ಕೆಲವು ಮುಖ್ಯ ಕಾರಣಗಳನ್ನು ಊಹಿಸಿಬಹುದು. ಅವುಗಳು ಜನಸಂಖ್ಯೆ, ಆರೋಗ್ಯ, ಮಹಿಳೆ ಮತ್ತು ಶಿಶುಮರಣ ಪ್ರಮಾಣ, ಮೌಢ್ಯ/ಅಜ್ಞಾನ ಮತ್ತು ಮಲೆನಾಡಿನ ಪರಿಸರ.

ಜನಸಂಖ್ಯೆ

ಸುಧಾರಿತ ಸಾರಿಗೆ ಸಂಪರ್ಕ, ತೀರ ಪ್ರದೇಶ, ಬಂದರುಗಳು, ವ್ಯಾಪಾರ ಸ್ಥಳ, ಮಾರುಕಟ್ಟೆಯ ಸೌಲಭ್ಯ, ನಗರಗಳು, ಬಯಲು ಪ್ರದೇಶಗಳು, ಜೀವನೋಪಾಯಕ್ಕೆ ಸುಲಭ ಸೌಕರ್ಯಗಳುಳ್ಳ ಪ್ರದೇಶಗಳು ವಿವಿಧ ಆರ್ಥಿಕ ಚಟುವಟಿಕೆಗಳು ಇವೇ ಮುಂತಾದ ಅಂಶಗಳು ಜನಸಾಂದ್ರತೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆ ಅನುಕೂಲಕರವಾದ ಭೌಗೋಳಿಕ ಹಿನ್ನಲೆ ಒಂದು ಪ್ರದೇಶದ ಜನಸಾಂದ್ರೆತೆಗೆ ಕಾರಣವಾಗುತ್ತದೆ. ಮಲೆನಾಡು ಈ ಎಲ್ಲ ಅಂಶಗಳಿಂದಲೂ ವಂಚಿತವಾಗಿತ್ತು. ಅಲ್ಲದೆ ವಾಯುಗುಣವೂ ಅಷ್ಟು ಹಿತಕರವಾಗಿರಲಿಲ್ಲ. ವಿಪರೀತ ಮಳೆಯಿಂದ ಬೆಳೆಗೂ ಹಾನಿಯಾಗುವುದಲ್ಲದೆ, ಜನರು ಬೇರೆಡೆಯಿಂದ ಬಂದು ವಾಸಿಸುವುದೂ ಆಸಾಧ್ಯವನ್ನಾಗಿ ಮಾಡಿತ್ತು.

ಜಮೀನ್ದಾರಿ ವ್ಯವಸ್ಥೆ ಪ್ರಧಾನವಾಗಿದ್ದ ಮಲೆನಾಡಿನಲ್ಲಿ ಗದ್ದೆ ತೋಟದ ಕೆಲಸಕ್ಕೆ ಜನರ ಅವಶ್ಯಕತೆ ಬಹಳ ಇತ್ತು. ಆದರೆ ದಟ್ಟ ಕಾಡಿನ ಮಧ್ಯೆ ಇದ್ದ ಈ ಪ್ರದೇಶಗಳಲ್ಲಿ ಮಲೇರಿಯಾದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಕಾಡಿನ ನಡುವೆ ಇದ್ದ ಹಳ್ಳಿಗಳಿಗೆ ನಗರ ಪಟ್ಟಣಗಳಲ್ಲಿರುವ ವೈದ್ಯಕೀಯ ಸೌಲಭ್ಯ ದೊರಕುತ್ತಿರಲಿಲ್ಲ. ಹಾಗಾಗಿ ಸರಿಯಾದ ಚಿಕಿತ್ಸೆ ಇಲ್ಲದೆ ಜನರು ಎಳೆಯ ವಯಸ್ಸಿನಲ್ಲೋ, ಯೌವ್ವನಾವಸ್ಥೆಯಲ್ಲೊ ಸಾವನ್ನಪ್ಪುತ್ತಿದ್ದರು. ದುಡಿಯುವ ಜನಸಂಖ್ಯೆಯಲ್ಲಿ ಯಾವಾಗಲೂ ಇಳಿಮುಖವಾಗಿರುತ್ತಿತ್ತು. ಇದು ಕೇವಲ ಕೆಳರ್ಗದ ಜನರಲ್ಲಿರುತ್ತಿದ್ದ ತೊಂದರೆ ಅಲ್ಲ ಭೂಮಾಲೀಕರಿಗೂ ಇದು ಅನ್ವಯಿಸುತ್ತಿತ್ತು. ಕುವೆಂಪು ಅವರು ತಮ್ಮ ಅತ್ಮಕತೆ ‘ನೆನಪಿನ ದೋಣಿಯಲ್ಲಿ’ ದಾಖಲಿಸಿದ ಕೆಲವು ಘಟನೆಗಳು ಈ ಆಂಶವನ್ನು ಸ್ಪಷ್ಟಪಡಿಸುತ್ತದೆ.

“ನಾನು ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಂದಿನಿಂದ ಪ್ರತಿ ದಸರಾ ಮತ್ತು ಬೇಸಿಗೆ ರಜೆಯಲ್ಲಿ ಮನೆಗೆ ಹೋದಾಗೆಲ್ಲ ಯಾರಾದರೊಬ್ಬರು ಮನೆಯವರು ತೀರಿ ಹೋಗಿರುತ್ತಿದ್ದರು. ಎಷ್ಟರಮಟ್ಟಿಗೆ ಎಂದರೆ, ನಾನು ಎಂ, ಎ. ತೇರ್ಗಡೆಯಾಗಿ ಮನೆಗೆ ಹಿಂದಿರುಗಿದಂದು ಮನೆಯ ಮಂದಿ ಮುಕ್ಕಾಲು ಪಾಲಗಿಂತಲೂ ಹೆಚ್ಚಾಗಿಯೆ ಖಾಲಿಯಾಗಿದ್ದರು” (ಕುವೆಂಪು ೨೦೦೫ಅ, ೪೦೮).

“ಶ್ರಾವಣ ಮಾಸದಲ್ಲಿ ಮೃತಪಟ್ಟದ್ದು…. ಶೀತಮ್ಮನವರು ಸ್ವರ್ಗಸ್ಥಾರಾಗುವ ಮೊದಲು ಅಂದರೆ ಎಂಟು ದಿನ ಮುಂಚೆ ಬಸಪ್ಪ ಅಜ್ಜಯ್ಯ ತೀರಿಕೊಂಡಿದ್ದರು. ಅವರಿಬ್ಬರ ಉತ್ತರಕ್ರಿಯಾದಿಗಳನ್ನು ಒಟ್ಟಿಗೆ ಮಾಡಿದ್ದರು” (ಕುವೆಂಪು ೨೦೦೫ಅ, ೪೦೯).

ಹೀಗೆ ಸಾವು ಯಾವಾಗೆಂದರೆ ಅವಾಗ, ಯಾರಿಗೆಂದರೆ ಅವರಿಗೆ ವಯೋಮಾನದ ಮಿತಿಯಿಲ್ಲದೆ ಬರುತ್ತಿತ್ತು. ಶ್ಲೇಷ್ಮ ಜ್ವರ, ಮಲೇರಿಯಾ ಮುಂತಾದ ಖಾಯಿಲೆಗಳು ಉಲ್ಬಣಗೊಂಡು ಸರಿಯಾದ ಶುಶ್ರೂಷೆ ಇಲ್ಲದೆ ಜನ ಮರಣ ಹೊಂದುತ್ತಿದ್ದರು, ಇದರಿಂದಾಗಿ ಮಲೆನಾಡಿನ ಜನಸಂಖ್ಯೆ ಕಡಿಮೆ ಇತ್ತು. ಆದ್ದರಿಂದ ದೊರೆತ ಬಡ ಆಳುಗಳ ಪರಿಸ್ಥಿತಿಯ ಲಾಭ ಪಡೆದು ಸಾಹುಕಾರರು, ಜಮೀನ್ದಾರರು ಅವರನ್ನು ತಮ್ಮ ಜೀತದಾಳುಗಳನ್ನಾಗಿ ಮಾಡಿಕೊಳ್ಳುತ್ತಿದ್ದರು.

ಅರೋಗ್ಯ

ಮಲೆನಾಡು ಸುಮಾರು ೩೦೦ ಇಂಚು ಮಳೆಯನ್ನು ಪಡೆಯುತ್ತಿದ್ದ ಪ್ರದೇಶ. ಡಟ್ಟ ಕಾಡು, ಜೌಗು ಪ್ರದೇಶಗಳನ್ನು ಹೊಂದಿದ್ದು ಮಲೇರಿಯಾದಂಥ ಭೀಕರ ಕಾಯಿಲೆಯ ತಾಣವಾಗಿತ್ತು. ಕುವೆಂಪು ತಾವು ಮೈಸೂರಿನಿಂದ ಮಲೆನಾಡಿಗೆ ಬಂದಾಗಲೆಲ್ಲ ತಮಗೆ ಮಲೇರಿಯಾ ಬರುತ್ತಿತ್ತು ಎಂದು ಸ್ಮರಿಸಿಕೊಳ್ಳುತ್ತಾರೆ.

“ಆದರೂ ಮಲೆನಾಡಿಗೆ ಬಂದಾಗಲೆಲ್ಲ ಮಲೇರಿಯಾ ಕಾಣಿಸಿಕೊಳ್ಳುತ್ತಿತ್ತು. ಔಷಧಿ ಕುಡಿದು ಶಮನವಾಗುತ್ತಿತ್ತು. ಶಮನವಾಗುವುದೆಂದರೆ ಏನು? ಮಲೇರಿಯಾ ಕ್ರಿಮಿಗಳು ನಾಶವಾಗುತ್ತಿರಲಿಲ್ಲ! ಸ್ಥಳ ಬದಲಾಯಿಸುತ್ತಿದ್ದವಷ್ಟೆ! ರಕ್ತದಿಂದ ತೊಲಗಿ ಗುಲ್ಮದಲ್ಲಿ ಆಶ್ರಯ ಪಡೆಯುತ್ತಿದ್ದವು. ಜ್ವರಗಡ್ಡೆ ಯಾವಾಗಲೂ ಇದ್ದೆ ಇರುತ್ತಿತ್ತು. ಜೀವಾಣುಗಳಿಗೆ ಸುಸಮಯ ಒದಗಿದಾಗ ಮತ್ತೆ ರಕ್ತಕ್ಕೆ ಸೇರಿ ಜ್ವರ ಕಾಣಿಸಕೊಳ್ಳುತ್ತಿತ್ತು” (ಕುವೆಂಪು ೨೦೦೫ಬ, ೭೦೫).

ಕ್ರಾನಿಕ್‌ಮಲೇರಿಯಾದ ಕಾರಣ ಕುವೆಂಪು ಅವರು ಐದಾರು ದಿನಗಳು ಆಸ್ಪತ್ರೆಯಲ್ಲಿಯೇ ಇರಬೇಕಾಗಿ ಬಂತು. ವರ್ಷದ ಒಂದು ರಜೆಯಲ್ಲಿ ಮಲೆನಾಡಿಗೆ ಹೋದಾಗ ಆಗುತ್ತಿದ್ದ ಮಲೇರಿಯಾ ಈ ರೀತಿಯಲ್ಲಿ ಅವರನ್ನು ಬಾಧಿಸರಬೇಕಾದರೆ, ವೈದ್ಯಕೀಯ ಶುಶ್ರೂಷೆ ಇಲ್ಲದೆ ಅಲ್ಲೇ ಇರಬೇಕಾದ ಜನರ ಪಾಡನ್ನು ಊಹಿಸಬಹುದು.

ಒಂದು ತಿಂಗಳ ಹಿಂದೆಯಷ್ಟೇ ಆರೋಗ್ಯದಿಂದಿದ್ದು ತನ್ನ ಮನೆಗೆ ಹೋಗಿ ಬಂದ ಕುವೆಂಪು ತಮ್ಮ ತಾಯಿ ಸೀತಮ್ಮ ಶ್ಲೇಷ್ಮಜ್ವರಕ್ಕೆ ತುತ್ತಾಗಿ ಒಂದು ತಿಂಗಳಷ್ಟರಲ್ಲೇ ತೀರಿಕೊಂಡಿದ್ದರು ಎಂದು ತಿಳಿಸುತ್ತಾರೆ.

ಕುವೆಂಪು ಮಲೆನಾಡಿನ ಮಲೇರಿಯಾ ಬಗ್ಗೆ ಹೀಗೆ ಬರೆಯುತ್ತಾರೆ. ‘ಮಲೆನಾಡು ಮನೋಹರವಾಗಿದೆ; ಆದರೆ ಮಲೇರಿಯಾ ಪ್ರಾಣಹಾರಿಯಾಗಿದೆ!’ (ಕುವೆಂಪು ೧೯೯೮, ೧೫). ಮಲೇರಿಯಾದ ಭೀಕರ ಪರಿಣಾಮವನ್ನು ನಾವಿಲ್ಲಿ ಊಹಿಸಬಹುದು. ಅಲ್ಲದೆ ರೇಷ್ಮೆ ಕಾಯಿಲೆ, ಶ್ಲೇಷ್ಮಜ್ವರ ಮುಂತಾದ ಖಾಯಿಲೆಗಳಿಂದ ಜನರು ಬಳಲುತ್ತಿದ್ದರು. ಅದಕ್ಕೆ ಸೂಕ್ತ ಚಿಕಿತ್ಸೆ ನೀಡದೆ ಜನರು ಸಾವನ್ನಪ್ಪುತ್ತಿದ್ದರು.

‘ಕಾನೂರು ಹೆಗ್ಗಡಿತಿ’ಯಲ್ಲಿ ಬರುವ ಸಾಲುಗಳನ್ನು ಗಮನಿಸಬೇಕು. ಕಾನೂರು ಮನೆಯ ವರ್ಣನೆ ಮಾಡುತ್ತ ಆ ಮನೆ ಮಂದಿ ಸಂಖ್ಯೆಯ ಬಗ್ಗೆ ಹೀಗೆ ಹೇಳುತ್ತಾರೆ.

‘ಆ ಮನೆಯಲ್ಲಿ ಮೂವತ್ತು ನಾಲ್ವತ್ತು ಮಂದಿ ನಿರಾತಂಕವಾಗಿ ವಾಸ ಮಾಡಬಹುದಾಗಿತ್ತು. ಈ ಕಥೆಯ ಕಾಲಕ್ಕೆ ಪೂರ್ವದಲ್ಲಿ ಗಂಡಸರು, ಹೆಂಗಸರು, ಮಕ್ಕಳು ಎಲ್ಲಾ ಇಪ್ಪತೈದು ಮಂದಿ ಮನೆಯವರೂ ಹತ್ತು ಹದಿನೈದು ಜನ ಸೇವಕರೂ ಒಟ್ಟು ನಾಲ್ವತ್ತು ನಾಲ್ವತ್ತೈದು ಜನಗಳ ಮಟ್ಟಿಗೆ ಮನೆಯನ್ನೆಲ್ಲ ತುಂಬಿರುತ್ತಿದ್ದರಂತೆ. ಒಟ್ಟು ಕುಟುಂಬದವರಾಗಿದ್ದರಿಂದ ಹಾಗಿದ್ದುದರಲ್ಲೇನೂ ಆಶ್ಚರ್ಯವಿಲ್ಲ. ಆದರೆ ಕೆಲವು ವರ್ಷಗಳ ಹಿಂದೆ ಮನೆಗೆ ಮಾರಿಯಮ್ಮನು – ಸಿಡುಬುರೋಗ ಕಾಲಿಟ್ಟು ಅನೇಕರನ್ನು ಆಹುತಿ ತೆಗೆದುಕೊಂಡಿದ್ದರಿಂದ ಈಗ ಆ ಕುಟುಂಬದಲ್ಲಿ ಏಳು ಜನರು ಮಾತ್ರ ಇದ್ದರು. ಅದರಲ್ಲಿಯೂ ಹೂವಯ್ಯ ರಾಮಯ್ಯರು ಓದಲು ಹೋಗಿದ್ದರಿಂದ ತತ್ಕಾಲದಲ್ಲಿ, ಆಳುಗಳನ್ನು ಬಿಟ್ಟರೆ, ಮನೆಯವರಾಗಿದ್ದವರು ಐದೇ ಮಂದಿ’ (ಕುವೆಂಪು ೨೦೦೬ಅ, ೩೩).

ಮಲೆನಾಡಿನ ಗ್ರಾಮೀಣ ಜನ ಅದರಲ್ಲೂ ಕೆಳವರ್ಗದವರು ನೈರ್ಮಲ್ಯವನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸುತ್ತಿರಲಿಲ್ಲ. ಕೆಳಕಾನೂರು ಅಣ್ಣಯ್ಯಗೌಡರ ರೋಗಿಷ್ಟ ಹೆಂಡತಿ ವಾಂತಿ ವಾಕರಿಕೆ ತಲೆನೋವು ಜ್ವರಗಳಿಂದ ನರಳುತ್ತಿದ್ದಳು. ಕುಡಿಯಲು ನೀರು ಕೇಳಿದಾಗ ಆಕೆಯ ಮಗಳು ಕೊಡುವ ನೀರು ‘….. ಅವರು ಬಾವಿಯಾಗಿ ಉಪಯೋಗಿಸುತ್ತಿದ್ದ ಗದ್ದೆಯ ಹೊಂಡದ್ದು. ಆ ಹೊಂಡದಲ್ಲಿ ಬಟ್ಟೆ ಯಗೆಯುವುದರಿಂದ ಮೊದಲುಗೊಂಡು ಎಲ್ಲ ಶೌಚಕಾರ್ಯಗಳು ನಡೆಯುತ್ತಿದ್ದುದರಿಂದ ಹಾವಸೆ ಹಬ್ಬಿ ನೀರು ಹಸುರುಗಟ್ಟಿತ್ತು. ಒಮ್ಮೊಮ್ಮೆ ಹಗಲು ಬಿಸಿಲಿನಲ್ಲಿ ಎಮ್ಮೆಗಳೂ ಅದರಲ್ಲಿ ಬಿದ್ದು ಹೊರಳಾಡುತ್ತಿದರಿಂದ ಅದರಲ್ಲಿ ಸೆಗಣಿಯ ವಾಸನೆಯೂ ತುಂಬಿತ್ತು’ (ಕುವೆಂಪು ೨೦೦೬ ಅ, ೮೧). ರೋಗದ ವಿಷಮಾವಸ್ಥೆಯಲ್ಲಿ ಕುಡಿಯಲು ತಣ್ಣೀರು ಕೊಡಬಾರದು. ಕೊಟ್ಟರೂ ಇಂಥ ಕಲುಷಿತ ನೀರಿನಿಂದ ಆಗುವ ಅನಾಹುತವೇ ಹೆಚ್ಚು.

ತಾಯಿಯ ಸ್ಥಿತಿ ಹೀಗಿದ್ದರೆ, ಮಗಳದು ಮತ್ತೊಂದು ರೀತಿಯದಾಗಿತ್ತು. ಅವಳು ಸಹ ಅನಾರೋಗ್ಯದಿಂದ ಬಳಲುತ್ತಿದ್ದಳು. ‘ಪದೇ ಪದೇ ಚಳಿ ಜ್ವರ ಬರುತ್ತಿದ್ದು, ಜ್ವರದ ಗಡ್ಡೆ ಬೆಳೆದು, ಸರಿಯಾದ ಆಹಾರವಾಗಲಿ ಗಾಳಿಯಾಗಲಿ ಶುಶ್ರೂಷೆ ಸುಖಗಳಾಗಲಿ ಇಲ್ಲದೆ ಕಲ್ಲಿನ ತಳದಲ್ಲಿ ಬೆಳೆಯುವ ಹುಲ್ಲಿನ ಕಣದಂತೆ ಇದ್ದಳು’ (ಕುವೆಂಪು ೨೦೦೬ಅ, ೮೦).

ಶುಚಿತ್ವದ ಕಡೆ ಗಮನಹರಿಸದ ಜನರು ಶುಚಿತ್ವವನ್ನು ಒಂದು ‘ಷೋಕಿ’ಯಾಗಿ ಪರಿಗಣಿಸುತ್ತಿದ್ದರು. ಹೆಣ್ಣು ಮಕ್ಕಳು ದಿನವು ಸ್ನಾನ ಮಾಡಿ, ಜಡೆ ಹಾಕಿಕೊಂಡರೆ ‘ಸೂಳೆಯರಂತೆ’ ಎಂಬ ನಂಬಿಕೆ ಶ್ರೀಮಂತ ಅನಾಗರಿಕರಲ್ಲಿ ಇತ್ತೆಂದು ಕುವೆಂಪು ಅವರ ಆತ್ಮಕಥೆಯಲ್ಲಿ ತಿಳಿಸಲಾಗಿದೆ (ಕುವೆಂಪು ೨೦೦೫ಬ, ೧೦೫೨).

ಮಹಿಳೆ ಮತ್ತು ಶಿಶು ಮರಣ ಪ್ರಮಾಣ

ಮಲೆನಾಡಿನಲ್ಲಿ ನೈರ್ಮಲ್ಯದ ಕೊರತೆ, ಸೂಕ್ತ ವೈದ್ಯಕೀಯ ಚಿಕಿತ್ಸೆಯ ಕೊರತೆ, ಅಜ್ಞಾನ, ಮೌಢ್ಯ, ಸ್ವಾತಂತ್ರ್ಯಪೂರ್ವದಲ್ಲಿ ತಾಂಡವವಾಡುತ್ತಿತ್ತು. ಆದರೆ ಮಹಿಳೆಯರು ಇವುಗಳ ನೇರ ಪ್ರಭಾವಕ್ಕೆ ಒಳಗಾದರು ಮತ್ತು ಇದರಿಂದ ಅವರ ಆರೋಗ್ಯ ಸ್ಥಿತಿಗತಿಗಳು ಕ್ಷೀಣಿಸುತ್ತಿದ್ದವು.

ಅಂದಿನ ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು ಮಲೇರಿಯಾ ಸರ್ವೇಸಾಮಾನ್ಯವಾಗಿತ್ತು. ಇದು ಮಹಿಳೆಯರ ಸಂಖ್ಯೆ ಕಡಿಮೆಯಾಗಲು ಒಂದು ಕಾರಣ ಎಂದು ಊಹಿಸಬಹುದು. ಅಲ್ಲದೆ ಪುರಷರ ದೌರ್ಜನ್ಯ, ಅನಾರೋಗ್ಯ ಮನೆಯ ಪರಿಸರ, ಆಚರಣೆಯಲ್ಲಿದ್ದ ಮೌಢ್ಯ ಇವೆಲ್ಲವೂ ಮಹಿಳೆಯರ ಮರಣ ಪ್ರಮಾಣ ಹೆಚ್ಚಾಗಲು ಕೊಡುಗೆಯಾದವು.

ಮಲೇರಿಯಾ ರೋಗದಿಂದ ಜನರು ನರಳುತ್ತಿದ್ದ ವಿಷಯ ಈ ಹಿಂದೆ ಹೇಳಲಾಗಿದೆಯಷ್ಟೆ. ಅದರೊಡನೆ ಶ್ಲೇಷ್ಮಜ್ವರ, ಒಡಲ ಜ್ವರ, ವಿಷಮಶೀತ ಜ್ವರದಿಂದಲು ಹೆಣ್ಣು ಮಕ್ಕಳು ಸಾವನ್ನಪ್ಪುತ್ತಿದ್ದರು. ಹುಟ್ಟಿದ ಮೊದಲನೆಯ ವರ್ಷದಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಉಳಿಯುವ ಸಾಧ್ಯತೆ ಹೆಚ್ಚಾಗಿದ್ದರೂ ೧೫ ರಿಂದ ೩೫ ವರ್ಷದ ಅಂತರದಲ್ಲಿ ಪುರಷರಿಗಿಂತ ಸ್ವೀಯರು ಮರಣವನ್ನಪ್ಪುವ ಸಾಧ್ಯತೆಗಳು ಹೆಚ್ಚು. ಅದೂ ಅಲ್ಲದೆ ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚು ಮಕ್ಕಳನ್ನು ಪಡೆಯುವುದರಿಂದಲು ಮತ್ತು ಗರ್ಭಕ್ಕೆ ಸಂಬಂಧಿಸಿದ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುವುದರಿಂದಲು ಸ್ತ್ರೀಯರ ಸಂಖ್ಯೆ ಕಡಿಮೆಯಾಗುತ್ತದೆ. ಪ್ಲೇಗು, ಕಾಲರ ಮುಂತಾದ ಅಂಟು ಜಾಡ್ಯಗಳು ಪುರಷರಿಗಿಂತ ಸ್ತ್ರೀಯರಿಗೆ ಹೆಚ್ಚು ಹರಡುವ ಸಾಧ್ಯತೆ ಇರುವುದರಿಂದ ಸ್ತ್ರೀಯರು ಹೆಚ್ಚು ಸಾವನ್ನಪ್ಪುತ್ತಾರೆ (ನಾರಾಯಣ ೧೯೭೯, ೩೪).

ಕುವೆಂಪುರವರು ತಮ್ಮ ನೆನಪಿನದೋಣಿಯಲ್ಲಿ ತಮ್ಮ ತಾಯಿ ಒಂದು ತಿಂಗಳ ಹಿಂದೆ ಚೆನ್ನಾಗಿದ್ದವರು. ಇದ್ದಕ್ಕಿದ್ದಂತೆ ಶ್ಲೇಷ್ಮಜ್ವರದಿಂದ ಮರಣ ಹೊಂದಿದ್ದರು ಎಂದು ದಾಖಲಿಸುತ್ತಾರೆ.

ಇದಕ್ಕಿಂತ ಹೆಚ್ಚು ಬಲವಾದ ಕಾರಣ ಹೆರಿಗೆ. ಇದರಲ್ಲಿ ಮಲೆನಾಡಿಗರ ಮೌಢ್ಯ, ಅಜ್ಞಾನ, ಅವೈಜ್ಞಾನಿಕ ಪದ್ಧತಿ, ವೈದ್ಯಕೀಯ ಸೌಲಭ್ಯದ ವಂಚನೆ ಮುಂತಾದ ಅಂಶಗಳು ಬೆಳಕಿಗೆ ಬರುತ್ತವೆ.

ಹೆರಿಗೆಯಲ್ಲಿ ತೀರಿಕೊಂಡ ಮಹಿಳೆಯರ ವಿಷಯ ಕುವೆಂಪು ಅವರ ಕಾದಂಬರಿಗಳಲ್ಲಿ ಅನೇಕ ಕಡೆ ಬರುವುದು. ಅನೇಕ ವೇಳೆ ಬಾಣಂತಿಯರು ಹಸುಗೂಸುಗಳೊಡನೆ ಸಾವನ್ನಪ್ಪುತ್ತಿದ್ದರು. ಕುವೆಂಪುರವರು ತಮ್ಮ ಹಿರಿಯ ತಂಗಿ ಹೆರಿಗೆಯಲ್ಲಿ ಶಿಶುವಿನೊಡನೆ ತೀರಿಕೊಂಡಿದ್ದರೆಂದು ತಮ್ಮ ಆತ್ಮಕಥೆಯಲ್ಲಿಯೂ ಬರೆದಿದ್ದಾರೆ.

(ಕಾನುರ ಚಂದ್ರಯ್ಯಗೌಡರ) ಎರಡನೆಯ ಹೆಂಡತಿ ಪುಟ್ಟಮ್ಮ ವಾಸು ಇಬ್ಬರನ್ನು ಹೆತ್ತು, ಮೂರನೆಯ ಹೆರಿಗೆಯಲ್ಲಿ ಶಿಶು ಸಮೇತ ದಿವಂಗತರಾದರು (ಕುವೆಂಪು ೨೦೦೬ಅ, ೩೪).

“ಕಿಟ್ಟಯ್ಯ ವಯಸ್ಸಿನಲ್ಲಿ ಇನ್ನೂ ಇಪ್ಪತ್ತೈದನ್ನೂ ದಾಟಿರಲಿಲ್ಲ. ಅಷ್ಟರಲ್ಲಿಯೇ ಅವನಿಗೆ ಎರಡು ಮದುವೆಗಳಾಗಿ ಇಬ್ಬರು ಹೆಂಡರೂ ತೀರಿಕೊಂಡಿದ್ದರು. ಮೊದಲನೆಯ ಹೆಂಡತಿಯಾಗಿ ಬಂದವಳು ಅವಳ ಹದಿನೆಂಟನೆಯ ವಯಸ್ಸಿನಲ್ಲಿಯೇ ಒಂದನೆಯ ಹೆರಿಗೆಯ ಅನಂತರವೆ ತೀರಿಕೊಂಡಿದ್ದಳು. ಎರಡನೆಯವಳಿಗೆ ಒಂದು ಹೆಣ್ಣು ಹುಟ್ಟಿದ ಒಂದೂವರೆ ವರ್ಷದೊಳಗಾಗಿ ಮತ್ತೊಂದು ಗಂಡು ಹುಟ್ಟಿ, ಬಾಲೆ ಬಾಣಂತಿಯರು ಸತ್ತು ಹೋಗಿದ್ದರು” (ಕುವೆಂಪು ೨೦೦೬ಬ, ೬೬೯).

ಮಲೆನಾಡಿನ ಹೆರಿಗೆ ಪದ್ಧತಿಯ ಬಗ್ಗೆ ಕಡಿದಾಳು ರಾಮಪ್ಪಗೌಡರು ದಾಖಲಿಸಿರುವ ವಿವರಗಳು, ಅವರು ಅನುಸರಿಸುತ್ತಿದ್ದ ವಿಧಿ ವಿಧಾನಗಳು ಜಿಗುಪ್ಸೆ ಹುಟ್ಟಿಸುವಂತಿವೆ. ಹೆರಿಗೆ ಎಂಬುದು ಕೇವಲ ಮಗುವಿನ ಪ್ರಸವವಾಗದೆ ಅಜ್ಞಾನ ಮೂಢನಂಬಿಕೆಗಳ, ಬೇಜವಾಬ್ದಾರಿಗಳ ಕೂಪವಾಗುತ್ತದೆ.

ಆಗಿನ ಮಲೆನಾಡಿನಲ್ಲಿ ಒಂದು ನಂಬಿಕೆಯಿತ್ತು. ಸಾಮಾನ್ಯವಾಗಿ ಮೂರು ಹೆಂಡತಿಯರು ಸತ್ತ ನಂತರ ನಾಲ್ಕನೇ ಹೆಂಡತಿಯಾಗಿ ಬಂದವಳು ಬದುಕುಳಿಯುತ್ತಾಳೆ ಎಂಬುದು. ಇದರ ಸತ್ಯಾಸತ್ಯತೆಯನ್ನು ಪರೀಕ್ಷಿಸದೆ, ಹೆಣ್ಣು ಮಕ್ಕಳು ಹೆರಿಗೆ ಸಮಯದಲ್ಲಿ ತಮ್ಮ ಸಾವು ನಿಶ್ಚಿತವೆಂದೇ ನಂಬಿದ್ದರು. ಗರ್ಭಿಣಿಯಾದಾಗ ಏನಾದರೂ ಕಾಯಿಲೆ ಶುರುವಾದರೆ ತನ್ನ ಗಂಡನ ಪೂರ್ವದ ಹೆಂಡತಿ ಜಕ್ಕಣಿಯಾಗಿ ತನ್ನನ್ನು ಕಾಡುತ್ತಿದೆ ಎಂದು ಹೆದರುತ್ತಿದ್ದರು. ಈ ಭೀತಿಗೇ ಸಾಕಷ್ಟು ಮಹಿಳಿಯರಿಗೆ ಹೃದಯಾಘಾತವಾಗಿ ಸಾಯುತ್ತಿದ್ದರು.

ಗರ್ಭಿಣಿಯರಿಗೆ ಹೆರಿಗೆ ನೋವು ಶುರುವಾದಾಗ ಸೂಲಗಿತ್ತಿಯರು ಅನುಸರಿಸುತ್ತಿದ್ದ ವಿಧಾನ ಅವರ ಅಜ್ಞಾನಕ್ಕೆ, ಅವೈಜ್ಞಾನಿಕ ರೀತಿಯ ಹೆರಿಗೆಗೆ ಹಿಡಿದ ಕನ್ನಡಿಯಾಗಿದೆ. ಗರ್ಭಿಣಿಗೆ ನೋವು ಶುರುವಾದ ಕೂಡಲೆ.

“…. ಈ ಸೂಲಗಿತ್ತಿಯವರು ಅವಳ ಹೊಟ್ಟೆ ಮೇಲೆ ಹರಳಣ್ಣೆ ತಿಕ್ಕಲು ಶುರು ಮಾಡುತ್ತಾರೆ. ಹೊಟ್ಟೆ ಮೃದುವಾಗಿ ಹೆರಿಗೆ ಸುಲಭವಾಗುತ್ತೆ ಎಂದು ಇವರು ತಿಕ್ಕುವ ಒತ್ತಡಕ್ಕೆ ಕೆಲವು ಸಂದರ್ಭಗಳಲ್ಲಿ ಮಗು ಹೊಟ್ಟೆ ಒಳಗೆ ಸತ್ತದ್ದು ಇವರಿಗೆ ಗೊತ್ತಾಗುವುದಿಲ್ಲ ಹೆರಿಗೆ ಆಗಲು ತಡವಾದರೆ ಸೂಲಗಿತ್ತಿಯರು ಕೈಗೂ ಬಸುರಿಯ ಜನೇಂದ್ರಿಯಕ್ಕೂ ಹರಳೆಣ್ಣೆಯನ್ನೂ ಹಚ್ಚಿಕೊಂಡು ಒಳಗಡೆ ಕೈಹಾಕಿ ಮಗುವನ್ನು ತೆಗೆಯಲು ಪ್ರಯತ್ನಿಸುತ್ತಾರೆ. ಮಗು ತೆಗೆಯುವಷ್ಟರಲ್ಲಿ ಅವಳಿಗೆ ರಕ್ತಸ್ರಾವ ಜಾಸ್ತಿಯಾಗಿ ಪ್ರಾಣ ಹೋಗಿರುತ್ತೆ. ಇದಕ್ಕೆ ಕತೆ ಕಟ್ಟುತ್ತಾರೆ. ಅವರ ದೈವ ಮುರಕೊಂಡು ಹೋತು ಅಂತ ಅಥವಾ ಸತ್ತ ಹಿರೇ ಹೆಂಡತಿಯ ಜಕಣಿ ಕಾಟದಿಂದ ಸತ್ತಳು” (ರಾಮಪ್ಪಗೌಡ ೧೯೯೮, ೧೦೩).

ಇದನ್ನು ಗೆದ್ದರೆ, ನಂತರ ನಡೆಯುವ ಬಾಣಂತನದ ಪಥ್ಯ ಮತ್ತೊಂದು ರೀತಿಯಲ್ಲಿ ಭಯಂಕರವಾಗಿತ್ತು. ಬಿಸಿ ಬಿಸಿ ನೀರ ಸ್ನಾನದ ನಂತರ ನಂಜು ಆಗದಿರಲು ಹಾಗೂ ಕರಳು ಉಬ್ಬದಿರಲು ಒಂದು ಖಾರದ ಕಷಾಯ ತಯಾರು ಮಾಡುತ್ತಿದ್ದರು. ಒಂದು ಸೇರು ಮೆಣಸಿನಕಾಳು ಕಿರುಗೊಡಿಸಿಗೆ ಬೇರು, ಗಜ್ಜಗ ಗಣಪೆಕಾಯಿ, ಕಾಡು ಜೀರಿಗೆ ಇದನ್ನು ಕುದಿಸಿ ಮಾಡುತ್ತಿದ್ದ ಕಷಾಯವನ್ನು ಗಂಜಿ ಕುಡಿದೊಡನೆ ಕೊಟ್ಟು ಮಲಗಿಸುತ್ತಿದ್ದರು. ಇದಕ್ಕೂ ಮುಂಚೆ ಮೆಣಸಿನ ಪುಡಿಯನ್ನು ಶರಾಬಿನಲ್ಲಿ ಸೇರಿಸಿ ಕೊಡುತ್ತಿದ್ದರು. ಇವುಗಳನ್ನು ಕುಡಿಸಿ ನಂತರ ದೇಹಕ್ಕೆ ಶಾಖ ಕೊಟ್ಟು ಬೆಚ್ಚಗಿಡಲು ಮೂರು ನಾಲ್ಕು ಕಂಬಳಿ ಹೊದಿಸಿ, ಪಕ್ಕಕ್ಕೆ ಬೆಂಕಿ ಹಾಕುತ್ತಿದ್ದರು.

ಹೊಟ್ಟೆ ಕರಳು ಉಬ್ಬುತ್ತದೆ ಎಂದು ಕುಡಿಯಲು ನೀರು ಸಹ ಕೊಡುತ್ತಿರಲಿಲ್ಲ. ಈ ರೀತಿ ಮೆಣಸಿನ ಕಾಳಿನ ಖಾರದ ಸೇವನೆಯಿಂದ ದೇಹವೆಲ್ಲ ಉರಿಯುತ್ತಿತ್ತು. ಇದರ ಉರಿ ಹತ್ತಿದಾಗ ತಾಳಲಾರದೆ ಕೆಲವರು ಹತ್ತಿರ ಇರುವ ಬಾವಿಗೋ ಕೆರೆಗೋ ಹಾರಿ ನೀರಿನಲ್ಲಿ ಮುಳುಗಿ ಸಾಯುತ್ತಿದ್ದರು. ಇದಕ್ಕೂ ಸಹ ಅವರ ಮನೆ ದೈವವೋ, ಜಕ್ಕಣಿಯೋ ಹಾರಿಸಿಕೊಂಡು ಹೋಗಿ ಕೆರೆಗೋ ಬಾವಿಗೋ ಹಾರಿಸಿ ಮುಳುಗಿಸಿತು ಎಂದು ಪ್ರಚಾರ ಮಾಡುತ್ತಿದ್ದರು. ಬಾಣಂತನ ಒಂದು ಶಿಕ್ಷೆಯಂತೆ ಪರಿಣಮಿಸುತ್ತಿತ್ತು.

ಹೆರಿಗೆ ನಂತರದ ಸೇವೆ ಹೀಗಾದರೆ ಗರ್ಭಿಣಿಯಾದಾಗ ಮತ್ತೊಂದು ಥರದ ನೋವು ಮಹಿಳೆಯರಿಗಿತ್ತು. ಮನೆಯಲ್ಲಿ ತಮ್ಮ ಗಂಡಂದಿರ ದೌರ್ಜನ್ಯ. ಗರ್ಭಿಣಿಯಾದರೂ ಶ್ರಮದ ಕೆಲಸವನ್ನು ಮಾಡುತ್ತಿದ್ದ ಮಹಿಳೆಯರು ಬದುಕುಳಿಯುತ್ತಿದ್ದದು ಕಡಿಮೆ.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಕೋಣೂರು ಸೇರೆಗಾರ ಚೀಂಕ್ರ ಮತ್ತು ಅವನ ಹೆಂಡತಿ ದೇಯಿ ಇದಕ್ಕೆ ತಕ್ಕ ಉದಾಹರಣೆ. ಕೆಲಸಕ್ಕೆ ಹೆಣ್ಣಾಳುಗಳು ಸಿಗದುದರಿಂದ ಚೀಂಕ್ರ ತನ್ನ ಗರ್ಭಿಣಿ ಹೆಂಡತಿ ದೇಯಿಯನ್ನು ಕೆಲಸಕ್ಕೆ ಬಲಾತ್ಕಾರದಿಂದ ಕರೆತಂದಿದ್ದನು.

ಭಾರತದಲ್ಲಿ ಸ್ತ್ರೀಯರ ಬಗ್ಗೆ ಪುರಷರಲ್ಲಿ ಅನಾದರಣೆ ಇದೆ. ಅದು ಮಹಿಳೆಯರು ಗರ್ಭಿಣಿಯಾದಾಗಲೂ ತಪ್ಪುತ್ತಿರಲಿಲ್ಲ. ಯಾವುದೇ ಸಂದರ್ಭದಲ್ಲೂ ಗಂಡಂದಿರ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ದನಕಾಯುವ ಬೈರ ತನ್ನ ಹೆಂಡತಿಯೊಂದಿಗೆ ಒಮ್ಮೆ ಜಗಳವಾಡಿದಾಗ, ಕುಡಿದ ಮತ್ತಿನಲ್ಲಿ ಅವಳ ಹೊಟ್ಟೆಯ ಮೇಲೆ ಒದ್ದಿದ್ದನು. ಇದರಿಂದ ಅವಳು ತಿಂಗಳು ತುಂಬುವ ಮೊದಲೆ ಸತ್ತು ಹೋಗಿದ್ದಳು. ಚೀಂಕ್ರನ ದೌರ್ಜನ್ಯದಿಂದ ಅವನ ಹೆಂಡತಿಯು ಭೀಕರವಾದ ಸಾವನ್ನಪ್ಪಿದಳು. ಹೀಗೆ ಮಹಿಳೆಯರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮಾರಕವಾಗುತ್ತಿತ್ತು.

ಅಲ್ಲದೆ ನಿಕಟ ಸಂಬಂಧದವರಲ್ಲೇ ವಿವಾಹ ಸಂಬಂಧ ಬೆಳೆಸುತ್ತಿದ್ದುದರಿಂದ ಜೈವಿಕ ಅಂಶಗಳೂ ಮಹಿಳೆಯರ ಹೆಚ್ಚಿನ ಮರಣಕ್ಕೆ ಕಾರಣವಾಗಿದ್ದವು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ತಿಮ್ಮಪ್ಪಹೆಗ್ಗಡೆಯ ತಂಗಿ ಮಂಜಮ್ಮ ‘ವೆಂಕಟಭಾವ’ ಎಂದೇ ಕರೆಯುತ್ತಿದ್ದಳು. ವೆಂಕಟಪ್ಪನಾಯಕರು ಒಂದು ಮೋರೆಯಲ್ಲಿ ‘ಭಾವ’ನಾಗಿಯೂ ಇನ್ನೊಂದು ಮೋರೆಯಲ್ಲಿ ‘ಚಿಕ್ಕಪ್ಪ’ನಾಕಗಿಯೂ ಇದ್ದರು. ಅಲ್ಲಲ್ಲಿಯೆ ಹತ್ತಿರದ ಮನೆಗಳಲ್ಲಿ ಹೆಣ್ಣು ಕೊಟ್ಟೂ ತಂದೂ ಸಂಬಂಧಗಳು ಜಟಿಲವಾಗಿದ್ದು, ಯಾರನ್ನು ಬೇಕಾದರೂ ಯಾವ ಸಂಬಂಧದಿಂದಾದರೂ ಸಂಬೋಧಿಸಬಹುದಿತ್ತು (ಕುವೆಂಪು ೨೦೦೬ಬ, ೫೧೦).

ಶಿಶುಮರಣ ಪ್ರಮಾಣವು ಸಹ ಗಮನೀಯವಾಗಿ ಮಲೆನಾಡಿನಲ್ಲಿತ್ತು. ಪ್ರಾಪ್ತ ವಯಸ್ಸು ತಲುಪುವಷ್ಟರಲ್ಲೆ ಅನೇಕ ಮಕ್ಕಳು ಸಾಯುತ್ತಿದ್ದರು. ಶಿಶುಮರಣಕ್ಕೆ ನಾಲ್ಕು ಪ್ರಮುಖ ಕಾರಣಗಳನ್ನು ಗುರತಿಸಲಾಗಿದೆ. ಮುಖ್ಯವಾಗಿ ಗರ್ಭಾವಸ್ಥೆಯಲ್ಲಿ ಸರಿಯಾದ ಶುಶ್ರೂಷೆಯ ಕೊರತೆ, ಸೂಕ್ತ ವೈದ್ಯಕೀಯ ಚಿಕಿತ್ಸೆಯ ಕೊರತೆ, ಹೆರಿಗೆಯ ಸಮಯದಲ್ಲಿ ಸೂಕ್ತ ಕಾಳಜಿಯ ಕೊರತೆ, ಜನನದ ನಂತರ ಆರೈಕೆಯ ಕೊರತೆ, ಮತ್ತು ಮಕ್ಕಳ ನಡುವಿನ ವಯಸ್ಸಿನ ಅಂತರ. ಇವು ಶಿಶುಮರಣ ಪ್ರಮಾಣಕ್ಕೆ ಕಾರಣಗಳು.

ಒಂದು ಊರಿನ ಆರ್ಥಿಕತೆ ಕೃಷಿಯಾಧಾರಿತವಾದಾಗ ಅಲ್ಲಿ ದೈಹಿಕ ದುಡಿಮೆಗೆ ಪ್ರಧಾನ ಆಧ್ಯತೆ ಇರುತ್ತದೆ. ಹಾಗಾಗಿ ಒಬ್ಬ ಹೆಣ್ಣಾಳಿನ ದುಡಿಮೆಯು ಬಹಳ ಮುಖ್ಯವಾಗುತ್ತದೆ. ಅವರು ಗರ್ಭಿಣಿಯಾಗಿರಲಿ ಅಥವಾ ಕಾಯಿಲೆಯಿಂದ ನರಳುತ್ತಿರಲಿ ದುಡಿಮೆ ಮಹತ್ವವನ್ನು ಪಡೆದುಕೊಳ್ಳುತ್ತದೆ.

ಮಲೆಗಳಲ್ಲಿ ಮದುಮಗಳು ಕಾದಂಬರಿಯ ಆಳು ಚೀಂಕ್ರ ತನ್ನ ಗರ್ಭಿಣಿಯಾದ ಹೆಂಡತಿ ದೇಯಿಯನ್ನ ಕೆಲಸಕ್ಕೆ ಬಲಾತ್ಕಾರವಾಗಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಇದನ್ನು ಕಾಣಬಹುದು. ಆಕೆಯ ಸ್ಥಿತಿ ದುಡಿಮೆಗೆ ಅನುಕೂಲಕರವಾಗಿಲ್ಲದಿದ್ದರೂ ಅವಳು ಕೆಲಸಕ್ಕೆ ಹೋಗಲೇಬೇಕಿತ್ತು.

ಇಂತಹ ಶ್ರಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರೂ ಸೂಕ್ತ ವೈದ್ಯಕೀಯ ಚಿಕಿತ್ಸೆ ಮಾಡಿಸದೆ ಅಂತ್ರ, ತಾಯಿ ಪೂಜೆ, ಹರಕೆ ಎಂದು ಮುಂತಾದ ಪದ್ಧತಿಯನ್ನು ಅನುಸರಿಸುತ್ತಿದ್ದರು.

ಹೆರಿಗೆಯ ಸಮಯದಲ್ಲಿ ತರಬೇತಿಯಿಲ್ಲದ ಸೂಲಗಿತ್ತಿಯರ ಪ್ರಮಾದದಿಂದ ಶಿಶುಗಳ ಮರಣವನ್ನಪ್ಪುತ್ತಿದ್ದವು. ಜನನದ ನಂತರ ನೈರ್ಮಲ್ಯತೆಯ ಕೊರತೆಯುಂಟಾಗಿ, ಮಕ್ಕಳ ಆರೋಗ್ಯ ಕೆಟ್ಟು ಮಕ್ಕಳು ಸಾಯುತ್ತಿದ್ದರು. ಇದಕ್ಕೆ ತಕ್ಕ ಉದಾಹರಣೆಯನ್ನು ‘ಕಾನೂರು ಹೆಗ್ಗಡಿತಿ’ಯಲ್ಲಿ ಕುವೆಂಪು ಚಿತ್ರಿಸಿದ್ದಾರೆ. ಮುತ್ತಳ್ಳಿ ಮನೆಯ ಆಳು ನಂಜನ ಕೂಸು ರಂಗಿ ವರ್ಣನೆ ಹೀಗೆದೆ:

“ನಂಜನ ಕೂಸು, ಕೈಕಾಲು ಸಣ್ಣಗಿತ್ತು, ಹೊಟ್ಟೆ ಡುಬ್ಬಣ್ಣವಾಗಿತ್ತು; ಮೂಗಿನಿಂದ ಸಿಂಬಳ ಸುರಿದು ಮೇಲ್ದುಟಿಯ ಮೇಲೆ ಕೋರೆಯಾಗಿತ್ತು. ಕೈಯಲ್ಲಿಯೂ ಹೊಟ್ಟೆಯ ಮೇಲೆಯೂ ಕಜ್ಜಿಗಳು ಕಾಣುತ್ತಿದ್ದವು. ಎದೆಯ ಎಲುಬಿನ ಗೂಡಿನ ಆಕೃತಿ ಹಬ್ಬಿದ್ದ ಚರ್ಮದ ಮೇಲೆ ಚೆನ್ನಾಗಿ ಕಾಣುತ್ತಿತ್ತು. ನಿರ್ಮಲವಾಗಿರುವವರು ಯಾರೂ ಇದನ್ನು ಮುಟ್ಟಲು ಹೇಸುತ್ತಿದ್ದರು” (ಕುವೆಂಪು ೨೦೦೬ಅ ೧೫೪).

ಹಿಂದೆ ಮದುವೆಗಳ ಸಂಬಂಧಿಕರೊಳಗೆ ನಡೆಯುತ್ತಿತ್ತು. ಆದ್ದರಿಂದ ಜೈವಿಕವಾಗಿ ಬರುತ್ತಿದ್ದ ಕಾಯಿಲೆಗಳು, ಗರ್ಭಿಣಿಯಲ್ಲಿ ಪೌಷ್ಠಕ ಆಹಾರದ ಕೊರತೆ, ಮಕ್ಕಳ ನಡುವಿನ ಅಂತರ – ಇವುಗಳು ಸಹ ಶಿಶು ಮರಣ ಪ್ರಮಾಣ ಹೆಚ್ಚಾಗಲು ಕಾರಣಗಳು.

‘ಕಾನೂರು ಹೆಗ್ಗಡಿತಿ’ಯ ಓಬಯ್ಯನ ಮಲತಂಗಿ ಮರಣದ ಪ್ರಸಂಗದಲ್ಲಿ ಮೌಢ್ಯ, ಸ್ವಚ್ಛತೆಯಿಲ್ಲದ ಮನೆ ಪರಿಸರ ಕಾಣುತ್ತದೆ.

“….. ಓಬಯ್ಯನ ತಂಗಿಗೆ ಜ್ವರ ಶುರುವಾಯಿತು. ‘ಔಸ್ತಿ, ಚೀಟಿಬುತ್ತಿ’ ಏನೇನು ಮಾಡಿದರೂ ಗುಣವಾಗಲಿಲ್ಲ. ದನದ ಕೊಟ್ಟಿಗೆಗೆ ಸೇರಿದ್ದ ಗಾಡಿಕೊಟ್ಟಿಗೆಯಲ್ಲಿ ಅವರಿಗೆ ಬಿಡಾರ ಮಾಡಿಕೊಟ್ಟಿದ್ದರಿಂದ ಯಾವಾಗಲೂ ತೇವ ತಪ್ಪುತ್ತಿರಲಿಲ್ಲ. ದಿನವು ಅಡುಗೆ ಮಾಡುತ್ತಿದ್ದ ಒಲೆಯ ಮೇಲೆ ಕೂಡ ಹಳು ಬೆಳೆಯುತ್ತಿತ್ತು! ಗಂಜಲ, ಸಗಣಿ, ಕೆಸರು, ಮುರು ಇವುಗಳ ದುರ್ವಾಸನೆ ಗುಮ್ಮೆಂದು ಮುತ್ತಿರುತ್ತಿತ್ತು. ಸೊಳ್ಳೆಗಳಂತೂ ಹೇಳತೀರದು!”

ಆಸ್ಪತ್ರೆ ಸೌಲಭ್ಯವಿಲ್ಲದ ಮಲೆನಾಡಿನ ಅನಾರೋಗ್ಯದ ರೂಪವನ್ನು ಸಹ ಸರಿಯಾಗಿ ಕಂಡುಕೊಳ್ಳುತ್ತಿರಲಿಲ್ಲ. ಮೊದಲು ಜ್ವರ ಎಂದು ತಿಳಿದು, ಅದು ನಂತರ ರೇಷ್ಮೆ ಕಾಯಿಲೆ ಎಂದು ಭಾವಿಸಿ ಚಿಕಿತ್ಸೆ ಕೊಡುವಷ್ಟರಲ್ಲಿ ಮಕ್ಕಳು ತೀರಿಕೊಂಡಿರುತ್ತಿದ್ದರು.

ಮಹಿಳೆ ಮತ್ತು ಶಿಶು ಮರಣಗಳು ಮಲೆನಾಡಿನಲ್ಲಿ ಸರ್ವೇ ಸಾಮಾನ್ಯವಾಗಿತ್ತು ಎಂಬಂತೆ ಕುವೆಂಪು ಅವರ ಕಾದಂಬರಿಗಳಲ್ಲಿ ಚಿತ್ರಿತವಾಗಿದೆ.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಹೂವಳ್ಳಿ ವೆಂಕಟಣ್ಣ ಹೆಂಡತಿ ವರಷಕ್ಕೊಂದರಂತೆ ಮಕ್ಕಳನ್ನು ಹೆತ್ತು ಐದನೆಯ ಹೆರಿಗೆಯಲ್ಲಿ ತೀರಿಕೊಂಡಿದ್ದಳು. ಆ ಐದು ಮಕ್ಕಳಲ್ಲಿ ಮೊದಲನೆಯ ಮಗು ಚಿನ್ನಮ್ಮ ಹೊರತು ಬೇರೆ ಮಕ್ಕಳು ಸತ್ತು ಹೋಗಿದ್ದರು. ಮಕ್ಕಳ ನಡುವೆ ವಯಸ್ಸಿನ ಅಂತರಕ್ಕೆ ಇಲ್ಲಿ ಆಸ್ಪದವೇ ಇಲ್ಲವೆಂಬಂತಿತ್ತು.

ಚೀಂಕ್ರನ ಹೆಂಡತಿ ದೇಯಿ ಆರು ಮಕ್ಕಳಾಗಿ ನಾಲ್ಕು ಸತ್ತು ಎರಡು ಮಾತ್ರ ಬದುಕಿದ್ದವು. ಆಕೆ ಏಳನೆಯ ಬಸರಾಗಿದ್ದಾಗ ತನ್ನ ಗಂಡನ ಕ್ರೂರ ನಡತೆಯಿಂದ ಅಕಾಲ ಹೆರಿಗೆಯಾಗಿ ಸಾವನ್ನಪ್ಪಿದಳು.

ಮೌಢ್ಯ

ಮಲೆನಾಡ ಜನರು ದೈಯ್ಯ, ಭೂತ, ದೇವರು, ಮಂತ್ರ, ನಿಮಿತ್ತ ಕೇಳುವುದು, ಹರಕೆ ಇಂಥ ಆಚರಣೆಗಳಲ್ಲಿ ಅಪಾರವಾದ ನಂಬಿಕೆ ಇಟ್ಟಿದ್ದರು. ಇವುಗಳ ಭಯ ಇದ್ದುದರಿಂದಲೇ ತೋಟದಲ್ಲಿ ಕಳ್ಳತನಗಳು ಕಡಿಮೆಯಾಗುತ್ತಿದ್ದವು.

ಜೀತದಾಳುಗಳು ಹಾಗು ಕೂಲಿಯಾಳುಗಳು ಕಳ್ಳತನ ಮಾಡುವ ಸಾಧ್ಯತೆ ಇತ್ತು. ಹಾಗಾಗಿ ಭೂಮಾಲೀಕರು ಹಾಗು ಶ್ರೀಮಂತರು ಅವರನ್ನು ‘ದೇವರು ಭೂತ’ ಎಂದು ಮುಂತಾದ ಕಾಲ್ಪನಿಕ ಶಕ್ತಿಗಳಿಂದ ಅಂಜಿಸಿ ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳುತ್ತಿದ್ದರು. ‘ಭೂತದ ಬನ’ದಲ್ಲಿ ಅಸ್ಪೃಶ್ಯರು ಕಾಲಿಡಬಾರದಿತ್ತು. ಅದಕ್ಕೆ ಕಾರಣವನ್ನು ಕುವೆಂಪು ಹೀಗೆ ಬರೆಯುತ್ತಾರೆ.

“ಏಕೆಂದರೆ ಭೂತದ ಬನದೊಳಕ್ಕೆ ಮುಟ್ಟಾಳುಗಳು ಕಾಲಿಟ್ಟರೆ ಅವರಿಗೆ ಏನಾದರೂ ಕೇಡು ತಪ್ಪದು ಎಂಬ ನಂಬುಗೆ ಬಲವಾಗಿತ್ತು; ಅದರಲ್ಲಿಯೂ ಕನ್ನಡ ಜಿಲ್ಲೆಯಿಂದ ಬಂದವರಿಗೆ ಘಟ್ಟದ ಮೇಲಣ ದೆಯ್ಯಗಳೆಂದರೆ ಮಹಾಭಯ. ಆ ಭಯದ ಬೇಲಿ ಕಟ್ಟಿ ಮಲೆನಾಡಿನ ಜಮೀನುದಾರರು ತಮ್ಮ ತೋಟ, ಗದ್ದೆ, ಹಿತ್ತಲುಗಳ ಫಸಲು ರಕ್ಷಣೆ ಮಾಡಿಕೊಳ್ಳುತ್ತಿದ್ದರು. ಎಂತಹ ಕಾವಲೂ ಪೋಲೀಸೂ ಕಾನೂನು ಮಾಡಲಾರದಷ್ಟು ಸಮರ್ಪಕವಾಗಿ” (ಕುವೆಂಪು ೨೦೦೬ಬ, ೧೩೫).

ಇಂಥಹ ಮೌಢ್ಯಕ್ಕೆ ಕಟ್ಟುಬಿದ್ದು ಅನೇಕ ಗರ್ಭಿಣಿಯರು ತನ್ನ ಗಂಡನ ಮೊದಲ ಹೆಂಡತಿಯ ಜಕ್ಕಣಿ ತನ್ನ ಕಾಡುವುದಾಗಿ ನಂಬಿಯೇ ಹೃದಯಾಘಾತದಿಂದ ಮರಣ ಹೊಂದುತ್ತಿದ್ದರು.

ಕಾನೂರಿನ ನಿಂಗ ತಾನು ಅಡಗಿಸಿದ ವಸ್ತುಗಳು ಕಳುವಾಗಲು ಮಂತ್ರಿಸಿದ ತೆಂಗಿನಕಾಯನ್ನು ಎಲ್ಲರಿಂದ ಮುಟ್ಟಿಸಿದ. ಅವನ್ನು ಕದ್ದ ಬೇಲರ ಬೈರನ ಮಗ ಗಂಗ ಹುಡುಗನಿಂದ ಅವನ ತಾಯಿ ಬಲವಂತವಾಗಿ ಅದನ್ನು ಮುಟ್ಟಿಸಿದಳು. ಮನಸ್ಸಿನ ಸುಪ್ತಾವಸ್ಥೆಯಲ್ಲಿ ಮನೆ ಮಾಡಿದ ದೇವರು ದೆವ್ವದ ಬಗೆಗಿನ ಭಯ ಗಂಗ ಹುಡುಗನ ಸಾವಿಗೆ ಕಾರಣವಾಯಿತು.

ಹೆಂಗಸರು ಮುಟ್ಟಾದಾಗ ಶಾಸ್ತ್ರದ ಹೆಸರಲ್ಲಿ ಮನೆಯ ಹೊರಗೆ ಕೂರಿಸುತ್ತಿದ್ದರು. ಮಲೆನಾಡಿನ ಮಳೆ ಚಳಿ ಬಿಸಿಲಲ್ಲಿ ಹೆಂಗಸರು ಹಿತ್ತಲ ಕಡೆಯಲ್ಲಿ ಕಂಬಳೀ ಚಾಪೆ ಹಾಕಿಕೊಂಡಿರುತ್ತಾರೆ. ಮುಚ್ಚುಮರೆ ಬಾಗಿಲು ಇಲ್ಲದೆ ರಾತ್ರಿ ಯಾವ ಕಾಲವಿದ್ದರೂ ಸಹ ಹಾಗೇ ಮಲಗಬೇಕಿತ್ತು. ಇಂತಹ ಸಂದರ್ಭಗಳಲ್ಲಿರಬೇಕಾದ ಹೆಂಗಸರು ಸಹಜವಾಗಿಯೇ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳಬೇಕಾಗುತ್ತಿತ್ತು.

ಈ ಎಲ್ಲಾ ಕಾರಣಗಳಿಂದ ಮಲೆನಾಡಿನಲ್ಲಿ ದೀರ್ಘಾಯುವಾದ ಮನುಷ್ಯರು ಇರುವುದು ಅಪರೂಪವಾಗಿತ್ತು. ವಿಶೇಷವಾಗಿ ಜೀತದಾಳುಗಳಲ್ಲಿ ದೀರ್ಘಾಯುಗಳು ಕಡಿಮೆ ಇರುತ್ತಿದ್ದರೆಂದು ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಬರುವ ಹಳೆ ಮನೆಯ ಕುಳವಾಡಿ ಸಣ್ಣನ ಪರಿಚಯದಿಂದ ತಿಳಿಯುತ್ತದೆ.

“ಕುಳವಾಡಿ ಸಣ್ಣ ಆ ಕೇರಿಗೆಲ್ಲ ವಯಸ್ಸಾಗಿದ್ದ ವ್ಯಕ್ತಿ. ಮಲೆನಾಡಿನಲ್ಲಿ, ಅದರಲ್ಲಿಯೂ ಬಡತನವೇ ಬಾಳಾಗಿದ್ದ ಕೀಳುಜಾತಿಯ ಜನರಲ್ಲಿ, ಐವತ್ತನ್ನು ಕಂಡವನೇ ಅತ್ಯಂತ ದೀರ್ಘಾಯುವಾಗಿದ್ದ. ಆ ಕಾಲದಲ್ಲಿ, ಕುಳವಾಡಿ ಸಣ್ಣನಿಗೆ ಅವನ ಕೇರಿಯಲ್ಲಿ ಮಾತ್ರವಲ್ಲದೆ ಸಿಂಬಾವಿ, ಕೋಣೂರು, ಬೆಟ್ಟಳ್ಳಿ ಮೊದಲಾದ ಕಡೆಯ ಕೇರಿಗಳಲ್ಲಿಯೂ ವೃದ್ಧ ಪಿತಾಮಹನಿಗೆ ಸಲ್ಲುವ ಗೌರವ ಸಿಗುತ್ತಿತ್ತು. ಆ ವಯೋ ಧರ್ಮದಿಂದಲೆ ಅವನಿಗೆ ಕುಳವಾಡಿ ಪಟ್ಟ ದೊರಕಿತ್ತು. ಜಾತಿ ಸಂಬಂಧವಾದ ವ್ಯಾಜ್ಯಗಳು ಆಗಲಿ, ನೀತಿ ಸಂಬಂಧವಾದ ಬಹಿಷ್ಕಾರದ ವಿಷಯಗಳಲ್ಲಿ ಆಗಲಿ, ಹೆಣ್ಣು ಗಂಡು ಕೊಟ್ಟು ತರುವ ಸಂಬಂಧದಲ್ಲಿ ಉದ್ಭವಿಸುವ ಭಿನ್ನಾಭಿಪ್ರಾಯದ ಕಲಹಗಳಲ್ಲಿ ಆಗಲಿ ಕುಳುವಾಡಿ ಸಣ್ಣನ ತೀರ್ಪಿಗೆ ಜಾತಿಯವರು ಯಾರೂ ಸಾಮಾನ್ಯವಾಗಿ ಎದುರು ಬೀಳುತ್ತಿರಲಿಲ್ಲ” (ಕುವೆಂಪು ೨೦೦೬ಬ, ೯೪). ಹೀಗೆ ಐವತ್ತು ವರ್ಷದ ವೃದ್ಧನಿಗೆ ಮರ್ಯಾದೆ ದೊರೆಯುತ್ತಿತ್ತು.

ಈ ಎಲ್ಲ ಅಂಶಗಳಿಂದ ಮರಣ ಪ್ರಮಾಣವು ಹೆಚ್ಚಿ‌ದ್ದು ಬದುಕಿದ ಕೆಲವು ಜನರನ್ನು ಭೂಮಾಲೀಕರು ಜೀತದಾಳುಗಳನ್ನಾಗಿ ಮಾಡಿಕೊಂಡು ದುಡಿಮೆಯ ನಿರಂತರತೆಯನ್ನು ಕಾಪಾಡಿಕೊಳ್ಳುತ್ತಿದ್ದರು. ಜೀತದಾಳುಗಳ ಹಾಗೂ ಜಮೀನ್ದಾರರ ನಡುವೆ ಒಂದು ಅಲಿಖಿತ ಒಪ್ಪಂದ ಇದ್ದು ಅದನ್ನು ಜೀತದಾಳುಗಳು ಮೀರದಂತೆ ಜಮೀನ್ದಾರರು ನೋಡಿಕೊಂಡರು. ಜೀತದಾಳುಗಳನ್ನು ದೈಹಿಕವಾದ ದಾಸ್ಯಕ್ಕೆ ನೂಕುವುದಲ್ಲದೆ ಮಾನಸಿಕ ದಾಸ್ಯಕ್ಕೂ ಒಳಗು ಮಾಡಿದ್ದರು.

ಮಲೆನಾಡಿನ ಪರಿಸರ

ಮಲೆನಾಡಿನ ಪಶ್ಚಿಮ ಘಟ್ಟದಲ್ಲಿರುವ ನಾಡು. ಸುತ್ತಲೂ ದಟ್ಟ ಕಾನನಗಳಿಂದ, ಬೆಟ್ಟಗುಡ್ಡಗಳಿಂದ ಆವರಿಸಿರುವ ನಾಡು. ಸ್ವಾತಂತ್ರ್ಯಪೂರ್ವದಲ್ಲಿ ಸುಮಾರು ಇನ್ನೂರರಿಂದ ಮುನ್ನೂರು ಇಂಚುಗಳಷ್ಟು ಮಳೆ ಸುರಿಯುತ್ತಿದ್ದ ನಾಡು. ಅನೇಕ ಅರಣ್ಯ/ನೈಸರ್ಗಿಕ ಸಂಪತ್ತುಗಳ ಆಗರ, ವಿವಿಧ ಪ್ರಾಣಿ ಪಕ್ಷಿಗಳ ಗಿಡ ಮರಗಳ ತಾಣ.

ಇಂಥ ಅರಣ್ಯದ ಮಧ್ಯೆ ವ್ಯವಸಾಯ ಮಾಡಿಕೊಂಡು ವಾಸಿಸುತ್ತಿದ್ದ ಜನರು ಸದಾ ಜಾಗರೂಕರಾಗಿರಬೇಕಾದ ಅವಶ್ಯಕತೆ ಇತ್ತು. ಗದ್ದೆ ತೋಟಗಳಲ್ಲಿ ಬಹಳ ಬೇಗ ಹಳು ಬೆಳೆದು ಬಿಡುತ್ತಿತ್ತು. ಅದನ್ನು ಪದೇ ಪದೇ ಸವರಿಸದಿದ್ದರೆ ಗದ್ದೆ ತೋಟಗಳಲ್ಲಿ ಹಳು ಬೆಳದು ಅವು ನಾಶವಾಗುವ ಆತಂಕವಿತ್ತು. ಇದನ್ನು ಕುವೆಂಪು ಅವರು ತಮ್ಮ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಹೀಗೆ ವಿವರಿಸದ್ದಾರೆ.

‘ಪೃಥ್ವಿಯನ್ನೆಲ್ಲ ಹಬ್ಬಿ ಹಬ್ಬಿ ಆಳುವ ಕಾಡಿನ ದುರ್ದಮ್ಯ ವಿಸ್ತೀರ್ಣದಲ್ಲಿ ಎಲ್ಲಿಯೊ ಒಂದಿನಿತೆ ಅಂಗಯಗಲದ ಪ್ರದೇಶವನ್ನು ಮನುಷ್ಯ ಗೆದ್ದುಕೊಂಡು ತನ್ನ ಗದ್ದೆ ತೋಟ ಮನೆಗಳನ್ನು ರಚಿಸಿಕೊಂಡಿದ್ದಾನೆ, ಅಷ್ಟೇ ಅದೂ ಕೂಡ ಅವನು ನಿಚ್ಚವೂ ಜಾಗರೂಕನಾಗಿ ತಾನು ಗೆದ್ದುಕೊಂಡಿದ್ದನ್ನು ನಿರಂತರವೂ ರಕ್ಷಿಸಿಕೊಳ್ಳುತ್ತಾ ಹೋಗುವುದನ್ನು ಮರೆತನೆಂದರೆ, ಬಹುಬೇಗನೆ ಹಳು ಬೆಳೆದು ಮತ್ತೆ ಅದು ಕಾಡಿನ ಶವಾಗಿ ಬಿಡುತ್ತದೆ’ (ಕುವೆಂಪು ೨೦೦೬ಬ, ೧೨೫).

ಈ ಕಾರಣಕ್ಕಾಗಿ ಗದ್ದೆ ತೋಟ ಹೊಂದಿದ ಸಾಹುಕಾರರು, ಜಮೀನುದಾರರಿಗೆ ತಮ್ಮ ಜಮೀನನ್ನು ಉಳಿಸಿಕೊಳ್ಳಲು ಆಳುಗಳ ದುಡಿಮೆ ಅತ್ಯವಶ್ಯಕವಾಗಿತ್ತು. ಆದ್ದರಿಂದ ಅವರು ಮುಂಗಡದಂತೆ ಅವರ ಮದುವೆಗೆ ಸಾಲ ನೀಡಿ, ಆ ಸಾಲವನ್ನು ದುಡಿದು ತೀರಿಸುವ ಅಲಿಖಿತ ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದರು. ಯಾವ ಒಡೆಯರು ಸಾಲ ಕೊಟ್ಟಿರುವರೋ ಅವರಲ್ಲೇ ದುಡಿಯಬೇಕಾದ ಅನಿರ್ವಾಯತೆ ಸಾಲಗಾರರಿಗಿತ್ತು. ಅವರ ದಿನಗೂಲಿ ಭತ್ತ, ಮೆಣಸು ಮುಂತಾದ ದವಸ-ಧಾನ್ಯಗಳಲ್ಲಿ ಕೊಡುತ್ತಿದ್ದುದರಿಂದ ಹಣದ ಬಳಕೆ ಇವರಲ್ಲಿ ಇರಲಿಲ್ಲ. ಕೊಡುವ ಎಂಟಾಣೆಯಿಂದ ಸಾಲ ತೀರುವಂತಿರಲಿಲ್ಲ ಒಮ್ಮೆ ಮಾಡಿದ ಸಾಲಕ್ಕೆ ಬಡ್ಡಿ ಸೇರಿ ದೊಡ್ಡ ಮೊತ್ತ ಆಗುತ್ತಿದ್ದರಿಂದ ಸಾಲಗಾರರ ಇಡೀ ಕುಟುಂಬವೇ ಒಡೆಯರಿಗೆ ದುಡಿಯಬೇಕಾಗುತ್ತಿತ್ತು. ಜೀತದಾಳುಗಳು ತಮ್ಮ ಮಕ್ಕಳ ಮದುವೆ ಎಂದೆಲ್ಲ ಮತ್ತೆ ಸಾಲ ಮಾಡುತ್ತಿದ್ದದರಿಂದ ಸಾಲದ ಬಲೆಯಿಂದ ಇವರು ಹೊರಬರುವಂತಿರಲಿಲ್ಲ.

ಪ್ರಾದೇಶಿಕವಾಗಿ ಕೇವಲ ಮಲೆನಾಡಿಗೇ ಸೀಮಿತವಾದ ಈ ವರ್ಗ ಮಲೆನಾಡಿನಾಚೆ ಇರುವ ಜೀತಪದ್ಧತಿಯ ಬಗ್ಗೆ ಅಜ್ಞಾನದಿಂದ ಇದ್ದರು. ಇದರಿಂದ ಇವರಿಗೆ ಸಂಘಟನೆ ಶಕ್ತಿಯೂ ಇಲ್ಲವಾಗಿ, ಇರಂತರ ಶೊಷಣೆಗೆ ಒಳಗಾಗಲು ಒಂದು ಕಾರಣವಾಗಿರಬಹುದು.

ಹೀಗೆ ಅವರ ಅಜ್ಞಾನ ಹಾಗು ಸಾಲ – ಒಡೆಯರಿಗೆ ಅನುಕೂಲವಾಗಿದ್ದವು. ಸಾಲವು ಜೀತದಾಳನ್ನು ತಮ್ಮ ಕೆಲಸಕ್ಕೆ ಬರುವಂತೆ ಮಾಡುವ, ತಮ್ಮಲ್ಲೇ ಅವರು ಉಳಿಯುವಂತೆ ಮಾಡುವ ಒಂದ ಅಯಸ್ಕಾಂತದಂತಹ ಸಾಧನವಾಗಿತ್ತು; ಆಳುಗಳ ದುಡಿಮೆಯನ್ನು ಖಚಿತಗೊಳಿಸುತ್ತಿತ್ತು. ಹೀಗೆ ಒಂದು ಜೀತದಾಳು ಪದ್ಧತಿಯೇ ಮಲೆನಾಡಿನಲ್ಲಿ ನಿರ್ಮಾಣವಾಯಿತು. ಒಂದು ಸ್ಥಳದ ಭುಗೋಳವೂ ಸಹ ಅಲ್ಲಿ ಜನ ಸಮುದಾಯದ ಜನ ಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಕ್ರಮವನ್ನು ನೋಡಬಹುದು.

ಒಂದು ಸಮಾಜದಲ್ಲಿ ಜನರ ಮರಣ ಪ್ರಮಾಣ ಹಾಗೂ ಜನರ ಸರಾಸರಿ ಆಯಸ್ಸು, ಆ ಜನ ಸಮುದಾಯದ ಬದುಕು ಉತ್ತಮವಾಗಿದೆಯೋ ಅಥವಾ ಕನಿಷ್ಟವಾಗಿದೆಯೋ ಎಂಬುದರ ಮಾಪಕಗಳು ಎನ್ನುತ್ತಾರೆ ಅಮರ್ತ್ಯಸೇನ್‌(ಚಂದ್ರಶೇಖರ್ ೧೯೯೯, ೪೭). ಏಕೆಂದರೆ ‘ಮರಣ ಪ್ರಮಾಣದ ವಿವರಗಳು ಜನರ ಬದುಕಿನ ಅಂತಸ್ಥಗುಣದ ದ್ಯೋತಕವಾಗಿವೆ’ (ಅದೇ.). ಈ ನಿಟ್ಟಿನಲ್ಲಿ ನೋಡಿದರೆ ಸ್ವಾತಂತ್ರ್ಯಪೂರ್ವ ಮಲೆನಾಡಿನ ಸಮಾಜ ಅಭಿವೃದ್ಧಿ ಹೊಂದಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ.