ಶ್ರೀಮತಿ ಲಕ್ಷ್ಮಿ ದೇವಮ್ಮ, ದೇವಂಗಿ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜೆಲ್ಲೆ. ಜಮೀನ್ದಾರರ ಮೂಲ ಕಸುಬು ಒಕ್ಕಲುತನ. ಇವರು ಆಳುಗಳನು ಇಟ್ಟು ಜಮೀನು ಕೆಲಸ ಮಾಡಿಸುತ್ತಿದ್ದರು. ಕಾಡಿರುವ ಜಾಗದಲ್ಲಿ ಅಂದರೆ ಕಾಡು ಪ್ರಾಣಿಗಳು (ಚಿರತೆ, ಕಾಡುಕೊಣ, ಕಾಡು ಹಂದಿ ಇತ್ಯಾದಿ) ಹೆಚ್ಚಾಗಿರುವ ಜಮೀನನ್ನು ವಿಶೇಷವಾಗಿ ಮರಾಠಿಗರಿಗೆ ಸಾಗುವಳಿಗೆ ಕೊಡುತ್ತಿದ್ದರು. ಏಕೆಂದರೆ ಅವರು ಶಿಕಾರಿಯಲ್ಲಿ ನಿಪುಣರಿದ್ದರು. ಇವರಿಗೆ ಶಿಕಾರಿಗೆ ಕೋವಿಯನ್ನು ಒಡೆಯರೇ ಕೊಡುತ್ತಿದ್ದರಾದ್ದರಿಂದ ಶಿಖಾರಿಯಲ್ಲಿ ಒಂದು ಪಾಲನ್ನು ಜಮೀನ್ದಾರರಿಗೂ ಕೊಡುತ್ತಿದ್ದರು.

ಜಮೀನ್ದಾರರು ಭೂ ಕಂದಾಯವನ್ನು ಸರ್ಕಾರಕ್ಕೆ ಕೊಟ್ಟು ಖಾತೆದಾರರಾಗಿದ್ದರು. ದೇವಂಗಿ ಒಡೆತನದಲ್ಲಿ ಸುಮಾರು ೨೦೦೦ ಎಕರೆಗಳಷ್ಟು ಜಮೀನಿತ್ತು. ಸಾಕಷ್ಟು ಜಮೀನು ತಮ್ಮ ಸ್ಥಳದಿಂದ ದೂರವಿದ್ದವು. ಇವರು ಆ ಭಾಗದ ಎಲ್ಲಾ ಜಮೀನ್ದಾರರಂತೆ ಲೇವಾದೇವಿ ವ್ಯವಹಾರವನ್ನೂ ಮಾಡುತ್ತಿದ್ದರು. ಜಮೀನು ಎಷ್ಟೇ ದೂರದಲ್ಲಿದ್ದರೂ ಅದನ್ನು ಅಡವಿಟ್ಟುಕೊಂಡು ಸಾಲಕೊಡುತ್ತಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲಿ ಸರ್ಕಾರಕ್ಕೆ ಭತ್ತವನ್ನು ಕೊಡುತ್ತಿದ್ದರು. ಸರ್ಕಾರವು ಅದಕ್ಕೆ ಹಣ ಕೊಡುತ್ತಿತ್ತು. ಆದರೂ ಸ್ವಾತಂತ್ರ್ಯ ಪೂರ್ವದಲ್ಲಿ ಯಾವುದೇ ಆಭಿವೃದ್ಧಿ ಆಗಲಿಲ್ಲ. ಸ್ವಾತಂತ್ರ್ಯದ ನಂತರ ವಿದ್ಯುಚ್ಛಕ್ತಿ, ರಸ್ತೆ ಮುಂತಾದ ಸವಲತ್ತುಗಳಾದವು.

ಜಮೀನುದಾರರು ಮನೆಯ ಹೆಣ್ಣು ಮಕ್ಕಳ ಕೈಯಲ್ಲಿ ದುಡ್ಡು ಕೊಡುತ್ತಿರಲಿಲ್ಲ. ಆದರೆ ಮನೆಯ ಉಸ್ತುವಾರಿ, ಆಳುಗಳ ಉಸ್ತುವಾರಿ, ಬಂದ ಅತಿಥಿಗಳ ಉಪಚಾರ ಇದೇ ಮೊದಲಾದ ಜವಾಬ್ದಾರಿಗಳು ಹೆಂಗಸರ ಪಾಲಾಗಿದ್ದವು.

ಇವರ ಜಮೀನಿನಲ್ಲಿ ಸಾಕಷ್ಟು ಒಕ್ಕಲುಗಳಿದ್ದರು. ಸ್ವಾತಂತ್ರ್ಯದ ನಂತರ ಬಂದ ಭೂಸುಧಾರಣೆ ಕಾಯಿದೆ ನಂತರ ಈ ಪದ್ಧತಿ ರದ್ದಾಯಿತು. ಕಾಯ್ದೆ ಬಂದ ಸಮಯದಲ್ಲಿ ಕೆಲ ಜಮೀನ್ದಾರರು ಒಕ್ಕಲುಗಳಿಂದ ಜಮೀನು ಮರಳಿ ಪಡೆದರು. ಒಕ್ಕಲುಗಳು ಗದ್ದೆಯನ್ನು ಹಿಂದಿರುಗಿಸದರೂ, ಅಡಿಕೆ ತೋಟವನ್ನು ಹಿಂದಿರುಗಿಸುತ್ತಿರಲಿಲ್ಲ.

ಜಮೀನ್ದಾರರು ಒಕ್ಕಲುಗಳ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದರು. ಒಕ್ಕಲುಗಳ ಮನೆ ಮದುವೆಗೆ ಒಡೆವೆಗಳನ್ನು ಹರಿವಾಣದಲ್ಲಿ ಹಾಕಿ ಅವರಿಗೆ ಧರಿಸಲು ಕೊಡುತ್ತಿದ್ದರು. ಮದುವೆಯಾದ ನಂತರ ಅವನ್ನು ಹಿಂದಿರುಗಿಸಬೇಕಿತ್ತು.

ಒಕ್ಕಲುಗಳಿಂದ ಕೆಲಸ ಮಾಡಿಸಿದರೆ ದುಡ್ಡು ಕೊಡುತ್ತಿದ್ದರು. ಒಡೆಯರ ಮನೆ ಮದುವೆ ಮುಂತಾದ ಸಮಾರಂಭಗಳಿಗೆ ಒಕ್ಕಲುಗಳು ತಾವಾಗಿಯೇ ಬಂದು ಕೆಲಸ ಮಾಡುತ್ತಿದ್ದರು. ಇದಕ್ಕೆ ಸಂಬಳ ಕೊಡುತ್ತಿರಲಿಲ್ಲ. ಒಕ್ಕಲುಗಳು ಕೊಡಬೇಕಾದ ಭತ್ತ, ಅಡಕೆಯನ್ನು ಕೊಯಿಲು ಆಗುತ್ತಿದ್ದಂತೆ ವಸೂಲಿ ಸಾಬರು ಹೋಗಿ ಅವರಿಂದ ವಸೂಲಿ ಮಾಡಿಕೊಂಡು ಬರುತ್ತಿದ್ದರು.

ಇವರ ಬಳಿ ಜೀತದಾಳುಗಳೊಡನೆ ಜಮೀನು ಕಳೆದುಕೊಂಡವರೂ ಕೆಲಸಕ್ಕೆ ಬರುತ್ತಿದ್ದರು. ಆಳುಗಳಿಗೆ ದಿನದ ಕೆಲಸಕ್ಕೆ ಒಂದು ಸೇರು ಅಕ್ಕಿ ಮತ್ತು ಎಂಟಾಣೆ ಸಂಬಳವಿತ್ತು. ಕೆಲಸಕ್ಕೆ ಜೀತದಾಳುಗಳನ್ನು ಪ್ರತಿದಿನ ಬೆಳಗ್ಗೆ ಹೋಗಿ ಕರೆಯಬೇಕಿತ್ತು. ಆಳುಗಳು ಮನೆಯ ಕೆಲಸವನ್ನು ಮಾಡಬೇಕಿತ್ತು. ಬಚ್ಚಲಿನ ಒಲೆಗೆ ಬೆಂಕಿ ಹಾಕಲು ಒಬ್ಬರು, ಗಂಡಸರ ಬಟ್ಟೆ ಒಗೆಯಲು ಒಬ್ಬ ಗಂಡಾಳು, ಹೆಂಗಸರ ಬಟ್ಟೆ ಒಗೆಯಲು ಒಬ್ಬ ಹೆಣ್ಣಾಳು, ಎಣ್ಣೆ ತಿಕ್ಕಲು, ಅಡುಗೆಗೆ ಸಹಾಯ ಮಾಡಲು, ಮುಸುರೆ ತೊಳೆಯಲು, ಮಕ್ಕಳಾಡಿಸಲು ಹೀಗೆ ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಆಳುಗಳು ಜಮೀನ್ದಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು.

ವಂಶಪಾರಂಪರ್ಯವಾಗಿ ಬಂದ ಆಸ್ತಿಯು ಹಿಸ್ಸೆಯಾಗುವಾಗ ಆಳುಗಳ ಹಿಸ್ಸೆಯೂ ಆಗುತ್ತಿತ್ತು. ಅಲ್ಲದೆ ಕೆಲವೊಮ್ಮೆ ಅವರಿಗೆ ಇಷ್ಟಪಟ್ಟವರ ಕಡೆ ಹೋಗುವ ಸ್ವಾತಂತ್ರ್ಯವೂ ಇತ್ತು. ಅವರು ತಮ್ಮ ಜಮೀನನ್ನು ಕಳೆದುಕೊಂಡಿದ್ದರಾದ್ದರಿಂದ ಜಮೀನ್ದಾರರ ಬಳಿ ಕೆಲಸಕ್ಕೆ ಬರಲೇಬೇಕಿತ್ತು ಮತ್ತು ಅವರ ಆಜ್ಞೆಯನ್ನು ಪಾಲಿಸಬೇಕಿತ್ತು.

ದೇವಂಗಿ ಜಮೀನ್ದಾರರು ತಮ್ಮ ಊರಿನ ಜನತೆಗೆ ಉಪಯೋಗವಾಗುವಂತಹ ಕಾರ್ಯಗಳನ್ನು ಮಾಡಿದ್ದಾರೆ. ದೇವಂಗಿಯಲ್ಲಿ ಪೋಸ್ಟ್‌ಆಫೀಸ್‌ಹಾಗು ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಬಸವಾನಿ, ಮೇಳಿಗೆ, ತೀರ್ಥಹಳ್ಳಿಗಳಲ್ಲಿ ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ.