ಕುವೆಂಪು ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ್ದು ಕನ್ನಡದ ಮೂಲಕ ಅಲ್ಲ ; ಇಂಗ್ಲಿಷಿನ ಮೂಲಕ. ಅವರಿಗೆ ಕನ್ನಡ ಸಾಹಿತ್ಯದ ಪಂಪ-ರನ್ನ-ಕುಮಾರವ್ಯಾಸಾದಿಗಳ ಪರಿಚಯವಾಗುವು ದಕ್ಕೆ ಮೊದಲೇ ಪಶ್ಚಿಮದ ಷೇಕ್ಸ್”ಪಿಯರ್-ವರ್ಡ್ಸ್”ವರ್ತ್-ಮಿಲ್ಟನ್ ಮೊದಲಾದ ಕವಿಗಳು ಅವರ ಮನಸ್ಸನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು. ಈ ಕವಿಗಳ ಸಾಹಿತ್ಯಾಭಿರುಚಿಯಿಂದ ಹುಟ್ಟಿಕೊಂಡ ಹಸಿವಿನಿಂದಾಗಿ, ಅವರು ಮೈಸೂರಿನ ವೆಸ್ಲಿಯನ್ ಮಿಶೆನ್ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದಾಗಲೇ, ಪಬ್ಲಿಕ್ ಲೈಬ್ರರಿಯ ಸಾರಸ್ವತ ಪ್ರಪಂಚಕ್ಕೆ ನುಗ್ಗಿ ಕಂಡ ಕಂಡ ಕೃತಿಗಳನ್ನು ಓದಿ ಅರಗಿಸಿಕೊಳ್ಳುವ ಸಾಹಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರು ತಮ್ಮ “ನೆನಪಿನ ದೋಣಿಯಲ್ಲಿ” (೧೯೯೩) ಹೇಳಿಕೊಂಡಿರುವಂತೆ, “ಯಾವ ನೆರವು ನಿರ್ದೇಶನಗಳೂ ಇಲ್ಲದೆ, ಎಸ್.ಎಸ್.ಎಲ್.ಸಿ. ತರಗತಿಯಲ್ಲಿರುವಾಗಲೇ, ಷೇಕ್ಸ್ಪಿಯರನ ನಾಟಕಗಳನ್ನೂ, ಮಿಲ್ಟನನ ಪ್ಯಾರಡೈಸ್ ಲಾಸ್ಟ್ನ್ನೂ ಓದಲು ಸಮರ್ಥ” (ಪು. ೧೧೯) ರಾದರಂತೆ. ಅಷ್ಟೆ ಅಲ್ಲ ಬಿ.ಎ. ತರಗತಿಯನ್ನು ಪ್ರವೇಶಿಸುವ ಹೊತ್ತಿಗೆ “ಅನೇಕ ಸಾಹಿತ್ಯ ಕ್ಷೇತ್ರಗಳಲ್ಲಿ ವಿಶೇಷವಾಗಿ ಇಂಗ್ಲಿಷ್ ಸಾಹಿತ್ಯದಲ್ಲಿ ಮತ್ತು ಇಂಗ್ಲಿಷ್ ಭಾಷಾಂತರದ ಮೂಲಕ ರಷ್ಯನ್, ಫ್ರೆಂಚ್, ಜರž್ಮನ್, ಇಟಾಲಿಯನ್ ಮತ್ತು ಸಂಸ್ಕೃತ ಸಾಹಿತ್ಯ ಕ್ಷೇತ್ರಗಳಲ್ಲಿ (ಅವರ) ಕವಿಪ್ರಜ್ಞೆ ಯಾತ್ರಿಯಾಗಿ ತನ್ನ ವಿಕಸನದ ಸಿದ್ಧಿಗೆ ಅತ್ಯವಶ್ಯಕವಾದ ಚಿಂತನಾಂಶ, ಕಲ್ಪನಾಂಶ, ಭಾವಾಂಶಗಳನ್ನೂ ಸಂಪಾದಿಸಿತು” (ನೆ.ದೋ. ಪು. ೩೧೬) ಈ ಹಿನ್ನೆಲೆಯಿಂದಾಗಿ, ಅವರೊಳಗೆ ಆಗಲೇ ಇದ್ದ ಸಹಜ ಕವಿ ತನ್ನ ಮೊದಲ ಅಭಿವ್ಯಕ್ತಿಯನ್ನು ಕಂಡುಕೊಂಡದ್ದು. ಅಂದಿನ ವಸಾಹತುಶಾಹೀ ಶಿಕ್ಷಣದ ಭಾಷೆಯಾದ ಇಂಗ್ಲಿಷಿನಲ್ಲಿ ಮತ್ತು ಅವರು ತಮ್ಮ “ಬಿಗಿನರž್ಸ್ ಮ್ಯೂಸ್” ಎಂಬ ಹೆಸರಿನ ಇಂಗ್ಲಿಷ್ ಭಾಷೆಯ ಕವನ ಸಂಗ್ರಹವನ್ನು ಪ್ರಕಟಿಸಿ ತಮ್ಮ ಗೆಳೆಯರನ್ನೂ, ಅಧ್ಯಾಪಕರನ್ನೂ  ಚಕಿತ ಗೊಳಿಸಿದ್ದು ಕೇವಲ ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ, ಅಂದರೆ ೧೯೨೨ರಲ್ಲಿ. ವಾಸ್ತವವಾಗಿ ಅದು ಕನ್ನಡ ಸಾಹಿತ್ಯದ ನವೋದಯದ ಕಿರಣೋದಯದ ಕಾಲ. ವೆಸ್ಲಿಯನ್  ಹೈಸ್ಕೂಲಿನ ವಿದ್ಯಾರ್ಥಿಯಾದ ಕುವೆಂಪುವಿಗೆ ತಮ್ಮ ಸುತ್ತ ಸಂಭವಿಸುತ್ತಿದ್ದ ಕನ್ನಡ ನವೋದಯದ ಪರಿವೆಯೇ ಇರಲಿಲ್ಲ. ಅವರೇ ಹೇಳಿಕೊಳ್ಳುವಂತೆ “ನನ್ನ ಬದುಕಿನ ಹೊಳೆ ಕನ್ನಡ ಸಾಹಿತ್ಯದ ನವೋದಯದ ನದಿಗೆ ಬಹುದೂರದಲ್ಲಿಯೆ ಹರಿಯುತ್ತಿತ್ತು. ಅದನ್ನು ಸಮೀಪಿಸಿಯೂ ಇರಲಿಲ್ಲ” (ನೆ.ದೋ.ಪು.೨೫೩). “ನನಗೆ ಆಗಿನ ಕಾಲದ ಯಾವ ಸಾಹಿತಿಯ ಸಂಪರ್ಕಕ್ಕೂ ಅವಕಾಶವಿರಲಿಲ್ಲ. ಆ ತೆರನಾದ ಸಂಪರ್ಕ ಮತ್ತು ಅರಿವು ಉಂಟಾದದ್ದು ನಾನು ಬಿ.ಎ. ತೇರ್ಗಡೆಯಾಗಿ ಕನ್ನಡ ಎಂ.ಎ. ತರಗತಿಗಳಿಗೆ ಬಂದಾಗಲೆ. ನಾನು ಓದುತ್ತಿದ್ದ ಮಿಶನ್ ಹೈಸ್ಕೂಲಿನಲ್ಲಿ ಕನ್ನಡ ಎಂಬುದು ಪಠ್ಯ ವಿಷಯ ಮಾತ್ರವಾಗಿತ್ತು…. ನನ್ನ ಆಸಕ್ತಿ ಗೌರವ ಎಲ್ಲವೂ ಇಂಗ್ಲಿಷಿಗೆ ಸಮರ್ಪಿತವಾಗಿತ್ತು. ಇಂಗ್ಲಿಷ್ ಕವಿಗಳನ್ನು ಅನುಕರಿಸಿ ಇಂಗ್ಲಿಷಿನಲ್ಲಿಯೆ ಪದ್ಯರಚನೆ ಮಾಡತೊಡಗಿದೆ” (ನೆ.ದೋ. ಪು.೧೩೦).

ಹೀಗೆ ಇಂಗ್ಲಿಷಿನಲ್ಲಿ ಅವರ ಪ್ರತಿಭೆ ಸಮೃದ್ಧವಾಗಿ ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದ್ದ ಹೊತ್ತಿನಲ್ಲಿ ಅವರನ್ನು “ಕನ್ನಡದ ಪುನರುತ್ಥಾನದ ಮತ್ತು ನವೋದಯದ ಕೇಂದ್ರಾನುಗ ಶಕ್ತಿವಲಯಕ್ಕೆ ನೂಕಿಬಿಟ್ಟದ್ದು” (ನೆ.ದೋ.ಪು. ೫೭೨). ಅವರು ೧೯೨೪ನೆ ಜುಲೈ ೨ನೇ ತಾರೀಖು ಮೈಸೂರಿನಲ್ಲಿ ಜೆ.ಎಚ್. ಕಸಿನ್ಸ್ ಎಂಬ ಐರಿಷ್ ಕವಿಯನ್ನು ಭೆಟ್ಟಿಯಾದ ಸಂದರ್ಭ. ಏಕಾಂಗ ಸಾಹಸಿಯಾಗಿ, ಪಶ್ಚಿಮದ ಸಾಹಿತ್ಯವನ್ನು ಕರಗತ ಮಾಡಿಕೊಳ್ಳುತ್ತ, ಇಂಗ್ಲಿಷಿನಲ್ಲಿ  ಪದ್ಯ ಬರೆಯುತ್ತ ಇದ್ದ ಕುವೆಂಪು ಅವರ ಕನ್ನಡವನ್ನು ಕುರಿತ ಔದಾಸೀನ್ಯಕ್ಕೆ ಮತ್ತು ಇಂಗ್ಲಿಷ್ ಹೆಮ್ಮೆಗೆ ಮೊದಲ ಆಘಾತ ಒದಗಿದ್ದು, ಕುವೆಂಪು ಅವರ ಇಂಗ್ಲಿಷ್ ಬರೆಹಗಳನ್ನು ಕುರಿತು ಕಸಿನ್ಸ್ ಹೇಳಿದ ಅಭಿಪ್ರಾಯ ಮತ್ತು ಸೂಚಿಸಿದ ಸಲಹೆಗಳಿಂದ. ನಿಮ್ಮದಲ್ಲದ ಭಾಷೆಯಲ್ಲಿ ಬರೆದು ನೀವೆಂದೂ ಒಳ್ಳೆಯ ಬರೆಹಗಾರರಾಗಲಾರಿರಿ; ಅದರಲ್ಲೂ ಕವಿತೆಯಂಥ ಸೃಜನಾತ್ಮಕ ಅಭಿವ್ಯಕ್ತಿಯಂತೂ ನಿಮ್ಮದಲ್ಲದ ಭಾಷೆಯಲ್ಲಿ ನಿಮಗೆ ದಕ್ಕಲಾರದು–ಎಂಬರ್ಥದ ಮಾತುಗಳನ್ನಾಡಿ, ಕುವೆಂಪು ಅವರನ್ನು ಕನ್ನಡದ ಕಡೆ ತಿರುಗಿಸಿದವರು ಕಸಿನ್ಸ್. ಕಸಿನ್ಸ್ ಅವರನ್ನು ಭೆಟ್ಟಿಯಾಗುವ ಮೊದಲೆ, ಕುವೆಂಪು ಕನ್ನಡದಲ್ಲಿ “ಅಮಲನ ಕತೆ”ಯಂಥ ಕವಿತೆಯನ್ನು ಬರೆಯುವ ಪ್ರಯತ್ನ ಮಾಡಿದ್ದರೂ, ತಾವು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲಿಯೂ ಬರೆದು ಸವ್ಯಸಾಚಿಯಾಗಬಹುದೆಂಬ ಕುವೆಂಪು ಅವರ ಭ್ರಮೆಯನ್ನು ನಿರಸನಗೊಳಿಸಿ ಅವರನ್ನು ಅಂದಿನ ಕನ್ನಡ ಕಾವ್ಯದ ಮುಖ್ಯವಾಹಿನಿಯ ಕಡೆ ತಿರುಗಿಸಿದವರು ಜೆ.ಎಚ್. ಕಸಿನ್ಸ್. ಆದರೆ ಕುವೆಂಪು ಅದುವರೆಗೆ ಮತ್ತು ಅನಂತರವೂ ಇಂಗ್ಲಿಷಿನ ಮೂಲಕ ಪಶ್ಚಿಮದ ಸಾಹಿತ್ಯದೊಂದಿಗೆ ನಡೆಯಿಸಿದ ಅನುಸಂಧಾನದಿಂದಾಗಿ, ಅವರು ಹೊಸಗನ್ನಡದಲ್ಲಿ ಅನೇಕ ಪ್ರಯೋಗಗಳನ್ನು ಕೈಕೊಳ್ಳಲೂ ಮತ್ತು ಅನೇಕ ಸಂವಾದಿ ರೂಪಗಳನ್ನು ಆವಿಷ್ಕರಿಸಲೂ, ಹಾಗೂ ಕನ್ನಡ ವಿಮರ್ಶೆಗೆ ಹೊಸ ಆಯಾಮಗಳನ್ನೂ ಕೊಡಲು ಸಾಧ್ಯವಾಯಿತೆಂಬ ಸಂಗತಿಯನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ.

ಕುವೆಂಪು ಅವರ ಮೊದಲ ಕವನ ಸಂಗ್ರಹ “ಕೊಳಲು” ಪ್ರಕಟವಾದದ್ದು ೧೯೩೦ರಲ್ಲಿ ಯಾದರೂ, ಕಸಿನ್ಸ್ ಅವರನ್ನು ಭೆಟ್ಟಿಯಾದ ನಂತರದ ಮೂರು ನಾಲ್ಕು ವರ್ಷಗಳ ಕಾಲಮಾನದಲ್ಲಿ, ಸಂಪೂರ್ಣವಾಗಿ ಕನ್ನಡದ ಕಡೆಗೆ ತಿರುಗಿ ಬಹುಸಂಖ್ಯೆಯ ಕವನಗಳನ್ನೂ ಮತ್ತು ಬ್ಲಾ ಂಕ್ವರ್ಸಿನ ನಾಟಕಗಳನ್ನೂ ಬರೆದು, ಬಿ.ಎ. ಮುಗಿಸಿ, ೧೯೨೭ರಲ್ಲಿ ಎಂ.ಎ. ತರಗತಿಗೆ ಸೇರುವ ಹೊತ್ತಿಗೆ, ಅವರು ಸಾಕಷ್ಟು ಹೆಸರು ಮಾಡಿದ್ದರು. ಯೋಗಾಯೋಗವೆಂದರೆ ಅದೇ ಹೊತ್ತಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ತರಗತಿಗಳು ಪ್ರಾರಂಭ ವಾಗಿದ್ದವು. ಆದರೆ ಬಿ.ಎ. ತರಗತಿಯಲ್ಲಿ ತತ್ವಶಾಸ್ತ್ರವನ್ನು ಪ್ರಧಾನ ವಿಷಯವನ್ನಾಗಿ ತೆಗೆದುಕೊಂಡು ತೇರ್ಗಡೆಯಾಗಿದ್ದ ಕುವೆಂಪು ಅವರಿಗೆ, ತತ್ವಶಾಸ್ತ್ರದ ಬಗ್ಗೆ ಇದ್ದ ಒಲವಿನಿಂದಲೂ ಮತ್ತು ಅವರು ಆಶ್ರಯ ಪಡೆದಿದ್ದ ಮೈಸೂರಿನ ಶ್ರೀರಾಮಕೃಷ್ಣಾಶ್ರಮದ ಪ್ರಭಾವದಿಂದಲೂ ಅವರಿಗೆ ತತ್ವಶಾಸ್ತ್ರದ ಎಂ.ಎ. ಯನ್ನು ಸೇರುವ ಪ್ರಬಲ ಅಪೇಕ್ಷೆಯಿದ್ದುದರಿಂದ ಅದನ್ನು ಸೇರಲು ಅರ್ಜಿಯನ್ನೂ ಹಾಕಿದ್ದರು. ಆದರೆ ಕುವೆಂಪು ಅವರ ಸಾಹಿತ್ಯ ಪ್ರತಿಭೆಯನ್ನು ಈಗಾಗಲೆ ಗುರುತಿಸಿದ ಪ್ರೊ. ಎ.ಆರ್. ಕೃಷ್ಣಶಾಸ್ತ್ರಿಯವರು ಕುವೆಂಪು ಅವರ ಮನ ಒಲಿಸಿ ಅವರನ್ನು ಕನ್ನಡ ಎಂ.ಎ.ಯ ಕಡೆ ಸೆಳೆಯುವುದರಲ್ಲಿ ಸಫಲರಾದರು. ಕನ್ನಡ ಕವಿಯಾಗಿ ರೂಪುಗೊಳ್ಳುತಿದ್ದ ಕುವೆಂಪು ಅವರನ್ನು, ಕನ್ನಡ ಸಾಹಿತ್ಯ ಪರಂಪರೆಯೊಂದಿಗೆ ಮತ್ತು ಅಂದಿನ ಸಮಕಾಲೀನ ಸಾಹಿತ್ಯ ಸಂದರ್ಭದೊಂದಿಗೆ ಬೆಸೆದುಕೊಳ್ಳುವಂತೆ ಮಾಡಿದ ಈ ಘಟನೆಯನ್ನು ಕುವೆಂಪು, ಒಂದು ಅಮೃತಕ್ಷಣ ಎಂದು ವರ್ಣಿಸಿದ್ದಾರೆ. (ಆ ಅಮೃತಕ್ಷಣ. ಸ.ಗ.ಸಂ.೨ ಪುಟ.೪೦೨-೪೦೩).

ತಾವು ಕೃಷ್ಣಶಾಸ್ತ್ರಿಗಳ ಪ್ರೇರಣೆಯಿಂದ ಕನ್ನಡ ಎಂ.ಎ. ತೆಗೆದುಕೊಂಡದ್ದರಿಂದ ಆದ ಪ್ರಯೋಜನವನ್ನು ಕುರಿತು ಒಂದೆರಡು ಕಡೆ ಕುವೆಂಪು ಪ್ರಸ್ತಾಪಿಸುತ್ತಾರೆ: “ಕನ್ನಡ ಎಂ.ಎ. ತೆಗೆದುಕೊಂಡದ್ದರಿಂದ ಸಾಹಿತ್ಯದ ಸಕ್ರಮ ಅಧ್ಯಯನದ ಅವಕಾಶ ದೊರೆಯಿತು. ನಮ್ಮ ಪರಂಪರೆಯ ಶಾಸ್ತ್ರೀಯವಾದ ಅಭ್ಯಾಸದಿಂದ ಕವಿಯ ಸೃಜನ ಪ್ರತಿಭೆಯ ತಾಯಿ ಬೇರಿಗೆ ಅಮೃತಾಹಾರ ಒದಗಿ, ತಾಯಿ ನೆಲಕ್ಕೆ ಆಳವಾದ ಪ್ರವೇಶ ದೊರಕಿತ್ತು” (ನೆ.ದೋ.ಪು. ೫೮೮). ಅಷ್ಟೆ ಅಲ್ಲ, “ನಾನು ಕನ್ನಡವನ್ನು ಸ್ನಾತಕೋತ್ತರ ವಿಷಯವಾಗಿ ಆಳವಾಗಿ ಅಭ್ಯಾಸ ಮಾಡದಿದ್ದರೆ, ಪಂಪ ರನ್ನ ಜನ್ನ ನಾಗವರ್ಮ ರಾಘವಾಂಕ ಕುಮಾರವ್ಯಾಸ ಲಕ್ಷಿ ಶಾದಿ ಮಹಾಕವಿ ವರಕವಿಗಳ ಕೃತಿಗಳನ್ನು ಅಧ್ಯಯನ ಮಾಡದಿದ್ದರೆ, ಕೊನೆಗೆ ಕನ್ನಡ ಅಧ್ಯಾಪಕನಾಗಿ ಪಾಠ ಹೇಳದೆ ಇದ್ದಿದ್ದರೂ, ವಿಷಯ ವಸ್ತು ಭಾವಾದಿ ಸಂಪತ್ತಿಯಲ್ಲಿ ಕೊರತೆಯಿರದಿರುವ ಉತ್ತುಂಗ ಪ್ರಜ್ಞಾಸ್ಥಿತಿಗೆ ಏರಬಹುದಾಗಿದ್ದರೂ, “ಶ್ರೀರಾಮಾಯಣದದರ್ಶನಂ” ಮಹಾಕಾವ್ಯದಂತಹ ಮೇರುಕೃತಿಗೆ ಬೇಕಾಗುವ ಪದಸಂಪತ್ತಿಯನ್ನೂ ಮಹಾಶೈಲಿಯನ್ನೂ ಖಂಡಿತವಾಗಿಯೂ ಪಡೆಯಲಾಗುತ್ತಿರಲಿಲ್ಲ. ಬಹುಶಃ ನನ್ನ ಕಾವ್ಯ ಕನ್ನಿಕೆ ಬಡಕಲು ಕನ್ನಡದ ಪಂಗುಶೈಲಿಯಲ್ಲಿ ಇಂಗ್ಲಿಷಿನ ಎರವಲು ಸರಕನ್ನು ತಲೆಹೊರೆಯಲ್ಲಿ ಹೊತ್ತು ಮಾರುವ ಬೀದಿಯ ಬೇಹಾರಿಯಾಗುತ್ತಿತ್ತೋ ಏನೊ; ಪತ್ರಿಕಾಲೋಕ ಪ್ರಸಿದ್ಧವಾಗಿ!” (ಸ.ಗ. ಸಂ.೨, ಪು.೪೦೪)

ಮೈಸೂರಿನ ಮಹಾರಾಜಾ ಕಾಲೇಜಿನ ವಾತಾವರಣದಲ್ಲಿ, ನವೋದಯದ ಆಚಾರ್ಯ ಬಿ.ಎಂ.ಶ್ರೀ. ಪ್ರೊ. ಟಿ.ಎಸ್. ವೆಂಕಣ್ಣಯ್ಯ, ಪ್ರೊ. ಎ.ಆರ್. ಕೃಷ್ಣಶಾಸ್ತ್ರೀ ಇಂಥವರ ಪ್ರಭಾವದ ಬೆಳಕಿನಲ್ಲಿ ಅರಳಿಕೊಳ್ಳುತ್ತಿದ್ದ “ವಿದ್ಯಾರ್ಥಿ” ಕುವೆಂಪು ಅವರನ್ನು, ಪ್ರೊ. ಎ.ಆರ್. ಕೃಷ್ಣಶಾಸ್ತ್ರಿಯವರು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ತಾವು ಏರ್ಪಡಿಸಿದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷತೆಗೆ ಆಹ್ವಾನಿಸಿದರು. ತಾ. ೧೫, ಡಿಸೆಂಬರ್ ೧೯೨೮ರಂದು ನಡೆದ ಕವಿ ಸಮ್ಮೇಳನದಲ್ಲಿ, ಕುವೆಂಪು ಅವರು ವಿದ್ಯಾರ್ಥಿ ಕವಿಗಳನ್ನು ಉದ್ದೇಶಿಸಿ ಮಾಡಿದ ಉಪನ್ಯಾಸದ ಮುಖ್ಯ ವಿಷಯ, ನಮಗೂ ನಮ್ಮ ಪರಂಪರೆಗೂ ಇರಬೇಕಾದ ಸಂಬಂಧವನ್ನು ಕುರಿತದ್ದು. ಕುವೆಂಪು ಹೇಳುತ್ತಾರೆ: “ಹೊಸತೆಂದರೇನು? ಹಳೆಯದರ ನಿಷೇಧವಲ್ಲ. ಹಳತಿಲ್ಲದ ಸಂಪೂರ್ಣವಾದ ಹೊಸತು ಸೃಷ್ಟಿಯಲ್ಲಿ ಎಲ್ಲಾದರೂ ಉಂಟೆ?… ಹಳೆಯದರ ತಳಹದಿಯಿಂದ ಹೊಸತು ಮೂಡುತ್ತದೆ. ಪಂಡಿತ ವರ್ಗದಲ್ಲಿ ಹೇಗೆ ಹೊಸ ಸಾಹಿತ್ಯವನ್ನು ಕಂಡರೆ ಒಂದು ವಿಧವಾದ ತಿರಸ್ಕಾರ ಉಂಟಾಗಿದೆಯೋ ಹಾಗೆಯೇ ತರುಣರಲ್ಲಿ ಈಚೀಚೆಗೆ ಹಳೆಯ ಸಾಹಿತ್ಯವೆಂದರೆ ಒಂದು ವಿಧವಾದ ಉಪೇಕ್ಷೆ ಮೂಡುತ್ತಿದೆ. ಹೊಸ ಸಾಹಿತ್ಯವನ್ನು ಹಳಿದರೂ ಅವರೇನೋ ಬದುಕಬಹುದು. ಆದರೆ ನಾವು ಹಳೆಯದನ್ನು ಹಳಿದು ಕ್ಷಣಕಾಲವೂ ಬದುಕಲಾರೆವು. ಹಳೆಯದೆಂದರೆ ಹೊಸದರ ಬೆನ್ನುಮೂಳೆ, ಅದು ನಮ್ಮ ಬಲವಾದ ತಳಹದಿ” (ಸ.ಗ. ಸಂ.೧. ಪು.೬,೭,೮).

ವಿದ್ಯಾರ್ಥಿ ಕವಿ ಸಮ್ಮೇಳನದಲ್ಲಿ, ಆಗ ಕನ್ನಡ ಎಂ.ಎ. ವಿದ್ಯಾರ್ಥಿಯೂ ಕವಿಯೂ ಆಗಿದ್ದ ಕುವೆಂಪು ಪ್ರಸ್ತಾಪಿಸಿದ ಈ ಕೆಲವು ಮಾತುಗಳು, ಅಂದಿನ ಸಮಕಾಲೀನ ಸಾಹಿತ್ಯ ಸಂದರ್ಭದ ವಾತಾವರಣವನ್ನೂ, ಕವಿಯೂ ವಿದ್ಯಾರ್ಥಿಯೂ ಆದ ತಮ್ಮಂಥ ತರುಣರಿಗೆ ಪ್ರಾಚೀನ ಸಾಹಿತ್ಯ ಪರಂಪರೆಯೊಂದಿಗೆ ಇರಬೇಕಾದ ಸಂಬಂಧದ ಸ್ವರೂಪವನ್ನೂ ಸ್ಪಷ್ಟಪಡಿಸುತ್ತವೆ.

ಈ ನಿಲುವಿನ ಕುವೆಂಪು ಮಹಾರಾಜಾ ಕಾಲೇಜಿನ ಎಂ.ಎ. ವಿದ್ಯಾರ್ಥಿಯಾಗಿ, ಪ್ರೊ. ಟಿ.ಎಸ್. ವೆಂಕಣ್ಣಯ್ಯ ಮತ್ತು ಪ್ರೊ. ಎ.ಆರ್. ಕೃಷ್ಣಶಾಸ್ತ್ರಿ ಇಂಥವರ ನೇರ ಶಿಷ್ಯರಾಗಿ, ಕನ್ನಡ ಸಾಹಿತ್ಯ ಪರಂಪರೆಗೆ ಪ್ರವೇಶ ಪಡೆದರು. ಅವರಿಗೆ ತಮ್ಮ ಎಳೆಯಂದಿನ ದಿನಗಳಲ್ಲಿ, ಮಲೆನಾಡಿನ ಮನೆಯಲ್ಲಿ, ಕಿವಿಯೊಳಗೆ ಅನುರಣಿಸಿ ಮರೆತು ಹೋಗಿದ್ದ ತೊರವೆ ರಾಮಾಯಣದ, ಲಕ್ಷ್ಮೀಶನ ಜೈಮಿನಿ ಭಾರತದ ಮತ್ತು ಕುಮಾರವ್ಯಾಸನ ಕೃತಿ ಸ್ಮ ತಿಗಳು ಈಗ ಜೀವಂತವಾದ ಚಿನ್ನದ ಗಣಿಗಳಂತೆ ತೆರೆದುಕೊಳ್ಳತೊಡಗಿದವು. ಅದುವರೆಗೆ ಅದಮ್ಯದಾಹದಿಂದ ಪರಿಚಯ ಮಾಡಿಕೊಂಡ ಪಶ್ಚಿಮದ ಕವಿಗಳ ಜತೆ, ಈಗ ಪರಿಚಿತವಾಗ ತೊಡಗಿದ ಪಂಪ-ರನ್ನ-ಕುಮಾರವ್ಯಾಸ- ರಾಘವಾಂಕ-ಲಕ್ಷಿ ಶಾದಿಗಳೂ, ವ್ಯಾಸ-ವಾಲ್ಮೀಕಿ- ಕಾಳಿದಾಸಾದ್ಯರೂ ಸೇರಿಕೊಂಡು ಅವರ ಪರಂಪರೆಯ ಪರಿಧಿಗಳು ವಿಸ್ತಾರಗೊಂಡವು.* ಮುಂದೆ ಉದ್ದಕ್ಕೂ ಅವರು ಒಬ್ಬ ಸೃಜನಶೀಲ ಬರೆಹಗಾರರಾಗಿ, ಕನ್ನಡ ಹಾಗೂ ಭಾರತೀಯ ಸಾಹಿತ್ಯ ಪರಂಪರೆಗಳೊಂದಿಗೆ ನಡೆಯಿಸಿದ ಸಂವಾದ, ತೋರಿದ ಪ್ರತಿಕ್ರಿಯೆ, ಕನ್ನಡ ಸಾಹಿತ್ಯ ಚರಿತ್ರೆಯ ಒಂದು ಭಾಗವಾಗಿದೆ. ಈ ಹಿನ್ನೆಲೆಯಲ್ಲಿ ಅವರು ೧೯೬೮, ಡಿಸೆಂಬರ್ ೨೮ ರಂದು, ನವದೆಹಲಿಯಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿಯನ್ನು ಸ್ವೀಕರಿಸುವಾಗ ಮಾಡಿದ ಭಾಷಣದಲ್ಲಿ ಕನ್ನಡ ಸಾಹಿತ್ಯದ ಹಿರಿಮೆ-ಗರಿಮೆಗಳನ್ನು  ಕುರಿತು ಪ್ರಸ್ತಾಪಿಸಿದ್ದು ಹೀಗೆ: ‘ಹತ್ತನೆಯ ಶತಮಾನದಲ್ಲಿಯೆ, ಜಗತ್ತಿನ ಯಾವ ಮಹಾಕಾವ್ಯಗಳಿಗೂ ಹೆಗಲೆಣೆಯಾಗಿ ನಿಲ್ಲುವಂತಹ ಮಹಾಕಾವ್ಯ ಕೃತಿಗಳು ಕನ್ನಡದಲ್ಲಿ ಸೃಷ್ಟಿಯಾಗಿರುವ ವೈಭವದ ದೃಶ್ಯ ನಮ್ಮ ವಿಸ್ಮಿತ ನೇತ್ರಗಳಿಗೆ ಗೋಚರವಾಗುತ್ತದೆ. ಷೇಕ್ಸ್‌ಪಿಯರ್ ಮಹಾಕವಿ ಹುಟ್ಟುವುದಕ್ಕೆ ಆರುನೂರು ವರ್ಷಗಳ ಮುನ್ನವೆ ಮಹಾಕವಿ ಪಂಪ ಜನಿಸಿದ್ದನೆಂಬುದನ್ನು ನೆನೆದರೆ ನಿಮಗೆ ಕನ್ನಡ ಸಾಹಿತ್ಯದ ಹಿರಿಮೆ ಗರಿಮೆಗಳ ಸ್ವರೂಪ ಇನಿತಾದರೂ ಮನೋಗೋಚರವಾಗಬಹುದು. ಪಂಪನ ಮಹಾಕಾವ್ಯ ಕ್ರಿ.ಶ. ೯೪೧ರಲ್ಲಿ ಹುಟ್ಟಿದ್ದರೆ, ಷೇಕ್ಸ್‌ಪಿಯರನ ಮೊದಲ ಕೃತಿ ಹುಟ್ಟಿದ್ದು ಕ್ರಿ.ಶ. ೧೫೯೩ರಲ್ಲಿ. ‘ಗದಾಯುದ್ಧ’ ಕಾವ್ಯದ ಅದ್ಭುತ ಕವಿ ರನ್ನನ ಕಾಲ (ಕ್ರಿ.ಶ. ೯೯೩) ಹತ್ತನೆ ಶತಮಾನದ ಕೊನೆಯ ಭಾಗವಾದರೆ, ‘ಪ್ಯಾರಡೈಸ್ ಲಾಸ್ಟ್’ ಮಹಾಕಾವ್ಯದ ಕರ್ತೃ ಮಿಲ್ಟನ್ ಕವಿಯ ಕಾಲ (ಕ್ರಿ.ಶ. ೧೬೦೮) ಹದಿನೇಳನೆಯ ಶತಮಾನದ ಆದಿಭಾಗವಾಗುತ್ತದೆ’ (ಸ.ಗ. ಸಂ.೨. ಪು. ೩೭೯).

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ‘ಪಂಪನಿಂದ ಕುವೆಂಪುವರೆಗೆ’ ಎಂಬ ಉಕ್ತಿಯೊಂದು ಪ್ರಚಲಿತವಾಗಿದೆ. ಈ ನುಡಿಗಟ್ಟನ್ನು ಮೊದಲು ಯಾರು ಬಳಸಿದರೋ ತಿಳಿಯದು. ಪ್ರಾಸಂಗಿಕವೆಂದು ಮೇಲುನೋಟಕ್ಕೆ ತೋರುವ ಈ ಜಾಣ್ಣುಡಿ ತುಂಬ ಅರ್ಥಪೂರ್ಣವಾದುದೆಂದು ನನ್ನ ತಿಳಿವಳಿಕೆ. ಯಾಕೆಂದರೆ ಇದು ಇಡೀ ಕನ್ನಡ ಸಾಹಿತ್ಯ ಪರಂಪರೆಯ ಸೀಮಾರೇಖೆಗಳನ್ನು ಇಬ್ಬರು ಮಹತ್ವದ ಕವಿಗಳ ಮೂಲಮಾನದಲ್ಲಿ ಗ್ರಹಿಸುವ ಒಂದು ಉಕ್ತಿಯಾಗಿದೆ. ಅಷ್ಟೆ ಅಲ್ಲ, ಪಂಪನಿಗೂ ಕುವೆಂಪು ಅವರಿಗೂ ಇರುವ ಸಾಮ್ಯವನ್ನು ಸೂಕ್ಷ ವಾಗಿ ಸೂಚಿಸುತ್ತದೆ.

ಪಂಪ ಹತ್ತನೆಯ ಶತಮಾನದ ಶಿಖರ ಸಾಹಿತಿಯಾದರೆ, ಕುವೆಂಪು ಇಪ್ಪತ್ತನೆ ಶತಮಾನದ ಶಿಖರ ಸಾಹಿತಿಯಾಗಿದ್ದಾರೆ. ಪಂಪ ವ್ಯಾಸಮಹಾಭಾರತವನ್ನು ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಹತ್ತನೆಯ ಶತಮಾನದ ವ್ಯಾಖ್ಯಾನವನ್ನಾಗಿ ಮಾಡಿದರೆ,  ಕುವೆಂಪು ತಮ್ಮ ಶ್ರೀರಾಮಾಯಣದರ್ಶನವನ್ನು, ವಾಲ್ಮೀಕಿ ರಾಮಾಯಣದ ಇಪ್ಪತ್ತನೆಯ ಶತಮಾನದ ವ್ಯಾಖ್ಯಾನವನ್ನಾಗಿ ರಚಿಸಿದ್ದಾರೆ. ಈ ಇಬ್ಬರೂ ಮಹಾಭಾರತ-ರಾಮಾಯಣಗಳ ಕಥಾವಸ್ತುವನ್ನು ಯಥಾವತ್ತಾಗಿ ಅನುಕರಿಸದೆ ‘ಕನ್ನಡದಿ ಬೇರೆ ಕತೆಯೆಂಬಂತೆ, ಬೇರೆ ಮೈಯ್ಯಾಂತಂತೆ, ಮರುವುಟ್ಟು ವೊಡೆದಂತೆ’ ನಿರ್ವಹಿಸಿದವರು. ಈ ದೃಷ್ಟಿಯಿಂದ ಪಂಪನ ‘ವಿಕ್ರಮಾರ್ಜುನ ವಿಜಯ’ವೂ, ಕುವೆಂಪುವಿನ ‘ಶ್ರೀರಾಮಾಯಣದರ್ಶನ’ವೂ–ಅನುಸೃಷ್ಟಿ ಅಥವಾ ಪುನರ್ಭವ ಕೃತಿಗಳೇ. ಪಂಪ ಕಾಳಿದಾಸನ ಅನಂತರ, ಅದೇ ಬಗೆಯ ಅದಮ್ಯ ನಿಸರ್ಗ ಪ್ರೀತಿಯ ಕವಿಯಾಗಿರುವಂತೆ, ಕುವೆಂಪು ಪಂಪನ ಅನಂತರ, ಪಂಪನಿಗೂ ಒಂದು ಕೈ ಮಿಗಿಲಾಗಿಯೇ, ತಮ್ಮ ನಿಸರ್ಗಪ್ರೀತಿಯನ್ನು ಜನ್ಮಜಾತವಾಗಿಯೇ ಪಡೆದುಕೊಂಡು ಅಭಿವ್ಯಕ್ತಿಸಿದವರು. ಪಂಪ ದೂರದ ಆ ಬೋಧನದ ಅರಿಕೇಸರಿಯ ಆಸ್ಥಾನದೊಳಗಿದ್ದು ‘ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಹಂಬಲಿಸಿದರೆ, ಕುವೆಂಪು ಮೈಸೂರಿನಲ್ಲಿ ನೆಲಸಬೇಕಾದ ಅನಿವಾರ್ಯತೆಯಲ್ಲಿ, ಪಂಪನ ಬನವಾಸಿಯನ್ನು ಒಳಗೊಂಡ ಸಹ್ಯಾದ್ರಿಯ ಅರಣ್ಯಶ್ರೇಣಿಯ ಪರಿಸರವನ್ನು ನೆನೆದು ‘ಹೋಗುವೆನು ನಾ ಮಲೆನಾಡಿಗೆ, ನನ್ನ ಒಲುಮೆಯ ಗೂಡಿಗೆ’ ಎಂದು ಹಂಬಲಿಸಿದವರು. ಶೈಲಿಯ ಗಾಂಭೀರ್ಯ ಮತ್ತು ವಿದ್ವತ್ತಿನ ಹಿನ್ನೆಲೆಯಲ್ಲಿ ಕೂಡ ಕುವೆಂಪು ಪಂಪನನ್ನು ನೆನಪಿಗೆ ತರುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಘೋಷಿಸಿದ ಪಂಪನ ಉಕ್ತಿ, ಕುವೆಂಪು ಅವರು ಕಂಡ ಹಾಗೂ ಎತ್ತಿ ಹಿಡಿದ ವಿಶ್ವಮಾನವತೆಯ ಕಲ್ಪನೆಗೆ ಸಂವಾದಿಯಾಗಿದೆ. ಆ ಕಾರಣದಿಂದಲೆ ಕುವೆಂಪು, ಮನುಷ್ಯನು ತನ್ನ ಅಲ್ಪತ್ವದಿಂದ ಪಾರಾಗಿ, ವಿಶ್ವಮಾನವನಾಗಿ ವಿಕಾಸಗೊಳ್ಳಬೇಕಾದರೆ, ಪಂಪನ ಈ ಉಕ್ತಿಯನ್ನು ನಾವು ನಿರುಪಾಧಿಕವಾಗಿ ಸ್ವೀಕರಿಸಬೇಕು ಎನ್ನುತ್ತಾರೆ. ಯಾಕೆಂದರೆ ಕುವೆಂಪು ತಮ್ಮ ಬದುಕಿನ ಉದ್ದಕ್ಕೂ ಮನುಷ್ಯರ ಸಮಾನತೆಯ ಪರವಾದ ನಿಲುವನ್ನು ಪ್ರತಿಪಾದಿಸಿದವರು. ಹೀಗೆ ಸಮಾನತೆಯನ್ನು ಕಾಣುವ ಮತ್ತು ಕಟ್ಟುವ ಮನೋಧರ್ಮವೆ ನಿಜವಾದ ಅಧ್ಯಾತ್ಮ ಅವರ ದೃಷ್ಟಿಯಲ್ಲಿ. ಯಾಕೆಂದರೆ ಅಧ್ಯಾತ್ಮ ಎಂದರೆ ಕುವೆಂಪು ಅವರ ಪ್ರಕಾರ ‘ಏಕತೆಯ ಅನುಭವ’.

ಕುವೆಂಪು ಅವರಿಗೆ ಪಂಪನನ್ನು ಬಿಟ್ಟರೆ ಕುಮಾರವ್ಯಾಸನೆ ಅವರ ಮೆಚ್ಚಿನ ಕವಿ. ಕೆಲವು ವಿಚಾರಗಳಲ್ಲಿ ಕುಮಾರವ್ಯಾಸ ಪಂಪನಿಗಿಂತ ದೊಡ್ಡವನು-ಅವರ ಪಾಲಿಗೆ. ‘ಪಂಪ ಕಲಿತವರ ಕಲ್ಪವೃಕ್ಷವಾದರೆ, ಕುಮಾರವ್ಯಾಸ ಕಲಿಯದವರಿಗೂ ಕಾಮಧೇನು’. ಅದರಲ್ಲೂ ‘ದರ್ಶನ’ದ ದೃಷ್ಟಿಯಿಂದ ಕುಮಾರವ್ಯಾಸನ ಪ್ರತಿಭೆ ಪಂಪನಿಗಿಂತ ಮೇಲ್‌ಮಟ್ಟದ್ದು. ಕುಮಾರವ್ಯಾಸನನ್ನು ಓದಿ ಅವರು ಪದ್ಯರೂಪದಲ್ಲಿ ಪ್ರತಿಕ್ರಿಯಿಸಿದ ‘ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’–ಎನ್ನುವ ಉಕ್ತಿ ಕುಮಾರವ್ಯಾಸನನ್ನು ಕುರಿತ ಕುವೆಂಪು ಅವರ ನಿಲುವನ್ನು ಸ್ಪಷ್ಟಪಡಿಸುತ್ತದೆ. ಪಂಪನ ‘ವಿಕ್ರಮಾರ್ಜುನ ವಿಜಯ’ವನ್ನು ಮೆಚ್ಚಿಕೊಂಡರೂ, ‘ದರ್ಶನ’ದ ದೃಷ್ಟಿಯಿಂದ ‘ಆದಿಪುರಾಣ’ವನ್ನು ಕುವೆಂಪು ಹೆಚ್ಚು ಇಷ್ಟಪಡುವಂತೆ ತೋರುತ್ತದೆ. ಪಂಪ, ಕುಮಾರವ್ಯಾಸರ ನಂತರ ಕುವೆಂಪು ಅವರ ಗಮನ ಸೆಳೆದ ಕವಿ ಎಂದರೆ ರನ್ನನೇ. ರನ್ನನನ್ನು ಅವರು ‘ಶಕ್ತಿಕವಿ’ ಎಂದು ಗುರುತಿಸಿದ್ದು ವಿಶೇಷದ ಸಂಗತಿಯಾಗಿದೆ. ಶಕ್ತಿ ಎಂದರೆ ಅತ್ಯಂತ ಪ್ರಕರ್ಷಾವಸ್ಠೆಯಲ್ಲಿ ಅಭಿವ್ಯಕ್ತವಾಗುವ ಸೃಜನ ಸಾಮರ್ಥ್ಯ ಎನ್ನಬಹುದು. ಶಕ್ತಿ ಎಂದರೇನೆಂದು ಕುವೆಂಪು ವಿವರಿಸದಿದ್ದರೂ ಅವರು ನಿದರ್ಶನಕ್ಕಾಗಿ ಕೊಡುವ, ಕಂಬವನ್ನೇರಿದ ವಿದ್ಯುತ್‌ತಂತಿಯ ಪ್ರತಿಮೆ, ಈ ಶಕ್ತಿಯ ವಿವರಣೆಯಾಗಿದೆ. ಆ ‘ಶಕ್ತಿಗುಣ ಒಂದಿಲ್ಲದಿದ್ದರೆ ಅವನದು ಪಂಪಸೂರ‍್ಯಕಾಂತಿಯನ್ನು ಪ್ರತಿಬಿಂಬಿಸುವ ಚಂದ್ರಕೀರ್ತಿಯಾಗುತ್ತಿತ್ತು’ ಎನ್ನುವುದು ಕುವೆಂಪು ಅವರ ವ್ಯಾಖ್ಯಾನ. ರನ್ನನಲ್ಲಿರುವ ಈ ಅಸಾಧಾರಣ ‘ಶಕ್ತಿ’ಯಿಂದ, ಆತ ‘ಪಂಪನಿಗೆ ಹೆಗಲೆಣೆಯಾಗಿ ನಿಂತಿದ್ದಾನೆ’–ಎನ್ನುವ ಕುವೆಂಪು ಅವರ ಮೌಲ್ಯಮಾಪನ ಗಮನಿಸತಕ್ಕದ್ದಾಗಿದೆ. ಅದರಲ್ಲೂ ರನ್ನನ ದುರ್ಯೋಧನನ ಪಾತ್ರ ಕುವೆಂಪು ಅವರ ಅಚ್ಚುಮೆಚ್ಚಿನ ಪಾತ್ರವಾಗಿದೆ. ಕುವೆಂಪು ಅವರ ‘ಶ್ಮಶಾನ ಕುರುಕ್ಷೇತ್ರ’ ನಾಟಕದಲ್ಲಿ ರನ್ನನ ಗದಾಯುದ್ಧ ಕಾವ್ಯದ ಪ್ರಭಾವವನ್ನು ಗುರುತಿಸಬಹುದು.

ಒಂದು ಆಶ್ಚರ್ಯದ ಸಂಗತಿ ಎಂದರೆ ಕುವೆಂಪು ಅವರ ಶ್ರೀರಾಮಾಯಣದರ್ಶನಂ  ಮಹಾಕಾವ್ಯದ ರಾವಣನ ಪಾತ್ರ ಮೂಲತಃ ನಾಗಚಂದ್ರನ ‘ರಾಮಚಂದ್ರಚರಿತಪುರಾಣ’ ಅಥವಾ ‘ಪಂಪರಾಮಾಯಣ’ದಿಂದ ನೇರವಾದ ಪ್ರೇರಣೆಯನ್ನು ಪಡೆದಿದೆ. ಸೀತೆಯ ಪರಮ ಪಾತಿವ್ರತ್ಯದ ಪ್ರಭಾವದಿಂದ, ರಾವಣನಿಗೆ ಸೀತೆಯ ಬಗೆಗಿದ್ದ ‘ಕಾಮುಕ’ ಭಾವವು, ಪರಿವರ್ತನೆಯಾಗಿ, ಆತ ಶ್ರೀರಾಮನನ್ನು ಗೆದ್ದು ಸೀತೆಯನ್ನು ರಾಮನಿಗೆ ಕಾಣಿಕೆಯಾಗಿ ಒಪ್ಪಿಸಲು ಮನಸ್ಸು ಮಾಡಿದನು–ಎನ್ನುವ ಕಲ್ಪನೆ ಜೈನ ರಾಮಾಯಣದ್ದು. ಈ ಜೈನ ರಾಮಾಯಣದ ಪ್ರತಿನಿಧಿಯಾದ ನಾಗಚಂದ್ರನ ಪಂಪರಾಮಾಯಣದಲ್ಲಿ ಕಾಣಿಸಿಕೊಳ್ಳುವ ರಾವಣನ ಈ ಮನಃಪರಿವರ್ತನೆಯ ಪ್ರಸಂಗ, ನಿಸ್ಸಂದೇಹವಾಗಿ ಕುವೆಂಪು ಅವರ ರಾವಣನ ಪಾತ್ರದ ಮೇಲೆ ಪ್ರಭಾವ ಬೀರಿದೆ. ಅದರಂತೆಯೆ ತಮ್ಮ ‘ಶ್ರೀರಾಮಾಯಣ ದರ್ಶನಂ’ದಲ್ಲಿ ರಾವಣನ ಪಾತ್ರವನ್ನು ಚಿತ್ರಿಸಿದ ಕುವೆಂಪು ಎಲ್ಲಿಯೂ ನಾಗಚಂದ್ರನ ಈ ಋಣವನ್ನು ನೆನೆಯುವುದಿಲ್ಲ.

ನಡುಗನ್ನಡ ಕವಿಗಳಲ್ಲಿ ಕುವೆಂಪು ಅವರ ಗಮನವನ್ನು ಸೆಳೆದ ಕವಿಗಳೆಂದರೆ ರಾಘವಾಂಕ, ಲಕ್ಷಿ ಶ ಮತ್ತು ರತ್ನಾಕರ. ಲಕ್ಷಿ ಶನಂತೂ ತನ್ನ ಭಾಷೆಯ ಸಾಲಂಕೃತ ವಾಗ್ಮಿತೆಯಿಂದ ಮತ್ತು ನಾದಲೋಲ ಗುಣದಿಂದ ಯಾವತ್ತಿನಿಂದಲೋ ಕುವೆಂಪು ಅವರ ಮನಸ್ಸನ್ನು ಸೂರೆಗೊಂಡವನು. ಈ ಕುರಿತು ಸಂದರ್ಶನವೊಂದರಲ್ಲಿ ಕುವೆಂಪು ಹೀಗೆ ಹೇಳಿಕೊಂಡಿದ್ದಾರೆ: ‘ನನ್ನ ಕಾವ್ಯಭಾಷೆಯ ಮೇಲೆ ಪರಿಣಾಮ ಮಾಡಿದ್ದು ಜಾನಪದದ್ದಲ್ಲ; ಲಕ್ಷಿ ಶ ಕುಮಾರವ್ಯಾಸ ಇವರದ್ದು…. ಅದರಲ್ಲೂ ನಾನು ಕುಮಾರವ್ಯಾಸನ ಭಾಷೆಗಿಂತ ಜೈಮಿನಿ ಭಾರತದ ಭಾಷೆಯ ಬಗ್ಗೆ ಹೆಚ್ಚು ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದೇನೆ. ನನ್ನ ‘ರಾಮಾಯಣದರ್ಶನ’ದ ಮೇಲೆ ಜೈಮಿನಿ ಭಾರತದ ಭಾಷೆ ಹೆಚ್ಚು ಪ್ರಭಾವ ಬೀರಿದೆ ಅಂತ ಹೇಳಬಲ್ಲೆ. ಲಕ್ಷಿ ಶನ ಭಾಷೆಗೆ ಕುಮಾರವ್ಯಾಸನ ಭಾಷೆಯ ಒಡ್ಡತನ ಇಲ್ಲ. ಅದು ತುಂಬ ಸಾಹಿತ್ಯಕವಾದ, ಪರಿಷ್ಕೃತವಾದ ಭಾಷೆ’ (ಸ.ಗ.ಸಂ. ೨. ಪು ೧೦೪೪; ೧೦೪೫). ಇನ್ನು ರಾಘವಾಂಕ ರತ್ನಾಕರವರ್ಣಿ ಕುವೆಂಪು ಅವರಿಗೆ ಪ್ರಿಯವಾಗುವುದು, ಹರಿಶ್ಚಂದ್ರ ಕಾವ್ಯ ಮತ್ತು ಭರತೇಶ ವೈಭವಗಳಲ್ಲಿ ಮೈದೋರಿರುವ ದರ್ಶನಾಂಶಗಳ ಕಾರಣದಿಂದ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕುವೆಂಪು ಅವರ ಗಮನ ಮುಖ್ಯವಾಗಿ ಮಾರ್ಗಕವಿಗಳನ್ನು ಕುರಿತದ್ದಾಗಿದೆಯೆ ಹೊರತು, ಈ ಸಾಹಿತ್ಯ ಪರಂಪರೆಯ ಒಂದು ಮುಖ್ಯ ಭಾಗವಾಗಿರುವ ದೇಸೀ ಕವಿ ಕಾವ್ಯಗಳ ಕಡೆಗೆ ಅಷ್ಟಾಗಿ ಹೊರಳುವುದಿಲ್ಲ. ಅದರಲ್ಲಿಯೂ ವಚನ ಚಳುವಳಿ ಹಾಗೂ ವಚನಕಾರರ ಅಭಿವ್ಯಕ್ತಿಯನ್ನು ಕುರಿತು ಅವರಿಗೆ ಅಂತಹ ಉತ್ಸಾಹವಿಲ್ಲದಿರುವುದು ಆಶ್ಚರ್ಯದ ಸಂಗತಿಯಾಗಿದೆ. ಯಾಕೆ ಕುವೆಂಪು ವಚನ ಸಾಹಿತ್ಯದ ಸಾಧನೆಯನ್ನೂ, ವಿಶಿಷ್ಟತೆಯನ್ನೂ ಹೀಗೆ ತಣ್ಣಗೆ ಅಲಕ್ಷಿಸಿದ್ದಾರೆ ಎನ್ನುವುದು ಸಾಹಿತ್ಯಾಸಕ್ತರನ್ನೂ, ಸಾಹಿತ್ಯ ವಿಮರ್ಶಕರನ್ನೂ ಕಾಡುವ ಪ್ರಶ್ನೆಗಳಾಗಿವೆ. ಆಧುನಿಕ ಸಾಹಿತ್ಯದ ಎಷ್ಟೋ ಬರೆಹಗಾರರನ್ನು ಆಕರ್ಷಿಸಿದ ಮತ್ತು ಸಾಹಿತ್ಯ ವಿಮರ್ಶೆಯ ವಲಯಗಳಲ್ಲಿ ಸಾಹಿತ್ಯದ ದೃಷ್ಟಿಯಿಂದ ಸಾಕಷ್ಟು ಚರ್ಚೆಗೆ ಗುರಿಯಾಗುತ್ತಿದ್ದ ವಚನಾಭಿವ್ಯಕ್ತಿಗಳನ್ನು ಕುವೆಂಪು, ‘ಸಾಹಿತ್ಯ’ ಎಂದಾಗಲಿ, ಅವುಗಳನ್ನು ಬರೆದವರು ‘ಸಾಹಿತಿ’ಗಳೆಂದಾಗಲಿ ಪರಿಗಣಿಸಲು ಸಿದ್ಧವಾಗಿರಲಿಲ್ಲ ಎನ್ನುವ ನಿಲುವೊಂದು ಅವರು ೧೯೪೯ನೇ ಇಸವಿಯ ‘ಪ್ರಬುದ್ಧ ಕರ್ನಾಟಕ’ದಲ್ಲಿ ಪ್ರಕಟಿಸಿದ ‘ವಚನಕಾರ ಬಸವೇಶ್ವರರು’ ಎಂಬ ಲೇಖನದಲ್ಲಿ ಮಂಡಿತವಾಗಿರುವುದು ವಿಲಕ್ಷಣವಾದ ಸಂಗತಿಯಾಗಿದೆ. ಈ ಲೇಖನದ ಪ್ರಕಾರ ಬಸವೇಶ್ವರರು ‘ಪ್ರಧಾನವಾಗಿ ಆಚಾರ್ಯರು, ಗೌಣವಾಗಿ ವಚನಕಾರರು… ಅಲ್ಲಲ್ಲಿ (ಅವರ ವಚನಗಳಲ್ಲಿ) ಸಾಹಿತ್ಯಾಂಶದಿಂದ ರಸಾನುಭವವನ್ನುಂಟು ಮಾಡುವನಿತು ರಮಣೀಯವಾಗಿದ್ದರೂ, ಅವು ಒಟ್ಟಿನಲ್ಲಿ ಶುದ್ಧಸಾಹಿತ್ಯ ಜಾತಿಗೆ ಸೇರುವುದಿಲ್ಲ’ (ಸ.ಗ. ಸಂ.೧. ಪು.೨೯೯). ಕುವೆಂಪು ಅವರ ಈ ನಿಲುವು ಅಷ್ಟು ಸಮಂಜಸವೆಂದು ತೋರುವುದಿಲ್ಲ. ‘ಶುದ್ಧ ಸಾಹಿತ್ಯಜಾತಿಗೆ ಸೇರುವುದಿಲ್ಲ’ ಎಂಬ ಕಾರಣಕ್ಕೆ ವಚನ ಸಾಹಿತ್ಯ ಕುವೆಂಪು ಅವರ ಅಲಕ್ಷ ಕ್ಕೆ ಗುರಿಯಾಯಿತೆಂದು ಭಾವಿಸುವುದಾದರೆ, ಕುವೆಂಪು ಅವರಿಗೆ ಪರಿಚಿತವಾದ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ‘ಶುದ್ಧ ಸಾಹಿತ್ಯ’ದ ಜಾತಿಗೆ ಸೇರುವ ಕೃತಿಗಳು ಎಷ್ಟಿವೆ, ಎಂದು ಕೇಳಬೇಕಾಗುತ್ತದೆ. ಕುವೆಂಪು ಅವರ ಈ ನಿಲುವಿಗೆ ಕಾರಣಗಳೇನೇ ಇರಲಿ, ಕುವೆಂಪು ಅವರ ವೈಚಾರಿಕತೆಯಲ್ಲಿ ಕಂಡುಬರುವ ವರ್ಣವ್ಯವಸ್ಥೆ ಹಾಗೂ ಜಾತಿ ಪದ್ಧತಿಯ ಖಂಡನೆ, ಸಮಾನತೆಯ ಪರವಾದ ನಿಲುವುಗಳು, ದೇವಾಲಯ ನಿರಾಕರಣೆ, ಪುರೋಹಿತಶಾಹಿ ಪ್ರವೃತ್ತಿಯ ತಿರಸ್ಕಾರ, ಶ್ರೀಸಾಮಾನ್ಯರ ಪರವಾದ ಕಾಳಜಿಗಳು–ಇಂಥ ಕ್ರಾಂತಿಕಾರೀ ಸಂಗತಿಗಳು ಹನ್ನೆರಡನೆಯ ಶತಮಾನದಷ್ಟು ಹಿಂದೆಯೆ ಕರ್ನಾಟಕದ ವಚನಕಾರರಿಂದ ಮಂಡಿತವಾಗಿರುವ ವಿಚಾರ ಕುವೆಂಪು ಅವರಿಗೆ ಬಹುಶಃ ಅಪರಿಚಿತವಾದ ಸಂಗತಿಯೇನೂ ಆಗಿರಲಾರದು. ಆದರೆ ಕುವೆಂಪು ಅವರ ವೈಚಾರಿಕತೆ ರೂಪುಗೊಂಡದ್ದು ಅವರಿಗೆ ವಚನಗಳ ಪರಿಚಯವಾಗುವ ಎಷ್ಟೋ ವರ್ಷಗಳ ಮೊದಲು, ಅವರ ಹೈಸ್ಕೂಲಿನ ದಿನಗಳಲ್ಲಿ, ಮೈಸೂರಿನ ಪಬ್ಲಿಕ್ ಲೈಬ್ರರಿಯಲ್ಲಿ ಅವರ ಕಣ್ಣಿಗೆ ಬಿದ್ದ ‘ಸ್ವಾಮಿ ವಿವೇಕಾನಂದ ಕೃತಿ ಶ್ರೇಣಿ’ಯೊಳಗಿನ ವಿಚಾರಗಳು ಇಂಗ್ಲಿಷಿನ ಮೂಲಕ ಅವರ ಮನಃಕೋಶವನ್ನು ಪ್ರವೇಶಿಸಿದ ಕಾರಣದಿಂದ. ಮುಂದೆ ವಿವೇಕಾನಂದರ ವ್ಯಕ್ತಿತ್ವ ಮತ್ತು ವಿಚಾರಗಳು ಅವರನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡವೆಂದೇ ಹೇಳಬೇಕು. ಈ ಹಿನ್ನೆಲೆಯಲ್ಲಿ, ಮೂಢನಂಬಿಕೆ, ಜಾತಿಪದ್ಧತಿ, ಚಾತುರ್ವರ್ಣ, ಪುರೋಹಿತಶಾಹೀ ಕುತಂತ್ರಗಳು, ಅಸಮಾನತೆ ಇತ್ಯಾದಿಗಳನ್ನು ಉಗ್ರವಾಗಿ ವಿರೋಧಿಸುತ್ತ, ಹಿಂದೂ ಧರ್ಮವನ್ನು ಚಿಕಿತ್ಸೆಗೆ ಗುರಿಪಡಿಸಿದ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಇಂಗ್ಲಿಷ್ ಭಾಷೆಯ ಮೂಲಕ ಪರಿಚಯ ಮಾಡಿಕೊಂಡು, ಒಂದು ರೀತಿಯಲ್ಲಿ ಅವರ ವಕ್ತಾರರೆ ಆದ ಕುವೆಂಪು ಅವರಿಗೆ, ಅದೇ ಕ್ರಾಂತಿಕಾರಕ ನಿಲುವುಗಳಿಗೆ ಸಂವಾದಿಯಾಗಬಹುದಾದ ಕನ್ನಡದ, ಹನ್ನೆರಡನೆಯ ಶತಮಾನದ ವಚನಕಾರರ ವಿಚಾರಗಳು ಅಂತಹ ರೋಮಾಂಚನ ವನ್ನೇನೂ ಹುಟ್ಟಿಸದೆ ಇರಬಹುದು. ಆದರೆ ಒಂದು ವಿಷಯ ಮಾತ್ರ ಸ್ಪಷ್ಟ. ಅದೇನೆಂದರೆ, ಶ್ರೀ ಅರವಿಂದರನ್ನೂ ಮತ್ತು ಅವರ ಅಭಿವ್ಯಕ್ತಿಯನ್ನೂ ತುಂಬ ಮೆಚ್ಚಿಕೊಳ್ಳುವ ಕುವೆಂಪು, ಬಯಲನ್ನು ರೂಪ ಮಾಡಿದಂತಿರುವ ಅಲ್ಲಮಪ್ರಭುವಿನ ಅಭಿವ್ಯಕ್ತಿಗಳನ್ನೂ, ಹಾಗೆಯೆ ವಚನಕಾರರು ಮೊಟ್ಟಮೊದಲು ಕನ್ನಡ ಭಾಷೆಯನ್ನು ಅನುಭಾವದ ಭಾಷೆಯನ್ನಾಗಿ ಮಾಡಿ ಅದನ್ನು ಸೃಜನಾತ್ಮಕವಾಗಿ ಬಳಸಿದ ಕ್ರಮಗಳನ್ನೂ ಸರಿಯಾಗಿ ಗಮನಿಸಿದ್ದರೆ, ಖಂಡಿತ ವಾಗಿಯೂ ಅದರಿಂದ ಅವರ ಕಾವ್ಯಕ್ಕೆ ಪ್ರಯೋಜನವಾಗಬಹುದಾಗಿತ್ತು–ಎಂದು ಅನ್ನಿಸುತ್ತದೆ.

ವಚನ ಸಾಹಿತ್ಯಕ್ಕೆ ಕುವೆಂಪು ಯಾಕೆ ಪ್ರತಿಕ್ರಯಿಸಲಿಲ್ಲ ಎನ್ನುವುದು ಒಂದು ಪ್ರಶ್ನೆಯಾದಂತೆ, ಅವರು ಕನ್ನಡ ಸಾಹಿತ್ಯ ಪರಂಪರೆಯ ಮತ್ತೊಂದು ಧಾರೆಯಾದ ಹರಿದಾಸರ ಕೀರ್ತನ ಸಾಹಿತ್ಯಕ್ಕೆ ಯಾಕೆ ಪ್ರತಿಕ್ರಿಯಿಸಲಿಲ್ಲ ಎನ್ನುವುದು, ಯಾರಿಗೂ ಪ್ರಶ್ನೆಯಾಗಲಿಲ್ಲ. ಯಾಕೆಂದರೆ ಕೀರ್ತನೆಗಳು ಮೂಲತಃ ಹಿಂದೂವೈದಿಕ ಧರ್ಮವನ್ನು, ಹದಿನಾರನೆ ಶತಮಾನದ ಕಾಲಮಾನದಲ್ಲಿ ಪ್ರಸಾರ ಮಾಡಿದ ಒಂದು ಬಗೆಯ ಉದಾರವಾದೀ ನಿಲುವಿನ ಅಭಿವ್ಯಕ್ತಿಗಳು. ದೈವಭಕ್ತಿಯ ವಿಚಾರದಲ್ಲಿ ಕುವೆಂಪು ಅವರಿಗೆ ಗಾಢವಾದ ಶ್ರದ್ಧೆಯಿದ್ದರೂ, ದಾಸಪಂಥ ಹಾಗೂ ದಾಸ ಸಾಹಿತ್ಯ ಮೂಲಭೂತವಾಗಿ ಚಾತುರ್ವರ್ಣದ ಪರವಾಗಿಯೆ ಇರುವುದರಿಂದ, ಮತ್ತು ಈ ದಾಸಪಂಥದ ಹಿಂದಿರುವ ಸಿದ್ಧಾಂತ, ತಾತ್ವಿಕವಾಗಿಯಾದರೂ ಜೀವ ಜೀವರುಗಳ ನಡುವಣ ಸಮಾನತೆಯನ್ನು ಒಪ್ಪಿಕೊಳ್ಳದಿರುವುದರಿಂದ, ದಾಸ ಸಾಹಿತ್ಯವನ್ನು ಕುರಿತು ಕುವೆಂಪು ತಟಸ್ಥವಾಗಿದ್ದಾರೆ ಎಂದು ತೋರುತ್ತದೆ. ಇಷ್ಟರ ಮೇಲೆ ಒಬ್ಬ ಸೃಜನಾತ್ಮಕ ಬರೆಹಗಾರನಿಗೆ ಸಾಹಿತ್ಯ ಪರಂಪರೆಯಲ್ಲಿ ಅವನದೇ ಆದ ಆಯ್ಕೆಗಳಿರುತ್ತವೆ. ಈ ದೃಷ್ಟಿಯಿಂದ ಕುವೆಂಪು ಅವರ ಆಯ್ಕೆ ವಿಶೇಷವಾಗಿ ಮತ-ಧರ್ಮಗಳನ್ನು ಮೀರಿದ, ವಿಶ್ವ ವಿಶಾಲವಾದ ಒಂದು ‘ದರ್ಶನ’ವನ್ನು ಅಭಿವ್ಯಕ್ತಪಡಿಸುವ ಕೃತಿಗಳ ಕಡೆಗೆ. ಅವರೆ ಒಂದೆಡೆ ಹೇಳಿಕೊಂಡಿದ್ದಾರೆ: ‘ಕವಿಯಾದವನು ಮತಾಚಾರ ಸಂಪ್ರದಾಯಗಳ ಶೃಂಖಲಾ ಸದೃಶವಾದ ಸಂಕುಚಿತ ದೃಷ್ಟಿಯಿಂದ ವಿಮುಕ್ತನಾಗಿ ಭೂಮವಾದುದರಲ್ಲಿ ಸಂಚರಿಸಬೇಕು’ (ಸ.ಗ.ಸಂ. ೧. ಪು. ೨೭) – ಎಂದು. ಅದರಲ್ಲೂ ಶೂದ್ರ ಸಮುದಾಯದಿಂದ ಹುಟ್ಟಿಬಂದ ಮೊದಲ ಪ್ರಮುಖ ಕವಿಯಾದ ಕುವೆಂಪು ಅವರಿಗೆ, ಮನುಷ್ಯನ ಚೈತನ್ಯದ ಚಲನಶೀಲತೆಯನ್ನು ಸ್ಥಗಿತಗೊಳಿಸುವ, ಜಾತಿ-ಮತ- ಪಂಥಗಳನ್ನು ಸುಭದ್ರವಾಗಿ ಸಂರಕ್ಷಿಸಿಕೊಂಡು ಬಂದ ಹಿಂದೂಧರ್ಮದ ಪುರೋಹಿತಶಾಹೀ ನಿಲುವುಗಳನ್ನು ಕುರಿತ ತೀವ್ರ ಅಸಮಾಧಾನವಿದೆ. ವಾಸ್ತವವಾಗಿ ಈ ಅಸಮಾಧಾನ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮೊದಲಿನಿಂದಲೂ ಹರಿದು ಬಂದ ಒಂದು ಪ್ರಧಾನ ಧಾರೆಯಾಗಿದೆ. ಬೇರೊಂದು ಮಾತಿನಲ್ಲಿ ಹೇಳುವುದಾದರೆ ‘ಹಿಂದೂ ಧರ್ಮವನ್ನು ತಿರಸ್ಕರಿಸುವ ಮತ್ತು ವಿರೋಧಿಸುವ ಪ್ರವೃತ್ತಿಯೊಂದು ಪ್ರತಿ ಕನ್ನಡ ಸಾಹಿತ್ಯಕ್ರಾಂತಿಯಲ್ಲಿಯೂ ಅಂತರ್ಯಾಮಿಯಾಗಿ’ (ತೇಜಸ್ವಿ: ೧೯೮೦) ಕ್ರಿಯಾಶೀಲವಾಗಿದೆ. ಕುವೆಂಪು ಆಧುನಿಕ ಸಾಹಿತ್ಯ ಸಂದರ್ಭದ ಕನ್ನಡದಲ್ಲಿ ಈ ನಿಲುವಿನ ಪ್ರಮುಖ ಪ್ರತಿನಿಧಿಯಾಗಿದ್ದಾರೆ.

ಕನ್ನಡ ಸಾಹಿತ್ಯ ಪರಂಪರೆಯ ವೈಶಿಷ್ಟ ವೆಂದರೆ, ಅದರ ಪ್ರಾರಂಭವೆ ವೈದಿಕ ವಿರೋಧೀ ನಿಲುವಿನ ಜೈನಧರ್ಮದ ಕವಿಗಳಿಂದ. ಮತ್ತೆ ಈ ನಿಲುವು ಕಾಣಿಸಿಕೊಂಡದ್ದು, ಹನ್ನೆರಡನೆಯ ಶತಮಾನದ ಶರಣ ಚಳುವಳಿಯಲ್ಲಿ. ಜೈನ ಕಾವ್ಯಗಳಲ್ಲಿ ಕ್ಷತ್ರಿಯನು ಬ್ರಾಹ್ಮಣನಿಗಿಂತ ಮೇಲಿನ ಸ್ಥಾನದಲ್ಲಿರುವುದು ಯಾಕೆ ಎನ್ನುವುದನ್ನು ಈ ಹಿನ್ನೆಲೆಯಿಂದ ನೋಡಬಹುದು. ಹಾಗೆಯೇ ಮಹತ್ ಪರಂಪರೆಯ ವಸ್ತುಗಳನ್ನು ಜೈನ ಕವಿಗಳು ನಿರ್ವಹಿಸಿರುವ ಕ್ರಮಗಳಲ್ಲಿ ಈ ವೈದಿಕ ವಿರೋಧೀ ಧೋರಣೆಯನ್ನು ಗುರುತಿಸಬಹುದು. ಕನ್ನಡ ಸಾಹಿತ್ಯದ ಪರಿವರ್ತನೆಯ ಮೊದಲ ಘಟ್ಟವಾದ ಪಂಪನ ಕಾಲದಿಂದ ಪ್ರಾರಂಭವಾದ ಈ ಹಿಂದೂ ವೈದಿಕ ವಿರೋಧಿ ನಿಲುವು, ಕನ್ನಡ ಸಾಹಿತ್ಯದ ಎರಡನೆಯ ಪರಿವರ್ತನ ಘಟ್ಟವಾದ, ಶಿವಶರಣರ ವಚನ ಚಳುವಳಿಯ ಸಂದರ್ಭದಲ್ಲಿ ಇನ್ನೂ ತೀವ್ರವಾಗಿ ಅಭಿವ್ಯಕ್ತಗೊಂಡಿದೆ. ಅಂದಿನ ಸಮಾಜದ ವಿವಿಧ ನಿರ್ಲಕ್ಷಿತ ಸ್ತರಗಳನ್ನು ಒಂದು ಸಂಘಟನೆಯ ಕೇಂದ್ರಕ್ಕೆ ತಂದುಕೊಂಡ ಈ ಚಳುವಳಿ, ಹಿಂದೂಧರ್ಮದ ಶ್ರೇಣೀಕೃತ ವ್ಯವಸ್ಥೆಯ ವಿರುದ್ಧ ಹೂಡಿದ ಬಂಡಾಯದ ದನಿಗಳ ಅಭಿವ್ಯಕ್ತಿಯಾಗಿದೆ. ಅದು ಮುಂದಿನ ವೀರಶೈವ ಕವಿಗಳಲ್ಲಿಯೂ ಅನುರಣನಗೊಂಡಿದೆ. ಕನ್ನಡ ಸಾಹಿತ್ಯದ ಮೂರನೆಯ ಪರಿವರ್ತನ ಘಟ್ಟವಾದ ಆಧುನಿಕ ಸಾಹಿತ್ಯ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಪರಂಪರೆಯ ಈ ಮುಖ್ಯ ಪ್ರವೃತ್ತಿಯ ವಕ್ತಾರರಾಗಿದ್ದಾರೆ ಕುವೆಂಪು.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಈ ವೈದಿಕ ವಿರೋಧೀ ನಿಲುವಿನ ಜತೆಗೆ ಪ್ರಭುತ್ವ ವಿರೋಧೀ ನಿಲುವೂ ಅದರ ಮುಖ್ಯ ಲಕ್ಷಣವಾಗಿದೆ. ಕವಿಯ ಕಾವ್ಯನಿರ್ಮಿತಿಯನ್ನು ನಿಯಂತ್ರಿಸುವ, ಧಾರ್ಮಿಕವಲ್ಲದ ಇನ್ನಿತರ ಪ್ರಭುತ್ವಗಳನ್ನು ನಿರಾಕರಿಸುವ ನಿಲುವು ಎಂದು ಇದನ್ನು ವರ್ಣಿಸಬಹುದು.

ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೆ, ಕರ್ನಾಟಕದ ರಾಜರುಗಳೂ ಮತ್ತು ರಾಜಾಸ್ಥಾನಗಳು ಕವಿಗಳಿಗೆ ಆಶ್ರಯವನ್ನು ಕೊಟ್ಟು, ಅವರ ಸಾಹಿತ್ಯ ನಿರ್ಮಿತಿಗೆ ಕಾರಣರಾಗಿದ್ದಾರೆ ಎಂಬ ವಾಸ್ತವ ಸಂಗತಿಯ ಹಿನ್ನೆಲೆಯಲ್ಲಿ ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರಭುತ್ವ ವಿರೋಧಿ ನಿಲುವೊಂದು’ ಇತ್ತೆಂಬ ಸಂಗತಿ ಒಂದು ವಿಪರ್ಯಾಸದಂತೆ ತೋರಬಹುದು. ನಿಜ; ಮಾರ್ಗ ಸಾಹಿತ್ಯದ ಅನೇಕ ಕವಿಗಳು ರಾಜರ-ಚಕ್ರವರ್ತಿಗಳ ಆಸ್ಥಾನಗಳಲ್ಲಿ ಇದ್ದು ಕೃತಿರಚನೆ ಮಾಡಿ, ಅವರುಗಳಿಂದ ಬಿರುದು-ಪ್ರಶಸ್ತಿ-ಸನ್ಮಾನಗಳನ್ನು ಪಡೆದುಕೊಂಡರೆಂಬುದು ನಿಜ. ಆದರೆ ಈ ಕವಿಗಳ ಮತ್ತು ಪ್ರಭುಗಳ ಸಂಬಂಧ ಬಹುತೇಕ ಕವಿಗಳ ಆತ್ಮಗೌರವಕ್ಕೆ ಧಕ್ಕೆಯನ್ನು ತರುವಂಥದ್ದಾಗಿರಲಿಕ್ಕಿಲ್ಲವೆಂದೇ ನನ್ನ ತಿಳಿವಳಿಕೆ. ಜತೆಗೆ ಈ ಕವಿಗಳು ರಾಜತ್ವವನ್ನು ಒಂದು ನಿರ್ದುಷ್ಟವಾದ ಸಂಸ್ಥೆ ಎಂದೇನೂ ಭಾವಿಸಿದಂತೆ ತೋರುವುದಿಲ್ಲ; ಅದೂ ಅಲ್ಲದೆ ತಮ್ಮ ಧರ್ಮಶ್ರದ್ಧೆಯ ನಿಲುವಿನಲ್ಲಿ ಈ ರಾಜರ ಆಶ್ರಯದಿಂದ ಒದಗುವ ಧನ-ಕನಕ-ಕೀರ್ತಿ-ಗೌರವಗಳನ್ನೂ ಧಿಕ್ಕರಿಸುವ ಮನೋಧರ್ಮವೂ ಅವರಲ್ಲಿತ್ತು. ಇಲ್ಲದಿದ್ದರೆ, ತನ್ನ ಪ್ರಭುವೂ ಆತ್ಮೀಯ ಗೆಳೆಯನೂ ಆದ ಅರಿಕೇಸರಿಯ ಆಸ್ಥಾನದಲ್ಲಿದ್ದೂ ಪಂಪನಂಥವನು ‘ಪೆರರೀವುದೇಂ ಪೆರರಿಂದಮಪ್ಪುದೇಂ ಪೆರರ ಮಾಡುವುದೇಂ’ ಎಂದು ಘೋಷಿಸುತ್ತಿರಲಿಲ್ಲ; ಅಷ್ಟೇ ಅಲ್ಲ ಕವಿಗಳು ತಮ್ಮ ಕಾವ್ಯದ ಕಥಾವಸ್ತುಗಳ ಸಂದರ್ಭದಲ್ಲಿ ರಾಜರುಗಳನ್ನು ಕುರಿತ ತಿರಸ್ಕಾರದ, ವ್ಯಂಗ್ಯೋಕ್ತಿಗಳನ್ನು ತರುತ್ತಿರಲಿಲ್ಲ. ಕನ್ನಡ ಕಾವ್ಯ ಯಾಕೆ ರಾಜಾಸ್ಥಾನಗಳಿಂದ ದೇವಸ್ಥಾನಗಳಿಗೆ ಸ್ಥಳಾಂತರಗೊಂಡಿತು ಎನ್ನುವುದರ ಹಿಂದಿನ ಕಾರಣಗಳೂ, ಧಾರ್ಮಿಕವಲ್ಲದ, ಬೇರೆಯ ಪ್ರಭುತ್ವಗಳ ನಿಯಂತ್ರಣಗಳಿಂದ ಸೃಜನಶೀಲತೆ ದೂರ ಸರಿಯಿತೆಂಬುದನ್ನು ದೃಢಪಡಿಸುತ್ತವೆ. ಈ ಪ್ರಭುತ್ವ ನಿರಾಕರಣೆಯ ನಿಲುವು, ಆಧುನಿಕ ಯುಗದ ಕವಿ ಕುವೆಂಪು ಅವರಲ್ಲಿ ಹರಳುಗಟ್ಟಿದೆ ಎಂಬುದು ಸ್ವಯಂಸ್ಪಷ್ಟವಾಗಿದೆ. ಕುವೆಂಪು ಅವರ ವ್ಯಕ್ತಿತ್ವದಲ್ಲಿಯೇ ಒಂದು ಬಗೆಯ ದಿಟ್ಟತನ ಅವರಿಗೆ ಹುಟ್ಟಿನೊಂದಿಗೇ ಬಂದಂತೆ ತೋರುತ್ತದೆ. ಹೀಗಾಗಿ ಅವರು ಯಾವುದಕ್ಕೂ ಅಧೀನವಾಗದ ಒಂದು ‘ನಿರಂಕುಶ ಮತಿ’ಯ ಪ್ರತಿಪಾದಕರಾಗಿದ್ದರು ಮತ್ತು ಕೀರ್ತಿ-ಪ್ರತಿಷ್ಠೆಯ ವಿಚಾರಗಳಲ್ಲಿ ಒಂದು ಬಗೆಯ ದಿವ್ಯ ನಿರ್ಲಕ್ಷ ವನ್ನು ಬೆಳೆಯಿಸಿ ಕೊಂಡಿದ್ದರು. ‘ವಸಂತ ವನದಲಿ ಕೂಗುವ ಕೋಗಿಲೆ ರಾಜನ ಬಿರುದನ್ನು ಬಯಸುವುದಿಲ್ಲ’, ‘ಕವಿಗರಸುಗಿರಸುಗಳ ಋಣವಿಲ್ಲ’– ಎಂಬ ನಿಲುವಿನ ಕುವೆಂಪು ಅವರ ‘ಪಾಂಚಜನ್ಯ’ ಎಂಬ ಕವನ ಸಂಗ್ರಹದ ಅನೇಕ ಕವಿತೆಗಳು ಅಂದಿನ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ನಡೆಯುತ್ತಿದ್ದ ಸ್ವಾತಂತ್ರ  ಚಳುವಳಿಗೆ ಹೇಗೆ ಸ್ಫೂರ್ತಿಯಾದವು ಎನ್ನುವ ಸಂಗತಿ ಈಗ ಚರಿತ್ರೆಯ ಒಂದು ಭಾಗವಾಗಿದೆ. ಅಷ್ಟೆ ಅಲ್ಲ ಈ ಸಾಮ್ರಾಜ್ಯಶಾಹಿಯ ಒಂದು ಭಾಗವಾದ ರಾಜಪ್ರಭುತ್ವದ ವಿಚಾರದಲ್ಲೂ ಕುವೆಂಪು ಅವರಿಗೆ ಗಾಢವಾದ ತಿರಸ್ಕಾರ ತಾನೇ ತಾನಾಗಿತ್ತು. ಅವರು ಮೈಸೂರಿನ ಮಹಾರಾಜಾ ಕಾಲೇಜಿನ ಅಧ್ಯಾಪಕರಾಗಿದ್ದ ಹೊತ್ತಿನಲ್ಲಿ, ಅರಮನೆಗೆ ಬಂದು ರಾಜಕುಮಾರರಿಗೆ ಪಾಠ ಹೇಳಿಕೊಡಬೇಕೆಂದು ಬಂದ ಆಹ್ವಾನಕ್ಕೆ ಉತ್ತರವಾಗಿ, ‘ಅರಮನೆಗೆ ಹೋಗಿ ರಾಜಕುಮಾರರಿಗೆ ಪಾಠ ಹೇಳುವುದಕ್ಕಿಂತ ಉತ್ತಮವಾದ ಕೆಲಸಗಳು ನನಗಿವೆ’–ಎಂದು ಕಡೆಗಣ್ಣಿನಿಂದ ಅರಮನೆಯ ಕರೆಯನ್ನು ಕುವೆಂಪು ನಿರಾಕರಿಸಿದರೆನ್ನುವುದು ಸಾಮಾನ್ಯವಾದ ಘಟನೆಯಲ್ಲ. ೧೯೫೦ರ ಕಾಲ. ಕರ್ನಾಟಕದ ಏಕೀಕರಣ ಮೂಲತಃ ಒಂದು ಸಾಂಸ್ಕೃತಿಕ ಅಗತ್ಯ ಎನ್ನುವುದು ಹಿಂದೆ ಬಿದ್ದು ಅದೊಂದು ರಾಜಕೀಯ ವಿಷಯವೆಂಬಂತೆ ಚರ್ಚೆಗೆ ಗುರಿಯಾಗಿತ್ತು. ಈ ಸಂದರ್ಭದಲ್ಲಿ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಕುವೆಂಪು, ಕರ್ನಾಟಕದ ಏಕೀಕರಣದ ಪರವಾಗಿ ದನಿಯೆತ್ತಿದರು. ಅಂದಿನ ಸರ್ಕಾರ ಕುವೆಂಪು ಅವರ ಅಭಿಪ್ರಾಯವನ್ನು ಆಕ್ಷೇಪಿಸಿ ಅವರಿಗೆ ಒಂದು ನೋಟೀಸ್ ಜಾರಿ ಮಾಡಿತು. ಅದರ ಸಾರಾಂಶ ಇಷ್ಟೆ: ‘ಸರ್ಕಾರದ ನೌಕರರಾಗಿರುವ ನೀವು ಕರ್ನಾಟಕದ ಏಕೀಕರಣದಂತಹ ವಿಚಾರಗಳಲ್ಲಿ ಬಾಯಿ ಹಾಕತಕ್ಕದ್ದಲ್ಲ’. ಕವಿ ಕುವೆಂಪು ಅವರಿಗೆ ರೇಗಿತು. ಸರ್ಕಾರದ ನೋಟೀಸಿಗೆ ಪ್ರತಿಕ್ರಿಯೆಯಾಗಿ ಒಂದು ಕವಿತೆ ಬರೆದರು. ಅದರ ಹೆಸರು ‘ಅಖಂಡ ಕರ್ನಾಟಕ’. ‘ಅಖಂಡ ಕರ್ನಾಟಕ, ಅಖಂಡ ಕರ್ನಾಟಕ, ಅಲ್ತೊ ನಿಮ್ಮ ಮೂರು ದಿನದ ರಾಜಕೀಯ ನಾಟಕ’ ಎಂದು ಪ್ರಾರಂಭವಾಗುವ ಈ ಕವಿತೆ, ಕವಿಯಾದ ತಾವು ‘ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲ’ಕ್ಕೆ ಅಧೀನರಲ್ಲವೆಂದೂ, ‘ಸಿರಿಗನ್ನಡ ಸರಸ್ವತಿಯೆ ರಚಿಸಿದೊಂದು’, ಅರಾಜಕೀಯ ಹಾಗೂ ಕನ್ನಡ ಮಹಾಕವಿಗಳಿಂದ ಕೂಡಿದ ‘ನಿತ್ಯ ಸಚಿವ ಮಂಡಲ’ಕ್ಕೆ ಮಾತ್ರ ಅಧೀನರೆಂದೂ ಘೋಷಿಸುತ್ತ ನಿಜವಾದ ಕರ್ನಾಟಕದ ಕಲ್ಪನೆಯನ್ನು ಮಂಡಿಸುತ್ತದೆ. ಸರ್ಕಾರ ಕುವೆಂಪು ಅವರ ಈ ಪ್ರತಿಭಟನೆಯಿಂದ ತತ್ತರಿಸಿದ್ದಂತೂ ನಿಜ.

ಭಾಷೆಯ ದೃಷ್ಟಿಯಿಂದ ನೋಡುವುದಾದರೆ, ಉದ್ದಕ್ಕೂ ದ್ವಿಭಾಷಾ (ಕನ್ನಡ-ಸಂಸ್ಕೃತ) ಸಂದರ್ಭದಲ್ಲಿ ನಿಂತು ತಮ್ಮ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳಬೇಕಾಗಿ ಬಂದ ಕನ್ನಡ ಕವಿಗಳು ತಮ್ಮ ಕೃತಿರಚನೆಯ ತುರ್ತಿನಲ್ಲಿ ಸಂಸ್ಕೃತವನ್ನು ಎಷ್ಟರಮಟ್ಟಿಗೆ ತಮ್ಮ ಕಾವ್ಯಭಾಷೆಯೊಳಗೆ ಅಳವಡಿಸಿಕೊಳ್ಳಬೇಕು ಎನ್ನುವ ಸಂಘರ್ಷ ಮತ್ತು ವಿವೇಚನೆ ಕನ್ನಡ ಸಾಹಿತ್ಯ ಪರಂಪರೆಯ ಲಕ್ಷಣವಾಗಿದೆ. ಮೊದಲಿಗೆ ಗುರುತಿಸಿಕೊಳ್ಳಬೇಕಾದ ವಿಚಾರವೆಂದರೆ, ಕನ್ನಡವು ಯಾವತ್ತೂ ಸಂಸ್ಕೃತವನ್ನು ‘ಅನ್ಯಭಾಷೆ’ಯೆಂದಾಗಲೀ, ತಾನು ಅದರ ಸಂಪರ್ಕ ಹಾಗೂ ಸೆಳೆತಗಳಿಂದ ದೂರ ನಿಲ್ಲಬೇಕೆಂದಾಗಲೀ ಭಾವಿಸಿಲ್ಲ. ಅಷ್ಟೆ ಅಲ್ಲ ಕನ್ನಡ ಕವಿಗಳಿಗೆ ಅದು ತಮ್ಮ ಋಣದ ಗಣಿಯಾದ ಸಾಹಿತ್ಯ ಪರಂಪರೆಯ ಭಾಷೆ ಕೂಡಾ. ಆದ ಕಾರಣ ಕನ್ನಡ ಸಂಸ್ಕೃತವನ್ನು ನಿರಾಕರಿಸದೆ, ಅದನ್ನು ತನ್ನ ಸೃಜನಶೀಲತೆಯ ಅಗತ್ಯಕ್ಕೆ ತಕ್ಕ ಹಾಗೆ ಉಪಯೋಗಿಸಿಕೊಳ್ಳುವುದು ಹೇಗೆ ಎನ್ನುವುದೆ ಇಲ್ಲಿನ ಮುಖ್ಯ ಪ್ರಶ್ನೆಯಾಗಿದೆ. ಆದರೆ ಕನ್ನಡ ಕಾವ್ಯ ಪರಂಪರೆಯಲ್ಲಿ ಅದರಲ್ಲೂ ಮಾರ್ಗಕವಿಗಳಲ್ಲಿ ಕನ್ನಡದೊಂದಿಗೆ ಸಂಸ್ಕೃತ ಬಳಕೆಯ ಕ್ರಮ ಒಮ್ಮೊಮ್ಮೆ ಏರುಪೇರಾಗಿರುವುದು ನಿಜವಾದರೂ, ಒಟ್ಟಾರೆಯಾಗಿ ಗಟ್ಟಿಗೊಂಡ ನಿಲುವೆಂದರೆ: ಕನ್ನಡದ ಸೊಗಸನ್ನು ಕಬಳಿಸದಂತೆ, ಸಂಸ್ಕೃತವನ್ನು ಒಂದು ನಿಯಂತ್ರಿತ ಹದದಲ್ಲಿ ಅಳವಡಿಸಿಕೊಂಡು ‘ಮಾರ್ಗ-ದೇಸಿ’ಗಳ ಒಡಂಬಡಿಕೆಯನ್ನು ಸಾಧಿಸುವುದು. ಸಾರಾಂಶವೇನೆಂದರೆ, ಸಂಸ್ಕೃತದ ನಿರಾಕರಣೆ ಅಲ್ಲ, ಕನ್ನಡದ ಕೃತಿನಿರ್ಮಿತಿಯಲ್ಲಿ ಸಂಸ್ಕೃತದ ಅತಿಯಾದ ಬಳಕೆಯ ನಿರಾಕರಣೆ. ಕುವೆಂಪು ಅವರ ಸಾಹಿತ್ಯ ಭಾಷಾ ಪ್ರಯೋಗವನ್ನು ಈ ಹಿನ್ನೆಲೆಯಿಂದ ನೋಡಿದರೆ, ಅವರಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಉದ್ದಕ್ಕೂ ಕನ್ನಡ ಸಂಸ್ಕೃತಗಳ ಬಗೆಗೆ ನಡೆದ ಸಂವಾದದ ಪುನರಭಿನಯವನ್ನು ಗುರುತಿಸಬಹುದಾಗಿದೆ. ‘ಕುವೆಂಪು ಭಾಷೆ ಸಂಸ್ಕೃತ ಭೂಯಿಷ್ಠವಾಗಿದೆ’ ಎಂಬ ನಿರಾಳವಾದ  ಆಕ್ಷೇಪಣೆಯೊಂದು ಪ್ರಚಲಿತವಾಗಿರುವುದರ ಹಿಂದೆ, ಕುವೆಂಪು ಅವರ ಕೃತಿಗಳ ವಿವಿಧ ಸ್ತರಗಳಲ್ಲಿ ಆವಿಷ್ಕಾರಗೊಂಡಿರುವ ಭಾಷೆಯ ಸ್ವರೂಪ ಮತ್ತು ಲಯಗಳನ್ನು ಕುರಿತ ಆಳವಾದ ಪರಿಶೀಲನೆ ಹಾಗೂ ತಿಳಿವಳಿಕೆಯ ಅಭಾವವಿದೆ ಎಂದು ನಮಗೆ ತೋರುತ್ತದೆ. ಮತ್ತು ಕುವೆಂಪು ಅವರ ಕಾವ್ಯಭಾಷೆ ಸಂಸ್ಕೃತದ ಓಜಸ್ಸಿನಿಂದ ಯಾಕೆ ಹಾಗೆ ಪೌರುಷಯುಕ್ತ ವಾಗಿದೆ ಎನ್ನುವುದರ ಹಿಂದಿರುವ ಸಾಂಸ್ಕೃತಿಕ ಕಾರಣಗಳನ್ನು ಸರಿಯಾಗಿ ಗುರುತಿಸದೆ ಇರುವುದರಿಂದ ಈ ಕುರಿತು ವಿಲಕ್ಷಣವಾದ ಪ್ರತಿಕ್ರಿಯೆಗಳು ಅಭಿವ್ಯಕ್ತವಾಗಿವೆ. ಅವರ ಕವಿತೆಯ ಮಾತು ಹಾಗಿರಲಿ, ಅವರ ಎರಡೂ ಕಾದಂಬರಿಗಳಲ್ಲಿ ನಿರೂಪಕನ ಭಾಷೆ ‘ಮಾರ್ಗ’ದ ಸ್ಪರ್ಶದಿಂದ ಕೂಡಿದ್ದರೆ, ಅದೇ ಕಾದಂಬರಿಗಳಲ್ಲಿ ವಿವಿಧ ಸಾಮಾಜಿಕ ಸ್ತರಗಳಿಗೆ ಸೇರಿದ ಬಹುಸಂಖ್ಯೆಯ ಪಾತ್ರಗಳು ತಮ್ಮ ಸ್ವಭಾವಾನುಸಾರಿಯಾಗಿ ಮಾತನಾಡುವ ಭಾಷೆಯ ಪ್ರಾದೇಶಿಕ ಚಹರೆಗಳ ‘ದೇಸಿ’ಯನ್ನು ಗಮನಿಸಿದರೆ, ಕುವೆಂಪು ಅವರ ಭಾಷೆಯ ವೈವಿಧ್ಯ ಮತ್ತು ವಿಸ್ತಾರಗಳು ಯಾರನ್ನು ಚಕಿತಗೊಳಿಸುತ್ತವೆ. ಒಂದು ಮಾತಂತೂ ನಿಜ: ಕುವೆಂಪು ಅವರ ಶೈಲಿಯೊಳಗೆ ಕಂಡುಬರುವ ಭಾಷಾಪ್ರಯೋಗ ಕನ್ನಡ ಸಾಹಿತ್ಯ ಪರಂಪರೆಗೆ ಅಪರಿಚಿತವಾದುದೇನಲ್ಲ; ಮತ್ತು ಅದು ಈ ಪರಂಪರೆಯ ಆಳವಾದ ಅರಿವಿನಿಂದ ನಿಷ್ಪನ್ನವಾದದ್ದು.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಗಮನಿಸಬೇಕಾದ ಮತ್ತೊಂದು ಲಕ್ಷಣವೆಂದರೆ, ಅದರ ಕಥನ ಕಾವ್ಯಪದ್ಧತಿಯ ನಿರಂತರತೆ. ಪಂಪನಿಂದ ಹಿಡಿದು ಮುದ್ದಣನವರೆಗೆ ಚಾಚಿಕೊಂಡ ಈ ಕಥನಕಾವ್ಯಪರಂಪರೆ, ಹತ್ತೊಂಬತ್ತು ಇಪ್ಪತ್ತನೆಯ ಶತಮಾನದಲ್ಲಿ ಪಶ್ಚಿಮದ ಕಾವ್ಯ ಪ್ರೇರಣೆಗಳಿಂದ ವ್ಯಕ್ತಿನಿಷ್ಠ ಕಾವ್ಯಪರಂಪರೆಯ ಕಡೆಗೆ ಹೊರಳಿತು. ಇದರಿಂದಾಗಿ ಕನ್ನಡಕಾವ್ಯ ಭಾರತೀಯ ಮಹತ್‌ಸಾಹಿತ್ಯ ಪರಂಪರೆಯೊಂದಿಗೆ ತನ್ನ ಸಂಬಂಧವನ್ನು ಕಳಚಿಕೊಂಡದ್ದು ಮಾತ್ರವಲ್ಲ, ಪ್ರಾಚೀನ ಕನ್ನಡ ಸಾಹಿತ್ಯಪರಂಪರೆಗೂ  ವಿದಾಯ ಹೇಳಿತು. ಅಷ್ಟೆ ಅಲ್ಲ ಕನ್ನಡವು ತನ್ನ ನೆರೆಹೊರೆಯ ಸೋದರ ಭಾಷೆಗಳೊಂದಿಗೆ ಪ್ರಾಸಂಗಿಕವಾಗಿ ನಡೆಯಿಸುತ್ತಿದ್ದ ಸಂವಾದವೂ ಸ್ಥಗಿತವಾಯಿತು. ನವೋದಯ ಕಾವ್ಯ ಸಂದರ್ಭದ ಈ ಹಂತದಲ್ಲಿ ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ ಕುವೆಂಪು, ಪಶ್ಚಿಮದ ಕವಿಗಳನ್ನು ತಮ್ಮ ಅಧ್ಯಯನದ ಮೂಲಕ ಅರಗಿಸಿಕೊಂಡ ಕುವೆಂಪು, ಪಶ್ಚಿಮದ ಸಾಹಿತ್ಯಕ್ಕೆ ಸವಾಲಾಗುವಂತೆ, ಅಲ್ಲಿನ ಸಮಸ್ತ ಪ್ರಕಾರಗಳನ್ನೂ ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ತಂದರು. ಈ ಪ್ರಕಾರಗಳೊಳಗಿನ ಅನುಭವದ ದ್ರವ್ಯ ಅವರದೇ ಆಗಿದ್ದರೂ, ಅವರ ಕಾವ್ಯ ಮತ್ತು ಕಾದಂಬರಿಗಳ ರೂಪ ಇಂಗ್ಲಿಷ್ ಮತ್ತು ಯೂರೋಪಿನ (ಅದರಲ್ಲೂ ರಷ್ಯದ) ಮಾದರಿಗಳೇ ಆಗಿದ್ದವು. ಆದರೆ ಪ್ರಾಚ್ಯ-ಪಾಶ್ಚಾತ್ಯ ಸಾಹಿತ್ಯ ಮತ್ತು ತತ್ವಜ್ಞಾನ ಪರಂಪರೆಯನ್ನೂ, ಜಾಗತಿಕ ಸಮಾಜವಾದೀ ಚಿಂತನೆ ಹಾಗೂ ವಿಜ್ಞಾನವನ್ನೂ ತಮ್ಮ ವ್ಯುತ್ಪತ್ತಿಯ ಒಂದು  ಭಾಗವನ್ನಾಗಿ ಮಾಡಿಕೊಂಡ ಕುವೆಂಪು, ಕಾವ್ಯ-ಕಾದಂಬರಿ-ನಾಟಕ-ಸಾಹಿತ್ಯ ವಿಮರ್ಶೆಗಳಷ್ಟಕ್ಕೆ ನಿಲ್ಲದೆ, ಶ್ರೀರಾಮಾಯಣದರ್ಶನದಂಥ ಮಹಾಕಾವ್ಯ ನಿರ್ಮಿತಿಗೆ ಕೈ ಹಾಕುವುದರ ಮೂಲಕ, ಮತ್ತೆ ಕನ್ನಡದ ಕಥನ ಪರಂಪರೆಗೆ ಹಾಗೂ ಅದಕ್ಕೆ ಹಿನ್ನೆಲೆಯಾದ ಭಾರತೀಯ ಮಹತ್ ಕಾವ್ಯಪರಂಪರೆಗೆ ಮರಳಿದ್ದು ಮಹತ್ವದ ವಿಚಾರವಾಗಿದೆ. ಈ ಹಂತದಲ್ಲಿ ನಿಜವಾದ ದೊಡ್ಡಕವಿ ಮಾಡಬೇಕಾಗಿದ್ದ ಕೆಲಸಗಳು ಎರಡು: ಒಂದು ಇಂಗ್ಲಿಷಿನ ಮಾದರಿಗಳಿಂದ ಬಿಡಿಸಿಕೊಂಡು ಮತ್ತೆ ಕನ್ನಡ ಸಾಹಿತ್ಯ ಪರಂಪರೆಗೆ ಹಿಂದಿರುಗುವುದು;  ಎರಡು, ಕನ್ನಡಕ್ಕೂ ಭಾರತೀಯ ಮಹತ್‌ಕಾವ್ಯ ಪರಂಪರೆಗೂ ಕಳಚಿಕೊಂಡು ಹೋದ ಸಂಬಂಧವನ್ನು ಮತ್ತೆ ಜೋಡಿಸುವುದು ಅಥವಾ ಅದರೊಂದಿಗಿನ ಸಂವಾದವನ್ನು ಪುನರುಜ್ಜೀವನಗೊಳಿಸುವುದು. ಕುವೆಂಪು ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಬರೆಯುವುದರ ಮೂಲಕ, ಇದನ್ನು ಸಾಧಿಸಿದ್ದಾರೆ. ಇದರಿಂದಾಗಿ ರಾಮಾಯಣ ಕಾವ್ಯಗಳ ಪರಂಪರೆಯನ್ನು ಕುವೆಂಪು ಕನ್ನಡದಲ್ಲಿ ಮುಂದುವರಿಸಿದ್ದು ಮಾತ್ರವಲ್ಲ, ಕನ್ನಡ-ಸಂಸ್ಕೃತ ಮತ್ತು ಪಾಶ್ಚಾತ್ಯ ಮಹಾಕಾವ್ಯಗಳ ಪರಿಚಯದಿಂದ ಮೈಗೂಡಿಸಿಕೊಂಡ ಜಾಗತಿಕ ಪ್ರಜ್ಞೆಯ ಬೆಳಕಿನಿಂದ, ವಾಲ್ಮೀಕಿ ರಾಮಾಯಣದ ಕಥೆಯನ್ನು ಇಪ್ಪತ್ತನೆಯ ಶತಮಾನದ ವ್ಯಾಖ್ಯಾನ ವನ್ನಾಗಿ ಮತ್ತು ಅದನ್ನೊಂದು ಪುನರ್ಭವ ಕೃತಿಯನ್ನಾಗಿ ಮಾಡಿದ್ದಾರೆ. ಇಪ್ಪತ್ತನೆಯ ಶತಮಾನಕ್ಕೆ ಹಿಂದಿನ ಕನ್ನಡ ಸಾಹಿತ್ಯದಲ್ಲಿ ರಾಮಾಯಣವನ್ನು ಕಥಾವಸ್ತುವನ್ನಾಗಿ ನಿರ್ವಹಿಸಿದ ಕೆಲವು ಕೃತಿಗಳು ಇರುವುವಾದರೂ, ಅವು ಯಾವೂ,  ಕುವೆಂಪು ಅವರ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯವು ಪಡೆದುಕೊಂಡ ಸಿದ್ಧಿಯನ್ನು ಗಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟೆ ಅಲ್ಲ ರಾಮಾಯಣದ ಪರಂಪರೆಯನ್ನು ಶೂದ್ರ ತಪಸ್ವಿ, ವಾಲ್ಮೀಕಿಯ ಭಾಗ್ಯ ಎಂಬ ನಾಟಕಗಳ ಮೂಲಕವೂ ಕನ್ನಡಕ್ಕೆ ತಂದ ಕುವೆಂಪು, ಮಹಾಭಾರತದ ಪರಂಪರೆಯನ್ನೂ, ಅವರ ಖಂಡ ಕಾವ್ಯವಾದ ‘ಚಿತ್ರಾಂಗದಾ’ದಲ್ಲಿ ಮತ್ತು ‘ಶ್ಮಶಾನ ಕುರುಕ್ಷೇತ್ರ’ ‘ಬೆರಳ್‌ಗೆ ಕೊರಳ್’ ‘ಕಾನೀನ’ ಇಂಥ ನಾಟಕಗಳಲ್ಲಿ ವಿಸ್ತರಿಸಿದ್ದಾರೆ. ಹೀಗೆ ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿ ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮಹಾಭಾರತಗಳ ಪರಂಪರೆಯನ್ನು ಮುಂದುವರಿಸಿದ್ದಲ್ಲದೆ, ಅದನ್ನು ತಮ್ಮ ವೈಚಾರಿಕತೆಯ ಹಾಗೂ ದರ್ಶನದ ಬೆಳಕಿನಲ್ಲಿ ಚಿಕಿತ್ಸೆಗೆ ಮತ್ತು ಪುನರ್‌ವ್ಯಾಖ್ಯಾನಕ್ಕೆ ಗುರಿಪಡಿಸಿದ ಕುವೆಂಪು ಅವರ ಈ ಪ್ರಯೋಗ ಪರಿಣತಿ ಒಬ್ಬ ಶ್ರೇಷ್ಠ ಸೃಜನಶೀಲ ಲೇಖಕ ತನ್ನ ಪರಂಪರೆಯೊಂದಿಗೆ, ನಡೆಯಿಸಿದ ಮತ್ತು ನಡೆಯಿಸಬೇಕಾದ ಸಂವಾದ ಹಾಗೂ ಅನುಸಂಧಾನದ ನಿದರ್ಶನವಾಗಿದೆ.

* * *

 


* ಶ್ರೀರಾಮಾಯಣದರ್ಶನಂ – ಮಹಾಕಾವ್ಯದ ಮೊದಲಲ್ಲಿ ಕುವೆಂಪು ಮಾಡುವ ಈ ಕೆಳಗಿನ ಪೂರ್ವ ಕವಿಸ್ಮರಣೆ, ಪ್ರಾಚೀನ ಕನ್ನಡ ಕವಿಗಳ ಸತ್ಕವಿಪ್ರಶಂಸೆಯ ಪುನರಾವರ್ತನೆಯಂತೆ ತೋರಿದರೂ, ಇದು ಅವುಗಳಿಗಿಂತ ಭಿನ್ನವಾಗಿ ಕುವೆಂಪು ಅವರಿಗಿದ್ದ ಜಾಗತಿಕ ಪರಂಪರೆಯ ಪ್ರಜ್ಞೆಗೆ ಕನ್ನಡಿ ಹಿಡಿಯುತ್ತದೆ:

ಹೋಮರಗೆ ವರ್ಜಿಲಗೆ ಡಾಂಟೆ ಮೇಣ್ ಮಿಲ್ಟನಗೆ
ನಾರಣಪ್ಪಂಗೆ ಮೇಣ್ ಪಂಪನಿಗೆ, ಋಷಿವ್ಯಾಸ
ಭಾಸ ಭವಭೂತಿ ಮೇಣ್ ಕಾಳಿದಾಸಾದ್ಯರಿಗೆ,
ನರಹರಿ ತುಲಸಿದಾಸ ಮೇಣ್ ಕೃತ್ತಿವಾಸಾದಿ
ನನ್ನಯ್ಯ ಫಿರ್ದೂಸಿ ಕಂಬಾರವಿಂದರಿಗೆ,
ಹಳಬರಿಗೆ ಹೊಸಬರಿಗೆ ಹಿರಿಯರಿಗೆ ಕಿರಿಯರಿಗೆ
ಕಾಲದೇಶದ ನುಡಿಯ ಜಾತಿಯ ವಿಭೇದಮಂ
ಲೆಕ್ಕಿಸದೆ ಜಗತೀ ಕಲಾಚಾರ್ಯರೆಲ್ಲರ್ಗೆ
ಜ್ಯೋತಿಯಿರ್ಪೆಡೆಯಲ್ಲಿ ಭಗವದ್ ವಿಭೂತಿಯಂ
ದರ್ಶಿಸುತೆ, ಮುಡಿಬಾಗಿ ಮಣಿದು ಕೈಜೋಡಿಸುವೆ ನಾಂ’
(ಶ್ರೀರಾ.ದ. ೧-ಪಂ.೧೪೧-೧೫೦)