ನನ್ನನ್ನು ಕುವೆಂಪು ಅವರ ಬಳಿ ತಂದು ಬಿಟ್ಟವರು ಯಾರು? ಕವಿಗೆ ಕವಿ ಮಣಿವನ್‌! ಹೌದು ನಾನು ಕುವೆಂಪು ಅವರಿಗೆ ಮಣಿದುದ್ದರ ಹಿಂದೆ ಈಗ ಹಿಂತಿರುಗಿ ನೋಡಿದಾಗ, ಒಂದು ದೀರ್ಘ ವೃತ್ತಾಂತವೇ ರೂಪುಗೊಳ್ಳುತ್ತಿರುವಂತಿದೆ.

ನನಗಾಗ ನಾಲ್ಕರ ಪ್ರಾಯ. ನನ್ನ ಅಜ್ಜಿಯ ಊರಾದ ಕಾರ್ಕಳದ ಮನೆಯ ಹಿತ್ತಲಿನಲ್ಲಿ ನನ್ನ ಗೆಳತಿಯರೊಂದಿಗೆ ಸೇರಿಕೊಂಡು ಹಲಸಿನ ಮರದ ಬುಡದಲ್ಲಿ ತೂಗುತ್ತಿದ್ದ ಮಿಡಿಗಳನ್ನೆಲ್ಲಾ ಕಿತ್ತು ರಾಶಿ ಹಾಕಿ ತರಕಾರಿ ಮಾರುವವಳ ಆಟ ಆಡುತ್ತಿದ್ದೆ. ಯಾಕೋ ಅಲ್ಲಿಗೆ ಬಂದ ತನ್ನ ತಾಯಿ ಒಂದು ಕ್ಷಣ ಹೌಹಾರಿ ಏನೂ ಮಾಡಲಾಗದೆ ಅಪಾರ ಅಸಹಾಯಕತೆಯಿಂದ ಆ ಮಿಡಿಗಳ ರಾಶಿ ನೋಡಿ, ಮಿಡುಕಿ ಮಿಡಿಗೊಂದರಂತೆ ನನಗೆ ಏಟನ್ನು ನೀಡಿದರು! ನಾನು ಅಳುತ್ತಾ ‘ನನಗೇನೂ ಈ ಮಿಡಿಗಳು ಬೇಕಾಗಿಲ್ಲ. ಬೇಕಾದರೆ ವಾಪಸ್ಸು ಮರಕ್ಕೇ ಅಂಟಿಸು’ ಎಂದು ಮಾರುತ್ತರ ನೀಡಿದೆ. ನನ್ನೊಳಗಣ ಕವಿಯೆ ಈ ಮಾತುಗಳನ್ನು ಆಡಿಸಿರಬೇಕು! ಅದಕ್ಕೆ ಸಿಕ್ಕ ಬಹುಮಾನವೆಂದರೆ ಮತ್ತೆ ಮಳ್ಳುಕಂಟಿಯಿಂದ ನಾಲ್ಕು ಏಟು. ನನ್ನೊಳಗಿನ ಕವಿಯೇ ನನ್ನನ್ನು ಕುವೆಂಪು ಅವರ ಬಳಿ ಕರೆತಂದ ಎಂದು ನಂಬೋಣವೇ?

ಇಲ್ಲ …. ಇಲ್ಲ… ಇರಲಿಕ್ಕಿಲ್ಲ … ಹಾಗಾದರೆ?

ಇನ್ನೂ ಒಂದು ವರುಷ ಮುಂದೆ ಹೋದರೆ… ನನಗಾಗ ಐದರ ಪ್ರಾಯ. ಆಗತಾನೆ ಸ್ಪಷ್ಟವಾಗಿ ಮಾತಾಡಲು ಪ್ರಶ್ನೆಗಳನ್ನು ಕೇಳಲು ಕಲಿತಿದ್ದ ನಾನು. ನಮ್ಮ ಮನೆಯ ಹಜಾರದಲ್ಲಿ ಎತ್ತರದಲ್ಲಿ ತೂಗು ಹಾಕಿದ್ದ ಎರಡು ಪಟಗಳನ್ನು ಕುರಿತಾಗಿ ಪ್ರತಿದಿನವೂ ನನ್ನ ಅಜ್ಜಿಯನ್ನು, ಅದು ಯಾರು ಎಂದು ಕೇಳುತ್ತಿದೆ. ಆ ಪಟದಲ್ಲಿದ್ದವರು ಯಾರು ಎಂದು ಈ ಮೊದಲು ಅಜ್ಜಿಯ ಮೂಲಕ ತಿಳಿದುಕೊಂಡಿದ್ದರೂ ಪ್ರಶ್ನೆ ಕೇಳುವುದಕ್ಕಾಗಿಯೇ ನಾನು ಕೇಳುತ್ತಿದ್ದ ಪ್ರಶ್ನೆಯದು! ನನ್ನ ಅಜ್ಜಿ ಸಾವಧಾನವಾಗಿ, ರಾಮಕೃಷ್ಣ ಪರಮಹಂಸ… ವಿವೇಕಾನಂದ… ಎನ್ನುತ್ತಿದ್ದರು. ತುಂಡು ಬಟ್ಟೆಯನ್ನುಟ್ಟು, ಹೆಗಲ ಮೇಲೆ ಬೈರಾಸು ಹೊದ್ದು ಸಿದ್ಧಾಸನ ಹಾಕಿ ಕುಳಿತ ಪರಮಹಂಸ, ಕೈಕಟ್ಟಿಕೊಂಡ ಭಂಗಿಯಲ್ಲಿರುವ ವಿವೇಕಾನಂದ ಈ ಪಟಗಳು ಈ ಹೊತ್ತಿಗೂ ನನ್ನ ಕಣ್ಣಲ್ಲಿ ಇವೆ. ಅರ್ಧರಾತ್ರಿಯಲ್ಲಿ ಎದ್ದು ಚಾಂಡಾಲನ ಮನೆಯನ್ನು ಯಾರಿಗೂ ತಿಳಿಯದಂತೆ ಪ್ರವೇಶಿಸಿ, ಅವನ ಕಕ್ಕಸ್ಸು ಮನೆಯನ್ನು ಗುಡಿಸಿ, ತಮ್ಮ ಕೇಶರಾಶಿಯಿಂದ ಆ ಸ್ಥಳವನ್ನು ಒರೆಸಿದ, ದೀನರಲ್ಲಿ ದೀನರಾಗಬೇಕೆಂದೇ ಇಚ್ಚಿಸಿದ ‘ಪರಮಹಂಸ’ ಮತ್ತು ಅವರ ಪಾದಗಳನ್ನು ಶಿರದಲ್ಲಿ ಧರಿಸಿದ, ‘ನಾನು ಹೊಲೆಯನಾಗಿದ್ದರೆ ಇನ್ನೂ ಹೆಚ್ಚು ಸಂತೋಷಪಡುತ್ತಿದ್ದೆ’ ಎಂದ ವಿವೇಕಾನಂದ ಈ ಗುರುಶಿಷ್ಯರ ಭಲೇ ಜೋಡಿಯೇ ನನ್ನನ್ನು ಇನಿತಿನಿತಾಗಿ ಶ್ರೀ ಕುವೆಂಪು ಅವರತ್ತ ಕರೆದೊಯ್ದಿರಬಹುದು..?

ಇಲ್ಲ …. ಇಲ್ಲ…. ಇರಲಿಕ್ಕಿಲ್ಲ… ಹಾಗಾದರೆ?

……. ಆ ಮರವೇ ನನ್ನನ್ನು ಅವರತ್ತ ಕರೆದೊಯ್ದಿರಬಹುದು. ಹೌದು ಅದೇ ಮರ… ಆಕಾಶಮಲ್ಲಿಗೆಯ ಮರ…

ನಾನು ಇಡಿಯಾಗಿ ನ್ನನ ಬಾಲ್ಯವನ್ನು ಹದಿಹರಯವನ್ನೂ ಕಳೆದಿದ್ದು ಬೆಟ್ಟ, ಗುಡ್ಡ ಕಾಡುಗಳಿಂದ ಆವೃತವಾಗಿದ್ದ ಶಿವಮೊಗ್ಗೆಯಲ್ಲಿ. ನಾನು ಓದುತ್ತಿದ್ದ ಶಿಶುವಿಹಾರದ ಮಗ್ಗುಲಲ್ಲೇ ಒಂದು ಎಕರೆ ವಿಸ್ತಾರದಲ್ಲಿ ಡಿ.ಸಿ. ಬಂಗಲೆಯಿತ್ತು. ಅಲ್ಲೂ ಹೆಚ್ಚು ಕಡಿಮೆಯೆಂದರೆ ನಲವತ್ತು-ಐವತ್ತು ಮರಗಳಿದ್ದವು. ಮರಗಳ ನಡುವೆ ಎಲ್ಲೋ ಮೂಲೆಯಲ್ಲಿ ಒಂದು ಬಂಗಲೆ! ನನಗೆ ಅಚ್ಚರಿಯೂ, ಅಲ್ಲಿಗೆ ಹೋಗಿ ಆಟವಾಡಬೇಕೆಂಬ ಆಸೆಯೂ ಆಗುತ್ತಿತ್ತು. ಅಲ್ಲಿದ್ದುದು ಹೆಚ್ಚು ಪಾಲು ಹುಣಿಸೇ ಮರಗಳಾದ್ದರಿಂದ ಜೊತೆ ಜೊತೆಗೆ ಭಯವೂ ಆಗುತ್ತಿತ್ತು. ಹಾಗಾಗಿ ನಂತರದ ದಿನಗಳಲ್ಲೂ ಆ ಮರಗಳ ಬಗ್ಗೆ ನನ್ನ ಕುತೂಹಲ ತಣಿಯಲಿಲ್ಲ. ಅನಂತರ ಹೈಸ್ಕೂಲು, ಕಾಲೇಜಿಗೆ ಹೋಗುವ ದಾರಿಯಲ್ಲೂ ಮರಗಳು ಬೇಸಿಗೆಯಲ್ಲಂತೂ ಹಳದಿ, ಕೆಂಪು, ನೇರಳೆ ಬಣ್ಣದ ಹೂಗಳು, ನನಗೆ ಚೆನ್ನಾಗಿ ನೆನಪಿದೆ. ನೆಹರು ಕ್ರೀಡಾಂಗಣದ ದಕ್ಷಿಣ ದಿಕ್ಕಿಗೆ ಮುಗಿಲ ಮುಟ್ಟಿ  ಬೆಳೆದು ನಿಂತಿರುವ ಆಕಾಶಮಲ್ಲಿಗೆಯ ಮರ ಇವತ್ತಿಗೂ ಹಾಗೆಯೇ ಇದೆ. ಏನಿಲ್ಲವಾದರೂ ಪ್ರತಿದಿನ ನಾನು ಆ ಮರವನ್ನು ನೋಡುತ್ತಿದೆ. ಮಲ್ಲಿಗೆಯ ಬಣ್ಣದ ಉದ್ದನೆಯ ತೊಟ್ಟಿನ ಅದರ ಹೂವುಗಳನ್ನು ಆರಿಸಿ ನಾನು ನನ್ನ ಗೆಳತಿಯರೂ ಪೀಪಿ ಮಾಡುತ್ತಿದ್ದೆವು. ಹೆಣೆದು ಮುಡಿಯುತ್ತಿದ್ದವು. ಗಡಿಬಿಡಿಯಲ್ಲಿ ಶಾಲೆಗೆ ಹೊರಟಿದ್ದಾದರೆ ಒಂದೆರಡು ಹೂಗಳನ್ನಾದರೂ ಆರಿಸಿ ಕೈ ಚೀಲಕ್ಕೆ ತುಂಬುತ್ತಿದ್ದೆವು. ಕುವೆಂಪು ಬಗ್ಗೆ ಅವರ ಬರಹಗಳ ಬಗ್ಗೆ ನನ್ನ ಆಸಕ್ತಿ, ಆಲೋಚನೆಗಳಿದ್ದಲ್ಲಿ, ಅದರ ಹುಟ್ಟು ಆ ಮರಗಳ ನಾಡಿನಲ್ಲೆ. ಅದರ ಹಾಡುಗಳನ್ನೂ ಅದರ ಜಾಡುಗಳನ್ನೂ ನಾನೇನಾದರೂ ಹಿಡಿಯಲು ಹೋಗುವುದಾದರೆ ಅದು ಆ ಮರಗಳ ನಾಡಿನಲ್ಲೆ.. ಹೈಸ್ಕೂಲಿನಲ್ಲಿ ಅಂಕಗಳ ಆಸೆಯಿಂದ ಸಂಸ್ಕೃತವನ್ನು ಒಪ್ಪಿಕೊಂಡಿದ್ದರಿಂದ ಕನ್ನಡದ ಕವಿಗಳನ್ನು ಶಾಲೆಯಲ್ಲಿ, ಕಾಲೇಜಿನಲ್ಲಿ ಓದುವ ಕೇಳುವ ಅವಕಾಶ ಶಾಶ್ವತವಾಗಿ ತಪ್ಪಿಹೋಯಿತು. ಆದರೂ ಒಂದು ಅವಕಾಶವಿತ್ತು! ಅದೆಂದರೆ ಹೈಸ್ಕೂಲಿನಲ್ಲಿ ನಿತ್ಯ ಪ್ರಾರ್ಥನೆಗೆ ‘ಜಯಭಾರತ ಜನನಿಯ ತನುಜಾತೆ…’ ಹಾಡುತ್ತಿದ್ದೆವು. ಮೇಳದಲ್ಲಿ ಹಾಡುವಾಗ ತುಂಬಾ ಖುಷಿ ಕೊಡುತ್ತಿದ್ದ ಹಾಡದು. ‘ಜಯ ಸುಂದರ ನದಿ ವನಗಳ ನಾಡೆ’ ಎಂದೆಲ್ಲಾ ಹಾಡುವಾಗ ನನ್ನೂರಿನ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತಿತ್ತು. ಅದರ ಕರ್ತೃ ಕುವೆಂಪು ಎಂದು ಆದಾಗಲೇ ಕಿವಿಗೆ ಬಿದ್ದಿತ್ತು.

ನಾನು ಕುವೆಂಪುರವರನ್ನು ಮೊದಲನೆಯ ಸಲ ನೋಡಿದ್ದು ಎಂಟನೆಯ ಇಯತ್ತೆಯಲ್ಲಿ. ಅದೊಂದು ದಿನ ಇದ್ದಕ್ಕಿದ್ದ ಹಾಗೆ ನಮ್ಮನ್ನು ಸರತಿಯ ಸಾಲಿನಲ್ಲಿ ನಿಲ್ಲಿಸಿದರು. ನಾನಾಗ ಓದುತ್ತಿದ್ದದು ಶಿವಮೊಗ್ಗೆಯ ನ್ಯಾಷನಲ್‌ ಗರ್ಲ್ಸ್‌ ಹೈಸ್ಕೂಲಿನಲ್ಲಿ. ಪಕ್ಕದಲ್ಲೇ ಇದ್ದ ಕಮಲಾನೆಹರೂ ಕಾಲೇಜಿಗೆ ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಬಂದಿರುವರೆಂದು ಸಾಲಿನಲ್ಲಿದ್ದವರು ತಿಳಿಸಿದರು. ಸರಿ, ನಮ್ಮೆಲ್ಲರನ್ನೂ ಪಕ್ಕದಲ್ಲೇ ಇದ್ದ ಕಮಲಾ ನೆಹರೂ ಕಾಲೇಜಿಗೆ ಕರೆದೊಯ್ದು ಸಾಲಾಗಿ ಕುಳ್ಳಿರಿಸಿದರು.ಕುವೆಂಪುರವರೂ, ಸುಬ್ರಹ್ಮಣ್ಯಂರವರೂ ವೇದಿಕೆಯ ಮೇಲೆ ಆಸೀನರಾಗಿದ್ದರು. ನನ್ನ ಗಮನವೆಲ್ಲ ಸುಬ್ರಹ್ಮಣ್ಯರವರ ಮೇಲೆ ಇದ್ದುದರಿಂದ ನಾನು ಕುವೆಂಪುರವರನ್ನು ಅಷ್ಟಾಗಿ ಗಮನಿಸಲಿಲ್ಲವೆಂದೇ ಹೇಳಬೇಕು. ಕೊನೆಗೊಮ್ಮೆ ಅಲ್ಲಿದ್ದವರು ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಅಲ್ಲ, ಬರೀ ಸುಬ್ರಹ್ಮಣ್ಯಂ (ಈಗಿನ ಶಿವಮೊಗ್ಗ ಸುಬ್ಬಣ್ಣ) ಎಂದು ತಿಳಿದು ನಮ್ಮ ಉತ್ಸಾ ಠುಸ್ಸೆಂದಿತು. ಇಷ್ಟರ ನಡುವೆ ನಮ್ಮ ಶಾಲೆಯ ಹುಡಿಗಿಯೊಬ್ಬಳಿಂದ ಗಾಯನವಾಯಿತು-

ದೂರ… ಬಹುದೂರ…
ಅಲ್ಲಿಹುದೆಮ್ಮ ಊರ… ತೀರ….

ತದನಂತರ ಶಿವಮೊಗ್ಗ ಸುಬ್ಬಣ್ಣ ಅವರಿಗೆ ‘ಆನಂದಮಯ ಈ ಜಗ ಹೃದಯ..’ದ ಗಾಯನ. ನನಗೆ ನನ್ನ ಶಾಲೆಯ ಹುಡುಗಿ ಚೆನ್ನಾಗಿ ಹಾಡಿದ್ದಾಳೆ ಎಂದೆನಿಸಿತ್ತು. ನಾನೂ ತಕ್ಕ ಮಟ್ಟಿಗೆ ಹಾಡುತ್ತಿದ್ದನಾದ್ದರಿಂದ ಅವಳು ಹಾಡಿದ್ದನ್ನೇ ಅನುಕರಿಸಿ ‘ದೂರ… ದೂರ..’ ಎಂದು ಹಾಡನ್ನು ಒಳಗೊಳಗೆ ಗುಣು ಗುಣಿಸುತ್ತಿರಲು ಕುವೆಂಪುರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ‘ಇಷ್ಟ ಬಂದ ಹಾಗೆ ಹಾಡೋದಲ್ಲ…. ಭಾವ ಇರಬೇಕು, ಚಿತ್ರ ಮೂಡಬೇಕು, ಸುಬ್ಬಣ್ಣ ಹಾಡಿದರಲ್ಲ …. ಹಾಗೆ…’ ಅಂದರು.

ಆದಿಯಲ್ಲಿ ಹಾಡಿದ ಹುಡುಗಿಗೆ ಕೊಂಚ ಕಟುವಾಗಿಯೇ ಬೈದರು! ನನಗೆ, ಆಕೆ ಚೆನ್ನಾಗಿಯೇ ಹಾಡಿದ್ದಾಳೆ, ಇವರಿಗೇಕೆ ಹಿಡಿಸಲಿಲ್ಲ? ಎಂಬ ಅಚ್ಚರಿ! ನಿಷ್ಕಾರಣವಾಗಿ ಹುಡುಗಿಗೆ ಬೇಕೆಂದೇ ಬೈಯುತ್ತಿದ್ದಾರೆ ಎಂಬ ಅನುಮಾನ. ನಾನು ಅವರ ನಿಲುವನ್ನು ಕಣ್ಣು ತುಂಬಿಕೊಳ್ಳುತ್ತಾ ಈ ಮುದುಕನನ್ನು ಮೆಚ್ಚಿಸುವುದು ಕಷ್ಟ ಅಂದುಕೊಂಡೆ! ಆ ಪುಟ್ಟ ಹುಡುಗಿಗೆ ಬಯ್ಯಬಾರದಿತ್ತು. ಅದೂ ಸಭೆಯಲ್ಲಿ, ಎಲ್ಲರ ಎದುರಿಗೆ ಎಂದೇ ನನ್ನ ತರ್ಕವಾಗಿತ್ತು. ಯಾಕೋ ಒಮ್ಮೆಗೆ ಕುವೆಂಪುರವರ ಬಗ್ಗೆ ಭಯವೂ ಮೂಡಿತು. ನಾವು ಕುವೆಂಪುರವರಿಗೂ, ಸುಬ್ಬಣ್ಣ ಅವರಿಗೂ ಶಾಪ ಹಾಕುತ್ತಾ (ಸುಬ್ಬಣ್ಣ ಚೆನ್ನಾಗಿ ಹಾಡಿದ್ದರಿಂದ ತಾನೇ ಹುಡುಗಿ ಬೈಗಲ ತಿಂದದ್ದು!) ಅಧ್ಯಾಪಕರ ಕಣ್ಣು ತಪ್ಪಿಸಿ ಓಡಲು ಹೊಂಚು ಹಾಕತೊಡಗಿದವು; ಸಭೆ ಮುಕ್ತಾಯವಾಗುವ ಮೊದಲೇ ಅಲ್ಲಿಂದ ಕಾಲುಕಿತ್ತಿದ್ದೆವು.

ಇದಾದ ಸ್ವಲ್ಪ ದಿನಗಳಲ್ಲೇ… ಶಾಲಾ ವಾರ್ಷಿಕೋತ್ಸವದಲ್ಲಿ ನನಗೆ ಭಾವಗೀತೆ ಸ್ಪರ್ಧೆಯಲ್ಲಿ ಕುವೆಂಪುರವರ ‘ನನ್ನ ಮನೆ’ ಕವನ ಸಂಕಲನ ಬಹುಮಾನ ರೂಪದಲ್ಲಿ ಸಂದಿತು. ಆಟೋಟ ಸ್ಪರ್ಧೆಯ್ಲಲಿ ವಿಜೇತರಾದವರಿಗೆ ಪ್ಲಾಸ್ಟಿಕ್‌ ತಟ್ಟೆ, ಲೋಟ, ಡಬ್ಬ ಇತ್ಯಾದಿ… ಹಾಡು, ನೃತ್ಯ ಇತ್ಯಾದಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪುಸ್ತಕ ರೂಪದ ಬಹುಮಾನ. ನನಗೆ ಪುಸ್ತಕ ರೂಪದ ಬಹುಮಾನ ಕೊಟ್ಟಾಗ ಅಳುವೇ ಬಂದಿತ್ತು! ನನ್ನ ಗೆಳತಿಯರ ಕೈಯಲ್ಲಿದ್ದ ಪ್ಲಾಸ್ಟಿಕ್‌ ಡಬ್ಬ, ತಟ್ಟೆ ಇತ್ಯಾದಿ ನೋಡಿ… ನನಗೂ ಅಂತಾದ್ದೇ ಒಂದು ಬಹುಮಾನ ಬರಬಾರದಿತ್ತೇ ಎಂದು ಅಲವತ್ತುಕೊಂಡಿದ್ದೆ! ಇದನ್ನು ನನ್ನ ಅಜ್ಜಿಯ ಹತ್ತಿರ ತೋಡಿಕೊಂಡಾಗ ಆಕೆ ಪುಸ್ತಕದ ಮಹತ್ವ ತಿಳಿಸಿ ‘ಪ್ಲಾಸ್ಟಿಕ್‌ ತಟ್ಟೆ ನಾಯಿಗೆ ಅನ್ನ ಹಾಕೋಕೆ ಆದೀತು, ಪುಸ್ತಕ ಜ್ಞಾನವನ್ನು ಹೆಚ್ಚಿಸುತ್ತದೆ. ಎಷ್ಟು ಪದ್ಯಗಳಿವೆ ನೋಡು ಈ ಪುಸ್ತಕದಲ್ಲಿ… ಎಲ್ಲಿ ಓದಿ ಹೇಳು ನೋಡೋಣ’ ಎಂದು ಸ್ವಲ್ಪ ಉತ್ಪ್ರೇಕ್ಷೆಯಿಂದಲೇ ಪುಸ್ತಕವನ್ನು ಹೊಗಳಿ ನನ್ನನ್ನು ಹುರುದಿಂಬಿಸಿದರು. ನಾನು ದಾರಿಗಾಣದೆ ಪುಸ್ತಕದ ಹಾಳೆಗಳನ್ನು ತಿರುವಿ ಅದರ ಮೊದಲ ಪದ್ಯವಾದ ‘ಕನ್ನಡವನ್ನು ಮಗ ನನಗೆ ತಿಳಿದಂತೆ ರಾಗ ಹಾಕಿ ನನ್ನ ಅಜ್ಜಿಗೆ ಹಾಡಿ ತೋರಿಸಿದೆ.

ಕನ್ನಡ ಎನೆ ಕುಣಿದಾಡುವುದೆನ್ನದೆ,
ಕನ್ನಡ ಎನೆ ಕಿವಿ ನಿಮಿರುವುದು!
ಕಾಮನ ಬಿಲ್ಲನು ಕಾಣುವ ಕವಿಯೋಲು
ತೆಕ್ಕನೆ ಮನ ಮೈಮರೆಯುವುದು.

ಕೊಂಕಣಿ ಮಾತನಾಡುವ ಹುಡುಗಿಗೆ ಕುವೆಂಪುರವರು ಕನ್ನಡದ ದೀಕ್ಷೆ ಕೊಟ್ಟ ಪರಿ ಇದೆನ್ನಬಹುದೆ? ಸಂಕಲನದ ಇತರೆ ಪದ್ಯಗಳಾದ ಕಾಮನಬಿಲ್ಲು ಕಮಾನು ಕಟ್ಟಿದೆ, ನನ್ನ ಮನೆ, ಒಡಗೆಗಳು, ಮೂರ್ತಿಯಚಂದ್ರನ್ನೊಳಗೆ ಇಷ್ಟಿಷ್ಟೇ ಇಳಿದವು. ಅದೆಷ್ಟೋ ತಿಂಗಳುಗಳ ಕಾಲ ಪುಸ್ತಕ ಚಿಂದಿಯಾಗುವ ತನಕ ನಾನು ಆ ಕವನಗಳನ್ನು ಹಾಡಿಕೊಂಡಿದ್ದುಂಟು.. ಅಷ್ಟ ತನಕ ಪಠ್ಯಪುಸ್ತಕಗಳಲ್ಲಿ ಬಿಡಿಬಿಡಿಯಾಗಿ ಪದ್ಯ ಓದಿದ್ದೇನೆ ಹೊರತು ಇಡಿಯಾಗಿ ಕವನಗಳು ಇರುವ ಪುಸ್ತಕವನ್ನು ನಾನು ನೋಡಿರಲಿಲ್ಲ. ಬರೀ ಪದ್ಯಗಳಿಗಾಗಿಯೇ ಪುಸ್ತಕ ಮಾಡುತ್ತಾರೆಯೇ? ಎಂದು ಸೋಜಿಗಗೊಂಡಿದ್ದೆ. ಗುಂಗುರು ಕೂದಲಿನ, ಬಿಳಿ ಜುಬ್ಬಾ-ಪೈಜಾಮದ, ಎತ್ತರದ ನಿಲುವಿನ, ಕೀಚಲು ದನಿಯ ಕುವೆಂಪು ನೆನಪಾದರು.

‘ದೂರ… ಬಹುದೂರ…’ ಹಾಡು ನೆನಪಾಯಿತು! ಒಂದು ರೀತಿಯ ಸಂಮಿಶ್ರ ಭಾವ ಮೂಡಿಬಂತು. ಚಿತ್ರ ಮೂಡವು ಹಾಗೆ, ಭಾವ ಹೊಮ್ಮುವ ಹಾಗೆ ನನ್ನ ಮನೆಯ ಕವನಗಳನ್ನು ಹಾಡಲು ನಾನು ಪ್ರಯತ್ನ ಪಟ್ಟಿದ್ದುಂಟು ನಿಜ! ಇಷ್ಟು ಸಾಲದು ಎಂದು ನಾನು, ನನ್ನ ತಮ್ಮಂದಿರು ಸೇರಿಕೊಂಡು ‘ನನ್ನ ಮನೆ’ ಕವನವನ್ನು ನೃತ್ಯರೂಪದಲ್ಲಿ ಅಭಿನಯಿಸಿದೆವು. ಇದೀಗ ಮೂವತ್ತು ವರ್ಷಗಳ ನಂತರ ಈ ಘಟನೆಯನ್ನು ಮೆಲುಕು ಹಾಕಿದಾಗ ‘ನುಬಂಧ’ ಎಂದರೆ ಇದಲ್ಲವೇ ಎಂದು ಆಶ್ಚರ್ಯವಾಗುತ್ತದೆ!

ನನ್ನ ಮನೆ ಪುಸ್ತಕ ಚಿಂದಿಯಾಗಿ ನನ್ನ ನಾಲಗೆಯ ಮೇಲಿಂದ ಆ ಕವನಗಳು ಇನ್ನೇನು ಮರೆಯಾಗುತ್ತವೆ ಎನ್ನುವಷ್ಟರಲ್ಲಿಯೇ ರಕ್ತಾಕ್ಷಿಯ ಆಗಮನವಾಯಿತು. ನಾನು ಪಿಯುಸಿಯಲ್ಲಿದ್ದಾಗ ನನ್ನ ಸೀನಿಯರ್‌ ಒಬ್ಬಳು ಪದೇ ಪದೇ ರಕ್ತಾಕ್ಷಿಯ ಒಂದು ಭಾಗವನ್ನು ಏಕಪಾತ್ರಾಭಿನಯದಲ್ಲಿ ಅಭಿನಯಿಸುತ್ತಿದ್ದಳು. ನನ್ನಲ್ಲಿ ರಕ್ತಾಕ್ಷಿಯ ರೋಮಾಂಚನ ಇನ್ನೂ ಹಸಿಹಸಿಯಾಗಿದದಾಗಲೇ ಮತ್ತೊಂದು ಘಟನೆ ಸಂಭವಿಸಿತು. ನನ್ನ ಸ್ನೇಹಿತೆಯ ಸಹೋದರನೊಬ್ಬ ಕುವೆಂಪು ಪ್ರಣೀತವಾದ ‘ಮಂತ್ರಮಾಂಗಲ್ಯ’ದ ರೀತಿಯಲ್ಲಿ ಸರಳ ವಿವಾಹವಾದ್ದರಿಂದ ಕುವೆಂಪು ವರಲ್ಲಿ ಕೇವಲ ಕವಿಯನ್ನು ನೋಡುತ್ತಿದ್ದ ಕಣ್ಣುಗಳು ಬೇರೇನನ್ನೋ ಅರಸತೊಡಗಿದವು. ಇದು ಮುಂದೆ ನನ್ನ ವಿವಾಹದ ಸಂದರ್ಭದಲ್ಲೂ ಧೈರ್ಯದ ಹೆಜ್ಜೆಗಳನ್ನಿಡಲು ಪ್ರೇರೇಪಿಸಿತಷ್ಟೇ.

ಸಾಹಿತ್ಯ ಲೋಕಕ್ಕೆ ಅದೇ ತಾನೆ ಕಣ್ಣು ತೆರೆಯತೊಡಗಿದದ ನನಗೆ, ನನ್ನದೊಂದು ಸಣ್ಣಕತೆಗೆ ಶಿವಮೊಗ್ಗೆಯ ಕನ್ನಡ ಸಂಘ ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ ಎರಡನೆ ಬಹುಮಾನ ಲಭಿಸಿ ಪುಸ್ತಕ ರೂಪದ ಕೊಡುಗೆಯಾಗಿ ಕೈ ಸೇರಿದ್ದು, ಕುವೆಂಪುರವರ ವಿಚಾರ ಕ್ರಾಂತಿಗೆ ಆಹ್ವಾನ. ನನಗಾಗ ಹದಿನೆಂಟು ವಯಸ್ಸು, ಹೊಸ ಹುಮ್ಮಸ್ಸು, ‘ಅಕ್ಷರ’ ಬಹುಮೂಲ್ಯ ವಸ್ತು ಎಂದು ನಾನು ತಿಳಿದಿದ್ದ ಕಾಲವದು. ಸಾಹಿತ್ಯ ದೊಡ್ಡದು ಎಂಬ ನಂಬುಗೆಯ ನನ್ನಲ್ಲಿ ಸಾಹಿತಿಯಾಗಬೇಕೆಂಬ ಆಕಾಂಕ್ಷೆ ಮೊಳೆಯುತ್ತಿದ್ದ ಕಾಲವದು. ನನ್ನ ಅಲ್ಪಮತಿಯನ್ನು ತಿಕ್ಕಿ ತೀಡಿದ ಪುಸ್ತಕ ಅದೇ ಆ ವಿಚಾರಕ್ರಾಂತಿಗೆ ಆಹ್ವಾನ ಅಂದು ನನ್ನ ಕೈ ಸೇರದೆ ಹೋಗದಿದ್ದರೆ ಇಂದು ನಾನು ಏನಾಗಿರುತ್ತಿದ್ದೇನೋ ಏನೋ ಊಹಿಸಲೂ ಆಗುತ್ತಿಲ್ಲ! ಜಾತಿ, ಮತ, ತಾರತಮ್ಯ, ಸಂಪ್ರದಾಯ, ಮೌಢ್ಯ, ಒಡವೆ, ವಸ್ತು, ಠೇಂಕಾರ, ಪ್ರದರ್ಶನ, ಪರನಿಂದೆ ಇವುಗಳಲ್ಲಿ ಮುಳುಗಿ ಹೋಗದಂತೆ ರಕ್ಷಿಸಿದ್ದೇ ಕುವೆಂಪುರವರ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ವಿಚಾರ ಕ್ರಾಂತಿಗೆ ಆಹ್ವಾನ, ಕಾರಂತರ ಬಾಳ್ವೆಯೇ ಬೆಳಕು, ಡಿವಿಜಿ ಅವರ ಬಾಳಿಗೊಂದು ನಂಬಿಕೆ ಪುಸ್ತಕಗಳು. ಇವತ್ತಿಗೂ ನಾನು ಸಂದರ್ಭ ಸಿಕ್ಕಾಗೆಲ್ಲಾ ಕಿರಿಯರಿಗೆ ಹೇಳುವುದು, ಈ ಪುಸ್ತಕಗಳನ್ನು ಓದಿ ಎಂದು. ಈ ಪುಸ್ತಕಗಳಿಂದ ಪ್ರಭಾವಿತಳಾಗಿ ನನ್ನ ಮತಿಯನ್ನು ಸಂಪೂರ್ಣವಾಗಿ ಕುವೆಂಪು-ಕಾರಂತರ ವಿಚಾರಧಾರೆಗಳಿಗೆ ಒಡ್ಡಿದೆ. ಪಿಯುಸಿಯಲ್ಲಿ ಪಠ್ಯವಾಗಿದ್ದ ಮುಲ್ಕರಾಜ್‌ ಆನಂದರ ದಿ ಅನ್‌ಟಚೆಬಲ್ ನನ್ನಲ್ಲಿ ವಿಪರೀತ ಹೊಯ್ದಾಟವನ್ನು ಉಂಟು ಮಾಡಿತ್ತು.

ಜಾತಿಭೇದ ಮಾಡುವುದು ದೊಡ್ಡ ಪಾಪ ಎಂಬ ಭಾವನೆ ಆ ಪುಸ್ತಕ ನನ್ನಲ್ಲಿ ಮೂಡಿಸಿತ್ತು. ಆ ದಿನಗಳಲ್ಲಿ ಸಾಹಿತಿಯಾಗಬೇಕೆಂಬ ಹಂಬಲ ನನ್ನಲ್ಲಿ ಎಷ್ಟಿತ್ತೆಂದರೆ ಐದು ರೂಪಾಯಿ ತೆತ್ತು ಶ್ರೀರಾಮಾಯಣ ದರ್ಶನಂ ಖರೀದಿಸಿ ಆ ಮಹಾಕಾವ್ಯವನ್ನು ಆದಿಯಿಂದ ಅಂತ್ಯದವರೆಗೆ ಪಠಣ ಮಾಡಿದ್ದೆ! ‘ಎದೆಯ ದನಿ’ಯನ್ನು ಆಲಿಸಬೇಕೆಂಬ ಕುವೆಂಪುರವರ ಮಾತು ಆ ದಿನಗಳಲ್ಲಿ ಯಾವಾಗಲೂ ನನ್ನಲ್ಲಿ ಅನುಕರಣಿಸುತ್ತಿತ್ತು. ಇಷ್ಟು ಸಾಲದು ಎಂದು ಆಗ ತೀರ್ಥಹಳ್ಳಿ ಸಮೀಪದ ಹುಂಚದಲ್ಲಿ ವಾಸವಾಗಿದ್ದ ನನ್ನ ಗೆಳತಿ ಶ್ರೀದೇವಿ, ಪದ್ಮಾಕ್ಷಿಯವರ ಜತೆಗೂಡಿ ತೀರ್ಥಹಳ್ಳಿ, ಕಲ್ಲುಸಾರ, ಸಿಬ್ಬಲುಗುಡ್ಡೆ, ಮೃಗವಧೆ ಮುಂತಾದವುಗಳಿಗೆ ಭೇಟಿಯಿತ್ತು, ಅಲ್ಲಿ ತುಂಗಾ ತೀರದಲ್ಲಿ ವಿಹರಿಸಿ ಕವಿಗಳಾದ ಆನಂದ-ಅನುಭೂತಿಗಳನ್ನು ನಮ್ಮದಾಗಿಸಿಕೊಳ್ಳಲು ಹೆಣಗಿದ್ದುಂಟು! ನವಿಲುಗುಡ್ಡದಿಂದ ಆರಿಸಿ ತಂದ ನವಿಲುಗರಿಗಳು ಈಗಲೂ ನನ್ನ ಬಳಿ ಇವೆ. ಹೂದಾನಿಯಲ್ಲಿ ಕುಳಿತಿರುವ ಆ ಗರಿಗಳು ಗಾಳಿಗೆ ಇಂತಿಷ್ಟೇ ಮೆಲ್ಲಗೆ ತೂಗಿ ನವಿಲುಗುಡ್ಡದ ನೆನಪಿಗೆ ಜೀವ ತುಂಬುವುದುಂಟು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದರೆ ಬಹುಶಃ ಇದೇ ಇರಬೇಕು!

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯ ದೇವಿ ನಮಗಿಂದು
ಪೂಜಿಸುವ ಬಾರ!

ದೇವರುಗಳ ವಿಷಯದಲ್ಲಿ ನಾನು ಭಾರಿ ಗೊಂದಲಕ್ಕೊಳಗಾದ ದಿನಗಳವು. ಆರ್ಯ ಸಮಾಜದ ಅನುಯಾಯಿಗಳಾಗಿದ್ದ ನನ್ನ ತಂದೆ ವಿಗ್ರಹರಾಧನೆಯ ವಿರೋಧಿಯಾಗಿದ್ದರು. ನಮ್ಮ ಮನೆಯಲ್ಲಿ ಯಾವ ದೇವರುಗಳ ವಿಗ್ರಹಗಳೂ ಇರಲಿಲ್ಲ. ಪೂಜೆಯೂ ಇಲ್ಲ. ಏನಿದ್ದರೂ ಧ್ಯಾನ, ಜಪ, ತಪ ಇತ್ಯಾದಿ. ನನ್ನ ಅಜ್ಜಿಯಂತೂ ರಮನ, ಪರಮಹಂಸ, ವಿವೇಕಾನಂದ ಇವರುಗಳು ದೇವರಿಗಿಂತ ದೊಡ್ಡವರು ಎನ್ನುತ್ತಿದ್ದಳು. ಆಕೆ ಸಾಕಷ್ಟು ಸಾಧುಸಂತರನ್ನು ಭೇಟಿ ಮಾಡಿದ್ದು, ಪುಟವರ್ತಿಯ ಸಾಯಿಬಾಬಾ ಬಗ್ಗೆ ‘ಆತನಿಗೆ ಸಿದ್ಧಿಯಿದೆ. ಆದರೆ, ಆತ ಯೋಗಿಯಲ್ಲ… ಪವಾಡಗಳಿಂದ ಏನೂ ಪ್ರಯೋಜನವಿಲ್ಲ… ಆತ್ಮ ಸಾಕ್ಷಾತ್ಕಾರ ಮುಖ್ಯ’ ಎನ್ನುತ್ತಿದ್ದಳು. ಈ ಹಿನ್ನಲೆ ಇದ್ದಾಗ್ಯೂ ನಾನು ನಾಲ್ಕನೆಯ ಇಯತ್ತೆಯಲ್ಲಿದ್ದಾಗ ನನ್ನ ತಂದೆಯವರ ಗಮನಕ್ಕೆ ಬಾರದಂತೆ ರಾಮ, ಕೃಷ್ಣ, ಶಿವ, ಗಣಪತಿ, ಷಣ್ಮುಖ, ವೆಂಕಟರಮಣ, ಲಕ್ಷ್ಮೀ, ಸರಸ್ವತಿ, ಪಾರ್ವತಿ ಇತ್ಯಾದಿ ಕ್ಯಾಲೆಂಡರ್‌ ದೇವಗುಳ ದಂಡನ್ನೇ ಕಲೆ ಹಾಕಿ ಅಡಿಗೆ ಮನೆಯ ಗೂಡಿನೊಳಗಿರಿಸಿದ್ದೆ. ನನ್ನ ತಂದೆ ಕೆಂಡಾಮಂಡಲವಾಗಿ ಕಾರ್ಯತಃ ಆ ದೇವ ದೇವತೆಗಳನ್ನು ಮನೆಯಿಂದ ಹೊರಗೆ ನೂಕಿ, ನನ್ನನ್ನೂ ಹೊರಗೆ ನೂಕುವ ಎಚ್ಚರಿಕೆ ನೀಡಿದ್ದರು. ನಾನು ನನ್ನ ತಂದೆಯನ್ನು ಪರಮಪಾಪಿಯೆಂದು ಬೈದುಕೊಂಡು ನಮ್ಮ ಮನೆ ‘ದೇವರಿಲ್ಲದ ಮನೆ’ ಎಂದೂ ಅದಕ್ಕೆ ನಮಗೆ ಬಡತನ, ಕಷ್ಟ, ಅನಾರೋಗ್ಯ ಇತ್ಯಾದಿಗಳು ಒದಗಿ ಬಂದಿವೆಯೆಂದೂ ನೊಂದುಕೊಂಡಿದ್ದೆ. ಬಗೆ ಹರಿಯದ ಸಮಸ್ಯೆಯಾಗಿ ನನ್ನನ್ನು ಕಾಡುತ್ತಿದ್ದ ಈ ದೇವರುಗಳ ಗೀಳು ಕುವೆಂಪುರವರ ‘ನೂಕಾಚೆ ದೂರ’ ಕವನದಿಂದ ತಾತ್ಕಾಲಿಕವಾಗಿ ಶಮನಗೊಂಡಿತ್ತು. ಕಾರಂತರ ‘ನಮ್ಮ ಅಳತೆ ಮೀರದ ದೇವರು’ ಕೂಡ ನನಗೆ ಹೊಸ ನೋಟ ನೀಡಿತ್ತು. ಇವತ್ತಿನವರೆಗೂ ಈ ದೇವರುಗಳ ಬಗ್ಗೆ ನಾನು ಸಂದೇಹವಾದಿಯೇ… ದೇವರುಗಳನ್ನು ಇಡುವುದು, ನೂಕುವುದು ನಿರಂತರವಾಗಿ ನಡೆದೇ ಇದೆ!

ಕುವೆಂಪುರವರ ಮಲೆಗಳಲ್ಲಿ ಮದುಮಗಳು ಹಾಗೂ ಕಾರಂತರು ಆ ಕಾಲದಲ್ಲೇ ಆಗಿದ್ದ ಅಂತರ್ಜಾತಿ ವಿವಾಹದ ಸಂಗತಿ, ನನ್ನನ್ನು ಜಾತಿ ಮೀರಿ, ಪ್ರೀತಿ ಸರಳವಾಗಿ ವಿವಾಹವಾಗಲು ಪ್ರೇರೇಪಿಸಿತಷ್ಟೇ… ಮದುವೆಯ ನಂತರ ಸಾಹಿತ್ಯಾಸಕ್ತ ಗೆಳೆಯರ ಬಳಗ ವಿಸ್ತರಿಸಿ ಕುವೆಂಪುರವರನ್ನು ಭಿನ್ನ-ವಿಭಿನ್ನ ದೃಷ್ಟಿಕೋನದಿಂದ ನೋಡುವ ಅವಕಾಶವೂ ಲಭಿಸಿತು. ನಾಗಭೂಷಣನ ಕೆಲವು ಗೆಳೆಯರು ಒಮ್ಮೊಮ್ಮೆ ಅಸಂಗತವಾಗಿ ಕುವೆಂಪು ಅವರ ಕಾವ್ಯವನ್ನು ಬೇಂದ್ರೆಯವರ ಕಾವ್ಯಕ್ಕೆ ಹೋಲಿಸಿ ಗೇಲಿ ಮಾಡುವುದುಂಟು. ನನಗಾಗ ಶಿವಮೊಗ್ಗೆಯ ಸುತ್ತಮುತ್ತಲೂ ಇನ್ನು ದಯನೀಯ ಸ್ಥಿತಿಯಲ್ಲಾದರೂ ಉಳಿದುಕೊಂಡಿರುವ ನದಿ, ಬೆಟ್ಟ, ವನರಾಶಿ, ಪಕ್ಷಿಕೂಜನವನ್ನು ಗೇಲಿ ಮಾಡಿದಂತಾಗುತ್ತಿದೆ. ಕುವೆಂಪು ಕಂಡು ಬೆರಗಾದ, ಪ್ರೀತಿಸಿದ, ಆರಾಧಿಸಿದ ಕಾಡನ್ನು ಕಡಿದುಹಾಕುತ್ತಿರುವ ಮನಸ್ಸಿನ ಒಂದು ಅಂಶವೇ ಕುವೆಂಪುರವರ ಕಾವ್ಯವನ್ನು ಗೇಲಿ ಮಾಡುವ ಮನಸ್ಸು ಎಂದೆನಿಸುತ್ತದೆ. ಕುವೆಂಪುರವರ ಸಾಹಿತ್ಯ ಲೋಕವನ್ನು ಪ್ರವೇಶಿಸಿದಾಗಲೆಲ್ಲ ನನಗೆ ಕಬೀರರ ‘ದೋಹಾ’ವೊಂದು ಮತ್ತೆ ಮತ್ತೆ ನೆನಪಾಗುತ್ತದೆ.

‘ಯಾರು ಬಹಳ ನಮ್ರವಾಗಿ ಕೆಳಕೆಳಗೆ ಇಳಿದರೋ
ಅವರೆಲ್ಲರೂ ಪಾರಾದರು.
ಉಚ್ಛ ಕುಲೀನರಾಗಿದ್ದು ಯಾರು ಅಭಿಮಾನದ ದೋಣಿ ಹತ್ತಿದರೋ ಅವರು ಮುಳುಗಿದರು….!
ಕೊನೆಯದಾಗಿ-

ಕುವೆಂಪು ಯಾಕೆ ಹುಟ್ಟಿದರು? ಮಲೆಗಳಲ್ಲಿ ಮದುಮಗಳು ಬರೆಯಲಿಲ್ಲವೆ?ಹೌದು. ಆದರೇನು, ಮಲೆಗಳಲ್ಲಿ ಮದುಮಗಳು ಬರೆಯಲೆಂದೇ ಅವರು ಹುಟ್ಟಲಿಲ್ಲ ಆದರೆ ಹುಟ್ಟಿದ ಮೇಲೆ ಮಲೆಗಳಲ್ಲಿ ಮದುಮಗಳು ಅವರಿಂದ ಬರೆಸಿಕೊಂಡಿತು, ಬೇರೆಯಲ್ಲ..!

ಸೃಷ್ಟಿಯೇಕೆ ಜನಿಸಿತು!
ಜನಿಸಿತು
ಕರ್ಮ ಸಮೆಯಲಿಲ್ಲವೇ?
ಸಮೆವುದು!
ಅದರೇನು’ ಕರ್ಮ ಸಮೆಯಲೆಂದು ಸೃಷ್ಟಿ
ಜನಿಸಲಿಲ್ಲ;
ಜನಿಸೆ ಕರ್ಮ ಸಮೆವುದಷ್ಟೆ,
ಬೇರೆಯಲ್ಲ!

ಮಲೆಗಳಲ್ಲಿ ಮದುಮಗಳು ಬಹುಶಃ ಇಂದು ಮುಂದು, ಎಂದಿಗೂ ಇರುವ ಉತ್ಕೃಷ್ಟ ಕಾದಂಬರಿ. ನಾನು ರಾಮಾಯಣ, ಮಹಾಭಾರತಗಳಿಂದ ಏನು ಪಡೆದಿರುವೆನೋ ಅದನ್ನೇ ಮಲೆಗಳಲ್ಲಿ ಮದುಮಗಳು ಕಾದಂಬರಿಯಿಂದ ಪಡೆದಿರುವೆ. ಒಂದು ಚಿಕ್ಕ ಉದಾಹರಣೆಯ ಮೂಲಕ ಇದನ್ನು ವಿಷಾದಪಡಿಸುವುದಾದರೆ-

ಕಾದಂಬರಿಯಲ್ಲಿ ತಿಮ್ಮಿಯ ಪಲಾಯನಕ್ಕೆ ಸಂಬಂಧಿಸಿದ ವಿಚಾರಣೆಯ ನಂತರ ಇಜಾರದ ಸಾಬು ಸಣ್ಣ ಬೀರನಿಗೆ ಹುಣಿಸೆ ಬರಲಿನಿಂದ ಯಮಶಿಕ್ಷೆ ನೀಡುವ ಪ್ರಸಂಗವಿದೆ. ಸಣ್ಣ ಬೀರ ಶಿಕ್ಷೆಯಿಂದ ಪಾರಾಗಲು ರೋದಿಸುತ್ತಾ “ದಮ್ಮಯ್ಯ ಸಾಬ್ರೆ, ಹೊಡಿಬೇಡಿ. ನಾ ಸಾಯ್ತಿನಿ. ನಿಮ್ಮ …ತಿನ್ತಿನಿ! ಅಪ್ಪ ಬಿಡಿಸೋ! ನಂಗೊತ್ತಿಲ್ಲೋ… ತಿಮ್ಮಿ ಎಲ್ಲಿ ಹೋದ್ಲು ಅಂತಾ, ಅಯ್ಯೋ, ಅಯ್ಯೋ, ಅಯ್ಯೋ” ಎಂದು ಒದ್ದಾಡಿ ಒರಲಿಕೊಂಡರೂ, ನೆತ್ತರು ಚಿಮ್ಮಿ ಅವನು ಉಟ್ಟಿದದ ಪಂಚೆ ಒದ್ದೆಯಾಗಿ ಕಾಲ ಮೇಲೆ ಇಳಿದ ಉಚ್ಚೆಯಿಂದ ನೆಲ ತೊಯದರೂ, ಅಂಡಿನ ರಕ್ತ ಬಟ್ಟೆ ರಕ್ತದಿಂದ ಕೆಂಪಾದರೂ, ಅವನ ಕೂಗು ನಿಂತು ತಲೆ ಕತ್ತಿನ ಮೇಲೆ ನಿಲ್ಲದೆ ಜೋಲಿದರೂ, ಅವನ ತಂದೆ ದೊಡ್ಡ ಬೀರ ಅವನನ್ನು ಬಿಡಿಸಿಕೊಳ್ಳಲು ಶಕ್ತನಾಗುವುದಿಲ್ಲ. ಆಗ ಪ್ರತ್ಯಕ್ಷಳಾಗುವ ಅವನ ತಾಯಿ ಸೇಸಿ ಇಜಾರದ ಸಾಬಿಯ ಕೈಯಲ್ಲಿದ್ದ ಹುಣಿಸೆಯ ಬರಲನ್ನು ಕಸಿದೆಸೆದು ತಲೆ ಜೋಲುತ್ತಿದ್ದ ತನ್ನ ಮಗನನ್ನು ಎದೆಗಾನಿಸಿಕೊಳ್ಳುತ್ತಾಳೆ. ಆಗ,

“ದಾಂಡಿಗನೂ ಬಲಿಷ್ಠನೂ ಕ್ರೂರಿಯೂ ಆಗಿ, ಇಂತಹ ಅನೇಕ ಧೂರ್ತಕರ್ಮಗಳಲ್ಲಿ ನುರಿತು ನಿಷ್ಠಾತನಾಗಿದ್ದ ಇಜಾರದ ಸಾಬಿಗೆ ಅದೇನಾಯಿತೋ ಏನೋ? ಇದ್ದಕ್ಕಿದ್ದಂತೆ ಸತ್ವಹೀನನಾದವನಂತೆ, ನಿರ್ಬಲನಾಗಿ… ಅವನು ತಳ್ಳಿದೊಡನೆ ಒಂದಲ್ಲ ಎರಡು ಮಾರು ಹಿಂಜರಿದು ಸ್ತಂಭಿಭೂತನಾದಂತೆ ನಿಂತು ಬಿಟ್ಟನು! ಹೊಲೆಯಳಾದರೂ, ಯಾವ ವಿಧವಾದ ವ್ಯಕ್ತಿತ್ವ ವಿಶೇಷವೂ ಲವಲೇಶವೂ ಇಲ್ಲದವಳಾದರೂ ಸಂಕಟತಪ್ತ ತಾಯ್ತನ ಎಂತಹ ಅಲ್ಪ ಸ್ತ್ರೀಯನ್ನಾದರೂ ಭೂಮಪಟ್ಟಕ್ಕೇರಿಸಿ ಬಿಡುತ್ತದೆಯೋ ಏನೋ ಎಂಬಂತೆ, ಅವಳ ಮಾತೃದುಃಖಜನ್ಮ ಕ್ರೋಧದ ಸಾನಿಧ್ಯಭೀಷಣೆಗೆ ಕ್ಷಣ ಮಾತ್ರ ಭೀತಚೇತಸನಾದನು. ಇಜಾರದ ಸಾಬಿ ಗೌಡರ ಆಜ್ಞೆಯನ್ನು ಮರೆತು ಸೇಸಿಯ ಮಾತಿಲ್ಲದ ಅಣತಿಗೆ ಒಳಗಾದವನಂತೆ ಬೇಗಬೇಗನೇ ಸಣ್ಣ ಬೀರನನ್ನು ಬಿಗಿದಿದ್ದ ಹಗ್ಗದ ಕಟ್ಟಡಗಳನ್ನೆಲ್ಲ ಬಿಚ್ಚಿ ಹಾಕಿದನು” (ಮಲೆಗಳಲ್ಲಿ ಮದುಗಳು-ಪುಟ ೩೨೬).

ಅಸಹಾಯಕತೆ, ಆರ್ತತೆ, ಆರ್ದ್ರತೆ ಮುಪ್ಪುರಿಗೊಂಡು ಸಹೃದಯನಲ್ಲಿ ಮೇಲೆ ಸೂಚಿಸಿದ ಪ್ರಸಂಗ ಉದ್ದೀಪಿಸುವ ರಸಾವೇಶ, ಕಾಲ, ದೇಶ, ಸಂದರ್ಭ, ಸನ್ನಿವೇಶ ಬೇರೆ ಬೇರೆ ಆಗಿದ್ದಾಗ್ಯೂ-ಮಹಾಭಾರತದಲ್ಲಿ ದ್ರೌಪದಿ ಅಸಹಾಯಕಳಾಗಿ ಮಾನಸಂರಕ್ಷಣೆಗಾಗಿ ಕೃಷ್ಣನನ್ನು ನೆನೆವ, ರಾಮಾಯಣದಲ್ಲಿ ಅವಮಾನಿತಳಾದ ಸೀತೆ ಭೂತಾಯಿಯನ್ನು ನೀನಾದರೂ ಬಾಯ್ದೆರೆದು ನನ್ನ ನುಂಗಬಾರದೆ ಎಂದು ಕೇಳಿಕೊಳ್ಳುವ, ಗೋವಿನ ಕತೆಯಲ್ಲಿ ಪುಣ್ಯಕೋಟಿ ಚಂಡವ್ಯಾಘ್ರನ ಬಳಿ ಒಂದು ದಿನದ ಮಟ್ಟಿಗೆ ಪ್ರಾಣ ಭಿಕ್ಷೆ ಬೇಡಿಕೊಳ್ಳುವಾಗಲ್ಲಿನ ಆರ್ದ್ರತೆಯನ್ನು ನೆನಪಿಸುತ್ತದೆ. ಸೇಸಿ ದೈವವೇ ಆಗಿ ಅವತರಿಸಿ ಸಣ್ಣ ಬೀರನನ್ನು ಯಮಶಿಕ್ಷೆಯಿಂದ ಪಾರು ಮಾಡುತ್ತಾಳೆ.

ಮಿಲಿಯನ್‌ಗಟ್ಟಲೆ ವರ್ಷಗಳಿಂದ ಈ ನೀರು, ನೆಲ, ಆಕಾಶ, ಪಶು, ಪಕ್ಷಿ, ಕ್ರಿಮಿ, ಕೀಟ, ಮನುಷ್ಯ-ಹೀಗೆ ಸಕಲ ಜಡ-ಚೇತನ ಸಂಕುಲವನ್ನು ಜತನದಿಂದ ಕಾಪಾಡಿಕೊಂಡು ಬರುತ್ತಿರುವ ಪ್ರಕೃತಿಯಲ್ಲಿ ಇಡಿಯಾಗಿ ಬೇರೂರಿರುವ ‘ಪರೆಯುವ’ ಈ ಅಂಶ ಬಿಡಿಯಾಗಿ, ಆದರೆ, ಏಕಕಾಲಕ್ಕೆ ಸಂಪೂರ್ಣವಾಗುವ ಸೇಸಿಯಲ್ಲಿ ಜಾಗೃತವಾಗುವ ಮೂಲಕ, ಆಕೆ ಶಕ್ತಿ ಸ್ವರೂಪಿಣಿಯಾಗಿ ಸಣ್ಣ ಬೀರನನ್ನು ರಕ್ಷಿಸಲು ಸಾಧ್ಯವಾಯಿತೇನೋ ಎಂದೆನಿಸುತ್ತದೆ. ಸೇಸಿಯ ಅಂತಃಸತ್ವದ ಭೀಮ ಚೈತನ್ಯದ ಮುಂದೆ ಹುಲ್ಲು ಕಡ್ಡಿಯಂತೆ ನಿರ್ಬಲವಾಗುವ ಇಜಾರದ ಸಾಬಿಯ ಶರಣಾಗತಿ ಕೂಡ ಇದನ್ನು ಸಾಂಕೇತಿಕವಾಗಿ ಸೂಚಿಸುತ್ತದೆ.

ಶೃಂಗಾರ ರಸದಿಂದ (ಗುತ್ತಿಯೊಂದಿಗೆ ತಿಮ್ಮಿಯ ಪಲಾಯನ) ಚಲಿಸುವ ಈ ಪ್ರಸಂಗ ‘ಕರುಣ’ ‘ರೌದ್ರ’ ‘ಭಯಾನಕ’ ‘ಬೀಭತ್ಸ’ ‘ವೀರ’ ರಸಗಳಲ್ಲಿ ಸಂಚರಿಸಿ ‘ಅದ್ಭುತ’ದಲ್ಲಿ ಒಂದು ಚಣ ವಿರಮಿಸಿ ‘ಶಾಂತ’ವಾಗಿ ಕೊನೆಗೊಳ್ಳುವ ಬಗೆಯಂತು ಅನನ್ಯವಾಗಿದೆ.

ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಒಬ್ಬ ಬ್ರಾಹ್ಮಣನಾಗಿಯೋ, ಶೂದ್ರನಾಗಿಯೋ, ದಲಿತನಾಗಿಯೋ, ಪುರುಷನಾಗಿಯೋ, ಸ್ತ್ರೀಯಾಗಿಯೋ ಪ್ರವೇಶಿಸಲಾಗದು. ನಮ್ಮ ಅಲ್ಪ ಪ್ರಜ್ಞೆಯನ್ನು ಬದಿಗಿರಿಸಿ ವಿಶ್ವಮಾನವ ಪ್ರಜ್ಞೆಯಿಂದಲೇ ಏಕಕಾಲಕ್ಕೆ ಜಡವೂ, ಚೇತನವೂ ಆಗಿ-ಕಲ್ಲಿನೊಂದಿಗೆ ಕಲ್ಲಾಗಿ, ಮರದೊಂದಿಗೆ ಮರವಾಗಿ, ಕ್ರಿಮಿ, ಕೀಟ, ಪಶು, ಪಕ್ಷಿ, ಮನುಷ್ಯ, ದೈವವಾಗಿ ಈ ಕಾದಂಬರಿಯನ್ನು ನಾವು ಪರಿಭಾವಿಸಬೇಕಾಗುತ್ತದೆ.

….ಅಂದರೆ ಹಾಗೆ ನನಗೆ ಈಗಲೂ, ಯಾವಾಗಲೂ ನೆನಪಾಗುವುದು ಆ ಮರವೇ ಆಕಾಶ ಮಲ್ಲಿಗೆಯ ಮರ. ಮುಗಿಲ ಮುಟ್ಟ ಬೆಳೆದು ನಿಂತಿರುವ ಹೆಮ್ಮರ ಪಾತಾಳಕ್ಕೆ ಚಾಚಿರುವ ಅದರ ಬೇರುಗಳನ್ನು ನಾನು ನೋಡಿಲ್ಲ. ಅದರ ದಪ್ಪ ಕಾಂಡದೊಳಗೆ ಅಡಗಿರುವ ಅನುಭವ ಪ್ರಪಂಚದ ಅರಿವೂ ನನಗಿಲ್ಲ. ದಿಕ್ಕು ದಿಕ್ಕಿಗೆ ಚಾಚಿರುವ ಕೊಂಬೆಗಳನ್ನು ಮುಟ್ಟುವುದಂತೂ ಸಾಧ್ಯವೇ ಇಲ್ಲ. ಆದರೂ ಅದು ಚೆಲ್ಲುವ ಹೂಗಳನ್ನು ನಾನು ಅರಿಸಿದ್ದೇನೆ. ಅದರ ಪರಿಮಳವನ್ನು ಆಫ್ರಾಣಿಸಿದ್ದೇನೆ. ಅದರ ನೆರಳಿನಲ್ಲಿ ಒಂದು ಕ್ಷಣವಾದರೂ ನಿಂತ ಸಂಭ್ರಮ ನನ್ನದಾಗಿದೆ.

* * *