ಈ ಶತಮಾನದ ಬಹುದೊಡ್ಡ ಲೇಖಕರಾಗಿ, ಜ್ಞಾನಪೀಠದ ಉತ್ತುಂಗಕ್ಕೇರಿ, ರಾಷ್ಟ್ರಕವಿಯಾಗಿ, ಕವಿ, ಕಾದಂಬರಿಕಾರ, ನಾಟಕಕಾರ, ದಾರ್ಶನಿಕ ಹೀಗೆ ಬಹುಶೃತ ಬರಹಗಾರರಾಗಿ ಕುವೆಂಪು, ಅವರವರ ಭಾವಕ್ಕೆ, ಅವರವರ ಬಕುತಿಗೆ ದಕ್ಕಿದವರು. ಕಿಂದರಿ ಜೋಗಿ, ನನ್ನ ಗೋಪಾಲನ ಮೂಲಕ ಎಳೆಯ ಮನಸ್ಸನ್ನು ತಟ್ಟಿದವರು. ಹದಿಹರೆಯದವರಲ್ಲಿ ಕಲ್ಕಿಯಂತಹ ಪಠ್ಯಗಳ ಮೂಲಕ ಅಸಮಾನತೆ ವಿರುದ್ಧ ರೋಷ ಮೂಡಿಸಿದವರು. ಪ್ರಣಯಿಗಳಿಗೆ ಚಂದ್ರ ಮಂಚಕೆ ಬಾ ಚಕೋರಿ ಎನ್ನುತ್ತಾ ನಶೆ ಏರಿಸಿದವರು. ಹೀಗೆ ಕುವೆಂಪು ಎಲ್ಲಾ ವಯೋಮಾನದವರನ್ನು ಮುಟ್ಟಿದ, ಮಣಿಸಿದ, ತಣಿಸಿದ ಕವಿ.

ಕುವೆಂಪು ಹೆಸರೇ ಒಂದು ವಿಸ್ಮಯ, ಅವರು ಬದುಕಿದ್ದಾಗಲೆ ಒಂದು ದಂತಕಥೆಯಾಗಿದ್ದರು. ಅವರು ಗೌರಿ ಶಂಕರ ಶಿಖರದಂತೆ, ಮೇರು ಪರ್ವತ, ಯಾರ ಕೈಗೂ ಎಟುಕದಂತೆ, ಅವರ ಪ್ರತಿಭೆಯ ಪ್ರಖರತೆಯಿಂದಾಗಿ ಯಾರೂ ಅವರ ಆಚೀಚೆ ಸುಳಿಯಲು ಸಾಧ್ಯವಿಲ್ಲ…. ಇತ್ಯಾದಿ…. ಇತ್ಯಾದಿ! ನನ್ನ ಹದಿಹರೆಯದ ಮುಗ್ಧ ಕಣ್ಣಲ್ಲಿ ಅವರನ್ನು ೩-೪ ಸಲ ಮಾತ್ರ ಕಂಡು ಸೋಜಿಗಗೊಂಡದ್ದಿದೆ. ಸಹಜ ಎತ್ತರದ ನಿಲುವು, ಧೀಮಂತ ವ್ಯಕ್ತಿತ್ವದ ಸದೃಢ ನಿಲುವಿನ ರಾಜಗಾಂಭೀರ್ಯದ ನಡೆ-ನುಡಿಗಳು ಕುವೆಂಪುರವರನ್ನು ಜನಸಾಮಾನ್ಯರ ಸಂಪರ್ಕದಿಂದ ದೂರವಿಡಲು ಸಹಕರಿಸಿದ್ದವು. ಎನಿಸುತ್ತದೆ. ಮಧ್ಯೆ, ಬೈತಲೆ ಮಿರಿ ಮಿರಿ ಮಿಂಚುವ ದಟ್ಟ ಗುಂಗುರು ಕೂದಲು ಥೇಟ್ ಅವರ ಕಾದಂಬರಿಯ ನಾಯಕ ಹೂವಯ್ಯನಂತೆ ಅವರು ನಡೆದು ಬರುತ್ತಿದ್ದರೆ, ಎದುರಾದವರಲ್ಲಿ ಒಂಥರ ಭಯಮಿಶ್ರಿತ, ಗೌರವಗಳು ಮೂಡುತ್ತಿದ್ದವು. ಅದರಿಂದಾಗಿ ಜನ ಸಾಮಾನ್ಯರಿಗೆ ಅವರೊಂದಿಗೆ ಸಲೀಸಾಗಿ ಸಂವಾದಿಸಲು ಸಾಧ್ಯವಾಗುತ್ತಿರಲಿಲ್ಲ. ರಾಮಾಯಣ ದರ್ಶನಂ ಮೂಲಕ ಮನೆ ಮನೆಗಳನ್ನು ತಲುಪಿದ ಕವಿ ಕುವೆಂಪು, ಸಾಮಾನ್ಯ ವ್ಯಕ್ತಿಯಾಗಿ ಜನ ಸಾಮಾನ್ಯರಿಗೆ ಎಟುಕುತ್ತಿರಲಿಲ್ಲ. ಇಂತಹ ಕುವೆಂಪುರವರಂತ ಕುವೆಂಪು ಒಂಚೂರು ನನಗೆ ಅರ್ಥವಾಗಿದ್ದು ಸುಮಾರು ೨೫ ವರ್ಷಗಳ ಹಿಂದೆ.

ಕುವೆಂಪುರವರ ‘ಆಗು ನೀ ಅನಿಕೇತನ’ ಎಂಬ ಸಾಲನ್ನು ನಾನು ವಾಚ್ಯಾರ್ಥದಲ್ಲಿ ಗ್ರಹಿಸಿ ಅಕ್ಷರಶಃ ಅದನ್ನು ಪಾಲಿಸಿದಂಥ ಪೆದ್ದು ಹುಡುಗಿಯಾಗಿದ್ದ ಕಾಲವದು, ಚದುರಂಗರು ಒಂಟಿಕೊಪ್ಪಲಿನ ಮನೆಯಲ್ಲಿದ್ದಾಗ, ಒಮ್ಮೆದಿ ಪೋಲಂಕಿ ರಾಮಮೂರ್ತಿ ಸರ್ ಅಲ್ಲಿಗೆ ಬಂದಿದ್ದರು. ನಾನಾಗ ಪಕ್ಕಾ ಮಹಿಳಾವಾದಿ, ಮದುವೆ, ಗಂಡ, ಸಂಸಾರವೆಂದರೆ ಸಿಡಿ ಸಿಡಿದು ಬೀಳುತ್ತಿದ್ದೆ. ಅವರುಗಳೊಂದಿಗೆ ಮಾತನಾಡುತ್ತಾ ಎಂದಿನಂತೆ ಗಂಡಸರನ್ನು ಸಾರಾಸಗಟು ಬೈದೆನೆಂದು ಕಾಣುತ್ತದೆ. ಸರಿಯಾಗಿ ನೆನಪಿಲ್ಲ. ಚದುರಂಗರು ನಿನಗೆ ಜೀವನಾನುಭವ ಸಾಲದು, ಎನ್ನುತ್ತಿದ್ದರು ಅಷ್ಟರಲ್ಲಿ ರಾಮಮೂರ್ತಿ ಸರ್ ಎಲ್ಲಾ ಗಂಡಸರನ್ನು ಸಾರಾಸಗಟು ಗುಡಿಸಿ ಹಾಕಬೇಡ. ನನ್ನ ಮಾತನ್ನು ಗಮನವಿಟ್ಟು ಕೇಳಿಸಿಕೋ, ಹೇಮಾವತಿಯವರು ಸತ್ತಾಗ, ಕುವೆಂಪು ಒಂದು ಗಂಟೆ ರೂಮಿನಲ್ಲಿ ಹೇಮಾವತಿಯವರ ದೇಹವನ್ನಿಟ್ಟುಕೊಂಡು ದುಃಖಿಸಿದ್ದರು.

ನಂತರ ಮನೆಯಿಂದ ಅವರನ್ನು ಹೊರತಂದಾಗ ಆಕೆಯ ಕಾಲುಗಳೆರಡನ್ನೂ ತನ್ನ ತಲೆಮೇಲಿಟ್ಟುಕೊಂಡು ಭಕ್ತಿಯಿಂದ ನಮಿಸಿದರು. ಸತ್ತ ಹೆಂಡತಿಯ ಕಾಲುಗಳನ್ನು ತಲೆ ಮೇಲಿಟ್ಟುಕೊಂಡರೆ ಹೆಂಡತಿಯ ಬಗ್ಗೆ ಕುವೆಂಪು ಅವರಿಗೆ ಅದೆಂಥ ಗೌರವವಿತ್ತು. ಆಕೆಯನ್ನವರು ಅದೆಷ್ಟು ಪ್ರೀತಿಸುತ್ತಿದ್ದರೆಂಬುದನ್ನು ಯೋಚಿಸು…. ಪಾದಗಳನ್ನು ಸಾರ್ವಜನಿಕರೆದುರು ನೆತ್ತಿಯ ಮೇಲಿಟ್ಟುಕೊಂಡರೆಂದರೆ, ಆಕೆ ಅದಿನ್ನಷ್ಟು ಗೌರವಾನ್ವಿತ ಬಾಳನ್ನು ಬದುಕಿದ್ದರು… ಎಂದೇನೇನೋ…. ಬಡಬಡಿಸಿದ್ದೆ.

ನಂತರ ತಾರಿಣಿಯವರ ‘ಮಗಳು ಕಂಡ ಕುವೆಂಪು’ ಮೂಲಕ ಒಬ್ಬ ಅಪ್ಪ, ಗಂಡ, ಅಜ್ಜನ ಪಾತ್ರಗಳಲ್ಲಿ ಕುವೆಂಪು ಅತ್ಯಂತ ತನ್ಮಯರಾಗಿ ಶ್ರದ್ಧೆಯಿಂದ, ನಿಷ್ಠೆಯಿಂದ ನಿರ್ವಹಿಸಿರುವ ಬಗೆ ನನ್ನಲ್ಲಿ ಅಚ್ಚರಿಯೊಂದಿಗೆ ಕುವೆಂಪು ಅವರ ಬಗ್ಗೆ ಒಂದು ಆತ್ಮೀಯ ಭಾವನೆಯನ್ನು ಮೂಡಿಸತೊಡಗಿತು. ತಾನು ಕಂಡದ್ದನ್ನು ಮಕ್ಕಳಿಗೂ ಕಾಣಿಸುತ್ತಾ, ಬೈಯದೆ, ಹೊಡೆಯದೆ ಅವರುಗಳನ್ನು ಮಾತಿನ ಮೂಲಕವೇ ತಿದ್ದುತಿದ್ದ ರೀತಿ. ಅವರನ್ನು ಬೆಳೆಸಿದ ಕ್ರಮ ಅನನ್ಯ. ತನ್ನ ಶಿಸ್ತಿನ ನಡೆ-ನುಡಿಗಳ ಮೂಲಕ ಮಕ್ಕಳಿಗೆ ಮಾರ್ಗದರ್ಶಕರಾಗಿದ್ದ ಸಾಹಿತ್ಯ ಲೀಕದ ಮೇರು ಪರ್ವತದ ಕೌಟುಂಬಿಕಬದ ಕಿನ ದರ್ಶನ ಮಾಡಿಸುವುದರ ಮೂಲಕ ಕುವೆಂಪು ನನ್ನಂತಹವರಿಗೂ ದಕ್ಕುವಂತೆ ಮಾಡಿದವರು ತಾರಿಣಿ ಚಿದಾನಂದ್.

ಹದಿಹರೆಯದಲ್ಲಿ ನಾನು ಓದಿದ ಮೊದಲ ದೀರ್ಘ ಪದ್ಯ ಕಲ್ಕಿ, ವರ್ಗ ಸಂಘರ್ಷವನ್ನು ಕವಿ ಕುತೂಹಲ, ಭಯ ರಕ್ತಪಾತ, ದಾಹಗಳ ಮೂಲಕ ವರ್ಣಿಸುತ್ತಾ ಹೋಗುವ ಕ್ರಮ ನನ್ನೊಳಗೆ ಕ್ರಾಂತಿಯ ಕಿಡಿಯನ್ನು ಹೊತ್ತಿಸಿತ್ತು. ಮೌಢ್ಯದ ವಿರುದ್ಧ, ಶ್ರೀಮಂತರ ಅಟ್ಟಹಾಸದ ವಿರುದ್ಧ ಬಂಡೇಳುವಂತೆ ಮಾಡಿತ್ತು. ನವೋದಯ ಕವಿ ನವ್ಯ ಕಾವ್ಯನಾಲೋಕದ ಮನಸನ್ನು ಮಾತು ಮಾತುಗಳ ಮೂಲಕ ಗಾಢವಾಗಿ ತಟ್ಟಿತ್ತು. ನಂತರ ಒಳ್ಳೆಯ ಕೆಲಸಕ್ಕಾಗಿ ಪರದಾಡುತ್ತಾ, ಪರೀಕ್ಷೆಗಳು, ಸಂದರ್ಶನಗಳಲ್ಲಿ ಒದ್ದಾಡುತ್ತಾ ಸರಿಯಾದ ನೆಲೆಯಾಗಿ ಅರಸುತ್ತಾ ಅತಂತ್ರವಾಗಿದ್ದ ಆ ದಿನಗಳಲ್ಲಿ ನಾನೂ ಅದೆಷ್ಟೋ ಸಲ ಕಲ್ಕಿ ಎಂದು ಕನವರಿಸುತ್ತಾ ಬೆಚ್ಚಿ ಎದ್ದದ್ದಿದೆ.

ಸುಮಾರು ೨೦-೨೨ ವರ್ಷಗಳ ಹಿಂದೆ ಮೈಸೂರಿನ ರಾಮಕೃಷ್ಣಾಶ್ರಮ ಶಾಲೆಯಲ್ಲಿ ಕವಿ, ಕಾವ್ಯ ಪರಂಪರೆ ಕುರಿತ ಪರೇಶ್ ಕುಮಾರ್ ರವರು  ದೃಶ್ಯಕಾವ್ಯವೊಂದನ್ನು ನಿರ್ದೇಶಿಸಿದ್ದರು. ಆ ದೃಶ್ಯ ಕಾವ್ಯ ಕಲ್ಪಿ ಪದ್ಯದೊಂದಿಗೆ ಕೊನೆಗೊಂಡಿತ್ತು. ಆ ದೃಶ್ಯಕಾವ್ಯಕ್ಕೆ ನಾನು ವಸ್ತ್ರಾಲಂಕಾರ ಮಾಡಿದ್ದೆ. ಹೀಗಾಗಿ ವಾಚಾಳಿ ಕಲ್ಪಿ ಮತ್ತೆ ನನ್ನೊಳಗೆ ಇಣುಕಿತ್ತು.

ಕಲ್ಕಿ ಪದ್ಯದೊಳಗಿನ ಅಸ್ಥಿಪಂಜರ ಬಹಳದಿನ ನನ್ನೊಳಗೆ ಭದ್ರವಾಗಿ ಕೂತುಬಿಟ್ಟಿದ್ದು ಆಗಾಗ್ಗೆ ಹೊರಗಿಣುಕಿ ನನ್ನನ್ನೂ ಕೆಣಕುತ್ತಾ, ಹೆದರಿಸುತ್ತಾ ಬೆಚ್ಚಿ ಬೀಳಿಸುತ್ತಿತ್ತು. ಅದರಿಂದ ಬಿಡುಗಡೆ ಪಡೆಯಲು ನಾನೊಂದು ಕಥೆ ಬರೆದು ಅಸ್ಥಿಪಂಜರವನ್ನು ಒಂದು ಪಾತ್ರವನ್ನಾಗಿಸಿ, ಕಥೆಯ ಕೊನೆಯಲ್ಲಿ ಅದನ್ನು ಮುರಿದು ಯಾರಿಗೂ ಸಿಗದಂತೆ ಬಿಸಾಡಿದೆ. ಹಿಂಸಾತ್ಮಕವಾಗಿ ಬಂದಿದ್ದ ಕಲ್ಪಿಯ ಮೇಲೆ ನಾನು ಸೇಡು ತೀರಿಸಿಕೊಂಡ ಬಗೆ ಇದು. ವಾಚಾಳಿತನದಿಂದಾಗಿಯೇ ಈ ಕಲ್ಕಿ ಪದ್ಯ ನಮ್ಮೊಂದಿಗೆ ಸಂವಾದಕ್ಕಿಳಿಯುತ್ತದೆ. ಪದ್ಯದ ಸಾಲುಗಳನ್ನು ಎಕ್ಕಿಕೊಳ್ಳುತ್ತಾ ಹೋದಂತೆ, ಅಸಮಾನತೆಯ ವಿರುದ್ಧ ಬಂಡೇಳುವಂತೆ ಮಾಡುತ್ತದೆ. ಹದಿಹರೆಯದ ಮನಸುಗಳಲ್ಲಂತೂ ಕ್ರಾಂತಿಯ ನೆಲೆಯನ್ನೇ ಉಕ್ಕಿಸುತ್ತದೆ. ಕುವೆಂಪು ಇಲ್ಲಿ ಬರಿಯ ಕಾವ್ಯವನ್ನು ಕಟ್ಟಿ ಕೊಡದೆ ದೃಶ್ಯ ಕಾವ್ಯವನ್ನು ಅನಾವರಣಗೊಳಿಸುತ್ತಾರೆ. ದೃಶ್ಯ ಮಾಧ್ಯಮಕ್ಕೆ ಬೇಕಾದ ಎಲ್ಲಾ ಗುಣಗಳನ್ನು ಹೊಂದಿರುವ ಈ ಪದ್ಯವನ್ನು ಮೂರು ಮುಖ್ಯ ದೃಶ್ಯಗಳನ್ನಾಗಿ ರಂಗದ ಮೇಲೆ ತರಬಹುದು.

ಒಂದು ಬಡವ ಬಲ್ಲಿದವರ ನಡುವಿನ ಅಂತರ, ಎರಡನೆಯದು ಅಗ್ನಿಯ ಕೆನ್ನಾಲಿಗೆಯ ಜ್ವಾಲೆ, ಎಲ್ಲವನ್ನು ಯಾವುದೇ ತಾರತಮ್ಯವಿಲ್ಲದೆ, ಅವರಿವರೆನ್ನದೆ ಎಲ್ಲರನ್ನೂ ಅಪೋಷಣ ತೆಗೆದುಕೊಳ್ಳುವ, ಸಂಹಾರಗೊಳಿಸುವ ಭಯಾನಕ ದೃಶ್ಯ. ಮೂರನೆಯದಾಗಿ ಕಲ್ಕಿಯ ತೀರದ ದಾಹ, ಹಿಂಗದ ಹಸಿವಿನ ರಾಕ್ಷಸನಂತೆ ರಕ್ತದೋಕುಳಿಯ ಭೀಕರ ಚಿತ್ರಣ.

ಕುವೆಂಪುರವರ ಕ್ಯಾಮೆರಾ ಕಣ್ಣು ಸಾಮಾಜಿಕ ಭಿನ್ನತೆ, ಸಂಭ್ರಮ, ವೈಭವ, ದುಃಖ, ಆತ್ತನಾದಗಳನ್ನೆಲ್ಲಾ ಚಕಚಕನೆ ನಮ್ಮ ಮುಂದೆ ಮೂಡಿಸುತ್ತಾ ಹೋಗುತ್ತದೆ. ದೃಶ್ಯಗಳನ್ನು ಬರಿದೇ ಮೂಡಿಸುವುದಿಲ್ಲ, ಹಿಂಸೆಯನ್ನು ವೈಭವೀಕರಿಸಿ, ವಿಜೃಂಭಿಸುವಂತೆ, ಆ ಮೂಲಕ ಓದುಗರ ನೋಡುಗರ ತಲ್ಲಣಗೊಳ್ಳುವಂತೆ ಮಾಡಿಬಿಡುತ್ತಾರೆ. ಸುಖ-ದುಃಖಗಳ ವಿರುದ್ಧ ಬದುಕಿನ ಚಿತ್ರಗಳು ಚಲನಚಿತ್ರದ ರೀಲಿನಂತೆ ಕಣ್ಣಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ. ವಿಭಿನ್ನ ಚಿತ್ರಗಳ ಕೋಲಾಜನ್ನಿಲ್ಲಿ ಕಾಣಬಹುದು. ವಿಭಿನ್ನ ದೃಶ್ಯಗಳನ್ನು ಒಂದಾದ ಮೇಲೊಂದರಂತೆ ಮೂಡಿಸುತ್ತಾ ಹೋಗುವ ದೃಶ್ಯ ಕಾವ್ಯವಿದು. ಹೌದೂ ಇದು ದೃಶ್ಯಕಾವ್ಯ, ಆದರೆ ಇದು ಮುದನೀಡುವ, ಹಾಯ್ ಎನಿಸುವ ಸುಂದರ ಸುಮಧುರ ಕಾವ್ಯವಲ್ಲ.

ಬಡವರ ಸಿಟ್ಟಿನ ಪ್ರೀಕವಾಗಿ, ಬಡವರ ಹೊಟ್ಟೆಯಿಂದ ಅವತಾರವೆತ್ತಿ ಬರುವ ಕಲ್ಕಿಯ ತಾಂಡವ ನೃತ್ಯಕ್ಕೆ ಬಡಬಾಗ್ನಿಯೆ ನಾಚಿ ತೆಲೆ ತಗ್ಗಿಸುತ್ತದೆ. ಎಲ್ಲಾ ರೀತಿಯ ಅಂತರವನ್ನು ಇಲ್ಲವಾಗಿಸಲು, ಅಟ್ಟಹಾಸದಿಂದ ಮೆರೆಯುವವರ ಸೊಕ್ಕು ಅಡಗಿಸಲು ಕಲಿಯುಗದ ಅಂತ್ಯದಲ್ಲಿ ಬಡವನೆ ಕಲ್ಕಿಯಾಗಬೇಕಾಗುತ್ತದೆ ಎಂಬ ಎಚ್ಚರವನ್ನು ನೀಡುತ್ತಾರಿಲ್ಲಿ.

ಬಡವರ ಹಸಿವು ಕೋಪಾಗ್ನಿಗೆ ಕೊನೆಯೇ ಇಲ್ಲ. ಅಸಮಾನತೆ ನಾಶವಾಗುವವರೆಗೂ ಕಲ್ಕಿಗೆ ಸಮಾಧಾನವಿಲ್ಲವೆಂಬ ಸತ್ಯವನ್ನು ಅರಹುವ ಭರದಲ್ಲಿ ಕಗ್ಗೊಲೆ, ಹಿಂಸಾತ್ಮಕ, ಹತ್ಯಾಕಾಂಡದ ಚಿತ್ರಗಳನ್ನು ವೈಭವೀಕರಿಸಿ ಭೀಭತ್ಸ ರಸದ ಹೊಳೆಯನ್ನೇ ಹರಿಸಿದ್ದಾರೆ. ಅಸ್ಥಿಪಂಜರ ರೂಪದ ಆಳು, ಕುದುರೆ, ಮತ್ತೆ ಪ್ರೇತಾತ್ಮನಂತೆ ಕಾಣುವ ಕಲ್ಕಿ ಮೂವರೂ ನರಭಕ್ಷಕರಾಗುವ ಘೋರ ದುರಂತದ ಚಿತ್ರಣ ಓದುಗರ ಎದೆ ನಡುಗಿಸುತ್ತದೆ. ಇಲ್ಲಿ ಸಿಟ್ಟು ಕ್ರೋಧ ಮಾತ್ರವಿಲ್ಲ. ಅವೆಲ್ಲವೂ ಮೈಳೈಸಿದ ಗಾಢ ದುರಂತವನ್ನು ಕಾಣುತ್ತೇನೆ.

ಕಲ್ಕಿ ಬಗೆಗಿನ ನನ್ನ ಆಗಿನ ವ್ಯಾಮೋಹ ಈಗ ಬಾಲಿಶ ಅಂತ ಅನ್ನಿಸಿದರೂ ನಮ್ಮ ಈ ಅಸಮಾನತೆಯ ಸಮಾಜದಲ್ಲಿ ಸಮಾನತೆ ತರುವಂತಹ ಕಲ್ಕಿಯ ಅಗತ್ಯ ಇಂದೂ ಇದೆ ಎನಿಸುತ್ತದೆ. ಕುವೆಂಪುರವರ ಭೀಕರ ಕಲ್ಕಿಯನ್ನು ನಾವಿಂದು ಕಾಣಲು ಸಾಧ್ಯವಿಲ್ಲವಾದರೂ ಕಲ್ಕಿಯ ಅಸ್ವಿತ್ವ ವೈರುಧ್ಯಮಯ ರೂಪಗಳಲ್ಲಿ ತಾಂಡವವಾಡುತ್ತಿರುವ ದೃಶ್ಯಗಳನ್ನು ಕಾಣುತ್ತೇವೆ, ಅನುಭವಿಸುತ್ತೇವೆ.

ನಮ್ಮ ಕಲ್ಪನೆಯ ಪುರಾಣದ ಒಂದು ಪಾತ್ರವಾದ ಕಲ್ಕಿ ವಿಷ್ಣುವಿನ ೧೦ನೆಯ ಅವತಾರವಾಗಿ ಕಲಿಯುಗದಲ್ಲಿ ಹುಟ್ಟಿ ಬರುತ್ತಾನೆ. ದುಷ್ಟರ ಶಿಕ್ಷಿಸಿ, ಶಿಷ್ಟರ ರಕ್ಷಿಸಬರುತ್ತಾನೆಂಬ ಪ್ರತೀತಿಯ ಪ್ರತಿಮೆಯನ್ನು ಕಮ್ಯುನಿಸಂ, ಸಮಾಜವಾದಗಳ ಪ್ರಭಾವದೊಂದಿಗೆ ನಮ್ಮ ಸಂಸ್ಕೃತಿಯಲ್ಲಿರುವ ಪುರಾಣ ಪಾತ್ರವನ್ನು ಪುನಃ ಸೃಷ್ಟಿಸುತ್ತಾರೆ. ಬಂಡಾಯಗಾರರಂತೆ ಕುವೆಂಪು ಪುರಾಣವನ್ನು, ಪರಂಪರೆಯನ್ನು ವಿರೋಧಿಸದೆ, ಕಲ್ಕಿಯನ್ನು ಕೈ ಹಿಡಿದು ಕರೆತಂದು ಸಮಾಜದಲ್ಲಿನ ಅಸಮಾತೆಯನ್ನು ಇಲ್ಲವಾಗಿಸು ಎಂದು ನಿರ್ದೇಶಿಸಿದಂತೆ ಕಾಣುತ್ತದೆ. ಕಲ್ಕಿ, ಕುವೆಂಪು ಆಶಯವನ್ನು ಮೀರಿ ತಾಂಡವ ನೃತ್ಯವನ್ನಾಡುತ್ತಾ ಎಲ್ಲವನ್ನೂ, ಎಲ್ಲರನ್ನೂ ನುಂಗಿ ನೊಣದಾದ ಮೇಲೆ ಸೃಷ್ಟಿಕರ್ತನತ್ತಲೇ ಧಾವಿಸತೊಡಗಿದಾಗ, ಕುವೆಂಪು ಬೆಚ್ಚಿ, ಬೆದರಿ ಎಚ್ಚರಗೊಳ್ಳುತ್ತಾರೆ. ಸಾಮಾಜಿಕ ನ್ಯಾಯ, ಸಮಾಜದ ಬಗ್ಗೆ ಅವರಿಗಿರುವ ಕಳಕಳಿ ಸಾಮಾಜಿಕ ಪ್ರಜ್ಞೆಯನ್ನು ಅವರ ಸ್ವಾತಂತ್ರ್ಯ ದಾಹವನ್ನು, ತಾರತಮ್ಯದ ಸಮಾಜವನ್ನು ಧಿಕ್ಕರಿಸಿ ಬಂಡೇಳುವ ಕ್ರಾಂತಿಯ ಕನಸಿನ ಬೀಜವನ್ನು ಕುವೆಂಪು ಬಿತ್ತುತ್ತಾರೆ. ಹಾಗೆ ವಗ್ಗ ಸಂಘರ್ಷವನ್ನವರು ನಾಟಕೀಯವಾಗಿ ವೈಭವೀಕರಿಸುತ್ತಾರೆ.

ಪದ್ಯದ ಕೊನೆಯಲ್ಲಿ ಕನಸೊಡೆದೆದ್ದೆ, ಇನ್ನೆಲ್ಲಿಯ ನಿದ್ದೆ ಎಂಬಲ್ಲಿ ಇದುವರೆಗೂ ಮಾಡಿದ ನಿದ್ದೆ, ಕಂಡ ಕನಸು ಕನವರಿಸಿದ ಭ್ರಮೆಗಳೆಲ್ಲದರ ಪೊರೆ ಕಳಚಿ ಪೂರ್ಣ ಎಚ್ಚೆತ್ತುಕೊಳ್ಳುವ ಕವಿಗೆ ಇನ್ನು ಶಾಶ್ವತ  ಎಚ್ಚರವೇ ಸರಿ. ಇನ್ನು ಸಮಾಜ ತೂಕಡಿಸದೆ ಎಚ್ಚರವಾಗಿಯೇ ಇರಬೇಕಾದುದು ಅನಿವಾರ್ಯ ಎಂಬ ಸಂದೇಶವನ್ನು ಸಾರುವುದರ ಮೂಲಕ ಕವಿ ಜಗದ ಕಣ್ಣು ತೆರೆಸಲು ಪ್ರಯತ್ನಿಸಿದ್ದಾರೆ.

ಸರ್ವೋದಯ, ಸರ್ವಧರ್ಮಗಳ ಆಶಯವುಳ್ಳ ಕುವೆಂಪು ಮೌಲ್ಯಗಳನ್ನು ಪ್ರಹರಿಸುವ ನೇತಾರರಾಗಬಯಸುತ್ತಾರೆ. ಕಲ್ಕಿ ಸಾಮಾಜಿಕ ನ್ಯಾಯ ಒದಗಿಸುವ ಹರಿಕಾರನಾಗಬೇಕೆಂದು ಬಯಸುತ್ತಾರೆ. ಎಲುಬಿನ ಹಂದರದ ಕಲ್ಕಿ, ಕುದುರೆ, ಆಳುಗಳ ಪ್ರವೇಶ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತದೆ. ಹೀಗೆ ವಿಕೃತ, ವಿರೂಪ, ನರಕ ಸದೃಶ್ಯದಂತೆ ಬರುವ ಕಲ್ಕಿ, ಏಳು ಕುದುರೆಗಳನ್ನು ಏರಿ, ಬೆಳಕು ಬೀರುವ ಸೂರ್ಯನಂತೆ ರೂಪಾಂತರವಾಗುವ ದೃಶ್ಯವೊಂದನ್ನು ನಾಟಕವೊಂದರಲ್ಲಿ ನೋಡಿದ ನೆನಪು ಕುವೆಂಪುರವರ ಆಶಯ ಕೂಡ ಅದೇ ಆಗಿತ್ತೆಂದುಕೊಳ್ಳುವೆ.

ಸುಮಾರು ಏಳು ದಶಕಗಳಿಗೂ ಹಿಂದೆ ಬರೆದ ಕಲ್ಕಿ ಪದ್ಯ ಇಂದಿಗೂ ಪ್ರಸ್ತುತವಾಗಿದೆ. ಈ ಪದ್ಯ ಕುವೆಂಪುರವರ ದೂರದೃಷ್ಟಿಗತೆ ಹಿಡಿದ ಕನ್ನಡಿ. ಅಂದು ನನ್ನ ಹದಿಹರೆಯದಲ್ಲಿ ಓದಿ, ಬೆಚ್ಚಿ, ಅಸಮಾನತೆಯ ವಿರುದ್ಧ ಹೋರಾಟಬೇಕೆಂಬ ಛಲದ ಕ್ರಾಂತಿಯ ಕುಡಿಯೊಂದನ್ನು  ಹತ್ತಿಸಿದ ಈ ಪದ್ಯ ನನ್ನೊಳಗೆ ಇನ್ನೂ ಸಣ್ಣಗೆ ಬೆಳಗುತ್ತಲೇ ಇದೆ. ಕುವೆಂಪು ಆಶಯದ ವಿಶ್ವ ಮಾನವತೆ ಕಲ್ಪನೆಯ ಸಾಕಾರಕ್ಕಾಗಿ ಕಲ್ಕಿಯೊಬ್ಬನ ಆಗಮನಕ್ಕಾಗಿ ನನ್ನಂತಹವರು ಕಾತುರದಿಂದ ಕಾಯುತ್ತಲೇ ಇದ್ದೇವೆ.

ಕುವೆಂಪುರವರ ಕಾದಂಬರಿಗಳು, ರಮ್ಯ ಕವನಗಳು, ಪ್ರಣಯ ಗೀತೆಗಳು, ಪ್ರಕೃತಿ ಪದ್ಯಗಳು ಮನಸ್ಸಿಗೆ ಮುದವನ್ನು, ಹಿತವನ್ನು ತರುತ್ತವೆ. ಹೌದು. ಆದರೆ, ಕಲ್ಕಿಯಂತಹ ವಾಚಾಳಿ ಪದ್ಯಗಳು, ಮುಖ್ಯವಾಗಿ ಹದಿಹರೆಯದ ಮನಸ್ಸುಗಳ ಮೇಲೆ ಗಾಢ ಪ್ರಭಾವವನ್ನು ಬೀಡುತ್ತದೆ. ಸಮಾಜದ ಸ್ವಾಸ್ಥಕ್ಕಾಗಿ ಅವಶ್ಯಬೇಕಾದ ಎಚ್ಚರಿಕೆಯ ಸಂದೇಶವನ್ನು ನಮ್ಮೊಳಗಿಳಿಯುವ  ಹಾಗೆ, ಕುವೆಂಪುರವರ ಕಲ್ಕಿಯಂತಹ ಪದ್ಯಗಳು ಮಾಡುತ್ತವೆ. ಆದ್ದರಿಂದಲೇ ಕಲ್ಕಿ ನನಗೆಂದೂ ಆಪ್ತ.

* * *