ಸಾಹಿತ್ಯ ಎಂದೆಂದೂ ಶಾಶ್ವತ, ಹಾಗೆಯೇ ಸಾಹಿತಿ ಕೂಡ. ಸಾಹಿತ್ಯ ಸಮಾಜವನ್ನು ಸೃಷ್ಟಿಸಬಲ್ಲದು ಹಾಗೂ ತಿದ್ದಬಲ್ಲದು. ಸರಿದಾರಿಯಲ್ಲಿ ನಡೆಸಬಲ್ಲದೆನ್ನಲು ಅನೇಕ ಉದಾಹರಣೆಗಳು ನಮ್ಮ ನಡುವೆ ಇವೆ. ಮಲೆನಾಡಿನ ಪುಟ್ಟ ಹಳ್ಳಿಯ ಪುಟ್ಟ ಮನೆಯ, ಪುಟ್ಟ ಹುಡುಗ ನೀಡಿದ್ದಾದರೂ ಏನೆಂದು ವಿಚಾರ ಮಾಡ ಹೊರಟರೆ ಪಂಚಮಂತ್ರ ಮತ್ತು ಸಪ್ತ ಸೂತ್ರಗಳನ್ನು ವಿಶ್ವವೇ ಮರೆಯಲು ಸಾಧ್ಯವಿಲ್ಲ. ಹಾಗೇ ಕುವೆಂಪು ಮಲೆನಾಡಿನ ಬದುಕನ್ನು ಹಿಡಿದಿಟ್ಟಂತೆ ಬೇರೆ ಯಾವ ಕವಿಯೂ ಹಿಡಿದಿಟ್ಟಿಲ್ಲ. ಅವರು ಮಲೆನಾಡಿನಲ್ಲಿ ಇದ್ದದ್ದು ಒಟ್ಟು ಹದಿನೈದೋ ಹದಿನಾರೋ ವರ್ಷಗಳು ಮಾತ್ರ. ಆದರೆ, ಅವರ  ಎರಡು ಕಾದಂಬರಿಗಳಲ್ಲಿ ಚಿತ್ರಿತವಾದದ್ದು ಮಲೆನಾಡಿನ ನಿಸರ್ಗದತ್ತವಾದ ಮೂಲ ಪಾತ್ರಗಳೇ ಆಗಿವೆ.

ಕುವೆಂಪು ಮಲೆನಾಡಿನ ಸೃಜನಶೀಲ ಬದುಕನ್ನು ದೃಶ್ಯ ಕಾವ್ಯವಾಗಿ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ. ಕುವೆಂಪುರವರಿಂದಾಗಿ ಮಲೆನಾಡಿನ ಕಾಡು, ಬೆಟ್ಟ, ಹಾವು, ಹುಲಿ, ಮಲೇರಿಯಾ, ಸಾವು, ನೋವು, ದುಃಖಗಳೆಲ್ಲ ಜೀವಂತವಾಗಿ ಮಹಾಕಾವ್ಯದ ರೂಪದಲ್ಲಿ ಕಾದಂಬರಿಯಲ್ಲಿ ದೊರೆಯುತ್ತವೆ. ಹಳ್ಳಿಯ ಅನಾಮಧೇಯ ಹುಡುಗನಾಗಿದ್ದಂತಹ ಕೆ.ವಿ. ಪುಟ್ಟಪ್ಪ, ಇಲ್ಲಿನ ನಿಸರ್ಗ ಸೌಂದರ್ಯ, ಜನಜೀವನ, ಜನಪರ ಸಂಸ್ಕೃತಿ, ಸಂಸ್ಕಾರ ಇವುಗಳನ್ನು ಕಾವ್ಯ, ಕಾದಂಬರಿ, ಚಿತ್ರಗಳು, ಪ್ರಬಂಧ, ನಾಟಕಗಳಲ್ಲಿ ಸೆರೆಹಿಡಿದು ಭೂಮಿ, ಆಕಾಶ, ಸೂರ್ಯ ಚಂದ್ರರಿರುವರೆಗೆ ಮರೆಯದ ಕುವೆಂಪುವಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ಈ ಕಾದಂಬರಿ ೨೦ನೇ ಶತಮಾನದ ಮೊದಲ ತಲೆಮಾರಿನಲ್ಲಿ ಮನೆನಾಡಿನ ಪ್ರಾಂತ್ಯದಲ್ಲಿ ನಡೆದ ಜನಜೀವನದ ಮಾರ್ಪಾಟುಗಳನ್ನು ಚಿತ್ರಿಸುತ್ತದೆ. ಕಾನನಾವೃತವಾದ ಈ ಸಮಾಜ ಅರ್ಧ ನಾಗರೀಕತೆಯ ಮಜಲಿನಿಂದ ಹೊರಹೊಮ್ಮೆ ಆಧುನಿಕ ನಾಗರೀಕತೆ, ಸಭ್ಯತೆಗಳ ದಿಕ್ಕಿನಲ್ಲಿ ಹೆಜ್ಜೆಯಿಡತೊಡಗಿದಾಗ ಉಂಟಾದ ಪರಿವರ್ತನೆಯನ್ನು ನಾನಾ ರೂಪಗಳಲ್ಲಿ, ನಾನಾ ವಲಯಗಳಲ್ಲಿ ಕಾಣಿಸುತ್ತದೆ.

ಒಂದು ವರದಿ ಕಥೆಯಾಗುವುದಿಲ್ಲ, ಒಂದು ವಸ್ತು ಕಲೆಯಾಗುವುದಿಲ್ಲ. ಈ ಕಾದಂಬರಿಯ ಯಶಸ್ಸು ಕಥೆಯಿಂದಲ್ಲ, ನಿರೂಪಣೆಯಿಂದ. ಹಾಗೆಯೇ ವಸ್ತುವಿನ ಆಯ್ಕೆಯಲ್ಲಿಯೇ ಪಾತ್ರಗಳು ಸೃಷ್ಟಿಯಾಗಿವೆ. ಕಥಾ ವಸ್ತುವಿನ ಒಳಗೆಯೇ ಪಾತ್ರಗಳು ಲೇಖಕನ ದೃಷ್ಟಿಕೋನಕ್ಕೆ ಸರಿಯಾಗಿ ರೂಪುಗೊಂಡಿವೆ. ‘ಕಾನೂರು ಹೆಗ್ಗಡತಿ’ ಒಂದು ಪ್ರಾದೇಶಿಕ ಕಾದಂಬರಿ ಎಂದು ಗುರುತಿಸುತ್ತೇವೆ. ಹಾಗೆಂದ ಮಾತ್ರಕ್ಕೆ ಪ್ರಾದೇಶಿಕತೆ ಕಲೆಯಲ್ಲಿ ಕಂಡು ಬರಬಹುದಾದ ಗಣನೀಯವಾದ ಅಂಶವೆಂದಾಗಲಿ ಅದಿದ್ದ ಮಾತ್ರಕ್ಕೆ ಆ ಕೃತಿ ಮೇಲ್ಮಟ್ಟದ್ದೆಂದಾಗಲಿ ಭಾವಿಸಲಾಗುವುದಿಲ್ಲ. ವಸ್ತು ವಿನ್ಯಾಸ, ಕಲ್ಪನಾ ವೈಭವ, ಭಾಷಾ ಸಾಮರ್ಥ್ಯ, ಶೈಲಿಯ ವೈಶಿಷ್ಟ್ಯ ಇವೆಲ್ಲದರ ಜೊತೆಯಲ್ಲಿ ಪ್ರಾದೇಶಿಕತೆಯೂ ಒಂದು ವೈಶಿಷ್ಟ್ಯವಾಗಿದೆ.

ಈ ಕಾದಂಬರಿಯ ಪಾತ್ರಗಳು ಕೇವಲ ವಿವರಣೆಗೆ ಒಳಗಾಗುವಂಥವಲ್ಲ, ವಿಶ್ಲೇಷಣೆಯನ್ನೂ ಬಯಸುತ್ತವೆ. ಈ ಕಾದಂಬರಿಯಲ್ಲಿ ಕೇಂದ್ರ ಪಾತ್ರ, ಮುಖ್ಯ ಪಾತ್ರ ಮತ್ತು ಅನುಷಂಗಿಕ ಪಾತ್ರಗಳಿವೆ. ನಾವು ಹೂವಯ್ಯನನ್ನು ಕೇಂದ್ರ ಪಾತ್ರವಾಗಿ ನೋಡಿದರೆ ಅದಕ್ಕೆ ಪೂರಕವಾಗುವಂತೆ ವಸ್ತುವಿನ ಮುಂದುವರಿಕೆಗೆ ಮುಖ್ಯ ಪಾತ್ರಗಳಾಗಿ ಚಂದ್ರಯ್ಯ ಗೌಡ, ಸುಬ್ಬಮ್ಮ, ಸೀತೆ, ರಾಮಯ್ಯರು ಬರುತ್ತಾರೆ. ಅನುಷಂಗಿಕ ಪಾತ್ರಗಳು ಕಥೆಯ ಓಟಕ್ಕೆ ಮತ್ತು ನಿರೂಪಣೆಗೆ ಸಹಾಯ ಮಾಡುತ್ತವೆ. ಅಂತಹ ಪಾತ್ರಗಳು ಕಾದಂಬರಿಯಲ್ಲಿ ಬಹಳ ಇವೆ. ಕುವೆಂಪು ಕಾದಂಬರಿಗಳಲ್ಲಿ ಮನುಷ್ಯ ಪಾತ್ರದಂತೆ ಪ್ರಕೃತಿಯು ಒಂದು ಪಾತ್ರವಾಗಿ ಮೂಡಿಬರುತ್ತದೆ.

ಕಥಾ ವಿವರಣೆಗೆ ಮನುಷ್ಯ ಪಾತ್ರಗಳು ಹೇಗೆ ಮುಖ್ಯವಾಗುತ್ತವೆಯೋ ಪ್ರಕೃತಿಯೂ ಅಷ್ಟೇ ಮುಖ್ಯ ಪಾತ್ರವಹಿಸುತ್ತದೆ. ಒಂದು ರೀತಿಯಲ್ಲಿ ಪ್ರಕೃತಿಯೇ ಈ ಕಾದಂಬರಿಗೆ ಪ್ರಾದೇಶಿಕತೆಯ ವೈಶಿಷ್ಟ್ಯವನ್ನೂ ನೀಡಿರುವ ಸಾಧನವೆಂದರೆ ತಪ್ಪಾಗಲಾರದು. ಕಾದಂಬರಿಕಾರರೇ ಹೇಳಿರುವಂತೆ ‘ಆ ಮಲೆನಾಡಿನ ಮೂಲೆಯಲ್ಲಿ ಗಗನಚುಂಬಿಗಳಾದ ಪರ್ವತಾರಣ್ಯ ಶ್ರೇಣಿಗಳಿಂದ ಪರಿವೃತವಾಗಿ ಪ್ರಪಂಚಕ್ಕೆ ಸೇರದ ಬೇರೊಂದು ಪ್ರಪಂಚವದು’. ಸುಂದರವೂ, ಭವ್ಯವೂ, ಕ್ರೂರವೂ, ಭಯಂಕರವೂ ಆದ ಮನುಷ್ಯ ಸಂಪರ್ಕದಿಂದಲೂಸ ಪರ್ಶದಿಂದಲೂ ಸ್ವಲ್ಪವೂ ಕುಂಠಿತವಾಗದ ಈ ಗಿರಿವನ ಸಾಮ್ರಾಜ್ಯದ ವಿವಿಧ ಮುಖಗಳ ಮರೆಯಲಾಗದಂಥ ಚಿತ್ರಗಳು ಮತ್ತೆ ಮತ್ತೆ ಬಂದು ಕಾದಂಬರಿಗೆ ತಮ್ಮದೇ ಆದ ಗುಣ ವೈಶಿಷ್ಟ್ಯವನ್ನು ನೀಡಿವೆ. ಇಲ್ಲಿಯ ಕಾಡು ಜೀವಂತ ಬೃಹತ್ ಲವಲವಿಕೆಯ ಪಾತ್ರವೆನ್ನಿಸುತ್ತದೆ. ಅದರ ಸ್ಥೂಲ ಹಾಗೂ ಸೂಕ್ಷ್ಮ ಸ್ವರೂಪ, ಅನವರತ ಚಟುವಟಿಕೆ, ಅತ್ಯಗಾಧ ಪ್ರಭಾವಗಳ ಅರಿವು ಹೆಜ್ಜೆ ಹೆಜ್ಜೆಗೂ ನಮಗಾಗುತ್ತದೆ. ಪ್ರಕೃತಿಯ ಜೀವ ಪೋಷಕ ಧಾರಾಳತನ ಹಾಗೂ ವಿನಾಶಕಾರಕ ಕಠೋರತೆಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತವೆ.

ಪ್ರಕೃತಿಯ ನಂತರ ನಮಗೆ ಕಾಣುವ ಪಾತ್ರಗಳಲ್ಲಿ ಜೀವಂತವಲ್ಲದಿದ್ದರೂ ಜೀವಪೂರ್ಣವಾಗಿ ಬರುವವುಗಳೆಂದರೆ ಗಾಡಿ, ಕಡೆಗೋಲು ಕಂಬ, ಹೋತ, ಎತ್ತುಗಳು. ಹೀಗೆ ಹತ್ತು ಹಲವು ಗಾಡಿಯನ್ನು ನಾವು ಕಾದಂಬರಿಯ ಪ್ರಾರಂಭದಿಂದ  ಕೊನೆಯವರೆಗೂ ಸಾಂಕೇತಿಕ ಪಾತ್ರವಾಗಿ ನೋಡುತ್ತಾ ಹೋಗುತ್ತೇವೆ. ಅದನ್ನು ಸಂಸಾರಕ್ಕೆ ಹೋಲಿಸಿದರೆ, ಅದರ ಏಳು ಬೀಳುಗಳು ಸಂಸಾರಕ್ಕೂ ಅನ್ವಯಿಸುತ್ತದೆ. ಎತ್ತುಗಳಾದ ಲಚ್ಚ ಮತ್ತು ನಂದಿಗಳು ಸಂಕೇತಗಳಾಗಿ ಬಂದರೂ ಅವು ಒಂದೊಂದು ವಿಭಿನ್ನ ಪಾತ್ರಗಳಾಗುತ್ತವೆ. ಲಚ್ಚನ ಸಿಡುಕು ಸ್ವಭಾವ ಹೊಸದಾದುದೇನಲ್ಲ. ತಿಮ್ಮನು ಸ್ವಲ್ಪ ನಾಚಿ ಕೋಪದಿಂದ ಕರಿಯ ಎತ್ತನ್ನು ನೋಡುತ್ತು ‘ಈ ಹಾಳು ಲಚ್ಚ ಅದರ ಸ್ವಾಭಾವವನ್ನು ಎಲ್ಲಿ ಬಿಟ್ಟೀತು ಹೋಸದಾಗಿ ತಂದಾಗ ಗಾಡಿಯವನನ್ನೇ ತಿವಿಯಲಿಲ್ಲವೇನು?’’ (ಕಾ.ಹೆ. ಪು ೫_ ಎನುವ ಮಾತುಗಳ ಅರ್ಥ ವ್ಯಾಪ್ತಿ ಎಷ್ಟಿದೆ ಎನ್ನುವುದು ಕಾದಂಬರಿಯನ್ನು ಓದುತ್ತಾ ಹೋದಂತೆ ತಿಳಿಯುತ್ತದೆ. ಇದು ಚಂದ್ರಯ್ಯ ಗೌಡರ ವ್ಯಕ್ತಿತ್ವಕ್ಕೆ ಹಿಡಿದ ಪ್ರತಿಮೆ ಎನ್ನುವುದು ಸ್ಪಷ್ಟವಾಗುತ್ತದೆ.

ಲಚ್ಚನ ತಂಟೆಗೆ ಹೋಗುವುದು ಅಪಾಯಕರವೆಂದು ತಿಳಿದು ರಾಮಯ್ಯನು ಪುನಃ ನಂದಿಯ ಕಡೆಗೆ ಹೋಗಿ ಅದನ್ನು ನಾನಾ ವಿಧವಾಗಿ ಮುದ್ದಿಸತೊಡಗಿದನು ಎನ್ನುವಲ್ಲಿ ನಂದಿ ತನ್ನ ಸ್ವಭಾವದಿಂದ ಹೂವಯ್ಯನ ಸ್ವಭಾವಕ್ಕೆ ತೀರ ನಿಕಟವಾಗಿದ್ದು, ರಾಮಯ್ಯ ಅಂತಹ ನಂದಿಯ ಬಳಿಗೆ ಹಿಂದಿರುಗಿದ ಎಂಬುದು ಎಷ್ಟು ಸಾಂಕೇತಿಕವಾಗಿದೆ ಎನ್ನುವುದು ತಿಳಿಯುತ್ತುದೆ. ಲಚ್ಚನ ಬಾಯಾರಿಕೆಗೆ ಗಾಡಿ ಉರುಳಿ ಬಿದ್ದು ನಂದಿಯ ಕೊರಳಿಗೆ ನೇಣು ಕ್ಷಣಕ್ಷಣಕ್ಕೂ ಬಿಗಿಯುವಂತಾಯಿತು ಎಂಬುದು ಅತ್ಯಂತ ಧ್ವನಿಪೂರ್ಣ. ಈ ಎರಡು ಎತ್ತುಗಳು ಹೊತ್ತಿರುವುದು ಒಂದೇ ನೊಗ ಎಂಬ ಸೂಚನೆಯು ಇಲ್ಲಿ ಸ್ಪಷ್ಟವಾಗಿರುವುದರಿಂದ ಕಾನೂರು ಮನೆತನದ ಪ್ರಾಮುಖ್ಯ ಮತ್ತು ಒಡಕು ಒಟ್ಟಿಗೇ ಧ್ವನಿತವಾಗುತ್ತದೆ.

‘ಹೋತನ ದೆಸೆಯಿಂದ’ ಕಾದಂಬರಿಯಲ್ಲಿ ತೀರ ಮಹತ್ವ ಪೂರ್ಣವಾದ ಸಾಂಕೇತಿಕ ಅಧ್ಯಯಾಯವಾಗಿ ಪರಿಣಮಿಸುತ್ತದೆ. ಹೋತದ ಹೋರಾಟ ಪಾತ್ರಗಳ ಬದುಕಿನ ಹೋರಾಟದ ಪ್ರತಿಮೆಯಾಗುತ್ತದೆ. ‘ನಿಂಗ ಜಗ್ಗಿಸಿ ಎಳೆದನು ಹೋತವೂ ಎಳೆಯಿತು. ನಿಂಗ ಒಂದು ಹೆಜ್ಜೆ ಅದರ ಕಡೆಗೇ ಸರಿಯ ಬೇಕಾಯಿತು’ ಎಂಬಂಥ ವಾಕ್ಯಗಳಲ್ಲಿರುವ ಆಂತರಿಕ ಆಶಯ ಕೂಡ ಇದೇ ಆಗಿದೆ. ನಿಂಗನನ್ನು ಎಳೆದು ಕೆಡವಿ ಕಾಡಿಗೆ ಓಡಿ ಹೋದ ಹೋತದ ಸುತ್ತ ಹಬ್ಬುವ ವಾರ್ತೆ ಬದುಕಿನ ಗೊಂದಲಮಯ ಅರ್ಥಹೀನ ವಾತಾವರಣವನ್ನು ಬಹು ಚೆನ್ನಾಗಿ ಚಿತ್ರಿಸುತ್ತದೆ. ಹೋತದ ಸಂಕೇತ ಇಲ್ಲಿಯೇ ನಿಲ್ಲದೆ ಕಾದಂಬರಿಯ ಬದುಕಿನಲ್ಲಿ ಜರುಗುವ ಎಲ್ಲಾ ಬಗೆಯ ಘಟನೆಗಳಿಗೂ ಬಲೀಂದ್ರನೇ ಕಾರಣವಾಗುತ್ತಿರುವುದು ಒಂದು ಸಾಮಾನ್ಯ ಸಂಗತಿ. ಅದನ್ನು ಕೊಂದ ಹೊರತು ನಾಗಮ್ಮರಾದಿಯಾಗಿ ಎಲ್ಲರಿಗೂ ನಿದ್ರೆ ಇಲ್ಲ. ಸೋಮನನ್ನು ಎಳೆದುಕೊಂಡು ಓಡುವಷ್ಟು ಶಕ್ತಿ ಹೋತಕ್ಕಿದೆ ಎಂಬುವನ್ನು ಹೂವಯ್ಯನ ಸಾತ್ವಿಕ ಶಕ್ತಿಯ ಪರಿಚಯವೂ ಆಗುತ್ತದೆ. ಅಂದರೆ ಹೋತದ ಸಂಕೇತ ಸಾತ್ವಿಕ ಹೋರಾಟಕ್ಕೆ ಮೀಸಲಾಗಿದ್ದು, ಗುರಿ ಸಾಧನೆಯಲ್ಲಿ ಸಫಲವಾಗುತ್ತದೆ. ಸೀತೆಯನ್ನು ಒಲಿಸಿಕೊಳ್ಳುವಲ್ಲಿ ವಿಶ್ವ ಪ್ರಯತ್ನ ಮಾಡುತ್ತಿರುವ ರಾಮಯ್ಯನಿಗೂ ಹೋತದ ಮೇಲೆ ಕಣ್ಣು, ಮೌಢ್ಯಕ್ಕೆ ರಾಮಯ್ಯನ ಜ್ಞಾನ ಶರಣಾಗುತ್ತಿರುವುದನ್ನು ಇಲ್ಲಿ ಗಮನಿಸಬಹುದು.

ಕಡೆಗೋಲು ಕಂಬ ಅಡಿಗೆ ಮನೆಯ ಸಾಮ್ರಾಜ್ಯದಲ್ಲಿ ಶತಶತಮಾನಗಳಿಂದಲೂ ಇರುವಂತದ್ದು. ಕುವೆಂಪು ಆ ಕಂಬಕ್ಕೆ ಬಾಯಿ ಬಂದರೆ ಮಹಾಭಾರತ, ರಾಮಾಯಣಗಳಂತ ಎಷ್ಟೋ ಕಥೆಗಳನ್ನು ಹೇಳಬಲ್ಲದು ಎನ್ನುತ್ತಾರೆ. ಹಾಗೇ ಆ ಮನೆಯ ಸ್ತ್ರೀ ಸಮ್ರಾಜ್ಯದ ನಿಗೂಢ ಜಗತ್ತಿನ ಜೀವಂತ ಸಾಕ್ಷಿಯಾಗಿ ಮೌನವಾದ ಪಾತ್ರವಾಗಿದೆ. “ಹಲ್ಲಿಕೃಪೆ” ಅಧ್ಯಾಯದಲ್ಲಿ ಸಹಜವಾಗಿ ಗೋಡೆ ಮೇಲೆ ಓಡಾಡುತ್ತಿದ್ದ ಹಲ್ಲಿಯ ಹತ್ತಿರ ಶಕುನ  ಹೇಳಿಸುತ್ತಾರೆ. ಹೂವಯ್ಯ ಗಾಡಿಯಿಂದ ಬಿದ್ದು ಸೀತೆ ಮನೆಗೆ ಬಂದು ಅವಳ ಕೋಣೆಯಲ್ಲಿ ಮಲಗಿದ್ದಾಗ ಗೋಡೆಯಲ್ಲಿದ್ದ ಹಲ್ಲಿ ಧ್ವನಿ ಮಾಡಿ ಮುಂದೆ ಹೋಗುತ್ತದೆ. ಅದಿದ್ದಲ್ಲಿಗೆ ದೀಪ ಹಿಡಿದಾಗ ಹೂವಯ್ಯನಿಗೆ ಅಲ್ಲಿ ‘ಹೂವಯ್ಯ ಭಾವವನ್ನೇ ಮದುವೆಯಾಗುತ್ತೇನೆ” ಎನ್ನುವ ಸಾಲು ಕಾಣಿಸುತ್ತದೆ. ಹೀಗೆ ಪ್ರತಿಯೊಂದು ಪ್ರಾಣಿ, ಪಕ್ಷಿ, ಗಿಡ, ಮರ, ಗಾಳಿ ಕೊನೆಯಲ್ಲಿ ಮೌನ ಕೂಡ ಅನೇಕ ಕಡೆ ಬೆರಗುಗೊಳಿಸುವ ಪಾತ್ರಗಳಾಗುತ್ತವೆ.

ಹೂವಯ್ಯನ ಪಾತ್ರದಲ್ಲಿ ಲೇಖಕರ ಸ್ವಯಂ ಪ್ರಜ್ಞೆಯೇ ಕೆಲಸ ಮಾಡಿರುವುದನ್ನು ನೋಡಬಹುದು. ಅನ್ನಮಯದಿಂದ-ಮನೋಮಯದಾಟ ಆನಂದಮಯಕ್ಕೇರಿದ ಆತ್ಮ ಸುಖೀ ಪಾತ್ರ ಇದಾಗಿದೆ. ಪಾತ್ರಗಳಲ್ಲಿ ಬೆಳೆಯುವ ಮತ್ತು ನಾಶವಾಗುವ ಪಾತ್ರಗಳಿರುತ್ತವೆ. ಇಲ್ಲಿ ಹೂವಯ್ಯ ತಾನು ಬೆಳೆಯುವುದಲ್ಲದೆ ಬೇರೆ ಪಾತ್ರಗಳನ್ನು, ಪರಿಸರವನ್ನು ಔನ್ನತ್ಯಕ್ಕೇರಿಸುತ್ತಾನೆ. ಹೂವಯ್ಯ ಹುಟ್ಟಿದ ಪರಿಸರ ಅಷ್ಟೇನೂ ಅವನ ವ್ಯಕ್ತಿತ್ವ ಬೆಳವಣಿಗೆಗೆ ಸಹಾಯಕವಾಗಿಲ್ಲ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ವಾತ್ಯಲ್ಯದಲ್ಲಿಯೇ ಬೆಳೆದ ಅವನಿಗೆ ಸಹಾಯಕ್ಕೆ ಬಂದ ಏಕೈಕ ಅಂಶವೆಂದರೆ ವಿದ್ಯೆ. ‘ರಾಮತೀರ್ಥದೆಡೆ ಕಲ್ಲುಸಾರದ ಮೇಲೆ’ ಅಧ್ಯಾಯದಲ್ಲಿ “ಆತನ ಕಣ್ಣುಗಳು ಅಷ್ಟೇನೂ ಅತಿಶಯ ವಿಸ್ತಾರವಾಗಿರದಿದ್ದರೂ ಉಜ್ವಲವಾಗಿ ಮರ್ಮಭೇದೀ ದೃಷ್ಟಿಯುತವಾಗಿ ಯೋಗಿಯ ನಯನಗಳಂತೆ ಅಂತರ್ಮುಖವಾಗಿ ತಿಳಿದವರಲ್ಲಿ ಗೌರವ ಭಾವವನ್ನೂ ತಿಳಿಯದವರಲ್ಲಿ ಮೋಹವನ್ನು ಉದ್ರೇಕಿಸುವಂತಿದ್ದವು. ಮೂಗು ಉದ್ದವಾಗಿ ತುದಿಯಲ್ಲಿ ಶುಕಚಂಚುವಿನಂತೆ ಬಾಗಿತ್ತು. ಸೃಷ್ಟಿಯ ರಹಸ್ಯಗಳನ್ನು ಕುಟುಕಿ ಒಳಹೊಕ್ಕು ನೋಡುತ್ತೇನೆ ಎನ್ನುವಂತಿತ್ತು” (ಕಾ.ಹೆ.ಪು.೯) ಎನ್ನುವ ವರ್ಣನೆಯ ಮೂಲಕ ವ್ಯಕ್ತವಾಗುವುದು ಹೂವಯ್ಯನ ಕೆಲವು ಸಹಜ ಗುಣಗಳು. ಹೂವಯ್ಯನ ಕೆಲವು ಪ್ರಕ್ರಿಯೆಗಳು ಸಹಜವಾದರೂ ಅವು ಸ್ವಯಾರ್ಜಿತವೂ ಆಗಿವೆ. ಅಂದರೆ ಹೂವಯ್ಯನ ವ್ಯಕ್ತಿತ್ವ ಪ್ರಜ್ಞಾಪೂರ್ವಕತೆಯಿಂದಲೂ ಬೌದ್ಧಿಕತೆಯಿಂದಲೂ ರೂಪುಗೊಂಡಿದೆ.

ಬುದ್ಧ, ರಾಮಕೃಷ್ಣ, ವಿವೇಕಾನಂದರಂತಹ ಸಾಧಕರಿಂದ ವರ್ಡ್ಸ್ ವರ್ತ್‌, ಮ್ಯಾಥ್ಯೂಅರ್ನಾಲ್ಡ್‌ರಂತಹ ಲೇಖಕರ ವಿಚಾರ, ಅನುಭೂತಿಗಳಿಂದ ಪ್ರಪುಲ್ಲಿತವಾಗಿರುವ ಹೂವಯ್ಯ ತನ್ನ ಜಗತ್ತಿನಲ್ಲಿ ಒಂಟಿಯಾಗಿದ್ದಾನೆ. ನಿಸರ್ಗದ ಅನುಪಮವಾದ ಹಾಗೂ ದೈವೀಕರಿಸುವ ಸೌಂದರ್ಯದಿಂದ ಭಾವಾವಿಷ್ಟನಾಗುವ ಅವನು, ತಮ್ಮ ಸಂಕೀರ್ಣ ಕಾಮ ಹಾಗೂ ಆಸ್ತಿ ಸಂಬಂಧಗಳ ಗೋಜಲಿನಲ್ಲಿರುವ, ಈ ದೈವೀಕ ಸೌಂದರ್ಯಕ್ಕೆ ಕುರುಡಾಗಿರುವ ಸುತ್ತಲ ಪ್ರಪಂಚದ ಕಣ್ಣಿಗೆ ರೋಗಿಯಂತೆ ಕಾಣಿಸುತ್ತಾನೆ. ಹೂವಯ್ಯನ ಈ ರೋಗಿತನವೇ ಆತ ತಾನು ಬದುಕುತ್ತಿರುವ ಸಮಾಜವನ್ನು ನಿರ್ಣಾಯಕವಾಗಿ ನಿಯಂತ್ರಿಸುವ ಶಕ್ತಿ ಪಡೆದುಕೊಂಡಿರುವ ಪುರೋಹಿತ ಶಾಹಿಯ ವಿರುದ್ಧ ಬಂಡೇಳುವಂತೆ ಮಾಡುವುದು. ಸರಿ-ತಪ್ಪುಗಳ ವಿಮರ್ಶೆಯ ಮಾನದಂಡಗಳ ವಾರಸುದಾರನಂತೆ ವರ್ತಿಸುವ ವೆಂಕಪ್ಪ ಜೋಯಿಸನ ಯಂತ್ರ, ಮಂತ್ರ, ತಂತ್ರಗಳಿಂದ ಜರ್ಝರಿತವಾಗಿ ಹೋಗಿರುವ ಬದುಕನ್ನು ಘನತೆಯ ಕಡೆಗೆ, ಜ್ಞಾನದ ಕಡೆಗೆ ಹಾಗೂ ಸಮತೆಯ ಕಡೆಗೆ ಒಯ್ಯುವ ಪ್ರಯತ್ನದಲ್ಲಿ ಹೂವಯ್ಯ ಮಾಗುತ್ತಾನೆ. ಈ ಪ್ರಯತ್ನದೊಂದಿಗೇ ಅವನ ಪ್ರೇಮ ಪ್ರಕರಣವೂ ಹೆಣೆದುಕೊಂಡಿದೆ. ಹೂವಯ್ಯ ಪ್ರೇಮದ ಬಗ್ಗೆ ಯೋಚಿಸಿ, ವಿಶ್ಲೇಷಿಸಿ, ವಿಮರ್ಶಿಸಿ, ಅಹಂಕರಿಸಿ, ಆತ್ಮವಂಚನೆಗೆ ಈಡಾಗಿ ನರಳುತ್ತಾನೆ. ಈ ನರಳುವಿಕೆಯ ಬೆಂಕಿಯಲ್ಲಿ ಪುಟ್ಟವಿಟ್ಟ ಚೇತನದಂತೆ ಎಲ್ಲ ನರಳುವಿಕೆಗೆ ಅತೀತವಾದ ಆನಂದದಲ್ಲಿ ಬೆಳಗುವ ಮನುಷ್ಯನಾಗುತ್ತಾನೆ. ಬುದ್ಧನಾಗುತ್ತಾನೆ.

ಹೂವಯ್ಯ ಪ್ರೀತಿಯ ಅಣ್ಣನಾಗುತ್ತಾನೆ. ಮುದ್ದಿನ ಮಗನಾಗುವಂತೆ ಒಂದು ಹೆಣ್ಣಿನ ಹೃದಯದಲ್ಲಿ ದೇವರಾಗುತ್ತಾನೆ. ಹೀಗೆ ಈ ಪಾತ್ರ ಬೆಳೆಯುತ್ತಾ ಹೋಗುತ್ತದೆ. ಬಲೀಂದ್ರ ಹೋತದ ಪ್ರಸಂಗ ನೋಡಿದರೆ ಇಲ್ಲಿಯೂ ಹೂವಯ್ಯ ತನ್ನ ವ್ಯಕ್ತಿತ್ವವನ್ನು ತನಗೆ ಸಹಜಗತಿಯಲ್ಲಿ ಉಳಿಸಿಕೊಳ್ಳುವುದನ್ನು ಗಮನಿಸಬಹುದು. ಬಲಿಯಾಗುವುದು ಪ್ರತಿಭಟಿಸಿ ಓಡಿಬಂದ ಹೋತವು ಜನ ಮತ್ತು ನಾಯಿಗಳ ಕಿರುಕುಳದಿಂದ ತಪ್ಪಿಸಿಕೊಂಡು ಕೆರೆಗೆ ಹಾರಿ ಈಜಿ ಸೋತು ನಿಂತಾಗ ಮಾತ್ರ ಹೂವಯ್ಯ ಅದಕ್ಕೆ ರಕ್ಷಣೆ ಕೊಡಲು ಮುಂದಾಗುತ್ತಾನೆ. ಆ ವೇಳೆಗಾಗಲೇ ಆಗಿದ್ದ ಬಲಿಗಳು ಜನರ ನಂಬಿಕೆಗಳನ್ನು ಪ್ರತಿಬಿಂಬಿಸುವಂಥವಾಗಿದ್ದು, ಹೂವಯ್ಯ ಅಂಥ ನಂಬಿಕೆಗಳಿಗೆ ಅಡ್ಡಿಯನ್ನುಂಟು ಮಾಡುವ ಪ್ರಯತ್ನವನ್ನೂ ಮಾಡಿರುವುದಿಲ್ಲ. ಆದ್ದರಿಂದ ಬಲೀಂದ್ರ ಹೋತದ ರಕ್ಷಣೆ ಅಹಿಂಸಾ ತತ್ವದ ಬೋಧನೆಗಾಗಿಯಾಗಲಿ, ಊರನ್ನೂ ತಿದ್ದುವ ಸಲುವಾಗಿಯಾಗಲಿ ಆದದ್ದಲ್ಲವೇ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಂತರ ಬಲೀಂದ್ರನ ರಕ್ಷಣೆ ಆತ ಶರಣು ಬಂದವರಿಗೆ ಕೊಡುವ ನೆರವಿನಂತಹ ರಕ್ಷಣೆಯಾಗಿದೆ.

ಹೂವಯ್ಯನ ಭಾವ ಸಮಾಧಿಯನ್ನು ಹಳ್ಳಿಯ ಜನರು “ಮೂರ್ಛೆರೋಗ, ದೆವ್ವ ಹಿಡಿಯುವುದು” ಮುಂತಾಗಿ ಆಡಿಕೊಳ್ಳುತ್ತಾರೆ. ಇದರ ಕಾರಣದಿಂದ ಆತನ ಬಗ್ಗೆ ಭಕ್ತಿಯನ್ನೋ ಭಯವನ್ನೋ ತೋರಿಸುವಂತಾಗುವುದು ವಸ್ತುಬಂಧದ ದೃಷ್ಟಿಯಿಂದ ಮುಖ್ಯ. ಇದರ ಕಾರಣದಿಂದಲೇ ಶಾಮಯ್ಯ ಗೌಡರು ಸೀತೆಯನ್ನು ಹೂವಯ್ಯನಿಗೆ ಕೊಡಲು ಹಿಂಜರಿಯುವುದು. ಹೀಗೆ ಭಾವಸಮಾಧಿ ಬೇರೆ ಬೇರೆ ಕಾರಣಗಳಿಗಾಗಿ ಕೃತಿಯ ಮೇಲೆ ಪರಿಣಾಮವನ್ನುಂಟು ಮಾಡಿದರೂ ಸಮಾಜದ ಪುನರ್‌ರಚನೆಯ ಹಂತದಲ್ಲಿ ಅದು ಪ್ರತ್ಯಕ್ಷವಾಗಿ ಪಾತ್ರ ವಹಿಸುವುದಿಲ್ಲ.

ಮನುಷ್ಯ ಎಲ್ಲರನ್ನು ನಿಯಂತ್ರಿಸುವ ಶಕ್ತಿಯುಳ್ಳವನಾಗುತ್ತಾನೆ. ಆದರೆ, ತನ್ನನ್ನು ನಿಗ್ರಹಿಸಿಕೊಳ್ಳಲು ಮನಸ್ಸು ಮಾಡುವುದಿಲ್ಲ, ಕಷ್ಟಪಡುವುದಿಲ್ಲ. ತನ್ನನ್ನು ತಾನು ಗೆಲ್ಲುವುದೇ ದೊಡ್ಡ ಬಮಡಾಯ, ಶಾಶ್ವತ ಬಂಡಾಯ. ಆಗ ಮನುಷ್ಯನಿಗೆ ಸ್ವಂತ ಆಸಕ್ತಿಗಳಿರುವುದಿಲ್ಲ. ಅವನು ಮಾಡುವುದೆಲ್ಲ ಸಮುದಾಯಕ್ಕಾಗಿ ಮೀಸಲಾಗುತ್ತದೆ. ಹೀಗೆ ಪ್ರತಿಯೊಬ್ಬನೂ ಸಾಧಿಸಿದಾಗ ಶೋಷಣೆ ನಿಲ್ಲುತ್ತದೆ. ಸಮಾನತೆ, ಸ್ವಾತಂತ್ರ್ಯ, ಸೋದರತ್ವ ಸ್ಥಾಪಿತವಾಗುತ್ತದೆ. ಶುದ್ಧ ಮಾನವೀಯತೆ ತನ್ನೆಲ್ಲ ನೈಜ ಶಕ್ತಿಯಿಂದ ಶೋಭಿಸುತ್ತದೆ. ಈ ದಿಸೆಯಲ್ಲಿ ಹೂವಯ್ಯ ಜೀವಂತ ಆದರ್ಶವಾಗುತ್ತಾನೆ.

ಹೂವಯ್ಯ ಕಾದಂಬರಿಯಲ್ಲಿ ಎಷ್ಟೇ ಪ್ರಮುಖ ಹಾಗೂ ಪ್ರಖರ ಪಾತ್ರವಾದರೂ ಕಾದಂಬರಿಯ ಸಮಷ್ಟಿ ಪರಿಣಾಮಕ್ಕೆ ಪೂರಕವಾಗುತ್ತಾನೆಯೇ ಹೊರತು ವ್ಯಾಪರವಾಗುವುದಿಲ್ಲ. ಕುವೆಂಪು ಈ ಪಾತ್ರದ ಮೂಲಕ ಬದುಕಿನ ಮಾನಸಿಕ ಹಾಗೂ ದೈಹಿಕ ಕ್ರಿಯೆಗಳಲ್ಲಿನ ಸಾಧ್ಯತೆ, ಘರ್ಷಣೆ ಹಾಗೂ ದೃಶ್ಯಗಳನ್ನು ಚಿತ್ರಿಸಲು ಯತ್ನಿಸುವ ಮೂಲಕ ಮೌಲ್ಯ ವಿಶ್ಲೇಷಣೆಯನ್ನು ವಿಶೇಷ ಸಂಘರ್ಷಗಳನ್ನು ಮೌಲ್ಯ ಸಾಧ್ಯತೆಗಳನ್ನು ನಡೆಸಲು ಯತ್ನಿಸಿದ್ದಾರೆ.

ಕಾದಂಬರಿಯ ಇನ್ನುಳಿದ ಪುರುಷ ಪಾತ್ರಗಳತ್ತ ನೋಡಿದರೆ ಚಂದ್ರಯ್ಯ ಗೌಡರದು ಕೇಂದ್ರ ಪಾತ್ರಕ್ಕೆ ಪೂರಕವಾಗಿ ಬರುವ ಮುಖ್ಯ ಪಾತ್ರವಾಗುತ್ತದೆ ಮತ್ತು ಕೇಂದ್ರ ಪಾತ್ರದ ಸುತ್ತ ಕತೆ ಹೆಣೆಯುತ್ತಿರುವುದರಿಂದ ಈ ಪಾತ್ರ ಕೇಂದ್ರ ಪಾತ್ರದಷ್ಟೇ ಮುಖ್ಯವಾಗುತ್ತದೆ. ಚಂದ್ರಯ್ಯಗೌಡರು ಮಲೆನಾಡಿನ ಒಂದು ಹಳ್ಳಿಯ ಶ್ರೀಮಂತ ವರ್ಗದ ಜೀವಂತ ಪಾತ್ರವಾಗಿ ಬರುತ್ತಾರೆ. ಕೆಲವು ಕಾದಂಬರಿಗಳಲ್ಲಿ ಪಾತ್ರಗಳು ಕಲ್ಪನೆಯಿಂದ ಬಂದವುಗಳಾದರೆ ಈ ಪಾತ್ರ ನಾವು ಮಲೆನಾಡಿನ ಪರಿಸರದಲ್ಲಿ ಎಂದೋ ಜೀವಂತವಾಗಿ ನೋಡಿದ, ಮಾತನಾಡಿದ ಅನುಭವವನ್ನು ನೀಡುತ್ತದೆ. ಆಗಿನ ಕಾಲದ ಮಲೆನಾಡಿನ ಒಬ್ಬ ತಂದೆ, ಚಿಕ್ಕಪ್ಪ, ಮೂರು ನಾಲ್ಕು ಹೆಂಡಿರ ಗಂಡ, ಹೆಣ್ಣು ತಂದ ಮಾವ ಹೇಗಿರುತ್ತಾನೆ ಎನ್ನುವುದು ಚಂದ್ರೇಗೌಡರಿಂದ ತಿಳಿಯಬಹುದು. ಕಾನೂರು ಮನೆತನದ ಕೇಂದ್ರವಾದ ಚಂದ್ರಯ್ಯಗೌಡರು ಕಾದಂಬರಿಯ ಮುಖ್ಯ ಬಿಂದುವಾಗಿಯೂ ಪರಿಣಮಿಸುತ್ತಾರೆ. ಒಂದು ಬಗೆಯ ಪಾಳೆಗಾರಿಕೆಯ ಧೋರಣೆ ಅವರದಾಗಿತ್ತು. ಅವರ ಸುತ್ತಮುತ್ತ ಬರುವ ಎಲ್ಲಾ ಪಾತ್ರಗಳು ಬೇರೆ, ಬೇರೆ ಕಾರಣಗಳಿಗಾಗಿ ಅವರಿಗೆ ಭಯ, ಭಕ್ತಿ ತೋರಿಸುತ್ತವೆ. ಕಾದಂಬರಿಯಲ್ಲಿ ಜರುಗುವ ಎಲ್ಲಾ ಘಟನೆಗಳು ಒಂದಲ್ಲ ಒಂದು ವಿಧದಿಂದ ಈ ಪಾತ್ರಕ್ಕೆ ಸಂಬಂಧ ಪಡುವುದು ಗಮನಾರ್ಹ. ಹಾಗೇ ಅವರಲ್ಲಿದ್ದ ದರ್ಪ, ಕ್ರೌರ್ಯ, ಸಣ್ಣ ಮನಸ್ಸು, ವಿಷಯ ಲಂಪಟತೆ ಕಾನೂರು ಮನೆತನದ ದುರಂತಕ್ಕೆ ಕಾರಣವಾಗುತ್ತದೆ. ಅವರಿಗೆ ಮದುವೆಯ ವಯಸ್ಸಿನ ಮಗನಿದ್ದಾಗಲೂ ಇನ್ನೊಂದು ಮದುವೆ ಮಾಡಿಕೊಳ್ಳುವುದು ಅವರ ಕಾಮಲಾಲಸೆಯನ್ನು ತೋರಿಸುವುದರ ಜೊತೆಗೆ ನೆಲ್ಲು ಹಳ್ಳಿಯ ಸುಬ್ಬಿ ಕಾನೂರಿನ ಹೆಗ್ಗಡತಿಯಾಗುವವರೆಗಿನ ಎಲ್ಲಾ ಏರು ಪೇರುಗಳಿಗೆ ಗೌಡರೇ ಕಾರಣೀಭೂತರಾಗಿದ್ದಾರೆ.

ಅವರಿಗೆ ತನಗಿಂತ ಮೇಲೆ ಯಾರೂ ಇರಬಾರದು ಎನ್ನುವ ಆಲೋಚನೆ ಇತ್ತು. ಅದಕ್ಕಾಗಿ ಹೂವಯ್ಯ, ರಾಮಯ್ಯರ ಓದನ್ನು ನಿಲ್ಲಿಸುವಂತೆ ಮಾಡುತ್ತಾರೆ ಮತ್ತು ಅವರಲ್ಲಿ ಇರುವ ಧೂರ್ತತೆ ಹೇಸಿಗೆ ಹುಟ್ಟಿಸುವಂತಿದೆ. ಅವರು ಕಾಮಲಾಲಸೆಗಾಗಿ ಮದುವೆಯಾದರೂ ಸುಬ್ಬಮ್ಮಳನ್ನು ಅನುಮಾನಿಸುತ್ತಾರೆ. ಅಷ್ಟೇ ಅಲ್ಲದೆ ಅವಳನ್ನು ಬಂಜೆ ಎಂದು ಹಂಗಿಸುತ್ತಾರೆ. ಅವರು ಸೀತೆಯ ವಿಚಾರದಲ್ಲಿ ವರ್ತಿಸುವ ರೀತಿ ವೇದನೆಯನ್ನುಂಟು ಮಾಡುತ್ತದೆ.

ಚಂದ್ರಯ್ಯಗೌಡರ ಕೊನೆ ದಿನಗಳಲ್ಲಿ ಬುದ್ಧಿ ವಿಕಾರಕ್ಕೆ ಒಳಗಾಗುತ್ತಾರೆ. ಇದಕ್ಕೆ ಹಲವು ಕಾರಣಗಳಿದ್ದವು. ಅವರು ಮಸುಲುವಿನಿಂದ ಹಿಡಿದು ಸುಬ್ಬಮ್ಮನವರೆಗೂ, ಓಬಯ್ಯನಿಂದ ಹಿಡಿದು ಸಿಂಗಪ್ಪಗೌಡರವರೆಗೂ ಯಾರನ್ನೂ ನಂಬುತ್ತಿರಲಿಲ್ಲ. ಇವರಲ್ಲಿ ಯಾರು ಎಷ್ಟರ ಮಟ್ಟಿಗೆ, ಯಾವುದು ಎಷ್ಟರ ಮಟ್ಟಿಗೆ ಕಾರಣವಾಗಿತ್ತೆಂಬುದನ್ನು ಪತ್ತೆ ಮಾಡುವುದು ಕಷ್ಟ. ಹಾಗಾಗಿ ಇದುವರೆಗೆ ಆ ಕಾಡು, ಹಳ್ಳಿ, ಮನ್ಯಲ್ಲಿ ತನ್ನ ದರ್ಪದ ಧ್ವನಿಯಿಂದ ನಡುಗಿಸುತ್ತಿದ್ದ ಚಂದ್ರಯ್ಯ ಗೌಡರ ವ್ಯಕ್ತಿತ್ವ ಅವರ ಕೊನೆಯ ಸಮಯದಲ್ಲಿ ಆಧಾರವಾಗುವುದು ಕಾದಂಬರಿಯ ವಸ್ತು ರಚನೆಯ ದೃಷ್ಟಿಯಿಂದ ಒಂದು ಮಹತ್ವದ ಘಟ್ಟ. ಸ್ವಕೀಯರನ್ನೇ ಪರಕೀಯರಂತೆಯೂ, ಪರಕೀಯರನ್ನು ಸ್ವಕೀಯರಂತೆ ಪರಿಲಕ್ಷಿಸುವ ಸಾಧ್ಯತೆ ಉಂಟಾಗಬೇಕಾದರೆ ಆ ಮನೋಭೂಮಿಕೆಯಲ್ಲಿ ಏನೆಲ್ಲ ವಿಪ್ಲವಗಳು ಉಂಟಾಗಿರಬಹುದು ಎಂದು ಯೋಚಿಸಿದಾಗ ಆ ಪಾತ್ರದ ಬಗ್ಗೆ ನಾವೂ ಒಮ್ಮೆ ಆರ್ದ್ರಗೊಳ್ಳುವಂತೆ ಕುವೆಂಪು ಒಡಮೂಡಿಸಿದ್ದಾರೆ.

ರಾಮಯ್ಯನ ಪಾತ್ರವನ್ನು ಗಮನಿಸಿದರೆ ಈತ ಹೂವಯ್ಯನಂತೆ ವಿದ್ಯಾವಂತನಾದರೂ ಕಾನೂರಿಗೆ ಬಂದ ನಂತರ ಅವನು ಇಲ್ಲಿನ ಪರಿಸರ ಮತ್ತು ವ್ಯಕ್ತಿಗಳಿಗೆ ಹೊಂದಿಕೊಳ್ಳುತ್ತಾ ತನ್ನ ಗುರಿ ಮತ್ತು ಆದರ್ಶಗಳನ್ನು ಮರೆತು ಬಿಡುತ್ತಾನೆ. ಯಾವುದೇ ಪಾತ್ರ ಬೆಳೆಯುತ್ತದೆ ಅಥವಾ ಪತನವಾಗುತ್ತದೆ. ಒಂದೇ ಮನೆ, ಒಂದೇ ವಿದ್ಯೆ ಪಡೆದ ರಾಮಯ್ಯ ಹೂವಯ್ಯರಲ್ಲಿ ಒಂದು ಬೆಳೆಯುವ ಪಾತ್ರವಾದರೆ, ಒಂದು ಪತನದ ಪಾತ್ರವಾಗುತ್ತದೆ. ಈ ಪತನಕ್ಕೆ ಕಾರಣವನ್ನು ನೋಡುವುದಾದರೆ ಹೋತದ ಪ್ರಸಂಗದಲ್ಲಿ ಅದನ್ನು ಕೊಲ್ಲಬೇಕು ಎನ್ನುವಲ್ಲಿ ಮೌಢ್ಯವನ್ನು ಪ್ರದರ್ಶಿಸುತ್ತಾನೆ. ಆತ ಒಂದು ಹೆಣ್ಣಿಗಾಗಿ ತನ್ನ ಆದರ್ಶಗಳನ್ನು ಬಲಿಕೊಡಲು ಹಿಂಜರಿಯುವುದುಲ್ಲ. ಅವನಿಗೆ ಹೂವಯ್ಯ ಮತ್ತು ಸೀತೆಯರ ಬಗ್ಗೆ ತಿಳಿದಿದ್ದರೂ, ಸೀತೆಯ ಪತ್ರ ಸಿಕ್ಕಿದರೂ ಮದುವೆಯಾಗಲೇಬೇಕು ಎನ್ನುವ ತೀರ್ಮಾನಕ್ಕೆ ಬರುತ್ತಾನೆ. ಜೋತಿಷಿ ಹೇಳುವುದನ್ನು ಕೋಲೆ ಬಸವನಂತೆ ತಲೆ ಆಡಿಸಿ ಒಪ್ಪಿಕೊಳ್ಳುತ್ತಾನೆ. ಈ ಎಲ್ಲಾ ವರ್ತನೆಗಳಿಗೆ ಆತನ ಹೂವಯ್ಯನಿಂದ ದೂರವಾದುದೇ ಕಾರಣವಾಗುತ್ತದೆ. ಹಾಗೆಂದು ಆತನಲ್ಲಿ ಮಾನವೀಯತೆ ಇರಲಿಲ್ಲವೆಂದಲ್ಲ. ಮಾನವೀಯತೆಯ ಕೆಲವು ಎಳೆಗಳು ಆತನಲ್ಲಿ ಉಳಿದಿದ್ದರಿಂದಲೇ ಸೀತೆಗೆ ಕಟ್ಟಬೇಕಾದ ತಾಳಿ ಕೈಯಿಂದ ಜಾರಿ ಬೀಳುವುದು. ಸೀತೆಗೆ ಬರೆ ಎಳೆದಾಗ ತಂದೆಗೆ ಎದುರುವಾದಿಸಿ ಅವಳು ಮದುವೆಗೆ ಮೊದಲು ಬರೆದ ಕಾಗದವನ್ನು ಕುರಿತು ತಂದೆ ಎದುರು ಪ್ರಸ್ತಾಪಿಸುವುದು ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವುದು.

ಕುವೆಂಪು ಎಷ್ಟು ವಿವರವಾಗಿ ದೀರ್ಘವಾಗಿ ವರ್ಣಿಸಬಲ್ಲರೋ ಅಷ್ಟೇ ಸಂಕ್ಷಿಪ್ತವಾಗಿ ದಟ್ಟವಾಗಿ ಹಬ್ಬಿಕೊಂಡ ಮುಖ್ಯ ಪಾತ್ರಗಳನ್ನು ಒಂದೊಂದು ವಾಕ್ಯದಲ್ಲೇ ಔಚಿತ್ಯಪೂರ್ಣ ರೂಪಕಗಳಿಂದ ಹಿಡಿದಿಡಬಲ್ಲರು. “ಹೂವಯ್ಯನಿಂದ ದೂರವಾಗಿದ್ದ ರಾಮಯ್ಯನ ಮಾನಸಿಕ ಸ್ಥಿತಿಯು ಆಯಸ್ಕಾಂತ ಶಿಲೆಯಿಂದ ಬಹುಕಾಲ ದೂರವಾಗುವ ಕಬ್ಬಿಣದ ಸೂಜಿಗಲ್ಲಿನಂತೆ ತನ್ನ ಶಕ್ತಿಯನ್ನು ಕಳೆದುಕೊಳ್ಳತೊಡಗಿತ್ತು” (ಕಾ.ಹೆ. ಪುಟ ೪೧೩) ಇದು ನಿಜಕ್ಕೂ ಶಕ್ತಿವತ್ತಾದ ಪ್ರತಿಮೆ. ಹೂವಯ್ಯನ ಆಧ್ಯಾತ್ಮಕ ಪ್ರಭಾವದಿಂದ ದೂರವಾದ ರಾಮಯ್ಯನ ಅಧೋಗತಿಯನ್ನು ಈ ವಿನೂತನ ಪ್ರತಿಮೆ ವೈಜ್ಞಾನಿಕವಾಗಿ ಹಿಡಿದಿದೆ. ಚಂದ್ರಯ್ಯಗೌಡರು ಯಾವ ಸುಳಿಗೆ ಸಿಕ್ಕು ವಂಶದ ಗೌರವಕ್ಕೆ ಶಿಲಾಂಜಲಿಯನ್ನಿತ್ತರೋ ಸ್ವಲ್ಪ ಹೆಚ್ಚು ಕಮ್ಮಿ ರಾಮಯ್ಯ ಅದೇ ಸೆಳೆತಕ್ಕೆ ಸಿಕ್ಕಿ ತನ್ನನ್ನು ತಾನು ಬಲಿಕೊಟ್ಟುಕೊಳ್ಳುತ್ತಾನೆ.

ವೆಂಕಪ್ಪಯ್ಯ ಜೋಯಿಸರ ಸ್ವಭಾವವನ್ನು ಕುವೆಂಪು ಹೀಗೆ ಬರೆಯುತ್ತಾರೆ: “ರಾಜ್ಯದಲ್ಲಿ ದಂಗೆಯಾದರೆ ಅದನ್ನಡಗಿಸಲು ಆ ಪ್ರದೇಶಕ್ಕೆ ರಾಜನ ಸೈನ್ಯ ಹೋಗುವ ಠೀವಿಯಿಂದ ವೆಂಕಪ್ಪ ಜೋಯಿಸರು ಮರುದಿನ ಮುತ್ತಳ್ಳಿಗೆ ಬಂದರು” (ಕಾ.ಹೆ.ಪುಟ ೪೪೬) ಜೋಯಿಸರು ತಮ್ಮ ಬದುಕಿನಲ್ಲಿ ಮಾಡಿದ್ದೆಲ್ಲ ಬಲಿದುಳಿಯೇ. ಕಾದಂಬರಿಯಲ್ಲಿ ಅವರಿಗೆ ಮೀಸಲಾಗಿರುವ ಪುಟಗಳನ್ನು ಗಮನಿಸಿದರೆ ಅವರ ಪಾತ್ರ ತೀರಾ ಗೌಣವೆನಿಸುತ್ತದೆ. ಆದರೆ, ಅವರು ಬೀರುವ ಪ್ರಭಾವ ಈ ಕಾದಂಬರಿಯ ಮೇಲೆ ಅವರಿಟ್ಟುಕೊಂಡಿರುವ ಹಿಡಿತವನ್ನು ಸೂಚಿಸುತ್ತದೆ. ಜೋಯಿಸರ ಪಾತ್ರ ಏಕಮುಖಿಯಾಗಿದ್ದು, ಶೋಷಣೆಗೆ ಪ್ರತಿನಿಧಿಯಾಗಿದೆ.

ಅದನ್ನು ಮಾದರಿಯಾಗಿ ಚಿತ್ರಿಸುವುದೇ ಕಾದಂಬರಿಕಾರರ ಉದ್ದೇಶವಾಗಿದೆ. ‘ಚಂದ್ರಯ್ಯ ಗೌಡರ ದರ್ಬಾರು’ ಎಂಬ ಅಧ್ಯಾಯದಲ್ಲಿ ವೆಂಕಪ್ಪಯ್ಯ ಜೋಯಿಸರ ದರ್ಶನವಾಗುತ್ತದೆ.” ಅವರ ಉದ್ಯೋಗಗಳಲ್ಲಿ ಮುಖ್ಯವಾದುದೆಂದರೆ ದೇವರು ಪೂಜೆ, ನಿಮಿತ್ತ ನೋಡುವುದು. ಲಗ್ನಕ್ಕೆ ಮಹೂರ್ತ ಇಟ್ಟುಕೊಡುವುದು, ಶೂದ್ರರು ಭೂತಾದಿಗಳಿಗೆ ರಕ್ತದ ಬಲಿ ಕೊಡುವ ಮೊದಲು ಹಣ್ಣು ಕಾಯಿ ಮಾಡುವುದು. ಮಂತ್ರದಿಂದ ದೆವ್ವಗಳನ್ನು ಬಿಡಿಸುವುದು ಮತ್ತು ಹಿಡಿಸುವುದು ಇತ್ಯಾದಿ ಆದ ಕಾರಣ ಹಳ್ಳಿಯವರಿಗೆಲ್ಲ ಅವರನ್ನು ಕಂಡರೆ ಭಯಭಕ್ತಿ (ಕಾ.ಹೆ. ಪು ೬೯) ಎಂದು ಪಾತ್ರ ವಿಶೇಷತೆಯನ್ನು ಕಾದಂಬರಿಕಾರರು ಸೂಚಿಸುತ್ತಾರೆ. ಈ ಅಂಶಗಳನ್ನೆಲ್ಲ ಕಾದಂಬರಿಯಲ್ಲಿ ಜೋಯಿಸರು ಮಾಡಿತೋರಿಸುತ್ತಾರೆ.

ಹೂವಯ್ಯನಿಗೆ ಜೋಯಿಸರ ಮೇಲೆ ವೈಯಕ್ತಿಕ ದ್ವೇಷವಿಲ್ಲ. ಆತ ಖಂಡಿಸುವುದು, ದ್ವೇಷಿಸುವುದು ಜೋಯಿಸರ ಎಂದರೆ ಆ ವರ್ಗದವರ ಶೋಷಣಾ ಭರಿತ ಬುದ್ಧಿಯನ್ನು, ಹೂವಯ್ಯ ಜೋಯಿಸರನ್ನು ಗೌರವಿಸುವುದು ಕೇವಲ ಸಭ್ಯತೆಗೆ ಹೊರತು ಅವರು ಮಾಡುವ ಸುಲಿಗೆಯ ಬಗ್ಗೆ ಸಹಾನುಭೂತಿಗಾಗಿ ಅಲ್ಲ. ಕಾದಂಬರಿಯಲ್ಲಿ ಸಂಪ್ರದಾಯಕ್ಕೂ, ಆಧುನೀಕತೆಗೂ ಘರ್ಷಣೆ ಉಂಟಾಗುತ್ತದೆ. ಜೋಯಿಸರ ಸ್ವಾರ್ಥಪರ ಕುತಂತ್ರದಿಂದ ಹಲವಾರು ಜೀವಗಳು ದುರಂತಕ್ಕೆ ಗುರಿಯಾಗುತ್ತವೆ. ಈತನ ಪ್ರತಿ ಮಾತಿನಲ್ಲಿಯೂ ಪುರೋಹಿತಶಾಹಿಯ ಮೋಸ, ಕಪಟ, ಸ್ವಾರ್ಥ, ಒಣ ಪ್ರತಿಷ್ಠೆ ಶೂದ್ರರ ಮೌಢ್ಯವನ್ನು ಬಂಡವಾಳವನ್ನಾಗಿಸಿಕೊಂಡು ಹೊಟ್ಟೆ ಹೊರೆದುಕೊಳ್ಳುವುದು, ಶೂದ್ರರನ್ನು ಅಜ್ಞಾನದ ಕತ್ತಲಲ್ಲೇ ಇಡುವುದು ಇತ್ಯಾದಿಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಸೇರೆಗಾರರ ಇಡೀ ಬದುಕನ್ನು ಕಾದಂಬರಿಯಲ್ಲಿ ಹೀಗೆ ಬರೆಯಲಾಗಿದೆ. “ಬೇಟೆಯಲ್ಲಿಯೂ ಅವರ ಕೂಲಿಯೊಳೊಬ್ಬರ ಬೇಟದಲ್ಲಿಯೂ ಅವರಿಗೆ ಆಸಕ್ತಿ. ಬೇಟ ಬೇಟೆಗಳಾಚೆ ಸೇರೆಗಾರರ ಜೀವ ಚಾಚಿಕೊಳ್ಳುವುದಿಲ್ಲ.” (ಕಾ.ಹೆ.ಪು. ೧೭೧) ರಂಗಪ್ಪ ಶೆಟ್ಟರಿಗೆ ತಮ್ಮದೇ ಆದ ವಿಶಿಷ್ಟ ರೀತಿಯ ಅಂತರಂಗವಿದ್ದು, ಆ ಅಂತರಂಗವು ಜಟಿಲತೆಯಿಂದ ಕೂಡಿ ಅವರ ವ್ಯವಹಾರದ ಹಾಸು ಬೀಸುಗಳ ಕಡೆಗೂ ಕೈ ತೋರಿಸುವಂತಿದೆ. ‘ಸೇರೆಗಾರರ ಕೇಪಿಲ ಕೋಲು’ ಎಂಬ ಅಧ್ಯಾಯದಲ್ಲಿ ಕೋಳಿ ಹುಂಜದ ಬೇಟೆಯನ್ನು ವಿವರಿಸುವಲ್ಲಿ ಸೇರೆಗಾರರ ವ್ಯಕ್ತಿತ್ವವನ್ನು ವಿವರಿಸುತ್ತಾರೆ. ಕಾದಂಬರಿಯ ಉದ್ದಕ್ಕೂ ದುರಂತದ ರೇಖೆಯನ್ನು ಎಳೆಯುತ್ತ ಹೋಗುವ ಸೇರೆಗಾರರನ್ನು ಬಹಳ ಸಮರ್ಥವಾಗಿ ಪರಿಚಯ ಮಾಡಿಕೊಡುತ್ತಾರೆ. ಈತ ಕಾಮುಕನಾಗಿ ನಮಗೆ ಕಾದಂಬರಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಗಂಗೆಗೆ ಮದುವೆಯಾಗಿದ್ದರೂ ಅವಳನ್ನು ಅಲ್ಲಿಂದ ಕರೆದುಕೊಂಡು ಬಂದಿರುವುದು ಮತ್ತು ಚಂದ್ರಯ್ಯಗೌಡರ ಹೆಂಡತಿಯಾದ ಸುಬ್ಬಮ್ಮ ಹೆಗ್ಗಡತಿಯ ಸರ್ವನಾಶಕ್ಕೆ ಕಾರಣವಾಗುವುದು ಹೀಗೆ ವಿಷಯ ಲಂಪಟತನದಿಂದ ಬದುಕಿದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ.

ಅನುಷಂಗಿಕವಾಗಿ ಬರುವ ಪಾತ್ರಗಳು ಕಥೆಗೆ ಪೂರಕವಾಗಿದೆ. ಅವುಗಳೂ ವಿಶಿಷ್ಟ ಮನೋಧಮ್ಮವನ್ನು ಹೊಂದಿವೆ. ವಾಸುವಿನದು ಚಿಕ್ಕ ಹುಡುಗನ ಪಾತ್ರವಾದರೂ ಆತ ಪ್ರಕೃತಿಯೊಂದಿಗೆ, ಪರಸರದೊಂದಿಗೆ, ಮನುಷ್ಯರೊಂದಿಗೆ ಹೊಂದಿರುವ ಸಂಬಂಧ ವಿಶಿಷ್ಟವಾದುದು. ಪುಟ್ಟಣ್ಣ ಈತ ಕಾನೂರು ಮನೆತನಕ್ಕೆ ಸೇರಿಯೂ ಸೇರದಂತಿರುವ, ಕಾದಂಬರಿಯಲ್ಲಿ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತಾನೆ. ಕಾನೂರು ಹೆಗ್ಗಡತಿಯ ಪುಟ ಪುಟಗಳಲ್ಲಿಯೂ ಮಲೆನಾಡಿನ ಮರಗಿಡಗಳಂತೆ ಸಂಕೀರ್ಣವಾಗಿ ಹೆಣೆದುಕೊಂಡಿರುವ ನೈಜ ಜೀವನದ ಪ್ರತಿನಿಧಿಯಾಗಿ ನಿಂಗ ಕಾಣಿಸಿಕೊಳ್ಳುತ್ತಾನೆ. ಹಳ್ಳಿಯ ದುಃಖ, ರೋಗ, ದಾರಿದ್ರ್ಯಗಳೇ ಮೈವೆತ್ತಂತೆ ಇರುವ ನಿಂಗನ ವ್ಯಕ್ತಿತ್ವ ಮಲೆನಾಡಿನ ಪದರು ಪದರನ್ನು ಸ್ಪರ್ಶಿಸಿದ ಅನುಭವ ನೀಡುತ್ತದೆ.

ಬೇಟೆ ಅಥವಾ ಶಿಕಾರಿ ಕುರಿತು ಬರೆಯುವುದೆಂದರೆ ಕುವೆಂಪುರವರಿಗೆ ಎಲ್ಲಿಲ್ಲದ ಸಂಭ್ರಮ. ಈ ಕಾದಂಬರಿಯಲ್ಲಿ ಬೇಟೆಯನ್ನು ಪ್ರತಿಮೆಯಾಗಿ ಬಳಸಿಕೊಳ್ಳುತ್ತಾರೆ. ಕೃಷ್ಣಪ್ಪ ಬೇಟೆಗೆ ಹೋಗಿ ತಾನೇ ಬೇಟೆಯ ಜಂತುವಾಗುತ್ತಾನೆ. ಹುಲಿಯ ಬೇಟೆಗೆ ಹೋಗಿ ಹುಲಿಗೆ ಬಲಿಯಾಗುತ್ತಾನೆ. ಸೀತೆಯ ದುರ್ದೈವದ ಹೋಲಿಕೆ ಇದಾಗಿದೆ. ಬೇಟೆಯಂತೆ ಕನಸುಗಳು ಕುವೆಂಪು ಕಾವ್ಯ, ಣಾಟಕ, ಕಾದಂಬರಿಯ ವಿಶಿಷ್ಟ ಸೃಷ್ಟಿಗಳು. ಕಾದಂಬರಿಯಲ್ಲಿಯೂ ಕನಸುಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಹೂವಯ್ಯ ಕಾಣುವ ಅನೇಕ ಕನಸುಗಳು ಕೆಲವು ಕಾರಣಗಳಿಗೆ ಮುಖ್ಯವಾಗುತ್ತವೆ. ತನ್ನ ತಾಯಿಗೆ ಆಗಿರುವ ಹಣೆಗಾಯ ಆಕೆ ತನ್ನ ಮಗನ ಬದುಕಿಗಾಗಿ ಮಾಡುವ ಪ್ರತ್ನದ ಅಸ್ಥಿರತೆಯನ್ನು ದುರ್ಬಲತೆಯನ್ನು ಸೂಚಿಸುವುದಲ್ಲದೆ, ವಿಧವೆತನವನ್ನು ವರ್ಣಿಸುತ್ತದೆ. ಸೀತೆ ಮದುವೆ ಸಂದರ್ಭದಲ್ಲಿ ಕಾಣುವ ಬೆಂಕಿಯ ಕನಸು, ಮುಂದಿನ ಘಟನೆಗಳನ್ನು ಕುರಿತು ಮೊದಲೇ ಸೂಚನೆಗಳನ್ನು ನೀಡುತ್ತಾ ಹೋಗುವುದರ ಸಂಕೇತವಾಗಿದೆ.

ಕಾನೂರು ಹೆಗ್ಗಡತಿಯ ಸ್ತ್ರೀ ಪಾತ್ರಗಳು ತುಂಬಾ ವಿಶಿಷ್ಟವಾದವುಗಳಿವೆ. ಇಲ್ಲಿ ಚಿಕ್ಕ ಮಗು ಲಕ್ಷ್ಮಿಯಿಂದ ಹಿಡಿದು ಸುಬ್ಬಮ್ಮ, ಪುಟ್ಟಮ್ಮ, ನಾಗಮ್ಮ, ಸೀತೆ ಗಂಗೆಯಂತಹರವರೆಗೆ ವಿವಿಧವಾದ ವಿಶಿಷ್ಟ ಅನೇಕ ಪಾತ್ರಗಳಿವೆ. ಮುಖ್ಯವಾಗಿ ಸುಬ್ಬಮ್ಮನನ್ನು ಗಮನಿಸುವುದಾದರೆ ಈಕೆ ನೆಲ್ಲು ಹಳ್ಳಿಯಲ್ಲಿ ಸುಬ್ಬಿಯಾಗಿದ್ದಳು. ಕಾನೂರಿನಲ್ಲಿ ಹೆಗ್ಗಡತಿಯಾಗಿ ಮಾರ್ಪಾಟಾಗುತ್ತಾಳೆ. ಇಲ್ಲಿ ಪ್ರಾಚೀನ ನವೀನತೆಗಳ ಸಂಘರ್ಷದಂತೆ ಸಂಪ್ರದಾಯ ಮತ್ತು ವೈಚಾರಿಕತೆಗಳ ನಡುವೆ ಈ ಪಾತ್ರ ತೂಗುತ್ತದೆ.

ಸುಬ್ಬಮ್ಮ ಹದಿವಯಸ್ಸಿನಲ್ಲಿ ಯೋಚಿಸಬಹುದಾದಂತೆ ಕಾನೂರಿಗೆ ಸೊಸೆಯಾಗಿ ಹೋಗುವಿಕೆಯನ್ನು ಹೂವಯ್ಯನಿಗಾಗಿ ಎಂದುಕೊಮಡರೂ ನಿಜಸ್ಥಿತಿ ತಿಳಿದಾಗ ಅವಳಿಗೆ ತಹ ಆಘಾತವೇನೂ ಆಗುವುದಿಲ್ಲ. ಕಾರಣ ಹೆಗ್ಗಡತಿಯಾಗುತ್ತೇನೆ ಎನ್ನುವ ಸಂತೋಷ ಸಂಭ್ರಮ ಸಡಗರ ವಯಸ್ಸನ್ನು ಮರೆಸುತ್ತದೆ. ಅವಳು ಕಾನೂರಿನಲ್ಲಿ ಮೊದ ಮೊದಲು ಉದ್ದಡತನದಿಂದ ವರ್ತಿಸಿ ನಾಗಮ್ಮ, ಪುಟ್ಟಮ್ಮರನ್ನು ಎದುರು ಹಾಕಿಕೊಳ್ಳುತ್ತಾಳೆ. ಕಾದಂಬರಿಕಾರರು ಅವಳ ಅಧಿಕಾರ ಚಲಾಯಿಸುವಿಕೆಯನ್ನು ಹೀಗೆ ಹೇಳುತ್ತಾರೆ. “ಇವರಿಂದ ಸುಬ್ಬಮ್ಮನಿಗೆ ಮತ್ತಷ್ಟು ಕೋಡು ಬಂದಂತಾಗಿ ಎಲ್ಲರನ್ನು ಹಾಯತೊಡಗಿದಳು”. (ಕಾ.ಹೆ.ಪು.೬೦ ) ಕೋಡು ಮತ್ತು ಹಾಯು ಪಶು ಸಹಜಗುಣವಾಗಿದ್ದು, ಅದಕ್ಕೆ ಸಾರಾಸಾರ ವಿವೇಚನೆಯಿಲ್ಲದಿರುವುದನ್ನು ತೋರಿಸುತ್ತದೆ. ಸುಬ್ಬಮ್ಮ ಕಾನೂರಿನಲ್ಲಿ ಚಂದ್ರಯ್ಯಗೌಡರಿಂದ ಹಿಂಸೆ ಪಡುತ್ತಾಳೆ. ಮತ್ತೆ ನೆಲ್ಲು ಹಳ್ಳಿಯಲ್ಲಿ ಮಾನಸಿಕ ತೊಳಲಾಟದಲ್ಲಿ ಸಿಕ್ಕಿ ಬೀಳುತ್ತಾಳೆ. ದುರಾಲೋಚನೆಯ ಪಾತ್ರವಾಗಿ ಸೇರೆಗಾರರ ಒಳ ಸಂಚಿನಿಂದಾಗಿ ಈ ಕಾದಂಬರಿಯಲ್ಲಿ ಅತಿ ದುರಂತಕ್ಕೆ ಒಳಗಾಗುವ ಪಾತ್ರವಾಗಿದ್ದಾಳೆ.

ಕಾದಂಬರಿಯ ಪ್ರಾಚೀನ ನವೀನ ಸಂಘರ್ಷಗಳಿಗೆ ಹೂವಯ್ಯ ಮತ್ತು ಚಂದ್ರೇಗೌಡರು ಪುರುಷ ಪಾತ್ರಗಳಾದರೆ ಸುಬ್ಬಮ್ಮ, ಸೀತೆ ಸ್ತ್ರೀ ಪಾತ್ರಗಳಾಗಿ ಬರುತ್ತಾರೆ.

ಮಲೆನಾಡಿನಲ್ಲಿ ಈ ಶತಮಾನದಲ್ಲಿ ವರ್ತಮಾನದಲ್ಲೂ ಊಹಿಸಲು ಸಾಧ್ಯವಾಗದಂತಹ ಒಂದು ಪಾತ್ರವನ್ನಾಗಿ ೨೦ ನೆ ಶತಮಾನದ ಎರಡನೆ ದಶಕದಲ್ಲಿ ಸೀತೆಯಂತಹ ವಿಶಿಷ್ಟ ಪಾತ್ರವನ್ನು ಸೃಷ್ಟಿಸಿರುವುದು ಕಾದಂಬರಿಯ ವಿಶೇಷತೆಗಳಲ್ಲಿ ಒಂದಾಗಿದೆ. ‘ಮಲೆಗಳಲ್ಲಿ ಮದುಮಗಳು’ವಿನಲ್ಲಿ ಗುತ್ತಿ ಮತ್ತು ತಿಮ್ಮಿ ಶೂದ್ರ ಜಾತಿಯಲ್ಲಿ ಹುಟ್ಟಿ ಪ್ರೀತಿಸಿ ಓಡಿ ಹೋಗುವ ಹೊಸ ವಾಸ್ತವ ಕಲ್ಪನೆಯನ್ನು ನೀಡಿರುವಂತೆ ಹೆಗ್ಗಡತಿಯಲ್ಲಿ ಆ ಕಾಲದಲ್ಲಿಯೇ ಅಂತಹ ದರ್ಪದ ಮಾವ, ತಂದೆ, ತಾಯಿ, ಪರಿಸರ, ಸಂಪ್ರದಾಯ ಸಮಾಜ ಎಲ್ಲವನ್ನೂ ಮೀರಿ ಒಬ್ಬನನ್ನು ಪ್ರೀತಿಸಿ, ಆತನಿಗಾಗಿಯೇ ಜೀವನ ಪೂರ್ತಿ ವಿಚಿತ್ರ ಸಂಕಟದಲ್ಲಿ ಬದುಕು ವಿಶಿಷ್ಟ ಮತ್ತು ವಿಮರ್ಶಾತ್ಮಕ ಪಾತ್ರ ಸೀತೆಯಾಗಿದ್ದಾಳೆ. ಚಂದ್ರೇಗೌಡರಂತಹ ದರ್ಪದ ವ್ಯಕ್ತಿಯ ಮನೆಯಲ್ಲೂ ಅಮರವಾದ, ಕಠೋರ ಪ್ರೇಮಿಯಾಗಿಯೇ ಉಳಿಯುವ ಸೀತೆ ಸಾಹಿತ್ಯ ಲೋಕ ಎಂದೂ ಮರೆಯಲಾಗದ ಪಾತ್ರವಾಗುತ್ತಾಳೆ.

ಸೀತೆಯು ಹೂ ಬಿಡಿಸುತ್ತಿದ್ದಾಗ ಒಂದು ಸೋಗೆ ಬಾಳೆಯ ಗಿಡದ ಮೇಳೆ ಬಿದ್ದು, ಅದು ಛಿದ್ರವಾಗುವುದನ್ನು ಹೇಳುವಲ್ಲಿ ಈ ಪ್ರತಿಮೆ ಸೀತೆಯ ಬದುಕಿನ ದಾರುಣ ದುರಂತವನ್ನು ಧ್ವನಿಸುತ್ತದೆ. ಸೀತೆ ತನ್ನ ಪ್ರೀತಿಗಾಗಿ ಮಾನಸಿಕ ರೋಗಿಯಂತೆ ವರ್ತಿಸುವುದು ಆ ಪಾತ್ರ ತನ್ನತನವನ್ನು ಕಾಯ್ದುಕೊಳ್ಳುವಲ್ಲಿ ಸಹಜವೆನಿಸುತ್ತದೆ.

ಸೀತೆ ರಾಮಾಯಣದ ಸೀತೆಯಷ್ಟೇ ಪವಿತ್ರವಾದವಳು ಹಾಗೂ ಮಾನಸಿಕ ಮದುವೆಯೇ ನಿಜವಾದ ಸಾಂಸಾರಿಕ ಬದುಕು ಎನ್ನುವುದನ್ನು ಪ್ರತಿಪಾದಿಸುವಲ್ಲಿ ಕಾದಂಬರಿಕಾರರ ಕೈಚಳಕ ಪರಿಣಾಮಕಾರಿಯಾಗಿದೆ. ಮೊದಲು ಸೀತೆಗೆ ಕೃಷ್ಣಪ್ಪನ ಸಂಬಂಧ ನೋಡುತ್ತಾರೆ. ಆತ ಹುಲಿಗೆ ಬಲಿಯಾಗುತ್ತಾನೆ. ರಾಮಯ್ಯನಿಗೆ ತಾಳಿಕಟ್ಟಲು ಆಗುವುದಿಲ್ಲ. ಹೀಗೆ ಸೀತೆ ಆ ರಾಮನ ಸೀತೆಯಷ್ಟೇ ಪವಿತ್ರಳಾಗಿ ಉಳಿಯುತ್ತಾಳೆ. ಸೀತೆಗೆ ಹೂವಯ್ಯನೊಂದಿಗೆ ಸಾಂಸಾರಿಕ ಬದುಕು ಸಿಗದಿದ್ದರೂ ಹೂವಿನೊಂದಿಗೆ ನಾರು ಸ್ವರ್ಗಕ್ಕೆ ಎನ್ನುವಂತೆ ಕಾದಂಬರಿಯ ಕೊನೆಯ ಅಧ್ಯಾಯದಲ್ಲಿ ಆಕೆ ಹೂವಯ್ಯನೊಂದಿಗೆ ತಪಸ್ವಿನಿಯಾಗುತ್ತಾಳೆ. ಸೀತೆ ರಾಮಯ್ಯನ ವಿಧವೆ, ಈಗ ಹೂವಯ್ಯ-ಸೀತೆ ಒಂದೇ ಮನೆಯಲ್ಲಿದ್ದಾರೆ. ಪರಿಸರ, ಪೂರ್ಣಪ್ರಣಯಿಗಳನ್ನು ಹತ್ತಿರಕ್ಕೆ ತಂದಿದೆ. ಲೈಂಗಿಕ ಸಮಾಗಮಕ್ಕೆ ಯಾರ ಅಡ್ಡಿಯೂ ತಡೆಯಿರಲಿಲ್ಲ. ಆದರೆ, ಆ ಧನ್ಯ ಜೀವಿಗಳು ಅನ್ನಮಯದಿಂದ ಆನಂದಮಯಕ್ಕೇರಿ ಸಾರ್ಥಕತೆ ಕಾಣುತ್ತಾರೆ. ಲಕ್ಷ್ಮೀ ಮತ್ತು ಸೀತೆ ಜಂಟಿ ಪಾತ್ರಗಳಾಗಿ ಕಾಣಿಸಿಕೊಳ್ಳುತ್ತವೆ. ಇಬ್ಬರು ಒಬ್ಬರನ್ನು ಬಿಟ್ಟು ಒಬ್ಬರು ಬದುಕುವುದಿಲ್ಲ. ಒಂದರ ಗುಣ ಒಂದಕ್ಕೆ ಪೂರಕವಾಗಿ ಬರುತ್ತವೆ.

ಲಕ್ಷ್ಮೀ ಹಠಮಾರಿ ಸ್ವಭಾವದವಳು. ಈ ಪಾತ್ರದ ಮೂಲಕ ಕುವೆಂಪು ಒಂದು ಮುಗ್ಧ ಮಗುವಿನ ಮಾನಸಿಕ ಸ್ಥಿತಿಯನ್ನು ಚಲ್ಲುತನ, ಹಠಮಾಡಿತನಗಳನ್ನು ಕುರಿತು ವಿವರಿಸಿದ್ದನ್ನು ನೋಡಿದರೆ ಕವಿಯೊಳಗೆ ಒಬ್ಬ ಮನೋವೈದ್ಯನಿರುವನೇನೋ ಅನಿಸದಿರಲಾರದು. ಹೀಗೆ ಸ್ತ್ರೀಪಾತ್ರಗಳು ಕಾದಂಬರಿಯ ವಸ್ತುವಿಗೆ ಜೀವಾಳದಂತಿವೆ.

ಕಾನೂರು ಹೆಗ್ಗಡತಿ ಕಾದಂಬರಿಯ ವಸ್ತು ಪ್ರಾಚೀನ-ನವೀನಗಳ ಪ್ರೇಮ- ಕಾಮ, ಮೃದು-ಕಠೀಣಗಳ, ಮಾನಸಿಕ-ದೈಹಿಕ ಸಂಬಂಧಗಳ ವಿಶಿಷ್ಟ ವಸ್ತುವನ್ನು ಹೊಂದಿರುವುದರಿಂದ ವೈರುಧ್ಯಗಳಿರುವ ಪಾತ್ರಗಳನ್ನೂ ಹೊಂದಿದೆ. ಕೆಲವು ಪಾತ್ರಗಳು ಔನ್ನತ್ಯಕ್ಕೆ ಏರಿದರೆ ಕೆಲವು ಸಹಜ ಸ್ಥಿತಿಯಲ್ಲಿಯೇ ಉಳಿಯುತ್ತವೆ. ಆದರೆ, ಎಲ್ಲಾ ಪಾತ್ರಗಳೂ ಔನ್ನತ್ಯಕ್ಕೇರುವ ಪಾತ್ರಕ್ಕೆ ಪೂರಕವಾಗಿಯೇ ಬರುತ್ತವೆ. ಈ ಕಾದಂಬರಿಯ ಪಾತ್ರಗಳು ಎಷ್ಟೊಂದು ಜೀವಂತವೆನಿಸುತ್ತವೆ ಎಂದರೆ ನಾವು ಕುಪ್ಪಳಿ, ಕಾನೂರಿನ ಹತ್ತಿರ ಹೋದರೆ ಅಥವಾ ಅಲ್ಲಿಯ ಒಬ್ಬ ವ್ಯಕ್ತಿ ಸಿಕ್ಕರೂ ಹೂವಯ್ಯ, ಸೀತೆ, ಲಕ್ಷ್ಮೀ, ವಾಸು ಎಲ್ಲಾ ಹೇಗಿದ್ದಾರೆಂದು ವಿಚಾರಿಸಬೇಕೆನಿಸುವಷ್ಟು ಗಾಢವಾಗಿ ನಮ್ಮ ನೆನಪಿನಲ್ಲಿ ಉಳಿದು ಬಿಡುತ್ತವೆ.

* * *